ಮಳೆ ಬರುತ್ತಿದೆ.
ಮಳೆ ಮಳೆ ಮತ್ತು ಮಳೆ.
ಪ್ರಾಸ ಬೆಳೆಯಲು ಬೇಕಷ್ಟು ಎಡೆ ಇದ್ದರೂ ಬೇಕೆಂದೇ ಬೆಳೆಯುವುದಿಲ್ಲ. ಕರಗುತ್ತದೆ. ಮಳೆ ಸುರಿಯುತ್ತಲೇ ಇದೆ.
ನೀವೆಲ್ಲ ಹೇಳುವುದು ನಿಜ. ಮಳೆಗಿಂತ ಚಂದ ಇನ್ನೊಂದಿಲ್ಲ. ಆದರೆ ಇಂಥ ಮಳೆ ಕಂಡಿದ್ದೀರ? ಇದು ಅಪೂರ್ವ ಮಳೆ. ನಿನ್ನೆ ಬಂದಿರಲಿಲ್ಲ. ನಾಳೆ ಬರುತ್ತದೆಯೇ ಗೊತ್ತಿಲ್ಲ. ನಾಳೆಯೆಂಬುದು ಇದೆಯೇ ನಿಜಕ್ಕೂ?… ಆ ನಾಳೆಯಲ್ಲಿ ನಾನಿರುತ್ತೇನೆಯೇ?…. ಇಲ್ಲದೆಯೂ ಇರಬಹುದು. ಈ ಕ್ಷಣದ್ದಾಗಿರುವುದು ಒಂದೇ. ಪರ್ಜನ್ಯಾನುದಾನುಸಂಧಾನ.
ಮಳೆ ನೀ ಯಾವೂರಿಂದ ಬಂದೆ?
ನಾಳೆಯೆಂಬುದು ಇದೆಯೇ ನಿಜಕ್ಕೂ?…
ಮಳೆ ಮಾತಾಡುವುದಿಲ್ಲ. ಸುರಿಯುವುದೊಂದೇ. ಮಳೆಯ್
ಏ ನೀನೇಕೆ ಮಾತಾಡುವುದಿಲ್ಲ? ಗುಡುಗುತ್ತದೆ. ಮಿಂಚುತ್ತದೆ. ಧುಮ್ಮಿಕ್ಕುತ್ತದೆ.
ಉತ್ತರವೆಂಬುದು ಯಾವಾಗಲೂ ಮುತ್ತಿನಂತೆ. ತಾಕತ್ತಿದ್ದರೆ ಅಂತರಾಳಕ್ಕಿಳಿಯಬೇಕು. ಮುತ್ತು ಹೆಕಿದಂತೆ ಹೆಕ್ಕಿಕೊಳ್ಳಬೇಕು. ಎಲ್ಲದಕ್ಕೂ ಎಲ್ಲೆಲ್ಲೂ ಉತ್ತರ ಸಿಗುವುದೆಂದರೆ ಹಾದಿ ಬೀದಿಗಳಲ್ಲಿಯೂ ಕಲ್ಲು ಮರಳುಗಳಿವೆಯಲ್ಲ!
ಮಳೆ-
ಮಾತಾಡುವುದಿಲ್ಲ. ಹಾಡುತ್ತದೆ. ಹರಡಿಕೊಳ್ಳುತ್ತದೆ. ಒಳಗೊಂಡು ಒದ್ದಾಡುತ್ತದೆ. ಮತ್ತೆ ಎಲ್ಲಿಗೋ ಹೋಗಿಬಿಡುತ್ತದೆ. ಬಹುಶಃ ಮೋಡ ಕವಿದೆ ಧರಿತ್ರಿಗಳು ಒಂದಲ್ಲ – ಹಲವು. ಮತ್ತೊಮ್ಮೆ ಕಾಣಬೇಕೆಂದರೆ ಕಾಯಬೇಕು. ಕಾದು ಕಾದು ಕಾಯಬೇಕು. ಕರಿಮೋಡದ ಕೊಡೆಯಡಿ. ದಿನಗಟ್ಟಲೆ.
ಸ್ವಾಧಿಷ್ಠಾನ ಚಕ್ರ. ಸ್ಥಾನ ಮೂಲಾಧಾರ ಮತ್ತು ಮಣಿಪುರ ಚಕ್ರಗಳ ನಡುವೆ. ಅಲ್ಲಿನ ತತ್ವ ‘ಅಪ್’- ಎಂದರೆ ಜಲ. ಸಿಂಧೂರ ವರಣದ ಆರು ಎಸಳುಗಳು. ಬೀಜಾಕ್ಷರಗಳು. ಅಲ್ಲಿನ ದೇವತೆ ವರುಣ. ಪ್ರತಿನಿಧಿಸುವ ಲೋಕ ಭುವರ್ಲೋಕ. ಭೌತ ಶರೀರದಲ್ಲಿ ಹೇಳುವುದಾದರೆ ಅದರ ಸ್ಥಾನ ಜನನೇಂದ್ರಿಯ ಮೂಲದಲ್ಲಿ.
…ಅರ್ಥವಾಗುವುದಿಲ್ಲ.
ಅರ್ಥವಾಗುವುದು ಅರ್ಥಮೀರಿದ ಮಳೆಯೊಂದೇ.
ಮಳೆಗೆ ಎಂತಹ ಏಕಾಂತ ದುಃಖಸುಖ ಕಲ್ಪಿಸುವ ಶಕ್ತಿ ಇದೆ! ಮಳೆ ಬಂದಾಗಲೆಲ್ಲ ಕಣ್ಣೀರಿನ ಉಗುರು ಬೆಪ್ಪಿನ ಶಾಖ ಸುಖ ಆಗುತ್ತದೆಯೇ ನಿಮಗೂ? ಪುಟ್ಟ ದಿನಗಳ ಹಾಳೆಹಾಳೆಗಳನ್ನು ಮಡಚಿ ದೋಣಿ ಮಾಡಿ ತೇಲಿ ಬಿಟ್ಟ ನೆನಪು? ಅವು ಕುಣಿಕುಣಿಯುತ್ತ ಕಣ್ಮರೆಯಾಗಿ ಬಿಟ್ಟವು.
ಕುಣಿತ…ಹೊಳಪು ನಯ ಕಾಗದದ ಮೇಲೆ ಚೈತನ್ಯನ ಕೃಷ್ಣ ಸ್ಮರಣೆ ಕುಣಿತ. ಚೈತನ್ಯ ಚರಿತಾಮೃತ. ಓದುವಾಗ ಹೊರಗೇ ಹೀಗೇ ಮಳೆ ಸುರಿಯುತ್ತಿತ್ತು. ಆಗ ಸುಮ್ಮನೆ ಓದಿ ಕೊಂಡದರ ಅರ್ಥ ಈಗ! ಶಬ್ದಗಳು ನೆನಪಿಲ್ಲ. ಚೈತನ್ಯ ದೇವನ ಮುಖ ನೆನಪಿಲ್ಲ. ನೆನಪಿರುವುದು ಕುಣಿಯುವ ಪದಗಳು, ಅವನ ಚಂದ ಕಂಬನಿ ಮತ್ತು ಆ ಪುಟಗಳ ನುಣುಪು.
“ಸ್ಮೃತಿ ಪರಿಶುದ್ಧೌ ಸ್ವರೂಪ ಶೂನ್ಯೇವ ಅರ್ಥ ಮಾತ್ರ ನಿರ್ಭಾಸ ನಿರ್ವಿತರ್ಕಾ…” ಎಮಃಡ ಪತಂಜಲಿ. ಎರಡು ಸಾವಿರದ ವರ್ಷಗಳ ಹಿಂದೆಯೇ. ಹೇಳಿದ್ದು ಮಾತ್ರ ನಿರ್ವಿತರ್ಕ ಸಮಾಧಿಯ ಕುರಿತು…
ರಾತ್ರಿಯಿಡೀ ಸುರಿದು ಬಿಟ್ಟು ಹೋದ ಮಳೆಯ ಬೆಳಗು.
ಮತ್ತು ಬರಿಸುವ ಮಳೆಗತ್ತಲಲ್ಲಿ ಬೆಚ್ಚಗೆ ಎಚ್ಚರಾಗುವ ಬದಲು ಜನ ಹೊದಿಕೆಯೊಳಗಿನ ಕತ್ತಲಾಗಿದ್ದಾರೆ.
ಕಿಟಕಿಯಾಚೆಗೆ ಕಾಣಿಸುವ ಬಟ್ಟೆ ಒಣ ಹಾಕುವ ತಂತಿ ಮೇಲೆ ಹನಿ ಹನಿಗಳು. ಪಿಳಪಿಳನೆ ಎಲ್ಲಿಗೋ ಸಾಲುಗಟ್ಟಿ ಧಾವಿಸುತ್ತಿವೆ. ಅದು ವರ್ಷಾಕಾಲದ ಸಂಭ್ರಮದ ಚಿತ್ತಾರ. ಎಲ್ಲಿಗೆಂತ ಕೇಳಿದರೆ ನಕ್ಕಾವು. ಸಂಭ್ರಮಕ್ಕೆ ದಿಕ್ಕಿದೆಯಂದು ಹೇಳಿದರೆ ಯಾರಾದರೂ ಇದ್ದಾರೆಯೇ ಇವತ್ತಿನವರೆಗೆ?
ಶ್ರವಣತಂತುವನ್ನು ಸ್ಫುಟಗೊಳಿಸಿಕೊಳ್ಳಿ. ನಿಶ್ಯಬ್ದ ಆಲಿಸಿರೆ. ಕೇಳಿಸಿತೆ?… ಸಮುದ್ರ ಮೊರೆತ… ದೂರದಿಂದ?
ಗಾಳಿ ಮೊರೆತ ಮೋಡಗಳು ಮಳೆ ಬಿಸಿಕು ಸೆಖೆ- ಆದರೆ ಸೆಖೆಯಾದಾಗಲೆಲ್ಲ ಮಳೆ ಬರುವುದಿಲ್ಲ.
ಎಲ್ಲ ಮೋಡಗಳೂ ಶ್ಯಾಮಕಾಯಗಳಲ್ಲ.
ಎಲ್ಲ ಮಳೆಯಂತ್ಯಕ್ಕೂ ಸಮುದ್ರ ಮೊರೆಯುವುದಿಲ್ಲ.
ನೆರೆ, ಗುಡಿಸಲು, ಅಕ್ರಂದನ, ಮೌನ, ಸ್ಮಶಾನ… ಮಳೆಯೇ, ನಿಲ್ಲು ನಿಲ್ಲು.
ಬಿರಿದ ನೆಲ, ಹಸಿರೊಣಗಿದ ಮರಗಿಡಗಳು, ಉಸಿರಿಲ್ಲದ ಊರುಗಳು.. ಮಳೆ ಮುಂಜಾವಿನ ಬನಿಯೆದುರು ನಿಂತು ನ್ರೆ ಪ್ರಶ್ನಿಸುತ್ತದೆ. ಮಳೆಯೇ ಹೋಗು ಆ ಕಡೆ. ಉಸಿರು ಒಣಗಿದಲ್ಲಿ.
ಮತ್ಹ್ಟೆ ಬಾ,. ಕಾಯುತ್ತಿರುತ್ತೇನೆ.
ಆದರೆ ಮಳೆ ಕರೆದರೆ ಬರುವುದಿಲ್ಲ. ನಿಲ್ಲೆಂದರೆ ನಿಲ್ಲುವುದಿಲ್ಲ. ಹೋಗೆಂದರೆ ಹೋಗುವುದೂಇಲ್ಲ!
ಬರುತ್ತದೆ, ನಿಲ್ಲುತ್ತದೆ, ಹೋಗುತ್ತದೆ, ಬರುತ್ತದೆ. ಅದು ಜೀವ ತಂತ್ರ. ಸ್ವತಂತ್ರ.
ದಿನಗಳೆಷ್ಟು ಉರುಳಿದವೋ, ಮಳೆಯಂತೂ ಕೃಶವಾಗಿದೆ. ದೋಣಿ ಬುಡಮೇಲಾಗಿ ವಿಕಾಸಪಥದ ಹಿಮ್ಮುಖ ನಡಿಗೆಯಲ್ಲಿ ಪುನಃ ಪ್ರಕೃತಿ ಸೇರುವ ಹವಣಿಕೆಯಲ್ಲಿದೆ.
ಉಳಿದಿರುವುದು ಸ್ಮೃತಿ ಪರಿಶುದ್ಧವಾದ ಸ್ವರೂಪಶೂನ್ಯವಾದ ಅರ್ಥಮಾತ್ರ ಹೊಳೆವ ಒಂದು ಚಿತ್ತ ಪ್ರತ್ಯಯ ಮಾತ್ರ.
‘ಮಳೆಯೇ ಬಾ’ ಎಂದು ಜಪಿಸುತ್ತ.
ಮಳೆಯೆಂದರೆ
ಮಳೆಯೆಂದರೆ
ಕಣ್ಣೀರ ಸರಳಲ್ಲ ಮಗೂ
ಮರುಳು!
ಮಳೆಯೆಂದರೆ
ಥಂಡಿ ಚಳಿಯೇ ಮಗೂ
ತಳಿಕಂಡಿಯಲಿ ನಿಂತು
ಕಾಯುತಿರು.
ಮಳೆಯೆಂದರೆ
ಮಡಲಮರೆ ಬಿಡು
ನೆನೆ.