ಗಳಗನಾಥರು ಬೆಚ್ಚಿಬಿದ್ದರು!
ಯಾವತ್ತಿನ ಹಾಗೆ ಕನ್ನಡಿಯ ಮುಂದೆ ಹೋಗಿ ನಿಂತ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸಲಿಲ್ಲ. ಕಣ್ಣು ಮಂಜಾಗಿದೆ ಅನ್ನಿಸಿ ಹೊಸಕಿಕೊಂಡು ನೋಡಿದರು. ಆದರೂ ಪ್ರತಿಬಿಂಬ ಕಾಣಿಸಲಿಲ್ಲ. ಗಾಬರಿಯಿಂದ ಕಿಟಕಿಯಾಚೆ ನೋಡಿದರು. ಹೊರಗೆ ದೂರದಲ್ಲಿ ಸ್ವಸ್ಥ ನಿಂತ ಗುಡ್ಡ, ಅದರ ತುತ್ತತುದಿಯಲ್ಲಿ ಯಾರ ಹಂಗಿಲ್ಲದೆ ಬೆಳೆದ ತಾಳೆಮರ, ಅದರ ಬುಡದಲ್ಲಿ ಚೌಡೇಶ್ವರಿಯ ಗುಡಿ, ಬೆಟ್ಟದ ತಡಿಯಲ್ಲಿ ನಸುಕಂದುಬಣ್ಣದ ಹೂಮುಡಿದ ರೆಂಜೆ ಮರ, ಅದರ ಬುಡದಲ್ಲಿ ಹರಿಯುತ್ತಿರುವ ಹೆಸರಿಲ್ಲದ ಹಳ್ಳ… ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು.
ಮತ್ತೆ ಕನ್ನಡಿ ನೋಡಿಕೊಂಡರು. ಕನ್ನಡಿ ಕಣ್ಣಿಗೆ ಬಿತ್ತು;ಕನ್ನಡಿಯೊಳಗೆ ಗಳಗನಾಥರಿರಲಿಲ್ಲ. ಎಡವನ್ನು ಬಲಮಾಡಿ, ಬಲವನ್ನು ಎಡಮಾಡಿ ತೋರಿಸುವ ಕನ್ನಡಿ ಆವತ್ತು ತನ್ನ ಮುಂದೆ ಗಳಗನಾಥರು ನಿಂತೇ ಇಲ್ಲವೇನೋ ಎಂಬಂತೆ ನಿರ್ಲಿಪ್ತವಾಗಿದ್ದೇಕೆ ಅನ್ನುವುದು ಗಳಗನಾಥರನ್ನು ಕಾಡತೊಡಗಿತು. ಕೈಯೆತ್ತಿದ್ದರು, ಹೆಗಲಿಗೆ ಹಾಕಿಕೊಂಡಿದ್ದ ಬೈರಾಸನ್ನು ಕನ್ನಡಿ ಮುಂದೆ ಹಿಡಿದರು, ಒಂದು ಹೆಜ್ಜೆ ಹಿಂದೆ ನಿಂತು ಕನ್ನಡಿಯಲ್ಲಿ ಬೇರೇನಾದರೂ ಕಾಣುತ್ತದಾ ನೋಡಿದರು.
ಗಳಗನಾಥರೊಬ್ಬರನ್ನು ಬಿಟ್ಟು ಕನ್ನಡಿ, ಎಲ್ಲವನ್ನೂ ಪ್ರತಿಫಲಿಸುತ್ತಿತ್ತು. ಬಾಗಿದಾಗ ಹೆಂಚು ಹೊದೆಸಿದ ಮಾಡು, ವಾರೆಯಾಗಿ ನೋಡಿದಾಗ ಮೂಲೆಯಲ್ಲಿದ್ದ ಮಂಚ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿತ್ತು. ಕನ್ನಡಿ ಯಾಕೋ ತನ್ನನ್ನು ಹಿಡಿದಿಡಲು ಹಿಂಜರಿಯುತ್ತಿದೆ ಅನ್ನಿಸಿ ಗಳಗನಾಥರಿಗೆ ಅವಮಾನವಾಯಿತು.
ಅಷ್ಟಕ್ಕೂ ತಾನೇನು ಮಾಡಿದ್ದೇನೆ ಅಂತ ಗಳಗನಾಥರು ಕನ್ನಡಿ ಮುಂದೆ ನಿಂತೇ ಯೋಚಿಸತೊಡಗಿದರು. ಒಳಗೆ ಹೆಂಡತಿ ಅಡುಗೆಯ ಸಿದ್ಧತೆಯಲ್ಲಿದ್ದವಳು ಮೂರನೆಯ ಮಗಳಿಗೆ ದಬದಬ ಬಡಿಯುತ್ತಿದ್ದಳು. ಮೊದಲ ಮಗಳು ಕಾಲೇಜಿಗೆ ಹೊರಡಲು ಸಿದ್ಧಳಾಗುತ್ತಾ ಗಳಗನಾಥರು ಕ್ಷೌರ ಮುಗಿಸಿ ಕನ್ನಡಿ ಬಿಟ್ಟೇಳುವುದನ್ನೇ ಕಾಯುತ್ತಿದ್ದಳು. ಗಳಗನಾಥರು ಅನುಮಾನದ ಪ್ರಾಣಿಯಂತೆ ಮತ್ತೆ ಮತ್ತೆ ಕನ್ನಡಿ ನೋಡುವುದನ್ನು ನೋಡಿ ಬೇಜಾರಾಗಿ ‘ ಸಾಕು, ಬಾರಪ್ಪಾ, ನಾನು ಕಾಲೇಜಿಗೆ ಹೊರಡಬೇಕು’ ಅನ್ನುತ್ತಾ ಅವರನ್ನು ಪಕ್ಕಕ್ಕೆ ಕರೆದಳು.
ಗಳಗನಾಥರು ಮಗಳು ಮೇಕಪ್ಪು ಮಾಡಿಕೊಳ್ಳುವುದನ್ನು ದೂರ ನಿಂತು ಗಮನಿಸಿದರು. ಅವಳಿಗೆ ಅವಳ ಪ್ರತಿಬಿಂಬ ಕಾಣುತ್ತಿದೆ ಅನ್ನುವುದು ಅವಳ ಭಾವಭಂಗಿಯಿಂದಲೇ ತಿಳಿಯುತ್ತಿತ್ತು. ತುಟಿಯನ್ನು ಅಗಲಿಸಿ ಲಿ?ಸ್ಟಿಕ್ಕು ಮೆತ್ತಿಕೊಂಡು ಆಮೇಲೆ ಎರಡೂ ತುಟಿಯನ್ನು ಒತ್ತಿಕೊಂಡು ತುಟಿಯಾಚೆಗೆ ಸರಿದ ಲಿ?ಸ್ಟಿಕ್ಕನ್ನು ಟವಲಿನ ಚುಂಗಿನಿಂದ ವರೆಸಿಕೊಂಡು ಕಣ್ಣನ್ನು ವಿಕಾರ ಮಾಡಿ ಕಣ್ಕಪ್ಪು ಹಚ್ಚಿಕೊಂಡು ಮುಂಗುರುಳು ತೀಡಿಕೊಳ್ಳುತ್ತಾ ಇದ್ದ ಮಗಳನ್ನು ಕನ್ನಡಿ ಕಣ್ತುಂಬಿಕೊಂಡಿದೆ. ಹಾಗಿದ್ದರೆ ಆಗ ತಾನು ಕನ್ನಡಿ ನೋಡಿದ್ದೇ ಸುಳ್ಳಿರಬೇಕು. ಅದು ತನ್ನನ್ನು ನಿರಾಕರಿಸಿದ್ದೇ ಸುಳ್ಳಿರಬೇಕು. ನೋಡಿಯೇ ಬಿಡೋಣ ಅಂತ ಗಳಗನಾಥರು ಛಂಗನೆ ಕನ್ನಡಿ ಮುಂದೆ ಜಿಗಿದರು. ಅವರು ಜಿಗಿದ ರಭಸಕ್ಕೆ ಕನ್ನಡಿ ಮುಂದೆ ನಿಂತಿದ್ದ ಮಗಳು ಅನಾಮತ್ತಾಗಿ ಪಕ್ಕಕ್ಕೆ ಸರಿದು ಅಪ್ಪನನ್ನು ಗದರಿಕೊಂಡಳು.
ಗಳಗನಾಥರಿಗೆ ಕನ್ನಡಿಯೊಳಗೆ ಗಳಗನಾಥರು ಕಾಣಿಸಲಿಲ್ಲ.
ಅಪ್ಪ ಇವತ್ಯಾಕೆ ಇಷ್ಟು ಹೊತ್ತು ಕನ್ನಡಿ ಮುಂದೆ ನಿಂತಿದ್ದಾರೆ ಅಂತ ಅಚ್ಚರಿಪಡುತ್ತಾ ಮಗಳು ಅಪ್ಪನ ಮುಖ ನೋಡುತ್ತಲೇ ಗಾಬರಿಯಾದಳು. ‘ಇದ್ಯಾಕಪ್ಪಾ ನಿನ್ನ ಮುಖ ಹಾಗಾಗಿದೆ. ರಾತ್ರಿ ನಿದ್ದೆ ಮಾಡಿಲ್ವಾ. ಕಣ್ಣು ನೋಡು, ಎಷ್ಟೊಂದು ಕೆಂಪಗಿದೆ’ ಅಂದಳು. ಗಳಗನಾಥರಿಗೆ ಮತ್ತಷ್ಟು ಗಾಬರಿಯಾಯಿತು. ‘ಯಾಕೇ, ಏನಾಗಿದ್ಯೇ’ ಅಂತ ಕೇಳಿದರು ಗಳಗನಾಥರು. ‘ನಂಗೆ ನೋಡೋಕ್ಕಾಗಲ್ಲ… ನೀವೇ ಒಂದ್ಸಾರಿ ಕನ್ನಡೀಲಿ ಮುಖ ನೋಡ್ಕೊಳ್ಳೀಪ್ಪಾ’ ಎನ್ನುತ್ತಾ ಮಗಳು ಪುಸ್ತಕ ಹಿಡಕೊಂಡು ಬೀದಿಗೆ ಬಿದ್ದಳು.
*
*
*
ಆವತ್ತಿಡೀ ಗಳಗನಾಥರನ್ನು ಕನ್ನಡಿ ಕಾಡಿತು. ಎದುರಿಗೆ ಸಿಕ್ಕವರೆಲ್ಲ ‘ಇದೇನು ಹೀಗಾಗಿಹೋಗಿದ್ದೀರಿ, ಆರೋಗ್ಯ ಸರಿಯಿಲ್ವೇ’ ಅಂತ ಕೇಳಿ ಕೇಳಿ ಸತಾಯಿಸಿದರು. ಹೇಗಾಗಿದ್ದೀನಿ ಅಂತ ನೋಡಿಕೊಳ್ಳಲು ಕನ್ನಡಿ ಮುಂದೆ ನಿಂತರೆ ಕನ್ನಡಿಯಲ್ಲಿ ತನ್ನ ಮುಖ ಮಾತ್ರ ಕಾಣಿಸುತ್ತಿರಲಿಲ್ಲ. ಮನೆಯ ಕನ್ನಡಿಯೊಂದೇ ತನಗೆ ಕೈಕೊಟ್ಟಿರಬೇಕು ಅಂದುಕೊಂಡು ಗಳಗನಾಥರು ತಾನು ಸಾಮಾನ್ಯವಾಗಿ ಹೋಗುವ ಗೋವಿಂದನ ಕ್ಷೌರದಂಗಡಿಗೆ ಹೋದರು. ಗೋವಿಂದ ಅಂಗಡಿ ತುಂಬ ಕನ್ನಡಿಗಳನ್ನು ಇಟ್ಟಿದ್ದ. ಒಂದು ಮುಖವನ್ನು ಹತ್ತಾಗಿ ಇಪ್ಪತ್ತಾಗಿ ತೋರಿಸುವಂತೆ ಅವುಗಳನ್ನು ಜೋಡಿಸಿದ್ದ.
ಕ್ಷೌರದಂಗಡಿಗೆ ಹೋಗುತ್ತಲೆ ಅವರನ್ನು ಕುರ್ಚಿಯಲ್ಲಿ ಕೂರಿಸಿಯೇ ಬಿಟ್ಟ ಗೋವಿಂದ. ಗಳಗನಾಥರು ಮತ್ತೊಮ್ಮೆ ಬೆಚ್ಚಿಬಿದ್ದರು. ಅವರಿಗೆ ಖಾಲಿ ಖುರ್ಚಿ ಕಾಣುತ್ತಿತ್ತೇ ವಿನಃ ಅದರಲ್ಲಿ ಕೂತ ಗಳಗನಾಥರು ಕಾಣಿಸಲಿಲ್ಲ. ತಲೆಯ ಮೇಲ್ಗಡೆ ಗೋವಿಂದನ ಕತ್ತರಿ ಆಡುವ ಸದ್ದು ಕೇಳಿಸುತ್ತಿತ್ತು. ಮೈಮೇಲೆ ಕತ್ತರಿಸಿದ ಕೂದಲು ಬೀಳುತ್ತಿತ್ತು. ಆದರೆ ಕನ್ನಡಿ ಮೌನವಾಗಿತ್ತು. ಕನ್ನಡಿ ತನ್ನ ಮೇಲೆ ಯಾಕೋ ಮುನಿಸಿಕೊಂಡಿದೆ ಅನ್ನಿಸಿ ಗಳಗನಾಥರಿಗೆ ಒಂಥರದ ಭಯ ಕಾಡತೊಡಗಿತು. ಇದ್ದಕ್ಕಿದ್ದ ಹಾಗೆ ತಾನು ನಿಜವಾಗಿಯೂ ಇದ್ದೇನೋ ಇಲ್ಲವೋ ಅನ್ನುವ ಅನುಮಾನ ಕಾಡತೊಡಗಿತು. ತಲೆಬಗ್ಗಿಸಿ ತಮ್ಮ ಕೈಕಾಲುಗಳನ್ನೂ ಹೊಟ್ಟೆಯನ್ನೂ ನೋಡಿಕೊಂಡರು. ಗೋವಿಂದ ತಲೆಯನ್ನು ಹಿಂದಕ್ಕೆ ಹಿಡಿದೆತ್ತಿ ಕತ್ತರಿಸತೊಡಗಿದ.
ಗೋವಿಂದನಿಗೆ ಕಾಸು ಕೊಟ್ಟು ಹೊರಬಂದಾಗ ಗಳಗನಾಥರಿಗೆ ಎಂಥ ಅನಾಥಪ್ರಜ್ಞೆ ಕಾಡತೊಡಗಿತು ಅಂದರೆ ಇಡೀ ಜಗತ್ತಿನಲ್ಲಿ ತಾನು ಯಾರಿಗೂ ಕಾಣಿಸುತ್ತಿಲ್ಲವೇನೋ ಅನ್ನುವ ಅನುಮಾನ ಕಾಡತೊಡಗಿತು. ಇಂಥ ಸಮಸ್ಯೆ ಯಾರಿಗಾದರೂ ಎದುರಾಗಿದೆಯಾ? ಡಾಕ್ಟರ ಹತ್ತಿರ ಹೋದರೆ ಇದಕ್ಕೆ ಔಷಧಿ ಸಿಗಬಹುದಾ? ಇದು ಕಣ್ಣಿನ ದೋಷವೋ ಕನ್ನಡಿಯ ದೋಷವೋ?
ಅದೇ ಹೊತ್ತಿಗೆ ಅವರಿಗೆ ಶಾಸ್ತ್ರಿಗಳು ನೆನಪಾದರು. ಶಾಸ್ತ್ರಿ ಮಹಾ? ಪಂಡಿತರು. ಆಯುರ್ವೇದ ಮತ್ತು ಜ್ಯೋತಿಷ್ಯಶಾಸ್ತ್ರ ಎರಡನ್ನೂ ಬಲ್ಲವರು. ಅವರ ಬಳಿಗೆ ಸ್ನಾನ ಮಾಡದೇ ಹೋಗುವಂತಿರಲಿಲ್ಲ. ಗಳಗನಾಥರು ಓಡೋಡಿ ಮನೆಗೆ ಬಂದು ಸ್ನಾನ ಮುಗಿಸಿದರು. ಸ್ನಾನ ಮಾಡುವ ಹೊತ್ತಿಗೆ ನೀರ ಹಂಡೆಯಲ್ಲಾದರೂ ತನ್ನ ಮುಖ ಕಂಡೀತು ಅಂತ ಹಾರೈಸಿದರು; ಹಂಡೆಯ ನೀರು ಕಂಪಿಸುತ್ತಿತ್ತು. ಅದರೊಳಗೆ ಯಾರ ಮುಖವೂ ಇರಲಿಲ್ಲ.
*
*
*
ಶಾಸ್ತ್ರಿಗಳ ಹತ್ತಿರ ಗಳಗನಾಥರು ತಮ್ಮ ಸಮಸ್ಯೆಯನ್ನೇನೂ ಹೇಳಿಕೊಳ್ಳಲಿಲ್ಲ. ಕನ್ನಡಿಯಲ್ಲಿ ಮುಖ ಕಾಣುವುದಿಲ್ಲ ಅನ್ನುವುದನ್ನು ಹೇಳಿಕೊಳ್ಳುವುದು ಹೇಗೆ ಅನ್ನುವ ಪ್ರಶ್ನೆಗಿನ್ನೂ ಅವರಿಗೆ ಉತ್ತರ ಸಿಕ್ಕಿರಲಿಲ್ಲ. ಹೀಗೆ ತಮ್ಮ ಕೆಮ್ಮು, ಬೆನ್ನು ನೋವುಗಳ ಬಗ್ಗೆ ಮಾತಾಡಿದರು. ಮೊದಲನೆ ಮಗಳಿಗೆ ಯಾವ ಕಡೆಯ ಗಂಡು ಸಿಗಬಹುದು ಅಂತ ವಿಚಾರಿಸಿದರು.
ಕೊನೆಯಲ್ಲಿ ಎದ್ದು ಬರುವಾಗ ಗಳಗನಾಥರು ಕೇಳಿಯೇಬಿಟ್ಟರು.‘ಶಾಸ್ತ್ರಿಗಳೇ. ಮೊನ್ನೆ ನಮ್ಮ ಹಳೆಯ ಪರಿಚಯದ ಒಬ್ಬರು ಸಿಕ್ಕರು. ಅವರದ್ದೊಂದು ವಿಚಿತ್ರ ಸಮಸ್ಯೆ. ಕನ್ನಡಿ ಮುಂದೆ ನಿಂತರೆ ಅವರಿಗೆ ಅವರ ಮುಖ ಕಾಣಿಸೋದಿಲ್ಲವಂತೆ’ ಅಂದರು.
ಶಾಸ್ತ್ರಿಗಳು ಒಂಚೂರೂ ಯೋಚಿಸದೇ ಹೇಳಿದರು; ‘ಆ ಹೊತ್ತಿಗೆ ಅದು ಹಾಗೇ’ ಎನ್ನುತ್ತಾ ಶಾಸ್ತ್ರಿಗಳು ಎದ್ದು ಒಳಗೆ ಹೋದರು.
ಆ ಹೊತ್ತಿಗೆ ಅಂದರೆ ಯಾವ ಹೊತ್ತಿಗೆ? ಸಾಯುವ ಕಾಲಕ್ಕೆ ಎಂದಿರಬಹುದೇ? ಸತ್ತ ಮೇಲೆ ಈ ದೇಹ ಇರುವುದಿಲ್ಲವಂತೆ. ಮನಸ್ಸು ಮಾತ್ರ ಓಡಾಡುತ್ತಾ ಇರುತ್ತದಂತೆ. ಹಾಗಿದ್ದರೆ ತಾನು ಸತ್ತು ಹೋಗಿರಬಹುದೇ? ಹಾಗಿದ್ದರೆ ಬೇರೆಯವರಿಗೆ ಯಾಕೆ ಕಾಣಿಸುತ್ತಿದ್ದೇನೆ? ಅವರ ಪಾಲಿಗೆ ಬದುಕಿ, ತನ್ನ ಪಾಲಿಗೆ ಸತ್ತು ಹೋಗಿದ್ದೇನಾ?
ಹಾಗಾಗಲು ಸಾಧ್ಯವೇ? ಇನ್ನೊಬ್ಬರಿಗಷ್ಟೇ ಯಾರಾದರೂ ಬದುಕಿರುತ್ತಾರಾ? ಹಾಗಿದ್ದರೆ ನನಗಷ್ಟೇ ಬದುಕಿದ್ದು, ಇನ್ನೊಬ್ಬರ ಪಾಲಿಗೆ ಸತ್ತಂತಿದ್ದರೆ ನಾನು ನನಗೆ ಮಾತ್ರ ಕಾಣಿಸುತ್ತೇನಾ?
ಗಳಗನಾಥರು ಯೋಚಿಸುತ್ತಲೇ ಮನೆಗೆ ಬಂದರು. ಕೊನೆಯ ಬಾರಿಗೆ ಕನ್ನಡಿ ಮುಂದೆ ನಿಂತು ಮುಖ ನೋಡಿಕೊಳ್ಳುತ್ತೇನೆ. ಬಹುಶಃ ಈಗ ಕಾಣಿಸಿದರೂ ಕಾಣಿಸಬಹುದು ಅಂತ ಆಶೆಪಟ್ಟರು. ಅಂಗಳಕ್ಕೆ ಬಂದು ಕಾಲುತೊಳೆದು ಬಾಗಿಲು ತಟ್ಟಿದರು. ಬಾಗಿಲು ತೆರೆದುಕೊಂಡಿತು.
ನೇರವಾಗಿ ಒಳಗೆ ಹೋಗಿ ಕನ್ನಡಿ ಮುಂದೆ ನಿಂತರು. ಕನ್ನಡಿಯೊಳಗೆ ಯಾರೂ ಕಾಣಿಸಲಿಲ್ಲ. ಮತ್ತೆ ಮತ್ತೆ ದಿಟ್ಟಿಸಿನೋಡಿದರೆ ಅದರೊಳಗೆ ನಿಧಾನವಾಗಿ ಹೆಂಡತಿಯ ಮುಖ ಕಾಣಿಸಿತು.
ಗಳಗನಾಥರು ತಿರುಗಿ ನೋಡಿದರು. ಆಗಷ್ಟೇ ಸ್ನಾನಮುಗಿಸಿ ಒದ್ದೆ ಕೂದಲಿಗೊಂದು ಟವ್ ಕಟ್ಟಿಕೊಂಡು ಕುಂಕುಮ ಇಡುತ್ತಾ ಹೆಂಡತಿ ನಿಂತಿದ್ದಳು. ಎದುರಿಗೇ ನಿಂತ ತನ್ನನ್ನು ನೋಡಿದರೂ ನೋಡದ ಹಾಗೆ ಸುಮ್ಮನಿದ್ದವಳನ್ನು ಕಂಡು ಗಳಗನಾಥರಿಗೆ ಗಾಬರಿಯಾಯಿತು. ಏನೋ ಹೇಳಲು ಯತ್ನಿಸಿದರು. ಏನೂ ಹೇಳಲಿಲ್ಲ ಅನ್ನಿಸಿತು.
ಹೆಂಡತಿ ಒದ್ದೆ ಕೂದಲನ್ನು ಬಿಚ್ಚಿ ಹರವಿಕೊಳ್ಳುತ್ತಾ ಮಗಳನ್ನು ಕೇಳಿದಳು;
ಅಪ್ಪ ಎಲ್ಲಿಗೆ ಹೋಗ್ತೀನಿ ಅಂದ್ರು?
ಮಗಳು ಒಬ್ಬಳೇ ಕೂತು ಚೌಕಾಭಾರ ಆಡುತ್ತಿದ್ದವಳು;
‘ನಂಗೊತ್ತಿಲ್ಲ’ ಅಂದಳು.
*****