ಒಂದು
‘ಸಾವಿಲ್ಲದಾ ಮನೆಯ ಸಾಸುವೆಯ ತಾರವ್ವ’ ಎಂದು ಬುದ್ಧ ಹೇಳಿದಾಗ ಕಿಸಾಗೌತಮಿ ಊರೂರು ಅಲೆದಳು- ಬೀದಿ ಬೀದಿ ಸುತ್ತಿದಳು-ಕಂಡಕಂಡವರ ಕಾಲಿಗೆ ಬಿದ್ದು ಗೋಗರೆದಳು ಆಗಲೇ ಅವಳಿಗೆ ಅರಿವಾದದ್ದು ‘ಒಂದೂ ಸಾವಿಲ್ಲದ ಮನೆ ಈ ಜಗತ್ತಿನಲ್ಲೇ ಇಲ್ಲ’ ಎಂದು.
ಎರಡು
ಈಕೆ ವೇಶ್ಯ ಎಂಬ ಕಾರಣ ಮಾಡಿ-ಜನತೆ ಅವಳನ್ನು ಹೀನಾಯವಾಗಿ ಕಂಡು ಕಲ್ಲೊಗೆಯ ತೊಡಗಿದಾಗ ‘ಜೀವನದಲ್ಲಿ ಒಂದೂ ತಪ್ಪು ಮಾಡಿಲ್ಲದವರು ಎಸೆಯಿರಿ ಕಲ್ಲನ್ನು’ ಎಂದು ಏಸು ಸ್ವಾಮಿ ಹೇಳಿದಾಗ ಎಲ್ಲ ತೆಪ್ಪಗಾಗುತ್ತಾರೆ.
ಮೂರು
‘ಎಂದೂ ನಾನು ಮುಖವಾಡ’ ಧರಿಸಿಯೇ ಇಲ್ಲ ಎನ್ನುವವರು ಕೈ ಎತ್ತಿ’ ಎಂದೊಮ್ಮೆ ಭಾಷಣಕಾರರು ಹೇಳಿದಾಗ ಸಭೆಯ ೩/೪ ಭಾಗ ಜನ ಕೈ ಎತ್ತಿದರು. ಅನಂತರ ಭಾಷಣಕಾರ ಕೇಳಿದ ಒಬ್ಬರನ್ನು ‘ನಿಮ್ಮ ಹೆಂಡತಿ ಕೇಳಿದ ಸೀರೆ-ಒಡವೆಗಳನ್ನೆಲ್ಲ ಕೊಡಿಸಿದ್ದೀರಾ?
‘ಅವಳು ತುಂಬ ಆಸೆ ಬುರುಕಿ, ಅವಳ ಆಶೆ- ಆಕಾಂಕ್ಷೆ ಪೂರ್ಣ ಮಾಡುವುದು ನನ್ನಿಂದ ಎಲ್ಲಿ ಸಾಧ್ಯ?
‘ಹಾಗಾದರೆ ಹೇಗೆ ಸಂಭಾಳಿಸುತ್ತಿದ್ದೀರಿ ನಿಮ್ಮ ಹೆಂಡತಿಯನ್ನ’
‘ಹಬ್ಬದ ಅಡ್ವಾನ್ಸ್ ಬರುತ್ತೆ, ಬೋನಸ್ ಬರುತ್ತೆ-ಈ ತಿಂಗಳು ಆಗಲಿಲ್ಲ ಮುಂದಿನ ತಿಂಗಳು ಕೊಡಿಸ್ತೀನಿ ಅಂತ ನಾಟಕ ಆಡ್ತೀದ್ದೀನಿ’
‘ಅಂದ್ರೆ ನಿಮ್ಮ ಮುಖಭಾವ ಬದಲಾಗುತ್ತೆ. ಬೇರೆ ಮುಖವಾಡ ಹಾಕ್ಕೊಂಡು ಮಾತಾಡ್ತಿದ್ದೀರಲ್ಲವಾ?’
‘ನಿಜ… ಆದ್ರೆ ಮುಖವಾಡ ಹಾಕ್ಕೊಳಲ್ಲ ಮುಖಕ್ಕೆ’
‘ಮುಖವಾಡವೇ ಹಾಕ್ಕೊಳ್ಳಬೇಕಾಗಿಲ್ಲ. ಭಾವನೆಗಳು ಬದಲಾದ ಹಾಗೆ ಮುಖ ಎಕ್ಸ್ ಪ್ರೆಷನ್ನೂ ಬದಲಾಗ್ತಿರುತ್ತೆ’
ಈಗ ಹಾಗೆ ನೋಡಿದ್ರೆ ನಮ್ಮ ಸುತ್ತಮುತ್ತ ಮುಖವಾಡದ ವ್ಯಕ್ತಿಗಳೇ ತುಂಬಿದ್ದಾರೆ. ಎದುರಿಗೆ ಸಿಕ್ಕಾಗ ನಗೆ ಮುಖವಾಡ ಹಾಕಿ ಹೊಗಳಿ ಮಾತಾಡ್ತಾರೆ-ಇನ್ನೊಂದು ಕಡೆ ಹೋದಾಗ ಬೇರೆ ಮುಖವಾಡ ಹಾಕ್ಕೊಂಡು ಬಾಯಿಗೆ ಬಂದ ಹಾಗೆ ಬೈತಿದ್ದಾರೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಸರ್ತಿ ನಾಟಕವಾಡುತ್ತೇ ಇರುತ್ತಾರೆ.
ಮಧ್ಯಮ ಹಾಗೂ ಕೆಳಮಧ್ಯಮ ವರ್ಗದವರು ನಾಟಕನಾಡದೆ ಬದುಕೋದು ಸಾಧ್ಯವೇ ಇಲ್ಲ. ‘ಸುಳ್ಳೇ ಹೇಳೋದಿಲ್ಲ ನಾವು’ ಅನ್ನೋರ ಮನೆದೇವರೇ ಅನೇಕ ವೇಳೆ ಸುಳ್ಳು ಆಗಿರುತ್ತೆ.
ಚಿತ್ರ ನಟ-ನಟಿಯರು ಸೆಟ್ ಆಚೆ ಒಂಥರಾ ಇದ್ದಾರೆ-ಸೆಟ್‌ಗೆ ಹೋದ ಮೇಲೆ ತುಂಬ ಬೇರೆ ಆಗಿದ್ದಾರೆ.
ಯಾಕೆ ಅಂದ್ರೆ ಅವರು ಅಭಿನಯಿಸೋ ಪಾತ್ರಕ್ಕೆ ಅವರು ಜೀವ ತುಂಬಬೇಕಾಗುತ್ತೆ. ಅಲ್ಲಿ ಸುಖ, ಸಂತೋಷ, ನೋವು, ನಲಿವು, ಸೇಡು-ಕೇಡು, ಪ್ರೀತಿ, ಪ್ರೇಮ, ಕಾಮ ಎಲ್ಲ ಪ್ರದರ್ಶಿಸಬೇಕು. ಅದನ್ನು ಅವರು ಉದ್ದೇಶಪೂರ್ವಕವಾಗಿ ಅಭ್ಯಾಸ ಮಾಡಿದ್ದಾರೆ. ಸನ್ನಿವೇಶವನ್ನು ಅರ್ಥಮಾಡಿಕೊಂಡು ಮುಖಚರ್ಯೆ ಬದಲಾಯಿಸೋದು ಅವರ ವೃತ್ತಿಯಾಗಿರುತ್ತೆ.
ಅದೇ ರಾಜಕಾರಣಿಗೆ ವೋಟ್ ಬೇಕಾದಾಗ ಕಾಲಿಗೆ ಬೀಳೋದೂ ಗೊತ್ತಿರತ್ತೆ. ಅಧಿಕಾರ ಸಿಕ್ಕಿದ ಮೇಲೆ ದೌಲತ್ತು ಮಾಡೋದು ಗೊತ್ತಿರತ್ತೆ. ಹಳ್ಳಿಯವರು ಬಂದಾಗ ಅಯ್ಯೋಪಾಪ ಅಂದು ಕಣ್ಣೀರು ಹಾಕೋದೂ ಗೊತ್ತಿರತ್ತೆ.
‘ಬಾಣ್ಣ ಬಾ… ನಿನ್ನ ಕೆಲಸ ಆಯಿತೂ ಅನ್ನೊ. ನಾನು ದೊಡ್ಡ ಸಾಹೇಬ್ರ ಹತ್ತಿರವೇ ಮಾತಾಡ್ತೀನಿ’ ಅಂತ ಗೆಳೆಯನ ಹತ್ರ ಮಾತಾಡಿ-ಹಳ್ಳಿಯವನ್ನ ಫೂಲ್ ಮಾಡಿ ಕಳಿಸ್ತಾನಲ್ಲ. ಆಗೇನಾದರೂ ಅವನು ಮುಖವಾಡ ಹಾಕ್ಕೊಂಡಿದ್ದಾನಾ-ಇಲ್ಲ.
ಯಕ್ಷಗಾನ-ಬಯಲಾಟದಲ್ಲಿ ಗ್ರೀಕ್ ನಾಟಕಗಳಲ್ಲಿ ಮುಖವಾಡಗಳು ಬಳಸಿದ ಹಾಗೆ ಈ ‘ಮಂದಿ’ ಮುಖವಾಡ ಬಳಸಲ್ಲ.
ಆದರೆ ಅವರನ್ನ ಮೀರಿಸುವಂಥ ನಿಸ್ಸಿಮ ನಟರು ರಾಜಕಾರಣಿಗಳು.
ಕಾರ್ಯವಾಸಿ ಕತ್ತೆಕಾಲು ಕಟ್ಟು ಅಂತ ಗಾದೆಯೇ ಇದೆ.
ತಾನೊಬ್ಬ ಮಹಾ ವ್ಯಕ್ತಿ ಅನ್ನೋಹಾಗೆ ರೋಪ್ ಹಾಕಿದ ಮಂದಿ ಅವನಿಗಿಂತಾ ದೊಡ್ಡೋನು ತಾನು ಅಂದಾಗ ಮಾನಮರ್ಯಾದೆ ಮನೇಲಿ ಗಂಟೂ ಮೂಟೆ ಕಟ್ಟಿಟ್ಟು ತಪ್ಪಾಯ್ತು ಅಂತ ಕಾಲಿಗೆ ಬೀಳೋ ಅಂತಹವರನ್ನೂ ನೀವು ಕಂಡಿದ್ದೀರಿ.
‘ದೇವ್ರು ವರ ಕೊಟ್ಟರೂ ಪೂಜಾರಿ ವರ ಕೊಡ’ ಅನ್ನೋ ಹಾಗೆ ಅನೇಕ ವೇಳೆ ‘ಬಾಸ್ ಒಳ್ಳೆಯವರಾದ್ರು-ಆಫೀಸಿನಲ್ಲಿರೋ ಚಿಲ್ರೆ-ಪಲ್ರೆ ಜನ-ಸಾಹೇಬರಿಗೆ ಪರಾಕು ಪಂಪ್ ಒತ್‌ತಾ ಆಚೆ ಬಂದಾಗ ಹೆಬ್ಬುಲಿ ಹಾಗೆ ಆಡಿ-ಆಫೀಸ್‌ಗೆ ಹೋದಾಗ ಮೂಗಿಲಿ ಹಾಗಿರ್ತಾರೆ. ರಾಜಕಾರಣದಲ್ಲಿ ಮಾತ್ರವಲ್ಲ-ಎಲ್ಲ ರಂಗದಲ್ಲಿ ಇಂಥ ಮರಿ ಪುಡಾರಿಗಳು ಇದ್ದೆ ಇದ್ದಾರೆ. ಅವರು ಕ್ಷಣಕ್ಕೊಂದು ಬಣ್ಣ ಬದಲಾಯಿಸೋ ಊಸರವಳ್ಳಿಗಳು. ಅಂಥೋರ ಸ್ನೇಹಿತರ ಮಾಫಿಯಾ ಗ್ಯಾಂಗ್ ಇದೆಯಲ್ಲ ಅದು ಇದ್ದದ್ದೂ ಡೇಂಜರಸ್.
ಚಾಡಿ ಚುಚ್ಚೋದು, ಕಿವಿ ಕಚ್ಚೋದು, ಇದ್ದದ್ದು ಇಲ್ಲದ್ದು ಸೇರ್ಸಿ ಕತೆಕಟ್ಟಿ ನಿಜದ ತಲೆಮೇಲೆ ಹೊಡದ್ಹಾಗೆ ಸುಳ್ಳು ಹೇಳೋದು ಅವರ ಆಜನ್ಮಸಿದ್ಧವಾದ ಹಕ್ಕು. ರಂಗದ ಮೇಲೆ ನಾಟಕವಾಡುವ ನಟ-ನಟಿಯರು, ಸಿನಿಮಾದಲ್ಲಿ ಭಾಗವಹಿಸುವವರು ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸ್ತಾರೆ. ಆದರೆ ಕೆಲವರಿಗೆ ಇಡೀ ಜಗತ್ತು ನೆಮ್ಮದಿಯಿಂದಿರೋದು ಇಷ್ಟವಿಲ್ಲ. ಆದ್ದರಿಂದ ಅವರು ಕ್ಷಣಕ್ಕೊಂದು ಮುಖವಾಡ ಹಾಕ್ಕೊಂಡು ಚಿತ್ರ ವಿಚಿತ್ರ ಸುದ್ದಿ ಹಚ್ತಾ ಮಿರಿಮಿರಿ ಮಿಂಚಕ್ಕೆ ನೋಡ್ತಾರೆ. ಅಂಥೋರ ವಿಷಯದಲ್ಲಿ ಹುಶಾರ್!
*****
(೧೯-೦೭-೨೦೦೨)