ಈ ತಿಂಗಳ ಕೊನೆಯ ದಿನ ಜಲಪ್ರಳಯ.. ಗೊತ್ತಿರ್‍ಲಿ..

ಸುದ್ದಿ ಖಚಿತವಾಗುತ್ತಿದ್ದಂತೆ ಧರೆಯ ಮೇಲೆ ವಾಸಿಸುತ್ತಿರೋ ಎಂಟನ್ಯೂರು ಚಿಲ್ಲರೆ ಕೋಟಿ ಜನಸಮೂಹ ಸ್ಥಂಭೀಭೂತವಾಯಿತು.. ಏನೇನು ಮಾಡಬಹುದು ಈ ದುರಂತದಿಂದ ತಪ್ಪಿಸಿಕೊಳ್ಳಲಿಕ್ಕೆ ಅಂತ ಯೋಚಿಸುವಷ್ಟರಲ್ಲೇ ಶುರುವಾಯಿತು.. ಕುಂಭದ್ರೋಣ ಮಳೆ. ಬಿಟ್ಟೂ ಬಿಡದೆ ಸುರೀತು.. ಸುರೀತು.. ಮಳೆ, ನಿರಂತರ ಹದಿನಾಲ್ಕು ದಿನಗಳ ಕಾಲ.. ಸಮುದ್ರದಲ್ಲಿ ಮುನ್ನೂರು ಅಡಿ ಎತ್ತರದ ಅಲೆಗಳು.. ಒಂದರ ಹಿಂದೆ ಒಂದು.. ನಗರಗಳು, ಪಟ್ಟಣಗಳು, ಹಳ್ಳಿಗಳು ಎಲ್ಲಾ ನೀರಿನಲ್ಲಿ ಮುಳುಗಡೆ.. ಇರುವೆ ಗೂಡಿಗೆ ಒಂದು ಬಕೀಟ್ ನೀರು ಹಾಕಿದರೆ ಕೊಚ್ಚಿಕೊಂಡು ಹೋಗುತ್ತಲ್ಲಾ ಹಾಗೆ ಕೊಚ್ಚಿಕೊಂಡು ಹೋಯಿತು ಇಡೀ ಮನುಕುಲ. ಬದುಕಿದ್ದವನು ಒಬ್ಬನೇ.. ಭಾರದ್ವಾಜ!
**********
ಟೀವಿಯಲ್ಲಿ ಒಂದೊಂದೇ ಪ್ರಪಂಚದ ನಗರಗಳು ಮುಳುಗಡೆಯಾಗ್ತಿರೋ ಸುದ್ದಿ ಪ್ರಸಾರವಾಗುತ್ತಿದ್ದಂತೆ ನೋಡುತ್ತಿದ್ದ ಭಾರದ್ವಾಜ ನೊಂದು ಹೋದ. ಭಗವಂತ ಮನುಕುಲದ ಮೇಲೆ ಯಾಕೆ ಈ ಪ್ರಕೋಪ.. ನೀನೇ ಹೆತ್ತ ಮಕ್ಕಳನ್ನು ನೀನೇ ಯಾಕೆ ಹೀಗೆ ಮುಕ್ಕುತ್ತಿದ್ದಿ..? ಈ ಥರದ ನಿರ್ಧಾರ ತೆಗೆದುಕೊಳ್ಳುವಂತೆ ನಿನ್ನನ್ನು ರೇಗಿಸಿದವರು ಯಾರು..? ಸೃಷ್ಟಿ, ಸ್ಠಿತಿ ನಿರ್ವಾಹಕರಾದ ಬ್ರಹ್ಮ, ವಿಷ್ಣುವಿನ ಮೇಲೆ ಜಗಳವಾಡಿಕೊಂಡು ಜಟೆ ಬಿಚ್ಚಿದೆಯಾ ಭಗವಂತಾ..? ಯೋಚಿಸುತ್ತಲೇ ಭಾರದ್ವಾಜ ಸುತ್ತುವರೆದ ನೀರಿನ ಮೇಲ್ಪದರಕ್ಕೆ ಬಂದು ಒಮ್ಮೆ ಶ್ವಾಸಕೋಶದೊಳಕ್ಕೆ ಗಾಳಿ ತುಂಬಿಕೊಂಡು ನೀರಿನ ಆಳಕ್ಕೆ ಮುಳುಗ್ತಾನೆ. ಯಾರೂ ಬದುಕಿರದ ಪ್ರಪಂಚದಲ್ಲಿ ಆತ ನೀರಿನ ಅಡಿಯಲ್ಲಿ ಏನು ಹುಡುಕುತಿದ್ದಾನೇಂತ ಅವನಿಗೆ ಗೊತ್ತಿದೆ.. ಅವನು ಹುಡುಕುತ್ತಿರುವುದು ಜಲಾವೃತವಾದ ಅಲಸೂರಿನ ಸೋಮೇಶ್ವರ ದೇವಸ್ಠಾನವನ್ನ.. ಅರವತ್ತು ಅಡಿ ಆಳಕ್ಕೆ ಬಂದು ನೋಡ್ತಾನೆ, ಅವನು ಬಂದಿರುವುದು ಅಲಸೂರಿನ ಸೋಮೇಶ್ವರ ದೇವಸ್ಥಾನಕ್ಕಲ್ಲ.. ಅದು ವಿಧಾನಸೌಧ..
**********
ಪಟ್ಟು ಬಿಡದೆ ಶಿವ ಸೂಕ್ತವನ್ನು ಹೇಳಿಕೊಳ್ತಾ ಮೇಲೆ ಬಂದು ಅಲಸೂಯ್ರು ಇರಬಹುದಾದ ದಿಕ್ಕಿನಲ್ಲಿ ಈಜಲಾರಂಭಿಸುತ್ತಾನೆ. ಸುತ್ತಲೂ ಬರೀ ನೀರು. ದಿಕ್ಕು ಹಿಡಿಯುವುದು ಸುಲಭವಲ್ಲ.. ಭಾರದ್ವಾಜ ಸೊಲೊಪ್ಪುವವನಲ್ಲ.. ನೀರು ಕೆಂಪಗಿದೆ.. ಸೂರ್ಯ ಪ್ರಖರವಾದ ಕಣ್ಣಲ್ಲಿ ಭಾರದ್ವಾಜನ ಪ್ರಯತ್ನವನ್ನು ನೋಡುತ್ತಿದ್ದಾನೆ.. ತಾನು ಈಜಿ ಬಂದಿರುವುದು ಸರಿಯಾದ ಜಾಗಕ್ಕೆಂದು ಮನಗಾಣುತ್ತಿದ್ದಂತೆ ಭಾರದ್ವಾಜ ಮತ್ತೆ ನೀರಿನ ಮೇಲ್ಮೈಗೆ ಬಂದು ತನ್ನ ಪುಪ್ಪಸ ಇರಿಸಿಕೊಳ್ಳಬಹುದಾದಷ್ಟೂ ಗಾಳಿಯನ್ನು ತುಂಬಿಕೊಳ್ತಾನೆ.. ಮನಸಿನಲ್ಲಿ ರುದ್ರವನ್ನು ಜೋರಾಗಿ ಪಠಿಸುತ್ತಾ.. ಶಂಭುವೇ ನಮ:.. ನಮಸ್ತೇ ಅಸ್ತು ಭಗವನ್ ವಿಶ್ವೇಶ್ವರಾಯ.. ಮಹಾದೇವಾಯ.. ತ್ರಯಂಬಕಾಯ.. ತ್ರಿಪುರಾಂತಕಾಯ.. ಕಾಲಾಗ್ನಿ ರುದ್ರಾಯ.. ನೀಲಕಂಠಾಯ.. ಮೃತ್ಯುಂಜಯಾಯ.. ಮಹೇಶ್ವರಾಯ.. ಶ್ರ್‍ಈಮನ್ ಮಹಾದೇವಾಯ ನಮ:.. ಪೂರ್ತಿ ಅರವತ್ತು ಅಡಿಗಳು.. ತಳಕ್ಕೆ ಬರುತ್ತಿದ್ದಂತೆ ಕೈಗೆ ತಾನು ಹುಡುಕುತ್ತಿರೋದು ಸಿಕ್ಕ ಅನುಭವ.. ಹೌದು.. ಸೋಮೇಶ್ವರನ ವಾಹನ ನಂದಿಯ ಕಿವಿ ಅದು.. ನಂದಿಯ ಆ ಕಿವಿಯಲ್ಲಿ ಕೋರಿಕೊಂಡ ಪ್ರಾರ್ಥನೆ ನೇರ ಶಿವನ ಹೃದಯಕ್ಕೆ ತಲುಪಿ ಶಿವ ಅದನ್ನು ತನ್ನ ಭಕ್ತರಿಗಾಗಿ ಮಾಡ್ತಾನೆ ಅನ್ನೊ ಪ್ರತೀತಿಯ ಅರಿವಿರೋ ಭಾರದ್ವಾಜ ಮೂಗು ಹಿಡಿದು ಕೊಂಡು ತನ್ನೆಲ್ಲಾ ಶಕ್ತಿಯನ್ನು ಬಿಟ್ಟು ನಂದಿಯ ಕಿವಿಯಲ್ಲಿ ಕೂಗ್ತಾನೆ.
**********
’..ಹೇ.. ತಾಂಡವ ಶಿವನೇ.. ಯಾಕಪ್ಪಾ ಈ ಕೋಪ ತಂದೇ.. ನಿನ್ನ ಜಟೆಯನ್ನು ಕಟ್ಟು.. ಈ ಲೋಕದಲ್ಲಿ ಉಳಿದಿರಬಹುದಾದ ಕೆಲವೇ ಮಂದಿಯನ್ನಾದರೂ ಉಳಿಸು.. ಮನುಕುಲವನ್ನು ಮುಗಿಸಿಬಿಡಬೇಡ.. ನಾನು ನನಗಾಗಿ ಯಾವತ್ತಿಗೂ ನಿನ್ನಲ್ಲಿ ಏನನ್ನೂ ಕೇಳಿಕೊಂಡಿಲ್ಲ.. ಅದು ನಿನಗೂ ಗೊತ್ತು.. ಇದೊಂದು ಬೇಡಿಕೆಯನ್ನು ಈ ಹುಲುಮಾನವನಿಗಾಗಿ ಕರುಣಿಸು ಸೋಮೇಶಾ..’ ಅವನ ಈ ಕೋರಿಕೆ ತನ್ನ ಪ್ರಳಯಯದ ನಿರ್ಧಾರಕ್ಕೆ ವಿರುದ್ಧವಾದದ್ದು ಅಂತ ಆ ಸಾಕ್ಷಾತ್ ಪರಮಶಿವನಿಗೇ ತಲುಪಿದಂತೆ.. ಅವನು ಕೋಪದಿಂದ ತನ್ನ ತಾಂಡವವನ್ನು ಇನ್ನೂ ಭೀಕರತೆಯಿಂದ ಮುಂದುವರೆಸಿದಂತೆ.. ಆ ನೀರಿನಲ್ಲಿ ಉಂಟಾದ ದೊಡ್ದ ಅಲೆಯೊಂದು ಭಾರದ್ವಾಜನ್ನನ್ನು ತೆಗೆದು ಎಸೆಯುತ್ತದೆ.. ದೂರಕ್ಕೆ..
**********
ನಾಲ್ಕು ದಿನಗಳ ಕಾಲ ತೇಲಿದ ಭಾರದ್ವಾಜನ ದೇಹ ಒಂದು ತೊಟ್ಟಿಯಂಥಾ ಜಾಗದಲ್ಲಿ ಬಂದು ಸಿಕ್ಕಿ ಹಾಕಿ ಕೊಳ್ಳುತ್ತದೆ.. ಹರಿಯುತ್ತಿರೋ ನೀರು ಇವನ ದೇಹವನ್ನು ಮತ್ತೆ ಮತ್ತೆ ಒಂದೇ ಗೋಡೆಯಂಥಾ ಜಾಗಕ್ಕೆ ಬಡಿಯಲಾರಂಭಿಸುತ್ತದೆ. ಆ ಹೊಡೆತದಿಂದ ಭಾರದ್ವಾಜನಿಗೆ ಎಚ್ಚರವಾಗುತ್ತದೆ. ಮೆಲ್ಲನ್ನೆ ಕಣ್ಣು ಬಿಡುತ್ತಾನೆ. ಸೂರ್ಯ ಮೊದಲಿನಷ್ಟು ಕ್ರೂರವಾಗಿಲ್ಲ.. ನೀರಿನ ಮಟ್ಟ ಸ್ವಲ್ಪ ಸ್ವಲ್ಪವೇ ಇಳಿಯುತ್ತಿದೆ.. ಮೆಲ್ಲನೆ ನಿಲ್ಲುವ ಪ್ರಯತ್ನ ಮಾಡುತ್ತಾನೆ ಭಾರದ್ವಾಜ. ನೀರಿನ ರಭಸ ಬಿಟ್ಟರೆ ಆತ ನಿಲ್ಲುವುದು ಸಾಧ್ಯವಾಗುತ್ತದೆ. ಇದು ಬೆಂಗಳೂರಿನ ಯಾವ ಭಾಗವಿರಬಹುದು..? ಈ ಪ್ರಶ್ನೆ ಅವನ ಹಸಿವು ಆಯಾಸಗಳನ್ನು ಮರೆಸುತ್ತದೆ.. ಆ ತೊಟ್ಟಿಯಂಥಾ ಜಾಗದಿಂದ ಹೊರಬಂದು ಈಜಿಕೊಂಡು ಆ ಜಾಗವನ್ನು ಒಂದು ಸುತ್ತು ಹಾಕುತ್ತಾನೆ. ನಂತರ ಗೊತ್ತಾಗುತ್ತದೆ.. ಅದು ಯುಟಿಲಿಟಿ ಬಿಲ್ಡಿಂಗ್ ಅಂತ..
*********
ಭಾರದ್ವಾಜ ಯೋಚಿಸಲಾರಂಭಿಸುತ್ತಾನೆ.. ತಾನು ಟೀವಿಯಲ್ಲಿ ನೋಡಿದಂತೆ ಪ್ರಪಂಚದ ಎಲ್ಲಾ ಭಾಗಗಳೂ ಮುಳುಗಿದ ಮೇಲೆಯೇ ಭಾರತ ಮುಳುಗಿದ್ದು.. ಅದರಲ್ಲೂ ದಕ್ಷಿಣ ಭಾರತ.. ಹಾಗಾದರೆ.. ಹಾಗಾದರೆ.. ಇಡೀ ಪ್ರಪಂಚದಲ್ಲಿ ಯಾರೂ ಬದುಕಿಲ್ಲ.. ತನ್ನನ್ನು ಬಿಟ್ಟು.. ದೂರದವರೆಗೂ ನೋಡ್ತಾನೆ.. ಯಾವ ಜೀವಿಯೂ ಉಳಿದಿರುವ ಸೂಚನೆಗಳ್ಯಾವುದೂ ಅವನಿಗೆ ಕಾಣಿಸುವುದಿಲ್ಲ.. ಆಗ ತನ್ನ ಕಿವಿಯನ್ನೇ ನಂಬಲಾರದಂಥ ಘಟನೆಯೊಂದು ಸಂಭವಿಸುತ್ತದೆ.. ’.. ಕಾಪಾಡಿ.. ಕಾಪಾಡಿ..’ ಒಂದು ಹೆಣ್ಣು ಧ್ವನಿ.. ಭಾರದ್ವಾಜನ ಅಣು ಅಣುವಿನಲ್ಲಿ ರೋಮಾಂಚನ..
*********
ಪ್ರಪಂಚದಲ್ಲಿ ಎಲ್ಲರೂ ಸತ್ತು ಹೋಗಿ ತಾನೊಬ್ಬನೇ ಇರೋದು ಅಂತ ಗ್ಯಾರಂಟಿಯಾದರೆ ಗಂಡಸು ನಿರಾಳವಾಗಿ ಇದ್ದುಬಿಡುತ್ತಾನೆನೋ..? ತನ್ನ ಜೊತೆ ಇನ್ನೊಂದು ಹೆಣ್ಣು ಇದೆ ಅನ್ನೋ ಸೂಚನೆ ಸಿಕ್ಕರೂ ಸಾಕು.. ಶುರುವಾಗುತ್ತದೆ ಗೊಂದಲಗಳು.. ಅವಳು ಹೇಗಿರಬಹುದು..? ಎಷ್ಟು ವಯಸ್ಸು..? ಯಾವ ಬಣ್ಣ..? ನನಗಿಷ್ಟ ಆಗ್ತಾಳಾ..? ನನಗಿಷ್ಟ ಆದರೂ ಅವಳು ನನ್ನನ್ನು ಒಪ್ತಾಳಾ..?
ಅವಳಿಗೆ ಕನ್ನಡ ಬರುತ್ತಾ..? ಕಾಪಾಡಿ ಅಂತ ಕೂಗಿರೋದ್ರಿಂದ ಬಹುಶ: ಬರುತ್ತೆ.. ಮುಖ್ಯವಾಗಿ ಕನ್ಯೆಯಾ..? ಅವನ ಎಲ್ಲ ಪ್ರಶ್ನೆಗಳು ಕೊನೆಗೆ ಸರ್ಕಲ್‌ಗೇ ಬಂದು ನಿಲ್ಲುತ್ತವೆ..
*********
ಮೂಯ್ರು ದಿನದಿಂದ ಹುಡುಕ್ತಿದ್ದಾನೆ ಭಾರದ್ವಾಜ.. ಮೂರುದಿನಗಳಲ್ಲಿ ಎರಡು ಭಾರಿ ಆ ಧ್ವನಿಯನ್ನು ಕೇಳಿದ್ದಾನೆ.. ತುಂಬಾ ಸ್ಪಷ್ಟವಾಗಿ. ಮೊದಲು ತಾನು ಒಬ್ಬಂಟಿಯಾಗಿ ಇರೋದ್ರಿಂದ ತನ್ನ ಭ್ರಮೆಯೇನೋ ಅಂದುಕೊಂಡಿದ್ದ.. ಎರಡನೇ ಭಾರಿ ಕಿವಿಯ ಪಕ್ಕದಲ್ಲೇ ಕೇಳಿಸಿತ್ತು.. ಇನ್ನು ನಂಬದಿರಲು ಸಾಧ್ಯವೇ ಇಲ್ಲ.. ಯುಟಿಲಿಟಿ ಬಿಲ್ಡಿಂಗ್ ಕಟ್ಟೆಯ ಮೇಲೆ ಕೂತು ಆ ಧ್ವನಿಗಾಗಿ ಕಾಯುವುದೇ ಅವನ ಕಾಯಕ.. ತೇಲಿ ಹೋಗುತ್ತಿರುವ ಏನನ್ನೋ ತಿನ್ನುತ್ತಾ.. ಮತ್ತದೇ ಧ್ವನಿ.. ತಿರುಗಿ ನೊಡ್ತಾನೆ.. ಭಾರದ್ವಾಜ.. ತನ್ನ ಕಣ್ಣುಗಳನ್ನೇ ತನಗೆ ನಂಬಲಿಕ್ಕಾಗುವುದಿಲ್ಲ.. ’..ಕಾಪಾಡಿ..ಕಾಪಾಡಿ..’ ಅಂತ ಕೂಗಿ ಆ ಹುಡುಗಿ ನೀರಿನಲ್ಲಿ ಮುಳುಗಿ ಹೋಗ್ತಾಳೆ.. ’.. ಯಾಕೆ ಹಾಗೆ ಮಾಡ್ತಿದ್ದೀರಾ.. ಮೇಲೆ ಬನ್ನಿ.. ಕೈ ಕೊಡಿ ನಾನು ಎಳೆದು ಕೊಳ್ತೇನೆ.. ’ ಜೋರಾಗಿ ಕೂಗ್ತಾನೆ ಅವಳಿಗೆ ಕೇಳುವಂತೆ ಭಾರದ್ವಾಜ.. ಆ ಕಡೆಯಿಂದ ಧ್ವನಿಯಷ್ಟೇ ಬರುತ್ತದೆ.. ’..ನಿಮ್ಮ ಹುಟ್ಟು ನೋಡ್ಕೊಳ್ಳಿ..’
**********
ಅಷ್ಟು ದಿನಗಳಲ್ಲಿ ಅವನು ತನ್ನ ದೇಹವನ್ನೇ ನೋಡಿಕೊಂಡಿರುವುದಿಲ್ಲ.. ತಾನು ಪ್ರಳಯವಾದ ದಿನ ಹಾಕಿ ಕೊಂಡಿದ್ದ ಬಟ್ಟೆ ನೀರಿನಲ್ಲಿ ಕೊಳೆತು ಮಾಯವಾಗಿದೆ.. ತಾನು ದಿಗಂಬರನಾಗಿರುವುದರ ಅರಿವು ಅವನಿಗೆ ಬರುತ್ತದೆ.. ಹಾಗಾದರೆ ಅವಳೂ ಬಟ್ಟೆ ತೊಟ್ಟಿಲ್ಲ.. ಮೊದಲ ಭೇಟಿಯಲ್ಲೆ ಮೈ ದರ್ಶನವಾಗಬಾರದೆಂಬ ತಿಳುವಳಿಕೆಯಿಂದ ಅವಳು ನೀರು ಬಿಟ್ಟು ಮೇಲೆ ಬರ್ತಿಲ್ಲ.. ಕೂಗ್ತಾನೆ.. ಭಾರದ್ವಾಜ.. ’.. ಸ್ವಲ್ಪ ಹೊತ್ತು ಇರಿ.. ನಿಮಗೆ ಬಟ್ಟೆ ವ್ಯವಸ್ಠೆ ಮಾಡ್ತೀನಿ..’
**********
ಹಿಂದೆ ಯಶವಂತಪುರವಿದ್ದ ಕಡೆಗೆ ಈಜುತ್ತಿದ್ದಾನೆ.. ಭಾರದ್ವಾಜ.. ಈಗೀಗ ಅವನಿಗೆ ಮುಳುಗಿರುವ ಬೆಂಗಳೂರಿನಲ್ಲಿ ಯಾವ ಯಾವ ದಿಕ್ಕಿನಲ್ಲಿ ಏನೇನಿದೆ ಅಂತ ಗೊತ್ತಾಗಿದೆ.. ಯಶವಂತಪುರ ಸಿಗುತ್ತಿದ್ದಂತೆ ಅಲ್ಲಿ ಮುಳುಗಡೆಯಾಗಿರುವ ಗಾರ್ಮೆಂಟ್ ಫ್ಯಾಕ್ಟ್‌ರಿಯಿಂದ ತೇಲಿ ಹೋಗುತ್ತಿರುವ ಬಟ್ಟೆ ತುಂಡುಗಳು ಹೇರಳವಾಗಿ ಸಿಗುತ್ತವೆ.. ಅದನ್ನೆಲ್ಲಾ ಗಂಟು ಹಾಕಿ ತನಗೊಂದು ಅವಳಿಗೊಂದು ಬಟ್ಟೇ ಸಿದ್ಧಪಡಿಸುತ್ತಾನೆ.. ಭಾರದ್ವಾಜ..
*********
ಈಜಿಕೊಂಡು ವಾಪಸ್ ಬರುತ್ತಿರುವ ಭಾರದ್ವಾಜ ಯೋಚಿಸಲಾರಂಭಿಸುತ್ತಾನೆ. ಅವಳಿಗಾಗಿ ಕಾದ ಮೂರು ದಿನದಲ್ಲಿ ಮನದಲ್ಲಿ ಎಷ್ಟೋಂದು ಭಾವಗಳು.. ಅವಳು ನೋಡಲಿಕ್ಕೆ ಚೆನ್ನಾಗೇ ಇದ್ದಾಳೆ.. ಭಗವಂತ ನನ್ನನ್ನು ಮತ್ತು ಅವಳನ್ನು ಮಾತ್ರ ಉಳಿಸಿರುವ ಕಾರಣಕ್ಕಾದರೂ ನಾನು ಅವಳನ್ನು ಪ್ರೀತಿಸಬೇಕು.. ಪ್ರೀತಿಸಬೇಕು ಏನು ಬಂತು.. ತಾನು ಆಗಲೇ ಅವಳನ್ನು ಪ್ರೀತಿಸುತಿದ್ದೇನೆ.. ಇಲ್ಲದಿದ್ದರೆ ಇಷ್ಟೋಂದು ದೂರ ಅವಳಿಗೆ ಬಟ್ಟೆ ಕೊಡಿಸಲು ಬರುತ್ತಿದ್ನೇ..? ಅವಳೂ ಒಪ್ಪಬಹುದು.. ಅವಳಿಗೆ ಬೇರೆ ಆಪ್ಷನ್ಸ್ ಏನಿದ್ದೀತು..?
*********
ಇಬ್ಬರೂ ಕಟ್ಟೆಯ ಮೇಲೆ ಕೂತಿದ್ದಾರೆ. ಒಂದು ಲೋಡ್ ಆಸ್ಟ್ರೇಲಿಯನ್ ಆಪಲ್ ತೇಲಿ ಕೊಂಡು ಬರುತ್ತದೆ.. ಹಿಂದೆ ಆದಮ್ ಮತ್ತು ಈವ್ ನಡುವೆ ಆಪಲ್ ವಿಚಾರಕ್ಕೆ ದೊಡ್ಡ ಸಂವಾದವೇ ನಡೆದಿರುತ್ತದೆ.. ಇಲ್ಲಿ ಹಾಗೇನೂ ಆಗುವುದಿಲ್ಲ.. ಇಬ್ಬರೂ ಒಂದೊಂದು ಆಪಲ್ ತೆಗೆದುಕೊಂಡು ತಿನ್ನುತ್ತಾ ಮಾತನಾಡಲಾರಂಭಿಸುತ್ತಾರೆ..
*********
’ನಿಮ್ಮ ಹೆಸರು..?’
’ಭವತಿ..’
’ಚೆನ್ನಾಗಿದೆ..’
ಅವಳು ನಗ್ತಾಳೆ.
’ಪ್ರಪಂಚದಲ್ಲಿ ಎಲ್ಲರೂ ಸತ್ತು ನಾವಿಬ್ಬರೇ ಬದುಕಿರುವ ಉದ್ದೇಶ ಏನಿರಬಹುದು ಅಂತ ನಿಮಗೆ ಗೊತ್ತಾ..?’
’ಏನು ಪೀಠಿಕೆ ಹಾಗ್ತಿದ್ದೀರಾ..ಪ್ರೇಮಿಸು ಅಂತ..? ನಾನು ಮನಸನ್ನು ಬೇರೆಯವನಿಗೆ ಕೊಟ್ಟಾಗಿದೆ..’
’ಯಾರದು.. ಬದುಕಿದ್ದಾನಾ..?’
’ಗೊತ್ತಿಲ್ಲ.. ಹುಡುಕುತ್ತೇನೆ..’
’ಎಷ್ಟು ವರ್ಷದ ಪರಿಚಯ..?’
’ಪ್ರಳಯವಾದ ದಿನ ನಾನು ಬೆಂಗಳೂರಿನ ಎಲ್ಲ ದೇವಸ್ಥಾನಗಳಲ್ಲಿ ಮುಳುಗಿ ಮುಳುಗಿ ಪ್ರಾರ್ಥಿಸುತ್ತಿದ್ದೆ.. ದೇವರೇ ಪ್ರಪಂಚವನ್ನು ಕಾಪಾಡು ಅಂತ.. ಒಬ್ಬ ಅಲಸೂರು ಸೋಮೇಶ್ವರ ದೇವಸ್ಥಾನದಲ್ಲಿ ಅದೇ ಪ್ರಾರ್ಥನೆಯನ್ನು ಅಲ್ಲಿರೋ ನಂದಿ ಕಿವಿಯಲ್ಲಿ ಮಾಡ್ತಿದ್ದ.. ನಾನು ಆ ಕಡೆಯ ಕಿವಿಯಲ್ಲಿದ್ದೆ.. ಆಗಲೇ ನಾನು ತೀರ್ಮಾನಿಸಿಬಿಟ್ಟೆ.. ಅಂಥಾ ನಿಸ್ವಾರ್ಥಿಯನ್ನು ನಾನು ಪ್ರೇಮಿಸಬೇಕು ಅಂತ.. ಅಷ್ಟರಲ್ಲಿ ಅವನ್ನನ್ನು ಒಂದು ಅಗೋಚರ ಶಕ್ತಿ ತೆಗೆದು ಎಸೆದು ಬಿಡ್ತು..
ನಾನು ಅವನನ್ನು ಹುಡುಕಿಕೊಂಡು ತುಂಬಾ ಅಲೆದೆ.. ಸಿಗಲಿಲ್ಲ.. ನೀವು
ಸಿಕ್ಕಿರಿ.. ’
’ಹಾಗೆ ಪ್ರಾರ್ಥಿಸುತ್ತಿದ್ದವನು ನಾನೇ…’
’ಹೇಗೆ ನಂಬಲಿ..?’
’ನಾನು ಇದುವರೆವಿಗೂ ಒಂದೇ ಒಂದು ಸುಳ್ಳೂ ಹೇಳಿಲ್ಲ.. ಸುಳ್ಳು ಹೇಳೋ ಪ್ರತಿಯೊಬ್ಬನೂ ಪ್ರಳಯದಲ್ಲಿ ಸತ್ತಿದ್ದಾನೆ.. ಹಾಗಾಗಿ ನೀವು ನನ್ನ ಮಾತನ್ನು ನಂಬ ಬಹುದು..’
**********
’ಖಂಡಿತವಾಗಿ ನಂಬ್ತೀನಿ.. ನಿಮ್ಮ ಕಣ್ಣುಗಳಲ್ಲಿ ಸುಳ್ಳಿಲ್ಲವಾದ್ದರಿಂದ.. ಆದರೆ ನಾವಿಬ್ಬರು ಪ್ರೀತಿಸುವ ಮುಂಚೆ ಒಂದು ಷರತ್ತಿದೆ.. ನಾವಿಬ್ಬರೂ ಹೆಸರುಗಳನ್ನು ಬದಲಿಸಿಕೊಳ್ಳಬೇಕು..’
’ಯಾಕೆ..?’
’ಈ ಪ್ರಳಯದ ಅರ್ಥವೇ ಅದು.. ಭಗವಂತ ಸುಂದರ ಭೂಮಿಯನ್ನು ಕೊಟ್ಟ.. ನಾವುಗಳು ಅದನ್ನು ಕೆಡಿಸಿದೆವು.. ಗಾಳಿಯಲ್ಲಿ ಗಲೀಜು ತುಂಬಿದೆವು.. ನೀರಿನಲ್ಲಿ ವಿಷ ತುಂಬಿದೆವು.. ದೇವಸ್ಥಾನದಂತಹ ಹೃದಯದಲ್ಲಿ ದ್ವೇಷ ತುಂಬಿಕೊಂಡೆವು.. ಬದುಕಿರಯ್ಯಾಂತ ಪ್ರೇಮ ಕೊಟ್ಟ.. ಕೊಂದುಕೊಂಡೆವು.. ಸುಖ ಕೊಟ್ಟ.. ಬೇರೆಯವರ ಸುಖ ನೋಡಿ ನಾವು ನೊಂದುಕೊಂಡೆವು.. ಧರ್ಮ ಕೊಟ್ಟ.. ಕಾದಾಡಿ ಕೊಂಡೆವು.. ವ್ಯವಸ್ಠೆ ಕೊಟ್ಟ.. ಅದರಲ್ಲಿ ರಾಜಕೀಯ ತುಂಬಿದೆವು.. ಶಾಂತಿ ಕೊಟ್ಟ.. ನಾವದನ್ನು ಇಸ್ಕೊಳ್ಳಲೇ ಇಲ್ಲ.. ಆನಂದ ಕೊಟ್ಟ.. ನಾವದನ್ನು ಅವನಿಗೆ ಕೊಡಲೇ ಇಲ್ಲ.. ಇದನ್ನೆಲ್ಲಾ ಇಷ್ಟು ವರ್ಷ ನೋಡಿ ಸಾಕಾಗಿ ಇಡೀ ಮನುಕುಲವನ್ನೇ ಮೊದಲಿನಿಂದ ಶುರು ಮಾಡಲು ಈ ವ್ಯವಸ್ಥೆಯನ್ನು ಮಾಡಿದ್ದಾನೆ.. ಈ ಪ್ರಳಯದ ನೀರಿನಲ್ಲಿ ಧರ್ಮಗಳು, ಜಾತಿಗಳು, ರಾಗದ್ವೇಷಗಳು, ರಾಜಕೀಯಗಳು, ಲಾಬಿಗಳು, ದುರಾಸೆಗಳು, ಸ್ವಜನ ಪಕ್ಷಪಾತಗಳು, ಲಂಚ ರುಷುವತ್ತುಗಳು, ಭ್ರಷ್ಟಾಚಾರಗಳು, ಉಗ್ರಗಾಮಿ ಚಟುವಟಿಕೆಗಳು ಮುಂತಾದ ಮನುಕುಲಕ್ಕೆ ಮಾರಕವಾದ ಎಲ್ಲವನ್ನೂ ತೇಲಿ ಹೋಗುವಂತೆ ಮಾಡಿದ್ದಾನೆ ಜಗದೀಶ.. ನಾವು ಅವನ ಈ ತೀರ್ಮಾನವನ್ನು ಗೌರವಿಸೋಣ.. ಬನ್ನಿ ನಮ್ಮ ಇತಿಹಾಸವನ್ನು ಮೊದಲು ಮರೆಯೋಣ.. ಹೆಸರು ಬದಲಿಸಿ ಕೊಳ್ಳೋಣಾ..’
’ಏನಂತ..’
’ನಾನು ಪ್ರಕೃತಿ.. ನೀವು ಪುರುಷ..’
**********
ಇದಾದ ಮೂರನೇ ದಿನಕ್ಕೆ ಅವರು ಸೂರ್ಯ ಸಾಕ್ಷಿಯಾಗಿ, ಅರುಂಧತಿ ನಕ್ಷತ್ರದ ಸಾಕ್ಷಿಯಾಗಿ, ಕಾಲಿಗೆ ತಾಗುತ್ತಿದ್ದ ಜಲದೇವತೆಯ ಸಾಕ್ಷಿಯಾಗಿ ಮದುವೆಯಾಗುತ್ತಾರೆ. ಒಂಭತ್ತು ತಿಂಗಳಿಗೆ ಅವರಿಗೆ ಮಗುವೊಂದು ಜನಿಸುತ್ತದೆ.. ಅದಕ್ಕೆ ಅವರು ತಮ್ಮ ಪ್ರೇಮದ ಸಾಕ್ಷಿಯಾಗಿ ’ವಿಶ್ವಮಾನವ’ ಅಂತ ಹೆಸರಿಡುತ್ತಾರೆ.
*********
ಭಗವಂತ ನೆಮ್ಮದಿಯ ನಿಟ್ಟುಸಿರು ಬಿಡುತ್ತಾನೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.