ಸಂಪಾದಕೀಯ: ೦೧-೦೪-೨೦೦೬
೧೨-೦೪-೨೦೦೬ ರಂದು ಸೇರಿಸಿದ್ದು:
ಬಹಳ ಹಿಂದೆ. ಪತ್ರಕರ್ತನಾದರೆ ಸಿನಿಮಾ ಮಂದಿಯ ಸಾಮಿಪ್ಯ, ಅವರೊಡನೆ ಹರಟೆ, ಮುನಿಸು ಇತ್ಯಾದಿಯೆಲ್ಲ ಮಾಮೂಲೆ. ಹಂಸಲೇಖರವರೊಡನೆ ಮಾತನಾಡಿ, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿನ ಸೌಂಡ್ ರೆಕಾರ್ಡಿಂಗ್ ಸ್ಟುಡಿಯೋದ ಮೆಟ್ಟಿಲುಗಳನ್ನು ಇಳಿದು ಬರುತ್ತಿದ್ದೆ. ಜೊತೆಗೆ ಸೀತ. ಕೆಳಗೆ ಒಂದು ಗುಂಪು ನಿಂತಿತ್ತು. ಮಧ್ಯದಲ್ಲಿ ರಾಜ್‌ಕುಮಾರ್, ಅದೇ ಬಿಳಿ ಪಂಚೆ, ಅದೇ ಬಿಳಿ ಅಂಗಿ, ಬಿಳಿ ಬಿಳಿಯಾದ ನಗು. ’ಏ ಪ್ಯಾಸೇಜ್ ಟು ಇಂಡಿಯ’ ಚಿತ್ರೀಕರಣ ನೋಡಿ, ಡೇವಿಡ್ ಲೀನ್‌ನ ಕೈ ಕುಲುಕಿದಾಗಲೂ ನನಗೆ ಭಯ-ಸಂಕೋಚ ಎರಡೂ ಇರಲಿಲ್ಲ. ಆದರೆ ರಾಜ್‌ಕುಮಾರ್ ಎದುರಿಗೆ ನಿಂತಿದ್ದಾಗ ಇವೆರಡೂ ಧಾರಾಳವಾಗಿ ಒಳಗೊಳಗೇ. ಜೊತೆಗೆ ರಾಜ್‌ಕುಮಾರ್ ಬಗೆಗೆ ಅಪಾರವಾದ ಗೌರವ- ಅತ್ಯದ್ಭುತ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸುತ್ತಿದ್ದ ಅವರ ಸೌಜನ್ಯಕ್ಕೆ ಬೆರಗಾಗಿಯೂ ನಿಂತಿದ್ದೆ. “ನಿಮ್ಮ ಚಿತ್ರಗಳನ್ನೇ ನೋಡುತ್ತ ಬೆಳೆದ ಬಾಲ್ಯ ನನ್ನದು..”-ತೊದಲಿದ್ದೆ. ನನ್ನೆರಡು ಕೈಗಳನ್ನು ತಮ್ಮ ಕೈಗೆ ತೆಗೆದುಕೊಂಡಿದ್ದ ರಾಜ್ ಒಂದೆರಡು ನಿಮಿಷ ಕುಶಲದ ಮಾತುಗಳನ್ನಾಡಿದ್ದರು. ಸುಮಾರು ಹದಿನೈದು ನಿಮಿಷ ಅವರೊಡನೆ ಮಾತನಾಡಿ ಹೊರಬಿದ್ದೆ.
-ಇಂದು ರಾಜ್‌ಕುಮಾರ್ ಇಲ್ಲವಾಗಿದ್ದಾರೆ. “ಕನ್ನಡಾಭಿಮಾನ” ಸೋಬರ್ ಆಗಿದ್ದ ಒಂದು ಹಂತಕ್ಕೆ ರಸ್ಟಿಕ್ ಆದ ಒಂದು ಅಗತ್ಯ ಚಲನೆ ತಂದುಕೊಟ್ಟದ್ದು ರಾಜ್‌ಕುಮಾರ್ ಎನ್ನುವುದು ಸಂಶಯಾತೀತ. ಈ ಜಾಗತೀಕರಣದ ನಡುವೆ ಬಹುಶ ಈ ರಸ್ಟಿಕ್ ಗುಣ ಇಲ್ಲವಾದರೆ ಬದುಕೇ ಅಸಹನೀಯವಾಗಿ ಹೋದಾತು ಎಂದು ಹೇಳುತ್ತಾ, ಅವರ ನೆನಪು ನಮಗೆಲ್ಲ ರಸ್ಟಿಕ್ ಆದ ಗುಣವುಳ್ಳ ಅದೇ ಸಂದರ್ಭಕ್ಕೆ ರಾಜ್‌ಕುಮಾರ್‌ರವರಿಗಿದ್ದ ವಿನಯವನ್ನು ತರಲಿ ಎಂದು ಆಶಿಸುತ್ತಾ – ದೊಡ್ಡಗಾಜನೂರು ಮಣ್ಣಿನ ಗುಣವಿದ್ದ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಕನ್ನಡಸಾಹಿತ್ಯ.ಕಾಂ ಪರವಾಗಿ, ಬೆಂಬಲಿಗರು ಹಾಗು ಓದುಗರ ಪರವಾಗಿ ಈ ಶ್ರದ್ಧಾಂಜಲಿಯ ಸಾಲುಗಳನ್ನು ಮುಗಿಸುತ್ತಿದ್ದೇನೆ.
ಕಳೆದ ಬಾರಿ ಸಂಪಾದಕೀಯದಲ್ಲಿ ಬರೆದ ಲೇಖಕರ ಹಕ್ಕುಗಳು ಕುರಿತಂತಿನ ಟಿಪ್ಪಣಿ. ಸಾಕಷ್ಟು ಚರ್ಚೆಗೆ ಕಾರಣವಾಯಿತು. ವಿವೇಕ ಶಾನಭಾಗರೂ ಸೇರಿದಂತೆ ಅನೇಕ ಪ್ರಮುಖರು ಕನ್ನಡಸಾಹಿತ್ಯ.ಕಾಂ ಬೆಂಬಲಕ್ಕೆಂದು ಇರುವ ತಂಡದಲ್ಲಿ ಚರ್ಚಿಸಿದ್ದಾರೆ. ಸೈಬರ್ ಸ್ಪೇಸ್‌ನಲ್ಲಿ ಕನ್ನಡವಿನ್ನೂ ಈಗತಾನೆ ಕಣ್ಣು ಬಿಡುತ್ತಿದೆ. ಇದೇ ಸಂದರ್ಭದಲ್ಲಿ ಈ ಅವಕಾಶ (ಸ್ಪೇಸ್) ವನ್ನು ಯಾವ್ಯಾವ ರೀತಿಯ ನಿಯಮಾವಳಿಗಳಿಗೆ ಒಳಪಡಿಸಬೇಕು? ಈ ಅವಕಾಶ/ಮಾಧ್ಯಮವನ್ನು ಬಲ್ಲವರು, ತಾಂತ್ರಿಕ ಕಾಳಜಿಯನ್ನು ಸಂಸ್ಕೃತಿಗೆ, ನಮ್ಮದೇ ಆದ ಅಗತ್ಯಗಳಿಗೆ, ಹೆಚ್ಚು ವ್ಯಾಪಕವಾಗುವಂತಹ “ಸೋಷಿಯಲ್ ಕಂಪ್ಯೂಟಿಂಗ್” ದಿಕ್ಕಿನಲ್ಲಿ ಸಾಧನಗಳನ್ನು, ಕೌಶಲ್ಯ, ಜಾಣ್ಮೆ, ಅರಿವಿನ ಶಕ್ತಿಯುಳ್ಳವರು ಮಾಡುವಂತಹ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಸದ್ಯಕ್ಕೆ ಆ ದಿಕ್ಕಿನಲ್ಲಂತೂ ಆಲೋಚನೆ ಮಾಡದೇ ಹೋದರೆ “ಇರುವ ಡಿಜಿಟಲ್ ಕಂದರ” ಹೆಚ್ಚುತ್ತಾ ಹೋಗಿ ಸಾಮಾಜಿಕವಾದ “ವ್ಯಾಪಕ ಅಸಮಾಧಾನಕ್ಕೆ” ಕಾರಣವಾಗುವ ದುರಂತವಂತೂ ಕಾದಿದೆ.
ಕನ್ನಡಸಾಹಿತ್ಯ.ಕಾಂ ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ನಿಲುವುಗಳೇನಾಗಿರಬೇಕು ಎನ್ನುವ ನಿಖರತೆಗಾಗಿ ಒಂದು ಸಮಿತಿಯನ್ನು ರಚಿಸಲಾಗಿದೆ. ಅದರಲ್ಲಿ, ಅಂಬಾ ಪ್ರಸಾದ್ (ವಕೀಲರು), ವಿವೇಕ ಶಾನಭಾಗ (ಲೇಖಕರು) ಹಾಗು ಶ್ರೀಧರ್ ಸಾಹುಕಾರ್ (ಸಾಫ್ಟ್‌ವೇರ್ ಇಂಜಿನಿಯರ್) ಇದ್ದಾರೆ. ಜೊತೆಗೆ ಆಲ್ಟರ್‌ನೇಟಿವ್ ಲಾ ಫೋರಂನ ಲಾರೆನ್ಸ್ ಲಿಯಂಗ್ ಅವರೂ ಇದ್ದಾರೆ. ಮುಂದಿನ ತಿಂಗಳು ಅಂದರೆ ಮೇ ೬ ರಂದು ಎಲ್ಲರೂ ಸಭೆ ಸೇರಿ ಪಾಲಿಸಬೇಕಾದ ನಿಯಮಾವಳಿಗಳ ಕುರಿತಂತೆ ಚರ್ಚೆ ನಡೆಸಿಕೊಡುತ್ತಾರೆ. ಇವರಿಗೆಲ್ಲ ಕನ್ನಡಸಾಹಿತ್ಯ.ಕಾಂ ಎಂದೆಂದೂ ಅಭಾರಿಯಾಗಿರುತ್ತದೆ.
ಇಂತಹ ಸಮಿತಿಯೊಂದರ ಅಗತ್ಯ ನಿರ್ಮಾಣವಾದದ್ದಾದರೂ ಏಕೆ? ಸಾಕಷ್ಟು ಕೆಎಸ್‌ಸಿ ಅಭಿಮಾನಿಗಳು ಈ ಬಗೆಗೆ ತಲೆಕೆಡಿಸಿಕೊಂಡು ಅರೆ ಔಪಚಾರಿಕ-ಅರೆ ಅನೌಪಚಾರಿಕ ನೆಲೆಯಲ್ಲಿ ನನ್ನೊಂದಿಗೆ ಚರ್ಚಿಸುತ್ತಾ ಹೋದದ್ದು, ಆ ಚರ್ಚೆಯಲ್ಲಿ ನಾನೂ ಪಾಲ್ಗೊಳ್ಳುತ್ತಾ ಹೋದಂತೆ ಸೃಷ್ಟಿಯಾದ ಕೆಲವು ಅಸ್ಪಷ್ಟತೆಗಳು-ಮತ್ತೂ ಕೆಲವು ಸಂಗತಿಗಳು ಸ್ಪಷ್ಟವಾದ ರೀತಿಯಿಂದಾಗಿ ನಾನು ಕಳೆದ ಅಪ್‌ಡೇಟ್‌ನಲ್ಲಿ (ಫೆಬ್ರವರಿ, ೨೦೦೬) ಸಂಚಿಕೆಯಲ್ಲಿ ಬರೆದಿದ್ದ ಸಂಪಾದಕೀಯ, ಕನ್ನಡಸಾಹಿತ್ಯ.ಕಾಂ ಬೆಂಬಲಕ್ಕೆ ಇರುವ ಯಾಹೂ ತಂಡದಲ್ಲಿ ವಿವೇಕ ಶಾನಭಾಗರು ಬರೆದ ಪ್ರತಿಕ್ರಿಯೆ ಒಂದು ಸಣ್ಣ ಮಟ್ಟದ ಚರ್ಚೆಯನ್ನು ಹುಟ್ಟಿಹಾಕಿತು. ಕನ್ನಡಸಾಹಿತ್ಯ.ಕಾಂ ನಲ್ಲಿ ಪ್ರಕಟಿಸಿರುವ/ಪ್ರಕಟಿಸಲಾಗುವ ಕೃತಿಗಳು ಕುರಿತಂತೆ “ಹಕ್ಕು”ಗಳು ಏನಿರಬೇಕು ಎಂಬ ಬಗೆಗೆ ಚರ್ಚೆ ಮುಂದುವರೆದಂತೆ ಅನೇಕ ಸ್ಪಷ್ಟೀಕರಣದ ಮೂಲಕವೆ ಸಂಗತಿಗಳು ತನ್ನಂತೆ ತಾನೇ ಖಚಿತವಾಗುತ್ತಾ ಹೋಯಿತು. ಸಂವಾದ ಹುಟ್ಟಿದ ಹಾಗೆಲ್ಲಾ ಸಂಗತಿಗಳು, ನಿಯಮಗಳು, ಬದ್ಧತೆ ಎಲ್ಲವೂ ತೆರೆದುಕೊಳ್ಳುತ್ತದೆ ಎನ್ನುವುದಕ್ಕೆ ಉದಾಹರಣೆಯೇ ಈಗಿನ ಸನ್ನಿವೇಶ. ಈ ಸಂಪಾದಕೀಯಕ್ಕೆ ಬಂದ ಪ್ರತಿಕ್ರಿಯೆಗಳು ನಮ್ಮ ಬೆಂಬಲಕ್ಕೆಂದೇ ಇರುವ ಯಾಹೂ ತಂಡದಲ್ಲಿ ದಾಖಲಾಗಿದೆ. ಉಳಿದವಲ್ಲಿ, ಕನ್ನಡಸಾಹಿತ್ಯ.ಕಾಂ ಕುರಿತಂತೆ ಮಾತ್ರವಲ್ಲದೆ ಈ ಚರ್ಚೆ ಮುಂದಿನ ದಿನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಪ್ರತಿಕ್ರಿಯೆಗಳು ಬಂದರೆ ಎಲ್ಲವನ್ನೂ ಒಂದೆಡೆ ಸಂಗ್ರಹಿಸಲಾಗುವುದು. ಸೈಬರ್ ಸ್ಪೇಸ್‌ನಲ್ಲಿ ಕನ್ನಡವನ್ನು ಹೇಗೆ ಯಾವ ನೆಲೆಯಲ್ಲಿ ವಿಸ್ತರಿಸಬೇಕು ಎನ್ನುವ ದೃಷ್ಟಿಯಲ್ಲಿ ತಾಂತ್ರಿಕತೆ ಕುರಿತಂತೆ, ಕನ್ನಡಸಾಹಿತ್ಯ.ಕಾಂ ನಿರ್ವಹಣೆಯ ನಿಟ್ಟಿನಲ್ಲಿ ಆಲೋಚಿಸಿದಾಗ:
ಕನ್ನಡಸಾಹಿತ್ಯ.ಕಾಂ ಎದುರಿಸುವ ಬಿಕ್ಕಟ್ಟುಗಳನ್ನು ಆಗಾಗ್ಯೆ ನಿವಾರಿಸಿಕೊಳ್ಳುತ್ತಾ ಮುಂದಕ್ಕೆ ಸಾಗಬೇಕಾಗುತ್ತದೆ. ಒಬ್ಬನ ನಿರ್ವಹಣೆಯಲ್ಲಿ ಇರಬಾರದು-ಅದೇನಾದರೂ ಅನಿವಾರ್ಯವಾದರೆ ಅದು ದುರಂತ. ನನ್ನದೂ ಹಾಗು ಇತರರದೂ ಕೂಡ. ನಾನು ಹಾಗು ಇತರರೂ ಕೂಡ ಸೇರಿದಾಗ ಆಗುವ ಸಾಮೂಹಿಕ ಪ್ರಯತ್ನಗಳು ನಿಜಕ್ಕೂ ಒಂದಷ್ಟಾದರೂ ಅರ್ಥಪೂರ್ಣವಾದ ಬೆಳವಣಿಗೆ ತರಬಲ್ಲದು. ಉದಾಹರಣೆಗೆ ಹೇಳಬಹುದಾದರೆ: ಅಪಾಚೆ, ಫೈರ್‌ಪಾಕ್ಸ್, ಲಿನಕ್ಸ್, ಪಿಎಚ್‌ಪಿ ಮುಂತಾದವನ್ನು ಉದಾಹರಿಸಬಹುದು. ಆದರೆ, ಕನ್ನಡಕ್ಕೆಲ್ಲ ಇರುವುದು ಎರಡೇ ಎರಡು: ಬರಹ ಮತ್ತು ನುಡಿ.
ಭಾಷಾತೀತವಾಗುವ ಭಾವಕ್ಕೆ ಬರಹ-೭ ಒಂದು ಪ್ರತೀಕ
ಬರಹ ೭, ನಂತರ ಮುಂದೇನು?
ಗೆಳೆಯ ವಾಸು, ಬರಹ ೭ ನ್ನು ಬಿಡುಗಡೆ ಮಾಡಿದ್ದಾರೆ. ಹೆಚ್ಚೂ ಕಡಿಮೆ ಭಾರತೀಯ ಪ್ರಧಾನ ಭಾಷೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಲ್ಯಾಟಿನ್ ಕ್ಯಾರೆಕ್ಟರ್ ಸಹ ಸಾಧ್ಯವಾಗಿಸಿ ಕನ್ನಡ ಕಂಪ್ಯೂಟಿಂಗ್ ಅವಕಾಶವನ್ನು ಹಿಗ್ಗಿಸಲಾಗಿದೆ. ಯುನಿಕೋಡ್ ಡಾಕ್ಯುಮೆಂಟ್ಸ್‌ಗಳಿಗಾಗಿ ಒಂದು ಯುನಿಪ್ಯಾಡ್ ಸಹ ಒದಗಿಸಿಕೊಟ್ಟಿದ್ದಾರೆ. ಹೊಸ ಸಾಧ್ಯತೆಗಳನ್ನು ಸದಾ ಕನ್ನಡ ಕಂಪ್ಯೂಟಿಂಗ್ ವಲಯದಲ್ಲಿ ಮುಂದಿಡುವುದರಲ್ಲಿ ವಾಸು ಮೇಲ್ಪಂಕ್ತಿಯನ್ನು ಹಾಕುವುದರಲ್ಲಿ ಮೊದಲಿಗರು. ಈಗ “ಬರಹ” ಮುಂದೇನು ಎನ್ನುವುದನ್ನು ‘ಹತ್ತು ಲಕ್ಷ ಬರಹ ಬಳಕೆದಾರರು ನಿರೀಕ್ಷಿಸುತ್ತಿರುತ್ತಾರೆ. ‘ಎಲ್ಲವನ್ನೂ’ ಒಬ್ಬರೆ ಮಾಡಬೇಕೇಕೆ? ಬರಹ ಎಸ್‌ಡಿಕೆಯನ್ನು ನೀಡಿದ್ದಾರೆ. ಅದನ್ನು ಎಷ್ಟರ ಮಟ್ಟಿಗೆ ಇತರ ಕನ್ನಡಿಗರು ಬಳಸಿ ಕನ್ನಡ ಕಂಪ್ಯೂಟಿಂಗ್‌ನ ವಲಯಕ್ಕೆ ನೀಡಿದ್ದಾರೆ ಎನ್ನುವುದನ್ನು ನೋಡಿದಾಗ ಅತ್ಯಂತ ನಿರಾಶದಾಯಕ ಸನ್ನಿವೇಶ ಕಾಡುತ್ತದೆ. ಇದೇ ರೀತಿಯ ಎಸ್‌ಡಿಕೆ ನುಡಿಯಲ್ಲೂಇದೆ. ಇರುವ ಸವಲತ್ತನ್ನು ಬಳಸಿ-ಬೆಳೆಸುವ ತಂತ್ರಜ್ಞರಿಗೆ ನಮ್ಮಲ್ಲಿ ಕೊರತೆಯೆ-ಅಥವ ಇರುವ ತಂತ್ರಜ್ಞರಿಗೆ ಇಚ್ಛಾಶಕ್ತಿ ಇಲ್ಲವೆ? ಇಂತಹ ದಟ್ಟ ದಾರಿದ್ರ್ಯಕ್ಕೆ ಯಾರನ್ನು ದೂರಬೇಕು? ಇನ್ನೂ ಈ ಪ್ರಶ್ನೆಯೆ ಚರ್ಚೆಗಿಡಬೇಕಾದರೆ ಅದು ದುರಂತವಲ್ಲದೆ ಮತ್ತೇನು?
೧. ಮೇಲೆ ಈಗಾಗಲೆ ತಿಳಿಸಿರುವಂತೆ, ಮೈಕ್ರೋಸಾಫ್ಟ್ ವರ್ಡ್‌ಗೆ ಆಡ್‌ಇನ್ ಸೇರಿಸುವ ಒಂದು ಸೌಲಭ್ಯ ಕಲ್ಪಿಸಲಾಗಿದೆ. ಅದೇ ರೀತಿ, ಬರಹದ ಅಭಿಮಾನಿಗಳು ಬರಹ ಎಸ್ ಡಿ ಕೆ ಬಳಸಿಕೊಂಡು ಆಡ್‌ಇನ್ ಸೇರಿಸುವ ಅವಕಾಶವನ್ನು- ನಿರ್ದಿಷ್ಟವಾಗಿ ಸೇರಿಸುವಂತೆ ಮುಂದಿನ buiಟಜ ಅನ್ನು ಬೆಳೆಸಲಿ. ತಾಂತ್ರಿಕವಾಗಿ ಹೀಗೆ ಇರಬೇಕು ಎನ್ನುವುದನ್ನು ವಾಸುರವರೇ ನಿರ್ಧರಿಸಿ: “ಹೀಗೀಗಿದ್ದರೆ ಹೀಗೆ ಬರಹಕ್ಕೆ, ನೀವು ಆಡ್ ಇನ್ ಸೇರಿಸಬಹುದು’ ಎಂಬ ಸೂತ್ರವನ್ನು ತಿಳಿಸಿ ಹೇಳಲಿ. ಇದರಿಂದಾಗಿ ಬರಹವೂ ಒಂದು ಸಾಮೂಹಿಕ ಆಯಾಮದಲ್ಲಿ ಬೆಳೆಯುವಂತಾಗುತ್ತದಲ್ಲದೆ ಭಾರತದಾದ್ಯಂತ ಅದು ಹೆಚ್ಚು ಹೆಚ್ಚು ಬಳಕೆಗೂ ಅನುಕೂಲ ಕಲ್ಪಿಸಿದಂತಾಗುತ್ತದೆ. ಆಡ್‌ಇನ್‌ಗಳು ಬರಹಕ್ಕೆ ಸೇರಿಕೊಳ್ಳುವಂತಾದರೆ ಪ್ರಾದೇಶಿಕ ಭಾಷೆಗಳ ಬೆಳವಣಿಗೆ ಹಾಗು ಬಳಕೆಗೆ ಅದೆಷ್ಟು ಉಪಯೋಗವಾಗುತ್ತದೆ…
ವಾಸುರವರಿಗೆ ಕನ್ನಡಸಾಹಿತ್ಯ.ಕಾಂ ಬಳಗದ ಪರವಾಗಿ ಧನ್ಯವಾದಗಳು ಹಾಗು ಅಭಿನಂದನೆಗಳು.
ರುದ್ರಮೂರ್ತಿ ಹಾಗು ಕನ್ನಡಕ್ಕಾಗೇ ಒಂದು ಸ್ಪೆಲ್‌ಚೆಕ್ಕರ್.
‘ಬರಹ’ವನ್ನು ಹಾಗು ಮೈಕ್ರೋಸಾಫ್ಟ್‌ನ ವರ್ಡ್ ಬಳಸುವವರಿಗೆ (ಆನ್ಸಿ) ತಮ್ಮ ಬರವಣಿಗೆಯ ಕಾಗುಣಿತ ದೋಷಗಳನ್ನು ಪರೀಕ್ಷಿಸಲು ಯಾವುದೇ ಸೌಲಭ್ಯವಿರಲಿಲ್ಲ. ನಮ್ಮ ಕನ್ನಡಸಾಹಿತ್ಯ.ಕಾಂನ ಅಭಿಮಾನಿ ರುದ್ರಮೂರ್ತಿಯವರು “ಸ್ಪೆಲ್ ಚೆಕ್ಕರ್” ಒಂದರ ಆಡ್-ಇನ್ ಕಂಪೋನೆಂಟ್ ಒಂದನ್ನು ತಯಾರಿಸಿದ್ದಾರೆ. ಇದರ “ಬೀಟಾ” ಆವೃತಿಯನ್ನು ಬಿಡುಗಡೆ ಮಾಡಲು ಸಂತೋಷವಾಗುತ್ತದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಲು, ಇದರ ಅಭಿವೃದ್ಧಿಗೆ ಸೂಕ್ತ-ಸಲಹೆಗಳನ್ನು ನೀಡಬೇಕೆಂದು ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತಿದ್ದೇನೆ. ಮೇ ತಿಂಗಳಲ್ಲಿ ಇದರ ಸಂಪೂರ್ಣ ಆವೃತಿಯನ್ನು ಬಿಡುಗಡೆ ಮಾಡಲು ರುದ್ರಮೂರ್ತಿಯವರು ಯತ್ನಿಸುತ್ತಿದ್ದಾರೆ. ರುದ್ರಮೂರ್ತಿಯವರಿಗೆ ಎಲ್ಲರ ಪರವಾಗಿ ಅಭಿನಂದನೆ ಹಾಗು ಕೃತಜ್ಞತೆಗಳು.
*
*
*
ಎಂ ಪಿ ಪ್ರಕಾಶ್, ವಿಮಾನ ಹಾಗು ರೈಲು ಪ್ರಯಾಣ
“…ಪ್ರಯಾಣಿಕರಾರೂ ಮಾತನಾಡುವ ಕುತೂಹಲ ತೋರಿಸಲೇ ಇಲ್ಲ. ಎಲ್ಲಾ ಗಂಭೀರವಾದ ಪ್ರಯಾಣ.” ಎಂ ಪಿ. ಪ್ರಕಾಶ್‌ರವರ ಮೇಲಿನ ವಾಕ್ಯ “ವಿಮಾನ ಯಾನ’ದ ಬಗೆಗೆ ನನಗಿದ್ದ ಭಾವನೆಗಳನ್ನು ಮತ್ತಷ್ಟು ದೃಢೀಕರಿಸಿತು. ಪ್ರಕಾಶರು ಸ್ವಲ್ಪ ಅತಿಸೌಜನ್ಯದ ಮನುಷ್ಯರಾದ್ದರಿಂದ ಆ ವಾಕ್ಯಗಳನ್ನು ವಿಸ್ತರಿಸಿಲ್ಲ, ಪ್ರಕಾಶ್‌ರವರ ಸಾಲನ್ನು ತೆಗೆದುಕೊಂಡು ನನ್ನ ಅನುಭವವನ್ನು ಇಲ್ಲಿ ವಿಸ್ತರಿಸಿದ್ದೇನೆ:
ವಿಮಾನದ ಸುದೀರ್ಘ ಪ್ರಯಾಣವೆಂದರೆ ನರಕ. ಎಲ್ಲರಿಗೂ ಹೀಗೆ ಅನ್ನಿಸಿರಬಹುದು. ದೊಡ್ಡಧ್ವನಿಯಲ್ಲಿ ಮಾತನಾಡುವುದು ಅನಾಗರೀಕತೆಯೊ ಅಥವ “ಮಾತನಾಡಿ ಬೇರೆಯವರಿಗೆ ತೊಂದರೆ ಕೊಡಬಾರದು” ಎಂದೆನ್ನುವ ಸೌಜನ್ಯವೋ? ಇಲ್ಲವೆ, “ಮಾತನಾಡಿದರೆ ಏನೇನು ಕೇಳುತ್ತಾರೊ, ಅದಕ್ಕೆಲ್ಲ ನಾನೇನು ಉತ್ತರಿಸಬೇಕಾಗುತ್ತದೊ-ಲಗ್ಗೇಜಿನೊಂದಿಗೆ ಈ ಸಂಪರ್ಕವೂ ಅನಗತ್ಯವಾದ ಲಗ್ಗೇಜಾದರೆ” ಹೇಗೋ ಅನ್ನುವ ಭೀತಿಯೊ, “ಇವನು ಯಾರೋ ಇವನ ಅಂತಸ್ಥು, ಸ್ಥಾನ ಮಾನಗಳೇನೊ, ನನ್ನ ಸ್ಥಾನಮಾನ, ಅಂತಸ್ಥಿಗೆ ಇವನು ತಕ್ಕವನಲ್ಲ” ಎನ್ನುವ ತೀರ್ಮಾನವೋ- ಅಂತೂ ವಿಮಾನದಲ್ಲಿ ಮಾತು ಇರುವುದೇ ಇಲ್ಲ. ಉಸಿರುಗಟ್ಟಿಸುವ ಅಮಾನವೀಯವಾದ ವಾತಾವರಣ-ಥೂ ಎಂದನ್ನಿಸಿಬಿಡುವಷ್ಟು.
ಬದಲಿಗೆ ರೈಲು ಪ್ರಯಾಣ, ನಿಜ ಇಲ್ಲೂ ಥೂ ಎಂದು ಮನಸ್ಸನ್ನು ಚಿಕ್ಕದು ಮಾಡಿಬಿಡುವಷ್ಟು ಕೊಳಕೂ ಇರುತ್ತದೆ. ಆದರೆ, ಅಪರಿಚಿತರ ನಡುವೆ ಸಂಕೋಚದ ಪರದೆ ಮೆಲ್ಲನೆ ಹರಿದು, ಏನು ಎತ್ತ ಎನ್ನುವ ವಿವರಗಳ ಹಂಚಿಕೊಳ್ಳುವ ಚಟುವಟಿಕೆಯೊಂದಿಗೆ ಮನೆಯಿಂದ ತಂದಿರಬಹುದಾದ ಆಹಾರವನ್ನು ಹಂಚಿಕೊಳ್ಳುವ ಚಟುವಟಿಕೆ-ಹಾಡು, ಕುಣಿತ-ಕೆಲವೆಡೆ ಇಸ್ಪೀಟು. ಒಟ್ಟಾರೆ ಇಲ್ಲಿ ಎಲ್ಲ ಸ್ಥಾನಮಾನಗಳು ಬದಿಗೊತ್ತಲ್ಪಡುತ್ತವೆ. ಹಾಗೆಂದು ಸಣ್ಣತನಗಳು ಇಲ್ಲದಿಲ್ಲ. ಆದರೆ, ಇದು ವಿಮಾನದ ಸಣ್ಣತನಕ್ಕಿಂತಲೂ ಸಹನೀಯವಾದವು-ಸಾಂದರ್ಭಿಕವಾದಂತವು.
ವಿಮಾನದ ಪ್ರಯಾಣವೇ ಒಂದು ಪ್ರತಿಷ್ಠೆ ಎನ್ನುವಂತೆ ನೋಡುವ ಮಂದಿ ಇರುವತನಕ “ಎಲ್ಲವೂ ಆಕಾಶದಲ್ಲೇ ಹಾರುತ್ತಿರುತ್ತವೆ”-ಭೂಮಿಗೆ ಕಚ್ಚಿಕೊಂಡು ನಿಲ್ಲುವುದಿಲ್ಲ ಅಥವ ಭೂ ಸ್ಪರ್ಶಕ್ಕೆ ಬರುವುದೇ ಇಲ್ಲ..ಗ್ರಾಸ್ ರೂಟ್ ಲೆವೆಲ್ ಎನ್ನುವುದೂ ಈ ಅಕಾಶಯಾನಿಗಳ ಬಾಯಲ್ಲೇನಾದರೂ ಬಂದರೆ ಒಂದೋ ಸಂಶಯದಿಂದ ನೋಡುವಂತಾಗಿ ಬಿಡುತ್ತದೆ. ಅಥವ ಅಸಹ್ಯ ಹುಟ್ಟಿಸಿಬಿಡುತ್ತದೆ.
ಒಂದಂತೂ ನಿಜ, ಎಂ ಪಿ ಪ್ರಕಾಶ್‌ರವರು ತಮ್ಮ ಮತ್ತೊಂದು ಲೇಖನದಲ್ಲಿ ರೈಲು ಪ್ರಯಾಣದ ಬಗೆಗೂ ಬರೆದಿದ್ದಾರೆ. ಆ ಲೇಖನದ ಸಾರಾಂಶ ವಿವರಗಳೂ ಸಹ ಸತ್ಯವಾದದ್ದೇ. ಅದು ನಮ್ಮ ಸಹ ಪ್ರಯಾಣಿಕರು, ರೈಲ್ವೇ ಖಾತೆಯವರೂ ಗಮನಿಸಬೇಕಾದ್ದೇ..ಏನೇ ಇರಲಿ, ವಿಮಾನದ ಉಸಿರುಗಟ್ಟಿಸುವ ಅಮಾನವೀಯವಾದ ವಾತಾವರಣಕ್ಕಿಂತಲೂ ರೈಲ್ವೆಯ ಮೂಗು ಮುಚ್ಚಿಕೊಂಡು ಪ್ರಯಾಣಿಸಲೇ ಬೇಕಾದ ಅನಿವಾರ್ಯ ಎಷ್ಟೋ ಸಹನೀಯವೆ…ಒಂದು ನನ್ನೊಳಗಿನ ಕುತೂಹಲವೆಂದರೆ ಎಂ ಪಿ ಪ್ರಕಾಶ್‌ರಂತಹವರೂ ಸಹ ವಿಮಾನ ಪ್ರಯಾಣದ ಬಗೆಗೆ ಹೆಚ್ಚು ಬರೆಯದೆ, ಅಲ್ಲಿನ ಸಹಪ್ರಯಾಣಿಕರ ಬಗೆಗೆ ಬರೆಯದೆ ಕೇವಲ ರೈಲು ಪ್ರಯಾಣದ ಕುರಿತಿನ ವಿವರಗಳನ್ನಷ್ಟೇ ಏಕೆ ಬರೆದರು -ಎನ್ನುವುದೆ. ಅವರೇನಾದರೂ ಇದಕ್ಕೆ ಉತ್ತರಿಸಿಯಾರೆ. ನೋಡೋಣ.
*
*
*
ಬರೆಯುವರಿಗೆ ಒಂದು ಆನ್‌ಲೈನ್ ಕಾರ್ಯಶಿಬಿರ
ಈಗೀಗ ಇಂಟರ್‌ನೆಟ್ ಸ್ವಲ್ಪ ವ್ಯಾಪಕವಾಗುವ ಲಕ್ಷಣಗಳನ್ನು ತೋರುತ್ತಿರುವಂತೆಯೇ “ಕನ್ನಡದಲ್ಲಿ ಬರೆಯಬೇಕು” ಎನ್ನುವವರ ಸಂಖ್ಯೆಯೂ ಸ್ವಲ್ಪವಾದರೂ ಬೆಳೆಯುತ್ತಿದೆ. ಆದರೆ ಹೇಗೆ? ಎನ್ನುವ ಪ್ರಶ್ನೆಯೇ ಎಲ್ಲವನ್ನೂ ಕಂಗೆಡಿಸಿಬಿಡುತ್ತಿದೆ. ಉತ್ಸಾಹ ಬತ್ತಿ ಹೋಗುವಂತೆ ಮಾಡಿಬಿಡುತ್ತದೆ. ಈ ಹೊಸಬರಿಗೆ ಉತ್ತೇಜನ ಕೊಡುವಂತೆ ಯಾವುದೇ “ರೆಫೆರೆನ್ಸ್” ಇಲ್ಲ. ಪ್ರೋತ್ಸಾಹಿಸುವ ಕ್ರಮವಾಗಲೀ ಪುಟಗಳಾಗಲೀ ಇಂಟರ್‌ನೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಭಾಷೆ ಬಲ್ಲವರೆಲ್ಲರೂ “ಇಲ್ಲಿ ಎಲ್ಲರೂ ಲೇಖಕರೇ” ಆಗಿ ಪ್ರಕಟಿಸಿದ್ದೆಲ್ಲವೂ “ಸೃಜನಶೀಲ ಬರವಣಿಗೆಯೂ” ಆಗಿಬಿಡುವ ಅಪಾಯವೂ ಇದೆ. ಸ್ವಲ್ಪವೂ ಸಂಕೋಚವಿಲ್ಲದೆ ಬರೆದುದ್ದನ್ನು ತಟಕ್ಕನೆ ಪ್ರಕಟಿಸಿಬಿಡುವ ಆತುರಗಾರಿಕೆಯನ್ನೂ ತೋರುತ್ತಾರೆ. ಕನ್ನಡಸಾಹಿತ್ಯ.ಕಾಂನಲ್ಲಿ ಪ್ರಕಟಿಸುವಂತೆ ಕೋರಿ ಅನೇಕ ಲೇಖನಗಳು, ಸಣ್ಣಕತೆಗಳು, ಕವನಗಳು ಇತ್ಯಾದಿ ಬರುತ್ತಲೇ ಇರುತ್ತವೆ. ಅವರ ಉತ್ಸಾಹಕ್ಕೆ ಮಣ್ಣೆರಚದಂತೆ ನಾನು “ಓದುಗನಾಗಿ” ಪ್ರತಿಕ್ರಿಯಿಸುತ್ತೇನೆ ಹೊರತಾಗಿ ಎಲ್ಲವನ್ನೂ ಪ್ರಕಟಿಸಿಬಿಡುವುದಿಲ್ಲ. ಆದುದರಿಂದಲೇ ಒಂದಷ್ಟರ ಮಟ್ಟಿಗಾದರೂ “ಗುಣಮಟ್ಟ”ವನ್ನು ಕಾಯ್ದುಕೊಂದು ಬರಲು ಸಾಧ್ಯವಾಗಿದೆ. ಗುಣಮಟ್ಟ ತೀರಾ ಸಾಪೇಕ್ಷವಾದದ್ದು ಎನ್ನುವ ತರ್ಕ/ಕುತರ್ಕಗಳಾಚೆಗೆ ಮೇಲಿನ ಮಾತುಗಳನ್ನು ಗ್ರಹಿಸಬೇಕಾಗಿ ಮನವಿ. ಕನ್ನಡಸಾಹಿತ್ಯ.ಕಾಂ ಪ್ರಕಟಿಸಿರುವುದೂ ಅತ್ಯಂತ ಶ್ರೇಷ್ಠವೆನ್ನುವುದು ನನ್ನ ಭಾವನೆ. ಇದಕ್ಕೆ ಯಾವುದೇ ಪ್ರಮಾಣಪತ್ರಗಳನ್ನು ಕೊಡಬೇಕಾಗಿಲ್ಲ.
ಕನ್ನಡಸಾಹಿತ್ಯ.ಕಾಂನಲ್ಲಿರುವ ಬರವಣಿಗೆ ಹೊಸ ಲೇಖಕರಲ್ಲಿ ಆಸಕ್ತಿ ಹುಟ್ಟಿಸಿದ್ದರೆ ಅಂತಹವರಿಗೊಂದು “ಅನ್‌ಲೈನ್ ವರ್ಕ್‌ಶಾಪ್” ಮಾಡುವ ಕಾರ್ಯ ಯೋಜನೆಯೊಂದನ್ನು ಇಟ್ಟುಕೊಂಡು ಲೇಖಕರ ಬಳಿ ಮಾತನಾಡುತ್ತಿದ್ದೇನೆ. ಸಣ್ಣಕತೆ ಪ್ರಾಕಾರಕ್ಕೆ ಸಂಬಂಧಿಸಿದಂತೆ ಈ ಕಾರ್ಯಶಿಬಿರ ರೂಪುಗೊಳ್ಳುತ್ತಿದೆ. ಸ್ಥೂಲವಾದ ಅದರ ವಿವರಗಳು:
ಎಲ್ಲ ಲೇಖಕರಿಗೆ ತಮ್ಮ ಹಳೆಯ ಹಾಗು ಹೊಸ ಕತೆ ಎರಡನ್ನು ತೆಗೆದುಕೊಂಡು ಅವರ ಬೆಳವಣೊಗೆಯನ್ನು, ಅವರು ಆಧರಿಸುವ ಶೈಲಿ-ಭಾಷೆ-ಆಶಯ ಇತ್ಯಾದಿ ವಿವರಗಳನ್ನು ಅವರನ್ನೇ (ಇದು ಶಿಬಿರಕ್ಕಾಗಿರುವುದರಿಂದ ಅವರುಗಳೇ ಬರೆಯಬೇಕು) ಬರೆಯುವಂತೆ ಕೇಳಿಕೊಳ್ಳುವುದು-ಹಾಗು ಅದಕ್ಕೆ (ವಿರುಧ್ಧ/ಪರ) ಪ್ರಜ್ಞಾವಂತ ಓದುಗರ ಟಿಪ್ಪಣಿಯನ್ನು ಸೇರಿಸಿದಾಗ ಆ ಎಲ್ಲ ಕತೆಗಳಿಗೂ ಕಾರ್ಯಶಿಬಿರದ ದೃಷ್ಟಿಯಿಂದ ವಿವಿಧ ಒಳ ನೋಟಗಳು ದಕ್ಕುತ್ತದೆ. ಶಿಬಿರಾರ್ಥಿಗಳು ತಾವು ಓದಿದ/ಗ್ರಹಿಸಿದ ಕ್ರಮದ ಬಗೆಗೆ ಲೇಖಕರೊಂದಿಗೆ ಟಿಪ್ಪಣಿ ಬರೆದವರೊಂದಿಗೆ ಪ್ರಶ್ನೋತ್ತರದಲ್ಲಿ ಭಾಗವಹಿಸಬಹುದು. ಹೀಗೆ ಮಾಡುವುದರಿಂದ ಬರವಣಿಗೆಯಲ್ಲಿ ಗಳಿಸಬೇಕಾದ (ಕೌಶಲ/ಪ್ರಾವೀಣ್ಯತೆ–ಸಾಹಿತ್ಯದ ಮಟ್ಟಿಗೆ ಕೆಟ್ಟ ಪದಗಳೇ ಇರಲಿ- ಆದರೆ ಇದು ಬರವಣಿಗೆಯಲ್ಲಿ ಆಸಕ್ತಿ ಇರುವವರನ್ನು ಕುರಿತಾದ್ದರಿಂದ ಹೀಗೆ ಹೇಳಬಹುದು) ಈ ಮೂಲಕ ಹೊಸಬರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎನುವ ಪ್ರಯತ್ನ ಈ ಯೋಜನೆಯ ಹಿನ್ನೆಲೆಯಲ್ಲಿರುವುದನ್ನು ಗುರುತಿಸಿದರೆ ಸಾಕು.
ಇದಕ್ಕಾಗಿ ಸಣ್ಣಕತೆಗಳ ಎರಡು ಕತೆಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಲೇಖಕರನ್ನೇ ಟಿಪ್ಪಣಿ ಬರೆಯುವಂತೆ ಕೇಳಿಕೊಳ್ಳಲಾಗುವುದು. ಇದರ ಸಂಬಂಧವಾಗಿ ಲೇಖಕರನ್ನು ಸಂಪರ್ಕಿಸಿದ್ದೇನೆ. ಒಟ್ಟು ೨೫ ಲೇಖಕರು ೫೦ ಕತೆಗಳು, ೫೦ ಟಿಪ್ಪಣಿಗಳು ಜೊತೆಗೆ “ಓದಿದವರ/ಗ್ರಹಿಸಿದವರ ಟಿಪ್ಪಣಿಗಳು. ಅಂದರೆ ಒಟ್ಟು ೧೫೦ ಬರವಣಿಗೆ ಒಂದೆಡೆ ಸೇರಿದರೆ, ಬರೆಯುವುದರಲ್ಲಿ ಆಸಕ್ತಿ ಹೊಂದಿರುವವರಿಗೆ ಈ ರೆಫೆರೆನ್ಸ್ ಒಂದೆಡೆಯೇ ದೊರಕುವಂತಾದರೆ, ಇದನ್ನು ಐಟಿ ಉದ್ಯಮದ ಪ್ರಜ್ಞಾವಂತ ಯುವ ಜನಾಂಗದವರಿಗೆ ದೂರೆಯುವಂತಾಗಿ – ತಮ್ಮ ಬರವಣಿಗೆಗೆ ಒಂದು ಕ್ರಿಯಾತ್ಮಕ ಸೃಜನಾತ್ಮಕ ಶಿಸ್ತನ್ನು ಗಳಿಸುವಂತಾದರೆ, ಆ ಮಟ್ಟಿಗೆ ಈ ಶ್ರಮ ಸಾರ್ಥಕ.
ಆದರೆ, ಇಂತಹ ಕೆಲಸ ಸ್ವಲ್ಪ ವೇಳೆಯನ್ನು ಬೇಡುವಂತದ್ದೆ. ಇದರ ಬಗೆಗೆ ಎಷ್ಟು ಮಂದಿ ಆಸಕ್ತರಿದ್ದಾರೆ, ಅವರು ಏನೇನು ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ ಎನ್ನುವ ಸೂಚನೆ ಸಿಕ್ಕಂತಾದರೆ ಈ ಆನ್‌ಲೈನ್ ಶಿಬಿರವನ್ನು ಹೆಚ್ಚು ಅರ್ಥಪೂರ್ಣಗೊಳಿಸಬಹುದೇನೊ. ಆಸಕ್ತರು, ಸಲಹೆ ಸೂಚನೆಗಳೇನಾದರೂ ಬರೆಯಿರಿ.
ಇದು ಕನ್ನಡದ ಮಟ್ಟಿಗೆ ಕೆ ಎಸ್ ಸಿ ಯ ಹೊಸ ಪ್ರಯೋಗ-ಹಾಗು ಕೊಡುಗೆಯಾಗುತ್ತದೆ.
*
*
*
ಬದುಕಲಾಸೆ ಎನ್ನುವ ವಿಶಾಲ್‌ಗೆ ನಿಮ್ಮ ನೆರವಿರಲಿ
ವಿಶಾಲ್ ಕಿರ್ಲೋಸ್ಕರ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ. ಸಂಭವಿಸಿದ ಅಪಘಾತದಲ್ಲಿ ಅವನ ದೇಹ ಜರ್ಜರಿತವಾಗಿ ಹೋಗಿದೆ. ಸಾಮಾನ್ಯವಾದ ಯಾವುದೆ ಚಟುವಟಿಕೆ ಇಲ್ಲದೆ, ನಾನು ಹೊರೆಯಾಗಲಾರೆ- ಎಲ್ಲರಂತೆ ಬದುಕ ಬೇಕು ಎನ್ನುವ ಛಲ ಆತನದು. ಆದರೆ, ಅವನ ಚಿಕಿತ್ಸೆಗೆ ಬೇಕಾದ ೯ ಲಕ್ಷ ರೂಪಾಯಿಗಳು. ಅತ್ಯಂತ ಮಧ್ಯಮ ತರಗತಿಗೆ ಸೇರಿದ ಅವನ ಹೆತ್ತವರು ಅಸಹಾಯಕರು. ಹೀಗಾಗಿ, ಅವನ ನೆರವಿಗೆ ಎಲ್ಲರೂ ಬರಬೇಕಾಗಿದೆ. ನಿಮ್ಮ ಕೈಲಾದಷ್ಟು ಅವನಿಗೆ ಸಹಾಯ ಮಾಡಿ, “ದೀರ್ಘಾಯುಶ್ಮಾನ್ ಭವ” ಎಂದು ಹರಸಿರಿ. ಅವನು ಎಲ್ಲರಂತೆ ಯಾರಿಗೂ ಹೊರೆಯಾಗದೆ ಬದುಕುವಂತಾಗಲಿ…
ವಿಶಾಲ್‌ಗೆ ಸಂಬಂಧಿಸಿದ ವಿವರಗಳು ಇಲ್ಲಿವೆ: www.helpformylife.com ಒಮ್ಮೆ ಓದಿ ಸಹಾಯ ಮಾಡಿ.
*
*
*
ನಾಲ್ವರು ಲೇಖಕರು:
ಕನ್ನಡಸಾಹಿತ್ಯ.ಕಾಂ ವಿಸ್ತರಿಸಿಕೊಳ್ಳುತ್ತಾ ಹೋಗುವ ನಿಟ್ಟಿನಲ್ಲಿ ಲೇಖಕರ ಬಳಗಕ್ಕೆ, ಪಟ್ಟಿಗೆ ನಾಲ್ವರು ಲೇಖಕರು ಸೇರಿಕೊಂಡಿದ್ದಾರೆ- ಎಂ ಪಿ ಪ್ರಕಾಶ್, ಗಂಗಾಧರ್ ಮೊದಲಿಯಾರ್ ಹಾಗು ಕೆ ವಿ ತಿರುಮಲೇಶ್ ಹಾಗು ರೇಖಾರಾಣಿ. ರೇಖಾರಾಣಿಯವರ ’ಅರ್ಥವಾಗದವರು” ಕಿರು ಕಾದಂಬರಿ ಪೂರ್ತಿಯಾಗಿ ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ ಇವರೆಲ್ಲರಿಗೂ ಕನ್ನಡಸಾಹಿತ್ಯ.ಕಾಂ ಲೇಖಕರ ಬಳಗಕ್ಕೆ ಸ್ವಾಗತ.
ಕನ್ನಡಸಾಹಿತ್ಯ.ಕಾಂಗೆ ಬೆಂಬಲ ಮತ್ತು ಅದರ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳು
ಕನ್ನಡಸಾಹಿತ್ಯ.ಕಾಂ ನ ವಿಸ್ತರಣೆ ಅತ್ಯಗತ್ಯವಾಗಿ ಆಗಬೇಕು. ಅಪಾರವಾದ ಬೆಂಬಲ, ಸದಭಿಪ್ರಾಯ ಇದ್ದೇ ಇದೆ. ಆದರೆ ಆ ಬೆಂಬಲ ಸರಿಯಾದ ರೀತಿಯಲ್ಲಿ ವ್ಯವಸ್ಥಿತ ಸ್ವರೂಪ ಪಡೆದುಕೊಂಡರೆ ಮುಂಚೂಣಿಯಲ್ಲಿರುವವರು ಬೇಕಾದ ರೋಡ್‌ಮ್ಯಾಪ್ ಹೊಂದಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಈ ಕಾರಣದಿಂದಾಗಿ, ಬೆಂಬಲವನ್ನೂ ಸಹ ವಿಭಜಿಸಿ, ಕ್ರಮಬದ್ಧಗೊಳಿಸುವ ಕಾರ್ಯ ನಡೆದಿದೆ ಅಂದರೆ “ಕೀ-ಏರಿಯಾಗಳನ್ನು” ಗುರುತಿಸಿ ಅದರಡಿ ಬೆಂಬಲವನ್ನು ವ್ಯವಸ್ಥಿತಗೊಳಿಸುವ ಕಾರ್ಯ: ಉದಾಹರಣೆಗೆ: ತಾಂತ್ರಿಕವಾದ ಬೆಂಬಲ. ಇದರಲ್ಲಿ, ತಾಂತ್ರಿಕವಾಗಿ ನೆರವು ನೀಡಬಲ್ಲಂತಹವರು ಸದಸ್ಯರಾಗಬಹುದು. ಇವರ ನಡುವೆ ನಡೆಯಬಹುದಾದ ಚರ್ಚೆ “ತಾಂತ್ರಿಕವಾದ ಕ್ಷೇತ್ರ ಪರಿಚಯವಿಲ್ಲದಿರುವವರ ಮೇಲೆ ಹೇರಿದಂತಾಗುವುದಿಲ್ಲ.” ಹೀಗೆಯೆ, ಪಠ್ಯವನ್ನು “ಬರಹ”” ಕ್ಕೆ ಇಳಿಸಲು, ಕಾಗುಣಿತ ದೋಷಗಳನ್ನು ತಿದ್ದುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸುವವರದೇ ಮತ್ತೊಂದು ವೇದಿಕೆ. ಬೆಂಗಳೂರಿನಲ್ಲಿರುವವರದೇ ಒಂದು ವೇದಿಕೆ. ಇವರ ಕಾರ್ಯಕ್ಷೇತ್ರಕ್ಕೆ, ಅಂದರೆ, ಸಭೆ, ಚರ್ಚೆ, ಸ್ಥಳೀವಾಗಿ ದೊರಕುವ ಬೆಂಬಲವನ್ನು ವಿಸ್ತರಿಸಿಕೊಳ್ಳುವ ಬಗೆಗೆ ಚರ್ಚೆ…ಅದೇ ರೀತಿಯಲ್ಲಿ ಉತ್ತರ ಅಮೆರಿಕದಲ್ಲಿರುವವರದೂ ಒಂದು ವೇದಿಕೆ ನಿರ್ಮಾಣವಾಗಿದೆ. ಕನ್ನಡಸಾಹಿತ್ಯ.ಕಾಂಗೆ ಭೇಟಿ ನೀಡುವವರಲ್ಲಿ ಯಾರಾದರೂ ಸಕ್ರಿಯವಾಗಿ ಪಾಲ್ಗೋಳ್ಳ ಬೇಕೆನ್ನಿಸಿದರೆ ಸೂಕ್ತವಾದ ತಂಡದಲ್ಲಿ ಸದಸ್ಯರಾಗಬಹುದು. ಹೀಗೆ ಬೆಂಬಲದ ವ್ಯಾಪ್ತಿ ಹೆಚ್ಚುತ್ತಾ ಹೋದಂತೆ ಕನ್ನಡಸಾಹಿತ್ಯ.ಕಾಂ ಅರ್ಥಪೂರ್ಣವಾಗಿ ವಿಸ್ತಾರವಾಗಬಹುದಾದ ಅವಕಾಶ ಹೇರಳವಾಗಿದೆ. ಸ್ಥಳೀಯವಾಗಿ ಇರುವ ಸಮಾನ ಮನಸ್ಕರನ್ನು ಒಂದು ವೇದಿಕೆಗೆ ತಂದು ಕ್ಷೇತ್ರವಾರು. ಪ್ರದೇಶವಾರು ವಿಂಗಡಿಸಿದರೆ ಮತ್ತಷ್ಟು ವ್ಯವಸ್ಥಿತವಾಗಿ ಕನ್ನಡಸಾಹಿತ್ಯ.ಕಾಂ ಗಟ್ಟಿಗೊಳ್ಳಲಿದೆ.
ಇದು ನಮ್ಮವರು, ನಮ್ಮವರಿಗಾಗಿಯೇ ನಾವೇ ಮಾಡುತ್ತಿರುವ ಒಂದು ಸಾಮೂಹಿಕ ಚಳವಳಿ-ಆಂದೋಳನವೆಂದರೂ ಸರಿಯೆ. ನೀವೂ ಪಾಲ್ಗೊಳ್ಳಿ-ನಿಮ್ಮವರಿಗೆಲ್ಲ ತಿಳಿಸಿ ಎಂದು ಇಲ್ಲಿ ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತಿದ್ದೇನೆ.
ಅನಿವಾರ್ಯ ಕಾರಣಗಳಿಂದಾಗಿ ಈ ಬಾರಿಯ ಅಪ್‌ಡೇಟ್ ಮೂರು ದಿನಗಳು ತಡವಾಗಿ ಆಗುತ್ತಿದೆ.
೧೨.-೦೪-೨೦೦೬ ರಂದು ಸೇರಿಸಿದ್ದು:
ಆತ್ಮೀಯ ಶೇಖರ್ ಪೂರ್ಣ,
ಕ್ಲಾಸಿನಲ್ಲಿ ಪಾಠ ಕೇಳುತ್ತಾ, ಬಿಡುವಿನಲ್ಲಿ ತರಗತಿಗಳಲ್ಲೆ ನನ್ನ ನೋಟ್ ಬುಕ್ಕಿನಲ್ಲಿ ಬರೆದ ಕಿರುಕಾದಂಬರಿ ಇದು. ಅಂದು ಅರ್ಥವಾಗದವರು ಬರೆದಾಗ ರೆಕ್ಕೆ ಬಿಚ್ಚಿದ ಹಕ್ಕಿಯಂತೆ ಹಾರಾಡಿ ಕುಣಿದಿದ್ದೆ. ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದಾಗ ನಾನೊಬ್ಬ ಮಹಾನ್ ಕಥೆಗಾರ್ತಿಯಾಗಿಬಿಟ್ಟೆ ಎಂದು ಬೀಗಿದ್ದೆ ಮತ್ತು ಇಡೀ ಜಗತ್ತಿನಲ್ಲಿ ನಾನೊಬ್ಬಳೇ ಕಥೆಗಾರ್ತಿ ಎಂಬ ಭಾವನೆ ಕೂಡಾ ಬೇರೂರಿತ್ತು. ಕಾರಣ, ಅರ್ಥವಾಗದವರು ಬರೆದಾಗ ನನ್ನ ವಯಸ್ಸು ೧೫-೧೬. ಅಲ್ಲಿಯವರೆಗೂ ನಾನು ಯಾವ ಸಾಹಿತ್ಯವನ್ನಾಗಲಿ, ಸಾಹಿತಿಗಳನ್ನಾಗಲಿ ಓದಿರಲಿಲ್ಲ… ಅರ್ಥಮಾಡಿಕೊಂಡಿರಲಿಲ್ಲ !
ಆಗ ಕಥೆ ಕಾದಂಬರಿಗಳನ್ನು ಓದುವುದು ಹವ್ಯಾಸವಾಗಿತ್ತು!
ಇಂದು… ಅರ್ಥವಾಗದವರು ಬರೆದು ಇಷ್ಟು ವರ್ಷಗಳ ನಂತರ ಜಗತ್ತು ಅರ್ಥವಾಗುತ್ತಿದೆ, ಸಾಹಿತ್ಯ ಅರ್ಥವಾಗುತ್ತಿದೆ…… ಇವುಗಳ ಮಧ್ಯೆ ನಾನು ಅರ್ಥ ಕಳೆದುಕೊಂಡಿದ್ದೇನೆ. ಪ್ರತಿಯೊಂದು ಪುಸ್ತಕ ಓದುವಾಗಲೂ ನನ್ನ ಕಾದಂಬರಿ ಹತ್ತು ಮೆಟ್ಟಿಲು ಕೆಳಗಿಳಿಯುತ್ತಾ ಹೋಗುತ್ತಿದೆ…
ಬಿಚ್ಚಿದ ರೆಕ್ಕೆ ಮುಚ್ಚಿ ಮನಸ್ಸು ನಿರ್ಮಲವಾಗಿದೆ, ಜಗತ್ತಿನಲ್ಲಿ ನಾನೊಬ್ಬಳೆ ಕಥೆಗಾರ್ತಿಯಲ್ಲ ಎಂಬ ಸತ್ಯ ಅರಿವಾಗುವುದರ ಜೊತೆಗೆ ನಾನು ನಿಜಕ್ಕೂ ಕಥೆಗಾರ್ತಿಯೇ ಎಂಬ ಬೃಹತ್ ಪ್ರಶ್ನೆ ನನ್ನೆತ್ತರಕ್ಕೂ ನನ್ನ ಮುಂದೆ ನಿಂತಿದೆ.
ಇದುವರೆಗೂ ನನ್ನ ಪ್ರಶ್ನೆಗೆ ಉತ್ತರಿಸುವವರು ಯಾರೂ ಸಿಕ್ಕಿಲ್ಲ. ಹೀಗಾಗಿ ಪ್ರಶ್ನೆ ಕೇಳುವುದನ್ನು ನಿಲ್ಲಿಸಿದ್ದೇನೆ. ಹಾಗೆ ಬರೆಯುವುದನ್ನು ಕೂಡಾ!
ಪ್ರೀತಿಯಿರಲಿ.,
ರೇಖಾ ರಾಣಿ
ರೇಖಾ,
ಮುಕ್ತವಾಗಿ ಎಲ್ಲವನ್ನೂ ನೋಡುವಾಗ ನಾವು “ಹಿರಿಯರೂ-ಕಿರಿಯರೂ” ಆಗುತ್ತಿರುತ್ತೇವೆ. ಅಂತಹ ವಿನಯಕ್ಕೆ ತೆರೆದುಕೊಳ್ಳುವ ಮನಸ್ಸು ಇದ್ದರೆ ಸಾಕು. ನಿಮ್ಮ ಬಿಡುವಿಲ್ಲದ ಕೆಲಸಗಳ ನಡುವೆ, ಅಥವ ನಿಮ್ಮ ಅದ್ಯತೆಗಳು ಬದಲಾಗಿರುವ ಸಂದರ್ಭದಲ್ಲಿ: ಇಷ್ಟು ವರ್ಷಗಳ ನಂತರ ಜಗತ್ತು ಅರ್ಥವಾಗುತ್ತಿದೆ, ಸಾಹಿತ್ಯ ಅರ್ಥವಾಗುತ್ತಿದೆ…… ಇವುಗಳ ಮಧ್ಯೆ ನಾನು ಅರ್ಥ ಕಳೆದುಕೊಂಡಿದ್ದೇನೆ. ಪ್ರತಿಯೊಂದು ಪುಸ್ತಕ ಓದುವಾಗಲೂ ನನ್ನ ಕಾದಂಬರಿ ಹತ್ತು ಮೆಟ್ಟಿಲು ಕೆಳಗಿಳಿಯುತ್ತಾ ಹೋಗುತ್ತಿದೆ.. -ಎಂದೆನ್ನುವುದನ್ನು ನಾನು ಕೊಂಚ ಸಂಶಯದಿಂದಲೇ ನೋಡುತ್ತಿದ್ದೇನೆ. ಅದ್ಯತೆಗಳು ಬದಲಾದ್ದರಿಂದಲೊ ಅಥವ ಅರ್ಥ ಕಳೆದುಕೊಂಡಿದ್ದರಿಂದಲೋ ಎಂದೆನ್ನುವುದನ್ನೂ ಸಹ ನಿಮ್ಮ ವಿವೇಚನೆಗೆ ಬಿಟ್ಟು, ಏನೇ ಆಗಲಿ “ನಿಮ್ಮದೇ ಬರವಣಿಗೆ (ಹೊಟ್ಟೆಪಾಡಿಗೆ ಬರೆಯುವುದಲ್ಲ)” ಯೊಂದೇ ನಿಮ್ಮ ಇರುವಿಕೆಗೆ ಒಂದು ಅರ್ಥ ಕಲ್ಪಿಸಬಹುದು. ಇಲ್ಲಿ ನಾನು ನಿಮ್ಮ ಅದ್ಯತೆಗಳನ್ನು ಕೊಂಕಿನಿಂದ ನೋಡುತ್ತಿಲ್ಲ. ಅದರ ನಡುವೆ ಬರವಣಿಗೆಗೂ ಅವಕಾಶವಿರಲಿ ಎಂದಷ್ಟೇ ಹೇಳುತ್ತಿರುವುದು. ಒಳ್ಳೆಯದಾಗಲಿ.
*****
ಶೇಖರ್‌ಪೂರ್ಣ
ಏಪ್ರಿಲ್, ೨೦೦೬
೦೧-೦೪-೨೦೦೬