ಅಡಿಗರ ‘ಶ್ರೀ ರಾಮನವಮಿಯ ದಿವಸ’ – ಪದ್ಯ ಬಗೆವ ಬಗೆ

ಇವತ್ತು ನಾನು ಮಾತಾಡಲು ಆರಿಸಿಕೊಂಡ ವಿಷಯ, ‘ಪದ್ಯ ಬಗೆವ ಬಗೆ’ ಅಂದರೆ ಎರಡು ಅರ್ಥಗಳಲ್ಲಿ: ಪದ್ಯವನ್ನು ನಾವು ಅರ್ಥ ಮಡಿಕೊಳ್ಳುವ ಕ್ರಮ ಮತ್ತು ಪದ್ಯ ನಮ್ಮ ಅರಿವನ್ನು ಹೆಚ್ಚಿಸುವ ಕ್ರಮ. ಇದು ಯಾವ ಯಾವ ಹಂತದಲ್ಲಿ ಹೇಗೆ ಹೇಗೆ ಜರುಗುತ್ತದೆ ಎನ್ನುವುದನ್ನು ತಿಳಿಯುವುದಕ್ಕಾಗಿ ಒಂದು ಪದ್ಯವನ್ನು ಆರಿಸಿ ಕೊಂಡಿದ್ದೇನೆ. ಅ ಪದ್ಯ ಅಡಿಗರ ‘ಶ್ರೀ ರಾಮನವಮಿಯ ದಿವಸ’. ಪದ್ಯಕ್ಕೂ ಚಿತ್ರಕ್ಕೂ ಮುಖ್ಯವಾದ ಒಂದು ವ್ಯತ್ಯಾಸವಿದೆ: ಒಂಡು ಚಿತ್ರವನ್ನು ಇಡೀ ನೊಡುತ್ತೇವೆ, ಮೊದಲು; ಅನಂತರ, ಅದು ಮುಖ್ಯವಾದ ಚಿತ್ರ ಅಂತ ನಮಗನ್ನಿಸಿದರೆ, ಅದರ ಒಂದೊಂದು ಬಿಡಿಭಾಗ ಇನ್ನೊಂದು ಭಾಗದ ಜೊತೆ ಹೇಗೆ ಸಾಂಗತ್ಯದಲ್ಲಿದೆ ಅನ್ನುವುದನ್ನು ನೋಡುತ್ತೇವೆ; ಬಣ್ಣಗಳನ್ನು ಹೋಲಿಸಿ ನೋಡುತ್ತೇವೆ. ಚೂರುಚೂರುಗಳನ್ನು ಹೀಗೆ ನೋಡಿದನಂತರ ಮತ್ತೆ ಇಡೀ ನೋಡುತ್ತೇವೆ; ಅಥವಾ ಆ ಚೂರುಗಳನ್ನು ನೋಡುವಾಗಲೂ ನಾವು ಇಡಿಯನ್ನು ನೋಡುತ್ತಾ ಇರುತ್ತೇವೆ. ಆದರೆ ಸಂಗೀತವನ್ನು ಕೇಳಿಸಿಕೊಳ್ಳುವಾಗ ನಾವು ಅದನ್ನು ಒಂದು ಕಾಲದಲ್ಲಿ ಕೇಳಿಸಿಕೊಳ್ಳುತ್ತೇವೆ; ಈಗ ಶುರುವಾದ್ದು, ಹಂತಹಂತವೇರುತ್ತ ಹೋಗುತ್ತದೆ; ಅಂದರೆ ಅದು ಕಾಲದಲ್ಲಿ ಸಂಭವಿಸುತ್ತದೆ. ಸಾಹಿತ್ಯವೂ ಹೀಗೆ ಕಾಲದಲ್ಲಿ ಸಂಭವಿಸುತ್ತದೆ. ಹೊಸ ರೀತಿಯ ಪದ್ಯಗಳು ಬಂದಾಗ ಆದ ತೊಡಕು ಇದು- ಸಾಮಾನ್ಯವಾಗಿ ನಾವು ಪದ್ಯಗಳನ್ನು ಓದುವಾಗ ಅವುಗಳಲ್ಲಿ ಒಂದು ನೇರ ತಾರ್ಕಿಕ ಬೆಳವಣಿಗೆ ಇರುತ್ತದೆ ಎಂದು ತಿಳಿದುಕೊಂಡು ಓದಿದವರು. ಎಲ್ಲಾ ಸರಳರೇಖಾತ್ಮಕ ನಡಿಗೆಯ ನಿರೂಪಣೆಯಲ್ಲೂ, ‘ ಇದು ಆಯ್ತು, ಆದದ್ದರಿಂದ ಇದು ಆಯ್ತು’ ಅನ್ನುವ ಒಂದು ತಾರ್ಕಿಕ ವಿಧಾನ ಇರುತ್ತದೆ. ಅದರೆ ಹೊಸ ರೀತಿಯ ಪದ್ಯಗಳು, ‘ ಇದು ಬಂತು, ಆಮೇಲೆ ಇನ್ನೊಂದು ಬಂತು, ಇವುಗಳಲ್ಲಿ ಏನು ಸಂಬಂಧ? ಎರಡರ ನಡುವೆ ಕಂದಕ ಇದೆಯಲ್ಲವೆ? ’ ಅಂತ ಅನ್ನಿಸುವ ಹಾಗೆ ಇದ್ದವು. ಅಂಥ ಪದ್ಯಗಳನ್ನು ಓದುವಾಗ ನಾನು ಅದನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಹೇಗೆ ಅನ್ನುವುದನ್ನು ತೋರಿಸುವುದಕ್ಕೆ ಈ ಪದ್ಯವನ್ನು ಆರಿಸಿಕೊಂಡಿದ್ದೇವೆ.
ಮೊದಲು ಪದ್ಯವನ್ನು ಓದೋಣ:

ಶ್ರೀರಾಮನವಮಿಯ ದಿವಸ ರಾಮಾನಾಮೃತವೆ
ಪಾನಕ, ಪನಿವಾರ,ಕೋಸಂಬರಿ;
ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ;
ವೃಕ್ಷಮಧ್ಯಕ್ಕೆ ಬಂದುರಿವ ಶಬರಿ,

ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ-
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು;
ಮಣ್ಣೊಡೆದು ಹಸರು ಹೂ ಹುಲ್ಲು ಮುಳ್ಳು.

ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ;
ಅಶ್ವತ್ಥದ ವಿವರ್ತ ನಿತ್ಯಘಟನೆ;
ಗುಮ್ಮಟಗಿರಿಯ ನೆತ್ತಿಯಲಿ ಕಲ್ಲರಳಿದ್ದು
ಕಾರ್ಯಕಾರಣದೊಂದಪೂರ್ವ ನಟನೆ.

ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್‌ವಿಮಾನವೇರಿ ಕೊಂಚ ದೂರ
ತೇಲಿ ಮಣ್ಣಿಗೆ ಮರಳಿ, ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ..

ವೇದೋಪನಿಷದಗಳ ಭೂತಕನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯ್ ಕೂರ್ಮವರಾಹಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ:

ಕೌಸಲ್ಯೆ ದಶರತರ ಪುತ್ರಕಾಮೇಷ್ಠಿ ಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ,
ಆಸ್ಫೋಟಿಸಿತ್ತು ಸಿಡಿತಲೆ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟ ನಿಂತ ಘಟನೆ:

ಬೆಳ್ಳಂಬೆಳಕಿನಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಲೆವ ರಾಜಹಂಸ;
ಅಂತರಂಗದ ಸುರುಳಿ ಬಿಚ್ಚಿ ಸರ್ಚ್‌ಲೈಟಿನಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ..

ಸಂಕಲ್ಪ ಬಲದ ಜಾಗರಣೆ; ಕತ್ತಲಿನೆಡೆಗೆ
ಕಣೆ, ದಂಡಕಾರಣ್ಯಕ್ಕೆ ಹಗಲ ದೊಣ್ಣೆ;
ಮಣ್ಣಿನುಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ
ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ..

ವಿಜೃಂಭಿಸಿತು ರಾಮಬಾಣ; ನಿಜ, ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ:
ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ
ಅನಾದಿ; ಕೋದಂಡ ದಂಡವೂ ಹೀಗೆ ದಂಡ;

ಆಥವಾ ಚಕ್ರಾರಪಂಕ್ತಿ ; ಚಕಮಕಿ ಕಲ್ಲ ನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ..

ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೆ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?

ಈ ಪದ್ಯದಲ್ಲಿ ಒಂದು ಪ್ರತೀಕಕ್ಕೂ ಇನ್ನೊಂದು ಪ್ರತೀಕಕ್ಕೂ ನಡುವೆ ಇರುವ ಮೌನಗಳು ಕೊನೆಯ ಪಕ್ಷ ನನ್ನನ್ನು ಟೀಸ್ ಮಾಡಬೇಕು.. ಟೀಸ್ ಮಾಡಿದರೆ ಇನ್ನೊಂದು ಸಾರಿ ಓದುತ್ತೇವೆ; ಮಾಡದೇ ಇದ್ದರೆ ಓದುವುದಿಲ್ಲ.. ಮಿನಿಮಮ್ ಆಗಿ ನಾನು ಒಂದು ಪದ್ಯದಿಂದ ಕೇಳುವುದು ಇದು..
ಈ ಪದ್ಯ ಓದಿದಾಗ, ಕೆಲವು ಸಾಲುಗಳು, ಅದರಲ್ಲಿರುವ ಲಯಗಾರಿಕೆ, ಸಂಗೀತ , ಇಂಥವು ನನ್ನನ್ನು ಮತ್ತೊಮ್ಮೆ ಅದನ್ನು ಓದಿಕೊಳ್ಳುವಂತೆ ಬೇಡುತ್ತವೆ ಎಂದು ನನಗೆ ಅನ್ನಿಸುವುದರಿಂದ- ಅದು ನನ್ನ ರುಚಿಯ ಮಾತೂ ಆಗಿರುವುದರಿಂದ- ಇನ್ನೊಂದು ಸಾರಿ ಓದುತ್ತೇನೆ.. ಆಗ ನನ್ನ ಗಮನಕ್ಕೆ ಬರುವುದು: ಈ ಪದ್ಯ ಕೇವಲ ಕಾಲದಲ್ಲಿ – ವರ್ತಮಾನದಿಂದ ಭವಿಷ್ಯತ್ತಿಗೆ ಹೋಗುವ ಕಾಲದಲ್ಲಿ – ಮೊತ್ತವಾಗಿ ಬೆಳೆಯುತ್ತಾ ಹೋಗುವ ಪದ್ಯ ಮಾತ್ರವಲ್ಲ; ಈಗ ನಾನು ಓದಿದ ಒಂದು ಮಾತು ಕೊನೆಯ ಸಾ‌ಇನಲ್ಲಿ ಬರುವ ಒಂದು ಮಾತಿನಿಂದ ಮತ್ತೆ ಬೆಳಕನ್ನ ಪಡೆದುಕೊಳ್ಳಬಹುದಾದಂತಹ ಪದ್ಯ ಇದು ಎಂಬುದು.. ಅಂದರೆ ಇದು ಲೀನಿಯರ್ ಸ್ಟ್ರಕ್ಚರ್ ಅಲ್ಲ, ಹಿಂದಿನದು ಮುಂದಿನದನ್ನು ಬಳಸಿಕೊಳ್ಳುತ್ತೆ, ಅಂದರೆ ಒಂದಕ್ಕೊಂದು ಸಂಬಂಧವಿರುವಂತೆ ಇಡೀ ಪದ್ಯ ಜರುಗುತ್ತೆ.. ಬೇಕಾದರೆ ಒಂದು ಮಂಡಳದಲ್ಲಿ ಯಾವ ರೇಖೆಯನ್ನು ನೋಡಿದರೂ ಅದು ಇನ್ನೊಂದು ರೇಖೆಯನ್ನು ಬಂದು ಸೇರಬದುದು; ಮತ್ತೆ ಅಲ್ಲಿಂದ ಶುರುವಾಗಿ ಇನ್ನೊಂದು ರೇಖೆಗೆ ಹೋಗಬಹುದು.. ಆ ರೀತಿಯ ಸಂವಿಧಾನ ಇರುವುದರಿಂದಲೇ ಇಂಥ ಕೆಲವು ಪದ್ಯಗಳು ತೊಡಕಿನಾದಾಗುತ್ತದೆ..

ಮೊದಲನೇ ಸಾರಿ ಪದ್ಯ ಓದುವಾಗ ನಾನು ಅಪೇಕ್ಷಿಸುವ ಮತ್ತೊಂದು ಅಂಶ: ಇದರಲ್ಲಿ ಬರುವ ಚಿತ್ರಗಳು ಕೊಕ್ಕೆಗಳಾಗಿ ನಮ್ಮಲ್ಲಿ ತೂಗಿ ಬೀಳಬೇಕು, ಆಗ, ಇನ್ನೊಂದು ಸಾರಿ ಓದಿದಾಗ, ಕೊಕ್ಕೆಗಳಾಗಿ ನಮ್ಮಲ್ಲಿ ತೂಗಿ ಬೀಳಬೇಕು.. ಕೊಕ್ಕೆಗಳಂತಿರುವ ಮಾತುಗಳೂ ಚಿತ್ರಗಳೂ ನಮಗೆ ನೆನಪಿರುವುದರಿಂದ, ಅವುಗಳ ಅರ್ಥಗಳನ್ನು ಕೂಡಿಸಿಟ್ಟು ಬೆಳೆಸುವ ಪದ್ಯದ ಜೀವಂತ ಅಂಗಗಳೆಂದು ತಿಳಿಯುತ್ತದೆ..

ಜೊತೆಗೆ ಇಂತ ಪದ್ಯಗಳಲ್ಲಿ ನನ್ನ ಅಧಿಕಪ್ರಸಂಗದಿಂದಾಗಿ ಅಲ್ಲಿ ಇಲ್ಲದೇ ಇರುವ ಅರ್ಥವನ್ನೂ ಅದಕ್ಕೆ ನಾನು ಹಚ್ಚಬಹುದಾದ ಅಪಾಯವಿದೆ.. ಬಹಳ ಬುದ್ಧಿವಂತನಾಗಬೇಕು ಅಂತ ಪದ್ಯ ನಮ್ಮನ್ನು ಕೇಳುವುದರಿಂದ, ಅದು ಕೇಳುವುದಕ್ಕಿಂತಲೂ ಹೆಚ್ಚು ಬುದ್ಧಿವಂತನಾಗಿ- ನಾನೆಲ್ಲಿ ದಡ್ಡ ಅಂತ ಜನ ತಿಳಿದುಕೊಳ್ಳುತ್ತಾರೊ ಅಂತಂದುಕೊಂಡು- ಪದ್ಯದಲ್ಲಿ ಇಲ್ಲದೇ ಇರುವ ಅರ್ಥವನ್ನು ಅದು ಸ್ಫುರಿಸುತ್ತೆ ಅಂತ ನಾನು ತಿಳಿಯಬಹುದು.. ಇಂಗ್ಲಿಷ್ ಆಧುನಿಕ ಕಾವ್ಯವನ್ನು ಪಾಠ ಹೇಳುವಾಗ ಇದೊಂದು ಪರೀಕ್ಷೆ ನಾನು ಮಾಡುವುದಿದೆ; ಯೇಟ್ಸ್‌ನನ್ನು ಪಾಠಮಾಡುತ್ತಾ ಇರುವಾಗ ಯಾವುದೋ ಒಂದು, ಬಹಳ ಸರಳವಾಗಿ ಕೂಡಲೇ ಅರ್ಥವಾಗುವಂಥ ಪದ್ಯವನ್ನು ವಿದ್ಯಾರ್ಥಿಗಳಿಗೆ ಕೊಟ್ಟರೆ, ಅದರಲ್ಲಿ ಏನೋ ಇರಬೇಕು ಎಂದು ಅವರು ಅರ್ಥ ಬಿಡಿಸಲಿಕ್ಕೆ ಪ್ರಾರಂಭಿಸಿ ಆ ಪದ್ಯ ನಿಜವಾಗಿಯೂ, ತನ್ನ ಸದ್ಯತನದಲ್ಲಿ ಕೊಡಬಹುದಾದ್ದನ್ನು ಸ್ವೀಕರಿಸಲಾರದೇ ಪದ್ಯವನ್ನು ಕಗ್ಗಂಟುಮಾಡಿಕೊಂಡುಬಿಡುತ್ತಾರೆ.. ಅಂದ್ರೆ ಎಷ್ಟು ಪ್ರತಿಕ್ರಿಯಿಸಬೇಕೋ ಅಷ್ಟು ಪ್ರತಿಕ್ರಿಯಿಸದೇ- ಒಂದೋ ಹೆಚ್ಚು ಪ್ರತಿಕ್ರಿಯಿಸುವುದು ಅಥವಾ ಕಡಿಮೆ ಪ್ರತಿಕ್ರಿಯಿಸುವುದು- ಇದು ಎಲ್ಲಾ ಓದಿನಲ್ಲೂ ಇರಬಹುದಾದ ಅಪಾಯ.. ವಿಮರ್ಶೆ ಎಂದರೆ ಈ ಅಪಾಯದಿಂದ ಹೇಗೆ ಪಾರಾಗುವುದು ಎನ್ನುವುದನ್ನು ನಮಗೆ ಕಲಿಸುವ ಒಂದು ಶಿಸ್ತು.. ಈಗ ಆ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಈ ಪದ್ಯವನ್ನು ಓದುತ್ತೇನೆ..

ರಾಮಾನಾಮೃತವೆ ಪಾನಕ, ಪನಿವಾರ,ಕೋಸಂಬರಿ.. ರಾಮನ ಹೆಸರು ಹೇಳುವುದೇ ಅಮೃತ ಎನ್ನುತ್ತಿದ್ದಾರೆ.. ಅಂದರೆ ಅದೊಂದು ರುಚಿಯಾದ ವಿಷಯ, ನಾಲಗೆಗೆ ಸಿಗುವಂಥದ್ದು.. ಅದು ಪಾನಕ, ಪನಿವಾರ,ಕೋಸಂಬರಿ, ‘ಕರಬೂಜ ಸಿದ್ದೋಟುಗಳ ಹೋಳು’.. ರಾಮನವಮಿ ಆಗುವ ಸಮಯವೇ ಮಾರ್ಕೆಟ್ಟುಗಳಲ್ಲಿ ಕರಬೂಜ, ಸಿದ್ದೊಟು ಸಿಗುವ ಸಮಯ.. ಒಂದು ಇಡೀ ಋತುವನ್ನು, ಎರಡು ಹಣ್ಣುಗಳ ಮುಖಾಂತರ, ನೆನಪಿಗೆ ತರುತ್ತಾರೆ.. ಅಂದರೆ ಇವೆಲ್ಲ ನನ್ನ ಮನಸ್ಸಿನಲ್ಲಿ ಕೊಕ್ಕೆಗಳ ಹಾಗೆ ಬೀಳುತ್ತಿವೆ..

ಇಷ್ಟರವರೆಗೆ ಪದ್ಯ ನನಗೆ ಸಂಪೂರ್ಣ ಅರ್ಥವಾಗುವ ನೆಲೆಯಲ್ಲಿಯೇ ಇದ್ದೇನೆ.. ಇದ್ದಕಿದ್ದ ಹಾಗೇ, ಕೂಡಲೇ ಅರ್ಥವಾಗದ ನೆಲೆಗೆ ನನ್ನನ್ನು ತೆಗೆದುಕೊಂಡು ಹೋಗುವಂತೆ ಕವಿ ‘ವ್ಯಕ್ತ ಮಧ್ಯಕ್ಕೆ ಬಂದುರಿವ ಶಬರಿ’ ಅನ್ನುತ್ತಾರೆ.. ಇಲ್ಲಿರುವ ತೊಡಕೇನು ಹೇಳುತ್ತೇನೆ.. ವ್ಯಕ್ತ ಮಧ್ಯ ಎನ್ನುವುದು ಮೊದಲನೇ ತೊಡಕು; ಅದು ಬರೀ ಶಬ್ದದ ಅರ್ಥದ ತೊಡಕಲ್ಲ; ವ್ಯಕ್ತವಾಗುವ ಮಧ್ಯದ ವಾಚ್ಯಾರ್ಥ ಸ್ಪಷ್ಟವಾದ್ದು.. ಆದರೆ ಗೀತೆಯನ್ನು ಓದಿದವನಿಗೆ ಗೊತ್ತಾಗುತ್ತೆ; ಸಾವಿನನಂತರದ್ದು, ಅವ್ಯಕ್ತ; ಹುಟ್ಟಿಗಿಂತ ಪೂರ್ವದ್ದು , ಅವ್ಯಕ್ತ.ಈ ಬದುಕು ಎನ್ನುವುದು ‘ವ್ಯಕ್ತಮಧ್ಯ’.

‘ವ್ಯಕ್ತ ಮಧ್ಯಕ್ಕೆ ಬಂದುರಿವ ಶಬರಿ’: ಉರಿಯುವ ಎಂದೇ ಯಾಕೆ? ನನಗದು ಭಾವುಕವಾಗಿ ಗೊತ್ತಾಗುತ್ತೆ; ಅವಳು ರಾಮನಿಗಾಗಿ ಆ ರೀತಿ ಕಾಯುತ್ತಾಳೆ.. ‘ಉರಿವ’ ಅನ್ನುವುದು ಕಾಯುತ್ತಿರುವುದಕ್ಕೆ ಒಂಡು ಪ್ರತೀಕವಾಗಿ ನನಗೆ ಸದ್ಯ ಅನ್ನಿಸುತ್ತಿದೆ: ಬೆಳಕಿಂದ ಉರಿಯುವ, ಅಥವಾ ನೋವಿನಿಂದ ಉರಿಯುವ, ಆತಂಕದಿಂದ ಉರಿಯುವ ಇತ್ಯಾದಿ.. ಇಷ್ಟನ್ನು ನಾನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇನೆ.. ‘ಯಾಕೆ ಹಣ್ಣಿನ ಹೋಳಿನ ಜೊತೆ ಶಬರಿಯೂ ಬಂದಳು?’ ಅಂತ ಕೇಳಿ ಪದ್ಯವನ್ನು ಕೆಡಿಸಿಕೊಳ್ಳುವುದಕ್ಕೆ ಸದ್ಯದಲ್ಲಿ ನನಗೆ ಇಷ್ಟವಿಲ್ಲ.. ಏನೋ ಇರಬೇಕು ಕಾರಣ.. ಹಣ್ಣಿನ ಹೆಸರುಗಳು ಬಂದವು.. ನಂತರ ಇದ್ದಕ್ಕಿದ್ದಹಾಗೆ ಶಬರಿಯೂ ಬಂದಳು.. ಶಬರಿ ಹಣ್ಣನ್ನು ರಾಮನಿಗೆ ಕೊಡುತ್ತಾಳೆ.. ಆದ್ದರಿಂದ ಹಾಗೆ ಬಂದಿರಬಹುದು.. ಅಂದರೆ ಈ ಅರ್ಥಗಳನ್ನೆಲ್ಲಾ ನಾನು ಸಸ್ಪೆಂಡ್ ಮಾಡಿರ್ತೀನಿ.. ( ಇಡೀ ಋತುವೇ ಶಬರಿಯಂತೆಯೆ ಉರಿಯುತ್ತ ಕಾದಿರಬಹುದೆ?)
ಮುಂದಿನ ಸ್ಟಾಂಜಾಕ್ಕೆ ಹೋಗುತ್ತೇನೆ:

ಕಾಮ ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ-
ಕುಳಿತ ಮೂಲಾಧಾರ ಜೀವಧಾತು

ಇಲ್ಲಿ ಬಿಸಿಲಿನಲ್ಲಿ ಕಾಯುತ್ತ ಮಣ್ಣಿನ ಒಳಗಡೆ ಇರುವ ಒಂದು ಬೀಜದ ಚಿತ್ರವಿದೆ.. ಮೂಲಾಧಾರ ಎಂದಿರುವುದರಿಂದ ಅದು ಬರೀ ಬೀಜವಲ್ಲ; ಆದರೆ ಬೀಜವೂ ಹೌದು.ಕವಿ ಅಲ್ಲಿ ಸಂಸ್ಕೃತ ಶಬ್ದವನ್ನು ಬಳಸಿದ ಕೂದಲೇ ಅದನ್ನು ಇಂದ್ರೀಯಗಳಿಗೆ ಗೋಚರವಾಗುವ ವಿಷಯಕ್ಕೆ ಮಾತ್ರವಲ್ಲದೇ, ಇಂದ್ರಿಯಾತೀತವಾದ ಯಾವುದನ್ನೋ ಸೂಚಿಸುವುದಕ್ಕೂ ಉಪಯೋಗಿಸುತ್ತಿರಬಹುದೆಂದು ಅನ್ನಿಸುತ್ತದೆ. ಆದರೆ ಆ ಪದ ಸೂಚಿಸುವ ಅರ್ಥ ’ವ್ಯಕ್ತ ಮಧ್ಯದಂತೆಯೆ’ ಇಂದ್ರಿಯಗ್ರಾಹ್ಯವಾಗಿಯೂ ಇದೆ. ರಾಮನವಮಿ ಆಚರಿಸುವುದು ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ. ಕಾದ ಂಅಣ್ಣಿನೊಳಗಡೆ ಕುಳಿತ ಮೂಲಾಧಾರ ಜೀವಧಾತು ಎಂದೊಡನೆಯೇ ಹಿಂದೆ ಮಾರ್ಕೆಟ್ಟಿನಲ್ಲಿ ಸಿಗುವ ಹಣ್ಣುಗಳಿಂದ ಋತುವನ್ನು ಕವಿ ನೆನಪು ಮಾಡಿದಂತೆಯೇ, ಇದು ಏಪ್ರಿಲ್ಕಾಲದ ಸೆಖೆಯನ್ನೂ ನೆನಪು ಮಾಡುತ್ತದೆ- ಅಲ್ಲಿ ಕಾದಿರುವ ಶಬರಿ; ಇಲ್ಲಿ ಕಾದಿರುವ ಬೀಜ. ’ಕಾದಿರುವ’ ಎನ್ನುವ ಕಲ್ಪನೆಯೆ ಇಲ್ಲಿ ಮತ್ತಷ್ಟು ಬೆಳೆಯಿತು.

ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು
ಮಣ್ಣೊಡೆದು ಹಸುರು ಹೂ ಹುಲ್ಲು ಮುಳ್ಳು

ಈಗ ಇಲ್ಲಿ ವಾಕ್ಯದಲ್ಲಿ ಅನ್ಯವೆನ್ನಿಸುವ ಇನ್ನೊಂದು ಶಬ್ದ ಸಿಕ್ಕಿತು, ‘ಸಹಸ್ರಾರ’.. ಇದು ಯೋಗದ ಪಾರಿಭಾಷಿಕ ಪದವಾಗಿದ್ದರು ಆ ಅರ್ಥದಲ್ಲಿ ಮಾತ್ರ ಇದನ್ನು ಸ್ವೀಕರಿಸಬೇಕಾಗಿಲ್ಲ.. ಆ ಬೀಜ ಮಣ್ಣಿನೊಳಗಡೆ ಇದ್ದು ಮರವಾಗಿ ಮೇಲಕ್ಕೆ ಹೋಗುವಂಥದ್ದು ಅಥವಾ ಮೋಡದಿಂದ ನೀರನ್ನು ಬಯಸುವಂಥದ್ದು.‘ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು’; ಇಲ್ಲಿಯೂ ಕೂಡ ’ಸಹಸ್ರಾರ’ ಎಂಬ ಸಂಸ್ಕೃತ ಪದ ಅಮೂರ್ತವಾದ್ದನ್ನು ಮೂರ್ತದ ಚೌಕಟ್ಟಿನಲ್ಲಿಟ್ಟು ಹೊಸ ಅರ್ಥವನ್ನು ಹೊಮ್ಮಿಸುವ ಪ್ರಯತ್ನ ಮಾಡುತ್ತಿದೆ.. ಜೊತೆಗೇ ಇಲ್ಲಿ ಗಮನಿಸಿ: ಬೀಜ ಇರುತ್ತೆ; ಮಳೆ ಬೀಳುತ್ತೆ;ಮೊಳಕೆ ಬರುತ್ತೆ; ಹೂ ಹಣ್ಣು ಇತ್ಯಾದಿಗಳೆಲ್ಲವೂ ಆಗುತ್ತವೆ.. ಇದು ಒಂಡು ಜೈವಿಕ ಪ್ರಕ್ರಿಯೆ- ಆರ್ಗಾನಿಕ್ ಪ್ರೋಸೆಸ್.. ನನಗಿನ್ನೂ ಗೊತ್ತಿಲ್ಲ, ಯಾತಕ್ಕೆ ಶಬರಿಯ ನಂತರ ಇದು ಬರುತ್ತಿದೆ ಎನ್ನುವುದು..

ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ;
ಅಶ್ವತ್ಥದ ವಿವರ್ತ ನಿತ್ಯಘಟನೆ;
ಗುಮ್ಮಟಗಿರಿಯ ನೆತ್ತಿಯಲಿ ಕಲ್ಲರಳಿದ್ದು
ಕಾರ್ಯಕಾರಣದೊಂದಪೂರ್ವ ನಟನೆ..

ಇಲ್ಲಿ ಮಣ್ಣನ್ನು ‘ಉಟ್ಟ; ಎನ್ನುತ್ತಿದ್ದಾರೆ.. ಈ ಪದ್ಯದಲ್ಲಿ ಕೆಲವು ಕೊಕ್ಕೆಗಳು ಮೊದಲೇ ನನ್ನನ್ನು ಸಿಗಿಸಿದವು ಎಂದು ಹೇಳಿದೆ.. ಅದರಲ್ಲಿ ಈ ಶಬ್ದವೂ ಒಂದು.. ಮೊದಲ ಎರಡು ಸಾಲು ಗಮನಿಸಿ: ಮರ ಹುಟ್ಟಿ ಬೆಳೀತಾ ಇರೋದು- ಇದು ಪ್ರತಿನಿತ್ಯ ನಡೆಯುತ್ತಿರುವ ಘಟನೆ, ಅನಂತರ ಬರುವುದು, ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ ಕಾರ್ಯಕಾರಣದ ಒಂದು ‘ಅಪೂರ್ವ’ ನಟನೆ: ಅಲ್ಲಿ ‘ನಿತ್ಯಕ್ಕೆ’ ಇಲ್ಲಿ ‘ಅಪೂರ್ವ’ ವಿರೋದವಾಗಿದೆ.. ಮರ ಹೂ ಬಿಡೋದು, ಚಿಗುರೋದು, ಬೆಳೆಯೋದು ನಿತ್ಯ ಸಂಭವಿಸುವ ಘಟನೆಯಾದರೆ ಒಬ್ಬ ಗುಮ್ಮಟನ ಉದಯವಾಗುವುದು ಯಾವುದೋ ಕಾಲದಲ್ಲಿ, ಚರಿತ್ರೆಯಲ್ಲಿ ಜರುಗುವಂತಹುದು.. ಅದೊಂದು ಅವತಾರ.. ಕಾರ್ಯಕಾರಣ ಅಪೂರ್ವವಾಗಿ ಸೇರಿದಾಗ‘ ಜರುಗುವುದು’ – ಅದನ್ನು ನಟನೆ ಎನ್ನುತ್ತಾರೆ.. ಅಂದರೆ ಮನುಷ್ಯ ಮಾಡಿ ತೋರಿಸುವಂತಹದು.. ಜೈವಿಕ ಪ್ರಕ್ರಿಯೆಗೆ ಸಂಬಧಿಸಿದ್ದರೂ, ಅದರಷ್ಟು ಸಹಜವಾದದ್ದಲ್ಲ, ‘ಅಸಹಜ’ವಾದದ್ದು.. ನಾನಿದನ್ನು ನೆಗೆಟಿವ್ ಅರ್ಥದಲ್ಲಿ ಹೇಳುತ್ತಿಲ್ಲ; ಅದೊಂದು ನಟನೆ; ಅದು ಮಾಡುವ ಕ್ರಿಯೆ; ಸಹಜವಾಗಿ ಆಗುವ ಕ್ರಿಯೆ ಅಲ್ಲ..
ಯಾಕೆ ಅಶ್ವತ್ಥವನ್ನೂ, ಗೊಮ್ಮಟವನ್ನೂ ಒಂದಕ್ಕೊಂದು ವಿರೋಧವಾಗಿ, ಒಂದೇ ಸ್ಟಾಂಜಾದಲ್ಲಿ ನಿಲ್ಲಿಸಿದ್ದಾರೆ ಎಂಬ ಪ್ರಶ್ನೆಯನ್ನು ಹೊತ್ತುಕೊಂಡು ಮುಂದಕ್ಕೆ ಹೋಗುತ್ತೇನೆ..

ನೆಲಕ್ಕಂಟಿ ಬಿದ್ದ ಆಕಶಯಾನದ ಕನಸು
ಜೆಟ್‌ವಿಮಾನವೇರಿ ಕೊಂಚ ದೂರ
ತೇಲಿ ಮಣ್ಣಿಗೆ ಮರಳಿ, ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ..

ಗೊಮ್ಮಟನನ್ನು ಕೆತ್ತಿ ನಿಲ್ಲಿಸಿದ್ದರೆ ಜತೆಗೇ ಮನುಷ್ಯನ ಇನ್ನೊಂದು ಕನಸು- ಆಕಾಶಯಾನದ ಕನಸು- ಜೆಟ್ ವಿಮಾನವಾಗಿ, ನಂತರ ರಾಕೆಟ್ಟುಗಳಾಗಿ, ಈಗ ಅದು ತಿಂಗಳಿಗೆ ಅಂದರೆ ಚಂದ್ರನಿಗೆ ಬಡಿಯುವ ಆಧುನಿಕ ವಿಕಾರವಾಗಿದೆ.. ಹಿಂದಿನದನ್ನು ನಟನೆ ಎಂದರು; ಇದನ್ನು ವಿಕಾರ ಅಂದರು.. ಗೊಮ್ಮಟನನ್ನು ಕೆತ್ತಿ ನಿಲ್ಲಿಸಿದ್ದೂ ಸಂಕಲ್ಪದಿಂದ; ಆಕಾಶಯಾನದ ಕನಸನ್ನು ನಿಜ ಮಾಡಿಕೊಂಡು ಚಂದ್ರನಿಗೆ ಬಡಿವಾಧುನಿಕ ವಿಕಾರವೂ ಸಂಕಲ್ಪದಿಂದಲೇ ಸಾಧ್ಯವಾದದ್ದು.. ಆದರೆ ಒಂದು ನಟನೆ ಮತ್ತೊಂದು ವಿಕಾರ..
ಹೀಗೆ ಓದುತ್ತಿದ್ದಂತೆ ಶಬರಿಯೂ ಅಂಥದೇ ಇನ್ನೊಂದು ಬಗೆಯ- ರಾಮನನ್ನು ಪಡೆವ- ಸಂಕಲ್ಪದಲ್ಲಿ ನಿಂತವಳು ಎಂದು ನಿಮಗೆ ಗೊತ್ತಾಗುತ್ತದೆ..

ಮುಂದೆ-
ವೇದೋಪನಿಷದಗಳ ಭೂತಕನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯ್ ಕೂರ್ಮವರಾಹಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ:

ಹುತ್ತಗಟ್ಟಿದ ಅಂದ ಕೂಡಲೇ ಗೊತ್ತಾಗುತ್ತದೆ- ರಾಮನನ್ನು ಧ್ಯಾನಿಸುತ್ತ ಹುತ್ತದೆ ಒಳಗಿರುವ ವಾಲ್ಮೀಕಿ ಎಂದು.. ಅವನೂ ಒಂದು ಸಂಕಲ್ಪದಲ್ಲಿ ವ್ರತದಲ್ಲಿ ಕಾಯುತ್ತ ಕೂತವನು.. ಅವನ ‘ಕೈ ಕಡೆದ ನೋಟ’ ಯಾವುದು?- ರಾಮ.. ಆದರೆ ಬರೀ ರಾಮ ಅಲ್ಲ, ಮತ್ಸ್ಯ ಕೂರ್ಮವರಾಹ ಮೆಟ್ಟಿಲುಗಳೇರುತ್ತ ಆದ ರಾಮ; ಉನ್ಮುಖ ಬೆಳವಣಿಗೆಯ ವಿಕಾಸವಾದ ಇದೆ ಇಲ್ಲಿ.. ಅಷ್ಟೇ ಅಲ್ಲ; ರಾಮನ ಸೃಷ್ಟಿಯ ಹಿಂದೆ ವೇದೋಪನಿಷದಗಳ ಆದರ್ಶಕ್ಕೆ ತತ್ಸಮವಾದ ಒಂದು ರೂಪವನ್ನು ಒಬ್ಬ ಕವಿ ಸೃಷ್ಟಿಸಿದ ಕ್ರಿಯೆ ಕೂಡ ಇದೆ.. ಈ ವೇದೋಪನಿಷದುಗಳು ಇರುವುದನ್ನು ದೊಡ್ಡದಾಗಿಮಾಡಿ ತೋರಿಸುವ ‘ಭೂತ’ ಕನ್ನಡಿ; ಜೊತೆಗೇ ವರ್ತಮಾನ ಕಾಲವನ್ನು ನಿರ್ದೇಶಿಸಬಲ್ಲ ‘ಭೂತ’ನಾಗಿದ್ದಾನೆ.. ‘ಕವಿ ತನ್ನ ಕೃತಿಗೆ ತಾನೆ ಮಣಿವನ್’ ಎಂಬಂತೆ.. ಅಂದರೆ ರಾಮನ ಅವತಾರ ಸಾಧ್ಯವಾದದ್ದು; ವೇದೋಪನಿಷದುಗಳ ಭೂತ ಕನ್ನಡಿಯಲ್ಲಿ ಕಂಡಿದ್ದನ್ನು ಪಡಿಮೂಡಿಸಿದ್ದರ ಮುಖಾಂತರ; ಮತ್ತು ಹೀಗೆ ಪಡಿಮೂಡಿಸಿದ್ದು ಕವಿ ತನ್ನ ಸುತ್ತ ಹುತ್ತವನ್ನು ಕಟ್ಟಿಸಿಕೊಳ್ಳುವಷ್ಟು ಸಂಕಲ್ಪ ಬಲದ ಪ್ರತಿಯಾಗಿದ್ದರ ಮುಖಾಂತರ.. ಗ ನಮಗೆ ಹಿಂದೆ ಬಂದ ಶಬರಿ ಜ್ಞಾಪಕಕ್ಕೆ ಬರುತ್ತಾಳೆ.. ಅಂದರೆ ಪದ್ಯ ಮುಂದೆ ಹೋಗುತ್ತಾ ಇರುವಾಗಲೇ ನಾವು ಹಿಂದಕ್ಕೂ ಹೋಗುತ್ತಾ ಇರುತ್ತೇವೆ.. ಬೇರೆ ಬೇರೆ ರೀತಿಯ ಪ್ರಕ್ರಿಯೆಗಳಲ್ಲಿ ಮನುಷ್ಯ ಸಂಕಲ್ಪ ಸೃಷ್ಟಿಸಿದ್ದನ್ನೂ ಗ್ರಹಿಸುತ್ತಿದ್ದೇವೆ- ಗೊಮ್ಮಟ, ಜೆಟ್ ವಿಮಾನ, ರಾಮ- ಹೀಗೆ..
ಮುಂದೆ-

ಕೌಸಲ್ಯೆ ದಶರತರ ಪುತ್ರಕಾಮೇಷ್ಠಿ ಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ,
ಆಸ್ಫೋಟಿಸಿತ್ತು ಸಿಡಿತಲೆ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟ ನಿಂತ ಘಟನೆ:

ಇಲ್ಲಿಯೂ ಕೂಡ ‘ಕೆಳಪಟ್ಟು’ ಶಬ್ದ ನನ್ನನ್ನು ಕೊಕ್ಕೆಯಾಗಿ ಹಿಡಿಯುತ್ತದೆ.. ಮೇಲ್ಪಟ್ಟು ಎಂಬ ಪದ ಕೇಳಿದ್ದೇವೆ; ಆದರೆ ಕೆಳಪಟ್ಟು ಎಂಬುದನ್ನು ಕೇಳಿಲ್ಲ.. ‘ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ’ – ಇದರಲ್ಲಿರುವ ವಕ್ರತೆ ನನ್ನನ್ನು ಆಕರ್ಷಿಸುತ್ತದೆ; ಜೊತೆಗೇ ಇನ್ನೊಂದು ಸಾರಿ ಪದ್ಯ ಓದಬೇಕೆಂದು ಈ ಸಾಲು ನನ್ನನ್ನು ಬೇಡುತ್ತದೆ.. ಕೌಸಲ್ಯೆ ದಶರಥರಿಗೆ ಮಗ ಬೇಕು ಎನ್ನುವ ಅಪೇಕ್ಷೆ- ಸಾಮಾನ್ಯವಾಗಿ ಎಲ್ಲಾ ದಂಪತಿಗಳಿಗೂ ಇರುವ ಪುತ್ರ ಸಂತಾನದ ಒಂದು ಅಪೇಕ್ಷೆ.. ವಾಲ್ಮೀಕಿಗೆ ವೇದೋಪನಿಷದುಗಳ ಭುತಗನ್ನಡಿಯೊಳಗೆ ವ್ಯಕ್ತವಾಗುವ ಆದರ್ಶಗಳನ್ನೆಲ್ಲ ಸಫಲಮಾಡಿಕೊಂಡಿದ್ದರ ಫಲವಾಗಿ ರಾಮ ಮೂಡಿದ್ದರೆ, ಒಬ್ಬ ಸಾಮಾನ್ಯ ತಂದೆ ತಾಯಿಗಳಿಗೆ ಮಗ ಬೇಕು ಎಂಬಾಶೆಯೇ ರಾಮ ಆದ.. ಆದರೆ ಇಲ್ಲಿ ಮತ್ತೊಂದು ವಿಶೇಷವೂ ಇದೆ..

ಅದು ಹಠಾತ್ತಾಗಿ, ಈ ಆಸೆ ಅಥವಾ ಅಪೇಕ್ಷೆ- ತಂದೆ ತಾಯಿಯಾದವರ ಸಂತಾನದ ಆಶಯ ಒಂದು ಗೆರೆ=ವರ್ತಮಾನದ ಭೂತ ಭವಿಷ್ಯತ್ತುಗಳ ತ್ರಿಕಾಲ ಚಕ್ರವನ್ನು ಅಕಸ್ಮಾತ್ತಾಗಿ ಮುಟ್ಟಿದ ಘಟನೆಯೂ ಆಗಿದೆ.. ಗುಮ್ಮಟ ಗಿರಿಯ ನೆತ್ತಿಯಲ್ಲಿ ಗುಮ್ಮಟ ಅರಳಿದ್ದು ಕೂಡ ಹೇಗೆ ಒಂದ್ ಅಪೂರ್ವವಾದ ಘಟನೆಯೋ, ಹಾಗೆಯೇ ಇದೂ ಕೂಡ ಹಠತ್ತಾಗಿ ಆದದ್ದು.. ನಾನು ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿರುವುದರಿಂದ ಇಲ್ಲಿ ಕೂಡ ಎಲಿಯಟ್‌ನ ಒಂದು ಮಾತು ನೆನಪಿಗೆ ಬರುತ್ತದೆ.. ‘iಟಿಣಡಿesಣiಟಿg oಜಿ ಣhe ಣemಠಿoಡಿಚಿಟ ತಿiಣh ಣhe ಟಿoಟಿ-ಣemಠಿoಡಿಚಿಟ’, ಐಹಿಕವಾದ ಕಾಲ ಇದೆಯಲ್ಲ ಅದು ಈ ತ್ರಿಕಾಲವನ್ನು ಎಲ್ಲೋ ಮುಟ್ಟಿದಾಗ ಏಸುವಿನ ಜನ್ಮವಾಯಿತು ಎಂದು ಒಂದು ಕಲ್ಪನೆಯಿದೆ.. ಹಾಗೆಯೇ ಚರಿತ್ರೆಗೆ ಅತೀತವಾದ ತ್ರಿಕಾಲವನ್ನು ಮುಟ್ಟಿದ ಆ ಕ್ಷಣದಲ್ಲಿ ರಾಮನ ಜನ್ಮವಾಯಿತು..

ಕೌಸಲ್ಯೆ ದಶರತರ ಪುತ್ರಕಾಮೇಷ್ಠಿ ಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ..

ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ | ಆಸ್ಫೋಟಿಸಿತ್ತು ಸಿಡಿತಲೆ;’: ಅಂದ ಕೂಡಲೇ ಹಿಂದೆ ರಾಕೆಟ್ಟು ಬಂದದ್ದು ನೆನಪಾಗುತ್ತದೆ.. ರಾಕೆಟ್ಟಿನ ತುದಿಯನ್ನು ಸಿಡಿತಲೆ ಅನ್ನುತ್ತಾರೆ, ಕನ್ನಡದಲ್ಲಿ.. ‘ಆಸ್ಫೋಟಿಸಿತ್ತು ಸಿಡಿತಲೆ; ಗರಿಷ್ಠ ತೇಜದ ಮೊನೆ’: ಎಲ್ಲಾ ತೇಜಸ್ಸೂ ತನ್ನ ಗರಿಷ್ಠ ಅವಸ್ಥೆಯಲ್ಲಿ ಇರುವ ಚೂಪಾದ ತುದಿ ಅದು.. ಸಾಮಾನ್ಯವಾಗಿ ರಾಕೆಟ್ಟು ಅಂದರೆ ಮೇಲೆ ಹೋಗುವ ವಸ್ತು ಎಂದೇ ನಾವು ಯೋಚನೆ ಮಾಡುತ್ತೇವೆ.. ಇಲ್ಲಿ ಅದು ಕೆಳಗೆ ಬರುವ ವಸ್ತುವಾಗಿದೆ; ‘ಕೆಳಪಟ್ಟು ಮಣ್ಣುಟ್ಟ ನಿಂತ ಘಟನೆ’.. ಹಿದೆ ಬಂದಿದ್ದ ರಾಕೆಟ್ಟು ‘ತಿಂಗಳಿಗೆ ಬಡಿವಾಧುನಿಕ ವಿಕಾರ’ವಾದರೆ ಇಲ್ಲಿ ಅದರ ಗರಿಷ್ಠ ತೇಜದ ಮೊನೆ ಭೂಮಿಯಲ್ಲಿ ಅವತರಿಸುತ್ತದೆ, ಮೂರ್ತವಾಗುತ್ತದೆ- ರಾಮನಾಗುತ್ತದೆ..

ಬೆಳ್ಳಂಬೆಳಕಿನಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಲೆವ ರಾಜಹಂಸ;
ಅಂತರಂಗದ ಸುರುಳಿ ಬಿಚ್ಚಿ ಸರ್ಚ್‌ಲೈಟಿನಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ..

ಬೆಳ್ಳಂಬೆಳಕಿನಲಿ ಬಿಳಿಹಾಯಿಗಳ ಪರದಾಟ,’- ಇದನ್ನು ಬರೇ ಚಿತ್ರವಾಗಿಯೇ ಕಲ್ಪಿಸಿಕೊಳ್ಳಿ.. ಹಿಂದಿನ ಸ್ಟಾಂಜಾದಲ್ಲಿ ‘ಸಹಸ್ರಾರ’ ಬಂದಿದ್ದರಿಂದ ಇಲ್ಲಿ ಹಂಸ ಬಂದಕೂಡಲೇ ಅದನ್ನು ಆತ್ಮ ಇತ್ಯಾದಿ ಅರ್ಥಗಳಲ್ಲೂ ಸ್ವೀಕರಿಸಬಹುದೇನೋ ಎನ್ನಿಸುತ್ತದೆ.. ಹಾಲ್ಗಡಲ ಬಗೆದು’ ‘ಬಗೆದು’ ಎಂದರೆ ಅರ್ಥಮಾಡಿಕೊಂಡು, ಬೇರ್ಪಡಿಸುತ್ತ, ಹಾಗೆಯೇ ಸೀಳುತ್ತ ಒಲೆವ ರಾಜಹಂಸ.. ಈಗ ಕೊನೆಯ ಎರಡು ಸಾಲುಗಳನ್ನು ಗಮನಿಸಿ.. ಯಾರಾದರೂ ಯುದ್ಧಕಾಲದಲ್ಲಿ ಸರ್ಚ್ ಲೈಟನ್ನು ನೋಡಿದ್ದರೆ ಇದು ಕೂಡ ಕಣ್ಣಿಗೆ ಕಟ್ಟುವ ಒಂದು ಚಿತ್ರ.. ಸರ್ಚ್ ಲೈಟ್ ಆಕಾಶದಲ್ಲಿ ಚಲಿಸುವ ಒಂದು ರೋಡ್ ಆಗುತ್ತದೆ; ಇಡೀ ಪ್ರದೇಶವನ್ನು ಅದು ಸ್ಕ್ಯಾನ್ ಮಾಡುತ್ತದೆ.. ಆಕಾಶದಲ್ಲಿ ಎನೇ ಹಾರಾಡುತ್ತಿರಲಿ ಸರ್ಚ್‌ಲೈಟಿನಲ್ಲಿ ಎಲ್ಲವು ಸ್ಪಷ್ಟವಾಗಿ ಗೋಚರವಾಗುತ್ತದೆ.. ರಾಮನ ಕಥೆ ಗೊತ್ತಿರುವವರಿಗೆಲ್ಲ ತಿಳಿದಿರುವ ಅಂಶ ಏನೆಂದರೆ, ರಾಮ ತನ್ನ ಎಲ್ಲಾ ಕಾರ್ಯಗಳನ್ನೂ ಸಂಪೂರ್ಣವಾಗಿ ಜನರ ಕಣ್ಣೆದುರಿಗೇ ಮಾಡಿಕೊಂಡು ಬದುಕಿದವನು.. ಈ ಅರ್ಥದಲ್ಲಿ ಅವನ ಚರಿತ್ರೆ ಅಂತರಂಗದ ಸರ್ಚ್‌ಲೈಟಿನಲ್ಲಿ ನಮ್ಮ ಕಣ್ಣೆದುರು ಹಾಸಿದ್ದು.. ಈ ಕಾರಣಕ್ಕಾಗಿಯೇ ರಾಮ ಗಾಂಧೀಜಿಗೆ ನೈತಿಕ ಆದರ್ಶ ಆದದ್ದು.. ಉದ್ಧದ ಚಿತ್ರಗಳು ಹಿಂದೆ ಕೂಡ ಬಂದಿವೆ.. ರಾಮಾಯಣವೂ ಕೂಡ ಒಂದು ಯುದ್ಧ ನೋಡಿ- ರಾವಣನ ಜೊತೆಗೆ ರಾಮಮಾಡಿದ ಯುದ್ಧ ಆದುದರಿಂದಲೇ ಈ ‘ಸರ್ಚ್‌ಲೈಟ್’ ಅನ್ನುವುದು ಆ ಯುದ್ಧದ ಸಂಗತಿಗಳಲ್ಲಿ ನನ್ನ ಮನಸ್ಸಿಗೆ ತರುತ್ತದೆ..

ಸಂಕಲ್ಪ ಬಲದ ಜಾಗರಣೆ; ಕತ್ತಲಿನೆಡೆಗೆ
ಕಣೆ, ದಂಡಕಾರಣ್ಯಕ್ಕೆ ಹಗಲ ದೊಣ್ಣೆ;
ಮಣ್ಣಿನುಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ
ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ..

ಇಡೀ ರಾಮಾಯಣವನ್ನು ಇಲ್ಲಿ ನಾಲ್ಕು ಸಾಲುಗಳಲ್ಲಿ ಹೇಳಿದ್ದಾರೆ.. ಸಂಕಲ್ಪ ಬಲದ ಜಾಗರಣೆ’; ಇದು ಸದಾ ಎಚ್ಚರವಿರುವಂಥಹ ಸ್ಥಿತಿ.. ಇಲ್ಲಿ ‘ಸಂಕಲ್ಪ’ ಶಬ್ದ ಸಿಕ್ಕಿದ ಕೂಡಲೇ ಹಿಂದಿನ ಮತ್ತು ಸಂಕಲ್ಪ ವ್ರತದ ಚಿತ್ರಗಳೆಲ್ಲವೂ ನಂಗೆ ಇನ್ನಷ್ಟು ಸ್ಪಷ್ಟವಾಗುತ್ತವೆ.. ‘ಕತ್ತಲಿನೆಡೆಗೆ ಕಣೆ, ದಂಡಕಾರಣ್ಯಕ್ಕೆ ಹಗಲ ದೊಣ್ಣೆ’; ಆ ದೊಣ್ಣೆ ಹಿಡಿದು ರಾಮ ದಂಡಕಾರಣ್ಯಕ್ಕೆ ಶಿಕ್ಷೆಗೆ ಎಂದು ಹೋಗುತ್ತಾನೆ.. ಮಣ್ಣಿನುಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ’- ನಾನು ಮೊದಲ ಬಾರಿ ಪದ್ಯ ಓದಿದಾಗ ಮಹತ್ವದ ಸಾಲುಗಳು ಎನ್ನಿಸಿದವುಗಳಲ್ಲಿ ಇದೂ ಕೂಡ ಒಂದು.. ಮಣಿನುಣುಗಿ ಯಾರು? ಸೀತೆ.. ಹಿಂದೆ ಬಂದ ‘ಮಣ್ಣುಟ್ಟ ಬಿತ್ತ’- ಮಳೆಹನಿಯ ಸೇಕಕ್ಕೆ ಕಾದದ್ದು ನೆನಪಾಗುತ್ತದೆ.. ಸೀತೆಯೂ ಮಣ್ಣಿನ ಮಗಳು.. ಅಂಥ ಅವಳ ಸೆಳವಿನಲ್ಲಿ ಲಂಕೆಗೆ ಬೆಂಕಿ.. ರಾಮ ಹುಟ್ಟಿದ್ದು ಹೇಗೆ? ಒಬ್ಬ ಸಾಮಾನ್ಯ ತಂದೆತಾಯಿಯರ ‘ಮಗ ಬೇಕು’ ಎಂಬ ಆಶೆಯಿಂದ- ಪುತ್ರಕಾಮೇಷ್ಠಿಯಿಂದ- ಹುಟ್ಟಿದವನು.. ಆದರೆ ಯಾವುದೋ ಇನ್ನೊಂದು ಬಂದು ಸೇರಿಕೊಂಡು ರಾಮನಾದವನು.. ಈಗ ತನ್ನ ಹೆಂಡತಿಯ ಮೇಲಿನ ನಿಷ್ಠೆಯಿಂದಲೇ- ಮಣ್ಣಿನುಣುಗಿಯ ಸೆಳವಿನಲ್ಲಿ- ರಾಮ ಒಂದು ದೊಡ್ಡ ರಾಜಕೀಯ ಯುದ್ಧದಲ್ಲಿ ತೊಡಗಿದ್ದಾನೆ.. ಅಂದರೆ ಅಮೂರ್ತವಾದ ಈವಿಲ್-ಕೆಟ್ಟದ್ದು, ರಾಕ್ಷಸ- ಎನ್ನುವುದನ್ನು ತೊಡೆದುಹಾಕುವ ನಿಷ್ಠೆಯೂ ಅವನಲ್ಲಿ ಹುಟ್ಟಿದ್ದು ಮಣ್ಣಿನುಣುಗಿಯ ಸೆಳವಿನಲ್ಲಿ.. ‘ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ.. : ಇಲ್ಲಿ ‘ಉಡಾಫೆ’ ಎಂಬ ಶಬ್ದವೂ ಮೊದಲನೇ ಓದಿನಲ್ಲಿಯೇ ನನಗೆ ಈ ಪದ್ಯ ಶ್ರೀಮಂತವಾದ ಶಬ್ದಕೋಶವನ್ನು ಪಡೆದಿರುವಂಥದ್ದು ಎಂಬ ಸೂಚನೆಯನ್ನು ಕೊಟ್ಟಿದೆ.. ಯಾಕೆಂದರೆ , ‘ಸಹಸ್ರಾರ’,‘ಜೆಟ್’,‘ವ್ಯಕ್ತಮಧ್ಯ’ ಇಂಥವುಗಳ ನಡುವೆ ‘ಮಣ್ಣಿನುಣುಗಿ’ ‘ಉಡಾಫೆ’ ಎನ್ನುವ ಶಬ್ದಗಳೂ ಇಲ್ಲಿವೆ.. ಹೀಗೆ ಒಂದು ಸಣ್ಣಾ ಪದ್ಯದಲ್ಲಿಯೇ ಕನ್ನಡದಲ್ಲಿ ನಮಗೆ ಇವತ್ತು ಹ್ಡೊರೆಯಬಹುದಾದ ಎಲ್ಲಾ ಆಕರಗಳಿಂದಲೂ- ಸಂಸ್ಕೃತ ಇಂಗ್ಲಿಷ್ ಉರ್ದು ಇತ್ಯಾದಿ-ಶಬ್ದಗಳು ದೊರೆಯುತ್ತವೆ.. ನೋಡಿ, ರಾಮನಿಗೆ ಗೊತ್ತಿದೆ- ಸೀತೆ ಪವಿತ್ರಳು ಅಂತ.. ಆದ್ದರಿಂದ ಅವಳು ಸುಟ್ಟು ಬರದಿದ್ದರೆ ನಾನು ಮುಟ್ಟುವುದಿಲ್ಲ ಅನ್ನುವುದು ‘ಉಡಾಫೆ’.. ಜೊತೆಗೆ ರಾಮನು ಸಮಾಜಕ್ಕೆ ಬದ್ದನಾದ ರಾಜನಾಗಿರುವುದರಿಂದ, ಎಲ್ಲಾ ಸ್ತರಗಳಲ್ಲೂ ನೈತಿಕವಾಗಿ ಫಲಿಸಬೇಕಾದ ಮನುಷ್ಯನಾಗಿರುವುದರಿಂದ ಸಾಮಾಜಿಕನಾಗಿ ತನ್ನನ್ನು ಒಪ್ಪ್ಸಿಕೊಳ್ಳವುದಕ್ಕಾಗಿ ಈ ‘ ಉಡಾಫೆ’..

ವಿಜೃಂಭಿಸಿತು ರಾಮಬಾಣ; ನಿಜ, ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ:
ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ
ಅನಾದಿ; ಕೋದಂಡ ದಂಡವೂ ಹೀಗೆ ದಂಡ;

‘ವಿಜೃಂಭಿಸಿತು ರಾಮಬಾಣ’- ‘ವಿಜೃಂಭಿಸಿತು’ ಎನ್ನುವ ಶಬ್ದದ ಝೇಂಕಾರ ಗಮನಿಸಿ; ನಂತರದ ಅನುಮಾನ ಗಮನಿಸಿ; ‘ ನಿಜ ಕತ್ತಲಿಗೆ ಹತ್ತೆ ತಲೆ? ನೂರಾರೆ? ಅದು ಅಸಂಖ್ಯ’.. ರಾವಣನ ಒಂದೊಂದು ತಲೆಯನ್ನು ಕಡಿದರೂ ಇನ್ನೊಂದು ತಲೆ ಅಲ್ಲಿ ಹುಟ್ಟುತ್ತದೆ.. ಎಷ್ಟು ಕತ್ತರಿಸಿದರೂ ಮತ್ತೆ ‘ಕತ್ತಿಗೆ ಬರುವ’, ಅಂದರೆ ತರಿಯುವ ಕತ್ತಿಗೆ ಬರುವ, ಜೊತೆಗೇ ನಮ್ಮ ಕತ್ತಿಗೆರ್ ಬರುವ (ಆಪತ್ತಾಗುವ)‘ಅನಾದಿ’, ಈಚಿನ ಪದ್ಯಗಳಲ್ಲಿ ಅಡಿಗರು ‘ಈವಿಲ್’ ಸದಾ ಇರುವಂಥದು ಎಂದೇ ಹೇಳುತ್ತಾ ಬಂದಿದ್ದಾರೆ.. ಮುಂದೆ ಬರುವ ‘ಕೋದಂಡ ದಂಡವೂ ಹೀಗೆ ದಂಡ’ ಅಂದರೆ ಯಾವತ್ತಿನವರೆಗೆ ಈವಿಲ್ ಇರುತ್ತದೀಯೋ, ಅವತ್ತಿನವರೆಗೆ, ಅದನ್ನು ಶಿಕ್ಷಿಸುವಂತ ಒಂದು ದಂಡದ ಅಗತ್ಯ ಇದ್ದೇ ಇದೆ; ಅದರ ಜೊತೆಗೇ ಎಷ್ಟು ಕತ್ತರಿಸಿದರೂ ಮತ್ತೆ ಮತ್ತೆ ಅದು ಬೆಳೆಯುತ್ತಲೇ ಇರುತ್ತದೆ ತಾನೆ? ಆದ್ದರಿಂದ ‘ಕೋದಂಡ ದಂಡವೂ ಹೀಗೆ ದಂಡ’.. ಲೋಹಿಯಾರವರು ಹೇಲುವ ‘ ನಿರಾಶಾಕಿ ಕರ್ತವ್ಯ’ ಈ ಬಗೆಯ ಇಬ್ಬಗೆ ಭಾವನೆಯಿಂದ ಹುಟ್ಟಬಹುದು.. ನಾವು ‘ಏನು ಮಾಡಬೇಕು’ ಎಂದಿದ್ದರೂ ‘ ಏನೂ ಅಗುವುದಿಲ್ಲ’ ಎಂದು ತಿಳಿದೇ ಮಾಡಬೇಕು.. ‘ ಕೋದಂಡ ದಂಡವೂ ಹೀಗೆ ದಂಡ’- ಟೋನಿನ ವ್ಯತ್ಯಾಸದಲ್ಲಿಯೇ ನಮಗೆ ಎರಡು ಅರ್ಥ ವ್ಯತ್ಯಾಸವೂ ಗೊತ್ತಾಗುತ್ತಡೆ..

ಅಥವಾ ಚಕ್ರಾರಪಂಕ್ತಿ ; ಚಕಮಕಿ ಕಲ್ಲ ನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ..

ರಾಮನನ್ನು ಸೃಷ್ಟಿಸಿದ ವಾಲ್ಮೀಕಿ ಹುತ್ತಗಟ್ಟಿ ಕೂ‌ಇದ್ದ.. ಆದರೆ ಈ ಕವಿ ಅನುಮಾನಿಸುತ್ತ ಕೂಥಂಥವನು;‘ಚಕಮಕಿ’ ಕಲ್ಲನುಜ್ಜುತ್ತ ಕೂತುಕೊಂಡಿದ್ದೇನೆ ಕತ್ತಲೊಳಗೆ/ಪನಿವಾರ ತಿಂದು ಪಾನಕ ಕುಡಿದು ನೋನುತ್ತ’.. ನೋನುತ್ತ- ಇದು ಅಚ್ಚಗನ್ನಡ ಶಬ್ದ.. ತಪಸ್ಸಿನ ಬದಲಿಗೆ ‘ನೋನುವ’ ಎನ್ನುವ ಪದ ಬಂದಿದೆ.. ಈ ಪದ್ಯದಲ್ಲಿ ವ್ರತಕ್ಕೆ ಸಂಬಂಧಿಸಿದ ಅನೇಕ ಶಬ್ದಗಳಿವೆ.. ‘ನೋನು’ ಎನ್ನುವುದೂ ಆ ಶಬ್ದಗಳ ಸಲಿನಲ್ಲಿ ಬಂದು ಸೇರಿಕೊಳ್ಳುತ್ತದೆ.. ಯಾವೊದೋ ಒಂದು ಸ್ಫೋಟವಾಗುತ್ತದೆ, ಏನೋ ಅಗುತ್ತದೆ, ಬರುತ್ತದೆ ಎಂದು ಈ ಕವಿ ಕಾದಿದ್ದಾನೆ.. ಇದು ನಿಸ್ಸಹಾಯಕ ಸ್ಥಿತಿಯನ್ನೂ ತೋರಿಸುವುದರ ಜೊತೆಗೆ; ಇನ್ನೊಂದು ಅವತಾರವಾಗುತ್ತದೆ; ಆ ಅವತಾರ ಒಂದು ಸ್ಫೋಟವಾಗಿ ಬರುತ್ತದೆ; ಅಥವಾ ತನ್ನ ಒಳಗೇ ಯಾವುದೋ ಒಂದು ಸ್ಫೋಟ ಉಂಟಾಗುತ್ತದೆ ಎಂದು ಭರವಸೆಯಲ್ಲಿ ಮತ್ತು ಆತಂಕದಲ್ಲಿ ಕಾಯ್ವ ಸ್ಥಿತಿಯೂ ಆಗುತ್ತದೆ..
ಹೀಗೆ ‘ ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ’ ಕೂತಿರೋನು ಸ್ವಲ್ಪ ಹಾಸ್ಯಾಸ್ಪದ ವ್ಯಕ್ತಿಯಾಗಿಯೂ ಕಾಣುತ್ತಾನೆ.. ಯಾಕೆಂದರೆ ಅವನು ವಾಲ್ಮೀಕಿಯ ಹಾಗೆ ಸಂಕಲ್ಪಬಲದಿಂದ ಕೂತವನಲ್ಲ.. ಪನಿವಾರ ತಿಂದು ಪಾನ ಕುಡಿದು- ದೈಹಿಕ ತೃಪ್ತಿ ಪಡೆದಾದ ಮೇಲೆ- ನೋನುತ್ತ, ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ, ಕೂತವನು.. ಶಬರಿಯ ಹಾಗೆ ಉರಿಯುವವನೂ ಅಲ್ಲ.. ಬೇಕಾಗಿರುವುದಕ್ಕಿಂತಲೂ ಹೆಚ್ಚು ಪ್ರತಿಕ್ರಿಯಿಸುತ್ತಿರಬಹುದು ಇವನು.. ಇವನು ಬೆಳಕಿಗೆಂದು, ಆಸ್ಫೋಟಕ್ಕೆ ಕಾದುಕೊಂಡಿರುವುದಾದರೂ ಉಜ್ಜುವದು ಚಮಕಿಕಲ್ಲನ್ನು.. ಆದುದರಿಂದಲೇ, ಚಕಮಕಿ ಕಲ್ಲಿನಿಂದಲೇ, ದೊಡ್ಡ ಆಸ್ಫೋಟವಾದೀತು ಎಂದು ತಿಳಿದುಕೊಂಡಿದ್ದಾನೆ.. ಆದ್ದರಿಂದ ಈತ ನಮ್ಮ ಹಾಗೇ ಸಣ್ಣ ಖಾಸಗಿ ವ್ಯಕ್ತಿ- ದುರ್ಬಲ, ಏಕಾಂಗಿ, ಆದರೆ ಅರಿವು ಉಳ್ಳಾತ.. ಅಡಿಗರ ಅನೇಕ ಪದ್ಯಗಳ ಕೇಂದ್ರವ್ಯಕ್ತಿ ಇಂಥವನೇ; ಇವನು ನವೋದಯ ಕವಿಗಳ ರಸ‌ಋಷಿಯೂ ಅಲ್ಲ, ದ್ರಷ್ಟಾರನೂ ಅಲ್ಲ; ಆದ್ದರಿಂದಲೇ ನಮ್ಮ ಕಾಲ್ದ ಸಂಕಟ ಮಿಡಿಯಬಲ್ಲನು..

ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೆ ಸಹಸ್ರಾರಕೆ?

ಇವೆಲ್ಲವೂ ಅನುಮಾನಗಳು, ಪ್ರಶ್ನೆಗಳು.. ಹಿಂದೆಯೇ ಬಂದ ರಾಕೆಟ್ಟು ಮತ್ತು ಯುದ್ಧದ ಚಿತ್ರ, ಜೊತೆಗೇ ಯೋಗದ ವಿಕಾಸದ ವಿಚಾರ- ಇವೆಲ್ಲವೂ ಇಲ್ಲಿ ಕೂಡಿಕೊಂಡು ‘ಷಟ್ಚಕ್ರ ರಾಕೆಟ್ಟು’ ಆಗಿದೆ.. ಹಂತಹಂತವೇರುವ ರಾಕೆಟ್ಟು, ನಾಭಿ ಬಳಿ ಇರುವ ಮೂಲಾಧಾರದಿಂದ ನೆತ್ತಿಯ‘ಸಹಸ್ರಾರ’ಕ್ಕೆ ಹಂತ ಹಂತ ಏರುವ ಯೋಗ, ಒಂದಕ್ಕೊಂದು ಇಲ್ಲಿ ಮೆಟಫರ್ ಆಗುವುದು ಮಾತ್ರವಲ್ಲ; ರಾಮನನ್ನು ತೊಡಗಿಸಿದ (ಅಂತರ್ಮುಖವಾದ ಜೊತೆಗೇ ಬಹಿರ್ಮುಖವಾದ, ಆಧ್ಯಾತ್ಮಿಕವಾದ ಜೊತೆಗೇ ರಾಜಕೀಯವಾದ) ಎರಡೂ ಹೋರಾಟಗಳನ್ನು ಅಭಿನ್ನವೆಂಬಂತೆ ಹೇಳುವ ಪ್ರತೀಕ ‘ಷಟ್ಚಕ್ರ ರಾಕೆಟ್ಟು’.. ರಾಮ ಹೀಗೆ ಸತತವಾದ ಒಂದು ವಿಕಾಸದ ಫಲ; ಮತ್ಸ್ಯ ಕೂರ್ಮವರಾಹ ಅವತಾರಗಳ ತುಟ್ಟತುದಿ; ಸಾಮಾನ್ಯ ತಂದೆ ತಾಯಿಯರ ಪುತ್ರಕಾಮೇಷ್ಠಿಯಿಂದ ಹುಟ್ಟಿದವನು; ಹಠತ್ತಾಗಿ ಈ ಹುಟ್ಟಿನಲ್ಲಿ ತ್ರಿಕಾಲಸ್ಥನಾದ ದೈವದ ಒಂದಂಶವನ್ನು ಪಡೆದವನು; ಹೆಂಡತಿಯ ಮೇಲಿನ ಸಾಂಸಾರಿಕ ಪ್ರೀತಿಯಿಂದಲೇ ಲಂಕೆಗೆ ಬೆಂಕಿಯಿಡುವ ತನಕ ಬೆಳೆದವನು; ಯೋಗದ ಪರಮಸ್ಥಿತಿ ಮುಟ್ಟಿದವನು- ಇಷ್ಟಿದ್ದೂ ಸಾಮಾಜಿಕವಾಗಿ ಉಳಿದವನು.. (ಇಂಥವನನ್ನು ಧ್ಯಾನಿಸುತ್ತಿರುವ ಕವಿ ‘ಅಂಚೆ ತಲುಪೀತೆ ಸಹಸ್ರಾರಕೆ’ ಎನ್ನುತ್ತಾರೆ.. ಅಂಚೆ ಎಂದರೆ ಇಲ್ಲಿ ಟಪ್ಪಾಲು ಮತ್ತು ಹಂಸ.. ಹಂಸ- ಆಧ್ಯಾತ್ಮಿಕ ಪದವೂ ಹೌದು.. ಎಲ್ಲ ಅರ್ಥಗಳೂ ಇಲ್ಲ್ಲಿ ದುಡಿಯುತ್ತವೆ.. ವಾಕ್ಯ ಪ್ರಶ್ನಾರ್ಥಕವಾಗಿರುವುದರಿಂದ ಅಸ್ತಿತ್ವದ ಪ್ರಸ್ತುತ ವಾಸ್ತವವನ್ನು ಕಾಪಾಡಿಕೊಂಡಿದ್ದೂ ಅನುಭವಕ್ಕೆ ಆದರ್ಶದಲ್ಲಿ ದಕ್ಕಬೇಕಾದ್ದನ್ನೂ ಸೂಚಿಸುತ್ತದೆ.. ಶಬ್ದಗಳು ಇಲ್ಲಿ ‘ಆಂಟನ’ಗಳಂತೆ ಸಾಧ್ಯತೆಗಳನ್ನು ಹುಡುಕುತ್ತವೆ.. ಹಲವು ಸಾಧ್ಯತೆಗಳಿಗೆ ತೆರೆಯಬಲ್ಲ ಮಿಡಿಯಬಲ್ಲ ಒಂದು ಮನಸ್ಸಿನ ಸ್ಥಿತಿಯನ್ನು, ರಾಮನ ಸಮಗ್ರ ಬಹುಮುಖ ವ್ಯಕ್ತಿತ್ವದ ಮನನದಿಂದಲೂ, ಜೊತೆಗೇ ರಾಮನನ್ನು ಸಾಧ್ಯವಾಗಿಸಿದ ಅಪಾರ ಶ್ರಮ,ವ್ರತ,ತಪಸ್ಸುಗಳನ್ನು ಪದ್ಯದಲ್ಲಿ ನಮ್ಮ ಪ್ರಜ್ಞೆಯೊ‌ಅಳಕ್ಕೆ ಊರಿದ್ದರಿಂದಲೂ ಈ ಕೊನೆಯ ಸಾಲುಗಳು ಪ್ರಸ್ತುತ ನಮ್ಮ ಬದುಕಿಕೆಗೆ ಸವಾಲಾಗಿ ಬರುವುದು ಸಾಧ್ಯವಾಗಿದೆ.. ಅಂದರೆ ಹಲವು ಅನುರಣನಗಳನ್ನು ಅಲೆ‌ಅಲೆಯಾಗಿ ನಮ್ಮಲ್ಲಿ ಎಬ್ಬಿಸಿ‌ಅಬಲ್ಲ ಪದ್ಯದ ಮೂರ್ತತ್ವದಿಂದ ಈ ಸಾಲುಗಳು ಸಾಧ್ಯವಾದವು..

ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?

ಕನ್ನಡದ ಈ ಕಾಲದ ಅತ್ಯಂತ ಮಹತ್ವದ ವಿಮರ್ಶಕರೆನ್ನಬದುದಾದ ಗತಿ‌ಉಸಿದ ಗೆಳೆಯ ಎಂ,ಜಿಕೆ.. ಅವರ ವಿಮರ್ಶಾ ಸಂಕಲನದ ಮೊದಲನುಡಿಯಾಗಿ ಈ ಸಾಲುಗಳನ್ನು ಅವರು ಉದ್ಧರಿಸಿದ್ದಾರೆ ಎಂಬುದು ಗಮನಾರ್ಹ.. ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತಾ ಕುಳಿತವನು ಕೇಳುವ ಪ್ರಶ್ನೆ ಇದು ಎಂಬುದನ್ನು ಮರೆಯಬಾರದು; ನಾವು ಮತ್ತೆ ವಾಲ್ಮೀಕಿಗಳಾಗದೆ- ಹುತ್ತಗಟ್ಟಬಲ್ಲಷ್ಟು ವ್ರತಿಗಳಾಗದೆ- ನಮ್ಮ ಚಿತ್ತ ಮತ್ತೆ ಆ ಪುರುಷೋತ್ತಮನನ್ನು ಕೆತ್ತಬಲ್ಲುದೇನು ಎಂದು ಕವಿ ಕೇಳುತ್ತಾರೆ.. ರಾಮ ಪುರುಷರಲ್ಲಿ ಉತ್ತಮಾನಾಗಿದ್ದುಕೊಂಡು ದೈವತ್ವವನ್ನು ಪಡೆದವನು ಎಂಬುದು ಇಲ್ಲಿ ಮುಖ್ಯ.. ಒಟ್ಟಿನಲ್ಲಿ ಪದ್ಯ ಏನು ಹೇಳುತ್ತದೆ ನೋಡೋಣ: ಪದ್ಯದಲ್ಲಿ ಒತ್ತುಬರುವುದು ವ್ರತಕ್ಕೆ: ( ಶಬರಿ, ವಾಲ್ಮೀಕಿ, ಕೌಸಲ್ಯೆ ದಶರಥರು ಮತ್ತು ರಾಮ ಎಲ್ಲರೂ ವ್ರತಿಗಳೇ) ಹೀಗೆ ಈ ವ್ರತದಲ್ಲಿ ಸಿದ್ದಿಸಿದ್ದು ಈ ಮಣ್ಣಿನ ಬದುಕಿನಲ್ಲಿ ಮೂರ್ತವಾಗತಕ್ಕದ್ದು.. ಪದ್ಯದ ಪ್ರಾರಂಭದಲ್ಲಿ ಬರುವಂತೆ ಅದೊಂದು ಜೈವಿಕ ಪ್ರಕ್ರಿಯೆಯೂ ಹೌದು; ಹಾಗೆಯೇ ಸಂಕಲ್ಪ ಶಕ್ತಿಯಿಂದ ಈ ಜೈವಿಕ ಪ್ರಕ್ರಿಯೆಯಲ್ಲಿ ಅಪೂರ್ವವಾದ್ದೊಂದು ಬಂದು ಸೇರಿಕೊಳ್ಳುವ ಸಂಗಮವೂ ಹೌದು.. ಈ ದೃಷ್ಟಿಯಿಂದ ಅದ್ ವ್ರತದಲ್ಲಿ ಪಡೆದದ್ದೂ ಹೌದು, ಕೃಪೆಯಿಂದ ಅವತಾರವೂ ಹೌದು.. ಅವನು ಕೌಸಲ್ಯೆಗೆ ಮಗ; ಶಬರಿಗೆ ಹಣ್ನನ್ನು ತಿನ್ನುವ ಪ್ರಿಯವಸ್ತು; ವಾಲ್ಮೀಕಿಗೆ ಅವತಾರಗಳ ವಿಕಾಸದ ಫಲ; ಚಕಮಕಿ ಕಲ್ಲನ್ನು ಉಜ್ಜುತ್ತ ಕೂತವನಿಗೆ ಸ್ಫೋಟವಾಗಿ ಅನುಭವಿಸಬೇಕೆಂಬ ಅಕಾಂಕ್ಷೆ; ಅ‌ಆದರೆ ಗಟ್ಟದೇ ಅವನನ್ನು ಮತ್ತೆ ಕೆತ್ತುವುದು ಸಾಧ್ಯವಿಲ್ಲವೆಂಬ ಅರಿವು.. (ಕೆತ್ತು ಎನ್ನುವ ಪ್ರಯತ್ನ ಮತ್ತು ಕೌಶಲಗಳನ್ನು ಸೂಚಿಸುವ ಪದ ಕೂಡ ಇಲ್ಲಿ ಗಮನಾರ್ಹ, ಏಕೆಂದರೆ ಗೀತೆ ಹೇಳಿದಂತೆ ಯೋಗ ಎಂಬುದು ಕರ್ಮಡಃಲ್ಲಿ ಕುಶಲತೆ.. ಇಷ್ಟು ಅರ್ಥವಾದ ನಂತರ, ಅಡಿಗರ ಹಿಂದಿನ ಪದ್ಯಗಳನ್ನು ಓದಿರುವವರಿಗೆ ಈ ಪದ್ಯದ ಹೆಚ್ಚು ತಿಳಿಯಬಹುದು.. ಯಾಕೆಂದರೆ ‘ಪ್ರಾರ್ಥನೆ’ಯಲ್ಲಿ ನಾವು ಓದಿದ್ದೇವೆ: ( ಸದಾ ಏಕಾಂಗಿಯಾಗಿ, ಇನ್ನೊಬ್ಬರ ಜೊತೆ ಸಂಪರ್ಕವಿಲ್ಲದಿರುವಂಥವನು ಮುಷ್ಠಿಮೈಥುನದ ಅಹಂಕಾರಕ್ಕೆ ತುತ್ತಾಗುತ್ತಾನೆ; ಆದರೆ ಹೊರಗಿನ ಜೊತೆ ತೀರಾ ಸಂಪರ್ಕ ಮಾಡುವವನು ಫ್ರಂಗಿರೋಗಕ್ಕೆ ಒಳಗಾಗುತ್ತಾನೆ.. ಅಡಿಗರ ಪದ್ಯಗಳನ್ನು ಓದುವಾಗ ಅವರು ಈ ಎರಡು ಯೋಚನೆಗಳನ್ನು ಸದಾ ಮಾಡುತ್ತಿರುವುದನ್ನು ನಾವು ಗಮನಿಸಬಹುದು: ಎಕಾಂಗಿತನದಲ್ಲಿ ಸಫಲಿಸಿಕೊಳ್ಳಬೇಕಾದ್ದು ಮತ್ತು ಅದು ಅತಿಯಾದಾಗ ಆಗುವ ಅಪಾಯ, ಒಂದು; ಎರಡನೆಯದು, ಹೊರಗಿನ ಜತೆಗಿನ ಸಂಪರ್ಕ ಅತಿಯಾದಾಗಿನ ಅಪಾಯ.. ಅದರ ಇವೆರಡೂ ಒಂದು ಸಮತೂಕದಲಿರುವಾಗ ಪಡೆಯಬಹುದಾದ ಏಕಾಗ್ರತೆ ಮತ್ತು ಸಮಗ್ರತೆ.. ಆಮನಲ್ಲಿ ಅಡಿಗರಿಗೆ ಈ ಸಮತೂಕ, ಸಮಗ್ರತೆಗಳು ಕಂಡಿವೆ.. ‘ನೆಹರೂ ನಿವೃತ್ತರಾಗುವುದಿಲ್ಲ’ ಪದ್ಯದ ನೆಹರೂನಲ್ಲಿ ಮೂರ್ತವಾದ್ದರ ಜತೆಗೆ ಸಂಪರ್ಕ ಇಲ್ಲದೆ ಬಯಸುವ ಅಮೂರ್ತ ಆದರ್ಶ ಏನಾಗುತ್ತದೆ ಎಂಬುದನ್ನು ನಾವು ಗುರುತಿಸಬಹುದು.. ಆದರೆ ರಾಮ ಮೂರ್ತದ ಜೊತೆಯೇ ವ್ಯವಹರಿಸುತ್ತ ಅಮೂರ್ತವಾದದ್ದನ್ನು ಸಾಧಿಸಿಕೊಳ್ಳುವುದರ ಪರಿಪೂರ್ಣ ಚಿತ್ರ.. ಷ್ಟಾದ ನಂತರ, ನಾನು ವಿಮರ್ಶಕನಾಗಿ ಮಾತಾಡುವುದಾದರೆ ಕನ್ನಡದಲ್ಲಿ ವಿಚಾರವನ್ನು ಕಾವ್ಯವನ್ನಾಗಿ ಮಾಡುವುದಕ್ಕೆ- ವೈಚಾರಿಕತನ್ನೇ ಕಾವ್ಯ ಮಡುವುದಕ್ಕೆ -ಹೊರಟ ಒಂದು ಪ್ರತಿಕ್ರಿಯೆಯಲ್ಲಿ ಅಡಿಗರು ಸಾಧಿಸಿರುವ ಒಂದು ದಿಟ್ಟವಾದ ಹೆಜ್ಜೆ ‘ಶ್ರೀರಾಮನವಮಿಯ ದಿವಸ’ ಎನ್ನಿಸುತ್ತದೆ.. ಯಾಕೆಂದರೆ ಅವರ ಹಿಂದಿನ ಪದ್ಯ ‘೧೯೫೮ ರ ಪಾಠ’ ದಲ್ಲಿಯೇ ಇದೇ ರೀತಿಯ ಪ್ರಯತ್ನ ಇತ್ತು..

ನೋಡೀ ನುಗ್ಗೆ :
ನಿಲ್ಲಲೊಂದಿಷ್ಟು ಲಂಗೊಟಿಯಿಯಗಲದ ಜಾಗ
ಆಕಾರ ತಳೆದ ಆಭೋಗ, ಉಳಿದದ್ದೆಲ್ಲ
ಪ್ರದೇಶ, ಗೊಡ್ಡು ಗಾಳಿಯ ಕಾಮಕೇಳಿ ಫಲ..

ಈ ರೀತಿಯ ಮಾತುಗಳಲ್ಲಿ ಒಂದು ವಿಚಾರವನ್ನು ಬೆಳೆಸುವ ಪ್ರಯತ್ನ ಅಡಿಗರು ಮಾಡಿದ್ದರು.. ಆ ಪ್ರಯತ್ನ ಹೆಚ್ಚು ಸಫಲಿಸಿರುವುದು ‘ಶ್ರೀರಾಮನವಮಿಯ ದಿವಸ’ದಲ್ಲಿ ಎಂದು ನನಗನ್ನಿಸುತ್ತದೆ..
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.