ರಾಗ — ಮುಖಾರಿ
ತಾಳ — ಛಾಪು
ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ |
ಭ್ರಷ್ಟಮಾನವ ಹಣೆಯಬರಹವಲ್ಲದೆ ಇಲ್ಲ ||ಪ||
ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ |
ಪರಿಪರಿಯಲಿ ವಿದ್ಯೆ ಕಲಿತರಿಲ್ಲ ||
ನರಿಯ ಬುದ್ಧಿಯಲಿ ನಡೆದುಕೊಂಡರು ಇಲ್ಲ |
ಅರಿಯದೆ ಹಲವ ಹಂಬಲಿಸಿದರಿಲ್ಲ ||೧||
ಕೊಂಡೆಗಾರಿಕೆಯನ್ನು ಹೇಳಿ ನಡೆದರಿಲ್ಲ |
ಕಂಡಕಂಡವರಿಗೆ ಕೈಮುಗಿದರಿಲ್ಲ ||
ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ ಪ್ರ – |
ಚಂಡನಾದರೂ ಇಲ್ಲ ಪರಿಹಾಸ್ಯವಲ್ಲ ||೨||
ಕಟ್ಟಾಳು ಕಡುಜಾಣನಾಗಿ ಪುಟ್ಟಿದರಿಲ್ಲ |
ಬೆಟ್ಟಗಳನು ಕಿತ್ತಿ ಇಟ್ಟರಿಲ್ಲ ||
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ |
ಕೊಟ್ಟವರಿಗೆ ಉಂಟು ಕೊಡದವರಿಗೆ ಇಲ್ಲ ||೩||
*****