ಅಂದು ಅಮಾವಾಸ್ಯೆಯ ಅರ್ಧರಾತ್ರಿಯ ಪೂರ್ಣ ಕತ್ತಲು. ಅದು ಆ ಊರಿನ ಶ್ಮಶಾಣ.
ನಿಶ್ಯಬ್ದವೇ ವಿಕಾರ ಎನ್ನುವಂತೆ ಶ್ಮಶಾನಮೌನದ ಏಕಾಂಗಿತನದಿಂದ ಬೇಸತ್ತ ಯಾವುದೋ ಅತೃಪ್ತ ಧ್ವನಿಯೊಂದು ಭೀಕರತೆಯಿಂದ ಸಿಡಿದಂತೆ.. ಅಲ್ಲಲ್ಲಿ ಏಳುತ್ತಿರುವ ಸುಳಿಗಾಳಿಯ ಮಧ್ಯೆ ಮೌನವನ್ನು ಭೇದಿಸಿಕೊಂಡು ಆರ್ಭಟವೇ ಹೊರಟಂತೆ.. ಬ್ರಹ್ಮಾಂಡವೇ ಫ಼ಟೀರೆಂದು ಒಡೆದಂತೆ ಆ ಧ್ವನಿ.. ಆ.. ಹೆಣ್ಣಿನ .. ಧ್ವನಿ..
ಒಣಗಿದ ಎಲೆಗಳಲ್ಲಿ ಮಲಗಿದ್ದ ಹಾವೊಂದು ಕಣ್ಣು ಬಿಟ್ಟ ಆ ಕ್ಷಣ. ಒಮ್ಮೆಗೇ ಮೂಡಿದ ಪಕ್ಷಿಗಳ ಕರ್ಕಶ ಆರ್ತನಾದ, ಬಾವಲಿಗಳ ಕೀರಲು ಭರಾಟೆ, ಒಣ ಎಲೆಗಳ ಪರಪರ ಸಪ್ಪಳ, ಭೂಮಿಯ ಪದರಗಳಲ್ಲಿ ಎಂದೋ ಹೂತು ಹೋದ ಆತ್ಮವಿಹಿತ ದೇಹಗಳಲ್ಲೂ ಒಂದು ಸಣ್ಣ ನಡುಕ, ಶ್ಮಶಾನದ ಲಯಕ್ಕೆ ವಿರೋಧವಾದ ಚೈತನ್ಯ ಸೃಷ್ಟಿಯಾದ ಆ ಕ್ಷಣ..
ಮೊನ್ನೆಯಷ್ಟೇ ಕಟ್ಟಿದ್ದ ಗೋರಿಯೊಂದರಲ್ಲಿ ಯಾರೋ ಕದಲಿಸಿದಂತೆ ಭೂಮಿಯನ್ನು ಸೀಳಿಕೊಂಡು ಧ್ವನಿಯೊಂದು ಅಸ್ಪಷ್ಟ ವಿಕಾರದಲ್ಲಿ ಕೂಗುತಿತ್ತು.
ಇನ್ನೂ ಆರದ ಗೋರಿಯಲ್ಲಿ ಬಿರುಕು ಕಾಣಿಸಿತೆಂದರೆ ಒಳಗಿರೋ ಅತೃಪ್ತ ಆತ್ಮ ಜಗತ್ತಿಗೆ ಏನೋ ಹೇಳಬೇಕಿಂದಿದೆ ಅಂತಾನೇ ನಂಬಿಕೆ… ಹೌದು.. ಅವಳೇನೋ ಹೇಳಬೇಕಿದೆ..
ನಾನು.. ನಾನು ಮಾತಾಡ್ತಿರೋದು.. ಜಿನ್ಸಿ. ನೆನಪಿದೆಯಾ ನಿಮಗೆ.. ಹಿಂದಿನ ತಿಂಗಳು ನಿಮ್ಮ ಲೇಖಕರ ತೊಡೆಯ ಮೇಲೆ ಹೆಣವಾದ ಹೆಣ್ಣು.. ನಾನು ಮಾತಾಡಬೇಕಿದೆ.. ಹೌದು.. ಮಾತಾಡಲೇಬೇಕಿದೆ. ನನ್ನಂತಹ ನನಗೇ ಮಾತು ಸಾಕೆನಿಸಿತ್ತು.. ಜಗತ್ತಿನ ಕೂಡ ನನ್ನ ಮಾತುಗಳನ್ನು ಅರ್ಧಕ್ಕೆ ನಿಲ್ಲಿಸಿ ಹೊರಟುಬಿಟ್ಟಿದ್ದವಳು ನಾನು. ಸಾವಿನ ಮನೆಯ್ಹ ಹೊಸ್ತಿಲಲ್ಲಿ ನನ್ನು ಕಂಡ ನಿಮ್ಮ ಆ ಲೇಖಕ ಅವನ ಅಕ್ಷರಗಳಿಗೆ ನನ್ನನ್ನು ಕಂಡ ನಿಮ್ಮ ಆ ಲೇಖಕ ಅವನ ಅಕ್ಷರಗಳಿಗೆ ನನ್ನನ್ನು ಆಹಾರವನ್ನಾಗಿಸಿಕೊಂಡಿದ್ದ. ತಾನು ಅನುಭವಿಸಿದ್ದನ್ನ ತನ್ನ ಓದುಗರಿಗೆ ದಾಟಿಸೋ ಉತ್ಸಾಹದಲ್ಲಿ ನಿರ್ದಾಕ್ಷಿಣ್ಯವಾಗಿ ನನ್ನ ವ್ಯಕ್ತಿತ್ವಹರಣ ಮಾಡಿದ್ದಾನೆ ಆತ. ಸಾವು ಜಗತ್ತಿನ ಮೇಲೆ ನಾನಿಟ್ಟ ನಂಬಿಕೆಗೆ ಪೂರ್ಣವಿರಾಮವಾಗಿತ್ತು. ಅದು ನಾನೇ ಆರಿಸಿಕೊಂಡ ದಾರಿಯಾಗಿತ್ತು.. ಅದೊಂದೇ ದಾರಿಯೇ ನನಗೆ ಎದ್ದುದ್ದು..? ಉತ್ತರ ಬೇಕಿಲ್ಲ.. ಆಗಬೇಕಾದ್ದೇ ಆಗಿದೆ. ಹದಿನಾರೇ ಮಾತ್ರೆಗಳು.. ಕೋಟ್ಯಿ ವರ್ಷಗಳಷ್ಟು ನಿದ್ದೆ. ನಿದ್ರೆಯುದ್ದಕ್ಕೂ ಕನಸಿನ ಭಂಗವೂ ಇಲ್ಲದ ಸುದೀರ್ಘ ನೆಮ್ಮದಿ. ಸಾವಿನ ಉತ್ತರಾರ್ಧದ ಸುಖದಲ್ಲಿದ್ದೆ ನಾನು.
ಆ ಮಲಗಿದ್ದ ಹೊತ್ತಿನಲ್ಲಿ.. ನಿಮ್ಮ ಲೇಖಕ ನನ್ನ ಮೇಲೆ ತನ್ನ ಲೇಖನದುದ್ದಕ್ಕೂ ಮಾಡಿದ ಅಬಾರ್ಷನ್ ಆಪಾದನೆ, ಶೀಲಗೆಟ್ಟ ಹೆಣ್ಣೆಂಬ ಹಣೆಪಟ್ಟಿ.. ನಿರ್ಲಜ್ಜ ಹೆಣ್ಣಿನ ಪಟ್ಟಗಳಿಂದ ಮಣ್ಣಿನೊಳಗೆ ತಂತಾನೇ ಕರಗಿ ಹೋಗುತ್ತಿದ್ದ ನಾನು ಕನಲಿ ಹೋದೆ.. ಆಗ ಹುಟ್ಟಿದ್ದೇ ನನ್ನ ಗೋರಿಯಲ್ಲೊಂದು ಬಿರುಕು.
ಜಗತ್ತೆಲ್ಲವೂ ಇದ್ದು ನಾವು ಮಾತ್ರ ಇಲ್ಲದೇ ಇರುವುದೇ ನಮ್ಮ ಸಾವಂತೆ.. ಅಂದು ಜಗತ್ತಿತ್ತು ಹಿಂದಿನಂತೆ.. ನಾನಿರಲಿಲ್ಲ ಅಷ್ಟೇ.. ಸತ್ತವಳು ಒಬ್ಬಳೇ.. ದುಃಖಪಡೋಕೆ ನೂರು ಜನ. ಕೊನೆಯ ವಿದಾಯ ಹೇಳಬಂದವರ ಗುಂಪಿನಲ್ಲಿ ಎಲ್ಲರೂ ಇದ್ದರು. ಸೂತಕದ ಭಾವವನ್ನೇ ಹೊತ್ತಿದ್ದ ಅಪ್ಪ, ದುಃಖಕ್ಕೇ ಸೀರೆಯನ್ನುಡಿಸಿದಂತಿದ್ದ ಅಮ್ಮ.. ಶಾಕ್‍ನಿಂದ ಇನ್ನೂ ಹೊರಬರದ ಮಿಸ್ಡ್‍ಕಾಲ್ಸ್ ಕೊಡ್ತಿದ್ದ ತಂಗಿ, ರಜ ಕೊಡೋದ್ರಿಂದ ಸತ್ತವರ ಆತ್ಮಕ್ಕೆ ಶಾಂತಿ ಸಿಗಲ್ಲ ಅಂತ ಬಲವಾಗಿ ನಂಬಿದ್ದ ನನ್ನ ಆಸ್ಪತ್ರೆಯ ಎಂ.ಡಿ., ನನ್ನ ಅರ್ಥ ಮಾಡಿಕೊಳ್ಳುವ ವಿವಿಧ ಹಂತದಲ್ಲಿದ್ದ ನನ್ನ ಸ್ನೇಹವರ್ಗ, ನನ್ನ ಆತ್ಮಕ್ಕೆ ಶಾಂತಿಯನ್ನು ಆಶಿಸುವಂತೆ ಅದರದೇ ಬಣ್ಣವಾದ ಬಿಳಿಯನ್ನೆ ಸಮವಸ್ತ್ರವನ್ನಾಗಿ ಧರಿಸಿದ್ದ ನನ್ನ ಆಸ್ಪತ್ರೆಯ ಸಿಬ್ಬಂದಿ ವರ್ಗ, ಸಮರ್ಥ ಸಹಾಯಕಿಯನ್ನು ಕಳೆದುಕೊಂಡ ಡಾಕ್ಟರುಗಳು ಮತ್ತು ಅವರ ವೈದ್ಯ ಪತ್ನಿಯರು ಮತ್ತು ಹಾಕುತ್ತಿದ್ದ ಸಾಂಬ್ರಾಣಿಯನ್ನೂ ಛೇಡಿಸುತ್ತಿದ್ದ ಸಾವಿನ ದಟ್ಟ ವಾಸನೆ..
ಎಲ್ಲವೂ ಇತ್ತು ಮತ್ತು ಎಲ್ಲರೂ ಇದ್ದರು. ಇರದವನು ಒಬ್ಬನೇ.. ಅವನು! ಹೌದು.. ನಾನು ಸರಿಯಾಗಿ ಗಮನಿಸಿದ್ದೇನೆ.. ಆತ ಅಲ್ಲಿರಲಿಲ್ಲ.. ಮತ್ತು ನನಗೆ ಚೆನ್ನಾಗಿ ಗೊತ್ತಿತ್ತು ಅವನು ಬರೋದಿಲ್ಲಾಂತ.. ಯಾವ ಕಾರಣಕ್ಕೂ..!
ಪ್ರೇಮದ ನದಿ ಎಲ್ಲಿ ಹುಟ್ಟಿ ಎಲ್ಲಿ ವಿಲೀನಗೊಳ್ಳುತ್ತೆ ಅನ್ನೋದು ಮುಖ್ಯ ಅಲ್ಲ.. ಪ್ರೇಮ ಅಲ್ಲೋದು ಕಣ್ಣಲ್ಲಿ ದುಃಖದ ಮಡುವಾಗಿ ನಿಲ್ಲಬಾರದಷ್ಟೇ.. ನನ್ನ ಜೀವನದಲ್ಲಿ ಆದದ್ದೇ ಅದು.. ಎಲ್ಲಾ ಅವನಿಂದ. ಹೌದು.. ಅವನಿಂದಲೇ..
ಅವನ ಹೆಸರು ಜಯಂತ್, ಅವನ ಹೆಸರು ಭರತ್, ಅವನ ಹೆಸರು ಭೂಷಣ್, ಅವನ ಹೆಸರು ಚೇತನ್. ’ಒಬ್ರು ಇಷ್ಟೊಂದು ಹೆಸರುಗಳನ್ನಿಟ್ಕೋತಾರಾ..’ ಒಮ್ಮೆ ಕೇಳಿದ್ದೆ. ’ನೀನು ದೇವರನ್ನ ಯಾವ ಹೆಸರಿನಿಂದ ಕರೆದ್ರೂ ಓ.. ಅನ್ನೋಲ್ವೇ ಹಾಗೇ..’ ತನ್ನನ್ನು ದೇವರಿಗೆ ಹೋಲಿಸಿಕೊಂಡಿದ್ದ.. ಈಡಿಯೆಟ್. ’ನಾನು ಯಾರನ್ನೂ ಏನನ್ನೂ ಜಯಿಸಿಲ್ಲ, ಜಯಂತನಾಗೋ ಆಸೆ. ಹುಣ್ಣಿಮೆಯ ದಿನ ನಾನು ಸಮುದ್ರದಂತೆ ಉಕ್ಕಿಲ್ಲ, ಭರತನಾಗೋ ಆಸೆ, ಮನಸ್ಸಿಗೆ ಬೇಕೆನಿಸಿದ್ದನ್ನ ಎಂದಿಗೂ ಧರಿಸಲಿಕ್ಕಾಗಿಲ್ಲ, ನನ್ನ ದುಡಿಮೆಗೆ ಪ್ರಾಯವೊಂದನ್ನು ಬಿಟ್ಟು..ಭೂಷಣಪ್ರಾಯನಾಗೋ ಆಸೆ. ನಿನ್ನಂಥ ಸುಂದರಿಯ ಶೀಲಕ್ಕೆ ನಾನು ಒಡೆಯನಾಗೋ ಆಸೆ.. ಚೇತನಶೀಲ ಅಂದರೆ ಅದೇನಾ..?
ಹ್ಹ.. ಹ.. ಹ್ಹ.. ಹ.. ನಿಂಗೊತ್ತಾ.. ನಂಗೆ ಪುಣ್ಯಕೋಟೀಂತ ಹೆಸರಿಟ್ಕೋಬೇಕೂಂತ ಆಸೆ. ಯಾಕೆ ಗೊತ್ತಾ, ಯಾಕೇಂತ ಕೇಳು. ಉತ್ತರ ಗೊತ್ತಿಲ್ಲದವರು ಪ್ರಶ್ನಗಳನ್ನ ಕೇಳ್ತಾ ಇರಬೇಕು. ಯಾಕಂದ್ರೆ.. ನಮ್ಮನೇಲಿ ಯಾರ ಹತ್ರಾನೂ ಕೋಟಿ ಇಲ್ಲ. ನನ್ನ ಹೆಸರಲ್ಲಾದ್ರೂ ಒಂದ್ ಕೋಟಿ ಇಟ್ಕೊಳ್ಳೋಣಾಂತ..’ ಗಹಗಹಿಸಿ ನಕ್ಕಿದ್ದ.. ಅವನ ನಗುವಿನಲ್ಲೊಂದು ಆಕರ್ಷಣೆ ಇತ್ತು.. ನಾನದನ್ನ ಸಮೃದ್ಧವಾಗಿ ಗಮನಿಸಿದ್ದೆ. ’ಇಷ್ಟ್ಲ್ಲಾ ಹೇಗೆ ಹೊಳೆಯುತ್ತೆ ನಿಂಗೆ..’ ನನ್ನ ಪ್ರಶ್ನೆ. ’ನಿಂಗೊತ್ತಾ.. ಮಾತಿಗಿಂತ ಮನ್ಮಥ ಇಲ್ಲಾಂತಾರೆ.. ಅದಕ್ಕೆ ಮಾತು ಮತ್ತು ಮನ್ಮಥ ಇಬ್ರಿಗೂ ದೇಹ ಇಲ್ಲ.. ಮತ್ತು ಇಬ್ರೂ ಕಣ್ಣಿಗೆ ಕಾಣಿಸಲ್ಲ.. ಹೆಣ್ಮಕ್ಕಳಿಗೆ ಹೇಗೆ ವಯ್ಯಾರವೋ.. ಗಂಡಸರಿಗೆ ಮಾತು.. ಸೋ.. ಮಾತಿಗಿಂತ ಮನ್ಮಥ ಇಲ್ಲ.. ವಯ್ಯಾರಕ್ಕಿಂತ ವಯಾಗ್ರ ಇಲ್ಲ..’ ಜೋರಾಗಿ ನಕ್ಕಿದ್ದ.. ಇಡೀ ಲಾಲ್‍ಬಾಗ್‍ಗೇ ಕೇಳಿಸುವಂತೆ.. ’ಏನು ಓದ್ಕೊಂಡಿದಿ ನೀನು..’ ನನ್ನ ಕಣ್ಣುಗಳಲ್ಲಿ ಅಭಿಮಾನದ ತೆರೆ. ’ತುಂಬಾ ಓದಿಲ್ಲ ನಾನು.. ಕಮ್ಮಿ ಓದಿರೋದನ್ನ ಜಾಸ್ತಿ ಅರ್ಥ ಮಾಡ್ಕೊಂಡಿದೀನಿ. ದಿನನಿತ್ಯದ ಕೆಲವು ಮಾತುಗಳನ್ನ ಬಿಟ್ರೆ.. ಎಲ್ಲಾ ಮಾತುಗಳಿಗೂ ಒಂದಕ್ಕಿಂತ ಜಾಸ್ತಿ ಅರ್ಥಾನೇ ಇರುತ್ತೆ.. ನಾವು ಹೇಳಿದ ಅರ್ಥ ಒಂದು.. ಕೇಳುಗರಿಗೆ ಸಿಗುವ ಅರ್ಥವೇ ಒಂದು.. ಯಾವ ಕಾರಣಕ್ಕೆ ಈ ಮತನ್ನ ಆತ ಆಡಿದ ಅನ್ನೋದು ಕೊಡೋ ಒಳ ಅರ್ಥಾನೇ ಇನ್ನೊಂದು.. ಹೀಗೆ.. ನೀನು ಕೇಳ್ತಿರೋ ಪ್ರಶ್ನೆಗಳಿಗೆ ನನ್ನ ಬಗ್ಗೆ ನಿನಗಿರೋ ಕುತೂಹಲ ಒಂದು ಅರ್ಥವಾದರೆ.. ನಿನ್ನ ಬಗ್ಗೆ ಇಷ್ಟೊಂದು ಕುತೂಹಲ ತೋರಿಸ್ತಿದ್ದೇನೆ.. ಅದು ಯಾಕೆ ಅಂತ ಅರ್ಥ ಮಾಡ್ಕೊಳ್ಳೋ ಹುಡುಗಾ.. ಅನ್ನೋ ಒಳ ಅರ್ಥವೂ ಇದ್ಯಲ್ಲಾ.. ಹಾಗೆ’ ಭಯಂಕರ ಸ್ಪೀಡಿನ್ಜ ಟ್ರೇನ್ ಸಡನ್ನಾಗಿ ನಿಲ್ಲಿಸಿದಂತೆ ತನ್ನ ಮಾತನ್ನುನಿಲ್ಲಿಸಿ ನನ್ನನ್ನೊಮ್ಮೆ ನೋಡಿದ ಈತ ನನ್ನನ್ನು ಆಳಬಲ್ಲ ಅನ್ಸಿದ್ದೇ ಅವತ್ತು ನನಗೆ. ಮತ್ತೆ ಮಾತಿನ ಹಳಿ ಬದಲಿಸುತ್ತಾ ’..ಆದ್ರೆ ಒಂದು ಹೇಳ್ತೀನಿ.. ನನಗೆ ಒಂದು ಅಹಂ ಇದೆ. ನನ್ನ ಮಾತುಗಳು ಏನನ್ನ ಪಡೀಬಹುದು ಈ ಜಗತ್ತಲ್ಲೀಂತ.. ಸಂಶೋಧನೆ ಮಾಡ್ತಿದ್ದೇನೆ.. ನನ್ನ ಅಷ್ಟೂ ಮಾತುಗಳನ್ನು ಪ್ರಪಂಚದ ಗಲಾಟೆಗಳನ್ನೆಲ್ಲಾ ಮರೆತು ಈ ಟ್ರಾಫ಼ಿಕ್‍ನಲ್ಲಿ ನಿನ್ನ ಕಿವಿಗಳು ಕೇಳಿಸ್ಕೊತಾ ಇದೇಂದ್ರೆ ಜಗತ್ತಿನ ಶಬ್ದಮಾಲಿನ್ಯವನ್ನೇ ಗೆದ್ದ ಸುಖ ನಂದು.. ಏನಂತೀಯಾ?’ ಇಂಥ ಸ್ವೀಟ್ ಶಾಕ್ಸ್ ನಂಗೆ ಪದೇ ಪದೇ ಅವನಿಂದ ಸಿಕ್ತಲೇ ಹೋಯ್ತು.. ಮತ್ತು ನಾವು ತುಂಬಾ ಮಾತಾಡ್ತಿದ್ವು.. ಅವನ ಮಾತುಗಳಿಗೆ ನಾನು ಕಿವಿಯಾಗಿ ಹೋಗಿದ್ದೆ.. ಅವನ ಮಾತುಗಳು ವಿಚಾರಯುತವಾಗಿರ್ತಿದ್ವು.. ಮಾವಿನಕಾಯಿ ಸೀಸನ್‍ನಿಂದ ಹಿಡಿದು ಮನಸ್ಸಿನ ಒಳಪದರಗಳವರೆಗೆ ಬರಿಯ ಒಂದು ಫ಼್ಲರ್ಟ್ ಆಗಿರಲಿಲ್ಲ್ಲ. ಏನು ಯೋಚಿಸ್ತಿದೀ.. ಕೇಳು ಹೇಳ್ತೀನಿ.. ಮಾತು ಒಬ್ಬ ಸಾಮಾನ್ಯ ಚಿಂತಕನನ್ನೂ ಸ್ವಾಮಿಯ ಹಂತಕ್ಕೆ ಕೊಂಡೊಯ್ದುಬಿಡುತ್ತೆ.. ತಾನು ನಂಬಿದ್ದನ್ನೇ ಧರ್ಮ ಅಂತ ನಂಬಿಸಲು ಆತ ಅದ್ಭುತವಾಗಿ ಮಾತಾಡ್ತಾನೆ.. ನಂಬಿಸ್ತಾನೆ. ಮಾತಿನಿಂದ ಸುರುವಾದದ್ದು ಹೊಸ ಧರ್ಮದ ಸ್ಥಾಪನೆಯಲ್ಲಿ ಮುಗಿಯುತ್ತೆ. ಅದಕ್ಕೆ ಯಾವ ಧರ್ಮದ ಸಂಸ್ಥಾಪಕನೂ ಪ್ರಪಂಚದ ಇತಿಹಾಸದಲ್ಲಿ ಮೂಕನಲ್ಲ.. ಮೂಕ ನಂಬಿಸಲಾರ.. ಧರ್ಮ ಸ್ಥಾಪಿಸಲಾರ.. ಮಾತೇ ಧರ್ಮವಾಗುತ್ತೆ.. ಮಾತೇ ಓಯ್ಟಾಗುತ್ತೆ.. ರಾಜಕಾರಿಣಿಗಳಿಗೆ. ಅಧ್ಯಾಪಕನ ಮಾತೇ ನೋಟ್ಸ್ ಆಗುತ್ತೆ.. ವಿದ್ಯಾರ್ಥಿಗಳಿಗೆ. ಮನಸ್ಸಿನೊಳಗಿನ ಮಾತುಗಳು ಕಾಗದದ ಮೇಲೆ ಶಾಯಿಯೊಂದಿಗೆ ದಾಂಪತ್ಯ ನಡೆಸಿದಾಗ ಕಾದಂಬರಿಯಾಗುತ್ತೆ. ಚಿತ್ರಕಥೆಯಾದಾಗ ಸಿನೇಮಾ ಆಗುತ್ತೆ. ಅದಕ್ಕೇ ಹೇಳೋದು ’ಮಾತೇ ಮುತ್ತು’ ಅಂತ. ಆತ ’ಮುತ್ತು’ ಪದವನ್ನು ಬಳಸಿದಾಗ ಅಪ್ರಯತ್ನಪೂರ್ವಕವಾಗಿ ನನ್ನ ಮುಖ ನೋಡಿದ. ಅವನು ನನ್ನಿಂದ ಆ ಕ್ಷಣದಲ್ಲಿ ಏನು ನಿರೀಕ್ಷಿಸಿದ್ದ ಅನ್ನೋದು ನನಗೆ ಹೊತ್ತಾಗಿಹೋಯಿತು.. ಮುತ್ತಿನ ಮಾತು ಬಿಡಿ, ನಾನವನಿಗೆ ಆ ಹೊತ್ತಿನಲ್ಲಿ ಅದನ್ನ ಕೊಟ್ಟೆನೋ ಬಿಟ್ಟೆನೋ ನಿಮಗೆ ಹೇಳಬೇಕಾಗಿಲ್ಲ.. ’ಮಾತೇ ಮೃತ್ಯು’ ಅನ್ನೋದನ್ನ ಆತ ಹೇಗೆ ನಿರೂಪಿಸಿಬಿಟ್ಟಾಂತ.. ನನ್ನನ್ನು ಈ ಅಶರೀರವಾಣಿಯ ಸ್ಥಿತಿಗೆ ತಂದಿಟ್ಟು.
ನಾನು ನನ್ನ ಅಮ್ಮನನ್ನು ಬಹಳಷ್ಟು ಹೋಲುತ್ತಿದ್ದೆ. ಅಮ್ಮ ಮಡಿಕೇರಿಯವಳು.. ತುಂಬು ಸುಂದರಿ.. ಮಡಿಕೇರಿಯಲ್ಲಿ ಒಮ್ಮೆ ಶೂಟಿಂಗ್ ನಡೀತಿದ್ದಾಗ ವಹೀದಾ ರೆಹಮಾನ್‍ಳ ತಂಗಿ ಪಾತ್ರಕ್ಕೆ ಅಮ್ಮನಿಗೆ ಹೇಳಿಕಳಿಸಿದ್ದರಂತೆ ಸಂಕೋಚ ಪ್ರವೃತ್ತಿಯ ಅಮ್ಮ ಒಪ್ಪಿರಲಿಲ್ಲ. ಟಿ.ವಿ. ಸೀರಿಯಲ್ ಒಂದಕ್ಕೆ ನಮ್ಮ ಆಸ್ಪತ್ರೆಯಲ್ಲಿ ಶೂಟಿಂಗ್ ನಡೀತಿದ್ದಾಗ ನಂಗೂ ಒಂದು ಆಫ಼ರ್ ಬಂದಿತ್ತು. ಬಾಸ್ ಒಪ್ಪಿರಲಿಲ್ಲ. ಅಮ್ಮನ ಭಾಗವಾಗಿದ್ದೆ ನಾನು. ದಿನವಿಡೀ ಸಮವಸ್ತ್ರದ ಬೋರ್‍ಡಂನಿಂದ ಹೊರಬರೋಕೇಂತಲೇ ಫ಼್ರೀ ಇದ್ದಾಗ ಚೆನ್ನಾಗಿ ಡ್ರೆಸ್ ಮಾಡ್ಕೋತಿದ್ದೆ. ನನ್ನ ಸೌಂದರ್ಯದ ಬಗ್ಗೆ ನನಗೆ ಹೆಮ್ಮೆಯಿತ್ತು. ಎಲ್ಲ ಹುಡುಗೀರ್ಗೂ ಇರುವಂತೆ. ನನ್ನ ಐದಾರು ಹೆಸರಿನ ಹುಡುಗನ ವಿಚಾರವೇ ಬೇರೆ ಇತ್ತು ಸೌಂದರ್ಯದೆಡೆಗೆ.. ದೇಹ ಸೌಂದರ್ಯಕ್ಕಿಂತ ವ್ಯದ್ತಿತ್ವ ಸೌಂದರ್ಯ ಆಂತ ಒಂದಿರುತ್ತೆ. ದೇಹಸೌಂದರ್ಯ ತಾನಾಗಿ ಬರೋದು. ಅದಕ್ಕೆ ನಾವು ಕಷ್ಟಪಡಬೇಕಾಗಿಲ್ಲ. ವ್ಯಕ್ತಿತ್ವದ ಸೌಂದರ್ಯ ನಾವು ಗಳಿಸೋದು ಅದೇ ದೊಡ್ಡದು ಅಂತಿದ್ದ. ಆತನಿಗೆ ನನ್ನನ್ನು ಸರಿಗಟ್ಟುವಂಥ ಅಂದವಿರಲಿಲ್ಲ ಮತ್ತು ಅದು ಅವನಿಗೂ ಗೊತ್ತಿತ್ತು. ಅವನ ಮಾತು ನಿಜವೇ ಅನ್ನಿಸುವಂತೆ ಅವನ ಕಮ್ಮಿ ಅಂದದ ಮುಖದಲ್ಲೂ ಒಂದು ಕಳೆಯಿತ್ತು. ಇದನ್ನು ಒಮ್ಮೆ ಅವನೇ ಪ್ರಸ್ತಾಪಿಸಿ ಬೇರೆಲ್ಲೆಡೆ ಕಳೆಯನ್ನು ನಿಕೃಷ್ಟವಾಗಿ ನೋಡ್ತಾರೆ. ಅದೊಂದು ಬೇಡದ ವಸ್ತು. ಸುಡಬೇಕಾದ್ದು. ವ್ಯಕ್ತಿತ್ವದಲ್ಲಿರೋ ಕಳೇನ್ನ ಮಾತ್ರ ಗುರುತಿಸ್ತಾರೆ.. ಆನಂದಿಸ್ತಾರೆ ಅಲ್ವಾ? ಆಗ ತಾನೇ ಹೊಳೆದ ಮಾತೇನೋ ಎಂಬಂತೆ ಅಮಾಯಕವಾಗಿ ಆಡಿದ್ದ. ಅವನ ಆ ಮುಖದ ಭಾವನೆಯಲ್ಲಿ ಅಡಗಿದ್ದ ಅವಲಕ್ಷಣದ ನೋವನ್ನು ನಾನು ಗುರುತಿಸಿದ್ದೆ. ’ಇಲ್ಲಪ್ಪಾ.. ನೀನು ಚೆನ್ನಾಗೇ ಇದೀಯ.. ನನ್ನ ಕಣ್ಣಿಗೆ ನೀನು ಚೆನ್ನಾಗೇ ಕಾಣ್ತಿ.. ಇದುವರೆಗೂ ನಿನ್ನ ಮುಖ ನನಗೆ ಆನಂದವನ್ನೇ ಕೊಟ್ಟಿದೆ..’ ನನಗೆ ತಿಳಿದಂತೆ ಮನಃಪೂರ್ವಕವಾಗಿ ಸಮಾಧಾನಿಸಿದ್ದೆ. ’ಗಂಡ ಹೇಗಿದ್ದರೂ ಹೆಂಡತಿಗೆ ಸುಂದರವೇ. ಅದು ಅವಳ ಅನಿವಾರ್ಯ ನೋಟ. ಬಹಳಷ್ಟು ಸಲ ನಮ್ಮ ಕಣ್ಣುಗಳು ಹೀರೋಗಳ ಕೆಟ್ಟ ಮುಖಕ್ಕೂ ಹೊಂದಿಕೊಂಡು ಬಿಡೋಲ್ವೇ ಹಾಗೆ. ನೋಡ್ತಾ ನೋಡ್ತಾ ಕಜ್ಜಿನಾಯಿಯ ಮೈಮೇಲಿನ ಡಿಸೈನ್ಸೂ ಚಂದವಾಗೇ ಕಾಣಿಸುತ್ತೆ ಅಲ್ವಾ.’ ಹೇಳಿಕೊಂಡು ನಕ್ಕಿದ್ದ.
ಒಬ್ಬ ಹುಡುಗ ತನ್ನ ಮಾತಿನ ಮೋಡಿಯಿಂದ ನನ್ನನ್ನು ಮರುಳು ಮಾಡಿದ್ದ ಅಂತ ನಾನು ಹೇಳ್ತಿಲ್ಲ, ಮಾತುಗಳು ಈಗಿನ್ಜ ಕಾಲದ ನನ್ನಂಥ ಹುಡುಗೀರ್ನ ಒಂದು ಹಂತಕ್ಕೆ ಮೆಚ್ಚಿಸಬಹುದಷ್ಟೇ. ಪೂರ್ಣ ಮರುಳು ಮಾಡಿಬಿಡೋಕೇ ಆಗೋಲ್ಲ. ಆತನಿಗೊಂದು ಸ್ಪಷ್ಟ ವ್ಯಕ್ತಿತ್ವವಿತ್ತು. ನಾನದನ್ನು ಗುರುತಿಸಿದ್ದೆ. ದೂರದ ಊರಲಿದ್ದ ನನ್ನ ಮನೆ, ನನ್ನ ಅಪ್ಪ, ಅಮ್ಮ, ತಂಗಿ ಇವರೆಲ್ಲರನ್ನೂ ಬಿಟ್ಟು ಕಿಲ್ಸಕ್ಕೇಂತ ಬೆಂಗಳೂರಿಗೆ ಬಂದ ಹೊಸತರಲ್ಲಿ ಅವರೆಲ್ಲಾ ತುಂಬಾ ನೆನಪಾಗ್ತಿದ್ರು.. ನಾನು ಅವರನ್ನು ತುಂಬಾ ಮಿಸ್ ಮಾಡ್ಕೋತಿದ್ದೆ. ದೈತ್ಯ ಹೋಂಸಿನೆಸ್ ಇತ್ತು ನನಗೆ. ಈತ ನನ್ನ ಜೀವನ ಪ್ರವೇಶಿಸಿದ ಮೇಲೆ ನಾನು ಏನನ್ನೂ ಮಿಸ್ ಮಾಡಿಕೊಳ್ಳದಂತೆ ನೋಡಿಕೊಳ್ತಿದ್ದ.. ಜ್ಞಾಪಿಸಿ ಮನೆಗೆ ಫ಼ೋನ್ ಮಾಡಿಸುತ್ತಿದ್ದ.. ನನ್ನ ಆ ಮನೆಯ ಇಲ್ಲಿನ ಭಾಗವಾಗಿದ್ದ ಆತ.. ಹೌದು ನಾವಿಬ್ಬಾರೂ ಪ್ರೇಮಿಸಿದ್ದೆವು.. ವ್ಯಕ್ತಪಡಿಸಿಕೊಂಡಿದ್ದೆವೂ ಕೂಡ. ನಮ್ಮ ನಮ್ಮಲ್ಲೇ. ಪ್ರೇಮದ ರೋಚಕತೆ ಅದು ರಹಸ್ಯವಾಗಿದ್ದಷ್ಟೂ ಮತ್ತೂ ಹೆಚ್ಚುತ್ತದೆ ಅಂತಿದ್ದ. ನಮ್ಮಿಬ್ಬರಲ್ಲಿರೋ ಪ್ರೇಮವೆಂಬ ರಹಸ್ಯ ಪ್ರಪಂಚದ ಯಾರೊಬ್ಬರಿಗೂ ಗೊತ್ತಿಲ್ಲ ಎಂಬ ರೋಚಕ ಭಾವ.. ಎಂಥ ಸತ್ಯವನ್ನು ಹೇಳಿಕೊಟ್ಟಿದ್ದ. ನಮ್ಮ ಸ್ನೇಹ ಸಮೂಹದ ಮುಂದೆ ನಾವು ಆತ್ಮೀಯರಷ್ಟೆ.. ಎಷ್ಟೇ ಜನರಿದ್ದರೂ ಯಾರಿಗೂ ತಿಳಿಯದಂತೆ ಕಣ್ಣೋಟದಲ್ಲೇ ಹಂಚಿಕೆಯಾಹುತ್ತಿತ್ತು ಪ್ರೇಮ. ಹೃಕಯ ತುಂಬುವಂಥ ಸುಖ ಅದು.. ಆನಂದದ ಕ್ಷಣಗಳು. ನಾನು ಗಮನಿಸಿದ್ದೆ. ನಮ್ಮ ಪ್ರೇಮದ ಬಗ್ಗೆ ಇಲ್ಲಿರೋ ಎಲ್ಲರಿಗೂ ತಿಳಿದುಹೋದರೆ ನಮ್ಮಿಬ್ಬರ ಗೌಪ್ಯ ಪ್ರೇಮದ ಈ ಆಟ ಸತ್ತುಹೋಗುತ್ತೆ ಅನ್ನೋದನ್ನ.. ನಮ್ಮ ಪ್ರೇಮದ ಬಗ್ಗೆ ಇಲ್ಲಿರೋ ಎಲ್ಲರಿಗೂ ತಿಳಿದುಹೋದರೆ ನಿಮ್ಮಿಬ್ಬರ ಹೌಪ್ಯಪ್ರೇಮದ ಈ ಆಟ ಸತ್ತುಹೋಗುತ್ತೆ ಅನ್ನೋದನ್ನ.. ಮತ್ತು ಆತ ನನ್ನ ಬಗ್ಗೆ ವಹಿಸುತ್ತಿದ್ದ ಕಾಳಜಿಯನ್ನ.. ಪ್ರೇಮವನ್ನು ವ್ಯಕ್ತಪಡಿಸೋ ಅದ್ಭುತ ರೂಪವೆಂದರೆ ಕಾಳಜಿ ಅಂತಿದ್ದ. ಯಾರಿಗೂ ಅನುಮಾನ ಬರದ ರೀತಿಯಲ್ಲಿ ತುಂಬು ಸ್ವಾಭ್ಣಾವಿಕವಾಗಿ ಸ್ನೇಹಿತರಿಗೆ ಮಾಡೋ ಸಹಾಯದಂತೆ ತೋರುತ್ತಿದ್ದವು ಅವನು ನನ್ನ ಬಗ್ಗೆ ವಹಿಸುತ್ತಿದ್ದ ಮುತುವರ್ಜಿ.. ಆದರೆ ಅದಕ್ಕೆ ಪ್ರೇಮದ ಅರ್ಥವಿರೋದು ನನಗೆ ಮಾತ್ರ ಗೊತ್ತಾಗ್ತಿತ್ತು. ಅಷ್ಟು ಹುಷಾರಿದ್ದ ನನ್ನ ಹುಡುಗ. ಅದು ನಟನೆಯಲ್ಲ.. ಮನುಷ್ಯ ಇಪ್ಪತ್ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ನಟಿಸಲಾರ.. ಮತ್ತು ನಟನೆಗಳು ಹುಡುಗಿಯರಿಗೆ ಬಹುಬೇಗ ಗೊತ್ತ್ತಾಗಿಬಿಡುತ್ತೆ.. ಸತ್ಯವಾಗಿ ಹೇಳ್ತೀನಿ ಆತ ನಿಷ್ಕಲ್ಮಶನಿದ್ದ.
ನನಗೇ ಒಮ್ಮೊಮ್ಮೆ ಭಯವಾಗ್ತಿತ್ತು. ಈತ ನನ್ನನ್ನು ಪ್ರೀತಿಸುವಷ್ಟರ ಮಟ್ಟಿಗೆ ನಾನು ಈತನನ್ನು ಪ್ರೀತಿಸಬಲ್ಲೆನಾ ಅಂತ. ನನ್ನ ಪ್ರೀತಿ ಅವನಿಗೆ ಕಮ್ಮಿಯಾಗಿ ತೋರಿಬಿಡಬಹುದೇನೋ ಎಂಬ ಭಯ. ಅವನೌ ನನ್ನನ್ನು ಪ್ರೀತಿಸುವುದಕ್ಕಿಂತಲೂ ನಾನು ಅವನನ್ನು ಜಾಸ್ತಿ ಪ್ರೀತಿಸಬೇಕಿಂದು ಹಂಬಲಿಸುತ್ತಿದ್ದೆ. ಆದರೆ ಪ್ರತೀಸಲವೂ ಅವನೇ ಗೆಲ್ಲುತ್ತಿದ್ದ.. ಮತ್ತು ನನಗೆ ಅಷ್ಟು ಹೊತ್ತಿಗಾಗಲೇ ನನ್ನ ಸುಂದರನಲ್ಲದ ಹುಡುಗನಲ್ಲಿದ್ದ ಅದ್ಭುತ ಪ್ರೇಮಿ ಪರಿಚಯವಾಗಿಬಿಟ್ಟಿದ್ದ. ನನ್ನಿಂದ ಅವನಿಗೆ ಯಾವತ್ತಿಗೂ ಯಾವ ಕೊರತೆಗಳೂ ಆಗಬಾರದು ಅಂದ್ಕೋತಿದ್ದೆ. ಅವನಿಂದ ಮುಂದೆ ಎಂದಾದರೂ ನನಗೆ ಸಣ್ಣಪುಟ್ಟ ನೋವುಂಟಾದರೂ ಅದನ್ನು ಮರೆತು ಅವನನ್ನು ಉಳಿಸಿಕೊಳ್ಳಬೇಕು ಅನ್ನೋದರ ಕಡೆಗೆ ಮಾನಸಿಕವಾಗಿ ಸಿದ್ಧಳಾಗ್ತಿದ್ದೆ ನಾನು. ನನ್ನ ಪ್ರಪಂಚದಲ್ಲಿ ಅವನಿರಲೇಬೇಕು.. ಅವನ ಪ್ರಪಂಚವನ್ನು ನಾನು ಆವರಿಸಿಕೊಳ್ಳಲೇಬೇಕು ಅನ್ನೋದರ ಕಡೆಗಷ್ಟೇ ನನ್ನ ಪ್ರಯತ್ನಗಳಿದ್ದವು.. ಮತ್ತು ನನ್ನ ಆಯ್ಕೆಯ ಬಗ್ಗೆ ನನಗೆ ಹೆಮ್ಮೆಯಿತ್ತು. ನನಗಿದ್ದ ಸ್ವಾರ್ಥ ಒಂದೇ. ಇಂಥ ಹುಡುಗನಿಗೆ ಸ್ಫ಼ೂರ್ತಿದೇವತೆಯಾಗಬೇಕನ್ನೋದು.
ಅದಕ್ಕೆ ಕಾರಣವೂ ಇದೆ. ಇಷ್ಟೆಲ್ಲಾ ಓಡಾಡಿದರೂ ಪ್ರೇಮದಾಟ ಕಣ್ಣುಗಳಲ್ಲಿ ನಡೆದಿದ್ದರೂ ಒಮ್ಮೆಯೂ ಆತ ನನ್ನನ್ನು ತನ್ನ ರೂಮಿಗೆ ಕರೆದಿರಲಿಲ್ಲ. ಸಿನೆಮಾಗಳಿಗೆ ಹೋದಾಗ ಆ ಕತ್ತಲ ಅಗತ್ಯದಲ್ಲಿ ಮೈತಾಕಿಸಿರಲಿಲ್ಲ. ಸಿನೆಮಾನ ಎಷ್ಟು ಚೆನ್ನಾಗಿ ನೋಡ್ತಿದ್ದೆಅ ಅವನು ಅಂದ್ರೆ ..’ನಮ್ಮ ಜನಕ್ಕೆ ಸಿನೆಮಾ ನೋಡೋಕೆ ಬರೋಲ್ಲ.. ಎರಡೂವರೆ ಗಂಟೆನ್ ಎ.ಸಿ. ಸುಖದಲ್ಲಿ ಅಂಧಕಾರದ ಏಕಾಂತದಲ್ಲಿ ನಮ್ಮನ್ನು ನಾವು ಮರೆಯೂ ಅವಕಾಶಾನ ಹಾಳು ಮಾಡಿಕೊಳ್ತಾರೆ ಜನ. ತೆರೆಯ ಮೇಲೆ ನಿರ್ಜೀವ ಬೆಳಕಿಗೆ ಜೀವ ಬಂದಿರುತ್ತೆ.. ಜೀವಂತ ನೋಡುಗ ಬೊಂಬೆಯಂತೆ ಕೂತಿರ್ತಾನೆ.. ಎಂಥ್ಜ ಸೋಜಿಗ ಅಲ್ವಾ ಇದು.. ಅಶ್ಟೊಂದು ಬೆಳಕಲ್ಲಿ ಸಿನೆಮಾ ತೆಗೆದು ಕತಲ್ಲಲ್ಲಿ ಕೂತು ನೋಡುವ ಜಗತ್ತು.. ಆ ನಟನ ಪೂರ್ವ ಇತಿಹಾಸಾ ಗೊತ್ತಿದ್ದೂ ಅವನ ಮಾತುಗಳಿಗೆ ನೋವೂಗಳಿಗೆ ನಾವು ಸ್ಪಂದಿಸ್ತೀವಲ್ಲಾ.. ನಮ್೧
ಮನ್ನಿಉ ಆಮಟ್ಟಕ್ಕೆ ತನ್ಮಯಗೊಳಿಸೊ ಸಿನೆಮಾಗೆ ಬೇಡದ್ದು ಮಾಡಿಕೊಂಡು ಕೊಡೋ ಅಗುರವ ಚಿತ್ರಮಂದಿರದ ದುರ್ಬಳಕೆ..’ ಅಂತಿದ್ದ. ನನಗೆ ಆ ಕ್ಷಣಕ್ಕೆ ಅನುಮಾನ ಬಂದಿತ್ತು. ’ಇವನ ಮಾತಿನಲ್ಲಿರೋ ರಸಿಕತೆ ಕೃತಿಯಲ್ಲಿಲ್ಲವಾ..’ ಅಂತ. ನನ್ನ ಅನಿಸಿಕೆ ಅದ್ಭುತವಾಗಿ ಸುಳ್ಳಾಗೋ ದಿನ ಬಂದೇ ಬಂತು.. ಅತಿ ಶೀಘ್ರದಲ್ಲೇ..
-ಮತ್ತೆ ಬರ್ತೀನಿ.. ಬೆಳಕಾಗ್ತಿದೆ.. ಜಿನ್ಸಿ.
*****
ರೂಪತಾರಾ ಆಗಸ್ಟ್ ೨೦೦೫ ರಲ್ಲಿ ಪ್ರಕಟವಾದ ಲೇಖನ.