ಮಂಥನ – ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಬಗೆಗೆ. ಅಂತರ್ಜಾಲ ಆವೃತ್ತಿ ಭಾಗ ಮೂರು

ಸ್ವಾಮಿ ಬ್ರಹ್ಮಾನಂದ ಸರಸ್ವತಿ (ಉಪನ್ಯಾಸವನ್ನು ಬರವಣಿಗೆಗೆ ಇಳಿಸಿದವರು ಶ್ರೀಮತಿ ಜಯಶ್ರೀ ದೇಶಪಾಂಡೆ)

ತಪ್ಪು ಕಲ್ಪನೆಯನು ತೆಗೆದು ಹಾಕು. ಭ್ರಾಂತಿಯನ್ನು ಬಿಡು. ಅಲ್ಲಿ ಜ್ಞಾನದ ದೀಪ ಹಚ್ಚು. ನಿನ್ನನ್ನು ನೀನು ತಿಳಿದುಕೊ.

ಒಬ್ಬ ಸಂತರ ಹತ್ತಿರ ಕುರುಡ ಬಂದು, ಸಂತರೇ, ನನಗೊಂದು ಕಂದೀಲುಕೊಡಿ ಎಂದು ಕೇಳಿದ. ಸಂತರು, ಕುರುಡನಿಗೆ ಯಾಕೆ ಕಂದೀಲು ಬೇಕು ಎಂದು ಕೇಳಿದರು, ಕುರುಡನು ಹೇಳಿದ – “ನನಗಂತೂ ಕಣ್ಣು ಇಲ್ಲ, ಕಣ್ಣು ಇದ್ದವರು ನನ್ನನ್ನು ಸರಿಯಾಗಿ ನೋಡಲಿ. ಇಲ್ಲವಾದರೆ, ನನ್ನ ಮೇಲೆ ಬೀಳುವ ಸಂಭವವಿದೆ.”ಸಂತ ಕಂದೀಲು ಕೊಟ್ಟ. ಕುರುಡನಿಗೆ ಬಹಳ ಸಂತೋಷವಾಯಿತು. ಕಂದೀಲು ಹಿಡಿದುಕೊಂಡು ಹೊರಟ. ನಾಲ್ಕು ಹೆಜ್ಜೆ ಹೋಗಿರಲಿಲ್ಲ. ಒಬ್ಬವ ಬಂದು ಮೈಮೇಲೆ ಬಿದ್ದ. ಕುರುಡನಿಗೆ ಕೇಳಿದ – “ಕಾಣಿಸುವುದಿಲ್ಲವೇ? ನಿನ್ನಂಥವರಿಗಾಗಿಯೇ ಈ ಕಂದೀಲು.” ಅವ ಹೇಳಿದ – “ಎಲ್ಲಿ ನಿನ್ನ ದೀಪ? ಬರಿ ಕಂದೀಲು.”

ಕುರುಡ: “ಓಹೋ! ನಾನು ದೀಪ ಹಚ್ಚಿಲ್ಲವೇ? ಮರೆತೆ.”
ಈ ಸಲ ದೀಪ ಹಚ್ಚಿಕೊಂಡು ಹೊರಟ. ನಾಲ್ಕು ಹೆಜ್ಜೆ ಹೋದ. ಮತ್ತೊಬ್ಬ ಬಂದು ಮೈಮೇಲೆ ಬಿದ್ದ. ಕುರುಡನಿಗೆ ಇನ್ನೂ ಆಶ್ಚರ್ಯ. “ನಿನಗೆ ದೀಪ ಕಾಣಿಸಲಿಲ್ಲವೇ? ನಿಮ್ಮಂಥವರಿಗೇ ಈ ದೀಪ”. “ಏನು ಮಾಡುವುದು ಹೇಳು ಕಣ್ಣೇನೊ ಇದೆ. ನಿನ್ನ ದೀಪವೂ ಇದೆ. ಆ ಕ್ಷಣ ಕಣ್ಣು ಮುಚ್ಚಿದ್ದೆ ಅಷ್ಟೇ!”

ಅರ್ಥಾತ್, ಕಣ್ಣು ಇದ್ದವರು ಕಣ್ಣು ಮುಚ್ಚಿದ್ದಾರೆ. ಯಾರು ಕಣ್ಣು ತೆರೆದಿದ್ದಾರೆ, ಅವರಿಗೆ ದೀಪವಿಲ್ಲ. ಇವನಿಗೆ ದೀಪವಿದೆ ಕಣ್ಣಿಲ್ಲ. ಏನು ವಿಚಿತ್ರ ಜೀವನ. ದೀಪವಿರಬೇಕು ಕಣ್ಣು ತೆರೆದಿರಬೆಕು. ಇಲ್ಲವಾದರೆ ಕುರುಡು ನಾಯಿ ಸಂತೆಗೆ ಬಂತಂತೆ ಎಂದು ದಾಸರು ಹೇಳಿದಂತೆ ಆಗುತ್ತದೆ.

ಆ ಭ್ರಾಂತಿ ಬಿಸಾಕು. ಅಲ್ಲಿ ಜ್ಞಾನದ ದೀಪ ಹಚ್ಚು. ನಿನ್ನನ್ನು ನೀನು ತಿಳಿದುಕೊ. ಈ ದಿವ್ಯವಾದ ಬ್ರಹ್ಮದ ಬೆಳಕನ್ನು ಬುದ್ಧ, ಸಂಕರಾಚಾರ್ಯರು, ಸಂತರು, ಶರಣರು, ವಿಶ್ವದ ತುಂಬೆಲ್ಲ ಹರಡಿದರು. ಶಂಕರಾಚಾರ್ಯರು ಎಲ್ಲೆಡೆ ಸಂಚಾರ ಮಾಡಿ, ಜ್ಞಾನ ಪ್ರಸಾರ ಮಾಡಿದರು. ಆದರೆ, ಎಷ್ಟು ಜನ ಆ ಬೆಳಕಿನತ್ತ ಲಕ್ಷ್ಯವಿತ್ತರು? ಯಾರೂ ಇಲ್ಲ ಆನ್ನುತ್ತಾರೆ ಶಂಕರರು.

೧. ಬಾಲಕರಿಗೆ ಹೀಳಿದೆ ಅವು ಕ್ರೀಡೆಯಲ್ಲಿ ಆಸಕ್ತರಾಗಿದ್ದರು.
೨. ಯುವಕರಿಗೆ ಹೇಳಿದೆ ಅವರು ಸಂಸಾರದಲ್ಲಿ ಆಸಕ್ತರಾಗಿದ್ದರು.
೩. ವೃದ್ಧರಿಗೆ ಹೇಳಿದೆ. ಅವರು ಚಿಂತೆಯಲ್ಲಿ ಮಗ್ನರಾಗಿದ್ದರು. ನನ್ನ ಮಾತನ್ನು ಯಾರು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಅಂದಿದ್ದಾರೆ ಶಂಕರರು.

ನಿನ್ನನ್ನು ನೀನು ತಿಳಿದುಕೊ. ನಿನ್ನ ನಿಜ ಸ್ವರೂಪ ತಿಳಿದಾಗ ಹೊರಗಿನ ಪ್ರಪಂಚದ ಒಲವು ತಾನೇ ಹೋಗುತ್ತದೆ.

ಜೀವದುದಯ ರಹಸ್ಯ, ಜೀವವಿಲಯ ರಹಸ್ಯ |
ಜೀವನದ ದೃಶ್ಯ ಮರುವುನ ಬಿಸಿಲ್ಗುದುರೆ ||
ಭಾವಿಸಲಿದೇ ತತ್ತ್ವ: ಬ್ರಹ್ಮಮಾಯೆಯೆ ವಿಶ್ವ |
ಕೇವಲಾತ್ಮ ಬ್ರಹ್ಮ ||ಮಂ||

ಜೀವನದ ಉದಯ, ಜೀವನದ ನಾಶ, ಹುಟ್ಟು, ಸಾವು ಇದೆಲ್ಲ ರಹಸ್ಯ. ರಹಸ್ಯ ಅಂದರೆ ಹುಟ್ಟು, ಸಾವು ಉದಯ ನಾಶವಿಲ್ಲದ್ದು. ಹುಟ್ಟು ಸಾವು ಇದೆ ಎಂದು ತಿಳಿದದ್ದು ನಮ್ಮ ಭ್ರಾಂತಿ. ಬ್ರಹ್ಮಹಮಸ್ಮಿ ಕೇವಲ ಆತ್ಮಬ್ರಹ್ಮ. ಇದು ಋಷಿಗಳ ವಾಣಿ. ಆನಂದ ಶಾಂತಿ ಒಳಗಡೆ ಇದೆ. ಪೂರ್ಣ ಆನಂದ ಆತ್ಮನಲ್ಲಿ ಮನಸ್ಸು ನಿಂತಾಗ. ಆದರೆ ನಾವು ನಮ್ಮ ಇಂದ್ರಿಯಗಳ ಮೂಲಕ ಹೊರಗಿನ ವಿಷಯಗಳಲ್ಲಿ ಸುಖವಿದೆ ಎಂದು ಓದುತ್ತೇವೆ. ಇದು ನಮ್ಮ ಅಜ್ಞಾನ.

ಪೂರ್ಣಾನಂದ ಆತ್ಮನಲ್ಲಿ ಮನಸ್ಸು ನಿಂತಾಗ ಮಾತ್ರ. ಅದು ಹೊರಗಡೆ ಇಲ್ಲ.

ಭ್ರಾಂತಿಯೋ ಸಂಪೂರ್ಣಸುಖದಾಶೆ ಬಾಹ್ಯದಲಿ |
ಸಾಂತ ಲೋಕದ ಸೌಖ್ಯ, ಖಂಡ ಖಂಡವದು ||
ಸ್ವಾಂತಕೃಷಿಯಿಂ ಬ್ರಹ್ಮವೀಕ್ಷೆ ಲಭಿಸಿರ್ದೊಡೇ- |
ಕಾಂತ ಪೂರ್ಣಾನಂದ ||ಮಂ||

ಹೊರಗಿನ ಪ್ರಪಂಚದಲ್ಲಿ ಸುಖವಿದೆ ಎಂದು ತಿಳಿದು, ಇಂದ್ರಿಯಗಳ ಮೂಲಕ ವಿಶಯಗಳ ಹಿಂದೆ ಓಡುತ್ತೇವೆ, ಇದು ನಮ್ಮ ಭ್ರಾಂತಿ ಭ್ರಾಂತಿಯೋ ಸಂಪೂರ್ಣ ಸುಖದಾಶೆ ಬಾಹ್ಯಾದಲಿ. ಪರಿಪೂರ್ಣ ಸುಖ, ಪೂರ್ಣಾನಂದ, ಬ್ರಹ್ಮಾನಂದ, ನಿಜವಾದ ಸುಖ ಲಭಿಸುವುದು ಆತ್ಮನಲ್ಲಿ ನಿಂತಾಗ ಮಾತ್ರ. ಆತ್ಮನಲ್ಲಿ ನಿಂತು ಆನಂದವನ್ನು ಅನುಭವಿಸಬೇಕೆಂದು, ಮನದಿಚ್ಛೆ ಇದ್ದರೆ ಮನಸ್ಸನ್ನು ಒಳಗಡೆ ತಿರುಗಿಸು. ಅಂತರ್ಮುಖಿಯಾಗು. ಇಂದ್ರಿಯ, ಮನಸ್ಸು ಬುದ್ಧಿಗಳನ್ನು ದಾಟಿ ಆತ್ಮನಲ್ಲಿ ಅತ್ಮನಾಗಿ ನಿಲ್ಲು. ನಿಜವಾದ ಸುಖವನ್ನು ಪಡೆ. ನಿದ್ರೆಯಲ್ಲಿ ಪಡೆಯುವ ಸುಖ ಬ್ರಃಮಾನಂದ. ಅದನ್ನು ಅನುಭವುಸು.

ಕನ್ನಡಿಯೊಳಗೆ ಮುಖವನ್ನು ನೋಡಿಕೊಂಡು, ಕುಂಕುಮ ಇಟ್ಟಿಕೊಳ್ಳಬೇಕೆಂದು, ನಮ್ಮ ಪ್ರತಿಬಿಂಬಕ್ಕೆ ಹಚ್ಚಿದರೆ ಏನಾಗುತ್ತದೆ? ಜೋರಾಗಿ ಹಚ್ಚಲು ಹೋದರೆ ಕನ್ನಡಿ ಒಡೆದು ಹೋಗುತ್ತದೆ ಅಷ್ಟೇ.

ಹಾಗಾದರೆ ಏನು ಮಾಡಬೇಕು? ಇದಕ್ಕೆ ಒಂದೇ ಉಪಾಯ. ಪ್ರತಿಬಿಂಬದ ಹಣೆಯ ಮೇಲೆ ಕುಂಕುಮ ಕಾಣಬೇಕೆಂದರೆ, ಮೊದಲು ನಮ್ಮ ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳಬೇಕು. ಆಗ ಪ್ರತಿಬಿಂಬದಲ್ಲಿ ಕುಂಕುಮ ತನ್ನಷ್ಟಕ್ಕೆ ತಾನೇ ಕಾಣಿಸುತ್ತದೆ. ಅದನ್ನು ಅಳಿಸಬೇಕೆಂದರೂ ಶಕ್ಯವಾಗುವುದಿಲ್ಲ.

ಕನ್ನಡಿಯಲ್ಲಿ ಪ್ರತಿಬಿಂಬ ಅಲಂಕಾರವಾಗಿ ಕಾಣಬೇಕು ಎಂದು ಇದ್ದರೆ ನೋಡುಕೊಳ್ಳುವವರು ಅಲಂಕಾರ ಮಾಡಿಕೊಳ್ಳಲೇಬೇಕು.

ನಾವು ಭಗವಂತನ ಪ್ರತಿಬಿಂಬ. ನಮಗೆ ಸುಖ ಬೇಕು, ಆನಂದ ಬೇಕು ಎಂಬ ಇಚ್ಛೆ ಇದ್ದರೆ, ಮೊದಲು ಭಗವಂತನನ್ನು ಸಂತೋಷಗೊಳಿಸಬೇಕು.

ಶಂಕರಾಚಾರ್ಯರು ಇದನ್ನೇ ಬಿಡಿಸಿ ಹೇಳಿರುತ್ತಾರೆ. ಭಗವಂತನನ್ನು ಸಂತೋಷಗೊಳಿಸಬೇಕೆಂದು ಇದ್ದರೆ, ಅವನಿಗೆ ಏನು ಕೊರತೆ ಇದೆ? ಕೊರತೆ ಇದ್ದರೆ ತಾನೆ ಬೇಕಾಗುವುದು ಅವನಿಗೆ ಏನು ಬೇಕಿಲ್ಲ. ಅವನು ನಿತ್ಯ, ಶುದ್ಧ, ಪರಿಪೂರ್ಣ ಸಚ್ಚಿದಾನಂದ ಚೈತನ್ಯ ವಸ್ತು. ಅಂಥವನಿಗೆ ಕೊಡಲು ನಿನ್ನ ಹತ್ತಿರ ಏನು ಇದೆ? ಪರಮಾತ್ಮನಿಗೆ ಏನನ್ನಾದರೂ ಕೊಡುವ ಮನಸ್ಸಿದ್ದರೆ ನಿನ್ನ ಮನಸ್ಸನ್ನು ಕೊಡು.

ಶ್ರೀಕೃಷ್ಣನು ಇದನ್ನೇ ಹೇಳಿದ್ದಾನೆ. ಅನನ್ಯಾಶ್ಚಿಂಯಂತೋ ಮಾಂ. ಯಾರು ನನ್ನನ್ನು ಏಕಮನಸ್ಸಿನಿಂದ ಭಜಿಸುತ್ತಾರೋ ಅಂಥವರಿಗೆ ನನ್ನ ಅಭಯಹಸ್ತ ಸದಾ ಸಿದ್ಧ. ನಿನ್ನ ಮನಸ್ಸನ್ನು ನನಗೆ ಅರ್ಪಿಸು, ನಿನ್ನ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ.

ಆದರೆ ನಾವು ಮನಸ್ಸೊಂದನ್ನು ಬಿಟ್ಟು ಉಳಿದೆಲ್ಲವನ್ನೂ ಸಮರ್ಪಣೆ ಮಾಡಲು ಸಿದ್ಧರಿದ್ದೇವೆ. ನಮಗೆ ಆಡಲಿಕ್ಕೆ ಇಲ್ಲವೆ ನಮ್ಮನ್ನು ಆಡಿಸಲಿಕ್ಕೆ ಇರುವುದು ಒಂದೇ ಮನಸ್ಸು. ಆ ಮನಸ್ಸು ಬೆಳಿಗ್ಗೆ ಒಂದು ರೀತಿ ಆಟವಾಡಿಸಿದರೆ, ಮಧ್ಯಾಹ್ನ ಅದರ ರೀರಿಯೇ ಬೇರೆ. ಸಂಜೆಗೆ ಅದರ ರೀತಿ ಮತ್ತೊಂದು ತರಹ. ಹೀಗೆ ಅದು ಆಟವಾಡಿಸುತ್ತದೆ. ನಾವು ಅದು ಆಡಿಸಿದಂತೆ ಆಡುತ್ತಲೇ ಇರುತ್ತೇವೆ.

ಅದನ್ನೇ ಕೊಟ್ಟು ನಾವು ಮಾಡುವುದೇನು? ನಿಜವಾದ ಸುಖ ಬೇಕೋ ಮನಸ್ಸು, ಇಂದ್ರಿಯ, ಬುದ್ಧಿಗಳನ್ನು ದಾಟಿ ಒಳಗೆ ಬಾ. ಅಂತರಾತ್ಮನಲ್ಲಿ ಶಾಂತಿ, ಸುಖ, ಆನಂದವಿದೆ. ಇದು ಋಷಿಗಳ ವಾಣಿ.

ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣಮುದಚ್ಯತೆ|
ಪೂರ್ಣಸ್ಯ ಪೂರ್ಣಮಾದಾಯ|

ಪೂರ್ಣಸ್ಯ ಪೂರ್ಣಮಾದಾಯ |
ಪೂರ್ಣಮೇವಾವಶಿಷ್ಯತೆ ||
ಓಂ ಶಾಂತಿಃ ಶಾಂತಿಃ ಶಾಂತಿಃ

ಶ್ರೀವಿಷ್ಣು ವಿಶ್ವಾದಿಮೂಲ ಮಾಯಾಲೋಲ |
ದೇವ ಸರ್ವೇಶ ಪರಬೊಮ್ಮನೆಂದು ಜನಂ ||
ಆವುದನು ಕಾಣದೊಡಮುಳ್ತಿಯಿಂ ನಂಬಿಹುದೊ |
ಆ ವಿಚಿತ್ರಕೆ ನಮಿಸೊ ||ಮಂ||
ಜೀವ ಜಡರೂಪ ಪ್ರಪಂಚವನದಾವುದೋ |
ಆವರಿಸಿಕೊಂಡುಮೊಳನೆರೆದುಮಿಹುದಂತೆ ||
ಭಾವಕೊಳಪಡದಂತೆ ಅಳತೆಗಳವಡದಂತೆ |
ಆ ವಿಶೇಷಕೆ ಮಣಿಯೊ ||ಮಂ||
ಇಹುದೊ‌ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ |
ಮಹಿಮೆಯಿಂ ಜಗವಾಗಿ ಜೀವವೇಷದಲಿ |
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ |
ಗಹನ ತತ್ತ್ವಕೆ ಶರಣೊ ||ಮಂ||

ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದಲ್ಲಿ ಭಕ್ತಿಯ ಬಗ್ಗೆ ಬಹಳ ಮಾರ್ಮಿಕವಾದ ರೀತಿಯಲ್ಲಿ ನಿರೂಪಿಸಿದ್ದಾರೆ. ನಾವು ದಿನನಿತ್ಯದ ವ್ಯವಹಾರದಲ್ಲಿ ಭಕ್ತಿಯ ಹೆಸರಿನಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಅಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ಮನಮುಟ್ಟುವಂತೆ ತೋರಿಸಿಕೊಟ್ಟಿದ್ದಾರೆ.

ನಿಜವಾದ ಭಕ್ತಿ ಎಂದರೇನು? ಭಕ್ತಿಯನ್ನು ಸಾಧಿಸುವ ಬಗೆ ಹೇಗೆ? ನಮ್ಮ ಅಂತಃಕರಣ ಅನ್ನುವಂಥ, ಮನಸ್ಸು-ಬುದ್ಧಿಯಲ್ಲಿ ಯಾವ ಬಗೆಯ ಜ್ಞಾನವಿರಬೇಕು. ಅದು ಹೇಗೆ, ಇರಬೇಕು, ಅನ್ನುವುದನ್ನು ಸ್ಪಷ್ತವಾಗಿ ಮಂಡಿಸಿದ್ದಾರೆ.

ಎಷ್ಟೋ ಜನರಿಗೆ ಪರಮಾತ್ಮನ ಬಗ್ಗೆ, ಪರಮಾತ್ಮನ ಅಸ್ತಿತ್ತ್ವದ ಬಗ್ಗೆ ಸಂಶಯವಿದೆ.

ಅಜ್ಞಾತವಾದುದನಭಾವವೆನೆ ನಾಸ್ತಿಕನು |
ಅಜ್ಞೇಯವೆಂದದಕೆ ಕೈಮುಗಿಯೆ ಭಕ್ತಿ ||
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ |
ಸ್ವಜ್ಞಪ್ತಿಶೋಧಿ ಮುನಿ ||ಮಂ||

ಪರಮಾತ್ಮ ತತ್ತ್ವ ಅಜ್ಞಾತವಾದದ್ದು. ಅದು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಬಾಹ್ಯಗೋಚರವಲ್ಲ. ಅಂದರೆ ನಮ್ಮ ಇಂದ್ರಿಯ, ಮನಸ್ಸು, ಬುದ್ಧಿಗೆ, ಗೋಚರವಾಗುವುದಿಲ್ಲ. ಆದುದರಿಂದ ಯಾರು ಪರಮಾತ್ಮ, ದೇವರು ಇಲ್ಲವೆಂದು ಹೇಳುತ್ತಾರೊ, ಅಜ್ಞಾತವಾದುದನು ಅಭಾವವೆನೆ ಅವರು ನಾಸ್ತಿಕರು. ಇವರು ನಿಜವಾಗಿಯೂ ವ್ಯವಹಾರಿತರು. ಇಂದ್ರಿಯ, ಮನಸ್ಸು, ಬುದ್ಧಿಗೆ, ಯಾವುದು ಗೋಚರವಾಗುವುದಿಲ್ಲವೋ ಅದರ ಬಗ್ಗೆ ಅವರಿಗೆ ನಂಬಿಕೆಯಿಲ್ಲ.

ನಾಸ್ತಿಕನು ತನ್ನ ಬುದ್ಧಿಯೇ ಎಲ್ಲಕ್ಕೂ ಮೇಲ್ಪಟ್ಟದ್ದು, ಅದು ಎಲ್ಲವನ್ನೂ ನೋಡಬಲ್ಲದು, ಹಿಡಿಯಬಲ್ಲದು, ಯಾವುದನ್ನು ಅದು ಹಿಡಿಯಲಾರದೋ ಅದು ಇಲ್ಲವೇ ಇಲ್ಲ ಎಂದು ತನ್ನ ಬುದ್ಧಿ, ಸಾಮರ್ಥ್ಯಗಳನ್ನು ನಂಬಿಕೊಂಡಿರುತ್ತಾನೆ.

ಅವನು ಭಗವದ್ವಿಷದಲ್ಲಿ ನಾಸ್ತಿಕ, ಸ್ವವಿಷಯದಲ್ಲಿ ಆಸ್ತಿಕ.

ಇನ್ನೊಬ್ಬ – ಅಜ್ಞೇಯವೆಂದು ಕೈಮುಗಿಯೆ ಅವ ಭಕ್ತ. ಅಸ್ತಿ ಎಂದರೆ? ಅಸ್ತಿ= ಉಂಟು ಎಂಬುದರಿಂದ ಬಂದದ್ದು. ಜಗತ್ತು ಶೂನ್ಯವಲ್ಲ. ಜೀವನವೆಂಬುದು ಶೂನ್ಯವಲ್ಲ. ಜೀವ ಜಗತ್ತುಗಳಿಗೆ ಆಧಾರವಾಗಿರುವ ದೇವರು, ಎಂಬುದು ಶೂನ್ಯವಲ್ಲ. ನಾವು ಇದ್ದೇವೆ, ಜಗತ್ತೂ ಇದೆ, ಅವೆರಡಕ್ಕೂ ಅರ್ಥವಿದೆ. ಅವೆರಡಕ್ಕೂ ಒಡೆಯನಾದ ದೇವರು ಎಂಬ ಒಂದು ಮಹಾ ಚೈಥನ್ಯವಿದೆ. ಹೀಗೆ ಉಂಟು (ಅಸ್ತಿ) ಎಂಬ ನಂಬಿಕೆಯೇ ಅಸ್ತಿಕತೆ.

ಪರಮಾತ್ಮ ಅಗೋಚರನಾದರೂ ಮಹಾತ್ಮರಿಗೆ ಅವನ ದರ್ಶನವಾಗಿದೆ. ಶಾಸ್ತ್ರಗಳೂ ಕೂಡ ಪರಮಾತ್ಮನಿದ್ದಾನೆ ಎಂದು ಹೇಳುತ್ತವೆ. ಆದ್ದರಿಂದ ಅಜ್ಞೇಯವೆಂದು ಶ್ರದ್ಧೆಯಿಂದ ಕೈಮುಗೆಯೆ ಅವನೇ ಭಕ್ತ. ಆಸ್ತಿಕನಿಗೂ ಪೂರ್ಣ ಜ್ಞಾನವಿಲ್ಲ. ಅವನೂ ಶಾಸ್ತ್ರಗಳ ಮೇಲಿನ ಶ್ರದ್ಧೆಯಿಂದ, ಗುರುವಾಕ್ಯಗಳಲ್ಲಿರುವ ಸತ್ಯಾಂಶವನ್ನು ನಂಬಿ ಆಸ್ತಿಕನಾಗಿರುತ್ತಾನೆ.

ಮತ್ತೊಬ್ಬ – ಜಿಜ್ಞಾಸ್ಯವೆಂದು ಪರಿಕಿಸತೊಡಗೆ ಅವನಿಗೆ ವಿಜ್ಞಾನೀ ಅನ್ನುತ್ತೇವೆ. ಅದು ಹೇಗೆ?

ತನಗಿಂತ ಹಿರಿದ, ಭುವನಕ್ಕಿಂತ ಹಿರಿದೊಂದ- |
ನನುಭವದ ಹಿಂದೆ, ಸೃಷ್ಟಿಯ ನೆರೆಳ ಹಿಂದೆ ||
ಅನುಮತಿಸಿ ಮನುಜನಾ ಹಿರಿದನೆಳಸುವನೆಯ್ದೆ |
ಮನುಜನೊಳಹಿರಿಮೆಯದು ||ಮಂ||

ಈಗ ನಾನು ಇರುವೆನೆಂಬ ಅನುಭವ ನನಗೆ ಇದೆಯಾದ್ದರಿಂದ, ನನಗೆ ಜೀವವಿದೆ ಎಂದು ಅರ್ಥ. ಅದರಂತೆ ಈ ಹೊರ ಜಗತ್ತಿನ ಅನುಭವವೂ ನನಗೆ ಇದೆಯಾದ್ದರಿಂದ, ಪ್ರಪಂಚವೂ ಇದೆ ಎಂದು ಅರ್ಥ. ಈ ನಾನು ಅನ್ನುವ ಜೀವಕ್ಕೆ, ಈ ಹೊರಪ್ರಪಂಚ ಕಾರಣನಾದವನು ಇರಲೇಬೇಕು. ಅವನೇ ಈಶ್ವರ, ಅದೇ ಮಹೇಶ್ವರ ಶಕ್ತಿ.

ನಾನು ಅಲ್ಪಜ್ಞ. ಇದು ತಿಳಿದ ವಿಷಯ, ಕಾರಣ ನಮ್ಮ ಕಲ್ಪನೆಯ ಶಕ್ತಿಯೂ ಕೂಡ ಅಲ್ಪ. ಆದರೆ ವಿಜ್ಞಾನಿಗಳು ಈ ಭವ್ಯವಾದ, ಸರ್ವವ್ಯಾಪಕವಾದ, ಸೃಷ್ಟಿಯನ್ನು ನಿರ್ಮಾಣ ಮಾಡುವ ನಿರ್ಮಾಪಕ ಶಕ್ತಿ, ಅದು ಸರ್ವಜ್ಞ ಶಕ್ತಿಯೇ ಎಂದು ಅನುಮಾನಿಸುತ್ತಿದ್ದಾರೆ. ಅನುಮಾನ ಎಂದರೆ ಏನು? ಅನುಮಾನವೆಂದರೆ ಬುದ್ಧಿಯ ಮೂಲಕ ಅನುಮತಿಸಿ, ಕಾರ್ಯದಿಂದ ಕಾರಣವನ್ನು ಹುಡುಕುವುದು.

ನಾನು ಎನ್ನುವ ಅರಿವು ನನ್ನಲ್ಲಿದ್ದಾಗ, ನನ್ನದು ಎನ್ನುವ ಪ್ರಪಂಚವಿರುವಾಗ, ಈ ನಮ್ಮಿಬ್ಬರುಗೂ ಕಾರಣವಾದ ಒಂದು ತತ್ತ್ವ ಇರಲೇಬೇಕು. ಅದೇ ಈಶ್ವರ ತತ್ತ್ವ. ಈ ತತ್ತ್ವವನ್ನು ಶೋಧಿಸುವ ಶಕ್ತಿ ಮನುಜನೊಳು ಹಿರಿಮೆಯದು. ಅಂದರೆ ಇದು ಅವನಲ್ಲಿರುವ ಬುದ್ಧಿಯ ಸಾಮರ್ಥ್ಯ. ವಿಜ್ಞಾನಿಗಳು ತಮ್ಮ ಬುದ್ಧಿಶಕ್ತಿಯಿಂದ, ಪ್ರಪಂಚದ ಬಗ್ಗೆ, ಅನ್ವೇಷಣೆ ಪರೀಕ್ಷಣಗಳನ್ನು ಮಾಡುತ್ತಲೇ ಇದ್ದಾರೆ. ವಿಜ್ಞಾನಿಗಳ ಸಂಶೋಧನೆ ನಡೆದೇ ಇದೆ. ಅಂದರೆ? ಸೂರ್ಯ, ಚಂದ್ರ, ಭೂಮಿ, ನಕ್ಷತ್ರಗಳು, ಇವೆಲ್ಲವೂ ಇರಬೇಕಾದರೆ, ಅಷ್ಟೇ ಅಲ್ಲ ಭೂಮಿಯು ೨೪ ಘಂಟೆಗಳಲ್ಲಿ ಒಂದು ಸಲ ಒಂದು ಸುತ್ತು ತಿರುಗಬೇಕಾದಾರೆ, ಹೀಗೆ ವಿಶ್ವವೆಲ್ಲವೂ ಕ್ರಮ ಪ್ರಕಾರವಾಗಿ ನಡೆಯಬೇಕಾದರೆ, ಇದಕ್ಕೆಲ್ಲ ಕಾರಣನಾದವನು ಒಬ್ಬ ಈಶ್ವರ, ನಿಯಂತ್ರಕ, ಇಲ್ಲವೆ ನಿಯಾಮಕ ಅನ್ನುವವನು ಒಬ್ಬನು ಇರಲೇಬೇಕು, ಎಂಬ ಅನುಮಾನದಿಂದ ಪರಮಾತ್ಮನು ಒಬ್ಬನು ಇರುತ್ತಾನೆ ಎಂದು ಅನುಮತಿಸಿ, ಶೋಧನೆ ಮಾಡಿದ್ದು, ಮನುಜನೊಳ ಹಿರಿಮೆಯದು.

ಆಲದ ಮರದ ಹಣ್ಣು. ಅದು ಬಹಳ ಚಿಕ್ಕದು. ಅದನ್ನು ಒಡೆದರೆ ಅದರ ತುಂಬ ಬಹು ಸಣ್ಣ ಬೀಜಗಳು ಕಾಣುತ್ತವೆ. ಅದರಲ್ಲಿಯ ಒಂದು ಚಿಕ್ಕ ಬೀಜವನ್ನು ಚಚ್ಚಿದರೆ ಅದರಲ್ಲಿ ಹಿಟ್ಟು ಕಾಣುತ್ತದೆ. ಆ ಹಿಟ್ಟಿನ ಕಣದಲ್ಲಿ ಏನಿದೆ? ಅಣುವಿದೆ. ಪರಮಾಣುವಿದೆ. ಹಾಗಾದರೆ ಆಲದ ಮರ ಹುಟ್ಟಿದ್ದು ಯಾವುದರಿಂದ? ಆ ಬೀಜದಿಂದ ಆ ಬೀಜದ ಹಿಟ್ಟಿನ ಒಳಗಡೆ ಏನೋ ಒಂದು ಅಡಗಿದೆ. ಆ ಅದೃಶ್ಯ ಶಕ್ತಿಯೇ ಬ್ರಹ್ಮ ಚೈತನ್ಯ ಎಂದು ಶೋಧನೆ ಮಾಡಿದರು. ಇದು ಬುದ್ಧಿಯ ಕೆಲಸ.

ಸಾಕಷ್ಟು ಜನರು ಈ ಹಾದಿಯಲ್ಲಿ ಮುಂದುವರಿದು, ಪರಮಾತ್ಮವನ್ನರಿಸಿದವರೂ ಇದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದುವರಿದು “ಅಹಂ ಅಸ್ಥಿ ಸದಾಭಾಮಿ.” ನಾನು ಇದ್ದೇನೆ ಈ “ನಾನು” “ನಾನು” ಅನ್ನುವ ಸ್ಪುರಣೆಗೆ ಅಧಿಷ್ಟಾನವಾದ ಪರಮಾತ್ಮನ ಶಕ್ತಿ ಇರಲೇಬೇಕು. ಈ ಶಕ್ತಿ ಸರ್ವವ್ಯಾಪಕವಾಗಿದೆ ಎಂದು ತಿಳಿದುಕೊಳ್ಳುವವನು ಜ್ಞಾನಿ.

ಹೇಗೆ ತಾಯಿಯ ಜೀವನವು, ಮಕ್ಕಳ ಜೀವನದಲ್ಲಿ ಭೇದವಿಲ್ಲದೆ, ಬೆರೆತುಕೊಂಡಿರುತ್ತದೆಯೋ, ಹಾಗೆಯೇ ಜ್ಞಾನಿಯು ಎಲ್ಲೆಲ್ಲೂ ತನ್ನನ್ನೇ ಕಾಣುತ್ತಾನೆ. ಅದರಂತೆ ಸಮಸ್ತ ಭೂತ ಹಿತದಲ್ಲಿಯೂ ಅಭೇದವಾಗಿ ಸೇರಿಕೊಂಡಿರುತ್ತಾನೆ.

“ಜ್ಞಾನೀ ತು ಆತ್ಮೈವ ಮೇ ಮತಮ್” ಭಗವದ್ಗೀತೆಯಲ್ಲಿಯೂ ಇದೇ ಉಕ್ತಿ ಇದೆ.

ಅಂಬುಧಿಯ ಮಡಕೆಯಲಿ, ಹೊಬಿಸಿಲ ಕಿಟಕಿಯಲಿ |
ತುಂಬಿಕೊಳ್ಳುವ ಬಡವನೈಶ್ವರ್ಯದಂತೆ ||
ಬಿಂಬದೊಳಗಮಿತ ಸತ್ತ್ವವ ಪಿಡಿದಿಡುವ ಭಕ್ತಿ- |
ಯಿಂಬು ಕಿಂಚಿನ್ಮತಿಗೆ ||ಮಂ||

ಡಿ.ವಿ.ಜಿ.ಯವರು ಇಲ್ಲಿ ಒಂದು ಬಹಳ ಸುಂದರವಾದ ದೃಷ್ಟಾಂತವನ್ನು ಕೊಟ್ಟಿರುತ್ತಾರೆ. ನಮ್ಮ ಮನಸ್ಸು ಬುದ್ಧಿಯನ್ನು ಒಂದು ಮಡಕೆಗೆ ಹೋಲಿಸಿದ್ದಾರೆ. ಅದರಂತೆಯೇ ಪರಮಾತ್ಮನನ್ನು ವಿಶಾಲವಾದ ಸಮುದ್ರಕ್ಕೆ ಹೋಲಿಸಿದ್ದಾರೆ. ನಮ್ಮ ಇಚ್ಛೆ ಏನು? ಮಡಕೆಯನ್ನು ಸಮುದ್ರಕ್ಕೆ ತೆಗೆದುಕೊಂಡು ಹೋಗಿ, ಇಡೀ ಅಂಬುಧಿಯ ಮಡಕೆಯಲಿ ಹೊಂಬಿಸಿಲ ಕಿಟಕಿಯಲಿ ತುಂಬಿಕೊಳ್ಳುವ ಬಡವ ನೈಶ್ಚರ್ಯದಂತೆ. ತುಂಬದು ಒಳಗೆ.

ನಮ್ಮ ಮನಸ್ಸು ಬುದ್ಧಿಯಲ್ಲಿಯೇ ಪರಮಾತ್ಮನು ಚೈತನ್ಯವು ಪ್ರತಿಬಿಂಬಿಸುತ್ತದೆ. ಇದಕ್ಕೆ ಚಿದಾಭಾಸ ಅನ್ನುತ್ತಾರೆ. ನಮಗೆ ಪರಮಾತ್ಮನನ್ನು, ಆ ಚೈತನ್ಯ ಶಕ್ತಿಯನ್ನು ನೋಡುವ ಹಂಬಲವಿದೆ ಅಷ್ಟೇ ಅಲ್ಲ ಅವನ ಸಾಕ್ಷಾತ್ಕಾರವಾಗಬೇಕು, ಅವನನ್ನು ಹಿಡಿದಿಡಬೇಕು, ಎಂಬ ಬಯಕೆಯ ದೃಷ್ಟಾಂತವೇ ಮಡಕೆಯದು. ಮಡಕೆಯನ್ನು ಸಮುದ್ರಕ್ಕೆ ಒಯ್ದು, ಇಡೀ ಸಮುದ್ರವನ್ನೇ ಮಡಕೆಯಲ್ಲಿ ಹಾಕಿಕೊಳ್ಳುವ ಬಯಕೆ. ಇದು ಅಂತಃಕರಣ, ಮನಸ್ಸು, ಬುದ್ಧಿಯ, ಮೂಲಕ ನಾವು ಪ್ರಯತ್ನಿಸುವಂಥ ಬಯಕೆಯಾದರೂ, ಅದುಸಫಲವಾಗುವುದಿಲ್ಲ. ಒಂದು ವೇಳೆ ಸಮುದ್ರವೇ ಮಡಕೆಯಲ್ಲಿ ಒಂದಾದಾಗ ಮಡಕೆ ಉಳಿಯುವುದೇ? ಸಾಧ್ಯವಿಲ್ಲ. ಎರಡೂ ಏಕರೂಪವಾಗುತ್ತದೆ.

ಇದರಂತೆಯೇ ನಮ್ಮ ಅಂತಃಕರಣ, ಮನಸ್ಸು, ಬುದ್ಧಿಯ ಮೂಲಕ ಪರಮಾತ್ಮನನ್ನು ಸಮೀಪಿಸಿದಾಗ, ಅವನ ಸ್ವರೂಪದಲ್ಲಿ ಲೀನವಾದಾಗ “ನಾನು” ಅನ್ನುವಂಥ ಉಪಾಧಿ, “ನಾನು” ಅನ್ನುವಂಥ ಅಹಂಕಾರ. ಈ “ನಾನು” ಅನ್ನುವ ಮನಸ್ಸು, ಬುದ್ಧಿಯ, ಮಡಕೆ ಒಡೆದು ಹೋಗುತ್ತದೆ. ಆಗ “ನಾನು” ಬೇರೆ ಪರಮಾತ್ಮ ಬೇರೆ, ಅನ್ನುವ ಭಾವವೇ ಉಳಿಯುವುದಿಲ್ಲ.

ಈ ದೇಹ ಭಾವವಿರುವಾಗ ನಾನು ಬೇರೆ ಪರಮಾತ್ಮ ಬೇರೆ.

ಕಣ್ಣಿರದೆ ರವಿಯೇನು? ರವಿಯಿರದೆ ಕಣ್ಣೇನು? |
ಅನ್ಯೋನ್ಯ ಸಹಕೃತಿಯನುಭಯ ಸಾರ್ಥಕತೆ ||
ನಿನ್ನಾತ್ಮ ಜಗದಾತ್ಮಕಂತು ಸಂಬಂದವವು |
ವಹ್ನಿಸ್ಫುಲಿಂಗಗಳೊ ||ಮಂ||

ನಾವು ಒಬ್ಬರಿಗೊಬ್ಬರು ಕಾಣುವುದು ಕಣ್ಣಿರುವುದರಿಂದ ಎಂದು ತಿಳಿದಿದ್ದೇವೆ. ಆದರೆ? ಬರಿಯ ಕಣ್ಣಿದ್ದರೆ ಸಾಲದು. ಅಮಾವಾಸ್ಯೆಯ ರಾತ್ರಿ ದೀಪವು ಇಲ್ಲದೆ ಇರುವಾಗ, ಒಬ್ಬರನ್ನೊಬ್ಬರು ಕಾಣಲು ಆಗುವುದಿಲ್ಲ. ನಮ್ಮ ಕಣ್ಣು ಕೆಲಸ ಮಾಡಬೇಕಾದರೆ, ಅದಕ್ಕೆ ಸೂರ್ಯನೋ, ದೀಪವೋ, ನೋಟಕ್ಕೂ ನೋಡುವವನಿಗೂ ಸಮಾನ ನಿವೇದಕವಾಗಿರಬೇಕು. ಕಣ್ಣ ಹೊಳಪು ಸೂರ್ಯನ ಅಥವಾ ದೀಪದ ಬೆಳಕು ಸೇರಿ ಮನಸ್ಸಿನ ಮೇಲೆ ಪರಿಣಾಮ ಮಾಡುತ್ತದೆ.

ಆಕಾಶಾತ್ ವಾಯುಃ ವಾಯೋರಗ್ನಿಃ ಅಗ್ನೇರಾಪಃ |
ಅದ್ಭ್ಯಃಪೃಥಿವೀ ಪೃಥಿವ್ಯಾಂ ಓಷಧಯಃ ಓಷಧೀಭ್ಯೋನ್ನಂ
ಅನ್ನಾದ್ ಪುರುಷಃ ||

ಈ “ನಾನು” “ನಾನು” ಅನ್ನುವುದು ಎಲ್ಲಿಂದ ಬಂದಿರುವುದು. ಈ ಸರ್ವವ್ಯಾಪಕವಾದ ಪರಮಾತ್ಮ ತತ್ತ್ವವೇ ಈ “ನಾನು” ಎನ್ನುವ ಶರೀರ. ಈ ಶರೀರದಲ್ಲಿ ಸರ್ವವ್ಯಾಪಕ ಪರಮಾತ್ಮ ಶಕ್ತಿ ಸ್ಫುರಿಸಿದಾಗ, ಜೀವವೆನ್ನುವ ಭಾವ ಬರುತ್ತದೆ.

ಈ ಕೆಳಗಿನ ದೃಷ್ಟಾಂತದಿಂದ ಇದನ್ನು ನೋಡೋಣ.

ಸರ್ವವ್ಯಾಪಕವಾದ ಅಗ್ನಿ ಪರಮಾತ್ಮನ ಶಕ್ತಿಯ ಹಾಗೆ ಎಲ್ಲೆಡೆಯೂ ಇದೆ. ಸರ್ವವ್ಯಾಪಕವಾದ ಅಗ್ನಿಯ ಒಂದು ಕಿಡಿಯೂ ಅಗ್ನಿಯೇ. ಅಗ್ನಿ ಬೇರೆ ಕಿಡಿ ಬೇರೆ ಅಲ್ಲ. ಅದರಂತೆಯೇ ಸೂರ್ಯ ಬೇರೆ ಕಣ್ಣು ಬೇರೆ ಅಲ್ಲ. ಸೂರ್ಯನು ಸರ್ವವ್ಯಾಪಕವಾಗಿರುವುದರಿಂದಲೇ ಕಣ್ಣು ಇರುವುದು. ಕಣ್ಣು ಇರುವುದರಿಂದಲೇ ಸೂರ್ಯನ ಅಸ್ತಿತ್ತ್ವ ತಿಳಿಯುವುದು. ಅಗ್ನಿಯುರುವುದರಿಂದಲೇ ಕಿಡಿಯಿರುವುದು. ಆ ಸಣ್ಣ ಕಿಡಿಯಿಂದಲೇ ಅಗ್ನಿಯ ಅನುಭವವಾಗುವುದು.

ಇದರಂತೆಯೇ ಪ್ರತಿಯೊಬ್ಬರ ಹೃದಯದಲ್ಲಿ “ನಾನು” “ನಾನು” ಎಂದು ಸ್ಪಂದಿಸುತ್ತಿರುವಂತ ಆತ್ಮ ತತ್ತ್ವ, ಆ ಪರಮಾತ್ಮ ತತ್ತ್ವ, ಸರ್ವವ್ಯಾಪಕವಾದದ್ದು. ಒಳಗಿನ ಆತ್ಮ ತತ್ತ್ವ ಬೇರೆ, ಹೊರಗಿನ ಪರಮಾತ್ಮ ತತ್ತ್ವ ಬೇರೆ ಬೇರೆ ಅಲ್ಲ.

ನಮಗೆ ಈ ದೇಹ ಭಾವವಿರುವುದರಿಂದ ಬೇರೆಬೇರೆಯಾಗಿ ತೋರುತ್ತದೆ.

ಬಹಿರುದ್ಭುತವ ಮನುಜನಂತರದ್ಭುತವರಿತು |
ಗ್ರಹಿಸುವಂತಾಗಿಸಲು ಪೂರ್ವನುಭವಿಗಳ್ ||
ಬಹುಪರಿಯುಪಾಯಗಳ ನಿರವಿಸಿಹರದಕೇಕೆ
ಗಹಗಹಿಸುವೆಯೋ, ಮರುಳೆ? ||ಮಂ||

ಬಹಿರಂತರೈಕ್ಯವನು ನೆನಪಿಗಾಗಿಸಲೆಂದು |
ವಿಹಿತಮ್ ಅಚಮನಾರ್ಘ್ಯ ಪೂಜೆ ನೈವೇದ್ಯ ||
ಗುಹೆಯೊಳಗಣದ ಹೊರಗಣದ ಕೂಡಿಸುವುಪಾಯ |
ಸಹಭಾವವದಕೆ ಸರಿ ||ಮಂ||

ಪರಮಾತ್ಮನ ಪೂಜೆಯಲ್ಲಿ ೧೬ ಮೆಟ್ಟಿಲುಗಳು ಇವೆ. ಅವು ಧ್ಯಾನ, ಆವಾಹನ, ಅರ್ಘ್ಯ, ಅಭಿಷೇಕ, ಅಲಂಕಾರ, ಧೂಪ, ದೀಪ, ನೈವೇದ್ಯ, ಮೊದಲಾದವುಗಳು.

ಈಗ ಪೂಜೆ ಮಾಡಲು ಒಬ್ಬರು ಕುಳಿತ್ತಿರುತ್ತಾರೆಂದು ಭಾವಿಸಿರಿ. ಆ ಪೂಜೆಯಲ್ಲಿ ಮಗ್ನನಾದವನಿಗೆ ತನ್ನ ದೇಹ ಭಾವ ಉಳಿದಿರುವುದಿಲ್ಲ. ದೇಹಭಾವ ಇಲ್ಲದಿರುವಾಗ, ತಾನು ಬೇರೆ, ಪರಮಾತ್ಮ ಬೇರೆ, ಅನ್ನುವ ಅರಿವೇ ಉಳಿಯುವುದಿಲ್ಲ. ಪೂಜಿಸುವವನಿಗೆ ತನ್ನ ಅಂತಃಕರಣ, ಮನಸ್ಸು, ಬುದ್ಧಿಯಲ್ಲಿ, ಪೂಜಿಸುತ್ತೇನೆ ಎನ್ನುವ ಭಾವನೆ ಮಾತ್ರ ಮೂಡಿರುತ್ತದೆ.

ಆದ್ದರಿಂದ ಅವನು ಅಸ್ಮಿನ್ ಬಿಂಬೇ ಎಂದು ಶಿವಲಿಂಗವನ್ನೋ, ಗಣಪತಿಯನ್ನೋ, ಸ್ಥಾಪಯಾಮಿ, ಪೂಜಯಾಮಿ, ಎಂದು ಪೂಜಿಸುತ್ತಾನೆ. ಪೂಜೆಗೆ ಮೊದಲು ಆಚಮನ ಮಾಡಿ, ಅರ್ಘ್ಯ ಮಾಡಿ, ಅರ್ಘ್ಯ ಬಿಡುತ್ತಾನೆ. ಆನಂದದಿಂದ ಅಭಿಷೇಕ ಮಾಡುತ್ತಾನೆ, ವಿಭೂತಿಯನ್ನು ಹಚ್ಚಿ ಹೂವಿನಿಂದ ಅಲಂಕಾರ ಮಾಡಿ, ಪಂಚಭಕ್ಷ್ಯ ಪರಮಾನ್ನವನ್ನು ಭಕ್ತಿಯಿಂದ ನೈವೇದ್ಯವನ್ನು ಸಲ್ಲಿಸುವಾಗ ಪ್ರಾಣಾಯಸ್ವಾಹಾ……. ಪರಮಾತ್ಮನೇಸ್ವಾಹ ಎಂದು ಮಂತ್ರ ಉಚ್ಚಾರಣೆಯಿಂದ ವಿಧಿಯುಕ್ತವಾಗಿ ನೈವೇದ್ಯ ಸಲ್ಲಿಸಿ, ಆರತಿ ಮಾಡುತ್ತಾನೆ. ಈ ಹಂತಹಂತವಾದ ಪೂಜೆಯ ವೈಭವದಲ್ಲಿ ಪೂಜಿಸುವ ತನ್ನನ್ನು ತಾನೇ ಮರೆಯುತ್ತಾನೆ. ತಾನು ಪೂಜೆಗೆ ಕುಳಿತಿರುವುದಾಗಲಿ ತನ್ನ ದೇಹಭಾವ, ಜೀವಭಾವವಾಗಲಿ, ಯಾವುದೂ ಅವನಲ್ಲಿರುವುದಿಲ್ಲ. ಬಹಿರಂತರೈಕ್ಯವನು ನೆನಪಿಗಾಗಿಸಲೆಂದು ಈ ದೇಹಭಾವವನ್ನು ಮರೆತ ನಾವು ಉಳಿಯುವುದು ಎಲ್ಲಿ? ಆತ್ಮನಲ್ಲಿ. ಆತ್ಮನಲ್ಲಿ ನಿಂತಾಗ ಬರುವ ಅನುಭವವೇನು? “ಸಯಶ್ಚಾಯಂ ಪುರುಷೇ, ಯಶ್ಚಾಸಾವಾದಿತ್ಯೇ ಸ ಏಕಃ ಪರಮಾತ್ಮನೊಬ್ಬನೇ ಎಂಬುದು.
ಪ್ರತಿಯೊಬ್ಬರೂ ಭಕ್ತಿಯಿಂದ ಮಾಡುವಂಥ ಪೂಜೆ, ಪ್ರಾರ್ಥನೆ, ಧ್ಯಾನ, ಇವು ದೇಹಭಾಗವನ್ನು ಮರೆತು, ಹೃದಯವನ್ನು ಬೆಳಗುವಂಥಾ ಆತ್ಮಭಾವದಲ್ಲಿ ಒಂದಾಗುವುದಕ್ಕೆ ಗುಹೆಯೊಳಗಣದ ಹೊರಗಣದ ಕೂಡಿಸುವ ಉಪಾಯ ಹೃದಯದ ಒಳಗೆ, ಹೊರಗೆ, ಇರುವ ಪರಮಾತ್ಮ ಒಬ್ಬನೇ. ಅದನ್ನು ಬೇರೆ ಬೇರೆ ಎಂದು ಭಾವಿಸಿರುವುದು ನಮ್ಮ ಮನಸ್ಸು-ಬುದ್ಧಿಯ ಭ್ರಾಂತಿಯಿಂದ, ದೇಹ ಭಾವನೆ ಇದ್ದುದ್ದರಿಂದ. ಈ ದೇಹ ಭಾವನೆಯನ್ನು ಕಳೆದುಕೊಳ್ಳುವುದೇ ಪೂಜೆ, ಭಜನೆ, ಪ್ರಾರ್ಥನೆಯ ನಿಜವಾದಂತಹ ಧ್ಯೇಯ.

ದೇವಮಂದಿರ ಭಜನೆ ಪೂಜೆ ಪ್ರಸಾದಗಳು |
ಜೀವನದಲಂಕಾರ, ಮನಸಿನುದ್ಧಾರ ||
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- |
ದಾವುದಾದೊಡಮೊಳಿತು ||ಮಂ||

ನಮ್ಮ ಮನೆಯಲ್ಲಿ ಒಂದು ಪೂಜಾ ಮಂದಿರ, ಇಲ್ಲವೆ ಪ್ರಶಾಂತವಾದಂತ ಸ್ಥಳ ಖಂಡಿತವಾಗಿ ಇರಬೇಕು. ಅಲ್ಲಿ ಪರಮಾತ್ಮನ ಯಾವುದಾದರೂ ಒಂದು ರೂಪವನ್ನು ಪೂಜಿಸಬೇಕು. ಪೂಜೆಯಲ್ಲಿ ಸಂಸಾರದ ಗೋಳಾಟ ಜೀವನದ ನಾನಾ ರೀತಿಯ ನೋವು, ಬೇನೆ, ಇವೆಲ್ಲವನ್ನು ಮರೆತು, ಆತ್ಮನಲ್ಲಿ ಒಂದಾಗಿನಿಂತು ಆತ್ಮಾನಂದವನ್ನು ಪಡೆಯುವುದಕ್ಕೆ, ಸಂತೋಷ ಸುಖವನ್ನು ಅನುಭವಿಸುವುದಕ್ಕೆ ಪೂಜೆ ಮಾಡಬೇಕು.

ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ |
ಸೋಮ ಶಂಕರನ ಭೈರವ ರುದ್ರನಂತೆ ||
ಹೈಮವತಿ ಶಿವೆ ತಾನೆ ಕಾಳಿ ಚಂಡಿಕೆಯಂತೆ |
ಪ್ರೇಮ ಘೋರಗಳೊಂದೆ! ||ಮಂ||

ಪರಮಾತ್ಮನಿಗೆ ಹಲವು ನಾಮಗಳುಂಟು. ಶ್ಯಾಮ, ರಾಮ, ನರಸಿಂಹ, ಶಂಕರ, ಭೈರವ, ರುದ್ರ, ಚಂಡಿ, ಮಹಾಕಾಳಿ, ಒಂದೇ ಎರಡೇ ಸಹಸ್ರ, ಸಹಸ್ರ ನಾಮಗಳು. ಮೂಲತಃ ಏಕೋದೇವಃ ಪರಮಾತ್ಮನ ಸತ್ಯವನ್ನು ತಿಳಿದವರಿಗೆ, ಎಲ್ಲ ರೂಪಗಳು ಒಂದೇ. ಮಹಾತ್ಮರಿಗೆ ಅವರ ಇಷ್ಟದೇವರು ಬೇರೆ ಬೇರೆಯಾಗಿದ್ದರೂ ಅವರು ದೇವರಲ್ಲಿ ಭೇದಭಾವ ಎಣಿಸಿಲ್ಲ ಯಾಕೆ? ಅವರು ಸತ್ಯವನ್ನು ಕಂಡವರು.

ಸತ್ಯಕ್ಕೆ ಸ್ವತಃ ಉಳಿದುಕೊಳ್ಳುವ ಶಕ್ತಿ ಇದೆ. ಸತ್ಯವನ್ನು ಯಾರೂ ಅಳಿಸಲಾರರು. ಸತ್ಯವನ್ನು ಉಳಿಸಲು ಯಾರೂ ಬೇಕಿಲ್ಲ. ಅದು ಸ್ವಯಂ ಸಮರ್ಥವಾದದ್ದು. ಅದು ತನ್ನನ್ನು ತಾನೇ ಅಂಗೀಕಾರ ಮಾಡಿಸಿಕೊಳ್ಳುತ್ತದೆ. ಅಸತ್ಯವು ತಾನಾಗಿಯೇ ಬಿದ್ದು ಹೋಗುತ್ತದೆ. ಸತ್ಯವು ಸ್ವತಃ ಶಾಶ್ವತ. ಅಸತ್ಯವು ಸ್ವತಃ ಕ್ಷಣಿಕ. ಅದಕ್ಕೆ ಸಾತ್ಯವೇ ದೇವರು ಎಂದಿದ್ದಾರೆ.

ಪ್ರತಿಯೊಬ್ಬರ ಹೃದಯದಲ್ಲಿ ಪರಮಾತ್ಮನೆಗೆ ಪೀಠವಿದೆ, ಸಿಂಹಾಸನವಿದೆ. ಆ ಸಿಂಹಾಸನದಲ್ಲಿ ಯಾವುದೇ ರೂಪವು ಇಲ್ಲ. ಪರಮಾತ್ಮನು ನಿರಾಕಾರಾ. ಅವನಿಗೆ ಯಾವ ರೂಪವೂ ಇಲ್ಲ. ನೀವು ಅವನಿಗೆ ಯಾವ ರೂಪವನ್ನು ಕಲ್ಪಿಸುತ್ತೀರೋ ಅದೇ ರೂಪವನ್ನು ಕಾಣುತ್ತೀರಿ. ಯದ್ ಭಾವಂ ತದ್ ಭವತಿ ಕಾರಣ ದೇವರಲ್ಲಿ ಮೇಲು, ಕೀಳು, ಉಚ್ಚ, ನೀಚ, ತರ, ತಮ, ಅನ್ನುವಂಥ ಅಜ್ಞಾನವನ್ನು ಕಿತ್ತಿಹಾಕಿ ಯಾವುದಾದರೂ ಒಂದು ರೂಪವನ್ನು ಇಟ್ಟುಕೊಳ್ಳಬೇಕು.
ದೇವರೊಬ್ಬ ನಾಮ ಹಲವು.

ನಂಬು ದೇವರ, ನಂಬು ನಂಬೆನ್ನುವುದು ಲೋಕ |
ಕಂಬನಿಯನಿಡುವ ಜನ ನಂಬಲೊಲ್ಲದರೇಂ? ||
ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ? |
ತುಂಬು ವಿರತಿಯ ಮನದಿ ||ಮಂ||

ಡಿ.ವಿ.ಜಿ.ಯವರು ಹೇಳುವುದು, ನಂಬುವುದಾದರೆ ಒಬ್ಬ ದೇವರನ್ನು ನಂಬು. ನಂಬು ದೇವರ ನಂಬು.

ನಾವು ಬೀದಿಯಲ್ಲಿ ಹೋಗುವಾಗ, ಮರಕ್ಕೆ ಪ್ರದಕ್ಷಿಣೆ ಹಾಕುವುದನ್ನು ನೋಡುತ್ತೇವೆ. ಇದು ಕೆಲವರಿಗೆ ಆಶ್ವರ್ಯ, ಮರಕ್ಕೇಕೆ ಪ್ರದಕ್ಷಿಣೆ? ಮರದಲ್ಲಿ ದೇವರು ಇದ್ದಾನೆಯೇ? ಅಲ್ಲೆಲ್ಲಿ ದೇವರು? ಎಂಬ ಶಂಕೆ ಅವರದು.

ಪರಮಾತ್ಮನಿಗೆ ಒಂದೇ ಸ್ಥಳವಿಲ್ಲ. ಅವನು ಸರ್ವವ್ಯಾಪಿ, ಎಲ್ಲೆಲ್ಲಿಯೂ ಇರುತ್ತಾನೆ. ಅಂದ ಮೇಲೆ ಮರದಲ್ಲಿಯೂ ಇರುತ್ತಾನೆ.

ನಾವೇ ಅವನಿಗೆ ಗರ್ಭಗೃಹವನ್ನು ಮಾಡಿ ಅಲ್ಲಿ ಸ್ಥಳವನ್ನು ಕಲ್ಪಿಸಿದ್ದು. ನಿಜವಾಗಿಯೂ ಅವನು ಎಲ್ಲೆಂದರಲ್ಲಿ ಇರುತ್ತಾನೆ.

ನಾವು ಪೂಜೆ ಮಾಡುವಾಗ ಅಸ್ಮಿನ್ ಬಿಂಬೆ ಎಂದು ಒಂದು ಅಡಿಕೆ ಬೊಟ್ಟನ್ನು ಇಟ್ಟು, ಗಣಪತಿ ಎಂದು ಕಲ್ಪಿಸಿ ಪೂಜಿಸುತ್ತೇವೆ. ಕಾರಣ ಯಾರು ಶ್ರದ್ಧೆಯಿಂದ ಯಾವ ವಸ್ತುವಿನಲ್ಲಿ ಪರಮಾತ್ಮನನ್ನು ಕಾಣಬೇಕು ಎಂದು ನಿರ್ಧರಿಸುತ್ತಾರೋ ಅದರಲ್ಲಿಯೇ ಅವನನ್ನು ಕಾಣುತ್ತಾರೆ.

ನಂಬು ದೇವರ ನಂಬು ನಂಬೆನ್ನುವುದು ಲೋಕ,
ಕಂಬನಿಯನಿಡುವ ಜನ ನಂಬಲೊಲ್ಲದರೇಂ?

ದೇವರನ್ನು ನಂಬುವುದರಿಂದ ಮಾನವನ ದುಃಖ ಅಳು, ಗೋಳು. ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತದೆ. ಅದಕ್ಕಾಗಿ ನಾಮಸ್ಮರಣೆ ಮಾಡು. ನಾಮ ಸ್ಮರಣೆಯಿಂದ ಅಂತಃಕರಣ-ಮನಸ್ಸು-ಬುದ್ಧಿ, ತನ್ನಿಂದ ತಾನೇ ಶಾಂತವಾಗುತ್ತದೆ. ನಾಮಸ್ಮರಣೆಯಲ್ಲಿಂ ಪೂಜೆ, ಭಜನೆಯಲ್ಲಿ, ಮಗ್ನವಾದಾಗ, ನಮಗೆ ಅರಿವಿಲ್ಲದೆಯೇ ಆನಂದದ ಅರಮನೆಗೆ ಹೋಗಿ ಕುಳಿತುಕೊಳ್ಳುತ್ತೇವೆ. ಆದರೆ? ಅದು ಎಷ್ಟು ಹೊತ್ತು? ಪೂಜೆ, ಭಜನೆ ಮುಗಿಯುವವರೆಗೆ, ನಮ್ಮನ್ನು ನಾವು ಮರೆಯುತ್ತೇವೆ.

ಪರಮಾತ್ಮನನ್ನು ನಾವು ನೋಡುವುದು ಹೃದಯದಲ್ಲಿ ಪರಮಾತ್ಮನ ವಾಸಸ್ಥಾನ ಹೃದಯ.

ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ |
ನಂಬಿಯುಂ ನಂಬದಿರುವಿಬ್ಬಂದಿ ನೀನು ||
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು |
ಸಿಂಬಳದಿ ನೊಣ ನೀನು ||ಮಂ||

ಹಿರಣ್ಯಕಶಿಪು ದೇವರೇ ಇಲ್ಲವೆಂದು ತೀರ್ಮಾನಿಸಿದ. ಅವನಿಗೆ ತನ್ನು ಬುದ್ಧಿ ಸಾಮರ್ಥ್ಯದ ಮೇಲೆ ಪೂರ್ಣ ನಂಬಿಕೆ. ಅವನ ಮಗನೇ ಪ್ರಹ್ಲಾದ ನಂಬಿದನು ಪ್ರಹ್ಲಾದ ಪ್ರಹ್ಲಾದನಿಗೆ “ಹರಿ” ಮಾತ್ರ ಎಲ್ಲೆಲ್ಲೂ ಕಾಣುವುದು. ಅವನು ಹರಿಯನ್ನು ಬಿಟ್ಟು ಬೇರೆ ಏನನ್ನೂ ಕಾಣಲಾರ. ಎಲ್ಲ ಕದೆಗೂ ಅವನೇ, ಅವನಿಗೆ ಇವರಿಬ್ಬರ ಹೃದಯಗಳ ಕಲ್ಪನೆ ಮಾಡಿದರೆ, ತಂದೆಯದು ರಾಕ್ಷಸ ಹೃದಯ, ತಾನು, ತನ್ನ ಬಲ, ಪೌರುಷ, ಇದರ ಮೇಲೆ ಅವನಿಗೆ ಪೂರ್ಣ ಭರವಸೆ. ಪರಮಾತ್ಮನು ಅವನಿಗೆ ಇಲ್ಲ.

ಮಗನದು ಅದಕ್ಕೆ ವಿರುದ್ಧವಾಗಿ “ನಾನು” ಅನ್ನುವುದರಲ್ಲಿ ಅಸ್ತಿತ್ವವೇ ಇಲ್ಲ. ಅವನಿಗೆ ಪರಮಾತ್ಮನಿರುತ್ತಾನೆ, ಎನ್ನುವಲ್ಲಿ ಸಂಪೂರ್ಣ ಶ್ರದ್ಧೆ. ಇಬ್ಬರ ಹೃದಯಸ್ಥಾನದಲ್ಲಿ ನಂಬಿಕೆ ನೂರಕ್ಕೆ ನೂರು. ಹಿರಣ್ಯಕಶಿಪುವಿಹೆ ಪರಮಾತ್ಮ ಇಲ್ಲವೇ ಇಲ್ಲ ಎನ್ನುವಲ್ಲಿ ಸಂಪೂರ್ಣ ಭರವಸೆ ಅವನ ಹೃದಯ, ಮನಸ್ಸು, ಬುದ್ಧಿಯ, ಸ್ಥಿರತೆ ದೇವರೇ ಇಲ್ಲ ಅನ್ನುವ ಅವನ ವಿಶ್ವಾಸದಲ್ಲಿ.

ಪ್ರಹ್ಲಾದನಿಗೆ ಪರಮಾತ್ಮ ಮಾತ್ರ. “ನಾನು” ಅನ್ನುವುದು ಅಲ್ಲಿ ಇಲ್ಲವೇ ಇಲ್ಲ. ಅಷ್ಟು ದೃಢವಾದ ನಂಬಿಕೆ ಅವನಿಗೆ.

ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು ಇಬ್ಬರಿಗೂ ಮೋಕ್ಷವಾಯಿತು. ಅಂತಹ ರಾಕ್ಷಸನಾದ ಹಿರಣ್ಯಕಶಿಪುವನ್ನು ಸಂಹಾರ ಮಾಡಿದ್ದು ಯಾರು? ಪರಮಾತ್ಮನೇ.

ಆದರೆ? ನಮ್ಮ ಕತೆಯೇ ಬೇರೆ. ಸಾಮಾನ್ಯವಾಗಿ ನಾವೆಲ್ಲರೂ ಭಕ್ತರೆಂದೇ ನಮ್ಮಷ್ಟಕ್ಕೆ ನಾವು ಭಾವಿಸಿಕೊಂಡಿರುತ್ತೇವೆ. ದೇವಸ್ಥಾನಕ್ಕೆ ಹೋಗುತ್ತೇವೆ, ನಾಮಸ್ಮರಣೆ ಭಜನೆ ಮಾಡುತ್ತೇವೆ, ಏನೂ ತೋಚದೆ ಇದ್ದಾಗ, ದೇವರೇ ಗತಿ ಎನ್ನುತ್ತೇವೆ. ಇವುಗಳೆಲ್ಲವೂ ಭಕ್ತಿಯ ಚಿನ್ಹೆಗಳೇ ಆದರೆ? ಅದು ನಿರ್ಮಲ ಭಕ್ತಿಯೇ? ಸಂಪೂರ್ಣ ಭಕ್ತಿಯೇ?

ಭಕ್ತಿಯೇ ನಮಗೆ ಪರಮತಾರಕವಾದದ್ದು. ಕಾರಣ ಭಕ್ತಿಯ ಸ್ವರೂಪವನ್ನು ವಿಚಾರಮಾಡಿ ತಿಳಿದುಕೊಳ್ಳಬೇಕು. ನಾವು ಕೈಮುಗಿಯುವುದನ್ನೂ ಬಿಡುವುದಿಲ್ಲ ಒಂದು ವೇಳೆ ದೇವರು ಇದ್ದರೆ? ಹೀಗೆ ನಮ್ಮ ಮನಸ್ಸಿಗೆ ಸ್ಥಿರತೆ ಇಲ್ಲ, ನಮ್ಮದು ಸಂಶಯಾತ್ಮಕ ಬುದ್ಧಿ.

ಕಾಯ್ವನೋರ್ವ ನಿರಲ್ಕೆ ಜಗದ ಕಥೆ ಏಕಿಂತು? ಪರಮಾತ್ಮನು ಪ್ರಪಂಚವನ್ನು ಕಾಪಾಡಲು ಇರುವುದಾದರೆ, ಪ್ರಪಂಚವು ಕಷ್ಟಗಳಿಂದ ಏಕೆ ತುಂಬಿದೆ? ಜಗದ ಕಥೆ ಏಕಿಂತು? ಅಂದರೆ ನಮಗೆ ನಮ್ಮ ಹೃದಯದಲ್ಲಿ ಪರಮಾತ್ಮನಿದ್ದಾನೆ, ಎಂಬ ಅರಿವಿನ ಬಗ್ಗೆ ಶ್ರದ್ಧೆಯಿಲ್ಲ, ಭಕ್ತಿಯಿಲ್ಲ, ಸಂಪೂರ್ಣ ಸ್ಥಿರತೆಯಿಲ್ಲ, ಅವನು ಖಂಡಿತವಾಗಿಯೂ ಇಲ್ಲ. ಅನ್ನುವ ಭರವಸೆಯೂ ನಮಗೆ ಇಲ್ಲ.

ಅದಕ್ಕೆ ಸ್ಥಿರವಾಗಿ ಒಂದು ಕಡೆ ಶ್ರದ್ಧೆಯಿಂದ ನಿಲ್ಲಬೇಕು. ಡಿ.ವಿ.ಜಿ.ಯವರು ಹೇಳುವುದು, ಸಿಂಬಳದ ನೊಣ ನೀನು. ಸಿಂಬಳ ಅಂತು ಅದರ ಮೇಲೆ, ನೊಣ ಕುಳಿತಾಗ ಅದು ಸಿಂಬಳವನ್ನು ತಿನ್ನುವ ಹಾಗೆಯೂ ಇಲ್ಲ, ಅಲ್ಲಿಂದ ಹಾರಿಹೋಗುವ ಹಾಗೆಯೂ ಇಲ್ಲ. ನಮ್ಮ ಭಕ್ತಿಯೂ ಇದೇ ರೀತಿಯಾಗಿದೆ. ನಾವು ಅ ಕಡೆಯೂ ಅಲ್ಲ ಈ ಕಡೆಯೂ ಅಲ್ಲ. ನಾಣ್ಣುಡಿಯೊಂದಿದೆ. ಹೊರಳಾಡುವ ಕೊಡ ನೀರು ತಂದೀತೆ ಎಂದು. ಗೊತ್ತುಗುರಿಯಿಲ್ಲದ ಅಲೆದಾಟದಿಂದ ಅಧ್ಯಾತ್ಮಿಕ ಭೂಮಿಕೆಯಲ್ಲಿ ಯಾವ ಪ್ರಯೋಜನವೂ ಸಾಧಿಸಲಾರದು.

ಕತ್ತಲೆಯೊಳೇನೋ ಕಂಡು ಬೆದರಿದ ನಾಯಿ |
ಎತ್ತಲೋ ಸಖನೊರ್ವನಿಹನೆಂದು ನಂಬಿ ||
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು |
ಭಕ್ತಿಯಂತೆಯೆ ನಮದ ||ಮಂ||

ಪೌರ್ಣಿಮೆ, ಹಿತ್ತು ಚೆಲ್ಲಿದ ಹಾಗೆ ತುಂಬು ಬೆಳದಿಂಗಳು. ಆ ಚಂದ್ರನ ಬೆಳದಿಂಗಳಲ್ಲಿ ಮರಗಳ ಟೊಂಗೆಗಳು ಗಾಳಿಗೆ ಅತ್ತಿತ್ತ ಅಲೆದಾಡುವಾಗ, ಅವುಗಳ ನೆರಳು ಸ್ವಲ್ಪ ಬೀಳುತ್ತದೆ. ಆ ನೆರಳನ್ನು ನೋಡಿ, ಒಂದು ನಾಯಿ ಬೆದರಿ ಬೌ ಬೌ ಎಂದು ಬೊಗಳಲು ಪ್ರಾರಂಭ ಮಾಡುತ್ತದೆ. ಆ ನಾಯಿ ಬೊಗಳುವುದನ್ನು ಕೇಳಿ, ಬೀದಿಯ ಎಲ್ಲ ಉಳಿದ ನಾಯಿಗಳೂ ಹೆದರಿ, ಆದರೆ ಉಳಿದ ನಾಯಿಗಳು ಬೆಗಳುವುದು ಆನಾಯಿ ಬೊಗಳಿದ್ದನ್ನು ಕೇಳಿ. ಎಲ್ಲ ನಾಯಿಗಳೂ ಬೆಗಳುವುದನ್ನು ಕೇಳಿ ಮೊದಲನೆಯ ನಾಯಿಗೆ ಸಂತೋಷ ಯಾಕೆ? ತನ್ನಂತೆಯೇ ಬೇರೆ ನಾಯಿಗಳು ಬೊಗಳುತ್ತವಲ್ಲ.

ನಾವು ಪ್ರಾಪಂಚಿಕರು. ನಾವು ಮಾದುವ ಭಕ್ತಿಯ ಒಳಗಡೆ ಕೊಂಚ ಅಹಂತೆ ಯಾವಾಗಲೂ ಅವಿತುಕೊಂಡಿರುತ್ತದೆ. ನಮಗೆ ಏನಾದರೂ ಬೇಕೆಂಬ ಇಚ್ಛೆಯಿಂದ ಅಂತಃಕರಣ, ಮನಸ್ಸು, ಬುದ್ಧಿಯಲ್ಲಿ, ಪರಮಾತ್ಮನನ್ನು ನಂಬಿ ಕೇಳುವಾಗ ನಮ್ಮನ್ನು ನೋದಿ ಇನ್ನೊಬ್ಬರು ಹೀಗೆಯೇ ನಂಬುತ್ತಾರೆ. ಈ ನಂಬಿಕೆಯಲ್ಲಿ ಮೊದಲನೆಯವನಿಗೆ ಪೂರ್ಣಶ್ರದ್ಧೆ ಇದೆಯೇ, ಪರಮಾತ್ಮನ ಬಗ್ಗೆ ಪೂರ್ಣಜ್ಞಾನವಿದೆಯೇ? ಇಲ್ಲ. ಅವನಿಗೆ ಏನು ಬೇಕೋ ಅದು ಸಿಗಲಿಲ್ಲ. ಅವನು ದೇವರನ್ನೇ ಬಿಟ್ಟ. ಕೆಲವು ದಿವಸಗಳ ನಂತರ, ಅವನ ದೇವರೇ ಬೇರೆ. ಇಷ್ಟು ದಿವಸ ಕೃಷ್ಣನನ್ನು ನಂಬಿದ್ದ, ಅವನನ್ನೂ ಬಿಟ್ಟ. ಅದಕ್ಕೇ ಅನ್ನುವುದು ಸಿಂಬಳದ ನೊಣನೀನು. ನಾವು ತಿಳಿದುದ್ದು ಏನು? ಭಕ್ತಿಯೆಂದರೆ ದೇವರು ನಮ್ಮ ಇಚ್ಛೆಗಳನ್ನೆಲ್ಲ ಪೂರೈಸಬೇಕು ಎಂಬುದು. ನಿಜವಾದ ಭಕ್ತಿಯೆಂದರೆ ಭಗವಂತನ ವಿಷಯದಲ್ಲಿ ನಿರ್ಮಲವೂ ಪರಿಪೂರ್ಣವೂ, ಆದ ಪ್ರೇಮ.

ಎನ್ನ ಬೇಡಿಕೆ ನಷ್ಟವಹುದೆಂತು ದೇವನಿರೆ? |
ಅನ್ಯಾಯ ಜಗವೆಲ್ಲ; ದೇವನಿರನೆನುತ ||
ತನ್ನ ತನ್ನನುಭವವ ನಂಬಲೋರೊರ್ವನುಂ |
ಭಿನ್ನವಾಗದೆ ಸತ್ಯ? ||ಮಂ||

ಎಲ್ಲ ಪ್ರಾಪಂಚಕರಿಗೆ ದೇವರಿದ್ದಾನೆಯೆ ಎಂಬ ಪ್ರಶ್ನೆ, ಜೀವನದಲ್ಲಿ ಒಂದು ಸಲ ಬಂದೇ ಬರುತ್ತದೆ. ಯಾಕೆ? ಅವರು ಜೀವನದಲ್ಲಿ ಏನನ್ನೋ ಬಯಸಿ ದೇವರನ್ನು ಭಕ್ತಿಯಿಂದ ಪೂಜಿಸುತ್ತಾರೆ. ಅದು ದೊರಕಲಿಲ್ಲವೆಂದರೆ ತಕ್ಷಣ ಅವರಿಗೆ ದೇವರಿದ್ದಾನೆಯೇ ಅನ್ನು ಪ್ರಶ್ನೆ ಬಂದೇ ಬರುತ್ತದೆ.

ಇನ್ನು ಕೆಲವರು ಪೂಜೆ, ಭಜನೆ, ವ್ರತಾದಿಗಳನ್ನು ನಿಯಮದಿಂದ ಪಾಲಿಸುತ್ತಾರೆ. ಸಾಧು ಸತ್ಪುರುಷರನ್ನು ಮನೆಗೆ ಬರಮಾಡಿಕೊಂಡು ಪಾದಪೂಜೆ ಭಿಕ್ಷೆ ಎಲ್ಲವನ್ನೂ ಮಾಡುತ್ತಾರೆ. ಇಷ್ಟೆಲ್ಲ ನಿಯಮಗಳನ್ನು ಪಾಲಿಸಿದರೂ ಕಷ್ಟ ಪರಂಪರೆಗಳು ಬರುವಾಗ, ದೇವರಿದ್ದಾನೆಯೇ? ಅದೆಲ್ಲ ಸುಳ್ಳು, ಎಂದು ಉದ್ಗಾರ ತೆಗೆಯುತ್ತಾರೆ.

ಇಂತಹ ಉದ್ಗಾರಗಳಿಂದ ದೇವರಿಗೇನೂ ನಷ್ಟವಿಲ್ಲ. ಪರಮೇಶ್ವರನಿಗೆ ಮನುಷ್ಯನ ಸೇವೆಯ ಅವಶ್ಯಕತೆಯಿಲ್ಲ. ಮನುಷ್ಯನು ಕೊಡುವ ನೈವೇದ್ಯ, ಕಾಣಿಕೆಗಳು, ದೇವರಿಗೆ ಬೇಕಿಲ್ಲ. ಅದರ ಲಾಭವೇನಿದ್ದರೂ ಮಾಡಿದವನಿಗೆ.

ನಾವು ಅಂತಃಕರಣ ಅನ್ನುವಂಥ ಮನಸ್ಸು, ಬುದ್ಧಿಯಲ್ಲಿ ದೇವರು ಅಂದರೆ ಏನು ಎನ್ನುವ ಸರಿಯಾದ ಜ್ಞಾನವನ್ನು ಬೆಳೆಸದೆ, ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು. ಹೀಗೆ ಆಗಬಾರದು ನಮ್ಮ ಭಕ್ತಿ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಕಷ್ಟಗಳು ಬರುತ್ತವೆ. ನಷ್ಟಗಳು ಆಗುತ್ತವೆ. ಆದರೆ ವಿಚಾರ ಮಾಡಿ ನೋಡು.

ಫಲವೇನು ಹೆಣಗಾಡಿ ಹೋರಾಡಿ ಧರೆಯೊಳಗೆ? |
ಸಲಿಸದೊಂದನುಮೊದನುಂ ದೈವ ಬಿಡದು ||
ಹೊಲಸೆಲ್ಲವೆಲ್ಲಪಾಳ್, ಬಾಳ್ಗೆ ತಳಹದಿಯಿಲ್ಲ |
ಗಲಿಬಿಲಿಯಿದೆನಬೇಡ ||ಮಂ||

ಪ್ರಪಂಚದಲ್ಲಿ ಸಾಕಷ್ಟು ಜನ ತಪ್ಪದೇ ಬೆಳಿಗ್ಗೆ ಪ್ರತಿದಿವಸವೂ ಪೂಜೆ ಮಾಡುವವರು ಇದ್ದಾರೆ. ಅವರ ದೇವರ ಮನೆ ನೋಡಲು ಅಂದವಾಗಿರುತ್ತದೆ. ಪ್ರತ್ಯೇಕವಾದ ದೇವರ ಮನೆ, ಭವ್ಯವಾದ ಬೆಳ್ಳಿಯ ಮಂಟಪ, ಬೆಳ್ಳಿಯ ತೋರಣ, ಬೆಳ್ಳಿಯ ಪೀಠ, ಮಿಕ್ಕ ಪೂಜೆಯ ಸಾಮಗ್ರಿಗಳೆಲ್ಲವೂ ಬೆಳ್ಳಿಯವೇ. ಪೂಜೆಯೂ ಸಂಭ್ರಮದಿಂದ ನಡೆಯುತ್ತದೆ. ನಿತ್ಯವೂ ಇಷ್ಟೆಲ್ಲ ಸಾಧನೆಗಳನ್ನು ಮಾಡಿಯೂ, ಅವರಿಗೆ ಕಷ್ಟಗಳು ಬರುವಾಗ, ದೇವರು ಇದ್ದಾನೆಯೇ? ಒಂದು ವೇಳೆ ಇದ್ದರೆ, ಅವನಿಗೆ ಕರುಣೆ ಇದೆಯೇ? ಎಂಬ ಪ್ರಶ್ನೆ ಅವರ ಮುಂದೆ ಕುಣಿಯುತ್ತದೆ. ಡಿ.ವಿ.ಜಿ.ಯವರು ಹೇಳುವುದು.

ಅಂಥವರ ಬಾಳ್ಗೆ ತಳಹದಿಯಲ್ಲ. ಕಾಯ್ವದೈವವಿಲ್ಲ. ದೇವರು ಕುರುಡೆನ್ನದಿರು. ಯಾಕೆಂದರೆ? ಪ್ರಪಂಚವೆಂದರೇನೆ ಗಲಿಬಿಲಿ, ಗದ್ದಲ, ಇದಕ್ಕೆ ಒಂದು ಆದಿ ಅಂತ್ಯವಿಲ್ಲ.

ಎನಗೆ ಸುಖವಿಲ್ಲವದರಿಂ ದೇವರಿರನೆನ್ನು- |
ವನುಮಿತಿಯ ನೀಂ ಗೆಯ್ಯೆ, ಸುಖಿಯದೇನೆನುವಂ? ||
ತನುಬಾಹ್ಯಕರಣದನುಭವಕಿಂತ ಸೂಕ್ಷ್ಮತರ- |
ಧನುಭವವ ನೀನರಸೊ ||ಮಂ||
ಎನಗೆ ಸುಖವಿಲ್ಲವದರಿಂ ದೇವರಿರನೆನ್ನು- |
ವನುಮತಿಯ ನೀಂ ಗಯ್ಯೆ |

ಜೀವನದಲ್ಲಿ ಸುಖವಿಲ್ಲವೆಂದರೆ, ದೇವರೇ ಇಲ್ಲ. ಅನ್ನುವ ಭಾವನೆ ಕೆಲವರಿಗೆ. ಯಾಕೆ? ಯಾಕೆಂದರೆ ಅವರು ಸಾಕಷ್ಟು ಪೂಜೆ, ಭಜನೆ, ಸಹಸ್ರನಾಮ, ಪಾರಾಯಣ, ಮುಂತಾದವುಗಳನ್ನು ಮಾಡುತ್ತಿರುವಾಗಲೂ, ದುರದೃಷ್ಟವಶಾತ್ ಲಖವಾ ಹೊಡೆದೊ, ಕ್ಯಾನ್ಸರ್ ಆಗಿಯೋ, ಬಳಲುವ ಸಂದರ್ಭ ಬರುವಾಗ, “ನಮ್ಮ ಪಾಲಿಗೆ ದೇವರೇ ಇಲ್ಲ” ಎಂದು ಗೋಳಾಡುವವರು ಕೆಲವರು.

ಇನ್ನು ಸುಖಿಯಾಗಿದ್ದವರು ಏನನ್ನುತ್ತಾರೆ? ಅವರು ತಮ್ಮ ಐಶ್ವರ್ಯದಲ್ಲಿ ಸುಖದ ಸುಪ್ಪತ್ತಿಗೆಯ ಮೇಲೆ ಮಲಗಿ, ಸುಖದಿಂದ ಇರುವಾಗ ದೇವಸ್ಥಾನಕ್ಕೇ ಹೋಗುವುದಿಲ್ಲ.

ಕಷ್ಟವಿದ್ದವರು ದೇವಸ್ಥಾನಕ್ಕೆ ಬರಬೇಕು. ಸುಖಿಯಾಗಿದ್ದವರು, ದೇವಸ್ಥಾನಕ್ಕೆ ಬರಬಾರದು ಎಂಬ ನಿಯಮವೇನಾದರೂ ಇದೆಯೇ? ಖಂಡಿತವಾಗಿಯೂ ಇಲ್ಲ. ತನುಬಾಹ್ಯಕರಣದನುಭವಕಿಂತ ಸೂಕ್ಷ್ಮತರದನುಭವವ ನೀನರಸೊ

ಪರಮಾತ್ಮನನ್ನು ನಂಬುವುದು, ನಮ್ಮ ಶ್ರೇಯಸ್ಸಿಗಾಗಿ, ನನ್ನ ಅಂತಃಕರಣ, ಬುದ್ಧಿ, ಮನಸ್ಸು, ನಿಜವಾದ ಆನಂದವನ್ನು ಪಡೆಯಲು, ಪೂರ್ಣ ಸುಖವನ್ನು ಅನುಭವಿಸಲು, ಪರಮಾತ್ಮನನ್ನು ಭಜಿಸುವಾಗ, ತಾನು ಬೇರೆ, ಪರಮಾತ್ಮ ಬೇರೆ, ಅನ್ನುವ ತನ್ನ ಜೀವಭಾವವನ್ನು ಮರೆತು, ಪರಮಾತ್ಮನಲ್ಲಿ ಒಂದಾಗಿ ಭಜಿಸಬೇಕು. ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಹರಿಯ ಎಂಬ ದಾಸೋಕ್ತಿ ಇದೆ.

ನನ್ನ ಅಂತಃಕರಣ ಅನ್ನುವಂಥ ಮನಸ್ಸು, ಬುದ್ಧಿ, ತನಗೆ ಇಷ್ಟವಾದ ಬಯಕೆಗಳನ್ನು ಪರಮಾತ್ಮನಲ್ಲಿ ಕೇಳಿದರೂ, ಅದು ನೆರೆವೇರಿತು ಸರಿ. ನೆರವೇರಲಿಲ್ಲ ಅದೂ ಸರಿ. ಯಾಕೆ?

ಪರಮಾತ್ಮನಿಗೆ ನಮಗೇನು ಬೇಕು ಎಂಬುದು ಸರಿಯಾಗಿ ಗೊತ್ತು.

ನಾವು ನಮ್ಮ ಸ್ವ‌ಇಚ್ಛೆಯಿಂದ ಪಡೆದ ವರವೇ ಶಾಪವಾಗಬಹುದು.

ಬೆರಗಿನಿಂ ಬೆನ್ನೈಪೆ ನೂರೆಂಟು ಬಯಕೆಗಳ |
ಸರಿತನಗೆ ತೋರ್ದನಿತಂ ಅದರುಣವನೀನಂ ||
ಅರಿತೆ ಎಲ್ಲವನು ನದೆಸದಿರೆ ದೇವಸುಳ್ಳಹನೆ |
ಕರುಣೆ ನಿರ್ಬಂಧವೆ? ||ಮಂ||

ನಾವು ದೇವಸ್ಥಾನಕ್ಕೆ ಹೋಗುತ್ತೇವೆ, ಪೂಜೆಯನ್ನು ಮಾಡಿಸುತ್ತೇವೆ, ಸಂಕಲ್ಪ ಮಾಡಿ ನಮಗೆ ಇಷ್ಟವಾದದ್ದನ್ನು ಕೇಳಿಕೊಳ್ಳುತ್ತೇವೆ. ನಮ್ಮ ಭಕ್ತಿಯ ನಡುವೆ ಅಹಂಕಾರದ ಕಣವೊಂದು ಯಾವಾಗಲೂ ಉಳಿದುಕೊಂಡಿರುತ್ತದೆ. “ದೇವರು ವರ ಕೊಟ್ಟಾನು ಕೊಡದೆ ಬಿಟ್ಟರೂ ಬಿಟ್ಟಾನು” ಹೀಗೆಲ್ಲ ತರ್ಕಮಾಡಿ ನಮ್ಮ ಭಕ್ತಿಯನ್ನು ಬೆರಕೆ ಮಾಡುತ್ತೇವೆ. ಇದು ಸಂಪೂರ್ಣವಾದ ಆತ್ಮ ಸಮರ್ಪಣೆಯಲ್ಲ. ನಾವು ನೀಡುವ ಭಕ್ತಿಯು ಮಿಶ್ರಿತ. ನಮಗೆ ದೊರಕುವ ಪ್ರಸಾದವೂ ಮಿಶ್ರಿತ.

ಕಲ್ಲು ಬೆರೆತ ಅಕ್ಕಿಯನ್ನು, ಹಾಲಿನಲ್ಲಿ ಹಾಕಿ ಬೇಯಿಸಿದರೂ, ಸಿದ್ಧವಾಗುವ ಪರಮಾನ್ನ, ಕಲ್ಲು ಬೆರೆತೇ ಇರುತ್ತದೆ.

ತನುಬಾಹ್ಯ ಕರಣದನುಭವಕಿಂತ ಸೂಕ್ಷ್ಮತರದನುಭವವ ನೀನರಸೊ.

ಪರಮಾತ್ಮನನ್ನು, ಬುದ್ಧಿಯ ಆಮಿಷಗಳಿಗೆ, ಮನಸ್ಸಿನ ಬಯಕೆಗಳಿಗೆ, ನಂಬಬೇಡ. ಪರಮಾತ್ಮನನ್ನು ಶರೀರ, ಇಂದ್ರಿಯ, ಮನಸ್ಸು, ಬುದ್ಧಿಯನ್ನು ದಾಟಿ, ಅದರ ಹಿಂದೆ ಇರುವ ಸೂಕ್ಷ್ಮತರಹದ ಅನುಭವಕ್ಕಾಗಿ, ಆನಂದ ಶಾಂತಿಯನ್ನು ಪಡೆಯುವುದಕ್ಕಾಗಿ, ನಂಬು. ಮಹಾತ್ಮರು, ಈ ಆನಂದವನ್ನು ಪಡೆದವರು. ಬ್ರಹ್ಮಾನುಭವಿಗೆ ಇದು ಬೇಕು, ಎಂಬ ಆಕಾಂಕ್ಷೆ ಇಲ್ಲ. ಅವನಿಗೆ ಇರುವುದು ಒಂದೇ ಭಗವಂತನಲ್ಲಿ ಸರ್ವೋತ್ತಮವಾದ ಭಕ್ತಿ.

ಹರಿಭಜಕರೊಳ ಭಯದಿನೊಗೆದುದೆನಿಬರ ಭಕುತಿ? |
ವರದ ಮೇಲಣ ಭಕ್ತಿಯೆನಿಬರದು ನೋಡೆ? ||
ಬರಿಯ ಸಂತೋಷದನುರಾಗರಸ ನಿಜಭಕ್ತಿ- |
ಪರಮದಾಕರ್ಷೆಯದು ||ಮಂ||

ಧರ್ಮೋ ರಕ್ಷತಿ ರಕ್ಷಿತಃ ನಾವು ಸರಿಯಾದ ದಾರಿಯಲ್ಲಿ ನಡೆದರೆ, ನಮ್ಮ ಧರ್ಮವೇ, ನಮ್ಮನ್ನು ಕಾಪಾಡುತ್ತದೆ. ಅಧರ್ಮ ಭುಕ್ತಿ. ನಾನು ನನ್ನ ಮನಸ್ಸಿಗೆ ಬಂದ ಹಾಗೆ ನಡೆದರೆ, ನನ್ನ ಕರ್ಮವೇ ನನ್ನನ್ನು ತಿನ್ನುತ್ತದೆ. ಪರಮಾತ್ಮನನ್ನು, ಅಲ್ಲಿ ತರುವ ಅವಶ್ಯಕತೆಯೇ ಇಲ್ಲ. ಪರಮೇಶ್ವರನು ಕೈಯಲ್ಲಿ ದೊಣ್ಣೆ ಹಿಡಿದು, ಮನುಷ್ಯರು ಶಿಕ್ಷಿಸುವ ಹಾಗೆ ಶಿಕ್ಷಿಸುವವನಲ್ಲ. ಪರಮೇಶ್ವರ ಕರುಣಾಮಯಿ, ದಯಾಮಯಿ, ಅವನು ಎಲ್ಲರ ಹೃದಯದಲ್ಲಿ, ವಾಸಮಾಡುವವನು, ಅವನು ಭಕ್ತಿ ಪರಾಧೀನ.

ನಿಜವಾದ ಭಕ್ತಿಯಲ್ಲಿ ಆತ್ಮಸಮರ್ಪಣೆ. ಶರಣಾಗತಿಬೇಕು. ಅದರಲ್ಲಿ “ನಾನು”, ನನ್ನದು, ನನ್ನ ಹಕ್ಕು, ನನಗೆ ಸಲ್ಲಬೇಕಾದದ್ದು, ನನ್ನ ಗತಿ, ನನ್ನ ಶಕ್ತಿ, ನನ್ನ ಪ್ರಯತ್ನ, ನನ್ನ ಸಂಕಲ್ಪ. ಇವೆಲ್ಲವೂ ಸಂಪೂರ್ಣವಾಗಿ ನಾಶವಾಗಬೇಕು. “ಅಹಮ್” ಆಕಾರದ ಮನೋವೃತ್ತಿಂ ಸಂಪೂರ್ಣವಾಗಿ ಹೋಗಬೇಕು.

ನಿಜಭಕ್ತಿ ಯಾವುದು? ಬರಿಯ ಸಂತೋಷದನುರಾಗರಸ ನಿಜಭಕ್ತಿ ಪರಮ ಆಸಕ್ತಿ.

ಭಕ್ತಿಯಿಂದ, ಭಜನೆ ಮಾಡುವಾಗ, ಪರಮಾತ್ಮನಲ್ಲಿ ಒಂದಾಗಿ, ಆನಂದವನ್ನು ಪಡೆ. ಪೂಜೆ ಮಾಡುವಾಗ, ಭಜನೆ ಮಾಡುವಾಗ ಪರಮಾತ್ಮನಲ್ಲಿ ಏನನ್ನೂ ಬಯಸಬಾರದು, ಯಾಕೆ? ಅಂದರೆ ನೀನು ಕೇಳುವ ಮೊದಲೇ, ಅವನಿಗೆ ನಿನಗೇನು ಬೇಕಾಗಿದೆ, ಎಂಬುದು ಗೊತ್ತು. ಪರಮಾತ್ಮನನ್ನು ಏನೂ ಕೇಳುವ ಅವಶ್ಯಕತೆಯಿಲ್ಲ. ಆದ್ದರಿಂದ ಪೂಜೆ, ಜಪದಲ್ಲಿ ಆನಂದ ಪಡೆ. ಆ ಆನಂದದಲ್ಲಿ ಮನಸ್ಸು, ಬುದ್ಧಿಯ, ನೋವು ಮರೆತು ಆಗುವ ಪರಮಾನಂದವೇ ಬೇರೆ ಆತ್ಮಾರಾಮಃ ಆನಂದರಮಣ. ಪರಮಾನಂದವನ್ನು ಪಡೆದವರು, ಪೂಜೆಯಲ್ಲಿಯೇ ಮಗ್ನರಾಗಿ ಮೈಮರೆತು. ನಾಲ್ಕಾರು ಘಂಟೆಗಳ ಕಾಲ ಕೂಡುವವರೂ ಇರುತ್ತಾರೆ. ಅವರ ಜೀವಭಾವವೇ ನಾಶವಾಗಿ ಹೋಗಿರುತ್ತದೆ.
ದುರ್ಬಲ ಮನಸ್ಸಿನವರು ಏನನ್ನೂ ಸಾಧಿಸಲಾರರು.
ಸುತೆಯ ಪೋಷಿಸಿ, ಬೆಳಸಿ, ಧನಕನಕದೊಡನವಳನ್- |
ಇತರಗೃಹಕಿತ್ತು ನೀಂ ಕೇಳ್ವ ಮುಯ್ಯೇನು? ||
ಪ್ರತಿಫಲವು ಬೇರೇಕೆ? ಸುಕೃತಕದು ತಾನೆ ಫಲ |
ಹಿತ ಮನದ ಪಾಕಕದು || ಮಂ ||

ಹೆಣ್ಣು ಮಗುವು ಆಯಿತೆಂದರೆ, ಕೆಲವರು ಸಂತೋಷಪಟ್ಟರೂ, ಇನ್ನೂ ಕೆಲವರು ಅಯ್ಯೋ ಹೆಣ್ಣು ಎಂದು, ಮುಖ ತಿರುಗಿಸುವವರೂ ಇರುತ್ತಾರೆ. ಅದು ಯಾಕೆ? ಅಂದರೆ, ಹೆಣ್ಣು ಎಂದ ತಕ್ಷಣ, ಅದು ಬೇರೆಯವರ ಸೊತ್ತು, ಎಂಬುದು ಎಲ್ಲರಿಗೂ ತಿಳಿದ ವಿಷಯ. ಆ ಹೆಣ್ಣು ಮಗು, ಶಿಶುವಿದ್ದಾಗಿನಿಂದಲೂ ತಾಯಿಗೆ, ಅದನ್ನು ಪೋಷಿಸುವಾಗ ಅಂತಹ ಭಾವನೆ ಕಿಂಚಿತ್ತೂ ಬರುವುದಿಲ್ಲ. ಮಗಳನ್ನು ಚೆನ್ನಾಗಿ ಪೋಷಿಸಿ ಬೆಳೆಸುತ್ತಾಳೆ, ಅಷ್ಟೇ ಅಲ್ಲ ಚೆನ್ನಾಗಿ ವಿದ್ಯಾಭ್ಯಾಸವನ್ನು ಕೊಡುತ್ತಾರೆ. ನಂತರ ಅವಳನ್ನು ಧನ, ಕನಕದೊಂದಿಗೆ, ವಿವಾಹ ಮಾಡಿ ಬೇರೆಯವರ ಮನೆಗೆ ಕಳಿಸುತ್ತಾರೆ. ಮಗಳಿಗೆ ಒಳ್ಳೆಯ ಗಂಡ ಸಿಕ್ಕಿದ್ದಾನೆ. ಒಳ್ಳೆಯ ಮನೆ ಸಿಕ್ಕೆದೆ. ಒಂದು ಮಗುವೂ ಆಗಿದೆ, ಇದಕ್ಕಿಂತಲೂ ಹೆಚ್ಚಿನ ಪ್ರತಿಫಲವೇನು ಬೇಕು, ತಂದೆ ತಾಯಿಗಳಿಗೆ.

ಇದರಂತೆಯೇ ಪೂಜೆ, ಭಜನೆ, ಜಪ ಇವುಗಳಿಗೆ ಪ್ರತಿಫಲದ ಅಪೇಕ್ಷೆವಿರಬಾರದು. ಪೂಜೆ, ಭಜನೆಯಲ್ಲಿ, ಮನಸ್ಸು ಏಕಾಗ್ರವಾಗಿ, ತನ್ನ ನೋವು, ಬೇನೆ, ಎಲ್ಲವನ್ನೂ ಮರೆತು, ಪರಮಾತ್ಮನಲ್ಲಿ ಒಂದಾಗಿ ನಿಂತು, ಪರಮಾನಂದವನ್ನು ಪಡೆದು ಬಳಿಕ, ಇದಕ್ಕಿಂತಲೂ ಹೆಚ್ಚಿನ ಲಾಭ ಇನ್ನೇನು ಬೇಕು? ಹಿತಮನದ ಪಾಕವಿದು, ಮನಸ್ಸು ಬುದ್ಧಿ ಪಕ್ವವಾಗುವುದಕ್ಕೆ ನಿಜವಾದ ದಾರಿ ಇದು. ಪೂಜೆ, ಭಜನೆಯಾದ ಮೇಲೆ ನಾರಾಯಣಾಯೇತಿ ಸಮರ್ಪಯಾಮಿ ಎಂದು ಕೈ ಮುಗಿಯಬೇಕು.

ಜೀವಸತ್ತ್ವದಪಾರಂಭಂಡಾರವೊಂದಿಹುದು |
ಸಾವಕಾರನದೃಷ್ಟನ್ ಅದನಾಳುತಿಹನು ||
ಅವಶ್ಯಕದ ಕಡವನವನೀವುದುಂಟಂತೆ |
ನಾವೊಲಿಪುದೆಂತವನ? || ಮಂ ||
ಸೃಷ್ಟಿಯದ್ಭುತಶಕ್ತಿಯುಳ್ಳೊರ್ವನಿರಲು ನ- |
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? ||
ಇಷ್ಟವಾತನೊಳುದಿಸುವಂತೆ ಚೋದಿಪುದೆಂತು? |
ಕಷ್ಟ ನಮಗಿಹುದಷ್ಟೆ || ಮಂ ||

ಜೀವಸತ್ತ್ವದಪಾರ ಭಂಡಾರ ಒಂದಿಹುದು ಪರಮಾತ್ಮನು ಇಚ್ಛಿಸಿದ್ದನ್ನು ಕೊಡುವ ಕಲ್ಪತರುವು, ಆದರೆ ನಮಗೆ ಅವನನ್ನು ಏನು ಕೇಳಬೇದೆಂಬುದು ತಿಳಿಯುವುದಿಲ್ಲ. ಈ ಕ್ಷಣಕ್ಕೆ ಮನಸ್ಸು ಒಂದನ್ನು ಬಯಸಿದರೆ, ಮರುಕ್ಷಣಕ್ಕೆ ಮತ್ತೊಂದನ್ನು ಬಯಸುತ್ತದೆ. ಮನಸ್ಸಿನ ಸ್ಥಿತಿಯೇ ಹಾಗೆ. ದೇವರನ್ನು ವರ ಕೇಳುವುದು ಬಹಳ ಕಷ್ಟ. ಭಾಸ್ಮಸುರ, ಹಿರಣ್ಯಕಶಿಪುವಿನಂಥ ಬಲಾಢ್ಯ ರಾಕ್ಷಸರು ತಾವು ಪಡೆದ ವರದಿಂದಲೇ, ತಮ್ಮ ವೀರಗತಿಯನ್ನು ಕಂಡವರು.

ದೇವರಿದ್ದಾನೆ ಸತ್ಯ, ಕಲ್ಪದ್ರುಮನು ಸತ್ಯ, ಕಾಮಧೇನುವು ಸತ್ಯ. ಹೃದಯದಲ್ಲಿದ್ದಾನೆ ಸತ್ಯ. ಆದರೆ? ಪೂಜೆ ಭಜನೆ ವ್ಯಾಪಾರವಲ್ಲ. ನಮ್ಮ ಭಕ್ತಿ ವ್ಯವಹಾರಕ್ಕಿಳಿಯಬಾರದು.

ಪ್ರಾರಬ್ಧದಲಿ ನಿನ್ನ ಪುಣ್ಯವಿನಿತಾನುಮಿರೆ |
ಸೇರೆ ಪಶ್ಚಾತ್ತಾಪ ಭಾರವದರೊಡನೆ ||
ದಾರುಣದ ಕರ್ಮನಿಯತಿಯನಿನಿತು ಶಿಥಿಲಿಪುದು |
ಕಾರುಣ್ಯದಿಂ ದೈವ || ಮಂ ||

ಪುನರ್ಜನ್ಮವಿದೆ ಎಂಬುದು ಎಲ್ಲರಿಗೂ ತಿಳಿದುರುವ ವಿಷಯ. ಅಂದಮೇಲೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಪುಣ್ಯಗಳ ಅವಶೇಷಗಳು, ನಮ್ಮೆಡನೆ ಬರುವುದು ಸಹಜ. ಪ್ರಾರಬ್ಧದಲಿ ಪುಣ್ಯವಿನಿತಾನುಮಿರೆ. ಕಳೆದ ಜನ್ಮದಲ್ಲಿ ಮಾಡಿದ ಪುಣ್ಯದ ಅಂಶವಿದ್ದು, ಅದರೊಡನೆ ಪಾಪಕರ್ಮಗಳನ್ನು ನೆನೆದು ಪಶ್ಚಾತ್ತಾಪವಾದರೆ, ಪುಣ್ಯದ ಅಂಶ ಮತ್ತು, ಪಶ್ಚಾತ್ತಾಪದಿಂದ, ಕರ್ಮದ ಭಾರವು ಸ್ವಲ್ಪ ಸರಿಯುವುದು. ಪಶ್ಚಾತ್ತಾಪಭಾರವು ಅದರೊಡನೆ ದಾರುಣಕರ್ಮ ನಿಯತಿಯನಿನಿತು ಶಿಥಿಲಿಪುದು. ಪರಮೇಶ್ವರನ ಎದುರು ನಿಂತು ಪಶ್ಚಾತ್ತಾಪದ, ಕಣ್ಣೀರು ಸುರಿಸುವುದರಿಂದ, ಮನಸ್ಸಿನ ಭಾರವು ಹಗುರವಾಗುತ್ತದೆ, ಅದರೊಡನೆ ಹಿಂದಿನ ಕರ್ಮವೂ ಸರಿಯುತ್ತದೆ.

ನಾವು ಈಗ ಮಾಡಿದ ತಪ್ಪುಗಳೇನೇ ಇದ್ದರೂ, ಆ ತಪ್ಪುಗಳನ್ನು ಪರಮಾತ್ಮನ ಮುಂದೆ ಒಪ್ಪಿಕೊಂಡು, ಕಣ್ಣೀರಿಡಬೇಕು. ಪರಮೇಶ್ವರ ಕರುಣಾಮಯಿ ಎಂದು, ಅವನ ಧ್ಯಾನ ಪೂಜೆ ಮಾಡಬೇಕು, ಅಂದರೆ ಮನಸ್ಸು ಪರಿಶುದ್ಧವಾಗಿ, ಹೆಚ್ಚಿನ ಆನಂದವನ್ನೂ, ಶಾಂತಿಯನ್ನೂ ಪಡೆಯುತ್ತದೆ.

ಪ್ರಾರಬ್ಧ ಕಳೆದ ಬಳಿಕ, ಸುಖ, ಶಾಂತಿ, ನೆಮ್ಮದಿ, ಖಂಡಿತ.

ತಕ್ಕಡಿಯ ದೈವ ಪಿಡಿದದರೊಂದು ತಟ್ಟೆಯಲಿ |
ಒಕ್ಕುವುದು ಬಿಡದೆ ಜೀವಿಯ ಪಾಪಚಯವ ||
ಇಕ್ಕುವುದು ಸುಕೃತಗಳನಿನ್ನೊಂದರೊಳಗಲ್ಲಿ |
ಭಕ್ತಿ ಪಶ್ಚಾತ್ತಾಪ || ಮಂ ||

ಪರಮೇಶ್ವರನ ಕೈಯಲ್ಲಿ ನ್ಯಾಯದ ತಕ್ಕಡಿ ಇದೆಯಂತೆ. ಅವನು ಆ ತಕ್ಕಡಿಯ ಒಂದು ಪರಡಿಯಲ್ಲಿ, ನಮ್ಮ ಪ್ರಾರಬ್ಧಗಳನ್ನು ಹಾಕಿ, ಇನ್ನೊಂದು ಪರಡಿಯಲ್ಲಿ ನಾವು ಮಾಡುತ್ತಿರುವಂಥ, ಪೂಜೆ, ಭಜನೆ, ದಾನ, ಧರ್ಮ, ಇಂಥ ಸತ್ಕರ್ಮಗಳನ್ನು ಹಾಕಿ ತೂಗಿದರೆ, ಸತ್ಕರ್ಮದ ಪರಡಿ ಮೇಲಕ್ಕೆ ಬಾರದೆ ಇದ್ದಾಗ, ನಮ್ಮ ಹಿಂದಿನ ಕರ್ಮಗಳು ಸರಿದಿಲ್ಲ ಎಂದು ಅರ್ಥ. ಅದಕ್ಕೇ ಮೇಲಿಂದ ಮೇಲೆ ಪೆಟ್ಟುಗಳು ಬೀಳುತ್ತಲೇ ಇವೆ. ನಷ್ಟವಾಗುತ್ತಲೇ ಇದೆ. ಇರಲಿ ಧೈರ್ಯಗುಂದದೆ ಮತ್ತೆ ಮತ್ತೆ ಪೂಜೆ, ಭಜನೆ ಮಾಡು. ಧೈರ್ಯದಿಂದ ಇರು.

“ಧೈರ್ಯಂ ಸರ್ವತ್ರ ಸಾಧನಂ”

ಆವ ಋಣಕೋಸುಗವೊ, ಆರ ಹಿತಕೋಸುಗವೋ |
ಆವಾವ ಕಾರಣಕೊಂ ಆವ ಯೋಜನೆಗೋ ||
ನೋವ ನೀಂ ಪಡುವುದೇ ದೈವೇಚ್ಛೆಯಾಗಿರದೆ?|
ದೈವ ಕುರುಡೆನ್ನದಿರು || ಮಂ ||

ನಾನು ಪ್ರತಿದಿವಸವೂ ಪೂಜೆ, ಭಜನೆ, ವ್ರತಾದಿಗಳನ್ನು ಒಳ್ಳೇ ಕಟ್ಟುನಿಟ್ಟಿನಿಂದ ಆಚರಿಸುತ್ತಿದ್ದರೂ, ಜೀವನದಲ್ಲಿ ಅನೇಕ ತರಹದ ಪೆಟ್ಟುಗಳು ಬೀಳುತ್ತಲೇ ಇವೆ. ಹೆಂಡತಿ ಹೋದಳು, ಜೀವನಕ್ಕೆ ಊರುಗೋಲಾಗಿದ್ದ ಒಬ್ಬ ಮಗ ಅಪಫಾತದಲ್ಲಿ ತೀರಿಹೋದ, ಸಾಲದಕ್ಕೆ ಈ ಕೆಟ್ಟ ರೋಗ ಅಂಟಿಕೊಂಡಿದೆ. ಏನು ಮಾಡಲೂ ತೋಚುವುದಿಲ್ಲ! ಹೀಗಿರುವಾಗ?!

ಡಿ.ವಿ.ಜಿ.ಯವರು ಹೇಳುವುದು. ಇದೆಲ್ಲವೂ ದೈವೇಚ್ಛೆ. ಇಷ್ಟೊಂದು ಧರ್ಮದಿಂದ ನಡೆದಾಗ್ಯೂ ಕಷ್ಟಗಳು ಬರುವುದಾದರೆ, ಅದೂ ನಿನ್ನ ಒಳಿತಿಗಾಗಿಯೇ ಎಂದು ತಿಳಿ. ದೈವ ಕುರುಡೆನ್ನದಿರು. ಪರಮಾತ್ಮನು ಕುರುಡನಲ್ಲ. ನಮ್ಮ ಕಷ್ಟಗಳು ಕಾರಣ ನಮಗೆ ತಿಳಿಯದೆ ಇರಬಹುದು.

ಎಷ್ಟೋ ಜನರು ಶ್ರೀರಾಮನಿಗೆ ಏಕೆ ವನವಾಸ? ಅವನೇನು ತಪ್ಪು ಮಾಡಿದ್ದ. ಶ್ರೀರಾಮನು ೧೪ ವರ್ಷ ವನವಾಸಕ್ಕೆ ಹೋದದ್ದರಿಂದಲೇ ಲೋಕಕಲ್ಯಾಣವಾಯಿತು. ಕೈಕೇಯಿ ತನ್ನ ಛಲವನ್ನು ಸಾಧಿಸದಿದ್ದರೆ, ಶ್ರೀರಾಮನು ವನವಾಸಕ್ಕೆ ಹೊರಡುತ್ತಿರಲಿಲ್ಲ. ಶ್ರೀರಾಮನು ವನವಾಸಕ್ಕೆ ಹೊರಡದಿದ್ದರೆ, ಲೋಕಕಲ್ಯಾಣವಾಗುತ್ತಿರಲಿಲ್ಲ. ಅಧರ್ಮದ ರಾಕ್ಷಸರನ್ನೆಲ್ಲ, ಸದೆ ಬದೆಯಬೇಕಾದರೆ, ಅವರನ್ನೆಲ್ಲ ಶಿಕ್ಷಿಸಬೇಕಾದರೆ, ರಾಮನು ವನವಾಸಕ್ಕೆ ಹೋಗಲೇಬೇಕಾಗಿತ್ತು. ಕೈಕೇಯಿ ಛಲ ಸಾಧಿಸಿದ್ದು ಒಳಿತೇ ಆಯಿತು.

ನಮ್ಮ ಜೀವನದಲ್ಲಿಯೂ ನಡೆಯುವಂಥ ಎಲ್ಲ ಘಟನೆಗಳಿಗೂ ಕಾರಣವಿದೆ. ಅದು ಪರಮೇಶ್ವರನಿಗೆ ಗೊತ್ತು. ನಮಗೆ ಅದರ ಅರಿವಾಗುವುದು ಬಹಳ ತಡವಾಗಿ.

ಚಿಕ್ಕ ಸಂಸಾರ. ತಾಯಿ ಮಗ ಇಬ್ಬರೇ ಮನೆಯಲ್ಲಿ ಮಗನಿಗೆ ಫ್ಯಾಕ್ಟರಿಯಲ್ಲಿ ಕೆಲಸ. ದಿನಾಲು ಫ್ಯಾಕ್ಟರಿಯ ಬಸ್ಸಿನಲ್ಲಿ ಹೋಗುವ ರೂಢಿ. ಆ ಬಸ್ಸು ಸರಿಯಾದ ವೇಳೆಗೆ ಫ್ಯಾಕ್ಟರಿಗೆ ಹೋಗುತ್ತಿತ್ತು. ಒಂದು ದಿವಸ ತಾಯಿಗೆ ತಿಂಡಿ, ಕಾಫಿ ಮಾಡಿಕೊಡಲು ತಡವಾಯಿತು. ಪಾಪ ಮಗನಾದರೂ ಏನು ಮಾಡಲು ಸಾಧ್ಯ, ಬಸ್ಸು ಇವನಿಗಾಗಿ ಕಾಯುವುದಿಲ್ಲ, ಅಂತೂ ಅಮ್ಮನ ಮೇಲೆ ಸಿಟ್ಟಾಗಿ ಗಡಿಬಿಡಿಯಿಂದ ಕಾಫಿ ಗುಟಕರಿಸಿ, ಓಡುತ್ತ ಹೋದರೂ ಬಸ್ಸು ಹೋಗಿಬಿಟ್ಟಿತು. ನಿರಾಶೆಯಿಂದ ಕಾಲು ಎಳೆಯುತ್ತ ಮನೆಗೆ ಬಂದು ಪೇಪರು ಓದುತ್ತ ಕುಳಿತ. ಅಮ್ಮನ ಮೇಲಿನ ಸಿಟ್ಟು ಹಾಗೆಯೇ ಇತ್ತು. ಸ್ವಲ್ಪವೇ ಸಮಯದಲ್ಲಿ ಫ್ಯಾಕ್ಟರಿಯಿಂದ ಫೋನ್ ಬಂತು. ಇವನು ದಿನಾಲು ಹೋಗುವ ಫ್ಯಾಕ್ಟರಿ ಬಸ್ಸು ಪೂಲಿನಿಂದ ಕೆಳಗೆ ಬಿದ್ದು, ಅದರಲ್ಲಿದ್ದವರೆಲ್ಲರೂ ಮೃತಪಟ್ಟಿದ್ದಾರೆ ಎಂದು. ಅದೇ ಕ್ಷಣಕ್ಕೆ ಅವನ ಮನಸ್ಸು ಬದಲಾಯಿತು. ಅಮ್ಮನ ಮೇಲಿನ ಸಿಟ್ಟು ಮಾಯವಾಗಿತ್ತು. ಅಮ್ಮನನ್ನು ಹೊಗಳಿದ್ದೇ ಹೊಗಳಿದ್ದು. “ಅಮ್ಮಾ, ಇವತ್ತು ನೀನೇ ನನ್ನ ಪ್ರಾಣ ಉಳಿಸಿದೆ.” ಇಷ್ಟು ಹೊತ್ತು ಅಮ್ಮನನ್ನು ಬೈದದ್ದು ಇವನೇ.

“ಆದದೆಲ್ಲಾ ಒಳಿತೇ ಆಯಿತು” ಎಂಬ ದಾಸೋಕ್ತಿಯೂ ಇದೆ.

ಹೊರಪ್ರಪಂಚದಲ್ಲಿ ಎಲ್ಲವೂ ಹೀಗೆಯೇ. ನಮ್ಮ, ಮನಸ್ಸು, ಬುದ್ಧಿಗೆ ಏನೊಂದೂ ಅರ್ಥವಾಗದೇ ಇದ್ದಾಗ, ನಾವು ಪರಮೇಶ್ವರನನ್ನು ಬೈಯಬಾರದು.

ನಿನ್ನೇಳು ಬೀಳುಗಳು, ನಿನ್ನ ಸೊಗ ಗೋಳುಗಳು |
ನಿನ್ನೊಬ್ಬನೋಸುಗವೆ ನಡೆವ ಯೋಜನೆಯೇಂ? ||
ಇನ್ನದೆನಿಬರ ಜೀವಪಾಕವದರಿಂದಹುದೊ! |
ಛನ್ನವಾ ಋಣಮಾರ್ಗ || ಮಂ ||

ಒಬ್ಬರಿಗಾಗಿ ಪ್ರಪಂಚ ನಡೆಯುತ್ತಿಲ್ಲ ನಿನ್ನೊಬ್ಬನೋಸುಗ ನಡೆವಯೋಜನೆಯೇಂ. ಪ್ರಪಂಚದಲ್ಲಿಯ ಎಲ್ಲ ಜೀವರಾಶಿಗಳಿಗೆ ಅವರವರ ಧರ್ಮ, ಕರ್ಮ, ಪಾಪ, ಪುಣ್ಯಗಳಿಗನುಸಾರವಾಗಿ ಪರಮೇಶ್ವರನು ಫಲವನ್ನು ಕೊಡುತ್ತಾನೆ.

ಧರ್ಮಶಾಸನದಂತೆ, ಕರ್ಮಾಕರ್ಮಗಳಿಗೆ ತಕ್ಕಂತೆ ಫಲಾಫಲಗಳನ್ನು ಪಡೆದುಕೊಂಡು, ಎಲ್ಲ ಜೀವಿಗಳೂ ನಡೆಯುತ್ತವೆ. ಬ್ರಹ್ಮನಾದರೋ ನಿರ್ಲಿಪ್ತಸಾಕ್ಷಿ.

ಈಗ ಒಂದು ವಸ್ತುವನ್ನು ಕದ್ದ ಕಳ್ಳಪ್ಪನನ್ನು ಪೋಲೀಸ್‌ರಾಮಪ್ಪ ಅವನನ್ನು ಹಿಡಿದ, ಜಡ್ಜ್ ಶಿವಪ್ಪ ಅವನಿಗೆ ೩ ತಿಂಗಳು ಬಂದೀಖಾನೆ ಎಂದು ತೀರ್ಮಾನಿಸಿದ. ಕಳ್ಲಪ್ಪನ ಕೈಗೆ ಬೇಡಿಬಿತ್ತು. ಇದೆಲ್ಲವನ್ನೂ ಮಾಡಿದ್ದು ಯಾರು? ಕಾನೂನು, ಶಾಸನ, ಇದರಲ್ಲಿ ಯಾರದೂ ಕೈವಾಡವಿಲ್ಲ. ಅದರಂತೆ, ಎಲ್ಲವೂ ಅವರವರ ಕರ್ಮದ ಫಲ, ಅದರಲ್ಲಿ ಬ್ರಹ್ಮನದೇನೂ ಕೈವಾಡವಿಲ್ಲ.

ಇದೆಲ್ಲವನ್ನೂ ಅರಿತುಕೊಂಡಿದ್ದರೂ ಸಹ ಕಷ್ಟಗಳು ಬರುವುದು ಏಕೆ? ಎಂದು ಮಾನವನು ಹಲುಬುತ್ತಿರುತ್ತಾನೆ.

ಸುಪಸಭೆಯಲಿ ಗಾಧಿಸುತ ವಸಿಷ್ಠ ಸ್ಪರ್ಧೆ |
ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ||
ಬರುವುದಿಂತೆತ್ತಣೆನೊ ಬೇಡದ ಪ್ರಾರಬ್ಧ |
ಕರುಮಗತಿ ಕೃತ್ರಿಮವೊ || ಮಂ ||

ಇಂದ್ರನ ಸಭೆಯಲ್ಲಿ ಗಾಧಿಸುತ – ವಿಶ್ವಮಿತ್ರ, ಬ್ರಹ್ಮರ್ಷಿ ವಸಿಷ್ಠ ಇವರಲ್ಲಿ ವಾದ ನಡೆಯಿತು. ಬ್ರಹ್ಮರ್ಷಿಗಳಿಗೂ ವಿಶ್ವಾಮಿತ್ರರಿಗೂ ಎಣ್ಣೆ ಸೀಗೆಕಾಯಿ ಇದ್ದಹಾಗೆ. ವಸಿಷ್ಠರು ಹೇಳುವುದಕ್ಕೆ ವಿರುದ್ಧವಾಗಿಯೇ ವಿಶ್ವಾಮಿತ್ರರು ಹೇಳುವುದು.

ಒಮ್ಮೆ ವಿಶ್ವಮಿತ್ರರು – “ಭೂಲೋಕದಲ್ಲಿ ಯಾರಾದರೂ ಸತ್ಯವಂತರಿದ್ದಾರೆಯೇ?” ಎಂದು ಕೇಳುತ್ತಾರೆ.

ಬ್ರಹ್ಮರ್ಷಿ ವಸಿಷ್ಠರು – “ಇದ್ದಾರೆ”
ವಿಶ್ವಾಮಿತ್ರರು – “ಯಾರವರು?”
ವಸಿಷ್ಠರು – “ರಾಜಾ ಹರಿಶ್ಚಂದ್ರ”!
ಹೀಗೆ ಇಬ್ಬರಿಗೂ ಸ್ಪರ್ಧೆ ಬಿತ್ತು.

ಬರುವುದಿಂತೆತ್ತಣೆನೊ ಬೇಡದ ಪ್ರಾರಬ್ಧ ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ. ಹರಿಶ್ಚಂದ್ರ ಏನು ತಪ್ಪು ಮಾಡಿದ್ದ? ಅವನ ಪಾಲಿಗೆ ಬಂತಲ್ಲ ಬೇಡದ ಪ್ರಾರಬ್ಧ.

ಹರಿಶ್ಚಂದ್ರನಿಗೆ ಕಾಲಕರ್ಮ ಸಂಯೋಗದಿಂದ, ಸ್ಮಶಾನದಲ್ಲಿ ಕಾವಲಿರಬೇಕಾದ ಕರ್ಮ ಪ್ರಾಪ್ತವಾಯಿತು. ಇದೇನು ಸಂತೋಷದ ಕೆಲಸವೇ? ಆ ಸ್ಥಳದಲ್ಲಿ ವಿಧಿ, ಅವನನ್ನು ತಂದು ನಿಲ್ಲಿಸಿದ ಮೇಲೆ, ಅಲ್ಲಿ ಅವನ ಕರ್ತವ್ಯವನ್ನು, ಅವನು ಮನಸ್ಸಿಟ್ಟು ಮಾಡಬೇಕಾಯಿತು. ಅವನು ತನ್ನ ಹೆಂಡತಿ ಚಂದ್ರಮತಿಯು, ಮಗ ಲೋಹಿತಾಶ್ವನ ದೇಹವನ್ನು ಹೊತ್ತುಕೊಂಡು ಬರುವಾಗ “ಇಲ್ಲಿ ಸಲ್ಲಬೇಕಾದ ರೊಕ್ಕವನ್ನು ತರಲೇಬೇಕು” ಎಂದು ಕಟ್ಟಪ್ಪಣೆ ಮಾಡಿದ.

ಕರ್ತವ್ಯವಿದ್ದಲ್ಲಿ ಇಷ್ಟಾನಿಷ್ಟ ವಿಚಾರಕ್ಕೆಡೆಯಿಲ್ಲ.

ಪುರುಷಬುದ್ಧಿಯೆ ಸಾಕು, ವಸಿದ್ಧಿಗೆಂದಲ್ಲ |
ಪರಮೇಶಕರುನೆಯನವಶ್ಯವೆಂದಲ್ಲ ||
ಚರಣ ನಡೆವನಿತು ಕಣ್ಣಿರಿವನಿತು ದೂರ ನೀಂ |
ಚರಿಸದಿರೆ ಲೋಪವಲ? || ಮಂ ||

ವಿಧಿ ಮತ್ತು ಪೌರುಷ ಇವೆರಡಕ್ಕೂ ಎರಡು ದೃಷ್ಟಾಂತಗಳನ್ನು ಡಿ.ವಿ.ಜಿ.ಯವರು ಕೊಟ್ಟಿದ್ದಾರೆ.

ವಿಧಿ ಎಂದರೆ, ಜಗನ್ನಿಯಂತ್ರಣ ಶಾಸನ, ಜಗನ್ನಿಯಾಮಕ, ವಿಧಿ. ಎಂದು ಹೇಳಿದರೆ ಸಮಂಜಸವಾಗುತ್ತದೆ. ವಿಧಿ, ವಿಧಾತ, ದೈವ ಎಂದು ಕರೆಯುತ್ತಾರೆ.

ಪೌರುಷ ಅಂದರೆ? ಲೋಕದಲ್ಲಿ ಅನ್ಯಾಯ, ಅಸತ್ಯ, ದುಷ್ಟತನ, ಅಜ್ಞಾನ ಪ್ರಮಾದ, ಭ್ರಾಂತಿ, ಅಪನೀತ ಇವು ಎಲ್ಲೇ ಇದ್ದರೂ ಅವುಗಳನ್ನು ಎದುರಿಸತಕ್ಕದ್ದೇ ಹೊರತು. ಅವುಗಳಿಗೆ ಹೆದರಿ ಅವು ಬಲಿಷ್ಠವೆಂದು ಓಡಿಹೋಗತಕ್ಕದ್ದಲ್ಲ. ಎಲ್ಲ ಕಷ್ಟಗಳಲ್ಲಿಯೂ ಭಕ್ತಿಪೂರ್ವಕ ಪೌರುಷ, ಮನೋವಿಕಾರರಹಿತ ಪೌರುಷ, ಮತ್ತು ಶಾಂತಿ ಸಮನ್ವಿತ ಪೌರುಷ ಇವು ತಾರಕ ಎಂದು ಡಿ.ವಿ.ಜಿ.ಯವರು ಹೇಳುವುದು.

ಚರಣನಡೆವನಿತು – ಕಾಲುನಡೆಯುವಷ್ಟು ಕಣ್ಣರಿವನಿತು ದೂರ ಕಣ್ಣಿಗೆ ಕಾಣುವಷ್ಟು ದೂರ, ನಾವು ಹೋಗಲೇಬೇಕು. ನಮಗೆ ಕಣ್ಣೇ ಕಾಣಿಸದಿದ್ದರೆ, ಕಾಲು ಇದ್ದರೂ ನಾವು ನಡೆಯುವುದು ಹೇಗೆ? ಅದರಂತೆಯೇ ಕಣ್ಣು ಇದ್ದು, ಕಾಲುಗಳು ನಡೆಯುತ್ತಾ ಇರಬೇಕು. ಇದರ ಅರ್ಥ ಪುರುಷ ಬುದ್ಧಿಯೂ ಬೇಕು, ದೈವಕೃಪೆಯೂ ಬೇಕು. ಕಾರಣ, ನೀನು ಬಯಸಿದ್ದು ಸಿಕ್ಕಿತು. ಅದೆಲ್ಲ ಈಶ್ವರ ಪ್ರಸಾದವೆಂದು ತಿಳಿ. ಬಯಸಿದ್ದು ಸಿಗಲಿಲ್ಲ. ಬಹಳ ಒಳ್ಳೆಯದು ಮತ್ತೂ ಒಂದು ಸಲ ಕೇಳು, ಆಗಲೂ ಸಿಗಲಿಲ್ಲವೆಂದರೆ, ಆ ನಿರಾಶೆಯ ಪೆಟ್ಟಿನಿಂದ, ಮನಸ್ಸು ತಾನೇ ಪಕ್ವವಾಗುತ್ತದೆ. ನಾನು ಬಸುವದು ಒಂದಾದರೆ, ವಿಧಿ ಬಯಸುವುದು ಮತ್ತೊಂದು, ಎಂಬ ವಾದ ಸಮಂಜಸವಲ್ಲ.

ಹೇ ಪರಮೇಶ್ವರ! ನಾನೇನೊ ಕೇಳಿದೆ. ಆದರೆ ಅದು ನನಗೆ ಬೇಡವೆಂದೇ, ನೀನು ಕರುಣಿಸಿಲ್ಲವೇನೋ, ಹೀಗೆ ಪರಮೇಶ್ವರನ ಜೊತೆಗೆ ವಾದ ಹಾಕುವುದು ಯುಕ್ತ.

ಪರಮೇಶ್ವರ ಎಲ್ಲರಿಗೂ ಹಿತವದುದ್ದನ್ನೇ ಕರುಣಿಸುತ್ತಾನೆ. ಪರಮೇಶ್ವರನೇ ಜೊತೆಗೆ, ಇರುವಾಗ ಮನಸ್ಸಿಗೆ ಆನಂದ ಖಂಡಿತ.

ಮನಸ್ಸಿಗೆ ದುಃಖಬೇಡ, ಪ್ರತಿಕ್ರಿಯೆ ಬೇಡ, ದ್ವೇಷ ಬೇಡ, ಉರಿದು ಬೀಳುವುದು ಬೇಡ.

ನರಜೀವನದ ರಣದಿ, ವಿಧಿಯ ಬಲವೊಂದು ಕಡೆ |
ಚಿರವಿವೇಕದಿ ಬೆಳೆದ ನಲುಮೆಯೊಂದು ಕಡೆ ||
ಉರುಬುತಿರೆ ಪುರುಷಂಗೆ ನಲುಮೆಯುಳಿತವೆ ಗೆಲವು |
ಪುರುಷತನವೇ ವಿಜಯ || ಮಂ ||

ನಾನು ಮಾಡುವ ಪೂಜೆ, ಭಜನೆಯಲ್ಲಿ ನನ್ನ ಪೌರುಷ, ಅಂತಃಕರಣ ಅನ್ನುವಂಥ ವಿವೇಕಕ್ಕೆ ಸರಿಯಾಗಿ ನನಗೇನು ಬೇಕೋ ಅದನ್ನು ಕೊಡಲು ಭಗವಂತನಿಗೆ ಪ್ರಾರ್ಥನೆ ಮಾಡಿ ಕೇಳಿದ್ದೇನೆ. ಅವನ ಪ್ರಸಾದ ದೊರಕಿತು ಸಂತೋಷ, ನನ್ನ ಅಂತಃಕರನ ಅನ್ನುವಂಥ, ಮನಸ್ಸು-ಬುದ್ಧಿಯ ಒಳಗಿನ ಪ್ರಶಾಂತತೆ, ಸ್ಥಿರತೆ, ಪ್ರಸನ್ನತೆಯನ್ನು ಕಾಪಾಡಿಕೊಳ್ಳುತ್ತೇನೆ. ಒಳಗಿನ ಪರಮಾತ್ಮನ ಆ ಆನಂದದ ಅನುಭವವನ್ನು ಅಸ್ವಾದಿಸುತ್ತೇನೆ.

ಪುರುಷತನವೇ ವಿಜಯ. ಅಂದರೆ ಜೀವನದಲ್ಲಿ ಕಷ್ಟನಷ್ಟಗಳು ಬಂದರು ಅವುಗಳಿಗೆ ಎದೆಗೊಟ್ಟು ನಿಲ್ಲು.

ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ |
ಸನ್ನಾಹ ಸಾಗೀತೆ? ದೈವವೊಪ್ಪೀತೆ? ||
ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ ಭಿನ್ನಿಸಲಿ |
ನಿನ್ನ ಬಲವನು ಮೆರಸೊ || ಮಂ ||

ನಾನು ನನ್ನ ಅಂತಃಕರಣದಲ್ಲಿರುವ, ಕಷ್ಟನಷ್ಟ, ನೋವು, ಬೇನೆ, ಎಲ್ಲವನ್ನೂ ಪರಮಾತ್ಮನಿಗೆ ಒಪ್ಪಿಸಲು ಸಿದ್ಧನಿರುತ್ತೇನೆ.

ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ ಪರಮಾತ್ಮನಿಗೆ ಒಮ್ಮೆ ಎಲ್ಲ ಭಾರವನ್ನು ಒಪ್ಪಿಸಿದ ಮೇಲೆ ಅವನು ನಿನ್ನ ಬೇಡಿಕೆಯನ್ನು ಈಡೇರಿಸಲಿ, ಇಲ್ಲವೆ ಈಡೇರಿಸದಿರಲಿ, ಅಂತಃಕರಣವೂ ಸದಾ, ಸರ್ವದಾ, ನಿತ್ಯ, ನಿರಂತರವಾಗಿ ಪ್ರಶಾಂತವಾಗಿರಲಿ.

ಅಂತಾನೊ ಇಂತಾನೊ ಮೆಂತು ನಿನಗಾದಂತೆ ಶಾಂತಿಯನೆ ನೀನರಸು ಪರಮಾತ್ಮನ ಭಕ್ತಿಯಲ್ಲಿ, ಮನಸ್ಸು ಕೆರಳಬಾರದು. ಅಂತಃಕರಣವೂ, ಯಾವತ್ತೂ ಪೌರುಷವನ್ನು ಮೆರೆಯಿಸಬೇಕು. ಭಕ್ತಿ, ಪೂಜೆ, ವ್ರತಾದಿಗಳನ್ನು, ಆಚರಿಸಿದರೂ, ಅದರ ಫಲ ತನಗೆ ಇಷ್ಟವಾದದ್ದೇ ಇರಲಿ, ಅನಿಷ್ಟವಾದದ್ದೇ ಬರಲಿ, ಅದನ್ನು ಸಮಾಧಾನದಿಂದ ಸ್ವೀಕರಿಸಬೇಕು.

ತಂದೆ, ಚಾಕಲೇಟು ಕೊಟ್ಟಾಗ ಹೇಗೆ ತಂದೆಯೋ, ಏಟು ಕೊಟ್ಟಾಗಲೂ ಹಾಗೆಯೇ ತಂದೆ. ವೈದ್ಯ ಜೇನುತುಪ್ಪ ಕೊಟ್ಟಾಗ ಹೇಗೋ ಶುಂಠಿ, ಮೆಣಸು ಕೊಟ್ಟಾಗಲೂ ಹಾಗೆಯೇ ಹಿತಕಾರಿ.

ಇಂತಹ, ವಿಶ್ವಾಸವಿರಬೇಕು. ಅದಕ್ಕೆ ಇನ್ನೂ ಹೆಚ್ಚಿನ ಸಾಧನೆ ಬೇಕು.

ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ |
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ||
ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು? |
ಒರಟು ಕೆಲಸವೊ ಬದುಕು || ಮಂಕು ||

ನಮ್ಮ ಜೀವನವನ್ನು ನಾವೇ ಹಾಳುಮಾಡಿಕೊಳ್ಳಬಾರದು. ನಮ್ಮ ಮನಸ್ಸು- ಮದ, ಮತ್ಸರ, ರಾಗ, ದ್ವೇಷ, ಅಸೂಯೆ, ಕಾಮ, ಕ್ರೋಧ ಇವುಗಳಿಂದ ತುಂಬಿದೆ. ನರಕವು ನಮ್ಮ ಮನಸ್ಸಿನಲ್ಲಿಯೇ. ಮನಸ್ಸನ್ನು ನಿರ್ಮಲವಾಗಿಟ್ಟುಕೊಂಡು ಪರಮಾತ್ಮನನ್ನು ಭಜಿಸಬೇಕು. ಭಜಿಸಿ ಬದುಕೆಲೆ, ಮನುಜ ಮನಮುಟ್ಟಿ ಹರಿಯ.

ಆದರೆ ನಾವು ಕಷ್ಟಗಳು ಬಂದಾಗ, ಪೂಜೆ ಮಾಡಿ, ಪರಮಾತ್ಮನಿಗೆ ಅವುಗಳ ಪರಿಹಾರಕ್ಕಾಗಿ ಪ್ರಾರ್ಥಿಸುತ್ತೇವೆ. ಪ್ರಾರ್ಥಿಸುವುದು ತಪ್ಪಲ್ಲ, ಆದರೆ ಬಯಸಿದ್ದು ದೊರಕದೆ ಇದ್ದಾಗ, ಪರಮಾತ್ಮನನ್ನು ಬೈದು, ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ. ಹಾಸಿಗೆ ಮೆತ್ತಗಾಗಿದ್ದುದು ಶಾಂತವಾಗಿ ಮಲಗಲು. ಶಾಂತವಾಗಿ ಮಲಗಲು ನೀನು ಪ್ರಪಂಚಕ್ಕೆ ಬಂದದ್ದು. ಅದೆಲ್ಲವನ್ನೂ ಬಿಟ್ಟು ಹಾಸಿಗೆಯಲ್ಲಿ ಮುಳ್ಳನ್ನು ಹರಡಿಕೊಂಡು ಒದ್ದಾಡಬೇಡ. ಯಾಕೆಂದರೆ, ಪರಮಾತ್ಮನು ಕೊಡುವ ಸುಖವು, ಅವನ ಪ್ರಸಾದವಾದರೆ, ಅವನು ಕೊಡುವ ದುಃಖವು, ನಮ್ಮ ಜೀವ ಶೋಧನೆಗೆ. ಜೀವಶೋಧನೆಯಿಂದ ಅಹಂಕಾರ ಕಡಿಮೆಯಾಗಿ, ಈಶ್ವರ ಸಂಬಂಧವು ಬೆಳೆಯುತ್ತದೆ.

ಈಶ್ವರ ಸಂಬಂಧದಿಂದ ತನಾಗಿಯೇ ಸಮಾಧಾನ, ಅಂತರಿಕ ಪ್ರಶಾಂತತೆ ದೊರೆಯುತ್ತದೆ. ಗೋಳಾಡುವುದು ಬೇಡ. ಮನಸ್ಸಿಗೆ ಈ ದೃಢತೆ ಇದೆಯೋ, ಅದು ನಿಜವಾದ ಭಕ್ತಿ.

ಅಷ್ಟದಿಗ್ಗಜವೆ ನೀನ್? ಆದಿಶೇಷನ ನೀನು? |
ಕಷ್ಟಭಾರವಿದೆಂದು ನಿಟ್ಟುಸಿರೆ ಬಿಡುವೆ! ||
ನಿಷ್ಠುರದ ನಿನ್ನ ಕನಿಕರ ಜಗಕೆ ಬೇಕಿಲ್ಲ |
ಎಷ್ಟಾದರೆಷ್ಟೆ ಸರಿ || ಮಂ ||

ಪ್ರತಿಯೊಬ್ಬರೂ ಕೂದ ತಮಗೇ ಏಕೆ ಕಷ್ಟಗಳು ಬರುತ್ತಿವೆ, ಎಂದು ಗೋಳಾಡುವುದು ಸಹಜ.

ಡಿ.ವಿ.ಜಿ.ಯವರು ಅಷ್ಟದಿಗ್ಗಜವೆ ನೀನ್? ಆದಿಶೇಷನೆ ನೀನು? ಆದಿಶೇಷನು ಇಡೀ ಪ್ರಪಂಚವನ್ನೇ ತನ್ನ ತಲೆಯ ಮೇಲೆ ಹೊತ್ತು ನಿಂತಿದ್ದಾನೆ. ಅಷ್ಟು ಭಾರವನ್ನೇನಾದರೂ ನಿಮ್ಮ ತಲೆಯ ಮೇಲೆ ಹೊತ್ತಿದ್ದಿರಾ? ಎಂದು ಕೇಳುತ್ತಾರೆ.

ಜೀವನದಲ್ಲಿ ಕಷ್ಟ, ನಷ್ಟ, ದುಃಖ, ನೋವು, ಬೇನೆ, ಇವೆಲ್ಲವೂ ಬರುತ್ತಲೇ ಇರುತ್ತವೆ. ಆದರೆ? ಇಡಿಥಿ ಜಚಿಥಿ ಟಿಣ ಟಿಜಚಿಥಿ. ಪ್ರತಿದಿವಸವೂ ಕಷ್ಟವಿರಲಾರದು. ಆದರೂ ಅಳುತ್ತೇವೆ ಯಾಕೆ?

ಅಂದರೆ, ನಮ್ಮ ಅಂತಃಕರಣ, ಮನಸ್ಸು, ಬುದ್ಧಿಗೆ ಸರಿಯಾದ ಜ್ಞಾನವಿಲ್ಲ.

ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ |
ಆವರಿಸದಳಲ್ ಎಲ್ಲರನುಮೊಂದೆ ಸಮಯ ||
ನೋವಿಲ್ಲದರು ನೊಂದವರನು ಸಂತಯಿಸುತಿರೆ |
ಜೀವನವು ಕಡಿದಹುದೆ? || ಮಂ ||
ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ |
ಆವರಿಸದಳಲ್ ಎಲ್ಲರನುಮೊಂದೆ ಸಮಯ ||

ಮನುಷ್ಯರ ಗುಣ, ಶಕ್ತಿ, ರುಚಿ, ಪ್ರವೃತಿಗಳ ವೈವಿಧ್ಯಕ್ಕೆ ಜಗತ್ತಿನ ವ್ಯವಸ್ಥೆಯಲ್ಲಿ, ಒಂದು ಮಹಾ ಪ್ರಯೋಜನವಿದೆ. ವಿವಿಧತೆ ಇರುವುದರಿಂದಲೇ, ಒಬ್ಬ ಮನುಷ್ಯನಿಗೆ ಇನ್ನೊಬ್ಬನ ಸಹಾಯ ಬೇಕು ಎಂದು ಎನಿಸುತ್ತದೆ. ಅಸಮಾನತೆಯಿರುವುದರಿಂದಲೇ ಜಗತ್ತಿನಲ್ಲಿ, ಒಬ್ಬರ ವಿಷಯದಲ್ಲೊಬ್ಬರಿಗೆ ಸ್ನೇಹ, ಗೌರವಗಳು ಉಂಟಾಗುವುದು. ನಮ್ಮಲ್ಲಿ ವಿವಿಧತೆ, ಇರುವುದರಿಂದಲೇ ಒಬ್ಬರಿಗೊಬ್ಬರು ಬೇಕಾಗಿರುತ್ತಾರೆ.

ಒಂದು ಕುಟುಂಬದ ಜನರೆಲ್ಲರೂ ಒಂದೇ ಸಲಕ್ಕೆ ಕಾಯಿಲೆ ಬೀಳುವುದಿಲ್ಲ.ಒಬ್ಬರು ಹುಷಾರಾಗುವ ಹೊತ್ತಿಗೆ ಮತ್ತೊಬ್ಬರು ಮಲಗುತ್ತಾರೆ. ಇದೇ ರೀತಿ ಎಲ್ಲರುಗೂ ಒಂದೇ ಸಲಕ್ಕೆ ಕಷ್ಟಗಳು ಬರುವುದಿಲ್ಲ.

ನೋವಿಲ್ಲದವರು ನೊಂದವರನು ಸಂತೈಸುತಿರೆ, ಜೀವನವು ಕಡಿದಹುದೆ. ಒಬ್ಬರಿಗೆ ಕಷ್ಟ ಬಂದಾಗ, ದುಃಖವಾದಾಗ, ಅವರನ್ನು ಸಂತೈಸಲು, ಅವರಿಗೆ ಸಮಾಧಾನ ಹೇಳಲು, ಮತ್ತೊಬ್ಬರು ಬೇಕೇಬೇಕು. ಇವೆಲ್ಲ ಜೀವನದ ರೂಪಗಳು. ಇದು ಪ್ರಪಂಚದಲ್ಲಿ ನಡೆದು ಬಂದ ರೀತಿ.

ಆದಕಾರಣ ಪರಮಾತ್ಮನನ್ನು ದೂಷಿಸಬೇಡ.

ಬೇಡಿದುದನೀವನೀಶ್ವರನೆಂಬ ನಚ್ಚಿಲ್ಲ |
ಬೇಡಲೊಳಿತಾವುದೆಂಬುದರರಿವುಮಿಲ್ಲ ||
ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ |
ನೀಡುಗೆದೆಗಟ್ಟಿಯನು || ಮಂ ||

ಹೋರಾಡು ಬೀಳ್ವನ್ನಮೊಬ್ಬೊಂಟಿಯಾದೊಡಂ |
ಧೀರಪಥವನೆ ಬೆದಕು ಸಕಲಸಮಯದೊಳಂ ||
ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? |
ಹೋರಿ ಸತ್ತ್ವವ ಮೆರಸು || ಮಂ ||

ಜೀವನದಲ್ಲಿ ಏನು ಸಂಭವಿಸುತ್ತದೆಯೋ, ಅದೆಲ್ಲವೂ ಹರಿ ಇಚ್ಛೆ, ಎಂದು ಪ್ರತಿಕ್ರಿಯೆಯಿಲ್ಲದೆ, ಮನಸ್ಸನ್ನು ಪ್ರಶಾಂತವಿಟ್ಟುಕೊ!

ಪ್ರತಿಯೊಬ್ಬರ ಜೀವನದಲ್ಲಿ ಪೆಟ್ಟುಗಳು ಬೀಳುತ್ತವೆ, ನಷ್ಟಗಳು ಆಗುತ್ತವೆ, ಆದರೂ ಬೀಳ್ವನ್ನಮೊಬ್ಬೊಂಟಿಯಾದೊಡಂ ಹೋರಾಡು. ಧೀರಪಥವನೆ ಬದಕು.

ಈಶ್ವರನು ಸಮಸ್ತ ಪ್ರಾಣಿಗಳಲ್ಲಿಯೂ, ಹೃದಯ ಮಧ್ಯಸ್ಥನಾಗಿ ಇರುತ್ತಾನೆ. ಭಗವಂತನು ಆಂತರ್ಯದಲ್ಲಿ ಕುಳಿತು ಚಿವುಟಿ, ಕಚಗುಳಿಯಿಡುತ್ತಾನೆ. ಎಲ್ಲರನ್ನೂ ಅತ್ತಿಂದತ್ತ ಹಾರಾಡಿಸುತ್ತಿದ್ದಾನೆ. ಇದು ಭಗವಂತನ ಲೀಲೆ.

ಆದಕಾರಣ ಜೀವನದಲ್ಲಿ ಪೆಟ್ಟುಬಿದ್ದಾಗ, ಸಹಿಸಿಕೊಂಡು ಧೈರ್ಯದಿಂದ ಎದುರಿಸು.

ದೂರದಲ್ಲಿ ಗೊಣಗುತ್ತ ಬಾಳ್ವಬಾಳ್ಗೇನು ಬೆಲೆ? ಪ್ರಪಂಚದ ಒಂದು ಮೂಲೆಯಲ್ಲಿ ಕುಳಿತು, ತಾನೂ ಅಳುತ್ತ, ಬೇರೆಯವರನ್ನೂ ಅಳಿಸುತ್ತ ಇರುವುದು ಜೀವನವಲ್ಲ.

ಡಿ.ವಿ.ಜಿ.ಯವರು ಮಂಕುತಿಮ್ಮನ ಕಗ್ಗದಲ್ಲಿ ಜೀವನದಲ್ಲಿಯ ಕೆಲವು ರಹಸ್ಯಗಳನ್ನು ಇಲ್ಲಿ ನಿರೂಪಿಸಿದ್ದಾರೆ. ಮಾನವನ ಜೀವನದಲ್ಲಿ ಅವನ ದೇಶ ಯಾವುದು? ಅವನ ಊರು ಯಾವುದು? ಅವನ ಜಾತಿ ಯಾವುದು? ಇವು ಯಾವುವೂ ಮುಖ್ಯವಲ್ಲ. ಸಂಸಾರದಲ್ಲಿ ಏರು, ತಗ್ಗು, ಕಷ್ಟ, ನಷ್ಟ, ಇವುಗಳ ಅನುಭವ ಮಾನವ ಜೀವನ. ಅದಕ್ಕೆ ಸಾಮಾನ್ಯವಾಗಿ ಎಲ್ಲರೂ ಜೀವನದಲ್ಲಿ ಸುಖವಿಲ್ಲ, ಶಾಂತಿಯಿಲ್ಲ, ನೆಮ್ಮದಿಯಿಲ್ಲ. ಯಾತಕ್ಕಾಗಿ ಈ ಜೀವನ, ಎಂದು ಗೋಳಾಡುವುದುಂಟು. ಆದರೆ ಈ ಮಂಕುತಿಮ್ಮನ ಕಗ್ಗದಲ್ಲಿ, ಜೀವನದಲ್ಲಿ ಗೋಳಾಡುವುದು ಬೇಡ, ಎಂದು ಸುಂದರವಾಗಿ ತಿಳಿಸಿ ಹೇಳಿದ್ದಾರೆ.

ಸಾರಸುಖರಸನಿಧಿ ಪರಬ್ರಹ್ಮನಿರುತಿರಲ್ |
ಸ್ವಾರಸ್ಯಹೀನವೆನ್ನುವರೆ ಜೀವಿತವ? ||
ಪೌರುಷ ಪ್ರೇಮ ಸೌಂದರ್ಯಗಳುಮಂತೆಯೇ |
ಸ್ವಾರಸ್ಯವೊ ರಹಸ್ಯ || ಮಂ ||

ಮಾನವನ ಬಾಳು ಬರೀ ಗೋಳು ಎಂದು ಅಳುವುದು ಬೇಡ. ಜೀವನವು ಸ್ವಾರಸ್ಯಮಯವಾಗಿದೆ, ಎಂದು ಡಿ.ವಿ.ಜಿ.ಯವರು ಹೇಳುತ್ತಾರೆ. ಸಾರಸುಖರಸನಿಧಿ ಪರಬ್ರಹ್ಮನಿರುತಿರಲ್ ಸ್ವಾರಸ್ಯ ಹೀನವೆನ್ನುವರೆ ಜೀವಿತವ. ಜೀವನವೆಂದರೆ ಬರೀ ಗೋಳಲ್ಲ. ಹೃದಯದಲ್ಲಿರುವ ಪರಮಾತ್ಮ, ಸರಸುಖರಸ, ನಿಧಿ, ಪರಬ್ರಹ್ಮ, ಸತ್ಯಂ ಜ್ಞಾನಂ ಅನಂತಂ ಬ್ರಹ್ಮ. ಆನಂದರಸನಾದ ಶಾಂತಿಯ ಧಾಮವಾದ ಪರಮಾತ್ಮನು ಹೃದಯದಲ್ಲಿರುತಿರಲಾಗಿ ಜೀವನವು ಸ್ವಾರಸ್ಯ ಹೀನವೆಂದು ಅಳುವುದು ಯಾಕೆ? ಪೌರುಷ, ಪ್ರೇಮ, ಸೌಂದರ್ಯಗಳು, ಇವೇ ಜೀವನದ ಸಾರ. ಇವೆಲ್ಲವನ್ನು ಮರೆತು ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಮನಸ್ಸು ಎದ್ದು ಕುಣಿಯುವಾಗ, ಅಳು, ದುಃಖ, ಅಶಾಂತಿ, ತಾಂಡವವಾಡುತ್ತದೆ. ಇದೇ ಸಂಸಾರ, ಇದೇ ಜೀವನ ಎಂದು ತಿಳಿದುಕೊಳ್ಳುತ್ತೇವೆ. ಆದರೆ ಅದು ಸರಿಯಲ್ಲ. ಯಾಕೆಂದರೆ? ಆ‌ಅ ಕುಣಿಯುವಂಥ ಮನಸ್ಸಿನ ಆಳದಲ್ಲೇ ಸಾರಸುಖರಸನಿಧಿ ಪರಬ್ರಹ್ಮನಿರುತಿರಲ್ ಎಲ್ಲರ ಹೃದಯದಾಳದಲ್ಲಿ ಜ್ಯೋತಿ, ಆನಂದರಸ, ಪರಮಾತ್ಮತತ್ತ್ವ, ಆನಂದಧಾಮ, ಇರುವಾಗ ಅಳುವುದು ಯಾಕೆ?

ನಾವು ನಮ್ಮ ಜೀವನವನ್ನು ಹಾಳು ಮಾಡಿಕೊಂಡು ನಾವೂ ಅತ್ತು ಬೇರೆಯವರನ್ನು ಅಳಿಸುವುದು ಬಾಳಿನ ರೀತಿಯೇ?

ಸ್ವಾಭಾವಿಕವ ಮರೆತು ನಭಕೇಣೆ ಹೂಡುವುದುಮ್ |
ಅಭಾಸವನು ಸತ್ಯವೆಂದು ಬೆಮಿಸುವುದುಮ್ ||
ಸೌಭಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ |
ಅಭಿಶಾಪ ನರಕುಲಕೆ || ಮಂ ||

ಸ್ವಾಭಾವಿಕವ ಮರೆತು ನಭಕೇಣೆ ಹೂಡುವುದು. ಆಭಾಸವನು ಸತ್ಯವೆಂದು ಭ್ರಮಿಸುವುದು. ಅಭಿಶಾಪ ನರಕುಲಕೆ.

ಅಧ್ಯಾಸವೆಂದರೆ ಸ್ವಾಭಾವಿಕವಾಗಿ ಇರುವಂಥಾದ್ದು. ಪರಮಾತ್ಮ ತತ್ತ್ವ, ಸಹಜವಾಗಿರುವಂಥಾದ್ದು. ಪರಮಾತ್ಮ ಹೃದಯವನ್ನು ಬೆಳಗುವಂಥ ಆನಂದ ಸ್ವರೂಪ. ರಸೋ ವೈ ಸ್ಯಃ|ರಸಗ್ಗಂ ಹ್ಯೇವಾಯಂ ಲಬ್ಢ್ವಾನಂದೀ ಭವತಿ. ಅಂದರೆ ಆನಂದ ರಸರೂಪ ಪರಮಾತ್ಮ. ನಮ್ಮ ಹತ್ತಿರವೇ, ನಮ್ಮ ಹೃದಯ ಗುಹೆಯಲ್ಲಿದ್ದರೂ, ನಾವು ಅದನ್ನು ಮರೆತು, ಸ್ವಾಭಾವಿಕವ ಮರೆತು ನಭಕೇಣೆ ಹೂಡುವುದು ಆಕಾಶಕ್ಕೆ ಏಣೆ ಹೂಡುತ್ತೇವೆ. ನಾವು ನಿಂತದ್ದು ಹೃದಯ ಗುಹೆಯಲ್ಲಿ ಆನಂದರಸರೂಪ ಪರಮಾತ್ಮನಿದ್ದಲ್ಲಿ. ದುರ್ದೈವದಿಂದ ಆ ಜ್ಞಾನ ನಮಗಿಲ್ಲ.

ನಮ್ಮ ಮನಸ್ಸು, ಬುದ್ಧಿ, ತಿಳಿದುಕೊಂಡಿರುವ ರೀತಿ ಆಕಾಶಕ್ಕೆ ಏಣೆ ಇಟ್ಟಹಾಗೆ. ಜೀವನದಲ್ಲಿ ಒಂದಲ್ಲ ಒಂದು ದಿವಸ ಸುಖಶಾಂತಿ ಸಿಗುತ್ತದೆ. ಆ ಸಮಾಧಾನವನ್ನು ಗಳಿಸುತ್ತೇವೆ, ಎನ್ನುವ ಆಭಾಸವನ್ನು ಸತ್ಯವೆಂದು ಭ್ರಮಿಸುವುದು.

ಆಭಾಸವೆಂದರೇನು? ಯಾವುದು ಸತ್ಯವಲ್ಲವೋ ಅದು. ಇದ್ದವಸ್ತು ಒಂದು, ಅದು ಹಗ್ಗ. ಅದು ಇದ್ದಹಾಗೆ ಕಾಣಿಸದೆ, ಹಾವಿನ ಹಾಗೆ ಕಾಣಿಸುವುದು. ಹಾವು, ಎಂದ ತಕ್ಷಣ ಅದಕ್ಕೆ ಬೆಚ್ಚಿಬಿದ್ದು, ಚೀರಿ, ಗೋಳಾಡುವುದು. ಇದು ನಾವು ಬದುಕುವ ರೀತಿ ಸೌಭಗ್ಯಗಳನರಸಿ ದೌರ್ಭಾಗಕೀಡಹುದು, ನಿಜವಾದ ಸೌಭಾಗ್ಯ ಸಾರಸುಖರಸನಿಧಿ. ಎಂದರೆ ನಮ್ಮ ಬುದ್ಧಿ, ಮನಸ್ಸಿನ ಆಳದಲ್ಲಿ, ಅಂದರೆ ಹೃದಯದಲ್ಲಿಯೇ ಪರಮಾತ್ಮನ ಆನಂದವಿದೆ, ಎಂದು ಅರಿತು ಸಮಾಧಾನದಿಂದ ಇರುವುದು. ಇದನ್ನು ಬಿಟ್ಟು, ನಮ್ಮ ಮನಸ್ಸು ಆನಂದವನ್ನು ಹುಡುಕುವುದು ಎಲ್ಲಿ? ಹೊರಗಿನ ಪ್ರಪಂಚದ ವಿಷಯಗಳಲ್ಲಿ. ಇದು ಅಭಿಶಾಪ ನರಕುಲಕೆ. ಇದು ಇವತ್ತಿನ ಮಾತಿಲ್ಲ. ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿದ್ದಾನೆ-

“ಹಿಂದಿನ ಎಲ್ಲ ಯುಗಗಳಲ್ಲಿ ಆಗಿಹೋದಂಥ ಎಲ್ಲ ಜನರೂ, ಇಂದಿನ ಯುಗದಲ್ಲಿಯ ಎಲ್ಲ ಜನರೂ, ಇನ್ನು ಮುಂದೆ ಹುಟ್ಟುವಂಥ ಎಲ್ಲ ಜನರೂ ಮಾಡುವಂಥ ತಪ್ಪು ಇದೇ” ಎಂದು. ಹೃದಯದಲ್ಲಿಯೇ ಇರುವ, ಸೌಭಗ್ಯ ರಸವನ್ನು, ಅಂದರೆ ಆನಂದವನ್ನು ಮರೆತು, ದೌರ್ಭಾಗ್ಯ ಕೀಡಹುದು. ಹೊಸ ಪ್ರಪಂಚದಲ್ಲಿಯ ವಿಷಯಗಳಲ್ಲಿ ಸುಖವಿದೆ ಎಂದು, ನಮ್ಮ ಮನಸ್ಸನ್ನು ಇಂದ್ರಿಯಗಳ ಮೂಲಕ ಹೊರಗೆ ಬಿಟ್ಟು, ನಮ್ಮ ರಮರಮಿಸುವಿಕೆ. ಆದರೆ? ಹೊರಪ್ರಪಂಚದಲ್ಲಿ ಶಾಂತಿ, ಸುಖ, ಯಾರಿಗೂ ದೊರೆತಿಲ್ಲ. ಬುದ್ಧಿ, ಮನಸ್ಸು ಅಂತರ್ಮುಖವಾಗುವವರೆಗೆ ಶಾಂತಿ, ನೆಮ್ಮದಿ, ಸಿಗಲು ಸಾಧ್ಯವಿಲ್ಲ. ಇದನ್ನು ನಾವು ಅರಿತಿಲ್ಲ. ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ ಭವಿಷ್ಯಣಿ ಚ ಭೂತಾನಿ ಎಂದರೆ ಹಿಂದಿನ ಕಾಲದವರೂ ಮಾಡಿದ ತಪ್ಪು ಇದೇ. ಈಗ ನಾವು ಮಾಡುತ್ತಿರುವಂಥ ತಪ್ಪು ಇದೇ. ಇನ್ನು ಭವಿಷ್ಯದಲ್ಲಿ ಹುಟ್ಟುವಂತ ಜನರು ಮಾಡುವ ತಪ್ಪು ಇದೇ. ಇದು ಅಭಿಶಾಪ ನರಕುಲಕೆ.

ಹೃದಯಸ್ಥಾನದಲ್ಲಿ ಸಾರಸುಖರಸನಿಧಿ ಪರಬ್ರಹ್ಮ ನಿರುತಿರಲ್, ಸ್ವಾರಸ್ಯ ಹೀನವೆನ್ನುವರೆ ಜೀವಿತವ?

ಮಾನವರು ತಮ್ಮ ಬುದ್ಧಿ, ಮನಸ್ಸನ್ನು, ತನ್ನೊಳಗೆ ನೆಮ್ಮದಿಯಿಂದ ನಗುನಗುತ್ತ, ಇಟ್ಟುಕೊಳ್ಳುವ ರಹಸ್ಯವನ್ನು ಡಿ.ವಿ.ಜಿ.ಯವರು ತಿಳಿಸಿಹೇಳಿದ್ದಾರೆ.

ನಾವು ನರಮನುಷ್ಯರು. ಆ ಹಾದಿಯನ್ನೇ ಬಿಟ್ಟಿದ್ದೇವೆ. ಅದು ಅಭಿಶಾಪ ನರಕುಲಕೆ.

ಏನೇನು ಹಾರಾಟ ಸುಖಕೆಂದು ಲೋಕದಲಿ! |
ತಾನಾಗಿ ಗಾಳಿವೊಲ್ ಬಂದ ಸುಖವೆ ಸುಖ ||
ನೀನೆ ಕೈ ಬೀಸಿಕೊಳೆ, ನೋವು ಬೆವರುಗಳೆ ಫಲ |
ಮಾಣು ಮನದುಬ್ಬಸವ || ಮಂ ||

ಏನೇನು ಹಾರಾಟ ಸುಖಕೆಂದು ಲೋಕದಲಿ ನಾವು ಬೆಳಗಿನಿಂದ ಸಾಯಂಕಾಲದವರೆಗೆ ಮಾಡುವುದು ಏನು? ಬರೀ ಪರದಾಟ. ಏತಕ್ಕಾಗಿ? ನಮ್ಮ ಸುಖಕ್ಕಾಗಿ, ನೆಮ್ಮದಿಗಾಗಿಂ ನಮ್ಮ ಬದುಕು ನಂದನವಾಗಬೇಕು, ಯಾವುದೇ ರೀತಿಯ ಕಷ್ಟಗಳು ಬರಬಾರದು, ನಷ್ಟವಾಗಬಾರದು, ಸದಾಕಾಲ ಸಂತೋಷದಿಂದ ಬಾಲ ಬೇಕು. ಹೀಗೆ ಏನೇನೋ ಹಾರಾಟ. ಅಂದರೆ ನಮಗೆ ಸುಖವು ಯಾವತ್ತಾದರೂ ಒಂದು ದಿವಸ ಬಂದೇ ಬರುತ್ತದೆ ಅದನ್ನು ನಾವು ಗಳಿಸುತ್ತೇವೆ ಎಂಬ ಭರವಸೆ ಆದರೆ?

ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣೆಸಿ |
ಹುಲ್ಲುಬಯಲೊಂದೆಡೆಯಿನ್ನೊಂದಕ್ಕೆ ನೆಗೆದು ||
ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ- |
ಡೆಲ್ಲಿಯೋ ಸುಖ ನಿನಗೆ? || ಮಂ ||

ಡಿ.ವಿ.ಜಿ.ಯವರು ಬಹಳ ಸುಂದರವಾದ ದೃಷ್ಟಾಂತವನ್ನು ಕೊಟ್ಟಿದ್ದಾರೆ.

ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣೆಸಿ ಹುಲ್ಲು ಬಯಲೊಂದೆಡೆಯಿನ್ನೊಂದಕ್ಕೆ ನೆಗೆದು ಹುಲ್ಲು ಬಯಲಿನಲ್ಲಿ ಕರು ಹುಲ್ಲು ಮೇಯಲು ಬರುತ್ತದೆ. ಅದಕ್ಕೆ ಅನುಭವವಿಲ್ಲ. ಹುಲ್ಲು ಬಯಲಿನಲ್ಲಿ ನಿಂತಾಗ ದೂರದಲ್ಲಿರುವ ಹುಲ್ಲಿನ ಬಯಲು ಸುಂದರವಾಗಿ ಕಾಣುತ್ತದೆ. ಕರುವಿಗೆ ಇಲ್ಲಿ ನಿಂತಾಗ ದೂರದಲ್ಲಿದ್ದ ಹುಲ್ಲು ಬಯಲು ಹುಲುಸಾಗಿ ಕಾಣಿಸಿತು. ಅಲ್ಲಿಗೆ ಹೋಯಿತು. ಅಲ್ಲಿ ನಿಂತಾಗ, ಮೊದಲು ನಿಂತಿದ್ದ ಹುಲ್ಲು ಬಯಲು ಹುಲುಸಾಗಿ ಕಾಣಿಸಿತು. ಕರು ಇತ್ತಿಂದತ್ತ ಅತ್ತಿಂದಿತ್ತ ಅಡ್ಡಾಡಿತೇ ವಿನಃ ಹುಲ್ಲು ತಿಂದಿತೋ? ಇಲ್ಲ. ಅದಕ್ಕೆ ಅತ್ತಿತ್ತ ಅಲೆದಾಡಿ ದಣಿಯಿತಷ್ಟೇ. ಅಷ್ಟರಲ್ಲಿ ಕತ್ತಲಾಯಿತು, ಮನೆ ಸೇರಿತು. ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊಡೆಲ್ಲಿಯೋ ಸುಖ ನಿನಗೆ? ನಾವು ನಮ್ಮ ಸುಖಕ್ಕಾಗಿ ಪರದಾಡುವ ರೀತಿಯು ಇಷ್ಟೇ.

ನಮ್ಮ ಸಂಸಾರ, ಅಂದರೆ ಹೆಂಡತಿ, ಗಂಡ, ಮಕ್ಕಳು ನಮಗೆ ಅಂದವಾಗಿ ಕಾಣುವುದಿಲ್ಲ. ಪಕ್ಕದ ಮನೆಯವರ ಸಂಸಾರ ಸುಖಮಯವಾಗಿ ಕಾಣುತ್ತದೆ. ಕರುವಿನ ಹಾಗೆ ಮನಸ್ಸಿನ ಹರಿದಾಟವನ್ನು ಬಿಟ್ಟು, ಸುಖವನ್ನು ಅನುಭವಿಸಬೇಕೋ?

ಹಾಗಾದರೆ, ಮನಸ್ಸು, ಬುದ್ಧಿಯನ್ನು ಒಳಗೆ ತಿರುಗಿಸುವಂತ ಸಾಧನೆ ಮಾಡು.

ಜೀವನದೊಂದು ಪರಮೈಶ್ವರ್ಯ ಬೊಮ್ಮನದು |
ಸೇವೆಯದನೂರ್ಜಿತಂಗೊಳಿಸುವೆಲ್ಲೆಸಕ ||
ಈವರಾರ್ ಕೊಳುವರಾರೆಲ್ಲರೊಂದಾಗಿರಲು? |
ನೈವೇದ್ಯಭಾಗಿ ನೀಂ || ಮಂ ||

ಮಾನವ ಜನ್ಮ ಪರಮಾತ್ಮನು ಕೊಟ್ಟಿರುವಂಥ ಪರಮೈಶ್ವರ್ಯ. ದಾಸರು ಮಾನವ ಜನ್ಮ ದೊಡ್ಡದು ಎಂದು ಹೇಳಿದ್ದಾರೆ. ಹೊರಗಿನ ಪ್ರಪಂಚವಿರುವುದು ಮಾನವನಿಗಾಗಿ. ಕಾರಣ ಇವೆರಡೂ ಸುಂದರವಾಗಿದೆ. ಆನಂದಮಯವಾಗಿದೆ. ಬೆಳಗಿನ ಸೂರ್ಯೋದಯ, ರಾತ್ರಿಯ ತಂಪಾದ ಚಂದ್ರನ ಬೆಳದಿಂಗಳು, ಹಚ್ಚುಹಸುರಾದ ಹುಲ್ಲಿನ ಮೇಲೆ ಬೀಸುವಂತಹ ಗಾಳಿ, ಇವೆಲ್ಲವೂ ಬೊಮ್ಮನ ಪರಮೈಶ್ವರ್ಯ ಜೀವನದೊಂದು ಪರಮೈಶ್ವರ್ಯ ಬೊಮ್ಮನದು.

ಪರಮಾತ್ಮನು ಸುಂದರವಾದ ಜೀವನವನ್ನು ಕೊಟ್ಟಿದ್ದಾನೆ ಮಹಾತ್ಮರು ಅದನ್ನು ಬಾಳುವ ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ಜೀವನದಲ್ಲಿ ಸುಖವಾಗಿ ನೆಮ್ಮದಿಯಿಂದ ಬಾಳಬೇಕು ಎಂಬ ಇಚ್ಛೆ ಇದೆ. ಆದರೆ ಹೊರಗಿನ ಪ್ರಪಂಚದಲ್ಲಿ, ಸುಖಕ್ಕಾಗಿ ಅತ್ತಿತ್ತ ಅಲೆದಾಡಿದರೆ, ಎಲ್ಲಿಯೋ ಸುಖ ನಿನಗೆ? ಅಲ್ಲಿ ಚೆನ್ನಲ್ಲಿ ಚೆನ್ನಲ್ಲೊ ಚೆನ್ನೆನುತೆಣೆಸಿ, ಅಲೆದಾಡುವುದು ಅಷ್ಟೇ.

ಅಂತಹ ಅಲೆದಾಟವನ್ನು ತೊರೆದು, ನಾವು ಒಂದು ಮನೆಯಲ್ಲಿ ಯಾರಿಗೋ ಮಗಳಾಗಿ ಇಲ್ಲವೇ ಮಗನಾಗಿ, ಜನ್ಮ ತಾಳಿದ್ದೇವೆ. ಅಲ್ಲಿಯೇ ಇದ್ದು, ಜಿವನದಲ್ಲಿ ಒಂದು ಉಚ್ಚವಾದ ಧ್ಯೇಯಕ್ಕಾಗಿ, ಮನಸ್ಸು, ಬುದ್ಧಿಯನ್ನು ಅಂತರ್ಮುಖವಾಗಿಸಿ, ಅಲ್ಲಿ ಮನಸ್ಸು, ಬುದ್ಧಿ, ಪ್ರಶಾಂತವಾಗಿ ನಿಲ್ಲುವ ಹಾಗೆ ಮಾಡಿ, ಒಳಗಿರುವ ಅಂತಃಶಕ್ತಿ ಸತ್ವ, ವೀರ್ಯ, ಎಲ್ಲವನ್ನೂ ಉಚ್ಚವಾದ ಧ್ಯೇಯವನ್ನು ಸಾಧಿಸಲು ಊರ್ಜಿತಂಗೊಳಿಸು.

ಊರ್ಜಿತಂಗೊಳಿಸಿ ಬಾಳನ್ನು ನಂದನವನವನ್ನಾಗಿ ಮಾಡಿಕೊ.

ಒಲ್ಲೆನೆನದಿರು ಬಾಳನ್, ಒಲವದೇನೆನ್ನದಿರು |
ಉಲ್ಲಾಸಕೆಡೆಮಾಡು ನಿನ್ನನಾದನಿತು ||
ನಿಲ್ಲು ಕೆಚ್ಚೆದೆಯಿಂದಲನ್ಯಾಯಗಲನಳಿಸೆ |
ಎಲ್ಲಕಂ ಸಿಧ್ಧನಿರು || ಮಂ ||

ಜೀವನದಲ್ಲಿ ಕಷ್ಟಗಳು ಅರಿವಿಲ್ಲದೆ, ಮೇಲಿಂದ ಮೇಲೆ ಒಮ್ಮೊಮ್ಮೆ ಬರುವುದುಂಟು,. ಹೇಳದೆ ಕೇಳದೆ ಬಹನು ವಿಧಿರಾಯ. ಬಿರುಗಾಳಿ ಬೀಸುವ ಹಾಗೆ, ಕಷ್ಟಗಳ ಪರಂಪರೆ ಬರುವುದು ಉಂಟು. ಜೀವನದಲ್ಲಿ ಹೆಂಡತಿ ಹೋದಳು, ಗಂಡ ಹೋದ, ಮುಂದೆ ನನಗೇನು ಗತಿ ಎಂದು ದುಃಖದಲ್ಲಿ ಮುಳುಗಿ ಮುಳುಗಿ ಏಳುವುದು. ಅಲ್ಲಿ ಇದ್ದ ಒಬ್ಬ ಮಗ ಅವನೂ ಅಪಘಾತದಲ್ಲಿ ತೀರಿ ಹೋದ, ಯಾತಕ್ಕಾಗಿ ಬದುಕುವುದು? ಎಂದು ನಿರಾಶೆ ದುಃಖ, ಕಳವಳ, ಜಿಗುಪ್ಸೆ, ಜೀವನದಲ್ಲಿ ಬರುವುದುಂಟು. ಆದರೆ ಡಿ.ವಿ.ಜಿ.ಯವರು ಇಂತಹ ಪರಿಸ್ಥಿತಿಯಲ್ಲಿಯೂ ಪ್ರತಿಯೊಬ್ಬರನ್ನು ಹುರಿದುಂಬಿಸುತ್ತಿದ್ದಾರೆ.

ಒಲ್ಲೆನೆನದಿರು ಬಾಳನ್ ಒಲವದೇನೆನ್ನದಿರು ಜೀವನದಲ್ಲಿ ಕಷ್ಟಗಳು ಬರುವಾಗ ಜಿಗುಪ್ಸೆ ಹುಟ್ಟುವುದು ಸಹಜ. ಆದರೆ, ಈ ಹೊರ ಪ್ರಪಂಚದಲ್ಲಿ ಬದುಕಬೆಕಾದರೆ ನಮ್ಮ ಅಂತಃಕರಣ ಅನ್ನುವಂಥ ಮನಸ್ಸು, ಬುದ್ಧಿಯಲ್ಲಿ, ಎರಡು ಗುಣಗಳಿವೆ. ಒಂದು ಬೆಳಿಗ್ಗೆ ಏಳುವಾಗಲೇ ಏತಕ್ಕಾಗಿ ಬೆಳಗಾಯಿತು? ತಾನು ಬಸಿದ್ದು ಒಂದೂ ಈಡೇರಲಿಲ್ಲ. ದೇವರಿಗೆ ಕರುಣೆಯೇ ಇಲ್ಲ. ಇನ್ನು ಮುಂದೆಯೂ ಅವನು ಈಡೇರಿಸುತ್ತಾನೆಂಬ ಭರವಸೆಯೂ ಇಲ್ಲ. ಯಾವ ಕಾರಣಕ್ಕಾಗಿ ಬದುಕಬೇಕು, ಯಾರಿಗಾಗಿ ಬದುಕಬೇಕು? ಅನ್ನುವುದು ಜೀವನದ ಒಂದು ಮುಖ. ಹೀಗೆ ಒಲ್ಲೆನೆನೆದಿರು ಬಾಳನ್.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.