ಸೆರೆ

ಹೊನ್ನಪ್ಪಾಚಾರಿಯ ಮನೆಗೆ ಹೋಗಿ, ಒಂದು ಸಂಜೆಯ ಮಟ್ಟಿಗೆ ಸ್ವಲ್ಪ ಕರಗಸ ಬೇಕಾಗಿತ್ತು ಎಂದು ಹೇಳಿ, ಪಡಕೊಂಡು, ಹಾಗೇ ಏಕನಾಥ ಶಟ್ಟಿಯ ಅಂಗಡಿಯಲ್ಲಿ ಪಾವುಸೇರು ಮೊಳೆಗಳನ್ನು ಕೊಂಡು ಆ ಹಳೆ ಮನೆಯನ್ನು ತಲುಪುವುದರೊಳಗೆ ಹೊತ್ತು ಕಂತಲಿಕ್ಕೆ ಬಂದಿತ್ತು. ಮನೆಯಲ್ಲಂದು ಪಿತೃಪಕ್ಷ; ಊಟಕ್ಕೆ ತಡವಾಗಿತ್ತು. ಊಟ ಮುಗಿದದ್ದೇ ಭಟ್ಟರಿಂದ ಮಂತ್ರಾಕ್ಷತೆ, ಆಶೀರ್ವಾದ ಪಡೆದು, ತಲೆ ನೋಯುತ್ತದೆ ಎಂದು ಕೋಣೆಯನ್ನು ಸೇರಿ, ಮಂಚದ ಮೇಲೆ ಅಡ್ಡವಾದವನ ಕಿವಿಯಲ್ಲಿ ಭಟ್ಟರೊಂದಿಗೆ ಅಮ್ಮ ಬಿಚ್ಚಿದ ತನ್ನ ಮದುವೆಯ ಪುರಾಣ ಬಿದ್ದದ್ದೇ ಕಿಡಿಕಿಡಿಯಾದ. ಥತ್ ಇವರ! ಅಮ್ಮನಿಗೆ ಬುದ್ಧಿಯಿಲ್ಲ. ಈ ಪುರೋಹಿತ ಭಟ್ಟನಿಗೆ ಬೇರೆ ಧಂದೆಯಿಲ್ಲ ಎಂದುಕೊಂಡವನೇ ಮಂಚದಿಂದ ಎದ್ದು ಹೊರಗೆ ಹೋಗುವ ಉಡುಪು ಮಾಡಹತ್ತಿದ. ತಾಯಿ, “ಎಲ್ಲಿಗೆ ಹೊರಟೆಯೋ?” ಎಂದು ಕೇಳಿದಾಗ, ಹಳೇ ಮನೆಗೆ ಹೋಗಿಬರುತೇನಮ್ಮಾ, ಎಂದ.
“ಅಡಿಗೆಮನೆಯ ಬಾಗಿಲ ದೂಡಿ ಮೊನ್ನೆ ದನ ಒಳಹೊಕ್ಕಿತಂತೆ. ಆ ಹೊನ್ನಪ್ಪಾಚಾರಿಗೆ ಹೇಳಿ ವ್ಯವಸ್ಥೆ ಮಾಡುತ್ತೇನೆ ಎಂದಿದ್ದೆಯಲ್ಲ?”
“ಅದಕ್ಕೇ ಹೊರಟೆ. ಹೊನ್ನಪ್ಪಾಚಾರಿಗೆ ಪುರಸತ್ತಿಲ್ಲವಂತೆ. ನಾನೇ ಹೋಗಿ ಏನು ಮಾಡಲಾಗುತ್ತದೋ ನೋಡುತ್ತೇನೆ.”
“ಇಷ್ಟು ಹೊತ್ತು ಮಾಡಿ ಒಬ್ಬನೇ ಹೋಗುತ್ತೀಯಾ?” ಎಂದುದನ್ನು ಪೂರ ಕಿವಿಯ ಮೇಲೆ ಹಾಕಿಕೊಳ್ಳುವ ಮೊದಲೇ ಜಗಲಿ ಇಳಿದ. ಆದರೆ ಅಂಗಳ ದಾಟುವ ಮೊದಲು, “ಹೋದ ವಾರ ನಮ್ಮ ಹಳೇ ಮನೆಯ ಹಿತ್ತಲ ಮೂಲೆಯಲ್ಲಿಯ ಬಿದಿರಿನ ಹಿಂಡಿನಲ್ಲಿ ಹಾವು ಹೊಕ್ಕಿದ್ದು ಕಂಡಿತಂತೆ ಭಟ್ಟರೇ”, ಎಂದು ಅಮ್ಮ ತೆಗೆದ ಕಾತರದ ರಾಗ ಮಾತ್ರ ಕೇಳಿಸದೆ ಇರಲ್ಲಿಲ್ಲ. . . .
ಹಳೆ ಮನೆಯ ಹಿತ್ತಲಲ್ಲಿ ಕಾಲಿಟ್ಟದ್ದೇ, ಧುತ್ ಎಂದು ಕಣ್ಣಿಗೆ ಬಿದ್ದವಳು ಶಂಕರರಾಯರ ಮನೆಯ ಕೆಲಸದ ಹುಡುಗಿ-ದೇವಿ. ಅಂಗಳದಲ್ಲಿ ಬಿದ್ದ
ಮಾವಿನ ಮರದ ಜಿಗ್ಗುಗಳನ್ನು ಹೆಕ್ಕುತ್ತಿದ್ದವಳು ಇವನ ಹೆಜ್ಜೆಯ ಸದ್ದು ಕೇಳಿದ್ದೇ ತಲೆಯನ್ನೆತ್ತಿ ನೋಡಿ, “ಓ””! ಬರ್ಮಚಾರೀ ಒಡೆದೀರು”? ಎನ್ನುತ್ತ ತುಂಟವಾಗಿ ನಕ್ಕಳು. ಬೆತ್ತಲೆ ಎದೆಯಿಂದ ಬದಿಗೆ ಸರಿದ ಸೀರೆಯ ಸೆರಗನ್ನು ಸರಿಪಡಿಸಿಕೊಳ್ಳುತ್ತ, ನಾಚುತ್ತ, “ಅದೇನು ಇಷ್ಟು ಸಂಜೆಮಾಡಿ ಬಂದಿರಿ ಒಡೆಯ-ಒಬ್ಬರೆ?” ಎಂದು ಕೇಳಿದಳು. ಬೇಡ ಬೇಡವೆಂದರೂ ಕಣ್ಣಿಗೆ ಬಿದ್ದ ದೇವಿಯ ಬೆತ್ತಲೆ ಮೊಲೆಗಳಿಂದ ಗೊಂದಲಿಸಿದವನು, ಅವಳನ್ನು ಮಾತನಾಡಿಸದೇ, ಲಗುಬಗೆಯಿಂದ ಮನೆಯ ಮೆಟ್ಟಿಲು ಏರಿದ. ಹೊರಜಗಲಿ ಸೇರಿ, ಕದಕ್ಕೆ ಹಾಕಿದ ಬೀಗವನ್ನು ತೆಗೆಯಲೆಂದು ಅಂಗಿಯ ಬಗಲಕಿಸೆಯಿಂದ ಕೀಲಿಕೈ-ಪೊತ್ತೆಯನ್ನು ಹೊರತೆಗೆಯುತ್ತಿದ್ದಾಗ, ಇನ್ನೂ ಅಂಗಳದಲ್ಲೇ ಇದ್ದ ದೇವಿ ಜಗಲಿಯ ಮೆಟ್ಟಿಲುಗಳನ್ನು ಸಮೀಪಿಸುತ್ತ, “ಹಾಗೇನು ಬಿಟ್ಟ ಮನೆಯನ್ನು ಒಬ್ಬರೇ ಹೊಕ್ಕುತ್ತೀರಿ ಒಡೆಯಾ-ಇಷ್ಟು ಸಂಜೆಯ ಹೊತ್ತಿಗೆ?” ಎಂದಳು. ತನ್ನ ಮಾತುಗಳನ್ನು ಕಿವಿಯಲ್ಲಿ ಹಾಕಿಕೊಳ್ಳದೇ ಬೀಗದ ತೂತಿನಲ್ಲಿ ನೆಟ್ಟ ಕೈಯನ್ನು ತಿರುವುತ್ತಿದ್ದಂತೆ, “ಶಂಕರ ಒಡೆದೀರ ಅಮ್ಮನಿಗೆ ಬಹ””ಳ ಸೀಕು ಒಡೆಯಾ. ನಾಲ್ಕು ದಿನ ಮನೆಯಲ್ಲೇ ಮಲಗೂಕೆ ಬಾ ಎಂದರು. ಉಂಬೂಕೂ ಇಲ್ಲೇ ಇರು ಎಂದರು. ಅವರ ಮನೇಲಿ ಮೀನಾ ತಿಂಬೂದಿಲ್ಲ. ನಿಮ್ಮ ಮನೆಯ ಹಿಂದಿನ ಜಗಲೀ ಮೇಲೇ ಒಲೀ ಹೂಡಿದ್ದೇನೆ. ಶಂಕರ ಒಡೆದೀರೇ ನಿಮ್ಮ ಅಮ್ಮನಿಗೆ ತಾವು ಹೇಳ್ತೇವೆ ಎಂದಿದ್ದರು. ನಾನೂ ಹೇಳೋಣ ಎಂತ ನಿನ್ನೆ ಹೋಗಿದ್ದೆ. ನೀವು ಇದ್ದಿರಲಿಲ್ಲ” ಎಂದಳು. ಅವನಿನ್ನೂ ತನ್ನತ್ತ ನೋಡಲೂ ಅಳುಕುತ್ತಿದ್ದುದನ್ನು ನೋಡಿ, ಒಮ್ಮೆ ಸಣ್ಣಗೆ ನಕ್ಕಳು. ಬೀಗ ತೆರೆದರೂ ಜಂಗುತಿಂದ ಬಾಗಿಲ ಚಿಲಕ ಒಮ್ಮಿಗಿಲೇ ತೆಗೆಯಲಾಗಲಿಲ್ಲ. ಅವನು ಚಿಲಕ ತೆಗೆಯಲು ಪರಿಶ್ರಮಿಸುತ್ತಿದ್ದಂತೆ, ಕೈ ಬಳೆಗಳನ್ನು ಕಿಂಕಿಣಿಸುತ್ತ, “ಮನೆಯಲ್ಲೆಲ್ಲ ಎಷ್ಟು ಧೂಳು ತುಂಬಿದೆಯೋ ಒಡೆಯಾ. ಹೇಳಿದರೆ ನಾನೇ ಬಂದು ಗುಡಿಸಿ ಹೋಗುತ್ತಿದ್ದೆ”, ಎಂದಳು. ಅವನು ಅವಳತ್ತ ಲಕ್ಷ್ಯವನ್ನೇ ಕೊಡದೇ, ಒಳಜಗಲಿ ಹೊಕ್ಕವನು ತನ್ನ ಹಿಂದೆಯೇ ಹೊರಜಗಲಿಯ ಕದ ಮುಚ್ಚಿ, ಅಗಳಿ ಇಟ್ಟು, ನಡುವಿನ ಕೋಣೆ ಸೇರಿ, ಒಳಗಿನ ಮಬ್ಬುಗತ್ತಲೆಯಲ್ಲಿ ಸರಿಯಾಗಿ ಕಾಣದಾದ.
ಒಂದು ತಿಂಗಳ ಹಿಂದೆ ಸತ್ತ ಅವನ ಸೋದರತ್ತೆಯ ಮರಣದ ವೇಳೆ ಬಹಳ ಕೆಟ್ಟದ್ದಾಗಿತ್ತಂತೆ. ಮೂರು ತಿಂಗಳು ಮನೆ ಬಿಡಬೇಕು ಎಂದು ಭಟ್ಟರು ಹೇಳಿದ್ದರಿಂದ ಆ ಮನೆಯನ್ನು ಖಾಲಿಮಾಡಿದ್ದರು. ಮೂರು ತಿಂಗಳ ಮೇಲೆ ಶಾಂತಿ, ರಾಕ್ಷಸಹೋಮ, ಮತ್ತೇನೇನೋ ಆದ ಮೇಲೇ ಆ ಮನೆ ವಾಸಕ್ಕೆ ಯೋಗ್ಯವಂತೆ. ನಾಲ್ಕು ವರ್ಷಗಳ ಹಿಂದೆ ಅವನ ತಂದೆ ಸತ್ತ ಹೊತ್ತೂ ಕೆಟ್ಟದ್ದಾಗಿತ್ತು. ಆದರೆ ಮನೆ ಬಿಡುವ ಮನಸ್ಸಿದ್ದರೂ ಹಾಗೆ ಮಾಡುವುದು ಶಕ್ಯವಿರಲಿಲ್ಲವಾದ್ದರಿಂದ ಬರೇ ಶಾಂತಿಯನ್ನಷ್ಟೇ ಮಾಡಿ ಅಲ್ಲೇ ಉಳಿದಿದ್ದರು. ತಂದೆ ಸತ್ತ ಆರೇ ತಿಂಗಳ ಒಳಗೆ ಅವನ ಒಬ್ಬಳೇ ಒಬ್ಬ ತಂಗಿ ಮೈಲಿಬೇನೆಯಿಂದ ತೀರಿಕೊಂಡಿದ್ದಳು. ಮನೆ ಬಿಡದೇ ಇದ್ದದ್ದೇ ಕಾರಣವೆಂದು ಜನ ಆಡಿ ಕೊಂಡಿದ್ದರು. ಅಮ್ಮ, ಸೋದರತ್ತೆ, ಅವನೂ ಕೂಡ ಹೆದರಿದ್ದರು. ಎಂತಲೇ, ಈಗ ಸೋದರತ್ತೆ ಸತ್ತ ವೇಳೆ ಕೂಡ ಬಹಳ ಕೆಟ್ಟದ್ದು; ಮನೆ ಬಿಡಬೇಕು ಎಂದು ಭಟ್ಟರು ಸಲಹೆಯಿತ್ತಾಗ ಹಾಗೆ ಮಾಡಲು ಹಿಂದುಮುಂದು ನೋಡಲಿಲ್ಲ. ಕೆಲವೇ ತಿಂಗಳ ಮೊದಲಷ್ಟೇ ಹಳ್ಳಿಯ ಪೋಸ್ಟ್ ಆಫೀಸ್ ನಡೆಸಲು ಬಾಡಿಗೆಯಿಂದ ಕೊಟ್ಟ ಅವರ ಇನ್ನೊಂದು ಮನೆ ಖಾಲಿಯಾಗಿತ್ತು. ಅದನ್ನಿನ್ನೂ ತಿರುಗಿ ಯಾರಿಗೂ ಬಾಡಿಗೆಗೆ ಕೊಟ್ಟಿರಲಿಲ್ಲ. ಸೋದರತ್ತೆ ಸತ್ತ ಹನ್ನೆರಡು ದಿನಗಳು ಕಳದದ್ದೇ ಹೊಸ ಬಿಡಾರ ಸಾಗಿಸಿದ್ದರು. ಬಿಟ್ಟ ಮನೆ ಬಹಳ ಹಳೆಯದೂ ಆಗಿತ್ತಾದ್ದರಿಂದ ಸೂತಕದ ಮೂರು ತಿಂಗಳು ಕಳೆದ ಮೇಲೂ ತಿರುಗಿ ಅಲ್ಲಿ ಹೋಗುವ ಮನಸ್ಸಿದ್ದಿರಲಿಲ್ಲ. ಶಾಂತಿ, ರಾಕ್ಷಸಹೋಮಗಳಾದ ಮೇಲೆ ಆ ಮನೆಯನ್ನು ತುಸು ದುರುಸ್ತ ಮಾಡಿ ಯಾರಿಗಾದರೂ ಬಾಡಿಗೆಗೆ ಕೊಟ್ಟರಾಯಿತು ಎಂದುಕೊಂಡಿದ್ದರು.
ಮೊನ್ನೆ, ಆ ಮನೆಯ ಹಿಂದಿನ ಹರಕು-ಮುರುಕು ಬಾಗಿಲವನ್ನು ದೂಡಿ ದನ ಒಳಗೆ ಹೊಕ್ಕಿತಂತೆ. ರಿಪೇರಿಗಾಗಿ ಹೊನ್ನಪ್ಪಾಚಾರಿಯನ್ನು ಕರೆಕಳಿಸಿದಾಗ ತುರ್ತ ಪುರಸತ್ತಿಲ್ಲ; ಇನ್ನೊಂದು ವಾರದ ಮೇಲಾದರೆ ಆಗಬಹುದು ಎಂದಿದ್ದ. ಅವನು ಹಾಗೆ ಹೇಳಿದಾಗ ತಾನೇ ಹೋಗಿ ರಿಪೇರಿಮಾಡುವ ವಿಚಾರ ಮಾತ್ರ ಅವನ ತಲೆಯಲ್ಲಿ ಸುತರಾಮ್ ಬಂದಿರಲಿಲ್ಲ. ಮಂಚದ ಮೇಲೆ ಅಡ್ಡವಾದಲ್ಲೇ ಹೊರಗೆ, ಅಮ್ಮ-ಪುರೋಹಿತರು ತನ್ನ ಮದುವೆಯನ್ನು ಕುರಿತು ಚರ್ಚೆ ಆರಂಭಿಸಿದ್ದನ್ನು ಕೇಳಿದ್ದೇ ಕಿಡಿಕಿಡಿಯಾದವನಿಗೆ ಎಲ್ಲಾದರೂ, ಇಲ್ಲಿಂದ ದೂರ ಹೊರಗೆ, ಹೋಗಬೇಕೆಂದು ಅನಿಸಿತ್ತೇ ಹೊರತು ಇಂಥಲ್ಲೇ ಹೋಗಬೇಕೆಂಬ ವಿಚಾರ ಬಂದಿರಲಿಲ್ಲ. ಆದರೆ ತಾಯಿ, ‘ಎಲ್ಲಿಗೆ ಹೊರಟೆ?’ ಎಂದು ಕೇಳಿದ ಕ್ಷಣದಲ್ಲೇ ಈ ಅನಿಸಿಕೆ ಹಳೇ ಮನೆಗೆ ಹೋಗುವ ವಿಚಾರದಲ್ಲಿ; ಮುಂದೆ ತಾಯಿ ಅಡಿಗೆಮನೆಯ ಬಾಗಿಲ ನೆನಪು ಮಾಡಿದಾಗ ಬಾಗಿಲ ರಿಪೇರಿ ತಾನೇ ಮಾಡಬೇಕು ಎಂಬ ನಿರ್ಧಾರದಲ್ಲಿ ಅವನಿಗರಿವಾಗುವ ಮೊದಲೇ ಕೊನೆಗೊಂಡಿತ್ತು. ಮರುಕ್ಷಣ ಹೊನ್ನಪ್ಪಾಚಾರಿಯ ಮನೆಗೆ ಹೋಗಿ ಕರಗಸ ಬೇಡಿ ತರಬೇಕು ಎಂದೂ ಹೊಳೆಯಿತು. ಕರಗಸ ತಂದರೆ ಬಚ್ಚಲು ಮನೆಯಲ್ಲಿ ರಾಶಿ ಒಟ್ಟಿದ ರೀಪುಗಳಲ್ಲಿಯ ಒಂದು ರೀಪು ಮೂರು ತುಂಡು ಮಾಡಿ ಬಾಗಿಲಿಗೆ ಹೊರಗಿನಿಂದ ಅಡ್ಡ ಹೊಡೆದುಬಿಟ್ಟರೆ ಹೊನ್ನಪ್ಪಾಚಾರಿಯ ಕೈಗೆ ಪುರಸತ್ತಾಗುವ ತನಕವಾದರೂ ತಿರುಗಿ ದನ ಮನೆ ಹೊಗುವುದನ್ನು ತಡೆಯಬಹುದು ಎಂದೆನಿಸಿತು. ಆದರೆ ‘ಎಲ್ಲಾದರೂ ದೂರ ಹೊರಗೆ ಹೋಗಬೇಕು’ ಎನ್ನುವ ವಿಚಾರ ಮುಂದಿನ ಯೋಜನೆಗಳಲ್ಲಿ ಎಷ್ಟೊಂದು ವೇಗದಿಂದ ರೂಪಾಂತರವಾಗಿತ್ತೆಂದರೆ, ‘ತಿರುಗೆಂದು ಹೊನ್ನಪ್ಪಾಚಾರಿಯ ಮನೆಗೆ ನಾನು ಒಂಟಿಯಾಗಿ ಹೋಗಬಾರದು’ ಎಂದು ಹಿಂದೊಮ್ಮೆ ಆಣೆಮಾಡಿ ನಿರ್ಧರಿಸಿಕೊಂಡಿದ್ದರ ನೆನಪು ಆದದ್ದು, ಹೊನ್ನಪ್ಪಾಚಾರಿಯ ಮನೆಯ ಅಂಗಳದಲ್ಲಿ ಹೋಗಿ ನಿಂತ ತನ್ನನ್ನು ಅವನ ಹೆಂಡತಿ ಮುರಕಮಾಡುತ್ತ, “ಅಯ್ಯ”” ನೀವು”?” ಎಂದು ಕೇಳಿದಾಗಲೇ! ಹೊನ್ನಪ್ಪಾಚಾರಿ ಈ ಹೊತ್ತಿಗೆ ಮನೆಯೊಳಗೆ ಇರುವುದಿಲ್ಲ ಎಂಬುದೂ ನೆನಪಿಗೆ ಬಂದದ್ದು, ಅವನ ಹೆಂಡತಿ, “ಇವರು ದಿನವೂ ನಸುಕಿನಲ್ಲೇ ಗಂಗಾವಳಿಗೆ ಹೋದವರು ತಿರುಗಿ ಮನೆಗೆ ಬರುವುದು ತುಂಬ ರಾತ್ರಿಯಾದ ಮೇಲೇ”, ಎಂದು ಇನ್ನೊಮ್ಮೆ ವಯ್ಯಾರ ಮಾಡಿದಾಗಲೇ! ಮನೆಯ ಅಂಗಳದಲ್ಲಿ ಕೂತು ಮಗುವಿನ ಕೂದಲು ಹಿಕ್ಕುತ್ತಿದ್ದವಳು, “ನೀನೀಗ ಆಡಲಿಕ್ಕೆ ಹೋಗೆ” ಎಂದು ಅದನ್ನು ಓಡಿಸುತ್ತ ಇವನತ್ತ ತಿರುಗಿ, “ಏನು ಬೇಕಿತ್ತೋ?” ಎಂದು ಕೇಳಿದಾಗಲೇ! ಥತ್ ಇವಳ! ಹೊನ್ನಪ್ಪಾಚಾರಿಯ ಹೆಂಡತಿ ಬಹಳ ಹಲ್ಕಟ್ ಹೆಂಗಸಂತೆ. ಊರಲ್ಲಿಯ ಒಬ್ಬಿಬ್ಬರು ಗಂಡಸರನ್ನು (. . . . . . ) ಥೂಥೂಥೂ ಹ್ಯಾಗಾದರೂ ತನಗಿದೆಲ್ಲ ಮರೆತೇ ಹೋಯಿತೋ! ಯಾಕಾದರೂ ಇಲ್ಲಿಗೆ ಬಂದೆನೋ! ಮೈಮೇಲೆ ಮುಳ್ಳು ನಿಂತುವು. ತಲೆಯಲ್ಲೆಲ್ಲ ಗೊಂದಲವೋ ಗೊಂದಲ. ತಾನು ಇಲ್ಲಿ ಬಂದದ್ದಾರೂ ಯಾಕೆ ಎಂಬುದು ಕೂಡ ಮರೆತೇ ಹೋದಂತಿತ್ತು. ಇನ್ನೂ ಮಾತನಾಡದೇ ನಿಂತವನನ್ನು ಕೆಣಕುತ್ತ ಹೊನ್ನಪ್ಪಾಚಾರಿಯ ಹೆಂಡತಿ, “ಏನಾದರೂ ಬೇಕಿತ್ತೇ?” ಎಂದು ಕೇಳಿದಳು. ಅಬ್ಬಾ ಅವಳ ಕಣ್ಣುಗಳೆ! ಏನೂ ಬೇಡ ಎಂದು ಹೇಳಿ ಹಾಗೇ ಅಲ್ಲಿಂದ ಹೊರಟು ಬರುವವ. ಆದರೆ ಅವನ ಸುದೈವ: ಆಯತ ಹೊತ್ತಿಗೆ ತಾನು ಬಂದುದರ ಉದ್ದೇಶ ನೆನಪಾಗಿತ್ತು. ಇಲ್ಲವಾದರೆ ಹೊನ್ನಪ್ಪಾಚಾರಿಯ ಹಂಡತಿ ತನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಿದ್ದಳೋ! “ಒಂದು ಸಂಜೆಯ ಮಟ್ಟಿಗೆ ಸ್ವಲ್ಪ ಕರಗಸ ಬೇಕಾಗಿತ್ತು” ಎಂದ, ತಡವರಿಸುತ್ತ. ಹೊನ್ನಪ್ಪಾಚಾರಿಯ ಹೆಂಡತಿ ಒಳಗೆ ಹೋಗಿ ಕರಗಸ ತಂದುಕೊಡುತ್ತ, ‘ಇಷ್ಟೇನೆ?’ ಎಂಬಂತೆ ಪ್ರಶ್ನಾರ್ಥಕವಾಗಿ ನೋಡುತ್ತ, “ನಿಮ್ಮ ಹಳೆಯ ಮನೆಯ ಹಿಂದಿನ ಜಗಲಿಯ ಮೇಲೆ ದೇವಿ ಒಲಿ ಹೂಡಿದ್ದಾಳಂತಲ್ಲ? ಆಗ ಏಕನಾಥಶೆಟ್ಟರ ಅಂಗಡಿಗೆ ಸಾಮಾನು ತರಲಿಕ್ಕೆ ಹೋದಾಗ ಭೆಟ್ಟಿಯಾಗಿದ್ದಳು. ಅವಳ ಧೈರ್ಯವಾದರೆ ಧೈರ್ಯವಪ್ಪ! ಹಾಗೆ ಬಿಟ್ಟ ಮನೆಯ ಜಗಲೀ ಮೇಲೆ. . . . .” ಎನ್ನುತ್ತ ಮುಗುಳು ನಕ್ಕಳು.
ಹೊನ್ನಪ್ಪಾಚಾರಿಯ ಹೆಂಡತಿ, ದೇವಿಯನ್ನು ಕುರಿತು ಮಾತನಾಡುವಾಗ ಮುಗುಳುನಕ್ಕದ್ದು ಲಕ್ಷ್ಯಕ್ಕೆ ಬಂದದ್ದು, ಹಳೆ ಮನೆಯ ಹಿತ್ತಲನ್ನು ಹೊಕ್ಕು ಅಂಗಳದಲ್ಲಿ ಜಿಗ್ಗು ಹೆಕ್ಕುತ್ತಿದ್ದ ದೇವಿಯನ್ನು ಕಂಡನಂತರವೇ! ನಿನ್ನೆ ರಾತ್ರಿ, ತಾನು ಅಂಗಡಿಯಿಂದ ಹಿಂತಿರುಗಿ ಬಂದ ಮೇಲೆ, ಅಮ್ಮನೂ ಹೇಳಿದಂತಿರಲಿಲ್ಲವೇ; ತಾನು ಅಂಗಡಿಗೆ ಹೊರಟುಹೋದದ್ದೇ ದೇವಿ ಬಂದಿದ್ದಳಂತೆ. ಹಿಂದಿನ ಜಗಲಿಯ ಮೇಲೆ ಒಲಿ ಹೂಡಿದ್ದನ್ನು; ಅಡಿಗೆಮನೆ ಹೊಕ್ಕ ದನವನ್ನು ಓಡಿಸಿ ಕದ ಅಡ್ಡಮಾಡಿ. . . . . . ಎಲಾ ಎಲಾ ಎಲ್ಲ ಈಗ ನೆನಪಾಗುತ್ತದೆಯಲ್ಲ! ಥೂ ಥೂ ಥೂ ಬೆಂಕಿ ಬಿದ್ದ ನನ್ನ ಹಾಳು ಮರೆವೇ! ಹಾಳು ಮರೆವೆ!. . . . . . . ದೇವಿಯನ್ನು ಕಂಡದ್ದೇ ಅವನಿಗರಿವಾಗುವ ಮೊದಲೇ ಅವನ ಮೊದಲಿನ ಯೋಜನೆಯಲ್ಲಿ ಬದಲಾಗಿತ್ತು. ಮನೆಯ ಹಿಂದುಗಡೆ ಹೋಗಿ ಬಚ್ಚಲ ಮನೆಯಿಂದ ರೀಪನ್ನು ತಂದು ಕದಕ್ಕೆ ಹೊರಗಿನಿಂದ ಬಡೆದರಾಯಿತು ಎಂದು ಕೊಂಡಿದ್ದ. ಆದರೆ ಈ ಯೋಜನೆಯಲ್ಲಿ ಬದಲಾದದ್ದು ಅವನ ಲಕ್ಷ್ಯಕ್ಕೆ ಬಂದದ್ದು ‘ಬಿಟ್ಟ’ ಮನೆಯನ್ನು ಹೊಕ್ಕು, ಹೊರ ಜಗಲಿಯ ಕದಕ್ಕೆ ಒಳಗಿನಿಂದ ಅಗಳಿ ಇಟ್ಟು, ನಡುವಿನ ಕೋಣೆಯ ಬಾಗಿಲ ತೆರದದ್ದೇ ಒಳಗಿನ ಮಬ್ಬುಗತ್ತಲೆಯೊಳಗಿಂದ ಫಟ್ ಫಟ್ ಫಟ್ ಎಂದು ರೆಕ್ಕೆ ಬಡೆಯುತ್ತ ಬಾವಲಿಗಳು ಮೈಮೇಲಿಂದಲೇ ಹಾದುಹೋದಾಗ! ಸೋದರತ್ತೆ ಸಾಯುವಾಗ ಮಲಗಿದ ಕೋಣೆಯನ್ನು ದಾಟುವಾಗ ಗುಮ್ಮೆಂದು ಬಂದ ವಿಚಿತ್ರ ವಾಸನೆಗೆ ಹೊಕ್ಕುಳದ ಸುತ್ತಲಿನ ಹೊಟ್ಟೆಯ ಭಾಗ ತತ್ಥರ ನಡುಗಿತು; ಅವಸರ ಅವಸರವಾಗಿ ಹೆಜ್ಜೆ ಇಡುತ್ತ ಅಡಿಗೆ ಮನೆಯತ್ತ ಸಾಗಿದ. ದೇವರ ಕೋಣೆಯಲ್ಲಂತೂ ಕತ್ತಲೆಯೇ ಕತ್ತಲೆ; ದಾಟುವಾಗ ಕಾಲಡಿಯಿಂದ ಇಲಿಯೋ, ಚುಚ್ಚಂದರಿಯೋ (ಸುಂಡಲಿ) ಚಿಂವ್ ಚಿಂವ್ ಎನ್ನುತ್ತ ಓಡಿಹೋದಾಗ ಜಿಗಿದುಬಿದ್ದ. ಅಡಿಗೆ ಮನೆ ಸೇರಿದ ಮೇಲೆ ಮಾತ್ರ ಜೀವಕ್ಕೆ ತುಸು ಸಮಾಧಾನವೆನಿಸಿತು; ಹಿಂದಿನ ಹರಕುಮುರುಕು ಕದದ ಸಂದಿ-ಬಿರುಕುಗಳೊಳಗಿಂದ ತುಸು ಬೆಳಕು ಒಳಗೆ ಬರುತ್ತಿತ್ತು. ಲಗುಬಗೆಯಿಂದ ಪಶ್ಚಿಮದ ದಿಕ್ಕಿನ ಕಿಡಿಕಿಯನ್ನು ಸಮೀಪಿಸಿ ಕದ ತೆರೆದ. ಇನ್ನು ತುಸು ಬೆಳಕು, ಗಾಳಿ ಒಳಗೆ ಬಂದವು. ಇಲ್ಲೆಲ್ಲೋ ಮೂಲೆಯಲ್ಲಿ ನಾಗಂದಿಯ ಮೇಲಿನ ಡಬ್ಬಿಗಳನ್ನು ಇಡಲು-ತೆಗೆಯಲು ಉಪಯೋಗಿಸುತ್ತಿದ್ದ ಸ್ಟೂಲು ಇದ್ದುದರ ನೆನಪು ಬಂದು, ಮಬ್ಬುಗತ್ತಲೆಯಲ್ಲೇ ಹುದುಕಾಡಿ ತಂದು ಅದರ ಮೇಲೆ ಕುಳಿತ.
ಸೋದರತ್ತೆ ಸತ್ತ ವೇಳೆ ಕೆಟ್ಟದ್ದಾಗಿತ್ತು ಎಂದು ಬಿಟ್ಟ ಹಳೆಯ ಮನೆ; ಮೂರುಸಂಜೆಯ ಹೊತ್ತಿನಲ್ಲಿ ಮನೆತುಂಬ ಹಬ್ಬಿಕೊಂಡ ಮಬ್ಬುಗತ್ತಲೆ; ತಿಂಗಳಿಡೀ ಕದಗಳೆಲ್ಲವನ್ನೂ ಮುಚ್ಚಿಕೊಂಡು ಗಾಳಿಯಾಡದ ಮನೆಯಲ್ಲಿ ನೆರೆನಿಂತ ಎಂತಹದೋ ಹಳೆತ ವಾಸನೆ; ಕಾಲಿಟ್ಟಲ್ಲೆಲ್ಲ ಧೂಳು; ತಾನು ಇದ್ದ ಪರಿಸ್ಥಿತಿಯ ಅರಿವು ಈಗ ಆಯಿತೆನ್ನುವಂತೆ ಸ್ಟೂಲಿನ ಮೇಲೆ ಕುಳಿತಲ್ಲೇ ನಡುಗಿದ. ಇಷ್ಟೆಲ್ಲ ಆದದ್ದು ಈ ಹಾಳು ದೇವಿಯಿಂದ. ಹಿಂದಿಲ್ಲ ಮುಂದಿಲ್ಲದ ಹುಡುಗಿ. ಧುತ್ ಎಂದು ಅಂಗಳದಲ್ಲೇ ಪ್ರಕಟವಾಗಿ ಮಾತನಾಡಿಸಿದ (ಮೊಲೆ ತೋರಿಸಿದ!) ಅವಳಿಗೆ ಹೆದರಿಯೇ ಅಲ್ಲವೇ ತಾನು ಇಲ್ಲಿಗೆ ಬಂದು ಸಿಕ್ಕಿಕೊಂಡದ್ದು! ಆ ಇಲ್ಲದ ವಯ್ಯಾರದ ಹೆಣ್ಣು-ಹೊನ್ನಪ್ಪಾಚಾರಿಯ ಹೆಂಡತಿ-ದೇವಿಯ ಬಗ್ಗೇ ಮಾತನಾಡುತ್ತ ಹಾಗೆ ಮುಗುಳುನಕ್ಕಿರದಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲವೇನೋ. ಶ್ರಾದ್ಧದ ಊಟವಾದದ್ದೇ ಅಮ್ಮ-ಭಟ್ಟರು ತನ್ನ ಮದುವೆಯ ಬಗ್ಗೆ ಮಾತನಾಡಿರದಿದ್ದರೆ ತಾನು ಹೊರಗೆ ಹೋಗುವ ವಿಚಾರವನ್ನೇ ಮಾಡುತ್ತಿರಲಿಲ್ಲವೇನೋ. ಅಥವಾ, ಇಂದು ಮನೆಯಲ್ಲಿ ಪಿತೃ ಪಕ್ಷವೇ ಇದ್ದಿರದಿದ್ದರೆ ತಾನು ಇಷ್ಟು ಹೊತ್ತಿಗೆ ಹಾಯಾಗಿ ಅಂಗಡಿಯಲ್ಲಿ ಕೂತಿರುತ್ತಿದ್ದೆನೇನೊ. . . . . . ಅಮ್ಮ-ಭಟ್ಟರ ಮೇಲೆ, ಅಂದು ಮಧ್ಯಾಹ್ನವೇ ಪಿಂಡಗಳನ್ನರ್ಪಿಸಿಕೊಂಡ ಪಿತೃಗಳ ಮೇಲೂ ಅವನಿಗೆ ಸಿಟ್ಟುಬಂತು. ಅಮ್ಮನಿಗಂತೂ ತನ್ನ ಮದುವೆಯನ್ನು ಕುರಿತು ಮಾತನಾಡಲು ಹೊತ್ತು ಗೊತ್ತು ಎಂಬುದೇನೂ ಇಲ್ಲ. ಇಡಿಯ ದಿನ ಕರಿಯ ಎಳ್ಳು, ದರ್ಭೆ, ಪಿಂಡ, ಸವ್ಯಂ ಅಪಸವ್ಯಂಗಳ ಗದ್ದಲದಲ್ಲಿ ತಲೆ ಚಿಟ್ಟು ಹಿಡಿದಾಗ ಬಿಚ್ಚಿದಳಲ್ಲ, “ಇವನಿಗೀಗ ಕಡಿಮೆ ವಯಸ್ಸೇ ಭಟ್ಟರೆ? ಇವನ ಸರೀಕರಿಗೆಲ್ಲ ಲಗ್ನವಾಗಿ ಎರಡೆರಡು ಮಕ್ಕಳಾಗಿವೆ. ಕೇಳಿದಾಗೆಲ್ಲ ತಾನು ಬ್ರಹ್ಮಚಾರಿಯಾಗಿಯೇ ಇರುತ್ತೇನೆ; ತನೆಗೆ ಮದುವೆಯೇ ಬೇಡ ಅನ್ನುತ್ತಾನೆ. ಮೊದಮೊದಲು ನಾವು ಬರೇ ಚೇಷ್ಟೆಗೆ ಅನ್ನುತ್ತಿರಬಹುದು ಎಂದುಕೊಂಡಿದ್ದೆವು. ಆ ಸ್ವಾಮಿ ಈ ಸ್ವಾಮಿ ಎಂದು ಯಾರ ಯಾರವೋ ಪುಸ್ತಕಗಳನ್ನು ಓದುತ್ತಾನಂತೆ. ದಿನವೂ ಸೂರ್ಯ ನಮಸ್ಕಾರ, ಆಸನಾ ಮಾಡುತ್ತಾನೆ. ಇವನ ಈ ಇಲ್ಲದ ಹುಚ್ಚನ್ನು ಬಿಡಿಸುವ ಹೆಣ್ಣು ಎಲ್ಲಿ ಕೂತಿದ್ದಾಳು ಅಂತೇನೆ. ಸೊಸೆಯ ಮೋರೆ ನೋಡ ಬೇಕು, ಮೊಮ್ಮಗನನ್ನು ನೋಡಬೇಕು ಎಂಬ ಆಸೆ ಇಟ್ಟುಕೊಂಡೇ ಇವರು ಕಣ್ಣುಮುಚ್ಚಿದರು. ಅಂತಹದೇ ಆಸೆ ಇಟ್ಟುಕೊಂಡ ಸೋದರತ್ತೇನೂ ಈಗ ಸತ್ತಳು. ಇವನು ಮದುವೆಯಾಗದಿದ್ದರೆ ನಮ್ಮ ವಂಶ ಹೇಗೆ ಮುಂದುವರಿಯಬೇಕು ಭಟ್ಟರೇ. ನಮಗೆ ಬೇರೆ ಮಕ್ಕಳಿವೆಯೇ?” ಅಮ್ಮನ ದನಿಯಲ್ಲಿ ಅಳು ಸೇರಿತ್ತು. ಅದನ್ನು ಕೇಳಿದ್ದೇ ಎದ್ದೆ. ಆದರೆ ಎದ್ದದ್ದೇ ಹೀಗೆಲ್ಲ ಆಗುತ್ತದೆಯೆಂದು ಯಾರು ತಿಳಿದಿದ್ದರು! ಕತ್ತಲೆ ಕವಿಯುವ ಹೊತ್ತಿಗೆ ಈ ಬಿಟ್ಟ ಮನೆಯಲ್ಲಿ ಸಿಕ್ಕುಬಿದ್ದೆನಲ್ಲ! ಈಗಿಂದೀಗ ಇಲ್ಲಿಂದ ಹೊರಟುಹೋದರೆ ಹೇಗೆ? ನಾಳೆ ಹೊನ್ನಪ್ಪಾಚಾರಿಯ ಕೈಗೆ ಪುರಸತ್ತಾದಾಗ ಅವನಿಂದಲೇ ರಿಪೇರಿ ಮಾಡಿಸಿದರಾಯಿತು. ತನಗೆ ಹೇಳಿದ ಕೆಲಸವೇ ಇದು? ಎಂದುಕೊಂಡ. ಮರುಕ್ಷಣ, ಅದಾಗಲೇ ಎಚ್ಚರಗೊಂಡಿದ್ದ ಸ್ವಾಭಿಮಾನ ಅಡ್ಡಬಂತು; ಇಲ್ಲಿಯವರಿಗಂತೂ ಬಂದದ್ದಾಗಿದೆ. ಇಷ್ಟೆಲ್ಲ ಕಷ್ಟಪಟ್ಟು (ಸಂಜೆಯ ಹೊತ್ತಿಗೆ, ಹೊನ್ನಪ್ಪಾಚಾರಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ, ಅವನ ಹೆಂಡತಿಯನ್ನು ಕಾಣುವುದೇನು ಕಡಿಮೆ ಕಷ್ಟದ ಕೆಲಸವೇ!) ಕರಗಸ ತಂದಾಗಿದೆ. ದೇವಿ, ಬಿಟ್ಟ ಮನೆಯ ಹೆದರಿಕೆ ಹಾಕಿದಾಗಲೂ ಅದರ ಪರಿವೆ ಇಲ್ಲದವನಂತೆ ಮನೆಯನ್ನು ಹೊಕ್ಕಾಗಿದೆ. ತಂದ ಕರಗಸವನ್ನು ಹಿಂದಕ್ಕೆ ಒಯ್ಯುವಾಗ ದೇವಿ ನೋಡಿದರೆ ತನಗೆ ಹೆದರಿಯೇ ಹಿಂತಿರುಗಿದ ಎಂದು ತಿಳಿಯಲಾರಳೇ? ಇಷ್ಟಕ್ಕೂ ಮನೆ ತಲುಪಿದ ಮೇಲೆ ಅಮ್ಮ ಕೇಳಿದರೆ ಅಥವಾ ನಾಳೆ ಹೊನ್ನಪ್ಪಾಚಾರಿ ಕರಗಸ ಏಕೆ ಒಯ್ದದ್ದು ಎಂದು ವಿಚಾರಿಸಿದರೆ ಏನು ಹೇಳುವುದು? ಕದಕ್ಕೆ ಪಟ್ಟಿ ಹೊಡೆಯೋಣ ಎಂತ ಹೋಗಿದ್ದೆ; ಆದರೆ ಅಲ್ಲಿದ್ದ ದೇವಿಗೆ ಹೆದರಿ ಹಾಗೇ ಹಿಂತಿರುಗಿದೆ ಎನ್ನಬಹುದೇ? ಏನಿಲ್ಲ. ಕದಕ್ಕೆ ಅಡ್ಡಪಟ್ಟಿ ಹೊಡೆದ ಹೊರತು ತಿರುಗಿ ಹೋಗುವ ಹಾಗಿಲ್ಲ. ಇಷ್ಟೇ, ಮೊದಲು ಹೊರಗಿನಿಂದ ಹೊಡೆಯಬೇಕು ಎಂದುಕೊಂಡ ಪಟ್ಟಿಗಳನ್ನು ಈಗ ಒಳಗಿನಿಂದ ಹೊಡೆದರಾಯಿತು (ಹಿಂದಿನ ಜಗಲಿಯ ಮೇಲೇ ಒಲೆ ಹೂಡಿದ ದೇವಿಯ ಕಣ್ಣಿಗೆ ತಿರುಗಿ ಬೀಳುವ ಪ್ರಸಂಗವೂ ತಪ್ಪುತ್ತದೆ!) ಎಂದುಕೊಂಡ. ಈ ನಿಶ್ಚಯ ಮೂಡಿದ್ದೇ ಒಳಗಿನ ಭಯ ಆ ಕ್ಷಣಕ್ಕಂತು ತುಸು ದೂರವಾದಂತೆನಿಸಿತು. ಹಿಂದಿನ ಜಗಲಿಯ ಮೇಲೆ ಹೆಜ್ಜೆಗಳ ಸದ್ದು. ಬಳೆಗಳ ಕಿಂಕಣ. ದೇವಿ ಅಲ್ಲಿಗೆ ಬಂದಿರಬೇಕು ಎಂದೆನಿಸಿತು. ಮರುಗಳಿಗೆ, ಹೊಸತೇ ಒಂದು ಪೇಚು ಮುಂದೆ ಬಂದು ನಿಂತಿತು. ಎಲಾ ತನಗಿಂದು ಆದದ್ದಾದರೂ ಏನು? ಕದಕ್ಕೆ ಪಟ್ಟಿ ಹೊಡೆಯಲು ರೀಪನ್ನು ತರುವುದಾದರೆ ಬಚ್ಚಲಮನೆಗೆ ಹೋಗಬೇಕು. ಬಚ್ಚಲಮನೆ ಇದ್ದದ್ದು ಹಿಂದಿನ ಜಗಲಿಯ ಬಲತುದಿಯಲ್ಲಿ. ಅಂತೂ ದೇವಿಯ ಕಣ್ಣಿಗೆ ಬೀಳುವ ಪ್ರಸಂಗ ತಪ್ಪಿದ್ದಲ್ಲ ಹಾಗಾದರೆ! ಥತ್ ಯಾಕಾದರೂ ಎಲ್ಲ ಬಿಟ್ಟು ಇಲ್ಲಿ ಬರುವ ವಿಚಾರ ಬಂದಿತೋ. ಎರಡು ತಾಸುಗಳ ಮಟ್ಟಿಗಾದರೂ ಅಂಗಡಿ ತೆರೆದು ಕೂಡ್ರಬಹುದಿತ್ತು. ಈಗಲೂ ಹೋಗಬಹುದಲ್ಲ. ಕೀಲಿಕೈ ಪೊತ್ತೆಯಂತೂ ಕಿಸೆಯಲ್ಲೇ ಇದೆ. ಆದರೆ ಈ ಕರಗಸದ್ದೇನು ಮಾಡಲೀ? ಇದನ್ನು ಹೊತ್ತುಕೊಂಡೇ ಅಂಗಡಿಗೆ. . . . . ಥತ್! ಇಷ್ಟಕ್ಕೂ ದೈವ ಅವನ ಕೈಬಿಡಲಿಲ್ಲ. ಸ್ಟೂಲಿನಿಂದ ಎದ್ದು ಅಡಿಗೆ ಮನೆಯಲ್ಲಿ ಒಲೆಯ ಕಟ್ಟಿಗೆ ಒಟ್ಟುವ ಮೂಲೆಯನ್ನು ಹುಡುಕಾಡಿದಾಗ ದಪ್ಪ ಹಲಗೆಯ ತುಂಡೊಂದು ಕೈಗೆ ಹತ್ತಿತ್ತು. ಹಾಂ ಎಂದ. ಇದನ್ನೇ ಕರಗಸದಿಂದ ಸೀಳಿ ಮೂರು ಪಟ್ಟಿಗಳನ್ನು ಸಿದ್ದಗೊಳಿಸಬಹುದಲ್ಲ ಎನ್ನಿಸಿತು. ವಿಚಾರ ಬಂದದ್ದೇ ಎಲ್ಲಿಲ್ಲದ ಹುರುಪಿನಿಂದ ಹಲಗೆಯನ್ನು ಕೊಯ್ಯಹತ್ತಿದ. ಕೋಣೆಯ ಮಬ್ಬು ಗತ್ತಲೆಯಲ್ಲಿ ಹಲಗೆಯ ದಪ್ಪ, ಉದ್ದ-ಅಗಲಳತೆಗಳು ಸ್ಪರ್ಶಗೋಚರವಾದವೇ ಹೊರತು ಕಟ್ಟಿಗೆಯ ಜಾತಿ ತಿಳಿಯಲ್ಲಿ. ಹಿಂದೆಂದೋ ಗಣಪತಿಯ ಮಣೆ ಮಾಡಿಸಲಾದೀತೆಂದು ತಂದಿಟ್ಟ ಆ ಹಲಗೆ ಹೊನ್ನಪ್ಪಾಚಾರಿ ಬಹಳ ದಿನಗಳಿಂದ ಉಪಯೋಗಿಸದೇ ಬೊಡ್ಡುಬಿದ್ದ ಕರಗಸಕ್ಕೆ ಸುಲಭವಾಗಿ ಬಗ್ಗುವಂತಹದಾಗಿರಲಿಲ್ಲ. ಆಗಿರದಿದ್ದರೇನಂತೆ! ಕದಕ್ಕೆ ಅಡ್ಡಪಟ್ಟಿ ಹೊಡೆದ ಹೊರತು ಹಿಂತಿರುಗಬಾರದು ಎಂಬ ನಿರ್ಧಾರವಾದರೂ ಸುಳ್ಳಾಗುವುದಿಲ್ಲವಲ್ಲ! ಈ ವಿಷಯವಾಗಿ ಅವನ ಮನಸ್ಸಿನಲ್ಲೆದ್ದ ರೊಚ್ಚು, ಕರಗಸದ ಬೊಡ್ಡು ಹಲ್ಲುಗಳ ಕೆಳಗೆ ಹಲಗೆ ಮಾಡುತ್ತಿದ್ದ ಕರ್ಕಶ ದನಿಯಲ್ಲಿ; ಮೈಮೇಲೆ ಹನಿಗೂಡುತ್ತಿದ್ದ ಬೆವರಿನಲ್ಲಿ; ಅಂಗೈಯ ಮೇಲೆ ಏಳುತ್ತಿದ್ದ ದಡ್ಡು-ಬೊಕ್ಕೆಗಳಲ್ಲಿ ವ್ಯಕ್ತವಾಗಿತ್ತು. ಹೊರಗಿನಿಂದ ದೇವಿ ಏನೋ ಅಂದಿರಬೇಕು. ಆದರೆ ಕರಗಸದ ಕರಕರೆಯಲ್ಲಿ ಸರಿಯಾಗಿ ಕೇಳಿಸಲಿಲ್ಲ. ಕೇಳುವ ವ್ಯವಧಾನವೂ ಇದ್ದಿರಲಿಲ್ಲ. ಕೊನೆಗೊಮ್ಮೆ ಕೊಯ್ಯುವ ಕೆಲಸ ಮುಗಿದಾಗ ಹುಸ್ಸಪ್ಪಾ ಎಂದ. ಆದರೆ ಆ ಉದ್ಗಾರದಲ್ಲಿ ತನಗಾದ ದಣಿವಿನ ಅರಿವು ಎಳ್ಳಷ್ಟೂ ಇದ್ದಂತಿರಲಿಲ್ಲ. ಮೈಮೇಲೆ ಧಾರೆಯಾಗಿ ಇಳಿಯಹತ್ತಿದ ಬೆವರಿನ ಗುರುತೂ ಅವನಿಗೆ ಸಿಗುತ್ತಿರಲಿಲ್ಲವೇನೋ. ಅದನ್ನು ಒರೆಸುವ ತಾಳ್ಮೆಯೂ ಇಲ್ಲದವನಂತೆ ಕೊಯ್ದು ಸಿದ್ಧವಾದ ಕಟ್ಟಿಗೆಯ ಪಟ್ಟಿಗಳಲ್ಲೊಂದನ್ನು ಎತ್ತಿ, ಕದದ ಮೇಲೆ ಅಡ್ಡ ಹಿಡಿದು ಮೊಳೆ ಹೊಡೆಯುವ ತಯಾರಿ ಮಾಡುವಾಗ ಪಟ್ಟಿಯನ್ನು ಹಿಡಿಯಲು ಯಾರಾದರೂ ಇದ್ದರೆ ಒಳಿತಾಗುತ್ತಿತ್ತಲ್ಲ ಎಂದುಕೊಳ್ಳುತ್ತಿರುವಾಗಲೇ, ಹೊರಗಿನಿಂದ ದೇವಿಯ ಕೆಮ್ಮಿನ ದನಿ, ಬಳೆಗಳ ಸದ್ದು ಕೇಳಿಬಂದುವು. ಹಾಳಾದವಳು ಇನ್ನೂ ಇಲ್ಲೇ ಇದ್ದಾಳೇನೋ. ಹರಕು-ಮುರುಕಾದ ಬಾಗಿಲ ಸಂದಿಗಳೊಳಗಿಂದ ಒಳಗೆ ಇಣಿಕಿ ನೋಡುತ್ತಿಲ್ಲವಷ್ಟೇ? ನಾಚಿಕೆ ಬಿಟ್ಟವಳು! ಯಾರಾದರೂ ನೋಡಿದರೆ?
“ದೀಪ ಹಚ್ಚುವ ಹೊತ್ತು. ಹೀಗೆ ಬಿಟ್ಟ ಮನೆಯನ್ನು ಹೊಕ್ಕು ಒಳಗೆ ಏನು ಮಾಡುತ್ತಿದ್ದಾರೋ? ಈ ಬರ್ಮಚಾರಿಯ ಧೈರ್ಯವಾದರೆ ಧೈರ್ಯವಪ್ಪಾ,” ದೇವಿಯ ಈ ಮಾತಿನಿಂದ ಅವನಿಗೆ ಸಿಟ್ಟುಬರುವ ಬದಲು ವಿಲಕ್ಷಣ ಭೀತಿಯಿಂದ ಮೈ ನಡುಗಿತು. ತಾನಿನ್ನೂ ಬಿಟ್ಟ ಮನೆಯ ಒಳಗೇ ಇದ್ದೇನೆ ಎನ್ನುವ ಅರಿವು ಈಗ ತಿರುಗಿ ಬಂದಿತು ಎನ್ನುವಂತೆ. ಹೊರಗೆ ಮತ್ತೆ ಬಳೆಗಳ ಕಿಂಕಿಣ. ಏಕೋ ಈಗ ದೇವಿ ಅಲ್ಲೇ ಇದ್ದಾಳೆ ಎಂಬ ಅನಿಸಿಕೆಯಿಂದ ತುಸು ಧೈರ್ಯವೆನಿಸಿತು. ಕದದ ಹೊರಗೇ ಆಗಲೊಲ್ಲದೇಕೆ, ಇನ್ನೊಂದು ಮನುಷ್ಯ ಜೀವ ಹತ್ತಿರವಿದೆಯಲ್ಲ ಎಂಬ ಭಾವನೆಯಿಂದ ಸಮಾಧಾನವೆನಿಸಿತು. ಪಟ್ಟಿಯನ್ನು ಅಡ್ಡಹಿಡಿದು, ಒಂದು ಕೊನೆಗೆ ಮೊಳೆ ಹೊಡೆಯಹತ್ತಿದ. “ಇದೆ! ಹೊನ್ನಪ್ಪಾಚಾರಿಯ ಕೆಲಸ ಇವರೇ ಮಾಡ್ತಾರೋ ನೋಡ್ತೇ ಕದಕ್ಕೆ ಮೊಳೆ ಹೊಡೆಯುವುದೇ ಇದ್ರೆ ಹೊರಗಿನಿಂದ ಹೊಡೆಯಲು ಆಗುತ್ತಿರಲಿಲ್ಲವೇ? ಹೀಗೆ ಕತ್ತಲೆಯ ಹೊತ್ತಿಗೆ, ಬಿಟ್ಟ ಮನೆಯನ್ನು ಹೊಕ್ಕಬೇಕಿತ್ತೇ?” – ದೇವಿ ಗುಣಗುಣಿಸಿದಳು. ಮೊಳೆ ಹೊಡೆಯುವ ಸದ್ದನ್ನು ಕೇಳಿ, ಮಗ್ಗಲು ಹಿತ್ತಲಲ್ಲಿಯ ಶಂಕರರಾಯರ ಮನೆಯ ಜಗಲಿಯಿಂದ ಅವರ ಅಡಿಗೆಯವಳು, ಆಳೆತ್ತರ ಬೇಲಿಯಾಚೆಯ ದೇವಿ ತನಗೆ ಕಾಣದಿದ್ದರೂ, ದೊಡ್ಡ ದನಿಯಲ್ಲಿ, “ಅದ್ಯಾರೇ ದೇವಿ? ಬಿಟ್ಟ ಮನೆಯ ಒಳಗೆ ಮೊಳೆ ಬಡೆದ ಸದ್ದು” ಎಂದು ಕೇಳಿದಳು.
“ಬರ್ಮಚಾರಿ ಒಡೆದೀರು ಬಂದೀರು. ಮೊನ್ನೆ ಕದಾ ಮುರ್ದು ದನಾ ಒಳಗೆ ಹೊಕ್ಕಿತ್ತಲ್ಲ; ಹಾಗೆಂದು ಸರಿ ಮಾಡಲಿಕ್ಕೆ ಬಂದಿರಬೇಕು” ಎನ್ನುತ್ತ ದೇವಿ ನಿಷ್ಕಾರಣವಾಗಿ ‘ಖುಕ್’ ಎಂದಳು. ದೇವಿಯ ಈ ಅಧಿಕಪ್ರಸಂಗದಿಂದ ಮಾತ್ರ ಅವನಿಗೆ ಸಿಟ್ಟು ಬರದೇ ಇರಲಿಲ್ಲ. ಅವಳು ಎಷ್ಟೊಂದು ಭಿಡಿಯಿಲ್ಲದೇ ತನ್ನನ್ನು ‘ಬರ್ಮಚಾರ ಒಡೆದೀರು’ ಎನ್ನುವುದು ಎಳ್ಳಷ್ಟೂ ಸೇರುತ್ತಿರಲಿಲ್ಲ. ಹಾಗೆಂದು ಅವಳನ್ನು ಪ್ರತಿಭಟಿಸುವ ಧೈರ್ಯವೂ ಅವನಿಗೆ ಈವರೆಗೂ ಆಗಿರಲಿಲ್ಲ. ಏನೆಂದರೂ ದೇವಿ ನಾಚಿಕೆ ಬಿಟ್ಟ ಹುಡುಗಿ. ಅವಳ ಬಾಯಲ್ಲಿ ಬೀಳುವ ನಿರ್ಲಜ್ಜತನ ಅವನೇಕೆ ಮಾಡಿಯಾನು! ಮೊನ್ನೆ ಮೊನ್ನೆಯದೇ ಸಂಗತಿ. ಈ ಮನೆ ಬಿಡುವ ಒಂದೆರಡು ತಿಂಗಳ ಮೊದಲಷ್ಟೇ ನಡೆದದ್ದು; ಸ್ನಾನದ ಹಂಡೆಗೆ ನೀರು ತರಲೆಂದು ಬಾವಿಗೆ ಹೋದಾಗ, ದೇವಿ ಬಾವಿಯ ಹತ್ತಿರದ ಕಲ್ಲು ಮರಗಿಯಲ್ಲಿ ನಿಂತು ನೀರಲ್ಲಿ ನೆನೆಯಲು ಹಾಕಿದ್ದ ಅರಿವೆಗಳನ್ನು ಕಾಲಿನಿಂದ ಮೆಟ್ಟುತ್ತಿದ್ದಳು. ಒದ್ದೆಯಾಗಬಾರದೆಂದು, ಸೀರೆಯನ್ನು ಮೊಣಕಾಲುಗಳಿಗಿಂತ ಬಹಳ ಮೇಲಕ್ಕೆತ್ತಿ, ಗಟ್ಟಿಯಾಗಿ ಹಿಂದಕ್ಕೆ ಕಚ್ಚೆ ಕಟ್ಟಿದ್ದಳು. ದೇವಿಯನ್ನು ಅವನು ಆ ವೇಷದಲ್ಲಿ ಹಿಂದೆಂದೂ ನೋಡಿರಲಿಲ್ಲ. ನುಣುಪಾದ ಮಾಂಸಲ ಬೆತ್ತಲೆ ತೊಡೆಗಳನ್ನು ಆಶ್ಚರ್ಯಚಕಿತನಾಗಿ ನೆಟ್ಟ ದೃಷ್ಟಿಯಿಂದ ನೋಡುತ್ತ ನಿಂತವನು ಎಚ್ಚರಗೊಂಡದ್ದು, “ಇದೆ! ಅದೇನು ಹಾಗೆ ನೋಡ್ತೀರಾ” ಎಂದು ದೇವಿ ಕೇಳಿದ ಮೇಲೇ. ದೇವಿಯ ಈ ಪ್ರಶ್ನೆಗೆ ಶಂಕರರಾಯರ ಮನೆಯ ಅಡುಗೆ ಮನೆಯಿಂದ ಯಾರೋ ಒದರಿ ಕೇಳಿದರು, “ಯಾರ ಹತ್ತರ ಮಾತನಾಡ್ತೀಯೇ ದೇವಿ?” ದೇವಿ, “ಬರ್ಮಚಾರಿ ಒಡೆದೀರು” ಎನ್ನುತ್ತಿರುವಾಗ ಇವನು ‘ದಮ್ಮಯ್ಯಾ’ ಎನ್ನುವಂತೆ ತನ್ನ ತುಟಿಯ ಮೇಲೆ ತಾನೇ ಕೈಯಿಟ್ಟುಕೊಂಡಾಗ ದೇವಿ ‘ಖುಕ್’ ಎಂದು ನಕ್ಕಿದ್ದಳು. ದೇವಿ ಯಾವಾಗಲೂ ಹೀಗೆಯೇ. ಹಿಂದಿಲ್ಲ-ಮುಂದಿಲ್ಲ. ಈಗಲ್ಲ, ಚಿಕ್ಕಂದಿನಿಂದಲೂ ಅವನು ಅವಳನ್ನು ಬಲ್ಲ. ಶಂಕರರಾಯರ ಮನೆಯಲ್ಲೇ ದೊಡ್ಡವಳಾದದ್ದಲ್ಲವೇ ಅವಳು. ಈಗಂತೂ ಮೈಯಲ್ಲಿ ಪ್ರಾಯ ತುಂಬಿ ‘ಮುಸುಮುಸು’ ಎನ್ನುತ್ತದಂತೆ ಅವಳಿಗೆ-ಶಂಕರರಾಯರೇ ಹಿಂದೊಮ್ಮೆ ಅವಳನ್ನು ಬಯ್ಯುವಾಗ ಅಂದ ಮಾತುಗಳು. ಎರಡು ವರ್ಷಗಳ ಹಿಂದಷ್ಟೇ ಅವಳ ಲಗ್ನವಾಗಿತ್ತು. ಆದರೆ ಲಗ್ನವಾದ ಕೆಲ ದಿನಗಳಲ್ಲೇ ಗಂಡ ಓಡಿಹೋದ. ಎಲ್ಲಿ ಹೋದನೋ, ಯಾಕೆ ಹೋದನೋ ಯಾರಿಗೂ ಗೊತ್ತಾಗಲಿಲ್ಲ. ಸೈನ್ಯ ಸೇರಿದ್ದಾನೆಂದು ಮೊನ್ನೆ ಯಾರೋ ಸುದ್ದಿ ತಂದಿದ್ದರು. ಸೈನ್ಯ ಸೇರಲಿ ಇಲ್ಲ ಮಸಣಕ್ಕೆ ಹೋಗಲಿ, ತನಗೇನಂತೆ! ದೇವಿಯ ಮೇಲೆ ಅನಾವರವಾಗಿ ಬಂದ ಸಿಟ್ಟು ಮೊಳೆಗಳ ಮೇಲೆ ಬೀಳುತ್ತಿದ್ದ ಕಲ್ಲಿನ ಪೆಟ್ಟಿನಲ್ಲಿ ಸರಿಯಾಗಿ ವ್ಯಕ್ತವಾಗಹತ್ತಿತ್ತು. “ಇದೆ! ಹೀಂಗೆಲ್ಲಾ ಮೊಳೆ ಹೊಡ್ದ್‌ರೆ ನಾಳೆ ಕದಾ ತೆರೀಲಿಕ್ಕೆ ಆಗ್ಲಿಕ್ಕಿಲ್ಲಾ” ಎಂದು ದೇವಿ ಹೇಳಿದ ಮಾತು ಕೇಳಿದಾಗಂತೂ ಮೊದಲು ಯೋಚಿಸಿದ್ದಕ್ಕಿಂತ ಎರಡು ಮೊಳೆಗಳು ಹೆಚ್ಚೇ ಪಟ್ಟಿಯಲ್ಲಿ ಸೇರಿದವು.
ಮುಂದಿನ ಕೆಲ ಹೊತ್ತು, ಒಂದೊಂದೇ ಪಟ್ಟಿಯನ್ನು ಅಡ್ಡಹಿಡಿದು ಮೊಳೆ ಹೊಡೆದು ಭದ್ರವಾಗಿ ಜೋಡಿಸುತ್ತಿದ್ದಂತೆ, ಕದದ ಹೊರಗೇ ಉಳಿದು, ಏನೇನೋ ‘ಗುಣುಗುಣು-ಗುಜುಗುಜು’ ಮಾತನಾಡುವ ದೇವಿಯ ಮೇಲೆ ಬಂದ ಸಿಟ್ಟು; ಇಂತಹ ಅವೇಳೆಯಲ್ಲಿ ಬಿಟ್ಟ ಮನೆಯನ್ನು ಹೋಗುವಂತೆ ಮಾಡಿದ ಹೊನ್ನಪ್ಪಾಚಾರಿಯ ಹೆಂಡತಿಯ ಮೇಲೆ ಬಂದ ಸಿಟ್ಟು; ಇದೆಲ್ಲಕ್ಕೂ ಮೂಲ ಕಾರಣರಾದ ಅಮ್ಮ, ಪುರೋಹಿತ ಭಟ್ಟ, ಸತ್ತ ಪಿತೃಗಳ ಮೇಲೆ ಬಂದ ಸಿಟ್ಟು, ಏಕನಾಥಶೆಟ್ಟಿಯ ಅಂಗಡಿಯಿಂದ ತಂದ ಪಾವುಸೇರು ಮೊಳೆಗಳನ್ನೂ ಕದಕ್ಕೆ ಬಡೆದ ಪಟ್ಟಿಗಳಲ್ಲಿ ಸೇರಿಸಿತ್ತು.
ಕೊನೆಗೊಮ್ಮೆ ಮೊಳೆ ಹೊಡೆಯುವ ಕೆಲಸ ಮುಗಿದು ‘ಹುಸ್ಸಪ್ಪಾ‘ ಎನ್ನುತ್ತ ಮೊಳೆ ಹೊಡೆಯಲು ಎತ್ತಿಕೊಂಡ ಕಲ್ಲನ್ನು ಕೆಳಗಿಡುತ್ತಿದ್ದಂತೆ ಮನೆಯೊಳಗಿನ ಕತ್ತಲೆ ಒಮ್ಮಿಗೆಲೇ ಹೆಚ್ಚಿದ್ದರ ಅರಿವು ಬಂದು ತಣ್ಣಗಿನ ಭೀತಿಯಿಂದ ನಡುಗಿದ. ಅಗಳಿ ಮುರಿದು ಹೋಗಿ ಹರಕು-ಮುರುಕಾದ ಕದಗಳನ್ನು ಜೋಡಿಸಿ, ಪಟ್ಟಿ ಹೊಡೆಯುವವರೆಗೂ ಇದ್ದ ಧೈರ್ಯ, ಪಟ್ಟಿ ಹೊಡೆದು ಕದಗಳನ್ನು ಭದ್ರಮಾಡಿದ್ದೇ ಉಡುಗಿ ಹೋಗಿದೆ. ಯಾವುದೋ ಸಿಟ್ಟಿನ ಭರದಲ್ಲಿ ಅನಿಸಿದ್ದ ಧೈರ್ಯ, ಸಿಟ್ಟು ತನ್ನ ಗುರಿಯನ್ನು ಕಂಡಾದುದೇ ಅವ್ಯಕ್ತ ಭೀತಿಗೆ ಎಡೆಗೊಟ್ಟಿದೆ. ಮನೆ ಹೋಗಲು ಹೆದರದೇ ಇದ್ದವನು, ಒಳಗಿನ ಕೆಲಸ ಈಗ ಮುಗಿದಿದೆ, ಈಗ ತಾನು ಹೊರಗೆ ಹೋಗಬೇಕು ಎನ್ನುವ ವಿಚಾರಕ್ಕೆ ಹೆದರಿದ್ದಾನೆ, ಕತ್ತಲೆ ತುಂಬಿದ ದೇವರ ಕೋಣೆ, ಸೋದರತ್ತೆ ಸಾಯುವಾಗ ಮಲಗಿದ ಕೋಣೆ, ಇವೆಲ್ಲವುಗಳನ್ನು ದಾಟಿ ಒಳಜಗಲಿ, ಆಮೇಲೆ ಹೊರಜಗಲಿ; ಇವೆಲ್ಲವುಗಳನ್ನು ಹಾದು ಹೇಗೆ ಹೊರಗೆ ಹೋಗಬೇಕೋ! ಯಾವುದೋ ಅವೇಶದ ಭರದಲ್ಲಿ ಅಡುಗೆ ಮನೆಯವರೆಗೆ ಬಂದವನು ಈಗ ತಾನು ತಿರುಗಿ ಹೋಗುವ ದಾರಿಯ ಉದ್ದ ಹೇಗೋ ಒಮ್ಮೆಗೆಲೇ ಬೆಳೆದಿದೆ ಎಂಬ ಅನಿಸಿಕೆಯಿಂದ ತಲ್ಲಣಗೊಂಡಿದ್ದಾನೆ. ದೇವರ ಕೋಣೆ ದಾಟುವಾಗ ಕಾಲಡಿಯಲ್ಲಿ ಆಗಿನಂತೆ ಇಲಿಯೋ ಚುಚ್ಚಂದರಿಯೋ ಹಾದುಹೋದರೆ! (‘ಹಿತ್ತಿಲ ಮೂಲೆಯಲ್ಲಿಯ ಬಿದಿರಿನ ಹಿಂಡಿನಲ್ಲಿ ಹಾವು ಹೊಕ್ಕಿದ್ದು ಕಂಡಿತಂತೆ ಭಟ್ಟರೆ’) ಅದರಾಚೆಯ ಕೋಣೆಯನ್ನು ದಾಟುವಾಗ ಸೋದರತ್ತೆಯೇ ಕಣ್ಣಮುಂದೆ ನಿಂತಂತಾದರೆ! ಲಗ್ನವಾದ ವರ್ಷ-ಎರಡು ವರ್ಷಗಳಲ್ಲೇ ಗಂಡ ಸತ್ತು ಬೋಳಿಯಾದ ಸೋದರತ್ತೆ ಮಕ್ಕಳು-ಮರಿಗಳಿಲ್ಲದೇ ಇಡಿಯ ಆಯುಷ್ಯವನ್ನು ತಮ್ಮನ ಮನೆಯಲ್ಲೇ ಕಳೆದು, ಮುದಿವಯಸ್ಸಿನಲ್ಲಿ ಸಂಧಿವಾತದಿಂದ ತಿಂಗಳುಗಟ್ಟಲೆ ಹಾಸಿಗೆ ಹಿಡಿದು, ಬಿದ್ದಲ್ಲೇ ನವೆದು ನವೆದು ಸತ್ತಿದ್ದಳು. ತುಂಬ ಅತೃಪ್ತವಾಸನೆಯ ಈ ಮುದಿಜೀವ ಸತ್ತ ವೇಳೆಯೂ ಕೆಟ್ಟದ್ದಾಗಿತ್ತೆಂದು ಬಿಟ್ಟ ಮನೆ! ಅಡುಗೆ ಮನೆಯಲ್ಲಿ ನಿಂತಲ್ಲೇ ಅವನಿಗೆ ತನ್ನ ಮೈ ಬೆವರುತ್ತಿದ್ದುದರ ಅರಿವು ಬಂದಿತು.
“ಕದಕ್ಕೆ ಮೊಳೆ ಹೊಡೆದಾದ ಮೇಲೂ ಇವರು ಒಳಗೆ ಒಬ್ಬರೇ ಏನು ಮಾಡುತ್ತಿರಬಹುದೋ!”, ಪಟ್ಟಿ ಹೊಡೆದು ಭದ್ರಮಾಡಿದ ಕದವನ್ನು ದೂಡಿ ನೋಡಿದಳೇನೋ ದೇವಿ. ಕೈಮುಟ್ಟಿಗೆಯಿಂದ ‘ಟಕ್-ಟಕ್’ ಎಂದು ಬಡೆದಂತೆಯೂ ಕೇಳಿಸಿತು. ಇವನು ಒಮ್ಮೆಲೇ ಎಚ್ಚರಗೊಂಡು ಕೊರಳ ಮೇಲೆ ಮೂಡಿದ ಬೆವರಿನ ಹನಿಗಳನ್ನು ಅಂಗಿಯ ತುದಿಯಿಂದಲೇ ಒರೆಸಿಕೊಂಡ. ಕರಗಸವನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದ. ಓಡುತ್ತ ಹೋಗಬೇಕು ಎನ್ನುವ ನಿಶ್ಚಯಮಾಡಿ, ಅವಡುಗಚ್ಚಿ, ಭರಭರನೇ ಹೆಜ್ಜೆಯಿಡುತ್ತ ದೇವರ ಕೋಣೆಗೆ ಬಂದದ್ದೇ ‘ಔಕ್’ ಎಂದ. ಭೀತಿಯಿಂದ ಚೀರಿಕೊಳ್ಳಬಾರದು ಎನ್ನುವಂತೆ ಬಲಗೈಯಿಂದ ಬಾಯನ್ನು ಮುಚ್ಚಿಕೊಂಡ; ದೇವರ ಕೋಣೆಯಿಂದ ಆಚೆಯ ಕೋಣೆಗೆ ಹೋಗುವ ಹೊಸತಿಲಲ್ಲಿ, ಇವನತ್ತ ಬೆನ್ನುಮಾಡಿ ಕುಳಿತಿದೆ-ದೊಡ್ಡದೊಂದು ಮಂಗನಂತಹ ಆಕೃತಿ! ಮಂಗವೇ ಅದು? ಅಲ್ಲಲ್ಲ ಸತ್ತುಹೋದ ಸೋದರತ್ತೆ! ಅವನ ಸೋದರತ್ತೆ, ಹಾಸಿಗೆಯಲ್ಲಿ ಮಲಗಿ ಬೇಸರ ಬಂದಾಗ, ಹೊರಗಿನ ಬೆಳಕು ನೋಡಲೆಂದು, ಹೀಗೆಯೇ, ಹೊಸತಿಲ ಬಳಿ ಮೈ ಮುದುಡಿ ಕೂಡ್ರುತ್ತಿದ್ದಳು-ಬೋಳುತಲೆಯ ಮೇಲೆ ಬಿಳಿಯ ಸೆರಗನ್ನು ಹೊತ್ತು. ಹೌದೌದು, ಸೋದರತ್ತೆಯೇ!
ಇವನ ಹೆಜ್ಜೆಯ ಸುಳಿವು ಹತ್ತಿತೇನೋ ಎಂಬಂತೆ ಅವನ ದಾರಿಗಟ್ಟಿಕೂತ ಪ್ರಾಣಿ ಒಮ್ಮಿಗೆಲೇ ಜಿಗಿದು ಇವನ ಕಡೆ ಮೋರೆಮಾಡಿ ಕುಳಿತು, ‘ಖೆಕ್’ ಎಂದಿತು. ಓ! ಹೌದು, ಮಂಗ-ಹೆಗ್ಗೋಡಗ! ಇಷ್ಟು ಸಂಜೆಯ ಹೊತ್ತಿನಲ್ಲಿ, ಹೀಗೆ ಬಿಟ್ಟ ಮನೆಯಲ್ಲಿ. ಈ ಮಂಗ ಹೇಗೆ ಬಂದಿತೋ! ಇದೇಕೆ ತನ್ನ ದಾರಿಕಟ್ಟಿ ಕೂತಿತೋ! ಇಲ್ಲದ ಧೈರ್ಯ ತಂದುಕೊಂಡು ಅಥವಾ ಭೀತಿ ಮೊದಲಿಗಿಂತ ಹೆಚ್ಚೇ ಆಗಿಯೋ ‘ಹೆತ್’ ಎಂದ, ಮಂಗನನ್ನು ಓಡಿಸಲೆಂಬಂತೆ ಮಂಗ ಕೂತಲ್ಲಿಂದ ಹಂದಾಡಲಿಲ್ಲ. ಇನ್ನೊಮ್ಮೆ ‘ಖಿಸ್’ ಎಂದು ಹಲ್ಲು ಕಿಸಿದಿತು ಅಷ್ಟೇ. ಇವನ ಎದೆ ‘ಝಲ್’ ಎಂದಿತು. ಕತ್ತಲೆಯ ಹೊತ್ತು! ಬಿಟ್ಟ ಮನೆ! ದೇವರ ಕೋಣೆಯಿಂದ ಮುಂದೆ ಹೋಗುವ ದಾರಿಗಟ್ಟಿ ಎಲ್ಲಿಂದಲೋ ಓಡಿ ಬಂದ ಮಂಗ ಕುಳಿತಿದೆ. ತನ್ನಂತೆಯೇ ಯಾವುದೋ ಅನಪೇಕ್ಷಿತ ಕಾರಣದಿಂದ ಈ ಮನೆಯಲ್ಲಿ ಸಿಕ್ಕಿಕೊಂಡಿದೆ. ಇನ್ನೂ ಹೆದರಿಸಲು ಹೋದರೆ ಮೊದಲೇ ಹೆದರಿದ ಮಂಗ ಇನ್ನಷ್ಟು ಕೆರಳಿ ತನ್ನ ಮೈಮೇಲೇ ಜಿಗಿಯ ಬಹುದೇನೋ, ಮಂಗನ ಉಗುರು ತಾಗಿದರೆ ಹುಚ್ಚು ಹಿಡಿಯುತ್ತದಂತೆ. ಗೋಕರ್ಣದ ಅಪ್ಪಣ್ಣ ಭಟ್ಟರ ಹುಡುಗನಿಗೆ ಹುಚ್ಚು ಹಿಡಿದದ್ದೇ ಹಾಗಂತೆ! ಅವಸರ ಅವಸರವಾಗಿ ಹಿಂದಿನ ಹೆಜ್ಜೆಗಳಿಂದ ಅವನು ಅಡುಗೆ ಮೆನೆ ಸೇರಿದ. ಸೇರಿದ್ದೇ ಭಡಭಡನೆ ದೇವರಕೋಣೆ-ಅಡುಗೆ ಮನೆಗಳ ನಡುವಿನ ಕದ ಮುಚ್ಚಿಕೊಂಡ. ಅಗಳಿ ಹಾಕಬೇಕು ಎಂದರೆ ಕದಕ್ಕೆ ಅಗಳಿಯೇ ಇರಲಿಲ್ಲ. (ಹಳೇ ಮನೆಯ ಹಾಳು ಕದಗಳೇ!) ತನ್ನ ಮೈಯೆಲ್ಲ ಧಾರಾಳವಾಗಿ ಬೆವೆತಿದೆ ಎಂಬ ಅರಿವಿನಿಂದ ಇನ್ನಷ್ಟು ಹೆದರಿದ. ಹೊತ್ತು ಹೋದಂತೆ ಒಳಗಿನ ಕೋಣೆಯ ಹೊಸತಿಲಲ್ಲಿ ಕೂತ ಮಂಗ ದೊಡ್ಡದಾಗುತ್ತ ನಡಿದಿದೆ ಎಂಬ ಭಾಸವಾತ್ತಿದ್ದಂತೆ, ಮಂಗ ‘ಘೂ””ಕ್’ ಎಂದಿತು. ಎದೆಯಲ್ಲಿ ಭೀತಿಯ ತೆರೆ ಎದ್ದಿತು. ಓಡೋಡಿ ಕಿಡಕಿಗೆ ಬಂದ. ಕಿಡಕಿಯ ಹೊರಗಿನ ನೀರ ಹಲಸಿನ ಮರದ ಕೆಳಗೆ, ಇವನತ್ತ ಬೆನ್ನುಮಾಡಿ ಕುಳಿತು ದೇವಿ ಏನನ್ನೋ ಮಾಡುತ್ತಿದ್ದಳು. ಇವನು ಹಿಂದು-ಮುಂದು ವಿಚಾರ ಮಾಡದೇ “ದೇವಿ” ಎಂದು ಕರೆದ. ಹಾಗೆ ಕರೆದ ಮೇಲೆ ಅವಳು ‘ದೇವಿ’ ಎಂಬುದನ್ನು ಅರಿತವನಂತೆ ಒಮ್ಮೆಲೇ ಅವಳ ದೃಷ್ಟಿಯಿಂದ ತನ್ನನ್ನು ಅಡಗಿಸಿಕೊಳ್ಳಲು ತಲೆ ತಗ್ಗಿಸಿದ. ತನ್ನ ಈ ಕೃತ್ಯದಿಂದ ತಾನೇ ನಾಚಿಕೆಪಟ್ಟಾಗ, ‘ದೇವಿಯನ್ನು ಕರೆದಾದರೂ ಏನು ಹೇಳಲಿ? ಮುಂದಿನ ಕೋಣೆಯಲ್ಲಿ ಮಂಗ ಬಂದು ಕುಳಿತಿದೆ. ನನ್ನ ದಾರಿ ಅಡ್ಡಗಟ್ಟಿದೆ. ಮಂಗನಿಗೆ ಹೆದರಿ ನಾನು ಹೊರಗೆ ಬರಲಾಗದೇ ಇಲ್ಲೇ ಉಳಿದಿದ್ದೇನೆ ಎಂದು ಹೇಳಬಹುದಿತ್ತೇ?’ ಎನ್ನುತ್ತ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡ. ಕಿಡಕಿಯಿಂದ ಓಡಿ ಬಂದು ಮೊಳೆ ಹೊಡೆದು ಭದ್ರಮಾಡಿದ ಕದದ ಹತ್ತಿರವಿದ್ದ ಸ್ಟೂಲಿನ ಮೇಲೆ ಕುಳಿತ. ತಾನು ಕರೆದದ್ದನ್ನು ದೇವಿ ನಿಜಕ್ಕೂ ಕೇಳಿದ್ದರೆ? ತಾನು ಅವಳನ್ನು ಕರೆದು ತಲೆ ತಗ್ಗಿಸಿ ಅಡಗಿದ್ದನ್ನು ಅವಳು ನಿಜಕ್ಕೂ ನೋಡಿದ್ದರೆ? ಇಲ್ಲ. ಇಲ್ಲ. ಕೇಳಿರಲಾರಳು. ನೋಡಿರಲಾರಳು. ಆದರೂ ಸ್ಟೂಲಿನಿಂದ ಎದ್ದು, ತಿರುಗಿ ಕಿಡಕಿಯ ಹತ್ತಿರ ಹೋಗಿ ಗೋಡೆಗೆ ಅಡ್ಡನಿಂತು ಕಿಡಕಿಯ ಕದ ಎಳೆದುಕೊಂಡ. ಕೋಣೆಯೊಳಗಿನ ಕತ್ತಲೆ ಒಮ್ಮಿಗೆಲೇ ಹೆಚ್ಚಾಯಿತು. ಅಂತೆಯೇ ಜೀವಕ್ಕೆ ಹಿಡಿದ ಭೀತಿಯೂ ಕೂಡ. ಮುಂದಿನ ಬಾಗಿಲಿನಿಂದ ಹೋಗೋಣವೇ? ಮಂಗ ದಾರಿಕಟ್ಟಿದೆ. ಈಗ ಹೊರಗೆ ಹೋಗಲು ಒಂದೇ ಉಪಾಯ. ಆಗ ಅರ್ಧ ಗಂಟೆಯವರೆಗೆ ಬೆವರು ಸುರಿಸುತ್ತ ಮೊಳೆ ಹೊಡೆಹೊಡೆದು ಗಟ್ಟಿಯಾಗಿ ಜೋಡಿಸಿದ ಕದಗಳನ್ನು ತೆರೆಯುವುದು. ಆದರೆ ಆಗ ಯಾವುದೇ ಸಿಟ್ಟಿನ ಭರದಲ್ಲಿ ಕದಕ್ಕೆ ಬಡೆದ ಮೊಳೆಗಳನ್ನು ತೆಗೆಯುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಹಾಗೆ ತೆಗೆಯುವ ಸಾಧನವನ್ನೂ ಜೊತೆಗೆ ತಂದಿರಲಿಲ್ಲ. ಉಳಿದುದೊಂದೇ ದಾರಿ. ಎರಡೂ ಕದಗಳು ಒಂದಕ್ಕೊಂದು ಹೊಂದಿಕೊಳ್ಳುವ ಸಂಧಿ ಭಾಗದಲ್ಲಿ ಪಟ್ಟಿಗಳನ್ನು ಕರಗಸದಿಂದ ಕೊಯ್ಯುವದು. ಹಾಗೇ ಕೊಯ್ಯಹತ್ತಿದ. ಹಾಗೆ ಕೊಯ್ಯುತ್ತಿದ್ದಂತೆ, ಹಿಂದಿನ ಮನೆಯಲ್ಲಿ ಅದೇ ಜಗಲಿ ಏರಿ ಬಂದ ಶಂಕರರಾಯರು ತಮ್ಮ ಹೆಂಡತಿಗೋ, ಇನ್ನಾರಿಗೋ ಹೇಳಿದ ಮಾತುಗಳು ಕೇಳಿಬಂದವು: “ಬಿಟ್ಟ ಮನೆಯಲ್ಲಿ ಇವತ್ತು ಮಂಗ ಹೊಕ್ಕಿತ್ತೆಂದು ತೋರುತ್ತದೆ. ಅವರ ಅಂಗಳ ಹಾದು ಬರುವಾಗ, ಕಟಕಟೆಯ ಸರಳುಗಳನ್ನು ಹತ್ತಿ ಮಾಡಿನ ಕಿಂಡಿಯೊಳಗಿಂದ ಹೊರಗೆ ಬರುವುದು ಕಂಡಿತು.” ಓಹೋ! ಒಳಗೆ ಕಂಡದ್ದು ಮಂಗನೆ ಹಾಗಾದರೆ! ಸೋದರತ್ತೆಯ ಭೂತ ಅಲ್ಲ ಹಾಗಾದರೆ! ಅಹುದಲ್ಲ, ತಾನು ಆಗ ಪಟ್ಟಿಗಳಿಗೆ ಮೊಳೆ ಹೊಡೆಯುವಾಗ “ಈ ಮಂಗಗಳಿಗೆ ಬಂದ ರೋಗವೇ. ಮನೆ ಮಾಡಿನ ಮೇಲೇ ಆಡ್ತಾವಲ್ಲ ಇವು” ಎಂದು ದೇವಿ ಎಂದದ್ದು ಈಗ ಮೆಲ್ಲನೆ ನೆನಪಾಯಿತು. ಮನೆಯನ್ನು ಹೊಗುವಾಗ ಜಗಲಿಯ ಮಾಡಿನ ಮೇಲೆ ತೆಂಗಿನ ಹೆಡೆಯೋ, ಕಾಯೋ ಬಿದ್ದು ಹಂಚು ಒಡೆದುಹೋಗಿ ಕಂಡಿ ಆದದ್ದನ್ನು ನೋಡಿದ್ದೂ ಈಗ ನೆನಪಿಗೆ ಬಂತು. ಮನೆಯ ಮಾಡಿನ ಮೇಲೆ ಆಡುತ್ತಿದ್ದ ಮಂಗ ಈ ಕಂಡಿಯೊಳಗಿಂದ ಹೇಗೋ ಒಳಗೆ ಬಿದ್ದಿರಬೇಕು. ಹೊರಗೆ ಹೋಗುವ ದಾರಿ ತಿಳಿಯದೇ ಒಳಗೆ ಬಂದಿರಬೇಕು. ಓಹ್! ಸುಳ್ಳೇ ಹೆದರಿದೆನಲ್ಲ, ಎಂದುಕೊಳ್ಳುತ್ತಿರುವಾಗಲೇ ಕದಕ್ಕೆ ಬಡೆದ ಮೂರೂ ಪಟ್ಟಿಗಳೂ ತುಂಡಾಗಿದ್ದವು. ಆಗಿನಿಂದಲೂ ಭದ್ರವಾಗಿ ಮುಚ್ಚಿಕೊಂಡ ಕದಗಳು ಮೆಲ್ಲನೆ ತೆರೆದಿದ್ದವು. ಗಾಳಿಯಾಡದೇ ಉಸಿರುಗಟ್ಟುವ, ಕತ್ತಲೆ ತುಂಬಿದ ಅಡುಗೆಮನೆಯಲ್ಲಿ ಹೊರಗಿನ ತಂಪು, ಸ್ವಚ್ಚ ಗಾಳಿಯ ಸುಳಿ ಬಂದಿತು. ಅದರ ಹಿಂದೆಯೇ ದೇವಿ ಒಳಗೆ ಬಂದಳು. “ಆಗ ನೀವು ಕಿಡಕಿಯೊಳಗಿಂದ ಕರೆದಾಗಲೇ ನನಗೆ ತಿಳಿದಿತ್ತು ಒಡೆಯಾ” ಎನ್ನುತ್ತ ತನ್ನ ಹಿಂದೆಯೇ ಕದ ಮುಚ್ಚಿಕೊಂಡಳು.
*****
೧೯೬೪
ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.