ನಿನ್ನೆ ರಾತ್ರಿ ನಮ್ಮ ಐರಾವತಕ್ಕೆ ನೆನಪಾಗಿ ಭಾರತ
ಒಂದೇ ಸಮನೆ ಘೀಳಿಟ್ಟು ರಾತ್ರಿಯ ತೆರೆ ಹರಿಯಿತು
ಉಕ್ಕಿ ಚೆಲ್ಲಿದವು ನಿನ್ನೆ ರಾತ್ರಿ ಹೆಂಡದ ಗಿಂಡಿ
ಆ ರಾತ್ರಿಯಂತೆ ಸಾಗಬಾರದೆ ಜೀವನ ಪುನರುತ್ಥಾನದತನಕ?
ನೊರೆಯುಕ್ಕಿ ಹರಿದಿತ್ತು ಮದ್ಯ, ಮತಿ ಎಲ್ಲ ವಿಕಳವಾಗಿತ್ತು
ನನ್ನ ಸ್ಥೂಲ ಸೂಕ್ಷ್ಮಗಳು, ಹೂವು ಮುಳ್ಳು ಹಂಬಲಿಸಿ ಕಂಪಿಸಿತ್ತು
ಮಧುಪಾತ್ರೆಗಳ ಸಂಘಟ್ಟಣೆಯ ಸದ್ದು ಸ್ವರ್ಗಕ್ಕೆ ಕೇಳಿಸಿತ್ತು
ಕೈಯಲ್ಲಿ ಮಧು, ಮಿದುಳಲ್ಲಿ ಮಹಾ ಬಿರುಗಾಳಿ ಭೋರ್ಗರೆದಿತ್ತು
ಆಕಾಶದಲ್ಲಿ ಅಲ್ಲೋಲ ಕಲ್ಲೋಲವೆದ್ದಿತ್ತು
ಮೂರು ಲಕ್ಷ ಜನ ಪರ್ಶಿಯಾದ ದೊರೆಗಳು ಶರಣಾಗಿ
ಹೊರಳಾಡಿದರು
ಆ ರಾತ್ರಿಯಲ್ಲಿ ಅದೃಷ್ಟ ದಿಗ್ವಿಜಯಗಳ ಸಂಗಮವಾಗಿತ್ತು
ಕಗ್ಗತ್ತಲ ಒಡಲಿಂದ ಸೂಫಿ ಸಂತರಿಗಾಗಿ ಹಗಲು ಚಿಮ್ಮಿತ್ತು
ಕಡಲು ಅಲೆಗಳಾಗಿ ಒಡೆಯಿತು, ಸ್ವರ್ಗಕ್ಕೆ ಈ ರಾತ್ರಿಯ ತುಣುಕು
ಸಿಕ್ಕಿ, ಹೆಮ್ಮೆಯಿಂದ ಮುಖ ತಲೆಗಳ ಮೇಲೆ ಮೆರೆಸಿತು
ಕಾಳ ರಾತ್ರಿಯಲ್ಲಿ ಮುಳುಗಿದ್ದರೂ ಮನುಕುಲ
ದಿವ್ಯ ಕರುಣೆಯ ಹೊಂಬಿಸಿಲು ಹೊರಗೆ ಚಿಮ್ಮಿತ್ತು
ಈ ರಾಗದಿಂದ ವಿಚಲಿತವಾಗದೆ ಹೇಗೆ
ಚರಾಚರ ರೂಪು ಉಳಿದಾವು?
ಆ ಆಶಾಪೂರ್ಣ ವ್ಯಕ್ತಿ ಹೇಗೆ ಜಡವಾದಾನು?
ಬಂಧುಗಳೇ, ಪ್ರಾರಂಭಿಸಿ ಮತ್ತೆ ಹೊಸಜೀವನ
ನಲ್ಲನಿಂದಾಗಿ ನಿರಾಕಾರವಾಗಿದೆ ಆಕಾರ
ನಲ್ಮೆಗೊದಗಿದೆ ನ್ಯಾಯದ ಮಹಾಪೂರ
ನನ್ನ ದೊರೆಯಿಂದಾಗಿ ಪತಿತರೂ ಪಾವನವಾದರು
ಅವನೇ ಸಾಖಿಯಾದಾಗ ಜನ ಜಾರದೆ ಹೇಗೆ ಉಳಿದಾರು?
ಕೊಚ್ಚಿದೆ ಆತ್ಮ ಪ್ರಯತ್ನವನು ಕಡಲು
ಚೂರಾಗಿದೆ ಶ್ರದ್ಧೆಯ ಕಾರ್ಯ
ನನ್ನ ದೊರೆಯ ಈ ಕೃಪಾರೂಪ
ಈಜಿಪ್ಟಿನ ಪ್ರಭುವೆ ಕೊಂಡ ಜೋಸೆಫ್‌ನ ರೂಪ
*****