ನಮ್ಮ ಮನೆಯ ಕನ್ನಡಿ
ಯಲಿ ಮಾತ್ರ ನನಗೆ ನಾ ಚಂದ
ಉಳಿದಲ್ಲಿ ಪ್ರೇತ ನರಪೇತಲ
ಊದಿಕೊಂಡ ಗಲ್ಲ
ಚಿಂತೆ ತುರಿಸುವ ಮೂಗು
ಆಸೆ ಇಂಗಿದ ಕಣ್ಣು ತುಟಿ ಕಿವಿ ಥೇಟು ಮಳ್ಳ
ನ ರೂಪ ಇವೆಲ್ಲ
ಅತೀ ತಾಕು ಠೀಕಾಗಿ
ಚದುರಿಕೊಂಡು ಕೂಡ್ರುತ್ತವೆ
ನಮ್ಮಿ ಕನ್ನಡಿಯಲ್ಲಿ
ನನಗೆ ನನ್ನನ್ನೇ ಮರೆಸುತ್ತವೆ
ಮೊನ್ನೆ ಕಟ್ಟು ಕಳಚಿತ್ತದರದು
ರಿಪೇರಿಸಿ ತಿರುಗಿ ತಂದಾಗ
ಏನೋ ಬದಲಾವಣೆ ಅಷ್ಟಷ್ಟು ಇಷ್ಟಿಷ್ಟು
ತೂಕ ತಪ್ಪಿದ ಸ್ವಭಾವ
ಇಲ್ಲಾಗದವುಗಳೆಲ್ಲ ಅಲ್ಲಾದಂತೆ
ಕೆಟ್ಟವ ಒಮ್ಮೆಗೇ ಸಾಧುವಾದಂತೆ
ಕೊನೆಗೆ ನಿರಾತಂಕ ನನ್ನ
ಅಕ್ಷರಸ್ಥ ಬದುಕು
ಶಬ್ದಗಳಲ್ಲಿ ಒಣಗಿದಂತೆ
ಕನ್ನಡಿಯ ಅದ್ಭುತ ಡೊಂಬರಾಟ
ಗೊತ್ತಿದ್ದೂ ನಿಲುಕದ ಮಿಥ್ಯ ಪರಿಪಾಠ
ನನಗೂ ಹೆದರಿಕೆಯಿಲ್ಲ ಸೋಗಿನ ವ್ಯಕ್ತಿತ್ವಕ್ಕೆ
ಒಂದೇ ಕಳವಳವೆಂದರೆ ಆಗಾಗ
ನಮ್ಮ ಕೆಲಸದ ನಾಗಿ ಸಂಜೆ ಆರರ ಅಪ್ಪ
ಪ್ರಿನ್ಸಿಪಾಲರು ಮತ್ತು ದೇವಸ್ಥಾನದ ಭಟ್ಟ
ಹೀಗೆ ಇವರೆಲ್ಲ ಒಳಗೆ ಸೇರಿಕೊಂಡು ಗುಂಪಾಗಿ
ನನ್ನನ್ನೇ ಅಳಿಸತೊಡಗುತ್ತಾರೆ
ಆಗ ಆ ನಾನು
ತಡೆಯಲಾರದೆ ಗಬಕ್ಕನೆ ಹೊರಬಂದು
ಈ ನನ್ನನ್ನು ತಬ್ಬಿಕೊಳ್ಳುತ್ತೇನೆ
ತಪ್ಪಾಯಿತು ತಪ್ಪಾಯಿತು ಅನ್ನುತ್ತೇನೆ
ಅತ್ತು ಅತ್ತು ಅಸತ್ಯವಾಗುತ್ತೇನೆ
ಆದರೂ ಈ ಕನ್ನಡಿ ಅಲ್ಲೇ
ಮತ್ತು ನಾನಿಲ್ಲೇ ಇರಬೇಕು ಅದೇ ನನಗೆ ಇಷ್ಟ
ಏಕೆಂದರೆ ಅದರ ಕಣ್ಣು ತಪ್ಪಿಸಿಕೊಂಡು
ನಾನು ಬದುಕುವುದು
ತುಂಬಾ ತುಂಬಾ ಕಷ್ಟ.
*****