ನೆರಳು

ನಿಟ್ಟುಸಿರನೆಳೆದು
ದಾಟಿತು ಕೊನೆಯರೈಲು :
(ತಕ್ಕೊ ಕೈಮರದ ಕರಡೀಸಲಾಮು !)
ಕೈಯ ಚಾಚಿದ ನೆರಳು ಚಲಿಸುತ್ತಿದೆ…..!
ಮೆಲ್ಲಮೆಲ್ಲನೆ ಸಂಜೆ ಹಿಂಬಾಲಿಸುತ ಬಂತು!
ಅಸ್ಥಿ ಪಂಜರದೊಡಲ ತುಂಬುತ್ತಿದೆ!
ಕೈಯಕೋಲನು ಮೀಟಿ
ಸೇತುವೆಯ ದಾಟಿ
ಕೈಯ ಚಾಚಿದ ನೆರಳು ತೆರಳುತ್ತಿದೆ
ನೆರಳು ನರಳುತ್ತಿದೆ!

ತೊಗಲಬಾವಲಿಯಂತೆ ಜೋತಿರುವ ಜೋಪಡಿಯ ನೆರಳು
ಅಕರಾಳ ವಿಕರಾಳ ನೆರಳು!
ಅದರ ಮಡಿಲಲ್ಲಿ ಅದೋ……. ಎರಡು ಕಣ್‌ ಕಪ್ಪಡಿ!
ನಂದಿದಾಶೆಯ ಮನದ ತುಕುಡಿ ತುಕುಡಿ!!
ಹೊರಗೆ……..
ಕೈಬೀಸಿ ಕರೆವ ಈಚಲಗರಿಯ ನೆರಳು
ಮರುಳು!
ನಟ್ಟಿರುಳು ಕೊರಳ ಹಿಸುಕಿದ ತೆರದಿ ನರಿಯ ಕೂಗು!
ಕೊಳ್ಳಿದೆವ್ವದ ಸೋಗು.
ಗೂಬೆ ಜೋಗುಳ ಕೇಳಿ
ಜೋಪಡಿಯೊಳಿರುಳು ಜೋಂಪಿಸಿತು.
ಅಸ್ಥಿಪಂಜರ ಕುಳಿತು
ಬೀದಿಯಲ್ಲಿ ಆಯ್ದ ಕೊರೆ ಬೀಡಿ ಕಿಡಿಗೆ
ಕತ್ತಲೆದೆ ತಿದಿಯಿಂದ ಹೊಗೆಯೆಳೆದು ನೂಕಿ-
ನೆರಳಿನನಿಮಿತ್ತ ಷೋಕಿ!
* * * *

ಬೆಳಕು ಹರಿಯಿತು ……..
ಯುಗಯುಗದ ಹೊಳವು ಹೊಡಮರಳಿತು!
ಒಡಲ ಹಸಿವೆಗೆ ಸೋತು
ಕೈಕೋಲನಾತು
ನೆರಳು ನಾಲಿಗೆ ಚಾಚಿ ಚಲಿಸುತ್ತಿದೆ;
ಅದೋ…….!
ಕೂಗಳತೆಯಲ್ಲಿಹುದು ರೈಲು ನಿಲ್ದಾಣ.
ನೆರಳು……
ನೆರಳಿನದೊಂದು ಪರಿವಾರವೇ ನಿಂದು
ಕೈ ಚಾಚುತಿದೆ ನರಗೆ : “ನಾರಾಯಣ!”
ಪುರಿಬಾಜಿ, ಬ್ರೆಡ್ಡು, ಬಿಸ್ಕೀಟು, ಬಿಸಿಬಿಸಿ ಚಹ
ಕಪ್ಪುಬಸಿಗಾನ ಸನ್ಮಾನ … …
ಮುಸುರೆಯರಸುವ ನಾಯಮೊಲೆಗೆ ಜೋತಾಡುತಿವೆ ಬೀತಕುನ್ನಿ
“ಕಾಗೆ ಒಂದಗುಳ ಕಂಡರೆ ಕರೆಯದೇ ತನ್ನ ಬಳಗವನು?!”
ಕೈಯಚಾಚಿದ ನೆರಳು ಜೊತೆಗೂಡಿತೆನ್ನಿ!
ಹೊಸನಾತ ……ಹೊಸನಾತ!
ಬಂದು ನಿಂತಿತು ರೈಲು ಮತ್ತೊಂದು;
ನೂಕು ನುಗ್ಗಲಿನಲ್ಲಿ ತೆವಳಿಕೊಂಡೇ ಬಂದು
ನೆರಳು ಕೈಚಾಚಿತದೊ ಬಾಗಿ ನಿಂದು!
* * * *
ಹೊಗೆಯುಗುಳಿ ದಾಟಿತು
ಕೊನೆಯ ರೈಲು
ಕೈಯ ಚಾಚಿದ ನೆರಳು ತೆವಳುತ್ತಿದೆ
ನೆರಳು ನರಳುತ್ತಿದೆ!
*****