ಕೆ.ವಿ.ಸುಬ್ಬಣ್ಣ ಅವರು ಇನ್ನಿಲ್ಲ ಎಂಬ ನೆನಪು ಬಂದಂತೆ ಮನಸ್ಸು ಮೂಕವಾತ್ತದೆ. ಕಳೆದ ಮೂವತ್ತು ವರುಷಗಳ ಅವರ ಪರಿಚಯದಲ್ಲಿ ನನಗೆ ತಿಳಿಯದೆಯೇ ಅವರಿಂದ ಕಲಿಯುತ್ತಾ ಹೋದೆ. ಅವರ ಬರಹ, ಭಾಷೆ, ಚಿಂತನೆ, ಒಂದು ಕಡೆ. ಅವರು ಜನರೊಡನೆ ಒಡನಾಡುತ್ತಾ ಒಪ್ಪಿಸುವ ಕ್ರಮವೇ ಸಮುದಾಯ ನಾಯಕತ್ವಕ್ಕೆ ಒಂದು ಆದರ್ಶ. ಅವರ ನಾಟಕ, ಸಿನಿಮಾ ಆಸಕ್ತಿ, ಅನುವಾದಗಳು ಇತ್ಯಾದಿ ಇತ್ಯಾದಿ ಬಹುಮುಖದ ಆ ವ್ಯಕ್ತಿತ್ವ ನಾಡಿನಾದ್ಯಂತ ಬೀರಿರುವ ಪ್ರಭಾವ ದೊಡ್ಡದು. ಅಂತಹವರ ಪರಿಚಯವೇ ಒಂದು ಸಂಪತ್ತು.
ಕಳೆದ ಇಪ್ಪತ್ತೈದು ವರುಷಗಳಲ್ಲಿ ವರುಷಕ್ಕೆ ಒಂದೋ ಎರಡೋ ಸಲ ಸಂದರ್ಭ ಸಿಕ್ಕ ಗಾಗೆ ಹೆಗ್ಗೋಡಿಗೆ ಹೋಗಿ ಬರುವ ಕ್ರಮ ನನ್ನದು. ಸುಬ್ಬಣ್ಣನವರೊಡನೆ ಮಾತಾಡುವುದು, ಅವರು ಹೇಳುತ್ತಿರುವುದನ್ನು ಕೇಳುವುದು ಒಂದು ಆಕರ್ಷಣೆ. ನೀನಾಸಂ ಬಳಗದ ಒಡನಾಟ, ಅಕ್ಷರನ ಸ್ನೇಹ ಮೈಸೂರಲ್ಲಿ ಒಟ್ಟಿಗೆ ಓದುತ್ತಿದ್ದ ಟಿ.ಪಿ.ಅಶೋಕ, ಸಾಗರದ ಸುರೇಶಬಾಬು ಇವರುಗಳ ಮನೆಯ ಆತಿಥ್ಯ. ಹೀಗೆ ನೀನಾಸಂ ಹೆಗ್ಗೋಡಿಗೆ ಹೋಗುವುದು ಸದಾ ಕಷ್ಟದ ಕೆಲಸ.
ಹೆಗ್ಗೋಡಿನಿಮ್ದ ಹಿಂತಿರುಗಿದಾಗ ಪ್ರತಿಸಲವೂ ಬೆಂಗಳೂರಿನ ಸ್ನೇಹಿತರು “ವೀಳ್ಯದೆಲೆ ವಿಶ್ವಾವಿದ್ಯಾನಿಲಯದ ಕುಲಪತಿಗಳು ಹೇಗಿದ್ದಾರೆ?” ಎಂಬ ಒಂದು ತಮಾಷೆ ಪ್ರಶ್ನೆ ಕೇಳುವುದು ನನಗೆ ಅಭ್ಯಾಸವಾಗಿಬಿಟ್ಟಿತ್ತು. ನೀನಾಸಂ, ಸುಬ್ಬಣ್ಣ, ಅಕ್ಷರ ಪ್ರಕಾಶನ ಹಾಗೂ ಆ ಊರಿನ ಸುತ್ತಲಿನ ಸಮುದಾಯ ಒಟ್ಟಾಗಿ ಒಂದು ಯೂನಿವರ್ಸಿಟಿಗಿಂತ ದೊಡ್ಡ ಕೆಲಸ ಮಾಡಿದರು. ಅಡಿಗರ ಹಿಂದೆ ಇದ್ದ ಸಂಘಟಕ ಸುಬ್ಬಣ್ಣ. ಅಕ್ಷರ ಪ್ರಕಾಶನ ಕನ್ನಡದ ನವ್ಯ ಚಿಂತನೆಗೇ ಒಂದು ಆಧಾರಸ್ತಂಭ ಒದಗಿಸಿತು.
ಕೆಲವರು ಇದ್ದಲ್ಲೇ ಇದ್ದು ತಮ್ಮಷ್ಟಕ್ಕೆ ತಾವೇ ಕೆಲಸ ಮಾಡಿಕೊಂಡಿದ್ದಾರೂ, ಅದು ಕಾಲದ ಮುಖ್ಯಕ್ರಿಯೆಯಾಗುತ್ತದೆ. ಇತರರಿಗೆ ಮಾದರಿಯಾಗುತ್ತದೆ. ಸುಬ್ಬಣ್ಣ ಹಾಗೆ ಹಿಂದೆ ತಾವು ಇರುವಲ್ಲೇ ಇದ್ದು ಜಗತ್ತಿನ ಗಮನ ಸೆಳೆದವರು. ಅವರು ಮಾಡಿದ ಕೆಲಸವೆ ಇತರರಿಗೆ ಅನುಸರಿಸಲು ಯೋಗ್ಯವಾಗುವಂತಹದ್ದು.
ಸುಬ್ಬಣ್ಣ ವಿಕೇಂದ್ರೀಕರಣದಲ್ಲಿ ವಿಶ್ವಾಸವಿದ್ದವರು. ಭಾರತೀಯ ಸಮಾಜವಾದದ ಕಡೆಗೆ ಒಲವಿದ್ದವರು. ನಗರೀಕರಣ, ಕೇಂದ್ರೀಕರಣ, ಜಾಗತೀಕರಣದ ಕಡೆಗೆ ದೇಶ ಚಲಿಸುತ್ತಿರುವಾಗ ಅವರು ಸಾಂಸ್ಕೃತಿಕ ವಿಕೇಂದ್ರೀಕರಣವನ್ನು ಸಾಧಿಸಿ ತೋರಿಸಿದರು. ಒಂದು ಪುಟ್ಟ ಹಳ್ಳಿಯೂ ಸಾಂಸ್ಕೃತಿಕ ನಕಾಶೆಯಲ್ಲಿ ಮುಖ್ಯವಾಗಿ ಕಾಣಬಹುದು. ಆದರೆ ಅವರಿಗಿದ್ದದ್ದು, ಭಾರತದ ಪ್ರತಿ ಹಳ್ಳಿಯೂ, ಹೆಗ್ಗೋಡಿನ ಹಾಗೆ ಇರಬೇಕು ಎಂಬುದು. ಅವರಿಗೆ ಸಂದ ಮ್ಯಾಗ್ಸೆಸೆ ಪ್ರಶಸ್ತಿ, ಕಾಳಿದಾಸ ಸಮ್ಮಾನ, ಅಕಾಡೆಮಿ, ಪದ್ಮಶ್ರೀ, ಸೋವಿಯತ್ ಲ್ಯಾಂಡ್ ಪ್ರಶಸ್ತಿ, ಮತ್ತಿತರ ಅನೇಕಾನೇಕ ಪ್ರಶಸ್ತಿಗಳು ಅವರ ಕೆಲಸವನ್ನೂ, ಚಿಂತನೆಯನ್ನೂ, ಜಗತ್ತು ಗುರುತಿಸಿದ ರೀತಿ. ಮ್ಯಾಗ್ಸೆಸೆ ಪ್ರಶಸ್ತಿ ಬಂದಾಗ ಆ ದೊಡ್ಡ ಹಣದಿಂದ ನೀನಾಸಂ ಪ್ರತಿಷ್ಠಾನ ಸ್ಥಾಪಿಸಿ, ಅದರ ಬಡ್ಡಿ ಹಣದಿಂದ ಸಣ್ಣ ಪುಟ್ಟ ಅನೇಕ ಊರುಗಳಲ್ಲಿ ಚಲನಚಿತ್ರ ತರಬೇತಿ ಶಿಬಿರಗಳು, ಸಾಹಿತ್ಯ ಕಮ್ಮಟಗಳು ಹೇಗೆ ನೀನಾಸಂ ಸಾಂಸ್ಕೃತಿಕ ಚಳವಳಿಯನ್ನೇ ರಾಜ್ಯದಾದ್ಯಂತ ಹಬ್ಬಿಸಿದರು. ಅವರ ‘ತಿರುಗಾಟ’ ನಾಟಕ. ಅನುವಾದಗಳು, ಪ್ರಕಾಶನ ಎಲ್ಲವೂ ಅವರ ಊರನ್ನು ಸಾಂಸ್ಕೃತಿಕವಾಗಿ ಸಮೃದ್ಧಗೊಳಿಸಿ ಅದರ ಕಂಪನ್ನು ನಾಡಿನಾದ್ಯಂತ ಹಬ್ಬಿಸಿದ ರೀತಿಗೆ ಮಾದರಿಯಾಗಿದೆ.
ಸುಬ್ಬಣ್ಣ ಬದುಕು ದೊಡ್ಡದು ಎಂಬ ಜೀವ ಪ್ರೀತಿಯವರು. ಶ್ರೇಷ್ಠತೆ ಒಂದು ವ್ಯಸನವಾಗಿ ಸಹಜ ಬದುಕು ಹಾಳಾಗದಿರಲಿ. ನಮ್ಮ ಬದುಕು ಆ ವ್ಯಸನದಲ್ಲಿ ನಮಗೇ ಕಹಿಯಾಗದಿರಲಿ ಎಂದು ತಿಳಿದವರು. ತಾನು ಸಹಜವಾಗಿ ತನ್ನ ಸಮುದಾಯದಲ್ಲಿ ಬದುಕಬೇಕು. ಅದರ ಜೊತೆ ತಾನು ಹಾಗೂ ತನ್ನ ಸಮುದಾಯ ಜಗತ್ತಿನಲ್ಲಿ ಉತ್ತಮವಾದದ್ದನ್ನು ತಿಳಿಯಬೇಕು, ಹೊಸ ಚಿಂತನೆಗಳನ್ನು ಅರಿಯಬೇಕು ಎಂದು ಹುಡುಕುತ್ತಾ ಹೋದರು. ಹೆಗ್ಗೋಡಿನ ಸುತ್ತಲಿನ ತನ್ನವರಿಗೆ ತೋರಿಸುತ್ತಾ. ಕಾಣಿಸುತ್ತಾ ಹೋದರು.
ಸಂಸ್ಕೃಯ ಕೇಂದ್ರ, ಬೆಂಗಳೂರಲ್ಲೋ, ಮೈಸೂರು, ಧಾರವಾಡ ಅಥವಾ ಉಡುಪಿ ಹೇಗೆ ಕೇಂದ್ರಗಳಲ್ಲಿ ಮಡುಗಟ್ಟಿರುತ್ತದೆ ಎಂದು ತಿಳಿದವರಿಗೆ ನೀನಾಸಂ ಹಾಗೂ ಹೆಗ್ಗೋಡುಗಳಲ್ಲಿ ಹರಳುಗಟ್ಟಿರುವ ಚಿಂತನೆಗಳನ್ನು ನೋಡಿ ಆಶ್ಚರ್ಯವಾದೀತು. ಕಾರಣ ಇಷ್ಟೆ. ಸುಬ್ಬಣ್ಣ ಹೇಳುವುದು ಪ್ರತಿಯೊಬ್ಬನ ಬದುಕೂ ಅಂತರಿಕವಾಗಿ ಶ್ರೀಮಂತವಾದಾಗ ಅಲ್ಲೇ ಒಂದು ಸಂಸ್ಕೃತಿಯ ಸೌಂದರ್ಯ ನಿರ್ಮಾಣವಾಗುತ್ತದೆ. ನಾವು ನಮ್ಮ ಜೀವನಕ್ಕೆ ಬೇಕಾದಷ್ಟು ಸಂಪಾದಿಸಿ ಉಳಿದಂತೆ ನಮ್ಮ ಆಸಕ್ತಿಗಳನ್ನು, ಬದುಕನ್ನು ಹಸನುಗೊಳಿಸಿಕೊಳ್ಳಬೇಕು.
ಸುಬ್ಬಣ್ಣನವರ ಆತ್ಮವಿಶ್ವಾಸ ಹಾಗೂ ಪೂರ್ವಗ್ರಹವಿಲ್ಲದ ಚಿಂತನೆ ಕೂಡಾ ದೊಡ್ಡದು. ದಿ. ಬಿ.ವಿ. ಕಾರಂತರ ‘ಬರ್ನಮ್‌ವನ’ ನಾಟಕವನ್ನು ಲಂಡನ್‌ನಲ್ಲಿ ಒಬ್ಬ ಯೂನಿವರ್ಸಿಟಿ ಸಾಹಿತ್ಯದ ಪ್ರಾಧ್ಯಾಪಕರೊಬ್ಬರು ಮೆಚ್ಚಿಕೊಳ್ಳಲಿಲ್ಲ ಎಂದು ಉಡುಪಿಯಲ್ಲಿ ಒಂದು ಸಭೆಯಲ್ಲಿ ಒಬ್ಬ ಪ್ರೇಕ್ಷಕ ಹೇಳಿ, ಕಾರಂತರ ‘ಬರ್ನಮ್‌ವನ’ (ಶೇಕ್ಸ್‌ಪಿಯರ್ಽನ ಮ್ಯಾಕ್‌ಬೆತ್ ನಾಟಕದ ಕಾರಂತರ ಹಿಂದಿನಾಟಕ ರೂಪ) ಅಷ್ಟು ಶ್ರೇಷ್ಠವಲ್ಲ ಎಂದ. ಸುಬ್ಬಣ್ಣನವರ ತಕ್ಷಣದ ಪ್ರತಿಕ್ರಿಯೆ: “ನಮ್ಮ ಯೂನಿವರ್ಸಿಟಿಗಳಲ್ಲೂ ದಡ್ಡ ಪ್ರೊಫೆಸರ್‍ಗಳಿರುವುದಿಲ್ಲವೆ? ಹಾಗೆ ಅವನೂ ಒಬ್ಬ.” ಬ್ರಿಟಿಷರ ಚಿಂತನೆ, ಪಾಶ್ಚಾತ್ಯ ಮೋಹ ಸುಬ್ಬಣ್ಣನವರಿಗೆ ಎಂದೂ ದೊಡ್ಡದಾಗಿ ಕಾಣುತ್ತಿರಲೇ ಇಲ್ಲ. ಹಾಗೆಂದು ಅವರು ಭಾರತೀಯ ಪರಂಪರೆಯ ಪುನರುತ್ಥಾನ ವಾದಿಗಳು ಆಗಿರಲಿಲ್ಲ. ೧೯೫೮ರಷ್ಟು ಹಿಂದೆ ಸಂಸ್ಕೃತದಿಂದ ಧನಂಜಯನ ‘ದಶರೂಪಕ’ವನ್ನು ಕನ್ನಡಕ್ಕೆ ಅನುವಾದಿಸಿದಾಗ ಎಂದು ಹೇಳಿ, ಒಂದು ಪರ್ಯಾಯ ಚಿಂತನೆಯನ್ನು ಶುರು ಮಾಡಿದವರು.
ಸುಬ್ಬಣ್ಣವನರ ಪರ್ಯಾಯ ಚಿಂತನೆ ಗಾಂಧೀಜಿಯ ತತ್ತ್ವಗಳಿಗೆ ಬಹು ಹತ್ತಿರವಾದ್ದು. ಭಾರತೀಯ ಪುನರುತ್ಥಾನವಲ್ಲ. ಪಾಶ್ಚಾತ್ಯರ ಅಂಧಾನುಕರಣೆ ಅಲ್ಲ. ಸಮುದಾಯ ಹಾಗೂ ವ್ಯಕ್ತಿತ್ವ ಒಂದರೊಳಗೆ ಒಂದು ಹೆಣೆದುಕೊಂಡು, ತನ್ನ ಬದುಕಿನ ಸಹಜತೆಯಲ್ಲಿ ಅರ್ಥಪೂರ್ಣತೆಯನ್ನು ಕಾಣುವ ಕ್ರಮ. ಸಾಂಸ್ಕೃತಿಕ ವಿಕೇಂದ್ರಿಕರಣ ಅವರಿಗೆ ಅಂತಹ ಒಂದು ಹುಡುಕಾಟದ ಭಾಗ.
ಸುಬ್ಬಣ್ಣ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ತ್ವವಾದಿ. ಜನರ ಸ್ವಾತಂತ್ರ್ಯ ಹಾಗೂ ಚಿಂತನೆಗಳನ್ನು ಗೌರವಿಸಿ ಪರಸ್ಪರ ಪೂರಕ ಬೆಳವಣಿಗೆಯಲ್ಲಿ ತೊಡಗಿಕೊಳ್ಳಬೇಕು ಎನ್ನುವವರು. ಅವರ ಅನೇಕಾನೇಕ ಬರಹಗಳಿಗಿಂತಲೂ ಹೊರಗೆ. ಅವರು ಸಾರ್ವಜನಿಕ ಹಿತಾಸಕ್ತಿಯ ಕೋರ್ಟು ವ್ಯವಹಾರಗಳಲ್ಲೂ ತೊಡಗಿಕೊಂಡಿದ್ದರು. ಅಡಿಕೆ ಬೆಳೆಗಾರರ ಪರವಾದ ಹೋರಾಟದ ಮುಂಚೂಣೆಯಲ್ಲಿ ಇರುತ್ತಿದ್ದರು. ಆದರೆ ಎಂದೂ ಗುಟ್ಕಾ ಮುಂತಾದ ರೀತಿಯಲ್ಲಿ ಅಡಿಕೆ ಬೆಲೆ ಏರಬೇಕೆಂದು ವಾದಿಸಿದವರಲ್ಲ. ಅಡಿಕೆ ಬೆಳೆಗಾರರ ಹೋರಾಟದ ಭಾಗವಾಗಿ ಅನೇಕ ವ್ಯಜ್ಯಗಳನ್ನು ಹೂಡಿ ನ್ಯಾಯಾಲಯಗಳಲ್ಲೂ ಹೋರಾಡಿದವರು. ಹೀಗೆ ಸುಬ್ಬಣ್ಣ ನನಗೆ ಸದಾ ಅವರ ಬಹುಮುಖಗಳಲ್ಲಿ ಬಹುಮುಖಗಳಲ್ಲಿ ಕಾಣುತ್ತಾರೆಯೇ ಹೊರತು ಒಬ್ಬರೇ ಆಗಿ ಕಾಣುವುದಿಲ್ಲ.
ಸುಬ್ಬಣ್ಣನವರ ಜೀವನ ನಮ್ಮ ನಾಡಿನ ಸಾಂಸ್ಕೃತಿಕ ಚರಿತ್ರೆಯೇ ಆಗಿದೆ. ಕುಮಾರ ಗಂಧರ್ವ ಸಂಗೀತದ ಬಗ್ಗೆ ಬರೆದ ಒಂದು ಲೇಖನದಲ್ಲಿ ಸುಬ್ಬಣ್ಣ ಕವಿ ಸು.ರಂ. ಎಕ್ಕುಂಡಿಯವರ ಕವನದಿಂದ “ನಮಗೂ ನಿಮಗೂ ಹೃದಯದ ಬಾಗಿಲ ತೆರೆದವರೇ ಇಲ್ಲ” ಎಂಬ ಕೊರಗಿನ ಬಗ್ಗೆ ಹೇಳುತ್ತಾರೆ. ಹಾಗೆ ಹೃದಯದ ಬಾಗಿಲು ತೆಗೆಯಬಲ್ಲ ವಿರಳರು ಶಿವಪುತ್ರ ಕುಮಾರಗಂಧರ್ವ ಎಂದಿದ್ದರು. ನನ್ನ ಮಟ್ಟಿಗೆ ಸುಬ್ಬಣ್ಣನವರು ಸಮುದಾಯದೊಡನೆ ಹೃದಯದ ಬಾಗಿಲು ತೆರೆದವರು. ಸಮುದಾಯಕ್ಕೊಂದು ಹೃದಯದ ಬಾಗಿಲು ತೆರೆದವರು.
ಕಳೆದ ತಿಂಗಳು ತೀರಾ ಆಕಸ್ಮಿಕವಾಗಿ ಒಂದು ಸಂಜೆ ಸ್ವಲ್ಪ ಹೊತ್ತು ಹೆಗ್ಗೋಡಿನಲ್ಲಿದ್ದೆ. ಶಿಮಮೊಗ್ಗಕ್ಕೆ ರೈಲಿಗೆ ತಡವಾಗಬಾರದು ಎಂಬ ಅವಸರದಲ್ಲಿ ನನ್ನ ತಂದೆಯವರು ತಾವು ಮೊದಲೇ ಹೋಗಿ ಕಾರಿನಲ್ಲಿ ಕೂತಿದ್ದರು. ಶಿವರಾಮ ಕಾರಂತರ ರಂಗಮಂದಿರದ ಬಳಿಯಿಂದ ಅಷ್ಟು ದೂರ ನಡೆದು ಬಂದು ಕಾರಿನಲ್ಲಿದ್ದವರಿಗೆಲ್ಲಾ ವಿದಾಯ ಹೇಳಿ ಊಟದ ವ್ಯವಸ್ಥೆ ಉಪಚಾರ ಕೇಳಿದರು. ಮ್ಯಾಗ್ಸಸ್ಸೆ ಪ್ರಶಸ್ತಿ ಪಡೆದ ಅಷ್ಟು ದೊಡ್ಡವರು ಎಷ್ಟು ಸರಳವಾಗಿದ್ದಾರೆ ಎಂದು ನಾವು ಕಾರಿನಲ್ಲಿ ಬರುತ್ತಾ ಮಾತಾಡಿಕೊಂಡೆವು ‘ನನ್ನ ಅನುಭವಕ್ಕೆ ದಕ್ಕಿದ ರಂಗ ಕಲ್ಪನೆ’ ಎಂಬ ಅವರದೊಂದು ಲೇಖನ ಹುಡುಕಿ ಗೆಳೆಯ ಟಿ.ಪಿ. ಅಶೋಕ್ ಅವರ ಆಯ್ದ ಬರಹಗಳಲ್ಲಿ ಪ್ರಕಟಿಸಿದ. ಅದನ್ನು ನಾನು ಅನೇಕ ಮ್ಯಾನೇಜ್‌ಮೆಂಟ್ ಕ್ಲಾಸುಗಳಲ್ಲೂ ತಾತ್ವಿಕ ಚಿಂತನೆಯ ಸಂದರ್ಭದ ಚರ್ಚೆಗಳಲ್ಲೂ ಉಪಯೋಗಿಸಿದ್ದಿದೆ. ಅವರ ಅರೆ ಶತಮಾನದ ಅಲೆ ಬರಹಗಳಲ್ಲಿ ಅದೂ ಸೇರಿದೆ. ಸುಬ್ಬಣ್ಣನವರು ಎಂದೂ ಚಾತುರ್ಯವನ್ನು ಅವಲಂಬಿಸಿರಲಿಲ್ಲ. ಆಂತರ್ಯವನ್ನು ಅವಲಂಬಿಸಿದರು ಅವರ ಸಾವಿರ ನೆನಪುಗಳು, ವಿಚಾರಗಳೂ ಮನಸ್ಸನ್ನು ಆವರಿಸುತ್ತದೆ ಅಗಲಿದ ಚೇತನಕ್ಕೆ ಗೌರವ ಪೂರ್ವಕ ವಂದನೆಗಳು.
*****
ಕೃಪೆ: ಸುಧಾ ವಾರ ಪತ್ರಿಕೆ