………. – ೧೨

ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ
‘ತಿಳಿ’ ನೀರು ತಳ ಕಾಣುವ ಹಾಗೆ
‘ಝುಳು-ಝುಳು’ ಅದರ ಸದ್ದು,
‘ಚಿಮ್ಮುವ’ ಅಲೆ, ‘ತಣ್ಣಗೆ’ ಗಾಳಿ.
ನದಿಗೆ ನೆರಳು ದಡದ ಮರ,
ನೀರ ಜೊತೆ ನಿಂತಲ್ಲೇ ಹರಿವ
ಹೂವು, ಎಲೆ, ರೆಂಬೆ ಕೊಂಬೆಗಳು.
ಕಾಲಿಟ್ಟರೆ ಸುತ್ತ ತರಂಗಗಳು;
ನೀರಿಗಿಳಿದು
ಅಂಗಾತ
ಕೈ ಕಾಲು ಬಡಿದು
ಈಸಿದರೆ,
ಹಾಗೇ
ತಿಳಿನೀರ ತಳಕ್ಕೆ ಮುಳುಗಿದರೆ…..
ಖಾಲಿ ಹಾಳೆಯ ಮೇಲೆ
ಹರಿವ ನದಿಯಲ್ಲಿ
ನಾನು.
ಮುಳುಗಿದರೆ ನದಿ, ಹಾಳೆಯ ತಳಕ್ಕೆ;
ನುಂಗಿ ನದಿಯ ಹಾಡು
ಮತ್ತೆ ಬಿಳಿ ಹಾಳೆ
ಖಾಲಿ!
ಏನೂ ಆಗದ ಹಾಗೆ…. ಬೆಳ್ಳಗೆ,
ನದಿಯ ನೆನಪಿಗೊಂದು
ಅಮೃತಶಿಲೆಯ ಸ್ಮಾರಕದ ಹಾಗೆ.
*****