ಅಖಿಲ ಭಾರತ ೭೦ನೆಯ, ಬೆಳಗಾವಿ ೭,೮,೯ ಮಾರ್ಚ್ ೨೦೦೩ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನ – ಅಂತರ್ಜಾಲ ಆವೃತಿ – ಭಾಗ ೨

ಕದಿಯುವುದನ್ನು ಅನೇಕರು ರೂಢಿಸಿಕೊಂಡು ಬಂದಿದ್ದಾರೆ. ಕೆಲವರು ಮಾಡಿದ ಅನೌಚಿತ್ಯ ಬೆಳಕಿಗೆ ಬಂದಿದೆ. ಆದರೆ ಅವರು ತಮಗೆ ಏನೂ ಆಗದವರಂತೆ ತಮ್ಮ ಚರ್ಮವನ್ನು ಬಹು ದಪ್ಪಗೆ ಬೆಳೆಸಿಕೊಂಡಿದ್ದಾರೆ. ಕೃತಿ ಚೌರ್ಯ ಮಾಡುವವರಲ್ಲಿ ಸಣ್ಣವರೂ ದೊಡ್ಡವರೂ ಇಬ್ಬರೂ ಸೇರಿಕೊಂಡಿದ್ದಾರೆ. ಸಣ್ಣವರು ದೊಡ್ಡವರು ಎನ್ನುವುದರಲ್ಲಿ ಒಂದು ವ್ಯತ್ಯಾಸ ಇದೆ. ಸಣ್ಣವರು ತಿಂದರೆ, ಅವರು ಹೊಟ್ಟೆಗಿಲ್ಲದೆ ತಿಂದರು ಎಂದಂತಾಗುತ್ತದೆ. ದೊಡ್ಡವರು ತಿಂದರೆ ಅವರು ಔಷಧಿ ತಿಂದರು ಎಂದಂತಾಗುತ್ತದೆ.

ಕಳವುಗಳಲ್ಲಿ ಎರಡು ವಿಧಗಳಿವೆ. ಒಂದು ಭೌತಿಕ ಕಳವು, ಇನ್ನೊಂದು ಬೌದ್ಧಿಕ ಕಳವು. ಭೌತಿಕ ವಸ್ತುವಿನ ಕಳವು, ಆ ವಸ್ತುವಿನ ಕಳವಿನೊಂದಿಗೇ ಮುಗಿಯುತ್ತದೆ. ಬೌದ್ಧಿಕ ವಸ್ತುವಿನ ಕಳವು, ಆ ಕಳವಿನೊಂದಿಗೆ ಮುಗಿದು ಹೋಗುವುದಿಲ್ಲ. ಅದು ಆ ಕೃತಿ ಇರುವವರೆಗೆ ಉದ್ದಕ್ಕೂ ಉಳಿದುಕೊಳ್ಳುತ್ತದೆ. ಆ ಕಾರಣದಿಂದಲೇ ಈ ಬೌದ್ಧಿಕ ಆಸ್ತಿಯ ಕಳವು ಹೆಚ್ಚು ಗಂಭೀರವಾಗಿದೆ, ಗಹನೀಯವಾಗಿದೆ.

ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ

ನಮ್ಮ ರಾಜ್ಯದ ಸಾಹಿತ್ಯ ಅಕಾಡೆಮಿಯು ತಾನು ಪ್ರಶಸ್ತಿ ನೀಡುವ ರೀತಿಯನ್ನು ಬದಲಿಸುವುದು ಅಗತ್ಯವಿದೆ. ಅದು ನೀಡುವ ಪ್ರಶಸ್ತಿಗಳು, ಪ್ರಶಸ್ತಿಯನ್ನು ನೀಡುವ ಆ ವರ್ಷದ ಎಲ್ಲ ಸಾಹಿತ್ಯ ಕೃತಿಗಳನ್ನು ಒಳಗೊಂಡಿರುವುದಿಲ್ಲ. ರಾಜ್ಯೋತ್ಸವ ಪ್ರಶಸ್ತಿಗಳಿಗೋಸುಗ ಅರ್ಜಿ ಹಾಕಿಕೊಳ್ಳುವವರಂತೆ, ಪ್ರಶಸ್ತಿಗೋಸುಗ ಪರಿಶೀಲನೆ ನಡೆಸಲು ಪುಸ್ತಕಗಳನ್ನು ಅಕಾಡೆಮಿಗಳಿಗೆ ಕಳಿಸುವವರ ಪುಸ್ತಕಗಳು ಮಾತ್ರ ಪರಿಶೀಲನೆಗೆ ಒಳಪಡುತ್ತವೆ. ಊಟದ ಟಿಕೆಟ್ ಕೊಂಡವರಿಗೆ ಮಾತ್ರ ಊಟ ಸಿಕ್ಕುತ್ತದೆ. ಕೆಲವರು ಮಾತ್ರ ತಮ್ಮ ಪುಸ್ತಕಗಳನ್ನು ಅಕಾಡೆಮಿಗಳಿಗೆ ಕಳಿಸಿಕೊಡುತ್ತಾರೆ. ಪುಸ್ತಕಗಳನ್ನು ಬರೆದಿರುವವರಲ್ಲಿ ಹೆಚ್ಚೆಂದರೆ ಶೇ.೧೦ರಷ್ಟು ಜನರ ಕೃತಿಗಳು ಮಾತ್ರ ಅಕಾಡೆಮಿಗೆ ಬಂದಿರುತ್ತವೆ.

ವರ್ಷದ ಸಾಹಿತ್ಯದ ಸಾಧನೆಯನ್ನು ನಿಷ್ಕರ್ಷ ಮಾಡುವ ಸಾಹಿತ್ಯ ಅಕಾಡೆಮಿಯು ತನ್ನ ಅಳತೆಗೋಲನ್ನು ಸರಿಯಾಗಿ ಇರಿಸಿಕೊಳ್ಳಬೇಕು. ಕೆಲವೇ ಕೃತಿಗಳಿಗೆ ಸೀಮಿತವಾದ ಸಮೀಕ್ಷೆಯನ್ನು ಎಲ್ಲ ಕೃತಿಗಳಿಗೆ ಸಂಬಂಧಿಸಿದ ಸಮೀಕ್ಷೆಯೆಂದು ಹೇಳುವುದು ಅಪ್ರಸ್ತುತವೆನಿಸುತ್ತದೆ. ಇದು ಮತದಾರರ ಒಲವುಗಳನ್ನು ಅಭ್ಯಸಿಸುವ ಚುನಾವಣಾ ಪೂರ್ವದ ಪರಿವೀಕ್ಷಣೆಯಂತೆ ಆಗಬಾರದು. ಈ ಸಾಹಿತ್ಯ ಸಾಧನೆಯನ್ನು ಅಳೆಯಲು ಒಂದು ಸಮಂಜಸವಾದ ವಿಧಾನವನ್ನು ನಿಯೋಜಿಸುವುದು ಅಗತ್ಯವಿದೆ. ವಸ್ತುನಿಷ್ಠ ವಿಮರ್ಶೆ ನಡೆದರೆ ಅದಕ್ಕೆ ಹೆಚ್ಚಿನ ವಿಶ್ವಾಸಾರ್ಹತೆ ಹಾಗೂ ಸ್ವೀಕಾರಾರ್ಹತೆ ಬರುತ್ತದೆ.

ಕನ್ನಡ ವಿಮರ್ಶೆಯ ಗತಿ- ಸ್ಥಿತಿ

ಕನ್ನಡದಲ್ಲಿ ಸರಿಯಾದ ವಿಮರ್ಶೆಯ ಬಹು ದೊಡ್ಡ ಕೊರತೆ ಇದೆ. ವ್ಯಾಪಕವಾದ ಓದು ಇಲ್ಲದವರಿಗೆ ತಮ್ಮ ಗಮನಕ್ಕೆ ಬಂದ ಕೃತಿಯೇ ಗಹನವಾದದ್ದಾಗಿ ಕಾಣುತ್ತದೆ. ಆಲದ ಮರವನ್ನು ಕಾಣದಿದ್ದವರಿಗೆ ತಮ್ಮ ಊರಿನ ಔಡಲ ಮರವೇ ಆಲದ ಮರವೆಂಬಂತೆ ಕಾಣುತ್ತದೆ. ತುಲನಾತ್ಮಕ ಓದು ಇಲ್ಲದೆ, ಕೇವಲ ಕನ್ನಡದ ನಾಲ್ಕೆಂಟು ಕೃತಿಗಳನ್ನು ಓದಿದವರು ತಾವು ಓದಿದ ಕೃತಿಯನ್ನು ಕುರಿತು ‘ಇದು ಜಗತ್ತಿನಲ್ಲಿಯೇ ಶ್ರೇಷ್ಠ ಕೃತಿ’ ಎಂದು ಹೇಳುವುದು ಹಾಸ್ಯಾಸ್ಪದ ಸಂಗತಿ ಎನಿಸುತ್ತದೆ.

ಒಳ್ಳೆಯ ಬರವಣಿಗೆಯಲ್ಲಿ ವಿಶೇಷಣಗಳ ಉಪಯೋಗ ಕಡಿಮೆ ಇರಬೇಕು. ಆದರೆ, ಸಾಮಾನ್ಯವಾಗಿ ನಾವು ನಮ್ಮ ಮಾತಿನಲ್ಲಿ, ಬರಹದಲ್ಲಿ, ವಿಶೇಷಣಗಳನ್ನು ಬಹು ಧಾರಾಳವಾಗಿ ಉಪಯೋಗಿಸುತ್ತೇವೆ. ನಮ್ಮಲ್ಲಿ ಎಲ್ಲರೂ ಖ್ಯಾತರು, ಪ್ರಖ್ಯಾತರು. ಸಾಮಾನ್ಯರಾದವರು ಯಾರೂ ಇಲ್ಲವೇ ಇಲ್ಲ. ಸಾಹಿತಿಗಳಾದವರು, ಭಾಷೆಯನ್ನು ಯಾವ ರೀತಿ ಆಡುತ್ತಾರೆ, ಬರೆಯುವಾಗ ಅದನ್ನು ಯಾವ ರೀತಿ ಬಳಸುತ್ತಾರೆ ಎನ್ನುವುದಕ್ಕೆ ಜನರಿಗೆ ಮಾದರಿ ಎನಿಸುವಂತೆ ಇರಬೇಕು.

ಇತ್ತೀಚಿನ ವರ್ಷಗಳಲ್ಲಿ ನಿಖರವಾದ ವಿಮರ್ಶೆ ಇಲ್ಲದಿರುವ ಬಹು ದೊಡ್ಡ ಕೊರತೆಯನ್ನು ನಾವು ಕಾಣುತ್ತಿದ್ದೇವೆ. ಕೃತಿಯನ್ನು ರಚಿಸಿದವರು ಯಾರು ಎನ್ನುವುದನ್ನು ನೋಡಿ, ಅವರು ಏನು ಬರೆದಿದ್ದಾರೆನ್ನುವುದನ್ನು ನೋಡಿ ಅಲ್ಲ- ವ್ಯಕ್ತಿನಿಷ್ಠ ವಿಮರ್ಶೆಗಳು ಬರತೊಡಗಿವೆ.

ಸಾಹಿತ್ಯ ರಚನೆಗೆ ತನ್ನನ್ನು ತೊಡಗಿಸಿಕೊಂಡಿರುವ ವ್ಯಕ್ತಿಯು ತನ್ನ ಜಾತಿ ಕುಲ ಪರಿಸರವನ್ನು ಮೀರಿ ಬೆಳೆಯಬೇಕಾಗಿದೆ. ಅವನು ತನ್ನ ಸುತ್ತಲೂ ಕಟ್ಟಿಕೊಂಡಿರುವ ಕೋಟೆಯಿಂದ ಹೊರಬಂದು, ವಿಶಾಲ ಮಾನವತೆಯ ಭಾಗವೆಂದು ತನ್ನನ್ನು ಗುರುತಿಸಿಕೊಳ್ಳಬೇಕು. ಆ ಮಾನವತೆಗೆ ತನ್ನ ಪ್ರೀತಿ ಅಂತಃ ಕರಣಗಳನ್ನು ಲೇಪಿಸುವುದಿದೆ. ಎನ್ನುವುದನ್ನು ಪ್ರತಿಯೊಬ್ಬ ಬರಹಗಾರನೂ ಅರಿತಿರಬೇಕು.

ಕನ್ನಡವನ್ನು ಶ್ರೀಮಂತಗೊಳಿಸುವ ಬಗೆ

ಅರ್ವಾಚೀನ ಕಾಲದ ಎಲ್ಲ ಬಗೆಯ ಬಹು ಸಮರ್ಥವಾದ ಅಭಿವ್ಯಕ್ತಿಯನ್ನು ಕನ್ನಡಕ್ಕೆ ತಂದುಕೊಡುವ ಪ್ರಜ್ಞಾಪೂರ್ವಕ ಪ್ರಯತ್ನ ಸತತವೂ ನಡೆಯಬೇಕಾದ ಅವಶ್ಯಕತೆ ಇದೆ. ಜ್ಞಾನದ ಕ್ಷಿತಿಜಗಳು ವಿಸ್ತಾರಗೊಳ್ಳುತ್ತಲೇ ಇರುವುದರಿಂದ ಆ ನಿಟ್ಟಿನಲ್ಲಿ ವಿಸ್ತೃ ತ ಪ್ರಯತ್ನ ನಡೆಯುವುದು ಅಗತ್ಯವೂ ಅನಿವಾರ್ಯವೂ ಆಗಿದೆ. ಸೂರ್ಯನೇಮಿ ಕ್ರಮದಂತೆ ಇದು ಅವ್ಯಾಹತವಾಗಿ ನಡೆಯುತ್ತಲೇ ಇರಬೇಕು.

ಹೊತ ಶಬ್ದಗಳಲ್ಲಿ ಕ್ಲಿಷ್ಟತೆ, ಸಂಕೀರ್ಣತೆ ಇರಬಾರದು, ರೋಗಕ್ಕಿಂತ ಪರಿಹಾರ ಕೆಟ್ಟದ್ದು ಎಂಬಂತೆ ಆಗುವುದು ಸರಿಯಲ್ಲ.

ನಾಗರಿಕತೆ ಬೆಳೆದಂತೆ, ನಮ್ಮಲ್ಲಿ ಈ ಮೊದಲು ಇಲ್ಲದ ಕಚೇರಿಗಳು ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಕಾಣಿಸಿಕೊಂಡಿವೆ. ಅವುಗಳಿಗೆ ಪರ್ಯಾಯವಾಗಿ, ಅನ್ನಲು ಸುಲಭವಾದ ಸೂಕ್ತವಾದ ಪದಗಳು ಬಂದರಂತೂ ಸರಿಯೇ. ಆದರೆ ಒತ್ತಾಯದ ಮಾಘ ಸ್ನಾನ ಮಾಡಿಸಿದಂತೆ ಅವುಗಳ ಸ್ಥಳದಲ್ಲಿ ಅನ್ನಲು ಸುಲಭವಲ್ಲದ ಕಠಿಣ ಹಾಗೂ ಕ್ಲಿಷ್ಟ ಪದಗಳನ್ನು ತರಬಾರದು.

ಮನುಷ್ಯನು ಬದುಕಬೇಕಾದರೆ ತಿನ್ನಬೇಕು. ಒಂದು ಭಾಷೆ ಕೂಡ ಮನುಷ್ಯನಂತೆಯೇ ಇದೆ. ತನ್ನ ಆಧುನಿಕತೆಯನ್ನು ಉಳಿಸಿಕೊಂಡು, ಅಭಿವ್ಯಕ್ತಿಗೆ ಹೊಸ ಬಾಯಿಯನ್ನು ತಂದುಕೊಡಬೇಕೆಂದು ಇಂಗ್ಲೀಷು ಪ್ರತಿವರ್ಷ ಕನಿಷ್ಠ ೨೦೦೦ ಶಬ್ದಗಳನ್ನು ಬೇರೆ ಭಾಷೆಗಳಿಂದ ಪಡೆದು ತನ್ನ ಶಬ್ದಕೋಶದ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳುತ್ತದೆ.

ಹೊಸ ಶಬ್ದಗಳ ಸೃಷ್ಟಿಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಅವು ಸಾಧ್ಯವಾದ ಮಟ್ಟಿಗೆ ಸೂಕ್ತವಾದ ಸರಿಯಾದ ಶಬ್ದವನ್ನೇ ಬಳಸಬೇಕು.

ಯಾವುದಕ್ಕೆ ಯಾವ ಪದವನ್ನು ಉಪಯೋಗಿಸಿದರೆ ಸೂಕ್ತ ಎನ್ನುವುದು ನಿಗದಿ ಆಗಬೇಕು. ವಿಶ್ವಸಂಸ್ಥೆಯಲ್ಲಿ ಸೆಕ್ಯೂರಿಟೀ ಕೌನ್ಸಿಲ್ ಇದೆ. ಅದನ್ನು ಒಂದೊಂದು ಪತ್ರಿಕೆಯವರು ಒಂದೊಂದು ರೀತಿ ಹೇಳುತ್ತಾರೆ. ಕೆಲವರಿಗೆ ಅದು ಭದ್ರತಾ ಸಮಿತಿ, ಇನ್ನು ಕೆಲವರಿಗೆ ಅದು ಸುರಕ್ಷಿತಾ ಮಂಡಲಿ. ಹೀಗೆ ಇನ್ನೂ ಏನೇನೋ ಅವರು ಹೇಳುತ್ತಿರುವುದು ಒಂದನ್ನು ಕುರಿತೋ, ಇಲ್ಲವೆ ಬೇರೆ ಬೇರೆಯಾದುದನ್ನು ಕುರಿತೋ. ಸಂಸ್ಥಾ ವಾಚಕ ಪದಗಳಲ್ಲಿ ಏಕರೂಪತೆ ಇದ್ದರೆ ಅರ್ಥ ವೈಪರೀತ್ಯಕ್ಕೆ ಕಾರಣವೇ ಇರುವುದಿಲ್ಲ.

ಭಾರತದಲ್ಲಿ ಈಗ ಪ್ರಜಾಸತ್ತೆ ಬಂದಿದೆ. ಆದರೆ ಜನರು ಉಪಯೋಗಿಸುವ ಭಾಷೆಗೆ ಪ್ರಜಾಸತ್ತಾತ್ಮಕ ಸ್ವರೂಪ ಇನ್ನೂ ಬಂದಿಲ್ಲ . ವಸಾಹತುಶಾಹಿ ಕಾಲದ ಭಾಷೆಯನ್ನೇ ಜನರು ಈಗಲೂ ಬಳಸುತ್ತಿದ್ದಾರೆ.

ಸರಕಾರದಲ್ಲಿ ಜನರ ಕೆಲಸವೇನೋ ಆಗುವುದಿರುತ್ತದೆ. ಅವರು ಮಂತ್ರಿಗಳಿಗೆ, ಅಧಿಕಾರಿಗಳಿಗೆ ಅರ್ಜಿ ಬರೆದು ತಮ್ಮ ಮನವಿ ಸಲ್ಲಿಸುತ್ತಾರೆ. ಅವರು ಪ್ರಜಾಸತ್ತಾತ್ಮಕವಲ್ಲದ, ಬ್ರಿಟಿಷ್ ಕಾಲದ ಭಾಷೆಯನ್ನು ಬಳಸುತ್ತಾರೆ. ಅವರ ಭಾಷೆಗೆ ಪ್ರಜಾಸತ್ತಾತ್ಮಕ ಸ್ವರೂಪ ಇನ್ನೂ ಬಂದಿಲ್ಲ. ಪ್ರಭುಗಳಿಗೆ ಬರೆಯುವಂತೆ ಅವರು ಈಗಲೂ ಬರೆಯುತ್ತಾರೆ.

ನಮ್ಮ ಜನರು ಅಮೇರಿಕೆಯಿಂದ ಸಾಲವನ್ನು ತರುತ್ತಾರೆ. ಆ ಸಾಲದಂತೆ ಅಮೇರಿಕೆಯವರ ಪ್ರಜಾಸತ್ತಾತ್ಮಕ ಭಾಷೆಯನ್ನು ಅನೇಕರು ಇಲ್ಲಿಗೆ ತರಬಾರದು. ತಮ್ಮ ದೇಶದ ಅಧ್ಯಕ್ಷನು ಅವರಿಗೆ ಸಾಹೇಬ ಅಲ್ಲ. ಖಾವಂದ ಅಲ್ಲ, ಮೆಹರ್ಬಾನ ಅಲ್ಲ, ಅವನು ಅವರಿಗೆ ಮಿಸ್ಟರ್ ಪ್ರೆಸಿಡೆಂಟ್ ಅಷ್ಟೆ . ಆ ದೇಶದ ಜನರು ಸಲ್ಲಿಸುವ ಮನವಿ ಅಲ್ಲಿ ಯಾರ ಸನ್ನಿಧಿಗೂ ಹೋಗುವುದಿಲ್ಲ.

ನೀವು ಹಿಮಾಚ್ಛಾದಿತ ಪ್ರದೇಶಕ್ಕೆ ಹೋದಾಗ ಸೋಜಿಗಗೊಳ್ಳುವ ಚಮತ್ಕಾರಿಕ ದೃಶ್ಯವೊಂದು ನಿಮ್ಮ ಕಣ್ಣಿಗೆ ಬೀಳುತ್ತದೆ. ಆ ಹಿಮದ ಹೊದಿಕೆಯನ್ನು ಬೇಧಿಸಿಕೊಂಡು ಬಂದ ಸಸ್ಯಗಳು, ಹೂವು ಅರಳಿಸಿ ನಿಂತಿರುವುದನ್ನು ಅಲ್ಲಿ ನೀವು ಕಾಣುತ್ತೀರಿ. ಆ ಚೇತೋಹಾರಿ ದೃಶ್ಯವನ್ನು ಕಂಡು ನಿಮ್ಮ ಮನಸ್ಸು ಆಹ್ಲಾದತೆಯನ್ನು ತಂದುಕೊಂಡು ಪ್ರಫುಲ್ಲಿತವಾಗುತ್ತದೆ.

ಅದರಂತೆ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೂಡ ಕನ್ನಡವು ಕರ್ನಾಟಕದಲ್ಲಿ ತನ್ನ ಕೃತಿ ಸುಗಂಧವನ್ನು ಸೂಸತೊಡಗಿದೆ. ಪಡುಕು ಇರುವಲ್ಲಿ ಬೀಜಗಳು ಮೊಳೆತು ಪಲ್ಲವಿಸುವಂತೆ, ಕನ್ನಡವು ನುಸುಳಿಕೊಂಡು ಮೇಲೆದ್ದು ಬೆಳೆಯತೊಡಗಿದೆ.

ಆಗಬೇಕಾದ ಕೆಲಸ ದೊಡ್ಡದಿದೆ. ಆದರೆ ಆಗಿರುವ ಕೆಲಸ ಸಣ್ಣದೇನೂ ಅಲ್ಲ. ಕನ್ನಡಕ್ಕೆ ಜಗತ್ತಿನ ನಾನಾ ಭಾಗಗಳಿಂದ ಜ್ಞಾನ ಹರಿದು ಬರಬೇಕಾಗಿದೆ. ಬೆಳಕು ಗಾಳಿ ಬರುವುದಕ್ಕೆ ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿರಿಸುವಂತೆ, ಕನ್ನಡವು ಹೊಸ ಜ್ಞ‌ಆನಕ್ಕೆ ತನ್ನ ಕಿಟಕಿ ಬಾಗಿಲುಗಳನ್ನು ತೆರೆದಿರಿಸಿಕೊಳ್ಳಬೇಕು.

ಕನ್ನಡವನ್ನು ಶ್ರೀಮಂತಗೊಳಿಸುವ ಕೆಲಸ ಯಾವ ನಿಟ್ಟಿನಿಂದ ನಡೆದರೂ ಅದು ಸ್ವಾಗತಾರ್ಹವೆನಿಸಬೇಕು. ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ನಾಗರಿಕತೆಗಳಲ್ಲಿ ಶ್ರೇಷ್ಠವಾದ ಸಾಹಿತ್ಯ ಕೃತಿಗಳೆಲ್ಲವೂ ಕನ್ನಡಕ್ಕೆ ಬರಬೇಕು. ಕನ್ನಡವನ್ನು ಶ್ರೀಮಂತಗೊಳಿಸುವ ಪ್ರಯತ್ನಗಳನ್ನೆಲ್ಲ ನಾವು ಮೆಚ್ಚಬೇಕು. ಪುರಸ್ಕರಿಸಬೇಕು.

ಮಕ್ಕಳ ಸಾಹಿತ್ಯ

ಓದುವುದು ಮಕ್ಕಳಿಗೆ ಹಾಗೂ ನವಸಾಕ್ಷರರಿಗೆ ಆಕರ್ಷಕವೆನಿಸುವಂತೆ ಗ್ರಂಥ ರಚನೆ ಆಗಬೇಕಾಗಿದೆ. ಮಕ್ಕಳ ಪುಸ್ತಕಗಳಲ್ಲಿ ಹೆಚ್ಚು ಚಿತ್ರಗಳಿರಬೇಕು. ಅವು ಹೆಚ್ಚು ಸರಳವಾದ ಭಾಷೆಯಲ್ಲಿ ಇರಬೇಕು. ಮಕ್ಕಳಿಗೋಸುಗ ಬರೆಯುವ ಪಠ್ಯಪುಸ್ತಕಗಳಲ್ಲಿ ನಾವು ಅಪೇಕ್ಷಿಸುವುದು ಬಹಳಷ್ಟು ಇದೆ.

ಮಕ್ಕಳ ಶಬ್ದಕೋಶದ ಪರಿಮಿತಿ ಏನು ಎನ್ನುವುದು ಪಠ್ಯಪುಸ್ತಕಗಳನ್ನು ರಚಿಸುವವರು ತಿಳಿದುಕೊಂಡಿರಬೇಕಾದ ಅವಶ್ಯಕತೆ ಇದೆ.

ಸಮಗ್ರ ರಾಜ್ಯವನ್ನು ಪ್ರತಿನಿಧಿಸುವ ಪಠ್ಯಪುಸ್ತಕ ಸಮಿತಿ ಈ ರಾಜ್ಯದಲ್ಲಿ ಇನ್ನೂ ನಿರ್ಮಾಣಗೊಳ್ಳಬೇಕಾಗಿದೆ. ಶಿಕ್ಷಣ ತಜ್ಞರಿಗಿಂತ ಅಲ್ಲಿ ಬೇರೆಯವರ ಉಪಯೋಗವೇ ಹೆಚ್ಚಾಗಿದೆ. ಸರಕಾರವು ತಜ್ಞರ ಆಯ್ಕೆಯಲ್ಲಿ ನೆಲ್ಸನ್ ದೃಷ್ಟಿಯನ್ನು ಇರಿಸಿಕೊಳ್ಳದೆ, ಸ್ವೀಕಾರಾರ್ಹತೆ ಇರುವ ವ್ಯಾಪಕ ದೃಷ್ಟಿಯನ್ನು ಇರಿಸಿಕೊಳ್ಳಬೇಕು.

ಈ ಸರಕಾರಿ ತಜ್ಞರು ಉಪಯೋಗಿಸುವ ಪದಗಳು ಸಾಮಾನ್ಯವಾಗಿ ಕರ್ನಾಟಕದ ಎಲ್ಲ ಪ್ರದೇಶಗಳ ಜನರಿಗೂ ತಿಳಿಯುವಂತಿರಬೇಕು. ತಮ್ಮದೇ ಸರಿಯೆನ್ನುವ ಪೂರ್ವಗ್ರಹ ದೃಷ್ಟಿ ಇರಬಾರದು.

ಸಾಹಿತಿ ಹೃದಯಗಳಿಗೆ ಸೇತುವೆ ಕಟ್ಟಬೇಕು

ನಮ್ಮ ಸಾಹಿತಿಗಳಿಂದ ಸಾಹಿತ್ಯ ಕ್ಷೇತ್ರದಿಂದ ಜನರು ಬಹಳಷ್ಟನ್ನು ನಿರೀಕ್ಷಿಸಿದ್ದಾರೆ. ಸಾಹಿತಿಗಳು ತಾವು ಇನ್ನೊಬ್ಬರಿಗೆ ಹೇಳುವುದನ್ನು ಅವರು ತಮ್ಮ ಜೀವನದಲ್ಲಿ ತೋರಿಸಿಕೊಡಬೇಕೆಂದು ಜನರು ಅಪೇಕ್ಷಿಸುತ್ತಾರೆ. ಕವಿ ಸಾಹಿತಿಗಳನ್ನು ಶೆಲ್ಲಿ ಜಗತ್ತಿನ ಅನಧಿಕೃತ ಶಾಸಕರೆಂದು ಕರೆದಿದ್ದಾನೆ. ಆ ಮಾತಿಗೆ ಸಾಕ್ಷಿ ಎನಿಸುವಂತೆ ಅವರು ಬದುಕಬೇಕು.

ಸಾಹಿತಿಗಳು ಏನು ಆಡುತ್ತಾರೆ, ಏನು ಮಾಡುತ್ತಾರೆ ಎನ್ನುವುದನ್ನು ಜನರು ನೋಡುತ್ತಾರೆ. ಸದಾ ಕಾಲವೂ ಪರೀಕ್ಷೆಗೆ ಒಳಗಾದಂತೆ ಅವರ ಸ್ಥಿತಿ ಇರುತ್ತದೆ. ಇಡಿ ಜಗತ್ತೇ ಒಂದು ರಂಗಭೂಮಿ ಎನ್ನುವ ಇಂಗ್ಲಿಷ್ ನಾಟಕಕಾರ ಶೇಕ್ಸ್‌ಪಿಯರನ ಮಾತನ್ನು ಕೈಲಾಸಂ ಒಪ್ಪುವುದಿಲ್ಲ . ರಂಗಭೂಮಿಯಲ್ಲಿ ಸೈಡ್‌ವಿಂಗ್ಸ್ ಇರುತ್ತವೆ. ‘ಆದರೆ, ಸುಸ್ತಾದಾಗ ಸುಧಾರಿಸಿಕೊಳ್ಳಲು ಸಮಾಜದಲ್ಲಿ ಸೈಡ್‌ವಿಂಗ್ಸ್ ಎಲ್ಲಿ ?’ ಎಂದು ಅವರು ಕೇಳುತ್ತಾರೆ.

ಸಾಹಿತಿಯಾದವನು ಜಗತ್ತನ್ನು, ಜನರನ್ನು, ಜೀವನವನ್ನು ಪ್ರೀತಿಸಬೇಕು. ಜೀವನವನ್ನು ಪ್ರೀತಿಸಿದರೆ ಯಾರ ದ್ವೇಷವನ್ನೂ ಕಟ್ಟಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನಾ ಬಗೆಗಳಿಂದ ಸೇರಿದ ಬಗೆಬಗೆಯ ಜನರಿರುವ ಸಂಕೀರ್ಣವಾದ ಸಮ್ಮಿಶ್ರ ಸಮಾಜದಲ್ಲಿ ನಾವು ಬದುಕಿದ್ದೇವೆ. ನಾವು ಹೊಂದಿಕೆ ಮಾಡಿಕೊಂಡು ಹೋಗಬೇಕು. ಜನರು ಒಬ್ಬರನ್ನೊಬ್ಬರು ಪ್ರೀತಿಸುವಂತೆ ಅವರ ಹೃದಯಗಳಿಗೆ ಸೇತುವೆಗಳನ್ನು ಕಟ್ಟಬೇಕು.

ನಮ್ಮ ಸಾಹಿತಿಗಳಲ್ಲಿ ಹಿಂದೆ ಕಾಣುತ್ತಿದ್ದ ಸೋದರತ್ವ ಈಗ ಕಾಣುತ್ತಿಲ್ಲವೆಂದು ಅನೇಕರು ಅಲ್ಲಲ್ಲಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಸೇತುವೆಗಳನ್ನು ಕಟ್ಟಬೇಕಾದವರು, ಕಟ್ಟಿದ ಸೇತುವೆಗಳನ್ನೇಕೆ ಮುರಿದು ಹಾಕಬೇಕು? ಘನತೆಯನ್ನು ಇರಿಸಿಕೊಳ್ಳಬೇಕಾದ ಸಾಹಿತಿಗಳು ಸಣ್ಣತನಕ್ಕೆ ಇಳಿದಿರುವುದು, ಅವರ ಬಗೆಗೆ ದೊಡ್ಡ ಭಾವನೆಯನ್ನು ಇರಿಸಿಕೊಂಡ ಜನರೆಲ್ಲರಿಗೂ ವಿವಂಚನೆಯನ್ನು ಉಂಟುಮಾಡಿದೆ.

ಸುವರ್ಣಯುಗ ನಮ್ಮ ಹಿಂದೆ ಆಗಿ ಹೋಯಿತೆಂದು ನಾವು ತಿಳಿಯುವುದು ಸರಿಯಲ್ಲ. ಅದನ್ನು ಈಗ ನಾವು ಪುನಃ ನಿರ್ಮಿಸುವುದು ಸಾಧ್ಯವಿದೆ.

ಶಬ್ದಗಳೊಂದಿಗೆ ಭಾವನೆಗಳೊಂದಿಗೆ ವ್ಯವಹರಿಸುವ ಪ್ರತಿಯೊಬ್ಬ ಮನುಷ್ಯನೂ ತಾನು ಒಳ್ಳೆಯತನದ ಆರಾಧಕ ಎನ್ನುವಂತೆ ತನ್ನ ಜೀವನವನ್ನು ಬದುಕಬೇಕು. ಅವನ ಬದುಕು ಬರಹಗಳಲ್ಲಿ ದ್ವಂದ್ವ ಇರಬಾರದು. ಅವನ ಮನಸ್ಸು ಹಾಗೂ ಲೆಕ್ಕಣಿಯಲ್ಲಿ ಅಲ್ಪತನ ಕಾಣಿಸಿಕೊಳ್ಳಬಾರದು.

ಮಹಾತ್ಮಾ ಗಾಂಧಿಯವರು ೧೯೩೧ರಲ್ಲಿ ಗುಜರಾಥೀ ಸಾಹಿತ್ಯ ಸಮ್ಮೇಲನದಲ್ಲಿ ಲೇಖಕರನ್ನು ಕುರಿತು ಹೇಳಿದ ಮಾತು ಇಂದಿಗೂ ಎಂದೆಂದಿಗೂ ಪ್ರಸ್ತುತವೆನಿಸುವಂತೆ ಇದೆ. ಒಬ್ಬ ಲೇಖಕನು ತನ್ನ ಲೇಖನಿಯನ್ನು ಪವಿತ್ರ ಭಾವನೆ ಇರಿಸಿಕೊಂಡು, ಕಾಗದದ ಮೇಲೆ ಇಡಬೇಕು. ಆಗ ಆಕಾಶದಿಂದ ಗಂಗೆ ಸುರಿಯುವಂತೆ, ಶ್ರೇಷ್ಠ ಸಾಹಿತ್ಯ ಅವನ ಲೇಖನಿಯಿಂದ ಹರಿದು ಬರುತ್ತದೆ.

ಋಷಿ ಅಲ್ಲದವನು ಕಾವ್ಯ ರಚಿಸಲಾರನೆಂದು ಹೇಳುವ ಪುರಾಣೋಕ್ತಿಯಲ್ಲಿ ಬಹಳಷ್ಟು ಅರ್ಥ ಇದೆ. ಹೇಳುವ ಮಾತು ಪರಿಣಾಮ ತೋರಿಸಿಕೊಡಬೇಕಾದರೆ, ಆ ಮಾತಿನ ಹಿಂದೆ ಒಬ್ಬ ಮನುಷ್ಯ ಇರಬೇಕು. ಆಗ ಅವನು ಹೇಳಿದ ಮಾತು ಬರೀ ಮಾತೆನಿಸುವುದಿಲ್ಲ. ಅದು ಅಲ್ಲಮ ಪ್ರಭುಗಳು ಹೇಳುವಂತೆ ಜ್ಯೋತಿರ್ಲಿಂಗವೆನಿಸುತ್ತದೆ.

ಭಾರತದ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳು ಕೂಡಿ ಬಿದ್ದಿರುವುದಕ್ಕೆ ಭಾರತ ಹಾಗೂ ರಾಜ್ಯ ಸರ್ಕಾರಗಳೇ ಕಾರಣವಾಗಿವೆ. ಜನರು ನ್ಯಾಯ ಪರಿಹಾರ ಪಡೆಯುವುದಕ್ಕೋಸುಗ ಕೋರ್ಟಿನ ಕಟ್ಟೆ ಹತ್ತಬೇಕಾದ ಪ್ರಸಂಗ ಬಂದೊದಗಿದೆ.

ಕನ್ನಡದ ಸಮಸ್ಯೆಗಳು
ಕೋರ್ಟಿನಲ್ಲಿ ಮೊಕದ್ದಮೆಗಳು ಕೂಡಿಬಿದ್ದಿರುವಂತೆ, ಕರ್ನಾಟಕದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡಿಬಿದ್ದಿವೆ. ಸರಕಾರದಲ್ಲಿರುವವರು, ಪರಿಹಾರ ಒದಗಿಸುವುದಕ್ಕೆ ಬದಲಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಾ ನಡೆದಿದ್ದಾರೆ. ಕನ್ನಡಕ್ಕೋಸುಗ ಏನು ಬೇಕೋ ಅದನ್ನು ಸರಕಾರವು ಒದಗಿಸಿಕೊಡುತ್ತಿಲ್ಲ. ಕನ್ನಡವು ಸಹಜವಾಗಿ ಪಡೆಯುವಂಥ ಚಿಕ್ಕ ಪುಟ್ಟ ಕರುಣೆಗಳನ್ನ ಕೂಡ, ಆಂದೋಲನ ಹೂಡಿಯೇ ಪಡೆಯಬೇಕೆಂದು ಸರಕಾರದ ಉದ್ದೇಶ ಇದೆಯೆಂದು ತೋರುತ್ತದೆ.

ಜನರು, ಕನ್ನಡದ ಬಗೆಗೆ ಸರಕಾರವನ್ನು ಎಚ್ಚರಿಸಲು ಜಹಾಂಗೀರನ ಗಂಟೆಯನ್ನು ದಿನದ ಮೂರು ಹೊತ್ತು ಬಾರಿಸುತ್ತಲೇ ಇದ್ದಾರೆ. ಆ ಗಂಟೆಯ ಕೂಗನ್ನು ಕೇಳಿ, ಅದರೊಂದಿಗೆ ಸ್ಪಂದಿಸಿ ಪರಿಹಾರ ಒದಗಿಸುವ ಜಹಾಂಗೀರನು ಮಾತ್ರ ಸರಕಾರದ ಇಲಾಖೆಗಳಲ್ಲಿ ಇಲ್ಲ.

ಕನ್ನಡಕ್ಕೋಸುಗ, ಕನ್ನಡಿಗರಿಗೋಸುಗ ಕರ್ನಾಟಕ ರಾಜ್ಯ ನಿರ್ಮಾಣಗೊಂಡು ಅರ್ಧ ಶತಮಾನ ಕಳೆಯುವ ಕಾಲ ಸಮೀಪಿಸುತ್ತಿದ್ದರೂ ಕನ್ನಡಕ್ಕೆ ಕನ್ನಡಿಗರಿಗೆ , ಸರ್ಕಾದ ಬಾಗಿಲಲ್ಲಿ ಅರ್ಜಿ ಬರೆದುಕೊಂಡು ನಿಲ್ಲುವ ಪರಿಸ್ಥಿತಿ ತಪ್ಪಲಿಲ್ಲ.

ಪ್ರೊಫೆಸರ್ ಎ.ಆರ್.ಕೃಷ್ಣಶಾಸ್ತ್ರಿಗಳು, ಕನ್ನಡ ಸಾಹಿತ್ಯ ಸಮ್ಮೇಲನದ ಅಧ್ಯಕ್ಷ ಭಾಷಣದಲ್ಲಿ ಕನ್ನಡಕ್ಕೋಸುಗ ಕಳವಳಗೊಂಡು, ‘ನಿಮಗೆ ಕನ್ನಡ ಬೇಡವೋ? ಹಾಗಿದ್ದರೆ ಅದನ್ನು ಅರಬ್ಬೀ ಸಮುದ್ರಕ್ಕೆ ತಳ್ಳಿಬಿಡಿ’ ಎಂದು ಮನನೊಂದು ನುಡಿದಿದ್ದರು. ಕನ್ನಡದ ಆಚಾರ್ಯಪುರುಷರಾದ ಪ್ರೊ. ಬಿ. ಎಂ. ಶ್ರೀಕಂಠಯ್ಯ ಅವರು ತೊಂಬತ್ತು ವರ್ಷಗಳ ಹಿಂದೆ ೧೯೧೧ರಲ್ಲಿ ತಮ್ಮ ಮೊದಲ ಸಾರ್ವಜನಿಕ ಭಾಷಣವನ್ನು ಕರ್ನಾಟಕದ ಬಗೆಗೆ ಕನ್ನಡಿಗರನ್ನು ಜಾಗೃತಗೊಳಿಸಿದ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕೊಟ್ಟರು. ಆಗ ಅವರು ತಮ್ಮ ಭಾಷಣಕ್ಕೆ ಆರಿಸಿಕೊಂಡ ವಿಷಯ ‘ಕನ್ನಡ ಮಾತು ತಲೆಯೆತ್ತುವ ಬಗೆ’. ಅವರು ಆ ಮಾತು ಹೇಳಿ ಒಂದು ಶತಮಾನವೇ ಸಮೀಪಿಸುತ್ತ ಬಂದಿದ್ದರೂ, ಅಂದು ಬಿ. ಎಂ. ಶ್ರೀ.ಯವರು ಆಡಿದ ಮಾತನ್ನೇ ಬಿಡಲಾಗದ ಒಂದು ಧಾರ್ಮಿಕ ವಿಧಿಯಂತೆ ಇಂದೂ ಹೇಳುತ್ತಿದ್ದೇವೆ.

ಸುಶಿಕ್ಷಿತರಾದ ಕನ್ನಡಿಗರಲ್ಲಿ ಕನ್ನಡ ಕಳೆದು ಹೋಗತೊಡಗಿದೆ. ಅದು ಬದುಕಿ ಉಳಿದಿದ್ದರೆ ಅಶಿಕ್ಷಿತ ಕನ್ನಡಿಗರಲ್ಲಿ ಮಾತ್ರ. ಕರ್ನಾಟಕಸ್ಥರೂ ಅವರ ಸರಕಾರವೂ ಕನ್ನಡವನ್ನು ಉಳಿಸಿಕೊಂಡರೆ ಕನ್ನಡ ಉಳಿಯುತ್ತದೆ. ಬಾಳಿ ಬದುಕಿ ಬೆಳೆಯುತ್ತದೆ. ಕನ್ನಡ ಕಾವಲು ಹಾಗೂ ಕನ್ನಡ ಗಡಿ ಸಲಹಾ ಸಮಿತಿಯ ಅಧ್ಯಕ್ಷನಾಗಿದ್ದಾಗ, ಹದಿನಾರು ವರ್ಷಗಳ ಹಿಂದೆ ನಾನು ‘ಸರಕಾರವು, ಕನ್ನಡದ ಕೆಲಸಕ್ಕೋಸುಗ ಸನ್ನದ್ಧವಾಗಿ ಇರಬೇಕಾದರೆ ಅದಕ್ಕೆ ಕನ್ನಡದ ತಾಯತವನ್ನು ಕಟ್ಟಬೇಕು’ ಎಂದು ಹೇಳಿದ್ದೆ.

ಆ ಮಾತು ತನ್ನ ಪ್ರಸ್ತುತತೆಯನ್ನು ಇನ್ನೂ ಕಳೆದುಕೊಂಡಿಲ್ಲ . ಕನ್ನಡಕ್ಕೋಸುಗ ಕೈ ಎತ್ತಿ ನಿಲ್ಲಬೇಕೆಂದು ಕರ್ನಾಟಕ ಸರಕಾರಕ್ಕೆ, ಕನ್ನಡಿಗರು ಕೈಯೆತ್ತಿ ಹೇಳಬೇಕಾದ ಪ್ರಸಂಗ ಇನ್ನೂ ಇದೆಯೆನ್ನುವುದು ನಾವೆಲ್ಲರೂ ವ್ಯಸನಪಡಬೇಕಾದ ದುರದೃಷ್ಟಕರ ಸಂಗತಿ.

ಅವರು, ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸುತ್ತಿಲ್ಲವಾದರೆ ಅದಕ್ಕೆಲ್ಲ ಅವರ ಇಲಾಖೆಗೆ ಸಂಬಂಧಿಸಿದ ಮಂತ್ರಿಗಳೇ ಕಾರಣರಾಗಿದ್ದಾರೆ. ಜನ ಪ್ರತಿನಿಧಿಗಳಾದ ಮಂತ್ರಿಗಳು, ತಾವು ಮೊದಲು ಕನ್ನಡವನ್ನು ಉಪಯೋಗಿಸಿ, ತಮ್ಮ ಕೈಕೆಳಗಿನ ಅಧಿಕಾರಿಗಳೂ ಕನ್ನಡದಲ್ಲಿಯೇ ವ್ಯವಹರಿಸುವಂತೆ ನೋಡಿಕೊಳ್ಳಬೇಕು. ಅವಶ್ಯಕತೆ ಇಲ್ಲದಿರುವಲ್ಲಿಯೂ ಅವರು ಇಂಗ್ಲಿಷ್ ಪದಗಳನ್ನು, ಭಾಷೆಯನ್ನು ಉಪಯೋಗಿಸುತ್ತಾರೆ. ಈಗ ದೂರದರ್ಶನ ಬಂದಿರುವುದರಿಂದ, ಯಾವುದನ್ನೂ ಮುಚ್ಚಿ ಇರಿಸುವುದಕ್ಕೆ ಆಗುವುದಿಲ್ಲ. ಅದು, ಯಾವುದನ್ನು ಮುಚ್ಚಿಡದೆ, ಭಾಷೆಯ ವಿಷಯದಲ್ಲಿ ಯಾವ ಪಾವಿತ್ರ ಯ ಏನಿದೆಯೆನ್ನುವುದನ್ನು ತೋರಿಸುತ್ತದೆ.

ಕೇವಲ ರಾಜ್ಯದ ಜನರೇ ಇರುವ ಸಮಾರಂಭಗಳಲ್ಲಿಯೂ ಅವರು ಇಂಗ್ಲೀಷನ್ನು ಯಾವ ಪುರುಷಾರ್ಥಕ್ಕೋಸುಗ ಉಪಯೋಗಿಸುವರೋ ಅದು ಯಾರಿಗೂ ಅರ್ಥವಾಗುವುದಿಲ್ಲ. ರಾಜ್ಯಕ್ಕೆ ಸಂಬಂಧಿಸಿದ ಸಂಸ್ಥೆಗಳ ಕಟ್ಟಡಗಳ ಅಸ್ತಿವಾರ ಸಮಾರಂಭದಲ್ಲಿ, ಅವುಗಳ ಅನಾವರಣ ಸಮಾರಂಭದಲ್ಲಿ , ಹಾಕುವ ಕಲ್ಲುಗಳ ಮೇಲೆ ಇಂಗ್ಲೀಷಿನಲ್ಲಿಯೇ ತಮ್ಮ ಹೆಸರುಗಳನ್ನು ಕೊರೆಸುತ್ತಾರೆ. ಈ ‘ಭಾಮಜ’ರಿಗೆ, ಅಂದರೆ ಭಾರೀ ಮಹತ್ವದ ಜನರಿಗೆ, ಕನ್ನಡದ ಬಗೆಗೆ ಈ ಅನಾಸ್ಥೆ ಏಕೆ? ಲೋಪವಾಗಿರುವ ಕನ್ನಡದ ಅಭಿಮಾನವನ್ನು ಇವರಲ್ಲಿ ಹೇಗೆ ಭರಿಸಬೇಕು? ಈ ಜನರ ಇಂಗ್ಲೀಷ್ ಅಭಿಮಾನದ ಬಗೆಗೆ ಇಂಗ್ಲಂಡೇನಾದರೂ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವುದೇ?

ಬಡಗಿಯು ಒಡೆಯನು ಹೇಳಿದಂತೆಯೇ ಮಾಡುತ್ತಾನೆ. ಯಾವ ರೀತಿ ಬಡಗಿ ಮಾಡಬೇಕೆಂದು ಹೇಳುವ ಮಾತು ಒಡೆಯನಿಗೆ ತಿಳಿದಿರಬೇಕು. ಒಡೆಯನ ಸ್ಥಾನದಲ್ಲಿ ಇರುವ ಮಂತ್ರಿಗಳು, ತಮ್ಮ ಕೈ ಕೆಳಗೆ ಕೆಲಸ ಮಾಡುವವರಿಂದ ಯಾವ ರೀತಿ ಕೆಲಸ ಮಾಡಿಸಿಕೊಳ್ಳಬೇಕು ಎನ್ನುವುದನ್ನು ಬಲ್ಲವರಾಗಿರಬೇಕು.

ಮಂತ್ರಿ ಹೇಳಿದಂತೆ ಅಧಿಕಾರಿಯು ತನ್ನ ಕಡತಗಳಲ್ಲಿ ವ್ಯವಹರಿಸಬೇಕಾಗುತ್ತದೆ. ನಾಯಿ ಅಲ್ಲಾಡಿಸಿದಂತೆ ಬಾಲ ಅಲ್ಲಾಡಬೇಕಲ್ಲದೆ, ಬಾಲವೇ ನಾಯಿಯನ್ನು ಅಲುಗಿಸಬಾರದು.

ಸರಕಾರದ ಧೋರಣೆಗಳನ್ನು ಮಂತ್ರಿ ನಿರ್ಧರಿಸಿ ಅದರ ಅನುಷ್ಠಾನದ ಕೆಲಸವನ್ನು ಅಧಿಕಾರಿಯ ಕೈಗೆ ಕೊಡಬೇಕು. ಕೆಲ ಧೋರಣೆಗಳನ್ನು ಮಂತ್ರಿಗಳಿಗೆ ಬದಲಾಗಿ ಅಧಿಕಾರಿಗಳೇ ನಿರ್ಧರಿಸುತ್ತಾರೆಂದು ತೋರುತ್ತದೆ. ಉದಾಹರಣೆಗೆ ಬಿ. ಇಡಿ. ಬೋಧೆಯಲ್ಲಿ ಕನ್ನಡವು ಹೊಂದಿದ ಅನಾಥ ಪರಿಸ್ಥಿತಿಯ ಬಗೆಗೆ ದೊರೆಯತನಕ ದೂರು ತೆಗೆದುಕೊಂಡು ಹೋದರೂ ಏನೂ ಆಗಲಿಲ್ಲ.

ಅದನ್ನು ನಿರ್ದೇಶಿಸುತ್ತಿದ್ದ ಒಬ್ಬ ಅಧಿಕಾರಿಯು ಮುಖ್ಯಮಂತ್ರಿಗಿಂತ ಮಿಗಿಲೆನಿಸಿದ್ದರು. ಕಾಂಗ್ರೆಸ್ ಸರಕಾರ ಬರುವ ಪೂರ್ವದಲ್ಲಿ ಜನತಾದಳ ಸರಕಾರ ಇದ್ದಿತು. ಆಗಿನ ಶಿಕ್ಷಣ ಮಂತ್ರಿಗಳು ಅಂದಿನ ಶೈಕ್ಷಣಿಕ ವರ್ಷದಿಂದಲೇ ಬಿ. ಇಡಿ.ಯಲ್ಲಿ ಕನ್ನಡವು ಪ್ರಾಮುಖ್ಯವಾಗಿ ಅಳವಡಿಕೆ ಆಗುವಂತೆ ಭರವಸೆ ನೀಡಿದ್ದರು. ಅವರು ಹೋದರು. ಕನ್ನಡ ಮಾತ್ರ ಬರಲಿಲ್ಲ.

ಹೊಸ ಸರಕಾರ ಬಂದರೂ ಕನ್ನಡದ ಸಂಬಂಧವಾದ ಅದರ ಹಳೆಯ ಧೋರಣೆ ಬದಲಾಗಲೇ ಇಲ್ಲ . ಕನ್ನಡವನ್ನು ಬಿ. ಇಡಿ. ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಕಡ್ಡಾಯಗೊಳಿಸುವುದನ್ನು ಕೃಷ್ಣ ಸರಕಾರ ಇನ್ನೂ ಜಾರಿಗೊಳಿಸಬೇಕಾಗಿದೆ. ಎರಡು ವರ್ಷಗಳ ಹಿಂದೆ ಈ ವಿಷಯವನ್ನು ಮುಖ್ಯಮಂತ್ರಿಗಳೆದುರು ನಾನೇ ಪ್ರಸ್ತಾಪಿಸಿದ್ದೆ. ಅವರು ಅದನ್ನು ಕಡ್ಡಾಯಗೊಳಿಸುವ ಬಗೆಗೆ ನನಗೆ ಭರವಸೆ ನೀಡಿದ್ದರು. ಆ ಭರವಸೆ ಎರಡು ವರ್ಷ ಕಳೆದರೂ ಇನ್ನೂ ಕಾರ್‍ಯರೂಪಕ್ಕೆ ಬಂದಿಲ್ಲ. ೨೦೦೩ನೆಯ ಶೈಕ್ಷಣಿಕ ವರ್ಷದಿಂದಾದರೂ ಅದು ಕಾರ್‍ಯರೂಪಕ್ಕೆ ಬರುವಂತೆ ಮಾಡಿ, ಮುಖ್ಯಮಂತ್ರಿಗಳು ತಮ್ಮ ಮಾತನ್ನು ಉಳಿಸಿಕೊಳ್ಲಬೇಕು.

ನಾಡಿನ ಜಲ ಸಮಸ್ಯೆ

ಕೃಷ್ಣಾ ಹಾಗೂ ಕಾವೇರಿ ನದಿ ನೀರಿನ ಸಂಬಂಧವಾಗಿ ನೆರೆಯ ರಾಜ್ಯದವರಿಂದ ಕರ್ನಾಟಕಕ್ಕೆ ಬಹಳೇ ತೊಂದರೆ ಆಗಿದೆ. ಈ ನದಿ ನೀರಿನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಅನ್ಯಾಯ ಮುಂದುವರಿದರೆ ನಾವು ಕೈ ಕಟ್ಟಿಕೊಂಡು ಸುಮ್ಮನೇ ಕುಳಿತುಕೊಳ್ಳುವುದಿಲ್ಲ . ಆ ನದಿಗಳಲ್ಲಿ ನ್ಯಾಯವಾದ ಪಾಲು ನಮಗೆ ಸಲ್ಲಲೇ ಬೇಕು. ‘ನನ್ನದು ನನಗೆ ಇರಲಿ, ನಿಮ್ಮದು ನಿಮಗೇ ಇರಲಿ’ ಎನ್ನುವ ನೆರೆಯ ರಾಜ್ಯಗಳ ಅಪಹರಣ ನೀತಿಯನ್ನು ಕನ್ನಡಿಗರು ಸಹಿಸಿಕೊಂಡು ಹೋಗುವುದು ಸರ್ವಥಾ ಸಾಧ್ಯವಿಲ್ಲ .

ಆಡಳಿತದಲ್ಲಿ ಕನ್ನಡ

ಸರಕಾರದ ಕೇಂದ್ರ ಸ್ಥಳವಾದ ವಿಧಾನಸೌಧದಲ್ಲಿರುವ ಹಿರಿಯ ಅಧಿಕಾರಿಗಳಲ್ಲಿ ಕನ್ನಡದ ಬಗೆಗೆ ಇರಬೇಕಾದ ಆಸಕ್ತಿ ಇಲ್ಲ. ‘ಮಾಡಿ, ಮಾಡಿ ಕೆಟ್ಟರು ಮನವಿಲ್ಲದೆ’ ಎಂಬಂತೆ ಅವರಿಂದ ಕನ್ನಡದ ಕೆಲಸ ನಡೆದಿದೆ. ಕನ್ನಡ ಉಪಯೋಗದಲ್ಲಿ ಅವರು ಪರಿಣತಿ ಪಡೆದಿದ್ದಾರೆನ್ನುವುದನ್ನು ಅವರು ತೆಗೆದುಕೊಂಡ ಇಲಾಖಾ ಪರೀಕ್ಷೆಗಳು ಹೇಳುತ್ತವೆ. ಅವುಗಳ ಆಧಾರದ ಮೇಲೆ ಅವರು ಸಂಬಳದ ಹೆಚ್ಚಳಿಕೆಯನ್ನು ಪದೋನ್ನತಿಯನ್ನು ಪಡೆದಿದ್ದಾರೆ. ಕನ್ನಡವನ್ನು ಉಪಯೋಗಿಸುವಲ್ಲಿ ಅವರಿಗೆ ಇರುವ ಅಸಾಮರ್ಥ್ಯವನ್ನು ನೋಡಿದರೆ ಕನ್ನಡ ಸಂಬಂಧದ ಇಲಾಖಾ ಪರೀಕ್ಷೆಗಳು ಪೊಳ್ಳು- ಬೋಗಸ್ ಎಂದು ಅವು ಹೇಳುತ್ತವೆ.

ಸುಳ್ಳು ಪರೀಕ್ಷೆ ತೆಗೆದುಕೊಂಡವರನ್ನು, ಅವರಿಗೆ ಸುಳ್ಳು ಪ್ರಮಾಣ ಪತ್ರ ಕೊಟ್ಟವರನ್ನು ಉಭಯ ಭ್ರಷ್ಟರೆಂದು ಪರಿಗಣಿಸಿ ಅವರನ್ನು ದಂಡಿಸಬೇಕು. ಅವರು ಪಡೆದುಕೊಂಡಿರುವ ಹಣಕಾಸಿನ ಸೌಲಭ್ಯಗಳನ್ನು ಅವರಿಂದ ಮರಳಿ ಪಡೆದು, ಸುಳ್ಳು ದಾಖಲೆ ಸೃಷ್ಟಿಸಿ, ಅವುಗಳ ಆಧಾರದ ಮೇಲೆ ಪದೋನ್ನತಿ ಪಡೆದುದನ್ನು ಅವರಿಂದ ಕಸಿದುಕೊಳ್ಳಬೇಕು.

ತಮಿಳುನಾಡಿನ ಸಚಿವಾಲಯದಲ್ಲಿ ತಮಿಳು ಬಾರದ ಒಬ್ಬ ಐ ಎ‌ಎಸ್ ಅಧಿಕಾರಿಯನ್ನು ಗಮನಿಸಿದ ಕಾಮರಾಜರ ನಂತರ ಬಂದ ಒಬ್ಬ ಮುಖ್ಯಮಂತ್ರಿ ‘ ಈ ಮನುಷ್ಯ ನಮ್ಮ ಸಚಿವಾಲಯದಲ್ಲಿ ಏಕೆ ಇದ್ದಾನೆ’ ಎಂದು ಮುಖ್ಯ ಕಾರ್‍ಯದರ್ಶಿಯನ್ನು ಕೇಳಿದ್ದರು.

ಹಿರಿಯ ಐ‌ಎ‌ಎಸ್ ಅಧಿಕಾರಿಗಳ ಬಗೆಗೆ ತಮಿಳುನಾಡಿನಲ್ಲಿ ನಡೆದಂತೆ ಇಲ್ಲಿಯೂ ನಡೆಯಬೇಕೆಂದು ಕನ್ನಡ ಜನರು ತಮ್ಮ ಸರಕಾರದ ಮುಖ್ಯಸ್ಥರಿಂದ ಅಪೇಕ್ಷಿಸಿದ್ದಾರೆ. ಈ ರಾಜ್ಯದ ಸೇವೆಗೆಂದು ಬಂದ ಐ‌ಎ‌ಎಸ್ ಅಧಿಕಾರಿಗಳು ಕನ್ನಡದಲ್ಲಿ ವ್ಯವಹರಿಸುವುದು , ಅವರು ಕನ್ನಡಕ್ಕೆ ಕರ್ನಾಟಕಕ್ಕೆ ಮಾಡುವ ಉಪಕಾರವೇನೂ ಅಲ್ಲ . ಅದು, ಅವರು, ನಿರ್ವಹಿಸಬೇಕಾದ ಕರ್ತವ್ಯವೇ ಆಗಿದೆ.

ಅಧಿಕಾರಿಗಳು ಸಣ್ಣವರೇ ಇರಲಿ, ದೊಡ್ಡವರೇ ಇರಲಿ, ಅವರು ಜನರ ಸೇವೆಗೋಸುಗ ಇರುವವರಲ್ಲದೆ, ಅವರ ಸೇವೆಗೋಸುಗ ಜನರು ಇಲ್ಲ. ಜನರು ಆಡುವ ಭಾಷೆ, ಆಡಳಿತ ಭಾಷೆ ಎರಡೂ ಒಂದೇ ಆಗಿರಬೇಕು. ಬ್ರಿಟಿಷರ ಕಾಲದಲ್ಲಿಯೂ ಆಡಳಿತವು ಕನ್ನಡದಲ್ಲಿಯೇ ನಡೆದಿದ್ದಿತು. ಡಾ. ಮಹಾದೇವ ಬಣಕಾರರು, ಈ ಮಾತನ್ನು ರುಜುವಾತು ಪಡಿಸುವ, ‘ಆಂಗ್ಲರ ಆಡಳಿತದಲ್ಲಿ ಕನ್ನಡ’ ಎಂಬ ವಿದ್ವತ್ಪೂರ್ಣವಾದ ಒಂದು ಗ್ರಂಥವನ್ನೇ ಬರೆದಿದ್ದಾರೆ.

ವಿದೇಶಿಯರು- ಕನ್ನಡ

ಮೈಸೂರು ಸರಕಾರದ ಸೇವೆಗೆಂದು ಬಂದ ಹಡ್ಸನ್‌ನು ಮೂವತ್ತು ದಿನಗಳಲ್ಲಿಯೇ ಕನ್ನಡವನ್ನು ಕಲಿತನೆನ್ನುವ ಕೌತುಕಕಾರೀ ಸಂಗತಿಯನ್ನು ಅವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಆ ಹಡ್ಸನ್‌ನು ಆ ಸಂಸ್ಥಾನದ ಶಿಕ್ಷಣ ಇಲಾಖೆಯ ಪ್ರಥಮ ನಿರ್ದೇಶಕನಾಗಿದ್ದನು. ಮೈಸೂರು ರಾಜ್ಯದಲ್ಲಿ ಕನ್ನಡ ಇಲ್ಲದಿದ್ದ ಆ ಕಾಲದಲ್ಲಿ ಅವನು ತನ್ನ ಜೇಬಿನಿಂದ ಹಣ ಹಾಕಿ ೨೩ ಕನ್ನಡ ಶಾಲೆಗಳನ್ನು ಸ್ಥಾಪಿಸಿದ್ದನೆನ್ನುವ ರೋಮಾಂಚನಕಾರೀ ಸಂಗತಿಯನ್ನು ಅವರು ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಡೆಪ್ಯೂಟೀ ಚೆನ್ನಬಸಪ್ಪ ಅವರು ಮಾಡಿದ ಕೆಲಸವನ್ನೇ ಈ ಹಡ್ಸನ್ ಆಗಿನ ಮೈಸೂರಿನಲ್ಲಿ ಮಾಡಿದ್ದಾನೆ.

ಬ್ರಿಟಿಷ್ ಆಡಳಿತ ನಡೆಯುತ್ತಿದ್ದ ಆ ಕಾಲದಲ್ಲಿ ಐ.ಸಿ.ಎಸ್. ಅಧಿಕಾರಿಗಳನ್ನು ಯಾವ ರಾಜ್ಯಕ್ಕೆ ಕಳಿಸುತ್ತಿದ್ದರೋ, ಅವರು ಆ ರಾಜ್ಯದ ಭಾಷೆಯನ್ನು ಕಲಿತಿರಬೇಕು ಮತ್ತು ಸರಕಾರದಲ್ಲಿ ಆ ಭಾಷೆಯನ್ನು ಉಪಯೋಗಿಸಬೇಕೆನ್ನುವುದು ಕಡ್ಡಾಯವೆನಿಸಿದ್ದಿತು.

ಆ ಹಳೆಯ ಸಂಗತಿಯನ್ನು ಮನವರಿಕೆ ಮಾಡಿಕೊಡುವಂಥ ಒಂದು ಘಟನೆ ಐವತ್ತು ವರ್ಷಗಳ ಹಿಂದೆ ನನ್ನ ನಿದರ್ಶನಕ್ಕೆ ಬಂತು. ೧೯೯೪೯ರಲ್ಲಿ ಬಿ. ಎನ್. ದಾತಾರರ ನೇತೃತ್ವದಲ್ಲಿ ಸರದಾರ ಪಟೇಲರನ್ನು ಕಂಡು ಅವರೆದುರು ಕರ್ನಾಟಕ ಏಕೀಕರಣದ ಬಗೆಗೆ ನಿವೇದಿಸಲು ಹೋದ ಒಂದು ಪುಟ್ಟ ಪ್ರತಿನಿಧಿ ಮಂಡಲಿಯಲ್ಲಿ ನಾನೂ ಇದ್ದೆ.

ಕರ್ನಾಟಕ ಪ್ರಾಂತ ರಚನೆಯ ಸಂಬಂಧವಾಗಿ ನಾವು ಹೇಳುತ್ತಿದ್ದಂತೆ ಸರಕಾರ ಪಟೇಲರು ಬಹು ವಿಶಿಷ್ಟ ರೀತಿಯಿಂದ ‘ಹೂಂ’ ಎಂದೆನ್ನುತ್ತಿದ್ದರು. ನಮ್ಮ ನಿಯೋಗದಲ್ಲಿದ್ದ ವೆಂಕಟೇಶ ಮಾಗಡಿಯವರು ‘ ಇವರು ಏನು ಹೇಳಿದರೂ ಬರೀ ಹೂಂ ಎನ್ನುತ್ತಿದ್ದಾರೆ. ಅವರ ಬಾಯಿ ಹೇಗೆ ಬಿಡಿಸಬೇಕು?’ ಎಂದು ನನ್ನನ್ನು ಕೇಳಿದರು. ಅವರು ನನ್ನೆದುರು ಆಡಿದ ಮಾತು, ಸರದಾರ ಪಟೇಲರ ಆಪ್ತ ಕಾರ್‍ಯದರ್ಶಿ, ಹಳೆಯ ಐ.ಸಿ.ಎಸ್. ಆಗಿ, ಮುಂಬಯಿ ಸರಕಾರದ ಸೇವೆಯಲ್ಲಿದ್ದ ವಿದ್ಯಾಶಂಕರರಿಗೆ ಕೇಳಿಸಿತು. ಅದು ನಮಗೆ ತಿಳಿದಿರಲಿಲ್ಲ. ‘ಅವರು ತಕ್ಷಣವೇ ಬಾಯಿ ಬಿಡದಿದ್ದರೇನಾಯಿತು ? ಬಾಯಿ ಬಿಡಲು ನಾನು ಇದ್ದೇನಲ್ಲ ’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದಾಗ ನಮಗಾದ ಬೆರಗು ಅಷ್ಟಿಷ್ಟಲ್ಲ.

ಆಗಿನ ನಾಗರಿಕ ಸೇವೆಯಲ್ಲಿದ್ದ ಅಧಿಕಾರಿಗಳೆಲ್ಲರೂ, ತಾವೂ ಇರುವ ರಾಜ್ಯದ ಭಾಷೆಯನ್ನು ಕಲಿತು, ಜನರ ಭಾವನೆ ಹಾಗೂ ಅವರ ಬದುಕಿನಲ್ಲಿ ಬೆರೆತು ಸರಕಾರದ ವ್ಯವಹಾರವನ್ನೆಲ್ಲ ಜನರ ಭಾಷೆಯಲ್ಲಿಯೇ ನೆರವೇರಿಸುತ್ತಿದ್ದರು.

ಕನ್ನಡ ಪರ ಹೋರಾಟ

ಕನ್ನಡಕ್ಕೋಸುಗ ಕನ್ನಡಿಗರು ಈ ರಾಜ್ಯ ನಿರ್ಮಾಣಗೊಂಡ ಹಿಂದಿನ ೪೬ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕನ್ನಡದ ಬಗೆಗೆ ತಾನು ನೆರವೇರಿಸುವ ಕರ್ತವ್ಯ ಇದೆಯೆನ್ನುವ ಬುದ್ಧಿಯನ್ನು ಸರಕಾರ ತಂದುಕೊಳ್ಳಬೇಕಾಗಿದ್ದಿತು. ಒಂದು ಗಾದೆಯ ಮಾತು ಹೇಳುವ ವಿವೇಕವನ್ನು ನಾವು ಗಮನಿಸಬೇಕು. ಮನುಷ್ಯನಿಗೆ ೪೦ ವರ್ಷಗಳಾದರೂ ಬುದ್ಧಿ ಬರದೇ ಹೋದರೆ ಅದು ಮುಂದೆ ಬರುವುದೇ ಇಲ್ಲವಂತೆ. ಆ ರೀತಿ ಆಗದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಕನ್ನಡವು ಆಡಳಿತ ಭಾಷೆಯಾಗಿಯೂ, ಶೀಕ್ಷಣ ಮಾಧ್ಯಮವಾಗಿಯೂ ಪೂರ್ಣ ಪ್ರಮಾಣದಲ್ಲಿ ಇನ್ನೂ ಅನುಷ್ಠಾನಗೊಂಡಿಲ್ಲ.

ಗೋಕಾಕ ವರದಿಯ ಅನುಷ್ಠಾನ

ಗೋಕಾಕ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಲು ನಡೆಸಿದಂಥ ಭಾಷಾ ಸಂಬಂಧವಾದ ಅತ್ಯುಗ್ರವಾದ ಹೋರಾಟವು, ಸ್ವಾತಂತ್ರ್ಯ ಬಂದ ಹಿಂದಿನ ಐವತ್ತು ವರ್ಷಗಳಿಗೆ ಮೇಲ್ಪಟ್ಟ ಕಾಲದಿಂದಲೂ ಭಾರತದ ಬೇರೆ ಯಾವ ರಾಜ್ಯದಲ್ಲಿಯೂ ನಡೆದಿಲ್ಲ . ಆದರೆ ಅದರ ಫಲಶ್ರುತಿ ಏನಾಯಿತು ? ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವುದು ಪರಿಣಾಮಕಾರಿಯಾಗಿ ಇನ್ನೂ ಜಾರಿಗೊಂಡಿಲ್ಲ.

ಬರಗೂರು ವರದಿ ಜಾರಿಗೆ ಬರಲಿ

ಈಗ ಸರಕಾರವು ಕನ್ನಡ ಶಾಲೆಗಳಲ್ಲಿ ಮೂರನೆ ತರಗತಿಯಿಂದ ಇಂಗ್ಲಿಷನ್ನು ದ್ವಿತೀಯ ಭಾಷೆಯೆಂದು ಕಲಿಸಲು ಮುಂದಾಗಿದೆ. ಕನ್ನಡ ಶಾಲೆಗಳಲ್ಲಿ ಇಂಗ್ಲಿಷನ್ನು ತರಬೇಕೆನ್ನುವ ಬರಗೂರು ವರದಿಯನ್ನು ಒಪ್ಪಿದೆ. ಆದರೆ ಇಂಗ್ಲಿಷ್ ಶಾಲೆಗಳಲ್ಲಿ ಕನ್ನಡವನ್ನು ತರಬೇಕೆನ್ನುವ ಬರಗೂರರ ಶಿಫಾರಸ್ಸಿನ ಬಗೆಗೆ ಸರಕಾರ ಕುರುಡು ತೋರಿದೆ. ಹಾಗಾದರೆ, ಸರಕಾರಕ್ಕೆ ಇಂಗ್ಲಿಷ ಬೇಕು, ಕನ್ನಡ ಬೇಡವೆಂದು ಇದರ ಅರ್ಥವೋ ?

ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷನ್ನು ದ್ವಿತೀಯ ಭಾಷೆಯೆಂದು ಕಲಿಸಬೇಕೆನ್ನುವ ತೀರ್ಮಾನವನ್ನು ಸರಕಾರವು ಕೈಕೊಂಡ ಮೇಲೆ ಈ ರಾಜ್ಯದಲ್ಲಿ ಪ್ರತ್ಯೇಕ ಇಂಗ್ಲಿಷ್ ಶಾಲೆಗಳು ಇರಬೇಕಾದ ಅವಶ್ಯಕತೆ ಏನಿದೆ ?

ಈ ಬಗೆಗೆ ಸರಕಾರವು ಕನ್ನಡದ ಬಗೆಗೆ ಆಸಕ್ತಿ ಹೊಂದಿದ ಕನ್ನಡ ಪರಿಣತರ ಸಭೆಯನ್ನು ಕರೆದು ತಾನು ಭಾಷಾ ವಿಷಯದಲ್ಲಿ ಅನುಸರಿಸಬೇಕಾದ ದೃಢವಾದ ನೀತಿಯನ್ನು ಗೊತ್ತುಪಡಿಸಿಕೊಂಡು ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡು ನಿಲ್ಲಬೇಕು.

ಶಿಕ್ಷಣ ಕ್ರಮದಲ್ಲಿ ಕನ್ನಡದ ಅವಶ್ಯಕತೆ

ಸರಕಾರವು ಕನ್ನಡ ಪ್ರಾಥಮಿಕ, ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಕರ ನೇಮಕಾತಿಯಲ್ಲಿ ತ್ವರಿತ ಕ್ರಮ ಕೈಗೊಳ್ಳದೆ ಹಿಂದೇಟು ಹಾಕುತ್ತಿರುವುದರಿಂದ ಕನ್ನಡವನ್ನು ಕಲಿಸುವುದಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ. ಈ ರಾಜ್ಯದಲ್ಲಿ ಹಿಂದಿ ಶಿಕ್ಷಕರ ನೇಮಕಕ್ಕೆ ತ್ವರಿತ ಕ್ರಮವನ್ನು ಕೈಕೊಂಡಿರುತ್ತಾರೆ. ಹಿಂದೀ ಬಗೆಗೆ ರಾಜ್ಯ ಸರಕಾರಕ್ಕೆ ಇರುವ ಆಸಕ್ತಿಯು ಕನ್ನಡದ ಬಗೆಗೆ ಇಲ್ಲವೆಂದು ತೋರುತ್ತದೆ.

ರಾಜ್ಯದ ಪದವಿಪೂರ್ವ ತರಗತಿಗಳಲ್ಲಿ ಐಚ್ಛಿಕ ಕನ್ನಡ ಬೋಧೆಗೆ ಮುಕ್ತ ಅವಕಾಶವನ್ನು ಕಲ್ಪಿಸಬೇಕು. ಈ ಬಗೆಗೆ ಸರಕಾರವು ಆದೇಶವನ್ನು ಹೊರಡಿಸಬೇಕು. ಕನ್ನಡವನ್ನು ಕಲಿಸಲಿಲ್ಲದ ಯಾವ ಪದವಿ ಪೂರ್ವ ಶಿಕ್ಷಣ ಸಂಸ್ಥೆಗೂ ಸರಕಾರವು ಅನುಮತಿಯನ್ನು ನೀಡಬಾರದು.

ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳ ಎಲ್ಲ ಪದವಿ ತರಗತಿಗಳ ಮೂರೂ ವರ್ಷವೂ ಕನ್ನಡ ಆವಶ್ಯಕ ಪತ್ರಿಕೆ ಬರುವಂತೆ ನೋಡಿಕೊಳ್ಳಬೇಕು.

ಲೋಕಸೇವಾ ಆಯೋಗದಲ್ಲಿ ಕನ್ನಡ

ರಾಜ್ಯದಲ್ಲಿ ಲೋಕಸೇವಾ ಆಯೋಗ ಇದೆ. ಅದರಲ್ಲಿ ಎಸ್.ಎಸ್.ಎಲ್.ಸಿ. ಮಟ್ಟದ ಕನ್ನಡ ಕಲಿಕೆ ಕಡ್ಡಾಯವಾಗಬೇಕು. ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳಿಗೆ ಏನೇ ಕೇಳುವುದಿದ್ದರೂ ಆ ಪ್ರಶ್ನೆಗಳು ಕನ್ನಡದಲ್ಲಿ ಇರಬೇಕಲ್ಲದೆ ಯಾವ ಕಾರಣದಿಂದಲೂ ಇಂಗ್ಲಿಷ್‌ನಲ್ಲಿ ಇರಬಾರದು. ಹೊರ ರಾಜ್ಯಗಳಿಂದ ಕರ್ನಾಟಕದ ಸೇವಾ ವ್ಯವಸ್ಥೆಯೊಳಗೆ ನುಗ್ಗಿ ಬರಬೇಕೆನ್ನುವವರನ್ನು ನಿಯಂತ್ರಿಸಿದಂತಾಗುತ್ತದೆ.

ತಮಿಳುನಾಡಿನ ಲೋಕ ಸೇವಾ ಆಯೋಗದವರು ಕೇಳುವುದೇನಾದರೂ ಇದ್ದರೆ ತಮ್ಮ ಅಭ್ಯರ್ಥಿಗಳಿಗೆಲ್ಲ ತಮಿಳಿನಲ್ಲಿಯೇ ಪ್ರಶ್ನೆ ಕೇಳುತ್ತಾರೆ. ಅಪ್ಪಿ ತಪ್ಪಿಯೂ ಅವರು ಇಂಗ್ಲಿಷ್‌ನಲ್ಲಿ ಎಂದೂ ಕೇಳುವುದಿಲ್ಲ. ಇದನ್ನು ತಮಿಳುನಾಡಿನಲ್ಲಿ ಮಾಡುವುದಾದರೆ, ಕರ್ನಾಟಕದಲ್ಲಿ ಏಕೆ ಮಾಡುವುದಕ್ಕೆ ಆಗುವುದಿಲ್ಲ ?

ಕನ್ನಡ ಪುಸ್ತಕಗಳ ಸಗಟು ಖರೀದಿ

ಕರ್ನಾಟಕದಲ್ಲಿ ಗ್ರಂಥಕರ್ತನು ಬದುಕುವಂತೆ ಗ್ರಂಥಗಾರಿಕೆ ಬೆಳೆಯುವಂತೆ ಸರಕಾರವು ಗ್ರಂಥಾಲಯ ಇಲಾಖೆಯನ್ನು ಬಲಪಡಿಸಿ, ಲೇಖಕರ ಹೆಚ್ಚು ಪುಸ್ತಕಗಳನ್ನು ಕೊಳ್ಳುವ ಕುರಿತು ಪರಿಣಾಮಕಾರೀ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ.

ಪುಸ್ತಕಗಳನ್ನು ಕೊಳ್ಳುವ ಗ್ರಂಥಾಲಯ ಪ್ರಾಧಿಕಾರದ ಜನರಿಗೆ ಶೇಕಡಾವಾರು ಹಣ ಸಂದಾಯವಾಗುವುದಕ್ಕೆ ಅವಕಾಶವಿಲ್ಲದಂತೆ, ಇಷ್ಟು ಪುಟಗಳ ಪುಸ್ತಕಕ್ಕೆ ಇಷ್ಟು ಬೆಲೆಯೆಂದು ನಿಗದಿಪಡಿಸಬೇಕು. ಗ್ರಂಥಾಲಯ ಪ್ರಾಧಿಕಾರವು ಒಬ್ಬ ಲೇಖಕನ ಪುಸ್ತಕದ ೧೦೦೦ ಪ್ರತಿಗಳನ್ನಾದರೂ ಕೊಳ್ಳಬೇಕು. ಗ್ರಂಥಾಲಯಗಳ ಸಂಖ್ಯೆ ಬೆಳೆಯುತ್ತಿರುವುದರಿಂದ ಕೊಳ್ಳುವ ಪುಸ್ತಕಗಳ ಸಂಖ್ಯೆಯೂ ಹೆಚ್ಚಾಗಬೇಕು.

ವೃತ್ತಿ ಶಿಕ್ಷಣದಲ್ಲಿ ಕನ್ನಡ

ರಾಜ್ಯದ ವೈದ್ಯಕೀಯ ತಾಂತ್ರಿಕ ಹಾಗೂ ದಂತ ವಿದ್ಯಾಲಯಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಆದೇಶವನ್ನು ಸರಕಾರ ಹೊರಡಿಸಬೇಕು. ಅದು ಪರೀಕ್ಷೆಯಿಲ್ಲದೆ ಐಚ್ಛಿಕ ವಿಷಯವಾಗಿದ್ದರೆ ಅದನ್ನು ಯಾರೂ ಓದುವುದಿಲ್ಲ. ಒತ್ತಾಯ ಇದ್ದರೇನೇ ಅದರ ಮಹತ್ವ ಅವರಿಗೆ ಮನವರಿಕೆ ಆಗುತ್ತದೆ.

ಪದವಿ ಶಿಕ್ಷಣಕ್ಕೆ ಅನುದಾನದ ಮುಂದುವರಿಕೆ

ಪದವೀ ಶಿಕ್ಷಣ ಕಾಲೇಜುಗಳಿಗೆ ನೀಡುವ ಅನುದಾನವನ್ನು ನಿಲ್ಲಿಸುವ ಇಲ್ಲವೆ ಕಡಿಮೆ ಮಾಡಬೇಕೆನ್ನುವ ವಿಚಾರ ಸರಕಾರದ ತಲೆಯಲ್ಲಿ ಬಂದಿರುವುದು ವಿಷಾದ ಹಾಗೂ ವಿವಂಚನೆ ಉಂಟು ಮಾಡುವ ಸಂಗತಿಯಾಗಿದೆ. ಇದು ಉನ್ನತ ಶಿಕ್ಷಣವನ್ನು ಪಡೆಯಬೇಕೆನ್ನುವ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪ್ರಗತಿ ಹಾಗೂ ಪುರೋಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತದೆ. ಸರಕಾರ, ಈ ಪ್ರತಿಗಾಮಿ ಧೋರಣೆಯನ್ನು ಕೈಬಿಡದಿದ್ದರೆ ಈ ವಿದ್ಯಾ ಸಂಸ್ಥೆಗಳ ಶುಲ್ಕ ಹೆಚ್ಚಳಿಕೆ ಮಾಡುವುದು ಅನಿವಾರ್‍ಯ ಎನಿಸುತ್ತದೆ. ಬಡಬಗ್ಗರು ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗುತ್ತಾರೆ. ಸರಕಾರವು ಉನ್ನತ ಶಿಕ್ಷಣದ ವ್ಯಾಪಾರೀಕರಣ ನಡೆಯುವುದನ್ನು ತಡೆಗಟ್ಟಬೇಕು. ಸಾಮಾನ್ಯ ಶಿಕ್ಷಣ ಮತ್ತು ವೃತ್ತಿ ಶಿಕ್ಷಣಗಳಲ್ಲಿ ಸಮನ್ವಯ ಸಾಧಿಸುವ ಪ್ರಯತ್ನ ಕೈಗೊಳ್ಳಬೇಕು.

ಕನ್ನಡ ಸಂಘ ಸಂಸ್ಥೆಗಳಿಗೆ ಅನುದಾನ

ಕನ್ನಡ ಸಾಹಿತ್ಯ ಹಾಗೂ ಸಂವರ್ಧನೆ ಕಾರ್‍ಯಗಳು ವಿಸ್ತಾರಗೊಳ್ಳಬೇಕೇ ವಿನಾ, ಹಣಕಾಸಿನ ತೊಂದರೆಯಿಂದ ಕುಂಠಿತಗೊಳ್ಳಬಾರದು. ಕನ್ನಡ ಸಾಹಿತ್ಯ ಸಂಸ್ಕೃತಿ ಸಂಘಟನೆಗಳು ಕನ್ನಡ ಪರ ಕಾರ್‍ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಅವುಗಳಿಗೆ ಕೊಡುವ ಅನುದಾನವನ್ನು ಯಾವುದೇ ಕಾರಣದಿಂದಲೂ ಕಡಿಮೆ ಮಾಡಬಾರದು . ಕನ್ನಡದ ಅಭಿವೃದ್ಧಿಗೋಸ್ಕರ ಹೆಚ್ಚಿನ ಅನುದಾನವನ್ನು ನೀಡಬೇಕಲ್ಲದೆ, ಅದಕ್ಕೋಸುಗ ನೀಡುತ್ತಿರುವ ಅನುದಾನವನ್ನು ಕಡಿಮೆ ಮಾಡುವುದು ಸರಿಯಲ್ಲ.

ಕಲೆ ಸಂಗೀತ, ನೃತ್ಯ, ಸಾಹಿತ್ಯ , ಸಂಸ್ಕೃತಿ ಬೆಳದರೇನೇ ಒಂದು ಜನವರ್ಗದ ನಾಗರಿಕತೆ ಬೆಳದಿದೆಯೆಂದು ತಿಳಿಯುತ್ತಾರೆ. ಈ ಲಲಿತ ಕಲೆಗಳ ಅಭಿವೃದ್ಧಿಗೋಸ್ಕರ ಹಾಕಿದ ಹಣ ಕಳೆದು ಹೋಯಿತೆಂದು ತಿಳಿಯಬಾರದು. ಅವುಗಳಿಗೋಸುಗ ರಾಜ್ಯ ಸರಕಾರವು ತನ್ನ ವರಮಾನದಲ್ಲಿ ಶೇಕಡಾ ಒಂದರ ಅರ್ಧದಷ್ಟಾದರೂ ಹಣವನ್ನು ಖರ್ಚು ಮಾಡಬೇಕು. ಕನ್ನಡ ಜನರು ಈ ಕ್ಷೇತ್ರದಲ್ಲಿ ತಮ್ಮಷ್ಟಕ್ಕೇ ಬೆಳೆಯುವುದೂ ಇದೆ. ಇನ್ನೊಬ್ಬರೊಂದಿಗೆ ಸರಿಸಾಟಿಯಾಗಿ ನಿಂತು ಬೆಳೆಯುವುದೂ ಇದೆ. ಆದುದರಿಂದ ಕರ್ನಾಟಕವು ತನ್ನ ಕಲೆ ಸಾಹಿತ್ಯ ಸಂಸ್ಕೃತಿಗಳಲ್ಲಿ ಭಾರತದ ಮಿಕ್ಕುಳಿದ ರಾಜ್ಯಗಳಿಗಿಂತ ಮಿಗಿಲು ಎಂಬ ಹೆಮ್ಮೆಯನ್ನು ಇರಿಸಿಕೊಂಡು ಬೆಳೆಯಬೇಕು ಎನ್ನುವ ವಿಚಾರವನ್ನು ಕರ್ನಾಟಕದ ಜನ ಹಾಗೂ ಅವರ ಸರಕಾರ ಸದಾ ಗಮನದಲ್ಲಿ ಇರಿಸಿಕೊಂಡಿರಬೇಕು.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಮೊದಾಲಾದ ಸಂಸ್ಥೆಗಳು , ಸಾಹಿತ್ಯ ಸಂಸ್ಕೃತಿ ವರ್ಧನೆಯಲ್ಲಿ ಹಲವಾರು ದಶಕಗಳಿಂದ ಬಹು ಉಪಯುಕ್ತ ಕಾರ್‍ಯವನ್ನು ಮಾಡಿಕೊಂಡು ಬಂದಿವೆ. ಅವುಗಳ ಕಾರ್‍ಯಚಟುವಟಿಕೆಗಳು ಬೆಳೆದು ಇನ್ನೂ ವಿಸ್ತಾರವಾಗಿ ಹಬ್ಬಿಕೊಳ್ಳಬೇಕು. ಅವುಗಳಿಗೆ ನೀಡುವ ಅನುದಾನದಲ್ಲಿ ಕಡಿತ ಮಾಡದೆ ಇನ್ನೂ ಹೆಚ್ಚು ಮಾಡಬೇಕಾದ ಅವಶ್ಯಕತೆ ಇದೆಯೆನ್ನುವುದನ್ನು ಸರಕಾರ ಮನವರಿಕೆ ಮಾಡಿಕೊಳ್ಳಬೇಕು. ಸರಕಾರ ಮಾಡುವುದಕ್ಕಿಂತಲೂ ಸಾಹಿತ್ಯ ಸಂಸ್ಕೃತಿ ಸಂವರ್ಧನೆಯ ಕಾರ್‍ಯವನ್ನು ಈ ಸಂಸ್ಥೆಗಳು ಕಡಿಮೆ ಖರ್ಚಿನಲ್ಲಿ ಮಾಡುತ್ತವೆ.

ಆಕಾಶವಾಣಿ, ದೂರದರ್ಶನದಲ್ಲಿ ಕನ್ನಡ
ದೂರದರ್ಶನವು ಈಗ ಭಾರತದ ತುಂಬೆಲ್ಲ ಬಂದಿದೆ. ಆದರೆ ಕರ್ನಾಟಕದ ತುಂಬೆಲ್ಲ ಬಂದಿಲ್ಲ. ಬೆಂಗಳೂರಿನಲ್ಲಿರುವ ದೂರದರ್ಶನ ಕೇಂದ್ರವು ಕರ್ನಾಟಕದ ರಾಜಧಾನಿಯಲ್ಲಿದ್ದು ಅದು ಅಲ್ಲಿಯ ಕಾರ್‍ಯಕ್ರಮಗಳಿಗೆ, ಕಾರ್‍ಯ ಚಟುವಟಿಕೆಗಳಿಗೆ ಪ್ರಾಮುಖ್ಯತೆ ಕೊಡುತ್ತದೆ. ರಾಜ್ಯದ ಬಹುಭಾಗದ ಕಾರ್‍ಯಕ್ರಮಗಳು ಅದರಲ್ಲಿ ಬರುವುದಿಲ್ಲ. ಗುಲಬರ್ಗಾದಲ್ಲಿರುವ ಕೇಂದ್ರವು ಸೀಮಿತ ಪರಿಮಿತಿಯನ್ನು ಹೊಂದಿದೆ. ರಾಜ್ಯದ ಬಹುಭಾಗದ ಜನರು ದೂರದರ್ಶನದ ಕಾರ್‍ಯಕ್ರಮಗಳಿಂದ ವಂಚಿತರಾಗಿದ್ದಾರೆ.

ಧಾರವಾಡದಲ್ಲಿ ಆಕಾಶವಾಣಿ ಇಲಾಖೆಯವರು ದೂರದರ್ಶನ ಕೇಂದ್ರವನ್ನು ಕಟ್ಟಿದ್ದಾರೆ. ಅದು ಯಾರ ಉಪಯೋಗಕ್ಕೂ ಇಲ್ಲ. ಅದು ಕೇವಲ ಅಲಂಕಾರಕ್ಕೋಸುಗ ಇದೆ. ಅಲ್ಲಿ ಯಾವ ಕಾರ್‍ಯಕ್ರಮಗಳೂ ನಡೆಯುವುದಿಲ್ಲ . ಇದೇ ಕೇಂದ್ರವು ತಮಿಳುನಾಡಿನಲ್ಲಿ ಇದ್ದಿದ್ದರೆ, ಅಲ್ಲಿ ಯಾವ ಕಾರ್‍ಯವನ್ನೂ ನಡೆಸದೆ, ಅದನ್ನು ಸ್ತಬ್ಧವಾಗಿ ಇರಿಸುವ ಧೈರ್‍ಯವನ್ನು ವಾರ್ತಾ ಮತ್ತು ಆಕಾಶವಾಣಿ ಇಲಾಖೆಯವರು ತೋರಿಸುತ್ತಿದ್ದರೇನು ? ನಾವು ಜನರ ಪ್ರಯೋಜನಕ್ಕೋಸುಗ ಕಾರ್‍ಯನಿರ್ವಹಿಸುವುದಿದೆ ಎನ್ನುವ ವಿಚಾರವನ್ನು ಅವರು ತಮ್ಮ ತಲೆಯಲ್ಲಿ ತಂದುಕೊಂಡಿದ್ದರೆ ಬಹಳಷ್ಟು ಹಣವನ್ನು ಖರ್ಚು ಮಾಡಿ ಕಟ್ಟಿದ ದೂರದರ್ಶನ ಕೇಂದ್ರವನ್ನು ಅವರು ಹೀಗೆ ನಿಷ್ಕ್ರಿಯಗೊಳಿಸಿ ಸುಮ್ಮನೆ ಇರಿಸುತ್ತಿರಲಿಲ್ಲ. ಅದು ಪೂರ್ಣ ಪ್ರಮಾಣದ ದೂರದರ್ಶನ ಕೇಂದ್ರವಾಗುವಂತೆ ನಮ್ಮ ಸರಕಾರದವರೂ ಸಂಸದರೂ ಅದರ ಮೇಲೆ ಒತ್ತಡವನ್ನು ತರಬೇಕು. ಎಲ್ಲರೂ ಕೂಗಿಕೊಂಡರೆ ಆ ಕೂಗು ದಿಲ್ಲಿಯಲ್ಲಿರುವ ದೊರೆಗೆ ಹೋಗಿ ಮುಟ್ಟುತ್ತದೆ.

ಕನ್ನಡಿಗರಿಗೆ ಉದ್ಯೋಗ

ಕನ್ನಡಿಗರಿಗೆ ಕೆಲಸ ಸಿಕ್ಕಬೇಕು ಎನ್ನುವುದು ನಮ್ಮಲ್ಲಿ ಒಂದು ಕೂಗಾಗಿ ಉಳಿದುಕೊಂಡಿದೆಯಲ್ಲದೆ ಅದರಿಂದ ನಮಗೆ ಯಾವ ಕಾರ್‍ಯಸಿದ್ಧಿಯೂ ಕಂಡು ಬಂದಿಲ್ಲ. ಸರೋಜಿನಿ ಮಹಿಷಿ ವರದಿ ಕಾರ್‍ಯರೂಪಕ್ಕೆ ಬರಬೇಕೆನ್ನುವುದು ಕೇವಲ ಒಂದು ಘೋಷಣೆಯಾಗಿ ಉಳಿದುಕೊಂಡಿದೆ. ಕನ್ನಡಿಗರಿಗೆ ಕೆಲಸ ಸಿಕ್ಕುವುದು ಒಂದು ಮರೀಚಿಕೆ ಎನಿಸಿದೆ. ರಾಜ್ಯದಲ್ಲಿರುವ ಅನೇಕ ಉದ್ದಿಮೆಗಳಲ್ಲಿ ಭೂಮಿಪುತ್ರರಾದ ಸ್ಥಳೀಯರಿಗೆ ಕೆಲಸ ಇಲ್ಲ. ರೈಲ್ವೇ ಸಿಬ್ಬಂದಿ ನೇಮಕಾತಿ ಸಮಿತಿಯವರು ಇತ್ತೀಚೆಗೆ ಬೆಂಗಳೂರು ಮೈಸೂರು ಹಾಗೂ ಹುಬ್ಬಳ್ಳಿ ರೈಲ್ವೇ ವಿಭಾಗ ಸ್ಟೇಶನ್ ಮಾಸ್ತರರನ್ನು ನೇಮಕ ಮಾಡಿಕೊಂಡರು. ಈ ರಾಜ್ಯದವರು ಬೀಜಕ್ಕೆ ಒಬ್ಬರೂ ಕೂಡ ಇಲ್ಲ . ಎರಡು ವರ್ಷಗಳ ಹಿಂದೆ ಇದೇ ರೈಲ್ವೇಯ ಸಿಬ್ಬಂದಿ ನೇಮಕಾತಿ ಸಮಿತಿ ಇಂಜಿನ ಚಾಲಕರನ್ನು, ಸ್ಟೇಷನ್ ಮಾಸ್ತರರನ್ನು ನೇಮಕ ಮಾಡಿಕೊಂಡಿತು. ಅವರೆಲ್ಲರೂ ಬಹುತೇಕವಾಗಿ ಬಿಹಾರಿಗಳು, ಅಸ್ಸಾಮಿಯರು, ತೆಲುಗರು, ತಮಿಳರು, ಮಲಯಾಳಿಗಳು. ಇದರ ವಿರುದ್ಧ ನಮ್ಮ ಸಂಸದರು ಎಂದು ಧ್ವನಿ ಎತ್ತುತ್ತಾರೆ ?

ಕಾಸರಗೋಡು ಕರ್ನಾಟಕಕ್ಕೆ ಸೇರಲಿ

ಬೆಳಗಾವಿ ಹಾಗೂ ಕಾಸರಗೋಡುಗಳು ಕರ್ನಾಟಕದ ಎರಡು ಕಣ್ಣುಗಳು. ಅವುಗಳನ್ನು ನಾವು ಎಂದೆಂದೂ ಕಳೆದುಕೊಳ್ಳಬಾರದು. ಬೆಳಗಾವಿ ನಮ್ಮೊಂದಿಗೇ ಇದೆ. ಅದು ನಮ್ಮನ್ನು ಬಿಟ್ಟು ಹೋಗಲಾರದು. ಆದರೆ ಕಾಸರಗೋಡು ಈಗ ನಮ್ಮ ಕೈ ಬಿಟ್ಟು ಹೋಗಿದೆ. ಆದರೆ ಅದು ನಮ್ಮಿಂದ ಕಳೆದೇ ಹೋಗಬಾರದು. ಅದನ್ನು ಮರಳಿ ಪಡೆಯಲು ವಿಳಂಬ ಮಾಡಿದರೆ, ಅದರ ಭಾಷಾ ಸ್ವರೂಪವೇ ಕಳೆದು ಹೋಗಬಹುದೆನ್ನುವ ಭೀತಿ ಇದೆ.

ಮಹಾಜನ ವರದಿಯನ್ನು ಜಾರಿಗೊಳಿಸಬೇಕೆಂದು ಕೇಳುವುದೊಂದೇ ಕಾಸರಗೋಡನ್ನು ಮರಳಿ ಪಡೆಯುವ ತಾರಕೋಪಾಯವಾಗಿದೆ. ಕೇಂದ್ರ ಸರಕಾರವು ತಾನೇ ನೇಮಕ ಮಾಡಿದ, ಆ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿಗೊಸುವ ನೈತಿಕ ಹೊಣೆ ಅದರ ಮೇಲೆ.

ರಾಜ್ಯ ಸರಕಾರವು ತಾನು ಮಹಾಜನ ವರದಿಯ ಪರವಾಗಿ ಇದೆಯೆಂದು ಹೇಳುವುದರ ವಿನಾ ಗಂಭೀರವಾಗಿ ಬೇರೆ ಇನ್ನೇನನ್ನಾದರೂ ಮಾಡಬೇಕು. ಕೇರಳದೊಂದಿಗೆ ದ್ವಿಪಕ್ಷೀಯ ಮಾತನ್ನು ನಡೆಸುವುದಕ್ಕೆ ಅವಕಾಶ ಇದೆ. ಹಿಂದೆ ಕಯ್ಯಾರ ಕಿಞ್ಞಣ್ಣ ರೈ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ಸಾಹಿತ್ಯ ಸಮ್ಮೇಳನ ನಡೆದ ಮೇಲೆ ಸ್ವಲ್ಪ ದಿನಗಳ ನಂತರ ಆಗಿನ ಕೇರಳದ ಮುಖ್ಯಮಂತ್ರಿ ಇ. ಕೆ. ನಯನಾರ್ ಅವರು ತಾವು ಕಾಸರಗೋಡಿನ ಬಗ್ಗೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ಕರ್ನಾಟಕದೊಂದಿಗೆ ಮಾತುಕತೆ ನಡೆಸಲು ಸಿದ್ಧರೆಂದು ಹೇಳಿದ್ದರು. ಆದರೆ ಕೇರಳದೊಂದಿಗೆ ಮಾತುಕತೆ ನಡೆಸಲು ಕರ್ನಾಟಕ ಮುಂದಾಗಲೇ ಇಲ್ಲ. ತಮ್ಮ ಬಗೆಗೆ ಕರ್ನಾಟಕದವರಿಗೆ ತುಟಿ ಸಹಾನುಭೂತಿ ಇದೆಯೆಂದು ಕಾಸರಗೋಡಿನ ನಮ್ಮ ಕನ್ನಡ ಬಾಂಧವರು ಹೇಳುವಂತಾಗಿದೆ.

ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ನೋವಿನ ವ್ಯಥೆಯನ್ನು ಕಂಡರೆ, ಅನಿಸುವ ಹೃದಯವಿದ್ದವರಿಗೆ ಕರುಳು ಕಿತ್ತು ಬರುತ್ತದೆ. ಕನ್ನಡವು ದಿನ ದಿನವೂ ತಮ್ಮ ಕಣ್ಣೆದುರಿಗೇ ಸೊರಗಿ ಹೋಗುವುದನ್ನು ತಮ್ಮ ಕಣ್ಣಾರೆ ಕಾಣುತ್ತಿದ್ದಾರೆ. ಅವರಿಗೆ ಆಗುತ್ತಿರುವ ತಳಮಳವನ್ನು ಕಂಡ ನನಗೆ ಗೋಲ್ಡ್‌ಸ್ಮಿತ್‌ನ ‘ಜಗತ್ತಿನ ನಾಗರಿಕ’ ಸಿಟಿಝನ್ ಆಫ್ ದಿ ವರ್ಲ್ಡ್ ಎಂಬ ಪುಸ್ತಕದಲ್ಲಿಯ ಕವಿಯ ಅಳಲು ನೆನಪಿಗೆ ಬಂತು. ‘ದೇವರೇ, ಜಗತ್ತಿನ ದುಃಖವನ್ನು ನೋಡಿ ಮರುಕ ಪಡುವಂತಹ ಹೃದಯವನ್ನು ಕೊಟ್ಟೆ . ಆದರೆ ಅದನ್ನು ನಿವಾರಿಸುವ ಸಾಮರ್ಥ್ಯವನ್ನು ನೀನು ನನಗೆ ಕೊಡಲಿಲ್ಲ.’

ಬೆಳಗಾವಿಯಲ್ಲಿ ವಿಧಾನ ಮಂಡಳ ಅಧಿವೇಶನ ನಡೆಯಲಿ

ನಾಡಿನ ಗಡಿಯೊಳಗೆ, ಗಡಿಯಾಚೆಗೆ, ಇರುವ ಕನ್ನಡಿಗರು ಹಲವು ಹನ್ನೊಂದು ಬಗೆಯ ತೊಡಕುಗಳಲ್ಲಿ ಸಿಕ್ಕು ತೊಳಲಾಡುತ್ತಿದ್ದಾರೆ. ಗಡಿಯ ಪ್ರಶ್ನೆಗಳಿಗೆ ನಾವಾಗಲಿ, ನಮ್ಮ ಸರಕಾರವಾಗಲಿ, ಕೊಡಬೇಕಾದ ಗಮನವನ್ನು ಕೊಡುತ್ತಿಲ್ಲ.

ಬೆಳಗಾವಿಗೆ ಸಂಬಂಧಿಸಿದ , ಬೀದರಕ್ಕೆ ಸಂಬಂಧಿಸಿದ, ರಾಯಚೂರು , ಚಾಮರಾಜ ನಗರದ ಪ್ರಶ್ನೆಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಸರಕಾರ ಅಲಕ್ಷಿಸಿದೆ. ಕಾಲೋಚಿತವಾದ ಪರಿಹಾರೋಪಾಯಗಳನ್ನು ಕೈಗೊಂಡಿಲ್ಲ. ಗಡಿ ಪ್ರದೇಶಗಳ ಜನರು ಅನುಭವಿಸುತ್ತಿರುವ ನೋವು ಸಂಕಟ ವ್ಯಥೆ ಬೆಂಗಳೂರಿನಲ್ಲಿ ಅಧಿಕಾರ ಹಿಡಿದುಕೊಂಡಿರುವ ಜನರಿಗೆ ಅರ್ಥವಾಗುತ್ತಿಲ್ಲ.

ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರೆಂದ ಮೇಲೆ ಕುಟುಂಬದ ಸದಸ್ಯರ ಅನುವು ಆಪತ್ತುಗಳೊಂದಿಗೆ ಕುಟುಂಬದ ಇನ್ನುಳಿದ ಸದಸ್ಯರೆಲ್ಲರೂ ಸಮಾನ ಭಾವನೆಯಿಂದ ಸ್ಪಂದಿಸಬೇಕು. ಅವರ ನೋವು ನಿವಾರಣೆ ಮಾಡಬೇಕು. ಅವರ ತೊಡಕು ತೊಂದರೆಗಳನ್ನು ತೊಡೆದು ಹಾಕಬೇಕು.

ಬೆಳಗಾವಿಯು ಕರ್ನಾಟಕದ ಹೃದಯ ಭೂಮಿ. ಎಂತಲೇ ಆ ಹೃದಯ ಭೂಮಿಯನ್ನು ಹಿಡಿದುಕೊಳ್ಳಬೇಕೆನ್ನುವ ಆಸೆ ಆಕಾಂಕ್ಷೆ ಹೊಂದಿದವರಿದ್ದಾರೆ. ಬೆಳಗಾವಿಯನ್ನು ಬಹುಜತನದಿಂದ ಕಾಯ್ದುಕೊಂಡು ಹೋಗಬೇಕಾಗಿದೆ. ಕರ್ನಾಟಕ ಸರಕಾರವು, ಬೆಳಗಾವಿಯ ಬಗೆಗೆ ತನಗೆ ಕಾಳಜಿ ಇದೆಯಂದು ತೋರಿಸಲು ಈಗ ಮುಂದಾಗಬೇಕು. ಬೆಳಗಾವಿಯನ್ನು ಹಚ್ಚಿಕೊಂಡರೆ, ಅದು ಉತ್ತರ ಕರ್ನಾಟಕವನ್ನು ಹಚ್ಚಿಕೊಂಡು, ಗಡಿ ಪ್ರದೇಶಗಳ ಬಗೆಗೆ ತನಗೆ ಹೆಚ್ಚಿನ ಆಸಕ್ತಿ ಇದೆಯನ್ನುವುದನ್ನು ಪ್ರತ್ಯಕ್ಷ ಪ್ರದರ್ಶನ ಮಾಡಿ ತೋರಿಸಿದಂತಾಗುತ್ತದೆ.

ಸರಕಾರವು ತನ್ನ ವಿಧಾನ ಮಂಡಲದ ಒಂದು ಅಧಿವೇಶನವನ್ನು ಪ್ರತಿ ವರ್ಷ ಬೆಳಗಾವಿಯಲ್ಲಿ ನಡೆಸುವ ಬಗೆಗೆ ತೀರ್ಮಾನವನ್ನು ಕೈಗೊಳ್ಳಬೇಕು. ಇದರಿಂದ ಏಕಕಾಲಕ್ಕೆ ಮೂರು ಕೆಲಸಗಳು ಆಗುತ್ತವೆ. ಸರಕಾರಕ್ಕೆ ಬೆಂಗಳೂರಿನ ಬಗೆಗೆ ಮಾತ್ರ ಆಸಕ್ತಿ ಇದೆಯೆನ್ನುವ ಆರೋಪದಿಂದ ಅದು ಮುಕ್ತವಾಗುತ್ತದೆ. ತಾನು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆಯೆಂಬ ದೂರಿನಿಂದ ಅದು ದೂರ ಸರಿಯುತ್ತದೆ. ಅದೇ ವೇಳೆಗೆ ಬೆಳಗಾವಿಯ ಬಗೆಗೆ ತನಗೆ ವಿಶೇಷ ಆಸಕ್ತಿಯಿದೆ ಎನ್ನುವುದನ್ನು ಕಾರ್‍ಯರೂಪದಲ್ಲಿ ಕಾಣಿಸಿಕೊಟ್ಟಂತೆ ಆಗುತ್ತದೆ.

ಉರ್ದು ಅಕಾಡೆಮಿ ಬೇಕೆ ?

ಸರಕಾರದಲ್ಲಿರುವವರು ಕನ್ನಡ ಹಾಗೂ ಕರ್ನಾಟಕದ ಬಗ್ಗೆ ದೂರದೃಷ್ಟಿಯಿಂದ ಆಲೋಚಿಸುವುದು ಅಗತ್ಯವಿದೆ. ಅವರ ಅಧಿಕಾರದ ಅವಧಿ ಪರಿಮಿತವಾಗಿರುತ್ತದೆ. ಆದರೆ ಅವರು ಕೈಗೊಳ್ಳುವ ನಿರ್ಣಯಗಳು ಬಹು ದೂರಗಾಮಿ ಪರಿಣಾಮವನ್ನುಂಟು ಮಾಡುತ್ತವೆ. ಈಗ ಇಲ್ಲಿ ಉರ್ದು ಅಕಾಡೆಮಿ ಬಗ್ಗೆ ನಾನು ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ. ಕರ್ನಾಟಕದಲ್ಲಿ ಉರ್ದು ಗ್ರಂಥಗಾರಿಕೆ ಇಲ್ಲದಿರುವಾಗ ಅಕಾಡೆಮಿಯನ್ನು ಅಲಂಕರಿಸುವುದಕ್ಕೋಸ್ಕರ ಇರಿಸಿಕೊಳ್ಳಬೇಕೇ ?

ಕೆಲ ವರ್ಷಗಳ ಹಿಂದೆ ಒಂದು ಪತ್ರಿಕೆಯಲ್ಲಿ ರಾಜ್ಯದ ಉರ್ದು ಅಕಾಡೆಮಿಯವರು ಒಂದು ಜಾಹೀರಾತನ್ನು ಪ್ರಕಟಿಸಿದ್ದರು. ಉರ್ದು ಅಭ್ಯಾಸ ಮಾಡುವವರಿಗೋಸ್ಕರ ತಾನು ಶಿಷ್ಯವೇತನ ಕೊಡುವುದಾಗಿ. ಇದು ಕರ್ನಾಟಕದಲ್ಲಿ ಉರ್ದು ಗ್ರಂಥಗಾರಿಕೆಯೇ ಇಲ್ಲ ಎನ್ನುವುದನ್ನು ನಮಗೆ ತೋರಿಸುತ್ತದೆ.

ಇಂತಹ ಸ್ಥಿತಿ ಇರುವಾಗ ಉರ್ದು ಅಕಾಡೆಮಿ ಯಾವ ಸೌಭಾಗ್ಯಕ್ಕೋಸುಗ ಇರಬೇಕು ? ಇದೀಗ ಕರ್ನಾಟಕವು ಒಂದು ಪ್ರತ್ಯೇಕ ಉರ್ದುಶಿಕ್ಷಣ ನಿರ್ದೇಶನಾಲಯವನ್ನು ಸ್ಥಾಪಿಸಬೇಕೆನ್ನುವ ಆಲೋಚನೆಯಲ್ಲಿ ತೊಡಗಿದೆ.

ಉರ್ದು ವಿಚಾರದಲ್ಲಿ ಸರಕಾರವು ಒಂದು ಸ್ಪಷ್ಟ ತಿಳಿವಳಿಕೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ.

ಈ ರಾಜ್ಯದ ಮುಸ್ಲಿಂ ಬಾಂಧವರು ಉರ್ದು ಭಾಷೆಯವರಲ್ಲ. ಅವರು ಕನ್ನಡ ಭಾಷೆಯವರೇ ಆಗಿದ್ದಾರೆ. ಇಲ್ಲಿಯ ತಮಿಳರಂತೆ ಮಲೆಯಾಳಿಗಳಂತೆ ಅವರು ಹೊರಗಿನಿಂದ ಬಂದವರಲ್ಲ. ಅವರು ಈ ರಾಜ್ಯದವರೇ ಆಗಿದ್ದಾರೆ. ಅವರು ಇಲ್ಲಿಯ ಭೂಮಿ ಪುತ್ರರು.

ಉರ್ದುಭಾಷೆಗೆ ೩೫೦ ವರ್ಷಗಳ ಆಚೆಯ ಇತಿಹಾಸವಿಲ್ಲ. ನಮ್ಮ ಮುಸ್ಲಿಂ ಬಾಂಧವರು ಈ ಉರ್ದು ಭಾಷೆ ಬರುವ ಪೂರ್ವದಲ್ಲಿ ಇದ್ದವರು. ರಾಷ್ಟ್ರಕೂಟ ದೊರೆ ನೃಪತುಂಗನ ಕಾಲದಿಂದಲೂ ಅವರ ಅಸ್ತಿತ್ವ ಇಲ್ಲಿ ಇದೆ. ತನ್ನ ಮುಸ್ಲಿಂ ಪ್ರಜೆಗಳಿಗೋಸ್ಕರ ನೃಪತುಂಗನು ಕ್ರಿ. ಶ. ೮೭೫ರಲ್ಲಿ ತನ್ನ ರಾಜಧಾನಿ ಮಳಖೇಡದಲ್ಲಿ ಒಂದು ಮಸೀದಿಯನ್ನು ಕಟ್ಟಿಸಿದ್ದನು ಎನ್ನುವ ಸಂಗತಿಯನ್ನು ಅಲ್ತೇಕರರು ‘ರಾಷ್ಟ್ರಕೂಟ ಚರಿತ್ರೆ’ ಎಂಬ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ.

ಅಲ್ಲಿಂದ ಹಿಡಿದು ಉರ್ದು ಬರುವವರೆಗೆ ಇಲ್ಲಿಯ ಮುಸ್ಲಿಮರು ಕನ್ನಡವನ್ನಲ್ಲದೆ ಬೇರೆ ಭಾಷೆ ಆಡುತ್ತಿರಲಿಲ್ಲ . ಉರ್ದು ಬಂದ ಮೇಲೆ ಕೂಡ ಅವರು ಕನ್ನಡವನ್ನು ಉಳಿಸಿಕೊಂಡಿದ್ದಾರೆ ಮತ್ತು ಅವರಲ್ಲಿ ಕೆಲವರು ಉರ್ದುವನ್ನೂ ಕಲಿತಿದ್ದಾರೆ. ಕರ್ನಾಟಕದ ಗ್ರಾಮಾಂತರ ಪ್ರದೇಶದ ಮುಸ್ಲಿಮರಿಗೆ ಕನ್ನಡ ಬರುವಂತೆ ಉರ್ದು ಬರುವುದಿಲ್ಲ.

ಇಲ್ಲಿ ಒಂದು ಸಂಗತಿಯನ್ನು ಅರಿತುಕೊಳ್ಳಬೇಕಾದ ಅವಶ್ಯಕತೆ ಇದೆ. ೧೮೫೭ರಲ್ಲಿ ನಡೆದ ಸ್ವಾತಂತ್ರ್ಯ ಯುದ್ಧದಲ್ಲಿ ಮೊಗಲರ ಕೊನೆಯ ಚಕ್ರವರ್ತಿ ಬಹಾದ್ದೂರಶಾಹ ಜಾಫರ ಬ್ರಿಟಿಷರಿಗೆ ಎದುರಾಗಿ ಹೋರಾಡಿದ. ಆಗ ನಮ್ಮ ಮುಸ್ಲಿಂ ಬಾಂಧವರು ಇಂಗ್ಲಿಷು ವೈರಿ ಭಾಷೆ ಎಂದು ಬಗೆದು ಅದನ್ನು ಕಲಿಯಲಿಲ್ಲ. ಹೀಗಾಗಿ ಅವರು ಸಹಜವಾಗಿಯೇ ಹಿಂದೆ ಬಿದ್ದರು.

ಈಗ ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯಾಗಿರುವಾಗ ಮುಸ್ಲಿಮರು ಅದನ್ನು ಕಲಿಯದೇ ಹೋದರೆ ಈಗಲೂ ಹಿಂದೆ ಬೀಳುತ್ತಾರೆ.

ಕೀರ್ತಿ ಶೇಷರಾದ ಅಜೀಜ ಸೇಟ್ ಒಂದು ಅರೇಬಿಕ್ ಶಾಲೆಗೆ ಭೆಟ್ಟಿ ಕೊಟ್ಟ ಒಂದು ಪ್ರಸಂಗವನ್ನು ನಾವು ಇಲ್ಲಿ ಜ್ಞ‌ಆಪಿಸಿಕೊಳ್ಳಬೇಕು. ‘ನೀವು ಎಲ್ಲರೂ ಅರೇಬಿಕ್ ಕಲಿತು ಏನು ಮಾಡುತ್ತೀರಿ. ಅರೇಬಿಕ್ ಕಲಿತರೆ ನಿಮಗೆ ಇಲ್ಲಿ ಕೆಲಸ ಸಿಕ್ಕುವುದೇನು ?’ ಅವರು ಕೇಳಿದ ಈ ಪ್ರಶ್ನೆ ಉರ್ದು ಭಾಷೆಗೆ ಕೂಡ ಅನ್ವಯಿಸುತ್ತದೆ. ಉರ್ದು ಒಂದು ಒಳ್ಳೆಯ ಭಾಷೆ. ಆದರೆ ಮುಸ್ಲಿಮರು ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಮಾಡಿಕೊಂಡು ಉರ್ದುವನ್ನು ದ್ವಿತೀಯ ಭಾಷೆಯನ್ನಾಗಿ ಕಲಿಯಬೇಕು.

ಸರಕಾರವಾಗಲೀ, ತಪ್ಪು ನಿರ್ದೇಶನದ ಮುಸ್ಲಿಂ ಧುರೀಣರಾಗಲೀ, ಮುಸ್ಲಿಂ ಬಾಂಧವರನ್ನು ಕೊಳ್ಳಕ್ಕೆ ನೂಕುವ ಪ್ರಯತ್ನ ಮಾಡಬಾರದು. ಕರ್ನಾಟಕದಲ್ಲಿ ಉರ್ದು ಶಿಕ್ಷಣ ನಿರ್ದೇಶನಾಲಯದ ಅವಶ್ಯಕತೆ ಇಲ್ಲ. ಈಗ ಸರಕಾರದವರು ಉರ್ದು ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಲು ಅವಕಾಶ ಕೊಟ್ಟರೆ ನಾಳೆ ಬೇರೆ ಭಾಷೆ ಯ ಜನರಿಂದ ಸಂಗೀತವನ್ನು ಎದುರಿಸಬೇಕಾದ ಪರಿಸ್ಥಿತಿಯನ್ನು ಸರಕಾರವು ತನ್ನ ಮೇಲೆ ತಾನೇ ತಂದುಕೊಳ್ಳುತ್ತದೆ.

ಸೋದರ ಭಾಷೆಗಳೊಂದಿಗೆ ಬಾಂಧವ್ಯ

ಕರ್ನಾಟಕವನ್ನು ಒಂದೇ ತೋಳಿನಲ್ಲಿ ಹಿಡಿದುಕೊಳ್ಳುವುದಕ್ಕೆ ಬೆಳಗಾವಿಯು ದಾರಿಯನ್ನು ತೋರಿಸಬಲ್ಲುದು. ಬೇರೆ ಬೇರೆ ಭಾಷಾ ಬಾಂಧವರು ಸೌಹಾರ್ದದಿಂದ ಇರಬಲ್ಲರೆನ್ನುವುದಕ್ಕೆ ಬೆಳಗಾವಿಯು ಸಾಕ್ಷಿಯಾಗಿದೆ. ಕನ್ನಡದಿಂದ ಮರಾಠಿ, ಮರಾಠಿಯಿಂದ ಕನ್ನಡ ಬೆಳೆಯಬೇಕು. ಕೊಂಕಣಿಯೊಂದಿಗೆ ಕರ್ನಾಟಕವು ಮಧುರ ಬಾಂಧವ್ಯವನ್ನು ಹೊಂದಿದೆ. ಕನ್ನಡವು ಕೊಂಕಣಿಯಿಂದ, ಕೊಂಕಣಿಯು ಮರಾಠಿಯಿಂದ ತೆಗೆದುಕೊಳ್ಳುವುದಿದೆ.

ಕನ್ನಡ ಹಾಗೂ ಮಲಯಾಳಂ ಭಾಷಾ ಬಾಂಧವ್ಯ ಬಹು ನಿಕಟವಾಗಿದೆ. ಮಲಯಾಳಂದಿಂದ ಕನ್ನಡಕ್ಕೆ ಬರಬೇಕು. ಕನ್ನಡದಿಂದ ಮಲಯಾಳಂಗೆ ಹೋಗಬೇಕು. ಪರಸ್ಪರ ಸಹಕಾರದಿಂದ ಉಭಯ ಭಾಷೆಗಳು ತಮ್ಮ ಸಾಹಿತ್ಯ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕು.

ಇದೇ ಮಾತು ಕನ್ನಡ ಮತ್ತು ತೆಲುಗು ಜನರಿಗೆ, ಕನ್ನಡ ಮತ್ತು ತಮಿಳು ಜನರಿಗೆ ಅನ್ವಯಿಸುತ್ತದೆ. ತೆಲುಗು, ತಮಿಳುಗಳ ಸಮೃದ್ಧ ಸಾಹಿತ್ಯ ಕನ್ನಡಕ್ಕೆ ಬರಬೇಕು. ಅದೇ ವೇಳೆಗೆ ತೆಲುಗು ತಮಿಳುಗಳಿಗೆ ಸಮೃದ್ಧ ಕನ್ನಡ ಸಾಹಿತ್ಯ ಹೋಗಬೇಕು.

ಕರ್ನಾಟಕವು ತನ್ನ ಸುತ್ತಣ ಪ್ರದೇಶಗಳೊಂದಿಗೆ ಭಾಷಾ ಬಾಂಧವ್ಯವನ್ನು ವಿಸ್ತರಿಸಿಕೊಂಡು ತನ್ನ ಸ್ನೇಹದ ಜಾಲವನ್ನು ಸುತ್ತಲೂ ಹಬ್ಬಿಸಿಕೊಳ್ಳಬೇಕು. ಭಾರತದ ಬೇರೆ ಭಾಷಾ ರಾಜ್ಯಗಳಿಗೆಲ್ಲ ಇದು ಮಾದರಿ ಎನಿಸಬೇಕು.

ಈ ರೀತಿಯ ಸಾಂಸ್ಕೃತಿಕ ಕೊಡುಕೊಳ್ಳುವ ಮೂಲಕವೇ ನಾವು ಭಾರತವನ್ನು ಬಲಪಡಿಸಬಹುದು. ಬೆಳಗಾವಿಯು, ಬದುಕುವ ದಾರಿಯನ್ನು ತೋರಿಸಬೇಕೆನ್ನುವ ಮಾತು ಸಮಗ್ರ ಭಾರತದ ವರ್ಷಕ್ಕೇ ತಿಳಿಯಬೇಕು. ಭಾರತವು ಸಾಂಸ್ಕೃತಿಕವಾಗಿ ಎದ್ದು ನಿಂತರೆ ಅದು ರಾಜಕೀಯವಾಗಿ ಎಂದೂ ಬಿದ್ದಿರಲಾರದು.

ಕರ್ನಾಟಕ ಮಹಾರಾಷ್ಟ್ರಗಳ ನಡುವಿನ ರಾಜಕೀಯ ಕೊಸರಾಟ ಇತ್ತೀಚಿನದು. ಕರ್ನಾಟಕ ಮಹಾರಾಷ್ಟ್ರಗಳ ಮೂಲ ಬೇರುಗಳು ಒಂದೇ ಆಗಿವೆ. ಉಭಯ ರಾಜ್ಯಗಳ ಸಂಸ್ಕೃತಿಯ ಮೂಲ ನೆಲೆಯನ್ನು ತಿಳಿದವರು ಈಗ ನಡೆದಿರುವ ದೊಂಬರಾಟಕ್ಕೆ ಬೆಲೆಯನ್ನೇನೂ ಕೊಡುವುದಿಲ್ಲ.

ಶತಮಾನಗಳಿಂದ ಸವಿ ಹಾಲಿನಂತಿದ್ದ ಕರ್ನಾಟಕ ಮಹಾರಾಷ್ಟ್ರಗಳ ನಡುವಣ ಸುಮಧುರ ಸಂಬಂಧಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಇಲ್ಲದ ರಾಜಕಾರಣಿಗಳು ಹುಳಿ ಹಿಂಡಿದ್ದಾರೆ.

ಬಾಲ ಗಂಧರ್ವರ ನಾಟಕ ಮಂಡಳಿ ಹುಬ್ಬಳ್ಳಿಗೆ ಬಂದರೆ ಅವರ ನಾಟಕಗಳು ಬಿಟ್ಟು ಬಿಡದೆ, ಎಂಟು ಹತ್ತು ತಿಂಗಳವರೆಗೆ ಭಾರೀ ಜನದಟ್ಟಣೆಯ ಪ್ರದರ್ಶನ ನೀಡುತ್ತಿದ್ದವು. ಹಿಂದೆ ಇದ್ದ ಆ ಸುಮಧುರ ಸಂಬಂಧಗಳನ್ನು ಕೆಡಿಸಿ ಹಾಕಿದವರು ಯಾರು ? ಮಹಾರಾಷ್ಟ್ರ ನಾಟಕಕಾರ ಇತ್ತೀಚೆಗಷ್ಟೇ ಹೇಳುತ್ತಿದ್ದ ಒಂದು ಮಾತು ಮಹಾರಾಷ್ಟ್ರದ ನಾಟಕಕಾರರ ಕಣ್ಣು ತೆರೆಸಬೇಕು. ನಾವು ನಾಟಕ ಮಾಡಿ ಮಹಾರಾಷ್ಟ್ರದಲ್ಲಿ ಕಳೆದುಕೊಂಡುದನ್ನು ಕರ್ನಾಟಕಕ್ಕೆ ಬಂದು ಅದನ್ನು ಅಲ್ಲಿ ಪಡೆದುಕೊಳ್ಳುತ್ತಿದ್ದೆವು.

ಕರ್ನಾಟಕ, ಮಹಾರಾಷ್ಟ್ರಗಳ ನಡುವಿನ ಗಡಿ ವಿವಾದಕ್ಕೆ ಮಹಾಜನ ವರದಿಯೇ ಅಂತಿಮ. ಮಹಾರಾಷ್ಟ್ರದವರು ಬೆಳಗಾವ ಒಂದು ಮುಗಿದ ಅಧ್ಯಾಯ ಎಂದು ತಿಳಿದುಕೊಳ್ಳಬೇಕು.

ಅವರಿಗೆ ತಿಳಿಯದಿದ್ದರೆ ಕೇಂದ್ರ ಸರಕಾರ ಅವರಿಗೆ ತಿಳಿಸಿ ಹೇಳಬೇಕು.

ದಲಿತ ಮತ್ತು ಮಹಿಳಾ ಸಾಹಿತ್ಯ

ಸಾಹಿತ್ಯವು ಜಾತಿ ವಾಚಕ, ಇಲ್ಲವೆ ಲಿಂಗವಾಚಕ ಪದವಲ್ಲ. ಅದು ಜಾತಿ ಬೇಧ ಇಲ್ಲದೆ ಲಿಂಗಬೇಧವಿಲ್ಲದೆ ಸರ್ವರನ್ನೂ ಹಿಡಿದುಕೊಂಡಿದೆ. ಲೇಖನ ಕಲೆಯು ಸೀಮಿತ ವ್ಯಾಪ್ತಿಯನ್ನು ಹೊಂದಿಲ್ಲ . ಅದು ವರ್ಣ ಭೇದ, ವರ್ಗ ಭೇದ, ಲಿಂಗ ಭೇದ, ಇಲ್ಲದ ವ್ಯವಸ್ಥೆಗೆ ಒಳಪಟ್ಟಿದೆ. ದೀನರು ದಲಿತರು ಬಹು ದೊಡ್ಡ ಅಭಿವ್ಯಕ್ತಿಯನ್ನು ಪಡೆದುಕೊಂಡು ಕನ್ನಡ ಸಾಹಿತ್ಯಕ್ಕೆ ಹೊಸ ರುಚಿಯನ್ನು ತಂದುಕೊಟ್ಟಿದ್ದಾರೆ. ಅವರಲ್ಲಿ ನ್ಯಾಯಸಮ್ಮತ ಆಕ್ರೋಶ ಇದೆ. ಅವರ ಸ್ಥಿತಿಯಲ್ಲಿರುವ ಜನರಿಗೆ ಅದು ಸಹಜವಾದದ್ದೇ. ಪೆಟ್ಟು ತಿಂದ ಇರುವೆ ಕೂಡ ಹೊರಳಿ ಬೀಳುತ್ತದೆ. ಅದು ಸಹಜವಾದದ್ದೇ. ಶತಮಾನಗಳಿಂದ ಸುಲಿಗೆ, ಶೋಷಣೆ ಹಾಗೂ ತುಳಿತಕ್ಕೆ ಒಳಗಾದವರು ಭೂಮಿಯ ಮೇಲೆ ಸೂರ್‍ಯನ ಕೆಳಗೆ ಮರ್‍ಯಾದೆಯ ಜೀವನ ಹುಡುಕಿಕೊಳ್ಳಲು ಹೋರಾಟ ಹೂಡಿದ್ದಾರೆ. ಅದು ಅವರ ಸಾಹಿತ್ಯದಲ್ಲಿ ಬಹು ಅರ್ಥ ಪೂರ್ಣವಾಗಿ ಕಾಣಿಸಿಕೊಂಡಿದೆ. ಮಾನವ ಸಮಾಜದಲ್ಲಿ ಅವರಿಗೆ ಸರಿಸಮಾನತೆ ಸಿಕ್ಕಬೇಕಾದ ಅವಶ್ಯಕತೆ ಇದೆ.

ಒಂದು ರೀತಿಯಿಂದ ಸ್ತ್ರೀಯರೂ ಕೂಡ ದಲಿತರೇ ಆಗಿದ್ದಾರೆ. ನಿಷ್ಕಾಳಜಿಗೆ ಗುರಿಯಾದ ಈ ಜನರು ಎಲ್ಲ ಜನವರ್ಗದಲ್ಲಿಂದೂ ಇದ್ದಾರೆ. ಅವರಲ್ಲಿ ಅನೇಕರ ಜೀವನವು ವ್ಯಕ್ತಿಯ ಕಥೆಯಾಗಿದೆ. ಎಲ್ಲ ಅವಮಾನಗಳ ವಿರುದ್ಧ ಅವರು ಧೈರ್‍ಯದಿಂದ ತಲೆಯೆತ್ತಿ ನಿಂತಿದ್ದಾರೆ. ಅವರಲ್ಲಿ ಗ ಹೊಸ ಪ್ರಜ್ಞೆ ಕಾಣಿಸಿಕೊಂಡಿದೆ. ಅವರ ಶಕ್ತಿ ಸಾಮರ್ಥ್ಯಗಳನ್ನು ಪಂಡಿತ ತಾರಾನಾಥರು ಗುರುತಿಸಿಕೊಂಡಿದ್ದರು. ಅದನ್ನು ಅವರು ಇಂಗ್ಲಿಷನ ಪದ ವ್ಯುಮನ ( ಡಿಟಞZಞ) ಎಂಬ ಪದದಲ್ಲಿಯ ಅಕ್ಷರಗಳನ್ನು ಬಿಡಿಸಿ ಹೇಳುತ್ತ ವ್ಯಕ್ತಪಡಿಸಿದ್ದರು. ‘ಡಬ್ಲ್ಯೂ ಎಂಬುದನ್ನು ಅವರು ಡಬಲ್ ಯೂ ಎಂದು ಓದಿಕೊಂಡು ಓ ಮಾನ ಎಂದು ಹೇಳುತ್ತಿದ್ದರು. ಅವಳು ಗಂಡಸೇ, ಅವಳು ನಿನ್ನ ಎರಡು ಪಟ್ಟು’. ಅವರ ಈ ವಿವರಣೆ ಬಹು ಅರ್ಥ ಪೂರ್ಣವಾಗಿದೆ.

ಇದು ಇನ್ನೂ ಪುರುಷ ಪ್ರಧಾನ ಸಮಾಜವಾಗಿಯೇ ಇದೆ. ಮಹಿಳೆಯರ ಬಗೆಗೆ ಇನ್ನೂ ಅವಜ್ಞೆ ಉಳಿದುಕೊಂಡಿದೆ. ಮಹಿಳೆಯರು ಈಗ ಬಹುದೊಡ್ಡ ರೀತಿಯಿಂದ ಕನ್ನಡದಲ್ಲಿ ಬರೆಯುತ್ತಿದ್ದರೂ ಇನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಅವರ ಬಗೆಗೆ ನೆಲ್ಸನ್ ದೃಷ್ಟಿಯಿದೆ. ಆ ಆಕಾಡೆಮಿಯವರಿಗೆ ನಮ್ಮ ಮಹಿಳಾ ಲೇಖಕಿಯರ ಸಾಧನೆ ಯಾವುದೂ ಕಾಣಿಸುತ್ತಿಲ್ಲ . ಇದು ವಿಷಾದಪಡತಕ್ಕ ಸಂಗತಿ.

ಕನ್ನಡ ಪತ್ರಿಕೋದ್ಯಮ

ಜಾಗತೀಕರಣವು ಅನೇಕ ಕ್ಷೇತ್ರಗಳಲ್ಲಿ ಅಸಮ ಸ್ಪರ್ಧೆಯನ್ನು ತಂದಿರುವಂತೆ ಪತ್ರಿಕಾ ಕ್ಷೇತ್ರದಲ್ಲಿಯೂ ಅದನ್ನು ತುಂಬಿದೆ. ದೊಡ್ಡ ದೊಡ್ಡ ಪತ್ರಿಕೆಗಳು ಜಿದ್ದಾ ಜಿದ್ದಿ ಹೋರಾಟವನ್ನು ಹೂಡಿರುವಾಗ ಚಿಕ್ಕ ಪತ್ರಿಕೆಗಳು ಬದುಕಿ ಉಳಿಯುವುದೇ ದುಸ್ತರವಾಗಿದೆ. ಮದ್ದಾನೆಗಳು ಉಪವನದಲ್ಲಿ ಕಾದಾಟಕ್ಕೆ ನಿಂತರೆ ಚಿಕ್ಕ ಪುಟ್ಟ ಸಸ್ಯಗಳು ಅವುಗಳ ತುಳಿತಕ್ಕೆ ಸಿಕ್ಕು ಸತ್ತು ಹೋಗುತ್ತವೆ. ಚಿಕ್ಕ ಪತ್ರಿಕೆಗಳು ಸ್ಥಳೀಯ ಜೀವನದ ಆಗು ಹೋಗುಗಳನ್ನು ಜನರಿಗೆ ತಿಳಿಸಿಕೊಡುತ್ತ ಅವರನ್ನು ಸುಶಿಕ್ಷಿತರನ್ನಾಗಿ ಮಾಡುತ್ತವೆ. ಈಗ ನಡೆದಿರುವ ಅಸಮ ಸ್ಪರ್ಧೆಯಲ್ಲಿ ಅವು ಬದುಕಿ ಉಳಿಯುವಂತೆ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಪರಿಣಾಮಕಾರಿ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ರೋಗಿ ಬದುಕಿದ್ದಾಗಲೇ ಅವನಿಗೆ ಪ್ರಾಣವಾಯುವನ್ನು ಕೊಟ್ಟು ಜೀವಿಸಿ ಉಳಿಯುವಂತೆ ನೋಡಿಕೊಳ್ಳಬೇಕು.

ಈಗ ಹೊಸ ಆಯವ್ಯಯ ಪತ್ರಿಕೆಯಲ್ಲಿ ಕಾಗದದ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಅದು ಜ್ಞ‌ಆನದ ಮೇಲೆ ಹೇರಿದ ತೆರಿಗೆಯಾಗಿದೆ. ಪತ್ರಿಕೆ ಹಾಗೂ ಪುಸ್ತಕಗಳ ಪ್ರಕಟಣೆಗೆ ಆ ತೆರಿಗೆ ತಾರಕವಾಗಿದೆ. ಹತ್ತು ಸಾವಿರದ ಒಳಗಿನ ಪ್ರಸಾರವನ್ನಷ್ಟೇ ಹೊಂದಿದ ಪತ್ರಿಕೆಗಳಿಗೆ ಆ ತೆರಿಗೆಯ ಭಾರ ಇಲ್ಲದಂತೆ ಕಾಗದವನ್ನು ಪೂರೈಸಬೇಕು. ದಲಿತರಿಗೆ ಅತ್ಯಲ್ಪ ಬಡ್ಡಿಯಿಂದ ಸಾಲ ಕೊಡುವಂತೆ ಈ ಚಿಕ್ಕ ಪತ್ರಿಕೆಗಳು ಬದುಕಿ ಉಳಿದು ಅವು ಕಾರ್‍ಯನಿರ್ವಹಿಸುವಂತೆ ಈ ಪತ್ರಿಕೆಗಳಿಗೂ ಆ ರೀತಿ ಸಾಲದ ವ್ಯವಸ್ಥೆ ಮಾಡಬೇಕು. ಸಣ್ಣ ಪತ್ರಿಕೆಗಳು ಬದುಕದೇ ಹೋದರೆ ಗ್ರಾಮಾಂತರ ಪ್ರದೇಶದ ಜನರನ್ನು ಕತ್ತಲೆಯಲ್ಲಿ ಇರಿಸಿದಂತೆ ಆಗುತ್ತದೆ. ಪತ್ರಿಕೆಗಳ ವರದಿಗಾರರಿಗೆ ಕೂಡ ನಿವೃತ್ತಿಯ ಪ್ರಯೋಜನಗಳು ಸಿಕ್ಕುವಂತೆ ನೋಡಿಕೊಳ್ಳಬೇಕು.

ಈಗ ನಾವು ಕತ್ತಲೆಯಿದೆ ಎಂದು ಶಪಿಸುತ್ತಾ ಕುಳಿತುಕೊಳ್ಳಬಾರದು. ಬೆಳಕನ್ನು ಹೊತ್ತಿಸಿ ಕತ್ತಲೆಯನ್ನು ಹೊಡೆದೋಡಿಸಬೇಕು.

ಕವಿವರ್ಯ ರವೀಂದ್ರನಾಥ ಠಾಕೂರರು ತಮ್ಮ ‘ ಸ್ಟ್ರೇ ಬರ್ಡ್ಸ್ ’ ಬಿಡಿ ಹಕ್ಕಿಗಳು ಎಂಬ ಪುಸ್ತಕದಲ್ಲಿ ಈ ಕತ್ತಲೆಯ ಬಗ್ಗೆ ಮನೋಜ್ಞ ದೃಷ್ಟಾಂತವನ್ನು ನೀಡಿದ್ದಾರೆ.

ಸೂರ್‍ಯನು ಮುಳುಗಿ ಹೋಗುತ್ತಿದ್ದಾಗ ಅವನಿಗೆ ಚಿಂತೆ ಆಯಿತಂತೆ ‘ನಾನು ಹೋಗಿ ಬಿಡುತ್ತೇನೆ. ಕತ್ತಲೆ ಜಗತ್ತನ್ನು ಕತ್ತಲೆ ಆವರಿಸಿಕೊಳ್ಳುತ್ತದೆ. ಇನ್ನೇನು ಗತಿ ?’

ಸೂರ್‍ಯನ ಈ ಅಳಲಿಗೆ ಮೂಲೆಯ ಹಣತೆಯೊಳಗಿನ ದೀಪ ಹೇಳಿತಂತೆ. ‘ನನ್ನ ದೊರೆಯೇ ನೀನು ಹೋಗಿಬಿಡು. ನನ್ನ ಮೂಲೆಯನ್ನು ನಾನು ಬೆಳಗಿಕೊಳ್ಳುತ್ತೇನೆ. ’

ನಾವು ಬೆಳಕನ್ನು ಎದುರಿಸುವ ಜನರಾದರೆ ನಮಗೆ ಕತ್ತಲೆಯೆನ್ನುವುದು ಎಲ್ಲಿಯೂ ಎದುರಾಗುವುದಿಲ್ಲ


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.