ಅಕ್ಕ ಆ ಹಿತ್ತಲಿನ ಅಂಗಳದಲ್ಲಿ ನಿಂತಿದಾಳೆ. ಅವಳ ಕಾಲಿನ ಕೆಳಗೆ ಕಟ್ಟಿರುವೆಗಳ ಸಾಲು ಹಬ್ಬಿದೆ. ಮೇಲೆ ಆಕಾಶ ನಗ್ತಿದೆ. ಮುಂದೆ ಚೆನ್ನಾಗಿ ಓದು ಮಾರಾಯ ಅಂತ ಅಕ್ಕ ನನಗೆ ಹೇಳ್ತಾಳೆ. ಸೋದರತ್ತ್ತೆಯ ಕಣ್ಣಿಗೆ ಕಾಣಿಸದ ಹಾಗೆ ನನ್ನ ಕೈಯಲ್ಲಿ ಇಪ್ಪತ್ತೈದು ರೂಪಾಯಿ ಇಡ್ತಾಳೆ. ‘ತಗೋ, ಖರ್ಚಿಗೆ ಆಗುತ್ತೆ’ ಅಂತ ನನ್ನ ಕೈ ಅದುಮಿದಾಳೆ. ನಾನು ಮುಗ್ಧನ ಹಾಗೆ ನಟಿಸಿದೆನಾ ಅಂತ ಈಗ ಅನ್ನಿಸ್ತಿದೆ.
ಅಕ್ಕ ಸಾಗರದ ಬಸ್ ನಿಲ್ದಾಣದಲ್ಲಿ ಇವತ್ತು ಸಂಜೆ ನಾಲ್ಕೂವರೆಗೆ ಸಿಗ್ತಾಳೆ. ಅವಳಿಗೆ ನನ್ನ ಮೊಟ್ಟ ಮೊದಲ ಕವನವನ್ನು ತೋರಿಸ್ಬೇಕು. ನನ್ನ ಹೋಮ್‌ವರ್ಕ್ ಪುಸ್ತಕದ ಹಾಳೆಯನ್ನೇ ಹರಿದು ಕವನ ಬರ್‍ದಿದೇನೆ. ದಾವಣಗೆರೆಯಲ್ಲಿ ನನ್ನ ಅಗ್ದಿ ಪ್ರಿಯ ಸ್ನೇಹಿತ ಗೊತ್ತಿಲ್ವ… ರಾಜು. ಅವನ ಮೇಲೆ. ಮೊದಲ ಪುಟದಲ್ಲಿ ‘ರಾಜುವೆಂದರೆ…’ಅಂತ ಆರಂಭ. ಎರಡನೆಯ ಪುಟದಲ್ಲಿ ‘ಜುಮ್ಮೆನ್ನುತ್ತದೆ ಮೈ….’ ಅಂತ. ಮೊದಲ ಪುಟದ ‘ರಾ’ ಅಕ್ಷರ ದೊಡ್ಡದಾಗಿದೆ. ಅದನ್ನು ಮೂರು ಬದಿಗಳಲ್ಲಿ ಕತ್ತರಿಸಿ ಕಿಟಕಿ ಥರ ಮಾಡಿದೇನೆ. ತೆರೆದರೆ ಎರಡನೆಯ ಪುಟದಲ್ಲಿ ದೊಡ್ಡದಾಗಿ ಬರೆದಿರೋ ‘ಜು’ ಕಾಣುತ್ತೆ.
ಗೆಳತಿಯರ ಜೊತೆ ಅಕ್ಕ ಬಸ್ಸಿನಲ್ಲಿ ಕೂತಿದಾಳೆ. ಅವಳ ಮುಖ ನೋಡಿದ ಕೂಡಲೇ ನನಗೆ ಒಂಥರ ಹಿತ. ಅವಳಿಗೆ ನಾಚುತ್ತ ಕವನ ತೋರ್‍ಸಿದೇನೆ. ಅವಳು ಹಾಗೇ ಓದಿದಾಳೆ. ‘ಚೆನ್ನಾಗಿದೆ ಕಣೋ, ಇನ್ನೂ ಬರಿ.ಬರೆದ ಕೂಡ್ಲೇ ನಂಕೊಡು’ ಅಂದಿದಾಳೆ. ಗೆಳತಿಯರಿಗೆ ನನ್ನ ತಮ್ಮ ಅಂದಿದಾಳೆ. ಬಸ್ಸು ಹೊರಟಿದೆ.
ಅಕ್ಕ ಶಿವಮೊಗ್ಗದಲ್ಲಿ ಇದಾಳೆ. ವಠಾರದಂಥ ಮನೆ. ಅಕ್ಕ ಅಲ್ಲಿ ಬಟ್ಟೆ ತೊಳೀತಾ ಇದಾಳೆ. ಅವಳ ಪುಟ್ಟ ಮಗ ಪ್ಲಾಸ್ಟಿಕ್ ತೊಟ್ಟೆಯಲ್ಲಿ ನೀರು ತುಂಬಿಸಿ ಸಣ್ಣ ತೂತಿನಿಂದ ಹಾರಿಸ್ತಾ ನಗ್ತಿದಾನೆ. ತುಂಬಾ ತುಂಟ.
ಅಕ್ಕ ದುರ್ಗಿಗುಡಿ ಹತ್ರ ಮನೆ ಮಾಡಿದಾಳೆ. ಮಗ ಪಕ್ಕದ ಮನೇಲಿ ಚಿಕನ್ ತಿನ್ನೋದಕ್ಕೆ ಹೋಗಿದಾನೆ.
ಅಕ್ಕ ಶಿರವಂತೆ ದೇವಸ್ಥಾನದಲ್ಲಿ ಇದಾಳೆ. ಎಷ್ಟು ಛೆಂದ ಸಿಂಗಾರ ಮಾಡಿದಾರೆ. ನಾನು ಹೊಸ ಪ್ಯಾಂಟು ಶರ್ಟು ಹಾಕಿಕೊಂಡು ಮೊಗಸಾಲೆಯಲ್ಲಿ ಕೂತಿದೇನೆ. ಮದುವೆ ಮುನ್ನಾ ದಿನದ ಊಟ ಗಡದ್ದು ಮಾಡಿದೇನೆ. ನಾಗಸ್ವರದವರು ತಯಾರಾಗಿದಾರೆ. ಒಳಗೆ, ಹೊರಗೆ ಗಲಾಟೆ. ಜೂನ್ ತಿಂಗಳ ಮೊದಲ ವಾರ. ದೇವಸ್ಥಾನವನ್ನೇ ಮುಳುಗಿಸಿಬಿಡೋ ಹಾಗೆ ಮಳೆ ಹೊಯ್ತಾ ಇದೆ.
ಎಲೆ ಅಡಿಕೆ ಹಾಕಿದ ನನಗೆ ಸುಣ್ಣ ಜಾಸಿ ಹಾಕಿಕೊಂಡದ್ದು ತಿಳಿದಿಲ್ಲ . ಸಣ್ಣಗೆ ತಲೆ ತಿರುಗ್ತಾ ಇದೆ. ಇಲ್ಲ ಹಾಗೇ ಬಿದ್ದಿದೇನೆ. ಅಕ್ಕ ಧಾವಿಸಿದಾಳೆ. ಅಲ್ಲಿ ದಿಬ್ಬಣ ಬರ್‍ತಾ ಇದೆ. ಇಲ್ಲಿ ನಾನು ಹೀಗೆ ಬಿದ್ದು ಅಕ್ಕನಿಗೆ ಗಾಬರಿ. ಅಮ್ಮ ಬಂದು ನನಗೆ ನೀರು ಚಿಮುಕಿಸಿದ್ದಾಳೆ. ನನಗೆ ಎಚ್ಚರವಾಗಿದೆ. ಕಣ್ಣು ಬಿಚ್ಚಿದರೆ ಅಕ್ಕ ಎಷ್ಟು ಮುದ್ದಾಗಿ ಕಾಣ್ತಿದಾಳೆ. ಅವಳಿಗೆ ನಾಳೆ ಬೆಳಗ್ಗೆಯಿಂದ ಎಂಥ ಹೊಸ ಬದುಕು ಸಿಗ್ತಾ ಇದೆ. ಅವಳು ಬೆಂಗಳೂರಿನಲ್ಲಿ ಎಷ್ಟು ಸುಖವಾಗಿ ಇರೋದಕ್ಕೆ ಹೋಗ್ತಾಳೆ. ನಾನು ಅವಳ ಮನೆಗೆ ಹೋದ್ರೆ ಬೆಂಗಳೂರು ನೋಡಬಹುದು.
ಮದುವೆಯ ಕ್ಷಣದಲ್ಲಿ ನಾನು, ಅಣ್ಣ, ಅಪ್ಪ, ಅಮ್ಮ, ತಂಗಿ ಎಲ್ಲರೂ ಒಂದೊಂದ್ಕಡೆ ಕೂತಿದೇವೆ. ಇಲ್ಲ. ಅಣ್ಣ ಅಲ್ಲಿ ಕಂಬಕ್ಕೆ ಒರಗಿ ನಿಂತಿದ್ದ.
ಅಕ್ಕ ಬೆಂಗಳೂರಿನಲ್ಲಿದಾಳೆ. ನಾನು ಅಪ್ಪ, ಅಮ್ಮ, ತಂಗಿ ಜೊತೆ ಪೊನ್ನಂಪೇಟೆಯಿಂದ ಬೆಂಗಳೂರಿಗೆ ಹೋಗಿದೇನೆ. ವೈಯಾಲಿಕಾವಲ್‌ನಲ್ಲಿ ಅವಳ ಮನೆ. ರಿಕ್ಷಾ ನಿಲ್ಲಿಸಿದ ಮೇಲೂ ನಮಗೆ ಮನೆ ಗೊತ್ತಾಗಿಲ್ಲ. ಕೊನೆಗೆ ಫೋನ್ ಮಾಡಿ ಹೋದೆವು. ಎಂಥ ಭವ್ಯ ಮನೆ. ಮೂರು ಕಾರು. ಬೈಕು. ಭಯಂಕರ ದೊಡ್ಡ ಡೆಕ್ ರೇಡಿಯೋ. ಅದರಲ್ಲಿ ಎಂಥ ಸ್ಪಷ್ಟ ದನಿ ಬರುತ್ತೆ. ಎಷ್ಟೆಲ್ಲ ಕ್ಯಾಸೆಟ್‌ಗಳು. ಎರಡು ಫೋನ್. ಭಾವನ ತಮ್ಮ ಯಾವಾಗ್ಲೂ ಸಿಂಗಾಪುರಕ್ಕೆ ಫೋನ್ ಮಾಡ್ತಿರ್‍ತಾನೆ. ಭಾವ ಯಾವಾಗ್ಲೂ ಸೂಟ್‌ಕೇಸ್ ಹಿಡಿದು ಹೋಗ್ತಿರ್‍ತಾರೆ. ಕೊನೆಗೆ ಮಲ್ಲೇಶ್ವರದಲ್ಲಿ ದೊಡ್ಡ ರೆಡಿಮೇಡ್ ಶಾಪ್. ಅಲ್ಲಿ ಅಕ್ಕ ನನಗೆ ಯೂನಿಫಾರ್ಮ್ ಕೊಡಿಸಿದಾಳೆ.
ಸಪ್ನಾದಲ್ಲಿ ಸಿನಿಮಾ ತೋರಿಸಿದಾಳೆ. ಕಾವೇರಿಯಲ್ಲಿ ಬುಲೆಟ್ ಟ್ರೈನ್ ಸಿನಿಮಾ ನೋಡಿ ಬೆರಗಾಗಿದೇನೆ.
ಅಕ್ಕ ಯಾವಾಗ್ಲೂ ನಗ್ತಾ ನಗ್ತಾ ತನ್ನ ಮೈದುನರನ್ನ , ಅತ್ತೇನ ನಗಿಸ್ತಾಳೆ. ನಮಗೆ ಛಲೋ ಊಟ ಹಾಕಿದಾಳೆ. ಮೆತ್ತಗಿನ ಹಾಸಿಗೆಯಲ್ಲಿ ಮಲಗಿಸಿದಾಳೆ. ಪೊಮೇರಿಯನ್ ನಾಯಿಗೆ ಸ್ನಾನ ಮಾಡಿಸ್ತಾಳೆ.
ಅಕ್ಕ ಬೆಂಗಳೂರಿನಲ್ಲಿ ಇದಾಳೆ. ಮಾಗಡಿ ರಸ್ತೆಯಲ್ಲಿ ಔಟ್‌ಹೌಸ್. ಚಿಕ್ಕ ಮನೆ. ಆದ್ರೂ ಎಷ್ಟು ದೊಡ್ಡ ರೂಮುಗಳು. ಅಕ್ಕನ ಮಗನಿಗೆ ಆಡೋದಕ್ಕೆ ಎಷ್ಟು ಜಾಗ ಇದೆ. ನಾನು ಬಂದಕೂಡಲೇ ನನ್ನ ಹಿಡ್ಕೊಂಡಿದಾನೆ. ಸ್ನಾನ ಮಾಡೋವಾಗ ನನ್ನ ಜನಿವಾರ ನೋಡಿಬಿಟ್ಟ. ಅದೆಂಥ ಆಕರ್ಷಣೆ ಅಂತ ಗೊತ್ತಿಲ್ಲ. ಮಾಮ, ನಂಕೊಡು ಅದರಲ್ಲಿ ಆಟ ಆಡ್ತೇನೆ ಅಂತ ಕೇಳಿದಾನೆ. ಮದುವೆಯ ಹೊತ್ತಿನಲ್ಲಿ ಹಾಕಿಕೊಂಡದ್ದು. ಅದಕ್ಕೆ ಅರ್ಥವೇ ಇಲ್ಲವೇನೋ ಅಂತ ಎಷ್ಟೋ ಸಲ ಅನ್ನಿಸಿದೆ.
ಅಕ್ಕ ಶಿರಸಿಗೆ ಬಂದಿದಾಳೆ. ಜಗಲಿಯಲ್ಲಿ ಮಲಗಿದಾಳೆ. ಹೊರಗೆ ದಟ್ಟ ಬಿಸಿಲು. ಗಾಜಿನ ಹೆಂಚಿನಿಂದ ತೂರಿಬಂದ ಬಿಸಿಲುಚೌಕ ಅವಳ ಪಕ್ಕದಲ್ಲೇ ಬಿದ್ದುಕೊಂಡಿದೆ. ಅವಳಿಗೆ ತಂಪು ಇಷ್ಟ. ಅವಳಿಗೆ ತಂಗಾಳಿ ಇಷ್ಟ.
ಅಕ್ಕ ಮಣಿಪಾಲ ಸೆಂಟರ್‌ನಲ್ಲಿ ಕೆಲಸ ಮಾಡ್ತಿದಾಳೆ. ಅಕ್ಕ ಲೂನಾದಲ್ಲಿ ಆಫೀಸಿಗೆ ಹೋಗ್ತಾಳೆ. ಅಕ್ಕನ ಮುಖದಲ್ಲಿ ಎಂಥ ಕಳೆ! ಅವಳಿಗೆ ಕೆಲಸ ಮಾಡೋದಕ್ಕೆ ಇರೋ ಆಸಕ್ತಿ ನೋಡಿ ನಾನು ಬೆರಗಾಗ್ತೇನೆ.
ಅಕ್ಕ ಈಗ ವಿಕ್ಟೋರಿಯಾ ಆಸ್ಪತ್ರೇಲಿ ಇದಾಳೆ. ನಾನು ಚಾಮರಾಜಪೇಟೆ ಆಫೀಸಿನಿಂದ ದಿನವೂ ಹೋಗ್ತೇನೆ. ಮಾತು, ಊಟ. ಆಸ್ಪತ್ರೆ ಜೋಕ್‌ಗಳನ್ನು ಅಕ್ಕ ಹೇಳಿ ನಗ್ತಾಳೆ. ನಾನು ಉಕ್ಕಿದ ಹಾಲನ್ನು ಸುಡ್ತಾ ಇರೋ ಹೀಟರ್ ಹಬ್ಬಿಸಿದ ವಾಸನೆ ಹೀರುತ್ತ ಅಕ್ಕನನ್ನು ನೋಡ್ತೇನೆ. ತಂಗಿ,ಭಾವ,ಅಣ್ಣ ಎಲ್ರೂ ಬರ್‍ತಿದಾರೆ. ಅಮ್ಮನಂತೂ ಅಲ್ಲೇ ಇರ್‍ತಾಳೆ.
ಹೊರಗೆ ಬಂದಾಗ ಅಮ್ಮ ಹೇಳ್ತಿದಾಳೆ. ಅಕ್ಕ ಬೈಯ್ಯೋದನ್ನು ಅಮ್ಮ ಬಾಯಿಮುಚ್ಚಿಕೊಂಡು ಸಹಿಸ್ತಾಳೆ. ‘ಎಂಥ ಮಾಡದು, ಅವಳಿಗೆ ಬೈಯ್ತಾ ಇದೀನಿ ಅಂತ್ಲೇ ಗೊತ್ತಾಗಲ್ಲ. ಈ ಔಷಧೀನೇ ಹಂಗಂತೆ. ಇರೋವಷ್ಟು ದಿನ ಅವಳ ಜೊತೆಗೆ ಇರ್‍ತೀನಲ್ಲ ಅನ್ನೋದೇ ನಂಗೆ ಸಮಾಧಾನ’ ಅಂತ ಬಿಕ್ಕುತ್ತಾಳೆ.
ಅಕ್ಕ ಈಗ ಕಿಡ್ವಾಯಿ ಆಸ್ಪತ್ರೇಲಿ ಇದಾಳೆ. ಒಂದೇ ಒಂದು ಡೋಸ್. ಕೇವಲ ಮೂವತ್ತು ಮಿಲಿ ಲೀಟರ್. ಒಂದೇ ಗುಟುಕು. ಎರಡೂವರೆ ಸಾವಿರ ರೂಪಾಯಿ. ಎಲ್ಲಾ ಟೆಸ್ಟುಗಳೂ ಮುಗಿದ ಮೇಲೆ, ಆ ರೂಮಿನ ಈಚೆ ನಾವು ನಿಂತಿದ್ದೇವೆ. ಕಟಕಟೆ ಥರ ಮರದ ಬೇಲಿ. ಆಚೆ ಅವಳು ನಮ್ಮನ್ನು ನೋಡ್ತಾನೇ ಅದನ್ನು ಒಂದೇ ಸಲ ಕುಡೀತಾಳೆ. ಅವಳು ಒಳಗೆ ಹೋದ ಮೇಲೆ ರೂಮಿನ ಬಾಗಿಲು ಮುಚ್ತಾರೆ.
ಇಪ್ಪತ್ತನಾಲ್ಕು ಗಂಟೆ ಅವಳು ಒಬ್ಬಳೇ ಇರಬೇಕು. ಅವಳು, ಅವಳ ಔಷಧಿ. ನಾಲ್ಕು ಗೋಡೆಗಳು. ಒಂದು ಮಂಚ. ಗಾಜಿನೀಚೆ ಅವಳನ್ನು ನೋಡುವ ವೈದ್ಯರು. ನರ್ಸುಗಳು. ಆ ದಿನವಿಡೀ ಅವಳ ಹತ್ರ ಯಾರಾದ್ರೂ ಹೋದ್ರಾ, ಮಾತಾಡಿಸಿದ್ರಾ ಗೊತ್ತಿಲ್ಲ.
ಅಕ್ಕ ಹೊರಗೆ ಬಂದಿದಾಳೆ. ಮುಖದಲ್ಲಿ ಯಾವ ಭಾವ ಇದೆ ಅಂತ ಗೊತ್ತಾಗ್ತಿಲ್ಲ. ಮಾರಾಯಾ, ಈ ಟ್ರೀಟ್‌ಮೆಂಟೂ ಮುಗೀತಲ್ಲ ಅಂತ ನಗ್ತಾಳೆ.
ಅಕ್ಕ ಮನೆಗೆ ಬಂದಿದಾಳೆ. ಹೊರರೂಮಿನಲ್ಲಿರೋ ಮಂಚದ ಮೇಲೆ ಕಾಲು ಚಾಚಿ ಕೂತಿದಾಳೆ. ಹೊರಗೆ ತರಕಾರಿ ಗಾಡಿ ಬಂದಾಗ ಇವಳನ್ನು ಕರೀತಾಳೆ. ಫ್ರೆಶ್ ತರಕಾರಿ ತಗೊಂಡ್ರೇನೇ ಅವಳಿಗೆ ತೃಪ್ತಿ.
ಅವಳಿಗೆ ಒಳ್ಳೇ ಹುಳಿ,ಸಾಗು,ಪೂರಿ ಇಷ್ಟ.
ಅವಳಿಗೆ ಒಳ್ಳೇ ಸಿನಿಮಾ ಇಷ್ಟ. ಒಳ್ಳೇ ಹಾಡು ಇಷ್ಟ. ಒಳ್ಳೇ ಚೂಡಿದಾರ ಇಷ್ಟ. ಅವಳಿಗೆ ತಮಾಷೆ ಇಷ್ಟ. ಅವಳಿಗೆ ಮಾತು ಇಷ್ಟ.
ಎದುರಿಗಿರೋ ಶೋಕೇಸಿನಲ್ಲಿ ಇಟ್ಟಿರೋ ಪುಟ್ಟ ಟಿವೀನ ನೋಡ್ತಿರ್‍ತಾಳೆ. ಪಕ್ಕದಲ್ಲೇ ಇರೋ ಫೋನಿನಲ್ಲಿ ಅಣ್ಣನ ಹತ್ರ ಮಾತಾಡ್ತಾಳೆ. ತಂಗಿ ಹತ್ರ ಮಾತಾಡ್ತಾಳೆ. ನನ್ನ ಗೆಳೆಯರನ್ನು ಮಾತಾಡಿಸಿ ಮೆಸೇಜು ತಗೋತಾಳೆ. ನಿನಗೆ ಇಂತಿಂಥವರು ಫೋನ್ ಮಾಡಿದ್ರು ಅಂತ ವರದಿ ಒಪ್ಪಿಸ್ತಾಳೆ. ಅವಳಿಗೆ ನನ್ನ ಬಗ್ಗೆ ಕಾಳಜಿ.
ನಾಟಿ ಕ್ಯಾಪ್ಸಿಕಂ ತಗಂಡ್ರೆ ಚೆನ್ನಾಗಿರುತ್ತೆ ಕಣೋ, ಹೈಬ್ರಿಡ್ ಬೇಡ. ಸುಮ್ನೆ ರುಚೀನೇ ಇರಲ್ಲ. ಚಿಕ್ಕ ಚಿಕ್ಕ ಕ್ಯಾಪ್ಸಿಕಂನಲ್ಲಿ ಮಸಾಲಾ ತುಂಬಿ ಗ್ರೇವಿಯಲ್ಲಿ ಕುದಿಸಿದ್ರೆ ಆಯ್ತು. ನಿಂಗೆ ಇಷ್ಟೆಲ್ಲ ಅಡುಗೆ ಮಾಡಕ್ಕೆ ಬರುತ್ತೆ ಅಂತೀಯ, ಕ್ಯಾಪ್ಸಿಕಂ ಮಸಾಲಾ ಬರಲ್ವ.ರಮ್ಯಾಂಗೂ ಎಷ್ಟೆಲ್ಲ ಅಡುಗೆ ಗೊತ್ತು. ಮೊನ್ನೆ ಅವರೇಕಾಯಿದು ಕೆಂಪು ಮೆಣಸಿನಕಾಯಿ ಮಸಾಲಾ ಮಾಡಿದ್ಲು, ಎಷ್ಟು ರುಚಿಯಾಗಿತ್ತು ಅಂತೀಯ…
ಮಧ್ಯಾಹ್ನ ಹನ್ನೆರಡೂವರೆ. ನಿಮ್ಹಾನ್ಸ್ ಔಟ್‌ಪೇಶೆಂಟ್ ವಿಭಾಗದಲ್ಲಿ ಅಕ್ಕ ಕೂತಿದಾಳೆ. ಎದುರಿಗೆ ಪಿ ಜಿ ಕೋರ್ಸಿನ ವೈದ್ಯ ಎನ್‌ಕ್ವೈರಿ ಮಾಡ್ತಿದಾನೆ. ‘ನನಗೆ ತಲೆನೋವು ಯಾಕೆ ಬರ್‍ತಿದೆ ಗೊತ್ತ?’ ಅಕ್ಕ ಅವನಿಗೆ ವಿವರಣೆ ನೀಡ್ತಿದಾಳೆ. ಅರೆ, ಅಕ್ಕ ಮಾತಾಡ್ತಿದಾಳೆ! ಎಷ್ಟು ಸ್ಪಷ್ಟವಾಗಿ ತನಗೆ ಯಾವ ಖಾಯಿಲೆ ಇದೆ ಅಂತ ಹೇಳ್ತಿದಾಳೆ.
ಎರಡೂವರೆ. ಅವಳು ರಿಕ್ಷಾದಲ್ಲಿ ಅಮ್ಮನ ಭುಜಕ್ಕೆ ಒರಗಿ ಕುಳಿತಿದಾಳೆ. ಕಿವಿಗೆ ಇನ್ನೂ ಹಿಯರಿಂಗ್ ಏಡ್ ಹಾಕಿಸಿಕೊಳ್ಳದ ಅಮ್ಮನಿಗೆ ಅವಳು ಮಾತಾಡ್ತಾ ಇರೋದು ಸರಿಯಾಗಿ ಕೇಳಿಸ್ತಿಲ್ಲ. ಮಗಳು ಮಾತಾಡಿದ್ದನ್ನೆಲ್ಲ ಅವಳು ಕೇಳಿಸಿಕೊಂಡ ಹಾಗೆ ತಲೆ ಆಡಿಸ್ತಾ ಇದಾಳೆ. ‘ಹೌದು ಭಾಗ್ಯ, ಹೌದು’ ಎಂದು ತಬ್ಬಿಬ್ಬಾಗಿ ಹೇಳ್ತಿದಾಳೆ. ನಾನು ಬಜಾಜ್ ಸ್ಕೂಟರಿನಲ್ಲಿ ರಿಕ್ಷಾದ ಪಕ್ಕದಲ್ಲೇ ಹೋಗ್ತಿದೇನೆ. ಸಿಗ್ನಲುಗಳು ಹಿಂದೆ ಹಿಂದೆ ಜಾರುತ್ತಿವೆ. ಮಳೆ ಬಂದ್ರೂ ಪರವಾ ಇಲ್ಲ. ರೈನ್‌ಕೋಟ್ ಇದೆ. ಅಕ್ಕ ನೆನೆಯಲ್ವಲ್ಲ, ಸಾಕು ಅಂದ್ಕೋತೇನೆ.
ಮೂರು ಗಂಟೆ. ಅಕ್ಕ ಮನೆಗೆ ಬಂದಮೇಲೆ ಒಂದೇ ಸಮ ಮಾತಾಡ್ತಿದಾಳೆ. ‘ನಾಟಿ ಕ್ಯಾಪ್ಸಿಕಂ ತಗೊಂಡು… ಮಸಾಲಾ… ಚಿಕ್ಕದು… ಸ್ವಲ್ಪ ಕುದಿಸಿ.. ನಾಟಿ ಕ್ಯಾಪ್ಸಿಕಂ… ಗೊತ್ತಾತಾ…. ಹಂಗೆ ಗ್ರೇವಿ ಕುದಿಸಿ… ಕ್ಯಾಪ್ಸಿಕಂ ಮಸಾಲಾ… ಗಾಡಿ ಬಂತು… ತಗಂಡು….’
ಅವಳಿಗೆ ಇವತ್ತೇ ಕ್ಯಾಪ್ಸಿಕಂ ಮಸಾಲಾ ಮಾಡಿಕೊಡಬೇಕು.
ಮೂರೂವರೆ.ಅಕ್ಕ ನಿದ್ದೆ ಮಾಡ್ತಿದಾಳೆ.
ನಾಲ್ಕೂವರೆ. ಬಿಸಿಲು ಇಳೀತಾ ಇದೆ. ಅಕ್ಕನ ಮೇಲೆ ಬಿದ್ದ ಬಿಸಿಲಿಗೂ ಎಷ್ಟು ಸೌಂದರ್ಯ ಹಬ್ಬಿಕೊಂಡಿದೆ. ಅಮ್ಮ ಮಾತ್ರ ಮಂಚದ ಕೆಳಗೆ ಕೂತಿದಾಳೆ. ನಾನು ಅಲ್ಲೇ ಮಲಗಿದೇನೆ.
ಐದೂವರೆ. ಆರೂವರೆ. ಏಳೂವರೆ.
ಅಕ್ಕ ನಿದ್ದೆ ಮಾಡ್ತನೇ ಇದಾಳೆ. ಅವಳನ್ನು ಎಬ್ಬಿಸಬೇಕು. ರಮ್ಯಾ ಕಾಯ್ತಿದಾಳೆ. ಅವಳ ಹತ್ರ ಕ್ಯಾಪ್ಸಿಕಂ ಮಸಾಲೆ ಹೇಳಿಸ್ಕೋಬೇಕು.
ಎಂಟೂವರೆ. ಹತ್ತೂವರೆ. ಅಮ್ಮ ಗಾಬರಿಯಾಗಿದಾಳೆ. ಅಕ್ಕನನ್ನು ಮೆಲ್ಲಗೆ ತಟ್ಟಿದೇನೆ. ಅವಳನ್ನು ಹೂವಿನ ಹಾಗೆ ಮುಟ್ಟಿದೇನೆ. ಅವಳ ಕೆನ್ನೆಯನ್ನು ಮೆದುವಾಗಿ ಸವರಿದೇನೆ.‘ಅಕ್ಕ, ಅಕ್ಕಾ’ ಅಂತ ನೆರೆಮನೆಗೆ ಕೇಳದ ಹಾಗೆ ಕರೆದಿದೇನೆ.
ಅಕ್ಕ ಏಳ್ತಾ ಇಲ್ಲ. ಅಮ್ಮ ಬಿಡ್ತಾ ಇಲ್ಲ.
ಹನ್ನೊಂದೂವರೆ. ನಾನು ರಾಮಮೂರ್ತಿ ಮನೆಗೆ ಹೋಗಿ ಮಾರುತಿ ವ್ಯಾನ್ ತಂದಿದೇನೆ. ಭಾವನೂ ಬಂದಿದಾನೆ. ನಾನು, ಅಮ್ಮ, ಭಾವ ಮೂರೂ ಜನ ಅಕ್ಕನನ್ನು ಕರಕೊಂಡು ವ್ಯಾನಿನಲ್ಲಿ ಮಲಗಿಸಿದೇವೆ. ಆಗಲೂ ಅಕ್ಕ ಎದ್ದಿಲ್ಲ.
ಎರಡು ವರ್ಷದಿಂದ ಅಕ್ಕ ಈ ಥರ ಮಲಗಿರ್‍ಲಿಲ್ಲ.
ಅಕ್ಕನಿಗೆ ಮಳೆ ಇಷ್ಟ. ಅಕ್ಕನಿಗೆ ಸಮುದ್ರ ಇಷ್ಟ. ಅಕ್ಕ ಮದ್ರಾಸು ಬೀಚಿನಲ್ಲಿ ನೀರು ಹಾರಿಸ್ತಾ ಇರೋ ಫೋಟೋ ಅಮ್ಮನ ಹತ್ರ ಇದೆ. ಫಿಲ್ಮು ಹಾಳಾಗಿತ್ತೇನೋ. ಅಕ್ಕನ ಚಿತ್ರ ಪೂರಾ ಗುಲಾಬಿ ಬಣ್ಣಕ್ಕೆ ತಿರುಗಿದೆ. ಪರವಾ ಇಲ್ಲ.
ಅಲ್ಲಿ ಸಮುದ್ರ ಕಾಣುತ್ತೆ. ಅಲ್ಲಿ ಅಲೆ ಕಾಣುತ್ತೆ. ಅಲ್ಲಿ ಅಕ್ಕನ ನಗು ಕಾಣ್ಸುತ್ತೆ.
ಅವಳು ಕ್ಯಾಪ್ಸಿಕಂ ಮಸಾಲಾ ಮಾಡೋದು ಹೇಗೆ ಅಂತ ಹೇಳ್ತಿದಾಳೆ. ಮನೆಗೆ ಹೋದ ಕೂಡಲೇ ರಮ್ಯಾಗೆ ಹೇಳಬೇಕು. ಇವತ್ತೇ ಕ್ಯಾಪ್ಸಿಕಂ ಮಸಾಲಾ ಮಾಡಬೇಕು. ಅಕ್ಕನಿಗೆ ಎಷ್ಟು ಚೆನ್ನಾಗಿ ಅಡುಗೆ ಮಾಡಕ್ಕೆ ಬರುತ್ತೆ. ಆದ್ರೂ ಇವತ್ತು ರಮ್ಯಾಗೆ ಅವಳೇ ಎಲ್ಲಾ ಮಾಡೋದಕ್ಕೆ ಹೇಳಬೇಕು. ಬೇಕಾದ್ರೆ ನಾನು ನಾನು ಮಸಾಲೆನ ಕ್ಯಾಪ್ಸಿಕಂನಲ್ಲಿ ಹಗೂರಾಗಿ ತುಂಬ್ತೇನೆ. ಅಕ್ಕನಿಗೆ ಇಷ್ಟ ಆಗೋ ಹಾಗೆ. ಅವಳು ಕಣ್ಣರಳಿಸಿ ತಿನ್ನೋ ಹಾಗೆ ಮಾಡ್ತೇನೆ. ಅವಳಿಗೆ ಇವಳು ಮಾಡೋ ಟೊಮ್ಯಾಟೋ ಸಾರೂ ಇಷ್ಟ. ಅದರಲ್ಲಿ ರಾಗಿ ಮುದ್ದೇನ ಕರಗಿಸೋದು ಎಷ್ಟು ಚೆನ್ನಾಗಿರುತ್ತೆ ಕಣೋ ಅಂತ ಅಕ್ಕ ಒಂದ್ಸಲ ನನಗೆ ಹೇಳಿದಾಳೆ.
ಕ್ಯಾಪ್ಸಿಕಂ ಮಸಾಲಾ ಮಾಡೋದಿರ್‍ಲಿ, ತರಕಾರಿ ತಳ್ಳುಗಾಡಿ ಇನ್ನೂ ಬಂದಿಲ್ಲ. ಅಕ್ಕ ಮಲಗಿದ್ದಾಳೆ. ಅವಳೀಗ ಎಷ್ಟು ಛೆಂದ ನಿದ್ದೆ ಮಾಡ್ತಿದಾಳೆ. ಅವಳು ಎದ್ದು ನನ್ನ ನೋಡೋವಾಗ ನಾನು ನಗ್ತೇನೆ. ‘ಅಕ್ಕ, ಕ್ಯಾಪ್ಸಿಕಂ ಮಸಾಲಾ ರೆಡಿ’ ಅಂತ ಅವಳಿಗೆ ಅಚ್ಚರಿ ಹುಟ್ಟಿಸ್ತೇನೆ.
ನಾನು ಕೆಂಗೇರಿ ಉಪನಗರದಲ್ಲಿ ವಿನಾಯಕ ಭಟ್ಟನ ಮನೆಗೆ ಹೋಗಿದೇನೆ. ಆತನ ಜೊತೆ ಚಾ ಕುಡಿದು ಸಾಹಿತ್ಯದ ಚರ್ಚೆ ನಡೆಸಿದೇನೆ. ಇಬ್ಬರೂ ಸೇರಿ ಅಧ್ಯಯನದ ಪ್ರಾಜೆಕ್ಟ್ ತಗೊಂಡು ಮೂರ್‍ನಾಲ್ಕು ವರ್ಷ ಎಲ್ಲಾದ್ರೂ ಯಾರಿಗೂ ಗೊತ್ತಾಗದಂತೆ ಇದ್ದು ಬಿಡಬೇಕು. ಭಟ್ಟ ಹೇಳಿದ್ದಕ್ಕೆಲ್ಲ ನಾನು ಹೂ ಅಂದಿದೇನೆ. ರಿಂಗ್ ರಸ್ತೆಗೆ ಬರೋ ಹೊತ್ತಿಗೆ ಸಣ್ಣಗೆ ಮಳೆ ಹೊಯ್ಯುತ್ತಿದೆ. ಮಲೆನಾಡಿನ ಥರ ಬೆಂಗಳೂರೂ ಥಂಡಿಗೆ ಜಾರುತ್ತಿದೆ. ಅಲ್ಲಿಂದಲೇ ಫೋನ್ ಮಾಡಿದೇನೆ. ‘ಮಳೆ ಬರ್‍ತಾ ಇದೆ.ನಿಧಾನ ಬಾ. ಸ್ಕೂಟರ್ ಸ್ಕಿಡ್ ಆಗಿಬಿಡುತ್ತೆ ಹುಷಾರು’ ಅಂತ ಎಚ್ಚರಿಕೆ ಕೊಟ್ಟಿದಾಳೆ.
ಅವಳಿಗೆ ನಾನು ಜಾರಬಾರದು ಅನ್ನೋ ಕಾಳಜಿ.
ಅವಳಿಗೆ ನಾನು ಅವಸರ ಮಾಡಬಾರದು ಅನ್ನೋ ಎಚ್ಚರ.
ನಾನು ರವೀಂದ್ರ ಕಲಾಕ್ಷೇತ್ರದಲ್ಲಿದೇನೆ. ನಾನು ಹೇಗೋ ಪ್ರೆಸ್ ಅಂತ ಹೇಳಿ ಎರಡನೆಯ ಸಾಲಿನಲ್ಲೇ ಮೂರು ಸೀಟು ಗಿಟ್ಟಿಸಿದೇನೆ. ಹೆಂಡತಿಗೆ, ಮಗನಿಗೆ ಕಾರ್ಯಕ್ರಮದ ವಿವರ ನೀಡ್ತಾ ಇದೇನೆ. ಕಾರ್ಯಕ್ರಮ ತಡ ಆಗ್ತಿದೆ. ಮುಗಿದ ಕೂಡಲೇ ನಾನು ಮನೆಗೆ ಹೋಗಬೇಕು. ಅಕ್ಕನಿಗೆ ಒಂದೇ ಇಂಜೆಕ್ಷನ್ ಕೊಡಬೇಕು. ನರ್ಸ್ ಬರಲ್ಲ. ಹತ್ತಿರ ಇರೋ ನೆಂಟ ವೈದ್ಯೆಗೆ ಪುರುಸೊತ್ತಾಗಲ್ಲ. ನನಗೆ ಸ್ಕೂಟರಿನಲ್ಲಿ ಆಸ್ಪತ್ರೆಗೆ ಕರಕೊಂಡು ಹೋಗಕ್ಕಾಗಲ್ಲ. ಅಕ್ಕ ಈಗ ಎಷ್ಟು ದಪ್ಪಗಾಗಿದಾಳೆ. ಅವಳನ್ನು ಹೇಗೆ ಮೂರು ತಿರುವಿನ ಮೆಟ್ಟಿಲುಗಳಲ್ಲಿ ಇಳಿಸಿಕೊಂಡು, ಹೂವಿನಂತೆ ಎತ್ತಿಕೊಂಡು ಬರಬೇಕು….
ಅಮ್ಮ ಈಗ ಅಕ್ಕನನ್ನು ಹಿಂದಿನಿಂದ ಅಪ್ಪಿಕೊಂಡಿದಾಳೆ. ಮುಂದಿನಿಂದ ನಾನು ಆವಳನ್ನು ಬೆನ್ನ ಮೇಲೆ ಹೊತ್ತುಕೊಂಡಿದೇನೆ. ಅವಳಿಗೆ ಮೂಳೆಗಳೇ ಇಲ್ಲವೇನೋ ಅನ್ಸುತ್ತೆ.
ಅವಳು ಒಂದು ಹೂವಿನ ಹಾಗೆ ಎಷ್ಟು ಮೆದುವಾಗಿದಾಳೆ.
ಅವಳಿಗೆ ದಿನಾಲೂ ಸ್ಟೆರಾಯ್ಡ್ ಕೊಡ್ತಾರೆ.
ಮಾರುತಿ ವ್ಯಾನ್ ಬರುತ್ತೆ.
ಆಸ್ಪತ್ರೆಯಲ್ಲಿ ಯಾರೂ ಇಲ್ಲ. ರಾತ್ರಿ ನನ್ನೊಳಗೆ ಇಳೀತಾ ಇದೆ.
ಅಕ್ಕ ಈಗ ಟಾಯ್ಲೆಟ್ ತೊಳೀತಿದಾಳೆ. ಅಕ್ಕ ಈಗ ರೂಮು ಗುಡಿಸ್ತಾ ಇದಾಳೆ. ತನ್ನ ಬಟ್ಟೇನೆಲ್ಲ ಮಡಚ್ತಾ ಇದಾಳೆ.
ಅವಳಿಗೆ ತಾನೇ ಎಲ್ಲ ಕೆಲಸ ಮಾಡ್ಕೋಬೇಕು. ಅವಳಿಗೆ ತನ್ನ ಖಾಸಗಿ ಸಂಗತಿಗಳಲ್ಲಿ ಬೇರೆ ಯಾರೂ ಬರೋದು ಇಷ್ಟ ಇಲ್ಲ. ಅವಳಿಗೆ ಗುಂಪು ಇಷ್ಟ. ಅವಳಿಗೆ ಖಾಸಗಿತನ ಇಷ್ಟ. ಅವಳಿಗೆ ಸ್ವಾತಂತ್ರ್ಯ ಇಷ್ಟ. ಅವಳಿಗೆ ಸ್ವಂತಿಕೆ ಇಷ್ಟ.
ಅಕ್ಕನಿಗೆ ಈಗ ಮಗನಿಗೆ ಹೋಮ್‌ವರ್ಕ್ ಮಾಡಿಸುವುದೇ ಖುಷಿ ಕೊಡೋ ಕೆಲಸ. ನಾನು ಈಗ ಮಗನಿಗೆ ಅತ್ತೆ ಹತ್ರಾನೇ ಹೋಮ್‌ವರ್ಕ್ ಮಾಡಿಸ್ಕೋ ಅಂದಿದೇನೆ.
ನಾನು ಸೆಕೆಂಡ್ ಹ್ಯಾಂಡ್ ಕಂಪ್ಯೂಟರ್ ತಗೊಳ್ಲಿಕ್ಕೆ ಹೋಗಿದೀನಿ. ಮಗನೂ ಜೊತೆಗೆ ಬಂದಿದಾನೆ. ನಾನು ಕಂಪ್ಯೂಟರ್ ತಗೋಬೇಕು. ಇಂಟರ್‌ನೆಟ್ ಕಲೀಬೇಕು. ನಾನು ಕಂಪ್ಯೂಟರಿಗೆ ಒಂದು ಟೇಬಲ್ ತಗೋಬೇಕು. ಅಥವಾ ಇಲ್ಲಿರೋ ಹಳೇ ಮೇಜೇ ಸಾಕು.
ಸ್ಕೂಟರನ್ನ ಸರ್ವೀಸಿಗೆ ಕೊಟ್ಟಿದೀನಿ. ಮೂರು ದಿನದಲ್ಲಿ ಸ್ಕೂಟರ್ ರೆಡಿಯಾಗುತ್ತೆ. ಅಕ್ಕನಿಗೆ ಖುಷಿಯಾಗುತ್ತೆ. ಆಮೇಲೆ ಅವಳ ಸರ್ಜರಿ ಟೈಮಲ್ಲಿ ಓಡಾಡೋದು ಎಷ್ಟು ಸುಲಭ. ಕ್ಲಚ್ ಹಿಡಿದು ಗೇರ್ ಬದಲಿಸೋದು ಸಲೀಸು. ನಿಮ್ಹಾನ್ಸ್ ರಸ್ತೆಯ ಟ್ರಾಫಿಕ್ಕಿಗೆ ಹೆದರ್‍ಬೇಕಿಲ್ಲ.
ಅಕ್ಕ ಅಣ್ಣನ ಮಗಳ ಬರ್ಥ್‌ಡೇ ಪಾರ್ಟೀಗೆ ಬಂದಿದಾಳೆ. ಭರ್ಜರಿ ಸೀರೆ ಉಟ್ಟಿದಾಳೆ. ಅವಳ ನಗುವಿನಲ್ಲಿ ಎಂಥದೋ ಸ್ನಿಗ್ಧತೆ ಕಾಣ್ತಿದೆ. ಒಂದೇ ಕಡೆ ಕೂತು ಎಲ್ಲ ಸಡಗರಾನೂ ನೋಡ್ತಾ ನಗ್ತಿದಾಳೆ. ಅವಳಿಗೆ ಮಕ್ಕಳು ಅಂದ್ರೆ ಅಷ್ಟು ಇಷ್ಟ.
ಅವಳು ತಂಗಿ ಮಗಳನ್ನು ಎತ್ತಿ ಮೇಲೆ ಹಾರಿಸೋವಾಗ್ಲೇ ಬೆನ್ನು ಚುಳುಕ್ ಅಂತ ಹಿಡ್ಕೊಂಡಿದ್ದು. ಆಮೇಲೆ ಅವಳು ಯಾರನ್ನೂ ಎತ್ತಿಕೊಳ್ಳಲಿಲ್ಲ.
ನಾವೇ ಕೊನೆಗೆ ಅವಳನ್ನು ಮಗುವಿನ ಹಾಗೆ ಎತ್ತಿಕೋತಿದ್ವಿ. ಅದನ್ನ ವಿರೋಧಿಸಲಿಕ್ಕೆ ಅವಳಿಗೆ ಎಚ್ಚರವೇ ಇರ್‍ತಿರಲಿಲ್ಲ.
ಅಕ್ಕ ಈಗ ಮಾರುತಿ ವ್ಯಾನಿನಲ್ಲಿ ಮಲಗಿದಾಳೆ.
ನಾಳೆ ಬೆಳಗ್ಗೆ ಅವಳಿಗೆ ಕ್ಯಾಪ್ಸಿಕಂ ಮಸಾಲಾ ಜತೆಗೆ ಉಬ್ಬುರೊಟ್ಟಿ ಮಾಡಿಕೊಡಬೇಕು.
ಅಕ್ಕ ನರಳ್ತಿಲ್ಲ. ಅಕ್ಕ ಮಾತಾಡ್ತಿಲ್ಲ. ಅಕ್ಕ ನನ್ನನ್ನೇ ನೋಡ್ತಿದಾಳೆ. ಅಥವಾ ವ್ಯಾನಿನ ಛಾವಣಿಯನ್ನಾ… ಗೊತ್ತಿಲ್ಲ.
ಅಕ್ಕ ಈಗ ಸ್ಟ್ರೆಚರ್‌ನಲ್ಲಿ ಮಲಗಿದಾಳೆ.
ಅಕ್ಕ ಆಪರೇಶನ್ ಥಿಯೇಟರ್ ಒಳಗೆ ಹೋಗಿದಾಳೆ. ಅಕ್ಕ ನಾಲ್ಕು ತಾಸು ನನಗೆ ಕಾಣಿಸಿಲ್ಲ. ಅಕ್ಕ ಈಗ ಹೊರಗೆ ಬಂದಿದಾಳೆ. ಅವಳೀಗ ಯಾರನ್ನೋ ನೋಡ್ತಿದಾಳೆ. ನಾನು, ಭಾವ ರಾಘು ಕರದ್ರೆ ಕೇಳಿಸ್ಕೊಳ್ತಿಲ್ಲ. ಅವಳ ಭುಜ ಹಿಡಿದು ಮೆಲ್ಲಗೆ ತಟ್ಟೋದಕ್ಕೂ ಭಯ.
ಅಕ್ಕ ಈಗ ನಿಮ್ಹಾನ್ಸ್ ವಾರ್ಡಿನಲ್ಲಿ ಮಲಗಿದಾಳೆ. ಅವಳ ತಲೆಯೆಲ್ಲ ಬೋಳು. ಅವಳ ಬಾಯಿಯಲ್ಲಿ ಉಸಿರಾಡೋದಕ್ಕೆ ಒಂದು ಕೊಳವೆ ಇದೆ. ಅಮ್ಮ ಈಗ ಮಾತಾಡ್ತಿಲ್ಲ. ವೆರಾಂಡದಲ್ಲಿ ಲಗೇಜು ಬ್ಯಾಗಿನ ಪಕ್ಕ ಕೂತಿದಾಳೆ. ಬೆಳಗ್ಗೆ ರಾಘು, ವಾಣಿ ಇಬ್ರೂ ಮಕ್ಕಳನ್ನು ಪಕ್ಕದ ಮನೇಲಿ ಬಿಟ್ಟು ಬರೋದಕ್ಕೆ ಹೋಗಿದಾರೆ.
ಅಕ್ಕ ಅಲ್ಲೇ ಇದಾಳೆ. ಅವಳ ಬಟ್ಟಲುಗಣ್ಣುಗಳು ನನ್ನನ್ನೇ ನೋಡ್ತಾ ಇವೆ. ಅಕ್ಕ ಒಳಗೊಳಗೇ ನನ್ನ ಕವನ ಕೇಳ್ತಿದಾಳ? ಅಕ್ಕ ರಮ್ಯಾಗೆ ಕ್ಯಾಪ್ಸಿಕಂ ಮಸಾಲಾ ಮಾಡೋದಕ್ಕೆ ಕಲಿಸ್ತಿದಾಳ?ನನ್ನ ಮಗನಿಗೆ ಹೋಮ್‌ವರ್ಕ್ ಮಾಡಿಸ್ತಿದಾಳ?
ಅಕ್ಕ ಈಗ ಬ್ಯಾಟರಾಯನಪುರದ ಕ್ರೆಮಟೋರಿಯಂನಲ್ಲಿ ಮಲಗಿದಾಳೆ.
ವಿದ್ಯುತ್ ಚಿತಾಗಾರದಲ್ಲಿ ಇರೋ ಒಂದು ರಂಧ್ರದಲ್ಲಿ ನೋಡಿದರೆ… ಅಕ್ಕ ಹಾಗೆ ಯಾವ ಬೇಜಾರೂ ಇಲ್ದೆ ಚಟಚಟ ಸುಟ್ಟುಹೋಗ್ತಿದಾಳೆ.
ಆಫೀಸಿನಲ್ಲಿ ಆತ ಅವಳನ್ನು ಸುಟ್ಟಿದ್ದಕ್ಕೆ ದಾಖಲೆ ಬರೀತಾ ಇದಾನೆ.
ಫ್ರಿಜ್ಜಿನಲ್ಲಿ ಕ್ಯಾಪ್ಸಿಕಂ ಇದೆ.
ಚಿಕ್ಕವೇ. ನಾಟಿ.
ಅಕ್ಕನ ಮೆದುಳುಗಡ್ಡೆಗಳಿಗಿಂತ ಸ್ವಲ್ಪ ದೊಡ್ಡವು.
*****
ವಿಜಯಕರ್ನಾಟಕ ಯುಗಾದಿ ಕಥಾಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕತೆ