ಆಗಷ್ಟೇ ನನ್ನ ’ಮಠ’ ಚಿತ್ರ ರಿಲೀಸ್ ಆಗಿತ್ತು.. ಪತ್ರಿಕೆಗಳು ಚೆನ್ನಾಗಿ ಬರೆದವು.. ಒಂದು ವಿಶೇಷ ಚಿತ್ರವೆಂಬ ಹೊಗಳಿಕೆಗಳೂ ಚಿತ್ರಕ್ಕೆ ಸಿಕ್ತು.
ತುಂಬಾ ಕೆಲಸದ ದಿನಗಳವು. ಕನಡದ ಮೂರು ಮುಖ್ಯ ಕಮರ್ಷಿಯಲ್ ಚಿತ್ರ ನಿರ್ಮಾಪಕರುಗಳಿಂದ ಚಿತ್ರ ಮಾಡಿಕೊಡೀಂತ ನಂಗೆ ಕರೆ ಬಂದಿತ್ತು. ಕನಡದಲ್ಲಿ ವಿಶಿಷ್ಟ ರೀತಿಯ ಕಥೆಗಳನ್ನಷ್ಟೇ ಮಾಡಬೇಕೆಂಬ ನನ್ನ ಸಿದ್ಧಾಂತದ ಬೆನ್ನಲ್ಲಿ.. ಅವರುಗಳೊಡನೆ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದೆ. ಆಗ ಬಂತು ಒಂದು ಫೋನ್ ಕಾಲ್. ಹೊಸ ನಂಬರ್ರು..ಹಳೆಯ ವ್ಯಕ್ತಿ.
’ಹೇಳಿ..’
’ನಮಸ್ತೆ ಸಾರ್.. ನಾನು ನಿಮ್ಮಲ್ಲಿ ಚಿತ್ರಕಥೆ ಮಾಡೋದನ್ನ ಕಲೀಬೇಕೂ.. ಯಾವಾಗ ಬರಲೀ ಸರ್..’
’ತುಂಬ ಮುಖ್ಯ ಮೀಟಿಂಗ್‍ನಲ್ಲಿದ್ದೀನಿ.. ಮುಂದಿನ ವಾರ ಫೋನ್ ಮಾಡೀ..’ ನನ್ನ ಉತ್ತರ.
’ಸರ್..ಎರಡು ತಿಂಗಳಿಂದ ನಿಮಗೆ ಫೋನ್ ಮಾಡ್ತಾನೇ ಇದ್ದೀನಿ.. ಮುಂದಿನ ವಾರ.. ಮುಂದಿನ ವಾರ ಅಂತ ಮುಂದೆ ತಳ್ತಾನೇ ಇದ್ದೀರಾ.. ದಯವಿಟ್ಟು ಒಮ್ಮೆ ನಾನು ಬಂದು ನಿಮ್ಮನ್ನ ಭೇಟಿ ಮಾಡ್ಲಿಕ್ಕೆ ಅವಕಾಶ ಮಾಡಿಕೊಡೀ ಸಾರ್..’
ಮುಖ್ಯ ಮೀಟಿಂಗ್‍ನಲ್ಲಿದ್ದಾಗ ಈ ಥರ ಫೋನ್‍ಕಾಲ್‍ಗಳು ಕಿರಿಕಿರಿ ಮಾಡಿಬಿಡುತ್ವೆ.. ನನ್ನ ಮುಂದಿನ ಚಿತ್ರ ಯಾವುದು.. ಅದನ್ನ ನಿರ್ಮಿಸೋದು ಯಾರೂಂತ ಇನ್ನೂ ತೀರ್ಮಾನವೇ ಆಗಿಲ್ಲ.. ಈ ಮಧ್ಯದಲ್ಲಿ ಆತನಿಗೆ ನಾನು ಏನು ಭರವಸೆ ಕೊಡಲಿ..? ತಾಳ್ಮೆ ಉಳಿಸಿಕೊಂಡೇ ಹೇಳಿದೆ.
’ದೇವ್ರೂ.. ಮುಂದಿನ ವಾರದೊಳಗೆ ಎಲ್ಲವೂ ತೀರ್ಮಾನವಾಗಿರುತ್ತೆ.. ನೀನು ಮುಂದೆ ನಿರ್ದೇಶಕನಾದಾಗ ಈ ಒತ್ತಡಗಳು ನಿನಗೂ ಅರ್ಥವಾಗುತ್ತೆ.. ದಯವಿಟ್ಟು ಮುಂದಿನವಾರ ಸಂಜೆ ಫೋನ್ ಮಾಡು.. ಮಾತಾಡೋಣಾ..’
’..ಸರ್, ನಾನು ನಿರ್ದೇಶಕನಾದಾಗ ಮುಖ್ಯ ಮೀಟಿಂಗ್ ಅವಧಿಗಳಲ್ಲಿ ಸಾಕ್ಷಾತ್ ಯಮನೇ ಪೋನ್ ಮಾಡಿದ್ರೂ ಎತ್ಕೊಳಲ್ಲ ಸರ್.. ಸರಿ ಬಿಡಿ.. ಮುಂದಿನವಾರ ಮಾಡ್ತೀನಿ..’ ದೃಢವಾಗಿ ಹೇಳಿದ.
ಅವನ ಧೋರಣೆ ಬಾಲಿಶವೆನಿಸಿದರೂ ಅವನ ಉತ್ತರ ಎಲ್ಲೋ ನಂಗಿಷ್ಟವಾಯ್ತು.. ನಾನು ನನ್ನಲ್ಲಿ ಕೆಲಸ ಮಾಡಲು ಬರುವ ಹುಡುಗರನ್ನು ಆರಿಸಿಕೊಳ್ಳುವುದೇ ಹಾಗೆ.. ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಉತ್ತರವಿರೋ ಹುಡುಗರು ಬೇಕು.. ಇನ್ನೊಂದು ಪ್ರಶ್ನೆಗಳಾಗೋರಲ್ಲ..
ಮುಂದಿನ ವಾರ ಇನ್ನೂ ಒತ್ತಡದಲ್ಲಿದ್ದೆ. ’ಮಠ’ ಚಿತ್ರದ ಪಬ್ಲಿಸಿಟಿ ನಾನೇ ಕೂತು ರೂಪಿಸಬೇಕು.. ಬೇರೆ ಬೇರೆ ನಿರ್ಮಾಪಕರಿಗೆ ಬೇರೆ ಬೇರೆ ಕಥೆಗಳು..ಬೇರೆ ಬೇರೆ ಬೇರೆ ಶೈಲಿಯಲ್ಲೇ ಹೇಳಬೇಕು.. ಹೀಗೆ. ಬಂತಪ್ಪ ಮತ್ತೆ ಅವನ ಫೋನ್ ಕಾಲ್, ಯಾವುದೋ ಲ್ಯಾಂಡ್‍ಲೈನ್‍ನಿಂದ. ಪೋನ್ ಎತ್ತಿಕೊಂಡಾಗ ಅವನೇ ಇರಬಹುದೆಂಬ ಸಂಶಯವೂ ನಂಗಿರಲಿಲ್ಲ. ’ಮಠ’ ಚಿತ್ರದ ಬಗ್ಗೆ ಅಭಿಪ್ರಾಯನ ವ್ಯಕ್ತಪಡಿಸುವವರ್‍ಯಾರದೋ ಎಂಬ ’ಫೀಡ್‍ಬ್ಯಾಕ್’ ತೆಗೆದುಕೊಳ್ಳುವ ಮೂಡ್‍ನಲ್ಲಿ ’ಹಲೋ..’ ಹೇಳಿದೆ.
’ಸಾರ್.. ನಾನು ವಿಶ್ವನಾಥ. ಮುಂದಿನ ವಾರ ಫೋನ್ ಮಾಡೂ ಅಂದಿದ್ರೆ..’
’ಸಂಜೆ ಮಾಡು ಅಂದಿದ್ದ ಜ್ಞಾಪಕ ನನಗೆ. ಇನ್ನೂ ಮಧ್ಯಾಹ್ನ..ಎರಡೂವರೆ..’ ನಾನೆಂದೆ.
’ಸಂಜೆ ಹೊತ್ತು ನೀವು ಮೊಬೈಲ್ ಆಫ್‍ನಲ್ಲಿಡ್ತೀರಿ..ನಂಗೆ ಗೊತ್ತಿದೆ. ಒಂದೇ ನಿಮಿಷ..ಮಾತಾಡಿಬಿಡಿ ಸಾರ್. ಯಾವಾಗ ಬರ್‍ಲಿ ಹೇಳಿ ಸರ್..’
ಫಾಲೋಅಪ್ ಅಂದ್ರೆ ಇದಪ್ಪಾ..ಬಡ್ಡೀಮಗಾ..ನೆನ್ನೆಮೊನ್ನೆಯೆಲ್ಲಾ ಚೆಕ್ ಮಡಿದ್ದಾನೆ. ಇಲ್ಲ.. ಇವತ್ತು ಆನ್‍ನಲ್ಲಿರುತ್ತೆ..ಮಾಡಿ. ಖಂಡಿತಾ ಮಾತಾಡೋಣಾ..’ ನಾನು ಸತ್ಯವನ್ನೇ ಹೇಳಿದ್ದೆ. ಬೇಕಾದ್ರೆ ನಾನು ಮೋಸ ಮಾಡಿಬಿಡ್ತೇನೆ..ಸುಳ್ಳು ಮಾತ್ರ ಹೇಳಲ್ಲ.
ಕೆಲವೊಮ್ಮೆ ಆಹಾರದಲ್ಲಿ ಏರುಪೇರಾದಾಗ ದೇಹದ ಕೆಲವು ಭಾಗಗಳು ಮಾತ್ರ ಉರಿಯುತ್ತೆ. ಆದ್ರೆ ಅವನು ಕೊಟ್ಟ ಉತ್ತರದಿಂದ ಇಡೀ ದೇಹವೇ ಉರಿದುಹೋಗಿತ್ತು ನನಗೆ.
’.ಸರಿ ಹಾಗಾದರೆ ಮುಂದಿನ ತಿಂಗಳು ಇದೇ ದಿನಾಂಕ ನಮ್ಮ ಆಫೀಸಿಗೆ ಬಂದುಬಿಡಿ’ ಫೋನ್ ಕಟ್ ಮಾಡಿದೆ.
ಒಂದು ಚಿತ್ರವನ್ನ ಮಾಡೋದು ಅಂತ ಆಯ್ತು. ಅದರ ಸಕಲ ತಯ್ಯಾರಿಗಳಲ್ಲಿ ಮುಳುಗಿಹೋಗಿದ್ದೆ. ನನ್ನ ಚಿತ್ರದ ಯಾವುದೇ ಸನ್ನಿವೇಶ ಮತ್ತು ಸಂಭಾಷಣೆಗಳು ಕದ್ದಿರಬಾರದು ಎಂಬ ಪಾಲಿಸಿಯಲ್ಲಿ ನಾನು ಕೆಲಸ ಮಾಡುವುದರಿಂದ ಸ್ಕ್ರಿಪ್ಟ್‍ಗೆ ಹೆಚ್ಚು ಟೈಂ ತಗೋತೀನಿ. ಈ ನಿರ್ಮಾಪಕ ಧಾರಳಿ. ಸ್ಕ್ರಿಪ್ಟ್‍ಗೆ ಸಾಕಷ್ಟು ಟೈಮ್ ಕೊಟ್ಟ..ಆದರೆ ಚಿತ್ರವನ್ನೇ ಮಾಡಲಿಲ್ಲ. ಅಷ್ಟರಲ್ಲಿ ವಿಶ್ವನಾಥ ನನಗೆ ಮರೆತೇಹೋಗಿದ್ದ.
ಆ ದಿನ ಏನನ್ನೋ ಓದುತ್ತಿದ್ದೆ.. ನನ್ನ ಸಹಾಯಕ ಬಂದು ’ನಿಮ್ಮನ್ನು ಕಾಣಲಿಕ್ಕೆ ಯಾರೋ ಬಂದಿದ್ದಾರೆ’ ಅಂದ. ’ಯಾರು?’ ನನ್ನ ಪ್ರಶ್ನೆ.
’ವಿಶ್ವನಾಥ’
**********
’ನಿಮಗೆ ಫೋನ್ ಮಾಡಿಮಾಡಿ ಕಿರಿಕಿರಿ ಮಾಡಿದ್ರೆ ಕ್ಷಮೆ ಇರಲಿ.’
’ಆವತ್ತಿನ ಒತ್ತಡ ದೊಡ್ಡದಿತ್ತು.. ಈವತ್ತಿನ ಸಮಯ ಚಿಕ್ಕದಿದೆ..’
ಅಂದು ಅವನು ನಾನು ನಿರೀಕ್ಷಿಸಿದ್ದಕ್ಕಿಂತಲೂ ಚೆನ್ನಾಗೇ ಮಾತನಾಡಿದ.
’..ನನ್ನ ೧೪ಸಾವಿರ ಸಂಬಳದ ಕೆಲಸಾನ ಬಿಟ್ಟೆ..ಕನ್ನಡದಲ್ಲಿ ಒಳ್ಳೊಳ್ಳೆ ಚಿತ್ರಗಳನ್ನ ನಿರ್ದೇಶಿಸಬೇಕೂಂತ. ಸಮಯ ಸಿಕ್ಕಾಗಲೆಲ್ಲಾ ಇಂಟರ್‌ನೆಟ್‍ನಲ್ಲಿರುವ ಇಂಗ್ಲೀಷ್ ಚಿತ್ರದ ಸ್ಕ್ರಿಪ್ಟ್‍ಗಳನ್ನ ಅಭ್ಯಸಿಸಿದ್ದೇನೆ. ನನ್ನ ಉಳಿತಾಯದ ಹಣದಿಂದ ನನ್ನ ಮುಂದಿನ ಒಂದು ವರ್ಷದ ಜೀವನ ಸಾಗುತ್ತೆ(ನನಗೆ ತುಂಬಾ ಇಷ್ಟವಾದ ವಿಚಾರ ಇದು..ಪಾರ್ಟಿ ಸಂಬಳ ಕೇಳಲ್ಲ.) ನಾನು ಚಿತ್ರನಿರ್ದೇಶನಕ್ಕೆ ಇಳಿಯೋಕ್ಕಿಂತ ಮುಂಚೆ ನಿಮ್ಮ ’ಮಠ’ ನೋಡಿರೋನಾದ್ರಿಂದ ನಿಮ್ಮಲ್ಲಿ ಕಲೀಬಲ್ಲೆ ಅನಿಸಿ ನಿಮಗೆ ತೊಂದರೆ ಕೊಟ್ಟೆ.. ನೀವು ತುಂಬಾ ಓಪನ್ ಅಂತ ಕೇಳಿದ್ದೆ ನನ್ನ ಸ್ನೇಹಿತರಿಂದ.. ಚಿತ್ರಕಥೆ ಹೇಳ್ಕೊಡ್ತೀರಾ ನನಗೆ?’ ತುಂಬಾ ಸ್ಫುಟವಾಗಿ ತನ್ನ ಮಾತುಗಳನ್ನು ಮುಗಿಸಿದ.
’ನೀವು ಬರೆದಿರೋ ಯಾವ್ದಾದ್ರೂ ದೃಶ್ಯವನ್ನು ಹೇಳಿ..’
ಆತ ಒಂದು ಅದ್ಭುತ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸ್ತಾನೆ. ಅವನು ತನ್ನ ದೃಶ್ಯ ಹೇಳಿ ಮುಗಿಸುವಷ್ಟರಲ್ಲಿ ನನಗೆ ರೋಮಾಂಚನ. ಕತೆ ಹೇಳುವುದು ಒಂದು ಕಲೆ..ಕೇಳುಗನನ್ನು ರೋಮಾಂಚನಗೊಳಿಸುವಂತೆ ಹೇಳುವುದು ದೊಡ್ಡಮಟ್ಟದ ಕಲೆ. ಕತೆ ಹೇಳುವ ಕಲೆ ಈತನಿಗೆ ಸಿದ್ಧಿಸಿದೆ. ಇಂಥಾ ಪ್ರತಿಭೆ ನನ್ನ ಚಿತ್ರಕ್ಕೆ ಬಿಟ್ಟಿ ದುಡೀತಾನೇಂದ್ರೆ ನಾನ್ಯಾಕೆ ಬೇಡ ಅನ್ನಲಿ.
’ನೀವೇನು ಓದಿದ್ದೀರಿ?’
’ಕಂಪ್ಯೂಟರ್ ಸೈನ್ಸ್.. ಸಾಫ್ಟ್‍ವೇರ್ ಇಂಜಿನಿಯರ್.’
’ನಿಮ್ಮ ಮನೆಯವರ ಬಗ್ಗೆ ಹೇಳು.’
’ಮುಂದಿನ ದಿನಗಳಲ್ಲಿ ಹೇಳಿದರಾದೀತಾ..?’
**********
ನಾನು ಚಿಂತಿಸುವ ಸ್ಪೀಡಿಗೇ ಆತನೂ ಚಿಂತಿಸುತ್ತಿದ್ದ. ರಿಲೀಸಾದ ಚಿತ್ರಗಳನ್ನು ಹೋಗಿ ನೋಡಿಕೊಂಡು ಬಂದು ವಿಮರ್ಶಿಸುತ್ತಿದ್ದ..ನಾನು ಓದಬೇಕು ಅಂದುಕೊಂಡಿದ್ದ ಪುಸ್ತಕಗಳನ್ನು ತಾನು ಮೊದಲು ಓದಿ ನಾನು ಓದ್ಬೇಕೋ ಬೇಡ್ವೋ ಅಂತ ನಿರ್ಧರಿಸಿ ಹೇಳ್ತಿದ್ದ. ಬೇಡವೆಂದರೂ ನಾನು ಏಳುವ ಮುಂಚೆಯೇ ಕಾರ್ ತೊಳೆದೂಬಿಡ್ತಿದ್ದ. ನೋಡನೋಡುತ್ತಿದ್ದಂತೆ ಮನೆಮಂದಿಗೆಲ್ಲಾ ಆತ್ಮೀಯನಾಗಿಹೋದ. ಚಟುವಟಿಕೆಯ ಮಹಾಪೂರ ಆತ. ಭವಿಷ್ಯದಲ್ಲಿ ಆತ ನನಗೆ ಕಾಂಪಿಟೇಟರ್ ಆಗುವ ಎಲ್ಲಾ ಛಾಯೆಗಳೂ ಸೂಕ್ಷ್ಮವಾಗಿ ಗೋಚರಿಸಲಾರಂಭಿಸಿತು.
ಚಿತ್ರದ ಸ್ಕ್ರಿಪ್ಟ್‍ಗಳಲ್ಲಿ ತುಂಬಾ ತೊಡಗಿಸಿಕೊಂಡ. ಸಹಾಯಕ ನಿರ್ದೇಶಕನಾದರೂ ಅವನಲ್ಲಿ ನಿರ್ದೇಶಕನ ಸತ್ವ ಇದ್ದಲ್ಲಿ ಅವನು ನಿರ್ದೇಶಕನಾಗೇ ನಡ್ಕೋತಿರ್‍ತಾನೆ. ನಿರ್ದೇಶಕನಾದವನಲ್ಲಿ ನಿರ್ದೇಶಕನ ಸತ್ವ ಇಲ್ಲದಾಗ ಅವನು ನಿರ್ದೇಶಕನೇ ಆದರೂ ಸಹಾಯಕನಿರ್ದೇಶಕನಾಗೇ ನಡ್ಕೋತಿರ್‍ತಾನೆ.
ಕಾಲಾನುಕ್ರಮದಲ್ಲಿ ಯಾವ ಸಂಬಂಧಗಳೇ ಆದರೂ ಓಪನ್ ಆಗಿಬಿಡುತ್ತವೆ. ಒಂದು ದಿನ ಆತ ಹೇಳಲಾರಂಭಿಸಿದ.. ಆತನ ತಂದೆ ಮಡಿಕೇರಿಯವರು. ಚಿಕ್ಕಂದಿನಿಂದ ಈತನ ಉತ್ಸಾಹ ಚಿತ್ರನಿರ್ದೇಶಕನಾಗೋದು. ಇವರ ಕುಟುಂಬಕ್ಕೆ ಮುಖ್ಯವಾಗಿ ತಂದೆಗೆ ಅದು ಇಷ್ಟವಿಲ್ಲದ್ದು..ಈತ ಆರ್ಮಿಯಲ್ಲಿ ತನಗೆ ಇಷ್ಟವಿಲ್ಲದಿದ್ದರೂ ಕೆಲಸ ಗಿಟ್ಟಿಸುತ್ತಾನೆ. ಭಾರತದ ರಕ್ಷಣಾ ವ್ಯವಸ್ಥೆಯ ಕಛೇರಿಯಲ್ಲಿ ಡಿಕೋಡರ್ ಆಗಿ ಕಾರ್ಯ ನಿರ್ವಹಿಸ್ತಾನೆ..ದೂರದ ಖಡಕ್‍ವಾಸ್ಲಾದಲ್ಲಿ. ಈತ ಈ ಕೆಲಸದಲ್ಲಿ ಮುಂದುವರೆದದ್ದು ಮನೆಯವರಿಗೆ ತುಂಬಾ ಆನಂದ ಕೊಟ್ಟಿದೆ. ಈತನಿಗೆ ಇಷ್ಟವಿಲ್ಲದ ಈ ಕೆಲಸ ಇವನನ್ನು ಅಲ್ಲಿಂದ ಹೇಳದೇ ಕೇಳದೇ ಕೆಲಸ ಬಿಟ್ಟು ಓಡಿ ಬರುವಂತೆ ಪ್ರೇರೇಪಿಸಿದೆ. ಕನಸು ಜೀವನಕ್ಕಿಂತ ದೊಡ್ಡದು.
’ಆರ್ಮಿಯಿಂದ ಹೇಗೆ ಓಡಿ ಬರ್‍ಓದು ತಪ್ಪಲ್ವಾ..? ಶಿಕ್ಷಾರ್ಹ ಅಪರಾಧ ಅಂತ ನಾನು ಕೇಳಿದ್ದೇನೆ..’
’ಹೌದು..ಖಂಡಿತಾ ಹೌದು..ನಾನು ಸಿಕ್ಕಿಹಾಕಿಕೊಂಡರೆ ಮಿನಿಮಮ್ ೭ವರ್ಷಗಳ ಮಿಲಿಟರಿ ಜೈಲ್ ಆಗುತ್ತೆ..ಆದರೆ ಕನ್ನಡ ಚಿತ್ರಗಳ ದಿಶೆಯನ್ನ ಬದಲಾಯಿಸೋ ಕನಸು ನನ್ನಿಂದ ಸಾಧ್ಯ ಅಂತ ನಂಬಿ ಹೊರಟುಬಂದಿದ್ದೇನೆ. ನಾನು ನನ್ನ ದೇಶಪ್ರೇಮವನ್ನ ಈ ಥರದಲ್ಲಿ ಮಾತ್ರ ತೋರಿಸಬಲ್ಲೆ..ಇಷ್ಟವಿಲ್ಲದ ಡಿಕೋಡರ್ ಕೆಲಸ ನಿಯತ್ತಾಗಿ ಮಾಡುತ್ತಾ ಅಲ್ಲ..’
ನಾನು ಆತನ ಕನ್ನಡ ಪ್ರೇಮವನ್ನು, ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಬೇಕೆಂಬ ಉತ್ಸಾಹವನ್ನಷ್ಟೆ ಗಮನಿಸುತ್ತಿದ್ದೆ..ಆತ ಮಾಡಬಲ್ಲ. ಅವನೇ ಮುಂದುವರೆಸಿದ.
’ಸಾರ್.. ಮಿಲಿಟರಿ ಪೋಲೀಸರು ಎಲ್ಲ ಕಡೆ ಹುಡುಕಿ ಕೊನೆಗೆ ಸುಮ್ಮನಾಗಿಬಿಡ್ತಾರೆ. ನಿಮಗೆ ಗೊತ್ತಿಲ್ಲದ್ದು ಇನ್ನೊಂದಿದೆ. ನಾನು ಕೆಲಸ ಬಿಟ್ಟು ಓಡಿಬಂದಿರೋ ವಿಚಾರ ನನ್ನ ತಂದೆತಾಯಿಗಳಿಗೇ ಇನ್ನೂ ಗೊತ್ತಿಲ್ಲ.. ಹಾಗೇ ಒಂದು ದಿನ ಫೈಲ್ ಮುಚ್ಚಿಹೋಗುತ್ತೆ..ಬಿಡಿ ಸಾರ್..’
ಕಥೆಗಾರನಾಗಿ ಟ್ವಿಸ್ಟ್‍ಟರ್ನ್‍ಗಳು ನಂಗೆ ತುಂಬಾ ಇಷ್ಟ.
**********
ನನ್ನ ಚಿತ್ರದ ಕಥೆ ಒಂದು ಹಂತಕ್ಕೆ ಬಂದಿತ್ತು. ಪ್ರೊಡ್ಯೂಸರ್ ಕಥೆಯ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಲು ನನ್ನ ಆಫೀಸಿಗೆ ಬಂದಿದ್ದರು. ನಾನು ಅವರನ್ನು ಕೂರಿಸಿ ಕಥೆಯ ಬೆಳವಣಿಗೆಗಳನ್ನು ಹೇಳಲಾರಂಭಿಸಿದೆ. ನಾನು ಕಥೆ ಹೇಳುವ ಉದ್ವೇಗದಲ್ಲಿ ಬಿಟ್ಟುಹೋಗುತ್ತಿದ್ದ ಒಳ್ಳೆಯ ಪಾಯಿಂಟ್‍ಗಳನ್ನು ವಿಶ್ವನಾಥ ಎತ್ತಿಕೊಡುತ್ತಿದ್ದ.. ರೀಡಿಂಗ್ ತುಂಬಾ ಚೆನ್ನಾಗಿ ಆಯಿತು. ನಿರ್ಮಾಪಕರು ತುಂಬಾ ಖುಷಿಯಲ್ಲಿದ್ದರು. ವಿಶ್ವನಾಥನ ಉತ್ಸಾಹವನ್ನು ಗಮನಿಸಿದ ನಿರ್ಮಾಪಕರು ಅವನ ಬಗ್ಗೆ ಕೇಳಿದರು, ’ಈ ಹುಡುಗನನ್ನು ನಿಮ್ಮ ತಂಡದಲ್ಲಿ ನಾನು ಈ ಮೊದಲು ನೋಡಿಲ್ಲವಲ್ಲ..ಹೊಸಬಾನಾ..’
’ಈಗ ಎರಡು ತಿಂಗಳುಗಳಿಂದ ನನ್ನೊಟ್ಟಿಗಿದ್ದಾನೆ..ತುಂಬಾ ಬುದ್ಧಿವಂತ..ಡೈರೆಕ್ಟರ್ ಮೆಟೀರಿಯಲ್..’ ಅಂದೆ.
ಅಷ್ಟೊತ್ತಿಗಾಗಲೇ ಅವನ ಉತ್ಸಾಹಕ್ಕೆ, ಮಾತಿನ ಸ್ಪಷ್ಟತೆಗೆ ಮಾರುಹೋಗಿದ್ದ ನನ್ನ ನಿರ್ಮಾಪಕರು ಅವನ ಕಡೆಗೆ ತಿರುಗಿ ಅವರ ಆಫೀಸ್‍ಗೆ ಬಂದು ಅವರನ್ನು ಒಮ್ಮೆ ಕಾಣುವಂತೆ ಸೂಚಿಸಿದರು. ವಿಶ್ವನಾಥನೂ ಒಪ್ಪಿದ.
ನನಗೆ ಟ್ವಿಸ್ಟ್‍ಟರ್ನ್‍ಗಳು ಇಷ್ಟ ಆದರೆ ಇಂತಹ ಟ್ವಿಸ್ಟ್‍ಟ್ಯರ್ನ್‍ಗಳು ನನಗಿಷ್ಟವಿಲ್ಲ.. ಈ ನಿರ್ಮಾಪಕರ ಕೈಲಿ ಇನ್ನೂ ಎರಡಾದರೂ ಚಿತ್ರ ಮಾಡಿಸುವ ಇರಾದೆ ನನ್ನದು.
ವಿಶ್ವನಾಥ ನನ್ನ ಅನ್ನವನ್ನು ತುಂಬಾ ಸುಲಭವಾಗಿ ಕಸಿಯುತ್ತಿದ್ದಾನೆ..ನನ್ನ ಆಫೀಸಿನಲ್ಲೇ ಕುಳಿತು..ನನ್ನ ತಂಡದಲ್ಲೇ ಕುಳಿತು.. ನನ್ನ ಎದುರಿನಲ್ಲೇ ಕುಳಿತು.. ನನ್ನ ತಟ್ಟೆಯಿಂದಲೇ..
**********
ನಾನು ಈ ಮೊಬೈಲು, ಎಸ್‍ಎಂಎಸ್, ಇಮೇಲ್‍ಗಳು ಬಂದ ಮೇಲೆ ಪತ್ರ ಬರೆಯದೇ ಅದೆಷ್ಟೋ ವರ್ಷಗಳಾಗಿತ್ತು..ಆದರೆ ಆವತ್ತು ರಾತ್ರಿ ಮನಸ್ಸಿಗೆ ತಡೆಯಲಾಗಲೇ ಇಲ್ಲ..ಬರೆದೇ ಬಿಟ್ಟೆ.. ಆ ಪತ್ರವನ್ನ.
**********
ಗೆ,
ಆರ್ಮಿ ಹೆಡ್,
ಖಡಕ್‍ವಾಸ್ಲಾ,
ಮಹಾರಾಷ್ಟ್ರ.
ಸ್ವಾಮೀ.. ನಿಮ್ಮ ೬೮೪ನೇ ರೆಜಿಮೆಂಟಿಗೆ ಸೇರಿದ ವಿಶ್ವನಾಥ ಎಂಬ ವ್ಯಕ್ತಿ ಡಿಕೋಡರ್ ಆಗಿ ಆರ್ಮಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಈಗ್ಗೆ ಕಳೆದ ನಾಲ್ಕು ತಿಂಗಳುಗಳಿಂದ ಕಾಣೆಯಾಗಿದ್ದಾನಷ್ಟೇ.. ಆತ ಈಗ್ಗೆ ಎರಡು ತಿಂಗಳುಗಳ ಹಿಂದೆ ನನ್ನಲ್ಲಿ ಕೆಲಸ ಕೇಳಿಕೊಂಡು ಬಂದಿದ್ದ. ಆತನ ಹಿನ್ನೆಲೆಯರಿಯದ ನಾನು ಆತನಿಗೆ ಕೆಲಸವನ್ನು ಕೊಟ್ಟೆ.. ದೇಶದ ಭದ್ರತೆಯ ಕೆಲಸವನ್ನು ಬಿಟ್ಟು ಆತ ಹೇಳದೇ ಕೇಳದೇ ಓಡಿಬಂದ ಹುಡುಗ ಕನ್ನಡದಲ್ಲಿ ಒಳ್ಳೆ ಚಿತ್ರಗಳನ್ನ ಮಾಡುವ ಮೂಲಕ ದೇಶಸೇವೆ ಮಾಡುತೀನೀ ಅಂತಾನೆ.. ನಂಗೆ ನಂಬಿಕೆಯಿಲ್ಲ.. ಈ ಕಳೆದ ಎರಡು ತಿಂಗಳುಗಳಿಂದ ಆತ ನನ್ನ ಕಸ್ಟಡಿಯಲ್ಲಿದ್ದಾನೆ. ಆತನ ಹಿನ್ನೆಲೆ ಅರಿವಾದ ಕ್ಷಣವೇ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ನೀವು ಬಂದು ಅವನನ್ನು ಕರೆದುಕೊಂಡು ಹೋಗುವವರೆಗೆ ಅವನನ್ನು ನನ್ನಲ್ಲೇ ಉಳಿಸಿಕೊಂಡಿರುತ್ತೇನೆ. ಆದಷ್ಟು ಬೇಗ ಬಂದು ನನ್ನ ಜವಾಬ್ದಾರಿಯನ್ನು ಇಳಿಸಿ.
ದೇಶಪ್ರೇಮಿಯಾಗಿ ನಾನು ಮಾಡಬಹುದಾದದ್ದಿಷ್ಟೆ.. ಜೈ ಭಾರತ ಮಾತೆ..
ಇಂತಿ ನಿಮ್ಮವ,
ಗುರುಪ್ರಸಾದ್.
**********
ಮೊನ್ನೆ ಹೋಳಿ ಹಬ್ಬದ ದಿನ ಆರ್ಮಿ ಪೋಲೀಸರು ಬಂದು ವಿಶ್ವನಾಥನನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡರು.. ನಾನು ನನ್ನ ನಿರ್ಮಾಪಕನನ್ನು ಉಳಿಸಿಕೊಂಡೆ. ನಮ್ಮ ದೇಶಪ್ರೇಮ ಇಂಥಹುದು. ನಮ್ಮ ಬಗ್ಗೆ ಹೇಸಿಗೆಯಾಗಬೇಕು.. ಛೇ..
**********
ನನ್ನ ಬಗ್ಗೆ ನಿಮಗೆ ಹೇಸಿಗೆಯಾದರೆ.. ನಾನು ಗೆದ್ದಂತೆ.. ಕಥೆಗಾರನಾಗಿ.
**********