ನರಸಿಂಹಲು ವಡವಾಟಿಯವರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ! ಕ್ಲಾರಿನೆಟ್ ಅಂದರೆ ಅವರು; ಅವರೆಂದರೆ ಕ್ಲಾರಿನೆಟ್ಟು. ಕ್ಲಾರಿನೆಟ್ಟಿನಂಥ ವಿದೇಶೀ ವಾದ್ಯಕ್ಕೆ ದೇಶೀಯ ಮೆರುಗು ನೀಡಿದ ಈ ಮಹಾನುಭಾವ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಯ ಬಾಗಿಲು ತಟ್ಟಿದರೆಂದರೆ ಹೇಗಾಗಬೇಡ? ಬಾಗಿಲು ತಟ್ಟುತ್ತಿರುವವರು ಅವರಿರಬಹುದೆ! ಇವರಿರಬಹುದೆ ಎಂದು ಯೋಚಿಸುವ ಮೊದಲು ನಾನು ನನ್ನ ಹೆಂಡತಿ ಅನ್ನಪೂರ್ಣಳೊಂದಿಗೆ ವಾದಕ್ಕಿಳಿದಿದ್ದೆ. ವಸಂತರಾವ್ ದೇಶಪಾಂಡೆಯವರ ಬಗ್ಗೆ ನಾನು ವಕಾಲತ್ತು ವಹಿಸಿದ್ದರೆ ಆಕೆ ಮೈಸೂರು ಅನಂತಸ್ವಾಮಿಯವರ ಬಗ್ಗೆ ವಕಾಲತ್ತು ವಹಿಸಿದ್ದಳು. ಏರುತ್ತಿರುವ ಮನೆ ವೆಚ್ಚ, ಬಿಡುವಿಲ್ಲದ ಗೃಹಕೃತ್ಯಗಳ ಬಗ್ಗೆ ಮಾತಾಡುತ್ತ ಮಾತಾಡುತ್ತ ರಾಜಕಾರಣದ ಬಗ್ಗೆ ತಿರುಗಿದ್ದೆವು; ರಾಜಕಾರಣದ ಬಗ್ಗೆ ಮಾತಾಡುತ್ತ ದೇಶದ ಪ್ರಧಾನ ಮಂತ್ರಿಗಳನ್ನೇ ಬಲಿತೆಗೆದುಕೊಂಡ ಉಗ್ರಗಾಮಿ ಕೃತ್ಯಗಳ ಬಗ್ಗೆ ಮಾತಿನ ಹಾದಿ ಬದಲಿಸಿದ್ದೆವು; ಅಲ್ಲಿಂದ ಯುವ ಪ್ರಧಾನಿಯವರ ಸಮಾಧಿ ಬಳಿ ನಡೆದ ಶಾಸ್ತ್ರೀಯ ಸಂಗೀತ ಕಛೇರಿ ಬಗ್ಗೆ ತಾರಕಕ್ಕೇರಿದ್ದೆವು. ಚಲನಚಿತ್ರ ಸಂಗೀತಾಭೀಮಾನಿಗಳೇ ಬಹುಸಂಖ್ಯಾತರಿರುವ ಭಾರತದೇಶದ ಪ್ರಧಾನಿ ಸಮಾಧಿ ಬಳಿ ಚಿತ್ರಸಂಗೀತ ಕಾರ್ಯಕ್ರಮ ಇಡುವುದು ಬಿಟ್ಟು ಅರ್ಥವಾಗದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಇಟ್ಟು ತಲೆ ತಿನ್ನುವುದು ಯಾಕೆ ಅಂತ ಅನ್ನಪೂರ್ಣ ತಕರಾತು ಎತ್ತಿದ್ದು ವಿಚಿತ್ರವಾಗಿತ್ತು. ಕ್ರಮೇಣ ಆಕೆ ಲಘು ಸಂಗೀತಕ್ಕೆ ಪಟ್ಟು ಹಿಡಿದಳು. ನಾನು ಸಂಗೀತದ ಮಾತೃಸ್ಥಾನದ ಬಗ್ಗೆ ವಕಾಲತ್ತು ವಹಿಸಿದೆ. ಕನಿಷ್ಠ ಪಕ್ಷ ವಸಂತರಾವ್ ದೇಶಪಾಂಡೆ; ಜಿತೇಂದ್ರ ಅಭಿಷೇಕಿಯವರ ಮರಾಠಿ ನಾಟ್ಯ ಸಂಗೀತವನ್ನಾದರೂ ಆಸ್ವಾದಿಸುವುದು ಅಭ್ಯಾಸ ಮಾಡಿಕೊಳ್ಳಬೇಕೆಂದು ವಾದಿಸತೊಡಗಿದೆ. ನನ್ನ ಧ್ವನಿಯಲ್ಲಿ ಗಂಡಸಿನ ಸರ್ವಾಧಿಕಾರಿತ್ವ ಇರುವುದನ್ನು ಮನಗಂಡು ವಾದವನ್ನು ಮೆದುಗೊಳಿಸಿದೆ. ನನ್ನ ವ್ಯಕ್ತಿತ್ವದಿಂದ ಪ್ರಖರವಾಗಿ ಪ್ರಕಟವಾಗುತ್ತಿದ್ದ ಪೌರುಷವನ್ನು, ಪಾಂಡಿತ್ಯವನ್ನು, ಧಿಮಾಕನ್ನು ತೆಗೆದು ಹಾಕಿದೆ.
ಆಕೆಯ ಅಭಿರುಚಿಯನ್ನು ಇನ್ನೇನು ನಾನು ಗೌರವಿಸಬೇಕೆನ್ನುವಷ್ಟರಲ್ಲಿ ಬಾಗಿಲು ತಟ್ಟುವ ಸದ್ದು ಮತ್ತೆ ಮತ್ತೆ ಕೇಳಿಬಂತು. ಬಾಗಿಲು ತಟ್ಟುತ್ತಿರುವವರು ಅವರಾಗಿರಬಹುದೆ ಅಂತ ನಾನು; ಇವರಾಗಿರಬಹುದೆ ಅಂತ ಆಕೆಯೂ ವಾದಿಸಿದೆವು. ಬಾಗಿಲ ಹೊರಗೆ ನಿಂತಿರುವ ವ್ಯಕ್ತಿಯನ್ನು ಒಳಗೆ ಬರಮಾಡಿಕೊಳ್ಳುವ ಅಳುಕು ಇಬ್ಬರಿಗೂ ಇರಲು, ಗೋಡೆ ಗಡಿಯಾರ ಒಂಬತ್ತು ಬಡಿಯಿತು. ನೆಲದ ಮೇಲೆ ಕರ್ತೃ ಕರ್ಮ ಕ್ರಿಯೆಗಳೇ ವಾಕ್ಯದಿಂದ ಬೇರೆಯಾಗಿ ಚೆಲ್ಲಾಪಿಲ್ಲಿಯಾಗಿರುವಂತೆ ಮೂರು ಮಕ್ಕಳು ಮಲಗಿ ಮಗ್ಗುಲು ಬದಲಾಯಿಸುತ್ತಿದ್ದುವು. ಅವು ನಿದ್ರಾಸ್ಥಿತಿಯಲ್ಲಿಯೇ ವರ್ತಮಾನ, ಭೂತ, ಭವಿಷ್ಯತ್ಗಳೆಂಬ ತ್ರಿಕಾಲಗಳನ್ನು ಪ್ರತಿನಿಧಿಸುತ್ತಿದ್ದುದು ಸೋಜಿಗದ ಸಂಗತಿಯಾಗಿತ್ತು. ಇನ್ನೂ ಹಾಲು ಅನ್ನ ಕಲೆಸಿಡದ ಕಾರಣಕ್ಕೆ ಬೆಕ್ಕು ಗೂಡಿನೊಳಗೆ ಕೂತು ಹಿಡಿ ಹಿಡಿ ಶಾಪ ಹಾಕುತ್ತಿತ್ತು. ಅರ್ಧಕಟ್ಟಿದ್ದ ಸೊಳ್ಳೆಪರದೆಯೊಳಗಡೆ ಬಂಧನಕ್ಕೊಳಗಾಗಿದ್ದ ನೂರಾರು ಸೊಳ್ಳೆಗಳು ನೂರಾರು ನಮೂನೆಯ ತಂತಿವಾದ್ಯಗಳಂತೆ ಬೇಕಾಬಿಟ್ಟಿ ನುಡಿಯತೊಡಗಿದ್ದವು. ಬಾಗಿಲು ತೆರೆದ ಕೂಡಲೆ ದುತ್ತನೆ ಒಳಗೆ ಪ್ರವೇಶಿಸಿ ಬಿಡುವ ಆಗಂತುಕನಿಗೆ ಸದ್ಯದ ವಸ್ತುಸ್ಥಿತಿ ಬೇಸರವನ್ನುಂಟುಮಾಡೀತೆಂದು ಯೋಚಿಸಿದ ಪತ್ನಿ ಮಕ್ಕಳನ್ನು ಒಂದೊಂದಾಗಿ ಒಳಗಡೆ ಹೊತ್ತುಕೊಂಡೊಯ್ದಳು. ಅರೆ! ಮೊದಲು ಈಕೆ ನನ್ನ ಕ್ಷುದ್ಬಾಧೆಯನ್ನು ತಣಿಸುವುದು ಬಿಟ್ಟು ಇದೇನು ಮಾಡುತ್ತಿರುವಳೆಂದು ಬೆಕ್ಕು ಗೂಡಿನಿಂದ ದುತ್ತನೆ ಜಿಗಿದು ಆಕೆಯ ಕಾಲಿನ ನಡುವೆ ನುಸಿಯತೊಡಗಿತು. ಸನ್ನಿವೇಷಕ್ಕೆ ಗೌರವವರ್ಣ ಬಿಳಿ ನಿಶಾನೆ ನೀಡಿದ ಅನಂತರವೇ ಆಕೆ ಬಾಗಿಲು ತೆರೆಯುವಂತೆ ಸೂಚಿಸಲು ನಾನು ಹೋದೆ ಬಾಗಿಲು ತೆರೆಯಲೆಂದು.
ಋತುಕಾಲಕ್ಕೊಂದೊಂದು ಸ್ವರೂಪ ಮುಡಿಯುತ್ತಿದ್ದ ಬಾಗಿಲ ಚಿಲಕ ಸರಿಸುವುದು ಸುಲಭ ಸಾಧ್ಯದ ಕೆಲಸವಾಗಿರಲಿಲ್ಲ. ಅದನ್ನು ಮಾಡುವಾಗ ನಿಂಗಣ್ಣಾಚಾರಿ ಆಕಾಶ ಉದುರುವಂತೆ ಗೊಣಗಾಡುತ್ತಿದ್ದ. ಬೇಕೆಂದೇ ಒಂದೊಂದು ಋತುವಿಗೆ ಒಂದೊಂದು ರೀತಿಯಲ್ಲಿ ಆಕಾರ ಬದಲಿಸುವಂತಹ ಕಟ್ಟಿಗೆ ಕೊಂಡು ಬಾಗಿಲು ಮಾಡಿದ್ದು. ಆತ ಎರಡು ರಂಧ್ರಗಳನ್ನು ಮಾಡಿದ್ದ. ರಂಧ್ರಗಳು ಎಷ್ಟು ಕಿರಿಕಿರಿ ಮಾಡುತ್ತಿದ್ದವೆಂದರೆ ಚಿಲಕವನ್ನು ಹಾಕಿದರೆ ತೆಗೆಯಲಿಕ್ಕೆ ಬರುತ್ತಿರಲಿಲ್ಲ. ತೆಗೆದರೆ ಹಾಕಲಿಕ್ಕೆ ಬರುತ್ತಿರಲಿಲ್ಲ. ಅದನ್ನು ಹಾಕುವವರಿಗೆ; ತೆಗೆವವರಿಗೆ ತಕ್ಕುದಾದ ಇಚ್ಛಾಶಕ್ತಿ ಬೇಕೇ ಬೇಕಿತ್ತು. ಆ ಶಕ್ತಿಯನ್ನು ಸೃಜನಶೀಲ ಕ್ರಿಯೆಗೆ ಧಾರೆ ಎರೆಯುತ್ತಿದ್ದುದರಿಂದ ಬಾಗಿಲು ಆಗುಹೋಗುಗಳನ್ನು ಆಕೆಯೇ ನೋಡಿಕೊಳ್ಳುತ್ತಿದ್ದಳು. ಆಕೆ ಪೂರ್ತಿ ಒಳಗಿದ್ದುದರಿಂದ ನಾನು ಒಂದು ಕಾದಂಬರಿಗೆ ಸಾಕಾಗುವಷ್ಟು ಪ್ರತಿಭೆಯನ್ನು ಉಪಯೋಗಿಸಿ ಬಾಗಿಲು ತೆರೆಯಲು ನಿರ್ಣಯಿಸಿದೆ. ಒಂದು ಕಿರು ಕಥೆ ಬರೆದಷ್ಟೆ ಸಲೀಸಾಗಿ ಬಾಗಿಲು ತೆರೆದೆ.
ಝೀರೋ ಕ್ಯಾಂಡಲಿನಂತೆ ಉರಿಯುತ್ತಿದ್ದ ಅರವತ್ತು ಕ್ಯಾಂಡಲು ಬೆಳಕಿನಲ್ಲಿ ಇಡೀ ಬಾಗಿಲು ತುಂಬಿನಿಂತಿದ್ದ ವ್ಯಕ್ತಿಯ ಮಂದ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಿತ್ತಾದರೂ ರುಂಡ ಮಾತ್ರ ಮಸುಕಿನಲ್ಲಿ ಅವಿತುಕೊಂಡಿರುವಂತಿತ್ತು. ಯಾರದು ಅಂದೆ, ಹಗಲ ತುಂಬ ಅಡ್ಡಾಡಿದ್ದ ಕಣ್ಣುಗಳಲ್ಲಿ ಅಳಿದುಳಿದ ಬೆಳಕನ್ನು ಉಪಯೋಗಿಸಿ ಮುಖ ಗುರುತಿಸಲು ಪ್ರಯತ್ನಿಸಿದೆ. ಇಡೀ ದೇಹ ಶುಕ್ಲಪಟಲದ ಮೇಲಿದ್ದ ಬೆಳಕನ್ನು ಮುಕ್ಕಾಲುವಾಸಿ ಉಪಯೋಗಿಸಿಕೊಂಡಿದ್ದರಿಂದ ಈ ಮುಖವನ್ನು ಎಲ್ಲೋ ನೋಡಿದಂತಿದೆಯಲ್ಲಾ! ಈ ನೈಜಾಮಶೈಲಿಯ ಪರಿಮಳವನ್ನು ಎಲ್ಲೋ ಆಸ್ವಾದಿಸಿದಂತಿದೆಯಲ್ಲಾ! ಎಂದು ಯೋಚಿಸುತ್ತಲೇ “ಅರೇ! ನರಸಿಂಹಲು ವಡವಾಟಿ…. ಏನಿದು ಸರ್‍ಪ್ರೈಜ್” ಅಂದೆ. ವಡವಾಟಿ ನೈಜಾಂಶೈಲಿಯಲ್ಲಿ ಆಲಿಂಗಿಸಿಕೊಂಡರು. ಕೃತಿ ಸಹೃದಯವನ್ನು ಸೇರಿದಂತೆ; ಅಂತಃಕರಣ ಸಹಾನುಭೂತಿಯನ್ನು ಅಪೋಶನ ತೆಗೆದುಕೊಂಡಂತೆ; ಹಿಗ್ಗಿದ ರೀತಿಯಲ್ಲಿ ಬಾಗಿಲೇ ಹೊಯ್ದಾಡಿತು. ನನ್ನ ಆತ್ಮೀಯ ವ್ಯಕ್ತಿ; ನಾಡಿನ ಹೆಮ್ಮೆಯ ಕ್ಲಾರಿನೆಟ್ ವಾದಕನನ್ನು ಹೇಗೆ ಸ್ವಾಗತಿಸಿದೆನೋ! ಹೇಗೆ ಕರೆದೊಯ್ದು ಸೋಫಾದ ಮೇಲೆ ಕೂಡ್ರಿಸಿದೆನೋ! ನನಗೇ ತಿಳಿಯದು! ಯಡದೊರೆ ಶೈಲಿಯಲ್ಲಿ ಹುಬ್ಬು ಬಿರಿದು ಮುಳುಗುತ್ತಿದ್ದ ವಡವಾಟಿಯವರು ಯಾಕೆ ನತದೃಷ್ಟ ಭಗ್ನ ಶಿಲ್ಪದಂತಿರುವರೋ ಅರ್ಥವಾಗಲಿಲ್ಲ.
ಅಷ್ಟರಲ್ಲಿ ಅನ್ನಪೂರ್ಣ ಚಹಾ ತಂದಳು. ಪರಿಚಯಿಸಿದೆ. ಏನಾದ್ರು ಅಡುಗೆ ಮಾಡು ಅಂದೆ. ಬಿಸಿಬೇಳೆಭಾತ್ ಮಾಡ್ತಿದೀನಿ ಅಂದಳು. ನನ್ಗೆ ಊಟಮಾಡಾಕ್ಯ ಮನಸ್ಸಿಲ್ಲ ಕುಂವೀ ಅಂದ್ರು ವಡವಾಟಿ. ಯಾಕ್ರಿ ಅಂದೆ-ಆತಂಕದಿಂದ. ದಾರ್ಯಾಗ ನಡೀಬಾರ್‍ದು ನಡೆದೋಯ್ತು ಅಂದರು. ನನಗೆ ಶಾಕ್ ಆಯ್ತು. ಅಂಥಾದ್ದೇನು ನಡೀತು ಹೇಳ್ರಲ್ಲ ಅಂದೆ. ಹ್ಯಾಂಗ್ರಿ ಹೇಳ್ಲಿ ಅಂದರು. ಕುಕ್ಕರು ಹಾಕುತ್ತಿದ್ದ ಶಿಳ್ಳೆಗೆ ಓಗೊಟ್ಟು ಅನ್ನಪೂರ್ಣ ಅಡುಗೆಮೆನೆಗೆ ಹೋಗಿದ್ದಳು. ಪ್ರಯಾಣದ ನಡುವೆ ನಡೆದಿರಬಹುದಾದರೂ ಏನಿರಬಹುದು? ಹಾಗಿರಬಹುದೆ ಹೀಗಿರಬಹುದೆ? ಕಥೆಗಾರತ್ವದ ಸಹಜಲಕ್ಷಣ ಪ್ರಕಟವಾಗುತ್ತಿತ್ತು. ಒಂದೊಂದು ಕಲ್ಪನೆ ನನಗೆ ಅಸಹನೀಯವಾಗುತ್ತಿತ್ತು.
ಇನ್ನೊಬ್ಬರ ದುಃಖದಲ್ಲಿ ಸಂತೋಷದಲ್ಲಿ ಸೃಜನ ಶೀಲತೆಯ ದೃಷ್ಟಿಯಿಂದ ಪಡೆಯಬಹುದಾದ ಲಾಭ ಕುರಿತು ಯೋಚಿಸುವ ಹಡಬೆ ಮನಸ್ಸಿನ ಲೇಖಕ ನಾನು ಮೊದಲೆ. ಒಮ್ಮೊಮ್ಮೆ ಮನುಷ್ಯ ಸಹಜ ಪ್ರವೃತ್ತಿಗಳಿಂದ ದೂರ ನಿಂತು ಬಿಡುಗಣ್ಣಿನಿಂದ ಬೇರೊಂದು ಬದುಕಿನಿಂದ ಲಾಭ ಪಡೆಯುವ ಕೆಟ್ಟ ಚಾಳಿ ನನ್ನಲ್ಲಿಲ್ಲದಿಲ್ಲ. ಒಂದು ರೀತಿ ನೋಡಿದರೆ ನನ್ನಂಥ ಲೇಖಕೀಯ ಮನುಷ್ಯನಿಗೆ ಮನುಷ್ಯ ಸಂಬಂಧಗಳೇ ಇರುವುದಿಲ್ಲವೇನೋ! ಆದ್ದರಿಂದ ವಡವಾಟಿ ಪ್ರಯಾಣಿಸುತ್ತಿರುವಾಗ ನಡೆದಿರಬಹುದಾದ ಘಟನೆ ಕುರಿತು ಆತ ವಿವರಿಸದೆ ಇದ್ದರೆ ಸಾಕೆನಿಸಿತು. ಆ ನಿಗೂಢ ಘಟನೆಗೆ ಮುಖ ಮೂಗು, ರೆಕ್ಕೆ ಪುಕ್ಕ ಮೂಡಿಸಿ ಒಂದು ಕಥೆ ಬರೆದು ಯಾವುದಾದರೂ ಪತ್ರಿಕೆಗೆ ರವಾನಿಸಿ ಒಂದಿಷ್ಟು ಲಾಭ ಪಡೆಯುವ ಹವಣಿಕೆಯಲ್ಲಿ ನಾನಿರುವಾಗ ವಡವಾಟಿ ತಾವು ಕೊಟ್ಟಿರುವ, ಕೊಡಬೇಕೆಂದಿರುವ ಪ್ರೋಗ್ರಾಮುಗಳ ಬಗ್ಗೆ; ಕದ್ರಿ ಗೋಪಾಲನಾಥರ ಸ್ಯಾಕ್ಸೋಫೋನು ಮತ್ತು ತಮ್ಮ ಕ್ಲಾರಿನೇಟ್ಟಿನ ಅವಿಸ್ಮರಣೀಯ ಜುಗಲಬಂದಿಯ ಬಗ್ಗೆ, ತಲೆ ಅಲ್ಲಾಡಿಸುವ ಜನ ಸಂಭಾವನೆ ಎಣಿಸುವಾಗ ಮಾಡುವ ಮಿಜಿ ಮಿಜಿ ಬಗ್ಗೆ; ಹೀಗೆ ಎಷ್ಟೋ ವಿಷಯಗಳ ಬಗ್ಗೆ ವಿವರಿಸಿದರು. ಅವರ ಧ್ವನಿ ಆರಕ್ಕೇರುತ್ತಿರಲಿಲ್ಲ ಮೂರಕ್ಕಿಳಿಯುತ್ತಿರಲಿಲ್ಲ. ಅವರ ಯಾವ ಮಾತೂ ಆಸಕ್ತಿ ಕುದುರಿಸುವಂತಿರಲಿಲ್ಲ.
ನನ್ನ ಆಸಕ್ತಿ ಇದ್ದದ್ದು ನಡೆದಿರಬಹುದಾದ ಘಟನೆ ಬಗ್ಗೆ ಎಲ್ಲಿವರೆಗೆ ಹೀಗೆ ಸುಲಭವಾಗಿ ಆಲೋಚಿಸುತ್ತ ಹೋಗುವುದು? ಆ ಘಟನೆ ಬಗ್ಗೆ ಆತ ಹೇಳಿದರೆ ಹೇಗೆ? ಹೇಳದಿದ್ದರೆ ಹೇಗೆ? ಎಂದು ಯೋಚಿಸುವ ಹೊತ್ತಿಗೆ ಬಿಸಿಬೇಳೆಭಾತಿನ ಪರಿಮಳ ಇಡೀ ಮುವತ್ತೈದು ಚದರದ ಮನೆತುಂಬ ಹರಡಿತ್ತು. ಆ ಪರಿಮಳದೊಳಗಿಂದ ಮೂಡಿಬಂದವಳಂತೆ ಮೂಡಿಬಂದ ಪತ್ನಿ ಊಟ ರೆಡಿ ಅಂದಳು. ವಡವಾಟಿಗೆ ತುಂಬ ಬಲವಂತ ಮಾಡಬೇಕಾಯಿತು. ಸಂಡಾಸೇ ಮೊದಲಾದ ಕ್ರಿಯೆಗಳನ್ನು ಮುಗಿಸಿದ ಅನಂತರ ಕಣ್ಣು ಒದ್ದೆ ಮಾಡಿಕೊಂಡೇ ತುತ್ತು ಮುಟ್ಟಿದ್ದು, “ನಂದರ್ಧ ಪ್ರಾಣ ಹೋದಂಗಾಗೇತ್ರೀ” ಎಂದು ಬಿಕ್ಕುತ್ತ ನೀರು ಕುಡಿದರು. ಆತನ ಆ ಅವಸ್ಥೆ ನೋಡಿ ನನಗೆ ಒಂಥರಾ ಸಂಕಟವಾಯಿತು. ಇವರ ಸಂಕಟವಾದರೂ ಏನಿರಬಹುದು? ಅದನ್ನು ಬಗೆಹರಿಸುವುದು ಹುಲುನರನಾದ ನನ್ನಿಂದ ಸಾಧ್ಯವಾದೀತೆ? ಅವರು ಹೇಳಿದರೆ ತಾನೆ ತಿಳಿಯುವುದು! ಹೇಳಲೆಂದು ಕಂಠದವರೆಗೆ ತಂದುಕೊಳ್ಳುತ್ತಿದ್ದರು. ಹೇಳಲಾರದೆ ಬಿಕ್ಕಿ ನೀರು ಕುಡಿಯುತ್ತಿದ್ದರು. ಆ ಮಹಾನ್ ಕ್ಲಾರಿನೆಟ್ ವಾದಕ ಸಂತೃಪ್ತಿಯಾಗಿ ಊಟ ಮಾಡದೆ ಕೈತೊಳೆದುಕೊಂಡೆದ್ದರು. ನಾನೂ ಹಾಗೆ ಮಾಡಿದೆನು.
ಕೋಣೆಯಲ್ಲಿ ತಾಂಬೂಲ ಸವಿಯುವಾಗಲೂ ಹಾಗೇ ಆಯಿತು. ಗಟ್ಟಿಯಾಗಿ ಕೇಳಿ ಬಿಡುವುದೆಂದು ನಿರ್ಧರಿಸಿದೆ. ಅಲ್ಲದೆ ಕೇಳಿಯೇ ಬಿಟ್ಟೆ, “ಹ್ಯಾಂಗ ಹೇಳ್ಲಿ ಕುಂವೀ…. ನನ್ ಪ್ರಾಣನೇ ಕಳ್ಕೊಂಡಾಗೈತಿ…..” ದುಃಖ ಒತ್ತರಿಸಿ ಬಂತು. ತಡೆದುಕೊಂಡು “ನನ್ ವಾದ್ಯ ಕಳವಾಯಿತ್ರಿ” ಮಗುವಿನಂತೆ ಗೋಳೋ ಅಂತ ದುಃಖಿಸಿ ದುಃಖಿಸಿ ಅಳತೊಡಗಿದರು. ಮಾಡಿಕೊಂಡ ಹೆಂಡತಿ ಕಳಕೊಂಡವರೂ ಇಷ್ಟು ಅತ್ತಿರಲಿಕ್ಕಿಲ್ಲ. ಆಫ್ಟರಾಲ್ ಒಂದು ವಾದ್ಯ ಕಳೆದುಹೋದರೆ ಇಷ್ಟು ದುಃಖಿಸುವುದೇನು? ನನಗೆ ಏನು ಹೇಳುವುದೂ ತೋಚಲಿಲ್ಲ. ನಾನು ಅದನ್ನು ಹತ್ತಾರು ಕಡೆ ನೋಡಿದ್ದೆ. ಅದೇನು ಅಷ್ಟು ಆಕರ್ಷಕವಾಗಿರಲಿಲ್ಲ. ಮೂಲಬಣ್ಣ ಹೋಗಿ ಹಳತಾಗಿತ್ತು. ಅದರ ಕೆಲವು ಲೋಹದ ಭಾಗಗಳು ಬೆರಳಾಡಿಸಿ ಬೆರಳಾಡಿಸಿ ಸವೆದು ವಿಕಾರವಾಗಿ ಕಾಣಿಸುತ್ತಿದ್ದವು. ವಾದಕನ ಜೀವನ ಶೈಲಿ ಬದಲಾಗಿತ್ತು. ಆದರೆ ವಾದ್ಯ ಬದಲಾಗಿರಲಿಲ್ಲ. ಅವರ ಕೈಯಲ್ಲಿ ಅದು ಕೋರೈಸುವಂತೆ ಕಾಣಿಸುತ್ತಿರಲಿಲ್ಲ. ಮ್ಯಾಂಚೆಸ್ಟರ್‍ಗೆ ಹೋದಾಗಲಾದರೂ ವಡವಾಟಿ ಹೊಸದೊಂದು ವಾದ್ಯ ಖರೀದಿಸಿರಬಹುದೆಂದುಕೊಂಡಿದ್ದೆ. ಆದರೆ ಆತ ತನ್ನ ತುಟಿ ನಡುವಿನ ನಗೆಯನ್ನು, ವಾದ್ಯವನ್ನು ಬದಲಾಯಿಸುವುದು ಸಾಧ್ಯವಿರಲಿಲ್ಲ.
ಆತ ಆಡುತ್ತಿದ್ದ ಮಾತುಗಳು ಕರುಳಿನಿಂದ ಹೊರಡುತ್ತಿದ್ದವು. ಅದರ ಪ್ರಾಮುಖ್ಯದ ಅರಿವಿದ್ದೂ ನಾನು “ಇನ್ನೊಂದು ಕೊಂಡರಾಯ್ತು ಬಿಡಿ” ಅಂದೆ. “ಏನ್ರೀ ಕುಂವೀ ನೀವು ಲೇಖಕರಾಗಿ ಭಾವನಾತ್ಮಕ ಸಂಬಂಧವನ್ನು ಅರ್ಥಮಾಡಿಕೊಳ್ತಿಲ್ಲವಲ್ಲ” ಅಂದರು. ಅದರಿಂದ ನನಗೆ ತುಂಬ ನಾಚಿಕೆಯಾಯಿತು. ನಾನ್ಯಾಕೆ ಒಳ್ಳೆಯ ಲೇಖಕನಾಗಿಲ್ಲವೆಂದು ಆಗ ಯೋಚಿಸಿದೆ. ಮಹಾದೇವ, ತೇಜಸ್ವಿಯಂಥವರಂತೆ ಒಳ್ಳೆಯ ಕಥೆ ಬರೆಯಲಾಗದಿರುವುದರ ಸೂಚನೆಯನ್ನು ವಡವಾಟಿ ಸೂಚ್ಯವಾಗಿ ನೀಡಿದರು. ಯಾಕೆ ಬೇಕೂಂತ ಧಿಮಾಕು ದೂರ ಇಟ್ಟು ಮೌನಿಯಾಗಿ ಬಿಟ್ಟೆ. ಔಪಚಾರಿಕವಾಗಿ ಅದು ಹ್ಯಂಗೆ ಹೋಯ್ತು; ಎಲ್ಲಿಗೆ ಹೊಂಟಿದ್ರಿ; ಬಸ್ಸಿನ್ಯಾಗ ಹೋಯ್ತೋ ರೈಲಿನಾಗೆ ಹೋಯ್ತೋ ಅಂತ ಹಿತೈಷಿಯಂತೆ, ಅಭಿಮಾನಿಯಂತೆ ಕೇಳಿದೆ. ಕ್ಲಾರಿನೆಟ್ಟಿನಂಥ ವಾದ್ಯ ಕಳೆದಿದ್ದರಿಂದಲೇನೋ ಹೊರಗಡೆ ಗಾಳಿ ಹುಚ್ಚು ಹಿಡಿದು ಬೀಸತೊಡಗಿತ್ತು. ತೆಂಗಿನ ಗರಿಗಳು ತಾವೂ ಒಂದೊಂದು ವಾದ್ಯಗಳೆಂಬಂತೆ ವಿಚಿತ್ರ ಸದ್ದು ಮಾಡುತ್ತಿದ್ದವು. ನಮ್ಮ ಓಣಿಯಲ್ಲಿಯೇ ಆರಕ್ಷಕ ಠಾಣೆ ಇದ್ದುದರಿಂದಲೇನೋ ಹೊರಗೆ ಒಳಗೆ ಮಲಗಿದ್ದ ಜನ ಬೆಚ್ಚಿಬೀಳುತ್ತಿದ್ದರು. ಕೆಟ್ಟದಾಗಿ ಕನವರಿಸುತ್ತಿದ್ದರು. ಕಬ್ಬಿಣದ ಕಿಂಡಿಗಳಿಂದ ಹೊರಗೆ ನೋಡಿದ ನನಗೆ ಇಡೀ ಓಣಿಗೆ ಲಕ್ವ ಬಡಿದಿರಬಹುದೇನೋ ಎಂಬಂತೆ ಕಂಡುಬಂದಿತು. ವಡವಾಟಿ ಅಪರೂಪದ ಏರಿಳಿತಗಳಿದ್ದ ಧ್ವನಿ ಸಾಧಿಸಿ ಕಳೆದ ವಾದ್ಯದೊಂದಿಗಿನ ತಮ್ಮ ಮೂರು ದಶಕದ ಸಂಬಂಧ ಕುರಿತು ಹೇಳುತ್ತಿದ್ದರು. ತಮ್ಮ ಗುರು ಪಂಡಿತ್ ಸಿದ್ಧರಾಮ ಜಂಬಲದಿನ್ನಿಯವರ ಬಗ್ಗೆ; ಅದಕ್ಕೂ ಪೂರ್ವದಲ್ಲಿ ತಾವು ಮದುವೆ ಮುಂಜಿ ಬ್ಯಾಂಡ್ ಪಾರ್ಟಿಗಳಲ್ಲಿ ಹತ್ತು ಐದಕ್ಕೆ ಕ್ಲಾರಿನೆಟ್ ಬಾರಿಸುತ್ತಿದ್ದುದರ ಬಗ್ಗೆ; ದಾರಿದ್ರ್‍ಯದ ನಡುವೆಯೂ ಅಹರ್ನಿಶಿ ಸಂಗೀತಾಭ್ಯಾಸ ಮಾಡಿದ್ದರ ಬಗ್ಗೆ; ಹೇಳಿಕೊಂಡು ಮನಸ್ಸು ಹಗುರಮಾಡಿಕೊಂಡರು. ಉತ್ತಮ ತಬಲಾವಾದಕರಾಗಿದ್ದ ತಮ್ಮ ತಂದೆ ಬುಡ್ಡಪ್ಪನವರ ಬಗ್ಗೆ; ಶ್ರೇಷ್ಠ ಶಹನಾಯಿ ವಾದಕರಾಗಿದ್ದ ತಾತ ಹೋಬಳಪ್ಪನವರ ಬಗ್ಗೆ ಹೇಳುವಾಗ ಕಣ್ಣು ತುಂಬಿಕೊಂಡರು.
ನಾನು ಅವರ ಕ್ಲಾರಿನೆಟ್ ವಾದನವನ್ನು ಕೇಳಿರುವ ಅಪರೂಪದ ಕ್ಷಣಗಳನ್ನು ನೆನಪಿಸಿಕೊಂಡೆ. ಮೀಂಡ್ ಹಾಗೂ ಗಮಕ ಪ್ರಕಾರಗಳನ್ನು ವೇಗವಾಗಿ ನುಡಿಸಲು ವಡವಾಟಿ ಮಾತ್ರ ಸಮರ್ಥರಾಗಿದ್ದರು. ದೃತ್ಲಯದ ಆವೇಗದೊಂದಿಗೆ ಭೈರವಿಯ ಹಂತಕ್ಕೆ ತಲಪಿ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿ ಮಾಡುವುದರಲ್ಲಿ ವಡವಾಟಿ ಸಿದ್ಧಹಸ್ತರು. ಇತರೇ ವಾದ್ಯಗಳೊಂದಿಗೆ ವಡವಾಟಿಯವರ ಜುಗಲ್ಬಂದಿಯೂ ಅಷ್ಟೇ ಸುಪ್ರಸಿದ್ಧ. ಕಳೆದೆರಡು ವರ್ಷದ ಹಿಂದೆ ಮೈಸೂರಿನಲ್ಲಿ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೋದಂಡರಾಮರ ನಾಗಸ್ವರದೊಂದಿಗಿನ ಅಥವಾ ಮದ್ರಾಸಿನಲ್ಲಿ ಕದ್ರಿ ಗೋಪಾಲನಾಥರ ಸ್ಯಾಕ್ಸೋಫೋನಿನೊಂದಿಗಿನ ಜುಗಲ್ಬಂದಿಯನ್ನಾಗಲೀ ನೆನಪಿಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಮುಂಬಯಿಯ ಸೂರಸಿಂಗಾರ್ ಸಂಸ್ಥೆಯವರು ಮಿತ್ರ ವಡವಾಟಿಯವರಿಗೆ ‘ಸೂರಮಣಿ’ ಪ್ರಶಸ್ತಿ ನೀಡಿದಾಗ ಹೆಚ್ಚು ಸಂತೋಷಪಟ್ಟವನು ನಾನು. ಇಂಥ ಕೀರ್ತಿ ಭಾಜನಕ್ಕೆ ಕಾರಣವಾದ ವಾದ್ಯದ ಬಗ್ಗೆ ಅಸಡ್ಡೆಯ ಮಾತಾಡಿದೆನಲ್ಲಾ! ಪಾಪ ನರಹಿಂಹಲು ಎಷ್ಟು ನೊಂದುಕೊಂಡರೇನೋ! ದೇವರೆ ಅರಿತು ನುಡಿಯುಂತೆ ಮಾಡು. ಕೈಕೈ ಹಿಚುಕಿಕೊಂಡೆ. ಆದರೆ ಅನ್ಯಥಾ ಭಾವಿಸುವಷ್ಟು ವಡವಾಟಿ ಸಿಲ್ಲಿಯಾಗಿರಲಿಲ್ಲ. ಆತ ತಮ್ಮ ಪಾಡಿಗೆ ತಾವು ಹೇಳುತ್ತಲೇ ಇದ್ದರು. ಹೊಸಪೇಟೆಯ ಹೊರವಲಯದಲ್ಲಿ ನೋಡಿಕೊಂಡಾಗ ಕ್ಲಾರಿನೆಟ್ಟಿನ ಪೆಟ್ಟಿಗೆ ಇತ್ತಂತೆ. ಹೊಸಪೇಟೆ ಬಸ್ಸು ನಿಲ್ದಾಣದಲ್ಲಿ ನೋಡಿಕೊಂಡಾಗ ನಾಪತ್ತೆಯಾಗಿತ್ತಂತೆ. ಅಲ್ಲಿ ಇಲ್ಲಿ ಹೇಳಿಕೊಂಡರಂತೆ. ಇಲ್ಲಿ ಅಲ್ಲಿ ಹುಡುಕಾಡಿದರಂತೆ; ಸಿಗದೆ ಹೋದರೆ ತಾನು ಮುಂದೆಂದೂ ಕ್ಲಾರಿನೆಟ್ಟೇ ನುಡಿಸುವುದಿಲ್ಲವೆಂದು ಶಪಥ ಸಹ ಮಾಡಿಬಿಟ್ಟರಂತೆ; ಮತ್ತೆ ಗದ್ಗದಿತರಾದರು. ಹೇಗೆ ಸಂತೈಸಬೇಕೆಂದು ನನಗೆ ತಿಳಿಯಲಿಲ್ಲ. ಅವರ ವ್ಯಾಕುಲತೆ ವಿಚಿತ್ರವಾಗಿ ಕಂಡಿತು. ನನಗೆ ಗೊತ್ತು ಅವರು ತಮ್ಮ ವಾದ್ಯ ಇಡುವ ಪೆಟ್ಟಿಗೆ ನೋಡಿದ ಎಂಥವರಿಗೂ ಅದು ನಗನಾಣ್ಯ ತುಂಬಿದ ಪೆಟ್ಟಿಗೆಯಂತೆ ಭಾಸವಾದರೆ ಅಚ್ಚರಿಯಿಲ್ಲ. ಷಹಜಾನ್ ಚಕ್ರವರ್ತಿ ಕೂಹಿನೂರು ವಜ್ರವನ್ನು ಅಂಥ ಪೆಟ್ಟಿಗೆಯಲ್ಲಿಟ್ಟಿರಲಿಲ್ಲವೇನೋ! ಪೆಟ್ಟಿಗೆ ಒಳಹೊರಗಿನ ಡೆಕೋರೇಷನ್ನೇ ಹಂಗಿತ್ತು. ಪವಿತ್ರವಾದುದನ್ನು ದುಬಾರಿಯಾದುದರೊಳಗೆ ಇಟ್ಟರೆ ಕಳುವಾಗದೆ ಇದ್ದೀತೆ! “ವಡವಾಟಿ…. ಆದದ್ದಾಯ್ತು. ಆ ಪೆಟ್ಟಿಗೇನ ಕಳುವು ಮಾಡ್ದೋರ್‍ಗೆ ಖಂಡಿತ ನಿರಾಸೆ ಆಗಿರತೈತಿ. ನಿಮ್ಮನ್ನು ಬಯ್ಕೊಂಡಿರ್‍ತಾರೆ. ಹೊಸಪೇಟೇಲಿ ತಾವರಗಿ ಅಂತ ಸರ್ಕಲ್ ಇನ್ಸ್ಪೆಕ್ಟರಿದ್ದಾರೆ. ಖಂಡಿತ ಹುಡುಕಿಸಿ ಕೊಡ್ತಾರೆ, ಚಿಂತೆಮಾಡದೆ ನಿದ್ದೆ ಮಾಡ್ರಿ” ಅಂತ ಹೇಳಿದೆ.
ಇಡೀ ರಾತ್ರಿ ನಿದ್ದೆಯಲ್ಲಿ ವಡವಾಟಿ ನನ್ ಕ್ಲಾರಿನಿಟ್ಟೂ ನನ್ ಕಾರಿನೆಟ್ಟೂ ಅಂತ ಕನವರಿಸುತ್ತಿದ್ದುದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ನನಗೂ ದುಃಖ ಒತ್ತರಿಸಿ ಬಂದಿತು. ಜೀವಂತ ಮನುಷ್ಯನೊಳಗೆ ಕ್ರಮೇಣ ಆವರಿಸಿಕೊಂಡು ಪ್ರಭುತ್ವ ಸ್ಥಾಪಿಸಿಬಿಡುವ ನಿರ್ಜೀವ ವಸ್ತುವಿಗಿರುವ ಶಕ್ತಿಯಾದರೂ ಎಂಥದ್ದು! ಸ್ಪರ್ಶ ಮತ್ತು ದೃಷ್ಟಿಯಿಂದ ನಿರ್ಜೀವ ವಸ್ತುವಿನೊಳಗೆ ಪ್ರಾಣಸಂಚಾರವನ್ನು ಕಲ್ಪಿಸಿಕೊಳ್ಳುವುದರಲ್ಲಿ ನಮ್ಮ ಪವಿತ್ರ ಭಾರತ ದೇಶವು ಹೆಸರಾಗಿಹುದು. ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮವೂ ಸಾಕಷ್ಟು ಶ್ರದ್ಧಾಳುಗಳ ಸಮಕ್ಷಮದಲ್ಲಿ ನಡೆಯುವುದು ಇದಕ್ಕಾಗಿಯೇ ಇದ್ದೀತು. ಇನ್ನು ವಡವಾಟಿ ಸುಪ್ರಸಿದ್ಧ ಕಲಾವಿದನಾಗಿದ್ದರೂ ಆತ ಹುಲುನರನೇ. ಹೀಗೆ ಯೋಚಿಸುತ್ತ ಯಾವಾಗಲೋ ನಿದ್ರಾದೇವಿಗೆ ವಶನಾದೆನು ಎನ್ನುವುದೇ ಸುಳ್ಳು. ನನಗೂ ಏನೇನೋ ಕನಸು ಕನವರಿಕೆಗಳು.
ಸೂರ್ಯೋದಯಕ್ಕೂ ಪೂರ್ವಕಾಲದಲ್ಲಿ ನಾನೇ ವಡವಾಟಿಯವರನ್ನು ಎಬ್ಬಿಸಿದೆನೋ, ವಡವಾಟಿಯವರೇ ಹುಲುನರನೆಂದು ಹೆಸರಾದ ನನ್ನನ್ನು ಎಬ್ಬಿಸಿದರೋ? ಒಟ್ಟಿನಲ್ಲಿ ಇಬ್ಬರೂ ನಸುಕಿನಲ್ಲಿ ಮಾತನಾಡುತ್ತ ಕೆರೆಕಡೆ ಹೋಗಿಬಂದಾಗಲೇ ಹೊಹೋ ಎದ್ದಿದ್ದೇವೆ ಎಂದು ಗೊತ್ತಾದದ್ದು. ಸ್ನಾನವೇ ಮೊದಲಾದ ಪ್ರಾತಃಕಾಲದ ವಿಧಿಗಳನ್ನು ಪೂರೈಸುವ ಹೊತ್ತಿಗೆ ಅನ್ನಪೂರ್ಣ ಬಿಸಿಬಿಸಿ ಮಂಡಾಳು ಒಗ್ಗರಣೆ ಮಾಡಿದ್ದಳು. ಅದನ್ನು ಸೇವಿಸುವಾಗ ವಾರ್ತೆಗಳು ಬಂದವು. ಅದರ ತುಂಬ ಭಯ ಮತ್ತು ಹಿಂಸೆಯ ಸುದ್ದಿಗಳೇ. ಅದೇತಾನೆ ಬಂದ ದಿನಪತ್ರಿಕೆಯನ್ನು ಗುಂಡುಸೂಜಿಯಿಂದ ಚುಚ್ಚಿದರೆ ರಕ್ತ ಹನಿಯಬಹುದೆನಿಸಿ ಬಿಟ್ಟಿತು. ಅದನ್ನು ಮುಟ್ಟಿದಾಗ ಕಳೇಬರವನ್ನು ಮುಟ್ಟಿದ ಅನುಭವವಾಗುತ್ತಿತ್ತು. ಅಂಥ ಸುದ್ದಿಗಳಿಂದಾದ ವೃತ್ತಪತ್ರಿಕೆಗಳು ಕಳೇಬರಗಳಾಗದಿರುವವೇ!
ಹಾಗೂ ಹೀಗೂ ಹೊರಟು ಸುಸೂತ್ರವಾಗಿ ಹೊಸಪೇಟೆ ತಲಪಿ ನೆಮ್ಮದಿಯ ಉಸಿರುಬಿಟ್ಟು ಸರ್ಕಲ್ ಇನ್ಸ್ಪೆಕ್ಟರ್ ತಾವರಗಿಯವರನ್ನು ಕಂಡೆವು. “ಓಹೋ ಬನ್ನಿ ಸಾಹೇಬರೇ” ಎಂದು ತಮ್ಮ ಇತಿಹಾಸ ಪ್ರಸಿದ್ಧ ನಗೆಯಿಂದ ಸ್ವಾಗತಿಸಿ ಸತ್ಕರಿಸಿದರು. ಹಿಂಗಿಂಗೇ ಅಂತ ಹೇಳಿದೆ. ಅವರು ತುಂಬ ಸಂತೋಷಪಟ್ಟರು. ಕಳವು ಮಾಡಿದವನು ಅದನ್ನು ಬ್ಯಾಂಡ್ ಕಂಪೆನಿಯವರಿಗೇ ಮಾರಿರಬೇಕೆಂದು ಅವರು ತರ್ಕಿಸಿದರು. ಮಂಗಲವಾದಕರಾದ ನಗರದ ಎಲ್ಲ ಮಂಗಲಿಗಳ ಬಳಿಗೆ ಪೀಸಿಗಳನ್ನು ಓಡಿಸಿದರು. ಹಾಗೆ ಕೆಲವು ಕಡೆ ಫೋನು ಸಹ ಮಾಡಿದರು. ಸ್ವಲ್ಪ ಹೊತ್ತು ಅದೂ ಇದೂ ಹರಟಿದೆವು. ನಮ್ಮ ಪ್ರಯತ್ನವೂ ಇರಲಿ ಅಂತ ಹುಡುಕಲು ಹೊರಡಲುದ್ಯುಕ್ತರಾದೆವು. ಅದೇ ಸಮಯಕ್ಕೆ ಅವರ ಶ್ರೀಮತಿಯವರು ಜ್ಯೂಸ್ ತಂದರು. ಕುಡಿಯುವಾಗ ತಾವರಗಿಯವರು ಇತ್ತೀಚೆಗೆ ಕರ್ನಾಟಕಕ್ಕೂ ನುಸುಳಿರುವ ಉಗ್ರಗಾಮಿಗಳನ್ನು ಕುರಿತು ಮಾತನಾಡಿದರು. ಅನಂತರ ನಾವು ಹೊರಟೆವು.
ಕೃಷ್ಣದೇವರಾಯ ತನ್ನ ಮೆಚ್ಚಿನ ರಾಣಿ ಚಿನ್ನಾದೇವಿಯ ಹೆಸರಿನಲ್ಲಿ ನಿರ್ಮಿಸಿದ್ದ ಆ ನಗರ ಇತಿಹಾಸ ಪ್ರಸಿದ್ಧ ಕೊಚ್ಚೆಗಳಿಗೆ ಹೆಸರಾಗಿತ್ತು. ಸುತ್ತಬಾರದ ಕಡೆ ಸುತ್ತಿದೆವು. ನಗರದ ಎಲ್ಲಾ ಬ್ಯಾಂಡ್ ಮಾಸ್ಟರ್ ಬಳಿಗೆ ಹೋಗಿ ಗೋಳು ತೋಡಿಕೊಂಡೆವು. ಅವರೆಲ್ಲ ಚಹಾದೊಂದಿಗೆ ಪ್ರಕಟಿಸಿದ ಅನುಕಂಪವನ್ನು ಗತ್ಯಂತರವಿಲ್ಲದೆ ಸ್ವೀಕರಿಸಿದೆವು. ಅನುಕಂಪದ ಭಾರದಿಂದ ವಡವಾಟಿ ಜಗ್ಗಿಹೋದರು. ನನ್ನ ಪ್ರೀತಿಯ ಸಂಗೀತಗಾರನ ಮುಖ ಮುದುಡಿದ್ದು ನೋಡಿ ಏನು ಮಾಡುವುದಪ್ಪಾ ಶಿವನೆ ಎಂದು ಕೈಕೈ ಹಿಚುಕಿಕೊಂಡೆ. ನಮ್ಮ ಮುಖಗಳನ್ನು ನೋಡಿದ ಎಂಥವರೂ ‘ಏನೋ ಕಳೆದುಕೊಂಡಿರುವ’ರೆಂದು ಸುಲಭವಾಗಿ ಊಹಿಸಬಹುದಾಗಿತ್ತು.
ಎಲ್ಲಿ ಬ್ಯಾಂಡಿನ ಸದ್ದು ಬರುವುದೋ ಅಲ್ಲಿಗೆ ಓಡುತ್ತಿದ್ದೆವು. ಮದುವೆ ಮೆರವಣಿಗೆಯ ಬ್ಯಾಂಡು ಸೆಟ್ಟು; ಶ್ರೀಮಂತ ವರ್ತಕನ ಶವದ ಮೆರವಣಿಗೆಯ ಬ್ಯಾಂಡುಸೆಟ್ಟು ಹೀಗೆ ಎಲ್ಲ ತಪಶೀಲು ಮಾಡಿದೆವು. ಕೊಟ್ಟೂರಿನಿಂದ ಸಮಾಳ ನಂದಿಕೋಲು ಸಂಘದ ಬೆಣ್ಣೆ ಬಸವರಾಜನನ್ನೂ ಕೇಳಿನೋಡಿದೆವು. ಆದರೆ ಪ್ರಯೋಜನವಾಗಲಿಲ್ಲ.
ಸಿಕ್ಕಿರಬಹುದೇನೋ ಅಂತ ತಾವರಗಿಯವರ ಬಳಿಗೆ ದೋಸೆ ತಿನ್ನುವುದನ್ನು ಬಿಟ್ಟು ಓಡಿದೆವು. ಸುಮ್ಮನೆ ಕೂತಿರದಿದ್ದ ಅವರು “ಹೆದರಬ್ಯಾಡ್ರಿ ಸಾಹೇಬ್ರ…. ಧೈರ್ಯ ತಂದ್ಕೊಳ್ರಿ” ಅಂದರು. ಕಳ್ಳನನ್ನು ಹುಡುಕಲು ಪೋಲೀಸರೊಂದಿಗೆ ಮಾಜಿ ಕಳ್ಳರನ್ನೂ ಬಿಟ್ಟಿದ್ದರು. ಒಂದು ಹಳೆಯ ಕ್ಲಾರಿನೆಟ್ಟಿನಂಥ ವಾದ್ಯವೂ ತಮ್ಮ ತಲೆಯನ್ನು ಇಷ್ಟು ತಿನ್ನಬಹುದೆಂದು ಅವರು ಅಂದುಕೊಂಡಿರಲಿಲ್ಲ.
ನಾವು ಅಲ್ಲಿಂದ ಹೊರಟು ಹುಡುಕುತ್ತ ಹುಡುಕುತ್ತ ಬಸ್ ನಿಲ್ದಾಣಕ್ಕೆ ಬಂದೆವು. ಅಲ್ಲಿಂದ ಬಜಾರಕ್ಕೆ ಹೋದೆವು. ಅಲ್ಲಿಂದ ಗಲ್ಲಿಗಳಿಗೆ ಹೋಗಿ ರೈಲ್ವೆ ಸ್ಟೇಷನ್ನಿಗೆ ಬಂದೆವು. ಪ್ಲಾಟ್ಫಾರಮಿನ ಪಡುಗಡೆಯಲ್ಲಿ ಜನ ಗುಂಪು ಸೇರಿದ್ದು ನಮ್ಮ ಗಮನಕ್ಕೆ ಬಂತು. ಅಲ್ಲಿ ಹಾವಾಡಿಸುವವರು ಅಥವಾ ಆರುಕಾಲಿನ ಮನುಷ್ಯ ಇರಬಹುದಂತ ಅಲ್ಲಿಗೆ ಹೋದೆವು. “ಏಯ್ ದೂರ ಸರೀರಿ, ಹತ್ರ ಹೋಗಬ್ಯಾಡ್ರಿ….. ಈಗ ಸ್ಫೋಟಿಸಬಹುದು….. ಆಗ ಸ್ಫೋಟಿಸಬಹುದು….. ಯಾರೋ ಪಾಪಿಗಳು ಬಾಂಬಿಟ್ಟು ಹೋಗ್ಯಾರ….” ಎಂದು ಗೊಣಗುತ್ತ ಜನ ಹತ್ತಿರವೂ ಹೋಗದೆ ದೂರವೂ ಸರಿಯದೆ ಒದ್ದಾಡುತ್ತಿದ್ದರು. ಏನದು ನೋಡೇ ಬಿಡೋಣ ಅಂತ ಜನರೊಳಗೆ ತೂರಿಕೊಂಡು ಹೋದೆವು. ಅಲ್ಲಿದ್ದ ವಸ್ತುವನ್ನು ನೋಡಿ ವಡವಾಟಿಗಾದ ಸಂತೋಷ ಅಷ್ಟಿಷ್ಟಲ್ಲ. ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹುಡುಕುತ್ತಿದ್ದ ಕ್ಲಾರಿನೆಟ್ ಬಾಕ್ಸ್ ಅಲ್ಲಿ ಬಿಕೋ ಅಂತ ಬಿದ್ದಿತ್ತು. ಅದರೊಳಗೆ ಕ್ಲಾರಿನೆಟ್ ಇರುವುದೋ ಇಲ್ಲವೋ! ಕೇವಲ ಬಾಕ್ಸ್ ಮಾತ್ರವೋ! ಬಾಕ್ಸ್ ಮಾತ್ರ ಅದ್ಭುತ ಅಲಂಕಾರದಿಂದ ಹೊಳೆಯುತ್ತ ಎಲ್ಲರ ಭಯಕ್ಕೆ ಕುತೂಹಲಕ್ಕೆ ಕಾರಣವಾಗಿತ್ತು. ಅದನ್ನು ಪಡೆಯಲು ಹೋಗಲಿದ್ದ ವಡವಾಟಿಯವರನ್ನು ತಡೆದೆ. ಪೋಲೀಸನೊಬ್ಬ ದುತ್ತನೆ ಪ್ರವೇಶಿಸಿ ಎಲ್ಲರನ್ನೂ ದೂರ ಸರಿಸಿದ. ಅದರ ಬಳಿಗೆ ಸುಳಿವ ಧೈರ್ಯ ಯಾರಿಗೂ ಬರಲಿಲ್ಲ. ಅವರಿಗೇನು ಗೊತ್ತು ಅದರ ತಳಬುಡ? ಮುಟ್ಟಿದರೆ ಸಾಕು ಸ್ಫೋಟಿಸುತ್ತದೆಂಬಂತೆ ಜನ ಮೂಕವಿಸ್ಮಿತರಾಗಿದ್ದರು. ಅಷ್ಟರಲ್ಲಿ ಏನಾಯಿತು? ಬಾಲಕನೋರ್ವ ಜನರ ಗುಂಪೊಳಗಿಂದ ತೂರಿಬಂದ. ಐದಾರು ವರ್ಷ ವಯಸ್ಸಿನ ಆ ಬಾಲಕ ಅನಾಥ ಎಂಬ ಪದಕ್ಕೆ ಪರ್ಯಾಯವೆಂಬಂತಿದ್ದ. ಹಿಂದುಮುಂದು ಯಾರೂ ಇರದಿದ್ದ ಅವನಿಗೆ ಭಯದ ಕಾಳಜಿ ಇರಲಿಲ್ಲ. ಅವನಿಗೆ ಆಡಲೊಂದು ಆಟಿಗೆ ಬೇಕಾಗಿತ್ತು. ಅದು ಅಲ್ಲಿದೆ! ತನ್ನಂತೆ ಅದೂ ಲಾವಾರಿಸ್. ಅದಕ್ಕೆ ತಾನು ಗತಿ; ತನಗೆ ಅದು ಗತಿ. ಜನ ಎಷ್ಟು ತಡೆಯಲೆತ್ನಿಸಿದರೂ ಬಾಲಕ ಮುಂದೆ ಮುಂದೆ ನಡೆದ. ಜನ ತಾವು ಸತ್ತೇ ಹೋಗುತ್ತೇವೆ ಎಂದು ಭಾವಿಸಿ ಹಿಂದೆ ಹಿಂದೆ ಸರಿದರು. ಆದರೆ ಆ ಬಾಲಕ ಆ ಪೆಟ್ಟಿಗೆ ಕಡೆ ಹೋಗುತ್ತಿದ್ದ ರೀತಿ ನೋಡಿದ ನನಗೆ ಶ್ರೀ ಕೃಷ್ಣಪಾಂಡವೀಯಂ ಸಿನಿಮಾದಲ್ಲಿ ದುರ್ಯೋಧನ ಪಾತ್ರಧಾರಿ ಎನ್ಟಿಆರ್ ಮಯನ ಸಭೆಗೆ ಹೋದ ದೃಶ್ಯ ನೆನಪಾಯಿತು. ಬಾಲಕ ಪೆಟ್ಟಿಗೆಗೆ ಕೈ ಹಾಕಿದೊಡನೆ ಜನ ಅಂಗೈಲಿ ಪ್ರಾಣ ಹಿಡಿದುಕೊಂಡು ಓಡಿದರು. ಬಾಲಕ ಪೆಟ್ಟಿಗೆ ತೆರೆದ. ಅದರೊಳಗಿಂದ ಕ್ಲಾರಿನೆಟ್ ಎತ್ತಿಕೊಂಡ. ಅಪೂರ್ವ ನಗೆ ಮೇಳೈಸಿದ್ದ ಅವನು ಅದರೊಂದು ತುದಿಯನ್ನು ಬಾಯಲ್ಲಿಟ್ಟುಕೊಂಡು ಪೀಯ್…..ಪೀಯ್ ಅಂತ ನುಡಿಸತೊಡಗಿದ.
ವಡವಾಟಿ ನನ್ನ ಹೆಗಲ ಮೇಲೆ ಮುಖ ಇಟ್ಟು ಬಿಕ್ಕಿ ಬಿಕ್ಕಿ ಕಣೀರಧಾರೆ ಹಸಿರಿದರು. ಅದನ್ನು ವರ್ಣಿಸುವ ಶಕ್ತಿ ನನ್ನ ಶಬ್ದಗಳಿಗಿರಲಿಲ್ಲ.
*****
ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ