ಒಂದು
ನಮ್ಮೂರಿನ ಅರಮನೆಯನ್ನು ಹರಾಜು ಹಾಕುವವರಿದ್ದಾರೆಂದು ನನ್ನ ಮಿತ್ರ ಹೇಳಿದಾಗ ನನಗೆ ಭಾರೀ ಆಶ್ಚರ್ಯ ಮತ್ತು ಆಘಾತವಾಯ್ತು. ನಾನು ಊರು ಬಿಟ್ಟು ತುಂಬಾ ದಿನಗಳಾದ್ದರಿಂದ ಅಲ್ಲಿಯ ವಿದ್ಯಮಾನಗಳ ಅರಿವಿರಲಿಲ್ಲ.
“ಯಾಕ, ಹರಾಜ ಹಾಕೋವಂಥಾದ್ದೇನ ಬಂತೊ?”-ಅಂದೆ.
“ಯಾಕಂದರ ರವಿಚಂದ್ರ ಅಲ್ಲಿ ಇರಾಕ ಒಲ್ಲ. ಅರಮನಿ ಮಾರಿ ಶಹರದಾಗ ಇರಬೇಕಂತಾನ. ಕಲಿತವರು ಹಳ್ಳ್ಯಾಗ ಇರಾಕ ಒಪ್ಪತಾರ, ಹೇಳು. ಬಾ ಅಂದರ ನೀ ಹಳ್ಳಿಗಿ ಬರತೀಯೇನ? ಹಂಗಽ ಅವನೂ.”
“ಅಲ್ಲಪ್ಪ, ನನಗ ನೌಕರಿ ಐತಿ, ಅದಕ್ಕ ನಾ ಇಲ್ಲಿರ್‍ತೀನಿ. ಹಾಂಗ ಅವಗೇನೈತಿ?”
“ಇನ್ನೇನಿರಬೇಕಾಗಿತ್ತೋ? ಅರಮನಿ ಐತಿ, ಹೌಂದ? ಮಾರತಾನ, ರೊಕ್ಕ ಬರತೈತಿ, ಖರ್ಚ ಮಾಡಿಕೊಂಡ ಮಜಾಶೀರ ಶಹರದಾಗ ಇರತಾನಾಯ್ತು. ದೇಸಾಯರಂದ ಮ್ಯಾಲ ಕಷ್ಟಪಟ್ಟುಗೊಂಡ ನಮ್ಮ ನಿಮ್ಹಾಂಗ ಯಾಕಿದ್ದಾರ ಹೇಳು?”
-ಅಂದ. ಅದು ನಿಜವೋ ಏನೋ. ದೇಸಗತಿಯ ಕೊನೆಯ ಕುಡಿಯಾದ ರವಿಚಂದ್ರ ಬುದ್ಧಿಗಲಿತಾಗಿನಿಂದ ಅಲ್ಲಿ ಇದ್ದವನಲ್ಲವೆಂದೂ, ಬರೀ ಬೆಂಗಳೂರಲ್ಲೇ ಇರುತ್ತಾನೆಂದೂ ಕೇಳಿದ್ದೆ. ಆದರ ಅವನೊಮ್ಮೆಯೂ ನನಗೆ ಭೇಟಿಯಾಗಿರಲಿಲ್ಲ.
“ಯಾಕ ಸುಮ್ಮನ ಕುಂತಿ?”
-ಎಂದು ನನನ್ ಮಿತ್ರ ಕೇಳಿದ. ನನಗೆ ಮಾತಾಡುವ ಮನಸ್ಸಿರಲಿಲ್ಲ, ಖಿನ್ನನಾಗಿದ್ದೆ. ಆ ಅರಮನೆಯ ಬಗ್ಗೆಯೇ ಧೇನಿಸುತ್ತ ಕೂತೆ.
ನಿಜ ಹೇಳಬೇಕಂದರೆ ಆ ಅರಮನೆ ಎಂಥದಿತ್ತೆಂದು ಅದೇ ಊರಿನವನಾದರೂ ನಾನು ಈತನಕ ನೋಡಿರಲಿಲ್ಲ. ಮತ್ತು ನನ್ನ ಹಾಗೆ ಅದರ ಹೊಸ್ತಿಲು ಮೆಟ್ತದ ಅನೇಕರು ನಮ್ಮೂರಲ್ಲಿದ್ದರು. ಅದರ ಬಗ್ಗೆ ನಾವೆಲ್ಲ ಕಥೆ ಕೇಳಿದ್ದೆವು. ಮತ್ತು ಕಥೆಯ ಪ್ರಕಾರ ಕಲ್ಪಿಸಿಕೊಂಡಿದ್ದೆವು. ನಮ್ಮ ಕಲ್ಪನೆ ಎಷ್ಟು ಮಡಿಯಾಗಿತ್ತೆಂದರೆ-ಅರಮನೆ ಮತ್ತು ಹರಾಜು-ಇಂಥ ಶಬ್ದಗಳನ್ನು ಒಂದೇ ಉಸಿರಿನಲ್ಲಿ ಹೇಳುವುದಾಗಲಿ, ಒಂದೇ ಕಿವಿಯಿಂದ ಕೇಳುವುದಾಗಲಿ ನಮ್ಮಿಂದಾಗುತ್ತಿರಲಿಲ್ಲ. ಅರಮನೆಯಲ್ಲಿ ನಮಗೆ ಪ್ರವೇಶವಿರಲಿಲ್ಲ ನಿಜ. ಆದರೂ ಅದು ನಮ್ಮ ಎಳೆತನದ ಭಾವಪ್ರಪಂಚದ ಒಂದು ಭಾಗವಾಗಿತ್ತು. ಊರ ಹಿರಿಯರು ಅಗತ್ಯವಿದ್ದಾಗ ಒಳಗೆ ಹೋದದ್ದುಂಟು. ಮತ್ತು ಕೊನೆಯ ದೇಸಾಯಿ ಆಗಾಗ ಊರಿನಲ್ಲಿ ಬರುತ್ತಿದ್ದನಲ್ಲ, ಅವನನ್ನು ನಾನು ಕಂಡಿದ್ದೆ. ಊರವರು ಅರಮನೆಯ ವಿದ್ಯಮಾನಗಳ ಬಗ್ಗೆ ಆಡಿಕೊಳ್ಳುವುದಿತ್ತು. ಅವೆಲ್ಲ ನಮಗೆ ವಿಚಿತ್ರ ಪ್ರಪಂಚವೊಂದರ ಮಾತಾಗಿ ಕೇಳಿಸುತ್ತಿದ್ದವು. ಕೇಳಿದಂತೆಲ್ಲ ನನಗೆ ಅನ್ನಿಸುತ್ತಿತ್ತು: ಅರಮನೆಯ ಜೀವನಕ್ಕೂ ಹೊರಗಿನ ಜೀವನಕ್ಕೂ ಎಂದೂ ತಾಳೆಯಾಗುತ್ತಿರಲಿಲ್ಲ-ಎಂದು. ಘಟನೆಗಳು ಅಲ್ಲಿಯೂ ಜರುಗುತ್ತಿದ್ದವು. ಆದರೆ ಅವ್ಯಾವೂ ನಮ್ಮ ಮನಸ್ಸಿಗೆ ನೇರವಾಗಿ ನಿಲುಕುತ್ತಿರಲಿಲ್ಲ. ಮತ್ತು ಊರ ಜೀವನದಿಂದ ಅರಮನೆಯ ಜೀವನದ ಮೇಲಾದ ಪರಿಣಾಮವನ್ನು ತಿಳಿಯುವುದೂ ಎಳೆಯರಾದ ನಮಗೆ ಸಾಧ್ಯವಿರಲಿಲ್ಲ. ಹೊರಗೆ ರೈತರು, ಅವರ ಹೆಂಗಸರು, ಮಕ್ಕಳು ಹೊಲಗಳಿಗೆ ನುಗ್ಗಿ, ಬಿತ್ತನೆಯಂತೆ, ಸಾಲುಗೊಬ್ಬರವಂತೆ, ಮಳೆಯಂತೆ, ಬೆಳೆಯಂತೆ, ಕುಮುದವ್ವನ ಜಾತ್ರೆಯಂತೆ- ಹೀಗೆ ಎಷ್ಟೆಲ್ಲ ಕಾರ್ಯಗಳಲ್ಲಿ ತೊಡಗಿರುತ್ತಿದ್ದರು. ಆ ಹುರುಪಳಿಸುವ ಬಿಸಿಲು, ಮಳೆಗಾಲದ ಮಳೆಯ ಸೆಳಕು, ಸೂಸಿ ಬರುವ ಆಷಾಢದ ಗಾಳಿ, ಕಾಲಿಗಂಟುವ ಹಸಿಮಣ್ಣು, ಮೋಡಗಳ ಮರೆಯಲ್ಲಿ ಸೂರ್ಯ ಅಡಗುವ, ಹೊರಬರುವ ಕಣ್ಣಾಮುಚ್ಚಾಲೆಯಾಟ-ಇವ್ಯಾವೂ ಅರಮನೆಯಲ್ಲಿದ್ದವರ ಪಾಲಿಗೆ ಇರಲೇ ಇಲ್ಲ. ಅಲ್ಲೇ ಅವರ ಗೋಡೆಯಾಚೆ ಇರುವ ಋತುಮಾನಗಳು ಅರಮನೆಯ ಒಳಕ್ಕೆ ಕಾಲಿಡುತ್ತಿರಲಿಲ್ಲ. ಅಥವಾ ಅರಮನೆಯ ಹವಾಮಾನ ನೋಡಿ ಹೊರಗೆ ಯಾವ ಋತುಮಾನ ಇದೆಯೆಂದು ಹೇಳುವುದು ಸಾಧ್ಯವಿರಲಿಲ್ಲ. ಹಾಗೆಂದೇ ಅರಮನೆಯಲ್ಲಿದ್ದವರ ನಿಟ್ಟುಸಿರು ಊರವರಿಗೆ ತಾಗುತ್ತಿರಲಿಲ್ಲ. ಅರಮನೆಯ ಒಳಗೊಂದು ಹವಾಮಾನ, ಹೊರಗೊಂದು ಹವಾಮಾನ! ನಮ್ಮ ಪಕ್ಕದಲ್ಲಿದ್ದೂ ಅದು ನಮಗೆ ಪರಕೀಯವಾಗಿತ್ತು, ಕಥೆಯಾಗಿತ್ತು…..
ನಾನು ಹೀಗೆ ಯೋಚನೆ ಮಾಡುತ್ತಿದ್ದಾಗ ನನ್ನ ಮಿತ್ರನ ದನಿ ಕೇಳಿಸಿತು.
“ಅಲ್ಲಪ್ಪಾ, ನೀ ಯಾಕ ಆ ಅರಮನಿ ಬಗ್ಗೆ ಒಂದ ಕಾದಂಬರಿ ಬರೀಬಾರ್‍ದು?”
-ಕೂತು ಕೂತು ಬೇಸರವಾಯ್ತೆಂದು ತೋರುತ್ತದೆ, ಕೇಳಿದ್ದ. ಈ ಮಾತು ಕೇಳಿ ಒಮ್ಮೆಲೆ ಬೆಂಕಿ ತುಳಿದವರಂತೆ ಚುರುಕಾದೆ. ಇದು ತುಂಬ ಅನಿರೀಕ್ಷಿತ ಪ್ರಶ್ನೆ. ಈ ತನಕ ಇಂಥ ಆಲೋಚನೆಯೇ ನನಗೆ ಹೊಳೆದಿರಲಿಲ್ಲ. ಅರಮನೆಯ ಘಟನೆಗಳು ಕಥೆಯಾಗಿಯಾದರೂ ನನಗೂ ಅಷ್ಟಿಷ್ಟು ಗೊತ್ತಿರುವುದರಿಂದ ಈ ಪ್ರಶ್ನೆ ಕೇಳುವುದಕ್ಕೆ ಅವನ ಅಂತರಂಗದಲ್ಲೇನಾದರೂ ಕುಹಕವಿದೆಯೋ ಎಂದು ನೋಡಿದೆ. “ಹಂಗ್ಯಾಕ ನೋಡತೀಯೋ?”ಅಂದ.
“ಬರೀಬಹುದು.”
-ಎಂದು ಅರ್ಧ ಸ್ವಗತಕ್ಕೆ, ಅರ್ಧ ನನ್ನ ಮಿತ್ರನಿಗೆಂಬಂತೆ ಹೇಳಿದೆ.
“ಬರೀಭೌದೇನು? ಬರೀ ಅಂದರ…….”
-ಎಂದು ಸಿಡುಕಿನಿಂದ ಆಜ್ಞೆಯನ್ನೇ ಮಾಡಿದ.
“ಬರಿ ಅಂದರ ಹೆಂಗೊ? ಎಷ್ಟಂದರೂ ನಾ ಅದನ್ನ ಹೊರಗಿನಿಂದ ಕಂಡವ. ನನಗೇನ ತಿಳಿದೀತು?”
-ಅಂದೆ.
“ನಿನಗ ನೋಡಪಾ. ಪಸ್ಟ್‌ಹ್ಯಾಂಡ ಇನ್‌ಫರ್‍ಮೇಶನ್ ಸಿಗಬೇಕಂದರ ಶೀನಿಂಗವ್ವನಽ ಸೈ. ಊರಿಗಿ ಹೋಗು. ಹೆಂಗೂ ಶೀನಿಗವ್ವಿನ್ನೂ ಜೀವಂತ ಇದ್ದಾಳ. ಕೇಳಿ ಬರಿ.”
-ಎಂದು ಹೇಳಿ. “ಯಾವಾಗ ಹೋಗ್ತಿ?” ಎಂದು ದುಬಾಲು ಬಿದ್ದ. ನಾನಿನ್ನೂ ಬರೆಯುವುದನ್ನೇ ನಿಶ್ಚಯಿಸಿರಲಿಲ್ಲ. ಆಗಲೇ ‘ಯಾವಾಗ ಹೋಗ್ತಿ?’ ಎಂದು ಕೇಳಿದರೆ ಏನು ಹೇಳಲಿ?
“ಹೋಗೋಣ, ಹೋಗೋಣ ಸಡುವಾಗಲಿ”-ಅಂದೆ.
“ನಿಂದ ಯಾವಾಗ್ಲೂ ಹಳೀಹಾಡ ಇದ್ದದ್ದಽ. ನಾಳಿ ಹರಾಜಾಗಿ ಹೋಯ್ತಂದರ ಮುಂದ ಅರಮನೀಗಿ ಯಾರು ಬರ್‍ತಾರೋ, ಎಂತೋ! ನೋಡಾಕಾ ಇದಽ ಆಕಾರದಾಗ ಸಿಕ್ಕಿತೋ ಇಲ್ಲೊ! ಇದಽ ಹುರುಪಿನಾಗ ಹೋಗಿ ಬರದ ಬಿಡಲ್ಲ. ಈಗಂತೂ ಅವನವ್ವನ ಅರಮನಿ ಬಿಕೋ ಅಂತ ಕಂಡವರ ಕರುಳು ಬಾಯಿಗಿ ಬರೋಹಾಂಗ ಕಾಣತೈತಿ. ಹೋಗಿ ಒಂದು ಸಲ ನೋಡಿದರ ಸಾಕು, ಗ್ಯಾರಂಟಿ ನೀ ಏನಾರ ಬರದಽ ಬರೀತಿ. ನನ್ನ ಮಾತ ಖರೆ ಸುಳ್ಳೋ. ಬೇಕಾದರ ಒಮ್ಮಿ ಹೋಗಿ ನೋಡಿ ಬಾ, ನಿನಗಽ ಗೊತ್ತಾಗತೈತಿ.”
-ಎಂದು ಹೇಳಿ ಹೊರಟುಹೋದ.
ಅವನ ಹೋದಮೇಲೂ ಅದನ್ನೇ ಧ್ಯಾನಿಸುತ್ತ ಕೂತೆ. ನಾನಾಗಲೇ ಹೇಳಿದಂತೆ ಅರಮನೆಯ ನೇರ ಅನುಭವ ಇಲ್ಲದಿದ್ದರೂ ಒಳಗೆ ನಡೆದದ್ದಕ್ಕೆ ಹೊರಗಿನ ಅಂದರೆ ಊರಿನ ಪ್ರತಿಕ್ರಿಯೆಗಳಲ್ಲಿ ಪ್ರತ್ಯಕ್ಷ ಭಾಗವಹಿಸಿದ್ದೆ. ಅದೇ ಆಶ್ಚರ್ಯದಿಂದ ಬರೆಯುವ ಮನಸ್ಸು ಮಾಡಿದೆ. ಹಾಗೂ ಬರುವ ಸೂಟಿಗೆ ಶಿವಾಪುರಕ್ಕೆ ಹೋಗುವುದೆಂದು ನಿರ್ಧರಿಸಿದೆ.
ವಾಚಕ ಮಹಾಶಯರಲ್ಲಿ ಕ್ಷಮೆ ಕೋರಿ ಒಂದು ಮಾತನ್ನು ಈಗಲೇ ಸ್ಪಷ್ಟ ಪಡಿಸುತ್ತೇನೆ. ಶಿವಾಪುರದಂಥ ಹಳ್ಳಿಯಲ್ಲಿ ಅರಮನೆಯಿರುವುದೆಂದರೆ ಏನರ್ಥ? ಬಹುಶಃ ಇದು ಜನಪದ ಕಥೆಗಳಲ್ಲಿ ಬರುವಂಥ ಅರಮನೆಯಿರಬೇಕೆಂದು ನೀವು ಭಾವಿಸಬಹುದು. ಮೈಸೂರಿನ ಅರಮನೆಯನ್ನು ನಾನೂ ಕಂಡಿದ್ದೇನೆ. ಮೈಸೂರಿನದು ರಾಜರ ಅರಮನೆಯಾದರೆ ಶಿವಾಪುರದ್ದು ದೇಸಾಯರ ಅರಮನೆ. ವಿಸ್ತಾರ ಮತ್ತು ಗಾತ್ರದಲ್ಲಿ ಅದಕ್ಕಿಂತ ಇದು ಬಹಳ ಚಿಕ್ಕದು. ಆದರೆ ಅರಮನೆಗೆ ಭೌತಿಕ ಆಸ್ತಿತ್ವವಿರುವ ಹಾಗೆ ಮಾನಸಿಕ ಆಸ್ತಿತ್ವವೂ ಒಂದಿರುತ್ತದಲ್ಲ? ಶಿವಾಪುರದಲ್ಲಿ ಹುಟ್ಟಿ ಬೆಳೆದವರಿಗೆ ಇದು ಮೈಸೂರರಮನೆಗಿಂತ ಯಾವ ರೀತಿಯಲ್ಲೂ, ಕೊನೇಪಕ್ಷ ಕಡಿಮೆಯದಂತೂ ಅಲ್ಲ. ನಮ್ಮ ಊರಿನದು ಹದಿನಾಲ್ಕೂರಿನ ಇಪ್ಪತ್ತೆರಡು ಸಾವಿರ ಎಕರೆ ಜಮೀನಿನ ದೇಸಗತಿ. ಇಲ್ಲಿಯ ದೇಸಾಯರಿಗೂ ಮಹಾರಾಜರೆಂದೇ ಸಂಬೋಧಿಸುವ ಬಿರುದಾವಳಿಗಳಿದ್ದವು. ಕೊನೆಯ ಸರಗಂ ದೇಸಾಯರಿಗೆ “ಮಹಾರಾಜ” ಎಂದು ಜನ ಕರೆಯುವುದನ್ನು ನಾನೇ ಕೇಳಿದ್ದೇನೆ. ಎಲ್ಲಾ ಅರಮನೆಗಿರುವಂತೆ ಇದಕ್ಕೂ ಚರಿತ್ರೆಯಿದೆ.
ಇದು ಒಂದು ಕಾಲಕ್ಕೆ ಆ ಭಾಗದಲ್ಲೆಲ್ಲ ಅದ್ಧೂರಿಯಿಂದ ಮೆರೆದ ಅರಮನೆಯೆಂಬುದರಲ್ಲಿ ಸಂದೇಹವೇ ಇಲ್ಲ. ಹುಲಿ ಕೊಂದವರಿಂದ ಹಿಡಿದು ಯುದ್ಧ ಮಾಡಿ ಗೆದ್ದವರವರೆಗೂ ಇಲ್ಲಿಯವರ ವಂಶಾವಳಿಯಿದೆ. ಅರಮನೆಯ ಶ್ರೀಮಂತಿಕೆಯ ಬಗ್ಗೆ ಜನಪದ ಕಥೆಗಳೇ ಇವೆ. ಬೆಳ್ಳಿಯ ರೂಪಾಯಿಗಳನ್ನು ಕಲ್ಲಿನ ಮೇಲೆ ಬಾರಿಸಿ ಬಾರಿಸಿ ಪರೀಕ್ಷಿಸುತ್ತಿದ್ದ ಕಾಲ ಅದು. ಹಾಗೆ ಬಾರಿಸಿ ಬಾರಿಸಿ ತಗ್ಗುಬಿದ್ದ ಒಳಕಲ್ಲಾದ ನಾಕೈದು ಕಲ್ಲುಗಳು ಈಗಲೂ ಅರಮನೆಯಲ್ಲಿವೆಯೆಂದು ಹೇಳುತ್ತಾರೆ. ಹಿಂದಿನ ಒಬ್ಬ ದೇಸಾಯಿ ಬರೀ ಬೆಳ್ಳಿಯ ರೂಪಾಯಿ ಮತ್ತು ಚಿನ್ನದ ಆಭರಣಗಳನ್ನು ಏಳು ತಾಮ್ರದ ಹಂಡೆಗಳಲ್ಲಿ ಹಾಕಿ ಹುದುಗಿರುವನೆಂದೂ ಜೋಡು ಹೆಡೆಯ ಸರ್ಪವೊಂದು ಸದಾ ಆ ನಿಧಿಗೆ ಕಾವಲಿದೆಯೆಂದೂ ಜನ ಹೇಳುತ್ತಾರೆ. ಆದರೆ ಅಲ್ಲೊಂದು ಸರ್ಪವಿದ್ದುದನ್ನು ಸ್ವಥಾ ನೋಡಿದ್ದಾಗಿ ನಮ್ಮಣ್ಣ ಹೇಳಿದ್ದು ನನಗೆ ನೆನಪಿದೆ.
ಅದರ ವೈಭವವನ್ನು ಹಾಡಿ ಹೊಗಳುವ ಜನರೇ ಇನ್ನೊಂದು ಕಥೆಯನ್ನು ಹೇಳುತ್ತಾರೆ. ಅದು ಅರಮನೆಯ ಶಾಪಕ್ಕೆ ಸಂಬಂಧಪಟ್ಟಿರುವಂಥದು. ಈಗಿನ ಅರಮನೆಯಿದೆಯಲ್ಲ, ಮೊದಲು ಅಲ್ಲಿ ಒಂದು ಪತ್ರೀಬನವಿತ್ತಂತೆ. ಅರಮನೆ ಕಟ್ಟುವುದಕ್ಕೆ ಅಷ್ಟೊಂದು ಉತ್ಕೃಷ್ಟವಾದ ಸ್ಥಳ ಬೇರೆ ಕಡೆ ಸಿಕ್ಕಲಿಲ್ಲವಾದ್ದರಿಂದ ಅಲ್ಲಿಯೇ ಕಟ್ಟಲು ಯೋಜಿಸಿ ಪತ್ರೀಗಿಡಗಳನ್ನು ಕಡಿಯುತ್ತ ಬಂದರು. ಅದಕ್ಕೆ ಜಂಗಮನೊಬ್ಬ ಅಡ್ಡಿಬಂದ. ದೇಸಾಯರ ಎದುರು ಒಬ್ಬ ಜಂಗಮ ಎದಕ್ಕೆ ಈಡಾದಾನು? ಅವನನ್ನು ಸರಿಸಿ ಕಟ್ಟತೊಡಗಿದರು. ಅವನು ಒದರ್‍ಯಾಡತೊಡಗಿದ. ಕೊನೆಗೆ ಪಾಯಕ್ಕೊಂದು ಬಲಿಯಾಗಬೇಕಿತ್ತಲ್ಲ, ಅವನನ್ನೇ ಹಾಕಿ ಕಟ್ಟಿದರು. ಸಾಯುವಾಗ ಅವನು “ಅರಮನ್ಯಾಗ ಪತ್ರೀಬನ ಬೆಳೀಲೋ” ಎಂದು ಶಾಪಹಾಕಿ ಬೂದಿ ಎಸೆದನಂತೆ. ಶಾಪವಿಲ್ಲದ ಶ್ರೀಮಂತರ್‍ಯಾರಿದ್ದಾರೆ? ಈ ಕಥೆಯನ್ನು ನಮ್ಮೂರವರು ಕೇಳುವವರಲ್ಲಿ ಭಯವುಂಟಾಗುವ ಹಾಗೆ ಹೇಳುತ್ತಾರೆ. ಮತ್ತು ಈ ಕಥೆ ಅರಮನೆಯ ಚರಿತ್ರೆಯ ಒಂದು ಅವಿಭಾಜ್ಯ ಅಂಗವೆಂಬಂತೆ ಬೆಳೆದುಬಂದಿದೆ. ಒಬ್ಬೊಬ್ಬರು ಒಂದೊಂದು ಥರ ಹೇಳಿದರೂ ಒಟ್ಟು ಅರಮನೆ, ಪತ್ರಿಬನ, ಜಂಗಮ, ಶಾಪ-ಇವಿಷ್ಟು ವಿಷಯಗಳು ಪ್ರತಿಯೊಂದರಲ್ಲೂ ಬರುವುದರಿಂದ, ಅವರು ಸೇರಿಸುವ ಭಾವುಕ ವಿವರಗಳನ್ನು ಸುಲಿದು ಈ ಕಥೆಯ ಸಾರಾಂಶವಷ್ಟನ್ನೇ ನಿಮ್ಮ ಮುಂದೆ ಹೇಳಿದ್ದೇನೆ.
ಮುಂದೆ ಇನ್ನೊಬ್ಬ ಜಂಗಮ ಈ ಅರಮನೆಯ ಬದುಕಿನಲ್ಲಿ ಕಾಲು ಹಾಕುವುದಿದೆ. ಈ ವಂಶದ ಹಿಂದಿನ ಒಬ್ಬ ದೇಸಾಯಿಗೆ ತುಂಬ ಚೆಲುವೆಯಾದ ಹೆಂಡತಿಯೊಬ್ಬಳಿದ್ದಳು. ಅವಳೆಷ್ಟು ಚೆಲುವೆಯೆನ್ನುವುದಕ್ಕೆ ಒಂದು ಸಣ್ಣ ಘಟನೆಯ ಉದಾಹರಣೆಯಿದೆ. ತೌರುಮನೆಯಿಂದ ಅವಳನ್ನು ಸ್ವಯಂ ದೇಸಾಯಿ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಕರೆತರುತ್ತಿದ್ದ. ಊರ ಸಮೀಪ ಬಂದಾಗ ರಾತ್ರಿಯಾಗಿ ಪಲ್ಲಕ್ಕಿ ಹೊತ್ತ ಒಬ್ಬ ಆಳು ಎಡವಿಬಿದ್ದು ಕಾಲ್ಮುರಿದುಕೊಂಡ. ತಕ್ಷಣ ದೇಸಾಯಿ ಆಳುಗಳು ಅವಳನ್ನು ಕಂಡಾರೆಂದು ಕಂಬಳಿ ಮೂಟೆಯಲ್ಲಿ ಅವಳನ್ನು ಸುತ್ತಿ ತಾನೇ ಹೊತ್ತುಕೊಂಡು ಅರಮನೆಗೆ ಬಂದನಂತೆ! ಒಮ್ಮೆ ಜಂಗಮನೊಬ್ಬ ಭಿಕ್ಷೆಗೆ ಬಂದಾಗ ಈ ಚೆಲುವೆಯಾದ ದೊರೆಸಾನಿಯೇ ನೀಡಲಿಕ್ಕೆ ಹೋದಳು. ಬಂದೊಡನೆ ಜಂಗಮ ಅವಳನ್ನೊಮ್ಮೆ ತೀಕ್ಷ್ಣ ದೃಷ್ಟಿಯಿಂದ ನೋಡಿ, ಏನು ಹೊಂಚಿದನೋ ಬೆನ್ನು ತಿರುಗಿಸಿ ಹೊರಟುಬಿಟ್ಟ. ಇವಳು “ಭಿಕ್ಷೆ ತಗೋ ಸ್ವಾಮಿ, ಭಿಕ್ಷೆ ತಗೋ ಸ್ವಾಮಿ” ಎಂದು ಹಲಬುತ್ತ ಹೊಸ್ತಿಲು ದಾಟಿ, ಬೆನ್ನು ಹತ್ತಿದಳು. ಮುಂದೆ ಮುಂದೆ ಜಂಗಮ, ಹಿಂದೆ ಹಿಂದೆ ದೊರೆಸಾನಿ! ದೊರೆಸಾನಿಯ ಮುಖವನ್ನೇ ಕಾಣದ ಜನ ಅವಳ ಮತ್ತು ಜಂಗಮನ ಇಂಥ ವಿಚಿತ್ರ ವರ್ತನೆಗೆ ಬೆರಗಾಗಿ ಬಾಯ್ಗೆ ಬೆರಳಿಟ್ಟುಕೊಂಡು ನಿಂತವರು ನಿಂತಹಾಗೇ ನೋಡತೊಡಗಿದರು. ಜನ ನೋಡನೋಡುತ್ತಿದ್ದಂತೆ ಇಬ್ಬರೂ ಕುಮುದವ್ವನ ಹುಣಿಸೇ ಮೆಳೆಯಲ್ಲಿ ಕಣ್ಮರೆಯಾದರಂತೆ! ಈ ಕಥೆಯಲ್ಲಿ ವಾಸ್ತವಾಂಶ ಎಷ್ಟಿದೆಯೆಂದು ನನಗೆ ತಿಳಿಯದು. ಅಂತೂ ಅರಮನೆಯವರಿಗೆ ಜಂಗಮರನ್ನು ಕಂಡರಾಗುವುದಿಲ್ಲವೆಂಬುದಂತೂ ನಿಜ. ಜಂಗಮರು ಭಿಕ್ಷೆ ಬೇಡುತ್ತ ಊರಾಡಿದರೂ ಅರಮನೆ ಹೊಸ್ತಿಲಿಗೆ ಮಾತ್ರ ಹೋಗುವುದಿಲ್ಲ. ಇವರೂ ಕರೆಯುವುದಿಲ್ಲ.
ಶಿವಾಪುರವೆಂದರೆ ದೇಸಾಯರ ಈ ಅರಮನೆಯೇ. ನೀವು ಅಷ್ಟು ದೂರದಿಂದ ನೋಡಿದರೆ ಒಡೆದು ಕಾಣುವುದು ಅದೊಂದೇ ಅರಮನೆ; ಎರಡಂತಸ್ತಿನ ಎತ್ತರವಾದ ಅರಮನೆ. ಉಳಿದ ಸುಮಾರು ನೂರಿನ್ನೂರು ಮನೆಗಳು ಮಣ್ಣಿನವು, ಮಣ್ಣಿನ ಮಾಳಿಗೆಯವು. ಊರಿನ ಯಾವ ಭಾಗದಲ್ಲಿ ನಿಂತು ನೋಡಿದರೂ ಕಾಣುವ ಕೆಂಪು ಹಂಚಿನ ಶ್ರೀಮಂತ ಅರಮನೆ ಹಾಗೂ ಊಳಿದ ಮಣ್ಣಿನ ಬಡಮನೆಗಳ ನಡುವಿನ ವ್ಯತ್ಯಾಸ ಯಾರ ಕಣ್ಣಿಗಾದರೂ ಹೊಡೆದು ಕಾಣಿಸುವಷ್ಟು ಸ್ಪಷ್ಟವಾಗಿದೆ. ಅರಮನೆಯ ಸುತ್ತ ಎತ್ತರವಾದ ಪೌಳಿ(ಕಾಂಪೌಂಡ್)ಯಿದ್ದು ಎಷ್ಟು ದೂರದಿಂದ ನೋಡಿದರೂ ಅದರ ಮೊದಲನೇ ಅಂತಸ್ತು ಕಾಣಿಸುವಿದೇ ಇಲ್ಲ. ಅರಮನೆಯ ಎದುರಿಗೆ ಒಂದು ದೊಡ್ಡ ಆಲದಮರದ ಕಟ್ಟೆಯಿದೆ. ಹಿಂದೆ ಊರವರ್‍ಯಾರಾದರೂ ದೇಸಾಯರನ್ನು ಭೇಟಿ ಮಾಡಬೇಕೆಂದಾಗ, ನ್ಯಾಯ ಕೇಳುವುದಿದ್ದಾಗ ಇಲ್ಲೇ ಕಾಯಬೇಕಿತ್ತು. ಪೌಳಿಯೊಳಗಿನ ಅರಮನೆ ನನಗೆ, ನನ್ನಂಥ ಅನೇಕರಿಗೆ ಈಗಲೂ ದೊಡ್ಡ ರಹಸ್ಯ. ಯಾಕೆಂದರೆ ಈತನಕ ನಾನು ಪೌಳಿಯೊಳಗೆ ಕಾಲಿಟ್ಟವನೇ ಅಲ್ಲ. ನಿಜ ಹೇಳಬೇಕೆಂದರೆ ಭೂತಸ್ಥಾನದಷ್ಟೇ ಈ ಅರಮನೆ ನನ್ನಲ್ಲಿ ಭಯ ಹುಟ್ಟಿಸುತ್ತಿತ್ತು. ರಾತ್ರಿ ಒಬ್ಬಂಟಿಗನಾಗಿ ನಾನೇನಾದರೂ ಅದರ ಅಕ್ಕಪಕ್ಕ ಹಾದುಹೋಗುವ ಸಂದರ್ಭ ಬಂದರೆ ಕಿರಿಚಿ ಹಾಡುತ್ತ ಓಡಿಹೋಗುತ್ತಿದ್ದೆ. ಜೊತೆಯಲ್ಲಿ ಯಾರಾದರೂ ಇದ್ದರೆ ಅವರ ಮೈಗೆ ಅಂಟಿಕೊಂಡೇ ನಡೆಯುತ್ತಿದ್ದೆ. ರಾತ್ರಿ ಒಂದ ಮಾಡುವುದಿದ್ದಾಗ ಆ ಕಡೆ ಬೆನ್ನು ಮಾಡಿ ಕೂರುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ಅಕಸ್ಮಾತ್ ಒಳಗಿನಿಂದ ಯಾವುದಾದರೂ ದನಿ ಕಿವಿಗೆ ಬಿದ್ದರೆ ಹತ್ತಾರು ಭಯಾನಕ ದೃಶ್ಯಗಳನ್ನು ಕಲ್ಪಿಸಿಕೊಂಡು ನಡುಗುತ್ತಿದ್ದೆ. ಒಮ್ಮೆ ನಮ್ಮಣ್ಣನ ಜೊತೆ ಅಲ್ಲಿ ಹಾದುಹೋಗುತ್ತಿದ್ದಾಗ ಒಳಗೆ ಯಾರೋ ಕಿರುಚಿದ್ದು ಕೇಳಿ ಅಣ್ಣನನ್ನು ತಬ್ಬಿಕೊಂಡು ನಾನೂ ಕಿರುಚಿದ್ದು ನನಗಿನ್ನೂ ನೆನಪಿದೆ. ನನ್ನಣ್ಣ ಅದು ದೇಸಾಯರ ದನಿಯೆಂದು ಹೇಳಿದ್ದ ಆದರೆ ನನಗದು ಹೆಣ್ಣಿನ ದನಿಯಂತೆ ಕೇಳಿಸಿತ್ತು. ಹೆದರಿದ್ದ ನನ್ನನ್ನು ಅಣ್ಣ ಎತ್ತಿಕೊಳ್ಳಲಿಲ್ಲ. ಯಾಕೆಂದರೆ ನನ್ನ ಚಡ್ಡಿ ಒದ್ದೆಯಾಗಿತ್ತು.
ಅರಮನೆಯೆಂದ ಮೆಲೆ ಅದಕ್ಕೊಂದು ಪ್ರಭಾವಳಿ ಇರಬೇಕಲ್ಲ. ಆ ಪ್ರಭಾವಳಿಯಲ್ಲಿ ಜನಕ್ಕೆ ಪ್ರವೇಶವಿರಲಿಲ್ಲ. ಹೊರಗೆ ನಿಂತವರೋ ಪ್ರಭಾವಳಿಯ ಬಗ್ಗೆ ಕೊನೇಪಕ್ಷ ಹೆಮ್ಮೆತಾಳಬೇಕೆಂದೂ ತಿಳಿಯದವರು. ಹೀಗ್ಯಾಕೆಂದು, ಅರಮನೆ ಮತ್ತು ಜನರ ಸಂಬಂಧ ಎಂಥದೆಂದು ತಿಳಿಯಬೇಕಾದರೆ ನೀವು ಶಿವಾಪುರದ ಗ್ರಾಮದೇವತೆ-ಕುಮುದವ್ವನ ವಿಷಯ ತಿಳಿಯಬೇಕು. ಊರ ಪಶ್ಚಿಮಕ್ಕೊಂದು ಹುಣಿಸೇ ಮೆಳೆಯಿದೆ. ಅಲ್ಲೇ ಕುಮುದವ್ವನ ಗುಡಿಯಿರೋದು. ಮರಗಳಲ್ಲಿ ಹುದುಗಿರೋದರಿಂದ ಒಡೆದು ಕಾಣುವುದಿಲ್ಲ. ಹುಣಿಸೇ ಮೆಳೆಯ ಬಗ್ಗೆ ಆಮೇಲೆ ಹೇಳುತ್ತೇನೆ. ಗುಡಿ ಮಾತ್ರ ತುಂಬ ವಿಚಿತ್ರವಾಗಿದೆ. ಎತ್ತರವಾದ ಹುಣಿಸೇಮರಗಳ ಅಂಚಿನಲ್ಲಿ ಮೊಳಕಾಲೆತ್ತರ ಒಂದು ಪೌಳಿ. ಅದರ ಮಧ್ಯೆ ಮಡಕೆಯಾಕಾರದ ಎರಡಾಳೆತ್ತರದ ಗುಡಿ. ಚಿಕ್ಕ ಬಾಗಿಲಿದೆ. ತೆರೆದರೆ ಎದುರಿಗೆ ಅಡ್ಡಬಿಟ್ಟ ಬಿಳಿ ಪರದೆ ಬಿಟ್ಟು ಬೇರೇನೂ ಕಾಣಿಸುವುದಿಲ್ಲ. ಚಿಕ್ಕಂದಿನಲ್ಲಿ ನಾವು ಈ ಪರದೆಯನ್ನೆತ್ತಿ ನೋಡಿದ್ದೆವು. ಒಳಗೆ ತೊಡೆ ಗೀಸಿ ಕುಳಿತ ಒಂದು ಬತ್ತಲೆ ಹೆಣ್ಣಿನ ಶಿಲ್ಪವಿದ್ದು ಅದರ ಎರಡೂ ಕೈಗಳಲ್ಲಿ ಒಂದೊಂದು ಕಮಲಗಳಿವೆ. ಈ ಮೂರ್ತಿಗೆ ತಲೆ ಇಲ್ಲ. ಬದಲು ಅದರ ಸ್ಥಳದಲ್ಲೊಂದು ಅರಳಿದ ಕಮಲವಿದೆ. ಗುಡಿಯ ಈ ದೇವಿ ಕುಮುದವ್ವ ನಮ್ಮ ಊರಿಗೆ ಪ್ರಸ್ತುತವಾದ ರೀತಿ ಮಾತ್ರ ವಿಚಿತ್ರವಾಗಿದೆ. ಕುಮುದವ್ವ ಎಂಬ ಹೆಸರೇನೋ ಸೈ. ಯಾಕೆಂದರೆ ಕೈಯಲ್ಲಿ ಕಮಲಗಳಿವೆ. ತಲೆ ಕಮಲದ ರೂಪದಲ್ಲಿದೆ. ಹಿಂದೆ ಇದೊಂದು ತಾಂತ್ರಿಕರ ಸ್ಥಳವಾಗಿತ್ತೆಂಬುದರಲ್ಲೂ ಸಂದೇಹವಿಲ್ಲ. ಆದ್ದರಿಂದಲೇ ಏನೋ ಹೆಂಗಸರು ಈ ಗುಡಿಯ ಕಡೆಗೆ ತಪ್ಪಿ ಕೂಡ ಸುಳಿಯುವುದಿಲ್ಲ. ಹರಕೆ ಹೊತ್ತರೂ ಬೇಡಿಕೊಂಡರೂ ಸೇವೆ ಸಲ್ಲಿಸುವುದು ಮಾತ್ರ ಗಂಡಸರ ಮುಖಾಂತರವೇ. ಆದರೆ ಈ ದೇವಿಗೆ ಯಾರೇನು ಕಾಣಿಕೆ ಕೊಟ್ಟರೂ ಮುಡಿಪು ತೆತ್ತರೂ ಅದು ಕದ್ದು ತಂದುದಾಗಿರಬೇಕು. ಸ್ವಂತದ್ದಾಗಲಿ, ಸ್ವಂತ ಗಳಿಸಿದ್ದಾಗಲಿ ಖಂಡಿತ ಆಗಿರಕೂಡದು!
ವರ್ಷಕ್ಕೊಮ್ಮೆ ಯುಗಾದಿಯ ಸುತ್ತ ಈ ದೇವಿಯ ಜಾತ್ರೆಯಾಗುತ್ತದೆ. ಜಾತ್ರೆಯೆಂದರೆ ಅಕ್ಕಪಕ್ಕ ಊರವರು, ಗಂಡುಹೆಣ್ಣು ಸೇರಿ ಚೆಂದಾಗಿ ಆಚರಿಸುವಂಥದಲ್ಲ. ನಾಳೆ ಜಾತ್ರೆಯೆಂದರೆ ಈ ದಿನ ಮಧ್ಯಾಹ್ನದ ಹೊತ್ತು ಊರಿನ ಗಂಡಸರು ಮನೆಗೊಂದಾಳಿನಂತೆ ಬಂದು ಗುಡಿಯಲ್ಲಿ, ಸೆರುತ್ತಾರೆ. ಎಲ್ಲರೂ ಬಂದರೆಂದಾಗ ದೇಸಾಯರ ಮನೆಯಿಂದ ಜೋಡು ತೆಂಗಿನಕಾಯಿ ತರುತ್ತಾರೆ. ಅವನ್ನು ಒಡೆದು, ಹಲಗೆ ಬಾರಿಸುತ್ತ ಬೆಳಗಾವಿಗೆ ಹೊರಡುತ್ತಾರೆ. ಹಲಗೆ ಸಪ್ಪಳ ಕೇಳಿದೊಡನೆ ಊರವರು ತಂತಮ್ಮ ಮನೆಯ ಬಾಗಿಲುಗಳನ್ನು ಭದ್ರಪಡಿಸಿಕೊಂಡು ಒಳಗೇ ಕುಂತಿರುತ್ತಾರೆ. ಮತ್ತೆ ಅವರು ಬಾಗಿಲು ತೆರೆಯುವುದು ಬೆಳಗಾವಿಗೆ ಹೋದ ಗಂಡಸರು ತಿರುಗಿ ಬಂದ ಮೇಲೆಯೇ. ಅಲ್ಲೀತನಕ ಕೂಸುಕುನ್ನಿ ಅತ್ತರಿಲ್ಲ, ಕಿರಿಚಿದರಿಲ್ಲ, ಸತ್ತರೂ ಇಲ್ಲ.
ಗಂಡಸರೆಲ್ಲರೂ ಒಟ್ಟಾಗಿ ಬೆಳಗಾವಿಗೆ ಹೋಗುತ್ತಾರಲ್ಲ, ಜಾತ್ರೆಯ ಪರಿಕರಗಳನ್ನು ಅಂದರೆ ಸೀರೆ, ಖಣ, ತೆಂಗಿನಕಾಯಿ, ಗೋಧಿ, ಬೆಲ್ಲ, ಕುರಿ, ಕೋಳಿ-ಇವನ್ನು ತರುವುದಕ್ಕೆ. ಅವು ಇಷ್ಟಿಷ್ಟಿರಬೇಕೆಂದು ಒಂದು ಲೆಕ್ಕವಿದೆ. ಅಷ್ಟನ್ನೂ ಅವರು ಕದ್ದು ತರಬೇಕು, ಕೊಂಡಲ್ಲ! ದೇವಿಯ ಮಹಿಮೆ ಎಂಥಾದ್ದೆಂದರೆ, ಇಷ್ಟು ವರ್ಷ ಜಾತ್ರೆ ಮಾಡಿದ್ದಾರೆ, ಒಂದು ಸಲವೂ ಶಿವಾಪುರದ ಒಂದು ಕುಳವೂ ಕದಿಯುವಾಗ ಇನ್ನೊಬ್ಬರಿಗೆ ಸಿಕ್ಕುಬಿದ್ದಿಲ್ಲ! ಕಳುವಿನಲ್ಲಿ ಪಾಲ್ಗೊಂಡವರು ಹೇಳುವುದೇನೆಂದರೆ ಸ್ವಥಾ ಪೋಲೀಸರು ಅಲ್ಲೇ ನಿಂತಿರುತ್ತಾರೆ. ಅವರ ಕಣ್ಣೆದುರಿನಲ್ಲೇ ಇವರು ಕದ್ದರೂ ಅವರಿಗೆ ಕಾಣಿಸುವುದಿಲ್ಲವಂತೆ! ದೇವಿಯ ಮಹಿಮೆಯೋ ಇವರ ಚಾಲಾಕುತನವೋ ಅಥವಾ ಬೆಳಗಾವಿ ಪೋಲೀಸರ ಮತ್ತು ಅಂಗಡಿಯವರ ಜಂಟೀ ಧಡ್ಡತನವೋ ಅಂತೂ ನಮ್ಮ ಊರವರು ಜಾತ್ರೆಯ ಕಳ್ಳತನದಲ್ಲಿ ಇನ್ನೊಬ್ಬರ ಕೈಗೆ ಸಿಕ್ಕುಬಿದ್ದಿಲ್ಲವೆನ್ನುವುದಂತೂ ನಿಜ. ದೇವಿಯ ಈ ಮಹಿಮೆಯನ್ನು ‘ಸಾರಿ ಸಾರಿ ಹೇಳುವ’ ನಾಕೈದು ಜನಪದ ಹಾಡುಗಳು ನಮ್ಮಲ್ಲಿವೆ. ಹೀಗೆ ಕದ್ದಾದ ಮೇಲೆ ಮಾಲು ಸಮೇತ ಎಲ್ಲರೂ ಒಟ್ಟಾಗಿ ಊರಿಗೆ ಹೊರಡುತ್ತಾರೆ. ಹದಿನೆಂಟು ಮೈಲು ಬರಿಗಾಲಲ್ಲಿ ನಡೆದುಕೊಂಡೇ ಬರಬೇಕು, ಯಾಕೆಂದರೆ ಕದ್ದ ಮಾಲಿನಲ್ಲಿ ಎರಡು ಮೇಕೆಗಳೂ ಇರುತ್ತವೆ.
ಊರು ತಲುಪಬೇಕಾದರೆ ಮಾರನೇ ದಿನ ಹೊತ್ತು ನೆತ್ತಿಗೇರಿರುತ್ತದೆ. ಬರುವಾಗಲೂ ಹಲಗೆ ಬಾರಿಸಿಕೊಂಡು ಊರಿನಲ್ಲಿ ಹಾದುಕೊಂಡು ಕದ್ದಮಾಲನ್ನು ಪ್ರದರ್ಶಿಸಿಕೊಂಡು ಬರುತ್ತಾರೆ. ಆ ಸಪ್ಪಳ ಕೇಳಿಯೇ ಊರವರು ಬಾಗಿಲು ತೆರೆಯೋದು. ಕಳ್ಳಭಕ್ತರಿಗೆ ನೀರುನೀಡಿ, ಆಯಾಯ ಮನೆಯವರು ತಂತಮ್ಮ ಗಂಡಸರಿಗೆ ತಮ್ಮ ಮನೆಯ ಹರಕೆಯ ಬಲಿಪ್ರಾಣಿಯನ್ನು (ಅದೂ ಆಯಾ ವರ್ಷದ ಅವಧಿಯಲ್ಲಿ ಕದ್ದು ತಂದುದೇ)ಕೊಡುತ್ತಾರೆ. ಬಂಟರು ಹಾಗೇ ದೇವಿಯ ತನಕ ಬಂದು ಮೊದಲು ಬೆಳಗಾವಿಯ ಮೇಕೆಗಳನ್ನು ಬಲಿಕೊಟ್ಟು ಆಮೇಲೆ ತಂತಮ್ಮ ಬಲಿಗಳನ್ನು ಕತ್ತರಿಸಿ ಮನೆಗೆ ತರುತ್ತಾರೆ. ಅದನ್ನೆ ಅಡಿಗೆಮಾಡಿ ಉಂಡು ಬಯಲಾಟವಾಡಿ ಸಂತೋಷಪಡುತ್ತಾರೆ. ಇಲ್ಲಿಗೆ ಕುಮುದವ್ವನ ಜಾತ್ರೆ ಮುಗಿದಂತೆ. ಜಾತ್ರೆಯ ಒಟ್ಟಾರೆ ತತ್ವ ಏನೇ ಇರಲಿ, ಅದು ಬಂದಾಗ ನಮಗೆಲ್ಲ ಭಾರೀ ಆನಂದವಾಗುತ್ತಿತ್ತು. ಆ ಮೆರವಣಿಗೆ, ಆ ಕುಣಿತಗಳು, ಅವರು ಹೇಳುತ್ತಾ ಬರುವ ಕಳ್ಳತನದ ಪವಾಡಗಳು, ಅಂದಿನ ಬಯಲಾಟ-ಅಯ್ಯೊ ಈ ಹಬ್ಬ ಇಷ್ಟುಬೇಗ ಕಳೆದುಹೋಯಿತಲ್ಲಾ-ಎಂದು ಹಳಹಳಿಸುವಂತೆ ಮಾಡುತ್ತಿದ್ದವು. ಹಬ್ಬಹರಿದಿನಗಳಲ್ಲಿ ಈ ಜನ ಹಾಕುವ ಒಂದು ಜನಪ್ರಿಯ ವೇಷವಿದೆ. ‘ಗುಡದಪ್ಪನ ಸೊಗು’ ಎಂದು ಅದಕ್ಕೆ ಹೆಸರು. ಹಿಂದೆ ಗುಡದಪ್ಪ ಎಂಬಾತ ತಾಯಿ ಕುಮುದವ್ವನನ್ನು ಒಲಿಸಿಕೊಂಡಿದ್ದನಂತೆ. ಆತ ತಾಯಿಯ ಎದುರು ಕೂತು “ತಾಯೀ ಇಂದ ನಿನಗೇನ ಅಸೆ ಆಗೇತಿ?”ಎಂದು ಕೇಳುತ್ತಿದ್ದನಂತೆ. ತಾಯಿ ಅವನಿಗೆ ಪ್ರತ್ಯಕ್ಷಳಾಗಿ “ಇಂಥಾ ಊರಿನ, ಇಂಥವನ ಮನೆಯನ್ನ, ಇಂಥಾ ಸಂಚಿನಿಂದ ಒಡೆದು ಇಂತಿಂಥಾ ವಸ್ತು ಒಡವೆ ಕದ್ದು ತಗಂಬಾ” ಎಂದು ಅಪ್ಪಣೆ ಕೊಡುತ್ತಿದ್ದಳಂತೆ! ಆ ದೇವಿಯೋ, ಆ ಭಕ್ತರೋ…..ಸುಳ್ಳು ಯಾಕೆ, ಅಭಿಮಾನ ಬದಿಗಿರಿಸಿ ಹೇಳುತ್ತೇನೆ-ನನ್ನ ಊರಿನ ಜನ ಕಳ್ಳರೇ!
ಆದರೆ ನಮ್ಮ ಊರಿನಲ್ಲಿ ಮಾತ್ರ ಕಳ್ಳತನಗಳೇ ಆಗುವುದಿಲ್ಲ ಎನ್ನುವುದನ್ನು ನೀವು ಮರೆಯಬಾರದು. ಅದಕ್ಕೆ ದೇವಿಯ ಶಾಪವಿದೆ, ಕಠಿಣ ಶಿಕ್ಷೆಯಿದೆ. ಕಾರಣ ಹೀಗಿರಬಹುದು: ದೇಸಾಯರ ಮನೆತನವೊಂದನ್ನು ಬಿಟ್ಟರೆ ಊರಿನ ಎಲ್ಲರೂ ಬಡವರೇ. ಇದ್ದ ಜಮೀನೆಲ್ಲ ದೇಸಗತಿಯದು. (ಈಗೀಗ‘ಉಳುವವನೇ ಭೂಮಿಯ ಒಡೆಯ’ ಎಂಬ ಕಾಯ್ದೆ ಬಂದಾಗಿನಿಂದ ಭೂಮಾಲೀಕರಾಗಿದ್ದಾರೆ ಅಶ್ಟೆ)ಆದ್ದರಿಂದ ಊರಿನ ಜನಗಳೆಲ್ಲ ಆ ಮನೆತನದ ಆಳುಗಳು; ಜೀತದಾಳುಗಳಾಗಿರಬಹುದು. ಚಾರಿ ಆಗಿರಬಹುದು, ಹರಕೆ ಆಳುಗಳಾಗಿರಬಹುದು, ಇಲ್ಲ ಮಾರಿಕೊಂಡವರಾಗಿರಬಹುದು. ಆಳುಗಳೆಂದಮೇಲೆ ಅವರಿಗೆ ಬೇಕಾದಷ್ಟು ಆಹಾರ ವಗೈರೆ ಸಿಕ್ಕದಿದ್ದಾಗ ಕಳ್ಳತನಕ್ಕಿಳಿಯುವುದು ಸಹಜ. ಆದರೆ ಸ್ವಂತ ಊರಿನಲ್ಲಿ ಮಾತ್ರ ಕಳ್ಳತನ ಮಾಡಬಾರದು. ಯಾಕೆಂದರೆ ಏನು ಕಳ್ಳತನ ಮಾಡಿದರೂ ದೇಸಗತಿಯೇ ಗುರಿಯಾಗುತ್ತಾದ್ದರಿಂದ-ಹಿಂದಿನ ದೇಸಾಯರೇ ಕಳ್ಳತನಕ್ಕೆ ದೇವೀ ಆರಾಧನೆಯ ರೂಪ ಕೊಟ್ಟಿರಬಹುದು. ಇಲ್ಲದಿದ್ದರೆ ತಾಂತ್ರಿಕರ ದೇವಿಯೊಬ್ಬಾಕೆ ಕಳ್ಳತನ ಕಲಿಸುವುದು, ಕಳ್ಳಮಾಲು ಮಾತ್ರ ಸ್ವೀಕರಿಸುವುದು, ಊರಿನಲ್ಲಿ ಕಳ್ಳತನ ಮಾಡಬಾರದೆಂಬ ಕಟ್ಟಳೆ ಮಾಡುವುದು-ಎಂದರೇನರ್ಥ? ಕಳ್ಳರಾಗುವುದಕ್ಕೆ ಯಾರು ಬಯಸುತ್ತಾರೆ? ಶತಮಾನಗಳಿಂದ ತಾವು ಕಳ್ಳರಾಗಿ, ಅಪರಾಧಿಗಳಾಗಿ ಬಂದುದಕ್ಕೆ ಕುಮುದವ್ವನ ಮೂಲಕ ದೇಸಗತಿ ಮಾಡಿದ ವ್ಯವಸ್ಥೆಯೇ ಕಾರಣವೆಂದು ಜನರ ಕರಿಮನಸ್ಸಿಗೆ ಹೊಳೆಯುತ್ತ ಬಂದಿತ್ತು. ಅದು ಪೂರ್ತಿ ಗೊತ್ತಾಗಿ ಅವರು ಕಣ್ಣು ತೆರೆದಾಗ ಎದುರು ಸಿಕ್ಕವನು ಅರಮನೆಯ ಕೊನೆಯ ದೇಸಾಯಿ. ಅಪರಾಧಿ ಅವನಲ್ಲ ನಿಜ. ಅಷ್ಟೇ ಅಲ್ಲ, ಅವನು ಯಾವನೇ ದೊಡ್ಡಮನುಷ್ಯನಿಗಿಂತ ಕೊಂಚ ಮಾತ್ರ ಕಮ್ಮಿಯೆಂದು ನಾನು ಕೈ ಎತ್ತಿ ಹೇಳಬಲ್ಲೆ. ಆದರೆ ಆತ ಹಿಂದಿನವರ ಆಸ್ತಿಗೆ ಮಾತ್ರವಲ್ಲ, ಅಪರಾಧಕ್ಕೂ ಹೊಣೆಗಾರನಾಗಬೇಕಾಯ್ತು. ಅವನು ಪಂಚಾಯ್ತಿ ಎಲೆಕ್ಷನ್ನಿಗೆ ನಿಂತಾಗ, ಜನ ಅವನನ್ನಲ್ಲ ಆ ವಂಶದ ಭೂತಕಾಲ ನೋಡಿ ಸೋಲಿಸಿಬಿಟ್ಟರು. ಒಮ್ಮೆ ಜನ ಸ್ವತಂತ್ರರಾದರೋ, ಮುಂದೆ ಅರಮನೆಯನ್ನು ಅದರಷ್ಟಕ್ಕೆ ಬಿಟ್ಟು ಊರಿನ ಯಾವ ಚಟುವಟಿಕೆಯಲ್ಲೂ ಅದು ಭಾಗಿಯಾಗದಂತೆ ನೋಡಿಕೊಂಡರು. ಹಾಗೂ ಅರಮನೆಯಲ್ಲಿ ಏನು ನಡೆದರೂ, ಅದಕ್ಕೆ ನಿರ್ಲಿಪ್ತರಾಗಿ ಉಳಿದರು. ಅರಮನೆಯ ಕೊನೆಗಾಲದ ಈ ಕಥೆಯನ್ನು ಹೇಳುವುದೇ ನನ್ನ ಉದ್ದೇಶ. ಆದರೆ ಅದರ ಪ್ರತ್ಯಕ್ಷಸ್ಪರ್ಶ ಇರಲಿಲ್ಲವೆಂದೆನಲ್ಲ, ಶೀನಿಂಗವ್ವನನ್ನು ಕೇಳುವುದಕ್ಕೆ, ಅವಳಿಂದ ಕಥೆ ಹೊರಡಿಸಲಿಕ್ಕೆ ಸೂಟಿಯಲ್ಲಿ ಶಿವಾಪುರಕ್ಕೆ ಹೋದೆ.
ಎರಡು
ಶಿವಾಪುರದ ಬಳಿ ನಾನು ಬಸ್ಸಿನಿಂದಿಳಿದಾಗ ಮಟಮಟಾ ಮಧ್ಯಾಹ್ನವಾಗಿತ್ತು. ಸುತ್ತ ಯಾರೂ ಇರಲಿಲ್ಲ. ಅವು ಬೇಸಿಗೆಯ ದಿನಗಳಾದ್ದರಿಂದ ಊರವರ್‍ಯಾರೂ ಹೊಲಗಳ ಕಡೆಗೆ ಸುಳಿಯುವುದೂ ಇಲ್ಲ. ಇಕ್ಕೆಡೆಗಳಲ್ಲಿ ದಟ್ಟವಾಗಿ ಬೆಳೆದ ಕಳ್ಳಿ, ಅದರ ಮಧ್ಯೆ ಇಕ್ಕಟ್ಟಾದ ದಾರಿ, ಸುಡುಸುಡುವ ಬಿಸಿಲು. ಒಂದಾದರೂ ಹಕ್ಕಿಯ ಉಲುವಿಲ್ಲ. ಊರು ದೂರವಿಲ್ಲದಿದ್ದರೂ ಒಟ್ಟಾರೆ ಬೋರಾಯಿತು. ಮಲೆನಾಡಿನ ನಿಸರ್ಗ ಒಂದು ಥರವಾದರೆ, ಬಯಲ ಸೀಮೆಯ ನಿಸರ್ಗ ಇನ್ನೊಂದು ಥರ. ಥರಾವರಿ ಸಮೃದ್ಧ ಹಸಿರಿನಿಂದ ಮೈಮನಸ್ಸುಗಳಿಗೆ ತಂಪೆರೆದು ಧನ್ಯವಾಗಿಸುವ ರೀತಿ ಮಲೆನಾಡಿನದು. ಅಲ್ಲಿ ಹಿಂಸ್ರಪ್ರಾಣಿಗಳು ಕೂಡ ಆ ಸೌಂದರ್ಯದ ಚಿತ್ತಾರಗಳಾಗಿ, ಅವುಗಳ ಕ್ರೌರ್ಯ ಸುಂದರ ಅನುಭವವಾಗುತ್ತದೆ. ಬಯಲು ಸೀಮೆ ಹಾಗಲ್ಲ. ಎತ್ತ ನೋಡಿದರತ್ತ ಬೆತ್ತಲಾಗಿ ಬಿದ್ದ ಬೋಳುಬಂಡೆಗಳು, ಒಣಗಿ ತಲೆ ಕೆದರಿಕೊಂಡ ಗಿಡಮರಗಳು, ಬಿಸಿಲಿಗೆ ಸುಟ್ಟು ಕರಕಾದ ಎರೆನೆಲ, ಇವುಗಳ ಮಧ್ಯೆ ಎಲ್ಲಾದರೂ ಹಸಿರು ಕಣ್ಣಿಗೆ ಬಿದ್ದರೂ ಸಾಕು, ಕಣ್ಣಿಗೆ ಹಿಂಸೆಯಾಗುತ್ತದೆ. ತನ್ನ ಬೋಳುತನ, ಬಂಜೆತನ, ನಿಷ್ಕ್ರಿಯತೆಗಳಿಂದ ಇಲ್ಲಿಯ ನಿಸರ್ಗ ಪಂಚೇಂದ್ರಿಯಗಳನ್ನು ಇರಿಯುತ್ತದೆ. ಇರಿದು ಇರಿದು ತನ್ನ ಹಾಜರಿಯನ್ನು ಮನಸ್ಸಿನ ಮೇಲೆ ಹೇರುತ್ತದೆ. ಮತ್ತು ಮನುಷ್ಯನನ್ನು ತನ್ನ ಹಾಗೇ ಕ್ರೂರಿಯನ್ನಾಗಿ ಮಾಡುತ್ತದೆ. ಇಲ್ಲಿ ಆಗುವಷ್ಟು ಕೊಲೆ ಖೂನಿ ಹಾದರಗಳು ಬೇರೆ ಕಡೆ ಆಗದೇ ಇರುವುದಕ್ಕೆ ಇದೇ ಕಾರಣವಾಗಿರಬಹುದು. ಇಂಥ ಧಗಧಗಿಸುವ ಬಿಸಿಲಿನಲ್ಲಿ ಎಂಥಾ ಸಮಚಿತ್ತನ ಪಿತ್ಥವೂ ನೆತ್ತಿಗೇರಿ ಆತ ಅಘಟಿತ ಘಟನೆಗಳನ್ನು ಮಾಡುವಂತೆ ಪ್ರೇರೇಪಿಸುವುದು ಸಾಧ್ಯ.
ಇಲ್ಲಿ ಅನೇಕ ದಿನ ಘಟನೆಗಳು ಜರುಗುವುದೇ ಇಲ್ಲ, ದಟ್ಟ ಬಿಸಿಲು, ದಟ್ಟ ಕತ್ತಲೆಗಳನ್ನುಳಿದು. ನಿಸರ್ಗದ ಇಂಥ ನಿಷ್ಕ್ರಿಯತೆಯಿಂದ ಮನುಷ್ಯನಿಗೆ ಬೋರ್ ಬೋರಾಗಿ ಕೊನೆಗೆ ಇನ್ನೇನು ‘ದೇವರು ನಮ್ಮನ್ನು ಕಾಪಾಡಲಿಲ್ಲ’ ಎನ್ನುವಾಗ ಮಳೆಗಾಲ ಬರುತ್ತದೆ. ಆಗ ಇಲ್ಲಿಯ ಜನರ ಕಣ್ಣಿಗೆ ತುಸು ಜೀವಕಳೆ, ತುಸು ಬೆಳಕು ಇಳಿಯುತ್ತದೆ. ಮಳೆ ಕೂಡ ಇವರೊಂದಿಗೆ ಒಳ್ಳೆಯ ಅತಿಥಿಯಂತೆ ವ್ಯವಹರಿಸುವುದಿಲ್ಲ. ಮಳೆಗಾಲದ ಮೋಡಗಳು ಕ್ಷಯರೋಗಿಯಂತೆ ಬಿಳಿಚಿಕೊಂಡಿರುವುದನ್ನು ನೋಡಿದರೆ ಇಲ್ಲಿ ಜನ ಹ್ಯಾಗಾದರೂ ಬದುಕಿದ್ದಾರೆಂದು ಆಶ್ಚರ್ಯವಾಗುತ್ತದೆ. ಅವರ ಹೋರಾಟವನ್ನು ಅಭಿನಂದಿಸಬೇಕೆನಿಸುತ್ತದೆ.
ಅದಕ್ಕೇ ಇರಬೇಕು. ಮಳೆ, ಮಕ್ಕಳು, ಮತ್ತು ಹೆಣ್ಣು ಇಲ್ಲಿಯ ಜನರ ಸೂಕ್ಷ್ಮವಾದ ಮರ್ಮಸ್ಥಾನಗಳು. ಇವರೆಲ್ಲ ಆಸೆ, ನಿರಾಸೆ, ಭಾವನೆಗಳ ಉಗಮ ಈ ಮರ್ಮಸ್ಥಾನಗಳಿಂದಲೇ. ನಿಜ ಹೇಳಬೇಕೆಂದರೆ ಇಲ್ಲಿಯ ದೇವರುಗಳು ಕೂಡ ಹುಟ್ಟಿದ್ದು ಈ ಮರ್ಮಸ್ಥಾನಗಳಿಗೆ. ಈಯೆಲ್ಲ ದೇವರುಗಳು ಮಳೆಯ ಮೇಲೆ ಹತೋಟಿ ಹೊಂದಿ, ಮಳೆ ಬರಿಸುವ, ಮಕ್ಕಳ ಫಲಪುತ್ರ ಸಂತಾನ ಸೌಭಾಗ್ಯ ನೀಡುವ ಸಮೃದ್ಧಿ ದೇವತೆಗಳು. ಮಳೆ ಬರಿಸುವ ಕಪ್ಪೆ ಅವರ ದೇವರು. ಶಿಶ್ನರೂಪದ ಜೋಕುಮಾರಸ್ವಾಮಿ ಅವರ ದೇವರು. ಯೋನಿರೂಪದ ಕರಗ ಅವರ ದೇವರು….
ಹೀಗೆ ವಿಚಾರ ಮಾಡುತ್ತಿದ್ದಾಗ ಊರು ಬಂತು. ಸೀದಾ ಅಣ್ಣನ ಮನೆಗೆ ಹೋದೆ. ಅವನೀಗ ಹೊಸಮನೆ ಕಟ್ತಿಸಿಕೊಂಡು ಅಲ್ಲೇ ವಾಸಿಸುತ್ತಿದ್ದ, ಹಳೆಯ ಮನೆಯನ್ನು ದನದ ಕೊಟ್ಟಿಗೆಯಾಗಿಸಿಕೊಂಡಿದ್ದ. ನಾವು ಹುಟ್ಟಿ ಬೆಳೆದದ್ದು ಈ ಹಳೇ ಮನೆಯಲ್ಲಿಯೇ. ಹ್ಯಾಗೂ ಅಲ್ಲಿ ಒಂದು ಕೋಣೆ ಖಾಲಿಯಿದ್ದುದರಿಂದ ಹಸನು ಮಾಡಿಸಿ ಅಲ್ಲಿಯೇ ನನ್ನ ವಾಸದ ವ್ಯವಸ್ಥೆ ಮಾಡಿಕೊಂಡೆ. ಅಶ್ಟರಲ್ಲಿ ಹಳೇಗೆಳೆಯರು, ಪರಿಚಿತರು ಬಂದರು. ಬಂದವರೊಡನೆ ಶೀನಿಂಗವ್ವನ ಬಗ್ಗೆ ವಿಚಾರಿಸಿಕೊಂಡೆ. ಅವಳಿಗಿನ್ನೂ ಅರುಳುಮರುಳಾಗಿಲ್ಲವೆಂದು ತಿಳಿಯಿತು.
ಮಾರನೇ ದಿನ ಶೀನಿಂಗವ್ವನನ್ನು ನೋಡಲು ಓಂಪ್ರಥಮದಲ್ಲಿ ನನ್ನ ಮಿತ್ರ ಶಿರಶೈಲನೊಂದಿಗೆ ಅರಮನೆಗೆ ಹೋದೆ. ಇದೇ ಮೊದಲನೇ ಬಾರಿ ಇದ್ದುದರಿಂದ ಪೂರ್ವದ ಭಯದಲ್ಲೋ, ಇಲ್ಲವೇ ಅರಮನೆ ನೋಡುವ ಸಡಗರದಲ್ಲೋ ನನ್ನ ಎದೆ ಹಾರುತ್ತಿತ್ತು. ಪೌಳಿ ದಾಟಿ ಹೊರಗೆ ಹೊರಡುವಷ್ಟರಲ್ಲಿ ಶೀನಿಂಗವ್ವನೇ ಹೊರಬಂದಳು. ತುಂಬ ಹಣ್ಣುಹಣ್ಣಾದ ಮುದುಕಿ. ಕಡ್ಡಿ ಮುರಿದು ಅಂಟಿಸಿದ ಹಾಗೆ ಅವಳ ಮುಖದಲ್ಲಿ ಗೆರೆ ಮೂಡಿದ್ದವು. ಅಡ್ದತಿಡ್ಡಿ ಗೆರೆಯ ಬಿಳಿ ಮುಖದಲ್ಲಿ ಬಹಳ ಚಂಚಲವಾದ ಎರಡು ನೀಲಿ ಕಣ್ಣು ನೀರಾಡಿ ಹೊಳೆಯುತ್ತಿದ್ದವು. ತುಸು ಗಿಡ್ದ ಮೂಗು, ತೆಳುವಾದ ತುಟಿ, ಗದ್ದ ತುಂಟತನದಿಂದ ತುಸು ಮುಂದೆ ಬಂದಿದ್ದು ಅವಳ ವಯಸ್ಸಾದ ಮುಖಕ್ಕೆ ಅದೂ ಒಂದು ಬಗೆಯ ಶೋಭೆ ತಂದಿತ್ತು. ನೋಡಿದರೆ ಒಂದು ಕಾಲಕ್ಕೆ ಖಂಡಿತ ಕುರೂಪಿಯಾಗಿರಲಿಲ್ಲವೆಂದು ಹೇಳಬಹುದಾದ ಆದರೆ ತುಂಬ ಅನುಭವವುಂಡವಳಾದ್ದರಿಂದ ಗೌರವ ಭಾವನೆ ಉಕ್ಕುವಂತೆ ಮಾಡುವ ವ್ಯಕ್ತಿತ್ವ ಅವಳದೆಂದು ಗೊತ್ತಾಗುತ್ತಿತ್ತು. ಬಂದವಳೇ ಅಸ್ಪಷ್ಟವಾಗಿ ಕಂಡ ನಮ್ಮನ್ನು ಹುಬ್ಬಿಗೆ ಕೈ ಹಚ್ಚಿಕೊಂಡು ನೋಡುತ್ತ “ಯಾರಪಾ ನೀವು?” ಎಂದಳು. ಶಿರಸೈಲ ನನ್ನ ಸಹಾಯಕ್ಕೆ ಬಂದ. ನನ್ನ ತಂದೆಯ ಹೆಸರು ಹೇಳಿ ಅವನ ಮಗ ಬಂದಿರುವುದಾಗಿ ಹೇಳಿದ. ಮುದುಕಿ ನಮ್ಮಪ್ಪನ ಸದ್ಗುಣ ನೆನೆದು ಕಣ್ಣೀರು ಸುರಿಸಿದಳು. “ಅಂಥವರು ಈಗೆಲ್ಲಿದ್ದಾರಪಾ!”ಎಂದು ಅತ್ತಳು. ನನ್ನ ತಾಯಿಯನ್ನು ಜ್ಞಾಪಿಸಿಕೊಂಡು ಇನ್ನೊಮ್ಮೆ ಅತ್ತಳು. ನಮ್ಮನ್ನು ಕಾಪಾಡುವಾಗ ನನ್ನ ತಾಯಿ ಸೀತೆ ಸಾವಂತ್ರಿಯ ಹಾಗೆ ‘ಕಣ್ಣೀರಿನಲ್ಲಿ ಕಲ್ಲು ಕುದಿಸಿ ಮುಳ್ಳು ಬೇಯಿಸಿ ತಿಂದದ್ದನ್ನು’ ಭಾವಪೂರಿತವಾಗಿ ನೆನೆದು ಮತ್ತಷ್ಟು ಅತ್ತಳು. ನನಗೆ ಏನು ಮಾಡುವುದಕ್ಕೂ ತೋಚಲಿಲ್ಲ. ಸಮಾಧಾನ ಮಾಡುವ ಗೋಜಿಗೂ ಹೋಗಲಿಲ್ಲ. ಯಾಕೆಂದರೆ ಆಕೆ ಸಮಾಧಾನ ಹೊಂದ್ಯಾಳೆಂದು ನನಗೆ ವಿಶ್ವಾಸವಿರಲಿಲ್ಲ. ನನಗೆ ಚಿಂತೆಯಾದದ್ದು ಈ ಮುದುಕಿಯಿಂದ ಹ್ಯಾಗೆ ಈ ಮನೆತನದ ಕಥೆ ಹೊರಡುಸೋದು-ಎಂದು. ಅವಳು ಇನ್ನೂ ಏನೇನೋ ಆ ಕಾಲ ನೆನೆದು ಅಳುತ್ತಿದ್ದಾಗ ಶಿರಶೈಲನಿಗೆ ಸಣ್ಣದನಿಯಲ್ಲಿ ನನ್ನ ಆತಂಕ ಹೇಳಿದೆ. ಅವನೂ ಅಷ್ಟೇ ಸಣ್ಣದನಿಯಲ್ಲಿ“ಎಣ್ಣಿ(ಸೆರೆ)ಇಳಿದರ ತಾನಽ ದಾರಿಗಿ ಬರ್‍ತಾಳ ಬಿಡು” ಅಂದ. ಅಷ್ಟರಲ್ಲಿ ಮುದುಕಿಗೆ ಎದುರಿಗಿನ ನಮ್ಮ ಅರಿವು ಮೂಡಿ.
“ಬೆಳಗಾವ್ಯಾಗ ಸಾಲೀಬರೀತಿ, ನೀನಽ ಅಲ್ಲಾ ಮಗನಽ?”-ಎಂದಳು. ನಾನು “ಹೌದಂಬೇ”ಎಂದೆ. ಶಿರಸೈಲನಿಗದು ಸರಿಬರಲಿಲ್ಲ.
“ಸಾಲೀ ಎಲ್ಲ ಬರದ ಮುಗಿಸಿ ಈಗ ದೊಡ್ಡ ಸಾಹೇಬ ಆಗ್ಯಾನಬೇ.”
-ಅಂದ. ಸುದೈವದಿಂದ ಮುದುಕಿಯ ಕಿವಿ ಹರಿತವಾಗಿದ್ದವು. ಕೇಳಿದವಳೇ ಎದೆಯಮೇಲೆ ಎರಡೂ ಕೈ ಊರಿಕೊಂಡು“ಅವ್ ಅವ್ ಅವ್ ನನ ಶಿವನಽ”ಎಂದು ಹೊಯ್ಕನುಭವಿಸಿ “ಬಾ ಇಲ್ಲಿ ನೋಡೋಣು”ಎಂದು ಎರಡೂ ಕೈಯಲ್ಲಿ ನನ್ನ ಮುಖ ಹಿಡಿದು ತನ್ನ ಕಣ್ಣೀನ ಸಮೀಪಕ್ಕೊಯ್ದು ನೋಡಿದಳು. ತಕ್ಷಣ ನನ್ನ ಮುಖ ಬಿಟ್ಟು ಬೆಳಗಾವಿಯಲ್ಲಿದ್ದ ರವಿಚಂದ್ರನನ್ನು ನೆನೆದು ಕಟ್ಟೆಯ ಮೇಲೆ ಕುಸಿದು ಕೂತಳು. ಇದನ್ನೆಲ್ಲ ನೋಡಲು ನಾವು ನಿಲ್ಲಲಿಲ್ಲ. ಅರಮನೆಯ ಒಳಕ್ಕೆ ಹೊಕ್ಕೆವು. ಎದುರಿಗಿನ ಭವ್ಯವಾದ ಕಟ್ಟಡ ನೋಡಿ ದಂಗಾಗಿ ನಿಂತುಬಿಟ್ಟೆ. ನಮ್ಮ ಬಡ ಊರಿನಲ್ಲಿ ಇಂಥ ಅದ್ಭುತವಾದೊಂದು ‘ಅರಮನೆ’ ಇದ್ದು ನಾನು ಈತನಕ ಇದನ್ನು ನೋಡಿಲ್ಲದ್ದಕ್ಕೆ ಹಳಹಳಿಸಿದೆ. ಇದರ ಬಗ್ಗೆ ಇರುವ ನಮ್ಮೂರ ಗರತಿಯರ ಹಾಡು ಕೇಳಿದ್ದೆ, ಕೇಳಿ ಕಲ್ಪಿಸಿಕೊಂಡಿದ್ದೆ. ಆದರೆ ಈ ಅರಮನೆ ನನ್ನ ಕಲ್ಪನೆ ಮೀರಿತ್ತು. ಸಾಲು ಸಾಲು ಕಂಬಗಳ ದೊಡ್ಡ ಒಡ್ಡೋಲಗದ ಶಾಲೆ, ಪ್ರತಿ ಕಂಬದ ಸೂಕ್ಷ್ಮ ಕೆತ್ತನೆ ಕೆಲಸ. ಗೋಡೆಗಳ ಮೇಲೆ ಬರೆದ ಹಳೇ ಚಿತ್ರಗಳು, ಮೇಲೆ ನೋಡಿದರೆ ಮತ್ತೆ ಮರಗೆಲಸದ ಸೂಕ್ಷ್ಮವಿನ್ಯಾಸಗಳು…… ನಿಜ ಹೇಳುತ್ತೇನೆ. ನಾನು ನಮ್ಮೂರಲ್ಲಿದ್ದುದನ್ನೇ ಮರೆತುಬಿಟ್ಟೆ. ಒಡ್ಡೋಲಗ ಸಾಲೆಗಿದ್ದ ಒಂದೇ ಒಂದು ದೊಡ್ಡ ಬಾಗಿಲು ದಾಟಿ ಒಳಕ್ಕೆ ಹೋದರೆ ಪಡಸಾಲೆ. ಅದಕ್ಕಂಟಿ ದೇವರ ಕೋಣೆಯಿದೆ. ಅದರಾಚೆ ಒಂದು ಸಣ್ಣಕೋಣೆ, ಬೆಳಕು ಸಾಲದ ಇಂಥ ಮೂರು ಕೋಣೆ ದಾಟಿದರೆ ತುಸು ಬೆಳಕಿನ ಇನ್ನೊಂದು ಕೋಣೆ, ಅಲ್ಲಿಂದ ಮೇಲೆ ಅಂತಸ್ತಿಗೆ ಹೋಗುವ ಮೆಟ್ಟಿಲುಗಳಿವೆ. ಹೀಗೆ ಹತ್ತು ಬಾಗಿಲು ದಾಟಿ ಮೆಟ್ಟಿಲೇರಿ ಮೇಲೆ ಹೋದೆ.
ಒಳಗೆ ಕತ್ತಲಿತ್ತು. ನನಗಿಂತ ಮುಂಚೆಯೇ ನುಗ್ಗಿದ್ದ ಶಿರಸೈಲ ಕಿಟಿಕಿಯ ಬಾಗಿಲು ತೆಗೆದ. ಈ ಕಿಟಕಿಗಳು ಸಾಮಾನ್ಯವಾದವುಗಳಲ್ಲ. ರಾತ್ರಿಯ ಸಮಯದಲ್ಲಿ ದೂರದ ಎಷ್ಟೋ ರೈತರಿಗೆ ಮಂದಬೆಳಕಿನ ಈ ಕಿಟಕಿಗಳೆ ಹದಿ ತೋರಿಸುವ ನಕ್ಷತ್ರಗಳು! ಇವನ್ನು ಹಾಗೆ ಗುರುತಿಸಿ ನಾನೆಷ್ಟೋ ಬಾರಿ ಊರು ಸೇರಿದ್ದೇನೆ. ಈಗ ಮಾತ್ರ ಆ ಕಿಟಕಿಯಾಚೆ ಬರುವ ಬೆಳಕು ಒಳಗಿಗೆ ಸಾಲುತ್ತಿರಲಿಲ್ಲ. ಎರಡೇ ಕಿಟಿಕಿಯಿದ್ದ ಆ ವಿಶಾಲ ಕೋಣೆಯ ಮಧ್ಯೆ ಒಂದು ದೊಡ್ಡ ಮಂಚವಿತ್ತು. ಅದರ ಮೇಲೊಂದು ಮಾಸಿದ ಕುತನೀಗಾದಿಯಿತ್ತು. ಅದರ ಪಕ್ಕದಲ್ಲೊಂದು ಕಪಾಟಿದ್ದು ಅದಕ್ಕೆ ದೊಡ್ದದೊಂದು ನಿಲುವುಗನ್ನಡಿ ಅಂಟಿಸಲಾಗಿತ್ತು. ಕನ್ನಡಿ ಮುಂದೆ ಕೂತು ಸಿಂಗರಿಸಿಕೊಳ್ಳಲು ಅನುಕೂಲವಾಗುವಂತೆ ಅದರೆದುರೊಂದು ಗಡಂಚಿಯಿತ್ತು. ಇಲ್ಲಿಯೂ ಜಂತಿಜಂತಿಯ ಕೆತ್ತನೆ ಕೆಲಸವಿದ್ದು ಸೂಕ್ಷ್ಮವಾಗಿ ನೋಡಿದರೆ ಹೆಣ್ಣುಗಂಡು ನಾನಾ ಭಂಗಿಗಳಲ್ಲಿ ಭೋಗಿಸುವ ವಿನ್ಯಾಸಗಳಿದ್ದದ್ದು ಗೊತ್ತಾಗುತ್ತಿತ್ತು. ನಾನು ಅವುಗಳನ್ನೇ ತೀಕ್ಷ್ಣವಾಗಿ ನೋಡುತ್ತಿದ್ದಾಗ ಶಿರಸೈಲ ಬಾಯ್ಗೆ ಕೈಯಿಟ್ಟುಕೊಂಡು ಒಳಗೊಳಗೇ ನಗುತ್ತಿದ್ದ. ಅವನನ್ನೆಳೆದುಕೊಂಡು ಇನ್ನೊಂದನ್ನು ನೋಡತೊಡಗಿದೆವು. ಅದರಲ್ಲಿ ಹೆಣ್ಣೊಬ್ಬಳು ನಾಯಿಯ ಜೊತೆ ಭೋಗಿಸುತ್ತಿದ್ದಳು. ಈಗ ಮಾತ್ರ ನನ್ನ ಮಿತ್ರನ ನಗೆ ಖೊಖ್ ಎಂದುಕ್ಕಿ ಹೊರಸೂಸಿಬಿಟ್ಟಿತು. ಆಶ್ಚರ್ಯವೆಂದರೆ ಅಷ್ಟು ದೊಡ್ದ ಕೋಣೆಗೆ ಎರಡೇ ಕಿಟಿಕಿಯಿದ್ದದ್ದು. ಊರ ಕಡೆಗಿನ ಎರಡು ಗೋಡೆಗಳಲ್ಲೂ ಕಿಟಿಕಿಗಳಿರಲಿಲ್ಲ. ದಕ್ಷಿಣದ ಕಿಟಿಕಿಯಲ್ಲಿ ನೋಡಿದರೆ ಹೊಲೆಯರ ಗುಡಿಸಲುಗಳಿಂದ ಆವೃತವಾದ ಬಯಲಿದೆ. ನಮ್ಮೂರಿನ ಕಲಾವಿದರು ಬಯಲಾಟ ಮಾಡುವುದು ಇಲ್ಲಿಯೇ. ಅಂಥ ಬಯಲಾಟಗಳನ್ನು ಈ ಕಿಟಿಯಿಂದಲೇ ನೋಡಬಹುದಿತ್ತು. ಬೇಕಾದರೆ ಮಂಚದ ಮೇಲೆ ಒರಗಿಕೊಂಡು ಕೂಡ ನೋಡಬಹುದಿತ್ತು. ದೊರೆಸಾನಿಯರು ಬಯಲಾಟಗಳನ್ನು ಇಲ್ಲಿಂದಲೇ ನೋಡುತ್ತಿದ್ದರೆಂದು ಊಹಿಸಿಕೊಂಡು ಇನ್ನೊಂದು ಕಿಡಿಕಿಗೆ ಹೋದೆ. ಅದು ಪಶ್ಚಿಮದ ದಿಕ್ಕಿನದು. ನೋಡಿದರೆ ಬಯಲು ಹೊಲಗಳಗುಂಟ ಒಂದು ಕಾಲು ದಾರಿ ಸುಳಿದು ತುಸು ದೂರದ ಹುಣಿಸೇಮೆಳೆಗೆ ಸೇರುತ್ತದೆ. ಅಲ್ಲಿಯೇ ಕುಮುದವ್ವನ ಗುಡಿಯಿರೋದು. ಅದರ ಬಗ್ಗೆ ನಿಮಗಾಗಲೇ ಹೇಳಿದ್ದೇನೆ.
ಅಂತಸ್ತಿನ ಕೋಣೆಯನ್ನು ಇನ್ನಷ್ಟು ವಿವರವಾಗಿ ನೋಡಿ ನಾನು ಮತ್ತು ಶಿರಸೈಲ ಕೆಳಗಿಳಿದು ಬಂದೆವು. ನಾವು ಒಳಕ್ಕೆ ಹೋಗುವ ಮುನ್ನ ಕುಸಿದು ಕೂತ ಶೀನಿಂಗವ್ವ ಎದ್ದು ಬಂದು ಎದುರಾದಳು. ಈ ಸಲ ಅವಳು ಅಳುತ್ತಿರಲಿಲ್ಲ. ಸುಮ್ಮನೆ ಬೆನ್ನುಹತ್ತಿದಳು. ಹೊರಕ್ಕೆ ಬಂದಾಗ ಮನೆಯ ಕಟ್ಟೆಯೊಡೆದು ಒಂದು ಪತ್ರೀಗಿಡ ಬೆಳೆದದ್ದನ್ನು ಶಿರಸೈಲ ತೋರಿಸಿದ. ನನಗದು ಗೊತ್ತಿತ್ತು. ಶೀನಿಂಗವ್ವನ ಕಡೆ ನೋಡಿದೆ. ನಾನು ನಿರೀಕ್ಷಿಸಿದಂತೆಯೇ ಮುದುಕಿ “ಕತೀ ಆಗಿ ಹೋದ್ನೋ ಮಗನಽ”ಎನ್ನುತ್ತ ಮತ್ತೆ ಅಳತೊಡಗಿದಳು. ಅರಮನೆ ನೋಡಿ ನನ್ನ ಮನಸ್ಸಿಗೂ ನೋವಾಗಿತ್ತು. ಅವಳನ್ನು ಸಮಾಧಾನ ಮಾಡುವಷ್ಟು ನೆಮ್ಮದಿ ನನಗಿರಲಿಲ್ಲ. ಸಾಯಂಕಾಲ ಬಂದರಾಯ್ತೆಂದು ಮನೆಗೆ ಹೋದೆವು.
ಮಧ್ಯಾಹ್ನ ಉಂಡು ಅಡ್ದಾದಾಗಲೂ ಸಲಕ್ಕೊಮ್ಮೆ ಅಳುವ ಈ ಮುದುಕಿಯಿಂದ ಕತೆ ಹ್ಯಾಗೆ ಹೊರಡಿಸೋದು-ಎಂಬ ಚಿಂತೆಯೇ ನನ್ನನ್ನು ಕಾಡಿಸುತ್ತಿತ್ತು. “ಐದ ರೂಪಾಯಿ ಕೊಡು, ಆಮ್ಯಾಲೆ ಅದರ ಗಮ್ಮತ್ತ ನೋಡು” ಎಂದು ನನ್ನ ಮಿತ್ರನೇನೋ ಸಮಾಧಾನ ಮಾಡಿದ್ದ. ನನಗೆ ನಂಬಿಕೆಯಿರಲಿಲ್ಲ. ಆತನಿಗೆ ಐದು ರೂಪಾಯಿ ಕೊಟ್ಟು ಅದೇನು ಮಾಡುತ್ತಾನೋ ಮಾಡಿಕೊಳ್ಳಲಿ ಎಂದು ಸುಮ್ಮನಾಗಿದ್ದೆ.
ಸಂಜೆ ಆರು ಗಂಟೆಯ ಸುಮಾರಿಗೆ ಅರಮನೆಗೆ ಹೋದೆ. ಮೊದಲೇ ಹೇಳಿದ್ದಂತೆ ಶಿರಸೈಲ ಅಲ್ಲಿದ್ದವನು ನನ್ನನ್ನು ನೋಡಿ ಓಡಿಬಂದ. ಅವಳಿಗೆ ಸಲ್ಲುವ ಹರಕೆ ಸಂದಾಯವಾಗಿದೆಯೆಂದೂ ಇನ್ನು ಕಾಳಜಿ ಮಾಡಬೇಡವೆಂದೂ ಹೇಳಿದ.(ಹರಕೆ ಅಂದರೆ ಒಂದು ಬಾಟ್ಲಿ ಸೆರೆ, ಒಂದು ಕಟ್ಟು ಬೀಡಿ ಹಾಗೂ ಒಂದು ಹುರಿದ ಮೀನು. ಈ ಜಂಗಮರ ಹುಡುಗ ಇದನ್ನೆಲ್ಲ ಹ್ಯಾಗೆ ವ್ಯವಸ್ಥೆ ಮಾಡಿದ್ದನೋ!) ಆಶ್ಚರ್ಯವೆಂದರೆ ಮುದುಕಿ ಮನೆಯಿಂದ ಹೊರಬಂದಾಗ ಭರ್ಜರಿ ಮೂಡಿನಲ್ಲಿದ್ದಳು. ನಗುತ್ತ “ಬಾ ಎಪ್ಪಾ”ಎಂದಳು. ಕಾಣಿಸದಿದ್ದ ಅವಳ ಕಣ್ಣುಗಳು ಹೊಳೆಯುತ್ತಿದ್ದವು. ಮುಖದ ಸುಕ್ಕಿನ ಗೆರೆಗಳೀಗ ಪಕ್ವ ಹಣ್ಣೀನ ಮೇಲೆ ಮೂಡುವ ಗೆರೆಗಳಂತಿದ್ದವು. ನಾನು ಅಲ್ಲೇ ಪಕ್ಕದ ಪತ್ರೀಕಟ್ಟೆಯ ಮೇಲೆ ಕೂತೆ. ಮುದುಕಿ ತುಸು ದೂರದಲ್ಲಿ ಕೂತಳು. ಶಿರಸೈಲ ಕಟ್ಟೆ ಸಮೀಪದ ಕಂಬಕ್ಕೊರಗಿ, ಮೊಳಕಾಲ ಸುತ್ತ ಕೈ ಹೆಣೆದು ಮುಂದೇನೋ ಭಾರೀ ಸಂಭಾಷಣೆ ಆಗಲಿದೆಯೆಂದೂ, ಆ ಮೂಲಕ ತನ್ನ ಮಿತ್ರನಾಧ ನನ್ನ ಪಾಂಡಿತ್ಯವನ್ನು ಮೆಚ್ಚಬೇಕೆಂದೂ ಕೂತ. ಆ ಈ ಮಾತುಗಳಾಗಿ ಹಿಂದೆ ನಾ ಕಂಡ ಘಟನೆಗಳನ್ನು ಹೇಳಿದೆ. ಮುದುಕಿಗೆ ಅವೂ ನೆನಪಿದ್ದವು. ಹೋ ಎಂದು ನನ್ನ ಕಡೆ ಕೈಮಾಡಿ, ನಕ್ಕಳು. ನನ್ನ ಮಿತ್ರನ ಹರಕೆ ಸರಿಯಾಗಿ ಕೆಲಸ ಮಾಡಿತ್ತು. ಮುಂಜಾನೆ ಸಲಕ್ಕೊಮ್ಮೆ ಅಳುತ್ತಿದ್ದ ಮುದುಕಿ ಇದೇನೋ ಎಂದು ನನಗೆ ಹೊಯ್ಕಾಯ್ತು. ನಾ ಒಂದು ಹೇಳಿದರೆ ಅವಳು ಎರಡು ಘಟನೆಗಳನ್ನು ಸರಿಯಾಗಿ ಹೇಳಿ ನನ್ನನ್ನು ನಗಿಸಿದಳು. ನನಗಾದ ಸಂತೋಷಕ್ಕೆ ಎಣೆಯೇ ಇರಲಿಲ್ಲ. ಯಾಕೆಂದರೆ ಆ ಮುದುಕಿಯ ನೆನಪು ನಿಚ್ಚಳವಾಗಿತ್ತು. ಘಟನೆಯನ್ನು ಅದು ನಿನ್ನೆಯೇ ನಡೆಯಿತೆಂಬಂತೆ, ಆ ನಿನ್ನೆ ಇನ್ನೊಮ್ಮೆ ಪ್ರತ್ಯಕ್ಷವಾಗಿ ಕಣ್ಣೆದುರು ಕಟ್ಟುವಂತೆ ಹೇಳುತ್ತಿದ್ದಳು. ಅವಳ ಮಾತುಗಳಿಂದ ನನಗೆ ಪೂರ್ತಿ ಧೈರ್ಯ ಮತ್ತು ವಿಶ್ವಾಸ ಮೂಡಿದಮೇಲೆ ಕೇಳಿದೆ-
“ಆಯೀ ಈ ಊರಿಗಿ ನೀ ಎಂದ ಬಂದಿ?”
ಮುದುಕಿ ನೆಲದಿಂದ ಎತ್ತರ ಸೂಚಿಸಲು ಕೈಮಾಡಿ,
“ಇಷ್ಟಿದ್ದೆ”ಎಂದು ಹೇಳಿ“ನಾವಿಬ್ಬರೂ ಮುಟ್ಟಾಗಿ ಎರಡುವರ್ಷ ಆಗಿದ್ದವು” ಎಂದಳು.
“ನಾವಿಬ್ಬರೂ ಅಂದರ?”
“ನಾನು ಮತ್ತು ಸಿಂಗಾರೆವ್ವ.”
“ಮುಟ್ಟಾಗಿ ಎರಡು ವರ್ಷಕ್ಕಽ ಮದಿವಿ?” ಆ ಭಾಗದಲ್ಲಿ ಎಳೇ ಕೂಸುಗಳಿಗೇ ಮದುವೆ ಮಾಡುವ ವಿಚಾರ ನನಗೆ ಗೊತ್ತಿತ್ತು. ಆದರೆ ಅದರಿಂದ ಕಥೆ ಮುಂದುವರಿಯುವ ಸಾಧ್ಯತೆಯಿದೆಯೆಂದು ಅನ್ನಿಸಿ ಕೇಳಿದ್ದೆನಷ್ಟೆ.
“ಮುಟ್ಟಾದ ಎರಡು ವರ್ಷಕ್ಕಽ ಮದಿವೆಂದರ….? ಸರಗಂ ದೇಸಾಯಿ ಆಕೀ ಎರಡ್ನೇ ಗಂಡ!”
-ಎರಡನೇ ಗಂಡ!ನನಗಿದು ಗೊತ್ತಿರಲಿಲ್ಲ. ಹಾಗೆಂದು ಆಡಿಯೂ ಬಿಟ್ಟೆ.
“ನಮ್ಮ ಸಿಂಗಾರೆವ್ವನ ಅಪ್ಪ ಭಾಳ ಕೊಳಕ ಇದ್ದ. ಕೊಳಕ ಅಂದರ ಅಂತಿಂತಾ ಕೊಳಕಂತ ಅಂದೀ ಮತ್ತ. ಅಸಮಾನ ಕೊಳಕ. ಮಕ್ಕಳ್ನ ಮಾರಿಕೊಳ್ಳೋವಂಥ ಕೊಳಕ……”
-ಎಂದು ಶೀನಿಂಗವ್ವ ಹೇಳತೊಡಗಿದಳು. ಸಿಂಗಾರೆವ್ವನ ತಂದೆ ಬಗ್ಗೆ ಅವಳಿಗೆ ಒಳ್ಳೆಯ ಭಾವನೆ ಇರಲಿಲ್ಲವೆಂದೂ ಗೊತ್ತಾಯಿತು. ಅಲ್ಲದೆ ಈ ವಿಷಯವನ್ನಾಕೆ ಸಂಕಟದಿಂದ ಹೇಳತೊಡಗಿದಳು. ಒಟ್ಟಾರೆ ದುರಂತಕ್ಕೆ ಆತನ ಕೊಳಕುತನವೇ ಕಾರಣವೆಂದು ಅವಳ ಅಭಿಪ್ರಾಯವಾಗಿದ್ದಂತೆ ಕಂಡಿತು. ಇಲ್ಲಿಗೆ ಪ್ರಸ್ತಾವನೆ ನಿಲ್ಲಿಸಿ ಇನ್ನು ಮುಂದೆ ಅವಳು ಹೇಳಿದ್ದಾನ್ನೇ ಗ್ರಾಂಥಿಕ ಭಾಷೆಯಲ್ಲಿ ನಿರೂಪಿಸುತ್ತೇನೆ. ಯಾಕೆಂದರೆ ಆಕೆಯೂ ಈ ಘಟನಾವಳಿಯಲ್ಲಿಯ ಒಂದು ಪ್ರಮುಖ ಪಾತ್ರ. ಮಾತ್ರವಲ್ಲ ಎಲ್ಲರ ಸಾವಿಗೆ ಸಾಕ್ಷಿಯಾಗಿ ಸಾಯದೆ ಇನ್ನೂ ಬದುಕ್ಕಿದ್ದವಳು. ಹೇಳ ಹೇಳುತ್ತ ಭಾವುಕಳಾಗಿ ಅಂದವರ್‍ಯಾರು ಅನ್ನಿಸಿಕೊಂಡವರ್‍ಯಾರೆಂದು ತಿಳಿಸದೆ ಬರೀ ಸಂಭಾಷಣೆಯ ಮೂಲಕವೇ ಒಮ್ಮೊಮ್ಮೆ ಕಥೆ ಹೇಳುತ್ತಿದ್ದಳು. ಪ್ರತ್ಯಕ್ಷ ಎದುರುಕೂತಲ್ಲದೆ ಅದು ತಿಳಿಯುವುದಿಲ್ಲವಾದ್ದರಿಂದ ಭಾಷೆಯಲ್ಲಿ ತುಸು ಒಪ್ಪಂದ ಮಾಡಿಕೊಂಡಿದ್ದೇನೆ. ಅಗತ್ಯ ಮತ್ತು ಅನಿವಾರ್ಯವೆನ್ನಿಸಿದಾಗ ಅವಳ ಮಾತುಗಳನ್ನೇ ಉದ್ಧರಿಸುತ್ತ, ಕಥೆಯ ಭಾವಪ್ರಪಂಚವನ್ನು ಪರೋಕ್ಷವಾಗಿ ನಾನೂ ಅನುಭವಿಸಿದವನಾದ್ದರಿಂದ ಅಲ್ಲಲ್ಲಿ ನಮ್ಮ ಅಂದಿನ ಪ್ರತಿಕ್ರಿಯೆಗಳನ್ನೂ ಬೆರೆಸುತ್ತ ಸಾವಳಗಿ ಶಿವಲಿಂಗೇಶ್ವರಮಠದ ಸಿದ್ಧರಾಮಸ್ವಾಮಿಗಳು, ಭೂಸನೂರುಮಠದ ಸಂಗಯ್ಯ ಸ್ವಾಮಿಗಳು ಹಾಗೂ ಘೋಡಗೇರಿಯ ಕಂಬಾರ ಬಸವಣ್ಣೆಪ್ಪ-ಇವರ ಹೆಸರುಗೊಂಡು ಸಾಧ್ಯವಾದಷ್ಟು ಪ್ರಾಮಾಣಿಕತೆಯಿಂದ ಕಥೆ ಮಾಡುತ್ತೇನೆ, ಕೇಳಿರಿ:
ಕಥೆ ನಂದಗಾವಿಯಿಂದ ಸುರುವಾದೀತೆಂದು ನನಗೂ ಅನ್ನಿಸಿರಲಿಲ್ಲ. ಆದದ್ದು ಒಳ್ಳೆಯದೇ ಆಯಿತೆಂದು ಮುಂದೆ ನಿಮಗೂ ಗೊತ್ತಾಗುತ್ತದೆ. ಶೀನಿಂಗವ್ವ ಹೇಳತೊಡಗಿದಳು:
ಮೂರು
“ನಂದಗಾಂವಿಗೆ ಪಂಡರೀಗೌಡನ ಒಡೆತನ. ಗೌಡ ದಪ್ಪ ಹೊಟ್ಟಿಯ ಅಷ್ಟೇನೂ ಎತ್ತರವಲ್ಲದ ಆಸಾಮಿ. ಪುಟ್ಟ ಕಾಲುಗಳು, ಬೊಜ್ಜು ತುಂಬಿಕೊಂಡು ಬೆವರು ಸುರಿಸುವ ಕೈ, ಕೊರೆದಂತಿರುವ ಮೀಸೆ; ಅವನ ಚಿಕ್ಕ ಚಂಚಲ ಕಣ್ಣು ಬಹಳ ಹೊತ್ತು ಒಂದು ವಸ್ತುವಿನ ಮೇಲೆ ಕೂರುತ್ತಲೇ ಇರಲಿಲ್ಲ. ಅವನು ಯಾವಾಗಲೂ ವಿಚಾರ ಮಾಡುತ್ತಿದ್ದುದು ಒಂದೇ: ಯಾರ ಬಳಿ ತುಪ್ಪ ಇದೆ; ಮತ್ತು ಆ ತುಪ್ಪದಲ್ಲಿ ತನ್ನ ರೊಟ್ಟಿ ಹ್ಯಾಗೆ ಜಾರಿ ಬೀಳಬೇಕು? ಹಾಗೆ ಜಾರಿ ಬೀಳದಿದ್ದರೆ ಆ ತುಪ್ಪವನ್ನು ಹ್ಯಾಗೆ ಅಪಹರಿಸಬೇಕು?-ಅದೊಮ್ಮೆ ಗೊತ್ತಾದರಾಯ್ತು, ಕಾರ್ಯೋನ್ಮುಖನಾಗುತ್ತಿದ್ದ. ಅವನೊಮ್ಮೆ ಕಾರ್ಯೋನ್ಮುಖನಾದರಾಯ್ತು, ಖಂಡಿತ ಅದರಲ್ಲಿ ಯಶಸ್ಸು ಗಳಿಸುತ್ತಿದ್ದ. ಅದಕ್ಕೇ ಅವನು ತನ್ನ ಅದೃಷ್ಟದಲ್ಲಿ ಭಾರೀ ನಂಬಿಕೆಯಿಟ್ಟಿದ್ದ. ತನಗೆ ಹೃದಯ ಕೂಡ ಇದೆಯೆಂದು ತೋರಿಸುವುದಕ್ಕೆ ಬೇರೆಯವರೊಂದಿಗೆ ಮುದುಕಿಯರ ಥರ ಹರಟುತ್ತಿದ್ದ. ಬೇರೆಯವರು ತಮ್ಮ ಮನಸ್ಸಿನೊಳಗಿರೋದನ್ನ ನಿಸ್ಸಂಕೋಚವಾಗಿ ಹೇಳುವಂತೆ ಮಾಡುತ್ತಿದ್ದ. ಆದರೆ ಸ್ವಂತ ವಿಚಾರವೊಂದನ್ನೂ ಹೊರಗೆಡವುತ್ತಿರಲಿಲ್ಲ. ಹೊಂಚುತ್ತ ಅವರು ಹೇಳಿದ್ದನ್ನೆಲ್ಲ ಆಸಕ್ತಿಯಿಂದ ಕೇಳುತ್ತ ಕೂರುತ್ತಿದ್ದ. ಇಷ್ಟೆಲ್ಲಾ ಸದ್ಗುಣಗಳಿದ್ದಾಗ್ಯೂ ಮಾತಾಡುವವರಿಗೆ ಮಾತಿನ ಅಂತ್ಯದಲ್ಲಿ ಅವನೊಂದಿಗೆ ಮಾತಾಡಿದ್ದಕ್ಕೆ ಪಶ್ಚಾತ್ತಾಪವಾಗುತ್ತಿತ್ತು. ಅದಕ್ಕೇ ಜನ ಅವನನ್ನು ಹಚ್ಚಿಕೊಳ್ಳುತ್ತಿರಲಿಲ್ಲ. ಇವನೂ ಜನರನ್ನು ಪ್ರೀತಿಸಿದವನಲ್ಲ; ಆದರೆ ಅಧಿಕಾರವಿತ್ತಲ್ಲ, ಜನ ಹೆದರುತ್ತಿದ್ದರು; ಕುತಂತ್ರಿಯಾದ ಬೇಟೆಗಾರನಿಗೆ ಪ್ರಾಣಿಗಳು ಹೆದರುವ ಹಾಗೆ. ಇಷ್ಟು ತಿಳಿಯಪ್ಪ: ನರಮನುಷ್ಯನಿಗೆ ಹಣಬೇಕು, ಆಸ್ತಿಬೇಕು ಮತ್ತು ಅದಕ್ಕಾಗಿ ಎಂಥ ಹೀನ ಕೆಲಸ ಮಾಡಿದರೂ ಕೊಂದರೂ ತಪ್ಪಿಲ್ಲ ಎನ್ನುವುದು ಆತ ಒಳಗೊಳಗೇ ನಂಬಿದ್ದ ಸಿದ್ಧಾಂತವಾಗಿತ್ತು. ಗೌಡನಾದ್ದರಿಂದ ಊರಿನ ಹೆಚ್ಚಿನ ಜಮೀನು ಆತನದೇ. ಆದರೂ ಮನುಷ್ಯ ತೃಪ್ತಿ ಹೊಂದಿದವನೇ ಅಲ್ಲ. ಇಷ್ಟೆಲ್ಲ ಗಳಿಸಿದ್ದನಲ್ಲ, ಹೋಗಲಿ ಮಕ್ಕಳಾದರೂ ಇದ್ದವೇ ಅಂದರೆ ಅವೂ ಇರಲಿಲ್ಲ. ಹಾಗಂತ ಪ್ರಯತ್ನ ಬಿಡುವ ಪೈಕಿ ಅಲ್ಲ, ಒಂದರ ಮೇಲೊಂದರಂತೆ ನಾಲ್ಕು ಮದುವೆಯಾಗಿದ್ದ. ಕೊನೆಗೆ ಇಳಿವಯಸ್ಸಿನಲ್ಲಿ ಎರಡನೆಯ ನಿಂಗವ್ವಗೌಡ್ತಿಗೆ ಸಿಂಗಾರವ್ವೆ ಹುಟ್ಟಿದಳು.ಎರಡನೆಯ ಹೆಂಡತಿಯೇನೋ ಬಚಾವಾದಳು. ಉಳಿದ ಮೂವರಿಗೆ ಮಾತ್ರ ನರಕಯಾತನೆ ತಪ್ಪಲಿಲ್ಲ. ಮಕ್ಕಳನ್ನು ಹೆರಲಿಲ್ಲವಾದ್ದರಿಂದ ಅವರು ತಮ್ಮ ಕರ್ತವ್ಯ ನೆರವೇರಿಸಲಿಲ್ಲವೆಂದೇ ಅವನ ಅಭಿಪ್ರಾಯ. ಬರಬರುತ್ತ ಅವರು ಮೋಸ ಮಾಡಿದರೆಂದೇ ನಂಬಿ ಬಾರುಕೋಲಿನಿಂದ ಬಾರಿಸುತ್ತಿದ್ದ.
ನಾಲ್ಕೂ ಜನ ತಾಯಂದಿರ ಕಣ್ಮಣಿಯಾಗಿಯೇ ಸಿಂಗಾರೆವ್ವ ಬೆಳೆದಳು. ನಾನು ಮತ್ತು ಸಿಂಗಾರೆವ್ವ ಇಬ್ಬರೂ ತುಸು ಹೆಚ್ಚು ಕಮ್ಮಿ ಓರಗೆಯವರೇ, ನಾನೂ ಅವರ ಮನೆಯಲ್ಲೇ ಬೆಳೆದವಳು. ನನ್ನ ತಾಯಿ ಗೌಡರ ಮನೆಯ ಹೆಣ್ಣಾಳಾಗಿದ್ದಳು. ಆಕೆ ನನ್ನ ಹೆತ್ತ ಆರು ತಿಂಗಳಲ್ಲೇ ಅಪ್ಪ ತೀರಿಕೊಂಡನಂತೆ. ಹುಟ್ಟಿದ ಒಂದು ವರ್ಷದಲ್ಲೇ ಅಪ್ಪನ್ನ ತಿಂದಳೆಂದು ನಮ್ಮವ್ವನಿಗೆ ನನ್ನ ಮೇಲೆ ಭಾರೀ ಸಿಟ್ಟಿತ್ತಂತೆ. ಮುಂದೆ ಬಹಳ ದಿನ ಉಳಿಯಲಿಲ್ಲ. ಆಕೆ ಸತ್ತೊಡನೆ ಗೌಡನ ಮನೆಯೇ ನನಗೆ ಆಶ್ರಯ ಸ್ಥಾನವಾಯಿತು.
ಒಬ್ಬಳೇ ಮಗಳಾದ್ದರಿಂದ ಸಿಂಗಾರೆವ್ವನನ್ನು ಬಹಳ ಅಚ್ಚೆಯಿಂದ ಬೆಳೆಸಿದರು. ಅದೇ ವಯಸ್ಸಿನವಳಾದರೂ ನಾನು ಕೆಲಸ ಮಾಡಬೇಕಾಗುತ್ತಿತ್ತು. ನನಗೆ ಸಿಗುತ್ತಿದ್ದುದು ತಂಗಳನ್ನ, ರೊಟ್ಟಿಮಾತ್ರ. ಅವಳ ತಾಯಂದಿರಿಂದ ಆಗಾಗ ಏಟುಗಳನ್ನೂ ತಿನ್ನಬೇಕಾಗುತ್ತಿತ್ತು. ಆದರೆ ಸಿಂಗಾರೆವ್ವನ ಗೆಳೆತನದ ಮುಂದೆ ನನಗೆ ಅದೆಲ್ಲ ಹಗುರವಾಗೇ ಕಾಣುತ್ತಿತ್ತು. ಅಪರೂಪದ ತಿಂಡಿಗಳನ್ನು ಆಕೆ ತಾಯಂದಿರ ಕಣ್ಣು ತಪ್ಪಿಸಿ ನನಗೂ ಕೊಡುತ್ತಿದ್ದಳು. ಆಸುಪಾಸು ಅವರಿಲ್ಲದಿದ್ದರೆ ಕೆಲಸಕ್ಕೂ ನೆರವಾಗುತ್ತಿದ್ದಳು. ಆಕೆ ಗೌಡನ ಮಗಳಾದ್ದರಿಂದ ಮನೆಬಿಟ್ಟು ಹೊರಗೆ ಹೋಗುವಂತಿರಲಿಲ್ಲ. ನಾನು ಮಾತ್ರ ಊರು ತುಂಬ ಅಡ್ಡಾಡುತ್ತಿದ್ದೆ. ಹೊಲಕ್ಕೂ ಹೋಗುತ್ತಿದ್ದೆ. ಜನರನ್ನು ನೋಡುತ್ತಿದ್ದೆ, ಮಾತಾಡುತ್ತಿದ್ದೆ. ಎಷ್ಟೆಷ್ಟೋ ಕಥೆ ಕೇಳಿಕೊಂಡು ಬಂದು ಅವನ್ನೆಲ್ಲ ಸಿಂಗಾರೆವ್ವನಿಗೆ ಹೇಳಿ ಖುಷಿಪಡಿಸುತ್ತಿದ್ದೆ. ಅವಳು ಒಮ್ಮೊಮ್ಮೆ ಹಠ ಮಾಡಿ ನಾನೂ ಅವಳ ಹಾಸಿಗೆಯಲ್ಲಿ ಮಲಗುವಂತೆ ಮಾಡುತ್ತಿದ್ದಳು. ಇದನ್ನು ನೋಡಿ ಗೌಡನೊಮ್ಮೆ ನನ್ನ ಬೆನ್ನು ಬಾರಿಸಿದ ಮೇಲೆ ನಾನು ಅವಳ ಜೊತೆ ಮಲಗುವುದನ್ನು ನಿಲ್ಲಿಸಬೇಕಾಯಿತು.
ಅವಳ ತಂದೆ ಎಷ್ಟು ಒರಟನೋ ಸಿಂಗಾರವ್ವೆ ಅಷ್ಟು ಮೃದು. ಅವಳ ಮನಸ್ಸು ಹೂವಿನ ಹಾಗೆ, ಯಾರೊಬ್ಬರು ಮುಖ ಕೆಳಗೆ ಹಾಕಿದರೂ ಮುದುಡುವಾಕಿ. ಇನ್ನು ಕಣ್ಣೀರು ಕಂಡರಂತೂ ಚಡಪಡಿಸುತ್ತಿದ್ದಳು. ನೀನು ಸಿಂಗಾರೆವ್ವನನ್ನು ನೋಡಿಲ್ಲ, ಅಲ್ಲ? ಥೇಟ್ ರತಿದೇವಿಯ ಹಾಂಗಿದ್ದಳು. ಕೊರೆದಿಟ್ಟಂತಹ ಹುಬ್ಬು, ನೀಳವಾದ ಮೂಗು, ತೆಳುವಾದ ಇಷ್ಟಿಷ್ಟೆ ತುಟಿ, ಆ ಗದ್ದ ಕೂಡ ಎಷ್ಟು ಚೆಂದಾಗಿತ್ತು! ಸದಾಕಾಲ ಹೊಚ್ಚಹೊಸ ಚೆಲುವು ಅವಳ ಮುಖದಲ್ಲಿ ಚಿಮ್ಮುತ್ತಿತ್ತು. ಆ ಬಟ್ಟಲಗಣ್ಣುಗಳೋ ಮುಗ್ಧವಾಗಿ ನೀಲಿಮಣಿ ಇಲ್ಲವೆ ವಜ್ರದ ಹಾಗೆ ಹೊಳೆಯುತ್ತಿದ್ದವು. ಅತ್ಯಂತ ಆಕರ್ಷಕವಾದ ಮೋಹಕವಾದ ರೂಪಲಾವಣ್ಯಗಳಿದ್ದವು ಆಕೆಗೆ. ಆಕೆ ನಕ್ಕರೆ ಅವಳನ್ನೇ ನೋಡಬೇಕೆನಿಸುತ್ತಿತ್ತು, ಅಂಥ ಮಾದಕ ನಗೆ.
ಯಾವಾಗಲೂ ಏನಾದರೂ ಮಾಡುವುದು, ಆಡುವುದು, ಹಾಡುವುದು, ನಗುವುದು, ಇಲ್ಲಾ ಕೀಟಲೆ ಮಾಡುವುದು ಅವಳ ಸ್ವಭಾವ. ಎದುರಿಗೆ ಏನು ಕಂಡರೂ ಹಿಗ್ಗುತ್ತಿದ್ದಳು. ಕೋಗಿಲೆಯ ದನಿ ಕೇಳುವುದೆಂದರೆ ಅವಳಿಗಿನ್ನೂ ಹಿಗ್ಗು. ಸುಗ್ಗಿ ಮುಗಿಯುತ್ತಿದ್ದಂತೆ ಅದು ಪಕ್ಕದ ತೋಟದಲ್ಲಿ ಕೂಗುತ್ತಿದ್ದಿತಲ್ಲ, ಅದನ್ನು ತಾನು ಮೊದಲು ಕೇಳಬೇಕೆಂದು ಅವಳಾಸೆ. ಹಾಗೇನಾದರೂ ಅದು ತನಗೇ ಮೊದಲು ಕೇಳಿದರೆ ಅವಳಿಗೆ ಆನಂದವಾಗುತ್ತಿತ್ತು. ಕುಣಿದಾಡಿ ಅದನ್ನು ಮತ್ತೆ ಮತ್ತೆ ನನ್ನ ಮುಂದೆ ಹೇಳುತ್ತಿದ್ದಳು. ಅವಳ ಹತ್ತಿರ ಎಷ್ಟೋ ಹೊತ್ತಿದ್ದರೂ, ಅವಳು ಕೀಟಲೆ ಮಾಡಿದರೂ ಅವಳ ಸಹವಾಸ ಸಾಕೆನಿಸುತ್ತಿರಲಿಲ್ಲ. ಯಾಕೆಂದರೆ ಅವಳ ಹೃದಯ ಅಷ್ಟು ಪರಿಶುದ್ಧವಾದುದು. ಈಗ ಕೀಟಲೆ ಮಾಡಿ ನನ್ನನ್ನು ಅಳಿಸಿದರೆ ಮರುಕ್ಷಣದಲ್ಲೇ ನನ್ನನ್ನು ನಗಿಸಿ ನಾನೇ ಅವಳನ್ನು ಮಾತಾಡಿಸುವ ಹಾಗೆ ಮಾಡುತ್ತಿದ್ದಳು. ನನಗೆ ಸ್ವಲ್ಪ ಬಿಡುವು ಸಿಕ್ಕರೂ ಸಾಕು ಅವಳೊಂದಿಗೆ ಆಟಕ್ಕೆ ನಿಲ್ಲುತ್ತಿದ್ದೆ. ಆ ಆಟಗಳಾದರೋ ಬರೀ ಗಂಡ-ಹೆಂಡತಿಯರ ಆಟ; ಪ್ರತಿ ಆಟದಲ್ಲೂ ನಾನು ಗಂಡ, ಅವಳು ಹೆಂಡತಿ. ಆದರೆ ಅವರಪ್ಪನ ಹಾಗೆ ನಾನು ಹೆಂಡತಿಯನ್ನು ಹೊಡೆದು ಹೆದರಿಸುವಂತಿರಲಿಲ್ಲ; ಆಕೆ ಹೇಳಿದಹಾಗೆ ಕೇಳಬೇಕಿತ್ತಷ್ಟೆ. ಆಶ್ಚರ್ಯವೆಂದರೆ ಆಟದಲ್ಲಿ ಅವಲು ಗೌಡ್ತಿಯಾಗುತ್ತಿದ್ದಳಲ್ಲ. ಅವಳ ಮನೆತುಂಬ ಮಕ್ಕಳು. ಸದಾ ಒಂದು ಅಳುವ ಕೂಸನ್ನು ಬಗಲಲ್ಲಿ ಹಿಡಿದುಕೊಂಡೋ, ಅದನ್ನು ಮಲಗಿಸುತ್ತಲೋ, ಅದಕ್ಕೆ ಮೊಲೆಯೂಡಿಸುತ್ತಲೋ ಇರುತ್ತಿದ್ದಳು. ನಾನು ಗಂಡ ತೋಟದಿಂದ ಬಂದರೆ ಬೇರೆ ಮಾತೇ ಇಲ್ಲ. ಸಂಪಿಗೆ(ಅವಳ ಹಿರಿಯ ಮಗಳು)ಹಾಗೆ ಮಾಡಿದಳು, ಶಿವಲಿಂಗ(ಮಗ) ಹೀಗೆ ಮಾಡಿದ-ಇದೇ ಗೋಳು. ಮಕ್ಕಳು ತಕರಾರು ಮುಗಿಯುವ ಮುನ್ನವೇ ನನ್ನನ್ನು ಯಾರಾದರೂ ಗೌಡ್ತಿಯರು “ಶೀನಿಂಗೀ” ಎಂದು ಕರೆಯುತ್ತಿದ್ದರು. ನಾನು ಓಡಲೇ ಬೇಕಾಗುತ್ತಿತ್ತು. ಆಗ ಅವಳ ಮುಖದಲ್ಲಿ ಮೂಡುವ ನಿರಾಸೆಯನ್ನು ನೋಡಲಾಗುತ್ತಿರಲಿಲ್ಲ. ಒಂದು ದಿನ ಅವಳ ಕೂಸಿಗೆ ಜ್ವರ ಬಂದಾಗಲೇ ಗೌಡ್ತಿಯ ಕರೆ ಕೇಳಿಸಿ ಓಡಿಹೋದೆ. ಸಿಂಗಾರೆವ್ವ ಕಣ್ಣೀರಿಟ್ಟು ಅಳೋದೇ? ಅಂಥಾ ಮಿದು ಮನಸ್ಸಿನವಳು.
ಮರ್‍ಯಾ ಸಣ್ಣವನಿದ್ದಾಗ ನಮ್ಮಲ್ಲೇ ಚಾಕರಿಗಿದ್ದ. ಅವನಿಗೆ ನಾವಾಗ ‘ಮರ್‍ಯಾ ಮರ್‍ಯಾ’ ಎಂದೇ ಕರೆಯುತ್ತಿದ್ದೆವು. ಅವನು ಹೊಲೇರ ಪೈಕಿ. ಅದ್ಯಾಕೋ ಏನೋ, ಅಂತೂ ಗೌಡನಿಗೆ ಆ ಹುಡಗನ್ನ ಕಂಡರೆ ಆಗುತ್ತಿರಲಿಲ್ಲ. ಆ ಹುಡುಗ ತನ್ನ ಸರೀಕನೆಂಬಂತೆ ವೈರ ಸಾಧಿಸುತ್ತಿದ್ದ. ಗೌಡನೊಬ್ಬ ಚಾಕರಿ ಆಳಿನ ಬಗ್ಗೆ, ಅದೂ ಬಾಲಕನ ಮೇಲೆ ಆ ರೀತಿ ಸೇಡು ತೀರಿಸಿಕೊಳ್ಳುವುದು ನಮಗೆ ಮೋಜಾಗಿ ಕಾಣಿಸುತ್ತಿತ್ತು. ವಿನಾಕಾರಣ ಗೌಡ ಮರ್‍ಯಾನನ್ನು ಒದೆಯುತ್ತಿದ್ದ, ಹೊಡೆಯುತ್ತಿದ್ದ, ಬೈಗಳಂತೂ ಸೈಯೇ. ಗೌಡ ಆ ಹುಡುಗನನ್ನು ಹೊಗಳುವುದಕ್ಕೆ ಎಷ್ಟೊಂದು ಕಾರಣಗಳಿದ್ದವು. ಹತ್ತಾಳಿನ ಕೆಲಸ ಒಬ್ಬನೇ ಮಾಡುತ್ತಿದ್ದ. ಮಾಡೋ ಕೆಲಸ ಇನ್ನೊಬ್ಬರು ಹೆಸರಿಡದ ಹಾಗೆ ಮಾಡುತ್ತಿದ್ದ. ಸಾಲದ್ದಕ್ಕೆ ಮಾಡಬೇಕಾದ ಕೆಲಸಗಳನ್ನು ತಾನೇ ಮುಂದಾಗಿ ಕಂಡು ಹೇಳಿಸಿಕೊಳ್ಳದೇ ಮಾಡುತ್ತಿದ್ದ. ಇಂಥಾ ನಿಯತ್ತಿನ ಚಾಕರ ಈಗಿರಲಿ, ಆಗಿನ ಕಾಲದಲ್ಲೂ ಸಿಗುತ್ತಿರಲಿಲ್ಲ. ಮರ್‍ಯಾ ಗೌಡನಿಂದ ಏಟು ತಿನ್ನುವ ದೃಶ್ಯವೂ ನಿಂತು ನೋಡುವ ಹಾಗಿರುತ್ತಿತ್ತು. ಗೌಡ ಕೋಲು, ಬಾರುಕೋಲು, ಕಾಲ್ಮರಿ-ಕೈಗೆ ಏನು ಸಿಕ್ಕರೆ ಅದರಿಂದ ಹೊಡೆಯುತ್ತಿದ್ದನಲ್ಲ; ಮರ್‍ಯಾ ಅಲುಗುತ್ತಿರಲಿಲ್ಲ. ತನ್ನ ಮುಖದ ಚೇರಾಪಟ್ಟೆ ಬದಲಿಸುತ್ತಿರಲಿಲ್ಲ. ಉಕ್ಕಿನ ದೊಡ್ಡ ಗೊಂಬೆಯ ಹಾಗೆ, ಹ್ಯಾಗಿರುತ್ತಿದ್ದನೋ ಹಾಗೇ ನಿಂತಿರುತ್ತಿದ್ದ. ಆಗಾಗ ಆತನ ನೀಲಿಕಣ್ಣುಗಳು ಮಾತ್ರ ಗುರಿ ಹಿಡಿದು ಹೊಳೆಯುವ ಚೂರಿಯಂತಿರುತ್ತಿದ್ದವು. ಉಗುರು ಕಚ್ಚುತ್ತ ದುರುಗುಟ್ಟಿ ನೋಡುತ್ತಿದ್ದ. ಅದನ್ನು ನೋಡಿ ಗೌಡ ಇನ್ನಷ್ಟು ರೇಗುತ್ತಿದ್ದ. ರೇಗಿ ಇನ್ನಷ್ಟು ಹೊಡೆಯುತ್ತಿದ್ದ. ಇವನು ಮಾತ್ರ ಒಂದೇ ಭಂಗಿಯಲ್ಲಿ ನಿಂತಿರುತ್ತಿದ್ದ. ಗೌಡನೇ ಹೊಡೆದು ಒದ್ದು ಸುಸ್ತಾದಾಗ ಮರ್‍ಯಾನ ಅವ್ವನನ್ನು ಬೈಯುತ್ತ ಮರೆಯಾಗುತ್ತಿದ್ದ. ಈತ ಏನೇನೂ ಆಗದವರಂತೆ ತನ್ನ ಕೆಲಸ ತಾನು ಮುಂದುವರೆಸುತ್ತಿದ್ದ.
ಒಂದು ದಿನ ಸಿಂಗಾರೆವ್ವ ಮತ್ತು ನಾನು ಕೊಟ್ಟಿಗೆಯಲ್ಲಿದ್ದೆವು. ಯಾಕೆಂದರೆ ನಮ್ಮ ಪ್ರೀತಿಯ ಕೆಂದಾಕಳು ಕಪಲಿ ಕರು ಹಾಕಿತ್ತು. ಅದನ್ನು ಕಂಡಂತೂ ಸಿಂಗಾರೆವ್ವನಿಗೆ ಹಿಗ್ಗಾದದ್ದು ಅಷ್ಟಿಷ್ಟಲ್ಲ. ಆ ಕರುವನ್ನು ಎಷ್ಟು ತಬ್ಬಿಕೊಂಡರೂ ತೃಪ್ತಿಯಿರಲಿಲ್ಲ. ಆಗಲೇ ಅದಕ್ಕೆ ‘ತುಳಸಿ’ ಎಂದು ಹೆಸರು ಕೂಡ ಇಟ್ಟಿದ್ದಳು. ಅದು ಮೊಲೆ ಕುಡಿಯುವಾಗಂತೂ ಅದನ್ನು ಬಿಟ್ಟು ಬೇರೆ ಕಡೆ ಹೋಗುತ್ತಲೇ ಇರಲಿಲ್ಲ. ಅದು ತಾಯಿಯ ಕೆಚ್ಚಲು ಗುದ್ದಿಗುದ್ದಿ ಮೊಲೆ ಕುಡಿಯುವಾಗ ಬಿಟ್ಟ ಕಣ್ಣಿನಿಂದ ಅದನ್ನೇ ನೋಡುತ್ತ ಕೂತಿದ್ದರೆ ಕೂತೇ, ನಿಂತಿದ್ದರೆ ನಿಂತೇಬಿಡುತ್ತಿದ್ದಳು. ಆಗ ಕಪಲಿಯೇನಾದರೂ ಬಾಲ ಅಲುಗಿಸಿದರೆ, ಒದ್ದರೆ ಇವಳಿಗೆ ಭಾರೀ ಸಿಟ್ತು. “ಥೂ ಹಾಂಗ ಮಾಡಬಾರದು” ಎಂದು ಗದರಿಸಿ ಹತ್ತು ಹಡೆದ ತಾಯೊಬ್ಬಳು ಚೊಚ್ಚಲ ಬಾಣಂತಿಗೆ ಬುದ್ಧಿ ಹೇಳುವಂತೆ ಹೇಳುತ್ತಿದ್ದಳು. ಒಂದು ಮಧ್ಯಾಹ್ನವಂತೂ ಮಲಗಿದ್ದ ಆ ಕರುವನ್ನು ತನ್ನ ತೊಡೆಯ ಮೇಲೆ ಮಲಗುವಂತೆ ಹಾಕಿಕೊಳ್ಳಹೋಗಿ ಬಿದ್ದು ಅದರ ಕೆಳಗೆ ಸಿಕ್ಕು ಒದ್ದಾಡಿದ್ದಳು.
ಒಂದು ದಿನ ಬೆಳಗ್ಗೆ ಎದ್ದವಳೇ ಸಿಂಗಾರೆವ್ವ ಕೊಟ್ಟಿಗೆಗೆ ಬಂದಿದ್ದಳು. ಅವಳೊಂದಿಗೆ ನಾನೂ. ಮಲಗಿದ್ದ ಕರುವನ್ನು ಕಪಿಲೆ ನೆಕ್ಕುತ್ತಿತ್ತು. ಸಿಂಗಾರೆವ್ವ ಅಲ್ಲೆ ಕೂತು ಅದನ್ನೇ ಕಣ್ಣುತುಂಬ ನೋಡುತ್ತಿದ್ದಳು. ಮರ್‍ಯಾ ಸಗಣಿ ಬಳಿಯುತ್ತಿದ್ದ.
“ನಿನ್ನಿ ಏನಾಯ್ತೆಂದಿ! ಕಪಲಿ ಮೇಯಾಕೆ ಹೋಗಿತ್ತಲ್ಲ, ಮಧ್ಯಾಹ್ನ ಹಸಿವಾಗಿ ತುಳಸಿ ಅಂಬಾ ಅಂತ ಒದರಾಕ ಹತ್ತಿತು! ಅಂಬಾ ಅಂದರ ಏನು ಹೇಳು?‘ಅವ್ವಾ ಅವ್ವಾ’ ಅಂಧಾಂಗ.”
-ಎಂದು ಸಿಂಗಾರೆವ್ವ ನಿನ್ನಿನ ಘಟನೆಯನ್ನು ಹೇಳುತ್ತಿದ್ದಳು. ಇಲ್ಲಿ ತುಳಸಿ ಅಂಬಾ ಎಂದು ಒದರಿದರೆ ಅಲ್ಲಿ ಅಡವಿಯಲ್ಲಿದ್ದ ಕಪಲಿಯ ಮೊಲೆ ಹಾಲು ತೊಟ್ಟಿಕ್ಕಿತಂತೆ! ಅದಕ್ಕೆ ಕಪಲಿ “ಆಯ್ ನನ ಶಿವನ! ನನ್ನ ಕಂದ ಹಸಿದೈತಲ್ಲ!” ಎಂದು ಓಡಿ ಬಂದಿತಂತೆ!
ಹೀಗೆ ಏನೇನೋ ಮುದ್ದುಮುದ್ದಾಗಿ ಹೇಳುತ್ತಿದ್ದಳು. ಮರ್‍ಯಾ ಕೂಡ ಇವಳ ಮಾತು ಕೇಳಿಸಿಕೊಳ್ಳುತ್ತಿದ್ದ. ಅಷ್ಟರಲ್ಲಿ ಯಾಕೋ ಏನೋ ಹೊರಗಿನಿಂದ ಬಿರುಗಾಳಿಯಂತೆ ಬಂದವನು “ಸೂಳೀ ಮಗನಽ!”ಎನ್ನುತ್ತ ಕೊಟ್ಟಿಗೆಯಲ್ಲಿಯ ಗೂಟಗಲ್ಲೊಂದನ್ನು ಎತ್ತಿ ಮರ್‍ಯಾನ ಮೇಲೆ ಹೇರುವುದಕ್ಕೆ ಸಿದ್ಧನಾದ! ಹಾಹಾ ಎನ್ನುವುದರೊಳಗೆ ಏನಾಗುತ್ತಿತ್ತೋ-ಕೂತಿದ್ದ ಸಿಂಗಾರೆವ್ವ ಚಂಗನೇ ನೆಗೆದು “ಎಪ್ಪಾಽ” ಎಂದವಳೇ ಮರ್‍ಯಾನನ್ನು ತಬ್ಬಿಕೊಂಡಳು. ಗೌಡ “ಸಿಂಗಾರೀ ಈ ಕಡೆ ಬಾ”ಅಂದ. ಅವಳು ಕೇಳಲಿಲ್ಲ, ಅಗಲವಾಗಿ ಕಣ್ಣು ತೆರೆದು “ಬರಾಣಿಲ್ಲ ಬರಾಣಿಲ್ಲ”ಎನ್ನುತ್ತ ಗಡಗಡ ನಡುಗುತ್ತಿದ್ದಳು. ಗೌಡ ಕಲ್ಲನ್ನು ಬೇರೆ ಕಡೆ ಎಸೆದು ಸಿಂಗಾರೆವ್ವನನ್ನು ದರದರ ಎಳೆದುಕೊಂಡು ಹೋದ. “ಈ ಬೋಳೀಮಗ್ಗ ಇಂದ ರೊಟ್ಟೀ ಹಾಕಬ್ಯಾಡ್ರೀ”ಎಂದು ಅಡಿಗೆ ಮನೆ ಕಡೆ ಮುಖಮಾಡಿ ಒದರಿ ಮಾಯವಾದ.
ಇದರಿಂದ ನನಗೇನೂ ಆಘಾತವಗಲಿಲ್ಲ. ಯಾಕೆಂದರೆ ಮರ್‍ಯಾನನ್ನು ಗೌಡ ಹೊಡೆದದ್ದನ್ನು ಅನೇಕ ಸಲ ನಾನು ಕಂಡಿದ್ದೆ. ಆದರೆ ಸಿಂಗಾರೆವ್ವ ಇದೇ ಮೊದಲ ಸಲ ನೋಡಿದ್ದಳು. ಯಾಕೆಂದರೆ ಗೌಡ ಈತನಕ ಅವನನ್ನು ಥಳಿಸಿದ್ದನ್ನು ತೋಟದಲ್ಲಿ, ಮನೆಯಲ್ಲಲ್ಲ. ಇದಾಯ್ತಲ್ಲ, ಅಂದಿನಿಂದ ಕರುವುನ ಜೊತೆಗೆ ಮರ್‍ಯಾ ಕೂಡ ಅವಳ ಕರುಣೆಯ ಕಂದನಾದ. ಗೌಡ ಎಷ್ಟೆಷ್ಟು ಕೋಪಗೊಂಡರೆ ಅಷ್ಟಷ್ಟು ಮರ್‍ಯಾನ ಬಗ್ಗೆ ಇವಳ ಅನುಕಂಪ ಹೆಚ್ಚುತ್ತಿತ್ತು. ಮರ್‍ಯಾನಿಗೆ “ರೊಟ್ಟೀ ಹಾಕಬ್ಯಾಡ್ರೆಂದು” ಗೌಡ ಹೇಳಿದ್ದನಲ್ಲ, ಆ ದಿನ ಸಿಂಗಾರೆವ್ವ ಎರಡು ರೊಟ್ಟಿ ಕದ್ದು ಲಂಗದಲ್ಲಿ ಮುಚ್ಚಿಟ್ಟುಕೊಂಡು ಬಂದು ಮರ್‍ಯಾನ ಹರಿವಾಣದಲ್ಲಿ ಹಾಕಿಹೋದಳು. ಅಂದಿನಿಂದ ನಾವಿಬ್ಬರೂ ರೊಟ್ಟಿ ಕದಿಯುತ್ತಿದ್ದೆವು. ಮರ್‍ಯಾನ ಹರಿವಾಣದಲ್ಲಿ ಚೆಲ್ಲಿ ಬರುತ್ತಿದ್ದೆವು. ಬರಬರುತ್ತ ಸೇಂಗಾ, ಬೆಲ್ಲ, ಉಂಡಿಗಳನ್ನೂ ಕದ್ದುಕದ್ದು ಚೆಲ್ಲಿ ಬರುತ್ತಿದ್ದೆವು. ಮತ್ತು ಬೈಲಕಡೆ ಹೋದಾಗ ಅಕ್ಕಪಕ್ಕ ಕೂತು ನಮ್ಮ ಕಳ್ಳತನದ ಸಾಹಸದ ಬಗ್ಗೆ ಪಿಸಿಪಿಸಿ ಮಾತಾಡಿ ಖುಸಿ ಪಡುತ್ತಿದ್ದೆವು. ಆಮೇಲಾಮೇಲಂತೂ ಸಿಂಗಾರೆವ್ವ ತನಗಿತ್ತ ತಿಂಡಿಯ ಭಾಗವನ್ನು ನನಗೆ ಕೊಡುವ ಬದಲು ಮರ್‍ಯಾನ ಹರಿವಾಣಕ್ಕೇ ಹಾಕುತ್ತ ಬಂದಳು. ಆದರೆ ಅವ ಕಟುಕ. ಒಮ್ಮೆಯೂ ನಮ್ಮ ಕಡೆ ಒಂದು ಕೃತಜ್ಞತೆಯ ನೋಟವನ್ನೂ ಬೀರಲಿಲ್ಲ. ಅವನು ಗಂಟು ಹಾಕಿದ ಹುಬ್ಬುಗಳನ್ನು ಒಮ್ಮೆ ಮಾತ್ರ ಸಡಿಲ ಮಾಡಿದ್ದರೂ ನಾವು ಅವನೊಂದಿಗೆ ಆಟ ಆಡಲು ತಯಾರಿದ್ದೆವು. ಯಾಕೆಂದರೆ ಮರ್‍ಯಾ ನಮ್ಮ ಓರೆಗೆಯವನೇ, ಬಹಳವಾದರೆ ನಮಗಿಂತ ಒಂದೆರಡು ವರ್ಷ ದೊಡ್ಡವನಿದ್ದಾನು. ಅವನಿಗೆ ಗೆಳೆಯರ್‍ಯಾರೂ ಇರಲಿಲ್ಲ. ಹ್ಯಾಗಿದ್ದಾರು? ಇವನೋ ಮಾತಿನವನಲ್ಲ, ಸಲಿಗೆಯವನಲ್ಲ, ನಕ್ಕವನಲ್ಲ, ಸಾಲದ್ದಕ್ಕೆ ರೂಪವಂತನಲ್ಲ, ಅಸಹ್ಯವಾಗಿದ್ದನೆಂದೇ ಹೇಳಬೇಕು. ಎರೀ ಮಣ್ಣಿನಂಥ ಕರೀ ಮುಖ, ಹುಲ್ಲಿನಂಥ ಹುಬ್ಬು, ಮುಗಿಲು ನೋಡುವ ಸಣ್ಣ ಮೂಗು, ದಪ್ಪ ತುಟಿಗಳಲ್ಲಿ ಅವನ ಅಸಮಾನ ಹಲ್ಲು ಬಹಳ ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಗದ್ದವೂ ಸಣ್ಣದು. ಕಣ್ಣಷ್ಟೇ ಚೆನ್ನಾಗಿದ್ದವು. ನೀಲಿ ಬಣ್ಣದ ಹೊಳೆಯುವ ಆ ಕಣ್ಣನ್ನಾದರೂ ನೋಡೋಣವೆಂದರೆ ಅಲ್ಲಿಯೂ ಮಾರಾಯ ಹಿರಿದ ಹಲಗನ್ನಿಟ್ಟಿರುತ್ತಿದ್ದ. ಆದರೆ ಕುಹಕಿಯಲ್ಲ, ಒಂದನ್ನು ಮುಚ್ಚಿ ಒಂದನ್ನು ತೋರುವವನಲ್ಲ. ಮನಸ್ಸಿನಲ್ಲಿ ಏನಿರುತ್ತಿತ್ತೋ ಅದನ್ನೇ ಮುಖ ತೋರಿಸುತ್ತಿತ್ತು. ಅದಕ್ಕೇ ಅವನ ಬಗ್ಗೆ ಗೌರವಭಾವನೆ ಬರುತ್ತಿತ್ತು. ನಮ್ಮ ಓರಗೆಯವನೇ ಎಂದು ಹೇಳಿದೆನಲ್ಲ, ಮೈ ಪೈಲ್ವಾನನಂತೆ ದಷ್ಟಪುಷ್ಟವಾಗಿತ್ತು. ಆರಾರು ರೊಟ್ಟಿಗಳನ್ನು ಒಮ್ಮೆಯೇ ಕತ್ತರಿಸಿ ತಿನ್ನುತ್ತಿದ್ದ. ಎಷ್ಟು ನೀಡಿದರೂ ಸಾಕೆನ್ನುತ್ತಿರಲಿಲ್ಲ. ‘ಮತ್ತು ನೀಡಿದ್ದನ್ನು ಹಾಗೆ ಹೀಗೆನ್ನದೆ, ನೀಡುವವರ ಕಡೆ ಒಮ್ಮೆಯೂ ನೋಡದೆ ತಿನ್ನುತಿದ್ದ. ಅವನಿಗೆ ಇನ್ನಷ್ಟು ಏನಾದರೂ ಬೇಕಾದರೆ ಬೇಡುತ್ತಿರಲಿಲ್ಲ. ನಾವೇ ತಂದರೆ ತರಲಿ ಎಂದು ಸುಮ್ಮನೆ ಎಡೆಯಲ್ಲಿ ಬಲಗೈಯೂರಿ ಕೂರುತ್ತಿದ್ದ. ನಾವು ತಂದರೆ ಸೈ, ತರದಿದ್ದರೆ ಕೈ ತೊಳೆದುಕೊಂಡೆದ್ದುಬಿಡುತ್ತಿದ್ದ. ಆತ ಮಾತಾಡುತ್ತಿದ್ದುದು ಬಹಳ ಕಮ್ಮಿ. ಮಾತಾಡಿದರೆ ಉಕ್ಕು ಬಾರಿಸಿದಂಥ ದನಿಯಲ್ಲಿ ಹಾ ಹೂ ಅನ್ನುತ್ತಿದ್ದ, ಅಷ್ಟೆ. ನಮ್ಮನ್ನಂತೂ ಇವರು ತನ್ನ ಸಮಾನರಲ್ಲವೆಂಬಂತೆ ತಿರಸ್ಕರಿಸಿಬಿಟ್ಟಿದ್ದ. ಇಷ್ಟು ದಿನ ಊಟಕ್ಕೆ ಹಾಕಿದ್ದೆನಲ್ಲ, ನನ್ನ ಕಡೆ ಒಮ್ಮೆಯೂ ಭಾವಪೂರಿತ ದೃಷ್ಟಿ ಬೀರಿದವನಲ್ಲ. ನಾನಿರಲಿ, ಸಿಂಗಾರೆವ್ವ ಎಷ್ಟು ಮಾತಾಡಿಸಿದರೂ ಮಾತಾಡುತ್ತಿರಲಿಲ್ಲ. ಬರೀ ಅವಳ ಕಡೆಗೆ ನೋಡುತ್ತಿದ್ದ, ಅಷ್ಟೆ. ಅವನ ಮೈ ಹ್ಯಾಗೇ ತರುಣವಾಗಿರಲಿ, ಮನಸ್ಸಿನಲ್ಲಿ ಅವನಿಗಾಗಲೇ ವಯಸ್ಸಾಗಿತ್ತು. ಆ ವಯಸ್ಸಿನಲ್ಲೇ ಗೌಡನಂಥವನನ್ನು ಎದುರು ಹಾಕಿಕೊಳ್ಳುವುದೆಂದರೆ ಹುಡುಗಾಟವೇ?
ಅದ್ಯಾಕೆ ಗೌಡನಿಗೂ ಅವನಿಗೂ ವೈರವಿತ್ತೋ ಕಾಣೆ. ನಾವು ಸಣ್ಣವರು, ನಮಗೆ ಇವೆಲ್ಲ ಅಷ್ಟಾಗಿ ತಿಳಿಯುತ್ತಿರಲಿಲ್ಲ. ಮರ್‍ಯಾನ ಅಪ್ಪ ತೀರಿಕೊಂಡ ಮೇಲೆ ಗೌಡ ಅವನ ತಾಯಿಯನ್ನು ಇಟ್ಟುಕೊಂಡಿದ್ದನಂತೆ. ಇದು ಮರ್‍ಯಾನಿಗೆ ಸರಿಬರದೆ ತಾಯಿಗೆ ತಾಕೀತು ಮಾಡಿದ್ದನಂತೆ. ಇನ್ನು ಕೆಲವರು ಆಡಿಕೊಳ್ಳುವ ಪ್ರಕಾರ ಮರ್‍ಯಾನ ತಂದೆ ಹೋದಮೇಲೆ ಅವನ ಜಮೀನನ್ನು ಗೌಡ ಎತ್ತಿ ಹಾಕಿದ್ದನಂತೆ. ಇದು ಖರೇಯಿದ್ದಿತು. ಯಾಕೆಂದರೆ ಒಮ್ಮೆ ಹೊಲದಲ್ಲಿ ಅವರಿಬ್ಬರೂ ಜಗಳಾಡುತ್ತಿದ್ದಾಗ ಮರ್‍ಯಾ ಆ ಹೊಲವನ್ನು ಅಂಗೈಯಿಂದ ಬಡಿಬಡಿದು “ಇದು ನಂದೆಂದು” ಹೇಳಿದ್ದನ್ನು ಸ್ವಥಾ ಕೇಳಿದ್ದೇನೆ, ಕಂಡಿದ್ದೇನೆ. ಅಲ್ಲದೆ ಗೌಡ ದೇವರಾಣೆ ಕೊಳಕ.
ಒಮ್ಮೆ ದೀಪಾವಳಿ ಹಬ್ಬದ ಸುತ್ತ ಇದ್ದೀತು. ನಮ್ಮ ತೋಟದ ಮಗಿ ಮಾವಿನ ಗಿಡಕ್ಕೆ ಕಾಯಾಗಿದ್ದವು. ದೀಪಾವಳಿಯಲ್ಲೆಂಥ ಮಾವಿನಕಾಯಿ ಎಂದು ಅನ್ನಬೇಡ. ಆ ಮಾವಿನಗಿಡ ವರ್ಷದಲ್ಲಿ ಎರಡು ಸಲ ಕಾಯಿ ಬಿಡೋದು. ದೀಪಾವಳಿ ಸುಮಾರಿಗೆ ಹತ್ತೆಂಟು ಕಾಯಿ ಬಿಡುತ್ತಿತ್ತು. ಆಗ ಊರಿನ ಎಲ್ಲ ಎಳೆಯರ ಬಾಯಲ್ಲಿ ನೀರು ಬರುತ್ತಿತ್ತು. ಅಕಾಲದಲ್ಲಿ ಮಾವಿನಕಾಯಾದರೆ ಯಾರಿಗೆ ಆಸೆಯಾಗುವುದಿಲ್ಲ? ಸುದ್ಧಿ ಗೊತ್ತಾಗಿ ನಾನು ಸಿಂಗಾರೆವ್ವನಿಗೆ ಹೇಳಿದೆ. ಈ ತನಕ ಸಿಂಗಾರೆವ್ವ ಬಾಯಿಬಿಟ್ಟು ಮರ್‍ಯಾನಲ್ಲಿ ಏನನ್ನೂ ಕೇಳಿದವಳಲ್ಲ. ಅಲ್ಲದೆ ನಾವು ಕೊಡುತ್ತಿದ್ದ ರೊಟ್ಟಿ, ತಿಂಡಿಗಳಿಂದಾಗಿ ಆತ ನಮ್ಮ ಬಗ್ಗೆ ಮಾತಾಡಿ ತೋರದಿದ್ದರೂ, ತುಂಬಾ ಸ್ನೇಹದಿಂದ ಇದ್ದಾನೆಂದೇ ನಮ್ಮ ತರ್ಕವಾಗಿತ್ತು. ಸಿಂಗಾರೆವ್ವ “ಮರ್‍ಯಾ ಮಾವಿನಕಾಯಿ ತಗೊಂಬಾರೊ” ಎಂದಳು. ಯಥಾಪ್ರಕಾರ ಅವನು ಹಾ ಹೂ ಅನ್ನಲಿಲ್ಲ. ತೋಟಕ್ಕೆ ಹೋದ.
ಸಂಜೆ ಯಾವಾಗಾದೀತೆಂದು, ಮರ್‍ಯಾ ಯಾವಾಗ ಮಾವಿನಕಾಯಿ ತಂದಾನೆಂದು, ನಾವು ತಿಂದೇವೆಂದು ತುದಿಗಾಲಲ್ಲಿ ನಿಂತು ಕಾಯುತ್ತಿದ್ದೆವು. ಹೊತ್ತು ಮುಳುಗಿದ ಮೇಲೆ ಮರ್‍ಯಾ ಬಂದ. ನಾವೆಣಿಸಿದ್ದಂತೆ ತನ್ನ ಧೋತರದ ಉಡಿಯಲ್ಲಿ ಮಾವಿನಕಾಯಿ ತಂದಿದ್ದ. ಇವೆಲ್ಲ ಕದ್ದು ಮಾಡುವ ವ್ಯವಹಾರಗಳು. ನಾನು ಬೇಕಾದರೆ ಮರಪ್ಪನ ಜೊತೆ ಮಾತಾಡಬಹುದಿತ್ತು. ಸಿಂಗಾರೆವ್ವನಿಗದು ಸಾಧ್ಯವಿರಲಿಲ್ಲ. ಇನ್ನೂ ದೀಪ ಹಚ್ಚಿರಲಿಲ್ಲ. ನಾವಿಬ್ಬರೂ ಕೊಟ್ಟಿಗೆಗೆ ಹೋದೆವು. ಆಗಷ್ಟೆ ದನ ಕಟ್ಟಿ ಕೂತಿದ್ದ, ಬಹುಶಃ ನಮ್ಮ ದಾರಿ ಕಾಯುತ್ತ. ಇಂಥ ಸಂದರ್ಭದಲ್ಲಿ ಯಾರಾದರೂ ಕಂಡಾರೆಂದು ಒಬ್ಬರು ಬಾಗಿಲಲ್ಲಿ ನಿಂತು ಇನ್ನೊಬ್ಬರು ಹರಿವಾಣದ ತನಕ ಹೋಗುವುದು ನಮ್ಮ ರೂಢಿ. ಸಿಂಗಾರೆವ್ವ ಬಾಗಿಲಲ್ಲಿ ನಿಂತಳು. ನಾನು ಅವನ ಬಳಿ ಹೋಗಿ “ಮಾವಿನಕಾಯಿ ತಂದ್ಯಾ?” ಎಂದು ಕೇಳಿದೆ. “ಆಕೀನಽ ಕಳಸು” ಅಂದ. ನಾನು ತಿರುಗಿ ಹೋಗಿ “ನಿನ್ನ ಕೈಯಾಗಽ ಕೊಡುತಾನಂತ. ಲಗು ಹೋಗಿ ಈಸಿಕೊಂಬಾ” ಅಂದೆ. ಸಿಂಗಾರೆವ್ವ ಓಡಿ ಹೋದಳು. ಕಿಡಿಕಿಯ ಹತ್ತಿರವೇ ನಿಂತಿದ್ದರಿಂದ ಮಂದ ಬೆಳಕಿನಲ್ಲಿ ನನಗೂ ಅವ ಕಾಣಿಸುತ್ತಿದ್ದ. ಸಿಂಗಾರೆವ್ವನ ಉಡಿಯಲ್ಲಿ ಮಾವಿನಕಾಯಿ ಹಾಕಿದ. ಅವಳು ತಿರುಗುವಷ್ಟರಲ್ಲಿ ಗಪ್ಪನೆ ತಬ್ಬಿಕೊಂಡು ಲಟಲಟನೆ ಅವಳ ಕೆನ್ನೆಗೆ ಮುದ್ದುಕೊಟ್ಟ! ಏನು ಎತ್ತ ತಿಳಿಯುವಷ್ಟರಲ್ಲಿ ಸಿಂಗಾರೆವ್ವ“ಎವ್ವಾ” ಎಂದು ಕಿರಿಚಿ ಓಡಿಬಂದಳು. ಇಬ್ಬರೂ ಪಡಸಾಲೆಗೆ ಒಂದೇ ಧಾವಂತಿಯಲ್ಲಿ ಓಡಿಬಂದೆವು!
“ಅಲ್ಲಿ ಆಗಲೇ ದೀಪ ಹಚ್ಚಿದ್ದರು. ಕಂಬಕ್ಕೊರಗಿ ನಿಂತಳು. ನಾನೂ ಅವಳ ಪಕ್ಕದಲ್ಲೇ ನಿಂತೆ. ಏದುಸಿರು ಬಿಡುತ್ತ ಹಾಗೇ ನನ್ನ ಭುಜಕ್ಕೆ ಒರಗಿದಳು. ಹುಡುಗಿ ಬೆಂಕಿಯ ಝಳ ತಾಗಿದ ಎಳೆ ಬಾಳೆಲೆಯಂತೆ ಮೆತ್ತಗಾಗಿದ್ದಳು. ತೊಡೆ ಥರಥರ ನಡುಗುತ್ತಿದ್ದವು. ಮೂಗು, ಹಣೆಯ ಮೇಲೆ ಬೆವರು ಮೂಡಿತ್ತು. ಕಿವಿ ಸುಡುತ್ತಿದ್ದವು. ಕೆನ್ನೆಯ ಮೇಲೆ ಮರ್‍ಯಾನ ಬಾಯೆಂಜಲಿತ್ತು. ಒರೆಸಿದೆ. ಅವನ ಹಲ್ಲು ಮೂಡಿದ್ದವು. ಸುಧೈವದಿಂದ ಅವಳು ಚೀರಿದ್ದು ಯಾರಿಗೂ ಕೇಳಿಸಿರಲಿಲ್ಲ. ಸಾವರಿಸಿಕೊಂಡಾದ ಮೇಲೆ “ಯಾರ ಮುಂದೆ ಹೇಳಬ್ಯಾಡ” ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿ ತನ್ನ ತಾಯಿಯ ಕೋಣೆಗೆ ಹೋದಳು.
ಎಂಟು ದಿನ ಕಳೆದರೂ ನಾವಿಬ್ಬರೂ ನಗಾಡಲಿಲ್ಲ. ಬಹಳ ಗಂಭೀರವಾಗಿದ್ದೆವು. ಆಮೆಲೆ ನಾವು ಮತ್ತೊಮ್ಮೆ ಕೊಟ್ಟಿಗೆಯ ಕಡೆ ಸುಳಿಯಲಿಲ್ಲ. ಮರ್‍ಯಾನ ಸುದ್ದಿ ನಾವಂತೂ ಆಡುತ್ತಿರಲಿಲ್ಲವಲ್ಲ. ಇನ್ಯಾರದಾದರೂ ಪ್ರಾಸಂಗಿಕವಾಗಿ ಎತ್ತಿದರೂ ಸಾಕು. ಸಿಂಗಾರೆವ್ವ ಕರಡಿ ಕಂಡ ಮಕ್ಕಳಂತೆ ಹೆದರುತ್ತಿದ್ದಳು. ನಾನಂತೂ ಅವನೊಬ್ಬ ನೀಚನೆಂದು ನಿರ್ಧರಿಸಿ, ನನಗೆ ಗೊತ್ತಿದ್ದ ಎಲ್ಲಾ ಬೈಗುಳಗಳಿಂದ ಅವನ ಕುಲದ ಎಲ್ಲರನ್ನೂ ಬೈದುಬಿಟ್ಟಿದ್ದೆ. ಒಂದೆರಡು ಸಲ ಆತ ನನ್ನ ಮಾತಾಡಿಸಿ ಸಿಂಗಾರೆವ್ವನನ್ನು ಕರೆತರುವಂತೆ ಹೇಳಿದ. ಹಾ ಹೂ ಎನ್ನದೆ ನಿರ್ಲಕ್ಷಿಸಿ ಸುಮ್ಮನಾಗಿದ್ದೆ. ಕರೆತರದಿದ್ದರೆ ಸೀಳಿ ಹೊಳೆಗಾಣಿಸುವುದಾಗಿ ಒಮ್ಮೆ ಬೆದರಿಕೆ ಹಾಕಿದ. ಆಗಲೂ ನಾನು ಸೊಪ್ಪುಹಾಕಲಿಲ್ಲ. ಇನ್ನೊಮ್ಮೆ ತಾನು ಉಪವಾಸವಿರುವುದಾಗಿಯೂ ಸಿಂಗಾರೆವ್ವ ರೊಟ್ಟಿ ಕೊಟ್ಟರೆ ತಿನ್ನುವುದಾಗಿ ಹೇಳಿದ. ಈಸಲ ಅವ ಹಣ್ಣಾದ ಹಾಗಿತ್ತು. ಕಣ್ಣಿನಲ್ಲಿ ಪಶ್ಚಾತ್ತಾಪ ಮೂಡಿತ್ತು. ಹೋಗಿ ಸಿಂಗಾರೆವ್ವನ ಕಿವಿಯಲ್ಲಿ ಹೇಳಿದೆ.
ಆ ದಿನ ಇಬ್ಬರಿಗೂ ರೊಟ್ಟಿ ಕದಿಯಲಾಗಲಿಲ್ಲ. ಕೊನೆಗೆ ಊಟ ಮಾಡುವಾಗ ಸಿಂಗಾರೆವ್ವ ಹ್ಯಾಗೋ ತನ್ನ ತಟ್ಟೆಯೊಳಗಿನ ಎರಡು ರೊಟ್ಟಿಗಳನ್ನೇ ಕದ್ದುಕೊಟ್ಟಳು. ನಾನು ಕೊಟ್ಟಿಗೆಗೆ ತಗೊಂಡು ಹೋದಾಗ ಮರ್‍ಯಾ ನಮ್ಮ ದಾರಿಯನ್ನೇ ಕಾಯುತ್ತಿದ್ದ. ನನ್ನೊಬ್ಬಳನ್ನೇ ನೋಡಿ ಅವನಿಗೆ ಅಸಮಧಾನವಾಯ್ತು. ನಾನು ರೊಟ್ಟಿ ಕೊಡಹೋದರೆ “ಅವಳ್ಯಾಕೆ ಬರಲಿಲ್ಲ?” ಎಂದು ಕಣ್ಣು ಮೂಗು ಕಿಸಿದ. ಅವನ ಮುಖಕ್ಕೆ ಎರಡೂ ರೊಟ್ಟಿ ಎಸೆದು ಓಡಿಬಂದೆ. ಆದಿನ ಸಿಂಗಾರೆವ್ವ ಊಟ ಮಾಡಲೇ ಇಲ್ಲ. ಆದ್ದರಿಂದ ನಾನೂ ಮಾಡಲಿಲ್ಲ.
ನಾಲ್ಕು
ಈ ಮಧ್ಯೆ ಗೌಡ ಶಿರಹಟ್ಟಿಯ ಗೌಡನಿಗೆ ಅಜಾರಿಯೆಂದು ನೋಡಲಿಕ್ಕೆ ಹೋದ. ಊರಿನಲ್ಲಿ ಗೌಡನಿಲ್ಲ ಎಂದರೆ ನಮಗೂ ಹೆಂಗಸರಿಗೂ ಬಹಳ ಸಂತೋಷವಾಗುತ್ತಿತ್ತು. ಅವ ಮನೆಯಲ್ಲಿದ್ದಾನೆಂದರೆ ನಮಗ್ಯಾಕೋ ಕಟ್ಟಿಹಾಕಿಸಿಕೊಂಡ ಅನುಭವವಾಗುತ್ತಿತ್ತು. ದನಿ ಎತ್ತಿ ಮಾತಾಡುವ ಹಾಗಿಲ್ಲ, ಒಳಹೊರಗೆ ಸುಳಿದಾಡುವಂತಿಲ್ಲ. ಅಷ್ಟು ದೂರದ ಪಡಸಾಲೆಯಲ್ಲಿ ಅವ ಕೂತಿದ್ದರೂ ಅಡಿಗೆ ಮನೆಯಲ್ಲಿಯ ಹೆಂಗಸರು ಪಿಸುಗುಟ್ಟಿಕೊಂಡೇ ಮಾತಾಡಬೇಕು. ಆತ ಮನೆಯಲ್ಲಿದ್ದಾಗೆಲ್ಲ ದನಿ ಕೇಳಿಸುತ್ತಿದ್ದುದು ಆತನೊಬ್ಬನದೇ. ಬಹಳವಾದರೆ ಸಿಂಗಾರೆವ್ವನ ದನಿ ಅಷ್ಟಿಷ್ಟು ಕೇಳಿಸಬೇಕು. ಅವನೇನಾದರೂ ಸುಮ್ಮನೆ ಕೂತನೆನ್ನೋಣ, ಅಥವಾ ಮಲಗಿದನೆನ್ನೋಣ. ಆಗಂತೂ ತಾಸುಗಟ್ಟಲೆ ಇಡೀ ಮನೆ ಮನುಷ್ಯರ ದನಿಯ ಸುಳಿವೇ ಇಲ್ಲದೆ ಬಣಗುಡುತ್ತಿತ್ತು. ಒಮ್ಮೊಮ್ಮೆ ಹಾಡುಹಗಲಲ್ಲೇ ಹೆದರಿಕೆಯಾಗುತ್ತಿತ್ತು. ಗೌಡ ಈಗ ಶಿರಹಟ್ಟಿಗೆ ಹೋಗಿದ್ದನಲ್ಲ, ನಾವು ಸಂತೋಷವಾಗಿರಬೇಕಿತ್ತು. ಆದರೆ ನಮ್ಮಿಬ್ಬರ ಮುನ್ನಿನ ಖುಶಿ ಮಾತ್ರ ಹಿಂದಿರುಗಲೇ ಇಲ್ಲ.
ಸಿಂಗಾರೆವ್ವ ಆಗ ಐದನೇ ಇಯತ್ತೆ ಓದುತ್ತಿದ್ದಳು. ದಿನಾ ಮುಂಜಾನೆ ಅವಳನ್ನು ಸಾಲೆಯ ತನಕ ಕಳಿಸಿ, ದನ ಕಾಡಿಗೆ ಹೊಡೆಯೋ ಸಮಯಕ್ಕೆ ಮತ್ತೆ ಸಾಲೆಗೆ ಹೋಗಿ ಕರೆತರುತ್ತಿದ್ದೆ. ನಾವಿಬ್ಬರೂ ಸಾಲೆಗೆ ಹೊಂಟಾಗಲೆಲ್ಲ ಮರ್‍ಯಾ ಕೊಟ್ಟಿಗೆ ಬಾಗಿಲಲ್ಲಿ ಸಿಂಗಾರೆವ್ವನನ್ನೇ ನೋಡುತ್ತ ನಿಂತಿರುತ್ತಿದ್ದ. ಅದು ಗೊತ್ತಾಗಿ ಸಿಂಗಾರೆವ್ವ ಜೋರಿನಿಂದ ನಡೆಯುತ್ತಿದ್ದಳು. ಗೌಡ ಊರಿನಲ್ಲಿ ಇರಲಿಲ್ಲವಲ್ಲ, ಆದ್ದರಿಂದ ಮರ್‍ಯಾನ ಬಗ್ಗೆ ಹೆದರಿಕೆ ಇನ್ನೂ ಜಾಸ್ತಿಯಾಗಿತ್ತು. ಸಿಂಗಾರೆವ್ವನಿಗೆ ಇನ್ನೂ ಹೆಚ್ಚು, ಯಾಕೆಂದರೆ ಆತ ಏನೂ ಮಾಡಬಲ್ಲವನಾಗಿದ್ದ. ಆದರೆ ನಾವು ಹೆದರುವಂಥದ್ದೇನೂ ನಡೆಯಲಿಲ್ಲ. ಅಷ್ಟರಲ್ಲಿ ಗೌಡ ಅವಸರದಿಂದ ಬಂದ.
ಊರಿಗೆ ಹೋದ ಗೌಡ ಸಾಮಾನ್ಯವಾಗಿ ದಣಿದು ಬರುವುದು ರೂಢಿ. ಆದರೆ ಈ ಸಲ ಬಹಳ ತರಾತುರಿಯಲ್ಲಿದ್ದ. ಮತ್ತು “ಎಲ್ಲಾರು ಇಂದಽ ಸವದತ್ತಿ ಎಲ್ಲಮ್ಮನ ಗುಡ್ಡಕ ಹೋಗಬೇಕು. ಲಗು ತಯಾರಾಗ್ರಿ”ಎಂದೂ ಹೇಳಿದ. ಆಳನ್ನು ಕರೆದು ಗಾಡಿಗೆ ಕೊಲ್ಲಾರಿ ಬಿಗಿಯಲು ಹೇಳಿದ. ಸಿಂಗಾರೆವ್ವನನ್ನು ಕರೆದು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅಚ್ಚೆ ಮಾಡಿದ. “ನೀನೂ ಗುಡ್ಡಕ ಬರಬೇಕವಾ” ಎಂದ. ಸಿಂಗಾರೆವ್ವ “ಶೀನಿಂಗೀನ ಕರತರಲಾ ಅಪ್ಪ?” ಎಂದು ಕೇಳಿದಳು. “ಓಹೋ ಆಕೀನೂ ಬರಲಿ” ಎಂದು ಗೌಡ ದೊಡ್ಡ ಮನಸ್ಸು ತೋರಿಸಿದ.
*****
ಮುಂದುವರೆಯುವುದು