ಅವನನ್ನು ನಾನು ಹೆಚ್ಚು ವರ್ಣಿಸುವುದಿಲ್ಲ
ನೋಡಲು ಬಿಕುಷ್ಠೆಯಂತಿದ್ದ. ಬೆಳಿಗ್ಗೆ ಎದ್ದಕೂಡಲೆ ನೋಡಿದರೆ ಅವತ್ತಿಡೀ ಅನ್ನನೀರು ಹುಟ್ಟಲಿಕ್ಕಿಲ್ಲ. ಅಫಿಸಿನ ದೊಡ್ಡ ಕಿಟಕಿಯ ಕೆಳಗೆ ಸಿಂಹಾಸನದಂತಹ ಕುರ್ಚಿಯಲ್ಲಿ ಕುಳಿತಿರುತ್ತಿದ್ದ. ಒಳಗೆ ಬರುವವರೆಗೆ ಕಣ್ಣಿಗೆ ಹೊಡೆದು ಕಾಣುವಂತೆ.
ಹಾಗೆ ಕುಳಿತುಕೊಳ್ಳಲು ಅವ ಎಷ್ಟು ಹೊತ್ತಿಗೆ ಬರುತ್ತಾನೆ, ಕುಳಿತವ ಎಷ್ಟು ಹೊತ್ತಿಗೆ ಎದ್ದು ಹೋಗುತ್ತಾನೆ ಎಲ್ಲವೂ ರಹಸ್ಯದಂತಿತ್ತು.
ಅವನ ದೃಷ್ಟಿಯಿಂದ ಒಮ್ಮೊಮ್ಮೆ ಬದುದಿನ ಬಗ್ಗೆ ಆಸಕ್ತಿಯೇ ಕಮರಿ ಹೋಗುತ್ತಿತ್ತು. ಒಮ್ಮೊಮ್ಮೆ ಕೆನ್ನೆಗೆ ಕೊಟ್ಟು ಕಣ್ಣು ಕಾಣದ ಊರಿಗೆ ಓಡಿಬಿಡುವ ಅನಿಸುತ್ತಿತ್ತು. ಒಮ್ಮೊಮ್ಮೆ ವಿಷ ತೆಗೆದುಕೊಳ್ಳುವ ಅಂತಲೂ ಅನಿಸುತ್ತಿತ್ತು.
ಆದರೆ ನಾನು ಕೆಲಸಕ್ಕೆ ಹೋಗುತ್ತಲೇ ಇದ್ದೆ. ಆ ಕೆಲಸ ಬಿಡುವಂತಿರಲಿಲ್ಲ. ಬಿಟ್ಟರೆ ಬೇರೆಂತದೂ ನನಗಿರಲಿಲ್ಲ. ಆದ್ದರಿಂದ ನಾನವನನ್ನು ಸಹಿಸಬೇಕಿತ್ತು. ಅವನ ಇರವನ್ನು ಮರೆಯಬೇಕಿತ್ತು. ಅವನ ದೃಷ್ಟಿಯನ್ನು ಅಪ್ಪಿತಪ್ಪಿಯಾದರೂ ಸಂಧಿಸಿದಾಗ ಅದನ್ನು ದಾಟಿ ಮತ್ತೆ ನನ್ನ ಕೆಲಸದಲ್ಲಿ ಮಗ್ನವಾಗುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಿತ್ತು.
ನಿದ್ರೆ ಬರುವ ಮುಂಚಿನ ಮಂಪರಿನಲ್ಲಿ ಕೂಡ ಅವ ಯಾರು ಯಾಕೆ ಅಲ್ಲಿರುತ್ತಾನೆ ಅವನನ್ನು ಓಡಿಸಲಿಕ್ಕೆ ಆಗುವುದಿಲ್ಲವೆ ಎಂತೆಲ್ಲ ಪ್ರಶ್ನೆ ಏಳುತ್ತಿತ್ತು. ಎಚ್ಚರಿದ್ದರೆ ಉತ್ತರ ಸಿಗುತ್ತಿತ್ತೋ ಏನೋ. ಆದರೆ ನಿಧಾನವಾಗಿ ನಿದ್ರೆ ಆವರಿಸುತ್ತಿತ್ತು. ಅವನನ್ನು ಮರೆಯುವ ತಾಣ ಇದೊಂದೇ ಎಂತ ನಿದ್ದೆಯೊಳಗೂ ಹೇಳಿಕೊಳ್ಳುತ್ತ ಒಂದು ರೀತಿಯಲ್ಲಿ ಅವನನ್ನು ಮರೆಯಲಾರದ ಸ್ಥಿತಿ ನನ್ನದಾಗಿತ್ತು.
ಕೆಲಸಕ್ಕೆ ಸೇರಿದ ಸಮಯದಲ್ಲಿ ಅವನ ಬಗ್ಗೆ ಯಾರೊಡನೆಯೂ ವಿಚಾರಿಸುವ ಅಧಿಕಕ್ಕೆ ನಾನು ಹೋಗಲಿಲ್ಲ. ಆದರೆ ಸೀಮಿತ ನನಗೆ ಪರಿಚಯವಾದಂತೆ ಒಂದು ದಿನ ಅವನ ಬಗ್ಗೆ ಒಂದರ ಮೇಲೊಂದು ಪ್ರಶ್ನೆ ಕೇಳಿದೆ. ಆಕೆ ಮೌನದ ಉತ್ತರವನ್ನೇ ಕೊಟ್ಟಳು. ಪುನಃ ಪುನಃ ಅವಳನ್ನು ಅಲ್ಲಾಡಿಸಿ ಕೇಳಿದಾಗ ಅತ್ತಿತ್ತ ನೋಡಿ ಪಿಸುಪಿಸುವಾಗಿ ‘ಯಾಕೆ? ಅವ ಇದ್ದರೆ ನಿಂಗೇನು?’-ಎಂದಳು. ’ಸತ್ಯ ಹೇಳು. ನಿಂಗೆ ರಗಳೆಯಾಗುವುದಿಲ್ಲವ?’-ಎಂತ ಕೇಳಿದೆ.
‘ರಗಳೆಯ? ಬೆಳಿಗ್ಗೆ ಎದ್ದು ಯಮದೂತನನ್ನು ಕಂಡಂತಾಗುತ್ತಿತ್ತು. ಆದರೆ ದಿನಾ ಕಾಣುತ್ತಿದ್ದರೆ ಯಮದೂತನೂ ನಮ್ಮಂತೆಯೇ ಅನಿಸುತ್ತದೆಯಲ್ಲವೆ? ಈಗೀಗ ಹಾಗೇ.’
‘ಅಂದರೆ ಅವ ಅಲ್ಲಿ ಇದ್ದರೂ ಇಲ್ಲದಿದ್ದರೂ ಒಂದೇ ಎಂಬ ಸ್ಥಿತಿಗೆ ಬಂದು ಮುಟ್ಟಿದೆ ನೀನು’.
‘ಮುಟ್ಟಿದೆನೋ ಇಲ್ಲವೋ. ಆ ಬಗ್ಗೆ ಯೋಚಿಸುವುದೂ ಇಲ್ಲ’-ಎಂದವಳು ಮತ್ತೆ ಹೇಳಿದಳು. ‘ಅವನ ಬಗ್ಗೆ ಇವತ್ತು ನನ್ನ ಹತ್ತಿರ ಕೇಳಿದ್ದಾಯಿತು. ಇನ್ನು ಯಾವತ್ತೂ ಕೇಳಬೇಡ. ಅವನ ಹೆಸರು ಎತ್ತಬೇಡ’.
‘ಹೆಸರು? ನನಗೆ ತಿಳಿದಿದ್ದರಲ್ಲ!’
‘ಅವನ ವಿಷಯವೆ ಬೇಡ ಎಂದೆನಲ್ಲ’-ಹಾಗೆ ಹೇಳಿ ಹೊರಟುಹೋದಳು ಅವಳ ಕತ್ತಿನ ನರ ನಡುಗುತ್ತಿದ್ದಂತೆ, ತುಟಿ ಕಚ್ಚಿಕೊಂಡು.
ಅವ ಇದ್ದರೆ ನಿಂಗೇನು ಎಂತ ಕೇಳಿದಳು. ಹೌದು ನಂಗೇನು? ಅವ ಸುಮ್ಮನೆ ಕುಳಿತಿರುತ್ತಿದ್ದ. ಕೂತಲ್ಲಿಂದ ಎದ್ದು ಸಹ ಬರುತ್ತಿರಲಿಲ್ಲ. ಆದರೆ ಮಿಸುಕಾಡದೆಯೂ ಮಾತಾಡದೆಯೂ ಕೇವಲ ತನ್ನ ಇರವಿನಿಂದಲೇ ಮನುಷ್ಯ ಹೇಗೆ ಹೀಕರಣೆ ಬರಿಸಬಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದ. ಅವನ ಒಂದು ದೃಷ್ಟಿ ಹಾಸಿ ಬಂದರೆ ಸಾಕು. ಪ್ರಪಂಚದ ಭವಿಷ್ಯಕ್ಕೆಲ್ಲ ಮುಸುಕು ಹಾಸಿದಂತೆ ಆಗುತ್ತಿತ್ತು. ಅದರಲ್ಲಿ ನನ್ನ ದಿನಗಳಂತೂ ಕಾಣುತ್ತಲೇ ಇರಲಿಲ್ಲ.
ಅವತ್ತು ರಾತ್ರಿ ನಿದ್ರೆಯಲ್ಲಿ ಕೀಳು ಹಿಡಿದವರಂತೆ ಕೂಗಿದ್ದೆ. ಸೀಮಿತ ನೇಣಿನಲ್ಲಿ ತೂಗಾಡಿದಂತೆ ಕನಸು. ಪಕ್ಕದಲ್ಲೇ ಅವ ನಿಂತಿದ್ದ. ಮುಂದಿನ ಸಲ ನೀನು ಎನ್ನುತ್ತಿದ್ದ. ನಾನು ಅಮ್ಮಾ ಎಂದಿದ್ದೆ. ಆದರೆ ನನ್ನ ಕೂಗು ಕನಸಿನ ಗೋಡೆಗೇ ಹೊಡೆದು ಮಾರ್ದನಿ ಇತ್ತಿತಾದ್ದರಿಂದ ಮನೆಯಲ್ಲಿನ ಯಾರಿಗೂ ಎಚ್ಚರಾಗಿರಲಿಲ್ಲ.
ಹೀಗೆ ಹೀಗೆ ಕನಸು ಬಿತ್ತು ಎಂತ ಹೇಳುವಾಗ ನಾನು ಉದ್ದೇಶಪೂರ್ವಕವಾಗಿ ನೇಣಿನ ಬಳಿ ನಿಂತ ಆ ಮನುಷ್ಯನ ಬಗ್ಗೆ ಬಿಟ್ಟಿದ್ದೆ. ಕನಸು ಕೇಳಿ ‘ಹಾಗಾದರೆ ಸೀಮಿತನಿಗೆ ಮತ್ತು ನಿನಗೆ ಆಯುಷ್ಯ ಜಾಸ್ತಿ’ ಎಂದರು ಎಲ್ಲ ನಗುತ್ತ. ‘ಕನಸಿನಲ್ಲಿ ಹೆಣ ಕಂಡರೆ ಹಣ ಸಿಗುತ್ತದೆಯಂತೆ. ಚಣ್ಣಮ್ಮ, ದುಡ್ಡು ಸಿಕ್ಕಿದರೆ ನಂಗೂ ನಾಕು ಪಾವಾಣೆ ಕೈ ಮೇಲೆ ಹಾಕಲು ಮರಿಬೇಡಿ’-ಎಂದಳು ಕೆಲಸದ ಚಿಣ್ಕಿ.
ಸೀಮಿತ ಎಷ್ಟು ಬಿಗಿಯಾಗಿ, ಅವನ ಕಡೆ ಕಾಣದೆ ಅವನು ಅಲ್ಲಿ ಇಲ್ಲವಂಬಂತೆಯೇ, ಇರುತ್ತಾಳೆ. ಸೀಮಿತ ಮಾತ್ರ ಅಲ್ಲ. ರಜಿ, ನರ್ತಕಿ, ಅನಂತರಾಯ ಮತ್ತುಳಿದವರೆಲ್ಲರೂ ಅಷ್ಟೆ. ಹಾಗೆ ಎಣಿಸಿದರೆ ಹಾಗೆ ಅಥವಾ ಆ ಪುರುಷನ ಬಗ್ಗೆ ಭಯಭಕ್ತಿ ವಿಧೇಯತೆಯಿಂದ ಇದ್ದಾರೆ ಎಂದರೆ ಹಾಗೇ ಕಾಣಿಸುತ್ತಿದ್ದರು.
ನನಗೊಬ್ಬಳಿಗೆ ಯಾಕೆ ಅವರ ಹಾಗೆ ಇರಲಿಕ್ಕಾಗುವುದಿಲ್ಲ? ಬದಲು ದಿನದಿಂದ ದಿನಕ್ಕೆ ಅವನ ಮೇಲಿನ ಗಮನ ಜಾಸ್ತಿಯಾಗುತ್ತಿತ್ತು. ಅವನ ಗುಟ್ಟು ರಟ್ಟು ಮಾಡಬೇಕೆಂಬ ಹಟ ಹುಟ್ಟುತ್ತಿತ್ತು.
ಅವರೆಲ್ಲರೂ ಅವನನ್ನು ದಾಟಿ ಹೋಗುವಾಗ ತಲೆಬಗ್ಗಿಸಿ ಹೋಗುತ್ತಿದ್ದರು. ಬಾಸ್ ಕೂಡ ಬಹಳ ಜತನದಿಂದ ಮರ್ಯಾದೆ ಕೊಟ್ಟು ಮಾತಾಡುತ್ತಿದ್ದರು. ಅವ ಅವರ ಮುಖ ನೋಡಿ ಅಲ್ಲ, ಗೋಡೆ ನೋಡಿ ಉತ್ತರ ಕೊಡುತ್ತಿದ್ದ.
ನನು ಬಾಸ್ ಆಗಬೇಕಿತ್ತು. ‘ನಿವಾಳಿಸು ಇಲ್ಲಿಂದ’-ಎಂತ ಅವನ ಕುತ್ತಿಗೆಗೆ ಕೈ ಹಾಕುತ್ತಿದ್ದೆ. ಇಲ್ಲ, ಬಾಸ್ ಅವನನ್ನು ದೂಡುವುದಿರಲಿ, ದೂಡಿಸಲೂ ಇಲ್ಲ. ಅವನೊಂದಿಗೆ ದಿನಾ ಒಂದರ್ಧ ಗಂಟೆ ವಿನೀತರಾಗಿ ಕಳೆದು ತನ್ನ ಕೊಠಡಿಗೆ ಹೋಗುತ್ತಿದ್ದರು.
ದಿನಾ ನಾನಿದನ್ನೆಲ್ಲ ನೋಡುತ್ತಿದ್ದೆ. ನಾ ನೋಡುತ್ತಿದ್ದೇನೆ ಎಂತ ಅವನಿಗೂ ಗೊತ್ತಿತ್ತು. ಫಕ್ಕನೆ ಅವನು ನನ್ನತ್ತ ತಿರುಗುತ್ತಿದ್ದ. ನಾನೂ ಫಕ್ಕನೆ ಮುಖ ತಗ್ಗಿಸಿಕೊಳ್ಳುತ್ತಿದ್ದೆ. ಅಷ್ಟರೊಳಗೆ ಯಾವುದೋ ಒಂದು ಕೋನದಲ್ಲಿ ಅವನ ದೃಷ್ಟಿ ನನ್ನದರೊಂದಿಗೆ ಸೇರಿ ತ್ರಿಶೂಲದಂತೆ ಇರಿಯುತ್ತಿತ್ತು. ನನ್ನ ದೃಷ್ಟಿಯೂ ತ್ರಿಶೂಲದಂತಿದ್ದಿದ್ದರೆ! ಅವನ ಗುಟ್ಟನ್ನು ಸೀಳಿ ಬಯಲು ಮಾಡುತ್ತಿದ್ದೆ.
ಹನ್ನೊಂದು ಗಂಟೆಗೆ ಸರಿಯಾಗಿ ಅವನಿಗೆ ಕೂತಲ್ಲೇ ಉದ್ದದ ಬೆಳ್ಳಿಲೋಟದಲ್ಲಿ ಕಾಫಿ ಬರುತ್ತಿತ್ತು. ಕಾಫಿ ಬಂತೆ ಎಂದು ಆಫಿಸಿನ ಪ್ರಮುಖರೆಲ್ಲ, ಬಾಸ್ನಿಂದ ಹಿಡಿದು, ಬಂದು ಬಂದು ಕೇಳಿ ಹೋಗುತ್ತಿದ್ದರು. ಕೆಲವರಿಗೆ ಅವನಿಂದ ಉತ್ತರ ಕೂಡ ಸಿಗುತ್ತಿರಲಿಲ್ಲ. ಆದರು ಅವರು ತಪ್ಪದೆ ಕೇಳುತ್ತಿದ್ದರು. ಅವನಿಗೆ ಸಮೀಪವಾಗಲು ನಂಬರ್ ಪಾಂಚುಗಳಂತೆ ಯತ್ನಿಸುತ್ತಿದ್ದರು ಎಂತ ಸ್ಪಷ್ಟವಾಗಿ ಹೊಳೆಯುತ್ತಿತ್ತು. ಸೀಮಿತ, ನರ್ತಕಿ, ರಜನಿ ಯಾರೂ ಸಹ ಇದಕ್ಕೆ ಹೊರತಾಗಿರಲಿಲ್ಲ. ನನ್ನ ಆಶ್ಚರ್ಯ ದೊಡ್ಡದಾಗುತ್ತ ಇತ್ತು. ಆದರೆ ಅದನ್ನು ತಣಿಸಿಕೊಳ್ಳಲು ಅವನ ಬಗ್ಗೆ ಯಾರೊಡನೆ ಕೇಳಿದರೂ ತುಟಿಯ ಮೇಲೆ ಕೈಯಿಟ್ಟು ಸನ್ನೆ ಮಾಡುತ್ತಿದ್ದರು. ತಾವು ಹೆದರುವುದಲ್ಲದೆ ನನ್ನನ್ನೂ ಹೆದರಿಸುತ್ತಿದ್ದರು. ಅವರೆಲ್ಲ ಹೆದರುತ್ತಾರೆಂತ ನಾನೂ ಹೆದರುವುದು ಎಂದರೆ ಅರ್ಥವಿಲ್ಲ.
ಆದರೆ ನಾನು ಹೆದರುತ್ತಿದ್ದೇನೆ. ಯಾವುದು ನನ್ನನ್ನು ಹೆದರಿಸುತ್ತಿದೆ? ಅವನ ರೂಪವ, ಕರಿಬಣ್ಣವ, ಕೆಟ್ಟದೃಷ್ಟಿಯ, ಕರಿಬಣ್ಣದ ಮೇಳೆ ಮಿಟುಕುತ್ತು ಕುಳಿತಿದ್ದ ಚಿನ್ನದ ಸರ ಉಂಗುರಗಳ, ಅಥವ ಅವನ ತಲೆಗಿಂತಲೂ ಎತ್ತರದ ಬೆನ್ನಿದ್ದಸಿಂಹಾಸನದಂತೆ ಕಾಣುವ ಅವನ ಕುರ್ಚಿಯ?
ದಿನ ಹೋದಂತೆ ನನಗೆ ಅವನನ್ನು ಸಹಿಸುವುದೇ ಅಸಾಧ್ಯವಾಗುತ್ತ ಹೋಯಿತು. ಉಣ್ಣುವಾಗ ತಿನ್ನುವಾಗಲೆಲ್ಲ ಅವನ ಗಂಟು ಗಂಟು ಮುಖ ಮುರುಟಲು ಕೈಕಾಲು ಕತ್ತಲೆ ಬಣ್ಣ-ನೆನೆದರೆ ಸಾಕು ಎಲ್ಲ ಶೂನ್ಯವಾದಂತಾಗಿ ಯಾವುದೂ ಸೇರುತ್ತಿರಲಿಲ್ಲ. ಬಾಯಿ ರುಚಿಗೆಟ್ಟು ನಿದ್ದೆಗೆಟ್ಟು-ನನ್ನ ಅವಸ್ಥೆ ಶತ್ರುವಿಗೂ ಬೇಡ ಎನ್ನುವಂತಾಯಿತು.
ಯಾರೊಡನೆಯಾದರೂ ಅವನ ವಿಷಯ ಎತ್ತಿ ಮಾತಾಡುತ್ತ ಹೋದಂತೆ ಅದೆಲ್ಲ ಸ್ಪಷ್ಟವಾಗುತ್ತ ಹೋದೀತು. ಆದರೆ ಯಾರೊಡನೆ?
ಅವತ್ತೊಂದು ದಿನ ತಂದೆಯವರು ‘ಏನು ಕೆಲಸಕ್ಕೆ ಸೇರಿದ ಲಾಗಾಯ್ತು ತುಂಬ ಸಪೂರವಾದೆ. ಕೆಲಸ ಮಾಡಿ ಆಯಾಸವಾಗುತ್ತದ?’-ಎಂತ ಕೇಳಿದ್ದೇ ನನಗೆ ದುಗುಡ ಉಕ್ಕಿ ಬಂತು. ಎಲ್ಲ ಹೇಳಿ ಬಿಡಬೇಕು ಅಂತನಿಸಿತು. ಒಂದೇ ಸಲಕ್ಕೆ ಎಲ್ಲ ಹೇಳಿಬಿಡುವುದು ಸಾಧ್ಯವೇ ಆಗೆದೆ ನಿಧಾನವಾಗಿ ಶಬ್ದ ಶಬ್ದವಾಗಿ ಹೇಳುವ ಅಂತ ‘ಅಪ್ಪ ಒಂದು ಮಾತು ಹೇಳಬೇಕು ನಿಮ್ಮ ಹತ್ತಿರ’ ಎಂದೆ ‘ಹೇಳು ಮಗು’-ಎಂದರು.
‘ನೀವು ಯಾವತ್ತಾದರೂ ನನ್ನ ಆಫಿಸಿಗೆ ಬಂದಿದ್ದೀರ?’
‘ಬರದೆ ಏನು? ನಿನ್ನ ಆಫಿಸೇನು ಯಾರೂ ಕಾಣದ್ದ?’
‘ಬಂದವರು ಆ ಅವನನ್ನ…’
‘ಛಿ ಛಿ ಒಳಗೆ ಹೋಗು. ಆ ವಿಷಯವೆಲ್ಲ ಯಾಕೆ ನಿನಗೆ? ಅವನು ನಿನ್ನ ಸುದ್ದಿಗೆ ಯಾವತ್ತಾದರೂ ಬಂದದ್ದುಂಟ? ಅವನಷ್ಟಕ್ಕೆ ಅವನು ಇದ್ದರೆ ನಿನಗೇನು? ನಿನ್ನ ಕೆಲಸಮಾಡಿ ಸಂಬಳ ತೆಗೆದುಕೊಳ್ಳುವುದು ಬಿಟ್ಟು ಊರ ಮೇಲಿನ ವಿಷಯಕ್ಕೆ ತಲೆಕೆಡಿಸಿಕೊಳ್ಳತಕ್ಕದ್ದಲ್ಲ’-ಅವರದಲ್ಲದ ಒರಟು ದನಿ. ದೊಡ್ಡ ಸ್ವರ. ತುಸು ಕಂಪನವೂ ಇತ್ತು. ನಾ ಸುಮ್ಮನೆ ನಿಂತೆ ಇದ್ದೆ. ಸ್ವಲ್ಪ ಹೊತ್ತಿನ ಮೇಲೆ ನನ್ನ ತಲೆ ತಡವುತ್ತ ಅವರು ‘ಸುಮ್ಮನೆ ಬೇಡದ್ದೆಲ್ಲ ತಲೆಗೆ ತುಂಬಿ ಕೊಳ್ಳಬೇಡ. ಕಾಲ ಹೀಗೆ ಇರುವುದಿಲ್ಲ’-ಎಂದವರು ‘ನಾ ಹೀಗೆಂದೆ ಎಂಬುದು ಗೋಡೆಗೂ ತಿಳಿಯಬಾರದು’-ಎಂದರು. ನನ್ನ ತಲೆಯ ಮೇಲೆ ಅವರ ಕಂಬನಿ ಉದುರಿದಂತಾಯಿತು. ಈ ಒಂದು ಕ್ಷಣ ನಾನು ಹೆದರಿಕೆಯ ಕುತೂಹಲದ ಗಡಿಯನ್ನು ದಾಟಿ ಬೆಪ್ಪುಬಡಿದವಳಂತಾದೆ.
ಊಟದ ಹೊತ್ತಿನಲ್ಲಿ ಅವನನ್ನು ದಾಟಿ ಹೋಗಲೇಬೇಕಿತ್ತು ನಾವು. ಹಾಗೆ ಹೋಗುವಾಗ ಎಲ್ಲರೂ ಬಗ್ಗಿ ಅವನೊಡನೆ ಕೇಳುತ್ತಿದ್ದರು. ‘ಊಟ ಬಂತೆ ತಮಗೆ?’ ಬಾಸ್ ಅಂತೂ ಇನ್ನಷ್ಟು ವಿನಯದಿಂದ ‘ಸಕಾಲದಲ್ಲಿ ಊಟ ಬಂತೆ? ಸರಿಯಾಗಿದೆಯಷ್ಟೆ?’ ಎಂತೆಲ್ಲ ಕೇಳುತ್ತಿದ್ದರು. ಹಾಗೆ ಕೇಳಿ ಅವನನ್ನು ಹಾದು ಮುಂದೆ ಹೋದದ್ದೇ ಅವರ ಕಣ್ಣುಗಳಲ್ಲಿ ವೇದನೆ ಹೆರೆಗಟ್ಟುತ್ತಿತ್ತು. ಯಾರ ಪ್ರಶ್ನೆಗೂ ಯಥಾ ಪ್ರಕಾರ ಆ ವ್ಯಕ್ತಿ ಉತ್ತರವನ್ನೇ ಕೊಡದೆ ಎದುರು ಮೇಜಿನ ಮೇಲೆ ಬೆಳ್ಳಿ ತಟ್ಟೆಯಲ್ಲಿಟ್ಟಿದ್ದ ಊಟವನ್ನು ಗೋಸಾಯಿಗುಬ್ಬನಂತೆ ಬಾಯಿಗೆ ತುಂಬಿಕೊಳ್ಳುವುದರಲ್ಲಿ ಮಗ್ನವಾಗುತ್ತಿದ್ದ. ದಿನವಿಡೀ ಈತ ಮಾಡುತ್ತಿದ್ದ ಕೆಲಸ ಇದೊಂದೇ ಆದುದರಿಂದ ಅವನ ಹೊಟ್ಟೆ ತುಂಬುವುದೂ ಮತ್ತೆ ಜೀರ್ಣವಾಗುವುದೂ ಈ ಒಂದು ಕೈ ಬಾಯಿ ಓಟದ ಕಾಯಕದಿಂದಲೇ ಎಂತ ನೆನೆಸಿ ನಗೆ ಬಂತು. ಆದರೆ ನಾನು ನಗಲಿಲ್ಲ. ಎಷ್ಟೋ ಹೊತ್ತಿನ ಮೇಲೆ, ಹಾಗೆ ನಗೆ ಬಂದಾಗ ನಾನು ನಗುವ ಧೈರ್ಯ ಮಾಡಲಿಲ್ಲ ಎಂಬ ಅರಿವಾಗಿ ತಲೆ ತಗ್ಗಿಸುವಂತಾಯಿತು.
ನಾನು ತಲೆತಗ್ಗಿಸಿದೆ ಅವರೆಲ್ಲರಂತೆ ಅವನೆದುರು ಬಗ್ಗಿ ವಿಚಾರಿಸದೆ ಸೆಟೆದುಕೊಂಡು ಅವನನ್ನು ಲೆಕ್ಕಕ್ಕೇ ಇಡದವರಂತೆ ಮುಂದೆ ಹೋದೆ. ಖಂಡಿತ ಒಂದು ದಿನ ಬಾಸ್ ನನ್ನನ್ನು ಕರೆಸಿ ‘ನೀನು ಅವನನ್ನು ವಿಚಾರಿಸುತ್ತಿರಬೇಕು. ಈ ಉದ್ಧಟತನ ಸಲ್ಲ’ ಎಂದೆಲ್ಲ ಬೈದಾರು. (ಆಗ ನಾನು ನನ್ನಿಂದಾದಷ್ಟು ಕಿರುಚಾಡಿ ‘ನಿಮ್ಮ ಕೆಲಸವೂ ನನಗೆ ಬೇಡ’ ಎಂತ ರಾಜೀನಾಮೆ ಪತ್ರಬರೆದು ಪಟ್ಟೆಂತ ಮೇಜಿನ ಮೇಲೆ ಕುಕ್ಕಿ-) ಅವನನ್ನು ದಾಟಿ ಹೋದ ಮೇಲೆ ಅಷ್ಟರವರೆಗೆ ನಿಂತೇ ಹೋದಂತಿದ್ದ ಹೃದಯ ನಡುಗುತ್ತಿತ್ತು.
ಇಲ್ಲ, ಬಾಸ್ ನನ್ನನ್ನು ಕರೆಯಲೇ ಇಲ್ಲ. ಹಾಗಾದರೂ ನಾನು ಹಗುರಾಗುವ ಸಾಧ್ಯತೆಯಿಲ್ಲ. ಬಹುಷಃ ನಾನೇ ಒಂದು ದಿನ ಸೋತು ಶರಣಾಗುತ್ತೇನೆ ಅಂತಿರಬಹುದು. ಅದು ಅಸಾಧ್ಯ ಎಂತ ಅವರಿಗೆ ತಿಳಿದಿಲ್ಲ.
ದಿನಗಳುರುಳಿದಂತೆ ನನಗನಿಸುತ್ತು ಇತ್ತು: ನಮ್ಮ ಉಸಿರು ಹೆಚ್ಚು ಬಿಸಿಯಾಗುತ್ತಿದೆ. ಜ್ವಾಲೆ ಉಗುಳುತ್ತಿದೆ. ನಮ್ಮನ್ನ ಪೂರ ಸುಡದೆ ಬರೀ ಕಾವಿನಿಂದ ಕರಕಾಗಿಸುತ್ತಿದೆ. ಅವನಂತೆಯೇ ನೆರಳಿಗಿಂತುಲೂ ಕತ್ತಲೆಗಿಂತಲೂ ಸಾವಿಗಿಂತಲೂ ಕರಾಳ ಮಾಡುತ್ತ ಇದೆ. ಅವನು ಹೇಗೆ ಸದ್ದು ಸುದ್ದಿಲ್ಲದೆ ನಮ್ಮನ್ನೆಲ್ಲ ಅವನಂತೆಯೇ ಪರಿವರ್ತಿಸಿಕೊಂಡು ಸೈನ್ಯ ಕಟ್ಟಿ ಯಾರ ಮೇಲೆಯೋ ಯುದ್ಧಕ್ಕೆ ನಮ್ಮನ್ನು ಕಳಿಸಿ ಗೆಲ್ಲುತ್ತಾನೆ. ಮತ್ತೆ ಇದಕ್ಕಿಂತಲೂ ದೊಡ್ಡ ಸಿಂಹಾಸನದಲ್ಲಿ ಕುಳಿತು ಇದಕ್ಕಿಂತಲೂ ದೊಡ್ಡ ಆಫಿಸನ್ನು ಆಳುತ್ತಾನೆ. ಯುದ್ಧದಲ್ಲಿ ಬದುಕಿ ಉಳಿದ ನಮ್ಮವರನ್ನೇ ಮತ್ತೆ ನೇಮಿಸಿಕೊಳ್ಳುತ್ತಾನೆ. ಮತ್ತೆ ಕರಕಾಗಿಸುವುದಕ್ಕೆ. ಸೈನ್ಯಕಟ್ಟುವುದಕ್ಕೆ, ಕಡೆಗೆ ಯಾರ ಮೇಲೋ ಛೂ ಬಿಡುವುದಕ್ಕೆ-
ಏನೆಲ್ಲ ಹೆಣೆಯುತ್ತಿತ್ತು ಮನಸ್ಸು, ಮನಸ್ಸು ಇರುವುದೇ ಹೆಣೆಯುವುದಕ್ಕೆ. ಕಂಡದ್ದಕ್ಕೆ ಕಾಣಬಾರದ್ದನ್ನು-ಎಲ್ಲವನ್ನೂ ಸೇರಿಸಿ ಮಾಲೆ ಮಾಡುವುದಕ್ಕೆ. ತಾನೇ ಕಟ್ಟಿದ ಮಾಲೆ ಮಾಲೆಯಲ್ಲ ಎಂತ ಬೆಚ್ಚಿ ಬೀಳುವುದಕ್ಕೆ. ಕೊನೆಗೊಂದು ದಿನ ಮಾಲೆಗೆ ಕತ್ತು ಕೊಟ್ಟು ನೇತಾಡುವುದಕ್ಕೆ.
ಹೀಗೇ-
ಹೇಗೇ ಎಣಿಸುತ್ತ ಹೋದರೆ ಒಂದು ದಿನ ನನ್ನ ತಲೆ ಕೆಡುವುದಿಲ್ಲವೆ? ನನ್ನ ತಲೆ ಕೆಡಬಾರದು. ಮತ್ತೆ ಸರಿಯಾದರೂ ಜನ ನನ್ನ ಭೂತವನ್ನೇ ನೆನೆಸುತ್ತಾರೆ. ನನ್ನ ಭವಿಷ್ಯದ ಸಮಾಧಿ ತೋರಿಸುತ್ತಾರೆ. ಜನರನ್ನು ಮೇರಿ ನಿಲ್ಲುವಂತಹ ತಾಕತ್ತು ಬರುವವರೆಗೂ ನನ್ನ ತಲೆ ಸರಿ ಇರಬೇಕು.
ಆದ್ದರಿಂದ ನನ್ನ ಒಳಗೊಳಗೆ ಇಳಿದು ಕತ್ತರಿಸುತ್ತ ಮುಂದುವರೆಯುವ ಪ್ರಶ್ನೆಗಳನ್ನು, ಉತ್ತರ ಸಿಗದಿದರೂ ಅಡ್ಡಿಲ್ಲ, ಗಟ್ಟಿಯಾಗಿ ಕೂಗಿ ಕೇಳಬೇಕು.
ಆ ಕ್ಷೌರಿಕನ ಹೆಂಡತಿ ಭೂಮಿ ತೋಡಿ ‘ರಾಜನ ಕಿವಿ ಕತ್ತೆ ಕಿವಿ’ ಎಂತ ಹೇಳಿದ್ದಳು ಆದರೆ ಅದನ್ನು ಮುಚ್ಚಿ ಅಲ್ಲಿ ನೆಟ್ಟ ಮರದಿಂದ ತಯಾರಿಸಿದ ನಗಾರಿಯೂ ‘ರಾಜನ ಕಿವಿ ಕತ್ತೆ ಕಿವಿ’ ಎಂದು ಊರಿಗೆಲ್ಲ ಸಾರಿ ಅವಳಿಗೆ ಕುತ್ತು ತಂದಿತ್ತು.
ಅಡ್ಡಿಲ್ಲ. ಅದು ಅಜ್ಜಿ ಕತೆ. ಅಜ್ಜಿ ಕತೆಯಲ್ಲಿ ಕಲ್ಲುಕಂಬಕ್ಕೂ ಜೀವವಿದೆ. ನಾಲಗೆಯಿದೆ. ನಾನಿಲ್ಲಿ ತೆಗೆದುಕೊಳ್ಳಬೇಕಾದ್ದು ಅವಳು ತನ್ನ ಮನಸ್ಸಿನಲ್ಲಿದ್ದುದನ್ನು ಹೊರಗೆ ಹಾಕಿದ ರೀತಿ ಮಾತ್ರ.
ನಾನೊಂದು ನಿರ್ಧಾರಕ್ಕೆ ಬಂದೆ. ಮನಸ್ಸು ಎಷ್ಟೋ ಹಗುರವಾಯಿತು. ಊಟದ ಸಮಯವಾಯಿತು. ಎಲ್ಲ ಎದ್ದರು. ಅವನಿಗೆ ಉಪಚಾರ ಮಾಡುತ್ತ ಊಟದ ಹಾಲಿಗೆ ಬಂದರು. ಅದನ್ನೆಲ್ಲ ನೋಡುತ್ತಿದ್ದಂತೆ ನನ್ನಲ್ಲಿ ಈ ಜಾಗದಿಂದಲೇ ಓಡಿಬಿಡಬೇಕು ಎನ್ನುವ ತವಕ ಮುಮ್ಮಡಿಯಾಗಿ ಬೆಳೆದಿತ್ತು. ಮನೆಗೆ ಹೋದ ಮೇಲೆ ಇಲ್ಲಿಯಾದರೂ ಗಟ್ಟಿಯಾಗಿ ಕೇಳಬೇಕೆಂತ ನಿರ್ಧಾರಮಾಡಿದ್ದರೂ ಅಷ್ಟರವರೆಗೆ ತಡೆದುಕೊಳ್ಳುವುದು ಸಾಧ್ಯವೇ ಇಲ್ಲವೆಂತ ಮಥಿಸುತ್ತಿದ್ದಂತೆ ನನ್ನ ಊಟ ಮುಗಿಯಿತು. ಖಾಲಿಯಾಗಿದ್ದ ಕ್ಯಾರಿಯರನ್ನು ಕಂಡು ದಾರಿ ಹೊಳೆದಂತಾಯಿತು.
ಕ್ಯಾರಿಯರನ್ನು ಹಿಡಿತು ಬಾತ್ರೂಮಿಗೆ ಹೋದೆ. ಬೋಲ್ಟ್ ಹಾಕಿದೆ. ಸುತ್ತ ಯಾರಿಲ್ಲವೆಂತ ಗೊತ್ತಿದ್ದರೂ ಅತ್ತಿತ್ತ ನೋಡಿದೆ. ಯಾರಿರಲಿಲ್ಲ. ಎದೆಡವಗುಟ್ಟುವ ಶಬ್ದ ಬಿಟ್ಟರೆ ಸುತ್ತಣ ಪ್ರಪಂಚದ ಎದೆ ಬಡಿತವೇ ನಿಂತಂತಿದ್ದ ನಿಶ್ಶಬ್ಧತೆ.
ನಡುಗುವ ಕೈಗಳಿಂದ ಕ್ಯಾಯಿಯರಿನ ಮುಚ್ಚಳ ತೆಗೆದೆ. ಇದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ‘ಅವ ಯಾರು ಎಲ್ಲಿಯವ, ಎಲ್ಲಿಂದ ಬಂದ ಯಾಕೆ ಬಂದ, ಅವನನ್ನು ಆ ಕಲಿಪುರುಷನನ್ನು, ಒಂದು ನಾಯಿಯೆಂಬಂತೆ ಬಡಿದು ಓಡಿಸುವವರು ಯಾರೂ ಇಲ್ಲವೆ?’-ಎಂದು ಕೂಗಿದೆ. ಸ್ವರದಲ್ಲಿ ತ್ರಾಣವೇ ಕೂಡಿಬರಲಿಲ್ಲ. ಮೂರು ಬಾರಿ ಕೂಗಿ ಸಾಕಾಗಿ ಕ್ಯಾರಿಯರಿನ ಮುಚ್ಚಳ ಹಾಕಿ ದುಗುಡವೇ ಇಲ್ಲದ ಮುಖವಾಡದಿಂದ ಹೊರಗೆ ಬಂದೆ. ಮುಖವಾಡ ನಿಜವಾಗುತ್ತ ಇದೆ, ನಾನು ಹಗುರವಾಗುತ್ತ ಇದ್ದೇನೆ ಎಂತ ಅಂದುಕೊಂಡರೂ ಖಾಲಿಯಾಗಿದ್ದ ಕ್ಯಾರಿಯರು ಭಾರವಾಗಿದೆ ಅಂತ ಭಾಸವಾಗುತ್ತಿತ್ತು.
ಸೀಮಿತ ತನ್ನ ಪ್ರಿಯತಮನೊಂದಿಗೆ ಕುಳಿತಿದ್ದಳು, ಪರಸ್ಪರ ದಿಟ್ಟಿಸಿ ನೋಡುತ್ತ ಅವರಿಬ್ಬರೂ ತಮ್ಮ ಮುಂದಿನ ಊಟವನ್ನೇ ಮರೆತಿದ್ದರು, ಅವರ ಮುಖದ ತುಂಬ ತುಂಬಿದ್ದ ನೋವನ್ನು ನೋಡುತ್ತ ಹಂಚಿಕೊಳ್ಳುತ್ತ ಇನ್ನಷ್ಟು ನೋಯುತ್ತ ಇದ್ದಂತೆ ಕಾಣುತ್ತಿತ್ತು. ನರ್ತಕಿ ಕೈಬಳೆ ಸಹ ಕಿಣಿಗುಡದಂತೆ ಉಣ್ಣುತ್ತಿದ್ದಳು. ಉಳಿದವರು ಒಬ್ಬೊಬ್ಬರು ಒಂದೊಂದು ತರಹ. ಅಪರಾಧಿಗಳಂತೆ, ಕೈದಿಗಳಂತೆ. ಎಲ್ಲ ಕಳಕೊಂಡವರಂತೆ. ನಾಳೆಯೇ ಸಾವು ಬರುತ್ತದೆ ಎಂತ ತಿಳಿದವರಂತೆ. ಬಾಸ್ ಕೂಡ ಊಟ ದೂರ ಸರಿಸಿ ತಲೆ ತುರಿಸಿಕೊಳ್ಳುತ್ತ ಚಿಂತೆಯಲ್ಲಿ ಅದ್ದಿದಂತಿದ್ದರು.
ಅವರನ್ನೆಲ್ಲ ನೋಡುತ್ತಿದ್ದಂತೆ ನಾನೇ ಧೈರ್ಯಸ್ಥೆ ಅನಿಸಿತು. ಇವತ್ತು ನನಗೆ ಊಟ ಸೇರಿತು. ಮತ್ತು ಇವತ್ತು ನನ್ನ ಮನಸ್ಸಿನಲ್ಲಿದ್ದದ್ದು ಸ್ವಲ್ಪ ಹೊರಗೆ ಹೋಯಿತು. ಇವತ್ತಿಗೆ ನಾನೇ ವೀರ ರಾಣಿ.
ವೀರ ರಾಣಿಯಂತೆ, ಅವರೆಲ್ಲರಿಗೆ ಕಾಯದೆ ಊಟದ ಕೋಣೆ ಬಿಟ್ಟು ಆಫೀಸಿನ ಬಾಗಿಲು ಹೊಕ್ಕು ನನ್ನ ಕುರ್ಚಿಗೆ ತಲುಪಲು ಇನ್ನು ಕೇವಲ ಇಪ್ಪತ್ತು ಇಪ್ಪತ್ತೈದು ಹೆಜ್ಜೆಗಳೀವೆ. …ನಾ ಹೆಜ್ಜೆಯಿಡುತ್ತಿಲಿದ್ದೆ.
ಕ್ಯಾರಿಯರು ಭಾರವಾಗುತ್ತ ಇತ್ತು. ಒಂದೊಂದು ಹೆಜ್ಜೆಗೂ ಒಂದೊಂದು ತೂಕ ಹೆಚ್ಚಿದಂತೆ. ನಾನು ಕೈಯಿಂದ ಕೈಗೆ ಬದಲಿಸುತ್ತ ಮುನ್ನಡೆದರೂ ತಡೆಯದ ಮಣಭಾರ.
ರಾಣಿಯ ಕೆಚ್ಚೆಲ್ಲ ಕರಗಿ ನನಗೆ ಕಣ್ಣು ಕತ್ತಲೆ ಕಟ್ಟುವಂತಾಯಿತು. ಭಾರವಾಯಿತೆಂತ ಕ್ಯಾರಿಯರನ್ನು ಇಳಿಸುವಂತಿರಲಿಲ್ಲ. ಏನು ಮಾಡಲಪ್ಪ ಎಂದು ಅಳು ಬರುವಷ್ಟು ಅಸಹಾಯಕತೆಯಿಂದ ಯೋಚಿಸುತ್ತಿದ್ದಂತೆ ನನ್ನ ಕೈ ಸೋತು ಕ್ಯಾರಿಯರು ಜಾರಿತು. ಢಣಾರೆಂತ ನೆಲಕ್ಕೆ ಅಪ್ಪಳಿಸಿ ಮುಚ್ಚಳ ಹಾರಿ ಹೋಯಿತು.
ಮರುಕ್ಷಣದಲ್ಲಿಯೇ ನಾಲ್ಕೂ ಗೋಡೆಗಳಿಂದ ಪ್ರತಿಧ್ವನಿ ನಾನು ಕೂಗಿದ್ದಕ್ಕಿಂತ ನೂರು ಪಟ್ಟು ಜಾಸ್ತಿಯಾಗಿ ಬಂದು ಅಪ್ಪಳಿಸಿತು. ‘ಅವ ಯಾರು, ಎಲ್ಲಿಯವ, ಎಲ್ಲಿಂದ ಬಂದ, ಯಾಕೆ ಬಂದ. ಅವನನ್ನು ಆ ಕಲಿ ಪುರುಷನನ್ನು, ಒಂದು ನಾಯಿಯೆಂಬಂತೆ ಬಡಿದು ಓಡಿಸುವವರು ಯಾರೂ ಇಲ್ಲವೆ?’-ಒಂದು, ಎರಡು, ಮೂರನೆಯ ಸಲ ಅದು ಹಾಗೆ ಕೆಟ್ಟ ಸ್ವರದಿಂದ ಕಿರುಚುತ್ತಿದ್ದಂತೆ ನಾನು ಕುಸಿಯುವುದರಲ್ಲಿದ್ದೆ.
ನಾನವನೊಡನೆ ರಾಜಿ ಮಾಡಿಕೊಳ್ಳಲೇ ಬೇಕು. ಸಾವಿನಿಂದ ತಪ್ಪಿಸಿಕೊಳ್ಳಲು ಈ ರಾಜಿ ಬೇಕೇ ಬೇಕು. ಅದನ್ನು ಹೇಳಿದ್ದು ನಾನಲ್ಲ ಎನ್ನಬೇಕು, ಅದೆಲ್ಲ ನನಗೆ ಗೊತ್ತೇ ಇಲ್ಲ ಎನ್ನಬೇಕು. ನೀ ಹೇಗಿದ್ದರೂ ಸರಿ. ನೀ ಹೇಳಿದ್ದನ್ನೆಲ್ಲ ಮಾಡುತ್ತೇನೆ ಎಂತ ಹೇಳಬೇಕು. ಇನ್ನೂ ಮೈ ಮೇಲೆ ಏರಿ ಬಂದರೆ ಈ ಕ್ಯಾರಿಯರೇ ನನ್ನದಲ್ಲ ಎಂತ ಬಿಸಾಡಿ ಬಿಡಬೇಕು.
ಕುಸಿಯುತಿದ್ದ ನಾನು ಒಣಗಿದ ನಾಲಗೆಯಿಂದ ತುಟಿ ಸವರಿ ಶಕ್ತಿಯ ಭ್ರಾಂತಿ ಬರಿಸಿಕೊಂಡು ಹೀಗೆಲ್ಲ ಹೇಳಬೇಕು ಎಂತ ಮುಖವೆತ್ತಿದಾಗ ಆಹ್! ಅವನ ಕುರ್ಚಿ ಖಾಲಿಯಿತ್ತು!
*****
ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ
