ಕಣ್ಮರೆಯ ಕಾಡು

ಸಿಗ್ನಲ್ ಬಳಿ ಬಸ್ಸು ನಿಂತಾಗ, ಡ್ರೈವರನಿಂದ ಬೈಸಿಕೊಳ್ಳುತ್ತ ಅವಸರದಿಂದ ಇಳಿದು, ಸನಿಹದ ಗೂಡಂಗಡಿಯಲ್ಲಿ ಬಿಸ್ಕತ್ತಿನ ಪೊಟ್ಟಣ ತಗೊಂಡು, ಗ್ಯಾರೇಜಿನ ಪಕ್ಕದ ಒಳದಾರಿಯಿಂದ ತವರಿನ ಕಡೆ ನಡೆಯತೊಡಗಿದ ಕುಸುಮಳ ಮನಸ್ಸು ಈಗ ಹೊಸದೇನನ್ನೂ ಗ್ರಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಇಲ್ಲವಾದರೆ ಪ್ರತಿ ಸಲ ಹೀಗೆ ತವರಿಗೆ ಬರುವಾಗಲೂ ತಾನು ಹುಟ್ಟಿ ಬೆಳೆದ ಈ ಕಾರ್ಖಾನೆ ಕಾರ್ಮಿಕರ ವಸಾಹತಿನ ಪ್ರದೇಶದಲ್ಲಿ ಆಗಿರುವ ಹೊಸ ಬದಲಾವಣೆಗಳನ್ನು ಗಮನಿಸುತ್ತ-ನಂತರ ತಾಯಿ ಯಮುನಾ ಮತ್ತು ತಂಗಿ ಪೂರ್ವಿಯ ಜತೆ “ಅರೇ ಆ ಝೆರಾಕ್ಸ್ ಅಂಗಡಿ ಇದ್ದಲ್ಲಿ ಹೋಟ್ಲು ಹೇಗೆ ಬಂತು? ಗಿರಣಿ ಪಕ್ಕ ಕಬ್ಬಿನ ರಸದ ಅಂಗಡಿ ಇಟ್ಟಿದ್ದ ಸೊಲ್ಲಾಪುರಿ ಹೆಂಗಸು ಎಲ್ಲಿ ಹೋದಳು? ದಿಲ್‌ವಾರ್ ಭಾಯಿಯ ಮನೆಗೆ ಇನ್ನೂ ಬೀಗವಿದೆಯಲ್ಲ!” ಹೀಗೆ ನಾಟಕೀಯವಾದ ನಿಜದಲ್ಲಿ ನಂಟನ್ನು ಹಸಿಗೊಳಿಸುತ್ತಿದ್ದಳು. ಆದರೆ ಇಂದು ಎಂದಿನ ಹಾಗಿರಲಿಲ್ಲ. ಹನ್ನೆರಡು ವರುಷಗಳ ಹಿಂದೆ ಮನೆ ತೊರೆದು ಹೋಗಿದ್ದ ತಮ್ಮ ಛೋಟೂ-ಅವನ ಹೆಸರು ಮಕರಂದ, ಆದರೆ ಕುಸುಮ ಮತ್ತು ಪೂರ್ವಿಯ ನಂತರ ಹುಟ್ಟಿದವನಾದ್ದರಿಂದ ಎಲ್ಲರೂ ಛೋಟೂ ಅಂತಲೇ ಕರೆಯುತ್ತಿದ್ದರು-ಇಲ್ಲೇ ಸಮೀಪದಲ್ಲೇ, ಅತಿ ಸಮೀಪದಲ್ಲೇ ಇದ್ದಾನೆ ಎಂಬ ಮಾಹಿತಿ ಇಂದು ಕುಸುಮಳಿಗೆ ಸಿಕ್ಕಿತು. ತಕ್ಷಣ ಹಾಫ್‌ಡೇ ರಜೆ ಹಾಕಿ, ತನ್ನ ತವರಾದ ಪರುಳೇಕರ್ ಕುಟುಂಬದ ನಿತ್ಯ ಸಂಸಾರವೆಂಬ ದೋಸೆಯನ್ನು ಮತ್ತೆ ಮಗುಚಲೆಂಬಂತೆ ಬಂದಿರುವ ಈ ಸುದ್ದಿಯನ್ನು ಹೇಗೆ ಸ್ವೀಕರಿಸಬೇಕು ಎಂಬುದೇ ತಿಳಿಯದಂಥ ಸುನ್ನ ಮನಸ್ಸಿನಲ್ಲಿ ಮನೆಯನ್ನು ಸಮೀಪಿಸತೊಡಗಿದಳು.

ಅಪ್ಪ ಪರುಳೇಕರ್ ಕಾರ್ಖಾನೆಯಲ್ಲಿ ಹಿರಿಯ ಕಾರ್ಮಿಕನಾಗಿದ್ದ. ಹಾಗೆಂದೇ ಒಂಟಿ ಕೋಣೆಯ ಕ್ವಾರ್ಟರ್ಸ್ ಅವನಿಗೆ ಎಂದೋ ಲಭ್ಯವಾಗಿತ್ತು. ಪೂರ್ವಿ ಮತ್ತು ಛೋಟೂ ಹುಟ್ಟಿದ್ದು ಇಲ್ಲೇ. ಸಣ್ಣವಳಿದ್ದಾಗ ಪಾತ್ರೆ ಪಡಗದೊಂದಿಗೆ ಟೆಂಪೋದಲ್ಲಿ ಡೊಂಬಿವಿಲಿಯಿಂದ ಇಲ್ಲಿಗೆ ಬಿಡಾರ ಬಂದ ನೆನಪು ಕುಸುಮಳಿಗೆ ಇನ್ನೂ ಇದೆ. ಟೆಂಪೋ ಡ್ರೈವರು ಐದು ರೂಪಾಯಿ ಟಿಪ್ಸ್ ಜಾಸ್ತಿ ಬೇಕೆಂದು ದೊಡ್ಡದಾಗಿ ಅಪ್ಪನನ್ನು ಏಕವಚನದಲ್ಲಿ ಬೈದು ಜಗಳ ಮಾಡಿದ್ದು ನೆನಪಿದೆ. ಮೂರೂ ಮಕ್ಕಳು ಹೇಗೆ ಈ ಪುಟ್ಟ ಬಿಡಾರದಲ್ಲಿ ಬೆಳೆದೆವೋ ಯಾವಾಗ ಬೆಳೆದೆವೋ ಎನ್ನುವುದು ತಿಳಿಯುವುದರೊಳಗೇ ಕುಸುಮಳ ಮದುವೆ ಆಯಿತು. ಪೂರ್ವಿಯ ಪ್ರೇಮ ವಿವಾಹವೂ, ಇದೇ ಕಾರ್ಖಾನೆಯ ಕಾರ್ಮಿಕ ಸುಹಾಸ ಭಾಲೇಕರನ ಜತೆ ಆಗಿ, ಅವನೂ ಇಲ್ಲೇ ಉಳಿದು, ಈ ಪ್ರೇಮ ವಿವಾಹಕ್ಕೆ ಕೆಲ ದಿನಗಳಿರುವಾಗಲೇ ಛೋಟೂನ ಕಣ್ಮರೆಯೂ ಆಗಿ, ನಂತರ ಪರುಳೇಕರನ ದೇಹಾಂತವೂ ಆಗಿ, ಕ್ವಾರ್ಟರ್ಸಿನಲ್ಲಿ ಹೀಗೆ ಬಿಡಾರ ಮುಂದುವರೆದಿತ್ತು.

ಹನ್ನೆರಡು ವರ್ಷಗಳ ಹಿಂದಿನ ಪ್ರಕರಣ ಅದು. ಛೋಟೂ ಆಗಷ್ಟೇ ಪಿಯುಸಿ ಫೇಲಾಗಿದ್ದ. ಕಳ್ಳನಂತೆ ಮನೆಯಲ್ಲೇ ಉಳಿಯುತ್ತಿದ್ದ. “ಯಾಕೋ ಛೋಟೂ….ಹೊರಗೆ ಹೋಗೋ” ಎಂದು ಹೇಳಿದರೆ “ನನ್ನನ್ನು ಮಕರಂದ ಅಂತ ಕರೀರಿ. ಛೋಟೂ ಅನ್ನಬೇಡಿ. ಫೇಲಾಗಿದ್ದೇನೆ ಅಂತ ದಾದಾಗಿರಿ ಮಾಡಬೇಡಿ ಎಲ್ಲಾ” ಎಂದು ರೇಗುತ್ತಿದ್ದ. ಪೂರ್ವಿಯ ಮದುವೆ ನಿಶ್ಚಯವಾಗಿದ್ದ ದಿನಗಳವು. ಸಹಾಯಕ್ಕೆಂದು ಬಂದಿದ್ದ ಕುಸುಮಾಳೂ ಛೋಟೂನನ್ನು “ಎಲ್ಲಾದರೂ ಟೆಂಪರರಿ ಕೆಲಸ ಹುಡುಕು ಹೀಗೆ ಮನೇಲಿ ಕೂತರೆ, ಹಿಂದೆ ಬೀಳುತ್ತೀ” ಎಂದಾಗ ಅಮ್ಮ ಛೋಟೂನ ಬಾಜು ವಹಿಸಿಕೊಂಡವಳಂತೆ “ಜಾಣೆಯರು ನೀವು ಅಂತ ಧಿಮಾಕು ನಿಮಗೆ. ಅವನ ಕಷ್ಟದ ಪರಿವೆಯಿಲ್ಲ. ಅವನು ತನ್ನ ಮನೆಯಲ್ಲಿದ್ದಾನೆ ನಿಮಗೇನು ತ್ರಾಸು?” ಎಂದೆಲ್ಲ ವಿಚಿತ್ರ ರಂಪ ಮಾಡಿ ಅಕ್ಕತಂಗಿಯರ ಬಾಯಿ ಮುಚ್ಚಿಸುತ್ತಿದ್ದಳು. ಇಂಥ ಒಂದು ಮಧ್ಯಾಹ್ನ ಐದಾರು ಯುವಕರು ಬಂದು, ಮಕರಂದನನ್ನು ದರದರ ಹೊರಗೆಳೆದು ಹಾಕೀ ಸ್ಟಿಕ್‌ನಿಂದ ಹೊಡೆದು, ಸಾಲು ಮನೆಗಳ ಮಧ್ಯ ಎಲ್ಲರೆದುರು ದವಡೆಯಿಂದ ರಕ್ತ ಸೋರುವಂತೆ ಗುದ್ದಿ-“ಮೋಸ ಮಾಡ್ತೀಯೇನೋ, ನೀನು ಹಣಾ ಮರಳಿಸೋ ತನಕ, ಪ್ರತಿ ವಾರ ಬಂದು ಹೀಗೆ ಎಲ್ಲರೆದುರು ಹೊಡೆದು ಹೋಗ್ತೀವಿ, ಖಬರ್ ದಾರ್”ಎಂದು ಪೂರ್ವಿ, ಕುಸುಮ ಮತ್ತು ತಾಯಿ ಯಮುನಾರನ್ನು ವಿಚಿತ್ರವಾಗಿ ನೋಡಿ ಹೋಗಿಬಿಟ್ಟರು.

ಮಕರಂದ ಯಾರದೋ ಮಾತು ಕೇಳಿ, ಫೈನಾನ್ಸ್ ಬಿಸಿನೆಸ್ ಮಾಡುತ್ತೇನೆ ಎಂದು ಯಾರ್‍ಯಾರಿಂದಲೋ ಇಪ್ಪತ್ತು ಸಾವಿರ ಇಸಕೊಂಡು ಅದನ್ನು ಎಲ್ಲೋ ಹಾಕಿ ಮುಳುಗಿಸಿ ಬಿಟ್ಟಿದ್ದ. ಈ ಮಾರಾಮಾರಿ ನಡೆದಾಗ ಎರಡನೇ ಶಿಫ್ಟಿನಲ್ಲಿದ್ದ ಅಪ್ಪ ಸುದ್ದಿ ತಿಳಿದು ಬಂದವನೇ ವಿವರ ಗೊತ್ತಾದದ್ದೇ ಅಪಮಾನದಿಂದ ನಖಶಿಖಾಂತ ಥರಥರ ಕಂಪಿಸಿ ಮಾತು ಬಾರದೆ ಉಮ್ಮಳಿಸಿ ಅತ್ತುಬಿಟ್ಟ. ಗೋವಾ ಗಡಿಯಿಂದ ಬರಿಗೈಲಿ ಮುಂಬಯಿಗೆ ಬಂದಿದ್ದ ತಾನು, ಲೋಕಲ್ ರೈಲುಗಳಲ್ಲಿ ಬಾಚಣಿಗೆ ಮಾರಿ, ರೇಡಿಯೋ ರಿಪೇರಿ ಅಂಗಡಿಯಲ್ಲಿ ಸಹಾಯಕನಾಗಿ ಸೇರಿ ಹೇಗೆ ಈ ಬಾಳು ಕಟ್ಟಿದೆ. ಎಷ್ಟು ಕಷ್ಟದಿಂದ ನೀಯತ್ತಿನಿಂದ ಕಟ್ಟಿದೆ. ಮೂರು ಮಕ್ಕಳ ಸಂಸಾರವನ್ನು ಕಾರ್ಖಾನೆಯಲ್ಲಿ ಡಬಲ್ ಡ್ಯೂಟಿ ಮಾಡಿ ಹೇಗೆ ತೂಗಿಸುತ್ತ ಬಂದೆ-ಎಂಬುದನ್ನು ಮಕ್ಕಳೆದುರು ಮೊದಲ ಬಾರಿಗೆ, ಯಾರೋ ಅಪರಿಚಿತರ ಎದುರು ಹೇಳುವಂತೆ ಭಯಮಿಶ್ರಿತ ಆವೇಶದಲ್ಲಿ ಹೇಳಿ ಹೇಳಿ ಬಿಸುಸುಯ್ಯತೊಡಗಿದ. ಛೋಟೂನ ರಕ್ತ ಸೋರುವ ದವಡೆಗೆ ಹಚ್ಚಲು ಪಕ್ಕದ ಮನೆಯ ಫ್ರಿಜ್ಜಿನಿಂದ ಐಸ್ ತಂದ ಪೂರ್ವಿಗೆ “ಯಾರಿಗೆ ಹೇಳಿ ಹೋಗಿದ್ದೆ ನಾಚಿಕೆಯಾಗೂದಿಲ್ಲ, ಮಂದಿಯ ಹಣ ಮುಳುಗಿಸಿ ಮೋಸಮಾಡಿ, ಮನೆಯ ಮರ್ಯಾದೆ ಮೂರು ಕಾಸು ಮಾಡಿದ ತಮ್ಮನ ಪೆಟ್ಟಿಗೆ ಹಚ್ಚಲು ಐಸ್ ಕೊಡಿ ಎಂದು ಹೇಳಿಕೊಂಡು ಊರೆಲ್ಲ ತಿರುಗಲು” ಎಂದು ತಾರಕಸ್ವರದಲ್ಲಿ ಕೂಗಿದ ಪರುಳೇಕರ್ ಛೋಟೂನನ್ನು ಕಾರ್ಖಾನೆಯ ಹೆಲ್ತ್ ಸೆಂಟರಿನ ಡಾಕ್ಟರರ ಬಳಿ ಒಯ್ಯಲೂ ನಿರಾಕರಿಸಿ ಬಿಟ್ಟ.

ನಂತರ ಕತ್ತಲಾದ ಮೇಲೆ ಕುಸುಮಾ ಮತ್ತು ಅಮ್ಮ ಸೇರಿ ಛೋಟೂನನ್ನು ರಿಕ್ಷಾದಲ್ಲಿ ಹಾಕಿ ಭಾಂಡುಪ್ ಉಪನಗರಕ್ಕೆ ಹೋಗಿ ಡಾಕ್ಟರಿಗೆ ತೋರಿಸಿ ತಂದರು. ಮನೆ, ಮರ್ಯಾದೆ, ನೀಯತ್ತು, ಹಣ ಅಂತ ಬೈಯುವಾಗ ಪರುಳೇಕರ್ ಇಡೀ ಚಾಳಿನ ಸಾಲು ಮನೆಗಳಿಗೆ ಕೇಳಿಸುವಂತೆ ಬಾಗಿಲ ಕಡೆಗೆ ಮುಖ ಮಾಡುತ್ತಿದ್ದ. ಅಕ್ಕಪಕ್ಕದ ಮನೆಯವರೆಲ್ಲರೂ ಒಂದು ತಣ್ಣನೆಯ ಲಕ್ಷಣ ರೇಖೆಯ ಆಚೆಗೇ ಉಳಿದುಕೊಂಡು ಸ್ಪಂದಿಸುತ್ತಿದ್ದರು. ಇದೊಂದು ಬಿಟ್ಟರೆ ಮತ್ತೆಲ್ಲ ಸರೀಗಿದೆ ಎಂಬಂತೆ “ಭಾಭೀ ‘ಛಾಯಾಗೀತ್’ ನೋಡಲು ಬರುವುದಿಲ್ಲವೆ? ‘ಹಮ್‌ಲೋಗ್’ ನೋಡಲು ಬರುವುದಿಲ್ಲವೆ?” ಎಂದೆಲ್ಲ ಮಾತಾಡುತ್ತಿದ್ದರು. ಇರುವ ಹತ್ತು ಚದುರಡಿಯ ಮನೆಯಲ್ಲಿ ನೋಯುವ ಕಾಲು ಚಾಚಿ ಮುದುಡಿ ಕೂತಿರುವ ಛೋಟೂನನ್ನು ಗಂಭೀರವಾಗಿ ಇಣುಕಿ ನೋಡಿ ಮನೆಯೆದುರು ಹಾಯುತ್ತಿದ್ದರು. ಅತಿ ಸಮೀಪ ಬಂದು ನಿಂತಿರುವ ಪೂರ್ವಿಯ ಮದುವೆಯ ದಿನಾಂಕವೂ ಈಗ ಪರುಳೇಕರನ ಮನದಲ್ಲಿ ಥರಥರ ಕಂಪಿಸತೊಡಗಿತು. “ಪೂರ್ವಿಯ ಲಗ್ನ ನಿನ್ನೀ ಲಫಡಾದಿಂದಾಗಿ ಮುರಿಯುವುದು ಬೇಡ. ನನ್ನ ಸರ್ವೀಸಿನಲ್ಲಿ ಉಳಿಸಿದ ಎಲ್ಲಾ ಹಣವನ್ನು ಈ ಲಗ್ನಕ್ಕೆ ಹಾಕಿದ್ದೇನೆ. ಇದು ಮುರಿದರೆ ಸತ್ಯಾನಾಶವಾಗಿ ಹೋಗ್ತೇನೆ. ನಿನ್ನಿಂದ ಮನೆಯ ಉದ್ಧಾರ ಆಗೋದು ಅಷ್ಟೇ ಇದೆ. ಹೋಗು ಎಲ್ಲಾದರೂ ಹಾಳಾಗಿ ಹೋಗು”ಎಂದು ಛೋಟೂನನ್ನು ನಡುರಾತ್ರಿ ಹೊರಹಾಕಿಬಿಟ್ಟ. ಕಂಗಾಲಾದ ಛೋಟೂ ಗಾಯಗೊಂಡ ಪ್ರಾಣಿಯಂತೆ ಆಸರೆಗಾಗಿ ಅಕ್ಕಂದಿರ ಮುಖವನ್ನೇ ನೋಡುತ್ತ ಮೆಲ್ಲಗೆ ಎದ್ದು ನಿಂತು ಬಾಗಿಲಲ್ಲಿ ತಂತಿಯ ಮೇಲೆ ಒಣಗುತ್ತಿದ್ದ ಟೀಶರ್ಟನ್ನು ಅದಾಗಲೇ ತೊಟ್ಟಿದ್ದ ಮಾಸಲು ಹಳೇ ಜೀನ್ಸ್ ಪ್ಯಾಂಟಿನ ಮೇಲೆ ಹಾಕಿಕೊಂಡು ಕುಂಟುತ್ತ ಕತ್ತಲಲ್ಲಿ ಹೋಗಿಬಿಟ್ಟ. ನಡೆಯುತ್ತಿರುವ ಸಂಗತಿಯ ಮೇಲೆ ಯಾವ ಬಗೆಯ ನಿಯಂತ್ರಣವೂ ಇಲ್ಲದಂತೆ ಯಮುನಾ ಬಾಯಿ ದೊಡ್ಡಕ್ಕೆ ಚೀರಲೂ ಆಗದೆ ಬಿಕ್ಕುತ್ತ, ಹೊರಗಿನ ಸಮಾಜ, ಮಗಳ ಮದುವೆ ಎಂಬೆಲ್ಲ ಅಜ್ಞಾತ ಭಯದಲ್ಲಿ ಬಾಯಿ ಕಳೆದುಕೊಂಡು ಮೋರಿಗೆ ಆತು ಕುಸಿದು ಕೂತುಬಿಟ್ಟಳು.

ಕುಸುಮಾಳೊಬ್ಬಳೇ ಬಾಗಿಲಲ್ಲಿ ನಿಂತು, ಕೊನೆಯಲ್ಲಿ ಬೀದಿ ದೀಪದ ಅಡಿಗೆ ಅವನು ಕುಂಟುತ್ತಾ ದೂರವಾಗುತ್ತ ಮರೆಯಾಗುವವರೆಗೆ ನೋಡಿದಳು. ಆಗಷ್ಟೆ ತಂತಿಯಿಂದ ಜಗ್ಗಿ ಹಾಕಿಕೊಂಡಿದ್ದ ಅವನ ಇಸ್ತ್ರಿಯಿಲ್ಲದ ತಿಳಿಹಳದಿ ಟೀ ಶರ್ಟಿನ ಬೆನ್ನಿನ ಮೇಲಿನ ತಂತಿಯ ಕುರುಹಿನ ನೆರಿಗೆಯ ಗೆರೆ ಬೀದಿ ದೀಪದಲ್ಲೂ ಸ್ಪಷ್ಟವಾಗಿ ಕಾಣುತ್ತಿತ್ತು.

ಮೆಲ್ಲಗೆ ದೂರವಾದ ಛೋಟೂನ ತಿಳಿಹಳದಿ ಟೀಶರ್ಟಿನ ಆ ನೆರಿಗೆಯ ಗೆರೆ ಕುಸುಮಳ ಮನದಿಂದ ಎಂದೂ ಮಾಸಿಲ್ಲ. ಗಂಡನ ಮನೆಗಿಂತ ಜಾಸ್ತಿ ಅವಳು ಇಲ್ಲಿಗೇ ಬರುತ್ತಿದ್ದಳು. ಏಕೆಂದರೆ ಕಾರ್ಖಾನೆ ಗೇಟಿನ ಬಳಿ ಅಥವಾ ರೇಷನ್ ಅಂಗಡಿಯ ಬಳಿ ಅಪರಿಚಿತರು ಸಿಕ್ಕಿ ಯಮುನಾಬಾಯಿಯನ್ನೋ ಪರುಳೇಕರನನ್ನೋ-“ಏನು? ಎಲ್ಲಿ ಬಚ್ಚಿಟ್ಟಿದ್ದೀರಿ ಮಗನನ್ನು ಬಿಡುವುದಿಲ್ಲ ನಾವು ಹಾಗೆಲ್ಲ” ಎಂದೆಲ್ಲ ಬೆದರಿಸುತ್ತಿದ್ದರು. ನಿದ್ದೆಗೆಡಿಸುವ ಭಯವೊಂದು ಈ ಬಿಡಾರವನ್ನು ಆವರಿಸಿಕೊಂಡಿತು. ಆಗೆಲ್ಲ ಪರುಳೇಕರ “ಅವನು ನಮ್ಮ ಪಾಲಿಗೆ ಸತ್ತ ಹಾಗೆ” ಎಂದು ಬೇಕಾದಕ್ಕಿಂತ ದೊಡ್ಡ ದನಿಯಲ್ಲಿ ತನ್ನ ಸಹೋದ್ಯೋಗಿಗಳಿಗೆ ಕೇಳಿಸುವ ಹಾಗೆ ಕೂಗುತ್ತಿದ್ದ. ಕಾರ್ಖಾನೆಯಲ್ಲಿಯ ತನ್ನ ಪ್ರತಿಷ್ಠೆ ಮತ್ತು ಪೂರ್ವಿಯ ನಿಗದಿತ ಮದುವೆ ಇವೆರಡಕ್ಕೂ ಬೇಕಿದ್ದ ಏನೋ ಒಂದನ್ನು ಈ ಪ್ರಕರಣದ ಈ ಆವೇಶದಲ್ಲಿ ಅವನು ಪಡೆಯುತ್ತಿರುವಂತಿತ್ತು. ಛೋಟೂ ಈಗ ಬರೋಡಾದಲ್ಲಿ ಇದ್ದಾನಂತೆ, ಕೊಲ್ಹಾಪುರದಲ್ಲಿ ಯಾರಿಗೋ ಸಿಕ್ಕನಂತೆ, ಹೀಗೆಲ್ಲ ಗಾಳಿಯಲ್ಲಿ ಕಾಗದದ ಚೂರುಗಳಂತೆ ವದಂತಿಗಳು ಹಾರಿ ಬಂದಾಗ, ಪುಟ್ಟ ಬಿಡಾರದಲ್ಲಿ ನಾಲ್ವರೂ ರಾತ್ರಿ ನಿದ್ದೆ, ಮಾತು ಎರಡೂ ಇಲ್ಲದೆ ತೆಪ್ಪಗೆ ಝೀರೋ ಕ್ಯಾಂಡಲ್ ದೀಪದಲ್ಲಿ ಕೂತಿರುತ್ತಿದ್ದರು. ಪಟಾಕಿ ಹಚ್ಚಲು ಹೆದರುತ್ತಿದ್ದ ಮೊನ್ನೆಮೊನ್ನೆಯ ಪೋರ, ಹಠಾತ್ತನೆ ಈ ಪುಟ್ಟ ಬಿಡಾರದೊಳಗೆ ಹಿಡಿಯಂತಾಗಿಬಿಟ್ಟನಲ್ಲ ಎಂದು ಕುಸುಮಳಿಗೆ ಜೀವ ಎಳೆಯುತ್ತಿತ್ತು. ಅವನನ್ನು ಅತಿ ಹೆಚ್ಚು ಎತ್ತಿ ಆಡಿಸಿದವಳೇ ಅವಳು.

ಪೂರ್ವಿಯ ಭಾವಿ ಪತಿ ಸುಹಾಸ್ ಭಾಲೇಕರ ಇದೇ ಸಮಯ ಸಾಧಿಸಿ, ಈ ಹತ್ತು ಚದುರಡಿಯಲ್ಲಿ ತನ್ನ ಒಜ್ಜೆಯನ್ನು ಹೇರತೊಡಗಿದ. “ಈ ಮನೆಯಲ್ಲಿ ಛೋಟೂನ ಯಾವ ಕುರುಹೂ ಇರಬಾರದು. ಅವನ ಫೋಟೋಗಳು ಒಂದೂ ಇರಕೂಡದು.” ಎಂದು ತಾಕೀತು ಹಾಕಿದ. ಫ್ರೇಮಿನಲ್ಲಿದ್ದ ಅವನ ಫೋಟೋಗಳನ್ನು ತೆಗೆಯಲಾಯಿತು. ಮದುವೆಯನ್ನು ಸರಳವಾಗಿ ‘ಆರ್ಯಸಮಾಜ’ದಲ್ಲಿ ನಿಯೋಜಿಸಲಾಯಿತು. ಈ ಸರಳತೆಯಿಂದಾಗಿ ಉಳಿತಾಯಗೊಂಡ ಹಣವನ್ನು ಸುಹಾಸ್ ಭಾಲೇಕರ್ ಕ್ಯಾಶ್ ಉಡುಗೊರೆಯಾಗಿ ತನಗೆ ಕೊಡಬೇಕೆಂದ. ಮದುವೆಯ ದಿನ ಸಿನಿಮೀಯವಾಗಿ ಛೋಟೂ ಏನಾದರೂ ಬಂದುಬಿಟ್ಟರೆ ತಾನು ಮಂಟಪವನ್ನೂ ತ್ಯಜಿಸಿ ಹೋಗುತ್ತೇನೆ ಎಂದೂ ಬೆದರಿಕೆ ಹಾಕಿದ. ಮದುವೆಯ ವೇಳೆ ಒಂದೊಮ್ಮೆ ಛೋಟೂ ಬಂದರೆ-“ಅದರಿಂದ ಲಗ್ನ ಮುರಿಯುತ್ತದೆ. ನನ್ನ ಬಾಳು ಹಾಳಾಗುತ್ತದೆ.” ಎಂದು ಹೇಳಿ ಎಂದು ಪೂರ್ವಿ ತನ್ನೆಲ್ಲ ಗೆಳತಿಯರನ್ನು ಆರ್ಯ ಸಮಾಜದ ಹೊರಗೆ ನಿಲ್ಲಿಸಿದ್ದಳು. ಮದುವೆಯ ನಂತರ ವಧೂವರರಿಗೆ ಬಿಡಾರದಲ್ಲಿ ಪ್ರೈವೇಸಿ ಸಿಗಲಿ ಅಂತ ಪರುಳೇಕರ ಮತ್ತು ಯಮುನಾಬಾಯಿ, ಕುಸುಮಾಳ ಮನೆಯಲ್ಲಿ ಎರಡು ದಿನ ಉಳಿದು ಮರಳಿ ಬಂದಾಗ ಸುಹಾಸ ಮನೆಯ ಸಂದಿಗೊಂದಿಯಲ್ಲಿದ್ದ ಛೋಟೂನ ಹಳೇ ಕೆನ್ವಾಸ್ ಬೂಟು, ಸ್ವೆಟರ್, ಪುಸ್ತಕ ಇತ್ಯಾದಿಗಳನ್ನು ಕಿತ್ತೆಸೆಯತೊಡಗಿದ್ದ. “ದುಡಿಯುತ್ತಿರುವ ನನ್ನ ಬಳಿಯೇ ಇಲ್ಲ ಇಂಥ ಶೋಕೀ ಸಾಮಾನುಗಳು! ದೊಡ್ಡ ಹೀರೋ…ನಿನ್ನ ಫೇಲ್ ತಮ್ಮ” ಎಂದು ಪೂರ್ವಿಯನ್ನು ಹಂಗಿಸತೊಡಗಿದ.

“ಹಾಗಾದರೆ ಅವನ ಆಫ್ಟರ್‌ಶೇವ್ ಲೋಶನ್-ನೀನ್ಯಾಕೆ ಬಳಸುತ್ತೀ?” ಎಂದಾಕೆ ಕೇಳಿದಾಗ “ಏಯ್…..ನಾನೀಗ ಗಂಡ. ಬಹುವಚನ ಕೊಡು ಬಹುವಚನಾ”ಎಂದು ಚೀರಿದ. ಮತ್ತು ಪರುಳೇಕರ್ ದಂಪತಿಗಳ ಸಮ್ಮುಖದಲ್ಲೇ ಛೋಟೂನ ಸಾಮಾನುಗಳನ್ನು “ನನಗಿಂತ ಸ್ಮಾರ್ಟ್ ಇದ್ದೀಯೇನೋ ಗಾಂಡೂ….ಇಂಗ್ಲೀಷ್ ಮೀಡಿಯಂ ಕಲ್ತಿದ್ದೀ ಅಂತ ಕೊಬ್ಬು ಇತ್ತಲ್ಲಾ ನಿನಗೆ…” ಎನ್ನುತ್ತ ಹೊರಗೆ ಎಸೆಯತೊಡಗಿದ. ಯಮುನಾಬಾಯಿ ಸಟಸಟ ಅದನ್ನೆಲ್ಲ ಆರಿಸಿಕೊಂಡಳು. ಮತ್ತು ಅದೇ ದಿನ ಪರುಳೇಕರ್ ಕಲ್ಯಾಣದಲ್ಲೊಂದು ಕೋಣೆಯನ್ನು ಬಾಡಿಗೆ ಹಿಡಿದ. ಮಗಳ ಮನಸ್ಸು ಒಡೆಯುವುದು ಬೇಡ ಎಂದು ಎರಡು ದಿನ ಇದ್ದು ನಂತರ ಇಬ್ಬರೂ ಕಲ್ಯಾಣ್‌ಗೆ ಹೋಗಿಬಿಟ್ಟರು.

ಕಲ್ಯಾಣದ ಹೊಸಬಿಡಾರಕ್ಕೆ ಹೋದ ಮೇಲೆ ಪರುಳೇಕರ್‌ನಿಗೆ ಛೋಟೂನ ಪ್ರಕರಣ ಬಿಲ್‌ಕುಲ್ ಬೇರೆಯಾಗಿ ತೋರತೊಡಗಿತು. ಕಾರ್ಖಾನೆಯ ಪರಿಸರದಲ್ಲಿ, ಈ ವಸಾಹತಿನಲ್ಲಿ ಮುಖ್ಯವೆನಿಸುತ್ತಿದ್ದ ತನ್ನ ಪ್ರತಿಷ್ಠೆ, ಹೆಸರು ಈಗ ಪರಿಚಿತರಿಲ್ಲದ ಹೊಸ ಪರಿಸರದಲ್ಲಿ ಅಷ್ಟು ಮುಖ್ಯವೆನಿಸಲಿಲ್ಲ. ಛೋಟೂನ ಗೈರು ಹಾಜರಿಯಲ್ಲಿ ಅಳಿಯ ವರ್ತಿಸಿದ ರೀತಿ ಕಟುವಾಗಿ ಕಂಡಿತು. ಪಾಪ ಅಳಿಯನೂ ತನ್ನ ಸ್ಥಳಕ್ಕೆ, ಸಮಯಕ್ಕೆ, ವಾತಾವರಣಕ್ಕೆ ಸಂಬಂಧಿಸಿದ ಪ್ರತಿಷ್ಠೆಯ ಹೋರಾಟದಲ್ಲಿದ್ದಾನೆ. ಈ ಹೊಸಪರಿಸರದಲ್ಲಿ ಪರುಳೇಕರ್‌ಗೆ ಛೋಟೂನ ನೆನಪು ತೀವ್ರವಾಗಿ ಬರತೊಡಗಿತು. ಛೋಟೂನ ಆ ೨೦ ಸಾವಿರ ರೂಪಾಯಿ ಪ್ರಕರಣ ನಿಜಕ್ಕೂ ಅಂಥ ಮಹಾಪಾಪವಾಗಿತ್ತೆ? ಸಹೋದ್ಯೋಗಿ ನಾಯರ್ “ನೋಡಿ ಪರುಳೇಕರ್, ಈ ಕಾಲದಲ್ಲಿ ಹಣಕ್ಕೆ ಏನು ಬೆಲೆ ಇದೆ. ೨೦ ಸಾವಿರ ರೂಪಾಯಿಯಲ್ಲಿ ಏನು ಸಿಗುತ್ತದೆ ಹೇಳಿ. ಮನೆ ಬಿಡಿ. ಒಂದು ರಿಕ್ಷಾ ಬಿಡಿ, ಒಂದು ಮೋಟಾರ್ ಸೈಕಲ್ಲೂ ಸಿಗುವುದಿಲ್ಲ. ಏನೋ ಅವನ ಎಣಿಕೆ ತಪ್ಪಾಯಿತು. ಅವನ ಕೆಟ್ಟಕಾಲ. ಅವನನ್ನು ಮಾಫ್ ಮಾಡಿಬಿಡಿ.” ಎಂದು ಹೇಳಿದ್ದರು. ಪರುಳೇಕರ್ ಅದನ್ನು ಮತ್ತೀಗ ನೆನೆಸಿಕೊಂಡು ದೊಡ್ಡದಾಗಿ ಯಮುನಾ ಬಾಯಿಗೆ ಹೇಳಿದ. ಯಮುನಾಬಾಯಿ ಮೌನವಾಗಿ ಇದ್ದು ಬಿಟ್ಟಿದ್ದಳು. ಛೋಟು ನಾಸಿಕದಲ್ಲಿದ್ದಾನಂತೆ, ದಮನ್‌ನಲ್ಲಿ ಇದ್ದಾನಂತೆ ಎಂಬ ಬಾತ್ಮಿಗಳು ಬಂದಾಗ ‘ಇದ್ದಾನಂತೆ’ ಎಂಬ ಶಬ್ದವೇ ಅತ್ಯಂತ ಸಮಾಧಾನವನ್ನು ಕೊಟ್ಟು, ಸುಮ್ಮನೆ ಕಣ್ಮುಚ್ಚಿ ಕುಲದೇವತೆಯನ್ನು ನೆನೆಸುತ್ತಿದ್ದಳು. ಪದೇ ಪದೇ ಕುಸುಮಾಳಿಗೆ ಫೋನು ಮಾಡಿ “ಒಂದು ವೇಳೆ ಛೋಟೂ ಬಂದರೆ, ಇಲ್ಲಿಯ ನಮ್ಮ ವಿಳಾಸ ಕೊಡಲು ಪೂರ್ವಿಗೆ ಹೇಳು” ಎಂದು ಹೇಳುತ್ತಿದ್ದಳು.
ಹೀಗಿರುವಾಗ ಒಂದು ದಿನ ಛೋಟುನನ್ನು ವಸಯಿ ರೈಲ್ವೆ ನಿಲ್ದಾಣದ ಕ್ಯಾಂಟೀನಿನಲ್ಲಿ ಕಂಡಂತಾಯಿತು ಎಂದು ಯಾರೋ ಪರುಳೇಕರ್‌ಗೆ ತಿಳಿಸಿದರು. ಪರುಳೇಕರ್ ತಕ್ಷಣ ಲೋಕಲ್ ಟ್ರೇನು ಹಿಡಿದು ದಾದರಿನಲ್ಲಿ ಬದಲಿಸಿ ವಸಯಿಗೆ ಹೋದ. ಅಲ್ಲಿಳಿದಾಗ ರಾತ್ರೆ ೧೧ ಗಂಟೆ. ಇರುವ ಆರೂ ಪ್ಲಾಟಫಾರ್ಮುಗಳಲ್ಲಿ ಒಟ್ಟೂ ಏಳೆಂಟು ಕ್ಯಾಂಟೀನುಗಳು. ಹತ್ತಿ ಇಳಿದರೂ ನಿಂತು ಇಣುಕಿ ನೋಡಿದ. ಪರಿಚಿತ ಮುಖ ಇರಲಿಲ್ಲ. ಅವನು ಗಡ್ಡ ಬಿಟ್ಟಿದ್ದಾನೋ ಎನಿಸಿ ಗಡ್ಡ ಇರುವ ಹದಿಹರೆಯದ ಮುಖಕ್ಕಾಗಿ ನೋಡಿದ. ರಾತ್ರಿಯೇರತೊಡಗಿದಂತೆ ಅಂಗಡಿ ಮುಚ್ಚಿ ಜನ ಅಲ್ಲೇ ಪ್ಲಾಟಫಾರ್ಮಿನ ಮೇಲೆ ಪುಟ್ಟ ಜಮಖಾನೆ ಹಾಸಿ ಸಾಲಾಗಿ ಮಲಗತೊಡಗಿದರು. ಹನ್ನೆರಡು ಹೊಡೆದ ನಂತರ ಲೋಕಲ್‌ಗಳ ಓಡಾಟ ಕಡಿಮೆ ಆಯಿತು. ಪರುಳೇಕರ್ ಮೆಲ್ಲಗೆ ತನ್ನ ಕಿಸೆಯಲ್ಲಿಯ ಪುಟ್ಟ ಸೆಲ್‌ಟಾರ್ಚ್ ಹೊರ ತೆಗೆದು ಮಲಗಿದವರ ಮುಖಕ್ಕೆ ಬಿಡುತ್ತ ಬಾಗಿ ಇಣುಕಿ ನೋಡುತ್ತ ನಡೆಯತೊಡಗಿದ. ಮುಖದ ಮೇಲೆ ಹಸಿರು ಚಾದರು ಮುಚ್ಚಿ ಮಲಗಿದವನನ್ನು ಸಮೀಪಿಸಿದಾಗ ಕೈ ಅದುರುತ್ತಿತ್ತು. ಬೆನ್ನ ಹಿಂದೆ ಯಾರೋ “ಏಯ್”ಎಂದು ಕೂಗಿದರು. ಚೌಕಳಿ ಚಾದರು ಹೊದ್ದವನು ಎದ್ದು ಕೂತು “ಚೂತ್ಯಾಸಾಲಾ. ಹೋಮೋ ಹೈಕ್ಯಾ?” ಎಂದು ಕಾಲಿನಿಂದ ಜೋರಾಗಿ ಎದೆಗೆ ಒದ್ದು ಬಿಟ್ಟ. ಕೆಲವೇ ದಿನಗಳಲ್ಲಿ ಪರುಳೇಕರ್ ತೀರಿಕೊಂಡ. ಯಮುನಾ ಒಬ್ಬಳೇ ಉಳಿದಳು. ಪೂರ್ವಿ, ಕುಸುಮಾ ಇಬ್ಬರೂ ಎಷ್ಟೇ ಕರೆದರೂ ಅವಳು ಹೋಗಲಿಲ್ಲ. ಕೊನೆಗೊಂದು ದಿನ ಪೂರ್ವಿ “ಗಂಡ ತುಂಬಾ ಕುಡಿಯತೊಡಗಿದ್ದಾನೆ. ಕಾರ್ಖಾನೆಯಲ್ಲಿ ಈಗಾಗಲೇ ವಿ.ಆರ್.ಎಸ್. ಘೋಷಿಸಿದ್ದಾರೆ. ಮೊದಲೇ ಮೈಗಳ್ಳ, ಎಲ್ಲಾದರೂ ಇಚ್ಛಾ ನಿವೃತ್ತಿ ತಗೊಂಡು ಮನೇಲೇ ಕೂತು ಬಿಟ್ಟರೆ ಖಂಡಿತ ಕುಡಿದು ಎಲ್ಲಾ ಸತ್ಯಾನಾಶ ಮಾಡಿ ಬಿಡಬಹುದು ಆತ. ನೀನಿದ್ದರೆ ತುಸು ಅಂಕೆಯಲ್ಲಿರಬಹುದು” ಎಂದು ಗೋಗರೆದ ಮೇಲೆ ಯಮುನಾ ಕಲ್ಯಾಣದ ಕೋಣೆಗೆ ಬೀಗ ಹಾಕಿ ಇಲ್ಲಿ ಬಂದು ಬಿಟ್ಟಳು. ಅದನ್ನು ಬಿಟ್ಟು ಬಿಡು ಎಂದರೆ “ಛೋಟು ಬಂದರೆ?” ಎಂದಳು.
ಕುಡಿದು ಬಂದ ಅಳಿಯ ಅತ್ತೆಯ ಕಣ್ಣು ತಪ್ಪಿಸಿ ಎಲ್ಲೋ ನೋಡುತ್ತ “ನನಗೆ ಯಾರೂ ಬುದ್ಧಿ ಹೇಳಬೇಕಾಗಿಲ್ಲ. ಹೇಳುವವರು ಅವರವರ ಮಗನಿಗೆ ಹೇಳಲಿ” ಎಂದು ತೊದಲುತ್ತಿದ್ದ. “ಆ ಬೇ‌ಇಮಾನ್ ಬಡ್ಡೀಮಗ ಬರಲಿ ಇಲ್ಲಿ. ಆಗ ತೋರಿಸ್ತೇನೆ. ನಾನ್ಯಾರು ಅಂತ” ಎಂದು ಬಾಗಿಲಿಗೆ ಮುಖ ಮಾಡಿ ಒದರತೊಡಗಿದ. ಒಂದು ದಿನ ಯಮುನಾ ಅವನೆದುರು ನಿಂತು “ಮೊದಲು ನಿನ್ನ ಮುಖ ಸರಿಯಾಗಿ ಕನ್ನಡೀಲಿ ನೋಡ್ಕೊ. ಆಮೇಲೆ ನನ್ನ ಮಗನ ಬಗ್ಗೆ ಮಾತಾಡು. ದುಡಿದು ಸರಿಯಾಗಿ ಹೆಂಡತಿಯನ್ನು ನೋಡಿಕೊಳ್ಳಲು ಕಲಿ ನಾಲಾಯಕಾ.
ಬಸುರಿ ಹೆಂಡ್ತೀನ ಪ್ರೆಸ್‌ನಲ್ಲಿ ಬುಕ್ ಬೈಂಡಿಂಗ್ ಮಾಡಲು ಕಳಿಸುತ್ತೀಯಲ್ಲಾ. ನಿನ್ನ ಪ್ರತಿಷ್ಠೆ ಎಲ್ಲಿ ಹೋಗ್ತದೆ ಆವಾಗಾ?” ಎಂದು ಕೂಗಿದಳು. ಮತ್ತೊಂದು ದಿನ “ದೊಡ್ಡ ವ್ಯಕ್ತಿಯಾಗಿದ್ದಾನೆ ನನ್ನ ಮಗ ಗೊತ್ತುಂಟೋ. ಬಹಳ ದೊಡ್ಡವನು ಈಗ ಅವನು. ವೆಸ್ಟರ್ನ್ ಲೈನಿನಲ್ಲಿ ಫ್ಲಾಟು‌ಉಂಟು ಅವನಿಗೆ. ಅವನ ಹಿಂದೆ ಮುಂದೆ ಜನ ಇದ್ದಾರೆ. ನಿನ್ನ ಬಾಗಿಲಿಗೆ ಬರುವ ಕೆಟ್ಟ ಕಾಲ ಖಂಡಿತ ಇಲ್ಲ ಅವನಿಗೆ. ಖಬರ್‍ದಾರ್ ಛೋಟೂನ ಮಾತೆತ್ತಿದರೆ” ಎಂದು ಎಲ್ಲರಿಗೂ ಕೇಳಿಸುವಂತೆ ಕೂಗಿ ಬಿಟ್ಟಳು. ತಾನದನ್ನೂ ತನ್ನ ಕೈಮೀರಿ ಹೇಳುತ್ತಿರುವಂತೆಯೇ ಅದೊಂದು ನಿಜವಾದಂತೆ, ನಿಜವಾಗುತ್ತಿರುವಂತೆ ಅವಳಿಗೆ ಅನಿಸಿತು. ಆಮೇಲೆ “ಹಾಂ” ಎಂದು ಚಿತಾವಣೆ ನೀಡುವಂತೆ ಸದ್ದು ಮಾಡಿ ಕೂತಳು. ಕಣ್ಮರೆಯಲ್ಲೇ ಛೋಟೂ ಬೆಳೆದಿರಬಹುದಾದ ನಿಜ ಈಗ ವಿಚಿತ್ರವಾಗಿ ಅವಳ ಅನುಭವಕ್ಕೆ ಬಂತು.

ಮರುದಿನ ಬೆಳಿಗ್ಗೆ ಹಾಲಿನ ಬೂತಿನ ಬಳಿ ಹೋದಾಗ ಟೇಲರ್ ಗೋಪಿ ಚಂದ್‌ನ ಮನೆಗೆ ಬೀಗ ಹಾಕಿದ್ದು ಕಂಡು, ಅರೆ ಅವನ ಹೆಂಡತಿಯ ಬಳಿ ಕಂತಿನಲ್ಲಿ ಕೊಂಡಿದ್ದ ಧೂಪ್‌ಛಾಂವ್ ಸೀರೆಯ ಕೊನೆಯ ಕಂತಿನ ಐವತ್ತು ರೂಪಾಯಿ ತಾನು ಕೊಟ್ಟೇ ಇಲ್ಲವಲ್ಲ. ಅವಳು ಏನು ಅಂದುಕೊಂಡಿರಬಹುದು. ಅವರು ಮನೆ ಖಾಲಿ ಮಾಡಿ ಹೋಗಿದ್ದರೆ ಅದನ್ನು ತೀರಿಸುವುದು ಹೇಗೆ ಎಂದು ಯಮುನಾ ಯಾರೂ ಎದ್ದಿರದ ಆ ಕಾಲದಲ್ಲಿ ಅಧೀರಳಾದಳು. ಪೂರ್ವಿ ಎದ್ದ ಕೂಡಲೇ ಅವಳಿಗೆ ಇದನ್ನು ಹೇಳಿಕೊಂಡಳು. ಅದಕ್ಕೆ ಪೂರ್ವಿ “ಇರಲಿ ಬಿಡು ಆಯೀ, ಗೋಪಿಚಂದ್‌ನ ಮಕ್ಕಳು ಎಷ್ಟು ದಿನ ಇಲ್ಲಿ ಊಟ ಮಾಡಿಲ್ಲ. ಗಂಡ ಹೆಂಡ್ತಿ ಎಷ್ಟು ದಿನ ಮಕ್ಕಳನ್ನು ಇಲ್ಲೇ ಬಿಟ್ಟು ಹೊರಗೆ ಹೋಗಿಲ್ಲ.

ಅದೆಲ್ಲ ಬಿಡು. ಐವತ್ತು ರೂಪಾಯಿಗಾಗಿ ತಲೆ ಕೆಡಿಸ್ಕೋಬೇಡ” ಎಂದಾಗ ಯಮುನಾ “ಛೆಛೆ ಯಾರಾದ್ರೂ ಉಂಡಿದ್ದರ ಲೆಕ್ಕ ಇಡ್ತಾರೇನೇ?” ಎಂದಳು. ಆದರೂ ಒಳಗೆಲ್ಲೋ ಭಾರ ಕಡಿಮೆ ಆದಂತೆಯೂ ಅನಿಸಿತು. ನೆನ್ನೆಯಿಂದ ಅನಿಸಿದ ಹಾಗೆ, ಛೋಟೂ ನಿಜಕ್ಕೂ ದೊಡ್ಡ ಮನುಷ್ಯನಾಗಿದ್ದಾನೆ ಎಂದು ತಿಳಿಯುವುದರಲ್ಲಿ ತಪ್ಪೇನಿದೆ ಅನ್ನಿಸಿತು. ಹೌದು, ಖಂಡಿತ ಅವನೀಗ ಶ್ರೀಮಂತನಾಗಿದ್ದಾನೆ. ಸುಖದಲ್ಲಿದ್ದಾನೆ. ಧಾರಾಳಿಯಾಗಿದ್ದಾನೆ. ಹೀಗೆ ಯೋಚಿಸುತ್ತ ಹೋದಂತೆ ಯಮುನಾಬಾಯಿಗೆ ಜಗತ್ತು ಮೆಲ್ಲಗೆ ಬೇರೆಯದೇ ಆಗಿ ಕಾಣತೊಡಗಿತು.

ಕುಸುಮಳ ಗಂಡ ದುಬೈನಲ್ಲಿ ಒಂದು ಕೇಟರಿಂಗ್ ಸಂಸ್ಥೆಯಲ್ಲಿ ಕೆಲಸ ಸಿಕ್ಕು ಹೊರಟು ಹೋದ. ಅವಳಿಗೂ ಅವಳ ಆಫೀಸಿನಲ್ಲಿ ಕ್ಯಾಶ್ ವಿಭಾಗಕ್ಕೆ ವರ್ಗವಾಯಿತು. ಮನೆಯಲ್ಲಿ ಪೇಪರು ಓದುವ ಅಭ್ಯಾಸ. ಅವಳೆಂದಿಗೂ ದಿನಪತ್ರಿಕೆಗಳಲ್ಲಿ ಸಾವಿನ ಸುದ್ದಿಗಳನ್ನು ಓದುತ್ತಿರಲಿಲ್ಲ. ಕ್ಯಾಶ್ ವಿಭಾಗಕ್ಕೆ ಬಂದ ನಂತರ ನೋಟನ್ನು ಪರ್ರ ಪರ್ರ ಎಂದು ಎಣಿಸುವುದು, ದೊಡ್ಡ ಕಟ್ಟುಗಳನ್ನು ೨ ಭಾಗ ಮಾಡಿ ಹಿಂದೆ ಮುಂದೆ ಮಾಡಿ ಪಿನ್ನುಗಳನ್ನು ತೆಗೆಯುವುದು ಇತ್ಯಾದಿ ಚಳಕಗಳನ್ನು ಕರಗತ ಮಾಡಿಕೊಂಡರೂ-ಅವಳಿಗೆ ಆ ನೋಟುಗಳ ಕಟ್ಟುಗಳು ಭಯ ಮತ್ತು ಬೇಸರ ತರುತ್ತಿದ್ದವು. ಹೊಟ್ಟೆಪಾಡಿಗೆ ಸಂಬಳ ಅಂತ ಸಿಗುವ ಸಂಗತಿ, ಕಂಡಕ್ಟರನಿಗೆ ಕೊಡುವ ನಾಲ್ಕು ರೂಪಾಯಿ ಎಂಬ ಚಿಲ್ಲರೆ ಸಂಗತಿ ಮತ್ತು ಇಲ್ಲಿರುವ ಈ ದಂಡಿ ದಂಡಿ ನೋಟಿನ ಪಿಂಡಿ ಎಲ್ಲಾ ಒಂದೇ ಅಲ್ಲವೇ ಅನಿಸುತ್ತಿತ್ತು. ಕೋಟ್ಯಾಂತರ ರೂಪಾಯಿಗಳ ಲೆಕ್ಕಪತ್ರ ನೋಡುವಾಗ ಹಠಾತ್ತನೆ ಛೋಟೂನ ಪ್ರಕರಣ ಇಪ್ಪತ್ತು ಸಾವಿರ ರೂಪಾಯಿ ನೆನಪಿಗೆ ಬಂದು ಅದೆಷ್ಟು ಕ್ಷುಲ್ಲಕ, ಅಮಾಯಕ ಅನಿಸುತ್ತಿತ್ತು. ಮಕ್ಕಳೇ ಆಗದೆ ಅವಳು ಗಂಡನೊಡನೆ ಬೇರೆ ಬೇರೆ ಗೈನಾಕ್‌ರ ರಿಸೆಪ್ಶನ್‌ನಲ್ಲಿ ಹಳೆಯ ಸ್ಟಾರ್‍ಡಸ್ಟ್‌ಗಳನ್ನು ತಿರುವುತ್ತ, ತನ್ನ ಹೆಸರನ್ನು ಅಸಡ್ಡಾಳವಾಗಿ ಕರೆಯುವುದನ್ನೇ ಕಾಯುತ್ತ ಕೂತಿದ್ದಾಗ, ಅಲ್ಲಿರುವ ಮುದ್ದು ಹಸುಳೆಗಳ ಪೋಸ್ಟರುಗಳನ್ನು ಕಂಡು ಎಳೆ ಛೋಟೂನ ನೆನಪಾಗುತ್ತಿತ್ತು. ಅವನಿಗೆ ಬಟಾಟೆವಡೆ ಅಂದರೆ ಪ್ರೀತಿ. ಅದಕ್ಕೆ ‘ಬತಾದೇ’, ‘ಬತಾದೇ….’ ಅನ್ನುತ್ತಿದ್ದ. ಅವನು ಪಿಯುಸಿಯಲ್ಲಿ ಫೇಲ್ ಆಗದೆ ಇದ್ದಿದ್ದರೆ, ಈ ೨೦ ಸಾವಿರ ರೂಪಾಯಿ ಪ್ರಕರಣವೂ ಇಷ್ಟೊಂದು ವಿಪರೀತವಾಗಿ ತೋರುತ್ತಿರಲಿಲ್ಲವೇ? ಸರಿಯಾಗಿ ಓದದ ಪೋರನ ಹೊರೆಯನ್ನು ಹೊರಲು ಹಿಂಜರಿದು ಆ ಸಣ್ಣ ಮನೆ ಅವನನ್ನು ಹಾಗೆ ಹೊರಹಾಕಿತೆ. ಹೀಗೆಲ್ಲ ಅನಿಸಿದ ಕುಸುಮಾ-ತಾನಾಗಿಯೇ ಅವನ ಪತ್ತೆಗೆ ಪ್ರಯತ್ನಿಸಿದ್ದೂ ಇತ್ತು. ಅವನೆಲ್ಲಾದರೂ ಫಕ್ಕನೆ ಸಿಕ್ಕರೆ ಅವನಿಗೆ ಕೊಡಲು ಸಾಧ್ಯವಾಗಬೇಕು ಎಂದು ಯಾವಾಗಲೂ ಒಂದಿಷ್ಟು ಹೆಚ್ಚಿಗೆ ಹಣವನ್ನು ಪರ್ಸಿನಲ್ಲಿ ಇಟ್ಟುಕೊಂಡೇ ಇರುತ್ತಿದ್ದಳು. ಈಚೀಚೆ ಆಯಿ- ಛೋಟೂ ತುಂಬಾ ಸುಖದಲ್ಲಿಯೇ ಇದ್ದಾನೆ. ನನ್ನ ಅಂತರಾತ್ಮಕ್ಕೆ ಗೊತ್ತು-ಎಂದು ಹೇಳುತ್ತಿರುವಾಗ ಅದನ್ನು ಹಾಗೆಯೇ ಮನಸಾ ನಂಬಲು ತುಂಬಾ ನೆಮ್ಮದಿಯಾಗುತ್ತಿತ್ತು. ತನಗಿನ್ನೂ ಮಕ್ಕಳಾಗುವುದು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಂಡ ಮೇಲಂತೂ ಛೋಟೂನ ಜಗತ್ತು ಎಲ್ಲಿದೆ. ಆ ಜಗತ್ತಿನಲ್ಲಿ ಪ್ರವೇಶ ಮತ್ತೆ ಸಾಧ್ಯವೇ ಎಂದು ಅಧೀರಳಾಗುತ್ತಿದ್ದಳು. ಅವನ ಇಸ್ತ್ರಿ ಇಲ್ಲದ ತಿಳಿಹಳದಿ ಟೀಶರ್ಟಿನ ಒಣಗು ತಂತಿಯ ನಿರಿಗೆಗೆರೆ ಮನದಲ್ಲಿ ಮೂಡುತ್ತಿತ್ತು.

ಅತ್ತ ಯಮುನಾ ಅಳಿಯನನ್ನು ಅತಿಯಾಗಿಯೇ ಜಬರಿಸತೊಡಗಿದಂತೆ ಹಠಾತ್ತನೆ ಪೂರ್ವಿಯ ಅಭಿಮಾನ ಒಂದು ದಿನ ಜಾಗೃತವಾಗಿ “ಆಯೀ ಅತೀ ಮಾಡ್ಬೇಡ ನೀನು. ನಿನ್ನ ಆ ಗ್ರೇಟ್ ಮಗ ಒಂದ್ಸಲನಾದ್ರೂ ನಿನ್ ನೋಡಬೇಕೂ ಅಂತ ಬಂದನೇನು?” ಎಂದಳು. ಅದಕ್ಕೆ ಯಮುನಾ…..“ಏ…ಏ…ಬಾಯ್ಮುಚ್ಚು. ಆ ಪೋರ ಹಾಗೆ ಆ ಗಾಯಗೊಂಡ ಸ್ಥಿತೀಲೂ ಪಿಟ್ಟೆನ್ನದೇ ಬಿಟ್ಟು ಹೋದದ್ದು ನಿನ್ನ ಲಗ್ನಕ್ಕಾಗಿ” ಎಂದಳು. ಪೂರ್ವಿಗೆ ತಡೆಯಲಾಗಲಿಲ್ಲ. “ನನಗಾಗಿ ಯಾರೂ ಯಾವ ಮಹಾತ್ಯಾಗವನ್ನೂ ಮಾಡಿಲ್ಲ. ಮಾಡಬೇಕಾಗೂ ಇಲ್ಲ. ಈ ಸುಹಾಸನ ಜತೆಗೆ ಮದುವೆ ಆಗಬೇಕೆಂದು ನಿಶ್ಚಯಿಸಿದವಳು ನಾನೇ. ಅವರ ಉಸಿರಲ್ಲಿ ವಿಸ್ಕಿಯ ಗಲೀಜು ವಾಸನೆ ಇತ್ತು ಎಂಬುದು ಗೊತ್ತಿದ್ದೂ ಅವನ ಜತೆ ಓಡಾಡಿದೆ. ನಿಮಗೆ ಒಂದು ಕೈ ತೋರಿಸಿಯೇ ಬಿಡಬೇಕೆಂದು ಮದುವೆ ಆದೆ. ಯಾವಾಗ ನೋಡಿದರೂ ‘ಕುಸುಮಾಳನ್ನು ನೋಡಿ ಕಲಿ. ನಿನ್ನ ವಯಸ್ಸಿನಲ್ಲಿ ಕುಸುಮಾ ಹಾಗಿದ್ದಳು, ಕುಸುಮಾ ಹೀಗಿದ್ದಳು-’ಎಂದು ಅಕ್ಕನನ್ನು ಕೊಂಡಾಡಿ ನನ್ನನ್ನು ಯೂಸ್‌ಲೆಸ್ ಎಂಬಂತೆ ಹಂಗಿಸುತ್ತಿದ್ದೀರಲ್ಲ, ಕುಸುಮಳಿಗಾಗಿ ಗಂಡು ಹುಡುಕಲು ಪರೇಲ್, ಲಾಲ್‌ಬಾಗ್, ಎಂದು ಜಾತಕ ಹಿಡಿದು ಓಡಾಡ್ತಿದ್ದಿರಲ್ಲ, ಪ್ರತಿ ತಿಂಗಳು ಸಂಬಳ ತಂದು ನಿಮ್ಮ ಕೈಲಿಡುತ್ತಿದ್ದ ಅವಳ ಮದುವೆಯಾಗಿ ಹೋದ ನಂತರ, ಬಂದಾಗೆಲ್ಲ ಸುಳ್ಳೇ ಗೋಳುಮುಖ ಮಾಡೋದು. ಹರಕು ಸೀರೆಯನ್ನೇ ಆಯ್ದು ಉಡೋದು ಮಾಡ್ತಿದ್ದೆಯಲ್ಲ. ಎಲ್ಲಾ ಗೊತ್ತು ನನಗೆ. ಅದಕ್ಕೇ-ನಿನ್ನ ಚಪ್ಪಲಿಯನ್ನು ಕಿಂಚಿತ್ತೂ ಸವೆಸದೇ, ಮನೆ ಬಾಗಿಲಲ್ಲಿ ಮದುವೆಯಾಗಿ ತೋರಿಸಿದೆ. ಈ ಕಾರ್ಖಾನೆಯವನನ್ನೇ ಮದುವೆಯಾಗಿ ಅಪ್ಪನ ನಿವೃತ್ತಿಯ ನಂತರವೂ ಈ ಕ್ವಾರ್ಟರ್ಸ್ ಕೈ ತಪ್ಪದಂತೆ ನೋಡಿಕೊಂಡೆ. ಅದಕ್ಕೇ ಅಲ್ಲವೇ ನೀವೂ ಸಹ ನನ್ನ ಪ್ರೇಮ ಪ್ರಕರಣವನ್ನು ಕಳ್ಳರಂತೆ ಪ್ರೋತ್ಸಾಹಿಸಿದ್ದು! ಸುಹಾಸನ ಜತೆ ತಿರುಗಾಡಿ ನಾನು ರಾತ್ರಿ ತಡವಾಗಿ ಮರಳುತ್ತಿದ್ದಾಗ ಚಾಳಿನ ಜನರೆಲ್ಲ ಮಿಕಿ ಮಿಕಿ ನನ್ನನ್ನೇ ನೋಡುತ್ತಿದ್ದಾಗ, ನಿಮ್ಮ ಕಾಲಕೆಳಗಿನ ಭೂಮಿಯೇ ಬಿರಿಯುತ್ತಿತ್ತು. ಆದರೂ ನೀವು ಪಿಟ್ಟೆನ್ನಲಿಲ್ಲ. ಮಳ್ಳರಂತೆ ಕಣ್ತಪ್ಪಿಸುತ್ತಿದ್ದಿರಿ ಇಬ್ಬರೂ. ನನಗೆಲ್ಲಾ ಗೊತ್ತಾಗುತ್ತಿತ್ತು. ನೀವು ಗೊತ್ತಿಲ್ಲದಂತೆ ನಟಿಸುತ್ತ ನನ್ನ ಪ್ರೇಮಕ್ಕೆ ಪ್ರೋತ್ಸಾಹ ಕೊಡುತ್ತಿದ್ದುದು ನಿಮ್ಮನ್ನೇ ಒಳಗಿನಿಂದ ತಿನ್ನುತ್ತಿತ್ತು. ಅದನ್ನೆಲ್ಲ ಮುಚ್ಚಲು ಛೋಟೂನ ಇಪ್ಪತ್ತು ಸಾವಿರ ರೂಪಾಯಿ ಪ್ರಕರಣ ನಿಮಗೆ ಸರಿಯಾಗೇ ಸಿಕ್ಕಿಬಿಟ್ಟಿತು. ಹ್ಯಾಗೆ ಮುಗಿಬಿದ್ದ ನೋಡು ಅಪ್ಪ ಆಗ. ನೀನೂ ತೆಪ್ಪಗಿದ್ದೆ. ಮತ್ತೆ ನಾನು? ನಾನ್ಯಾಕೆ ಆಗ ಒಂದು ಚಕಾರ ಆಡದೆ ಛೋಟೂನನ್ನು ಬಿಟ್ಟುಕೊಟ್ಟೆ ಗೊತ್ತೆ? ಈಗ ಹೇಳ್ತೇನೆ ಕೇಳು. ಒಂದು ದಿನ ಸುಹಾಸ ನನ್ನನ್ನು ಮಧ್ಯಾಹ್ನ ಮುಲುಂಡಿನ ಪಾಂಚರಸ್ತಾದ ಲಾಜಿಂಗ್‌ಗೆ ಕರೆದುಕೊಂಡು ಹೋಗಿದ್ದ. ಅಲ್ಲಿಂದ ಹೊರಬೀಳುವಾಗ ಛೋಟೂನ ದೋಸ್ತ ನಂದೂ ಜಗತಾಪ ನಮ್ಮಿಬ್ಬರನ್ನೂ ನೋಡಿಬಿಟ್ಟ.

ನಾನು ಗುರ್ತೇ ಇಲ್ಲದವಳಂತೆ ಮುಂದೆ ಮುಂದೆ ನಡೆದುಬಿಟ್ಟೆ. ಅವನದನ್ನು ಛೋಟೂಗೆ ಖಂಡಿತ ಹೇಳಿದ್ದಾನೆ. ಮತ್ತೂ ಛೋಟೂ ಅದನ್ನು ಮನೆಯಲ್ಲಿ ಹೇಳಲಾಗದೆ ನನ್ನ ಮೇಲೆ ಉರಿಯುತ್ತಿದ್ದಾನೆ ಎಂದು ನನಗೆ ಅನಿಸತೊಡಗಿತು. ಅವನ ಸಹಜ ಮಾತುಗಳಲ್ಲೂ ಕೊಂಕು ಕಾಣತೊಡಗಿತು. ಅವನಿ ‘ದಿಲ್ ವಾಲೇ ದುಲ್ಹನಿಯಾ ಲೇ ಜಾಯೆಂಗೇ’ ಅಥವಾ ‘ಹಂ ತುಂ ಏಕ್ ಕಮರೇ ಮೇಂ ಬಂದ್ ಹೋ’ ಎಂದೆಲ್ಲ ಗುಣುಗುಣಿಸಿದಾಗ ನನ್ನನ್ನೇ ಹಂಗಿಸುತ್ತಿದ್ದಾನೆ ಅನಿಸತೊಡಗಿತು. ನನ್ನ ತಪ್ಪು ಅವನಲ್ಲಿ ಇನ್ನೂ ದೊಡ್ಡದಾಗಿ ಬೆಳೆಯುತ್ತಿದೆ ಅನ್ನಿಸಿ-ಅವನನ್ನು ಎಷ್ಟು ದ್ವೇಷಿಸಿದೆ ಅಂದ್ರೆ ಆ ದಿನ ಆ ಅಪರಿಚಿತರು ಬಂದು ಅವನ ದವಡೆ ಒಡೆದಾಗ ನನಗೆ ಬೇಜಾರೇ ಆಗಲಿಲ್ಲ. ನನ್ನ ಕಳ್ಳತನ ಮುಚ್ಚುವಂಥ ದೊಡ್ಡದೇನೋ ಸಿಕ್ಕಿತು ಎಂದು ‘ಅಯ್ಯೋ ನನ್ನ ಲಗ್ನ ಮುರಿದರೆ….”- ಎಂದು ನಿಮ್ಮೆದುರು ಗೋಳಾಡಿದೆ. ನಿಮಗೂ ಅದೇ ಬೇಕಿತ್ತು. ದಬ್ಬಿಯೇ ಬಿಟ್ಟಿರಿ ಅವನನ್ನು!” ಎಂದು ಆವೇಶದಿಂದ ತುಟಿಯೆಲ್ಲ ಬಿಳುಚಿ ಅಳತೊಡಗಿದಳು. ಯಮುನಾಬಾಯಿಗೆ, ಹುಡುಗಿಯಾಗಿದ್ದ ಪೂರ್ವಿ ನೋಡನೋಡ್ತಾ ಹೆಂಗಸಾಗಿ ಹಣ್ಣಾದಂತೆ ಕಂಡಿತು. ತನ್ನದೇ ಆದ ಜಗತ್ತಿನಲ್ಲಿ ಅವಳು ಅಳುತ್ತಿದ್ದಳು. ಪ್ರತಿಷ್ಠೆ, ಇಜ್ಜತ್, ಸಮಾಜ ಇಂಥ ಶಬ್ದಗಳು ಈ ಜಗದ ಅಂಚಿನಲ್ಲಿ ಸಮುದ್ರ ತೀರದ ಕಸದಂತೆ ಇದ್ದವು.

ಒಂದು ದಿನ ಸುಹಾಸ “ಅಕ್ಕ ತಂಗಿ ಇಬ್ಬರೂ ನನ್ನ ಕಣ್ಣು ತಪ್ಪಿಸಿ ತಮ್ಮನಿಂದ ಹಣ ತಂದು ಮಾಡುತ್ತಿದ್ದೀರಿ. ನನಗ್ಗೊತ್ತು. ಇಲ್ಲವಾದರೆ ವಿಸೀಡಿ ಸಿಸ್ಟಮ್‌ಗೆ ಹಣ ಹೇಗೆ ಬಂತೂ?” ಎಂದು ಕೂಗಿದ. “ನನ್ನಿಂದಲೇ ಆಗಿದ್ದು” ಎನ್ನುವಂತೆ ಯಮುನಾ ಬಾಯಿಯ ಕಡೆಗೆ ನೋಡಿದ. ಅವಳು ಏನೂ ತಾಕದವಳಂತೆ ಟೀವಿ ನೋಡುತ್ತಿದ್ದಳು. ಅವಳ ಮೊಗದ ಮೇಲೆ ಟೀವಿ ಬಣ್ಣಬಣ್ಣದ ಪ್ರಭೆಯನ್ನು ಉಂಟು ಮಾಡುತ್ತಿತ್ತು. “ನಿನ್ನ ಮಗ ಅಷ್ಟೇ ಅಮೀರ್‌ನಾಗಿದ್ದರೆ, ಇಲ್ಯಾಕೆ ಸಾಯ್ತಿದ್ದಿ? ಹೋಗಿ ಅವನ ಜೊತೆ ಮಲಬಾರ್‌ಹಿಲ್‌ನಲ್ಲಿ ಇರು ನೋಡುವಾ. ಅಥವಾ ನಮಗಾಗಿ ಹೌಸಿಂಗ್ ಬೋರ್ಡಿನಲ್ಲಿ ಒಂದು ಫ್ಲ್ಯಾಟು ತೆಗೆಸಿಕೊಡು ನೋಡುವಾ”- ಎಂದು ನಗತೊಡಗಿದ. ಮಂಚದಲ್ಲಿ ಚೊಚ್ಚಲು ಮಗುವನ್ನು ತಟ್ಟಿ ಮಲಗಿಸುತ್ತಿದ್ದ ಪೂರ್ವಿ “ಶ್ ಶ್ ಶ್” ಎಂದು ಕಣ್ಣಲ್ಲೇ ಚೀರಿದಳು.

ಛೋಟೂ ಉಪನಗರದಲ್ಲೇ ಇದ್ದಾನೆ. ಎರಡೇ ರಸ್ತೆಯಾಚೆ ಇದ್ದಾನೆ ಎಂಬ ಅತ್ಯಂತ ಖಚಿತ ಮಾಹಿತಿಯೊಂದಿಗೆ ಈಗ ಬಂದಿರುವ ಕುಸುಮಾ ಮನೆ ತಲುಪಿದಾಗ ಪೂರ್ವಿಯ ಮಗಳು ಸೋನಿ ಶಾಲೆಗೆ ಹೋಗಿದ್ದಳು. ಕೂತು ಕೂತು ನುಣುಪಾದ ಮೆಟ್ಟಿಲಲ್ಲಿ ಕೂತು ತೊಡೆಯ ಮೇಲೆ ಸ್ಟೀಲಿನ ತಾಟಿನಲ್ಲಿ ಪುಟ್ಟ ಅಕ್ಕಿಯ ಗೋಪುರವನ್ನಿಟ್ಟುಕೊಂಡು ಪೂರ್ವಿ ಒಂಟಿ ಕೈಯಿಂದ ಆರಿಸುತ್ತಿದ್ದಳು. ಎಡಗೈಗೆ ಆಗಷ್ಟೇ ಮೆಹಂದಿ ಹಚ್ಚಿ ಪ್ರಪಂಚಕ್ಕೇ ಆಶೀರ್ವಾದ ಕೊಡುವಂತೆ ಎತ್ತಿ ಹಿಡಕೊಂಡಿದ್ದಳು. ನನ್ನನ್ನು ನೋಡಿ ಕಣ್ಣರಳಿಸಿದ ಪೂರ್ವಿಗೆ ಸದ್ದು ಮಾಡಬೇಡ ಎಂದು ಸನ್ನೆ ಮಾಡಿ ಮೆಲ್ಲಗೆ ಪಕ್ಕದಲ್ಲೇ ಕುಸುಮಾ ಕೂತಳು. ಯಮುನಾಬಾಯಿ ಒಳಗೆ ಕಾಟಿನ ಮೇಲೆ ಮಲಗಿದ್ದಳು. ಸುಹಾಸ ಫ್ಯಾಕ್ಟರಿಗೆ ಹೋಗಿದ್ದ. “ಛೋಟೂ ಇಲ್ಲೇ ಈ ಕಾಮಾನಿ ರಸ್ತೆಯಲ್ಲೇ ಇದ್ದಾನಂತೆ” ಎಂದಾಗ ಪೂರ್ವಿ ತೆರೆದ ಕಣ್ಣು ತೆರೆದ ಬಾಯಲ್ಲಿ ಸದ್ದಿಲ್ಲದೆ ಬೆಚ್ಚಿದಳು.

ಕಣ್ಮರೆಯಾಗಿದ್ದುಕೊಂಡೇ ವಿವಿಧ ರೂಪಗಳಲ್ಲಿ ಎಲ್ಲರ ಖಾಸಗೀ ಹೋರಾಟದ ಭಾಗವಾಗಿ, ವಿಚಿತ್ರ ಅಮೂರ್ತ ಶಕ್ತಿಯಾಗಿ ಬೆಳೆಯುತ್ತ ಬಂದ ಛೋಟೂ, ಇಲ್ಲೇ, ಕೇವಲ ಇಪ್ಪತ್ತು ಮೂವತ್ತು ನಿಮಿಷದ ನಡಿಗೆಯ ಅಂತರದಲ್ಲೇ ಇದ್ದಾನೆ ಅಂದರೆ! ಮಧ್ಯಾಹ್ನದ ನೀರವದಲ್ಲಿ ಹತಾಶವಾದ ಉದ್ವೇಗವಿತ್ತು. ಕುಸುಮಾ “ಬಾ ಹೋಗಿ ನೋಡಿ ಬರೋಣ”-ಎಂದಾಗ ಪೂರ್ವಿ ಒಂದು ಬಗೆಯ ಮಂಕಿನಲ್ಲಿ ಬಗ್ಗಿ ಎದ್ದು ನಿಂತಳು. ಅವಳು ಬಾಗಿ ಏಳುವಾಗ ತೂಗಿದ ಅವಳ ಮಂಗಳ ಸೂತ್ರದ ತುಂಬ ಹೊಳಪುಗೆಟ್ಟ ಸೇಫ್ಟಿ ಪಿನ್ನುಗಳನ್ನು ಕಂಡು ಕುಸುಮಳಿಗೆ ಬೇಜಾರಾಯಿತು.

ಎರಡೂ ಕಡೆ ಲೋಹದ ತಗಡುಗಳ ಸಗಟು ಮಳಿಗೆಗಳಿರುವ ರಸ್ತೆಯಲ್ಲಿ ಇಬ್ಬರೂ ನಡೆದರು. ಒಂದಾನೊಂದು ಕಾಲದಲ್ಲಿ ಜೀವಂತವಾಗಿದ್ದ ಅಕ್ಕಪಕ್ಕದ ವಿವಿಧ ಔಷಧಿ ತಯಾರಿಕೆಯ ಕಾರ್ಖಾನೆಗಳೆಲ್ಲ ಬಂದು ಬಿದ್ದು ಹಾಳು ಸುರಿಯುತ್ತಿದ್ದವು. ಅವನ್ನೆಲ್ಲ ಬಿಲ್ಡರುಗಳು ಕೊಂಡುಕೊಂಡು ದೊಡ್ಡ ದೊಡ್ಡ ಗಗನ ಚುಂಬಿಗಳ ಜಾಹೀರಾತಿನ ಬೋರ್ಡುಗಳನ್ನು ಹಾಕಿದ್ದರು. ದೀವಾಳಿ ಹೋದ ಕಾರ್ಖಾನೆ ಕಟ್ಟಡಗಳ ಹೆಣ ಕಾಯುತ್ತ ಗೇಟುಗಳಲ್ಲಿ ಸೆಕ್ಯೂರಿಟಿ ಪೇದೆಗಳು ಕೂತಿದ್ದರು. ತಮ್ಮಂಥ ಸಹಸ್ರಾರು ಬಿಡಾರಗಳನ್ನು ಪೋಷಿಸಿದ್ದ ಕಾರ್ಖಾನೆಗಳು ಅವು. ಆ ಕುಟುಂಬಗಳೆಲ್ಲ ಈ ಶಹರದಲ್ಲಿ ಎಲ್ಲಿ ಹೋದವೋ. ಏನಾದವೋ. ಇಬ್ಬರ ಮನಸ್ಸಿಗೂ ಅದೇ ವಿಚಾರ ಬಂತು.

ಮದುವೆಯಾದ ನಂತರ ಹೀಗೆ ಅಕ್ಕತಂಗಿ ಇಬ್ಬರೇ ಹೊರಬಂದು ನಡೆದದ್ದೇ ಇರಲಿಲ್ಲ. ಮನಸ್ಸಿನಲ್ಲಿದ್ದ ನಕ್ಷೆಯ ಪ್ರಕಾರ ಕುಸುಮ ನಡೆಯುತ್ತಿದ್ದಳು. ಅವಳ ಎದೆ ಕಂಪಿಸುತ್ತಿತ್ತು. ದೂರ ಕಡಿಮೆಯಾದಷ್ಟೂ ವೇಗವೂ ಕಡಿಮೆ ಆಗುತ್ತಿತ್ತು. ಅದಕ್ಕೇ, ನಡುವೆ ಟರ್ಬೂಜನ ಶರಬತ್ತಿನ ಗಾಡಿಯ ಬಳಿ ನಿಂತು ಪೂರ್ವಿ “ಕುಡಿಯೋಣವಾ?” ಎಂಬಂತೆ ಹುಬ್ಬು ಹಾರಿಸಿದಾಗ ಕುಸುಮಾ ಬೇಡ ಎನ್ನಲಿಲ್ಲ. ಸ್ಟೀಲಿನ ಫಳಫಳ ಬಾಂಡಲೆಯಲ್ಲಿ ಸವುಟಿನಿಂದ ಶರಬತ್ತಿನಲ್ಲಿ ಐಸ್ ತಿರುಗಿಸುತ್ತಿದ್ದವ ಗ್ಲಾಸು ತುಂಬಿಸಿ ಕೊಟ್ಟ. ಹಣ ಕೊಡಲು ಮುಂದಾದ ಕುಸುಮಳ ಕೈಯನ್ನು ಗಟ್ಟಿ ಹಿಡಿದು, ತಾನು ಅರ್ಧ ಕುಡಿದ ಗ್ಲಾಸು ಗಾಡಿಯ ಮೇಲಿಟ್ಟು ಮೆಹಂದಿ ಕೈ ಬಳಸದೆ ಒಂದೇ ಕೈಯಿಂದ ತನ್ನ ಪುಟ್ಟ ಪಾಕೀಟು ತೆಗೆದು ಹಣ ಕೊಟ್ಟು “ನಾನೂ ಕೂಡ ಕಮಾಯಿ ಮಾಡುತ್ತೇನೆ. ಬುಕ್ ಬೈಂಡಿಂಗ್ ಮನೆಗೂ ತಂದು ಮಾಡುತ್ತೇನೆ. ನೀನು ಮಾತ್ರ ಗಳಿಸುವವಳು ಎಂಬ ದಾದಾಗಿರಿ ಬೇಡ” ಎಂದಳು ಪೂರ್ವಿ. ನಂತರ ನಡೆಯುತ್ತ “ಈ ಸಲ ಸಂಕ್ರಾಂತಿಗೆ ಆಯಿಗೆ ಸೀರೆಯನ್ನೇ ತರಲಿಲ್ಲವಲ್ಲ ನೀನು. ಬಹುಶಃ ಕುಸುಮ ಮರೆತಿರಬೇಕು ಎಂದಳು ಆಯಿ. ನಾನು ಹೇಳಿದೆ ಎಂದು ಹೇಳಬೇಡ ಮತ್ತೆ.” ಈ ಅಪರಾಹ್ನದ ಈ ಅವಕಾಶದಲ್ಲಿಯಷ್ಟೆ ಆಡಬಹುದಾದ್ದನ್ನು ಆಡಿ ಬಿಡಬೇಕು ಎಂಬಂತೆ “ಕುಸುಮಾ, ನೀನು ಕಾಂದಿವಿಲಿಯಲ್ಲಿ ಪ್ಲ್ಯಾಟು ಬುಕ್ ಮಾಡಿದ್ದೀಯಂತೆ. ಟೂ ರೂಂ ಕಿಚನ್. ಹೌದೆ? ಹೇಳೇ ಇಲ್ಲ ನನಗೆ. ನೀವು ಇರೋದೇ ಇಬ್ಬರು. ಮಕ್ಕಳಂತೂ ಇಲ್ಲ. ಟೂ ರೂಂ ಕಿಚನ್ ಯಾಕೆ? ಸಿಂಗಲ್ ರೂಂ ಕಿಚನ್ ಸಾಕಿತ್ತಲ್ಲ! ಇರಲಿ ಬಿಡು. ನಿನ್ನ ದುಡ್ಡು ನಿನ್ನ ಮನೆ. ನನಗೇನಾಗಬೇಕಿದೆ ಹೇಳು?” ಎಂದಳು.

“ಛೋಟೂನ ಬಳಿ ಏನೇನೂ ಮಾತಾಡಲು ಹೋಗಬೇಡ. ನಮ್ಮ ಬಗ್ಗೆ ಅವನ ಮನಸ್ಸಿನಲ್ಲಿ ಏನಿದೆಯೋ. ಹೇಗಿದೆಯೋ. ಏನೂ ಗೊತ್ತಿಲ್ಲ. ಸುಮ್ಮನೆ ಬಾಯಿ ಬಿಟ್ಟು ಎಲ್ಲಾ ಹಾಳು ಮಾಡಿ ಬಿಟ್ಟೀಯಾ?” ಎಂದಳು ಕುಸುಮಾ. “ಅವನು ಸಿಕ್ಕೇ ಬಿಡ್ತಾನೆ ಅನ್ನೋ ಥರ ಆಡ್ತೀಯಲ್ಲ ನೀನು. ಚಿಂತೆ ಬೇಡ ಮಾರಾಯ್ತಿ. ನನಗೊಂದು ಕಲರ್ ಟೀವಿ ಕೊಡಿಸು, ಅಥವಾ ನನ್ನ ಮದುವೆಗೆ ನೀನು ಬಂದಿರಲಿಲ್ಲ, ಉಂಗುರ ಕೊಡಿಸು-ಎಂದೆಲ್ಲಾ ಕೇಳುವುದೇ ಇಲ್ಲ ನಾನು. ಸುಮ್ಮನಿರ್ತೇನೆ. ಅವನು ಕೊಡಿಸಿ ಬಿಟ್ಟರೆ ನಿನ್ನದೇನು ಅಂತಸ್ತು ಉಳಿಯುತ್ತೆ ಹೇಳು ಆಮೇಲೆ? ಇಲ್ಲ ಖಂಡಿತ ಕೇಳೋದಿಲ್ಲ. ಇರೋ ಬ್ಲಾಕ್ ಆಂಡ್ ವ್ಹೈಟ್‌ನ್ನೇ ನೋಡ್ತೀನಿ .ಸರೀನಾ?” ಎಂದು ಏದುಸಿರು ಬಿಡುತ್ತ ಜೋರಾಗಿ ನಡೆದಳು.

ಕಾಮಾನಿ ಸ್ಟ್ರೀಟ್‌ನಲ್ಲಿ ಇಬ್ಬರೂ ನಿಂತರು. ರಸ್ತೆಯ ಆಚೆ ಬದಿಗೆ ತುಸು ದೂರ ಶೆಫಾಲಿ ಸ್ಕ್ರಾಪ್ಟ್ ಸೆಂಟರ್. ಅಲ್ಲಿ ನೋಡು ಆ ಪಾನ್ ಶಾಪು ತೋರುತ್ತಿದೆಯಲ್ಲ. ಅದೇ ಅವನ ಪಾನ್‌ಶಾಪು. ಒಳಗೆ ಕೂತವ ಇಲ್ಲಿಂದ ಸ್ಪಷ್ಟವಾಗಿ ಕಾಣುತ್ತಿಲ್ಲ. ನಿಲ್ಲು ಜನ ಸಿಗರೇಟು ಕೊಂಡುಕೊಳ್ತಾ ಇದ್ದಾರೆ. ಅವರು ಹೋಗಲಿ. ಇರ್ಲಿ ಬಿಡೇ ಅವರೇನು ಮಾಡ್ತಾರೆ. ಬಾ ಹೋಗುವಾ. ಕುಸುಮಾ ನೀನು ಹೋಗು, ಅಲ್ಲಿ ಆ ಗ್ಲಾಸಿನ ಅಂಗಡಿ ಪಕ್ಕದಿಂದ ಸಮೀಪ ಕಾಣುತ್ತದೆ. ಅಲ್ಲಿಂದ ನೋಡಿ ಹೇಳು. ಇಲ್ಲಿಯ ತನಕ ಬಂದು ನಾಟಕ ಬೇಡ ಪೂರ್ವಿ. ಬಾ. ಸರಿ, ನೀನಿಲ್ಲೇ ಇರು. ನಾನೇ ಹೋಗಿ ನೋಡ್ತೇನೆ. ಅವನು ಹೌದು ಅಂತಾದರೆ ಕರೀತೇನೆ. ಮುನ್ಸಿಪಾಲ್ಟಿಯ ಸೊರಗಿದ ಗಿಡವೊಂದಕ್ಕೆ ಹಾಕಿದ ತಂತಿಯ ಪಂಜರಕ್ಕೆ ಆತು ಪೂರ್ವಿ ನಿಂತಳು. ಮತ್ತು ಕುಸುಮ ಮೆಲ್ಲಗೆ ರಸ್ತೆ ದಾಟಿ ಕಾಜಿನಂಗಡಿಯ ಸಮೀಪ ನಿಂತು ಅಳುಕುತ್ತಲೇ ಪಾನ್ ಶಾಪಿನತ್ತ ನೋಡಿದಳು.

ಹಾಗೆ ಫಕ್ಕನೆ ಅವನೇ ಆಗಿ ತೋರಿ ಬರುವಂತೆ ಖಂಡಿತ ಇರಲಿಲ್ಲ. ಸಿಗರೇಟು ಪೊಟ್ಟಣಗಳು, ಗುಟ್ಕಾ ಪಾಕೀಟು, ಮುಂದೆ ಚಾಕಲೇಟು, ಚಿಕ್ಕಿ, ಪೆಪ್ಪೆರಮೆಂಟಿನ ಕಾಜಿನ ಭರಣಿಗಳು, ಸುಣ್ಣ ಮಸಾಲೆಯ ಪುಟ್ಟ ಬೋಗುಣಿಗಳು, ಪಾನ್ ಅಂಗಡಿಯ ಆ ಚೌಕಟ್ಟು ಟೀವಿಯ ತೆರೆಯಂತೆ ತೋರುತ್ತಿತ್ತು. ಆ ಚೌಕಟ್ಟಿನಲ್ಲಿ ಅಧೋವದನನಾಗಿ ಅವನು ಪಾನ್ ಕಟ್ಟುತ್ತಿದ್ದಾನೆ. ಮೇಲ್ಗಡೆ ಪುಟ್ಟ ದೇವರ ಫೋಟೋ, ಅದಕ್ಕೊಂದು ಕೆಂಪನೆ ಝೀರೋ ಕ್ಯಾಂಡಲ್ ಬಲ್ಬು. ‘ಬತಾದೇ’ ‘ಬತಾದೆ’ ಎಂದು ಬಟಾಟೆ ವಡೆಗೆ ತೊದಲು ಕೈಚಾಚುತ್ತಿದ್ದ ಈ ಮುದ್ದು ಪೋರ ಪಾನ್ ಕಟ್ಟುವುದನ್ನು ಹೇಗೆ ಕಲಿತ, ತನ್ನದೇ ದೇವರನ್ನು ಹೇಗೆ ನಿರ್ಧರಿಸಿದ. ಅವನ ಚೌಕಾಕಾರದ ಅಂಗಡಿಯ ಪೆಟ್ಟಿಗೆ ಒಂದು ಸ್ವತಂತ್ರ ಸ್ವರ್ಗದಂತೆ ತೋರಿತು. ಅವನು ಮತ್ತು ನಮ್ಮೆಲ್ಲರ ಜಗತ್ತಿನ ನಡುವೆ ವಿಚಿತ್ರವಾದ ಗೆರೆ ಇದೆ. ಅಪ್ರತ್ಯಕ್ಷನಾಗಿಯೇ ಏನೇನೋ ಆಗಿ ನಮ್ಮೆಲ್ಲರನ್ನೂ ಒಂದಾಗಿ ಹಿಡಿದಿರುವ, ಕಾಣದ ಶಕ್ತಿಯಾಗಿ ಮುನ್ನಡೆಸಿರುವ ಛೋಟೂಗೂ ಮತ್ತು ಇಲ್ಲಿ ತನ್ನದೇ ಒಂದು ಪ್ರೇಮ, ದ್ವೇಷ, ವ್ಯವಹಾರ, ಭಕ್ತಿ, ಭಯ, ಟೀಶರ್ಟು, ಉದ್ರಿ, ನಗದು, ಪಾಪ-ಪುಣ್ಯಗಳ ಉಪಗ್ರಹವೊಂದನ್ನು ಕಟ್ಟಿಕೊಂಡು ತಲ್ಲೀನರಾಗಿರುವ ಈ ಜೀವಕ್ಕೂ ಏನೇನೋ ಸಂಬಂಧವಿಲ್ಲ. ಆ ಇಪ್ಪತ್ತು ಸಾವಿರ ರೂಪಾಯಿಯನ್ನು ಅವನು ಹೇಗೆ ಹೊತ್ತುಕೊಂಡಿದ್ದಾನೋ ಗೊತ್ತಿಲ್ಲ. ಇಲ್ಲೇ ಪಕ್ಕದಲ್ಲೇ ಮನೆಯಿಂದ ಕೇವಲ ಎರಡೂವರೆ ಕಿಲೋಮೀಟರು ಅಂತರದಲ್ಲೆ ಇರುವ ಈತ ನಮಗೆ ಸಂಬಂಧಪಟ್ಟವನಲ್ಲ. ಈತನನ್ನು ನಮ್ಮೆಲ್ಲರ ಹಂಗಿನ ಲೋಕಕ್ಕೆ ತಂದು ಧ್ವಂಸ ಮಾಡುವುದೆ? ಇವನ ಪುಟ್ಟ ಅಂಗಡಿಯ, ಪುಟ್ಟ ಫ್ರೇಮಿನ, ಇವನ ಪುಟ್ಟ ದೇವರೇ, ಇವನ ಸ್ವರ್ಗ ನರಕಗಳನ್ನು ಕಾಪಾಡು. ಇವನ ಟೀಶರ್ಟುಗಳಿಗೆ ಇಸ್ತ್ರಿ ಮಾಡು.

‘ಛೋಟೂ’ ಎಂದು ವಿಚಿತ್ರವಾದ ಸಣ್ಣ ನಿಟ್ಟುಸಿರ ಸ್ವರವೊಂದು ಮೆಲ್ಲಗೆ ಕುಸುಮಳಿಂದ ಹೊಮ್ಮಿತು ಮತ್ತದು ಅವನೊಬ್ಬನನ್ನು ಬಿಟ್ಟು ಇಲ್ಲಿಯ ಸಕಲ ತಗಡು, ಕಾಜು, ಗುಜರಿ ವಸ್ತುಗಳನ್ನು ಸವರಿಕೊಂಡು ಹಾರಿ ಹೋಯಿತು. ಗಿಡದ ಪಂಜರಕ್ಕಾತು ನಿಂತ ಪೂರ್ವಿ ಜೋರಾಗಿ ಏನು? ಏನು? ಎಂದು ಸನ್ನೆ ಮಾಡಿದಳು. ಕುಸುಮ ಪೆಚ್ಚು ಮುಖದಲ್ಲಿ ‘ಇದು ಅವನಲ್ಲ’ ಎಂಬಂತೆ ತಲೆ ಅಲ್ಲಾಡಿಸಿ ಮೆಲ್ಲಗೆ ರಸ್ತೆ ದಾಟಿ ಈಚೆ ಬಂದಳು ‘ನನಗೆ ಗೊತ್ತಿತ್ತು. ಅವನು ಇಲ್ಲಿ ಇರೋದು ಅಶಕ್ಯ ಅಂತ ನನಗೆ ಖಾತ್ರಿ ಇತ್ತು’ ಎಂದು ಗ್ರಹಣ ಬಿಟ್ಟವಳಂತೆ ಹಿಗ್ಗಿನಲ್ಲಿ ಕೇಕೆ ಹಾಕಿ ಮುಂದೆ ನಡೆದ ಪೂರ್ವಿಯನ್ನು, ಹಿಂದಿನಿಂದ ‘ಮೆಲ್ಲಗೆ….ಮೆಲ್ಲಗೆ’ ಎಂದು ಕರೆಯುತ್ತ ಕುಸುಮಾ ರಸ್ತೆ ಬದಿಯಲ್ಲಿನ ಮುಚ್ಚಿದ ಅಂಗಡಿಯ ಮುಂಗಟ್ಟಿಗೆ ಒರಗಿ ನಿಂತಳು. ಪ್ರತಿಸಲ ಗರ್ಭಪಾತವಾದಾಗಲೂ ಅವಳನ್ನು ಆವರಿಸಿಕೊಳ್ಳುತ್ತಿದ್ದ, ನಿಜಲೋಕವೊಂದನ್ನು ಶಾಶ್ವತವಾಗಿ ಕಳಕೊಂಡಂಥ ದಟ್ಟನೆಯ ನೀರವವೊಂದು ಮುತ್ತಿಕೊಳಲು ಬಂದಂತೆ ಮುಖವನ್ನು ಮುಚ್ಚಿಕೊಂಡಳು. ಕುಸುಮಾ ಜತೆಗೆ ಇದ್ದಾಳೆಂದೇ ತಿಳಿದ ಪೂರ್ವಿ ಒಬ್ಬಳೇ ಮಳ್ಳಿಯಂತೆ ಮಾತಾಡುತ್ತ ಮೆಹಂದಿ ಕೈಯನ್ನು ಅಭಯ ಹಸ್ತದಂತೆ ಗಾಳಿಯಲ್ಲಿ ಹಿಡಿದು ಬಿಸಿಲಲ್ಲಿ ದೂರವಾಗುತ್ತಿದ್ದಳು.
*****

ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.