ಬೆಳಕು

ಬೆಳಕೆ! ಓ ನನ್ನ ಬೆಳಕೆ!
ಜಗವನೆಲ್ಲವ ತುಂಬಿ ತುಳುಕುತಿಹ ಬೆಳಕೆ!
ಕಂಗಳಾಲಯ ತುಂಬಿ ಚುಂಬಿಸುವ ಬೆಳಕೆ!
ಎದೆಯ ಇನಿದಾಗಿಸುವ ಚೆನ್ನ ಬೆಳಕೆ!

ಓ! ಬೆಳಕು ಕುಣಿಯುತಿದೆ ನನ್ನ ಬಾಳಿನ ಮಧ್ಯ
ರಂಗದಲಿ; ಮುದ್ದಿನ ಕಣಿ,
ನನ್ನ ಒಲವಿನ ತಂತಿಯನ್ನೆ ಮೀಟುತ್ತಿಹುದು
ಆ ಬೆಳಕು; ನನ್ನರಗಿಣಿ
ಬಾನು ಬಗೆ ತೆರೆಯುತಿದೆ
ಗಾಳಿ ಹರಿದೋಡುತಿದೆ
ನಗೆ ಸಾಗಿ ಹೋಗುತಿದೆ ಬುವಿಯ ಮೇಲೆ!

ಎನಿತೊ ಬಣ್ಣದ ಚಿಟ್ಟೆ ಬೆಳಕಿನಾ ಕಡಲಲ್ಲಿ
ಹಾಯಿಗಳ ಹರಹುತಿಹವು,
ಬೆಳಕಿನ ತರಂಗಗಳ ಅಂಚಿನಲಿ ತೇಲುತಿವೆ
ನೈದಿಲೆಯು ಜಾಜಿ ಹೂವು.

ಮೋಡ ಮೋಡಗಳಲ್ಲಿ ಬೆಳಕು ಬಂಗಾರ-ಹುಡಿ,
ರತ್ನಗಳ ಸುರಿಸುತಿಹುದು;
ಎಲೆಯಿಂದ ಎಲೆಗೆ ಸಲೆ ಉಲ್ಲಾಸವಲೆಯುತಿದೆ
ಸಂತೋಷ ಮಿಳಿರುತಿಹುದು.
ಸ್ವರ್‍ಗದಲಿ ಹರಿವ ನದಿ ಮೇರೆದಪ್ಪುತ ತನ್ನ
ಆನಂದಪೂರದಲಿ ಮುಳುಗಿಸಿಹುದು.
*****
– “Geetanjali” 53