ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ
ಗಂಧಲೇಪನವ್ಯಾತಕೆ! ಈ ದೇಹಕೆ||
ಮಂದಮಾರುತ ಮೈಗೆ ಬಿಸಿಯಾದವೇ ತಾಯಿ
ಬೆಳದಿಂಗಳೂ ಉರಿವ ಬಿಸಿಲಾಯಿತೇ ನನಗೆ
ಹೂಜಾಜಿ ಸೂಜಿಯ ಹಾಗೆ| ಚುಚ್ಚುತಲಿವೆ||
ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ
ಉಸಿರಿನ ಬಿಸಿ ಅವಗೆ ತಾಗದೆ ಹುಸಿಹೋಯ್ತೆ
ಚೆಲುವ ಬಾರದಿರೇನು ಫಲವೆ| ಈ ಚೆಲುವಿಗೆ||
ಕಾಮನ ಬಾಣಾ ಹತ್ತ್ಯಾವ ಬೆನ್ನಾ
ಆತುರ ತೀವ್ರ ಕಾಮಾತುರಾ ತಾಳೆನಾ
ಆರ್ತಳಿಗೆ ಆಶ್ರಯವಿರದೆ|ಒದ್ದಾಡುವೆ||
ಅನ್ಯಪುರುಷನು ಮಾರ ಅಂಗನೆಯನೆಳೆದಾರೆ
ಕೈಹಿಡಿದ ಸರಿಪುರುಷ ಸುಮ್ಮನಿರತಾರೇನೆ
ಕರುಣೆಯ ತೋರುವರ್‍ಯಾರೇ| ಸಣ್ಣವಳಿಗೆ||
*****