ಸಂಸ್ಕೃತಿ ಮತ್ತು ಅಡಿಗ

ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ ವಿಶ್ವಾಸ ಇಪ್ಪತ್ತು ವರ್ಷಗಳದ್ದು. ಅವರು ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆಂಬುದು ನನಗೆ ಆಶ್ಚರ್ಯದ ವಿಷಯವೇ ಆಗಿ ಉಳಿದಿದೆ. ಅಡಿಗರಿಗೆ ಸರ್ವಮಾನ್ಯರಾಗುವುದು ಕಷ್ಟದ ಸಂಗತಿ. ಅವರಿನ್ನೂ ಜೀವಂತ ವ್ಯಕ್ತಿಯಾದ್ದರಿಂದ ಎಲ್ಲರಿಂದ ಸೈ ಎನಿಸಿಕೊಳ್ಳಬೇಕೆಂಬ ವ್ಯಾಮೋಹ ಅವರಿಗಿಲ್ಲ. ಅಧಿಕಾರದಲ್ಲಿರುವ ಜನರಿಗೆ ಅಡಿಗರು ಯಾವತ್ತೂ ಮುಜುಗರ ಹುಟ್ಟಿಸುವ ವ್ಯಕ್ತಿಯಾಗಿ ಉಳಿದಿದ್ದಾರೆ. ಸಂಸ್ಥೆಗಳಲ್ಲಿ ಅವರು ಸುಲಭವಾಗಿ ಸಲ್ಲುವವರಲ್ಲ. ಬಂಡವಾಳಶಾಹಿ ವ್ಯವಸ್ಥೆಯನ್ನು ಅವರು ಎತ್ತಿ ಹಿಡಿಯುತ್ತಿದ್ದ ಕಾಲದಲ್ಲಿ ಅವರು ಪ್ರಿನ್ಸಿಪಾಲರಾಗಿದ್ದ ಕಾಲೇಜಿನ ಒಬ್ಬ ಜವಾನನ ಪರವಾಗಿ ದೊಡ್ಡ ವರ್ತಕನೊಬ್ಬನ ಜೊತೆ ಅವರು ಜಗಳವಾಡಿದ್ದು ನನಗೆ ಗೊತ್ತಿದೆ. ಎರಡು ಕಾಲೇಜುಗಳ ಪ್ರಿನ್ಸಿಪಾಲ್ ಹುದ್ದೆಯನ್ನು , ನ್ಯಾಷನಲ್ ಬುಕ್ ಟ್ರಸ್ಟಿನ ದೊಡ್ಡ ಕೆಲಸವನ್ನು ಇವರು ಎಷ್ಟು ಸುಲಭವಾಗಿ ಮುಂದಾಲೋಚನೆಯಿಲ್ಲದೆ ಬಿಟ್ಟುಕೊಟ್ಟರೆಂಬುದನ್ನು ಕಂಡು ನಾನು ಚಕಿತನಾಗಿದ್ದೇನೆ. ಜೇಬಿನಿಂದ ಕೊನೆಯ ರೂಪಾಯಿ ಖರ್ಚಾಗುವ ತನಕ ಅಡಿಗರು ಎಷ್ಟು ಧಾರಾಳಿಗಳು ಎಂಬುದು ಗತಿಸಿದ ನನ್ನ ಗೆಳೆಯ ಸದಾಶಿವನಿಗೆ ಮತ್ತು ನನಗೆ ಗೊತ್ತು. ಸದಾ ಹಸಿದಿರುತ್ತಿದ್ದ ನಮ್ಮ ಹೋಟೆಲ್ ಬಿಲ್ಲುಗಳನ್ನು ಸಾಮಾನ್ಯವಾಗಿ ಅಡಿಗರೇ ಎತ್ತಿಕೊಳ್ಳುತ್ತಿದ್ದುದು.

uಟಿಜeಜಿiಟಿeಜ‌ಅವರದು ಮಗುವಿನಂಥ ನಿಷ್ಕಪಟ ಮನಸ್ಸೆಂದೂ ನನಗೆ ಗೊತ್ತು. ಪ್ರೀತಿ, ದ್ವೇಷ ಎರಡೂ ಅವರಲ್ಲಿ ಉತ್ಕಟ. ಹುಟ್ಟಿನಿಂದಲೇ ಕೆಲವು ಮನುಷ್ಯರು ರಾಕ್ಷಸರಾಗಿರುತ್ತಾರೆ ಎಂದು ತಿಳಿಯುವ ಅಡಿಗರಿಗೆ ವಿವರಣೆಗೆ ಸಿಕ್ಕದ ಈವಿಲ್ ಜೀವನದ ಒಂದಂಶವಾಗಿ ಇದೆ. ನಂಬಿ ಮೋಸ ಹೋದೆನೆಂದು ನಮಗೆಲ್ಲರಿಗೂ ಒಮ್ದಲ್ಲ ಒಂದು ಕಾಲದಲ್ಲಿ ಅನ್ನಿಸುವ ಭಾವನೆ ಅಡಿಗರ ಕಾವ್ಯದಲ್ಲಿ ತೀವ್ರವೂ ಗಾಢವೂ ಆದ ಚಿಂತನೆಯನ್ನು ನಿರ್ವಹಿಸುವ ನೋವಾಗಿ ಬರುತ್ತದೆ. ’ಗೊಂದಲಪುರ’, ’ಭೂಮಿಗೀತ’, ’ಕೂಪ ಮಂಡೂಕ’ ಈ ಎಲ್ಲ ಕವನಗಳ ಮೂಲದಲ್ಲಿರುವುದು ಮುಗ್ದನೊಬ್ಬ ನಂಬಿ ಮೋಸ ಹೋದ ಭಾವನೆ.

“ಕ್ರೌಂಚ ವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು.” ಹಸಿಯಾದ ಮೈಯ ಮೃದುವಾದ ಹುಳ ರೇಷ್ಮೆಯ ಗಟ್ಟಿಯಾದ ನೂಲನ್ನು ಉತ್ಪನ್ನ ಮಾಡುತ್ತದೆ. ಅದರ ಮೈ ನೋಯಬಲ್ಲ ಬತ್ತಲೆಯದಾದ್ದರಿಂದ ಈ ಗಟ್ಟಿ ರೇಷ್ಮೆ ಅದಕ್ಕೆ ಸಾಧ್ಯ ಎಂಬುದಿಲ್ಲಿ ಮುಖ್ಯ. ಜೀವನದ ಮೂಲದಲ್ಲಿರುವ ಈ ನೋವನ್ನು ಅಡಿಗರು ಅಹೇತುಕವಾದ್ದೆಂದು ತಿಳಿದಿರಬಹುದು. ಮೇಲೆ ನಾನು ಉದ್ಧರಿಸಿದ ಅಡಿಗರ ಸಾಲು ಅವರ ಕಾವ್ಯದ ಪ್ರಕ್ರಿಯೆಯನ್ನು ಸಾರದಲ್ಲಿ ತಿಳಿಸುತ್ತದೆ ಎಂದು ನನಗೆ ಅನೇಕ ಸಾರಿ ಅನ್ನಿಸಿದೆ. ಅಡಿಗರ ಎಲ್ಲ ಮುಖ್ಯ ಕವನಗಳ ಕೇಂದ್ರದಲ್ಲಿ ಇಂಥ ಒಂದು ಬತ್ತಲೆಯ ನೋಯಬಲ್ಲ, ಅನುಭವದ ಆಘಾತಕ್ಕೆ ಒಡ್ಡಿಕೊಂಡ, ತನ್ನ ಗಟ್ಟಿತನವನ್ನೂ ಪಡೆದ ವ್ಯಕ್ತಿತ್ವವಿದೆ ಎನ್ನಬಹುದು.

ಅಡಿಗರ ಕಾವ್ಯದಲ್ಲಿ ಗಾಢವಾದ ತಾತ್ವಿಕ ಚಿಂತನೆ ರಾಜಕೀಯ ಸಾಮಾಜಿಕ ಚಿಂತನೆಯ ಜೊತೆ ಜೊತೆಗೆ ಸಾಗುತ್ತದೆ. ಅವರ ಕಾವ್ಯವನ್ನು ಸಾಮಾಜಿಕ/ ವೈಯಕ್ತಿಕ ಅಥವಾ ಅಂತರ್ಮುಖ/ಬಹಿರ್ಮುಖ ಎಂದು ವಿಭಾಗಿಸುವುದರ ಬದಲು ಅದರ ಒಟ್ಟು ದಿಕ್ಕು ಸಾಂಸ್ಕೃತಿಕ ಎನ್ನುವುದೇ ಹೆಚ್ಚು ಸರಿ ಎಂದು ಈಚೆಗೆ ನನಗೆ ಅನ್ನಿಸುತ್ತಿದೆ. ರಾಜಕೀಯ ವಿಡಂಬನೆಗಳನ್ನು ಅವರು ಬರೆದಿಲ್ಲವೆಂದಲ್ಲ. ’ಭೂಮಿಗೀತ’ದಂಥ ಪದ್ಯದಲ್ಲಿ ನಮ್ಮ ಪ್ರಸ್ತುತ ಸಾಮಾಜಿಕ ಸಮಸ್ಯೆಗಳು ಇಣುಕುವುದಿಲ್ಲವೆನ್ನುವುದೂ ನಿಜ. ಆದರೆ ಅವರ ’ಭೂತ’, ’ರಾಮನವಮಿಯ ದಿವಸ’, ’ವರ್ಧಮಾನ’ಗಳಂತಹ ಮುಖ್ಯ ಕವನಗಳಲ್ಲಿ ಅವರ ಮೂಲ ಕಾಳಜಿ ಸಾಂಸ್ಕೃತಿಕ ಎನ್ನಬಹುದು. ಮನುಷ್ಯನ ಬುದ್ಧಿ ಮತ್ತು ಭಾವನೆಗಳು ಎಚ್ಚರದಲ್ಲಿ ಸೃಷ್ಟಿಸುವ ಮೌಲ್ಯಗಳು ಒಂದು ಸಂಸ್ಕೃತಿಯನ್ನು ಕಟ್ಟುತ್ತವೆ. ವ್ಯಕ್ತಿ, ಸಮಾಜ ಮತ್ತು ಮಾನವೇತರ ಜಗತ್ತು- ಈ ಮೂರರ ನಡುವೆ ಸಂಬಂಧಗಳನ್ನು ಸೃಷ್ಟಿಸುವುದು, ಅದನ್ನು ನಮ್ಮ ನಡೆ ನುಡಿಗಳಲ್ಲಿ ರೂಢಿಸುವುದು ಸಂಸ್ಕೃತಿಯ ಕೆಲಸ. ಸಂಸ್ಕೃತಿಯ ಚೌಕಟ್ಟಿನಲ್ಲಿ ಶಿಸ್ತು, ಸಂಯಮ, ವ್ರತಗಳ ಮೂಲಕ ಮನುಷ್ಯ ಪರಿಪಕ್ವನಾಗಿ ತನ್ನ ಖಾಸಗಿತನಕ್ಕೂ ತಾನಿರುವ ಸಮಷ್ಟಿಗೂ, ತನ್ನಿಂದ ಹೊರತಾದ ಜಗತ್ತಿಗೂ ಘರ್ಷಣೆಯಾಗದಂತ ಬದುಕಬೇಕು. ಇದು ಕಷ್ಟದ ವಿಷಯ. ಪರಮ ಸ್ವಾರ್ಥದಲ್ಲಿ ವ್ಯಕ್ತಿ ರಾಕ್ಷಸನಾದಾನು. ರಾಜಕೀಯ ವಿಚಾರಗಳಲ್ಲಿ ಸಮಾಜ ವ್ಯಕ್ತಿಯನ್ನು ನುಂಗಬಹುದು. ಆತ್ಮರತನಾದ ಮನುಷ್ಯ ಈ ಜಗತ್ತಿನಲ್ಲಿ ತಾನೊಬ್ಬ ಅತಿಥಿ ಎಂಬುದನ್ನು ಮರೆಯಬಹುದು. ಈ ಮೂರರ ಸೆಲೆಯಲ್ಲಿರುವ ಶಕ್ತಿಗಳೂ ವ್ಯಯವಾಗದಂತೆ, ಒಂದು ಇನ್ನೊಂದನ್ನು ನಾಶ ಮಾಡದಂತೆ ಜೀವಿಸುವುದನ್ನು ಮನುಷ್ಯನಿಗೆ ಕಲಿಸುವುದು ಸಂಸ್ಕೃತಿ. ಒಂದು ಜೀವಂತ ಸಂಸ್ಕೃತಿ ವರ್ತಮಾನಕ್ಕೆ ಸ್ಪಂದಿಸಬೇಕು; ಅದರ ಬೇರುಗಳು ಭೂತದಲ್ಲಿರಬೇಕು. ಈ ಜಗತ್ತಿನಲ್ಲಿ ಹಿಂದೆ ಇದ್ದವರು ಈಗಿನ ನಮಗೆ ಕಲಿಸುವುದು ಸಾಧ್ಯವಾಗುವುದು ಸಂಸ್ಕೃತಿಯ ಮೂಲಕ. ಇಂಥ ವಿಚಾರಗಳ ಹಿನ್ನೆಲೆ ಅಡಿಗರ ಮುಖ್ಯ ಕವನಗಳಿಗಿವೆ ಎಂದು ಅನ್ನಬಹುದು. ಹೀಗೆ ನೋಡಿದಾಗ ಅಡಿಗರ ’ರಾಮನವಮಿಯ ದಿವಸ’ ಕನ್ನಡದ ಅತ್ಯಂತ ಮುಖ್ಯ ಕವನಗಳಲ್ಲಿ ಒಂದು ಎಂದು ಹೇಳಬಹುದು.

ಸಂಸ್ಕೃತಿಯ ಪಕ್ವತೆಗೆ ಅಡ್ಡ ಬರುವ ಪ್ರವೃತ್ತಿಗಳನ್ನೆಲ್ಲ ಅಡಿಗರು ಉಗ್ರವಾಗಿ ವಿರೋಧಿಸುತ್ತಾರೆ. ನೆಹರೂ ಯುಗದ ಆದರ್ಶಪ್ರಿಯತೆಯಿಂದ ಹುಟ್ಟಿದ ಹಿಪೋಕ್ರಸಿ , ವ್ಯಕ್ತಿ ಪ್ರಜ್ಞೆ ಸ್ವಯಂ ಭೂ ಎಂದು ಭಾವಿಸುವ ವೇದಾಂತಿಗಳ ಅಮೂರ್ತ ತತ್ವಗಳು, ಈ ಮಣ್ಣು ಮೈಗಳ ಮಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಮನುಷ್ಯನನ್ನು ದೇವನೆಂದು ಭಾವಿಸುವ ರೊಮಾಂಟಿಕ್ ಧೋರಣೆಗಳು, ಸಮಷ್ಟಿಯ ಹಿತದ ಸೋಗಿನಲ್ಲಿ ವ್ಯಕ್ತಿಯ ಖಾಸಗಿತನವನ್ನು ಮೆಟ್ಟುವ ಸರ್ವಾಧಿಕಾರೀ ರಾಜಕೀಯ ವಿಚಾರಗಳು- ಈ ಎಲ್ಲವೂ ಅಡಿಗರಿಗೆ ದೊಡ್ಡ ಅಪಾಯಗಳು; ನಾವು ಬೆಳೆಯತೊಡಗದಂತೆ ಕಾಡುವ ಕಂಟಕಗಳು.

ಕೊನೆಯದಾಗಿ ಹಠಾತ್ತಾಗಿ, ಒಂದು ಮಾತನ್ನು ಹೇಳಲೇಬೇಕು ಎನ್ನಿಸುತ್ತದೆ. ಎಮರ್ಜನ್ಸಿ ಕಾಲದಲ್ಲಿ ಅಡಿಗರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಿದ್ದರೆ? ಮಹಾರಾಷ್ಟ್ರದ ಶ್ರೀಮತಿ ದುರ್ಗಾ ಭಾಗವತರಂತೆ ಅಡಿಗರೂ ಕನ್ನಡ ಜನದ ಮಾನವನ್ನು ಖಂಡಿತ ಉಳಿಸುತ್ತಿದ್ದರು. ಯಾವ ವಿಧದ ದಬ್ಬಾಳಿಕೆಯನ್ನೂ ಸಹಿಸದ ಅಡಿಗರು ಈ ದೃಷ್ಟಿಯಿಂದ ಸ್ವಾತಂತ್ರ್ಯವನ್ನು ನಿಜವಾಗಿ ಪ್ರೇಮಿಸುವವರು. ಯಾರೂ ಇವರನ್ನು ಕಟ್ಟಿ ಹಾಕಲಾರರು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.