ಅಲ್ಲೆ ಇರು, ಇಲ್ಲೆ ಇರು, ಎಲ್ಲೊ ಎಂತಾದರಿರು
ನನ್ನ ನಲುಮೆಯ ಕರೆಗೆ ಓಗೊಡುತಿರು;
ಒಮ್ಮೆ ಉದ್ವೇಗದಲಿ, ಒಮ್ಮೆ ಸಂತೃಪ್ತಿಯಲಿ
‘ಓ’ ಎಂಬ ಸವಿದನಿಯ ಸೋಂಕಿಸುತಿರು.
ದೂರದಿಂ ತೇನೆಯುಲಿ ಸಾರುವಂತೆ
ಮರಳಿ ಬೆಳುದಿಂಗಳಲಿ ಕರಗುವಂತೆ!
ಆವ ಹೆಸರಿನ ಅಂದಚಂದದಲಿ ಎನಿತು ಸಲ
ಮೆಚ್ಚಿ ಕರೆದರು ಮನಕೆ ತೃಪ್ತಿಯಿಲ್ಲ;
ಹೂವಿನೆದೆ ಸವಿಜೇನಿಗಾವ ಹೆಸರಿಟ್ಟರೂ
ತುಂಬಿ ತಣಿ ಹೀರದೆಯೆ ಮಾಬುದಿಲ್ಲ.
ಒಲುಮೆಯಾಳದ ನುಡಿಯು ಹೃದಯಂಗಮ
ಬದುಕ ಸವಿಯಾಗಿಸುವ ರಸ ಸಂಭ್ರಮ.
ತಿಳಿಗೊಳದ ಮಧ್ಯದಲಿ, ತೆರೆಯ ವರ್‍ತುಲಗಳಲಿ
ಹೊನ್ನ ತಾವರೆ ತೇರು ತೇಲಿದಂತೆ
ಮನದ ಮಾನಸ ಸರೋವರದ ಕನ್ನಡಿಯಲ್ಲಿ
ನಿನ್ನ ಮೊಗ ಚಂದಿರನ ಬಿಂಬದಂತೆ!
ಬಾಳ ನಿರ್‍ಮಲಗೊಳಿಸಿ ಸಿಂಗರಿಸಿದೆ.
ಎದೆಯ ಮಂದಿರ ಮತ್ತೆ ಕಂಗೊಳಿಸಿದೆ.
ಸುಂದರ ವಸುಂಧರೆಯು ಸೂರ್‍ಯಚಂದ್ರಾದಿಗಳು
ಕೋಟಿ ನಕ್ಷತ್ರಗಣ ನೀಹಾರಿಕೆ
ಯಾರ ದೂರದ ಕರೆಗೆ ಓಗೊಟ್ಟು ಓರಂತೆ
ತಿರುಗುತಿವೆ ಒಂದೊಂದರೊಳಸೆಳೆತಕೆ.
ಸುಖದುಃಖಗಳ ಸಾಮರಸ್ಯದಲ್ಲಿ
ಬಾಳಿಹುದು ಮನುಜಕುಲ ಸಖ್ಯದಲ್ಲಿ.
ಸೊಂಪೇರಿ ನಳನಳಿಸಿ ಬೆಳೆದ ಪೈರಿನ ಕಂಪು
ಗಾಳಿಯಲಿ ತಂಪಾಗಿ ಬೀಸುವಂತೆ
ನೂರು ಗಾವುದ ದಾಟಿ ಮೇಘತಾನವ ಮೀಟಿ
ಇನಿವಾತನುಸುರುತಿರು ಹಿಂಗದಂತೆ.
ಯಕ್ಷ ಸಾಕ್ಷಿಗೆ ಮೇಘದೂತನಾಗೆ
ಇಂದು ಕಳಿಸಿಹೆನಕ್ಷಿ ಪಕ್ಷಿಹಾಗೆ.
*****