ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು – ಭಾಗ ಎರಡು ಹಾಗು ಅಂತಿಮ ಕಳೆದ ಸಂಚಿಕೆಯಿಂದ ಮುಂದುವರೆದದ್ದು

ಶಬ್ದಾಲಂಕಾರ ಅರ್ಥಾಲಂಕಾರಗಳು

ಎರಡನೆಯ ಪರಿಚ್ಛೇದವು ಶಬ್ದಾಲಂಕಾರಗಳಿಗೆ ಸಂಬಂಧಿಸಿದ್ದು. ಇಲ್ಲಿ ಅಲಂಕರ ಮತ್ತು ಶಬ್ದಾಲಂಕಾರ-ಅರ್ಥಲಂಕರ ಭೇದಗಳ ಲಕ್ಷಣಗಳನ್ನು ಮೊದಲಿಗೆ(೧-೩) ಹೇಳಿದೆ. ಆಮೇಲೆ ‘ಇಲ್ಲಿಗೆ ಇದು ತಕ್ಕುದು ಇಲ್ಲಿಗೆ ಪೊಲ್ಲದು ಇದು ಎಂದು ಅರಿದು ಸಮರಿ ಬಲ್ಲಂತೆ, ಎಲ್ಲಂ ನೆಲ್ಲುಂ ಮೊಸರುಂಗುಡಿದಂತೆ ಅಲ್ಲದೆ, ತಲ್ಲಣಿಸದೆ ಅಲಸದೆ ಇಡು ಮೃದುಪದಮಂ’(೪) ಎಂದು ಮತ್ತು, ‘ಗಳಿಯಿಸಿದ ಅರ್ಥಂ ಸಲೆ ಪಾಂಗು ಅಳಿಯದೆಯುಂ ಶಬ್ದಮ್ ಒಂದದಿರ್ದೊಡೆ ಮುತ್ತುಂ ಮೆಣಸುಂ ಕೋದಂತೆ ಇರ್ಕುಂ, ಕಳಲ್ಚಿ ಕಳೆಗೊಂದಿ ಮುಂದೆ ಬಾರದ ಪದಮಂ’(೫) (ಇಲ್ಲಿಗೆ ಉಚಿತ ಇಲ್ಲಿಗೆ ಅನುಚಿತ ಎಂದು ತಿಳಿದು ಸರಿಗೊಳಿಸಿ, ಭತ್ತ ಮೊಸರುಗಳನ್ನು ಕೂಡಿಸಿ ಕಲಸಿದಂತೆ ಮಾಡದೆ, ಮೃದುವಾದ ಶಬ್ದಗಳನ್ನು ಇರಿಸು. ಕುರಿತಿರುವ ಅರ್ಥವು ಕ್ರಮಪ್ರಕಾರವಾಗಿದ್ದರೂ ಸರಿಯಾದ ಶಬ್ದದಲ್ಲಿ ಹೊಂದಿಕೊಂಡಿರದಿದ್ದರೆ ಮುತ್ತು ಮೆಣಸುಗಳನ್ನು ಒಟ್ಟಿಗೆ ಪೋಣಿಸಿದಂತೆ ತೋರುತ್ತದೆ; ಅರ್ಥದ ಕಳೆಗೆ ಹೊಂದಿ ಮುಂದೆ ನಿಲ್ಲದ ಪದವನ್ನು ಕಳಚ್ವಿ ಹಾಕಿ.) ಎಂದು, ಶಬ್ದಗಳ ಪರಸ್ಪರ ಹೊಂದಾಣಿಕೆ ಮತ್ತು ಶಬ್ದ-ಅರ್ಥಗಳೆರಡರ ಹೊಂದಾಣಿಕೆಗಳನ್ನು ನಿರ್ದೇಶಿಸಿದೆ. ಅನಂತರ, ಲಘು-ಗುರು-ಸಂಯುಕ್ತಾಕ್ಷರ-ಕ್ರಿಯಾವಿಶೇಷ-ನಿಪಾತ-ಅವ್ಯಯ-ವಿಭಕ್ತಿ ಪ್ರತ್ಯಯ-ಸಂಬೋಧನೆ-ಪುನರುಕ್ತಿ-ಬಹುವಿಶೇಷಣ ಇ. ದೋಷಗಳು ಮತ್ತು ಅವುಗಳಿಗೆ ಅಪವಾದಗಳನ್ನು ಹೇಳಿದೆ(೬-೨೯). ಬಳಿಕ ‘ಪ್ರಾಸ’ ಮತ್ತು ಅದರಲ್ಲಿನ ಆರು ಭೇದಗಳನ್ನು ಲಕ್ಷಿಸಲಾಗಿದೆ. ‘ಪ್ರಾಸ’ವು ಕನ್ನಡಕ್ಕೆ ಅತ್ಯಂತ ವಿಶಿಷ್ಟವಾದುದೆಂಬುದನ್ನು (‘ನುತ ಶಬ್ದಾಲಂಕಾರ ದೊಳ್ ಅತಿಶಯಂ ಈ ಕನ್ನಡಕ್ಕೆ ಸತತಂ ಪ್ರಾಸಂ’-೩೦)ಗಮನಿಸಿ ದಾಖಲಿಸಲಾಗಿದೆ. ಅದಕ್ಕೆ ಮುಂದೆ ಹೆಚ್ಚಾಗಿ ದಂಡಿಯನ್ನೇ ಅನುಸರಿಸಿ ಉತ್ತರಮಾರ್ಗ-ದಕ್ಷಿಣಮಾರ್ಗ ಭೇದಗಳ ಬಗ್ಗೆ ದೀರ್ಘವಾಗಿ ಹೇಳಲಾಗಿದೆ(೪೬-೧೧೧). ಕೊನೆಯಲ್ಲಿ ಗೋಮೂತ್ರ್ರಿಕ-ಯಮಕ-ಗೋಪಸ್ರಕ್ರಿಯ-ಅರ್ಥಭ್ರಮ-ಮುರಜಬಂಧ-ಚಕ್ರಬಂಧ ಇ., ಮತ್ತು ಪ್ರಹೇಳಿಕೆ ಇ., ಚಿತ್ರಕಾವ್ಯ ಪ್ರಕಾರಗಳ ಲಕ್ಷ್ಯಪದ್ಯಗಳನ್ನು ರಚನೆಮಾಡಿ ಕೊಡಲಾಗಿದೆ(೧೧೨-೧೫೨).
ಈ ಗ್ರಂಥದಲ್ಲಿ ಹೇಳಿರುವ ಉತ್ತರ-ದಕ್ಷಿಣ ಮಾರ್ಗಭೇದಗಳು ಕನ್ನಡದಲ್ಲಿ ಆ ಕಾಲಕ್ಕೆ ವಾಸ್ತವವಾಗಿಯೂ ಇದ್ದವೇ ಅಥವಾ ದಂಡ್ಯಾದಿಗಳನ್ನು ಅನುಸರಿಸಿ, ಸಂಸ್ಕೃತದಲ್ಲಿ ಹೇಳಿದುದನ್ನೇ ಕನ್ನಡಕ್ಕೆ ಆರೋಪಿಸಿ ಹೇಳಲಾಗಿದೆಯೇ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ದಿ. ಮುಳಿಯ ತಿಮ್ಮಪ್ಪಯ್ಯನವರೊಬ್ಬರೇ ಅವು ವಾಸ್ತವವಾಗಿಯೇ ಇದ್ದುವು ಅಂತ ದೀರ್ಘವಾಗಿ ಪ್ರತಿಪಾದಿಸಿದ್ದಾರೆ. ಆದರೆ ಅವರ ಪ್ರಯತ್ನಪೂರ್ವಕ ಪ್ರತಿಪಾದನೆಯು ನಮಗೆ ಹೌದೆನ್ನಿಸದೆ ಸೋಲುತ್ತದೆ.
ಮಾರ್ಗಭೇದಗಳ ಬಗ್ಗೆ ದಂಡ್ಯಾದಿಗಳಲ್ಲಿಯೂ ಬಹು ನಿಶ್ಚಿತವಾದ ಅಭಿಪ್ರಾಯವಿದ್ದಂತೆ ತೋರುವುದಿಲ್ಲ. ದಂಡಿಯು ‘ಗೌಡೀ’ ಮತ್ತು ‘ವೈದರ್ಭೀ’ ಮಾರ್ಗಗಳ ಭಿನ್ನತೆಯನ್ನು ಪ್ರತಿಪಾದಿಸುತ್ತಾನೆ ಮತ್ತು ಅವಕ್ಕೇ ಉತ್ತರ-ದಕ್ಷಿಣ ಮಾರ್ಗಗಳೆಂಬ ಇನ್ನೊಂದು ಹೆಸರನ್ನು ಸೂಚಿಸುತ್ತಾನೆ. ಆದರೆ ಭಾಮಹನು ಈ ಮಾರ್ಗಭೇದದ ವಿವರಣೆಗಳನ್ನು ನಿರಾಕರಿಸಿ, ಈ ವೈಚಿತ್ರ್ಯಗಳು ಕಾವ್ಯಗಳಲ್ಲಿ ಪ್ರತ್ಯೇಕವಾಗಿ ಕಾಣಿಸದೆ ಬೆರೆತುಕಂಡಿರುತ್ತದೆ ಎನ್ನುತ್ತಾನೆ.
‘ಕವಿರಾಜಮಾರ್ಗ’ವು ಬಹುಮಟ್ಟಿಗೆ ದಂಡಿಯನ್ನೇ ನಕಲು ಮಾಡಿದಂತೆ (ಗೌಡೀ-ವೈದರ್ಭೀ ಎಂಬ ಹೆಸರನ್ನು ಕೈಬಿಟ್ಟು ಉತ್ತರ-ದಕ್ಷಿಣವೆಂಬುದನ್ನೇ ಇಟ್ಟುಕೊಂಡು) ‘ಮಾರ್ಗಭೇದ’ವನ್ನು ಪ್ರಸ್ತಾಪಿಸುತ್ತದೆ. ಪ್ರಾರಂಭದಲ್ಲಿ, ‘ಬಹು ವಿಕಲ್ಪದೊಳ್ ಅರಿದು ಪೀನಂ ಮಾರ್ಗಗತಿಯಂ ತರಿಸಲಲ್(ನಿಶ್ಚಯಿಸಿ ಹೇಳಲು) ಆರ್ಗಂ ಆಗದು’ ಎಂದೂ, ‘ಪೂರ್ವಶಾಸ್ತ್ರ ಪದವಿಯಂ ತೆರೆದಿರೆ ಪೇಳ್ವೆನ್ ಇನಿಸಂ ಕನ್ನಡದೊಳ್’(೪೬) ಎಂದೂ ಹೇಳಲಾಗಿದೆ. ಅಲ್ಲದೆ ಈ ಭೇದವು, ‘ಅನಿಶ್ಚಿತ-ಕ್ರಮ-ವಿಶೇಷ-ಗುಣಯುಕ್ತ’(೫೦) ಎಂದೂ ಸೂಚಿಸಲಾಗಿದೆ. ಅಂದರೆ, ಈ ಗ್ರಂಥವು ಮಾರ್ಗಭೇದದ ಬಗ್ಗೆ ಕನ್ನಡದಲ್ಲಿ ಅನಿಶ್ಚಿತತೆಯಿರುವುದನ್ನು ಹೇಳಿಕೊಂಡಿದೆ; ಅನಿಶ್ಚಿತತೆಯಿದ್ದಾಗ್ಯೂ ‘ಮಾರ್ಗಭೇದ’ವೆಂಬುದನ್ನು ದಾಖಲಿಸಿ ಸ್ಥಿರಗೊಳಿಸಲು ಉದ್ದೇಶಿಸಿದೆ.
ಮುಂದಕ್ಕೆ, ‘ವಕ್ರೋಕ್ತಿ’, ‘ಸ್ವಭಾವೋಕ್ತಿ’ ಎಂಬ ಉಕ್ತಿವೈಚಿತ್ರ್ಯಗಳನ್ನು ಹೇಳಿ ಅದರಲ್ಲಿ, ‘ವಕ್ರೋಕ್ತಿ’ಯು ಉತ್ತರಮಾರ್ಗದ ಮತ್ತು ‘ಸ್ವಭಾವೋಕ್ತಿ’ಯು ದಕ್ಷಿಣಮಾರ್ಗದ ಲಕ್ಷಣ-ಎಂದು ನಿರೂಪಿಸಲಾಗಿದೆ. ಆಮೇಲೆ, ದಕ್ಷಿಣಮಾರ್ಗದ ಗುಣಗಳು ಹತ್ತು ಎಂದು ಹೇಳಿ, ಅವುಗಳಿಗೆ ವಿರುದ್ಧವಾದ ಇನ್ನು ಹತ್ತು ಗುಣಗಳು ಉತ್ತರಮಾರ್ಗದ ಲಕ್ಷಣಗಳು ಎನ್ನಲಾಗಿದೆ ಹಾಗೂ ಆ ದಶಗುಣ-ಪ್ರತಿದಶಗುಣಗಳಲ್ಲಿ ಒಂದೊಂದಕ್ಕೂ ಲಕ್ಷಣ-ಲಕ್ಷ್ಯಗಳನ್ನು ಕೊಡಲಾಗಿದೆ. (ಈ ಗುಣಗಳನ್ನು ‘ಬಂಧ’ಗಳೆಂದೂ ಕರೆದಿದೆ.) ಅದಾದ ಮೇಲೆ ವಿಶೇಷ ಸೂಚನೆಯೆನ್ನುವಂತೆ, ಈ ‘ಮಾರ್ಗ’ ಮತ್ತು ‘ಗುಣ’ಗಳನ್ನು ರಸೋಚಿತವಾಗಿ(ಒಂಬತ್ತು ವಿವಿಧ ರಸಗಳಿಗೆ ಒಂದೊಂದಕ್ಕೆ ಅದಕ್ಕದಕ್ಕೆ ಹೊಂದುವಂತಹ ಮಾರ್ಗ-ಗುಣ-ಬಂಧಗಳನ್ನೇ) ಬೆರೆಯಿಸಿ ಬಳಸಬೇಕು-ಎಂದು ವಿಧಿಸಲಾಗಿದೆ.
ಗ್ರಂಥದ ಈ ತನಕದ ನಿರೂಪಣೆಗಳು (ಲಕ್ಷಣಗಳು ಮತ್ತು ಅವುಗಳಿಗೆ ಗ್ರಂಥಕಾರನೇ ರಚಿಸಿಕೊಟ್ಟಿರುವ ಲಕ್ಷ್ಯಪದ್ಯಗಳು)ದಂಡಿಯ ಅನುವಾದ ಅನುಕರಣೆಗಳೇ ಎನ್ನುವಂತಿವೆ. ತುದಿಯಲ್ಲಿ ಮಾತ್ರ, ಉತ್ತರ-ದಕ್ಷಿಣಗಳ ಶಬ್ದಪ್ರಯೋಗಗಳಲ್ಲಿನ ಭೇದಗಳನ್ನು ಉದಾಹರಿಸಿ ಹೇಳಲಾಗಿದೆ. (ಉದಾ: ನೋಡುವೆನು, ಬೇಡುವೆನು ಮುಂತಾದವು ಉತ್ತರದವು; ನೋಳ್ಪೆನು ಬೇಳ್ಪೆನು ಮುಂತಾದವು ದಕ್ಷಿಣದವು; ಆದರೆ, ‘ಸೂಡುವೆನು’ ಇ. ಕೆಲವು ಪದಗಳನ್ನು ‘ಸೂಳ್ಪೆನು’ ಮುಂತಾಗಿ ಯಾವುದೇ ಮಾರ್ಗದಲ್ಲೂ ಬಳಸತಕ್ಕದ್ದಲ್ಲ ಇ.,ಇ.,) ಈ ಶಬ್ದರೂಪದ ಭೇದಗಳು ಆ ಕಾಲದ ಉತ್ತರ-ದಕ್ಷಿಣ ಪ್ರದೇಶಭಾಷೆಗಳಲ್ಲಿ ಬಳಕೆಯಲ್ಲಿದ್ದವಿರಬೇಕು ಎಂದು ನಮಗೆ ತೋರುತ್ತದೆ.
ಒಟ್ಟಿನಲ್ಲಿ, ಈ ಮಾರ್ಗಭೇದದ ನಿರೂಪಣೆಯನ್ನು ಓದಿ ಉಂಟಾಗುವ ಅಭಿಪ್ರಾಯವು ಇದು: ೧.ತುದಿಯಲ್ಲಿ ಹೇಳಿರುವ ಶಬ್ದಪ್ರಯೋಗ ಭೇದಗಳು ಆ ಕಾಲದ ಕನ್ನಡದಲ್ಲಿ ನಿಜವಾಗಿ ಇದ್ದಿರಬಹುದಾದಂಥವು ಮತ್ತು ೨. ಇನ್ನುಳಿದ ಗುಣಗತ (ಶಬ್ದಗುಣ-ಅರ್ಥಗುಣ ಎರಡೂ), ರಸ್ಗತ ಇತ್ಯಾದಿ ಭೇದಗಳು ಸಂಸ್ಕೃತ ಶಾಸ್ತ್ರವನ್ನು ಆಧರಿಸಿ ಕಲ್ಪಿತವಾಗಿ ಹೇಳಿದಂಥವು.
ಈ ಪರಿಚ್ಛೇದದಲ್ಲಿ ಗಮನಿಸಬೇಕೆಂದು ನಾನು ಸೂಚಿಸುವ ವಿಷಯಗಳು ಇವು:
೧. ಕನ್ನಡಕ್ಕೇ ವಿಶಿಷ್ಟವಾದ ‘ಪ್ರಾಸ’ವನ್ನು ಗುರುತಿಸಿ ದಾಖಲಿಸಿರುವುದು;
೨. ಸಂಸ್ಕೃತದಲ್ಲಿರುವ ಉತ್ತರ-ದಕ್ಷಿಣ ಮಾರ್ಗ ಭೇದಗಳನ್ನು ಕನ್ನಡದಲ್ಲಿಯೂ ಕಲ್ಪಿಸಿ ಸ್ಥಿರಗೊಳಿಸಿರುವುದು;
೩. ಹಿಂದಿನ ಪರಿಚ್ಛೇದದಂತೆಯೇ ಇಲ್ಲೂ ಸಂಸ್ಕೃತ ಶಾಸ್ತ್ರಲಕ್ಷಣ-ಪಾರಿಭಾಷಿಕಗಳನ್ನು ಬಳಸಿರುವುದು.
ಮೂರನೆಯ ಪರಿಚ್ಛೇದವು ‘ಅರ್ಥಾಲಂಕಾರ’ವನ್ನು ಕುರಿತದ್ದು, ಇದರಲ್ಲಿ, ಜಾತಿ-ರೂಪಕ-ಅರ್ಥಾಂತರನ್ಯಾಸ-ವ್ಯತಿರೇಕ-ಯಥಾಸಂಖ್ಯ-ದೀಪಕ-ಉಪಮಾ-ಅತಿಶಯೋಕ್ತಿ-ಸದೃಶಯೋಗಿತಾ-ಆಕ್ಷೇಪ-ಶ್ಲೇಷ-ಉತ್ಪ್ರೇಕ್ಷಾ-ಸೂಕ್ಷ್ಮ-ವಿಶೇಷ-ಸಮಾಹಿತ-ಸಮಾಸೋಕ್ತಿ-ಪರ್ಯಾಯೋಕ್ತ-ವಿರೋಧ-ಅಪ್ರಸ್ತುತ ಪ್ರಶಂಸೆ-ನಿದರ್ಶನ-ಸಹೋಕ್ತಿ-ಸಂಕೀರ್ಣ-ಪರಿವೃತ್ತಿ-ವ್ಯಾಜಸ್ತುತಿ-ಹೇತು-ವಿಭಾವನಾ-ಲವ-ಉದಾತ್ತ-ಅಪಃನುತಿ-ರಸವತ್-ಊರ್ಜಿತ-ವ್ಯಾವೃತ್ತಿ-ಪ್ರಿಯರ-ಆಳೀಃ-ಭಾವಿಕ ಎಂಬ ‘ಪುರಾಣ ಶಾಸ್ತ್ರೋಕ್ತಂಗಳ್’ ಆದ ೩೫ ಮತ್ತು ‘ಧ್ವನಿ’ ಎಂಬ ಹೊಸದೊಂದು, ಒಟ್ಟು ೩೬ ಅಲಂಕಾರಗಳು ಹಾಗೂ ಅವುಗಳ ಒಳ ಭೇದಗಳನ್ನು ವಿವರಿಸಿ ಅದಕ್ಕೆ ನಿದರ್ಶನಗಳನ್ನು ಕೊಡಲಾಗಿದೆ(೨-೨೦೯). (ಈ ಅಲಂಕಾರಗಳಲ್ಲಿ ಕೆಲಕೆಲವುಗಳ ಹೆಸರುಗಳಷ್ಟೇ ಗ್ರಂಥದಿಂದ
ಗ್ರಂಥಕ್ಕೆ ಬದಲಗುತ್ತದೆ.) ಅನಂತರ, ‘ಮಹಾಕಾವ್ಯ ಲಕ್ಷಣವನ್ನು ದಂಡ್ಯಾದಿಗಳನ್ನು ಅನುಸರಿಸಿಕೊಂಡು ಹೇಳಲಾಗಿದೆ(೨೧೦-೨೧೮). ಉಪಸಂಹಾರವಾಗಿ, ನೃಪತುಂಗ ಸಭಾಪದ ವರ್ಣನೆ ಮತ್ತು ಗ್ರಂಥಸಮಾಪ್ತಿ ವಾಕ್ಯಗಳಿವೆ(೨೧೯-೨೩೨).
ಸಂಸ್ಕೃತದಲ್ಲಿ ‘ಧ್ವನಿ’ಯೆಂಬ ಕಾವ್ಯತತ್ತ್ವವನ್ನು ಮೊದಲಿಗೆ ಸ್ಥಾಪಿಸಿದ ಗ್ರಂಥವೆಂದರೆ ಬಹುಶಃ, ಆನಂದವರ್ಧನನ ‘ಧ್ವನ್ಯಾಲೋಕ’. ಕಾಶ್ಮೀರದ ಅವಂತೀವರ್ಮ (ಕ್ರಿ.ಶ. ೮೫೫-೮೮೩)ನ ಆಳ್ವಿಕೆಯಲ್ಲಿ ಇದು ರಚಿತವಾಗಿರಬೇಕು ಎನ್ನುತ್ತಾರೆ. ಅಂದರೆ, ಸಮಕಾಲೀನವಾದ ‘ಕವಿರಾಜಮಾರ್ಗ’ವು ಸಂಸ್ಕೃತ ಕಾವ್ಯಮೀಮಾಂಸೆಯಲ್ಲಿ ‘ಧ್ವನಿ’ಯು ಸ್ಥಾಪಿತಗೊಳ್ಳುತ್ತಿದ್ದ ಆ ಕಾಲದಲ್ಲಿಯೇ ದೂರ ಉತ್ತರದಲ್ಲಿ ನಡೆದಿದ್ದ ಚರ್ಚೆಗಳನ್ನು ಗಮನಿಸಿ ಗ್ರಹಿಸಿ ಅದನ್ನು ತ್ವರೆಯಿಂದ ತನ್ನಲ್ಲಿ ಒಳಗೊಳಿಸಿಕೊಂಡಿತು ಎಂಬುದು ಬಹು ಕುತೂಹಲಕರವಾದ ವಿಷಯ.
ದಂಡಿ ಭಾಮಹಾದಿ ‘ಪ್ರಾಚೀನ ಆಲಂಕಾರಿಕ’ ರ ಹಾಗೆಯೇ ಈ ಗ್ರಂಥವೂ ರಸ-ಭಾವಗಳನ್ನು ಪ್ರತ್ಯೇಕವಾಗಿ ವಿವರಿಸದೆ, ಅವುಗಳನ್ನು ‘ರಸವತ್’ ಎಂಬ ಅಲಂಕರದಲ್ಲಿ ಅಳವಡಿಸಿದೆ. ಭರತನಿಂದ ಭಾಮಹನ ತನಕ ಎಲ್ಲರೂ ಎಂಟು ಸ್ಥಾಯಿಭಾವ ಮತ್ತು ರಸಗಳನ್ನು ಹೇಳಿದ್ದರೆ ಈ ಗ್ರಂಥವು ‘ಶಾಂತ’ವೆಂಬುದನ್ನು ಕೂಡಿಸಿ ಒಂಬತ್ತು ರಸಗಳನ್ನು ಹೇಳಿದೆ. ಮತ್ತು, ಸಂಸ್ಕೃತ ಶಾಸ್ತ್ರಗಳಲ್ಲಿ ‘ಕರುಣ’ ಎಂದು ಹೆಸರಿಸಿರುವ ರಸವನ್ನು ಇಲ್ಲಿ ‘ಕರುಣಾ’ ಎಂದು ಬದಲಿಸಿಕೊಳ್ಳಲಾಗಿದೆ. (ಗ್ರಂಥದ ಎರಡನೇ ಪರಿಚ್ಛೇದದಲ್ಲಿ ಗುಣಗಳು ರಸಾನುಸಾರಿಯೆಂದು ವಿವರಿಸುವಲ್ಲಿ ಕೂಡಾ ‘ಶಾಂತ’ ಕರುಣಾ’ಗಳು ಹೇಳಲ್ಪಟ್ಟಿವೆ.) ‘ನಾಟ್ಯಶಾಸ್ತ್ರ’ವು ಎಂಟೇ ರಸಗಳನ್ನು ಹೇಳಿದ್ದಿತಾದರೂ ಬಹುಶಃ ಬೌದ್ಧ ಜೈನ ಪ್ರಭಾವಗಳಿಂದಾಗಿ, ಮುಂದೆ ಕ್ರಮೇಣ ‘ಶಾಂತ’ ವನ್ನು ಒಂಬತ್ತನೆಯದಾಗಿ ಪರಿಗಣಿಸಿ ಸ್ವೀಕರಿಸಲಾಯಿತು. ‘ಕವಿರಾಜಮಾರ್ಗ’ದ ಕಾಲಕ್ಕಾಗಲೇ ಸಂಸ್ಕೃತ ಲಾಕ್ಷಣಿಕರು ‘ಶಾಂತ’ವನ್ನು ಒಪ್ಪಿಕೊಂಡಿದ್ದರು ಅಥವ ಒಪ್ಪಿಕೊಳ್ಳುವ ಹಂತಕ್ಕೆ ಬಂದಿದ್ದರು ಎಂದು ತೋರುತ್ತದೆ. ಹೇಗೂ ಈ ಗ್ರಂಥವು ಮೊತ್ತಮೊದಲ ಕನ್ನಡ ಸರ್ವೋದಯ ಸಂದರ್ಭದಲ್ಲೇ ‘ಶಾಂತ’ವನ್ನು ಸ್ಥಾಪಿಸಿ ಕನ್ನಡ ಕಾವ್ಯಕ್ಕೆ ಮುಂದೆ ಉಪಯುಕ್ತವದ ವ್ಯಾಪಕ ಅಸ್ತಿವಾರವನ್ನು ಹಾಕಿಕೊಟ್ಟಿತು. ‘ಶೋಕ’ ಸ್ಥಾಯಿಯಾದ ‘ಕರುಣ’ವನ್ನು ಕೈಬಿಟ್ಟು ಅದರ ಸ್ಥಾನದಲ್ಲಿ ‘ದಯಾ’ ಇತ್ಯಾದಿ ಸ್ಥಾಯಿಯಾದ ‘ಕರುಣಾ’ ಎಂಬುದನ್ನು ಸೂಚಿಸಿದ್ದು ಕೂಡಾ ಬೌದ್ಧ-ಜೈನ ಕವಿಗಳೇ ಎಂದು ತೋರುತ್ತದೆ. ಆದರೆ ಮುಂದೆ ಇದು ಸಾರ್ವತ್ರಿಕವಾಗಿ ಒಪ್ಪಿತವಾಗದೆ ನಿರಾಕೃತವಾಯಿತು.
ಈ ಪರಿಚ್ಛೇದದಲ್ಲಿ ಗಮನಿಸಬೇಕೆಂದು ಸೂಚಿಸುವ ಅಂಶಗಳು ಇವು:
೧.‘ಶಾಂತ’ವನ್ನು ಒಂಬತ್ತನೆಯ ರಸವಾಗಿ ಸ್ಥಾಪಿಸಿರುವುದು;
೨.‘ಧ್ವನಿ’ಯೆಂಬುದನ್ನು ಹೊಸ ‘ಅಲಂಕಾರ’ವೆಂದು ಸ್ವೀಕರಿಸಿ ಸ್ಥಾಪಿಸಿದ್ದು;
೩.ಇಲ್ಲಿಯೂ ಸಂಸ್ಕೃತ ಆಲಂಕಾರಿಕರ ಲಕ್ಷಣ ಪರಿಭಾಷೆಗಳನ್ನು ಬಳಸಿಕೊಂಡದ್ದು.
ಆಯಾ ಪರಿಚ್ಛೇದಗಳಲ್ಲಿ ಗಮನಿಸಬೇಕಾದ್ದೆಂದು ನಾನು ಸೂಚಿಸಿರುವುದೇನಿದ್ದರೂ ಅದು ನನ್ನ ಪ್ರಸ್ತುತ ಕಥಾನಕದ ದೃಷ್ಟಿಯಿಂದ ಮಾತ್ರವೇ ಎನ್ನುವುದನ್ನು ಇಲ್ಲಿ ಸ್ಪಷ್ಟಗೊಳಿಸುತ್ತಿದ್ದೇನೆ.
ಇನ್ನು, ಗ್ರಂಥದ ಭೂಮಿಕೆ ಮತ್ತು ಮೇಲಿನ ಕೆಲವು ಮುಖ್ಯಾಂಶಗಳನ್ನು ನೆನಪಿನಲ್ಲಿಟ್ಟುಕೊಂಡು. ಭೂಮಿಕೆಯ ವಿವೇಕಪ್ರಭೆಯು ಒಳಗೆ ಪಠ್ಯದ ಉದ್ದವೂ ಹೇಗೆ ವ್ಯಾಪಿಸಿದೆಯೆನ್ನುವುದನ್ನು ಗಮನಿಸಬೇಕು.

ಭಾಷಾ ಸಾರ್ವತ್ರಿಕತೆ, ಕೊಡುಕೊಳೆ

‘ವಸುಧಾವಲಯವಿಲೀನ-ವಿಶದ-ವಿಷಯ ವಿಶೇಷಂ’ ಎಂದು ಭೂಮಿಕೆಯಲ್ಲಿ ತಾತ್ತ್ವಿಕ ಸೂತ್ರವೊಂದನ್ನು ಉದ್ಬೋಧಿಸಿಕೊಂಡ ‘ಕವಿರಾಜಮಾರ್ಗ’ವು, ಭಾಷೆ-ಕಾವ್ಯಭಾಷೆ-ಅಲಂಕಾರಗಳನ್ನು ಕುರಿತ ತನ್ನ ಪಠ್ಯದಲ್ಲಿ, ವಿವಿಧ ಭಾಷೆಕಾವ್ಯಗಳ ಸ್ವಂತಿಕೆ-ವಿಶಿಷ್ಟತೆಯ ಬಗ್ಗೆಯೂ ಮತ್ತು ಅದೇ ರೀತಿಯಲ್ಲಿ ಎಲ್ಲವುಗಳ ಸಾರ್ವತ್ರಿಕತೆ-ಸಾಂಯತೆಯ ಬಗ್ಗೆಯೂ ಮೇಲಿನ ಸೂತ್ರದ ದ್ವಂದ್ವತ್ವ ವಿವೇಕವನ್ನು ಕೊಂಚವೂ ಮಸುಳದಂತೆ ಅವಿಚ್ಛಿನ್ನವಾಗಿ ಉಳಿಸಿಕೊಂಡಿದೆ. ಮಾರ್ಗಭಿನ್ನತೆಯನ್ನು ಹೇಳುವಾಗ ಈ ಗ್ರಂಥವು, ಸಾಮ್ಯತೆ-ಭಿನ್ನತೆಗಳ ದ್ವಂದ್ವವನ್ನು ಒಂದು ದೃಷ್ಟಾಂತದ ಮೂಲಕ ಮನವೊಗುವಂತೆ ಹೇಳಿದೆ. ‘ಕರಚರಣ-ಶರೀರ-ಶಿರೋದರ-ವದನಾದ್ಯವಯವಂಗಳಿವು ತಂತಮ್ಮೊಳ್ ದೊರೆಕೊಂಡೇಗಳೊಳವಾಗಿರೆಯುಂ ನರರೊರ್ವರೊರ್ವರಂ ಪೋಲದವೋಲ್’ (೨:೪೭) (ಕೈಕಾಲು ಮೈ ತಲೆ ಹೊಟ್ಟೆ ಮುಖ ಮುಂತಾದ ಅವಯವಗಳು ಅದದೇ ಸ್ಥಾನದಲ್ಲಿ ಹಾಗೇ ಇರುವಾಗಲೂ ಮನುಷ್ಯರು ಒಬ್ಬರನ್ನೊಬ್ಬರು ಹೋಲುವುದಿಲ್ಲ-ಹಾಗೆ) ಎಂಬುದು ಆ ದೃಷ್ಟಾಂತ. ಭಿನ್ನತೆಯೆಂಬ ಕಲ್ಪನೆಯು ಹುಟ್ಟುವುದೇ ‘ಸಾಮಾನ್ಯ’ತೆಯ ಭಿತ್ತಿಯಮೇಲೆ. ಮನುಷ್ಯರು ಎಂಬ ಸಾಮಾನ್ಯತೆಯ ಕಲ್ಪನೆಯಿರುವುದರಿಂದಲೇ ಅವರಲ್ಲಿನ ಒಬ್ಬೊಬ್ಬ ವ್ಯಕ್ತಿಯ ವಿಶಿಷ್ಟತೆಯು ಗೋಚರವಾಗುತ್ತದೆ.
ಈ ಸಾಮ್ಯತೆ-ಭಿನ್ನತೆಗಳೆನ್ನುವಂಥವು ಅನೇಕ ವೇಳೆ ಬಹು ಸೂಕ್ಷ್ಮವಾದವು; ಖಚಿತವಾಗಿ ಲಕ್ಷಣ ಹೇಳಿ ನಿರೂಪಿಸುವುದು ಕಷ್ಟವೇ. ಜಗತ್ತಿನಲ್ಲಿ ಸಹಸ್ರಾರು ಭಾಷೆಗಳಿವೆ ಮತ್ತು ಅವುಗಳಲ್ಲಿ ಒಂದನ್ನು ಬಲ್ಲವನಿಗೆ ಇನ್ನೊಂದು ಅರ್ಥವಾಗುವುದಿಲ್ಲ; ಹಾಗಿರುವಾಗಲೂ ‘ಭಾಷಾಜಾತಿ’ಗೆ ಸಾಮಾನ್ಯತೆಯಿದೆ. ಎಲ್ಲ ಭಾಷೆಗಳೂ ಶಬ್ದಕೋಶ ವ್ಯಾಕರಣಗಳಿಂದಲೇ ನಿರ್ಮಿತವಾಗುವಂಥವು; ಅದೆಷ್ಟೇ ವಿಲಕ್ಷಣ ಉಚ್ಚಾರವಿರುವ ಭಿನ್ನಭಾಷಾ ಶಬ್ದವಿದ್ದರೂ ಅದನ್ನು ನಾವು ‘ನಿಘಂಟು’ವಿನ ಮೂಲಕ ನಮ್ಮದೆನ್ನುವ ಹಾಗೇ ಗ್ರಹಿಸಬಹುದು.

ಕನ್ನಡವೆಂಬ ವಿಶಿಷ್ಟ ಭಾಷೆಯನ್ನು ಕುರಿತಿರುವಾಗಲೂ ಭಾಷಾಸಾಮಾನ್ಯತೆಯ ಪ್ರಜ್ಞೆಯನ್ನು ಮಸಳಿಕೊಳ್ಳದಿರುವ ಕಾರಣ ಈ ಗ್ರಂಥವು ಸಂಸ್ಕೃತ ಅಲಂಕಾರಶಸ್ತ್ರದ ಪಾರಿಭಾಷಿಕಗಳನ್ನೂ ಲಕ್ಷಣನಿರೂಪಣೆಯನ್ನೂ ಬಹ್ವಂಶ ಅನಾಮತ್ತಾಗಿ ಎತ್ತಿಕೊಳ್ಳಲು ನಿರ್ಧರಿಸಿಕೊಂಡಿತು. ಒಂದೊಂದು ಭಾಷ‌ಎ-ಕಾವ್ಯಕ್ಕೂ ಅದರದೇ ಆದ ಸ್ವಂತಿಕೆಯ ಚರ್ಯೆ-ಚಹರೆಗಳಿರುವಂತೆಯೇ ಜಗತ್ತಿನ ಎಲ್ಲಾ ಭಾಷಾ-ಕಾವ್ಯಗಳಿಗೂ ಸಾಮಾನ್ಯವಾಗಿ ಅನ್ವಯಿಸುವ ಒಂದು ಸಾಮಾನ್ಯ-ಕಾವ್ಯಶಾಸ್ತ್ರವಿದೆ. ಸಹಾಭಾಷೆಯಾದ ಸಂಸ್ಕೃತವು ಅಂಥದೊಂದು ಸಾಮಾನ್ಯ ಕಾವ್ಯಶಾಸ್ತ್ರವನ್ನು ಅದಾಗಲೇ ಸಿದ್ಧಗೊಳಿಸಿಕೊಂಡಿರುವಾಗ, ಅದನ್ನು ಎತ್ತಿ ಬಳಸಿಕೊಳ್ಳುವುದು ಜಾಣತನ. ಈ ಗ್ರಂಥದ ಮನೋಧರ್ಮ ಆ ಬಗೆಯದು.

ಇನ್ನೊಂದು ಭಾಷೆಯನ್ನು ‘ಸಹವಸ್ತು’ವಾಗಿ ನೋಡಬಹುದು ಅಥವಾ ‘ಪ್ರತಿವಸ್ತು’ ವೆಂದು ನೋಡಬಹುದು. ಇವಿ ಎರಡು ಭಿನ್ನ ಮನೋಧರ್ಮಗಳು. ಮೊದಲನೆಯ ಮನೋಧರ್ಮವನ್ನುಳ್ಳ ‘ಕವಿರಾಜಮಾರ್ಹ’ವಿ, ಕನ್ನಡದ ಬಗ್ಗೆ ಮತ್ತು ‘ಭಾಷಾಜಾತಿ’ಯ ಬಗ್ಗೆ ಒಟ್ಟೊಟ್ಟಿಗೆ, ಮುಜುಗರವಿಲ್ಲದೆ ಮಾತನಾಡುತ್ತದೆ. (ಉದಾಹರಣೆಗೆ:೧ಃ೪, ೭ರಿಂದ ೨೫; ೨ಃ೧೧೨ ರಿಂದ ೧೫೫ಇ. ಅನೇಕ ಭಾಗಗಳು.) ಸಂಸ್ಕೃತ ಪ್ರಾಕೃತಗಳ ಜೊತೆಗೆ ಕನ್ನಡವನ್ನಿಟ್ಟು ಮಾತನಾಡುವಾಗ ಈ ಗ್ರಂಥವು ಕೀಳರಿಮೆಯಿಂದಾಗಲೀ ಅಥವಾ ಅದಕ್ಕೆ ವಿರುದ್ಧವಾದ ಮಡಿ-ಗರ್ವದಿಂದಾಗಲೀ ಕಿಂಚಿತ್ತೂ ಕ್ಲೇಶಗೊಲ್ಳುವುದಿಲ್ಲ; ಸಂಸ್ಕೃತ ಪ್ರಾಕೃತಗಳಲ್ಲಿ ಲಕ್ಷಣಗ್ರಂಥಗಳು ಲಭ್ಯವಿದ್ದು, ಕನ್ನಡದಲ್ಲಿ ಅವು ಇಲ್ಲ ಎನ್ನುವಗಲೂ(೧ಃ೪೧-೪೨)ಮತ್ತು, ಕಾವ್ಯಗಳ ಪ್ರಸ್ತಾಪದಲ್ಲಿ ಹೆಚ್ಚು ಬೆಳೆದ ಸಂಸ್ಕೃತ ಕಾವ್ಯದ ಬಗ್ಗೆ ಮೊದಲು ಹೇಳಿ ಕನ್ನಡ ಕಾವ್ಯಗಳ ಬಗ್ಗೆ ಅನಂತರ ಹೇಳುವಾಗಲೂ(೧ಃ೨೬ರಿಂದ ೩೨)ವಸ್ತುಸ್ಥಿತಿಯನ್ನು ಹೇಳುವ ಸಹಜ-ಸ್ವಸ್ಥ ಧಾಟಿಯಿದೆಯಲ್ಲದೆ, ಅವು ಕನ್ನಡಕ್ಕಿಂತ ಮೇಲಾದ ಭಾಷೆಗಲು ಎನ್ನುವ ಅಳುಕಿಲ್ಲ.

ಭಾಮಹನಲ್ಲದೆ ದಾಕ್ಷಿನಾತ್ಯನಾಗಿದ್ದ ದಂಡಿಯೂ ಸಂಸ್ಕೃತವನ್ನು ‘ದೇವಭಾಷೆ’ಯೆಂದು ಗಣಿಸಿರುವುದು, ಅವರ ಸಂದರ್ಭದಲ್ಲಿ ಸಹಜವೇ ಎಂದು ಭಾವಿಸೋಣ. ಅದರೆ೧೦-೧೧ನೇ ಶತಮಾನಗಳ ನಡುವಣ ೧ನೆ ನಾಗವರ್ಮನು ತನ್ನ ‘ಛಂದೋಂಬುಧಿ’ಯಲ್ಲಿ ‘ಸಂಸ್ಕೃತ ಪ್ರಾಕೃತ ಅಪಭ್ರಂಶ ಪೈಶಾಚಿಗಳೆಂಬ ಮೂರುವರೆ ಮೂಲಭಾಷಿಗಳಿಂದ ದ್ರಾವಿಡಾಂಧ್ರ ಕರ್ಣಾಟಕಾದಿ ಐವತ್ತಾರು ಭಾಷೆಗಳು ಹುಟ್ಟಿಕೊಂಡಿವೆ’ ಎಂಬ ಐತಿಹ್ಯವನ್ನು ನಂಬಿ ನಿರೂಪಿಸುವಾಗ ಕೊಂಚ ಆಶ್ಚರ್ಯವಾಗುತ್ತದೆ. ಅಂಥದೊಂದು ಐತಿಹ್ಯವನ್ನು ಎತ್ತಿ ಹೇಳಿ ಕನ್ನಡದ ಧೃತಿ ಕಂಪಿಸುವಂತೆ ಮಾದದೆ, ಹೆಚ್ಚು ಕಡಿಮೆಯಾಗಿ ಬೆಳೆದ ಎಲ್ಲಾ ಭಾಷೆಗಳನ್ನೂ ಸರೀಕವಾಗಿ ನೋಡುವ ‘ಕವಿರಾಜಮಾರ್ಗ’ದ ಸ್ಥೈರ್ಯವು ಗಮನಿಸಬೇಕಾದಂಥದು.

ಇಷ್ಟು ಮಾತ್ರವಲ್ಲ, ಸಂಸ್ಕೃತದ ಶಾಸ್ತ್ರದಲ್ಲಿ ಸೂಕ್ತವಾದ ತಿದ್ದುಪಡಿಗಳನ್ನು ಮಾಡಲಿಕ್ಕೂ ಈ ಗ್ರಂಥವು ಸ್ವಾತಂತ್ರ್ಯವನ್ನು ತೆಗೆದುಕೊಂಡಿದೆ: ‘ಕರುಣ’ವೆಂಬ ರಸವನ್ನು ‘ಕರುಣಾ’ಎಂದು ತಿದ್ದಿರುವುದು, ‘ಶಾಂತ’ವನ್ನು ಒಂಬತ್ತನೆಯ ರಸವಾಗಿ ಕೂಡಿಸಿರುವುದು, ‘ಧ್ವನಿ’ಯೆಂಬುದನ್ನು ಅಲಂಕಾರಪಟ್ಟಿಯಲ್ಲಿ ಸೆರಿಸಿರುವುದು ಇತ್ಯಾದಿಗಳನ್ನು ನೋದಬಹುದು. ( ಈ ತಿದ್ದುಪಡಿಗಳು ಕನ್ನಡಕ್ಕೆ ಮಾತ್ರ ಅನ್ವಯಿಸುವಂಥವಲ್ಲ, ಸಮಸ್ತ ಕಾವ್ಯಶಾಸ್ತ್ರಕ್ಕೆ ಅನ್ವಯಿಸುವಂಥವು.) ಹೀಗೆ, ಭಾಷಾಸಂಬಂಧದಲ್ಲಿ ಈ ಗ್ರಂಥವು ಕನ್ನಡತ್ವ-ಕಲ್ಪನೆಯೇ.ಅಳುವ ಸ್ವಸ್ಥ-ಸ್ಥೈರ್ಯಕ್ಕೆ ಮೂಲವಾದದ್ದು, ಭೂಮಿಕೆಯಲ್ಲಿ ಉದ್ಭವಿಸಿರುವ

ಉಳಿದ ಭಾಷೆಗಳನ್ನು ‘ಪ್ರತಿಭಾಷೆಗಳೆಂದು ನೋಡುವ ‘ಕವಿರಾಜಮಾರ್ಗ’ದ ಮನೋಧರ್ಮವನ್ನು ಇಷೃದ್ದ ವಿವರಿಸಿದ್ದಕ್ಕೆ ಕಾರಣವೆಂದರೆ-ಈ ಗ್ರಂಥಕ್ಕಿಂತ ಸುಮಾರು ಒಂದೆರಡು ಶತಮಾನಗಳ ಮೊದಲು ರಚಿತವಾದ, ನೆರೆಯ ತಮಿಳಿನ ‘ತೋಳ್ಕಾಪ್ಪಿಯಂ’, ಇದಕ್ಕೆ ಪೂರ್ತಾ ವಿರುದ್ಧವಾದ ಮನೋಧರ್ಮವನ್ನು ತಾಳಿಕೊಂಡಿತ್ತು ಎಂಬುದು ಮತ್ತು ಅದೊಂದು ಮೇಲ್ಪಂಕ್ತಿಯಾಗಿರುವಾಗಲೂ ಈ ಗ್ರಂಥವು ಅದನ್ನು ಬಿಟ್ಟು ತನ್ನ ಮನೋಧರ್ಮವನ್ನು ಆಯ್ಕೆಮಾಡಿಕೊಂಡಿತು ಎನ್ನುವುದು.

ಇನ್ನು, ಸಂಸ್ಕೃತದಿಂದ ಶಬ್ದಗಳನ್ನು ಸ್ವೀಕರಿಸಿ ಅವನ್ನು ಕನ್ನಡವನ್ನಾಗಿಸಿಕೊಳ್ಳುವ ಮತ್ತು ಅವುಗಳನ್ನು ಕನ್ನಡ ಶಬ್ದ-ಪದಗಳ ಜೊತೆ ಮಿಶ್ರಮಾಡಿಕೊಳ್ಳುವ ವಿಚಾರದಲ್ಲೂ ‘ಕವಿರಾಜಮಾರ್ಗ’ವು ಮೇಲಿನ ಮನೋಧರ್ಮವನ್ನೇ ತಾಳಿ ಸೂಚನೆಗಳನ್ನು ನೀಡಿದೆ. ಒಂದು ಭಾಷೆಯು ಇನ್ನೊಂದರಿಂದ ಶಬ್ದ-ಪದಗಳನ್ನು ಸ್ವೀಕರಿಸುವುದು, ಸ್ವೀಕರಿಸಬೇಕಾದ್ದು, ಬಹು ಸಹಜವಾದ ಪ್ರಕ್ರಿಯೆ. ಬೇಕಾದ ಪದಗಳನ್ನೆಲ್ಲಾ ತಾನೇ ಸೃಷ್ಟಿಸಿಕೊಳ್ಳುತ್ತೇನೆಂದು ಶ್ರಮವನ್ನು ದುಂದುಮಾಡಿಕೊಲ್ಳುವುದಕ್ಕಿಂತ, ಇನ್ನೊಂದು ಭಾಷೆಯಲ್ಲಿ ಅದು ಸಿಕ್ಕರೆ ಸ್ವೀಕರಿಸುವುದು ಸುಲಭ ಮತ್ತು ಜಾಣತನ ಕೂಡಾ. ಆದರೆ ಇದಕ್ಕೆ ಸರಿಯಾದ ಹದದ ‘ಅರಿವು’ಬೇಕು. ಅದಲ್ಲದಿದ್ದರೆ ಸ್ವೀಕೃತ ಮತ್ತು ಮಿಶ್ರಿತ ಅಂಶಗಳು ಈ ಭಾಷೆಯ ಸೂಕ್ಷ್ಮಾತಿಸೂಕ್ಷ್ಮ ವೈಶಿಷ್ಟ್ಯಗಳನ್ನು ನಷ್ಟಗೊಳಿಸುತ್ತ ಕ್ರಮೇಣ, ಭಾಷೆಯನ್ನೇ ನಾಶಮಾಡಿಬಿಡಬಹುದು. ಭಾಷೆಯ ಸಾಮಾನ್ಯತೆ ಮತ್ತು ಸ್ವಂತಿಕೆಯ ಅಂಶಗಳು ಸೂಕ್ಷ್ಮಾತಿಸೂಕ್ಷ್ಮವಾಗಿರುವ ಕಾರಣ ಅವನ್ನು ಪಟ್ಟಿಮಾಡಿ ಹೇಳಲಿಕ್ಕೆ ಬಾರದು; ಮುಖ್ಯವಾಗಿ ಕಿವಿ-ನಾಲಗೆಗಳು ಕೊಡುವ‘ಅರಿವಿ’ನಿಂದ ಮಿಶ್ರಣದ ಹದವನ್ನು ಗ್ರಹಿಸಿಕೊಳ್ಳಬೇಕು. ಈ ವಿವೇಕದ ಫಲಶೃತಿಯಾಗಿ ಬಂದಿರುವ ಸೂತ್ರ ಇದು: ‘ಸಮಸಂಸ್ಕೃತಂಗಳೊಳ್ ಸೈತು ಅಮರ್ದಿರೆ(ಒಪ್ಪಿ ಅಪ್ಪಿಕೊಂಡಿರುವಂತೆ) ಕನ್ನಡಮನ್ ಅರಿದು ಪೇಳ್ಗೆ ಎಂಬುದಿದು ಆಗಮ ಕೋವಿದ ನಿಗದಿತ ಮಾರ್ಗ’ (೧~ಹ್೫೬).

‘ಕನಕರಚನೆಯೊಳ್ ಮಣಿನಿಕರ’ವನ್ನು ಹೊಂದಿಸಿ ಕಟ್ಟುವಂತೆ ಕನ್ನಡ-ಸಂಸ್ಕೃತ ಶಬ್ದಗಳನ್ನು ಜೋಡಿಸಬೇಕು(೧ಃ೬೧)-ಎಂಬ ಈ ಗ್ರಂಥದ ಮಾತು, ಸೋದರ ಭಾಷೆಗಳಾದ ತಮಿಳು-ಮಲೆಯಾಳಮ್‌ಗಳಲ್ಲಿ ಬೇರೆಬೇರೆ ಕಾಲದಲ್ಲಿ ಪ್ರಚುರವಾದ ‘ಮಣಿಪ್ರವಾಳ ಶೈಲಿ’ಯೆಂಬ ಮಾತನ್ನು ನೆನಪಿಸುತ್ತದೆ.

ಕನ್ನಡ ಸ್ವಂತಿಕೆ-ಛಂದಸ್ಸು

ಕನ್ನಡದ ಸಾಮಾನ್ಯತೆಯಂತೆಯೇ ಅದರ ಸ್ವಂತಿಕೆ-ವಿಶಿಷ್ಟತೆಗಳ ಬಗ್ಗೆಯೂ ಈ ಗ್ರಂಥವು ಒಂದು ಅರಿವನ್ನು ಹುಟ್ಟಿಸುತ್ತದಲ್ಲದೆ, ಅವೇನೆಂದು ಪಟ್ಟಿಮಾಡಿ ಹೇಳುವುದಿಲ್ಲ. ಇಲ್ಲಿನ ವಿವೇಕವನ್ನು ಆಧಾರವಾಗಿಟ್ಟುಕೊಂಡು ಮುಂದೆ ಕೇಶಿರಾಜನು,

‘ಗಮಕಸಮಾಸದಿಂ ರಳಕುಳಕ್ಷಳದಿಂ ಶೃತಿಸಹ್ಯ ಸಂಧಿಯಿಂ
ಸಮುಚಿತವಾಗಿ ಬರ್ಪ ಸತಿಸಪ್ತಮಿತಿಯಿಂ ಸಮಸಂಸ್ಕೃತೋಕ್ತಿಯಿಂ
ವಮಹಪ ಭೇದದಿಂ ವಿರಹಿತಾವ್ಯಯಸಂಸ್ಕೃತ ಲಿಂಗದಿಂ ಪದೋ
ತ್ತಮ ಶಿಥಿಲದ್ವಿತ್ವದಿಂ ಯತಿವಿಲಂಘನದಿಂದರಿದಲ್ತೆ ಕನ್ನಡಂ.’

-ಎಂದು ಕನ್ನಡದ ಸ್ವಂತಿಕೆಯನ್ನು ಪಟ್ಟಿಮಾಡಿದ. ಭಾಷಾಶಾಸ್ತ್ರ-ವ್ಯಾಕರಣ ಶಾಸ್ತ್ರ ಇ. ಗಳ ಅಧಾರದ ಮೇಲೆ ಇವತ್ತು ಇನ್ನೂ ಸುಧರಿತವಾದ ಪಟ್ಟಿಯನ್ನು ತಯಾರಿಸಲು ಸಾಧ್ಯ. ಹೇಗೂ, ಇಂಥ ಸೂಕ್ಷ್ಮಗಳನ್ನು ಅರಿವಿಗೆ ತೆರೆಯುವುದಲ್ಲದೆ, ಶಾಸ್ತ್ರೀಯ ಪಟ್ಟಿ ಪರಿಭಾಷೆಗಳ ಜಡತ್ವದಲ್ಲಿ ಸ್ಥಗಿತಗೊಳಿಸಿಬಿಡಲು ‘ಕವಿರಾಜಮಾರ್ಗ’ವು ಮುಂದಾಗುವುದಿಲ್ಲ.
ಹಾಗಿದ್ದರೂ ‘ಕವಿರಾಜಮಾರ್ಗ’ವು ಸಾಂದರ್ಭಿಕವಾಗಿ ಇವು ಕನ್ನಡದ ಸ್ವಂತಿಕೆಗಳೆಂದು ಕೆಲವು ಅಂಶಗಳಿಂದ ಗುರುತಿಸಿದೆ. ಅವೆಂದರೆ-

೧.ಪೀಠಿಕಾಭಾಗದಲ್ಲಿ ಹೇಳುವ ‘ಗದ್ಯಕಥೆ’, ‘ಬೆದಂಡೆ’, ‘ಚತ್ತಾಣ’,ಗಳೆನ್ನುವ ವಿಶಿಷ್ಟವಾದ ಗದ್ಯಪದ್ಯ ಬಂಧಗಳು ಹಾಗೂ ‘ಅಕ್ಕರ’, ‘ಚೌಪದಿ’, ‘ಗೀತಿಕೆ’, ‘ತ್ರಿವದಿ’ ಎಂಬ, ಸ್ಥಳೀಯ ಅಥವಾ ಜಾತಿ ಛಂದಸ್ಸುಗಳು;(ಮುಂದೆ ಪ್ರಸ್ತಾಪಿತವಾಗಿರುವ ‘ಪಗರಣ’ ವೆಂಬುದು ಕಾವ್ಯೇತರವಾದ್ದು ಮತ್ತು ರಂಗಪ್ರಯೋಗಕ್ಕೆ ಸಂಬಂದಿಸಿದ್ದು ಎಂದು ತೋರುತ್ತದೆ.) ೧. ಯತಿವಿಲಂಘನ ಮತ್ತು ಪ್ರಾಸ. (ಅನ್ಯಭಾಷೆಯ ಸಹಯೋಗ, ಕರುಣಾ-ಶಾಂತರಸಗಳು ಇತ್ಯಾದಿಗಳು ಎಲ್ಲಾಭಾಷೆಗಳಿಗೂ ಅನ್ವಯಿಸುವಂಥವು.) ಇವುಗಳಲ್ಲಿ, ೧ನೆಯದಾಗಿ ಹೇಳಿದವು ಕನ್ನಡದ ಬಂಧ-ಛಂದಗಳು; ಸ್ಥೂಲವಾಗಿ ಕಾಣಲು ಸುಗುವಂಥವು. ಆದರೆ ಯತಿವಿಲಂಘನ ಮತ್ತು ಪ್ರಾಸವೆಂಬೆರಡು ಸಂಗತಿಗಳು ಕನ್ನಡ ಭಾಶೆಗೆ ವಿಶಿಷ್ಟ ಚಹರೆಯನ್ನು ಕೊಟ್ಟ ಸೂಕ್ಷ್ಮಾಂಶಗಳಾಗಿವೆ. ಈಯೆರಡರ ಬಗ್ಗೆ ಸ್ವಲ್ಪ ಯೋಚಿಸಬೇಕು.

ಭಾವಕ್ಕೆ ಅಪೇಕ್ಷಿತವಾದ ಲಯದ ಗತಿಯಲ್ಲಿ ಶಬ್ದಗಳನ್ನು ಜೋಡಿಸುವುದು ಪದ್ಯರಚನೆಯ ಸರಳರೂಪ. ಇದಲ್ಲದೆ, ಶಬ್ದರಚನೆಯು ಕಾಲಲಯವನ್ನು ಅಲ್ಲಲ್ಲಿ ಒಳಗೊಳಗೇ ಧಿಕ್ಕರಿಸುತ್ತ ಜಡಕಾಗಿ ಚಲಿಸಬಹುದು. ಉದಾಹರಣೆಗೆ-‘ತಾಯೆ-ಬಾರ-ಮೊಗವ-ತೋರ….’ಎನ್ನುವಲ್ಲಿ ಶಬ್ದಗಳು ಕಾಲಗಣದ ಅಚ್ಚಿಗೆ(೩ಮಾತ್ರೆಯ ೪ಗಣಗಳು)ಎರಕಹೊಯ್ದಂತೆ ಹೊಂದಿ ಕೂಡಿಕೊಂಡಿವೆ. ಇದಕ್ಕೆ ಭಿನ್ನವಾಗಿ, ‘ಜಯ ಭಾರತ ಜನನಿಯ ತನುಜಾತೆ…..’(ಜಯ ಭಾ-ರತಜನ-ನಿಯತನು-ಜಾತೆ: ೪+೪+೪+೪ಎಂಬಲ್ಲಿ ಶಬ್ದಗಳು ಗಣದ ಮಿತಿಯನ್ನು ಉಚಾಯಿಸಿ ನಡೆದಿವೆ. ಹೀಗೆ ಶಬ್ದಗಳು ಲಯಗತಿಗೆ ಎದುರಾಗಿ, ವಿಷಮವಾಗಿ ನಡೆಯುವುದು ಅಪೇಕ್ಷಣೀಯವಾದರೂ ಇಂಥ ವಿಷಮಗತಿಯನ್ನು ದೀರ್ಘವಾಗಿ, ಲಯಸ್ಮೃತಿಯು ಮಸಳಿಹೋಗುವತನಕ ಮುಂದುವರಿಸುವಂತಿಲ್ಲ. ಎರಡೋ ಮೂರೋ ನಾಲ್ಕೋ ಐದೋ ಗಣಗಳ ಅವಧಿಯಲ್ಲಾದರೂ ಗಣದ ತುದಿಗೆ ಶಬ್ದವು ಮುಗಿದು ನಿಂತುಕೊಳ್ಳಬೇಕು; ಹಾಗೆ ಹೊಂದಿ ನಿಂತು ಪದ್ಯದ ಲಯವಂತಿಕೆಯನ್ನು ಖಚಿತಗೊಳಿಸಬೇಕು. ಮೇಲಿನ ಎರಡನೇ ಉದಾಹರಣೆಯಲ್ಲಿ, ಸಾಲಿನ ತುದಿಗೆ ನಿಲು-ತಾಣವಿರುವುದನ್ನು ಕಾಣಬಹುದು. ಪದ್ಯಗಳಲ್ಲಿನ ಇಂಥ ಲಯಸಮನ್ವಯದ ನಿಲು-ತಾಣಗಳನ್ನು ಸ್ಥೂಲವಾಗಿ ‘ಯತಿ’ ಅಂತ ಇಟ್ಟುಕೊಳ್ಳೋಣ. ಕನ್ನಡದ್ದೇ ಛಂದೋಪ್ರಕಾರಗಲಲ್ಲಿ ಸಮಾನ್ಯವಾಗಿ ಪದ್ಯದಲ್ಲಿ ಎಲ್ಲೆಲ್ಲಿ ಇಂಥ ನಿಲು-ತಾಣಗಳಿರಬೇಕು ಎಂಬ ಬಗ್ಗೆ ನಿರ್ದಿಷ್ಟವಾದ ನಿಯಮಗಳಿರುವುದಿಲ್ಲ; ಅದು ಕವಿಯವಿವೇಚನೆಗೆ ಬಿಟ್ಟದ್ದಾಗಿರುತ್ತದೆ. ಆದರೆ ಬೇರೆ ಕೆಲವು ವಿಶಿಷ್ಟ ಛಂದೋಪ್ರಕಾರಗಳಲ್ಲಿ ಮಾತ್ರ, ನಿಲು-ತಾಣದ ನಿರ್ಧಾರವನ್ನು ಕವಿಯ ವಿವೇಚನೆಗೆ ಬಿಡದೆ, ಪದ್ಯದ ಒಂದೊಂದು ಸಾಲಿನ ಇಷ್ಟಿಷ್ಟು ಸಂಖ್ಯೆಯ ಅಕ್ಷರಗಳ ಎಡೆಯಲ್ಲೇ ನಿಲು-ತಾಣವು ಕಡ್ಡಾಯವಾಗಿ ಇರತಕ್ಕದ್ದು ಎನ್ನುವ ನಿಯಮವಿರುತ್ತದೆ. ಇವುಗಳಲ್ಲಿ ಸಾಮಾನ್ಯ ರೂಢಿಯ ಮೊದಲಿನದನ್ನು ‘ಐಚ್ಛಿಕಯತಿ’ ಅಥವಾ ‘ಅರ್ಥಯತಿ’ ಅಂತಲೂ ಎರಡನೆಯದನ್ನು ‘ನಿಯತಯತಿ’ ಅಂತಲೂ ಕರೆದುಕೊಳ್ಳೋಣ.

ಕನ್ನಡದಲ್ಲಿ-ಮತ್ತು ಇತರ ದ್ರಾವಿಡ ಭಾಷೆಗಳಲ್ಲಿ ಕೂಡಾ-ಆದಿಮವಾಗಿ ಬಳಕೆಯಲ್ಲಿದ್ದದ್ದು ಬ್ರಹ್ಮ-ವಿಷ್ಣು-ರುದ್ರ ಗಣಗಳಿಂದ ಎಣಿಕೆಯಾಗುವ ‘ಅಂಶಛಂದಸ್ಸು’ ಎಂತಲೇ ತೋರುತ್ತದೆ. ಕನ್ನಡದಲ್ಲಿ ಮುಂದೆ ನಡುಗನ್ನಡ ಕಾಲಕ್ಕೆ, ಸಂಗೀತ ಲಯತಾಲಗಳಿಗೆ ಸಮೀಪವಾಗಿರುವ ‘ಮಾತ್ರಾಛಂದಸ್ಸು’ ಬಳಕೆಯಲ್ಲಿ ಬಂದಿತು. ಇವೆರಡು ಛಂದೋರೂಪಗಳಲ್ಲಿಯೂ ‘ಐಚ್ಛಿಕಯತಿ’ಯಲ್ಲದ ‘ನಿಯತಯತಿ’ ಎಂಬುದಿಲ್ಲ.

ಸಂಸ್ಕೃತಕ್ಕೆ ಸಂಬಂಧಿಸಿ ಹೇಳುವುದಾದರೆ, ಅಲ್ಲಿ ಪ್ರಾರಂಭಿಕ ವೈದಿಕ ರಚನೆಗಳಲ್ಲಿ, ಅಕ್ಷರಗಣನೆಯಷ್ಟೇ ಉಳ್ಳ ‘ಅಕ್ಷರಛಂದಸ್ಸು’ ಇದ್ದಿತೆಂದು ತೋರುತ್ತದೆ. ಕ್ರಮೇಣ ಇದು, ಅಕ್ಷರಗಳೊಳಗಿನ ಹೃಸ್ವ-ದೀರ್ಘ ವರ್ಣಗಳನ್ನೂ ಗಣಿಸುತ್ತ ‘ವರ್ಣ ಛಂದಸ್’ ಆಗಿ ಪರಿವರ್ತನೆಗೊಂಡಿತು. ಮುಂದಣ ಸಂಸ್ಕೃತ ಲೌಕಿಕ ವಾಙ್ಮಯದಲ್ಲಿ ಬಹು ವ್ಯಾಪಕವಾಗಿ ಕಾಣೈಗುವ ಛ್ಮ್ದೋರೂಪವು ವರ್ಣ ಛಂದಸ್ಸೇ ಎನ್ನಬಹುದು ಮತ್ತು ಅಂಥವುಗಳಲ್ಲಿ ಬಹು ಮುಖ್ಯವಾದವು-‘.ಅನುಷ್ಟುಬ್ ಅಥವಾ ಶ್ಲೋಕ; ೨.ಅಸಂಖ್ಯಾತ ವೃತ್ತಗಳು. ಎಂಟು ಅಕ್ಷರಗಳ ಮೂರು ಸಾಲುಗಳುಳ್ಳ(೨೪ಅಕ್ಷರ) ಗಾಯತ್ರಿಯೆಂಬ ವೈದಿಕ ಛಂದಸ್ಸಿಗೆ ನಾಲ್ಕನೆಯ ಪಾದವೊಂದು ಸೇರಿ(೮ ಇಂಟು೪=೩೨ಅಕ್ಷರ) ‘ಅನುಷ್ಟುಬ್’ ಎಂಬ ಛಂದೋರೂಪವು ಮೂಡಿಬಂದಿತು. ಆಮೇಲೆ ಇದು ‘ಸ್ಲೀಕ’ವೆನ್ನಿಸಿಕೊಂಡು ಸಂಸ್ಕೃತ ವಾಙ್ಮಯದಲ್ಲಿ ಎಲ್ಲೆಲ್ಲೂ ವ್ಯಾಪಿಸಿಕೊಂಡಿತು. ಈ ಶ್ಲೋಕವನ್ನು ಎಂಟು ಅಕ್ಷರಗಳ ನಾಲ್ಕು ಸಾಲು ಅಂತ ಗಣಿಸುವ ಹಾಗೆ ಹದಿನಾರು ಅಕ್ಷರಗಳ ಎರಡು ಸಾಲು ಅಂತಲೂ ಗಣಿಸಬಹುದು. ಆಗ, ಈ ಎರಡೂ ಸಾಲುಗಳಲ್ಲಿನ ಕೊನೆಯ ನಾಲ್ಕು ಅಕ್ಷರಗಳು(೧೩-೧೪-೧೫-೧೬ನೆಯ ಅಕ್ಷರಗಳು) ಲಗಲಗ(ಲಘು-ಗುರು-ಲಘು-ಗುರು =ನನಾನನಾ ಎಂಬಂತೆ) ಸ್ವರೂಪದಲ್ಲಿಯೇ ಇದ್ದಿರುತ್ತದೆ. ಪಾದಾದ್ಯಂತದ ಈ ಲಗದ್ವಂದ್ವವೆಂಬುದೇ ‘ಶ್ಲೋಕ’ದ ಬಹುಮುಖ್ಯವಾದ ಒಂದು ಲಕ್ಷಣವೆನ್ನಬಹುದು. ಅದರ ಇನ್ನೊಂದು ಮುಖ್ಯ ಲಕ್ಷಣ-ಪ್ರತಿ ಎಂಟು ಅಕ್ಷರಗಳ ಅಂತ್ಯದಲ್ಲಿ ನಿಯತವಾಗಿ ಬರಬೇಕಾದ ‘ಯತಿ’

ಎರಡನೆಯದಾದ ವೃತ್ತಗಳು: ಇವು ನಾಲ್ಕು(ಪಾದ)ಗಳುಳ್ಳ ರಚನೆಗಳು. ಇವುಗಳ ಒಂದೊಂದು ಸಾಲಿನಲ್ಲಿ, ಒಂದೇ ಅಕ್ಷರದಿಂದ ಹಿಡಿದು ಇಪ್ಪತ್ತಾರು ಅಕ್ಷರಗಳ ತನಕ ಇರಬಹುದು; ಇದರಲ್ಲಿ ಮೂರು-ಮೂರು ಅಕ್ಷರಗಳ, ವಿವಿಧ ಗುರು-ಲಘು ವಿನ್ಯಾಸಗಳ(ಎಂಟು ಗಣಗಳ)ಗಣನೆಯು ರೂಢಿಯಾಗಿರುತ್ತದೆ. ಇಂಥ ವೃತ್ತಗಳು ಅಕ್ಷರ ಸಂಖ್ಯೆಯನ್ನಾಧರಿಸಿ ಇಪ್ಪತ್ತಾರು ಗುಂಪುಗಳಾಗುತ್ತವೆ ಮತ್ತು ಅವುಗಳಲ್ಲಿ ‘ಯ-ಮ-ತ-ರ-ಜ-ಭ-ನ-ಸ’ ಎಂಬ ಎಂಟು ಗಣಗಳ ವಿವಿಧ ವಿನ್ಯಾಸಗಳ ಮೂಲಕ ಹದಿಮೂರು ಕೋಟಿಗೂ ಮಿಕ್ಕು(೧೩,೪೨,೧೭,೭೨೬)ಅಪಾರ ಸಂಖ್ಯೆಯ ವೃತ್ತಗಳನ್ನು ಸೃಷ್ಟಿಸಿಕೊಳ್ಳಲು ಸಾಧ್ಯ-ಸಂಗೀತದಲ್ಲಿ ಅಪಾರ ಸಂಖ್ಯೆಯ ರಾಗಗಳನ್ನು ಸೃಷಿಸಿಕೊಳ್ಳಲು ಸಾಧ್ಯವಿರುವ ಹಾಗೇ ಇದಾದಮೇಲೆ, ನಾಲ್ಕು ಸಾಲುಗಳೂ ಒಂದೇ ರೀತಿಯಲ್ಲಿರುವ ‘ಸಮ’, ಎರಡೆರಡು ಸಮನಾಗಿರುವ ‘ಅರ್ಧಸಮ’, ಪ್ರತಿಸಾಲೂ ಭಿನ್ನವಾಗಿರುವ ‘ವಿಷಮ’ ಎಂಬ ವೃತ್ತಗಳ ಕಲ್ಪನೆಯಿದೆ. ಶ್ಲೋಕ-ವೃತ್ತಗಳೇ ಅಲ್ಲದೆ ಇಲ್ಲಿ, ಇಪ್ಪತ್ತಾರು ಅಕ್ಷರಗಳಿಗೂ ಮಿಕ್ಕಿದ ಸಾಲುಗಳುಳ್ಳ ‘ದಂಡಕ’ ಇತ್ಯಾದಿಗಳೂ ಕಲ್ಪಿತವಾಗಿವೆ. (ಸಂಸ್ಕೃತದಲ್ಲಿ ಅಕ್ಷರ-ವರ್ಣ ಛಂದಸ್ಸುಗಳಲ್ಲದೆ ಮಾತ್ರಾ ಛಂದಸ್ಸು ಕೂಡ ಅಲ್ಲಲ್ಲಿ ಬಳಕೆಯಾದ್ದಿದೆ.)

ಅಕ್ಷರ-ವರ್ಣ ಗಣನೆಗಳೆರಡೂ ಕೂಡಿಕೊಂಡು, ವಿಲಕ್ಷಣ ಮಿಶ್ರವಾಗಿರುವ ಸಂಸ್ಕೃತದ ‘ವರ್ಣಛಂದಸ್ಸು’ ಪದ್ಯರಚನೆಯ ಕಾಯಕಕ್ಕೆ ಅಪಾರವಾದ ಸ್ವಾತಂತ್ರ್ಯವನ್ನೂ ಅಸಂಖ್ಯಾತ ಸಾಧ್ಯತೆಗಳನ್ನೂ ಕಲ್ಪಿಸಿದೆ. ಹಾಗೇ, ಈ ಛಂದಸಿನಲ್ಲಿ ಲಯವಂತಿಕೆಯು ಹೇಗೆ ಸಾಧಿತವಾಗುತ್ತದೆ ಎನ್ನುವುದನ್ನು, ಈಗಿರುವ ಘಟಕ(ಅಕ್ಷರ-ವರ್ಣ-ಗಣ)ಗಳ ಪ್ರಕಾರ ಶಾಸ್ತ್ರೀಯವಾಗಿ ಕಂಡುಕೊಂಡು ನಿರೂಪಿಸುವುದು ಕಠಿನವಾಗಿಬಿಟ್ಟಿದೆ. ಈ ಛಂದೋರೂಪದಲ್ಲಿರುವ ಬಹು ಮುಖ್ಯವಾದ ಮತ್ತು ಗಟ್ಟಿಯಾದ ನಿಯಮವೆಂದರೆ, ‘ನಿಯತಿಯತಿ’. ಇಲ್ಲಿನ ಶ್ಲೋಕ ವೃತ್ತ ಮುಂತಾದ ಎಲ್ಲ ಬಂಧಗಳಲ್ಲೂ, ಸಾಲಿನ ಇಂಥಿಂಥ ಸ್ಥಾನಗಳಲ್ಲಿ ಮತ್ತು ಪಾದಾಂತ್ಯದಲ್ಲಿ ‘ಯತಿ’ಯು ಇರತಕ್ಕದ್ದೆಂಬುದು ಕಡ್ಡಾಯವಾಗಿದೆ.

ವರ್ಣ ಛಂದೋ ವ್ಯವಸ್ಥೆಯಲ್ಲಿ ಪದ್ಯದ ಲಯಬದ್ಧತೆಯನ್ನು ಸೃಷ್ಟಿಸಿಕೊಡುವ ಅತಿಮುಖ್ಯವಾದ ಮತ್ತು ಪ್ರಾಯಃ ಅನಿವಾರ್ಯವಾದ ಸಾಧನವು ಈ ‘ನಿಯತಯತಿ’ ಉದಾಹರಣೆಗೆ-‘ಯತಿಯ ಪರಿಗಣನೆಯನ್ನು ಬಿಟ್ಟರೆ, ಸಂಸ್ಕೃತದ ಯಾವುದೇ ಗದ್ಯವಾಕ್ಯವನ್ನೂ ಪ್ರಸ್ತಾರಹಾಕಿ, ಇದು ಇಂಥ ವರ್ಗದ ಇಂಥ ಬಂಧ ಎಂದು ಸಮರ್ಥಿಸಿಬಿಡಬಹುದು. ಅಂಥಲ್ಲಿ ‘ನಿಯತಯತಿ’ಯೇ ಗದ್ಯ-ಪದ್ಯಗಳ ಭಿನ್ನತೆಯನ್ನು ನಿರ್ಧರಿಸಿಕೊಡುತ್ತದೆ. ಅಂದರೆ, ವರ್ಣಛಂದಸ್ಸಿನಲ್ಲಿ ಗದ್ಯ-ಪದ್ಯ ಭೇಧವನ್ನು ನಿರ್ಣಯಿಸುವ ಒಂದು ಮುಖ್ಯ ಅಂಶ, ‘ನಿಯತಯತಿ’

ಕನ್ನದದ ಸ್ವಂತಿಕೆ-ಯತಿವಿಲಂಘನ

ಕನ್ನಡದಲ್ಲಿ ಮೊದಲಿಗೆ ‘ಯತಿ’ ಯೆಂಬ ಪರಿಕಲ್ಪನೆಯು ಇದ್ದಿಲ್ಲವೆನ್ನಿಸುತ್ತದೆ. ಸಂಸ್ಕೃತ ವರ್ಣವೃತ್ತಗಳನ್ನು ತನ್ನೊಳಗೆ ತಂದುಕೊಳ್ಳಲು ಹವಣಿಸಿದಾಗ ಕನ್ನಡವು ‘ಯತಿ’ಯ ಪರಿಕಲ್ಪನೆಯನ್ನು ತಂದುಕೊಳ್ಳಬೇಕಾಯಿತು. ಸಂಸ್ಕೃತದಲ್ಲಿ ‘ಯತಿ’ಯ್ ‘ನಿಯತಯತಿ’ಯೇ. (‘ನಿಯತ ಸ್ಥಾನದಲ್ಲಿ ಪದಚ್ಛೇದ ಮಾಡುವುದೇ ಯತಿ’ ಎಂದು ದಂಡಿಯೂ ‘ಛಂದಶ್ಯಾಸ್ತ್ರ ವಿಧಿಗೆ ಅನುಸಾರವಾಗಿ ಪದದ ನಿಲುಗಡೆಯಾಗುವುದು ಯತಿ’ಎಂದು ಭಾಮಹನೂ ಹೇಳುತ್ತಾರೆ.) ಆದರೆ ‘ಕವಿರಾಜಮಾರ್ಗ’ವು ‘ಯತಿ’ಗೆ ಸ್ವಲ್ಪ ಬೇರೆಯಾದ ಅರ್ಥವನ್ನು ಕೊಟ್ಟುಕೊಂಡಂತೆ ತೋರುತ್ತದೆ. ‘ಯತಿ’ಎಂದರೆ ನಿಯತವಾದ ನಿಲುಗಡೆ ಎನ್ನುವುದಕ್ಕೆ ಬದಲಾಗಿ, ಲಯಬದ್ಧ ಪದ್ಯಪಠನದಲ್ಲಿ ಉಸಿರು ತೆಗೆಯುವ ಜಾಗ(ಉಸಿರ್ವತಾಣಂ)ಎಂದು ಅದು ಅರ್ಥೈಸಿಕೊಂಡಿತು. ಕನ್ನಡವು ವರ್ಣವೃತ್ತಗಳಲ್ಲಿ ‘ನಿಯತಯತಿ’ಯನ್ನು ಕೈಬಿಟ್ಟಿದ್ದೇ ಅದಕ್ಕೆ ಕಾರಣವಿರಬಹುದು.

ಕನ್ನಡದಲ್ಲಿ ಆಮೊದಲೇ ದ್ವಿತೀಯಾಕ್ಷರ ‘ಖಂಡಪ್ರಾಸ’ವಿದ್ದಿರಬೇಕು;ವರ್ಣ ವೃತ್ತಗಳನ್ನು ತಂದುಕೊಂಡಾಗ ಕನ್ನಡವು ಸ್ವಂತಿಕೆಯ ಚಹರೆಯಾದ ಈ ಪ್ರಾಸರೂಢಿಯನ್ನು ಕೈಬಿಡಲು ಇಚ್ಛಿಸದೆ ಅದನ್ನು ವೃತ್ತಗಳಲ್ಲಿಯೂ ಒಳಗೊಳಿಸಿಕೊಳ್ಳಲು ಹವಣಿಸಿರಬೇಕು. ಆ ಸಂದರ್ಭದಲ್ಲಿ ಯತಿ-ಪ್ರಾಸಗಳೆರಡನ್ನೂ ಇಟ್ಟುಕೊಂಡು ಪದ್ಯರಚನೆ ಮಾಡುವುದು ಕಷ್ಟವೆನ್ನಿಸಿರಬಹುದು; ಅಥವಾ, ಸಾಲಿನ ಮೊದಲಲ್ಲಿ ಬರುವ ನಿಯತ ಪ್ರಾಸವು ಸಾಲಿನ ಪ್ರಾರಂಭವನ್ನು ನಿಶ್ಚಿತವಾಗಿ ಕಾಣಿಸುವುದರಿಂದ, ಪುನಃ ಪಾದಾಂತ್ಯ ಯತಿಯ ಮೂಲಕ ಸಾಲಿನ ತುದಿಯನ್ನು ಖಚಿತಗೊಳಿಸಬೇಕಾದ ಅಗತ್ಯವಿಲ್ಲ ಎಂದು ಬೋಧವಾಗಿರಬೇಕು. ಹೀಗೆ ಪಾದಾಂತ್ಯಯತಿಯನ್ನಂತೂ ಕೈಬಿಡಬಹುದು ಎನ್ನಿಸಿದಮೇಲೆ, ಕ್ರಮೇಣ, ಅನೇಕ ವೃತ್ತಗಳಲ್ಲಿ ಪಾದಾಮಧ್ಯಯತಿಯನ್ನೂ ಬಿಟ್ಟುಕೊಡುವ ಪ್ರಯೋಗ ನಡೆದು, ಕೆಲವು ವೃತ್ತಪ್ರಕಾರಗಳಲ್ಲಾದರೂ ಅದು ಯಶಸ್ವಿಯಾಗಿರಬೇಕು. ಹೇಗೂ ಕನ್ನಡವು ‘ನಿಯತಯತಿ’ಯನ್ನು ಬಿಟ್ಟುಕೊಟ್ಟಿತು; ಮತ್ತು, ಈ ಉಲ್ಲಂಘನೆಯಿಂದ ಊನಗೊಳ್ಳದೆ, ಕನ್ನಡಕ್ಕೆ ಹೆಚ್ಚು ಹೊಂದಬಹುದಾದ ಕೆಲವು ವೃತ್ತಗಳನ್ನು ಬಳಕೆಗೆ ತಂದುಕೊಂಡಿತು. ಹೀಗೆ ‘ಖ್ಯಾತ ಕರ್ಣಾಟಕಂಗಳ್’ಎಂದು ಮುಂದೆ ಹೆಸರಾದ ಆರು ಮತ್ತು ಸ್ವಲ್ಪ ವಿರಲವಾಗಿ ಇನ್ನು ಹತ್ತೆಂಟು ವೃತ್ತಗಳು ಕನ್ನಡದಲ್ಲಿ ಬಳಕೆಯಾದವು.

ಪ್ರಾಸವನ್ನಿಟ್ಟುಕೊಂಡು ಯತಿಯನ್ನು ಕೈಬಿಟ್ಟಿದ್ದರಿಂದ ಕನ್ನಡವು ಏನನ್ನು ಸಾಧಿಸಿತು ಎಂಬುದು ಮುಖ್ಯ. ಹಿಂದೆ ಹೇಳಿದ ಹಾಗೆ, ಸಂಸ್ಕೃತ ವರ್ಣಛಂದಸ್ಸಿನಲ್ಲಿ ಅಸಂಖ್ಯ ಸಾಧ್ಯತೆಗಳೂ ಅಪಾರ ಸ್ವಾತಂತ್ರ್ಯವೂ ಲಭ್ಯವಾಗಿತ್ತು. ಅದರಿಂದಲೇ ಸರಳ ಅನುಷ್ಟುಪ್ ಶ್ಲೋಕವು ರಾಮಾಯಣ ಮಹಾಭಾರತಾದಿ ಪುರಾಣರಾಶಿ-ಕಾವ್ಯರಾಶಿ-ಶಾಸ್ತ್ರರಾಶಿಗಳ ಸೃಷ್ಟಿಗೆ ಅನುಕೂಲಕರವಾಗಿ ಮೈಗೊಟ್ಟುಕೊಂಡಿತು. ಇವತ್ತಿನ ನಮ್ಮ ಸರಳ ರಗಳೆ(ಬ್ಲಾಂಕ್‌ವರ್ಸ್)ಯಲ್ಲಿರುವ ಸಾಧ್ಯತೆ ಸ್ವಾತಂತ್ರ್ಯಗಳು ಅದರಲ್ಲಿ ದೊರಕಿದ್ದವು. ಹಾಗೆ ವರ್ಣವೃತ್ತಗಳು., ಸಂಗೀತಲಯದಂತೆ ತಾಲಬದ್ಧವಾಗದೆ ಅದಕ್ಕಿಂತ ಭಿನ್ನವಾದ ಒಂದು ಲಯವಂತಿಕೆಯನ್ನು ರೂಪುಗೊಳಿಸಿದ್ದವು. ಇಷ್ಟಾದರೂ ವರ್ಣಛಂದಸ್ಸಿನಲ್ಲಿ ಯತಿ ನಿಯಮದಿಂದಾಗಿ ಅದರಲ್ಲಿ ಒಂದು ಬಗೆಯ ಏಕತಾನತೆಯು ಅನಿವಾರ್ಯವಾಗಿಬಿಟ್ಟಿತ್ತು. ಅನುಷ್ಟುಪ್ ಶ್ಲೋಕಗಳನ್ನು ಸ್ವಲ್ಪ ಹೊತ್ತು ಉದಕ್ಕೆ ಓದುತ್ತಹೋದರೆ, ಎಂಟೆಂಟು ಅಕ್ಷರಗಳಿಗೆ ನಿಂತು ನಿಂತು ಸಾಗುವ ಅದರ ನದೆಯು ಅನುಭವಕ್ಕೆ ಬರುತ್ತದೆ. ಅಸಾಧಾರಣ ಕೌಶಲದ ಕಾಲಿದಾಸನ ಕಾವ್ಯಗಳಲ್ಲೂ ಈ ಕಿಂಚಿತ್ ಊನವು ಕಿವಿತಾಕದೆ ಹೋಗುವುದಿಲ್ಲ. ಉದಾಹರಣೆಗೆ, ಉತ್ಕೃಷ್ಟಕೌಶಲವಿರುವ ಆತನ ‘ಮೇಘದೂತ’ದ ‘ಮಂದಾಕ್ರಾಂತ, ವೃತ್ತಗಳೂ ಈ ಏಕತಾನತೆಯನ್ನು ತಪ್ಪಿಸಿಕೊಳ್ಳಲಾರದಾದವು.(ಇಷ್ಟರಮೇಲೂ ‘ಮೇಘದೂತ’ದ ಮೊದಲ ಪದ್ಯದಲ್ಲಿ ‘ಶಾಪೇನಾಸ್ತಂ ಗಮಿತಮಹಿಮಾ’ಎಂಬಲ್ಲಿ ಯತು ಭಂಗವಾಗಿದೆಯೆಂದು ಛಂದಶ್ಯಾಸ್ತ್ರಕಾರರು ಕಾಲಿದಾಸನನ್ನೇ ಅಕ್ಷೇಪಿಸಿದ್ದಾರಂತೆ.)

‘ಪ್ರಾಸ’ಕ್ಕೂ ‘ಯತಿ’ಗೂ ಇರುವ ಒಂದು ಮುಖ್ಯ ಭಿನ್ನತೆಯನ್ನು ಇಲ್ಲಿ ಗುರುತಿಸಬಹುದು. ಯತಿಯಲ್ಲಿ ಪದಚ್ಛೇದವಾಗಿಯೇ ಲಯವು ಸೂಚಿತವಾಗಬೇಕು; ಪ್ರಾಸದಲ್ಲಿ ಪದಚ್ಛೇದವಿಲ್ಲದೆಯೇ ಅದು ಭೋಧವಾಗುತ್ತದೆ. ಇದರಿಂದ, ಪ್ರಾಸ ವ್ಯವಸ್ಥೆಯಲ್ಲಿ ಶಬ್ದಗಳ ವಿಷಮ ನಡೆಯನ್ನು ತಡೆಯಿಲ್ಲದೆ ಮುಂದುವರಿಸಿಕೊಂಡು ಹೋಗಬಹುದು, ಈ ವಿವರಗಳನ್ನೆಲ್ಲ ಸುಲಭವಾಗಿ ಉದಾಹರಣೆಗಳ ಮೂಲಕ ಗುರುತಿಸಿಕೊಳ್ಳಬಹುದು.

‘ಸ್ರಗ್ಧರಾ’ ವೃತ್ತದ(೨೧ಅಕ್ಷರ-ಮರಭನಯಯಯ)ಎರಡು ಮಾದರಿಗಳು ಇಲ್ಲಿವೆ. ಮೊದಲನೆಯದು, ಕಾಲಿದಾಸನ ‘ಶಾಕುಂತಲ’ ನಾಟಕದ ಪ್ರಾರಂಭದಲ್ಲಿ ಬರುವ, ಬೇಟೆಗೆ ಹೆದರಿ ಓಡುತ್ತಿರುವ ಜಿಂಕೆಯ ವರ್ಣನೆ; ಎರಡನೆಯದು, ಪಂಪನ ‘ಆದಿಪುರಾಣ’ದಮೊದಲ ಪದ್ಯ ಜಿನಸ್ತುತಿ. ಸಂಸ್ಕೃತದ ‘ನಿಯತಿಯತಿ’ಯನ್ನು ಗಣಿಸಿ ಮೊದಲನೆಯದನ್ನೂ ಕನ್ನಡದ ‘ಐಚ್ಛಿಕಯತಿ’ ಅಥವಾ ‘ಉಚಿತಯತಿ’ ಯನ್ನು ಗಣಿಸಿ ಎರಡನೆಯದನ್ನೂ ಬಿಡಿಸಿ ಬರೆಯಲಾಗಿದೆ:

ಮೊದಲನೆಯದು,-
ಗ್ರೀವಾಭಂಗಾಭಿರಾಮಂ-ಮುಹರನುಪತಿತ-ಸ್ಯಂದನೇ ದತ್ತ ದೃಷ್ಟಿಃ|
ಪಶ್ಚಾರ್ಧೇನ ಪ್ರವಿಷ್ಟಃ-ಶರಪತನಭಯಾತ್-ಭೂಯಾಸಾಪೂರ್ವಕಾಯಂ|
ಶಷ್ಟೈರರ್ಧಾವಲೀಢೈಃ-ಶಮವಿತತಮುಖ-ಭ್ರಂಶಿಭಿಃ ಕೀರ್ಣವರ್ತ್ಮಾ|
ಪದ್ಭ್ಯೋರಗ್ರಪ್ಲುತತ್ವಾತ್-ವಿಯತಿ ಬಹುತರಂ-ಸ್ತೋಕಮುರ್ವ್‌ಯಾಂ ಪ್ರಾಯಾತಿಃ

ಎರಡನೆಯದು,-

ಮೂಲ:(೧:೧)
ಶ್ರೀ ದೇವೇಂದ್ರಮುನೀಂದ್ರ ವಂದಿತಗುಣವ್ರಾತಂ ಜಗತ್ಸ್ವಾಮಿ ಸಂ|
ದಾದಿಬ್ರಹ್ಮನಗಾಧಬೋಧನಿಳಯಂ ದುರ್ವಾರ ಸಂಸಾರ ವಿ|
ಚ್ಛೇದೋಪಾಯ ನಿಯುಕ್ತ ಸೂಕ್ತಿ ವೃಷಮಾರ್ಗಾಗ್ರೇಸರಂ ಪಾಪಹೃ|
ತ್ಪಾಜಾಬ್ಜಂ ದಯಗೆಯ್ವನಕ್ಕೆಮಗೆ ಮುಕ್ತಿಶ್ರೀಸುಖಾವಾಪ್ತಿಯಂ|
(ಮೇಲಿನ ಸಾಲುಗಳಲ್ಲಿ ಮೊದಲ ಮೂರೂ ಪದಾಂತ್ಯದೊಡನೆ ಮುಗಿದಿಲ್ಲ ಎನ್ನುವುದನ್ನು ಗಮನಿಸಬೇಕು.)
ಶೀದೇವೇಂದ್ರ ಮುನೀಂದ್ರ ವಂದಿತ ಗುಣವ್ರಾತಂ-
ಜಗತ್ಸ್ವಾಮಿ-ಸಂದಾದಿಬ್ರಾಹ್ಮನ್-
ಅಗಾಧ ಬೋಧ ನಿಳಯಂ-
ದುರ್ವಾರ ಸಂಸಾರ ವಿಚ್ಛೇದೋಪಾಯ ನಿಯುಕ್ತ ಸೂಕ್ತಿ ವೃಷಮಾರ್ಗಾಗ್ರೇಸರಂ-
ಪಾಪಹೃತ್ ಪಾದಜ್ಬಂ-
ದಯೆಗೆಯ್ವ ನಕ್ಕೆಮಗೆ-
ಮುಕ್ತಿ ಶ್ರೀಸುಖಾವಾಪ್ತಿಯಂ
ಕಾಲಿದಾಸನ ಈ ಜಿಂಕೆಯ ವರ್ಣನೆಯಿಂದ ಬಹುಶಃ ಪ್ರಭಾವಗೊಂಡು ನಾಗವರ್ಮನು ತನ್ನ ‘ಕರ್ಣಾಟಕ ಕಾದಂಬರಿ’ ಯಲ್ಲಿ ಕೌತುಕಗೊಂಡ ಕುದುರೆಯೊಂದರ ಚಿತ್ರವನ್ನು ಕೊಟ್ಟಿದ್ದಾನೆ:

ಮೂಲ:(೩:೧೮)
ಮುರಿದ ಕೊರಲ್ ಬಳಲ್ದೆಳಪಲಾಟಿಪ ಮೆಯ್ ಕಡೆವಾಯ ಲೋಳೆಯೊಳ್|
ಪೊರೆದುಗುತರ್ಪ್ ವಚ್ಚಪಸಿಯಚ್ಚ ಗರುಂಕೆ ಮರಲ್ಪ ದಿಟ್ಟಿ ಕ|
ತ್ತರಿ ಮೊನೆಗೊಂಡೆಳಲ್ವ ಕಿವಿ ಸೂಚಿಸಿದಪ್ಪುದು ಸೋಲ್ತ ಭಾವಮಂ|
ತುರಗಮಿದೇನನಾಲಿಸುತುಮಿರ್ದುಪುದೆಂದು ನರೇಂದ್ರಚಂದ್ರಮಂ|

ಬಿಡಿಸಿದ್ದು:
ಮುರಿದ ಕೊರಲ್-ಬಳಲ್ದೆಳಪಲಾಟಿಪ ಮೆಯ್-
ಕಡೆವಾಯ ಲೋಳೆಯೊಳ್|ಪೊರೆದುಗುತರ್ಪ ಪಚ್ಚ ಪಸಿಯಚ್ಚ ಗರುಂಕೆ-
ಮೆರಲ್ದ ದಿಟ್ಟಿ-ಕ|ತ್ತರಿ ಮೊನೆಗೊಂಡೆಳಲ್ವ-ಕಿವಿ-
ಸೂಚಿಸಿದಪ್ಪುದು ಸೋಲ್ವಭಾವಮಂ|-

ತುರಗಮಿದೇನನಾಲಿಸುತುಮಿರ್ದುಪುದೆಂದು ನರೇಂದ್ರಚಂದ್ರಮಂ|(ಅಚ್ಚರಿಗೊಂಡ.)
ಇಲ್ಲಿ ನಾಗವರ್ಮನು ಬೇರೆ(ಚಂಪಕಮಾಲೆ)ವೃತ್ತವನ್ನು ಬಳಸಿದ್ದಾನೆ. ಹಾಗಿದ್ದರೂ ಕಾಲಿದಾಸನಿಗೆ ಸಂಸ್ಕೃತದಲ್ಲಿ ದೊರಕದಿರುವ ಸ್ವಾತಂತ್ರ್ಯವು ಈತನಿಗೆ ಕನ್ನಡದಲ್ಲಿ, ಯತಿವಿಲಂಘನದಿಂದಾಗಿ ದೊರಕಿದೆ ಎಂಬುದು ನಿಚ್ಚಳವಾಗಿ ಇಲ್ಲಿ ಕಾಣುತ್ತದೆ.

ಯತಿವಿಲಂಘನ ವ್ಯಾಯಾಮಗಳು
ಯತಿವಿಲಂಘನದಿಂದ ಕನ್ನಡದ ಒಂದೇ ಛಂದೋಬಂಧನದಲ್ಲಿ ಎಂಥೆಂಥ ಅಶ್ಚರ್ಯಕಾರಕ ವಿಭಿನ್ನ ಲಯಗಳನ್ನು ಸೃಜಿಸುವುದು ಸಾದ್ಯವಾಯಿತು ಎನ್ನುವುದನ್ನು ನೋಡಬಹುದು. ಮೊದಲಿಗೆ ಪಂಪನ ಎರಡು ಕಂದಪದ್ಯಗಳು; ಎರಡೂ ‘ಆದಿಪುರಾಣ’ದ ನೀಲಾಂಜನೆಯ ನೃತ್ಯಪ್ರಸಂಗದಲ್ಲಿ ಬರುವಂಥವು, ಆದಿದೇವನ ವೈರಾಗ್ಯದ ಉದ್ಗಾರಗಳು:

ಮೂಲ:(೯-೫೪)
ಜನನೀಜನಕಸಹೋದರ|
ವನಿತಾಜನಪುತ್ರಮಿತ್ರ ಸಂಬಂಧಮದೆಂ|
ತೆನಿತೆನಿತು ಭವದೊಳಾಯ್ತಿ|
ಲ್ಲೆನಿತೆನಿತಂ ನೆನೆವುದೆನಿತ ನವಧರಿಸುವುದೋ|

ಬಿಡಿಸಿದ್ದು:
ಜನನೀಜನಕ ಸಹೋದರ ವನಿತಾಜನ ಪುತ್ರಮಿತ್ರ ಸಂಬಂಧಂ ಅದು ಎಂತು ಎನಿತೆನಿತು
ಭವದೊಳಾಯ್ತಲ್ಲ-ಎನಿತೆನಿತಂ ನೆನೆವಿದೆನಿತನ್ ಅವಧರಿಸುವುದೋ.

ಮೂಲ:(೯-೫೫)
ತನುಗೆ ಪೊರೆ ತುಡುಗೆ ನವಲೇ|
ಪನಮೆ ಮಳಂ ಗೀತಮಳ್ಕೆ ನೃತ್ಯ ಬಗೆಯ|
ಲ್ಕೆನಗೆ ದಲುನ್ಮತ್ತಕವಿಲ|
ಸನಮಿಂತಿನಿತರೊಳಮೊಂದರೊಳ್ ಪುರುಳುಂಟೇ|

ಬಿಡಿಸಿದು :
ತನುಗೆ ಪೊರೆ(ಹೊರೆ)ತುಡುಗೆ-
ನವಲೇಪನಮೆ ಮಲಂ-
ಗೀತಮ್ ಅಳ್ಕೆ(ಆಳುವಿಕೆ)-
ನೃತ್ಯಂ ಬಗೆಯಲ್ಕೆ ನಗೆ ದಲ್ ಉನ್ಮತ್ತಕವಿಲಸನಂ-
ಇಂತಿನಿತರೊಳಮ್ ಒಂದರೊಳ್ ಪುರುಳುಂಟೇ.

(ಮೇಲಿನ ಪದ್ಯಗಳಲ್ಲಿ, ಸಂಚಾರೀ ಭಾವಗಳಿಗನುಗುಣವಾದ ದ್ರುತ-ವಿಲಂಬಿತ ಲಯಗಳ ಕುಶಲ ವಿನ್ಯಾಸವನ್ನು ಗಮನಿಸಬೇಕು.)

ಪಂಪನು ‘ಚಂಪಕಮಾಲಾ’ ವೃತ್ತದಲ್ಲಿ (೨೧ ಅಕ್ಷರ ನಜಭಜಜಜರ)ಬಹು ವಿಭಿನ್ನ ಲಯಗಳನ್ನು ನಿರ್ವಹಿಸಿರುವುದನ್ನು ನೋದಬಹುದು:

೧. ಇದು ‘ಆದಿಪುರಾಣ’ದಲ್ಲಿ ಮಹಾಬಲನೆಂಬ ಖೇಚರರಾಜನಿಗೆ ಲೋಕಾಯುತ ಧರ್ಮದ ಮಂತ್ರಿಯೊಬ್ಬನು ಹೇಳುವ ಉಪದೇಶ:

ಮೂಲ:(೨:೮)
ಒದಲೊಳೆ ಜೀವಮಿರ್ದು ಗಡ ಸೂಚಿಸುತಿರ್ಪುದು ಪುಣ್ಯಪಾಪಮಂ|
ಗಡ ಬಳಿಕತ್ತ ಬೇರೆ ಪೆರತೊಂದೊಡಲೊಳ್ ಗಡ ತಾನೆ ನಿಂದೊಡೆ|
ಬಡಿಪುದು ಧರ್ಮಕರ್ಮ ಫಲಮಂ ಗಡ ಸತ್ತನೆ ಮತ್ತೆ ಪುಟ್ಟುವಂ|
ಗಡ ಪುಸಿ ಕಾಣ ಡಂಬಮಿದು ಖೇಚರ ನೀನಿದನೆಂತು ನಂಬಿದೋ|

ಬಿಡಿಸಿದು:
ಒಡಲೊಳೆ ಜೀವಮಿರ್ದು ಗಡ ಸೂಚಿಸುತಿರ್ಪುದು ಪುಣ್ಯಪಾಪಮಂ ಗಡ-
ಬಳಿಕತ್ತ ಬೇರೆ ಪೆರತೊಂದರೊಳ್ ಗಡ
ತಾನೆ ನಿಂತು ಒಡಂಬಡಿಪುದು ಧರ್ಮಕರ್ಮ ಫಲಮಂ ಗಡ-
ಸತ್ತನೆ ಮತ್ತೆ ಪುಟ್ಟುವಂ ಗಡ-
ಪುಸಿ ಕಾಣ-ಡಂಬಮಿದು-ಖೇಚರ,
ನೀನಿದನೆಂತು ನಂಬಿದೋ.

೨. ‘ಆದಿಪುರಾಣ’ದಲ್ಲಿ, ಗೆದ್ದ ಬಾಹುಬಲಿಯು ಸೋತ ಸೋದರ ಭರತನಿಗೆ ರಾಜ್ಯವನ್ನು ಬಿಟ್ಟುಕೊಡುವ ಸಂದರ್ಭದಲ್ಲಿ ಹೇಳುವಂಥದು:

ಮೂಲ:(೧೪-೧೩೦)
ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಲಮೀಭಟ ಖಡ್ಗಮಂಡಲೋ|
ತ್ಪಲವನ ವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ|
ವಲಯ ಮನಯ್ಯ ನಿತ್ತುದುಮನಾಂ ನಿನಗಿತ್ತೆನಿದೇವುದಣ್ಣ ನೀ|
ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತೆ ಮಾಸದೇ|

ಬಿಡಿಸಿದ್ದು:
ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಲಮ್
ಈ ಭಟಖಡ್ಗ ಮಂಡಲೋ ತ್ಪಲವನವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ-
ಭೂ ವಲಯಮನ್ ಅಯ್ಯನಿತ್ತುದನ್ ಆಂ ನಿನಗಿತ್ತೆನ್-
ಇದೇವುದಣ್ಣ-
ನೀ ನೊಲಿದ ಲತಾಂಗಿಗಂ ಧರೆಗಂ ಆಟಿಸಿದಂದು-ನೆಗಳ್ತೆ ಮಾಸದೆ

೩. ‘ಆದಿಪುರಾಣ’ದಲ್ಲಿ ವಜ್ರಚಂಘ-ಶ್ರೀಮತಿಯರ ವಿವಾಹವಾಗಿ, ವಧುವನ್ನು ಗಂದನ ಮನೆಗೆ ಕಳಿಸಿಕೊಡುತ್ತಿರುವ ಪ್ರಸಂಗ:

ಮೂಲ:(೪:೨೭)
ಪೊಡೆವಡುವಪ್ಪಿಕೊಳ್ವ ನೆನೆಯುತ್ತಿರಿಮೆಂಬ ಸಮಸ್ತವಸ್ತುವಂ|
ಕುಡುವ ಪಲರ್ಮೆಯಿಂ ಪರಸಿ ಸೇನೆಯನಿಕ್ಕುವ ಬುದ್ಧಿವೇಳ್ವ ಕೈ|
ಯೆಡೆ ನಿಮಗೆಂದೊಡಂಬಡಿಪ ನಲ್ಲರಗಲ್ಕೆಗೆ ಕಣ್ಣ ನೀರ್ಗಳಂ|
ಮಿಡಿವ ಬಹು ಪ್ರಕಾರ ಜನಸಂಕಟಮೊಪ್ಪಿದುದಾ ಪ್ರಮಾಣದೊಳ್|

ಬಿಡಿಸಿದ್ದು:
ಪೊಡಮಡುವ-ಅಪ್ಪಿಕೊಳ್ವ-
ನೆನೆಯುತ್ತಿರಿ ಎಂಬ-ಸಮಸ್ತ ವಸ್ತುವಂ ಕುಡುವ-
ಪಲರ್ಮೆಯಿಂ ಪರಸಿ ಸೇನೆಯನಿಕ್ಕುವ-
ಬುದ್ಧಿವೇಳ್ವ-ಕೈಯೆಡೆ ನಿಮಗೆಂದೊಡಂಬಡಿಪ-
ನಲ್ಲರಗಲ್ಕೆಗೆ ಕಣ್ಣ ನೀರ್ಗಳಂ ಮಿಡಿವ-
ಬಹುಪ್ರಕಾರ ಜನಸಂಕಟಮೊಪ್ಪಿದುದಾ ಪ್ರಯಾಣದೊಳ್|

೪. ಅದೇ ಶ್ರೀಮತಿ-ವಜ್ರಜಂಘರ ದುರಂತಮರಣ; ಸೆಜ್ಜೆಮನೆಯಲ್ಲಿ, ಧೂಪವನ್ನು ಹೊತ್ತಿಸಿಟ್ಟ ಸೇವಕನು ಕಿಟಕಿ ತೆರೆಯುವುದನ್ನು ಮರೆತದ್ದರಿಂದ, ಆ ಹೊಗೆಯು ಸುತ್ತಿ ಉಸಿರುಗಟ್ಟಿ ಅವರಿಬ್ಬರೂ ಮಲಗಿದಲ್ಲೇ ಸಾಯುವ ಸಂದರ್ಭ:

ಮೊದಲೊಳ್ ನೀಳ್ದು-ಪೊದಳ್ದು-ಪರ್ವಿ-
ಪರಪಂ ಕೈಕೊಂಡು-ಮದೈಸಿ-ಮಾ ಣದೆ-
ತನ್ನಂದದೊಳೇಳ್ಗೆಗುಂದದೆ-
ನಿರುದ್ವೋಚ್ಛ್ವಾಸಮಪ್ಪನ್ನೆಗಂ ಪುದಿದು-
ಆ ದಂಪತಿಯಂ ಪುದುಂಗೊಳಿಸಿ-
ಲೋಕಾಶ್ಚರ್ಯಮಂ ಮಾಡಿ ಕೊಂ ದುದು
ಕೃಷ್ಣಾಗರುಧೂಪಧೂಮನಿವಹಂ-
ಕೃಷ್ಣೋಗರಂ ಕೊಲ್ವವೋಲ್.

ಪಂಪನದೇ ಎರಡು ‘ಮಹಾಸ್ರಗ್ಧರಾ’(೨೨ ಅಕ್ಷರಗಳು; ಸತತನಸರರಗ)ವೃತ್ತಗಳನ್ನು ನೋಡಬಹುದು:

೧. ‘ವಿಕ್ರಮಾರ್ಜುನ ವಿಜಯ’ದಲ್ಲಿ ಭೀಮನು ದುಶ್ಯಾಸನನನ್ನು ವಧಿಸಿ ದ್ರೌಪದಿಯ ಮುಡಿಗೆ ರಕ್ತಾಭಿಷೇಕ ಮಾಡಿಸುತ್ತಿರುವ ಸಂದರ್ಭದಲ್ಲಿ, ಆಕೆಯ ಮುಡಿಯನ್ನು ವರ್ಣಿಸುವುದು:

ಮೂಲ: (೧೨-೧೫೬)
ಇದರೊಳ್ ಶ್ವೇತಾತಪತ್ರಸ್ಥಗಿತ ದಶದಿಶಾಮಂದಲಂ ರಾಜಚಕ್ರಂ|
ಪುದಿದಳ್ಕಾದಿತ್ತಡಂಗಿತ್ತಿದರೊಳೆ ಕುರುರಾಜಾನ್ವಯಂ ಮತ್ಪ್ರತಾಪ|
ಕ್ಕಿದರಿಂದಂ ನೋಡಗುರ್ವು ರ್ವಿದುದಿದುವೆ ಮಹಾಭಾರತಕ್ಕಾದಿಯಾಯ್ತು|
ಬ್ಜದಲಾಕ್ಷೀ ಪೇಳ ಸಾಮಾನ್ಯಮೆ ಬಗೆಯೆ ಭವತ್ಕೇಶಪಾಶಪ್ರಪಂಚಂ|

ಬಿಡಿಸಿದ್ದು:
ಇದರೊಳ್-
ಶ್ವೇತಾತಪತ್ರಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ ಪುದಿದಳ್ಕಾಡಿತ್ತು-
ಆಡಂಗಿತ್ತಿದರೊಳೆ ಕುರುರಾಜಾನ್ವಯಂ-
ಮತ್ಪ್ರತಾಪ ಕ್ಕಿದರಿಂದಂ ನೋದಗುರ್ವು ಉರ್ವಿದುದು-
ಇದುವೆ ಮಹಾಭಾರತಕ್ಕಾದಿಯಾ ಯ್ತಬ್ಜದಳಾಕ್ಷೀ-
ಪೇಳ- ಸಾಮಾನ್ಯಮೆ ಬೆಗೆಯೆ-
ಭವತ್ಕೇಶಪಾಶ ಪ್ರಪಂಚಂ

೨. ‘ಆದಿಪುರಾಣ’ದಲ್ಲಿ ಸುಖಭೋಗದಲ್ಲಿದ್ದ ಲಲಿತಾಂಗನು ಅನಿರೀಕ್ಷಿತವಾಗಿ ಮರಣಹೊಂದಿದಾಗ, ಶೋಕಪೀಡಿತಳಾದ ಆತನ ಪತ್ನಿ ಸ್ವಯಂಪ್ರಭೆಯ ಬಣ್ಣನೆ:

ಮೂಲ: (೩:೧೩)
ಅಲಕಂ ಮಂದಾರ ಶೂನ್ಯಂ ಕದಪು ಮಕರಿಕಾಪತ್ರಶೂನ್ಯಂ ಲಲಾಟಂ|
ತಿಲಕಾಲಂಕಾರ ಶೂನ್ಯಂ ಘನಕುಚಯುಗಲಂ ಹಾರಶೂನ್ಯಂ ನಿತಂಬಂ|
ಕಲಕಾಂಚೀದಾಮ ಶೂನ್ಯಂ ಚರಣಯುಗಲಮುಂ ನೂಪುರಾಲಾಪ ಶೂನ್ಯಂ|
ಲಲಿತಾಂಗಂ ಪೋದೋಡಾಯ್ತಾಕೆಗೆ ದಿವಮನಿತುಂ ನಿರ್ಜರಾರಣ್ಯಶೂನ್ಯಂ|

ಬಿಡಿಸಿದ್ದು:
ಆಲಕಂ ಮಂದಾರಶುನ್ಯಂ-
ಕದಪು ಮಕರಿಕಾಪತ್ರಶೂನ್ಯಂ-
ಲಲಾಟಂ ತಿಲಕಾಲಂಕಾರಶೂನ್ಯಂ-
ಘನಕುಚಯುಗಲಂ ಹಾರಶೂನ್ಯಂ-
ನಿತಂಬಂ ಕಲಕಾಂಚೀದಾಮಶೂನ್ಯಂ-
ಚರಣಯುಗಲಮುಂ ನೂಪುರಾಲಾಪಶೂನ್ಯಂ-
ಲಲಿತಾಂಗಂ ಪೋದೊಡೆ ಆಕೆಗಾಯ್ತು-
ದಿವಮನಿತುಂ ನಿರ್ಜರಾರಣ್ಯಶೂನ್ಯಂ.

(ಒಂದೇ ವೃತ್ತ ಬಂಧದಲ್ಲಿರುವ ಮೇಲಿನ ಎರಡು ಪದ್ಯಗಳು ಅದೆಷ್ಟು ಭಿನ್ನವಾದ ಲಯವನ್ನು ಸಾಧಿಸಿಕೊಂಡಿದೆಯೆಂಬುದನ್ನು ಗಮನಿಸಬೇಕು.)
ಮೊದಲ ಸಹಸ್ರಮಾನದಲ್ಲಿ-ಕನ್ನಡವು ಮಹಾಕಾವ್ಯಗಳಿಂದೊಡಗೂಡಿದ ಶ್ರೀಮಂತ ಭಾಷೆಯನ್ನು ನಿರ್ಮಿಸಿಕೊಳ್ಳಬೇಕೆಂಬ ಅತ್ಯುತ್ಸಾಹಭರದಲ್ಲಿ, ಸಮೃದ್ಧವಾಗಿದ್ದ ಸಂಸ್ಕೃತವನ್ನು ಸುಲಿದು ದೋಚಿಕೊಳ್ಳಲು ತವಕಿಸಿತು: ಆ ಅತ್ಯಾಕಾಂಕ್ಷೆ ಆತುರಗಳಲ್ಲಿ ಕನ್ನದ ಭಾಷೆಯು ‘ಸಂಸ್ಕೃತ ಭೂಯಿಷ್ಠ’ವಾಯಿತು; ದೀರ್ಘಲಯದ ಮಾತ್ರಾವೃತ್ತಗಳಿಗೆ ಸಂಸ್ಕೃತದ ದೀರ್ಘ ಸಮಾಸಗಳು ಅನಿವಾರ್ಯವೆಂದು ತೋರಿದವು. ಅಲ್ಲಿಯೂ ಕ್ರಮೇಣ, ಸಂಸ್ಕೃತ-ಕನ್ನಡ ಮಿಶ್ರಣಗಳ ಸರಿಹದವನ್ನು ಗೆಯ್ದು ಗಳಿಸಿಕೊಳ್ಳುವ ಪ್ರಯತ್ನಗಳೂ ನಡೆದದ್ದನ್ನು ಕಡೆಗಣಿಸುವಂತಿಲ್ಲ. ಮೆಲೆ ಉದಾಹರಿಸಿದ ವೃತ್ತಗಳಲ್ಲೇ ಕನ್ನಡದ ಸೊಗಸು ತುಂಬಿರುವ ರಚನೆಗಳನ್ನೂ ಗುರುತಿಸಬಹುದು. ಒಟ್ಟಿನಲ್ಲಿ ಆ ಕಾಲದ ಪ್ರಣಯದ ಅತಿರೇಕವಂತೂ ಎದ್ದು ಕಾಣಿಸುವಂಥದು.

ಸಮಾಧಾನದ ಮಾತೆಂದರೆ, ಕನ್ನದವು ಈ ಅತಿರೇಕಗಳನ್ನು ಸಕಾಲದಲ್ಲಿ ಗ್ರಹಿಸಿಕೊಂಡಿತು ಮತ್ತು ಪಂಪಯುಗದ ಕೊನೆಯಲ್ಲಿ. ೧೧-೧೨ನೇ ಶತಮಾನಗಳ ಹೊತ್ತಿಗೆ, ಸಂಸ್ಕೃತದ ಜೊತೆಗಿನ ಈ ಅತಿರೇಕ ಪ್ರಣಯವನ್ನು ತಟ್ಟನೆ ಕಡಿದುಹಾಕಿ, ಹಟದಿಂದೆಂಬಂತೆ ತನ್ನದೇ ಭಷೆ-ಛಂದಸ್ಸುಗಳನ್ನು ಮೇಲೆತ್ತಿಕೊಂಡಿತು. ಈಗ ಚಂಪೂ ಕಾಲವಷ್ಟನ್ನೇ ನೋಡುವಾಗ, ಅಂದಿನ ಸಂಸ್ಕೃತ ಭ್ರಮಣೆಯ ಬಗ್ಗೆ ನಮ್ಮಲ್ಲಿ ಅಸಹನೆ-ಅಸಮ್ಮತಿಗಳು ಹುಟ್ಟುವುದು ಸಹಜವೇ. ಹಾಗಾದರೂ ಕನ್ನಡವು ಮುಂದೆ ವಿವೇಕವನ್ನು ಮರಳಿಸಿಕೊಂಡು ಮುಂದುವರಿದಾಗ, ಹೊಸ ಯುಗಕ್ಕೆ ಹಳೆಯ ಸಂಸ್ಕಾರಗಳು ಶ್ರೀಮಂತಿಕೆಯನ್ನು ತಂದುಕೊಟ್ಟವು ಎಂಬುದನ್ನು ಕೂಡಾ ಗನಿಸಿಕೊಳ್ಳಬೇಕು. ಉದಾಹರಣೆಗೆ, ಆಗಸಂಸ್ಕೃತಶಬ್ಧಕೋಶವನ್ನು ಹಾಗೆ ದೋಚಿಕೊಂಡದ್ದರಿಂದಲೇ ಪ್ರಾಯಃ, ಅಲ್ಲಮನಂಥ ಮಹಾ ದಾರ್ಶನಿಕನು ಕನ್ನಡದಲ್ಲೇ ಬರೆಯಲು ಮತ್ತು ಮಹಾಭಾರತದ ಮಹಾ ಚಿಂತಕರನೇಕರ ಜೊತೆಗೆ ಕನ್ನಡದಲ್ಲಿಯೇ ಸಮರ್ಥವಾಗಿ ಚರ್ಚಿಸಲು, ವಾದಿಸಲು, ಗುದ್ದಾಡಿಕೊಳ್ಳಲು ಸಾಧ್ಯವಾಯಿತು. ಆ ಕಾಲದಲ್ಲಿ ಕನ್ನದವು ರಕ್ತಗತಗೊಳಿಸಿಕೊಂಡ ಪದ್ಯಲಯಗಳು ಮುಂದಿನ ಹೊಸ ಯುಗದ ಹೊಸ ರೂಪಗಳಲ್ಲಿ ಸಹಜ ಸೂಕ್ಷ್ಮವಾಗಿ ಮೆಯ್‌ಗೊಂಡು ಬಂದವು.

ಹೊಸಯುಗದಲ್ಲಿ ಚಂಪೂವನ್ನು ಮುಂದುವರಿಸಿದ ಆಂಡಯ್ಯನಿಗೂ ‘ಸೊಗಯಿಪ ಸಕ್ಕದಂ ಬೆರೆಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ ಬಗೆಗೊಳೆ ಪೇಳಲಾರರ್’ ಎಂಬ ಬೇಸರವುಂಟಾಗಿತ್ತು. (ಕನ್ನಡದೊಳ್, ಕನ್ನಡದಲ್ಲಿ ಇತ್ಯಾದಿ ಪ್ರಯೋಗಗಳಿಗಿಂತ ಭಿನ್ನವಾದ ಆತನ ‘ಕನ್ನಡದಲ್ಲಿ’ ಎಂಬ ಪ್ರಯೋಗವು ಕುತೂಹಲಕಾರಿ.) ‘ಮಾತನಾಡಿದವೊಲ್ ಅಂದವನಾಳ್ದಿರೆ’, ಅಚ್ಚಗನ್ನದದಲ್ಲೇ ಕಾವ್ಯರಚನೆ ಮಾದುವುದಾಗಿ ಆತ ಪಣ ತೊಟ್ಟ. ಸಂಸ್ಕೃತದಲ್ಲಿನಂತೆ ಕನ್ನದದ ನುಡಿಗಳನ್ನೂ ಬೆಸೆದು ಜಡೆನೆಯ್ಯುವ ಕೌಶಲವನ್ನು ಆತ ತನ್ನ ವೃತ್ತಗಳಲ್ಲಿ ಸಾಧಿಸಿದ. ಉದಾಹರಣೆಗೆ, ಆತನ ‘ಕಬ್ಬಿಗರ ಕಾವ’ದ ಮಂಗಲ ಪದ್ಯವನ್ನು ನೋಡಬಹುದು:

ಉತ್ಪಲಮಾಲೆ-೨೦-ಅಕ್ಷರ-ಭರನ ಭ ಭ ರಲಗ
ಮೂಲ: (೧-೧)
ಅವನ ಗಾಡಿ ನೋಡಿದವರು ಸಲೆಸೋಲಿಸುತಿರ್ಪುದುರ್ಕಿನಿಂ-
ದಾವನ ಪೂವಿನಂಬಧಟರಂ ತಲೆವಾಗಿಸುತಿರ್ಪೂದೇಳ್ಗೆಯಿಂ |
ದಾವನ ಪಜ್ಜಳಿಪ್ಪ ಜಸಮೆಣ್ದೆಸೆಯೊಳ್ ನೆಲೆಸಿರ್ಪುದಾತನೀ|
ಗಾವಗಮೆನ್ನ ಜಾಣ್ಣುಡಿಗೆ ಮೆಯ್ಸಿರಿಯಂ ನನೆವಿಲ್ಲ ಬಲ್ಲಹಂ|
ಬಿಡಿಸಿದ್ದ:
ಆವನ ಗಾಡಿ ನೋಡಿದವರಂ ಸಲೆ ಸೋಲಿಸುತಿರ್ಪುದು-
ಉರ್ಕಿನಿಂದ ಆವನ ಪೂವಿವನಂಬು ಅದಟರಂ ತಲೆವಾಗಿಸುತಿರ್ಪುದು-
ಏಳ್ಗೆಯಿಂದ ಆವನ ಪಜ್ಜಳಿಪ್ಪ ಜಸಂ ಎಣ್ದೆಸೆಯೊಳ್ ನೆಲೆಸಿರ್ಪುದು-
ಈಗೆ ಆತನ್ ಆವಗಂ- ಎನ್ನ ಜಾಣ್ಣುಡಿಗೆ ಮೆಯ್ಸಿರಿಯಂ ನನೆವಿಲ್ಲ ಬಲ್ಲಹಂ.

ಬಿಡಿಸಿದ್ದು :
ಅವನ ಗಾಡಿ ನೋಡಿದವರಂ ಸಲೆ ಸೋಲಿಸುತಿರ್ಪುದು-
ಉರ್ಕಿನಿಂದ ಆವನ ಪೂವಿವನಂಬು ಅದಟರಂ ತಲೆವಾಗಿಸುತಿರ್ಪುದು-
ಏಳ್ಗೆಯಿಂದ ಅವನ ಪಜ್ಜಳಿಪ ಜಸಂ ಎಣ್ದೆಸೆಯೊಳ್ ನೆಲೆಸಿರ್ಪುದು-
ಈಗೆ ಆತನ್ ಆವಗಂ ಎನ್ನ ಜಾಣ್ಣುಡಿಗೆ ಮೆಯ್ಸಿರಿಯಂ ನನೆವಿಲ್ಲ ಬಲ್ಲಹಂ.

ಹೊಸಯುಗದ ‘ಮಹಾಕವಿ’ಯೆನಿಸಿಕೊಂಡ ಹರಿಹರನು ಹಳೆಯ ಚಂಪೂ ಮತ್ತು ಹೊಸ ಜಾತಿಗಳೆರಡರಲ್ಲೂ ಸವ್ಯಸಾಚಿಯಾಗಿ ಲಯಪ್ರಯೋಗಗಳನ್ನು ನಡೆಸಿದ.

ಕನ್ನಡ ಕಾವ್ಯವು ಇಲ್ಲಿ ಒಮ್ಮೆಲೇ ಹಿಂದಿನದಕ್ಕೆ ತದ್ವಿರುದ್ಧವಾಗಿ ಪಲ್ಲಟಿಬಿಟ್ಟಿತು ಅಂತ ತೋರುವ, ಗದ್ಯಪದ್ಯ ಸಮ್ಮೇಳದ‘ವಚನಸಾಹಿತ್ಯ’ದಲ್ಲಿ ಗಮನಿಸಿ ನೋಡಿದರೆ ‘ವಡ್ಡಾರಾಧನೆ’ಯ ದೇಸೀ (ಪ್ರಾಕೃತ ಕೂದಾ) ಲಯವೂ ಚಂಪೂ ಪದ್ಯಲಯವೂ ಅಲ್ಲಿ ಬಹು ಸೂಕ್ಷ್ಮವಾಗಿ ಅನುರಣಿಸುವುದನ್ನು ಕಾಣಬಹುದು. ಇದನ್ನು ಕೊಂಚ ಸುಲಭವಾಗಿ ಕಾಣಿಸುವ ಅಕ್ಕಮಹಾದೇವಿಯ ವಚನಗಳನ್ನು ನೋಡಬೇಕು:

‘ವನವೆಲ್ಲ ನೀವೆ-ವನದೊಳಗಣ ದೇವತರುವೆಲ್ಲ ನೀವೆ-
ತರುವುನೊಳಗಾಡುವ ಖಗಮೃಗಗಳೆಲ್ಲ ನೀವೆ…..’ಇತ್ಯಾದಿ.
‘ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ-
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗೆ ನಾನೊಲಿದೆ…..’ಇತ್ಯಾದಿ.

‘ಕಿಡಿಕಿಡಿ ಕೆದರಿದಡೆ ಎನಗೆ ಹಸಿವು ತೃಷೆ ಯಡಗಿತ್ತೆಂಬೆನು-
ಮುಗಿಲು ಹರುದು ಬಿದ್ದರೆ ಎನಗೆ ಮಜ್ಜನಕ್ಕೆರೆದರೆಂಬೆನು…..’ಇತ್ಯಾದಿ.

‘ಚಿಲಿಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣಿರೆ-
ಸರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೆ….’

(ಈ ಪ್ರಸಿದ್ಧ ವಚನವು ಪಂಪನ ‘ಆದಿಪುರಾಣ’ದ ಸುರತರು ನಂದನಂಗಳಿರ…..’ಎಂಬ ವೃತ್ತವನ್ನು ತಟ್ಟನೆ ನೆನಪಿಸುತ್ತದೆ.)

‘ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು’ ಅಂತ ಕವಿ ವಿನಾಯಕರು ಕನಲಿದ್ದಾರೆ. ಅದಿರಲಿ. ನಮ್ಮ ಷಟ್ಪದಿಕಾರರಲ್ಲಿ ಪ್ರಮುಖರಾದ ಕವಿತಿಮಿಂಗಿಲರು ಷಟ್ಪದಿಯ ಹರಿಗೋಲಿನಿಂದಲೇ ಶರಧಿಗಳನ್ನು ಈಸಿ ಅಗಲ ಆಳಗಳನ್ನಳೆಯುವ ಸಾಹಸ ಮಾಡಿದವರು. ರಾಘವಾಂಕ-ಲಕ್ಷ್ಮೀಶ-ಕುಮಾರವ್ಯಾಸರು ವೃತ್ತಲಯಗಳನ್ನೆಲ್ಲ ಪ್ರಯೋಗಿಸಿದರು; ಆ ಮೂಲಕ, ಅನುಷ್ಟುಪ್‌ನಷ್ಟೇ ಏಕತಾನವಾಗಬಹುದಾಗಿದ್ದ ಷಟ್ಪದಿಗಳಿಗೆ ಆಶ್ಚರ್ಯಕಾರಕವಾದ, ಹೊಸನಡೆಗಳನ್ನು ರೂಪಿಸಿಕೊಟ್ಟರು. ಹೀಗೆ ಚಂಪೂಯುಗದ ಸಂಸ್ಕೃತ-ಕನ್ನಡ ಲಂಪಟಪ್ರಣಯದ ಸತ್ಫಲವನ್ನು ಷಟ್ಪದಿಕಾರರು ಕೈಗೊಳಿಸಿಕೊಂಡರು.

೩-೪ಮಾತ್ರೆಗಳ ನಡೆಯ ‘ಭಾಮಿನಿ ಷ್ಟಪದಿ’ಯು ಸರಳ ಲಯವಂತಿಕೆಯಲ್ಲಿ ಹೀಗಿರುತ್ತದೆ:

ಹಾವು-ಹಲವನು-ಹಡೆದು-ಲೋಕಕೆ
ಸಾವ-ತರವೊಲು-ನೂರು-ಮಕ್ಕಳ
ನಾವ-ಪರಿಯಲಿ-ಹಡೆದು-ಕೆಡಿಸಿದೆ-ಭೂಮಿ-ಭಾರಕ-ರ
ಅಥವಾ,
ಕೋಪ-ವೆಂಬುದ-ನರ್ಥ-ಸಧನ
ಕೋಪ-ವೇ ಸಂ-ಸಾರ-ಬಂಧನ…..ಇತ್ಯಾದಿ.

ಇವೆರಡೂ ಕುಮಾರವ್ಯಾಸನವೇ. ಈ ೪-೪ ಮಾತ್ರೆಗಳ ಸರಳಲಯವನ್ನು ಸಂದರ್ಭಗಳ ಅಗತ್ಯಕ್ಕೆ ತಕ್ಕಂತೆ ಆತನೇ ಅದೆಷ್ಟು ವಿಚತ್ರ ವಿಲಕ್ಷಣ ರೀತಿಗಳಲ್ಲಿ ಬಳಸಿ ಯಶಸ್ವಿಯಾಗುತ್ತಾನೆಂಬುದು ದೊಡ್ಡ ಸೋಜಿಗ.

ಉದಾಹರಣೆಗೆ-ಆತನ ‘ಗದುಗಿನ ಭಾರತ’ದ ಮೊತ್ತಮೊದಲನೆಯ ಪದ್ಯವೇ ವಿಷಮ ನಡೆಯಲ್ಲಿ ರೂಪುಗೊಂಡಿದೆ;

ಶ್ರೀ ವನಿತೆಯರಸನೆ-ವಿಮಲ ರಾಜೀವ ಪೀಠನ ಪಿತನೆ-
ಜಗತಿಕ ಪಾವನನೆ-ಸನಕಾದಿ ಸಜ್ಜನನಿಕರದಾತಾರ
ಎಂಬುದನ್ನು ಹೀಗೆ ಒಡೆಯಬೇಕು:
ಶ್ರೀವ-ನಿತೆಯರ-ಸನೆ ವಿ-ಮಲರಾ-
ಜೀವ-ಪೀಠನ-ಪಿತನೆ….ಇತ್ಯಾದಿ.

‘ಉದ್ಯೋಗ ಪರ್ವ’ದಲ್ಲಿ ಸಂಧಾನಕ್ಕಾಗಿ ಬಂದ ಶ್ರೀಕೃಷ್ಣನು ವಿದುರನ ಮನೆಗೆ ನಡೆದಾಗ, ವಿದುರನು ಆನಂದಾಶ್ಚರ್ಯ ಸಂಭ್ರಮದಲ್ಲಿ ಮತ್ತನಾಗಿ ‘ಮನೆಯ ಮುರಿದೀಡಾಡಿದನು’ ಎನ್ನುವ ಕುಮಾರವ್ಯಾಸ, ಇಲ್ಲಿ ತನ್ನ ಗದುಗಿವ ವೀರನಾರಾಯಣನ ಮೊದಲ ಕೊಂಡಾಟದಲ್ಲಿ ಮಾತ್ರೆ ಗಣ ಛಂದಸ್ಸುಗಳನ್ನು ಮುರಿದು ಈಡಾಡಿಬಿಟ್ಟಿದ್ದಾನೆ.
ಅಲ್ಲದೆ, ಈ ಉದಾಹರಣೆಗಳನ್ನು ನೋಡಬಹುದು:
ಕೊಲುವವೈ ಕಾಗೆಗಳಕಟ ಕೋಗಿಲೆಯು ಮರಿಯನು-
ಕೃಷ್ಣ-ಕರುಣಾಜಲಧಿಯೇ-
ಕೈಗಾಯಬೇಕೆಂದೊರಲಿದಳು ತರಳೆ….
ಇದನ್ನು
ಕೊಲುವ-ವೈಕಾ-ಗೆಗಳ-ಕಟಕೋ-
ಗಿಲೆಯ-ಮರಿಯನು-ಕೃಷ್ಣ-ಕರುಣಾ-
ಜಲಧಿ-ಯೇ ಕೈ- ಗಾಯ-ಬೇಕೆಂ-ದೊರಲಿ-ದಳು ತರ-ಳೆ ಇತ್ಯಾದಿ.
(ಇಲ್ಲಿ ಗಣಮಾತ್ರೆಗಳು ಕಂಗಾಲಾಗಿ ಎಡವಿಬಿಟ್ಟಿವೆ.)
ಸಂಸ್ಕೃತ ಭಾಷೆಯ ಸೃಜನಾತ್ಮಕ ಬಳಕೆ ಮತ್ತು ಅಸಾಧಾರಣ ಲಯಸಿದ್ಧಿಯನ್ನು ಕಾಣಿಸುವ ಆತನದೇ ಇನ್ನೊಂದು ಪದ್ಯ:

ಮೂಲ:
ಆ ಮಹೀಶಕ್ರತುವರದೊಳು
ದ್ದಾಮ ಮುನಿಜನರಚಿತ ಮಂತ್ರ
ಸ್ತೋಮ ಪುಷ್ಕಲ ಪೂತ ಪುಣ್ಯ ಜಲಾಭಿಶೇಚನದ
ಶ್ರೀಮುಡಿಗೆ ಕೈಯಿಕ್ಕಿದನು ವರ
ಕಾಮುನೀ ನಿಕುರಂಬಿವಕಟಕ
ಟಾ ಮಹಾಸತಿ ಶಿವಶಿವಾ ಎಂದೊರಲಿತಲ್ಲಲ್ಲಿ.

ಬಿಡಿಸಿದ್ದು:
ಆ ಮಹೀಶಕ್ರತು ವರದೊಳ್ ಉದ್ದಾಮಮುನಿಜನರಚಿತಮಂತ್ರಸ್ತೋಮ ಪುಷ್ಫಲಪೂತ
ಪುಣ್ಯಜಲಾಭಿಷೇಚನದ-
ಶ್ರೀಮುಡಿಗೆ ಕೈಯಿಕ್ಕಿದನು-
ವರ ಕಾಮಿನೀ ನಿಕುರುಂಬ-
ಅಕಟಕಟಾ ಮಹಾಸತಿ-ಶಿವಶಿವಾ-ಎಂದೊದರಿತಲ್ಲಲ್ಲಿ.

ಒಟ್ಟಿನಲ್ಲಿ, ಪ್ರಾರಂಭದ ಕನ್ನಡೋದಯ ಕಾಲದಲ್ಲಿ ನಡೆದ ‘ಖಂಡಪ್ರಾಸಮನಿರಿಸಿಯತಿಯಂ ಮಿಕ್ಕರ್’ ಎಂಬುದರ ಅನೇಕ ಸ್ವತಂತ್ರ ಸ್ವಕೀಯ ಪ್ರಯೋಗಗಳ ಸತ್ಫಲಗಳು ನಡುಗನ್ನಡ-ಹೊಸಗನ್ನಡ ಮುಂತಾದ ಎಲ್ಲ ಪಲ್ಲಟಗಳನ್ನೂ ಜಿಗಿದು, ಇವತ್ತಿನತನಕವೂ-ಕನ್ನಡದ ರಕ್ತದ ಅಳಿಯದ ನೇಸಲುಗಳಂತೆ-ಮುಂದುವರಿದು ಬಂದಿವೆ. ಈ ಕಾಲದ ಅಬಿಕಾತನಯದತ್ತರಲ್ಲಿ, ಕುವೆಂಪುರ ‘ಮಹಾಛಂದಸ್ಸು’(ಸರಳರಗಳೆ)ಎಂಬುದರಲ್ಲಿ ಅಡಿಗರಲ್ಲಿ ಮುಂತಾಗಿ ಚಂಪೂವೃತ್ತಲಯಗಳು ಬಹು ಸೂಕ್ಷ್ಮವಾಗಿ ಮರುಕಳಿಸುವುದನ್ನು ಬೇಕಷ್ಟು ಉದಾಹರಣೆಗಳ ಮೂಲಕ ಕಾಣಿಸಬಹುದು.

‘ಪ್ರಾಸ’ದ ವಿಷಯಕ್ಕೆ ಬಂದರೆ-ಕವಚಕುಂಡಲಗಳ ಜತೆಯಲ್ಲೇ ಹುಟ್ಟಿದನೆಂಬ ಕರ್ಣನಹಾಗೆ ಕನ್ನಡಭಾಷೆಯು ಪ್ರಾಸಸಮೇತವಾಗಿ ಹುಟ್ಟಿತು ಅಂತ ಅನ್ನಿಸುವಷ್ಟು ಪ್ರಾಸಪ್ರಚುರವಾದದ್ದು ಈ ಭಾಷೆ. ಕನ್ನಡದಲ್ಲಿ ಮಾತಿಗೊಂದು ಗೀತ’ ಎಂಬ ಒಂದು ನಾಣ್ಣುಡಿಯಿದೆ. ಒಂದು ‘ಅರ್ಥಶಬ್ದ’ವನ್ನು ಬಳಸುವಾಗ ಅನೇಕವೇಳೆ ಅದರ ಜತೆ ಒಂದು ‘ಧ್ವನಿಶಬ್ದ’ವನ್ನು ಬಳಸುವುದು ಕನ್ನಡದ ರೂಢಿ. ಉದಾಹರಣೆಗೆ, ಆಟ-ಪಾಟ, ಕಾಡು-ಮೇಡು, ಇತ್ಯಾದಿ ಜಂಟಿಗಳಲ್ಲದೆ, ಆಳು-ಕಾಳು, ಕೂಲಿ-ನಾಲಿ, ಮಾಡು-ಗೀಡು, ಚೂರು-ಪಾರು ಇತ್ಯಾದಿಗಳು ಕೂಡ ಇಲ್ಲಿ ಬಳಕೆಯಾಗುತ್ತವೆ.

ಸಂಸ್ಕೃತದಲ್ಲಿ ಅಕ್ಷರ ಪುನರಾವೃತ್ತಿಯಿಂದ ಚಮತ್ಕಾರವೆನಿಸುವ, ಕಿವಿಗೆ ಸೊಗಸೆನಿಸುವ ಪರಂಪರೆಯಲ್ಲಾದರೋ, ‘ಪ್ರಾಸ’ವು, ಸಂಸ್ಕೃತದಲ್ಲಿನಂತೆ ಐಚ್ಛಿಕ ಶಬ್ದಾಲಂಕಾರವಷ್ಟೇ ಅಲ್ಲ ಅದು ಛಂದೊನಿಯಮಗಳ ಪ್ರಕಾರ ನಿಯತವಾದದ್ದು. ಕನ್ನಡದಲ್ಲಿ ಛಂದೋಲಯವಾಗಿದ್ದರಷ್ಟೇ ಪದ್ಯವಾಗಲಾರದು; ಪ್ರಾಸವೂ(ಅದರಲ್ಲೂ ನಿಯತವಾಗಿ ಖಂಡಪ್ರಾಸ)ಇರತಕ್ಕದ್ದು. ಕನ್ನಡದಲ್ಲಿ ಸಂಸ್ಕೃತದಲ್ಲಿರುವ ‘ಅನುಪ್ರಾಸ’ವಿದೆ. ಶಬ್ದವನ್ನು ತುಂಡರಿಸಿ ಅದರೊಳಗಿನ ಒಂದು ಅಕ್ಷರವನ್ನು-ಪ್ರತಿ ಸಾಲಿನ ಎರಡನೇ ಅಕ್ಷರದಲ್ಲಿ ಪ್ರಾಸವಾಗಿಸಿಕೊಳ್ಳುವ, (ಶ್ರವಣ ಸುಖಕ್ಕಿಂತ ಹೆಚ್ಚಾಗಿ ಲಯಕಾರಿತೆಗಾಗಿ ಬಳಸುವ)ಬಹು ವಿಶಿಷ್ಟವಾದ ಛಂದೋ-ತಂತ್ರವಾಗಿದೆ. ಇದರಲ್ಲಿ ಮತ್ತೆ ಒಳ ಭೇದಗಳೂ ಕಲ್ಪಿತವಾಗಿವೆ. ಇನ್ನು, ಈ ಶತಮಾನದ ಪ್ರಾರಂಭದಿಂದ ತೊಡಗಿ ಕನ್ನಡವು ಹೊಸ ಛಂದೂ ಬಂಧಗಳನ್ನು ಸೃಷ್ಟಿಸಿಕೊಳ್ಳುತ್ತ ದ್ವಿತೀಯಾಕ್ಷರ ಪ್ರಾಸವನ್ನು ಕೈಬಿಟ್ಟಿತ್ತಾದರೂ ಈ ಭಾಷೆಯ ಒಟ್ಟೂ ಪ್ರಾಸಪ್ರೀತಿಯು ಕಡಿಮೆಯಾಗಿರುವಂತೆ ತೋರುವುದಿಲ್ಲ.

ಪ್ರಾಸವನ್ನು ಕುರಿತು ಕೊಂಚ ತಾತ್ತ್ವಿಕವಾಗಿ ಕೂಡ ಯೋಚಿಸಬಹುದು. ಶಬ್ದದಲ್ಲಿ ವರ್ಣಗಳ ಉಚ್ಛಾರಣೆಯಾಗುತ್ತ ಹೋದಂತೆ ನಾವು ಅರ್ಥವನ್ನು ಧ್ಯಾನಿಸುತ್ತ ವರ್ಣಸಂಸ್ಕೃತಿಯನ್ನು ಹಿಂದಕ್ಕೆ ತಳ್ಳುತ್ತೇವೆ; ಆದರೆ ವರ್ಣಸಂಸ್ಕೃತಿಯಿಂದಲೇ ಅರ್ಥವು ತಿಳಿಯಬೇಕಾದ ಕಾರಣ ಅದನ್ನು ಪೂರ್ತಾ ವಿಸರ್ಜಿಸುವಂತೆಯೂ ಇಲ್ಲ, ಕೆಲವು ಸಂದರ್ಭಗಳಲ್ಲಿ ಅರ್ಥವು ಮಾತ್ರವಲ್ಲದೆ ವರ್ಣಗಳೂ ನಮ್ಮನ್ನು ಆಕರ್ಷಿಸುವುದುಂಟು, ಪ್ರಾಸಸಂದರ್ಭದಲ್ಲಿ ನಮ್ಮ ಮನಸ್ಸು ಅರ್ಥ ಧ್ಯಾನವೊಂದರಲ್ಲೇ ಅಲ್ಲದೆ ವರ್ಣಧ್ಯಾನದಲ್ಲೂ ತೊಡಗಿಕೊಳ್ಳುತ್ತದೆ. ಇಂಥ ದ್ವಂದ್ವಧ್ಯಾನದಲ್ಲಿ ನಾವು ಅರ್ಥಗುಣ -ವರ್ಣಗುಣಗಳೆರಡನ್ನೂ ಏಕಪ್ರಕಾರವಾಗಿ ಪರಿಭಾವಿಸುತ್ತ. ಈ ಎರಡು ಗುಣಗಳ ಸಾಮ್ಯ-ವೈಶಮ್ಯಗಳಲ್ಲಿ ಆಸಕ್ತರಾಗುತ್ತೇವೆ. ಕೆಲವೊಮ್ಮೆ ಶಬ್ದಗುಣಗಳು (ದೀರ್ಘಹ್ರಸ್ವಸಂಯುಕ್ತಾಕ್ಷರಗಳು. ನಾದ ಇತ್ಯಾದಿ) ಅರ್ಥಗುಣಕ್ಕೆ ಹೊಂದಿ ಅದನ್ನು ಪೋಷಿಸಬಹುದು; ಕೆಲವೊಮ್ಮೆ ಅವು ಅರ್ಥಗುಣಕ್ಕೆ ವಿರುದ್ಧವಾಗಿ ಸೆಣೆಸಿ ನಿಂತಂತೆ ತೋರಬಹುದು, ಈ ಎರಡೂ ಸಂದರ್ಭಗಳಲ್ಲಿಯೂ ಅರ್ಥವ್ಯಾಪ್ತಿಯು ಬೆಳೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಅರ್ಥ ಶಬ್ದಗಳೆರಡೂ ಅಸ್ಥಿರವಾಗಿ, ಸಹೃದಯನೂ ತಾನೇ ಸ್ವತಃ ಅರ್ಥಶೋಧದಲ್ಲಿ ತೊಡಗಿಕೊಳ್ಳುವಂತೆ ಪ್ರಚೋದಿಸುತ್ತವೆ. ಆಗ ಸಹ್ರುದಯನಲ್ಲಿ ಒಂದಲ್ಲ, ಹಲವು ಅರ್ಥಗಳು ಅನುರಣಿಸತೊಡಗುತ್ತವೆ. ಇದನ್ನೇ ನಾವು ಸದ್ಯಕ್ಕೆ, ಬಹು ಸ್ಥೂಲವಾದ ಭಾಷೆಯಲ್ಲಿ ‘ಧ್ವನಿ’ಅಂತ ಕರೆದುಕೊಳ್ಳೋಣ. ಅಂದರೆ, ‘ಪ್ರಾಸ’ವೆಂಬುದು ಬಹು ಸರ್ಥವಾದ ಬಳಕೆಯಲ್ಲಿ ಧ್ವನಿಕಾರಕವಾಗಿ ಕೂಡಾ ಕೆಲಸ ಮಾಡಬಹುದು. ಕನ್ನಡದ ಕೆಲವು ಶ್ರೇಷ್ಠ ಕವಿಗಳು ‘ಪ್ರಾಸ’ವನ್ನು ಹೀಗೆ ಧ್ವನಿಕಾರಕವಾಗಿ ಬಳಸಿ ಭಾಷೆಯ ಸಾಧ್ಯತೆಗಳನ್ನು ಬೆಳೆಸಿದ್ದಾರೆ ಎಂಬುದನ್ನು ನಾನಿಲ್ಲಿ ಸೂಚಿಸುತ್ತಿದ್ದೇನೆ.

ಮೇಲಿನಂತೆ, ಪ್ರಾಸವು ಧ್ವನಿಕಾರಕವಾಗಿ ಬಳಕೆಯಾಗುವುದನ್ನು ಕುರಿತು ಯೋಚಿಸುವಾಗ, ಕನ್ನಡವು ಮೊದಲಿನಿಂದಲೂ ಭಾಷೆಯ ‘ಅನೇಕ-ಅರ್ಥ-ಅನುರಣನ’ (ಧ್ವನಿಕಾರಕ) ಗುಣದಲ್ಲಿ ವಿಶೇಷ ಆಸಕ್ತಿಯನ್ನಿಟ್ಟುಕೊಂಡು ಬಂದಿದೆ ಎನ್ನುವ ಸಂಗತಿಯು ಕೂಡಾ ನೆನಪಾಗುತ್ತದೆ. (ಅಥವಾ, ಕನ್ನಡಕ್ಕಿರುವ ಅಂಥ ನೆನಪಿನಿಂದಲೇ ಮೇಲಿನ ಆಲೋಚನೆಗಳು ಮೊಳೆತಿರುವುದು ಸಾಧ್ಯ,) ಒಂದನ್ನು ಹೇಳುವಾಗ ಅದರಲ್ಲಿ ಹಲವನ್ನು ಹೊಳೆಯಿಸಬೇಕೆಂಬ ಕನ್ನಡದ ಗಾಢ ಆಸಕ್ತಿಯ ಬಗ್ಗೆ‘ಕವಿರಾಜಮಾರ್ಗ’ವು ನೇರವಾಗಿ ಪ್ರಸ್ತಾಪಿಸಿಲ್ಲ. ಆದರೆ, ರಾಜ ನೃಪತುಂಗನಲ್ಲಿ ದೈವ ವಿಷ್ಣು-ನಾರಾಯಣನನ್ನು ಸಮಾಸಗೊಳಿಸಿರುವ ಅದರ ಮೊದಲ ಪದ್ಯವೇ ಕನ್ನಡದ ಈ ವಿಶಿಷ್ಟಗುಣಕ್ಕೆ ಸಾಕ್ಷಿಯಂತಿದೆ; ಮುಂದೆಯೂ ‘ಕಾವೇರಿಯಿಂದ…..’ ಪದ್ಯದ ‘ವಸುಧಾವಲಯ ವಿಲೀನ’ವೆಂಬುದನ್ನು ಮೊದಲುಗೊಂಡು ಇಂಥ ಬೇಕಷ್ಟು ಅನೇಕಾರ್ಥಕ ಪ್ರಯೋಗಗಳನ್ನು ಈ ಗ್ರಂಥದಲ್ಲೇ ಕಾಣಬಹುದು. ಆಮೇಲಿನ ಕನ್ನಡದಲ್ಲಿ ಕೂಡಾ, ‘ಕೊಡೆಯೆಂಬರಾತ ಪತ್ರಮನ್’(ಲಕ್ಷ್ಮೀಶ)ಎಂಬ ಶ್ಲೇಷಾಲಂಕಾರ ಮೂಲವಾದ ಚತಿರೋಕ್ತಿಯಿಂದ ಹಿಡಿದು ಪುರಾಣ-ಪ್ರಸ್ತುತಗಳನ್ನು ಏಕತ್ರ ಧ್ವನಿಸಿ ಕೊಡುವ ಪಂಪಾದಿಗಳ ‘ಸಮಸ್ತ ಕಾವ್ಯ’ಗಳ ತನಕ, ಈ ಗುಣವು ವಿಜೃಂಭಿಸಿ ಕಾಣಿಸುತ್ತದೆ. ಕನ್ನಡದ ಈ ಗುಣವಿಶೇಷವು ಪ್ರಜ್ಞೆಯಲ್ಲಿದ್ದುದರಿಂದಲೇ ಕವಿರಾಜಮಾರ್ಗವು ಬಹುಶಃ, ಆ ಕಾಲಕ್ಕಿನ್ನೂ ಸಂಸ್ಕೃತ ಅಲಂಕಾರಿಕರಿಂದ ಸಾರ್ವತ್ರಿಕ ಸಮ್ಮತಿ ಪಡೆಯದೆ ಚರ್ಚೆ-ವಿವಾದಗಳ ಹಂತದಲ್ಲಿದ್ದ ‘ಧನಿ’ ಎಂಬ ಹೊಸ ಕಲ್ಪನೆಯನ್ನು ಒಪ್ಪಿ ಕನ್ನಡದೊಳಕ್ಕೆ ತಂದುಕೊಂಡಿತು.

ಸಾಂದರ್ಭಿಕವಾಗಿ ಇಲ್ಲಿ ಇನ್ನೊಂದು ಸಂಗತಿಯು ನೆನಪಾಗುತ್ತಿದೆ: ಕನ್ನಡ ಭಾಷೆಯ ವಿಶಿಷ್ಟತೆಯ ಬಗ್ಗೆ ವಿನೋಬಾಜಿಯವರ ವ್ಯಾಖ್ಯಾನೋದ್ಗಾರ ಅದು. ಕನ್ನಡವು ಆಟದ ಭಾಷೆ, ಕನ್ನಡಿಗರು ಲೀಲಾಪ್ರಜ್ಞೆಯುಳ್ಳವರು-ಎನ್ನುತ್ತಾರೆ ಅವರು, ‘ಆಡು’ ಎಂಬ ಕ್ರಿಯಾಪದವನ್ನು ನಾವು ಬಳಸುವ ರೀತಿಯು ಅವರನ್ನು ಆಕರ್ಷಿಸಿದೆ, ಕನ್ನಡದಲ್ಲಿ ಕ್ರಿಯೆಯೆಲ್ಲವೂ‘ಆಟ’ವೇ, ಆಟವನ್ನು ಆಡುವಂತೆ ಮಾತನ್ನು ನಾವು ‘ಆಡು’ ತ್ತೇವೆ; ಅದೇಕೆ, ಜಗಳ‘ಮಾಡು’ವ ಬದಲು ನಾವು ಜಗಳ ‘ಆಡು’ ತ್ತೇವೆ. ವಿನೋಬಾಜಿಯವರ ಈ ವ್ಯಾಖ್ಯಾಚಮತ್ಕಾರದ ಅಶಾಸ್ತ್ರೀಯತೆಯನ್ನು ನೆನೆದು ಭಾಷಾ ಶಾಸ್ತ್ರಿಗಳು ನಕ್ಕುಬಿಡುತ್ತಾರೆ ಅಂತ ಬಲ್ಲೆ, ನಾನು ಕೂಡಾ ಇದನ್ನೊಂದು ಸಿದ್ಧಪ್ರಮೇಯವೆಂದು ನಂಬುತ್ತಿಲ್ಲ; ನಂಬಿದರೆ ಮೂರ್ಖನೆನ್ನಿಸಿಯೇನು. ಹಾಗಾದರೂ ಇದನ್ನು ತಟ್ಟನೆ ತಳ್ಳಿಹಾಕಿ ಮರೆತುಬಿಡಲಾರೆ ಇಂಥ ಚಮತ್ಕಾರ ಗ್ರಹಿಕೆಗಳು ಮಿಂಚುವಾಗ ಅದರ ಬೆಳಕಲ್ಲಿ ಒಂದು ಭಾಷೆಯ ಅತಿ ಸೂಕ್ಷ್ಮ ಸಂಗತಿಗಳು ತತ್ಕಾಲದಲ್ಲಿ ಹೊಳೆದು ಕಾಣಿಸುವ ಸಾಧ್ಯತೆಯಿರುತ್ತದೆ.

ನಂಬಿದಂತೆ ಗ್ರಹಿಸುವುದು ಮತ್ತು ಪೂರ್ತಾ ನಂಬದೆಯೆ ಅನುಮಾನಿಸುವುದು ಅಥವಾ ದ್ವಂದ್ವಗಳನ್ನು ನಡುನೆಲೆಯಿಂದ ಒಟ್ಟೊಟ್ಟಿಗೆ ಗ್ರಹಿಸುವುದು-ಇದೇ ಬುದ್ಧನು ಸೂಚಿಸಿದ ‘ಮಧ್ಯಮ ಮಾರ್ಗ’ಎಂದು ನನ್ನ ಕಲ್ಪನೆ. ಇಂಥ ಗ್ರಹಿಕೆಯ ಕ್ರಮವನ್ನು, ಈ ತನಕ ‘ಕನ್ನಡದ ವೈಶಿಷ್ಟ್ಯ’ಅಂತ ಆಲೋಚಿಸುತ್ತ ಬಂದ(ಅನ್ಯ ಭಾಷಾಮಿಶ್ರಣ-ಯತಿವಿಲಂಘನ-ಪ್ರಾಸ- ಧ್ವನಿಕಾರಿತೆ-ಲೀಲಾಲೋಲತೆ ಇತ್ಯಾದಿಯಾದ)ಎಲ್ಲಾ ಭಾಷಾ ಸೂಕ್ಷ್ಮಗಳ ವಿಷಯಕ್ಕೂ ಅನ್ವಯಿಸಿಕೊಳ್ಳಬೇಕಾದ್ದು ಅತ್ಯಗತ್ಯ. ಕನ್ನಡದ್ದೆನ್ನುವ ಮೇಲಿನ ಭಾಷಾ ಸೂಕ್ಷ್ಮಗಳು ಇದರದ್ದೇ ಏಕೋವೈಶಿಷ್ಟ್ಯಗಳೇನಲ್ಲ, ಇನ್ನಿತರ ಭಷೆಗಳಲ್ಲೂ ಬಗೆಬಗೆಯಾಗಿ ಇರುವಂಥದೇ-ಅಂತ ಕೂಡಾ ವಾದಿಸಿ ಸಾಬೀತು ಮಾಡಬಹುದು. ಅವೇ ವಿವಿಧ ಭಾಷಾ ಸೂಕ್ಷ್ಮಗಳ ವಿವಿಧ ಪ್ರಮಾಣದ ರಸಪಾಕದಲ್ಲಿ ಕೂಡಾ ಭಾಷೆಯ ಸ್ವಂತಿಕೆಯು ಪರಿಮಳಿಸುತ್ತಿರಬಹುದು. ಒಂದು ಭಾಷೆಯ ಸೂಕ್ಷ್ಮಗಳನ್ನು ಹಾಗೆ ಸ್ಥೂಲದಲ್ಲಿ ಹಿಡಿಯಲಿಕ್ಕೆ ಬರುವುದಿಲ್ಲ; ಹಿಡಿಯುವಷ್ಟರಲ್ಲಿ ಅದು ಮುಷ್ಟಿಯಲ್ಲೇ ಮಾಯವಾಗಿಬಿಟ್ಟಿರುತ್ತದೆ. ಹಿಡಿಯುವ ಮತ್ತು ಹಿಡಿದೆನೆನ್ನಿಸುವಷ್ಟರಲ್ಲಿ ತಟ್ಟನೆ ಕ್ಬಿಟ್ಟುಬಿಡುವ ವ್ಯಾಯಾಮದಲ್ಲೇ ಭಾಷೆಯ ಸೂಕ್ಷ್ಮಗಳನ್ನು ಅರಿವುಗೊಳಿಸಿಕೊಳ್ಳಬೇಕು.

‘ಕವಿರಾಜಮಾರ್ಗ’ವು ಜಡ ಶಾಸ್ತ್ರಗ್ರಂಥದ ಹಾಗೆ ಎಲ್ಲವನ್ನೂ ಸ್ಥೂಲ ಲಕ್ಷಣದಲ್ಲಿ ಸಾಯಿಸಿ ಸೆರೆಹಿಡಿಯುವ ಚಪಲವುಳ್ಳದ್ದಲ್ಲ. ಕವಿಪ್ರತಿಭೆಯಿಂದ ದ್ವಂದ್ವ ಸೂಕ್ಷ್ಮಗಳನ್ನು ಅರಿವುಗೊಳಿಸಿಕೊಳ್ಳಬೇಕೆಂಬ ಎಚ್ಚರವಿರುವುದು ಈ ಗ್ರಂಥದ ‘ಅತಿಶಯ’ವಾಗಿದೆ. ಅದರಿಂದಲೇ ಈ ಗ್ರಂಥವು ಕನ್ನಡದ ಬಗ್ಗೆ ಗರ್ವತಾಳಿಯೋ ಅಥವಾ ಸಂಸ್ಕೃತದ ಬಗ್ಗೆ ದೈನ್ಯ ತಾಳಿಯೋ ಕ್ಲೇಶಗೊಳ್ಳದೆ ಸ್ವಸ್ಥಚಿತ್ತವುಳ್ಳದ್ದಾಗಿದೆ.

– ೩ –
ಹಳತು ಹೊಸತರ ಕೂಡಲಸುತ್ತು

ಕೊನೆಯ ಈ ಭಾಗದಲ್ಲಿ ಹಿಂದೆ ಹೇಳಿದ ಕೆಲವು ಸಂಗತಿಗಳನ್ನೆತ್ತಿಕೊಂಡು ಮುಂದುವರಿಸುತ್ತೇನಲ್ಲದೆ, ಇಡೀ ಆಖ್ಯಾನವನ್ನು ತುದಿಯಲ್ಲೊಮ್ಮೆ ಎಚ್ಚರದಿಂದ ಬಾಚಿ ಅಚ್ಚುಕಟ್ಟಾಗಿ ಅಂದವಾಗಿ ಮುಡಿಗಟ್ಟುತ್ತಿಲ್ಲ. ಆ ಅವಕಾಶವೂ ಅಧಿಕಾರವೂ ಓದುಗ ಸಹೃದಯರಿಗೆ ಮೀಸಲಾಗಿರುವಂಥದು.

ಇಲ್ಲಿ ಮೊದಲಿಗೆ, ನನ್ನ ಈ ಬರವಣಿಗೆಯ ಬಗ್ಗೆ ಒಂದು ಮಾತನ್ನು ಹೇಳಬಹುದು. ‘ಕವಿರಾಜಮಾರ್ಗ’ದಂಥ ಪಠ್ಯವನ್ನು-ಅಥವಾ ಯಾವುದೇ ಪಠ್ಯವನ್ನು-ಅಧ್ಯಯನ ಮಾಡುವಾಗ ನಾವು ಅವಲಂಬಿಸುವ ನೆಲೆಗಳು ಸಾಮಾನ್ಯವಾಗಿ ಎರಡು-೧.ಪಠ್ಯದ ಹಿನ್ನೆಲೆ ಅಥವಾ ಪಠ್ಯಸಂಬಂಧಿಯಾದ ಇತಿಹಾಸ; ೨. ಪಠ್ಯದ ಶಬ್ದಾರ್ಥಗಳಿಂದ ಹೊರಡುವ ತಾತ್ಪರ್ಯ. ಅಲ್ಲದೆ, ಒಂದು ಪಠ್ಯದಿಂದ ನಾವು ಅಪೇಕ್ಷಿಸುವ ಫಲವಾದರೂ ಅವೇ ಎರಡು-ಇತಿಹಾಸ ಮತ್ತು ಪಠ್ಯತಾತ್ಪರ್ಯಗಳ ಜ್ಞಾನಾನುಭವಗಳು-ಎನ್ನಬಹುದು. ನನ್ನ ಬರವಣಿಗೆ ಕೂದಾ ಮೇಲಿನ ಎರದು ಅಂಶಗಳನ್ನಾಧರಿಸಿದೆ. ಆದರೆ, ಇಲ್ಲಿ ಎದುರಾಗುವ ಒಂದು ತಾತ್ವಿಕ ಸಮಸ್ಯೆಯೆಂದರೆ-‘ಇತಿಹಾಸ’ ಎನ್ನುವುದಾಗಲಿ ಅಥವಾ ‘ಶಬ್ದಾರ್ಥತಾತ್ಪರ್ಯ’ ಎನ್ನುವುದಾಗಲಿ ತುಂಬ ಸೂಕ್ಷ್ಮವಾದದ್ದು, ಅನಿಶ್ಚಿತ ಅಮೂರ್ತವಾದದ್ದು.

‘ಇತಿಹಾಸ’ ಅನ್ನುವುದೇನು ನಿಜವಾಗಿ? ಅದು ಯಾವತ್ತೋ ಆಗಿಹೋದದ್ದು; ಹರಿವ ನೀರಿನ ಹನಿಗಳ ಹಾಗೆ, ಅದು ಯಾವತ್ತೂ ಮತ್ತೆ ಮತ್ತೆ ಯಥಾಸ್ಥಿತಿಯಲ್ಲಿ ಕೈಗೆ ಸಿಗದಂಥದ್ದು. ಅದಕ್ಕೆ ಅಸ್ತಿತ್ವವೆನ್ನುವುದೇ ಇಲ್ಲ, ನಿಜವಾಗಿ. ಹೀಗಿರುವಾಗ, ಆಗಿನ ಹಲವು ಅವಶೇಷ ಸಾಕ್ಷಿಗಳನ್ನು, ಸ್ಮೃತಿಗಳನ್ನು ಅವಲಂಬಿಸಿ ಪ್ರಸ್ತುತ ಕ್ಷಣದಲ್ಲಿ ಪ್ರತಿಭಾಕಲ್ಪನೆಯಿಂದ ನಮ್ಮ ಚಿತ್ತದಲ್ಲಿ ಒಂದು ‘ಆಕೃತಿ’ಯನ್ನು ನಿರ್ಮಿಸಿಕೊಳ್ಳುತ್ತೇವೆ ಮತ್ತು ಅದನ್ನೇ ‘ಇತಿಹಾಸ’ ಅಂತ ನಂಬಿಕೊಳ್ಳುತ್ತೇವೆ. ಅಂದರೆ, ನಿಜವಾದ ಇತಿಹಸವೆನ್ನುವುದು ಇಲ್ಲದ ವಸ್ತು; ಇಲ್ಲದೆಯೂ ಇದ್ದ ಹಾಗೆ ನಮ್ಮ ಚಿತ್ತದಲ್ಲಿ ಆಕೃತಿಗೊಂಡಿರುವ ಅಭಾಸ. ಮತ್ತು, ಈ ಚಿದಾಕೃತಿಯು ಪ್ರಸ್ತುತದ ಜತೆಗೆಯೇ ಜಡೆಯಾಗಿ ಹೆಣೆದುಕೊಂಡಿರುವಂಥದ್ದು. ಅದು ನಿಜವಾಗಿ ನಮ್ಮ ಇವತಿನ ಸೃಷ್ಟಿ.

ಇದರ ಹಾಗೇ, ಒಂದು ಪಠ್ಯದಲ್ಲಿ ಕೂಡಾ ಅದರ ರಚನೆಯ ಕಾಲದಲ್ಲಿ ಕಡೆದಿಟ್ಟಿರುವ ಸುನಿಶ್ಚಿತವಾದ ಶಬ್ದಾರ್ಥತಾತ್ಪರ್ಯವೆಂಬುದಿಲ್ಲ. ಸಹೃದಯ ಚಿತ್ತಗಳು ತಮ್ಮ ಪ್ರಸ್ತುತದಲ್ಲಿ ಅಂತಿಮವಾಗಿ ಯಾವ ನಿಶ್ಚಿತ ಆಕೃತಿಯನ್ನು ಸೃಷ್ಟಿಸಿಕೊಳ್ಳುತ್ತವೋ ಅದೇ ಆ ಪಠ್ಯದ ತಾತ್ಪರ್ಯ.

ಈ ಕಾರಣಗಲಿಂದ ನನ್ನ ಬರವಣಿಗೆಯು ಇತಿಹಾಸ-ಪಠ್ಯಾರ್ಥಗಳೆಂಬುವನ್ನೇ ಅವಲಂಬಿಸಿರುವಂತೆ ಕಾಣಿಸಿಕೊಂಡರೂ ಅದರ ಏಕಾಗ್ರ ಗಮನವಿರುವಿದೆಲ್ಲಾ-ನಮ್ಮ ಪ್ರಸ್ತುತಕ್ಕೆ ಉಪಯುಕ್ತವೂ ಪ್ರಸ್ತುತ ಸಮುದಾಯಕ್ಕೆ ಸಮ್ಮತವೂ ಆಗುವ ಒಂದು ಮನೋನಿರ್ಮಿತಿಯನ್ನು ಕಟ್ಟಿಕೊಳ್ಳುವ ಬಗ್ಗೆಯೇ. ಇದನ್ನು ನೆನಪಿಟ್ಟುಕೊಂಡು ಮುಂದುವರಿಯಬಹುದು.

ಸಮೀಪದ ತಮಿಳಿನ ‘ತೊಳ್ಕಾಪ್ಪಿಯಂ’ ಮತ್ತು ದೂರ ವಿದೇಶದ‘ಗ್ರಮಾಟಿಕಾ ಕಾಸ್ಟೆಲ್ಲನಾ’(ನೆಬ್ರಿಜನ ಸ್ಪಾನಿಶ್ ವ್ಯಾಕರಣ)ಗಳ ಬಗ್ಗೆ ಹಿಂದೆ ಪ್ರಸ್ತಾಪಿಸಿದ್ದೇನೆ. ಮೊದಲಿನದು ‘ಕವಿರಾಜಮಾರ್ಗ’ಕ್ಕಿಂತ ಮೂರುನಾಲ್ಕು(?)ಶತಮಾನ ಹಿಂದಿನದು ಮತ್ತು ಎರಡನೆಯದು ಆರು ಶತಮಾನಗಳಷ್ಟು ಮುಂದಿನದು. ಮೊದಲನೆಯದು ತನ್ನ ಭಾಷೆ ಕಾವ್ಯಗಳ ಶಾಸ್ತ್ರಸಂಗತಿಯನ್ನು ತಲ್ಲೀನಗೊಂಡು ನಿರೂಪಿಸುತ್ತದೆಯಾದರೆ ಎರಡನೆಯದು, ಭಾಷೆಯನ್ನು ರಾಜಕಾರಣದ ಒಂದು ಸಾಧನವೆಂದು ಗಟ್ಟಿಯಾಗಿ ನಂಬಿಕೊಂಡು ಅಂಥದೊಂದು ನಿರ್ದಿಷ್ಟ ಸಾಧನೆಗಾಗಿಯೇ ತನ್ನ ಭಷೆಯ ವ್ಯಾಕರಣವನ್ನು ರೂಪಿಸುತ್ತದೆ. ‘ಕವಿರಾಜಮಾರ್ಗ’ವು ಕಾವ್ಯಶಾಸ್ತ್ರದ ಆಸಕ್ತಿಯಿಂದಾಗಿ ಮೊದಲನೆಯದರೊಡನೆ ಮತ್ತು ರಾಜಕಾರಣದ ಪ್ರಸಕ್ತಿಯಿಂದಾಗಿ ಎರಡನೆಯದರೊಡನೆ-ಹೀಗೆ ಎರಡೂ ಗ್ರಂಥಗಳೊಡನೆ ಕೊಂಡಿಗೊಳ್ಳುತ್ತದೆ.(ಶುದ್ಧ ಕಾವ್ಯ ಸಂಬಂಧಿಯೆಂದೋ ಅಥವಾ ಕಾಲ ದೇಶ ಸಂದರ್ಭ ನಿರ್ಲಿಪ್ತವಾಗಿಯೋ ತೋರುವ ಒಂದು ಕೃತಿಯು ಕೂಡಾ ರಾಜಕಾರಣವೆಂಬುದನ್ನು ಸೂಕ್ಷ್ಮವಾಗಿ ಅಂತರ್ಗತಗೊಳಿಸಿಕೊಂಡಿರುತ್ತದೆ ಎಂಬುದನ್ನು ನಾನು ಕಡೆಗಣಿಸುತ್ತಿಲ್ಲ.)

ಎರಡೂ ಭಾಷೆಗಳು ಗೊತ್ತಿಲ್ಲದ ನಾನು ಮೇಲಿನ ಎರಡು ಪುಸ್ತಕಗಳ ಬಗ್ಗೆ ಮಾತನಾಡುವುದು ಕಷ್ಟವೇ. ಮೊದಲನೆಯದನ್ನು, ಅದರ ಏಕೈಕ ಸಮಗ್ರ ಇಂಗ್ಲಿಷ್ ಅನುವಾದ(ತೊಳ್ಕಾಪ್ಪಿಯಂ-ಅನು: ಡಾ|ಎಸ್.ಇಲಕ್ಕುವನಾರ್; ಎಜುಕೇಶನಲ್ ಪಬ್ಲಿಶರ್ಸ್, ಮದ್ರಾಸ(ಚೆನೈ); ೧೯೬೩ಮತ್ತು ೧೯೮೪.)ಮತ್ತು ಇನ್ನಿತರ ಬರಹಗಳ ಮೂಲಕ ಹಾಗೂ ಎರಡನೆಯದನ್ನು ಇವಾನ್ ಇಲ್ಯಿಚ್‌ನ ಒಂದು ಲೇಖನ(‘ಶಾಡೊವರ್ಕ್’ಗ್ರಂಥದ ೨ನೇ ಲೇಖನ:ವರ್ನಾಕ್ಯುಲರ್ ವ್ಯಾಲ್ಯೂಸ್;ಇ.ಇಲ್ಯಿಚ್; ಮರಿಯಾನ್ ಬೊಯರ್ಸ್, ಲಂಡನ್;೧೯೮೧.) ಮತ್ತು ಇನ್ನಿತರ ಆಕರಗಳ ಮೂಲಕ ಸ್ಥೂಲವಾಗಿ ಗ್ರಹಿಸಿಕೊಂಡಿದ್ದೆನೆ; ಅವುಗಳಲ್ಲಿ ಸ್ಪಷ್ಟವಾಗಿರುವ ಸಂಗತಿಗಳಷ್ಟಕ್ಕೇ ನನ್ನನ್ನು ಸೀಮಿತಗೊಳಿಸಿಕೊಂಡಿದ್ದೇನೆ.

ತೊಳ್ಕಾಪ್ಪಿಯಂನ ಸ್ಥೂಲ ನೋಟ

‘ತೊಳ್ಕಾಪ್ಪಿಯಂ’ನಲ್ಲಿ , ‘ಎಳುತ್ತದಿಗಾರಂ’(ಅಕ್ಷರ-ವಿಭಾಗ), ‘ಸೊಲ್ಲದಿಗಾರಂ’(ವ್ಯಾಕ್ಯಾರ್ಥ-ವಿಭಾಗ), ‘ಪುರುಳದಿಗಾರಂ’(ಕಾವ್ಯ ವಸ್ತು-ಸಂಬಂಧಿ)-ಎಂಬ ಮೂರು ವಿಭಾಗಗಳು ಮತ್ತು ಒಂದೊಂದು ವಿಭಾಗದಲ್ಲೂ ಪುನಃ ಒಂಬತ್ತು ಒಳ ವಿಭಾಗಗಳೂ(ಒಟ್ಟಿನಲ್ಲಿ ೨೭ಅದ್ಯಾಯಗಲು)ಇವೆ. ಇವುಗಳಲ್ಲಿರುವ ಒಟ್ಟೂ ಪದ್ಯಗಳ ಸಂಖ್ಯೆ: ಸು. ೪೮೩+೪೬೩+೬೨೫=೧೫೭೧. ‘ಕವಿರಾಜಮಾರ್ಗ’ದಲ್ಲಿ ಸು. ೫೪೧ ಪದ್ಯಗಳಿದ್ದರೆ,ಅದಕ್ಕೆ ಸಮಾನವಾದ ‘ತೊಳ್ಕಾಪ್ಪಿಯ’ನ ‘ಪುರುಳದಿಗಾರಂ’ನಲ್ಲಿ ೬೨೫ಪದ್ಯಗಳಿವೆ ಮತ್ತು ಇದರ ೮ನೆಯ ಬಹು ದೀರ್ಘ ಒಳವಿಭಾಗವು ‘ಛಂದಶ್ಯಾಸ್ತ್ರ’ವನ್ನು ಕುರಿತದ್ದಾಗಿದೆ. ಹೀಗೆ ಒಟ್ಟಿನಲ್ಲಿ, ‘ತೊಳ್ಕಾಪ್ಪಿಯಂ’ನ ‘ಕಾವ್ಯಶಾಸ್ತ್ರ’ವಿಭಾಗದ ಗಾತ್ರವು ‘ಕವಿರಾಜಮಾರ್ಗ’ದ ಗಾತ್ರಕ್ಕೆ ಸಮಾನವೆನ್ನುವಂತಿದೆ.

‘ಕವಿರಾಜಮಾರ್ಗ’ದಲ್ಲಿನ ನಮ್ಮ ಪರ್‍ಯಾಲೋಚನೆಗಳನ್ನು ನೆನಪಿನಲ್ಲಿಟ್ಟುಕೊಂಡು ‘ತೊಳ್ಕಾಪ್ಪಿಯಂ’ನ ಸ್ವರೂಪವನ್ನು ಸ್ಥೂಲವಾಗಿ ಗಮನಿಸುವಾಗ, ಒಡನೆಯೇ ಹೊಳೆಯುವ ಕೆಲವು ಸಂಗತಿಗಳು ಇವು:

‘. ‘ತೊಳ್ಕಾಪ್ಪಿಯಂ’, ರಾಜ್ಯ-ರಾಜ-ರಾಜ್ಯದ ಮೇರೆ ಇತ್ಯಾದಿಗಳನ್ನು ಎತ್ತಿ ಪ್ರಸ್ತಾಪಿಸಿಲ್ಲ. ಈ ಗ್ರಂಥದ ಮುಂದಿನ ವ್ಯಖ್ಯಾನಕಾರರು, ‘ವೇಂಗಡಂ’(ತಿರುಪತಿ)ನಿಂದ ‘ಕುಮಾರಿ’(ಕನ್ಯಾಕುಮಾರಿ)ಯ ತನಕ’ ಅಂತ ತಮಿಳು ನಾಡಿನ ಮೇರೆಯನ್ನು ವಿವರಿಸಿದ್ದಾರಂತೆ. ಇನ್ನು ಸಾಂದರ್ಭಿಕ ಉಲ್ಲೇಖಗಳೆಂದರೆ, ಮೂರನೇ ಭಾಗದ ಪ್ರಾರಂಭಕ್ಕೆ ಮೊದಲ ಪದ್ಯಗಳಲ್ಲಿ(ಅ. ೧ರ ಮೊದಲ ಪದ್ಯಗಳು)ಇಡೀ ನಾಡನ್ನು, ಭೌಗೋಲಿಕ ಮೇಲ್‌ಮೈ, ಹವಾಗುಣ ಇತ್ಯಾದಿ ಆಧಾರದ ಮೇಲೆ, ಹನ್ನೆರಡು ಭಾಗಗಳಾಗಿ ವಿಂಗಡಿಸಿರುವುದಾಗಿ ಹೇಳಿದೆ. ಮತ್ತು ಇನ್ನೊಂದು ಕಡೆ(ಭಾಗ೩ಅ.೮;ಪ.೩೯೧)’ಬಹು ಪ್ರಸಿದ್ಧರಾದ ಮೂರು ರಾಜರುಗಳ ರಾಜ್ಯಾಡಳಿತವಿರುವ ತಮಿಳು ನಾಡಿನ ಸೊಂಪು ನೆಲದ ನಾಲ್ಕು ಮೇರೆಗಳೊಳಗೆ’ಎನ್ನುವ ಮಾತು ಕಾಣುತ್ತದೆ.

೨. ‘ತೊಳ್ಕಾಪಿಯಂ’ ತನ್ನ ಮತ್ತು ಇತರ ನಾಡುಗಳ ಬಗ್ಗೆ ಹೇಗೆ ಮೌನವಾಗಿದೆಯೋ ಹಾಗೆಯೇ ಬೇರೆ ಭಾಷೆಗಳ ಬಗ್ಗೆಯೂ ಬಹುಮಟ್ಟಿಗೆ ಮೌನವಾಗಿದೆ; ಒಂದೇ ಒಂದು ಕಡೆ ಮಾತ್ರ ಅನ್ಯ ಭಾಷೆಯ ಚಿಕ್ಕ ಪ್ರಸ್ತಾಪವಿದೆ. ಅಲ್ಲಿ (ಭಾ.೧;ಅ.೯;ಪ.೪೦೧-೪೦೨), ಬಹುಶಃ ‘ಸಂಸ್ಕೃತ’ವನ್ನು, ‘ವಡಸೊಲ್’(ಬಡಗುನುಡಿ) ಎಂಬ ತಾನಿಟ್ಟುಕೊಂಡ ಅಡ್ಡ ಹೆಸರಿನಿಂದ ಪ್ರಸ್ತಾಪಿಸಲಾಗಿದೆ; ಆ ಭಾಷೆಯಿಂದ ಶಬ್ದಗಳನ್ನು ಪಡೆದುಕೊಳ್ಳಬಹುದಾದರೂ ತಮಿಳು ಉಚ್ಚಾರಣೆಗೆ ಹೊಂದುವಂಥವನ್ನು ಮಾತ್ರವೇ ಪಡೆದುಕೊಳ್ಳತಕ್ಕದ್ದು ಎಂದು ವಿಧಿಸಲಾಗಿದೆ; ತಮಿಳಿಗೆ ತಂದುಕೊಳ್ಳುವ ಆ ಶಬ್ದಗಳ ಮೂಲರೂಪಗಳು ವಿರೂಪಣೆಗೊಂಡರೂ ಅಕ್ಷೇಪವಿಲ್ಲ ಎಂದಿದೆ.

೩. ಮೇಲಿನ ಸಂಗತಿ ಹೊಂದಿ, ಜಗತ್ತಿನ ಇತರ ಪ್ರದೇಶ-ಭಾಷೆ ಇತ್ಯಾದಿಗಳ ಜತೆಗಿನ ಇತಿ-ನೇತಿ ಸಂಬಂಧಗಳು ಈ ಗ್ರಂಥದಲ್ಲಿ ಪ್ರಸ್ತಾಪಗೊಳ್ಳುವುದಿಲ್ಲ.

೪. ಕಾವ್ಯಕ್ಕೆ ಸಂಬಂಧಿಸಿದ ಈ ಗ್ರಂಥದ ೩ನೇ ಭಾಗ(ಪುರುಳದಿಗಾರಂ)ವು-‘ಅಹಂ’ ಮತ್ತು ‘ಪುರ’ (ಒಳಗಿನ-ಹೊರಗಿನ/ಒಲವು-ಕಾಳಗ) ಎಂಬ ಸುವ್ಯಕ್ತ ಪ್ರವಿಭಾಗಗಳುಳ್ಳ ‘ಸಂಗಂ ಕಾವ್ಯ’ ಮಾದರಿಯ ಕಾವ್ಯರಾಶಿಯನ್ನೇ ಬಹುಮಟ್ಟಿಗೆ ಗಣನೆಯಲ್ಲಿಟ್ಟುಕೊಂಡಿರುವಂತೆ ತೋರುತ್ತದೆ. ಸಂಸ್ಕೃತಾದಿ ಭಾಷೆಗಳಲ್ಲಿ ಮತ್ತು ಮುಂದೆ ತಮಿಳಿನಲ್ಲಿ ಕೂದಾ ಬೆಳೆದ ‘ಮಹಾಕಾವ್ಯ’ ಅಥವಾ ‘ಮಾರ್ಗಕಾವ್ಯ’ವೆಂಬಂಥ ಸಂಕೀರ್ಣ ಬಂಧಗಳ ಬಗ್ಗೆಯಾಗಲೀ ಗದ್ಯಕಥಾ ಬಂಧಗಳ ಬಗ್ಗೆಯಾಗಲೀ ಈ ಗ್ರಂಥದಲ್ಲಿ ಪ್ರಸ್ತಾಪ ಕಾಣುವುದಿಲ್ಲ ಒಟ್ಟಿನಲ್ಲಿ ಈ ಗ್ರಂಥವು, ಸಂಸ್ಕೃತಾದಿ ಭಾಷೆಗಳಲ್ಲಿನ ಕಾವ್ಯಶಾಸ್ತ್ರ ಪರಿಕಲ್ಪನೆ- ಪರಿಭಾಷೆಗಳನ್ನು ಗಮನಿಸಲು ಹೋಗದೆ, ತನ್ನೊಳಗೆ ತಾನು ಕೇಂದ್ರೀಕರಿಸಿಕೊಂಡು ತನ್ನೆದುರಿನ ಕಾವ್ಯರಾಶಿಯನ್ನು ವಿಶ್ಲೇಷಿಸಿದಂತೆ ತೋರುತ್ತದೆ. ( ಹೀಗಿದ್ದರೂ ಈ ಗ್ರಂಥದಲ್ಲಿ ಸಂಸ್ಕೃತಪ್ರಾಕೃತಾದಿಗಳಲ್ಲಿನ ಪರಿಭಾಷೆ-ಪರಿಕಲ್ಪನೆಗಳ ಛಾಯೆಗಳಂತೂ ಕಾಣಿಸುತ್ತವೆ. ಉದಾಹರಣೆಗೆ-ಇದರಲ್ಲಿನ ‘ಅದಿಗಾರಂ’ಗಳೆಂಬ ವಿಭಾಗಗಳ ಹೆಸರು ಸಂಸ್ಕೃತದ ‘ಅಧಿಕಾರ’(ವಿಭಾಗ)ವೆಂಬುದನ್ನು ನೆನಪಿಸುತ್ತದೆ ಮತ್ತು ಇಲ್ಲಿನ ಎಳತ್ತು-ಸೊಲ್-ಪುರುಳ್ ಎಂಬ ವಿಭಜನೆಯು ಭತೃಹರಿಯ ‘ವಾಕ್ಯಪದೀಯ’ದ ಬ್ರಹ್ಮ-ಶಬ್ದ-ವಾಕ್ಯಕಾಂಡಗಳೆಂಬ ವಿಭಾಗಗಳನ್ನು ನೆನಪಿಸುತ್ತದೆ. ಇಂಥ ಉದಾಹರಣೆಗಳು ಅನೇಕವಿವೆ.)

‘ತೊಳ್ಕಾಪ್ಪಿಯ’ ಕಾವ್ಯಮೀಮಾಂಸೆ?

‘ತೊಳ್ಕಾಪ್ಪಿಯ’ ಗ್ರಂಥವು ಸಂಸ್ಕೃತ ಕಾವ್ಯಮೀಮಾಂಸೆಗಿಂತ ಬೇರೆಯಾದ ತನ್ನದೇ ಒಂದು ‘ಕಾವ್ಯಮೀಮಾಂಸೆ’ಯನ್ನು ಪ್ರತಿಪಾದಿಸಿದೆ ಎಂದು ವಾದಿಸುವವರಿದ್ದಾರೆ. ಇದನ್ನು ಕೊಂಚ ವಿಚಾರ ಮಾಡಬೇಕು.

ಇಲ್ಲಿ ಮೊದಲಿಗೆ, ‘ಮೀಮಾಂಸೆ’ಯೆನ್ನುವ ಪದಕ್ಕೆ ಒಂದು ನಿಶ್ಚಿತ ಅರ್ಥವನ್ನು ಕೊಟ್ಟುಕೊಳ್ಳಬೇಕಾಗುತ್ತದೆ. ‘ಮೀಮಾಂಸೆ’ಯೆಂದರೆ ಮೂಲತತ್ವ. ಮೂಲಸ್ವರೂಪದ ಪರಿಕಲ್ಪನೆ. ‘ಕಾವ್ಯಮೀಮಾಂಸೆ’ ಯೆನ್ನುವುದು ಜಗತಿನ ಎಲ್ಲಾ ಭಾಷೆಗಳ ಕಾವ್ಯರಾಶಿಯನ್ನೂ ಪರಿಗಣನೆಯಲ್ಲಿ ತಂದುಕೊಂಡು, ‘ಕಾವ್ಯಸಾಮಾನ್ಯ’ವೆಂಬ ಪರಿಕಲ್ಪನೆಯಲ್ಲಿ, ಅದರ ತಾತ್ತ್ವಿಕ ಸ್ವರೂಪವನ್ನು ಚಿಂತಿಸುವಂಥದು ಮತ್ತು ನಿರೂಪಿಸುವಂಥದು. ‘ಧರ್ಮ’ದ ತಾತ್ತ್ವಿಕ ಜಿಜ್ಞಾಸೆ ನಿರೂಪಣೆಗಳು ಹೇಗೋ ಹಾಗೆ, ಇದೂ ‘ಸದಾಕಾಲ-ಸರ್ವತ್ರ’ದ ಪರಿಕಲ್ಪನೆಯಲ್ಲಿ ರೂಪುಗೊಂಡಂಥವು. ಧರ್ಮವೆಂಬುದು ತನ್ನ ‘ಮೀಮಾಂಸೆ’ಯಲ್ಲಿ ಹೀಗೆ ಸಾರ್ವತ್ರಿಕ ಸರ್ವಕಾಲಿಕವಾಗಿದ್ದರೂ ಈ ತಾತ್ತ್ವಿಕ ಕಲ್ಪನೆಗಳು ಹಾಗೂ ಅಂಥ ಕಲ್ಪನೆಗೆ ಆಧಾರವಾದ ಮನೋಧರ್ಮಗಳೂ ಭಿನ್ನವಾಗಿರುತ್ತವೆ ಮತ್ತು ಅದರಿಂದಲೇ, ಹಿಂದು-ಬೌದ್ಧ-ಜೈನ-ಕ್ರಿಶ್ಚಿಯನ್-ಇಸ್ಲಾಂ ಇತ್ಯಾದಿ ವಿಭಿನ್ನ ಧರ್ಮಕಲ್ಪನೆಗಳು ರೂಪುಗೊಂಡು ಬಂದಿವೆ. ಹಾಗಿದ್ದರೂ ಈ ಒಂದೊಂದು ಧರ್ಮದ ಚಿಂತನೆಯೂ ಒಂದು ಸಮುದಾಯವನ್ನು ಕುರಿತ ಚಿಂತನೆಯಲ್ಲ ಇಡೀ ಮಾನವಕುಲವನ್ನೇ ಜಗತ್ತನ್ನೇ ಕುರಿತದ್ದು. ಹಿಂದು ತ್ಯಾದಿ ಅನೇಕ ಧರ್ಮಗಳಿರುವ ಹಗೆ, ‘ಭಾರತೀಯ ಕಾವ್ಯಮೀಮಾಂಸೆ’, ಗ್ರೀಕರ ಕಾವ್ಯಮೀಮಾಂಸೆ’ ಚೀನಿಯರ ಕಾವ್ಯ ಮೀಮಾಂಸೆ’ ಇತ್ಯಾದಿಗಳಿವೆ. ಇದರ ಅರ್ಥ, ‘ಕಾವ್ಯಮೀಮಾಂಸೆ’ಯೆಂಬ ಹೆಸರು ಹಚ್ಚಬೇಕಾದರೆ ಅದು ತನ್ನ ಜಿಜ್ಞಾಸೆ-ನಿರೂಪಣೆಗಳಲ್ಲಿ ಇಡೀ ಜಗತ್ತಿನ ಕಾವ್ಯರಾಶಿಯನ್ನು ‘ಕಾವ್ಯಸಾಮಾನ್ಯ’ವನ್ನು ಏಕತ್ವದಲ್ಲಿ ಪರಿಗಣಿಸಿಕೊಂಡದ್ದಾಗಿರಬೇಕು.

ಇನ್ನು, ‘ಭಾರತೀಯ ಕಾವ್ಯಮೀಮಾಂಸೆ’ಯೆನ್ನುವುದರ ಬಗ್ಗೆಯೂ ಬೇಕಷ್ಟು ಆಕ್ಷೇಪಣೆಗಳು ಬಂದಿವೆ. ಇಲ್ಲಿ ಹಲವು ಭಾಷೆಗಳೂ ಹಲವು ಸಾಹಿತ್ಯರಾಶಿಗಳೂ ಇರುವಾಗ, ಸಂಸ್ಕೃತದಲ್ಲಿ ಅಲಂಕಾರಿಕ ಮತ್ತು ಮೀಮಾಂಸಕರು ಬರೆದಿಟ್ಟಂಥವನ್ನೇ ಸಮಸ್ತವಾಗಿ ‘ಭಾರತೀಯ’ ವೆಂದು ಪರಿಗಣಿಸಲಿಕ್ಕಾದೀತೇ-ಎಂಬುದು ಇಲ್ಲಿನ ಮುಖ್ಯ ಆಕ್ಷೇಪನೆ ಸಂಸ್ಕೃತದಲ್ಲಿ ಮಾತ್ರವಲ್ಲ, ವಿವಿಧ ಪ್ರಾಕೃತಗಳು ಹಾಗೂ ದೇಶ ಭಾಷೆಗಳಲ್ಲೂ ಇರುವ ಒಂದು ದೊಡ್ಡ ಗ್ರಂಥರಾಶಿಯು ‘ಭಾರತೀಯ ಕಾವ್ಯಮೀಮಾಂಸೆ’ಯೆನ್ನಿಸಿಕೊಂಡಿದೆ. ಇನ್ನು ಆ ರಾಶಿಯನ್ನು ಒಮ್ಮೆ ಪರೀಕ್ಷಿಸಬೇಕು.

‘ಭಾರತೀಯ ಕಾವ್ಯಮೀಮಾಂಸೆ’ಯೆಂದು ಕರೆಯಿಸಿಕೊಳ್ಳುವುದು ಯಾವುದೋ ಒಂದು ಅಥವಾ ಕೆಲವು ಗ್ರಂಥಗಳಲ್ಲ’ ಬೃಹತ್ತಾದ ಒಂದು ಗ್ರಂಥರಾಶಿಯೇ ಒಂದು ಮೊತ್ತವಾಗಿ ಆ ಹೆಸರು ಪಡೆದುಕೊಂಡಿದೆ. ಮಾನವಕುಲದಲ್ಲಿ ಭಾಷೆಯೆಂಬ ಒಂದು ಸಂಗತಿಯು ಕಲ್ಪಿತವಾಗಿದೆ ಮತ್ತು ಅದರೊಳಗೆ ಕಾವ್ಯವೆಂಬ ಒಂದು ವಿಶಿಷ್ಟ ಭಾಷಾರೂಪವೂ ಕಲ್ಪಿತವಾಗಿದೆ; ಇದರ ತಾತ್ತ್ವಿಕ ಸ್ವರೂಪಗಳೇನು ಅಂತ, ಈ ಭಾರತ ಉಪಖಂಡದ ವಿಶಾಲವ್ಯಾಪ್ತಿಯಲ್ಲಿ ಜಿಜ್ಞಾಸೆ ನಡೆಸಿರುವ ಗ್ರಂಥಗಳ ಬಹುದೊಡ್ಡ ರಶಿ ಇದು. ಈ ರಾಶಿಯಲ್ಲಿ ಸಂಸ್ಕೃತದವೇ ಅಲ್ಲದೆ ವಿವಿಧ ಪ್ರಾಕೃತ-ವಿವಿಧ ದೇಶಭಾಷೆಗಳ ಗ್ರಂಥಗಳೂ ಸೇರಿವೆ; ಸಂಸ್ಕೃತದಲ್ಲಿ ರಚಿತವಾದ ಗ್ರಂಥಗಳೂ ತಮ್ಮ ಜಿಜ್ಞಾಸೆಗೆ ಕೇವಲ ಸಂಸ್ಕೃತ ಕಾವ್ಯದಿಂದಲ್ಲದೆ ವಿವಿಧ ಪ್ರಾಕೃತ ಕಾವ್ಯಗಳಿಂದಲೂ ಉದಾಹರಣೆಗಳನ್ನು ವಿಪುಲವಾಗಿ ಎತ್ತಿ ಬಳಸಿಕೊಂಡಿದೆ.

ಕನಿಷ್ಠ ಹತ್ತು ಹದಿನೈದು ಶತಮಾನಗಳಕಾಲ ನಡೆದ ವಾದ-ವಿವಾದ, ಚರ್ಚೆ, ಜಿಜ್ಞಾಸೆಗಳ ಸಾರವು ಈ ರಾಶಿಯಲ್ಲಿದೆ; ಮತ್ತು ಈ ಪರಂಪರೆಯು ನಮ್ಮ ತನಕ ಹರಿದುಬಂದಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಮತ್ತು ಆಫ್ಘಾನಿಸ್ತಾನದಿಂದ ಆಸ್ಸಾಮ್ ತನಕದ ಚಿಂತಕರು-ವಿವಿಧ ಪ್ರಾಕೃತ ದೇಶಭಾಷೆಗಳಲ್ಲಿದ್ದವರು-ಈ ಜಿಜ್ಞಾಸೆಯಲ್ಲಿ ಪಾಲ್ಗೊಂಡು ಬೆಳೆಸಿದ್ದಾರೆ. ಈ ವ್ಯಾಪ್ತಿಯಲ್ಲಿನ, ವಿವಿಧ ಜಾತಿ-ಧರ್ಮ-ತತ್ತ್ವಪಂಥಗಳನ್ನು ನಂಬಿಕೊಂಡಂಥ ಅನೇಕಾನೇಕರು ತಮ್ಮ ಧರ್ಮತತ್ತ್ವದ ಆಧಾರವಿಟ್ಟುಕೊಂಡೇ ಜಿಜ್ಞಾಸೆಯನ್ನು ಬೆಳೆಸಿದ್ದಾರೆ. ಹಿಂದು ಧರ್ಮವು ದೇವರ ಬಗ್ಗೆ, ಧರ್ಮಗ್ರಂಥದ ಬಗ್ಗೆ ಅಥವಾ ಧರ್ಮಾನುಷ್ಠಾನಗಳ ಬಗ್ಗೆ ಹೇಗೆ ಯಾವುದೇ ಒಂದು ಅಂತಿಮನಿರ್ಣಯವನ್ನು ಅಂಗೀಕರಿಸಿ ವಿಧಿಸಿಲ್ಲವೋ ಹಾಗೇ ಈ ‘ಭಾರತೀಯ ಕಾವ್ಯಮೀಮಾಂಸೆ’ಯೆಂಬುದೂ ಯಾವುದೇ ತಾತ್ತ್ವಿಕ ಪರಿಕಲ್ಪನೆಯನ್ನು ನಿರ್ಣೀತವೆಂದು ವಿಧಿಸುವುದಿಲ್ಲ. ಈಗಲೂ ಅಲ್ಲಿ ಹೊಸ ಜಿಜ್ಞಾಸೆಗಳಿಗೆ ತೆರವಿದೆ ಮತ್ತು ನಡೆದಿವೆ. ನಮ್ಮ ಕಾವ್ಯಮೀಮಾಂಸಾಗ್ರಂಥಗಳು ಮತ್ತು ಬೇರೆ ಶಾಸ್ತ್ರಗ್ರಂಥಗಳು ಬಹುಪಾಲು ಸಂಸ್ಕೃತದೊಳಗೇ ಇವೆ ಎನ್ನುವುದಕ್ಕೆ ಕಾರಣ, ಈ ವಿಶಾಲ ಪ್ರದೇಶದ ಸಮಸ್ತಭಾಗಗಳ ಜನರೂ ಕೂಡಿ ಸಂಸ್ಕೃತವನ್ನು ಹಾಗೆ ಬೆಳೆಸಿಕೊಂಡಿದಾರೆ ಎನ್ನುವುದೇ.

ಒಂದು ಮುಖ್ಯ ಸಂಗತಿಯನ್ನು ಇಲ್ಲಿ ಹೇಳುತ್ತೇನೆ. ಭಾರತವೆಂಬ ಈ ವ್ಯಾಪಕ ಮಹಾಸಮುದಾಯದ ಮಹಾ ಪ್ರಯತ್ನದಲ್ಲಿ ಸಂಸ್ಕೃತವು ‘ಬಹುಭಾಷಾಸ್ತರೀಯ’ವಾಗಿ ಕೂಡಾ ರೂಪುಗೊಂಡಿತು. ಸಂಸ್ಕೃತ ನಾಟಕಗಳು ಸಂಸ್ಕೃತದೊಳಕ್ಕೇ ಅನೇಕ ಪ್ರಾಕೃತಗಳನ್ನು ಒಳಗೊಳಿಸಿಕೊಂಡವು. ಹೀಗೆ ‘ಬಹುಭಾಷಾಸ್ತರೀಯ ಭಾಷೆ’ಯಾಗಿ ಅರ್ಥಾತ್, ‘ಬಹು ಸಮುದಾಯಸ್ತರೀಯ’ವಾಗಿ ರೂಪುಗೊಂಡದ್ದು ಬಹುಶಃ, ಇಡೀ ಜಗತ್ತಿನಲ್ಲಿ ಸಂಸ್ಕೃತವೊಂದೇ.

ಈ ಮಾತುಗಳಾದ ಮೆಲೆ ಪುನಃ ‘ತೊಳ್ಕಾಪ್ಪಿಯಂ’ಗೆ ಬಂದರೆ, ಇದರಲ್ಲಿ ನಮಗೆ ಕಾಣಿಸುವುದು, ಆತನಕದ ತಮಿಳು ಕಾವ್ಯರಾಶಿಯ ವಿವರಗಳು, ವಿಶ್ಲೇಷಣೆ, ಶಾಸ್ತ್ರನಿರೂಪಣೆ ಇತ್ಯಾದಿ. ‘ಕವಿರಾಜಮಾರ್ಗ’ವು ಹೇಗೆ ‘ಕಾವ್ಯಮೀಮಾಂಸೆ’ಯನ್ನು ಕುರಿತದ್ದಲ್ಲವೋ ಹಾಗೆ ‘ತೊಳ್ಕಾಪ್ಪಿಯಂ’ಕೂಡಾ ಅದಲ್ಲ.

ನೆಬ್ರಿಜಾ ಸಂದರ್ಭದ ರಾಜಕಾರಣ

ನೆಬ್ರಿಕಾನ ವಿಷಯಕ್ಕೆ ಬಂದರೆ, ಆತನು ಹೇಳುವ ರಾಜಕಾರಣದ ಹೊಳಹು ಆತನ ರಾಜಕಾರಣದಲ್ಲಿ ಸಿಗಲಿಕ್ಕಿಲ್ಲ; ಅವನು ಸಾಮ್ರಾಜ್ಞಿಗೆ ಸಹಾಯಬೇಡಿ ಒಪ್ಪಿಸಿದ ಮನವಿಪತ್ರದಲ್ಲಿ ಅದನ್ನು ಕಂಡುಕೊಳ್ಳಬೇಕು. ಐರೋಪ್ಯರಾಷ್ಟ್ರಗಳಲ್ಲಿ, ರಾಜ್ಯಸಾಮ್ಯಾಜ್ಯ ವಿಸ್ತರಣೆ-ವಸಾಹತು ನಿರ್ಮಾಣ ಇತ್ಯಾದಿ ಮಹತ್ವಾಕಾಂಕ್ಷೆಗಳು ಹುಟ್ಟಿಕೊಳ್ಳುತ್ತಿದ್ದ ಆ ಕಾಲಘಟ್ಟದಲ್ಲಿ ನೆಬ್ರಿಜಾ, ಭಾಷಾಶಕ್ತಿಯನ್ನು ಮನಗಂಡವನಾಗಿ, ಭಾಷೆಯನ್ನು ರಾಜ್ಯ ವಿಸ್ತರಣೆಯ ಮುಖ್ಯ ಸಾಧನವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಪ್ರತಿಪಾದಿಸಿದ; ಹಾಗೆ ವಿಸ್ತರಣೆ-ವಸಾಹತು ರಾಜಕಾರಣಕ್ಕೆ ಬೀಜ ನೆಟ್ಟವರಲ್ಲೊಬ್ಬನಾದ-ಇದಿಷ್ಟು ಸಂಗತಿ ಆತನ ಮನವಿಪತ್ರದಿಂದ ನಮಗೆ ತಿಳಿಯುತ್ತದೆ. ಅದಕ್ಕೂ ಮುಂದಿನ ಸೂಕ್ಷ್ಮಗಳು ನಮಗೆ ತಿಳಿಯಲಿಕ್ಕಿಲ್ಲ. ಜಾಗತಿಕ ಪ್ರಸಿದ್ಧಿಯ ಈಚಿನ ಚಿಂತಕರಲ್ಲೊಬ್ಬನೂ ‘ಆಧುನಿಕ’ವೆಂಬ ರಾಷ್ಟ್ರಪ್ರಭುತ್ವ, ಸಾರ್ವತ್ರಿಕಸಮಾನ ಶಿಕ್ಷಣ, ವಿಜ್ಞಾನ ಯಂತ್ರಜ್ಞಾನ, ವೈದ್ಯಕೀಯ ಇತ್ಯಾದಿಗಳ ಕಟು ವಿಮರ್ಶಕನೂ ಆದ ಇವಾನ್ ಇಲ್ಯಿಚ್, ಐರೋಪ್ಯ ಇತಿಹಾಸದ ತನ್ನ ಗಾಢ ಸಂಶೋಧನೆ ಮತ್ತು ಒಳನೋಟಗಳಿಂದ ನೆಬ್ರಿಜಾನ ರಾಜಕಾರಣವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ನಿರೂಪಿಸಿದ್ದಾನೆ.

ಆತನು ನೆಬ್ರಿಜಾನ ವಾದವನ್ನು ಹೀಗೆ ಸಂಗ್ರಹಿಸುತ್ತಾನೆ: ೧. ಚಲಚಂಲವಾದ ದೇಸೀ ನುಡಿಯು ಸ್ವೇಚ್ಛೆಯಲ್ಲಿ ಬದಲಿಸುತ್ತ ಹೋಗಲು ಅವಕಾಶವಿಲ್ಲದಂತೆ ಅದನ್ನು ನಿಶ್ಚಿತ ಎರಕದ ‘ಕೃತ-ಆಕೃತಿ’(ಆರ್ಟಿಫಿಸಿಯೊ)ಯುಳ್ಳ ಭಾಷೆಯನ್ನಾಗಿ ಪರಿವರ್ತಿಸಿಕೊಳ್ಳಬೇಕು; ಅದರಿಂದ ಮಾತ್ರವೇ ಪ್ರಭುತ್ವವು ವ್ಯಾಪಕಗೊಳ್ಳಲು ಮತ್ತು ದೀರ್ಘಾಯುವಾಗಲುಸಾಧ್ಯ: ೨. ಪ್ರಭುತ್ವವು ಜನರ ಭಾಷಾವ್ಯವಹಾರದ ಮೇಲೆ ಸರಿಯಾದ ಹತೋಟಿಯಿಟ್ಟುಕೊಳ್ಳುವುದಕ್ಕೆ ನಿಶ್ಚಿತವಾದ ‘ಕೃತಭಾಷೆ’ಯು ಅಗತ್ಯವಾಗಿದೆ; ೩. ಈಗ ಭಾಷೆಯು ಮುಕ್ತವೂ ಅರಾಜಕವೂ ಆಗಿದ್ದು, ಜನರು ಅದರಲ್ಲಿನ ಸುಳ್ಳುಕತೆ ಕಟ್ಟುಕತೆಗಳನ್ನು ಓದುತ್ತ ಸಮಯವನ್ನು ಅಹಿತಕಾರಿಯಾಗಿ ಪೋಲುಮಾಡುತ್ತಿದ್ದಾರೆ ಮತ್ತು ಹೊಸದಾಗಿ ಬಂದಿರುವ ಮುದ್ರಣ ತಂತ್ರವು ಮತ್ತಷ್ಟು ಮುಕ್ತತೆ ಅರಾಜಕತೆಗಳನ್ನು ಬೆಳೆಸಿದೆ; ಉಪಯುಕ್ತವಾದ್ದು ಮಾತ್ರವೇ ರಚಿತವಾಗುವಂತೆ, ಮುದ್ರಣಗೊಳ್ಳುವಂತೆ ಮತ್ತು ಜನರ ಓದಿಗೆ ಸಿಗುವಂತೆ ನಿಯಂತ್ರಿಸಬೇಕಾದ್ದು ಪ್ರಭುತ್ವದ ಕರ್ತವ್ಯ; ೪. ಸಾಮ್ರಾಜ್ಞಿಯ ಹೊರಗಿನ ದೇಶಗಳನ್ನು ಗೆಲ್ಲುವುದು ಮಾತ್ರ ಮುಖ್ಯವಲ್ಲ; ತನ್ನ ಜನರನ್ನು ಮತ್ತು ಜಗತ್ತನ್ನು ಕೂಡಾ ನಾಗರಿಕಗೊಳಿಸಬೇಕು-ಇದೇ ರಾಜತ್ವದ ‘ದೈವಕಾಯಕ’ (ರಾಜತ್ವದ ದೈವಕಾಯಕ’ವೆಂಬ ನಿರೂಪಣೆಯಿಂದಲೇ ಕೊಲಂಬಸನೂ ತುದಿಯಲ್ಲಿ ರಾಣಿಯ ನೆರವನ್ನು ಗೆದ್ದುಕೊಂಡಿದ್ದ.)

ಈ ರಾಜಕಾರಣವು ರಾಜ್ಯವಿಸ್ತರಣೆಗೆ ಮಾತ್ರ ಸಂಬಂಧಿಸಿದ್ದಲ್ಲ, ಜನರನ್ನು ಏಕರೂಪಿ ನಾಗರಿಕ ಪ್ರಜರಾಗಿ ಸಂಸ್ಕರಿಸಿ ಅವರನ್ನು ತನ್ನ ಸಂಪೂರ್ಣ ಹತೋಟಿಗೆ ಒಳಗೊಳಿಸಿಕೊಳ್ಳುವ ಆಧುನಿಕ ‘ರಾಷ್ಟ್ರಪ್ರಭುತ್ವ’ಕ್ಕೆ ಸಂಬಂಧಿಸಿದ್ದು ಎನ್ನುತ್ತಾನೆ, ಇಲ್ಯಿಚ್. ಆತನು ಯೂರೋಪಿನ ರಾಜ್ಯಾಧಿಕಾರದ ಇತಿಹಾಸವನ್ನು ಶೋಧಿಸುತ್ತಾನೆ.

ಸು.ಕ್ರಿ.ಶ. ೩ನೆಯ ಶತಮಾನದ ಹೊತ್ತಿಗಾಗಲೇ ಚರ್ಚುಗಳು ಅಲ್ಲಿ ಜನರ ಮೆಲೆನ ತಮ್ಮ ಅಧಿಕಾರವನ್ನು ಬೆಳೆಸಲು ಹವಣಿಸಿದ್ದವು. ಜನರು ಹುಟ್ಟಾ ಮೃಗಸಮಾನರು: ಧರ್ಮಧೀಕ್ಷೆಕೊಟ್ಟು ಚರ್ಚ್ ಅವರನ್ನು ನಾಗರಿಕ ಮಾನವರನ್ನಾಗಿ ಸಂಸ್ಕರಿಸುತ್ತದೆ; ಹೀಗೆ ಕಲ್ಪನೆಯನ್ನು ಬಿತ್ತಿ ಬೆಳೆಸಲಾಯಿತು. ಮುಂದೆ, ಧರ್ಮನಿರಪೇಕ್ಷವಾದ ‘ರಾಜ್ಯ’ಗಳು ಚರ್ಚ್‌ನ್ನು ಸೋಲಿಸಿ ಹತ್ತಿಕ್ಕಿ ಆ ಮಾತೃಸ್ಥಾನವನ್ನು ತಾವು ವಶಪಡಿಸಿಕೊಂಡವು. ಅಸಂಖ್ಯಾತ ತಾಯಂದಿಯ ಮಕ್ಕಳಾಗಿ ಬೆಳೆದ ಅಸಂಖ್ಯಾತರನ್ನು ಅಲ್ಲಿಂದ ಕಿತ್ತುತಂದು, ಅವರೆಲ್ಲರನ್ನೂ ಒಂದೇ ಎರಕದ ಪಡಿಯಚ್ಚುಗಳನ್ನಾಗಿ, ಎಣಿಕೆಗೆ ಸಿಗುವ ಏಕಗಾತ್ರದ ಸರುಕುಗಳನ್ನಾಗಿ ಸಂಸ್ಕರಿಸಿ ತನ್ನ ‘ಪ್ರಭುಮಾತೃತ್ವ’ದ ಮಡಿಲೊಳಗೆ ಗಿಡಿದುಕೊಳ್ಳುವ ಮತ್ತು ಹಾಗೆ ಜನರನ್ನು ಸಂಪೂರ್ಣ ಪ್ರಭುತ್ವಾವಲಮಿ ಪ್ರಜಾರಾಶಿಯನ್ನಾಗಿ ಪರಿವರ್ತಿಸಿಕೊಳ್ಳುವ ಈ ಹುನ್ನಾರವು ಸಮಸ್ತಾಧಿಕಾರವುಳ್ಳ ಆಧುನಿಕ ‘ರಾಷ್ಟ್ರಪ್ರಭುತ್ವ’ದ ಅಸ್ತಿವಾರ-ಎನ್ನುತ್ತಾನೆ ಇಲ್ಯಿಚ್.

ಸಮಸ್ತರಮೇಲೂ ತನ್ನ ಸರ್ವಾಧಿಕಾರವಿರತಕ್ಕದ್ದೆದ್ಮು ಉದ್ದೇಶಿಸುವ ಆಧುನಿಕ ‘ರಾಷ್ಟ್ರಪ್ರಭುತ್ವ’ವು,‘ಜೀವನಾಪ್ತಿ ಅರ್ಥಶಾಸ್ತ್ರ’ ಅಥವಾ ‘ಛಾಯಾ ಅರ್ಥಶಾಸ್ತ್ರ’ವನ್ನು ಹತ್ತಿಕ್ಕಿ ಅದನ್ನು ತನ್ನ ‘ಮಾರುಕಟ್ಟೆ ಅರ್ಥಶಾತ್ರ’ದೊಳಕ್ಕೆ ಅಳವಡಿಸಿಕೊಳ್ಳಲು ಹೆಣಗುತ್ತದೆ. ಮನೆಯಲ್ಲಿ ಹೆಂಗಸರು ಮಾಡುವ ಮನೆವಾರ್ತೆ ಕೆಲಸಗಳಂಥ, ಅರ್ಥಶಾಶ್ತ್ರದ ಮೌಲ್ಯಮಾಪನಕ್ಕೆ ದಕ್ಕದ, ‘ಛಾಯಾ’ಅಥವಾ ‘ಜೀವನಾಪ್ತಿ’ ಚಟುವಟಿಕೆಗಳನ್ನು ಅದು ನಿಯಂತ್ರಿಸುತ್ತ ಕ್ರಮೇಣ ಅದನ್ನು ಹಣದ ಬೆಲೆಗಟ್ಟಲು ಬರುವಂತೆ ಪರಿವರ್ತನೆಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಮೊಲೆಹಾಲಿಗೆ ಬದಲು ಬಾಟಲಿಹಾಲು ರೂಢಿಗೊಳ್ಳುತ್ತದೆ. ಅದೇರೀತಿ, ಜನರು ತಮ್ಮ ಜೀವನಾಪ್ತಿಯಲ್ಲಿ ಭಾಷೆಯನ್ನು ಹೇಗೆಹೇಗೋ ಬಳಸಿಕೊಳ್ಳುತ್ತ ನಡೆದರೆ, ಭಾಷ ಚಟುವಟಿಕೆಯ ಆ ಕ್ಷೇತ್ರವು ಮುಕ್ತ-ಅನಿಯಂತ್ರಿತ-ಅರಾಜಕವಾಗಿ ಬಿಡುತ್ತದಾದ ಕಾರಣ ಭಾಷೆಯನ್ನು ಮಟ್ಟಗೊಳಿಸಿ ನಿಯಂತ್ರಿಸಬೇಕಾದ್ದು ಅಗತ್ಯವಾಗುತ್ತದೆ. ನಮ್ಮ ಈ ಕಾಲಕ್ಕೆ ಬೃಹದಾಕಾರವಾಗಿ, ದೈತ್ಯದಕ್ಷವಾಗಿ ಬೆಳೆದುಕೊಂಡಿರುವ ‘ಆಧುನಿಕ ರಾಷ್ಟ್ರಪ್ರಭುತ್ವ’ದ ‘ಸಮಸ್ತಾಧಿಕಾರರಾಜಕಾರಣ’ವನ್ನೇ ನೆಬ್ರಿಜಾನು ಆ ಕಾಲಕ್ಕೆ ಮುಂಗಂಡು ಪ್ರತಿಪಾದಿಸಿದ ಎಂಬುದು ಇಲ್ಯಿಚ್‌ನ ವ್ಯಾಖ್ಯಾನ.

ನೆಬ್ರಿಜಾ ಮತ್ತು ಕವಿರಾಜಮಾರ್ಗ ಸಂದರ್ಭ, ಭಿನ್ನತೆ
ಐರೋಪ್ಯ ಅಧಿಕಾರ ರಾಜಕಾರಣದ ಪ್ರಮುಖ ಧಾರೆಯೊಂದನ್ನು ಮಾತ್ರವೇ ಇಲ್ಯಿಚ್, ಕ್ರುದ್ಧನಾಗಿ ರೇಖಿಸಿದ್ದಾನೆ ಮತ್ತು ಇದಕ್ಕೆ ಪ್ರತಿಯಾಗಿ ವಿರುದ್ಧವಾಗಿ ಕಾಲಕಾಲಕ್ಕೆ ಸ್ಪೋಟಿಸಿದ ಭಿನ್ನ ಅಸಂತತ ಧಾರೆಗಳನ್ನು ಗಣಿಸದೆ ಹೋಗಿದ್ದಾನೆ ಅಂತ ನನ್ನ ಭಾವನೆ. ಹೇಗೂ ಭಾಷಾರಾಜಕಾರಣದ ಅತಿ ಸೂಕ್ಷ್ಮಾಂಶಗಳ ಜಿಜ್ಞಾಸೆಯು ಮನಸ್ಸಿನಲ್ಲಿರಲಿ ಎಂಬ ಕಾರಣಕ್ಕೆ ಇಲ್ಯಿಚ್ ವ್ಯಾಖ್ಯೆಯನ್ನು ಉದ್ದವಾಗಿ ಪ್ರಸ್ತಾಪಿಸಿದೆ. ಈಗ, ನೆಬ್ರಿಜಾ ಮತ್ತು ‘ಕವಿರಾಜಮಾರ್ಗ’ದ ಭಾಷಾರಾಜಕಾರಣಗಳನ್ನು ಕೆಲಮಟ್ಟಿಗೆ ಪರಸ್ಪರ ಹೋಲಿಸಿ ನೋಡಿಕೊಳ್ಳಬಹುದು.

ಮೊಸಲನೆಯದಾಗಿ-ವಿಶೃಂಖಲವಾಗಿರುವ ಭಾಷೆಯನ್ನು ಶಾಸ್ತ್ರೀಯ ಚೌಕತ್ಟಿನಲ್ಲಿ ನಿಯಂತ್ರಿಸಿ, ಅದು ಯಾವತ್ತೂ ಎಲ್ಲೂ ಯಾರಿಂದಲೂ ವಿಕಲ್ಪಗೊಳ್ಲಲಾಗದಂತೆ, ‘ನಿಶ್ಚಿತ-ಕೃತ-ಆಕೃತಿ’ಯಾಗಿ ಪ್ರಯತ್ನಪೂರ್ವಕ ನಿರ್ಮಿಸಿಕೊಳ್ಳಬೇಕು ಎನ್ನುವುದು ನೆಬ್ರಿಜಾನ ಪ್ರತಿಪಾದನೆ. ‘ಕವಿರಾಜಮಾರ್ಗ’ದಲ್ಲಿ, ದೇಸಿಯು ಬೇರೆಬೇರೆಯಾಗಿರುವ ಕಾರಣ ಈ ವಿವಿಧ ಕನ್ನಡಗಳಲ್ಲಿ ನುಸುಳಿಬಂದಿರುವ ಅಸಂಖ್ಯಾತ ದೋಷಗಳನ್ನು ಚಿಂತಿಸಿ, ಎತ್ತಿ, ನಿಶ್ಚಯಿಸಿ ತೋರಿಸುವುದು ಎಷ್ಟು ಕಷ್ಟವೆಂದರೆ, ವಾಸುಕಿಗೂ ಅಂಥ ಎಣಿಕೆಯು ಬೇಸರ ತರುತ್ತದೆ’(೧-೪೬) ಎನ್ನುವ ಮಾತು ಬಂದಿದೆ. ಈ ಪದ್ಯವನ್ನು ಆಧರಿಸಿ, ‘ಕವಿರಾಜಮಾರ್ಗ’ವೂ ಕನ್ನಡದ ವೈವಿಧ್ಯಗಳನ್ನು ಕಟುವಾಗಿ ಟೀಕಿಸಿದೆ ಅಂತ ಸೂಚಿಸಿರುವುದುಂಟು. ಆದರೆ ಈ ಪದ್ಯವು ದೋಷಗಳ ಅಸಂಖ್ಯಾತತೆಗಾಗಿ ಬೇಸರವನ್ನು ಹೇಳಿದೆಯಲ್ಲದೆ, ಕನ್ನಡದ ಅಸಂಖ್ಯಾತತೆಗಾಗಿ ಬೇಸರವನ್ನು ಸೂಚಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಅಂದರೆ, ಈ ಪದ್ಯವನ್ನು ತಪ್ಪಾಗಿ ಅರ್ಥಮಾಡಿ ಅದರ ಮೇಲೆ ವಾದ ಕಟ್ಟಬಾರದು ಅಂತ ನನ್ನ ಸೂಚನೆ. ‘ಕವಿರಾಜಮಾರ್ಗ’ಕ್ಕೂ ಬಹುಶಃ, ಭಾಷೆಯು ವಿಶೃಂಖಲ-ಅರಾಜಕವಾಗಬಾರದು, ಅಸಂಖ್ಯಾತವಾಗಬಾರದು ಎಂಬ ಅಪೇಕ್ಷೆಯಿದೆ. ಆದರೆ ಭಾಷೆಯನ್ನು ಏಕರೂಪಿ ಕೃತ-ಆಕೃತಿಯಾನ್ನಾಗಿ ಪ್ರಯತ್ನಪೂರ್ವಕ ನಿರ್ಮಿಸಿ ಕಾಪಾಡಿಕೊಳ್ಳಬೇಕು ಎಂಬ ಹಟ ಅದಕ್ಕಿಲ್ಲ. ಭಾಷೆಯ ವೈವಿಧ್ಯವನ್ನು ಅದು ನಿಶ್ಚಿತವಾಗಿಯೂ ಪುರಸ್ಕರಿಸುತ್ತದೆ. ಆ ಕಾರಣವೇ ಆ ಕಾಲಕ್ಕೆ ಪ್ರಾಯಃ ಕನ್ನಡದಲ್ಲಿಲ್ಲದಿದ್ದ ದಕ್ಷಿಣ-ಉತ್ತರ(ಮತ್ತು ಉತ್ತರೋತ್ತರ ಕೂಡಾ)ಮಾರ್ಗಗಳ ಕಲ್ಪನೆಯನ್ನು ಸಂಸ್ಕೃತದಿಂದ ಇಲ್ಲಿಗೂ ತಂದುಕೊಂಡಿದೆ; ಹಾಗೆ ವೈವಿಧ್ಯಕ್ಕೆ ಮುಕ್ತ ಅವಕಾಶವನ್ನು ತಾನೇ ಕಲ್ಪಿಸಿಟ್ಟಿದೆ.

ಅದಲ್ಲದೆ ಈ ಗ್ರಂಥವು, ಕಿಸವೊಳಲು-ಕೊಪಣ-ಪುಲಿಗೆರೆ-ಒಂಕುಂದಗಳು ಮೇರೆಯಾಗಿರುವ ಒಳಪ್ರಾಂತವನ್ನು ‘ಕನ್ನಡದ ತಿರುಳ್’ ಎಂದು ಘೋಷಿಸಿದೆ; ಬಹುಶಃ, ‘ತಿರುಳ್ಗನ್ನಡ’ವೆಂಬ ಇನ್ನೊಂದು ಭಾಷಾ ಭೇಧವನ್ನು ಸೂಚಿಸಿದೆ. ರಾಜಧಾನಿ ಮಳಖೇಡದ ವಲಯದಿಂದ ಹೊರಗಿರುವ ಪ್ರಾಂತವೊಂದನ್ನು ‘ರಾಜ್ಯದ ತಿರುಳು’ಎಂದು ಘೋಷಿಸಿರುವುದೇ ಈ ಗ್ರಂಥದ ರಾಜಕಾರಣವು, ‘ಪ್ರಭುತ್ವಕೇಂದ್ರಿತ ಸಮಸ್ತಾಧಿಕಾರ ರಾಜಕಾರಣ’ ಕ್ಕಿಂತ ಭಿನ್ನವಾಗಿದೆ ಎನ್ನುವುದಕ್ಕೆ ದೊಡ್ಡ ಸಾಕ್ಷಿ.

ಭಾಷೆಯು ಕಾಲಾಂತರದಲ್ಲಿ ಪರಿವರ್ತನೆಗೊಳ್ಳುತ್ತ ಹೋಗುತ್ತಿರುವುದರ ಬಗ್ಗೆ ನೆಬ್ರಿಜಾನಿಗೆ ದೊಡ್ಡ ಆತಂಕವಿದೆ. ತನ್ನ ಭಾಷೆಯು ಕಳೆದ ಐನೂರು ವರ್ಷಗಳಲ್ಲಿ, ಬೇರೆ ಭಾಷೆಯೇ ಎಂಬಷ್ಟು ಬದಲಾಗಿಬಿಟ್ಟಿರುವುದನ್ನು ಆತನು ಎತ್ತಿ ಹೇಳುತ್ತಾನೆ; ಮುಂದೆ ಕೂಡ ಹೀಗೆ ಬಲುಬೇಗ ಬದಲಾಗುತ್ತಾ ಹೋದರೆ, ಈಗ ಬರೆದಿಡುವ ರಾಣಿಯ ಸಾಹಸಪ್ರಶಸ್ತಿಗಳು ಮುಂದಿನ ಜನರಿಗೆ ಅರ್ಥವಾಗದೆ ರಾಣಿಯ ಇತಿಹಾಸವೇ ನಷ್ಟವಾಗಿ ಹೋಗಬಹುದು ಎನ್ನುವ ಭೀತಿಯನ್ನು ಮುಂದಿಡುತ್ತಾನೆ. ‘ಕವಿರಾಜಮಾರ್ಗ’ಕ್ಕೆ ಅಂಥ ಭೀತಿಯಿಲ್ಲ. ಬದಲು, ಭಾಷೆಯು ಬದಲಾಗುತ್ತ ಹೋಗಬೇಕಾದ್ದನ್ನು ಅದು ಬಲವಾಗಿ ಸಮರ್ಥಿಸುತ್ತದೆ; ತನ್ನ ಕಾಲದವರು ಪೂರ್ವದ ‘ಹಳಗನ್ನಡ’ವನ್ನು ಬಳಸುತ್ತಿರುವ ಬಗ್ಗೆ ಅಸಹನೆ ಸೂಚಿಸಿ, ಅಂಥವರನ್ನು ನಿಂದಿಸುತ್ತದೆ, ಲೇವಡಿ ಮಾಡುತ್ತದೆ. ಅಂದಿನ ಕಾಲಕ್ಕೆ ಹೊಂದಿ ಚಂದವಾಗಿದ್ದ ಆ ಭಾಷೆಯನ್ನು ಇವತ್ತೂ ಅನುಕರಿಸುವುದೆಂದರೆ ಅದು, ‘ಜರ್ಧ್ವದೂ-ಸುರತ-ರಸ-ರಸಿಕತೆ’ಯಂತೆ ಎಂದು ‘ಕವಿರಾಜಮಾರ್ಗ’ವು ಕಟುವಾಗಿ ಟೀಕಿಸುತ್ತದೆ.

ಜನರು ಈಗ ‘ಕಾದಂಬರಿಗಳು ಮತ್ತು ಸುಳ್ಳುಗಳಿಂದ ತುಂಬಿಹೋಗಿರುವ ಮನೋವಿಲಾಸದ ಕಟ್ಟುಕತೆಗಳನ್ನು ಓದುತ್ತ’ ಸಮಯವನ್ನು ಅಹಿತಕರವಾಗಿ ಪೋಲು ಮಾಡುತ್ತಿದ್ದಾರೆನ್ನುವುದು ನೆಬ್ರಿಜಾನ ಇನ್ನೊಂದು ಆತಂಕ. ಪ್ರಭುತ್ವವು ಅದನ್ನು ನಿಯಂತ್ರಿಸತಕ್ಕದ್ದು ಎಂದು ಆತ ಪ್ರತಿಪಾದಿಸುತ್ತಾನೆ. ಒಟ್ಟೂ ‘ಸೃಜನ ಸಾಹಿತ್ಯ’ದ ಬಗ್ಗೆಯೇ ಆತನಿಗೆ ಅಸಮಧಾನವಿರುವಂತೆ ತೋರುತ್ತದೆ. ಇದಕ್ಕೆ ಪ್ರತಿಯಾಗಿ ‘ಕವಿರಾಜಮಾರ್ಗ’ವು ಗದ್ಯ-ಪದ್ಯ-ಕಥಾ-ಕಾವ್ಯಪಕ್ಷಪಾತಿ. ಅತ್ಯುತ್ಕೃಷ್ಟ ಕಾವ್ಯಗಳು ಪಾಪ-ಪುಣ್ಯ ಇತ್ಯಾದಿಗಳನ್ನು ಕಾನಿಸುವಂಥವು ಎಂದು ಅದು ಹೇಳುತ್ತದಾದರೂ (ಪಾಪವನ್ನು ಕಾಣಿಸಲಿಕ್ಕೂ ಅದು ಆಕ್ಷೇಪಿಸಲಾರದು)ಇನ್ನುಳಿದ ಗದ್ಯಕಥೆ, ಬೆದಂಡೆ, ಚತ್ತಾಣಗಳಂಥವಕ್ಕೂ ಅದು ಮಾನ್ಯತೆ ನೀಡುತ್ತದೆ.

ತುದಿಯಲ್ಲಿ ನೆಬ್ರಿಜಾ ಯಾವ ಮುಚ್ಚುಮರೆಯಿಲ್ಲದೆ ಉಧ್ಘೋಷಿಸುತ್ತಾನೆ-‘ನನ್ನ ಭಾಷಾನಿರ್ಮಾಣ ಪ್ರಯತ್ನದಿಂದಾಗಿ ಸಾಮ್ರಾಜ್ಞಿಯಾದ ತಾವು, ಬಲು ಶೀಘ್ರವಾಗಿ ಗ್ರಾಮ್ಯಾತಿಗ್ರಾಮ್ಯ ಭಾಷೆಗಳನ್ನಾದುತ್ತಿರುವ ಅನೇಕಾನೇಕ ಬರ್ಬರ ಜನಸಮುದಾಯಗಳ ಮೇಲೆ ತಮ್ಮ ಅಧಿಕಾರದ ನೊಗವನ್ನು ಹೇರಿರುತ್ತೀರಿ ಮತ್ತು ತಮ್ಮ ವಿಜಯಕ್ಕೆ ಶರಣಾದ ಆ ಜನವರ್ಗಗಳು ತಮ್ಮ ಕೃಪೆಗೋಸ್ಕರ-ಎಂದರೆ, ಗೆದ್ದವರು ಸೋತವರಿಗೆ ನೀದಬೇಕಾದ ಕೃಪೆಗಳಿಗೋಸ್ಕರ-ಕಾದು ನಿಂರಿರುತ್ತವೆ; ಅವರಿಗೆ ನಮ್ಮ ಭಾಷೆಯ ಕೃಪಾದಾನವಾಗಬೇಕು.’ ಒಂದು ಕಡೆಯಿಂದ ಇದು ವಸಾಹತು ವಿಸ್ತರಣವನ್ನೂ ಇನ್ನೊಂದು ಕಡೆಯಿಂದ ಕ್ರಿಶ್ಚಿಯನ್ ಧರ್ಮಪ್ರಸಾರವನ್ನೂ(ರಾಜ್ಯಪ್ರಭುತ್ವ ಧರ್ಮಪ್ರಭುತ್ವಗಳೆರಡನ್ನೂ)ಒಗ್ಗೂಡಿಸಿ ಹೇಳುವಂಥದು. ‘ಕವಿರಾಗಮಾರ್ಗ’ಕ್ಕೆ ಅನಿರ್ಧಿಷ್ಟ ಕಾಲಘಟ್ಟದಲ್ಲಂತೂ ಇಂಥ ಮಾತುಗಳು ಬಹುಶಃ ಅಸಂಬದ್ಧವಾಗಿ ಅಪಾಯಕಾರಿಯಾಗಿ ಕಾಣುತ್ತಿತ್ತು. ಯಾಕೆಂದರೆ, ಅದು ‘ಪರಾಕ್ರಮ ರಾಜಕರಣ’ದಿಂದ ಬೇಸತ್ತು ನಿರಸನ ಹೊಂದಿ, ಬೇರೆ ಬಗೆಯ ಭದ್ರರಾಜಕಾರಣದ ಶೋಧನೆಯಲ್ಲಿ ಆಸಕ್ತವಾಗಿತ್ತು; ಮತ್ತು ಧಾರ್ಮಿಕವಾಗಿ, ಧರ್ಮಗಳ ವಿಸ್ತರಣೆಗೆ ಬದಲಾಗಿ ಅನೇಕ ಧರ್ಮಗಳ ಸಹಬಾಳ್ವೆಯ ಬಗ್ಗೆ, ಅವುಗಳ ನಿರಾತಂಕ ಯಾಥಸ್ಥಿತಿ ಅಸ್ತಿತ್ವವನ್ನು ರಕ್ಷಿಸುವ ಬಗ್ಗೆ ಚಿಂತಿಸಬೇಕಾಗಿತ್ತು.

ಸ್ವಜನ-ಅನ್ಯಜನರನ್ನು ನಿಯಂತ್ರಿಸಿ ನಾಗರೀಕಗೊಳಿಸುವ ಬಗ್ಗೆಯಲ್ಲದೆ, ಎರಡೂ ಜನವರ್ಗಗಳ ನಿರಾತಂಕ ಬದುಕನ್ನೂ ಪರಸ್ಪರ ಸರಕಾರವನ್ನೂ ಕುರಿತು ಯೋಚಿಸಬೇಕಾಗಿತ್ತು.

ನೆಬ್ರಿಜಾನ ಕಾಲವೆಂದರೆ, ದೇಸಿಯವೆನಿಸಿಕೊಂಡಿದ್ದ ಐರೋಪ್ಯ ಸಮುದಾಯಗಳಲ್ಲಿ ಹೊಸ ಮಹತ್ವಾಕಾಂಕ್ಷೆ-ಮಹೋತ್ಸಾಹ ಆತ್ಮಪ್ರತ್ಯಯಗಳು ಬೆಳೆಯುತ್ತಿದ್ದ ಕಾಲ; ರಾಜ್ಯಸಮುದಾಯಗಳೊಂದೊಂದೂ ಸಾಮ್ರಾಜ್ಯವಾಗಿ ವಿಸ್ತರಿಸಿಕೊಂಡು ಬೃಹತ್ತಾಗಿ ಬೆಳೆಯಲು ಸ್ಪರ್ಧಿಸಿ ತವಕಿಸುತ್ತಿದ್ದ ಕಾಲ. ಇದರ ಜೊತೆಗೆ, ಯೂರೋಪ್‌ನಲ್ಲಿ ಆತನಕ ದೀರ್ಘಕಾಲ ನದೆದಿದ ‘ಧರ್ಮಯುದ್ಧ’ದ ಸ್ಮೃತಿಯೂ ಅವರನ್ನು ಸ್ಫೂರ್ತಿಸುತ್ತಿತ್ತು. ಈಚಿನ ಅವಧಿಯಲ್ಲಿ ಚರ್ಚ್‌ಗಳು ದುರ್ಬಲಗೊಂಡು ಅವುಗಳ ಕರ್ತವ್ಯವನ್ನು ರಾಜ್ಯಗಳೇ ನೆರವೇರಿಸಬೇಕಾಗಿತ್ತು. ಹೀಗೆ, ರಾಜ್ಯವಿಸ್ತರಣೆ ಮತ್ತು ‘ಕರುಣಾ-ಮೈತ್ರಿ’ಗಳ ಭೋಧದಿಂದ ಅನಾಗರಿಕ ಮನುಕುಲವನ್ನು ನಾಗರಿಕಗೊಳಿಸಬೇಕಾದ ಕ್ರಿಶ್ಚಿಯನ್ ಧಾರ್ಮಿಕ ಕರ್ತವ್ಯ-ಇವೆರದನ್ನೂ ನೆರವೇರಿಸಬಹುದಾದಂಥ ಪ್ರಬಲ ಪ್ರಭುತ್ವವು ಅಲ್ಲಿನ ಆಗಿನ ಅವಶ್ಯಕತೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಪ್ರಭುತ್ವಕ್ಕೆ ಶರಣಾಗತಿಯನ್ನೊಪ್ಪಿಸಿದ ಜನ ಮತ್ತು ಅವರನ್ನು ನಿಯಂತ್ರಿಸಿ ಶರಣಾಗತಗೊಳಿಸುವ ವಿಧೇಯರಾಗಿಸುವ ಮುಖ್ಯ ಸಾಧನವಾದ ಭಾಷೆ-ಇವುಗಳನ್ನು ಕುರಿತು ನೆಬ್ರಿಜಾ ಚಿಂತಿಸಿದ. ‘ಕವಿರಾಜಮಾರ್ಗ’ವು ಸೂಚಿಸುವ ಜನ-ಭಾಷೆ-ಪ್ರಭುತ್ವವೆಂಬ ಅಂಗತ್ರಯಗಳ ಪರಿಭಾಷೆಯು ನೆಬ್ರಿಜಾ ಚಿಂತನೆಯ ಪರಿಭಾಷೆಯಾಗಿಯೂ ಸಲ್ಲುತ್ತದೆ.

ತೊಳ್ಕಾಪ್ಪಿಯಂ ಗುಪ್ತ ರಾಜಕಾರಣ

‘ತೊಳ್ಕಾಪ್ಪಿಯಂ’ನ ರಾಜಕಾರಣವು ಅಸ್ಪಷ್ಟವೆನ್ನುವಂತಿದೆ. ಮೇಲ್ನೋಟಕ್ಕೆ ಕಾಣುವ ಹಾಗೆ ಅದರಲ್ಲಿ ರಾಜಕಾರಣದ ಪ್ರಸ್ತಾಪವಿಲ್ಲ ಎನ್ನಬಹುದು. ಅಥವಾ ರಾಜಕಾರಣದ ಬಗ್ಗೆ ಅದು ಕಾಣಿಸುವ ಮೌನ, ಅಸ್ಪಷ್ಟತೆಗಳನ್ನೆ ಅದರ ರಾಜಕೀಯ ನಿಲುವೆಂದೂ ಭಾವಿಸಬಹುದು. ‘ತೊಳ್ಕಾಪ್ಪಿಯ’ನ ಕಾಲ ಮತ್ತು ಅದಕ್ಕೆ ಹಿಂದಿನ ತಮಿಳು ಇತಿಹಾಸವು ತುಂಬಾ ಅಸ್ಪಷ್ಟವಾಗಿರುವುದರಿಂದ, ನೆಬ್ರಿಜಾನ ಗ್ರಂಥವನ್ನು ಐರೋಪ್ಯ ಇತಿಹಾಸವಾಹಿನಿಯಲ್ಲಿಟ್ಟು ಪರಿಶೀಲಿಸಿದ ಹಾಗೆ ಇದನ್ನು ಐತಿಹಾಸಿಕ ನೆಲೆಯಲ್ಲಿಟ್ಟು ಪರಿಗಣಿಸುವುದು ಕೊಂಚ ಕಷ್ಟವೇ. ಕಷ್ಟವಿದ್ದರೂ ಅದರ ಐತಿಹಾಸಿಕ ಹಿನ್ನೆಲೆ ಮತ್ತು ಪ್ರಭಾವಗಳನ್ನು ಬಹು ಸ್ಥೂಲವಾಗಿಯಾದರೂ ಸರಿಯೆ, ಗುರುತಿಸುವ ಪ್ರಯತ್ನ ಮಾಡಬೇಕು.

ಅಸ್ಪಷ್ಟತೆ ಅನಾಸಕ್ತಿಗಳಲ್ಲಿ ಧ್ವನಿತವಾಗುವ ಅದರ ಅಂತರ್ಗತ ರಾಜಕಾರಣವು ಪ್ರಾಚೀನ ತಮಿಳು ಇತಿಹಾಸದಿಂದ ಪ್ರೇರಿತವಾದ್ದಿರಬೇಕು. ಕ್ರಿಸ್ತಪೂರ್ವದಲ್ಲಿ ತಮಿಳುಭಾಷೆಯು ಬ್ರಾಹ್ಮೀಯಿಂದ ತನ್ನ ಲಿಪಿವ್ಯವಸ್ಥೆಯನ್ನು ರೂಪಿಸಿಕೊಂಡಾಗ ಹೇಗೆ ತಾನು ತನ್ನನ್ನಷ್ಟೇ ನೋಡಿಕೊಂಡಿತೋ ಅಂತಹ ಅಂತರ್ಮುಖತೆಯು ಮೊದಲಿನಿಂದಲೂ ಅದರ ಪ್ರಧಾನ ವಾಹಿನಿಯಾಗಿ ಹರಿದುಬಂದಂತೆ ತೋರುತ್ತದೆ. ಅದಕ್ಕಿಂತ ಮುಂದಿನ ಕಾಲದಲ್ಲಿ ಮೊದಲಿಗೆ ಕನ್ನಡ ಮತ್ತು ಕ್ರಮೇಣ ಭಾರತದ ಇತರ ಎಲ್ಲಾ ಭಾಷೆಗಳು ಅದೇ ಬ್ರಾಹ್ಮೀಯಿಂದಲೇ ತಮ್ಮ ತಮ್ಮ ಲಿಪಿವ್ಯವಸ್ಥೆಗಳನ್ನು ರೂಢಿಸಿಕೊಂಡಾಗ, ಅವೆಲ್ಲವೂ ತಮಿಳಿಗಿಂತ ಭಿನ್ನವಾಗಿ, ತಮ್ಮ ಆ ಸಧ್ಯದ ಉಚ್ಛಾರಣೆಗೆ ಬೇಕಿರಲಿ ಇಲ್ಲದಿರಲಿ, ಅಲ್ಲಿನ ಬಹುತೇಕ ಅಕ್ಷರಗಳನ್ನು ಉಳಿಸಿಕೊಂಡವು. ತಮಿಳಿನ ಈ ಪ್ರತ್ಯೇಕತೆ ಮತ್ತು ಅಂತರ್ಮುಖತೆಗಳು ನಮ್ಮ ಈ ಕಾಲದ ‘ದ್ರಾವಿಡರಾಷ್ಟ್ರ’ವೆಂಬ ಸಿದ್ಧಾಂತ-ಚಳವಳಿಗಳ ತನಕ ಧಾರೆವರಿದು ಬಂದವು. (ನಮ್ಮ ಈ ಕಾಲದಲ್ಲಿ ಅನೇಕಾನೇಕ ರಾಜ್ಯ-ಪ್ರಾಂತ ಪ್ರತ್ಯೇಕತಾ ಚಳವಳಿಗಳು ಸತತ ನಡೆಯುತ್ತಲೇ ಬಂದಿವೆಯೆಂಬುದು ನಿಜ. ಆದರೆ, ತಮಿಳಿನ ಸಂದರ್ಭವನ್ನು ಬಿಟ್ಟು ಉಳಿದೆಲ್ಲವುಗಳಲ್ಲೂ ಪ್ರತ್ಯೇಕತೆಯ ಅಪೇಕ್ಷೆಯು ಮೂಲತಃ ಇದ್ದುದಲ್ಲ; ರಾಜಕೀಯ-ಆರ್ಥಿಕ-ಸಾಂಸ್ಕೃತಿಕ ಆಕ್ರಮಣದ ಭಯವು ಅಂಥ ಅಪೇಕ್ಷೆಯನ್ನು ಹೊಗೆಯಿಸಿತು.)

ತಮಿಳುನಾಡಿನ ಭೌಗೋಲಿಕ ನೆಲೆಯೇ ಅದಕ್ಕೊಂದು ಸುರಕ್ಷಿತ-ಸ್ವತಂತ್ರ-ಪ್ರತ್ಯೇಕ-ಘಟಕ ಭಾವನೆಯನ್ನು ನೆಟ್ಟಿರಬೇಕು. ಸ್ವವಿಸ್ತರಣೆಯ ಹಂಬಲವು ಮೇಲುಕ್ಕಿದ ಕಾಲ ಸಂದರ್ಭಗಳನ್ನು ಬಿಟ್ಟರೆ, ಉಳಿದಂತೆ ಅದು ತನ್ನಷ್ಟಕ್ಕೆ ತಾನೊಂದು ಜಗತ್ತಾಗಿ ಬಾಳಿಕೊಂಡಿತು ಎನ್ನಿಸುತ್ತದೆ. ಈ ಕಾರಣದಿಂದ ಅದಕ್ಕೆ ‘ರಾಜ್ಯ’ದ ಚಹರೆಯನ್ನು ರೂಢಿಸಿಕೊಳ್ಳುವುದಕ್ಕಿಂತ ‘ಸಮುದಾಯ’ದ ಚಹರೆಯಲ್ಲಿ ಬದುಕುವುದೇ ಹೆಚ್ಚು ಪ್ರಿಯವೆನ್ನಿಸಿರಬಹುದು. ಸಂಕೀರ್ಣಗೊಳ್ಳುತ್ತಲೇ ಹೋಗುವ ರಾಜಕಾರಣದ ಬಗ್ಗೆ ಅದಕ್ಕೆ ಅಷ್ಟಾಗಿ ಆಸಕ್ತಿಯಿದ್ದಿರಲಿಲ್ಲವೇನೋ. ನಮ್ಮ ಇತರ ಭಾಷಾರಾಜ್ಯಗಳ ಜೊತೆ ಹೋಲಿಸಿ ನೋಡುವಾಗ, ತಮಿಳುನಾಡು ಇವತ್ತಿಗೂ ‘ರಾಜ್ಯ ಸ್ವರೂಪ’ದ್ದೆಂಬುದಕ್ಕಿಂತ ‘ಸಮುದಾಯ ಸ್ವರೂಪ’ದ್ದಾಗಿಯೇ ನನಗೆ ಭಾಸವಾಗುತ್ತದೆ.

ಮೇಲಿನಂತೆ ತಮಿಳು ರಾಜಕಾರಣದ ಬಗ್ಗೆ ಯೋಚಿಸುವಾಗ ತತ್‌ಕ್ಷಣವೇ ಅದಕ್ಕಿಂತ ಭಿನ್ನವಾದ ಅನೇಕ ಧಾರೆಗಳ ಬಗ್ಗೆಯೂ ಯೋಚಿಸದೇ ಹೋದರೆ ನಮ್ಮ ಪರಿಶೀಲನೆಯು ದೋಷಪೂರ್ಣವಷ್ಟೇ ಅಲ್ಲ, ಅಪಾಯಕಾರಿಯೂ ಆಗಿಬಿಡುತ್ತದೆ. ‘ತೊಳ್ಕಾಪ್ಪಿಯಂ’ಗಿಂತ ಪೂರ್ವಕಾಲದಿಂದ ಮೊದಲಾಗಿ, ತಮಿಲು ಭಾಷೆ ರಾಜ್ಯಗಳು ಬೇರೆ ಭಾಷೆ-ಜನ-ದೇಶಗಳ ಜೊತೆ ಸಂಪರ್ಕವಿಟ್ಟುಕೊಳ್ಳಲಿಲ್ಲ ಅಂತ ನಾವು ಭಾವಿಸಿದರೆ ಪ್ರಮಾದವಾಗುತ್ತದೆ; ಆ ಸಂಪರ್ಕವು ಒಂದು ವಿಶಿಷ್ಟ ನಿಯಂತ್ರಣದಲ್ಲಿ ವ್ಯಾಪಕವಾಗಿಯೇ ಇತ್ತು. ಸು.ಕ್ರಿ.ಶ. ೫ನೇ ಶತಮಾನದಿಂದ ೧೫ನೇ ಶತಮಾನದ ತನಕ, ಮುಖ್ಯವಾಗಿ ಪಲ್ಲವ ಮತ್ತು ಚೋಳ ರಾಜರುಗಳ ಕಾಲದಲ್ಲಿ, ತಮಿಳು ಭಾಷೆ ಸಾಹಿತ್ಯಗಳು ಸಂಸ್ಕೃತದ ಜೊತೆ ವಿಶೇಷವಾದ ಒಡನಾಟವನ್ನು ರೂಢಿಸಿಕೊಂಡವು. ಈ ಕಾಲದಲ್ಲಿ ಮಹಾಭಾರತ-ರಾಮಾಯಣ-ಭಾಗವತಾದಿ ಸಂಸ್ಕೃತ ಪುರಾಣೇತಿಹಾಸ ಕೃತಿಗಲು ತಮಿಳಿಗೆ ಅಳವಟ್ಟು ಬಂದವು; ತಮಿಳು-ಸಂಸ್ಕೃತಮೇಳ ಮಿಶ್ರಣದ ‘ಮಣಿಪ್ರವಾಳ’ಶೈಲಿಯು ರೂಢಿಗೊಂಡಿತು. ಅಂಧ್ರ ಕರ್ನಾಟಕ ಮುಂತಾದ ದೇಶ-ಭಾಷೆಗಳ ಜೊತೆ ತಮಿಳಿನ ಸಂಪರ್ಕವು ಮೊದಲಿನಿಂದಲೂ ಬೆಳೆದುಕೊಂಡೇ ಬಂದಿತ್ತು; ಪರಸ್ಪರ ಕೊಡುಕೊಳೆಗಳ ಬೇಕಷ್ಟು ಉದಾಹರಣೆಗಳಿವೆ. ಅಲ್ಲದೆ, ಪೂರ್ವದ ವಿದೇಶಗಳ ಜೊತೆಯಲ್ಲಿ ತಮಿಳಿನ ಸಂಪರ್ಕವು ಸತತವಾಗಿತ್ತು ಮತ್ತು ಪ್ರಾಯಃ, ಆಂಧ್ರ ಕರ್ನಾಟಕಗಳಿಗಿಂತ ಹೆಚ್ಚಾಗಿ ತಮಿಳರು ವಿದೇಶಗಳಿಗೆ ಹೋಗಿ ಅಲ್ಲಿ ನೆಲೆಸಿಕೊಂಡಿದ್ದರು ಕೂಡಾ. ತಮಿಳು ದೊರೆಗಳು ವಿದೇಶಗಳಿಗೆ ಹೋಗಿ ಆಳ್ವಿಕೆ ನಡೆಸಿದ್ದೂ ಉಂಟು.

ಈ ನಮ್ಮ ಕಾಲದಲ್ಲಿ ಕೂಡಾ ಸ್ವಾತಂತ್ರ್ಯ ಹೋರಾಟದ ದೀರ್ಘಕಾಲದಲ್ಲಿ ತಮಿಳುನಾಡು ಉತ್ಸಾಹದಿಂದ ಕೈಜೋಡಿಸಿದ್ದಷ್ಟೇ ಅಲ್ಲ, ಮುಂಚೂಣಿಯ ಸ್ಥಾನವನ್ನು ಪಡೆದುಕೊಂಡಿತ್ತು; ಉಳಿದ ಪ್ರದೇಶಗಳಿಗೆ ಕಡಿಮೆಯಿಲ್ಲದಷ್ಟು ಸಂಖ್ಯೆಯ ದೊಡ್ಡ ರಾಷ್ಟ್ರನಾಯಕರುಗಳನ್ನು ಅದು ಒದಗಿಸಿಕೊಟ್ಟಿತು. ಸ್ವಾತಂತ್ರ್ಯೋತ್ತರದ ಮೊದಲ ಎರಡು ದಶಕಗಳಲ್ಲಿ ಅಲ್ಲಿ ದ್ರಾವಿಡ ರಾಜ್ಯ-ಪ್ರತ್ಯೇಕತೆಯ ಭುಗಿಲೆದ್ದಿದ್ದರೂ, ಆನಂತರ ಅದು ತನ್ನ ಆ ಒತ್ತಾಯವನ್ನು ಹಿಂಜರಿಸಿಕೊಂಡು ರಾಷ್ಟ್ರ್ರರಾಜಕಾರಣದಲ್ಲಿ ಅತ್ಯ್ತ್ಸಾಹದಿಂದ ಬೆರೆತು ಭಾಗವಹಿಸುತ್ತಿದೆ.

ಮೇಲೆ ಹೇಳಿದ ಸಂಗತಿಗಳನ್ನು ನೆಬ್ರಿಜಾ ಮತ್ತು ಪಾಶ್ಚಿಮಾತ್ಯ ರಾಜಕಾರಣ ಸಂದರ್ಭಗಳಿಗೂ ತಪ್ಪದೆ ಅನ್ವಯಿಸಿಕೊಳ್ಳಬೇಕು. ಅಲ್ಲಿನವನೇ ಆದ ಇಲ್ಯಿಚ್ ಕ್ರುದ್ಧ ಕಥನವನ್ನು ಓದುವಾಗ ಕೂಡಾ ನಾವು ಅಲ್ಲಿನ ಭಿನ್ನ ಚಿಂತನಧಾರೆಗಳನ್ನು ಕಡೆಗಣಿಸಬಾರದು. ‘ಕವಿರಾಜಮಾರ್ಗ’ದ ವಿಶಿಷ್ಟತೆಯನ್ನು ಸ್ಪಷ್ಟ ರೀತಿಯಲ್ಲಿ ಗುರುತಿಸಿಕೊಳ್ಳಲಿಕ್ಕಾಗಿ ಮಾತ್ರವೇ ನಾವು ಕೆಲವು ಸೀಮಿತ ಸಂದರ್ಭಗಳನ್ನು ಗಣಿಸಿ ಹೋಲಿಸಿಕೊಂಡಿದ್ದೆವೆ ಎಂಬುದು ನೆನಪಿರಬೇಕು. ಎಲ್ಲ ಇತಿಹಾಸಗಳೂ ಅಂತಿಮವಾಗಿ, ಮನುಷ್ಯರ ವಿವೇಕ-ಅವಿವೇಕಗಳ ಸಂಕೀರ್ಣಕಥನಗಳೇ. ಮನುಷ್ಯರಾದ ನಾವು ಜಗತ್ತಿನ ಎಲ್ಲ ಇತಿಹಾಸಗಳೀಗೂ ಸಮಾನವಾಗಿ ಬಾಧ್ಯರು. ಆ ಎಲ್ಲ ವಿವೇಕ-ಅವಿವೇಕಗಳೂ ನಮ್ಮವೇ; ಯಾವುದನ್ನೂ ನಾವು ಕೊಡವಿಕೊಳ್ಳಲಾರೆವು. ಹೀಗೆ ಮನುಕುಲದ ಸಮಸ್ತ ಇತಿಹಾಸದ ನೆಲೆಯನ್ನು ಪರಿಭಾವಿಸಿಕೊಳ್ಳಲಾಗದೆ ನಮ್ಮನ್ನು ನಾವು ನೋಡಿಕೊಳ್ಳುತ್ತೇವಾದರೆ-ನಮ್ಮ ವಿವೇಕವನ್ನೇ ಹುಡುಕಿ ಎತ್ತಿ ಕೀರ್ತಿಸಿಕೊಳ್ಳುವ ಅ-ವಿವೇಕಿಗಳೂ ಅ-ಮಾನುಷರೂ ಆಗುತ್ತೇವೆ ನಾವು. ಸಮಸ್ತ ಕಾಲಕ್ಕೂ ಅಪಾಯಕಾರಿಯಾಗುವ ಅ-ಮಾನವೀಯ ಮೂಲಭೂತ ಮನೋಧರ್ಮವೆನ್ನುವುದು ಇದನ್ನೇ.

ಕವಿರಾಜಮಾರ್ಗದ ಅನನ್ಯತೆ

ದಿ.ಡಿ.ಆರ್.ನಾಗರಾಜ್ ಅವರು ೧೯೯೬ರ ತಮ್ಮ ಒಂದು ಭಾಷಣದಲ್ಲಿ, ‘ಕವಿರಾಜಮರ್ಗ’ದ ಬಗ್ಗೆ ಹ್ರಸ್ವವಾಗಿ ಪ್ರಸ್ತಾಪಿಸಿ, ಅದು “……..ಒಂದು ರಾಜಕೀಯ ಕೃತಿಯೂ ಹೌದು. ನನ್ನ ಪ್ರಕಾರ ಕಳೆದ ಸಾವಿರ ಎರಡು ವರ್ಷಗಳಲ್ಲಿ ಬಂದ ಪ್ರಪಂಚದ ಹತ್ತು ಹನ್ನೆರಡು ಅತ್ಯಂತ ಮಹತ್ವದ ರಾಜಕೀಯ ಕೃತಿಗಳ ಪಟ್ಟಿಯೊಂದನ್ನು ಮಾಡುವುದಾದಲ್ಲಿ ‘ಕವಿರಾಜಮಾರ್ಗ’ನಿಸ್ಸಂದೇಹವಾಗಿ ಅದರಲ್ಲಿ ಸೇರುವಂಥದು……”ಎಂದಿದ್ದರು. (ಛದ್ಮವೇಷ ಮತ್ತು ಛತ್ರಪತಿತ್ವ; ‘ನೀನಾಸಮ್ ಮಾತುಕತೆ’೪೦-ಫೆಬ್ರವರಿ ೧೯೯೭; ಹೆಗ್ಗೋಡು.) ಆಮೆಲೆ ಆ ಕುರಿತು ಅವರೊಡನೆ ಮಾತನಾಡುವಾಗ, ಆ ಗ್ರಂಥದ ಬಗ್ಗೆ ತಾನಿನ್ನೂ ಯೋಚಿಸಬೇಕಾಗಿದೆ ಎಂದೂ ನಾವಿಬ್ಬರೂ ಕೂತು ಚರ್ಚಿಸೋಣ ಎಂದೂ ಸೂಚಿಸಿದರು. ಈ ಚರ್ಚೆ ಸಾಧ್ಯವಾಗಲೇ ಇಲ್ಲ. ಆಗಲೆ ಅವರು ಶೆಲ್ಡನ್ ಪೋಲಾಕ್‌ನ(ದಿ.ಕಾಸ್ಮೊಪಾಲಿಟನ್ ವರ್ನಾಕುಲರ್-ಜರ್ನಲ್ ಆಪ್ ಏಸ್ಯನ್ ಸ್ಟಡೀಸ್-೫೭:೧-ಪು.೬-೩೭-೧೯೯೮.) ಎಂಬ ಲೇಖನವನ್ನು ಓದಲು ತಿಳಿಸಿದರಲ್ಲದೆ ಮುಂದೆ ಆ ಲೇಖನದ ಪ್ರತಿಯನ್ನೂ ನನಗೆ ದೊರಕಿಸಿಕೊಟ್ಟರು. ಪೊಲಾಕ್ ಲೇಖನದ ಕನ್ನಡದ ಅನುವಾದವೂ ಈಗ ಪ್ರಕಟವಾಗಿದೆ. ವಿಶ್ವಾತ್ಮಕ ದೇಶಭಾಷೆ;ಅನು:ಕೆ.ವಿ.ಅಕ್ಷರ; ‘ನೀನಾಸಮ್ ಮಾತುಕತೆ;-ಫೆಬ್ರವರಿ ೨೦೦೦; ಹೆಗ್ಗೋಡು.

ಬಹಳ ವ್ಯಾಪಕವಾದ ಪಾಂಡಿತ್ಯ ಮತ್ತು ಪ್ರತಿಭೆಯ ಒಳನೋಟಗಳಿಂದ ದಟ್ಟವಾಗಿರುವ ಈ ಬರಹವನ್ನು ಕನ್ನಡಿಗರು ಓದಲೇಬೇಕು ಮಾತ್ರವಲ್ಲ, ನಮ್ಮದೇ ಇತಿಹಾಸ ಅತ್ಯುಪಯುಕ್ತ ಅಂಶಗಳನ್ನು ಗುರುತಿಸಿ ಕಾಣಿಸಿಕೊಟ್ಟದ್ದಕ್ಕಾಗಿ ಆತನಿಗೆ ಕೃತಜ್ಞರಾಗಬೇಕು. ಆತನ ಲೇಖನವನ್ನೋದಿದ ಮೇಲೆ, ನನ್ನ ಚಿಂತನೆಗಳಿಗೆ ಸ್ಥೈರ್ಯವು ದೊರಕಿದಂತಾಯಿತು. ಪೊಲಾಕ್ ಇದರಲ್ಲಿ ದಕ್ಷಿಣ ಏಸ್ಯಾದ ಇತಿಹಾಸದಲ್ಲಿ ಮತ್ತು ಜಾಗತೀಕವಾಗಿ ಕೂಡಾ ನಡೆದ ‘ವಿಶ್ವಜಗತ್ತು-ಸ್ಥಳಜಗತ್ತು ರಾಜಕಾರಣ’ದ ನೆಲೆಯಲ್ಲಿ ‘ಕವಿರಾಜಮಾರ್ಗ’ವನ್ನು ವಿನ್ಯಸ್ತಗೊಳಿಸಿ ಅದರ ಪ್ರಾಮುಖ್ಯವನ್ನು ಕಾಣಿಸಿದ್ದಾನೆ. ಅದಲ್ಲದೆ, ನಮ್ಮದೇ ನೆಲೆಯಲ್ಲಿ ಈ ಗ್ರಂಥದ ವೈಶಿಷ್ಟ್ಯವನ್ನು ಕಂಡುಕೊಳ್ಳಲು ಪ್ರಯತ್ನಿಸುವಾಗ ಎರಡು ಬಹುಮುಖ್ಯ ವೈಶಿಷ್ಟ್ಯಗಳು ನಮಗೆ ಕಾಣಿಸುತ್ತವೆ: ೧. ಕವಿಯೂ ರಾಜನೂ ಕೂಡಿ ರಚಿಸಿದ ಗ್ರಂಥ ಎಂಬುದು; ೨. ಭಾರತ ರಾಜಕಾರಣದಲ್ಲಿ ಇದು ತರ್ಕಬದ್ದವಾದ ಒಂದು ಹೊಸ ರಾಜ್ಯ-ಸೂತ್ರವನ್ನು ನಿರೂಪಿಸಿತು ಎನ್ನುವುದು.

ಮನುಷ್ಯನಿಗೆ ಭಾವದ ಲೋಕಾಕಾರವನ್ನು ನಿರ್ಮಿಸಿಕೊಡುವ ಮುಖ್ಯ ಸಾಧನವು ಭಾಷೆ ಮತ್ತು ಭವದ ಲೋಕಾಕಾರವನ್ನು ನಿರ್ಮಿಸಿಕೊಡುವ ಮುಖ್ಯಸಾಧನವೂ ರಾಜಕಾರಣ. ಇತಿಹಾಸದಲ್ಲಿ ಭಾಷೆ-ರಾಜಕಾರಣಗಳೆರಡೂ ಪರಸ್ಪರ ಪ್ರಭಾವಿಸುತ್ತ ಸಹಧಾರೆಗಳಾಗಿ ಮುನ್ನಡೆಯುತ್ತಿರುತ್ತವೆ. ಕರ್ನಾಟಕದಲ್ಲಿ, ನೃಪತುಂಗನ ಆಳ್ವಿಕೆಯ ಕಾಲದಲ್ಲಿ-ಇತಿಹಾಸದಲ್ಲಿ ಬಹು ಅಪರೂಪವೆನ್ನುವಂತೆ-ಮೇಲಿನ ಎರಡೂ ಧಾರೆಗಳು ಸಮೀಕೃತಗೊಂಡು ಒಗ್ಗೂಡಿದವು. (‘ಕವಿರಾಜಮಾರ್ಗ’ವು ಜನಪದ-ಭಾಷೆ-ರಾಜ್ಯಗಳನ್ನು ಸಮೀಕರಿಸಿ ಈ ಎಲ್ಲವಕ್ಕೂ ‘ಕನ್ನಡ’ವೆಂಬ ಒಂದೇ ಹೆಸರನ್ನು ನಿರಖುಗೊಳಿಸಿತು ಎಂಬುದನ್ನು ಗಮನಿಸಬಹುದು.) ಇದು ‘ಅಪರೂಪ’ದ ಸಂಗತಿಯಾದರೆ ‘ಅನನ್ಯ’ವೆನ್ನಬಹುದಾದ ಇನ್ನೊಂದು ಸಂಗತಿಯಿದೆ. ಇಂಥ ಅಪರೂಪದ ಇತಿಹಾಸ-ಸಂದರ್ಭದಲ್ಲಿ, ರಾಜ್ಯದ ಸಮಸ್ತಾಧಿಕಾರಿಯಾದ ಜನಪ್ರಿಯ ರಾಜನೂ ಭಾಷೆಯ ಬಗ್ಗೆ ವಿಶೇಷಾಧಿಕಾರವುಳ್ಳ ಕವಿ-ವಿದ್ವಾಂಸನೂ ಒಟ್ಟಿಗೇ ಕೂತು, ಭವ ಲೋಕಾಕಾರ-ಭಾವ ಲೋಕಾಕಾರಗಳನ್ನು ಸಮೀಕರಿಸುವ ಯತ್ನ ನಡೆಸಿದರು ಮತ್ತು ಆ ಪ್ರಯತ್ನದಲ್ಲಿ ಈ ಜಂಟಿ ಜವಾಬ್ದಾರಿಯ ಗ್ರಂಥವನ್ನು ರಚಿಸಿದರು ಎನ್ನುವುದು. ಇಂಥ ಉದಾಹರಣೆ ಇನ್ನೆಲ್ಲೂ ಇರಲಿಕ್ಕಿಲ್ಲ. ಈ ಸಂಗತಿಯಿಂದಾಗಿ ‘ಕವಿರಾಜಮಾರ್ಗ’ವನ್ನು ಭಾಷಾಸಂಬಂಧಿಯೆಂದೋ ಅಥವಾ ರಾಜಕಾರಣ ಸಂಬಂಧಿಯೆಂದೋ ಪ್ರತ್ಯೇಕತೆಯಲ್ಲಿ ಗುರುತಿಸಿಕೊಳ್ಳಲಿಕ್ಕೇ ಬರುವುದಿಲ್ಲ.

‘ಕವಿರಾಜಮಾರ್ಗ’ದ ಇನ್ನೊಂದು ಅನನ್ಯತೆಯೆಂದರೆ-ರಾಜಕಾರಣದ ಹೊಚ್ಚ ಹೊಸ ತಾತ್ತ್ವಿಕ ಸೂತ್ರವೊಂದನ್ನು ಶೋಧಿಸಿ ನಿರೂಪಿಸಿದ್ದು. ಮೊದಲಿಗೆ ದೀರ್ಘಕಾಲ ಉತ್ತರದಲ್ಲಿದ್ದ ಭಾರತೀಯ ರಾಜಕಾರಣಕೇಂದ್ರವು ಗುಪ್ತರ ಅನಂತರ ಅಥವಾ ಕಾನ್ಯ ಕುಬ್ಜದ ಶ್ರೀಹರ್ಷನು ಮುಮ್ಮಡಿ ಪುಲಕೇಶಿಯಿಂದ ಸೋತದ್ದೆ ಗಡಿಯಾಗಿ, ದಕ್ಷಿಣಕ್ಕೆ ಚಲಿಸಿಬಂದಿತು ಅಂತ ಇತಿಹಾಸಕಾರರು ಗುರುತಿಸಿದ್ದಾರೆ. ಆದರೆ ಇದಕ್ಕೆ ಮುಂದಿನ ಬೆಳವಣಿಗೆಯೇ ಹೆಚ್ಚಿನ ರೋಚಕ ಅಧ್ಯಯನಕ್ಕೆ ವಸ್ತುವಾಗುವಂಥದು. ಅಧಿಕಾರ ಕೇಂದ್ರವನ್ನು ಪರಾಕ್ರಮದಿಂದ ದಕ್ಷಿಣಕ್ಕೆ ಸೆಳೆತಂದ ಇಲ್ಲಿನ ರಾಜರುಗಳು, ಗುಪ್ತರೇ ಮುಂತಾದ ಆ ರಾಜರುಗಳನ್ನೇ ಮೇಲ್ಪಂಕ್ತಿಯಾಗಿಟ್ಟುಕೊಂಡು ಪರಾಕ್ರಮ ರಾಜಕಾರಣವನ್ನೇ ಮುಂದುವರಿಸತೊಡಗಿದರು. ಹಿಂದೆ ನಾವು ಗಮನಿಸಿರುವ ಹಾಗೆ, ಈ ಪರಾಕ್ರಮರಾಜಕಾರಣವು ಇಲ್ಲಿ ಬಲು ಕಷ್ಟದ್ದಾಗುತ್ತ, ನೃಪತುಂಗನ ಕಾಲಕ್ಕೆ ಮುಂದೆ ಇದು ಅಸಾಧ್ಯವೆಂಬ ಹಂತವನ್ನು ತಲುಪಿಬಿಟ್ಟಿತು; ಹೊಸದೊಂದು ರಾಜಕಾರಣದ ಮಾದರಿಯೂ ಮತ್ತು ಅದಕ್ಕೆ ಆಧರವಾದ ತಾತ್ತ್ವಿಕ ಸೂತ್ರವೂ ಅತ್ಯಗತ್ಯವೆನ್ನಿಸಿತು. ಇದೇ ಹೊತ್ತಿಗೆ ಕನ್ನಡ್ದ ಜನಪದ-ಭಾಷೆ-ಲಿಪಿ-ಸಾಹಿತ್ಯ-ಸಂಸ್ಕೃತಿಗಳು ಪ್ರಬುದ್ಧವಾಗಿ ಬೆಳೆದು ಒಗ್ಗೂಡಿಕೊಳ್ಳುತ್ತಿದ್ದುವಾದ ಕಾರಣ, ‘ಕನ್ನಡ’ವೇ ಹೊಸ ರಾಜಕಾರಣದ ಸೂತ್ರವಾಗಿ ಕಾಣಿಸಿಕೊಂಡಿತು; ಒಂದು ಭಾಷಾ-ಸಂಸ್ಕೃತಿ ಸಮುದಾಯವು ತರ್ಕಬದ್ಧವಾಗಿಯೂ ಒಂದು ದೃಢ ರಾಜ್ಯವಾಗಿ ನಿಲ್ಲಬಲ್ಲುದು ಎಂಬ ಹೊಸ ತತ್ತ್ವವು ಗೋಚರಿಸಿತು.

ನಾಗರಿಕ ಜನವರ್ಗದ ಸಂದರ್ಭದಲ್ಲಿ ಆಕ್ರಮಣ ರಾಜಕಾರಣವನ್ನು ತರ್ಕಬದ್ಧವಾಗಿ ಸಮರ್ಥಿಸಲಿಕ್ಕಾಗುವುದಿಲ್ಲ. ಭಾಷಾರಾಜ್ಯವೆಂಬುದು ತಾರ್ಕಿಕವಾಗಿ ಸಮರ್ಥಿಸಲು ಬರುವಂಥದ್ದು. ಒಂದು ಭಾಷೆ-ಸಂಸ್ಕೃತಿಯೆಂದರೆ, ಅದು ಒಂದು ಜನಪದದ ‘ಸಮಸ್ತಮನಸ್ಸಿ’ನ ಲೋಕಾಕೃತಿ; ಹಾಗೆ ಇನ್ನೊಂದು ಭಾಷಾ ಜನಪದದ ಸಮಸ್ತಮನಸ್ಸಿನ ಆಕೃತಿಯು ಇನ್ನೊಂದೇ ಆಗಿ ಭಿನ್ನವಾಗಿರುತ್ತದೆ. ಈ ಕಾರಣದಿಂದ, ಒಂದೊಂದು ಜನಪದ ಮನಸ್ಸಿನ ಆಕೃತಿಯೂ ತನ್ನ ಮೇಲೆ ಇನ್ನೊಂದರ ಆಕ್ರಮಣವಾಗದ ಹಾಗೆ, ತನ್ನನ್ನು ರಕ್ಷಿಸಿಕೊಳ್ಳಬೇಕು; ಮತ್ತು ಹಾಗೆ ರಕ್ಷಿಸಿಕೊಳ್ಳಲು ಅದಕ್ಕೆ ರಾಜಕೀಯ ಸಾರ್ವಭೌಮತ್ವವು ಅಗತ್ಯವಾಗುತ್ತದೆ. ಈ ತರ್ಕವು ಆ ಕಾಲಕ್ಕೆ, ಕನ್ನಡ ರಾಜ್ಯಕ್ಕೆ ಭದ್ರವಾದ ಅಸ್ತಿವಾರವನ್ನು ಹಾಕಿಕೊಟ್ಟಿತು. ಹೀಗೆ ನ್ಯಾಯ-ತರ್ಕಬದ್ಧವಾದ ಹೊಸ ರಾಜ್ಯಕಲ್ಪನೆಯೊಂದು ಶೋಧಗೊಂಡುದಕ್ಕೆ ಕವಿ ಮತ್ತು ರಾಜನು ಕೂಡಿ ರಚಿಸಿರುವ ‘ಕವಿರಾಜಮಾರ್ಗ’ವು ಸಾಕ್ಷಿಗಲ್ಲಾಗಿ ನಿಂತಿದೆ. ಅಂದರೆ, ಆ ಕಾಲಕ್ಕೆ ಭಾರತದ ರಾಜಕೀಯ ಕೇಂದ್ರವು ಉತ್ತರದಿಂದ ದಕ್ಷಿಣಕ್ಕೆ ಚಲಿಸಿತಷ್ಟೇ ಅಲ್ಲ, ಅದಕ್ಕೆ ಮುಂದೆ, ಭಾರತದ ರಾಜಕಾರಣಕ್ಕೆ ಅತ್ಯುಪಯುಕ್ತವಾದಂಥ ಭಾಷಾರಾಜ್ಯವೆಂಬ ಹೊಸ ಸೂತ್ರವು ದಕ್ಷಿಣದಲ್ಲಿ ಇಲ್ಲಿ ಶೋಧಗೊಂಡಿತು.

ಹಿಂದಿನ ಉನ್ಮುಕ್ತಪರಾಕ್ರಮರಾಜಕಾರಣಕ್ಕೆ ಪ್ರತಿಯಾಗಿ ಮೂಡಿದ, ಭಾಷಾರಾಜ್ಯವೆಂಬ ಸಂಯಮ ರಾಜಕಾರಣದ ಈ ಸೂತ್ರದಲ್ಲಿ ಅನಿವಾರ್ಯವಾಗಿ, ಜನರೇ ಕೇಂದ್ರವಾಗುವಂತಾಯಿತು. ಕಾರಣ, ಒಂದು ಭಾಷಾ ಚಹರೆಯುಳ್ಳ ಜನರು, ಜನಪದವೇ ಈ ಸೂತ್ರದ ಆಧಾರವಸ್ತು. ಇಲ್ಲಿ ಸಾರ್ವಭೌಮ ಅಧಿಕಾರವೆಂಬುದು ಜನರದ್ದು ಹಾಗೂ ಅದನ್ನು ರಕ್ಷಿಸುವ ಅಧಿಕಾರವಷ್ಟೇ ರಾಜನದ್ದು. ಈ ರಾಜಕಾರಣದಲ್ಲಿ ರಾಜನು ಪರಾಕ್ರಮದಿಂದ ರಾಜ್ಯವನ್ನು ಗಳಿಸುತ್ತಾ ಹೋಗುತ್ತಾನೆ; ಅದು ಅವನು ಗಳಿಸುವ ಸೊತ್ತು. ಆದ್ದರಿಂದ ಅಲ್ಲಿ ಬಹುಶಃ, ‘ಪ್ರಭು-ವೀರ-ಮಂತ್ರಶಕ್ತಿ’ಗಳ ಸೂತ್ರವು ಹುಟ್ಟಿಕೊಳ್ಳುತ್ತದೆ. ಇಲ್ಲಿ ಹಾಗಲ್ಲವೇ ಅಲ್ಲ. ಈ ಸೂತ್ರದ ಪ್ರಕಾರ, ರಾಜನು ಪರಾಕ್ರಮದಿದ್ಮ ರಾಜ್ಯವನ್ನು ವಿಸ್ತರಿಸಲು ಸಧ್ಯವಾಗದಂತೆ ಆತನ ಮೇಲೆ ನಿಯಂತ್ರಣವು ಹೇರಿಕೊಳ್ಳುತ್ತದೆ; ಆ ಸ್ವಾತಂತ್ರ್ಯವನ್ನು ಅವನು ಕಳೆದುಕೊಳ್ಳುತ್ತಾನೆ. ಆದರೆ ಜನರಾದರೋ ತಮ್ಮ ಲೋಕಾಕಾರದ ಮೇಲೆ ಅನ್ಯರ ಆಕ್ರಮಣವಾಗದಂಥ ದೃಢ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುತ್ತಾರೆ.

ಕವಿರಾಜಮಾರ್ಗದ ರಾಜಕಾರಣ ರೀತಿನೀತಿ

ಐತಿಹಾಸಿಕ ಅನಿವಾರ್ಯವಾಗಿ ಉದ್ಭವಗೊಂಡ ಈ ಹೊಸ ರಾಜಕಾರಣ-ವಿವೇಕದಿಂದಾಗಿ ‘ಕವಿರಾಜಮಾರ್ಗ’ವು ಅನಿವಾರ್ಯವಾಗಿಯೇ ಜನಾಧರಿತ ರಾಜಕಾರಣವನ್ನು ಪ್ರತಿಪಾದಿಸುವಂತಾಯಿತು ಎನ್ನುವುದಷ್ಟೇ ಅಲ್ಲ. ಇದಲ್ಲದೆ-ಜನರ ಬಗ್ಗೆ ಅಪಾರವಾದ ನಿರ್ವ್ಯಾಜ್ಯ ಪ್ರೀತಿಯಿದ್ದ ಕವಿ ಮತ್ತು ‘ಲೋಕೋಪದ್ರವ’ನಿವಾರಣೆಗಾಗಿ ತನ್ನ ಎಡಗೈ ಹೆಬ್ಬೆರಳನ್ನೇ ಕತ್ತರಿಸಿಕೊಡಬಲ್ಲ ಹಾಗೂ ಸಾಮಾನ್ಯವಾಗಿ ಅಪೇಕ್ಷಣೀಯವಲ್ಲದ ಬಹುವಿಶೇಷಣಗಳನ್ನು ಈ ತನ್ನ ಪ್ರಜೆಗಳ ವಿಚಾರದಲ್ಲಿ ಮಾತ್ರ ಧಾರಾಳವಾಗಿ ಬಳಸಬಹುದು. ಅಂತ ಘೋಷಿಸುವಷ್ಟು ಜನಪ್ರೀತಿಯಿರುವ ರಾಜ-ಈಯಿಬ್ಬರನ್ನು ಆ ಕಾಲಸಂದರ್ಭವು ಸೃಷ್ಟಿಸಿಕೊಂಡದ್ದು ಮತ್ತು ಅವರು ಕೂಡಿ ರಾಜಮುದ್ರೆಯಿಂದ ಅಧಿಕೃತವಾಗಿ ಈ ಹೊಸ ರಾಜಕಾರಣವನ್ನು ಪ್ರತಿಪಾದಿಸಿ ಕಾರ್‍ಯಗತಗೊಳಿಸಿದ್ದು ಕನ್ನಡದ ಪುಣ್ಯ.

ಬಾಳಿಕೊಂಡಿರಲು ಬಲ್ಲ, ಜಾಣ ವಿವೇಕವಂತ ಜನ;ನೀರಂತರ-ಅತ್ಯ್ದಾರ-ಅತಿಶಯಧವಳ ರಾಜ; ಪಾಪಪುಣ್ಯ ಇತ್ಯಾದಿ ಸೂಕ್ಷ್ಮಗಳನ್ನು ಅರಿವುಗೊಳಿಸಬಲ್ಲ ಮಹಾಕಾವ್ಯಗಳಿಂದ ಸಂಪನ್ನವಾದ *ವಾಗ್ಮಯ* ಮತ್ತು ಹಾಗೆ ಪ್ರೌಢವಾಗಿರುವ ಭಾಷೆ-ಇವು ಹೊಸ ರಾಜಕಾರಣ ಆಸ್ತಿವಾರತ್ರಿವಳಿ. ಈ ಸಂವಿಧಾನದ ಅನುಬಂಧವಾಗಿ ರಾಜನು ಆಶ್ರಯಕೊಟ್ಟು ಆಸ್ಥಾನದಲ್ಲಿಟ್ಟುಕೊಂಡಿರುವ ಕವಿ-ಪಂಡಿತ ಮಂಡಲಿಯಿದೆ; ಅದು ಜನರ ಬದುಕಿನ ವಿವೇಕವನ್ನು ಶೋಧಿಸಿ, ಅದರಿಂದ ಅವರಿಗೆ ಅಗತ್ಯವಾದ ಹೊಸಹೊಸ ಲೋಕಾಕೃತಿಗಳನ್ನು ಭಾಷೆ-ಕಾವ್ಯಗಳಲ್ಲಿ ನಿರ್ಮಿಸಿಕೊಡುತ್ತದೆ. ಇದು ಇಲ್ಲಿನ ಒಟ್ಟೂ ರಾಜಕಾರಣದ ನಕ್ಷೆ ಎನ್ನಬಹುದು.

(‘ಕವಿರಾಜಮಾರ್ಗ’ವು ಮೊದಲಲ್ಲಿ(೧:೯)ಮೃಗಗಳಂತಿರುವ ‘ಅಶೃತ-ಪ್ರಕೃತಿ’ಯ ಜನರನ್ನು ಕುರಿತು ಹೇಳುತ್ತದೆ; ಅದು ಕವಿ ವಿದ್ವಾಂಸರು ಕೂಡಿ ಭಾಷೆಯನ್ನು ಬೆಳೆಸದಿರುವ ಆದಿಮಜನಪದವನ್ನು ಕುರಿತದ್ದು; ನಾಗರಿಕ ಜನಪದಗಳನ್ನಲ್ಲ. ಜತೆಗೆ ಇದು, ಕವಿಪಂಡಿತರಿಗಿರುವ ಜವಾಬ್ದಾರಿಯನ್ನು ಸೂಚಿಸುವಂಥದು.)

ರಾಜಾ ನೃಪತುಂಗನಿಗೆ ‘ಕನ್ನಡ ನಾಡೆಂ’ಬ ರಾಜ್ಯವನ್ನು ಕಟ್ಟುವುದು ಪ್ರಾಯಃ, ಅಷ್ಟು ಕಷ್ಟವಾಗಲಿಲ್ಲ. ಇದು ನಿಜವಾಗಿ ಆತನು ಗಳಿಸಿದ್ದಲ್ಲ, ಉಳಿಸಿಕೊಂಡದ್ದು. ಬಹು ಪರಾಕ್ರಮಿಯಾದ ತಂದೆ ೩ನೇ ಗೋವಿಂದರಾಜನು ಗಳಿಸಿದ ರಾಜ್ಯದಲ್ಲಿ ಮೇಲೂ ಕೆಳಗೂ ಅಷ್ಟಷ್ಟು ಕಳೆದುಹೋಗಿ ಕಡೆಯಲ್ಲಿ ಇವಿಷ್ಟನ್ನೇ ಉಳಿಸಿಕೊಳ್ಳಲು ಈತನಿಗೆ ಸಾಧ್ಯವಾಯಿತು. (ಇದರಿಂದಾಗಿಯೇ ನೃಪತುಂಗನು ಇತಿಹಾಸದ ಕಥನದಲ್ಲಿ ಹೆಚ್ಚಿನ ಸ್ಥಳವನ್ನು ಗಳಿಸಿಕೊಂಡಿಲ್ಲ.) ಆದರೆ ಈ ರಾಜ್ಯವನ್ನು ನೆಮ್ಮದಿಯಲ್ಲಿ ಬಾಳಿಸಿಕೊಳ್ಳುವುದು ಈತನಿಗೆ ತುಂಬ ಕಷ್ಟವಾಗಿರಬೇಕು.

ಇದು ದಕ್ಷಿಣತುದಿಯ ತಮಿಳುನಾಡಿನಂಥದಲ್ಲ; ದಕ್ಷಿಣೋತ್ತರ ಸೇತುವಿನಂತಿರುವ ಈ ಭಾಗವು ಬಹು ಸಂಕೀರ್ಣವಾದ ಒಂದು ಜನಪದವಾಗಿ ಬೆಳೆದಿತ್ತು. ಇಲ್ಲಿದ್ದ ಜನಾಂಗ-ಧರ್ಮ-ಜಾತಿ-ಮತ-ಕುಲ-ನಡಾವಳಿ-ಭಾಷೆ ಉಪಭಷೆಗಳ ಅಪಾರ ವೈವಿದ್ಯ ವೈರುದ್ಯಗಳೂ ವಿದೇಶಸಂಪರ್ಕ-ಸಂಚಾರ-ವಾಸ್ತವ್ಯಗಳಿಂದ ಉದ್ಭವಿಸುತ್ತಿದ್ದ ಹೊಸಹೊಸ ಸಮಸ್ಯೆಗಳೂ ಈ ಜನಪದವನ್ನು ಆಸ್ಪೋಟಕಗರ್ಭದ ನಿರಂತರ ಜ್ವಾಲಾಮುಖಿಯನ್ನಾಗಿಸಿದ್ದವು. ಆ ಕಾಲಕ್ಕೆ, ಪೂರ್ವದ ಥೈಲ್ಯಾಂಡ್ ತನಕವೂ ವಿದೇಶಿ ರಾಜ್ಯಗಳ ಸಂಪರ್ಕವೇರ್ಪಟ್ಟಿದ್ದು ಅಲ್ಲಿಂದ ಜನರು ಬಂದು ಹೋಗುತ್ತಿದ್ದರು; ಅರಬ್ ಮುಂತಾದ ಪಶ್ಚಿಮ ರಾಜ್ಯಗಳ ವ್ಯಾಪಾರಿಗಳು ಇಲ್ಲಿ ಬಂದು ನೆಲೆಸಿ ವ್ಯಾಪಾರ ನಡೆಸುತ್ತಿದ್ದರು. ಅವರಿಗೆ ಪ್ರತ್ಯೇಕ ವಸತಿ ಸ್ಥಳಗಳನ್ನೂ ಅವರ ಧರ್ಮಾಚರಣೆಗೆ ಅವಕಾಶ ಮತ್ತು ಧರ್ಮ ವಿಸ್ತರಣೆಗೆ ನಿಯಂತ್ರಣಗಳನ್ನೂ ಕಲ್ಪಿಸಲಾಗಿತ್ತು.
ಇದರ ಮೇಲೆ ಹೊರಗಿನಿಂದ ಎರಗಿಬರುವ ಆಕ್ರಮಣಗಳಿದ್ದವು. ಅಲ್ಲಿಯೂ ಶತ್ರುತ್ವ ಮಿತ್ರತ್ವಗಳು ದಿನದಿಂದ ದಿನಕ್ಕೆ ಪಲ್ಲಟಿಸುತ್ತಿದ್ದವು. ಒಂದು ಸಮಯದಲ್ಲಿ ನೃಪತುಂಗನ ಮಗ ಕೃಷ್ಣನೇ ಶತ್ರುಗಳ ಜೊತೆಗೆ ಕೈಜೋಡಿಸಿ ವಿಪ್ಲವವನ್ನು ಹುಟ್ಟಿಸಿದ್ದ; ಅವನನ್ನು ‘ಸ್ವ’ ಎಂದು ಗಣಿಸುವುದೆ, ‘ಪರ’ ಎಂದು ಗಣಿಸುವುದೆ? ಇಂಥ ಸಂಕೀರ್ಣ ಸ್ಥಿತಿಯಲ್ಲಿ ಆತನು, ‘ಸ್ವ’ ಮತ್ತು ‘ಪರ’ ಎಂಬುದಕ್ಕಿಂತ ಭಿನ್ನವಾದ, ‘ಸ್ವ’ ಮತ್ತು ‘ಸಹ’ ಎಂಬ ಸೈರಣೆಯ ಸಹಬಾಳ್ವೆಯ ರಾಜನೀತಿಯನ್ನು ರೂಢಿಸಿಕೊಳ್ಳಬೇಕಾಯಿತು.
ಭಾಷಾರಾಜ್ಯವೆನ್ನುವ ಕಲ್ಪನೆಯೇ ಇತರ ಭಾಷ-ರಾಜ್ಯಗಳ ಸಹ-ಅಸ್ತಿತ್ವವನ್ನು ತತ್ತ್ವತಃ ಮನ್ನಿಸುವಥದ್ದು. ಆ ಭಾಷಾರಾಜ್ಯ ಸೂತ್ರಕ್ಕೆ ಸೈರಣೆ ಸಹಬಾಳ್ವೆಗಳೆಂಬವು ಅನಿವಾರ್ಯ ಕಾರ್‍ಯನೀತಿಗಳಾಗಿ ಕಾಣಿಸಿಕೊಂಡವು. ರಾಜಕಾರಣದ ಇಂಥ ಸಂದರ್ಭದಲ್ಲಿ, ಕನ್ನಡಭಾಷೆಯ ಬಗ್ಗೆರ್ ಚಿಂತಿಸುವ ಕವಿ ವಿದ್ವಾಂಸರೂ ಭಾಷಾ ಭಾಷಗಳ ನಡುವೆ ಇಂಥದೇ ಒಂದು ಸೈರಣೆಯ ನೀತಿಯನ್ನು ರೂಢಿಸಿಕೊಳ್ಳಬೇಕಾಯ್ತು. ಹೀಗೆ ಆ ಕಾಲಕ್ಕೆ ರಾಜನೀತಿ-ಧರ್ಮನೀತಿ-ಭಾಷಾನೀತಿಗಳಂದಲ್ಲದೆ ಸೈರಣೆಯೆಂಬುದು ಬದುಕಿನ ‘ಸಮಸ್ತನೀತಿ’ಯಾಗಬೇಕಾಯಿತು. ಅದನ್ನೇ ‘ಕವಿರಾಜಮಾರ್ಗ’ದ ಕಸವರಸೂತ್ರ’ವು (ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ…)ದಾಖಲಿಸುತ್ತದೆ.
ಈತನಕ ಇಷ್ಟು ದೀರ್ಘವಾಗಿ ವಿವರವಾಗಿ ರಾಜಕಾರಣದ ಬಗ್ಗೆ ಆಲೋಚಿಸಿದೆವಾದರೂ ಮೂಲತಃ ‘ಕವಿರಾಜಮಾರ್ಗ’ವು ಆ ಬಗ್ಗೆ ಪ್ರಕಟವಾಗಿ ಏನನ್ನೂ ಹೇಳಿಲ್ಲ ಮತ್ತು ಅದು ರಾಜಕಾರಣವನ್ನು ಉದ್ದೇಶವಾಗಿಟ್ಟುಕೊಂಡು ಬರೆದ ಗ್ರಂಥವಲ್ಲವೇ ಅಲ್ಲ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ನೆಬ್ರಿಜಾನ ರಾಜಕಾರಣವು ಕೂಡಾ ರಾಜಕಾರಣವನ್ನು ಪ್ರಸ್ತಾಪಿಸುವುದಿಲ್ಲ; ಅದನ್ನು ರಾಣಿಗೆ ಅರ್ಪಿಸಿದಾಗ ಆತನು ಸಲ್ಲಿಸಿದ ವಿಜ್ಞಾಪನಪತ್ರದಲ್ಲಿ ಮಾತ್ರ ಆತನ ರಾಜಕಾರಣವು ಸೂಚಿತವಾಗಿದೆ. ಹಾಗೇ ಶೆಲ್ಡನ್ ಪೊಲಾಕ್ ಉಲ್ಲೇಖಿಸಿರುವ ದಾಂತಯ (ಕ್ರಿ.ಶ) ‘ಲಾ ಎಲೊಕ್ವನ್ಸಿಯಾ’ದಲ್ಲಾಗಲಿ, ‘ತೊಳ್ಕಾಪ್ಪಿಯಂ’ನಲ್ಲಾಗಲಿ ರಾಜಕಾರಣವೆಂಬುದು ಸ್ಪಷ್ತಪ್ರಕಟವಾಗಿಲ್ಲ. ಇವುಗಳಲ್ಲಿ ಬಹು ಸೂಕ್ಷ್ಮವಾಗಿ ಧ್ವನಿತವಾಗುವ ಅಂತರ್ಗುಪ್ತ ರಾಜಕಾರಣವನ್ನು, ಕೆಲವೊಮ್ಮೆ ಇತಿಹಾಸದ ಬೆಳಕು ಚೆಲ್ಲಿಕೊಂಡು ನಾವೇ ಹುಡುಕಿ ಓದಿಕೊಳ್ಳಬೇಕಾಗುತ್ತದೆ. ‘ಕವಿಮಾರ್ಗ’ವು ರಾಜಕಾರಣ-ರಾಜನೀತಿಗಳನ್ನು ಪ್ರಕಟವಾಗಿ ಪ್ರತಿಪಾದಿಸಿಲ್ಲವಾದರೂ, ಅದರ ಪೀಠಿಕಾಭಾಗವು ಮತ್ತು ಪೀಠಿಕಾಕೇಂದ್ರವಾದ ‘ವಸುಧಾವಲಯ ಸೂತ್ರ’ವು, ನಾವು ಈತನಕ ಯೋಚಿಸದ ರಾಜಕಾರಣ ರಾಜನೀತಿಗಳನ್ನು ಧ್ವನಿಸಿಕೊಡುತ್ತದೆ.

ನಮ್ಮ ಕಾಲದ ಭಾಷಾರಾಜ್ಯ ರಾಜಕಾರಣ

ಜನಕೋಟಿ ಜನಪದದ ಅಭೀಪ್ಸೆಯು ಸಹಸ್ರಮಾನ ಇತಿಹಾಸದ ಪುಟ-ತಪಗಳಲ್ಲಿ ಪಾಕಗೊಳ್ಳುತ್ತ ಕಡೆಗೆ ನೃಪತುಂಗನ ಕಾಲಕ್ಕೆ ಕನ್ನಡ ರಾಜ್ಯವಾಗಿ ಹರಳುಗಟ್ಟಿಕೊಂಡಿತು ಅಂತ ನಾವು ವಾಗ್ವೈಭವದಲ್ಲಿ ವರ್ಣಿಸಿಕೊಳ್ಳಬಹುದಾದರೂ ಒಡನೆಯೇ ನಮ್ಮನ್ನು ಹೆಪ್ಪುಗಟ್ಟಿಸುವ ಒಂದು ಸೋಜಿಗವು ಎದುರಾಗುತ್ತದೆ. ತಾತ್ತ್ವಿಕ ತಳಹದಿಯಿದ್ದೂ ತರ್ಕಬದ್ಧವಾಗಿದ್ದೂ ಈ ಹೊಸಶೋಧವು, ಈ ಹೊಸ ರಜ್ಯಮಾರ್ಗವು ದಕ್ಷಿಣದಲ್ಲಿ ಜನಪದಗಳನ್ನಾಕರ್ಷಿಸಿ ಯಾಕೆ ಕ್ರಮೇಣ ಹಬ್ಬಿಕೊಳ್ಳಲಿಲ್ಲ? ಅಷ್ಟೇ ಅಲ್ಲ, ಇಲ್ಲಿನ ಕನ್ನಡ ರಾಜ್ಯವೆಂಬುದೂ ನೃಪತುಂಗನ ಕಾಲಕ್ಕಷ್ಟೇ ಕಂಡ ಕ್ಷಣಬುದ್ಬುದವಾಗಿ ಮುಂದೆ ಮಾಯವಾಗಿಹೋಯಿತಲ್ಲ? ಇಷ್ಟೇ ಸೋಜಿಗದ ಇನ್ನೊಂದು ಸಂಗತಿಯೂ ಇದೆ- ನೃಪತುಂಗನಾಗಿ ಮತ್ತೆ ಸಹಸ್ರಮಾನ ಕಳೆದಮೇಲೆ ಇದು ಪುನಃ, ಯಾವತ್ತಿನಿಂದಲೂ ಇದು ಹೀಗೇ ಇದ್ದುಕೊಂಡಿತ್ತು ಎಂಬ ಸಹಜಸ್ಥಿತಿಯಲ್ಲಿ ನಮ್ಮ ಕಾಲಕ್ಕೆ ಭಾರತಾದ್ಯಂತವೂ ಉದ್ಭವಗೊಂಡುಬಿಟ್ಟಿತಲ್ಲ? ಯಾಕೆ?
ಮುಖ್ಯವಾಗಿ ಕಾಣುವ ಒಂದು ಕಾರಣವೆಂದರೆ, ಎಲ್ಲೆಡೆಗಳಲ್ಲೂ ಪರಾಕ್ರಮಣ ರಾಜಕಾರಣವೇ ಚಾಲ್ತಿಯಲ್ಲಿದ್ದ ಆ ಕಾಲದಲ್ಲಿ ಈ ಹೊಸ ಬಗೆಯ ರಾಜ್ಯವನ್ನು ಏಕೈಕವಾಗಿ ಬಾಳಿಸಿಕೊಳ್ಳುವುದು ದುಃಸಧ್ಯವಾಗಿತ್ತು, ಎಂಬುದು. ರಾಜ್ಯಕಟ್ಟುವೆನೆಂಬ ಹುಮ್ಮಸ್ಸಿನ ಆಸಂಖ್ಯಾತ ವೀರರೂ ಅನೇಕಾನೇಕ ವಂಶಗಳೂ ಅವಕಾಶಕ್ಕಾಗಿ ಹೊಂಚಿ ಕಾದುಕೊಂಡಿರುವಾಗ ಮತ್ತು ದೇಶಿಯ ಭಾಷೆಗಳು ಭಾಷಾಸಮುದಾಯವಾಗಿ ಬೆಳೆದುಕೊಳ್ಳದೆ ಇನ್ನೂ ಪ್ರೌಢಾವಸ್ಥೆಯ ವಿವಿಧ ಹಂಥಗಳಲ್ಲಿದ್ದಿರುವಾಗ, ಈ ರಾಜ್ಯಮಾದರಿಯು ಕಾರ್‍ಯಸಾಧ್ಯವೆನಿಸಿ ಆಕರ್ಷಿಸಲಿಲ್ಲ. ಮತ್ತು ಇದಕ್ಕಿಂತಲೂ ಬಹುಶಃ ಮುಖ್ಯವಾದ, ಗಾಢವಾದ ಇನ್ನೊಂದು ಕಾರಣವಿತ್ತು. ಅದೆಂದರೆ, ಈ ‘ವಸುಧಾವಲಯಸೂತ್ರ’ದ ಚಿಂತನೆಯಲ್ಲಿಯೇ ಒಂದು ಕೊರೆಯಿತ್ತು ಎನ್ನುವುದು. ಬಹು ಪ್ರಾಚೀನ ಕಾಲದಿಂದಲೂ ಇಲ್ಲಿ, ಉತ್ತರ ಆರ್ಯಾವರ್ತ ಮತ್ತು ದಕ್ಷಿಣಾಪಥಗಳಿಂದ ಕೂಡಿದ ‘ಆಸೇತು ಹಿಮಾಚಲ’ವೆನ್ನುವ ಸಮಗ್ರಭಾರತದ ಕಲ್ಪನೆಯು ಬೇರುಬಿಟ್ಟಿತು. ಯಾವತ್ತೂ ರಾಜಕೀಯ ಘಟಕವಾಗಿ ಒಗ್ಗೂಡಿಕೊಂಡಿರದಿದ್ದರೂ ಇದೊಂದು ಭಾವಭೂಮಿಯಾಗಿ ಜನಪದಗಳಲ್ಲಿ ದೃಢವಾಗಿ ನೆಟ್ಟುಕೊಂಡಿತು; ಗುಪ್ತಸಾಮ್ರಾಜ್ಯದ ಕಾಲದಲ್ಲಿ ಬಹುಶಃ, ಎಂದಿಗಿಂತ ಹೆಚ್ಚು ಗಟ್ಟಿಗೊಂಡಿತ್ತು. ‘ಕವಿರಾಜಮಾರ್ಗ’ ಸಂದರ್ಭ ರಾಜ್ಯ ಕಲ್ಪನೆಯು ಈ ಭಾವವಾಸ್ತವವನ್ನು ತನ್ನ ನಕ್ಷೆಯಲ್ಲಿ ಅಳವಡಿಸಿಕೊಳ್ಳಲಿಕ್ಕಾಗಲಿಲ್ಲ. ಒಂದು ಸಮುದಾಯದ ನೆಲೆಯಲ್ಲಿ ನಿಂತು ತನ್ನಂಥ ಅನೇಕ ಸಮುದಾಯಗಳ ಬಗ್ಗೆ ಚಿಂತಿಸುವುದು ಮತ್ತು ನಿರ್ಣಯಿಸುವುದು ಅದಕ್ಕೆ ಕಷ್ಟವಾಗಿರಬೇಕು. ಬಹುಶಃ, ಈ ಕಾರಣದಿಂದಲೇ ಇಲ್ಲಿನ ‘ವಸುಧಾ ವಲಯ ಸೂತ್ರ’ವು ಕನ್ನಡವಿಷಯದಿಂದ ವಸುಧಾವಲಯಕ್ಕೆ ಜಿಗಿಯುತ್ತದೆ; ನಡುವಣ ಈ ಭೂಖಂಡದ ನೆಲೆಯನ್ನು ನಿಶ್ಚಿತಗೊಳಿಸಲಿಕ್ಕಾಗದೆ ಸಂದಿಗ್ಧದಲ್ಲಿಡುತ್ತದೆ.

ಆಮೇಲೆ ಹನ್ನೆರಡನೇ ಶತಮಾನವು ಮುಗಿಯುವಷ್ಟರಲ್ಲಾಗಲೇ ಭಾರತವು ವಿದೇಶಿ ಆಳ್ವಿಕೆಗೆ ತನ್ನನ್ನು ಕೊಟ್ಟುಕೊಳ್ಳತೊಡಗಿತು ಮತ್ತು ಕ್ರಮೇಣ ಇಡೀ ಭಾತರವು ವಿಡೆಶಿ ದಾಸ್ಯಕ್ಕೊಳಗಾಯಿತು; ಈ ದಾಸ್ಯಾವಸ್ಥೆಯು ಈ ಶತಮಾನದ ಮಾಧ್ಯಭಾಗದ ತನಕ ಮುಂದುವರಿದುಕೊಂಡು ಬಂದಿತು. ಆದರೆ ಈ ದಾಸ್ಯಯುಗದಲ್ಲಿಯೇ ಹಿಂದೆಂದೂ ಕಾಣದಂಥ, ಇಡೀ ಭೂಖಂಡದ ರಾಜಕೀಯ ಏಕೀಕರಣವು ಸಾಧಿಸಿತ್ತು. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟವು ಪ್ರಾರಂಭವಾದಾಗ ಬಹು ಸಹಜವಾಗಿಯೇ ಅದು ಅಖಲಭಾರತ ಹೋರಾಟವಾಗಿ ರೂಪುತಾಳಿತು. ಇಪ್ಪತ್ತನೇ ಶತಮಾನವು ಮೊದಲಾಗುವ ಹೊತ್ತಿಗಾಗಲೇ ಅಖಿಲ ಭಾರತದ ಕನಸು ನಮ್ಮನಾವರಿಸಿಕೊಂಡಿತ್ತು ಮತ್ತು ವಿದೇಶಿ ಶಿಕ್ಷಣ ಚಿಂತನೆಗಳ ಪ್ರಭಾವದಿಂದಾಗಿ, ‘ಪ್ರಜಾತಂತ್ರ-ರಾಜಕಾರಣ’ದ ಅಕಾಂಕ್ಷೆಯೂ ದೃಢವಾಗಿಬಿಟ್ಟಿತ್ತು. ಈ ಶತಮಾನದ ಮೊದಲ ಮೂರು ದಶಕಗಳು ಕಳೆಯುವ ಹೊತ್ತಿಗೆ, ಆ ಕಾಲದ ಗಾಂಧಿ ಮಾರ್ಗದರ್ಶನ ಹೋರಾಟದಲ್ಲಿ, ಮುಂದೆ ಈ ರಾಷ್ಟ್ರವು ಭಾಷಾವಾರು ರಾಜ್ಯಗಳಾಗಿ ವಿಭಜನೆಗೊಳ್ಳಬೇಕೆಂಬ ಜನಾಶಯವು ಕೂಡಾ ದೃಢಗೊಂಡಿತ್ತು.

ತಾತ್ಪರ್ಯ ಇದು: ೧.ನಮ್ಮ ಇಪ್ಪತ್ತನೇ ಶತಮಾನದಲ್ಲಿ ಪರಾಕ್ರಮ ರಾಜಕಾರಣವು ನಿರಾಕೃತವಾಗಿ ಆಧುನಿಕ ಜನತಂತ್ರ ರಾಜಕಾರಣವು ಸರ್ವಾನುಮತದಿಂದೆಂಬಂತೆ ಸ್ಥಾಪಿತಗೊಂಡಾಗ ಮತ್ತು, ೨. ಅಖಿಲ ಭಾರತವೆಂಬ ಪ್ರಾಚೀನ ಕಲ್ಪನೆಗೆ ಭೌತಿಕ ಆಧಾರವೂ ದೊರಕಿದಾಗ, ಕನ್ನಡದ ೯ನೇ ಶತಮಾನದ ಭಾಷಾರಾಜ್ಯ ಕಲ್ಪನೆಯು ಆಗಿನ ಊನಗಳನ್ನು ಕಳೆದುಕೊಂಡು ಪುನರುದ್ಭವಗೊಳ್ಳಲಿಕ್ಕೆ ಮತ್ತು ಕಾರ್ಯಗತವಾಗಲಿಕ್ಕೆ ಸಾಧ್ಯವಾಯಿತು. ಆತನಕ, ಸಹಸ್ರವರ್ಷ ಮೀರಿ ಅದು ಭಾರತೀಯ ಸಮುದಾಯದಲ್ಲಿ ಕೇವಲ ಭಾವ ಪ್ರಚಲಿತವಾಗಿ ಬೆಳೆದುಕೊಳ್ಳುತ್ತ ಕಾಯುತ್ತಲಿತ್ತು.

ಅಂದರೆ, ಇವತ್ತಿನ ನಮ್ಮ ಭಾಷಾವಾರು ರಾಜ್ಯ-ರಾಷ್ಟ್ರರಾಜಕಾರಣದ ಬೀಜವು ಕವಿರಾಜಮಾರ್ಗ ಕಾಲದ ವಿಶಿಷ್ಟ ಸಂದರ್ಭದಲ್ಲಿ ಕನ್ನಡದಲ್ಲಿ ಅಂಕುರಿಸಿದು ಎನ್ನಬಹುದು. ಅಲ್ಲದೆ, ಇವತ್ತಿನ ನಮ್ಮ ಜನತಂತ್ರ ಕಲ್ಪನೆಗೆ ಅಸ್ತಿರವಾಗಬಹುದಾದ ಜನ-ಭಾಷಾ-ಪ್ರಭುತ್ವ ಸೂತ್ರವೂ ಆ ಕಾಲದಲ್ಲಿ ಒಮ್ಮೆ ಆವಿಷ್ಕೃತವಾಗಿತ್ತು ಎನ್ನುವುದೂ ನಮಗೆ ಕುತೂಹಲಕಾರಿಯಾಗಬೇಕು. ಬ್ರಿಟಿಷರು ಇಲ್ಲಿಂದ ಬಿಟ್ಟುಹೋಗುವಾಗ ನಮಗೆ ಏಕೈಕ ಪರಿಹಾರವಾಗಿ ಕಂಡುನಾವು ಅಳವಡಿಸಿಕೊಂಡ ‘ಭಾಷಾವಾರು ರಾಜ್ಯಗಳು ಹಾಗೂ ಅವುಗಳ ಒಕ್ಕೂಟವಾದ ಭಾರತದ ಮತ್ತು, ಜತೆಗೆ ಆದ್ಯಂತ ಜನತಂತ್ರ’ ಎಂಬ ಸೂತ್ರವು ಈ ಐವತ್ತು ವರ್ಷಗಳ ಅವಧಿಯ ಅನಂತರವೂ-ಉದ್ದಕ್ಕೂ ಅದೆಷ್ಟೇ ತೀವ್ರವಾದ ಸಮಸ್ಯೆಗಳನ್ನು ಹುಟ್ಟಿಸಿ ನಮ್ಮನ್ನು ಕಂಗೆಡಿಸಿದ್ದಾಗ್ಯೂ ನಿರಸನಗೊಳಿಸಿದ್ದಾಗ್ಯೂ-ಪರ್‍ಯಾಯವಾಗಿ ಇನ್ನೊಂದು ಬಗೆಯ ರಾಜ್ಯವಿಭಜನೆಯನ್ನು (ಉದಾಹರಣೆಗೆ, ಅಮೆರಿಕ ಸಂ.ಸಂ. ರೀತಿಯ ಸರಳರೇಖಾ ವಿಭಜನೆಯನ್ನೋ ಅಥವಾ ಭೌಗೋಲಿಕ ಮೇಲ್‌ಮೈ ಲಕ್ಷಣಗಳನ್ನಾಧರಿಸಿ ವಿಂಗಡಣೆಯನ್ನೋ) ನಾವು ಯೋಚಿಸಲಾರೆವು ಕೂಡಾ. ಈ ವ್ಯವಸ್ಥೆಗಳು ಸದ್ಯೋಭವಿಷ್ಯಕ್ಕಂತೂ ಅತ್ಯನಿವಾರ್ಯವೆಂದೇ ತೋರುತ್ತದೆ.

ಆಕಾಲ-ಈಕಾಲ-ಹೋಲಿಕೆ

ನಮ್ಮ ದೇಶಕ್ಕೆ, ಈ ಕಾಲಕ್ಕೆ ಪ್ರಜಾತಂತ್ರ-ಭಾಷಾರಾಜ್ಯ ವ್ಯವಸ್ಥೆಗಳೇ ಅತ್ಯುತ್ತಮ ಆಯ್ಕೆಯೆಂಬುದನ್ನು ನಂಬಿರುವಾಗಲೂ ಈ ವ್ಯವಸ್ಥೆಗಳಲ್ಲಿನ ಊನದೋಷಗಳನ್ನು ಕಡೆಗಣಿಸಬಾರದು. ಇವುಗಳ ಅನುಷ್ಠಾನದಲ್ಲಿ ಸತತವಾಗಿ ಶ್ರದ್ಧೆ ಅಗತ್ಯವಾಗಿರುವ ಹಾಗೆ, ಪ್ರಾಯಃ ಅದಕ್ಕಿಂತ ಹೆಚ್ಚಾಗಿ ಇವುಗಳಲ್ಲಿನ ಊನದೋಷಗಳ ಬಗ್ಗೆ ನಿರಂತರ ಜಾಗೃತಿಯಿರಬೇಕಾಗುತ್ತದೆ. ಭಾಷಾ ಸಮುದಾಯವೊಂದರ ‘ಸಮಸ್ತಮನಸ್ಸು’ ಎಂಬುದನ್ನು ಗಣಿಸಿದೆವಲ್ಲ, ಅದೇನೂ, ನಿಶ್ಚಲ-ಸ್ಥಿರವಾದದ್ದಲ್ಲ. ಕಾಲಸಂದರ್ಭಗಳಿಗೆ ಅನ್ವಯಿಸಿ ಒಡನೊಡನೆಯೇ ಬೇರೆಬೇರೆಯಾಗಿ ರೂಪಾಗುವ ಅಮೂರ್ತ ಆಕೃತಿ ಅದು. ಉದಾಹರಣೆಗೆ-ಒಂದು ಸಂದರ್ಭದಲ್ಲಿ ಒಂದು ಕುಟುಂಬದ ಸಮಸ್ತಮನಸ್ಸು ಪ್ರತಿಕ್ರಿಯೆಗೂಡುತ್ತಿರಬಹುದು; ಇನ್ನೊಂದು ಸಂದರ್ಭದಲ್ಲಿ ಒಂದು ಊರಿನ ಸಮಸ್ತ ಮನಸ್ಸು ಸಂವೇದನೆಗೊಳ್ಳುತ್ತಿರಬಹುದು. ಹೀಗೆ ಜಿಲ್ಲೆ-ರಾಜ್ಯ-ದೇಶ ಇತ್ಯಾದಿ ಮಾತ್ರವಲ್ಲ, ಜನಾಂಗ-ಜಾತಿ-ವರ್ಗ-ವೃತ್ತಿ ಇತ್ಯಾದಿ ಅಸಂಖ್ಯ ಆಕಾರಗಳಲ್ಲಿ ಅದು ಸಂದರ್ಭದಿಂದ ಸಂದರ್ಭಕ್ಕೆ ಬದಲಾಗಿಕೊಳ್ಳುತ್ತಿರುತ್ತದೆ.

ಮುಖ್ಯವಾಗಿ ನಮ್ಮ ದೇಶದ ವಿನ್ಯಾಸದಲ್ಲಿ, ರಾಜ್ಯವಾಗಿ ರೂಪುಗೊಳ್ಲಲು ಸಾಧ್ಯವಿರುವ, ಇದ್ದುದರಲ್ಲೇ ಉಳಿದವಕ್ಕಿಂತ ಕೊಂಚ ಹೆಚ್ಚು ಅನುಷ್ಠಾನ ಸಾಧ್ಯವಾದ ಘಟಕ, ಭಾಷಾ ಸಮಸ್ತ ಮನಸ್ಸು. ನಾವು ಸಮಸ್ತರೂ ಬದುಕಿನ ಎಲ್ಲ ಕ್ಷಣಗಳಲ್ಲಿಯೂ ಭಾಷೆಯನ್ನು ಸಮಾನತೆಯಲ್ಲಿ ಬಳಸುತ್ತಲೇ ಇರುತ್ತೇವಾದ ಕಾರಣ, ಭಾಷಾ ಸಮಸ್ತಮನಸ್ಸೆಂಬುದು ಇನ್ನೆಲ್ಲಾ ಇಂಥ ಆಕೃತಿಗಳಿಗಿಂತ ಹೆಚ್ಚಿನ ಸಾತತ್ಯವುಳ್ಳದ್ದಾಗಿರುತ್ತದೆ. ಆದರೆ ಎಷ್ಟೋ ಸಲ ಈ ಭಾಷಾ ಸಮಸ್ತ ಮನಸ್ಸು, ಇದರೊಳಗಿರುವ ಧಾರ್ಮಿಕ ಅಥವಾ ಇನ್ನಾವುದೇ ಸಮಸ್ತಮನಸ್ಸನ್ನು ಒಳಗೊಳಿಸಿಕೊಳ್ಳುವುದು ಹೊಂದಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗಬಹುದು. ಉದಾಹರಣೆಗೆ ಆಮೇಲೆ ಬಂದು ಕೂಡಿಕೊಂಡ ಮುಸ್ಲಿಮ್ ಕ್ರಿಶ್ಚಿಯನ್ ಮುಂತಾದ ಸಮಸ್ತಮನಸ್ಸುಗಳಿಗೆ ಕನ್ನಡವೆಂಬ ಸಮಸ್ತಮನಸ್ಸಿನಲ್ಲಿ ಲೀನಗೊಳಿಸಿಕೊಳ್ಳುವುದು ಕೆಲವು ಸಂದರ್ಭಗಳಲ್ಲಿ ಕಷ್ಟವಾಗಬಹುದು.

ಅಲ್ಲದೆ, ಈಗ ನಮ್ಮ ದೇಶದಲ್ಲಿ ಏಳುನೂರಕ್ಕೂ ಹೆಚ್ಚು ಭಾಷೆಗಳಿವೆಯೆನ್ನುತ್ತಾರೆ. ಇವುಗಳಲ್ಲಿ ಸಾಕಷ್ಟು ಲಿಖಿತ *ಮಾಗ್ಮಯ*-ಸಾಹಿತ್ಯಗಳಿರುವ ಮತ್ತು ಸಾಕಷ್ಟು ವ್ಯಾಪ್ತಿಯುಳ್ಳ ಹದಿನೆಂಟು ಭಾಷೆಗಳನ್ನು ನಮ್ಮ ಸಂವಿಧಾನವು ಆಯ್ದು ಪಟ್ಟಿ ಮಾಡಿದೆ; ಕೇಂದ್ರ ಸಾಹಿತ್ಯ ಅಕಾಡಮಿಯು ಈ ಪಟ್ಟಿಗೆ ಇನ್ನೂ ಏಳೆಂಟು ಭಾಷೆಗಳನ್ನೂ ಕೂಡಿಸಿಕೊಂಡು ಅವಕ್ಕೆ ಮನ್ನಣೆಯಿತ್ತಿದೆ. ಅಂದರೆ, ಇಲ್ಲಿರುವ ‘ಪ್ರಧಾನ’ ಭಾಷೆಗಳ ಸಂಖ್ಯೆಯು ಸುಮಾರು ಇಪ್ಪತ್ತೈದರಷ್ಟು ಎನ್ನುವುದಾದರೆ, ಇಲ್ಲಿರುವ ಭಾಷಾರಾಜ್ಯಗಳ ಸಂಖ್ಯೆ ಹದಿನೈದು ಅಥವಾ ಇನ್ನೂ ಕಡಿಮೆ.

ಈ ನಮ್ಮ ಕರ್ನಾಟಕದೊಳಗೇ ಕನ್ನಡವು ಜನ್ಮಭಾಷೆಯಾಗಿರುವವರ ಸಂಖ್ಯೆಯು, ಈಚಿನ ಜನಗಣತಿಯ ಪ್ರಕಾರ ಶೇ. ೬೫ ಮಾತ್ರ. ತಟ್ಟನೆ ಕಾಣಿವಹಾಗೆ ಇಲ್ಲಿ, ತುಳು-ಕೊಂಕಣಿ-ಕೊಡವ-ಲಮಾಣಿ ಇತ್ಯಾದಿ ಭಾಷೆಗಳಿವೆ. ಕನ್ನಡದಲ್ಲಿ ಕೂಡಾ ವಿವಿಧ ಪ್ರಾಂತಗಳು ಸ್ಥಳಗಳು, ಜಾತಿಗಳು ಇತ್ಯಾದಿಗಳ ವಿವಿಧ ಉಪಭಾಷೆಗಳಿವೆ. ಇಂಥ ಅಪಾರ ವೈವಿಧ್ಯಗಳಿರುವಲ್ಲಿ ‘ಭಾಷಾ ಸಮಸ್ತ ಮನಸ್ಸು’ ಎಂಬುದು ಅದೆಷ್ಟು ಬಲು ಸೂಕ್ಷ್ಮವಾದ್ದು, ತೇಲು ತೆಳುವಾದ್ದು ಎಂಬುದನ್ನು ನಾವು ಊಹಿಸಿಕೊಳ್ಳಬಹುದು. ಜತೆಗೆ, ಭಾಷೆಯೆಂಬುದು ಜನಾಂಗ-ಜಾತಿ-ಧರ್ಮ-ವೃತ್ತಿ-ರಾಜಕಾರಣ- ಆರ್ಥಿಕತೆ ಇತ್ಯಾದಿ ಯಾಯಾವುದೋ ಸಂಗತಿಗಳ ಸಮಸ್ಯೆಗಳೊಡನೆ ಜಡಕುಗೊಳ್ಳುತ್ತದೆ. ಕಾವೇರಿ ನೀರಿನ ವಿವಾದದಲ್ಲಿ ಕಿಡಿಯೆದ್ದಾಗ ಕನ್ನಡ-ತಮಿಳುಗಳು ಹೊತ್ತಿ ಉರಿದದ್ದನ್ನು ನಾವೆ ಕಂಡಿದ್ದೇವೆ. ಕನ್ನಡದ ದೇವಾಲಯ ಚರ್ಚುಗಳಲ್ಲಿ ಆಧ್ಯಾತ್ಮಿಕ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸುವಾಗ ಕನ್ನಡದ ‘ಮಂತ್ರ’ (?)ಗಳೇ ಇರತಕ್ಕದ್ದು ಎಂನಂಥ-ಬಲು ಗಂಭೀರರೋ ಹಾಸ್ಯಾಸ್ಪದವೋ ಅಂತ ನಿರ್ಣಯಿಸಲಿಕ್ಕೆ ಆಗದ ದೊಡ್ಡ ಚಳುವಳಿ ಪ್ರದರ್ಶನಗಳನ್ನೂ ಕಂಡಿದ್ದೇವೆ.

ಹೀಗೆ ಭಾಷಾರಾಜ್ಯ ರಾಜಕಾರಣವೆನ್ನುವುದು ನಮಗೆ ಅತ್ಯನಿವಾರ್ಯವಾಗಿರುವಂತೆಯೇ ಅದರ ನಿರ್ವಹಣೆಯು ಅತ್ಯಂತ ಕಠಿಣವಾದ್ದಾಗಿ ತೋರುತ್ತಿದೆ. ಇಂಥ ಸಂದರ್ಭದಲ್ಲಿ-ಅದೇ ಹೊಸದಾಗಿ ‘ಕನ್ನಡ’ದ ಕಾಣ್ಕೆಗಂಡು ಅದರ ನಿರ್ಮಾಣಕಾಯಕವನ್ನು ಕೈಗೊಂಡಿದ್ದ ನೃಪತುಂಗಯುಗದಲ್ಲಿ, ಆ ಕಾಯಕದ ಕೇಂದ್ರದಲ್ಲೇ ಸಾಕ್ಷಿಯಾಗಿ ನಿಂತು ಆಗಿನ ವಿವೇಕಗಳನ್ನು ದಾಖಲಿಸಿರುವ ‘ಕವಿರಾಜಮಾರ್ಗ’ವು-ಈ ಕಾಲದ್ದೆ ನಮ್ಮದೇ ಅಂತ ಭಾಸವಾದರೆ ಸೋಜಿಗವಿಲ್ಲ. ಈಗಿದ್ದ ಎಲ್ಲಾ ಸಮಸ್ಯೆಗಳೂ ಬಹುತೇಕ ಆಗಲೂ ಇದ್ದವು. ಈ ಗ್ರಂಥದ ಹಾಗೆ ನಮ್ಮ ಪ್ರಸ್ತುತದ ಜೊತೆ ನೇರ ತೊಡಗಿ ಮಾತನಾಡಬಹುದಾದ ಇನ್ನೊಂದು ಹಳೆಯ ಪುಸ್ತಕವಿಲ್ಲ; ಕನ್ನಡದಲ್ಲಿ ಅಂತ ಅಲ್ಲ, ಎಲ್ಲಿಯೂ ಇಂಥ ವಿಶಿಷ್ಟ ಗ್ರಂಥವು ದುರ್ಲಭವೇ.

ಹಳ್ಳಿಗಳೊಂದೊಂದೂ ಒಂದೊಂದೂ ಜಗತ್ತಾಗಿದ್ದ ೯ನೇ ಶತಮಾನದ ಹಳೆಯ ಆ ಕಾಲದ ಜೊತೆಗೆ, ಜಗತ್ತೇ ಒಂದು ಹಳ್ಳಿಯಾಗಿರುವ ಈ ನಮ್ಮ ಬಹು ಸಂಕೀರ್ಣಕಾಲವನ್ನು ತಳುಕೆ ಹಾಕಿ ಯೋಚಿಸುವುದು ಸರಿಯೆ? ಈ ಎರದು ಕಾಲಗಳ ವ್ಯತ್ಯಾಸವು ಹಳೆಯ ಶಿಲಾಯುಗ-ನಾಗರಿಕ ಯುಗಗಳ ನಡುವಣ ಲಕ್ಷಾಂತರ ವರ್ಷಗಲಲ್ಲಿ ಕಾಣುವ ವ್ಯತ್ಯಾಸಕ್ಕಿಂತ ಹೆಚ್ಚಿನದೆನ್ನಿಸುತ್ತದೆ. ಉದಾಹರಣೆಗೆ, ರಾಜಪ್ರಭುತ್ವವೊಂದೆ ನಿಷ್ಪರ್ಯಾಯ ವ್ಯವಸ್ಥೆಯೆಂದು ಬಹುಶಃ ನಂಬಿಕೊಂಡಿದ್ದ ಕಾಲದಲ್ಲಿ, ಜನರ ಬಗ್ಗೆ ಜನಾಧಿಕಾರದ ಬಗ್ಗೆ ಆಲೋಚನೆ ನಡೆದಿತ್ತು ಅಂತ ನಂಬಲಿಕ್ಕೂ ಕೆಲವೊಮ್ಮೆ ಕೊಂಚ ಕಷ್ಟವೆನ್ನಿಸಬಹುದು. ಆದರೆ, ಲಕ್ಷಾಂತರ ವರ್ಷಗಲ ದೀರ್ಘದಲ್ಲಿ ಮಾನವಕುಲದ ಇತಿಹಾಸದಲ್ಲಿ ಬದಲಾಗುತ್ತಲೇ ಬಂದ ಸಂಗತಿಗಳಿರುವಂತೆ ಬದಲಾಗದೆ ಇರುವ ಸಂಗತಿಗಳೂ ಪ್ರಾಯಶಃ, ಇವೆ. ಲಕ್ಷಾಂತರ ವರ್ಷಗಳಿಂದ ತನ್ನ ವಿವೇಕವನ್ನವಲಂಬಿಸಿ ಬಾಳಿಕೊಂಡು ಬಂದಿರುವ ಜನಮನಸ್ಸಿನ ಸಾತತ್ಯಕ್ಕೆ ಮೌಲಿಕ ಮನುಷ್ಯಗೌರರವೆಂಬುದನ್ನು ಇವತ್ತು ನಾವು ನಮ್ಮ ಕಲಿಕೆಯಿಂದ ಉತ್ಪಾದಿಸಿ ಹಂಚಿಕೊಡಬೇಕಾಗಿದೆ ಅಂತ ಭ್ರಮಿಸಿ ಭಾವಿಸಿದರೆ ಅದು ನಮ್ಮ ದುರಹಂಕಾರ. ಮೌಲಿಕವಾದ ಅಭಿಮಾನ ಗೌರವಗಳ ಪ್ರಜ್ಞೆಯು ಮನುಷ್ಯರಲ್ಲಿ ಹಿಂದಕ್ಕೆ ಇರಲಿಲ್ಲ ಎನ್ನುವುದು ಈ ಮನುಷ್ಯರೆಂಬುವರು ಅನಂತಕಾಲಕ್ಕೂ ದೈನ್ಯದಾಸ್ಯಗಳಲ್ಲಿಯೇ ಇರಲಿಕ್ಕೆ ಅರ್ಹರು ಎಂದಂತೆಯೇ. ಇತಿಹಾಸದ ಆದಿಮ ದಿನಗಳಲ್ಲಿಯೂ ಮನುಷ್ಯರೆನ್ನುವವರು, ಅನ್ಯಸಹಾಯವಿಲ್ಲದೆ ಕೂಡಾ ತಮ್ಮ ಅಧಿಕಾರ ಗೌರವಗಳನ್ನು ರಕ್ಷಿಸಿಕೊಂಡಿದ್ದರು; ಅದು ನಿಯಂತ್ರಣಕ್ಕೊಳಗಾದಾಗಲೆಲ್ಲಾ, ನಿಧಾನವಾಗಿಯಾದರೂ, ಯಶಸ್ವಿಯಾಗಿಯೋ ಅಯಶಸ್ವಿಯಾಗಿಯೋ ಸ್ಫೋಟಿಸಿ ಪ್ರತಿಭಟಿಸಿದ್ದಾರೆ.

ಈ ಮೇಲಿನ ಮಾತುಗಳನ್ನು ಐತಿಹಾಸಿಕ ತಾರ್ಕಿಕ ನೆಲೆಯಲ್ಲಿ ಹೇಳಬಹುದಾದರ ತಾತ್ವಿಕ ನೆಲೆಯಲ್ಲಿ ಈ ಹಿಂದೆ ಗಮನಿಸಿದ ಹಾಗೆ, ‘ಇತಿಹಾಸ’ವೆಂಬುದು ಅಂತಿಮವಾಗಿ ನಮ್ಮ ಪ್ರಸ್ತುತದ ಚಿತ್ತನಿರ್ಮಿತಿಯೆಂಬುದನ್ನೂ ನೆನಪಿಸಿಕೊಳ್ಳಬೇಕು.

ಕನ್ನಡ ಚಳುವಳಿಗಳು

೧೯೮೦ರ ದಶಕದಲ್ಲಿ, ‘ಕವಿರಾಜಮಾರ್ಗ’ದ ನನ್ನ ಓದು ನಮ್ಮ ಪ್ರಸ್ತುತದೊಳಕ್ಕೆ ಹೊಕ್ಕು ಹೆಣೆದದ್ದನ್ನು ನೆನಪಿಸಿಕೊಳ್ಳುತ್ತೇನೆ. ೧೯೭೦ರ ದಶಕದಲ್ಲಿ ಜಯಪ್ರಕಾಶ್ ನಾರಾಯಣರು ತುರ್ತುಪರಿಸ್ಥಿತಿಯ ವಿರುದ್ಧ ಜನಾಂದೋಲನವನ್ನು ಪ್ರಾರಂಭಿಸಿದರು ಮತ್ತು ಅದು ಬಲು ಬೇಗ ಸೊರಗಿಹೋಯಿತು; ಮುಂದೆ, ೮೦ರ ದಶಕದಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ, ಅದೇ ಬಡ್ಡೆಯ ಚಿಗುರುಗಳೆನ್ನುವ ಹಾಗೆ, ಹಲವಾರು ಕಿರು ಚಳುವಳಿಗಳು ಮೊಳೆತುಕೊಂಡವು; ನಮ್ಮ ‘ಕನ್ನಡ ಚಳುವಳಿ’ಯು ಅಂಥವುಗಳಲ್ಲೊಂದು ಎನ್ನಬಹುದು. ಆದರೆ ಇದು ರಾಜಧಾನಿ ಬೆಂಗಳೂರಿನ ಚಳುವಳಿ ಎನ್ನುವ ಹಾಗೆ, ಕರ್ನಾಟಕದ ಇತರ ಭಾಗಗಳಿಗೆ ಹಬ್ಬದೆ ಅಲ್ಲೇ ಬೆಳೆಯಿತೆನ್ನುವುದು ಗಮನಾರ್ಹ. ಕೆಲಕೆಲವೇ ಸಂದರ್ಭಗಳಲ್ಲಿ ಅದು ತಾತ್ಕಾಲಿಕವಾಗಿ-ಉದಾಹರಣೆಗೆ, ಗೋಕಾಕ್ ಚಳುವಳಿ ಎನ್ನಿಸಿಕೊಂಡು ಧಾರವಾಡ ಮುಂತಾದ ಸ್ಥಳಗಳಿಗೂ, ಕಾವೇರಿ ಚಳವಳಿಯೆಂದು ಮಂಡ್ಯ ಮೈಸೂರು ಇತ್ಯಾದಿ ಸ್ಥಳಗಳಿ ಹಸರಿಸಿದ್ದುಂಟು; ಹಾಗೇ ಕರಗಿಹೋದದ್ದೂ ಉಂಟು.

೮೦ರ ದಶಕದಲ್ಲಿ ಕಾವೇರಿ ಚಳುವಳಿಯು ಇಲ್ಬಣಿಸಿದಾಗ ಒಮ್ಮೆ ನಾವು ಅದರ ಬಿಸಿಯಲ್ಲಿ ಸಿಲುಕಿಕೊಂಡದ್ದು ನೆನಪಾಗುತ್ತದೆ. ಅವೊತ್ತು, ಗೆ| ಬಿ.ವಿ.ಕಾರಂತರ ಕತೆ ನಾವು ಕೆಲವರು ಬೆಂಗಳೂರಿನಿಂದ ಮೈಸೂರಿಗೆ ಪ್ರಾಯಾಣಿಸುತ್ತಿದ್ದೆವು. ಮಂಡ್ಯದ ಬಳಿ ಚಳುವಳಿಗಾರರ ಭಾರೀ ಗುಂಪು ನಮ್ಮನ್ನು ಅಡ್ಡಗತ್ಟಿ ನಿಲ್ಲಿಸಿತು. ನೂರಾರು ವಾಹನಗಳನ್ನು ಅಲ್ಲಿ ತಡೆದು ನಿಲ್ಲಿಸಲಾಗಿತ್ತು. ನಾವು ತುರ್ತಾಗಿ ಮೈಸೂರು ಸೇರಿಕೊಳ್ಳಬೇಕಾಗಿದ್ದ ಕಾರಣ ತುಂಬ ಆತಂಕಗೊಂಡಿದ್ದೆವು. ಸ್ವಲ್ಪ ಹೊತ್ತಿನ ಮೇಲೆ ಕಾರಂತರು ಟ್ಯಾಕ್ಸಿಯಿಂದ ಕೆಳಕ್ಕಿಳಿದರು. ಅವರ ಯಾವೊತ್ತಿನ ಉದ್ವಿಗ್ನ ಧಾಟಿಯಲ್ಲಿ-‘ಏನೂ ಚಳುವಳೀನಾ….ಸರಿಸರಿ…..ಚಳುವಳಿ ಮಾಡ್ಲೇಬೇಕು……ನಮಗೂ ಭಾಳ ಇಷ್ಟ…..ಹೇಳಿ, ಈಗ ಏನು ಮಾಡೋಣ? ಟ್ಯಾಕ್ಸಿ ವಾಪಸ್ಸು ಕಳಿಸಿಬಿಡೋಣವಾ? ನಾವೆಲ್ಲಾ……ನಾವೆಲ್ಲ ನಾಲ್ಕೈದು ಜನ ಇದೇವೆ…..ನಿಮ್ಮ ಜತೆ ಇದ್ದುಬಿಡ್ತೇವೆ……ಒಂದು ವಾರ ಇರಬೇಕಾಗತ್ತಾ……ಎರಡು ವಾರ……ತೊಂದ್ರೆ ಇಲ್ಲ……ಬೆಂಗಳೂರಿನಿಂದ ಕರೆಸೋಣ ಎಷ್ಟು ಜನ ಬೇಕಾಗತ್ತೆ…..’ಇತ್ಯಾದಿ ಒಂದೇ ಸಮನೆ ಬಡಬಡಿಸಿದರು; ಅದೇನು ಸಹಾನುಭೂತಿಯೋ ಭಯವೋ ಆತಂಕವೋ ಹಾಸ್ಯವೋ ಎಂಬುದು ಜತೆಗಿದ್ದ ನಮಗೇ ಗೊತ್ತಾಗದ ರೀತಿಯಲ್ಲಿ ಅವರ ಸ್ವಗತಭಾಷಣ ನಡೆದಿತ್ತು. ಅಷ್ತರಲ್ಲಿ ಗುಂಪಿನಲ್ಲಿದ್ದ ಯಾರೋ ಕಾರಂತರನ್ನು ಗುರುತಿಸಿದರು; ‘ಹೋ ಹೋ ಕಾರಂತ್ರು…ಸೂಟಿಂಗ್ ಹೋಗತಿದಾರೆ…ಬಿಟ್ಬುಡಿ…ಒಂದು ಆಟೊಗ್ರಾಫ್ ಕೊಟ್ಟುಬುಟ್ಟು ಹೋಗಿ ಸಾ…..’ಅಂತ ತ್ವರೆಯಲ್ಲಿ ಕಾರಂತರನ್ನು ಹತ್ತಿಸಿ ಟ್ಯಾಕ್ಸಿಯನ್ನು ಕಳಿಸಿದರು.

ಆದರೆ ಈ ಚಳವಳಿಯ ಅನುಭವಗಳು ಎಲ್ಲಾ ಸಂದರ್ಭಗಳಲ್ಲೂ ನಮ್ಮದರ ಹಾಗೆ ಬರೀ ತಮಾಷೆಯದಾಗಿರಲಿಲ್ಲ. ಕನ್ನಡ ಹೆಸರಿನ ಈ ಚಳವಳಿಗಳು ತಮ್ಮ ಆ ಸೀಮಿತ ಕ್ಷೇತ್ರದಲ್ಲಾದರೂ ರಾಜ್ಯವೇ ಕಳವಳಗೊಳ್ಳುವಷ್ಟು ಭಯ-ಹಿಂಸೆ-ನಷ್ಟಗಳನ್ನುಂಟುಮಾದಿದವು. ಶಿವಸೇನೆಯ ಚಟುವಟಿಕೆಗಳು ಕೂಡಾ ಆರಂಭದಲ್ಲಿ ಹೊರಗಿನವರಿಗೆ ತಮಾಷೆಯಾಗಿಯೇ ಕಂಡಿದ್ದವು. ಈಗ ನೋಡಿದರೆ ಅದು ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಇಡೀ ಭಾರತದ ರಾಜಕಾರಣದಲ್ಲೂ ತನ್ನ ದಟ್ಟ ಕರಿನೆರಳನ್ನು ಚೆಲ್ಲತೊಡಗಿದೆ; ರಾಷ್ಟ್ರ ರಾಜಕಾರಣವನ್ನು ಭಯ-ಹಿಂಸೆಗಳಿಂದ ನಿಯಂತ್ರಿಸುವಲ್ಲಿಗೆ ಬಂದಿದೆ.

ಆ ಕಾಲದಲ್ಲಿ ಉಡುಪಿಯ ಗೆ| ಜಿ.ರಾಜಶೇಖರ್ ಅವರು ಬೆಂಗಳೂರಿನ ಸಾಹಿತ್ಯ ಸಂಕಿರಣವೊಂದರಲ್ಲಿ ಈ ಚಳವಳಿಗಳ ವಿಕೃತಿಗಳನ್ನು ಕಾಣಿಸಿ, ಮನನೀಯವಾದ ಒಂದು ‘ಪತ್ರಿಕೆ’ಯನ್ನು ಮಂಡಿಸಿದರು. ಅನಂತಮೂರ್ತಿ ಲಂಕೇಶ ಮುಂತಾದ ಕೆಲವರು ಈ ಚಳವಳಿಗಳ ವಿಕೃತಿಯನ್ನು ಟೀಕಿಸಿದರು. ಆ ಮೇಲೆ ದಿ.ಡಿ.ಆರ್ ನಾಗರಾಜ್ ಅವರು ಶತಮಾನದ ಆರಂಭದಲ್ಲಿ ಕನ್ನಡ ಏಕೀಕರಣ ಚಳುವಳಿಯನ್ನು ರೂಪಿಸಿದ ಆಲೂರರೇ ಮೊದಲಾದ ಹಿರಿಯರ ಹೇಳಿಕೆಗಳನ್ನೂ ಈಗಿನ ಚಳುವಳಿ ನಾಯಕರ ಹೇಳಿಕೆಗಳನ್ನೂ ಉಲ್ಲೇಖಿಸಿ, ಹೋಲಿಸಿ ಸಧ್ಯದ ಚಳವಳಿಯ ಆಧಾರಚಿಂತನೆಗಳ ವಿಕೃತಿಯನ್ನು ಕಾಣಿಸಿದರು. ಈ ಸಂದರ್ಭದಲ್ಲಿ ನನಗೆ ಮತ್ತೆ ಮತ್ತೆ ನೆನಪಾಗುತ್ತಿದ್ದುದು ‘ಕವಿರಾಜಮಾರ್ಗ’.ಬಲು ದೂರದ ಆ ಪ್ರಾಚೀನ ಕಾಲಕ್ಕೂ ಈಗಿನ ನಮ್ಮ ಅತಿಭಿನ್ನ ಆಧುನಿಕ ಯುಗಕ್ಕೂ ಹೋಲಿಕೆ ಕಾಣುತ್ತಿರುವ ಬಗ್ಗೆ ನನಗೇ ಮುಜಗರವಾಗುತ್ತಿದ್ದರೂ ‘ಕವಿರಾಜಮಾರ್ಗ’ವು ನನ್ನನ್ನು ಬಲವತ್ತರವಾಗಿ ಸೆಳೆಯುತ್ತಿತ್ತು.

ಶತಮಾನದ ಪೂರ್ವಾರ್ಧದ ಏಕೀಕರಣ ಚಳವಳಿಯ ಸಂದರ್ಭವೆಂದರೆ, ಅದು ಉತ್ತರಕರ್ನಾಟಕದ ಜನಕ್ಕಂತೂ ಉಳಿವು ಅಳಿವಿನ ತೀವ್ರ ಸಮಸ್ಯೆಯಾಗಿತ್ತು. ಮರಾಠಿ ಬಹುಸಂಖ್ಯೆಯ ಮುಂಬೈ ಪ್ರಾಂತದೊಳಗೆ, ಹೈದರಾಬಾದಿನ ಉರ್ದುರಾಜ್ಯದೊಳಗೆ ಮತ್ತು ಇನ್ನೆಷ್ಟೋ ಕಿರು ಸಂಸ್ಥಾನಗಳಲ್ಲಿ ಹಂಚಿಹೋಗಿ, ತಮ್ಮ ಕನ್ನಡ ಆ ಸ್ಮಿತೆಯನ್ನೇ ಕಲೆದುಕೊಂಡಿದ್ದ ಜನ ಅವರು.

ಆ ಸಂದರ್ಭದಲ್ಲಿ ಅವರು ಉಳಿಸಿಕೊಂಡಿದ್ದ ವಿವೇಕವು ಆ ತೀವ್ರತೆಯಿಲ್ಲದ, ಈ ನಮ್ಮ ಕರ್ನಾಟಕ ರಾಜ್ಯೋತ್ತರ ಸಂದರ್ಭದಲ್ಲಿ ನಷ್ಟವಾಗಿ ಹೋಗಿದ್ದನ್ನು ಡಿ.ಆರ್.ಬರವಣಿಗೆ ಮನದಟ್ಟು ಮಾಡಿಕೊಟ್ಟಿತ್ತು. ಆ ಕಾಲಕ್ಕೆ ನನ್ನ ಮನಸ್ಸು ಯೋಚಿಸುತ್ತಿದ್ದುದೆಂದರೆ ‘ಕವಿರಾಜಮಾರ್ಗ’ದ ಸಂದರ್ಭವು ಈ ಎರಡು ಸಂದರ್ಭಗಳಿಗಿಂತ ಎಷ್ಟೋ ಪಾಲು ಹೆಚ್ಚು ತೀವ್ರ ಆತಂಕಗಳಿದ್ದ ಕಾಲವಾಗಿತ್ತು ಎಂಬುದು ಮತ್ತು ಅಂತ ಕಾಲದಲ್ಲಿನ ಆ ಗ್ರಂಥದ ವಿವೇಕವು ಮೇಲಿನ ಎರಡು ಕಾಲದಲ್ಲಿಯೂ ಕಾಣದ ಅಪರೂಪವಾದ ವಿವೇಕವಾಗಿತ್ತು ಎನ್ನುವುದು.

ಸ್ವಂತ ರಾಜನೇ ಕಾರಣ -ಕರ್ತೃವಾಗಿದ್ದ ‘ಕವಿರಾಜಮಾರ್ಗ’ವು ಕನ್ನಡ ಭಾಷೆ ರಾಜ್ಯಗಳನ್ನು ರಾಜಾಂಕಿತದಲ್ಲಿ ಅಧಿಕೃತಗೊಳಿಸುವಂತೆ ಕಂಡರೂ ನೃಪತುಂಗನು ತನ್ನ ರಾಜ್ಯವನ್ನು ಕನ್ನಡ ರಾಜ್ಯವೆಂದೂ, ಅದರ ಅಧಿಕೃತ ಭಾಷೆಯು ಕನ್ನಡವೆಂದು ಘೋಷಿಸಿದಂತೆ ಕಾಣುವುದಿಲ್ಲ; ಅಂಥ ದಾಖಲೆ ಶಾಸನಗಲ್ಲೆಲ್ಲೂ ಕಾಣಿಸದು . ಈತನ ಕಾಲದಲ್ಲಿ ಕನ್ನಡ ಶಾಸನಗಳಷ್ಟೇ ಸಂಖ್ಯೆಯ ಸಂಸ್ಕೃತ ಶಾಸನಗಳು ಸ್ಥಾಪಿತಗೊಳ್ಳುತ್ತಿದ್ದವು. ಸಂಸ್ಕೃತವು ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಏಸ್ಯಾದ ತುಂಬ ವ್ಯಾಪಕವಾಗಿ ಹಬ್ಬಿಕೊಂಡಿದ್ದ ಕಾಲ ಅದು. ಅತನಕ ಹೆಚ್ಚಾಗಿ ಪ್ರಾಕೃತವನ್ನು ಬಳಸುತ್ತಿದ್ದ ಜೈನರು ಈ ಕಾಲದಲ್ಲಿ ಸಂಸ್ಕೃತವನ್ನು ಹೆಚ್ಚಾಗಿ ಬಳಸಿತೊಡಗಿದ್ದರು. ಸಂಸ್ಕೃತದಲ್ಲಿ ‘ಮಹಾಪುರಾಣ’ ವನ್ನು ತೊಡಗಿ ‘ಆದಿಪುರಾಣ’ವನ್ನು ರಚಿಸಿ ಮುಗಿಸಿದ ಜಿನಸೇನಾಚಾರ್ಯ, ಜೈನರಲ್ಲಿ ಮೊದಲಿಗೆ ಸಂಸ್ಕೃತ ವ್ಯಾಕರಣ (ಶಬ್ದಾನುಶಾಸನ)ವನ್ನು ರಚಿಸಿದ ಶಾಕಟಾಯನ ಮತ್ತು ಇನ್ನು ಅನೇಕ ಸಂಸ್ಕೃತ ಪ್ರಾಕೃತ ಪಂಡಿತರುಗಳಿಗೆ ನೃಪತುಂಗನು ಆಶ್ರಯ ನೀಡಿದ್ದ. ನಾಡಿನಲ್ಲಿ ಹಲವು ಪ್ರಾಕೃತಗಳು ಚಾಲ್ತಿಯಲ್ಲಿದ್ದವು. ಉತ್ತರದಲ್ಲಿ ಒಂದು ಕಡೆ ಆಂಧ್ರಭಾಷೆಯು ಇನ್ನೊಂದು ಕಡೆ ಮಹಾರಾಷ್ಟಿ ಪ್ರಾಕೃತದ ಮರಾಠಿಯು ಲಿಖಿತ ಭಾಷೆಯಾಗಿ ಮೇಲೆದ್ದುಕೊಳ್ಳುತ್ತಿದ್ದವು. ಹೀಗೆ ಕನ್ನಡವು ಹಲವು ಭಾಷೆಗಳ ನಡುವಣ, ಬಹುಶಃ ಕೊಂಚ ಹೆಚ್ಚು ವ್ಯಾಪಕವಾದ, ಒಂದು ಭಾಷೆಯಾಗಿ ಬಳಕೆಯಲ್ಲಿತ್ತು.

ಪೆ‌ಅಚಲಿತವಿದ್ದ ಕನ್ನಡವೆಂಬುದಾದರೂ ಅಸಂಖ್ಯ ದೇಸಿ ಉಪಭಾಷೆಗಳಾಗಿ ಛಿದ್ರಗೊಂಡಿತ್ತು. ಅದಕ್ಕೆ ಒಂದು ಖಚಿತ ಏಕಾಕೃತಿ ಮಾದರಿಯನ್ನು ರೂಪಿಸುವಂಥ ಪ್ರಸಿದ್ಧ ಮಹಾಕಾವ್ಯಗಳು ಬಹುಶಃ, ಆಕಾಲಕ್ಕೆ ಕನ್ನಡದಲ್ಲಿರಲಿಲ್ಲ. ಇವತ್ತಿನ ನೆಲೆಯಿಂದ ನಾವು ಆಕಾಲವನ್ನು ನೋಡುವಾಗ, ಆಕಾಲದ ಕನ್ನಡವು ನಮ್ಮ ಈಗಿನ ಸಂದರ್ಭಗಳೆಲ್ಲವುಕ್ಕಿಂತಲೂ ಎಷ್ಟೋ ಹೆಚ್ಚು ಪಾಲು ಅಸ್ಥಿರವಾಗಿತ್ತು. ‘ಕವಿರಾಜಮಾರ್ಗ’ವು ಇವೆಲ್ಲವನ್ನೂ ನಿಚ್ಚಳವಾಗಿ ವಾಸ್ತವವನ್ನೊಪ್ಪಿಕೊಂಡಿದೆ; ಹಾಗಿದ್ದರೂ ಕನ್ನಡದ ಸ್ಥೈರ್ಯದ ಬಗ್ಗೆ ಶಂಕೆ ತಾಳಿ ಕಂಗೆಟ್ಟು ತಲ್ಲಣದಲ್ಲಿ ಹರಿಹಾಯ್ದಿಲ್ಲ.

ಶತಮಾನ ಪೂರ್ವಾಧರ್ಮದ ನಮ್ಮ ಏಕೀಕಿರಣ ಚಳುವಳಿಯು ಕನ್ನಡವನ್ನು ಪ್ರತ್ಯೇಕವೆಂದು ನೋಡದೆ, ಭಾರತದ ಸ್ವಾತಂತ್ರ್ಯ-ಪ್ರಜಾತಂತ್ರ-ಅಹಿಂಸಾತ್ಮಕ ರಾಜನೀತಿ ಇತ್ಯಾದಿಗಳ ಭಾಗವಾಗಿಯೇ ಕಾಣುತ್ತಿತ್ತು ಎಂಬ ಕಾರಣಕ್ಕಾಗಿ ಬಹುಶಃ, ಅದು ನಮ್ಮ ೮೦ರ ದಶಕದ ಚಳುವಳಿಗಿಂತ ಹೆಚ್ಚು ವಿವೇಕಪೂರ್ಣವಾಗಿತ್ತು ಅಂತ ಅನ್ನಿಸುತ್ತದೆ. ಮತ್ತು, ‘ಕವಿರಾಜಮಾರ್ಗ’ವು ತನ್ನ ಸಂದರ್ಭದಲ್ಲಿ ಕನ್ನಡದ ಭಾಷೆ-ರಾಜ್ಯಗಳನ್ನು ಜತೆಯ ಇತರ ಭಾಷೆ-ರಾಜ್ಯಗಳ ಒಟ್ಟೂ ವಿನ್ಯಾಸದಲ್ಲಿ ಹಾಗೂ ಅದಕ್ಕೂ ಮುಂದೆ ಹೋಗಿ ವಸುಧಾವಲಯದ ವಿನ್ಯಾಸದಲ್ಲಿ ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿತ್ತು. ಸೈರಣೆ ಅನುಸಂಧಾನಗಳ ಅದರ ನೀತಿಯೇ ಅದಕ್ಕೆ ಆ ಬಗೆಯ ಸ್ಥೈರ್ಯವನ್ನು ಕೊಟ್ಟಿತ್ತು. ಇದರಿಂದಾಗ, ನಮ್ಮ ಕಾಲದ ಎರದು ಸಂದರ್ಭಗಳಲ್ಲಿ ಉಳಿಯದೆ ಹೋದ ವಿವೇಕವನ್ನು ಅದು ರಕ್ಷಿಸಿಕೊಂಡಿತ್ತು.

ಕನ್ನಡವನ್ನು ಉಳಿಸುವ ಮಾತು

ಈತನಕ ಅದೇ ಸೀಮಿತತೆಯಲ್ಲಿ ಮುಂದುವರಿದುಕೊಂಡು ಬಂದಿರುವ ೮೦ರ ದಶಕದ ಚಲುವಳಿಯು ‘ಕನ್ನಡವನ್ನು ಉಳಿಸುವ’ ಬಗ್ಗೆಯೇ ಏಕಾಗ್ರ ಚಿಂತನೆ ನಡೆಸಿದೆ ಮತ್ತು ಆ ದಿಶೆಯಲ್ಲೇ ತನ್ನ ಪ್ರಯತ್ನಗಳನ್ನು ಕೇಂದ್ರೀಕರಿಸಿದೆ. ಅದಲ್ಲದೆ, ಈಗ ೯೦ರ ದಶಕದ ಜಾಗತೀಕರಣದ ಹುಯ್ಯಲಿನಲ್ಲಿ ಮುಂಗಾಣದೆ ಕಂಗಟ್ಟಿರುವ ನಮ್ಮ ಅನೇಕ ಲೇಖಕರು ವಿದ್ಯಾವಂತರುಗಳೂ ‘ಕನ್ನಡವನ್ನು ಉಳಿಸುವ’ ಬಗ್ಗೆ ಕಾತರರಾಗಿದ್ದಾರೆ. ಈ ಒತ್ತಡಗಳಲ್ಲಿ ನಮ್ಮ ಸರ್ಕಾರವೂ ಕನ್ನಡವನ್ನು ಉಳಿಸಲಿಕ್ಕೆಂದು ಪ್ರಾಧಿಕಾರಗಳೇ ಮೊದಲಾದ ಕಾರ್ಯತಂತ್ರಗಳನ್ನು ಯೋಜಿಸುತ್ತದೆ.

‘ಉಳಿಸಬೇಕು’ ‘ಉಳಿಸುತ್ತೇವೆ’ ಎಂಬ ಈ ಚಪಲ ಅಥವಾ ಛಲದಲ್ಲೇ ಕೊಂಚ ವಿಕೃತಿಯಿದೆಯೋ ಎನ್ನುವುದು ನನ್ನ ಸಂಶಯ. ‘ಹಿಂದುಧರ್ಮವನ್ನು ಉಳಿಸಬೇಕು’ ಎಂದು ಪ್ರತಿಜ್ಞೆ ಕೈಗೊಂಡಂತಿರುವ ನಮ್ಮ ಹಿಂದು ವಾದಿಗಳನ್ನು ನಾವು ಕಂಡಿದ್ದೇವೆ. ಈ ಸಂಬಂಧದಲ್ಲಿ ಸ್ವಾಮಿ ವಿವೇಕಾನಂದರ ಉದ್ಬೋಧಕವಾದ ಒಂದು ಅನುಭವಿದೆ; ಅದು ಅವರೇ ಸ್ವತಃ ಹೇಳಿದ್ದು ಮತ್ತು ಅವರ ಸಮಗ್ರ ಕೃತಿಗಳಲ್ಲಿ ಅಧಿಕೃತವಾಗಿ ದಾಖಲಾಗಿರುವಂಥದು. ಅವರ ಜೀವಿತದ ಅಂತಿಮ ವರ್ಷಗಳಲ್ಲಿ ನಡೆದ ಘಟನೆ ಇದು.

ಆಗ ಅವರ ಆರೋಗ್ಯವು ಹದಗೆಟ್ಟು ವಿಶ್ರಾಂತಿಗೆಂದು ಕಾಶ್ಮೀರಕ್ಕೆ ತೆರಳಿದ್ದರು. ಅಲ್ಲಿಂದ ವಾಪಸು ಬರುತ್ತಿರುವಾಗ ದಾರಿಯಲ್ಲಿ, ಬಹಲ ಪ್ರಸಿದ್ಧವಾಗಿದ್ದ ಅಲ್ಲಿನ ಕ್ಷೀರಭವಾನಿ ದೇವಾಲಯಕ್ಕೆ ಅವರು ಭೇಟಿ ಕೊಟ್ಟರು. ದೇವಿಯ ಮೂರ್ತಿಯನ್ನು ಕಂಡು ಅವರು ಭಾವುಕರಾದರು. ಮೂರ್ತಿಯ ಎದುರುನಿಂತು ಅತ್ಯಂತ ಆರ್ತರಾಗಿ ಆಕೆಯನ್ನು ಪ್ರಶ್ನಿಸಿದರು. ‘ತಾಯಿ, ಪರದೇಶಿಯರು ಇಲ್ಲಿ ಬಂದು ದಾಳಿಮಾಡಿ ಆಕ್ರಮಿಸಿ ಹಿಂದು ಧರ್ಮಕ್ಕೆ ದೊಡ್ಡ ದೊಡ್ಡ ಆಪತ್ತನ್ನು ಉಂಟುಮಾಡಿದರು. ಇಷ್ಟಾದರೂ ನೀನು ಯಾಕೆ ಹಿಂದು ಧರ್ಮವನ್ನು ರಕ್ಷಿಸದೆ ಮೌನವಾಗಿದ್ದೀಯೆ? ಧರ್ಮವನ್ನು ರಕ್ಷಿಸಿಕೊಳ್ಳಲಿಕ್ಕಾಗಿ ಯಾಕೆ ನಿನ್ನ ಮಕ್ಕಳನ್ನು ಹುರಿದುಂಬಿಸುತ್ತಿಲ್ಲ?’ ಆಮೆಲೆ ದೇವಿಯ ಮುಂದೆ ಕಣ್ಮುಚ್ಚಿ ಮೌನದಲ್ಲಿ ನಿಂತಿದ್ದಾಗ ಅವರಿಗೆ ಗರ್ಭಗುಡಿಯಿಂದ ಒಂದು ಧ್ವನಿ ಕೇಳಿಸಿತಂತೆ-‘ಎಲ್ಲವೂ ನಿನ್ನ ಇಚ್ಛೆಯಂತೆ ನಡೆಯುತ್ತದೆ… ಅಲ್ಲದೆ, ನಿನಗೆ ಯಾಕೆ ಚಿಂತೆ? ನಾನು ನಿನ್ನನ್ನು ರಕ್ಷಿಸುತ್ತೇನೆಯೋ ಅಥವಾ ನೀನು ನನ್ನನ್ನು ರಕ್ಷಿಸುತ್ತೀಯೋ?’-ಅಂತ.

ಅವು ಮಾತ್ರವಲ್ಲ, ಇತ್ತೀಚೆಗೆ ಆರಂಭಗೊಂಡಿರುವ ಪರಿಸರ ಚಳುವಳಿಯಲ್ಲೂ ‘ಪರಿಸರವನ್ನು ರಕ್ಷಿಸುವ’ ಕೂಗು ಕೇಳಿಬರುತ್ತಿದೆ. ತೊಲ್‌ಸ್ತೊಯ್, ಗಾಂಧಿ ಮುಂತಾದವರು ಈ ಮೊದಲೇ ಈ ಒಟ್ಟೂ ಸಮಸ್ಯೆಯ ಬಗ್ಗೆ ಗಮನ ಹರಿಸಿದ್ದರು. ಆದರೆ ಅವರು, ತಮ್ಮ ಅಳವಿನ ಆಚೆಯಿರುವ ‘ಪರಿಸರ’ದ ಬಗ್ಗೆ ಯೋಚಿಸುವ ಬದಲಾಗಿ, ನಮ್ಮ ಮನುಷ್ಯರ ನೆಲೆಯಿಂದ ಯೋಚಿಸಿದರು. ಮನೋಜ್ಞವಾದ ತನ್ನ ಕಥೆಯಲ್ಲಿ ತೊಲ್‌ಸ್ತೊಯ್, ‘ನಮಗೆಷ್ಟು ಭೂಮಿಬೇಕು’-ಕಡೆಗೆ ನಮ್ಮನ್ನು ಹೂಳಲಿಕ್ಕೆ ಬೇಕಾದ್ದು ಆರಡಿ ಭೂಮಿ ಮಾತ್ರವಲ್ಲವೆ-ಅಂತ ಚಿಂತಿಸುವ ಹಾಗೆ ಮಾಡಿದ. ಗಾಂಧಿ, ಈಶಾವಾಸ್ಯದ ‘ತ್ಯೇನ ತ್ಯಕ್ತೇನ ಭುಂಜಿತಾ ಮಾ ಗೃಧಃ ಕಸ್ಯಸ್ವಿತ್ ಧನಂ’ಎಂಬ ಪ್ರಾಚೀನ ಸಮುದಾಯ ವಿವೇಕವನ್ನಾಧರಿಸಿ ಅ-ರುಚಿ.,
ಅ- ಸಂಗ್ರಹ, ಅ-ಹಿಂಸೆಗಳ ಮಾನವ ಧರ್ಮವನ್ನು ನೆನಪಿಸಿದ.

‘ಕವಿರಾಜಮಾರ್ಗ’ವು ತನ್ನ ಆ ಅಂಥ ಅಸ್ಥಿರವೆನಿಸಬಹುದಾದ ಕಾಲದಲ್ಲೂ ಕನ್ನಡದ ಉಳಿವಿನ ಬಗ್ಗೆ ವಿಚಲಿತಗೊಂಡು ಕಾತರಪಡಲಿಲ್ಲ. ತಾನು, ಅಂದರೆ ಈ ಗ್ರಂಥವು ‘ಪರಮಾನಂದಿತ ಲೋಕಮೊಪ್ಪೆ-ನೆಲೆಗೊಳ್ಗೆ-ಆಚಂದ್ರತಾರಂಬರಂ’ಎಂದು ಹಾರಯಿಸಿದ. ಕನ್ನಡದ ಒಂದು ಗ್ರಂಥವೇ ಆಚಂದ್ರತಾರಂಬರಂ’ಬಾಳುತ್ತದೆಯೆನ್ನುವ ಭರವಸೆಯಿರುವಾತನಿಗೆ ಕನ್ನಡವೂ ಹಾಗೆ ಚಿರಕಾಲ ಬಾಳುತ್ತದೆ ಎಂಬ ಸ್ಥೈರ್ಯವಿರಬೇಕಲ್ಲ? ಈ ಗ್ರಂಥಕ್ಕೆ ತನ್ನ ಚಿರಜೀವಿತಕ್ಕೆ ಅಗತ್ಯವಾಗಿ ಕಂಡದ್ದೇನು? ತಾನು ‘ಸ್ತ್ರೀ ಬಾಲ ವೃದ್ಧಾಹಿತಂ’ ಆಗಿರಬೇಕು ಮತ್ತು ಪರಮಾನಂದಿತ ಲೋಕ’ದಿಂದ ಒಪ್ಪಿತವಾಗಬೇಕು-ಎಂಬುದೇ. ‘ಪರಮಾನಂದಿತಲೋಕ’ವೆಂದರೆ, ಎದೆಯಲ್ಲಿ ಪ್ರೀತಿಯನ್ನು ಮಡುಗಟ್ಟಿಸಿಕೊಂಡಿರುವ ಸಹೃದಯತೆಯ ಸಮುದಾಯ, ಅಥವಾ ಸಮುದಾಯಸಹೃದಯತೆ. ಇದರ ಮೇಲೆ, ಯಾರು ಬಲ್ಲರು, ಚಂದ್ರತಾರೆಯರೂ ಕೂಡಿ ಇಡೀ ವಿಶ್ವವೇ ಯಾವಕ್ಷಣದಲ್ಲೂ ಸ್ಫೋಟಿಸಿ ಮಾಯವಾಗಿಬಿಡಬಹುದು. ನಮ್ಮ ಅಳವಿನ ಆಚೆಗಿರುವವುಗಳ ಬಗ್ಗೆ ಊಹಾಪೋಹ ಮಾಡುತ್ತ ಪ್ರತ್ರಸ್ತಗೊಳ್ಳುವುದು ವಿವೇಕವಂತೂ ಅಲ್ಲ.

ಕನ್ನಡವನ್ನು ಉಳಿಸುವುದಲ್ಲ, ಅದರ ಮಡಿಲೊಳಗೆ ನಮ್ಮನ್ನು ಬಾಳಿಸಿಕೊಳ್ಳುವುದು ಮತ್ತು ಅದನ್ನು ನಮ್ಮ ಪುಷ್ಟಿಗಾಗಿ ಬಳಸಿಕೊಳ್ಳುವುದು ಇವೇ ನಮ್ಮ ಅಪೇಕ್ಷೆ-ಕರ್ತವ್ಯಗಳಾಗಬೇಕು. ಇದೇನೂ ನನ್ನ ಉಪದೇಶ-ಸಂದೇಶಗಳಲ್ಲ. ಚಿಂತಕರೆಂದುಕೊಳ್ಳುವ ನಾವು ಚಿತೆಗೇರಿಸಲ್ಪಟ್ಟವರ ಹಾಗೆ, ಕನ್ನಡವನ್ನುಳಿಸಬೇಕು ಅಂತ ಹಪಹಪಿಸುತ್ತಿದ್ದರೆ, ಪತ್ರಿಕೆಗಳನ್ನೋದಿ ಚರ್ಚಿಸಿ ಊಹಾಪೋಹ ನಡೆಸದಿರುವಂಥ ‘ಅವಿದ್ಯಾವಂತ-ಸಾಮಾನ್ಯಜನ’ರೆಂಬುವವರು ಅಂಥ ತಹತಹವಿಲ್ಲದೆ, ತಮ್ಮ ಪಾಡಿಗೆ ತಾವು ಕನ್ನಡದ ಮಡಿಲಲ್ಲಿದ್ದುಕೊಂಡು ಅದನ್ನು ಬಳಸಿಕೊಳ್ಳುತ್ತ ಬಾಳಿಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಗ್ಯಾರೇಜ್ ವರ್ಕ್‌ಶಾಪ್‌ಗಳಲ್ಲಿರುವ ಜನರು ಅಥವಾ ಹೊಲದಲ್ಲಿ ಗೆಯ್ಯುವ ರೈತರು, ಇವತ್ತು ಹೊಸ ಹೊಸ ತಾಂತ್ರಿಕ ಸಲಕರಣೆಗಳು ಸರಬರಾಜಾಗಿ ಬರುತ್ತಿರುವಂತೆ, ಅವುಗಳಿಗೆ ಕನ್ನಡದ ಹೆಸರು ಸೃಷ್ಟಿಸಿಕೊಳ್ಳುತ್ತ, ತದ್ಭವಗಳನ್ನು ನಿರ್ಮಿಸಿಕೊಳ್ಳುತ್ತ, ಆ ಸಲಕರಣೆ ತಾಂತ್ರಿಕ ಕಲೆಗಳನ್ನು ಕನ್ನಡದೊಳಕ್ಕೆ ತಂದುಕೊಳ್ಳುತ್ತಿದ್ದಾರೆ; ಅರ್ಥಾತ್, ವಸುಧಾವಲಯವನ್ನು ಕನ್ನಡದೊಳಗೆ ಅರಗಿಸುತ್ತಿದ್ದಾರೆ. ಹೀಗೆ, ‘ಕವಿರಾಜಮಾರ್ಗ’ದ’‘ಆಚಂದ್ರತಾರಂಬರಂ’ಭರವಸೆಯು ನಮ್ಮ ಜನಸಮುದಾಯದ ಭರವಸೆ, ಅವತ್ತೂ ಇವೊತ್ತೂ.

೧೯೭೧ರಲ್ಲಿ ನೀನಾಸಮ್‌ನಲ್ಲಿ ಜಾಗತಿಕ ಚಲನಚಿತ್ರೋತ್ಸವವನ್ನು ನಡೆಸಿದಾಗ ಮತ್ತು ಅದಕ್ಕೆ ಮುಂದೆ ವಾರ್ಷಿಕ ಚಲನಚಿತ್ರ-ರಸಗ್ರಹಣ ಶಿಬಿರಗಳನ್ನು ನಡೆಸುವಾಗ ನಾವು ಚಿತ್ರಗಳ ಪರಿಚಯ ಪತ್ರವನ್ನು ಕನ್ನಡದಲ್ಲೆ ಮುದ್ರಿಸಿ ಹಂಚುತ್ತಿದ್ದೆವು. ಪ್ರದರ್ಶನದ ಸಮಯದಲ್ಲಿ, ಚಿತ್ರದ ಜೊತೆಜೊತೆಯಲ್ಲೇ ಮೈಕ್ರೊ ಫೋನ್ ಮೂಲಕ ಕನ್ನಡದಲ್ಲಿ ನುಡಿಟಿಪ್ಪಣಿಗಳನ್ನು ಒದಗಿಸುತ್ತಿದ್ದೆವು. ಆ ಕಾಲಕ್ಕೆ ಕೆಲವು ಕನ್ನಡ ಉತ್ಸಾಹಿಗಳು, ಇಲ್ಲಿ ಕನ್ನಡ ಚಿತ್ರಗಳನ್ನು, ಪ್ರಸಿದ್ಧ ರಾಜ್‌ಕುಮಾರ್ ಚಿತ್ರಗಳನ್ನು ನಾವು ತೋರಿಸುತ್ತಿಲ್ಲವೆಂದು ಆಕ್ಷೇಪಿಸಿ ನಮ್ಮ ಕನ್ನಡ ನಿರಭಿಮಾನವನ್ನು ಬಹಿರಂಗವಾಗಿ ಖಂಡಿಸಿದ್ದುಂಟು. ಆದರೆ ದೇಶದಲ್ಲೇ ಮೊತ್ತಮೊದಲಿಗೆ ಸಂಪೂರ್ಣವಾಗಿ ದೇಶಭಾಶೆಯನ್ನು ಬಳಸಿದ ಫಿಲ್ಮ್ ಸೊಸೈಟಿ ನಮ್ಮದಾಗಿತ್ತು. ಫಿಲ್ಮ್ ಸೊಸೈಟಿ ಎಂಬುದಕ್ಕೆ ‘ಚಿತ್ರಸಮಾಜ’ವೆಂದು ದೇಶೀಭಾಷೆಯ ಹೆಸರು ಕೊಟ್ಟುಕೊಂಡದ್ದು ಮೊದಲಿಗೆ ನಮ್ಮ ಸಂಸ್ಥೆಯೇ. ಹಾಗಂತ ಇದು ನೀನಾಸಮ್ ಸಂಚಾಲಕರ ಮಹಾವಿವೇಕ ಅಂತ ಭಾವಿಸಕೂಡದು; ಅಲ್ಲವೇ ಅಲ್ಲ. ಅದು ನಿಜವಾಗಿ ಇಲ್ಲಿನ ಜನರ ಆಶಯ ಮತ್ತು ಆದೇಶ. ಶಿರಸಾವಹಿಸಿ ಅದನ್ನು ಪಾಲಿಸದಿದ್ದರೆ ನಮ್ಮ ಪ್ರದರ್ಶನಗಳು ನಿರ್ಜನ ಪ್ರದರ್ಶನಗಳಾಗಬೇಕಿತ್ತು.

ಉಳಿಸುವುದು-ಬಳಸುವುದು ಇತ್ಯಾದಿ ಶಬ್ದಗಳನ್ನು ಹೂಡಿಕೊಂಡು ಒಂದು ವಿಶಿಷ್ತ ವಾದವನ್ನು ನಾನು ಮಂಡಿಸುತ್ತಿಲ್ಲ, ಚರ್ಚೆಗೆ ಕರೆಗೊಡುತ್ತಿಲ್ಲ. ಹೇಳಬೇಕಾದ್ದಿಷ್ಟೇ: ಉಳಿಸುವುದೆಂಬ ಕಲ್ಪನೆಯು ಒಮ್ಮೆ ನಮ್ಮ ತಲೆಯಲ್ಲಿ ಮಿಂಚಿಬಿಟ್ಟಿತೆಂದರೆ, ಆಗ ‘ಸ್ವ’ ಎಂಬುದು ಪ್ರತ್ಯೇಕಗೊಳ್ಳುತ್ತದೆ; ‘ಅನ್ಯ’ಗಳೆಲ್ಲವೂ-ಇಡೀ ಜಗತ್ತೇ-ನಮ್ಮ ಸುತ್ತ ನಮ್ಮನ್ನು ಆಕ್ರಮಿಸಲು ಹೊಂಚಿ ಕಾದಿರುವ ‘ಪ್ರತಿವಸ್ತು’ಗಳಾಗಿ ಕಾಣಿಸತೊಡಗುತ್ತವೆ; ಅಲ್ಲಿ ನಾವು ನಮ್ಮ ಪೌರುಷವನ್ನು ಉತ್ಕರ್ಷಗೊಳಿಸಿಕೊಂಡು ಅನ್ಯಗಳ ಜೊತೆ ಸ್ಪರ್ಧಿಸಿ, ಹೋರಾಡಿ ಮೋಕ್ಷಗೊಳ್ಳಬೇಕಾಗುತ್ತದೆ. ‘ಕನ್ನಡ’ವೆಂಬುದು ಪ್ರೀತಿಯ ಬಾಳುವೆಯಾಗದೆ ಪೌರುಷದ ಹೋರಾಟವಾಗುತ್ತದೆ. ಇದನ್ನೇ ನಾನು ವಿಕೃತಿಯೆಂದದ್ದು.

ಕವಿರಾಜಮಾರ್ಗ ವಿವೇಕ

ವೈಯಕ್ತಿಕವಾಗಿ ಹೇಳುವುದಾದರೆ, ಕಳೆದ ಹತ್ತಾರು ವರ್ಷಗಳಲ್ಲಿ ‘ಕವಿರಾಜಮಾರ್ಗ’ದ ಓದು ನನ್ನ ಬಹುತೇಕ ಚಟುವಟಿಕೆಗಳನ್ನು ತಿದ್ದುತ್ತ ಬಂದಿದೆ ಮತ್ತು ನನ್ನ ಚಟುವಟಿಕೆಗಳು ಈ ಗ್ರಂಥದ ನನ್ನ ಓದನ್ನು ತಿದ್ದುತ್ತ ಬಂದಿವೆ. ಹೀಗೆ ಈ ಗ್ರಂಥವು ಬರಿಯ ಪಠ್ಯವಾಗಿ ಉಳಿಯದೆ ಸತತಪ್ರಕ್ರಿಯೆಯಲ್ಲಿ ನನ್ನ ಸಹಭಾಗಿಯಾಗಿ ಒಡಗೂಡಿಕೊಂಡಿದೆ. ಈ ಪರಸ್ಪರ ಒಡನಾಟದ ಫಲಶ್ರುತಿ ಈ ಬರವಣಿಗೆ.

ಕಳೆದ ಒಂದು ನೂರು ವರ್ಷಗಲಲ್ಲಿಯೂ ಯಾಕೆ ನಾವು ಈ ಗ್ರಂಥವನ್ನು ‘ಅಲಂಕಾರಶಾಸ್ತ್ರ’ವೆಂದೇ ನಂಬಿಕೊಳ್ಳಲು ಮತ್ತು ಅರ್ಥೈಸಿಕೊಳ್ಳಲು ಹೆಣಗಿದ್ದೇವೆ ಮತ್ತು ಪುನಃ ಪುನಃ ಸಂದೇಹಗಳು ತಲೆಯೆತ್ತುತ್ತಿದ್ದಾಗಲೂ ಯಾಕೆ ಅದನ್ನು ಹತ್ತಿಕ್ಕಿಕೊಳ್ಳಲು ಪ್ರಯತ್ನಿಸಿದ್ದೇವೆ ಅಂತ ಯೋಚಿಸುತ್ತೇನೆ. ಪ್ರಾಯಃ, ನಾವು ರೂಢಿಸಿಕೊಂಡಿರುವ ಓದಿನ ಪರಿಯೇ ಇದಕ್ಕೆ ಕಾರಣ. ನಮ್ಮ ‘ಆಧುನಿಕ ಶಿಕ್ಷಣ’ ವೆಂಬುದೂ ಈ ಬಗೆಯ ಕಟ್ಟು-ಓದಿಗೆ ಕೆಲಮಟ್ಟಿಗೆ ಕಾರಣವಾಗಿರಬಹುದು. ಈ ಓದಿನ ಬಗೆಯಲ್ಲಿ ಸಾಮಾನ್ಯವಾಗಿ, ಒಂದು ಗ್ರಂಥವನ್ನು ಅದು ಇಂಥ ವಿಷಯಕ್ಕೆ ಸಂಬಂಧಪಟ್ಟುದೆಂಬ ನಮೂದನ್ನು ನಂಬಿ, ಅದೇ ಖಾನೆಯಲ್ಲಿರಿಸಿಕೊಂಡು ಓದುತ್ತೇವೆ. ಮತ್ತು ಓದುವಾಗ, ಗ್ರಂಥ ವಿಷಯಕ್ಕೆ ನೇರ ಸಂಬಂಧಿಸಿದ, ಅದರ ವ್ಯಾಪ್ತಿಯೊಳಗೇ ಬರುವ ನಮ್ಮ ಜ್ಞಾನ-ಅನುಭವಗಳನ್ನು ಮಾತ್ರವೇ ಒಳಬಿಟ್ಟುಕೊಂಡು ಅವುಗಳನ್ನಷ್ಟೇ ತೊಡಗಿಸಿಕೊಳ್ಳುತ್ತ ಓದುತ್ತೇವೆ; ವಿಷಯಕ್ಕೆ ನೇರ ಸಂಬಂಧಿಸದಿರುವ, ಆ ವ್ಯಾಪ್ತಿಯಲ್ಲಿ ಬಾರದು ಎನ್ನುವ ನಮ್ಮ ಜ್ಞಾನ-ಅನುಭವಗಳನ್ನು ಒಳಕ್ಕೆ ಕರೆದುಕೊಳ್ಳದೆ ಒತ್ತಾಯಿಸಿ ಹೊರಕ್ಕಿಟ್ಟಿರುತ್ತೇವೆ. ನಮ್ಮ ಅಜ್ಞಾ-ಅಲ್ಪಜ್ಞಾನ-ಅರ್ಧಜ್ಞಾನ ಇತ್ಯಾದಿಗಳನ್ನು ನೆನೆದುಕೊಂಡು ಓದಿನಲ್ಲಿ ಮತ್ತೂ ಮತ್ತೂ ಸಂಕೋಚಗೊಳ್ಳುತ್ತಿರುತ್ತೇವೆ. ಒಂದು ಗ್ರಂಥದ ಬಗ್ಗೆ ಸಹಜ ಕುತೂಹಲವುಂಟಾದಾಗಲೂ ಅದು ನಮ್ಮ ಪ್ರದೇಶ-ಪರಿಣಿತಿಗಳಿಲ್ಲದ ಕ್ಷೇತ್ರದ್ದು ಅಂತ ತಿಳಿದು ಅದನ್ನು ದೂರವಿಡುವುದುಂಟು. ಹೀಗೆ ನಮ್ಮ ಓದಿನಲ್ಲಿ ಅಳುಕಿ ಮುದುಡಿಕೊಳ್ಳುವುದು ನಮಗೆ ರೂಢಿಯಾಗಿಬಿಟ್ಟಿದೆ. ವಾಸ್ತವವಾಗಿ, ಜಗತ್ತಿನ ಯಾವುದೇ ಸಂಗತಿಯೂ ಭಾಷೆಯೂ ಗ್ರಂಥವೂ ಒಂದು ನಿಶ್ಚಿತ ವಿಷಯದ್ದಷ್ಟೇ ಆಗಿ ವಿವಿಕ್ತವಾಗಿ ಉಳಿದುಕೊಂಡಿರುವುದಿಲ್ಲ. ಇಂಥದ್ದೇ ನಿಶ್ಚಿತ ವಿಷಯದ್ದೆಂದು ಗಟ್ಟಿ ಗೆರೆಹಾಕಿಕೊಂಡು ರಚಿತವಾದ ಗ್ರಂಥವೂ, ಕನಿಷ್ಠ ತನ್ನ ಸಾಲುಗಳ ನಡುವಣ ತೆರಪುಗಳಲ್ಲಿ ಇನ್ನೇನೇನೋ ಸಂಗತಿಗಳನ್ನು ಪಿಸುಗುಡುತ್ತಿರಬಹುದು. ಈಗಿನ ನಮ್ಮ ರೂಢಿಯ ಕೋಣೆ-ಓದಿನಿಂದಾಗಿ, ಅನೇಕಸಲ ವಿಶಾಲವ್ಯಾಪ್ತಿಯ ‘ಕಾವ್ಯಧ್ವನಿ’ಗಳು ಕೂಡಾ ನಮಗೆ ದಕ್ಕದೆಯೇ ಹೋಗಬಹುದು. ಮುಕ್ತವಾದ ಓದಿನ ಕ್ರಮಕ್ಕೆ ನಮ್ಮನ್ನು ನಾವು ತೆರೆದುಕೊಳ್ಳಬೇಕು ಎನ್ನುವುದು ನನ್ನ ಅಪೇಕ್ಷೆ.

ಇಲ್ಲಿ, ‘ಕವಿರಾಜಮಾರ್ಗ’ವು ಕಲ್ಪಿಸಿಕೊಂಡ, ಆದರ್ಶ-ಸಂಸ್ಕೃತ-ಜಾಣ-ಸಹೃದಯ-ಸಮುದಾಯದ ಮಾತಿನ ಮತ್ತು ಓದಿನ ರೀತಿಯನ್ನು ನೆನಪಿಸಿಕೊಳ್ಳಬೇಕು. ‘ಹೇಳುವುದನ್ನು ಹದವರಿತು ಹೇಳುವ ಕೌಶಲ, ಕೇಳುವುದನ್ನು ಮೊದಲಿಗೆ ಕಿವಿದೆರೆದು ಕೇಳಿ ಅನಂತರ ಮನನಮಾಡಿ ಅರಗಿಸಿಕೊಳ್ಳುವ ಕೌಶಲ……(೧:೩೮): ಒಂದು ವಿಶಿಷ್ಟ ವಿಷಯದಲ್ಲಿ ಪರಿಣಿತಿಯಿಲ್ಲದಿರುವಾಗಲೂ ಭಾಷೆಯ ಜಾಣ್ಮೆಯಿಂದ ಅಜ್ಞಾತ ವಿಷಯವನ್ನು ಗ್ರಹಿಸುವ ಕೌಶಲ….(೧:೩೯); ಭಾಷೆಯಲ್ಲಿ ಹೆಚ್ಚಿನ ಜಾಣ್ಮೆಯಿಲ್ಲದಿದ್ದಾಗ್ಯೂ ಹಟಹಿಡಿದು ಓದುವ ಮತ್ತು ಉಕ್ತಿಯಲ್ಲಿನ ದೋಷಗಳನ್ನು ತಟ್ಟನೆ ಕಂಡು ಎತ್ತಿ ಹೇಳಬಲ್ಲ ಕೌಶಲ….(೧:೪೦)’ಇತ್ಯಾದಿ ಈ ಮಾತುಗಳಾದರೂ ಸಹಜ ಮತ್ತು ಮುಕ್ತ ಓದನ್ನೇ ಸೂಚಿಸುತ್ತವೆ.

ನನ್ನ ಈ ಬರವಣಿಗೆಯಲ್ಲಿ-ಮುಖ್ಯವಾಗಿ ಪೀಠಿಕಾ ಭಾಗಕ್ಕೆ ಸಂಬಂಧಿಸಿ-ಈತನಕ ಅನುಕ್ತವಾದ ಹಲವು ವಿಷಯಗಳನ್ನು ಮುಂದಿಟ್ಟಿದ್ದೇನೆ. ಇವೆಲ್ಲವೂ ಅನುಕ್ರಮವಾಗಿದ್ದರೂ ನಮ್ಮ ಆಳದ ಗುಪ್ತಾನುಭವದಲ್ಲಿ ಅವು ಉದ್ದಕ್ಕೂ ಕ್ರಿಯಾಶೀಲವಾಗಿದ್ದವು. ಅಂತಲೇ ನನ್ನ ನಂಬಿಕೆ. ಅದಲ್ಲದಿದ್ದರೆ ಈ ಅವಧಿಯಲ್ಲಿ ‘ಕವಿರಾಜಮಾರ್ಗ’ದ ಬಗ್ಗೆ ಇಷ್ಟೊಂದು ಸಂಶೋಧನೆ-ಚಿಂತನೆ-ಚರ್ಚೆ-ಜಿಜ್ಞಾಸೆಗಳು ನಡೆಯುತ್ತಲೇ ಇರಲಿಲ್ಲ; ಆ ಬಗೆಯ ಶ್ರದ್ಧೆಯು ನಮ್ಮಲ್ಲಿ ಹುಟ್ಟಿಕೊಳ್ಳುತ್ತಿರಲಿಲ್ಲ: ಮತ್ತು ಈಗ ಸಾಮಾನ್ಯವಾಗಿ ಎಲ್ಲರೂ ತಿಳಿಯುವಂತೆ, ಇದು ನಮ್ಮ ಕಾವ್ಯೇತರ ಗಣ್ಯಗ್ರಂಥಗಳಲ್ಲಿ ಸರ್ವಪ್ರಥಮವೆಂದು ಪರಿಗಣಿತವಾಗುತ್ತಿರಲಿಲ್ಲ.

ಈ ಶತಮಾನ ಅಂತ ಅಲ್ಲ, ರಚಿತವಾದಂದಿನಿಂದ ಸಹಸ್ರಮಾನ ಮಿಕ್ಕು ‘ಕವಿರಾಜಮಾರ್ಗ’ವು ಸತತವಾಗಿ ಗೌರವಪ್ರಶಂಸೆಗಳ ಸುರಿಮಳೆಯಲ್ಲಿ ನೆನೆದುಕೊಳ್ಳುತ್ತ ಬಂದಿದೆ. ಈ ಗ್ರಂಥದ ಕರ್ತೃ ಶ್ರೀವಿಜಯನನ್ನು ವೈದಿಕನಾದ ದುರ್ಗಸಿಂಹನು(ಕ್ರಿ.ಶ.೧೦೩೦)
‘ಶ್ರೀವಿಜಯರ ಕವಿರಾಜಮಾರ್ಗಂ|ಭಾವಿಪ ಕವಿಜನರ
ಮನಕೆ ಕನ್ನಡಿಯುಂ ಕೆಯ್|ದೀವಿಗೆಯಯುಮಾದುದರಿಂ
ಶ್ರೀವಿಜಯರ್ ದೇವರನೇವೆಣ್ಣಿಪುದೋ’
ಅಂತ ಅತ್ಯುನ್ನತ ಗೌರವದಿಂದ ಕೊಂಡಾಡಿದ್ದಾನೆ;ಕೇಶಿರಾಜನು(ಕ್ರಿ.ಶ.ಸು.೧೨೩೫) ಪಂಪನಿಂದ ಮೊದಲುಗೊಂಡು ತಾನು ಲಕ್ಷ್ಯವಾಗಿಟ್ಟುಕೊಂಡ ಕವಿಲೇಖಕರೆಲ್ಲರನ್ನೂ ಏಕವಚನದಲ್ಲಿ ಪ್ರಸ್ತಾಪಿಸಿ ಶ್ರೀವಿಜಯನನ್ನು ಮಾತ್ರ, ‘ಶ್ರೀವಿಜಯರ,…..’ಮುಂತಾಗಿ ಬಹುವಚನದಿಂದ ಉಲ್ಲೇಖಿಸಿದ್ದಾನೆ. ನಮ್ಮ ಕಾಲಕ್ಕಾದರೆ, ‘ಉಪಲಬ್ಧವಾದ ಪ್ರಪ್ರಥಮ ಪ್ರಾಚೀನಗ್ರಂಥ’ಎನ್ನುವ ವಿಶೇಷ ಮಹತ್ವವು ಇದಕ್ಕೆ ಲಭಿಸಿತು. ಹಿಂದಿನ ಕಾಲದಲ್ಲಿ ಬಹುಶಃ ಇದಕ್ಕೆ ಈ ಬಗೆಯ ಮಹತ್ವವಿರಲಿಲ್ಲ; ಆ ಕಾಲಕ್ಕೆ ‘ಕವಿರಾಜಮಾರ್ಗ’ಕ್ಕೆ ಮುಂಚಿನ ಗ್ರಂಥಗಳೂ ಲಭವಿದ್ದವು.

ಇನ್ನು ಅಲಂಕಾರಶಾಸ್ತ್ರವಾಗಿ ಈ ಗ್ರಂಥವು ನಮ್ಮ ಪ್ರಾಚೀನರಿಗೆ ಭಾರೀ ಉಪಕಾರಕವಾಗಿತ್ತೆ ಮತ್ತು ಆ ಕಾರಣಕ್ಕಾಗಿ ಮಹತ್ವದ್ದೆನಿಸಿತೆ ಅಂತ ಯೋಚಿಸಿದರೆ, ಹೌದು ಅಂತ ಒಪ್ಪುವುದು ಕಷ್ಟವೇ. ೧ನೇ ನಾಗವರ್ಮನ’ ಕಾವ್ಯಾವಲೋಕನೆ’ವು ಕನ್ನಡ ಕವಿಗಳಿಗೆ ಆಧಾರಕ್ಕಿದ್ದ ಏಕೈಕ ಕನ್ನಡ-ಛಂದಶ್ಯಾಸ್ತ್ರಗ್ರಂಥವಾಗಿತ್ತು ಮತ್ತು ಕೇಶಿರಾಜನ ‘ಶಬ್ದಮಣಿದರ್ಪಣ’ವು ಏಕೈಕ ಕನ್ನಡ-ವ್ಯಾಕರಣ ಗ್ರಂಥವಾಗಿತ್ತು; ‘ಕವಿರಾಜಮಾರ್ಗ’ಕ್ಕೆ ಆ ಬಗೆಯ ಏಕೈಕವೆಂಬ ಗಣನೆಯಿದ್ದಿರಲಾರದು. ಏಕೆಂದರೆ, ಕನ್ನಡ ಅಲಂಕಾರಶಾಸ್ತ್ರವೆಂಬುದು ಸಂಸ್ಕೃತ ಅಲಂಕಾರಶಾಸ್ತ್ರಕ್ಕಿಂತ ತುಂಬ ಭಿನ್ನವಾಗಿರಬೇಕಾಗಿರಲಿಲ್ಲ. ‘ಕವಿರಾಜಮಾರ್ಗ’ವು ಅಲಂಕಾರಗಳ ನಿರೂಪಣೆಯಲ್ಲಿ ದಂಡಿ-ಬಾಮಹರನ್ನೇ ಬಹುಮಟ್ಟಿಗೆ ನಕಲು ಮಾಡಿದೆ. ನಮ್ಮ ಮಾರ್ಗಕವಿಗಳೆಲ್ಲರೂ ಸಂಸ್ಕೃತದಲ್ಲಿ ವಿಶೇಷ ಪರಿಣಿತಿಯುಳ್ಳವರಾಗಿದ್ದರು ಮತ್ತು ಭರತನ ‘ನಾಟ್ಯಶಾಸ್ತ್ರ’ದಿಂದ ಮೊದಲುಗೊಂಡು ಸಂಸ್ಕೃತ ಕಾವ್ಯಶಾಸ್ತ್ರವನ್ನು ಕರಗತಮಾಡಿಕೊಂಡಿದ್ದರು; ಇದನ್ನು ಅವರು ತಮ್ಮ ಕಾವ್ಯಗಳಲ್ಲೇ ಹೇಳಿಕೊಂಡಿದ್ದಾರೆ ಕೂಡಾ. ಇಂಥ ಸನ್ನಿವೇಶದಲ್ಲಿ ಅವರು ‘ಕವಿರಾಜಮಾರ್ಗ’ದಿಂದ ಪಡೆಯಬಹುದಾದ ಅಲಂಕಾರಶಾಸ್ತ್ರ ಸಂಗತಿಗಳು ಅತ್ಯಲ್ಪವಾಗಿದ್ದವು. ಪಂಪನು, ‘ಧ್ವನಿಯೆನಿಸಿದಳಂಕಾರ ಧ್ವನಿಯೆಸೆವಿನಂ…..’(ಆದಿಪುರಾಣ) ಮುಂತಾಗಿ ಮತ್ತು ರನ್ನನು, ಪದಿನಾರವಲ್ಲಲಂಕ್ರಿಯಾರಚನೆ ಮೂವತ್ತಾರುನೇರ್ಪಟ್ಟವು…..’(ಗದಾಯುದ್ಧ) ಮುಂತಾಗಿ ಹೇಳಿರುವುದರಿಂದ, ‘ಕವಿರಾಜಮಾರ್ಗ’ದ ವಿಶೇಷ ಅಲಂಕಾರಸಂಗತಿಗಳು ನಮ್ಮ ಕವಿಗಳ ಗಮನವನ್ನು ಸೆಳೆದಿತ್ತು ಅಂತ ಹೇಳಬಹುದು. ನಿಜ. ಆದರೆ ಈ ಕನ್ನಡದ ಗ್ರಂಥವು ನಮ್ಮ ಹಿಂದಿನ ಕವಿಗಳಿಗೆ ಬಹುಮುಖ್ಯ ಅಥವಾ ಏಕೈಕ ‘ಕವಿಶಿಕ್ಷಾಗ್ರಂಥ’ವಾಗಿತ್ತು ಅಂತ ಪ್ರತಿಪಾದಿಸಲಿಕ್ಕಾಗುವುದಿಲ್ಲ. ಹೀಗಿದ್ದರೂ ಇದು, ‘ಕಾವ್ಯಾವಲೋಕನ’ಕ್ಕಿಂತ ಅಥವಾ ಏಕೈಕವಷ್ಟೇ ಅಲ್ಲದೆ ಬಹುಶ್ರೇಷ್ಟವೂ ಆಗಿರುವ ‘ಶಬ್ದಮಣಿದರ್ಪಣ’ಕ್ಕಿಂತ ಹೆಚ್ಚಿನ ಪ್ರಸಿದ್ಧಿ ಮಾನ್ಯತೆಗಳನ್ನು ಗಳಿಸಿಕೊಂಡಿಲ್ಲ, ಯಾಕೆ?

ಒಟ್ಟಿನಲ್ಲಿ ನನ್ನ ಅನುಮಿತಿ ಇದು: ಚಿರಕಾಲವೆನ್ನುವಷ್ಟು ದೀರ್ಘಕಾಲ ಕನ್ನಡ ಸಮುದಾಯವು-ಒಳಗಿದ್ದು ಬಾಳಿಕೊಳ್ಳಲಿಕ್ಕೆ, ಅಗತ್ಯವೂ ಉಪಯುಕ್ತವೂ ಆದ ‘ಕನ್ನಡ ಜಗತ್ತ’ನ್ನು ಅದು ಸೃಷ್ಟಿಸಿಕೊಟ್ಟಿತು ಎನ್ನುವುದೇ ‘ಕವಿರಾಜಮಾರ್ಗ’ದ ಮಹತ್ತರ ‘ಅತಿಶಯ”ಮತ್ತು ಈ ‘ಅತಿಶಯ’ವು ಅವತ್ತಿನಿಂದ ಇವತ್ತಿನ ತನಕ ಉದ್ದಕ್ಕೂ ಕನ್ನಡಿಗರಿಗೆ-ಸ್ಪಷ್ಟವಾಗಿಯೋ ಅಸ್ಪಷ್ಟವಾಗಿಯೋ-ಅಂತರಾಳದಲ್ಲಿ ಅರುಕಿಸಿ ನೆಟ್ಟುಕೊಂಡಿದೆ ಎಂಬ ಕಾರಣಕ್ಕಾಗಿ, ಅದಕ್ಕಾಗಿ ಮಾತ್ರವೇ, ಈ ಗ್ರಂಥವು ಮೀಸಲು ಮಹತ್ವವನ್ನು ಪದೆದುಕೊಂಡಿದೆ.
ಅದಾವುದು ಈ ‘ಕನ್ನಡ ಜಗತ್ತು’?
ಉತ್ತರಕ್ಕಾಗಿ, ‘ಕವಿರಾಜಮಾರ್ಗ’ದ ‘ಕಾವೇರಿಯಿಂದ…..’ಇತ್ಯಾದಿ (ವಸುಧಾವಲಯಸೂತ್ರ)ಪದ್ಯಕ್ಕೆ ಮರಳಬೇಕು. ಈ ಸೂತ್ರದಲ್ಲಿ ನಾಡು(ರಾಜ್ಯ), ಜನಪದ, ಭಾಷೆ ಈ ಮೂರೂ *ಆ ಕನ್ನಡ*(ದ.ಅಕ್ಷರ)ದಲ್ಲಿ ಭಾವಿಸಿದ್ದು ಎಂದಿದೆ. ಇಲ್ಲಿ, *ಆ* ಎನ್ನುವ ವಿಶಿಷ್ಟತೆಯ ನಿರ್ದೇಶನವನ್ನು ಗಮನಿಸಬೇಕು. ಸಾಮಾನ್ಯವಾಗಿ ‘ಕನ್ನಡ’ ಎನ್ನುತ್ತೇವಲ್ಲ ಅದಲ್ಲ ಇದು; ವಿಶಿಷ್ಟವಾದ ಒಂದು ಸಂಗತಿಗೆ ಕೊಟ್ಟುಕೊಂಡಿರುವ ವಿಶಿಷ್ಟ ಹೆಸರು, *ಆ ಕನ್ನಡ.* *ಆ ಕನ್ನಡ*ವೆಂಬುದು ಒಂದು ಮೂಲದ್ರವ್ಯ. ಆ ಮೂಲದ್ರವ್ಯದಿಂದ, ಕಾಲಕಾಲಕ್ಕೆ, ಭಿನ್ನಭಿನ್ನವಾದ ಭೌತಿಕ ಚಹರೆ ಚರ್ಯೆಗಳುಳ್ಳ ರಾಜ್ಯ, ಜನಪದ, ಭಾಷೆ ಇತ್ಯಾದಿ ಕಲ್ಪನೆಗಳು ಮತ್ತು ಅಂಕಿತಗಳು (ನಾಮ-ರೂಪಗಳು) ನಿರ್ಮಾಣಗೊಳ್ಳುತ್ತಿರುತ್ತವೆ. ಆ ‘ಮೂಲದ್ರವ್ಯ’ವಾದರೂ ಯಾವುದು? ಈ ಸಮುದಾಯದ ಸಮಷ್ಟಿ ಚಿತ್ತವೇ-ಸಮಷ್ಟಿಚಿತ್ತದ ಸತ್ವ. ಸತ್ವಗಳೇ ಮೂಲದ್ರವ್ಯ; ಅದೇ *ಆ ಕನ್ನಡ*. ಹೀಗೆ, ಈ ಸಮುದಾಯದ ಸಮಷ್ಟಿಚಿತ್ತದಲ್ಲಿ, ಅರ್ಥಾತ್ * ಆ ಕನ್ನಡ*ದಲ್ಲಿ ಕಾಲಕಾಲಕ್ಕೆ, ಭಿನ್ನಭಿನ್ನವಾದ ಕಾಲ್ಪನಿಕ ಮತ್ತು (ಅನಂತರ) ಭೌತಿಕ ಆಕೃತಿಗಳು ಮೂಡಿಕೊಳ್ಳುತ್ತ ಹೋಗುತ್ತವೆ. ಇಲ್ಲಿ ಕಾಲಕಾಲಕ್ಕೆ, ಹೊರ ಚಹರೆಯ ಕನ್ನಡಗಳು ಬದಲಾಗುತ್ತ ನಡೆದರೂ ಆ ಸಂರಚನೆಗಳೆಲ್ಲಾ ವಿರಚಿಸುತ್ತ ಹೋಗುವ *ಆ ಕನ್ನಡ*ವೆಂಬುದು ಬದಲಾಗದೆ ಸ್ಥಿರವಾಗಿ ಉಳಿದಿರುತ್ತದೆ.

ನೃಪತುಂಗನ ಕಾಲದಲ್ಲಿ ರಾಜ್ಯವು ಕಾವೇರಿಯಿಂದ ಗೋದಾವರಿಯ ತನಕದ್ದಾಗಿತ್ತು. ಈಗ ಅದು ಕಾವೇರಿಯಿಂದ ಕೃಷ್ಣೆಯ ತನಕದ್ದಾಗಿದೆ. ‘ಕವಿರಾಜಮಾರ್ಗ ಸೂತ್ರ’ವು ಈ ಬಗೆಯ ಅನಂತ ಅಸಂಖ್ಯಾತ ಪರಿವರ್ತನೆಗಳಿಗೆ ಅವಕಾಶವನ್ನು ಕಲ್ಪಿಸಿಟ್ಟಿದೆ. ಕಾವೇರಿ ಗೋದಾವರಿಗಳು ಒಂದು ಕಾಲಕ್ಕೆ, ನಿಶ್ಚಲ ನದೀರೇಖೆಗಳಾಗಿ ಅರ್ಥವಾಗಬಹುದು: ಇನ್ನೊಂದು ಕಾಲಕ್ಕೆ ಅವು ಜೀವ ಸಂಪತ್ತಿನ ಸೆಲೆಗೆ ಕೊಟ್ಟುಕೊಂಡ ಅಂಕಿತಗಳಾಗಬಹುದು, ಐತಿಹ್ಯ ಪ್ರತಿಮೆಗಳಾಗಬಹುದು. ಅದರಿಂದಲೇ, ನೃಪತುಂಗನ ಕಾಲದಿಂದ ಈತನಕ ಕನ್ನಡ ರಾಜ್ಯದ ನಕ್ಷೆಗಳು, ಕನ್ನಡ ಭಾಷೆಯ ರೂಪಗಳು ಮುಂತಾದುವು ಬದಲಾಗಿ ಕಾಣಿಸಿಕೊಂಡರೂ *ಆ ಕನ್ನಡ* ದ್ರವ್ಯಕ್ಕೆ ಆಪೋಹವುಂಟಾಗಲಿಲ್ಲ. ಕನ್ನಡಗಳು ಚರ; *ಆ ಕನ್ನಡ*ವು ಸ್ಥಿರ.

*ಆ ಕನ್ನಡ*ವೆನ್ನುವುದುದನ್ನು ಒಂದು ಆಕೃತಿಯಾಗಿ ಪರಿಭಾವಿಸಿದರೆ, ಅದನ್ನು ‘ಕನ್ನಡ ಜಗತ್ತು’ ಎನ್ನಬಹುದು. *ಆ ಕನ್ನಡ*ವೆನ್ನುವ ಸಮುದಾಯ ಚಿತ್ತದ್ರವ್ಯವು ತಾನೇ ಒಂದು ಜಗತ್ತಾಗಿದೆ. ಅಲ್ಲಿ ಅದು ತನ್ನದೇ ರುಚಿಯ ಅಸಂಖ್ಯಾತ ಆಕೃತಿ ಕಲ್ಪನೆಗಳನ್ನು ಸ್ಫುರಿಸುತ್ತ ಹೋಗುತ್ತದೆ ಮತ್ತು ಅಂಥ ಅಸಂಖ್ಯಾತ ಆಕೃತಿಗಳ ನಿರ್ಮಿತಿಗೆ ಬೇಕೆನ್ನುವಷ್ಟು ವಿಶಾಲವಾದ ಅವಕಾಶವನ್ನು ತೆರೆದುಕೊಂಡಿರುತ್ತದೆ. ಹೀಗೆ ವಿಫುಲವಾದ ಅವಕಾಶಗಳಿರುವ, ವ್ಯಾಪಕ ಆಕಾಶವಿರುವ ಜಗತ್ತು ಅದು. ಈ ಆಕಾಶಜಗತ್ತಿನಲ್ಲಿ ಕಾಲಕಾಲಕ್ಕೆ, ಚರಕನ್ನಡದ ವಾಸ್ತುಸಂಕೀರ್ಣಗಳು ಮೂಡಿಕೊಳ್ಳುತ್ತ ಮರೆಯಾಗುತ್ತ ಸಂಚಲಿಸುತ್ತಿರುತ್ತವೆ.

ಇದಾದಮೇಲೆ, ಈ ಜಗತ್ತು ಮತ್ತು ಹೊರಗಿನ ವಿಶ್ವಗಜತ್ತುಗಳ ನಡುವೆ ‘ಕವಿರಾಜಮಾರ್ಗಸೂತ್ರ’ವು ಕಲ್ಪಿಸುವ *ವಿಲೀನ*ಸಂಬಂಧವನ್ನು ಪರಿಗಣಿಸಬೇಕು. ಅದು ಹೀಗೆ: ೧. ವಿಶ್ವಜಗತ್ತಿನಲ್ಲಿ ಇದು ವಿಲೀನವಾಗಿದೆ, ಸಮರಸವಾಗಿ ಬೆರೆತುಕೊಂಡಿದೆ: ೨. ವಿಲೀನವಾಗಿಯೂ ತನ್ನ ವಿಶಿಷ್ಟತೆಯನ್ನು ಕಳೆಯದೆ, ಕಾಣುವಂತೆ ಉಳಿಸಿಕೊಂಡಿದೆ; ೩. ಮತ್ತು, (ಇನ್ನೊಂದು ರೀತಿಯಿಂದ) ಇದು ವಿಶ್ವಜಗತ್‌ಸಮಸ್ತವನ್ನೂ ತನ್ನಲ್ಲಿ ವಿಲೀನಗೊಳಿಸಿಕೊಂಡು (ಅರಗಿಸಿಕೊಂಡು) ವಿಶ್ವಜಗತ್ತಿನಷ್ಟೇ *ವಿಷದ*(ಅಪಾರ)ವಾಗಿದೆ. ‘ವಿಲೀನ’ವಾಗಿದ್ದೂ ‘ವಿಶಿಷ್ಟ’ವಾಗಿರಲು ಹೇಗೆ ಸಾಧ್ಯ? *ವಿ-ಲೀನ*ಎನ್ನುವ ಶಬ್ದ ಕಲ್ಪನೆಯೇ ಅದನ್ನು ಸಾಧ್ಯಗೊಳಿಸುತ್ತದೆ. *ವಿ-ಲೀನ*ಎಂಬುದು, ‘ವಿಶೇಷ-ಲೀನ’ವೂ ಹೌದು, ‘ವಿರುದ್ಧ-ಲೀನ’ವೂ ಹೌದು. ಶಬ್ದವು ದ್ವಂದ್ವಾರ್ಥಕವಾಗಿರುವ ಹಾಗೆ ಈ ಸಂಬಂಧವೂ ‘ಆಕರ್ಷಣ ಅಪಲರ್ಷಣ’ಗಳ ದ್ವಂದ್ವವುಳ್ಳದ್ದು. ಇಂಥ ಆಕರ್ಷಣ-ಅಪಕರ್ಷಣಗಳ ಸಂಬಂಧದಲ್ಲಿ ವಿಶ್ವಜಗತ್ತಿನೊಡನೆ ಒಂದಾಗುತ್ತ, ಬೇರಾಗುತ್ತ, ವಿರುದ್ಧಸೆಳೆತಗಳ ಭಾರಭರದಲ್ಲಿ ಕ್ಷಣಕ್ಷಣವೂ ಹರಳಾಗುತ್ತ, ನವೋನವ ಆಕೃತಿಗಳನ್ನು ತಾಳುತ್ತ ಬಾಳುವ, ‘ಜಗತ್ಯಾಂ ಜಗತ್’, ಈ *ಕನ್ನಡ ಜಗತ್ತು*. ‘ಸ್ವ’ ಮತ್ತು ‘ಅನ್ಯ’ಗಳು ಪರಸ್ಪರ ‘ಪ್ರತಿ’(ಎದುರು) ಅಲ್ಲ, ಅವು ‘ಸಹ’(ಒಡನಿರುವುವು) ಎಂಬ ನಂಬಿಕೆಯೂ, ಪರಧರ್ಮಮಂ ಪರವಿಚಾರಮುಮಂ ಸೈರಿಸುವ ಕಸವರನೀತಿಯೂ ಈ ‘ಜಗತ್ಯಾಂ ಜಗತ್’ಎಂಬ ಪ್ರಾತಿಭ ಕಲ್ಪನೆಯ ಮೂಲಾಧಾರ.

‘ಕವಿರಾಜಮಾರ್ಗಸೂತ್ರ’ಕ್ಕೆ ಸ್ಪಂದಿಸಿ ಅನುರಣಿಸುತ್ತಿರುವಂತೆ ತೋರುವ ಅಂಬಿಕಾತನಯದತ್ತರ ಕೆಳಗಿನ ಸಾಲುಗಳನ್ನು (‘ನನ್ನದು ಈ ಕನ್ನಡ ನಾಡು’)ನೋಡಬೇಕು:

ನನ್ನದು ಈ ಕನ್ನಡ ನಾಡು ನನ್ನದೋ
ಅವರಿವರದೆಂದು ಎಂದೂ ಎನ್ನದೋ
ಅದು ನನ್ನದೆಂತು ಹಾಗೇ ನಿನ್ನದೋ…..(ಶ್ಲೇಷೆಗಳನ್ನು ಗಮನಿಸಿ)
ಕನಸಿಟ್ಟ ತತ್ತಿಗಳ ಗೂಡು ನೋಡದೋ
ಮೈಗೊಂಡು ಬಂತು ಕಣ್ಮೂಡಿ……….
……ತನ್ನ ತಾನರಿದು ಹೃದಯ ಕಣ್ದೆರೆದು
ಪೂರ್ವಭವ ಹರಿದು
ಕನ್ನಡವೊಟಿ ಹುಟ್ಟಿತೋ……….
ಕಣಸೆಂದ ಕಾಣ್ಕೆಗಳ ಕೂಟ ಕಂಡೆಯೋ
ಒಂದೊಂದು ಮೂರ್ತಿ ಒಡಮೂಡಿ
ಆವರಣವನ್ನೇ ಒಡಗೂಡಿ
ಸಾಕ್ಷಾತ್ತು ಆಯ್ತು…..
ಭಾರತೀಯ ಜೋಡಿ ಕನ್ನಡದ ಮೋಡಿ ಭೂದೇವಿ ಮಾಡಿ ಎರಕವನೆ ಹೊಯ್ದಿರೆ
ರಸದೊಳಗೆ ರಸವು ಹಲಬಣ್ಣ ಹೊಸವು….
ಇಂದಿನದಲ್ಲೀ *ಹಾಡು*
*ನಾಡಿದಿನಾ* ಕನ್ನಡ ನಾಡು
*ಆ ಕನ್ನಡ*ನಾಡು ನನ್ನದು
ನನ್ನದು *ಈ ಕನ್ನಡ*ನಾಡು….(ಒತ್ತುಗಳು ನನ್ನವು.)

ಯಾವುಯಾವುದೋ ಕೊಂಡಿಗಳು ತಳುಕುಗೊಳ್ಳುತ್ತ ದೀರ್ಘ ಬೆಳೆದ ಈ ‘ಕವಿರಾಜಮಾರ್ಗ ಕಥಾಕಾಲಕ್ಷೇಪ’ವನ್ನು(-ಪ್ರಾಚೀನ ನವೀನ ಕಥಾನಕಗಳು ಪರಸ್ಪರ ವಿಕ್ಷೇಪಗೊಂಡಿರುವುದೂ ಉಂಟಲ್ಲ ಇಲ್ಲಿ-) ಮುಗಿಸಬೇಕು; ಕೆಲವು ತುದಿಮಾತುಗಳಿಂದ ಬರವಣಿಗೆಯನ್ನು ತೃಪ್ತಗೊಳಿಸಿ ಮುಗಿಸುತ್ತೇನೆ.

‘ಕವಿರಾಜಮಾರ್ಗ’ದ ಸ್ವರೂಪ ಕುರಿತು ಅನುಮಾನವೆತ್ತಿ ಈ ಬರವಣಿಗೆಯನ್ನು ಪ್ರಾರಂಭಿಸಿದೆ. ಇನ್ನಷ್ಟು ಬರೆದಾದಮೇಲೂ ಅದನ್ನು ಖಚಿತವಾಗಿ ನಿರ್ವಚಿಸಿ ಹೇಳಲಾರೆ. ಸ್ಥೂಲವಾಗಿ ಹೇಳಬಹುದಾದರೆ, ಇದು ವಿಧ್ವತ್ ಗ್ರಂಥವಷ್ಟೇ ಅಲ್ಲ, ಅಪರೂಪವಾದ ಪ್ರತಿಭಾಗ್ರಂಥ ಎನ್ನಬಹುದು. ಇದರ ಕಾರಣನು ನೃಪತುಂಗ ಮತ್ತು ಕರ್ತೃ ಶ್ರೀವಿಜಯ. ಶ್ರೀವಿಜಯನು ರೂಢಿಯ ಕಾವ್ಯಮಾರ್ಗವೊಂದನ್ನು ಬರೆದಿದ್ದನೋ ಒಲ್ಲವೋ-ನಮಗಂತೂ ಆತನ ಬೇರೆ ಗ್ರಂಥಗಳು ಲಭ್ಯವಾಗಿಲ್ಲ. ಈ ಕಾರಣ, ಆತನು ಬಲು ಪ್ರೀತಿ ಹೆಮ್ಮೆಗಳಿಂದ ತನ್ನನ್ನು ಹಾಗೆ ಹೊಗಳಿಕೊಂಡಿದ್ದರೂ ನಾವು ಆತನನ್ನು ಕವಿ-ಮಹಾಕವಿ ಅಂತ ರೂಢಿಯ ಅರ್ಥದಲ್ಲಿ ಕರೆಯುವುದು ಕಷ್ಟವೇ. ವಾಸ್ತವವಾಗಿ ಅವನು ಕವಿಗಳ ಕವಿ; ಕನ್ನಡದಲ್ಲಿ ಮುಂದೆ ನಿರ್ಮಾಣ ಮಾಡಿದವರೆಲ್ಲರ ನಿರ್ಮಾಪಕ ಅವನು. ಅವನ ಗ್ರಂಥವಿಲ್ಲದಿರುತ್ತಿದ್ದರೆ, ಅದಾಗಿ ನೂರು ವರ್ಷಗಳೊಳಗೆ, ಈಗಲೂ ಕನ್ನಡದ ಮಹೋನ್ನತ ಕೃತಿಗಳೆನಿಸುವ ಪಂಪನ ಕಾವ್ಯಗಳು ಇರುತ್ತಿರಲಿಲ್ಲ; ಅಷ್ಟೇಕೆ, ಚಾವುಂಡರಾಯನ ‘ಅತಿತುಂಗಾಕೃತಿ’ಯಾದ ಬಾಹುಬಲಿಯು ಬೆಟ್ಟದಮೇಲೆ ಬಂಡೆಮೆಯ್ಯಾಗಿ ಬಹುಶಃ, ನಿಂತಿರುತ್ತಿರಲಿಲ್ಲ. ಶ್ರೀವಿಜಯನು ನಿಸ್ಸಂದೇಹವಾಗಿ ‘ಕನ್ನಡಮಾರ್ಗಕಾರ’, ಅಥವಾ ಇನ್ನೊಂದು ಪರಿಪ್ರೇಖ್ಶ್ಯದಿಂದ-ಕನ್ನಡ ಸಮುದಾಯದ ಸಹಸ್ರವರ್ಷಗಳ ಅಭೀಪ್ಸೆ ಪ್ರಯತ್ನಗಳು ಮೊದಲಿಗೆ ‘ಕವಿರಾಜಮಾರ್ಗ’ವಾಗಿ ಆನಂತರ ಪಂಪನ ಕವಿತೆಯಾಗಿ ಬಂಡೆ ಬಾಹುಬಲಿಯಾಗಿ ಹರಳುಗಟ್ಟಿಕೊಂಡವು-ಅಂತ ಹೇಳಬಹುದು.

‘ಕಾವೇರಿಯಿಂದ……..’ಇತ್ಯಾದಿ ಪದ್ಯವು ಕನ್ನಡದ ‘ಬೀಜಮಂತ್ರ’ ಅಂತ ಮೊದಲಿಗೆ-ಉದ್ದೇಶಪೂರ್ವಕವಾಗಿ-ಹೇಳಿದ್ದೇನೆ. ಭಾಷೆಯಲ್ಲಿ ಸಾಮಾನ್ಯವಾಗಿ, ‘ಶಾಸ್ತ್ರವಾಕ್’ ‘ವ್ಯವಹಾರವಾಕ್‌ಗಳೂ ವಿಶೇಷವಾಗಿ, ‘ಕಾವ್ಯವಾಕ್’ ಎಂಬುದೂ ಇರುತ್ತದೆ. ಅವುಗಳಾಚೆ ‘ಮತ್ರವಾಕ್’ಎಂಬುದನ್ನು ಕಲ್ಪಿಸಿರುವುದುಂಟು. ‘ಲೌಕಿಕರು ಸಾಧುಗಳು ಮುಂತಾದವರ ಮಾತಿನಲ್ಲಿ ವಾಕ್ಕು ಅರ್ಥವನ್ನು ಹಿಂಬಾಲಿಸಿ ನಡೆಯುತ್ತದೆ; ಋಷಿಗಳು ಮತ್ತು ಆದ್ಯರ ಮಾತಿನಲ್ಲಿ ಅರ್ಥವೆ ಮಾತನ್ನು ಹಿಂಬಾಲಿಸಿ ನಡೆಯುತ್ತದೆ’, (ಲೌಕಿಕಾನಾಂ ಹಿ ಸಾಧೂನಾಮರ್ಥಂ ವಾಗನುವರ್ತತೇ| ಋಷಿಣಾ ಪುನರಾದ್ಯಾನಾಂ ವಾಚಾಮರ್ಥೋನುಧಾವತಿ’||-ಉತ್ತರರಾಮಚರಿತೆ-೧:೧೦.)ಎಂದು ಭವಭೂತಿಯು ಸಾಮಾನ್ಯವಾಕ್ ಮತ್ತು ಮಂತ್ರವಾಕ್‌ಗಳ ಭಿನ್ನತೆಯನ್ನು ನಿರೂಪಿಸುತ್ತಾನೆ. ಶಾಸ್ತ್ರದಲ್ಲಿ ವಾಚ್ಯಾರ್ಥವೇ ಏಕೈಕ ಪ್ರಧಾನ; ವ್ಯವಹಾರದಲ್ಲಿ ವಾಚ್ಯಾರ್ಥ ಲಕ್ಷಣಾರ್ಥಗಳೆರಡೂ ಇರುತ್ತವೆ; ಕಾವ್ಯದಲ್ಲಿ ವ್ಯಂಗ್ಯಾರ್ಥ ಅಥವಾ ಧ್ವನಿಯು ವಿಶೇಷವಾಗಿರುತ್ತದೆ ಮತ್ತು ಅದು ಪ್ರಧಾನವಾಗಿರುತ್ತದೆ. ಮಾತಿನ ಈ ಮೂರೂ ಬಗೆಗಳಲ್ಲೂ ಶಬ್ದಗಳು ಕ್ರಮೇಣ ಮಾಯವಾಗಿ ಅರ್ಥವು ಮಾತ್ರವೇ ಅಂತಿಮವಾಗಿ ಉಳಿದು ನಿಲ್ಲುತ್ತದೆ. ಕಾವ್ಯದಲ್ಲಿ ಶಬ್ದಗಳೂ ವ್ಯಾಚ್ಯಾರ್ಥವೂ ಉಪಸರ್ಜನೆಗೊಂಡು ಅಂತಿಮವಾಗಿ,‘ಧ್ವನಿ’ಯೆಂಬುದು ಪ್ರಸರಗೊಳ್ಳುತ್ತದೆ-ಎನ್ನುತ್ತಾನೆ ಆನಂದವರ್ಧನ.

ಮಂತ್ರದಲ್ಲಿ ಧ್ವನಿ ಇರಬಹುದು, ಇಲ್ಲದಿರಬಹುದು. ಆದರೆ ಅರ್ಥ-ಧ್ವನಿಗಳಾವುವೂ ಅಲ್ಲಿ ಮುಖ್ಯವಲ್ಲ. ಅಲ್ಲಿ ಸಮಸ್ತವೂ ಶಬ್ದವೇ. ಸಾಧಕನು ಆ ಶಬ್ದಗಳನ್ನು ಮನನಮಾಡುತ್ತ ಹೋದಂತೆ ಅವೇ ಒಂದು ಅನುಭವ ಪ್ರಪಂಚವಾಗಿ ಸಾಕ್ಷಾತ್ಕಾರಗೊಳ್ಳುತ್ತವೆ. (ಮನನಾತ್ಮಂತ್ರಃ). ಇಲ್ಲಿ ಶಬ್ದಗಳು ‘ನಿತ್ಯ’;ಅವು ಉಪಸರ್ಜಿತವಾಗುವ ಮಾತೇ ಇಲ್ಲ. ಅಂದರೆ, ಇಲ್ಲಿ ಶಬ್ದಗಳು ಕರಗಿ ಇನ್ನೇನ್ನನ್ನೋ ಸೃಷ್ಟಿಸುವುದಿಲ್ಲ; ಅವೇ ಆಕಾರವಾಗಿ ಸಾಕ್ಷಾತ್ಕರಿಸುತ್ತವೆ. ಉದಾಹರಣೆಗೆ, ಇಂದ್ರಮತ್ರದಿಂದ ಇಂದ್ರನ ಸಾಕ್ಷಾತ್ಕಾರವೆಂದರೆ, ಆ ಶಬ್ದದಿಂದ ಇಂದ್ರನೆಂಬ ಇನ್ನೊಂದು ವಸ್ತು ಸೃಷ್ಟಿಗೊಂಡು ಬರುವುದಿಲ್ಲ; ಆ ಶಬ್ದವೇ, ಆ ಮಂತ್ರವೇ ಇಂದ್ರ.

‘ಕಾವೇರಿಯಿಂದ……..’ಪದ್ಯಕ್ಕೆ ಬಂದರೆ, ಮೇಲ್ನೋಟಕ್ಕೆ ಅದು ಶಾಸ್ತ್ರಸೂತ್ರ. ಆದರೆ, ಶಾಸ್ತ್ರದಲ್ಲಿ ಒಂದು ಶಬ್ದಕ್ಕೆ ಒಂದೇ ಖಚಿತವಾದ ಅರ್ಥ ಇರತಕ್ಕದ್ದು. ಈ ಪದ್ಯದ ಶಬ್ದಗಳಾದರೋ ಖಚಿತವಾದ ಏಕೈಕ ಅರ್ಥವನ್ನು ಹೇಳದೆ ಹಲವನ್ನು ಧ್ವನಿಸತೊಡಗುತ್ತವೆ. ಇನ್ನು, ಇದನ್ನು ‘ಕಾವ್ಯ’ವೆನ್ನೋಣವೆ? ಪಂಪನು ತನ್ನ ಹಸ್ತಿನಾವತಿಯ ವರ್ಣನೆಯಲ್ಲಿ ಕನ್ನಡ ನಾಡನ್ನು ಧ್ವನಿಸುತ್ತ ಹೀಗೆ ಬರೆಯುತ್ತಾನೆ:

‘ಲಳಿತ ವಿಚಿತ್ರ ಪತ್ರ ಫಲಪುಷ್ಫಯುತಾತವಿ
ಸೊರ್ಕಿದಾನೆಯಂ ಬೆಳೆವುದು……….’,‘ಆವಲರುಂ
ಪಣ್ಣುಂ ಬೀತೋವುವು ಗಡ-ಬೀಯವಿಲ್ಲಿ
ಮಲ್ಲಿಗೆಗಳು ಮಿಮ್ಮಾವುಗಳುಂ….’, ‘ಮಿಡಿದೊಡೆ
ತನಿಗರ್ಬು ರಸಂ ಬಿಡುವುವು-ಬಿರಿದೊಂದು
ಮುಗುಳು ಕಂಪಿನೊಳೆ ಮೊಗಂಗಿಡುವುವು
ತುಂಬಿಗಳ್-ಆಳ್ಕಮೆ (ಅಜೀರ್ಣ) ವಡೆವುವು
ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್…….’ಇತ್ಯಾದಿ.

-ಇದರ ಹಾಗೆ, ‘ಕಾವೇರಿಯಿಂದಂ……’ಎಂಬುದು ಮನೋಹರವಾದ ‘ಕಾವ್ಯವಾಕ್’ ಅಲ್ಲ. ಹಾಗಂತ ಇದನ್ನು ಆವತ್ತಿನ ತತ್ಕಾಲಕ್ಕೆ ಸಂಬಂಧಿಸಿ ಹೇಳಿದ ಸಾಮಾನ್ಯವಾದ ವ್ಯಾವಹಾರಿಕ ಮಾತು ಎನ್ನೋಣವೆ? ಅದಾಗಿದ್ದರೆ, ಈ ಪದ್ಯವು ಸಹಸ್ರಾರು ವರ್ಷ ದೀರ್ಘ ಕನ್ನಡದ ಚಿಂತಾಮಣಿ ಎಂಬಂತ ಕನ್ನಡ ನಾಲಗೆ-ಸಂಪುಟಗಳಲ್ಲಿ ಸಂಗೋಪಿತವಾಗಿಕೊಂಡು ಬಾಳಿ ಬರುತ್ತಿರಲಿಲ್ಲ.

ಕನ್ನಡದಲ್ಲಿ ‘ಮಂತ್ರವಾಕ್’ ಎಂಬುದೊಂದು ಸೃಷ್ಟಿಯಾಗಿದ್ದರೆ, ಅದರ ಅತ್ಯುತ್ತಮ ಮಾದರಿ, ‘ಕಾವೇರಿಯಿಂದ….’ಪದ್ಯ. ಕನ್ನಡ ಚಿತ್ತವೆಂಬ ದೃವದಿಂದ ಅದು ಕನ್ನಡಕ್ಕಾಗಿ ದತ್ತವಾದದ್ದು; ಶ್ರೀವಿಜಯನು ಪಡೆದುಕೊಂದದ್ದು. ಶ್ರೀವಿಜಯನು ಹೀಗೆ ಕನ್ನಡದಲ್ಲಿ ಮಂತ್ರ ಪಡೆದುಕೊಂಡವನು, ‘ಮಂತ್ರದ್ರಷ್ಟಾರ’ ಅಂತ ಭಾವಿಸಿದ್ದರಿಂದಲೇ ದುರ್ಗಸಿಂಹನು, ‘ಶ್ರೀವಿಜಯರ್ ದೇವರ್-ಅವರನೇವೆಣ್ಣಿಪುದೋ’ ಅಂತ ಉದ್ಗರಿಸಿದ್ದಾನೆ. ಅಲ್ಲದೆ, ದುರ್ಗಸಿಂಹನು ‘ಕವಿರಾಜಮಾರ್ಗ’ವನ್ನು ಬಣ್ಣಿಸುವಾಗ- ಬಹುಶಃ, ೧ನೇ ನಾಗವರ್ಮನು ತನ್ನ ‘ಕಾವ್ಯಾವಲೋಕನ’ವನ್ನು ಕುರಿತು, ‘ಕವಿಗಳ್ಗಿದು ಕೆಯ್‌ಗನ್ನಡಿ’ ಅಂತ ಹೇಳಿಕೊಂಡದ್ದನ್ನು ಸ್ಮರಿಸಿ, ಅದಕ್ಕಿಂತ ಬಹುಮುಖ್ಯವಾದ ಈ ಗ್ರಂಥಕ್ಕೆ ತಕ್ಕ ಪ್ರಶಂಸೆಯನ್ನು ಯೋಚಿಸುತ್ತ-‘ಭಾವಿಪ ಕವಿಜನರ ಮನಕೆ ಕನ್ನಡಿಯಂ ಕೆಯ್‌ದೀವಿಗೆಯಂ’ ಎಂದು, ಕನ್ನಡಿ ಕೆಯ್‌ದೀವಿಗೆಗಳೆರಡರ ಉಪಮೆಯನ್ನು ಕೊಡುತ್ತಾನೆ. ಉಪಮೆಯೆಂಬುದು ಬರೀ ಸಾದೃಶ್ಯವಲ್ಲ, ಅದು ‘ಸಾದೃಶ್ಯಲಕ್ಷ್ಮಿ’ಎನ್ನುತ್ತಾನೆ, ಅಪ್ಪಾಯಾದೀಕ್ಷಿತ. ದುರ್ಗಸಿಂಹನ ಉಪಮೆಗಳು ನಿಜವಾಗಿ ‘ಸಾದೃಶ್ಯಲಕ್ಷ್ಮಿ’ ಎನ್ನುವಂಥವು. ಈ ಎರಡು ಉಪಮೆಗಳನ್ನು ಎರದು ಕನ್ನಡಿಗಳಾಗಿ ಎದುರುಬದುರಿಟ್ಟುಕೊಂಡು, ಅವುಗಳಲ್ಲಿ ‘ಕವಿರಾಜಮಾರ್ಗ’ದ ಅರ್ಥಚಿತ್ರ ಪರಂಪರೆಗಳು ಮೂಡುವುದನ್ನು ಪರಿಭಾವಿಸಿಕೊಳ್ಳುವುದು ಸಹೃದಯನಿಗೆ ರೋಚಕವಾದ ಪ್ರತಿಭಾವ್ಯಾಯಾಮವಾದೀತು ಅಂತ ಮಾತ್ರವೇ ಇಲ್ಲಿ ಸೂಚಿಸುತ್ತೇನೆ.

ತುದಿಯಲ್ಲಿ-ಈ ನನ್ನ ‘ಕವಿರಾಜಮಾರ್ಗ ಸಂಕೀರ್ತನ’ವನ್ನು ಒಂದು ಗ್ರಂಥದ ವೈಭವೀಕರಣವೆಂದು ತಿಳಿಯದೆ, ಕನ್ನಡ ಸಮುದಾಯದ ಸಹಸ್ರಮಾನ ಇತಿಹಾಸದ(-ಮತ್ತು ಹಾಗೇ, ಮಾನವಸಮುದಾಯವೊಂದರಲ್ಲಿನ ಕುತೂಹಲಕಾರಿ ಇತಿಹಾಸಪ್ರಕ್ರಿಯೆಯ ಸೃಜನಶೀಲ ಸಂಕಥನವೆಂದು ಭಾವಿಸಿ ಅಂತ ನೆನಪಿಸುತ್ತ, ವಿನಂತಿಸುತ್ತ ಮುಗಿಸುತ್ತೇನೆ.

*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.