ನದಿಯ ನೀರಿನ ತೇವ – ಮುನ್ನುಡಿ

ಕನ್ನಡ ಓದುಗರಿಗೆ ಈಗಾಗಲೆ ಸಾಕಷ್ಟು ಪರಿಚಿತರಾಗಿರುವ ಕವಿ ಮಮತಾ ಜಿ. ಸಾಗರ ಅವರ ಮೊದಲ ಕವನ ಸಂಕಲನ ‘ಕಾಡ ನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾಯಿತು. ಇದೀಗ ಆರು ವರ್ಷಗಳ ನಂತರ ಅವರ ಎರಡನೆ ಸಂಕಲನ ‘ನದಿಯ ನೀರಿನ ತೇವ’ ಪ್ರಕಟವಾಗುತ್ತ ಇದೆ. ಸಂಕಲನಗಳ ನಡುವೆ ಇಷ್ಟು ಕಾಲದ ಅವಧಿಯಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ: ಸ್ವತಃ ಕವಿಗೇ ತನ್ನ ಶೈಲಿಯಿಂದ ಸ್ವಲ್ಪ ಮಟ್ಟಿಗಾದರೂ ಬಿಡುಗಡೆ ಪಡೆದುಕೊಳ್ಳುವುದು ಇದರಿಂದ ಸಾಧ್ಯವಾಗಬೇಕು! ಕವಿ ಹೀಗೆ ನಿರಂತರವಾಗಿ ಬಿಡುಗಡೆ ಪಡೆದುಕೊಳ್ಳಬೇಕಾದ ಅಗತ್ಯದ ಕುರಿತು ನಾನು ಪ್ರತ್ಯೇಕವಾಗಿ ಹೇಳಬೇಕಾದ್ದಿಲ್ಲ. ವಾಸ್ತವದಲ್ಲಿ ಈ ಬಿಡುಗಡೆ ಎರಡು ರೀತಿಯದು : (೧) ಇತರ ಕವಿಗಳ ಅಥವ ಕಾವ್ಯಮಾರ್ಗಗಳಿಂದ ಬಿಡುಗಡೆ, ಮತ್ತು (೨) ತನ್ನದೇ ಶೈಲಿಯಿಂದ ಬಿಡುಗಡೆ, ಬರೆಯಲು ಶುರು ಮಾಡಿದ ಆರಂಭದ ಕಾಲದಲ್ಲಿ ಹೆಚ್ಚಾಗಿ ಎಲ್ಲ ಕವಿಗಳೂ ಪ್ರಚಲಿತ ಕಾವ್ಯಮಾರ್ಗದ ಪ್ರಭಾವ ದಲ್ಲಿರುವುದು ಎಷ್ಟು ಸಹಜವೋ ಅಷ್ಟೇ ಅದರಿಂದ ಕವಿ ಬಿಡುಗಡೆಯನ್ನು ಸಾಧಿಸುವುದೂ ಅಗತ್ಯವಾಗುತ್ತದೆ. ಹೆಚ್ಚಿನ ಕವಿಗಳು ಈ ಮೊದಲ ರೀತಿಯ ಬಿಡುಗಡೆಯನ್ನು ಸಾಧಿಸುವುದರಲ್ಲಿ ಸಫಲರಾಗುತ್ತಾರೆ. ಆದರೆ ಎರಡನೆ ರೀತಿಯ ಬಿಡುಗಡೆ ಮಾತ್ರ, ಎಂದರೆ ತನ್ನದೇ ಸಿದ್ಧ ಶೈಲಿಯಿಂದ ಹೊರಬರುವುದು, ಬಹಳ ಸೂಕ್ಷ್ಮವೂ ಕಠಿಣವೂ ಆದ ಬಿಡುಗಡೆ! ಮಮತಾ ಈ ಎರಡನೆಯ ಸಂಕಲನದಲ್ಲಿ ಈ ಎರಡೂ ರೀತಿಯ ಬಿಡುಗಡೆಗಳನ್ನು ಸಾಧಿಸಿದ್ದಾರೆ ಎನಿಸುತ್ತದೆ.

ಮಮತಾ ಅವರ ಮೊದಲ ಕವನ ಸಂಕಲನಕ್ಕೆ ಗೋಪಾಲಕೃಷ್ಣ ಅಡಿಗರ ಮುನ್ನುಡಿ ಮತ್ತು ಕಿ. ರಂ. ನಾಗರಾಜರ ಹಿನ್ನುಡಿ ಇವೆ. ‘ನದಿಯ ನೀರಿನ ತೇವ’ಕ್ಕೆ ಮುನ್ನುಡಿ ಬರೆಯಲು ಒಪ್ಪಿಕೊಂಡ ಮೇಲೆ ನಾನು ಮಮತಾ ಅವರ ಮೊದಲ ಸಂಕಲನದ ಕವಿತೆಗಳನ್ನು, ಅದಕ್ಕೆ ಅಡಿಗರು ಬರೆದ ಮುನ್ನುಡಿ ಹಾಗೂ ಕಿ. ರಂ. ಬರದ ಹಿನ್ನುಡಿಯನ್ನು ಸಾಕಷ್ಟು ಗಮನವಿಟ್ಟು ಓದಬೇಕಾಯಿತು. ಅಡಿಗರ ಮುನ್ನುಡಿ ಹಲವು ಕಾರಣಗಳಿಗೆ ವಿಶಿಷ್ಟವಾದ್ದರಿಂದ ಇಲ್ಲಿ ಆರಂಭದ ಪ್ಯಾರಾದಿಂದ ಕೆಲವು ಸಾಲುಗಳನ್ನು ಉದ್ಧರಿಸಿಕೊಡುತ್ತಿದ್ದೇನೆ :

ಈಗ ನಿಜವಾದ ಕವನಗಳನ್ನು ರಚಿಸಬಲ್ಲ ಹೊಸಕವಿಗಳು ಕಾಣಿಸದೆ ಇರುವ, ಓದು ಬರಹ ಬಲ್ಲ ಬಹಳ ತರುಣ-ತರುಣಿಯರು ಕಾವ್ಯಚ್ಚಲದಿಂದ ಕೆಟ್ಟಗದ್ಯದ ಸಾಲುಗಳನ್ನು ತುಂಡು ತುಂಡು ಮಾಡಿ ಒಂದರ ಕೆಳಕ್ಕೆ ಒಂದೊಂದು ತುಂಡನ್ನು ಇಟ್ಟು, ಅದನ್ನೆಲ್ಲಾ ಕವನವೆಂದು ಪ್ರಕಟಿಸಿ, ಅಂಥ ಕವನಗಳ ಪ್ರಕಟಣೆಗೆ ತಮ್ಮ ಅಥವಾ ತಮ್ಮ ಸ್ನೇಹಿತರ ದುಡ್ಡನ್ನೆಲ್ಲಾ ಪೋಲು ಮಾಡುತ್ತಿರುವ ಈ ಕಾಲದಲ್ಲಿ ಒಬ್ಬ ನಿಜವಾದ ಕವಿ ಕಂಡು ಬಂದರೆ ಭಾರೀ ಸಂತೋಷವಾಗುತ್ತದೆ. ಮಾತ್ರವಲ್ಲ, ಕನ್ನಡ ಕಾವ್ಯದ ಭವಿಷ್ಯದ ಬಗ್ಗೆ ನಿರಾಶೆ ಮುಸುಕುತ್ತಿರುವಾಗ ಆಸೆಯ ಒಂದು ತಂತು ದೊರೆತಂತಾಗುತ್ತದೆ. ಮಮತಾ ಅಂಥ ನಿಜವಾದ ಕವಿ. ಭಾಷೆಗೆ ವ್ಯಾಕರಣದ ಅಗತ್ಯ ಹೇಗೋ ಹಾಗೆ ಛಂದಸ್ಸೂ ಕವಿತೆಗೆ ಅಗತ್ಯ ಎಂಬುದನ್ನು ಅರಿಯದವರ ಕೈಲಿ ನಮ್ಮ ಕಾವ್ಯದ ಅಭ್ಯಾಸಗಳು ಮಂದಯಿಸುತ್ತಿರುವಾಗ ಕನ್ನಡವನ್ನು ಚೆನ್ನಾಗಿ ಬಲ್ಲ, ಯಾವ ತಪ್ಪನ್ನೂ ಮಾಡದ, ಲಯಬದ್ಧವಾದ ಅರ್ಥಾನುಸಾರಿಯಾಗಿ ಏರಿ ಇಳಿದು ಸಾಗುವ ಚರಣಗಳೇ ಕಾವ್ಯದ ಜೀವಾಳ ಎಂದು ತಿಳಿದಿರುವ ಮಮತಾರವರ ಕಾವ್ಯ ಕನ್ನಡ ರಸಿಕರಿಗೆ ಸಂತೋಷ ಕೊಡುವುದರಲ್ಲಿ ನನಗೆ ಸಂದೇಹವಿಲ್ಲ.

ನವ್ಯಕಾವ್ಯ ಪ್ರವರ್ತಕರಾದ ಅಡಿಗರು ಇಂಥ ಮಾತುಗಳನ್ನು ಹೇಳಿದರೇ ಎಂದು ಆಶ್ಚರ್ಯವಾಗುವ ರೀತಿಯಲ್ಲಿ ಇವು ಸಂಪ್ರದಾಯವಾದಿಯಾಗಿ ಕಾಣಿಸುತ್ತವೆ! ಒಂದು ವೇಳೆ ನವ್ಯಪೂರ್ವ ಚಿಂತನೆಯ ಶಿವರುದ್ರಪ್ಪ ಅಥವಾ ಕಣವಿ ಹೀಗೆ ಹೇಳಿದ್ದರೆ ಅದರಲ್ಲಿ ಆಶ್ಚರ್ಯಪಡುವಂಥಾದ್ದು ಏನೂ ಇರುತ್ತಿರಲಿಲ್ಲ. ಆದರೂ ಭಾಷಾ-ಲಯದ ಬಗ್ಗೆ ಇದೇ ರೀತಿಯ ಮಾತುಗಳನ್ನು ಇನ್ನೊಬ್ಬ ಶ್ರೇಷ್ಠ ನವ್ಯಕವಿ ರಾಮಚಂದ್ರಶರ್ಮ ಕೂಡ ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ. ಇವರೆಲ್ಲ ಕನ್ನಡದ ಆಧುನಿಕ ಕವಿಗಳೆಂದು ಹೆಸರುಗಳಿಸಿದ್ದರೂ ಹಳೆಯ ಲಯಸಿದ್ಧಾಂತ, ವ್ಯಾಕರಣ-ಛಂದಸ್ಸು ಮುಂತಾದವಕ್ಕೆ ಮಾನಸಿಕವಾಗಿ ಬದ್ಧರಾಗಿರುವುದನ್ನು ಗಮನಿಸಿದರೆ ಇದೆಲ್ಲಿಯ ನವ್ಯತೆ ಎಂದು ಅರ್ಥವಾಗುವುದಿಲ್ಲ! ಲಯವೆಂದರೆ ಒಂದು ಮಾತಿನ ಜತೆ ಇನ್ನೊಂದು ಮಾತು ಬಂದು ನಿಲ್ಲುವ ರೀತಿ ಎಂದು ಸ್ಯಾಮುವೆಲ್ ಬೆಕೆಟ್ ಬಹಳ ಹಿಂದೆಯೇ ಹೇಳಿದ. ಅಡಿಗರು ಇದೇ ಅರ್ಥ ಬರುವಂತೆ ತಮ್ಮ ಮುನ್ನುಡಿಯ ಎರಡನೇ ಪ್ಯಾರಾದಲ್ಲಿ ಪ್ರತಿಯೊಂದು ಅನುಭವದ ಜೊತೆಗೆ ಅದರ ವಿರುದ್ಧವಾದುದು ಸೇರಿದರೆ ಅದು ನಿಜವಾದ ಅನುಭವವಾಗುತ್ತದೆ’ ಎಂಬ ಮಾತನ್ನು ಹೇಳುತ್ತಾರೆ. ಮಮತಾ ಅವರ ಕವಿತೆಗಳಲ್ಲಿ, ವ್ಯಾಕರಣ ಬದ್ಧತೆಯ ಜತೆಗೇ, ಈ ರೀತಿಯ ಮುಖಾಮುಖಿ ಕೂಡ ಇದೆ ಎನ್ನುವುದು ಅಡಿಗರ ಅಭಿಪ್ರಾಯ. ಹಾಗೂ ಮಮತಾ ಹೀಗೆ ನಮ್ಮ ಅಂತರಂಗ ಬಹಿರಂಗಗಳ ದ್ವಂದ್ವದಂತೆಯೇ ನಮ್ಮ ಅಂತರಂಗ ಜೀವನವೂ ದ್ವಂದ್ವಗಳ ಸಮಾಗಮ ಎಂದೂ ಬಲ್ಲವರು ಎನ್ನಿಸುತ್ತದೆ. ಪ್ರತಿಯೊಂದು ಕವನವು ಈ ರೀತಿ ಸಂಶ್ಲಿಷ್ಟವಾಗಿರುತ್ತದೆ, ಸರಳ ಅಥವಾ ಏಕಮುಖಿಯಾಗಿರುವುದಿಲ್ಲ” ಎಂದು ಕೂಡ ಹೇಳುತ್ತಾರೆ. ಕವಿತೆಗೆ ಇದೇ ಮುಖ್ಯವೆಂದು ಗೊತ್ತಿದ್ದೂ ಅಡಿಗರು ವ್ಯಾಕರಣ, ತಪ್ಪು ಮಾಡದಿರುವಿಕೆ, ಛಂದಸ್ಸು ಮುಂತಾದ ಹಳೆ ವಿಚಾರಗಳನ್ನು ಪ್ರಸ್ತಾಪಿಸಿ ಅವನ್ನು ಮಮತಾ ಅವರ ಕವಿತೆಗಳಲ್ಲಿ ಒಂದು ಕಾವ್ಯಗುಣವಾಗಿ ಕಂಡಿರುವುದು ಕನ್ನಡದ ಈ ನವ್ಯಕಾವ್ಯ ಪ್ರವರ್ತಕರ ಆಂತರ್ಯದ ದ್ವಂದ್ವಕ್ಕೆ ಸಾಕ್ಷಿಯಾಗುತ್ತದೆಯೇ ವಿನಾ ಕವಿತೆಯ ಕುರಿತಾದ ದಾರಿದೀಪ ಆಗುವುದಿಲ್ಲ. ಭಾಷಾಲಯದಿಂದ ಆಧುನಿಕ ಕವಿತೆ ವಿಚಾರಲಯದ ಕಡೆ ಸಾಗಿ ಬಂದಿರುವುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಈ ವಿಚಾರಲಯವಾದರೂ ಪೂರ್ವಭಾವಿಯಾಗಿ ಗುರುತಿಸಲ್ಪಡುವುದಿಲ್ಲ ಎನ್ನುವುದು ಮುಖ್ಯ. ಪ್ರತಿ ಕವಿಯೂ ಇದನ್ನು ಪ್ರತಿಯೊಂದು ಸಲ ಹೊಸತಾಗಿ ಸಾಧಿಸಿಕೊಳ್ಳಬೇಕಾಗುತ್ತದೆ ಎನ್ನುವುದು ಕೂಡ ಕವಿತೆ ಬರೆಯುವವರಿಗೂ ವಿಮರ್ಶಾತ್ಮಕವಾಗಿ ಓದುವವರಿಗೂ ಗೊತ್ತು.

ಅಡಿಗರ ಮಾತಿಗೆ ತೀರ ವಿರುದ್ಧವಾಗಿ ಹಿನ್ನುಡಿಯಲ್ಲಿ ಕಿ. ರಂ. ನಾಗರಾಜ್ ಮಮತಾರವರ ಕವಿತೆಗಳಲ್ಲಿ ಕವಿಯ ವೈವಿಧ್ಯಮಯ ಜೀವನಾನುಭವಗಳು ಸಂಘಟಿಸುವ ರೀತಿ ನಿಶ್ಚಿತ ಧಾಟಿ ಮತ್ತು ಏಕತಾನತೆಗೆ ಎಡೆಮಾಡುತ್ತದೆ ಎಂದು ಹೇಳುತ್ತಾರೆ!

ಕಿ. ರಂ. ಹೆಸರಿಸದ ಈ ನಿಶ್ಚಿತ ಧಾಟಿ ಏನೆಂದು ಯೋಚಿಸಿದರೆ ಅದು ಇನ್ನೇನೂ ಅಲ್ಲ ದಟ್ಟವಾದ ಕನ್ನಡ ನವ್ಯದ ಛಾಯೆ, ಅಡಿಗ, ರಾಮಚಂದ್ರ ಶರ್ಮ ಎನ್ನುವುದು ಗೊತ್ತಾಗುತ್ತದೆ! ವ್ಯಕ್ತ ರೂಪಕಗಳ ಆಕರ್ಷಣೆ, ಭರತ ವಾಕ್ಯಗಳ ‘ತೆವಲು’. ಉದಾಹರಣೆಗೆ “ಕವಿತೆಯೆಂದರ” ಎಂಬ ಕವಿತೆ :

ಕವಿತೆಯೆಂದರದೊಂದು ತೆವಲು
ದುಷ್ಟ ಪುಷ್ಟ ಮೈ ಕಟ್ಟಿನ
ಪ್ರಿಯತಮನ ಹಾಗೆ.
ಶಬ್ದಗಳ ತೂಕ ಅವನ ಒಂದೊಂದು
ಸ್ನಾಯು ಬಲವಿದ್ದ ಹಾಗೆ.
ಓದುತ್ತಲೇ ಗಕ್ಕನೆ ಅಪ್ಪಿಬಿಡಬೇಕು
ಅವನಪ್ಪುಗೆಯ ಹಾಗೆ.
ಕವಿತೆ ಸಿದ್ಧವಾದ ಮೇಲೆ ಹಿತವಾಗಿರಬೇಕು.
ಅವನ ಜತೆ ಕಳೆದ ರಾತ್ರಿಯ
ನೆನಪಿನ ಹಾಗೆ.

ಇಲ್ಲಿನ ಕವಿತೆಯನ್ನು ಪ್ರಿಯಕರನ ಜತೆಗಿನ ಕೂಡುವಿಕೆ, ಆಮೇಲೆ ಅದರ ನೆನಪು ಮುಂತಾದ ಒಂದು ಅನುಭವಕ್ಕೆ ನೇರವಾಗಿ ಹೋಲಿಸಲಾಗಿದೆ. ಇಂಥ ಹೋಲಿಕೆ ರಾಮಚಂದ್ರ ಶರ್ಮರ ಈಗ ಎಲ್ಲರಿಗೂ ಪರಿಚಿತವಾದ ಶೈಲಿಯನ್ನು ನೆನಪಿಗೆ ತರುವಂಥದು. ಇದರಲ್ಲಿ ಬರುವ ‘ದುಷ್ಟ ಪುಷ್ಟ’ ಎಂಬ ಪದಪ್ರಯೋಗವೆಂದೇ ಸ್ವಲ್ಪ ಕುತೂಹಲಕಾರಿಯಾದ್ದು – ಆದರೆ ಅಡಿಗರ ಮಾತನ್ನು ಗಂಭೀರವಾಗಿ ತೆಗೆದುಕೊಂಡರೆ, ಇದು ವ್ಯಾಕರಣ ಬದ್ಧ ಪ್ರಯೋಗವಲ್ಲ! ಆದರೆ ಇಲ್ಲಿ ಮಾತ್ರ ಈ ವ್ಯಾಕರಣದ ಉಲ್ಲಂಘನೆ ಕೂಡ ಕವಿತೆ ನಮ್ಮನ್ನು ಒಳಗೊಳ್ಳುವುದಕ್ಕೆ ಸಹಾಯ ಮಾಡುವುದಿಲ್ಲ. ಇದಕ್ಕೆ ಕವಿತೆಯ ದುರ್ಬಲವಾದ ರೂಪಕ ಒಂದು ಕಾರಣವಾದರೆ (ದುರ್ಬಲ ಯಾಕೆಂದರೆ “ಕವಿತೆ=ಒಂದು ತೆವಲು…..” ಎಂಬ ಸರಳ ಸಮೀಕರಣದಿಂದಾಗಿ, ಆಧುನಿಕ ಕಾವ್ಯಕ್ಕೆ ಇದನ್ನು ಹೀಗೇ ಇಷ್ಟು ಸರಳವಾಗಿ – ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ!), ಇಡೀ ಕವಿತೆಯ ‘ಹಾಗಿರಬೇಕು, ಹೀಗಿರಬೇಕು’ ಎನ್ನುವ ಧಾಟಿ ಇನ್ನೊಂದು ಕಾರಣವೆಂದು ಅನಿಸುತ್ತದೆ. ಇದನ್ನೇ ನಾನು ಭರತವಾಕ್ಯವೆಂದು ಕರೆಯುವುದು. ಇದು ಅಡಿಗ, ರಾಮಚಂದ್ರ ಶರ್ಮರ ಕವಿತೆಗಳ ಜಾಯಮಾನ. ಅವರು ಕವಿತೆಯ ಉದ್ದೇಶ ಪೂರ್ತಿಯಾಗಬೇಕಾದರೆ ಅದರಲ್ಲೇನಾದರೂ ಒಂದು ‘ನೀತಿ’ ಇದ್ದೇ ಇರಬೇಕು ಎಂಬಂತೆ ಬರೆಯುವವರು. ಅಡಿಗ ಮತ್ತು ಶರ್ಮರ ಒಟ್ಟಾರೆ ಕಾವ್ಯ ಸಾಮರ್ಥ್ಯ ಹಾಗೂ ಅವರ ಸ್ಥಾನ ಮಾನ ಈ ಅವಗುಣವನ್ನು ಮರೆಸಿಬಿಡುವ ಸಾಮರ್ಥ್ಯವನ್ನು ಪಡೆದಿರಬಹುದು. ಆದ್ದರಿಂದ ಓದುಗರು ಈ ನೀತಿಯನ್ನು ಕಾವ್ಯದ ಅಂಗವಾಗಿ ಸ್ವೀಕರಿಸಿಕೊಳ್ಳುವುದಕ್ಕೆ ಬಹುಶಃ ತಯಾರಿರುತ್ತಾರೆ. ಅಥವಾ ಈ ಭರತವಾಕ್ಯದ ತುಯ್ತ ಕೂಡ ಇವರ ಒಟ್ಟಾರೆ ಕಾವ್ಯ ಸಾಮರ್ಥ್ಯಕ್ಕೆ ಕಾರಣವೇ ಎನ್ನುವ ಪ್ರಶ್ನೆ ಕೂಡ ಕೇಳಬಹುದು. ಅದೇನೇ ಇದ್ದರೂ ಇನ್ನೂ ಅಂಬೆಗಾಲಿಕ್ಕುವ ಕವಿ ಇದೇ ರೀತಿಯ ನಿರ್ದೇಶನಗಳನ್ನು ಕವಿತೆಯ ಮೂಲಕ ಕೊಡಲು ತೊಡಗಿದರೆ ಅದು ಓದುಗರನ್ನು ಹತ್ತಿರ ಬರಗೊಡದು! ಇದನ್ನೆಲ್ಲ ಇಲ್ಲಿ ಯಾಕೆ ಹೇಳುವುದು ನನಗೆ ಸಾದ್ಯವೆಂದರೆ ನಾನೂ ಇಂಥ ಅನೇಕ ತಪ್ಪುಗಳನ್ನು ಪದೇ ಪದೇ ಮಾಡುತ್ತ ಬಂದಿರುವುದರಿಂದ!

ಆದರೆ ಮಮತಾ ಅವರ ಈ ಎರಡನೆ ಸಂಕಲನ ಸಾಕಷ್ಟು ಮಹತ್ವಾಕಾಂಕ್ಷೆಯದ್ದು. ಇದರ ವಿಸ್ತಾರ ಮತ್ತು ವೈವಿಧ್ಯ, ಎರಡೂ ಮೊದಲ ಸಂಕಲನಕ್ಕಿಂತ ಜಾಸ್ತಿ. ನಾಲ್ಕು ಭಾಗಗಳಾಗಿ ವಿಂಗಡಿಸಿರುವ ಈ ಸಂಕಲನದ ಕವಿತೆಗಳು ಪ್ರಾಯೋಗಿಕ ಕುತೂಹಲಗಳನ್ನು ಒಳಗೊಂಡಿವೆ. ಇವು ಸಚಿತ್ರವಾಗಿ ಮುದ್ರಣಗೊಂಡಿರುವುದನ್ನು ಗಮನಿಸಬೇಕು. ಮಲ್ಟಿ ಮೀಡಿಯಾ ಯುಗದಲ್ಲಿ ಇದೇನೂ ದೊಡ್ಡ ಸಂಗತಿಯಾಗುವುದಿಲ್ಲ ಎಂದಿಟ್ಟುಕೊಂಡರೂ ಅಕ್ಷರಮಾಧ್ಯಮವನ್ನು ಮೀರುವ ಇಲ್ಲಿನ ಪ್ರಯತ್ನ ಕೇವಲ ಪ್ರಾಯೋಗಿಕವಲ್ಲ – ಮಮತಾ ಅವರ ಮಟ್ಟಿಗೆ ಇದು ಅವರ ಕಾವ್ಯಕ್ಕೆ ವ್ಯಂಜಕವಾಗಿರುವ ಗುಣ. ೧೯೯೨ರಿಂದ ೧೯೯೮ಕ್ಕೆ ಆರು ವರ್ಷಗಳ ಅಂತರವಷ್ಟೆ. ಆದರೆ ಕಾವ್ಯಗುಣದ ಅಂತರವನ್ನು ವರ್ಷಗಳಲ್ಲಿ ಅಳೆಯುವುದು ಸಾಧ್ಯವಿಲ್ಲ. ಕಾವ್ಯದ ‘ಬೆಳವಣಿಗೆ’ಯ ಕುರಿತೂ ಬಹುಶಃ ಮಾತಾಡುವುದರಲ್ಲಿ ಅರ್ಥವಿಲ್ಲವೆಂದು ತೋರುತ್ತದೆ. ಕಾವ್ಯ ಹುಟ್ಟಿ, ಬೆಳೆದು, ಮಾಗುವ ಒಂದು ಜೈವಿಕ ಕ್ರಿಯೆಯೇನೂ ಅಲ್ಲ. ಆದ್ದರಿಂದ ಈ ಎರಡನೆಯ ಸಂಕಲನ ಮೊದಲನೆಯದಕ್ಕಿಂತ ಬೆಳೆದಿದೆಯ ಎಂದು ಕೇಳುವುದಕ್ಕಿಂತ ಯಾವ ರೀತಿಯಲ್ಲಿ ಭಿನ್ನವಾಗಿದೆ ಎಂದು ಕೇಳುವುದು ಹೆಚ್ಚು ಸೂಕ್ತವಾದೀತು. ಎಲ್ಲಾ ಆಧುನಿಕ ಕವಿಗಳಿಗೂ ಇರುವ ಕವಿತೆಯ (ಅ)ಸಾಧ್ಯತೆಯ ಕುರಿತಾದ ಆತಂಕ ಮಮತಾ ಅವರಿಗೂ ಇದೆ. ಈ ಕಾರಣಕ್ಕೆ ಅವರ ಮೊದಲ ಸಂಕಲನದಲ್ಲಿ ಈ ಹಿಂದೆ ಉದ್ಧರಿಸಿದ ಕವಿತೆಯಲ್ಲದೆ ಕವಿತೆಯ ಬಗೆಗಿನ ಇತರ ಕವಿತೆಗಳೂ ಸಾಕಷ್ಟಿರುವುದು. ‘ನದಿಯ ನೀರಿನ ತೇವ’ ಕೂಡ ಈ ಆತಂಕದಿಂದ ಮುಕ್ತವಾಗಿಲ್ಲ. ಆದರೂ ಈ ಆತಂಕ ಒಂದು ಕಾವ್ಯಾನುಭವವಾಗಿ ಓದುಗನಿಗೆ ಒದಗದ ಹಿಂದಿನ ರೀತಿಯಲ್ಲಿ ನಿರ್ದೇಶಾತ್ಮಕ (Model) ಅನುಸೂಚನೆಯ ಹಾಗೆ ಕೇಳಿಬರುತ್ತದೆ. ಆರಂಭದ ಕವಿತೆ “ರಾಗ” :

ಸಮುದ್ರ ಸೀಳಿ ಲಾಗ ಹೊಡೆಯುವ ತಿಮಿಂಗಿಲ
ಆಕಾಶವನ್ನೆ ಹರಿದು ಸುರಿಯುವ ಮಳೆ
ಚಂದ್ರ ತಾರೆಗಳನ್ನೇ ನುಂಗಿಬಿಡುವ ಮೋಡ
ಭೂಮಿಯೊಳಗಿಂದ ಹಟಾತ್ತನೆ ಸಿಡಿದು ನಡುಗಿಸುವ ಕಂಪನ; ನುಡಿಸಿದರೆ ರಾಗ
ಹೀಗಿರಬೇಕು!
ರೋಮ ರೋಮಕ್ಕೂ ಲಗ್ಗೆ ಇಟ್ಟು ಕೊಲ್ಲುವ ಹಾಗೆ.

ಇದನ್ನು ಗಣನೆಗೆ ತೆಗೆದುಕೊಳ್ಳದೆ ಓದುಗ ಮುಂದೆ ಹೋಗಬೇಕು. ಹೋದರೆ ಈ ಆರಂಭ ಕೇವಲ ದೃಷ್ಟಿಬೊಟ್ಟಾಗಿರಬಹುದು ಎನ್ನುವ ಸೂಚನೆಗಳು ನಮಗೆ ಧಾರಾಳ ಸಿಗುತ್ತವೆ. ಸಂಕಲನದ ಎರಡನ ಕವಿತೆಯೆ ಮಮತಾ ತೆಗೆದುಕೊಂಡ ಭಿನ್ನ ಆಕಾಂಕ್ಷೆಗಳಿಗೆ ಸೂಚನೆಯಂತಿದೆ. ಈ ಕವಿತೆಯ ಹೆಸರು “ಕತ್ತಲ ಕುಲದವಳು”. ರಾತ್ರಿ ಜೀವನ ನಡೆಸುವ ಬೆಲವಣ್ಣಿನ ಚಿತ್ರಣ ಇಲ್ಲಿದೆ. ಆದರೆ ಈಕೆ ಮಾತ್ರ “ಸಾವಿರ ಗಂಡರಿಗೆ ಮೊಲೆಯುಣಿಸಿ” ಲಾಲಿ ಹಾಡಿಸಿ ಮಲಗಿಸಬಲ್ಲವಳು. ಮಮತಾ ಅವರ ಹಲವು ಕವಿತೆಗಳಲ್ಲಿ ಕಾಣಿಸುವಂತೆ ಇಲ್ಲಿಯೂ ಮನುಷ್ಯ ಮತ್ತು ನಿಸರ್ಗ ಒಂದೇ ವಿದ್ಯಮಾನದ ಎರಡು ರೂಪಗಳಂತೆ ಬರುವುದರಿಂದ ಒಂದು ಇನ್ನೊಂದರ ರೂಪಕವಾಗಿಬಿಡುವುದನ್ನು ಕಾಣುತ್ತೇವೆ. ಈ ಕೊನೆಯ ಸಾಲುಗಳನ್ನು ನೋಡಬಹುದು :

ಇವಳು ಕತ್ತಲ ಕನ್ಯೆ.
ಅಡಗಿದ್ದ ಸೂರ್‍ಯನ್ನ ಆಕಾಶಕ್ಕೆ ಕೊಡವಿ
ಮತ್ತೆ ಮುಡಿ ಕಟ್ಟುತ್ತಾಳೆ.

ಈ ಕತ್ತಲ ಕನ್ಯೆ ಮುಡಿಕಟ್ಟುವುದರಿಂದಲೇ ಸೂರ್ಯೋದಯ ಕೂಡ! ಇವು ಕವಿತೆಯಾಗಿ ಪ್ರಬಲವಾದ ಸಾಲುಗಳೆನ್ನುವುದರಲ್ಲಿ ಸಂದೇಹವಿಲ್ಲ. ಆದರೂ ಹೀಗೆ ಮನುಷ್ಯನ ಸಾಮಾಜಿಕ ದಾರುಣತೆಯನ್ನು ನೈಸರ್ಗಿಕರಿಸಿದ ತಕ್ಷಣ ಉಂಟಾಗುವ ರಮ್ಯತಾಭಾವವೆ ಒಂದು ಧನ್ಯತಾಭಾವವೂ ಆಗಿಬಿಡುವುದು ಸಾಧ್ಯವೆನ್ನುವುದನ್ನು ಕವಿ ತಿಳಿದುಕೊಳ್ಳಬೇಕು. ಈ ರೀತಿಯ ನೈಸರ್ಗಿಕರಣದ ವಿರುದ್ಧ ನವ್ಯಕಾವ್ಯ ನಡೆಸಿದ ಹೋರಾಟ ಇನ್ನೂ ನಮ್ಮ ಮನಸ್ಸಿನಲ್ಲಿ ಇರುವುದರಿಂದ ಹಾಗೂ ಅದು ಪಡೆದ ಗೆಲವನ್ನು ಕಾರಣವಿಲ್ಲದೆ ಬಿಟ್ಟುಕೊಡುವುದು ಸರಿಯಲ್ಲವಾದ್ದರಿಂದ ಈ ಮಾತನ್ನು ಹೇಳಬೇಕಾಗುತ್ತದೆ. ಇಂಥ ನೈಸರ್ಗಿಕರಣ ಎರಡಲಗಿನ ಖಡ್ಗದ ಹಾಗೆ! ವರ್ಡ್ಸ್‌ವರ್ತ್ ಇದನ್ನ ಚೆನ್ನಾಗಿ ನಿಭಾಯಿಸಿದ. ಆ ಕಾಲಕ್ಕೆ ಪ್ರಾಯಶಃ ಅದು ಅವನಿಗೆ ಅಗತ್ಯವೂ ಆಗಿತ್ತು. (ಉದಾಹರಣೆಗೆ ‘ದಿ ಓಲ್ಡ್ ಕಂಬರ್ಲೆಂಡ್ ಬೆಗ್ಗರ್’) ನಾವಿವತ್ತು ರೊಮ್ಯಾಂಟಿಕ್ ಯುಗಕ್ಕೆ ಮರಳುವ ಹಾಗಿಲ್ಲ. ಇವತ್ತು ಕವಿತೆ ಮಾಡಬೇಕಾದ ಕೆಲಸ ಬೇರೇ ಎನಿಸುತ್ತದೆ. ಇದು ಮಮತಾ ಅವರಿಗೂ ಗೊತ್ತಿರುವ ಸಂಗತಿ. ಇತರ ಹಲವು ಕವಿತೆಗಳು ಈ ನಿಸರ್ಗಿಕರಣದ ಅಪಾಯದಿಂದ ತಪ್ಪಿಸಿಕೊಂಡಿವೆ. ಉದಾಹರಣೆಗೆ, ಇದರ ಮುಂದಿನ ಕವಿತ ‘ಹೇಮಕೂಟ’ ವನ್ನು ಗಮನಿಸಬಹುದು. ‘ಹೇಮಕೂಟ’ದಲ್ಲಿ ಕೂಡ ನಿಸರ್ಗ ಬರುತ್ತದೆ, ಆದರೆ ಅದರ ಬರವು ವಾಸ್ತವವನ್ನು ರಮೀಕರಿಸದೆ ಕವಿತೆಯ ಆಶಯಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಈ ಕವಿತೆ ಹಾಳು ಹಂಪಿಯ ಕಲ್ಲು ಮಂಟಪಗಳಲ್ಲಿ ಕೂತ ಗಿಳಿಗಳ ಮಾತುಗಳನ್ನು ಮತ್ತು ನೆನಪುಗಳನ್ನು ಒಳಗೊಂಡಿದೆ. ಈ ಗಿಳಿಗಳು ಇಲ್ಲಿನ ಅಂತಃಪುರದ ರಾಣಿಯರ ಆತ್ಮಗಳು, ಪಾಳುಬಿದ್ದ ಮಂಟಪಗಳನ್ನು ನೋಡಬರುವ ಪ್ರವಾಸಿಗರು, ಅಲ್ಲಿ ಕೆತ್ತಿದ ನಗ್ನ ಸುಂದರಿಯರ ಕೆತ್ತನೆಗಳ ಮೈದಡವುತ್ತಾರಲ್ಲದೆ ಈ ಆತ್ಮಗಳನ್ನು ಮಾತಾಡಿಸುವ ಗೋಜಿಗೆ ಹೋಗುವುದಿಲ್ಲ. ಇಲ್ಲಿ ನೆನಪು ಮಾಯವಾಗಿದ ಎಂಬ ಸೂಚನೆಯಿದೆ. ಇದು ಒಂದು ಸಾಮ್ರಾಜ್ಯದ ಏರಿಳಿವಿನ ನೆನಪು ಮಾತ್ರವೇ ಅಲ್ಲ, ಇಂಥ ಅರಮನೆಗಳಲ್ಲಿ ಕೂಡಿ ಹಾಕಿದ್ದು ಒಮ್ಮೆ ರಾಜಭೋಗದಲ್ಲಿ ಮರೆದು ಅಲ್ಲೇ ಅಸುನೀಗಿದ ಹೆಣ್ಣುಗಳದ್ದೂ ಹೌದು.

ತುಂಬಿ ಹರಿಯುತ್ತಿದ್ದಾಳೆ ತುಂಗಭದ್ರೆ
ಅವಳಿಗೋ, ಮೈಯೆಲ್ಲಾ ಸುಳಿ,
ಇವಳ ಪ್ರವಾಹದ ಮುಂದೆ
ಮೋಹಿಸಿ ಬಂದರೆ ಸಾಕು,
ಹತ್ತಿರ ಸೆಳೆದು, ತಬ್ಬಿ, ಕೊಂದುಬಿಟ್ಟಾಳು!
ಕೊಚ್ಚಿ ಹೋಗುವ ಹಾಗೆ ನೆನಪುಗಳು,
ಜನ, ಮನ, ಕಾಲ-ದೇಶಗಳು,

ತುಂಗಭದ್ರೆ ತೆರೆದಿಟ್ಟ ತಾವು –
ಎಲ
ಜಲ
ಸಮಾಧಿ
ಶಿಥಿಲ ಸ್ಥಳ
ಯಾರಿಗೇನು ಬೇಕೊ ಎಲ್ಲವೂ ಇದೆ ಇಲ್ಲಿ
ಭಿಕ್ಷುಕ – ಭೈರಾಗಿ, ಸಂತ – ಸಾಮ್ರಾಟರ
ಹೇಮ ಕೂಟ.

ಎಂಬ ಕೊನೆಯಲ್ಲಿ ಭಯ, ಒಂಟಿತನ, ಆತ್ಮಹತ್ಯೆ, ಆಕಸ್ಮಿಕ ಮರಣ ಮುಂತಾದ ಸಂಗತಿಗಳು ಧ್ವನಿಪೂರ್ಣವಾಗಿ ಬಂದಿವೆ. ಇಲ್ಲಿ ‘ಹೇಮ ಕೂಟ’ ಎನ್ನುವ ಹೆಸರಿನ ಭವ್ಯತೆ ಮತ್ತು ಇವತ್ತಿನ ಈ ಪ್ರದೇಶದ ಜೀರ್ಣಾವಸ್ಥೆಯ ಮಧ್ಯೆ ಇರುವ ಕಂದಕದ ಅರ್ಥವೇನೆಂದು ಕವಿತೆ ಹೇಳುವುದಕ್ಕೆ ಹೋಗದೆ ಅದನ್ನು ಓದುಗರಿಗೇ ಬಿಟ್ಟುಕೊಡುತ್ತದೆ. ಆದ್ದರಿಂದ ಈ ಕವಿತೆಯನ್ನು ವಿಸ್ಮೃತಿವಾದಿಗಳು ಹಾಗೂ ಸ್ತ್ರೀವಾದಿಗಳು ಏಕಕಾಲಕ್ಕೆ ಉಪಯೋಗಿಸುವುದು ಸಾಧ್ಯ. ಕವಿತೆ ಇಂಥ ವಾದಗಳಿಗೆ ಆಹಾರವಾಗಿ ಮಾತ್ರವೇ ಬಂದರೆ ಅದು ನಮ್ಮ ಆತಂಕಕ್ಕೆ ಕಾರಣವಾಗಬೇಕು. ಇದನ್ನು ಈ ವಾದಗಳ ಸದ್ಯದ ಆಕರ್ಷಣೆಯಲ್ಲಿ ಸಿಕ್ಕಿರುವ ನಾವು ತೀರ್ಮಾನಿಸುವುದು ಸಾಧ್ಯವಿಲ್ಲ. ಇದಕ್ಕೆ ಪರವಾಗಬೇಕು ಅಥವಾ ಇದರಿಂದ ಬಿಡುಗಡೆ ಪಡೆಯಬೇಕು ಎನ್ನುವ ಎರಡೂ ತರದ ಸೋಪಜ್ಞತೆಗಳು ಕವಿಗೆ ತಕ್ಕುದಲ್ಲವಾದ್ದರಿಂದ ಪ್ರತಿಯೊಬ್ಬ ಕವಿ ಇಂಥ ಪರಿಸ್ಥಿತಿಯಲ್ಲಿ ಹೇಗೆ ಬರೆಯಬೇಕೆನ್ನುವುದು ಕುತೂಹಲದ ವಿಷಯವಾಗಿಯೇ ಉಳಿಯುತ್ತದೆ. ಪ್ರವಾಹಕ್ಕೆ ಎದುರಾಗಿ ಸಾಗು ಎಂದ ಫ್ರೆಂಚ್ ಲೇಖಕ ಆಂದ್ರೆ ಜೀದ್. ಅದು ಕಷ್ಟಕರ. ಸಾಗುವ ಯತ್ನದಲ್ಲಿ ಮುಂದೆ ಹೋಗದೆ ಇರಬಹುದು, ಅಥವಾ ಹಿಂದಕ್ಕೆ ಕೊಚ್ಚಿಕೊಂಡು ಹೋಗಬಹುದು. ಸೃಜನಶೀಲತೆಯನ್ನುವುದು ದುರಂತದ ಅಂಚಿನಲ್ಲಿ ಬೆಳೆಯುವ ಹೂವಿನ ಹಾಗೆ, ಅದಕ್ಕೆ ಕೈಚಾಚಿದರೆ ಏನು ಬೇಕಾದರೂ ಆಗಬಹುದು!

ಸಾಹಿತ್ಯದ ಪ್ರತಿಯೊಂದು ಪ್ರಯತ್ನವೂ ತನ್ನ ಓದಿನ ದಾರಿಯನ್ನು ತಾನಾಗಿ ಸೂಚಿಸುವ ಚಿಹ್ನೆಗಳನ್ನು ಒಳಗೊಂಡಿರುವ ಹಾಗೆ, ಮಮತಾ ಅವರ ಸದ್ಯದ ಕವನ ಸಂಕಲನ ಕೂಡ ಅಂಥ ಸೂಚನೆಗಳನ್ನು ಒಳಗೊಂಡಿದೆ: ಅಥವ ಇಂಥ ಸೂಚನೆಗಳನ್ನು ಕಾಣುವುದಕ್ಕೆ ಆಯಾ ಕಾಲವೇ ನಮ್ಮನ್ನು ನಿರ್ದೇಶಿಸುತ್ತಲೂ ಇರಬಹುದು! ಅಂತೂ ಇಂದಿನ ಆಧುನಿಕೋತ್ತರ ಅಥವಾ ಪೋಸ್ಟ್ ಮಾಡರ್ನ್ ಯುಗದಲ್ಲಿ ಸಾಹಿತ್ಯದ ಚಹರೆಗಳ ಕುರಿತೇ ಆತಂಕಗಳು ಏಳುತ್ತಿರುವಾಗ, ಮಮತಾ ಈ ಯುಗದ ಧ್ವನಿಯಾಗುವಂತೆ ಕವಿತೆಗಳನ್ನು ರಚಿಸಲು ಯತ್ನಿಸಿರುವಂತೆ ತೋರುತ್ತದೆ. ಅಕ್ಷರಮಾಧ್ಯಮ ಮಾತ್ರವಲ್ಲದೆ ಇಲ್ಲಿ ದೃಶ್ಯಮಾಧ್ಯಮವನ್ನು ಕೂಡ ಕವಿ ಅಲ್ಲಲ್ಲಿ ಉಪಯೋಗಿಸಿಕೊಂಡಿದ್ದಾರೆ. ‘ಕವಿತೆ, ಒಂದು ಕಪ್ಪು ಕಾಫಿಯ ಹಾಗೆ ಎನ್ನುವ ರೀತಿ ಇಲ್ಲಿ ಪ್ರಾತಿನಿಧಿಕ! Cup-ಕಪ್ಪುಗಳ ಸಂಬಂಧ, ಅಂತರ, ಅರ್ಥಾತ್‌ ಡೆರಿಡಾ ಹೇಳುವ ಡಿಫರಾನ್ಸ್ ಮಮತಾರವರ ಕವಿತೆಗಳನ್ನು ಆವರಿಸಿರುವ ಹಾಗೆ ಅನಿಸುತ್ತದೆ. ಇದು ಮಲ್ಟಿಮೀಡಿಯಾ ಸಂಸ್ಕೃತಿಯ ಸೂಚನೆ ಹೇಗೆಯೋ ಹಾಗೇನೇ ನವ್ಯೋತ್ತರ ಸಂದಿಗ್ಧತೆಗಳ ಸೂಚನೆಯೂ ಹೌದು. ಕವಿತೆ ಎಲ್ಲಿದೆ? ಜಗ್‌ನಿಂದ ಕಪ್ಪಿಗೆ ಸುರಿಯುತ್ತಿರುವ ಕ್ರಿಯೆಯಲ್ಲಿಯೆ? ಕೆಳಗೆ ತುಂಬುತ್ತಿರುವ ದ್ರವದಲ್ಲಿಯೆ? ಅಥವ ಕಪ್ಪಿನಲ್ಲಿಯೆ? (ಯಾವ ‘ಕಪ್ಪು’ – ಬಣ್ಣವೆ, ಪಾತ್ರೆಯೆ? ಎರಡೂ?) ಮೇಲೇಳುತ್ತಿರುವ ಹಬೆಯಲ್ಲಿಯೆ? ಒಟ್ಟಾರೆ, ಕವಿತೆಗೂ ಕಪ್ಪು ಕಾಫಿಗೂ ಏನು ಸಂಬಂಧ? ಏನೆಂದರೆ, ಕವಿತೆಗೆ ಸಂಬಂಧಿಸಿಯೂ ಇಂಥದೇ ಪ್ರಶ್ನೆಗಳನ್ನು ಈವತ್ತು ಕೇಳುವುದು ಸಾಧ್ಯ? ಕವಿತೆಯಲ್ಲಿದೆ – ಅಕ್ಷರಗಳಲ್ಲಿಯೆ? ಅರ್ಥದಲ್ಲಿಯೆ? ಓದುಗರ ಮನಸ್ಸಿನಲ್ಲಿಯೆ? ಕಾಗದದ ಮೇಲೆಯೆ? ಕಾಗದದ ಮೇಲೆ ಅಚ್ಚೊತ್ತಿದ ಕಾರ್ಬನಿನಲ್ಲಿಯೆ? ಇಂಥ ಪ್ರಶ್ನೆಗಳನ್ನು ಕೇಳುತ್ತ ನಾವು ಮೋಬಿಯಸ್ ಸ್ಟ್ರಿಪ್ (Mobious Strip)ನಲ್ಲಿ ಅದರ ತಳವನ್ನು ಹುಡುಕುತ್ತ ಎಷ್ಟು ಪ್ರಯಾಣ ಮಾಡಿದರೂ ತಳ ಸಿಗದೆ ಬಂದಲ್ಲಿಗೆ ವಾಪಸಾಗುತ್ತೇವೆ! ಮಮತಾರವರ ಈ ಪುಟ್ಟ ಕವಿತೆ ಇಂಥ ಬೃಹತ್ತಾದ ‘ಆಕಾಶ ಅವಕಾಶ’ ದ ಕಡೆ ಕೈ ತೋರಿಸುತ್ತದೆ. “ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ” ಎಂಬ ಕವಿತೆ ಇದನ್ನೇ ಇನ್ನೊಂದು ರೀತಿ ಹೇಳುವ ಹಾಗಿದೆ. ಇಲ್ಲಿ ನದಿಯ ಮೇಲ್ಮೈಯನ್ನೊಂದು ಕಾಗದದ ‘ಹೊಳೆ’ಗೆ ಹೋಲಿಸಲಾಗಿದೆ – ಆಮೇಲೆ ಕಾಗದದ ಹಾಳೆಗೆ ನದಿಯ ಮೇಲ್ಮೈ ಹೋಲಿಕೆಯಾಗುತ್ತದೆ. (‘ಕವಿತೆ’ ಎಂಬ ಕವಿತೆಯಲ್ಲೂ ಈ ರೀತಿಯ ದ್ವಿಮುಖ ಪಟ್ಟನ್ನು ಗಮನಿಸಬೇಕು – ಈ ಸಂಕಲನದ ಅನೇಕ ಕವಿತೆಗಳಲ್ಲಿ ಈ ಪಟ್ಟು ಸಾವಯವವಾಗಿ ಬಂದಿದ್ದು ಸಂಕಲನದ ಒಟ್ಟಾರೆ ಧರ್ಮಕ್ಕೆ ಸಾಕ್ಷಿಯಾಗಿದೆ. ಪಾರದರ್ಶಕವಾದ ನದೀ ನೀರಲ್ಲಿ ತಳ ಕಾಣಿಸಿದರೂ, ಅದರ ಮೇಲೆ ಒಂದು ಹಾಳೆಯ ಹಾಗೇ ಇರುತ್ತದೆ. ನದಿಯ ತಳಕ್ಕಿಳಿದರೂ ಈ ಮೈಯ ಗುಣ ಬದಲಾಗುವುದಿಲ್ಲ.

ಹಾಗೇ
ತಿಳಿನೀರ ತಳಕ್ಕೆ ಮುಳುಗಿದರೆ…..
ಖಾಲಿ ಹಾಳೆಯ ಮೇಲೆ
ಹರಿವ ನದಿಯಲ್ಲಿ
ನಾನು,

ಮುಳುಗಿದರೆ ನದಿ, ಹಾಳೆಯ ತಳಕ್ಕೆ;
ನುಂಗಿ ನದಿಯ ಹಾಡು
ಮತ್ತೆ ಬಿಳಿ ಹಾಳೆ
ಖಾಲಿ!

ಈಗ ಇದೇ ನದಿಯ ಮೈಯ ರೂಪಕ ಹಾಡಿಗೂ ಅನ್ವಯವಾಗುತ್ತದೆ. ಹಾಳೆಯ ಮೇಲೆ ಬರೆದ ‘ಹಾಡು’ ಹಾಳೆಯಿಂದೆದ್ದಾಗಲೆ ಹಾಡಾಗುವುದು, ಶಬ್ದ ‘ಶಬ್ದ’ವಾಗುವುದೂ ಕಳಚಿಕೊಂಡಾಗಲೇ! ಆದರೆ ಹಾಗೆನ್ನುವುದೂ ಕೂಡ ಒಂದು ವಿರೋಧಾಭಾಸ.

ಹಾಳೆಯಿಂದೆದ್ದು ಶಬ್ದ,
ಅದರ ಹಿಂದೊಂದು ಶಬ್ದ;

ಶಬ್ದ
ಶಬ್ದಗಳ
ಸರಣಿ

ಗಾಳಿಯಲಿ ತೇಲಿ ಬಿಟ್ಟರೆ…. ಹಾಡು!

ಈಗ
ಹಾಳೆಯ ಮೇಲೆ
ಹಾಡು – ಶಬ್ದ
ಹಾಡು-ನಿಃಶಬ್ದ.

ಮಮತಾ ಅವರ ಕವಿತೆಗಳು ಬಯಸುವ ಓದು ಯಾವ ರೀತಿಯದೆಂಬುದಕ್ಕೆ ಇನ್ನೂ ವ್ಯಕ್ತವಾದ ಸೂಚನೆ ಸಸ್ಯೂರ್‌ನಿಗಾಗಿ ಬರೆದ ಗಾಥೆಯಲ್ಲಿ ಕಾಣಬಹುದು. ಎಲ್ಲರಿಗೂ ಗೊತ್ತಿರುವಂತೆ ಸ್ವಿಸ್ ಭಾಷಾವಿಜ್ಞಾನಿ ಫರ್ಡಿನಾಂಡ್‌ ಸಸ್ಯೂರ್‌ನನ್ನು ಆಧುನಿಕ ಭಾಷಾವಿಜ್ಞಾನದ ಪಿತಾಮಹನೆಂದು ಪರಿಗಣಿಸಲಾಗುತ್ತಿದೆ. ಸಸ್ಯೂರ್ ಸ್ಟ್ರಕ್ಚರಲಿಸಂ ಅಥವಾ ರಚನಾವಾದವನ್ನು ಭಾಷಾವಿಜ್ಞಾನದಲ್ಲಿ ಹುಟ್ಟುಹಾಕಿದವನು. ಒಂದು ಪದದ ಮೌಲ್ಯ ಇತರ ಪದಗಳೊಂದಿಗೆ ಅದು ಯಾವ ರೀತಿಯಲ್ಲಿ ವ್ಯತ್ಯಾಸದಲ್ಲಿದೆ ಎನ್ನುವುದರ ಮೇಲಿದೆ ಎಂಬ ಥಿಯರಿಯನ್ನು ಪ್ರಚುರಪಡಿಸಿದವನು. ಆದ್ದರಿಂದಲೆ, ಫ್ರೆಂಚ್‌ನ arbor ಮತ್ತು ಇಂಗ್ಲೀಷ್‌ನ tree ಎನ್ನುವ ಪದಗಳಿಗೆ ‘ಅರ್ಥ’ ಒಂದೇ ಎಂದು ಹೇಳಲಾಗದು. ಯಾಕಂದರೆ, ಫ್ರೆಂಚ್‌ನ ಪದದ ಅರ್ಥ ಆ ಭಾಷೆಯ ಇತರ ಪದಗಳ ಜತೆ ಯಾವ ರೀತಿಯಲ್ಲಿ ಅದು ಸಂಬಂಧ ತಳೆದಿದೆ ಎನ್ನುವುದನ್ನು ಮತ್ತು ಇಂಗ್ಲೀಷ್ ಪದ ಅದು ಇಂಗ್ಲೀಷ್‌ನ ಇತರ ಪದಗಳ ಜತೆ ಯಾವ ಸಂಬಂಧದಲ್ಲಿ ನಿಂತಿದೆ ಎನ್ನುವುದನ್ನು ಹೊಂದಿಕೊಂಡಿದೆ. ಸಸ್ಯೂರ್ ಕೊಡುವ ಚದುರಂಗದ ಮಣೆಯ ಉದಾಹರಣೆ ಎಲ್ಲರಿಗೂ ಪರಿಚಿತ. ಚದುರಂಗದ ಕಾಯಿಗಳು ಆಯಾ ಕಾಯಿ ಇತರ ಕಾಯಿಗಳಿಂದ ಕಾರ್ಯದಲ್ಲಿ ಯಾವ ರೀತಿ ಭಿನ್ನವಾಗಿದೆ ಎನ್ನುವುದರ ಮೇಲಿಂದ ಅರ್ಥ ಪಡೆಯುತ್ತವೆಯೇ ಹೊರತು ಕಾಯಿಯ ಆಕಾರದಿಂದಲ್ಲ. ಆಕಾರ ಮತ್ತು ಅರ್ಥಕ್ಕಿರುವ ಸಂಬಂಧ ಅನಿಯಂತ್ರಿತ (arbitrary). ಪದಗಳ ಈ ಋಣಾತ್ಮಕ ಮೌಲ್ಯವನ್ನೇ ಡೆರಿಡಾ ‘ಡಿಫರಾನ್ಸ್’ ಎಂದು ಕರೆದಿರುವುದು. ಡೆರಿಡನ ಪ್ರಕಾರ ಒಂದುಪದ ಇತರ ಪದಗಳ ಜತೆಗಿನ ಅದರ ವ್ಯತ್ಯಾಸದಿಂದ ತನ್ನ ಅರ್ಥವನ್ನು ಪಡೆಯಬೇಕಾದ್ದರಿಂದ ಈ ಅರ್ಥವೆನ್ನುವುದು ನಾವು ಸಾಧಾರಣವಾಗಿ ಅಂದುಕೊಂಡಂತೆ ನಿಖರವಾಗಿ ಇರದ, ಯಾವತ್ತೂ ಓಟದಲ್ಲಿದ್ದು ಕೈಗೆ ಎಟಕುವುದೇ ಇಲ್ಲ! ಆದ್ದರಿಂದ ಅರ್ಥದ ಬೆನ್ನು ಹತ್ತಿದ ಮನುಷ್ಯರು ಕೇವಲ ಛಾಯೆಗೆ ಮಾತ್ರ ಬದ್ಧರು.

‘ಮರ’ಕ್ಕೆ ಮರವೆನ್ನದೆ
ಸುಮ್ಮನೆ ಬೇರೇನೋ ಕರೆದಿದ್ದರೆ
‘ಮರ’ ಬೇರೇನೋ ಆಗಿರುತ್ತಿತ್ತು.

ಅದನ್ನು ‘ಆಕಾಶ’ ಎಂದು ಕರೆದಿದ್ದರೆ,
ಅದು ಮೂರಕ್ಷರದ ಮರವಾಗಿ;
ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು.

ಹುಡುಗಿಯರಿಗೆ
ಸುಮ್ಮನೆ ‘ಅವಳು’ ಎಂದು
ಏನೇನೋ ಬೇಕಾದ್ದು ಹೇಳದೆ
ಸರಿಯಾಗಿ ಬೇರೇನೋ ಕರೆದಿದ್ದರೆ;
ಹುಡುಗರು,
ಎಂದೂ ಹೀಗೆ –
ಈಗಿರುವ ಹಾಗೆ ಇರುತ್ತಿರಲಿಲ್ಲ.

ಎನ್ನುವಲ್ಲಿ ಮಮತಾ ಇಡೀ ಪೋಸ್ಟ್ ಸ್ಟ್ರಕ್ಚರಲಿಸಂ ಅರ್ಥಾತ್ ರಚನೋತ್ತರವಾದದ ಸಕಲ ಪರಿಣಾಮಗಳನ್ನೂ ಧ್ವನಿಸಿದ್ದಾರೆಂದು ನನಗನಿಸುತ್ತದೆ. ಹುಡುಗಿಯರಿಗೆ ‘ಅವಳು’ ಅನ್ನುವುದು ಮತ್ತು ಹುಡುಗರಿಗೆ ‘ಅವನು’ ಅನ್ನುವುದು ಕನ್ನಡದಲ್ಲಿ ಅನಿಯಂತ್ರಿತ ಆಯ್ಕೆ, ಆದರೂ ‘ಅವಳು’ ಮತ್ತು ‘ಅವನು’ ಎಂಬ ಲಿಂಗ ವ್ಯತ್ಯಾಸ ನಮ್ಮ ಜೀವನ ದೃಷ್ಟಿಯನ್ನು ಎಷ್ಟೊಂದು ನಿಯಂತ್ರಿಸಿಬಿಟ್ಟಿದೆಯೆಂದರೆ ಅವಳು ಎಂದರೆ ನರ್ಸ್ ಎಂದೂ, ಅವನು ಎಂದರೆ ಡಾಕ್ಟರ್ ಎಂದೂ ಯೋಚನೆಯಿಲ್ಲದೆ ಸಹಜವೆನ್ನುವಂತೆ ಕಲ್ಪಿಸಿಕೊಳ್ಳುತ್ತೇವೆ! ಹೀಗೆ ಅನಿಯಂತ್ರಿತವಾದ ಆಯ್ಕೆಯೊಂದು ನಮ್ಮ ಅರಿವನ್ನು ನಿಯಂತ್ರಿಸತೊಡಗುವುದು ನಿಜಕ್ಕೂ ಆಶ್ಚರ್ಯದ ಸಂಗತಿಯೇ. ಭಾಷೆ ಕೇವಲ ಭಾಷೆಯಾಗದೆ ನಮ್ಮ ಸಾಮಾಜಿಕ ಜೀವನದ ಒಂದು ಬಹು ದೊಡ್ಡ ಶಕ್ತಿಯಾಗುವುದು ಹೀಗೆ.

ಭಾಷೆ ಚಪಾತಿ ಹಿಟ್ಟಿನ ಹಾಗೆ,
ಲಟ್ಟಿಸಿದರೆ, ಗುಂಡಗಿರಬೇಕು
ಅಥವಾ ಮೂರು ಮೂಲೆ,
ಬೇರೆ ಆಕಾರವೇ ಬಾರದು ಅದಕೆ.

(“ಪಾಠ – ಒಂದು, ಎರಡು, ಮೂರು..”)

ಮಮತಾ ಅವರ ಕವಿತೆಗಳು ಭಾಷೆಯನ್ನು ಮತ್ತೆ ಮತ್ತೆ ಪ್ರಶ್ನೆಗೆ ಗುರಿಪಡಿಸುತ್ತ ಅದರ ಮೈಯನ್ನು ನಮಗೆ ಪರಿಚಯ ಮಾಡಿಸಲು ಯತ್ನಿಸುವ ಹಾಗೆ ತೋರುತ್ತದೆ. ಬಹುಶಃ ಈ ರೀತಿಯಲ್ಲಿ ಸದ್ಯದ ತಾತ್ವಿಕ-ವೈಚಾರಿಕ ಪ್ರಣಾಳಿಕೆಯೊಂದನ್ನು ಕಾವ್ಯರೂಪದಲ್ಲಿ ಧ್ವನಿಸಿದ ಇನ್ನೊಂದು ಪ್ರಯತ್ನ ಕನ್ನಡದಲ್ಲಿ ಇಲ್ಲವೆಂದು ತೋರುತ್ತದೆ. ಬಹುಶಃ ಯುವಕವಿಗಳಿಗೆ ಮಮತಾ ಅವರ ಈ ಕವಿತೆಗಳು ಆಕರ್ಷಕವೆನಿಸುವುದರಲ್ಲಿ ಸಂದೇಹವಿರದು.

ಇಷ್ಟು ಹೇಳಿದ ಮೇಲೆ ನನ್ನ ಮನಸ್ಸಿನೊಳಗಿನ ಒಂದು ಸಂದೇಹವನ್ನೂ ಇಲ್ಲಿ ಹೇಳಬೇಕಾಗಿದೆ. ಅದೆಂದರೆ, ಪೋಲಿಶ್ ಕವಿ ಬೆಸ್ಲಾ ಮಿಲೋಝ್ ಒಂದೆಡೆ ಪ್ರಕಟಿಸಿದಂತೆ, ಕವಿ(ತ)ಗೆ ಈ ತರದ ಸ್ಟೋಪಜ್ಞತೆ ಸಲ್ಲುವುದೆ ಎನ್ನುವುದು. ಮಿಲೋಝ್ ಈ ಮಾತನ್ನು ಹೇಳುವುದು ಕವಿ ಮತ್ತು ವಿಮರ್ಶಕರ ನಡುವಿನ ವ್ಯತ್ಯಾಸಕ್ಕೆ ಸಂಬಂಧಿಸಿ. ವಿಮರ್ಶಕ ಎಂದರೆ ವಿದ್ವಾಂಸ, ವಿಮರ್ಶೆಯ ಕಾರ್ಯಕ್ಕೆ ಆತನಿಗೆ ಸಕಲ ವಿದ್ವತ್ತೂ ಬೇಕು. ಆದರೆ ಕವಿಗೆ ಅಂಥ ವಿದ್ವತ್ತು, ಹಾಗೂ ಅದು ಒದಗಿಸಬಹುದಾದ ಸ್ಟೋಪಜ್ಞತೆ, ಒಂದು ತೊಡಕಾಗಲಾರದೆ ಎನ್ನುವುದು ಮಿಲೋಝ್ ಕೇಳುವ ಪ್ರಶ್ನೆ. ಇದರ ಅರ್ಥ ಆಧುನಿಕ ಕವಿ(ತೆ) ಪೂರ್ವದ ‘ಮುಗ್ಧತೆ’ಗೆ ವಾಪಸಾಗಬೇಕು ಎಂದಲ್ಲ – ಅಂಥ ಮರಳುವಿಕೆ ಸಾಧ್ಯವೂ ಇಲ್ಲ. ಆದರೂ, ಕವಿತೆಯ ಕಾರಣ ಯಾವುದೇ ಪ್ರಣಾಳಿಕೆಯ ಪ್ರಕಟಣೆಯಲ್ಲ – ಅದು ತಾತ್ವಿಕವಾಗಿರಲಿ, ಸಾಮಾಜಿಕವಾಗಿರಲಿ, ಹಾಗೂ ಎಷ್ಟೇ ಜರೂರಿನದ್ದಾಗಿರಲಿ! ತನ್ನ ಕಾಲದಲ್ಲಿ ಬೃಹತ್ತಾದ ರಾಜಕೀಯ ಕ್ರಾಂತಿಗಳು ನಡೆಯುತ್ತಿದ್ದಾಗಲೂ, ಹಾಗೂ ಆ ಕ್ರಾಂತಿಗಳ ಕುರಿತು ತನಗೆ ಒಲವಿದ್ದಾಗಲೂ, ಇಂಗ್ಲೆಂಡಿನ ಕವಿ ವರ್ಡ್ಸ್‌ವರ್ತ್ ಅದೊಂದೂ ನಡೆಯಲೇ ಇಲ್ಲ ಎನ್ನುವ ರೀತಿಯಲ್ಲಿ ಶ್ರೇಷ್ಠವಾದ ಕವಿತೆಗಳನ್ನು ರಚಿಸಿದ ಎನ್ನುವುದು ಕವಿತೆಯ ಒಳದೃಷ್ಟಿಯಿಂದ ಬಹಳ ಮುಖ್ಯವಾದ ಸಂಗತಿ! ಆತ ತನ್ನ ಕಾಲದ ವಿದ್ಯಮಾನಗಳಿಗೆ ‘ನೈಸರ್ಗಿಕರಣ’ದ ಮೂಲಕವೆ ಸ್ಪಂದಿಸಿದ ರೀತಿ ಕಾವ್ಯಮೀಮಾಂಸೆಯ ದೃಷ್ಟಿಯಿಂದ ಅತ್ಯಂತ ಕುತೂಹಲ ಕರವಾದ್ದು. ಸಾಮಾಜಿಕವಾಗಿ ಹಾಗೂ ತುರ್ತಾಗಿ ತಾನು ಸಲ್ಲಬೇಕೆನ್ನುವ ಕವಿಗಳ ಆತುರದ ಬಗ್ಗೆ ಮಾತ್ರ ನಾನಿದನ್ನು ಹೇಳುತ್ತಿದ್ದೇನೆ. ಈ ಆತುರ ಕೂಡ ಬಹುಶಃ ಒಂದು ಸಾಮಾಜಿಕ ಉತ್ಪತ್ತಿ ಇರಬೇಕು! ಪ್ಲೇಟೋನ ಕಾಲದಿಂದಲೂ ಕವಿಯ ಸಾಮಾಜಿಕ ಕಾಳಜಿ ಹಾಗೂ ಉಪಯೋಗ ಪ್ರಶ್ನೆಗೆ ಗುರಿಯಾಗಿರುವುದನ್ನು ಕವಿಗಳು ಎಂದೂ ಮರೆತಿರಲಿಕ್ಕಿಲ್ಲ! ಕವಿ ತಾನೂ ಉತ್ತಮ ನಾಗರಿಕ ಎಂದು ತೋರಿಸಿಕೊಡುವ ಆತುರದಲ್ಲಿ ತಿಳಿಯದೆಯೆ ಕಾವ್ಯಕ್ಕೆ ಅನ್ಯಾಯ ಮಾಡಬಹುದು.

ಆದ್ದರಿಂದಲೆ, ಕೊನೆಗೂ ‘ಸಾಮಾನ್ಯ’ ಓದುಗರಿಗೆ ಮಮತಾರವರ “ನಾವಿಲ್ಲದೂರು” ಮತ್ತು “ಪಾರಿಜಾತದ ಪ್ರೀತಿ”ಯಂಥ ಕವಿತೆಗಳೇ ಇಷ್ಟವಾಗಬಹುದೆಂದು ನನಗನಿಸುತ್ತದೆ. ಈ ‘ಸಾಮಾನ್ಯ’ ಓದುಗರಲ್ಲಿ ನಾನೂ ಸೇರಿದ್ದೇನೆ ಎಂಬುದನ್ನು ಕೂಡ ಇಲ್ಲಿ ಹೇಳಿಬಿಡುವೆ. ಮತ್ತು ಮಮತಾರವರ ಈ ಸಂಕಲನದಲ್ಲಿ ನನಗಿಷ್ಟವಾಗುವ ಇಂಥ ಇನ್ನಷ್ಟು ಕವಿತೆಗಳಿವೆ ಎನ್ನುವುದು ನನಗೆ ಸಮಾಧಾನದ ಸಂಗತಿ. ಈ ಕವಿತೆಗಳೇ ಯಾಕೆ ಇಷ್ಟವಾಗಬೇಕು ಎನ್ನುವುದು ನಿಜಕ್ಕೂ ಕುತೂಹಲದ ಸಂಗತಿ. ಅಡಿಗರು ಅನ್ನುವ ವ್ಯಾಕರಣಬದ್ಧತೆ ಮತ್ತು ಶರ್ಮರು ಬಯಸುವ ಲಯ ಎರಡೂ ಇಲ್ಲಿ ಇವೆಯೆನ್ನುವುದು ನಿಜ. ಆದರೆ ಇಷ್ಟಕ್ಕೆ ಬರಹ ಕಾವ್ಯವಾಗುವುದು ಸಾಧ್ಯವಿಲ್ಲ. ಕಾವ್ಯದ ಭ್ರಮೆಯೇ ಕಾವ್ಯವಲ್ಲ. ಈ ಕವಿತೆಗಳಲ್ಲಿನ ‘ಒಳಧ್ವನಿ’ಯ ಕಾರಣಕ್ಕಾಗಿ ಬಹುಶಃ ನನಗಿವು ಇಷ್ಟವಾದುವು ಎಂದು ತೋರುತ್ತದೆ. ಈ ಕವಿತೆಗಳು ನನ್ನೊಳಗಿನ ನನ್ನ ಜತೆ ಮಾತಾಡುತ್ತವೆ. ಈ ಕುರಿತು ಇನ್ನಷ್ಟು ಜಿಜ್ಞಾಸೆ ಸಾಧ್ಯ. ಆದರೆ ಅದನ್ನು ಓದುಗರಿಗೆ, ವಿಮರ್ಶಕರಿಗೆ ಬಿಡುವುದು ಒಳ್ಳೆಯದು!
******

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.