ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಯು.ಆರ್.ಅನಂತಮೂರ್ತಿಯವರು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಎಸ್.ಎಂ. ಕೃಷ್ಣರಿಗೆ ಬರೆದ ಪತ್ರ
ಸನ್ಮಾನ್ಯ ಮುಖ್ಯಮಂತ್ರಿಗಳೇ
ಕುದುರೆ ಮುಖದ ಗಣಿಗಾರಿಕೆ ನಿಲ್ಲಬೇಕೆಂದು ತೀರ್ಥಹಳ್ಳಿಯಲ್ಲಿ ದೊಡ್ಡದೊಂದು ಸಭೆ ಮತ್ತು ಮೌನ ಮೆರವಣಿಗೆ ಈ ೯ನೇ ತಾರೀಖು ನಡೆದ ತಕ್ಷಣವೇ ನಾನು ತಮಗೊಂದು ಕಾಗದ ಬರೆದೆ. ಕೂಡಲೇ ತಾವು ನನಗೆ ಪ್ರತಿಕ್ರಿಯಿಸಿ ಈ ದಿನದ ಮಾತಿಗೆ ಕರೆದಿರಿ. ನೀವು ನನಗೆ ಬರೆದದ್ದು ಗೊತ್ತಾದ ದಿನದಿಂದ ನನ್ನ ಜೊತೆ ಸಹಕರಿಸುತ್ತಿರುವ ಎಲ್ಲರೂ (ತುಂಗಭದ್ರ ಹೋರಾಟದ ಒಕ್ಕೂಟದವರು, ತುಂಗಾ ಮೂಲ ಉಳಿಸಿ ಹೋರಾಟದವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೋರಾಡುತ್ತಿರುವವರು, ಈ ಬಗ್ಗೆ ಕಳಕಳಿಯಿರುವ ಎಲ್ಲ ಸಂಘಗಳು, ನಾಡಿನ ಸಾಹಿತಿಗಳು, ರೈತರು ಒಟ್ಟಿನಲ್ಲಿ ಕನ್ನಡನಾಡಿನ ಎಲ್ಲರೂ ಈ ದಿನ ತಾವು ತೆಗೆದುಕೊಳ್ಳುವ ನಿರ್ಧಾರಕಾಗಿ ಕಾದಿದ್ದಾರೆ. ವೈಯಕ್ತಿಕವಾಗಿ ನಾನು ನಿಮ್ಮ ಕಾಗದ ಓದಿದ ಕ್ಷಣದಿಂದ ನೀವು ಗಣಿಗಾರಿಕೆಯನ್ನು ನಿಲ್ಲಿಸುವಿರಿ ಎಂಬ ಭರವಸೆಯಲ್ಲಿದ್ದೇನೆ.
ನಮ್ಮ ಈ ಹೋರಾಟದಲ್ಲಿ ಹತ್ತಾರು ವರ್ಷಗಳಿಂದ ಗಣಿಗಾರಿಕೆಯ ವಿರುದ್ಧ ಹೋರಾಡಿದ ಯುವಜನರಿದ್ದಾರೆ; ಎಲ್ಲ ಪಕ್ಷದ ಶಾಸಕರಿದ್ದಾರೆ; ಗೃಹಿಣಿಯರಿದ್ದಾರೆ, ಇಂಥ ಸಾವಿರಾರು ಜನರ ಪ್ರತಿನಿಧಿಗಳಾಗಿ ಬಂದವರು ಇಲ್ಲೇ ಇದ್ದಾರೆ. ನಮಗೆ ಬೆಂಬಲವಾಗಿ ವೈಜ್ಞಾನಿಕವಾಗಿ ಸಂಶೋಧಿತವಾದ ದಾಖಲೆಗಳಿವೆ. ಇಡೀ ಜಗತ್ತಿನ ಎಲ್ಲ ಪ್ರಜ್ಞಾವಂತರ ಹಂಬಲವಿದೆ; ಯಾಕೆಂದರೆ ಪ್ರಪಂಚದ ಅಮೂಲ್ಯವಾದ ಜೈವಿಕ ವೈವಿಧ್ಯದ ಸಂಪತ್ತಿನ ಹದಿನೆಂಟು ಪ್ರದೇಶಗಳಲ್ಲಿ ಇದೂ ಒಂದು. ಧಾರಾಕಾರವಾಗಿ ಸುರಿಯುವ ಮಳೆಯ ನೀರನ್ನು ತನ್ನ ಒಡಲಲ್ಲಿ ಪಡೆದು ನದಿಗಳಾಗಿ ನಾಡಿನ ಜನತೆಯನ್ನು ಕಾಪಾಡುವ ತಾಯಿಯ ಗರ್ಭದಂತೆ ಇದೆ ನಮ್ಮ ಪಶ್ಚಿಮ ಘಟ್ಟಗಳು. ಇಲ್ಲಿ ಗಣಿಗಾರಿಕೆ ನಡೆಸುವುದು ಅಪರಾಧ. ಬಂಗಾರ ಸಿಕ್ಕರೂ ಈ ಗುಡ್ಡಬೆಟ್ಟಗಳನ್ನು ಅಗೆಯಕೂಡದು.
ಈವರೆಗೆ ನಾವೆಲ್ಲರೂ ಪ್ರಕೃತಿಯ ಮೇಲಿನ ದೌರ್ಜನ್ಯವನ್ನು, ಅನಗತ್ಯವಾದ ಲೂಟಿಯನ್ನು ಹೇಗೆ ಯಾಕೆ ಸಹಿಸಿಕೊಂಡು ಬಂದಿದ್ದೇವೆ ಎನ್ನುವುದನ್ನು ಆಳವಾಗಿ ನಮ್ಮೊಳಗೇ ನೋಡಿಕೊಂಡು ನಮ್ಮ ಅಂತಃಕರಣವನ್ನು ಶೋಧಿಸಿಕೊಳ್ಳಬೇಕಾದ ದಿನ ಪ್ರಾಪ್ತವಾಗಿದೆ. ಯಾವುದು ನಿಜವಾದ ಅಭಿವೃದ್ಧಿ, ಯಾವುದು ಅಲ್ಲ ಎಂಬ ಬಗ್ಗೆ ಆಳವಾಗಿ ಚಿಂತಿಸಿ ಶಾಶ್ವತಕ್ಕೂ, ಸದ್ಯಕ್ಕೂ ಏಕಕಾಲದಲ್ಲಿ ಸಲ್ಲುವ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಮುವತ್ತು ವರ್ಷಗಳ ದುಷ್ಟ ಗಣಿಗಾರಿಕೆಯಿಂದ ಪಶ್ಚಿಮಘಟ್ಟಗಳು ಚೇತರಿಸಿಕೊಳ್ಳಲು ಶತಮಾನಗಳೇ ಬೇಕಾಗಬಹುದು. ನಿಸರ್ಗದ ಸಮೃದ್ಧ ಜೀವಜಾಲದ ಮಡಿಲಲ್ಲಿ ನಾವೇ ದುರಾಸೆಯಲ್ಲಿ ಮಾಡಿದ ಗಾಯಗಳು ಭವಿಷ್ಯದಲ್ಲಿ ಅಪಾಯಕಾರಿಯಾಗದಂತೆ ಏನೇನು ಮಾಡಬಹುದೆಂದು ಪ್ರಾಯಶ್ಚಿತ್ತ ರೂಪವಾಗಿ ನಾವು ಈಗ ಚಿಂತಿಸಬೇಕೇ ಹೊರತು ಆಸೆಬುರುಕರಾದ ಜೀವ ಶತ್ರುಗಳ ಒತ್ತಡಕ್ಕೆ ಒಳಗಾಗಿ ಇನ್ನು ಕೆಲವು ವರ್ಷಗಳ ಗಣಿಗಾರಿಕೆಗೆ ಅನುಮತಿ ಕೊಡುವುದಲ್ಲ. ಕೊಟ್ಟರೆ ಅದು ಅಪರಾಧವಾಗುತ್ತದೆ.
ತಾವು ಇಡೀ ನಾಡಿನ ಮುಖ್ಯಮಂತ್ರಿ; ಕೇಂದ್ರ ಸರ್ಕಾರದಲ್ಲೂ ಗೌರವಾನ್ವಿತರು, ಸಂವೇದನಾಶೀಲರು, ದೂರದೃಷ್ಟಿಯಿಲ್ಲದ, ಸದ್ಯದ ಲಾಭವನ್ನು ಮಾತ್ರ ಪರಿಗಣಿಸುವ ಯಾವ ಶಕ್ತಿಗೂ ನೀವು ಮಣಿಯಕೂಡದೆಂದು ಇಡೀ ನಾಡು ನಿರೀಕ್ಷಿಸುತ್ತಿದೆ.
ಪ್ರಾಯಶಃ ನಮ್ಮಲ್ಲಿ ಹಲವರು ಹುಟ್ಟುವುದಕ್ಕಿಂತ ಮುಂಚೆ, ಯಾವುದೋ ಒಂದು ರಮಣೀಯವಾದ ಸಂಜೆ, ತುಂಗಾತೀರದ ಶಿಬ್ಬಲುಗುಡ್ಡೆಯಲ್ಲಿ ನಿಂತು ಪ್ರಕೃತಿ ಸೌಂದರ್ಯಕ್ಕೆ ಬೆರಗಾಗಿ ಆಕಾಶವನ್ನು ನೋಡಿದ ಕವಿ ಕುವೆಂಪುಗೆ ಹಾರುವ ಬೆಳ್ಳಕ್ಕಿಗಳ ಸಾಲು ದೇವರು ರುಜುಮಾಡಿದಂತೆ ಕಂಡಿತ್ತು. ನಾನು ಬಾಲಕನಾಗಿದ್ದಾಗ ನನಗೂ ಹಾಗೆ ಕಾಣಿಸುವಂತೆ ಅವರು ತಮ್ಮ ಕಾವ್ಯದಿಂದ ಕಲಿಸಿದ್ದರು. ನಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ಮಲೆನಾಡು, ಈ ಬಗೆಯಲ್ಲಿಯೇ, ತನ್ನ ಸೌಂದರ್ಯದಲ್ಲಿ ದಿವ್ಯದ ಅನುಭವವನ್ನು ಕೃಪೆ ಮಾಡುವುದು ಸಾಧ್ಯವಾಗಿ ಉಳಿಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯೆಂದು ತಿಳಿದು ತಾವು ಇಲ್ಲಿ ನಿಮ್ಮ ಸಮ್ಮುಖದಲ್ಲಿ, ಇತಿಹಾಸದಲ್ಲಿ ಮಹತ್ವದ್ದಾಗಿ ಖಂಡಿತ ಕಾಣಿಸಬಹುದಾದ, ನಿಮ್ಮ ತೀರ್ಮಾನಕ್ಕೆ ಕಾದಿದ್ದೇವೆ.
ನಾವೆಲ್ಲರೂ ಕೇಳುವುದು ಇಷ್ಟು ಮಾತ್ರ. ಕುದುರೆ ಮುಖದ ಗಣಿಗಾರಿಕೆಯನ್ನು ನಿಲ್ಲಿಸಿ, ಒಂದು ದಿನವೂ ಮುಂದುವರಿಯದಂತೆ ಈಗಲೇ ನಿರ್ಧಾರ ತೆಗೆದುಕೊಳ್ಳಿ.
ಯು.ಆರ್.ಅನಂತಮೂರ್ತಿ
ಜುಲೈ ೧೮,೨೦೦೧
*****
(ನಿ ಮುರಾರಿ ಬಲ್ಲಾಳರ ಸಂಪಾದಕತ್ವದಲ್ಲಿ -ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ನವರು – ೫೭೪ ೨೧೭, ಪ್ರಕಟಿಸಿರುವ ‘ಯಾರದೋ ಮುಖ..ಯಾರದೋ ದೇಹ’ ಕೃತಿಯಿಂ ಆಯ್ದುಕೊಳ್ಳಲಾಗಿರುವ ಲೇಖನ ಕೃತಿಯ ಬೆಲೆ: ರೂ ೪೦.೦೦)