ಬಂಗಾಲಿ ಮೂಲ ಲೇಖಕರು : ಅರುಣಕುಮಾರ್ ಚಟರ್ಜಿ ಕನ್ನಡಕ್ಕೆ: ಸುಮತೀಂದ್ರ ನಾಡಿಗ್
ಪೃಥ್ವಿ ಹುಟ್ಟಿದಾಗಿನಿಂದಲೂ ದಕ್ಷಿಣ ಸಮುದ್ರದ ಕಪ್ಪು ನೀಲಜಲ ಬೆಟ್ಟದ ತಪ್ಪಲಿಗೆ ಬಡಿಯುತ್ತಲೇ ಇದೆ. ಬೆಟ್ಟದ ಸಂದು ಸಂದುಗಳಲ್ಲಿ ನೀರು ನಿಂತ ಕಡೆ ಪಚ್ಚೆಯ ಮೊಸಾಯಿಕ್‌ನ ಹಾಗೆ ಪಾಚಿ ಬೆಳೆದಿದೆ. ಅಲ್ಲೊಬ್ಬ ಮನುಷ್ಯ ಒಂದು ಮರದ ಮೇಲಿದ್ದ ಒಂದು ಹಿಡಿ ಪಾಚಿಯನ್ನು ತೆಗೆದುಕೊಂಡು, ಅದರ ಜೊತೆಗೆ ಒಂದಿಷ್ಟು ಸಮುದ್ರದ ನೊರೆಯನ್ನು ಸೇರಿಸುತ್ತಾನೆ. ಸಮುದ್ರ, ಬೆಟ್ಟದ ಕಾಲನ್ನು ಮುಟ್ಟುವ ಜಾಗದಿಂದಲೇ ಕಾಡು ಶುರುವಾಗುತ್ತದೆ. ದಟ್ಟವಾದ, ವಿಸ್ತಾರವಾದ ಹಸಿರುಕಾಡಿನ ಸೃಷ್ಟಿ ದಕ್ಷಿಣ ದೇಶಕ್ಕೆ ಅಗಸ್ತ್ಯ ಬಂದಾಗ ಆದದ್ದು. ಆಗ ವಿಂಧ್ಯಪರ್ವತ ತಲೆಬಗ್ಗಿಸಿ ಎಷ್ಟು ವರ್ಷಗಳು ಆದವೊ ಏನೊ? ಈ ಕಾಡಿನ ಮರಗಳು ಅವನ ಸ್ಥಾವರ ಸಂತತಿ. ಈ ಹಸಿರುಮಕ್ಕಳು ಎಣಿಕೆಗೆ ಸಿಕ್ಕದ ಕಾಲನ ಸಂಗಾತಿಗಳು; ಬಿರಿಗಾಳಿಗಳನ್ನೂ ಮತ್ತು ಬರಗಾಲಗಳನ್ನೂ ಎದುರಿಸಿದ್ದಾರೆ. ಈ ವೃಕ್ಷಗಳಿಗೆ ಇದನ್ನು ಬೆಳೆಸಿದ ಮನುಷ್ಯ ‘ಅಶಿರಾ’ ಎಂದು ನಾಮಕರಣ ಮಾಡಿದ್ದ. ರಾತ್ರಿಯ ಬಿರುಗಾಳಿಯಲ್ಲಿ ಕೈಮುರಿದ ಒಬ್ಬ ‘ಅಶಿರಾ’ ನಿಂತಿದ್ದಾನೆ. ರೆಂಬೆ-ಕೊಂಬೆಗಳೇ ಅವನ ಕೈಗಳು. ಅಲ್ಲಿದ್ದ ಮನುಷ್ಯ ‘ಅಶಿರಾ’ನ ಮುರಿದಿದ್ದ ಕೊಂಬೆಗೆ ಪಾಚಿಯನ್ನು ಮತ್ತು ನೊರೆಯನ್ನು ಸವರುತ್ತಾನೆ. ಅವನೇ ಆ ವೃಕ್ಷಗಳ ಸಾಕುತಂದೆ. ಚಲಿಸಲಿಕ್ಕಾಗದ ಹಸಿರು ವೃಕ್ಷಗಳ ಈ ಪ್ರದೇಶದಲ್ಲಿ ಅವನೊಬ್ಬನೇ ಚಲಿಸುವವನು. ತನ್ನ ಕೈಯ್ಯಾರೆ ಬೆಳೆಸಿದ ಸಸ್ಯ – ಶಿಶುಗಳಿಗೆ ಅವನೇ ಆರೈಕೆ ಮಾಡುತ್ತಾನೆ. ಅವುಗಳನ್ನು ನೇವರಿಸುತ್ತಾನೆ, ಪ್ರೀತಿಸುತ್ತಾನೆ. ಹಸಿರು ಶಿಶುಗಳು ಎಲೆತುಂಬಿದ ಕೊಂಬೆಗಳನ್ನು ಆಡಿಸುತ್ತ ಅವನ ಜೊತೆ ಆಟವಾಡುತ್ತದೆ. ಹಿರಿಯ ವೃಕ್ಷ ಸಂತತಿಗಳು ಛತ್ರಿಯ ಹಾಗೆ ಕೊಂಬೆಗಳನ್ನು ಎತ್ತಿ ಹಿಡಿದು ಕಠಿಣವಾದ ಬಿಸಿಲಿನಿಂದ ಅವನನ್ನು ರಕ್ಷಿಸುತ್ತಾರೆ. ಕೊಂಬೆಗಳನ್ನು ತಗ್ಗಿಸಿ ಜಡಿಮಳೆಯಿಂದ ಅವನು ನೆನೆಯದ ಹಾಗೆ ನೋಡಿಕೊಳ್ಳುತ್ತದೆ. ಅಶಿರಾ ವೃಕ್ಷಗಳು ದಿಕ್ಕನ್ನು ಬದಲಿಸಿ ಫಲಭರಿತ ವೃಕ್ಷಗಳ ಜೊತೆ ನಿಂತಹಾಗೆ ಅವನು ಕನಸು ಕಾಣುತ್ತಾನೆ. ಅವನು ಆನಂದ ತುಂಬಿ ಕುಣಿದಾಡುತ್ತಾನೆ. ವೃಕ್ಷಗಳ ನಾಡಿನಲ್ಲಿ ಒಂದು ಉತ್ಸವ ಶುರುವಾಗುತ್ತದೆ. ಎಲೆಗಳ ನಡುವೆ ಗಾಳಿಗಳು ಮರಕ್ಕಾಸ್ ವಾದ್ಯದ ಶಬ್ದಗಳನ್ನು ಹೊರಡಿಸುತ್ತದೆ. ಠೊಳ್ಳು ಬಿದಿರಿನ ಮೂಲಕ ಕ್ಲಾರಿನೆಟ್ ನಾದಗಳು ಕೇಳಿಸುತ್ತವೆ. ವನವನಾಂತರದಲ್ಲಿ ಆಶ್ಚರ್ಯಕರವಾದ ಸಿಂಫೊನಿ ಹರಡುತ್ತದೆ. ಕಲ್ಲುಕಲ್ಲಿನ ನಡುವೆ ಸಮುದ್ರವೂ ಸಂಗೀತವನ್ನು ನುಡಿಸುತ್ತದೆ. ಪರ್ವತ ಶಿಖರವೂ ಕುಣಿಯಲಾರಂಭಿಸುತ್ತದೆ. ಅವನು ಬ್ಯಾಂಡ್ ಮಾಸ್ಟರಿನ ಹಾಗೆ ಕೈಗಳನ್ನು ಆಡಿಸುತ್ತಾನೆ. ಅವನ ಶರೀರ ತೂಗುತ್ತದೆ. ಉತ್ಸವವು ಮುಂದುವರಿಯುತ್ತದೆ. ಸಮುದ್ರದ ಹಕ್ಕಿಗಳು ಹಾಡುತ್ತವೆ. ಅವುಗಳ ರೆಕ್ಕೆಗಳ ರಿಣ್ ರಿಣ್ ಶಬ್ದ ಅಲೆಗಳ ಮೇಲೆ ಹಾರಿ, ಹಸಿರು ಪ್ರಾಂತವನ್ನು ಆವರಿಸುತ್ತದೆ.
ಬೆಂಕಿಯ ಬುಟ್ಟಿ
ಹಳೆಯ ಆಲ, ಅಶ್ವತ್ಥ ಮತ್ತು ಬೇವಿನ ಮರಗಳು ಹತಾಶವಾಗಿ ಕಂಡವು. ಅವನು ಬೆಳಗಿನ ಹೊತ್ತು ಅವುಗಳ ತೊಗಟೆಗಳು, ರೆಂಬೆಗಳು ಮತ್ತು ಎಲೆಗಳ ಮೇಲೆ ತನ್ನ ಕೈಯಾಡಿಸಿ ಸಮಾಧಾನಗೊಳಿಸಲಿಕ್ಕೆ ಯತ್ನಿಸಿದ. ವಿಧ್ವಂಸಕಾರಿ ಗಾಳಿ ಪೂರ್ವದ ಬೆಟ್ಟಗಳ ಕಡೆಯಿಂದ ಜೋರಾಗಿ ಬೀಸುತ್ತಿತ್ತು. ಅದರಲ್ಲಿ ದಾವಾನಲದ ವಾಸನೆ ಇದೆ ಅಂತ ಅವನಿಗೆ ಗೊತ್ತಾಯಿತು. ವೃದ್ಧ ವೃಕ್ಷಗಳಿಗೆ ಅದರ ಸೂಚನೆ ಆಗಲೇ ತಿಳಿದಿತ್ತು. ಅವಕ್ಕೂ ವಾಸನೆ ಬಂತು. ವೃಕ್ಷಗಳ ಗುಂಪು ಹುಯ್ಲಿಡಲಿಕ್ಕೆ ಆರಂಭಿಸಿತು. ಈ ಮಣ್ಣಿನ ಹಂಗನ್ನು ಬಿಡಿಸಿಕೊಂಡು ಅವು ಇನ್ನೆಲ್ಲಾದರೂ ಹೋಗಬೇಕು ಅಂದುಕೊಂಡವು. ಸಣ್ಣ ಸಸಿಗಳ ಪಾಡೇನು ಅಂತ ಅವನು ಯೋಚಿಸಿದ. ಆ ಭಯಂಕರ ತಾಪವನ್ನು ಅವು ಸಹಿಸಲಾರವು: ಏನಾದರೂ ತಿಳಿಯುವ ಮುಂಚೆಯೇ ಅವು ನಾಶವಾಗುವುದು ಖಂಡಿತ. ಅವನು ಸಮುದ್ರದ ಕಡೆ ಓಡಿದ. ಕಾಡುಭೂಮಿ ನೀರಲ್ಲಿ ಮುಳುಗಿಹೋಗಲಿ ಅಂತ ಪ್ರಾರ್ಥಿಸಿದ. ಕಾಳ್ಗಿಚ್ಚು ಮೌನವಾಗಿ ಹಿಂತಿರುಗಲಿ ಅಂತಲೂ ಪ್ರಾರ್ಥಿಸಿದ.
ನಟ್ಟ – ನಡುರಾತ್ರಿಯಲ್ಲಿ ಮೃಗಶಿರದ ಕೆಳಗಿದ್ದ ಬೆಟ್ಟದ ತುದಿಯಿಂದ ಬೆಂಕಿ ಉರುಳುರುಳಿ ಬರುತ್ತಿತ್ತು. ಸುಟ್ಟವಾಸನೆಯಿದ್ದ ಗಾಳಿಯನ್ನು ಹಿಂಬಾಲಿಸುತ್ತಿತ್ತು. ವೃಕ್ಷಗಳ ನಾಡಿನಿಂದ ಒಂದು ಆಸಹಾಯ ಧ್ವನಿ ಕೇಳಿಸಿತು. ಅವನು ಸಮುದ್ರವನ್ನು ಸಮೀಪಿಸಿದ. ಒಂದು ಕ್ಷಣದಲ್ಲಿ ಅಂಧಕಾರ ನುಚ್ಚುನೂರಾಯಿತು. ಬಿರುಗಾಳಿಯು ಹಿಡಿತದಲ್ಲಿದ್ದ ಬೆಂಕಿ ಕಾಡನ್ನು ಸುಡಲು ಪ್ರಾರಂಭಿಸಿತು. ಅದೇ ಸಮಯದಲ್ಲಿ ವೃಕ್ಷಗಳ ಮಕ್ಕಳ ಮೇಲೆ ತೇವವಿರುವ ಗಾಳಿಯೊಂದು ಬೀಸಿತು. ವಟವೃಕ್ಷ ಬಿಳಿಲುಗಳಿಂದ ತನ್ನನ್ನು ಮುಚ್ಚಿಕೊಂಡಿತು. ಎಲ್ಲ ಕಡೆಯಲ್ಲಿಯೂ ಲವಣಪೂರಿತ ಜಲರಾಶಿ ಥೈಥೈ ಕುಣಿದಾಡುತ್ತ ನುಗ್ಗಿತು. ತನ್ನ ತಲೆಯು ನೀರಿನ ಗೋಡೆಗೆ ಬಡಿದದ್ದರಿಂದ ನಿರಾಶೆಗೊಂಡ ಕಾಳ್ಗಿಚ್ಚು ಹಿಂತಿರುಗಿತು. ಬೆಂಕಿ ಆರಿತು. ಕ್ರುದ್ಧವಾದ ಸಮುದ್ರ ಶಾಂತವಾಯಿತು.
ಅವನೊಂದು ಕನಸು ಕಂಡ. ಕನಸನ್ನು ಹೆಣೆದ. ಮಾತಾಡಲಿಕ್ಕೆ ಬರದ ಹಸಿರು ಜಗತ್ತಿನ ಭಾಷೆಯನ್ನು ತನ್ನ ಮಜ್ಜೆಯಲ್ಲಿ ಅನುಭವಿಸಿದ. ಅವನಿಗೆ ಸೂರ್ಯನಾಗಲಿ, ಅಂಧಕಾರವಾಗಲಿ, ಕಾಲದ ಒಂದೇ ರೂಪವಾಗಿ ಗೋಚರಿಸಿತು. ಅನಂತಕಾಲದ ಸ್ರೋತದಲ್ಲಿ ತೇಲುತ್ತಿದ್ದ ಅವನಿಗೆ ಯಾವ ಬಗೆಯ ಭಾಷೆಯೂ ಗೊತ್ತಿರಲಿಲ್ಲ. ದಿನ, ಮಾಸ, ವರ್ಷ, ಹೆಸರು, ದೇಶ, ಕಾಲ, ಏನೂ ತಿಳಿಯಲಿಲ್ಲ. ವೃಕ್ಷ ಶಿಶುಗಳಿಂದ ಆವೃತವಾದ ಈ ಅರಣ್ಯಭೂಮಿ ಮಾತ್ರ, ಆ ಬೆಟ್ಟ, ಆ ಸಮುದ್ರ ಮಾತ್ರ ಅವನಾಗಿದ್ದ.
ಚರಿತ್ರೆ ಮಾತಾಡುತ್ತದೆ.
ಹಿಂದೆ ಗೋದಾವರಿ ಬೆಟ್ಟಗಳಲ್ಲಿ ಒಂದು ಗುಟ್ಟಾದ ಸಭೆ ನಡೆಯಿತು. ಆ ಮುಖದ ಮೇಲೆ ದೊಂದಿಯ ಬೆಳಕು ಬಿದ್ದಿತ್ತು. ಭಾರತೀಯರ ಕ್ರಾಂತಿಯ ಮುಖಂಡನಾಗಿ ದೇಶದ್ರೋಹಿ ಎನಿಸಿಕೊಂಡ ಚಿತರಾಮರಾಜುವಿನ ಕಡೆಗೆ ಬ್ರಿಟಿಷ್ ಸರ್ಕಾರದ ಬಂದೂಕಗಳೆಲ್ಲ ತಿರುಗಿದ್ದಾಗ, ಚಿತಾರಾಮರಾಜು ಹಳ್ಳಿ-ಹಳ್ಳಿಗಳಲ್ಲಿ ಕಾಡು-ಮೇಡುಗಳಲ್ಲಿ ಕ್ರಾಂತಿಯನ್ನು ಹರಡುತ್ತಿದ್ದ. ಏನವನ ಹೆಸರು…..ಏನು ಹೆಸರು…..ತನ್ನ ಹೆಸರೇ ಅವನಿಗೆ ಮರೆತು ಹೋಗಿತ್ತು. ಚಿತಾರಾಮರಾಜು ಅಭಿಮನ್ಯುವಿನಂತೆ ಇದ್ದ. ಅವನ ಸುತ್ತಲೂ ಬ್ರಿಟಿಷ್, ಸೈನಿಕರು ಸುತ್ತುವರೆದಿದ್ದರು. ಅವನ ಮೃತದೇಹ ಸಿಕ್ಕಲಿಲ್ಲ. ಅವನು ದೇಶಭ್ರಷ್ಯ, ನಿರಾಶ್ರಿತ, ರೆನಗೇಡ್! ಯಾವಾಗಿನಿಂದ? ಬಹಳ ಕಾಲದಿಂದ! ಆ ದಿನದ ವೃಕ್ಷಗಳ ಸಭೆಯಲ್ಲಿ ಅವನು ಹಾಜರಾಗಿದ್ದ. ಅಂದು ಅವನು ನೆಟ್ಟ ಬೇವಿನ ಬೀಜ ಇಂದು ವೃಕ್ಷವಾಗಿದೆ. ಅದಕ್ಕೆಷ್ಟು ವಯಸ್ಸು? ತನ್ನಷ್ಟೇ ಇರಬಹುದು, ಸ್ವಲ್ಪ ಕಮ್ಮಿ ಇರಲೂ ಬಹುದು. ನಿನ್ನೆಯ ತೊಗಟೆಗಳ ಮೇಲೆ ಮತ್ತು ನಿನ್ನೆಯ ಹಸಿರು ಎಲೆಗಳ ಮೇಲೆ ಕಾಲರಾಯನ ಬರಹವಿದೆ. ಹಾಗೆಯೇ ಅವನ ಮುಖ, ಕಣ್ಣು, ಚರ್ಮದ ಮೇಲೆ ಕೂಡ ಕಾಲರಾಯನ ಬರಹವಿದೆ.
ಮಾಡರನೈಸೇಶನ್ನಿನ ದೂತ
ಅವನು ಸ್ನಾನ ಮಾಡುತ್ತ ಸಮುದ್ರದ ನೊರೆಯನ್ನು ಮತ್ತು ಹಸಿರು ಪಾಚಿಯನ್ನು ಎತ್ತಿಕೊಳ್ಳುವುದರಲ್ಲಿದ್ದ ಪ್ರತೀದಿನ ದೂರದಲ್ಲಿ ಸಮುದ್ರದ ಮೇಲೆ ಹೋಗುವ ಹಡುಗುಗಳನ್ನು ಆಗಾಗ ನೋಡುತ್ತಿದ್ದ. ಉಹ್ಞು…. ಈ ಸಾರಿ ನೋಡಿದ್ದು ಬೇರೆ. ದೂರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದನ್ನು ಅವನು ನೋಡಲಿಲ್ಲ. ಆ ಹಡುಗು ಸ್ಥಿರವಾಗಿತ್ತು, ಅಚಲವಾಗಿತ್ತು. ದೊಡ್ಡ ತೆರೆಯ ಮೇಲಿನ ಮಹಾತಿಮಿಂಗಲದ ಹಾಗೆ ಆ ‘ಹಡಗಿನ ಶರೀರ ಕಾಣಿಸಿತು. ದೊಡ್ಡ ಬೇವಿನ ಮರ ಒಂದು ಕೊಂಬೆಯನ್ನು ಕೆಳಗಿಳಿಸಿತು. ಅವನು ಅದನ್ನು ಹಿಡಿದುಕೊಂಡು ಮೇಲೇರಿದ. ಇನ್ನೂ ಮೇಲೇರಿದ. ದೂರದ ಸಮುದ್ರದ ಮೇಲೆ ಕೂತು, ಎರಡೂ ಕೈಗಳನ್ನು ಕಪಾಲದ ಮೇಲಿಟ್ಟುಕೊಂಡು ನೋಡಿದ. ಪಶ್ಚಿಮ ಘಟ್ಟದ ಮೇಲೆ ಸೂರ್ಯ ತನ್ನ ಕಾಲುಗಳನ್ನು ಊರಿದ್ದ. ಸಮುದ್ರದ ಮೇಲಿನಿಂದ ಏನೋ ಒಂದು ರೀತಿಯ ವಾಸನೆಯನ್ನು ಗಾಳಿ ಹೊತ್ತು ತಂದಿತು. ಹಡಗಿನಿಂದ ಏನೋ ಒಂದು ವಸ್ತು ನೀರಿಗೆ ಇಳಿಯಿತು. ಮೋಟರ್ ಬೋಟ್. ಕೆಂಪುಮೀನಿನ ಹಾಗಿತ್ತು. ಹಡಗಿನಿಂದ ಒಬ್ಬೊಬ್ಬರಾಗಿ ಹಗ್ಗವನ್ನು ಹಿಡಿದುಕೊಂಡು ಜನ ಇಳಿದರು-ಒಂದು, ಎರಡು, ಮೂರು…. ಆರು ಜನ. ನೀರಿಗಿಳಿಯುವ ಹಸಿರು ಬಟೆಯನ್ನು ತೊಟ್ಟ ಅವರು, ಕೆಂಪು ಮೀನಿನ ಮೇಲೆ ತೇಲುವ ಹಸಿರು ಪಾಚಿಯ ಹಾಗೆಯೇ ಕಂಡರು. ಅವರು ಹೊರಟರು. ಶಬ್ದತರಂಗಗಳು ಅಲೆ ಅಲೆಯಾಗಿ ಬಂದವು. ಕೆಂಪುಮೀನು ಓಡಿತು. ಓಡುತ್ತ ಓಡುತ್ತ ಅವನಿದ್ದ ದಿಕ್ಕಿಗೇ ಬಂತು.
ಅವರ ಕತೆ
ಅವರು ಕಲ್ಲುಮರಳಿದ್ದ ಜಾಗದಲ್ಲಿ ಬೋಟನ್ನು ಕಟ್ಟಿಹಾಕಿದರು. ಯಾರೋ ಕೂಗಿದರು: “ಸಿಂಗ್, ಇದೇ ಸ್ಪಾಟ್ ಅದು. ಕಾಡು ಬೆಟ್ಟ ಸಮುದ್ರ- ಪೆಟ್ರೋಲ್ ಸೆಕ್ಟರ್. ನಿನ್ನ ಮ್ಯಾಪ್ ಏನು ಹೇಳುತ್ತೆ?” ಅವರು ಭೂಗರ್ಭಶಾಸ್ತ್ರಜ್ಞರು, ಇಂಜಿನಿಯರ್‌ಗಳು. ಐದು ಜನ ಗಂಡಸರು, ಇನ್ನೊಂದು ಹೆಂಗಸು.ಪೃಥಾ ಕೂಡಾ ಒಬ್ಬ ಭೂಗರ್ಭಶಾಸ್ತ್ರ – ಪೆಟ್ರೋಖೆರಿ ಇಂಜನಿಯರ್: ಮರಗಳ ನೆರಳಿನಲ್ಲಿ ಅವರು ಟೆಂಟ್ ಎಬ್ಬಿಸಿದರು. ಮೋಟಾರ್ ಬೋಟ್‌ನಿಂದ ಕೆಲವು ಮರದ ಪೆಟ್ಟಿಗೆಗಳನ್ನು ಮತ್ತು ಉಪಕರಣಗಳನ್ನು ಹೊತ್ತು ತಂದರು.
ಸ್ಟೋವ್‌ನಿಂದ ಚಾ ಕೈಗೆ ಬರಲಿಕ್ಕೆ ಹತ್ತು ನಿಮಿಷ ಹಿಡಿಯಿತು. ಒಂದು ಕಪ್ಪು ಚಾ ಕೈಯಲ್ಲಿ ಹಿಡಿದು ಪೃಥಾ ದಟ್ಟವಾದ ಕಾಡಿನ ಒಳಗೆ ಹೋದಳು. ಎಷ್ಟೊಂದು ವೃಕ್ಷ ಶರೀರಗಳು. ನೆಟ್ಟಗೆ ನಿಂತ ಭಾರೀ ಬಡ್ಡೆಗಳು, ಅವುಗಳ ವಯ್ಯಸ್ಸೆಷ್ಟು ಅನ್ನುವುದನ್ನು ತೊಗಟೆಯ ಮೇಲೆ ಬರೆದಂತಿತ್ತು. ರಾಜನ್ ಅವುಗಳ ವಯಸ್ಸನ್ನು ಹೇಳಬಲ್ಲವನಾಗಿದ್ದ. ಅರವತ್ತೊ, ನೂರೋ, ಅವನಿಗೆ ಗೊತ್ತಾಗುತ್ತಿತ್ತು. ದೊಡ್ಡ ಬೇವಿನ ಮರದ ಕೆಳಗೆ ಪೃಥಾ ನಿಂತಳು. ನಾಲ್ಕೂ ದಿಕ್ಕಿನಲ್ಲಿ ಒಂದು ರೀತಿಯ ಅಲೌಕಿಕ ಮೌನ ಹರಡಿದಂತಿತ್ತು. ಮರಗಳ ಕೊಂಬೆಗಲಲ್ಲಿ ಏನೋ ಸದ್ದು, ಪೃಥಾಳ ಕಂಠಗಳ ಒಂದು ವಿಹ್ವಲ ಚೀತ್ಕಾರ ಹೊರಟಿತು. ಎದುರಿಗೊಬ್ಬ ಮನುಷ್ಯ ನಿಂತಿದ್ದ. ಮನುಷ್ಯನ? ಅಲ್ಲ ಅದೊಂದು ಮರ! ಮರದ ಹಾಗಿರುವ ಮನುಷ್ಯ. ಅವನ ಇಡೀ ಮೈ ತೊಗಟೆಯಿಂದ ಮುಚ್ಚಿತ್ತು.
ಅವಳಲ್ಲಿ ವಿಶ್ವಾಸ ಹುಟ್ಟಿಸುವುದಕ್ಕಾಗಿ ಅವನು ಕೈಯೆತ್ತಿದ, ನಕ್ಕ, ಬೇವಿನ ಎಲೆಯಿಂದ ಉಜ್ಜಿದ ಅವನ ಹಲ್ಲುಗಳು ಸೂರ್ಯ ರಶ್ಮಿಯನ್ನು ಪ್ರತಿಫಲಿಸಿದವು. ಚೇತನಹೀನಳಂತೆ ಹತ್ತಿರದ ಎಲೆಗಳ ಮೇಲೆ ಬಿದ್ದಿದ್ದ ಪೃಥಾ ಕಣ್ಣು ತೆರೆದಳು. ಅವಳ ಹತ್ತಿರ ಮರದ ಹಾಗೆ ಕಾಣುತ್ತಿದ್ದ ಒಬ್ಬ ಮನುಷ್ಯ ನಿಂತಿದ್ದ. ಪೃಥಾ ಎದ್ದು ಕುಳಿತಳು. ಅವಳ ಕೂದಲು ಬೆನ್ನ ಹಿಂದೆ ಹರಡಿತ್ತು. ಕಿತ್ತುಹೋದ ಗುಂಡಿಗಳ ಷರಟಿನ ಮೂಲಕ ಅವಳ ಬ್ರಾ ಕಾಣಿಸುತ್ತಿತ್ತು. ಅವಳ ಎದೆಯಿಂದ ಕಾಳ್ಗಿಚ್ಚಿನ ಗಂಧ ಹೊರಸೂಸುತ್ತಿತ್ತು. ದೊಡ್ಡ ಬೇವಿನಮರ ಎಲೆಗಳನ್ನು ಉದುರಿಸಿತು. ವೃದ್ಧ ವಟವೃಕ್ಷ ಗಾಳಿ ಬೀಸಿತು. ಸಮುದ್ರ ಗಂಭೀರ ಮೌನವನ್ನು ತಾಳಿತ್ತು.
ಅವನು ದೇಶಭ್ರಷ್ಟ
ಈ ಮರಕ್ಕೆ ಆ ಮರಕ್ಕೆ ಸಿಂಗ್ ಆರು ಹ್ಯಾಮಕ್‌ಗಳನ್ನು ಕಟ್ಟಿದ್ದ. ‘ಗುಪ್ತ’ ಟಿನ್ನಿನಿಂದ ಮಾಂಸವನ್ನು ತೆಗೆದು ಪ್ಲೇಟುಗಳ ಮೇಲೆ ಇಡುತ್ತಿದ್ದ. ಬಾಟನಿಸ್ಟ್ ಕುಲಕರ್ಣಿ ಮತ್ತು ರಾಜನ್ ‘ಓ ಮೈ ಸ್ವೀಟ್ ಹಾರ್ಟ್’ ಅಂತ ಹಾಡುತ್ತಾ, ಗ್ಯಾಸ್‌ಲ್ಯಾಂಪಿನ ಬೆಳಕಿನಲ್ಲಿ ಮ್ಯಾಪ್ ನೋಡುವುದರಲ್ಲಿ ಮಗ್ನರಾಗಿದ್ದರು. ದಡದಲ್ಲಿದ್ದ ಒಂದು ಕಲ್ಲಿನ ಮೇಲೆ ಕುಳಿತು ದಿಲ್‌ಬಾರ್ ಸಂಜೆಯ ಹೊತ್ತಿನಲ್ಲಿ ಭೈರವ್‌ರಾಗವನ್ನು ಕೊಳಲಿನಲ್ಲಿ ಬಾರಿಸುತ್ತಿದ್ದ. ಪೃಥಾ ಮತ್ತು ವೃಕ್ಷದ ಹಾಗಿದ್ದ ಮನುಷ್ಯ ತಂಬೂರಿ ಎದುರಿಗಿಟ್ಟುಕೊಂಡು ಮಾತಾಡುತ್ತಿದ್ದರು. ಇಷ್ಟು ದಿವಸ ಯಾವ ಭಾಷೆಯಲ್ಲಿ ಮಾತಾಡುತ್ತಿದ್ದೆನೆನ್ನುವುದು ಅವನಿಗೆ ಮರೆತುಹೋಗಿತ್ತು. ಈ ಹೊತು ಪ್ರವಾಹ ನುಗ್ಗಿ ಅಣೆಕಟ್ಟು ಒಡೆದುಹೋಗಿತ್ತು. ಅವನು ಮನುಷ್ಯನೆನ್ನುವುದೂ ಅವನಿಗೆ ಮರೆತುಹೋಗಿತ್ತು. ಪೃಥಾ ಹೇಳಿದಳು – “ ಈ ಇಡೀ ಪ್ರದೇಶದಲ್ಲಿ ಪೆಟ್ರೋಲ್ ಸಿಗುತ್ತದೆ. ಎಲ್ಲ ಮರಗಳನ್ನು ಕಡಿದುಹಾಕಬೇಕು. ನಾಳೆ ಸಂಜೆಯ ಒಳಗಾಗಿ ಪೂರ್ವದಿಕ್ಕಿನ ಪ್ರವತವನ್ನು ದಾಟುತ್ತಾರೆ. ನಾಲ್ಕುದಿನ ತಿರುಗಾಟ ಹಿಡಿಯುತ್ತದೆ. ನಾನು ಕಾಂಪ್‌ನಲ್ಲೇ ಇದ್ದು ಸ್ಟಡಿ ರಿಪೋರ್ಟ್ ತಯಾರಿಸಬೇಕಾಗುತ್ತೆ.” ಮರದಹಾಗಿದ್ದ ಆ ಮನುಷ್ಯ ಮಾತಾಡದೆ, ಅರಣ್ಯ ಜಗತ್ತಿನಲ್ಲಿ ಅಂಧಕಾರದ ಆಶ್ರಯಕ್ಕೆ ಹೊರಟುಹೋದ. ಇವತ್ತು ವೃದ್ಧ ವಟವೃಕ್ಷ ಬಿಳಿಲುಗಳನ್ನಾಡಿಸಿ ಅವನನ್ನು ಮಾತಾಡಿಸಲಿಲ್ಲ. ಅಶ್ವತ್ಥ ವೃಕ್ಷದ ಶಾಖೆಗಳಿಂದ ತಂಗಾಳಿಯು ಬಂದು ಅವನನ್ನು ಆಲಂಗಿಸಲಿಲ್ಲ. ದೊಡ್ಡ ಬೇವಿನ ವೃಕ್ಷದ ತೊಗಟೆ ಮರದಿಂದ ಇನ್ನೊಂದು ಮರದ ಹತ್ತಿರ ಹೋಗಿ ಗೋಳಾಡಿದ – “ನನ್ನನ್ನು ನಂಬಿ, ನಂಬಿ, ನಾನು ದೇಶಭ್ರಷ್ಟನಲ್ಲ, ದೇಶದ್ರೋಹಿ ಅಲ್ಲ. ನಾನು ನಿಮ್ಮಲ್ಲಿ ಒಬ್ಬ, ನಿಮ್ಮವನೆ.”
ಹೀಗೆ ವರ್ಷಗಳಾದ ಮೇಲೆ ಮನುಷ್ಯರ ಭಾಷೆಯನ್ನು ಮಾತಾಡಿದ್ದ. ಅವನನ್ನು ನಂಬದ ಸಾವಿರಾರು ಮರಗಳು ಅಂಧಕಾರದಲ್ಲಿ, ಅಕ್ಕಪಕ್ಕದಲ್ಲಿ ನಿಂತು, ಬಿಗುಮಾನದಿಂದ ನಿಂತಿದ್ದವು. ಪೂರ್ವದ ಬೆಟ್ಟಗಳಿಂದ ಹತಾಶೆಯ ರೋಧನ ಕೇಳಿಸುತ್ತಿತ್ತು. ಅರಣ್ಯ ಭೂಮಿಯನ್ನು ಹಾದುಹೋದ ಆ ರೋಧನ ಸಮುದ್ರವನ್ನು ಮುಟ್ಟಿತು.
ಪ್ರಕೃತಿಗೇ ಗೊತ್ತು
ಅವರು ಪೂರ್ವದ ಬೆಟ್ಟಗಳಿಗೆ ಹೋದರು. ಪೃಥಾ ಹ್ಯಾಮಕ್‌ನಲ್ಲಿ ಮಲಗಿದ್ದಳು. ಅವಳು ಕಟ್ಟಿದ್ದ ರೇಡಿಯಂ ಡೈಯಲ್ ವಾಚ್‌ನಲ್ಲಿ ಬೆಳಗಾಗುವುದಕ್ಕೆ ಹೆಚ್ಚು ಹೊತ್ತಿರಲಿಲ್ಲ. ಇದ್ದಕ್ಕಿದ್ದ ಹಾಗೆ ಹ್ಯಾಮಕ್ ತೂಗಾಡಿ ಹರಿತುಬಿತ್ತು. ಅವಳು ಬೀಳುವಾಗ ಬಲೆಯಿಂದ ಮಾಡಿದ ತೂಗಾಡಿ ಹರಿದುಬಿತ್ತು. ಅವಳು ಬೀಳುವಾಗ ಬಲೆಯಿಂದ ಮಾಡಿದ ಹ್ಯಾಮಕ್‌ನ ದಾರಗಳನ್ನು ಹಿಡಿದಿದ್ದಳು. ವೃಕ್ಷಮಾನವನ ಕೊಂಬೆಗಳ ಸಾಗಿಸುವ ಶಕ್ತ ತೋಳುಗಳು ನೆಲದ ಮೇಲೆ ಬಿದ್ದಿದ್ದ ಅವಳನ್ನು ಸುತ್ತಿಕೊಂಡಿದ್ದವು. ವೃಕ್ಷಮಾನವನ ಬೇರುಗಳು ಅವಳಲ್ಲಿ ಇಳಿಯುವುದಕ್ಕೆ ಅವಳು ಆಶ್ರಯ ಕೊಟ್ಟಳು. ದೊಡ್ಡ ಬೇವಿನ ಮರದ ಒಂದು ಕೊಂಬೆ ಭಯಂಕರ ಶಬ್ದವನ್ನು ಮಾಡುತ್ತ ಕೆಳಗೆ ಬಿತ್ತು. ಆ ದೊಡ್ಡ ಕೊಂಬೆಯ ಆಘಾತವನ್ನು ಅವನ ಬೆನ್ನು ತಡೆಯಿತು. ವೃಕ್ಷಮಾನವ ತಾನು ಕೈಯಾರೆ ಬೆಳೆಸಿದ್ದ ಶಿಶು ಸಸಿಗಳ ಮೇಲೆ ಬಿದ್ದ. ಸಣ್ಣ ಸಣ್ಣ ರೆಂಬೆಗಳು ತೀಕ್ಷ್ಣ ಸೂಜಿಗಳ ಹಾಗೆ ಅವನ ಬೆನ್ನಿಗೆ ಮತ್ತು ಹೊಟ್ಟೆಗೆ ಚುಚ್ಚಿಕೊಂಡವು. ಬೆಳಿಗ್ಗೆ ಬೆಳಕು ಮೂಡುತ್ತಿದ್ದ ಹಾಗೆ ದೊಡ್ಡ ಬೇವಿನ ಕೊಂಬೆ ವೃಕ್ಷಮಾನವನ ಬೆನ್ನನ್ನು ತೀವ್ರವಾಗಿ ಘಾಸಿಗೊಳಿಸಿದ್ದು ಪೃಥಾಗೆ ಕಾಣಿಸಿತು. ಅವಳು ಫಸ್ಟ್ ಏಡ್‌ಬಾಕ್ಸ್ ತರಲಿಕ್ಕೆ ಕ್ಯಾಂಪ್‌ಗೆ ಓಡಿದಳು. ಅದು ಅಲ್ಲಿರಲಿಲ್ಲ. ಡಾ. ದಿಲ್‌ಬಾರ್ ಅದನ್ನು ತೆಗೆದುಕೊಂಡು ಹೋಗಿದ್ದ. ಏನೂ ತೋಚದ ಪೃಥಾ ಪೂರ್ವದ ಬೆಟ್ಟಗಳ ಕಡೆಗೆ ಓಡಿದಳು.
ಖಾಂಡವ ದಹನ
ಅವರು ವೇಗವಾಗಿ ಬೆಟ್ಟದಿಂದ ಇಳಿಯುತ್ತಿದ್ದರು. ಸಿಂಗ್ ಕಿರುಚಿದ – “ಅಲ್ನೋಡಿ ಬೆಂಕಿ ಹತ್ತಿದೆ.” ಅಗ್ನಿಯ ಒಂದು ಸ್ರೋತ ಬೆಟ್ಟದಿಂದ ಕಾಡಿನ ಕಡೆಗೆ ವೇಗದಿಂದ ಇಳಿಯುತ್ತಿತ್ತು. ಆ ಅಗ್ನಿಕುಂಡದಲ್ಲಿ ವೃಕ್ಷ ಸಂತತಿ – ಜಹರ್‌ವ್ರತ’ ನಡೆಸುತ್ತಿದ್ದವು. ಪೃಥಾ ಓಡುತ್ತಿದ್ದಳು. ಐದು ಜನ ಅವಳನ್ನು ಹಿಂಬಾಲಿಸಿದ್ದರು. ಸುತ್ತುವರಿದಿದ್ದ ಅಗ್ನಿ ಒಂದೇ ಕ್ಷಣದಲ್ಲಿ ಗ್ರಾಸವಾಗಿ ತೆಗೆದುಕೊಂಡಿತ್ತು. ಸುತ್ತುವರಿದಿದ್ದ ಅಗ್ನಿಯ ಸುತ್ತಲೂ ಸುತ್ತುತ್ತ ಪೃಥಾ ಕೂಗುತ್ತಿದ್ದಳು – “ಅಗಸ್ತ್ಯ! ಅಗಸ್ತ್ಯ!” ಅಗ್ನಿಕುಂಡದಲ್ಲಿ ವೃದ್ಧ ವಟವೃಕ್ಷ ಮತ್ತು ದೊಡ್ಡ ಬೇವಿನಮರಗಳು ಉರಿಯುತ್ತಿದ್ದವು. ಇವತ್ತಿನ ಖಾಂಡವ ದಹನದಲ್ಲಿ ಸಮುದ್ರದ ನೀರು ಚಿಲುಮೆಗಳ ಹಾಗೆ ಉಕ್ಕು ಬರಲಿಲ್ಲ. ಅಗಸ್ತ್ಯರ ಸಂತತಿ ಮತ್ತು ಬಂಧು-ಬಳಗದವರು ನಿಶ್ಶೇಷವಾಗಿ ಹೋದರು.
ನಾಭಿಯ ಶೋಧನೆ
ಆ ರಾತ್ರಿ ಬಿಯರ್‌ಕ್ಯಾನಿನ ಮುಚ್ಚಳ ತೆಗೆಯುತ್ತ ಸಿಂಗ್ ಹೇಳಿದ: “ಈ ದಾವಾನಲ ನಮ್ಮ ಕೆಲಸವನ್ನು ಸುಗಮಗೊಳಿಸಿತು.” ದಿಲ್‌ಬಾರ್ ಹೇಳಿದ. “ದಾವಾನಲವಲ್ಲ, ಈ ವೃಕ್ಷಮಾನವ, ಪೃಥೆಯ ಅಗಸ್ತ್ಯ.” ಎಲ್ಲರೂ ಅಗಸ್ತ್ಯನಿಗೆ “ಥ್ರೀ ಛಿಯರ್ಸ್” ಹೇಳಿದರು. ಈಗಲೂ ಪೃಥೆ ಬೂದಿಯ ರಾಶಿಯಲ್ಲಿ ಅಗಸ್ತ್ಯನ ನಾಭಿಯನ್ನು ಹುಡುಕುತ್ತಿದ್ದಾಳೆ.
*****