ಫೈಲಿಂಗ್ ಕ್ಲರ್ಕ್ ಶೃಂಗಾರಪುರೆ

ಸುರೇಶ ಮಹಾದೇವ ಶೃಂಗಾರಪುರೆ ಖಂಡೋಬಾನ ಪರಮ ಭಕ್ತ. ಸಂಕಟದ ಗಳಿಗೆ ಬಂದಾಗಲೆಲ್ಲಾ ಆತ ಮನೆಯಲ್ಲಿರಲಿ, ಆಫೀಸಿನಲ್ಲಿರಲಿ ಅಲ್ಲಾ ರಸ್ತೆಯಲ್ಲಿರಲಿ ನಡೆಯುತ್ತಿರಲಿ ಖಂಡೋಬಾನ ಧ್ಯಾನಕ್ಕೆ ತೊಡಗುತ್ತಾನೆ. ಮನಸ್ಸಿನಲ್ಲಿಯೆ ಆತ ಖಂಡೋಬಾನ ಮೂರ್ತಿಗೆ ವಿವಿಧ ಅಲಂಕಾರ ಮಾಡುತ್ತಾನೆ. ಬಗೆಬಗೆಯಲ್ಲಿ ಸ್ತುತಿಸುತ್ತಾನೆ. ದೇವಾ ನನ್ನನ್ನು ಈ ಸಂಕಟದಿಂದ ಪಾರು ಮಾಡು ಎಂದು ಮೊರೆಯಿಡುತ್ತಾನೆ. ಮತ್ತೆ “ಜಯದೇವಾ ಜಯದೇವಾ ಜಯ ಮಂಗಲ ಮೂರ್ತಿ” ಎಂದು ಆರತಿ ಎತ್ತುತ್ತಾನೆ ಈಗಲಾದರೂ ಅಷ್ಟೇ ಚರ್ಚ್ಗೇಟ್‌ನಿಂದ ಹಾರ್ನಿಮನ್ ಸರ್ಕಲ್‌ನಲ್ಲಿರುವ ತನ್ನ ಆಫೀಸಿನತ್ತ ದಾಪುಗಾಲು ಹಾಕುತ್ತಿರುವಾಗ ಶೃಂಗಾರಪುರೆ ಖಂಡೋಬಾನ ಧ್ಯಾನದಲ್ಲಿ ತೊಡಗಿದ್ದಾನೆ.

ಇವತ್ತು ಸೋಮವಾರ. ಸೋಮವಾರ ಒಂದು ಸರಿಯಾಗಿ ಸಾಗಿ ಬಿಟ್ಟರೆ ಮತ್ತೆ ಇಡೀ ವಾರ ತೊಂದರೆಯೇನೂ ಇಲ್ಲ. ಟ್ರೈನು ಚರ್ಚ್‌ಗೇಟ್ ತಲುಪಿದಾಗಲೇಹತ್ತು ದಾಟಿತ್ತು. ೧೦.೧೫ರ ಒಳಗೆ ಆಫೀಸು ತಲುಪದಿದ್ದರೆ ಹಾಜರಿ ಪುಸ್ತಕದಲ್ಲಿ ರೆಡ್ ಮಾರ್ಕ್ ಬೀಳುತ್ತದೆ. ಮೂರು ರೆಡ್ ಮಾರ್ಕ್ ಎಂದರೆ ಒಂದು ದಿನದ ರಜೆಯೆಂದು ಲೆಕ್ಕ. ಈ ತಿಂಗಳಲ್ಲಿ ಈಗಾಗಲೇ ಶೃಂಗಾರಪುರೆಯ ಹಾಜರಿಯಲ್ಲಿ ಎರಡು ರೆಡ್ ಮಾರ್ಕ್ ಬಿದ್ದಿದೆ. ತಿಂಗಳು ಮುಗಿಯಲು ಇನ್ನೂ ಹತ್ತು ದಿನಗಳಿವೆ. ಆದುದರಿಂದಲೆ ಇಂದು ಬೆಳಿಗ್ಗೆ ರಸ್ತೆಯಲ್ಲಿಯೆ ಶೃಂಗಾರಪುರೆ, ಖಂಡೋಬಾನ ಧ್ಯಾನದಲ್ಲಿ ತೊಡಗಿದ್ದಾನೆ.

ಅಂತೂ ಇಂತೂ ಸ್ವಲ್ಪ ಓಡಾಡುತ್ತಾ ಸ್ವಲ್ಪ ನಡೆಯುತ್ತಾ ಶೃಂಗಾರಪುರೆ ತನ್ನ ಆಫೀಸು ಕಟ್ಟಡ ತಲುಪಿದಾಗ ೧೦.೧೦. ಸಮಾಧಾನದ ನಿಟ್ಟುಸಿರು ಬಿಟ್ಟು ಆತ ಲಿಫ್ಟ್‌ನ ಬಳಿ ಬಂದಾಗ ಅಲ್ಲಿನ ದೃಶ್ಯ ನೋಡಿ ಬೆಚ್ಚಿಬಿದ್ದ. ಎರಡು ಲಿಫ್ಟ್‌ಗಳಲ್ಲಿ ಒಂದು ನಿನ್ನೆಯಿಂದ ಸರ್ವೀಸ್‌ನಲ್ಲಿದೆ. ಇನ್ನೊಂದರ ಮುಂದಿದ್ದ ಕ್ಯೂನಲ್ಲಿ ಕನಿಷ್ಠ ಪಕ್ಷ ಮೂವತ್ತು ಜನರಾದರೂ ಇದ್ದಾರೆ. ಐದು ಮಂದಿಯಂತೆ ಲಿಫ್ಟ್ ಆರು ಬಾರಿ ಮೇಲೆ ಹೋಗಿ ಬಂದ ಬಳಿಕ ತಾನೆ ತನ್ನ ಸರದಿ ಬರುತ್ತದೆ. ಆತ ಕ್ಯೂ ಬಿಟ್ಟು ಮೆಟ್ಟಿಲುಗಳತ್ತ ಓಡಿದ.

ಶೃಂಗಾರಪುರೆಯ ಓಟವನ್ನು ಕಂಡ ಆತನ ಆಫೀಸಿನ ಸ್ಟೆನೊ ಮಿಸ್. ಮೀರ್‌ಚಂದಾನಿ “ಶಿಂಗೂ ಮೈ ಡಿಯರ್ ಕಮ್ ಆನ್ ಯಾರ್” ಎಂದು ಜೋರಾಗಿ ಕರೆದಾಗ ಕ್ಯೂನಲ್ಲಿ ನಿಂತವರೆಲ್ಲಾ ಗೊಳ್ಳೆಂದು ನಕ್ಕರು. ಹಿಂದೆ ತಿರುಗಿ ನೋಡದ ಶೃಂಗಾರಪುರೆ “ತುಜಾ ಆಯಿಲಾ” ಎಂದು ಮನಸ್ಸಿನಲ್ಲಿಯೇ ಕೆಟ್ಟದಾಗಿ ಬೈಯುತ್ತಾ ಮೆಟ್ಟಿಲುಗಳನ್ನು ಹತ್ತ ತೊಡಗಿದ. ಸಂದರ್ಭ ಒದಗಿದಾಗಲೆಲ್ಲಾ ಆಫೀಸು ಎಂದಿಲ್ಲ ಹೊರಗೆ ಎಂದಿಲ್ಲ ಈ ಸಿಂಧಿ ಚೋಕ್ರಿ ತನ್ನನ್ನು ಲೇವಡಿ ಮಾಡುತ್ತಿದ್ದಾಳೆ. ಇಂತಹವರಿಂದಲೇ ಆಫಿಸಿನಲ್ಲಿ ಮಾತ್ರವಲ್ಲ ಇಡೀ ಕಟ್ಟಡದಲ್ಲಿ ತಾನು ನಗೆಪಾಟಲಿಗೆ ಈಡಾಗಿದ್ದೇನೆ ಎಂದು ಶೃಂಗಾರಪುರೆ ದುಃಖಿಸಿದ.

ನಾಲ್ಕು ಮಾಳಿಗೆ ಹತ್ತುವುದು ಪ್ರಯಾಸದ ಸಂಗತಿಯೇನಲ್ಲ. ದಾದರ್‌ನಲ್ಲಿನ ಚಾಳ್‌ನಲ್ಲಿ ಶೃಂಗಾರಪುರೆಯ ಖೋಲಿ ಇರುವುದು ಮೂರನೆಯ ಮಹಡಿಯಲ್ಲಿ. ದಿನನಿತ್ಯ ಆತ ಪ್ರಯಾಸವಿಲ್ಲದೆ ತನ್ನ ಕಟ್ಟಡವನ್ನು ಹತ್ತಿ ಇಳಿಯುತ್ತಾನೆ. ಆದರೆ ತನ್ನ ದುಂಡಗಿನ ಶರೀರವನ್ನು ಸಾವರಿಸಿಕೊಂಡು ಐದು ನಿಮಿಷಗಳಲ್ಲಿ ನಾಲ್ಕು ಮಾಳಿಗೆ ಹತ್ತುವುದು ಜೀವಕ್ಕೆ ಬರುತ್ತದೆ. ಅದೇನಿದ್ದರೂ ಇಂದು ಸೋಮವಾರ. ಅಲ್ಲದೆ, ಹಾಜರಿಯಲ್ಲಿ ಈಗಾಗಲೇ ಎರಡು ರೆಡ್ ಮಾರ್ಕ್ ಬಿದ್ದಿದೆ ಎನ್ನುವುದು ನೆನಪಿಗೆ ಬಂದೊಡನೆ ಶೃಂಗಾರಪುರೆ ತನ್ನ ನಡಿಗೆಯ ವೇಗವನ್ನು ಓಟಕ್ಕೆ ದಾಟಿಸಿದ.

ಇನ್ನೇನು ಈಶ್ವರ ಅಯ್ಯರ್ ಹಾಜರಿ ಪುಸ್ತಕವನ್ನು ಮುಚ್ಚಿ ಮೆನೇಜರ್ ಕ್ಯಾಬಿನ್‌ಗೆ ಒಯ್ಯಬೇಕೆಂದು ಸನ್ನಾಹ ನಡೆಸಿರುವಾಗಲೇ ಏದುಸಿರು ಬಿಡುತ್ತಾ ಬಂದ ಶೃಂಗಾರಪುರೆ ಆತನ ಕೈಯಿಂದ ಪುಸ್ತಕವನ್ನು ಕಸಿದು ಸಹಿಮಾಡಿ ಗೆದ್ದೆ ಎನ್ನುವಂತೆ ನಕ್ಕ. ಶೃಂಗಾರಪುರೆಗೆ ಇಂದು ರೆಡ್‌ಮಾರ್ಕ್ ಬಿದ್ದೇ ಸಿದ್ದ ಎನ್ನುವ ಖುಶಿಯಲ್ಲಿ ಮೈ ಮರೆತವನಂತೆ ಇದ್ದ ಅಯ್ಯರ್ ಕ್ಷಣಕಾಲ ಬೆಪ್ಪಾಗಿ ಕುಳಿತ. ಪೆಕರನಂತೆ ಇನ್ನೂ ಹಲ್ಲು ಕಿರಿಯುತ್ತಾ ತನ್ನ ಮುಂದೆ ನಿಂತಿದ್ದ ಶೃಂಗಾರಪುರೆಯನ್ನು ನೋಡುತ್ತಾ ಅಯ್ಯರ್‌ನ ಮೈ ಉರಿದುಹೋಯಿತು. ನಾಳೆ ನೋಡೋಣ ಮಗನೆ ಎಂದುಕೊಳ್ಳುತ್ತಾ ತಾನೂ ವ್ಯಂಗ್ಯವಾಗಿ ನಕ್ಕ ಈಶ್ವರ್ ಅಯ್ಯರ್.

ಈ ಬೇಂಚೋಂದ್ ಮದ್ರಾಸಿಯಿಂದಲೆ ಆಫೀಸಿನಲ್ಲಿ ತನಗೆ ಸಮಸ್ಯೆ ಉಂಟಾಗಿದೆ ಎನ್ನುತ್ತಾ ಶೃಂಗಾರಪುರೆ ತನ್ನ ಟೇಬಲ್‌ನತ್ತಾ ನಡೆದ. ಇನ್ನು ಐದು ನಿಮಿಷಗಳ ಬಳಿಕ ಬರುವ ಮೀರ್‌ಚಂದಾನಿ ಚೋಕ್ರಿಗೆ ಈತ ಸಹಿಮಾಡಲು ಬಿಡುವುದಲ್ಲದೆ ಆಕೆ “ಹಾಯ್ ಅಯ್ಯರ್” ಎಂದಾಗ ಧನ್ಯತಾಭಾವವನ್ನು ಪ್ರದರ್ಶಿಸಲಿದ್ದಾನೆ.

ಈ ಆಫೀಸು ಎಂದೇನು ತನ್ನ ಹುಟ್ಟೇ ನಗೆಯ ವಸ್ತುವಾಗಿದೆ ಎನ್ನುವುದು ಸ್ವತಃ ಶೃಂಗಾರಪುರೆಗೆ ಗೊತ್ತು. ಐವತ್ತೈದರ ತನ್ನ ತಂದೆಗೆ ಮರು ಮದುವೆಯ ಹುಚ್ಚು ಯಾಕಾಯಿತೊ. ಅರುವತ್ತರ ಹೊಸ್ತಿಲಲ್ಲಿರುವಾಗ ಮತ್ತೆ ತಂದೆಯಾಗುವ ಪ್ರಯತ್ನ ಮಾಡಬಾರದಿತ್ತು. ತನ್ನ ತಂದೆ ಮರು ಮದುವೆ ಆದದ್ದು ಅದರಲ್ಲೂ ಇಳಿವಯಸ್ಸಿನಲ್ಲಿ ಇನ್ನೊಮ್ದು ಮಗುವಿನ ತಂದೆಯಾದದ್ದನ್ನು ಅಣ್ಣ ಮತ್ತು ಅಕ್ಕ ಒಪ್ಪಿರಲಿಕ್ಕಿಲ್ಲ. ತಂದೆಯನ್ನು ಟೀಕಿಸುವಂತಿಲ್ಲ ತಾನೆ? ಆದರೆ ಸಮಯ ಸಿಕ್ಕಿದಾಗಲೆಲ್ಲಾ ತನ್ನನ್ನು ಮುದಿಪ್ರಾಯದಲ್ಲಿ ಹುಟ್ಟಿದ ಮಗ ಎಂದು ಹೀನೈಸಲು ಅವರು ಈಗಲೂ ಮರೆಯುವುದಿಲ್ಲ. ಚಾಳಿನ ಹುಡುಗರೂ ಮುದುಕನ ಮಗ ಎಂದು ಲೇವಡಿ ಮಾಡುವುದನ್ನು ಕೇಳುತ್ತಲೇ ಶೃಂಗಾರಪುರೆ ತನ್ನ ಬಾಲ್ಯವನ್ನು ಕಳೆದಿದ್ದ.

ನೆರೆಮನೆ ಆನಂದಿಬಾಯಿ ಹೇಳುತ್ತಾಳೆ: ತನ್ನ ಮಂದ ಬುದ್ಧಿಗೆ, ತಂದೆಗೆ ಇಳಿವಯಸ್ಸಿನಲ್ಲಿ ತಾನು ಹುಟ್ಟಿರುವುದು ಕಾರಣವಂತೆ. ಇಲ್ಲವಾದರೆ ಕುಟುಬದಲ್ಲಿ ಎಲ್ಲರೂ ಬುದ್ಧಿವಂತರಾಗಿ ಉನ್ನತ ಸ್ಥಾನದಲ್ಲಿರುವಾಗ ತಾನು ಮಾತ್ರ ಹೀಗಾಗಲು ಕಾರಣ? ತಂದೆ ಮಿಂಟ್‌ನಲ್ಲಿ ಸುಪರಿಟೆಂಡೆಂಟ್ ಆಗಿ ಇದ್ದವರು. ಅಣ್ಣ ಇನ್‌ಕಮ್ ತ್ಯಾಕ್ಸ್ ಆಫೀಸರ್. ಅಕ್ಕ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮೆನೇಜರ್. ಭಾವ ಮಲ್ಟಿನೇಶನಲ್ ಸಂಸ್ಥೆಯಲ್ಲಿ ವರ್ಕ್ಸ್ ಮೆನೇಜರ್. ಆದರೆ ತಾನು ಮಾತ್ರ ಈ ಸಣ್ಣ ಕಂಪನಿಯಲ್ಲಿ ಫೈಲಿಂಗ್ ಕ್ಲರ್ಕ್.

ತನ್ನ ಟೇಬಲ್ ಮೇಲೆ ರಾಶಿ ಬಿದ್ದ ಫೈಲುಗಳನ್ನು ನೋಡಿ ಶೃಂಗಾರಪುರೆಗೆ ಎಲ್ಲಿಲ್ಲದ ಕೋಪ ಬಂದಿತು. ಆದರೆ ಸಾವರಿಸಿಕೊಂಡು ತಲೆಯ ಮೇಲೆ ಕೈಹೊತ್ತುಕೊಂಡು ಒಂದು ಕ್ಷಣ ಆತ ಕುಳಿತ. ಶನಿವಾರ ಸೆಲ್ಸ್ ರಿವ್ಯೂ ಮೀಟಿಂಗ್‌ಗಾಗಿ ಹೊರತೆಗೆದ ಫಲುಗಳನ್ನು ಪ್ಯೂನ್‌ಗಳು ತಂದು ಆತನ ಟೆಬಲ್ ಮೇಲೆ ಗುಡ್ಡೆ ಹಾಕಿದ್ದರು. ಕ್ಯಾಬಿನ್‌ಗೆ ಹೋದ ಫೈಲುಗಳನ್ನು ಪ್ಯೂನ್‌ಗಳೆ ಮತ್ತೆ ರ್‍ಯಾಕ್‌ನಲ್ಲಿ ಇರಿಸಬೇಕೆಂದು ಶೃಂಗಾರಪುರೆ ವಿಫಲ ಹೋರಾಟ ನಡೆಸಿದ್ದ. ಮಾರ್ಕೆಟಿಂಗ್ ಡೈರೆಕ್ಟರರವರೆಗೆ ದೂರು ಹೋಯಿತು. ಆ ಒಂದು ಸಂದರ್ಭದಲ್ಲಿ ಅವರು ಶೃಂಗಾರಪುರೆಯನ್ನು ಬೆಂಬಲಿಸಿದ್ದರು.

ಆದರೆ ರ್‍ಯಾಕ್‌ನಲ್ಲಿ ಎಲ್ಲೆಂದರಲ್ಲಿ ಫೈಲುಗಳನ್ನು ಪ್ಯೂನ್‌ಗಳು ಇರಿಸಿ ಶೃಂಗಾರಪುರೆ ಒದ್ದಾಡುವಂತೆ ಮಾಡಿದಾಗ ಆತ ಹತಾಶನಾದ. ಸಮಯಕ್ಕೆ ಸರಿಯಾಗಿ ಫೈಲುಗಳು ಸಿಗದಾಗ ಕುಪಿತರಾದ ಸೇಲ್ಸ್ ಮೆನೇಜರರಿಗೆ ಶೃಂಗಾರಪುರೆ ವಸ್ತುಸ್ಥಿತಿ ತಿಳಿಸುವ ಪ್ರಯತ್ನ ನಡೆಸಿದಾಗ, ಇನ್ನು ಮುಂದೆ ರ್‍ಯಾಕ್‌ನಲ್ಲಿ ಇರಿಸಿದ ಫೈಲುಗಳನ್ನು ಫೈಲಿಂಗ್ ಕ್ಲರ್ಕ್ ಹೊರತಾಗಿ ಯಾರೂ ಮುಟ್ಟುವಂತಿಲ್ಲ ಎಂದು ವಿಚಿತ್ರ ಆರ್ಡರ್ ಮಾಡಿ ಬಿಟ್ಟರು. ಮೋರೆ, ಕದಂ, ಬಬನ್, ಎಲ್ಲಾ ಮುಸಿ ಮುಸಿ ನಕ್ಕಾಗ ಆತ ಅಸಹಾಯಕನಾಗಿ ನಿಂತು ಬಿಟ್ಟಿದ್ದ.ರ್‍ಯಾಕ್‌ನಿಂದ ಫೈಲ್ ತೆಗೆಯುವಂತಿಲ್ಲ, ಇರಿಸುವಂತಿಲ್ಲ ಎಂದು ಹೇಳಿದುದರ ಅರ್ಥ ಟೇಬಲ್‌ನ ಮೇಲೆ ಫೈಲ್‌ನ ಗುಡ್ಡೆ ಏರಿಸಬೇಕೆಂದಲ್ಲ. ಮೇನೇಜರರನ್ನ ಕರೆತಂದು ಇದನ್ನು ತೋರಿಸಬೇಕೆಂದು ಶೃಂಗಾರಪುರೆ ಒಂದು ಕ್ಷಣ ಯೋಚಿಸಿದರೂ ಮತ್ತೆ ಇವತ್ತು ಸೋಮವಾರ ಎಂದು ನೆನಪಾಗಿ ಸುಮ್ಮನೆ ಕುಳಿತ.

ತಾನು ಕಂಪ್ಲೇಂಟು ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎನ್ನುವುದು ಶೃಂಗಾರಪುರೆಗೆ ತಿಳಿದಿದೆ. ಬಹುಶಃ ಅಯ್ಯರ್‌ನ ಬೆಂಬಲದಿಂದಲೇ ಈ ಕೆಲಸವನ್ನು ಇವರು ಮಾಡಿರಬೇಕು. ಇಷ್ಟು ಧೈರ್ಯದಿಂದ ಈ ದುಷ್ಟ ಚತುಷ್ಟಯರು ಈ ಕೆಲಸ ಮಾಡಿದ್ದಾರೆಂದರೆ ಮೊನ್ನೆ ಮೀಟಿಂಗ್‌ನಲ್ಲಿ ತನ್ನ ತಪ್ಪು ಏನಾದರೂ ಗೋಚರಿಸಿ ಮೆನೇಜರರು ಕುಪಿತರಾಗಿರಬೇಕು. ಮೈಕೋಗೆ ಸಂಬಂಧಿಸಿದ ಪೇಪರ್ ಇಂಜಿನ್‌ವಾಲ್ಸ್‌ನಲ್ಲೂ, ಎಚ್.ಎ.ಎಲ್. ಪೇಪರ್ ಆರ್ಡಿನನ್ಸ್ ಫ್ಯಾಕ್ಟರಿಯ ಫೈಲ್‌ನಲ್ಲಿ ಸೇರಿಕೊಂಡಿರಬಹುದೇ ಎಂದು ಶೃಂಗಾರಪುರೆ ಗಾಬರಿಗೊಂಡ. ಎಷ್ಟು ಜಾಗರೂಕತೆ ವಹಿಸಿದರೂ ಇತ್ತೀಚೆಗೆ ಇಂತಹ ತಪ್ಪುಗಳು ಪದೇ ಪದೇ ಆಗುತ್ತಿವೆ. ತಾನು ವೃಥಾ ಬೈಸಿಕೊಳ್ಳುತ್ತಿದ್ದೇನೆ ಎಂದು ಆತ ದುಃಖಿಸಿದ. ತನ್ನ ತಪ್ಪುಗಳನ್ನು ಎತ್ತಿತೋರಿಸಿ ಅಯ್ಯರ್ ಸಿದ್ದಪಡಿಸಿ ಸೇಲ್ಸ್ ಮೆನೇಜರ್ ಸಹಿಮಾಡಿದ ಹಳದಿ ಬಣ್ಣದ ಮೆಮೋಗಳಿದ್ದೇ ಒಂದು ದಪ್ಪ ಫೈಲನ್ನು ಶೃಂಗಾರಪುರೆ ತನ್ನ ಟೇಬಲ್‌ನ ಎರಡನೆಯ ಡ್ರಾಯರ್‌ನಲ್ಲಿ ಇರಿಸಿದ್ದಾನೆ. ಶೃಂಗಾರಪುರೆ ತುರತುರನೆ ಮೆನೇಜರರ ಬಳಿ ಹೋಗುತ್ತಾನೆ. ಅಲ್ಲಿ ಆತನಿಗೆ ಬೈಗುಳ ಪ್ರಹಾರ ಆರಂಭವಾಗುತ್ತದೆ ಎಂದು ಕಾದು ನಿಂತಿದ್ದ ಚತುಷ್ಟಯರು ಆತನ ಮೌನ ಕಂಡು ನಿರಾಶರಾದರು.

ಈ ಬೇಂಚೋದ್‌ಗಳಿಗೆ ನಿರಾಸೆಯನ್ನುಂಟುಮಾಡಿದೆನಲ್ಲ ಎಂದು ಶೃಂಗಾರಪುರೆ ಒಂದು ಕ್ಷಣ ಸಂತೋಷಪಟ್ಟು, ಸದ್ದಿಲ್ಲದೆ ಎಲ್ಲಾ ಫೈಲುಗಳನ್ನು ಟೇಬಲ್ಲಿನ ಎಡಬದಿಯಲ್ಲಿ ಒಂದರ ಮೇಲೆ ಒಂದಾಗಿ ಇರಿಸಿ ತನ್ನ ಚೀಲವನ್ನು ಹೊರತೆಗೆದು ಎಂದಿನಂತೆ ಟವಲ್ ತೆಗೆದು ಮುಖ ಒರೆಸಿದ. ಚೀಲದಲ್ಲಿರಿಸಿದ ಪ್ಲಾಸ್ಟಿಕ್ ಬಾಕ್ಸ್‌ನಿಂದ ಖಂಡೋಬಾನ ಚಿಕ್ಕ ಪಟವನ್ನು ತೆಗೆದು ಭಯಭಕ್ತಿಯೊಂದಿಗೆ ಟೇಬಲಿನ ಬಲಬದಿಯಲ್ಲಿ ಇರಿಸಿದ. ಹೂವುಗಳನ್ನು ತೆಗೆದು ಪಟದ ಮೇಲ್ಭಾಗದಲ್ಲಿ ಸಿಕ್ಕಿಸಿದ. ಊದುಬತ್ತಿಯನ್ನು ಹೊತ್ತಿಸಿ ಆರತಿಯೆತ್ತುವ ಪಟದ ಮುಂದೆ ಹಿಡಿದ. ಮತ್ತೆ ಕೈಮುಗಿದ. ‘ದೇವಾ ರಕ್ಷಿಸು’ ಎಂದು ಪ್ರಾರ್ಥಿಸಿದ.

ಇಂದು ದೈನಂದಿನ ವಿನೋದವೆಂಬಂತೆ ಶೃಂಗಾರಪುರೆಯ ಸಹೋದ್ಯೋಗಿಗಳೆಲ್ಲರೂ ಓರೆನೋಟದಿಂದ ಆತನನ್ನೇ ವಿಕ್ಷಿಸುತ್ತಿದ್ದರು. ಆರಂಭದಲ್ಲಿ ಶೃಂಗಾರಪುರೆ ಅರ್ಧ ತಾಸಿನಷ್ಟಾದರೂ ಸ್ತೋತ್ರವನ್ನು ಪಠಿಸುವುದು ಇತ್ತು. ಶೃಂಗಾರಪುರೆ ಆಫೀಸಿನಲ್ಲಿ ಕುಳಿತು ಪೂಜೆ ನಡೆಸಿದ್ದಾನೆ ಎಂದು ಸೇಲ್ಸ್ ಮೆನೇಜರರಿಗೆ ದೂರು ಹೋದಾಗ ಅವರು ಇದನ್ನು ನಿಲ್ಲಿಸಬೇಕೆಂದು ಆಜ್ಞೆಯಿತ್ತರು. ಆದರೆ ಶೃಂಗಾರಪುರೆ ಮಾರ್ಕೆಟಿಂಗ್ ಡೈರೆಕ್ಟರರಲ್ಲಿ ವಿನಂತಿಸಿದ. ಸ್ವತಃ ಧರ್ಮಬೀರುವಾಗಿದ್ದ ಅವರು ಟೇಬಲಲ್ಲಿ ಖಂಡೋಬಾನ ಪಟ ಇರಿಸುವುದಕ್ಕೆ ಅಡ್ಡಿಯಿಲ್ಲ, ಆದರೆ ಸ್ತೋತ್ರಪಠನವೆಂದು ಸಮಯ ವ್ಯಯಿಸುವಂತಿಲ್ಲವೆಂದರು.

ಈ ಘಟನೆಯಿಂದಾಗಿ ಸೇಲ್ಸ್ ಮೆನೇಜರರ ಜತೆ ಶೃಂಗಾರಪುರೆಯ ಸಂಬಂಧ ಇನ್ನಷ್ಟು ಕೆಟ್ಟರೂ ಮಾರ್ಕೆಟಿಂಗ್ ಡೈರೆಕ್ಟರರು ಆತನನ್ನು ನಿಕಟವಾಗಿ ಅರಿಯಲು ಸಾಧ್ಯವಾಯಿತು. ಅವರು ದೇಶಾಧ್ಯಂತ ಎಲ್ಲಾ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಬಂದವರು. ಆದರೆ ಖಂಡೋಬಾ ದೇವನ ಬಗ್ಗೆ ತಿಳಿದಿರಲಿಲ್ಲ. ಶೃಂಗಾರಪುರೆ ಜೆಜುರುಯ ಗುಡ್ಡದ ಮೇಲಿರುವ ಖಂಡೋಬಾನ ದೇಗುಲದ ಬಗ್ಗೆ ತಿಳಿಸಿ ಅದು ಅತ್ಯಂತ ಜಾಗೃತ ಸ್ಥಳ ಎಂದು ವರ್ಣಿಸಿದ. ತಮ್ಮ ಕುಟುಂಬದ ಆರಾಧ್ಯ ದೈವ ಖಂಡೋಬಾ ಶಿವನ ಅವತಾರವೆನ್ನುವುದನ್ನು ತಿಳಿಸಿದ. ಪ್ರಾಸಂಗಿಕವಾಗಿ ಅವರು ಶೃಂಗಾರಪುರೆಯ ಮನೆಯ ಪರಿಸ್ಥಿತಿಯನ್ನು ವಿಚಾರಿಸಿ ತಿಳಿದುಕೊಂಡರು. ಆತನ ತಂದೆ, ಅಣ್ಣ, ಅಕ್ಕ, ಭಾವನ ವಿಷಯ ತಿಳಿದು ಆತನ ಬಗ್ಗೆ ಅವರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿತು. ಈಗಿನ ಆತನ ಪರಿಸ್ಥಿತಿಗೆ ಸಹಾನುಭೂತಿಯೂ, ಮಾರ್ಕೆಟಿಂಗ್ ಡೈರೆಕ್ಟರರು ಶೃಂಗಾರಪುರೆಯ ಬಗ್ಗೆ ತೋರಿದ ವಿಶೇಷ ಆಸಕ್ತಿಯಿಂದಾಗಿ ದಸರಾ ಸಂದರ್ಭದಲ್ಲಿ ಆಫೀಸಿನಲ್ಲಿ ಪೂಜೆ ಮಾಡಿ ಪ್ರಸಾದ ಹಂಚುವ ಕೆಲಸ ಮೋರೆಯಿಂದ ಶೃಂಗಾರಪುರೆಗೆ ಬಂತು. ಪೂಜೆಯ ಹೆಸರಿನಲ್ಲಿ ಪುಡಿಗಾಸು ಸಂಪಾದಿಸುತ್ತಿದ್ದ ಮೋರೆ ಈ ಕಾರಣದಿಂದಲೆ ತನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾನೆ ಎನ್ನುವುದು ಶೃಂಗಾರಪುರೆಯ ಗುಮಾನಿ. ನಿವೃತ್ತರಾಗಿ ಬಹಳ ವರ್ಷಗಳಾದರೂ ನಿರ್ದೇಶಕ ಮಂಡಳಿಯ ವಿನಂತಿಯಂತೆ ಇನ್ನೂ ಕಾರ್ಯನಿರ್ವಹಿಸುತ್ತಿರುವ ಮುದುಕ ಮಾರ್ಕೆಟಿಂಗ್ ಡೈರೆಕ್ಟರರು ಮುಂದಿನ ವರ್ಷ ಅಮೆರಿಕಾದಲ್ಲಿ ನೆಲೆಸಿರುವ ಮಗನ ಬಳಿಗೆ ಹೋಗುತ್ತಾರೆ. ಆ ಬಳಿಕ ತನ್ನನ್ನು ಯಾರು ರಕ್ಷಿಸುತ್ತಾರೆ ಎನ್ನುವ ಭಯ ಶೃಂಗಾರಪುರೆಯದ್ದು. ಮುಂದೆ ನಿನ್ನನ್ನು ನೋಡಿಕೊಳ್ಳುತ್ತೇವೆ ಎನ್ನುವ ಸೂಚನೆಯನ್ನು ದುಷ್ಟ ಚತುಷ್ಟಯರು ಆಗಾಗ್ಗೆ ನೀಡುತ್ತಿದ್ದಾರೆ.

ಮದ್ರಾಸಿಗಳೇ ಹೆಚ್ಚಾಗಿರುವ ಈ ಆಫೀಸಿನಲ್ಲಿ ತನಗೆ ಕಿರುಕುಳ ನೀಡುವುದು ವಿಶೇಷವಲ್ಲ. ಆದರೆ ಮಹಾರಾಷ್ಟ್ರೀಯನ್ನರೇ ಆಗಿರುವ ಸೇಲ್ಸ್ ಮೆನೇಜರ್ ಮತ್ತು ಈ ಮೂವರು ಪೂನ್‌ಗಳು ಸತಾಯಿಸುತ್ತಾರಲ್ಲಾ ಎಂದು ಶೃಂಗಾರಪುರೆಗೆ ದುಃಖ. ಶಿವಸೇನೆಯ ಸಕ್ರಿಯ ಸದಸ್ಯನಾಗಿ “ಅಮ್ಚೀ ಮುಂಬಯಿ, ಅಮ್ಚೀ ಮಾಣುಸ್” ಎಂದೆನ್ನುವ ಈ ಮೋರೆಯಿಂದಾಗಿಯೇ ಸಹೋದ್ಯೋಗಿಗಳಲ್ಲಿ ಹೆಚ್ಚಿನವರು ಶೃಂಗಾರಪುರೆಯನ್ನು ದ್ವೇಷಿಸಲು ಕಾರಣ.

ಶೃಂಗಾರಪುರೆ ಆಫೀಸಿಗೆ ಬಂದ ಮೊದಲಲ್ಲಿ ಅಯ್ಯರ್ ಆತನಿಂದ ತಿಪ್ಪರಲಾಗ ಹಾಕಿಸುವುದನ್ನು ಕಂಡು ಮೋರೆಯ ಭಾಷಾಭಿಮಾನ ಜಾಗ್ರತಗೊಂಡಿತು. ಮರಾಠಿ ಮಾಣುಸ್‌ನನ್ನು ಈ ಮದ್ರಾಸಿ ಸತಾಯಿಸುವುದನ್ನು ನಿಲ್ಲಿಸುತ್ತೇನೆ, ನೋಡು ಅವನಿಗೆ ಹೇಗೆ ಪಾಠ ಕಲಿಸುತ್ತೇನೆ ಎಂದು ಮೋರೆ ಶೃಂಗಾರಪುರೆಯ ಎದುರು ಕೊಚ್ಚಿಕೊಂಡ. ಹಾಗೆ ಹೇಳಿದ ಮರುದಿನ ಮಧ್ಯಾಹ್ನ ಅಯ್ಯರ್‌ಗೆ ಅಜ್ಞಾತ ವ್ಯಕ್ತಿಯೊಬ್ಬನಿಂದ ಫೋನು ಬಂತು ನಾನು ಸೇನಾಭವನದಿಂದ ಮಾತನಾಡುತ್ತಿದ್ದೇನೆ. ಇನ್ನು ಮುಂದೆ ಆಫೀಸಿನಲ್ಲಿ ಮರಾಠಿ ಜನರನ್ನು ಸತಾಯಿಸಿದರೆ ನಿನ್ನ ಕಾಲು ಮುರಿದು ಕೈಯಲ್ಲಿ ಕೊಡುತ್ತೇನೆ ಹೀಗೆ ಫೋನಿನಲ್ಲಿ ಬೆದರಿಕೆಯನ್ನು ಕೇಳುತ್ತಿರುವಂತೆಯೆ ಅಯ್ಯರ್‌ನ ಮುಖ ಬಿಳಿಚಿ ಹೋಯಿತು. ಆತ “ನಹೀ ಸಾಬ್ ನಹೀ ಸಾಬ್” ಎನ್ನುತ್ತಾ ಫೋನು ಕೆಳಗಿಟ್ಟ. ಮತ್ತೆ ನೀರು ತರಿಸಿ ಕುಡಿದ. ತಮಾಷೆ ನೋಡುತ್ತಿದ್ದ ಮೋರೆ ಶೃಂಗಾರಪುರೆಯತ್ತ ನೋಡಿ ಕನ್ಣು ಮಿಟುಕಿಸಿದ. ಸುದ್ದಿ ಸೇಲ್ಸ್ ಮೆನೇಜರರಿಗೂ ಮುಟ್ಟಿತು. ಅವರು ಅಯ್ಯರ್‌ನನ್ನು ಕರೆಸಿ ಸಮಾಧಾನ ಪಡಿಸಿದರು. ಸಹಾಯಕ ಗೃಹಸಚಿವರು ತನ್ನ ಭಾವ ನೆಂಟನ ಸಂಬಂಧಿ. ನೀನೇನೂ ಭಯಪಡಬೇಡ. ಇನ್ನು ಮುಂದೆ ಫೋನು ಬಂದರೆ ನನ್ನನ್ನು ಕರೆ ಎಂದರು.

ಇದಕ್ಕೆಲ್ಲಾ ಮೋರೆ ಕಾರಣವೆನ್ನುವುದು ಸೇಲ್ಸ್ ಮ್ಯಾನೇಜರರಿಗೆ ಹೊಳೆಯಿತು. ಗೃಗ ಸಚಿವರ ಹೆಸರು ಕೇಳಿದೊಡನೆ ತಣ್ಣಗಾದ ಮೋರೆ ಈ ಕೆಲಸ ತಾನು ಮಾಡಿದುದಲ್ಲ. ಬಹುಶಃ ಶೃಂಗಾರಪುರೆ ಶಿವಸೇನಾ ಕಾರ್ಯಾಲಯದಲ್ಲಿ ದೂರು ಕೊಟ್ಟಿರಬೇಕೆಂದು ಜಾರಿಕೊಂಡ. ಶೃಂಗಾರಪುರೆಗೆ ವೃಥಾ ಬೈಗುಳ ಸಿಕ್ಕಿತು. ಇನ್ನು ಮುಂದೆ ಕೆಲಸದಲ್ಲಿ ಹೆಚ್ಚು ಗಮನ ಕೊಡದೆ ಇಂತಹ ಕಿತಾಪತಿಗೆ ಹೊರಟರೆ ನೌಕರಿ ಹೋದೀತೆಂದು ವಾರ್ನಿಂಗ್ ಕೂಡಾ ದೊರೆಯಿತು. ತನ್ನ ಮಾತುಗಳನ್ನು ಕೇಳುವ ಮೂಡ್‌ನಲ್ಲಿ ಸೇಲ್ಸ್ ಮೆನೇಜರರು ಇಲ್ಲವೆಂದು ಅರಿತ ಶೃಂಗಾರಪುರೆ ಸುಮ್ಮನೆ ನಿಂತು ಬೈಗುಳನ್ನು ಕೇಳಿಸಿಕೊಂಡ.

ನಿಜ ಹೇಳಬೇಕೆಂದರೆ ಫೋನು ಮಾಡಿದಾತ ಶಿವಸೇನೆಯ ಪದಾಧಿಕಾರಿಯೇನಲ್ಲ. ಬದಲಾಗಿ ಮೋರೆಯ ಆದೇಶದಂತೆ ಆತನ ಗೆಳೆಯನೊಬ್ಬನೇ ಈ ರೀತಿ ನಾಟಕವಾಡಿದ್ದ. ಶೃಂಗಾರಪುರೆಯ ಮೇಲಿನ ಸಹಾನುಭೂತಿಯಿಂದೇನು ಆತ ಹೀಗೆ ಮಾಡಿರಲಿಲ್ಲ. ಬದಲಾಗಿ ತನ್ನ ವೋಚರ್‌ಗಳನ್ನು ಪಾಸು ಮಾಡಲು ಅಯ್ಯರ್ ಹಿಮ್ದೆ ಮುಂದೆ ನೋಡುತ್ತಿದ್ದಾನೆಂದು ಆತ ಈ ರೀತಿ ಪ್ರತೀಕಾರ ತೀರಿಸಿದ್ದ. ಈ ಘಟನೆಯ ಬಳಿಕ ಮೋರೆಯ ವೋಚರ್‌ಗಳು ಬೇಗನೆ ಪಾಸು ಆಗಲಾರಂಭಿಸಿದ್ದವು. ಆದರೆ ಶೃಂಗಾರಪುರೆಯ ಮೇಲಿನ ಅಯ್ಯರ್‌ನ ಕಾಕದೃಷ್ಟಿಯಲ್ಲಿ ಏನೂ ಬದಲಾವಣೆ ಆಗಲಿಲ್ಲ. ಈಗ ಮೋರೆಯೂ ಅಮ್ಚಾ ಮಾಣುಸ್‌ನ ಕೈಬಿಟ್ಟು ಅಯ್ಯರ್‌ನ ಜತೆ ಸೇರಿದ.

ಆಫೀಸಿನ ಹೆಚ್ಚಿನ ಮಂದಿ ಶೃಂಗಾರಪುರೆ ಶಿವಸೇನೆಯ ನೆರವು ಪಡೆಯಲು ಹೋಗಿದ್ದ ಎನ್ನುವುದನ್ನು ನಂಬಿ ಆತನನ್ನು ದೂರವಿರಿಸಿದರು. ಆದರೆ ಕೆಲವರು ಮುಖ್ಯವಾಗಿ ವಯಸ್ಸಾದ ಹೆಂಗಸರಿಗೆ ಆತನ ಬಗ್ಗೆ ಸಹಾನುಭೂತಿ. ತಮ್ಮ ಲಂಚ್‌ಬಾಕ್ಸ್‌ನಿಂದ ಆಗೊಮ್ಮೆ ಈಗೊಮ್ಮೆ ಶಿರಾವನ್ನೊ ಬಾಜಿಯನ್ನೊ ಆತನಿಗೆ ಕೊಡುವುದಿದೆ. ಆದರೆ ಆತ ಆಫೀಸಿಗೆ ತಡವಾಗಿ ಬರುತ್ತಿರುವುದರಿಂದ ಹಾಜರಿ ಪುಸ್ತಕದಲ್ಲಿ ರೆಡ್‌ಮಾರ್ಕ್ ಹಾಕುವ ಕ್ರಮ ಆರಂಭವಾಗಿ ಆಗೊಮ್ಮೆ ಈಗೊಮ್ಮೆ ತಡವಾಗಿ ಬರುತ್ತಿದ್ದ ಅವರೆಲ್ಲರೂ ತಮ್ಮ ಪಾಲಿಗೆ ದಕ್ಕುವ ರೆಡ್‌ಮಾರ್ಕನ್ನು ದುಃಖದಿಂದ ಸ್ವೀಕರಿಸುತ್ತ, ಅದಕ್ಕೆ ಕಾರಣಕರ್ತನಾದ ಶೃಂಗಾರಪುರೆಗೆ ತಿರುಗಿಬಿದ್ದರು. ಈ ಮಂದಿ ಬುದ್ಧಿಯ ಮನುಷ್ಯನಿಂದಾಗಿ ತಮ್ಮ ಕೆಲಸಕ್ಕೂ ಅಡ್ಡಿಯೆಂದು ಅವರೀಗ ಆಡಿಕೊಳ್ಳುತ್ತಿದ್ದಾರೆ.

ಈಗ ಆಫಿಸಿಗೆ ಆಫೀಸೇ ತನಗೆ ವಿರುದ್ಧವಾಗಿರುವುದು ಶೃಂಗಾರಪುರೆಯ ಅವರಿಗೆ ಬಾರದೆ ಇಲ್ಲ. ಆದರೆ ಮೋರೆಯಂತೆ ಜನರನ್ನು ತನ್ನ ಮಾತಿನ ಚಮತ್ಕಾರದಿಮ್ದ ಮರುಳು ಮಾಡುವ ಕಲೆ ಆತನಿಗೆ ಸಿದ್ಧಿಸಿಲ್ಲ. ತಾನು ವಿಳಂಬವಾಗಿ ಬರುತ್ತಿರುವುದಕ್ಕೆ, ಆಗಾಗ್ಗೆ ರಜೆ ತೆಗೆಯುತ್ತಿರುವುದಕ್ಕೆ ತನ್ನ ತಾಯಿಯ ಅನಾರೋಗ್ಯ ಕಾರಣವೆನ್ನುವುದು ಈ ಮಂದಿಗೆ ತಿಳಿದಿಲ್ಲವೆ ಎಂದು ಆತ ಒಳಗೊಳಗೆ ಸಂಕಟಪಡುತ್ತಿದ್ದಾನೆ.

ಮುದುಕನ ಮಗ ಎಂದು ಕರೆಸಿಕೊಳ್ಳುವಾಗ ಅದಕ್ಕೆ ಕಾರಣಕರ್ತನಾದ ತನ್ನ ಬಗ್ಗೆ ಶೃಂಗಾರಪುರೆಗೆ ಕೋಪ ಬರುತ್ತಿತ್ತು. ಆದರೆ ಆಯಿ ಒಂದು ದಿನ ಮಗನನ್ನು ತನ್ನ ಮುಂದೆ ಕೂತುಕೊಳ್ಳಿಸಿ ಎಲ್ಲ ವೃತ್ತಾಂತ ತಿಳಿಸಿದಾಗ ಆತನಿಗೆ ತನ್ನ ತಂದೆಯ ಮೇಲೆ ಎಲ್ಲಿಲ್ಲದ ಗೌರವ ಮೂಡಿತು. ಆಯಿ ಬಾಲ ವಿಧವೆ. ಅನಾಥೆಯಾದ ಆಕೆ ಚಿಕ್ಕಪ್ಪನ ಮನೆಯಲ್ಲಿ ಬೆಳೆದವಳು. ಕಾಕ ಎನೋ ಒಳ್ಳೆಯವರೆ. ಆದರೆ ಕಾಕಿ ಮಹಾದುಷ್ಟೆ. ತನ್ನ ಅಣ್ಣನ ಈ ಏಕಸಂತಾನದ ದುಃಖ ನೋಡಲಾಗದೆ ವಯಸ್ಕನಾದರೂ ಮಹಾದೇವ ಶೃಂಗಾರಪುರೆಯ ಮನೆ ಒಲಿಸಿ ಈ ವಿವಾಹಕ್ಕೆ ಕಾಕ ಒಪ್ಪಿಸಿದರು. ತಂದೆಯ ನಿವೃತ್ತಿಯವರೆಗೆ ಎಲ್ಲ ಸುಸೂತ್ರವಾಗಿ ಸಾಗಿತು. ನಿವೃತ್ತಿಯ ಮುಂದಿನ ವರ್ಷವೇ ಪಾರ್ಶ್ವವಾಯು ಅಘಾತಕ್ಕೆ ಈಡಾದವರು ಹತ್ತು ವರ್ಷಗಳ ಕಾಲ ಶಯ್ಯೆಯಲ್ಲಿಯೇ ಕಳೆದರು. ನಿವೃತ್ತ ಜೀವನಕ್ಕೆಂದು ಕೂಡಿಸಿಟ್ಟಿದ್ದ ಇಡುಗಂಟು ಅವರ ಚಿಕಿತ್ಸೆಗೆ ವ್ಯಯವಾಯಿತು. ತನ್ನ ಹಿಂದಿನ ಪತ್ನಿಯ ಮಕ್ಕಳನ್ನು ಒಳ್ಳೆಯ ಸ್ಥಿತಿಗೆ ತಲುಪಿಸಿದ್ದೇನೆ. ಇನ್ನುಳಿದದ್ದು ತನ್ನ ಈ ಮಂದ ಬುದ್ಧಿಯ ಮಗನಿಗೆ ಎಂದೆನ್ನುತ್ತಿದ್ದ ತಂದೆ. ಆದರೆ ಸಾಯುವಾಗ ಉಳಿದದ್ದು ದಾದರ್‌ನಲ್ಲಿನ ಈ ಪುಟ್ಟ ಖೋಲಿಮಾತ್ರ.

ಚಿಕ್ಕಂದಿನಲ್ಲಿ ಗುಂಡಗೆ ಮೊದ್ದು ಮೊದ್ದಾಗಿದ್ದ ಸುರೇಶ ನಡೆದದ್ದು. ಮಾತನಾಡಿದ್ದು ಎಲ್ಲಾ ತಡವಾಗಿ. ಒಂದೆಡೆ ಕುಳ್ಳರಿಸಿದರೆ ಉತ್ಸವಮೂರ್ತಿಯಂತೆ ಕೂತೇ ಇರುತ್ತಿದ್ದ. ಆದರೂ ಆತನ ಮುಖದ ತುಂಬ ಹರಡಿರುತ್ತಿದ್ದ ಬಾಲಿಶ ನಗುವಿಗೆ ಮರುಳಾಗದವರಿಲ್ಲ. ಪತಿಯ ಅನಾರೋಗ್ಯ. ಮಗನ ಮಂದಬುದ್ಧಿಯಿಂದ ದೃತಿಗೆಟ್ಟ ತಾಯಿ ಸದಾ ವ್ರತ, ನೇಮ, ನಿಷ್ಠೆಗೆ ತೊಡಗಿದ್ದು ಮಾತ್ರವಲ್ಲ ತನ್ನ ಮಗನನ್ನು ಖಂಡೋಬಾನ ಕೃಪಾಛತ್ರದೊಳಗೆ ಕುಳ್ಳಿರಿಸಿ ಬಿಟ್ಟಳು. ಸುರೇಶ ಮೊದಲ ತರಗತಿಯಲ್ಲಿನ್ನು ಅಕ್ಷರ ತಿದ್ದುತ್ತಿದ್ದರೆ ಆತನ ಸಹಪಾಠಿಗಳು ಎರಡು ತರಗತಿ ಮುಂದೆ ಹಾರಿ ಆಗಿತ್ತು. ಖಂಡೋಬಾನ ದಯಯಿಂದ ಹೈಸ್ಕೂಲು ಮೆಟ್ಟಲು ಹತ್ತುವಂತಾದಾಗ ಸುರೇಶನ ಮುಖದಲ್ಲಿ ಗಡ್ಡ ಮೀಸೆ ಚಿಗುರೊಡೆದಿತ್ತು.

ಅಕ್ಕಪಕ್ಕದವರ ಮನೆಯಲ್ಲಿ ಕೆಲಸ ಮಾಡುತ್ತಾ ಆಯಿ ಶೃಂಗಾರಪುರೆಯನ್ನು ಪಿ.ಯು.ಸಿ.ಯವರೆಗೆ ಓದಿಸಿದರು. ಆದರೆ ಅಲ್ಲಿ ಕೂಡಾ ಎಸ್.ಎಸ್.ಎಲ್.ಸಿ.ಯಂತೆ ಎರದು ವರ್ಷ ಡುಮುಕಿ ಹೊಡೆದಾಗ ಇನ್ನು ಓದು ಸಾಕೆಂದು ತಂದೆಯ ಸ್ನೇಹಿತರ ನೆರವಿನಿಮ್ದ ದೊರಕಿಸಿಕೊಂಡದ್ದು ಈ ಉದ್ಯೋಗ. ಇನ್ನೇನು ಆಯಿ ಸುಖವಾಗಿರುತ್ತಾಳೆ ಎಂದು ನೆಮ್ಮದಿಯಿಂದಿದ್ದಾಗ ತಂದೆಯಂತೆಯೇ ಆಕೆಗೂ ಆಘಾತ. ಈಗ ಹಾಸಿಗೆಯಲ್ಲೇ ಮಲಗಿರುವ ಆಕೆಯನ್ನು ಶುಶ್ರೂಷಿಸುತ್ತಾ ಮನೆ ಕೆಲಸ ಮಾಡಿ ಆಫೀಸು ತಲುಪಲು ಶೃಂಗಾರಪುರೆಗೆ ಸಾಕೋ ಸಾಕು ಎನ್ನುಸುತ್ತದೆ. ಇದು ಆಪೀಸಿನಲ್ಲಿ ಎಲ್ಲರಿಗೂ ತಿಳಿದ ಸಂಗತಿ. ಆದರೆ ಜೀವನದುದ್ದಕ್ಕೂ ಸಹಾನುಭೂತಿ ತೋರಿಸಲು ಅವರೇನು ತ್ರೇತಾಯುಗದ ಸಂತರು ಅಲ್ಲವಲ್ಲ.

ಮೂವತ್ತು ದಾಟಿದ ಶೃಂಗಾರಪುರೆಗೆ ದೂರದ ಬಂಧುಗಳು, ನೆರೆಹೊರೆಯವರು ಮದುವೆ ಆಗಿ ಸಂಸಾರ ನಡೆಸು, ಆಯಿಯನ್ನು ನೋಡಿಕೊಳ್ಳುವಂತಹ ಹುಡುಗಿ ತೋರಿಸುತ್ತೇವೆ ಎನ್ನುವಾಗಲೆಲ್ಲಾ ಆತನ ಮನಸ್ಸಿನಲ್ಲೂ ಆಸೆ ಹುಟ್ಟುತ್ತದೆ. ಆಯಿ ಕೂಡಾ ಮಲಗಿದಲ್ಲಿಂದಲೇ ಒತ್ತಾಯಿಸುತ್ತಿದ್ದಾಳೆ. ಆದರೆ ತನ್ನ ಉದೋಗವೇ ಸ್ಥಿರವಲ್ಲ ಎಂದು ನಂಬಿರುವ ಆತನಿಗೆ ಈ ಒಂದು ಸಾಹಸಕ್ಕೆ ಹೊರಡಲು ಧೈರ್ಯವಗುವುದಿಲ್ಲ. ಆಫೀಸಿನಲ್ಲಿ ಮೀರ್‌ಚಂದಾನಿ ಚೋಕ್ರಿ. ಬೇರೆ ಟೈಪಿಸ್ಟ್ ಹುಡುಗಿಯರು ಸೊಟ ಕುಲುಕಿಸುತ್ತಾ ಅಯ್ಯರ್‌ನ ಮುಂದೆ ನಿಂತು ಸಲ್ಲಾಪದಲ್ಲಿ ತೊಡಗಿದಾಗ ಶೃಂಗಾರಪುರೆಯ ಮನದಲ್ಲೂ ಮಧುರ ಭಾವನೆಗಳು ಮೂಡುವುದಿದೆ. ಆದರೆ ಆಫೀಸಿನ ಹುಡುಗಿಯರು ಎಂದೇನೂ ನೆರೆಹೊರೆಯ ಹುಡುಗಿಯರಿಗೂ ಶೃಂಗಾರಪುರೆ ಒಂದು ತಮಾಷೆಯ ವಸ್ತುವಾಗಿಬಿಟ್ಟಿದ್ದಾನೆ. ತನ್ನ ವಿವಾಹದ ಬಗ್ಗೆ ಆಪಿಸಿನಲ್ಲಿ ಪ್ರಸ್ತಾವ ಬಂದಾಗ ಈ ಹೆಣ್ಣಿಗನಿಗೆ ಯಾರು ಹೆಣ್ಣು ಕೊಡುತ್ತಾರೆ. ಆತನ ತರಡಿನಲ್ಲಿ ಬೀಜವೇ ಇಲ್ಲ ಎಂದು ಅಯ್ಯರ್ ಅಂದಾಗ ಅಲ್ಲೇ ಪ್ಯಾಂಟು, ಲಂಗೋಟಿ ಬಿಚ್ಚಿ ತನ್ನ ಪುರುಷತ್ವವನ್ನು ಪ್ರದರ್ಶಿಸಬೇಕು ಎಂದು ಶೃಂಗಾರಪುರೆಗೆ ಅನಿಸಿದ್ದರೂ ಎಲ್ಲರೂ ನಗುವಾಗ ಆತ ಅಸಹಾಯಕನಂತೆ ನಿಂತು ಬಿಟ್ಟಿದ್ದ.

ಆಫಿಸಿನಲ್ಲಿ ಕುಳಿತಲ್ಲಿಂದಲೇ ಶೃಂಗಾರಪುರೆಯ ಯೋಚನಾಗತಿ ಹೀಗೆ ಸಾಗಿತ್ತು. ಒಳ್ಳೆಯ ಒಂದು ಕೆಲಸ ದೊರೆತರೆ ನಕ್ಕವರಿಗೆಲ್ಲಾ ತೋರಿಸುತ್ತಿದ್ದೆ. ಕಳೆದ ವಾರ ಅಣ್ಣನ ಮನೆಗೆ ಈ ಉದ್ದೇಶದಿಂದಲೇ ಹೋದದ್ದು. ಆಯಿಯ ಔಷಧಕ್ಕೆ ಸ್ವಲ್ಪ ಹಣ ಬೇಕು ಎಂದಾಗ ತಂದೆಯದ್ದೆಲ್ಲಾ ನಿಮಗೇ ಸಿಕ್ಕಿತಲ್ಲಾ ಎಂದು ಆತ ಒರಟಾಗಿ ಉತ್ತರಿಸಿದ್ದ. ಏನನ್ನೂ ಹೇಳದೇ ಅಲ್ಲಿಂದ ಹಿಂತಿರುಗಿ ಬಂದಿದ್ದ ಶೃಂಗಾರಪುರೆ. ಆದರೆ ಅಕ್ಕ ಮಾತ್ರ ಐನೂರು ರೂಪಾಯಿಗಳನ್ನು ನೀಡಿ ಸಮಸ್ಯೆಯನ್ನೆಲ್ಲಾ ಮೌನವಾಗಿ ಕುಳಿತು ಕೇಳಿದ್ದಳು. ಆಯಿ ಹಾಗಿರುವಾಗ ಹುಚ್ಚನಮ್ತೆ ಇರುವ ಕೆಲಸವನ್ನು ಕಳೆದುಕೊಳ್ಳಬೇಡ ಎಂದಳು. ಭಾವನ ಫ್ಯಾಕ್ಟರಿಯಲ್ಲಿ ಒಂದು ಉದ್ಯೋಗ ಕೊಡಿಸು ಎಂದಾಗ ಅವರು ಅಷ್ಟು ದೊಡ್ಡ ಹುದ್ದೆಯಲ್ಲಿರುವಾಗ ಅವರ ಭಾವನೆಂಟ ಕ್ಲರ್ಕ್‌ನ ಉದ್ಯೋಗ ಮಾಡುವುದೆ ಎಂದು ಆತನ ವಿನಂತಿಯನ್ನು ಆಕೆ ತಳ್ಳಿಬಿಟ್ಟಳು.

ಅಲ್ಲಿಯೆ ಉದ್ಯೋಗ ದೊರೆತರೆ ತನ್ನಂತಹ ಸಾಧು ಪ್ರಾಣಿ ಯಾವ ಭಯ ಇಲ್ಲದೆ ಜೀವಿಸುವುದು ಸಾಧ್ಯವಿತ್ತಲ್ಲ ಎನ್ನುವುದು ಶೃಂಗಾರಪುರೆಯ ಆಸೆ. ವರ್ಕ್ಸ್ ಮೆನೇಜರರ ಭಾವನೆಂಟನನ್ನು ಗೇಲಿ ಮಾಡುವ ಧೈರ್ಯವನ್ನು ಯಾರಾದರೂ ತೋರಿಸಿಯಾರೆ? ಈ ಅಯ್ಯರ್ ಬೇಂಚೋಂದ್‌ನಂತೆ ತಾನೂ ಕಾರುಬಾರು ಮಾಡಬಹುದಿತ್ತು. ಆದರೆ ಅಕ್ಕ, ಭಾವನ ಅಂತಸ್ತಿನ ಪ್ರಶ್ನೆಯೊಂದು ಅಡ್ಡಿಯಾಗಿ ಉಳಿದುಬಿಟ್ಟಿದೆಯಲ್ಲ.

ಮಧ್ಯಾಹ್ನ ಊಟದ ಬಿಡುವಿನವರೆಗೆ ಸೇಲ್ಸ್ ಮೆನೇಜರರಿಂದ ಕರೆ ಬಂದಾಗ ತಾನು ಬಚಾವಾದೆ ಎಂದು ಶೃಂಗಾರಪುರೆ ಸಮಾಧಾನದ ನಿಟ್ಟುಸಿರು ಬಿಟ್ಟ. ಎಂದಿನ ಒಣ ರೊಟ್ಟಿ ಬಟಾಟೆ ಬಾಜಿ ಇಂದು ರುಚಿಯಾಗಿ ತೋರಿತು. ಊಟ ಮುಗಿದ ಬಳಿಕ ಸಮಯ ಹಾಳು ಮಾಡದೆ ಬಾಕಿ ಉಳಿದ ಪೇಪರುಗಳನ್ನು ಒಂದೊಂದಾಗಿ ಆತ ಫೈಲ್ ಮಾಡಿದ. ಯಾವುದೇ ತಪ್ಪು ಆಗದಂತೆ ಎಚ್ಚರ ವಹಿಸಿದ. ಇನ್ನು ಎರಡು ತಾಸು ಕಳೆದರೆ ಸೋಮವಾರ ಮುಗಿಯುತ್ತದೆ. ಇಡೀ ವಾರ ಸುಸೂತ್ರವಾಗಿ ಕಳೆಯುತ್ತದೆ ಎಂದು ಆತ ಉಲ್ಲಾಸದಲ್ಲಿ ಹಳೆಯ ಸಿನಿಮಾ ಹಾಡೊಂದನ್ನು ಗುನುಗುನಿಸುತ್ತಾ ಕೆಲಸದಲ್ಲಿ ವ್ಯಸ್ತನಾಗಿದ್ದಾಗ ಮೂರು ಗಂಟೆಗೆ ಸರಿಯಾಗಿ ಮೇನೇಜರರಿಂದ ಕರೆ ಬಂದಿತು. ಬಬನ್ ಬಂದು ಹೇಳಿದಾಗಲೇ ಆತನ ಮುಖ ಕಪ್ಪಿಟ್ಟಿತು. ಬಬನ್‌ಗೆ ಏನನಿಸಿತೋ “ಫೈಲುಗಳಲ್ಲಿನ ತಪ್ಪುಗಳ ಒಂದು ಪಟ್ಟಿಯನ್ನು ಮೆನೇಜರ್ ತಮ್ಮ್ಮ ಮುಂದಿರಿಸಿದ್ದಾರೆ. ಜಾಗರೂಕತೆಯಿಂದ ಉತ್ತರ ನೀಡು” ಎಂದು ಆತ ಎಚ್ಚರಿಸಿದ. ಎಂದೂ ತನಗೆ ಸಹಾನುಭೂತಿ ತೋರದ ಈ ಹುಡುಗ ಇವತ್ತು ಹೀಗಂದದ್ದು ಶೃಂಗಾರಪುರೆಗೆ ಇನ್ನಷ್ಟು ಗಾಬರಿಯನ್ನು ಹುಟ್ಟಿಸಿತು. ಭಾರವಾದ ಹೃದಯದೊಂದಿಗೆ ನಿಧಾನ ನಡಿಗೆಯಲ್ಲಿ ಆತ ಮೆನೇಜರರ ಕೊಠಡಿ ಪ್ರವೇಶಿಸಿದ. ಅಲ್ಲಿ ಅಯ್ಯರ್, ಮಿಸ್ ಮೀರ್‌ಚಂದಾನಿ ಇಬ್ಬರನ್ನೂ ನೋಡಿದಾಗ ಆತನ ಎದೆ ದಸಕ್ಕೆಂದಿತು. ಇವತ್ತು ದೊಡ್ಡ ವಾರ್ನಿಂಗ್ ಮೆಮೊ ನೀಡಲಾಗುತ್ತದೆ. ಅಲ್ಲಾ ಕೆಲಸದಿಂದ ತೆಗೆಯಲು ಜಾರ್ಜ್‌ಶೀಟೆ?

ಗಂಟಲನ್ನು ಸರಿಪಡಿಸುತ್ತಾ ಶಾಂತ ಧ್ವನಿಯಲ್ಲಿಯೆ ಮೆನೇಜರರು “ನೋಡು, ಶೃಂಗಾರಪುರೆ, ನಿನ್ನಿಂದಾಗಿ ನಮಗೆಲ್ಲಾ ತೊಂದರೆಯಾಗುತ್ತಿದೆ. ಮೊನ್ನೆಯ ಮೀಟಿಂಗ್‌ನಲ್ಲಿ ಜಿ.ಎಂ. ಎದುರು ನಮಗೆ ಮುಖಭಂಗ ಆಯಿತು. ಪ್ರತಿಯೊಮ್ದು ಫೈಲ್‌ನಲ್ಲಿ ತಪ್ಪು ಪತ್ರಗಳು ಇವೆ. ನೀನು ಬೇರೆ ಕಡೆ ಕೆಲಸ ಸಿಗುತ್ತದೇ ಎಂದು ಪ್ರಯತ್ನಿಸು. ನಿನ್ನ ಮನೆಯ ಪರಿಸ್ಥಿತಿ ತಿಳಿದುದರಿಂದ ಈ ಬಾರಿಯೂ ಕ್ಷಮಿಸಿದ್ದೇನೆ. ಆದರೆ ಇನ್ನು ಮುಂದೆ ಹೀಗಾದರೆ ಕೆಲಸ ಖಂಡಿತಾ ಹೋಗುತ್ತದೆ. ಇವತ್ತು ಮನೆಗೆ ಹೋಗುವ ಮುನ್ನ ಇದನ್ನೆಲ್ಲಾ ಸರಿಪಡಿಸು” ಎಂದು ಉದ್ದದ ಪಟ್ಟಿಯೊಂದನ್ನು ನೀಡಿದರು.

ಕೋಪ ಬಂದಾಗಲೆಲ್ಲಾ ಇಂಗ್ಲಿಷಿನಲ್ಲಿ ಬೈಗಳನ್ನು ಆರಂಭಿಸುತ್ತಿದ್ದ ಮೆನೇಜರರು ಇಂದು ಮರಾಠಿಯಲ್ಲಿ ಶಾಂತವಾಗಿ ಮಾತನಾಡಿದ್ದು ಶೃಂಗಾರಪುರೆಗೆ ಆಶ್ಚರ್ಯವನ್ನುಂಟು ಮಾಡಿತು. ಆದರೆ ಯಾವುದೋ ಬಿರುಗಾಳಿಯ ಮುನ್ನದ ಶಾಂತತೆ ಇದು ಎಂದು ಹೆದರಿಕೆಯೂ ಹುಟ್ಟಿ, ಹೆಗಾದರೂ ಸರಿ ಈ ರವಿವಾರ ಭಾವನನ್ನೇ ನೇರವಾಗಿ ಕೇಳಬೇಕು. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಬೇಕು. ತಂದೆಯದ್ದೆಲ್ಲಾ ನಿಮಗೆ ಸಿಕ್ಕಿದೆ ಎನ್ನುವ ಅಣ್ಣನಿಗೂ ಲೆಕ್ಕ ಒಪ್ಪಿಸಬೇಕು. ನಿಮ್ಮ ತಂದೆ ನಿವೃತ್ತರಾದಾಗ ತಂದದ್ದೆಲ್ಲಾ ಅವರ ಚಿಕಿತ್ಸೆಗೆ ಖರ್ಚು ಮಾಡಲಾಗಿದೆ ಎಂದು ಒರಟಾಗಿ ಉತ್ತರಿಸಬೇಕು. ತಮ್ಮ ಎನ್ನುವ ವಾತ್ಸಲ್ಯ ಆತನಿಗೆ‌ಇಲ್ಲವಾದರೆ ಅಣ್ಣ ಎಂದು ತಾನು ಗೌರವ ಯಾಕೆ ತೋರಿಸಬೇಕು. ಏನೂ ಆಗದಿದ್ದರೆ ದಾದರ್‌ನಲ್ಲಿನ ಖೋಲಿ ಮಾರಿ ಸಿಕ್ಕಿದ ಹಣದಿಂದ ಅರ್ಧವನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ನೀಡಿ ಆಯಿಯನ್ನು ಅಲ್ಲಿರಿಸಿ ಉಳಿದರ್ಧವನ್ನು ಹಿಡಿದು ತಾನು ತೀರ್ಥಯಾತ್ರೆಗೆ ಹೊರಡಬೇಕು. ಈ ಕೆಲಸ ಸಾಕು.

ಆದರೆ ತನ್ನ ಟೇಬಲ್‌ಗೆ ಬಂದು ಖಂಡೋಬಾನ ಪಟ ನೋಡಿದೊಡನೆಯೆ ಇಂದು ಕೋಲಾಹಲ ಹುಟ್ಟಬೇಕಾದ ಸಂದರ್ಭದಲ್ಲಿ ಎಲ್ಲವೂ ಶಾಂತವಾಗಿ ನಡೆಯಲು ದೇವನ ದಯೆಯೆ ಕಾರಣವಾಗಿರಬಾರದೇಕೆ ಎನ್ನುವ ಯೋಚನೆ ಬಂದು ಇದೇ ಸರಿ ಎಂದು ಮನದಟ್ಟಾದವನಂತೆ ಕೈಮುಗಿದು ನಿಂತ.

ಕ್ಷಣದಲ್ಲಿಯೇ ಹೊಸ ಉತ್ತೇಜನ ದೊರೆತವನಮ್ತೆ ಆತ ಮೆನೇಜರರು ನೀಡಿದ ಪಟ್ಟಿಯಲ್ಲಿ ನಮೂದಿಸಿದ ಫೈಲುಗಳನ್ನು ಒಂದೊಂದಾಗಿ ಹೊರತೆಗೆದು, ಇಷ್ಟು ತಪ್ಪು ತನ್ನಿಂದ ಹೇಗಾಯಿತು ಎಂದು ಅಚ್ಚರಿ ಪಟ್ಟ. ಆಫೀಸಿನಲ್ಲಿ ಆತನ ಸಹೋದ್ಯೋಗಿಗಳು ಒಬ್ಬೊಬ್ಬರಾಗಿ ಹೋದರೂ ಶೃಂಗಾರಪುರೆ ತನ್ನ ಕೆಲಸದಲ್ಲಿ ವ್ಯಸ್ತನಾಗಿದ್ದ. ಅಯ್ಯರ್ ಹದ್ದಿನ ಕಣ್ಣುಗಳಿಂದ ಇವನನ್ನೇ ನೋಡುತ್ತಾ ಕುಳಿತಿದ್ದ. ಮೋರೆ “ಅಯ್ಯರ್ ಸಾಬ್, ಅಯ್ಯರ್ ಸಾ” ಎನ್ನುತ್ತಾ ಆತನಿಗೆ ಬೆಣ್ಣೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದ.ಮಿಸ್. ಮೀರ್‌ಚಂದಾನಿ ಮೆನೇಜರರ ಕ್ಯಾಬಿನ್‌ನಲ್ಲಿ ಡಿಕ್ಟೇಶನ್ ತೆಗೆದುಕೊಳ್ಳುತ್ತಾ ಕುಳಿತಿದ್ದಳು.

ಆರೂವರೆ ಹೊತ್ತಿಗೆ ಮೆನೇಜರ್ ನೀಡಿದ ಪಟ್ಟಿಯಂತೆ ಎಲ್ಲಾ ಫೈಲುಗಳನ್ನು ಸರಿಪಡಿಸಿ ಶೃಂಗಾರಪುರೆ ಸಮಾಧಾನದ ಉಸಿರುಬಿಟ್ಟ. ಟಾಯ್ಲೆಟ್ಟಿಗೆ ಹೋಗಿ ಮೂತ್ರಿಸಿ ಬಂದು, ಸಿಂಕ್‌ನಲ್ಲಿ ಮುಖ ತೊಳೆದು ಬಾಚಣಿಗೆ ತೆಗೆದು ತಲೆ ಬಾಚಿಕೊಂಡ. ಇವತ್ತು ಯಾಕೋ ತಾನು ಮಾಡಿದ ಕೆಲಸದಲ್ಲಿ ಆತನಿಗೆ ತೃಪ್ತಿ ಇದೆ. ನಾಳೆಯಿಂದ ಎಚ್ಚರದಿಂದ ತನ್ನ ಕೆಲಸ ಮಾಡಬೇಕು ಎಂದು ಆತ ನಿರ್ಧರಿಸಿದ.

ಟೇಬಲ್‌ಗೆ ಹಿಂತಿರುಗಿ ಬಂದ ಆತ ಖಂಡೋಬಾನ ಪಟ ತೆಗೆದು ಬಾಕ್ಸ್‌ನಲ್ಲಿ ಇರಿಸಿ ಅದನ್ನು ಚೀಲದಲ್ಲಿ ಸೇರಿಸಿದ. ಲಂಚ್ ಬಾಕ್ಸನ್ನು ಒಳಗೆ ತೆಗೆದಿರಿಸಿದ. ಅಯ್ಯರ್‌ನಲ್ಲಿ ಕೆಲಸ ಮುಗಿಯಿತು ಎಂದು ತಿಳಿಸಿ ಹೊರಟ.

ಲಿಫ್ಟ್ ನಬ್ರ ೨ ತಳಭಾಗದಲ್ಲಿರುವುದು ಕಾಣಿಸಿತು. ಆದರೆ ಲಿಫ್ಟ್ ನಂಬ್ರ ೧ ದುರಸ್ತಿಯಾಗಿ ಚಲಿಸಲು ಆರಂಭಿಸಿದೆ. ಶೃಂಗಾರಪುರೆ ಅದರೆ ಗುಂಡಿ ಅದುಮಿ ಮೇಲಿನಿಂದ ಬರಲು ಕಾದು ನಿಂತ. ಆಗ ತಾನೆ ಬಂದ ಮಿಸ್ ಮೀರ್‌ಚಂದಾನಿ ಲೇಡೀಸ್ ಫಸ್ಟ್ ಎನ್ನುತ್ತಾ ಶೃಂಗಾರಪುರೆಯ ಮುಂದೆ ಬಂದು ನಿಂತಳು. ಲಿಫ್ಟ್ ಬಂದಾಗ ಇಬ್ಬರಿಗೂ ವಕಾಶವಿರುವುದು ಕಾಣಿಸಿತು. ಮಿಸ್ ಮೀರ್‌ಚಂದಾನಿಯ ಜತೆಗೆ ಲಿಫ್ಟ್‌ನಲ್ಲಿ ಹೋಗಬೇಕಾಗಿ ಬಂದದ್ದು ಆತನಿಗೆ ತುಂಬಾ ಖುಶಿ ಕೊಟ್ಟಿತು. ಬೆಳಗಿನಿಂದ ಸಂಜೆಯವರೆಗೆ ಈ ಸಿಂಧಿ ಚೋಕ್ರಿಯ ಸುತ್ತ ಹರಡಿರುವ ಈ ದಿವ್ಯ ಸುವಾಸನೆ ಯಾವುದಿರಬಹುದು ಎಂದು ಆತ ದೀರ್ಘ ಉಸಿರೆಳೆದುಕೊಂಡ.

ಇನ್ನೇನು ಶೃಂಗಾರಪುರೆ ಲಿಫ್ಟ್‌ನ ಒಳಗೆ ಹೋಗಬೇಕೆಂದಿರುವಾಗ ಓಡಿ ಬಂದ ಅಯ್ಯರ್ ಆತನನ್ನು ಬದಿಗೆ ಸರಿಸಿ ನನಗೆ ಅ‌ಎಜೆಂಟಾಗಿ ಹೋಗಬೇಕಾಗಿದೆ ನೀನು ಆ ಬಳಿಕ ಬಾ ಎಂದು ಆಜ್ಞೆಮಾಡಿದ. ಬಾಗಿಲು ಮುಚ್ಚುತ್ತಾ “ಮತ್ತೆ ಇಲ್ಲಿ ಕಾಯಬೇಡ. ಮೆಟ್ಟಿಲುಗಳನ್ನು ಇಳಿಯುತ್ತಾ ಬಾ. ನಿನ್ನ ಡೊಳ್ಳು ಹೊಟ್ಟೆ ಸರಿಯಾದೀತು” ಎಂದು ನಗೆಯಾಡಿದ. ಬಾಗಿಲ ಎಡೆಯಿಂದ ಮಿಸ್ ಮೀರ್‌ಚಂದಾನಿ “ಬ್ಯಾ ಶಿಂಗೂ” ಎಂದು ಕೈಬೀಸಿದಾಗ ಒಳಗಿದ್ದವರೆಲ್ಲಾ ಗೊಳ್ಳೆಂದು ನಕ್ಕರು. ಬೆಳಗಿನಂತೆ ಕೆಟ್ಟದಾಗಿ ಬೈಯಬೇಕೆಂದು ಅನಿಸಿದರೂ ಶೃಂಗಾರಪುರೆ ಉಕ್ಕಿ ಬರುತ್ತಿದ್ದ ಕೋಪವನ್ನು ತಡೆಯುತ್ತಾ ಮೆಟ್ಟಿಲುಗಳತ್ತ ನಡೆದ.

ಆತ ಎರಡು ಮೆಟ್ಟಿಲುಗಳನ್ನು ಇಳಿದಿದ್ದನಷ್ಟೆ ‘ಢಾಂ” ಎನ್ನುವ ಭೀಕರ ಸದ್ದು ಕೆಳಗಿನಿಂದ ಕೇಳಿಸಿತು. ಮೂರು ವರ್ಷಗಳ ಹಿಂದೆ ಶೇರು ಮಾರ್ಕೆಟ್ ಕಟ್ಟಡದಲ್ಲಿ ಬಾಂಬ್ ಸ್ಪೋಟವಾದಾಗ ಆಫೀಸಿನಲ್ಲಿ ಕುಳಿತಿದ್ದ ಶೃಂಗಾರಪುರೆ ಇದೇ ರೀತಿ ಸದ್ದು ಕೇಳಿ ಬೆಚ್ಚಿ ಬಿದ್ದಿದ್ದ. ನಮ್ಮ ಕಟ್ಟಡಕ್ಕೆ ಬಾಂಬು ಬಿತ್ತೇ. ಹಾಗಾದರೆ ಮೆಟ್ಟಿಲುಗಳೇ ಸುರಕ್ಷಿತವೆಂದು ಆತ ದಡದಡನೆ ಕೆಳಗೆ ಇಳಿಯಹತ್ತಿದ.

ಅಕ್ಕಪಕ್ಕದ ಕಟ್ತಡಗಳಿಂದಲೂ, ಬೀದಿಯಿಂದಲೂ ಓಡಿ ಬಂದ ಜನರು ಲಿಫ್ಟ್ ನಂಬ್ರ ೧ರ ಮುಂದೆ ಜಮಾಯಿಸಿದ್ದರು. ಗುಂಪಿನೊಳಗೆ ನುಸುಳಿ ನೋಡಿದಾಗ ಲಿಫ್ಟ್ ಕ್ಯ್ರಾಶ್ ಆಗಿ ಕೆಳಗಿನ ಪಿಟ್‌ನಲ್ಲಿ ಬಂದು ಬಿದ್ದದ್ದು ಕಾಣಿಸಿತು. ಅಲ್ಲಿಂದ ಸಿಕ್ಕಿಬಿದ್ದ ಜನರ ಆಕ್ರಂದನ ಕೇಳಿಸುತ್ತಿತ್ತು. ಈ ಲಿಫ್ಟ್‌ನಲ್ಲಿ ತಾನಿರಬೇಕಿತ್ತು ಎನ್ನುವುದು ಹೊಳೆದದ್ದೆ ಶೃಂಗಾರಪುರೆ ಒಂದು ಕ್ಷಣ ನಡುಗಿದ. ಮೇಲಿನಿಂದ ಓಡಿ ಬಂದ ಮೋರೆ “ಕಾಯ್ ಜಾಲ” ಎಂದು ಕೇಳುತ್ತಿದ್ದರೂ ಆತನಿಗೆ ಉತ್ತರಿಸದೆ ಶೃಂಗಾರಪುರೆ ಗುಂಪಿನಿಂದ ಹಿಂದೆ ಸರಿದ. ಅಲ್ಲಿ ಕೆಳಗೆ ಸಿಕ್ಕಿ ಬಿದ್ದವರು ತನ್ನ ಪರಿಚಿತರು, ಅವರಲ್ಲಿ ಇಬ್ಬರು ತನ್ನ ಸಹೋದ್ಯೋಗಿಗಳು. ಅವರಿನ್ನೂ ಜೀವಂತ ಇದ್ದಾರೆಯೆ ಇಲ್ಲವೆ ಎನ್ನುವ ಕುತೂಹಲ ಕೂಡಾ ಇಲ್ಲದವನಂತೆ ಆತ ಹೆಬ್ಬಾಗಿಲಿನತ್ತ ಸಾಗಿದ.

ಮತ್ತೆ ಚರ್ಚ್‌ಗೇಟ್‌ನತ್ತ ಸಾಗುತ್ತಿರುವಂತೆಯೇ ಶೃಂಗಾರಪುರೆ ಖಂಡೋಬಾನ ಧ್ಯಾನದಲ್ಲಿ ತೊಡಗಿದ್ದ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.