ಸದ್ಯಕ್ಕೆ ನಮ್ಮನ್ನು ಗಾಢವಾಗಿ ಕಾಡುತ್ತಿರುವ ವಿಷಯಗಳಲ್ಲಿ ಕನ್ನಡದ ಅಳಿವು, ಉಳಿವು, ವ್ಯಾಪ್ತಿ ಮುಖ್ಯವಾದುವು. ’ಶಿಕ್ಷಣ ಮಾಧ್ಯಮದಲ್ಲಿ ಕನ್ನಡ’ ಈ ಚಿಂತನೆಯ ಒಂದು ಭಾಗವೂ ಆಗಿದೆ, ಕೆಲವು ರೀತಿಗಳಲ್ಲಿ ಅದಕ್ಕಿಂತಾ ಮಿಗಿಲಾದ ವಿಷಯವೂ ಆಗಿದೆ. ಇಂದು ಕನ್ನಡ ನಾಡಿನಲ್ಲಿ ತೀವ್ರವಾಗಿ ಚರ್ಚೆಗೊಳಗಾಗಿರುವ ವಿಷಯಗಳಲ್ಲಿ ಇದೂ ಒಂದು (ಇಷ್ಟು ವರ್ಷಗಳ ನಂತರವೂ ಚರ್ಚೆಯ ಹಂತದಲ್ಲಿರುವುದು ವಿಪರ್ಯಾಸವೆ ಸರಿ!!). ಎಲ್ಲಾ ಆಯಾಮಗಳಿಂದಲೂ ಸಮಾಜದ ಮೇಲೆ ಪರಿಣಾಮ ಬೀರಬಲ್ಲ ವಿಷಯ ಇದು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಪ್ರಗತಿ, ಸಾಂಸ್ಕೃತಿಕ ಹರಿವಿನ ಮುಂದುವರಿಕೆ, ಭಾವನಾತ್ಮಕ ನೆಮ್ಮದಿ, ಈ ಎಲ್ಲಾ ಅಂಶಗಳ ದೃಷ್ಟಿಯಿಂದ ಮೇಲಿನ ವಿಷಯದ ಸಾರ್ವಜನಿಕ ಚರ್ಚೆ ಒಂದು ಅನಿವಾರ್ಯ ಅಗತ್ಯ. ನಾಡಿನ ಪ್ರತಿಯೊಬ್ಬ ಸೂಕ್ಷ್ಮಜ್ಞನೂ ಈ ವಿಷಯವಾಗಿ ವಸ್ತುನಿಷ್ಠ ಚಿಂತನೆ ನಡೆಸುವ ಅಗತ್ಯವಿದೆ. ’ಪ್ರಾಥಮಿಕ ಶಿಕ್ಷಣ ಮಾಧ್ಯಮವಾಗಿ ಕನ್ನಡ’ ಶೀರ್ಷಿಕೆಯ ಲೇಖನ, ಕೆ.ಎಸ್.ಸಿ ಯಲ್ಲಿ ಈ ಕುರಿತಾದ ಚಿಂತನೆಗೆ ನಾಂದಿಯಾಗುತ್ತದೆ ಎಂದು ನನ್ನ ಆಶಯ.
’ನಡೆದು ಬಂದ ದಾರಿ’ ಹೇಗಿದ್ದಿರಬಹುದು ಎನ್ನುವ ಊಹಾಪೂರಿತ ಅವಲೋಕನದೊಂದಿಗೆ ಈ ಲೇಖನವನ್ನು ಪ್ರಾರಂಭಿಸುತ್ತೇನೆ. ಸ್ವಾತಂತ್ರ್ಯಾನಂತರದ ಮೊದಲ ದಿನಗಳಲ್ಲಿ ಕರ್ನಾಟಕದಲ್ಲಿನ ಪ್ರಾಥಮಿಕ ಶಾಲೆಗಳ ರೂಪರೇಷೆಯೇನು ಎಂಬ ಪ್ರಶ್ನೆ ಅತಿ ಮುಖ್ಯ. ಆ ತಲೆಮಾರಿನ ಅನೇಕರ ಪರಿಚಯವಿರುದರಿಂದ ಹೆಚ್ಚಿನ ಪ್ರಾಥಮಿಕ ಶಾಲೆಗಳು ಕನ್ನಡ ಮಾಧ್ಯಮದ್ದವೆ ಆಗಿದ್ದವು ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಇಂಗ್ಲೀಶ್ ಶಾಲೆಗಳಿದ್ದರೂ ಅವುಗಳ ಸಂಖ್ಯೆ ಅತಿ ಕಡಿಮೆಯಾಗಿದ್ದಿರಬೇಕು. ಕೇವಲ ಸಂಖ್ಯೆಯ ದೃಷ್ಟಿಯಿಂದಲ್ಲ, ಸಾಮಾಜಿಕ ಪ್ರಭಾವದ ದೃಷ್ಟಿಯಿಂದಲೂ ಹೌದು. ಕನ್ನಡ ಶಾಲೆಗಳ ಮೇಲಿನ ಜನರ ನಂಬಿಕೆ (ತನ್ಮೂಲಕ ಸಮಾಜದ ಆಂತರ್ಯದಲ್ಲಿ ಕನ್ನಡದ ಸಾಧ್ಯತೆಗಳ ಮೇಲಿನ ನಂಬಿಕೆ, ಕನ್ನಡ ಸಮಾಜದಲ್ಲಿ ಬೆಳೆದಿರಬಹುದಾಗಿದ್ದ ಆತ್ಮ ಗೌರವ), ಆಂಗ್ಲ ಶಾಲೆಗಳಿಗಳಿಗೆ ಪೈಪೊಟಿ ಕೊಡಬಲ್ಲ ತಾಕತ್ತು – ಇವೆಲ್ಲಾಈ ದೃಷ್ಟಿಯಿಂದ ಕನ್ನಡ ಶಾಲೆಗಳ ಮತ್ತೂ ಹೆಚ್ಚಿನ ಬೆಳವಣಿಗೆಗೆ ಒಳ್ಳೆಯ ವೇದಿಕೆ ತಯಾರಾಗಿತ್ತು ಎಂದು ನನ್ನ ಊಹೆ (ಅ ಕಾಲದ ನೆನಪುಳ್ಳ ಹಿರಿಯರು ಈ ಬಗ್ಗೆ ಬೆಳಕು ಚೆಲ್ಲಬೇಕು!). ಇಂದಿನ ಪರಿಸ್ಥಿತಿಯೊಂದಿಗೆ ಹೋಲಿಸಿ ನೋಡುವುದಾದರೆ, ಇಂದೂ ಕೂಡ ಕನ್ನಡ ಶಾಲೆಗಳೇ ಹೆಚ್ಚಿವೆಯಾದರೂ (ಈ ಬಗ್ಗೆ ಸಚಿವ ವಿಶ್ವನಾಥರು ಅಂಕಿ ಅಂಶ ನೀಡಿದ್ದನ್ನು ಪತ್ರಿಕೆಗಳು ಪ್ರಕಟಿಸಿವೆ), ಸಮಾಜದ ಮೇಲೆ ಅವುಗಳು ಬೀರಬಹುದಾದ ಪರಿಣಾಮದಲ್ಲಿ ಭಯಂಕರ ವ್ಯತ್ಯಾಸ ನಿರ್ಮಾಣವಾಗಿದೆ. ಸಂಖ್ಯೆಯ ದೃಷ್ಟಿಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಸಮಸ್ಯೆ ಎಷ್ಟು ಗಂಭೀರ ಎನ್ನುವುದು ತಿಳಿಯುತ್ತದೆ. ಆಂಗ್ಲ ಮಾಧ್ಯಮ ಶಾಲೆಗಳು ನಗರ ಮತ್ತು ಪಟ್ಟಣಗಳಲ್ಲಿ ಸಾಂದ್ರವಾಗಿದ್ದರೆ, ಕನ್ನಡ ಮಾಧ್ಯಮ ಶಾಲೆಗಳು ಪಟ್ಟಣ ಮತ್ತು ಹಳ್ಳಿಗಳಲ್ಲಿ ಸಾಂದ್ರವಾಗಿವೆ. ಪೂರ್ತಿ ಅಲ್ಲದಿದ್ದರೂ ಶ್ರೀಮಂತರು, ಶೈಕ್ಷಣಿಕವಾಗಿ ಮುಂದುವರೆದಿರುವ ಪೋಷಕರ ಮಕ್ಕಳು, ಮೇಲ್ವರ್ಗದವರು ಆಂಗ್ಲ ಶಾಲೆಗಳ ಪೋಷಕರಾಗಿದ್ದರೆ, ಸಾಮಾಜಿಕವಾಗಿ ಕೆಳವರ್ಗದಲ್ಲಿರುವವರು, ಬಡವರು, ಶೈಕ್ಷಣಿಕವಾಗಿ ಹಿಂದುಳಿದಿರುವ ಪೋಷಕರ ಮಕ್ಕಳು ಕನ್ನಡ ಶಾಲೆಗಳನ್ನು ಅವಲಂಬಿಸಿದ್ದಾರೆ – ಎಂದು ಸ್ಥೂಲವಾಗಿ ಹೇಳಬಹುದು. ಇದಕ್ಕೆ ಅನೇಕ ಪ್ರಮುಖ ಅಪವಾದಗಳಿವೆ, ಆದರೆ ಸಂಖ್ಯೆಯ ದೃಷ್ಟಿಯಿಂದ, ಸಾಮಾಜಿಕ ಪರಿಣಮದ ದೃಷ್ಟಿಯಿಂದ ಗೌಣ. ಇದರಿಂದಾಗಿರುವ ಒಂದು ಮಾರಕ ಪರಿಣಾಮ – ಕೆಳವರ್ಗದವರು, ಬಡವರು ಆಂಗ್ಲ ಶಾಲೆಗಳಲ್ಲಿ ಮಕ್ಕಳನ್ನು ಓದಿಸಬೇಕು ಎಂದು ಹಾತೊರೆಯುವಂತಾಗಿದೆ. ಒಟ್ಟಿನಲ್ಲಿ ಕನ್ನಡಿಗರು ತಮ್ಮ ಭಾಷೆಯ ಸಾಧ್ಯತೆ, ಶಕ್ತಿ – ಯ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ, ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಅಪ್ರಿಯ ಸತ್ಯವನ್ನು ಇಂದು ನಾವು ಎದುರಿಸಬೇಕಾಗಿದೆ. (ಈ ಎಲ್ಲದರ ಪರಿಣಾಮವಾಗಿ ಆಂಗ್ಲ ಮಾಧ್ಯಮದಲ್ಲಿ ಓದಿದ ಈ ಲೇಖಕನೂ ಇದಕ್ಕೆ ಒಂದು ಉದಾಹರಣೆ.) ಭಾಷೆಯ ಮೇಲಿನ ನಂಬಿಕೆಗೆ ನೇರವಾಗಿ ಸಮಾಜದ ಆತ್ಮ ವಿಶ್ವಾಸದ ಜೊತೆಗೆ ಸಂಬಂಧವಿರುವ ಕಾರಣ, ಇದರ ಪರಿಣಾಮ ಏನು ಎನ್ನುವುದನ್ನು ಇನ್ನೂ ಹೆಚ್ಚು ವಿವರಿಸಬೇಕಾಗಿಲ್ಲ.
ಸುಗಮವಾದ ಹಾದಿಯಲ್ಲಿ ಸಾಗಬಹುದಾಗಿದ್ದ ಪರಿಸ್ಥಿತಿಯಿಂದ ಇಂತಹ ಹೀನಾಯ ಪರಿಸ್ಥಿತಿ ತಲುಪಿರುವ ಕಾರಣಗಳನ್ನು ಕುರಿತು ಧ್ಯಾನಿಸಬೇಕಿದೆ. ಬದಲಾವಣೆ ನಗರಗಳಿಂದ ಶುರುವಾಗಿದೆ ಎನ್ನುವುದಕ್ಕೆ ಹೆಚ್ಚಿನ ವಿವರ ನೀಡಬೇಕಾಗಿಲ್ಲ ಎಂದು ನಂಬಿ, ನಗರಗಳ ಬೆಳವಣಿಗೆಯ ದೃಷ್ಟಿಯಿಂದ ಇದನ್ನು ಅನ್ವೇಷಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಣದ ಬಲದಿಂದ ಆಂಗ್ಲ ಶಾಲೆಗಳು ಕನ್ನಡ ಶಾಲೆಗಳಿಗಿಂತ ಮಿಗಿಲಾಗಿವೆ. (ಇಂದು ಹಣವಂತರ ಖಾಸಗಿ ಆಂಗ್ಲ ಶಾಲೆಗಳು ಸೌಲಭ್ಯ, ಸೌಕರ್ಯ, ಶೈಕ್ಷಣಿಕ ಗುಣ ಮಟ್ಟದ ದೃಷ್ಟಿಯಿಂದ ಮುಂದಿವೆ.) ಅಂದರೆ ಕ್ರಮೇಣ ಹಣವಂತರು ಕನ್ನಡ ಶಾಲೆಗಳ ಕೈಬಿಟ್ಟರೆ? ಕೈ ಬಿಟ್ಟಿದ್ದಾದರೆ ಏಕೆ? ಹೊರರಾಜ್ಯದಿಂದ ವಲಸೆ ಬಂದವರ ಶೈಕ್ಷಣಿಕ ಅಗತ್ಯಗಳಿಂದ ನಿರ್ಮಾಣವಾದ ಆಂಗ್ಲ ಶಾಲೆಗಳು, ಕನ್ನಡಿಗರಲ್ಲಿ ಕನ್ನಡದ ಶಕ್ತಿಯ ಕುರಿತಾದ ವಿಶ್ವಾಸ ಕುಂದಿಸಿದವೆ? ಕನ್ನಡಿಗರ ಭಾಷೆಯ ಮೇಲಿನ ನಿರಭಿಮಾನ ಎಷ್ಟರ ಮಟ್ಟಿಗೆ ಕಾರಣವಿರಬಹುದು? ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗೆ ಆಂಗ್ಲ ಭಾಷೆಯ ಮೇಲಿನ ಪ್ರಭುತ್ವ ಕಷ್ಟ ಸಾಧ್ಯ ಎಂದೆನಿಸಿತೆ? ಇಂಗ್ಲೀಷ್ -ನಲ್ಲೆ ಎಲ್ಲಾ ಸಿಗುವಾಗ ಕನ್ನಡದ ಅವಶ್ಯಕತೆಯಾದರೂ ಏಕೆ ಎಂದೆನಿಸಿತೆ? ಪ್ರಾಥಮಿಕ ಶಾಲಾ ವಿದ್ಯಾರ್ಥಿಯೊಬ್ಬನ ಶೈಕ್ಷಣಿಕ ಹಾಗೂ ಜ್ಞಾನದ ಹಸಿವನ್ನು ಇಂಗಿಸುವ ಪುಸ್ತಕ ಇನ್ನಿತರ ಸೌಲಭ್ಯಗಳಲ್ಲಿ ಕನ್ನಡ ಹಿಂದುಳಿಯಿತೆ? ಬದಲಾಗುತ್ತಿದ್ದ ಸಾಂಸ್ಕೃತಿಕ ಪರಿಸರದಲ್ಲಿ ಕನ್ನಡ ವಿದ್ಯಾರ್ಥಿಗಳ ಕಲ್ಪನಾ ಶಕ್ತಿಯನ್ನು ಹಿಡಿದಿಡುವಲ್ಲಿ ಸೋತಿತೆ? ವಿಜ್ಞಾನ ಪ್ರಪಂಚದಲ್ಲಿ ಉಂಟಾಗುತ್ತಿದ್ದ ಬೆಳವಣಿಗೆಗಳನ್ನು ಅಷ್ಟೆ ವೇಗವಾಗಿ ಕನ್ನಡಕ್ಕೆ ತರುವಲ್ಲಿ ಸೋತಿದ್ದು ಇದಕ್ಕೆ ಕಾರಣವಾಯ್ತೆ? ಪ್ರಾಥಮಿಕ ಶಿಕ್ಷಣಕ್ಕೆ ನೇರವಾಗಿ ರಾಜ್ಯ ಸರ್ಕಾರ ಹೊಣೆಯಾದ್ದರಿಂದ ಸರ್ಕಾರಗಳ ನಿರ್ಲಕ್ಷ್ಯ ಇದಕ್ಕೆ ಕಾರಣವಾಯಿತೆ? ಅಥವಾ ಬುದ್ಧಿಜೀವಿಗಳ ಮಕ್ಕಳು ಆಂಗ್ಲ ಶಾಲೆಗಳಲ್ಲಿ ಓದುತ್ತಿರುವುದನ್ನು ನೋಡಿದ ಸಾಮಾನ್ಯ ಕನ್ನಡಿಗ ಧೃತಿಗೆಟ್ಟನೆ? ಅಥವಾ ನಿಜಕ್ಕೂ ಕನ್ನಡ ಮಾಧ್ಯಮದ ಅವಶ್ಯಕತೆಯೆ ನಮಗಿಲ್ಲವೆ, ಸುಮ್ಮನೆ ಭಾವನಾತ್ಮಕ ಕಾರಣಗಳಿಂದ ನಾವು ವ್ಯಾಕುಲಗೊಂಡಿದ್ದೇವೆಯೆ? ಈ ಎಲ್ಲಾ ಅಂಶಗಳೂ ಸದ್ಯದ ಪರಿಸ್ಥಿತಿಗೆ ಕಾರಣವಾದರೂ ಇದರ ಬಗೆಗಿನ ಆಳವಾದ ಅಧ್ಯಯನ ನಡೆಯದೆ, ಈ ವಿಷಯಕ್ಕೆ ನಾವು ಸರಿಯಾದ ಪರಿಹಾರ ಹುಡುಕಿಕೊಳ್ಳಲಾಗುವುದಿಲ್ಲ. ವಾಟಾಳರ ಘರ್ಜನೆಯೂ, ಜಿ.ನಾ. ಕುಮಾರರ ಹೋರಾಟವೂ, ಬರಗೂರರ ಕ್ರೂಸೇಡೂ ಈ ತೊಂದರೆಯನ್ನು ನಿವಾರಿಸಲು ಸಾಧ್ಯವಾಗದು. ಒಟ್ಟಿನಲ್ಲಿ, ಇವೆಲ್ಲಾ ಅಂಶಗಳು ಒಂದಕ್ಕೊಂದು ಸೇರಿಕೊಂಡು, ಸರ್ಕಾರದ ಕೃಪಾಕಟಾಕ್ಷದಲ್ಲಿ ಮಾತ್ರ ಬದುಕುವಂತಾಗಿರುವ ಕನ್ನಡ ಶಾಲೆಗಳು ಹಿಂದುಳಿಯುವಂತಾಗಿದೆ.
ಮೇಲೆ ಕೊಟ್ಟಿರುವ ಕಾರಣಗಳು ಮುಖ್ಯವಾದವುಗಳಾದರೂ ಕೆಲವು ಪ್ರಮುಖ ಕಾರಣಗಳಿವೆ. ಪಾಶ್ಚಾತ್ಯರ ವೈಜ್ಞಾನಿಕ ಪ್ರಗತಿ, ಶೈಕ್ಷಣಿಕ ಮಾಹಿತಿ ಎಲ್ಲವೂ ಆಂಗ್ಲದಲ್ಲೆ ಇದ್ದು, ಅವುಗಳ ಶ್ರೇಷ್ಠ ಮಟ್ಟದ ಕನ್ನಡ ಭಾವಾನುವಾದಗಳ ಅಲಭ್ಯ ಒಂದು ಮುಖ್ಯ ಕಾರಣ. ಪ್ರಾಥಮಿಕ ಮಟ್ಟದಲ್ಲಿ ಇದು ಹೇಗೆ ಮುಖ್ಯ ಎಂದು ಪ್ರಶ್ನಿಸುವವರು ಐ.ಸಿ.ಎಸ್.ಸಿ.-ಯ ಪ್ರಾಥಮಿಕ ಶಾಲಾ ಪಠ್ಯಗಳನ್ನು ಒದಬೇಕು. ಕನ್ನಡದ ಶಕ್ತಿಯ ಮೇಲಿನ ಅಪನಂಬಿಕೆಯಿಂದ (ಅಪನಂಬಿಕೆ ಅರ್ಥಹೀನವಾದರೂ ಪ್ರಾಮಾಣಿಕವಾಗಿತ್ತು), ಬಹುಬೇಗ ಪಾಶ್ಚಾತ್ಯರ ಪ್ರಗತಿಯನ್ನು ಭಾರತಕ್ಕೆ ತರುವ ಅವಶ್ಯಕತೆಯಿಂದ, ಯಾವುದಕ್ಕೂ ಹೆಚ್ಚು ಸಮಯವಿಲ್ಲ ಎಂಬ ಭಾವನೆಯಿಂದ, ದೇಶಾದ್ಯಂತ ಇರುವ ಪ್ರತಿಭಾವಂತರು ಒಂದೆಡೆ ಕಲೆತು ಕಲಿಯಬೇಕಾದರೆ ಬೇಕಾಗುವ ಸೌಕರ್ಯದಿಂದ, ಆಂಗ್ಲ ಮಾಧ್ಯಮಕ್ಕೆ ಕಾಲನ ಕೃಪಾಕಟಾಕ್ಷ ದೊರೆಯಿತು – ಎಂದು ನಾವು ಪರಿಗಣಿಸಬಹುದು. ಮಿಕ್ಕ ಕಾರಣಗಳು ಇವುಗಳ ಸುತ್ತ ಬೆಳೆದವು, ಈ ಕಾರಣಗಳಿಗೆ ಉತ್ತರಿಸಲಾಗದೆ ಆದ ಪರಿಣಾಮಗಳು. ಒಬ್ಬ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ಜ್ಞಾನದ ಹಸಿವು ತೀರಿಸುವ ಎಲ್ಲವೂ ಕನ್ನಡದಲ್ಲಿ ಇಲ್ಲ, ಆದ್ದರಿಂದ ಪ್ರಾಥಮಿಕ ಹಂತದಲ್ಲೂ ಇಂಗ್ಲೀಷ್ ಅಗತ್ಯ ಎನ್ನುವ ಒಂದು ಕಳಕಳಿ ಹುಟ್ಟಿದ್ದರೆ ತಪ್ಪಿಲ್ಲ. ಆದರೆ ಇದರ ಜೊತೆಗೆ ಮತ್ತೊಂದು ಯೋಚನೆ ಸೇರಿದ್ದು ಕನ್ನಡ ಮಾಧ್ಯಮ ಹಿಂದೆ ಸರಿಯಲು ಕಾರಣವಾಗಿದ್ದಿರಬೇಕು. ಅದೆ – ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡದಲ್ಲಿ ಮಾಡುತ್ತಿರುವ ಒಬ್ಬ ವಿದ್ಯಾರ್ಥಿ, ಅದೆ ತರಗತಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಿಂತಾ ಇಂಗ್ಲೀಷ್ ಭಾಷಾ ಜ್ಞಾನದ ವಿಷಯದಲ್ಲಿ ಹಿಂದುಳಿಯಬಹುದು – ಎಂಬುದು.
ಇವಿಷ್ಟು ಕೇವಲ ಶೈಕ್ಷಣಿಕ ದೃಷ್ಟಿಯಿಂದ ನಡೆಸಿದ ವಿಶ್ಲೇಷಣೆ. ಈ ಎಲ್ಲಾ ಅಂಶಗಳು ಸಾಮಾಜಿಕ ಜೀವನದಲ್ಲಿ ಉಂಟು ಮಾಡಿದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಇಂಗ್ಲೀಷ್ ಶಿಕ್ಷಣ ದುಬಾರಿಯಾಗಿ ಕ್ರಮೇಣ ’ಇರುವವರು ಇಲ್ಲದವರು’ ಎಂಬ ಎರಡು ವರ್ಗಗಳಾಗಿದ್ದು ನಂತರದ ಒಂದು ಮುಖ್ಯ ಬೆಳವಣಿಗೆ. (ಸ್ವಲ್ಪ ಮಟ್ಟಿಗೆ ಡೊನೇಶನ್ ಸಂಸ್ಕೃತಿ ಇದರಿಂದಲೆ ಬೆಳೆದಿರಬಹುದು.) ಇಂಗ್ಲೀಷ್, ಆಂಗ್ಲ ಮಾಧ್ಯಮ ಪ್ರತಿಷ್ಠೆಯ ಸಂಕೇತವಾಯಿತು. ಮಕ್ಕಳಲ್ಲಿ, ಕ್ರಮೇಣ ದೊಡ್ಡವರಲ್ಲಿಯೂ ಕನ್ನಡ ಅಷ್ಟೆನೂ ಶಕ್ತಿಯುತ ಭಾಷೆಯಲ್ಲ ಎನ್ನುವ ತಾತ್ಸಾರ ಬೆಳೆಯಿತು. ಮಿಕ್ಕ ಕಾರಣಗಳ ಜೊತೆಗೆ ಮಾತೃಭಾಷೆಯನ್ನು ಮನುಷ್ಯ ಅವಲಂಬಿಸುವುದು ತನ್ನ ಸಾಂಸ್ಕೃತಿಕ ಪ್ರಜ್ಞೆಯನ್ನು ಉಳಿಸಿ-ಬೆಳೆಸಲು. ಆದರೆ ಪಶ್ಚಿಮದ ತಂತ್ರಜ್ಞಾನದಿಂದ ಉಂಟಾದ ಆಲೋಚನೆಗಳಿಂದ ಪ್ರೆರಿತ ಸಾಂಸ್ಕೃತಿಕ ಬೆಳವಣಿಗೆಯಿಂದ ನಮ್ಮ ಪರಂಪರೆಯ ಜ್ಞಾನವೆ ಅಮುಖ್ಯ ಎಂಬ ಧೋರಣೆ ಬೆಳೆದದ್ದರಿಂದ ಕನ್ನಡದ ಮೇಲಿನ ಅವಲಂಬನೆ ಮತ್ತೂ ಕಡಿಮೆಯಾಯಿತು. ಕಡೆಗೆ ಭಾಷೆಯ ಅಸ್ತಿತ್ವಕ್ಕೆ ಸಂಚಕಾರ ಉಂಟಾಗಿರುವ ಇಂದಿನ ಪರಿಸ್ಥಿತಿಯನ್ನು ನಾವು ತಲುಪಿದ್ದೀವಿ. ಇಂದು ಮಾತೃಭಾಷೆಯೆ ಇಂಗ್ಲೀಶ್ ಎನ್ನುವ ಒಂದು ವರ್ಗ ಬೆಂಗಳೂರಿನಂತಹ ಅನೇಕ ನಗರಗಳಲ್ಲಿ ಇದೆ. ಕಾಲನ ಕೃಪೆಯಿಂದಾದ ಈ ವರ್ಗದ ಯಶಸ್ಸು ಮಿಕ್ಕವರ ಮೆಲೆ ಅಪಾರ ಪ್ರಭಾವ ಬೀರತೊಡಗಿದೆ. ಜಾಗತೀಕರಣ, ಐ.ಟಿ., ಅಂತರ್ಜಾಲ ಇವುಗಳನ್ನು ಬಳಸಿಕೊಳ್ಳುವಲ್ಲಿ ಕನ್ನಡದ ತಯಾರಿಯ ಅಭಾವ – ಇವೆಲ್ಲಾ ಇಂಗ್ಲೀಷ್ ಸರ್ವಸ್ವವಾಗಿರುವವರ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ಕೊಟ್ಟಿದೆ. ಕನ್ನಡದ ಕೀಳರಿಮೆಯನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ, ಕನ್ನಡ ಮಾಧ್ಯಮದ ಈ ಸೋಲೆ ಕನ್ನಡ ಇಂದಿನ ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳಿಗೆ ಬಹು ಮಟ್ಟಿಗೆ ಕಾರಣ ಎನ್ನುವುದು ನನ್ನ ದೃಢವಾದ ನಿಲುವು.
ಒಂದೆಡೆ ಈ ಎಲ್ಲಾ ಬೆಳವಣಿಗೆಗಳಾಗುತ್ತಿದ್ದರೆ ವಿಜ್ಞಾನಿಗಳು, ಸಮಾಜಶಾಸ್ತ್ರಜ್ಞರು ಹೇಳುತ್ತಿದ್ದುದೆ, ಹೇಳುತ್ತಿರುವುದೆ ಬೇರೆ. ವಿಶ್ವ ಸಂಸ್ಥೆಯ ಅನುಮೋದನೆಯೊಂದಿಗೆ ಇವರು ಹೇಳಿದ್ದು – ವೈಜ್ಞಾನಿಕ ದೃಷ್ಟಿಯಿಂದ ಪ್ರಾಥಮಿಕ ಶಿಕ್ಶಣ ಮಾತೃಭಾಷೆಯಲ್ಲೆ ಆಗಬೇಕು . ಈ ದಿಸೆಯಲ್ಲಿ ಮತ್ತೊಂದು ಬೆಳವಣಿಗೆಯೆಂದರೆ – ಭಾಷೆಯ ಶಕ್ತಿಯ ದೃಷ್ಟಿಯಿಂದ (ಸೌಕರ್ಯದ ದೃಷ್ಟಿಯಿಂದಲ್ಲ!) ಪ್ರಾಥಮಿಕ ಶಿಕ್ಷಣಕ್ಕೆ ಕನ್ನಡ ಶಕ್ತವಲ್ಲದೆ ಪೂರಕವಾಗಿದೆ ಎನ್ನುವುದು. ಕೆಲವರಾದರೂ, ಮಾತೃಭಾಷೆಯಲ್ಲೆ ಶಿಕ್ಷಣ ಪಡೆದು ಉನ್ನತ ಪದವಿ, ಶ್ರೇಷ್ಠ ಶೈಕ್ಷಣಿಕ, ಔದ್ಯೋಗಿಕ ಸಾಧನೆ ಮಾಡಿದರು. ಕನ್ನಡದಂತಹ ಭಾಷೆಯ ದುಡಿಮೆಗೆ ಮೊದಲಿಟ್ಟ ಮತ್ತೆ ಕೆಲವರು ಅನೇಕ ಶಾಸ್ತ್ರಗಳಲ್ಲಿ ಮಾತೃಭಾಷೆಯ ಬಳಕೆ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟರು. ಇಂಗ್ಲೀಷ್-ನಷ್ಟಲ್ಲದಿದ್ದರೂ, ಪ್ರತಿಯೊಂದು ವಿಷಯಗಳಲ್ಲಿ ಕೆಲವಾದರೂ ಒಳ್ಳೆಯ ಪುಸ್ತಕಗಳು ಬರತೊಡಗಿ, ಜನರ ಮನಸ್ಸು ಇತ್ತ ಹರಿಯಬಹುದೇನೋ ಎಂಬ ಭರವಸೆ ಇಟ್ಟುಕೊಳ್ಳುವಂತಾಯಿತು. ಒಟ್ಟಿನಲ್ಲಿ ಶಿಕ್ಷಣ ಮಾಧ್ಯಮದಲ್ಲಿ ಮಾತೃಭಾಷೆಯ ಬಳಕೆಗೆ ವೈಜ್ಞಾನಿಕ ತಳಹದಿ ಸಿಕ್ಕಂತಾಯ್ತು. ಅಷ್ಟಲ್ಲದೆ, ಸಾಂಸ್ಕೃತಿಕ ದೃಷ್ಟಿಯಿಂದ ಕಳವಳಗೊಂಡ ಮತ್ತೆ ಕೆಲವರು, ಭಾಷೆಯೊಂದಿಗೆ ಬೆಸೆದಿರುವ ಸಂಸ್ಕೃತಿಯನ್ನು ಉಳಿಸುವ ಕಳಕಳಿಯಿಂದ ಏನಾದರೂ ಕ್ರಮ ಕೈಗೊಳ್ಳಬೇಕೆಂಬ ಧೋರಣೆ ತಳೆದರು. ಭಾಷೆಯನ್ನು ಪ್ರೀತಿಸುವವರಲ್ಲಿ ಭಾಷೆಯ ರಾಜಕೀಯ, ಸಾಮಾಜಿಕ ಸೋಲು ಯಾವ ಮಟ್ಟಿಗಿನ ಭಾವನಾತ್ಮಕ ಹೊಡೆತ, ಎಷ್ಟರ ಮಟ್ಟಿಗೆ ಅಸ್ಥಿರತೆಯ ಭಾವನೆಯನ್ನು ತರುತ್ತದೆ ಎನ್ನುವುದನ್ನು ಭಾಷಾ-ಸಮಾಜ ಶಾಸ್ತ್ರಜ್ಞರು ಅನೇಕ ವಿಧವಾಗಿ ವಿವರಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ಮಾತೃಭಾಷೆಯಲ್ಲಿ ಶಿಕ್ಷಣ ಮಾಧ್ಯಮ ಇರಬೇಕೆ ಬೇಡವೆ ಎಂಬುದರ ಬಗ್ಗೆ ವಸ್ತುನಿಷ್ಠ ಚರ್ಚೆಯ ಅಗತ್ಯವಿದೆ. ಈ ಮೊದಲೇ ಹೇಳಿದ ಹಾಗೆ ಮಾತೃಭಾಷಾ ಬಳಕೆಗೆ ವೈಜ್ಞಾನಿಕ ತಳಹದಿ ದೊರೆತಿದೆ. ಚಿ. ವಿ. ಶ್ರೀನಾಥ ಶಾಸ್ತ್ರಿಗಳು ’ವಿಜಯ ಕರ್ನಾಟಕ’ದಲ್ಲಿ ವೃತ್ತಿಶಿಕ್ಷಣದಲ್ಲೂ ಇದು ಸಾಧ್ಯ ಎನ್ನುವುದಕ್ಕೆ ಹಲವು ನಿದರ್ಶನಗಳನ್ನು ಕೊಟ್ಟಿದ್ದಾರೆ. ಇನ್ನುಳಿದಿರುವುದು ನಿಜಪ್ರಪಂಚದಲ್ಲಿ ಇದರ ಶ್ರೇಷ್ಠ ಮಟ್ಟದ, ನಿರಂತರವಾಗಿ ಉಳಿಯಬಲ್ಲಂತಹ ಅನುಷ್ಠಾನ. ನಾವು ಸೋತಿರುವುದೆ ಇಲ್ಲಿ.
ಆಂಗ್ಲ ಮಾಧ್ಯದಲ್ಲಿ ಯಾವುದೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗೆ, ಅದೆ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಿಂತಾ ಹೆಚ್ಚಿನ ಮಟ್ಟದ ಇಂಗ್ಲೀಷ್ ಭಾಷಾಜ್ಞಾನ ಇರುತ್ತದೆ – ಎನ್ನುವ ಒಂದು (ತಪ್ಪಾದ) ಪರಿಕಲ್ಪನೆ ಕನ್ನಡ ಮಾಧ್ಯಮಕ್ಕೆ ಮುಳುವಾಯಿತು ಎನ್ನುವುದನ್ನು ಈ ಮೊದಲೇ ವಿವರಿಸಿದ್ದೇನೆ. ಇದಕ್ಕೆ ಪರ್ಯಾಯವಾದ ಎರಡು ಉಪಾಯಗಳಿವೆ. ಮೊದಲನೆಯದು, ಕನ್ನಡ ಮಾಧ್ಯಮದ ಪ್ರತಿಪಾದಕರು ಇಂಗ್ಲೀಷ್-ನಲ್ಲಿ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನೂ ಕನ್ನಡದಲ್ಲಿ ಒದಗಿಸುವುದು. ಇದು ದುಃಸಾಧ್ಯ ಎಂದು ಬೇರೆ ವಿವರವಾಗಿ ಹೇಳಬೇಕಿಲ್ಲ. ಅನೇಕ ದಶಕಗಳ ಪರಿಶ್ರಮದಿಂದ ನಾವು ಇದನ್ನು ಸಾಧಿಸಬಹುದಾದರೂ, ಅದಕ್ಕೆ ತಗಲುವ ವೆಚ್ಚ ದುರ್ಭರವಾದುದು. ಅಲ್ಲಿಯವರೆಗೆ ಕನ್ನಡ ಮಾಧ್ಯಮದ ಮೇಲೆ ಜನರ ನಂಬುಗೆ ಬೆಳೆಯುವುದೂ/ಉಳಿಯುವುದೂ ಕಷ್ಟ. ಅಂತರ ಇನ್ನಷ್ಟು ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಮತ್ತೊಂದು ಮಾತು ಹೇಳಬೇಕೆನಿಸುತ್ತಿದೆ. ಮಾತೃಭಾಷಾ ಶಿಕ್ಷಣಕ್ಕೆ ಯೂರೋಪಿನ ಉದಾಹರಣೆ ಕೊಡುತ್ತಾರೆ. ಆದರೆ ಇದು ಸರಿಸಮಾನವಾದ ಉದಾಹರಣೆ ಅಲ್ಲ. ಯೂರೋಪಿನ ಎಲ್ಲಾ ಭಾಷೆಗಳೂ ತಂತ್ರಜ್ಞಾನದ ಜೊತೆಯಲ್ಲೆ ಬೆಳೆದು ಯಾವ ಕಾರಣಕ್ಕೂ, ಯಾವ ಸಮಯದಲ್ಲೂ ಇಂಗ್ಲೀಷ್-ಗಿಂತಾ ಹಿಂದೆ ಬೀಳಲಿಲ್ಲ. ಎಲ್ಲಾ ಬಗೆಯ ಪುಸ್ತಕಗಳೂ, ಸೌಕರ್ಯಗಳೂ ಯೂರೋಪಿನ ಭಾಷೆಗಳಲ್ಲಿ ದೊರೆಯುತ್ತದೆ. ಆದರೆ ಕನ್ನಡದಂತಹ ಭಾಷೆಗಳು ತಂತ್ರಜ್ಞಾನದ ಬೆಳವಣಿಗೆಯ ಕಾಲದಲ್ಲಿ ಅದರಿಂದ ವಂಚಿತವಾಯಿತು. ಈ ವಿಷಯದಲ್ಲಿ ಯೂರೋಪಿನ ಭಾಷೆಗಳನ್ನಾಗಲಿ, ಇಂಗ್ಲೀಷನ್ನಾಗಲಿ ಸರಿಗಟ್ಟಲು ಪ್ರಯತ್ನ ಪಡುವ ಆಲೋಚನೆ ತತ್ ಕ್ಷಣದ ಅಗತ್ಯಗಳ ದೃಷ್ಟಿಯಿಂದ ಉಚಿತವಲ್ಲ.
ಎರಡನೇಯದು, ’ಕನ್ನಡ ಮಾಧ್ಯಮದಲ್ಲಿ ಯಾವುದೇ ತರಗತಿಯಲ್ಲಿ ಓದುವ ವಿದ್ಯಾರ್ಥಿ, ಇಂಗ್ಲೀಷ್ ಮಾಧ್ಯಮದಲ್ಲಿ ಅದೆ ತರಗತಿಯಲ್ಲಿ ಓದುವ ವಿದ್ಯಾರ್ಥಿಯಷ್ಟೆ ಇಂಗ್ಲೀಷ್ ಕಲಿಯಬಲ್ಲ’ ಎನ್ನುವುದನ್ನು ಸಾಬೀತುಪಡಿಸುವುದು. ಇದು ಸಾಧ್ಯವಾದ ಮಾತು ಎನ್ನುವುದು ನನ್ನ ಅನಿಸಿಕೆ. ಕ್ರಮೇಣ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಯೊಬ್ಬನಿಗೆ ಇಂಗ್ಲೀಷ್ ಕಲಿಯಲು ಮತ್ತಷ್ಟು ಸುಲಭವಾಗುತ್ತದೆ ಎನ್ನುವುದನ್ನು ಸಾಬೀತುಪಡಿಸುವುದು. ಇದನ್ನು ಅನುಷ್ಠಾನಗೊಳಿಸಲು ಒಂದು ರೂಪುರೇಷೆ ತಕ್ಷಣದ ಅಗತ್ಯ. ಇದು ಪ್ರಥಮ ಹೆಜ್ಜೆ. ಇದರ ನಂತರದ ಹೆಜ್ಜೆಗಳ ಕುರಿತಾದ ಚಿಂತನೆಗೆ ನಾಂದಿ ಹಾಡುವುದೇ ಈ ಲೇಖನದ ಆಶಯ.
ಆದರೆ ಇಂದು ಕನ್ನಡನಾಡಿನಲ್ಲಿ ಇದರ ಕುರಿತಾದ ಚಿಂತನೆ ನಿರಾಶೆಗೊಳಿಸುವ ಮಟ್ಟದಲ್ಲಿದೆ. ನಾರಾಯಣ ಮೂರ್ತಿಯವರು ಆಂಗ್ಲ ಶಾಲೆಗಳ ಅಗತ್ಯವಿದೆ ಎಂದು ಒಮ್ಮೆ ಹೆಳಿದಾಗ ಅವರ ಜೊತೆ ವೈಚಾರಿಕ ವಾದ ನಡೆಸದೆ ಅವರ ಪ್ರಾಮಾಣಿಕತೆಯನ್ನೆ ಪ್ರಶ್ನಿಸುವಂತಹ ಮಾತುಗಳು ಕೇಳಿಬಂದವು. ಈಗ, ಆಂಗ್ಲ ಶಾಲೆಗಳನ್ನು ಕಾನೂನಿನ ಮೂಲಕ ಮುಗಿಸಿಬಿಡುವ ಹುನ್ನಾರ ಬಾಲಿಶವಾದುದು, ದೂರದೃಷ್ಟಿರಹಿತವಾದುದು. ನಮಗೆ ಇಷ್ಟವಿರಲಿ-ಬಿಡಲಿ, ವೈಜ್ಞಾನಿಕವಾಗಿರಲಿ ಬಿಡಲಿ, ಆಂಗ್ಲ ಮಾಧ್ಯಮ ಶಾಲೆಗಳು ನಮ್ಮ ಜನರ ಅಭಿಮಾನವನ್ನು ಗಳಿಸಿವೆ. ಈ ದೇಶದಲ್ಲಿ ಅದೊಂದು ಪರ್ಯಾಯ ವ್ಯವಸ್ಥೆಯಾಗಿ ರೂಪುಗೊಂಡಿದೆ. ಇದನ್ನು ಮೀರಲು ಹಂತ ಹಂತವಾದ ಕಾರ್ಯಕ್ರಮದ ಅವಶ್ಯಕತೆಯಿದೆ. ದ್ವೇಷ, ರಾಜಕೀಯ ಪ್ರೇರಿತ ಆಕ್ರಮಣಕಾರಿ ಹಂಚಿಕೆ ನಮಗೆ ತಿರುಗುಬಾಣವಾಗಬಹುದು. ಉಚ್ಚನ್ಯಾಯಾಲಯ ಇದಕ್ಕೆ ವಿರುದ್ಧವಾದ ತೀರ್ಪು ನೀಡುವ ಸಾಧ್ಯತೆಗಳಿವೆ. ಕನ್ನಡ ಮಾಧ್ಯಮದ ಮೇಲೆ ಜನರ ವಿಶ್ವಾಸ ಗಳಿಸುವ ಮೊದಲು ಇಂತಹ ಯೋಜನೆಗಳು ಯಶಸ್ಸು ಗಳಿಸಲಾರವು. ಮೇಲಾಗಿ, ಬೆರೆ ರಾಜ್ಯಗಳಿಂದ ವರ್ಗವಾಗಿ ಬರುವವರ ಮಕ್ಕಳ ಗತಿಯೇನು? ಇದಕ್ಕೆ ಒಬ್ಬ ಮಹಾಶಯರ ಉತ್ತರ ’ಅಂತಹ ನೌಕರಿಲ್ಲಿರುವವರಿಗೆ ಮಾತ್ರ’ ಆಂಗ್ಲ ಮಾಧ್ಯಮದಲ್ಲಿ ಓದುವ ಅವಕಾಶ ಕಲ್ಪಿಸುವುದು. ಇದು ಅನುಷ್ಠಾನಗೊಳಿಸಬಲ್ಲಂತಹದೆ? ಇಂದು ’ವರ್ಗವಾಗಬಲ್ಲ ನೌಕರಿ’ ಅಥವಾ ’ವರ್ಗವಾಗಲಾರದ ನೌಕರಿ’ ಎಂದು ವಿಂಗಡಿಸುವ ಸ್ಥಿತಿಯಲ್ಲಿದ್ದೇವೆಯೆ ನಾವು? ಇಂತಹವರೇನಾದರೂ ಎಕ್ಸಿಕ್ಯುಟಿವ್-ನಲ್ಲಿದ್ದರೆ ಈ ಕೆಲವರ ಬೌದ್ಧಿಕ ದಿವಾಳಿತನ ಒಂದು ಘನ ಉದ್ದೇಶದ ಸೋಲಿಗೆ ಕಾರಣವಾಗುತ್ತದೆ. ಶಿಕ್ಷಣ ಮಾಧ್ಯಮದ ವಿಷಯದಲ್ಲಿ ಹುಡುಗಾಟ ಸಲ್ಲದು.
ಈಗ ಮುಖ್ಯವಾಗಿ ಆಗಬೇಕಿರುವ ಕೆಲಸ, ಕನ್ನಡ ಮಾಧ್ಯಮದಲ್ಲಿ ಯಾವುದೇ ವಿದ್ಯಾರ್ಥಿ ಇಂಗ್ಲೀಶ್ ಕಲಿಕೆಯಲ್ಲಿ ಹಿಂದೆ ಬೀಳುವುದಿಲ್ಲ ಎನ್ನುವುದಮ್ಮು ಸಾಬೀತು ಪಡಿಸುವುದು. ಅದಕ್ಕೆ ಬೇಕಾದ ವೈಜ್ಞಾನಿಕ ಸೌಲಭ್ಯಗಳನ್ನು ಸೃಷ್ಟಿ ಮಾಡುವುದು. ಜನರ ವಿಶ್ವಾಸ ಗಳಿಸುವುದರಲ್ಲಿ ಇದು ಒಂದು ಮುಖ್ಯ ಹೆಜ್ಜೆಯಾಗಬಹುದು. ಪಟ್ಟಣದ ವಿದ್ಯಾರ್ಥಿಗಳನ್ನು ಆಕರ್ಷಿಸುವ ದೃಷ್ಟಿಯಿಂದ, ತಂತ್ರಜ್ಞಾನ ಪ್ರೇರಿತ, ಪಶ್ಚಿಮದಿಂದ ಹರಿದು ಬಂದಿರುವ ಸಂಸ್ಕೃತಿಯನ್ನು ಕನ್ನಡೀಕರಿಸುವುದು (ಸಂಗೀತ, ಸಾಹಿತ್ಯ, ಆಟ-ಗಳು ಮೊದಲಾದವುಗಳು). ಮಡಿವಂತರಿಗೆ, ಸಮಾಜವಾದಿಗಳಿಗೆ ಇದು ಅಸಹ್ಯ ತರಿಸಿದರೆ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಮಾಡಬಹುದಾದ ಕಾಲದಲ್ಲೂ ಏನನ್ನೂ ಮಾಡದೆ ’ಆರ್ಮ್ ಚೇರ್ ಕ್ರಿಟಿಕ್’ ಗಳ ತರಹ ಕುಳಿತ ಇವರು ಈಗ ಮಾತಾಡುವುದೇನೂ ಉಳಿದಿಲ್ಲ.
ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ನಮ್ಮ ಗೆಲುವು ಪೈಪೋಟಿಯಿಂದ, ಸ್ಪರ್ಧೆಯಿಂದ ನಡೆಯಬೇಕೆ ಹೊರತು, ಬಲವಂತ ಮಾಘಸ್ನಾನದಿಂದ ಏನನ್ನೂ ಸಾಧಿಸುವುದು ಸಾಧ್ಯವಿಲ್ಲ. ಕನ್ನಡದ ಸಾಧ್ಯತೆಯಲ್ಲಿ ನಂಬಿಕೆಯಿದ್ದರೆ, ನಮ್ಮಲ್ಲಿ ಒಬ್ಬರು ಮಾಡಬೇಕಾದ ಕೆಲಸ ಇಷ್ಟು – ಬೆಂಗಳೂರಿನ ಒಂದು ಕನ್ನಡ ಶಾಲೆಯನ್ನು ದತ್ತು ತೆಗೆದುಕೊಂಡು ನಮ್ಮ ಈ ಎಲ್ಲಾ ವಿಚಾರಧಾರೆಗಳನ್ನೂ ಅದರಲ್ಲಿ ಅನುಷ್ಠಾನಗೊಳಿಸಿ ಯಾವುದೇ ಆಂಗ್ಲ ಶಾಲೆ ಹೊರತರಬಲ್ಲ (ಎಲ್ಲಾ ಆಯಾಮಗಳಲ್ಲಿ) ಫಲಿತಾಂಶವನ್ನು ಆ ಶಾಲೆ ಸಾಧಿಸುವಂತೆ ಮಾಡುವುದು. ಇದು ಸಾಧ್ಯವಾದರೆ, ನಂತರದ ದಿನಗಳಲ್ಲಿ ಜನರು ಕನ್ನಡ ಮಾಧ್ಯಮದತ್ತ ಆಸಕ್ತಿಯಿಂದ ಕಣ್ಣು ಹೊರಳಿಸುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಹಣ ಸರಕಾರದಿಂದ ಬರಬಹುದಾದರೂ ಅನುಷ್ಠಾನ ಖಾಸಗಿಯವರಿಂದಲೆ ಆಗಬೇಕು. ಇದು ಬಿಟ್ಟು, ಕಾನೂನಿಂದ ಆಂಗ್ಲ ಶಾಲೆಗಳ ವಿರುದ್ಧ ಹೋರಾಟ ನಡೆಸಿದರೆ, ಅದು ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯಿದೆ ಎನ್ನುವುದನ್ನು ಎತ್ತಿ ತೊರಿಸುತ್ತದೆ. ಜಯವಂತೂ ದುರ್ಲಭವಾಗೆ ಉಳಿಯುತ್ತದೆ.
ಆದರೆ ನಮ್ಮಲ್ಲಿ ಎಲ್ಲವನ್ನೂ ಸರಕಾರ ಮಾಡಬೇಕು ಎಂಬುದು ಸಮಾಜವಾದದಿಂದ ಪ್ರಭಾವಿತರಾದ ನಮಗೆ ಅಭ್ಯಾಸವಾಗಿಹೋಗಿದೆ. ವಿಚಾರ ನಮ್ಮದಾಗಿರಲಿ, ಅನುಷ್ಠಾನ ಬೇರೆಯವರದ್ದು ಎನ್ನುವುದು ಬೇಜವಾಬ್ದಾರಿಯ ಪ್ರವೃತ್ತಿ. ನಮ್ಮಲ್ಲಿ ಇಷ್ಟೆಲ್ಲ ಬುದ್ಧಿ ಜೀವಿಗಳಿದ್ದು, ಶಿಕ್ಷಣ ತಜ್ಞರಿದ್ದೂ ಒಂದು ಕನ್ನಡ ಶಾಲೆಯನ್ನು ಪ್ರಸಿದ್ಧಿಗೆ ತರಲಾರದ್ದು ನಾಚಿಕೆಗೇಡಿನ ವಿಷಯ. ಎಲ್ಲಾ ಶಾಲೆಗಳಲ್ಲಿ ಏಕಕಾಲದಲ್ಲಿ ಒಂದೇ ಮಟ್ಟದ ಶಿಕ್ಷಣದ ಕನಸು ಕಾಣುವ ಸಮಾಜವಾದಿಗಳು, ತಾವೆ ಈ ಯೋಜನೆಯ ಅನುಷ್ಠಾನದ ದಿಸೆಯಲ್ಲಿ ಏನ್ನನ್ನೂ ಮಾಡಲಿಲ್ಲ. ಇದು ರಷ್ಯದಲ್ಲೂ ಸಾಧ್ಯವಾಗಿರಲಿಲ್ಲ ಎನ್ನುವುದು ನನ್ನ ಊಹೆ. (ಯೂರೋಪಿನ ಸ್ಕ್ಯಾಂಡಿನವಿಯನ್ ದೇಶಗಳಲ್ಲಿ ಇದರ ಹತ್ತಿರದ ಅನುಷ್ಠಾನ ನಡೆದಿದೆ). ಒಟ್ಟಿನಲ್ಲಿ ಎಲ್ಲರಿಗೂ ಸಮಾನ ಮಟ್ಟದ ಶಿಕ್ಷಣ ನಮ್ಮ ದೇಶದಲ್ಲಿ ಸಧ್ಯದ ಪರಿಸ್ಥಿತಿ-ಯಲ್ಲಿ ಸಾಧ್ಯವಿಲ್ಲ. ಕನಸು ಒಳ್ಳೆಯದೆ, ಆದರೆ ಒಮ್ಮೆಗೆ ಸಾಧ್ಯವಿಲ್ಲ, ಹಂತ ಹಂತವಾಗಿ ಆ ಪರಿಸ್ಥಿತಿ ನಿರ್ಮಾಣ ಮಾಡಬೇಕು. ಇಷ್ಟೆಲ್ಲ ಹೇಳಿದ್ದು, ಒಂದು ಕನ್ನಡ ಶಾಲೆಯನ್ನು ನಾವು ಆಂಗ್ಲ ಶಾಲೆಗಿಂತ ಮುಂದೆ ತರುವುದು ಸಾಧ್ಯವಾದರೆ, ಮುಂದೆ ಕನ್ನಡ ಶಾಲೆಗಳ ವಿಷಯದಲ್ಲಿ ಕ್ರಾಂತಿಯೆ ಆದೀತು, ಎನ್ನುವುದಕ್ಕೆ.
ಈಗ ನಾವು ಈ ದಿಸೆಯಲ್ಲಿ ಆಲೋಚನೆಗಳ ದೃಷ್ಟಿಯಿಂದ, ಅನುಷ್ಠಾಅನದ ದೃಷ್ಟಿಯಿಂದ ಶ್ರಮಪಡಬೇಕಾದ ಸಮಯ. ಆದರೆ ನಮ್ಮ ಬುದ್ಧಿಜೀವಿಗಳು ಈದಿಸೆಯಲ್ಲಿ ಕೆಲಸಮಾಡದೆ ಸಚಿವ ವಿಶ್ವನಾಥರನ್ನು ಕೆಳಗಿಳುಸುವುದರಲ್ಲಿ ಹೆಚ್ಚು ತೃಪ್ತಿ ಪಡುತ್ತಿರುವಂತಿದೆ. (ಸಚಿವರು ಹೇಳಿರುವ ಕೆಲವು ಮಾತುಗಳು ಪೂರ್ತಿ ಸುಳ್ಳಲ್ಲ ಎನ್ನುವುದು ಬೇರೆ ಮಾತು). ಹೀಗೆ ೫೦ ವರ್ಶ ನಾವು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾ ಕಾಲ ಕಳೆದಿದ್ದೇವೆ. ಆ ದಿನಗಳಲ್ಲಿ ಈ ಕಾರ್ಯಕ್ರಮ ಸುಲಭವಾಗಿ ಜಾರಿಗೆ ತರಬಹುದಿತ್ತು. ಅವಕಾಶ ಕೈ ತಪ್ಪಿ ಹೋಗಿದೆ. ಈಗ ಪ್ರಮುಖರಾಗಿರುವ ಅನೇಕ ಬುದ್ಧಿಜೀವಿಗಳು ಆಗಲೂ ಇದ್ದರು, ಪ್ರಮುಖರಾಗಿದ್ದರು, ಆಗ ಇವರೆಲ್ಲಾ ಸುಮ್ಮನಿದ್ದದ್ದೇಕೆ ಎನ್ನುವುದು ಅರ್ಥವಾಗದ ವಿಷಯ. ದೂರದೃಷ್ಟಿಯ ಕೊರತೆ ಎಂದೆ ಹೇಳಬೇಕು. ಅದೇನೆ ಇರಲಿ ಈಗಲೂ ಸಹ ಅನಗತ್ಯ ಹೋರಾಟಕ್ಕಿಂತ ಪ್ರಯೋಜನಕಾರಿಯಾದ ಕ್ರಿಯಾಶೀಲತೆಯಲ್ಲಿ ತೊಡಗಿಕೊಂಡರೆ ಮಾತ್ರ ನಮ್ಮಲ್ಲಿ ಅನೇಕರ ನೆಚ್ಚಿನ ಕನಸಾದ ಕನ್ನಡ ಮಾಧ್ಯಮ ಶಿಕ್ಷಣ ಬೆಳೆಯುವಂತಾಗುತ್ತದೆ. ಆಂಗ್ಲ ಶಾಲೆಗಳು ಇರುತ್ತವೆ, ಕನ್ನಡ ಶಾಲೆಗಳು ಅವುಗಳಿಗಿಂತಾ ಯಾವುದರಲ್ಲಿಯೂ ಕಡಿಮೆಯಲ್ಲದಂತೆ ಮಾಡುವಲ್ಲಿ ಸಫಲರಾದರೆ ನಮ್ಮ ಗುರಿ ಸಾಧಿಸಿದಂತೆಯೆ ಸರಿ.
*****