ಮಳೆಯ ಜಿಟಿಜಿಟಿ ರಾಗ ಶುರುವಾಗಿ ಆಗಲೇ ಮೂರು ದಿನ ಕಳೆದಿದೆ. ಕಾರ್ತೆಲ್ ತಿಂಗಳ ನಡುವದು. ಬೆಳಗುವ ತೆಂಗಿನ ಮಡಲು – ಕೊತ್ತಳಿಗೆ, ಸೌದೆ, ತರಗಲೆಗಳೆಲ್ಲ ಆ ರೀತಿ ಜೀರಿಗಟ್ಟಿ ಸುರಿವ ಮಳೆಯ ಆಲಾಪನೆ, ಥಂಡಿಗೆ ಬೆದರಿ ಬಚ್ಚಲು ಮನೆಯ ಕೋಡಿಮೂಲೆಯಲ್ಲಿ ಚಳಿ ಹಿಡಿದು ಹನಿದು ಕೂತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಖಾದ್ರಿಬ್ಯಾರಿಯವರು ಎಂಕಪ್ಪಶೆಟ್ಟರ ಬಚ್ಚಲು ಮನೆಯ ಉರಿವ ಒಲೆಬಾಯಿಗೆದುರಾಗಿ ಕುಕ್ಕರುಗಾಲಲ್ಲಿ ಕೂತು, ಉರಿವ ತೆಂಗಿನ ಮಡಲ ಸೀಳನ್ನು ಒಲೆಗಂಟಲತ್ತ ತಳ್ಳುತ್ತಿದ್ದರು. ತಳ್ಳುವ ತೆಂಗಿನ ಗರಿಗಳೆಲ್ಲ ಬರಬರನೆ ಉರಿದುಬಿಟ್ಟು ಬರಿ ನಡುದಂಡು ಬಂದಾಗ ಉರಿಯ ಅಬ್ಬರವನ್ನೊಮ್ಮೆ ಕುಗ್ಗಿಸಿ ಒಂದಷ್ಟು ಹೊಗೆಯ ಕಾಣಿಕೆಯನ್ನು ಖಾದ್ರಿಬ್ಯಾರಿಯವರಿಗೆ ಕರುಣಿಸುವಾಗಲೆಲ್ಲ ಅವರು ಸುಕ್ಕು ಮುಖದಲ್ಲಿ ಕ್ಷೀಣವಾಗಿ ಬೆಳಗುತ್ತಿದ್ದ ಕಣ್ಣುಗಳಿಗೆ ನೀರು ತುಳುಕಿಸುವ ಅವಸರ !
ತೊಟ್ಟ ಹಸಿರು ರುಮಾಲಿನ ಅಂಚಿನಿಂದಲೆ ಕಣ್ಣನೀರನ್ನು ಇಂಗಿಸಿಕೊಂಡು ಒಲೆಬಾಯಿಗೆ ಮತ್ತಷ್ಟು ತೆಂಗಿನ ಗರಿ ತುರುಕಿಸುವಷ್ಟರಲ್ಲಿ ಆ ಮಳೆಗಾಳಿಯೊಂದಿಗೆ ಬೀಸಿ ಬಂತು – ವೆಂಕಪ್ಪಶೆಟ್ಟರ ಹಕ್ಕಿನ ಶೆಡ್ತಿ ಉಮ್ಮಕ್ಕೆಯವರ ಎಂದಿನ ಎಚ್ಚರಿಕೆ ಅವುಚಿದ ಹಿತವಚನ!
‘ನೀರು ಉಗುರುಬಿಸಿ ಆದ್ರೆ ಸಾಕು ಸೈಬೆರೇ… ಇವತ್ತೇ ಎಲ್ಲ ಮರಮಟ್ಟನ್ನು ಆ ಒಲೆಗಂಟಲಿಗೆ ತುರುಕಿದರೆ ನಾಳೆ ಅದರ ಬಾಯಿಗೆ ನಮ್ಮ ಕೈಕಾಲನ್ನು ತುರುಕಿಸುವುದು ಹೇಗೆ…? ಆ ಒಲೆಯೇನೊ ಈ ಊರಲ್ಲಿರುವ ಸೌದೆ-ಸೌಟುಗಳೆಲ್ಲ ನನ್ನ ಬಾಯಿಗೇ ಬಂದು ಬೀಳಲಿ ಎಂದು ಕೇಳಬಹುದು… ಆದ್ರೆ ನಾವು ನಾಳೇನೂ ಬಾಣಂತಿ – ಮಗು ಮೀಯಿಸಬೇಕಲ್ಲ…’
ಎಂದಿನಂತೆ ಇಂದೂ ತೇಲಿಬಂದ, ಉಮ್ಮಕ್ಕೆ ಶೆಡ್ತಿಯವರ ಉರಿಮಾತು ಖಾದ್ರಿಬ್ಯಾರಿಯವರ ನೆಮ್ಮದಿಯನ್ನು ಕದಡುವಂತಿದ್ದರೂ ಅವರು ಅದನ್ನು ಆಲಿಸಿಯೂ ಆಲಿಸದಂತವರಿದ್ದು, ಇನ್ನೊಂದಷ್ಟು ತೆಂಗಿನ ಗರಿಗಳನ್ನು ಎಳೆದು ಒಲೆಗಂಟಲಿಗೆ ತುರುಕಿಸುವಷ್ಟರಲ್ಲಿ ಶೆಡ್ತಿಯವರು ಉರಿ ಮುಸುಡಿ ಮಾಡಿ ಬಂದೇಬಿಟ್ಟರು. ಕಾವಿಗೆ ಕೂತ ಹೇಂಟೆಯಂತೆ – ಅದ್ಯಾವದೋ ಅಸಮಾಧಾನ, ಅಶಾಂತಿಯಿಂದ ಬೇಯುತ್ತಾ ಬಂದ ಶೆಟ್ಟರ ಮಡದಿಯ ದಿಢೀರ್ ಆಗಮನದಿಂದ ಒಲೆ ಮುಂದೆ ಕೂತಿದ್ದ ಖಾದ್ರಿಬ್ಯಾರಿಯವರ ಆಸೆಯ ಕಿಡಿಗೆ ತಣ್ಣೀರು ಎರಚಿದಂತಾಯ್ತು!
ಬಾಣಂತಿ ಮೀಯುವ ತಾಮ್ರದ ಹಂಡೆಗೆ ಕಂಠ ಮುಟ್ಟುವಷ್ಟು ನೀರು ತುಂಬಿ, ಒಲೆಗಂಟಲು ಬಿರಿವಷ್ಟು ಸೌದೆ ತುರುಕಿಸಿಟ್ಟು, ನೀರನ್ನು ಸಾಕಷ್ಟು ಜಾಸ್ತಿಯೇ ಕಾಯಿಸಿಟ್ಟು…ಇನ್ನೇನು ಆ ನೀರೊಳಗೆ ತನ್ನ ವಾತ ಹಿಡಿದ ಕೈಗಳೆರಡನ್ನು ಮೂರ್‍ನಾಕು ಗಳಿಗೆ ಅದ್ದಿಟ್ಟು…ನಾಕೇ ನಾಕು ಚೊಂಬು ನೀರನ್ನು ನೋವಿನಿಂದ ಮರಗಟ್ಟಿ ಹೋಗಿರುವ ತನ್ನ ಕಾಲ್ಗಂಟುಗಳಿಗೆ ಎರೆದುಕೊಳ್ಳಬೇಕು – ಎಂಬ ಆಸೆಯೆಳೆಯನ್ನು ಅದುವರೆಗೂ ಮಯಿಯಿಡೀ ಸುತ್ತಿಕೊಂಡು ಹೊಗೆಯ ದೆಸೆಯಿಂದ ಮುದಿ ಕಣ್ಗಳನ್ನು ಕೆಂಪು ಕೇಪಳಹಣ್ಣು ಮಾಡಿಕೂತಿದ್ದ ಖಾದ್ರಿಬ್ಯಾರಿಯವರ ಎದೆಯೊಳಗೆ ನಿರಾಸೆಯ ಕಗ್ಗತ್ತೆಲೆಯೇ ಕವಿದಂತಾಯ್ತು!
ಬಚ್ಚಲುಮನೆಗೆ ಹಾಗೆ ನುಗ್ಗಿ ಬಂದ ಉಮ್ಮಕ್ಕೆಯವರು ಎಂದಿನಂತೆ ನೇರವಾಗಿ ಬಂದು, ಹಂಡೆಯ ಮರದ ಮುಚ್ಚಳ ಸರಿಸಿ ಸಾವಧಾನದಿಂದ ಬಲಗೈಯ ಬೆರಳುಗಳಷ್ಟು ಸೋಕಿಸಿದವರೆ,
‘ಎಲ್ಲಾ ನನ ಕರ್ಮವೇ….ಅಲ್ಲಾ ಸ್ಯಾಬರೆ, ನಿಮ್ಗೆ ಎಷ್ಟೂಂತ ಹೇಳುದು ಮಾರಾಯ್ರೇ! ಇದು ಮಗು-ಬಾಣಂತಿ ಮೀಯುವ ನೀರಾ ಅಥವ ಹೆಣ ಮೀಯಿಸುವ ನೀರಾ….? ಒಲೆಬಾಯಿಗೆ ಕಸಕಡ್ಡಿ ತಳ್ಳುವುದಕ್ಕೆ ನಿಮ್ಗೆ ಒಂದು ತಲೆಬುಡ ಯಾವ್ದೂ ಇಲ್ಲಾಂತ ಕಾಣಿಸುತ್ತೆ….?’
ಸೈಬರಿಗೆ ನಯವಾಗಿ ಗದರುತ್ತಲೇ ಉಮ್ಮಕ್ಕೆಯವರು ಉರಿವ ಒಲೆಗಂಟಲತ್ತ ತಿರುಗಬೇಕೆನ್ನುವಷ್ಟರಲ್ಲಿ ಖಾದ್ರಿಬ್ಯಾರಿಯವವರು ಒಲೆಗೆದುರಾಗಿ ಕೂತವರು ಕೂತಲ್ಲಿಂದ ತಟ್ಟನೆ ಎದ್ದುನಿಂತರು. ‘ಒಮ್ಮೆ ನೀವು ಆಡಿ ಸರಿಸಿ ನೋಡುವಾ…’ಎಂದು ಹೇಳುತ್ತಲೇ ಉಮ್ಮಕ್ಕೆಯವರು ತಮ್ಮ ಎರಡೂ ಕೈಗಳಿಂದ, ಒಲೆಗಂಟಲೊಳಗೆ ಭಾರಿ ಸಂಭ್ರಮದಿಂದ ಉರಿಯುತ್ತಿದ್ದ ತೆಂಗಿನ ಕೊತ್ತಳಿಗೆಗಳನ್ನು ಬಲವಾಗಿ ಹೊರಗೆಳೆದು ಹಾಕಿ, ಅವೆಲ್ಲವನ್ನು ಹೊಸಕಿ ಹಾಕಿದೊಡನೆ ತಟ್ಟನೆ ಎದ್ದ ಹೊಗೆರಂಪಕ್ಕೆ ಖಾದ್ರಿಬ್ಯಾರಿವಯರು ಅಂಗಳ ಪಾಲಾದರು.
’ಓಯ್ ಮಾರಾಯ್ತಿಯೆ… ಒಮ್ಮೆ ಆ ಮಗುವನ್ನು ಮೀಯ್ಸುದಕ್ಕೆ ತಗೊಂಬಾರೆ…ಈ ಸ್ಯಾಬರು ಬಾಣಂತಿ-ಮಗುಗೆ ನೀರು ಕಾಯ್ಸಿದ್ದಲ್ಲ…., ನನ್ನ ಹೆಣ ಮೀಯ್ಸುದಕ್ಕೆ ನೀರು ಕಾಸಿದಂತಿದೆ…’ ಎಂದು ಗಟ್ಟಿಯಾಗಿ ಒದರುತ್ತಲೇ ತನ್ನ ಬಾಣಂತಿ ಮಗಳು ಸುಮತಿಗಾಗಿ ಘೀಳಿಟ್ಟರು.
ಹೊಗೆ ಘಾಟಿನ ಏಟನ್ನಾದರೂ ಸಹಿಸಿಕೊಳ್ಳಬಲ್ಲೆ-ಆದರೆ ಈ ಶೆಡ್ತಿಯವರ ಮಾತಿನ ಏಟನ್ನು ಸಹಿಸಿಕೊಳ್ಳಲಾರೆ ಎಂಬ ನಿಷ್ಠುರ ಭಾವವನ್ನು ಹೊತ್ತು ಖಾದ್ರಿ ಬ್ಯಾರಿಯವರು ಅಂಗಳವಿಳಿದವರು ಅಲ್ಲೆ ಹೊರ ಪಾಗಾರಕ್ಕೆ ಒರಗಿಸಿಟ್ಟ ತನ್ನ ತಲೆಗೊರಬನ್ನು ತಲೆಗೇರಿಸಿಕೊಂಡು ಮನೆ ತಡಮೆ ದಾಟಬೇಕೆನ್ನುವಷ್ಟರಲ್ಲಿ, ಉಮ್ಮಕ್ಕೆಯವರಿಂದ ‘ಈ ನೀರು ಹೆಣ ಮೀಯ್ಸುದಕ್ಕಾ….’ ಎಂಬ ಮಾತಿನೇಟಿಗೆ ಒಂದರೆಗಳಿಗೆ ತತ್ತರಿಸಿದಂತಾಗಿ ದುಃಖದಿಂದ ಅಧೀರ ಹೃದಯ ಹೊತ್ತು ಮನೆ ತಡಮೆ ದಾಟಿದರು.
ಉಮ್ಮಕ್ಕೆಯವರು ಹಂಡೆಯ ಕುದಿನೀರಿಗೆ ಮೂರು ಕೊಡ ತಣ್ಣೀರು ಬೆರೆಸುವಷ್ಟರಲ್ಲಿ ಮಗುವನ್ನು ಎತ್ತಿಕೊಂಡು ಬಂದ ಮಗಳು ಸುಮತಿ “ಅಲ್ಲಮ್ಮ ಆ ಮುದಿಸ್ಯಾಬರು ಈ ಕಿರಿ ಕಿರಿ ಮಳೆಗೆ ಮುಂಜಾನೆಗೇ ಎದ್ದು ಬಂದು ಇಷ್ಟು ಬೆಂದರ್ ಕಾಯ್ಸಿದ್ದೇ ಹೆಚ್ಚು! ಏನೋ ಆ ಮುದಿವಾತದ ಜೀವ ನಾಕು ಚೊಂಬು ಬಿಸಿನೀರಿಗಾಗಿ ಇನ್ನಿಲ್ಲದಂತೆ ಜೀವಬಿಡುತ್ತೆ. ಅವ್ರೇನು ನಮ್ಮಿಂದ ಉಣ್ಣುವ ಅನ್ನ ಕೇಳ್ತಾರಾ. ಅಥವಾ ಉಡುವ ಬಟ್ಟೆ ಕೇಳ್ತಾರಾ? ಬರೀ ಹೊಯ್ದುಕೊಳ್ಳಲು ಒಂದಷ್ಟು ಬಿಸಿನೀರು ಬಯಸ್ತಿದ್ದಾರೆ ಅಷ್ಟೆ. ಅದುನ್ನೂ ಅವರೇನು ನಮ್ಮಿಂದ ಪುಕ್ಕಟ್ಟೆಯಾಗಿ ಅವರಾಗಿಯೇ ಬೇಡಿದ್ದಾರಾ…? ನಮ್ಗೆ ಬಾಣಂತಿ ನೀರು ಕಾಯ್ಸಿಕೊಡಿ…ನಮ್ಮ ಬಾಣಂತಿ ಮಿಂದಾದ ಮೇಲೆ ನೀವೂ ಒಂದು ಗಡದ್ದಾಗಿ ಮಿಂದು ಬಿಡಿ…’ ಎಂದು ಅಪ್ಪ ಅವರಿಗೆ ಹೇಳಿ ಒಪ್ಸಿದ್ದಲ್ವಾ?
ಮಗಳ ಮಾತಿನ ಸರಣಿಗೆ ಉಮ್ಮಕ್ಕೆಯವರು ವಿಕ್ಷಿಪ್ತ ಅರಿವು ತಿಳಿಯಾಗತೊಡಗಿತ್ತು. ಮಗು ಮೀಯಿಸುವ ನೀರನ್ನು ಹದಗೊಳಿಸುತ್ತಿದ್ದ ಅವರು ಮಗಳಾಡಿದ ಮಾತುಗಳನ್ನು ಅತ್ಯಂತ ಪರಿತಾಪದಲ್ಲೇ ಮನನ ಮಾಡಿಕೊಳ್ಳುತ್ತಿದ್ದಂತೆ ಅವರಿಗೆ ತಮ್ಮ ಮಾತಿನ ಬಗ್ಗೆ, ಮನದ ಭಾವದ ಬಗ್ಗೆ ಪಶ್ಚಾತ್ತಾಪ ಹುಟ್ಟದಿರಲಿಲ್ಲ. ಅವರಿಗೂ ಖಾದ್ರಿಬ್ಯಾರಿವರೆಂದರೆ ಉದಾಸೀನವಿಲ್ಲ-ನಿರ್ಲಕ್ಷ್ಯವಿಲ್ಲ; ಉಡಾಫೆಯ ಭಾವವೂ ಇಲ್ಲ. ಈ ಮಾನ ತೆಗೆವ ಮಳೆಗಾಲದಲ್ಲಿ ‘ಅನಪತ್ಯ’ಕ್ಕೆ ಅಂತ ಇಟ್ಟಿದ್ದ ಸೌದೆಸೊಪ್ಪುಗಳೆಲ್ಲವನ್ನು ಖಾದ್ರಿಬ್ಯಾರಿವರು ಏನೂ ಪಿಕೀರಿಲ್ಲದಂತೆ ಈ ಬಚ್ಚಲ ಒಲೆಗಂಟಲೆಂಬ ಯಜ್ಞಕುಂಡಕ್ಕೆ ಎಸೆದರೆ ಆ ನಂತರ ಈ ಮಳೆಗೆ ಬಾಣಂತಿ-ಮಗುವನ್ನು ಮೀಯಿಸುವ ಕತೆ ಹೇಗೆ-ಎಂಬ ಆತಂಕದಿಂದಲೇ ದಿನನಿತ್ಯವೂ ಅವರು ‘ಬಚ್ಚಲ ಯಜ್ಞಕುಂಡದಿಂದ’ಹೊಗೆ ಎದ್ದಾಕ್ಷಣ ‘ಉಗುರುಬಿಸಿನೀರು ಸಾಕು ಸ್ಯಾಬರೇ…’ ಎಂಬ ಎಚ್ಚರಿಕೆ ಗಂಟೆಯನ್ನು ಅಬ್ಬರದ ಧ್ವನಿಯಲ್ಲಿ ಮೊಳಗಿಸುತ್ತಿದ್ದರಷ್ಟೆ.
ಖಾದ್ರಿಬ್ಯಾರಿಯವರಿಗೂ ಶೆಟ್ಟರ ಪತ್ನಿ ಉಮ್ಮಕ್ಕೆಯವರ ಅಂತರಂಗ ಏನೆಂಬುದು ತಿಳಿಯದ್ದೇನಲ್ಲ. ಉಮ್ಮಕ್ಕೆಯವರು ಮೈರ್ಪಾಡಿ ಗುತ್ತಿನ ಸುಸಂಸ್ಕೃತ ಮನೆತನದ ಮಗಳಾಗಿದ್ದು, ಆಕೆಯಲ್ಲಿರುವ ಸ್ತ್ರೀ ಸಹಜವಾದ ಔದಾರ್ಯ, ನಯವಿನಯ, ಕಷ್ಟಸಹಿಷ್ಣುತೆ, ಮನುಷ್ಯತ್ವ, ಎಲ್ಲವೂ ಆಕೆಗೆ ತಾಯಿ ಮಾಣ್ಯಕ್ಕೆ ಶೆಡ್ತಿಯವರಿಂದಲೇ ಬಂದಿರುವಂತಹದ್ದು – ಎಂಬ ಮಾತನ್ನು ಅದೆಷ್ಟು ಬಾರಿ ಅವರು ವೆಂಕಪ್ಪಶೆಟ್ಟರಲ್ಲಿ ಹೇಳಿಲ್ಲ. ಇದುವರೆಗೆ ಅದೆಷ್ಟು ಬಾರಿ ಅವರು ಉಮ್ಮಕ್ಕೆಯವರ ಕೈಯಿಂದಲೇ ಎಂತೆಂಥ ಸಹಾಯವನ್ನು ಪಡೆದಿಲ್ಲ. ಅವರ ಈ ಕಾರ್ತೆಲ್ ತಿಂಗಳ ಆರಂಭದಿಂದ ಹೀಗೆ ಸುರಿವ ಮಳೆಯ ಕಾರಣದಿಂದಾಗಿ ಖಾದ್ರಿ ಬ್ಯಾರೆಯವರು ಉಮ್ಮಕ್ಕೆಯವರ ನಡೆ-ನುಡಿ-ವ್ಯವಹಾರಗಳ ಬಗ್ಗೆ ಸಾಂದರ್ಭಿಕವಾಗಿ ವ್ಯತಿರಿಕ್ತವಾದ ತೀರ್ಪನ್ನೇ ನೀಡುವಂತಾಗಿದೆ. ಮನುಷ್ಯ ಬೆಳೆದ ಹಾಗೆ ಆತನ ಮನಸ್ಸು ಮಾತ್ರ ಸಂಕುಚಿತವಾಗತೊಡಗುತ್ತದೆ, ಮುರುಟುತ್ತದೆ ಎಂದು ಹಿರಿಯರು ಹೇಳುವ ಮಾತು ನಿಜವೋ ಏನೋ ಎಂದು ಒಂದರಗಳಿಗೆ ಖಾದ್ರಿಬ್ಯಾರಿಯವರಿಗೆ ಆ ಸಂದರ್ಭದಲ್ಲಿ ಅನಿಸದೇನೂ ಇರಲಿಲ್ಲ.
ಇದೀಗ ಖಾದ್ರಿಬ್ಯಾರಿಯವರು ಉಮ್ಮಕ್ಕೆಯವರ ಬಗ್ಗೆನೇ ಯೋಚಿಸುತ್ತ. ಅದರ ಜೊತೆ ಜೊತೆಗೆ ಈ ತನ್ನ ವಾತದ ಮೈಗೆ ಎಂದು ನಾಕು ಗೆರಟೆ ಬಿಸಿನೀರು ಬಿದ್ದೀತೋ… ಅದು ಹೇಗೆ ಎಲ್ಲಿ ಎಂಬ ಹಂಬಲ-ಯೋಚನೆಯಲ್ಲಿ ಭಾರವಾದ ಹೆಜ್ಜೆಗಳನ್ನಿಡುತ್ತಲೇ ಕಟ್ಟಹುಣಿಯ ನೀರತೋಡಿನ ಬಳಿ ಬರುವಾಗ ಭರದಿಂದ ಹರಿಯುವ ತೋಡಿನ ನೀರು ಕೂಡಾ ಅವರನ್ನು ಹಾಗೂ ಅವರಾಸೆಯನ್ನು ಕಂಡು ಗಹಗಹಿಸಿ ನಕ್ಕಂತಾಯಿತು. ಖಾದ್ರಿ ಬ್ಯಾರಿಯವರು ತಮ್ಮ ಬಿಸಿನೀರಿನ ಆಸೆಯನ್ನಲ್ಲೇ ಮುರುಟಿಸಿಕೊಂಡು ತೋಡು ದಾಟಿದರು.
ತೋಡು ದಾಟಿದರೇನು ಅವರೊಳಗಿನ ಯೋಚನೆ ಮಾತ್ರ ಅವರ ತಲೆಯಿಂದ ದಾಟಿ ಹೋಗಲಿಲ್ಲ. ಉಮ್ಮಕ್ಕೆಯವರು ಅಂದಿದ್ದ ನಿಷ್ಠುರದ ಮಾತುಗಳು ಅವರೆದೆಯೊಳಗೆ ಹುದುಗಿ ಕುಳಿತು ಒದ್ದೆ ಬಟ್ಟೆ ಹಿಂಡಿದಂತೆ ಹಿಂಡತೊಡಗಿದ್ದವು. ಖಾದ್ರಿಬ್ಯಾರಿಯವರು ಅದೇ ಯೋಚನೆಯ ಸುಳಿಯಲ್ಲಿ ಸಿಲುಕಿ ತೀರಾ ಖಿನ್ನರಾಗಿ ದಾರಿ ಸವೆಸತೊಡಗಿದರು. “ತಾನೇನು ಆ ಮನೆಯಲ್ಲಿ ಬಿಸಿನೀರು ಮೀಯಬೇಕು ಎಂಬ ಆಸೆಯನ್ನು ಹೊದ್ದುಕೊಂಡು ನಾನಾಗಿಯೇ ಮೇಲೆಬಿದ್ದು ‘ಬಾಣಂತಿ ನೀರು ಕಾಯಿಸಿಕೊಡುತ್ತೇನೆ’ ಎಂದು ಕೇಳಿಕೊಂಡು ಹೋಗಿದ್ದೇನೆಯೇ? ಈ ಶೆಡ್ತಿ ಯಾಕಾಗಿ ಈ ರೀತಿ ದಿನಾ ನನ್ನ ಮೇಲೆ ಹರಿಹಾಯ್ತಾರೋ…” ಎಂಬ ಪ್ರಶ್ನೆಯು ಅವರ ಆತ್ಮಗೌರವದ ಪ್ರಶ್ನೆಯಾಗಿ ಅವರನ್ನು ಇನ್ನಿಲ್ಲದಂತೆ ಚುಚ್ಚತೊಡಗಿತ್ತು.
ಉಮ್ಮಕ್ಕೆಯವರು ಆಸ್ತಿ-ಅಂತಸ್ತು-ಸಾಮಾಜಿಕ ಸ್ಥಾನಮಾನದಲ್ಲಿ ಖಾದ್ರಿಬ್ಯಾರಿಯವರಿಗಿಂತ ಮೇಲಿದ್ದರೂ, ಆತ್ಮಗೌರವ, ಮಾನವತೆ, ಶ್ರಮಸಂಸ್ಕೃತಿ, ಕಷ್ಟಸಹಿಷ್ಣುತೆ, ನಿಸ್ವಾರ್ಥತೆಯಲ್ಲಿ ಇಬ್ಬರೂ ಸಮಾನರೆ. ವಯಸ್ಸಲ್ಲಂತೂ ಖಾದ್ರಿಬ್ಯಾರಿಯವರು ಉಮ್ಮಕ್ಕೆಯವರ ತಂದೆ ಕರಿಯಶೆಟ್ಟರಿಗೆ ಸಮಾನರು. ಖಾದ್ರಿಬ್ಯಾರಿಯವರಿಗೆ ಮೈರ್ಯಾಡಿಗುತ್ತಿನ ಕರಿಯಶೆಟ್ಟರಲ್ಲಿ ಅದೆಷ್ಟು ಗೌರವ, ವಿಶ್ವಾಸ, ಸಲಿಗೆ, ಅಭಿಮಾನ, ಇದೆಯೋ ಅಷ್ಟೇ ಅಥವಾ ಅದಕ್ಕಿಂತ ಒಂದು ಮುಷ್ಟಿ ಜಾಸ್ತಿಯೇ ಪ್ರೀತಿ-ಅಭಿಮಾನ ಗೌರವ ಈ ವೆಂಕಪ್ಪಶೆಟ್ಟರ ಕುಟುಂಬದ ಮೇಲಿದೆ. ಮೊನ್ನೆ ಮೊನ್ನೆ ತನ್ನ ಮೊಮ್ಮಗಳ ಪ್ರಾಯದವಳಾದ ಸುಮತಿಯ ಬಾಣಂತನಕ್ಕೆ ‘ಬಾಣಂತಿ ಮದ್ದು’ತಯಾರಿಸಲು ಊರಿಡೀ ಹುಡುಕಿ ಓಲೆಬೆಲ್ಲ ತಲಾಶ್ ಮಾಡಿತಂದುಕೊಟ್ಟವರಾರು? ಇದೇ ಖಾದ್ರಿಬ್ಯಾರೆಯವರು. ಊರೆಲ್ಲಾ ಹುಡುಕಿದರೂ, ನಾಕು ಕಾಸು ಜಾಸ್ತಿಯೇ ಕೊಡುತ್ತೇನೆಂದರೂ ವೆಂಕಪ್ಪ ಶೆಟ್ಟರಿಗೆ ದೊರಕದ ’ಓಲೆ ಬೆಲ್ಲ’ ಸುಂದರ ಪೂಜಾರಿ ಮನೆಯಲ್ಲಿ ಖಾದ್ರಿಬ್ಯಾರೆಯವರಿಗೆ ದೊರಕಿತ್ತು. ತಾನೇ ದುಡ್ಡು ಕೊಟ್ಟು ತಂದು ‘ಅವಳು ನನ್ನ ಮೊಮ್ಮಗಳು ಖೈರುವಿನ ಸಮಾನ…’ ಎಂದನ್ನುತ್ತ ಓಲೆ ಬೆಲ್ಲದ ಹಣವನ್ನು ಶೆಟ್ಟರು ಜುಲುಮೆ ಮಾಡಿಕೊಟ್ಟರೂ ಅವರು ಸುತರಾಂ ಮುಟ್ಟಿರಲಿಲ್ಲ.
ಮೊನ್ನೆಯ ಭೇಷ ತಿಂಗಳ ಶುರುವಿರಬೇಕು. ಖಾದ್ರಿಬ್ಯಾರಿಯವರು ಮುಂಜಾನೆಯ ನಮಾಜು ಮುಗಿಸಿ ಬಂದು, ಚಾಯಬ್ಬಬ್ಯಾರಿಯ ಗೂಡಂಗಡಿಯ ಹೊರ ಜಗಲಿಯಲ್ಲಿರುವ ಬೆಂಚಿನ ಮೇಲೆ ಕುಳಿತು ಅರೆಗಳಿಗೆ ಕಳೆದಿದೆಯಷ್ಟೆ. ಅದೇ ಗಳಿಗೆಗೆ ತಮ್ಮ ಬೈಲುಗದ್ದೆಗಳ ವಿಚಾರಣೆಗೆಂದು ಪಡ್ಲಾಗೆ ಹೊರಟಿದ್ದ ವೆಂಕಪ್ಪ ಶೆಟ್ಟರಿಗೆ ಖಾದ್ರಿಬ್ಯಾರಿಯವರ ಹಸಿರು ರುಮಾಲು ಕಣ್ಣಿಗೆ ಬಿದ್ದಿದೆ! ತಮ್ಮ ಅಂತರಂಗದ ಅಹವಾಲನ್ನು ಖಾದ್ರಿಬ್ಯಾರಿಯವರ ಮುಂದೆ ಬಿಡಿಸಿಟ್ಟರೆ ತನ್ನ ಕೆಲಸ ಹಣ್ಣಾಗಬಹುದು ಅಥವ ಒಂದು ಒಳ್ಳೆಯ ಸಲಹೆಯಾದರೂ ಸಿಗಬಹುದು ಎಂಬ ದೂರದಾಸೆಯಿಂದ ಶೆಟ್ಟರು ಹತ್ತಿರ ಬಂದವರೇ ‘ಸ್ಯಾಬೆರೇ ನಾನೀಗ ಒಂದು ದೊಡ್ಡ ಮುಷ್ಕಿಲಲ್ಲಿ ಸಿಕ್ಕಿಹಾಕಿಕೊಂಡಿದ್ದೇನಲ್ಲವಾ…? ನಮ್ಮ ಸುಮತಿಯ ಹೆರಿಗೆಯ ದಿನ ಹತ್ತಿರ ಬಂದಾಗಿದೆ. ಬಾಣಂತಿ ಸಾಕುದಕ್ಕೆ ನಮ್ಮವಳೇ ಇದ್ದಾಳೆ. ಹೆರಿಗೆ ಮಾಡಿಸುವ ದೇಯಿ ಪದೆತಿಗೆ, ಹೆರಿಗೆಯ ಹಿಂದೆ ಮುಂದಿನ ದಿನಗಳಲ್ಲಿ ನಮ್ಮಲ್ಲೇ ಇರಬೇಕೆಂದು ಹೇಳಿಯೂ ಆಗಿದೆ. ಆದರೆ ಈ ಒಂದು ಮಳೆ ಶುರುವಾದರೆ… ಬಾಣಂತಿ ನೀರು ಕಾಯಿಸುದಕ್ಕೆ ಈಗ ಯಾವ ನರಿ ನಾಯಿಯೂ ಒಪ್ಪುತ್ತಿಲ್ಲ ಮಾರಾಯ್ರೆ…! ನಮ್ಮ ಬಿಡಿ ಒಕ್ಕಲು-ಪುಡಿ ಒಕ್ಕಲು ಮಕ್ಕಳನ್ನೆಲ್ಲ ಕೇಳಿ ಆಯ್ತು- ಈಗ ನಾನವರ ಕೈಕಾಲು ಹಿಡಿದು ಬೇಡುವುದೊಂದು ಬಾಕಿ ಇದೆ ಅಷ್ಟೆ. ನಿಮ್ಮ ಗೊತ್ತಲ್ಲಿ ಯಾರಾದ್ರೂ ಇದ್ರೆ ಹೇಳಿ ಸ್ಯಾಬರೆ…’
‘… ನನ್ನ ಗೊತ್ತಲ್ಲಿ ಯಾರುದ್ದಾರೆ ಶೆಟ್ರೇ…! ನನ್ನದೀಗ ಊರ ದೂರಾಯ್ತು. ಕಾಡು ಹತ್ತಿರವಾಯೂ ಎಂಬಂಥ ಕತೆ. ಅಲ್ಲಾ… ನಿಮ್ಗೆ ಯಾರು ಸಿಗದಿದ್ರೆ ನಾನೇ ಬಂದು ಬಾಣಂತಿ ನೀರು ಬಿಸಿ ಮಾಡಿ ಕೊಡ್ತೇನೆ… ಆಗ್ಬಹುದಾ ಅಂತಾ ನಿಮ್ಮ ಯಜಮಾನ್ತಿಯಲ್ಲೊಮ್ಮೆ ಕೇಳಿ ನೋಡಿ ಶೆಟ್ರೆ.’
“ಅವಳಲ್ಲೆಂತದ್ದು ಕೇಳುದು…? ಕೋಳಿಯಲ್ಲೆ ಕೇಳಿ ಮಸಾಲೆ ಅರಿ ಎಂದು ಹೇಳಿದ ಹಾಗಾಯ್ತು ನಿಮ್ಮ ಪಂಚಾತಿಕೆ. ಅಲ್ಲಾ ಸ್ಯಾಬರೆ ನೀವು ನಮ್ಮಲ್ಲಿಗೆ ಸುಮ್ಮನೆ ಬಂದು ನೀರು ಕಾಯಿಸುದು ಬೇಡಾ…, ನಿಮಗೆ ಬಾಣಂತಿ ನೀರು ಮುಗಿದ ಮೇಲೆ ‘ಇಂತಿಷ್ಟು ಅಂತ ನಾನು ಕೊಟ್ಟೆಕೊಡುವುದು ಸೈ. ಅದೂ ಅಲ್ಲದೆ ನಿಮ್ಗೆ ಬಿಸಿನೀರು ಅಂದ್ರೆ ಎಷ್ಟು ಜೀವ ಅಂತ ನನಗೆ ಗೊತ್ತಿಲ್ವಾ…, ನೀವು ದಿನಾ ಬಾಣಂತಿ ಮಿಂದಾದ ಮೇಲೆ ಅದೇ ನೀರಲ್ಲಿ ನೀವೂ ಒಂದು ಗಡದ್ದ್ ಮಿಂದುಬಿಡಿ. ನಿಮ್ಮ ವಾತದ ಮೈಗೆ ಅದೇ ಒಂದು ದೊಡ್ಡ ಮದ್ದು… ಆಗದಾ”
ಶೆಟ್ಟರಿಂದ ‘ಮೀಯುವ ಮಾತು’ ಬಂದೊಡನೆ ಖಾದ್ರಿಬ್ಯಾರಿಯವರು ಹಿಂದು ಮುಂದು ನೋಡದೆ ‘ಆ ಮಗು ಸುಮತಿ ಬೇರೆ ಅಲ್ಲ… ನಮ್ಮ ಮೊಮ್ಮಗಳು ಖೈರುನ್ನಿಸ ಬೇರೆ ಅಲ್ಲ…, ನೀವೊಮ್ಮೆ ಸುಮ್ಮನಿದ್ದು ಬಿಡಿ ಶೆಟ್ಟರೆ…, ಎಂತಹ ಊರು ತೆಗೆವ ಮಳೆ ಬಂದರೂ ಬಾಣಂತಿಗೆ ನೀರು ಕಾಯುಸುವ ಜವಾಬ್ದಾರಿ ನಂಗೆ ಬಿಡಿ; ಶೆಟ್ಟರು ನಿರಾಳರಾದರು.
ವೆಂಕಪ್ಪ ಶೆಟ್ಟರಿಗೆ ಖಾದ್ರಿಬ್ಯಾರಿಯವರ ಮಾತಿನ ಬಗ್ಗೆ ಇರುವ ವಿಶ್ವಾಸ ಈಗಿನದ್ದಲ್ಲ. ಸ್ಯಾಬರು ಎಂದೂ ಕೊಟ್ಟ ಮಾತಿಗೆ ತಪ್ಪಿದ ಮನುಷ್ಯನೇ ಅಲ್ಲ. ಕೃತಜ್ಞತಾ ಭಾವದಿಂದ ಶೆಟ್ಟರು ಖಾದ್ರಿಬ್ಯಾರಿಯವರ ಕೈಗಳನ್ನು ಕಣ್ಣಿಗೊತ್ತಿ ‘ತನ್ನ ಕೆಲಸ ಫ಼ೈಸಲ್ ಆಯಿತು’ ಎಂಬ ಭಾವ ಹೊತ್ತು ಪಡುವಣದ ಗದ್ದೆಗಳತ್ತ ನಡೆದಿದ್ದರು.
ಕೊಟ್ಟ ಮಾತಿನಂತೆ ಖಾದ್ರಿಬ್ಯಾರಿಯವರು ವೆಂಕಪ್ಪ ಶೆಟ್ಟಿ ಮನೆಯ ಮಗು-ಬಾಣಂತಿಗೆ ಬಾಣಂತಿನೀರು ಕಾಯಿಸಲಾರಂಭಿಸಿ ಅಂದಿಗೆ ನಲವತ್ತನೇ ದಿನ. ಇಷ್ಟು ದಿನಗಳಲ್ಲಿ ನೀರು ಕಾಯಿಸಲಾರಂಭಿಸಿದ ಖಾದ್ರಿಬ್ಯಾರಿಯವರು ಮಗು-ಬಾಣಂತಿ ಮಿಂದಾದ ನಂತರ ತಮ್ಮ ವಾತ ಹಿಡಿದ ಕೈ-ಕಾಲ ಗಂಟುಗಳಿಗೆ ಕೇವಲ ಏಳೆಂಟು ಬಾರಿ ಬಿಸಿನೀರ ಅಭ್ಯಂಜನ ಮಾಡಿಸಿದ್ದಿರಬಹುದು. ಆದರೆ ಇಡೀ ದೇಹಕ್ಕೆ ಬಿಸಿನೀರು ಎರೆದುಕೊಳ್ಳುವ ಯೋಗವೆಂದೂ ಅವರಿಗೆ ಶೆಟ್ಟರ ಆ ಬಚ್ಚಲು ಮನೆಯಲ್ಲಿ ಇದುವರೆಗೂ ಲಭ್ಯವಾಗಿಲ್ಲ. ವೆಂಕಪ್ಪಶೆಟ್ಟರು ಖಾದ್ರಿಬ್ಯಾರಿಯವರಿಗೆ ಕೊಟ್ಟ ಬಾಯ್ಮಾತಿನಂತೆ, ಇಂದಿನ ವರೆಗೆ ಅವರಿಗೆ ನಲವತ್ತು ದಿನಗಳ ಬಿಸಿನೀರು ಮೀಯುವ ಸುಖ ದೊರಕಬೇಕಿತ್ತು.
ಆದರೆ ಶೆಟ್ಟರು ಸ್ಯಾಬರಿಗೆ ಕೊಟ್ಟ ವಾಗ್ದಾನವನ್ನು ಈಡೇರಿಸಿಕೊಳ್ಳಲು ಶೆಟ್ಟರ ಪತ್ನಿ ಉಮ್ಮಕ್ಕೆಯವರು ಅವಕಾಶ ಕೊಟ್ಟರೆ ತಾನೆ! ಖಾದ್ರಿಬ್ಯಾರಿಯವರನ್ನು ಇಲ್ಲಿ ಬಚ್ಚಲು ಮನೆಯಲ್ಲಿ ಮೀಯಲು ಬಿಡಬಾರದು ಎಂಬ ‘ಹಠದ ಭಾವ’ ಮಾತ್ರ ಉಮ್ಮಕ್ಕೆಯವರಲ್ಲಿ ಖಂಡಿತಾ ಇಲ್ಲ. ಈ ಮಳೆಗಾಲದಲ್ಲಿ… ಮಳೆಗಾಲದ ಅನಪತ್ಯಕ್ಕೆಂದೇ ಇಟ್ಟಿದ್ದ ಸೌದೆಗಳನ್ನೆಲ್ಲ ಈಗಲೇ ಒಟ್ಟಿ ಬಿಸಿನೀರು ಕಾಯಿಸಿದರೆ ನಾಳೆಗೇನು ಎಂಬ ಕಾಳಜಿ-ಆತಂಕದಲ್ಲಿ ಬೇಯುತ್ತಿದ್ದ ಉಮ್ಮಕ್ಕೆಯವರಿಗೆ, ತನ್ನ ಗಂಡ ಖಾದ್ರಿಬ್ಯಾರಿಯವರ ಜತೆ ಮಾಡಿಕೊಂಡಿರುವ ‘ಮೀಯುವ ಒಪ್ಪಂದ’ ಒಂಥರದಲ್ಲಿ ಅಸಮಾಧಾನವನ್ನು ಮಾತ್ರ ತಂದಿದೆ. ಆದರೆ ಆಕೆ ಈ ರೀತಿ ಅಸಮಾಧಾನಪಡುವುದು ತಪ್ಪು ಎನ್ನುವ ಹಾಗೂ ಇಲ್ಲ. ಎಂತಹ ತಾಯಿಯೂ ಮೊದಲು ತೋರುವ ಕಾಳಜಿ, ಪ್ರೀತಿ ತನ್ನ ಸ್ವಂತ ಬಳ್ಳಿಗೆ ತಾನೇ. ನಂತರವಷ್ಟೆ ಸುತ್ತಲ ಬಳ್ಳಿ-ಜೀವಗಳಿಗೆ. ‘ಇಂಥಾ ಪೋಕಾಲದ ಮಳೆಯಲ್ಲಿ… ಇಷ್ಟೊಂದು ಸೌದೆ-ತರಗಲೆಯ ಸಮಸ್ಯೆ ಇರುವಾಗ, ನಮ್ಮ ಮಗು-ಬಾಣಂತಿಗೆ ನೀರು ಕಾಯಿಸುದೇ ಕಷ್ಟ. ಬೇಕಾದರೆ ಒಂದ್ನಾಕು ಕಾಸು ಜಾಸ್ತಿಯೇ ಹೋಗಲಿ ಒಂದು ಆಳನ್ನು ಇಟ್ಟು ಬಾಣಂತಿಗೆ ನೀರು ಕಾಯಿಸುವ ವ್ಯವಸ್ಥೆ ಮಾಡಿದ್ರೆ ಆಗ್ತಿರ್ಲಿಲ್ವಾ…? ದುಡ್ಡು ಕೊಟ್ರೂ ಒಣ ಸೌದೆ ಸಿಗದ ಈ ಥಂಡಿ ಕಾಲದಲ್ಲಿ… ಇವ್ರು ಹೋಗಿ ಹೋಗಿ… ಆ ಕಣ್ಣಲ್ಲಿ ಮಾತ್ರವೇ ಜೀವ ಇಟ್ಟುಕೊಂಡಿರುವ, ಬಿಸಿನೀರಿಗೆ ಜೀವ ಬಿಡುವ ಆ ಮುದಿಸ್ಯಾಬರಿಗೆ ಹೇಳುದಾ…? ಈ ಸ್ಯಾಬ್ರಾದ್ರು ಬಯಸುದೇನು! ಕಾಸೂ ಅಲ್ಲ ಕಾಣಿಯೂ ಅಲ್ಲ… ಮೀಯುದಕ್ಕೆ ಬಾಣಂತಿ ಬಿಸಿ ನೀರು! ಇದೆಂಥಾ ಪೋಕಾಲದ ಪಾಯಿಂಟಪ್ಪ?’
ಗಂಡ ವೆಂಕಪ್ಪಶೆಟ್ಟರು ಖಾದ್ರಿಬ್ಯಾರಿಯವರ ಜತೆಗೆ ‘ಬಿಸಿನೀರ ಒಪ್ಪಂದ’ ಮಾಡಿಕೊಂಡು, ಬಂದಾಗಿನಿಂದಲೂ ಉಮ್ಮಕ್ಕೆಯವರಿಗೆ ಜೀವದಲ್ಲಿ ಸಹನೆಯೆಂಬುದಿಲ್ಲ. ಈ ಬಗ್ಗೆ ‘ಗಂಡನ ಜತೆ ಹಲವು ಬಾರಿ ವಾದಿಸಿಯೂ ಆಗಿದೆ.’
‘ಬಚ್ಚಲು ಮನೆಯಲ್ಲಿ ಬಾಣಂತಿ-ಮಗುವಿಗೆ ನೀರು ಹಾಕುವಾಗ ಈ ಸ್ಯಾಬರದ್ದೇನು ಹೊಸ ಪಂಛಾತಿಕೆ! ಇವರಿಗೆ ಬಿಸಿನೀರು ಮೀಯುವ ಆಸೆ ನೀಗಿಸಿಕೊಳ್ಳಲು ಸಿಕ್ಕಿದ್ದು ನಮ್ಮ ಹಿತ್ಲೇನು? ಅವರ ಸೊಸೆ ನಫೀಸಮ್ಮಿನಿಗೇನು ದಾಡಿ, ದಿನಾ ಮಾವನಿಗೊಂದು ಗುರ್ಕೆ ಬಿಸಿನೀರು ಕಾಯಿಸಿಕೊಡುವುದಕ್ಕೆ…? ಈ ಮಳೆಗಾಲದಲ್ಲಿ ದುಡ್ಡು ಕೊಟ್ರೆ ಒಣಗಿದ ಉರುವಲು ಸಿಗುವುದಾದರೆ ಈ ಸ್ಯಾಬರಿಗೆ ಒಂದು ಹಂಡೆ ಯಾಕ್, ಎರಡು ಹಂಡೆ ನೀರು ಬಿಸಿ ಮಾಡಿ ಮೀಯಿಸುವ…ಆಗದಾ?’ ಉಮ್ಮಕ್ಕೆಯವರು ಶೆಟ್ಟರ ಜತೆ ಹೀಗೆ ವಾದದ ಮಾಲೆ ಹಿಡಿದಾಗಲೆಲ್ಲ, ಶೆಟ್ಟರನ್ನುತ್ತಿದ್ದ ಸಮಾಧಾನ, ಸಂಯಮದ ಮಾತನ್ನು ಶೆಡ್ತಿಯವರು ಕಿವಿಯ ಬೀಳಿಗೂ ಸೇರಿಸಿಕೊಳ್ಳುತ್ತಿರಲಿಲ್ಲ.
ವೆಂಕಪ್ಪಶೆಟ್ಟರು, ಅತ್ಯಂತ ತಾಳ್ಮೆಯಿಂದ ತಮ್ಮ ಮಡದಿಗೆ ಹೇಳುವಷ್ಟು ಹೇಳಿ ನೋಡಿದರು. ಆಕೆಯದ್ದೇ ವಾದ ಬಿಗಿಯಾಗತೊಡಗಿದಾಗ ಶೆಟ್ಟರು “ಏಯ್ ಬಿಕನಾಸಿ, ಈ ಮಳೆಯ ವರಾತಕ್ಕೆ ಮಣ್ಣಿಂಗಿ ಹೋದ ನಿನ್ನಪ್ಪ ಬಂದು ‘ಬಾಣಂತಿನೀರು ಬಿಸಿ ಮಾಡ್ತಾನೇನೆ? ಆ ನಿನ್ನ ಬಿಡಿ ಒಕ್ಕಲ ಮಕ್ಕಳು ನೋಡಿದ್ರೆ ನಿನ್ನ ಹಿತ್ಲ ಕಡೆ ತಲೆ ಹಾಕಿ ಮಲಗುವುದಿಲ್ಲ. ಅವುಗಳಿಗೆ ಬಂದಿರುವ ದಪ್ಪ ಛರ್ಬಿ ಇಳಿಸ್ಬೇಕಾದ್ರೆ ಆ ಚಾವಡಿಯೊಳಗಿನ ಪಂಜುರಿಲ್ಯೇ ಬರಬೇಕು ಅಷ್ಟೆ.ಇಂತಹ ಇಕ್ಕಟ್ಟಿನ ಜಂಬರದಲ್ಲಿ ಬಿದ್ದು ನಾನು ಒದ್ದಾಡಿದ್ರೆ…ನನ್ನನ್ನು ಆದರಿಸಿ ಹಿಡಿದವರೆ ಖಾದ್ರಿಬ್ಯಾರಿಯವರು. ಯಾವುದೇ ವಾತ ಹಿಡಿದ ಜೀವಕ್ಕೆ ‘ಬಿಸಿನೀರೆಂದ್ರೆ ಪ್ರಾಣ’ ಅಂತಾ ನನಗೊತ್ತಿಲ್ವಾ? ‘ಎರಡೊತ್ತು ಊಟ ಇರದಿದ್ರೂ ದೊಡ್ಡದಲ್ಲ. ಒಂದೊತ್ತು ಮೀಯುದ್ದಕ್ಕೆ ಬಿಸಿನೀರು ಮಾಡಿಕೊಡಮ್ಮ’ ಎಂದು ಇವರು ಸೊಸೆಗೆ ಎಷ್ಟು ದೊಗ್ಗಲು ಸಲಾಂ ಹಾಕಿದ್ರೂ…ಆಕೆ ಬಿಸಿನೀರ ಹನಿ ಸೋಕಿಸ್ತಿಲ್ಲ ಎಂದು ಸ್ಯಾಬರು ಎಂದೋ ಹೇಳಿದ್ದು ನನಗೆ ನೆನಪಲ್ಲಿದ್ದುದರಿಂದಲೇ ನಾನು ಅವರನ್ನು ಒತ್ತಾಯದಿಂದ ಈ ‘ಬಿಸಿನೀರ ಒಪ್ಪಂದಕ್ಕೆ’ ಒಪ್ಪಿಸಿದ್ದು. ಅವ್ರು ಬಾಣಂತಿ ಏಳುವವರೆಗೆ ಮಾತ್ರ ತಮ್ಮ ಬಚ್ಚಲ ಮನೆಯಲ್ಲಿ ಮೀಯುವುದಲ್ಲ…ಬಾಣಂತಿ ಎದ್ದನಂತರವೂ ಇಲ್ಲೇ ಬಿಸಿನೀರು ಕಾಸಿಕೊಂಡು ಮೀಯುತ್ತಾರೆ…,ಈಗೇನಂತೆ ನಿನ್ನ ಮಸಾಲತ್ತು” ಎಂದು ಕಣ್ಣಲ್ಲೇ ಕೆಂಡ ಕಾರಿಸುತ್ತ
ಹೆಂಡತಿಯ ಬಾಯ್ಮುಚ್ಚಿಸಿದ್ದರು.
ಆ ಕ್ಷಣಕ್ಕೆ ಉಮ್ಮಕ್ಕೆಯವರ ಬಾಯೇನೋ ಮುಚ್ಚಿರಬಹುದು. ಆದರೆ ಖಾದ್ರಿಬ್ಯಾರಿಯವರು ಎಂದು ಶೆಟ್ಟರ ಮನೆಯ ಬಚ್ಚಲು ಮನೆಯಲ್ಲಿ ಉರಿ ಹಾಕತೊಡಗಿದರೋ ಅಂದಿನಿಂದಲೇ ಉಮ್ಮಕ್ಕೆಯವರು, ಸ್ಯಾಬರ ಒಳಜೀವಕ್ಕೆ ಕಿರಿಕಿರಿ ಹುಟ್ಟಿಸುವಂತೆಯೂ, ಆತ್ಮಗೌರವಕ್ಕೆ ಧಕ್ಕೆಯಗುವಂತೆಯೂ ವರ್ತಿಸತೊಡಗಿದ್ದರು. ಖಾದ್ರಿಬ್ಯಾರಿಯವರು ತಮ್ಮ ಕಣ್ಣುಗಳನ್ನು ಕೇಪಳಹಣ್ಣು ಮಾಡಿಕೊಂಡು ಹೊಗೆಘಾಟಿನೊಂದಿಗೆ ಗುದ್ದಾಡುತ್ತಾ ಹಂಡೆ ನೀರನ್ನು ಬಿಸಿ ಮಾಡಿ ಇಟ್ಟಾಕ್ಷಣ ಮಗುವಿನೊಂದಿಗೆ ನುಗ್ಗಿ ಬರುತ್ತಿದ್ದ ಉಮ್ಮಕ್ಕೆಯವರು ತಕ್ಷಣ ಮಗು-ಬಾಣಂತಿಯನ್ನು ಮೀಯಿಸುವ ಏರ್ಪಾಡುಮಾಡಿ ಬರೀ ಮೂರ್ನಾಕು ಗೆರಟೆ ನೀರನ್ನಷ್ಟೇ ಹಂಡೆಯಲ್ಲಿ ಉಳಿಸಿ ಮಿಕ್ಕೆಲ್ಲವನ್ನು ಮಗು-ಬಾಣಂತಿಗೆ ಎರೆದುಬಿಡುತ್ತಿದ್ದರು. ಇಷ್ಟಕ್ಕೂ ಸಮಾಧಾನವಿಲ್ಲವೆಂಬಂತೆ ಒಲೆಗಂಟಲಿಗೆ ನೀರು ಹನಿಸಿಬಿಟ್ಟು, ಒಲೆಬಾಯನ್ನು ತಂಪುಗೊಳಿಸಿಬಿಡುತ್ತಿದ್ದರು. ಆ ಹನಿದ ಒಲೆಗಂಟಲಿಗೆ ಮತ್ತೆ ಆ ಕ್ಷಣದಲ್ಲಿ ಉರಿ ಹಾಕಬೇಕೆಂದರೆ ಭೂತ ಪಂಜುರ್ಲಿಯೇ ಮಾಯ ತೋರಬೇಕು ಅಷ್ಟೆ, ಆದ್ರಿಬ್ಯಾರಿಯವರಿಗೆ ಉಮ್ಮಕ್ಕೆಯವರ ಆ ಕ್ಷಣದ ವರ್ತನೆ ಬಗ್ಗೆ ಯೋಚಿಸಲು ಏನೂ ತೋಚದಂತಾಗಿ ತಕ್ಷಣ ನಿಡುಸುಯ್ಲೊಂದನ್ನು ಬಿಡುತ್ತಾ ಮೌನವಾಗಿ ಎದ್ದು ಹೊರಡುತ್ತಿದ್ದರು.
ಇತ್ತಿತ್ಲಾಗೆ, ಕೆಲವು ದಿನಗಳಿಂದ ಸ್ಯಾಬರು ಒಲೆಗಂಟಲೆದುರು ಕೂತಾಗಲೆಲ್ಲಾ ಉಮ್ಮಕ್ಕೆಯವರು ಪಡಸಾಲೆಯಿಂದಲೇ-‘ಒಲೆಗಂಟಲಿಗೆ ನಾಲ್ಕು ಬಾಯಿ ಸೌದೆ ತುರಿಕಿದರೆ ಸಾಕು ಸ್ಯಾಬರೇ;ಸಾಕು ಉರಿ ನಿಲ್ಸಿ…..ಉಗುರು ಬಿಸಿ ಸಾಕು…., ಮೀಯಲಿಕ್ಕಿರುವುದು ಮಗು-ಬಾಣಂತಿ ಅಷ್ಟೆ….’ ಎಂದು ಏರುದನಿಯಿಂದ ಹೇಳುವಾಗಲೆಲ್ಲ ಖಾದ್ರಿಬ್ಯಾರಿಯವರ ಜೀವ ಹಿಂಡಿ ಜೀವವಾಗುತ್ತಿತ್ತು. ಅವರ ಎದೆಯೊಳಗೆ ನಿರಾಶೆಯ ಕಗ್ಗತ್ತಲೇ ಕವಿಯುತ್ತಿತ್ತು. ಕಣ್ಣೂ ಹನಿಗಣ್ಣಾಗುತ್ತಿತ್ತು.
ನನಗೆ ಈ ಅಂಗಳದ ಬಿಸಿನೀರೂ ಬೇಡ….ಸುಡುನೀರೂ ಬೇಡಾ….ಎಂದು ಅವರಿಗೆ ಅನೇಕ ಬಾರಿ ಅನ್ನಿಸಿದ್ದರೂ, ತನ್ನ ಮೊಮ್ಮಗಳ ಸಮಾನಳಾದ, ಅದರಲ್ಲೂ ತನ್ನ ಬಗ್ಗೆ ಜೀವವನ್ನೇ ಇಟ್ಟುಕೊಂಡಿರುವ ಆ ಬಾಣಂತಿ, ತಾನು ಇದ್ದಕ್ಕಿದ್ದಂತೆ ನೀರು ಕಾಯಿಸುವ ಕೆಲಸವನಲ್ಲೇ ಬಿಟ್ಟರೆ ಎಷ್ಟು ನೊಂದುಕೊಂಡಾಳೋ ಎಂಬ ಹಿಂಜರಿಕೆಯಿಂದಲೇ ಅವರು ಇಂದಿನವರೆಗೂ ಆ ಕಾಯಕವನ್ನು ಅಷ್ಟೇ ಮುತುವರ್ಜಿಯಿಂದ ಮುಂದುವರೆಸಿದ್ದಾರೆ. ಆದರೆ ಅವರು ಆ ಬಚ್ಚಲುಮನೆಯಲ್ಲಿ ಇದುವರೆಗೂ ಒಂದು ಬಾರಿಯಾದರೂ ಮಿಂದಿಲ್ಲ.
ಖಾದ್ರಿಬ್ಯಾರಿಯವರಿಗೇನು ಆ ಅಂಗಳ-ಆ ಮನೆ ಮಂದಿ ನಿನ್ನೆ ಮೊನ್ನೆಯ ಪರಿಚಯವೇನಲ್ಲ. ವೆಂಕಪ್ಪಶೆಟ್ರ ಅಪ್ಪ ಕುಡುಪ್ಪ ಶೆಟ್ರ ಕಾಲದಿಂದಲೂ ಅವರು ಆ ಅಂಗಳದಲ್ಲೇ ಓಡಾಡಿ ಈಗ ಮುಪ್ಪು ಕಂಡವರು. ಹುಡುಗು ಪ್ರಾಯದಲ್ಲಿ ಅಪ್ಪನ ಜತೆ ಸೇರಿ ಮಣಿಸರ-ಮೆಣಸಿನ ವ್ಯಾಪಾರಕ್ಕಾಗಿ ಬಡಗುದಿಕ್ಕಿನ ಗಟ್ಟವನ್ನೇರಿದ ಖಾದ್ರಿಸ್ಯಾಬರು, ಕ್ರಮೇಣ ಅಲ್ಲಿನ ಗೌಡ್ತಿಯವರ ಮಾತಿನ ಕಾಟ ತಾಳಲಾರದೆ, ಏಳೆಂಟು ವರುಷಗಳಲ್ಲೆ ಅಲ್ಲಿನ ವ್ಯಾಪಾರ ವಹಿವಾಟುಗಳನ್ನು ಕೈದು ಮಾಡಿ, ಅಪ್ಪನ ಜತೆಗೂಡಿ ಕನ್ನಡಜಿಲ್ಲೆಯಲ್ಲೇ ವ್ಯಾಪಾರಕ್ಕಾಗಿ ಅಡಿಗಲ್ಲಿಟ್ಟಿದ್ದರು.
ಖಾದ್ರಿಸ್ಯಾಬರು ಎಂದೂ ಒಂದೇ ವ್ಯಾಪಾರಕ್ಕೆ ಜೋತುಬಿದ್ದವರಲ್ಲ. ಆರಂಭದಲ್ಲಿ ಮಣಿಸರಕಿನ ವ್ಯಾಪಾರದ ಜತೆ ನಾಲ್ಕು ಊರು ಸುತ್ತುತ್ತ ಎಮ್ಮೆ, ಹಸು, ಕೋಣಗಳ ದಲ್ಲಾಳಿ ಕೆಲಸಕ್ಕೆ ಕೈಹಾಕಿದ ಖಾದ್ರಿಬ್ಯಾರಿಯವರು ಮನೆಯಲ್ಲಿ ಸಂತಾನ ಭಾಗ್ಯ ಹೆಚ್ಚಿದಂತೆಲ್ಲ ತಮ್ಮ ಜಾಣ್ಮೆ, ಚಾಕಚಕ್ಯತೆ, ದೂರಾಲೋಚನೆಯನ್ನು ಮುಂದಿಟ್ಟುಕೊಂಡು ಋತುಗಳಿಗನುಗುಣವಾಗಿ ತಮ್ಮ ವ್ಯಾಪಾರದ ಕ್ಷೇತ್ರವನ್ನು ವಿಸ್ತರಿಸುತ್ತಿದ್ದುದು ಅವರ ವ್ಯಾಪಾರ ಜ್ಞಾನ, ಅವರ ಬದುಕುವ ದಾರಿಯನ್ನು ಅರಸುವ ಕೌಶಲ್ಯಕ್ಕೊಂದು ಮಾದರಿಯಾಗಿತ್ತು.
ಪಗ್ಗು-ಭೇಷ ತಿಂಗಳು ಬಂತೆಂದರೆ ಸಾಕು-ದಲ್ಲಾಳಿ ಕೆಲಸದ ಜತೆಗೆ ಮುಂದೆ ದಿಗಿಣ ತೆಗೆದು ಬರಲಿರುವ ಕಾರ್ತೆಲ್ ತಿಂಗಳ ಮಳೆರಾಯನಿಗೆ ಇರಲಿ ತನ್ನದೊಂದು ‘ಛತ್ರಿಸೇವೆ’ ಎಂಬಂತೆ ಖಾದ್ರಿಬ್ಯಾರಿಯವರು ಹೆಗಲ ಮೇಲೊಂದು ಸುತ್ತೆ-ಕತ್ರಿ-ಮೊಳೆ-ಕಡ್ಡಿಗಳಿರುವ ಬಟ್ಟೆ ಚೀಲ ನೇತುಹಾಕಿಕೊಂಡು ಊರು ಸುತ್ತಲು ಹೊರಟರೆಂದರೆ-ಊರವರ ಮೂಲೆ ಸೇರಿದ ಹಾಳು ಮೂಳು ಬಣ್ಣಗೇಡಿ ಕೊಡೆಗಳೆಲ್ಲ ಸ್ಯಾಬರಿಗೆ ಸಲಾಮು ಹೊಡೆಯತೊಡಗುತ್ತವೆ. ಮತ್ತೆ ಆ ಕೊಡೆ ರಿಪೇರಿ ಕೆಲಸ ಕೈದಾಗುವುದು ಮುಂದೆ ಶ್ರಾವಣಮಾಸ ಬಂದ ನಂತರವಷ್ಟೆ. ಅಷ್ಟರಲ್ಲಿ ಕನ್ಯಾ ತಿಂಗಳು ಎದುರು ಬಂದರೆ ಪುನಃ ಶುರು-ಕತ್ರಿಸಾಣೆ,ಕಮ್ಮಾರಿಕೆಯ ಕೆಲಸ. ಕೊಟ್ಟು-ಪಿಕಾಸಿ-ಕತ್ತಿಗಳ ಬಾಯಿಗಳಿಗೆ ಹೊಡೆದು ಬಡಿದು ಜಳಪಿಸುವ ಕೆಲಸವೆಲ್ಲ ಮುಗಿದೊಡನೆ, ಪೆರಾರ್ದೆ ತಿಂಗಳಲ್ಲಿ ಗಾಡಿ ಎತ್ತುಗಳಿಗೆ ಲಾಳ ಹೊಡೆಯುವ ಕೆಲಸ, ಜತೆಗೆ ತಾಮ್ರ-ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಹಚ್ಚುವ ಕೆಲಸವೂ ಮಾಮೂಲು.
ಇವೆಲ್ಲವೂ ಮುಗಿಯುವ ಹೊತ್ತಿಗೆ ವಸಂತಕಾಲ ಅಡಿಯಿಟ್ಟರೆ ಮತ್ತೆ ಖಾದ್ರಿಬ್ಯಾರಿಯವರಿಗೆ ಅಂಡಿಗೆ ಪುರುಸೊತ್ತಿಲ್ಲದ ಕಾಲ. ಕಾಲಿಗೊಂದು ಚರ್ಮದ ಮೆಟ್ಟು ಮೆಟ್ಟಿಕೊಂಡು ವಸಂತಕಾಲದ ಪ್ರಕೃತಿ ವ್ಯಾಪಾರದ ಜತೆಗೆ ಇವರ ವ್ಯಾಪಾರ ಶುರುವಾಗುತ್ತದೆ, ಊರಿಡೀ ಸಾಲುಮರ, ಉಳ್ಳವರ ತೋಪು-ಹಿತ್ತಲಲ್ಲಿರುವ ಹೂ-ಹಣ್ಣು ಹೊತ್ತಿರುವ ಬಸುರಿ ಮರಗಳನ್ನು ದಿಟ್ಟಿಸುವುದು; ಈ ಬಾರಿ ಈ ಮರದಲ್ಲಿ ಕಾಯಿಯೆಷ್ಟು ಹಿಡಿಯಬಹುದು, ಎಷ್ಟಕ್ಕೆ ವಹಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಅವರೊಳಗೆ ಆರಂಭಗೊಳ್ಳುತ್ತದೆ. ಊರಲ್ಲಿರುವ ಮಾವು-ಹಲಸು-ಗೇರು-ಹುಣಿಸೆ-ಬುಗುರಿ ಮರಗಳನ್ನು ವಹಿಸಿಕೊಂಡ ನಂತರ ಮುಂದೆ ಗ್ರೀಷ್ಮಋತು ಬರುವವರೆಗೆ ಇದೇ ಕಾಯಕದಲ್ಲಿ ಸ್ಯಾಬರು ಹಣ್ಣಾಗುತ್ತಾರೆ.
ಹಣ್ಣು ಮಾಗುವಕಾಲ ಮುಗಿದ ನಂತರದ ಕೆಲಸವೆಂದರೆ ಸುಗ್ಗಿ ಕಾಲದ ದವಸ-ಧಾನ್ಯಗಳನ್ನು ಗೇಣಿಮಕ್ಕಳಿಂದ ಕೊಂಡು, ಕೊಳಕೆಯ ಬೆಳೆಯನ್ನೂ ಧಣಿಗಳಿಂದ ಖರೀದಿಸಿಕೊಂಡು ಅದನ್ನು ಲಾಭ ಬರುವ ಋತುಮಾನದಲ್ಲಿ ಮಾರಿ ಒಂದಿಷ್ಟು ಲಾಭ ಗಿಟ್ಟಿಸಿಕೊಳ್ಳುವುದು.
ಗ್ರೀಷ್ಮಕಾಲದ ನಂತರದ ವರ್ಷಋತುವಿನಲ್ಲಿ ಖಾದ್ರಿಬ್ಯಾರಿಯವರಿಗೆ ಸ್ವಲ್ಪ ಪುರುಸೊತ್ತು ಸಿಗುವುದಿದೆ. ಆದರೆ ಪುರುಸೊತ್ತು ಸಿಗುವುದು ಅವರ ಕಾಲುಗಳಿಗೆ ವಿನಃ ಅವರ ದುಡಿಮೆಗಲ್ಲ, ವಹಿವಾಟಿಗಲ್ಲ. ಹೊರಗಡೆ ಆ ಪರಿಯಲ್ಲಿ ಮಳೆ ಸುರಿಯುತ್ತಿರಬೇಕಾದರೆ ಖಾದ್ರಿಬ್ಯಾರಿಯವರು ಜಗಲಿಯ ಮೂಲೆಯಲ್ಲಿ ಕುಳಿತು ಹೊಲಿಗೆ ರಾಟೆ ತಿರುಗಿಸತೊಡಗುತ್ತಾರೆ. ಖಾದ್ರಿಬ್ಯಾರಿಯವರು ಅಪ್ಪನಿಂದಲೇ ಈ ದರ್ಜಿ ಕೆಲಸವನ್ನು ಕಲಿತವರು. ಅಲ್ಲಾನ ಪಾದ ಸೇರುವ ಜಾತಿ ಬಾಂಧವರಿಗೆ ಕಫನ್ ಹೊಲಿಯುವ ಕೆಲಸವನ್ನು ಆ ಊರಲ್ಲಿ ನಿರ್ವಹಿಸಿದವರು ಖಾದ್ರಿಬ್ಯಾರಿವರ ಅಪ್ಪ ಮೂಸೆಬ್ಯಾರಿಯವರು. ಕಫನ್ ಹೊಲಿಯುವ ಕೆಲಸಕ್ಕೆಂದೇ ಆರಂಭದಲ್ಲಿ ರಾಟೆ ತಿರುಗುವ ಕೆಲಸವನ್ನು ಆರಂಭಿಸಿದ ಖಾದ್ರಿಬ್ಯಾರಿಯವರು ನಿಧಾನಕ್ಕೆ ತಮ್ಮ ಮಡದಿ, ಮಕ್ಕಳಿಗೆ ಲಂಗ,ರವಿಕೆ ಗವನನ್ನೂ ಹೊಲಿಯತೊಡಗಿದ್ದರು, ಮಡದಿ ಮೈಮೂನಮ್ಮನವರಿಗೆ ಖಾದ್ರಿಬ್ಯಾರಿಯವರು ಕುಪ್ಪಸ ಹೊಲೀತಾರೆಂದು ಸುದ್ದಿಯಾಡನೆ ಸುತ್ತಮುತ್ತಲ ಮನೆಯವರೂ ಅವರನ್ನು ಲಂಗ-ರವಿಕೆ-ಗವನಿಗಾಗಿ ಆಶ್ರಯಿಸಿದ್ದರು. ಆದರೆ ಎಲ್ಲಾ ಕಾಯಕದಲ್ಲೂ ಯಶಸ್ವಿ ಪಟ್ಟ ಪಡೆದುಕೊಂಡ ಖಾದ್ರಿಬ್ಯಾರಿಯವರಿಗೆ ಈ ದರ್ಜಿ ಕಾಯಕದಲ್ಲಿ ಮಾತ್ರ ‘ಯಶಸ್ವಿ ದರ್ಜಿ’ ಪಟ್ಟವನ್ನು ಮಾತ್ರ ಪಡೆದುಕೊಳ್ಳಲಾಗಲಿಲ್ಲ. ಅವರು ಹೊಲಿದ ಲಂಗ-ರವಿಕೆಗಳ ಬಗ್ಗೆ ಊರಿನ ಪುರುಷ ಸಂಕುಲದಿಂದ ಹಲವಾರು ಅಪಸ್ವರಗಳು ಎದ್ದು ಅವು ಊರಿಡೀ ವ್ಯಂಗ್ಯ-ಕುಹಕ-ಲೇವಡಿ-ಹಾಸ್ಯಗಳ ಮೂಲಕ ತೇಲಾಡಿದ್ದವು.
‘ಇವ ಹೆಣಕ್ಕೆ ಮಾತ್ರ ಲಂಗ-ಗವನನ್ನು ಹೊಲಿಲಿಕ್ಕೆ ಲಾಯಕ್ಕು… ಜೀವ ಇರುವವರಿಗಲ್ಲ’ ಎಂದು ಕೈನಾಲು ಮನೆಯ ಹರಿಯಪ್ಪನೆಂದರೆ, ‘ಇವ್ರು ಹೊಲಿದ ರವಿಕೆಯಲ್ಲಿ, ಹೆಣ್ಮಕ್ಕಳ ದುಂಡೆದೆ ಮೈದಾನದಷ್ಟೇ ಸಪಾಟಾಗಿ ಕಾಣಿಸುತ್ತೆ’ ಎಂದು ಊರುಮನೆ ರಂಗಪ್ಪ ಗಾಣಿಗ ಊರಿಡೀ ಹೇಳಿಕೊಂಡು ಬಂದಿದ್ದ.
‘ಈ ಖಾದ್ರಿಬ್ಯಾರಿಯವರು ಹೊಲಿದ ಗವನು ಹಾಕಿದ್ರೆ ಥೇಟ್ ಹೆಣವೇ ಗೋರಿಯಿಂದ ಎದ್ದು ಬಂದಂತೆ ಕಾಣಿಸುತ್ತೆ ಮಾರಾಯ್ರೇ’ ಎಂದು ಬೆಸ್ತರ ಕೇರಿಯ ವಾಸು ಸಾಲ್ಯಾನ್ ಕೂಡ ಅಂದಿದ್ದನಂತೆ.
ಹೀಗೆ ಊರಮಂದಿಯ ಹತ್ತು ಹಲವು ಬಗೆಯ ವ್ಯಂಗ್ಯ ಕುಹಕ ಸಿಟ್ಟಿನ ಮಾತುಗಳನ್ನು ನಗು ಮುಖದಿಂದ ಕೇಳಿಸಿಕೊಳ್ಳುತ್ತಲೇ ಖಾದ್ರಿಬ್ಯಾರಿಯವರು, ಕಫನ್ ಹೊಲಿಯುವ ಕಾಯಕವನ್ನು ಮಾತ್ರ ನಿರಾತಂಕವಾಗಿ ಮುಂದುವರಿಸಿಕೊಂಡು ಬಂದು ತನ್ನ ಮೂವತ್ತರ ಹರೆಯವನ್ನು ಇದೀಗ ಎಂಬತ್ತೆರಡಕ್ಕೇರಿಸಿಕೊಂಡು, ಆರು ಮಂದಿ ಹೆಣ್ಣುಮಕ್ಕಳ ಒಬ್ಬ ಗಂಡು ಮಗ ಇದ್ದೂ ಈ ವಯಸ್ಸಲ್ಲಿ ಪಡಬಾರದ ಪಾಡು ಪಡುತ್ತಾ ಸೊಸೆಯ ದೌಲತ್ತಿನಡಿ ಸಂಪೂರ್ಣ ಹಣ್ಣಾಗಿ ನಲುಗುತ್ತಿದ್ದಾರೆ.
‘ಕೈಯ ಕಾಸೂ ಹೋಯಿತು, ಮೈಯ ಮಾಂಸವೂ ಹೋಯಿತು’ ಎಂಬಂಥ ಸ್ಥಿತಿಯಲ್ಲಿರುವ ಖಾದ್ರಿಬ್ಯಾರಿಯವರು ಈ ಕಫನ್ ಹೊಲಿಯುವ ಕಾಯಕವನ್ನು ಇದೀಗ ಅವರ ಏಕೈಕ ಗಂಡು ಸಂತಾನವಾಗಿರುವ ಹುಸೇನಬ್ಬ ಮುಂದುವರಿಸುತ್ತಿದ್ದಾನೆ. ಎಲ್ಲ ಹೆಣ್ಣುಮಕ್ಕಳ ಹಿಂದೆ ಹುಟ್ಟಿದ
ಮಗ ಹುಸೇನಬ್ಬನೆಂದರೆ ಖಾದ್ರಿಬ್ಯಾರಿ ಮೈಮೂನಮ್ಮನವರಿಗೆ ತುಂಬು ಜೀವ. ಆತನಿಗೊಂದು ಸಂಗಾತಿಯಾಗಿ ಎಂದು ಮೈಮೂನಮ್ಮನವರು ಮಾಪ್ಳ ಕಡಪುವಿನ ಬಾವುಬ್ಯಾರಿಯ ಮಗಳು ನಫೀಸಮ್ಮಳನ್ನು ಸೊಸೆಯಾಗಿ ಮನೆ ತುಂಬಿಸಿಕೊಂಡರೋ ಅಂದಿನಿಂದಲೇ ಅವರಿಬ್ಬರಿಗೂ ಮಗನ ಮೇಲಿನ ಮಮಕಾರ ಕುಂದತೊಡಗಿತ್ತು. ನಫೀಸಮ್ಮ ಗಂಡನನ್ನು ಸಂಪೂರ್ಣವಾಗಿ ತನ್ನ ಸೆರಗಿನ ತುದಿಗೆ ಗಂಟು ಹಾಕಿಕೊಂಡ ನಂತರ ಮಗನ ವರ್ತನೆಯಲ್ಲಾದ ಬದಲಾವಣೆ ಕಂಡು ಮೈಮೂನಮ್ಮನವರನ್ನು ಕಾಡಿದ್ದು ‘ತನ್ನ ಗಂಡನ ಮುಂದಿನ ಪಾಡೇನು’ ಎಂಬ ಚಿಂತೆ.
ಹುಸೇನಬ್ಬ ಬದುಕುವ ದಾರಿ ಹಿಡಿಯಲು, ಅಪ್ಪ ಸವೆಸಿದ ದಾರಿಯಲ್ಲೇ ಸಾಗಿಬಂದನಾದರೂ, ತಾನು ಸಾಗಿಬಂದ ದಾರಿಯಲ್ಲಿರುವ ಏರು, ತಗ್ಗುಗಳೆಲ್ಲ ಸಾವಧಾನದಿಂದ ತಗ್ಗಿ-ಬಗ್ಗಿ ಏರಿ ನಡೆಯಬೇಕೆಂಬ ವ್ಯತ್ಯಾಸದರಿವಿಲ್ಲದೆ ತಿಳಿಗೇಡಿಯಾಗಿ ಊರಲ್ಲಿ ಅಪ್ಪ ಪಡೆದ ಹೆಸರನ್ನು ಆತನಿಂದ ಉಳಿಸಿಕೊಳ್ಳಲಾಗಲಿಲ್ಲ. ಸಿಗಿಯುವುದೊಂದೇ ಗರಗಸದ ನಿಯಮ-ಎಂಬಂತೆ ಅಪ್ಪನ ಮೈಯಲ್ಲಿ ತಾಕತ್ತು ಇರುವವರೆಗೂ ಅವರನ್ನು ಮುಂದಿಟ್ಟುಕೊಂಡು ತನ್ನ ಬದುಕುವ ದಾರಿಯನ್ನು ಸುಗಮ ಮಾಡಿಕೊಂಡಿದ್ದನಾತ. ಖಾದ್ರಿಬ್ಯಾರಿಯವರೂ ತಮ್ಮ ಮೈಯಲ್ಲಿ ಬಿಸಿರಕ್ತದ ವಹಿವಾಟು ತಣ್ಣಗಾಗುವುದರೊಳಗೆ ತನ್ನೆಲ್ಲ ಹೆಣ್ಣುಮಕ್ಕಳ ಮದುವೆ-ಬಾಣಂತನವನ್ನು ಮುಗಿಸಿ, ಮಗನಿಗೆ ಬದುಕುವ ದಾರಿಗಳನ್ನು ಅತ್ಯಂತ ಸ್ಪಷ್ಟವಾಗಿ ಪರಿಚಯಿಸಿಬಿಟ್ಟು, ದಮ್ಮುರೋಗದಿಂದ ನರಳುತ್ತಿದ್ದ ತಮ್ಮ ಮೈಮೂನಮ್ಮನವರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡುಬಿಟ್ಟಿದ್ದರು.
ತನ್ನ ನಂತರ ಗಂಡನಿಗೆ ದಿಕ್ಕ್ಯಾರು? ಎಂಬ ಚಿಂತೆಯಲ್ಲೇ ಹೂ ಮನಸ್ಸಿನ ಮೈಮೂನಮ್ಮನವರು ತಮ್ಮ ದಮ್ಮುರೋಗವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಹಾಸಿಗೆ ಹಿಡಿದಾಗ, ಅವರ ಸೇವೆ ಮಾಡುವ ಸಂಪೂರ್ಣ ಜವಾಬ್ದಾರಿ ಖಾದ್ರಿಬ್ಯಾರಿಗಳದಾಗಿತ್ತು. ಈ ದಮ್ಮುರೋಗದಿಂದ ತನಗಿನ್ನು ಉಳಿಗಾಲವೆಂಬುದು ಮೈಮೂನಮ್ಮನವರಿಗೆ ಖಾತ್ರಿಯಾದೊಡನೆ ಮಗ-ಸೊಸೆಯನ್ನು ಎದುರಿಗಿರಿಸಿಕೊಂಡು ಈ
ದೇವರಂಥ ಮನುಷ್ಯನನ್ನು ಕಾಲ ಕಸ ಮಾಡ್ದೆ, ಹೂ-ಚೆಂಡನ್ನು ರಕ್ಷಿಸುವಷ್ಟು ಮೃದುವಾಗಿ ರಕ್ಷಿಸಬೇಕೆಂದು ಸೊಸೆಯ ಕೈಗಳನ್ನು ತನ್ನ ಕಣ್ಣಿಗೊತ್ತಿಕೊಂಡು ಬೇಡಿಕೊಂಡಿದ್ದರು. ಹಾಗೆ ಬೇಡಿದ ಮರುದಿನವೇ ಮೈಮೂನಮ್ಮ, ಖಾದ್ರಿಬ್ಯಾರಿಯವರನ್ನು ಈ ಜಗತ್ತಲ್ಲಿ ಏಕಾಂಗಿಯಾಗಿರಿಸಿ ಅಲ್ಲಾನ ಪಾದ ಸೇರಿದ್ದರು.
ಇಂದಿಗೆ ಮೈಮೂನಮ್ಮ, ಖಾದ್ರಿಬ್ಯಾರಿಯವರನ್ನು ತೊರೆದು ಹತ್ತು ವರುಷಗಳೇ ಸಂದಿದೆ. ಹೆಂಡತಿಯ ಕಾಲಾನಂತರ ಖಾದ್ರಿಬ್ಯಾರಿಯವರಿಗೆ ಈ ಜಗತ್ತಿನ ಏನೂ ಯಾವುದೂ ಬೇಡವಾಯ್ತು. ಸೊಸೆಯ ದೌಲತ್ತು ಏರಿದಂತೆಲ್ಲ ಅಪ್ಪನನ್ನು ಆಗಾಗ್ಗೆ ವಿಚಾರಿಸಲು ಮನೆಗೆ ಬರುತ್ತಿದ್ದ ಹೆಣ್ಣು ಮಕ್ಕಳೂ ಬರುವುದನ್ನು ಕೈದು ಮಾಡಿಬಿಟ್ಟರು. ಇದರಿಂದಾಗಿ ಖಾದ್ರಿಬ್ಯಾರಿಯವರು ಇನ್ನಷ್ಟು ಒಂಟಿಯಾದರು. ಮಗ ಹುಸೇನಬ್ಬನಂತೂ ಮಡದಿ ನಫೀಸಳಿಗೆ ಹೆದರಿ ಅಪ್ಪನನ್ನು ಸಂಪೂರ್ಣ ಮರೆತೇ ಬಿಟ್ಟವನಂತೆ ಮುಖತಪ್ಪಿಸಿ ಓಡಾಡತೊಡಗಿದ್ದ. ಎಳೆ ಮನಸ್ಸಿನ ಮೊಮ್ಮಕ್ಕಳೇನಾದರೂ ಖಾದ್ರಿಬ್ಯಾರಿಯವರಿಗೆ ಒಗ್ಗಿಹೋಗದಿರುತ್ತಿದ್ದರೆ ಅವರ ಸ್ಥಿತಿ ಅವರ ವೈರಿಗೂ ಬೇಡವಾಗಿರುತ್ತಿತ್ತು. ಹುಸೇನಬ್ಬನ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿಗಂತೂ ಅಜ್ಜನೆಂದರೆ ಜೀವ. ಆದರೇನು ಅವಿನ್ನೂ ರೆಕ್ಕೆ ಬಲಿತವು ಅಲ್ಲ-ಅಜ್ಜನ ಬೇಕು ಬೇಡಗಳನ್ನು ಪೂರೈಸಲು. ಅಜ್ಜನ ಪರವಾಗಿ ಅಮ್ಮನ ಜತೆ ವಾದಿಸುವಷ್ಟು ಅವುಗಳ ಕೊರಳು ಬಲಿತಿರುವುದೇ ಖಾದ್ರಿಬ್ಯಾರಿಯವರಿಗೆ ಇನ್ನಿಲ್ಲದ ಸಂಕಟವನ್ನು ತಂದೊಡ್ಡಿದಂತಾಗಿದೆ. ‘ಮಕ್ಕಳ ತಲೆಕೆಡಿಸಿದ್ದಾರೆ’ ಎಂಬ ಆರೋಪ ನಫೀಸಮ್ಮನ ಕಡೆಯಿಂದ ತೇಲಿಬಂದು ಖಾದ್ರಿಬ್ಯಾರಿಯವರ ರುಮಾಲೇರಿ ಕುಳಿತ ನಂತರ, ಖಾದ್ರಿಬ್ಯಾರಿಯವರು ಮೊಮ್ಮಕ್ಕಳಿಂದಲೂ ದೂರವಿರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವು ಬಿಡಬೇಕಲ್ಲ.
ಹೀಗೆ ಮುಪ್ಪಿನಲ್ಲಿ ಖಾದ್ರಿಬ್ಯಾರಿಯವರು ಒಂಟಿಬಾಳ್ವೆ ನಡೆಸುತ್ತಿರುವಾಗ, ಜತೆಗೊಂದು ಸಂಗಾತಿ ಇರಲೆಂದು ದೇವರು ಅವರ ಜೀವದೊಳಗೊಂದು ವಾತರೋಗವನ್ನು ಹೊಗಿಸಿಬಿಟ್ಟಿದ್ದರಿಂದ ಅವರ ಸ್ಥಿತಿ ಮತ್ತಷ್ಟು ವಿಷಮಗೊಂಡಿತ್ತು. ದಿನನಿತ್ಯ ಮುಂಜಾನೆಯ ನಮಾಜಿಗೆಂದು ಎದ್ದುನಿಲ್ಲಬೇಕಾದರೆ ಆ ವಾತರೋಗ ಕೊಡುವ ಕಾಟ-ನೋವನ್ನು ಖಾದ್ರಿಬ್ಯಾರಿಯವರು ಚಾಪೆ ತುಂಬ ಕಣ್ಣೀರು ಇಳಿಸುವ ಮೂಲಕವೇ ಶಮನಗೊಳಿಸಲು ಪ್ರಯತ್ನಿಸುತ್ತಾರೆ. ಅಮ್ಮನ ಕಣ್ತಪ್ಪಿಸಿ ಮೊಮ್ಮಕ್ಕಳೇನಾದರೂ ಕೈ-ಕಾಲುಗಳ ಗಂಟು ನೀವಿದರೆ ಅವರು ಕೂತಲ್ಲಿಂದ ಎದ್ದು ನಿಂತಾರು ಅಷ್ಟೆ.
ಈ ವಾತಕ್ಕೆ ಬಿಸಿನೀರೇ ದಿವ್ಯ ಔಷಧಿ ಎಂಬುದನ್ನು ಬಲ್ಲ ಖಾದ್ರಿಬ್ಯಾರಿಯವರು ಮೊಮ್ಮಕ್ಕಳ ಮೂಲಕ ಸೊಸೆಗೆ ಈಗಾಗಲೇ ಒಂದು ಸಂದೇಶವನ್ನು ರವಾನಿಸಿದ್ದರು. ‘ಅಜ್ಜನಿಗೆ ಬೆಳಿಗ್ಗೆ ತಿಂಡಿ ಬೇಡವಂತೆ-ಅವರ ಬದಲಿಗೆ ಅವರಿಗೆ ಮೀಯಲು ಒಂದಷ್ಟು ಬಿಸಿನೀರು ಕೊಡಬೇಕಂತೆ’ ಎಂಬ ಮಕ್ಕಳ ಮಾತಿನ ಓಲೆಗೆ ನಫೀಸಮ್ಮ ರವಾನಿಸಿದ ಮರು ಓಲೆ ಹೀಗಿತ್ತು. ‘ಅಡುಗೆಮನೆಗೆ ಉರಿ ಹಚ್ಚೂದಕ್ಕೇ ಮನೆಯ ರೀಪು-ಪಕ್ಕಾಸುಗಳನ್ನು ಕೀಳಬೇಕೆಂದಿದ್ದೇನೆ. ಇನ್ನು ಅವರನ್ನು ಮೀಯಿಸಲು ಒಂದು ಕಾಡು ಬೆಳೆಸಿ ನಂತರ ಮೀಯಿಸಿ ಬಿಡುವ….ಆಗದಾ?’
ಸೊಸೆಯ ಮಾತಿನಿಂದ ಖಾದ್ರಿಬ್ಯಾರಿಯವರು ಸಂಪೂರ್ಣ ಕುಂದಿ ಹೋಗಿದ್ದರು. ‘ಇಳಿವಯಸ್ಸಲ್ಲಿ ಹಿಡಿದ ವಾತ…ಮುದಿಮರಕ್ಕೆ ಹಿಡಿದ ಗೆದ್ದಲು-ಹಿಡಿದ ಜೀವವನ್ನು ಬಿಡುವುದು ಸತ್ತನಂತರವಷ್ಟೆ’ ಎಂಬ ಗಾದೆಯಿದೆಯಲ್ಲ ಹಾಗೆ ನನ್ನ ಕತೆ ಎಂದು ಖಾದ್ರಿಬ್ಯಾರಿಯವರು ಹನಿಗಣ್ಣಾಗಿ ಆಪ್ತರಾಗಿ ಹೇಳಿಕೊಂಡಾಗಲೆಲ್ಲ ಎಲ್ಲರೂ ಆ ಮುದಿಜೀವಕ್ಕೆ ಮರುಗುವವರೇ ವಿನಾ ಯಾರಿಂದಲೂ ಆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿರಲಿಲ್ಲ.
ಹಾಗೆ ಬಿಸಿನೀರಿನ ಆಸೆಯೊಂದನ್ನು ತನ್ನ ವಾತರೋಗದಂತೆಯೇ ಗಟ್ಟಿಯಾಗಿ ತಬ್ಬಿಕೊಂಡ ಖಾದ್ರಿಬ್ಯಾರಿಯವರು ಈ ಮನೆಯಲ್ಲಿ, ಸೊಸೆಯ ದರ್ಬಾರಿನಲ್ಲಿ ಅದೆಂದೂ ನೆರವೇರದು ಎಂದು ಅರಿತವರೇ ಊರಲ್ಲಿರುವ ತಮ್ಮ ನಂಬಿಗಸ್ಥ ಕುಟುಂಬದ ‘ದೊಡ್ಡ ತಲೆ’ಗಳನ್ನು ಕಂಡಾಗಲೆಲ್ಲ ತಮ್ಮ ಆಸೆಯನ್ನು ಅವರೊಂದಿಗೆ ನಿವೇದಿಸಿಕೊಂಡಿದ್ದಿದೆ,
ಆ ಮುದಿಜೀವದೊಳಗೆ ನಡೆಯುತ್ತಿರುವ ಸರ್ವ ಮನೋವ್ಯಾಪಾರಗಳ ಬಗ್ಗೆ ಅರಿವಿದ್ದ ಊರಿನ ಹಲವು ಸಹೃದಯ ಯಜಮಾನರು, ಖಾದ್ರಿಬ್ಯಾರಿಯವರ ಆ ಒಂದು ಪುಟ್ಟ ಆಸೆಗೆ ಮಮ್ಮಲ ಮರುಗಿ ಅವರ ಆಸೆಯನ್ನು ಹಲವು ಬಾರಿ ಈಡೇರಿಸಿಕೊಳ್ಳಲು ತಾವು ಅನುವು ಮಾಡಿಕೊಟ್ಟಿದ್ದಿದೆ. ಆದರೆ ಅವೆಲ್ಲವೂ ಬೇಸಿಗೆಯ ವಹಿವಾಟಿನ ಕಾಲದಲ್ಲಿ ಮಾತ್ರ. ಆದರೆ ಈ ಹಡಬೆಗುಟ್ಟಿದ ಮಳೆಗಾಲ ಕಾಲಿಟ್ಟಿತೆಂದರೆ ಎಲ್ಲರ ಮನಸ್ಸೂ-ಕೈಯೂ ಈ ವಿಚಾರದಲ್ಲಿ ಸ್ವಲ್ಪ ಹಿಂಜರಿಯುವುದು ಸಾಮಾನ್ಯವೇ. ಎಲ್ಲರಿಗೂ ಆ ಕಾಲದಲ್ಲಿ ಉರುವಲಿನದೇ ಬಹುದೊಡ್ಡ ಕಾಟ. ಜಾರಿಗೆಬೆಟ್ಟಿನ ಮುದರ ಪೂಜಾರಿ, ಮೈರ್ಪಾಡಿಗುತ್ತಿನ ಅಂತಪ್ಪಶೆಟ್ರು, ಓಂತಿಬೆಟ್ಟಿನ ವಾಮಯ್ಯ ಮೂಲ್ಯ, ಮೈಲೀಬೆಟ್ಟಿನ ಸೂರಪ್ಪ ಮೈಲಿ ಎಲ್ಲರೂ ಮಾಯಿಸುಗ್ಗಿ ಕಾಲದಲ್ಲಿ ಈ ವಯೋವೃದ್ಧ ಖಾದ್ರಿಬ್ಯಾರಿಯವರಿಗೆ ತಮ್ಮ ತಮ್ಮ ಬಚ್ಚಲುಮನೆಯಲ್ಲಿ ಯಥೇಚ್ಛವಾಗಿ ಬಿಸಿನೀರು ಮೀಯುವ ಅವಕಾಶ ಮಾಡಿಕೊಟ್ಟಿದ್ದಾರೆ.
ಇಂತಹ ಒಂದು ಮಳೆಗಾಲದಲ್ಲೇ, ಖಾದ್ರಿಬ್ಯಾರಿಯವರ ಬಿಸಿನೀರ ಆಸೆಯನ್ನು ಬಹಳಷ್ಟು ಬಾರಿ ಕೇಳಿದ್ದ ವೆಂಕಪ್ಪ ಶೆಟ್ಟರು-ಒಂದು ಅಂಕದ ಹುಂಜದಿಂದ ನಾಕು ಅಂಕದ ಹುಂಜಗಳನ್ನು ಪಡೆಯುವಂಥಹ ಜಾಣ್ಮೆಯುಳ್ಳವರು. ಈ ಮಳೆಗಾಲದ ಆರ್ಭಟಕ್ಕೆ ತಮ್ಮ ಮಗಳಿಗೆ ಬಾಣಂತಿನೀರು ಕಾಯಿಸುವುದಕ್ಕೆ ಯಾವ ಹುಳವೂ ಇತ್ತ ತಲೆಹಾಕದು ಎಂದು ಬಲ್ಲವರೇ, ತಮ್ಮ ಮನಸ್ಸಿನ ಲೆಕ್ಕಾಚಾರವನ್ನು ಖಾದ್ರಿಬ್ಯಾರಿಯವರ ಮುಂದೆ ತೆರೆದಿಟ್ಟು, ಸ್ಯಾಬರಿಗೆ ಒಂದು ರೀತಿಯಲ್ಲಿ ಬಿಸಿನೀರಿನ ಆಮಿಷವನ್ನು ಪರೋಕ್ಷವಾಗಿ ಒಡ್ಡಿಯೇ ತಮ್ಮ ಜವಾಬ್ದಾರಿಯನ್ನು ಹಗುರ ಮಾಡಿಕೊಂಡಿದ್ದರು.
ಇದಿಗ ಖಾದ್ರಿಬ್ಯಾರಿಯವರು ವೆಂಕಪ್ಪಶೆಟ್ಟರ ಅಂಗಳದಲ್ಲಿ ತನ್ನ ಆತ್ಮಗೌರವಕ್ಕಾದ ಪುಟ್ಟ ಏಟನ್ನು ಶಮನಮಾಡಿ ಕೊಳ್ಳಲು ನಿರ್ಧರಿಸಿಯೇ ತಮ್ಮ ಮನೆಯಂಗಳ ಹೊಕ್ಕವರು ನೇರ ಮೊಮ್ಮಕ್ಕಳ ಜತೆ ಮಾತುಕತೆಗಿಳಿದುಬಿಟ್ಟಿದ್ದರು. ಹಿರಿಮೊಮ್ಮಗಳು ಜೋಹರಾ ಅಕ್ಕಿ ಪುಂಡಿ-ಜತೆ ಬೂತಾಯಿ ಮೀನಿನ ಸಾರನ್ನು ತಂದಿಟ್ಟವಳೇ ಎಂದಿನಂತೆ ನಿಡಿದಾಗಿ ಕಾಲು ಚಾಚಿ ಕೂತ ಅಜ್ಜನ ಕೈಕಾಲನ್ನು ನೀವತೊಡಗಿದಾಗ, ಖಾದ್ರಿಬ್ಯಾರಿಯವರ ಕಣ್ಣುಗಳಲ್ಲಿ ಹನಿದುಂಬಿ ಮಂಜಾಗತೊಡಗಿತ್ತು. ಹಾಗೆ ಒಂದೋ ಎರಡೋ ಅಕ್ಕಿಪುಂಡಿ ತಿಂದಿದ್ದಾರಷ್ಟೇ ಸ್ಯಾಬರಿಗೆ ಇದ್ದಕ್ಕಿದ್ದಂತೆ ಒಂದೇ ಒಂದು ತೇಗು ಬಂದಂತಾಗಿ ತಲೆ ಗಿರಗಿರನೆ ಸುತ್ತತೊಡಗಿತ್ತು. ಬಾಯಲ್ಲಿದ್ದ ಪುಂಡಿ ಇರುವ ಹಾಗೆಯೇ ಅಜ್ಜಯ್ಯ ಮೊಮ್ಮಗಳು ಜೋಹರನ ತೊಡೆಗೆ ತಲೆ ಒರಗಿಸಿ ಮಲಗಿಯೇ ಬಿಟ್ಟರು. ಜೋಹರ ಏನು ಎತ್ತ ಎಂದು ತಿಳಿಯದೆ ಅಜ್ಜನನ್ನು ಸಂತೈಸುತ್ತ ಅಮ್ಮನನ್ನು ಕೂಗುವಷ್ಟರಲ್ಲಿ ಖಾದ್ರಿಬ್ಯಾರಿಯವರು ತಾನು ಮಡದಿ ಮೈಮೂನಮ್ಮನವರ ಮಡಿಲಿಗೆ ತಲೆಯಿಡಲು ಹೊರಟನೆಂಬಂತೆ ಅಲ್ಲಾನ ಪಾದ ಸೇರಿಯಾಗಿತ್ತು!
‘ಇದು ಎಂತಹ ಸಾವು’ ಹೂವೆತ್ತಿದಷ್ಟು ಮೌನ, ಹಗುರ!’ ‘ಲಕ್ಷದಲ್ಲೊಬ್ಬರಿಗೆ ಇಂಥ ಸಾವು ಮಾರಾಯ್ರೆ!’ ‘ನಾಕು ಮಂದಿಗೆ ಬೇಕಾಗಿ ಬದುಕಿದ ಜೀವಕ್ಕೆ ಇಂಥ ಸಾವಲ್ಲದೆ, ಅಲ್ಲಾಹು ಬೇರೆಂಥ ಸಾವು ಕರುಣಿಸುತ್ತಾನೆ!’ ‘ಒಟ್ಟಿನಲ್ಲಿ ಇವ್ರು ಪುಣ್ಯಾತ್ಮರಪ್ಪ-ನಮಗೂ ಹೀಗೆಯೇ ಸದ್ದಿಲ್ಲದ ಸಾವು ಬರಲಿ’ ಎಂದು ಜಾತಿಬೇಧವಿಲ್ಲದೆ ಎಲ್ಲರೂ ಹನಿಗಣ್ಣಾಗಿಯೇ ಬಂದು ಖಾದ್ರಿಬ್ಯಾರಿಯವರಿಗೆ ಅಂತಿಮ ನಮನ ಸಲ್ಲಿಸತೊಡಗಿದ್ದರು.
ಖಾದ್ರಿಬ್ಯಾರಿಯವರ ಈ ಸಾವಿನ ಸುದ್ದಿ ಊರಿನ ಎಲ್ಲ ಮನೆಗೂ ತಕ್ಷಣ ಹರಡದಿದ್ದರೂ ವೆಂಕಪ್ಪಶೆಟ್ಟರ ಹೊಸ್ತಿಲು ತಲುಪಿದ್ದು ತುಂಬ ತಡವಾಗಿಯೇ. ಆ ದಿನ ಅಲ್ಲಿ ಬಾಣಂತಿ ಎದ್ದುದರಿಂದ ಶೆಟ್ಟರು ತಮ್ಮ ಎತ್ತಿನ ಗಾಡಿಯಲ್ಲಿ ಪತ್ನೀ ಸಮೇತರಾಗಿ ಮಗು ಮತ್ತು ಬಾಣಂತಿಗೆ ದೇವರ ನೀರು ಹನಿಸಲು ಊರಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರಿಂದ ಈ ಸಾವಿನ ಸುದ್ದಿ ಅವರಿಗೆ ಆ ಕ್ಷಣ ತಲುಪಿರಲಿಲ್ಲ. ದೇವಸ್ಥಾನದಿಂದ ಹಿಂದಿರುಗುವಾಗ ಒಕ್ಕಲ ಮಕ್ಕಳಿಂದ ವಿಷಯ ತಿಳಿದೊಡನೆ ವೆಂಕಪ್ಪಶೆಟ್ಟರೊಬ್ಬರಿಗೆ ಮಾತ್ರವಲ್ಲ, ಬಾಣಂತಿಮಗಳು ಸುಮತಿ ಮತ್ತು ಮಡದಿ ಉಮ್ಮಕ್ಕೆಯವರ ಅಂತರಂಗದ ವ್ಯಾಪಾರಗಳೆಲ್ಲ ಒಂದರೆಗಳಿಗೆ ನಿಂತಂತಾಗಿ ಎಲ್ಲರೂ ಮಾತಿನಿಂದ ಮೌನಕ್ಕೆ ಧುಮುಕಿದ್ದರು. ಸುಮತಿಗಂತೂ, ಖಾದ್ರಿಬ್ಯಾರಿಯವರು ಆ ಮುಪ್ಪಿನಲ್ಲೂ ಪುಟ್ಟ ಮಗುವಿನಂಥ ನಿಷ್ಕಳಂಕ ಮನಸ್ಸನ್ನಿಟ್ಟುಕೊಂಡು ತನ್ನತ್ತ ತೋರುತ್ತಿದ್ದ ಕಾಳಜಿ-ಪ್ರೀತಿ ಎಲ್ಲವೂ ದುತ್ತನೆ ಎದುರಿಗೆ ಬಂದಂತಾಗಿ ಆ ಕ್ಷಣದಲ್ಲಂತೂ ಆಕೆಗೆ ಈ ಪ್ರಪಂಚದ ಪ್ರಿತಿಯನ್ನೆಲ್ಲ ಕಳೆದುಕೊಂಡ ಅನುಭವವಾಯ್ತು!
ಖಾದ್ರಿಬ್ಯಾರಿಯವರ ಸಾವಿನ ಸುದ್ದಿ ಕೇಳಿಸಿಕೊಳ್ಳುವುದಕ್ಕೆ ಮುಂಚೆಯೇ ಉಮ್ಮಕ್ಕೆಯವರ ಒಳಮನಸ್ಸಿನಲ್ಲಿ ಪೂರ್ವಾಹ್ನದ ಘಟನೆಯೇ ಸುತ್ತ ತೊಡಗಿದ್ದರಿಂದ, ಇದೀಗ ಬಂದ ಸಾವಿನ ಸುದ್ದಿ ಅವರನ್ನು ಇನ್ನಷ್ಟು ಶೋಕಪ್ರೇರಿತರನಾಗಿ ಮಾಡಿತ್ತು. ‘ತನ್ನ ಮನಸ್ಸು ಯಾಕಾಗಿ ಅದು ಈ ರೀತಿ ಸಂಕುಚಿತವಾಯಿತು, ಯಾಕಾಗಿ ಆಗಾಗ್ಗೆ ಕರುಟುತ್ತದೆ ಮುರುಟುತ್ತದೆ’ ಎಂದು ತನ್ನನ್ನೆ ಪ್ರಶ್ನಿಸಿಕೊಳ್ಳುತ್ತ ತನ್ನ ಅಪ್ಪನೆಂದ ಮಾತುಗಳನ್ನು ಆಕೆ ನೆನಪಿಸಿಕೊಂಡರು. ‘ನಮ್ಮ ವಯಸ್ಸು ಹೆಚ್ಚಿದಂತೆಲ್ಲ ನಮ್ಮ ಮನಸ್ಸೂ ಬೆಳೆಯಬೇಕು ಬುದ್ಧಿಯೂ ಬೆಳೆಯಬೇಕು-ಭಾವವೂ ಬೆಳೆಯಬೇಕು, ಆದರೆ ನಮ್ಮೊಳಗಿನ ಗುಣಸ್ವಭಾವ ಎಳಸಾಗಿಯೇ ಉಳಿಯಬೇಕು’ ಎಂದು, ತಮ್ಮ ಅಪ್ಪ ಹೇಳಿದ್ದನ್ನು ಮೆಲುಕು ಹಾಕುತ್ತಲೇ ಅವರು ಅಪ್ಪನ ಸಮಾನರಾದ ಖಾದ್ರಿಬ್ಯಾರಿಯವರಿಗಾಗಿ ಒಂದಷ್ಟು ಕಣ್ಣೀರ ಮುತ್ತು ಉರುಳಿಸುವಷ್ಟರಲ್ಲಿ ವೆಂಕಪ್ಪಶೆಟ್ಟರು, ಖಾದ್ರಿಬ್ಯಾರಿಯವರ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ದುಃಖತಪ್ತರಾಗಿಯೇ ಅವರ ಹಿತ್ತಲತ್ತ ಹೆಜ್ಜೆ ಹಾಕಿದ್ದರು.
ಆಗಲೆ ಖಾದ್ರಿಬ್ಯಾರಿಯವರ ಅಂಗಳದಲ್ಲಿ ಜಾತಿಬೇಧವಿಲ್ಲದೆ ಎಲ್ಲರೂ ನೆರೆದಿದ್ದರು. ಶವಸಂಸ್ಕಾರದ ಸಿದ್ಧತೆ ನಡೆದಿತ್ತು. ಹೆಣಕ್ಕೆ ಹೊದಿಸುವ ಕಫನ್ ಕೂಡಾ ಸಿದ್ಧವಾಗಿ ಕೂತಿತ್ತು. ಹೆಣ ಮೀಯಿಸಲು ಬಿಸಿನೀರಿಗೂ ತಯಾರಿ ನಡೆದಿತ್ತು. ಅಂದಿನ ಬಿಸಿನೀರು ಕಾಯಿಸುವ ಜವಾಬ್ದಾರಿ ಖಾದ್ರಿಬ್ಯಾರಿಯವರ ಮೊಮ್ಮಕ್ಕಳ ಮೇಲಿತ್ತು. ಕಳೆದ ಮೂರು ದಿನಗಳಿಂದ ಬಾನು ಬಿರಿದಂತೆ ಆ ಪರಿ ಸುರಿಯುತ್ತಿದ್ದ ಮಳೆಯ ರಂಪಾಟಕ್ಕೆ… ಅದರ ಥಂಡಿಗೆ ಯಾವ ಸೀಮೆಯ ತೆಂಗಿನ ಮಡಲು, ಸೌದೆ ಕೊತ್ತಳಿಗೆಗಳು ಆ ಸಾವಿನ ಮನೆಗೆ ನೀರು ಕಾಯಿಸಲು ಮುಂದೆ ಬಂದಾವು! ಸೊಸೆ ನಫೀಸಮ್ಮ ಮಳೆಗಾಲಕ್ಕೆಂದು ಕೂಡಿಟ್ಟಿದ್ದ ಸೊಪ್ಪು-ಸೌದೆ-ಮಡಲುಗಳೆಲ್ಲವೂ ಮಳೆಗೆ ಸೀರಣಿಗೆ ಹನಿದು ಕೂತು….ಇದೀಗ ಆಕೆಯ ಮಕ್ಕಳ ಸಹನೆಯ ಕಟ್ಟೆಯನ್ನು ಸಂಪೂರ್ಣವಾಗಿ ಒಡೆಯುವ ಹುನ್ನಾರದಲ್ಲಿದ್ದವು, ಹಸಿ ಕಟ್ಟಿಗೆಗಳು ನೀರ ಹಂಡೆಯ ಸುತ್ತ ಹೊಗೆ ಎಬ್ಬಿಸುತ್ತಿದ್ದವೆ ವಿನಾ ಹಂಡೆಯನ್ನು ಬಿಸಿಮಾಡಲು ಸುತರಾಂ ಒಪ್ಪುತ್ತಿರಲಿಲ್ಲ. ಮೊಮ್ಮಕ್ಕಳು ಈ ದರ್ವೇಸಿ ಕಟ್ಟಿಗೆಗಳ ಮೊಂಡಾಟಕ್ಕೆ ಬೇಸತ್ತು ಅತ್ತರೇ ಏನೋ ಎಂಬಂತೆ ಅವರು ಮೂಗು ಕಣ್ಣುಗಳಿಂದ ಆ ಪರಿ ನೀರಿಳಿಸಿಕೊಂಡು ಸೌದೆ ತುಂಡುಗಳ ಜತೆ ಸೆಣೆಸಾಡುತ್ತಿರುವುದನ್ನು ಕಂಡ ಶೆಟ್ಟರಿಗೆ ತಟ್ಟನೆ ನೆನಪಾದದ್ದು-ತಮ್ಮ ಬಚ್ಚಲುಮನೆ, ಸೌದೆರಾಶಿ ಮತ್ತು ಬಾಣಂತಿ ನೀರಿನ ಹಂಡೆ. ಹಾಗೆ ಒಂದೆರಡು ಗಳಿಗೆ ಕೈಕಟ್ಟಿಕೊಂಡು ಹನಿಗಣ್ಣಾಗಿಯೇ ನಿಂತು ಆ ನೀರು ಕಾಯಿಸುತ್ತಿದ್ದ ದೃಶ್ಯವನ್ನು ದಿಟ್ಟಿಸುತ್ತಿದ್ದ ವೆಂಕಪ್ಪಶೆಟ್ಟರಿಗೆ ಇದ್ದಕ್ಕಿದ್ದಂತೆ ಏನನ್ನಿಸಿತೋ ಏನೋ! ತಟ್ಟನೊಂದು ಹೊಳೆದಂತಾಗಿ ನೇರ ಒಂದೇ ದಮ್ಮು ಹಿಡಿದು ಅವಸರದಿಂದ ತನ್ನ ಹಿತ್ತಲತ್ತ ದಾಪುಗಾಲು ಹಾಕಿದವರೆ, ನೇರ ತಮ್ಮ ಬಚ್ಚಲು ಮನೆ ಹೊಕ್ಕು ಬಾಣಂತಿ ಮೀಯಿಸುವುದಕ್ಕೆಂದೇ ಬೆಚ್ಚಗೆ ಒತ್ತಿಟ್ಟಿದ್ದ ಕಟ್ಟಿಗೆ-ಕೊತ್ತಳಿಗೆಗಳ ರಾಶಿಯನ್ನೇ ಉರುಳಿಸಿಬಿಟ್ಟು ಆರು ಮಾರು ಉದ್ದದ ಹುರಿಹಗ್ಗಕ್ಕಾಗಿ ಕಣ್ಣಾಡಿಸಿದ್ದರು. ಹುರಿಹಗ್ಗ ಕಣ್ಣಸೀಮೆಗೆ ಸೋಕಿದ್ದೇ ತಡ, ತಾನೆ ಒಂದಿಷ್ಟು ಕಟ್ಟುಮಸ್ತಾದ ಕಟ್ಟಿಗೆಗಳನ್ನು ಒಟ್ಟು ಸೇರಿಸಿ ಕಟ್ಟು ಬಿಗಿದು ಹೊತ್ತು ನಡೆದಿದ್ದರು-ನೇರ ಸಾವಿನ ಮನೆಯತ್ತ. ಮಳೆ ಯಾಕೋ ಸೂರ್‍ಯದೇವರಂತೆ ಅಮ್ಮನ ಹಾಲು ಕುಡಿಯಲು ಹೋಗಿತ್ತೋ ಏನೋ? ಕಳೆದ ಒಂದೆರಡು ತಾಸುಗಳಿಂದ ತಾನುಂಟು-ಬಾನುಂಟು ಎಂದು ತಣ್ಣಗಾಗಿದ್ದ ಮಳೆರಾಯನನ್ನು ಕಂಡು ಸಾವಿನ ಮನೆಯವರು ಎಷ್ಟು ಸಮಾಧಾನಪಟ್ಟುಕೊಂಡರೋ ಅಷ್ಟೇ ಸಮಾಧಾನದ ಭಾವ ಕಟ್ಟಿಗೆ ಹೊತ್ತಿದ್ದ ಶೆಟ್ಟರಲ್ಲೂ ಮೂಡಿತ್ತು.
ಹಾಗೆ ಕಟ್ಟಿಗೆಯನ್ನು ಹೊತ್ತು ಬಂದ ಶೆಟ್ಟರು ನೇರವಾಗಿ ಸಾವಿನ ನೀರು ಕಾಯಿಸುತ್ತಿದ್ದ ಖಾದ್ರಿಬ್ಯಾರಿಯವರ ಮೊಮ್ಮಕ್ಕಳ ಬಳಿಗೆ ಬಂದವರೆ ನೀರು ಕಾಯಿಸುತ್ತಿದ್ದ ಆ ಮಕ್ಕಳನ್ನೆಲ್ಲಾ ಎಬ್ಬಿಸಿ ಆ ಕೆಲಸಕ್ಕೆ ತಮ್ಮನ್ನೇ ಒಪ್ಪಿಸಿಕೊಂಡು ಬಿಟ್ಟಿದ್ದರು. ಶವಸಂಸ್ಕಾರಕ್ಕೆ ನೆರೆದವರೆಲ್ಲರೂ ಶೆಟ್ಟರ ಜತೆಗೆ ಸಹಕರಿಸಿದ್ದರಿಂದ ಕೊನೆಗೂ ಒಲೆಗಂಟಲಲ್ಲಿ ಉರಿ ಎದ್ದು ಬಿಸಿನೀರು ಸಿದ್ಧವಾಯಿತು.
ಇನ್ನೇನು ಹೆಣ ಮೀಯಿಸುವಲ್ಲಿಗೆ ಹೆಣವನ್ನು ತರಬೇಕು; ಅಂಗಳದಲ್ಲಿ ನಿಂತಿದ್ದ ಶೋಕತಪ್ತ ವಿಜಾತಿಯ ತಲೆಗಳೆಲ್ಲ ಖಾದ್ರಿಬ್ಯಾರಿಯವರಿಗಾಗಿ ಮೌನವಾಗಿಯೇ ಕಣ್ಣೀರ ತರ್ಪಣವನ್ನು ಅರ್ಪಿಸಿಬಿಟ್ಟು ಕೈಮುಗಿದು ತಮ್ಮ ತಮ್ಮ ಮನೆಯ ದಾರಿ ಹಿಡಿಯುವಷ್ಟರಲ್ಲಿ ಉಮ್ಮಕ್ಕೆಯವರು ಆಗ ತಾನೆ ಸಾವಿನ ಮನೆಯ ಅಂಗಳವನ್ನು ಹೊಕ್ಕುಬಿಟ್ಟಿದ್ದರು. ಆಗಷ್ಟೇ ಹೆಣಕ್ಕೆ ಮರೆಯಲ್ಲಿ ಬಿಸಿನೀರ ಸ್ನಾನ ನಡೆಯುತ್ತಿತ್ತು. ಹನಿಗಣ್ಣಾಗಿ ಆ ದೃಶ್ಯವನ್ನು ದಿಟ್ಟಿಸಿದ ಉಮ್ಮಕ್ಕೆಯವರು ಮುಂಜಾನೆ ಗಂಡನೆಂದಿದ್ದ ಮಾತನ್ನು ಮತ್ತೊಮ್ಮೆ ಚಿತ್ತದಿಂದ ಮೇಲಕ್ಕೆತ್ತಿ ತಂದರು: “ಆನೆ ಹೋದ ದಾರಿಯಲ್ಲಿ ಆಡು ಹೋದೀತು….ಮಾರಾಯ್ತಿ, ಆದರೆ ಆಡು ಹೋದ ದಾರಿಯಲ್ಲಿ ಆನೆಯೆಂದೂ ಸಾಗದು.”
ಉಮ್ಮಕ್ಕೆಯವರ ಕಣ್ಣಾಲಿಗಳಿಂದ ನೀರ ಮುತ್ತಿನ ಮಾಲೆಮಾಲೆಯೇ ಉರುಳಿತು.
*****
ಕೀಲಿಕರಣ: ಸೀತಾಶೇಖರ ಮತ್ತು ಚೀನಿ