ಚಕ್ರವ್ಯೂಹ

ಯುನಿವರ್‍ಸಿಟಿಯ ಸುತ್ತಾ
ಜಿಟಿ ಜಿಟಿ ಮಳೆಯಲ್ಲಿ ಕಳಚದ ಪೊರೆಯಲ್ಲಿ
ಗಾಳಿಮರಗಳ ಕಾಲಿಗೆ ಬಿದ್ದ ಅಂಗಾತ
ಬೀದಿಗಳಲ್ಲಿ ಕಟ್ಟಡದಿಂದ ಕಟ್ಟಡಕ್ಕೆ
ಹಾಯುವ ಗಂಭೀರತೆಯಲ್ಲಿ ಹಿರಿಯರ
ಮುಖದರ್‍ಜೆಯಲ್ಲಿ ಸುಂಯನೆ ಸೆರಗು
ಚಿಮ್ಮಿಸಿ ಹೊರಟ ಸ್ಕೂಟರಿನಲ್ಲಿ
ಸಿಟಿಬಸ್ಸಿಗೆ ಜೋತು ಬೀಳುವ ಕೈಗಳಲ್ಲಿ
ಕಾಮುಕ ಗಲ್ಲಗಳಿಗೆ ಮೆತ್ತಿದ ಪೌಡರಿನಲ್ಲಿ
ಲೈಬ್ರರಿಯಲ್ಲಿ-ಅದಕ್ಕೆ ಅಂಟಿಕೊಂಡ ಅಸಹನೀಯ
ಮೌನದಲ್ಲಿ ಸಾಲಾಗಿ ಬೀರುವಿನಲ್ಲಿ ಪಟಪಟ ಪುಟಿವ
ಅಳುವ ಲಕ್ಷಾಂತರ ಬಚ್ಚಿಟ್ಟ ಅಕ್ಷರಗಳಲ್ಲಿ
ದನಿಗಳಲ್ಲಿ ಇತಿಹಾಸಗಳಲ್ಲಿ ಪುಸ್ತಕಗಳ
ನಡುತಲೆಯಲ್ಲಿ ಹಕ್ಕಿಯೂ ಧಿಕ್ಕರಿಸುವ
ಸಿಮೆಂಟು ಪಾರ್‍ಕಿನಲ್ಲಿ ದಿನ ದಿನವೂ ಸತ್ತು ಚೂರಾಗುವ
ನೂರಾರು ಚಾಕುಪೀಸುಗಳಲ್ಲಿ ಬ್ಲಾಕ್ ಬೋರ್‍ಡೋಳಗೆ
ಸಮಾಧಿಗೊಂಡಿರುವ ಜ್ವಲಂತ ಸತ್ಯಗಳಲ್ಲಿ
ನರ ವಾಸನೆಯೇ ಇರದ ಲ್ಯಾಬಿನಲ್ಲಿ
ಪುಸ್ತಕದ ಹುಳುಗಳಲ್ಲಿ ಬೆಂಝಿನ್‌ ಅಸಿಟೋನ್‌ಗಳ
ಉಸಿರಿನಲ್ಲಿ ಕೆಲ ಕತೆ ಕವಿತೆಗಳ ಗರ್‍ಭಪಾತದಲ್ಲಿ
ಸೂತ್ರಗಳಲ್ಲಿ ಆಕೃತಿಗಳಲ್ಲಿ
ಕೂಗು ಕೇಳದ ಚಳಿಯಲ್ಲಿ
ಬೆಳೆಯದ ಬೆಳೆಯಲ್ಲಿ ತಿಳಿಯದ ಸುಳಿಯಲ್ಲಿ
ಅಯ್ಯೋ, ನನ್ನನ್ನೇ ಕಳೆದುಕೊಳ್ಳುತ್ತಿರುವ ನನಗೆ
ನೆನಪಾಗುತ್ತಾಳೆ-
ನನ್ನೂರಿನ ನನ್ನ ಅಮ್ಮ-ಆ ನೂರು ಮೈಲು
ಗಳಾಚೆಯೂ ಈಗ ಆಕೆ ಬೇಯಿಸುತ್ತಿರಬಹುದಾದ
ಸಾರು ಅನ್ನ
ಆ ಒಳಮನೆಯಲ್ಲಿ ಫಳಫಳ ಹೊಳೆವ ಒರೆದ ನೆಲ
ಬಾಗಿಲಿಗೆ ತೂಗುವ ಅವಳ ಕಸೂತಿಯ “ಸುಸ್ವಾಗತಂ”
ಬಂದವರಿಗೆಲ್ಲ ತೋರಿಸಲ್ಪಡುತ್ತಿರುವ
ನನ್ನ ಮುಂಜಿಯ ಅಲ್ಬಂ
ತಾಜಾ ತರಕಾರಿ ಉಪ್ಪು ಕೈ ತೋಟದ ಮಲ್ಲಿಗೆ
ಸೇವಂತಿಗೆ-ಅದೇ ಸಂಜೆ ಅದೇ ಮುಂಜಾವು
ಜಾರುವ ಸೂರ್‍ಯನ ತಂಟೆ-ಅಪ್ಪನ
ಹೃದಯವೇ ಮುಖವಾದ ಕಣ್ಣು
ಅಲ್ಲಿಯದೇ ಗಾಳಿ ಅದೇ ಮಣ್ಣು

ಹಾ, ಮೇಲೆ ಕ್ಲಾಕ್ ಟವರ್
ಹಲ್ಲು ಕಿರಿಯುತ್ತಿದೆ
ಕಿಸೆಯಲ್ಲಿಯ ಐಡೆಂಟಿಟೀ ಕಾರ್‍ಡ್
ನನ್ನನ್ನಿರಿಯುತ್ತಿದೆ
ಅಮ್ಮಾ, ಈ ಚಕ್ರವ್ಯೂಹದ ಅಭಿಮನ್ಯು
ನಾನಲ್ಲ, ನಾನಲ್ಲ,
ಎಂದು ಅರಚಬೇಕೆನಿಸುತ್ತದೆ.
*****