– ೧ –
ಸದಾ ಇವರು ಹೀಗೆಯೇ-
ಇಲ್ಲೆ, ಗಾಂಧಿಬಜಾರಿನ ಹಿರಿ ಚೌಕದೆದುರಲ್ಲೇ,
ಸಿಗರೇಟು ಸೇದುತ್ತಲೊ ಪತ್ರಿಕೆಯನೋದುತ್ತಲೊ
ಹರಟುತ್ತಲೊ ಇದ್ದಾಗ ಎದುರಾಗುವರು ಇದ್ದಕಿದ್ದಂತೆ
ನಿರ್ದಿಷ್ಟ ಸಮಯದಂತೆ.
ವಯಸು ಅನುಭವ ಹೂಡಿ ಸುಖದುಃಖ ಬೆಳೆದ ಮುಖ,
ಹಿಂದೊಮ್ಮೆ ನೆಲಸಿದ್ದ ಬೆಳಕ ಕನವರಿಸುತಿಹ ಮಂದಗಣ್ಣು;
ಸಾಂತ್ವನವ ನುಡಿದಿರುವ ಹಳೆ ನಮೂನೆಯ ಚಶ್ಮ;
ಅದೇ ಕೊಡೆಯ ಗದೆ:
ಬೆದರಿಸಲು ಭಿಕ್ಷುಕರ ಹುಡುಗರನ್ನ,
ಬೀದಿ ಕುನ್ನಿಯ, ಪೋಲಿ ದನಗಳನ್ನ,
ಎದುರಿಸಲು ಮಳೆ ಬಿಸಿಲ ದಾಳಿಯನ್ನ,
ಸಾಲು ವೃಕ್ಷದ ಹಕ್ಕಿ ಹಿಕ್ಕೆಯನ್ನ.
ಇವರು ನನ್ನೆದುರಲ್ಲಿ ಹಾದು ಹೋದಾಗೆಲ್ಲ
ಹಳ್ಳಿಗಾಡಿನ ಕಡೆಯ ಸುಪ್ರಸನ್ನತೆಯೊಂದು ನಗರಕ್ಕೆ ಸಂದಂತೆ,
ಬೆಳಗಾಗ ಛಳಿಯಲ್ಲಿ ಬಿಸಿ ನೀರ ಮಿಂದಂತೆ
ಎದೆ ಸ್ವಚ್ಛಗೊಳ್ಳುತ್ತದೆ; ಹಗುರಕ್ಕೆ ಸಲ್ಲುತ್ತದೆ.
– ೨ –
ಗವೀಪುರದಿಂದ ಗಾಂಧಿಬಜಾರಿನ ಕೊನೆಗೆ
ಪ್ರಕೃತಿಯ ಕರೆಯಂತೆ ಎಳೆಯುವುದು ಕ್ಲಬ್ಬು;
ಅಲ್ಲಿ ಕಾಯುತ್ತಾರೆ ಕಿಟ್ಟಿ ಗುಂಡೂ ಸುಬ್ಬು-
ಹೊಚ್ಚ ಹೊಸ ಯೌವನದ ರಂಗುಗಳ ಗುಂಗುಗಳ,
ಫ್ಯಾಶನ್ನು ಪಹರೆಗಳ, ಕಸಿ ಹಣ್ಣು ಚಹರೆಗಳ
ವರ್ತಮಾನದ ನಟ್ಟನಡುವಿನಲ್ಲಿ
ಹುಚ್ಚು ಹುರುಪಿನ ನೂಕುನುಗ್ಗುಲಲ್ಲಿ-
ಅಚ್ಚುಕಟ್ಟಿನ ಹಾಗೆ,
’ ಮಾದರಿಯ ಬೆಂಗಳೂರಿನ ಹಾಗೆ,
ಕಾಲ ಕುಗ್ಗಿಸಿದೊಡಲು ಕಾಲನೆಳೆಯುತ ಬರಲು
ಈ ವೃದ್ಧರನು ಕಂಡು “ಅಯ್ಯೊ” ಎಂದಿದ್ದೇನೆ;
ಎನ್ನುತಿರುವಂತೆಯೆ ಕೈಯ ಮುಗಿದಿದ್ದೇನೆ.
ರಸ್ತೆ ಹಿರಿದಾಗಿ ಫುಟ್‌ಪಾತು ಕಿರಿದಾಗಿ
ಓಡಾಟ ಹೆಚ್ಚಾಗಿ, ನೆಮ್ಮದಿಯೆ ಪೆಚ್ಚಾಗಿ,
ಲೋಕ ಕಂಪ್ಯೂಟರಿನ ಸ್ವಿಚ್ಚು ತಂತಿಗಳಂತೆ ಸಂದಿಗ್ಧವಾಗಿ,
ಬೆಲೆಗಳೆಲ್ಲ ಬಿದ್ದು ಹರಡಿ ದಿಕ್ಕಾಪಾಲು
ಎಸೆಯುತಿವೆ ಪ್ರತಿಕ್ಷಣವು ಸರಳ ವೃದ್ಧಾಪ್ಯಕ್ಕೆ ಹಿರಿ ಸವಾಲು.
– ೩ –
ಕ್ಲಬ್ಬಿನಲಿ ನಿಶ್ಚಿಂತೆಯಾಗಿ ಎಲೆ ಕಲಸುವುದು
ಇಪ್ಪತ್ತೆಂಟನಾಡುವುದು – ನಡುವೆ ಅದೂ ಇದೂ
ಇಪ್ಪತ್ತೆಂಟನಾಡುವುದು;
ನಂಬರೆರಡರ ಬಸ್ಸಿನೆದುರು ಬಾಳೆಯ ಸಿಪ್ಪೆ
ಟೈಲರಿನ ಎಡಗಾಲನುಳುಕಿಸಿದ್ದು;
ರಾತ್ರಿ ಪುರ ಭವನದಲಿ ಸಂಗೀತ ಸಾಮ್ರಾಜ್ಞಿ
ಶಂಕರಾಭರಣದಲಿ ಪುಲಕಿಸಿದ್ದು;
ಅಬ್ದುಲನ ಹೈಕೋರ್ಟು ರಿಟ್ಟು ವಜಾ ಆದದ್ದು;
ಖೋಟ ನೋಟ್ ಕೃಷ್ಣನಿಗೆ ಕಠಿಣ ಸಹ ಆದದ್ದು;
ಬದರಿ ನಾದಿನಿಗೊಬ್ಬ ಒಳ್ಳೆ ವರ ಸಿಕ್ಕಿದ್ದು;
ರಷ್ಯ ಚೀನಾ ಕ್ಯೂಬ ಅಮೇರಿಕ ವಾರ್ತೆ ಮಿಕ್ಕಿದ್ದು-
ಅದೂ ಇದೂ ಇಪ್ಪತ್ತೆಂಟನಾಡುವುದು;
ನಡುವೆ ತಪ್ಪಾಡಿದರೆ ಎದುರಾಳಿಯಲ್ಲೊಬ್ಬ
ಮನೆಯ ಕಿರಿ ಸೊಸೆಯಂತೆ ಮುಖವನೂದಿಸಿ ಬೀಗಿ
ಗೊಣಗುವುದು: ಲೆಟ್ ಅಸ್ ಪ್ಲೇ ದಿ ಗೇಂ ಫಾರ್ ಗೇಮ್’ಸ್ ಸೇಕ್
ಇನ್ನಿವರ ಜೀವನ? ಅದು ಕೂಡ ಹೀಗೆಯೇ, ಎಲ್ಲ ಖುಲ್ಲ;
ಖುಷಿಗಷ್ಟೆ ನಫೆಗಲ್ಲ.
ಗಂಟೆಗಟ್ಟಲೆ ಕಲಸಿದರು ಕೈ
ಬಂದರಿಪ್ಪತ್ತು ಹೋದರಿಪ್ಪತ್ತು ನ. ಪೈ.,
ಕೂಗು ಹುಸಿಮುನಿಸುಗಳ ನಡುವೆ ತುಟಿಗಳ ಮೊಗ್ಗೆ
ಬಿರಿಸಿ ನಕ್ಕಾಗಿವರು, ಥೇಟ್ ಜುಲೈ ತಿಂಗಳಿನ ಶಿವಮೊಗ್ಗೆ;
ಚಣಕ್ಕಷ್ಟು ಚಳಿ ನೂಲು, ಒಂದಿಷ್ಟು ಹೂಬಿಸಿಲು,
ಹೊರಗೆ ಕಚಪಿಚ ಕೆಸರು, ಒಳಗೆ ಬೆಚ್ಚನೆ ಸೂರು.
– ೪ –
ಹೊತ್ತಾಯಿತೆ? ಆವರಿಸಿತೇ ಮಬ್ಬು?
ಕೊಡೆ ತೆರೆದು ಏಕಾಕಿ ಮನೆಯತ್ತ ನಡೆಯುವರು ಮರೆತು ಕ್ಲಬ್ಬು.
ಗಾಂಧಿಬಜಾತೀಗ ತಿಳಿಯಾಗಿ ಫರ್ಲಾಂಗು ಬೆಳಕ ಹಬ್ಬ-
ಚೌಕದೆಡೆ ಆಗೀಗ ಪ್ರತಿಪಕ್ಷದವನೊಬ್ಬ
ಎಲುಬಿರದ ನಾಲಗೆಯ ನಾಚು ನಡೆಸುತ್ತಿರಲು
ಸರ್ಕಾರದಸಫಲತೆಯ ಹುಣ್ಣ ನೊಣ – ಸುತ್ತಿರಲು,
ದೀಪಗಳ ಝಗಮಗದಿ ಕಣ್ಸೋತು ನಿಂತಿರಲು
ಮನೆಮಠವ ಮರೆತಿರುವ ಮಂದಿ ಸಂತೆ,
ಬೊಬ್ಬೆ ಅಬ್ಬರದೆದುರು ಗುರುತು ಹತ್ತದ ಹಾಗೆ
ಕಾಲಿಗೊತ್ತಿದ ಗಾಜ ಚೂರ ದೂರಕೆ ಎಸೆದು
ಸಾಗುವರು ಸದ್ದಿರದೆ ಚಂದ್ರನಂತೆ;
ಗಂಭೀರವಾಗಿ
ಕರ್ತವ್ಯದೆಚ್ಚರಿನ ಸನ್ನೆಯಂತೆ.
ನೋಡುತ್ತಲಿದ್ದಂತೆ
ಹೋಟಲಿನ ಬದಿಯಲ್ಲಿ ಬೀದಿ ತಿರುಗನು ಹೊಕ್ಕು
ಮರೆಯಾಗುವರು ಮಾಸ್ತಿ-
ಸಂದ ಜೀವನದೊಂದು ರೀತಿಯಂತೆ;
ಸರಳ ಸದಭಿರುಚಿಯ ಖ್ಯಾತಿಯಂತೆ.
*****
ಕೀಲಿಕರಣ: ಶ್ರೀನಿವಾಸ