ಡಾ.ಕೃಷ್ಣರಾಜು ಚಿಕಾಗೋಗೆ ಕರೆದಿದ್ದಾರೆ. ಕನ್ನಡ ಸಂಘದವರಿಂದ ನಾಡಹಬ್ಬದ ಆಚರಣೆ, ಬನ್ನಿ ಎಂದು. ಆಯೋವಾಸಿಟಿಯಿಂದ ಚಿಕಾಗೋಗೆ ಗ್ರೇಹೌಂಡ್ ಬಸ್ಸಿನಲ್ಲಿ ಸುಮಾರು ಐದುಗಂಟೆಗಳ ಪ್ರಯಾಣ. ಕತ್ತಲು; ದಾರಿಯುದ್ದಕ್ಕೂ ಮೋಟೆಲ್‌ಗಳು ಹ್ಯಾಂಬರ್ಗರ್ ಸಿಗುವ ಜಾಗಗಳು; ಗ್ಯಾಸ್ ಸ್ಟೇಶನ್‌ಗಳ ಜಾಗಿರಾತುಗಳು; ಮುಂದೆ ಎಕ್ಸಿಟ್ ಇಂಥ ಊರಿಗೆ, ಇಂತಿಷ್ಟು ನಿಮಿಷಗಳಿಗೆ, ಈ ನಂಬರ್ ದಾರಿಗೆ ಬಲಕ್ಕೆ ತಿರುಗಿ, ಇಲ್ಲಿ ಎಡಕ್ಕೆ ತಿರುಗಬೇಡಿ, ನೇರವಾಗಿ ಹೋಗಿ – ದಾರಿಯುದ್ದಕ್ಕೂ ಹೊಳೆಯುವ ಸೂಚಿಗಳು. ಇದನ್ನು ತಿನ್ನಿ, ಇದನ್ನು ಕುಡಿಯಿರಿ – ಕಣ್ಣು ಕಿವಿಗಳ ಮೇಲೆ ಸತತವಾದ ಧಾಳಿ. ನನ್ನ ಮರೆವು ಎಷ್ಟೆಂದರೆ ಒಂದೇ ಒಂದು ಜಾಹಿರಾತು ನನಗೆ ನೆನಪಿರುವುದಿಲ್ಲ. ಬಸ್ಸು ಕೆಲವೆಡೆ ನಿಲ್ಲುತ್ತದೆ. ಮೆಶಿನ್‌ನಿಂದ ಬಿಸಿಯಾದ ಕಾಫಿ, ತಣ್ಣಗಿನ ಸೆವೆನ್ ಆಪ್, ಕೋಕೋಕೋಲ, ಬಿಸಿಬಿಸಿ ಸೂಪು, ಸಿಗರೇಟು ಪಡೆದು ಪ್ರಯಾಣಿಕರು ಬಸ್ಸಿಗೆ ಹಿಂದಿರುಗುತ್ತಾರೆ. ಆರಡಿಗೂ ಹೆಚ್ಚು ಎತ್ತರದ, ನೀಳವಾದ ಶರೀರದ ಕಪ್ಪು ಮನುಷ್ಯ ನಮ್ಮ ಚಾಲಕ. ನಾವು ಎಲ್ಲಿದ್ದೇವೆ, ಎಷ್ಟು ಹೊತ್ತಿಗೆ ಚಿಕಾಗೋ ಸೇರುತ್ತೇವೆ – ಮೈಕಿನಲ್ಲಿ ಹೇಳುತ್ತಾನೆ, “ಎದುರುಗಡೆ ಸೀಟುಗಳಲ್ಲಿ ಸಿಗರೇಟು ಸೇದುವುದು ಕಾನೂನುಬಾಹಿರ, ಹಿಂದಿನ ಸೀಟಿನಲ್ಲಿ ಮಾತ್ರ ಸೇದಬಹುದು” ಎಂದು ಅವನು ಹೇಳಿದ್ದನ್ನು ಕೇಳಿ ನಾನು ಸಿಗರೇಟಿನ ಸಹಿತ ಹಿಂದಿನ ಸೀಟಿಗೆ ಹೋಗಿ ಕೂರುತ್ತೇನೆ. ಸೀಟನ್ನು ಹಿಂದಕ್ಕೆ ತಳ್ಳಿ ಸಿಗರೇಟು ಹಚ್ಚಿ ವಿಶ್ರಮಿಸುತ್ತೇನೆ. ಬಸ್ಸು ಕಾನೂನಿನ ಪ್ರಕಾರ ಐವತ್ತೈದು ಮೈಲುಗಳ ವೇಗದಲ್ಲಿ ಓಡುತ್ತದೆ. ಕಿಟಕಿಯಿಂದ ಸಾಲುಸಾಲಾಗಿ ಇರುವೆಯಂತೆ ಇನ್ನೊಂದು ದಿಕ್ಕಿನಲಿ ಓಡುವ ಕಾರುಗಳು ಕಾಣುತ್ತವೆ. ತನ್ನ ತನ್ನ ಪರಿಧಿಯಲ್ಲಿ ಎಲ್ಲವೂ ನಿಯಂತ್ರಿತವಾಗಿ ನಡೆಯುತ್ತದೆ. ಎಲ್ಲ ಹಿಡಿತದಲ್ಲಿದೆ, ಕ್ಷೇಮವಾಗಿದೆ ಎನ್ನಿಸಿದರೂ ರೇಡಿಯೋ ಹಾಕಿದಾಗ್ಗೆಲ್ಲ ಕೇಳುವುದು ಅಪಘಾತ.
ಇಲ್ಲ ಇಂಥ ಹೈವೇಗಳನ್ನು ನಮ್ಮ ದೇಶ ನಿರ್ಮಿಸುವುದು ಸಾಧ್ಯವಿಲ್ಲ. ಎಷ್ಟೋ ಹಳ್ಳಿಗಳನ್ನು ನಿರ್ನಾಮಮಾಡಬೇಕಾದೀತು. ಅಲ್ಲದೆ ನಮಗೆ ಇಷ್ಟೊಂದು ಕಾರುಗಳೂ ಬೇಡ, ಪಾರ್ಕ್ ಮಾಡುವ ಪರದಾಟವೂ ಬೇಡ. ಇಷ್ಟೊಂದು ಜನ ಎಲ್ಲಿಗೆ ಯಾಕೆ ಬರಿದೇ ತಿರುಗಾಡುತ್ತಾರೆ? ತೇಪೆ ಹಾಕಿದ ಬ್ಲೂ ಜೀನ್ಸ್ ತೊಟ್ಟು, ಉದ್ದಕೂದಲು ಗಡ್ಡಗಳನ್ನು ಬಿಟ್ಟ ನನ್ನ ವಿದ್ಯಾರ್ಥಿಗಳನ್ನು ಕೆಲವರು ಹೇಳುತ್ತಾರೆ : “ಈ ಕಾರುಗಳನ್ನು ನಾವು ದ್ವೇಷಿಸುತ್ತೇವೆ; ಈ ಟಿನ್ ಆಹಾರವನ್ನು ನಾವು ದ್ವೇಷಿಸುತ್ತೇವೆ. ಈ ಪದಾರ್ಥ ವ್ಯಾಮೋಹ, ಈ ಪ್ರಾಪಂಚಿಕತೆ ನಾವು ದ್ವೇಷಿಸುತ್ತೇವೆ; ನಮ್ಮ ವಾತಾವರಣ ಮಲಿನವಾಗುತ್ತಿದೆ. ನಮಗೆ ನ್ಯಾಚುರಲ್ ಫುಡ್ ಬೇಕು.” ನನ್ನ ಜೊತೆ ಕೆಲಸ ಮಾಡುವ ಇಬ್ಬರು ರಿಸರ್ಚ್ ಅಸಿಸ್ಟೆಂಟ್ ಹುಡುಗಿಯರು ತಿನ್ನುವುದು ಬರೀ ಮೊಸರು, ತರಕಾರಿ.
ಆದರೆ ನ್ಯೂಯಾರ್ಕ್ನಲ್ಲೊಂದು ಅಂಗಡಿಯಿದೆ. ಶ್ರೀನಿವಾಸರಾವ್ ನನಗಿದನ್ನು ಹೇಳಿದ್ದು. ಯೆಹೂದ್ಯನೊಬ್ಬ ಅಂಗಡಿಯ ಮಾಲೀಕ. ಭಾರತೀಯರಿಗೆ ಸ್ವಾಗತವೆಂದು ಹಿಂದಿಯಲ್ಲಿ ಬೋರ್ಡ್‌ಹಾಕಿಃದಾನಂತೆ. ೨೨೦ ವೋಲ್ಟ್‌ಗಳಲ್ಲಿ ನಡೆಯುವ ವಿದ್ಯುತ್ ಸರಕುಗಳನ್ನು ಅವನು ಮಾರುತ್ತಾನೆ. ಅಲ್ಲಿ ನಮ್ಮ ಭಾರತೀಯರು ಕಿಕ್ಕಿರಿದಿರುತ್ತಾರೆ. ಅದನ್ನು ಕೊಡು, ಇದನ್ನು ಕೊಡು ಎಂದು ಎತ್ತಿದ ಎರಡು ಕೈಗಳಿಂದಲೂ ಸರಕುಗಳನ್ನು ತೋರಿಸುತ್ತ ನಮ್ಮವರು ಹಾತೊರೆಯುವ ದೃಶ್ಯವನ್ನು ಶ್ರೀನಿವಾಸರಾವ್ ನನ್ನ ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ನನಗೂ ಒಂದು ಕ್ಯಾಮರ, ಒಂದು ಕ್ಯಾಸೆಟ್ ಟೇಪ್ ರಿಕಾರ್ಡರ್, ಒಂದು ಒಳ್ಳೆಯ ಸ್ಟೀರಿಯೋ ರಿಕಾರ್ಡ್‌ಪ್ಲೇಯರ್ ಕೊಳ್ಳುವ ಆಸೆ. ಆದರೆ ನಾಚಿಕೆ.
ಪಕ್ಕದಲ್ಲಿ ಕೂತವ ’ಹಾಯ್’ ಎಂದ. ಗಟ್ಟುಮುಟ್ಟಾದ ಆಳು. ಗುಂಡು ಮುಖ. ಚಿಕಾಗೋ ಸೇರಲು ಇನ್ನೆಷ್ಟು ಸಮಯ ಬೇಕು ಎಂದೆ. “ಒಂದೂವರೆ ಗಂಟೆ. ನಿನ್ನದು ಯಾವ ದೇಶ?”
ಪರಸ್ಪರ ಪರಿಚಯವಾಯಿತು. ಅವನ ಪೂರ್ವಿಕರು ವೆಲ್ಶ್‌ಜನ. ಅವನದು ಊರಿಂದ ಊರಿಗೆ ಪ್ರಯಾಣ. ಕೆಲಸ ಸಿಕ್ಕಲ್ಲಿ ದುಡಿಮೆ. ಅವನ ಕನಸು : ಪರ್ವತ ಪ್ರದೇಶದಲ್ಲಿ ಗುಡಿಸಲು ಕಟ್ಟಬೇಕು. ರೈತನಾಗಿ ಬದುಕಬೇಕು ಈಜಬೇಕು, ಬೆಟ್ಟಗಳನ್ನು ಹತ್ತಬೇಕು, ಕೈಯಲ್ಲಿ ಬೆಳೆದದ್ದನ್ನು ತಿನ್ನಬೇಕು. ಟಿನ್ ಆಹಾರ, ಟೆಲಿವಿಶನ್, ಕಾರುಗಳು – ಎಲ್ಲದರಿಂದ ದೂರವಾಗಬೇಕು.
“ಹಾಗಾದರೆ ನೀನು ಅಮೆರಿಕಾನ್ನ ದ್ವೇಷಿಸುತ್ತಿ?”
“ಇಲ್ಲ. ಪ್ರಪಂಚದಲ್ಲಿ ಸದ್ಯಕ್ಕೆ ಇದೇ ಒಳ್ಳೆ ದೇಶ. ಇಲ್ಲಿ ಸ್ವಾತಂತ್ರ್ಯವಿದೆ. ಇಲ್ಲಿ ಯಾರೂ ದೊಡ್ಡವನಲ್ಲ, ಯಾರೂ ಚಿಕ್ಕವನಲ್ಲ, ನಾವು ನಿಕ್ಸನ್‌ಗೆ ಏನು ಮಾಡಿದೆವು ನಿನಗೆ ಗೊತ್ತಿರಬಹುದಲ್ಲ?”
“ಸರಿ, ಆದರೆ ನಿಮ್ಮ ಸ್ವಾತಂತ್ರ್ಯದ ಹಿಂದೆ ಸಮೃದ್ಧಿಯಿದೆ, ನಿಮ್ಮ ಸಮೃದ್ಧಿ ಸಾಧ್ಯವಾದ್ದು ನಮ್ಮ ದೇಶಗಳ ಬಡತನದಿಂದಾಗಿ, ನೋಡು – ನಿಮಗೆ ಪೆಟ್ರೊಲ್ ಚೀಪಾಗಿ ಸಿಗುತ್ತದೆ. ಆದರೆ ನಾವು ಕೊಳ್ಳುವ ನಿಮ್ಮ ಮೇಶಿನು ತುಂಬ ದುಬಾರಿ. ಈಗ ಪೆಟ್ರೊಲಿನ ಬೆಲೆ ಏರುತ್ತಿರುವುದರಿಂದ ಜನರಲ್ ಮೋಟಾರ್ಸ್‌ನಲ್ಲಿ ಕೆಲಸ ಮಾಡುವ ಎಷ್ಟೋಜನ ನಿರುದ್ಯೋಗಿಗಳಾಗಿದ್ದಾರೆ. ನಿಮ್ಮ ಸ್ಥಿತಿ ಹೀಗೆ ಮುಂದುವರಿಯುತ್ತದೆಂಬ ಭ್ರಮೆ ಇಟ್ಟುಕೊಳ್ಳುವುದು ತಪ್ಪು”.
“ನೀನು ಹೋಳೋದು ಸರಿಯಿರಬಹುದು. ರಾಜಕೀಯವೆಂದರೆ ನನಗೆ ಬೋರು, ಗ್ರಾಸ್‌ಸೇದುತ್ತೀಯೇನು?”
ಬ್ಯಾಗಿನಿಂದ ಅವ ಒಂದು ಚಿಕ್ಕ ಲೋಹದ ಪೈಪನ್ನು ತೆಗೆದ. ಇನ್ನೊಂದು ಪುಟ್ಟ ಚೀಲದಿಂದ ಮರಿವಾನಾವನ್ನು ತೆಗೆದು ತುಂಬಿದ.
“ನೋಡು – ಇದನ್ನು ಸೇದೋದು ಕಾನೂನು ಬಾಹಿರ. ನಮ್ಮನ್ನು ಪೋಲೀಸರು ಈಗ ಬಂಧಿಸಬಹುದು. ಆದರೆ ನನಗೆ ಅದರ ಎಗ್ಗಿಲ್ಲ. ಸಿಗರೇಟ್‌ಗಿಂತ ಇದು ಹೆಚ್ಚು ಕೆಟ್ಟದಲ್ಲ. ನಿಮ್ಮ ದೇಶದ್ದು : ರುಚಿನೋಡು. ಗ್ರಾಸ್ ಅಷ್ಟು ಚೆನ್ನಾಗಿಲ್ಲ. ಹೂ ತಗೋ”.
ದಾಕ್ಷಿಣ್ಯಕ್ಕಾಗಿ ಸೇದಿದೆ. ನಮ್ಮ ಸೇಟಿನ ಪಕ್ಕದಲ್ಲಿ ಇಬ್ಬರು ತೆಳುವಾದ ಮುಖಗಳ ಹುಡುಗಿಯರಿದ್ದರು. ನಾನು ಎರಡು ದಂ ಎಳೆದು ಕೊಟ್ಟ ಪೈಪನ್ನು ಅವನು ಅವರಿಗೆ ಕೊಟ್ಟ. ಅವರೂ ಅವನಿಗೆ ಅಪರಿಚಿತರು. ಪೈಪ್ ನಮ್ಮ ನಡುವೆ ಸುತ್ತಾಡಿತು. ಮುಂದೆ ಕೂತವರು ತಮಗಿದು ತಿಳಿಯದೆಂಬಂತೆ ನಟಿಸುತ್ತ ಸೆಟೆದುಕೂತಿದ್ದರು. ನನಗೆ ಗ್ರಾಸ್ ಸ್ವಲ್ಪವೂ ಸೇರಲಿಲ್ಲ. ಯಾವ ಪರಿಣಾಮವನ್ನೂ ಮಾಡಲಿಲ್ಲ. ಆದರೆ ಸ್ನೇಹಕ್ಕೆ ಬೇಡವೆನ್ನಲಾರದೆ ಸೇದಿದೆ. ನನ್ನ ಪಾಲಿಗೆ ಪೈಪ್ ಬಂದಾಗ ಒಂದು ದಂ ಎಳೆದು ಅವನಿಗೆ ಹಿಂದಕ್ಕೆ ಕೊಡುತ್ತಿದ್ದೆ. ನನ್ನ ದಾಕ್ಷಿಣ್ಯ ಅವನಿಗೆ ಅರ್ಥವಾಗಲಿಲ್ಲ. ಅವನು ತನ್ನ ವೆಲ್ಶ್ ಪೂರ್ವಿಕರ ಬಗ್ಗೆ, ತನ್ನ ಮೀನು ಹಿಡಿಯುವ ಸಾಹಸಗಳ ಬಗ್ಗೆ, ತಾನು ಇನ್ನೂ ಓದಲು ಇಚ್ಛಿಸುವ ಮಕ್ಕಳ ಅದ್ಭುತಕತೆಗಳ ಬಗ್ಗೆ, ಅಮೆರಿಕಾದಲ್ಲಿ ಹುಟ್ಟಿ ಬೆಳೆದ ತನಗೂ ಇನ್ನೊಂದು ಪ್ರಪಂಚ ಎನ್ನಿಸುವ ನ್ಯೂಯಾರ್ಕಿನ ಬಗ್ಗೆ ಮಾತಾಡಲು ಪ್ರಾರಂಭಿಸಿದ್ದ. ಹಿಂದಿನ ಸೀಟಿನಲ್ಲಿ ಸುತ್ತಾಡುವ ಪೈಪ್ ಒಂದು ಸಣ್ಣ ಕುಟುಂಬವನ್ನು ರಚಿಸಿತ್ತು.
“ಇದೇ ಚಿಕಾಗೋನ ಎತ್ತರದ ಬಿಲ್ಡಿಂಗ್ – ಜಾನ್‌ಹ್ಯಾಂಕಾಕ್. ಸಿಯರ್ಸ್ ಇದಕ್ಕೂ ಹೆಚ್ಚು ಎತ್ತರವೆನ್ನುತ್ತಾರೆ. ಪ್ಮೇಬಾಯ್ ಪ್ರಕಟವಾಗುವುದು ನಿಮ್ಮ ಬಲಕ್ಕೆ ಕಾಣುವ ಆ ಎತ್ತರವಾದ ಕಟ್ಟದಲ್ಲಿ”. ನಮ್ಮ ಚಾಲಕ ಮೈಕ್‌ನಲ್ಲಿ ನಮ್ಮ ಪುರ ಪ್ರವೇಶವನ್ನು ಸಾರಿದ.
“ಚಿಕಾಗೋದಲ್ಲಿ ಏನು ಮಾಡುತ್ತಿ?”
“ಕ್ಯಾಲಿಫೋರ್ನಿಯಾ ಬೋರಾಯಿತು. ಈಗ ಚಿಕಾಗೋದಲ್ಲಿ ಕೆಲಸ ಹುಡುಕುತ್ತೇನೆ. ಯಾವುದೋ ಒಂದು ದಿನ ಬೆಟ್ಟದ ಮೇಲೊಂದು ಮನೆ ಕಟ್ಟುತ್ತೇನೆ. ಅಡಿಗೆ ಮಾಡುವುದರಲ್ಲಿ ಖುಷಿಯಿರುವ ಹುಡುಗಿಯನ್ನು ಮದುವೆಯಾಗುತ್ತೇನೆ. ಅಮೇರಿಕಾದ ಹುಡುಗಿಯರು ಗಂಡಸರಂತೆ ಆಗುತ್ತಿದ್ದಾರೆ. ನನ್ನ ಎದುರು ಕೂತ ಈ ಹುಡುಗಿಯನ್ನು ನೋಡು. ಅವಳ ಜೊತೆ ಸಂಭೋಗ ಮಾಡಬೇಕೆಂದು ನಿನಗನ್ನಿಸುತ್ತದೆಯೆ?”
ನನ್ನ ಮುಖದಲ್ಲಿ ಮೂಡಿದ ಮುಜುಗರ ಕತ್ತಲಿನಲ್ಲಿ ಅವನಿಗೆ ಅರ್ಥವಾಗಲಿಲ್ಲ. ಬಸ್ಸು ನಿಂತಾಗ ಅವನು ಎದ್ದುನಿಂತ. ಎತ್ತರವಾದ ಮೈಕಟ್ಟಿನ ಯುವಕ. ಅಮೆರಿಕಾದ ಸಮೃದ್ಧಿಯ ಶಿಶು. ಭಾರತದ ಗ್ರಾಸ್ ಎಂದು ಅವನು ಸೇದಿದ್ದು ನಿಜವಾಗಿಯೂ ಹುಲ್ಲೇ ಇರಬಹುದು. ಸ್ನೇಹಿತರೊಬ್ಬರು ಹೇಳಿದ್ದರು: ಬಾಳೆ ಹಣ್ಣಿನ ಒಣಗಿದ ಸಿಪ್ಪೆಯನ್ನು ಸೇದುವುದು ಮಾದಕವೆಂದು ಯುವಕರು ನಂಬಿ ಸೇದಲು ಪ್ರಾರಂಭಿಸಿದರಂತೆ. ಹಲವರಿಗೆ ಅದು ಮಾದಕವಾಗಿಯೂ ಕಂಡಿತಂತೆ. ಈ ಯುವಕರು ಏನನ್ನಾದರೂ ನಂಬಲು ಹಾತೊರೆದಿದ್ದಾರೆ…..ಅಥವಾ ನಾನು ಸೇದಿದ್ದು ನಿಜವಾಗಿಯೂ ಮಾರಿವಾನವೆ? ಬಸ್ಸನ್ನು ತಡವರಿಸದೇ ಇಳಿದಿದ್ದೆ. ಚಿಕಾಗೋನ ಅತ್ಯಂತ ಎತ್ತರದ ಜಾನ್ ಹ್ಯಾಂಕಾಕ್ ಆಗಲೀ, ಸಿಯರ್ಸ್ ಆಗಲೀ ನನ್ನ ಕಣ್ಣಲ್ಲಿ ತೇಲಿರಲಿಲ್ಲ; ಅದ್ಭುತವಾಗಿ ಖಂಡಿತ ಕಂಡಿರಲಿಲ್ಲ.
*
*
*
ಡಾ.ಕೃಷ್ಣರಾಜು ನನಗಾಗಿ ಕಾದಿದ್ದರು.
“ನೀ ಮೆಟ್ಟುವ ನೆಲ ಅದೆ ಕರ್ನಾಟಕ”
ಅಮೇರಿಕಾದ ಮಿಡ್‌ವೆಸ್ಟ್ ವಿದ್ಯಾರಣ್ಯವಾಗಿದೆ, ಮಿಚಿಗನ್ ನೃಪತುಂಗವಾಗಿದೆ. ನ್ಯೂಯಾರ್ಕ್ ಕಾವೇರಿಯಾಗಿದೆ, ಕ್ಯಾಲಿಪೋರ್ನಿಯಾ ಕರ್ನಾಟಕವಾಗಿದೆ. ಕನ್ನಡನಾಡಿನಲ್ಲಿ ಓದಿ ಅಮೇರಿಕಾದಲ್ಲಿ ಕೆಲಸ ಮಾಡುವ ನಮ್ಮ ಕನ್ನಡಿಗ ಡಾಕ್ಟರರು, ಎಂಜಿನಿಯರ್‌ಗಳು ತಾವು ಮೆಟ್ಟುವ ನೆಲವನ್ನು ಕರ್ನಾಟಕ ಮಾಡಿದ್ದಾರೆ; ಹೆಸರು ಕೊಟ್ಟು ಹಿಗ್ಗಿದ್ದಾರೆ. ಕೊರೆಯುವ ಚಳಿ, ಪ್ರಖರವಾದ ಬೆಳಕಿನ ಬಿಸಿಲಿನಲ್ಲಿ ಕ್ರೈಸ್ತ ಧರ್ಮದ ಕಾಲೇಜೊಂದರಲ್ಲಿ ಮಧ್ಯಾಹ್ನ ನಾಡಹಬ್ಬಕ್ಕೆಂದು ಸೇರುತ್ತಿದ್ದ ಕನ್ನಡಿಗರನ್ನು ನೋಡುತ್ತ ಅಡ್ಡಾಡಿದೆ. ಅಷ್ಟೇನೂ ಕನ್ನಡ ಕಿವಿಯ ಮೇಲೆ ಬೇಳಲಿಲ್ಲ. ಆದರೆ ಈ ಜರಿ ಅಂಚು ಸೆರಗುಗಳ ರೇಷ್ಮೆ ಸೀರೆಯನ್ನುಟ್ಟು ಸಡಗರದಲ್ಲಿ ಓಡಾಡುವ ಹೆಂಗಸರು ಕನ್ನಡಿಗರೇ – ಖಂಡಿತ. ಯಾರು ಕಮ್ಮೆ, ಯಾರು ಕರ್ನಾಟಕ, ಯಾರು ಮಾಧ್ವ, ಯಾರು ಶ್ರೀ ವೈಷ್ನವ ಎಂದು ಕೂಡ ಊಹಿಸಬಹುದು: ಅವರು ಮನೆಯಿಂದ ಮಾಡಿ ತಂದ ಓಗರಗಳ ವೈವಿಧ್ಯದಲ್ಲಿ. ಅದನ್ನು ಅವರು ಟೇಬಲ್ಲಿನ ಮೇಲೆ ಇಡುತ್ತಿದ್ದ ಸಂಭ್ರಮದಲ್ಲಿ, ಏಕಾಗ್ರತೆಯಲ್ಲಿ. ನಾಲ್ಕೈದು ರೀತಿಯ ಬಿಸಿಬೇಳೆ ಹುಳಿಯನ್ನ, ಮೊಸರನ್ನ, ಪುಳಿಯೋಗರೆ, ಜಾಮೂನು, ಇತ್ಯಾದಿ ಪ್ರತ್ಯಕ್ಷವಾದವು. ಮಕ್ಕಳು ತಾಯಂದಿರಿಗೆ ಅಂಟಿಕೊಂಡು ಅತ್ತವು. ಗೊಂದಲ. ಯಾರು ಏನು ಹಾಡಬೇಕು? ಯಾವುದರ ನಂತರ ಯಾವುದು? ಭಾರತದಲ್ಲಿ ಕ್ಷಾಮವೆ? ನಿಜವೆ? ಅಥವಾ ಅಮೆರಿಕಾದ ಪ್ರಚಾರವೆ? ಐದಾರು ವರ್ಷಗಳಿಂದ ದೇಶಕ್ಕೆ ಹಿಂದಿರಿಗದಿದ್ದವರು ನನ್ನ ಕೇಳಿದರು. ಒಬ್ಬ ಕನ್ನಡಗಿತ್ತಿ ಗೊಣಗಿದಳು: ಇವರೇ ನೋಡಿ ನೀವು ಏನೇ ಹೇಳಿ, ನಮ್ಮನ್ನು ಕಂಡರೆ ಈ ಜನಕ್ಕೆ ಆಗಲ್ಲ. ಅದರಲ್ಲೂ ಇಲ್ಲಿನ ಕರಿಯರಂತೂ……
ಸೀರೆ ಮತ್ತು ಅಡಿಗೆ – ಈ ಎರಡು ಅಂಶಗಳಲ್ಲಿ ಭಾರತೀಯತೆ ನಾಶವಾಗದೇ ಉಳಿಯುತ್ತದೆ. ಜೊತೆಗೇ ಅಪಾರ್ಟ್‌ಮೆಂಟ್‌ಗಳ ಕಿಷ್ಕಿಂಧದಲ್ಲೂ ಕೆಲವು ಇಂಚುಗಳನ್ನು ಆಕ್ರಮಿಸುವ ದೇವರ ಚಿತ್ರಗಳಲ್ಲಿ. ಬೆಳ್ಳಿಯ ತಿಮ್ಮಪ್ಪನ ಪಟ, ಬೆಳ್ಳಿಯ ಕೃಷ್ಣ, ಕುಂಕುಮ, ಅರಿಶಿನ, ಮೈಸೂರಿನ ಊದುಬತ್ತಿ, ಲಕ್ಷ್ಮೀಪಟ. ದೇವರ ಮುಖ ಚೆಂದಾಗಿರಬೇಕೆಂದಿಲ್ಲ, ಆಶ್ಚರ್ಯವೆಂದರೆ ಅಮೇರಿಕಾದ ಕೃಷ್ಣಪಂಥದವರು ಪ್ರಕಟಿಸುವ ಪುಸ್ತಕಗಳಲ್ಲಿರುವ ನಮ್ಮ ದೇವರುಗಳ ವರ್ಣರಂಜಿತ ಚಿತ್ರಗಳೂ ಹೀಗೇ ಇರುತ್ತವೆ.
ನಾನು ಚಿಕಾಗೋದಲ್ಲಿ ಒಂದು ವಿಷಯ ಅರಿತೆ. ನಮ್ಮ ಹೆಂಗಸರಿಗೆ ಸ್ವಲ್ಪವಾದರು ನಮ್ಮ ಸಂಸ್ಕೃತಿಯ ಪರಿಚಯವಿರುತ್ತದೆ. ಕೊನೆಗೆ ಒಂದು ಹಾಡಾದರೂ. ಒಬ್ಬಾಕೆ ಅದ್ಭುತವಾಗಿ ಪುರಂದರದಾಸರ ಹಾಡುಗಳನ್ನು ಹೇಳಿದರು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು – ಈ ಹಾಡನ್ನು ಚಿಕಾಗೋದಲ್ಲಿ ಕೇಳುವುದು ಒಂದು ಅಸಂಗತ ಅನುಭವ.
ಡಾಕ್ಟರರ ಹೆಂಡರು ಸಹ ಡಾಕ್ಟರರು. ಇಲ್ಲಿಂದ ಕರ್ನಾಟಕಕ್ಕೆ ಹೋಗಿ ವಿಧಿಪೂರ್ವಕ ಮದುವೆಯಾಗಿ ಗ್ಯಾಡ್ಜೆಟ್‌ಗಳ ಸ್ವರ್ಗದಲ್ಲಿ ಸಂಸಾರ ಹೂಡಿದ ದಂಪತಿಗಳು; ಜಾತಕ, ಜಾತಿ, ಕಸುಬು ಎಲ್ಲ ಕೂಡಿ ಬಂದಿರುವ ಅದೃಷ್ಟಶಾಲಿಗಳು. ಅವರ ಪ್ರಕಾರ: ಭಾರತವನ್ನು ಅವರು ಪ್ರೀತಿಸುತ್ತಾರೆ, ಪಾಶ್ಚಿಮಾತ್ಯರ ಸಂಸ್ಕೃತಿಹೀನತೆಯನ್ನು ದ್ವೇಷಿಸುತ್ತಾರೆ, ಆದರೆ ಅವರ ಯೋಗ್ಯತೆಗೆ ಸರಿಯಾದ ಕೆಲಸ ಭಾರತದಲ್ಲಿ ಅವರಿಗೆ ಸಿಗದಿದ್ದರಿಂದ…… ಇತ್ಯಾದಿ. ಈ ವಾದದ ವಿರುದ್ಧ ಎಲ್ಲ ವಾದವೂ ವ್ಯರ್ಥವೆಂದು ನನಗೆ ಗೊತ್ತು. ಒಂದು ಡಾಲರಿಗೆ ಎಂಟುರೂಪಾಯಿ – ಅದು ನಿಜ. ಒಬ್ಬ ಹುಡುಗಿ ಮಾತ್ರ ನಿಜವಾದ ಮಾತು ಹೇಳಿದಳು. ಸುಧಾಳ ಪ್ರಕಾರ ಒಂದು ಡಾಲರು ಒಂದು ರೂಪಾಯಿಗೆ ಸಮವಾಗಿದ್ದರೆ ಈ ಚಳಿದೇಶಕ್ಕೆ ನಾವೆಲ್ಲ ಯಾಕೆ ಬರಬೇಕಿತ್ತು? ಸುಂದರವಾದ ಥಿಯೇಟರ್, ಮಕ್ಕಳು, ದೊಡ್ಡ ಕುಂಕುಮದ ಮುದುಕಿಯರು, ಈಚೆಗೆ ಭಾರತದಿಂದ ಬಂದಿರುವರೆಂಬುದಕ್ಕೆ ದ್ಯೋತಕವಾಗಿ ಟೈಟ್ ಪ್ಯಾಂಟ್‌ಗಳನ್ನು ಧರಿಸಿದ ಯುವಕ ಡಾಕ್ಟರರು, ಎಂಜಿನಿಯರು, ಕರ್ನಾಟಕದ ನಾಡಹಬ್ಬದಂತೆಯೇ ಈ ನಾಡಹಬ್ಬವೂ ನಡೆಯಿತು. ರತ್ನನ ಪದಗಳು; ಕನ್ನಡ ಮತ್ತು ಹಿಂದಿ ಸಿನಿಮಾ ಹಾಡುಗಳು; ರಂಗದಿಂದ ಪಿಸುಮಾತೂ ಕೇಳಿಸಬಲ್ಲಂಥ ಥಿಯೇಟರಿನಲ್ಲಿ ಮೈಕು; ಅದು ಅನಾಮತ್ತಾಗಿ ಹಾಡಿನ ಮಧ್ಯೆ ಕಿರುಚುವುದು; ಮೈಕಿನ ವೈರನ್ನು ರಂಗನಿರ್ಗಮನದ ಅವಸರದಲ್ಲಿ ಎಡವೋದು; ತಾಯಿ ಹಾಡುತ್ತಿರುವಾಗ ಮಗು ಮೆಲ್ಲಮೆಲ್ಲನೆ ರಂಗ ಪ್ರವೇಶ ಮಾಡಿ ಎಲೆಕ್ಟ್ರಿಕ್ ವೈರಿನ ಮೂಲವನ್ನು ಎಳೆಯುವುದು; ಅದರಿಂದ ನಾವು ಗಾಬರಿಯಾಗುವುದು – ಅಮೇರಿಕನ್ನರ ಇಜಿಜಿiಛಿieಟಿಛಿಥಿ ಮಾನವೀಯವಲ್ಲವೆಂದು ವಾದಿಸುತ್ತ ಪರಕೀಯರ ನಡುವಿನ ನನ್ನ ದಿಗ್ಭ್ರಮೆ ಮುಚ್ಚಿಕೊಳ್ಳುವ ನನಗೆ, ಈ ವಾತಾವರಣ ನಿಜವಾಗಿಯೂ ಹಿತವೆನ್ನಿಸಿತು.
ನಾವು ತಿಂದ ಬಿಸಿ ಬೇಳೆ ಅನ್ನ ಕರಗುವಷ್ಟು ಕಾಲ ಶಾಸ್ತೀಯ ಸಂಗೀತ, ಭರತನಾಟ್ಯ, ಹಳ್ಳಿಮಾತಿನ ಅಣಕ, ಸಿನಿಮಾ ಹಾಡಿಗಳ ಕನ್ನಡ ಸಂಸ್ಕೃತಿಯ ಚೌಚೌ ನಡೆಯಿತು.
ಮುಖ್ಯ ಅತಿಥಿಯ ಭಾಷಣದಲ್ಲಿ ನಾನು ಹೇಳಿದೆ: ನಮ್ಮ ದೇಶ ಇನ್ನೂ ಎರಡು ಮೂರು ಶತಮಾನ ಪ್ರಯತ್ನಿಸಿದರೂ ಮುಟ್ಟಲಾರದ ಸಮೃದ್ಧಿಯನ್ನು ಒಂದು ದಿನದ ಪ್ರಯಾಣದಲ್ಲಿ ಪಡೆದವರು ನೀವು. ಭಾರತದ ಅಸಂಖ್ಯಾತ ಬಡವರು ಈ ಕನಸನ್ನು ಸಹ ಕಾಣಲಾರರು. ಆದರೆ ಇಂಡಿಯಾದ ಭವಿಷ್ಯವನ್ನು ರೂಪಿಸುವವರು ನೀವಲ್ಲ – ಅವರು. ಯಾಕೆಂದರೆ ನಿಮ್ಮ ಹಾಗೆ ಅವರು ಶತಮಾನಗಳನ್ನು ಜಿಗಿಯಲಾರರು; ಆದ್ದರಿಂದ ಅವರು ಭಾರತಕ್ಕೆ ಬದ್ಧರು. ಅವರು ತುಳಿಯುವ ಹಾದಿ ಕ್ರಾಂತಿಯಾದರೆ, ಹಿಂಸೆಯಾದರೆ ಅದನ್ನು ಟೀಕಿಸುವ ಹಕ್ಕು ನಿಮಗಿಲ್ಲ. ನೀವು ಚಕ್ರಕ್ಕೆ ಕೈ ಹಚ್ಚಿದವರಲ್ಲ.
ಮೇಲಿನ ಮಾತುಗಳನ್ನು ಬರೆಯುತ್ತಿದ್ದಂತೆ ನನಗೆ ಮುಜುಗರವಾಗುತ್ತಿದೆ. ಅಮೆರಿಕಾದಲ್ಲಿರುವ ಈ ಕನ್ನಡಿಗರಲ್ಲಿ ಹಲವರು ಹಲವರು ವಾರಾನ್ನದಿಂದ ಓದಿದವರು. ತಮ್ಮಂದಿರ ವಿದ್ಯಾಭ್ಯಾಸ, ತಂಗಿಯರ ಮದುವೆ – ಇತ್ಯಾದಿ ಜವಾಬ್ದಾರಿಗಳ ನಿರ್ವಹಣೆಗಾಗಿ ವಲಸೆ ಬಂದವರು. ಇಲ್ಲ ನನಗೆ ಯಾರನ್ನೂ ಟೀಕಿಸುವ ಅಧಿಕಾರವಿಲ್ಲ. ಭಾರತದಲ್ಲಿದ್ದೂ ಜನಸಮುದಾಯದ ಸುಖದುಃಖಗಳಲ್ಲಿ ಭಾಗಿಯಾಗುವವರು ಎಷ್ಟು ಜನ? ಇವರು ನನ್ನವರು, ನನ್ನಂಥವರು. ನಾವು ಅರಿಯಬೇಕಾದ್ದು; ಚರಿತ್ರೆ ಚಕ್ರ ಇಂಡಿಯಾದಲ್ಲಿ ತಿರುಗಲು ಶುರುವಾದಾಗ ನಮ್ಮ ಅಭಿಪ್ರಾಯಗಳು, ನಮ್ಮ ಸಣ್ಣ ಸಂಕಟಗಳು, ಕಷ್ಟಗಳು, ಒಳ ಜಗಳಗಳು – ಎಲ್ಲ ಎಷ್ಟು ಅಸಂಬದ್ಧ ಎಂಬುದನ್ನು. ಆದರೆ ಇವರು ಕೂಡ ನಿಜವಾಗಿ ಗುಂಪನ್ನು ಪ್ರೀತಿಸುವ ಜನ. ದೋಸೆ, ಇಡ್ಲಿ, ನಮ್ಮ ಮಂತ್ರಿಗಳ ಲಂಚಕೋರತನ, ಯಾರು ಈಗ ಯಾವ ಹುದ್ದೆಯಲ್ಲಿ – ಇತ್ಯಾದಿಗಳಲ್ಲಿದ್ದೇ ನಾನು ಕ್ಷಣ ಮೈಮರೆತು ನನ್ನ ಭಾಷೆಯನ್ನು ಮಾತಾಡುವ ಜನರ ಜೊತೆ ಒಂದಾಗಿ ಹೋದೆ.
ಈಚೆಗೆ ನಾನು ಗಾಢವಾಗಿ ಅನುಭವಿಸಬಲ್ಲ ಭಾವನೆಯೆಂದರೆ ಸಿಟ್ಟಲ್ಲ – ವಿಷಾದ.