ಟಿಕ್ ಟಿಕ್ ಟಿಕ್ ಟಿಕ್ : ಓಹ್! ಗಡಿಯಾರ!!

ನಿಮಗೆಲ್ಲಾ ಮಾರ್ಕೆಟ್ವೇನ್ ಎಂದು ಪರಿಚಿತನಾಗಿರುವ ನನ್ನ ಗೆಳೆಯ ಸಾಮ್ಯುಯಲ್ ಲಾಂಗಾರ್ನ್ ಕ್ಲೆಮಿನ್ಸ್‌ಗೆ ಆಗ ಮೂವ್ವತ್ನಾಲ್ಕು ವರ್ಷಗಳಾಗಿದ್ದವು. ಅವನಾಗಲೇ ಕಥೆ ಬರೆಯುವುದರಲ್ಲಿ ನಿಷ್ಣಾತನೆಂದು ಹೆಸರು ಗಳಿಸಿದ್ದ. ನ್ಯೂಯಾರ್ಕ್ ಮ್ಯಾಗಜೀನ್, ಅಟ್ಲಾಂಟಿಕ್ ಮಂಥ್ಲೀ ಮತ್ತು ಸ್ಯಾಟರ್ಡೇ ಪ್ರೆಸ್‌ಗಳಲ್ಲಿ ಅವನ ಕಥೆಗಳು ಆಗಾಗ ಕಂಡುಬರುತ್ತಿದ್ದವು. ಅದೇ ಕಾಲಕ್ಕೆ ಸಂಜೆಯಾವಾಗಲಾದರೂ ಕುಳಿತು ಅವನ ಕೃತಿಗಳು, ಅದರ ಹಿನ್ನೆಲೆ ಇತ್ಯಾದಿ ಚರ್ಚೆ ಮಾಡುವುದು ನನಗೆ ಹಾಗೂ ವಿಮರ್ಶಕನೆಂದು ಹೆಸರು ಮಾಡುತ್ತಿದ್ದ ವಿಲಿಯಂ ಹೊವೆಲ್ಸ್‌ಗೆ ಪ್ರಿಯ ವಿಷಯವಾಗಿತ್ತು. ಅಂದು ಸಂಜೆ : ನಾನು ಮತ್ತು ಹೊವೆಲ್ಸ್ ಟ್ವೇನ್‌ನ ಆಗಮನಕ್ಕಾಗಿ ಕಾಯುತ್ತಿದ್ದೆವು.

ಟ್ವೇನ್ ಇನ್ನೂ ಬಂದಿರಲಿಲ್ಲ.
ಹೊವೆನ್ಸ್ ಟ್ವೇನ್‌ನನ್ನು ಪ್ರೀತಿಯಿಂದ ಅವನ ಹಳೆಯ ಹೆಸರಾದ ‘ಸ್ಯಾಮ್’ ಎಂದೇ ಕರೆಯುತ್ತಿದ್ದ. ಟ್ವೇನ್‌ಗೆ ಇದು ಸಾಕಷ್ಟು ಕಿರಿಕಿರಿ ಉಂಟುಮಾಡುತ್ತಿದ್ದುದು ಸ್ಪಷ್ಟವಾಗಿತ್ತು. ಅವನೂ ಹೊವೆಲ್ಸ್‌ನನ್ನು ‘ಬಿಲ್’ ಎಂದು ಕರೆದು ಸೇಡು ತೀರಿಸಿಕೊಳ್ಳುತ್ತಿದ್ದ. ನನ್ನನ್ನು ಮಾತ್ರ ಇಬ್ಬರೂ ಔಪಚಾರಿಕವಾಗಿಯೇ ಸಂಬೋಧಿಸುತ್ತಿದ್ದರು. ಇಬ್ಬರಿಂದಲೂ ನಾನು ಸ್ವಲ್ಪ ದೂರ ಉಳಿದಿದ್ದೆನೆಂದೇ ಹೇಳಬೇಕು.

ಮೀಜಿನ ಮೇಲಿದ್ದ ಅಟ್ಲಾಂಟಿಕ್ ಕೈಗೆತ್ತಿಕೊಂಡು ತಿರುವ ತೊಡಗಿದೆ. ಎಡಗೈನಲ್ಲಿ ಹೊವೆಲ್ಸ್ ಆಗ ತಾನೇ ತಯಾರಿಸಿಕೊಟ್ಟಿದ್ದ ಕಾಫಿ ಇತ್ತು. ಸಂಜೆ ಏಳಕ್ಕೆ ಹೊವೆಲ್ಸ್‌ನ ಮನೆಗೆ ಬರುತ್ತೇನೆಂದಿದ್ದ ಟ್ವೇನ್ ಮಾತ್ರ ನಾಪತ್ತೆಯಾಗಿದ್ದ.

“ತಂಪಾಗಿ ಏನಾದ್ರೂ ಕೊಡ್ಲೇ…. ಷರಿ, ಬ್ರಾಂದಿ….?” ಹೊವೆಲ್ಸ್ ಕೇಳಿದ.
“ಬೇಡ….” ಮತ್ತೊಂದು ಲೋಟ ಕಾಫಿ ಬಗ್ಗಿಸಿಕೊಳ್ಳುತ್ತಾ ಉತ್ತರಿಸಿದೆ.
ಹೊವೆಲ್ಸ್ ಮತ್ತೆ ಒಳಹೋಗಿ ಕೆಟಲ್‌ನಲ್ಲಿ ಇನ್ನೊಂದಿಷ್ಟು ಕಾಫಿ ಕಾಯಿಸತೊಡಗಿದ. ನಾನು ಪತ್ರಿಕೆ ತಿರುವಿ ಹಾಕುತ್ತಿದ್ದೆ. ಅವರು ಅಡುಗೆ ಮನೆಯಿಂದ ಬರುತ್ತಿದ್ದ ಹಾಗೆ ನಾನು ತಲೆ ಎತ್ತಿ ಮಾತನಾಡತೊಡಗಿದೆ_

“ಅಲ್ಲಾ ಏಳಕ್ಕೆ ಬರುತ್ತೇನೆಂದವ ಇನ್ನೂ ಬಂದೇ ಇಲ್ವಲ್ಲಾ ?”
“ಸ್ಯಾಮ್ ಹಾಗೆಲ್ಲಾ ತಡಮಾಡೋಲ್ಲ. ಅವನು ಏಳೂಮುಕ್ಕಾಲಾದರೂ ಬರಲಿಲ್ಲಾಂದ್ರೆ ಏನೋ ಒಂದು ಕಿತಾಪತಿ ಇರಲೇಬೇಕು.”
“ಇರಬಹುದು ಬೆಳಿಗ್ಗೆ ಭೇಟಿ ಆಗಿದ್ದಾಗ ತಡವಾದರೂ ಆಗಬಹುದೂನ್ನೋ ಸೂಚನೆ ಕೊಟ್ಟಹಾಗಿತ್ತು. ‘ಅಕಸ್ಮಾತ್ ನಾನು ತಡವಾದ್ರೆ ಸ್ಯಾಟರ್ಡೇ ಪ್ರೆಸ್ ಓದ್ತಾ ಕೂತಿರು’ ಅಂದಿದ್ದ”.
“ಹೌದಾ ? ಹಾಗಾದ್ರೆ ಅದರಲ್ಲೇ ಏನೋ ಕರಾಮತ್ತು ಇರಬೇಕು. ಈ ರೀತಿಯ ತರಲೆಗಳನ್ನು ಅವನು ಆಗಾಗ ಮಾಡ್ತಾಲೇ ಇರ್ತಾನೆ”.

ಹೊವೆಲ್ಸ್ ಮಾತನಾಡುತ್ತಲೇ ತನ್ನ ಕೋಣೆಯೊಳ ಹೊಕ್ಕ. ಸ್ಯಾಟರ್ಡೇ ಪ್ರೆಸ್ ತರುವುದಕ್ಕೆ ಎಂದು ನನಗೆ ಖಾತ್ರಿಯಿತ್ತು. ನನಗೂ ಟ್ವೇನ್‌ನ ಈ ಆಟದ ಹಿಂದಿನ ಉದ್ದೇಶವೇನಿರಬಹುದು ಎಂಬುದರ ಬಗ್ಗೆ ಕುತೂಹಲವಿತ್ತು. ಹೊವೆಲ್ಸ್ ಆಚೆ ಬರುತ್ತಿದ್ದ ಹಾಗೆ ನಾನು ನನ್ನ ಕಪ್‌ನಲ್ಲಿ ಮತ್ತೊಂದಿಷ್ಟು ಕಾಫಿ ಸುರಿದುಕೊಂಡು ಅವನ ಪಕ್ಕ ಹೋಗಿ ಕುಳಿತೆ.
ಹೊವೆಲ್ಸ್ ಪತ್ರಿಕೆ ಬಿಡಿಸಿದ.
“ಹಾಂ…. ಇಲ್ಲಿದೆ ನೋಡು_ ಒಥಿ ತಿಚಿಣಛಿh-ಚಿಟಿ iಟಿsಣಡಿuಛಿಣive ಟiಣಣಟe ಣಚಿಟe’…. ಇದೇ ಅವನು ಬರದೇ ಇರುವುದಕ್ಕೆ ಕಾರಣವಿರಬಹುದು.”
ಆ ಕಥೆ ಏನಿರಬಹುದೆಂದು ನನಗೆ ಬಹಳ ಕುತೂಹಲ ಉಂಟಾಯಿತು.
ಆದರೂ ಹೊವೆಲ್ಸ್‌ನ ಕೈಯಿಂದ ಪತ್ರಿಕೆ ಕಸಿದುಕೊಳ್ಳುವುದು ಸಭ್ಯಸ್ಥನ ಲಕ್ಷಣ ಅಲ್ಲ. ಹೊವೆಲ್ಸ್ ಓದುತ್ತಿದ್ದ ಪುಟಗಳತ್ತ ಓರೆನೋಟ ಬೀರುತ್ತಾ ಅವನ ಓದಿ ಮುಗಿಯುವುದನ್ನೇ ಕಾತರದಿಂದ ಕಾಯುತ್ತಾ ಕುಳಿತಿದ್ದೆ.

ಕಥೆ ಹೆಚ್ಚೇನೂ ಉದ್ದವಿರಲಿಲ್ಲ. ಒಂದು ಸಾವಿರ ಪದಗಳಿಗೂ ಕಡಿಮೆ ಇತ್ತೆನ್ನಬೇಕು. ಕಥೆಯನ್ನು ಓದಿ ಮುಗಿಸಿ, ಹೊವೆಲ್ಸ್ ಜೋರಾಗಿ ನಗತೊಡಗಿದ.
ನನಗೇನೂ ಆಶ್ಚರ್ಯವಾಗಲಿಲ್ಲ ; ಏಕೆಂದರೆ :
ಟ್ವೇನ್‌ನ ಕಥೆಗಳನ್ನು ಓದಿ ನಗದೇ ಇದ್ದವರು ಬಹಳ ವಿರಳ.

ಹೊವೆಲ್ಸ್ ನಗುತ್ತಲೇ:
“ಅಂತೂ ತನ್ನ ಕಥೆಯನ್ನು ನಾವು ಈ ದಿನವೇ ಓದಿ, ಅವನು ಬರೋಷ್ಟು ಹೊತ್ತಿಗೆ ಚರ್ಚಿಸಿ, ನಮ್ಮ ಅಭಿಪ್ರಾಯ ತಿಳಿಸೋಕ್ಕೆ ಸಿದ್ಧವಾಗಿರಬೇಕೂಂತ ಈ ಪ್ಲಾನ್ ಹಾಕಿದ ಹಾಗಿದೆ.”
ಎನ್ನುತ್ತಾ ಕಥೆಯನ್ನು ನನ್ನತ್ತ ಕಳ್ಳಿದ. ನಾನೂ ಕಥೆ ಓದಲಾರಂಭಿಸಿದೆ.
ಟ್ವೇನೆನ ಅತ್ಯುತ್ತಮ ಕಥೆಗಳಲ್ಲೊಂದು ಎಂದು ಹೇಳುವ ಹಾಗೇನೂ ಆ ಕಥೆ ಇರಲಿಲ್ಲ. ಈ ಬಗ್ಗೆ ಹೊವೆಲ್ಸ್ ಸಹ ನನ್ನ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ. ಇದೂ ಕೇವಲ ಮತ್ತೊಂದು ಅಣಕವಾಗಿತ್ತು ಅಷ್ಟೆ. ಈ ಬಾರಿ ಕೈ ಗಡಿಯಾರದ ರಿಪೇರಿಯವರು ಟ್ವೇನ್‌ನ ಗುರಿಗೆ ಸಿಕ್ಕಿದ್ದರು. ಹದಿನೆಂಟು ತಿಂಗಳ ಕಾಲ ಸರಿಯಾಗಿ ನಡೆದ ಗಡಿಯಾರ ನಂತರ ಕೆಟ್ಟು ಹೋದದ್ದು, ನಾಲ್ಕು ನಿಮಿಷ ತಡವಾಗಿ ನಡೆಯುತ್ತಿದೆಯೆಂದು ಗಡಿಯಾರದಂಗಡಿಗೆ ಕೊಂಡೊಯ್ದದ್ದು. ಅವನು ಏನನ್ನೋ ಮುಟ್ಟಿ ಆ ಗಡಿಯಾರ ; ತಿಂಗಳುಗಟ್ಟಲೆ ಮುಂದೆ ಹೋದದ್ದು_ಅಥವಾ ಹಿಂದೆ ಹೋದದ್ದು ಇತ್ಯಾದಿಗಳನ್ನು ತನ್ನ ವ್ಯಂಗ್ಯ ಭಾಷೆಯಲ್ಲಿ ದಾಖಲಿಸಿದ್ದ.

ನಾನೂ ಓದಿ ಮುಗಿಸಿದ ನಂತರ ಜೋರಾಗಿ ನಕ್ಕುಬಿಟ್ಟೆ. ಅವನ ಶೈಲಿಯೇ ಅಂಥದ್ದು : ಎಂತಹ ಸುಳ್ಳನ್ನು ಬೇಕಿದ್ದರೂ ಸಾವಿನ ಸುದ್ದಿ ಹೇಳುವವನ ಗಂಭೀರ ಮುಖಮುದ್ರೆ ಹೊತ್ತು ಹೇಳುತ್ತಿದ್ದ. ಕಥೆ ಹೆಣೆಯುವಾಗಲೂ ಅಷ್ಟೇ : ನೀವು ನಂಬಲೇಬೇಕು ಎಂದು ಒತ್ತಾಯ ಮಾಡುವಂತಹ ಶೈಲಿ. ಆದರೂ ಅದನ್ನೆಲ್ಲ ನಿಜವೆಂದು ನಂಬುವುದು ಕಷ್ಟವಾಗುತ್ತಿತ್ತು. ಇಂದಿಗೂ ಆ ಕಥೆ ಲಭ್ಯವಿದೆ. ಟ್ವೇನನ “Sಞeಣಛಿhs oಟಜ ಚಿಟಿಜ ಓeತಿ” ಪುಸ್ತಕದಲ್ಲಿ ಆ ಕಥೆ ಸೇರಿಸಿದ್ದ, ನಿಮಗೆ ಕಂಡುಬಂದರೆ ಖಂಡಿತವಾಗಿ ಓದಿ.

ನಾವುಗಳು ಆ ಕಥೆ ಚರ್ಚಿಸುತ್ತಿದ್ದಾಗಲೇ ಟ್ವೇನ್ ಬಂದ.
ಹೊವೆಲ್ಸ್ ಬೇಸರ ನಟಿಸುತ್ತಲೇ ಕೇಳಿದ :
“ಏನಯ್ಯಾ ಸ್ಯಾಮ್ ನಿನ್ನ ಆ ಕೆಟ್ಟ ಕಥೆ ನಮ್ಮ ಕೈಲಿ ಓದಿಸೊಕ್ಕೆ ನಿಂಗೆ ಬೇರ್‍ಯಾವ ದಾರೀನೂ ಸಿಗಲಿಲ್ವೇ ?”
ಟ್ವೇನ್ ಏನೂ ಅರ್ಥವಾಗದವನಂತೆ ಮುಖದ ಮೇಲೆ ಅಮಾಯಕ ಕಳೆ ಹೊತ್ತು ನಿಂತಿದ್ದ. ಅವನು ನಟಿಸುತ್ತಿದ್ದಾನೋ, ನಿಜವಾಗಿ ಚಕಿತನಾಗಿದ್ದಾನೋ ಹೇಳುವುದು ಕಷ್ಟವಿತ್ತು. ಕಡೆಗೂ ಅವನು ಬಾಯ್ದೆರೆದ :
“ಪ್ಯಾನ್ ಈ ಬಿಲ್ ಏನು ಹೇಳ್ತಾ ಇದ್ದಾನೇನ್ನೋದು ನಿಂಗೇನಾದ್ರೂ ಅರ್ಥವಾಯ್ತೇ ?”
“ಅದಿರಲಿ ಟ್ವೇನ್-ಈಗ ನೀನು ಯಾಕಿಷ್ಟು ತಡಮಾಡಿದೆ ಹೇಳು.”
“ತಡ ? ಈಗ ಏಳು ಗಂಟೆ ಅಲ್ವಾ ? ನೋಡು.” ಟ್ವೇನ್ ತನ್ನ ಗಡಿಯಾರ ತೋರಿಸಿದ. ಇಬ್ಬರೂ ಮತ್ತೊಮ್ಮೆ ಜೋರಾಗಿ ನಕ್ಕೆವು. ಟ್ವೇನ್ ತಲೆಯ ಮೇಲಿನ ಟೋಪಿ ತೆಗೆದು ಗೂಟಕ್ಕೆ ನೇತು ಹಾಕಿ, ತಲೆ ಕೆರೆದುಕೊಳ್ಳುತ್ತಾ ಕುಳಿತುಕೊಂಡ :

“ನಿಮಗೇನಾದ್ರೂ ಹುಚ್ಚು ಹಿಡಿದಿದ್ಯೇನು ?”
ಹೊವೆಲ್ಸ್ ಕೂಡಲೇ ನಗು ನಿಲ್ಲಿಸಿದ :
“ಸ್ಯಾಮ್ ನೀನು ಸೀರಿಯಸ್ಸಾಗಿದ್ದೀ ತಾನೇ ? ನಾವು ಈಗ ತಾನೇ ನಿನ್ನ ಕಥೆ ಓದಿ, ಅದನ್ನೆ ಚರ್ಚಿಸ್ತಾ ಇದ್ವು. ನೀನು ನಮ್ಮ ಮೇಲೆ ಹಾಕಿದ ಪ್ರಾಕ್ಟಿಕಲ್ ಜೋಕ್ ಅಂತ ಇಬ್ರೂ….”
“ಯಾವ ಕಥೆ ?”
“ಅದೇ ಗಡಿಯಾರದ ಕಥೆ”
ಈ ಬಾರಿ ನಗುವ ಸರದಿ ಟ್ವೇನ್‌ನದಾಗಿತ್ತು.
“ಓಹ್ ಖಂಡಿತವಾಗಿಯೂ ನಾನು ಅಪಾಲಜೈಸ್ ಮಾಡಿಕೋಬೇಕು. ಇದು ಸಂಪೂರ್ಣ ಕಾಕತಾಳೀಯ. ನಾನು ಸುಮ್ಮನೆ ಮಾತಿನವರಸೆಗೆ ಸ್ಯಾಟರ್ಡೇ ಪ್ರೆಸ್ ಅಂತ ಹೇಳಿದ್ದೆ. ಆದರೆ ಆ ಕಥೇಲಿ ಬರೆದಿರೋ ಗಡಿಯಾರದ ವಿಷಯ ಮಾತ್ರ ಸಂಪೂರ್ಣ ನಿಜ. ಈಗ ನೋಡಿ ಆ ಗಡಿಯಾರ ಏಳು ಗಂಟೆ ತೋರಿಸ್ತಾ ಇದೆ. ನಾವು ಇಲ್ಲಿಂದ ಹೊರಡೋಷ್ಟು ಹೊತ್ತಿಗೆ ನಿಜವಾದ ಸಮಯ ಒಂಭತ್ತಾಗಿದ್ರೂ ಹನ್ನೆರಡು ತೊರಿಸಿಯಾತು. ಅದರಲ್ಲೇನೂ ಆಶ್ಚರ್ಯವಿಲ್ಲ. ಈ ಗಡಿಯಾರ ಓಡಾಡ್ದೇ ಇರೋ ರಿಪೇರಿ ಅಂಗ್ಡೀ ಇಲ್ಲ….

ನಾವಿಬ್ಬರೂ ಆ ಗಡಿಯಾರದತ್ತ ಕುತೂಹಲದಿಂದ ನೋಡಿದೆವು. ಅನಂತರ ಬೇರೆ ವಿಷಯಗಳನ್ನು ಮಾತನಾಡುತ್ತಾ ಸಮಯ ಕಳೆದದ್ದೇ ತಿಳಿಯಲಿಲ್ಲ. ರಾತ್ರಿ ಹತ್ತಾಗುತ್ತಾ ಬಂದಂತೆ ನಾನು ಹೊತ್ತಾಯಿತೆಂದು ಎದ್ದೆ. ಟ್ವೇನ್ ಮತ್ತೆ ತನ್ನ ಗಡಿಯಾರ ನೋಡಿದ. ಅದು ಏಳೂವರೆ ತೋರಿಸುತ್ತಿತ್ತು. ಇಬ್ಬರೂ ನಮ್ಮ ಓವರ್‍ಕೋಟ್ ಧರಿಸಿ ಟೋಪಿ ಹಾಕಿಕೊಂಡೆವು. ಹೊರಗೆ ಲಘುವಾಗಿ ಹಿಮಪಾತವಾಗಿತ್ತು.
ಹೊರಬರುತ್ತಿದ್ದಂತೆ ನಾನು ಟ್ವೇನ್‌ಗೆ ಹೇಳಿದೆ :-“ಯಾಕೆ ಆ ಗಡಿಯಾರವನ್ನ ಇನ್ನೂ ಇಟ್ಕೊಂಡು ಪೇಚಿಗೆ ಸಿಕ್ಕಾಕೊಳ್ತಾ ಇದ್ದೀ ? ಅದನ್ನತ್ಲಾಗೆ ಮಾರಿ ಹೊಸ ಗಡಿಯಾರಾನಾದ್ರೂ ತಗೋಬಾರ್ದೇ ?”
“ಇಲ್ವೋ…. ಇದರಿಂದ ಸ್ವಲ್ಪ ಮೋಜು ಪಡೆಯೋಣಾಂತ ಇತ್ತು. ಆದ್ರೆ ನೀನು ಹೇಳಿದ್ದು ನಿಜ. ಈಗೀಗ ಪೇಚಿಗೆ ಸಿಕ್ಕೋ ಪರಿಸ್ಥಿತೀನೇ ಜಾಸ್ತಿಯಾಗಿದೆ. ಒಂದು ಕೆಲಸ ಮಾಡು-ಈ ಗಡಿಯಾರವನ್ನ ನಿಂಗೆ ಕೊಡ್ತೇನೆ. ನೀನು ಇದನ್ನ ರಿಪೇರಿ ಮಾಡಿಸ್ತೀಯೋ, ಮಾರ್ತೀಯೋ ಜವಾಬ್ದಾರಿ ನಿಂದು….ಸರೀನಾ ?”
ಕಡೆಗೂ ನನ್ನ ತಲೆಗೆ ಜವಾಬ್ದಾರಿಯನ್ನು ಕಟ್ಟಿ, ಟ್ವೇನ್ ಆರಾಮವಾಗಿ ಹೊರಟುಬಿಟ್ಟ.

ಟ್ವೇನ್ ಏನೋ ಗಡಿಯಾರ ಕೊಟ್ಟ. ನಾನು ಅದನ್ನು ರಿಪೇರಿ ಮಾಡಿಸಿಯೇ ಬಿಡುವ ಹುಮ್ಮಸ್ಸಿನಲ್ಲಿ ನನ್ನೊಂದಿಗೆ ಒಯ್ದೆ. ಆದರೆ ಅದನ್ನು ಒಯ್ದ ನಂತರ ನನಗೆ ಅದು ಸಾಮಾನ್ಯ ಗಡಿಯಾರವಲ್ಲ ಎಂದು ಅರಿವಾಗತೊಡಗಿತು. ಆ ಗಡಿಯಾರಕ್ಕೆ ಒಂದು ಪ್ರತ್ಯೇಕ ವ್ಯಕ್ತಿತ್ವವಿದೆಯೆಂದು ನನಗೆ ಭಾಸವಾಗತೊಡಗಿತು. ನನ್ನ ಬಳಿ ಬಂದಾಗಿನಿಂದ ಒಂದು ವಾರದ ಕಾಲ ಆ ಗಡಿಯಾರ ಸರಿಯಾಗಿಯೇ ಓಡಿತು. ನಾನು ಈಗೀಗ ನನ್ನ ಗಡಿಯಾರವನ್ನು ಬದಿಯಲ್ಲಿಟ್ಟು ಅದನ್ನೇ ದಿನವೂ ಕೈಗೆ ತೊಡುತ್ತಿದ್ದೆ. ರಾತ್ರಿ ಮಲಗುವಾಗ ನನ್ನ ಕೈ ಗಡಿಯಾರದ ಬದಿಯಲ್ಲೇ ಅದನ್ನೂ ಇಡುತ್ತಿದ್ದೆ. ಆದರೆ ಈ ಸುಖ ಶಾಂತಿ ನೆಲೆಸಿದ್ದು ಕೇವಲ ಒಂದು ವಾರ ಕಾಲ ಮಾತ್ರ. ವಾರದ ನಂತರ ಟ್ವೇನ್‌ನ ಗಡಿಯಾರ ಯಥಾಸ್ಥಿತಿಗೆ ಮರಳಿತು. ಅದನ್ನು ರಿಪೇರಿಗೆ ಒಯ್ಯುವ ಅನಿವಾರ್ಯತೆ ಕೂಡ ಉಂಟಾಯಿತು. ದುರಾದೃಷ್ಟವೆಂದರೆ ಅದೇ ರೀತಿಯ ರೋಗ ನನ್ನ ಗಡಿಯಾರಕ್ಕೂ ಅಂಟಿಕೊಂಡಿತ್ತು. ಗಡಿಯಾರದ ಟಿಕ್ ಟಿಕ್ ನಲ್ಲಾಗಬಹುದಾದ ಏರುಪೇರು-ಅಂಟುರೋಗವೆಂದು ನನಗೆ ಆ ದಿನದವರೆಗೂ ತಿಳಿದಿರಲಿಲ್ಲ.

ಈ ಏರುಪೇರು ಕಾಲಾತೀತತೆಯ ಒಂದು ಭಾವನೆಯನ್ನು ನನ್ನೊಳಗೆ ಉಂಟುಮಾಡಲು ಕಾರಣವಾಯಿತು. ಇದರ ಅಸ್ತಿತ್ವದ ಅನುಭವ ನನಗೆ, ಆ ಗಡಿಯಾರಗಳನ್ನು ರಿಪೇರಿಗೆಂದು ಹೊರಾಲಜಿಸ್ಟ್‌ನ ಬಳಿ ಕೊಂಡೊಯ್ದಾಗ ಅರಿವಾಯಿತು. ಎರಡೂ ಗಡಿಯಾರಗಳ ಸಮಯದ ಪ್ರಕಾರ ತೆರೆದಿರಬೇಕಿದ್ದ ಅವನ ಅಂಗಡಿ ಮುಚ್ಚಿತ್ತು. ಈ ವಿಚಿತ್ರ ಭಾವನೆ ನನ್ನಲ್ಲಿ ಭೀತಿ ಉಂಟುಮಾಡಿತ್ತು. ಎರಡು ದಿನಗಳ ಕಾಲ ನಾನು ಈ ರೀತಿಯ ತೊಳಲಾಟದಲ್ಲಿ ರಿಪೇರಿಯವನ ಅಂಗಡಿಯ ಮುಚ್ಚಿದ ಕದ ನೋಡುತ್ತಾ ಕಳೆದೆ. (ಅಥವಾ ಎರಡು ದಿನಗಳೆಂದು ನಾನು ಭಾವಿಸಿದ್ದೆ. ಆ ಕಾಲಮಾನದ ಕೇವಲ ಎರಡು ಘಂಟೆಗಳಾಗಿದ್ದಿರಬಹುದು ಇಲ್ಲವೇ ಎರಡು ವಾರಗಳೂ ಆಗಿರಬಹುದು. ಇಷ್ಟಕ್ಕೂ ನಿಖರವಾಗಿ ಎಷ್ಟು ಕಾಲ ಕಳೆಯಿತೆಂದು ಹೇಳಲು ನನ್ನಲ್ಲಿ ಸರಿಯಾದ ಗಡಿಯಾರವೇ ಇರಲಿಲ್ಲವಲ್ಲ !)

ಕಡೆಗೂ ಆ ಗಡಿಯಾರಗಳೆರಡೂ ರಿಪೇರಿಯವನ ಕೈ ಸೇರಿದವು. ಅವನು ಅದರ ಟಿಕ್, ಟಿಕ್ ಶಬ್ಧವನ್ನು ನಾಡಿ ಬಡಿತ ಪರೀಕ್ಷಿಸುವಂತೆ ಪರೀಕ್ಷಿಸಿದ. ಈ ಮೊದಲು ಯಾರ ಬಳಿ ರಿಪೇರಿಗೆ ಬಿಟ್ಟಿದ್ದೆವೆಂದು ಕೇಳಿದ. ಅನೇಕ ಸ್ಥಳಗಳಿಗೆ ಟ್ವೇನ್ ಒಯ್ದಿರಬಹುದೆಂದು ಹೇಳಿದೆ. ಅವನು ಮತ್ತೆ ಗಡಿಯಾರವನ್ನು ಪರೀಕ್ಷಿಸಿ ಎರಡನ್ನೂ ಒಂದು ಗಾಜಿನ ಪೆಟ್ಟಿಗೆಯಲ್ಲಿ ಹಾಕಿ ಮುಚ್ಚಿಟ್ಟು ಕೆಲಕಾಲದ ನಂತರ ಬರಹೇಳಿದ. ನಾನೂ ಅವನ ಮರ್ಜಿಗೆ ಬಿದ್ದದ್ದರಿಂದ ಅವನು ಹೇಳಿದ್ದಕ್ಕೆಲ್ಲ ತಲೆದೂಗಿದೆ.
ನಾನೀಗ ಗಡಿಯಾರ ರಹಿತನಾಗಿದ್ದದ್ದರಿಂದ ನನಗೆ ಸಮಯ ತಿಳಿಯುತ್ತಿರಲಿಲ್ಲ. ತಪ್ಪಾದ ಸಮಯ ತಿಳಿಯುವುದಕ್ಕಿಂತ ಸಮಯ ತಿಳಿಯದಿದ್ದುದೇ ವಾಸಿಯೇನೋ ! ಟ್ವೇನನಿಗೂ ಈ ಘಟನೆ ಸಾಕಷ್ಟು ಕಿರಿಕಿರಿ ಉಂಟುಮಾಡಿರಬೇಕು. ಏಕೆಂದರೆ ಸಾಧಾರಣವಾಗಿ ನಾವುಗಳು ಇಂಥ ಘಟನೆಗಳನ್ನು ಬೇಗ ಮರೆಯುತ್ತೇವೆ. ಆದರೆ ಟ್ವೇನ್ ಎಂಟು ವರ್ಷಗಳ ನಂತರ ಬರೆದ “ದ ಲವ್ಸ್ ಆಫ್ ಅಲೋಂಜೋ ಅಂಡ್ ರೊಸಾನಾ” ಕಥೆಯಲ್ಲಿಯೂ ಗಡಿಯಾರಗಳ ಬಗೆಗಿನ ತನ್ನ ಕೋಪ ತೋಡಿಕೊಂಡಿಲ್ಲ. ಆ ಕಥೆಯಲ್ಲಿ ಈ ವಾಕ್ಯವಿರುವುದನ್ನು ನೀವು ಗಮನಿಸಿರಬಹುದು :
“ಗಡಿಯಾರ ಮತ್ತೆ ತಪ್ಪು ತೋರಿಸ್ತಾ ಇದೆ. ಸಮಯ ಎಷ್ಟೂಂತ ಅಡಿಯಾರಕ್ಕೆ ಹೆಚ್ಚಿನಂಶ ತಿಳಿದಿರುವುದಿಲ್ಲ. ತಿಳಿದಿದ್ರೂನೂವೆ ಅದು ಸುಳ್ಳು ಹೇಳುತ್ತೆ, ಎರಡೂ ಒಂದೇ ಅಲ್ಲವೇ ?”
ಟ್ವೇನನ ಸಂಗತಿ ಹಾಗಿರಲಿ ಬಿಡಿ. ಅವನೇನೋ ತನ್ನ ಕೈ ಗಡಿಯಾರ ನನಗೆ ತೊಡಿಸಿ ತಾನು ಕೈ ತೊಳೆದುಕೊಂಡು ಬಿಟ್ಟ. ಅದರ ಪೀಕಲಾಟದಿಂದ ಒದ್ದಾಡಿದವನು ನಾನಲ್ಲವೇ? ? ಮೂರು ದಿನಗಳಿರಬಹುದು. ಈಗೀಗ ನಾನು ಹಳೆಯ ಕಾಲದವರ ಹಾಗೆ ನೆರಳಿನ ಉದ್ದ ನೋಡಿ ಸಮಯ ಹೇಳುವುದರಲ್ಲಿ ನಿಷ್ಣಾತನಾಗುತ್ತಿದ್ದರೂ, ಸೂರ್ಯಾಸ್ತ ಸೂರ್ಯೋದಯದ ಸಮಯಗಳ ಬಗ್ಗೆ ಸ್ವಲ್ಪ ಗೊಂದಲವಿತ್ತು. ಎರಡೂ ಸಮಯಗಳು ನನಗೆ ಏಕ ರೀತಿ ಕಾಣುತ್ತಿದ್ದುದರಿಂದ ದಿನಗಳ ಲೆಕ್ಕ ಯಾವಾಗಲೂ ತಪ್ಪುತ್ತಿತ್ತು) ಗಡಿಯಾರದಂಗಡಿಗೆ ಹೋದೆ. ನನ್ನ ಹಾಗೂ ಟ್ವೇನನ ಗಡಿಯಾರಗಳ ಬಗ್ಗೆ ವಿಚಾರಿಸಿದೆ. ಆ ಗಡಿಯಾರಗಳನ್ನ ಪ್ರತ್ಯೇಕವಾಗಿ ಎರಡು ಗಾಜಿನ ಪೆಟ್ಟಿಗೆಯಲ್ಲಿಟ್ಟಿದ್ದ. ಎರಡೂ ಪೆಟ್ಟಿಗೆಗಳನ್ನು ಮತ್ತೊಂದು ಗಾಜಿನ ಪೆಟ್ಟಿಗೆಯಲ್ಲಿಟ್ಟಿದ್ದ. ಅಂಗಡಿಯವ ನನ್ನನ್ನು ನೋಡಿದಾಕ್ಷಣ ಅರ್ಧ ದೇಹ ಬಗ್ಗಿಸಿ ನನಗೆ ವಂದಿಸಿದ. ನಂತರ ಮೃದುವಾದ, ಶೋಕಭರಿತ ದನಿಯಲ್ಲಿ ಹೇಳಿದ:

“ಮಿಸ್ಟರ್ ಪ್ಯಾನ್, ದಯಮಾಡಿ ನೀವು ಈ ಗಡಿಯಾರಗಳನ್ನ ತೆಗೆದುಕೊಂಡು ಹೋಗಿ ಇವಕ್ಕೆ ಯಾವ ಸಾಂಕ್ರಾಮಿಕ ರೋಗ ಅಂಟಿದೆಯೋ ತಿಳಿಯದು. ಆದರೆ ಒಂದೇ ಘಂಟೆಯಲ್ಲಿ ಇವು ಇತರ ಗಡಿಯಾರಗಳನ್ನೆಲ್ಲಾ ರೋಗ ಪೀಡಿತ ಮಾಡಲೆನ್ತಿಸಿದವು. ಅದೃಷ್ಟವಶಾತ್ ನಾನು ಬೇಗನೇ ನೋಡಿಕೊಂಡು ಇವನ್ನು ಪ್ರತ್ಯೇಕಿಸಿ ಇಟ್ಟೆ. ಮಿಕ್ಕವನ್ನು ಓವರ್‍ಹಾಲ್ ಮಾಡುವುದರಲ್ಲಿ ಈಗ ನನ್ನ ಸಮಯ ಕಳೆಯುತ್ತಿದೆ. ನನಗಂತೂ ಇವುಗಳ ಶಬ್ದದಿಂದ ನಿದ್ದೆಯೇ ಇಲ್ಲ. ಒಂದು ಗಡಿಯಾರ ಗಂಟೆಗೊಮ್ಮೆ ಟಿಕ್ ಎಂದರೆ, ಮತ್ತೊಂದು ಸೆಕೆಂಡಿಗೆ ನಾಲ್ಕು ಬಾರಿ ಟಿಕಿಸಿ ಇಲ್ಲಿನ ಶಾಂತಿಯನ್ನೇ ಹಾಳು ಮಾಡಿದೆ. ಇದರ ರೋಗ ಗುಣಪಡಿಸುವುದು ನನ್ನ ಕೈ ಮೀರಿದ್ದು”
ನಾನು ಮಧ್ಯೆ ಅನೇಕ ಬಾರಿ ಬಾಯಿ ಹಾಕಲು ಪ್ರಯತ್ನಿಸಿದರೂ, ಅವನು ಉರುಹೊಡೆದಿದ್ದಂತಿದ್ದ ಮೇಲಿನ ಸಾಲುಗಳನ್ನು ಮುಗಿಸುವವರೆವಿಗೂ ನನಗೆ ಅವಕಾಶ ಕೊಡಲೇ ಇಲ್ಲ. ಅವನು ಎರಡು ಪೆಟ್ಟಿಗೆಗಳನ್ನೂ ಗಾಜಿನ ದೊಡ್ಡ ಪೆಟ್ಟಿಗೆಯಿಂದ ತೆಗೆದು ನನಗೆ ಕೊಟ್ಟ.ನನಗೆ ಏನು ಮಾಡಬೇಕೋ ತೋರಲಿಲ್ಲ. ಎರಡನ್ನೂ ಒಯ್ದೆ. ಒಂದು ಸಂಜೆ ಟ್ವೇನನ ಗಡಿಯಾರವನ್ನು ಅವನಿಗೆ ವಾಪಸ್ ಮಾಡೋಣವೆಂದು ಹೋದೆ. ಅವನಿನ್ನೂ ಎದ್ದಿಲ್ಲವೆಂದು ಹೇಳಿದರು. ಆಗಲೇ ನನಗೆ ಅದು ಮುಂಜಾನೆ, ಸಂಜೆ ಅಲ್ಲ ಎಂಬ ವಾಸ್ತವ ಅರಿವಾದದ್ದು. ಸರಿ ಎಂದುಕೊಂಡು ಎರಡೂ ಗಡಿಯಾರಗಳನ್ನು ನನ್ನ ಮನೆಯಲ್ಲೇ ತಂದಿಟ್ಟುಕೊಂಡೆ.
ಆ ಗಡಿಯಾರಗಳು ಮನೆ ಹೊಕ್ಕದ್ದೇ ನನ್ನ ಯಾತನೆಗಳು ಸುರುವಾದವು. ನನಗಂತೂ ಶಾಂತಿಯೇ ಇಲ್ದವಾಯಿತು. ನಿದ್ದೆ ಸರಿಯಾಗಿ ಬರಲಿಲ್ಲವೆಂದು ಆರಾಮವಾಗಿ ಮಲಗಿದರೆ ಸ್ವಲ್ಪ ಸಮಯಕ್ಕೇ ವಿಪರೀತವಾಗಿ ಟಕಟಿಕಿಸಿ ನನ್ನನ್ನು ಎಬ್ಬಿಸಿಬಿಡುತ್ತಿದ್ದವು,. ನಾನು ಮೇರಿವಿಲಿಯಂಸ್ ಳನ್ನು ಡೇಟ್ ಮಾಡಿದರೆ ನನಗೆ ಗಡಿಯಾರದ ಶಬ್ದ ಕೇಳಿಸುತ್ತಿತ್ತು. ಗಡಿಯಾರಗಳು ಎಷ್ಟರ ಮಟ್ಟಿಗೆ ನನ್ನ ಜೀವನವನ್ನು ಆವರಿಸಿ ಬಿಟ್ಟಿದ್ದುವೆಂದರೆ ಅವು ನನ್ನ ಸಮಯದ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ನನ್ನ ಪ್ರವರ್ತನೆಯ ಬಗ್ಗೆ ಕಾಳಜಿ ವಹಿಸುತ್ತಿವೆಯೇನೋ ಎನ್ನಿಸಿಬಿಬಿಟ್ಟಿತ್ತು.
ಇದೂ ಸಾಲದೆಂಬಂತೆ ಒಂದೊಂದು ಗಡಿಯಾರ ಪ್ರತ್ಯೇಕ ಸಮಯ ತೋರಿ ಅವುಗಳಲ್ಲಿ ವಾಸ್ತವಕ್ಕೆ ಹತ್ತಿರವಾದುದು ಯಾವುದೆಂದು ನಾನು ನಿರ್ಧರಿಸುವಷ್ಟರಲ್ಲೇ ನನ್ನ ಕೆಲಸದ ಸಮಯ ಮುಗಿದುಹೋಗುತ್ತಿತ್ತು.
ಜನರಂತೂ ಈಗೀಗ ನನ್ನನ್ನು ನೋಡಿ ನಗತೊಡಗಿದ್ದರು. ನಾನು ಕೆಲಸಕ್ಕೆ ಒಂದೆರಡು ಗಂಟೆಗಳ ಕಾಲ ಮುಂಚಿತವಾಗಿಯೋ ಅಥವಾ ತಡವಾಗಿಯೋ ಹೋಗುವುದು ಸಾಮಾನ್ಯವಿತ್ತು. ಅಲ್ಲಿ ನನ್ನ ಮೇಜಿನೆದುರು ಕುಳಿತು ಕೈಯಲ್ಲಿನ ಗಡಿಯಾರವನ್ನು ಅಲ್ಲಾಡಿಸುವುದು, ಅದಕ್ಕೆ ಶಾಪಹಾಕುವುದು ಅದರ ನಾಶಕ್ಕೆ ಯೋಜನೆಗಳನ್ನು ತಯಾರಿಸುವುದು ಇತ್ಯಾದಿಗಳನ್ನು ಮಾಡುತ್ತಿದ್ದೆ. ನನಗೆ ಕಾಲದ ಪರಿವೆಯೇ ಇರುತ್ತಿರಲಿಲ್ಲ. ನಾನು ಕಾಲವನ್ನೇ ಮರೆತಂತಿತ್ತು. ನನ್ನ ಸಹೋದ್ಯೋಗಿಗಳೆಲ್ಲಾ ನನಗೆ ‘ವಾಚ್ ಮೆನ್ಸ್ ಡಿಸೀಸ್’ ಬಂದಿದೆಯೆಂದು ಹಾಸ್ಯ ಮಾಡತೊಡಗಿದ್ದರು.
ನಾನೂ ಮ್ಯಾಕ್ ಬೆತ್ ನಾಟಕದಲ್ಲಿ ಲೇಡಿ ಮ್ಯಾಕ್ ಬೆತ್ ಅರಚುವಂತೆ “ouಣ ಜಚಿmಟಿ ತಿಚಿಣಛಿh! ಔuಣ I sಚಿಥಿ….ಊeಡಿe’s ಣhe smeಟಟ oಜಿ ಣime ಚಿgಚಿiಟಿ. ಂಟಟ ಣhe ಠಿeಡಿಜಿumes oಜಿ ಂಡಿಚಿbiಚಿ ತಿiಟಟ ಟಿoಣ ಡಿeಠಿಚಿiಡಿ ಣhis ಟiಣಣಟe ತಿಚಿಣಛಿh” ಇತ್ಯಾದಿ ಅಸಂಬಧ್ಧವಾಗಿ ಅರಚುತ್ತಿದ್ದೆ. ಕಡೆಗೆ ಒಂದು ದಿನ (ಅಥವಾ ರಾತ್ರಿ; ಸಮಯ ತಿಳಿದಿಲ್ಲ) ನನ್ನನು ಡಾಕ್ಟರ ಬಳಿ ಕರೆದೊಯ್ದರು. ಆದರೆ ಬಡಪಾಯಿ ಡಾಕ್ಟರಿಗೆ ಏನೂ ಅರ್ಥವಾಗಲಿಲ್ಲ. ಮನೋರೋಗ ಇರಬಹುದೆಂದು ಅವರು ಸೈಕಿಯಾಟ್ರಿಸ್ಟ್ ಬಳಿ ಕಳುಹಿಸಿದರು. ಸರಿ ಅವರ ಬಳಿ ಹೋದದ್ದೂ ಆಯಿತು.
ರಾಬರ್ಟ್ ಪ್ಯಾಜೆಟ್ ನನ್ನನ್ನ ಪ್ರಶ್ನಿಸಿದರು:
“ಮಿಸ್ಟರ್ ಪೈಯಾನ್ ನಿಮ್ಮನ್ನು ಏನು ಕಾಡ್ತಾ ಇದೆ?”
“ನನ್ನನ್ನ? ಅದಕ್ಕೆ ಬದಲು ಈ ವಾಚನ್ನು ಪ್ರಶ್ನಿಸಬಾರದು? ಅದನ್ನು ಕಾಡ್ತಾ ಇರೋದು ಏನೂಂತ. ಯಾಕೇಂದ್ರೆ ಸ್ರಿಯಾಗಿ ನಡೀದೇ ಹುಚ್ಚುಚ್ಚಾಗಿ ಪ್ರವರ್ತಿಸಿರೋವು ಈ ವಾಚುಗಳೇ”
ಅಂದಿನ ಸಂಭಾಷಣೆ ಹೀಗೇ ಮುಂದುವರೆಯಿತು. ಸೈಕಿಯಾಟ್ರಿಸ್ ಪ್ಯಾಜೆಟ್ ನನ್ನನ್ನು ಅನೇಕ ಪ್ರಶ್ನೆ ಕೇಳಿದರು. ನಾನು ವಾಚಿನ ಬಗ್ಗೆ ಉತ್ತರಿಸಿದೆ. ಕಡೆಗೂ ಅವರಿಗೇನೂ ಅರ್ಥವಾಗಲಿಲ್ಲವೋ ಅಥವಾ ಅವರಿಗೆ ಅರ್ಥವಾದದ್ದು ನನಗೆ ಗ್ರಾಹ್ಯವಾಗಲಿಲ್ಲವೋ ಅಂತೂ ಅಲ್ಲಿಂದ ಹೊರಬಿದ್ದದ್ದಂತೂ ಸತ್ಯ.
* * * *

ಈ ಎಲ್ಲ ಕಿರಿಕಿರಿಗಳಿಂದಲೂ ರೋಸಿ ಹೋಗಿ ನಾನು ಈ ಗಡಿಯಾರಗಳನ್ನು ನಾಶಪಡಿಸಲು ಅನೇಕ ಬಾರಿ ಪ್ರಯತ್ನಿಸಿದೆ. ಒಂದು ಸಂಹೆ ಮೊದಲ ಉಪ್ಪರಿಗೆಯಲ್ಲಿದ್ದ ಆಲಿವ್ಸ್ ರೆಸ್ಟೋರಾಗೆ ಹೋಗಿ ನಿಧಾನವಾಗಿ ಕಿಟಕಿಯಿಂದ ಎರಡೂ ಡಬ್ಬಗಳನ್ನು ಆಚೆ ಎಸೆದೆ. ದುರದೃಷ್ಟವಶಾತ್ ಅದು ಒಂದು ಮಗುವಿನ ಪೆರಾಂಬು ಲೇಟರ್ ನಲ್ಲಿ ಬಿದ್ದು ಮಗುವಿಗೆ ಏಟುಬಿತ್ತಂತೆ. ಗಡಿಯಾರದ ಪೆಟ್ಟಿಗೆಯ ಮೇಲೆ ನನ್ನ ಹೆಸರು ವಿಳಾಸಗಳನ್ನು ರಿಪೇರಿಯವ ನಮೂದಿಸಿದ್ದರಿಂದ ನಾನು ಸಿಕ್ಕಿಬಿದ್ದೆ. ಸಾಲದ್ದಕ್ಕೆ ದಂಡವನ್ನೂ ಕಟ್ಟಬೇಕಾಯ್ತು.
ಮಿಸಿಸಿಪಿಯಲ್ಲಿ ಮುಳುಗಿಸಿ ಬಿಡೋಣವೆಂದು ನಾನು ಬೋಟ್ ರೈಡ್ ಹೋದೆ. ಆಗ ನನ್ನಲ್ಲಿದ್ದ ಭಯವನ್ನು ಸೂಚಿಸಲೋ ಎಂಬಂತೆ ಗಡಿಯಾರ ಜೋರಾಗಿ ಟಿಕ್ ಟಿಕ್ ಶಬ್ದಮಾಡಿತು. ಅದು ನನ್ನ ಹೃದಯದ ಬಡಿತವನ್ನೇ ಹೋಲುತ್ತಿತ್ತು, ಈ ಶಬ್ದ ಸುತ್ತಮುತ್ತ ಇದ್ದವರ ಆಕರ್ಷಣೆಗೆ ಕಾರಣವಾದ್ದರಿಂದ ಮಿಸಿಸಿಪಿಯಲ್ಲಿ ಎಸೆಯಲು ಧೈರ್ಯ ಬರಲಿಲ್ಲ. ಅದನ್ನು ಹಾಗೇ ನನ್ನ ಓವರ್ ಕೋಟ್ ಜೇಬಿನಲ್ಲಿರಿಸಿ ಬೋಟ್ ಇಳಿದದ್ದಾಯಿತು.
ಮನೆಯಲ್ಲಿ ಒಂದು ತಣ್ಣನೆ ಹವೆ ಬೀಸುತ್ತಿದ್ದಾಗ ಬೆಂಕಿಹಾಕಿ ಮೈ ಕಾಯಿಸಿಕೊಳ್ಳುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಒಂದು ಮಿಂಚಿನ ಆಲೋಚನೆ ಹೊಳೆದು ಗಡಿಯಾರವನ್ನು ಬೆಂಕಿಗೆ ತಳ್ಳಿದೆ. ಉಹುಂ…ಅದೇನೋ ತಾನು ಚಿರಾಯು ಎನ್ನುವ ಹಾಗೆ ಹೊರಪುಟಿದು ತನ್ನ ಹೊಟ್ಟೆಯ ಮೇಲೆ ಮಲಗಿಕೊಂಡಿತು. ಅಲ್ಲಿ ನೋಡಿದರೆ ” ಮೇಡ್ ಇನ್ ಸ್ವಿಟ್ಜರ್ ಲೆಂಡ್ ಫ್ಯೆರ್ ಪ್ರೂಫ್ ಷಾಕ್ ರೆಸಿಸ್ಟೆಂಟ್” ಇತ್ಯಾದಿಗಳು ಬರೆದಿದ್ದವು.
ಅಂತಿಮ ಚಲನೆಯಾಗಿ ನಾನು ಆ ಗಡಿಯಾರವನ್ನು ಅದನ್ನು ತಯಾರಿಸಿದ ಸ್ವಿಟ್ಜರ್ ಲೆಂಡಿನ ಕಂಪೆನಿಗೆ ಅಂಚೆಯ ಮೂಲಕ ಕಳಿಸಿದೆ. ಅದರೆ ಅಲ್ಲೂ ನನ್ನ ಅದೃಷ್ಟ ಸರಿಯಿರಲಿಲ್ಲ.(ಅದೃಷ್ಟ ಸರಿಯಿದ್ದರೆ ಏನು ಮಾಡಿದರೂ ಸಮಂಜಸವಾಗುತ್ತದೆನ್ನುವುದಕ್ಕೆ ಟ್ವೇನ್ ನ ಟuಛಿಞ ಕಥೆ ಓದಿ) ಕಸ್ಟಮ್ಸ್ ನ ಜನ ನನ್ನ ಮೇಲೆ ಅನುಮಾನ ಪಟ್ಟು ನನ್ನನ್ನು ನಾನಾರೀತಿಯ ಕಿರುಕುಳಗಳಿಗೆ ಒಳಪಡಿಸಿದರು. ಕಡೆಗೂ ಕೈ ಗಡಿಯಾರಗಳು ನನಗೇ ವಾಪಸ್ಸಾದವು.

* * * *
ಮತ್ತೆ ಇತರ ಕೆಲವ್ಯಕ್ತಿಗಳನ್ನು ಭೇಟಿಯಾದ ನಂತರ ಹಾಗೂ ಇತರೆಡೆಗಳಿಗೆ ಹೋಗಿಬಂದನಂತರ ಮಾರ್ಕ್ ಟ್ವೇನ್ ನನ್ನು ವಿಲಿಯಂ ಹೊವೆಲ್ಸ್ ನನ್ನು ಭೇಟಿಯಾಗುವ ಭಾಗ್ಯ ನನಗೆ ಪ್ರಾಪ್ತವಾಯಿತು. ( ಕೆಲ ಸಮಯದ ನಂತರ ಅವರುಗಳನ್ನು ಭೇಟಿಯಾದೆ ಎಂದು ಬರೆಯಬಹುದಿತ್ತು. ಆದರೆ ನನಗೆ ಕಾಲದ ಅರಿವಿಲ್ಲದ್ದರಿಂದ ಅದನ್ನೂ ಭೌತಿಕ ಮೌಲ್ಯಮಾಪನಕ್ಕೆ ಒಳಪಡಿಸುವುದು ಅನಿವಾರ್ಯವಾಗಿದೆ.) ನಾನು ಅವರುಗಳನ್ನು ಭೇಟಿಯಾಗುವಷ್ಟರಲ್ಲಿ ಅವರುಗಳು ಎರಡು ಲೋಟ ಕಾಫಿ ಕುಡಿದು ಮೂರು ಕಥೆಗಳನ್ನು ಚರ್ಚಿಸಿ ಆಗಿತ್ತಂತೆ.
” ಏನಯ್ಯಾ ಫೈ‌ಆನ್ ತಡಮಾಡಿಬಿಟ್ಟೆ” ಟ್ವೇನ್ ಕೇಳಿದ.
“ತಡ? ? ತಡ ಅಂದ್ರೇನು ಡಿಫೈನ್ ಮಾಡು.”
“ತಲೆ ಗಿಲೆ ಕೆಟ್ಟಿದ್ಯಾ? ಏನು ಈ ಥರ ಹುಚ್ಚುಚ್ಚಾಗಿ ಮಾತಾಡ್ತಾ ಇದ್ದೀಯಾ?” ಹೊವೆಲ್ಸ್ ಕೇಳಿದ.
“ತಲೆ ಕೆಟ್ಟಿಲ್ಲ ಆದರೆ ವಾಚ್ ಕೆಟ್ಟಿದೆ” (ಹೊಟ್ಟೆ ಕಿಚ್ಚಿದೆ ಎಂದು ಹೇಳುವಷ್ಟು ಸಹಜವಾಗಿ ನಾನಂದೆ) ಇಬ್ಬರಿಗೂ ಗಡಿಯಾರ ನೋಡುತ್ತಿದ್ದಂತೆ ಅರ್ಥವಾಯಿತು.
” ಇನ್ನೂ ಇದರ ರಿಪೇರಿ ಆಗಿಲ್ವೇನಪ್ಪಾ ?” ಟ್ವೇನ್ ಚಕಿತನಾಗಿ ಕೇಳಿದ. ನಂತರ ಒಂದು ಕಾಫಿ ಕುಡಿಯುವಲ್ಲಿ ಆ ಗಡಿಯಾರವನ್ನು ಏನು ಮಾಡಬೇಕೆಂಬ ಚರ್ಚೆ ಮುಂದುವರೆಯಿತು. ಟ್ವೇನ್ ಕೇಳಿದ.
” ಅದಾ ಸರಿ. ನಿಂಗೆ ಈಗ ಸಮಯ ಹೇಗೆ ತಿಳೀತಿದೆ ?”
ನಾನು ನಕ್ಕುಬಿಟ್ಟೆ.
“ಸಮಯ? ಹಾಗಂದ್ರೆ? ಈಗ ನೀನು ಸಹಿಹಾಕಲು ಪ್ರಾರಂಭಿಸಿ ಮುಗಿಸುವಷ್ಟರಲ್ಲಿ ನಾನು ಟ್ಯಾಯ್ಲೆಟ್ಟಿಗೆ ಹೋಗಿಬರ್ತೇನೆ. ಒಂದು ಕಾಫಿ ಕುಡಿಯುವಾಗ, ನಾನೊಂದು ಸಿಗರೇಟ್ ಸೇದಿ ಮುಗಿಸುತ್ತೇನೆ. ಎಲ್ಲಕ್ಕೂ ಒಂದು ಕಾಮನ್ ಡಿನಾಮಿನೇಟರ್ ಹಾಕಿದರಾಯಿತಲ್ಲವೇ ?”
“ಅಂದ್ರೆ ಕಾಲವನ್ನು ವಿಸ್ತಾರದಿಂದ ಅಳೀತಾ ಇದ್ದೀಯಾ?” ಹೋವೆಲ್ಸ್ ಕೇಳಿದ
ನಾನು: “ಖಂಡಿತವಾಗಿಯೂ ಇಲ್ಲ. ಕಾಲದಂತಹ ವಸ್ತುವಿಗೆ ಕಾಲವೇ ಮಾಪಕ. ಆದ್ದರಿಂದ ಅದನ್ನು ಬೇರೆ ಕಾಲದಿಂದ ಅಳೀತಾ ಇದ್ದೀನಿ. ಈ ಗಡಿಯಾರ ಎಷ್ಟಾದರೂ ಒಂದು ವಿಸ್ತಾರದಲ್ಲಿ ಅಡಕವಾಗಿರೋ ಭೌತಿಕ ಸಾಧನ ತಾನೇ. ನಾವು ಒಂದೇ ಸಾಧನದ ಮೇಲೆ ಅವಲಂಬಿತರಾಗೋದು ಎಷ್ಟರ ಮಟ್ಟಿಗೆ ಸ್ವಾಗತಾರ್ಹ ? ನಾನಂತೂ ಎಲ್ಲವನ್ನೂ ಸಾಪೇಕ್ಷವಾಗಿ ನೋಡುತ್ತಿದ್ದೇನೆ.ಂಜಿಣeಡಿಚಿಟಟ eveಡಿಥಿಣhiಟಿg is ಡಿeಟಚಿಣive
ಅವರಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಕಡೆಗೆ ಟ್ವೇನ್ ಹೇಳಿದ.
“ಪೈನ್ ನನಗೇಕೋ ಈ ಎಲ್ಲದಕ್ಕೂ ನಾನೇ ಕಾರಣ ಅನ್ನಿಸ್ತಾ ಇದೆ. ಎರಡೂ ಗಡಿಯಾರಗಳನ್ನು ನೀನು ನನಗೇ ಕೊಡು. ಅದಕ್ಕಿ ನಾನೊಂದು ಕಾರಣವನ್ನು ಹುಡುಕುತ್ತೇನೆ.”
“ಬೇಡ ಟ್ವೇನ್….. ನನಗೇಕೋ ಖ್ಯಾತ ಲೇಖಕನೊಬ್ಬನ ತಲೆ ಕೆಡಿಸಿದ ಅನ್ನೋ ಅಪಕೀರ್ತಿ ನನಗೆ ಬರಬಾರದು ನೋಡು.”
ಹೊವೆಲ್ಸ್ ತನ್ನ ಆಲೋಚನೆ ಮುಂದಿಟ್ಟ.
“ಇಬ್ಬರ ಗಡಿಯಾರಗಳನ್ನೂ ನಾಶ ಮಾಡುವ ಪ್ರಯತ್ನ ಮಾಡಬಾರದೇಕೆ ?”ನಾನು ಗಡಿಯಾರದ ನಾಶದಲ್ಲಿ ನಾನು ಮಾಡಿದ ವಿವರಗಳನ್ನೆಲ್ಲಾ ಅವರಿಗೆ ಹೇಳಿದೆ. ಎಲ್ಲ ಆದ ನಂತರ ಹೊವೆಲ್ಸ್ ಒಂದು ಸೊಟ್ಟ ನಗೆ ನಕ್ಕು ಹೇಳಿದ.
“ನೋಡು, ತಲೆತಲಾಂತರದಿಂದ ಗಮನಿಸಿ ನೋಡಿದರೆ ಮನುಷ್ಯ ತನ್ನ ತಪ್ಪುಗಳನ್ನು ಬಚ್ಚಿಡಲು, ಅಥವಾ ನಾಶಮಾಡಲು ಪ್ರಯತ್ನಿಸಿದಾಗ, ಯಾರಿಗೂ ತಿಳಿಯಬಾರದೆಂದುಕೊಂಡಾಗ ಅವನು ಮೊರೆ ಹೋಗುವುದು ಈ ಭೂಮಿತಾಯಿಯನ್ನು …. ಎಲ್ಲವನ್ನೂ ಹುಗಿದಿಡಬೇಕು. ಮುಂದೆ ಹುಗಿದದ್ದು ತಪ್ಪೆನಿಸಿದರೆ ಬಗೆಯಲೂ ಸಾಧ್ಯವಿರುತ್ತದೆ!”
ಹೌದೆಂದು ಇಬ್ಬರೂ ತಲೆಯಾಡಿಸಿದೆವು.
ನನ್ನ ಮನೆಯ ಹಿತ್ತಿಲಿನಲ್ಲಿ ಆರಡಿ ಆಳದ ಗುಂಡಿ ತೋಡಿ ಎರಡೂ ಗಡಿಯಾರಗಳಿಗೆ ಸಮಾಧಿ ಮಾಡಿದೆವು. ಅದೃಷ್ಟವಶಾತ್ ಅವು ಎದ್ದು ಬರಲಿಲ್ಲ. ಸಮಯ ತಿಳಿದುಕೊಳ್ಳಬೇಕಾದ ನಮ್ಮ ಯಾಂತ್ರಿಕ ಅವಶ್ಯಕತೆಗಾಗಿ ನಾವುಗಳು ಬೇರೆ ಗಡಿಯಾರಗಳನ್ನು ಕೊಂಡದ್ದೂ ಆಯಿತು. ಆದರೆ ಬಹಳ ವರ್ಷಗಳ ಕಾಲ ಅವು ನನ್ನನ್ನು ಕಾಡದೇ ಬಿಡಲಿಲ್ಲ. ಇದ್ದಕ್ಕಿದ್ದ ಹಾಗೆ ಟಿಕ್ ಟಿಕ್ ಶಬ್ದ ಕೇಳಿಸಿ ನನಗೆ ಮೈಯೆಲ್ಲಾ ನಡುಕವುಂಟಾಗುತ್ತಿತ್ತು. ಬಹಳಷ್ಟು ಜನ ಇದನ್ನು ನನ್ನ ಭ್ರಮೆ ಎಂದರು. ಇರಬಹುದು, ಎಷ್ಟೋ ಬಾರಿ ಹುಗಿದಿದ್ದ ಗಡಿಯಾರವನ್ನು
ಆಚೆಗೆ ಒಗೆದು ಅದು ಇನ್ನೂ ಹಾಗೇ ತಪ್ಪುತಪ್ಪಾಗಿ ನಡೆಯುತ್ತಿದೆಯೇನೋ ನೋಡಬೇಕೆಂದು ಆಸೆಯಾಗುತ್ತಿತ್ತು. ಆದರೆ ಹೊವೆಲ್ಸ್ ನನಗೆ ಮೊದಲೇ ತಾಕೀತು ಮಾಡಿದ್ದರಿಂದ ನಾನು ಆ ಧೈರ್ಯ ಮಾಡಲಿಲ್ಲ.
ಈ ಘಟನೆಗಳು ನಡೆದ ನಲವತ್ತು ವರ್ಷಗಳ ನಂತರ ಟ್ವೇನ್ ಮರಣಿಸಿದ. ಆ ವೇಳೆಗಾಗಲೇ ನಾವು ಭೇಟಿಯಾಗುವುದೂ ಸಾಕಷ್ಟು ಕಡಿಮೆ ಆಗಿತ್ತು. ಅಷ್ಟೊತ್ತಿಗಾಗಲೇ ಅವನು ಅಪಾರ ಸಂಪತ್ತು ಗಳಿಸಿ ಎಲ್ಲವನ್ನೂ ಕಳೆದುಕೊಂಡೂ ಬಿಟ್ಟಿದ್ದ. ಸಾಲಗಾರರಿಗೆ ಹಣ ವಾಪಸ್ ಮಾಡಲೆಂದು ಭಾಷಣಗಳ ಪ್ರಪಂಚ ಯಾತ್ರೆಯನ್ನೂ ಕೈಗೊಂಡ.
ಅವನು ಸತ್ತ ಐದು ವರ್ಷಗಳ ನಂತರ ನಾನು ನನ್ನ ಮನೆಯ ಹಿತ್ತಲನ್ನು ಬಗೆದೆ. ಆ ಗಡಿಯಾರಗಳ ಬಗೆಗಿದ್ದ ನನ್ನ ಕುತೂಹಲ ನನಗಿನ್ನೂ ತಣಿದಿರಲಿಲ್ಲ. ಈಗೀಗ ನನಗೆ ಶಬ್ದವೂ ಕೇಳಿಸುತ್ತಿರಲಿಲ್ಲವಾದ್ದರಿಂದ ( ನಿಜವಾಗಿ ಶಬ್ದ ಬರುತ್ತಿರಲಿಲ್ಲವೋ ಅಥವಾ ನಾನು ಆ ಶಬ್ದಕ್ಕೆ ಒಗ್ಗಿ ಹೋಗಿದ್ದೆನೋ ತಿಳಿಯದು) ನನಗೊಂದಿಷ್ಟು ಧೈರ್ಯವೂ ಬಂದಿತ್ತು. ಗಡಿಯಾರ ಈಗ ಹೊಡೆದುಕೊಂಡರೂ ನನಗೇನೂ ಆಗಲಾರದಷ್ಟು ಗಟ್ಟಿ ಹೃದಯದವನಾಗಿದ್ದೆನೇನೊ ಆರೂವರೆ ಅಡಿ ಆಳ ಮೂರಡಿ ಅಗಲ ಎರಡೂವರೆ ಅಡಿ ಉದ್ದದ ಹಳ್ಳ ಬಗೆದಾಗ ನನಗೆ ಮೊದಲ ಪೆಟ್ಟಿಗೆ ಸಿಕ್ಕಿತು. ಅದನ್ನು ನಾನು ಭದ್ರವಾಗಿ ಎತ್ತಿಟ್ಟುಕೊಂಡೆ. ನನಗೂ ಆ ವೇಳೆಗೆ ಸಾಕಷ್ಟು ಬಡತನ ಬಂದಿತ್ತೆಂದೇ ಹೇಳಬೇಕು.
ಗಡಿಯಾರಗಳನ್ನು ರೂಮಿಗೆ ತಂದು ಕಿವಿಯ ಬಳಿ ಇಟ್ಟೆ. ಟ್ವೇನನ ಗಡಿಯಾರ ಹೊಡೆದುಕೊಳ್ಳಲಿಲ್ಲ, ಬಹುಶಃ ಸುದೀರ್ಘ ಕಾಲ ಭೂತಳದಲ್ಲಿದ್ದುದರಿಂದ ಹಾಗೇನೋ, ಅಥವಾ ಟ್ವೇನ್ ಸತ್ತದಿನವೇ ಅದೂ ಹೊಡೆದುಕೊಳ್ಳುವುದು ನಿಂತಿತೋ….. ನನ್ನ ಗಡಿಯಾರ ಕಿವಿಯ ಬಳಿ ಇಟ್ಟಾಗ ಅದು ಕ್ಷೀಣವಾಗಿ ಹೊಡೆಯುತ್ತಿರುವಂತೆ ಭಾಸವಾಯಿತು. ಅದರ ಕ್ಷೀಣ ಧ್ವನಿ ನನಗೇಕೋ ಬಹಳವಾಗಿ ಸಾವಿನ ಭೀತಿ ತಂದೊಡ್ಡಿತು. ಅದೇ ವರ್ಷ ಫ್ಲಾರಿಡಾದಲ್ಲಿ ಟ್ವೇನನ ಅನೇಕ ವಸ್ತುಗಳ ಹರಾಜು ಆಯಿತು. ನಾನೂ ಟ್ವೇನನ ಗಡಿಯಾರವನ್ನೊಯ್ದು ಅಲ್ಲಿ ಇಟ್ಟಿದ್ದೆ, ಯಾರೋ ಮಹಾನುಭಾವ ಅದನ್ನು ೧೦,೦೦೦ ಡಾಲರ್ ಗಳಿಗೆ ಕೊಂಡ.
ಬದುಕಿದ್ದಾಗ ಅದನ್ನು ನಾಶಮಾಡಲು ಯತ್ನಿಸಿ ಅಸಫಲರಾಗಿ ಸೋತ ಅದೇ ಗಡಿಯಾರಕ್ಕೆ ಸತ್ತನಂತರ ಬಂದ ಬೆಲೆ ಈ ಡಾಲರುಗಳು!
ಫ್ಲಾರಿಡಾದಿಂದ ಹಿಂತಿರುಗುವಾಗ ನನಗೆ ಮೊದಲ ಹೃದಯಾಘಾತ ಆಯಿತು.
ಟ್ವೇನ್ ಬದುಕಿದ್ದಷ್ಟು ದಿನವೂ, ಈ ಕಥೆಯನ್ನು ನಡೆದಂತೆ ಬರೆಯಬೇಕೆಂದು ನಾನವನಿಗೆ ಅನೇಕ ಬಾರಿ ಸೂಚಿಸಿದ್ದೆ. ಆದರೆ ಟ್ವೇನನಿಗೆ ಜನ ತನ್ನ ಕಥೆಗಳನ್ನು ಲಘುವಾಗಿ ಪರಿಗಣಿಸುತ್ತಾರೆಂಬ ಭಾವನೆ ಬಲವಾಗಿ ಬೇರೂರಿತ್ತು. ‘ಕ್ರೆಡಿಬಲಿಟಿ ಇರೋದಿಲ್ಲ ಪೈನ್, ನೀನೇ ಬರಿ’ ಎಂದಿದ್ದ. ಕಡೆಗೆ ಅವನ ಜೀವನ ಚರಿತ್ರೆಯಲ್ಲೂ ಇದನ್ನೊಂದು ಘಟನೆಯಾಗಿ ಸೇರಿಸಲು ಟ್ವೇನ್ ಒಪ್ಪಲೇ ಇಲ್ಲ. ಅದಕ್ಕೇ ನಾನು ಇದನ್ನು ಒಂದು ಸ್ವತಂತ್ರ ಕಥೆಯಾಗಿ ಬರೆಯಬೇಕಾಯಿತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.