ಅಪ್ಪ ನಾವು ಪ್ರತೀಸರ್ತಿ ಕಟಿಂಗ್ ಮಾಡಿಸಿಕೊಳ್ಳೋಕ್ಕೆ ಇಷ್ಟು ದೂರ ಯಾಕೆ ಬರಬೇಕು? ಎಂದು ಅರಿಜಿತ್ ಕೇಳಿದಾಗ ಪ್ರಭಾತನ ಬಳಿ ಉತ್ತರವಿರಲ್ಲಿಲ್ಲ.
ಯಾಕೆ? ಬೇರೆಲ್ಲದರೂ ಹೋಗಬೇಕೂ ಅಂತಾನಾ? ಹೇಳು. ಇಲ್ಲಿ ಇಷ್ಟವಾಗ್ತಾ ಇಲ್ಲವಾ?
ಅಲ್ಲಾ.. ಸ್ಕೂಟರಿನಲ್ಲಿ ಇಷ್ಟು ದೂರ ಬರ್ತೀವಲ್ಲಾ.. ಯಾಕೆ? ಬಾಬು ಹೇದ: ಮನೆಯ ಹತ್ತಿರಾನೇ ಒಂದು ಹೊಸಾ ಸಲೂನು ಶುರುವಾಗಿದೆಯೆಂತೆ. ಆಶಾ ಹೇರ್ ಆರ್ಟ್ ಅಂತ. ಬಾಬುಗೆ ತುಂಬಾ ಚೆನ್ನಾಗಿ ಸ್ಪೈಕಿ ಕಟ್ ಮಾಡಿದ್ದಾನೆ.
ಪ್ರಭಾತ ಸ್ಕೂಟರ್ ಒಡಿಸುತ್ತಿದ್ದ. ಈ ಮಾತಿಗೆ ಅವನ ಬಳಿ ಉತ್ತರವಿರಲ್ಲಿಲ್ಲ. ಪರಿಮಲ್ ಗಾರ್ಡನ್ ಬಳಿಯಿದ್ದ ಫ಼್ಲಾಟನ್ನು ಬಿಟ್ಟು ತಾನು ಕಲಿಸುತ್ತಿದ್ದ ಯೂನಿವರ್ಸಿಟಿ ಕ್ವಾರ್ಟರ್ಸ್‌ಗೆ ಹೋಗಿ ಒಂದು ವರ್ಷ ಆಗಿತ್ತು. ಆದರೂ ಕಟ್ಟಿಂಗಿಗೆ ಮಾತ್ರ ಹಳೆಯ ಮನೀಷಾ ಹೇರ್ ಆರ್ಟ್ ಬಳಿಗೇ ಯಾಕೆ ಬರಬೇಕು ಅನ್ನುವುದಕ್ಕೆ ತಕ್ಷಣ ಜವಾಬು ಇರಲಿಲ್ಲ.
ಕಳೆದ ಹಲವು ವರ್ಷಗಳಲ್ಲಿ ಅಪ್ಪ ಮಗನಿಗೆ ಇದೊಂದು ರೀತಿಯ ರಿವಾಜು ಆಗಿಬಿಟ್ಟಿತ್ತು. ಪ್ರತೀ ತಿಂಗಳ ಎರಡನೇ ಶನಿವಾರ ಮನೆಯಲ್ಲಿರುವ ಹಳೆಯ ಪೇಪರು, ಖಾಲೀ ಬಾಟ್ಲಿ, ಹಾಲಿನ ಕವರು, ಕಸ ಕಡ್ಡಿಯನ್ನೆಲ್ಲಾ ಒಂದು ದೊಡ್ಡ ಚೀಲಕ್ಕೆ ತುಂಬಿಸಿ, – ಬೀಳದಂತೆ ಸ್ಕೂಟರಿನ ಕೊಂಡಿಗೆ ಸಿಕ್ಕಿಸಿ, ಹಾಗೂ ಹೀಗೂ ಬ್ಯಾಲೆನ್ಸ್ ಮಾಡುತ್ತಾ ಕಬಾಡಿವಾಲಾನ ಬಳಿ ಹೋಗುವುದು. ಬಂದ ಹಣವನ್ನು ಜೇಬಿಗಿರಿಸಿ ಕಟ್ಟಿಂಗ್ ಮಾಡಿಸಿಕೊಳ್ಳುವುದು. ಪ್ರಭಾತ ಪ್ರತಿ ಮುಂಜಾನೆ ತರಿಸುತ್ತಿದ್ದ ಪೇಪರುಗಳು, ಮುಫ಼ತ್ತು ಗಡಿಯಾರ, ಟೆಲಿಫೋನು ಇತ್ಯಾದಿ ಪಡೆಯಲೆಂದು ತರಿಸುತ್ತಿದ್ದ ಔಟ್‌ಲುಕ್, ಇಂಡಿಯಾ ಟುಡೇ ಇತ್ಯಾದಿ ಪತ್ರಿಕೆಗಳು – ಅಪ್ಪ ಮಗ ಇಬ್ಬರಿಗೂ ತಿಂಗಳಿಗೊಮ್ಮೆ ಕಟ್ಟಿಂಗ್ ಮಾಡಿಸಿಕೊಳ್ಳಲು ಸಾಕಾಗುತ್ತಿತ್ತು. (ಯೂನಿವರ್ಸಿಟಿ ಕ್ಯಾಂಪಸ್ಸಿಗೆ ಬಂದ ನಂತರ ಈ ರಿವಾಜಿನಲ್ಲಿ ಸ್ವಲ್ಪ ಬದಲಾವಣೆ ಆಗಿತ್ತು: ಕ್ಯಾಂಪಸ್‌ನಲ್ಲಿ ಮನೆಯ ಮುಂದೆಯೇ ಹೋಗುವ ಇನ್ ಹೌಸ್ ಕಬಾಡಿವಾಲಾನ ಬಳಿ ಪೇಪರ್ ಹಾಕುವ ರಿವಾಜನ್ನು ತನ್ನ ಪತ್ನಿ ಪ್ರಾರಂಭಿಸಿದಾಗಿನಿಂದಲೂ ಸ್ವಂತ ಸಂಪನ್ಮೂಲಗಳಿಂದ ಕಟ್ಟಿಂಗಿಗೆ ಹಣ ಪೂರೈಸಬೇಕಾಗಿತ್ತು). ಮೊದಮೊದಲಿಗೆ ಪ್ರತಿಬಾರಿಯೂ ಮನಿಷಾ ಹೇರ್ ಆರ್ಟ್‌ನವನು ನವರತ್ನ ತೇಲ್ ಹಾಕಿ ತಲೆಗೆ ಮಾಲಿಷ್ ಮಾಡುತ್ತೇನೆಂದು ಹೇಳುತ್ತಿದ್ದನಾದರೂ ಪ್ರಭಾತನ ಲೆಕ್ಕದ ಪ್ರಕಾರ ಅದಕ್ಕೂ ದುಡ್ಡು ಪೂರೈಸಬೇಕಾದರೆ ಪ್ರತಿದಿನ ಇನ್ನೊಂದು ಪೇಪರು, ಮತ್ತೊಂದೆರಡು ವಾರಪತ್ರಿಕೆಗಳಿಗೆ ಚಂದಾದಾರನಾಗಬೇಕಾದೀತಾದ್ದರಿಂದ ಬೇಡವೆಂದಿದ್ದ! ಹೀಗಾಗಿ ಮೊದಲಿಗೆ ಪ್ರಭಾತ ಮಾಲಿಷ್ ಬಗ್ಗೆ ಹೆಚ್ಚು ಉತ್ಸಾಹ ತೋರಿರಲ್ಲಿಲ್ಲ. ಮೇಲಾಗಿ ಜನ ಯಾಕೆ ತೇಲ್ ಮಾಲಿಷ್ ಮಾಡಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಅವನಿಗೆ ತುಂಬವೇ ಕುತೂಹಲವಿತ್ತು. ಮಾಲಿಷ್‌ನ ಅಭ್ಯಾಸ ತನ್ನ ಸ್ವಂತ ಊರಾದ ಬೆಂಗಳೂರಿಗಿಂತ ಅಹಮದಾಬಾದಿನಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದಂತಿತ್ತು.
ಮಗ ಅರಿಜಿತ್ ಇಲ್ಲೇ ಕಟ್ಟಿಂಗ್ ಮಾಡಿಸುಕೊಳ್ಳುತ್ತಾ ಬೆಳೆದದ್ದನ್ನ ಪ್ರಭಾತ ನೆನಪು ಮಾಡಿಕೊಂಡ. ಬಂದ ಹೊಸತರಲ್ಲಿ ಕುರ್ಚಿಯ ಮೇಲೆ ಒಂದು ದೊಡ್ಡ ವೃತ್ತಾಕಾರದ ದಿಂಬನ್ನು ಇಟ್ಟು ಅದರ ಮೇಲೆ ಮಗುವನ್ನು ಕೂಡಿಸುತ್ತಿದ್ದರು. ರಾವಣಾಸುರನ ಆಸ್ಥಾನದಲ್ಲಿ ಬಾಲ ಸುತ್ತಿ ಕೂತ ಹನುಮಂತನಂತೆ ಅರಿಜಿತ್ (ಮುದ್ದಾಗಿ) ಕಾಣುತ್ತಿದ್ದ. ಮಗನ ಕಟ್ಟಿಂಗ್ ಮುಗಿಯುವವರೆಗೂ ಅವನ ಹಿಂದೆ ನಿಂತು ಪ್ರಭಾತ ಬ್ಯಾಕ್‌ಸೀಟ್ ಡ್ರೈವಿಂಗ್ ಮಾಡುತ್ತಾ ಸೂಚನೆಗಳ್ಳನ್ನು ಕೊಡುತ್ತಿದ್ದ: ತಲೆಯ ಮೇಲೆ ಬಾಚಣಿಗೆ ಓಡಿಸುವಷ್ಟು ಕೂದಲು ಇರಲಿ; ಸೈಡಿನಲ್ಲಿ ಬಾರೀಕ್‌ಆಗಿ ಕತ್ತರಿಸಬೇಕು; ಕಿವಿಯ ಮೇಲಿಂದ ದೊಡ್ಡ ವೃತ್ತಾಕಾರವಾಗಿ ಕೂದಲು ತೆಗೀಬೇಕು – ಬೆಳೆದಾಗ ಕಿವಿಯ ಮೇಲೆ ಸುಲಭವಾಗಿ ಕೂದಲು ಬೀಳಬಾರದು; ಕೆನ್ನೆಯ ಮೇಲೆ ರೇಜರ್ ಓಡಿಸಬಾರದು – ಬದಲಿಗೆ ಮೆಷೀನ್ ಓಡಿಸಬೇಕು.. ಇದೆಲ್ಲ ಮನೀಷಾ ಹೇರ್ ಆರ್ಟ್‌ನ ಕೆಲಸಗಾರರಿಗೆ ಮನೋಗತವಾಗಿತ್ತು. ಕಳೆದ ನಾಲ್ಕಾರು ವರ್ಷಗಳಲ್ಲಿ ಒಂದೆರಡು ಪುಟ್ಟ ವಿಚಾರಗಳು ಬದಲಾಗಿದ್ದುವು. ಮಗ ಅರಿಜಿತ್ ದಿಂಬಿಲ್ಲದೇ ಕುಳಿತು ಕೊಳ್ಳುವಷ್ಟು ಬೆಳೆದಿದ್ದ. ಕಟ್ಟಿಂಗ್ ಹೇಗೆ ಮಾಡಬೇಕೆಂದು ಈಗೀಗ ಅವನೇ ಹೇಳುತ್ತಿದ್ದ. ಆದರೂ ಮಷ್‌ರೂಂ, ಸ್ಪೈಕಿ ಇತ್ಯದಿ ಕಟ್ ಮಾಡಿಸಿಕೊಳ್ಳಲು ಪ್ರಭಾತ ಪರವಾನಗಿ ಕೊಟ್ಟಿರಲಿಲ್ಲ. ಹೇರ್ ಕಟ್ಟಿಂಗ್ ಸೆಲೂನ್ ಬದಲಾಯಿಸಿದರೆ ’ಬೆಕ್ಕಂ’ನಂತಹ ಸ್ಪೈಕಿ ಕಟ್ ಮಾಡಿಸಿಕೊಳ್ಳಬಹುದೆಂದು ಅರಿಜಿತ್ ಪ್ರಯತ್ನ ಮಾಡಿದ್ದ. ಆದರೆ ಈವರೆಗೆ ತನ್ನ ಯಾವುದೇ ಯೋಜನೆ ಕೆಲಸ ಮಾಡಿರಲಿಲ್ಲ. ಹೀಗಾಗಿ ತಾನು ಯಾವಾಗ ಬೆಳೆದು ದೊಡ್ಡವನಾಗುತ್ತೇನೆಂದು ಯೋಚಿಸುತ್ತಾ ಬೇಚೈನಾಗಿ ಅರಿಜಿತ್ ಕಾಯುತ್ತಿದ್ದ.
ಮನೀಷಾ ಹೇರ್ ಆರ್ಟ್‌ನ ಹೆಸರಿನ ಬಗ್ಗೆ ಅಪ್ಪ ಮಗನ ನಡುವೆ ಸಾಕಷ್ಟು ಚರ್ಚೆಯಾಗಿತ್ತು. ಇಟ್ಟಿರುವ ಹೆಸರು ಮನಿಷಾಳದ್ದಾಗಿದ್ದರೂ ಐಶ್ವರ್ಯ ರಾಯ್‌ಳ ದೊಡ್ಡ ಪೋಸ್ಟರ್ ಚಿತ್ರವನ್ನ ಯಾಕೆ ಹಾಕಿದ್ದನೆ? ಅಥವಾ ಸೆಲೂನಿಗೆ ಯಾಕೆ ಐಶ್ವರ್ಯಳ ಹೆಸರು ಇಡಲಿಲ್ಲ? ಇಲ್ಲಿನ ಬಹಳಷ್ಟು ಸೆಲೂನುಗಳು ಗಂಡಸರ ಕೂದಲನ್ನು ಕತ್ತಿರಿಸಿದರೂ, ಹೆಣ್ಣು ಹೆಸರುಗಳನ್ನೇ ಪಡೆದಿರುವುದರ ಹಿಂದಿರುವ ಗುಟ್ಟೇನೆಂಬುದರ ಬಗ್ಗೆ ಸಹ ಅವರು ಚರ್ಚಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಕೂದಲು ಕತ್ತರಿಸುವ ಪ್ರಕ್ರಿಯೆಯಲ್ಲಿ ಕಲೆ ಎಲ್ಲಿಂದ ತೂರಿ ಕೊಂಡಿತು? ಈಚೀಚೆಗೆ ಚಾಲ್ತಿಗೆ ಬಂದಿರುವ ಡಿಸೈನ್ ಕಟ್ಟಿಂಗ್‌ನಿಂದಾಗಿ ಆರ್ಟ್ ಪದ ಬಂದಿರಬಹುದೇ? ಪ್ರಭಾತನ ಪ್ರಶ್ನೆಗಳು ಒಂದು ಸ್ಥರದ್ದಾಗಿದ್ದರೆ, ಅರಿಜಿತ್‌ನ ಪ್ರಶ್ನೆಗಳು ಬೇರೆ ಸ್ಥರದ್ದಾಗಿರುತ್ತಿದ್ದವು: ಸಲೂನಿನಲ್ಲಿ ಟಿಂಕಲ್ ತರಿಸದೇ ಬರೇ ಸ್ಟಾರ್‌ಡಸ್ಟ್ ಮಾತ್ರ ಯಾಕೆ ತರಿಸುತ್ತಾರೆ? ಈ ಎಲ್ಲ ವಿಷಯಗಳ ಬಗ್ಗೆ ಅಪ್ಪ ಮಗ ಬಹಳಷ್ಟು ಚರ್ಚಿಸಿದ್ದುಂಟು. ಮತ್ತೊಂದು ಗಮ್ಮತ್ತಿನ ವಿಷಯವೆಂದರೆ ಈ ಊರಿನ ಎಲ್ಲ ಸಲೂನುಗಳಲ್ಲಿ ಮುಖದ ಎದುರಿಗೆ ಕನ್ನಡಿಯಿರುತ್ತಿತ್ತೇ ಹೊರತು, ಹಿಂದೆ ಏನಾಗುತ್ತಿದೆ ಎಂದು ಗಿರಾಕಿಗಳಿಗೆ ತಿಳಿಯುತ್ತಿರಲ್ಲಿಲ್ಲ. ಕಟ್ಟಿಂಗ್ ಮುಗಿದ ಮೇಲೆ ಒಂದು ಕನ್ನಡಿಯನ್ನು ತಲೆಯ ಹಿಂದಕ್ಕೆ ಹಿಡಿದು ಕಡವಾ ಚೌತ್ ದಿನ ಜರಡಿಯ ಮೂಲಕ ಚಂದ್ರ ದರ್ಶನ ಮಾಡಿಸುವಂತೆ ತಲೆಯ ಹಿಂಭಾಗದ ದರ್ಶನ i&ಂಚಿಛಿuಣe;ಡಿಸುತ್ತಿದ್ದರು. ಅಷ್ಟು ಹೊತ್ತಿಗಾಗಲೇ ಆಗಬೇಕಾದ ಡ್ಯಾಮೇಜ್ ಮುಗಿದಿರುತ್ತಿತ್ತಾದ್ದರಿಂದ ಚಂದ್ರಾಕರದ ಹಿಂಭಾಗವನ್ನು ಕನ್ನಡಿಯಲ್ಲಿ ನೋಡಿಕೊಂಡು ಹೆಚ್ಚು ಮಾತನಾಡದೇ ಜನ ತಲೆಯಾಡಿಸಿ ಹೊರಟುಹೋಗುತ್ತಿದ್ದರು.
ಇಲ್ಲಿಗೇ ಯಾಕೆ ಕಟ್ಟಿಂಗಿಗೆ ಬರಬೇಕು ಎಂಬ ಪ್ರಶ್ನೆಗೆ ಅವನ ಬಳಿ ಉತ್ತರವಿರಲ್ಲಿಲ್ಲ. ಅಥವಾ ಇತ್ತೇ? ಹಾಗೆ ನೋಡಿದರೆ, ಹಳೇ ಪೇಪರ್ ಹಾಕುವ ಕಬಾಡಿವಾಲಾನನ್ನು ಬದಲಯಿಸಿಯಾಗಿತ್ತು. ದಿನಸಿ ಕೊಡುತ್ತಿದ್ದ ಅಂಗಡಿಯನ್ನೂ ಹೀಗೇ ಬದಲಾಯಿಸಿಯಾಗಿತ್ತು. ಮುಂಚೆ ಸಪ್ಲೈ ಮಾಡುತ್ತಿದ್ದ ಜಸಾನಿ ಬ್ರದರ್ಸ್ ಅಂಗಡಿಯ ೨ ಕಿಲೋಮೀಟರ್ ಪರಿಧಿಯಲ್ಲಿ ಫ಼್ರೀ ಡೆಲಿವರಿಯ ಲಕ್ಷ್ಮಣ ರೇಖೆ ದಾಟಿದ್ದರಿಂದ – ಈಗ ದಿವಸಿ ಕೃಷ್ಣಾ ಕಿರಣಾದಿಂದ ಬರುತ್ತಿತ್ತು. ಬೆಂಗಳೂರಿನ ರಾಮಯ್ಯಾ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದ ಕೃಷ್ಣಾದ ಯುವ ಮಾಲೀಕ ಒಂದೆರಡು ತುಂಡು ಕನ್ನಡ ಮಾತಾಡುತ್ತಿದ್ದುದರಿಂದ ಪ್ರಭಾತನಿಗೂ ಬಹಳ ಖುಶಿಯಾಗಿತ್ತು. ಹಾಗೆ ನೋಡಿದರೆ ಪರಿಮಲ್ ಗಾರ್ಡನ್ ಫ಼್ಲಾಟ್‌ನ ದಿನಗಳಿಂದ ಹಾಗೆಯೇ ಮುಂದುವರಿದ ಹಳೇ ಕೊಂಡಿ ಇದೊಂದೇ ಆಗಿತ್ತು.
ಪ್ರತೀ ವರ್ಷ ದೀಪಾವಳಿಯ ನಂತರ ಕೂದಲು ಕತ್ತರಿಸಿಕೊಳ್ಳಲು ಹೋದಾಗ ಅಲ್ಲಿನ ಕೆಲಸಗಾರರು ನೆನಪಿನಿಂದ ದೀಪಾವಳಿ ಬಕ್ಷೀಸು ಕಿತ್ತುಕೊಳ್ಳುತ್ತಿದ್ದುದ್ದು ಪ್ರಭಾತನಿಗೆ ತುಂಬಾ ಕಿರಿಕಿರಿಯುಂಟು ಮಾಡುತ್ತಿತ್ತು. ಒಂದು ವರ್ಷ ದೀಪಾವಳಿ ರಜೆಗೆ ಎಲ್ಲರೂ ಬೆಂಗಳೂರಿಗೆ ಹೋಗಿದ್ದಾಗ, ಈ ವಿಷಯ ನೆನಪಾಗಿ ಪ್ರಭಾತ ಅಲ್ಲೇ ಕಟಿಂಗ್ ಮಾಡಿಸಿಕೊಂಡು ಬಂದಿದ್ದ. ಹೀಗಾಗಿ, ಇಲ್ಲಿ ಕಟ್ಟಿಂಗಿಗೆ ತಿಂಗಳ ನಂತರ ಜನವರಿಯಲ್ಲಿ ಇಬ್ಬರೂ ಹೋಗಿದ್ದರು. ಆದರೇನಂತೆ.. ಅಲ್ಲಿನ ಕೆಲಸಗಾರರು ಮರೆತಿರಲಿಲ್ಲ. ನಿರ್ಮಮಕಾರವಾಗಿ ಕೊಡುವವನ ಜಾತಿ ಕೋಮು ಏನೂ ವಿಚಾರಿಸದೇ ದೀವಾಳಿಕೆ ಬಾದ್ ಪಹಲೇ ಬಾರ್ ಆಯಾ.. ಬಕ್ಷೀಶ್ ಸಾಬ್.. ಅಂತ ಹೇಳಿ ಚಿದಂಬರಂ ಸಾಹೇಬರು ಎಜುಕೇಷನ್ ಸೆಸ್ ಕಸಿದು ಕೊಂಡಂತೆ ವಸೂಲು ಮಾಡಿಯೇಬಿಡುತ್ತಿದ್ದರು. ಈ ಘಟನೆಯಾದಾಗ ಪ್ರಭಾತ ಇಲ್ಲಿಗೆ ಮತ್ತೆ ಬರಬಾರದೆಂದು ನಿರ್ಧಾರ ಮಾಡಿದ್ದ. ಆದರೆ, ಆ ನಿರ್ಧಾರ ಹೆಚ್ಚು ದಿನ ಕಾಯಂ ಆಗಿ ನಿಲ್ಲಲ್ಲಿಲ್ಲ.
ಈ ನಡುವೆ ಮನೀಷಾ ಹೇರ್ ಆರ್ಟ್‌ನ ರಸ್ತೆಯಲ್ಲಿ ಪಾರ್ಕಿಂಗಿಗೆ ಕಷ್ಟವಾಗುತ್ತಿದ್ದಾಗ್ಯೂ ಪ್ರಭಾತ ಮಗನನ್ನು ಇಲ್ಲಿಗೇ ಎಳೆದು ತರುತ್ತಿದ್ದ. ಒಂದು: ಹಳೇ ಪೇಪರಿನ ಆಮದನಿಯಿರಲ್ಲಿಲ್ಲ, ಮೇಲಾಗಿ: ಹೇರ್‌ಕಟ್ ಖರ್ಚಲ್ಲದೇ, ಹದಿನೈದು ರೂಪಾಯಿಯ ಪೆಟ್ರೋಲು ಸುರಿಯಬೇಕಿತ್ತು. ಆದರೂ ಮನಿಷಾ ಯಾಕೆ ಎಂಬುದಕ್ಕೆ ಅವನು ಉತ್ತರ ಹುಡುಕುತ್ತಿದ್ದ. ಹಾಗೆ ನೋಡಿದರೆ ಪ್ರಭಾತನಾಗಲೀ ಅರಿಜಿತ್ ಆಗಲೀ, ಮಿಕ್ಕ ಗಿರಾಕಿಗಳಂತೆ ಹೆಚ್ಚು ಮಾತಾಡುತ್ತಿರಲ್ಲಿಲ್ಲ. ಎಲ್ಲವೂ ವಿಚಿತ್ರ ಮೌನದಲ್ಲಿ ನಡೆದು ಹೋಗುತ್ತಿತ್ತು. ಇಬ್ಬರಿಗೂ ಗುಜರಾತಿ ಭಾಷೆ ಬರುತ್ತಿರಲ್ಲಿಲ್ಲವಾದ್ದರಿಂದ ಮಾತಾಡಬೇಕೆಂದರೂ ಅದು ಸರಳವಾಗಿ ಸಾಧ್ಯವಾಗುತ್ತಿರಲ್ಲಿಲ್ಲ. ಬಹಳ ದಿನಗಳವರೆಗೆ ಈ ಸಲೂನಿನ ಮಾಲೀಕ ಅಥವಾ ಮುಖ್ಯಸ್ಥ ಯಾರೆಂಬುದೂ ಪ್ರಭಾತನಿಗೆ ತಿಳಿದಿರಲ್ಲಿಲ್ಲ. ಇವರು ಹೋದಾಗಲ್ಲೆಲ್ಲಾ ಅಲ್ಲಿ ನಾಲ್ಕಾರು ಜನ ಕೂದಲು ಕತ್ತಿರಿಸಲು ಸನ್ನದ್ಧರಾಗಿ ನಿಂತಿರುತ್ತಿದ್ದರು. ಬರುವ ಜನರ ಕೋರಿಕೆಯ ಮೇರೆಗೆ ಷೇವಿಂಗ್, ಕೂದಲು ಕತ್ತರಿಸುವುದು, ಬಣ್ಣ ಹಾಕುವುದು, ಮತ್ತು ಕೆಲ ಗಂಡಸರಿಗೆ (ಮುಖ್ಯವಾಗಿ ಯುವಕರಿಗೆ) ಮುಖಕ್ಕೆ ಫ಼ೇಶಿಯಲ್ ಮಾಡುವುದು, ಹೀಗೆ ಅನೇಕ ಚಟುವಟಿಕೆಗಳು ಅಲ್ಲಿ ನಡೆಯುತ್ತಿದ್ದುವು. ಪ್ರಭಾತ ಮತ್ತು ಅರಿಜಿತ್ ಮಾತ್ರ ಅಲ್ಲಿ ಕೂತು ಸ್ಟಾರ್‌ಡಸ್ಟ್‌ನಲ್ಲಿ ಷಾರುಖ್ ಚಿತ್ರಗಳನ್ನು ನೋಡುವುದು, ತಮ್ಮ ಸರದಿ ಬಂದಾಗ ತಲೆ ಒಡ್ಡುವುದು, ಹಣ ಕೊಟ್ಟು ವಾಪಸ್ಸಾಗುವುದು – ಇಷ್ಟೇ ಮಾಡುತ್ತಿದ್ದರು. ಹೀಗಾಗಿ ಅವರಿಬ್ಬರಿಗೂ ಅಲ್ಲಿ ಕೂದಲು ಕತ್ತರಿಸುವವರ ಮುಖ ಪರಿಚಯವಿದ್ದರೂ, ಹೆಸರುಗಳು ತಿಳಿದಿರಲ್ಲಿಲ್ಲ. ಆದರೆ ಅರಿಜಿತನನ್ನು ನೋಡಿ ಅಂಗಡಿಯಲ್ಲಿ ಯಾರಾದರೂ ಕ್ಯಾ ಛೋಟೂ ಕೈಸಾ ಹೈ.. .. ಬಹುತ್ ದಿನ್ ಕೆ ಬಾದ್ ಆಯಾ ಬಾಲ್ ಕಟಾನೆ ಅಂತ ಹೇಳುತ್ತಿದ್ದುದುಂಟು.
ಎಷ್ಟು ಯೊಚನೆ ಮಾಡಿದರೂ ಸೆಲೂನನ್ನು ಯಾಕೆ ಬದಲಾಯಿಸಿಲಲ್ಲ ಎಂಬುದಕ್ಕೆ ಉತ್ತರ ಹುಡುಕುವುದು ಕಷ್ಟವಾಗುತ್ತಾ ಹೋಯಿತು. ಎರಡು ವರ್ಷಗಳ ಹಿಂದೆ ಗೋಧ್ರಾ ಕಾಂಡದ ನಂತರ ಅಹಮದಾಬಾದಿನಲ್ಲಿ ದೊಡ್ಡ ಕೋಮು ಗಲಭೆಯಾಗಿತ್ತು. ಈ ಗಲಭೆಯಾಗುವವರೆಗೂ ಯಾವ ಅಂಗಡಿಯನ್ನ ಯಾವ ಕೋಮಿನವರು ನಡೆಸುತ್ತಿದ್ದರೆಂದು ಬಹಳಷ್ಟು ಜನರಿಗೆ ತಿಳಿದಿರಲಿಲ್ಲವೆನ್ನಿಸುತ್ತದೆ. ಈ ಗಲಭೆಯಲ್ಲಿ ಗುರಿಯಿಟ್ಟಂತೆ ಮುಸಲ್ಮಾನರ ಎಷ್ಟೋ ಆಸ್ತಿಪಾಸ್ತಿ ನಷ್ಟವಾಯಿತು. ಇದು ಎಷ್ಟರ ಮಟ್ಟಿಗೆಂದರೆ, ಭಸ್ಮವಾದ ಯವುದಾದರೂ ಕಟ್ಟಡ ಕಂಡರೆ, ಅದರ ಮಾಲೀಕ ಯಾವ ಕೋಮಿಗೆ ಸೇರಿದ್ದೆಂದು ಪ್ರಶ್ನೆ ಕೇಳುವ ಅವಶ್ಯಕತೆಯೇ ಇರಲಿಲ್ಲ. ಪ್ರಭಾತನಿಗೆ ಇನ್ನೂ ನೆನಪಿದೆ – ತನ್ನ ಕ್ಯಾಂಪಸ್ಸಿನ ಬಳಿ ಇದ್ದ ಎಡ್‌ವರ್ಡ್ ಡ್ರೈ ಕ್ಲೀನರ್ಸ್‌ನ ಅಂಗಡಿ ಮಾತ್ರ ಈ ಸರ್ವನಾಶವನ್ನು ತಡೆದು ಪ್ರತಿಭಟಾತ್ಮಕವಾಗಿ ನಿಂತಿತ್ತು. ಅದರ ಹಿಂದಿನ ಗಮ್ಮತ್ತಿನ ಕತೆ ಈ ರೀತಿ ಇತ್ತು: ಗಲಭೆಯ ದಿನ ಕತ್ತಿ ಝಳಪಿಸುತ್ತಾ ತಿಲಕ ಧರಿಸಿದ್ದ ದೊಡ್ಡ ಗುಂಪು ಅಲ್ಲಿಗೆ ಬಂದಾಗ ಅಂಗಡಿಯವನು ಹೇಳಿದನಂತೆ: ಸುಡುವುದಾದರೆ ಎಲ್ಲವನ್ನೂ ಸುಟ್ಟು ಹಾಕಿ – ಆದರೆ ಇಷ್ಟು ಮಾತ್ರ ನೆನಪಿರಲಿ – ಇಲ್ಲಿರುವ ಒಂದೊಂದು ಬಟ್ಟೆಯೂ ಹಿಂದೂಗಳದ್ದು. ಹೀಗೆ ಈ ಎಡ್‌ವರ್ಡ್ ಒಬ್ಬನನ್ನು ಬಿಟ್ಟರೆ, ಮಿಕ್ಕೆಲ್ಲಾ ಮುಸಲ್ಮಾನರ ಅಂಗಡಿಗಳು ಭಸ್ಮವಾಗಿಬಿಟ್ಟಿದ್ದವು. ವಿಚಿತ್ರವೆಂದರೆ ನಾಶವಾದ ಅಂಗಡಿಗಳ ಹೆಸರಿನ ಯಾದಿ ನೋಡಿದರೆ ಆ ಸಂಸ್ಥೆಗಳ ಮಾಲೀಕರು ಯಾರಾದರೂ ಆಗಬಹುದಿತ್ತು.. ಅಭಿಲಾಷಾ ಪ್ಯೂರ್ ವೆಜ್ ರೆಸ್ತುರಾ, ತುಳಸಿ ಹೋಟೆಲ್, ಮೋತಿ ಮಹಲ್.. ಅದಾನಿ ರಾವ್‌ಜಿ ಸೂಪರ್ ಸ್ಟೋರ್.. ಹಾಗೂ ಮನಿಷಾ ಹೇರ್ ಆರ್ಟ್.
ಕಡೆಯ ಹೆಸರೊಂದನ್ನು ಬಿಟ್ಟು ಮಿಕ್ಕವನ್ನೆಲ್ಲಾ ಪ್ರಭಾತ ಪತ್ರಿಕೆಯಲ್ಲಿ ಓದಿದ್ದ. ತಲೆಯ ಮೇಲೆ ಕೂದಲು ಬೆಳೆಯುತ್ತಿದ್ದಂತೆ ಮತ್ತೆ ತಿಂಗಳ ಎರಡನೆಯ ಶನಿವಾರ ಬಂತು. ಅಪ್ಪ- ಮಗ ಮತ್ತೆ ಎಂದಿನಂತೆ ಕೂದಲು ಕತ್ತಿರಿಸಿಕೊಳ್ಳಲು ಹೋದರು. ಅಲ್ಲಿಗೆ ಹೋದಾಗ ಪ್ರಭಾತ ಅವಾಕ್ಕಾದ. ಯಾವಾಗಲೂ ಕಚಾಕಚ್ ತುಂಬಿರುತ್ತಿದ್ದ ಮನಿಷಾ ಹೇರ್ ಆರ್ಟ್ ಖಾಲಿಯಾಗಿತ್ತು. ಅದರ ಗಾಜುಗಳೆಲ್ಲ ಛಿದ್ರವಾಗಿ ಅವಶೇಷಗಳು ಮಾತ್ರ ಕಾಣುತ್ತಿದ್ದವು. ಒಂದೇ ಒಂದು ಕನ್ನಡಿ, ಒಂದು ಎತ್ತರದ ಕುರ್ಚಿ ಹಾಗೂ ನೆಲದ ಮೇಲೆ ಕುಕ್ಕರಗಾಲಿನಲ್ಲಿ ಕೂತಿದ್ದ ಕಳಾಹೀನ ಮುಖದ ಒಂಟಿ ವ್ಯಕ್ತಿ. ಅವನ ಮುಖ ನೋಡಿದಾಗ ಪ್ರಭಾತನಿಗೆ ನೆನಪಾಯಿತು – ಅಷ್ಟೂ ದಿನ ತಮ್ಮಿಂದ ಹಣ ಪಡೆಯುತ್ತಿದ್ದ ವ್ಯಕ್ತಿ ಈತನೇ. ಮೊದಲು ಮಗ, ನಂತರ ಅಪ್ಪ ಹೀಗೆ ಇಬ್ಬರೂ ಒಬ್ಬರಾದ ನಂತರ ಒಬ್ಬರು ಕತ್ತರಿಗೆ ತಲೆಯನ್ನೊಡ್ಡಿದರು. ಎಲ್ಲವೂ ಮೌನದಲ್ಲಿ ನಡೆಯಿತು. ಏನಾಯಿತೆಂದು ಕೇಳುವ ಅವಶ್ಯಕತೆ ಪ್ರಭಾತನಿಗಿರಲ್ಲ. ಎಲ್ಲ ಮುಗಿಸಿ ತಲೆಯ ಹಿಂದೆ ಕನ್ನಡಿ ಹಿಡಿಯುತ್ತಾ ಆತ ತೇಲ್ ಲಗವಾಲೋ ನಾ ಸಾಹೇಬ್.. ಠಂಡಾ ರಹೇಗಾ.. ಅನ್ನುತ್ತಾ ಅವನು ನವರತ್ನ ತೇಲ್‌ನ ಬಾಟಲಿಗೆ ಕೈ ಒಡ್ಡಿದ. ಪ್ರಭಾತ ಸುತ್ತಲೂ ನೋಡಿದ. ಬೇರಾವ ಗಿರಾಕಿಯೂ ಇಲ್ಲಿಗೆ ಬರುತ್ತಿದ್ದಂತಿರಲಿಲ್ಲ. ಸುಮ್ಮನೆ ಮೌನವಾಗಿ ಅಲ್ಲೇ ಅಲುಗಾಡದೇ ಕುಳಿತಿದ್ದ. ಅಂದು ಪ್ರಾರಂಭವಾದ ಈ ತೇಲ್ ಮಾಲಿಷ್‌ನ ಪ್ರಕ್ರಿಯೆ ಈ ಎರಡು ವರ್ಷಗಳಲ್ಲಿ ಎಡೆಬಿಡದೇ ನಡೆದು ಬಂದಿದೆ.
ಕ್ರಮಕ್ರಮೇಣ ಮನಿಷಾ ಹೇರ್ ಆರ್ಟ್ ಮುಂಚಿನ ಸ್ಥಿತಿಗೇ ವಾಪಸ್ಸಾಗ ಹತ್ತಿತು. ಆದರೆ ಮುಂಚೆ ಕೆಲಸ ಮಾಡುತ್ತಿದ್ದವರು ಒಬ್ಬರೂ ಇಲ್ಲಿ ಕೆಲಸ ಮಾಡುತ್ತಿದ್ದಂತೆ ಕಾಣಲಿಲ್ಲ. ಈ ಬಾರಿ ದೀಪಾವಳಿಗೂ ಬಕ್ಷೀಸು ಕೇಳಿದಂತೆ ಪ್ರಭಾತನಿಗೆ ನೆನಪಿಲ್ಲ. ಈ ಎಲ್ಲದರ ಮಧ್ಯೆ ಮಗ ಕೇಳಿದ ಪ್ರಶ್ನೆಗೆ ಅವನು ಉತ್ತರವನ್ನೇ ಕೊಟ್ಟಿರಲಿಲ್ಲ ಎಂದು ನೆನಪಾಯಿತು. ಯೊಚಿಸುತ್ತಾ, ತಲೆ ಕೆರೆಯುತ್ತ ಪ್ರಭಾತ ಕಡೆಗೂ ಅರಿಜಿತನ ಪ್ರಶ್ನೆಗೆ ಉತ್ತರ ತಯಾರು ಮಾಡಿಕೊಂಡ – ಇಲ್ಲಿಗೇ ಯಾಕೆ ಬರೋದೂಂದ್ರೆ – ಊರಿನಲ್ಲಿನ ಅತ್ಯುತ್ತಮ ತೇಲ್ ಮಾಲಿಷ್ ಮಾಡುವುದು ಮನಿಷಾ ಹೇರ್ ಆರ್ಟ್‌ನವನೇ..
ಅರಿಜಿತನಿಗೆ ಇದು ಸರಿಯಾದ ಉತ್ತರ ಅನ್ನಿಸಲಿಲ್ಲ. ಆದರೂ ಅಪ್ಪನೆದುರು ಅವನು ಹೆಚ್ಚು ವಾದಿಸುತ್ತಿರಲ್ಲಿಲ್ಲವದ್ದರಿಂದ, ಸುಮ್ಮನಾದ. ಮೌನವಾಗಿ ಇಬ್ಬರೂ ಮತ್ತೊಮ್ಮೆ ಕೂದಲನ್ನು ಕತ್ತರಿಗೊಡ್ಡಿ ಪಟ್ಟಾಭಿಷೇಕ ಮಾಡಿಸಿಕೊಂಡು ಮನೆಗೆ ವಾಪಸ್ಸಾದರು.
ಅಹಮದಾಬಾದ್
ಜುಲೈ ೨೦೦೪.
೧ . ಈ ಊರಿನಲ್ಲಿ ಅಂಗಡಿಯ ಹೆಸರಿಗೂ, ಮಾಲೀಕತ್ವಕ್ಕೂ ಹೆಚ್ಚಿನ ಸಂಬಂಧವಿರಲ್ಲಿಲ್ಲ. ಹೆಚ್ಚೂ ಕಮ್ಮಿ ಎಲ್ಲ ಡ್ರೈ ಕ್ಲೀನಿಂಗ್ ಅಂಗಡಿಗಳಿಗೂ ಎಡ್‌ವರ್ಡ್‌ನ ಹೆಸರಿರುತ್ತಿತ್ತು. ಬೇಕರಿಗಳು ಹೆಚ್ಚಿನಂಶ ಇಟಾಲಿಯನ್ ಬೇಕರಿಗಳಾಗಿದ್ದುವು, ಮತ್ತು ದೊಡ್ಡ ಪಾನ್ ಅಂಗಡಿಗಳಿಗೆ ಅಶೋಕ್ ಪಾನ್ ಪ್ಯಾಲೆಸ್ ಎಂಬ ಹೆಸರಿರುತ್ತಿತ್ತು
*****