How do you know but ev’ry Bird that cuts the airy way,
is an immense world of Delight, clos’d by your senses five?
-William blake
(1757 – 1827)
ನಾವು ಹುಡುಗರು ಆಗುಂಬೆ ರಸ್ತೆಯಲ್ಲಿ ತೀರ್ಥಹಳ್ಳಿ ಹೈಸ್ಕೂಲಿಗೆಂದು ನಡೆದುಬರುವಾಗ ಪೇಟೆ ತಲ್ಪುತ್ತಿದ್ದಂತೆ ಒಬ್ಬರು ನಿತ್ಯ ಕಾಣುತ್ತಿದ್ದರು. ಸೈಕಲ್ ಕಚ್ಚೆಹಾಕಿ, ರುಮಾಲು ತೊಟ್ಟು, ಮಾಸಿದ ಕಪ್ಪು ಕೋಟಿನಲ್ಲಿರುತ್ತಿದ್ದ ಅವರು ನನಗೆ ಅತ್ಯಂತ ಕಟ್ಟುನಿಟ್ಟಿನ ವ್ಯಕ್ತಿಯಾಗಿ ಭಾಸವಾಗಿದ್ದರು. ಅವರು ಗತ್ತಿನಲ್ಲಿ ನಡೆಯುವಾಗ ಹರಳೆಣ್ಣೆ ಕುಡಿದ ಹಲವು ಪದರಗಳ ಒರಟಾದ ದಪ್ಪನೆಯ ಅವರ ಎಕ್ಕಡ ಸಣ್ಣಗೆ ಚೀರುತ್ತಿದ್ದುದೂ ನೆನಪಾಗುತ್ತೆ. ಭಯ ಗೌರವಗಳನ್ನು ಹುಟ್ಟಿಸುವ ಇಂಥ ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ದೂರದ ಮರದ ತುದಿಯನ್ನು ತದೇಕ ಮಗ್ನತೆಯಿಂದ ದಿಟ್ಟಿಸುತ್ತ ನಿಂತಿರುತ್ತಿದ್ದರೆಂಬುದೇ ನಾನು ಅವರನ್ನು ಅವರ ವೇಷ ಭೂಷಣ ಸಮೇತ ಮರೆಯದೆ ಇರುವುದಕ್ಕೆ ಕಾರಣ.
ದರ್ಪದ ಗತ್ತಿನ ಈ ಆಸಾಮಿ ದೂರದ ಮರದ ತುದಿಯನ್ನು ಯಾಕೆ ಹೀಗೆ ನೋಡುತ್ತ ನಿಂತಿರುತ್ತಾರೆಂಬ ಕುತೂಹಲ ನನಗೆ. ಒಂದು ದಿನ ಕ್ಲಾಸಿಗೆ ಚಕ್ಕರ್ ಹಾಕಿ ಅವರಿಂದ ಅಷ್ಟು ದೂರದಲ್ಲಿ ನಾನು ಮರವನ್ನೆ ದಿಟ್ಟಿಸುತ್ತಾ ನಿಂತೆ. ಆಕಾಶದಲ್ಲಿ ತೇಲುವ ಚುಕ್ಕೆಯೊಂದು ದೊಡ್ಡದಾಗಿ ಬೆಳೆದು, ಬಿಚ್ಚಿದ ರೆಕ್ಕೆಯನ್ನು ತುಸುವೇ ಓರೆಮಾಡುತ್ತ, ಅನಾಯಾಸ ದೊಡ್ಡ ವರ್ತುಲಗಳಲ್ಲಿ ಸುತ್ತುತ್ತ, ಮರದ ತುದಿಯಲ್ಲಿ ಹಗುರವಾಗಿ ಕೂತು ಬಿಚ್ಚಿದ ರೆಕ್ಕೆಯನ್ನು ಮಡಚಿಕೊಂಡಿತು. ಆ ಪಕ್ಷಿ ಹದ್ದಲ್ಲ, ಗರುಡ, ಯಾಕೆಂದರೆ ಅದರ ಕತ್ತಿನ ಕೆಳಗಿನ ಭಾಗ ಬೆಳ್ಳಗಿದೆ ಇತ್ಯಾದಿ – ಆ ಮೇಲಿಂದ ಮನವರಿಕೆ ಮಾಡಿಕೊಂಡ ನನಗೆ ಸೈಕಲ್ ಕಚ್ಚೆಯವರ ಪ್ರತಿಕ್ರಿಯೆಯೇ ಆ ಕ್ಷಣದ ಆಸಕ್ತಿಯಾಗಿತ್ತು.
ಅವರು ಲಗುಬಗೆಯಲ್ಲಿ ಎಕ್ಕಡ ಕಳಚಿ ಕೈಮುಗಿದು ಬರಿಗಾಲಲ್ಲಿ ನಿಂತರು. ಮತ್ತೆ ಮಧ್ಯದ ಬೆರಳುಗಳನ್ನು ಮಡಚಿ, ಮಡಚದ ಕಿರಿ ಮತ್ತು ತೋರುಬೆರಳುಗಳನ್ನು ಒಂದರ ಮೇಲೊಂದಿಟ್ಟು, ಮಡಚಿದ್ದ ಬೆರಳುಗಳನ್ನು ಎದಿರು ಬದಿರಿನ ಹೆಬ್ಬೆರಳುಗಳಿಗೆ ಸಿಕ್ಕಿಸಿ, ಅಂಗೈ ಮುಂಗೈಗಳ ಈ ಸಮಾವೇಶದಲ್ಲಿ ಉತ್ಪನ್ನವಾದ ಕಂಡಿಯನ್ನು ಒಂದು ಕಣ್ಣಿಗೆ ತಂದು ತನ್ಮೂಲಕ ಸೂರ್ಯನನ್ನೂ, ಗರುಡನನ್ನೂ ನೋಡಿ, ಮತ್ತೆ ಕತ್ತು ಬಗ್ಗಿಸಿ, ಕಣ್ಮುಚ್ಚಿ ನಿಂತು, ಧ್ಯಾನಿಸಿ ನಿಧಾನವಾಗಿ ಎಕ್ಕಡಮೆಟ್ಟಿ ಹೊರಟರು. ಈ ಮುಹೂರ್ತದ ಮುಗಿತಾಯಕ್ಕಾಗಿ ಕಾದಿದ್ದವರ ಜೊತೆ ಅದು – ಇದು, ಧಾರಣೆ – ಗೀರಣೆ ಮಾತಾಡುತ್ತ ಗತ್ತಿನಲ್ಲೆ ಅವರು ನಡೆದರು. ಪ್ರತಿದಿನ ಹೀಗೆ ಗರುಡದರ್ಶನವಾಗದ ಹೊರತು ಅವರು ಉಣ್ಣುವಂತಿಲ್ಲವೆಂದು ಆಮೇಲಿಂದ ತಿಳಿದೆ. ಶನಿವಾರ ನಾವು ಮಾರ್ನಿಂಗ್ ಕ್ಲಾಸ್ ಮುಗಿಸಿ ಮನೆಗೆ ಹಿಂದಿರುಗುವಾಗ ಹೊಟ್ಟೆ ಹಪಹಪ ಎನ್ನುವಾಗಲೂ ಒಂದೊಂದು ದಿನ ಲೇಟಾಗಿ ಆಗಮಿಸುವ ಗರುಡನಿಗಾಗಿ ಈ ಪುಣ್ಯಾತ್ಮ ಕಾದಿರುವುದು ನಾನು ಕಂಡಿದ್ದೇನೆ.
ರುಕ್ಮಿಣಿ ಸತ್ಯಭಾಮರನ್ನು ಎರಡು ಕೈಗಳಲ್ಲೂ ಅವುಚಿ ಹಿಡಿದು ಗರುಡನ ಮೇಲೆ ಕೂತ ಶ್ರೀಕೃಷ್ಣನನ್ನು ನಸ್ಯದ ಜಾಹೀರಾತಿನ ಕ್ಯಾಲೆಂಡರಲ್ಲಿ ಕಂಡಿದ್ದ ನಾನು ಕೂಡ ಅವರಂತೆಯೇ ಅಂಗೈ ಮುಂಗೈ ಸಮಾವೇಶದ ಯಂತ್ರದ ಮೂಲಕ ಗರುಡನನ್ನು ಭಗವಂತನ ವಾಹನವಾಗಿ ಭಾವಿಸಲು ಹುಡುಗನಿದ್ದಾಗ ಪ್ರಯತ್ನಿಸಿದ್ದೇನೆ. ಆದರೆ ಹೊರಗಣ್ಣಿಗೆ ಬಿಳಿ ಹೊಟ್ಟೆಯ ಹದ್ದಾಗಿ ಕಾಣೂವಂಥದು ನನ್ನ ಪಾಲಿಗೆ ಪುರಾಣದ ಗರುಡನೂ ಆದದ್ದೂ ಬೆಳೆದು ದೊಡ್ಡವನಾದ ಮೇಲೆ ಕವನ ಒಂದರಲ್ಲಿ:
……ಚಿಪ್ಪೊಡೆದು
ಬರಲಿ ಪರಿಪೂರ್ಣವತಾರಿ ವಿನತಾ ಪುತ್ರ
ಗಾಳಿ ಕಡೆಯಲು ಸೆಟೆದ ಬಳ್ಳಿ ಮಂತು
ನಿನ್ನ ತೊಡೆ ಹೊರೆ ಕೆಳಗೆ ಮೆತ್ತೆಸಡಿಲು
(ಅಡಿಗ: `ಪ್ರಾರ್ಥನೆ’)
ಪಕ್ಷಿಯ ಬೆಳ್ಳಗಿನ ಅಧೋಭಾಗ ಕೆಳಗೆನಿಂತು ನೋಡುವ ಕಣ್ಣಿಗೆ ಬೆಳ್ಳಿಯ ಕಡಗೋಲಾಗುತ್ತದೆ. ಆಕಾಶದಲ್ಲಿ ಅನಾಯಾಸ ಗಾಳಿಗೆ ಒಡ್ಡಿಕೊಂಡು ತೇಲುವ ಹೊಟ್ಟೆ ಹಾಗೆ ಮಂಥಿಸುತ್ತಿರುವಂತೆ ಹೊಳೆದೊಡನೆಯೇ ನಮ್ಮ ಮನಸ್ಸಿನ ಉತ್ಕರ್ಷದಿಂದಾಗಿ ಪಕ್ಷಿಗೆ ಪುರಾಣದ ಗರುಡತ್ವ ಆವಾಹಿತವಾಗುತ್ತದೆ. ವಿನತೆ ಅವಸರದಿಂದ ಒಡೆದ ಮೊಟ್ಟೆಯಿಂದ ಹುಟ್ಟಿದ್ದು ಕುಂಟನಾದ ಅರುಣನಾದರೆ, ಇವನು ಪರಿಪೂರ್ಣಾವತಾರಿ. ಅದಂಯ ಶಕ್ತಿಯುಳ್ಳವ; ಆದರೆ ಮತ್ತು ಆದ್ದರಿಂದಲೇ ದೇವರ ಭಾರಕ್ಕೆ ಶರಣಾಗತಿಯಲ್ಲಿ `ಮತ್ತೆ – ಸಡಿಲು’ ಆಗುವವನೂ ಕೂಡ. ವಿರೋಧವೆಂದು ನಾವು ತಿಳಿದಿದ್ದ ಸೆಟೆಯುವಿಕೆ/ಮೆತ್ತಗಾಗುವಿಕೆಗಳು ಇಲ್ಲಿ ಪರಸ್ಪರ ಪೂರಕ.
ಹೀಗೆ ನಮ್ಮನ್ನು ಒದಗಿಸಿಕೊಳ್ಳುತ್ತಲೇ ಬೆಳೆದು ನಿಲ್ಲುವ ಕಲ್ಪನೆಗೆ ಜೀವಾಳವಾಗಿರುವ ಶಬ್ದ ಚಿತ್ರವೆಂದರೆ ಆಕಾಶದಲ್ಲಿ ಬೆಳ್ಳಿಯ ಕಡಗೋಲಿನಂತೆ ಕಾಣಿಸುವ ಪಕ್ಷಿಯ ಬಿಳಿದಾದ ಅಧೋಭಾಗ. ಕಣ್ಣಿಗೆ ಇದು ಹೀಗೆ ಕಾಣುವುದರಿಂದಲೇ ಉಳಿದ ವಿವರಗಳು ನಿಜವಾಗುತ್ತವೆ. (ಕಡಗೋಲಿನಿಂದಾಗಿ ಅಮೃತ ಮಂಥನ, ಕೃಷ್ಣ ಇತ್ಯಾದಿ ಮನಸ್ಸಿಗೆ ಹೊಳೆದಾವು.)
ಒಂದು ವಿಶಿಷ್ಟ ಲಕ್ಷಣದ ಪಕ್ಷಿಯನ್ನು ಆ ಲಕ್ಷಣದ ಮೂಲಕ ಕಾಣುತ್ತಲೇ ಕಂಡದ್ದನ್ನು ಕಾಣಿಕೆಯಾಗಿ ಪಡೆಯುವ ಈ ಸೋಜಿಗದಲ್ಲಿ ಕವಿಯ ವಿಶಿಷ್ಟ ಕಾಲ್ಪನಿಕ ಶಕ್ತಿಯಲ್ಲದೆ ಅವನನ್ನು ಪೋಷಿಸಿದ ಸಂಸ್ಕೃತಿಗೆ ವಿಶೇಷವಾದ ನಂಬಿಕೆಗಳೂ ಇವೆ. ಅವು ಹೇಗೆ ಇವೆ ಎಂದರೆ, ಗರುಡದರ್ಶನವಾಗದ ಹೊರತು ಊಟ ಮಾಡುವುದಿಲ್ಲವೆಂಬ ವ್ರತದ ಸೈಕಲ್ ಕಚ್ಚೆಯ ವ್ಯಕ್ತಿಯನ್ನು ಮೂಢ ನಂಬಿಕೆಯವನೆಂದೂ ತಿಳಿಯುವವನೂ ಕೂಡ ಪದ್ಯದ ಗರುಡನಿಗೆ ಸ್ಪಂದಿಸುತ್ತಾನೆ. ಪದ್ಯದ ಶಕ್ತಿ ನಾವು ವೈಚಾರಿಕವಾಗಿ ನಿರಾಕರಿಸುವುದನ್ನು ಸಾಂಕೇತಿಕ ನೆಲೆಯಲ್ಲಿ ಒಪ್ಪುವಂತೆ ಮಾಡುತ್ತದೆ. ಈ ಸಾಂಕೇತಿಕತೆಯೂ ಭಾರತೀಯ ಸಂಸ್ಕೃತಿಕ ದೃಷ್ಟಿಕೋನದಿಂದ ಮುಕ್ತವಲ್ಲ. ಅದರ ಹಿಂದೆ ನಮಗೆ ಮೂಢನಂಬಿಕೆಯೆಂದು ಕಾಣಬಹುದಾದ ಸೈಕಲ್ ಕಚ್ಚೆಯವನ ಶ್ರದ್ಧೆಯೂ ಇದೆ. ಒಂದು ಹೋಲಿಕೆಯ ಮುಖೇನ ಇದು ಸ್ಪಷ್ಟವಾದೀತು.
ವಿಂಡ್‌ಹೋವರ (Windhover) ಎಂಬ ಪದ್ಯವನ್ನು ಬರೆದ ಇಂಗ್ಲಿಷಿನ ಹಾಪ್ಕಿನ್ಸ್ ಕವಿ ಕ್ರೈಸ್ತ ಪಾದ್ರಿಯಾಗಿದ್ದವ. ಆತನಿಗೆ ಪ್ರಕೃತಿ ಮತ್ತು ದೇವರು ಬೇರೆ ಬೇರೆಯಾದ ಸತ್ಯಗಳು; ಪ್ರಕೃತಿಯಲ್ಲಿ ದೈವ ಪ್ರಭೆ ಹೊಳೆಯುತ್ತದೆ ಎಂಬ ಮಾತ್ರಕ್ಕೆ ಪ್ರಕೃತಿ ದೇವರಲ್ಲ. ವಿಂಡ್‌ಹೋವರ್ ಪಕ್ಷಿ ಏಸುಕ್ರಿಸ್ತನನ್ನು ನೆನಪಿಸುತ್ತಲೇ, ದೈವಕ್ಕಿಂತ ಅನ್ಯವಾದ ಶಕ್ತಿಯಾಗಿ – ‘Brute Beauty’ ಯಾಗಿ ಕಾಣಿಸುತ್ತದೆ:
Brute beauty and valour and act, oh, air, pride, plume, here
Buckle! and the filre that breaks from thee then, a billion
Times told lovelier, more dangerous, o my chevalier !
ಸಂಯಮದಲ್ಲಿ ಇಂದ್ರಿಯ ನಿಗ್ರಹಿಯಾಗಿ ಬದುಕುತ್ತಿರುವ ಪಾದ್ರಿಕವಿ ಪಕ್ಷಿಯ ಸಹಜ ಜೈವಿ ಶಕ್ತಿಯ ನಿರಂಬಳ ಅಭಿವ್ಯಕ್ತಿ ಕಂಡು ಕ್ಷಣ ಕರುಬುತ್ತಾನೆ. ಮುಂಜಾವಿನ ಸೌಂದರ್ಯಕ್ಕೆ ಈ ಬಗೆಯ ಉತ್ಕರ್ಷದಲ್ಲಿ ಲಂಗು ಲಗಾಮಿಲ್ಲದಂತೆ ಸ್ಪಂದಿಸಬಲ್ಲ ಹಕ್ಕಿಗಾಗಿ ಒಳಗಿಂದ ಹಾತೊರೆಯುತ್ತಲೇ (‘My hear in hiding stirred for a bird’) ತನ್ನ ನಿಷ್ಠಾವಂತ ವ್ರತಶೀಲ ತಪಸ್ಸೂ, ನಿರಂತರ ಕಾಯುವುಕೆಯೂ ಪಕ್ಷಿಯ ಸೌಂದರ್ಯಕ್ಕಿಂತಲೂ ಮಿಗಿಲಾದ ಸೌಂದರ್ಯವೊಂದನ್ನು, ಶಿಲುಬೆಗೇರಿದ ಕ್ರಿಸ್ತನ ದೈವಿಕ ಬಲಿದಾನದ ನೋವಿನ ಸೌಂದರ್ಯವನ್ನು ವ್ಯಕ್ತಪಡಿಸಬಲ್ಲದೆಂದು ಪದ್ಯದ ಕೊನೆಯಲ್ಲಿ ತಿಳಿಯುತ್ತಾನೆ.
“Sheer plod makes plough down sillion
Shine……”
ಹಾಪ್‌ಕಿನ್ಸ್ ಕಾಲದಲ್ಲೂ, ಅಡಿಗರ ಕವನದಲ್ಲೂ ಪಶುಶಕ್ತಿ ದೇವ ಮಹಿಮೆಗೆ ಬಾಗುತ್ತದೆ. ಆದರೆ ಒಂದು ಮುಖ್ಯ ವ್ಯತ್ಯಾಸವಿದೆ ಇವುಗಳ ನಡುವೆ. ಇಂಗ್ಲಿಷ್ ಕವನದಲ್ಲಿ ಕವಿ ಪಶುಶಕ್ತಿಯನ್ನು ನಿರಾಕರಿಸುತ್ತಾನೆ. ಇದೇನೂ ಅಸಂದಿಗ್ಧ ನಿರಾಕರಣೆಯಲ್ಲ. ಪಕ್ಷಿಯ ಸಹಜ ಸ್ಪೂರ್ತಿಯಿಂದ ಕವಿಯಲ್ಲಿ ಉಂಟಾದ ತಳಮಳ ಕೊನೆತನಕವು ಉಳಿದೇ ಇರುತ್ತದೆ. ‘Buckle’ ಎಂಬ ಶಬ್ದದ ನಾನಾರ್ಥಗಳು ಪದ್ಯದ ತಿಕ್ಕಾಟಗಳನ್ನು ಪೂರ್ಣಬಗೆಹರಿಯದಂತೆ ಉಳಿಸುತ್ತವೆ. ಅವಡು ಕಚ್ಚಿದ ತಪಸ್ಸಿನ ಸೌಂದರ್ಯದ ಹಿರಿಮೆಗೆ ಸರಿಸಾಟಿಯೆಂಬಂತೆ ಪಕ್ಷಿಯ ನಿರಾಯಾಸ ಉಲ್ಲಾಸ ನಮಗೆ ಕಾಣಿಸುತ್ತಲೇ ಉಳಿದಿರುತ್ತದೆ. ಈ ಕಷ್ಟಕ್ಕೆ ಕಾರಣ; ಹಾಪ್ಕಿನ್ಸ್‌ನದು ಪ್ರಕೃತಿ ಮತ್ತು ದೇವರು ಬೇರೆ ಬೇರೆಯೆಂಬ ಕ್ರಿಶ್ಚಿಯನ್ ಮನೋಧರ್ಮದ ತಿಳುವಳಿಕೆ. ಮರ, ಗಿಡ, ಪಶುಪಕ್ಷಿಗಳೂ ದೈವಿಕದಲ್ಲಿ ಸಹಭಾಗಿಗಳಾಗಬಲ್ಲ, ಆರಾಧನೆಯ ಸಂಗತಿಗಳೂ ಆಗಬಲ್ಲ ಹಿಂದೂ ಸಂಸ್ಕೃತಿಯಿಂದ ಹುಟ್ಟಿದ ಅಡಿಗರ ಕವನದಲ್ಲಿ ಗರುಡನ ಪಶುಶಕ್ತಿಯೇ (“ಗಾಳಿ ಕಡೆಯಲು ಸೆಟೆದ ಬೆಳ್ಳಿಮಂತು”) ಭಗವಂತನ ತೊಡೆಗಳಿಗೆ ಆಧಾರ. ಹಾಪ್‌ಕಿನ್ಸ್‌ನಲ್ಲಿ ಕವಿ ಮೆಚ್ಚಿದ್ದನ್ನು ಪಾದ್ರಿ ಭಂಗಿಸುತ್ತಾನೆ; ಕನ್ನಡದಲ್ಲಿ ಜೈವಿಕ ಮತ್ತು ದೈವಿಕಗಳು ವಿರೋಧಿಗಳಲ್ಲ – ಪರಸ್ಪರ ಪೂರಕವಾದ ಸಂಗತಿಗಳು.
ಇಂಗ್ಲಿಷ್ ಕವನದಲ್ಲಿ ಪಕ್ಷಿಯು ಹಠಾತ್ತನೆ ನೆಲ ಬಿಟ್ಟೇರುವ, ಗಾಳಿಗೊಡ್ಡಿ ಹಾರುವ ಸಂಭ್ರಮದ ಅನೇಕ ವಿವರಗಳಿವೆ:
‘I caught this morning morning’s minion
kingdom of daylight’s dauphin, dapple
dawn- drawn Falcon……’ , ಇತ್ಯಾದಿ
ಕನ್ನಡದಲ್ಲಿ ಪಕ್ಷಿ ಪ್ರಕೃತಿಯ ಒಂದು ವಸ್ತುವಾಗಿ ನಮ್ಮ ಅರಿವಿಗೆ ಉಳಿದಿರುವುದು ಅದರ ಬಿಳಿ ಅಧೋಭಾಗದಿಂದ, ಮತ್ತು ಅದು `ಚಿಪ್ಪೊಡೆದು’ ಬಂದಿದೆ ಎಂಬ ಇನ್ನೊಂದು ವಿವರದಿಂದ. ಕತ್ತಿನ ವಿವರದಿಂದ ಉತ್ಪನ್ನವಾದ ಬೆಳ್ಳಿಮಂತಿನ ರೂಪಕ ಪಕ್ಷಿಗೆ ಪ್ರಕೃತಿಯ ಸೋಂಕನ್ನು ಉಳಿಸುತ್ತಲೇ ಹೊಳೆಯಿಸಿ, ಅನುಭವ ವೇದ್ಯವಾಗುವಂತೆ `ದಿವ್ಯ’ಗೊಳಿಸುತ್ತದೆ.
ಹಾರುವ ಗರುಡ ಕೆಳಗಿನಿಂದ ನೋಡಿದಾಗ ಬೆಳ್ಳಿಯ ಕಡಗೋಲಿನಂತೆ ಕಾಣಾಹುದೆಂಬುದು ಕವನದಲ್ಲಿ ಒಂದು ಶಬ್ದಚಿತ್ರ. ಇದನ್ನು `ಪ್ರತೀಕ’ (image) ಎನ್ನಬಹುದು. ಈ ಪ್ರತೀಕ ಒಂದು ಪ್ರತಿಮೆಯಾಗಿ (symbol) ಕೆಲಸ ಮಾಡುತ್ತದೆ. ಪ್ರತಿಮೆಯಾದ್ದರಿಂದಲೇ ಅದಕ್ಕೆ ಕವನದಲ್ಲಿ ಒಂದು ತಾತ್ವಿಕ ಚಿಂತನೆಯನ್ನು ತತ್ವಶಾಸ್ತಕ್ಕೆ ಭಿನ್ನವಾದ ರೀತಿಯಲ್ಲಿ ಧಾರಣೆ ಮಾಡಬಲ್ಲ ಶಕ್ತಿ ಪ್ರಾಪ್ತವಾಗಿದೆ. ಸೊಕ್ಕಿನಿಂದ ಹುಟ್ಟುವ `ತಾನು ಏಕೈಕ’ ಎಂಬ ವ್ಯಕ್ತಿವಾದ, ರೋಗದ ಒಂದು ಸ್ಥಿತಿ; ಇದಕ್ಕೆ ವಿರೋಧವಾದ ಅತಿ ದೈನ್ಯ ಮತ್ತು ಸ್ವಾಭಿಮಾನ ಹೀನತೆ, ರೋಗದ ಇನ್ನೊಂದು ಸ್ಥಿತಿ; ಇವುಗಳಿಗೆ ಬದಲಾಗಿ ಗರುಡ ಪ್ರತಿನಿಧಿಸುವ ವೀರ್ಯವಂತಿಕೆ ಮತ್ತು ಸಮರ್ಪಣ ಭಾವಗಳು ರೋಗಗಳಾಗಿ ಬಹುದಾಗಿದ್ದ ಸ್ಥಿತಿಗಳ ಆರೋಗ್ಯವಂತವಾದ ಸ್ವರೂಪ. ಈ ಚಿಂತನೆಯ ಹಿಂದೆ ವೈಯಕ್ತಿಕ ಜಾಡ್ಯವನ್ನು ಸಾಂಸ್ಕೃತಿಕ ನೆಲೆಯಲ್ಲಿಟ್ಟು ನೋಡುವ, ಈ ನೋಡುವಿಕೆಯನ್ನು ಸಮಕಾಲೀನ ಸಂದರ್ಭಕ್ಕೆ ಅನ್ವಯಿಸುವ ಪ್ರಯತ್ನ ಪದ್ಯದುದ್ದಕ್ಕೂ ಇದೆ. ಯಾವುದು ರೋಗ, ಯಾವುದು ಆರೊಗ್ಯ ಎಂಬುದು ಜೀವನದ ಸಫಲತೆಗೂ, ಸಮಾಜದ ಹಿತಕ್ಕೂ ಅತ್ಯಂತ ಮುಖ್ಯ ಪ್ರಶ್ನೆಗಳು. ಇವು ಸಂದಿಗ್ಧವಾದವು ಕೂಡ. ಯಾಕೆಂದರೆ ಹೀಗೆ ಗುಣವೆಂದು ಕಾಣುವಂಥದೇ ಅತಿಗೆ ಹೋದಾಗ ಹಾಗೆ ದೋಷವಾಗಿ ಬಿಡಬಹುದಾದ ಅಸಿಧಾರಾವ್ರತ ಈ ಜೀವನ. ಏಕಾಂಗಿತನ ತಪಸ್ಸು ಆದೀತು; ಮುಷ್ಠಿಮೈತುನದ ರೋಗವೂ ಆದೀತು. ಅಂತೆಯೇ ಬೆರೆಯುವುದರಿಂದ ಸೃಷ್ಟಿಯೂ ಫಲಿಸಬಹುದು; `ಫರಂಗಿರೋಗ’ವೂ ಹತ್ತಬಹುದು. ಮುಖ್ಯವಾದದ್ದು `ಪೂರ್ವಾಜಿತದ ರತಿವಿವೇಕದ ಶಿಖೆ.’ ಇದು ಪದ್ಯದ ಒಳಗಿನ ಡಯಲೆಕ್ಟಿಕ್ – ಪರವಿರೋಧಗಳು ಎದುರು ಬದಿರಾಗಿ ಸಮನ್ವಯ ಗೊಳ್ಳುವ ವಾಗ್ವಾದ ಕ್ರಮ. ಈ ವಾಗ್ವಾದ ತಾರ್ಕಿಕವಲ್ಲ, ದಾರ್ಶನಿಕ.
ಪದ್ಯದಲ್ಲಿರುವ ಗರುಡನ ಪ್ರತಿಮೆಯಲ್ಲಿ ಡಯಲೆಕ್ಟಿಕಲ್ ಆಗಿದ್ದರೂ ಮಾಂತ್ರಿಕವಾದ ಒಂದು ವಿಶಿಷ್ಟವಾದ ಚಿಂತನಾಕ್ರಮ ಸಂಕೀರ್ಣವಾದ ವೈಚಾರಿಕವಾದ ಸಮನ್ವಯವನ್ನು ಪಡೆಯಲು ಸಾಧ್ಯವಾದ್ದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ಹಿಂದೆ ಸೂಚಿಸಿದಂತೆ ಪಕ್ಷಿಯ ಪ್ರಕೃತಿಯಿಂದ ಪಡೆದ ಮಹತ್ವದ ಒಂದು ವಿವರವಾದರೆ, ಎರಡನೆಯದನ್ನು ದಯಪಾಲಿಸಿದ್ದು ನಮ್ಮ ಸಂಸ್ಕೃತಿಯಲ್ಲಿ ಅಡಗಿರುವ ನಂಬಿಕೆಗಳು. ಕಾವ್ಯಪ್ರಿಯರಾದ ವಿಚಾರವಾದಿಗಳನ್ನು ಕೆಣಕಲೆಂದೇ ನಾನು ಈ ನಂಬಿಕೆಗಳ ಪ್ರತಿನಿಧಿಯಾಗಿ ಟಿಪ್ಪಣಿಯ ಮೊದಲಲ್ಲಿ ಗರುಡ ದರ್ಶನಕ್ಕಾಗಿ ಕಾದುನಿಂತ, ವಿಚಾರವಾದಿಗೆ ಹಾಸ್ಯಾಸ್ಪದನಾಗಿ ಕಾಣಬಹುದಾದ ಸೈಕಲ್ ಕಚ್ಚೆಯವನನ್ನು ತಂದಿರುವುದಿಲ್ಲ. ಅವನು ನನ್ನನ್ನೂ ಬಾಧಿಸಿದ್ದಾನೆ. ಗಯಟೆಯ ಪ್ರಕಾರ ಮೂಢನಂಬಿಕೆಗಳು ಜೀವನದ ಕಾವ್ಯ. ಆದರೆ `ಮೂಢ’ವೆಂದು ನಾವು ನಿರಾಕರಿಸುವ, ಆಚರಿಸದೇ ಇರುವ ಎಷ್ಟೋ ನಂಬಿಕೆಗಳು ಕಾವ್ಯಮುಖೇನ ನಮಗೆ ವಿಶ್ವದ ಹಲವು ಸಂಗತಿಗಳ ನಡುವಿನ ಸಂಬಂಧಗಳನ್ನು ಹೊಳೆಯಿಸುವ ಸಾಧನಗಳಾಗಿಯೇ ಉಳಿದಿದೆ. ಗೊಡ್ಡಾಗಿ ಆಚರಿಸಿದರೆ ಮೂಢನಂಬಿಕೆಯಾಗುವಂಥದು ಕಲ್ಪನೆಯಲ್ಲಿ ಸ್ಪಂದಿಸಿದಾಗ ರೂಪಕವಾಗುತ್ತದೆ.
ಕವಿ ತಮ್ಮ ಸ್ವಂತ ಜೀವನದಲ್ಲಿ ಗರುಡದರ್ಶನ ಮಾಡದೆ ಊಟ ಮಾಡಲ್ಲವೆಂಬ ವ್ರತಿಯಲ್ಲದೇ ಇರಬಹುದು. ಅಂತೆಯೇ ಸೈಕಲ್ ಕಚ್ಚೆಯವನು ಗರುಡನಿಗಾಗಿ ಕಾಯುವಾಗಲೂ, ಅಂಗಡಿಯೊಂದರ ಮಾಲೀಕನಾಗಿರಬಹುದಾದ ಈತ ಪೇಟೆಧಾರಣೆ ಬಗ್ಗೆ ಯೋಚಿಸುತ್ತಿರಬಹುದು. `ಗರುಡ, ಗರುಡ, ಗರುಡ’ ಎಂಬ ನಾಮಸ್ಮರಣೆಯಲ್ಲಿ ಸಂತೃಪ್ತನಾಗುವ ಆತನಿಗೆ – ಅವನಂತೆ ಭಜನೆಗೆ ತಲೆದೂಗುವವನಿಗೆ – ಕಾವ್ಯದ ಬಿಗಿಯಾದ ನಿಖರವಾದ ಭಾವಾಭಿನಯದ ಅಗತ್ಯವಿಲ್ಲ. ಪದ್ಯದಲ್ಲಿ ನಾನು ಗರುಡನಿಗೆ ಸ್ಪಂದಿಸುತ್ತಿರುವಾಗಲೂ, ನನ್ನಂಥವನಿಗೆ ಹೀಗೆ ಸ್ಪಂದಿಸುವುದು ಸಾಧ್ಯವಾಗಲು ಮುಖ್ಯವಾದ್ದು ಶಬ್ದಸುಖ. ನನ್ನ ಮನಸ್ಸು `ಚಿಪ್ಪೊಡೆದು’ ಎನ್ನುವಲ್ಲಿನ ಒತ್ತನ್ನು ಸುಖಿಸುತ್ತಲೇ ಗರುಡ ಹುಟ್ಟುವುದನ್ನೂ ಗಾಳಿಯನ್ನು ಅವನು ಬೆಳ್ಳಿಮಂತಿನಂತೆ ಮತಿಸುವುದನ್ನು ಕಾಣುತ್ತದೆ. ಅಂದರೆ, ಸೈಕಲ್ ಕಚ್ಚೆಯವನಂಥವರು ಕಾಪಾಡಿಕೊಂಡು ಬಂದಿರುವ ಸಂಸ್ಕೃತಿಯ ಉಗ್ರಾಣದ ಒಂದು ಸರಕಾರ ಗರುಡ, ಕಾವ್ಯದಲ್ಲಿ ನನಗೆ ನಿಜನಾಗಲಿಕ್ಕೆ ಈ ಶಬ್ದ ಸುಖ – ಜನಮನದಲ್ಲಿ ಜೀವಂತವಾದ ಭಾಷೆಯಿಂದ ಮಾತ್ರ ಪಡೆಯಬಲ್ಲ ಸುಖ – ಬೇಕು. ಸೈಕಲ್ ಕಚ್ಚೆಯವನು ಮೊದಲು ನಂಬುವುದು, ಆಮೇಲೆ ಅದೃಷ್ಟವಶಾತ್, ಕಾಣುವುದು. ಕಾವ್ಯದಲ್ಲಿ ನಾವು ಮೊದಲು ಕಾಣುವುದು. ಆಮೇಲೆ ಅದೃಷ್ಟವಶಾತ್, ಅದು ವೈಯಕ್ತಿಕ ಅಗತ್ಯವೂ ಆಗಿದ್ದಲ್ಲಿ ಮಾತ್ರ, ನಂಬುವುದು. ಅವನಿಗೆ ದೃಷ್ಟಿಯ ಕಕ್ಷೆಯಲ್ಲಿ ಬೇಕಾದ್ದನ್ನು ಇಡಲು, ಬೇಡವಾದ್ದನ್ನು ಬಿಡಲು ಅಂಗೈ – ಮುಂಗೈ ಮುದ್ರೆ ಬೇಕು. ಕವಿಗೆ ಭಾಷೆಯ ಶರೀರವೇ, ಕವನದ ವಿಶಿಷ್ಟ ಬಂಧವೇ ಮೀಸಲಾಗಿ ಕಾಣಲು ಅಗತ್ಯವಾದ ದೃಷ್ಟಿಯನ್ನು ಒದಗಿಸಬಲ್ಲ ಮುದ್ರೆ.
ಪದ್ಯವನ್ನು ಓದುವ ಯಾರಿಗೂ ನನ್ನ ಬಾಲ್ಯದ ನೆನಪಿನ ಸೈಕಲ್ ಕಚ್ಚೆಯವನ ಪರಿಚಯವಿಲ್ಲದಿದ್ದರೂ ಅವನ ನಂಬಿಕೆಗೆ ಕಾರಣವಾದ ಪುರಾಣದ ಪರಿಚಯವಿರಬಹುದು. ಇಲ್ಲದಿದ್ದರೂ ನಾನು ಉದ್ಧರಿಸಿದ ಸಾಲುಗಳು ಮರೆತುಹೋದ ಅಥವಾ ಗೊತ್ತಿಲ್ಲದ ಪುರಾಣವನ್ನು ಮತ್ತೆ ಜೀವಂತ ಮಾಡಿಕೊಡಬಹುದು. ಹಳಹಳಿಕೆಯಲ್ಲಲ್ಲ, ಸಜೀವತೆಯಲ್ಲಿ. ಯಾಕೆಂದರೆ ಗಾಳಿಯನ್ನು ಮಂಥಿಸುವಂತೆ ಗರುಡ ಇಲ್ಲಿ ಹೊಟ್ಟೆಯನ್ನುಜ್ಜುತ್ತ ಹಾರುತ್ತಿದ್ದಾನೆ.
ಮೂಢನಂಬಿಕೆ ಜೀವನದ ಕಾವ್ಯವಾದರೆ, ಅಂಥ ನಂಬಿಕೆ ಸಾಧ್ಯವಾಗದ ಸ್ಥಿತಿಯನ್ನು ತಲುಪಿದ ನಮ್ಮಂಥವರು ಕಳಕೊಂಡದ್ದನ್ನು ಮತ್ತೆ ಶಬ್ದಸುಖದ ಮುಖಾಂತರ ಪಡೆಯುತ್ತಿರಬಹುದೇ?
ಹಾಗೆನ್ನಿಸುತ್ತದೆ ಮ್ಯಾಥ್ಯೂ ಅರ್ನಾಲ್ಡರನ್ನು ಈ ವಿಷಯದ ಬಗ್ಗೆ ಓದಿದಾಗ. ವಿಕ್ಟೋರಿಯಾ ಕಾಲದಲ್ಲಿ ಮತಶ್ರದ್ಧೆಗೆ ಧಕ್ಕೆಯಾದಾಗ ಇನ್ನು ಮುಂದೆ ಕಾವ್ಯವೇ ರಿಲಿಜನ್ ಮಾಡುತ್ತಿದ್ದ ಕೆಲಸವನ್ನು ಮಾಡಬೇಕಾಗುತ್ತದೆ ಎನ್ನುತ್ತಾನೆ ಅರ್ನಾಲ್ಡ್. ಅವನ ಪ್ರಕಾರ, ಸಾಂಕೇತಿಕ ಕಾವ್ಯವೆಂದು ಓದಿದರೆ ಮಾತ್ರ ಬೈಬಲ್ ನಿಜ; ಆದರೆ ಬೈಬಲ್ಲಿನ ಕಥೆಗಳು ಅಕ್ಷರಶಃ ಸತ್ಯವೆಂದು ಓದಿದರೆ ಅದರಲ್ಲಿನ ರಿಲಿಜಸ್ ಅಂಶ ಸುಳ್ಳಾಗುವುದು ಮಾತ್ರವಲ್ಲ, ಕಲ್ಪನೆಯಲ್ಲಿ ಸತ್ಯಸ್ಯ ಸತ್ಯವಾಗಬಹುದಾಗಿದ್ದ ಕಥೆಗಳನ್ನೂ ನಾವು ಕಳಕೊಳ್ಳುತ್ತೇವೆ. ಎಲಿಯಟ್ ಅರ್ನಾಲ್ಡಿನ ವಾದ ಒಪ್ಪುವುದಿಲ್ಲ. ಕಾವ್ಯ ರಿಲಿಜನ್ ಆಗಲಾರದು – ರಿಲಿಜನ್ ಬೇಡುವ ಶ್ರದ್ಧೆಯ ಸ್ವರೂಪವೇ ಬೇರೆ ರೀತಿಯದು. ಅದರ ಅಗತ್ಯ ಕಂಡವನ ಹಸಿವು ಕಾವ್ಯದಿಂದ ತೃಪ್ತವಾಗದು. ಬೈಬಲ್ಲನ್ನು ಕಾವ್ಯವೆಂದೇ ಓದಲು ಎಲ್ಲರೂ ಮುಂಚಿನಿಂದಲೂ ತೊಡಗಿದ್ದರೆ, ಅದು ಕಾವ್ಯದ ಮೇಲೆ ಈಗ ಮಾಡಿರುವಂಥ ಪ್ರಭಾವವನ್ನು ಖಂಡಿತ ಮಾಡುತ್ತಿರಲಿಲ್ಲ – ಇತ್ಯಾದಿ.
ಪ್ರಾಯಶಃ ಇಂಗ್ಲೆಂಡಿನಲ್ಲಿ, ಕ್ರಿಸ್ಚಿಯನ್ ಧರ್ಮದ ಸಂದರ್ಭದಲ್ಲಿ ನಡೆದ ಈ ವಾದ ನಮಗೆ ಯಥಾವತ್ ಅನ್ವಯಿಸುವಂತದಲ್ಲ. ಗಣೇಶ ಧಾರ್ಮಿಕ ಮೂರ್ತಿಯೋ? ಸರ್ರಿಯಲ್ ಕಲಾಕೃತಿಯೊ? ವೇದ ಕಾವ್ಯವೊ ಅಥವಾ ಮಂತ್ರವೊ? `ಇದು ಮೇಜು’, `ಇದು ಕುರ್ಚಿ’, ಎನ್ನುವಂಥ ಮಾತುಗಳನ್ನು ಬಿಟ್ಟು, ನಮ್ಮ ಭಾವನೆಯನ್ನು ತೊಡಗಿಸುವ ಯಾವ ಮಾತೇ ಆಗಲಿ ಕಾಲ್ಪನಿಕವಾಗಿಯಲ್ಲದೆ ನಮಗೆ ಗಮ್ಯವಾಗುವುದು ಸಾಧ್ಯವೇ? ಕಂಡರೆ ಉಂಟು, ಕಾಣದಿದ್ದರೆ ಇಲ್ಲ, ಗರುಡನೊ? ತಥಾಸ್ತು. ಕೇವಲ ಪಕ್ಷಿಯೊ? ಸರಿಯೇ. ಕಾಣುವ ನಿನ್ನ ಮೇಲೆ ಅದು ನಿಂತಿದೆ. ಕಂಡೆ ಎಂಬುದೆಲ್ಲವೂ ಕಲ್ಪನೆಯಲ್ಲೇ ಕಂಡದ್ದು. ಇಬ್ಬನಿಯಲ್ಲಿ ತೊಯ್ದ ಈ ಗರಿಕೆ ಮುಂಜಾವಿನಲ್ಲಿ ನಿನಗೆ ಸುಖ ತಂದದ್ದೂ ನೀನದನ್ನು ಕಲ್ಪನೆಯಲ್ಲಿ ಕಂಡದ್ದರಿನ್ದಲೇ. ಇಂಥಲ್ಲಿ,
ಕಲ್ಪನೆ ಕಂಡದ್ದೇ ಅಕ್ಷರಶಃ ನಿಜ ಕೂಡ: ಗಿಡಗಂಟೆಯ ಕೊರಳುಗಳಿಂದಲೇ ಹೊರಟದ್ದು ಹಕ್ಕಿಗಳ ಹಾಡು. `ಇದು ಬರಿ ಬೆಳಗಲ್ಲೋ ಅಣ್ಣಾ’ ಎಂದರೆ ಅದು ಕೇವಲ ಮಾತಿನ ಚಮತ್ಕಾರವಲ್ಲ. ಬೆರಗಿನಲ್ಲಿ ಬೆಳಕು ಕಂಡದ್ದೆ ಹಾಗೆ.
ಕಲ್ಪನೆ ಮುಕ್ಕಾದರೆ ಬದುಕು ನೀರಸವಾಗುತ್ತದೆ. ಪ್ರಪಂಚದ ಬಗ್ಗೆ ಅವಜ್ಞೆಯಂತಾಗುತ್ತದೆ. ವರ್ಡ್ಸ್‌ವರ್ತ್ ಈ ಜೀವನ್ಮೃತ ಸ್ಥಿತಿಯ ಬಗ್ಗೆ ಬರೆದಿದ್ದಾನೆ.:
The world is too much with us, late and soon
Getting and spending, we lay waste our powers
ಆಯ – ವ್ಯಯದ ಪ್ರಾಪಂಚಿಕತೆಯಲ್ಲಿ ಮುಳುಗಿಬಿಟ್ಟವನಿಗೆ ಈ ಜಗತ್ತು ದಿವ್ಯಪ್ರಭೆಯಿಂದ ತೊಯ್ದದ್ದಾಗಿ ಕಾಣಿಸುವುದಿಲ್ಲ. ಹೀಗಿರುವುದಕ್ಕೆ ಬದಲಾಗಿ ತಾನೊಬ್ಬ ಮೂಧನಂಬಿಕೆಯ ಪೇಗನ್ನಾದರೂ ಆಗಿದ್ದರೆ ಒಳತಾಗಿರುತ್ತಿತ್ತೆಂದು ಕ್ರಿಸ್ಚಿಯನ್ ಕವಿ ಹಲುಬುತ್ತಾನೆ. ಅಂದರೆ ಗರುಡ ದರ್ಶನಕ್ಕಾಗಿ ಕಾದುನಿಂತ ಸೈಕಲ್ ಕಚ್ಚೆಯವನ ಮನಸ್ಥಿತಿಯೂ ತನ್ನದಕ್ಕಿಂತ ವಾಸಿಯಾದ್ದು ಎಂದು ಕವಿಗೆ ಅನ್ನಿಸುತ್ತದೆ. ಗುಹೆಯಲ್ಲಿ ಬದುಕುತಿದ್ದ ಆದಿಮಾನವನಿಗಿಂತ ನಾವು ಹಲವು ವಿಷಯಗಳಲ್ಲಿ ಮುಂದಿರಬಹುದು; ಆದರೆ ಜೀವಂತಿಕೆಯ ಪ್ರಶ್ನೆ ನಮಗೆ ಎದುರಾದಾಗ ಅವನು ಕಾಣುತ್ತಿದ್ದ ಕ್ರಮ ಇಂದಿಗೂ ನಮಗೆ ಅಗತ್ಯವಾಗಿಯೇ ಉಳಿದಿದೆ. ಈ ಕಾಣ್ವಿಕೆಯನ್ನು ಜೀವಂತ ಉಳಿಸಿಕೊಂಡಿರುವುದು ಕಾವ್ಯ. ರೂಪಕ ಶಕ್ತಿ ಜಡ್ಡಾದಾಗ ಯಾಂತ್ರಿಕ ಆಚರಣೆಯಾದಾಗ ಅದು ಮೂಧನಂಬಿಕೆಯಾಗಬಹುದು – ಅಷ್ಟೇ.
ಸೈಕಲ್ ಕಚ್ಚೆಯವನ ಜೊತೆಗಿನ ಡಾಕ್ಟರ್ ಎಚ್ಚೆನ್ನರ ಜಗಳಕ್ಕಿಂತ ಹೆಚ್ಚು ಅರ್ಥಪೂರ್ಣವಾದ್ದು ಅವನ ಜೊತೆ ಬಸವಣ್ಣನಿಗಿರುವ ಜಗಳ. ಕಲ್ಲಿನ ನಾಗರ ಕಂಡರೆ ಹಾಲೆರೆಯುವ ನೀನು ದಿಟದ ನಾಗರ ಕಂಡರೆ ಯಾಕೆ ಕಲ್ಲು ಹೊಡೆಯುತ್ತಿ? – ಎನ್ನುತ್ತಾನೆ ಬಸವಣ್ಣ. ಅಧೋಲೋಕದ ದೊರೆಯಂತೆ ಕಂಡ ಹಾವನ್ನು ತನ್ನ ದರಿದ್ರ ಶಿಕ್ಷಣದಿಂದಾಗಿ ದಿಗಿಲಿನಲ್ಲಿ ಕಲ್ಲಿನಿಂದ ಹೊಡೆದೆನೆಂದು ಲಾರೆನ್ಸ್ ಪಾಪ ಬುದ್ಧಿಯಿಂದ ತೊಳಲುತ್ತಾನೆ. ಸಮಸ್ತ ಜೀವಕೋಟಿಯೂ ಪೂಜ್ಯವೆಂದು ಕಾಣುವ ಕಾಲ್ಪನಿಕ ಸಹಾನುಭೂತಿ ಕಲ್ಲಿನ ನಾಗರಕ್ಕೆ ಮಾತ್ರ ಪರಿಣಿತವಾದಾಗ ಬಸವಣ್ಣ ನಮ್ಮನ್ನು ಛೇಡಿಸುತ್ತಾನೆ. ವಿಷಜಂತುವನ್ನು ಕೊಲ್ಲುವುದೇ ಸರಿಯೆಂಬ ವ್ಯವಹಾರಜ್ಞಾನವನ್ನು ಅವನು ಎತ್ತಿ ಹಿಡಿಯುವುದಕ್ಕಾಗಿ, ಅಂದರೆ ನಮ್ಮ ರಾಶನಲಿಸ್ಟರಂತೆ, ಅವನು ಮಾತಾಡುವುದಲ್ಲ. ತಾವು ಕಲ್ಪನೆಯಲ್ಲಿ ಕಂಡ ಸತ್ಯ ಈ ವಾಸ್ತವ ಜಗತ್ತಿನದೂ ಆಗಬೇಕೆಂಬ ಪರಮಹಠದ ದೃಷ್ಟಾರರೇ ಈ ಜಗತ್ತಿನ ಅತ್ಯಂತ ದೊಡ್ಡ ಕ್ರಾಂತಿಕಾರರು. ಇವರು ಸಮಸ್ತ ಜೀವಜಂತುಗಳೂ ಪೂಜ್ಯವೆಂಬ ಭಾವದವರು. ಆಯ – ವ್ಯಯದ ವ್ಯವಹಾರದಲ್ಲಿ ಕಳಕೊಂಡದ್ದನ್ನು ಕಲ್ಪನೆಯಲ್ಲಿ ಇಡಿಯಾಗಿ ಪಡಕೊಳ್ಳುವ, ಹೀಗೆ ಪಡೆದದ್ದನ್ನು ವ್ಯವಹಾರದಲ್ಲೂ ಕಾಣಬೇಕೆಂಬ ಛಲದ ದೈವಿಕ ಹುಚ್ಚರು. ಪಾರಮಾರ್ಥಿಕ ಸತ್ಯ ನಿತ್ಯ ಉಣ್ಣುವ, ಬೆವರುವ, ನಡೆದಾಡುವ, ಹಿಗ್ಗುವ ಜೀವಂತತನದ್ದಾಗಬೇಕೆಂದು ಬಯಸಿದ ಸಂತರೆಲ್ಲರೂ ಏಟ್ಸ್ ಹೇಳುವ Literalists of the imagination, ಒಳಗಣ್ಣು ಕಂಡದ್ದೆ ಅಕ್ಷರಶಃ ಸತ್ಯವೆಂದು ತಿಳಿದವರು. ವ್ಯಾಪಾರ ಕುದುರಲೆಂದು ಗರುಡನ ದರ್ಶನಕ್ಕಾಗಿ ಕಾಯುತ್ತ ನಿಲ್ಲುವವರಲ್ಲ ಇವರು.
ಕಲ್ಪನೆ ಗ್ರಹಿಸುವ ಕ್ರಮ ಮಾಂತ್ರಿಕವಾದ್ದು – ತಾರ್ಕಿಕವಾದ್ದಲ್ಲ. ವಿಶ್ಲೇಷಕ ಪ್ರವೃತ್ತಿಗೆ ಈ ಕ್ರಮ ಗೊಂದಲಮಯವಾಗಿ ತೋರುವುದು ಎಂಬುದಕ್ಕೆ ಖ್ಯಾತ ಮನೋವಿಜ್ಞಾನಿ ಸುಧೀರ್ ಕಾಕರ್ ತಂತ್ರದ ಅನುಯಾಯಿಗಳು ಯೋಚಿಸುವ ಕ್ರಮವನ್ನು ನಿದರ್ಶನವಾಗಿ ಕೊಡುತ್ತಾನೆ. (Shamans, Mystics and Doctors, 156-7) `ಆನಂದ’ ಎಂಬ ಶಬ್ದ ಪಾರಮಾರ್ಥಿಕ ಸ್ಥಿತಿಯನ್ನು ಹೇಳುತ್ತದೆಯಲ್ಲವೆ ಎಂದಾಗ, ಅವನು ಭೇಟಿ ಮಾಡಿದ ತಾಂತ್ರಿಕರು ಗೇಲಿ ಮಾಡುತ್ತ `ಇಲ್ಲ ಅದು ಸಂಭೋಗದ ಸುಖವನ್ನು ವಿವರಿಸುತ್ತದೆ’ ಎನ್ನುತ್ತಿದ್ದರಂತೆ. ಕಾಕರ್‌ರವರ ಮಾತನ್ನು ಅಕ್ಷರಶಃ ನಂಬಿ ತಂತ್ರದ ಪರಿಭಾಷೆಯನ್ನು ಮೈಥುನದ ವರ್ಣನೆಯೆಂದೇ ವ್ಯಾಖ್ಯಾನಿಸತೊಡಗಿದಾಗ ಅವರು ನಗುತ್ತ `ಇದು ಸಾಂಕೇತಿಕ’ ಎನ್ನುತ್ತಿದ್ದರಂತೆ. ಅಂದರೆ, ಕಾವ್ಯದಲ್ಲಿ ಒಂದು ಪಕ್ಷಿ ಈಗ ಕಾಣುತ್ತಿರುವ ಹಕ್ಕಿಯೂ, ಪುರಾಣದ ಗರುಡನೂ ಒಟ್ಟಾಗಿ ಆಗಿರುವ ಸ್ಥಿತಿ – ಒಂದನ್ನು ಇನ್ನೊಂದು ಕಳೆಯದಂತೆ ಇರುವ ಸ್ಥಿತಿ – ತಂತ್ರದವರು ತಮ್ಮ ಪರಿಭಾಷೆಯನ್ನು ಅರಿಯುವ ಕ್ರಮದ್ದೇ. ತ್ರಿಕರಣಪೂರ್ವಕವಾದ ಏಕಾಗ್ರತೆಯಲ್ಲಿ ಫಲಿಸಿದ್ದು ಕೇವಲ ಮೂಢನಂಬಿಕೆಯಾಗಿ ಉಳಿಯುವುದಿಲ್ಲ. ಅದು ಇಡಿಯಾಗಿ ಹಿಡಿಯುವ ನೋಟವಾಗುತ್ತದೆ.
ಈ ಬಗೆಯಲ್ಲಿ ಕಾಣುವ ದೃಷ್ಟಾರರಿಗೂ, ವಿಶ್ಲೇಷಕ ಪ್ರವೃತ್ತಿಯ ವಿಚಾರವಾದಿಗಳಿಗೂ ಆಜನ್ಮವೈರ – ಎಲ್ಲ ದೇಶದಲ್ಲೂ, ಎಲ್ಲಾ ಕಾಲದಲ್ಲೂ, ಬ್ಲೇಕ್ ಮತ್ತು ನ್ಯೂಟನ್, ಲಾರೆನ್ಸ್ ಮತ್ತು ರಸ್ಸಲ್, ಜೂಲಿಸ್ನ್ ಹಕ್‌ಲೀ ಮತ್ತು ಅರ್ನಾಲ್ಡ್, ಲೀವಿಸ್ ಮತ್ತು ಸ್ನೋ, ನಮ್ಮ ನಾಡಲ್ಲೇ ಬೇಂದ್ರೆ ಮತ್ತು ಶಂಬಾಜೋಷಿ ಈ ಬಗೆಯಲ್ಲಿ ಕಾದಾಡಿದರು.
ಆಲ್ಡಸ್ ಹಕ್ಸ್‌ಲೇ ಚಂದ್ರನನ್ನು ವೈಜ್ಞಾನಿಕವಾಗಿ ವಿವರಿಸಿದಾಗ ಲಾರೆನ್ಸ್ ಅಸಮಾಧಾನದಲ್ಲಿ ಕುದಿಯುತ್ತ ಚಂದ್ರ ತನ್ನ ಪಾಲಿಗೆ ದೇವತೆಯೇ ಎಂದು ವಾದಿಸಿದ್ದನಂತೆ. ಡಾರ್ವಿನ್‌ನ ವಿಕಾಸವಾದ ನಿಜವೆನ್ನುವುದಕ್ಕೆ ಪುರಾವೆಗಳಿದ್ದಾವೆ ಎಂದರೆ ಅಂಥ ವೈಜ್ಞಾನಿಕ ಪುರಾವೆಗಳು ತನಗೆ `ಇಲ್ಲಿ’ ನಿಜವೆನ್ನಿಸುವುದಿಲ್ಲೆಂದು ತನ್ನ ಸೂರ್ಯನಾಡಿ (ಟಚಿಡಿ ಟ) ಯನ್ನು ಅದುಮಿ ತೋರಿಸಿ ಹೇಳಿದ್ದನಂತೆ. ತನ್ನ ಸಾಕುದನ ಸೂಸನ್‌ಗಳ ಎಲ್ಲ ಪಶುಭಾವನೆಗಳನ್ನೂ ಅವಳು ತನ್ನ ಪಾಡಿಗೆ ಮೇಯುತ್ತಿರುವಾಗ ಪರಕಾಯ ಪ್ರವೇಶದಲ್ಲೆಂಬಂತೆ ತಿಳಿಯಬಲ್ಲವನಾಗಿದ್ದ ಲಾರೆನ್ಸ್‌ನ ಪ್ರತಿಭೆಗೆ ಹಕ್ಸ್‌ಲೇ ತನ್ನೆಲ್ಲ ಸಂಶಯಗಳಲ್ಲೂ ತಲೆಬಾಗುತ್ತಾನೆ.
ಬ್ಲೇಕನೂ ಲಾರೆನ್ಸ್ ಬಗೆಯ ದೈವಿಕ ಹುಚ್ಚನೇ. ಆತ್ಮ ಮತ್ತು ದೇಹವೆಂದು ಭಿನ್ನಗೊಳ್ಳದ ಎಲ್ಲವೂ ಪವಿತ್ರವೆಂಬ ದೃಷ್ಟಿಯ ಬ್ಲೇಕ್ ಸ್ವರ್ಗದಿಂದ ಅಟ್ಟಲ್‌ಪಡುವುದಕ್ಕಿಂತ ಮುಂಚಿನ ಆಡಂನಂತೆ ಬೆತ್ತಲೆ ಓಡಾಡುತ್ತಿದ್ದನಂತೆ. “If the doors of perception were cleansed everything would appear to man as it is, infinite”(ದೃಷ್ಟಿದ್ವಾರಗಳನ್ನು ಶುದ್ಧಗೊಳಿಸಿಕೊಂಡಲ್ಲಿ ಪ್ರತಿಯೊಂದು ತನ್ನ ನಿಜಸ್ವರೂಪದಲ್ಲಿ, ಅಂದರೆ ಅನಂತವೆಂದು ಮನುಷ್ಯನಿಗೆ ಕಾಣಿಸೀತು.) ಎನ್ನುತ್ತಾನೆ ಬ್ಲೇಕ್. ಜಗತ್ತನ್ನು ನಿಜಸ್ವರೂಪದಲ್ಲಿ ಅರಿಯಲಾರದಂತೆ ಮನುಷ್ಯ ತನ್ನನ್ನೇ ತಾನು ಮಿತಗೊಳಿಸಿಕೊಂಡಿದ್ದಾನೆ. ತನ್ನ ಅಹಮಿಕೆಯಲ್ಲಿ, ಗೊಡ್ಡು ಧಾರ್ಮಿಕತೆಯಲ್ಲಿ, ಶುಷ್ಕ ಆಚರಣೆಗಳಲ್ಲಿ. ಕಣ್ಣುಗಳನ್ನು ತೊಳೆದು, ಕಾಣಿಕೆಗೆ ಅವನ್ನು ಆಣಿಮಾಡುವ ಕೆಲಸ ಕಾವ್ಯದ್ದು. ಆಗ ಈ ಜಗತ್ತೇ ದಿವ್ಯ ಪ್ರಭೆಯಲ್ಲಿ ತೊಯ್ದದ್ದಾಗಿ ಕಂಡೀತು.
ಬ್ಲೇಕ್‌ನ ಎಲ್ಲಾ ಆಚಾರ – ವಿಚಾರಗಳನ್ನೂ ಮರುಮಾತಿಲ್ಲದೆ ಒಪ್ಪುತ್ತಿದ್ದ ಅವನ ಹೆಂಡತಿ ಮಾತ್ರ ಮನೆಯ ಪರಿಚಾರಿಕೆಯಲ್ಲಿ ಗಂಡನಿಗೆ ಮನಸ್ಸಾದಾಗ ಕಾಮವನ್ನು ದೈವಿಕ ಬೆರಗಿನಿಂದ ಕಾಣುವ ಗಂಡನನ್ನು ತಡೆದಿದ್ದಳಂತೆ. ಪತನದ ಸ್ಥಿತಿಯಲ್ಲಿ ಮಾತ್ರ ಪಾಪಪುಣ್ಯಗಳ ಭೇದವಿರುವುದು ಎಂಬುದನ್ನು ಒಪ್ಪಿದಾಗಲೂ, ಈ ಭೇದದ ಅಗತ್ಯ ದುಷ್ಠಕಾಲದ ನಿಜ ಜೀವನದಲ್ಲಿ ದೃಷ್ಟಾರನಾದ ಬ್ಲೇಕನನ್ನೂ ಬಾಧಿಸಿತ್ತು. ಸಕಲ ಜೀವಜಂತುಗಳಲ್ಲೂ ತಾದಾತ್ಮ್ಯದ ದೃಷ್ಟಿಯ ಬ್ಲೇಕ್ (A Robin Red breast in a cage/Puts all heaven in a rage) ತನ್ನ ಕಾಲದಲ್ಲಿ ಬೆಳೆಯುತ್ತಿದ್ದ ವೈಜ್ಞಾನಿಕ ತಾರ್ಕಿಕ ಬುದ್ಧಿಯ ವಿರುದ್ಧ ದೊಡ್ಡ ಯುದ್ಧವನ್ನೇ ಹೂಡಿದ್ದ. ನ್ಯೂಟನ್ ಅವನ ಪಾಲಿಗೆ ಶತ್ರುವಾಗಿ ಕಂಡ.
Mock on, Mock on, Voltaire, Rouseeau;
Mockon, Mock on, ‘tis all in vain.
You throw the sand against the wind
And the wind blows it back again.
The Atoms of the Democritis
And Newton’s Particles of light
And sands upon the Red sea shore,
Where Israel’s tents do shine so bright.
ಅವನ ಇನ್ನೊಂದು ದೊಡ್ಡ ಶತ್ರು ಕ್ರೈಸ್ತ ಮಠ. ಈ ಮಠದ ಕಳ್ಳ ಅನುಯಾಯಿಗಳ ಆಷಾಢಭೂತಿತನ:
Prinsons are built with stones of Law,
Brothels with bricks of Religion.
ಹೀಗೆ ಭವಿಷ್ಯದಲ್ಲಿ ಬೆಳೆಯಲಿದ್ದ ವೈಜ್ಞಾನಿಕ ವಿಶ್ಲೇಶಕ ಅಂಶದೃಷ್ಟಿಯನ್ನೂ, ಭೂತಕಾಲದಲ್ಲಿ ಬೆಳೆದು ಆಳರಸರ ಕೈಗೊಂಬೆಯಾಗಿದ್ದ ಕ್ರೈಸ್ತ ಮಠವನ್ನೂ ಒಟ್ಟಾಗಿ ನಿರಾಕರಿಸಿದ ಬ್ಲೇಕ್ ಕಾವ್ಯದ ದಿವ್ಯದಲ್ಲಿ ಅಚ್ಚಹೊಸ ಪುರಾಣಗಳನ್ನೇ ಶೃಷ್ಟಿಸಿದ. ಪತನ ಪೂರ್ವದ ಇಡಿಯಾದ ಸ್ಥಿತಿಯನ್ನು ಮತ್ತೆ ಪಡೆಯುವುದು ಕಲ್ಪನೆಯಲ್ಲೇ (ಚಿಟಿಚಿಣಟಿ) ಸಾಧ್ಯವೆಂದು ಬ್ಲೇಕ್ ತಿಳಿಸಿದ್ದ; ಮುಗ್ಧತೆ ಮತ್ತು ಅನುಭವ, ಈ ಎರಡು ಮನಃಸ್ಥಿತಿಗಳು ಅವನ ಪಾಲಿಗೆ ಅಂಶದೃಷ್ಟಿಯವೇ ಆಗಿದ್ದವು. ಯಂತ್ರಯುಗ ಕಾಲಿಡುತ್ತಿದ್ದ ಚಿತ್ರಹಿಂಸೆಯ ತನ್ನ ಕಾಲದಲ್ಲಿ ಯಾರಿಗೂ ಬೇಡದವನಾಗಿ, ಅರೆಹುಚ್ಚನಂತಿದ್ದು, ಅದರಿಂದ ಧೃತಿಗೆಡದೆ ತನ್ನ ಕಾಣಿಕೆಯ ಹಿಗ್ಗಿನಲ್ಲಿ ನಮ್ಮ ಪೂರ್ವದ ಅರಣ್ಯಕರಂತೆ ಬದುಕಿದ. ಅವನ ಕಾವ್ಯದಲ್ಲಿ ಸೂಳೆಯರು, ಚಿಮಣಿ ಜಾಡಮಾಲಿಗಳು, ಶಿಶು ಕಾರ್ಮಿಕರು ಯುಗಾಂತರದ ಪ್ರವಾದಿಗಳಾಗುತ್ತಾರೆ. ಮನೋ ನಿರ್ಮಿತ ಅಗೋಚರ ಕೈಕೋಳಗಳಲ್ಲಿ ನರಳುವ ಬಂಧಿಗಳಾದ ಜನರನ್ನು ಎಚ್ಚರಿಸುವ ದನಿಯಾಗುತ್ತಾನೆ ಬ್ಲೇಕ್. ಚರಿತ್ರೆಯ ಕಾಲದಲ್ಲಿ ತನ್ನ ನಿಜಸ್ವರೂಪದಿಂದ ವಂಚಿತವಾದ ಚೇತನ, ಕಲ್ಪನೆಯಲ್ಲಿ ತನ್ನ ಸಹಜಪೂರ್ಣತೆಯನ್ನು ಅವನ ಕಾವ್ಯದಲ್ಲಿ ಪಡೆದುಕೊಳ್ಳುತ್ತದೆ. ಬ್ಲೇಕ್‌ಗೆ ಕಲ್ಪನೆಯೆಂದರೆ;
To see a world in a Grain of sand
And a Heaven in a Wild flower,
Hold Infinity in the palm of your hand
And Eternity in an hour
ಕಲ್ಪನಾ ಶಕ್ತಿ ಇಲ್ಲದುದನ್ನು ಕಾಣುವುದಲ್ಲ; ಇರುವುದನ್ನೇ ಅದರ ಎಲ್ಲ ಪ್ರಭೆಯಲ್ಲಿ ಕಾಣುವಂಥದು. ಕಣ್ಣಿನ ಪೊರೆ ಕಳೆಯಬೇಕು ಅಷ್ಟೇ. `ಪಂಚೇಂದ್ರಿಯಗಳಲ್ಲಿ ಅಡಗಿರುವ ನೀನು ಹೇಗೆ ತಿಳಿದೀಯೆ? ವಾಯು ಮಾರ್ಗವನ್ನು ಬಗೆದು ಹಾರುವ ಪ್ರತಿ ಹಕ್ಕಿಯೂ ಅಗಾಧ ಹರ್ಷದ ಜಗವಾಗಿರುತ್ತದೆ’ – ಎನ್ನುತ್ತಾನೆ ಬ್ಲೇಕ್. ಬ್ಲೇಕ್ ಕಾಣುವ ಬಗೆಯೇ ಬೇರೆಲ್ಲ ಕವಿಗಳಿಗಿಂತಲೂ ಭಿನ್ನವಾದ್ದು. ವರ್ಡ್ಸ್‌ವರ್ತ್, ಕೋಲರಿಜ್, ಅಡಿಗ, ಕುವೆಂಪು, ಕಂಬಾರ ಕೂಡ – ಇವರಿಗೆ ಅನ್ವಯವಾಗುವಂತೆ `ವಿಧಾನ’ (ಅಥವಾ `ಉಪಾಯ’) ಎನ್ನಬಹುದಾದ ಪ್ರತಿಮಾಮಾರ್ಗ ಅವನದಲ್ಲ. ದೇವರು ಎಂದರೆ ಅವನಿಗೆ “Poetic Genious” ಅವನು
“Only acts and is, in existing beings or Men”.
ಉಳಿದವರಲ್ಲಿ ಅಲ್ಲಿ – ಇಲ್ಲಿ ಕಾಣಬಹುದಾದ ರೀತಿ ಬ್ಲೇಕ್‌ನ ಇಡೀ ಶೈಲಿ. ಅತಿ ಸಾಮಾನ್ಯ ಹೂವುನಲ್ಲೂ ಆಳವಾದ ಭಾವನೆಯನ್ನು ಕಾಣುವೆನೆಂಬ ವರ್ಡ್ಸ್‌ವರ್ತ್‌ಗೆ ಬ್ಲೇಕ್ ಹೇಳುವುದು, ಇದು ಅತಿ ಸಾಮಾನ್ಯ ಹೂವೆಂದು ನೀನು ಯಾಕಾದರೂ ತಿಳಿಯುತ್ತಿ? ಇಹಕ್ಕೂ ಪರಕ್ಕೂ, ದೇಹಕ್ಕೂ ಆತ್ಮಕ್ಕೂ, ಪ್ರಕೃತಿಗೂ, ದೇವರಿಗೂ ನಡುವೆ ತರತಮದ ಭಾವ ಮುಖ್ಯವಾದ ಕ್ರೈಸ್ತ ಮನೋಧರ್ಮಕ್ಕೆ ಹೊರತಾದ ಕಾಣ್ಕೆ ಬ್ಲೇಕ್‌ನದು. ಶೋಭೆಯಲ್ಲಿ ಕಂಪಿಸುವ ಮೂರ್ತತೆ ಅತ್ಯಂತ ಸಹಜವಾಗಿ, ನೇರವಾಗಿ, ಅಪ್ರಯತ್ನವಾಗಿ, ಈ ಬಗೆಯ ಕಾಣುವಿಕೆಯಿಂದಾಗಿ ಬ್ಲೇಕ್‌ಗೆ ತನ್ನ ಕಾವ್ಯದಲ್ಲಿ ಸಾಧ್ಯವಾಯಿತು. ಬೇಂದ್ರೆಯಂತೆ ಬ್ಲೇಕ್‌ನಿಗೂ `ಕವಿಮನದ ಬ್ಯಾಸರಾ ಹರಿಸಾಕ/ಹಾಡ ನುಡಿಸಾಕ ಹೆಚ್ಚಿಗೇನು ಬೇಕ/ಒಂದು ಹೂತ ಕುಣಿಸಿಯ ಮರಸಾಕ’.
ಇನ್ನು ನಮ್ಮ ಕಾಲದವನೇ ಆದ ಏಟ್ಸ್ ಬ್ಲೇಕ್‌ನಂಥವರ ಕಾಣ್ಕೆಯನ್ನೂ ನಮ್ಮಂಥವರ ಎಲ್ಲ ಸಂಶಯಗಳನ್ನೂ ಒಟ್ಟಾಗಿ ಪಡೆದು ಸಂಕಟದಲ್ಲಿ ಕಾವ್ಯಸೃಷ್ಟಿ ಮಾಡಿದ. ಅವನು ಹೇಳುತ್ತಾನೆ:
“ಒಂದು ವಿಷಯದಲ್ಲಿ ಮಾತ್ರ ನನ್ನ ತಲೆಮಾರಿನ ಉಳಿದವರಿಗಿಂತ ನಾನು ಭಿನ್ನನಾಗಿದ್ದೆ. ನಾನು ತುಂಬಾ ರಿಲೀಜಿಯಸ್. ಅದರೆ ನಾನು ದ್ವೇಷಿಸುವ (ಜೂಲಿಯನ್) ಹೆಕ್ಸ್‌ಲೇ ಮತ್ತು ಟಂಡಾಲ್ ನನ್ನ ಬಾಲ್ಯದ ಸರಳ ಮನಸ್ಸಿನ ಆಧ್ಯಾತ್ಮಿಕತೆಯಿಂದ ನನ್ನನ್ನು ವಂಚಿಸಿದರು. ನಾನು ಸದಾ ಈ ಧಾರ್ಮಿಕ ಪರಂಪರೆ ಸಜೀವವಾಗಿ ಉಳಿದ ಜಗತ್ತಿಗಾಗಿ ಹಾತೊರೆದಿದ್ದೇನೆ. ಚಿತ್ರಗಳು ಮತ್ತು ಕಾವ್ಯದಲ್ಲಿ ಮಾತ್ರವಲ್ಲ – ಒಲೆಯ ಹೊಡೆಕಿಂಡಿಗೆ ಜೋಡಿಸಿದ ಗಾಜಿನ ಬಿಲ್ಲೆಗಳಲ್ಲಿ, ಚಳಿಗಾಳಿ ತಡೆಯಲು ಮುಚ್ಚುವ ಕರ್ಟನ್‌ಗಳಲ್ಲಿ.”
ಹೀಗೆ ನಿತ್ಯ ಜೀವನದ ಬಳಕೆ ವಸ್ತುಗಳಲ್ಲೂ ಧಾರ್ಮಿಕ ದೃಷ್ಟಾರತೆಯ ಕುರುಹುಗಳಿಗಾಗಿ ಹಾತೊರೆದ ಏಟ್ಸ್, ದೀಪ ತಟ್ಟೆ ಸವುಟುಗಳಲ್ಲೂ ಅದನ್ನು ಕಾಣಿಸುತ್ತಿದ್ದ ಪ್ರಾಚೀನ ಭಾರತ ಸಂಸ್ಕೃತಿಯನ್ನು ಮೆಚ್ಚಿದ್ದು ಸಹಜವೇ.
ಗರುಡ ದರ್ಶನವಾಗದೆ ಊಟಮಾಡಲಾರೆನೆಂದು ಕಾದು ನಿಂತಿರುವ ಸೈಕಲ್ ಕಚ್ಚೆಯವ ಏಟ್ಸ್ ಕಾವ್ಯದಲ್ಲಿ ಸಂದೇಹಾಸ್ಪದನಾಗಿದ್ದೂ ಶೋಭೆಯುಳ್ಳ ಪಾತ್ರವಾಗಿರುತ್ತಿದ್ದ.
*****
(`ರುಜುವಾತು’ ೧೧, ಜುಲಾಯಿ – ಸೆಪ್ಟೆಂಬರ್, ೧೯೮೩. `ಪೂರ್ವಾಪರ’ – ೧೯೯೦.)