ಅಯ್ಯಂಗಾರ್ ಮತ್ತು ನಾಯಿ

ಮೈಸೂರಿನ ದೇವಾಂಬ ಅಗ್ರಹಾರದ ಗೋಪಾಲಯ್ಯಂಗಾರ್‌ಗೆ ರಾತ್ರಿ ಹನ್ನೊಂದಾದರೂ ಅವತ್ತು ಇನ್ನೂ ಯಾಕೋ ಕಣ್ಣು ಎಳೆದಿರಲಿಲ್ಲ. ಸುಮಾರು ಇಪ್ಪತೈದು ವರ್ಷದಿಂದ ಮಲಗುತ್ತಿದ್ದ ಹಳೆ ಕಿಂಗ್‌ಸೈಜ್ ಬೆಡ್‌ನಲ್ಲಿ ಆ ಕಡೆಯಿಂದ ಈ ಕಡೆಗೆ ಹೊರಳಾಡುತ್ತ, ಒಂದು ಕ್ಷಣ ತಲೇನ ಬಲಗೈ ಮೇಲೆ ಇಟ್ಟು ಪಕ್ಕಕ್ಕೆ ಮಲಗಿ ಇನ್ನೊಂದು ಕ್ಷಣ ಎಡಗೈ ಮೇಲೆ ಮಲಗೋಕ್ಕೆ ಪ್ರಯತ್ನ ಮಾಡಿ ಮತ್ತೆ ನೇರ ಮಲಗಿ ಒದ್ದಾಡ್ತಾ: ಚಿಕ್ಕದು ಪಾಪ ನಿದ್ದೆ ಮಾಡಿರುತ್ತೆ, ದೊಡ್ಡದು ಗಣಕಯಂತ್ರದ ಮುಂದೆ ಕೂತು ’ಚ್ಯಾಟ್’ ಮಾಡುತ್ತ ಹೆಡ್‌ಫೋನ್ ಕಿವಿಗೆ ಸಿಕ್ಕಿಸ್ಕೊಂಡು ಯಾವುದೋ ಹಾಡು ಕೇಳುತ್ತ ಕೂತಿರುತ್ತೆ ಅಂತ ಅನ್ಕೊಂಡು ಮತ್ತೆ ಪಕ್ಕಕ್ಕೆ ತಿರುಗಿದರು. ಮೂವತ್ತು ವರ್ಷದ ಹಿಂದೆ ಯಾವಾಗಲೋ ಮೈಸೂರಿನಲ್ಲಿ ಸ್ನೇಹಿತ ಪಾಂಡು ಹೇಳಿದ್ದು ಜ್ಞಾಪಕ ಬಂದು ಉಸಿರು ಜೋರಾಗಿ ಎಳೆದು, ಗಾಳಿಯನ್ನ ಶ್ವಾಸಕೋಶದಲ್ಲಿ ಒಂದು ಹತ್ತು ಸೆಕೆಂಡು ನಿಲ್ಲಿಸಿ ಮತ್ತೆ ನಿಧಾನಕ್ಕೆ ಬಿಡೋದನ್ನ ಒಂದೆರಡು ನಿಮಿಷ ಮಾಡಿದರು. ಏನು ಉಪಯೋಗವಾಗಲಿಲ್ಲ. ನಿದ್ದೆ ಹತ್ತದೆ ಸಾಕಾಗಿ ನಿಟ್ಟುಸಿರು ಬಿಡುತ್ತಾ ಶ್ರೀರಾಮಚಂದ್ರ, ನಾರಾಯಣ ಅಂತ ಹೇಳುತ್ತಾ ದಿಂಬನ್ನ ಹೆಡ್‌ಬೋರ್ಡ್‌ಗೆ ಒರಗಿಸಿ ನಿಲ್ಲಿಸಿ, ಕೆಳಭಾಗವನ್ನು ಸ್ವಲ್ಪ ಮುಂದಕ್ಕೆ ಎಳೆದು ಬೆನ್ನು ಒರಗಿಸಿ, ಕಾಲು ಚಾಚಿ ಕೂತರು. ಅಗ್ರಹಾರದ ಮನೆಯಲ್ಲಿ ಚಿಕ್ಕವರಿದ್ದಾಗ ಮಲಗುವುದಕ್ಕೆ ಮುಂಚೆ ತಾಯಿ ಹಾಲು ಕೊಡುತ್ತಿದ್ದದ್ದು ನೆನಪಿಗೆ ಬಂತು. ಒಂದು ಕೈಯಲ್ಲಿ ಬಿಸಿಹಾಲು ತುಂಬಿದ ಪಾತ್ರೆ, ಇನ್ನೊಂದರಲ್ಲಿ ಲೋಟ. ಹಜಾರದಲ್ಲಿ ಸಾಲಾಗಿ ಮಲಗಿದ ಎಲ್ಲರಿಗು ಹೆಸರಿಡಿದು ಕರೆದು ಕೊಡೊ ರೂಢಿ. ಒಂದು ಕ್ಷಣ ಕಣ್ಣು ಮುಚ್ಚಿದರು. ತಾಯಿಯ ರೂಪ ಸ್ಪಷ್ಟವಾಗಿ ಮೂಡಿತ್ತು. ಕಪ್ಪಗಿದ್ದರೂ ಸುಂದರ ಮುಖ, ಮೂಗಿನಲ್ಲಿ ಹಳೆ ಮೂಗುತಿ, ಆಕರ್ಷಕವಾದ ಕಣ್ಣು, ಕಿವಿಯ ಪಕ್ಕದಲ್ಲಿ ಇನ್ನು ಅಳಿಸಿರದ ಅರಿಶಿನ, ಕೊರಳಲ್ಲಿ ಶ್ರೀವೈಷ್ಣವರ ಮಾಂಗಲ್ಯ, ಹಣೆಯಲ್ಲಿ ನೇರಳೆ ಬಣ್ಣದ ಕುಂಕುಮ. ದೀರ್ಘವಾಗಿ ಉಸಿರೆಳೆದುಕೊಳ್ಳುತ್ತ ಹಾಸಿಗೆಯಿಂದ ಇಳಿದು ಕಿಟಿಕಿಯ ಪರದೆಯನ್ನು ಸರಿಸಿ ಹೊರಗೆ ಇಣುಕಿದರು. ಎದುರಿನಲ್ಲಿದ್ದ ’ಡೆಲಿ’ ಇನ್ನು ಮುಚ್ಚಿರಲಿಲ್ಲ. ಯಾವನೋ ಕಾಫಿ ತೆಗೆದುಕೊಂಡು ಹೀರುತ್ತ ಹೋಗುತ್ತಿದ್ದ. ಅವನ ಹಿಂದೆ ಸ್ವಲ್ಪ ದೂರದಲ್ಲಿ ವಯಸ್ಸಾದ ಮುದುಕನೊಬ್ಬ ಐದೋ, ಆರೋ ಜೂಲು ನಾಯಿಗಳನ್ನ ಕರಕೊಂಡು ಹೋಗುತ್ತಿದ್ದ. ಅವಳು(ತಾಯಿ) ಸತ್ತು ಆಗಲೇ ಸುಮಾರು ವರ್ಷವಾಯಿತಲ್ಲವೆ….ಇವೆರಡು ಹುಟ್ಟೇ ಇರಲಿಲ್ಲ…ಒಂದು ನಾಯಿನಾದರು ಸಾಕಬೇಕು ಅಂದುಕೊಂಡರು ಅಯ್ಯಂಗಾರ್ರು… ಬಹಳ ಹಿಂದೆ ನಾನಿನ್ನು ಹೈಸ್ಕೂಲಿನಲ್ಲಿ ಓದ್ತಾ ಇದ್ದೆ ಅನಿಸುತ್ತೆ…. ಸಾಕಿದ್ದ ನಾಯಿ ಮ್ಯಾನಿಟೊಬ ಬೀದೀಲಿ ಏನೋ ಕಚ್ಚಿಕೊಂಡು ಬಂದಿತ್ತು. ತೆಗೆಯೋಕ್ಕೆ ಹೋದಾಗ ಗಟ್ಟಿಯಾಗಿ ಕಚ್ಚಿ ಹಿಡಿದಿದ್ದ ಕಾಗದದ ಉಂಡೆಯನ್ನ ಬಿಟ್ಟು ಗೊರ್ರ್ ಗೊರ್ರ್ ಅಂತ ಬೆರಳು ಹಿಡಿಯೋದರಲ್ಲಿ ಇತ್ತು. ಹೆದರಿ ಬೇಗನೆ ಕೈ ಹಿಂದಕ್ಕೆ ಎಳಕೊಂಡಿದ್ದರೂ, ಬೆರಳಮೇಲೆ ಹಲ್ಲಿನ ಪಡಿ ಮೂಡಿ ರಕ್ತ ಜಿನುಗಿತ್ತು. ಹದಿನಾಲ್ಕು ದಿನ ದೊಡ್ಡಾಸ್ಪತ್ರೆಗೆ ಬೆಳಗಾಗೆದ್ದು ಹೋಗಿ ಹೊಕ್ಕಳು ಸುತ್ತಾ ಇಂಜಕ್ಷನ್ ತೆಗೊಂಡಿದ್ದ ನೆನಪು. ಮನೆ ಎದುರಗಡೆ ಇದ್ದ ನರ್ಸಿಂಗ್‌ಹೋಮ್‌ಗೆ ದಿನಾ ಬರ್ತಿದ್ದ ಡಾಕ್ಟರ್ ಮನೆ ಸೇರಿತ್ತು ಮ್ಯಾನಿಟೊಬ!. ಓಡಾಡೋ ಕಾರುಗಳ ಶಬ್ದ, ದೂರದಲ್ಲೆಲ್ಲೋ ಪೋಲಿಸ್ ಕಾರಿನ ಸೈರನ್ನು, ಆಂಬ್ಯೂಲನ್ಸಿನ ಕೂಗು. ಎಷ್ಟೋ ವರ್ಷದಿಂದ ಇದೆ ಊರಲ್ಲಿ, ಇದೇ ಮನೆಯಲ್ಲಿ ವಾಸ ಮಾಡಿದ್ದ ಅಯ್ಯಂಗಾರ್ರ್‌ಗೆ ಹೊರಗಡೆ ಸದ್ದುಗಳು ಅಭ್ಯಾಸವಾಗಿ ಹೋಗಿತ್ತು. ಒಂದು ಕಪ್ ಬಿಸಿಯಾಗಿ ಹಾಲು ಕುಡಿದರೆ ನಿದ್ದೆ ಬರುತ್ತೇನೋ ಎಂದುಕೊಳ್ಳುತ್ತ ರೂಮಿನ ಮಧ್ಯಕ್ಕಿದ್ದ ಡ್ರೆಸ್ಸಿಂಗ್ ಟೇಬಲ್ ಪಕ್ಕದಲ್ಲಿ ಉರೀತಿದ್ದ ಚಿಕ್ಕ ಬ್ರಾಹ್ಮಣನ ಬೆಳಕಲ್ಲಿ ಹೊರ ನಡೆದರು.

ಚಿಕ್ಕವಳ ರೂಮಿನಲ್ಲಿ ಲೈಟ್ ಆಫ್ ಆಗಿತ್ತು. ದೊಡ್ಡವಳ ರೂಮಿನಲ್ಲಿ ಬೆಳಕು ಇನ್ನು ಉರೀತಿತ್ತು. ಅಪಾರ್ಟ್‌ಮೆಂಟ್ ಪೂರ್ತಿ ಮರದ ಫ್ಲೋರಿಂಗೂ; ಹೆಜ್ಜೆ ಇಟ್ಟರೆ ಸಾಕು ’ಕೀರ್ ಕೀರ್’ ಅನ್ನೊ ಶಬ್ದ. ಹಲ್ಲಲ್ಲಿ ಕೆಳಗಿನ ತುಟಿ ಕಚ್ಚಿ, ನಿಧಾನವಾಗಿ ಮೆಟ್ಟಿಲು ಇಳಿದು ಬಂದು, ರೆಫ್ರಿಜರೆಟರ್‌ನಲ್ಲಿ ’ಫ್ಯಾಟ್‌ಫ್ರೀ ಮಿಲ್ಕ್’ ಇಲ್ಲದೆ ಇದ್ದಿದ್ದಕ್ಕೆ ’ಹಾಳಾದ್ದು..’ ಅಂತ ಶಪಿಸುತ್ತ ಬಾಗಿಲು ಮುಚ್ಚಿ ನಿಂತು ಮತ್ತೆ ತೆಗೆದು ಏನಾದರು ಆಗಲಿ ಅಂತ ಗೊಣಗುತ್ತಾ ’ರೆಗ್ಯುಲರ್’ ಮಿಲ್ಕನ್ನೆ ಒಂದು ಕಪ್‌ಗೆ ಬಗ್ಗಿಸಿ, ಎರಡು ’ಈಕ್ವಲ್’ ಹಾಕಿ ಒಂದು ಕ್ಷಣ ಸುಮ್ಮನಿದ್ದು ಇನ್ನೊಂದ್ ’ಈಕ್ವಲ್’ ಎಸೆದು ’ಮೈಕ್ರೊವೇವ್ನಲ್ಲಿ’ ಬಿಸಿ ಮಾಡಿ ಮಹಡಿ ಹತ್ತಿ ಬಂದರು. ’ಮಲಕ್ಕೋ ಮಗು ಲೇಟಾಯ್ತು’ ಅಂತ ಹೇಳಬೇಕೆಂದು ಅನಿಸಿ ’ಟಕ್ ಟಕ್’ ಅಂತ ಬಾಗಿಲು ತಟ್ಟಿ ತೆಗೆಸಿದರು. ಹೆಡ್‌ಫೋನ್ ತೆಗೆಯುತ್ತ ’ವಾಟ್ ಇಸ್ ಇಟ್’ ಸ್ವಲ್ಪ ಜೋರಾಗೆ ಕೇಳಿದ್ಲು ಮಗಳು ? ಏನೂ ಇಲ್ಲ ಮಗು ಅನ್ನೋ ಹಾಗೆ ತಲೆ ಅಲ್ಲಾಡಿಸುತ್ತಾ ರೂಮಿಗೆ ಭಾರವಾದ ಹೆಜ್ಜೆಗಳನ್ನ ಹಾಕುತ್ತ ನಡೆದರು ಅಯ್ಯಂಗಾರ್ರು.

ದಿಂಬಿಗೆ ಒರಗಿ ಕೂರುತ್ತ ತಮ್ಮಷ್ಟಕ್ಕೆ ತಾವೆ ಇವಳಿಗೆ ಇನ್ನು ಮೂರು ವರ್ಷ ಇದ್ದಾಗಲೆ ಬಡಕೊಂಡೆ ’ನಡಿಯೇ ವೈದು ವಾಪಸ್ಸ್ ಮೈಸೂರಿಗೆ ಹೊರಟೋಗೋಣ; ಸಾಕಾಯ್ತು ಇಲ್ಲಿ ಜೀವನ’ ಅಂತ; ಆದಕ್ಕೆ, ’ನೀವು ಸಾಕು ಸುಮ್ಮನಿರಿ ಸಧ್ಯ. ಮೂರು ಮೂರು ದಿನಕ್ಕು ವಾಪಸ್ಸ್ ಹೋಗೋಣ, ವಾಪಸ್ಸ್ ಹೋಗೋಣ ಅಂತ ರಾಗಮಾಲಿಕೆ ತೆಗಿಬೇಡಿ. ನೀವು ಇಲ್ಲಿಗೆ ಬಂದು ಆಯ್ತು ಹದಿನೇಳು ವರ್ಷ. ನಾನು ಬಂದು ಈ ಆಗಸ್ಟ್‌ಗೆ ಇನ್ನು ಮೂರು ವರ್ಷ. ಮಧ್ಯದಲ್ಲಿ ಮಲಗಿದ್ದ ಮಗು ಕಡೆ ನೋಡುತ್ತ, ಇವಳು ಇನ್ನು ಹೊಟ್ಟೆಲೇ ಇದ್ದಳು. ಆಮೇಲೆ ಇವಳನ್ನ ಬೆಳೆಸೋದೇ ಆಯ್ತು. ನಾನು ಆಮೆರಿಕಾಗೆ ಬಂದಮೇಲೆ ಏನ್ಮಾಡಿದಿನಿ ಹೇಳಿ? ಇವಳು ಸ್ಕೂಲ್‌ಗೆ ಹೊಗೋ ವಯಸ್ಸಿಗಾದರು ಏನಾದರು ಮಾಡೋಣಾ ಅಂದರೆ, ಈಗ ತಿರುಗ ಪ್ರೇಗ್‌ನೆಂಟು. ಬೇರೆ ಏನಾದರು ಕೆಲಸ ಇದೆಯ ನಿಮಗೆ? ಮಲಗೋ ಟೈಮನಲ್ಲಿ ನನ್ನ ಕೆಣಕಬೇಡಿ. ಮೈಸೂರಂತೆ ಮೈಸೂರು ಸುಮ್ಮನೆ ಮಲಗಿ…’ ಅಂತ ಆ ಕಡೆ ತಿರುಗಿ ಮಲಗಿದ್ದರು ಶ್ರೀಮತಿಯವರು. ಹದಿನೈದು ವರ್ಷದ ಹಿಂದಿನ ಮಾತುಕತೆ ಅದು. ಅಯ್ಯಂಗಾರ್ರು ’ಅದೆಲ್ಲ ಸರಿ ಕಾಣೆ ಈಗ ಅನುಭವಸ್ತಾಯಿರೋದು ಯಾರು ನೋಡ್ತಿದೀಯಲ್ಲ’ ಗೊಣಗಿದರು…

ಬೆಡ್ ಪಕ್ಕಕ್ಕೆ ಇದ್ದ ’ಎಂಡ್’ ಟೇಬಲ್ಲಿನ ಮೇಲೆ ಲೋಟ ಇಟ್ಟು ಸ್ವಲ್ಪ ಹಿಂದಕ್ಕೆ ತಳ್ಳಿ, ದಿಂಬು ಕೆಳಗೆ ಎಳದು ಮಲಗಿದರು. ಅವರ ತುಟಿಗಳ ಮೇಲೆ ಸಣ್ಣ ನಗುವೊಂದು ಮೂಡಿತ್ತು. ಹದಿನೈದು ವರ್ಷದ ಹಿಂದಿನ ರಾತ್ರಿಯನ್ನೆ ಇನ್ನು ಮೆಲಕಾಕ್ತ ಇದ್ದರು. ಮುಖ ತಿರುಗಿಸಿ ಮಲಗಿದ ಶ್ರೀಮತಿಯವರಿಗೆ ಎರಡು ನಿಮಿಷದಲ್ಲಿ ಗಾಢವಾದ ನಿದ್ದೆ ಹತ್ತಿ ಗೊಟರ್, ಗೊಟರ್, ಗಟ್ರ, ಗಟ್ರಾಂತ ಗೊರಕೆ ಹೊಡೀತಿದ್ದರು. ಅಯ್ಯಂಗಾರ್ರು ಕಾಲಲ್ಲಿ ಒಂದು ಸತಿ ತಿವಿದರೆ ಎರಡು ಕ್ಷಣ ನಿಲ್ಲಿಸಿ ಮತ್ತೆ ಶುರುವಾಗೋದು ಗೊಟರ್, ಗೊಟರ್ ಶಬ್ಡ…ದಿಂಬಿನ ಅಂಚು ಎಳೆಯೋದು, ಬೆನ್ನಿಗೆ ಮೆತ್ತಗೆ ಕುಟ್ಟೋದು, ಸ್ವಲ್ಪ ಜೋರಾಗಿ ಕೆಮ್ಮೋದು ಹೀಗೆ ಮಾಡಿದಾಗಲೆಲ್ಲ ಶಬ್ದ ನಿಂತು, ಒಂದೆರಡು ನಿಮಿಷದಲ್ಲಿ ಮತ್ತೆ… ಗೊಟರ್, ಗೊಟರ್, ಗಟ್ರ, ಗಟ್ರ… ಅಯ್ಯಂಗಾರ್ರ್‌ಗೆ ಮಧ್ಯದಲ್ಲಿ ಮಲಗಿರೋ ಮಗು ಎಲ್ಲಿ ಎದ್ದು ರಾತ್ರಿಯೆಲ್ಲ ಜಾಗರಣೆಯಾಗುತ್ತೋ ಅನ್ನೋ ’ಟೆನ್‌ಶನ್’ ಬೇರೆ. ಹೆಂಡತಿಗೆ ಎಬ್ಬಿಸಿ ಹೇಳೋಣ ಅಂದರೆ ಐದು ತಿಂಗಳು ತುಂಬಿದ ಗರ್ಭಿಣಿ. ಪಾಪ ಮಲ್ಕೋಳ್ಲಿ ಅಂತ ಒಂದುಕಡೆ, ಇನ್ನೊಂದು ಕಡೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗಬೇಕು; ಸ್ವಲ್ಪವು ನಿದ್ದೆ ಆಗದೆ ಇದ್ದರೆ ಕಾಲೇಜನಲ್ಲಿ ಪಾಠ ಏನು ಮಾಡೋದು ಅನ್ನೋ ಚಿಂತೆ. ನಿದ್ದೆ ಹತ್ತದೆ, ಹೇಳದೆ ಇರೋಕ್ಕು ಆಗದೆ ’ಡೀ ವೈದು ಕೊಂಚು ಪಕ್ಕ್‌ತ್ಕ್ ಪಡ್ತ್ಕೋಡಿ. ಉಸಿರಾಡೋಕ್ಕೆ ಅನುಕೂಲವಾಗುತ್ತೆ ಕಾಣೆ, ನೀನು ನೆಮ್ಮದಿಯಾಗಿ ಮಲಗಬಹುದು ಶಬ್ದ ಇರೋಲ್ಲ’ ಅಂತ ಹೇಳಿ ಜಲಭಾದೆ ಮುಗಿಸಿ ಬಾತ್‌ರೂಮಿಂದ ಬರೋಷ್ಟರಲ್ಲಿ ಶ್ರೀಮತಿಯವರಿಗೆ ಎಚ್ಚರವಾಗಿ ’ನಾನು ಮಲಗಿದ್ದರಲ್ಲವೆ ಗೊರಕೆ ಹೊಡೆಯೋಕ್ಕೆ, ಆ ಕಡೆ ತಿರುಕ್ಕೊಂಡು ನಿಮ್ಮ ಮನೆ ಟ್ರೇಡ್‌ಮಾರ್ಕ್ ಇದೆಯಲ್ಲ ತಲೆ ಕೆಳಗೊಂದು ದಿಂಬು ಮೇಲೊಂದು, ಇಟ್ಟ್ಕೊಂಡು ಮಲಗಿ. ಶಬ್ದವು ಕೇಳಿಸೋಲ್ಲ, ನಿದ್ದೇನೂ ಬರುತ್ತೆ’. ಪಕ್ಕದಲ್ಲಿದ್ದ ದಿಂಬನ್ನ ತಲೆ ಮೇಲೆ ಇಟ್ಟು ಮಲಗಿದ ಅಯ್ಯಂಗಾರ್ರ್‌ಗೆ ನಿದ್ದೆ ಹತ್ತಿದ್ದು ಗೊತ್ತಾಗಲಿಲ್ಲ.

ಸಾಧಾರಣವಾಗಿ ಬಾತ್ರೂಮಿನಲ್ಲಿ ಓಡುವ ಶವರಿನ ಸದ್ದಿಗೊ, ಯಾವುದೋ ರೂಮಿನ ಬಾಗಿಲು ದಢಾರನೆ ಮುಚ್ಚಿದ ಶಬ್ದಕ್ಕೋ, ಒಮ್ಮೆಲೆ ಜೋರಾಗಿ ಹೊಮ್ಮಿದ ’ರಾಕ್’ ಮ್ಯೂಸಿಕ್ಕಿನ ಕರ್ಕಶ ’ಸೌಂಡಿಗೊ’, ಕೆಳಗೆ ’ಲಿವಿಂಗ್’ ರೂಮಿನಲ್ಲಿ ಓಡಾಡೋ ರಭಸಕ್ಕೆ ಎದೆಮೇಲೆ ಯಾರೋ ನಡೆದಂತಾಗಿ ಎಚ್ಚರವಾಗೋ ಅಯ್ಯಂಗಾರ್ರ್‌ಗೆ ಅಂದು ಯಾಕೋ ಎಚ್ಚರವಾಗಿರಲಿಲ್ಲ. ಕಣ್ಣು ಬಿಟ್ಟಾಗ ತಲೆ ಸಣ್ಣದಾಗಿ ನೋಯುತಿತ್ತು. ದಿಂಬಿನ ಅಡಿಯಲ್ಲಿದ್ದ ವಾಚಲ್ಲಿ ಟೈಮ್ ನೋಡಿ, ಬಲಗಡೆ ತಿರುಗಿ ಒಂದು ಕ್ಷಣ ಹಾಗೆ ಮಲಗಿದ್ದರು. ಲೇಟಾಗಿತ್ತು. ಕಿಟಕಿ ಪಕ್ಕದಲ್ಲಿ ನೇತು ಬಿದ್ದಿದ್ದ ’ಪ್ಯಾರಿಸ್ಸಿನ’ ಫೋಟೋ ನೋಡಿ ನಕ್ಕರು. ದೊಡ್ಡಮಗಳು ಜಾಹ್ನವಿ ಮೂರು ವರ್ಷದವಳಿದ್ದಾಗ ’ನಿನಗೆ ಹದಿನಾರು ಆಗಲಿ ಚಿನ್ನ ನಿನ್ನ ಪ್ಯಾರಿಸ್, ಪ್ಯಾರಿಸ್ನಲ್ಲಿ ಡಿomಚಿಟಿಛಿe ಮಾಡ್ಸ್‌ತಿನಿ’ ಅಂತಂದು ಮುದ್ದು ಮಾಡುತ್ತಿದ್ದದ್ದು ಜ್ಞಾಪಕಕ್ಕೆ ಬಂದಿತ್ತು. ಎದ್ದು ಅಂಗೈಗಳನ್ನು ಉಜ್ಜುತ್ತ, ಬಿಡಿಸಿ ಒಮ್ಮೆ ನೋಡಿ, ಎರಡೂ ಕೈಯನ್ನು ಹಣೆಯಿಂದ ಕಣ್ಣು, ಮೂಗು, ಬಾಯ್ಮೇಲೆ ನೀವುತ್ತಾ ನಾರಾಯಣ ಶ್ರೀಹರಿ ಎಂದು ಹೇಳಿ ಮತ್ತೊಮ್ಮೆ ಅಂಗೈಯನ್ನು ನೋಡಿ, ದಿನವಿಧಿಗಳನ್ನು ಪೂರೈಸಲು ಹೋದರು.

ಮಹಡಿ ಇಳಿದು ಕೆಳಗೆ ಬರುತ್ತ ಏನೋ ಮರೆತನಲ್ಲ, ಏನು ಅಂತ ಯೋಚನೆ ಮಾಡ್ತಾನೆ ಬಂದ ಅಯ್ಯಂಗಾರ್ರು ಯಾಕೋ ತಲೆನೋವು ಬೇರೆ ಜಾಸ್ತಿ ಆಗಿದೆ ಅನ್ಕೋಂಡು, ರೆಡಿಯಾಗಿದ್ದ ಕಾಫಿ ಬಗ್ಗಿಸ್ಕೋಂಡು ಅಲ್ಲೇ ಅಡಿಗೆಮನೆಯಲ್ಲಿದ್ದ ಛೇರ್‌ಮೇಲೆ ಕೂತರು. ಕಾಫಿಯೊಂದು ಚೆನ್ನಾಗಿ ಮಾಡ್ತಾಳೆ ದೊಡ್ಡವಳು ಅಂತ ಒಂದು ಗುಟುಕು ಹೀರಿ, ಕಣ್ಣು ಮಿಟುಕಿಸದೆ ಟಿವಿ ನೋಡ್ತಿದ್ದ ಮಕ್ಕಳ ಕಡೆಯೊಮ್ಮೆ ನೋಡಿದರು. ಜನವರಿಗೆ ಹದಿನೆಂಟು ತುಂಬಿದ ಜಾಹ್ನವಿ, ಭುಜಕ್ಕಿಂತ ಸ್ವಲ್ಪ ಕೆಳಕ್ಕೆ ದಟ್ಟವಾಗಿ ಬೆಳೆದ ಕಪ್ಪು ಕೂದಲ ಕಟ್ಟದೆ ಹಾಗೆಯೆ ಬಿಟ್ಟು ಸುಂದರವಾಗಿ ಕಾಣುತ್ತಿದ್ದಳು. ಸಣಕಲ ಕಡ್ಡಿ ಜಮುನ ಚಿಕ್ಕವಳು. ಅವಳಿಗೂ ಈ ಸೆಪ್ಟಂಬರ್‌ಗೆ ಹದಿನೈದು ತುಂಬುತ್ತೆ. ಅದು ಕಾಫಿ ಕುಡಿಯೋಲ್ಲ. ತೆಳ್ಳಗೆ ಗಳುವಿನಾಗೆ ಅಕ್ಕನಿಗಿಂತಲೂ ಉದ್ದ ಬೆಳದು ನಿಂತವಳು, ಬೆನ್ನಲ್ಲಿ ಹದಿನೈದು ಕೇಜಿ ಭಾರದ ’ಬ್ಯಾಕ್-ಪ್ಯಾಕ್’ ಹೊತ್ತುಕೊಂಡೆ ಛೇರ್‌ಮೇಲೆ ಕೂತಿದ್ದಳು. ತಂದೆ ಬಂದಿದ್ದು ಗೊತ್ತಾದ್ರು ಟಿವಿ ನೋಡ್ತಾನೆ ಕೂತಿದ್ದವು. ’ಗುಡ್ ಮಾರ್ನಿಂಗ್’ ಅಂತಂದ ಅಯ್ಯಂಗಾರ್ರ್‌ಗೆ ಸಣ್ಣದಾಗಿ ತಲೆ ಸುತ್ತಿದಂತಾಗಿ ಕಣ್ಣು ಮುಚ್ಚಿ ಮಗು ಅಲ್ಲೆಲ್ಲೋ ಕನ್ನಡಕ ಇಟ್ಟಿದೀನಿ ನೋಡು ತೆಗೋ ತಿhಚಿಣ ಟಿoತಿ ? ಅಂದರು ಜಾನಕಿಗೆ. ತೆಗೋ….ಅಂದವಳಿಗೆ ಅರ್ಥವಾಗಿ ನಾನು ಬಿಜಿ ಡ್ಯಾಡ್ ಅಂತ ಟಿವಿ ನೋಡ್ತಾನೆ ಹೇಳಿದಳು. ತಾವೆ ಎದ್ದು ಲಿವಿಂಗ್ ರೂಮಿನ ’ಫೈಯರ್ ಪ್ಲೇಸ್’ ಪಕ್ಕದಲ್ಲಿದ್ದ ಬುಕ್‌ಶಲ್ಫ್ನಲ್ಲಿ ಕನ್ನಡಕ ತೆಗೊಂಡು ಬರೋಷ್ಟರಲ್ಲಿ ತಲೆ ಗಿರ್ರ್ ಅಂತ ಸ್ವಲ್ಪ ಜೋರಾಗೆ ಸುತ್ತಿದಂತಾಗಿ ಅಯ್ಯಂಗಾರ್ರು, ಇವತ್ತು ಯಾಕೆ ಹೀಗೆ? ಏನೋ ಮರೆತನಲ್ಲ ಏನು? ಅಂತ ಯೋಚನೆ ಮಾಡ್ತಾನೆ ಅಂದಿನ ಪೇಪರ್ ಕೈಯಲ್ಲಿ ಹಿಡಿದು ಕೂತರು. ಏನೋ ತಕ್ಷಣ ಹೊಳೆದಂತಾಗಿ,

ಜಾನು ಯೂನಿವರ್ಸಿಟಿಯಿಂದ ನಿನಗೆ ಲೆಟರ್ ಬಂತಾ ಮಗು ?
ಲಾಸ್ಟ್ ವೀಕೆ ಬಂತಲ್ಲಾ, ಮರೆತು ಬಿಟ್ಟಿದೀಯ ನೀನು. ಅಡ್ಮಿಶನ್ ಸಿಕ್ಕಿದೆ ಸಮ್ಮರ್‌ನಲ್ಲಿ ಹೋಗಬೇಕು.
ಹೌದಲ್ಲ ಮರೆತೆ ಹುಂ….

ಯಾವುದೋ ’ಫ್ಯಾಶನ್ ಮ್ಯಾಗಜಿನ್’ ಪುಟಗಳನ್ನ ತಿರುವಿ ಹಾಕುತ್ತ, ಜುಲೈನಲ್ಲಿ ನಾನು ಪ್ಯಾರಿಸ್ನಲ್ಲಿ ಇರ್ತಿನಿ ಕಾಣೆ, ಅಂತ ತಂಗಿಗೆ ಹೇಳ್ತಿದ್ದಳು ಜಾಹ್ನವಿ. ಇಲ್ಲಿ ನೋಡು ಅಂತ ಯಾವುದೋ ಚಿತ್ರದ ಮೇಲೆ ಬೆರಳಿಟ್ಟು ತೋರಿಸುತ್ತಾ,

“ಇಲ್ಲೆ ಎಲ್ಲಾ ಮಾಡಲ್ಸು ಇರೊದು…”
ಜಮುನ ಕುತೂಹಲದಿಂದ “ನೀನು ಹೋಗೋದು ’ಮೊನಕೊ’ಗೆ ಅಂದಿದ್ದೆ ಮತ್ತೆ.”
ಅದು ’ವಿಂಟರ್’ನಲ್ಲಿ ಕಾಣೆ. ನಿನಗಂತೂ ಏನು ಗೊತ್ತಿಲ್ಲ. ಪ್ಯಾರಿಸ್‌ಗೆ ಸಮ್ಮರ್‌ನಲ್ಲಿ ಹೋಗಬೇಕು, ಇರಬೇಕು ಮಂಕೆ, ಪ್ರಪಂಚಕ್ಕೇ ಗೊತ್ತಿರೋ ವಿಷಯ ಅದು.
ತಲೆ ಎತ್ತದೆ, ಪೇಪರ್ ಓದ್ತಾನೆ ಅಯ್ಯಂಗಾರ್ರು “ನೀನು ಅಲ್ಲಿಗೆ ಹೋಗ್ತಾ ಇರೋದು ಓದೋಕ್ಕೆ. ಅವರಿವರ ಕೈಯಲ್ಲಿ ಫೋಟೋ ತೆಗಿಸ್ಕೊಳ್ಳೋದಕ್ಕಲ್ಲ.”
“ನನಗೆ ಗೊತ್ತು,I ಞಟಿoತಿ.” ಅನ್ನುತ್ತ ಮುಖ ದುರುಗುಟ್ಟ್ಕೊಂಡು ನೋಡಿ ಆ ಕಡೆ ತಿರುಗಿ, ಸಿಟ್ಟಿನಲ್ಲಿ ಏನೆನೋ ಗೊಣಗಕ್ಕೆ ಶುರು ಮಾಡ್‌ದ್ಲು ಜಾನು.
“ಹೇಳೊಕ್ಕೆ ಬೇರೇನು ಇಲ್ಲದೆ ಇದ್ದರೆ ಸುಮ್ಮನಿರಬೇಕು. ಒಳ್ಳೆsಣuಛಿಞ ಡಿeಛಿoಡಿಜ” ತರಹ ಯಾವಾಗಲು ಅದೇ.. ಕೇಳದೆ ಇರೋದು ಏನಾದರು ಹೇಳಿದರೆ ಅದೊಂದು, ಅದು ಬಿಟ್ಟು ಸುಮ್ಮನೆ….. ಮಾಡೋಕ್ಕೆ ಬೇರೆ ಕೆಲಸ ಇಲ್ಲದೆ ಇದ್ದರೆ…”

ಸಾಮಾನ್ಯವಾಗಿ ಸುಮ್ಮನಿರುತ್ತಿದ್ದ ಅಯ್ಯಂಗಾರ್ರ್‌ಗೆ ಅಂದು ಕೋಪ ನೆತ್ತಿಗೇರಿತ್ತು. ಕನ್ನಡಕ ತೆಗೆದಿಡುತ್ತಾ ನಿಂತು, ಬಲಗೈಯಲ್ಲಿ ಇದ್ದ ಪೇಪರನ್ನು ಬಿಸಾಕಿದಾಗ, ಟೇಬಲ್‌ಮೇಲೆ ಇದ್ದ ಕಾಫಿ ಕಪ್ಪಿಗೆ ಕೈ ತಾಕಿ ಉರುಳಿಬಿದ್ದು ಕಾಫಿ ಚೆಲ್ಲಿತ್ತು. ಹಲ್ಲು ಕಚ್ಚುತ್ತ “ನನ್ನ ಪ್ರಾಣ ತೆಗೆದು ಬಿಡ್ತೀರ ನೀವಿಬ್ಬರು ಅಪ್ಪ ಅನ್ನೋ ಮರ್ಯಾದೆನೆ ಇಲ್ಲ ನಿಮಗೆ” ಎಂದು ಜೋರಾಗಿ ಉಸಿರು ಬಿಡುತ್ತಾ ಎರಡು ಹೆಜ್ಜೆ ಮುಂದೆ ಹೋಗಿದ್ದ ಅಯ್ಯಂಗಾರ್ರು ತಲೆ ತಿರುಗಿ ಬಿದ್ದು ಬಿಟ್ಟರು.

ಅಷ್ಟ್ರಲ್ಲಿ ಆಗಲೇ ಕಣ್ಣಲ್ಲಿ ಎರಡು ಹನಿ ಜಿನುಗಿದ್ದ ಜಾಹ್ನವಿ “ಔh! mಥಿ goಜ..” ಅಂದಳು. ಚಿಕ್ಕದು ಕಣ್ಣು, ಬಾಯಿ ಬಿಡುತ್ತ ಅಪ್ಪನ ಭುಜ ಹಿಡಿಯೋಕ್ಕೆ ಮುಂದೆ ಬಗ್ಗಿ “ಂಡಿe ಥಿou oಞ, ಜಚಿಜ?.” ಎಂದು ಕೇಳಿತ್ತು.

ಭುಜದ ಮೇಲೆ ಬಿದ್ದ ಆಯ್ಯಂಗಾರ್ರ್‌ಗೆ ಒಂದು ಕ್ಷಣ ಏನು ತೋಚದೆ ಸುತ್ತಲು ಕತ್ತಲೆ ಕವಿದಂತೆನಿಸಿ ಹೆದರಿದ್ದರು. ಅಯ್ಯೋ ಮಕ್ಕಳ ಮುಂದೆ ಹೀಗಾಯ್ತಲ್ಲ ಎಂದಂದು ಕೊಳ್ಳುತ್ತಾ ಏಳೋದಕ್ಕೆ ಹೋದವರಿಗೆ ಆಗದೆ ತಲೆಯಿನ್ನೂ ಸುತ್ತುತ್ತಿರುವುದು ತಿಳಿದು ಹಾಗೆ ಅಲ್ಲಿಯೇ ಬಿದ್ದಿದ್ದರು. ಟೇಬಲ್ ಮೇಲಿಂದ ಕಾಫಿ ಪಾದದ ಮೇಲೆ ಹನಿ ಹನಿಯಾಗಿ ತೊಟಕುತಿತ್ತು. ಅಯ್ಯಂಗಾರ್ರು ಕಾಲನ್ನ ಹಿಂದಕ್ಕೆ ಎಳಕೊಳ್ಳಲಿಲ್ಲ. ಭುಜ ಹಿಡಿಯಲು ಬಂದ ಜಾನಕಿಯ ಕೈಯನ್ನು ನೋಡಿದವರೆ ಸಿಟ್ಟಿನಲ್ಲಿ ಅಭಯ ಹಸ್ತ ತೋರಿಸುತ್ತ ಬೇಡ, ಬೇಡ ಅಂದರು. ಜಾನಕಿ ಹೆದರಿ ಹಿಂದೆ ಸರಿದು ಅಕ್ಕನ ಮುಖ ನೋಡಿ, ಭುಜವನ್ನ ಮೇಲಕ್ಕೆತ್ತಿ ಎರಡು ಕೈಯನ್ನು ಏನು ಗೊತ್ತಿಲ್ಲವೆನ್ನುವಂತೆ ತಿರುಗಿಸಿದಳು. ಜಾಹ್ನವಿ ಬಿಪಿ ಟ್ಯಾಬ್ಲೇಟ್ ಬೆಳಿಗ್ಗೆ ತೆಗೊಂಡರ ಅಂತ ಪಿಸುಗುಟ್ಟಿದ್ದು ಆಯ್ಯಾಂಗಾರ್ರ್‌ಗೆ ಕೇಳಿಸಿತ್ತು. ಮರೆತಿದ್ದು ಆದನ್ನೇ ಅಂತ ತಕ್ಷಣ ಹೊಳೆದಿತ್ತು. ಜೋರಾಗಿ ಹೇಳೊಕ್ಕಾಗದೆ ಟ್ಯಾಬ್ಲೆಟ್ಟು, ಟ್ಯಾಬ್ಲೆಟ್ಟು ಮೇಲಿದೆ ಅಂತ ಹೇಳಿದರು. ಜಾನಕಿ ಓಡೋಗಿ ತಂದುಕೊಟ್ಟ ಗುಳಿಗೆ ನುಂಗಿ, ಛೇ ಹೀಗಾಯ್ತಲ್ಲ ಯಾವತ್ತು ಮಕ್ಕಳ ಮುಂದೆ ಹೀಗಾಗಿರಲಿಲ್ಲ; ದಿನಾ ಹಲ್ಲು ಉಜ್ಜಿದ ಕೂಡಲೆ ನುಂಗೊ ಮನುಷ್ಯ ಮರೆತನಲ್ಲ..ಆದಕ್ಕೆ ಹಾಳಾದ್ದು ಬೆಳಿಗ್ಗೆಯಿಂದಲೆ ತಲೆ ಗಿರ್ರ್ ಅಂತಿದ್ದಿದ್ದು..ಆಗಬಾರದಿತ್ತು ಆಗಬಾರದಿತ್ತು..ಪಾಪ ಹೆದರಿಬಿಟ್ಟಿವೆ ಅಂತ ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಮತ್ತೆ ಏಳೋದಕ್ಕೆ ಪ್ರಯತ್ನ ಮಾಡಿ ಆಗದೆ ಕೂತಲ್ಲೆ ಹಿಂದಕ್ಕೆ ಸರಿದು ಗೋಡೆಗೆ ಒರಗಿ, ಮಗು ಆ ಫೋನ್ ಕೊಡು ಅಂತ ನಿಧಾನವಾಗಿ ಹೇಳಿದರು. ಕಾಲೇಜಿಗೆ ಫೋನ್ ಮಾಡಿ ಸಿಕ್‌ಲೀವ್ ಹಾಕಿ ಇನ್ನು ಮಂಕಾಗಿ ನಿಂತ ಮಕ್ಕಳ ಕಡೆ ನೋಡಿ, ನನಗೆ ಏನು ಆಗಿಲ್ಲ ಯೋಚನೆ ಮಾಡಬೇಡಿ. ಬೆಳಿಗ್ಗೆ ಟ್ಯಾಬ್ಲೇಟ್ ತಗೊಳೋದು ಮರೆತು ಬಿಟ್ಟೆ ಅಷ್ಟೆ. ನೀವು ತಿಂಡಿ ತಿಂದಾಗಿದ್ದರೆ ಸ್ಕೂಲಿಗೆ ಹೋಗಿ ಅಂದರು. ದೊಡ್ಡವಳು ನಾನು ಬೇಕಾದರೆ ಮನೇಲಿ ಇರ್ತಿನಿ ಅಂತ ಅಂದಿದ್ದಕ್ಕೆ ಮನೇಲಿದ್ದು ಏನು ಮಾಡ್ತಿ? ಗೋ ಗೋ ಅಂತಂದರು ಅಯ್ಯಂಗಾರ್ರು.

ಮಕ್ಕಳಿಬ್ಬರು ಹೋದಮೇಲೆ ಮಾರ್ಚಿನ ಆ ಮಂದ ಬೆಳಕಲ್ಲಿ ಒಬ್ಬರೆ ಕೂತಿದ್ದ ಅಯ್ಯಂಗಾರ್ರ ಮನಸ್ಸಿಗೆ ಕ್ಲೇಶವಾಗಿತ್ತು. ಮಕ್ಕಳ ಮುಂದೆ ಬಿದ್ದು ಏನು ಮಾಡಲಾಗದಿದ್ದಕ್ಕೆ ಬಹಳ ಕಿರಿಕಿರಿಯಾಗಿ ಮನಸ್ಸು ಕಲಕಿ ಹೋಗಿತ್ತು. ಅವಗಳದ್ದು ಏನು ತಪ್ಪಿಲ್ಲ ಮರೆತಿದ್ದು ನಾನಲ್ಲವೇ. ಆದು ಅಲ್ಲದೇ ನಾನು ಕೋಪ ಮಾಡ್ಕೋಳೋ ಅಂತದ್ದು ಅವಳೇನು ಹೇಳಿರಲಿಲ್ಲ. ಇನ್ನು ಚಿಕ್ಕವು, ಮನಸ್ಸು ಬಹಳ ಸೂಕ್ಷ್ಮ. ಈಗಿನ್ನು ಗೂಡು ಬಿಟ್ಟು ಹೊರಬಂದ ಬಣ್ಣದ ಚಿಟ್ಟೆಗಳ ಹಾಗೆ. ಅವಳಿನ್ನು(ಹೆಂಡತಿ) ಬದುಕಿದ್ದರೆ ಇಷ್ಟೆಲ್ಲ ಆಗೋಕ್ಕೆ ಬಿಡ್ತಾನೇ ಇರಲಿಲ್ಲ: ’ಅವರ ಚಿಂತೆ ನಿಮಗೆ ಯಾಕೆ ? ನಾನು ಹೇಗೋ ನಿಭಾಯಿಸಿಕೊಂಡು ಹೋಗ್ತಿನಿ. ಸುಮ್ಮನೆ ನಿಮ್ಮಷ್ಟಕ್ಕೆ ನೀವು ಇರಿ. ನಿಮಗು ನೆಮ್ಮದಿ ಅವಕ್ಕು. ನಿಶ್ಶಬ್ದವನ್ನ ಅನುಭವಿಸಿ’ ಅನ್ನೋವಳು. ಅವಳು ಸತ್ತ ಎಂಟು ವರ್ಷದಲ್ಲಿ ನಾನು ಇನ್ಸ್ಟಂಟ್ ನೂಡಲ್ಸ್ ಮಾಡೊದನ್ನ ಕಲಿತೆ, ಜಮೈಕನ್ ಜಡೆ ಹೆಣೆಯೋದನ್ನ ಕಲಿತೆ, ನೂರಾರು ಪಾಪ್ ಸಿಂಗರ್ ಹೆಸರುಗಳನೆಲ್ಲಾ ಉರು ಹೊಡೆದೆ. ’ಓ ಥಿಟಿಛಿ’ ಹುಡುಗರ ಕೈ ಕುಲುಕಿರೋ ಮೊದಲನೆ ಗಣಿತದ ಮೇಷ್ಟ್ರು ನಾನೇ ಅನಿಸುತ್ತೆ. ಇಷ್ಟೆಲ್ಲ ಕಲಿತವನಿಗೆ ಇವರ ಅಲಕ್ಷ್ಯ, ಉದಾಸೀನ, ತಿರಸ್ಕಾರದ ದೃಷ್ಟಿ ಅರ್ಥ ಆಗೋಲ್ಲವೆ, ಆಗುತ್ತೆ. ಬೆಳಗಾಗೆದ್ದು ಕಾಫಿ ಕುಡೀತಾ ಜೊತೇಲಿ ಕೂತಾಗ, ಒಂದೇ ಒಂದು ಮಾತು ಆಡದೆ ಇದ್ದರೆ ನನಗೆ ಹೇಗಾಗಬೇಡ. ದಿನಾ ಇದೆ ರಾಮಾಯಣ. ನನ್ನ ಪಾಡಿಗೆ ನಾನು ಅವರ ಪಾಡಿಗೆ ಅವರು. ಏನಾದರು ಕೇಳಿದಕ್ಕೆ ನಾಕು ಮಾತು, ಇಲ್ಲದೇ ಇದ್ದರೆ ಆದು ಇಲ್ಲ. ಏನೋ ಒಂದು ಸ್ವಲ್ಪವು ಸರಿಯಿಲ್ಲ. ಹಾಲಿಲ್ಲದ ಹಸು ಮೊಲೆಗೆ ಕರು ಬಾಯಿಟ್ಟು ಕುಟ್ಟಿ ಗುಮ್ಮದ್ದಂಗೆ ಅನಿಸುತ್ತೆ. ಜೊತೇಗೆ ಈ ರೋಗಗಳು ಬೇರೆ. ಅವಳು ಸತ್ತಮೇಲೇ ಅಲ್ಲವೇ ನನಗೆ ಬಿಪಿ ಶುರುವಾಗಿದ್ದು. ನನ್ನ ಎದೆ ಬಡಿತವೆ ಸರಿ ಇಲ್ಲವೇನೋ ಅಂತ ಡಾಕ್ಟರ್ ಹತ್ತಿರ ಹೋದರೆ, ಏನು ಆಗಿಲ್ಲ ಹೋಗಿ ಅಂದ!. ಅವನಿಗೆ ಗೊತ್ತಿಲ್ಲ, ಆ ನಾಡಿಯ ಮಿಡಿತ ಕಳೆದು ಹೋಗುತ್ತಿರೋ ಸಮಯದ ಶಬ್ದ ಅಂತ. ಅದಾದ ಮೂರು ವರ್ಷಕ್ಕೆ ಸಕ್ಕರೆ ರೋಗವು ಬಂತಲ್ಲಾ. ಮರೆಯೋಕ್ಕೆ ಮುಂಚೆ ಇನ್ಸುಲಿನ್ ತೆಗೋಬೇಕು. ಇಲ್ಲ ವೈದು ಇಲ್ಲ; ನಿಶ್ಶಬ್ದವನ್ನ ಅನುಭವಿಸೋದು ನೀನೆಣಿಸಿದಷ್ಟು ಸುಲಭವಲ್ಲ. ಶಬ್ದವಿಲ್ಲದ ಕಣ್ಣಿನ ನಾಕಾರು ನೋಟಗಳೆ ಸಾಲದೆ? ನೀನು ಸತ್ತ ದಿನವು ಶಬ್ದವಿರಲಿಲ್ಲ. ಏನೋ ಎದೆ ನೋವು ೯೧೧ಗೆ ಫೋನ್ ಮಾಡಿ ಅಂದೆ. ಎಂದು ಯಾವುದಕ್ಕು ಡಾಕ್ಟರ್ ಸುದ್ದಿ ಎತ್ತದೆ ಇರೊ ನೀನು ೯೧೧ಗೆ ಫೋನ್ ಮಾಡು ಅಂದಾಗ ಸ್ವಲ್ಪ ಗಾಬರಿಯಾದರು, ಸುಮ್ಮನೆ ಏನಾದರು ತಮಾಶೆ ಮಾಡ್ತಿದಿಯೋ ಅಂತ ಒಂದು ಗಳಿಗೆ ನಿನ್ನ ಮುಖವನ್ನ ಇಲ್ಲ ಕಣ್ಣುಗಳನ್ನ ನೋಡೇ ಎಲ್ಲ ತಿಳಿದಿತ್ತಲ್ಲ ನನಗೆ. ಶಬ್ದವಿರಲಿಲ್ಲ ವೈದು ಶಬ್ದವಿರಲಿಲ್ಲ. ಎಮರ್ಜನ್ಸಿ ಮೆಡಿಕಲ್ ಹೆಲ್ಪ್ ಈ ಸಿಟಿ ಟ್ರಾಫಿಕ್ನಲ್ಲಿ ಬರೋದಕ್ಕೆ ಹತ್ತು ನಿಮಿಷ ತಡಮಾಡಿದ್ದರು. ಅಷ್ಟ್ರಲ್ಲೇ ನೀನು ಎಲ್ಲಾನು ಇಲ್ಲೇ ಮಾಡ್ಕೋಂಡ್ ಬಿಟ್ಟೆಯಲ್ಲ. ವ್ಯಾನಿಗೆ ನಿನ್ನ ಎತ್ತಿಕೊಂಡು ಹೋಗುವಾಗ ನೀನು ಬಹಳ ಹೆದರಿದ್ದೆ, ಹತ್ತೋದಕ್ಕೆ ಮುಂಚೆ ನೀನು ಬಿಟ್ಟ ಉಸಿರಿನ ಶಬ್ದವೊಂದೇ ನನಗೆ ಕೇಳಿಸಿದ್ದು. ಅದೇ ನಿನ್ನ ಕೊನೆಯ ಉಸಿರೆಂದೆನಿಸಿತ್ತು. ಆಮೇಲೆ ಆಸ್ಪತ್ರೆಯಲ್ಲಿ ಮುಕ್ಕಾಲು ಗಂಟೆ ಏನೆಲ್ಲಾ ಮಾಡಿದರು, ನೀನು ಮತ್ತೆ ಶಬ್ದ ಮಾಡಲೇ ಇಲ್ಲಾ, ಹಾರ್ಟ್‌ಫೈಲ್ ಆಗಿತ್ತು. ತಲೆಗೊಬ್ಬರು ಒಂದೊಂದು ಹೇಳಿದರು; ನ್ಯೂಯಾರ್ಕ್ ಸಿಟಿನ ಸೂ ಮಾಡಿ ಅಯ್ಯಂಗಾರ್ರೆ ಯಾಕೆ ಬಿಡಬೇಕು ಹೇಳಿ? ಇಟ್ ಈಸ್ ಡೆರೆಲೆಕ್ಶನ್ ಆಫ್ ಡ್ಯೂಟಿ; ಹತ್ತು ನಿಮಿಷ ಲೇಟ್ ಬರೋದು ಅಂದರೇನು? ನೋ ನೋ ಯು ಶುಡ್‌ನಾಟ್ ಲೆಟ್ ದೆಮ್ ಗೆಟ್‌ಅವೇ ವಿಥ್ ದಿಸ್. ಸುಮ್ಮನೆ ಬಿಡಬೇಡಿ ಅಂತ ನಮ್ಮ ಹಳೆ ಗೆಳೆಯ ನಾಗರಾಜ ರಾಯರು; ಸೂ ಮಾಡೋಲ್ಲ ಅಂದರೆ ಏನೋ ಅರ್ಥ? ಯು ಹ್ಯಾವ್ ಎ ಗ್ರೇಟ್ ಕೇಸ್ ಹಿಯರ್ ಅಂತ ಪಿಟ್ಸ್‌ಬರ್ಗಲ್ಲಿರೋ ನನ್ನ ಅಣ್ಣ. ನ್ಯೂಯಾರ್ಕ್ ಸಿಟಿ ಮೇಯರ್ ಆಫೀಸಿಗೆ ಒಂದು ಪತ್ರ ಬರದ್ಹಾಕಿ ಅದೇ ಪತ್ರವನ್ನ ನ್ಯೂಯಾರ್ಕ್ ಟೈಮ್ಸ್ ಎಡಿಟೋರಿಯಲ್ಲಿಗೂ ಕಳುಹಿಸಿದ್ದೆ. ಪೇಪರ್ರಿನವರು ಹಾಕಲಿಲ್ಲ. ಮೇಯರ್ ಆಫೀಸಿನವರು ಥಾಂಕ್ಯೂ ಲೆಟರ್ ಕಳುಹಿಸಿದ್ದರು.

ನೀನು ಸತ್ತು ಇನ್ನೂ ಒಂದು ತಿಂಗಳೂ ಆಗಿರಲಿಲ್ಲ, ನಿಮ್ಮಮ್ಮ ನಾನೆ ಒಂದು ಒಳ್ಳೆ ಹುಡುಗಿ ನೋಡ್ತೀನಿ ನೀವು ಇನ್ನೊಂದು ಮದುವೆ ಆಗಿ ಅಂತ ಹೇಳಿದ್ದರು. ನಿನಗೆ ಏನು ಮಹಾ ವಯಸ್ಸಾಗಿರೋದು ಇನ್ನೊಂದು ಮದುವೆ ಮಾಡ್ಕೋ ತಾಯಿಯಿಲ್ಲದ ತಬ್ಬಲಿ ಮಕ್ಕಳಿಗೂ ಒಂದು ದಾರಿ ಆಗುತ್ತೆ ಅಂತ ನಮ್ಮಪ್ಪನಿಂದ ಹಿಡಿದು ಎಲ್ಲರೂ ಹೇಳಿದರು. ಹೇಸಿಗೆಯಾಗಿತ್ತು ನನಗೆ. ಇವರ ಒಳ್ಳೆ ಮಾತಿಗೆ ಬೆಂಕಿ ಹಾಕ ಅಂತ ಅಂದುಕೊಂಡಿದ್ದೆ. ಬಹಳ ಖಡಾ ಖಂಡಿತವಾಗಿ ಮುಖ ಮುರದಂಗೆ ಹೇಳಿದ್ದೆ ’ನೋಡಿ, ನನಗೆ ಒಬ್ಬಳೇ ಹೆಂಡತಿ. ಸತ್ತಳು ಮುಗೀತು. ಇನ್ನು ಯಾರೂ ಯಾವತ್ತೂ ಇನ್ನೊಂದು ಮದುವೆ ಬಗ್ಗೆ ಚಕಾರ ಎತ್ತಬೇಡಿ’ ಅಂತ. ನಿನ್ನ ಮೇಲಿದ್ದ ಪ್ರೀತಿಯೋ, ಒಬ್ಬನೇ ಎರಡು ಮಕ್ಕಳನ್ನ ಇವರ ಮೊಖಕ್ಕೆ ಹೊಡೆಯೋ ಹಾಗೆ ಬೆಳೆಸಿ ತೋರಿಸಬೇಕು ಅನ್ನೋ ಹಠವೋ ಅಂತು ಅಂದೇ ಕೊನೆ. ಇಲ್ಲಿವರೆಗೆ ಒಬ್ಬರು ಮತ್ತೆ ಮದುವೆ ಉಸಿರೆತ್ತಲಿಲ್ಲ. ಈಗ, ಚುಕ್ಕಾಣಿಯಿಲ್ಲದ ಹಡಗಿನ ಹಾಗೆ ದಿಕ್ಕು, ದೆಸೆಯಿಲ್ಲದಂತೆ ಅನಿಸುತ್ತಿದೆ. ಮುಂಗಾರಿನ ಭರ್ಜರಿ ಮಳೆಗೆ ತುಂಬಿ ಕೊಚ್ಚಿ ಹರಿಯುವ ನದಿಯ ನೀರಲ್ಲಿ ಸತ್ತ ಕರುವೊಂದು ಕೊಚ್ಚಿ ಹೋದಂಗೆ. ನೀರಿನ ರಭಸಕ್ಕೆ ಮುಂದೆ ಹೋಗುತ್ತ ಉಬ್ಬರವಿಳಿತಕ್ಕೆ ಮೇಲೆ ಕೆಳಗೆ ಮೇಲೆ ಕೆಳಗೆ ಬಂದು, ಕಂಡರೂ ಕಾಣದಂತೆ ಎಷ್ಟು ದಿನದ ಪಯಣವೋ? ಉಬ್ಬಿದ ಅದರ ದೇಹ ಹಾರಿ ಬರುವ ಹಕ್ಕಿಗಳು ಕೂರುವುದಕ್ಕೆ ಜಾಗವಾದೀತಷ್ಟೇ ವೈದು. ನಾನು ಮಕ್ಕಳ ರೆಕ್ಕೆ ಬಲಿಯೋವರೆಗೆ ಇರಬೇಕಷ್ಟೇ. ಕೊನೆಗೊಂದು ದಿನ ಬಿರುಗಾಳಿಗೆ ಉರುಳಿಬಿದ್ದ ಮರದ ಕೊಂಬೆಯೊಂದಕ್ಕೆ ಸಿಕ್ಕಿಬಿದ್ದು ಆ ಸತ್ತ ಕರುವಿನ ಯಾನವು ಮುಗಿದೀತು.

ನಿಧಾನವಾಗಿ ಗೋಡೆ ಹಿಡಿದೆದ್ದ ಅಯ್ಯಂಗಾರ್ರು ಒಂದು ಕ್ಷಣ ಹಾಗೆ ನಿಂತು, ಜೀವಕ್ಕೆ ಸ್ವಲ್ಪ ಸರಿಯೆನಿಸಿದ ನಂತರ ಟೇಬಲ್ಲಿನ ಮೇಲೆ, ಕೆಳಗೆ ಚೆಲ್ಲಿದ ಕಾಫಿ ಒರೆಸಿ ಕ್ಲೀನ್‌ಮಾಡಿ, ಛೇರಿನಲ್ಲಿ ಕೂತು ಇನ್ಸುಲಿನ್ ಇಂಜಕ್ಷನ್ ತೆಗೊಂಡು, ಕಿಚನ್‌ಗೆ ಹೋಗಿ ಒಂದೆರಡು ಬ್ರೆಡ್‌ಟೋಸ್ಟ್ ಮಾಡಿ ತಿಂದು, ಬಿಸಿ ಬಿಸಿಯಾಗಿ ಕಾಫಿ ಮಾಡಿ ಕುಡಿದು, ಲಿವಿಂಗ್ ರೂಮಿನಲ್ಲಿದ್ದ ರಾಕಿಂಗ್ ಛೇರ್ ಮೇಲೆ ಹೋಗಿ ಕೂತರು. ಎದುರಿಗೆ ಬಾಲ್ಕನಿಯ ಗಾಜಿನ ಬಾಗಿಲಿಂದಾಚೆ ನೋಡಿದರೆ ’ಸ್ಟಾಚು ಆಫ್ ಲಿಬರ್ಟಿ’, ಅದರ ಹಿಂದಕ್ಕೆ ಸಾಗರ, ದೂರದಲ್ಲಿ ’ವೆರಜ್ಜಾನೊ ಬ್ರಿಡ್ಜು’. ಎಷ್ಟೋ ವರ್ಷಗಳಿಂದ ನೋಡಿ ನೋಡಿ ಕಣ್ಣುಗಳಿಗೂ ಅಭ್ಯಾಸವಾಗಿ ಹೋಗಿರುವ ಸುಂದರ ನೋಟ. ಕಣ್ಣು ಮುಚ್ಚಿ ಕೂತಿದ್ದ ಅಯ್ಯಂಗಾರ್ರು ಹೆಬ್ಬೆಟ್ಟು, ಮತ್ತದರ ಪಕ್ಕದ ಬೆರಳಲ್ಲಿ ಕಣ್ಣು ಮೂಗು ಸೇರುವ ತುದಿಯನ್ನು ಒತ್ತಿ ಹಿಡಿದು, ಮತ್ತೆ ಚಿಂತೆ ಮಾಡುತ್ತ ತಮ್ಮಷ್ಟಕ್ಕೆ ತಾವೆ ಸ್ವಗತ ಮಾತಾಡ ಹತ್ತಿದರು. ಮಾಡೋದಕ್ಕೆ ಕೆಲಸ ಬೇಕಾದಷ್ಟು ಇದೆ ಆದರೆ ಮನಸ್ಸೇ ಇಲ್ಲವೆ. ಆಸಕ್ತಿನೇ ಇಲ್ಲ. ಹುಡುಗರ ಉತ್ತರ ಪತ್ರಿಕೆಗಳನ್ನ ಗ್ರೇಡ್ ಮಾಡಬೇಕು, ಮುಂದಿನ ತಿಂಗಳು ಪಬ್ಲಿಷ್ ಆಗಬೇಕಾಗಿದ್ದ ರಿಸರ್ಚ್ ಪೇಪರ್ರಿನ ಕೆಲಸ ಹಾಗೆ ಉಳಿದಿದೆ, ವಿಮರ್ಶೆ ಬರಿತೀನಿ ಅಂತ ಒಪ್ಕೊಂಡಮೇಲೆ ಬಂದ ಬುಕ್ಕೆಲ್ಲಾ ಹಾಗೆ ಬಿದ್ದಿವೆ. ಆದರೆ ನನಗೆ ಮೊದಲಿನಾಗೆ ಏಕಾಗ್ರತೆ ಇಲ್ಲ, ಮನಸ್ಸು ಒಂದು ಕಡೆ ನಿಲ್ಲೋಲ್ಲ, ಟೈಮ್‌ನ್ನ ಸರಿಯಾಗಿ ಬಳಸೊಕ್ಕೆ ಆಗ್ತಾ ಇಲ್ಲವೋ ಅಥವಾ ಸಮಯ ನನ್ನ ಬೆರಳಿನ ಸಂದಿಗಳಲ್ಲಿ ನೀರಿನ ಹಾಗೆ ಹರಿದು ಹೋಗುತ್ತಿದೆಯೋ. ಮೂವತ್ತು ವರ್ಷದ ಈ ನನ್ನ ನ್ಯೂಯಾರ್ಕಿನ ಬದುಕು ಎಂದೂ ನಿಜ ಅನ್ನಿಸಲೇ ಇಲ್ಲ; ಯಾವಾಗಲೂ ಶುದ್ದ, ಸ್ವಚ್ಛ, ಉಜ್ವಲ ಕಳೆತುಂಬಿದ ಬದುಕು; ಬುದ್ಧಿವಂತ ಫೋಟೋಗ್ರಾಫರ್ರು ಫೋಟೋ ಒಂದನ್ನ ಸುಂದರವಾಗಿ ರೀಟಚ್ ಮಾಡಿದಾಗೆ. ಛೇ, ಏನು ಜೀವನವೋ… ಈ ಮಕ್ಕಳು ಬೇರೆ ಹೀಗೆ..

ಮಕ್ಕಳ ಹೆಸರನ್ನ ಗಾಳಿಯಲ್ಲಿ ಪಿಸುಗುಟ್ಟುತ್ತಾ ’ನನ್ನ ಮಾತು ಕೇಳಿ ಉದ್ಧಾರ ಆಗ್ತೀರಾ. ನಾನು ಹೇಳಿದ್ದನ್ನ ಅರ್ಥ ಮಾಡ್ಕೋಳಿ….. ಅರ್ಥ ಆಗದೆ ಇದ್ದರೇ ನನ್ನ ಕೇಳಿ, ಹಾಗೆ ಮುಖ ತಿರುಗಿಸಕೊಂಡು ಹೋಗಬೇಡಿ… ನಾನು ಜೀವನದಲ್ಲಿ ಮಾಡಿರೋ ಅರ್ಧದಷ್ಟು ಮಾಡಿದರೆ ಸಾಕು ನೀವು.. ನಿಮ್ಮ ವಯಸ್ಸಿನಲ್ಲಿ ನಾನು ನಿಮ್ಹಾಗೆ ಇರಲಿಲ್ಲ. ದೊಡ್ಡವನಾದಾಗ ಪ್ರಪಂಚದ ಆ ಕಡೆಗೆ ಹೋಗ್ತೀನಿ ಅಂತಿದ್ದೆ. ಕಷ್ಟಪಟ್ಟು ಓದಿದ್ದಕ್ಕೆ ಒಂದು ದಿನ ನನಗೂ ಕಾಲ ಬಂತು. ವೀಸಾ ಸಿಕ್ಕಿತ್ತು….’

ಸಾವಿರದ ಒಂಬೈನೂರ ಎಪ್ಪತ್ತೆರಡರ ಛಳಿಗಾಲದಲ್ಲಿ ನನಗಿನ್ನೂ ಇಪ್ಪತ್ತೊಂದು, ಮೈಸೂರಿಂದ ನ್ಯೂಯಾರ್ಕ್ ಸಿಟಿಗೆ ಬಂದೆ; ಈಗಿನ ಹಾಗೆ ಗಲ್ಲಿಗೆ ನಾಕು ಜನ ಅಮೆರಿಕಾಗೆ ಆಗ ಬರ್ತಾ ಇರಲಿಲ್ಲ. ನಾನು ಬಂದ ವರ್ಷ ಮೈಸೂರಿಂದ ಬರೇ ನಾಕು ಮಂದಿ ಅಷ್ಟೆ: ಗಂಗೋತ್ರಿಯಿಂದ ನಾನು,ಓ..ಇ ಯಿಂದ ಮೂರು ಜನ ಹುಡುಗರು. ಕೊಲಂಬಿಯ ಯುನಿವರ್ಸಿಟಿಯಲ್ಲಿ ಅಡ್ಮಿಶನ್ನು, ಸ್ಕಾಲರ್‌ಶಿಪ್ಪು ಸಿಕ್ಕಿತ್ತು. ಅಗ್ರಹಾರದ ಅಯ್ಯಂಗಾರಿ ಪಿಳ್ಳೆ ಪ್ರಪಂಚದ ಅತಿ ದೊಡ್ಡ ನಗರಕ್ಕೆ ಬಂದಿಳಿದಿದ್ದೆ. ಆ ದಿನಗಳು ಮೋಸ, ಕಪಟಗಳ ನೇರ ಪರಿಚಯವಿಲ್ಲದ ಹುಡುಗನಾಗಿದ್ದೆ. ಮನುಷ್ಯನ ವಿಕೃತ ಮನಸ್ಸಿನ ಅರಿವಿಲ್ಲದ ವಿದ್ಯಾರ್ಥಿಯಾಗಿದ್ದೆ. ಆ ದಿನಗಳೇ ಬೇರೆ. ನನ್ನ ಹೆಣ್ಣು ಮಕ್ಕಳು ಟಿವಿ ಶೋಗಳಲ್ಲಿ ನೋಡೋ ಇವತ್ತಿನ ನ್ಯೂಯಾರ್ಕಿಗೂ ಅಂದಿನ ನ್ಯೂಯಾರ್ಕಿಗೂ ಬಹಳ ವ್ಯತ್ಯಾಸವಿದೆ. ಇಂದು ಹದಿಹರೆಯದ ಮಕ್ಕಳು ನಗುತ್ತ, ಗೇಲಿಮಾಡುತ್ತ ಬೀದ್ಬೀದಿ ತಿರುಗೋದು ಸಾಮಾನ್ಯ ನೋಟ. ನಾನು ಬಂದಾಗ ಚಾಕು, ಚೂರಿಗಳ ಉಪದ್ರವ ವಿಪರೀತವಾಗಿತ್ತು. ಜನ ಹೊರಗ್ಹೋಗೊಕ್ಕೆ ಹಿಂದು ಮುಂದು ನೋಡುತ್ತಿದ್ದ ಕಾಲ ಆದು. ಕತ್ತಲಾದಮೇಲೆ ಬೀದಿಗಳು ನಿರ್ಜನವಾಗುತ್ತಿತ್ತು. ಮುಸ್ಸಂಜೆಯ ಹೊತ್ತಿಗೆ ಅಂಗಡಿಗಳ ಗಾಜಿನ ಬಾಗಿಲಿಗೆ ಸ್ಪೆಶಲ್ಲಾಗಿ ಮಾಡಿಸಿದ ಶೆಟ್ಟರ್‌ಗಳು ಕೆಳಗಿಳಿಯೋವು; ನಾವು ಡಾರ್ಮೇಟ್ರಿಯ(ಹಾಸ್ಟಲ್) ರೂಮುಗಳಲ್ಲಿ ಭದ್ರವಾಗಿ ಚಿಲಕ ಹಾಕ್ಕೋಂಡು ಬಾಲ ಮುದುರಿಕೊಂಡು ಇರಬೇಕಾಗಿತ್ತು. ಒಂದು ದಿನ ಆ ಚಳೀಲೂ ಕಿಟಕಿಯಿಂದ ತಲೆ ಹೊರಗಾಕಿ ’ರಿವರ್-ಸೈಡ್ ಡ್ರೈವ್’ ಆಕಡೆ ಈಕಡೆ ಧೈರ್ಯಮಾಡಿ ನೋಡಿದ್ದೆ. ಒಂದು ನರಪಿಳ್ಳೆನಾದರೂ ಕಾಣಿಸುತ್ತಾನ ಬೀದೀಲಿ ಅಂತಾ ಕಣ್ಣುಗಳು ಹುಡುಕಿದ್ದವು. ಕಟ್ಟಡಗಳ ಮುಖದಲ್ಲಿ ಕಾರಾಗೃಹದ ಕಳೆ ಎದ್ದು ಕಾಣ್ತಿತ್ತು. ಜೈಲಿನಂತ ವಾತಾವರಣ. ಪ್ರಪಂಚದ ಅತಿ ದೊಡ್ಡ ನಗರ ಇದು. ಆದರೆ ಅದರ ಹನ್ನೆರೆಡೋ ಹದಿನೈದೋ ದಶಲಕ್ಷ ಜನ ನಾಕು ಗೋಡೆಗಳ ಒಳಗೆ ಖೈದಿಗಳಾಗಿದ್ದಾರೆ ಅನಿಸಿತ್ತು. ’ಹುಚ್ಚು ಹಿಡಿಯುತ್ತೆ ಇಲ್ಲ ಯಾವನೋ ಹುಚ್ಚ ಕಾರಣ ಇಲ್ಲದೆ ಚಾಕುನೋ, ಚೂರಿನೋ ಹಾಕಿ ಬೀದೀಲೇ ಕೊಲ್ತಾನೆ ಅನಿಸಿತ್ತು. ಯಾವ ಬುಲೆಟ್ಟಿನಲ್ಲಿ ಯಾರ ಹೆಸರು ಬರೆದಿದೆಯೋ ಯಾರಿಗ್ಗೊತ್ತು? ಯಾಕಾದರೂ ಈ ತರಹ ಬದುಕಬೇಕು, ಯಾರು ಬದುಕ್ತಾರೆ ಹೀಗೆ, ಯಾಕ್ಬೇಕು’ ಎಂದೆಲ್ಲ ಅನಿಸಿತ್ತು. ಆದರೆ…

ದುಡ್ಡು, ದುಡ್ಡಿನ ಅವಶ್ಯಕತೆಯಿತ್ತು ನನಗೆ. ಟ್ಯೂಶನ್ ಫೀ, ಬುಕ್ಕು, ರೂಮಿನ ಬಾಡಿಗೆ ಎಲ್ಲವನ್ನೂ ಯೂನಿವರ್ಸಿಟಿಯವರೆ ಕೊಟ್ಟರೂ, ಮೂರೊತ್ತಿನ ಊಟಕ್ಕೆ ಬೇಕಾದಷ್ಟು ಹಣ ನನ್ನ ಬಳಿಯಲ್ಲಿಯಿರಲಿಲ್ಲ. ದುಡ್ಡಿಗಾಗಿ ದುಡಿಯಬೇಕಿತ್ತು – ಬೇರೆ ವಿಧಿಯಿರಲಿಲ್ಲ. ಈಗಲೂ ನನಗೆ ವಿಚಿತ್ರವೆನ್ನಿಸೋದು ನಾನು ಮೈಸೂರಿನಲ್ಲಿ ಇದ್ದಾಗ ಎಂದೂ ದುಡ್ಡಿನ ಬಗ್ಗೆ ಚಿಂತೆಯಾಗಲಿ, ಯೋಚನೆಯಾಗಲಿ ಮಾಡದೆ ಇದ್ದಿದ್ದು. ಈ ದೇಶಕ್ಕೆ ಬಂದಾಗಿನಿಂದ ಪ್ರತಿದಿನ ನನಗೆ ಬೇಕೋ, ಬೇಡವೋ ಆದರ ಯೋಚನೆಯಂತೂ ಸದಾ ನನ್ನ ಬೆನ್ನ ಹತ್ತಿತ್ತು. ಆ ಮೊದಲನೆ ಛಳಿಗಾಲದಲ್ಲಿ ನನಗೆ ನೆನಪಿರುವಾಗೆ ಎಡೆಬಿಡದ ಮಳೆ. ಒಂದು ಛತ್ರಿ ಕೊಂಡುಕೊಳ್ಳೋಕ್ಕೆ ಆಗಿರಲಿಲ್ಲ ನನ್ನಿಂದ. ಇದ್ದ ಒಂದೆ ಒಂದು ಸೂಟನ್ನ ಪ್ರತಿದಿನ ಕ್ಲಾಸಿಗೆ ಹಾಕ್ಕೋಂಡು ಹೋಗ್ತಿದ್ದೆ. ಬೇರೆ ಹುಡುಗರು ನನ್ನನ್ನೇ ದುರುಗುಟ್ಟ್ಕೊಂಡು ನೋಡೋವರು. ನನಗೆ ಏನು ಅನಿಸುತ್ತಿರಲಿಲ್ಲ. ಆದರೆ ಕ್ಲಾಸಿನಲ್ಲಿ ಕೂತು ಹೊರಗೆ ಸ್ಟೈಲಾಗಿ ಜೀನ್ಸ್ ಪ್ಯಾಂಟು, ಬಿರುಸಾದ ಶರ್ಟು, ಮೇಲೋಂದು ಲೆದರ್ ಜಾಕೆಟ್ಟು ಹಾಕ್ಕೊಂಡು ಓಡಾಡೋ ಅಮೆರಿಕನ್ ಹುಡುಗರನ್ನ ನೋಡಿದಾಗಲೆಲ್ಲಾ ನನಗೂ ಆಸೆಯಾಗೋದು. ಆದರೆ ಕಾಸಿರಲಿಲ್ಲ. ಆ ದಿನಗಳು ಎಷ್ಟೋ ಬಾರಿ ಮೈಸೂರಿಗೆ ವಾಪಸ್ಸು ಹೊರಟ್ಹೋಗಬೇಕೆಂದು ಅನಿಸಿದ್ದು ಉಂಟು. ಆದರೆ ಆದಕ್ಕೂ ದುಡ್ಡಿನ ಅವಶ್ಯಕತೆಯಿತ್ತಲ್ಲ!.

ಉತ್ತರ ಅದಕ್ಕೂ ಹತ್ತಿರದಲ್ಲಿತ್ತು. ಇಂಟರ್‌ನ್ಯಾಶನಲ್ ಹೌಸ್ ಬುಲೆಟಿನ್ ಬೋರ್ಡಿನ ಕಾರ್ಡೊಂದರಲ್ಲಿ ಯಾರೋ ಗೀಚಿದ್ದರು – ’ಮೇಕ್ ಮನಿ ನವ್ ವಿಥ್‌ಔಟ್ ವೀಸ’; ಕಾಲ್ ಸಿಂಗ್. ಕೆಳಗಡೆ ಫೋನ್ ನಂಬರ್ ಇತ್ತು.

ಆರ್ ಯು ದೇಸಿ? ಯು ಆರ್ ಎ ಸ್ಟುಡೇಂಟ್? ಕಮ್ ಟು ಕೊಲಂಬಸ್ ಸರ್ಕಲ್ ಅಂಡ್ ಆಸ್ಕ್ ಫಾರ್ ’ನಿರ್ವಾಣ’ ನಿಯರ್ ದ ಪಾರ್ಕ್. ಫೋನ್ ಕುಕ್ಕಿದ್ದ.

ಸೆಂಟ್ರಲ್‌ಪಾರ್ಕಿನ ಎದುರಲ್ಲಿದ್ದ ’ನಿರ್ವಾಣ’ ನ್ಯೂಯಾರ್ಕಿನಲ್ಲಿ ಒಂದು ಪಾಪ್ಯುಲರ್ ಇಂಡಿಯನ್ ರೆಸ್ಟೊರಾಂಟೆಂದು ಅಂದೆ ಗೊತ್ತಾಗಿದ್ದು. ಇಪ್ಪತ್ತನೆ ಫ್ಲೋರಿನಲ್ಲಿದ್ದ ಆ ಹೋಟಲಿನಿಂದ ಪಾರ್ಕ್ ಸುಂದರವಾಗಿ ಕಾಣುತಿತ್ತು. ಕೈಯಲ್ಲಿ ತಲೆ ಕೂದಲ ಬಾಚಿಕೊಳ್ಳುತ್ತಾ ಹೊರಗೆ ಬಾಗಿಲ ಬಳಿಯಲ್ಲೇ ನಿಂತಿದ್ದೆ. ಬಹಳ ಆಶ್ಚರ್ಯವಾಗಿತ್ತು ನನಗೆ. ದೇಸಿಗಳು ಒಬ್ಬರು ಇರಲಿಲ್ಲ, ಬರಿ ಅಮೆರಿಕನ್ಸ್, ಬಿಳಿಯರು ಮತ್ತೆ ನೀಗ್ರೋಗಳು, ಅಲ್ಲಿ ಇಲ್ಲಿ ಒಂದಿಬ್ಬರು ಚೈನೀಸ್ ಮತ್ತೆ ಲ್ಯಾಟಿನೋಗಳು. ದೊಡ್ಡ ಅಮೇರಿಕನ್ ತಟ್ಟೆಗಳಲ್ಲಿ ಫೋರ್ಕು, ನೈಫು ಹಿಡಿದು ತಿನ್ನುತ್ತಾ ಆಗಾಗ ಪಕ್ಕದಲ್ಲಿದ್ದ ಕೋಕೋ ಇಲ್ಲ ಕಾಕ್‌ಟೈಲನ್ನೋ ಹೀರುತ್ತಿದ್ದವರ ನೋಡುತ್ತಾ ನಿಂತಿದ್ದೆ. ರೆಜಿಸ್ಟರ್ನಲ್ಲಿ ನಿಂತಿದ್ದ ಹೆಂಗಸು ನನ್ನ ನೋಡಿ ಓಳಗೋಗಿ ಬಂದಳು. ಸೂಟೂ, ಬೂಟೂ ಧರಿಸಿದ ಒಬ್ಬ ಡೊಳ್ಳೊಟ್ಟೆಯ ಪಂಜಾಬಿ ದಾಪು ಕಾಲುಗಳ ಹಾಕುತ್ತ ಬಂದ. ಅವನ ಸೂಟಿಂದ ಎಲ್ಲ ತರಹದ ವಾಸನೆಗಳು ಬರುತಿತ್ತು. ಸ್ಪೀಕ್ ಇಂಗ್ಲೀಷ್? ನಾಯಿ ಬೊಗಳಿದಂಗೆ ದಪ್ಪ ಪಂಜಾಬಿ ಶಬ್ದೋಚ್ಚಾರದಲ್ಲಿ ಕೇಳಿದ್ದ.
ಯೆಸ್.
ಲೆಕ್ಕ ಮಾಡೊಕ್ಕೆ ಬರುತ್ತಾ ಅಬಾಕಸ್ ಇಲ್ಲದೇ?
ಆಫ್ ಕೋರ್ಸ್.
ಓಕೆ. ಗೋ ಸ್ಟಾಂಡ್ ಇನ್ ದ ರೆಜಿಸ್ಟರ್.
ಅಂಕಲ್ ವಾಟ್ ವಿಲ್ಲ್ ಐ ಬಿ ಡುಯಿಂಗ್ ? ನಾನು ಹೆದರುತ್ತ ಕೇಳಿದ್ದೆ.
ರಿಂಗಿಂಗ್ ದ ಬಿಲ್, ಔರ್ ಕ್ಯಾ ಕರೇಗಾ ತೂ? ಮದ್ರಾಸಿ….ಎಂದು ಕೂಗಿದ್ದ.
ನಮಸ್ತೆ ಭಾಭೀ ಅಂದೆ ರೆಜಿಸ್ಟರ್‌ನಲ್ಲಿ ನಿಂತಾಕೆಯ ನೋಡಿ.
ನಮಸ್ತೆ ಪುತ್ತರ್ರ್…ಮದ್ರಾಸಿ ಹೋ ಅಂತ ಪ್ರೀತಿಯಿಂದ ಕೇಳಿದ್ದರು.
ಹಿಂದಿ ಬರದ ನಾನು ಮೈಸೂರ್, ಮೈಸೂರ್ ಅಂದಿದ್ದೆ!

ಸಂಜೆ ಐದರಿಂದ ರಾತ್ರಿ ಹನ್ನೋಂದರವರಗು ವಾರಕ್ಕೆ ಏಳು ದಿನ ರೆಜಸ್ಟರ್ನಲ್ಲಿ ನಿಂತು, ವೈಟರ್‌ಗಳು ಬಿಲ್ಲುಗಳನ್ನು ತಂದಾಗ ಅದನ್ನ ರಿಂಗ್ ಮಾಡೋ ಕೆಲಸ. ಕ್ರೆಡಿಟ್ ಕಾರ್ಡ್ಗಳನ್ನ ಚಾರ್ಜ್ ಮಾಡೊದು, ಸರ್ವಿಸ್ ಟ್ಯಾಕ್ಸ್ ಸರಿಯಾಗಿ ಸೇರಿಸೋದು, ರೆಜಸ್ಟರ್ನಲ್ಲಿ ಚಿಲ್ಲರೆ ಸರಿಯಾಗಿ ಜೋಡಿಸಿ ಇಟ್ಟುಕೊಳ್ಳೋದು, ಇದೆಲ್ಲವನ್ನು ಭಾಭೀ ಬೇಗನೆ ತೋರಿಸಿಕೊಟ್ಟಿದ್ದರು. ಒಂದು ವಾರ ನಾನು ಉತ್ಸಾಹದಿಂದಲೇ ಕೆಲಸ ಮಾಡಿದ್ದೆ, ಆದರೆ ಸಿಂಗ್ – ದುರ್ನಾತದ ಆ ಪಂಜಾಬಿನ ನೋಡಿದರೆ ಮೈ ಉರಿಯೋದು. ಮಾತು ಮಾತಿಗೂ ಎಲ್ಲರನ್ನು ಪಂಜಾಬಿಯಲ್ಲಿ ಸಿಡಕೋದು, ಬೈಯೋದು; ನನ್ನ ಹೆಸರಿಡಿದು ಕರೆದಿದ್ದೇ ಇಲ್ಲ, ಮದ್ರಾಸಿ ಆಗಿದ್ದೆ ನಾನು. ಮೊದ ಮೊದಲು ಅವನದೇ ಈ ಹೋಟೆಲ್ಲು ಎಂದು ತಿಳಿದಿದ್ದ ನನಗೆ ಮೊದಲನೇ ವಾರದ ಕೊನೆಯಲ್ಲಿ ಗೊತ್ತಾಗಿತ್ತು ಅವನು ನನ್ಹಾಗೆ ಕೆಲಸದಾಳು ಅಂತ. ಇಂಗ್ಲಿಷ್ ಮಾತನಾಡೊಕ್ಕೆ ಬರದ ಪಂಜಾಬಿಗಳಿಗೆ ಮ್ಯಾನೇಜರ್ ಆಗಿದ್ದ. ಆ ವಿಷಯ ತಿಳಿದು ನನಗೆ ಯಾಕೋ ಸಂತೋಷವಾಗಿತ್ತು. ವಾರದ ಕೊನೆಯಲ್ಲಿ ಎಲ್ಲರಿಗು ಕೊಟ್ಟಾಗ ನನಗೆ ಸಂಬಳ ಕೊಡಲಿಲ್ಲ. ಬಹಳ ದುಃಖವಾಗಿತ್ತು. ಇನ್ನೊಂದು ವಾರ ಮಾಡು, ಕೆಲಸ ನೋಡಿ ಒಟ್ಟಿಗೆ ಕೊಡ್ತೀನಿ ಅಂದಿದ್ದ ಸಿಂಗ್!

ರೂಮಿಗೆ ಬಂದು ಅಳೋದೊಂದು ಬಾಕಿ. ಸ್ನಾನ ಮಾಡ್ತಾ ಶವರ್‌ನಲ್ಲಿ ಭೀಮ್ ಹಾಡಿರೋ ’ಕರುಣಿಸೋ ರಂಗ ಕರುಣಿಸೋ’ ಬಹಳ ಎಮೋಶನ್ನಲ್ಲಾಗಿ ಹೇಳುತ್ತ ನಾಕು ಹನಿ ನಿಜವಾಗಲೂ ಕಣ್ಣಿಂದ ಬಂದಿತ್ತೋ, ಇಲ್ಲ ಮೇಲಿಂದ ಬಿದ್ದ ನೀರೋ ಸರಿಯಾಗಿ ನೆನಪಿಲ್ಲ. ನನ್ನ ರೂಮ್‌ಮೇಟ್ ’ಚನ್ ಲೂ’ ಖುಶಿ ಖುಷಿಯಾಗಿ ಬಂದಿದ್ದ – ಪೇಮೆಂಟ್ ಆಗಿತ್ತು. ನನ್ನ ಕಷ್ಟ ಎಲ್ಲಾ ತೋಡ್ಕೊಂಡೆ. ನನಗಿಂತ ಸೀನಿಯರ್ರು. ಇನ್ನೊಂದು ವಾರ ಚೆನ್ನಾಗಿ ಕೆಲಸ ಮಾಡು, ದುಡ್ಡು ತೆಗೊಂಡು ಕೆಲಸ ಬಿಟ್ಬಿಡು ಅಂದ. ನಾನು ಕೆಲಸ ಮಾಡೋ ರೆಸ್ಟೊರಾಂಟ್‌ನಲ್ಲಿ ಕೊಡಿಸ್ತೀನಿ ಅಂತ ಭರವಸೆ ಕೊಟ್ಟ.

ಇನ್ನೊಂದು ವಾರ ಸಿಂಗ್ ಹಾವಳಿ ತಡಕೊಂಡು ಕೆಲಸ ಮಾಡಿ, ಗಂಟೆಗೆ ಮೂರು ಡಾಲರ್ ಹಾಗೆ, ಇನ್ನೂರ ಐವತ್ತೆರಡು ಡಾಲರ್ ಎಣಿಸಿದಾಗ, ಬಹಳ ಸಂತೋಷವಾಗಿತ್ತು. ಮದ್ರಾಸಿ ’ಆಶ್ ಕರೋ’ ಎಂದು ನಗುತ್ತ ಕೊಟ್ಟಿದ್ದ ಸಿಂಗ್. ಈಗ ಅಂದಿನ ದುಡ್ಡು ನೋವಾಗುವಷ್ಟು ಕಡಿಮೆ, ಬಹಳ ಕಡಿಮೆ ಅನಿಸುತ್ತೆ. ಆದರೆ ಅಂದು ಆದೇ ನನ್ನ ಪಾಲಿಗೆ ಐಶ್ವರ್ಯವಾಗಿತ್ತು: ಒಂದು ವಿಂಟರ್ ಕೋಟಿಗೆ, ವುಲ್ಸ್‌ವರ್ಥ್‌ನಲ್ಲಿ ಒಂದು ಜೊತೆ ಬೂಟಿಗೆ ಬೇಕಾದಷ್ಟು. ಸಾಲ್ವೇಶನ್ ಆರ್ಮಿಲಿ ಐವತ್ತು ಸೆಂಟಿಗೊಂದು ಶರ್ಟಂತೆ ಆರು ಶರ್ಟ್ ತೆಗೊಂಡಿದ್ದೆ!. ಒಂದು ಲೀವೈಸ್ ಜೀನ್ಸ್ ತಗೋಳ್ಳಕ್ಕೆ ಮರೀಲಿಲ್ಲ. ಮಾರನೆ ದಿನ ಹೊಸ ಬಟ್ಟೆ ಹಾಕ್ಕೋಂಡು ಮೋಪಾಗಿ ಕಾಲೇಜಿಗೆ ಹೋದಾಗ ಯಾವ ನನ್ನ ಮಕ್ಕಳಿಗೂ ಕಡಿಮೆ ಇಲ್ಲಾ ಅನಿಸಿತ್ತು!.

’ಚೈನೀಸ್ ವೋಕ್’ ಮಿಡ್ಟೌನ್‌ನಲ್ಲೊಂದು ರೆಸ್ಟೊರಾಂಟು. ಬಿಜಿ ಕಾರ್ನರ್‌ನಲ್ಲಿದ್ದ ಆ ಹೋಟಲ್ಲಿನ ದೊಡ್ಡ ಕಪ್ಪು ಗಾಜಿನ ಕಿಟಕಿಗಳಲ್ಲಿ ಬೀದಿಯ ಬಿಂಬ ಕಾಣಿಸೋದು. ಚನ್ ನನ್ನ ಸೀದ ಒಳಗೆ ಕರಕೊಂಡ್ ಹೋಗಿ ’ಕ್ಯಾಂಟೊನೀಸ್’ ನಲ್ಲಿ ಏನೋ ಹೇಳಿದ್ದ. ಸಾಧಾರಣ ಎತ್ತರದ ಆ ಮನುಷ್ಯ ಧರಿಸಿದ್ದ ಬಿಳಿಯ ಜಾಕೆಟ್ ಮೇಲೆ ಯಾರೋ ವಾಂತಿ ಮಾಡಿದ್‌ಹಾಗಿತ್ತು. ದಪ್ಪವಾದ ಧ್ವನಿಯಲ್ಲಿ ಸ್ಪೀಕ್ ಇಂಗ್ಲೀಷ್ ಎಂದು ಕೇಳಿದ್ದ.
ಯೆಸ್.
ಲೆಕ್ಕ ಮಾಡೋಕ್ಕೆ ಬರುತ್ತಾ ಅಬಾಕಸ್ ಯೂಸ್ ಮಾಡದೆ ?
ಯಾಕೋ ತಿರುಗ ರೆಜಸ್ಟರ್ ಕೆಲಸಾನೆ ಸಿಗುತ್ತೇನೋ ಅನ್ನ್ಕೋಂಡು, ಆಫ್ ಕೋರ್ಸ್ ಅಂದೆ.
ಸೈಕಲ್ ಹೊಡೆಯೋಕ್ಕೆ ಬರುತ್ತಾ ?
ಮೈಸೂರು ಅಯ್ಯಂಗಾರಿಗೆ ಸೈಕಲ್ ಹೊಡೆಯೋಕ್ಕೆ ಬರುತ್ತಾ ಅಂತ ಕೇಳ್ತಾನಲ್ಲ. ಮೀನಿಗೆ ಈಜೋಕ್ಕೆ ಬರುತ್ತಾ ಅಂತ ಕೇಳ್ತಾರೇನೋ ಬೆಪ್ಪಮುಂಡೆದೆ, ತಕ್ಷಣ ನಗು ಬಂದಿದ್ದರೂ ತಡಕೊಂಡು, ಬರುತ್ತೆ ಅಂದೆ.
ಸೈಕಲ್ಲ್ ಬೇಸ್‌ಮೆಂಟ್‌ನಲ್ಲಿದೆ, ಮ್ಯಾಪ್ ಕೊಡ್ತೀನಿ ನಾಳೆಯಿಂದ ಶುರುಮಾಡು ಅಂದ.
ಏನನ್ನ ಅಂತಾ ಗೊತ್ತಾಗದೆ, ಅಂಕಲ್ ವಾಟ್ ವಿಲ್ ಐ ಬಿ ಡುಯಿಂಗ್? ಅಂದೆ
ಆಶ್ಚರ್ಯವಾಗಿ ನನ್ನ ಕಡೆ ನೋಡಿ ಮತ್ತೆ ಚನ್ ಕಡೆ ನೋಡಿ ಜೋರಾಗಿ ನಗುತ್ತ ಹೊರಟ್ಹೋದ. ಚನ್ ಎಲ್ಲ ವಿವರಿಸಿ ಮ್ಯಾಪ್ನಲ್ಲಿ ಸುತ್ತಾಮುತ್ತಾ ಇರೋ ಬೀದಿಗಳನೆಲ್ಲಾ ಸರಿಯಾಗಿ ನೋಡಿ ತಿಳಕೋ ಅಂತ ಒತ್ತಿ ಹೇಳಿದ್ದ. ಚೈನೀಸ್ ಫೂಡ್ ಡೆಲಿವರಿ ಬಾಯ್ ಆಗಿದ್ದೆ!

ಮೊದ ಮೊದಲು ಯಾವಾಗಲೂ ಹೆದರಿಕೆಯಾಗೋದು ನನಗೆ. ಮ್ಯಾಪ್ನ ಚೆನ್ನಾಗಿ ನೋಡಿ ಅಡ್ಡಬೀದಿಗಳ ಹೆಸರನ್ನೆಲ್ಲಾ ಉರು ಹೊಡೆದೆ. ಯಾವುದೇ ಕಾರಣಕ್ಕೂ ಎಲ್ಲೂ ನಿಲ್ಲಿಸ್ಲುಬಾರದು, ಯಾರನ್ನೂ ದಾರಿನೂ ಕೇಳಬಾರದು ಅಂತ ತೀರ್ಮಾನ ಮಾಡಿದ್ದೆ. ಸೈಕಲ್ಲನ್ನ ಲಾಕ್ ಮಾಡೋಕ್ಕಿದ್ದ ಭಾರವಾದ ಚೈನನ್ನ ನನ್ನ ಭುಜಕ್ಕೆ ಸುತ್ತಿಕೊಂಡೆ ಓಡಿಸುತ್ತಿದ್ದೆ. ಯಾವನಾದರು ಹಿಂದಿನಿಂದ ಕೈ ಹಾಕಿದರೆ ಅದರಲ್ಲೇ ತಿರುಗಿಸಿ ಬಿಡೋಣಾಂತ. ಚನ್ ಹೇಳಿದ್ದ ಯಾರಾದರು ’ಮಗ್ಗ್’ ಮಾಡೋಕ್ಕೆ ಬಂದರೆ ಏನಾದರು ಕೂಗುತ್ತಾ, ಕೈಗಳನ್ನ ಬೀಸುತ್ತಾ, ಕೋಪ ಬಂದವನಂತೆ ಮುಖ ಮಾಡಿ ಜೋರಾಗಿ ಕಿರುಚು ಸಾಮಾನ್ಯವಾಗಿ ಹೋರಟ್ಹೋಗ್ತಾರೆ ಅಂತ. ಇನ್ನೊಬ್ಬ ಡೆಲಿವರಿ ಬಾಯ್, ಬಿಳಿ ಕರ್ಚೀಫೊಂದನ್ನ ತಲೆಗೆ ಸುತ್ತೋದನ್ನ ತೋರಿಸಿಕೊಟ್ಟ. ಟಫ್ಫಾಗಿ ಕಾಣಿಸುತ್ತೆ ಯಾರು ನಿನ್ನ ತಂಟೆಗೆ ಬರೋಲ್ಲ ಅಂದಿದ್ದ. ಆದರೆ ನನ್ನ ಬಂಡವಾಳ ನನಗೆ ಚೆನ್ನಾಗಿ ಗೊತ್ತಿತ್ತು. ನಮ್ಮ ಅಪ್ಪರಾಣೆ ನಾನು ಯಾರೊಂದಿಗೂ ಫೈಟ್ ಮಾಡೋಲ್ಲ, ನನಗಾಗೋದು ಇಲ್ಲಾಂತ. ಪ್ರತಿಯೊಂದು ಡೆಲಿವರಿಗೆ ಹೋದಾಗಲೂ ಭಯ, ಹೆದರಿಕೆ, ನಡುಕ; ಎಲ್ಲಿ ಯಾವಾಗ ಏನಾಗಿ ಬಿಡುತ್ತೋ ಅನ್ನೋ ದಿಗಿಲು. ವಾಪಸ್ಸು ಬರೋವಾಗ ಕತ್ತಲೇ ಆಗಿದ್ದರಂತೂ ಆ ಟ್ರಕ್ಕು, ಹಳದಿ ಟ್ಯಾಕ್ಸಿಗಳ ಮಧ್ಯೆ ಬರೋಷ್ಟ್ರಲ್ಲಿ ಸಾಕಾಗೋದು. ಒಂದೊಂದು ಸತಿ ಹಿಂದೆ ದೆವ್ವ, ಪಿಶಾಚಿಗಳು ಅಟ್ಟಿಸಿಕೊಂಡು ಬರ್ತಾಯಿವೆ ಅನಿಸೋದು. ಆ ಛಳಿಲೂ ಬೆವತು, ಬೆವತು ಬಿಳಿ ಶರ್ಟಲ್ಲಿ ವಾಸನೆ ಜೊತೆಗೆ ಕಾಲರ್‌ಗಳಲ್ಲಿ ಒಂದು ಮೊಣ ಕೊಳೆ ಎದ್ದು ಕಾಣೋದು. ಬಟ್ಟೆಗಳನ್ನ ದಿನಾ ಒಗಿದಿದ್ದರೂ ವಾರಕ್ಕೆ ಎರಡು ಬಾರಿಯಾದರೂ ಒಗಿಬೇಕಾಗಿ ಬಂದಿದ್ದಷ್ಟೆ ನಿಜ.

ಒಂದು ತಿಂಗಳು ಹೀಗೆ ವಾರಕ್ಕೆ ಐದು ದಿನ ಕೆಲಸ ಮಾಡಿದ ಮೇಲೆ, ಸ್ಥಿತಿ ಸ್ವಲ್ಪ ಸುಧಾರಿಸಿ ಮನಸ್ಸಿಗೆ ನಿರಾಳವಾಗಿ, ಸೈಕಲ್‌ನಲ್ಲಿ ಹೋಗಬೇಕಾದರೆ ಸುತ್ತಾಮುತ್ತಾ ನೋಡ್ತಾ, ಅಕ್ಕಾಪಕ್ಕಾ ಬರೆದಿರೋ ಸೈನ್‌ಗಳನ್ನ ಓದೋದಕ್ಕೆ ಶುರು ಮಾಡಿದ್ದೆ. ’ಮಿಡ್‌ಟೌನ್ ಡೆಲಿ’, ’ಕೊಲಂಬಸ್ ಸರ್ಕಲ್’, ’ಸೆಂಟ್ರಲ್‌ಪಾರ್ಕ್ ವೆಸ್ಟ್’. ನ್ಯೂಯಾರ್ಕಿನ ಥಿಯೇಟರ್ ಡಿಸ್ಟ್ರಿಕ್ಟ್ ಗಲ್ಲಿಗಳು, ಸ್ಟೇಜ್ ಡೋರ್ ಇರೋ ಚಿಕ್ಕ ಬೀದಿಗಳು ಚಿರಪರಿಚಯವಾದವು. ಅಲ್ಲಿ ಕಪ್ಪು ಸೂಟು ಹಾಕ್ಕೋಂಡು, ನನ್ನ ಕೈಯ್ಯಿಂದ ಬ್ರೌನ್‌ಬ್ಯಾಗ್ ಕಿತ್ತ್ಕೊಂಡು, ಹದಿನೈದರ ಬಿಲ್ಲಿಗೆ ಹತ್ತರ ಎರಡು ನೋಟನ್ನೋ ಇಲ್ಲ ಹದಿಮೂರರ ಬಿಲ್ಲಿಗೆ ಹತ್ತರ ನೋಟೊಂದನ್ನೋ ತುರುಕಿ ಒಂದು ಕ್ಷಣದಲ್ಲಿ ಮಿಂಚಿನಂತೆ ಮಾಯವಾಗಿ ಹೋಗೋವರು. ಆ ಛಳಿಗೆ ಯಾವ ರೀತಿ ಬಟ್ಟೆ ಹಾಕೋಬೇಕು ಅಂತ ತಲೆ ಕೊರಿಯೋ ಮುದುಕೀರು, ಮುಖ ಸಿಂಡರಿಸಿಕೊಂಡು ಒಳಗೆ ಬಿಡೋ ವಾಚ್ಮನ್‌ಗಳು, ಒಂಟಿ ಜೀವನ ರೋಸಿದ್ದಕ್ಕೆ ಸಿಡುಕೋ ಹಣ್ಣಾದ ಮುದುಕರು ಹೀಗೆ ಎಲ್ಲಾ ಮಾದರಿಗಳನ್ನು ನೋಡಿದೆ. ಕೆಲಸ ಬಹಳ ಇಷ್ಟವಾಗಿತ್ತು. ಸಿಗುತ್ತಿದ್ದ ದುಡ್ಡು ಕಡಿಮೆ, ಆದರೆ ಆಗ ಬಹಳ ಜಾಸ್ತಿ ಎಂದನಿಸಿತ್ತು. ಮೂರೊತ್ತಿನ ಊಟದ ತೊಂದರೆ ಕಳೆದಿತ್ತು! ಸೈಕಲ್ಲಿನಲ್ಲಿ ನ್ಯೂಯಾರ್ಕಿನ ಆ ಗಲ್ಲಿಗಳಲ್ಲಿ ಸುತ್ತುವಾಗಲೆಲ್ಲ ಸಂತೋಷವಾಗಿರುತ್ತಿದ್ದೆ. ಚಿಂತೆಗಳಿರಲಿಲ್ಲ ಬದುಕು ಸರಳವಾಗಿತ್ತು, ಸುಂದರವಾಗಿತ್ತು. ಸೈಕಲ್ಲ್ ತುಳಿದ ದಣಿವಿಗೆ ರಾತ್ರಿ ಸೊಗಸಾಗಿ ನಿದ್ದೆ ಮಾಡ್ತಿದ್ದೆ. ಅದೊಂದು ಅದ್ಭುತ ಸಾಹಸವಾಗಿತ್ತು: ನ್ಯೂಯಾರ್ಕಿನ ಬೀದಿ ಬೀದಿಗಳಲ್ಲಿ ಒಬ್ಬನೆ ನಿರರ್ಗಳವಾಗಿ ಓಡಾಡ್ತಾ ಇದ್ದೆ, ಅವರಂತೆಯೆ ಮಾತಾಡ್ತ ಇದ್ದೆ, ಕೈಯಲ್ಲಿ ಕಾಸು ಓಡಾಡೋದು. ಒಂದು ಮಾತಲ್ಲಿ ಹೇಳಬೇಕಂದರೆ ಅಲ್ಲಿಯವನೆ ಆಗಿಬಿಟ್ಟಿದ್ದೆ. ತಿಚಿ ಚಿ ಓತಿ ಙಡಿಞಡಿ!.

ಅಂದು ನಾನು ಬದುಕಿದ್ದೆ, ಸಂತೋಷವಾಗಿದ್ದೆ. ರೀಟಚ್ ಮಾಡಿದ ಪೋಸ್ಟ್‌ಕಾರ್ಡ್ ಆಗಿರಲಿಲ್ಲ ನನ್ನ ಜೀವನ.

ಆಮೇಲೆ……ಕಾಲೇಜಿನಲ್ಲೆ ಕೆಲಸ ಸಿಕ್ಕಿತ್ತು, ಒಂದುವರೆ ವರ್ಷಕ್ಕೆ ಸ್ನಾತಕೋತ್ತರ ಪದವಿ. ಅದಾದ ಮೂರು ವರ್ಷಕ್ಕೆ ಡಾಕ್ಟರೇಟ್. ಇಂದಿಗೂ ನನ್ನ ಪಿ‌ಎಚ್‌ಡಿ ಥೀಸಿಸ್ ರೆಫರ್ ಮಾಡದೆ ಗ್ರಾಫ಼್ ಥಿಯೆರಿಯಲ್ಲಿ ಯಾರು ವರಿಜಿನಲ್ ಕೆಲಸ ಮಾಡೋಕ್ಕೆ ಆಗೋದೆ ಇಲ್ಲ….ಆಮೇಲೆ ಉದ್ಯೋಗ, ಮದುವೆ, ಮಕ್ಕಳು, ಸಾವು, ನೋವು, ನೋವು……….ಎನ್ನುತ್ತಾ ರಾಕಿಂಗ್ ಛೇರ್ ಮೇಲೆ ಹಾಗೆಯೇ ಮಲಗಿದ್ದ ಅಯ್ಯಂಗಾರ್ರ್‌ಗೆ ಗಾಢವಾಗಿ ನಿದ್ದೆ ಹತ್ತಿತ್ತು. ಗೊರಕೆಯ ಸದ್ದು ಆ ಮನೆಯ ನಿಶ್ಶಬ್ದವನ್ನ ಭೇದಿಸಿತ್ತು.

ಅಯ್ಯಂಗಾರ್ರ್‌ಗೆ ಎಚ್ಚರವಾದಾಗ ಕತ್ತಲೆಯಾಗಿತ್ತು. ಕತ್ತಲಿಗೆ ಕಣ್ಣುಗಳು ಒಗ್ಗಿದ ಮೇಲೆ ಎದ್ದು, ದೀಪ ಬೆಳಗಿ, ಬಿಸಿ ಬಿಸಿಯಾಗಿ ಸ್ನಾನ ಮಾಡಿ ಬಂದಾಗ ಹಿತವೆನಿಸಿತ್ತು. ಮಕ್ಕಳು ಬರೋ ಹೊತ್ತಾಯ್ತು ಏನಾದರು ಅಡಿಗೆ ಮಾಡಬೇಕೆಂದು ಅನಿಸಿ ಅಡಿಗೆ ಮನೆಗೆ ಬಂದವರು, ಬೇಡವೆಂದು ಮತ್ತೆ ಮಹಡಿ ಹತ್ತಿ, ಗಣಕಯಂತ್ರದ ಮುಂದೆ ಕೂತು, ಅಂತರಜಾಲದಲ್ಲಿ ಯಾವುದೋ ವಿಳಾಸ, ಫೋನ್ ನಂಬರ್ರುಗಳನ್ನ ಹುಡುಕಿ ಪ್ರಿಂಟ್ ಮಾಡಿ ಕೆಳಗೆ ಬಂದು ಮಕ್ಕಳಿಗೆ, ’ನಾನು ಒಂದೆರೆಡು ಗಂಟೆಯಲ್ಲಿ ಬರ್ತೀನಿ ನೀವೆ ಏನಾದರೂ ಮಾಡ್ಕೊಂಡು ತಿನ್ನಿ ಅಂತ ನೋಟ್ ಬರೆದು’, ಹೊರಗೆ ಹೋದರು.

ಮನೆಗೆ ಬಂದಾಗ ಮಕ್ಕಳಿಬ್ಬರೂ ಅವರವರ ರೂಮ್ ಸೇರಿದ್ದರು. ಬಹಳ ಸಂತೋಷವಾಗಿದ್ದ ಅಯ್ಯಂಗಾರ್ರು ಕೆಳಗೆ ನಿಂತೆ ಪ್ರೀತಿಯಿಂದ ಕೂಗಿದರು: “ಜಾನು, ಜಮುನ ಇಬ್ಬರು ಕೆಳಗಡೆ ಬನ್ನಿ “have a surprise!”

ಮೆಟ್ಟಲಿಳಿದು ಬಂದ ಜಾನು, ಬಿಟ್ಟ ಬಾಯ್ಮೇಲೆ ಕೈಯಿಟ್ಟು ’ಎಷ್ಟು ಮುದ್ದಾಗಿದೆ ಮರಿ’ ಅನ್ನುತ್ತ ದೊಡ್ಡ ಕಣ್ಣುಗಳನ್ನು ಬಿಡುತ್ತಾ ಕೆಳಗೆ ಬಂದಳು. ಜಮುನ “It is so cute, thats lovely let me hold it, hold it” ಎನ್ನುತ್ತ ಬಂದು, ತಂದೆ ಕಂಕುಳಲ್ಲಿ ಹಿಡಿದಿದ್ದ ಪುಟ್ಟ ನಾಯಿ ಮರಿಯನ್ನು ಎತ್ತಿಕೊಳ್ಳುತ್ತ, “ದಿಸ್ ಇಸ್ ಗ್ರೇಟ್ ಡ್ಯಾಡ್” ಅಂದಳು.

ತಂದೆ, ಮಕ್ಕಳಿಬ್ಬರು ಖುಷಿಯಾಗಿ ಸೋಫಾ ಮೇಲೆ ಕೂತಾಗ, ಅಯ್ಯಂಗಾರ್ರು ಏನಾದರು ಹೆಸರಿಡಿ ನೋಡೋಣ ಅಂದರು. ಜಮುನ ಓಕೆ ಎನ್ನುತ್ತಾ “ಬಿಂಗೊ, ಟಾಪಿ, ಸ್ನೊಯಿ…..”

“ನೀನು ಯಾವುದಾದರು ಹೇಳು ಜಾಹ್ನವಿ”, ಇಬ್ಬರ ಭುಜದಮೇಲೂ ಕೈಯಿಟ್ಟು ತಬ್ಬಿ ಹಿಡಿದಿದ್ದ ಅಯ್ಯಂಗಾರ್ರು ಮತ್ತೆ ಹೇಳಿದರು.

“ನನಗೆ ಈಗ ಯಾವದು ಹೊಳೀತಿಲ್ಲ, ಯೋಚಿಸಿ ನಾಳೆ ಬೇಕಾದರೆ ಹೇಳ್ತಿನಿ….ನೀನೆ ಯಾವದಾದರು ಹೇಳು” ಅಂದಳು ಅಪ್ಪನಿಗೆ. ಯೆಸ್, ಯೆಸ್ ಅಂದಿತ್ತು ಜಮುನ.

ಅಯ್ಯಂಗಾರ್ರು ಭಾವುಕರಾಗಿ ನಿಮ್ಮ ತಾಯಿಗೆ ನಾಯಿ ಅಂದರೆ ಬಹಳ ಇಷ್ಟ. ತೆಗೊಂಡರೆ ’ಚಿಂತು’ ಅಂತಾನೆ ಕರೆಯೋದು ಅನ್ನೋವಳು. ನಿಮ್ಮಿಬ್ಬರಿಗೂ ಚಿಂತು ಇಷ್ಟವಾದರೆ ಹಾಗೆ ಕರೀಬಹುದು.

ಒಂದು ನಿಮಿಷ ಸುಮ್ಮನಿದ್ದು ಇಬ್ಬರೂ ಒಟ್ಟಿಗೆ “Yes Chintu it is” ಎಂದು ಕೂಗಿದವು.
*****
೮-೧೨-೨೦೦೫

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.