ಆತ ತೀರ ಹತ್ತಿರಕ್ಕೆ ಬಂದು ನಿಂತು ಮಾತಾಡತೊಡಗಿದ. ಆಕೆ ಒಂದು ಹೆಜ್ಜೆ ಹಿಂದೆ ಸರಿದಳು. ಆತ ಹೆಜ್ಜೆ ಮುಂದೆ ಬಂದ. ಕಣ್ಣಲ್ಲಿ ಕಣ್ಣಿಡಲು ಹವಣಿಸಿದ. ಅವನ ದೃಷ್ಟಿ ತಪ್ಪಿಸಿ ಆಕೆ ಎತ್ತಲೋ ನೋಡತೊಡಗಿದಳು. ಆಕೆ ಹಾಗೆ ಎತ್ತಲೋ ನೋಡಿದಂತೆಲ್ಲ ಆತ ಅವಳ ದೃಷ್ಟಿಯನ್ನು ಅರಸ ತೊಡಗಿದ.
ಮಳೆ ಸುರಿಯುತ್ತಿತ್ತು. ಆತ ಮಾತಾಡುತ್ತಿದ್ದ. ಆಕೆ ಮಳೆಯನ್ನು ಸಂಗೀತವೆಂಬಂತೆ ಆಲಿಸುತ್ತಿದ್ದಳು. ನಡುನಡುವೆ ಆತ “ನಾನು ಹೇಳಿದ್ದು ಕೇಳಿಸಿತ?” ಎಂದರೆ ಹೂಂ ಎಂದಳು. ಪುಣ್ಯಕ್ಕೆ “ಹಾಗಾದರೆ ಏನು ಹೇಳಿದ್ದು ನಾನೀಗ?” ಎಂದು ಆತ ಕೇಳಲಿಲ್ಲ. ಕೇಳಿದ್ದರೆ ಆತನಿಗೆ ಒಂದು ಬರಿಯ ಮುಗುಳುನಗೆ, ಕೃತಕಹೂವಿನ ಪಕಳೆಯಂತಹ ನಗೆ, ಸಿಗುತ್ತಿತ್ತೇನೋ.
ಸಮಯ ಕಳೆಯುತ್ತಿತ್ತು. ಆತ “ಇಲ್ಲೇ ದೇವಸ್ಥಾನಕ್ಕೆ ಹೋಗಿಬರುವನ?” ಎಂದ. ಆಟೋ ಬಂತು. ಅವರನ್ನು ಹತ್ತಿಸಿಕೊಂಡು ಹೊರಟಿತು. ಪಕ್ಕದಲ್ಲೇ ಕುಳಿತುಕೊಂಡ ಆತ ಹತ್ತಿರ ಸರಿದ ಆಂತನಿಸಿ ಅಕೆ ತನ್ನ ಬದಿಗೆ ಇನ್ನಷ್ಟು ಒತ್ತರಿಸಿದಳು. ಹೆಚ್ಚು ದೂರ ಸರಿಯಲು ಅದೇನು ಬೆಂಚ್ ಅಲ್ಲವಲ್ಲ. ಅದು ಬೆಂಚಲ್ಲವಾದರೂ, ಆಕೆ ಸರಿದ ರೀತಿಗೆ, ಆತನಿಗೆ ಮತ್ತಷ್ಟು ಹತ್ತಿರ ಬರಲು ಧೈರ್ಯವಾಗಲಿಲ್ಲ.
ಮಾತಿನ ಪ್ರಕೃತಿ ಎಷ್ಟೋ ಸಲ ವಿಚಿತ್ರವೆನಿಸುತ್ತದೆ. ಅದು ಮಾತಾಡದೆ ಕುಳಿತವರೆದುರು ತನ್ನ ಗಾಡಿಯನ್ನು ಒಮೊಮ್ಮೆ ಜೋರಾಗಿ ಓಡಿಸುತ್ತದೆ. ಎದುರಿಗಿರುವ ಮೌನವನ್ನು ತನಗೆ ಕಂಡಂತೆ ಅರ್ಥಮಾಡಿಕೊಳ್ಳುತ್ತ. ಇಲ್ಲಿ ಆಕೆಯ ಮೌನವನ್ನು ಅವಳ ಸಂಕೋಚ ಪ್ರವೃತ್ತಿ ಎಂದುಕೊಂಡನಾತ. ಆ ಸಂಕೋಚವನ್ನು ಓಡಿಸಬೇಕೆಂದು ಛಲ ತೊಟ್ಟಂತೆ ಮತ್ತಷ್ಟು ಮಾತಾಡತೊಡಗಿದ. ತನ್ನ ಹೆಂಡತಿ, ಪ್ರಿಯತಮೆಯರ ಕುರಿತು ಹೇಳತೊಡಗಿದ. ಒಬ್ಬಳ ನೀಳಮೂಗಿನ ಆಕರ್ಷಣೆ, ಮತ್ತೊಬ್ಬಳ ನಡೆ, ಇನ್ನೊಬ್ಬಳ ಸುಂದರ ಧಿಮಾಕು ಮತ್ತು ಏನೆಂದೇ ಗುರುತಿಸಲಾಗದ….. ಈ ಈಕೆ.
ಮಾತಿನೆದುರು ಮಳೆ ದಿಟ್ಟಿಸುತ್ತ ಕುಳಿತ ಅವಳು. ಖಾಲಿ ಮಳೆ ಸುರಿಯುತ್ತಿತ್ತು. ಅವಳ ಕಿವಿಯಲ್ಲಿ ಗುಂಜಾರವ ತುಂಬಿತ್ತು. ಆಕೆ ಸಂಪೂರ್ಣ ಧ್ಯಾನಸ್ಥಳಂತೆ ಕುಳಿತಿದ್ದಳು. “ಕೇಳಿದೆಯ? ನಾನೇನೆಂದೆ ಕೇಳಿಸುತ್ತದೆಯೆ?” – ಆತ ಅವಳ ಕಿವಿಯತ್ತ ಬಗ್ಗಿ ಆಟೋ ಸದ್ದನ್ನು ಸೀಳಿದಂತೆ ಕೇಳಿದ. ಆತನಿಗೆ ಅವಳು ಉತ್ತರಿಸಬೇಕಿರಲಿಲ್ಲ. ಹೇಗೂ ತನ್ನದು ಎಚ್ಚರಗೊಂಡ ಮನಸ್ಸು ಎಂದು ತಿಳಿದುಕೊಂಡವನಾತ. ಹುಡುಗಿಯರಿಂದ ಹುಡುಗಿಯರಿಗೆ ಹಾರಿಯೂ ಒಂದೆಡೆ ನೆಲೆಗೊಳ್ಳದ ಮನಸ್ಸು. ಒಂದೆಡೆ ನೆಲೆಗೊಂಡರೂ ಬಿಟ್ಟು ಹಾರುವ ಮನಸ್ಸು. ಸತ್ಯಗಳೆಂದರೆ ಇವೇ, ಮತ್ತು ಇವನ್ನೆಲ್ಲ ತಾನು ಸಾಕ್ಷಾತ್ಕರಿಸಿಕೊಂಡಿರುವಂತೆ ಮಾತಾಡುತ್ತಿದ್ದ.
ಒಂದೇ ನದಿಗಾಗಿ ಸಮುದ್ರ ಎಂದೂ ಮೊರೆಯುವುದಿಲ್ಲ. ಸೇರಬಯಸುವ ನದಿಗಳೆಲ್ಲ ಬರಲಿ, ಸೇರಲಿ. ಸಮುದ್ರದ ಗುಣ ಪುರುಷಗುಣ. (ಸಮುದ್ರವೇ ತಾನು, ತಾನೇ ಸಮುದ್ರ ಎಂಬಂತೆ) ಮುಂತಾಗಿ ನುಡಿಯುತ್ತ ನದಿಗಳನ್ನೆಲ್ಲ ಹೆಂಗಸರಿಗೆ ಪರೋಕ್ಷವಾಗಿ ಹೋಲಿಸುತ್ತ ಸಮುದ್ರ ನದಿ ಕಲ್ಪನೆಗಳನ್ನೆಲ್ಲ ಎಲ್ಲೆಂದರಲ್ಲಿ ಎಳೆದು ತನ್ನ ಥಿಯೆರಿಗಳಿಗೆ ಆಧಾರಕೊಡಲು ಹೊರಟ. ಆತನ ಮಾತುಗಳನ್ನು ಕೇಳುತ್ತಿದ್ದರೆ ಸಮುದ್ರ ಎಂದೂ ಹೆಣ್ಣಾಗಿರಲು ಸಾಧ್ಯವೇ ಇಲ್ಲ; ಗಂಡು, ನದಿಯಾಗುವುದೂ ಸಾಧ್ಯವಿಲ್ಲ. ಅಷ್ಟೇ ಅಲ್ಲ, ನದಿಯಾಗಿರುವುದು ಸಮುದ್ರ ಆಗಿರುವುದಕ್ಕಿಂತ ಯಾವತ್ತೂ ಕಡಿಯೆಯೇ ಅಂತನಿಸಬೇಕು ಹಾಗೆ.
ಹುಸಿ, ನಿಜ, ಭ್ರಮೆ ಎಲ್ಲವನ್ನೂ ಕಲೆಸಿ ಮಾತಾಡುವವರೆದುರು ಸತ್ಯ ನಿಷ್ಠರರತೆಯನ್ನು ಧಡಕ್ಕನೆ ಎಸೆದು ತಬ್ಬಿಬ್ಬುಗೊಳಿಸಲು, ಕನಿಕರದಿಂದ, ಮನಸ್ಸು ಬರುವುದಿಲ್ಲ. “ನಾನು ನಿಮ್ಮೊಂದಿಗೆ ಬರಲಾರೆ” – ಎಂಬಂತಹ ಕಾಣಲು ಸಣ್ಣದಿರುವ, ಸತ್ಯವನ್ನೂ! ಈತನೋ ತಾನೆಂದರೆ ವಾಸ್ತವದ ಬದುಕಿನ ತಿರುಳಿಗೇ ಕೈಹಾಕಿದವ. ಸತ್ಯ ಕಂಡವ. ಆದರೂ ಸುಳ್ಳುಗಳನ್ನು ಬಿಡಲಾರದವ. ಮುಕ್ತಮನದವ. ಜಗತ್ತೆಲ್ಲ ಹೀಗೆಯೇ ತನ್ನಂತೆಯೇ. ಆದರೆ ತನ್ನಂತಾಗಲು ಧೈರ್ಯ ಸಾಲದೆ ಇರುವವರಿಂದ ತುಂಬಿಕೊಂಡಿದೆ ಮುಂತಾಗಿ ಅರಳು ಹುರಿದಂತೆ ಒಂದೇಸವನೆ ಹೇಳುತ್ತಲೇ ಇದ್ದ.
ಇವನೆದುರು, ಆಹ! ಮಳೆ! ಏಕಾಂಗವೀರನಂತೆ. ಮೌನವಾಗಿ ಸುರಿಯುತ್ತ ಮೌನವಣಕಿಸುವ ಮಳೆ. ಅವನ ಮಾತುಗಳಿಗೆ ಅಡ್ಡ ಹಾಕಿದ ನೀಲಮಣಿಗಳ ಪರದೆಯಂತೆ ಪಿಳಿಗುಡುತ್ತ ಇಳಿಯುವ ಮಳೆ. ಅದರಾಚೆ ಇಣುಕುವ ಯಕ್ಷಲೋಕದ ಶ್ಯಾಮಲತೆ. ಮಂದಕಿರಣಗಳ ಕಿರೀಟದ ಮುಖವೆಲ್ಲಿ? ಕಣ್ಣೆಲ್ಲಿ?… ಏನೂ ಬಯಲುಗೊಳಿಸದ ಮಸುಕುಕವಿಸಿದ ಮಳೆ.
ದೇವಸ್ಥಾನ ಬಂತು. ಬೇಡ, ಮುಂದೆ ಹೋಗುವ ಎಂದ. ಸಿನೆಮಾ ಟಾಕೀಸು ಬಂತು. ಬೇಡ ಮುಂದೆ ಹೋಗಲಿ ಎಂದ. ಪಾರ್ಕು ರೆಸ್ಟುರಾ ಬಂತು. ಬೇಡ ಅಲ್ಲವೆ? ಹೋಗಲಿ ಮುಂದೆ ಅಂದ. ಆಟೋ ಓಡಿತು. ಅವನ ಮಾತಿನ ಗಾಡಿಯಂತೆಯೇ. ಹೀಗೆಯೇ ಇದು ಓಡುತ್ತಿರಬೇಕು. ಎಲ್ಲಿಯೂ ನಿಲ್ಲದೆ ಅಲ್ಲವೆ? – ಎಂದು ಕೇಳಿದ. ಈ ಮಾತನ್ನು ತಾನು ಇದೇ ಪ್ರಥಮಸಲ ಕೇಳುತ್ತಿದ್ದೇನೋ ಎಂದು ತನಗೇ ಅನಿಸುವಂತಹ ಹಸಕು ದನಿಯಲ್ಲಿ. ಆಕೆ ಕಣ್ಣು ತೆಗೆಯದೆ ಮಳೆ ನೋಡುತ್ತಿದ್ದಳು. ಉತ್ತರಿಸಲಿಲ್ಲ. ಬಿಸಿಲಿರದಿದ್ದರೂ ಬೆಳಕಿತ್ತು. ಆಕಾಶದಲ್ಲಿ ಸೂರ್ಯಚಂದ್ರರು ಇದ್ದರೂ ಇರಲಿಲ್ಲ. ಇರುವುದೆಲ್ಲ ಘನಶ್ಯಾಮಸುಂದರ ಮೇಘಗಳು. ಪದ ಜೋಡಿಸಿ ರಾಗ ಕಟ್ಟುವ ದಟ್ಟ ಮೇಘಗಳು.
ಆಟೋ ಓಡುತ್ತಿತ್ತು. ಇನ್ನು ವಾಪಾಸು ಬರಲಿಕ್ಕೇ ಇಲ್ಲವೆಂಬಂತಹ ನಂಬಿಕೆಯ ಮೂಳೆಯನ್ನು ಕಚ್ಚಿಕೊಂಡು ಓಡುವಂತೆ.
ಇಲ್ಲಿ ಇಳಿಯುವನ? ಆತ ಕೇಳಿದ. ನೋಡಿದರೆ ಎದುರು ಪ್ರವಾಸಿ ಬಂಗಲೆ ಇತ್ತು. ಮೊತ್ತಮೊದಲಿಗೆ ಎಂಬಂತೆ ಆಕೆ ಅವನನ್ನು ನೋಡಿದಳು. ಕೆಳಗಿಳಿದಳು. ಹಸಿರೇ ಹಸಿರಿನ ನಡುವೆ ನಡುವೆ ನಿಂತ ಸುಂದರ ಬಂಗಲೆ. ಏನೆಲ್ಲಾ ಕಣ್ಣಾಮುಚ್ಚಾಲೆ ಆಟಗಳು ಕತೆಗಳು ಗೊತ್ತಿದ್ದೂ ಹೇಳಲಾರದೆ ಹೊಟ್ಟೆಪಾಡಿಗೆ ಸುಮ್ಮನಿರುವ ಪ್ರಾಮಾಣಿಕ ಸರಕಾರಿ ನೌಕರನಂತೆ ಬಿಮ್ಮಗೆ ನಿಂತಿತ್ತು. ….ಅಲ್ಲಿಂದ ಹೊರಗೊಂದು ಖಾಲಿ ಆಟೋ ಬರುವುದು ಅವಳಿಗೆ ಕಾಣಿಸಿತು.
ಆಟೋಕ್ಕೆ ದುಡ್ಡು ಕೊಟ್ಟು ಆತ ಇತ್ತ ತಿರುಗಿದರೆ
ಆಕೆ ಮಾಯವಾಗಿದ್ದಳು!
* * * *
ರಾತ್ರಿ ಪತಿಯೊಂದಿಗೆ ಮಳೆಯ ಅಂತರಂಗದ ಕುರಿತು ತೇವಭಾರದ ದನಿಯಲ್ಲಿ ತರ್ಕಿಸುತ್ತ ಏನೂ ಸ್ಪಷ್ಟವಾಗದ ಸುಖದಲ್ಲಿ ನರಳಿದಳು ಅವಳು. ಆಕೆಯ ತರ್ಕದುದ್ದಕ್ಕೂ ಆ ಆತನ ನೆರಳು ಕೂಡ ಇರಲಿಲ್ಲ. ಬದಲು ಅಷ್ಟು ಸುರಿದೂ ಸೆಖೆ ತಣಿಸಲಾರದೆ ಸೋತು ನಗುನಗುತ ನಿಂತು ತಂಪುಣಿಸುವ ಮಳೆಯ ಕುರಿತೇ ಎಲ್ಲ. ಈ ನಿಗೂಢವನ್ನು ಒಳಬಗೆದು ಹೇಳಲು ತಾನಂತೂ ಅಸಮರ್ಥನೆಂದ ಪತಿಯನ್ನು ಪ್ರೀತಿಯಿಂದ ತಬ್ಬಿಕೊಂಡು ಮಲಗಿದಳಾಕೆ; ಮೋಡಗಳಾಚೆಯ ಶ್ಯಾಮಲಲೋಕದಲ್ಲಿನ ಕಂಡೂಕಾಣದ ಕೇಳಿಯೂ ಕೇಳದ ಗುರುತಿಸಿಯೂ ಗುರುತಿಸಲಾಗದ ಕಣ್ಣು ನಗೆ ದನಿಯನ್ನು ಅರಸುವ ಕನಸಿನ ಮಾರ್ದವತೆಯನ್ನು ಉಳಿಸಿಕೊಂಡೇ ಬದುಕುವ ಸಿದ್ಧತೆಯಂತೆ.
*****
ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ