ಬೆಳಿಗ್ಗೆ ಎಂಟೂವರೆ ಗಂಟೆಗೆ ಸರಿಯಾಗಿ ಹತ್ತಾರು ದಿನಗಳಿಂದ ಕಡುನೀಲಿಯಾಗಿಯೇ ಉಳಿದಿದ್ದ ಆಕಾಶದ ತುಂಬ ಅದಾವ ಮಾಯದಲ್ಲೋ ಹಿಂಡು ಹಿಂಡು ಮದ್ದಾನೆಗಳ ಹಾಗೆ ಕಪ್ಪು ಮೋಡಗಳು ದಟ್ಟಯಿಸಿ ಇದ್ದಕ್ಕಿದ್ದಂತೆ ಹಗಲೇ ರಾತ್ರಿಯಾಗಿಬಿಟ್ಟ ಹಾಗೆ, ಕತ್ತಲು ಕವಿದು ಕೆಲವೇ ಕ್ಷಣಗಳಲ್ಲಿ ಎದೆ ನಡುಗಿಸುವಂತಹ ಗುಡುಗು ಮೊಳಗಿ, ಆಗಾಗ ಕಣ್ಣು ಮಿಟುಕಿಸುವಷ್ಟು ಹೊತ್ತು ಮಾತ್ರ ಕತ್ತಲನ್ನು ಹೊಡೆದೋಡಿಸುವಂತೆ ಫಳಾರನೆ ಮಿಂಚು ಮಿಂಚಿ ರಪ ರಪ ರಪ ಎಂದು ಸುರಿಯತೊಡಗಿದ ಆಲಿಕಲ್ಲು ಮಳೆ ಭುವನಗಿರಿಯ ಮರಗಿಡಗಳ ರೆಂಬೆಕೊಂಬೆಗಳನ್ನು ಮುರಿದು ಎಲೆಗಳನ್ನೆಲ್ಲ ಉದುರಿಸಿ ಮನೆಯೊಳಗೆ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದ ಹಾಗೆ ಅಬ್ಬರಿಸಿ ಹಲವಾರು ಮನೆಗಳ ಹೆಂಚುಗಳನ್ನು ಒಡೆದು ಮುಂಜಾನೆಯೇ ಎಚ್ಚರಗೊಂಡು ಚಿಲಿಪಿಲಿಗುಟ್ಟುತ್ತಿದ್ದ ಗುಬ್ಬಚ್ಚಿಗಳನ್ನೂ ಕಾಗೆ ಕೋಳಿಗಳನ್ನೂ ತೆಪ್ಪಗಿರಿಸಿ ಹೊರಗೆಲ್ಲೋ ಅಡ್ಡಾಡಲು ಹೊರಟಿದ್ದವರ ಜುಟ್ಟು ಹಿಡಿದು ಅಲ್ಲಾಡಿಸಿ ಒಂಟೊಂಟಿಯಾಗಿ ಛತ್ರಿ ಹಿಡಿದು ನೆಟ್ಟಗೆ ನಿಂತ ತೆಂಗಿನ ಮರಗಳ ಗರಿಗಳನ್ನುದುರಿಸಿ ವೇಣುಗೋಪಾಲಸ್ವಾಮಿ ಗುಡಿಯ ಗೋಪುರದ ಕಲಶವನ್ನು ದಢಾರೆಂದು ನೆಲಕ್ಕೆ ಕೆಡವಿ ಅಂಗಳಗಳಲ್ಲಿ ಒಣಹಾಕಿದ್ದ ಬಟ್ಟೆಗಳನ್ನು ದೂರದೂರಕ್ಕೆ ತೇಲಿಸಿ ಹಾರಿಸಿ ಮನೆಮಾಡುಗಳಿಂದ ಜಲಪಾತದ ಹಾಗೆ ಧುಮ್ಮಿಕ್ಕುತ್ತಿದ್ದ ನೀರೆಲ್ಲ ಬೀದಿಗಳ ತುಂಬ ಹರಿದು ಭೋರ್ಗರೆಯುವಂತೆ ಮಾಡಿ ಸಂಜೆಯವರೆಗೂ ತನ್ನ ರಾಕ್ಷಸ ಪ್ರತಾಪವನ್ನು ತೋರಿಸಿದ ಆ ದಿನ ಜಾನಕಮ್ಮ ಕಣ್ಣು ಮುಚ್ಚಿದಳು.
ಆ ದುರದೃಷ್ಟದ ದಿನ ಚೊಚ್ಚಲು ಹೆರಿಗೆಯಲ್ಲಿ ಹೆತ್ತ ಗಂಡು ಮಗುವಿನ ಜೊತೆಯಲ್ಲೇ ಅವಳೂ ಅಸುನೀಗಿದಳಲ್ಲಾ ಎಂದು ಮನೆಯವರೆಲ್ಲರೂ ಬಾಯಿ ಬಾಯಿ ಬಡಿದುಕೊಂಡು ಗೋಳಾಡಿದರು.
ಮಾರನೆಯ ದಿನ ಭುವನಗಿರಿಯ ಯಾವ ಗಿಡದಲ್ಲೂ ಹೂವರಳಲಿಲ್ಲ.
ಮಾರನೆಯ ದಿನ ಆ ಮನೆಯ ಅಂಗಳದಲ್ಲಿ ಹತ್ತಾರು ಕಾಗೆ, ನೂರಾರು ಗುಬ್ಬಚ್ಚಿಗಳು ಸತ್ತುಬಿದ್ದದ್ದನ್ನು ನೋಡಿದರೂ ನಂಅಲಾಗದವರಂತೆ ಎಲ್ಲರೂ ದಿಗ್ಭ್ರಾಂತರಾದರು.
ನಾಲ್ಕನೆಯ ದಿನ ಜನ ಸಾಮಾನ್ಯವಾಗಿ ಮರೆಯುವಂತೆ ನಮ್ಮ ಜಾನಕಮ್ಮನನ್ನೂ ಮರೆತುಬಿಟ್ಟರು, ನಮ್ಮಪ್ಪನ ಆ ಅಕ್ಕನ ಬಗ್ಗೆ ನಾನೆಂದೂ ಅಷ್ಟಾಗಿ ಯೋಚಿಸಿದವಳಲ್ಲ. ನಾನು ಹುಟ್ಟುವುದಕ್ಕೆ ಮೊದಲೇ ಈ ಇಹಲೋಕವನ್ನು ಬಿಟ್ಟುಹೋಗಿದ್ದ ಆಕೆಯ ಬಗ್ಗೆ ನಮ್ಮ ಕುಟುಂಬ ನೆನಪುಗಳಲ್ಲಿ ಅಂಥ ಸ್ಥಾನವೇನೂ ಇದ್ದಂತಿರಲಿಲ್ಲ. ಯಾರದೋ ಮದುವೆಯಲ್ಲೋ ಬಂಧುಬಾಂಧರೆಲ್ಲ ಸೇರಿದಾಗ ಕೂಡ ಅವಳ ವಿಷಯ ಮಾತಿಗೆ ಬರುತ್ತಿದ್ದುದೇ ಅಪರೂಪ. ನಮ್ಮಲ್ಲಿರುವ ಆಲ್ಬಂಗಳಲ್ಲಿ ಮನೆತನದ ಹೆಗ್ಗಳಿಕೆಯ ಶಾಖಾನುಶಾಖೆಯನ್ನು ಪ್ರತಿನಿಧಿಸುವವರ ನೂರಾರು ಫೋಟೋಗಳು ತುಂಬಿ ಹೋಗಿದ್ದರೂ ಯಾಕೋ ಆಕೆಯದೆಂದು ಗುರುತಿಸಲಾಗಿರುವ ಫೋಟೋ ಇರುವುದು ಒಂದೇ ಒಂದು. ಹಳದಿ ಬಣ್ಣಕ್ಕೆ ತಿರುಗಿ ಮುಟ್ಟಿದರೆ ಮುರಿಯುವಷ್ಟು ಹಳೆಯದಾದ ಆ ಫೋಟೋದಲ್ಲಿ ಕ್ಯಾಮೆರಾದ ಇದಿರಿಗೆ ಮುಜುಗರದಿಂದ ಮೈಬಿಗಿದುಕೊಂಡಂತೆ ಕಾಣಿಸುವ-ಓಬೀರಾಯನ ಕಾಲದ ಎಲ್ಲ ಫೋಟೋಗಳಲ್ಲೂ ನಮ್ಮ ಹೆಂಗಸರು ಕಾಣಿಸುವುದೇ ಹಾಗಲ್ಲವೇ-ಹದಿನೇಳೋ ಹದಿನೆಂಟೋ ವರ್ಷದ ಜಾನಕಮ್ಮ ಸೂಕ್ಷ್ಮ ಕೆತ್ತನೆಯಿಂದ ಸಿಂಗಾರಗೊಂಡ ಭಾರೀ ಮರದ ಕುರ್ಚಿಯಲ್ಲಿ ನೆಟ್ಟಗೆ ಸೆಟೆದು ಕುಳಿತಿದ್ದಾಳೆ.
ಅವಳ ಬಳಿಯಲ್ಲಿ ಒಂದೇ ಒಂದು ಕಾಲಿರುವ ಅಂಥದೇ ಕೆತ್ತನೆಯುಳ್ಳ ಗುಂಡು ಮೇಜು. ಅದರ ಮೇಲೆ ಕಸೂತಿ ಹಾಕಿರುವ ಬಿಳಿಯ ಟೇಬಲ್ ಕ್ಲಾತು. ಚಿನ್ನದ ಬಳೆಗಳನ್ನೂ ಕಡಗವನ್ನೂ ತೊಟ್ಟುಕೊಂಡ ತನ್ನ ಕೈಗಳನ್ನು ತೊಡೆಯ ಮೇಲಿಟ್ಟುಕೊಂಡಿದ್ದಾಳೆ. ಆ ತೊಡೆಗಳು ಬಹುಶಃ ಅವರಮ್ಮನ ಹದ್ದಿನ ಕಣ್ಣಿನ ಆಣತಿಗೆ ಅನುಗುಣವಾಗಿ ಮಧ್ಯೆ ಒಂದಿಷ್ಟೂ ಬಿರುಕು ಬಿಡದೆ ಒಂದಕ್ಕೊಂದು ಅಂಟಿಕೊಂಡಂತಿವೆ. ಅವಳು ತನ್ನ ಇದಿರನ್ನೇ ದಿಟ್ಟಿಸುತ್ತಿದ್ದಾಳೆ-ಘನಗಂಭೀರವಾಗಿ, ಒಂದಿಷ್ಟೂ ಮುಗುಳುನಗದೆ, ಮೊದಲೇ ಅಗಲವಾಗಿರುವ ತನ್ನ ಕಣ್ಣುಗಳನ್ನು ಇನ್ನಷ್ಟು ಆಲವಾಗಿ ಅರಳಿಸಿಕೊಂಡು. ಆದರೂ ಯಾಕೋ ಅವಳ ಆ ಬಿಗಿದುಕೊಂಡ ಮುಖವನ್ನು ನೋಡಿದರೆ ಉಕ್ಕಿಬರುತ್ತಿರಬಹುದಾದ ನಗುವನ್ನು ತಡೆದುಕೊಳ್ಳಲು ಹೆಣಗುತ್ತಿದ್ದಾಳೇನೋ ಅಂತ ನನಗೆ ಅನ್ನಿಸುತ್ತಿದೆ. ಬೈತಲೆ ತೆಗೆದು ಹಿಂದಕ್ಕೆ ಎಳೆದು ಚಾಚಿರುವ ಕೂದಲು; ತುರುಬಿನಲ್ಲಿ ಹೂವಿನ ರಾಶಿಯೇ ಇರಬೇಕು. ಕಿವಿಯಲ್ಲಿ ವಜ್ರದ ಓಲೆಗಳು; ಮೂಗಿನಲ್ಲಿ ಮುತ್ತಿರುವ ಬೇಸರಿ; ಬೆರಳುಗಳಲ್ಲಿ ಫಳಫಳ ಹೊಳೆಯುವ ಉಂಗುರಗಳು; ತೋಳಿನಲ್ಲಿ, ಎದೆಯ ಮೇಲೆ ಬಗೆಬಗೆಯ ಚಿನ್ನದ ಆಭರಣಗಳು. ಬಿಗಿಯಾಗಿ ಎಳೆದು ಕಟ್ಟಿದಂತಿರುವ ಸೆರಗಿನ ಹಿಂದೆ ಚಪ್ಪಟೆಯಾದ ಎದೆ. ಅಥವಾ ನನಗೆ ಹಾಗೆ ಕಾಣಿಸುತ್ತಿದೆಯೋ. ಒಟ್ಟಿನಲ್ಲಿ ಹೀಗೆ ಒಡವೆಗಳನ್ನು ಹೇರಿಕೊಂಡು ಕುರ್ಚಿಯಲ್ಲಿ ಕೂತಿರುವ ಹಿಂಸೆಯಿಂದ ಯಾವಾಗ ಬಿಡುಗಡೆಯೋ ಎನ್ನುವಂತಿರುವ ಮುಖಭಾವ.
ಒಡವೆ ವಸ್ತುಗಳ ಮೂಲಕವೇ ಎಂಥ ಐಶ್ವರ್ಯವಂತರ ಮನೆ ಎಂಬುದನ್ನು ಸೂಚಿಸುವಂತೆ ಹೀಗೆ ಹೆಣ್ಣುಮಕ್ಕಳ ಫೋಟೋ ತೆಗೆಸುವುದು ಆ ಕಾಲದ ಪರಿಪಾಠವೇನೋ. ಅಥವಾ ನಮ್ಮ ಮನೆಯಲ್ಲೊಬ್ಬ ವಿವಾಹಯೋಗ್ಯ ಯುವತಿಯಿದ್ದಾಳೆಂದು ಜಗಜ್ಜಾಹೀರು ಮಾಡುವ ಪರಿಯೋ ? ಕಳೆದ ಕೆಲವು ದಿನಗಳಿಂದ ಈ ಫೋಟೋವನ್ನೇ ನೋಡುತ್ತಿದ್ದೇನೆ ನಾನು. ಭುವನಗಿರಿಯ ಈ ಭಾರೀ ಬಂಗಲೆಯಲ್ಲಿ ಕತ್ತಲು ಕವಿದ ಯಾವುದೋ ಕೋಣೆಯ ಕಪಾಟಿನೊಳಗಿಂದ ಒಂದು ಆಲ್ಬಂನಿಂದ ನಾನಿದನ್ನು ಕದ್ದುಕೊಂಡು ಬಂದದ್ದು. ಒಂದು ವೇಳೆ ಕದಿಯದೆ ನನಗೆ ಕೊಡಿ ಎಂದು ಕೇಳಿದ್ದರೆ ಜಾನಕಮ್ಮನ ಬಗ್ಗೆ ನನಗೇಕೆ ಇಷ್ಟು ಕುತೂಹಲ ಎಂದು ಹಲವಾರು ಹುಬ್ಬುಗಳು ಮೇಲೇರಿ ವಿಚಿತ್ರ ಸಂಶಯಕ್ಕೆ ಎಡೆಮಾಡಿಕೊಡಬಹುದಾಗಿತ್ತು. ವಿಸ್ಮಯದ ಸಂಗತಿಯೆಂದರೆ ನಮ್ಮಪ್ಪನ ಕಡೆಯವರಾರೂ ಆಕೆಯ ಬಗ್ಗೆ ಪ್ರಾಸಂಗಿಕವಾಗಿ ಕೂಡ ವಿಶೇಷವಾಗಿ ಅಂಥದೇನನ್ನೂ ಹೇಳದಿದ್ದದ್ದು ಯಾಕೆ ? ಸತ್ತು ಐವತ್ತಾರು ವರ್ಷವಾದ ಮೇಲೂ ಇನ್ನೂ ಯಾಕೆ ಹೀಗೆ ? ಅವಳೇನಾದರೂ ಮನೆತನಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಳೆ ? ಅಥವಾ ಅವಳ ವಿಷಯ ನಿಜಕ್ಕೂ ಯಾರಿಗೂ ಏನೂ ಗೊತ್ತೇ ಇರಲಿಲ್ಲವೋ ? ಮೊನ್ನೆ ಮೊನ್ನೆಯವರೆಗೂ ಬದಿಕಿದ್ದ ನಮ್ಮಜ್ಜಿ ಅವಳ ಹೆಸರೆತ್ತಿದರೆ ಸಾಕು, ಮಹಾಮೌನಿ. ಚಿಕ್ಕಂದಿನಲ್ಲಿ ಅವಳ ಒಡನಾಡಿರಬಹುದಾದ ನಮ್ಮಪ್ಪ ಕೂಡ ಒಮ್ಮೆ ಆಕೆಯ ಪ್ರಸ್ತಾಪ ಬಂದಾಗ ಹುಚ್ಚಿ ಎಂದನಲ್ಲದೆ ಬೇರೇನನ್ನೂ ಹೇಳಲಿಲ್ಲ.
ಜಾನಕತ್ತೆ ಒಳ್ಳೆ ತ್ರಿಪುರಸುಂದರಿಯ ಹಾಗಿದ್ದಳಂತೆ. ಇಡೀ ಪ್ರಪಂಚಕ್ಕೇ ತಂಪೆರೆದು ನೆಮ್ಮದಿ ತರುವಂಥ ಕಣ್ಣುಗಳಿದ್ದುವಂತೆ ಅವಳಿಗೆ. ಬೆಳಗಾದದ್ದೇ ಸ್ನಾನ ಮಾಡಿ ಹಣೆಗೆ ಇಷ್ಟಗಲ ಕುಂಕುಮವನ್ನಿಟ್ಟುಕೊಂಡು ತುಳಸೀ ಕಟ್ಟೆಗೆ ಪೂಜಿಸಿ ಅವಳು ಪ್ರೀತಿಯಿಂದ ಚೆಲ್ಲುತ್ತಿದ್ದ ಕಾಳಿಗಾಗಿ ಕಾದಿರುತ್ತಿದ್ದುವಂತೆ ಹಿಂಡು ಹಿಂಡು ಕಾಗೆ ಗುಬ್ಬಚ್ಚಿಗಳು. ಹದಿನಾರು ತುಂಬಿದ ಮೇಲೆ ಒಂದು ದಿನ ಅದೇನು ಹುಕ್ಕಿ ಬಂತೋ ಮನೆಯಲ್ಲಿದ್ದ ಹಳೆ ಬಟ್ಟೆಗಳನ್ನು ಹರಡಿಕೊಂಡು ಇಡೀ ಮಧ್ಯಾಹ್ನ ಅವುಗಳನ್ನು ಹೇಗೆ ಹೇಗೋ ಕತ್ತರಿಸಿ ಸಂಜೆಯ ಹೊತ್ತಿಗೆ ಒಂದು ಗೊಂಬೆಯನ್ನು ಮಾಡಿದ್ದಳಂತೆ. ಬಣ್ಣಬಣ್ಣದ ಚೂರು ಬಟ್ಟೆಗಳಲ್ಲಿ ಹತ್ತಿ ತುಂಬಿ ಹೊಲಿದಿದ್ದ ಮುದ್ದಾದ ಗೊಂಬೆ. ಅದರ ಕಣ್ಣುಗಳ ಜಾಗದಲ್ಲಿ ಅಂಟಿಸಿದ್ದ ಬಿಳಿ ಕವಡೆ. ಅದುವರೆಗೂ ಯಾರಿಗೂ ಗೊತ್ತಿರದ ಅವಳ ಆ ಜಾಣ್ಮೆಯನ್ನು ಕಂಡು ಎಲ್ಲರಿಗೂ ಸಂತೋಷವಾಯಿತಂತೆ. ಮತ್ತೆರಡು ದಿನಗಳ ನಂತರ ಅಂಥದೇ ಇನ್ನೊಂದು ಗೊಂಬೆ ತಯಾರು. ಮೊದಲಿನದಕ್ಕಿಂತ ಅದು ತುಸು ಪಳಗಿದ ಕೈ ಚಳಕವೆನ್ನುವಂತೆ ಹೆಚ್ಚು ಸುಂದರವಾಗಿತ್ತಂತೆ. ಇನ್ನೂ ಅಷ್ಟು ಮಾಡಿಡು, ನವರಾತ್ರಿಗೆ ಹೇಗೂ ಗೊಂಬೆ ಕೂರಿಸಬೇಕಲ್ಲ ಎಂದಿದ್ದರಂತೆ ಅವರಮ್ಮ ನಗುತ್ತ.
ಜಾನಕಮ್ಮ ಅದನ್ನೊಂದು ಅಪರೂಪದ ಉತ್ತೇಜನವೆಂದು ಬಗೆದು ಇನ್ನೂ ಅಷ್ಟು ಗೊಂಬೆಗಳನ್ನು ಮಾಡಿಟ್ಟಳಂತೆ. ಎಲ್ಲ ಗೊಂಬೆಗಳಿಗೂ ಒಂದೇ ಮುಖ-ಮುಗುಳುನಗುತ್ತಿರುವ ಗಂಡು ಮುಖ. ಅದೊಂದು ದಿನ ಮಂಗಳಮ್ಮ ಉದ್ದ ಜಡೆಯಿರುವ ಒಂದು ಹೆಣ್ಣು ಗೊಂಬೆಯನ್ನೂ ಮಾಡಬಾರದೇನೇ ಎಂದು ಕೇಳಿದಾಗ ಹೆಣ್ಣುಗೊಂಬೆ ಯಾಕೆ, ನಾನೇ ಇದ್ದೇನಲ್ಲ ಸಾಲದೆ ಎಂದು ನಿಟ್ಟುಸುರುಬಿಟ್ಟಿದ್ದಳಂತೆ. ಅಂತೆಕಂತೆಗಳು ಅಲ್ಲಿಗೇ ಮುಗಿಯಲಿಲ್ಲ….
ಕಡೆಗಾಲದಲ್ಲಿ ಅವಳಿಗೆ ಹೆಚ್ಚುಕಡಿಮೆ ಹುಚ್ಚೇಹಿಡಿದುಬಿಟ್ಟಿತಂತೆ. ಯಾಕೆ ಹುಚ್ಚು ಹಿಡಿಯಿತು ? ಅವಳೇನು ಮಾಡಿದ್ದಳು ? ಯಾರಾದರೂ ಹುಡುಗ ಅವಳ ಮನಸೆಳೆದಿದ್ದನೇ ? ಇಲ್ಲ, ಆ ಕಾಲದಲ್ಲಿ ಈಗಿನಂತೆ ಹುಡುಗರು ಹುಡುಗಿಯರ ಬೆನ್ನುಹತ್ತುತ್ತಿರಲಿಲ್ಲ ಎಂದರಲ್ಲ ಕೆಲವರು. ಇನ್ನೇನು ಕಾರಣವಿದ್ದೀತು ? ಈ ಬಗ್ಗೆ ಏನಾದರೂ ಸುಳಿವು ಕೊಡಬಹುದಾದವಳು ಮಂಗಳಮ್ಮ ಮಾತ್ರವೇ ಎನ್ನಿಸಿ ಅವಳನ್ನು ಹುಡುಕಿಕೊಂಡು ಭುವನಗಿರಿಗೆ ಹೋದೆ. ಒಂದು ಕಾಲದಲ್ಲಿ ಹಳ್ಳಿಯ ಶ್ರೀಮಂತರ ಮನೆಗಳಲ್ಲಿ ತಂದೆತಾಯಿಯಿಲ್ಲದೆ ಅನಾಥರಾದ ಅಥವಾ ತಂದೆತಾಯಿಯಿದ್ದೂ ಬಡವರಾಗಿದ್ದ ಹೆಣ್ಣುಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಿದ್ದರಷ್ಟೆ. ಅಂಥವರಲ್ಲಿ ಕೆಲವರು ತಮ್ಮ “ಒಳ್ಳೆಯ ನಡತೆ” ಯಿಂದಾಗಿ ಮನೆಯವರ ಮೆಚ್ಚುಗೆಗೆ ಪಾತ್ರರಾಗಿ ತಮ್ಮ ಬಾಲ್ಯ, ಯೌವನಗಳನ್ನೆಲ್ಲ ಕೆಲಸಮಾಡುತ್ತಲೇ ಕಳೆದು ಮನೆಯವರೇನಾದರೂ ಮುತುವರ್ಜಿ ವಹಿಸಿದರೆ ಮದುವೆಯೂ ಆಗಿ ಗಂಡನೊಡನೆ ಅದೇ ಮನೆಯಲ್ಲಿ ಇದ್ದುಕೊಂಡು ಕಡೆಗೆ ಮನೆಯವರಲ್ಲೇ ಒಬ್ಬರಾಗಿಬಿಡುತ್ತಿದ್ದರು. ಹಾಗೆ ನಮ್ಮಲ್ಲಿ ಬೆಳೆದವಳು ಮಂಗಳಮ್ಮ. ನಮ್ಮಜ್ಜಿ ಅವಳನ್ನು ಅಪಾರ ಕರುಣೆಯಿಂದ ನೋಡಿಕೊಂಡರಂತೆ. ಯಾಕೋ ಅವರೆಷ್ಟು ಪ್ರಯತ್ನಿಸಿದರೂ ಅವಳಿಗೆ ಮದುವೆಯಾಗುವ ಯೋಗ ಇರಲಿಲ್ಲ.
ನಮ್ಮಜ್ಜ ಅಜ್ಜಿ ಇಬ್ಬರೂ ಇಲ್ಲವಾಗಿ ಅದೆಷ್ಟೋ ವರ್ಷಗಳು ಕಳೆದಿರುವ ಈಗ ಜಾನಕಮ್ಮನ ಗಂಡ ವಿಶ್ವೇಶ್ವರಯ್ಯನೊಬ್ಬನೇ ಭುವನಗಿರಿಯ ಹಳೆಕಾಲದ ಆ ದೊಡ್ಡಮನೆಗೆ ಉತ್ತರಾಧಿಕಾರಿ. ಸುಬ್ಬಣ್ಣನ ಕಾಣದೆ, ಮೊದಲಿನ ಕಳೆಯಿಲ್ಲದೆ ಬಿಕೋ ಎನ್ನುತ್ತಿರುವ ಆ ಮನೆಯಲ್ಲಿ ಹತ್ತಿರ ಹತ್ತಿರ ತೊಂಭತ್ತು ವರ್ಷದ ವೃದ್ಧೆಯಾಗಿರುವ ಮಂಗಳಮ್ಮ ಜಾನಕತ್ತೆಯ ಕೋಣೆಯಲ್ಲೇ ಹಾಸಿಗೆ ಹಿಡಿದುಬಿಟ್ಟಿದ್ದಳು. ಇದಿರಿಗೆ ಕೂತು ಒಂದಾದಮೇಲೊಂದರಂತೆ ನನ್ನ ಪ್ರಶ್ನೆಗಳನ್ನಿಟ್ಟಾಗ ಸುಮ್ಮನೆ ಕಣ್ಣು ಪಿಳಿಕಿಸುತ್ತ ನನ್ನ ಕಡೆ ನೋಡಿದಳಷ್ಟೆ. ನಲವತ್ತು ಐವತ್ತು ವರ್ಷಗಳ ಹಿಂದಿನ ಪುರಾವೆಯೊಂದೂ ಅವಳಿಗೆ ನೆನಪಿದ್ದಂತಿರಲಿಲ್ಲ. ನಮ್ಮಜ್ಜ ಅಜ್ಜಿಯ ಬಗ್ಗೆ, ಅಷ್ಟೇಕೆ ನಮ್ಮಪ್ಪನ ಬಗ್ಗೆ ಕೂಡ ಅವಳದು ಅಖಂಡ ಮೌನ. ಕಡೆಗೆ ವಿಶ್ವೇಶ್ವರಯ್ಯನ ಸೂಚನೆಯಂತೆಕುತೂಹಲದಿಂದ ಅವಳ ಬಲಗೈಯಲ್ಲಿ ಮಿಂಚುತ್ತಿದ್ದ ಚಿನ್ನದ ಬಳೆಯನ್ನು ಮುಟ್ಟಿ ಅದರತ್ತ ಬೆರಳು ತೋರಿಸಿದೆ. ತಕ್ಷಣ ಭಯಭೀತಿಯಿಂದ ಬೆಚ್ಚಿಬಿದ್ದವಳಂತೆ ಎದ್ದು ಕೂತು ಆ ಬಳೆಯನ್ನೂ ತನ್ನ ಕೈಯೊಳಗೇ ಇದೆಯೆಂದು ಖಾತರಿಪಡಿಸಿಕೊಂಡವಳು, ಆ ಹುಡುಗ ಬಂದಿದಾನೆ ನೋಡೋ ಜಾನಕೀ-ಹೂಂ, ಹೊರಡು ಹಜಾರಕ್ಕೆ… ನನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ ಮನೇಲಿ… ಎಂದು ಅರ್ಧಂಬರ್ದ ಕೇಳಿಸುವ ಹಾಗೆ ಒಂದಷ್ಟು ಗೊಣಗಿಕೊಳ್ಳುತ್ತ ನಿಡಿದಾಗಿ ಉಸಿರುಬಿಟ್ಟಳಷ್ಟೆ. ಕೆಲವು ಕ್ಷಣಗಳ ಬಳಿಕ, ಎಷ್ಟು ಮುದ್ದಾಗಿದೆಯಲ್ಲೇ ನಿನ್ನ ಮಗು…. ಎಂದೇನೋ ಕನವರಿಸಿಕೊಂಡಂತೆ ಬಡಬಡಿಸಿ ಮಲಗಿಬಿಟ್ಟಳು. ಅಷ್ಟೆ, ಆಮೇಲೆ ಮಾತಿಲ್ಲ ಕತೆಯಿಲ್ಲ.
ನಮ್ಮ ಮನೆತನಕ್ಕೆ ಸಂಬಂಧಿಸಿದ ಈ ಎಳೆಗಳೆಲ್ಲ ಒಂದು ನೆಯ್ಗೆಯಾಗುವುದಾದರೂ ಹೇಗೆ ಎನ್ನುವುದೇ ನನ್ನ ಸಮಸ್ಯೆಯಾಯಿತು. ಬೆಂಗಳೂರಿಗೆ ಹಿಂದಿರುಗಿದ ಮೇಲೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮದುವೆಯನ್ನು ಮುಂದೂಡುತ್ತಿರುವ ನನ್ನನ್ನು ಅಪ್ಪ ಅಮ್ಮ ಇಬ್ಬರೂ ಎಲ್ಲೋ ಯಾವುದೋ ಗಂಡಿದೆಯೆಂದು ಏಳೆಂಟು ದಿನ ಒಪ್ಪಿಕೋ ಎನ್ನುತ್ತ ಕಾಡಿಸಿ ಪೀಡಿಸಿದ್ದಾಯಿತು. ನನಗೇಕೆ ಮದುವೆ ಬೇಡವೆಂದು ಅವರಿಗಾದರೂ ಹೇಗೆ ಗೊತ್ತಾಗಬೇಕು ? ಮೊನ್ನೆ ನನ್ನ ರೂಮಿನಲ್ಲಿ ಕೂತವಳು ಏನನ್ನೋ ಹುಡುಕುತ್ತ ಅಲಮಾರಿನ ಹಾಳುಮೂಳನ್ನೆಲ್ಲ ತೆಗೆದು ಜಾಡಿಸುತ್ತಿರುವಾಗ ನನಗೆ ಜಾನಕಮ್ಮನ ಅದೇ ಫೋಟೋ ಸಿಕ್ಕಿತು. ಅದೂ ಕೂಡ ಪ್ರೇಮದಿಂದಾಗಿ ಯಮಯಾತನೆಯನ್ನನುಭವಿಸಿ ಚೂರುಪಾರು ನೆನಪುಗಳನ್ನಷ್ಟೇ ಉಳಿಸಿಹೋದ ಒಂದು ಹೆಣ್ಣಿನ ಫೋಟೋವಷ್ಟೆ ಎನ್ನಿಸಿತು. ಒತ್ತಾಗಿ ಬೆಳೆದ ಹುಬ್ಬಿನ ಕೆಳಗೆ ಆ ಸುಂದರ ಬಟ್ಟಲುಗಣ್ಣುಗಳ ಮೂಲಕ ಗಂಟಲಿನ ಸೆರೆಯುಬ್ಬಿ ಬರುತ್ತಿರುವ ಅತೀವ ದುಃಖವನ್ನು ಅದುಮಿಹಿಡಿದುಕೊಂಡಂತೆ ಪ್ರಪಂಚವನ್ನು ನೋಡುತ್ತ ಕೂತವಳ ದೃಷ್ಟಿ ಅವಳನ್ನೇ ನೋಡುತ್ತಿದ್ದ ನನ್ನ ಮೇಲೆ ನೆಟ್ಟು ನಿಂತಂತೆನಿಸಿದ್ದೇ ಆ ದೃಷ್ಟಿಯ ಕರುಳು ನೇವರಿಸುವಂತಹ ಪರಿಣಾಮ, ನಾನೂ ನಿನ್ನಂತೆಯೇ ಒಬ್ಬಳು ಎಂಬ ಹತಾಶಭಾವ ಹಠಾತ್ತಾಗಿ ನನ್ನಲ್ಲುದಿಸಿದ ಆತಂಕವನ್ನು ತುಸು ಸಮಾಧಾನಪಡಿಸಿತು. ಆ ಫೋಟೋವನ್ನೇ ದಿಟ್ಟಿಸಿ ನೋಡುತ್ತಿದ್ದಂತೆ ಅದರಲ್ಲಿದ್ದವಳು ಒಬ್ಬ ಜೀವಂತ ಹುಡುಗಿಯಾಗಿ ಕಣ್ಣಿನ ರೆಪ್ಪೆಗಳನ್ನು ಅಲುಗಾಡಿಸುತ್ತ ನಿರಾಶೆಯಿಂದ ನಕ್ಕಂತೆ ಕಾಣಿಸಿ ಅವಳು ಅದೇನೋ ರಹಸ್ಯವನ್ನು ನನ್ನೊಡನೆ ಹಂಚಿಕೊಳ್ಳಲು ತವಕಿಸುತ್ತಿರುವಂತೆ ಭಾಸವಾದಾಗ ನಮ್ಮಿಬ್ಬರನ್ನೂ ಬೇರ್ಪಡಿಸಿದ್ದ ಐವತ್ತಾರು ವರ್ಷ ಯಾವ ಮಾಯದಲ್ಲೋ ಕರಗಿಹೋದಂತಾಯಿತು.
-ನೀನು ತಿಳಿದಂತೆ ಆತ ನನ್ನ ಕೈಬಿಡಲಿಲ್ಲ, ವೈದೇಹಿ.
-ಅತ್ತೇ, ಏನು ಮಾತಿದು ? ಅವನು ಇನ್ನೊಬ್ಬಳನ್ನು ಮದುವೆಯಾಗಲಿಲ್ಲವೆ ?
ಅವನಿಗಾಗಿ ಹಂಬಲಿಸಿ ಹಂಬಲಿಸಿ ಕಡೆಗೆ ನೀನೂ ಬೇರೆ ಒಬ್ಬನನ್ನು ಕಟ್ಟಿಕೊಳ್ಳಲಿಲ್ಲವೆ ? ಅದರಿಂದಲೇ ನಿನಗೆ ಹುಚ್ಚು ಹಿಡಿಯಿತಲ್ಲವೆ ?
-ನಾವು ತುಂಬಾ ತುಂಬಾ ಪ್ರೀತಿಸುತ್ತಿದ್ದೆವು, ಪುಟ್ಟೀ. ಆದರೆ ನಮ್ಮ ದುರದೃಷ್ಟಕ್ಕೆ ಏನು ಹೇಳೋಣ. ನಾವು ಬೇರೆ ಬೇರೆಯವರನ್ನೇನೋ ಮದುವೆಯಾದೆವು. ಪ್ರೀತಿ ಸಾಯದಿದ್ದರೆ ದುರದೃಷ್ಟ ಏನುಮಾಡೀತು ಹೇಳು ? ಪರಿಸ್ಥಿತಿ ನಮ್ಮನ್ನು ದೂರ ದೂರ ಸರಿಸಿದರೂ ನಾವು ಪ್ರೀತಿಸುವುದನ್ನು ಬಿಡಲಿಲ್ಲ. ಕಡೆಗೆ ನನಗೆ ಹುಟ್ಟಿದ್ದೂ ಅವನ ವಂಶದಕುಡಿಯೇ ಅಲ್ಲವೆ ?
-ಇದನ್ನೆಲ್ಲ ಹೇಗೆ ತಾನೆ ನಂಬುವುದು ಅತ್ತೇ ? ಒಂದು ದಿನವಾದರೂ ನೀನು ಆ ಮನೆಯಿಂದ ಹೊರಗೆ ಹೆಜ್ಜೆ ಇಟ್ಟದ್ದುಂಟಾ ? ಅದೂ ಅಜ್ಜಿಯ ಹದ್ದಿನ ಕಣ್ಣನ್ನು ತಪ್ಪಸಿ ?
-ಹೌದು, ನನ್ನ ಸುತ್ತ ಸರ್ಪಗಾವಲಿತ್ತು. ಆದರೆ ಪ್ರೀತಿಯ ವಿಷಯಕ್ಕೆ ಬಂದಾಗ ನಾವು ಹೆಂಗಸರು ಗಂಡಸರಿಗಿಂತ ಧಾರಾಳಿಗಳು. ಪ್ರೀತಿ ಬಾಡಿಹೋದರೂ ನಾವೇ ಅದನ್ನು ಮತ್ತೆ ನೇರೆರೆದು ಬೆಳೆಸಬಲ್ಲೆವು.
ಅಮ್ಮ ಅತ್ತಿರದಲ್ಲೆಲ್ಲೂ ಇಲ್ಲದ ಕಾರಣ ವಿಶಾಲವಾದ ಹಜಾರದಲ್ಲಿ ನನ್ನ ಅಪ್ಪನಿಗಾಗಿ ಕಾಯುತ್ತ ಕೂತಿದ್ದ ಅವನನ್ನು ಅರೆತೆರೆದ ಬಾಗಿಲಿನ ಹಿಂದೆ ನಾನೇ ತುದಿಗಾಲಲ್ಲಿ ನಿಂತಿರುವ ಸುಳಿವೂ ತೋರಗೊಡದೆ ದಿಟ್ಟಿಸುತ್ತಿರುವಾಗ ಪರವಾಗಿಲ್ಲ, ನನಗೆ ಇಷ್ಟವಾಗುವಂಥ ಪ್ರಶಾಂತ ಮುಖದ ಹುಡುಗ ಎನ್ನಿಸಿದ್ದೇ ಇವನಿಲ್ಲಿ ಬಂದಿರುವುದು ನನ್ನ ಕೈ ಹಿಡಿಯುವ ಉಮೇದಿನಿಂದಲೇ ಎಂದಾಗಿದ್ದರೆ ನನ್ನಷ್ಟು ಪರಮಸುಖಿ ಇನ್ನೊಬ್ಬಳಿರಲಾರಳು ಎಂದುಕೊಂಡವಳಿಗೆ, ಪೂರ್ಣಿಮೆಗೋ ಅಮಾವಾಸ್ಯೆಗೋ ಎಂದಾದರೊಮ್ಮೆ ಅಮ್ಮ ವಿಶೇಷ ಮುತುವರ್ಜಿಯಿಂದ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋದಾಗ ಇವನೂ ನನ್ನನ್ನು ನೋಡಿರಬಾರದೇಕೆ ಎಂದು ಅನ್ನಿಸಿದ ತಕ್ಷಣ ನನ್ನ ಕೈಸೋಕಿದ ಬಾಗಿಲು ಕಿರ್ರೆಂದದ್ದೇ ಅವನು ಅತ್ತ ಕಣ್ಣು ಹರಿಸಿದನೋ ಇಲ್ಲವೋ ಮರುಕ್ಷಣ ಹಿಂದೆ ಸರಿದು ಉಸಿರುಬಿಗಿಹಿಡಿದುಕೊಂಡು ನಿಂತವಳು ಸ್ವಲ್ಪ ಸಮಯದ ನಂತರ ಮತ್ತೆ ಹತ್ತಿಕ್ಕಲಾರದ ಆಸೆಯಿಂದ ಹೊರಗಿಣಿಕಿದ್ದೇ ಮುಖದಲ್ಲಿ ತುಂಟುನಗೆ ಮೂಡಿಸಿಕೊಂಡು ನೋಡ್ದುತ್ತಿದ್ದವನ ಕಣ್ಣು ನನ್ನನ್ನು ಇಡಿಯಾಗಿ ನೋಡಿಬಿಟ್ಟಿತೆನ್ನಿಸಿ ಮೈತುಂಬ ನಡುಕವುಂಟಾಗಿ ಸರಸರನೆ ಸದಾ ಕತ್ತಲು ಕವಿದಿರುತ್ತಿದ್ದ ಒಳಗಿನ ಕೋಣೆಗೆ ಹಿಂದಿರುಗಿದವಳು ಅವತ್ತು ಬೆಳಿಗ್ಗೆಯಷ್ಟೇ ಅಮ್ಮ ಮುಗಿಸು ಎಂದು ಕೊಟ್ಟಿದ್ದ ಕಸೂತಿಯನ್ನು ಕೈಗೆತ್ತಿಕೊಂಡು ಮುಂದುವರಿಸುತ್ತ ಕೂತುಬಿಟ್ಟೆ. ಹೊರಗೆ ಹೋಗಿದ್ದ ಅಮ್ಮ ಸಂಜೆಯಾಗುವವರೆಗೂ ಮರಳಿ ಬರುವಂತಿರಲಿಲ್ಲ. ಅಪ್ಪ ? ಹಜಾರದಿಂದ ಈಗ ಗಟ್ಟಿಯಾಗಿ ಮಾತನಾಡುತ್ತಿರುವ ಸದ್ದು ಕೇಳಿಸುತ್ತಿರುವುದರಿಂದ ಅಪ್ಪ ಬಂದಿರಬೇಕೆನ್ನಿಸಿ ಮತ್ತೆ ಆ ಭಾರಿ ಬಾಗಿಲಿನ ಹಿಂಬದಿಯ ರಹಸ್ಯ ತಾಣಕ್ಕೆ ಬಂದದ್ದೇ ಎರಡನೆಯ ಬಾರಿಗೆ ಅವನು ಯಾರಿಗೂ ಸುಳಿವು ಕೊಡದಂತೆ ನನ್ನನ್ನು ನೋಡಿದಾಗ ನಾನು ಮೊದಲಿನಂತೆ ಭಯದಿಂದ ಹಿಂದೆ ಸರಿಯದೆ ನಾನೇ ಇಡಿಯಾಗಿಯೇ ಅವನ ಕಣ್ಣು ತುಂಬುವಂತೆ ಎರಡು ಹೆಜ್ಜೆ ಮುಂದೆ ಸರಿದು ಅರೆತೆರೆದ ಬಾಗಿಲನ್ನು ಎಡಗೈಯಿಂದ ಬಳಸಿಕೊಂಡು ಕ್ಷಣಕಾಲ ನಿಂತು ಮರುಕ್ಷಣ ಹಿಂಸರಿದ ಆ ಕೆಲವು ಕ್ಷಣಗಳಲ್ಲೇ ಅವನ ಕಣ್ಣು ಸಂಪೂರ್ಣವಾಗಿ ನನ್ನನ್ನು ತುಂಬಿಕೊಂಡುಬಿಟ್ಟಿತ್ತು. ಮೊದಲ ಬಾರಿಗೆ ಒಬ್ಬ ಯುವಕನನ್ನು ಕಣ್ಣುತುಂಬ ನೋಡುವಂತಹ ಆ ಅಮೃತಘಳಿಗೆಯಿಂದಾಗಿ ಅದುವರೆಗೂ ಗಾಳಿ ಬೆಳಕಿಲ್ಲದ ಆ ಏಕಾಂತದ ನೀರಸ ನೀರವಕ್ಕೆ ಹೊಂದಿಕೊಳ್ಳಲಾಗದೆ ತೊಳಲಾಡುತ್ತಿದ್ದ ನನಗೆ ಹಠಾತ್ತನೆ ನನ್ನ ಅಸ್ತಿತ್ವವೇ ಹೊಸ ಅರ್ಥಪಡೆದುಕೊಂಡಂತಾಗಿ ಹೊರ ಜಗತ್ತಿನ ಉತ್ಸಾಹ-ಸಂಭ್ರಮಗಳು ನುಗ್ಗಿಬಂದಂತೆ ಏನೋ ಸುಖ, ಉಲ್ಲಾಸ… ನಾನು ಇದಿರಿಗಿರುವಾಗ ಅಪ್ಪ ಅಮ್ಮನ ಜೊತೆ ಮಾತನಾಡುತ್ತಿದ್ದುದೇ ಅಪರೂಪವಾಗಿದ್ದರಿಂದ ಅವೊತ್ತು ರಾತ್ರಿ ಮನೆಯಲ್ಲಿ ಅವರಿವರ ಪಿಸುಮಾತು ಕೇಳಿಸಿಕೊಂಡಷ್ಟರಿಂದಲೇ ಅವನ ಹೆಸರು ಗಂಗಾಧರಯ್ಯ, ಅವನದು ಒಳ್ಳೆಯ ಮನೆತನ ಎಂದಷ್ಟು ಬಿಟ್ಟರೆ ಹೆಚ್ಚೇನೂ ತಿಳಿಯಲಿಲ್ಲ. ಬಹುಶಃ ಅವನ ಜೊತೆ ಅಪ್ಪನದೇನೋ ಲೇವಾದೇವಿಯಿರಬೇಕು, ಆಗಾಗ ಬರುತ್ತಿದ್ದುದರಿಂದ ನನ್ನಲ್ಲಿ ಇಂಗಲಾರದ ಯಾವುದೋ ಆಸೆ. ಮತ್ತೊಂದು ದಿನವೂ ಅಮ್ಮ ಇಲ್ಲದ ಸಮಯದಲ್ಲಿ ಅವನು ಬಂದಾಗ ನಾನು ಅದಾವ ಧೈರ್ಯದಿಂದಲೋ ಹರಿವಾಣದಲ್ಲಿ ಕಾಫಿ ಬಟ್ಟಲಿಟ್ಟುಕೊಂಡು ಹಜಾರಕ್ಕೆ ಹೊರಟ ಮಂಗಳಮ್ಮನನ್ನು ತಡೆದು ನಾನೇ ತಗೊಂಡು ಹೋಗ್ತೇನೆ, ಕೊಡು ಎಂದವಳೇ ಅವಳ ಕೈಯಿಂದ ಆ ಹರಿವಾಣವನ್ನು ಹೆಚ್ಚುಕಡಿಮೆ ಕಿತ್ತುಕೊಂಡೇ ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ನಡೆದುಕೊಂಡು ಹೋಗಿ ಹಜಾರದಲ್ಲಿ ಹಾಸಿದ್ದ ಚಾಪೆಯ ಮೇಲೆ ಅಪ್ಪನ ಎದುರಲ್ಲೇ ಕುಳಿತಿದ್ದ ಅವನ ಮುಂದೆ ತುಸು ಬಾಗಿ ಒಮ್ಮೆ ಕೂಡ ಕಣ್ಣೆತ್ತದೆ, ಆದರೂ ಅವನು ನನ್ನನ್ನು ನೋಡುತ್ತಿದ್ದಾನೆಂಬ ಅರಿವಿನಿಂದ ಪುಳಕಗೊಳ್ಳುತ್ತ ನಿಂತದ್ದುಂಟು. ಅವನು ಹರಿವಾಣದಿಂದ ಕಾಫಿ ಬಟ್ಟಲನ್ನು ತೆಗೆದುಕೊಳ್ಳುತ್ತಿರುವಂತೆಯೇ ಅಪ್ಪ ಯಾಕೋ ಏನೋ ಬೀದಿಯತ್ತ ತಿರುಗಿದಾಗ ನನಗೇ ಅರಿವಿಲ್ಲದಂತೆ ಒಂದು ಬಗೆಯ ದಿಟ್ಟತನದಿಂದಲೇ ಅವನನ್ನು ಕಣ್ಣಿಟ್ಟು ನೋಡಿಬಿಟ್ಟೆ. ಒಂದೇ ಕ್ಷಣ-ನಾನು ಹಿಂದೆಯೂ ಕಂಡರಿಯದ ನಿರ್ಮಲ ಪ್ರೀತಿಯೇ ಒಂದು ಚಿಲುಮೆಯಂತೆ ಅವನ ಕಣ್ಣುಗಳಲ್ಲಿ ಚಿಮ್ಮುತ್ತಿದೆಯೆನ್ನಿಸಿ ಕೆನ್ನೆಗೆ ಕೆಂಪು ಮೂಡಿ ಮೈಯೆಲ್ಲ ಸುಖದ ಅಮಲಿನಿಂದ ಕಾವೇರಿದಂತಾಗಿ ಹರಿವಾಣವನ್ನು ಎತ್ತಿಕೊಂಡು ಹಿಂದಿರುಗಿದವಳನ್ನು ಮತ್ತೆ ಆ ಬಂಗಲೆಯ ಕತ್ತಲೆ ಕಬಳಿಸಿಬಿಟ್ಟಿತು.
ಆಮೇಲೆ ಅವನು ಬಂದಾಗಲೆಲ್ಲ ಅವನ ಪ್ರೀತಿಯುಕ್ಕಿಸುವ ನೋಟವನ್ನು ಸ್ವಾಗತಿಸುವುದಕ್ಕಾಗಿ ನನ್ನ ಸಂವೇದನೆ ಹುರಿಗೊಳ್ಳುತ್ತಿತ್ತು. ಒಂದು ಬಾರಿ ಕಾಫಿ ಬಟ್ಟಲನ್ನು ಕೈಗೆತ್ತಿಕೊಳ್ಳುತ್ತಿರುವಾಗ ಅವನ ಬೆರಳು ನನ್ನ ಕೈಸೋಕಿದ್ದೇ ಸುಖದ ಅಲೆಗಳು ಅಪ್ಪಳಿಸಿದಂತಾಗಿ ಮೈಯೆಲ್ಲ ಜುಂ ಅಂದದ್ದು ನಿಜ. ದಿನಗಳೆದಂತೆ ನನ್ನ ರಹಸ್ಯವನ್ನು ಕಟ್ಟೆಚ್ಚರದಿಂದ ಕಾಪಾಡಿಕೊಳ್ಳತೊಡಗಿದವಳಿಗೆ ರಾತ್ರಿ ಪಕ್ಕದಲ್ಲೇ ಅಮ್ಮ ಮಲಗಿರುವಾಗ ಕೂಡ ನಿದ್ದೆ ಬರದೆ ಹಾಸಿಗೆಯೇ ಮುಳ್ಳಾಗಿ ಚಡಪಡಿಸುತ್ತಿದ್ದುದುಂಟು. ಬಹುಶಃ ಅಂಥ ಒಂದು ರಾತ್ರಿಯಲ್ಲೇ ಅಮ್ಮ ನನ್ನ ಹೊರಳಾಟವನ್ನು ಗಮನಿಸಿ ಹದಿನೆಂಟು ವರ್ಷವಾಯಿತಲ್ಲಾ, ಇನ್ನು ಮದುವೆ ಮಾಡಬೇಕು ಎಂದು ಯೋಚಿಸಿರಲಿಕ್ಕೇ ಸಾಕು. ಮರುದಿನವೇ ಅಪ್ಪ ಬೆಂಗಳೂರಿಂದ ಬಂದಿದ್ದ ಒಬ್ಬ ಫೋಟೋಗ್ರಾಫರನನ್ನು ಹಿಡಿದು ತೆಗೆಸಿದ್ದು ಇದೇ ಫೋಟೋ.
ಗಂಗಾಧರಯ್ಯನಿಗೆ ಅದಾವ ಮುನ್ಸೂಚನೆ ಸಿಕ್ಕಿತೋ, ಅದೊಂದು ದಿನ ಅವನು ಬಂದಾಗ ಅಪ್ಪ ಅಮ್ಮ ಇಬ್ಬರೂ ಮನೆಯಲ್ಲಿರಲಿಲ್ಲ. ಹಜಾರದೊಳಕ್ಕೆ ಅಡಿ ಇಟ್ಟವನ ಕಣ್ಣು ವಿಚಿತ್ರ ಧಾವಂತದಿಂದ ಹೆಚ್ಚೂಕಡಿಮೆ ತೆರೆದೇ ಇದ್ದ ಬಾಗಿಲಲ್ಲೇ ನಿರುಕಿಸುತ್ತಿತ್ತು. ನಾನಂತೂ ಎಷ್ಟೋ ವರ್ಷಗಳಿಂದ ಆ ಒಂದು ಮುಹೂರ್ತಕ್ಕಾಗಿ ಕಾದಿದ್ದವಳಂತೆ ಆ ಬಾಗಿಲನ್ನು ತುಂಬಿ ನಿಂತಾಗ ನನ್ನ ಮುಖ ಎಂದಿನಂತೆ ಲಜ್ಜೆಯಿಂದ ಕೆಂಪಾಗದೆ ಒಂದು ಬಗೆಯ ಆತಂಕವನ್ನೂ ತಲ್ಲಣವನ್ನೂ ತುಳುಕಿಸಿದ್ದಿರಬೇಕು.
-ಸಧ್ಯದಲ್ಲೇ ನಂಗೆ ಮದುವೆ. ಅಮ್ಮ ಗಂಡು ನೋಡಿದ್ದಾರೆ. ಎಂದುಬಿಟ್ಟ ನನ್ನ ಮುಖದಲ್ಲಿ ನಿರಾಶೆಯ ಛಾಯೆಯೊಂದು ಮೂಡಿ ಮುಳುಗಿತ್ತು.
-ಗೊತ್ತಾಯಿತು. ಇನ್ನು ನಾನೂ ಇಲ್ಲಿರೋಲ್ಲ. ಬೆಂಗಳೂರು ಮಂಡಿಪೇಟೆಯಲ್ಲಿ ಕೆಲಸ ಸಿಕ್ಕಿದೆ. ನಾಳಿದ್ದೇ ಹೊರಟಿದ್ದೇನೆ.
-ಅಯ್ಯೋ, ನಿಮ್ಮನ್ನು ನೋಡದೆ ಹ್ಯಾಗಿರಲಿ ? ಎನ್ನುತ್ತ ಗಳಗಳನೆ ಅತ್ತುಬಿಟ್ಟವಳು ಆ ನಿಂತ ನಿಲುವಿನಲ್ಲೇ ಅದಾವ ಆವೇಶದಿಂದಲೋ ಅವನನ್ನು ಅಪ್ಪಿಕೊಂಡುಬಿಟ್ಟೆ. ಅದೇ ಸಮಯ ತೆರೆದ ಬಾಗಿನಿನ ಹಿಂದೆ ಯಾರೋ ಒಂದು ಕ್ಷಣ ಸುಳಿದು ಮಾಯವಾದಂತಾಯಿತು.
-ಅಳಬೇಡ. ನಾನು ತಾನೆ ನಿನ್ನನ್ನು ಹೇಗೆ ಮರೆಯಲಿ ? ಮರೆಯುವುದಿಲ್ಲ ಎಂದವನು ನಮ್ಮಮ್ಮ ಕೂಡ ಎಂದೂ ತಡವಿರದ ರೀತಿಯಲ್ಲಿ ಪ್ರೀತಿಯಿಂದ ನನ್ನ ಬೆನ್ನು ಸವರುತ್ತಿರುವಾಗ ಅವನ ಕಣ್ಣೂ ತುಂಬಿಬಂದಿರಬೇಕು.
ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಕರ್ಕಶ ದನಿಯಿಂದ ಬೆಚ್ಚಿಬಿದ್ದದ್ದೇ ನಾವಿಬ್ಬರೂ ದೂರ ಸರಿದೆವು. ನಾನಿನ್ನೂ ಮೌನವಾಗಿ ಅಳುತ್ತಿರುವಾಗಲೇ ಸದ್ದಿಲ್ಲದೆ ಅಲ್ಲಿಗೆ ಬಂದುಬಿಟ್ಟ ಮಂಗಳಮ್ಮ, ನಿಮ್ಮಪ್ಪನಿಗೆ ಗೊತ್ತಾದರೆ ಏನು ಗತಿ ? ಏನಿದು, ಈ ಮನೆಹಾಳನ ಜೊತೆ ನಿನ್ನ ಸರಸ ? ಎಂದು ಗದರಿಸಿಕೊಂಡಳು. ಬೇಡ ಬೇಡ, ಅಮ್ಮನಿಗೆ ಹೇಳಬೇಡ, ನನ್ನಾಣೆ ಎಂದು ಅಂಗಲಾಚಿದೆ. ಆ ಕ್ಷಣ ಅಮ್ಮ ದಂಡಿಸುತ್ತಾಳೆ ಎನ್ನುವುದಕ್ಕಿಂತ ಇನ್ನು ಮುಂದೆ ನನ್ನನ್ನು ಹೊರಗೇ ಬಿಡುವುದಿಲ್ಲ ಎಂಬ ಭಯವೇ ನನ್ನನ್ನು ಕಾಡಿರಬೇಕು.
ಅವನು ಬಂದಾಗಲೆಲ್ಲ ನೀನ್ಯಾಕೆ ಈ ಬಾಗಿಲ ಹಿಂದೆ ನೀತಿರತಾ ಇದ್ದೆ ಅಂತ ನಂಗೀಗ ಗೊತ್ತಾಯಿತು. ಬಿಡು ಎಂದು ಆಕೆ ತಟ್ಟನೆ ಅಂದಾಗ ಅವಳ ತುಟಿಗಳ ಮೇಲೆ ಒಂದು ಬಗೆಯ ಕ್ರೂರ ವ್ಯಂಗ್ಯ ತಾಂಡವವಾಡುತ್ತಿತ್ತು. ಅಷ್ಟು ಹೊತ್ತಿಗೆ ಅವನು ಹೊರಟೋಗಿದ್ದ. ಮಂಗಳಮ್ಮ ಸುಮ್ಮನೆ ಬಿಟ್ಟಾಳೆಯೇ ? ಅಲ್ಲಿ ನಿಮ್ಮಮ್ಮ ಗಂಗವಾರದ ಜೋಡೀದಾರರ ಮಗನನ್ನು ನಿಂಗೆ ತಂದುಕೊಳ್ಳಬೇಕಂತ ಪರದಾಡ್ತಾ ಇದ್ದಾರೆ. ನೀನಿಲ್ಲಿ ಈ ದರವೇಸಿ ಜೊತೆ ಚಕ್ಕಂದ ಆಡ್ತಿದೀಯಾ ? ಗೌರವಸ್ತರ ಮನೆ ಹುಡುಗಿ, ನಾಚಿಕೆ ಆಗೋಲ್ವಾ ನಿಂಗೆ ಎಂದು ಎಡೆಬಿಡದೆ ತರಾಟೆಗೆ ತೆಗೆದುಕೊಂಡಳು. ಅವಳನ್ನು ಕಾಡಿ ಬೇಡಿ ಕಾಲಿಗೆ ಬಿದ್ದು ಹೇಗಾದರೂ ಒಲಿಸಿಕೊಳ್ಳಬೇಕೆಂದು ಕೊನೆಯ ಉಪಾಯವೆಂಬಂತೆ ಅಮ್ಮನ ಸಂದೂಕವನ್ನು ತೆರೆದು ಕೈಗೆ ಸಿಕ್ಕಿದ ಚಿನ್ನದ ಬಳೆಯೊಂದನ್ನು ಕೊಟ್ಟಮೇಲೆಯೇ ಅವಳು ಸುಮ್ಮನಾದದ್ದು. ಎಷ್ಟೆಂದರೂ ಅವಳು ಕನಸಿನಲ್ಲೂ ಕಂಡಿರದ ಚಿನ್ನದ ಬಳೆಯಲ್ಲವೆ ? ಅದನ್ನು ತಿರುಗಿಸಿ ತಿರುಗಿಸಿ ನೋಡುತ್ತ, ನೀನು ಏನೇ ಹೇಳು, ಗಂಗವಾರದ ಆ ಜೋಡೀದಾರರ ಮಗನಿಗಿಂತ ಇವನೇ ಎಷ್ಟೋ ಚೆನ್ನಾಗಿದ್ದಾನೆ ಎಂದು ನನ್ನ ತಲೆ ಸವರಿ ತಾರೀಫು ಮಾಡಿದಳು.
ಮರುವರ್ಷವೇ ನಾನು ಕೈಹಿಡಿದದ್ದು ಅಮ್ಮ ನೋಡಿಟ್ಟ, ನೀನೀಗಲೂ ನೋಡುತ್ತಿರುವ ಅದೇ ಗಂಗವಾರದವನನ್ನೇ. ಅಪ್ಪನಿಗೆ ವಯಸ್ಸಾಗುತ್ತಿದ್ದುದರಿಂದ, ನನ್ನ ತಮ್ಮನಿನ್ನೂ ಚಿಕ್ಕವನಾಗಿದ್ದುದರಿಂದ ಗಂಗವಾರದ ವಿಶ್ವೇಶ್ವರಯ್ಯ ಮನೆ ಅಳಿಯನಾಗಿ ಭೂಮಿಲಾಣಿ ನೋಡಿಕೊಳ್ಳುವುದಕ್ಕೆ ಒಂದು ದಿಕ್ಕಾದನೆಂದು ಅಮ್ಮ ಬೀಗಿದಳು. ಐದು ದಿನ ಅದ್ದೂರಿಮದುವೆಯಾಯಿತಂತೆ. ದೇವನಹಳ್ಳಿಯಿಂದ ಎರಡು ಬಿಳಿಯ ಕುದುರೆಗಳ ಸಾರೋಟು ತರಿಸಿದ್ದರಂತೆ. ಮದರಾಸು ಕಡೆಯ ವಾಲಗದವರು ಬಂದಿದ್ದರಂತೆ. ಸ್ವತಃ ಮದುಮಾಳಾಗಿಯೂ ನನಗೆ ಅದರ ಪರಿವೆಯಿರಲಿಲ್ಲ ನೋಡು. ಕೂತಲ್ಲಿ ನಿಂತಲ್ಲಿ, ನನ್ನ ಮನಸ್ಸನ್ನು ತುಂಬುತ್ತಿದ್ದವನು ಗಂಗಾಧರಯ್ಯನೇ. ಸದಾ ಮಂಕು ಕವಿದಂತೆ ಚಡಪಡಿಸುತ್ತಿದ್ದ ನನ್ನನ್ನು ಮೊದಮೊದಲು ನನ್ನ ಗಂಡ ಸಮಾಧಾನಪಡಿಸಿ ನನ್ನ ಮನಸ್ಸನ್ನು ಸ್ತಿಮಿತಕ್ಕೆ ತರಲು ಪ್ರಯತ್ನಿಸಿದ್ದುಂಟು. ಆಮೇಲೆ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಟ್ಟ. ಅವನಿಗೂ ನನ್ನನ್ನು ಕಂಡರೆ ಪ್ರೀತಿಯೇ. ಮದುವೆಯಾದ ಹೊಸದರಲ್ಲಿ ನೀನು ಸಿಕ್ಕಿದ್ದು ನನ್ನ ಅದೃಷ್ಟ ಎಂದೂ ಒಮ್ಮೆ ಹೇಳಿದ್ದ. ಜೊತೆಗೆ ಅಪ್ಪನ ಅಪಾರ ಆಸ್ತಿಗೆ ತಾನೇ ಒಡೆಯನಾದೆನೆಂಬ ಇನ್ನಿಲ್ಲದ ಸಂತೋಷ. ದಿನಗಳೇನೋ ಒಂದರ ನಂತರ ಒಂದರಂತೆ ಸಾಗುತ್ತಿದ್ದವು. ಆದರೆ ನನ್ನ ಬದುಕು ಮಾತ್ರ ವಾರ ತಿಂಗಳು ವರ್ಷಗಳೆಲ್ಲ ಒಟ್ಟುಗೂಡಿ ಬಹುದೀರ್ಘವಾದ ಒಂದೇ ಒಂದು ದಿನವಾಗಿಬಿಟ್ಟಂತೆ ಬಣಬಣವೆನ್ನುತ್ತಿತ್ತು. ಈ ಮಧ್ಯೆ ಮದುವೆಯಾಗಿ ಎರಡು ವರ್ಷವಾದರೂ ಮಗಳು ಬಸಿರಾಗಲಿಲ್ಲವೆಂದು ಪೇಚಾಡತೊಡಗಿದ ಅಮ್ಮ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ಉಪವಾಸ ವ್ರತ ಆರಂಭಿಸಿದಳು. ಕಾಲ ಇದ್ದ ಹಾಗೇ ಇರುವುದಿಲ್ಲ ಅಲ್ಲವೇ ವೈದೇಹಿ ? ನಾವು ಹೆಂಗಸರು ಏನೇ ಆಗಲಿ ಒಳ್ಳೆಯ ಕನಸು ಕಾಣುವುದನ್ನು ಮಾತ್ರ ಬಿಡುವುದಿಲ್ಲ ನೋಡು. ಆಮೇಲೊಂದು ದಿನ ಗಂಗಾಧರಯ್ಯ ಊರಿಗೆ ಬಂದಿದ್ದಾನೆಂದು ತಿಳಿದದ್ದೇ ನನ್ನ ಒಳ ನೋವೆಲ್ಲ ಮಂಜಿನಂತೆ ಕರಗಿಹೋಗಿ ಮೈಯಲ್ಲಿ ಹೊಸ ಲವಲವಿಕೆ ಮೂಡಿದಂತಾದಾಗ ನನ್ನ ಗಂಡ ಕೂಡ, ನಿನ್ಗೆ ನಿಜವಾಗಿಯೂ ಇಷ್ಟು ದೊಡ್ಡ ಕಣ್ಣಿತ್ತೇನೇ ಎಂದು ಅಚ್ಚರಿಯಿಂದ ಹುಬ್ಬೇರಿಸಿದ್ದು ನಿಜ. ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿರುವಾಗ ಒಂದು ಬೆಳಿಗ್ಗೆ ದೂರದಲ್ಲಿ ನಡೆದುಹೋಗುತ್ತಿದ್ದ ಅವನು ತುಸು ಸೊರಗಿದಂತೆ ಕಾಣಿಸಿತು. ಕಡೆಗೆ ಊರಿಗೆ ಬಂದವನು ಮನೆಗೂ ಬಂದು ಕದ ತಟ್ಟಿದ. ಗಂಡ ಬಾಗಿಲು ತೆರೆಯಲು ಹೊರಟಾಗ ಆಗಷ್ಟೇ ಎರೆದುಕೊಂಡಿದ್ದ ನಾನು ಒಳ ಅಂಗಳದಲ್ಲಿ ತಲೆ ಒರೆಸಿಕೊಳ್ಳುತ್ತಿದ್ದೆ. ಬೆಂಗಳೂರಿನ ಹವ ಒಗ್ಗಲಿಲ್ಲವೋ ಅಥವಾ ಅಲ್ಲಿ ಕೆಲಸ ಕಳೆದುಕೊಂಡನೋ ಅಂತೂ ಮತ್ತೆ ಊರಿಗೆ ಮರಳಿದ್ದ ಅವನು ಏನಾದರೂ ಕೆಲಸ ಸಿಕ್ಕಿತೆಂದೋ ಏನೋ ನನ್ನ ಗಂಡನೊಡನೆ ವಿಚಾರಿಸುತ್ತಿದ್ದಿರಬೇಕು. ಮದುವೆಯಾಗಿರುವ ನಾನೀಗ ಅಪರಿಚಿತರ ಮುಂದೆ ಸುಳಿದಾಡಿದರೆ ತಪ್ಪೇನಿರಲಿಲ್ಲವಲ್ಲ. ಅವನಿಗೆ ಕೊಡಲೆಂದು ಕಾಫಿ ಬಟ್ಟಲನ್ನು ತೆಗೆದುಕೊಂಡು ಹೋದವಳು ಯಾವ ಮುಜುಗುರವೂ ಇಲ್ಲದೆ ಇವನಿನ್ನೂ ನನ್ನನ್ನು ಪ್ರೀತಿಸುತ್ತಿರಬಹುದೆ ಎಂಬ ನಿರೀಕ್ಷೆಯಿಂದ ಅವನ ಮುಖವನ್ನೇ ದಿಟ್ಟಿಸಿ ನೋಡಿದೆ. ಒಂದು ಗಳಿಗೆ ನನ್ನನ್ನು ನೋಡಿ, ಬಹುಶಃ ನನ್ನ ದೃಷ್ಟಿಯನ್ನು ಎದುರಿಸಲಾಗದೆ ತನ್ನ ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡ. ಇದ್ದಕ್ಕಿದ್ದಂತೆ ನನ್ನ ಕಣ್ಣೂ ತುಂಬಿಬಂದತಾಗಿ ಅಲ್ಲಿ ನಿಲ್ಲಲಾಗದೆ ಒಳಗೆ ಹೋಗಿಬಿಟ್ಟೆ. ಅವತ್ತು ನಾನು ಅನುಭವಿಸಿದ ಯಾತನೆಯನ್ನು ನಿನಗೆ ಹೇಗೆ ತಾನೇ ಬಣ್ಣಿಸಲಿ, ವೈದೇಹಿ. ನಿಂತಲ್ಲಿ ನಿಲ್ಲಲಾಗದೆ ಚಡಪಡಿಕೆ, ಯಾರದೋ ಭೀತಿಯಿಂದ ಮೈಯೆಲ್ಲ ಉಕ್ಕುವ ಬೆವರು, ಪ್ರಾಣಕ್ಕೆ ಸಮಾನವಾದದ್ದೇನೋ ಕಳೆದುಹೋದಂತೆ ಹತಾಶೆ, ಬೆಳಕಿನಲ್ಲೂ ಏನೂ ಕಾಣಿಸದಂತೆ ಮಂಜು ಮಂಜು…. ಎಷ್ಟು ಹೊರಳಾಡಿದರೂ ನಿದ್ದೆ ಬರದ ಹಲವು ರಾತ್ರಿಗಳ ನಂತರ ಒಂದು ಮುಂಜಾವಿನ ಮಂಪರಿನಲ್ಲಿ ಎಂಥಾ ಕನಸು ಬಿತ್ತು ಗೊತ್ತಾ ? ಸುಂದರ ಉದ್ಯಾನವನವೊಂದರಲ್ಲಿ ನಾನೂ ಅವನೂ ಕೈಕೈಹಿಡಿದುಕೊಂಡು ನಿಂತಿದ್ದೆವು. ನಮ್ಮ ಸುತ್ತ ಹೆಸರು ಗೊತ್ತಿಲ್ಲದ ಬಣ್ಣಬಣ್ಣದ ಹೂವುಗಳು ಅರಳಿರುವ ಗಿಡಗಳು. ಮೇಲೆ ರಾತ್ರಿಯಾಗಿದ್ದೂ ಮನಸ್ಸಿಗೆ ಹಾಯೆನಿಸುವಂತೆ ಬಿಳಿಮೋಡಗಳನ್ನು ತೇಲಿಬಿಟ್ಟಿರುವ ತಿಳಿನೀಲಿಯ ಆಕಾಶ, ಅಂಥ ಆಕಾಶವನ್ನು ನಾನೆಂದೂ ನೋಡಿರಲಿಲ್ಲ ಬಿಡು. ಮೆಲ್ಲಗೆ ಮೈಗೆ ಕಚಗುಳಿಯಿಡುವಂತೆ ಬೀಸಿಬಂದ ಗಾಳಿ ನಮ್ಮಿಬ್ಬರ ತಲೆಯನ್ನೂ ನೇವರಿಸಿತು. ಅದಾಗ ಧಗ್ಗನೆ ಬೆಳಕು ಹೊತ್ತಿಕಂಡಂತೆ ಬಂದು ಅದ್ಭುತ ಅರಮನೆ ಪ್ರತ್ಯಕ್ಷವಾಗಿದ್ದೇ ನಮ್ಮನ್ನು ತನ್ನ ಶಯ್ಯಾಗೃಹಕ್ಕೆ ಬರಮಾಡಿಕೊಂಡಿತು. ಅಲ್ಲಿನ ಮಂಚದ ಮೇಲೆ ಮಲಗಿ ತಲೆಯೆತ್ತಿದರೆ ಛಾವಣಿಯೊಳಗೇ ಇಳಿದುಬಿಟ್ಟಿರುವ ಹುಣ್ಣಿಮೆ ಚಂದಿರ. ಅವನು ನನ್ನನ್ನು ಆಲಂಗಿಸಿಕೊಂಡದ್ದೇ ಇಡೀ ಶಯ್ಯಾಗೃಹವನ್ನು ಸುಗಂಧರಾಜದಂಥ ಹೂವಿನ ಪರಿಮಳ ಮುತ್ತಿಕೊಂಡುಬಿಟ್ಟಿತು ನೋಡು. ಆಶ್ಚರ್ಯ, ಬೆಳಿಗ್ಗೆ ಎಚ್ಚರವಾದಮೇಲೂ ನನ್ನ ಕೋಣೆಯ ತುಂಬದೇ ಪರಿಮಳ; ನನ್ನ ಮೈಯೆಲ್ಲ ಅದೇ ಪರಿಮಳ. ಅಸ್ತಮಾದಿಂದ ಹಾಸಿಗೆ ಹಿಡಿದುಬಿಟ್ಟಿದ್ದ ಅಪ್ಪ ಇದೇನು ವಾಸನೆಯೇ, ಯಾವ ಹೂವು ತಂದಿದೀರೇ ಮನೆಗೆ, ಎಂದು ಕೂಗಿಕೊಳ್ಳುವ ಹೊತ್ತಿಗೆ ಇಡೀ ಮನೆಯ ಮೂಲೆಮೂಲೆಗಳಿಂದ ಅದೇ ಪರಿಮಳ ಈಗ ಮೃದುವಾಗಿ ಈಗ ನವಿರಾಗಿ, ಈಗ ಕಟುವಾಗಿ ಬೇಸಿಗೆಯ ಸೆಕೆಯಲ್ಲಿ ತಣ್ಣಗೆ ಮೈಸೋಕುವ ಗಾಳಿಯಂತೆ ಹಿತವಾಗಿ ಕ್ರಮೇಣ ಎಷ್ಟು ಸರ್ವವ್ಯಾಪಿಯಾಗತೊಡಗಿತೆಂದರೆ ಅಂಗಳದಲ್ಲಿ ಅರಳಿದ ಜಾಜಿ ಮಲ್ಲಿಗೆ ಕನಕಾಂಬರ ಕರ್ಣಕುಂಡಲ ಹೂಗಳು ಕೂಡ ತಮ್ಮ ಅಸಲಿ ವಾಸನೆಯನ್ನು ಮರೆತುಬಿಟ್ಟಿದ್ದವು. ಆ ಪರಿಮಳದ ಮೂಲವನ್ನು ಹುಡುಕುತ್ತ ಮನೆಯೆಲ್ಲ ಜಾಲಾಡಿದ ಮಂಗಳಮ್ಮ ಅನುಮಾನದಿಂದ ಹೌದು, ಇಲ್ಲೇ ಏನೋ ಪನ್ನೀರು ಚೆಲ್ಲಿದ ಹಾಗಿದೆ ಎನ್ನುತ್ತ ನನ್ನ ಕೋಣೆಗೆ ಬಂದವಳೇ ಪದೇ ಪದೇ ತನ್ನ ಮೂಗನ್ನು ಅರಳಿಸುತ್ತ ಮೂಲೆಮೊಡಕುಗಳನ್ನು ತಡಕಾಡಿ ಕಡೆಗೆ ನನ್ನ ಬಳಿ ಸುಳಿದದ್ದೇ, ಇದೇನು ಮಹರಾಯಿತಿ, ಹೀಗೆ ಸುಗಂಧ ಹಂಚತಾಯಿದ್ದಿ, ಯಾವ ಹೂವಮ್ಮಾ ಇದು ಇಷ್ಟು ವಾಸನೆ ಹೊಡೆಯೋದು ಎಂದು ನನ್ನ ಗಲ್ಲ ಸವರಿದಳು. ಅವತ್ತು ಮಧಾಹ್ನ ನನ್ನ ಗಂಡ ಊಟವಾದ ಮೇಲೆ ತುಸು ನಿದ್ದೆ ಮಾಡಿ ಎದ್ದು ಭತ್ತದ ಕಣಕ್ಕೆ ಹೋಗಿ ಬಂದವನು ತನ್ನ ಮೈಯಾಲ್ಲೂ ಯಾಕೆ ಅಂಥದೇ ಸುವಾಸನೆ ಎಂದು ಆಶ್ಚರ್ಯಪಟ್ಟ. ಆಮೇಲೆ ಒಂಭತ್ತು ತಿಂಗಳು ಇಪ್ಪತ್ತೊಂದು ದಿನ ಆ ಪರಿಮಳ ನಮ್ಮಲ್ಲಿ ಯಾರನ್ನೂ ಬಿಡಲಿಲ್ಲ ನೋಡು. ಏನನ್ನುತ್ತೀ ಅದಕ್ಕೆ ? ನಾನಂತೂ ಅದನ್ನು ಅವನ ಪ್ರೀತಿಯೆಂದೇ ಬಗೆದು ಸಂಭ್ರಮಪಟ್ಟೆ. ಇಬ್ಬರು ಮಾತ್ರ ಅರಿಯಬಲ್ಲ ಆ ಪ್ರೀತಿ ನೆಲದ ಈ ನೀರಸ ಬದುಕನ್ನು ಬಿಟ್ಟು ಕನಸಿನ ಕಾಮನಬಿಲ್ಲನ್ನೇರಿ ದಿವ್ಯಾನುಭವಕ್ಕೆ ದಾರಿ ಮಾಡಿತು. ಹಿಂದೆಂದೂ ನನ್ನ ಮುಖ ಅಷ್ಟು ಸುಂದರವಾಗಿರಲಿಲ್ಲವಂತೆ; ನಾನು ನಡೆದರೆ ಸುತ್ತ ಬೆಳಕು ಚಿಮ್ಮುತ್ತಿತ್ತಂತೆ; ಮೊದಲೇ ವಿಶಾಲವಾಗಿದ್ದ ನನ್ನ ಕಣ್ಣುಗಳು ಮತ್ತಷ್ಟು ವಿಶಾಲವಾಗಿ ನೆಮ್ಮದಿಯನ್ನು ತುಳುಕಿಸುತ್ತಿದ್ದುವಂತೆ. ನನ್ನನ್ನು ನೋಡಿದವರು ಹಾಗೆನ್ನುತ್ತಿದ್ದರೆನ್ನು. ನಾನು ಮಾತ್ರ ಮೊದಲಿನಂತೆ ಖಿನ್ನಳಾಗಿರುವುದನ್ನು ಬಿಟ್ಟೆ. ಹಗಲೆಲ್ಲ ತುಂಬು ಲವಲವಿಕೆಯಿಂದ ಮನೆಗೆಲಸದಲ್ಲಿ ಭಾಗಿಯಾಗುತ್ತಿದ್ದವಳು ರಾತ್ರಿಯ ಹೊತ್ತು ಅವನು ಕರುಣಿಸಿದ ಅನುರಾಗವನ್ನು ಸವಿಯುತ್ತ ನನ್ನದೇ ಸ್ವಪ್ನನೌಕೆಯಲ್ಲಿ ತೇಲಾಡುತ್ತಿದ್ದೆ.
ಕಡೆಗೂ ಅದೊಂದು ದಿನ ನಡುರಾತ್ರಿ ನಾವಿಬ್ಬರೂ ವೇಣುಗೋಪಾಲಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿದ್ದೆವು. ಅಲ್ಲಿ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣದಷ್ಟು ಕತ್ತಲಿದ್ದರೂ ನಮ್ಮಿಂದ ಹೊಮ್ಮುತ್ತಿದ್ದ ಪರಿಮಳವೇ ಒಂದು ಬಗೆಯ ದೀಪದಂತೆ ದಾರಿ ತೋರಿಸುತ್ತಿತ್ತು. ನನ್ನನ್ನು ಇಡಿಯಾಗಿ ಎತ್ತಿಕೊಂಡು ದೇವರ ಮುಂದಿನ ಜಗಲಿಯ ಮೇಲೆ ಮೆಲ್ಲಗೆ ಮಲಗಿಸಿದ ಅವನು ನನ್ನ ಕೆನ್ನೆ ಚಿವುಟಿದ, ಮೂಗನ್ನು ಹಿಡಿದೆಳೆದ, ತುಟಿಗಳನ್ನು ಚುಂಬಿಸಿದ, ಮಗುವಿನ ಕೈ ಬಿಚ್ಚುವಂತೆ ನನ್ನ ರವಿಕೆಯ ಗುಂಡಿಗಳನ್ನು ಬಿಚ್ಚಿದ. ಇಬ್ಬರಿಗೂ ಮಾತು ಬೇಕಿರಲಿಲ್ಲ. ನನ್ನ ಮೇಲೆ ಮಲಗಿ ಮುಡಿಬಿಚ್ಚಿ ಹರಡಿಕೊಂಡಿದ್ದ ನನ್ನ ಕೂದಲನ್ನು ಆಘ್ರಾಣಿಸುತ್ತ ಪರಿಮಳ ಸೂಸುವಂತೆ ಉಸಿರಾಡುತ್ತ ಅವನು ಆಲಂಗಿಸಿಕೊಂಡ ಆ ಕೆಲವು ಕ್ಷಣ ಕಳೆದದ್ದೇ ಅತೀವ ಸುಖದಿಂದ ಯಾವ ಎಗ್ಗೂ ಇಲ್ಲದೆ ಎಷ್ಟು ಜೋರಾಗಿ ನರಳಿಬಿಟ್ಟೆನೆಂದರೆ ತಕ್ಷಣ ಕಣ್ಣು ತೆರೆದಾಗ ಪಕ್ಕದಲ್ಲಿ ಮಲಗಿದ್ದ ಗಂಡನಿಗೆ ಎಚ್ಚರಾಗಿ ಅವನು ಏನಾಯಿತು ಎಂದು ಗಾಬರಿಯಿಂದ ಕೇಳಿದ. ಸುಮ್ಮನೆ ಮುಗುಳುನಕ್ಕೆ. ಏನು, ಆರಾಮವಾಗಿದ್ದೀ ತಾನೆ ಎಂದದ್ದಕ್ಕೂ ಹೂಂ ಎಂದೆ. ನನ್ನ ಮನಸ್ಸು ತುಂಬಾ ಸಂತೋಷವಾಗಿ ಎಂದದ್ದು ಅವನಿಗೆ ಕೇಳಿಸಿರಲಿಕ್ಕಿಲ್ಲ.
ಆ ನಂತರದ ಹಲವು ತಿಂಗಳುಗಳುದ್ದಕ್ಕೂ ನನ್ನ ಚಡಪಡಿಕೆಯನ್ನೇ ಗಮನಿಸುತ್ತಿದ್ದ ನನ್ನ ಗಂಡನಿಗೆ ಒಳಗೇ ಸಂತೋಷವಾಗಿತ್ತು. ಅಪ್ಪನಿಗೆ ಅಮ್ಮನಿಗೆ ಕೊನೆಗೂ ನಾನು ಬಸಿರಾದೆನೆಂದು ಹಿಗ್ಗೋ ಹಿಗ್ಗು. ಮಂಗಳಮ್ಮ ಬಗೆಬಗೆಯ ತಿಂಡಿತಿನಿಸುಗಳನ್ನು ಮಾಡಿ ಬಡಿಸುತ್ತಿದ್ದಳು. ಕನಸಿನಲ್ಲಿ ಓಡುವವರಂತೆ ಓಡಾಡುತ್ತಿದ್ದ ನಾನು ಅವನಿಗೆ ಈ ಸುದ್ದಿ ಮುಟ್ಟಿಸಬೇಕೆಂದು ತವಕಿಸುತ್ತಿದ್ದೆ. ಆದರೆ ಅವನು ಮತ್ತೆ ಬರಲೇ ಇಲ್ಲ. ಆ ಕಾಲದಲ್ಲೇ ನಾನು ಹಳೆಯ ಬಟ್ಟೆಗಳನ್ನು ಕತ್ತರಿಸಿ ಕೂಡಿಸಿ ಮಾಡಿದ ಹತ್ತಾರು ಗೊಂಬೆಗಳನ್ನು ನೀನೂ ನೋಡಿರಬೇಕು. ನನ್ನ ಮನಸ್ಸಿನಲ್ಲಿ ಮೂಡಿದ್ದ ಅವನದೇ ಚಿತ್ರದ ಪ್ರತಿಬಿಂಬವೇ ಆ ಗೊಂಬೆಗಳಾಗಿದ್ದುವೆಂದು ನಿನಗೆ ಬಿಡಿಸಿ ಹೇಳಬೇಕೇನೇ ಪುಟ್ಟೀ ? ಒಮ್ಮೆ ಕನಸಿನಲ್ಲಿ ಅವನು ಕಂಡಂತಾಗಿ ಎಷ್ಟು ಕೂಗಿಕೊಂಡರೂ ಅವನಿಗದು ಕೇಳಿಸಿದಂತೆ ಕಾಣಲಿಲ್ಲ. ಅವನತ್ತ ಓಡಿಹೋಗಲು ಪ್ರಯತ್ನಿಸಿದರೂ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನಿಂದಾಗಿ ಓಡಲಾಗದೆ ಕುಸಿದುಬಿದ್ದೆ. ಅಮೇಲೆ ನನ್ನ ಕೋಣೆಯನ್ನು ಬಿಟ್ಟು ಹೊರಗೇ ಸುಳಿಯಲಿಲ್ಲ. ಯಾವಾಗಲೂ ತಲೆಕೆದರಿಕೊಂಡು ಅಸಾಧ್ಯ ನೋವು ತಿನ್ನುತ್ತಿರುವವಳಂತೆ ಕಣ್ಣೀರಗರೆಯುತ್ತ ಮೂಲೆ ಹಿಡಿದಿರುತ್ತಿದ್ದೆ. ಅಪ್ಪ ಆಯುರ್ವೇದ ಪಂಡಿತರನ್ನು ಕರೆಸಿ ತೋರಿಸಿದರು. ಅವರು ಕೊಟ್ಟ ಏನೇನೋ ಚೂರ್ಣ ಕಷಾಯಗಳನ್ನು ಸೇವಿಸಿದ್ದಾಯಿತು. ಅಮ್ಮ ಅನೇಕ ದೇವರುಗಳಿಗೆ ಹರಸಿಕೊಂಡದ್ದಲ್ಲದೆ ಮಂತ್ರವಾದಿಗಳನ್ನು ಕರೆಸಿ ಪೂಜೆಯನ್ನೂ ಮಾಡಿಸಿದಳು. ನಾನು ಮಾತ್ರ ದಿನಗಳೆದಂತೆ ಕೊರಗಿ ಸೊರಗಿ ಕಡ್ಡಿಯಂತಾಗಿದ್ದೆ-ನನ್ನ ತುಂಬಿದ ಹೊಟ್ಟೆಯನ್ನು ಬಿಟ್ಟು.
ಒಂಭತ್ತನೆಯ ತಿಂಗಳು ಹುಚ್ಚು ಹಿಡಿದವಳಂತೆ ನನಗೆ ನಾನೇ ಏನೇನೋ ಮಾತಾಡಿಕೊಳ್ಳುತ್ತ ಮನೆಯೆಲ್ಲ ಸುತ್ತುತ್ತಿದ್ದೆನೆಂದು ಅಮ್ಮ ಹೇಳಿದ್ದುಂಟು. ಒಂದು ಮಧ್ಯಾಹ್ನ ಅವನ ತೀರ ಪರಿಚಿತ ದನಿ ಕೇಳಿದಂತಾಗಿ ಎಂಥದೋ ಉಲಾಸದಲ್ಲಿ ಮೈಮರೆತು ದಡದಡನೆ ನಡೆದುಕೊಂಡು ಹೋಗಿ ಹಜಾರ ಬಾಗಿಲ ಹಿಂದೆ ನಿಂತವಳು ಹಿಂದೆಲ್ಲ ಸುಲಭವಾಗಿ ತೆರೆಯುತ್ತಿದ್ದ ಕದವನ್ನು ಉಸಿರು ಬಿಗಿಹಿಡಿದುಕೊಂಡು ಬಹು ಪ್ರಯಾಸದಿಂದ ತೆರೆಯಲು ಪ್ರಯತ್ನಿಸುತ್ತಿರುವಾಗಲೇ ನನ್ನನ್ನು ನೋಡಿದ ಗಂಡ ಗಡಗಡನೆ ನಡುಗುತ್ತ ದೆವ್ವವನ್ನು ಕಂಡವನಂತೆ ಕಿರಚಿಕೊಂಡಾಗ ಅವನ ಮುಖ ಹಠಾತ್ತನೆ ಬಿಳಚಿಕೊಂಡುಬಿಟ್ಟಿತ್ತು. ಅಮ್ಮ, ಮಂಗಳಮ್ಮ ಓಡಿಬಂದವರು ಹೆಚ್ಚುಕಡಿಮೆ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡೇಹೋಗಿ ನನ್ನ ಕೋಣೆಯಲ್ಲಿ ಮಲಗಿಸಿ ಹಣೆಗೆ ತಣ್ಣೀರುಬಟ್ಟೆ ಕಟ್ಟಿದರು. ಮರುದಿನ ಬೆಳಗಿನ ಜಾವ ನನಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ನಿದ್ದೆಗೆ ಜಾರುತ್ತಿರುವಂತೆ ಪ್ರಜ್ಞೆ ತಪ್ಪಿತು. ಮತ್ತೆ ಎಚ್ಹರವಾದಾಗ ಕೆಳಹೊಟ್ಟೆಯನ್ನು ಯಾರೋ ಕಟ್ಟುತ್ತಿರುವ ಹಾಗೆ ವಿಪರೀತ ನೋವಾಗುತ್ತಿತ್ತು. ಸೂಲಗಿತ್ತಿ ಮುನಿಯಮ್ಮ ನನ್ನ ತೊಡೆಗಳ ಇದಿರಲ್ಲೇ ಕೂತಿದ್ದನ್ನು ಕಂಡ ನೆನಪಷ್ಟೆ. ಆಮೇಲೆ ಗಳಿಗೆ ಗಳಿಗೆಗೂ ಬೆಳಕು ಕಂದುತ್ತಿರುವಂತೆ….ಕಣ್ಣಿಗೆ ಕತ್ತಲು ಕವಿಯತೊಡಗಿದಂತೆ….ಮುಖದಲ್ಲಿ ಪೊತ್ತೆ ಮೀಸೆಯಷ್ಟೇ ಕಾಣಿಸುತ್ತಿದ್ದ ಯಾರೋ ರಾಕ್ಷಸನಂಥವನು ನನ್ನ ಕೈಹಿಡಿದು ಎಳೆದುಕೊಂಡುಹೋದಂತೆ….
ಕತೆಯೇನೋ ಬರೆದದ್ದಾಯಿತು. ಆದರೆ ಸಂಭವಿಸಿದ್ದಕ್ಕೂ ಸಂಭಾವ್ಯಕ್ಕೂ ಎಷ್ಟು ಅಂತರ ಎಂಬ ಪ್ರಶ್ನೆ ಕಾಡುತ್ತಿದೆ. ಒಬ್ಬೊಬ್ಬರೂ ಒಂದೊಂದು ಪ್ರಪಂಚವಾಗಿರುವ ಈ ಬದುಕಿನಲ್ಲಿ ನಾನು ಗ್ರಹಿಸಿದ ಈ ವಾಸ್ತವದ ತುಣುಕಿಗೆ ತನ್ನದೇ ಆದ ಕಲ್ಪನೆ ಅದೆಂಥ ಬೆಳಕು ಚೆಲ್ಲಿರಬಹುದೋ ಹೇಳಲಾರೆ. ಮದುವೆ ಮುಂದೂಡುವ ನೆಪದಲ್ಲಿ ಅಪ್ಪ ಅಮ್ಮನ ಕಣ್ಣು ತಪ್ಪಿಸುತ್ತಿರುವ ನಾನು ಕೂಡ ಈಗ ಒಂದರ್ಥದಲ್ಲಿ ಜಾನಕಮ್ಮನ ಹಾಗೆಯೇ ಇರುವವಳಲ್ಲವೆ ? ಮತ್ತೆ ನನಗಂಟಿರುವ ಹೊಸ ನಂಟು ಯಾವ ರೀತಿ ಕೊನೆಗೊಳ್ಳುವುದೋ ಯಾರಿಗೆ ಗೊತ್ತು ?
————
ಪ್ರಾಣ ಪಕ್ಷಿಯ ತೊಟ್ಟಿಲು
– ಮೊಗಳ್ಳಿ ಗಣೇಶ್ –
ಚಿಕ್ಕಪ್ಪನ ಮಗಳು ಅಶ್ವಿನಿ ಆ ದೊಡ್ಡ ಮನೆಯಲ್ಲಿ ತನ್ನ ಕೋಣೆಯ ತೊಟ್ಟಿಲನ್ನು ಎಲ್ಲರಿಂದಲೂ ತೂಗಿಸಿಕೊಂಡದ್ದು ಈಗ ಯಾರ ನೆನಪಿಗೂ ಬೇಕಾಗಿಲ್ಲದ ಸಂಗತಿ. ಕಾಲ ಅವಳನ್ನು ಬಹಳ ದೂರದ ಕಿನಾರೆಗೆ ಕರೆದುಕೊಂಡು ಹೋಗಿದೆ. ಅವಳನ್ನು ತೂಗಿದ್ದ ತೊಟ್ಟಿಲಲ್ಲೆ ಮನೆಯ ಎಲ್ಲ ಮಕ್ಕಳು ಬೆಳೆದದ್ದು. ಅಜ್ಜಿಯರಿಗೆ ತೊಟ್ಟಿಲು ತೂಗುವುದೇ ಜೀವದ ಜೋಕಾಲಿಯಾಗಿತ್ತು. ಅಶ್ವಿನಿಯೇ ಕೊನೆಯ ಪುಣ್ಯವಂತೆ. ಅಂತಹ ರೇಡಿಯೋ ಹುಚ್ಚಿನ ಚಿಕ್ಕಪ್ಪನ ಈ ಮುದ್ದು ಮಗಳಿಗೆ ಅಜ್ಜಿಯರು ದೈವಕ್ಕೆ ಸ್ನಾನ ಮಾಡಿಸಿದಂತೆ ಸಡಗರ ಪಡುತ್ತಿದ್ದರು. ಅನಾದಿಕಾಲದ ಮಂತ್ರಾಚರಣೆಯಂತೆ ಅವರ ಜೋಗುಳವು ಮಧ್ಯರಾತ್ರಿಯಲ್ಲೂ ಮಂದ್ರಸ್ಥಾಯಿಯಲ್ಲಿ ನಿದ್ದೆ ಮಂಪರಲ್ಲಿ ಮಗ್ಗಲು ಬದಲಿಸುವಾಗ ನನ್ನ ಕಿವಿಗೆ ಕಿನ್ನರ ಲೋಕದ ಎಂತದೋ ದನಿಯಲ್ಲಿ ಕೇಳಿಸಿ ಎಚಾರವಾಗಿಬಿಡುತ್ತಿತ್ತು. ನಿಜಕ್ಕೂ ಆ ಅಜ್ಜಿಯರು ಅನಾದಿ ಯುಗದ ದೈವಗಳೇ ಇರಬೇಕೆಂಬ ಅನುಮಾನವೂ ಅಂತಹ ಅವೇಳೆಯಲ್ಲಿ ನನಗೆ ಬರುತ್ತಿತ್ತು. ಅಹೋರಾತ್ರಿಯಲ್ಲಿ ಎಲೆ ಅಡಿಕೆ ಹೊಗೆಸೊಪ್ಪು ಜಗಿಯುತ್ತಾ, ತೊಟ್ಟಿಲನ್ನು ತೂಗುತ್ತಾ ಆಕಳಿಸುತ್ತಾ ಏನೇನೋ ಗೊಣಗುತ್ತಿದ್ದರು. ಅವರು ಯಾವಾಗ ನಿದ್ದೆ ಮಾಡಿ ಎಚ್ಚರವಾಗುತ್ತಿದ್ದರೆಂಬುದೇ ಗೊತ್ತಾಗುತ್ತಿರಲಿಲ್ಲ. ತುಂಬಿ ತುಳುಕುವ ಆ ಮನೆಯಲ್ಲಿ ಒಂದೊಂದು ಮೂಲೆಯಲ್ಲಿ ಮಲಗಿರುತ್ತಿದ್ದ ಎಲ್ಲರನ್ನೂ ಕಾಯುವವರಂತೆ ಕಾಣುತ್ತಿದ್ದರು. ತೊಟ್ಟಿಲ ಬಳಿ ಅಂತಹ ಅವೇಳೆಯಲ್ಲಿ ಒಂದು ಸಣ್ಣ ಹುಲ್ಲುಕಡ್ಡಿಯ ಸದ್ದಾದರೂ, ಒಂದು ಮರಿ ಇರುವೆ ಹರಿದಾಡಿದರೂ ಅಜ್ಜಿಯರು ಜಾಗೃತರಾಗಿ ಬಿಡುತ್ತಿದ್ದರು. ಹಿರಿಯಜ್ಜಿಯಂತು ಯಾವುದಕ್ಕೂ ಹೇಸದವಳಾಗಿದ್ದು ಎಂತಹ ಕೇಡು ಬಂದರೂ ಅದರೊಡನೆ ಗುದ್ದಾಡಿ ಗೆದ್ದು ಬರುವೆನೆಂಬ ಹಟ ಸಾಧಿಸುತ್ತಿದ್ದಳು. ಆಗ ಅಶ್ವಿನಿಗೆ ಇನ್ನೂ ಒಂದು ವರ್ಷ ತುಂಬಿರಲಿಲ್ಲ. ಅಂತಹ ಅಸುಳೆಗಳ ಮೇಲೆ ಪೀಡೆಗಳಿಗೆ ಸದಾ ಕಣ್ಣಿರುತ್ತದೆ ಎಂದು ತುಂಬ ಎಚ್ಚರಿಕೆ ವಹಿಸುತ್ತಿದ್ದರು. ಒಂದು ಅಮಾವಾಸ್ಯೆಯ ದಿನ ಯಾಕೊ ಗೂಬೆ ಕೂಗಿಕೊಂಡಿತು. ಕತೆ ಕೇಳಿ ನಿದ್ದೆಗೆ ಮುಳುಗುತ್ತಿದ್ದ ನನಗೆ ತಟ್ಟನೆ ಎಚ್ಚರವಾಯಿತು. ಹಾಗೆ ಗೂಬೆ ಕೂಗಿದ್ದೇ ಆದಲ್ಲಿ ಹಿರಿಯಜ್ಜಿ ಸುಮ್ಮನಿರಲು ಸಾಧ್ಯವೇ ಇರಲಿಲ್ಲ. ಅವಳು ಅನಾದಿ ಕಾಲದ ಆಚರಣೆಗೆ ಹೊರಟುಬಿಡುತ್ತಿದ್ದಳು. ಕೋಣೆಗೆ ಹೋಗಿ ಬೆತ್ತಲಾಗಿ, ಒಲೆಯ ಬೂದಿಯನ್ನು, ಮಸಿಯನ್ನೂ ಮೈತುಂಬ ಬಳಿದುಕೊಂಡು, ಒಂದು ಕೆನ್ನೆಗೆ ಕುಂಕುಮಾದ್ದೊ ಎಂತದೋ ಕೆಂಪುಬಣ್ಣವನ್ನು ಬಳಿದುಕೊಂಡು, ಇನ್ನೊಂದು ಕೆನ್ನೆಗೆ ಕರಿ ಮಸಿಯನ್ನು ಮೆತ್ತಿಕೊಂಡು ಮಹಾಕಾಳಿಯ ವೇಷ ತಾಳಿ ಒಂದು ಕೈಯಲ್ಲಿ ಪೊರಕೆಯನ್ನು, ಇನ್ನೊಂದರಲ್ಲಿ ಹರಿದ ಚಪ್ಪಲಿಯ ಹಿಡಿದುಕೊಂಡು ಸದ್ದಿಲ್ಲದೆ ಆಚೆಗೆ ಹೊರಟುಹೋಗುತ್ತಿದ್ದಳು.
ಎಲ್ಲೊ ಮರೆಯಲ್ಲಿ ದೂರದ ಯಾವುದೋ ಹೊಳೆಸಾಲಿನ ಮರದ ಪೊಟರೆಯಲ್ಲೋ ಗುಡ್ಡದ ಗವಿ ಮೂಲೆಯಲ್ಲೋ, ಕುಳಿತು ಹಾಗೆ ಗೂಕ್ ಗೂಕ್ ಎಂದು ಕೂಗಿದ ಗೂಬೆಯನ್ನು ಪತ್ತೆ ಮಾಡಿ ಅದಕ್ಕೆ ಸಾಸ್ತಿ ಮಾಡಿಯೇ ಅಜ್ಜಿ ಹಿಂದಿರುಗುತ್ತಿದ್ದದ್ದು. ತನ್ನ ಕೊನೆಗಾಲದ ಮುದ್ದು ಮೂಳ್ ಮಗಳು ಅಶ್ವಿನಿಯ ಪ್ರಾಣ ಬೇಕೆಂದು ಆ ಗೂಬೆ ಕೂಗುತ್ತಿದೆ ಎಂದೇ ಅಜ್ಜಿ ನಂಬುತ್ತಿದ್ದಳು. ಗೂಬೆಗಾಗಿ ರಾತ್ರಿಯೆಲ್ಲ ತಡಕಾಡಿ ಮಾಯಾವಿನಿಯಂತೆ ಸುತ್ತಾಡಿ, ತಾನೂ ಒಂದು ಗಂಡು ಗೂಬೆಯಂತೆ ಕೂಗಿ ಪತ್ತೆ ಮಾಡಿಬಿಡುತ್ತಿದ್ದಳು. ಆ ಗೂಬೆಯ ಗುರುತು ಸಿಕ್ಕಿದ ಕೂಡಲೇ ಪೈಶಾಚಿಕ ಭಾಷೆಯಲ್ಲಿ ಗೂಬೆಯ ಜೊತೆ ಜಗಳ ತೆಗೆಯುತ್ತಿದ್ದಳು. ಜೀವಜಾಲದ ಎಂತೆಂತದೋ ವಿಚಿತ್ರ ಅನುಕರಣ ಶಬ್ದಗಳನ್ನು ಅವಳು ನಿರಂತರವಾಗಿ ಹಾಡಿನ ಮಂತ್ರದ ಲಯದಲ್ಲಿ ಆಕಾಶಕ್ಕೆ ಮುಖವಿಟ್ಟು ಆ ದಟ್ಟ ಕತ್ತಲ ಹೊತ್ತಲ್ಲಿ ಆಡುತ್ತಿದ್ದರೆ ನಿಜಕ್ಕೂ ಎಲ್ಲಾ ಪೀಡೆಗಳೂ ಹೆದರಿ ಅವಳ ಮಾತಿಗೆ ಸ್ಪಂದಿಸುತ್ತಿವೆ ಎಂಬಂತೆ ಆಗುತ್ತಿತ್ತು. ಹಾಗೆ ಗೂಬೆಯ ಜೊತೆ ಜಗಳಕ್ಕಿಳಿದು ಗೆದ್ದು ಬರುವ ಹೊತ್ತಿಗೆ ಮುಂಜಾವದ ಕೋಳಿಯೂ ಕೂಗಿರುತ್ತಿತ್ತು. ಅಲ್ಲಿತನಕ ಜೋಪಾನವಾಗಿ ಉಳಿದ ಅಜ್ಜಿಯರು ಮೂರು ಸಾಲಿನ ಕರಿಗೆರೆಯನ್ನು ತೊಟ್ಟಿಲ ಸುತ್ತ ಬಿಡಿಸಿ ಕಾದೇ ಇರುತ್ತಿದ್ದರು. ಅಶ್ವಿನಿಯ ತಾಯಿ ವೆಂಕಟಲಕ್ಷ್ಮಿಗೆ ಈ ಯಾವ ಆಚಾರಗಳೂ ತಿಳಿಯುತ್ತಿರಲೂ ಇಲ್ಲ. ಇಂತವೆಲ್ಲದರ ಬಗ್ಗೆ ಅವಳಿಗೆ ಹೆಚ್ಚಿನ ಆಸಕ್ತಿಯೂ ಇರುತ್ತಿರಲಿಲ್ಲ. ಗೂಬೆ ಕುಳಿತು ಕೂಗಿದ್ದ ಮರದ ಸುತ್ತ ಬೂದಿ ಬಿಟ್ಟು ಎಲೆ ಅಡಿಕೆ ಜಗಿದು ರಸವನ್ನು ರಕ್ತದಂತೆ ಸುತ್ತಲೂ ಚೆಲ್ಲಿ ಮತ್ತೊಮ್ಮೆ ಕೂಗಿದರೆ ನಿನ್ನ ಜೀವವನ್ನು ನಿಶ್ಚಿತವಾಗಿಯೂ ಮಾಟ ಮಾಡಿ ತೆಗೆಯುತ್ತೇನೆಂದು ಎಚ್ಚರಿಕೆಯನ್ನು ಕೊಟ್ಟು ಹಿಂದಿರುಗುತ್ತಿದ್ದಳು. ಹಾಗೆ ಬಂದು ಪುಟ್ಟ ಗೊರಕೆಯಲ್ಲಿ ತಾಯಿ ಬೆಚ್ಚನೆಯ ಕಿಬ್ಬೊಟ್ಟೆಯ ಮೊಲೆ ಹಾಲ ಕನಸಲ್ಲಿ ತೇಲುತ್ತಿದ್ದ ಅಶ್ವಿನಿಗೆ ಕಿವಿಯಲ್ಲಿ ಪಿಸಪಿಸನೆ ಏನೋ ಮಂತ್ರೋಚ್ಚಾರ ಮಾಡಿ ಹಾಲುಕುಡಿಸಲು ಸೂಚಿಸುತ್ತಿದ್ದಳು. ಅಂತಹ ನಮ್ಮ ಹಿರಿಯಜ್ಜಿಗೆ ಹಿಂದೆ ಆದದ್ದೂ ಮುಂದೆ ಆಗುವುದೂ ಎರಡೂ ತಿಳಿದಿದ್ದವೆಂದು ಉಳಿದವರು ಗುಪ್ತವಾಗಿ ಮಾತನಾಡಿಕೊಂಡು, ಮುಂದೆ ಏನು ಆಗುತ್ತದೆಂಬುದನ್ನು ಯಾರೂ ಕೇಳಿ ತಿಳಿಯಲು ಬಯಸುತ್ತಿರಲಿಲ್ಲ.
ರೇಡಿಯೋ ಚಿಕ್ಕಪ್ಪ ಯಾವುದೊ ಗ್ರಹದ ಪೂರ್ವಿಕರ ಜೊತೆ ಮಾತನಾಡುತ್ತಾ ಅವರ ಸೆಳೆತದಲ್ಲಿ ಕಳೆದುಹೋಗುತ್ತಾನೆಂದು ಒಮ್ಮೆ ಯಾರಲ್ಲೊ ಸಿಟ್ಟಿನಿಂದ ಹೇಳಿದ್ದು ಈಗ ಅಸ್ಪಷ್ಟವಾಗಿ ನೆನಪಾಗುತ್ತದೆ. ಅಜ್ಜಿ ಹಾಗೆ ಯಾಕೆ ಭವಿಷ್ಯ ನುಡಿದಿದ್ದಳೋ ಆಗ ಯಾರಿಗೂ ಅದು ಅರ್ಥವಾಗಿರಲಿಲ್ಲ. ಈಗ ಕೂಡ ಆ ಮಾತಿನ ಗೂಡಾರ್ಥ ಕಲ್ಪನೆ ಸಹ ಯಾರಿಗೂ ಬರಲಾರದು. ಮನೆಯಲ್ಲಿದ್ದ ಒಬ್ಬೊಬ್ಬರೂ ಅಂಜುತ್ತ ಅಳುಕುತ್ತ ಕೂಡು ಕುಟುಂಬದ ಬಂಧದಿಂದ ಕಳಚಿಕೊಳ್ಳಲು ಉಪಾಯಗಳನ್ನು ಹುಡುಕುತ್ತಿದ್ದರು. ಎಂದೊ ಒಂದು ಕಾಲದಲ್ಲಿ ಉತ್ತರನ ಯಾವುದೊ ಒಂದು ಬೆಟ್ಟ ಗುಡ್ಡಗಳ ಕಣಿವೆಯಿಂದ ಬಯಲುದಾರಿ ಹಿಡಿದು ಬಂದು, ಇಲ್ಲಿ ನೆಲೆಸಿ, ನೂರಾರು ವರ್ಷಗಳು ದಾಟಿ ಬಾಳಿ ಬದುಕಿ, ಹೊಸ ಕಾಲಕ್ಕೆ ಬರುವ ಹೊತ್ತಿಗೆ ಏನೆಲ್ಲ ಏರುಪೇರುಗಳು ಆ ಮನೆಯಲ್ಲಿ ಘಟಿಸಿಹೋಗಿದ್ದವು. ಅವನ್ನೆಲ್ಲ ನೆನೆಯುವುದಕ್ಕೆ ಈಗ ತುಂಬ ಹಿಂಸೆಯಾಗುತ್ತದೆ. ಎಷ್ಟೋ ಬಾರಿ ಹಾಗೆ ಆದದ್ದೆಲ್ಲ ಪೂರ್ವ ನಿಯೋಜಿತವೆಂದು ಅನುಮಾನವಾಗುತ್ತದೆ. ಮನೆಯ ವ್ಯವಹಾರಗಳು ಹೋಳಾಗುತ್ತಾ ಹೋದಂತೆಲ್ಲಾ ಅಸಹಾಯಕಳಾಗಿ ಸಿಟ್ಟಾಗುತ್ತಿದ್ದ ಹಿರಿಯಜ್ಜಿ ಮೂಲೆಯಲ್ಲೊ ಹಿತ್ತಲ ಸಂಪಿಗೆ ಮರದ ಬೊಡ್ಡೆಯಲ್ಲೊ ಕುಳಿತು ತನ್ನ ಅನಾದಿ ಕಾಲದ ಪೈಶಾಚಿಕ ಭಾಷೆಯಲ್ಲಿ ಏನನ್ನೋ ಹಾಡಿಕೊಂಡು ಅದರಲ್ಲೇ ತನ್ನನ್ನು ಸಮಾಧಾನ ಮಾಡಿಕೊಳ್ಳುತ್ತಿದ್ದಳು. ಅಂತಹ ವೇಳೆಯಲ್ಲೆಲ್ಲ ಬೇಕಂತಲೇ ಕರ್ಕಶವಾಗಿ ಅಶ್ವಿನಿ ತೊಟ್ಟಿಲಿಂದ ಕಿಟಾರನೆ ಕಿರುಚಿಕೊಳ್ಳುತ್ತಿದ್ದಳು. ಹಾಳಾದ ಕೂಸು ತನ್ನ ಮಾತನ್ನು ಅರ್ಥ ಮಾಡಿಕೊಳ್ಳುತ್ತಿದೆ ಎಂದು ಅಜ್ಜಿ ಆಗ ಎದ್ದು ಬಂದು ಹಾಲಿಲ್ಲದಿದ್ದರೂ ತನ್ನ ಮೊಲೆ ಕಚ್ಚಿಸಿ, ಲಾಲಿಯ ಮುದದಿಂದ ನಿದ್ದೆ ಬರಿಸಿ ದಣಿದ ತನ್ನ ಕಾಲಾಂತರದ ಕಣ್ಣುಗಳನ್ನು ಮನೆಯ ಒಂದೊಂದು ಮುರುಕು ಪ್ರತಿಮೆಯಂತಿದ್ದ ವಸ್ತುಗಳ ಮೇಲೆ ನಿರಾಸಕ್ತಿಯಿಂದ ಚೆಲ್ಲುತ್ತಿದ್ದಳು.
ಅಂತಹ ಹೊತ್ತಲ್ಲಿ ರೇಡಿಯೋ ಚಿಕ್ಕಪ್ಪ ಹಿತ್ತಲಿನ ದೊಡ್ಡ ಬೇವಿನ ಮರಕ್ಕೆ ತೂಗುಯ್ಯಾಲೆಯನ್ನು ಕಟ್ಟಿಸಿಕೊಂಡು, ಅದರ ತೂಗಾಟದ ಲಯದಲ್ಲೇ ರೇಡಿಯೋ ಕೇಳುತ್ತಿದ್ದ. ರೇಡಿಯೋ ಚಿಕ್ಕಪ್ಪನ ಭಾಷೆಗೂ ಮಿತಿಯಿರಲಿಲ್ಲ. ದೂರದ ಬಿಬಿಸಿಯ ವಾರ್ತೆಗಳನ್ನು, ವಾಷಿಂಗ್ಟನ್ನಿನ ಸಂಗೀತದ ಕಾರ್ಯಕ್ರಮಗಳನ್ನು ಅರೇಬಿಯಾದ ಅಲ್ಲಾಹುವಿನ ಪ್ರಾರ್ಥನೆಯನ್ನೂ ಗಂಟೆಗಟ್ಟಲೆ ತಲ್ಲೀನವಾಗಿ ಕೇಳಿಸಿಕೊಂಡು ಆ ಬೇವಿನ ಮರದ ಯಾವುದೊ ಒಂದು ಕೊಂಬೆಯಂತೆ ಜೋತಾಡುತ್ತಲೇ ಇರುತ್ತಿದ್ದ. ತನ್ನೊಳಗೆ ಯಾರಿಗೂ ಹೇಳಿಕೊಳ್ಳಲಾಗದ ಸಂಕಟ, ಯಾತನೆ, ದುಃಖ, ಒಂಟಿತನ, ಅಸಹನೀಯ ಬೇಸರ ತುಂಬಿಕೊಂಡಿವೆ ಎಂಬಂತೆ ಅವನ ನೀಳಮುಖ ಯಾವತ್ತೂ ಸೂಚಿಸುತ್ತಿತ್ತು. ಅಶ್ವಿನಿಗೆ ಆರೈಕೆ ಮಾಡಿದ್ದಕ್ಕೂ ಒಂದು ಕೈ ಮಿಗಿಲಾಗಿ ಆಗ ಹಿರಿಯಜ್ಜಿ ರೇಡಿಯೋ ಚಿಕ್ಕಪ್ಪನ ಬಾಣಂತನವನ್ನು ನಿಷ್ಠೆಯಿಂದ ಮಾಡಿದ್ದಳು. ಅದೇ ಮಾಂತ್ರಿಕ ತೊಟ್ಟಿಲಲ್ಲಿ ಚಿಕ್ಕಪ್ಪ ಕೂಡ ಎಂದೆಂದೂ ಮುಗಿಯದ ಲಾಲಿ ನಾದವ ತುಂಬಿಕೊಂಡದ್ದು, ಅಂತಹ ಒಂದು ತೊಟ್ಟಿಲಲ್ಲಿ ಬೆಳೆದ ನಮಗೆಲ್ಲಾ ನಮ್ಮ ಪರಂಪರಯೇ ಮರೆತುಹೋಗುತ್ತಿತ್ತು. ಎಷ್ಟೋ ಬಾರಿ ಆ ಮರೆವನ್ನು ಎಲ್ಲರೂ ವ್ಯವಸ್ಥಿತವಾಗಿ ನಿಭಾಯಿಸುತ್ತಿದ್ದರು. ಯಾಕೊ ನನಗಂತೂ ಆ ತೊಟ್ಟಿಲ ರೋಮಾಂಚನದಿಂದ ಒಂದು ಕ್ಷಣವೂ ಹೊರಗುಳಿಯಲು ಆಗುತ್ತಿರಲಿಲ್ಲ.
ಒಮ್ಮೆಯಾದರೂ ಚಿಕ್ಕಪ್ಪ ಅಶ್ವಿನಿಯನ್ನು ಎತ್ತಿಕೊಂಡು ಮುದ್ದಾಡಿದ್ದನ್ನು ನಾವ್ಯಾರೂ ಕಂಡಿರಲಿಲ್ಲ. ಅಶ್ವಿನಿಯ ಬೆನ್ನ ಮೇಲೆ ಬರೆ ಹಾಕಿದಂತೆ ವಿಚಿತ್ರ ಗೆರೆಗಳಿದ್ದುದನ್ನು ಕಂಡು ಇವಳು ತಮ್ಮ ಆದಿ ಕಾಲದ ಪೂರ್ವಿಕಳೆಂದೂ, ಆ ಕಾಲದವಳು ಇವಳಲ್ಲಿ ಹುಟ್ಟಿ ಬಂದಿದ್ದಾಳೆಂದೂ ಎಲ್ಲರೂ ಹೆಚ್ಚಿನ ಗಮನವನ್ನು ಆಕೆಯ ಆರೈಕೆಯಲ್ಲಿ ತೋರುತ್ತಿದ್ದರು. ತಾಯಿ ವೆಂಕಟಲಕ್ಷ್ಮಿಯ ಎದೆ ಹಾಲ ಕೊರೆತೆಯಿಂದ ಅಶ್ವಿನಿಯನ್ನು ನಿಭಾಯಿಸಲಾರದೆ ರೇಡಿಯೋ ಚಿಕ್ಕಪ್ಪನ ಮೇಲೆ ರೇಗಾಡಿ, ಈ ಮನೆಯೂ ಗಂಡನೂ ಆ ಮಗು ಯಾವುದೂ ಯಾಕಾದರೂ ತನಗೆ ಬೇಕೆಂದು ಆಗಾಗ ರೋಸಿಹೋಗುತ್ತಿದ್ದಳು. ಅದನ್ನು ಅರಿತೋ ಏನೋ, ವೆಂಕಟಲಕ್ಷ್ಮಿಯನ್ನೂ ತೊಟ್ಟಿಲ ಮಗುವಂತೆಯೇ ಅಜ್ಜಿಯರು ನಿವಾಳಿಸುತ್ತಿದ್ದರು.
ಆ ತೊಟ್ಟಿಲಲ್ಲಿ ಅಜ್ಜಿಯರ ಎಲ್ಲ ಎಚ್ಚರದ ಆದಿಕಾಲದ ಲಾಲಿ ಪದಗಳ ನಾದವನ್ನು ತಮ್ಮ ದೇಹಕ್ಕೆ ತುಂಬಿಕೊಂಡ ಯಾವ ಮಗುವೂ ಅನಂತವಾಗುತ್ತದೆಂಬುದು ಮನೆತನದ ಮಾತೃನೆಲೆಯ ನಂಬಿಕೆಯಾಗಿತ್ತು. ರೇಡಿಯೋ ಚಿಕ್ಕಪ್ಪ ಯಾವ ಅನೂಹ್ಯ ನಿಸ್ಸಂತು ತರಂಗಗಳ ನಾದವನ್ನು ತುಂಬಿಕೊಂಡನೋ, ಅಶ್ವಿನಿ ಯಾವ ರೀತಿ ಅವನ್ನೆಲ್ಲ ಪಡೆದುಕೊಂಡಳೋ ನಿರ್ದಿಷ್ಟವಾಗಿ ಈಗ ಹೇಳಲಿಕ್ಕೆ ಬರದು. ಆ ತೊಟ್ಟಿಲಿಗಾಗಿ ಎಷ್ಟೋ ತಾಯಂದಿರು ಆಸೆಪಡುತ್ತಿದ್ದರು. ತಾವು ಮಗು ಹಡೆದು ಅಂತಹ ಒಂದು ಚೆಂದದ ತೊಟ್ಟಿಲಿಗೆ ಹಾಕಿ ತೂಗಿದರೆ ಹಡೆದದ್ದು ಸಾರ್ಥಕವಾಗುತ್ತದೆಂದು ಭಾವಿಸುತ್ತಿದ್ದರು.
ನಿಜಕ್ಕೂ ಅದೊಂದು ರಮ್ಯಲೋಕದ ತೊಟ್ಟಿಲು. ಪೂರ್ವಕಾಲದಿಂದಲೂ ಅಜ್ಜಿಯರು ಜತನವಾಗಿ ಆ ತೊಟ್ಟಿಲನ್ನು ಕಾಯ್ದುಕೊಂಡು ಬಂದದ್ದರು. ಅದರ ಬಗ್ಗೆ ಹುರಿಯಜ್ಜಿ ನೂರೆಂಟು ಕತೆಗಳನ್ನು ಹೇಳುತ್ತಿದ್ದಳು.ಆ ಕಿನ್ನರ ಕತೆಯಿಂದಲೋ ಏನೋ ತಾಯ ಮೊಲೆ ಬಿಡಲಾರದೆ ಕಂಗಾಲಾಗುವ ಮಗುವಿನ ಮನಸ್ಸಿನಂತೆ ಆ ತೊಟ್ಟಿಲ ಬಗೆ ನನ್ನ ಮನಸ್ಸು ಹೊಯ್ದಾಡುತ್ತಿತ್ತು. ಆ ತೊಟ್ಟಿಲ ಬಗ್ಗೆಯೇ ವೆಂಕಟಲಕ್ಷ್ಮಿಗೆ ಅಸಮಾಧಾನವಿದ್ದುದನ್ನು ನಾನು ಗ್ರಹಿಸಿದ್ದೆ. ಭೂತಕಾಲದ ಆ ತೊಟ್ಟಿಲಲ್ಲಿ ನನ್ನ ಮಗು ಅಶ್ವಿನಿ ಯಾಕೆ ಬೆಳೆಯಬೇಕೆಂದು ಆಕೆ ಮನೆಯ ಯಾರಲ್ಲೋ ಹೇಳಿಕೊಂಡದ್ದನ್ನು ಕೇಳಿ ಹಿರಿಯಜ್ಜಿ ದೊಡ್ಡ ರಂಪವನ್ನೇ ಮಾಡಿಬಿಟ್ಟಿದ್ದಳು. ಸ್ವತಃ ಆ ದೇವತೆಗಳೇ ಇಂತಹ ಒಂದು ತೊಟ್ಟಿಲನ್ನು ನಮ್ಮ ಪೂರ್ವಿಕರಿಗೆ ಕೊಟ್ಟಿದ್ದೆಂದೂ, ತಲೆಮಾರುಗಳಿಂದ ಅದನ್ನೊಂದು ಪವಿತ್ರ ಶಕ್ತಿಯಾಗಿ ಕಾಯ್ದುಕೊಂಡು ಬಂದಿರುವುದಾಗಿಯೂ ಇದರಿಂದಲೇ ತನ್ನ ವಂಶದ ಎಲ್ಲಾ ಕುಡಿಗಳಿಗೂ ಯೋಗ್ಯವಾದ ದಾರಿ ಸಾಧ್ಯವಾಗುತ್ತದೆಂದು ಅಜ್ಜಿ ವಾದಿಸಿ ವೆಂಕಟಲಕ್ಷ್ಮಿಯನ್ನು ತೆಪ್ಪಗಾಗಿಸಿದ್ದಳು. ಹಾಗಿದ್ದರೆ ತನ್ನ ಗಂಡ ಇದೇ ತೊಟ್ಟಿಲಲ್ಲಿ ನಿಮ್ಮ ಆರೈಕೆಯಲ್ಲಿಯೇ ತಾನೆ ಬೆಳೆದು ಇವತ್ತು ರೇಡಿಯೋ ಹುಚ್ಚಿನಲ್ಲಿ ಕಳೆದುಹೋಗಿರುವುದು ಎಂದು ಬಾಯಿಗೆ ಬಂದಿದ್ದ ಮಾತನ್ನು ನುಂಗಿಕೊಂಡು, ಈ ಮನೆಯ ಎಲ್ಲವೂ ಪುರಾಣದ ಕನಸಿನಲ್ಲಿ ಮುಳುಗಿ ಹೋಗುತ್ತಿದೆ ಎಂದು ತನ್ನನ್ನೇ ತಾನು ಸಮಾಧಾನ ಮಾಡಿಕೊಂಡಿದ್ದಳು. ಏನೇ ಆಗಲಿ, ಅಂತಹ ತೊಟ್ಟಿಲ ಬಗ್ಗೆ ಚಿಕ್ಕಮ್ಮ ಯಾಕೆ ಉಪೇಕ್ಷೆ ತಾಳಬೇಕೆಂದು ನನಗೂ ಕೋಪ ಬರುತ್ತಿತ್ತು. ಆದರೆ ಮನೆಯ ಗಂಡಸರಿಗೆ ಮಾತ್ರ ಆ ದೈವಿಕ ತೊಟ್ಟಿಲಿನ ಬಗ್ಗೆ ಭಯ ಕಡಿಮೆ ಆಗುತ್ತಿದ್ದದ್ದಕ್ಕೆ ಅಜ್ಜಿಯರು ಒಟ್ಟಾಗಿ ತಮ್ಮ ಕಾಲದ ತಾಯಾಳಿಕೆಯ ದಣಿದ ಹತಾಶೆಯ ಸಂಕಟದ ಜಗಳ ತೆಗೆಯುತ್ತಿದ್ದರು. ಆ ತೊಟ್ಟಿಲನ್ನು ಅತ್ಯಂತ ಉಪೇಕ್ಷೆಯಿಂದ ಒದ್ದವನು ಮೊದಲಿಗೆ ಚಿಕ್ಕಪ್ಪನೇ ಇರಬೇಕು. ನನಗೀಗಲೂ ನಿಗೂಢವಾದದ್ದೆಂದರೆ ಆ ಬಗೆಯ ಪವಿತ್ರ ತೊಟ್ಟಿಲನ್ನು ಗಂಡಸರು ಯಾಕೆ ಅಷ್ಟೊಂದು ಅಗೌರವದಿಂದ ಉಪೇಕ್ಷಿಸುತ್ತಿದ್ದರೆಂಬುದು. ಹಿಂದೆ ಒಂದು ಕಾಲಕ್ಕೆ ಪ್ಲೇಗು, ಕಾಲರ, ಸಿಡುಬು ಮಾರಿಯರು ಬಂದು ಜನರನ್ನು ಗುಡಿಸಿಕೊಂಡು ಹೋಗುವಾಗ ಇದೇ ತೊಟ್ಟಿಲು ನಮ್ಮನ್ನೆಲ್ಲ ಕಾಪಾಡಿದ್ದೆಂದು ಅಜ್ಜಿ ಹೆಮ್ಮೆಯಿಂದ ಹೇಳಿದ್ದಳು. ಉತ್ತರದಿಕ್ಕಿನ ಯಾವ ಹಳ್ಳಿ, ಯಾವ ಕಾಡು, ಯಾವ ಬಯಲು, ಯಾವ ನದಿ ಹಾದಿಯಲ್ಲಿ ಆ ಕಾಲದಲ್ಲಿ ಪ್ಲೇಗು ಮಾರಿಯರಿಂದ ತಪ್ಪಿಸಿಕೊಂಡು ಆ ತೊಟ್ಟಿಲಲ್ಲಿ ನಾಲ್ಕೈದು ಹಸುಳೆಗಳನ್ನು ಹೊತ್ತುಕೊಂಡು ನಮ್ಮ ಪೂರ್ವಿಕರು ಬಂದರೊ, ಅದು ಸ್ವತಃ ಈಗ ಉಳಿದವರಿಗೇ ನಿಖರವಾಗಿ ಗೊತ್ತಿಲ್ಲ.
ಕಾಲದ ಯಾವುದೊ ಸಮುದ್ರದಲೆಯಲ್ಲಿ ಸಾಗುತ್ತಿರುವ ಅಶ್ವಿನಿಗೆ ತಾಯಿ ವೆಂಕಟಲಕ್ಷ್ಮಿ ಇದನ್ನೆಲ್ಲ ಹೇಳಿಕೊಟ್ಟಿರಲು ಸಾಧ್ಯವೇ ಇಲ್ಲವೆಂದು ನನ್ನ ಮನಸ್ಸು ಹೇಳುತ್ತಿದೆ. ಅಂತಹ ತೊಟ್ಟಿಲಲ್ಲಿ ಬೆಳೆದು ಇವತ್ತು ಯಾವುದೊ ನಮಗೆ ನಿಲುಕದ ಎತ್ತರದಲ್ಲಿರುವ ಅಶ್ವಿನಿಯನ್ನು ಹಿರಿಯಜ್ಜಿ ಬದುಕಿದ್ದು ನೋಡಿರಲೇಬೇಕಿತ್ತು. ನಮ್ಮ ಮನೆಯಲ್ಲಿ ಒಂದು ವಿಚಿತ್ರ ವರ್ಣಮಿಶ್ರಣವಿತ್ತು. ನಮ್ಮ ಅಜ್ಜಿಯರೆಲ್ಲರೂ ಹೊಳೆವ ಸೂರ್ಯನ ಬಣ್ಣದವರೇ ಎಂದು ಹೇಳಿದರೆ ಅದು ಅತಿಶಯವಲ್ಲ. ಅವರನ್ನು ನೋಡಿದರೆ ಇವರು ಎಲ್ಲಿಂದಲೋ ಹೊರಗಿನಿಂದ ಬಂದವರಂತೆ ತೋರುತ್ತಿದ್ದರು. ಅವರ ನೀಳ ಮೂಗು, ಕೆಂಚು ಕಣ್ಣು, ರಸ ಚಿಮ್ಮುವ ಯೌವ್ವನದ ಕೆನ್ನೆ, ರೇಶಿಮೆಯ ಉದ್ದ ಕೂದಲು, ಎಂತಹ ಗಂಡಸರನ್ನೂ ಸೋಲಿಸಿಬಿಡುತ್ತಿದ್ದವು. ಎದೆ ಸೆಟೆಸಿ ನಡೆವ ಅವರ ನಿಲುವಿನಲ್ಲಿ ಎಂತದೊ ದಿವ್ಯತೆಯಿದ್ದು ಕೆಂಪು ಟಮೊಟ ಹಣ್ಣಿನಂತೆ ಅವರ ಮುಖ ಹೊಳೆಯುತ್ತಿತ್ತು. ನೂರಾರು ಮಕ್ಕಳಿಗೆ ಹಾಲೂಡಿಸಿಯೂ ಬತ್ತದಂತೆ ಅಜ್ಜಿಯ ಹಿರಿ ಸ್ತನಗಳು ಮೊಮ್ಮಕ್ಕಳ ಮುಂದೆ ನಾಳಿನ ಯಾವುದೊ ಹಣ್ಣಾದ ಫಲಗಳಂತೆ ತೊನೆಯುತ್ತಿದ್ದವು. ವಿಚಿತ್ರ ಎಂದರೆ ಅಂತಹ ಮುಪ್ಪಿನ ಕಾಲದಲ್ಲೂ ಹಿರಿಯಜ್ಜಿ ಅಶ್ವಿನಿಗೆ ಹಾಲೂಡಿಸುವ ಪದ್ದತಿಯನ್ನು ಇಟ್ಟುಕೊಂಡಿದ್ದಳು. ಹಾಲು ಬರುತ್ತಿತ್ತೊ ಅಥವಾ ಅಜ್ಜಿಯ ತಾಯ್ತನವೋ ಏನೊ, ಅಶ್ವಿನಿ ಕುಶಾಲಿನಿಂದ ತನ್ನ ಮೃದುವಾದ ಬೋಡಿನಿಂದ ಕಚ್ಚಿ ಆಟ ಆಡುತ್ತಿದ್ದುದನ್ನು ನಾವು ತಮಾಷೆಯಿಂದ ನೋಡುತ್ತಿದ್ದೆವು. ಅಜ್ಜಿಯ ಅದೇ ಹಿರಿ ಸ್ತನಗಳು ನನ್ನ ಬಾಯನ್ನೂ ಜೀವ ರಸದಿಂದ ಒದ್ದೆಯಾಗಿಸಿದ್ದವು. ನಮ್ಮ ಮನೆತನದ ಗಂಡಸರು ಸ್ಫುರದ್ರೂಪಿಯಾದ ಅಜ್ಜಿಯರನ್ನು ಎಲ್ಲಿ ಹೇಗೆ ಲಗ್ನ ಮಾಡಿಕೊಂಡರೊ ಅವರ ಮೂಲವನ್ನು ಈಗ ಕೆದಕಲಿಕ್ಕಾಗದು. ಬಹುಪಾಲು ಮನೆಯ ಎಲ್ಲಾ ಗಂಡಸರೂ ಕಂದು ಕಪ್ಪು ವರ್ಣದ, ಗಿಡ್ಡದೇಹದ, ಪುಟ್ಟಕಣ್ಣಿನ, ಚೋಟುಮೂಗಿನ, ವಿಶಾಲ ಭುಜದ, ಸಣ್ಣಕಾಲಿನ, ಗುಂಗುರು ಕೂದಲಿನ, ಒರಟು ರೂಪದಲ್ಲಿಯೇ ಇದ್ದವರಾಗಿದ್ದರು. ಒಂದೊಂದು ತಲೆಮಾರಿಗೆ ಏನೊ ವ್ಯತ್ಯಾಸವಾದಂತೆ ಒಬ್ಬೊಬ್ಬರು ಮಾತ್ರ ಅಜ್ಜಿಯರ ರೂಪವನ್ನು ಧರಿಸಿ ಬರುತ್ತಿದ್ದರು. ಅಂತವರಲ್ಲಿ ರೇಡಿಯೊ ಚಿಕ್ಕಪ್ಪನೂ ಒಬ್ಬ. ಆದರೆ ಗುಣದಲ್ಲಿ ಹೀಗೆ. ಸ್ಫುರದ್ರೂಪಿಯಾಗಿ ಹುಟ್ಟಿ ಬಂದವರಾರೂ ಮೂಲ ಅಜ್ಜಿಯರ ಸ್ವಭಾವವನ್ನು ಪಡೆದು ಬಂದವರಾಗುತ್ತಿರಲಿಲ್ಲ. ರೇಡಿಯೊ ಚಿಕ್ಕಪ್ಪನಿಗೆ ತಂದೆ ಮೂಲದ ಲಕ್ಷಣಗಳೂ ಇರುತ್ತಿರಲಿಲ್ಲ. ಅಜ್ಜಿಯರ ಜೈವಿಕಾಂಶಗಳನ್ನು ಹೊತ್ತು ಬಂದವರೆಲ್ಲಾ ವಿಚಿತ್ರ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುತ್ತಿದ್ದರು. ತಾನಿರುವ ಜಗತ್ತಿನ ಜೊತೆ ಸಾಮರಸ್ಯದಿಂದ ಸಂಬಂಧಗಳನ್ನು ಬೆಳೆಸಿಕೊಳ್ಳುವಲ್ಲಿ ಅವರು ವಿಫಲರಾಗುತ್ತಿದ್ದರು.
ವೆಂಕಟಲಕ್ಷ್ಮಿಯು ಅಂತಹ ಮನೆಗೆ ಸೊಸೆಯಾಗಿ ಬರುವ ಮುನ್ನ ಮುಗ್ಧತೆಯನ್ನು ತುಂಬಿಕೊಂಡಿದ್ದ ದಡ್ಡಿಯೇ ಆಗಿದ್ದಳು. ಆಗ ಹಿರಿಯಜ್ಜಿಯೇ ಅವಳನ್ನು ಬಲಗಾಲಿರಿಸಿ ಹೊಸಿಲು ದಾಟಿಸಿ ಮನೆಗೆ ಕರೆದುಕೊಂಡು ಹೋಗಿ, ಮೊದಲು ಆ ತೊಟ್ಟಿಲಿಗೆ ಪೂಜೆಮಾಡಿಸಿ ಅದನ್ನು ತೂಗಿಸಿದ್ದಳು. ನಿನ್ನ ಹೊಟ್ಟೆಯಲ್ಲಿರುವ ಗರ್ಭವು ದೇವಲೋಕದ್ದೆಂದೂ, ಇಲ್ಲಿರುವ ಆ ತೊಟ್ಟಿಲು ಮನುಷ್ಯ ಲೋಕದ ಇನ್ನೊಂದು ಗರ್ಭವೆಂದು, ತಿಳಿಸಿದಾಗ ವೆಂಕಟಲಕ್ಷ್ಮಿಯು ಏನೂ ಗೊತ್ತಿಲ್ಲದೆ ಇದು ಯಾವ ಆಚಾರವೋ ಎಂದು ಹೇಳಿದಂತೆ ನಡೆದುಕೊಂಡಿದ್ದಳು. ಮದುವೆಯಾದ ಮೊದಲ ರಾತ್ರಿಯ ಗುಪ್ತ ಆಚರಣೆಗಳು ಮತ್ತಷ್ಟು ಅವಳನ್ನು ಲಜ್ಜೆಗೊಳಪಡಿಸಿದ್ದವು. ಆ ಮನೆಯಲ್ಲಿ ಮದುವೆಯಾದ ಎಲ್ಲರೂ ಖಡ್ಡಾಯವಾಗಿ ಪಾಲಿಸಬೇಕಾದ ಆಚರಣೆಯೊಂದಿತ್ತು. ಮದುಮಕ್ಕಳು ಕೂಡುವ ಆ ರಾತ್ರಿಯ ಮೊದಲ ಕ್ಷಣದಲ್ಲಿ ಹಿರಿಯಜ್ಜಿಯ ಸಾಕ್ಷಿಯಲ್ಲಿ ಇಬ್ಬರೂ ಬೆತ್ತಲಾಗಿ, ದೀಪದ ಮಂದ ಬೆಳಕಿನಲ್ಲಿ ಎಲ್ಲರೂ ಮಲಗಿ ನಿದ್ರಿಸುತ್ತಿರುವಾಗ ಒಬ್ಬರನ್ನೊಬ್ಬರು ತೊಟ್ಟಿಲಿಗೆ ಎತ್ತಿ ಕೂರಿಸಿ ಮಲಗಿಸಿ ಮೋಹದ ತೊಟ್ಟಿಲ ತೂಗಿ ಹೆಣ್ಣನ್ನು ಗಂಡು ತೂಗಿ ಗಂಡನ್ನು ಹೆಣ್ಣು ತೂಗಿ, ಕೊನೆಗೆ ಹೆಣ್ಣು ಗಂಡಿಬ್ಬರನ್ನೂ ಆ ತೊಟ್ಟಿಲಲ್ಲೇ ಅಜ್ಜಿಯು ತೂಗಿ ಮಾಂತ್ರಿಕ ಲಾಲಿ ಪದಗಳ ಅಮೂರ್ತ ದನಿಗಳನ್ನು ಕಿವಿಗೆ ತುಂಬಿಸಿಕೊಂಡು ಎದ್ದು ಹೋಗಿ ಒಳಮನೆಯ ಸೇರಿಕೊಂಡು ರತಿಯ ಲಾಲಿ ಪದಗಳನ್ನು ಅವರೇ ದೇಹೈಕ್ಯತೆಯಿಂದ ಹಾಡಬೇಕಿತ್ತು.
ರೇಡಿಯೊ ಚಿಕ್ಕಪ್ಪನನ್ನು ಈ ಆಚರಣೆಗೆ ಹೊಂದಿಸುವಲ್ಲಿ ಮನೆಯ ಎಲ್ಲಾ ಅಜ್ಜಿಯರೂ ಸುಸ್ತಾಗಿ ಹೋಗಿದ್ದರು. ಈ ಆಚರಣೆಯನ್ನು ತಪ್ಪಿಸಿಕೊಂಡರೆ ಮುಂದೆ ಎಂದೆಂದೂ ಮಕ್ಕಳಾಗುವುದಿಲ್ಲವೆಂದೂ, ಲಗ್ನದ ಶಾಸ್ತ್ರ ಮುಗಿಯುವುದಿಲ್ಲವೆಂದೂ, ಅನಂತರ ಹೆಣ್ಣು ಗಂಡಿನ ಹೊಂದಾಣಿಕೆ ಅಸಾಧ್ಯವೆಂದು ಮನೆಯವರು ತಿಳಿದಿದ್ದರು, ಮದುಮಗಳು ವೆಂಕಟಲಕ್ಷ್ಮಿಯು ಹಳ್ಳಿಯ ನಾರುಬೇರಿನ ಸಾರದ ಸಪೂರ ದೇಹದ ಆಕಾಶದಗಲ ಕನಸು ಕಾಣುವಂತಹ ಕಪ್ಪು ಕಣ್ಣಿನ ದಿಟ್ಟ ಚೆಲುವೆಯಾಗಿದ್ದಳು. ಮದುವೆಯಾದ ಮೊದಲ ರತಿ ರಾತ್ರಿಯೇ ಗಂಡ ಬೆತ್ತಲಾಗದೆ ಅನಾಸಕ್ತನಾಗಿ ರೇಡಿಯೊ ಹಿಡಿದುಕೊಂಡಿರುವುದನ್ನು ಕಂಡು ಕಂಗಾಲಾಗಿದ್ದಳು. ರೇಡಿಯೊ ಚಿಕ್ಕಪ್ಪನನ್ನು ಆಗ ಹಿರಿಯಜ್ಜಿ ವಯನ ಮಾಡಿ ನೀನೀಗ ಮುದ್ದುಕಾಲದ ಹಸುಳೆ ಕಂದ ಕಣೊ ಎಂದು ನಂಬಿಸಿ ಈ ತೊಟ್ಟಿಲಲ್ಲಿ ನಿನ್ನನ್ನು ತೂಗಿ ಮಲಗಿಸುತ್ತೇನೆಂದು ಹೇಳಿದ ಮೇಲೆಯೇ ಚಿಕ್ಕಪ್ಪ ವೆಂಕಟಲಕ್ಷ್ಮಿಯ ಕೈಯಿಂದ ಬಟ್ಟೆ ಬಿಚ್ಚಿಸಿಕೊಂಡದ್ದು. ಆ ಮಂದ ಬೆಳಕಿನಲ್ಲಿ ಚಿಕ್ಕಪ್ಪನ ಸುಂದರ ದೇಹ ದಿವ್ಯವಾಗಿ ಕಾಣುತ್ತಿತ್ತು. ಅವನ ದೇಹದಲ್ಲಿ ಯಾವ ಊನವೂ ಇಲ್ಲವೆಂದು ಖಚಿತವಾಗುತ್ತಿತ್ತು. ಅವನನ್ನು ಚಿಕ್ಕಮ್ಮ ಎತ್ತಿ ಭುಜದ ಮೇಲೆ ಹೊತ್ತುಕೊಂಡು ಬೆನ್ನು ತಟ್ಟಿ ಮೈ ಸವರಿ ಅವಳ ಅಂಗಾಂಗಗಳ ಸಂದುಗಳಲ್ಲಿ ಮಿಂಚು ಹರಿಸಿದರೂ ಅವನ ಪ್ರತಿಕ್ರಿಯೆ ಶೂನ್ಯವಾಗಿರುತ್ತಿತ್ತು. ಎರಡೂ ತೊಡೆಗಳನ್ನು ತುಂಬಿದ ತನ್ನ ಯವ್ವನದ ಎಡೆಗೆ ಒತ್ತಿಕೊಂಡು ಎರಡೂ ರಟ್ಟೆಗಳಿಂದ ಬಾಹುಬಂಧನದ ಬಿಗಿಯಲ್ಲಿ ತನ್ನ ಎದೆಯನ್ನು ಅವನ ಕಿಬ್ಬೊಟ್ಟೆಗೆ ಅದುಮಿದರೂ ಚಿಕ್ಕಪ್ಪ ಹಾಲುಗಲ್ಲದ ಹಸುಗೂಸಿನಂತೆ ವೆಂಕಟಲಕ್ಷ್ಮಿಯ ಕುತ್ತಿಗೆಯಿಂದ ಇಳಿಯುತ್ತಿದ್ದ ಬೆವರನ್ನು ಸುಮ್ಮನೆ ತುದಿ ನಾಲಿಗೆಯಿಂದ ನೆಕ್ಕುತ್ತಿದ್ದ.
ಅವನಿಗೆ ರತಿ ಅಮಲನ್ನು ನಿನ್ನ ಮೊಲೆಯಿಂದ ಕುಡಿಸು ಎಂದು ಹಿರಿಯಜ್ಜಿ ಹತಾಶೆಯಿಂದ ಹೇಳುತ್ತಿದ್ದಳು. ವೆಂಕಟಲಕ್ಷ್ಮಿಯು ಹಾಗೇ ಮಾಡಿದ್ದಳು. ಬೆತ್ತಲಾಗಿದ್ದ ಆಕೆ ತೊಡೆಮೇಲೆ ಮಲಗಿಸಿಕೊಂಡು ಉದ್ರೇಕದ ತನ್ನ ಮೊಲೆಯನ್ನು ಅವನ ಬಾಯಿಗೆ ಒತ್ತಿ ತುಂಬಿದಳು. ಉದ್ವೇಗದಿಂದ ಏರಿಳಿದ ಅವಳ ದೇಹದ ನೆರಳು ಗೋಡೆಯ ಮೇಲೆ ಆಡುತ್ತಿತ್ತು. ಚಿಕ್ಕಪ್ಪ ನಿಜವಾಗಿ ಹಾಲು ಕುಡಿಯುತ್ತಿದ್ದನೊ, ರತಿ ಅಮಲನ್ನು ಭ್ರಮಿಸುತ್ತಿದ್ದನೊ, ಗೊತ್ತಾಗುತ್ತಿರಲಿಲ್ಲ. ಅವನನ್ನು ಮೇಲೆ ಮಲಗಿಸಿಕೊ ಎಂದು ಅಜ್ಜಿ ಸೂಚನೆ ಕೊಡುತ್ತಿದ್ದಳು. ಊಹುಂ, ನಾನು ಮೊಲೆ ಬಿಟ್ಟು ಮೇಲೇಳಲಾರೆ ಎಂಬಂತೆ ಚಿಕ್ಕಪ್ಪ ಈಗವಳನ್ನು ಕಚ್ಚಿಕೊಂಡಿದ್ದ. ವೆಂಕಟಲಕ್ಷ್ಮಿಗೆ ಇವನನ್ನು ಪುರುಷನನ್ನಾಗಿಸಿಯೇ ರತಿ ರಾತ್ರಿಯನ್ನು ಪೂರ್ಣಗೊಳಿಸಬೇಕು ಎಂಬ ಹಠ ಬಂದಂತೆ ಕಾಣುತ್ತಿತ್ತು. ಚಿಕ್ಕಪ್ಪನನ್ನು ಹೊಸಗಾದಿಯ ಮೇಲೆ ಮಲಗಿಸಿದಳು. ಬೆವೆತು ತೋಯುತ್ತಿದ್ದಳು. ಯವ್ವನದ ಅವಳ ಆ ಕಂಪು ಕೊಠಡಿಯನ್ನು ಈಗ ತುಂಬಿಕೊಂಡಿತ್ತು. ಚಿಕ್ಕಪ್ಪನ ಮೇಲೆ ಮಲಗಿ ಅವನ ದೇಹದ ಇಂಚಿಂಚನ್ನೂ ಆವರಿಸಿ, ಹಿಂಡಿ ಹಿಚುಕಿ ಅಪ್ಪಿ ಬಿಗಿದಷ್ಟು ನುಲಿದು, ಅವನ ದೇಹದ ಯಾವುದೊ ಮೂಲೆಯಲ್ಲಿ ಇದ್ದ ಒಂದಿಷ್ಟು ರತಿ ಬೆವರ ಸುರಿಸಿ ಅಂಗಾಂಗಗಳಿಗೆ ಅಮಲು ತುರುಕಿ ಉದ್ರೇಕದಿಂದ ಚಿಮ್ಮುವಂತೆ ಮಾಡಿದ್ದಳು. ಹಿರಿಯಜ್ಜಿ ಗೆದ್ದಂತೆ ನಿಟ್ಟುಸಿರುಬಿಟ್ಟಿದ್ದಳು. ಆಮೇಲೆ ಚಿಕ್ಕಪ್ಪನನ್ನು ತೊಟ್ಟಿಲಿಗಿಟ್ಟು ತೂಗುತ್ತಿದ್ದಂತೆಯೇ ಆತ ಗೊರಕೆ ಹೊಡೆಯಲಾರಂಭಿಸಿದ್ದೆ. ಆಚರಣೆಯ ಕೊನೆಯ ಸುತ್ತು ಇನ್ನೂ ಮುಗಿದಿರಲಿಲ್ಲ. ವೆಂಕಟಲಕ್ಷ್ಮಿಯನ್ನು ಎತ್ತಿಕೊಂಡು ಅದೇ ತೊಟ್ಟಿಲಿಗೆ ಮಲಗಿಸಿ ಅವಳ ಕಿಬ್ಬೊಟ್ಟೆ ಮೇಲೆ ಅಷ್ಟೂ ಹೊತ್ತು ಮುಖವಿಟ್ಟು ಮುದ್ದು ಮಾಡಿ ತೂಗಬೇಕಿದ್ದನ್ನು ಆತ ಪೂರೈಸಲಾಗಿರಲಿಲ್ಲ. ಇನ್ನೂ ಕೊನೆಯಲ್ಲಿ ಹಿರಿಯಜ್ಜಿಯಿಂದ ಸತಿಪತಿಗಳಿಬ್ಬರೂ ಅಪ್ಪಿಕೊಂಡು ಕುಳಿತು ತೊಟ್ಟಿಲು ತೂಗಿಸಿಕೊಳ್ಳಬೇಕಾದ್ದನ್ನು ಮಾಡಲೂ ಆಗಿರಲಿಲ್ಲ.
ಅಂತೂ ವೆಂಕಟಲಕ್ಷ್ಮಿಯು ತನ್ನ ಸ್ವಸಾಮರ್ಥ್ಯದಿಂದಲೊ, ಅಜ್ಜಿಯರ ಮುದ್ದಿನಿಂದಲೊ, ರತಿ ರಾತ್ರಿಯ ಮೊದಲ ಆ ಮುದ್ದಿನಿಂದಲೊ, ಗರ್ಭ ಧರಿಸಿ ಅಶ್ವಿನಿಯನ್ನು ಎತ್ತಿ ಅದೇ ತೊಟ್ಟಿಲಿಗೆ ಹಾಕಿ ಅದನ್ನು ತೂಗುವಾಗ ಬದುಕು ಇದೆಷ್ಟೆಯಾ ಎಂದು ವ್ಯಾಕುಲಗೊಂಡಿದ್ದಳು. ರೇಡಿಯೊ ಚಿಕ್ಕಪ್ಪ ಅದೇ ಹಿತ್ತಲ ಬೇವಿನ ಮರದ ದೊಡ್ಡ ತೂಗುಯ್ಯಾಲೆಯ ಲೀಲೆಯಲ್ಲಿ ಆಕಾಶದ ಕಡೆ ನೆಟ್ಟ ನೋಟವನ್ನು ಬಾಣದಂತೆ ಬಿಡುತ್ತಾ ಸೂರ್ಯನನ್ನು ಮುಳುಗಿಸಿದ್ದ. ತಾತನ ಕಾಲದ ತೋಟ ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದ ಜೀತದವರೆಲ್ಲಾ ಚಿಕ್ಕಪ್ಪನನ್ನು ಕಂಡು ಹೆದರುತ್ತಿದ್ದರು. ಅವನ ಮೈಮೇಲೆ ಯಾವತ್ತೂ ಅನಾದಿ ದೆವ್ವಗಳು ಸೇರಿಕೊಂಡಿರುತ್ತವೆಂದು ಕೆಲಸ ಮಾಡುವಾಗ ಮಾತನಾಡಿಕೊಳ್ಳುತ್ತಿದ್ದರು. ತುಂಬಿ ತುಳುಕುತ್ತಿದ್ದ ಆ ಮನೆಯಲ್ಲಿ ಯಾವುದಕ್ಕೂ ಕೊರತೆಯಿರದಿದ್ದರೂ ಅವರವರ ಎಂತೆಂತದೋ ಹಸಿವು ಒಬ್ಬೊಬ್ಬರನ್ನೂ ಬಾಧಿಸುತ್ತಿತ್ತು. ಇಂದಲ್ಲಾ ನಾಳೆ ಈ ಜೀತದವರೆಲ್ಲಾ ಸೇರಿಕೊಂಡು ಮನೆತನದ ಎಲ್ಲಾ ಆಸ್ತಿಯನ್ನೂ ಕಿತ್ತುಕೊಂಡು ಕೈಗೆ ಭಿಕ್ಷಾಪಾತ್ರೆಯನ್ನು ಕೊಟ್ಟು ಕಳಿಸುವುದು ನಿಶ್ಚಿತ ಎಂದು ಹಿರಿಯಜ್ಜಿ ಯಾವಗಲೊ ಒಮ್ಮೆ ತನ್ನ ಏಕಾಂತದಲ್ಲಿ ಪೈಶಾಚಿಕ ಭಾಷೆಯನ್ನು ಆಡುವಾಗ ಹೇಳುತ್ತಿದ್ದಳೆಂದು ಕಿರಿ ಅಜ್ಜಿ ಹೇಳಿದಂತೆ ನೆನಪು. ಅಜ್ಜಿಯರಿಗೆ ಯಾವಾಗಲೊ ಚಿಕ್ಕವರಾಗಿದ್ದ ನಮ್ಮದೇ ಚಿಂತೆ ಕಾಡುತ್ತಿತ್ತು. ಅಜ್ಜಿಯರ ತಾಯಾಳಿಕೆಯೂ ಮನೆಯಲ್ಲಿ ಕೈ ಜಾರುತ್ತಾ ಇದ್ದ ಗಂಡಸರ ವ್ಯವಹಾರಗಳೂ ಕಲಸಿ ಹೋಗುತ್ತಿದ್ದವು.
ಹಳೆಯದನ್ನೆಲ್ಲ ನೆನೆದರೆ ನನ್ನ ಧಮನಿಗಳು ಬಿರಿದು ಹೋಗುತ್ತವೆ. ಕಾಲಾಂತರದಿಂದಲೂ ಸುಖದ ಸುಗ್ಗಿಯಲ್ಲಿ ತೇಲಿದ್ದ ನಮ್ಮ ಮನೆತನವು ಕಾಲದ ಎಚ್ಚರವೇ ಇಲ್ಲದೆ ಎಲ್ಲವೂ ಹೀಗೆಯೇ ಅಂದವಾಗಿ ಮುಗ್ಧವಾಗಿ ಸುಖದ ಸವಿ ಬೆಳದಿಂಗಳಂತೆ ಶಾಶ್ವತವಾಗಿ ಸಾಗುತ್ತದೆಂದು ನಂಬಿದ್ದರು. ಮನೆಯೊಳಗಿದ್ದ ಅಜ್ಜಿಯರಿಗೆ ಹೊರ ಜಗತ್ತಿನ ಯಾವ ಬದಲಾವಣೆಯೂ ತಿಳಿಯುತ್ತಿರಲಿಲ್ಲ. ಅವರು ಅವರವರ ಮೋಹದ ರಮ್ಯಗಾನದ ಕತೆಗಳ ಪ್ರಾಣಪಕ್ಷಿಯ ತೊಟ್ಟಿಲಲ್ಲಿ ಜೋಗುಳವನ್ನು ಮಾತ್ರವೇ ಆಡುತ್ತಾ, ಕೇಳುತ್ತಾ, ಕಲ್ಪನೆಯ ರೆಕ್ಕೆ ಮೇಲೆ ಕೂತು ಅಕಾಶದಲ್ಲೆಲ್ಲ ಸಂಚರಿಸಿ ಮುದ್ದು ಮೊಮ್ಮಗಳು ಅಶ್ವಿನಿಯ ನಗೆಯಲ್ಲಿ ತೇಲಿಹೋಗಿದ್ದರು. ಹಿಂದಿನಿಂದಲೂ ಒದಗಿ ಬಂದಿದ್ದ ಅಷ್ಟೆಲ್ಲಾ ಆಸ್ತಿಯ ಒಕ್ಕಲುತನವನ್ನೆಲ್ಲ ಜೀತಗಾರರು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದೂ ಕೂಡ ಅವರಿಗೆ ತಿಳಿಯುತ್ತಿರಲಿಲ್ಲ. ಆದರೂ ಹಿರಿಯಜ್ಜಿ ಏನೇನೊ ಅಪಶಕುನ ಹೊಳೆಯುತ್ತಿದೆ ಎಂದಾಗಲೆಲ್ಲಾ ಮನೆಯ ಗಂಡಸರು ಆಕೆಯ ಬಾಯಿ ಮುಚ್ಚಿಸುವಂತೆ ಗಡಬಡ ಮಾತನಾಡುತ್ತಿದ್ದರು. ಆಗೆಲ್ಲಾ ವೆಂಕಟಲಕ್ಷ್ಮಿಯು ತನ್ನ ಏಕಮಾತ್ರ ಪುತ್ರಿ ಅಶ್ವಿನಿಯನ್ನು ತೊಡೆ ಮೇಲೆ ಹಾಕಿಕೊಂಡು ಹಜಾರದ ಕಂಬಕ್ಕೆ ಒರಗಿಕೊಂಡು ಏನನ್ನೋ ಲೆಕ್ಕಿಸುತ್ತಿದ್ದಳು.
ಅತ್ತ ಆ ನಿಷ್ಠುರಣಿ ಕಾಲವು ಎಲ್ಲಾ ಲೆಕ್ಕವ ತೂಗಿ ನಮ್ಮೆಲ್ಲರನ್ನೂ ತೂಗಿದ್ದ ಪ್ರಾಣದ ತೊಟ್ಟಿಲ ಹಗ್ಗವನ್ನೂ ಸವೆಸಿ ಜಗ್ಗಿ ಎಳೆದು ತುಂಡುಮಾಡಿ ಹೊಕ್ಕಳುಬಳ್ಳಿಯ ಬಂಧನವನ್ನು ಕಿತ್ತುಹಾಕಿತ್ತು. ಮನೆತನದ ಕೆಲಸಗಾರರು ಯಾಕೋ ಜರೂರತ್ತಿನಿಂದ ಓಡಾಡುತ್ತಿದ್ದರು. ಹಿರಿಯಜ್ಜಿಯ ಮಾತಿಗೆ ಅವರು ಗೇಲಿಯ ಉತ್ತರ ಕೊಟ್ಟು, ಮೀಸೆ ಬಿಡದಿದ್ದ ಅವರು ದಪ್ಪ ಮೀಸೆ ಬಿಟ್ಟು, ಕಾಲದ ತಲೆ ಮೇಲೆ ಕೂತಂತೆ ನೋಡುತ್ತಿದ್ದರು. ಏನೋ ಸರಕಾರ ಅವರ ಪರವಾಗಿ ಎಂತದೊ ಕಾನೂನು ತಂದಿದೆ ಎಂಬ ವಿಷಯ ಸ್ವತಃ ನಮ್ಮ ಮನೆಯ ಯಾರಿಗೂ ಗೊತ್ತಾಗದೆ ಜೀತದವರನ್ನೇ `ಅದೆಂತದ್ರೊ ನಿಮ್ಮ ಕಾನೂನು’ ಎಂದು ಕೇಳಿದ್ದರು. ಕಿರಿಯಜ್ಜಿ ಆ ಕಾನೂನನ್ನು ಕೇಳಿದ ಕೂಡಲೇ ಬೆಂಕಿಯಾಗಿ `ಅದು ಎಂದೆಂದಿಗೂ ಅಸಾಧ್ಯವಾದ ಮಾತು. ನನ್ನ ಜೀವ ಇರೋತನಕ ಅದು ನಡಿಯೊ ಆಗಿಲ್ಲ. ನಾನಂತೂ ಯಾವ ಹಮ್ಮೀರ ಸರದಾರ ಬಂದರೂ ಈ ಜೀತದವರಿಗೆ ಭೂಮಿ ಬಿಟ್ಟುಕೊಡುವುದಿಲ್ಲ’ ಎಂದು ರಂಪ ಮಾಡಿ ನಾಳೆಯಿಂದ ಯಾವ ಕೆಲಸದವನೂ ನಮ್ಮ ಬಳಿ ಬರುವಂತಿಲ್ಲ. ಬಂದದ್ದೇ ಆದರೆ ಅವರ ರಕ್ತ ಕುಡಿದುಬಿಡುತ್ತೇನೆ ಎಂದು ಆ ರಾತ್ರಿಯೆಲ್ಲಾ ರಗಳೆ ಮಾಡಿದ್ದಳು.
ಇದಾದ ಕೆಲವೇ ದಿನಗಳಲ್ಲಿ ಅಂತಹ ಪ್ರಾಣ ಪಕ್ಷಿಯ ವಿಶ್ವಾಸದ ತೊಟ್ಟಿಲು ಕೂಡ ನಮ್ಮನ್ನು ಕಾಯಲಾರದೇ ಹೋಯಿತು. ಹಿರಿಯಜ್ಜಿ ಕಾನೂನಿನ ಸುದ್ದಿ ತಿಳಿದ ಕ್ಷಣದಿಂದ ಅನ್ನಾಹಾರ ಬಿಟ್ಟು ಯಾರನ್ನೂ ನೋಡದೆ ಮಾತನಾಡಿಸದೆ ತೊಟ್ಟಿಲನ್ನು ಹಿಡಿದು ಅದರ ಮೇಲೆ ತಲೆಯಿಟ್ಟು ಯಾವತ್ತಿನಂತೆಯೇ ತನ್ನ ಪೈಶಾಚಿಕ ಭಾಷೆಯಲ್ಲಿ ಮನೆತನವನ್ನು ಕಾಯುವ ನುಡಿಗಳನ್ನು ಮಣಿ ಮಣಿಸುತ್ತಾ ಅಲ್ಲೇ ಐಕ್ಯವಾದಂತೆ ಬೇರುಬಿಟ್ಟಳು. ಊರ ತುಂಬ ಸರಕಾರದವರು ಬಂದು ಉಳುವವನೇ ಭೂ ಒಡೆಯ ಎಂದು ದಿಬ್ಬದ ಮನೆಯ ಎಲ್ಲ ಜಮೀನನ್ನು ಬಿಡಿಸಿ ಬಡವರಿಗೆ ಹಂಚಿಬಿಡುತ್ತಾರೆ ಎಂಬ ಸುದ್ದಿ ಹಬ್ಬಿ, ಆ ಜನರೆಲ್ಲ ಸಡಗರದಿಂದ ಓಡಾಡುತ್ತಿದ್ದರೆ ನಮ್ಮ ಮನೆಯ ಒಳಗೆ ದೀಪ ಹಚ್ಚುವುದಕ್ಕೂ ಮನಸ್ಸಾಗದೇ ಯಾವುದೊ ಮಹಾಕಮರಿಯ ಕತ್ತಲ ಪಾತಾಳಕ್ಕೆ ಬಿದ್ದಂತೆ ವದ್ದಾಡುತ್ತಿದ್ದೆವು. ನೂರಾರು ಬಗೆಯ ಭೀಕರ ಕತೆ ಕಟ್ಟಿ ಮನೆತನದ ಒಬ್ಬೊಬ್ಬರನ್ನೂ ಸರಪಳಿಯಲ್ಲಿ ಬಿಗಿದುಕೊಂಡು ಹೋಗಿ ಸರಕಾರದವರು ಗಲ್ಲಿಗೇರಿಸುತ್ತಾರೆ ಎಂದು ಗುಲ್ಲೆಬ್ಬಿಸಿದ ಮೇಲೆ ಇದ್ದ ಬಿದ್ದ ಗಂಡಸರೆಲ್ಲಾ ಅವಿತುಕೊಂಡರು. ಅಶ್ವಿನಿ ಅದಾವುದನ್ನೂ ಅರಿಯದೆ ನಾಳೆಯ ತನ್ನ ನಗುವ ಯಾರೂ ಕಸಿಯಲಾರರೆಂದು ಗಿಲಕೆ ಗೆಜ್ಜೆಯ ಕುಣಿಸುತ್ತಾ ಹಿರಿಯಜ್ಜಿಯ ಕಡೆ ನೋಡುತ್ತಿದ್ದಳು. ವೆಂಕಟಲಕ್ಷ್ಮಿ ಆಗಲೆ ಗಂಟು ಕಟ್ಟಿ ನಾಳೆಯ ಚಿಂತೆಯ ತಲೆಮೇಲೆ ಹೇರಿಕೊಂಡು ಗಟ್ಟಿಯಾಗಿ ಅಳಲಾರದೆ ಸುಮ್ಮನೆ ಕಂಬನಿ ಸುರಿಸುತ್ತಾ ರೇಡಿಯೊ ಹುಚ್ಚಿನ ಗಂಡನ ನೆನೆದು ವ್ಯಗ್ರತೆಯ ಅಸಹಾಯಕ ಸಂಕಟವನ್ನು ಹೊರಹಾಕಲಾರದೆ ನಾಳೆಯನ್ನು ಹುಡುಕುತ್ತಿದ್ದಳು. ಅಶ್ವಿನಿಯ ನಗೆಯಿಂದಾದರೂ ಹಿರಿಯಜ್ಜಿಯನ್ನು ಎಬ್ಬಿಸಬಹುದೆಂದು ಪ್ರಯತ್ನಿಸಿದರೂ ಆಕೆ ಎಚ್ಚರಗೊಂಡಿರಲಿಲ್ಲ.
ಜನ ಅನ್ನುತ್ತಿದ್ದಂತೆಯೇ ಸರಕಾರದ ಮಂದಿ ಪೇದೆಗಳ ಸಹಿತ ಮನೆಯ ಅಂಗಳಕ್ಕೆ ಬಂದೇಬಿಟ್ಟರು. ನಮ್ಮ ಹೊಲ ಗದ್ದೆ ತೋಟಗಳಲ್ಲಿ ನಿಯತ್ತಿನಿಂದ ದುಡಿಯುತ್ತಿದ್ದ ಆ ಜನರೆಲ್ಲ ನಮ್ಮ ವಿರುದ್ಧ ಕೂಗು ಹಾಕಿ ಆ ಕ್ಷಣದಲ್ಲೇ ಇಲ್ಲೇ ನಮ್ಮ ಎಲ್ಲರ ಜಮೀನನ್ನೂ ಬಿಟ್ಟುಕೊಡಬೇಕು ಎಂದು ಗದ್ದಲವೆಬ್ಬಿಸುತ್ತಿದ್ದರು. ಸರಕಾರದವರ ಜೊತೆ ಮಾತನಾಡಲು ನಮ್ಮ ಮನೆಯ ಯಾರೊಬ್ಬರೂ ತಯಾರಿರಲಿಲ್ಲ. ಎಲ್ಲರೂ ಸೋತು ಅಪರಾಧಿಗಳಂತೆ ಬಚ್ಚಿಟ್ಟುಕೊಂಡಿದ್ದರು. ನಾವು ಹುಡುಗರು ಅಟ್ಟ ಸೇರಿ ಕಿಂಡಿಗಳ ಮೂಲಕ ಎಲ್ಲವನ್ನೂ ಬೆದರಿದ ಕಂಗಳಿಂದ ದಿಟ್ಟಿಸುತ್ತಿದ್ದೆವು. ಪ್ರಾಯದ ಹೆಂಗಸರು ಅಡುಗೆಮನೆಯ ಕತ್ತಲೆಯಲ್ಲಿ ಸೆರಗು ಮುಚ್ಚಿಕೊಂಡು ಮರೆಯಾಗಿದ್ದರೆ, ಮುದುಕಿಯರು ಜೀವ ಬಿಡುವವರಂತೆ ಹಜಾರದಲ್ಲಿ ಬಿದ್ದುಕೊಂಡು ನರಳುತ್ತಿದ್ದರು. ಆಗಲೂ ಅಂತಹ ಮನೆತನದ ಅವಸಾನದ ಕಠೋರ ಸ್ಠಿತಿಯಲ್ಲೂ ರೇಡಿಯೊ ಚಿಕ್ಕಪ್ಪ ಜಗತ್ತಿನ ಯಾವುದೇ ಭಾಷೆಯ ಕರ್ಕಶ ಸದ್ದಿನ ಮಾತುಗಳನ್ನು ಹಾಕಿಕೊಂಡು ಮನೆಯ ಮಾಡಿಗೆ ಮುಖವಿಟ್ಟು ದಿಟ್ಟ ಚಿತ್ತದಿಂದ ಆಲಿಸುತ್ತಿದ್ದ. ಮೊಟ್ಟಮೊದಲನೆಯ ಬಾರಿಗೆ ಅವನ ಕಣ್ಣಲ್ಲಿ ನೀರು ಜಾರಲೊ ಬೇಡವೊ ಎಂಬಂತೆ ಹೊಯ್ದಾಡುತ್ತಿದ್ದವು. ಜನರೆಲ್ಲಾ ನಮ್ಮ ಜಮೀನನ್ನು ಬಿಟ್ಟುಕೊಡಿ ಎಂದು ಕೂಗಾಡುತ್ತಿದ್ದರೆ ಅಂಜದ ಆ ಅಶ್ವಿನಿಯು ವೆಂಕಟಲಕ್ಷ್ಮಿಯ ಕಂಬನಿಯನ್ನು ತನ್ನ ಬೆರಳ ತುದಿಗೆ ಅಂಟಿಸಿಕೊಂಡು ಬಾಯಿಗಿಟ್ಟು ಉಪ್ಪುಪ್ಪಾದ ರುಚಿಗೆ ಮುಖ ಕಿವುಚಿ ಆ ಜನರ ಕರ್ಕಶ ಆವೇಶವನ್ನು ತಾನು ಸಹಿಸಿಕೊಳ್ಳಬಲ್ಲೆ ಎಂಬಂತೆ ಉಸಿರಾಡುತ್ತಿದ್ದಳು.
ಕಾಲಾಂತರದಿಂದಲೂ ತಮಗಾದ ಅನ್ಯಾಯಕ್ಕೆ ಈ ಕ್ಷಣವೇ ನ್ಯಾಯ ಸಿಗಬೇಕು ಎಂಬ ಅವರ ಆಕ್ರೋಶದ ಕೂಗು ನಮ್ಮ ಮನೆಯನ್ನು ನುಂಗುತ್ತಿತ್ತು. ಹಿರಿಯಜ್ಜಿಯನ್ನು ಆ ಯಾವ ಗದ್ದಲವೂ ಎಬ್ಬಿಸಿರಲಿಲ್ಲ. ಸರಕಾರದ ಹಿರಿಯ ಅಧಿಕಾರಿಯೇ ಹೋಗಿ ರೇಡಿಯೊ ಚಿಕ್ಕಪ್ಪನ ರೆಟ್ಟೆ ಹಿಡಿದು ಅಲುಗಾಡಿಸಿದಾಗ, ಆತ ಬೆಚ್ಚಿ ಬಿದ್ದು ಏನು ಏನು ಎಂದು ಬಡಬಡಿಸಿದ್ದ. ಈ ಮನೆಯ ಎಲ್ಲಾ ಆಸ್ತಿಪಾಸ್ತಿಯ ಆಧಾರ ಪತ್ರಗಳು ಎಲ್ಲಿವೆ ಎನ್ನುತ್ತಿದ್ದಂತೆಯೇ ಆತ ಖಜಾನೆಯ ಕಡೆ ಕೈತೋರಿಸುತ್ತಿರಬೇಕಾದರೆ ಕಿರಿ ಅಜ್ಜಿಯು ಓಡಿ ಹೋಗಿ ಬೀಗ ತೆಗೆದು ಎಲ್ಲಾ ಅಧಾರ ಪತ್ರಗಳನ್ನೂ ತೆಗೆದುಕೊಂಡು ಹೋಗಿ ಯಾವತ್ತೂ ಉರಿಯುತ್ತಿದ್ದ ನೀರೊಲೆಗೆ ತುರುಕಿ ದಗದಗಿಸಿ ಬೆಂಕಿ ಮಾಡಿ ಬೂದಿ ಮಾಡಿಬಿಟ್ಟಳು. `ಹೇ ಮುದಿ ರಂಡೇ’ ಎಂದು ಅಧಿಕಾರಿಗಳು ತಡೆಯಲು ಹೋದರೂ ಪ್ರಯೋಜನವಾಗಿರಲಿಲ್ಲ. ಜನ ಕಿರಿ ಅಜ್ಜಿಯನ್ನು ಅದೇ ಒಲೆಗಿಕ್ಕಿ ಸುಟ್ಟುಬಿಡುತ್ತಾರೆಂದು ನಾವೆಲ್ಲ ಗಡಗಡ ನಡುಗುತ್ತಿರಬೇಕಾದರೆ ಹಾಗೇನೂ ಆಗದೆ ನೀವೇ ಆಸ್ತಿ ಪತ್ರ ಬರೆದುಕೊಡಿ ಎಂದು ಬರೆಸಿಕೊಂಡು ಅವರವರಿಗೆ ಸಲ್ಲಬೇಕಾದ ಭೂಮಿಯನ್ನು ಚಾವಡಿಯಲ್ಲಿ ಹಂಚಿಕೊಳ್ಳಲು ಕಿರಿಚಾಡುತ್ತಿದ್ದರು.
ಅವತ್ತು ನಿಜವಾಗಿಯೂ ಸೂರ್ಯ ಸತ್ತಂತೆ ಮುಳುಗಿದ್ದ, ನಕ್ಷತ್ರಗಳು ಅತ್ತಂತೆ ಕಣ್ಣು ಕೆಂಪು ಮಾಡಿಕೊಂಡು ಮಸುಕಾಗಿ ಆಕಾಶದಲ್ಲಿ ಅನಾಥರಂತೆ ಕಾಣಿಸಿಕೊಂಡಿದ್ದವು. ಜನ ತಮ್ಮ ಕೇರಿಗಳಲ್ಲಿ ತಮಟೆ ನಗಾರಿಗಳನ್ನು ಆಗಲೇ ಬಾರಿಸುತ್ತಾ ಹಿಂದೆಂದೂ ಇಲ್ಲದಷ್ಟು ಸಿರಿಯಿಂದ ಸಡಗರ ಪಡುತ್ತಿದ್ದರು. ಕಿರಿ ಅಜ್ಜಿ ಕುದಿಯುತ್ತಿದ್ದಳು. ಎಲ್ಲ ಹೆಂಗಸರೂ ತೊಟ್ಟಿಲ ಬಳಿ ಸುಷುಪ್ತಿಯಲ್ಲಿದ್ದ ಹಿರಿಯಜ್ಜಿಯ ಸುತ್ತ ಕುಳಿತು ಗೋಳಾಡಿ ಎದ್ದೇಳು ಎಂದರೂ ಆಕೆ ತಲೆ ಮೇಲೆತ್ತಿರಲಿಲ್ಲ. ಅವಳ ದೇಹದಲ್ಲಿ ಸೂಲು ಅನಾಥವಾಗಿ ಬಿಕ್ಕುತ್ತಿತ್ತು. ಜಮೀನು ಬಿಟ್ಟುಕೊಡದಿದ್ದರೆ ಗಲ್ಲಿಗೇರಿಸಲಾಗುತ್ತದೆ ಎಂಬ ಭೀತಿಯನ್ನು ಊರ ತುಂಬ ತಮಟೆ ನಗಾರಿಯಲ್ಲಿ ಬಾರಿಸಿ ಹರ್ಷೋದ್ಗಾರಗಳಿಂದ ಜನ ಕೇಕೆ ಹಾಕುತ್ತಿದ್ದರು. ಅವರ ಕಾಲಾಂತರದ ಭೂಮಿಯ ಕನಸು ಎಲ್ಲೆ ಮೀರಿ ಕುಣಿಯುತ್ತಿತ್ತು. ರೇಡಿಯೊ ಚಿಕ್ಕಪ್ಪ ಬೇವಿನ ಮರಕ್ಕೆ ನೇಣು ಹಾಕಿಕೊಂಡಂತೆ ಉಯ್ಯಾಲೆಯಲ್ಲಿ ಕುಳಿತು ಆ ಕತ್ತಲಲ್ಲೂ ಗದ್ದಲದಲ್ಲೂ ರೇಡಿತೊ ಕೇಳುತ್ತಾ ಎಲ್ಲೋ ಕರಗಿ ಹೋಗುತ್ತಿದ್ದ. ಜಮೀನೆಲ್ಲವೂ ತಮ್ಮದಾಗುವುದೆಂದು ಊರಮ್ಮನಿಗೆ ಪೂಜೆ ಮಾಡಿ ಬೀದಿಯಲ್ಲಿ ಮೆರವಣಿಗೆ ಹೊರಟು ನಮ್ಮ ಮನೆಯ ಮುಂದೆ ಅಬ್ಬರಿಸಿ ತಮಟೆ ನಗಾರಿ ಬಡಿದು ರಣ ಕಹಳೆ ಊದಿ ಗೆದ್ದಂತೆ ಕೂಗಾಡಿ ಕೋಳಿ ಕೂಗುವ ತನಕ ಅವರು ಮೆರೆಯುತ್ತಲೇ ಇದ್ದರು. ನೂರಾರು ಎಕರೆ ತೋಟವನ್ನು ಹಂಚಿಕೊಳ್ಳುವಲ್ಲಿ ಅವರಲ್ಲೇ ಕೆಲವರು ಆಗಲೇ ಕಚ್ಚಾಟಕ್ಕೂ ತೊಡಗಿ ತನ್ನ ಪಾಲು ಇಷ್ಟಿಷ್ಟು ಎಂದು ಗದ್ದಲಮಾಡಿಕೊಳ್ಳುತ್ತಿದ್ದರು. ಕಾಲಾಂತರದ ಅವರ ಹಸಿವಿನ ನ್ಯಾಯ ಅವರವರನ್ನೇ ಹಿಡಿದು ಅಲುಗಾಡಿಸುತ್ತಿತ್ತು. ಕೆಳಗಿನ ಕೇರಿಯವರ ಸಿರಿಸುಗ್ಗಿಗೆ ಆಕಾಶವೇ ಕಂಪಿಸುವಂತಿತ್ತು.
ಎಷ್ಟೋ ಹೊತ್ತಾದರೂ ನಮ್ಮ ಮನೆಯ ದಿಡ್ಡಿ ಬಾಗಿಲನ್ನು ತೆರೆಯಲು ನಮಗಾರಿಗೂ ಧೈರ್ಯವಿರಲಿಲ್ಲ. ಸರಕಾರಿ ಅಧಿಕಾರಿಗಳು ಹೊರಟ ಮೇಲೆ ನಮಗೆಲ್ಲ ಬೇರೊಂದು ಭೀತಿ ಆವರಿಸಿತ್ತು. ಕಾಲಾಂತರದಿಂದ ನಮ್ಮ ಸಂಪತ್ತನ್ನೆಲ್ಲ ಕೊಳ್ಳೆಹೊಡೆದು ತುಂಬಿಕೊಂಡಿದ್ದಾರೆಂದು ಅದನ್ನೆಲ್ಲ ಕಸಿದುಕೊಳ್ಳಲು ಜನರೆಲ್ಲ ಒಗ್ಗಟ್ಟಾಗಿ ಬಂದು ಮನೆ ಮೇಲೆ ಧಾಳಿ ಮಾಡುತ್ತಾರೆಂಬ ಸುದ್ದಿ ಅದೇ ಜೀತಗಾರನೊಬ್ಬನಿಂದ ತಿಳಿದು ನಮ್ಮ ಸಂಕಟಕ್ಕೆ ಕೊನೆಯೇ ಇರಲಿಲ್ಲ. ಯಾವ ಕ್ಷಣದಲ್ಲಿ ಅವರು ಬಂದು ಅತ್ಯಾಚಾರಗೈದು ಬೆಂಕಿ ಹಚ್ಚಿ ಎಲ್ಲರನ್ನೂ ಮುಗಿಸಿಬಿಡುವರೋ ಎಂದು ತತ್ತರಿಸುತ್ತಿದ್ದೆವು. ವೆಂಕಟಲಕ್ಷ್ಮಿಯು ಅಶ್ವಿನಿಯನ್ನು ಬೆನ್ನಿಗೆ ಕಟ್ಟಿಕೊಂಡು ಓಡಿ ಹೋಗಲು ತುದಿಗಾಲಲ್ಲಿ ನಿಂತಿದ್ದರೂ ಕಿರಿ ಅಜ್ಜಿ ತಡೆದು ಬೇಡ, ಬೇಡ, ಹೊರಗಡೆ ಅವರೆಲ್ಲ ಸೀಳು ನಾಯಿಯಂತೆ ಕಾದಿದ್ದಾರೆ. ನೀನು ಹೊರಗೋಡಿದ ಕೂಡಲೆ ಹರಿದು ತಿಂದುಹಾಕುವರೆಂದು ತಡೆಯುತ್ತಿದ್ದಳು. ನಿಜಕ್ಕೂ ಮನೆಯ ಹೊರಗೆ ಏನೇನೋ ಗದ್ದಲ ಕೇಳಿ ಬರುತ್ತಿತ್ತು. ಮೂರು ದಿನಗಳ ತನಕ ನಾವ್ಯಾರೂ ಹೊರಕ್ಕೆ ಬಂದಿರಲಿಲ್ಲ. ಜನ ದಿಡ್ಡಿ ಬಾಗಿಲ ಬಡಿದು ಸಾಕಾಗುತ್ತಿದ್ದರು. ಕುಡಿಯಲು ಗುಟುಕು ನೀರೂ ಸಿಗದೆ ನಾವೆಲ್ಲ ಸಾವಿನ ಭೀತಿಯಿಂದ ತತ್ತರಿಸಿ ಹೋಗಿದ್ದೆವು. ಆ ಪ್ರಾಣಪಕ್ಷಿಯ ತೊಟ್ಟಿಲು ನಮ್ಮನ್ನೆಲ್ಲ ಹೊತ್ತುಕೊಂಡು ಹೋದಂತೆ ಆ ಭೀತಿಯ ಮಂಪರು ನಿದ್ದೆಯಲ್ಲಿ ನಾನು ಕನಸು ಕಂಡು ಕಣ್ಣು ಬಿಟ್ಟರೆ ದೊಡ್ಡ ಗದ್ದಲದಿಂದ ಜನರೆಲ್ಲಾ ಸೇರಿ ದಿಡ್ಡಿ ಬಾಗಿಲನ್ನು ಮುರಿದು ಹಾಕುತ್ತಿದ್ದರು. ಹೆಂಗಸರು ಮಕ್ಕಳು ಅಳಲೂ ಶಕ್ತಿಯಿಲ್ಲದೆ ಒಂದೊಂದು ಬಿಲ ಸೇರಿಕೊಂಡಂತೆ ದೊಡ್ಡ ಮನೆಯ ಮೂಲೆಗಳಲ್ಲೊ, ಗುಡಾಣಗಳ ಸಾಲಿನಲ್ಲೊ ಅವಿತುಕೊಂಡಿದ್ದರು. ಅಟ್ಟದ ಮೇಲೆ ನಾವು ಸಣ್ಣವರು ಗೊಳೋ ಎಂದು ಆಕಾಶವನ್ನು ಆರ್ತವಾಗಿ ಕರೆಯುತ್ತಿದ್ದೆವು. ಕಿರಿಯಜ್ಜಿ ತಾತನ ಕಾಲದ ತುಕ್ಕು ಹಿಡಿದ ಉದ್ದ ಕತ್ತಿಯೊಂದನ್ನು ಹಿಡಿದು ಬಾಗಿಲ ಬಳಿ ನಿಂತು ಹುಚ್ಚಿಯಂತೆ ಕೂಗಾಡುತ್ತಿದ್ದಳು. ಹೊರಗಿನ ನಡುರಾತ್ರಿಯ ಕತ್ತಲು ಪೂತ್ಕರಿಸುತ್ತಿತ್ತು. ಆಗಲೂ ಹಿರಿಯಜ್ಜಿ ತೊಟ್ಟಿಲು ಬಿಟ್ಟು ಮೇಲೆದ್ದಿರಲಿಲ್ಲ. ವೆಂಕಟಲಕ್ಷ್ಮಿ ಕಚ್ಚೆ ಹಾಕಿ ಬೆನ್ನಿಗೆ ಬಲವಾಗಿ ಅಶ್ವಿನಿಯನ್ನು ಬಿಗಿದುಕೊಂಡು ಉದ್ವೇಗವನ್ನು ತಡೆಯಲಾರದೆ ಕಂಪಿಸುತ್ತಾ ಕೂಗಿಕೊಳ್ಳುತ್ತಿದ್ದರೆ ಅದೇ ರೇಡಿಯೊ ಚಿಕ್ಕಪ್ಪ ಹಜಾರದಲ್ಲಿ ಒಬ್ಬನೇ ನಿಂತು ಕಿವಿಗೆ ರೇಡೊಯೊ ಇಟ್ಟುಕೊಂಡು ಅವಕಾಶದ ಕೊನೆಯ ಕ್ಷಣವನ್ನು ಎದುರು ನೋಡುತ್ತಿದ್ದ.
ಕಿರಿ ಅಜ್ಜಿ ನೀರೊಲೆಗೆ ಹಾಕಿ ಸುಟ್ಟದ್ದು ನಿಜವಾದ ಹಕ್ಕು ಪತ್ರಗಳಲ್ಲವೆಂತಲೂ ಆಸ್ತಿ ಪತ್ರದ ಪತ್ರಗಳು ಇನ್ನೊಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿವೆಯೆಂದೂ ಯಾರೊ ಹೇಳಲಾಗಿ ಅವನ್ನು ಕಿತ್ತುಕೊಂಡು ಲೂಟಿ ಮಾಡಲು ಕೆಲಸದವರೆಲ್ಲಾ ಹುಚ್ಚಾಗಿ ಆ ನಡುರಾತ್ರಿಯಲ್ಲಿ ಬಂದು ದಂಗೆಯೆದ್ದಿದ್ದರು. ನಾನು ಅಟ್ಟದ ಮೂಲೆಗೆ ಹೋಗಿ ಹೆಂಚುಗಳನ್ನು ಸರಿಸಿ ಹೊರಗನ್ನು ನೋಡಿದ ಕೂಡಲೆ ಬಳಬಳನೆ ಉಚ್ಚೆ ಹೊಯ್ದುಕೊಂಡೆ. ಒಬ್ಬೊಬ್ಬರೂ ಪಂಜಿನಂತೆ ಉರಿಯುತ್ತಿದ್ದರು. ಬೆಂಕಿಯ ಅವರ ಕೆನ್ನಾಲಿಗೆ ಮನೆಯನ್ನು ನುಂಗುತ್ತಿತ್ತು. ಅವರು ಬಾಗಿಲನ್ನು ಮುರಿದು ಒಳಕ್ಕೆ ಬಂದೇಬಿಟ್ಟರು. ಮಹಾಕಾಳಿಂಗ ಸರ್ಪದಂತೆ ನುಗ್ಗಿ ಕಿರಿಯಜ್ಜಿಯನ್ನು ಸುತ್ತಿಕೊಂಡರು. ಅವಳು ತುಕ್ಕಿ ಹಿಡದ ಕತ್ತಿಯಿಂದ ಒಂದಿಬ್ಬರನ್ನು ತಿವಿದಳಾದರೂ ಅವರಿಗೇನೂ ಆಗದೆ, `ಮುಂಡೇ ನಿನ್ನ ಕೊಬ್ಬು ಇನ್ನೂ ಕರಗಿಲ್ಲವೇ’ ಎಂದು ಪಂಜಿನ ತುದಿಯಿಂದ ಬಡಿದರು. ಒಬ್ಬೊಬ್ಬರೂ ಕೈಗೆ ಸಿಕ್ಕಿದ್ದನ್ನು ದೋಚಿದರು. ಯಾರೊ ರೇಡಿಯೊ ಚಿಕ್ಕಪ್ಪನ ರೇಡಿಯೊವನ್ನು ಬಲವಂತವಾಗಿ ಹೊಡೆದು ಕಸಿಯುತ್ತಿದ್ದರೂ ಅದನ್ನಾತ ತನ್ನ ಪ್ರಾಣವೆಂಬಂತೆ ಬಿಡದೆ ಬಿದ್ದುಕೊಂಡು ಎದೆಗೆ ಅವುಚಿಕೊಂಡು ಆಗಲೂ ಅದರ ಕರ್ಕಶ ಶಬ್ಧವನ್ನು ಕಿವಿಗೆ ಒತ್ತಿಕೊಂಡು ನಾನು ಇದನ್ನು ಕೊಡಲಾರೆ ಎಂದು ಅಂಗಲಾಚಿ ಬೇಡುತ್ತಿದ್ದ. ಆಕ್ರೋಶದ ಜನ ಧಾನ್ಯದ ಮೂಟೆಗಳನ್ನು ಹೊತ್ತು ಸಾಗುತ್ತಿದ್ದರೆ ಕಾಲಾಂತರದ ಹತಾರು ಗುಡಾಣಗಳನ್ನು ಹೊಡೆದುರುಳಿಸಿ ಅವುಗಳನ್ನು ಬಚ್ಚಿಟ್ಟಿದ್ದ ಏನೇನನ್ನೋ ಅತ್ಯಂತ ಆನಂದದಿಂದ ಬಾಚಿಕೊಂಡು ಓಡಿ ಹೋಗುತ್ತಿದ್ದರು. ಕಬ್ಬಿಣದ ಪೆಟ್ಟಿಗೆಯನ್ನು ಕೊಡಲಿಯಿಂದ ಸೀಳಿ ನಗ ನಾಣ್ಯ ಒಡವೆಯನ್ನೆಲ್ಲ ದೋಚುತ್ತಾ ಮನೆಯ ಇಂಚಿಂಚನ್ನೂ ಹುಡುಕುತ್ತಿದ್ದರು.ಅಟ್ಟದ ಮೇಲೆ ನಾವೆಲ್ಲ ಹುಡುಗರು ಇಲಿ ಮರಿಗಳಂತೆ ಪ್ರಾಣ ಉಳಿಸಿಕೊಳ್ಳಲು ತತ್ತರಿಸುತ್ತಿದ್ದೆವು. ಮನೆಯ ತುಂಬ ಆಗಲೆ ಬೆಂಕಿಯ ಹೊಗೆ ವ್ಯಾಪಿಸುತ್ತಿತ್ತು. ಪಂಜು ಹಿಡಿದು ಒಳಕ್ಕೆ ನುಗ್ಗಿದವರು ವಿಕಾರವಾಗಿ ನಾಲಿಗೆಯನ್ನು ಚಾಚುತ್ತಿದ್ದರು. ವೆಂಕಟಲಕ್ಷ್ಮಿಯು ಅದಾವ ಮಾಯೆಯಲ್ಲೊಮಿಂಚಿನಂತೆ ಮಾಯವಾಗಿದ್ದಳು. ದಿಡ್ಡಿ ಬಾಗಿಲ ಬಳಿ ಕಿರಿ ಅಜ್ಜಿ ಬೆಂಕಿ ತಗುಲಿ ವಿಲವಿಲ ಒದ್ದಾಡಿ ಸುಟ್ಟುಹೋಗಿದ್ದಳು. ಹಜಾರದ ಗೋಡೆ ಸಾಲಿನಲ್ಲಿದ್ದ ಭತ್ತ, ರಾಗಿ ಕಾಳಿನ ಮೂಟೆಗಳಿಗೆ ಬೆಂಕಿ ತಗುಲಿ ಅವು ಉರಿಯಲಾರಂಭಿಸಿದ್ದವು. ನಾನು ಅಟ್ಟದ ಹೆಂಚಿನ ಸಂದುಗಳನ್ನು ಹೇಗೋ ಮುರಿದು ಜಾರಿ ಜೊತೆಗಿದ್ದವರನ್ನು ಕರೆದುಕೊಂಡು ತಪ್ಪಿಸಿಕೊಳ್ಳಲು ಹೆಣಗಾಡಿದ್ದೆ. ಹಿರಿಯಜ್ಜಿಯ ಬಳಿ ಉಳಿದಿದ್ದ ಹೆಂಗಸರು ಸುತ್ತುವರಿದು ಆ ತೊಟ್ಟಿಲಿಗೆ ಏನೂ ಮಾಡಬೇಡಿ ಏನನ್ನಾದರೂ ಕಿತ್ತುಕೊಳ್ಳಿ, ಇದನ್ನು ಮಾತ್ರ ಕಸಿದುಕೊಳ್ಳಬೇಡಿ ಎಂದು ಬೇಡುತ್ತಿದ್ದರು. ಯಾವನೊ ಒಬ್ಬ ಕಿಡಿಗೇಡಿ ತೊಟ್ಟಿಲ ಹಗ್ಗವನ್ನು ಕಿತ್ತುಹಾಕಿದ. ಹಿರಿ ಅಜ್ಜಿ ತೊಟ್ಟಿಲ ಸಹಿತ ಬಿದ್ದು ಹಾಗೇ ಒರಗಿದಳಾದರೂ ಆ ತೊಟ್ಟಿಲಿನಿಂದ ನನ್ನು ಬೇರೆ ಮಾಡಬೇಡಿ, ಬೇಕಾದರೆ ಇದರ ಜೊತೆಗೇ ನನ್ನನ್ನು ಸುಟ್ಟು ಬಿಡಿ ಎಂದು ಕ್ಷೀಣ ದನಿಯಲ್ಲಿ ಹೇಳುತ್ತಿದ್ದಳು.
*****