(ಹೆಚ್ಚಾಗಿ ಕನ್ನಡದಲ್ಲಿ ಬಳಕೆಯಲ್ಲಿಲ್ಲದ-ಪ್ರಾದೇಶಿಕವೆನ್ನಬಹುದಾದ ಪದಗಳ ಅರ್ಥಗಳನ್ನು ಕೆಳಗೆ ನೀಡಲಾಗಿದೆ-ಸಂ)
ಕಾರ್ತಿಕ ಮಾಸದ ಮುಸ್ಸಂಜೆ. ಆ ತರವಾಡು ಮನೆಯ ಅಗಲ ಕಿರಿದಾದ ಮೂರು ಸುತ್ತು ಉದ್ದೋ ಉದ್ದ ಚಾಚಿರುವ ಚಾವಡಿಗೆ ಕತ್ತಲು ಅಂಬೆಗಾಲಿಕ್ಕುತ್ತಿತ್ತು. ಮುಂಭಾಗದ ಚಾವಡಿಯ ತಿಟ್ಟೆಯಲ್ಲಿ ಕುಳಿತು ಹಿತ್ತಲ ಕೊನೆಯ ಗೇಟಿನತ್ತ ಕಣ್ಣು ನೆಟ್ಟಿದ್ದ ದೇವಕಿಯಮ್ಮ ಬಗ್ಗಿಬಿಟ್ಟಿದ್ದ ಬೆನ್ನನ್ನು ನೇರವಾಗಿಸುತ್ತಾ ನೋವಿನ ನಿಟ್ಟುಸಿರು ಬಿಡುತ್ತಾ ಕುಲದೈವವನ್ನು ಸ್ಮರಿಸಿದರು. ಗೇಟಿನಿಂದ ಯಾರೊ ಹಾದು ಬಂದಂತಾಗಿ ಅವರು ತಟ್ಟನೆ ಎದ್ದು ನಿಂತು ಅದೇ ಹುಮ್ಮಸ್ಸಿನಲ್ಲಿ ಮೊಣಕಾಲಿಗೆ ಕೈಯೂರುತ್ತಾ ಒಂದೊಂದೆ ಮೆಟ್ಟಿಲಿಳಿದು ಅಂಗಳಕ್ಕೆ ಕಾಲಿಟ್ಟವರೆ ಕಣ್ಣು ಕಿರಿದುಗೊಳಿಸಿ ಮತ್ತೆ ದಿಟ್ಟಿಸಿದರು.
ಶಿಸ್ತಿನ ಸಿಪಾಯಿಗಳಂತೆ ನೇರ ನಿಂತಿದ್ದ ತೆಂಗಿನ ಸಾಲುಮರಗಳು, ದರೆಯ ಬಳಿ ಕಾಲುದಾರಿಯ ಅಕ್ಕಪಕ್ಕ ಬೆಳೆದಿದ್ದ ಸಮೃದ್ಧ ಹೂಗಿಡಗಳು, ಅವುಗಳ ಮಧ್ಯೆ ಇದೇ ಈಗ ಮಿಣ್ಣಗೆ ಹಾರಹತ್ತಿದ್ದ ಒಂದೆರಡು ಮಿಂಚುಹುಳುಗಳ ಹೊರತು ಇನ್ಯಾರೂ ಕಾಣಿಸದೆ ದೇವಕಿಯಮ್ಮ ಯಾರೋ ಕಂಡಂತಾದದ್ದು ತಮ್ಮ ಭ್ರಮೆ ಎಂದುಕೊಂಡರು.
ಈ ವಯಸ್ಸಿನಲ್ಲೂ ಎಂದರೆ ಆಕೆಯ ಪ್ರಕಾರ ಎಂಬತ್ತು ಕಳೆದರೂ ದೇವಕಿಯಮ್ಮನ ದೃಷ್ಟಿ ಅಷ್ಟು ಮಂದವಾಗಿಲ್ಲ. ದೂರದಿಂದ ಬರುವವರ ಮುಖ ಪರಿಚಯ ಸ್ಪಷ್ಟವಾಗದಿದ್ದರೂ ಅವರ ನಡಿಗೆಯ ರೀತಿ, ಉಡುಪಿನ ವೈಖರಿಯಿಂದಲೇ ಇಂತಹವರೇ ಎಂದು ನಿಖರವಾಗಿ ಗುರುತಿಸಿ ಆ ದೂರಕ್ಕೆ ಧ್ವನಿ ಕೊಡುವುದುಂಟು. ದೇವಕಿಯಮ್ಮನ ಗಟ್ಟಿಮುಟ್ಟು ನಿಲುವು ಕಂಡವರು ಅವರ ವಯಸ್ಸಿನ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸುವುದಿದೆ. ಆದರೆ ದೇವಕಿಯಮ್ಮ, ತಮ್ಮ ತಾಯಿ ಯುದ್ಧಕಾಲದ ಬವಣೆಯನ್ನು ಕೇಂದ್ರವಾಗಿಟ್ಟುಕೊಂಡು ಮಕ್ಕಳ ಹುಟ್ಟು ಸಾವುಗಳ ವರ್ಷಗಳನ್ನು ಬೆರಳೆಣಿಕೆ ಹಾಕುತ್ತಿದ್ದುದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಹಾಗೆ ಅವರು “ಮೊದಲನೆಯ ಯುದ್ಧಕಾಲಕ್ಕೆ ನಾನು ಐದು ವರ್ಷದ ಬಾಲೆ” ಎನ್ನುತ್ತಾರೆ.
ಅಂಗಳದಲ್ಲಿ ನಿಂತು ಕತ್ತಲ ಮುಸುಕನ್ನು ಹೊದ್ದುಕೊಳ್ಳುತ್ತಿದ್ದ ತಮ್ಮ ಮನೆಯನ್ನು ನೋಡುತ್ತಿದ್ದಂತೆ ದೇವಕಿಯಮ್ಮನ ಎದೆ ಭಾರವಾಗಿಬಿಟ್ಟಿತು. ದೇವಕಿಯಮ್ಮನದ್ದು ಬರೇ ಮನೆಯಲ್ಲ, ತರವಾಡು(೧) ಮನೆ. ಅವರ ಕುಟುಂಬದವರೆಲ್ಲಾ ಬಂದು ಸೇರುವ ಮನೆ. ವಿಷ್ಣುಮೂರ್ತಿ ನೆಲೆಸಿರುವ ಮನೆ. ಸುತ್ತಮುತ್ತಲ ನಾಲ್ಕು ಊರುಗಳಲ್ಲಿ ಇರುವ ಅವರ ಕುಟುಂಬದವರೆಲ್ಲರ ಮೂಲಸ್ಥಾನ ಈ ಮನೆ.
ವಿಷು ಹಬ್ಬದ ಹಿಂದಿನ ರಾತ್ರಿ ನಡೆಯುವ ವಿಷ್ಣುಮೂರ್ತಿ ದೈವದ ಕೈದ್‌ಗೆ(೨) ಕುಟುಂಬದ ಇಬ್ಬಿಬ್ಬರು ಬಂದರೂ ಈ ದೊಡ್ಡ ಮನೆಯ ಚಾವಡಿ, ಮುಂದಿನ ಅಂಗಳ ನೆರೆದ ಗಂಡಸರಿಗೆ ಮಾತ್ರ ಸಾಕಾಗುತ್ತದೆ. ಹೆಂಗಸರು ಮಕ್ಕಳು ಒಳಕೋಣೆಗಳಲ್ಲಿ, ಮಹಡಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಪುದಿಯೋಡಕ್ಕಲ್(೩)ನಂತಹ ವಿಶೇಷ ಸಂದರ್ಭದಲ್ಲಿ ಅಂಗಳದ ಹೊರಗೂ ಚಪ್ಪರ ಹಾಕಬೇಕಾಗುತ್ತದೆ.
ಆದರೆ ಈ ಕಳೆದ ಕೆಲ ವರ್ಷಗಳಿಂದ ಕೈದ್‌ಗೆ ಈ ಊರಿನ ಹತ್ತು ಮನೆಗಳಿಂದ ಜನ ಬಂದರೆ ಅದೇ ವಿಶೇಷ. ಬೊಂಬಾಯಿ, ದುಬಾ ಎಂದು ಹೋಗಿ ಸೇರಿಕೊಂಡಿರುವ ತರವಾಡಿನ ಸದಸ್ಯರಿಗೆ ಮಾತ್ರವಲ್ಲ, ಅಕ್ಕಪಕ್ಕದ ಊರಿನಲ್ಲಿರುವವರಿಗೂ ತರವಾಡು ದೂರವಾಗಿಬಿಟ್ಟಿದೆ. ಪುದಿಯೋಡಕ್ಕಲ್ ಆಗದೆ ಏಳು ವರ್ಷಗಳೇ ಕಳೆದಿದೆ. ಕೈದ್, ಪುದಿಯೋಡಕ್ಕಲ್ ಎಂದೇ ಏನು ದೈವದ ಮುಂದೆ ಪ್ರತಿ ಸಂಜೆ ಸಮಯಕ್ಕೆ ಸರಿಯಾಗಿ ದೀಪ ಹೊತ್ತಿಸುವುದಕ್ಕೂ ಅಡ್ಡಿಯಾಗುತ್ತಿದೆಯಲ್ಲ ಎಂದು ದೇವಕಿಯಮ್ಮ ನಿಟ್ಟುಸಿರುಬಿಟ್ಟರು.
ಆಕಾಶದಲ್ಲಿ ಚುಕ್ಕಿ ಮೂಡುವ ವೇಳೆಗಾಗಲೆ ಹಿಂದೆ ದೈವದ ಮುಂದೆ, ತುಳಸಿಕಟ್ಟೆಯ ಮುಂದೆ ದೀಪ ಕುಣಿಯುತ್ತಿರುತ್ತಿತ್ತು. ನಂತರ ಚಾವಡಿಯಿಂದ ತೊಡಗಿ ಒಂದೊಂದೆ ಕೊಠಡಿಯನ್ನು ಬೆಳಗುವ ಕೆಲಸ. ದೇವಕಿಯಂತಹ ತರವಾಡಿನ ಹೆಣ್ಣುಮಕ್ಕಳು ಸಂಭ್ರಮದಿಂದ ದೀಪಧಾರಿಣಿಯರಾಗಿ ಓಡಾಡುತ್ತಿದ್ದ ದಿನಗಳವು. ಈಗ ಮಗಳು ಭವಾನಿ ಅಮ್ಮನ ಅಣತಿಗೆ ಕಾದು ಕುಳಿತಿದ್ದು ನಂತರ ಸರಸರನೆ ಚಾವಡಿಯ ಮತ್ತೆರಡು ಕೊಠಡಿಗಳ ವಿದ್ಯುದ್ದೀಪದ ಗುಂಡಿ ಅದುಮಿ ಬಿಡುತ್ತಾಳೆ. ಆದರೆ ಎಲ್ಲಕ್ಕೂ ಮೊದಲು ಅವ ಬರಬೇಕಲ್ಲಾ ಮೂಪ, ದೈವದ ಮುಂದೆ ದೀಪ ಹಚ್ಚುವವ.
ಮುಸ್ಸಂಜೆಯ ಹೊತ್ತಿನಲ್ಲಿ ದೀಪ ಬೆಳಗುವ ಈ ಸಂಪ್ರದಾಯಕ್ಕೆ ಕೆಲವು ತಿಂಗಳಿಂದ ಅಡ್ಡಿ ಒದಗಿದೆ. ಇದಕ್ಕೆಲ್ಲಾ ಈ ತರವಾಡಿನಲ್ಲಿ ಹುಟ್ಟಿದ ಈ ವಿಷಬೀಜವೆ ಕಾರಣ ಎನ್ನುವುದು ಹೊಳೆದು ದೇವಕಿಯಮ್ಮನ ಶಿರಕ್ಕೆ ರಕ್ತ ಏರಿತು. ಅವರು ಕೋಪದಿಂದ, “ಭವಾನಿ, ಭವಾನಿ” ಎಂದು ಕರೆದರು.
ಅಡುಗೆ ಕೋಣೆಯಲ್ಲಿ ಅಮ್ಮನ ಕರೆಗೆ ಕಾದು ನಿಂತವಳಂತೆ ಇದ್ದ ಭವಾನಿ ಕಾಲುದೀಪವನ್ನು ಹೊತ್ತಿಸಿ ತಂದು “ದೀಪಂ ದೀಪಂ” ಎನ್ನುತ್ತಾ ಚಾವಡಿಗೆ ಬಂದಳು. ತಿಟ್ಟೆಯಲ್ಲಿ ಮೆಟ್ಟಲುಗಳ ಪಕ್ಕದಲ್ಲಿ ದೀಪವನ್ನು ಇರಿಸಿ ಕೈ ಮುಗಿದಳು. ಚಾವಡಿಯಲ್ಲಿ ಕವಿದ ಕತ್ತಲನ್ನು ದೂರ ಮಾಡಲು ಶಕ್ತವಾಗದಿದ್ದರೂ ತನ್ನ ಸುತ್ತಮುತ್ತ ಮಂದ ಪ್ರಕಾಶವನ್ನು ಹರಡಿದ ದೀಪವನ್ನು ಕಂಡೊಡನೆ ಏರಿದ ಕೋಪ ಇಳಿದು ದೇವಕಿಯಮ್ಮ ಕ್ಷಣಕಾಲ ಶಾಂತರಾದರು. ನಿಂತಲ್ಲಿಂದಲೇ ಅವರು ದೀಪಕ್ಕೆ ಕೈಮುಗಿದರು.
ಅನಿವಾರ್ಯ ಪ್ರಸಂಗದಲ್ಲಿ ಹೀಗೆ ಚಾವಡಿಯಲ್ಲಿ ಕಾಲುದೀಪವನ್ನು ಹೊತ್ತಿಸಬಹುದು. ಆದರೆ ದೈವದ ಕೊಠಡಿಯಲ್ಲಿ ದೀಪ ಹೊತ್ತಿಸದೆ ಮನೆಯಲ್ಲಿ ವಿದ್ಯುತ್ ದೀಪವನ್ನು ಬೆಳಗುವಂತಿಲ್ಲ ಎನ್ನುವ ಕಟ್ಟಪ್ಪಣೆಯನ್ನು ದೇವಕಿ ಅಮ್ಮ ಮಾಡಿದ್ದರು. ಕಾಲುದೀಪ ಹೊತ್ತಿಸಬಹುದಾದರೆ ವಿದ್ಯುತ್ ದೀಪ ಯಾಕೆ ಹೊತ್ತಿಸಬಾರದು ಎಂದು ಭವಾನಿ ಈ ಹಿಂದೆ ವಾದ ಹೂಡಿದ್ದರೂ ಅಮ್ಮನ ಆಜ್ಞೆಯನ್ನು ಉಲ್ಲಂಘಿಸುವಂತಿಲ್ಲ. ಅವರು ತನ್ನ ಅಮ್ಮ ಮಾತ್ರವಲ್ಲ, ತರವಾಡು ಮೂಪತ್ತಿ(೪)ಯೂ ಹೌದು. ಅಲ್ಲದೆ ಕೇರಳ ವಿದ್ಯುತ್ ಇಲಾಖೆಯಿಂದ ಟ್ಯೂಬ್ ಲೈಟು ಹೊತ್ತುವಂತಹ ವಿದ್ಯುತ್ ಪೂರೈಕೆ ಆರಂಭವಾಗಲು ರಾತ್ರಿ ಒಂಬತ್ತು ಗಂಟೆ ಕಳೆಯಬೇಕು. ಅಲ್ಲಿಯವರೆಗೆ ಕಾಲುದೀಪವೂ ಒಂದೇ ವಿದ್ಯುತ್ ದೀಪವೂ ಒಂದೇ.
ಅಮ್ಮ ಎಂದಿನಂತೆ ಅಪ್ಪುವನ್ನು ಬೈಯಲು ಆರಂಭಿಸುತ್ತಾಳೆ ಎಂದು ಗೋಡೆಗೊರಗಿ ಭವಾನಿ ಕಾದು ನಿಂತಳು. “ನಿನ್ನ ಮಗ ಇವತ್ತೂ ಬರಲಿಲ್ಲ” ಎಂದು ದೇವಕಿಯಮ್ಮ ಮಾತು ಆರಂಭಿಸಿದರು. “ದೈವ, ದೇವರ ಕುರಿತು ಈಗಿನ ಹುಡುಗರಿಗೆ ಭಯ ಭಕ್ತಿಯಿಲ್ಲ. ಏನಾದರೂ ಕೆಲಸ ಕಾರ್ಯ ಇದ್ದು ತಡವಾಗುವುದೆಂದರೆ ಅದು ಬೇರೆ ಮಾತು. ಆದರೆ ಪೋಲಿ ಅಲೆಯುತ್ತಾ ಕಾಲ ವಿಳಂಬ ಮಾಡುವುದೆಂದರೆ? ಈ ತರವಾಡು ಮನೆ ಕಟ್ಟಿದಂದಿನಿಂದ ಹೀಗೆಂದೂ ಆಗಿರಲಿಲ್ಲ.”
ತನ್ನ ಮಾತುಗಳನ್ನು ಮೌನವಾಗಿ ನಿಂತು ಕೇಳುತ್ತಿದ್ದ ಮಗಳನ್ನು ನೋಡಿ ದೇವಕಿಯಮ್ಮನ ಕರುಳು ಚುರ್ ಎಂದಿತು. ಮಗ ಕೆಟ್ಟು ಹೋಗುತ್ತಿರುವುದನ್ನು ನೋಡುವಾಗ ಹೆತ್ತ ಹೊಟ್ಟೆಗೆ ಎಷ್ಟು ಸಂಕಟ ಆಗುತ್ತಿರಬೇಡ. “ನಿನಗೆ ಹೇಳಿ ಏನು ಪ್ರಯೋಜನ. ಇದೆಲ್ಲಾ ನನ್ನ ಕರ್ಮ. ನನ್ನ ಕಣ್ಣೆದುರಲ್ಲೇ ಈ ತರವಾಡು ಕುಸಿಯುವಂತೆ ಆಯಿತಲ್ಲಾ” ಎಂದು ಹಣೆ ಬಡಿಯುತ್ತಾ ದೇವಕಿಯಮ್ಮ ಅಂಗಳದಲ್ಲೇ ಕುಸಿದು ಬಿದ್ದರು. ತುಂಬಿ ಬಂದ ಕಣ್ಣೀರನ್ನು ಒರೆಸುತ್ತಾ ಧಾವಿಸಿ ಬಂದ ಭವಾನಿ ತಾಯಿಯ ಎರಡೂ ರೆಟ್ಟೆಗಳನ್ನು ಹಿಡಿದೆತ್ತಿ ನಡೆಸುತ್ತ ಕರೆತಂದು ತಿಟ್ಟೆಯಲ್ಲಿ ಮತ್ತೆ ಕುಳ್ಳಿರಿಸಿದಳು.
– ೨ –
ಒಲೆಯ ಮೇಲೆ ಇರಿಸಿದ ಅನ್ನದ ನೀರು ಕುದಿಯುತ್ತಿರುವುದನ್ನು ದಿಟ್ಟಿಸಿ ನೋಡುತ್ತಾ ಗೋಡೆಗೊರಗಿ ನಿಂತಿದ್ದ ಭವಾನಿಯ ಮನಸ್ಸಿನಲ್ಲಿ ದುಃಖ ಉಮ್ಮಳಿಸಿ ಬರಹತ್ತಿತು. ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಅಸಹಾಯಕ ಪರಿಸ್ಥಿತಿಯಲ್ಲಿ ಆಕೆಯೀಗ ಇದ್ದಾಳೆ. ಒಂದೆಡೆ ಶಿಸ್ತು, ಸಂಪ್ರದಾಯ ಎಂದೆನ್ನುವ ತಾಯಿ. ಇನ್ನೊಂದೆಡೆ ಉಸಿರುಗಟ್ಟುವಂತಹ ಈ ವಾತಾವರಣದಿಂದ, ಈ ಬಂಧನದಿಂದ ಪಾರಾಗಿ ಹೋಗುತ್ತೇನೆ ಎಂದೆನ್ನುವ ಮಗ. ಈ ಕೆಲ ತಿಂಗಳುಗಳಿಂದ ಇವರ ನಡುವೆ ಸಾಗಿರುವ ಶೀತಲ ಯುದ್ಧದಿಂದ ಆಕೆ ಕಂಗೆಟ್ಟಿದ್ದಾಳೆ. ತಾನು ಬರೆ ತಾಯಿಯಾಗಿ, ಮಗಳು ಆಗಿ ಪ್ರತಿಕ್ರಿಯಿಸುವಂತಿಲ್ಲ ಎನ್ನುವುದು ಆಕೆಗೆ ತಿಳಿದಿದೆ. ದೇವಕಿಯಮ್ಮನ ಬಳಿಕ ಈ ತರವಾಡಿನ ಮೂಪತ್ತಿಯಾಗುವವಳು ಆಕೆ. ಅದನ್ನು ಗಮನದಲ್ಲಿರಿಸಿಕೊಂಡೆ ಪ್ರತಿಯೊಂದು ಹೆಜ್ಜೆಯನ್ನು ಮುಂದುವರಿಸಬೇಕು.
ಈ ದಿಸೆಯಲ್ಲಿ ಯೋಚಿಸುವಾಗಲೆಲ್ಲಾ ವಿಧಿ ತನ್ನ ಜೀವನದಲ್ಲಿ ಎಸಗಿದ ಕರಾಳ ಪಾತ್ರವನ್ನು ಆಕೆ ನೆನೆಯುತ್ತಾಳೆ. ದೇವಕಿಯಮ್ಮನ ಮಕ್ಕಳಲ್ಲಿಯೆ ಅತಿ ಬುದ್ಧಿವಂತೆ, ಸುಂದರಿ ಎಂದು ಹೆಸರಾದಾಕೆ ಭವಾನಿ. ದೇವಕಿಯಮ್ಮನ ಕಾಲದ ಕುರುಕ್ಕಳ್ ಶಾಲೆಗಲ್ಲ, ಇಂಗ್ಲಿಷು ಶಾಲೆಗೆ ಹೆಗಲಲ್ಲಿ ಪುಸ್ತಕ ತುಂಬಿದ ಚೀಲವನ್ನು ಹಾಕಿ ಹೋದವಳು ಆಕೆ. ತನ್ನ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಭವಾನಿ ಎಂದೂ ಬಿಟ್ಟುಕೊಟ್ಟಿರಲಿಲ್ಲ. ಪ್ರಥಮ ದರ್ಜೆಯಲ್ಲಿ ಅತ್ಯುನ್ನತ ಅಂಕಗಳಿಂದ ಮೆಟ್ರಿಕ್ ಪಾಸು ಮಾಡಿ ಆಕೆ ತರವಾಡಿಗೆ ಹೆಸರು ತಂದಿದ್ದಳು.
ಶಾಲೆಯಲ್ಲಿ ಇರುವಾಗಲೆ ಭವಾನಿಗೆ ದೊಡ್ಡ ದೊಡ್ಡ ತರವಾಡುಗಳಿಂದ ವಿವಾಹ ಆಲೋಚನೆ ಬಂದಿತ್ತು. ದೇವಕಿಯಮ್ಮ ಮಗಳಿಗಾಗಿ ಆರಿಸಿದ ಯುವಕ ಕಣ್ಣೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದ. ಹಿರಿಯ ತರವಾಡಿನವ; ಅಲ್ಲದೆ ಸ್ವಯಾರ್ಜಿತ ಆಸ್ತಿಯೂ ಸಾಕಷ್ಟು ಇತ್ತು. ಎಲ್ಲರೂ ಭವಾನಿಯ ಭಾಗ್ಯವನ್ನು ಹೊಗಳುವವರೆ, ಆದರೆ ವಿವಾಹದ ಸಿದ್ಧತೆ ಭರದಿಂದ ನಡೆದಿದ್ದಂತೆಯೆ ಊರಿಗೆ ಬಂದ ಗಂಡು ಸರ್ಪ ಕಚ್ಚಿ ಸತ್ತಾಗ ಅದೇ ಜನ ಭವಾನಿಯ ದುರಾದೃಷ್ಟವನ್ನು ತೆಗಳಿದರು.
ಸುದ್ದಿ ತಿಳಿದು ಕುಸಿದು ಬಿದ್ದ ಮಗಳನ್ನು ಅಪ್ಪಿ ಹಿಡಿದ ದೇವಕಿಯಮ್ಮ ಈ ಘಟನೆ ಹತ್ತು ದಿನಗಳ ಮೊದಲೇ ನಡೆದುದರಿಂದ ಭವಾನಿ ವಿಧವೆ ಆಗುವುದು ತಪ್ಪಿತು ಎಂದು ಸಮಾಧಾನಪಟ್ಟರೂ ಆಕೆಯ ಭವಿಷ್ಯದ ಯೋಚನೆ ಮೂಡಿದಾಗ ಒಂದು ಕ್ಷಣ ನಡುಗಿದರು. ಪಯ್ಯನೂರಿನಿಂದ ಬಂದ ಕಣಿಶನ್(೫) ಈ ನಿಶ್ಚಿತ ಮುಹೂರ್ತದಲ್ಲಿ ಭವಾನಿಯ ವಿವಾಹ ಆಗದಿದ್ದರೆ ಮುಂದೆ ಆಕೆಗೆ ವಿವಾಹ ಯೋಗವಿಲ್ಲ ಎಂದಾಗ ನಡೆದ ಅವಸರದ ವರಾನ್ವೇಷಣೆಯಲ್ಲಿ ದೊರೆತಾತ ಕುಂಞಕಣ್ಣ. ಹೆಸರಿಗೇನೊ ದೊಡ್ಡ ತರವಾಡಿನವ, ಆದರೆ ಉಂಡಾಡಿ. ತರವಾಡಿನ ಪ್ರತಿಷ್ಠೆ, ಕಣಿಶನ್ ಭವಿಷ್ಯ ಎಂದು ದೇವಕಿಯಮ್ಮ ವಿವಾಹ ನಡೆಸಿಯೆಬಿಟ್ಟರು. ವಾದ್ಯಘೋಷವಿಲ್ಲ, ಸಿಡಿಮದ್ದಿನ ಅಬ್ಬರವಿಲ್ಲ. ವಿವಾಹಕ್ಕೆಂದು ಬಂದ ಆತ್ಮೀಯ ಬಂಧುಗಳ ಮುಖದಲ್ಲೂ ಸೂತಕದ ಕಳೆ. ಆದರೂ ಪುದಿಯವಳಪ್ ತರವಾಡಿನ ದೇವಕಿಯಮ್ಮನ ಮಗಳು ಭವಾನಿಯ ಮದುವೆ ಪೂರ್ವನಿಶ್ಚಿತ ಮುಹೂರ್ತದಲ್ಲಿಯೆ ನಡೆಯಿತು. ದೂರದ ಊರಿನಿಂದ ಬಂದ ಕಾರ್ನವರು(೬), ಬಂಧುಗಳು ದೇವಕಿಯಮ್ಮನ ಎದೆಗಾರಿಕೆಗೆ ಮೆಚ್ಚುಗೆ ಸೂಚಿಸಿದರು. ಮನೆಯಳಿಯನಾಗಿ ಬಂದ ಕುಂಞಕಣ್ಣ ಅನಿರೀಕ್ಷಿತವಾಗಿ ತನ್ನ ಪಾಲಿಗೆ ಒದಗಿ ಬಂದ ಭಾಗ್ಯವನ್ನು ನೆನೆದು ಬೀಗಿ ಕುಳಿತ. ಆದರೆ ಭವಾನಿ, ಬಹಿಷ್ಠೆಯರಾದ ಸ್ತ್ರೀಯರಿಗಾಗಿ ಕಟ್ಟಿರುವ ಮನೆಯ ಹೊರಗಿನ ಕತ್ತಲ ಕೊಠಡಿಯಲ್ಲಿ ಯಾರೂ ಕಾಣದಂತೆ ಕುಳಿತು ಮನಸ್ಸು ಹಗುರ ಆಗುವಷ್ಟು ಹೊತ್ತು ಅತ್ತು ಬಂದಳು. ಮಗಳ ದುಃಖ ಹೃದಯ ಹಿಂಡಿದರೂ ದೇವಕಿಯಮ್ಮ ನಿಸ್ಸಹಾಯಕರು. ಮಗಳಿಗೆ ವಿದ್ಯಾಯೋಗವಷ್ಟೇ ಇದೆ, ಸಂಸಾರಯೋಗವಿಲ್ಲ ಎನ್ನುವುದನ್ನು ಬದಲಾಯಿಸಿಯೇ ತೀರುತ್ತೇನೆಂದು ಹಠದಲ್ಲಿದ್ದ ಆಕೆ ನಂಬಿಕೊಂಡು ಬಂದಿದ್ದ ದೈವದ ಮುಂದೆ ಸೆರಗೊಡ್ಡಿ ಮಗಳ ಜೀವನ ಹಸನಾಗಲಿ ಎಂದು ಪ್ರಾರ್ಥಿಸಿದರು.
ಒಂದು ತಿಂಗಳು ಎಲ್ಲವೂ ಸುಸೂತ್ರವಾಗಿ ಕಳೆಯಿತು. ಆದರೆ ತಿಂಗಳ ಅಳಿಯ ಸತ್ಕಾರದ ಬಳಿಕ ದೇವಕಿಯಮ್ಮ ಪರೋಕ್ಷವಾಗಿ ಹಿತ್ತಲ ಕೆಲಸ ಕಾರ್ಯಗಳಲ್ಲಿ ಆಸಕ್ತಿ ತೋರಬೇಕೆಂದು ಅಳಿಯನಿಗೆ ಹೇಳಿಬಿಟ್ಟದ್ದು ದೊಡ್ಡ ಆಪತ್ತಿಗೆ ಕಾರಣವಾಯಿತು. ಅದಾಗಲೆ ಆತನ ತರವಾಡಿನವರು ಕೈ ಖರ್ಚಿಗೆ ಹಣ ಕೊಡುವುದನ್ನೂ ನಿಲ್ಲಿಸಿಬಿಟ್ಟಿದ್ದರು. ದೇವಕಿಯಮ್ಮನ ಎದುರು ಉತ್ತರಿಸದಿದ್ದರೂ ಹೆಂಡತಿಯ ಮುಂದೆ ನಿನ್ನ ಅಮ್ಮನಿಗೆ ತೋಟದ ಕೆಲಸಕ್ಕೆ ಪುಕ್ಕಟೆ ಗಂಡಾಳು ದೊರೆಯಿತು ಎಂದು ಹಂಗಿಸುವುದನ್ನು ಕುಂಞಕಣ್ಣ ನಿಲ್ಲಿಸಲಿಲ್ಲ. ಕೆಲಸ ಮಾಡಿ ತಿನ್ನುವಂತಹ ಜಾಯಮಾನಕ್ಕೆ ಸೇರಿದವನಲ್ಲ ಆತ. ತಿಂಗಳು ಕಳೆಯುವುದರೊಳಗೆ ಆತ ತನ್ನ ತರವಾಡಿಗೆ ಹಿಂತಿರುಗಿದ. ಮುಂದೆ ತಿಂಗಳಿಗೆ ಒಂದೊ ಎರಡೊ ಬಾರಿ ರಾತ್ರಿ ಕಳೆಯಲು ಬರುವುದಕ್ಕೆ ಆತನ ಸಂಬಂಧ ಉಳಿಯಿತು. ಇಂತಹ ಭೇಟಿಯಿಂದ ದೊರೆತ ಉಡುಗೊರೆಯಿಂದಾಗಿ ಭವಾನಿ ನಾಲ್ಕು ಬಾರಿ ಪ್ರಸವಿಸಿದಳು. ಆದರೆ ಉಳಿದದ್ದು ಕೊನೆಯ ಗಂಡು ಮಗು, ಅಪ್ಪು ಮಾತ್ರ.
ವರ್ಷಗಳು ಕಳೆದಂತೆ ಇಂತಹ ಭೇಟಿಗಳೂ ವಿರಳವಾಗುತ್ತಾ ಸಾಗಿದವು. ಇಂತಹ ಒಂದು ಅಪೂರ್ವ ಸಂದರ್ಭದಲ್ಲಿ ಭವಾನಿ, “ಎಲ್ಲಿಯಾದರೂ ಒಂದು ಸಣ್ಣ ಮನೆ ಮಾಡಿ ನನ್ನನ್ನು, ಮಗುವನ್ನು ಒಯ್ಯಬಾರದೆ ಏನಾದರೂ ವ್ಯಾಪಾರ ಆರಂಭಿಸಿ ಗಳಿಸಬಾರದೆ” ಎಂದು ಸಲಹೆ ನೀಡಿದಾಗ ಹೋದ ಕುಂಞಕಣ್ಣ ತಿಂಗಳ ಬಳಿಕ ನಗುಮುಖದೊಂದಿಗೆ ಬಂದ. ಮಂಗಳೂರು ಮಲ್ಲಿಗೆ ಚೆಂಡು ತಂದಿದ್ದ, ಸಿಹಿ ತಿಂಡಿಯೂ ಇತ್ತು. ಸ್ನೇಹಿತನೊಂದಿಗೆ ಮಂಜೇಶ್ವರದಲ್ಲಿ ವ್ಯಾಪಾರ ಆರಂಭಿಸುವುದಾಗಿ ತಿಳಿಸಿದ. ಅಲ್ಲಿ ಇಲ್ಲಿ ಸಾಲ ತೆಗೆದು ಹತ್ತು ಸಾವಿರ ಒಟ್ಟು ಮಾಡಿದ್ದೇನೆ, ಇನ್ನು ಹತ್ತು ಸಾವಿರ ಬೇಕು ಎಂದ. ಹೆಂಡತಿಯನ್ನು ಪುಸಲಾಯಿಸಿ ಇದ್ದ ಚಿನ್ನವನ್ನೆಲ್ಲಾ ಒಯ್ದವ ಆ ಬಳಿಕ ಹಿಂತಿರುಗಿ ಬರಲಿಲ್ಲ.
ತನ್ನನ್ನು ಕೇಳದೆ ಮಗಳು ಕೈಕೊಂಡ ಈ ಒಂದು ಹುಚ್ಚು ನಿರ್ಧಾರಕ್ಕಾಗಿ ದೇವಕಿಯಮ್ಮ ಅವಳನ್ನು ಎಂದೂ ಕ್ಷಮಿಸಿರಲಿಲ್ಲ. ಕುಂಞಕಣ್ಣನ ಈ ವರ್ತನೆಯಿಂದಾಗಿ ಅಮ್ಮ ಅಪ್ಪುವನ್ನು ನಿರ್ಲಕ್ಷಿಸುತ್ತಿದ್ದಾರೆನ್ನುವ ಸಂದೇಹ ಭವಾನಿಗಿದೆ. ಚಿಕ್ಕಂದಿನಲ್ಲಿ ಆತ ತುಂಟಾಟದಲ್ಲಿ ತೊಡಗಿದ್ದಾಗ ಅಪ್ಪನಿಗೆ ತಕ್ಕ ಮಗನೆಂದು ಆಕೆ ಬಿರುನುಡಿಯಾಡಿದ್ದು ಭವಾನಿಯ ಕಿವಿಗೆ ಬಿದ್ದಿದೆ. ತೀರಿಹೋದ ಮೂವರು ಹೆಣ್ಣುಮಕ್ಕಳಲ್ಲಿ ಒಂದಾದರೂ ಉಳಿಯುತ್ತಿದ್ದರೆ ವಂಶ ಬೆಳೆಯುತ್ತಿತ್ತು ಎಂದು ಅಮ್ಮ ಹೇಳುವುದು ಆಕೆಗೆ ಕೇಳಿಸಿದೆ. ಆದರೆ ಅನಿವಾರ್ಯತೆಯಿಂದಾಗಿ ತರವಾಡಿನಲ್ಲಿ ಉಳಿಯಬೇಕಾಗಿ ಬಂದ ತಾನು ಯಾರಿಗೂ ಉತ್ತರ ನೀಡುವ ಸ್ಥಿತಿಯಲ್ಲಿಲ್ಲ ಎನ್ನುವುದು ಭವಾನಿಗೆ ಅರಿವಿದೆ.
ಈ ಕಳೆದ ಕೆಲ ದಿನಗಳಿಂದ ಅಪ್ಪುವಿನ ಮಾನಸಿಕ ತಳಮಳ ಹೆಚ್ಚಿದೆಯೆನ್ನುವುದು ಭವಾನಿಗೆ ತಿಳಿದಿದೆ. ಆತನ ಗೆಳೆಯರು ಆನಂದ ಮತ್ತು ಅಬೂಬಕರ್ ದುಬಾಗೆ ಹೊರಟಿದ್ದಾರೆ ಎಂದು ತಿಳಿದಂದಿನಿಂದ ಆತ ಇನ್ನಷ್ಟು ಉದ್ವಿಗ್ನಕ್ಕೊಳಗಾಗಿದ್ದಾನೆ. ಹೇಗಾದರೂ ಮಾಡಿ ಇಪ್ಪತ್ತೈದು ಸಾವಿರ ರೂಪಾಯಿ ಸಂಗ್ರಹಿಸಿಕೊಡಿ ಎಂದು ಆತ ಒಂದೆರಡು ಬಾರಿ ಗೋಗರೆದ. ದುಬಾಗೆ ಹೋದ ಆರು ತಿಂಗಳಲ್ಲೇ ಸಾಲ ತೀರಿಸಬಹುದು ಎಂದು ಹೇಳುತ್ತಿದ್ದಾನೆ. ಸ್ವಂತದ್ದಾಗಿ ಅಮ್ಮನಲ್ಲಿ ಅಷ್ಟು ಹಣ ಇರಲಾರದು. ಆದರೆ ಹಳೆಯ ಚಿನ್ನ ಇದೆ. ಮನೆಯ ಚಿನ್ನದಲ್ಲಿ ತಂದೆ ಈಗಾಗಲೆ ಅರ್ಧದಷ್ಟು ಗುಳುಂ ಮಾಡಿದುದಾಗಿ ದೂರುವ ಅಮ್ಮ ಮಗನಿಗೆ ಅದರಲ್ಲಿ ಉಳಿದುದನ್ನು ನೀಡುತ್ತಾರೆಯೆ? ಅಲ್ಲದೆ ದೈವಕ್ಕೆ ದೀಪ ಹೊತ್ತಿಸಲು ತರವಾಡಿನಲ್ಲಿರುವ ಒಂದೇ ಒಂದು ಗಂಡು ಸಂತಾನವನ್ನು ದೂರ ಕಳುಹಿಸುವ ಕಾರ್ಯಕ್ಕೆ ತರವಾಡು ಮೂಪತ್ತಿ ಮನಸ್ಸು ಮಾಡುವುದೇ ಅಸಂಭವ. ಆದರೆ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ತನ್ನ ಮಗನಿಗೆ ಇಲ್ಲಿ ಏನು ಭವಿಷ್ಯವಿದೆ ಎಂದು ಯೋಚಿಸಿದಾಗಲೆಲ್ಲಾ ಭವಾನಿಗೆ ಮಗನ ಯೋಚನಾಗತಿಯೆ ಸರಿ ಎಂದೆನ್ನಿಸುತ್ತದೆ.
ನೀರು ಕುದಿಯುವ ಸದ್ದು ಕೇಳಿಸಿದಾಗ ತೊಳೆದಿಟ್ಟ ಅಕ್ಕಿಯನ್ನು ಪಾತ್ರೆಗೆ ಹಾಕಿ ಮತ್ತೆ ಭವಾನಿ ಗೋಡೆಗೊರಗಿ ನಿಂತಳು.
– ೩ –
ರಾಮುಣ್ಣಿ ನಾಯರ್ ಬಾರ್ ನಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದ ಅಪ್ಪು ಕೈಎತ್ತಿ ಆವೇಶದಿಂದ ಮಾತನಾಡುತ್ತಿದ್ದಾನೆ. ಆಗೊಮ್ಮೆ ಈಗೊಮ್ಮೆ ತನ್ನ ಸ್ನೇಹಿತರೊಂದಿಗೆ ಕದ್ದುಮುಚ್ಚಿ ಕುಡಿಯುತ್ತಿದ್ದ ಅಪ್ಪು ಇಂದು ಬಾರ್‌ನಲ್ಲಿ ರಾಜಾರೋಷವಾಗಿ ಕುಳಿತು ಕುಡಿಯಲು ಕಾರಣ ಎರಡು. ಮೊದಲನೆಯದ್ದು ತಮ್ಮ ನಿರುದ್ಯೋಗಿ ಬಳಗದಿಂದ ಪಾರಾಗಿ ದುಬಾಗೆ ಹೋಗುತ್ತಿರುವ ಆನಂದ, ಅಬೂಬಕ್ಕರ್‌ಗೆ ಒಳ್ಳೆಯ ವಿದಾಯಕೂಟ ನೀಡಬೇಕೆನ್ನುವುದು, ಇನ್ನೊಂದು, ಹೀಗೆ ತಾನು ಕುಡಿದು ಕೆಟ್ಟುಹೋಗುತ್ತಿದ್ದೇನೆ ಎನ್ನುವ ಸುದ್ದಿ ಮುಟ್ಟಿದಾಗಲಾದರೂ ತನ್ನ ಅಜ್ಜಿಯೂ ಆಗಿರುವ ತರವಾಡು ಮೂಪತ್ತಿ ಒಂದಿಪ್ಪತ್ತೈದು ಸಾವಿರ ಸಾಲ ನೀಡಬಹುದು ಎನ್ನುವುದು. ಅದಿಲ್ಲವಾದರೆ ತನ್ನ ಪ್ರತಿಭಟನೆ ಹೀಗಾದರೂ ವ್ಯಕ್ತವಾಗಲಿ. ಮುಸ್ಸಂಜೆಯ ಹೊತ್ತಿನಿಂದಲೆ ಮನೆಯ ಇಬ್ಬರು ಹೆಂಗಸರು ತನಗಾಗಿ ಕಾಯುತ್ತಿದ್ದಾರೆ ಎನ್ನುವುದು ನೆನಪಿಗೆ ಬಂದಾಗ ಅಪ್ಪು ಹಾಗಾದರೂ ಈ ತರವಾಡಿನ ಎಲ್ಲರಿಗೆ ತನ್ನ ಮಹತ್ವ ತಿಳಿಯಲಿ ಎಂದು ಮನಸ್ಸಿನೊಳಗೆ ಬೀಗುತ್ತಾ ಕುಳಿತ.
ಇಂದು ತನ್ನನ್ನೇನಾದರೂ ಬೈದರೆ ಮುದುಕಿಗೆ ಸರಿಯಾದ ಉತ್ತರ ನೀಡುತ್ತೇನೆ. ಮನೆಯ ಬಿಟ್ಟಿ ಕೆಲಸ ಮಾಡಲು ತಾನು ಬೇಕು. ವಿಷ್ಣುಮೂರ್ತಿಗೆ ದೀಪ ತೋರಿಸಲು ತಾನು ಬೇಕು. ಜೀವಮಾನದುದ್ದಕ್ಕೂ ಹೀಗೆ ಸೇವೆ ಮಾಡುತ್ತಾ ಮಾಡುತ್ತಾ ಕೊನೆಗೊಂದು ದಿನ ತಾನು ಕಣ್ಣು ಮುಚ್ಚಿದರೆ ಎಂದು ಯೋಚಿಸುತ್ತಿರುವಂತೆಯೆ ರಾಘವ ಮಾವನ ನೆನಪು ಬಂದು ಗಂಟಲು ಕಟ್ಟಿತು. ತಾಯಿಯ ಅಣ್ಣ ರಾಘವ ಮಾವ ಇರುವವರೆಗೆ ಯಾವ ಕೆಲಸದ ಜವಾಬ್ದಾರಿ ಅಪ್ಪುಗೆ ಇರಲಿಲ್ಲ. ಮಾವ ಅವರಿಲ್ಲವಾದರೆ ಅವರ ಮೂವರು ಮಕ್ಕಳು ಹಿತ್ತಲ ಕೆಲಸ, ದೈವಕ್ಕೆ ದೀಪ ತೋರಿಸುವ ಕೆಲಸ ಎಲ್ಲಾ ಮಾಡುತ್ತಿದ್ದರು.
ಆದರೆ ತರವಾಡಿನಲ್ಲಿ ಇಷ್ಟು ವರ್ಷಗಳ ಕಾಲ ಮಾಡಿದ ಸೇವೆಗೆ ದೊರೆತ ಫಲ ಏನು? ಮಾವ ತೀರಿದ ಬಳಿಕ ಅತ್ತೆ ತರವಾಡಿನ ಹಿತ್ತಲ ಗುಡ್ಡೆಯ ಮೇಲೆ ಒಂದು ಪುಟ್ಟ ಮನೆ ಕಟ್ಟಿ ನಿಲ್ಲುತ್ತೇನೆ ಎಂದರು. ಆದರೆ ತರವಾಡು ಮೂಪತ್ತಿ ಅದಕ್ಕೆ ಸಮ್ಮತಿಸಲಿಲ್ಲ. ಈ ತರವಾಡು ಮನೆಯಲ್ಲಿ ಬೇಕಾದಷ್ಟು ಕಾಲ ಇರಬಹುದು. ಆದರೆ ತರವಾಡು ಆಸ್ತಿಯನ್ನು ಹೀಗೆ ಹಂಚುವಂತಿಲ್ಲ.
ಅಳಿಯ ಸಂತಾನ ಕ್ರಮವನ್ನು ಅನುಸರಿಸುತ್ತಿರುವ ತಮ್ಮಲ್ಲಿ ಗಂಡುಮಕ್ಕಳ ಸಂತಾನಕ್ಕೆ ತರವಾಡು ಆಸ್ತಿಯಲ್ಲಿ ಹಕ್ಕಿಲ್ಲ ನಿಜ. ಆದರೆ ಇಷ್ಟು ವರ್ಷಗಳ ಕಾಲ ಅವರು ಸಲ್ಲಿಸಿದ ಸೇವೆ ವ್ಯರ್ಥವೆ? ಬೇರೆ ಎಷ್ಟೋ ತರವಾಡುಗಳಲ್ಲಿ ಇದು ಬದಲಾಗಿದೆ. ಆದರೆ ದೇವಕಿಯಮ್ಮನ ತರವಾಡಿನಲ್ಲಿ ಸಾಧ್ಯವಿಲ್ಲವಂತೆ. ಅತ್ತೆ ಮೂವರು ಮಕ್ಕಳೊಂದಿಗೆ ಹೊರಟು ನಿಂತ ಆ ಹೃದಯ ವಿದ್ರಾವಕ ಗಳಿಗೆಯಲ್ಲಿ ಎಲ್ಲರ ಕಣ್ಣಲ್ಲಿ ನೀರು ಹನಿಯುತ್ತಿತ್ತು. ಆದರೆ ದೇವಕಿಯಮ್ಮ ಹಳೆಯ ಸಂದೂಕದಿಂದ ಸಾವಿರ ರೂಪಾಯಿ ತೆಗೆದು ನೀಡಿ, “ಹೋಗಿ ಬರುತ್ತಾ ಇರಿ” ಎಂದು ಗಂಭೀರ ಮುಖಭಾವದಿಂದ ವಿದಾಯ ಹೇಳಿದರು.
ಮುಂದೊಂದು ದಿನ ಇದೇ ಕತೆಯ ಪುನರಾವರ್ತನೆ ಆಗಲಿದೆ. ಅಪ್ಪು ಸತ್ತಾಗ ಅವನ ಹೆಂಡತಿ ಮಕ್ಕಳು ಗಂಟುಮೂಟೆ ಕಟ್ಟಿ ಹೊರಟು ನಿಂತಾಗ ಈ ದೇವಕಿಯಮ್ಮ ಅಲ್ಲಾ, ಭವಾನಿಯಮ್ಮ ಸಾವಿರ ರೂಪಾಯಿ ನೀಡಿ ಋಣ ಸಂದಾಯ ಮಾಡಬಹುದು. ಇದನ್ನು ಖಂಡಿತಾ ಆಗಗೊಡೆ. ಅದಕ್ಕೂ ಮೊದಲೆ ಇಲ್ಲಿಂದ ಪಾರಾಗಿ ಹೋಗಬೇಕು. ಮುಂದೊಂದು ದಿನ ದುಬಾಯಿಂದ ದೊಡ್ಡ ದೊಡ್ಡ ಸೂಟುಕೇಸುಗಳೊಂದಿಗೆ ಹಿಂತಿರುಗಿ ಬಂದಾಗ ಈ ದೇವಕಿಯಮ್ಮನ ತರವಾಡಿಗೂ ಒಂದು ಭೇಟಿ ನೀಡಬೇಕು. ನೂರರ ಗರಿಗರಿ ನೋಟುಗಳನ್ನು ಕೈಯಲ್ಲಿರಿಸಿ ದೈವದ ಎಣ್ಣೆ ಖರ್ಚಿಗೆಂದು ಹೇಳುವಾಗ ಅವರ ಕಣ್ಣುಗಳು ಅರಳಬಹುದು. ಆದರೆ ದುಬಾಗೆ ಹೋಗಲು ಇಪ್ಪತ್ತೈದು ಸಾವಿರ ಬೇಕಲ್ಲಾ.
ದೈವದ ಕೋಣೆಯ ಪಕ್ಕದ ಕತ್ತಲ ಕೋಣೆಯಲ್ಲಿರಿಸಿರುವ ಆ ದೊಡ್ಡ ಸಂದೂಕದಲ್ಲಿ ಹಣ ಖಂಡಿತಾ ಇರಬೇಕು. ಇಲ್ಲವಾದರೆ ಚಿನ್ನ ಇದೆಯಲ್ಲಾ. ಮುದುಕಿ ಎಷ್ಟೊಂದು ಜತನದಿಂದ ಅದನ್ನು ಕಾಯುತ್ತಿದ್ದಾಳೆ. ತರವಾಡಿನ ಎಲ್ಲಾ ಮಕ್ಕಳಿಗೆ ಆ ಸಂದೂಕದ ಬಗ್ಗೆ ಕೌತುಕ. ಕೇಳಿದರೆ ಆಕೆ ನಕ್ಕು, “ಮಕ್ಕಳೇ ಅದರಲ್ಲಿ ಈ ತರವಾಡು ಮೂಪತ್ತಿಯ ನಿಧಿ ಇದೆ. ನಾನು ಸ್ವರ್ಗದ ಹಾದಿ ಹಿಡಿದಾಗ ನೀವೆಲ್ಲಾ ಅದನ್ನು ನೋಡುವಿರಂತೆ” ಎಂದೆನ್ನುತ್ತಿದ್ದದ್ದು ನೆನಪಿಗೆ ಬಂತು. ಆ ಸಂದೂಕದ ಮುಚ್ಚಳ ತೆರೆಯಬೇಕಾದರೆ ಮುದುಕಿ ಸಾಯಬೇಕು. ನನ್ನ ಈ ಕಂಗೆಟ್ಟ ಪರಿಸ್ಥಿತಿಯಲ್ಲೂ ಒಂದಿಷ್ಟು ಚಿನ್ನ ಬ್ಯಾಂಕಿನಲ್ಲಿರಿಸಿ ಸಾಲ ಪಡೆಯಲು ಆಕೆ ಸಮ್ಮತಿಸಲಾರಳು.
ತಂದೆ ಎಲ್ಲರ ಮುಖಕ್ಕೆ ಮಸಿ ಬಳೆಯುವಂತಹ ಕೆಲಸ ಮಾಡಿದ್ದಾರೆ ನಿಜ. ಆದರೆ ನಾನು ಈ ತರವಾಡಿನ ಸಂತಾನ. ಪುದಿಯವಳಪ್ ತರವಾಡಿನ ಮೂಪತ್ತಿ ದೇವಕಿಯಮ್ಮನ ಮಗಳು ಭವಾನಿಯಮ್ಮನ ಮಗ. ಸಂದೂಕದಲ್ಲಿರುವ ಚಿನ್ನದಲ್ಲಿ ನನಗೆ ಹಕ್ಕು ಇಲ್ಲವೆ?
ತಾನು ಕಲಿತ ಮೆಕ್ಯಾನಿಕ್ ಕೆಲಸಕ್ಕೆ ದುಬಾಯಲ್ಲಿ ಬೇಡಿಕೆಯಿದೆ. ಆದರೆ ಅಲ್ಲಿಗೆ ಹೋಗುವ ವ್ಯವಸ್ಥೆ ಮಾಡಲು ಏಜೆಂಟಿಗೆ ಇಪ್ಪತ್ತೈದು ಸಾವಿರ ರೂಪಾಯಿ ಕೊಡಬೇಕು. ತನ್ನ ಅಸಹಾಯಕತೆಯ ಅರಿವು ಮೂಡಿದಾಗ ಅಪ್ಪುವಿನ ಗಂಟಲು ಕಟ್ಟಿ ಬಂದಿತು. ಟೇಬಲ್ಲಿನಲ್ಲಿರುವ ಗ್ಲಾಸುಗಳು ಖಾಲಿಯಾಗಿರುವುದನ್ನು ನೋಡಿದ ಆತ ಅಳು ನುಂಗುತ್ತಾ ವೇಟರನನ್ನು ಕರೆದು ಇನ್ನೊಂದು ಅರ್ಧ ಬಾಟಲು ತರಲು ಹೇಳಿದ. ಹೇಳಿದ ಬಳಿಕ ಬಿಲ್ ಮಿತಿ ಮೀರಿರಬೇಕು ಎಂದು ಒಂದು ಕ್ಷಣ ಆತ ಯೋಚಿಸಿದ. ತರವಾಡಿನ ಹಿತ್ತಲಿನಿಂದ ತೆಂಗಿನಕಾಯಿ ಖರೀದಿಸುವ ಖಾದರ್ ಬ್ಯಾರಿಯೊಂದಿಗಿನ ಗುಪ್ತ ಒಪ್ಪಂದದಿಂದಾಗಿ, ಅಪ್ಪುವಿಗೆ ಎಂದೂ ಪುಡಿಗಾಸಿಗೆ ಕೈ ಚಾಚುವ ಪ್ರಸಂಗ ಬಂದಿರಲಿಲ್ಲ. ಮುಂದಿನ ಬಾರಿ ಕಾಯಿ ಖರೀದಿಸುವಾಗ ಸಂದಾಯ ಮಾಡುತ್ತೇನೆ ಎಂದು ಆತ ಐನೂರು ರೂಪಾಯಿ ತಂದಿದ್ದ. ಆ ಹಣ ಜೇಬಿನಲ್ಲಿ ಇರುವುದರಿಂದಲೇ ಆತ ಇಂದಿನ ಪಾರ್ಟಿಗೆ ಅತಿಥೇಯನಾಗಿದ್ದ.
ಹೊಸತಾಗಿ ಬಂದ ಬಾಟಲಿನಿಂದ ಪ್ರತೀ ಗ್ಲಾಸಿಗೆ ವಿಸ್ಕಿ ಹಾಕಿ ಅದರ ಮೇಲೆ ನೊರೆ ನೊರೆ ಸೋಡಾ ಸುರಿಯುತ್ತಿರುವುದನ್ನು ನೋಡುತ್ತಿರುವಂತೆಯೇ ಅಪ್ಪು, ಇಂದು ಎಲ್ಲಾ ವ್ಯಥೆಯನ್ನು ತನ್ನ ಸ್ನೇಹಿತರಿಗಾಗಿ ಮರೆತು ಸಂತೋಷದಿಂದಿರಬೇಕು ಎಂದು ಯೋಚಿಸುತ್ತಾ ಒಮ್ಮೆಲೆ ಉಲ್ಲಾಸಭರಿತನಾದ. ಮತ್ತೆ ಮತ್ತೆ ಆನಂದ ಮತ್ತು ಅಬೂಬಕರನ ಕೈ ಕುಲುಕಿದ. ಕಂಗ್ರ್ಯಾಚುಲೇಶನ್ಸ್ ಮೈ ಡೀಯರ್ ಫ್ರೆಂಡ್ಸ್ ಎಂದು ಇನ್ನೊಮ್ಮೆ ಹೇಳುತ್ತಿರುವಂತೆಯೆ ಭಾವಾತಿರೇಕದಿಂದ ಮಾತು ತಡವರಿಸಿತು, ಕಣ್ಣು ಹನಿಯಿತು.
– ೪ –
“ವಿಷ್ಣುಮೂರ್ತಿಯ ಪೂಜಾ ಕೊಠಡಿಯಲ್ಲಿ ಹೆಂಗಸರು ಯಾಕೆ ದೀಪ ಹೊತ್ತಿಸಬಾರದು” ಎಂದು ಬಾಲೆ ದೇವಕಿ ತನ್ನ ಅಮ್ಮನಲ್ಲಿ ಕೇಳಿದ್ದಳು. ದೀಪ ಹೊತ್ತಿಸುವುದು ಗಂಡಸರ ಹಕ್ಕು ಎಂದು ಅಮ್ಮ ಹೇಳಿದಾಗ ಆಕೆ ಸಮ್ಮತಿಸಿರಲಿಲ್ಲ. ತರವಾಡಿನಲ್ಲಿ ಹೆಂಗಸರಿಗೆ ದೊಡ್ಡ ಸ್ಥಾನವಂತೆ. ತರವಾಡು ಮೂಪತ್ತಿಯ ಸ್ಥಾನ ಹೆಂಗಸರಿಗೆ ಮೀಸಲು. ಆದರೆ ದೈವದ ಕೊಠಡಿಯಲ್ಲಿ ದೀಪ ಹೊತ್ತಿಸುವುದು ಮಾತ್ರ ಗಂಡಸರ ಹಕ್ಕು ಯಾಕೆ ಎಂದು ಆಕೆ ಮರು ಪ್ರಶ್ನೆ ಹಾಕಿದ್ದಳು.
ಪುಟ್ಟ ಹುಡುಗಿಗೆ ಹೇಗೆ ವಿವರಿಸುವುದು ಎಂದು ಗಲಿಬಿಲಿಗೊಂಡ ತಾಯಿ ಬರಿದೇ ನಕ್ಕು ಮುದ್ದು ಮಾಡಿದ್ದಳು. ತನ್ನ ಹೆಗಲಿನತ್ತ ಬೆಟ್ಟು ಮಾಡಿ “ಇಷ್ಟು ಎತ್ತರವಾಗು ಮಗಳೆ ಆಗ ಹೇಳುತ್ತೇನೆ. ನೀನೀಗ ಸಣ್ಣ ಕೂಸು. ದೈವದ ಮುಂದೆ ನೀನೂ ದೀಪ ಹಚ್ಚಬಹುದು” ಎಂದಾಗ ದೇವಕಿಗೆ ಖುಷಿಯಾಗಿತ್ತು.
ವಿಷ್ಣುಮೂರ್ತಿಯ ಮುಂದೆ ದೀಪ ಹೊತ್ತಿಸುವ ಸಂದರ್ಭ ಕೊನೆಗೂ ದೇವಕಿಗೆ ಒದಗಿ ಬಂತು. ಮನೆಯ ಗಂಡಸರೆಲ್ಲಾ ಆ ದಿನ ಸಂಬಂಧಿಕರ ಮನೆಗೆ ಹೋಗಿ ಬರಲು ತಡವಾದಾಗ ತಾಯಿ ಮಗಳಿಗೆ ಮೀಯಿಸಿ ಮಡಿ ಬೈರಾಸನ್ನು ಮುಂಡಿನಂತೆ ಉಡಿಸಿದರು. ಇನ್ನೊಂದು ಬೈರಾಸನ್ನು ಸೆರಗಿನಂತೆ ಹೊದಿಸಿದರು.
ಕೈ ಮುಗಿದು ಭಕ್ತಿಯಿಂದ ಕೊಠಡಿಗೆ ಹೋಗು ಎಂದರು. ಒಂದು ನಿಮಿಷ ಕತ್ತಲ ಕೋಣೆಯಲ್ಲಿ ಏನೂ ಕಾಣಿಸಲಿಲ್ಲ. ಆದರೆ ಕಣ್ಣಿಗೆ ಕತ್ತಲ ಪರಿಚಯ ಆದ ಬಳಿಕ ಎಲ್ಲವೂ ಮಸುಕು ಮಸುಕಾಗಿ ಕಾಣಿಸಿತು. ಆಳೆತ್ತರದ ಮರದ ಕೆತ್ತನೆಯ ಕಾಲುಂಪಲ(೭)ದಲ್ಲಿ ಇರಿಸಿದ ವಿಷ್ಣುಮೂರ್ತಿಯ ಆಯುಧಗಳು. ಮುಂಭಾಗದಲ್ಲೇ ನೀರು ತುಂಬಿಸಿದ ಗಿಂಡಿ. ಉತ್ತರಾಭಿಮುಖವಾಗಿ ಇರಿಸಿದ ಮಣೆಯೊಂದರಲ್ಲಿ ಇನ್ನೊಂದು ಕಪ್ಪಗಿನ ಆಯುಧ. ಗಗ್ಗರದಂತೆ ದನಿ ಮಾಡುವ ಈ ಆಯುಧವನ್ನು ಕೈದ್‌ನ ಸಂದರ್ಭದಲ್ಲಿ ವೆಳಿಚ್ಚಪ್ಪಾಡ್(೮) ಹಿಡಿದು ಕುಣಿಯುತ್ತಾರೆ. ದರ್ಶನ ಬಂದು ಆವೇಶಭರಿತರಾದಾಗ ವೆಳಿಚ್ಚಪ್ಪಾಡ್ ಆಯುಧದಿಂದ ಎದೆಗೆ ಬಡಿಯುತ್ತಾರೆ.
ದೇವಕಿಯಂತಹ ಮಕ್ಕಳಿಗೆ ಅದು ನಿಜವಾಗಿ ಹರಿತವಾದ ಕತ್ತಿಯೆ ಅಲ್ಲಾ ಬಡ್ಡು ಹಿಡಿದದ್ದೇ ಎನ್ನುವ ಕುತೂಹಲ. ಅದೊಂದು ವರ್ಷ ಶುದ್ಧಿಯಲ್ಲಿ ಇಲ್ಲದ ವೆಳಿಚ್ಚಪ್ಪಾಡ್ ಕುಟ್ಟಪ್ಪನ್ ಆಯುಧದಿಂದ ಎದೆಗೆ ಬಡಿದಾಗ ರಕ್ತ ಚಿಮ್ಮಿತು. ಅರಿಸಿನದ ಹುಡಿಯನ್ನು ಗಾಯಕ್ಕೆ ಎರಚಿದಾಗ ರಕ್ತ ಹರಿಯುವುದು ನಿಂತರೂ ಆತ ಮುಂದಿನ ನಾಲ್ಕೈದು ತಿಂಗಳ ಕಾಲ ನರಳಬೇಕಾಯಿತು. ಆ ಬಳಿಕ ಕುಟ್ಟಪ್ಪನ್ ಬದಲು ಹೊಸ ವೆಳಿಚ್ಚಪ್ಪಾಡ್ ಬರ ಹತ್ತಿದರು.
ಅಮ್ಮ ಏನನ್ನೂ ಮುಟ್ಟಬಾರದು ಎಂದಿದ್ದರು. ಆದರೂ ದೇವಕಿ ಕಸ ಗುಡಿಸುವ ನೆಪದಲ್ಲಿ ಆಯುಧವನ್ನು ಮುಟ್ಟಿಮುಟ್ಟಿ ಆನಂದಿಸಿದ್ದಳು. ಅಮ್ಮ ಹೊರಗೆ ನಿಂತು ಸೂಚನೆ ನೀಡುತ್ತಿರುವಂತೆಯೆ ಆಕೆ ನೀರಿನ ಗಿಂಡಿಯೊಂದಿಗೆ ಹೊರಗೆ ಬಂದಳು. ತೆಂಗಿನ ಮರದ ಬುಡಕ್ಕೆ ನೀರನ್ನು ಸುರಿದು ಗಿಂಡಿಯನ್ನು ತೊಳೆದು ಶುಭ್ರವಾಗಿಸಿದಳು. ಬಾವಿ ಕಟ್ಟೆಯಿಂದ ನೀರು ತಂದು ಮತ್ತೆ ಗಿಂಡಿಯನ್ನು ತುಂಬಿಸಿ ತಂದು ಕಾಲುಂಪಲದಲ್ಲಿ ಇರಿಸಿದಳು. ಮಡಿ ಬಟ್ಟೆಯಿಂದ ಬತ್ತಿಯನ್ನು ಹೊಸೆದು ತೂಗುದೀಪಗಳಲ್ಲಿ ಇರಿಸಿದಳು. ಎಣ್ಣೆ ಗಿಂಡಿಯಿಂದ ತೆಂಗಿನೆಣ್ಣೆಯನ್ನು ದೀಪಗಳಲ್ಲಿ ತುಂಬಿಸಿದಳು. ದೀಪ ಹೊತ್ತಿಸಿದಳು. ಸಂಜೆ ದೀಪ ಹೊತ್ತಿಸುವುದರಲ್ಲಿ ಮಕ್ಕಳಿಗೆಲ್ಲಾ ಅತ್ಯಂತ ಸಂತೋಷವನ್ನುಂಟುಮಾಡುವ ಅಂಶ ಮುಂದಿನದ್ದು. ಆಕೆ ಆಯುಧದ ಬಳಿ ಮಣೆಯಲ್ಲಿ ಇರಿಸಿದ ಶಂಖವನ್ನು ಹೊರತಂದು ಊದುವ ಶ್ರಮ ನಡೆಸಿದಳು. ಎರಡು ಬಾರಿಯ ವಿಫಲ ಯತ್ನದ ಬಳಿಕ ಶಂಖದಿಂದ ಧ್ವನಿ ಹೊರಟಿತು. ಅಮ್ಮ ಸಾಕು ಎಂದು ಹೇಳಿದ ಬಳಿಕವೂ ಎರಡು ಬಾರಿ ಶಂಖ ಊದಿದ ದೇವಕಿ ಸಂಭ್ರಮದೊಂದಿಗೆ ಹೊರ ನಡೆದಳು. ಕೊಡದಲ್ಲಿ ಬಾಕಿ ಉಳಿದಿದ್ದ ನೀರಿನಿಂದ ಶಂಖವನ್ನು ಶುದ್ಧಗೊಳಿಸಿ ಮತ್ತೆ ಒಳಗೊಯ್ದಳು. ಅಮ್ಮ ಹೇಳಿದಂತೆ ಕಾಲುಂಪಲದ ಮುಂದೆ ಸಾಷ್ಟಾಂಗ ನಮಸ್ಕರಿಸಿ, ವಿಷ್ಣುಮೂರ್ತಿಯ ಕೊಠಡಿಯ ಬಾಗಿಲು ಮುಚ್ಚಿ ಆಕೆ ಹೊರ ಬಂದಳು. ದೇವಕಿಯ ಈ ಎಲ್ಲಾ ಸಂಭ್ರಮದ ಗಳಿಗೆಗೆ ಸಾಕ್ಷಿಯಾಗಿ ದೈವದ ಕೊಠಡಿಯ ಹೊರಗೇ ಕೈಮುಗಿದು ನಿಂತಿದ್ದ ತರವಾಡಿನ, ನೆರೆಯ ಇತರ ಎಲ್ಲಾ ಮಕ್ಕಳ ಮಧ್ಯೆ ಆಕೆ ಆ ದಿನ ನಾಯಕಿ.
ತಿಟ್ಟೆಯ ಕಂಬವನ್ನು ಒರಗಿ ಕುಳಿತಿದ್ದ ದೇವಕಿಯಮ್ಮ ಆ ನೆನಪಿನಿಂದಲೇ ಪುಳಕಿತಗೊಂಡಂತೆ ದೈವಮೇ(೯) ಎಂದರು. ಅಂದಿನ ಮಕ್ಕಳಿಗೆ ವಿಷ್ಣುಮೂರ್ತಿಗೆ ದೀಪ ಹೊತ್ತಿಸುವುದು, ಶಂಖ ಊದುವುದು ಎಂದರೆ ಅದೊಂದು ಸಂಭ್ರಮದ ಕ್ಷಣವಾಗುತ್ತಿತ್ತು. ಆದರೆ ಇಂದು? ಮತ್ತೆ ಅಪ್ಪುವಿನ ನೆನಪಾಗಿ ದೇವಕಿಯಮ್ಮನ ಶಿರಕ್ಕೆ ರಕ್ತ ಏರಿತು. ದುಬಾಗೆ ಹೋಗಲು ಇಪ್ಪತ್ತೈದು ಸಾವಿರ ರೂಪಾಯಿ ಕೊಡಬೇಕಂತೆ. ಆತ ಹೋದರೆ ತರವಾಡಿನ ಕೆಲಸ ಕಾರ್ಯ ನಿಂತು ಹೋಗುವುದಿಲ್ಲ. ದೂರದ ಸಂಬಂಧದ ವಿಧವೆ ಚಿರುದ ಮತ್ತವಳ ಮಗ ಈ ತರವಾಡಿನಲ್ಲಿ ಬಂದು ನೆಲೆಸಲು ತುದಿಗಾಲಲ್ಲಿ ನಿಂತಿದ್ದಾರೆ.
ಕೈಯಲ್ಲಿ ಹಣ ಇಲ್ಲವೆಂದಲ್ಲ. ಆದರೆ ಅದು ತರವಾಡಿನ ಸೊತ್ತು. ಕಾಲುಂಪಲಕ್ಕೆ ಗೆದ್ದಲು ಹಿಡಿದಿದೆಯೆಂದು ತ್ರಿಶ್ಶೂರಿನಿಂದ ಬಂದ ದೊಡ್ಡ ಕಣಿಶನ್ ಹೇಳಿದಾಗಲೆ ದೇವಕಿಯಮ್ಮನ ಎದೆಯೊಡೆದಿತ್ತು. ದೈವದ ಕೋಣೆಯ ಉಸ್ತುವಾರಿ ನೋಡುತ್ತಿದ್ದ ರಾಘವ ಮತ್ತವನ ಮಕ್ಕಳನ್ನು ಆಕೆ ತರಾಟೆಗೆ ತೆಗೆದುಕೊಂಡಿದ್ದಳು. ಮನೆಯ ಒಳಗೆ ಏನು ನಡೆಯುತ್ತಿದೆಯೆನ್ನುವುದು ಮನೆಯವರಿಗೆ ತಿಳಿದಿಲ್ಲ. ಅದನ್ನು ಹೇಳಲು ದೂರದಿಂದ ಬಂದ ಕಣಿಶನ್ ಬೇಕಾದ.
ಮುಂದೆ ತರವಾಡಿನವರೆಲ್ಲಾ ಒಟ್ಟು ಸೇರಿ ಅಷ್ಟಮಂಗಲ ಪ್ರಶ್ನೆ ಕೇಳಿದಾಗ ಹೊಸ ಕಾಲುಂಪಲವನ್ನೇ ಮಾಡಿಸಬೇಕು, ಅಲ್ಲದೆ ಜೀರ್ಣಾವಸ್ಥೆಯಲ್ಲಿರುವ ತರವಾಡು ಮನೆಯನ್ನು ನವೀಕರಿಸಬೇಕು ಎಂದು ತಿಳಿದು ಬಂತು. ಅಂದು ಬಂದ ಸದಸ್ಯರೆಲ್ಲಾ ಮೀಟಿಂಗ್ ಕರೆದು ಸಂಗ್ರಹಿಸಿದ ಇಪ್ಪತ್ತು ಸಾವಿರ ರೂಪಾಯಿ ದೇವಕಿಯಮ್ಮನಲ್ಲಿದೆ. ಆದರೆ ಒಟ್ಟು ಕೆಲಸಕ್ಕೆ ಎರಡು ಲಕ್ಷ ರೂಪಾಯಿಗಳು ಬೇಕು. ಎಲ್ಲಾ ಸದಸ್ಯರು ಒಟ್ಟು ಸೇರಿದರೆ ಅದು ಅಸಾಧ್ಯವೇನಲ್ಲ. ಆದರೆ ಹೆಂಡತಿ ಮಕ್ಕಳಿಗೆ ಆಸ್ತಿಪಾಸ್ತಿ ಮಾಡುವುದರಲ್ಲೇ ತರವಾಡಿನ ಸದಸ್ಯರ ಗಮನ ಹೆಚ್ಚಿದೆ.
ಆ ದಿನ ಒಬ್ಬ ಬುದ್ಧಿವಂತ, ದೈವದ ಕೊಠಡಿಯನ್ನಷ್ಟೇ ಉಳಿಸಿ ಇಡೀ ತರವಾಡು
ಮನೆಯನ್ನು ಕೆಡವಿ ನಾಲ್ಕೈದು ಕೊಠಡಿಗಳ ಚಿಕ್ಕ ಕಾಂಕ್ರೀಟು ಮನೆಯನ್ನು ಕಟ್ಟುವ ಸಲಹೆ ನೀಡಿದ. ಮೂಂದೆ ರಿಪೇರಿಯ ಪ್ರಶ್ನೆಯೆ ಇಲ್ಲ. ಮಹಡಿಯ ಮಾಡಿನ ತೊಲೆ, ಮರಮುಟ್ಟು ಮಾರಿದರೆ ಒಳ್ಳೆಯ ಬೆಲೆ ಸಿಗುವುದು ಎನ್ನುವಾಗ ದೇವಕಿಯಮ್ಮ ಸ್ವರ ಏರಿಸಿ ಮಾತನಾಡಿ ಆತನ ನಾಯಿ ಮುಚ್ಚಿಸಿದರು. ಅವರ ಮಾತುಗಳನ್ನು ಕೇಳಿದ ಬಳಿಕ ಯಾರಿಗೂ ಉಸಿರೆತ್ತುವ ಧೈರ್ಯವಾಗಲಿಲ್ಲ. ತರವಾಡು ಮನೆ ಕೆಡವುತ್ತಾರಂತೆ. ಇಲ್ಲಿ ಒಂದಿಷ್ಟು ಗೋಡೆಯಿಂದ ಮಣ್ಣು ಉದುರಿದರೆ ಸಾಕು ತನ್ನ ಎದೆ ಉಮ್ಮಳಿಸುತ್ತದೆ.
ಮಹಡಿಯನ್ನು ನಿತ್ಯ ಏರಲಾಗುವುದಿಲ್ಲ. ಆದರೂ ವರ್ಷಕ್ಕೊಮ್ಮೆ ಹೆಂಚನ್ನು ತೆಗೆಸಿ ಪಕ್ಕಾಸು, ತೊಲೆ ರೀಪುಗಳಿಗೆ ಕೀಲೆಣ್ಣೆ ಬಿಡುವ ಕೆಲಸವನ್ನು ಸ್ವತಃ ನಿಂತು ದೇವಕಿಯಮ್ಮ ಮಾಡಿಸುತ್ತಾರೆ. ಪ್ರತೀ ವರ್ಷ ಕಂಡಪ್ಪ ಮೇಸ್ತ್ರಿ “ಅಮ್ಮಾ ಇನ್ನೊಂದು ಹತ್ತು ವರ್ಷಗಳಿಗೆ ಏನೂ ಮೋಸವಿಲ್ಲ” ಎಂದಾಗಲೆ ಆಕೆಗೆ ಸಮಾಧಾನ.
ಹಾಗೆ ಹಂಚು ತೆಗೆದಾಗೊಮ್ಮೆ ಮಾತ್ರ ಬೆಳಕಿಗೆ ತೆರೆದು ನಿಲ್ಲುವ ಮುಚ್ಚಿದ ಕೊಠಡಿಗಳ ಮೂಲೆ ಮೂಲೆಗೆ ದೇವಕಿಯಮ್ಮ ಹೋಗಿ ಬರುತ್ತಾರೆ. ಇಲ್ಲದಿದ್ದರೆ ಚಿಕ್ಕ ಮರದ ಕಿಟಕಿ, ಜಾಲಂದ್ರದ ಮೂಲಕವಷ್ಟೇ ಬೆಳಕಿನ ಎಳೆಗಳನ್ನು ಕಾಣುವ ಕೊಠಡಿಗಳು ಅವು. ಈ ಕೊಠಡಿಗಳನ್ನು ಗುಡಿಸಿ ಒರಸಿಯೆ ತನ್ನ ಸೊಂಟ ಬಿದ್ದುಹೋಯಿತೆಂದು ಭವಾನಿ ಗೊಣಗುತ್ತಿದ್ದಾಳೆ. ಆದರೆ ತನಗೆ ಇದು ಬರೆ ಕೊಠಡಿಗಳಲ್ಲ. ಈ ತರವಾಡಿನ ನೋವು ನಲಿವಿನ ಕತೆಯ ಮೂಕಸಾಕ್ಷಿಗಳು ಅವು.
ಅಂಗಳದ ನೇರ ಮೇಲಕ್ಕಿರುವ ಜಾಲಂದ್ರದ ಮೂಲಕವೆ ತರವಾಡಿನ ಹೆಣ್ಣು ಮಕ್ಕಳು ಕೆಳಗೆ ನಡೆಯುವ ದೈವದ ಉತ್ಸವಗಳನ್ನು ನೋಡುವುದು. ಮುಂಡು ಮೇಲಕ್ಕೆತ್ತಿ ಕಟ್ಟಿ ಓಡಾಡುವ ಕುಡಿ ಮೀಸೆಯ ತರುಣರು ಆಗಾಗ ಜಾಲಂದ್ರವನ್ನು ದಿಟ್ಟಿಸುವುದು, ಅದರ ಹಿಂದೆ ಇರುವ ಯಾವುದಾದರೂ ಜೋಡಿ ಕಣ್ಣುಗಳು ಆ ನೋಟವನ್ನು ಸೆರೆ ಹಿಡಿದು ನಾಚುವುದು, ಕುಲುಕುಲು ನಗೆ ಮಹಡಿ ತುಂಬಾ ಪ್ರತಿಧ್ವನಿಸುವಾಗ ಯಾವುದೊ ಹಿರಿಯ ಹೆಂಗಸಿನ ಎಚ್ಚರಿಕೆಯ ಮಾತು. ಉತ್ಸವದ ಮರುದಿನ ಮಹಡಿಯ ನೆಲ ತುಂಬಾ ಉದುರಿ ಬಿದ್ದ ನಕ್ಷತ್ರಗಳಂತೆ ಮಲ್ಲಿಗೆ, ಅಬ್ಬಲಿಗೆ ಹೂಗಳು, ನವಿರಾದ ಕಂಪು.
ಪಡು ಬದಿಯ ಕತ್ತಲಾದ ಕೊಠಡಿಯಲ್ಲಿಯೆ ತರವಾಡಿನ ಹೆಣ್ಣುಮಕ್ಕಳು ಪ್ರಥಮ ರಾತ್ರಿ ಕಳೆಯಬೇಕು. ಬೀಟಿ ಮರದ ಕೆತ್ತನೆಯ ಮಂಚ, ಕಪಾಟು, ಮೇಜು, ಕಂಚಿನ ದೀಪಗಳು ಬೆಳಕಿನಲ್ಲಿ ಬಟಾಬಯಲಾಗಿ ನಿಂತದ್ದು ನೆನೆದು ದೇವಕಿಯಮ್ಮನ ಮುಖ ಈಗಲೂ ಕೆಂಪಾಗುತ್ತದೆ. ಹರೆಯದ ಸಿಹಿ ಕನಸುಗಳನ್ನು ಎದೆಯಲ್ಲಿ ತುಂಬಿಕೊಂಡು ಈ ಕೊಠಡಿಗೆ ಕಾಲಿರಿಸಿದ ತರವಾಡಿನ ಎಷ್ಟು ಹುಡುಗಿಯರು ಪ್ರಥಮ ರಾತ್ರಿಯಂದು ಸಂತೃಪ್ತಿಯಿಂದ ಅರಳಿದರೊ, ಎಷ್ಟು ಮಂದಿ ಬಾಡಿ ಮುರುಟಿ ಹೋದರೊ.
ಮೆಟ್ಟಲ ಬದಿಯ ಕೆಳಗಿನ ಮೂಲೆಯ ಕೊಠಡಿಗಳು ತನ್ನಂತಹ ಎಷ್ಟು ಎಳೆ ವಿಧವೆಯರ ಉಮ್ಮಳವನ್ನು, ಬಿಸುಸುಯ್ಲನ್ನು ಬಚ್ಚಿಟ್ಟುಕೊಂಡಿಲ್ಲ. ಗಂಡನಿದ್ದೂ ವಿಧವೆಯಂತೆ ದಿನ ಕಳೆದವರ ಎದೆಯ ನೋವಿನ ಲೆಕ್ಕವಿಟ್ಟಿಲ್ಲ. ದೇವಕಿಯಮ್ಮ ಚಾವಡಿಯ ತಿರುವಿನ ಮಸುಕು ಮಸುಕಾಗಿ ಕಾಣಿಸುತ್ತಿದ್ದ ಮಹಡಿಯ ಮೆಟ್ಟಲುಗಳನ್ನು ದುಗುಡದಿಂದ ದಿಟ್ಟಿಸಿದರು. ತಿಟ್ಟೆಯನ್ನು ನವಿರಾಗಿ ಸವರಿದರು.
ಮಗ ರಾಘವನ ಅಕಾಲ ಮೃತ್ಯುವಿಗೆ ಗೆದ್ದಲು ಹಿಡಿದ ಕಾಲುಂಪಲ ಬದಲಿಸದ್ದೇ ಕಾರಣ ಎಂದೆನ್ನುತ್ತಾರೆ. ದೈವದ ಅನುಗ್ರಹಕ್ಕಿಂತಲೂ ಪ್ರಕೋಪವನ್ನೇ ತನ್ನ ಕುಟುಂಬ ಎದುರಿಸುತ್ತಾ ಬಂದಿದೆ. ದೇವಕಿಯಮ್ಮ ಏಕ ಸಂತಾನ. ಮದುವೆಯಾದ ಗಂಡು ತರವಾಡಿನ ಸಂಪ್ರದಾಯಕ್ಕೆ ವಿರುದ್ಧವಾಗಿ ವಧುವನ್ನು ತನ್ನ ಮನೆಗೆ ಒಯ್ದಿದ್ದ. ಕಾರ್ನವರರು ದೇವಕಿಯನ್ನು ಇಲ್ಲೇ ಬಿಡಬೇಕು. ಆಕೆ ನಾಳಿನ ತರವಾಡು ಮೂಪತ್ತಿ ಎಂದರೂ ಆತ ಒಪ್ಪಿರಲಿಲ್ಲ. ನಾಲ್ಕು ವರ್ಷಗಳ ಬಳಿಕ ಚಿಕ್ಕ ಮೂವರು ಮಕ್ಕಳೊಂದಿಗೆ ದೇವಕಿ ವಿಧವೆಯಾಗಿ ತರವಾಡಿಗೆ ಹಿಂತಿರುಗಿ ಬಂದಾಗ ಎಲ್ಲರೂ ಹೇಳಿದ್ದು ಇದು ವಿಷ್ಣುಮೂರ್ತಿಯ ಪ್ರಕೋಪವೆಂದು.
ಭವಾನಿಯ ವಿವಾಹ ನಿಶ್ಚಯ ಮಾಡಿದಾಗಲೂ ಈ ಒಂದು ಸಮಸ್ಯೆ ಇತ್ತು. ಕಿರಿಯವಳಾದ ಶ್ಯಾಮಲಾ ತರವಾಡಿನಲ್ಲಿ ಉಳಿಯಬಹುದು ಎಂದು ಮನಸ್ಸಿನಲ್ಲೇ ನಿರ್ಧರಿಸಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದು. ಆದರೆ ವಿಷ್ಣುಮೂರ್ತಿ, ಭವಾನಿಯೆ ಮುಂದಿನ ಮೂಪತ್ತಿ ಎಂದು ನಿರ್ಧರಿಸಿರಬೇಕು. ಇಂದು ಶ್ಯಾಮಲಾ ಬೊಂಬಾಯಿಯಲ್ಲಿ ತನ್ನ ಕುಟುಂಬದೊಂದಿಗೆ ಸಂತೋಷದಿಂದಿದ್ದಾಳೆ. ಆದರೆ ಕುಲದೈವದ ಸೇವೆಗೆ ನಿಂತ ಭವಾನಿಗೆ ಈ ದುಃಖ ಯಾಕೆ?
ಹೀಗೆ ತನ್ನ ಕುಟುಂಬದಲ್ಲಿ ಏನೇನೊ ದುರಂತ ಸಂಭವಿಸಿದರೂ ದೇವಕಿಯಮ್ಮನಿಗೆ ವಿಷ್ಣುಮೂರ್ತಿಯಲ್ಲಿ ವಿಶ್ವಾಸ ಅಚಲವಾಗಿ ಉಳಿದಿದೆ. ಈ ವರ್ಷ ಕುಟುಂಬದ ಸದಸ್ಯರಿಂದ ಆಗದಿದ್ದರೆ ತರವಾಡಿನ ಹಿತ್ತಲಲ್ಲಿರುವ ಮರಗಳನ್ನು ಕಡಿದಾದರೂ ಹೊಸ ಕಾಲುಂಪಲ ಮಾಡಿಸಿಬಿಡಬೇಕೆಂದು ಆಕೆ ನಿರ್ಧರಿಸಿದ್ದಾರೆ. ಅದೇ ರೀತಿ ತರವಾಡಿನ ಸದಸ್ಯರು ಬರಲಿ ಬಿಡಲಿ ವಿಷ್ಣುಮೂರ್ತಿಗೆ ಸಲ್ಲುವ ಎಲ್ಲಾ ಸೇವೆಯನ್ನು ತಾನು ಜೀವಿಸಿರುವಷ್ಟು ಕಾಲ ನಿರಾತಂಕವಾಗಿ ನಡೆಸುವ ದೃಢ ಸಂಕಲ್ಪ ಮಾಡಿದ್ದಾರೆ ದೇವಕಿಯಮ್ಮ. ಈ ದಿನ ನಿತ್ಯದ ಸಮಸ್ಯೆಗೂ ಒಂದು ಪರಿಹಾರ ಕಂಡುಕೊಳ್ಳಬೇಕು. ಇವತ್ತು ಅಪ್ಪು ಬಂದಾಗ ಅವನಲ್ಲಿ ಖಡಾ ಖಂಡಿತವಾಗಿ ಹೇಳಬೇಕು. ವಿಷ್ಣುಮೂರ್ತಿಯ ಸೇವೆಗೆ ಸಮಯಾವಕಾಶವಿಲ್ಲದಿದ್ದವರಿಗೆ ಈ ತರವಾಡು ಮನೆಯಲ್ಲಿ ಸ್ಥಾನವಿಲ್ಲ.
– ೫ –
ಆಟೊ ಬಂದ ಸದ್ದಾದೊಡನೆ ಇಬ್ಬರೂ ಹೆಂಗಸರೂ ಎಚ್ಚೆತ್ತರು. ಗೇಟಿನ ಬಾಗಿಲು ತೆಗೆದು ಒಳ ಬಂದಾತ ಅಪ್ಪು ಎನ್ನುವುದು ಮೊದಲು ಭವಾನಿಗೆ ಗೋಚರವಾಯಿತು. ಆದರೆ ಇದೇನು ವಾಲಿಕೊಂಡು ಬರುತ್ತಿದ್ದಾನೆ ಎಂದು ತನ್ನೊಳಗೆ ಉದ್ಗರಿಸಿದಳು. ಆತ ಕಂಠಪೂರ್ತಿ ಕುಡಿದು ಬಂದಿದ್ದಾನೆ ಎನ್ನುವುದು ತಿಳಿದೊಡನೆ ಭವಾನಿಯ ಎದೆ ನಡುಗಿತು. “ಇದೇನು ಅನರ್ಥ ಕಾದಿದೆ, ಭಗವತಿ” ಎಂದು ಆಕೆ ಹಣೆ ಬಡಿದುಕೊಂಡಳು. ಮಗಳ ಮುಖಚರ್ಯೆಯಿಂದಲೆ ದೇವಕಿಯಮ್ಮನಿಗೆ ಸಂದೇಹ ಮೂಡಿತ್ತು. ದಿಟ್ಟಿಸಿ ನೋಡಿದರೆ ಅಪ್ಪು ವಾಲಾಡುತ್ತಾ ಅಂಗಳಕ್ಕೆ ಕಾಲಿರಿಸುತ್ತಿದ್ದಾನೆ. ದೇವಕಿಯಮ್ಮ ಮಾತು ಕಳೆದು ಆತನತ್ತಲೆ ನೋಡುವಾಗ ಕಣ್ಣೀರ ಹನಿಗಳೆರಡು ಗಲ್ಲದ ಮೇಲೆ ಉರುಳಿ ಹೋದವು. ಆತನಿಗಾಗಿ ಕಾಯುತ್ತಾ ಇಡೀ ಸಂಜೆಯನ್ನು ಒಂದು ಯುಗವೆಂಬಂತೆ ಕಳೆದಿದ್ದರು. ಆತ ಬರುತ್ತಾನೆ, ದೀಪ ಹಚ್ಚಿಯೆ ಹಚ್ಚುತ್ತಾನೆ ಎನ್ನುವ ನಂಬಿಕೆಯಿಂದ.
ಚೇತರಿಸಿಕೊಳ್ಳಲು ದೇವಕಿಯಮ್ಮನಿಗೆ ಬಹಳ ಹೊತ್ತು ಬೇಕಾಗಲಿಲ್ಲ. ತಿಟ್ಟೆಯಿಂದ ಎದ್ದ ಅವರು ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾ ಹೇಳಿದರು, “ಇಂತಹವರಿಗೆ ಈ ತರವಾಡು ಮನೆಯಲ್ಲಿ ಸ್ಥಳವಿಲ್ಲ.”
“ನಿಮ್ಮ ತರವಾಡು ಯಾರಿಗೆ ಬೇಕಾಗಿದೆ. ದೀಪಕ್ಕೆ ಗತಿಯಿಲ್ಲದ ತರವಾಡು. ನಾನು ಹೋಗುತ್ತೇನೆ” ಇನ್ನು ಏನೇನೊ ಅಸ್ಪಷ್ಟ ಹೇಳುತ್ತಾ ಹಿಂದಿರುಗಲು ಯತ್ನಿಸುವಾಗ ಅಪ್ಪು ಅಲ್ಲೇ ದೊಪ್ಪನೆ ಬಿದ್ದು ಬಿಟ್ಟ. ಮಗನ ಬಳಿ ಓಡಿ ಆದರಿಸಬೇಕೆಂದುಕೊಂಡ ಭವಾನಿ, ಮೆಲ್ಲನೆ ಹೆಜ್ಜೆ ಮುಂದಿಡುತ್ತಿದ್ದ ಅಮ್ಮನನ್ನು ನೋಡಿ ಅಲ್ಲೇ ನಿಂತಳು.
ದೇವಕಿಯಮ್ಮನ ಹೆಜ್ಜೆ ನಿಲ್ಲಲಿಲ್ಲ. ಒಮ್ಮೆ ತಿರುಗಿ ತರವಾಡು ಮನೆಯನ್ನು ದಿಟ್ಟಿಸಿದರು. ಕತ್ತಲ ಹಿನ್ನೆಲೆಯಲ್ಲಿ ಎಷ್ಟೊಂದು ದೃಢತೆಯಿಂದ ತಲೆ ಎತ್ತಿ ನಿಂತಿದೆ. ತನಗೆ ಗೊತ್ತಿದೆ ಎಲ್ಲೆಲ್ಲಿ ಗೋಡೆ ಬಿರುಕು ಬಿಟ್ಟಿದೆಯೆಂದು, ಮಣ್ಣು ಜರಿದಿದೆಯೆಂದು, ಜಂತಿಗೆ ಗೆದ್ದಲು ಹತ್ತಿದೆಯೆಂದು. ಆದರೆ ಈ ಗಳಿಗೆಯಲ್ಲಿ ಹಾಗೆ ತಲೆ ಎತ್ತಿ ನಿಂತ ತರವಾಡು ಮನೆ ಯಾವುದೊ ಶಕ್ತಿ, ಹುಮ್ಮಸ್ಸನ್ನು ಆಕೆಯಲ್ಲಿ ತುಂಬುವ ಹಾಗನಿಸಿತು.
ಯಾರೊ ಆಕೆಯನ್ನು ’ಮೋಳೆ’(೧೦) ಎಂದು ಕರೆದರು. ತೆಂಗಿನ ಕಟ್ಟೆಯಲ್ಲಿ ನಿಲ್ಲಿಸಿ ಮೀಯಿಸಿದರು. ಮಡಿ ಉಡಿಸಿ ದೈವದ ಕೊಠಡಿಯ ಮುಂದೆ ನಿಲ್ಲಿಸಿದರು. ಬಾಗಿಲು ತೆರೆಯಿತು.
ತನ್ನತ್ತ ಕೈಚಾಚಿ ಬರುತ್ತಿದ್ದ ಮಗಳನ್ನು ತಡೆದು ಒಂದು ಕೊಡ ನೀರು ತಾ ಎಂದು ದೇವಕಿಯಮ್ಮ ಆಜ್ಞಾಪಿಸಿದರು. ತರವಾಡಿನ ಮೂಪತ್ತಿಯ ಸ್ವರದ ಗಾಂಭೀರ್ಯವನ್ನು ಗ್ರಹಿಸಲು ಭವಾನಿಗೆ ಆಗಲಿಲ್ಲ. ಬಹುಶಃ ಮತಿಯಿಲ್ಲದೆ ಬಿದ್ದುಕೊಂಡಿರುವ ಅಪ್ಪುವಿನ ಮತ್ತು ಕಳೆಯಲು ನೀರು ತರಲೆಂದು ಅಮ್ಮ ಹೇಳಿರಬೇಕು ಎಂದು ಆಕೆ ಗಡಿಬಿಡಿಯಿಂದ ಬಾವಿ ಕಟ್ಟೆಯತ್ತ ನಡೆದಳು. ತಲೆಗೆ ನೀರು ಬಿದ್ದರೆ ಆತನ ಅಮಲು ಇಳಿಯುತ್ತದೆ. ಮತ್ತೆ ಸ್ನಾನ ಮಾಡಿ ಶುದ್ಧಿಗೊಂಡು ದೀಪ ಹೊತ್ತಿಸಬಹುದು.
ನೀರಿನ ಕೊಡದೊಂದಿಗೆ ಅಂಗಳಕ್ಕೆ ಬಂದ ಭವಾನಿ ಅಮ್ಮ ಎಲ್ಲಿ ಎಂದು ಅತ್ತಿತ್ತ ನೋಡಿದಾಗ ತೆಂಗಿನ ಮರದ ಕಟ್ಟೆಯಲ್ಲಿ ತಲೆಗೂದಲನ್ನು ಬಿಚ್ಚಿ ಕುಳಿತಿರುವುದು ಕಾಣಿಸಿತು. ಒಂದು ಕ್ಷಣ ಗಾಬರಿಯಿಂದ ಆಕೆ ನಿಂತು ಬಿಟ್ಟಳು. ಅಮ್ಮ ಏನನ್ನು ಮಾಡ ಹೊರಟಿದ್ದಾರೆ ಎನ್ನುವುದು ಆಕೆಗೆ ಸ್ಪಷ್ಟವಾಯಿತು.
ಒದ್ದೆ ಬಟ್ಟೆಯಲ್ಲಿ, ತಲೆಯಿಂದ ನೀರು ಹನಿಯುತ್ತಿರುವಂತೆಯೆ, ಕೈ ಮುಗಿದು, ಕಣ್ಣು ಮುಚ್ಚಿ ಮೌನ ಪ್ರಾರ್ಥನೆ ಸಲ್ಲಿಸುತ್ತಾ ದೇವಕಿಯಮ್ಮ ವಿಷ್ಣುಮೂರ್ತಿಯ ಕೊಠಡಿ ಪ್ರವೇಶಿಸಿದಾಗ ಆಕೆ ಮತ್ತೆ ಮಗುವಾಗಿದ್ದರು.
*****
೧ ಕುಟುಂಬದ ಹಿರಿಯ ಮನೆ ೨ ವಾರ್ಷಿಕ ಕೋಲ ೩ ವಿಶೇಷ ಕೋಲ ೪ ಕುಟುಂಬದ ಹಿರಿಯಳು ೫ ಜ್ಯೋತಿಷಿ ೬ ಕುಟುಂಬದ ಹಿರಿಯರು ೭ ಮರದ ಕೆತ್ತನೆಯ ಆಳೆತ್ತರದ ಮಂಟಪ ೮ ಪಾತ್ರಿ ೯ ದೇವರೇ ೧೦ ಮಗಳೇ