(ಸ್ವಾಮಿ ಬ್ರಹ್ಮಾನಂದ ಸರಸ್ವತಿ (ಉಪನ್ಯಾಸವನ್ನು ಬರವಣಿಗೆಗೆ ಇಳಿಸಿದವರು ಶ್ರೀಮತಿ ಜಯಶ್ರೀ ದೇಶಪಾಂಡೆ)
ಜೀವನದಲ್ಲಿ ಜಿಗುಪ್ಸೆ ತಾಳದೆ. ಬೆಳಿಗ್ಗೆ ಏಳುವಾಗಲೇ ಖಿಜಚಿಥಿ ಚಿ ಜ ಜಚಿಥಿ, ಎಂಬ ಭಾವನೆಯೆಂದ ಏಳು. ಅಂತಃಕರಣ, ಮನಸ್ಸು, ಬುದ್ಧಿಯಲ್ಲಿ, ಉಲ್ಲಾಸಕೆಡೆಮಾಡು ನಿನ್ನಿನಾದನಿತು. ನಿಲ್ಲು ಕೆಚ್ಚೆದೆಯಿಂದ ಅನ್ಯಾಯಗಳನಳಿಸಿ.
ಜೀವನದಲ್ಲಿ ಏರು, ತಗ್ಗು, ಸುಖ, ದುಃಖ, ಈ ರೀತಿಯ ದ್ವಂದ್ವಗಳು ಬರುವುದು ಸಹಜ. ಇದು ಜೀವನದ ಲಕ್ಷಣ.
ಅಂತಃಕರಣ, ಬುದ್ಧಿ, ಮನಸ್ಸಿಗೆ, ಬೆಳಗಿನಿಂದಲೇ ಸತತವಾಗಿ ಶಿಕ್ಷಣ ಕೊಡು.
ಸಂತತದ ಶಿಕ್ಷೆಯಿಂ, ದೀರ್ಘದಭ್ಯಾಸದಿಂ- |
ದಂತರಂಗದ ಕಡಲು ಶಾತಿಗೊಳಲಹುದು ||
ಸಂತೃಪ್ತ ವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು || ಮಂ ||
ಸಂತತದ ಶಿಕ್ಷೆಯಿಂ, ದಿರ್ಘದಭ್ಯಸದಿಂ
ಬೆಳಿಗ್ಗೆ ಸೂರ್ಯನು ಉದಯಿಸುವಾಗಲೇ ಅಂತರಂಗದ ಕಡಲು ಅಂದರೆ ಒಳಗೆ ಹುದುಗಿರುವ ಮನಸ್ಸು ಏತಕ್ಕಾಗಿ ಈ ಬದುಕು? ನನ್ನ ಎಲ್ಲ ಆಶೆ ಆಕಾಂಕ್ಷೆಗಳನ್ನು ಮಣ್ಣುಗೂಡಿಸಿದನು ಆ ವಿಧಿರಾಯ, ಇನ್ನು ಈ ಜೀವನವೇ ಸಾಕು ಎಂದು ಅತ್ತು, ಗೋಳಾಡುವುದು ಒಂದು ರೀತಿ.
ಇನ್ನೊಂದು ರೀತಿ – ಎಷ್ಟೊಂದು ಪೂಜೆ, ವ್ರತಾದಿಗಲನ್ನು ಮಾಡಿದೆ, ತಂದೆತಾಯಿಯ ಸೇವೆ ಮಾಡಿದೆ, ಆದರೂ ಜೀವನದಲ್ಲಿ ಬಯಸಿದ್ದು ಒಂದು ದೊರಕಲಿಲ್ಲ ಎಂಬುದು. ತಮಗೇನು ಗತಿಯೆಂದು ಕೇಳುವವರೇ ಎಲ್ಲರು.
ಇದು ಜೀವನ ಲಕ್ಷಣವಲ್ಲ.
ಸಂತತದ ಶಿಕ್ಷೆಯಿಂ – ಅಂತರಂಗದಲ್ಲಿ ಹುದುಗಿಕೊಂಡಿರುವಂಥ ಮನಸ್ಸಿಗೆ ಸತತವಾಗಿ ಶಿಕ್ಷಣ ಕೊಡು. ದಿರ್ಘದಭ್ಯಾಸ ಮಾಡಿಸು, ಅದು ಹೇಗೆ? ಅಂತಃಕರಣ, ಬುದ್ಧಿ, ಮನಸ್ಸಿನ, ದೃಷ್ಟಿಯನ್ನು ಬದಲಾಯಿಸು.
ಉಲ್ಲಾಸಕೆಡೆಮಾಡು ನಿನ್ನಿನಾದನಿತು.
ಹಿಂದಿನಡೆದ ಘಟನೆಗಳನ್ನೆಲ್ಲ ಮರೆತು ಬಿಡು. ಪರಮೇಶ್ವರನು ಮುಂದೆ ಇನ್ನೂ ಒಂದು ದಿನವನ್ನು ಕರುಣಿಸಿದ್ದಾನೆ. ಸೂರ್ಯ ಉದಯಿಸಿದ್ದಾನೆ. ತಂಪಾದ ಗಾಳಿ ಬೀಸುತ್ತಾನೆ ಇದೆ. ಆನಂದದಿಂದ ಹಕ್ಕಿಗಳೆಲ್ಲ ಹಾರಾಡುತ್ತಿವೆ. ಪ್ರಕೃತಿದೇವಿ ಕಣ್ಣಮುಂದೆ ಕುಣಿಯುತ್ತಿದ್ದಾಳೆ. ನಂದನವನವಾದಂಥ ಜಗತ್ತಿದೆ. ಇಂತಹ ಒಂದು ದಿನವನ್ನು ಪರಮೇಶ್ವರನು, ಪ್ರಪಂಚದ ಸೇವೆಗಾಗಿ, ಲೋಕಸಂಗ್ರಹಕ್ಕಾಗಿ ಅನುಗ್ರಹಿಸಿದ್ದಾನೆ. ಈ ಒಂದು ದಿವಸವನ್ನು ಸಂತಸದಿಂದ, ನೆಮ್ಮದಿಯಿಂದ, ನಾಲ್ಕು ಜನರಿಗೆ ಹಿತವಾಗುವ ಹಾಗೆ, ಪರರ ಸೇವೆಯಲ್ಲಿ ಕೆಳೆಯುತ್ತೇನೆ, ಎನ್ನುವ ಉತ್ಸಾಹ, ಬೆಳಿಗ್ಗೆ ಏಳುವಾಗಲೇ ಇರಬೇಕು. ಹಿತವೆಂದು ಜಗಕೆಂದು ಕೇಳುವ ಸಂತೃಪ್ತ ವೃತ್ತಿ ಇರಬೇಕು. ಯಾಕೆ?
ಯಾಕೆಂದರೆ? ಮನಸ್ಸು, ಬುದ್ಧಿ, ಎದ್ದಮೇಲೆಯೇ ಹೊರಗಿನ ಪ್ರಪಂಚ ಏಳುವುದು. ಆ ಮನಸ್ಸು, ಬುದ್ಧಿ, ಏಳುವಾಗಲೇ ಹಿಂದಿನದನ್ನು ನೆನೆನೆನೆದು ಗೋಳಿಡುತ, ಗತಿಯೇನು ತಮಗೆನುತ ಕೇಳುವವರೇ ಎಲ್ಲರು.
ಅದಕ್ಕೆ ಹಿಂದಿನದೆಲ್ಲವನ್ನು ಮರೆತು, ಇವತ್ತು ನನ್ನ ಮನಸ್ಸಿನಲ್ಲಿರುವ, ಶಕ್ತಿ, ವೀರ್ಯ, ಪರಮಾತ್ಮನ ಸತ್ವವನ್ನು ಪ್ರಪಂಚದ ಸೇವೆಯಲ್ಲಿ, ಜೀವನ ಸಾರ್ಥಕಗೊಳಿಸುವುದಕ್ಕಾಗಿ ಕಳೆಯುವೆ ಎಂಬ ಉತ್ಸಾಹವಿರಬೇಕು. ಪ್ರಪಂಚದ ಸೇವೆಯನ್ನು ಮಾಡುವ ಬಗೆ ಹೇಗೆ?
ಎಂಬುದನ್ನು ಡಿ.ವಿ.ಜಿ.ಯವರು ಮುಂದಿನ ಶ್ಲೋಕದಲ್ಲಿ ವರ್ಣಿಸಿದ್ದಾರೆ.
ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ |
ಬಡವರಿಂಗುಪ್ರಕೃತಿಯೊ, ಆವುದೋ ಮನದ ||
ಬಡಿದಾತವನು ನಿಲಿಸಿ ನೆಮ್ಮದಿಯನೀವೊಡದೆ |
ಬಿಡುಗಡೆಯೊ ಜೀವಕ್ಕೆ || ಮಂ ||
ಪ್ರತಿಯೊಬ್ಬರ ಮನಸ್ಸಿನಲ್ಲಿರುವಂಥ, ಶಕ್ತಿ, ವೀರ್ಯ, ತೇಜಸ್ಸು, ಇವೆಲ್ಲವನ್ನೂ ಬೆಳಕಿಗೆ ತರುವಂಥಾದ್ದೇ ಸಾಧನೆ. ಒಬ್ಬೊಬ್ಬರಿಗೆ ಒಂದೊಂದು ಸಾಧನೆ ಇರಬಹುದು. ಕೆಲವರಿಗೆ ಗಾಯನ, ಕೆಲವರಿಗೆ ಪೂಜೆ, ಇನ್ನು ಕೆಲವರಿಗೆ ಬಡವರಿಗೆ ಉಪಕೃತಿ. ಇದು ಕರ್ಮಯೋಗ. ಯಾವುದಾದರೂ ಒಂದು ರೀತಿಯಲ್ಲಿ ಮನಸ್ಸಿನಲ್ಲಿರುವಂಥ ಸತ್ವ, ದೈಹಿಕ ಶಕ್ತಿ, ವೀರ್ಯ, ಇವನ್ನು ಹೊರಪ್ರಪಂಚದಲ್ಲಿ ನಾಲ್ಕು ಜನರಿಗೆ ಉಪಕಾರವಾಗುವಂತೆ, ಲೋಕಕಲ್ಯಾಣಕ್ಕಾಗಿ, ಉಪಯೋಗಿಸಬೇಕು.
ಡಿ.ವಿ.ಜಿ.ಯವರು ಹೇಳುವುದು-ಬೆಳಿಗ್ಗೆ ಒಂದು ಗಂಟೆ ಪೂಜೆ ಮಾಡಬೇಕು. ಅಂದರೆ? ಆ ಪೂಜೆಯಲ್ಲಿ ವಾರ, ತಿಥಿ, ಎಲ್ಲವೂ ತಿಳಿಯುತ್ತದೆ. ಸಂಕಷ್ಟ-ಚತುರ್ಥೀ ಎಂದು ತಿಳಿದರೆ, ಆದಿವಸ ಗರಿಕೆ, ಇಲ್ಲವೇ ಕೆಂಪು ಹೂವು ತಂದು ಗಣಪತಿಗೆ ಏರಿಸಿ, ಅಲಂಕಾರ ಮಾಡಿ, ಸಹಸ್ರನಾಮ ಪಠಣ ಮಾಡಿ, ಮೋದಕ ನೈವೇದ್ಯ ತೋರಿಸಿ ಆರತಿ ಮಾಡುವಾಗ, ಒಂದು ಗಂಟೆ ಏಕೆ, ಎರಡು ಗಂಟೆಯಾದರೂ ಬರುವುದಿಲ್ಲ.
ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ ಬಡವರಿಂಗುಪ್ರಕೃತಿಯೊಂ ಆವುದೊ ಮನದ ಬಡಿದಾಟವನು ನಿಲಿಸಿ ನೆಮ್ಮದಿಯ ನೀವೊಡದೆ.
ಮನಸ್ಸಿನ ಬಡಿದಾಟವನ್ನು ನಿಲ್ಲಿಸಿ, ಆ ಮನಸ್ಸಿಗೆ ನೆಮ್ಮದಿಯನ್ನು, ಶಾಂತಿಯನ್ನು ಕೊಡುವಂತಹ ದಾರಿ, ಯಾವುದಾದರೂ ಸರಿ.
ಒಬ್ಬನು ತಾಯಿಯ ಶವಸಂಸ್ಕಾರಕ್ಕೆ, ಅಮೇರಿಕೆಯಿಂದ ದಿಲ್ಲಿಗೆ ಬಂದ. ಶವಸಂಸ್ಕಾರವನ್ನೂ ಮಾಡಿದ. ನಂತರ ತಾಯಿಯ ತಿಥಿಯನ್ನು ಸಾಂಪ್ರದಾಯಿಕವಾಗಿ ಮಾಡಿದ. ಕೊನೆಯ ದಿವಸ ತಾಯಿಯಿ ಪ್ರೀತಿರ್ಥ್ಯ ಸಾಕಷ್ಟು ಜನರಿಗೆ ಭೋಜನಕ್ಕೆ ಆಮಂತ್ರಣವಿತ್ತು. ಪಂಚಪಾಕ್ವಾನ್ನವನ್ನು ಮಾಡಿಸಿದ. ದುರದೃಷ್ಟವಶಾತ್ ಅದೇ ದಿವಸ ಧಾರಾಕಾರವಾಗಿ ಮಳೆ ಸುರಿಯಿತು. ಆದರಿಂದ ಭೋಜನಕ್ಕೆ ಯಾರಿಗೂ ಬರುವುದಾಗಲಿಲ್ಲ. ಕೇವಲ ೨೦ ಜನರು ಮಾತ್ರ ಬಂದಿದ್ದರು. ಅಡಿಗೆಯೆಲ್ಲ ಹಾಗೆಯೇ ಉಳಿಯಿತು. ಆದರೆ ಅವನೇನು ಧೈರ್ಯಗೆಡದೆ, ವಿಚಾರ ಮಾಡಿ, ಮಾಡಿದ ಅದಿಗೆಯನ್ನೆಲ್ಲ ಸ್ಲಮ್ ಹತ್ತಿರ ತೆಗೆದುಕೊಂಡು ಹೋಗಿ ಅಲ್ಲಿದ್ದವರಿಗೆಲ್ಲ ಊಟಕ್ಕೆ ಹಾಕಿಸಿದ. ಅಲ್ಲಿ ಉಂಡವರೆಲ್ಲರ ಖುಷಿಯನ್ನು ನೋಡಿ ಇವನಿಗೂ ತುಂಬಾ ಖುಷಿಯಾಯಿತು. ತಕ್ಷಣ ಅವನಿಗೆ ಒಂದು ವಿಚಾರ ಹೊಳೆಯಿತು. ಪ್ರತಿದಿವಸ ಇದೇ ರೀತಿಯಾಗಿ ಕಲ್ಯಾಣ ಮಂಟಪಗಳಲ್ಲಿ, ದೊಡ್ಡ ದೊಡ್ಡ ಹೋಟಲುಗಳಲ್ಲಿ ಅದೆಷ್ಟು ಆಹಾರ ಹಾಳಾಗುತ್ತದೆಯೋ, ಅದನ್ನೆಲ್ಲ ಬಡವರಿಗೆ ಹಂಚಿದರೆ? ಆ ವಿಚಾರವನ್ನು ಅವನು ಕಾರ್ಯಗತ ಮಾಡಿಯೇ ಬಿಟ್ಟ. ಒಂದು ವ್ಯಾನ್ ಇಟ್ಟ, ಅದರಲ್ಲಿ ಫೋನ್, ಪ್ರತಿದಿವಸ ಎಲ್ಲ ಕಡೆಗೆ ಹೋಗಿ ಉಳಿದ ಆಹಾರ ಶೇಖರಿಸಿ, ಬಡವರಿಗೆ ಊಟಕ್ಕೆ ಕೊಡಲು ಪ್ರಾರಂಭ ಮಾಡಿದ.
ಅಮೇರಿಕ ಮರೆತೇ ಬಿಟ್ಟ, ತಿರುಗಿ ಹೋಗುಲೂ ಇಲ್ಲ. ಬಡವರಿಂಗು ಪ್ರಕೃತಿಯೊ, ಜೀವನದಲ್ಲಿ ಉತ್ಕೃಷ್ಟವಾದ ಒಂದು ಧ್ಯೇಯವನ್ನು ಇಟ್ಟುಕೊಂಡು ಪರಹಿತಕ್ಕಾಗಿ, ಲೋಕದ ಕಲ್ಯಾಣಕ್ಕಾಗಿ ನಗುನಗುತ ಬಾಳುವುದೇ ಜೀವನದ ಸರ್ಥಕತೆ.
ಪಿಡಿ, ಗಳಿಸು, ಭುಜಿಸೊಡೆಯನಾಗೆನ್ನುವುದು ಮೋಹ |
ಕೊಡು ಸಲಿಸು ಸೇವೆಗೈಯೆನ್ನುವುದು ಕರುಣೆ ||
ಬಿಡು ನೀನು ನಾನುಗಳ, ವಿಶ್ವಾತ್ಮಪದವನೀ- |
ನಡೆರೆನ್ನುವುದು ಶಾಂತಿ || ಮಂ ||
ಪಿಡಿ, ಗಳಿಸು, ಭುಜಿಸೊಡೆಯನಾಗೆನ್ನುವುದು ಮೋಹ.
ಮನುಷ್ಯನು ಕರ್ಮ ಮಾಡುವುದು ಏಕೆ? ಜೀವಿಗೆ ಸಂಪಾದಿಸಿಕೊಳ್ಳುವುದಕ್ಕೆ, ಮತ್ತೂ ಏಕೆ ಗಳಿಸಬೇಕು? ಒಂದು ಸಂಪಾದಿಸಿದ್ದು ಸಾಲದೇ ಹೋದರೆ, ಇನ್ನೊಂದು ಭಗವಂತನು ಅನುಗ್ರಹಿಸಿಯಾನೆಂಬ ನಿರೀಕ್ಷೆಯಿಂದ. ಹೀಗೆ ಅನೇಕ ಕಾರಣಗಳಿಂದ ಕರ್ಮಗಳನ್ನು ಮಾಡುತ್ತಾನೆ. ಪಿಡಿ, ಗಳಿಸು, ಭುಜಿಸೊಡೆಯನಾಗೆನ್ನುವುದು ಮೋಹ. ಪಿಡಿ, ಇನ್ನೂ ಗಳಿಸು, ಭುಜಿಸು, ಒಡೆಯನಾಗು ಎನ್ನುವುದು ನಮ್ಮ ಮನಸ್ಸಿನೊಳಗೆ ಇರುವಂಥ ರಾಕ್ಷಸ. ಈ ರಾಕ್ಷಸವೇ ಮೋಹ. ಇನ್ನೊಂದು ಕರುಣೆ. ಹೃದಯದಲ್ಲಿರುವ ಅನುಕಂಪ, ಪ್ರೀತಿ, ಏನನ್ನು ಹೇಳುತ್ತದೆ? ಕೊಡು, ಸಲಿಸು, ಸೇವೆಗೈಯೆನ್ನುವುದು ಕರುಣೆ. ಅಂದರೆ ತನ್ನಂತೆಯೆ ಪರರು ಎಂದು ತಿಳಿದು ಎಲ್ಲರ ಜೊತೆಗೆ ದಯೆ, ಅನುಕಂಪ ಪ್ರೀತಿಯಿಂದ ಇರುವುದು. ಇಂಥವರಿಗೆ ಮಹಾತ್ಮರು ಅನ್ನುತ್ತಾರೆ.
ಮಹಾತ್ಮರು ಸರ್ವತ್ರ ಭಗವಂತನನ್ನು ಕಾಣುವವರು. ಅವರಿಗೆ ಎಲ್ಲ ಲೋಕಸಂಬಂಧಗಳೂ, ಬಂಧು, ಮಿತ್ರ, ಪರಿವಾರವೆಲ್ಲ ಈಶ್ವರದತ್ತ ಪ್ರಸಾದ. ಈ ಭಾವನೆ ಬೆಳೆದಂತೆ, ಮೋಹ ಕಡಿಮೆಯಾಗುತ್ತದೆ ಅಂದರೆ ಮೋಹ ಸವೆದು ಜೀವನಶುದ್ಧವಾಗುತ್ತದೆ. ತತ್ತ್ವಾಜ್ಞಾನವುಳ್ಳವರು ಮಹಾತ್ಮರು. ಮಹಾತ್ಮರಿಗೆ ತಮ್ಮ ಜೀವನದಲ್ಲಿ, ಜಗತ್ತಿಗೆ ಸಲ್ಲಬೇಕಾದದ್ದು ಏನು? ಅಂತರಾತ್ಮಕ್ಕೆ ಸಲ್ಲಬೇಕಾದದ್ದು ಏನು? ಎಂಬುದು ಗೊತ್ತು. ಈ ಪರಮ ಸತ್ಯವನ್ನು ತಿಳಿದುಕೊಂಡು ನಿಶ್ಚಿಂತರಾಗಿರುವವರು ಮಹಾತ್ಮರು.
ವಿಶ್ವಾತ್ಮ ಪದವನೀನಡರೆನ್ನುವುದು ಶಾಂತಿ. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ? ಪರೋಪಕಾರದಲ್ಲಿಯೂ ಕೂಡ, ನನ್ನಿಂದ ಉಪಕಾರವಾಯಿತು, ಎನ್ನುವಲ್ಲಿ ಅಹಂಕಾರವಿದ್ದೇವಿರುತ್ತದೆ. ಈ ಅಂತರ್ಬಹಿರೇಕೀಕರಣ ಅಂದರೆ ಒಳಗೂ, ಹೊರಗೂ, ನಾನು, ನೀನು, ಎಂಬ ಭೇದಗಳೆಲ್ಲ ಅಂತರಂಗದಲ್ಲಿ ಎಣಿಕೆಗೆ ಬಾರದೆ ಇರುವಾಗಲೇ ಬ್ರಹ್ಮದರ್ಶನ.
ಹೃದಯದಲ್ಲಿ ಪರಮಾತ್ಮನಿಗೆ ಸ್ಥಾನವಿರುವುದಾದರೆ ಅದೇ ಮುಕ್ತಿ, ಶಾಂತಿ, ನೆಮ್ಮದಿ.
ಅಂದರೆ ಆರಂಭದಲ್ಲಿ ನಾವು ಕರ್ಮ ಮಾಡುವಾಗ ಪಿಡಿ, ಗಳಿಸು, ಭುಜಿಸಿ ಎನ್ನುವುದು ಮೋಹ. ನಂತರ ಕೊಡು, ಸಲ್ಲಿಸು, ಸೇವೆಗೈಯೆನ್ನುವುದು ಕರುಣೆ. ಕೊನೆಗೆ ಶಾಂತಿ! ಈ ರೀತಿ ಮನಸ್ಸು ಬುದ್ಧಿಯನ್ನು ವಿಕಾಸಗೊಳಿಸಬೇಕು. ಸಾಧನೆಯಲ್ಲಿ ತೊಡಗಿದಾಗ ಮಾತ್ರ, ನಮ್ಮ ಸ್ವಾರ್ಥ, ಮೋಹ, ಮತ್ತು ಅಜ್ಞಾನದ ಕತ್ತಲೆಯಲ್ಲಿ ಗೋಳಾಡುತ್ತ ಜೀವಿಸುವುದು……. ನಿಜವಾದ ಜೀವನವಲ್ಲ ಎಂಬ ಅರಿವು ಮೂಡುತ್ತದೆ. ಪ್ರಪಂಚಕ್ಕೆ ತನ್ನಿಂದ ಹಿತವುಂಟು ಎಂದು ಕೇಳುವವ ಸಂತಸಂತರು ಲೋಕಕ್ಕೆ ವಸಂತದಂತೆ ಹಿತವಾದುದನ್ನೇ ಮಾಡುತ್ತಾ ಸಂಚರಿಸುತ್ತಾರೆ. ಈ ಭವಾರ್ಣವವನ್ನು ತಾವೂ ದಾಟಿ ಆಹೇತುಕವಾದ ಕೃಪೆಯಿಂದ ಇತರರನ್ನು ದಾಟಿಸುತ್ತಾರೆ. ಇದು ನಿಜವಾದ ಜೀವನ.
ಡಿ.ವಿ.ಜಿ.ಯವರು ಜೀವನದ ನಿಜವಾದ ಅರ್ಥವನ್ನು ಹುಡುಕಿ; ಆನಂದ, ಶಾಂತಿಯನ್ನು ಗಿಟ್ಟಿಸಿಕೊಂಡ ಮೂವರ ದೃಷ್ಟಾಂತಗಳನ್ನು ಕೊಟ್ಟಿದ್ದಾರೆ. ೧)ಶಬರಿ ೨)ಹನುಮಂತ ೩)ಶೌನಕ ಮಹರ್ಷಿ ಉಪದೇಶ.
ಸಾಮಾನ್ಯವಾಗಿ ಜೀವನದಲ್ಲಿ, ಪ್ರತಿಯೊಬ್ಬರೂ ಕೂಡ ತಮಗೆ ಶಾಂತಿ, ನೆಮ್ಮದಿ ದೊರಕುಲಿಲ್ಲ, ದೊರಕುವ ಭರವಸೆಯೂ ಇಲ್ಲ. ಏಕೋ ಆ ದೇವರಿಗೆ ಕರುಣೆ ಬರಲಿಲ್ಲ ಎಂದು ಗೊಣಗುಟ್ಟುವವರೇ, ಅದರ ಬದಲು ಈ ಮೂವರು ದೃಷ್ಟಾಂತಗಳನ್ನು ಒಂದೊಂದಾಗಿ ನೋಡಿ ಎಂದು ಡಿ.ವಿ.ಜಿ.ಯವರು ಹೇಳುವುದು.
ತನ್ನ ರುಚಿ ರಾಮರುಚಿ; ತನ್ನ ಸಂತುಷ್ಟಿ ಪರಿ- |
ಪೂರ್ಣವಪ್ಪುದು ರಾಮಸಂತುಷ್ಟಿಯಿಂದೆ ||
ಎನ್ನುವಾ ಸಾಜದಾ ದೈವಾತ್ಮಭಾವದಲಿ |
ಧನ್ಯಳಾದಳು ಶಬರಿ || ಮಂ ||
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ |
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ||
ಕೊರೆಯದೊಡೇನೊಂದು? ನೆರೆದೊಡೇನಿನ್ನೊಂದು ||
ಒರಟು ಕೆಲಸವೊ ಬಗುಕು || ಮಂ ||
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ |
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ||
ಸಂಸಾರ ಎಂಬುದೇ ಒಂದು ತಪಸ್ಸು. ಅದು ಕಮ್ಮಾರನ ಶಾಲೆ. ಕಮ್ಮಾರನು ಕಬ್ಬಿಣವನ್ನು ಕಾಯಿಸಿ, ಮೆತ್ತಗೆ ಮಾಡುವಂತೆ, ಸಂಸಾರ ತಾಪವು, ಮನುಷ್ಯನ ಸ್ವಭಾವವನ್ನು ಮೆತ್ತಗೆ ಮಾಡುತ್ತದೆ. ಲೋಕದ ಏಟು, ಪೆಟ್ಟುಗಳು, ಮನುಷ್ಯನ ಸ್ವಭಾವವನ್ನು ಹದಗೊಳಿಸಿ, ಲೋಕಪ್ರಯೋಜನಕ್ಕೆ ಒದಗಿಸುತ್ತದೆ.
ಬಸವಣ್ಣನವರ ವಚನ ಹೀಗೆದೆ.
ಮರ್ತ್ಯುಕೋದವೆಂಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವವರಯ್ಯಾ.
ಸಂಸಾರದಲ್ಲಿ ಹೀಗೆಯೇ ಇರಬೇಕು ಎಂಬುದು ಸಾಧ್ಯವಿಲ್ಲ. ನಾವೊಂದು ಬಯಸಿದರೆ ದೈವವೊಂದು ಬಯಸುತ್ತದೆ. ದೇವರೇ ಎಲ್ಲಕ್ಕೂ ಅಡ್ದಿಗಳನ್ನು ತರುತ್ತಾನೆ ಎಂದು ಹೇಳುವವರು ಯಾರು? “ನಾನು” “ನಾನು” ಎನ್ನುವ ಅಹಂಕಾರ. “ನಾನು” ಎನ್ನುವ ಅಹಂಕಾರವೇ ಸಂಸಾರದಲ್ಲಿ ಆಟವಾಡಿಸುವುದು.
ನಾವೇ ಚಿಕ್ಕವರಿದ್ದಾಗ, ಇನ್ನೂ ಅಹಂಕಾರ ಬೆಳೆಯದೆ ಇದ್ದಾಗ, ಇದೇ ಜಗತ್ತಿನಲ್ಲಿ ಆನಂದವಾಗಿ ಇದ್ದೆವು, ಆದರೆ? ಈಗ ನಮ್ಮ ಸಂಸಾರ ಜಂಜಾಟಕ್ಕೆ ಕಾರಣ ಯಾರು? “ನಾನು” ಎನ್ನುವ ಅಹಂಕಾರ.
ನಮ್ಮ ಹಿರಿಯರು, ಸಾಧು ಸಂತರು, ಋಷಿಗಳು, ಈ ಅಹಂಕಾರವನ್ನು ಕುಗ್ಗಿಸುವ ಒಂದು ರಹಸ್ಯವನ್ನು ಹುಡುಕಿದ್ದಾರೆ. ಅದೇನು ರಹಸ್ಯ?
ಅಹಂಕಾರವನ್ನು ಎಲ್ಲಿಯಾದರೂ ಒಂದು ಕಡೆ ಸಮರ್ಪಿಸಬೇಕು. ಸಮರ್ಪಣಂ ಅಂದರೆ ಯಾವುದಾದರೂ ಒಂದು ವೇದಿಕೆಯ ಮೇಲೆ ರಾಕ್ಷಸ ಅನ್ನುವ ಅಹಂಕಾರನ ವಧೆಯಾಗಬೇಕು. ಅನಂತರವೇ ಜ್ಞಾನೋತ್ತರದ ಜೀವನ. ಇಂತಹ ಸಮರ್ಪಣ ಭಾವದಿಂದ, ಆನಂದವಾಗಿ ಬದುಕಿದವರು ಎಲ್ಲ ಋಷಿ ಮುನಿಗಳು.
ಶಬರಿ “ನಾನು”, “ನನ್ನದು” ಎನ್ನುವ ಅಹಂಕಾರವನ್ನು, ಶ್ರೀರಾಮಚಂದ್ರನ ಪಾದಗಳಿಗೆ ಅರ್ಪಿಸಿದವಳು. ತನ್ನ ರುಚಿ, ರಾಮ ರುಚಿ, ಸಂಪೂರ್ಣವಾಗಿ ಶಬರಿ ತನ್ನನ್ನು ಶ್ರೀರಾಮನಿಗೆ ಸಮರ್ಪಿಸಿದ್ದಳು.
ಆತ್ಮ ಸಮರ್ಪಣೆ ಎಂಬುದು, ಭಕ್ತಿಯ ಪರಿಪೂರ್ಣ ದಿಶೆ. ಅದು ನಿರ್ವಿಚಾರ ಶ್ರದ್ಧೆ. ಅದು ಹೊರಗಣ ಸಾಕ್ಷ್ಯಗಳನ್ನು ರುಜುವಾತುಗಳನ್ನೂ ಅಪೇಕ್ಷಿಸುವುದಿಲ್ಲ.
ಮಗುವು ಯಾರ ಮಾತಿಗೂ ಕಾಯದೆ, ತಾನೇ ತಾನಾಗಿ, ತನ್ನ ತಾಯಿಯನ್ನು ನಂಬಿಕೊಂಡು, ಆಕೆಯ ಮಡಿಲಿನಲ್ಲಿ ತನ್ನನ್ನೇ ಮರೆತುಕೊಂಡು ಸುಖಿಸುವಂತೆ, ಭಕ್ತನು ಭಗವಂತನನ್ನು ನಂಬಿ, “ಸ್ವಾಮೀ ನೀನೇ ನನ್ನ ಸರ್ವಸ್ವ, ನಿನ್ನಿಚ್ಛೆಯೇ ನನ್ನಿಚ್ಛೆ,” ಎಂದು ಆನಂದಿಸುವನು.
ಶಬರಿಯ ಭಕ್ತಿಯೂ ಇದೇ.
ಶಬರಿ ಮೃಖಂಡು ಮುನಿಯ ಆಶ್ರಮದಲ್ಲಿರುತ್ತಿದ್ದಳು. ಆಶ್ರಮದ ಸುತ್ತಮುತ್ತ, ಹಣ್ಣಿನ ಮತ್ತು ಹೂವಿನ ಗಿಡಗಳು ಅಂದವಾಗಿ ಬೆಳೆದಿದ್ದವು. ಶಬರಿಗೆ ತನ್ನ ಜೀವನದಲ್ಲಿ, ಯಾವ ಆಶೆ ಆಕಾಂಕ್ಷೆಯೂ ಇರಲಿಲ್ಲ. ಅವಳಿಗೆ ಇದ್ದದ್ದು ಒಂದೇ ಹಂಬಲ. ಶ್ರೀರಾಮನ ದರ್ಶನ, ಅವನ ಸಂತೃಪ್ತಿ. ಇದೊಂದನ್ನೆ ತನ್ನ ಮನಸ್ಸು-ಬುದ್ಧಿಯಲ್ಲಿಟ್ಟುಕೊಂಡು ಹಗಲೂ, ಇರುಳೂ ತನ್ನ ಉಸಿರಿನೊಡನೆ ಉಸಿರಾಗಿ “ಶ್ರೀರಾಮಜಯರಾಮ ಜಯಜಯರಾಮ” “ಶ್ರೀರಾಮ ಜಯರಾಮ ಜಯಜಯರಾಮ” ಮಂತ್ರವನ್ನು ಜಪಿಸಿದಳು. ಶ್ರೀರಾಮನು ಎಲ್ಲಿರುವನೆಂಬುದು ಅವಳಿಗೆ ಗೊತ್ತಿಲ್ಲ. ಶಬರಿ ಎಲ್ಲಿರುವಳೆಂಬುದು ಶ್ರೀರಾಮನಿಗೆ ಗೊತ್ತಿಲ್ಲ. ಈಗಿನಂತೆ ಎಸ್.ಟಿ.ಡಿ. ಐ.ಎಸ್.ಡಿ. ಮೊಬೈಲ್ ಫೋನ್ ಪೇಜರ್ ಯಾವುದೂ ಇರಲಿಲ್ಲ. ಅಂತಹ ಕಾಲದಲ್ಲಿ ಶೃರಾಮನು ಶಬರಿಯನ್ನು ಹುಡುಕಿಕೊಂಡು ಬಂದೇ ಬಿಟ್ಟ. ಶ್ರೀರಾಮನನ್ನು ಅವಳ ಭಕ್ತಿ, ಶ್ರದ್ಧೆ, ಎಳೆದು ತಂದಿತ್ತು. ಶ್ರೀರಾಮನ ದರ್ಶನದಿಂದ ಶಬರಿಗೆ ಆದ ಆನಂದ ಅಷ್ಟಿಷ್ಟಲ್ಲ. ಅವಳು ತನ್ನನ್ನು ತಾನೇ ಮರೆತಳು. ವೈಭವದಿಂದ ಪಾದಪೂಜೆ ಮಾಡಿದಳು. ಯಾವ ಮರದ ಹಣ್ನನ್ನು ಆಯ್ದುಕೊಡಿದ್ದಳೋ, ಅವನ್ನು ರುಚಿನೋಡಿ, ಎಂಜಲು ಮಾಡಿ ಶ್ರೀರಾಮನಿಗೆ ಕೊಟ್ಟಳಂತೆ. ತನ್ನ ರುಚಿ, ರಾಮರುಚಿ, ಎನ್ನುವ ಭವನೆ ಅವಳಿಗೆ. ಆಶುಧ್ಧ ಭಾವನೆ ಹೆಣ್ಣಿನಲ್ಲಿ ಮೂಡಿಬಂದಿತ್ತು. ಶ್ರೀರಾಮನು ಅಷ್ಟೇ ಭಕ್ತಿ, ಭಾವನೆಯಿಂದ ತಿಂದು ತೇಗಿ ಸಂತೃಪ್ತನಾದ. ಅನೇಕ ವರ್ಷಗಳಿಂದ ಶಬರಿ ಶ್ರೀರಾಮನ ಜಪ, ಧ್ಯಾನ ಮಾಡುತ್ತ ಕಾಯುತ್ತಾ ಇದ್ದಳು. ಕೊನೆಗೆ ಅಂದರೆ ಅವಳ ಅಂತ್ಯಾಕಾಂಕ್ಷೆ ಶ್ರೀರಾಮ ದರ್ಶನ ಕೊಟ್ಟು ಅವಳಿಗೆ ಮೋಕ್ಷವನ್ನು ಕರುಣಿಸಿದ. ಶ್ರೀರಾಮನು ಅವಳಿಗೆ ಮೋಕ್ಷವನ್ನು ಕರುಣಿಸಿದ್ದಲ್ಲ. ಮತ್ತೆ? ಶಬರಿ ಪರಮಾತ್ಮನು ಕರುಣಿಸುವ ಹಾಗೆ “ತಾನು” ಎನ್ನುವ ತನ್ನ ಅಹಂಕಾರವನ್ನು, ಶ್ರೀಚರಣಗಳಲ್ಲಿ ಮುಡುಪಾಗಿಟ್ಟು, ತನಗೇನು ಬೇಕು ಎಂಬುದರ ಪರಿವೆಯೇ ಇಲ್ಲದೆ ಪರಮಾತ್ಮನ ಧ್ಯಾನ ಸ್ಮರಣೆಯಲ್ಲಿ ತನ್ನ ದಿವ್ಯವಾದ ಜೀವನವನ್ನು ಕಳೆದಳು.
ಕಾಯೇನ, ವಾಚಾ, ಮನಸೇಂದ್ರಿಯೇರ್ವಾ
ಬುದ್ಧ್ಯಾತ್ಮನಾವಾ ಪ್ರಕೃತೇರ್ಸ್ವಾಭಾವಾತ್
ಕರೋಮಿ ಯದ್ಯತ್ ಸಕಲಂ ಪರಸ್ಮೆ
ನಾರಾಯಣಾಯೇತಿ ಸಮರ್ಪಯಾಮಿ ||
ಅಹಂಕಾರವಿಲ್ಲದೆ ಪರಮತ್ಮನಿಗಾಗಿ ಬದುಕು. ಶ್ರೀರಾಮ ಚಂದ್ರನಿಗಾಗಿ ಬದುಕು. ಶಬರಿಯ ದೃಷ್ಟಾಂತ. ಇಂತಹ ಸಮರ್ಪಣೆಯ ಭಾವವಿರಬೇಕು.
ಇನ್ನೊಂದು ದೃಷ್ಟಾಂತ ನೋಡಿ.
ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು |
ನೆನೆಯದಿನ್ನೊಂದನೆಲ್ಲವ ನೀಡುತದರಾ ||
ಅನುಸಂಧಿಯಲಿ ಜೀವಭಾರವನು ಮರೆಯುವುದು |
ಹನುಮಂತನುಪದೇಶ || ಮಂ ||
ಘನತತ್ತ್ವ ಒಂದಕ್ಕೆ ಶಬರಿಯ ಜೀವನವನ್ನು ನೋಡೆದೆವು. ಶಬರಿ ತನ್ನ ಅಹಂಕಾರವನ್ನು, ಆಶೆ, ಆಕಾಂಕ್ಷೆಗಳನ್ನು, ಮರೆತು ಶ್ರೀರಾಮನಿಗಾಗಿ ೩೬೫ ದಿವಸವೂ, ಹಗಲೂ, ಇರುಳೂ, ವರ್ಷವಿಡೀ ಪೂರ್ತಿ, ತನ್ನ ಆಯುಷ್ಯವನ್ನೆಲ್ಲ, ರಾಮನನ್ನೇ ಜಪಿಸುತ್ತ ಅವನ ದರ್ಶನ ಪಡೆದಳು. ಅವನಿಗಾಗಿ ಮೀಸಲಾಗಿಟ್ಟಿದ್ದ ಹಣ್ಣುಗಳನ್ನು ಕೊಟ್ಟು, ಧನ್ಯಳಾದಳು. ತನಗೇನು ಬೇಕು ಎಂಬುದನ್ನು ಮರೆತು, ಹಿತವೆಂತು ಲೋಕಕ್ಕೆಂದು ಕೇಳಿದಳು ಶಬರಿ. ಇನ್ನೊಂದು ದೃಷ್ಟಾಂತ ಆಂಜನೇಯನದು.
ಆಂಜನೇಯ, ಶ್ರೀರಾಮಚಂದ್ರ ಪ್ರಭುವಿನ ದರ್ಶನವಾಗುವವರೆಗೆ, ತನ್ನ ಜೀವನದಲ್ಲಿ ಯಾವ ಆಶೆ ಆಕಾಂಕ್ಷೆಗಳನ್ನು ಇಟ್ಟುಕೊಡಿದ್ದನೋ? ಯಾರಿಗೆ ಗೊತ್ತು?
ಒಂದು ಸಲ ಘನತತ್ತ್ವ ಒಂದಕ್ಕೆ ದಿನರಾತ್ರಿ ಮನಸೋತು, ಇನ್ನೊಂದನ್ನು ನೆನೆಯದೆ ಅದರೆ ಅನುಸಂಧಿಯಲಿ ಜೀವಭಾವವನು ಮರೆತ. ಒಂದು ಸಲ ಶ್ರೀರಾಮಚಂದ್ರನ ದರ್ಶನವಾದ ಮೇಲೆ ತನಗೇನು ಬೇಕು, ಎನ್ನುವುದನ್ನೇ ಮರೆತು ಹನುಮಂತ, ತನ್ನ ಜೀವನವನ್ನು, ಶ್ರೀರಾಮಚಂದ್ರನ ಸೇವೆಗಾಗಿ ಸವೆಯಿಸಿದ. ಒಂದು ಶಬರಿ, ಎರಡನೆಯದು ಹನುಮಂತ. ಇವರು ನೆನಪಿನಲ್ಲಿಡಬೇಕಾದಂತ ದಿವ್ಯ ವ್ಯಕ್ತಿಗಳು. ಘನತತ್ತ್ವ ಒಂದಕ್ಕೆ ದಿನರಾತ್ರಿ ಮನಸೋತು ಹನುಮಂತ ತನ್ನಾಂತಃಶಕ್ತಿ, ವೀರ್ಯ, ಎಲ್ಲವನ್ನು ಶ್ರೀರಾಮಚಂದ್ರನ ಚರಣದಲ್ಲಿ ಸಮರ್ಪಿಸಿದ ಅನುಸಂಧಿಯಲಿಯೇ, ನೆನೆಯದೆ ಇನ್ನೊಂದು ತನ್ನ ಜೀವಭಾವವನ್ನು ಮರೆತು, ಆನಂದದಿಂದ ಬದುಕಿದವ ನತಮಸ್ತಕಾಂಜಲಿಮ್ ತನ್ನ ಅಹಂಕಾರವನ್ನು ಶ್ರ್ರಾಮ ಚರಣಗಳಲ್ಲಿ ಅರ್ಪಿಸಿ, ಬಾಷ್ಪವಾರಿ ಪರಿಪೂರ್ಣ ಲೋಚನಮ್-ಆನಂದ ಭಾಷ್ಪಗಳನ್ನು ಸುರಿಸಿದ. ತನ್ನ ಜೀವನ ಶ್ರೀರಾಮಚಂದ್ರನಿಗಾಗಿ ಎಂದು, ಒಂದು ಸಲ, ಅವನ ಮನಸ್ಸಿನಲ್ಲಿ ಬಂದನಂತರ, ತನ್ನನ್ನೇ ತಾನು ಮರೆತು.
ಶ್ರೀರಾಮಚಂದ್ರನ ಫೋಟೋದಲ್ಲಿ ಹನುಮಂತನ ದೃಷ್ಟಿ, ಪರಮಾತ್ಮನ ಚರಣಗಳಲ್ಲಿರುವುದು, ಎಲ್ಲರಿಗೂ ಗೊತ್ತು. ಮಾರುತಿಗೆ, ಲಂಕೆಗೆ ಹಾರುವಾಗ ಸೀತೆಯನ್ನ ಹುಡುಕುವಾಗ, ಲಂಕಾದಹನ ಮಾಡುವಾಗ, ಅವನ ಮನಸ್ಸಿನಲ್ಲಿದ್ದುದ್ದು ಒಂದೇ. ಒಂದು ವಿಚಾರಧಾರೆ. ಶ್ರೀರಾಮಚಂದ್ರನಿಗಾಗಿ ಬದುಕು ಅಷ್ಟೇ, ಅವನಿಗೇನು ಬೇಕು? ಬರೀ ಲಂಗೋಟಿ!
ಸೀತೆಯನ್ನು ಕಂಡು ಶ್ರೀರಾಮ ಅಯೋಧ್ಯೆಗೆ, ಮರಳಿ ಬಂದ ಮೇಲೆ, ತನಗೆ ಸಹಾಯ ಮಾಡಿದ ಅಂಗಧ, ವಿಭೀಷಣ, ಮೊದಲಾದವರೆಲ್ಲರಿಗೂ ಸಾಕಷ್ಟು ಪುರಸ್ಕಾರ ಮಾಡಿದ. ಮಾರುತಿಗೆ ಮಾತ್ರ ಏನನ್ನೂ ಕೊಡಲಿಲ್ಲ. ಅವನಿಗೆ ಅದರ ಅವಶ್ಯಕತೆಯೇ ಇರಲಿಲ್ಲ. ಯಾಕೆಂದರೆ? ತನ್ನಿಂದಾಗಿ ಸೀತೆ ದೊರಕಿದ್ದು, ತನ್ನಿಂದಾಗಿ ಶ್ರೀರಾಮನಿಗೆ ಜಯ ದೊರಕಿದ್ದು, ಎಂಬ ಅಹಂಕಾರವೇ ಅವನಿಗೆ ಇರಲಿಲ್ಲ. ಘನತತ್ತ್ವ ಒಂದಕ್ಕೆ ದಿನರಾತ್ರಿ ಮನಸೋತು. ಘನತತ್ತ್ವಕ್ಕಾಗಿ ತನ್ನ ಜೀವನ. ಶ್ರೀರಾಮಚಂದ್ರನಿಗಾಗಿ ತನ್ನ ಜೀವನ. ಅಷ್ಟೇ.
ದ್ರೋಣಾಚಾರ್ಯ ಅರ್ಜುನನಿಗೆ ಬಿಲ್ಲು-ವಿದ್ಯೆ ಕಲಿಸಿದ ಗುರುಗಳು. ಅರ್ಜುನನ ಜೊತೆಗೆ ಇನ್ನೂ ಅನೇಕ ವಿದ್ಯರ್ಥಿಗಳೂ ಇದ್ದರು. ದ್ರೋಣಾಚಾರ್ಯರು ಎಲ್ಲರಿಗೂ ಬಿಲ್ಲು-ವಿದ್ಯೆಯನ್ನು ಕಲಿಸಿ, ಕೊನೆಗೆ ಪರೀಕ್ಷೆ ಇಟ್ಟರು. ಪರೀಕ್ಷೆಯಲ್ಲಿ ಎಲ್ಲರೂ ಬಿಲ್ಲನ್ನು ಬಗ್ಗಿಸಿ, ಹೆದೆ ಏರಿಸಿ ನಿಂತರು. ಆಗ ದ್ರೋಣಾಚಾರ್ಯರು ಪ್ರತಿಯೊಬ್ಬರಿಗೂ ಕೆಲವು ಪ್ರಶ್ನೆಗಳನ್ನು ಹಾಕಿದರು.
ದ್ರೋಣಾಚಾರ್ಯರು – ಈ ಮರ ಕಾಣುತ್ತಿದೆಯಾ?
ಶಿಷ್ಯ – ಹೌದು
ದ್ರೋಣಾಚರ್ಯರು – ಇಲ್ಲಿ ಎಲ್ಲರು ಕಾಣುತ್ತಾರೋ?
ಶಿಷ್ಯ – ಹೌದು ಕಾಣುತ್ತಾರೆ.
ದ್ರೋಣಾಚಾರ್ಯರು – ಹೊಡಿ ಹಾಗಾದರೆ.
ಶಿಷ್ಯ ಹೊಡೆದ, ಬಾಣ ಹೋಯಿತು, ಎಲ್ಲಿಗೋ?
ಹೀಗೇಯೇ ಎಲ್ಲರ ಸರದಿ ಮುಗಿಯಿತು. ಕೊನೆಗೆ ಅರ್ಜುನನ ಸರದಿ ಬಂತು. ಅರ್ಜುನನ ಬಿಲ್ಲನ್ನು ಬಗ್ಗಿಸಿ, ಹೆದೆ ಏರಿಸಿ, ಗುರಿಯಿಟ್ಟು ನಿಂತಿರುವಾಗ, ದ್ರೋಣಾಚಾರ್ಯರು ಕೆಲವು ಪ್ರಶ್ನೆ ಕೇಳುತ್ತಾರೆ.
ದ್ರೋಣರು – ಅರ್ಜುನ ಮರ ಕಾಣುತ್ತಿದೆಯಾ?
ಅರ್ಜುನ – ಇಲ್ಲ
ದ್ರೋಣರು – ಇಲ್ಲಿ ನಿಂತವರು?
ಅರ್ಜುನ – ಇಲ್ಲ
ಆಗ ಅಲ್ಲಿದ್ದವರೆಲ್ಲರೂ ನಗುತ್ತಾರಂತೆ.
ದ್ರೋಣರು – ಅರ್ಜುನ ನಿನಗೆ ಕಾಣುತ್ತಿರುವುದಾದರೂ ಏನು?
ಅರ್ಜುನ – ಹಕ್ಕಿಯ ತಲೆ ಮಾತ್ರ.
ದ್ರೋಣರು – ಹಾಗದರೆ ಹೊಡೆ
ಅರ್ಜುನ ಹೊಡೆದೆ. ಹಕ್ಕಿಯ ಕತ್ತು ಕತ್ತರಿಸಿಬಿತ್ತು.
ಘನತತ್ತ್ವ ಒಂದಕ್ಕೆ ದಿನರಾತ್ರಿ ಮನಸೋತು ನೆನೆಯದಿನ್ನೊಂದನೆಲ್ಲವ ನೀಡುತದರಾ ಅನುಸಂಧಿಯಲಿ ಜೀವಭಾರವನು ಮರೆಯುವುದು.
ಇದು ಹನುಮಂತನುಪದೇಶ.
ಪ್ರತಿಯೊಬ್ಬರೂ ಕೂಡ ತಮ್ಮ ಜೀವನವು ಸಾರ್ಥಕವಾಗಬೇಕಾದರೆ, ಮನುಷ್ಯನು ಮಾಡಿಕೊಳ್ಳಬೇಕಾದಂತಹ ಸಿದ್ಧತೆಗಳಲ್ಲಿ, ಮೊದಲನೆಯದು ನಿಷ್ಕರ್ಷೆಯಾದ ಉದ್ದೇಶವನ್ನು ಇಟ್ಟುಕೊಳ್ಳುವುದು. ಜೀವನದ ಗುರಿ ಗೊತ್ತಾದರೆ, ಜೀವ ದೃಢಪಡುತ್ತದೆ. ಅದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಒಂದು ಸಲ ಜೀವನದ ಗುರಿಯನ್ನು ನಿರ್ಧರಿಸಿದ ಮೇಲೆ, ಕಣ್ಣನ್ನು ಆ ಕಡೆಗೆ, ಈ ಕಡೆಗೆ, ಹೊರಳಿಸಬಾರದು. ಅದರಂತೆಯೇ ಕಿವಿಯನ್ನು ಆಕಡೆ, ಈ ಕಡೆಯವರಿಗೆ ಒತ್ತೆಯಿಡಬಾರದು.
ತಂದೆ-ತಾಯಿ, ತಮ್ಮ ಮಗನ ಬುದ್ಧಿಯ ಮಟ್ಟಕ್ಕೆ ಸರಿಯಾಗಿ, ಬಿ.ಎ. ಓದಿಸಬೇಕೆಂದು ನಿಶ್ಚಯಿಸುತ್ತಾರೆ. ಈ ಕಡೆಯ ಪಕ್ಕದ ಮನೆಯವರಿಗೆ ಇದು ತಿಳಿದ ತಕ್ಷಣ ಅವರು, “ಅಯ್ಯೋ ಬಿಡಿ ದರಿದ್ರ ಬಿ.ಎ. ಓದಿಸುತ್ತರಂತೆ” ಎಂದು ಟೀಕಿಸುತ್ತಾರೆ. ಮೂರನೆಯ ಮನೆಯವರು, “ಬಿ.ಎಸ್ಸಿ. ಆದರೂ ಚೆನ್ನಾಗಿತ್ತು ಅದೇನು ದರಿದ್ರ ಬಿ.ಎ.” ಎಂದು ಟೀಕಿಸುತ್ತಾರೆ. ಅಂತೂ ಎಲ್ಲರೂ ಒಂದಾಗಿ ಆಡಿಕೊಳ್ಳುವವರೇ. ಆವಾಗ ಮನಸ್ಸು ಕದಲುತ್ತದೆ.
ತಮ್ಮ ಮನಸ್ಸು ತಮಗೇ ಗೊತ್ತಿಲ್ಲದವರ ಪಾಡು ಏನಾಗಬಹುದು? ಹುಡುಗ ಓದಿದ ಹಾಗೆಯೇ?
ಅದಕ್ಕೆ ಜೀವನಕ್ಕೆ ಗುರಿ ಮುಖ್ಯ.
ಶರನಿಧಿಯನೀಜುವನು,ಸಮರದಲಿ ಕಾದುವನು |
ಗುರಿಯೊಂದನುಳಿದು ಪೆರತೊಂದ ನೋಡುವನೆ? ||
ಮರೆಯುವನು ತಾನೆಂಬುದನೆ ಮಹಾವೇಶದಲಿ |
ನಿರಹಂತೆಯದು ಮೋಕ್ಷ || ಮಂ ||
ಶರನಿಧಿಯ ನೀಜುವನು, ಸಮರದಲಿ ಕಾದುವನು |
ಗುರಿಯೊಂದನುಳಿದು ಪೆರತೊಂದ ನೋಡುವನೆ? ||
ಆಚಾರ್ಯ ಶಂಕರರಿಗೆ ೮ ವರುಷ. ಎಂಟು ವರುಷಕ್ಕೇ ಅವರಿಗೆ ಯಾವ ಆಶೆಯೂ ಇರಲಿಲ್ಲ. ಅಷ್ಟೇ ಅಲ್ಲ ಅವರಿಗೆ ವೈರಾಗ್ಯ ಹುಟ್ಟಿತ್ತು. ಸಂನ್ಯಾಸದ ಕಡೆಗೆ, ಅಂದರೆ ಬೇರೆ ಯಾವ ವಿಚಾರವೂ ಇರದೆ ಶಂಕರರಿಗೆ ತಮ್ಮ ಜೀವನ ಧರ್ಮೋದ್ಧಾರಕ್ಕಾಗಿ, ಶಾಸ್ತ್ರಗಳ ಪುನರುದ್ಧಾರಕ್ಕಾಗಿ, ಇಡೀ ರಾಷ್ಟ್ರದ ಐಕ್ಯತೆಗಾಗಿ ಎಂಬ ಧ್ಯೇಯವಿತ್ತು. ಶಂಕರರಿಗೆ ಬೇರೆ ಏನೂ ಕಾಣಲಿಲ್ಲ. ಸನ್ಯಾಸ ಒಂದೇ ಅವರ ಗುರಿಯಾಗಿತ್ತು. ಅಮ್ಮನಿಂದ ಸನ್ಯಾಸಕ್ಕೆ ಅಪ್ಪಣೆ ಪಡೆಯಲು ಅವರು ನಾಟಕವಾಡಬೇಕಾಯಿತು. ಒಂದು ದಿವಸ ಅಮ್ಮ, ಮಗ, ಇಬ್ಬರೂ ನದಿಗೆ ಸ್ನಾನಕ್ಕೆ ಹೋದರು. ಶಂಕರರು ಸ್ನಾನಕ್ಕೆಂದು ನದಿಯಲ್ಲಿಳಿದರು. ನೀರಿನಲ್ಲಿ ತೇಲಿ ಹೋದರು, ನಡು ನೀರಿನಲ್ಲಿ ನಿಂತು ಒಮ್ಮೆಲೇ ಆರ್ತಧ್ವನಿಯಿಂದ “ಅಮ್ಮಾ ಮೊಸಳೆ, ಅಮ್ಮಾ ಮೊಸಳೆ, ಕಾಲು ಹಿಡಿದಿದೆ. ನೀನು ನನ್ನ ಸನ್ಯಾಸಕ್ಕೆ ಅಪ್ಪಣೆ ಕೊಟ್ಟರೆ ಮಾತ್ರ ಬಿಡುತ್ತದೆ.” ಎಂದು ಚೀರಿದರು. ತಾಯಿ ಕರುಳು ಗಾಬರಿಯಾಯಿತು. ಇದ್ದ ಒಬ್ಬ ಮಗ ಎಲ್ಲಿಯಾದರೂ ಬದುಕಿರಲಿ ಎಂದು “ಆಯಿತಪ್ಪಾ ಸನ್ಯಾಸ ತಗೊ ಎಂದಿತು ತಾಯಿ ಕರುಳು.”
ಸನ್ಯಾಸ ಅನ್ನುವುದೇ ಶಂಕರರ ಧ್ಯೇಯ.
ಸಮರ್ಥ ರಾಮದಸರು ಮದುವೆಯ ಮಂಟಪದಿಂದ ಓಡಿಹೋದವರು, ತಿರುಗಿ ೧೮
ವರ್ಷಗಳ ನಂತರ ತಮ್ಮ ಊರಿಗೆ ಬರುವಾಗ, ಅವರ ಮೈಮೇಲೆ ಬರೀ ಒಂದು ಲಂಗೋಟಿ, ಕೈಯಲ್ಲಿ ಒಂದು ದಂಡ, ಕಮಂಡಲು, ಜಪಮಾಲೆ, ಜಟಾಧಾರಿಗಳಾಗಿ, ಬಂದರು. ದಿನವಿಡೀ ರಾಮನಾಮ, ಶ್ರೀರಾಮ ಜಯರಾಮ, ಜಯಜಯರಾಮ, ಶ್ರೀರಾಮ ಜಯರಾಮ ಜಯಜಯರಾಮ, ಮಂತ್ರ ಪಠಣ.
ಗೋರ ಕುಂಬಾರನಿಗೆ ವಿಠ್ಠಲನೇ ಸರ್ವಸ್ವ. ಅವನು ಕುಂಬಾರ ಗಡಿಗೆ ಮಾಡುವುದೇ ಅವನ ವೃತ್ತಿ. ಒಂದು ದಿವಸ ಗಡಿಗೆ ಮಾಡುವ ಮಣ್ಣನ್ನು ತುಳಿಯುವಾಗ ವಿಠ್ಠಲ, ವಿಠ್ಠಲ, ಎಂದು ಭಜನೆ ಮಾಡುತ್ತ ಅದರಲ್ಲಿಯೇ ಮಗ್ನನಾಗಿದ್ದ. ಅಷ್ಟರಲ್ಲಿ ಅವನ ೮ ತಿಂಗಳ ಕೂಸು ಅಂಬೆಗಾಲಿಡುತ್ತ ಅಳುತ್ತ ಅಲ್ಲಿಗೆ ಬಂದರೂ, ಅದರ ಪರಿವೆಯಿಲ್ಲದೆ ಭಜನೆಯಲ್ಲಿ ಮಗ್ನನಾಗಿ, ವಿಠ್ಠಲನಲ್ಲಿ ಏಕರೂಪವಾಗಿದ್ದ. ತನ್ನ ಕೂಸಿನ ಅರಿವಿಲ್ಲದೆ, ಮಣ್ಣಿನ ಹಾಗೆ ಕೂಸನ್ನು ತುಳಿದುಬಿಟ್ಟ. ಇಷ್ಟೊಂದು ನಿಮಗ್ನತೆ ಆ ವಿಠ್ಠಲನಲ್ಲಿ ಗೋರಾ ಕುಂಬಾರನಿಗೆ.
ಆಂಜನೇಯ ಶ್ರೀರಾಮಚಂದ್ರನ ಪಾದಗಳಿಗೆ, ಒಂದು ಸಲ ಶಿರಬಾಗಿ ನಮಿಸಿದ. ತಕ್ಷಣ ಅವನಲ್ಲಿಯ ತಾನು, ತನ್ನದು, ಎಂಬ ತಡಕಾಟವೆಲ್ಲ ಭಸ್ಮವಾಗಿ, ಪ್ರಭುವಿಗಾಗಿ ತನ್ನ ಜೀವನ ಎಂದು ತನ್ನ ಜೀವನವನ್ನೆಲ್ಲ ಕಳೆದ.
ಶ್ರೀರಾಮಚಂದ್ರನೂ ಕೂಡ, ಧರ್ಮ ಪರಿಪಾಲನೆಗಾಗಿ ಕಾಡಿಗೆಹೋದ. ೧೪ ವರ್ಷ ವನವಾಸ ಅನುಭವಿಸಿದ. ಭರತನಿಗೆ ಪಟ್ಟವನ್ನು ಬಿಟ್ಟುಕೊಟ್ಟ. ರಾಮನ ಧರ್ಮ ವರ್ತನೆಯು, ಹೊರಗಣ ಭಯಗಲ ಕಾರಣದಿಂದ ಆದದ್ದಲ್ಲ. ಕೀರ್ತಿ, ಪ್ರಸಿದ್ಧಿಗಳ ಆಶೆಯಿಂದ ಆದದ್ದಲ್ಲ. ಸ್ವರ್ಗಾದಿ ಉತ್ತಮ ಲೋಕಗಳ ಅಪೇಕ್ಷೆಯಿಂದ ಆದದ್ದಲ್ಲ.
ಧರ್ಮಕ್ಕೋಸ್ಕರವಾಗಿಯೇ ಧರ್ಮವನ್ನು ನಡೆಸಿದವನು ಶ್ರೀರಾಮ.
ಕಪ್ಪುಸ್ವಾಮಿ ಎಂಬುವರು ಡಾಕ್ಟರರಾಗಿದ್ದವರು. ಅವರ ವೃತ್ತಿ, ರೋಗಿಯ ತಪಾಸಣೆ. ಔಷಧಿ ಕೊಡುವುದು. ಆದರೆ? ಘನತತ್ತ್ವ ಒಂದಕ್ಕೆ ದಿನರಾತ್ರಿ ಮನಸೋತು. ಎನು ಅವರ ಘನತತ್ತ್ವ? ಲೋಕ ಕಲ್ಯಾಣ. ಪರಹಿತಕ್ಕಾಗಿ ತನ್ನ ಸ್ವಾರ್ಥವನ್ನು, ಅಹಂಕಾರವನ್ನು ಬಿಟ್ಟು, ಆಟಿ ಐಜಿ ಛಿಣಥಿ ಪ್ರಾರಂಭ ಮಾಡಿದರು. ಇವತ್ತಿಗೆ ದಿವ್ಯ ಜೀವನ ಸಂಘ ಸ್ಥಪನೆಯಾಗಿದೆ.
ಜೀವನಕ್ಕೆ ತಿರುವು ಸಿಕ್ಕರೆ ಸಾಮಾನ್ಯ ವ್ಯಕ್ತಿಯಾದವನೂ ಅದ್ಭುತಕಾರ್ಯಗಳನ್ನು ಸಾಧಿಸಬಲ್ಲ.
ಸ್ವಾಮಿ ಚಿನ್ಮಯಾನಂದರೆ ಹೆಸರನ್ನು ಕೇಳದವರಿಲ್ಲ. ಅವರು ದೇಶವೆದೇಶಗಳಲ್ಲಿ, ಹೆಸರುವಾಸಿಯಾಗಿ ಉಳಿದಿದ್ದಾರೆ. ಅವರ ಶಿಕ್ಷಣ ಒ.ಂ.ಐ.ಐ.ಒ. ಅವರು ೩೦-೩೫ ವರ್ಷ. ಯಾವುದೇ ಗೊತ್ತು ಗುರಿಯಿಲ್ಲದೆ ಅಲೆದಾಡಿದರು. ಅವರ ಸಂಚಾರದಲ್ಲಿ ಸ್ವಾಮಿ ಶಿವಾನಂದರ ದರ್ಶನವಾಯಿತು. ತಪೋವನ ಮಹಾರಾಜರು ಅವರ ಗುರುಗಳಾದರು. ಅವರಿಂದ ಉಪನಿಷತ್ತು, ಭಗವದ್ಗೀತೆಯಲ್ಲಿಯ, ಅದ್ಭುತವಾದ ಜ್ಞಾನವನ್ನು ಅರಿತು, ಅದರಿಂದ ದಿಗ್ಭ್ರಮೆಗೊಂಡರು. ಈ ವಿದ್ಯೆ, ಅವರ ಜೀವನಕ್ಕೆ ತಿರುವು ಕೊಟ್ಟಿತು. ಉಪನಿಷತ್ತು, ಇದು ಜೀವನ ಧರ್ಮಯೋಗ, ಇದನ್ನು ಪ್ರಸಾರ ಮಾಡಬೇಕು, ಅನ್ನುವ ವಿಚಾರ ಮೂಡಿ ಬಂತು. ಅಂದೇ ಅವರು ತಮ್ಮ ಜೀವನವನ್ನು ಈ ಜ್ಞಾನಪ್ರಸಾರಕ್ಕಾಗಿ ಮುಡಿಪಾಗಿಡುವ ನಿರ್ಧಾರ ಮಾಡಿದರು. ಈ ಜ್ಞಾನಪ್ರಸಾರಕ್ಕಾಗಿ ದೇಶವಿದೇಶಗಲಲ್ಲಿ ಅನೇಕ ವರುಷ ಸಂಚಾರ ಮಾಡಿದರು. ಕೊನೆ ಕೊನೆಗೆ ಅವರ ಆರೋಗ್ಯವು ಸರಿಯಾಗಿರಲಿಲ್ಲ. ಅನೇಕ ಕಾಯಿಲೆಗಳು ಅವರಲ್ಲಿ ಮನೆ ಮಾಡಿದ್ದವು. ಆದರೂ ಅವರಿಗೆ ಅವುಗಳ ಕಡೆಗೆ ಲಕ್ಷ್ಯವಿರಲಿಲ್ಲ. ಅವರಿಗೆ ಇದ್ದದ್ದು ಒಂದೇ ಗುರಿ. ಪರಹಿತಕ್ಕಾಗಿ, ಲೋಕಕಲ್ಯಾಣಕ್ಕಾಗಿ ಜೀವನವನ್ನು ಗಂಧದ ಕೊರಡಿನ ಹಾಗೆ ಸವೆಯಿಸುವುದು. ಅವರು ಜೀವನ ಪೂರ್ತಿ ಬೆಳಿಗ್ಗೆ ಉಪನಿಷತ್ತು, ಸಾಯಂಕಾಲ ಭಗವದ್ಗೀತೆಯ ಜ್ಞಾನ ಪ್ರಸಾರಕ್ಕಾಗಿ ಘನತತ್ತ್ವ ಒಂದಕ್ಕೆ ಮುಡಿಪಾಗಿಟ್ಟರು. ಅವರು ತಮ್ಮ ಜೀವನದ ನೋವು, ಬೇನೆ, ಎಲ್ಲವನ್ನೂ ಮರೆತು, ೩೫ ವರ್ಷದಿಂದ ೭೭ ವರ್ಷದವರೆಗೆ ಸಾವಿರಾರು ಗೀತಾ ಪ್ರವಚನಗಳನ್ನು ಮಾಡಿ ಅಮರರಾಗಿದ್ದಾರೆ.
ಮನುಷ್ಯನಿಗೆ ಒಂದು ಗುರಿ ಬೇಕು. ಗುರಿಯಲ್ಲಿ ತಾರತಮ್ಯವಿಲ್ಲ. ಆಂಜನೇಯ ಬೆಟ್ಟಾವೆತ್ತಿದ. ಅಳಿಲು ಮರಳು ಹೊತ್ತಿತ್ತು.
ಒಂದು ಊರಲ್ಲಿ ಒಬ್ಬಳು ಚಿಕ್ಕವಯಸಿನ್ನಲ್ಲಿಯೇ ದುರ್ದೈವದಿಂದ ಗಂಡನನ್ನು ಕಳೆದುಕೊಂಡಳು. ಅವಳು ಧೃತಿಗೆಡದೆ, ಭಗವಂತನ ಸೇವೆಗೆ ಘನತತ್ತ್ವ ಒಂದಕ್ಕೆ ತನ್ನ ಜೀವನವನ್ನು ಸವೆಯಿಸಬೇಕೆಂದು ನಿರ್ಧರಿಸಿದಳು. ಬೆಳಿಗ್ಗೆ ನಾಲ್ಕು ಘಂಟೆಗೇ ಏಳುತ್ತಿದ್ದಳು. ಅದೇ ಊರಿನಲ್ಲಿ ಒಂದು ದೊಡ್ಡ ಗುಡಿ ಇತ್ತು. ಅವಳ ಕೆಲಸವೆಂದರೆ ಹಿಂದಿನ ದಿವಸವೇ ಸಾಯಂಕಾಲ, ಆ ಊರಿನಲ್ಲಿರುವ ಆಕಳುಗಳಿರುವ ಜಾಗಗಳಿಗೆಲ್ಲ ಹೋಗಿ, ಗೋಮಯವನ್ನು ತಲೆ ಹಾಕಿ ತರುತ್ತಿದ್ದಳು. ಬೆಳಕು ಹರಿಯುವುದಕ್ಕೆ ಮುಂಚಿತವಾಗಿಯೇ ಎದ್ದು, ಆ ಸೆಗಣಿಯನ್ನು ನೀರನ್ನು ಹೊತ್ತು ತಂದು ಕಲಿಸಿ, ದೇವರ ನಾಮ ಹೇಳುತ್ತ, ದೇವಸ್ಥಾನಕ್ಕೆ ಹೋಗೋ ಆ ಜಾಗವನ್ನೆಲ್ಲ ಗುಡಿಸಿ, ಸಾರಿಸಿ, ರಂಗೋಲಿ ಇಡುತ್ತಿದ್ದಳು. ಹೀಗೆಯೇ ವರ್ಷಪೂರ್ತಿ, ೩೬೫ ದಿವಸವೂ ಮಳೆ, ಚಳಿ, ಬಿಸಿಲೆನ್ನದೆ ಬಂದದ್ದು ಆಕೆಯ ಒಪ್ಪತ್ತಿನ ಊಟಕ್ಕೆ ಇತ್ತು. ಹೀಗೆ ಸಂತಳಾಗಿ ಭಗವಂತನ ಸೇವೆಯಲ್ಲಿಯೇ ಮುಕ್ತಳಾದಳು. ಘನತತ್ತ್ವ ಒಂದಕ್ಕೆ ತನ್ನ ಜೀವನವನ್ನು ಸವೆಯಿಸಿ ಜನ್ಮವನ್ನು ಸಾರ್ಥಕ ಮಾಡಿಕೊಂಡಳು. ಮದರ್ ಥೆರೆಸಾ ಅವಳು ಪರಹಿತಕ್ಕಾಗಿ ಕೋಕೋದ್ಧಾರಕ್ಕಾಗಿ ಬದುಕಿದವಳು. ಅವಳು ಬಡವರಿಗಾಗಿ, ರೋಗಿಗಳಿಗಾಗಿ ಅದ್ಭುತ ಕಾರ್ಯಗಳನ್ನು ಮಾಡಿದ್ದಾಳೆ. ಅವಳ ಸೇವೆಗೆ ಮೆಚ್ಚಿ, ಸರಕಾರವು ಓಟ ಪ್ರಶಸ್ತಿ, ಹಾಗೂ ಭಾರತ ರತ್ನ ಬಿರುದನ್ನು ಕೊಟ್ಟಿದೆ. ಅವಳು ತನಗಾಗಿ ಏನನ್ನೂ ಬಯಸಿದವಲಲ್ಲ. ಅವಳ ಆಸ್ತಿ ಎರಡು ಉಡಲು ಬಟ್ಟೆ, ಎರೆಡು ಪ್ಲಾಸ್ಟಿಕ್ ಬಕೆಟ್, ಅವಳಿಗೆ ಬ್ಯಾಂಕ್ ಅಕೌಂಟೂ ಕನಸಿನ ಮಾತಾಗಿತ್ತು.
ಮದರ್ ಥೆರೆಸಾ, ಒಂದು ಸಲ ಒಬ್ಬ ಶ್ರೀಮಂತರ ಮನೆಗೆ, ದೇವನೆಗೆ ಕೇಳಲು ಹೋದ ವೇಳೆಗೆ, ಆ ಮನೆಯ ಯಜಮಾನ, ಅವಳ ಮುಖಕ್ಕೆ ಉಗುಳಿದನಂತೆ. ಅದರಿಂದ ಅವಳು ಸ್ವಲ್ಪವೂ ಪ್ರತಿಕ್ರಿಯೆಯಿಲ್ಲದೆ, ಅಹಂಕಾರವಿಲ್ಲದೆ, ಆ ಯಜಮಾನನಿಗೆ ಹೀಗೆ ಹೇಳಿದಳಂತೆ. “ಈ ಅಪಮಾನ, ಹಿಂಸೆ, ಮನಸ್ಸಿಗಾದ ನೋವು, ನನಗೇ ಇರಲಿ. ನಾನು ಇಲ್ಲಿಗೆ ಬಂದದ್ದು ನನಗಾಗಿ ಅಲ್ಲ, ಬಡಮಕ್ಕಳ ರಕ್ಷಣೆಗಾಗಿ, ರೋಗಿಗಳ ಉಪಚಾರಕ್ಕಾಗಿ. ಆದ ಕಾರಣ ಅವರಿಗಾಗಿ ನಿನಗೆ ಏನಾದರೂ ಕೊಡುವ ಮನಸ್ಸಿದ್ದರೆ ಕೊಡಪ್ಪಾ?” ಎಂದಾಗ, ಯಜಮಾನನು ಪಶ್ಚಾತ್ತಾಪದಿಂದ ಮನಸ್ಸು ಕರಗಿ, “ಅಮ್ಮಾ ನಿನಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋಗು” ಎಂದು ಕೈ ಮುಗಿದು ಹೇಳಿದನಂತೆ. ಘನತತ್ತ್ವ ಒಂದಕ್ಕೆ ಬಡವರ ಉದ್ಧಾರಕ್ಕೆ ಜೀವವನ್ನು ಸವೆಯಿಸಿದವಳು ಮದರ್ ಥೆರೆಸಾ.
ಎಲ್ಲ ಮಹಾತ್ಮರೂ ಸಂತರೂ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡವರು. ಆಮೆಯು, ತನ್ನ ತಲೆಕಾಲು ಮೊದಲಾದ ಅಂಗಗಳನ್ನು ತನ್ನೊಳಗೆ ಎಳೆದುಕೊಳ್ಳುವಂತೆ, ಯಾರು ತಮ್ಮ ಇಂದ್ರಿಯಗಳನ್ನು ಕೆರಳಿಸುವ ವಿಷಯಗಳಿಂದ, ತನ್ನೊಳಗೆ ಸೆಳೆದುಕೊಂಡು, ವಿಷಯ ಸ್ಪರ್ಶವಿಲ್ಲದಂತೆ, ಬಾಳಬಲ್ಲರೋ ಅವರೇ ಮಹಾತ್ಮರು.
ನಾವು ಕೂಡ ಲೋಕಹಿತಕ್ಕಾಗಿ, ಪ್ರತಿದಿವಸವೂ ಬೆಳಿಗ್ಗೆ ಏಳುವಾಗಲೇ, ನಗುನಗುತ್ತಾ ಮನಸ್ಸನ್ನು ಉಲ್ಲಾಸದಿಂದ ಇಟ್ಟುಕೊಂಡು ಬದುಕಲು ಸಾಧ್ಯ.
ಕ್ಷಣದಿಂದನುಕ್ಷಣಕೆ, ದಿನದಿಂದ ಮರುದಿನಕೆ |
ಅನಿತನಿತರೊಳೆ ಬದುಕುತಾಯುವನು ಕಳೆವಾ ||
ಮನದ ಲಘುಸಂಚಾರವೊಂದು ಯೋಗದುಪಾಯ |
ಶುನಕೋಪದೇಶವದು || ಮಂ ||
ಶುನಕ ಮಹರ್ಷಿಗಳು ಜನತೆಗೆ ಕೊಟ್ಟಿರುವಂತಹ ಇದೊಂದು ಆಶಿರ್ವಾದ. ಇದೊಂದು ಜೀವನದ ರಹಸ್ಯವೂ ಹೌದು.
ಜೀವನದಲ್ಲಿ ಮನುಷ್ಯನಿಗೆ, ಪೆಟ್ಟು ಬೀಳುವುದು, ನಷ್ಟವಾಗುವುದು ಸಹಜ. ತಾಪತ್ರಯಗಳು – ಅಂದರೆ, ಸಂಚಿತ, ಆಗಮಿ, ಮತ್ತು ಪ್ರಾರಬ್ಧ, ಎಂಬ ಮೂರು ವಿಧವಾದ ಕರ್ಮಗಳು. ಇವು ಮನುಷ್ಯನಿಗೆ ಎಷ್ಟೋ ಜನ್ಮಗಳಲ್ಲಿ ಮಾದಿದ ಕರ್ಮಗಳ ಫಲಾಫಲ ಕರ್ಮಗಳು. ಇವು ಮನುಷ್ಯನಿಗೆ ಉಂಡೇ ಮುಗಿಸಬೇಕು. ಆದ್ದರಿಂದ ಪ್ರತಿಯೊಬ್ಬರಿಗು ಸಂಸಾರದಲ್ಲಿ ಮಡದಿ ಮಕ್ಕಳ ಪೇಚಾಟ, ಬಂಧುಬಳಗಗಲ ಕಚ್ಚಾಟ, ಆಫೀಸುಗಳಲ್ಲಿ ಒದ್ದಾಟ, ಇವೆಲ್ಲವೂ ಜೀವದ ಗಟ್ಟಿಗಂಟುಗಳನ್ನು ಹಿಸುಕಿ, ಬೇಯಿಸಿ, ಮೆತ್ತಗೆ ಮಾಡುತ್ತವೆ. ಇಂತಹ ಸಂದರ್ಭದಲ್ಲಿಯೂ ಮನದ ಲಘುಸಂಚಾರವೊಂದು ಯೋಗದುಪಾಯ. ಆ ಮನಸ್ಸನ್ನು ಅಲುಗಾಡಿಸದೆ ಪ್ರಶಾಂತವಾಗಿಟ್ಟುಕೊಳ್ಳಬೇಕಂತೆ. ಇದು ಜೀವನದ ರಹಸ್ಯ.
ನಾವು ಉದ್ಯಾನಕ್ಕೆ ವಿಹಾರಕ್ಕೆಂದು ಹೋಗುತ್ತೇವೆ. ಆಗ ಅಲ್ಲಿ ನಮಗೆ ಎಷ್ಟು ಬೇಕೋ ಅಷ್ಟೇ ಹಾಸಿಕೊಂಡು ಕುಳಿತು, ತಿಂಡಿ ತಿಂದು, ನೀರು ಕುಡಿದು, ಆಮೇಲೆ ಎದ್ದು ಬರುವ ಮುಂಚೆ, ಆ ಹಾಸಿದ ಬಟ್ಟೆಯನ್ನು ಝೂಡಿಸುತ್ತೇವೆ. ಯಾತಕ್ಕೆ? ಅದರಲ್ಲಿ ಏನಾದರೂ ಸ್ವಲ್ಪ ಮಣ್ಣು, ಕಸವಿದ್ದರೆ, ಅದು ಅಲ್ಲಿಯೇ ಬಿದ್ದು ಶುಧ್ಧವಾಗಿ ಆ ಬಟ್ಟೆ ನನ್ನ ಕೈಗೆ ಬರಲಿ ಎಂದು. ಅದರಂತೆಯೇ ಕ್ಷಣದಿಂದನುಕ್ಷಣಕೆ, ದಿನದಿಂದ ಮರುದಿನಕೆ ಅನಿತನಿತರೊಳೆ ಬದುಕುತಾಯುವನು ಕಳೆವಾ ಮನಸ್ಸಿಗೂ ಕೂಡ ಕಷ್ಟವಾದಾಗ, ಪೆಟ್ಟುಬಿದ್ದಾಗ, ಅನೇಕ ತರಹದ ದುಃಖಗಳು ಬಂದು ಅಪ್ಪಳಿಸುವಾಗ, ಆ ಮನಸ್ಸನ್ನು ಝೂಡಿಸಬೇಕಂತೆ. ಕ್ಷಣದಿಂದನುಕ್ಷಣಕೆ ಮರುಕ್ಷಣಕ್ಕೆ ಅದನ್ನು ಮರೆತುಬಿಡಬೇಕಂತೆ. ಮನಸ್ಸನ್ನು ಉಲ್ಲಾಸದಿಂದ ನಗುನಗುತ್ತ ಇಟ್ಟುಕೊಳ್ಳಬೇಕೆಂತೆ.
ಇದು ಶುನಕ ಮಹರ್ಷಿಗಳ ಉಪದೇಶ.
ಮುನ್ನಾದ ಜನುಮಗಲ ನೆನಸಿನಿಂ ನಿನಗೇನು? |
ಇನ್ನುಮಿಹುದೆದೆ ನೀಡು ಮನವನ್: ಎನ್ನುವವೋಲ್ ||
ಬೆನ್ನ ಪಿಂತಿನದು ಕಾಣಿಸದಂತೆ ಪರಮೇಷ್ಠಿ |
ಕಣ್ಣನಿಟ್ಟನು ಮುಖದಿ || ಮಂ ||
ಪರಮೇಶ್ವರನು ಕಣ್ಣನಿಟ್ಟನು ಮುಖದಿ ಮನುಷ್ಯರಿಗೆ ಕಣ್ನಿರುವುದು ಎಲ್ಲಿ? ಮುಖದಿ ಎದುರಿನಲ್ಲಿ. ಕಣ್ನನ್ನು ಹಿಂದುಗಡೆಯೂ ಏಕೆ ಇಟ್ಟಿಲ್ಲ? ಹಿಂದೆ ಒಂದು ಕಣ್ಣೂ, ಮುಂದೆ ಒಂದು ಕಣ್ಣು ಇದ್ದರೆ, ಮನುಷ್ಯನಿಗೆ ನಡೆಯಲು ಸಾಧ್ಯವೇ? ಮುಂದಿನ ಕಣ್ಣು ಮುಂದೆ ಹೋಗಲು ಹೇಳಿದರೆ, ಹಿಂದಿನ ಕಣ್ಣು ಇನ್ನೇನನ್ನೋ ಹೇಳುತ್ತದೆ. ಆಗ ನಮ್ಮ ಗ್ರಹಚಾರ ಏನಾಗುತ್ತಿತ್ತು?
ಮನೆಯಲ್ಲಿ ಟಿ.ವಿ. ನೋಡುವಾಗ, ಇಪ್ಪತ್ತೆರಡು ಚಾನೆಲ್ಗಳು ಇದ್ದು, ಮೂವರು ಕೈಯಲ್ಲಿ ಡಿಣ ಇದ್ದರೆ, ಅವರು ತಮ್ಮ ಮನಸ್ಸಿಗೆ ಬಂದಹಾಗೆ ಅದನ್ನು ತಿರುಗಿಸುತ್ತಿದ್ದರೆ, ಟಿ.ವಿ. ನೋಡಿದ ಹಾಗೆಯೇ. ಕಣ್ಣನಿಟ್ಟನುಮುಖದಿ ಯಾತಕ್ಕೆ? ಬೆನ್ನ ಪಿಂತಿನದು ಕಾಣಿಸದಂತೆ.
ಪ್ರತಿಯೊಬ್ಬರಿಗೂ ಜೀವನದಲ್ಲಿ ಪೆಟ್ಟುಗಳು ಬೀಳುವುದು ಸಹಜ, ಅದರಂತೆ ನೋವಾಗುವುದು ಸಹಜ, ಆದರೆ ಅದೆಲ್ಲವನ್ನೂ ಮತ್ತೆ ಮತ್ತೆ ಮನಸ್ಸಿಗೆ ತರಬಾರದು. ಇನ್ನುಮಿಹುದಕೆ ನೀಡು ಮನವನ್: ಎನ್ನುವವೋಲ್. ಅಂದರೆ ಜೀವನದಲ್ಲಿ ಕಷ್ತವಾದದ್ದು ನಿಜ. ಪೆಟ್ತು ಬಿದ್ದದ್ದು ನಿಜ. ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡದ್ದೂ ನಿಜ. ಆದರೆ? ಹಿಂದಿನದೆಲ್ಲವನ್ನೂ ಮರೆತು ಬಿಡು.
ಕ್ಷಣದಿಂದನುಕ್ಷಣಕೆ ದಿನದಿಂದ ಮರುದಿನಕೆ |ಅನಿತನಿತರೊಳೆ ಬದುಕುತಾಯುವನು ಕಳೆವಾ.
ನಗುನಗುತ ಬಾಳುವ ರಹಸ್ಯವನ್ನು ಅರಿತು ಉಲ್ಲಾಸದಿಂದ ಬಾಳುವುದಕ್ಕೆ ಪರಮಾತ್ಮನು ಕಣ್ಣನಿಟ್ಟುನು ಮುಖದಿ.
ಲೋಚನದ ಸಂಚಾರ ಮುಖದ ಮುಂದಕಪಾರ |
ಗೋಚರಿಪುದೇನದಕೆ ತಲೆಯ ಹಿಂದಣದು? ||
ಪ್ರಚೀನ ಹೊರತು ಸ್ವತಂತ್ರ ನೀಂ, ಸಾಂತವದು |
ಚಾಚು ಮುಂದಕೆ ಮನವ || ಮಂ ||
ಲೋಚನದ ಸಂಚಾರ ಮುಖದ ಮುಂದಕಪಾರ
ಗೋಚರಿಪುದೇನದಕೆ ತಲೆಯ ಹಿಂದಣದು ?
ಪರಮಾತ್ಮನು ಕಣ್ಣನ್ನು ಮುಂದೆ ಇಟ್ಟಿದ್ದಾನೆ. ಯಾಕೆ? ಮುಂದೆ ನೋಡು, ಮುಂದೆ ಹೋಗು. ಹಿಂದೆ ನೋಡಬೇಡ. ಹಿಂದೆ ಅಂದರೇನು? ಈಗಾಗಲೇ ಕಳೆದು ಹೋದ ಆಯುಷ್ಯದಲ್ಲಿ, ಬಿದ್ದ ಪೆಟ್ಟುಗಳನ್ನು, ಅನುಭವಿಸಿದ ಕಷ್ಟಗಳನ್ನು, ಮತ್ತೆ, ಮತ್ತೆ, ನೆನೆಯುವುದರಲ್ಲಿ ಸ್ವಾರಸ್ಯವಿಲ್ಲ. ಹಾಗಾದರೆ? ನಮಗೂ ಒಂದು ಒಳ್ಳೆಯ ದಿವಸವನ್ನು ನೋಡುವ ಅವಕಾಶವಿದೆಯೇ? ಏಕಿಲ್ಲ? ನಮಗೂ ಒಂದಲ್ಲ ಒಂದು ದಿವಸ ಒಳ್ಳೆಯದಾಗುತ್ತದೆ. ಆನಂದ ಸಿಗುತ್ತದೆ. ಎಂದು ನಂಬಿ, ಜೀವನದಲ್ಲಿ ಮುಂದುವರಿಯುತ್ತೇವೆಯೋ…… ಖಂಡಿತ ದೇವರು ನಮಗೆ ಒಳ್ಳೆಯ ದಿನವನ್ನು ಕರುಣಿಸುತ್ತಾನೆ. ಪ್ರಾಚೀನ ಹೊರತು ಸ್ವತಂತ್ರ ನೀಂ ಹಿಂದಿನ ಪ್ರಾಚೀನ ಕರ್ಮಗಳನ್ನು ಮರೆತು ಬಿಡು. ಚಾಚು ಮುಂದಕೆ ಮನವ
ನಿನ್ನ ಅಂತಃಕರಣ ಮನಸ್ಸು, ಬುದ್ಧಿಗೆ, ಮುಂದೆ ನೋಡಿ
ಮುಂದುವರಿಯುವ ಸಾಧನೆ ಮಾಡಿಸು.
ಧಾರುಣೆಯ ನಡಿಗೆಯಲಿ, ಮೇರಿವಿನ ಗುರಿಯಿರಲಿ |
ಮೇರುವನು ಮರೆತಂದೆ ನಾರಕಕೆ ದಾರಿ ||
ದೂರವಾದೊಡದೇನು? ಕಾಲುಕುಟಿರಲೇನು? |
ಊರ ನೆನಪೇ ಬಲವೊ || ಮಂ ||
ಧಾರುಣಿಯ ನಡಿಗೆಯಲಿ, ಮೇರಿವಿನ ಗುರಿಯಿರಲಿ.
ಸಂಸಾರದಲ್ಲಿ ನಾವು ಬಂಧುಬಾಂಧವರ, ಮತ್ತು ಕೋಕಸಂಪರ್ಕದಿಂದ ಉಂಟಾಗುವ ಬಗೆ ಬಗೆಯ ಅನುಭವಗಳೊಂದಿಗೆ ಅಂದರೆ ಒಮ್ಮೆ ಪ್ರೀತಿ, ಮಾತ್ಸರ್ಯ, ಸ್ನೇಹ, ವೈರತ್ವಗಳ ಮಧ್ಯ ಸುಖ, ದುಃಖ, ಕಷ್ಟ, ನಷ್ಟಗಳನ್ನು ಅನುಭವಿಸುತ್ತ ಹೊರಟಿದ್ದೇವೆ. ಆದರೆ? ಧಾರುಣಿಯ ನಡಿಗೆಯಲಿ ಮೇರಿವಿನ ಗುರಿಯಿರಲಿ ಜೀವನದಲ್ಲಿ ಮುಂದೆ ನಡೆದುಕೊಂಡು ಹೋಗುವಾಗ, ಜೀವನದ ಗುರಿ ಮೇರು ಪರ್ವತದಷ್ಟು ದೊಡ್ಡದಾಗಿರಬೇಕಂತೆ. ಜೀವನದಲ್ಲಿ ಬಂದದ್ದೆಲ್ಲ ಬರಲಿ ಗೋವಿಂದನ ದಯವೊಂದಿರಲಿ. ಗೋವಿಂದನ ದಯ ಎಂದರೆ? ಮನಸ್ಸು, ಬುದ್ಧಿ ಪ್ರಶಾಂತವಾಗಿರುವುದು. ಈ ಆನಂದ, ಶಾಂತಿ ಹೊರಗಡೆಯಿಂದ ದೊರಕುವುದಿಲ್ಲ, ಇಲ್ಲವೆ ಯಾರಾದರೂ ತಂದುಕೊಡುವ ವಸ್ತುವಲ್ಲ. ನಿಜವಾದ ಆನಂದ ನಮ್ಮೊಳಗೇ ಇದೆ.
ಮನುಷ್ಯನು “ನಾನು” “ನಾನು” ಎಂದು ನುಡಿಯುವಾಗ ಯಾವುದನ್ನು ಕುರಿತು ಹಾಗೆ ನುಡಿಯುತ್ತಾನೋ ಅದೇ ಆತ್ಮ. “ಅಹಂ” ಪಾದಕ್ಕೆ ವಿಷಯವಾದದ್ದು ಆತ್ಮ. ಆತ್ಮವೆಂಬುದು ಸ್ವರೂಪ ಸ್ಥಿತಿಯಲ್ಲಿ ಚೈತನ್ಯ, ಜ್ಯೋತಿಸ್ವರೂಪ.
ಆ ಚೈತನ್ಯ ಆ ಜ್ಯೋತಿ ನಮ್ಮೊಳಗೇ ಇದೆ. ಅಂದರೆ ಚೈತನ್ಯ ಸ್ವರೂಪ ಸಚ್ಚಿದಾನಂದಸ್ವರೂಪವೇ “ನಾನು”
ಆದ ಕಾರಣ ಆನಂದ, ಸುಖ, ಶಾಂತಿ, ಹೊರಪ್ರಪಂಚದಿಂದ ಸಿಗುವುದಿಲ್ಲ. ಇಲ್ಲವೆ ಯಾರಿಂದಲೂ ದೊರಕುವಂತಹುದಲ್ಲ.
ನಮ್ಮೊಳಗೇ ಆನಂದ, ಶಾಂತಿ ಇದೆ. ನಾವೂ ಆನಂದದಿಂದ ಬದುಕಿ, ಇತರರಿಗೂ ಆನಂದದಿಂದ ಬದುಕಲು ನಮ್ಮ ಮನಸ್ಸು ಬುದ್ಧಿಗೆ ಸಾಧ್ಯವಿದ್ದಷ್ಟು ಸಹಾಯ ಮಾಡುವುದೇ ನಮ್ಮ ಜೀವನದ ಉದ್ದೇಶ.
ನಿನ್ನಲಿಯೆ ನೀನಿರು ಓ ಮಾನವೇ |ಅಲ್ಲಲ್ಲಿಗೆ ಅಲೆಯದಿರು ಮನವೆ |ನೀ ಬಸುವುದೆಲ್ಲಾ ತಾನಿಹುದಲ್ಲಿ |ನಿನ್ನಂತಃಕರಣದ ಅಂತಃಪುರದಲಿ |
ನಾಸಿಕದೊಳಚ್ಛ್ವಾಸ ನಿಶ್ವಾಸ ನಡೆವಂತೆ |
ಸೂಸುತ್ತಲಿರಲಿ ನಿನ್ನರವು ಮಂಗಳವ ||
ಆಶಿಸದೆ ಸಂಕಲ್ಪಯತ್ನಗಲನಿನಿತುಮಂ |
ಸಾಜವಾಗಲಿ ಸಯ್ಪು || ಮಂ ||
ನಾಸಿದಕೊಳುಚ್ಛ್ವಾಸ ನಿಶ್ವಾಸ ನಡೆವಂತೆ.
ಉಚ್ಛ್ವಾಸ ಒಳಗೆ ತೆಗೆದುಕೊಳ್ಳುವುದು. ನಿಶ್ವಾಸ ಹೊರಗೆ ಬಿಡುವುದು. ನಮ್ಮ ಉಸಿರಾಟ ಅಂದರೆ? ಸ್ವಾಸವನ್ನು ಒಳಗೆ ತೆಗೆದುಕೊಳ್ಳುವುದು, ಹೊರಗೆ ಬಿಡುವುದು. ಈ ಕಾರ್ಯ ಸುಲಭದಲ್ಲಿ, ನಿರಾಯಾಸವಾಗಿ, ಪ್ರಯತ್ನವಿಲ್ಲದೆ, ಸದಾಕಾಲ ನಡೆಯುತ್ತದೆ. ಅದೇ ರೀತಿಯಾಗಿ ಎಲ್ಲಿ ನಿನ್ನ ಅಸ್ತಿತ್ವವಿದೆಯೋ ಅಲ್ಲಿ ಸುತ್ತಮುತ್ತ ಅಂದರೆ, ಗಂಡ, ಹೆಂಡತಿ, ಮಕ್ಕಳು, ಹತ್ತಿರದ ಬಂಧು ಬಾಂಧವರು, ಪ್ರತಿಯೊಬ್ಬರಿಗೂ ಕೂಡ ಸೂಸುತ್ತಿರಲಿ ನಿನ್ನಿರವು ಮಂಗಳವ. ನಿನ್ನ ಇರವು, ಮಂಗಳವ ಸೂಸುತ್ತಿರಲಿ, ಶಾಂತಿಯ ಸೂಸುತ್ತಿರಲಿ. ಅಂದರೆ, ಕಷ್ಟದಲ್ಲಿದ್ದವರು, ಯಾರೇ ಆದರೂ ನಿನ್ನ ಹತ್ತಿರ ಬಂದರೆ, ಅವರನ್ನು ಸಂತೈಸುವಂತೆ ಅಂತಃಕರಣ, ಮನಸ್ಸು, ಬುದ್ಧಿಯನ್ನು ಇಟ್ಟುಕೊ. ಮಹಾತ್ಮರಾದವರು ಪರಮಹಂಸರೂ ತುಳಿದಂತಹ ದಾರಿ ಇದು.
ಎಲ್ಲ ಮಹಾತ್ಮರು ತಾಯಿಯ ಜೀವನವು, ಮಕ್ಕಳು ಜೀವನದಲ್ಲಿ ಬೇರೆ ತನವಿಲ್ಲದಂತೆ ಸೇರಿಕೊಂಡಿರುವಂತೆ ಎಲ್ಲೆಲ್ಲೂ ತನ್ನೊಬ್ಬನನ್ನೇ ಕಾಣುತ್ತಾರೆ. ಅದರಂತೆಯೇ ಸಮಸ್ತ ಭೂತಹಿತದಲ್ಲಿಯೂ ಅಭೇದವಾಗಿ ಸೇರಿಕೊಂಡಿರುತ್ತಾರೆ.
ಮೇರು ಪರ್ವತಕಿಹುವು ನೂರೆಂಟು ಶಿಖರಗಳು |
ದಾರಿ ನೂರಿರಬಹುದು, ನಿಲುವ ಕಡೆ ನೂರು ||
ಸಾರು ನೀಂ ಯಾತಿಕರಿಗೆಲ್ಲ ಕೆಳೆಯಾಗಿರುತೆ |
ಮೇರುಸಂಸ್ಮ್ರತಿಯೆ ಬಲ || ಮಂ ||
ಆನಂದ, ಶಾಂತಿ. ಇದು ಹೃದಯದಲ್ಲಿರುವಂತಹುದು. ಇದು ಪ್ರತಿಯೊಬ್ಬರ ನಿಜವಾದ ಸ್ವರೂಪ. ಆನಂದ ಹೊರಗೆ ದೊರಕುವಂತವುದಲ್ಲ. ಅದು ಒಳಗಡೆ ಚೈತನ್ಯಸ್ವರೂಪ, ಜ್ಯೋತಿಸ್ವರೂಪವಾಗಿದೆ.
ನಿನ್ನಲ್ಲಿಯೆ ನೀನಿರು ಓ ಮನವೆ. ಅಲ್ಲಲ್ಲಿಗೆ ಅಲೆಯದಿರು ಮನವೆ |ಮನಸ್ಸಿನ ಹೊಯ್ದಾಟವನ್ನು, ಅಲೆದಾಟವನ್ನು ಬಿಟ್ಟು, ಸಮಾಧಾನದಿಂದಿದ್ದು, ಬೇರೆಯವರಿಗೂ ಸಹ ಆನಂದವನ್ನು ಉಂಟುಮಾಡುವ ಹಾಗೆ ಬದುಕಬೇಕು. ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರು ಕೆಳೆ=ಸ್ನೇಹಿತ. ದಾರಿಯಲ್ಲಿ ಹೋಗುವಾಗ, ಯಾರಿಗಾದರೂ ಸಹಾಯ ಬೇಕಿದ್ದರೆ, ತಕ್ಷಣ ಸಹಾಯ ಮಾಡು. ಕಷ್ಟದಲ್ಲಿದ್ದವರ ಕಣ್ಣೀರು ಒರಿಸು. ಅವರ ದುಃಖದಲ್ಲಿ ಪಾಲ್ಗೊಂಡು ಸಮಾಧಾನ ಹೇಳು. ಏನೆಂದು? ಅಪ್ಪಾ ಜೀವನದಲ್ಲಿ ಕಷ್ಟಗಳು ಬರುತ್ತವೆ. ನಷ್ಟಗಳು ಆಗುತ್ತವೆ. ಹೆದರಬೇಡ. ಕಷ್ಟಗಳಿಗೆ ಅಂಜಿ ಕೂಡುವುದು ಜೀವನದ ಧರ್ಮವಲ್ಲ, ಅಳುತ್ತ ಕೂಡುವುದು ಹೇಡಿತನ, ನಡೆ ಮುಂದೆ ಪ್ರಯತ್ನಪಟ್ಟು ಭಂಗವಾದರೂ, ಅದರಿಂದ ನೀನು ನಷ್ಟಪಡಲಾರೆ. ಒಳ್ಳೆಯದನ್ನು ಸಾಧಿಸಲು ಯತ್ನಿಸಿದವನಿಗೆ, ಎಂದಿಗೂ ದುರ್ಗತಿ ಬಾರದು. ಕಿಂಚಿತ್ ಪ್ರಯತ್ನವೂ ವ್ಯರ್ಥವಾಗದು. ಧೈರ್ಯದಿಂದ ಮುನ್ನುಗ್ಗು.
ಹೃಷಿಕೇಶ ಎಲ್ಲರಿಗೂ ಚಿರಪರಿಚಿತವಾದ ಹೆಸರು. ಹೃಷಿಕೇಶ ಬದರಿಗೆ ಹೋಗುವ ದಾರಿಯ ಬೆಟ್ಟದ ಅಡಿಯಲ್ಲಿದೆ. ಗಂಗಾನದಿಯ ಲಕ್ಷಣ ಝೂಲಾ ಸೇತುವೆಯನ್ನು ದಾಟಿದ ನಂತರ ಹೃಷಿಕೇಶ ಬರುತ್ತದೆ. ಹೃಷಿಕೇಶ ಒಂದುವರೆ ಸಾವಿರ ಅಡಿ ಎತ್ತರದಲ್ಲಿದೆ. ಹೃಷಿಕೇಶವನ್ನು ದಾಟಿ ಮುಂದೆ ವಿಮಲೇಶ್ವರವಿದೆ. ವಿಮಲೇಶ್ವರ ಏಳುವರೆ ಸಾವಿರ ಅಡಿ ಎತ್ತರದಲ್ಲಿದೆ. ಅಲ್ಲಿ ಎಲ್ಲಿ ನೋದಿದಲ್ಲಿ ಹಿಮಾಚ್ಛಾದಿತ ಶಿಖರಗಳು. ಕಣ್ಮನವನ್ನು ಸೂರೆಗೊಳ್ಳುವಂಥ ದೃಶ್ಯಗಳು. ಹೃಷಿಕೇಶದಿಂದ ವಿಮಲೇಶ್ವರಕ್ಕೆ ಕಾಲ್ನಡಿಗೆಯಿಂದ ಅನೇಕ ಯಾತ್ರಿಕರು ಹೋಗುತ್ತಾರೆ. ಹೃಷಿಕೇಶದಿಂದ, ವಿಮಲೇಶ್ವರ ಐದಾರು ಗಂಟೆಗಳ ದಾರಿ. ಬೆಳಿಗ್ಗೆ ಎದ್ದು, ಒಳ್ಳೆಯ ಹುರುಪಿನಿಂದ ಭೋಲೆನಾಥ ಮಹಾರಾಜಕೀ ಜೈ, ಎಂದು ಹೊರಡುತ್ತಾರೆ. ಒಂದೆರಡು ಘಂಟೆ, ಬೆಟ್ಟವನ್ನು ಹತ್ತುವಾಗ, ಸುಸ್ತಾಗಿ ಒಬ್ಬರ ಮುಖವನ್ನೊಬ್ಬರು ನೋಡುವವರೇ. ಹಾದಿಯಲ್ಲಿ ಕುಡಿಯಲು ನೀರು ಸಹ ಸಿಗುವ ಹಾಗಿಲ್ಲ. ಅಂತೂ ಎಲ್ಲರೂ ಒಟ್ಟಾಗಿ ಕುಳಿತು ತಾವೇ ತಂದ ಪದಾರ್ಥಗಳನ್ನು ಹಂಚಿಕೊಂಡು ತಿಂದು, ನೀರು ಕುಡಿದು ವಿಶ್ರಾಂತಿ ಪಡೆಯುತ್ತಾರೆ. ದಣಿವು ಆರಿಸಿಕೊಂಡು, ಅತ್ತಿತ್ತ ನೋಡುವಾಗ ಪಕ್ಕದಲ್ಲಿಯೇ ಒಂದು ಬೋರ್ಡ್ ಕಾಣಿಸುತ್ತದೆ. ಅದರ ಮೇಲೆ ಏನು ಬರೆದಿದೆ, ಎಂಬ ಕುತೂಹಲ ಎಲ್ಲರಿಗೂ ಒಳ್ಳೆಯ ಉತ್ಸುಕತೆಯಿಂದ ಬೋರ್ಡನ್ನು ಓದುತ್ತಾರೆ, ಏನನ್ನು? “ವಿಮಲೇಶ್ವರ ಇಲ್ಲೆಯೇ ಸ್ವಲ್ಪ ದೂರದಲ್ಲಿದೆ.” ಅದನ್ನು ಓದಿದ ಮೇಲೆ, ಎಲ್ಲರೂ ಹುರುಪಿನಿಂದ ಹೊರಡುತ್ತಾರೆ. ಒಂದೆರಡು ಘಂಟೆ ನಡೆಯುವ ಹೊತ್ತಿಗೆ ಬಹಳ ದಣಿಯುತ್ತಾರೆ. ಯಥಾಸ್ಥಿತಿ ಮತ್ತೆ ಎಲ್ಲರೂ ಒಟ್ಟಾಗಿ ಕುಳಿತು, ತಾವು ತಂದ ತಿಂಡಿಯಲ್ಲಿ ಮಿಕ್ಕಿದ್ದನ್ನು ಎಲ್ಲರೂ ಹಂಚಿಕೊಂಡು ತಿಂದು, ನೀರು ಕುಡಿದು ದಣಿವಾರಿಸಿಕೊಂಡು, ಅತ್ತಇತ್ತ ನೋಡುವಾಗ, ಮತ್ತೆ ಒಂದು ಬೋರ್ಡು ಕಾಣಿಸುತ್ತದೆ. ಅದರ ಮೇಲೆ ಏನು ಬರೆದಿತ್ತು? “ವಿಮಲೇಶ್ವರ ಇನ್ನು ಸ್ವಲ್ಪ ದೂರವಿದೆ.” ಯಾತ್ರೆಗೆಂದು ಬಂದಿದ್ದೇರಾ ಹೊರಡಿ. ವಿಮಲೇಶ್ವರ ನಿಮಗಾಗಿ ಕಾಯುತ್ತಾ ಇದ್ದಾನೆ ಹೊರಡಿ.
ಒಂದು ಕಡೆ ಕೂಡ ನಿರುತ್ಸಾಹವನ್ನು ಹುಟ್ಟಿಸುವಂಥ ಬೋರ್ಡು ಇಲ್ಲ. ಎಲ್ಲ ಕಡೆಗೂ ಹುರುದುಂಬಿಸಿ ಉತ್ಸಾಹವನ್ನು ಹುಟ್ಟಿಸುವಂಥ ಬೋರ್ಡುಗಳೇ.
ಇದರ ಅರ್ಥ ನಮ್ಮ ಹಿರಿಯರು ಹೇಳಿದ್ದು ಜೀವನದ ಯಾತ್ರೆಯಲ್ಲಿ ಹೊರಟಿದ್ದೀಯಾ ನಡೆ ಮುಂದೆ, ಸಾರು ನೀಂ ಯಾತ್ರಿಕರಿಗೆಲ್ಲ ಕೆಲೆಯಾಗಿರುತೆ ವಿಮಲೇಶ್ವರ ಯಾತ್ರೆಗೆ ಹೊರತಿದ್ದೀಯಾ ಅದನ್ನು ಮುಟ್ಟುವವರೆಗೆ ನಿಲ್ಲಬೇಡ. ಉತ್ತಿಷ್ಠತ, ಜಾಗ್ರತ ಏಳು, ಎದ್ದೇಳು, ಗುರಿ ಸೇರುವವರೆಗೆ ವಿಶ್ರಾಂತಿ ಬೇಡ, ನಡೆ ಮುಂದೆ.
ನಮ್ಮ ಜೀವನದಲ್ಲಿಯ ಧ್ಯೇಯವೇನು? ಕ್ಷಣದಿಂದನುಕ್ಷಣಕೆ ದಿನದಿಂದ ಮರುದಿನಕೆ ಅನಿತನಿತರೊಳೆ ಬದುಕುತಾಯುವನು ಕಳೆವಾ.
ಇದು ಶೌನಕರ ಉಪದೇಶ ನಮ ಅಂತಃಕರಣ, ಮನಸ್ಸು, ಬುದ್ಧಿಯಲ್ಲಿಯೇ, ಆನಂದ, ಶಾಂತಿ ಇದೆ. ಈ ಶಾಂತಿ, ಈ ಚೈತನ್ಯ, ಜ್ಯೋತಿರೂಪದಲ್ಲಿ ಜೀವವೆನಿಸಿಕೊಂಡು, ಆತ್ಮರೂಪದಲ್ಲಿಯೂ ಎದೆ. ಕಾರಣ, ಸೌನಕ ಮಹರ್ಷಿಗಳು ಜಿವನದಲ್ಲಿ ಕ್ಷಣಕ್ಷಣವೂ ನಗುನಗುತ್ತಾ ಬಾಳು, ಅಷ್ಟೇ ಅಲ್ಲ ಆ ನಗು, ಆ ಆನಂದ ನಿನ್ನ ಹಾಗೆಯೇ ಆತ್ಮಪ್ರಕಾಶವಾಗಿ ಎಲ್ಲರಲ್ಲಿಯೂ ಇದೆ, ಎಂಬುದನ್ನು ತೋರಿಸಿಕೊಟ್ಟು, ಅವರೂ ನಗುನಗುತ್ತಾ ಬಾಳುವ ಹಾಗೆ ಮಾಡು, ಎಂದು ಶೌನಕಮಹರ್ಷಿಗಳು ಉಪದೇಶ ಮಾಡಿದ್ದಾರೆ. ಇದೊಂದು ಧ್ಯೇಯ ನಿನ್ನಲ್ಲಿರಲಿ. ಅಂದರೆ ನಿನ್ನ ಬದುಕು ಸಾರ್ಥಕವಾಗುತ್ತದೆ.
ಮುಳ್ತುಂಬಿಹವು ಜಗದ ದಾರಿಗಳದೆತ್ತಲುಂ |
ಕಾಲ್ತೆಳಕೆ ನೀಂ ಜ್ಞಾನದೆಲೆ ಹಸುರ ಸವರು ||
ಮುಳ್ತಲೆಯ ಬಾಗಿಪುದು ನೆಲಹುಲ್ಲ ಹೊಡೆಯುವುದು |
ಬಾಳ್ತೆನದ ತಂತ್ರವಿದು || ಮಂ ||
ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡಿರುವ ಹಾಗೆ. ಪ್ರಪಂಚದಲ್ಲಿ ಜೀವನ ಪುಷ್ಟದ ಹಾಸಿಗೆಯಲ್ಲ. ಮುಳ್ ತುಂಬಿಹವು ಜಗದ ದಾರಿಗಳದೆತ್ತಲುಂ ಜೀವನದ ದಾರಿ ಗಡುಚಾಗಿದೆ. ಆ ದಾರಿಯಲ್ಲಿ ಏರು, ತಗ್ಗು, ದಿನ್ನೆ, ಹಳ್ಳ, ಮುಳ್ಳು ತುಂಬಿವೆ. ಹಾಗಾದರೆ ಮಾಡುವುದೇನು? ದಾರಿಯನ್ನು ಪೂರ್ತಿಯಾಗಿ ಹೊದಿಸಲು ಸಾಧ್ಯವಿಲ್ಲ. ಜೀವನದ ಯಾತ್ರೆಯಲ್ಲಿ ನಡೆದುಕೊಂಡು ಹೋಗುವ ದಾರಿಯಲ್ಲಿ ಕಲ್ಲು, ಮುಳ್ಳು, ಹಳ್ಳ, ದಿನ್ನೆ, ಅಂದರೆ ಕಷ್ಟ, ನಷ್ಟ, ದ್ವಂದ್ವಗಳು, ತಾಪತ್ರಯಗಳು, ಎಲ್ಲರಿಗೂ ಬರುವಂಥವೆ. ಅದಕ್ಕೆ ನೀನು ಕಾಲ್ತೆಳಕೆ ಜ್ಞಾನದ ಹಸುರ ಎಲೆಯ ಸವರು. ಜ್ಞಾನವೆಂಬ ಎಲೆಗಲನ್ನು ನುಣ್ನಗೆ ಮಾಡಿ, ಅದನ್ನು ಔಷಧಿಯಂತೆ ಕಾಲ್ತೆಳಕೆ ಪಾದಗಳ ಕೆಳಗೆ ಸವರು. ಅಂದರೆ ಕಲ್ಲು, ಮುಳ್ಳು, ಹಳ್ಳ, ದಿನೆ, ಎಲ್ಲೇ ನಡೆದರೂ, ಕಾಲುಗಳಿಗೆ ಏನೂ ನೋವು ಆಗುವುದಿಲ್ಲ. ಅದರಂತೆಯೇ ಜೀವನದಲ್ಲಿ ಕಷ್ಟ, ನಷ್ಟ, ಸುಖ, ದುಃಖಗಳು ಬರುವಾಗ ಅಂತಃಕರಣ, ಮನಸ್ಸು, ಬುದ್ಧಿಯನ್ನು ಪ್ರಶಾಂತವಾಗಿಟ್ಟುಕೊ. ಮುಳ್=ಅಂದರೆ, ಜಿವನದಲ್ಲಿ ಬರುವ ಕಷ್ಟ, ನಷ್ಟ, ದುಃಖ, ನೋವು, ಬೇನೆ, ಇವುಗಳ ಮಧ್ಯ ತಲೆ ಭಾರವಾಗಿ ತಾನೇ ಕೆಳಗೆ ಬಾಗುತ್ತದೆ – ಮುಳ್ ತಲೆಯ ಬಾಗಿಪುದು. ಆದರೆ ನೆಲ ಹುಲ್ಲ ಹೊಡೆಯುವುದು. ಜೀವನದಲ್ಲಿ ಕಷ್ಟಗಳು ಬರಬಾರದು ಎಂದು ಕಾಯುವುದು ಜೀವನದ ಲಕ್ಷನವಲ್ಲ. ಇಲ್ಲವೇ ಜೀವನದಲ್ಲಿ ಬರುವ ಏರು, ತಗ್ಗು, ಲಾಭ, ನಷ್ಟ ಇವುಗಳಿಗೆ ಹೆದರುವುದು ಸಾಧನವಲ್ಲ.
ಆ ಮನಸ್ಸು, ಬುದ್ಧಿಗೆ ಜ್ಞಾನದ ಎಲೆ ಸವರು, ಅಂದರೆ ಆ ಎಲೆಯೇ ಔಷಧಿಯಾಗುತ್ತದೆ. ಜ್ಞಾನೇನೈವ ತು ಕೈವಲ್ಯಂ.
ಹೊರಗಿನ ಪ್ರಪಂಚದಲ್ಲಿ ಎಲ್ಲ ಕಷ್ಟ, ನಷ್ಟಗಳ, ಈ ಸಂಸಾರವೆಬ ನದಿಯನ್ನು ಜ್ಞಾನದ ಹಡಗಿನಲ್ಲಿ ಕುಳಿತು ಆನಂದದಿಂದ ದಾಟು. ಬಾಳ್ತನದ ತಂತ್ರವಿದು. ಹಿಂದಿನ ಋಷಿಗಳು ಬಾಳಿದ ರೀತಿ ಇದು.
ಅಮೃತ ಮತ್ತು ಮೃತ್ಯು ಎರಡು ದೇಹದಲ್ಲಿ ಪ್ರತಿಷ್ಠಿತವಾಗಿವೆ. ಮೋಹದ ದಾರಿ ಹಿಡಿದರೆ ಮೃತ್ಯುವನ್ನು ಸಂಧಿಸುತ್ತೇವೆ. ಸರಿಮಾರ್ಗದಲ್ಲಿ ನಡೆದರೆ ಅಮೃತವನ್ನು ಸೇರುತ್ತೇವೆ.
ಮಳೆಯ ಹೊಡೆತಕೆ ಸಿಕ್ಕಿ ಹಳೆಯಮೆನೆ ಬೀಳ್ವುದೇ |
ಇಳೆಗೆ ಬೇಸರ ತರುವ ದಿನದಿನದ ಮಾತು ||
ಅಳಿದ ಮನೆಯನು ಮತ್ತೆ ನಿಲಿಸಿ ಕಟ್ಟಿಸಿ ಬೆಳಕ- |
ಗಳಿಸುವವೊಲ್ ಯತ್ನಿಸಲೆ || ಮಂ ||
ಮಳೆಯ ಹೊಡೆತಕೆ ಸಿಕ್ಕಿ ಹಳೆಯ ಮನೆ ಬೀಳ್ವುದೇ |
ಮಳೆಗಾಲದಲ್ಲಿ ಧಾರಕಾರವಾಗಿ ಮಳೆ ಸುರಿಯುವಾಗ, ಪೇಪರಿನಲ್ಲಿ ಅಲ್ಲಿ ಮನೆಬಿತ್ತು ಇಲ್ಲಿ ಮನೆಬಿತ್ತು, ಎನ್ನುವ ಸಮಾಚಾರ ಇದ್ದೇ ಇರುತ್ತದೆ. ಮಳೆಯ ಹೊಡೆತಕ್ಕೆ ಹಳೆಯ ಮನೆಗಳೆಲ್ಲ ಕೊಚ್ಚಿಕೊಂಡು ಹೋಗುತ್ತವೆ. ಮಳೆಯ ಹೊಡೆತಕ್ಕೆ ಸಿಕ್ಕಿ ಹಳೆಯ ಮನೆ ಬೀಳ್ವುದೇ |ಇಳೆಗೆ ಬೇಸರೆ ತರುವ ದಿನದಿನದ ಮಾತು.
ಇದು ನಮಗೆ ಸಂಬಂಧಪಟ್ಟದ್ದಲ್ಲ. ಅಳಿದ ಮನೆಯನ್ನು ಮತ್ತೆ ನಿಲ್ಲಿಸಿ ಕಟ್ಟಿಸಿ ಬೆಳಕಗಳಿಸುವವೊಲ್
ಮಳೆಯ ಹೊಡೆತಕ್ಕೆ ಹಳೆಯ ಮನೆಗಳು ಬಿಳುವುದು ಸಹಜ. ಬಿದ್ದ ಮನೆಯನ್ನು ಮತ್ತೆ, ಹೊಸಪಾಯ ಹಾಕಿ ಕಟ್ಟು. ಹೊಸಮನೆ ಕಟ್ಟು. ಇದರ ಅರ್ಥ ಗೊರಪ್ರಪಂಚದಲ್ಲಿ, ಸಂಸಾರದಲ್ಲಿ ಪ್ರತಿಯೊಬ್ಬರಿಗೂ ಕಷ್ಟ, ನಷ್ಟ, ನೋವು, ಬೇನೆಗಳಿರುವುದು ಹೊಸದೇನಲ್ಲ. ಇದು ದಿನದಿನದ ಮಾತು ಆದರೆ?
ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ |
ನನೆಸಲಿ ನಿನ್ನೆಲ್ಲವು ಏನಾದೊಡೇನು ||
ಬಸವಳಿಯದಿರು ಜೀವ ವಸಿಸು ಶಿವಸತ್ವದಲಿ |
ಕುಶಲವಿರೆ ಗಟ್ಟಿಯಿರೆ || ಮಂ ||
ಕುಶಲ=ಸಂತೋಷ ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ ನನೆಸಲಿ ನಿನ್ನ ಎಲ್ಲ ಆಶೆಗಳು
ಜೀವನದಲ್ಲಿ ಎಷ್ಟೋ ಆಶೆ-ಆಕಾಂಕ್ಷೆಗಳು ಇದ್ದವು, ಅವು ಒಂದೂ ಈಡೇರಲಿಲ್ಲ. ಏನಾಯಿತು? ಬಸವಳಿಯದಿರು ಅಳುತ್ತ ಕುಳಿತುಕೊಳ್ಳಬೇಡ. ವಸಿಸು ಶಿವಸತ್ವದಲಿ
ಹೊರಪ್ರಪಂಚದಲ್ಲಿ, ಸಂಸಾರದಲ್ಲಿ ಪೆಟ್ಟುಗಳು ಬೀಳುವುದು, ನಷ್ಟಗಳಾಗುವುದು ವಿಶೇಷವೇನಲ್ಲ. ಪೆಟ್ಟುಗಳು ಬಿದ್ದಾಗಲೂ ಅವುಗಳನ್ನು ಸರಿಪಡಿಸಿಕೊ ಯಾಕೆಂದರೆ ಹೊರಗಿನ ಪ್ರಪಂಚ ಶಿವನ ಲೀಲಾರಂಗ ಎಲ್ಲರನ್ನೂ ಅವನೇ ಅತ್ತಿಂದಿತ್ತ ಹಾರಾಡಿಸುತ್ತಾನೆ. ಅದಕ್ಕೆ ಹೃದಯ ಮಧ್ಯದಲ್ಲಿ ಬೆಳಗುತ್ತಿರುವಂಥ ಶಿವಸತ್ವದಲ್ಲಿ ಪ್ರಶಾಂತವಾಗಿ, ಆನಂದವಾಗಿ ವಾಸಿಸು. ಇದೇ ಜೀವನ.
ಮಲವಿರದ ಮೈಯಿರದು ಕೊಳೆಯಿರದ ಮನವಿರದು |
ಗಳಿಗೆ ಗಳಿಗೆಯ ಬೆವರೆ ಬಾಳ್ವಿಕೆಯ ಕುರುಹು ||
ಕೊಳೆವುದಚ್ಚರಿಯಲ್ಲ ಕೊಳೆಯದಿಹುದಚ್ಚರಿಯೊ |
ಜಳಕವಾಗಿಸು ಬಾಳ್ಗೆ || ಮಂ ||
ಮಲವಿರದ ಮೈಯಿರದು, ಕೊಳೆಯಿರದ ಮನವಿರದು.
ಶರೀರದ ಸ್ವಾಭಾವಿಕವಾದ ಗುನ ಬೆವರುವುದು. ನಾವು ಬೆವರುತ್ತಿದ್ದೇವೆ. ಅಂದರೆ, ಅದು ಬಾಳ್ವಿಕೆಯ ಕುರುಹು. ನಾವು ಜೀವಂತವಾಗಿದ್ದೇವೆ ಎನ್ನುವುದರ ರಹಸ್ಯ ಅದು. ಮಲವಿರದ ಮೈ ಇರದು ಕೊಳೆಯಿರದ ಮನವಿರದು ಬೆವರದೆ ಇದ್ದವರು ಯಾರಾದರೂ ಇದ್ದಾರೆಯೇ? ಸಾಧ್ಯವಿಲ್ಲ. ಹಾಗೆಯೇ ಅಂತಃಕರಣ, ಮನಸ್ಸು, ಬುದ್ಧಿಯಲ್ಲಿ ರಾಗ, ದ್ವೇಷ, ಅಶಾಂತಿ, ದುಃಖ ತಳಮಳ
ತಲ್ಲಣ. ಇವು ಇರುವುದು ಮನಸ್ಸಿನ ಸಹಜವಾದ ಲಕ್ಷಣ. ಕೊಳೆವುದಚ್ಚರಿಯಲ್ಲ. ನಾವು ಬೆವರುತ್ತಾ ಇದ್ದೇವೆ ಎಂದು ಹೇಳುವುದು ವಿಶೇಷವೇನಲ್ಲ. ಕೊಳೆಯದಿಹುದಚ್ಚರಿಯೊ ಒಂದು ವೇಳೆ ಮನಸ್ಸಿಗೆ ಪೆಟ್ಟು ಬೀಳುವಾಗಲೂ ಅದು ಚಂಚಲವಾಗದೆ ಇರುವುದು ವಿಶೇಷ. ಜೀವನದಲ್ಲಿ ನಾನಾ ರೀತಿಯ ಏರು, ತಗ್ಗು, ಸುಖ, ದುಃಖ, ಕಷ್ಟ, ನಷ್ಟಗಳು ಬರುವುದು ಸಹಜ. ಅಂತಹ ಸಂದರ್ಭದಲ್ಲಿ ಜಳಕವಾಗಿಸು ಬಾಳ್ಗೆ ಆ ಮನಸ್ಸಿಗೆ ಸ್ನಾನ ಮಾಡಿಸು ಸ್ನಾನ ಮಾಡುಸುವದೆಂದರೇನು? ಮನಸ್ಸಿಗೆ ಜ್ಞಾನದ ಎಲೆ ಹಸುರ ಸವರು. ಜ್ಞಾನಗ್ನಿ ಸರ್ವಕರ್ಮಾಣಿ ಭಸ್ಮಸಾತ್ ಕುರುತೆ.
ಯಾವಜ್ಞಾನ? “ನಾನು” ಚಿದಾನಂದ ರೂಪ. ಶಿವೋಹಂ ಶಿವೋಹಂ ಎನ್ನುವುದು.
ಹೃದಯವನ್ನು ಬೆಳಗುತ್ತಿರುವಂಥ ಶುದ್ಧ ವಸ್ತು, ಆನಂದಸ್ವರೂಪ, ಶಾಂತಿಯುಧಾಮ ನಾನು. ಆ ಮನಸ್ಸನ್ನು ಕೆರಳಿಸಿ, ಕುಣಿಸಿ, ತಲ್ಲಣಿಸಿಕೊಂಡು, ಅಳುವಂತಹುದು ನನ್ನ ಸ್ವಧರ್ಮವಲ್ಲ. ಅದು ಬಾಳಲ್ಲ.
ಕಡು ಹೇಡಿಯಾರಯ್ಯಾ? ಬಡತನಕೆ ಹೆದರುವನು |
ಎಡರುಗಲನೆದುರಿಸಲಿಕೆಡೆಯಿಲ್ಲದವನು ||
ಜಡುಗುವನು ಸತ್ಯದುಲಿಯನುಕೇಳಿ ಜಗದೊಳಗೆ |
ನಡೆಸನವ ಜೀವನವ || ಮಂ ||
ಕಡು ಹೇಡಿಯಾರಯ್ಯಾ? ಹೊರ ಪ್ರಪಂಚದಲ್ಲಿ ಕಷ್ಟ, ನಷ್ಟ, ಸುಖ, ದುಃಖ, ಬರುವುದು ಸಹಜ. ಆದರೆ? ಅವುಗಳನ್ನು ಎದುರಿಸಲು ಅಂತಃಕರಣ, ಮನಸ್ಸು, ಬುದ್ಧಿಯಲ್ಲಿ, ಸರಿಯಾದ ಜ್ಞಾನವಿಲ್ಲದೆ ಹೆದರಿ ಅಳುತ್ತ ಕೂಡುವವನು, ಕಡುಹೇಡಿ – ಮತ್ತು ಎಡರುಗಳನು ಎದುರಿಸಲು ಎದೆಯಿಲ್ಲದವನು. ನಾವು ಭಗವಂತನನ್ನೂ ಪೂಜೆ ಮಾಡಿ, ಭಜನೆ ಮಾಡಿ, ವ್ರತಾದಿಗಳನ್ನು ಮಾಡಿ, ನಮಗೆ ಕಷ್ಟಗಳು ಬರಲೇಬಾರದೆಂದು ನಾವು ಎಷ್ಟೇ ಕೇಳಿಕೊಂಡರೂ. ಅವು ಪ್ರತಿಯೊಬ್ಬರ ಕರ್ಮನುಸಾರವಾಗಿ ಬಂದೇ ಬರುತ್ತದೆ. ಇದನ್ನೇ ದಾಸರು ಹೇಳಿದ್ದಾರೆ. ಬಂದದ್ದೆಲ್ಲಾ ಬರಲಿ ಗೋವಿಂದನ ಕೃಪೆಯೊಂದಿರಲಿ.
ಭಗವಂತನ ಕೃಪೆಯ ಗಾಳಿ ನಿರಂತರವು ಬೀಸುತ್ತಿರುತ್ತದೆ. ಈ ಸಂಸಾರವೆಂಬ ದೋಣೆ ಪಟ ಬಿಚ್ಚುವುಕೊಂದೇ ನಮ್ಮ ಕೆಲಸ. ಅವನ ಕೃಪೆ ಪಡೆಯುವುದಕ್ಕೆ ಪ್ರಯತ್ನಬೇಕು. ಅಂದರೆ? ಯಾರು ಹಂಬಲಿಸಿ, ಹಲುಬಿ, ಹೃತ್ಪೂರ್ವಕವಾಗಿ ಪ್ರಾಥಿಸುತ್ತಾರೋ ಅವರ ಕರೆಗೆ ಓಗೊಟ್ಟು, ಅವರ ಮಾಯೆಯ ಆವರಣವನ್ನು ಭಗವಂತ ಸರಿಸಿಕೊಡುತ್ತಾನೆ. ಸಂಸಾರಿಗಳ ಮೇಲೆ ಅವನ ಕೃಪೆ ವಿಶೇಷ. ಸಂಸಾರಿಗಳ ತಲೆಯ ಮೇಲೆ ಸಾಕಷ್ಟು ಭಾರವಿದೆ. ಅವರು ಸಂಸಾರದ ದುಃಖ ಕಷ್ಟಗಳ ಬೆಂಕಿಯಲ್ಲಿ ಬೇಯುತ್ತಿದ್ದಾರೆ. ಆದ್ದರಿಂದ ಅವರ ಸ್ವಲ್ಪ ಪ್ರಾರ್ಥಿಸಿದರೂ ಸಾಕು. ಅವನು ಅವರ ಮೊರೆ ಕೇಳಿ ಉದ್ಧರಿಸುತ್ತಾನೆ.
ಜೀವನದಲ್ಲಿ ಕಷ್ಟ, ನಷ್ಟಗಳು, ಸುಖ, ದುಃಖಗಳು. ಬಂದೇ ಬರುತ್ತವೆ. ಅವುಗಳ ಮಧ್ಯದಲ್ಲಿ ಅಂತಃಕರಣ, ಮನಸ್ಸು, ಬುದ್ಧಿಯನ್ನು ಪ್ರಶಾಂತವಾಗಿ ಇಟ್ಟುಕೊಳ್ಳುವುದೇ ಸಾಧನೆ.
ಆದರೆ? ಸತ್ಯದುಲಿಯನು ಕೇಳಿ ಜಗದೊಳಗೆ ನಡೆಸನವ ಜೀವನವ.
ನಾವು ಈಜು ಕಲಿಯಬೇಕಾದರೆ ನೀರಿಗಿಳಿಯಲೇಬೇಕು. ಆದರೆ ನಮ್ಮ ಬಯಕೆ ಏನು? ನಾವು ಈಜೂ ಕಲಿಯಬೇಕು. ಆದರೆ ನೀರಿನಲ್ಲಿಳಿಯಬಾರದು, ನಮ್ಮ ಬಟ್ಟೆ ಒದ್ದೆಯಾಗಬಾರದು ಎಂಬುದು. ಅದರಂತೆಯೇ ಕಾರೂ ನಡೆಸಬೇಕು, ಬೀದಿಯಲ್ಲಿ ಯಾರೂ ಬರಬಾರದು, ಒಬ್ಬನೇ ಹೋಗುತ್ತಾ ಇರಬೇಕು ಎಂಬುದು.
ಇದರಂತೆಯೇ ನಮ್ಮ ಜೀವನ ಯಾವ ಕಷ್ಟನಷ್ಟಗಳಿಲ್ಲದೆಯೆ ಸುಖಮಯವಾಗಿಬೇಕು ಎಂಬುದು, ಇದು ಸಾಧ್ಯವೇ?
ಅಬ್ಬಬ್ಬಾ! ಬೀದಿಯಲ್ಲಿ ಕಾರು ನಡೆಸುವಾಗ ಅದೇನು ವಾಹನಗಳು ಬರುತ್ತವೆ. ಎಡದಿಂದ, ಬಲದಿಂದ, ಎದುರಿಗ, ಹಿಂದುಗಡೆಯಿಂದ, ಮೇಲಿನಿಂದ ಒಂದು ಇಲ್ಲ. ಇಂತಹ ವಾಹನಗಳ ಸಂಚಾಲನ ಮಧ್ಯದಲ್ಲಿ ಆಕಡೆ, ಈಕಡೆ ನೋಡಿಕೊಂಡು ತನ್ನ ವಾಹನವನ್ನು ಸುರಕ್ಷಿತವಾಗಿ ಹೊಡೆದುಕೊಂಡು ಹೋಗುವುಕೊಂದೇ ದಾರಿ. ಅದರಂತೆ ಜೀವನದಲ್ಲಿ ಬಂದದ್ದೆಲ್ಲ ಬರಲಿ, ಗೋವಿಂದನ ಕೃಪೆಯೊಂದಿರಲಿ ಎಂದು ಗೋವಿಂದನನ್ನು ನಂಬಿ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಂಡು ಬಾಳುವುದೇ ಗೋಳು.
ಇಲ್ಲವಾದರೆ ಬಾಳೆಲ್ಲ ಬರೀ ಗೋಳು.
ಕಷ್ಟಭಯ ತೋರ್ದಂದು. ನಷ್ಟನಿನಗಾದಂದು |
ದೃಷ್ಟಿಯನು ತಿರುಗಿಸೊಳಗಡೆಗೆ ನೋಡಲ್ಲಿ ||
ಸೃಷ್ಟಿಯಮೃತದ್ರವಂ ಸ್ರವಿಸುವುದು ಗುಪ್ತಿಯಿಂ |
ಪುಷ್ಟಿಗೊಳ್ಳದರಿಂದೆ || ಮಂ ||
ಕಷ್ಟ ಭಯತೋರ್ದಂದು ನಷ್ಟನಿನಗಾದಂದು.
ಜೀವನದಲ್ಲಿ ಎಲ್ಲ ಕಡೆಯಿಂದಲೂ ವಿಚಿತ್ರ ರೀತಿಯಲ್ಲಿ ಪೆಟ್ಟುಗಳು ಬೀಳುವಾಗ, ಭಯವಾಗುವುದು ಸ್ವಾಭಾವಿಕ, ಪೆಟ್ಟುಗಳು ಬೀಳುತ್ತಾ ಇವೆ, ಎಂದರೆ? ಅವನ್ನು ತಡೆದುಕೊಳ್ಳುವ ಶಕ್ತಿ ಇರುವುದರಿಂದಲೇ ಎಂದು ಅರ್ಥ. ಅಂತಹ ತಡೆದುಕೊಳ್ಳುವ ಶಕ್ತಿ ಇರುವುದರಿಂದಲೇ ನಮ್ಮ ಪರೀಕ್ಷೆಗಾಗಿ ಪೆಟ್ಟುಗಳು ಬೀಳುವುದು. ಮನಸ್ಸು, ಬುದ್ಧಿಯಲ್ಲಿ, ಖಂಡಿತವಾಗಿ ಅಪಾರಶಕ್ತಿಯಿದೆ. ಆದಕಾರಣ ಮನಸ್ಸನ್ನು ಕೆರಳಲು ಬಿಡದೆ ಒಳಗಡೆ ನೋಡಲ್ಲಿ
ಮನಸ್ಸನ್ನು ಪ್ರಾಶಾಂತತೆಯಿಂದ ಪೂಜೆಯೋ, ಭಜನೆಯೋ, ಪ್ರಾರ್ಥನೆಯೋ, ಕೀರ್ತನೆಯೋ, ಶ್ರವಣದ ಮೂಲಕವೋ ದೃಷ್ಟಿಯನ್ನು ತಿರುಗಿಸಿ ಒಳಗಡೆ ನೋಡಲ್ಲಿ. ಆ ಸೃಷ್ಟಿಕರ್ತ, ಪರಮಾತ್ಮ, ವಿಷ್ಣು, ಶಾಂತಿಧಾಮದಲ್ಲಿ, ಅಂದರೆ ಹೃದಯದಲ್ಲಿ ಆನಂದವಾಗಿದ್ದಾನೆ. ಹೃದಯ ಗುಹೆಯ ಮಧ್ಯೆ ಕೇವಲಂ ಬ್ರಹ್ಮಮಾತ್ರಂ. ಆದ್ದರಿಂದ ಕಷ್ಟ ಭಯ ತೋರ್ದಂದು ನಷ್ಟನಿನಗಾದಂದು ದೃಷ್ಟಿಯನು ತಿರುಗಿಸೊಳಗಡೆಗೆ ನೋಡಲ್ಲಿ ಆನಂದ ಒಳಗಡೆ ಹೃದಯದಲ್ಲಿದೆ. ಪುಷ್ಟಿಗೊಳ್ಳದರಿಂದೆ.
ಮನಸ್ಸು, ಬುದ್ಧಿ, ಪ್ರಶಾಂತವಾಗಿ ಒಳಗಡೆ ಅಂದರೆ ಹೃದಯ ಗುಹೆಯ ಮಧ್ಯದಲ್ಲಿರುವ ಪರಮಾತ್ಮನಲ್ಲಿ, ಸ್ಥಿರವಾಗಿ ನಿಂತಾಗ, ಅಲ್ಲಿ ಸ್ರವಿಸುವುದು ಒಳಗಡೆ ಆನಂದದ ಝುರಿ. ಒಳಗಡೆ, ಆನಂದದ ಝುರಿಯೇ ಇದೆ. ಅದನ್ನು ಕಳೆದುಕೊಳ್ಳಬೇಡ.
ಮನಸ್ಸಿಗೆ ಬಿದ್ದ ಪೆಟ್ಟುಗಳನ್ನು ಯಾರು ತಕ್ಷಣದಲ್ಲಿ ಮರೆಯುತ್ತಾರೋ ಅವರು ಜ್ಞಾನಿಗಳು ಸ್ವಲ್ಪ ದಿವಸಗಳ ನಂತರ ಪೂಜೆ, ಭಜನೆ, ಜಪ. ಇವುಗಳಲ್ಲಿ ನಿಧಾನವಾಗಿ ಮರೆಯುತ್ತಾರೋ ಅವರು ಸಾಧಕರು. ಯಾರು ಅಂತಹ ಪೆಟ್ಟು ನೋವನ್ನು, ಮರೆಯದೆ, ಅದನ್ನೇ ನೆನಪಿಸಿಕೊಳ್ಳುತ್ತ ಅಳುತ್ತ ಬದುಕುತ್ತಾರೋ ಅವರೇ ಸಂಸಾರಿಗಳು.
ಬೆತ್ತಲೆಯ ನೀಂ ಬಂದೆ, ಬೆತ್ತಲೆಯೆ ನೀಂ ಪೋಪೆ |
ವಸ್ತುವೇಷಗಳೆಲ್ಲ ನಡುವೆ ನಾಲ್ಕು ದಿನ ||
ಚಟ್ಟಕ್ಕೆ ನಿನ್ನನೇರಿಪ ಮುನ್ನ ನೀನಾಗಿ |
ಕಿತ್ತೆಸೆಯೊ ಕಂತೆಗಳ || ಮಂ ||
ಬೆತ್ತಲೆಯೆ ನೀಂ ಬಂದೆ, ಬೆತ್ತಲೆಯೆ ನೀಂ ಪೋಪೆ.
ಮಾನವನು ಹುಟ್ಟಿ ಬರುವಾಗ ಬಂದದ್ದು ಬೆತ್ತಲೆ. ಏನನ್ನೂ ತರಲಿಲ್ಲ ಪ್ರಪಂಚವನ್ನು ಬಿಟ್ಟು ಹೋಗುವಾಗಲೂ ಬೆತ್ತಲೆಯೇ, ಏನನ್ನೂ ಒಯ್ಯುವ ಹಾಗಿಲ್ಲ. ಮೈಮೇಲೆ ಆಭರಣ, ಹೊಸ ವಸ್ತ್ರಾಲಂಕಾರಗಳಿದ್ದರೂ, ಸ್ಮಶಾನದ ಆಚೆಕಡೆ, ಏನನ್ನೂ ತೆಗೆದುಕೊಂಡು ಹೋಗುವ ಹಾಗಿಲ್ಲ. ವಸ್ತ್ರವೇಷಗಳೆಲ್ಲ ನಡುವೆ ನಾಲ್ಕುದಿನ. ಡಿಂಬಿನೊಳು ಪ್ರಾನವನ್ನು ಕಾಂಬ ಸೂತ್ರದ ಗೊಂಬೆಯಂತೆ ಎಂದಿಗಾದರೊಂದುದಿನ ಸಾವು ತಪ್ಪದು.
ನಾವು ಜನ್ಮ ತಾಳಿದ ಮೇಲೆ, ಮೃತ್ಯುವು ಕೂಡ ನಮ್ಮ ಹಿಂದೆಯೇ ಬಂದಿರುತ್ತದೆ. ಜಾತಸ್ಯ ಮರಣಂ ಧೃವಂ ಹುಟ್ಟಿದ ಮನುಷ್ಯ, ಒಂದು ದಿವಸ ಸಾಯಲೇಬೇಕು. ಇದು ಸೃಷ್ಟಿಯ ನಿಯಮ.
ಆದರೆ? ಚಟ್ಟಕ್ಕೆ ನಿನ್ನನೇರಿಪಮುನ್ನ ನೀನಾಗಿ ಕಿತ್ತೆಸೆಯೊ ಕಂತೆಗಳ. ಮನಸ್ಸಿನಲ್ಲಿರುವಂಥ ನೋವು, ದುಃಖ, ಕಳವಳ, ಅಶಾಂತಿ, ಇವುಗಳ ಕಂತೆಗಳನ್ನು ನಿನ್ನ ಮನಸ್ಸಿನಿಂದ ಕಿತ್ತು ಎಸೆ. ಅಂದರೆ, ಕೊನೆಯ ಘಳಿಗೆಯಲ್ಲಿ ಪ್ರಾಣ ಬಿಡುವಾಗ ಮನಸ್ಸು ಪ್ರಾಶಂತವಾಗಿರಲು ಸಾಧ್ಯ.
ಶ್ರೀಕೃಷ್ಣ ಪರಮಾತ್ಮನೇ ಹೇಳಿದ್ದಾನೆ. “ಅಂತ್ಯಕಾಲದಲ್ಲಿ ನನ್ನನ್ನು ಯಾವ ರೂಪದಲ್ಲಿ ಸ್ಮರಿಸಿದರೂ, ಅದು ಭಗವಂತ ಸಾನ್ನಿಧ್ಯವನ್ನು ತೋರಿಸಬಲ್ಲದು.”
ದೇಹ ಬಿಡುವ ಕಾಲದಲ್ಲಿ, ಭಕ್ತನು ಯಾವ ಭಗವತಸ್ವರೂಪವನ್ನು ಸ್ಮರಣೆ ಮಾಡಿಕೊಳ್ಳುತ್ತಾನೋ, ಆ ರೂಪದಲ್ಲಿಯೇ ಭಗವಂತನು ಅವನಿಗೆ ದರ್ಶನ ಕೊಡುತ್ತಾನೆ.
ಈ ಕಾರಣದಿಂದಲೇ ನಮ್ಮಲ್ಲಿ ಮಕ್ಕಳಿಗೆ, ದೇವರ ಹೆಸರನ್ನು ಅಥವಾ ಗುರುಗಳ ಹೆಸರನ್ನು, ಇಡುವುದು ಪದ್ಧತಿ. ಮನುಷ್ಯ ತನಗೆ ಅವಸಾನ ಕಾಲ ಬಂತೆಂದು ತೋರಿದಾಗ, ತನಗೆ ಅತ್ಯಂತ ಪ್ರಿಯರಾದವರನ್ನು ನೆನಸಿಕೊಳ್ಳುವುದು ಸ್ವಾಭಾವಿಕ. ಆ ಕಾರಣಕ್ಕಾದರೂ, ಭಗವನ್ನಾಮ ಉಚ್ಚಾರಣೆಯಾಗಿ, ಭವನ್ಮಹಿಮೆ ಮನಸ್ಸಿಗೆ ಹೊಳೆಯಲೆಂಬುದು ಪೂರ್ವಿಕರ ಆಶಯ.
ಸಾವಿನ ಸಂದರ್ಭವೆಂದರೆ ಕೊನೆಯ ಘಳಿಗೆಯಲ್ಲಿ ಮಾತ್ರವಲ್ಲ. ಯಾರು ಪ್ರತಿಕ್ಷನವೂ, ದಿನವಿಡೀ, ತನ್ನ ಮನಸ್ಸಿನ ಪ್ರಶಾಂತತೆಯನ್ನು ಕಾಪಾಡಿಕೊಡಿರುತ್ತಾರೋ, ಅವರ ಮನಸ್ಸು ಕೊನೆಯ ಘಳಿಗೆಯಲ್ಲಿಯೂ ಪ್ರಶಾಂತವಾಗಿ ನಿಲ್ಲುತ್ತದೆ.
ನೋವಿರದೆ ಸಾವು ದೈನ್ಯತೆಯುಳಿದ ಜೀವಿತವು |
ದೈವಪದ ಸಾಯುಜ್ಯ ದೇಹ ಬಿಟ್ಟಂದು ||
ಮೂವರಗಳಿವನು ವರಿಸಿದ ಪೂರ್ವಿಕರ್ ಸಾರ |
ಕೋವಿದರ್ ಬೇಡಂತು || ಮಂ ||
೧. ನೋವಿರದೆ ಸಾವು ಅಂದರೆ ಅನಾಯಾಸೇನೆ ಮರಣಂ.
೨. ದೈನ್ಯತೆಯುಳಿದ ಜೀವಿತವು ಅಂದರೆ ವಿನಾ ದೈನ್ಯೇನೆ ಜೀವನಂ
೩. ದೈವಪದ ಸಾಯುಜ್ಯ ಇವು ಮೂರು ಹಿರಿಯರ ತಾರಕ ಮಂತ್ರಗಳು. ಪ್ರತಿ ದಿವಸವೂ ಹಿರಿಯರಿಗೆ ಪೂಜೆ, ಜಪ, ಪ್ರಾರ್ಥನೆಯಾದ ನಂತರ ಪರಮಾತ್ಮನಿಗೆ ಇವು ಮೂರು ವರಗಳನ್ನು ಪಾಲಿಸೆಂದು ಬೇಡಿಕೊಳ್ಳುವಂಥ ಪದ್ಧತಿ ಇತ್ತು.
೧) ಅನಾಯಾಸೇನ ಮರಣಂ. ನಾನು ಯಾರುಗು ಭಾರವಾಗದ ಹಾಗೆ ನನಗೆ ಮರಣ ಬರಲಿ ೨) ವಿನಾದೈನ್ಯೇನ ಜೀವನಂ. ನಾನು ಯಾರಿಗೂ ಕೈಯೊಡ್ಡದ ಹಾಗೆ ಇಡು. ೩) ದೈವಪಾದ ಸಾಯುಜ್ಯ. ದೇಹ ಬಿಡುವ ಕಾಲಕ್ಕೆ ಅಂದರೆ ಅಂತ್ಯ ಕಾಲಕ್ಕೆ ನಿನ್ನನ್ನೇ ಚಿಂತಿಸಿ ಶರೀರ ಬಿಡುವ ಹಾಗೆ ಮಾಡು ಕೃಷ್ಣ.
ಪ್ರತಿದಿವಸವೂ ಈ ಮೂರು ವರಗಳನ್ನು ಭಕ್ತಿ, ಶ್ರದ್ಧೆಯಿಂದ ಪೂಜೆ ಮುಗಿಸಿದ ನಂತರ, ಪರಮಾತ್ಮನಲ್ಲಿ ಹಿಂದಿನವರಿಗೆ ಕೇಳಿಕೊಳ್ಳುವ ರೂಢಿ ಇತ್ತು. ಅವರು ಸಾರ ಕೋವಿದರು ಅಂದರೆ ಪೂಜೆಯ ಮಹತ್ವವನ್ನು ತಿಳಿದುಕೊಡವರು ವರಗಳ ಮಹತ್ವವನ್ನು ಅರಿತವರು.
ಅಂತ್ಯಕಾಲ ಇದು ಎಂದೋ ಯಾವಾಗಲೋ ಬರಬಹುದು. ಮೃತ್ಯು ನಮಗೆ ಮುನ್ನೆಚ್ಚರಿಕೆ ಕೊಟ್ಟು ಕಾದಿದ್ದು ಆಮೇಲೆ ಬರುವುದಲ್ಲ. ಹೇಳದೆ, ಕೇಳದೆ, ಬರುತ್ತದೆ. ಆದ್ದರಿಂದ ವಿವೇಕಿಯಾದವರು, ಯಾವಾಗಲೂ ಅದಕ್ಕೆ ಸಿದ್ಧರಾಗಿರುತ್ತಾರೆ.
ಪ್ರತಿಯೊಬ್ಬರೂ ಕೂಡ ನೋವಿರದಂತಹ ಸಾವು, ದೈನ್ಯತೆ ಉಳಿಯದಂಥ ಜೀವಿತ, ದೈವಪದ ಸಾಯುಜ್ಯ ಇವು ಮೂರು ವರಗಳನ್ನು ಕೇಳಿಕೊಳ್ಳಬೇಕು. ಪ್ರತಿದಿವಸವೂ ಪರಮಾತ್ಮ ಕೊನೆಯ ಕಾಲ ಇದೇ ರೀತಿಯಾಗಿ ಬರಲಿ, ಎಂದು ಕೇಳಿಕೊಂಡರೆ, ಕೊನೆಯ ಕಾಲ ಹಾಗೆಯೇ ಬರುತ್ತದೆ. ನಮ್ಮ ಸಂಕಲ್ಪದಂತೆ ಪರಮಾತ್ಮ ಆಶಿರ್ವದಿಸುತ್ತಾನೆ.
ಪ್ರತಿದಿವಸವೂ, ಪ್ರತಿಕ್ಷಣವೂ, ಮನಸ್ಸು ಪ್ರಶಾಂತವಾಗಿ ತಲ್ಲಣಗೊಳ್ಳದೆ, ಜೀವನದಲ್ಲಿ ಬರುವ ಏರು, ತಗ್ಗುಗಳಿಗೆ ಧೈರ್ಯದಿಂದ ಇರುವ ಹಾಗೆ ಆಶಿರ್ವದಿಸು ಕೃಷ್ಣ ಎಂದು ಪ್ರಾರ್ಥಿಸಿದರೆ, ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು ಸಮರ್ಥ ರೀತಿಯಲ್ಲಿ ಎದುರಿಸುತ್ತೇನೆನ್ನುವ ಧೈರ್ಯ ತಾನೇ ಬರುತ್ತದೆ. ಮನಸ್ಸೂ ಪ್ರಶಾಂತವಾಗಿ ಉಳಿಯುತ್ತದೆ. ಇದು ಮೊದಲನೆಯ ಸಾಧನೆ.
ಎರಡನೆಯದು ಪ್ರತಿ ನಿಮಿಷವೂ, ಪ್ರತಿಕ್ಷಣವೂ, ಮನಸ್ಸು ಪ್ರಶಾಂತವಾಗಿದ್ದರೆ ಅಂತ್ಯಕಾಲವೂ ಹಾಗೆಯೇ ಬರುತ್ತದೆ.
ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ- |
ಯಾತುರದಿ ಕೀಳೆ ಹರಿಯುವದು ಚೂರಾಗಿ ||
ಚೇತಸದ ಪಾಡಂತು ಜಗದ ಮುಳ್ಗಳಿನದನು |
ಸೈತರಿತು ಬಿಡಿಸಿಕೊಳೊ || ಮಂ ||
ಕೇತಕಿ ಗುಲಾಬಿ ಪೊದೆಗಳ ಮೇಲೆ ಬಿದ್ದರಿವೆ-
ಯಾತುರದಿ ಕೀಳೆ ಹರಿಯುವುದು ಚೂರಾಗಿ
ಒಬ್ಬ ಹೆಣ್ಣು ಮಗಳು ಗುಲಾಬಿ, ಕೇತಕಿ ತೋಟದಲ್ಲಿ ಆ ಕಡೆ, ಈ ಕಡೆ ಹೋಗುವಾಗ ಅವಳ ಸೆರಗು ಗುಲಾಬಿ ಗಿಡದ ಮೇಲೆ ಬಿದ್ದರೆ, ಅದರ ಮುಳ್ಳು ಅವಳ ಸೆರಗನ್ನು ಹಿಡಿದುಕೊಂಡು ಬಿಡುತ್ತದೆ. ಕೇತಕಿ ಗಿಡದ ಹತ್ತಿರ ಹೋದವರ ಅನುಭವವೂ ಇದೇ. ಗುಲಾಬಿ ಗಿಡದಲ್ಲಿ ಎಲ್ಲ ಕಡೆಗೆ ಮುಳ್ಳುಗಳಿರುವುದರಿಂದ ಬಟ್ಟೆಯನ್ನು ಗಟ್ಟಿಯಾಗಿ ಹಿಡಿಯುತ್ತದೆ. ಆತುರದಿ ಅವಸರದಿಂದ ಬಟ್ಟೆಯನ್ನು ಜಗ್ಗಿದರೆ, ಬಟ್ಟೆ ಹರಿದು ಹೋಗುತ್ತದೆ. ತಾಳ್ಮೆಯಿಂದ ಒಂದೊಂದಾಗಿ ಆ ಮುಳ್ಳುಗಳನ್ನು ಬಿಡಿಸಿಕೊಳ್ಳಬೇಕು. ಚೇತಸದ ಪಾಡಂತು ನಮ್ಮ ಮನಸ್ಸಿನ ಕಥೆಯೂ ಇದೆ. ಜಗದ ಮುಳ್ಳುಗಳಿಂದ ಅದನು ಸೈತರಿಸಿ ಬಿಡಿಸಿಕೊಳೊ ಜಗತ್ತಿನ ಮುಳ್ಳುಗಳೆಂದರೆ, ಜಗತ್ತಿನ ರುಚಿ, ಹೊರಪ್ರಪಂಚದ ರುಚಿ, ನಮ್ಮಲ್ಲಿ ಬಗೆಬಗೆಯ ಆಶೆಗಳನ್ನು ಕೆರಳಿಸಿ, ಚೇಷ್ಟೆ ಮಾಡಿಸುತ್ತದೆ. ಅವೇ ಆಶಾಪಾಶಗಳು. ಈ ಪಾಶಗಳಲ್ಲಿ ಸಿಕ್ಕು ಬೀಳುವುದೇ ಸಂಸಾರ.
ಈ ಸಂಸಾರದಲ್ಲಿ ಒಂದೇ ಎರಡೇ ಅನೇಕ ಮುಳ್ಳುಗಳು ಅಂದರೆ, ನಮ್ಮ ಅಂತಃಕರಣಕ್ಕೆ ಬೀಳುವಂಥ ಪೆಟ್ಟುಗಳು ಒಂದೇ ಎರಡೇ? ಒಂದು ಪೆಟ್ಟು ಬಿದ್ದು ಅದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಇನ್ನೊಂದು ಪೆಟ್ಟು ಬೀಳುತ್ತದೆ. ಇನ್ನೊಂದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಇನ್ನೊಂದು ಪೆಟ್ಟು ಬೀಳುತ್ತದೆ. ಇನ್ನೊಂದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಬೀಳುತ್ತದೆ. ಜಗತ್ತಿನ ಕಥೆಯೇ ಹೀಗೆ.
ನಾವು ಪ್ರಪಂಚಕ್ಕೆ ವಿರುದ್ಧವಾಗಿ ನಮಗೆ ಕಷ್ಟ, ನಷ್ಟ, ನೋವು ಆಗಲೇಬಾರದು ಎಂದರೆ ಅದು ತಪ್ಪು. ಜೀವನದಲ್ಲಿ ಯಾರೂ ಯಾರನ್ನೂ ಕಾಪಾಡಲಾರರು. ಹೊರಗಿನ ಪ್ರಪಂಚದಲ್ಲಿ ಬಹಳ ಎಚ್ಚರವಾಗಿರಬೇಕು.
ದಿನದಂತೆ ದಿನವಿಲ್ಲ. ಮನದಂತೆ ಮನವಿಲ್ಲ |
ಜನಜನವು ಚಣಚಣವು ನವನವ್ಯ ಸೃಷ್ಟಿ ||
ಗುಣರುಚಿಗೆ ಮುಪ್ಪಿಲ್ಲವನುಭವಕೆ ಮಿತಿಯಿಲ್ಲ |
ಅನವರತ ಚಲಿತ ಜಗ || ಮಂ ||
ಹೊರಗಿನ ಪ್ರಪಂಚವು ಬದಲಾಗುತ್ತಲೇ ಇರುತ್ತದೆ. ದಿನದಂತೆ ದಿನವಿಲ್ಲ, ಮನದಂತೆ ಮನವಿಲ್ಲ, ಜನಜನವು ಚಣಚಣವು ನವನವ್ಯ ಸೃಷ್ಟಿ. ಅಂತಃಕರಣ, ಮನಸ್ಸು, ಬುದ್ಧಿ, ಯಾವ ರೀತಿ ಚಂಚಲವೇ, ಜಗತ್ತು ಕೂಡ ಅದೇ ರೀತಿಯಾಗಿ ಅಷ್ಟೇ ಚಂಚಲವಾಗಿದೆ. ಈಗ ಇದ್ದಂತೆ ಇನ್ನೊಂದು ಕ್ಷಣಕ್ಕೆ ಇರುವುದಿಲ್ಲ. ಇಂತಹ
ವಿಚಿತ್ರವಾದ ಪ್ರಪಂಚದಲ್ಲಿ, ಜೀವನದಲ್ಲಿ ಬರುವ ಕಷ್ಟಗಳನ್ನು ಪರಿಹರಿಸಲು ಯಾರಿಗೆ ಸಾಧ್ಯ? ಯಾರಿಗೂ ಸಹಾಯ ಮಾಡಲು ಸಾಧ್ಯವಿಲ್ಲ. ಕಾರಣ ಯಾರಾದರೂ ಸಹಾಯಕ್ಕೆ ಬರಬಹುದೆಂದು ತಿಳಿಯುವುದು ಬೇಡ.
ಎಡಕೆ ತಿರುಗಲೆ ಬೇದ, ಬಲಕೆ ತಿರುಗಲೆ ಬೇಡ |
ಒಡನಾಡಿಯೆತ್ತಲೆಂದುಸಿರೆತ್ತ ಬೇಡ ||
ನಡೆ ನಿನ್ನ ಪಾಡ ನೀನಡರಲೊಮ್ಮೆಲೆಯಿಂದೆ |
ಬಿಡುಗಡೆಯೊ ಒರ್ತನದಿ || ಮಂ ||
ಒರ್ವನೇ ಧರ್ಮಯಾತ್ರೆಯ ಚರಿಸೆ ಸಿದ್ಧನಿರು |
ಖರ್ವಪಾದಗಳಿರಲಿ ಗುರಿ ದೂರವಿರಲಿ |
ಸರ್ವರುಂ ತೊರೆದಿರಲಿ ಶರ್ವರಿಯ ಕಾಳಿರಲಿ ||
ನಿರ್ವಂಚನೆಯೊ ಮುಖ್ಯ || ಮಂ ||
ಹೊರಪ್ರಪಂಚದಲ್ಲಿ ಎಡಕೆ ತಿರುಗಲೆ ಬೇಡ, ಬಲಕೆ ತಿರುಗಲೆ ಬೇಡ, ಒಡನಾಡಿಯೆತ್ತಲೆಂದುಸಿರೆತ್ತ ಬೇಡ.
ಒರ್ತನದಿ = ಒಬ್ಬನಾಗಿ ಬಂದಿದ್ದಿ. ಬೆತ್ತಲೆಯೆ ನೀಂ ಬಂದೆ ಪ್ರಪಂಚಕ್ಕೆ ಬರುವಾಗ ಬೆತ್ತಲೆಯಾಗಿ ಬಂದಿದ್ದೀಯಾ-ಬರಿಗೈಯಿಂದ . ಬರಿಗೈಯಿಂದ ಬೆತ್ತಲೆಯ ನೀಂ ಪೋಪೆ ಪ್ರಪಂಚವನ್ನು ಬಿಟ್ಟು ಹೋಗುವಾಗ ಬೆತ್ತಲೆಯಾಗಿಯೆ ಹೋಗುತ್ತೀಯಾ ಬರಿಗೈಯಿಂದ. ಏನಿದ್ದರೂ ನಡುವೆ ನಾಲ್ಕು ದಿನದ ಸಂಸಾರ. ಒಬ್ಬನಾಗಿ ಬಂದದ್ದು. ಒಬ್ಬನಾಗಿ ದುಡಿದದ್ದು. ಒಬ್ಬನೇ ಜೀವಿಸುತ್ತಾ ಇದ್ದಿ. ಮಧ್ಯದಲ್ಲಿ ಬಾಳ ಸಂಗಾತಿಯಾಗಿ ಹೆಂಡತಿ ಬಂದದ್ದು. ಹಾಗೆಯೇ ಗಂಡನೂ. ಬಾಳಿನಲ್ಲಿ ಹೆಂಡತಿ ಕೊನೆಯವರೆಗೂ ನೋಡುವಳೆಂಬ ಭರವಸೆ ಇದ್ದರೆ, ಬಾಳಿನಲ್ಲಿ ಗಂಡನು ಕೊನೆಯವರೆಗೆ ನೋಡುವನೆಂಬ ಭರವಸೆ ಅವಳಿಗೆ. ಆದರೆ? ಜೀವನ ನಾವು ಎಣಿಸಿದಂತಲ್ಲ. ಜೀವನ ಯಾತ್ರೆ ಅಷ್ಟು ಸುಗಮವಾದದ್ದಲ್ಲ. ಅವನ ಕಣ್ಣು ಮುಂದೆಯೇ ಹೆಂಡತಿ ಕೈಬಿಟ್ಟು ಹೋದಳು. ಹಾಗೆಯೇ ಅವಳ ಕಣ್ಣು ಮುಂದೆಯೇ ಅವಳ ಕೈ ಬಿಟ್ಟುಹೋಗುವುದುಂಟು. ಮಕ್ಕಳು, ಅಂದರೆ ಮಗನೇ ಇರಲಿ, ಇಲ್ಲವೆ ಮಗಳೇ ಇರಲಿ. ಅವರಾದರೂ ನೋಡಿಕೊಳ್ಳುತ್ತಾರೆಂಬ ಭರವಸೆಯಿಂದ ಅವರಿಗೆ ವಿದ್ಯೆ ಕೊಟ್ಟು ಬೆಳೆಸಿಯೂ ಆಯಿತು. ಆದರೆ ದುರ್ದೈವದಿಂದ ಮಕ್ಕಳೂ ಅವರ ಕಣ್ಣು ಮುಂದೆಯೇ ಹೋದರು ಇನ್ನು ಮುಂದೆ ಜೀವನದಲ್ಲಿ ಬದುಕುವುದು ಹೇಗೆ? ಎಂದು ಏನೂ ತೋಚದೆ ಅಳುತ್ತ ಕೂಡುವುದು ಸಹಜ. ಆದರೆ ಡಿ.ವಿ.ಜಿ.ಯವರು ಹೇಳುವುದು ಬದುಕಲು ಸಾಧ್ಯವಿದೆ ಎಂದು ನಾವು ಹುಟ್ಟಿ ಬರುವಾಗ ಒಬ್ಬರೇ ಬಂದದ್ದು. ಹೆಂಡತಿ ಇರಲಿಲ್ಲ, ಗಂಡನಿರಲಿಲ್ಲ, ಮಕ್ಕಳಿರಲಿಲ್ಲ… ಇವರೆಲ್ಲರೂ ಜೀವನದ ಮಧ್ಯೆ, ಅಂದರೆ ನಡುವೆ ಸೇರಿಕೊಂಡದ್ದು. ಅವರ ಜೊತೆಯಲ್ಲಿರುವಾಗ ಇದ್ದಷ್ಟು ನಾಲ್ಕು ದಿವಸ ಸುಖದಿಂದ ಸಂತೋಷದಿಂದ ಇರೋಣ. ಅಕಸ್ಮಾತ್, ಹೆಂಡತಿ ಹೋದಳು, ಗಂಡ ಹೋದ, ಮಕ್ಕಳು ಹೋದರು. ಆದರೂ ನಡೆ ನಿನ್ನ ಪಾಡ ನೀನಡರಲೊಮ್ಮಲೆಯಿಂದೆ. ಮನಸ್ಸು, ಬುದ್ಧಿಯಲ್ಲಿ ಧೈರ್ಯದಿಂದ ಏನೇ ಬಂದರೂ ಸಹಿಸುತ್ತೇನೆ ಮತ್ತು ನೆಮ್ಮದಿಯಿಂದ ಪ್ರತಿಕ್ರಿಯೆಯಿಲ್ಲದೆ ಬಾಳುತ್ತೇನೆ ಎಂದು, ಮುಂದೆ ಹೋದರೆ, ಅದೇ ಬಿಡುಗಡೆಯೂ ಒರ್ತನದಿ. ಜೀವನದಲ್ಲಿ ಬರುವ ಕಷ್ಟಗಳಿಗೆ ಯಾರೂ ಸಹಾಯ ಮಾಡುವವರು ಇಲ್ಲ. ನಾವು ಒಬ್ಬರೇ ಬಂದದ್ದು.
ಒರ್ವನೇ ಧರ್ಮಯಾತ್ರೆಯ ಚರಿಸೆ ಸಿದ್ಧನಿರು
ಖರ್ವಪಾದಗಳಿರಲಿ ಗುರಿ ದೂರವಿರಲಿ.
ಮಾನವನು ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕಾದರೆ ಅವನು ನಿಷ್ಕರ್ಷೆಯಾದ ಉದ್ದೇಶವನ್ನು, ಗುರಿಯನ್ನು ಇಟ್ಟುಕೊಳ್ಳಬೇಕು. ಗುರಿ ಗೊತ್ತಾದರೆ ಜೀವ ದೃಢ ಪಡುತ್ತದೆ. ಅದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮನಸ್ಸಿಗೆ ನೆಮ್ಮದಿ ಇದ್ದರೆ ಧೈರ್ಯವು ತಾನೇ ಬರುತ್ತದೆ. ಆದಕಾರಣ ಜೀವನದಲ್ಲಿ ಗುರಿಯಿರುವುದು ಮುಖ್ಯ. ಗುರಿ ಮುಟ್ಟಲು ನಾವು ನಡೆಯುವುದು ಖರ್ವಪಾದ = ಅಂದರೆ ಸಣ್ಣ ಸಣ್ಣ ಹೆಜ್ಜೆ ಹಾಕುತ್ತಾ ಕೂರ್ಮದ ಹಾಗೆ ನಿಧಾನವಾಗಿ ಹೊರಟದ್ದು. ಸರ್ವರುಂ ತೊರೆದಿರಲಿ ನಮಗೆ ಯಾರೂ ಸಹಾಯ ಮಾಡುವವರು ಇಲ್ಲ. ಶರ್ವರಿಯ ತಾಳಿರಲಿ ನಾವು ನಡೆಯುವ ದಾರಿಯಲಿ ಬೆಳಕಿಲ್ಲ. ಕಗ್ಗತ್ತಲು, ಕವಿದಿದೆ, ಆದರೂ ನನ್ನ ಅಂತಃಕರಣದಲ್ಲಿ ಒಂದು ಧೈರ್ಯವಿದೆ. ಯಾವ ಧೈರ್ಯ? ನನ್ನ ಹೃದಯದಲ್ಲಿಯೇ ಪರಮಾತ್ಮನಿದ್ದಾನೆ. ಪರಮಾತ್ಮನು ನನ್ನ ಅಂತಃಕರಣದಲ್ಲಿಯೇ ಇರುವುದರಿಂದ ನನಗೆ ಯಾವ ಭಯವೂ ಇಲ್ಲ. ಈ ಜ್ಞಾನ ನಮ್ಮನ್ನು ಕಾಪಾಡುತ್ತದೆ. ಒರ್ವನೇ ಧರ್ಮಯಾತ್ರೆಯ ಚರಿಸೆ ಸಿದ್ಧನಿರು.
ಒಬ್ಬನೇ ಗಟ್ಟಿಯಾಗಿ ನಿಲ್ಲು. ಬೇರೆಯವರಿಗೆ ಸಹಾಯ ಮಾಡು. ಯಾರೇ ಆದರೂ, ಕಷ್ಟದಲ್ಲಿದ್ದು ನಿಸ್ಸಹಾಯಕರಾಗಿ ಕಂಗಾಲಾದಾಗ ಅವರಿಗೆ ಧೈರ್ಯ ಹೇಳು. ನಮ್ಮ ಮನಸ್ಸು, ಬುದ್ಧಿಯಲ್ಲಿ ಈ ಧೈರ್ಯವಿರಬೇಕು. ನಿರ್ವಂಚನೆಯೇ ಮುಖ್ಯ ಆನಂದ ಸ್ವರೂಪ ಎನ್ನುವುದೇ ನನ್ನ ನಿಜವಾದ ಸ್ವರೂಪ. ಅದು ನನ್ನಲ್ಲಿಯೇ ಇದೆ ಎನ್ನುವ ಜ್ಞಾನದಿಂದ ಹೊರ ಪ್ರಪಂಚದಲ್ಲಿ ಆನಂದದಿಂದ ಬದುಕಲು ಸಾಧ್ಯ.
ದುಡಿಲೋಕದಲಿ ಮರುಳೆ ದುಡಿದೊಡಲಸವೆಯಿಸೈ |
ಒಡಲ ಸವೆದಂತೆ ಮನದಲಗು ಸವೆಯುವದು ||
ಸಡಗರವು ಕುಗ್ಗುತಿರೆ ಬುದ್ಧಿ ಕಳೆಯೇರುವುದು |
ಬೆಡಗುವಡೆಯುವುದಾತ್ಮ || ಮಂ ||
ಡಿ.ವಿ.ಜಿ.ಯವರು ಹೇಳುವುದು-ದುಡಿಯಬೇಕು ಹೇಗೆ? ಶರೀರವನ್ನು ಗಂಧದ ಕೊರಡಿನ ಹಾಗೆ ತೇಯ್ದು, ತೇಯ್ದು, ನಿಸ್ವಾರ್ಥದಿಂದ ಹೊರಪ್ರಪಂಚದಲ್ಲಿ ದುಡಿ. ಪರಮಾತ್ಮನು ಶರೀರವನ್ನು ಕೊಟ್ಟಿದ್ದಾನೆ. ಪ್ರಪಂಚದ ಸೇವೆಗಾಗಿ ಸೂರ್ಯ, ಚಂದ್ರರ ಹಾಗೆ, ಬೀಸುವಗಾಳಿಯ ಹಾಗೆ ಒಡಲ ಸವೆಯಿಸೈ ಅದರಿಂದ ಸಡಗರವು ಕುಗ್ಗುತಿರೆ ಅಂದರೆ, ಅದರಿಂದ ಮನಸ್ಸಿನಲ್ಲಿಯ ಹೊಯ್ದಾಟವೆಲ್ಲ ಕಡಿಮೆಯಾಗಿ ಬುದ್ಧಿ ಕಳೆಯೇರುವುದು ಅಂದರೆ ಬುದ್ಧಿಯಲ್ಲಿ ಸಮಾಧಾನವಾಗುವುದು.
ಇದನ್ನೇ ಭರ್ತೃಹರಿಯು ತನಗೆ ಅವಸಾನಕಾಲ ಬಂತೆಂದು ತೋರಿದಾಗ ಕೈ ಮುಗಿದು ಹೇಳುತ್ತಾನೆ-
“ಅಮ್ಮಾ ಭೂಮಾತೆ, ತಂದೆ ವಾಯುದೇವನೆ, ಸ್ನೇಹಿತನಾದ ಸೂರ್ಯನೆ, ಆಪ್ತ ಬಂಧುವಾದ ಜಲವೆ, ಅಣ್ಣ ಆಕಾಶವೆ, ಇಗೋ ನಿಮಗೆ ನನ್ನ ಕಟ್ಟಕಡೆಯ ನಮಸ್ಕಾರ. ನಿಮ್ಮಗಳ ಸಂಪರ್ಕದಿಂದ ಉಂಟಾದ ಸಂಸ್ಕಾರದ ಮೂಲಕ. ನನ್ನ ಸಹಜವಾದ ಸ್ವಾರ್ಥ ಮೋಹವು ಕಳಚಿ ಹೋಗಲಾಗಿ, ಸುದ್ಧವೂ ವಿಸ್ತಾರವೂ, ಆದ ತತ್ತ್ವದ ಪ್ರಕಾಶ ನನಗೆ ಲಭಿಸಿತು. ಅದರಿಂದ ನಾನು ಈಗ ಪರಮಾತ್ಮ ವಸ್ತುವಿನಲ್ಲಿ ಲೀನವಾಗುವುದು ಸಾಧ್ಯವಾಗಿದೆ.”
ಮನುಷ್ಯನಿಗೆ ಸಮಾಧಾನ ಪ್ರಾಪ್ತಿಯಾಯಿತೆಂದರೆ ಅವನಲ್ಲಿ ಯಾವ ಆಶೆ, ಆಕಾಂಕ್ಷೆಗಳೂ ಉಳಿಯುವುದಿಲ್ಲ. ಅವನು ಯಾವುದೇ ಕೆಲಸವನ್ನು ಮಾಡಿದರೂ ಆನಂದದಿಂದ ಮಾಡುತ್ತಾನೆ ವಿನಃ ಆನಂದಕ್ಕಾಗಿ ಅಲ್ಲ. ಆನಂದ ಸ್ವರೂಪವೇ ತಾನು ಎಂದು ತಿಳಿದ ಮೇಲೆ, ಹೊರ ಪ್ರಪಂಚದಲ್ಲಿ ಶಾಂತಿ, ಸಮಾಧಾನ ಸಿಗುವುದೆಂಬ ಭ್ರಮೆ ಅವನಲ್ಲಿರುವುದಿಲ್ಲ.
ಪ್ರತಿಯೊಬ್ಬರಲ್ಲಿಯೂ ಆನಂದ, ಶಾಂತಿ ಅವರವರ ಹೃದಯದಲ್ಲಿ ಅಂತರಾತ್ಮನಲ್ಲಿದೆ. ಅದು ಹೊರಪ್ರಪಂಚದಲ್ಲಿ ದೊರಕುವಂಥದ್ದಲ್ಲ.
ದೇವನಿಂಗೆಂದು ದುಡಿ ಯಾವಾತನಿಗಮಲ್ತು |
ಜೀವ ಶೋಧನೆಗೆ ದುಡಿ ಭೂವಿಭವಕಲ್ತು ||
ಈವನೆಲ್ಲರ್ಗಮೀಶಂ ತಕ್ಕುದವರವರ್ಗ |
ಆ ವರದಿ ತೃಪ್ತವಿರು || ಮಂ ||
ದೇವನಿಗೆಂದು ದುಡಿ ಈ ಲೋಕ ಒಂದು ಬಡಗಿಯ ಕಾರ್ಖಾನೆ. ನೀನು ಅದರಲ್ಲಿ ಬಡಗಿ. ನಿನ್ನ ಕೆಲಸದ ಮೇಲೆ ಮನಸ್ಸಿಟ್ಟು ಮಾಲೀಕನನ್ನು ಅಂದರೆ ದೇವರನ್ನು ಮೆಚ್ಚಿಸಲು ದುಡಿ. ದುಡಿಮೆಯ ಫಲಾಫಲಗಳು ದೇವರಾಧೀನವೆಂದು ತಿಳಿದು ದುಡಿ. ಇಷ್ಟಾರ್ಥ ಕೈಗೂಡಿದಾಗ ಅದು ಸ್ವಸಂಪಾದಿತವಲ್ಲ ಈಶ್ವರಾನುಗ್ರಹ ಎಂದು ತಿಳಿ. ಇಷ್ಟ ನೆರವೇರದೆ ಹೋದಾಗ ಅದು ಸಲ್ಲಬೇಕಾದ ಶಿಕ್ಷೆ ಎಂದು ತಿಳಿ. ಇದರಿಂದ ಜೀವ ಶೋಧನೆಯಾಗುತ್ತದೆ. ಮನಸ್ಸು ಶುದ್ಧವಾಗುತ್ತದೆ.
ದೇವರು ಕೊಟ್ಟ ಶರೀರವನ್ನು, ದೇವರಿಗಾಗಿಯೇ ಸವೆಯಿಸಿದ್ದೇನೆಂಬ ತೃಪ್ತಿ ಮನಸ್ಸಿನಲ್ಲಿ ಉಳಿಯುತ್ತದೆ.
ಅದೇ ತೃಪ್ತಿಯಿಂದ ಬದುಕಿದರೆ ಜೀವನ ಸಾರ್ಥಕ.
ಹರಿಃ ಓಂ || ಶ್ರೀ ಗುರುಭ್ಯೋ ನಮಃ || ಹರಿಃ ಓಂ
*****
ಮುಗಿಯಿತು