ಭಗವತಿ ಕಾಡು

ಮನೆಯ ಅಂಗಳಕ್ಕೇಕೆ ಇಡೀ ಕೇರಿಗೇ ಒಡವೆ ತೊಡಿಸಿದಂತಿರುವ ಅಂಗಳದ ಬೇವಿನ ಮರದಿಂದ ಕೆಳಕ್ಕಿಳಿಬಿದ್ದಿರೋ ಕೊಂಬೆಗೆ ಹಗ್ಗದಿಂದ ತೊಟ್ಟಿಲು ಕಟ್ಟಬೇಕೆಂಬ ಯೋಚನೆಯಲ್ಲಿದ್ದ ನಾಗವ್ವ ಕುಂಯ್ ಮರ್ರೋ ಎಂದು ರಂಪಾಟ ಮಾಡುತ್ತಿದ್ದ ಎಂಟೊಂಬತ್ತು ತಿಂಗಳ ಪ್ರಾಯ ಕಂದಯ್ಯನನ್ನು ಎಳೆದುಕೊಂಡಳು. ಎಡ ಮೊಲೆಗೆ ಹುಣ್ಣಾಗಿದ್ದರಿಂದ ಬಲ ಮೊಲೆ ಉಣ್ಣಿಸುವುದೆಂದು ಕಂದಯ್ಯನನ್ನು ತೊಡೆ ಮೇಲೆ ಹಾಕಿಕೊಂಡು ‘ನೀಯೆಲ್ಲಿ ನಿಮಪ್ನಂಗಾತೀಯೋ ಈಗ್ಲೆ ಇಷ್ಟು ಸಿದುಗ ಅದಿ’ ಎಂದು ಮೊಲೆ ತೊಟ್ಟನ್ನು ಅದರ ಬಾಯಿಗೆ ತುರುಕಿದ ಮರು ಚಣದಲ್ಲೆ ‘ ಲ್ಲೇ ಭರಮ್ಯಾ…. ಭರಮ್ಯಣ್ಣಾ’ ಎಂಬೊಂದು ಕೂಗು ಕೇಳಿ ಬಂತು. ಆ ಧ್ವನಿ ಕೋಮಟಿಗರ ತಿಮ್ಮಯ್ಯ ಸೆಟ್ಟಿಯದೋ ಅಥವಾ ಕೊಲುಮ ಹಸನ ಸಾಬಿಯದೋ ಅಥವಾ ಕಟುಗರ ಇಟೋಬನದೋ ಎಂದು ಗುರುತಿಸಲು ಪ್ರಯತ್ನಿಸುತ್ತಿದ್ದಾಗ ಕ್ವಕ್…. ಕ್ವಕ್…. ಕೆಮ್ಮುತ್ತ ಮುದುಕಿ ವರಸಿನ ಮೇಲೆ ತನ್ನ ದೇಹದ ಮುಂಡ ಭಾಗವನ್ನು ಸೊಲುಪ ಅಂದರೆ ಸೊಲುಪ ಮೇಲೆತ್ತಿತ್ತು. ಮತ್ತೊಮ್ಮೆ ಕೆಮ್ಮಿ ಗಂಟಲ್ಲಲ್ಲಿ ಮೂಡಿದ ಕಫವನ್ನು ಮಣ್ಣಿನ ಕ್ವಾರೆ ಚಿಪ್ಪಿಗೆ ಉಗಿದು “ಲ್ಯೇ ಬಿಡಿಕಿ ಒಳಾಗೇನು ಪಡುಸ್ತಿದೀ…. ವರ್‍ಯಾಗ ಯಾರೋ ಕೂಗಿದಂಗಾತು. ಕಿವಿಗೇನು ಗೂಟ ಬೊಡ್ಕಂಡದೀಯಾ ಕ್ವಕ್… ಕ್ವಕ್…. ಹ್…. ಹ್….” ಎಂದು ಮುಲುಗುಟ್ಟುತ್ತ ಮತ್ತೆ ವರಸಿಗೊರಗಿತು. ತನ್ನ ಕಂದಯ್ಯಗೆ ಒಂಚೂರು ಮೊಲೆ ಉಣ್ಣಿಸುವುದಕ್ಕೂ ಈ ಮುದುಕಿ ಬಿಡುವುದಿಲ್ಲವಲ್ಲಾ ಎಂಬ ಸಿಟ್ಟು ನಾಗವ್ವಗೆ…. ನ್ವಾಡ್ತೀನಪ್ಪಾ…. ನ್ವಾಡ್ತೀನಿ….. ಕೈ ಬೆರಳುಗಳನ್ನ ಲೊಟ ಲೊಟ ಮುರಿದೆದ್ದಳು. ಎಂಥೆಂಥೋರ್‍ಗೇ ಸಾವು ಬರ್‍ತದೆ ಯಿದಕ್ಯಾಕೆ ಬರೊಲ್ಲಂತೀನಿ…. ನಂ ಕರುಮಽ…. ಎಂದು ಮುಸುಗುತಡುತ್ತ ಹ್ಯಾಟಿಯನ್ನು ಅಟ್ಟಿಸಿಕೊಂಡು ಕಾಲಾಗೆ ಬಂದು ಹೋದ ಹುಂಜವನ್ನು ನೋಡಿ ತನ್ನ ತವರೂರಾದ ಕಣ್ಕುಪ್ಪಿಯನ್ನು ನೆನಪು ಮಾಡಿಕೊಂಡಳು. ಬಲಗಾಲಿಗೆ ನಾರು ಹುಣ್ಣಾಗಿ ಮಲಗಿರುವ ತನ್ನ ತಂದೆ ತಳವಾರ ಹನುಮಂತನನ್ನು ನೋಡಲಿಕ್ಕೆ ಹೋಗ್ತೀನಿ ಎಂದಾಗ ಕಳೆದ ವಾರ ದೊಡ್ಡ ರಂಪಾಟವೇ ನಡೆದಿತ್ತು. ಮುದುಕಿ ಜೊತೆ ಮಗನೂ ಸೇರಿಕೊಂಡು ‘ಲ್ಯೇ ಲವುಡೀ ಓದಿ ಅಂದ್ರೆ ಕಾಲುಮುರಿತೀನಿ’ ಎಂದು ಹಲ್ಲಿನಿಂದ ಮಾಡಿದ ಸದ್ದನ್ನು ನೆನಪಿಸಿಕೊಳ್ಳುತ್ತ ಬಾಕುಲು ಓರೆ ಮಾಡಿ ನೋಡುತ್ತಾಳೆ…. ತಮಗೆ ಅಂಗುಲಂಗುಲ ಗೊತ್ತಿರುವ ಹೊಲ ಮನೆಯ ಸಾಹುಕಾರ ಸಿವಪೂಜೆ ಕ್ವಟ್ರಗೌಡ್ರು ಕಂಡೊಡನೆ ಕಂದಯ್ಯ ಜುಮಡುತ್ತಿದ್ದ ಮೊಲೆ ಕಾಣದಂತೆ ಅದರ ಮೇಲೆ ಹರಿದ ಸೆರಗೆಳೆದಳು. ಕೆಲಸವಿಲ್ಲದೆ ಕೆಳಗೇರಿಗೆ ಸುಮ್ಮ ಸುಮ್ನೆ ಬರುವ ಪೈಕಿಯಲ್ಲ ಗೌಡರು; ಬಂದರೆಂದರೆ ಏನಾದರೊಂದು ಅನಾಹುತ ತಪ್ಪದು…. ಅಂಥವರ ದೃಷ್ಟಿ ತನ್ನ ಎದೆ ಮೇಲಿಲ್ಲದಿರುವುದು ಪುಣ್ಯದ ಸಂಗತಿ. ಆದರೆ ಅವರ ಆಳಕ್ಕಿಳಿದಿರುವ ಕಣ್ಣುಗಳ ಅಳತೆಗೆ ದಕ್ಕದ ರೀತಿಯಲ್ಲಿ ಬೇವಿನಮರ ಬೆಳೆದು ಇಡೀ ತಮ್ಮ ಮನೆ ಎಂಬೋ ಮನೆಯ ಚರಾಚರಕ್ಕೆ ಹಸಿರ ಚವರಿ ಬೀಸುತ್ತಿರುವಂತೆ ಕಂಡಿತು. “ಅಯ್ಯೋ ಗೋಡನ ಕೊಣ್ಣುಗೋಳು ಸ್ಯೇದಿ ಓಗ” ಎಂದು ಆಕೆಯ ಮನಸ್ಸು ಶಪಿಸಲು ಕಾರಣಗಳು ಒಂದೆ ಎರಡೇ… ಬಸುರಿ ಲಚ್ಚಕ್ಕ ಜಳಕಕ್ಕೆ ಕೂತಿದ್ದಾಗ ಆಕೆಯ ಆರೇಳು ಮಾಸ ವಯಸ್ಸಿನ ಹೊಟ್ಟೆಯನ್ನು ಗೌಡರು ಅಚಾನಕ ನೆರಿಕೆ ಕಿಂಡಿಯಿಂದ ನೋಡಿದರು. ಅವತ್ತು ರಾತ್ರೀ ಲಚ್ಚಕ್ಕಗೆ ಗರ್ಭಪಾತವಾಗಿ ಬಿಟ್ಟಿತು…. ನೆಲ್ಲುಗದ್ದೆಯ ಬದು ಮೇಲೆ ತಿಮ್ಮಕ್ಕ ಕೂಸಿಗೆ ಮೊಲೆ ಉಣ್ಣಿಸುತ್ತಿದ್ದುದನ್ನು ಗೌಡರು ಅಕಸ್ಮಾತ್ ನೋಡಿದರು…. ಮರುದಿನವೇ ಆಕೆಯ ತುಂಬು ಮೊಲೆಗಳು ಬತ್ತಿ ಪೀಚಲಾಗಿ ಜೋತುಬಿದ್ದವು. ಆಕಳು ಎಮ್ಮೆಗಳ ಕೆಚ್ಚಲಾದರೂ ಅಷ್ಟೇ. ಗೌಡರ ಕೆಟ್ಟ ದೃಷ್ಟಿಗೆ ಮರಗಳು ಗೊಡ್ಡು ಬೀಳುತ್ತವೆ. ಗಿಡಗಳು ಗಿಡ್ಡವಾಗುತ್ತವೆ. ಬಳ್ಳಿಗಳಂತೂ ಬಿಳುಚಿಕೊಂಡು ಒಣಗಿಹೋಗುತ್ತವೆ. ಅವರು ಎತ್ತಿಕೊಂಡು ಮುದ್ದು ಕೊಟ್ಟರೆಲ್ಲಿ ತಮ್ಮ ಕೂಸುಗಳು ಒಣಗಿ ಹೋಗುವವೋ ಅಂತ ಯಾವ ತಾಯಂದಿರೂ ತಮ್ ಕುಸೂ ಕಂದಮ್ಮಗಳನ್ನು ಆತನ ಹತ್ತಿರ ಸುಳಿಯಲು ಬಿಡುವುದಿಲ್ಲ. ಆದ್ದರಿಂದ ತಮ್ಮ ಬೇವಿನಮರದ ಮೇಲೆ ಗೌಡನ ಕಣ್ಣುಗಳು ಓತಿಕ್ಯಾತದಂತೆ ಹರಿದಾಡಿದ್ದು ಸುಭ ಶಕುನ ಅಲ್ಲೆನಿಸಿತು. ಗೌಡರ ದೋತರ ಮೂಸಿ ನೋಡುವುದರಲ್ಲಿ ಯಶಸ್ವಿಯಾದ ಅರ್ಜುನನ ಕಡೆ ಅವರ ಗಮನ ಸೆಳೆದು “ಯ್ಯೋನು ಗೋಡಾ…. ಬಾಳ ದೂರ ಬಂದೀ….” ಎಂದು ವಿಚಾರಿಸಿದಳು. “ನಿನಗಂಡನತ್ರ ಒಂಚೂರು ಕ್ಯಲ್ಸ ಇತ್ತು ಅದ್ಕೆ ಬಂದಿದ್ದೆ…. ಯಲ್ಲಿ ಅವ್ನು…. ಬಾಳ ದಿನಾಯ್ತು ನೋಡೆ ಇಲ್ಲ…. ಆವಾಗೆಲ್ಲ ಅದ್ಕೆ ಇದ್ಕೆ ಅಂತ ಬತ್ತಿದ್ದ…. ಈಗ್ಯಾಕ ಬರ್‍ತಾನವ್ವಾ ಇಸಪೀಟಾಡೋರತ್ರ ಇದ್ರೆ ಎಲ್ಡು ಮೂರು ಸಿಕ್ತದೆ. ಮೈಯಿ ಕೂಡ ಬೊಗ್ಗಿಸಿ ದುಡ್ಯಾಂಗಿಲ್ಲ” ಎಂದು ಗೌಡರು ಮಾತಾಡುತ್ತಿದ್ದರೂ ಅವರ ಕಣ್ಣುಗಳು ಮಾತ್ರ ಸೀರೆ ಸೆರಗೊಳಗೆ ಪಿಳುಕು ಪಿಳುಕು ಕಣ್ಣು ಬಿಡುತ್ತಿದ್ದ ಕೂಸಿನ ಕಡೆಗೂ, ಮಿರಿ ಮಿರಿ ಮಿಂಚುತ್ತಿದ್ದ ಸ್ತನಗಳ ಕಡೆಗೂ ನೆಟ್ಟಿದ್ದವು. ಬಂದ್ಕೂಡ್ಲೆ ಕಳ್ಸು ನಾಗವ್ವಾ ಎಂದು ಹೇಳಿ ಏದುಸಿರುಬಿಡುತ್ತ ಆಮೆ ವೇಗದಲ್ಲಿ ಹೆಜ್ಜೆ ಹಾಕಿದ ಅಸ್ತಮಾದವುನು.

ತನ್ನ ಗಂಡ ಇಸಪೀಟಾಡುತ್ತಿರುಬಹುದಾದ ದೃಶ್ಯವನ್ನು ಊಹಿಸಿಕೊಳ್ಳುತ್ತಲೆ ನಾಗವ್ವ ಸಿಟ್ಟಿನಿಂದ ಕೆಂಡ ಮಂಡಲವಾದಳು…. “ಅಗ್ಲು ರಾತ್ಲೀ ಇಸಪೀಟೂ ಇಸಪೀಟು…. ಯ್ಯೋನು ಕರುಮಾ ಮಾಡಿದ್ನೋ ಈ ಮುದುಕಿ ಮನಗ ಕೈಯಿ ಯಿಡಿಯಾಕೆ…. ಬೊರ್‍ಲಿ…. ಬೊರ್‍ಲಿ…. ದೋತ್ರ ಯಿಡ್ದು ಕ್ಯೋಳೇ ಬುಡ್ತೀನಿ…. ನಿಂಗೇನು ಯಂಡ್ರು ಮಕ್ಳು ಬ್ಯೇಕಾ ಬ್ಯಾಡಾ ಅಂತ…. ಬ್ಯಾಡಾ ಅಂತ ಯ್ಯೋಳಿ ಬುಡ್ಳಿ…. ಕಣಗ್ಳಿಬ್ಯೇರು ಥೇದು ಮೊಕ್ಳಿಗೂ ಕುಡಿಸಿ ನಾನು ಸಾಯ್ತಿನಿ….” ಎಂದು ಒಳಗೆ ಹೋಗಿ ಕೋಳಿ ಮಂಕರಿ ಮಗ್ಗುಲು ಕಂದಯ್ಯನನ್ನು ಕುಕ್ಕುರು ಬಡಿಯುತ್ತಲೆ ಕುಂಯ್ಯೋ ಮರ್ರೋ ಎಂಬ ನಾದ ಮುಗಿಲು ಮುಟ್ಟಿತು.

“ಅದ್ಯೋನು ಬ್ವಗುಳ್ದಿ…. ಬ್ವಗುಳೇ” ವರಸಿನಿಂದ ಮುಂಡವನ್ನು ಮೇಲಕೆತ್ತಲಾರದೆ ಎತ್ತುತ್ತ ಕನಲಿ ಕೇಳಿತು “ನನ್ನೂ ನನ್ ಮಗನ್ನೂ ಆಡಿಕೆಂತೀಯಾ….ನನ್ ಮೊಗ ಗಂಡ್ಸಲೇ…. ಅವ್ನು ಇಸಪೀಟಾದ್ರು ಆಡ್ತಾನೆ ಟೇಮು ಬೊಂದ್ರೆ ಸೂಳ್ಯಾರ್‍ನಾರ ಮಾಡ್ತಾನೆ…. ಅದ್ನ ಕ್ಯೋಳಾಕೆ ನೀನ್ಯಾವೂರ ಅಪ್ಪಜೆಪ್ನ ಮೊಗ್ಳೇ…. ಕ್ವಕ್… ಕ್ವಕ್… ಹ್ಹ್… ಹ್ಹ್… ಹ್ಹ್…”

“ಯಾವೋಳು ಯಾಕಾತೀನೇನ್ಯೇಽಽ….” ನಾಗವ್ವ ಸೀರೆ ಮೇಲೆತ್ತಿ ಕಟ್ಟಿದಳಲ್ಲದೆ ತುರುಬನ್ನೂ ಬಿಗಿದು ಸಜ್ಜಾಗಿ ಹೇಳಿದಳು. “ಥಾಳಿ ಕಟ್ಟಿಸ್ಕಂಡೀರೋವತ್ಗೆ ನಿನ್ ಕೂಟಾಗೆ ಥೂ ಛೀ ಅನ್ನಿಸ್ಗಂತ ಬಿದ್ದಿದೀನಿ…. ಮನಿ ಸ್ವಸಿ ಅನ್ನೋ ಖಬರಿಲ್ದೆ ಮಾತಾಡ್ತೀಯಾ…. ಆತ ನಿಂಗ ಮೊಗ ಆಗಿರಬವ್ದು. ನಾನಾತ್ನ ಯಂಡ್ತಿ…. ಇಗೋ ನ್ವಾಡು…. ಕ್ವಳ್ಳಾಗ ಥಾಳಿ ಯಂಗ ಥಳಥಳಾ ಅಂತೈತೆ….”

ಗಲಾಟೆಗೆ ಒಲೆಯಲ್ಲಿ ಮಲಗಿದ್ದ ಬೆಕ್ಕು ಹೊರ ಬಂದು ಅಳುತ್ತಿದ್ದ ಕೂಸಿನ ಮುಖಕ್ಕೆ ಬಾಲದಿಂದ ಗಾಳಿ ಬೀಸುತ್ತ ಮ್ಯಾಂವ್‌ಗುಟ್ಟತೊಡಗಿತು.

“ಯ್ಯಾಳೂರು ಕಾಗೆ ಯೆಬುಸೋವ್ಕೆ ಥಾಳಿ ಒಂದ್ಕೇಡು…. ಹ್ಹ್….ಹ್ಹ್….ಕ್ವಕ್….ಕ್ವಕ್” ಗಂಟಲು ಬಿಟ್ಟು ಬರದೆ ಹಠ ಹಿಡಿದಿದ್ದ ಕಫ ಕಿತ್ತಲು ವಿಫಲಳಾಗಿ ಮುದುಕಿ ಹೇಳಿತು. “ಕಾಡಿಗಣ್ಣೋಳು ಬ್ಯಾಡಾ….ಬ್ಯಾಡಾ…. ಮಾಡ್ಕಂಡ್ರೆ ಮನೀಗೆ ವಳ್ಳೇದಾಗಲ್ಲ ಅಂತ ಬೊಡ್ಕಂಡೆ. ನನಗುಟ್ಟಿದ ಮೊಗ ನನ್ಮಾತ್ನ ಕ್ಯೇಳ್ಯಾನ ಹ್ಹ್… ಹ್.”

ಅತ್ತೆ ಸೊಸೆ ಬದ್ದ ವೈರಿಗಳಂತೆ ಜಗಳಾಡೋದು ಮಾಮೂಲಾಗಿದೆಯಲ್ಲ ಎಂಬ ಆತಂಕದಿಂದ ಅರ್ಜುನ ಕುಂಯ್ ಕುಂಯ್ ಎಂಬ ತನ್ನ ನಾಯಿ ಭಾಷೆಯಲ್ಲಿ ಏನೋ ಬುದ್ಧಿ ಹೇಳಲು ತೊಡಗಿದ್ದರ ಕಡೆ ಹುಲುಮಾನವರ ಗಮನ ಮಾತ್ರವಿರಲಿಲ್ಲ.

“ಹ್ಹಾ….ಹ್ಹಾ…. ಆಣಿಗಾಲ್ನೋನ ಮಾಡಿಕ್ಯಾಬ್ಯಾಡಾ. ಮಾಡ್ಕೊಂಡ್ರೆ ಒಂದ್ತುತ್ತು ಕೂಳು ಕಾಣಾ…. ಒಂಚೂರು ಬಟ್ಟೆಕಾಣಾ…. ಅಂತ ನಮ್ಮಪ್ಪ ಯ್ಯೋಳೇ ಯೋಳ್ದ…. ನಾನ್ ಕ್ಯೋಳಿದ್ನಾ…. ಆತ ತ್ವಟ್ಗಂಡಿದ್ದ ಟವುಜರ್‍ಗೆ ಮೊಳ್ಳಾಗಿ ವಪ್ಪಿದ್ನೋಡು. ನಂಗೆ ಬುದ್ದಿ ಕಡ್ಮಿ…. ನನ್ನ್ ಮಾಡ್ಕೆಳ್ಳಾಕೆ ಯೆಂಥೆಂಥ ತಳವಾರ್ರೆ ಬೊಂದು ಹ್ವಾದ್ರು…. ನಾನ್ಹೂ ಅಂದಿದ್ರೆ ತೆರವು ಕಟ್ಟಿ ಮಾಡ್ಕೊಂಡೋಗಿ ಸುಕ್ವಾಗಿಡ್ತಿದ್ರು…. ಅಯ್ಯೋ…. ನನ ಕರುಮಾವೇ ಮಿಂಜಾಲಿದ್ರೆ ಛಂಜಿಕಿಲ್ಲ… ಛಂಜಿಕಿದ್ರೆ ಮಿಂಜಾಲಿಗಿಲ್ಲ…. ಮೆಯ್ಗೆ ಬಟ್ಟಿ ಕಾಣ್ದೆ ಯೇಸೋ ವರ್ಸಾದ್ವು….” uಟಿಜeಜಿiಟಿeಜ
ಪುಟ್ಟ ಶಿಶ್ನಕ್ಕೆ ಅಡರಿಗೊದ್ದಿಗ ಕಡಿದ ಪರಣಾಮಕ್ಕೆ ಚಿಟಾರನೆ ಚೀರಿ ಅಳತೊಡಗಿದ ಕಂದಯ್ಯನನ್ನು ಬಾಚಿ ಎತ್ತಿಕೊಂಡಳು ನಾಗವ್ವ. ಮಾತುಮಾತಿಗೆ ಗಂಟೆ ಹೊಡೆದಂತೆ ಜವಾಬು ಕೊಡುವ ಸೊಸೆಯನ್ನು ಯಾವ ಶಸ್ತ್ರ ಉಪಯೋಗಿಸಿ ಮಣಿಸುವುದೆಂದು ತಿಳಿಯಲಾರದೆ ಪರಪರ ತಲೆ ಕೆರೆದುಕೊಳ್ಳುತ್ತ ಆಕೆ ಕಂಕುಳಲ್ಲಿದ್ದಃhಚಿgಚಿvಚಿಣhi ಏಚಿಜu, iಟಟusಣಡಿಚಿಣioಟಿ bಥಿ Pಡಿಚಿmoಜ P ಖಿಕೂಸನ್ನು ದಿಟ್ಟಿಸಿ ನೋಡಿದ ಒಂದು ಚಣದಲ್ಲಿಯೇ ಜ್ಞಾನೋದಯವಾಯಿತು ಮುದುಕಿಗೆ. ದಿನಕ್ಕೊಮ್ಮೆಯಾದರೂ ಅದನ್ನು ಎತ್ತಿಕೊಂಡು ಅದರ ಅಂಗೋಪಾಂಗಗಳು ತನ್ನ ಮಗನನ್ನು ಹೋಲದಿದ್ದರೂ ಊರಿನ ಯಾರನ್ನು ಹೋಲುತ್ತವೆ ಎಂದು ಯೋಚಿಸುತ್ತಿದ್ದಳು. ಅನುಮಾನಕ್ಕೆ ನಾಗವ್ವ ಮುರುಕು ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತ ಪೋಡರ ಹಚ್ಚಿಕೊಳ್ಳುತ್ತಿದ್ದುದು ಒಂದು ಕಾರಣವಾದರೆ ಊರಿನ ಡವುಲಾಗಿರು ಗಂಡಸರು ಮಾತಾಡಿಸಿದರೆಂದರೆ ಚಾವತ್ತಾದರೂ ನಿಂತು ನಗುನಗುತ್ತ ಮಾತಾಡುತ್ತಿದ್ದುದು ಇನ್ನೊಂದು ಕಾರಣ…. ಮಳ್ಳಿಮಳ್ಳೀ ಮಂಚಕ್ಕೇಸು ಕಾಲೂಂದ್ರೆ ಮೂರೂ ಮತ್ತೊಂದು ಎಂದುತ್ತರಿಸುವ ಪೈಕಿಯಾದ ಸೊಸೆಯ ನಡೆ ನುಡಿಯಲ್ಲಿ ಒಂದೊಂದು ತಪ್ಪು ಕಂಡು ಹಿಡಿದು ಮಗ ಭರಮಯ್ಯಗೆ ವರದಿ ಮಾಡುತ್ತಿತ್ತು. ಐದನೇ ತರಗತಿವರೆಗೆ ಓದಿರುವ ಭರಮ್ಯಾ ಮೂರನೇ ತರಗತಿವರೆಗೆ ಓದಿರುವ ತನ್ನ ಹೆಂಡತಿ ಮೇಲೆ ತಾಯಿ ಮುದುಕಿ ಹೇಳುತ್ತಿದ್ದ ಚಾಡಿ ಮಾತುಗಳನ್ನು ಎಡಗಿವಿಯಿಂದ ಕೇಳಿ ಬಲಗಿವಿಯಿಂದ ಬಿಟ್ಟು ಬಿಡುತ್ತಿದ್ದ…. ದೊಡ್ಡೂರಲ್ಲಿ ಹುಟ್ಟಿ ಬೆಳೆದೋಳು; ಮೇಲಾಗಿ ತಳವಾರನ ಮಗಳು…. ಸೊಲುಪ ಚೋಚಿಯಲ್ಲು ಎಂದೇ ಆತ ಸಣ್ಣಪುಟ್ಟ ಕಾರಣಗಳಿಗೆ ಹೆಂಡತಿ ಮೇಲೆ ಎಗರಿ ಬೀಳುತ್ತಿರಲಿಲ್ಲ.

“ಲೋ ಜೋಗಮ್ನಂಥೋನೆ…. ಮಾಡಿಕ್ವಂಡೋಳ್ಗೆ ಇಟಾಕೊಂದು ಸೊಡ್ಲಕ್ವಟ್ರೆ ಮುಂದೆ ಬಾಳೂವೆ ನೆಡೆದೀತೆ…. ಸಣ್ಣಪುಟ್ಟ ತೆಪ್ಪು ಕಂಡುಹಿಡ್ದು ಯೆಂಡ್ತೀ ಮೊಗ್ಲು ಮರೀತಿರಬೇಕು…. ಅದು ಗಂಡಸ್ರ ಲಚ್ಚಣ…. ನಿಮಪ್ಪಿದ್ನೋಡು…. ನನಗೆ ದಿನಕೊಂದ್ಸಾರಿಯಾದ್ರು ವಡೀದಿದ್ರೆ ಬೇಷಿ ಕಾಣ್ತಿರ್‍ಲಿಲ್ಲ…. ಅವ್ನಂದ್ರೆ ಥರಥರ ನಡೂಗ್ತಿದ್ದೆ…. ಅಂಥ ಗಂಡ್ಸೀಗೆ ವುಟ್ದೋನಾಗಿದ್ರೆ ನೀನ್ಯಾಕ ಯಿಂಗಿರ್‍ತಿದ್ದಿ….” ಮುದುಕಿ ಹೀಗೆ ವಾರಕ್ಕೊಮ್ಮೆಯಾದರೂ ಮಗನನ್ನು ಸೊಸೆ ಮೇಲೆ ಛೂ ಬಿಡಲು ಯತ್ನಿಸಿ ವಿಫಲಳಾಗುತ್ತಿತ್ತು.

ತಮ್ಮ ವಂಶದಲ್ಲಿ ಯಾರನ್ನೂ ಹೋಲದ ಕೂಸನ್ನೇ ಒಂದು ಅಸ್ತ್ರ ಮಾಡಿದ್ದನ್ನು ಹೆತ್ತ ತಾಯಿಯ ಮೇಲೆ ಯಾಕೆ ಪ್ರಯೋಗಿಸಬಾರದೆಂಬ ನಿರ್ಣಯಕ್ಕೆ ಬಂದು ಮುದುಕಿ “ಗಯ್ಯಾಳಿಯೆಣ್ಣೆ…. ಥಾಳಿ ಮುಂದಿಟ್ಕಂಡು ಆಡಬಾರದಾಟ ಆಡ ಬೋದಂದ್ಕಂಡದೀಯಾ…. ಅಂಗೈ ವುಣ್ಣು ನ್ವಾಡಾಕೆ ಕನ್ನೂಡಿ ಯಾಕ ಬೇಕಲೇ ಭೋಸುಡಿ” ಎಂದು ಕುಟುಕಿ ಪೀಠಿಕೆ ಹಾಕಿತು.

ಇದೇ ಸುಸಮಯವೆಂದು ಅರ್ಜುನ ಕುಯ್‌ಗುಡುತ್ತ ಬೆಕ್ಕಿನ ಮೂತಿ ನೆಕ್ಕಿ ಪಾಲೀಷು ಮಾಡಿ ತನ್ನನ್ಯಾರು ಗಮನಿಸಲಿಲ್ಲವೆಂದು ಪುತುಕ್ಕನೆ ಮನೆ ಒಳಗೆ ಓಡಿತು. ಮಿಯಾವ್ ಭಾಷೆಯಲ್ಲಿ ಕೂಗುತ್ತ ಬೆಕ್ಕೂ ಅದನ್ನು ಹಿಂಬಾಲಿಸಿತು.

“ಅಲಲಲಾ ಮುದ್ಕೀ” ನಾಗವ್ವ ಸಿಟ್ಟಿನಿಂದ ಕಂಕುಳಲ್ಲಿ ಹೋ…. ಅಂತಿದ್ದ ಕಂದಯ್ಯನ ಕುಂಡಿಯನ್ನು ಜೋರಾಗಿ ಚಿವುಟಿ ಗದ್ದಲವನ್ನು ರಾಪು ಮಾಡಿದಳು. “ಅದೇನು ವುಣ್ಣು ಗಿಣ್ಣು ಅಂತಾಡ್ತೀಯಾ…. ನಿಸೂರಾಗಿ ಬ್ವಗ್ಳು…. ನಾನೂ ಕ್ಯೋಳ್ತೀನಿ….”

“ನಿನ್ ಕಂಕ್ಳಾಗೇ ಐತೆ ನೋಡು-ಅದ್ಕಿಂತ ಬ್ಯಾರೆ ಸಾಕ್ಚಿ ಬೇಕೇನು…. ಹ್ಹ್…. ಹ್ಹ್…. ಕ್ವಕ್…. ಕ್ವಕ್” ಕೆಮ್ಮು ಬಂದು ಒಂದ್ತೊಲ ಕಫವನ್ನು ಕ್ವಾರೆ ಚಿಪ್ಪಿಗೆ ಉಗುಳಿತು. ಅದರಲ್ಲಿ ಸಿಕ್ಕೊಂಡು ಒದ್ದಾಡುತ್ತಿದ್ದ ನೊಣದಂತಾಯಿತು ನಾಗವ್ವನ ಪರಿಸ್ಥಿತಿ ಆ ಮಾತಿಗೆ.

ಕಂಕುಳಲ್ಲಿದ್ದ ಕಂದಯ್ಯನನ್ನು ಅದರ ಮುಂದೆ ಕುಕ್ಕುರು ಬಡಿದೇಟಿಗೆ ಅದರ ಸ್ವರ ಮುಗಿಲಿಗೆ ಪುಟಿಯಿತು. ಮನೆ ಒಳಗೆಲ್ಲ ತಲಾಷ್ ನಡೆಸಿ ಬಂದ ಅರ್ಜುನ ಅದರ ಅಳುವಿನ ಸೊಗಸಿಗೆ ಮರುಳಾಗಿ ಕಂದಯ್ಯನ ಮುಂದೆ ನಿಂತು ಬಾಲ ಅಲ್ಲಾಡಿಸಿತು.

“ಕ್ವಂಕ್ಣಸುತ್ತಿ ಮೈಲಾರಕ್ಕೆ ಬರಬ್ಯಾಡಬೇ ಮುದ್ಕಿ…. ಅದೇನು ಬ್ವಗುಳ್ತೀಯೋ ನಿಸೂರಾಗಿ ಬ್ವಗ್ಳು” ಸೊಂಟ ಕಟ್ಟಿ ಸಡ್ಡೊಡೆದು ನಿಂತಳು.

ತನ್ನೆರಡು ಕೈಗಳ ಒಂಬತ್ತು ಬೆರಳುಗಳನ್ನು ತಲೆಯ ಕೂದಲೊಳಗೆ ತೂರಿಸಿ ಪರ ಪರ ಕೆರೆದೂ ಕೆರೆದೂ ಉಗುರೊಳಗೆಲ್ಲಾದರೂ ಹೇನಾಗಲೀ, ಸೀರಾಗಲೀ ಸಿಲುಕಿ ಹಾಕಿಕೊಂಡಿರಬಹುದೇ ಎಂದು ಪರೀಕ್ಷಿಸಿದ ಮೇಲೆ ಮುದುಕಿ ಕಂದಯ್ಯನ ರೆಟ್ಟೆ ಹಿಡಿದು ತಿರುವಿ “ಇದು ಯಾರಿದ್ದಂಗೈತಿ…. ನಾನಿದ್ದಂಗೈತಾ…. ಇಲ್ಲಾ ನನ್ ಮೊಗಿದ್ದಂಗೈತಾ…. ನೀನಿದ್ದಂಗೇತಾ…. ಯಾರಿದ್ದಂಗೈತೆ…. ಬ್ವಗ್ಳಲೇ ಮತ್ತೆ…. ಹ್ಹ್…. ಹ್ಹ್…. ಕ್ವಕ್…. ಕ್ವಕ್…. ತಳ್ವಾರ ಹನುಮಂತನ ಮಗ್ಳಾಗಿ ವುಟ್ಟಿದ್ರೆ ನಿಜ ಬ್ವಗುಳ್ತೀ…. ಇಲ್ಲಾಂದ್ರೆ ಇಲ್ಲ…. ಬರಿ ಬಾಯಿ ಮಾತು ಕ್ಯೋಳಾಕಿಲ್ಲಲೇ ನಾನು…. ಹ್ಹ್…. ಹ್ಹ್…. ಕ್ವಕ್…. ಕ್ವಕ್…. ಈ ನಿನ್ ಮೊಗನ್ ಮ್ಯಾಲ ಪ್ರಮಾಣ ಮಾಡಿ ಬ್ವಗ್ಳು…. ಹ್ಹ್…. ಹ್ಹ್…. ಕ್ವಕ್…. ಕ್ವಕ್…. ಕೆಮ್ಮಿ ಮತ್ತೆ ಕಫ ಕೀಳಲೆತ್ನಿಸಿತು.

“ಅಲಲಲಾ” ನಾಗವ್ವ ಎದೆಯನ್ನು ದಪ ದಪ ಬಡಿದುಕೊಂಡಳು…. “ನೀನು ಮನಸ್ಯೋಳಲ್ಲಬೇ ರಾಕ್ಚಚಿ ನೀನು…. ನಮ್ಮನ್ನು ಯೇನು ಮಾಡಾಕೆ ಬದ್ಕಿದೇ…. ಥೂ ನಿನ್ ಜಲುಮಕ್ಕಸ್ಟು ಕಿಚ್ಚಿಡಾ…. ಹ್ಹಾ…. ಆಂ…. ಅಲಲಲಾ” ಮುಂದೊಂದು ಸಬುದ ಉಚ್ಚರಿಸಲಾಗದೇ ಬುಸುಗರಿಯತೊಡಗಿದಳು.

ಅತ್ತೆ ಸೊಸೆಯರ ಜಗಳ ವೀಕ್ಷಿಸಿ ಆನಂದ ಪಡೆಯಬೇಕೆಂದು ಕುಂಟಂಜಿನಿ : ನಂದಿ ಈರಕ್ಕ ಮೊದಲಾದವರು ಬಾಕುಲಾಚೆ ಜಮಾಸಿದ್ದುದರ ಕಡೆ ಹುಬ್ಬಿಗೆ ಕೈಯಿ ಹಚ್ಚಿ ನೋಡಿ ಮುದುಕಿ ವರಸಿನಿಂದ ಕುಪ್ಪಳಿಸಿ ಎದ್ದು ನಿಂತಿತು.

“ನಿನ್ ಮಾತಿಗೆ ಮೊಳ್ಳಾಗಾಕೆ ನಾನೇನು ಆ ಭಾಡ್ಕಾವಲ್ಲ ಹ್ಹ್…. ಹ್ಹ್ ತಿಳೀತಾ ಯಿದ್ರಮ್ಯಾಲ ಕೈಯಿ ಇಟ್ಟು ಪ್ರಮಾಣ ಮಾಡಿ ಯ್ಯೇಳು….ಯಿದು ಭರಮ್ಯಗವುಟ್ಟಿದ್ದಾ…. ಅಲ್ಲಾಽಽ…. ಹ್ಹ್….ಹ್…. ಸತ್ಯನಾರು ಜನ್ಕೆ ತಿಳೀಲಿ…. ಕ್ವಕ್…. ಕ್ವಕ್….”

“ಅಲಲಲಾ” ನಾಗವ್ವನ ಮರ್ಮಕ್ಕೆ ಆಘಾತವಾಯಿತು. “ಸಿವ್…. ಸಿವಾ…. ಯಂಥಾ ಮಾತಂತಲ್ಲಪೋ….ಯಿದ್ರ ಬಾಯಿ ಸ್ಯೇದಿ ಓಗಾ….ಽಽ ನಾಲೀಗೆ ವುಳಾ ಬೀಳಾ….ಯಿದು ನಿನ್ ಮೊಗ್ನೀಗೆ ವುಟ್ಟಿದ್ದಬೇ ಮಿಂಡ್ರಿಗುಟ್ಟಿದೋಳೆ…. ನಾನೊಂದ್ಕೇಳ್ತೀನಿ…. ಬ್ವಗುಳ್ತೀಯಾ ಮತ್ತೆ….”

“ಓಹೋ ಕ್ಯೋಳು…. ನಾನು ಅಳೇಕಾಲ್ದಾಕೆ…. ಸುಳ್ಳು ಥಾರಾ ತಿಗಡಿಗ್ವತ್ತಿಲ್ಲ…. ಹ್….ಹ್”

“ನಿನ್ ಮೊಗ….ಅಂದ್ರೆ ನನ್ ಗಂಡ… ನಿನ್ ಗಂಡಗೆ ವುಟ್ಟಿದೋನಾ”

“ಹ್ಹ್….ಹ್ಹ್….” ಬಯಲಾಟದಲ್ಲಿ ದುಶ್ಯಾಸನ ನಕ್ಕಂತೆ ವಿಲಕ್ಷಣವಾಗಿ ನಗಾಡಿತು. “ಅವ್ನು ನನ್ ಗಂಡಗುಟ್ಟಿದ್ರೆ…. ಈ ಮನೀನ ನನಕೈಲಿ ಕಟ್ಟಿಸಾಕಾಯ್ತಿತ್ತಾ…. ಅವ್ನ ಸಾಕಿ ಸಲಯಿ ಅಷ್ಟೆತ್ರ ಬ್ಯಳಸೋಕಾತಿತ್ತಾಽಽ…. ಗಂಡುಸ್ರು ನಡುವೆ ಗಂಡ್ಸಾಗಿ ಈಸುದಿನ ಬೊದುಕಾಗಾತಿತ್ತಾ…. ಹ್….ಹ್…. ಕ್ವಕ್…. ಕ್ವಕ್…. ಹ್…. ಹ್…. ನ್ವಾಡಲೇ ನ್ವಾಡು…. ಈ ಬಾಕ್ಲೂನ…. ಈ ಜನರಲ್ಲಾ…. ಯಿವ್ಯೆಲ್ಲ ಕಟ್ಗೆ ಝೋಡಿಸಿದ್ದೇ ದ್ವಡ್ ಕಥೀಯಲೇ ಲವುಡೀ…. ಕಲ್ಲಿಗೇಂಥ ಉಲಿಗುಡ್ಡದ ವಡ್ರು ಕಡಿ ತಿರುಗಿ ಯಲ್ಡು ಜತಿ ಕ್ಯೆರ ಹರ್‍ಕೊಂಡ್ನಲೇ…. ಬಿಡ್ಕೇ…. ಕ್ವಕ್…. ಕ್ವಕ್…. ಹ್….ಹ್…. ಪಾಪ…. ನಿಮ್ಮಾವ್ನಂಥ ಛಲೋ ಪಿರಾಣಿ ಈ ಪರಪಂಚದಾಗೆಲ್ಲಿಽಽಯಿಲ್ಲ ಬಿಡು… ವಂದ್ ವಳ್ಳೇದಂತಾ… ವಂದ್ ಕ್ಯೆಟ್ಟದ್ದಂತಾ…. ಯಿಟ್ಟಿದ್ ಥಿಂಥಿತ್…. ಗಪ್ನ ಮಕ್ಕಂಥಿತ್ತು…. ಮೊರಬದೀರಣ್ಣನ ಬ್ಯಾಟೀ ಆಡಾಕೆಂತ ಅಡ್ವೀಗೆ ವೋತು ಬ್ಯಾಡಾಂದ್ರೂ ಕ್ಯೋಳ್ಳಿಲ್ಲ…. ಯಾವೋನು ಯೇನು ಮಾಡಿದ್ನೋ…. ಯ್ಯಾನೋ…. ಅವ್ನು ಕೈಯಿ ಸ್ಯೇದ್ಯೋಗಾ…. ನಿಮ್ಮಾವ ವೂರ್ಗೆ ವಾಪಾಸು ಬರ್ಲೇಯಿಲ್ಲ…. ಅಯ್ಯೋ…. ಅಯ್ಯೋ…. ಬಂಗಾರ್‍ದಂಥೋನ್ನ ಕಳ್ಕೊಂಡು ಈಸು ದಿನ ಬೊದ್ಕಿದ್ನೆಲ್ಲಪೋ…. ಯಿಸಕುಡ್ಯಾ ಬುದ್ದೀನ ಆ ದ್ಯಾವುರು ಯಾಕ ಕ್ವಡ್ನಿಲ್ಲ ನಂಗೆ” ಮುದುಕಿಗೆ ತನ್ನ ಗಂಡನ ನೆಪ್ಪಾಗಿ ಅಳುವುದನ್ನು ನೋಡಿ ಮರದಲ್ಲಿ ವಾಸಿಸುತ್ತಿದ್ದ ಗುಬ್ಬಿ ಸಂಸಾರ ದುಃಖಿಸಿತು. ಮರ ಕೂಡ ಹಣ್ಣೆಲೆಗಳನ್ನುದುರಿಸಿ ಸಂತಾಪ ಸೂಚಿಸಿತು. uಟಿಜeಜಿiಟಿeಜ
“ಓಹೋ… ಎಂದಳುತ್ತಿದ್ದ ಕಂದಯ್ಯನನ್ನು ಮೂಲೇಲಿ ಕುಕ್ಕರಿಸಿ ನಾಗವ್ವ “ಅದ್ಯಾಕಂಗಳ್ತಿ ಬುಡು. ಅಳೇದ್ನೆಲ್ಲ ನೆಪ್ ಯಾಕ ಮಾಡ್ಕೇಂತಿ…. ನೀನತ್ರೆ ಸತ್ತೋನು ಬೊದ್ಕಿ ಬಂದಾನ….” ಎಂದು ರಮಿಸುತ್ತದ್ದಾಗ ಸಂಗವ್ವ ಬಾಕಲಲ್ಲಿಣುಕಿ ಮೂತಿ ತೂರಿಸಿ ಕ್ವಕ್ಕೆಂದು ಕೆಮ್ಮೆ ಸದ್ದು ಮಾಡಿತು. “ಬ್ಬೇ ಸೆವುಡವ್ವಾ…. ನಿನ್ನ ಗಂಡಾ…. ನಾಗವ್ವನ ವಟ್ಯಾಗ ವುಟ್ಟಿ ಬಂದ್ ಮೂಲ್ಯಗ ಯೆಂಗ ಅಳ್ತಾಕೂತಾನ್ನೋಡು….” ಎಂದು ಆಕೆ ಆಡಿದ ಮಾತು ಮುದುಕಿಯ ತಲೆಯೊಳಗೆ ಪುಸುಗಿ ಹೊಸಬೆಳಕನ್ನುಂಟುಮಾಡಿತು… ಮಸಗುಗಣ್ಣುಗಳನ್ನು ಮೂಲೆಗೆ ಹರಿಬಿಟ್ಟು ನೋಡಿತು. ಅದೇ ಗಿಣಿ ಮೂಗು ಅದೇ ಚಪ್ಪೆಯಾಕಾರದ ತಲೆ… ಅದೇ ಆನೆಕಿವಿ…. ಓಹ್…. ಖರೇವಂದ್ರೂ…. ಅವ್ನೇ ಇವ್ನು…. ವರಸು ಕಿರಕುಗುಟ್ಟುವಂತೆ ಸಿಡಿದೆದ್ದು ಏಳುತ್ತ ಬೀಳುತ್ತ ವ್ಯಟಕಿತ್ತು ಮೊಮ್ಮಗನನ್ನು ಬರಸೆಳೆದು ಅಪ್ಪಿಕೊಂಡು ಎದೆಯ ಗೂಡೊಳಗೆ ಹುದುಗಿಸಿಟ್ಟು ಕಣ್ಣುಗಳಿಂದ ಆನಂದಬಾಷ್ಪ ಉದುರಿಸಿತು. ನೋಡುತ್ತಿದ್ದ ಸರ್ವರು ಆ ಹನಿಗಳು ತಮ್ಮ ಎದೆಯ ಮೇಲೆ ಬಿದ್ದಂತೆ ಕ್ಷಣದಲ್ಲಿ ಮುಗ್ಧಭಾವದಿಂದ ಕಂಪಿಸಿದರು. ಆದರೆ ನಾಗವ್ವ ತನ್ನ ಕಂದಯ್ಯ ಮುದುಕಿಯ ಎದೆಯೊಳಗೆ ಅವಿತುಕೊಂಡಿರುವ ದೃಶ್ಯವನ್ನೇ ಒಂದು ಅಸ್ತ್ರವಾಗಿ ಉಪಯೋಗಿಸಲು ನಿರ್ಧರಿಸಿದಳು. “ಯಿದ್ ನಾನ್ ಮಾಡಿರೋ ನೆಳ್ಳು ಕಣ್ಲೇ ಲವುಡೀ…. ನಾನ್ ಯ್ಯೊಳ್ದಂಗೆ ಕ್ಯೋಳಂಗಿದ್ರೆ ಬಿದ್ದಿರ್ರಿ… ಯಿಲ್ಲಾಂದ್ರೆ, ವಂಟೋಗ್ರಿ” ಎಂದು ಇಂಥ ದಿನ ಇಲ್ಲಾ ಎಂಬಂತೆ ಅಕ್ಕಿ ಕಾಳು ಉದುರಿಸುತ್ತಿದ್ದುದು ದಿಢೀರನೆ ನೆನಪಾಗಿ ಕಿಚ್ಚಿಟ್ಟಿತು ಬೇರೆ… ಮದುವೆ ಮನೆಯ ಹೋಳಿಗೆಯಂಥ ಕಂದಯ್ಯನ ದೇಹದ ಹಿಂಭಾಗದ ಮೇಲಾದರೂ ನಾಲಗೆಯಾಡಿಸು ಇಚ್ಛೆಯಿಂದ ಅರ್ಜುನ ಅಲ್ಲಿಗೆ ಹೋಗಿ ಟ್ರೈ ಮಾಡಿ ಮುದುಕಿಯಿಂದ ಗುದ್ದಿಸಿಕೊಂಡು ಕುಯ್ಯೋ ಮರ್ರೋ ಅನ್ನಲಾಗದೆ ಕೇವಲ ಬುರುಗೂದಿದಂತೆ ಸಣ್ಣ ದನಿ ಹೊರಡಿಸುತ್ತ ನಾಗವ್ವನ ಕಾಲಬುಡಕ್ಕೆ ಬಂದು ಆಕೆಯ ಪಾರ್ಟಿ ಸೇರಿ ಬಾಲ ಅಲುಗಾಡಿಸಿತು.

ಮುದುಕಿ ತನ್ನ ಕಂದಯ್ಯನ ಮುಖದ ಪ್ರತಿಯೊಂದು ಭಾಗಗಳನ್ನೂ ಅತ್ತೂ ಅತ್ತೂ ಸ್ವಚ್ಛವಾದ ಪ್ರಖರ ಕಿರಣಗಳಿಂದ ತಿಕ್ಕಿ ತಿಕ್ಕಿ ನೋಡುತ್ತಿರುವುದನ್ನು ತೀಕ್ಷಣವಾಗಿ ಗಮನಿಸಿದ ನಾಗವ್ವ ತನ್ನ ವಾರಿಗೆಯವಳಾದ ಸಂಕುಳಿಯ ಬಳಿಗೆ ಸಾರಿದಳು. “ಅಲ್ಲಬೇ ನನ್ನೆಳ್ಳೂ…. ನನ್ನೆಳ್ಳೂಂತ…. ಪತ್ರಿಯ್ಯೇರಿಸಿದಂಗಾಡ್ತಲ್ಲ… ಸಾಯ್ವಾಗ ವಯ್ತಳನ್ನಂಗೆ…. ಯಾಕಿದ್ದೀತಂಥೀನಿ-ಆವಂದಷ್ಟೇ ಆದ್ರೂ… ನಾನೇನು ಕಡ್ಮೆ ಮಾಡೀನಿಯ್ಯೇಳು…. ಮಗ್ನಂಗೆ ದುಡ್ದಿಟ್ತಿಲ್ಲಾ…. ತಿಂದುಂಡು ಮಮ್ಮಗನ್ನಾಡಿಸ್ತಾ ಆರಾಮಿದ್‌ಬುಟ್ರಾಯ್ತು….” ತಾನು ತುಸುಗಟ್ಟಿಯಾಗಿ ನುಡಿಯುತ್ತಿರುವ ಮಾತುಗಳನ್ನು ಮುದುಕಿ ತದೇಕ ಚಿತ್ತದಿಂದ ಆಲಿಸುತ್ತಿರುವುದೋ ಇಲ್ಲೋಂತ ಖಚಿತಪಡಿಸಿಕೊಂಡು ಮುದುವರಿದು ಹೇಳಿದಳು…. “ಯಾಕಿದ್ದೀತವ್ವಾ ಥಾಯಿ… ಯೀಗೊಂದು ಬುದ್ಧಿ. ಯಿನ್ನೊಂದು ಸೊಲುಪೊತ್ತಿಗೆ ಯಿನ್ನೊಂದು ಬುದ್ದಿ… ಆಕಿ ಮಾಡಿದ್ನ ಆಕೇನೇ ಅನುಬೋಸ್ಲೇಳು…. ನಾನ್ಯೇನು ಬ್ಯಾಡಾಂದೀನಾ…. ನಾನು ಮದ್ಲೇ ತಳಾರ ಅನಮಂತ್ನ ಮೊಗ್ಳು… ಮಾತೆಂದ್ರೆ ಮಾತು… ಉಫ್… ಹ್ಹ್… ಬ್ಯಾಡವ್ವಾ… ಬ್ಯಾಡಾ… ಸುಡ್ಗಾಡೇ ವಾಸಿ… ಸತ್‌ಮ್ಯಾಲ ದೆವ್ವ ಆಗಿ ಆಸ್ತಿ ಕಾಯೋ ಮುದ್ಕಿ ಥಂಟಿ ಸಾಕವ್ವಾ ತಾಯಿ….”

ತಾನು ಮೈಮರೆತಿದ್ದಾಗ ತನ್ನ ತೊಡೆ ಏರಿ ರೆಸ್ಟು ತೆಗೆದುಕೊಂಡಿದ್ದ ಬೆಕ್ಕನ್ನು ಆಚೆಗದಮಿ ಮುದುಕಿ ಒಂದೊಂದು ಮಾತಿಗೂ ಅನೇಕ ಅರ್ಥಗಳನ್ನು ಕಲ್ಪಿಸಿಕೊಂಡು ವ್ಯಗ್ರವಾಗಯಿತು. ಈ ತನ್ನ ಸ್ವಯಾರ್ಜಿತ ಆಸ್ತಿಯಾದ ನೆಳ್ಳನ್ನು ಹೊಡೆಯಲು ಈ ಸೊಸೆ ಎಂಬ ಗಯ್ಯಾಳಿ ಮುಂಡೆ ಮುದ್ದಿ ಇಂಡಿಯೊಳಗೆ ಕಣಗೆಲೆ ಬೇರು ತೇದಿಡಲೂ ಹೇಸಲಾರಳೆಂದುಕೊಂಡ ಮುದುಕಿ “ಯಿಂದೇ ವಂಡ್ರಿ, ವರ್ಯಾಕೆ… ಬ್ಯಾಡಾಂತೀನ… ಸತ್‌ಮ್ಯಾಲ ನಾನು ದೆವ್ವಾರ ಆಕೀನಿ… ಪಿಚ್ಯಾಚ್ಯಾರ ಆಕೀನಿ ಅದ್ನ ಕ್ಯೋಳಾಕೆ ನೀನ್ಯಾವೋಳೆ ನನ್ನಾಟಗಿತ್ತೀ… ಕ್ವಕ್… ಕ್ವಕ್… ಹ್ಹ್…. ಹ್ಹ್… ವಂಡ್ರಿ… ಯೀಗಿಂದೀಗ್ಲೇ ವಂಡ್ರಿ-ಮಷಣದಾಗಾರಾಯಿರ್ರಿ…. ಸುಡುಗಾಡಾಗಾರಾಯಿರ್ರಿ…. ಬೆಟ್ ತೋರಿಸ್ಗೆಂಡು ಬಾಳುವೆ ಮಾಡಿದಾಕ್ಯೆಲ್ಲ ನಾನು. ಯೀ ಕ್ಯೇರ್‍ಯಾಗ ವಂದ್ತುತ್ತು ಮುದ್ದೀ ವುಟ್ಟಾಕಿಲ್ಲಾ ಅಂದ್ಕಂಡೀಯಾ…. ಹ್…ಹಾ… ಅಲಲಲಾ…. ಅವನದಾನವ್ನೂ…. ನಿನ್ ಚೆಲುವೀಕೆಗೆ ಮಳ್ಳಾಗಿ ಥಾಳಿ ಕಟ್ಟಿ ತಂದಾನ್ನೋಡು ಆಗ್ರಾಕ್ಕೋಗಿ ಗೂಗಿ ತಂದಂಗೆ…. ಹ್ಹ್…ಹ್ಹ್…. ಗಂಡನ್ನೆತ್ತಿಮ್ಯಾಲ ಮೆಣ್ಸು ಅರಿಯ್ಯೋಳೆ… ಗ್ಯಯ್ಯಾಳಿ… ಹ್ಹ್….ಹ್ಹ್….ಕ್ವಕ್….ಕ್ವಕ್….” ಎಂದು ನುಡಿಯುತ್ತಿರುವಷ್ಟರಲ್ಲಿ ಬೀಗೂತಿಯಂತೆ ಬಂದ ಕೆಮ್ಮು ಮಾತಿಗೆ ಅಡ್ಡಗಾಲು ಹಾಕಿತು. ಅಂತೂ ಸಾಹಸ ಮಾಡಿ ಗಂಟಲ ಡಿಪೋದಿಂದ ಬೊಗಸೆಯಷ್ಟು ಕಫ ಕಿತ್ತು ಕ್ವಾರೆಚಿಪ್ಪಿಗೆ ಉಗುಳುತ್ತಿರುವಾಗಲೇ ನಾಗವ್ವ ಗಾಳಿಯಂತೆ ನುಗ್ಗಿ ತನ್ನ ಕಂದಯ್ಯನನ್ನು ಬಾಚಿ ಎತ್ತಿಕೊಂಡಳು. ಅದು ನೋಡುವವರಿಗೆ ಅಗಲಿಸುವಿಕೆಯಂತೆ ಕಂಡುಬಂದು ನಾಗವ್ವ ‘ಮಹಾಗಯ್ಯಾಳಿ’ ಎಂಬ ಬಿರುದಿಗೆ ಪಾತ್ರಳಾದಳು. ಕಂದಯ್ಯನ ಸ್ಪರ್ಶದೇಟಿಗೆ ಮೊದಲೆ ತುಂಬಿಕೊಂಡಿದ್ದ ಮೊಲೆಗಳು ಜುಮ್ಮೆಂದು ಹಾಲು ಇನುಕಿ ಕುಬುಸ ಒದ್ದೆಯಾದದ್ದನ್ನು ಗೊಡ್ಡೀರವ್ವ ಗಮನಿಸಿ “ದ್ಯಾವ್ರೇ ನನಗ್ಯಾವಾಗ ತೊಟ್ಲು ಸೋಬಾಗ್ಯ ಕ್ವಡ್ತೀ… ಬಂಜೀ ಎಂಬ ಅಪವಾದದಿಂದ ಎಂದು ಮುಕ್ತಿ ಕೊಡ್ತೀ” ಎಂದು ಮೌನವಾಗಿ ಮೊರೆ ಇಟ್ಟಳು. ಆಕೆಯ ಮೊರೆ ಆಲಿಸಿದಂತೆ ಬೆಕ್ಕು ಮ್ಯಾಂವ್‌ಗುಟ್ಟುತ್ತ ಆಕೆಯ ಕಂದು ಬಣ್ಣದ ಕಾಲ ಮೀನ ಖಂಡಕ್ಕೆ ಮೈತಿಕ್ಕಿದ್ದಲ್ಲದೆ ಬೇವಿನ ಮರವೂ ಗಾಳಿಗೆ ಮಿಸುಕಾಡಿ ಹೊನ್ನೆಲೆಗಳುನ್ನದುರಿಸಿ ಅನುಮೋದಿಸಿತು.

ಅಂಥವೆರಡು ಎಲೆಗಳುದುರಿದ್ದ ಕಿರಾಪಿನ ಕರಿತಲಿಮಾನವನಾದ ಭರಮ್ಯ ದೂರದಿಂದ ಸುಂದರವಾಗಿ ಕಂಡ ಗೊಡ್ಡೀರವ್ವನ ಕಡೆ ಗುರಿ ಇಟ್ಟು ಬಂದವನೆ ಅತ್ತೆ ಸೊಸೆಯರ ಜಗಳದಿಂದಾಗಿ ಮನೆ ಮತ್ತೆ ನರಕದಂತೆ ಕಂಡಿತು. ತನ್ನ ಪ್ರಿಯವಾದ ಕಿರಾಪನ್ನು ಲೆಕ್ಕಿಸದೆ ಬೇಸರದಿಂದ ಕೂದಲು ಕಿತ್ತುಕೊಳ್ಳುತ್ತಲೆ ಬಾಕುಲು ತಟಾದು” ಏನ್ರಬೇಯಿದು ಗಲಾಟೆ…. ನಾನೇನು ಮನೀಗೆ ಬರಾಕ ಬ್ಯಾಡೇಳ್ರಿ” ಎಂದು ಹೇಷಾರವ ಮಾಡುತ್ತಲೆ ಅರ್ಜುನ ಬೋಽಽ ಬೋವ್ ಎಂದು ಮಾಲ್ ಕೌಂಸ್‌ರಾಗ ಹಾಡಿ ಸಂತೋಷ ವ್ಯಕ್ತಪಡಿಸಿತು. ಇಸಪೀಟಾಟದಲ್ಲಿ ಎಲ್ಡುಮೂರು ಕಳಕೊಂಡು ಬಂದಿರುವಾತನ ಮಾತು ಕೇಳಲು ಚಂದ ಎಂದು ಗೌಡರ ಹಟ್ಟಿ ಹೊಲಗಳಲ್ಲಿ ದುಡಿದು ಸುಣ್ಣವಾಗಿ ಬಂದಿದ್ದ ಕೇರಿ ಜನ ಕೆಲವರು ಉಚಿತ ಮನರಂಜನೆ ಆಸೆಯಿಂದ ನಾಮುಂದು ತಾಮುಂದು ಅಂತ ಬಾಕಲು ಗೋಡೆಗಾತು ನಿಲ್ಲಲು ಗೋಡೆ ಪೊಟರಲ್ಲಿ ವಾಸಿಸುತ್ತಿದ್ದ ಇಲಿಬುಡಕವೊಂದು ಟಣ್ಣನೆ ಜಿಗಿದು ಹಾರಿಹೋಯಿತು. ಆರನೇ ಕಿಲಾಸು ಓದಿರುವ ತಾನು ಕೇರಿಗರೆಲ್ಲರಿಗಿಂತ ಸುಸಂಸ್ಕೃತ ಎಂಬುದಾಗಿ ಭಾವಿಸಿದ್ದ ಆತ ತನ್ನ ಯೋಗ್ಯತೆಗೆ ಸರಿಯಾದ ತಾಯಿ ಮುದುಕಿ ಅಲ್ಲವೆಂದು; ತನ್ನ ಅಂತಸ್ತಿಗೆ ತಕ್ಕುದಾದ ಹೆಂಡತಿ ಆಕೆ ಅಲ್ಲವೆಂದೂ ಬಗೆದನು. ಇವರಿಬ್ಬರು ಸದಾ ತಲೆಯೊಳಗೆ ಕೂತು ಎಲೆ ಕಲೆಸುವಾಗೆಲ್ಲ ನೆನಪಾಗಿ ಯಾವುದು ಕಿಂಗೋ: ಯಾವುದು ಕ್ವೀನೋ: ಯಾವುದು ಜೋಕರ್ರೋ ಎಂದು ಆ ಕ್ಷಣ ಹೊಳೆಯದೆ ತಾನು ಎಷ್ಟೋ ಸಾರಿ ಆಟ ಬಿಟ್ಟುಕೊಟ್ಟಿರುವುದು ನೆಪ್ಪಾಯಿತು. ಇಂಥವರಿಂದಾಗಿ ತನಗೆ ಕುಂತರೂ ಲಾಸು; ನಿಂತರೂ ಲಾಸು; ಅವನು ಬಿಗಿ ಹಿಡಿದ ಮುಷ್ಠಿಗೆ ಮತ್ತು ಅವುಡು ಗಚ್ಚಿದ ಬಾಯಿಗೆ ರಕ್ತ ಸಡನ್ನ ನುಗ್ಗಿ ಒಂದು ರೀತಿಯ ನೋವು ಕಾಣಿಸಿಕೊಂಡು ಮುಖವನ್ನು ಒಂಥರಾ ಮಾಡಿ ಮತ್ತೆ ನಿಸೂರಾದನು. ಹೀಗೆ ಯೋಚಿಸುತ್ತ ಮಂಕಾಗಿರುವಾಗಲೇ ಮಗನನ್ನು ಮಾತಿನಿಂದ ಕಟ್ಟಬೇಕೆಂದು ಮುದುಕಿ ಚಿನ್ನಿಕೋಲು ಪುಟಿದಂತೆ ಮೇಲಕ್ಕೆದ್ದು ಲೋ ನೀನೊಂದು ಗೊಂಡ್ಸಾ… ಥೂ… ನಿನ ಬೋಯಾಗ ನನ ಹಾಟುಯ್ಯಾ. ನೀನಿಲ್ದ ಟೇಮಿನಾಗೆಂಥೆಂಥ ಮಾತಂಥಾಳೇಽಽ ಯೋನ್ಕಥೆ… ಸಿವ್‌ಸಿವಾ… ಯಿನ್ನಬ್ಬೋನಾಗಿದ್ರೆ ಕಣಗ ಥಗಂಡು ಯೆಂಡ್ತಿ ಸ್ವಂಟ ಮುರೀತಿದ್ದಾಽ… ನೀನೀದ್ದಿನ್ವಾಡು… ಕೂಳಿಗೆ ದಂಡಾಗಿ… ಯಿಲ್ಲ… ಕ್ವಕ್… ಕ್ವಕ್… ಹ್… ನಿನ್ನಂಥ ಮೊಗ ನನಗಿದ್ರೇನ್? ಯಿಲ್ದಿದ್ರೇನ್. ಕರ್‍ಕಂಡು ವಂಡು ನಿನ್ನೆಂಡ್ತಿ ಮೊಕ್ಳೂನ… ನನ್ನ ಮನ್ಯಾಗ ಬ್ಯಾಡಽಽ” ಕ್ವಕ್…. ಕ್ವಕ್….” ಎಂದನ್ನುತ್ತಿರುವಾಗ್ಗೆ ಬಂದ ಕೆಮ್ಮನ್ನು ನಿಗ್ರಹಿಸಲೆಂದು ನೆಲಕ್ಕೆ ಕೂತು ತಲೆಗೆ ಕೈ ಹಚ್ಚಿದಳು.

ಮುದುಕಿ ಎಂಬೋ ಬದುಕಿರೋ ಪಿಶಾಚಿಯ ಮಾತಿನ ಆಕ್ರಮಣದಿಂದ ಚೇತರಿಸಿಕೊಳ್ಳುವ ಮೊದಲೇ ತನ್ನ ಗಂಡನ ಮೇಲೆ ಮಾತಿನ ಸಮ್ಮೋಹನಾಸ್ತ್ರ ಪ್ರಯೋಗಿಸಬೇಕೆಂದು ಚೊಚ್ಚಿಲಿಗೆ ಗಂಡು ಹಡೆದ ಹಮ್ಮಿನಿಂದ ನಾಗವ್ವ ಕೆಂಡದ ಮೇಲೆ ಉಪ್ಪು ಚೆಲ್ಲಿದಂತೆ ಕೂಸು ಸಮೇತ ಅವನ ಮುಂದೆ ಕುಪ್ಪುಳಿಸಿದ್ದಕ್ಕೆ ಆನಂದಿಸುತ್ತಿದ್ದ ಪ್ರೇಕ್ಷಕರ ಪೈಕಿ ಸಿದ್ರಾಮ ಸೀಟಿ ಹೊಡೆದನು ಮತ್ತು ಎಂಕಟಿ ಶಬ್ಬಾಷ್ ಎಂದು ಕೂಗಿದನು.

“ಕ್ಯೋಳಿದ್ಯಾ…. ಕ್ಯೋಳಿದ್ಯಾ ನಿಮವ್ವಾಡಿದ ಮಾತ್ನ” ತನಗರಿವಿದ್ದೋ ಅರಿವಿಲ್ಲದೆಯೋ ಕಂಕುಳಲ್ಲಿದ್ದ ಕಂದಯ್ಯನ ಕುಂಡಿಯನ್ನು ಎಡಗೈಯ ಬೆರಳುಗಳಿಂದ ಚಿವುಟಿ ರೊಚ್ಚಿಗೆಬ್ಬಿಸಲು ಅದು ತಾಳ ವಾದ್ಯ ಕಛೇರಿ ಆರಂಭಿಸಿತು. “ಮಾತ್ ಮಾತ್ಗೂ ನಾನ್ ಕಟ್ಟಿಸಿದ ಮನಿ ನಾನು ಕಟ್ಟಿದ ಮನಿ….. ಯಾವದ್ವಡ್ ಬಂಗ್ಲಿ ಕಟ್ಟಿಸ್ಯಾಳನ್ನಂಗಡ್ತಾಳೆ…. ತನ್ ಮನ್ಯಾಗ ತಾನೇ ಸಿದಗಿ ಬೊಡ್ಕಂಡಿರ್‍ಲಿ… ನೀನಿಕಿ ವಟ್ಯಾಗುಟ್ಟಿದ ಮೊಗಾಗಿದ್ರೆ ಯಿಂಗಾಡ್ತಿರ್‍ಲಿಲ್ಲ… ಯೀ ಮನೀನೂ ಬ್ಯಾಡ…. ಯಿಕಿ ಸಾವಸಾನೂ ಬ್ಯಾಡ…. ವಂಡು ಯಲ್ಲಾರ ಸುಡ್ಗಾಡಾ ಗಾರಾಯಿಡು…. ಯಿರ್‍ತೀನಿ….” ಮಾತುದುರಿಸುತ್ತ ಗಂಡನ ಮುಖ ನೋಡಿ ಸಿಟ್ಟು ಬರಲಿಲ್ಲ ಇನ್ನೂ ಎಂದು ಖಚಿತಪಡಿಸಿಕೊಂಡು ನಾಗವ್ವ ತನ್ನ ಗಂಟಲ ಬಿರುಡಿಯನ್ನು ಎತ್ತರಕ್ಕೆ ತಿರುವಿದಳು. ಮುದುಕಿಗೆ ಬಾಯಿತೆರೆಯಲು ಆಸ್ಪದ ಕೊಡಬಾರದೆನ್ನುವುದೂ…. “ಅಯ್ಯಯ್ಯೋ…. ಮುತ್ತೈದಿ ಸಾವು ಯ್ಯಾಕ ಕ್ವಡುವಲ್ಲೋ…. ಯಿಂಥ ಕಂಟ್ಲುಗಿತ್ತಿ ಅತ್ತಿ ಕೈಯ್ಲಿ ಯಂಗ ಬಾಳುವೆಮಾಡ್ಲೊ…. ನನಗಂಡ ಕೈಲಾಗ್ದೋನಾಗಿದ್ಕೆ ತಾನಿ ಯಿದು ಯಿಸ್ಟು ಅಂತಿರೋದು…. ಯಿನ್ನೊಬ್ಬಾನಾಗಿದ್ರೆ ಯಿಸ್ಟು ದಿನ ಸುಮ್ನಿರ್ತಿದ್ನಾ…. ನಿಂತು ಬೈಟಕ್ಕೇಲೆಯಲ್ಲೋ ಗುಡುಸ್ಲಾಕಿ ಯಂಡ್ರುನಿಟ್ಟು ಮಾರಾಜ್ನಂಗೆ ಬಾಳುವೆ ಮಾಡ್ತಿದ್ದ… ಅವನನ್ನೊದೇನೈತೆ…. ನಾನು ಯಣ್ ಮುಂಡೇದು…. ಪಡೆದು ಬಂದಿರೋದೇ ಯಿಸ್ಟು… ಹ್‌ಹ್… ಹ್‌ಹ್…. ಹ್‌ಹ್” ಗಂಡನಿಂದ ಬೀಳಬಹುದಿದ್ದ ಹೊಡೆತಗಳಿಂದ ತಾನು ರಕ್ಷಿಸಿಕೊಳ್ಳಲೆಂದು ಸಿಟ್ಟನ್ನೇ ದುಃಖವನ್ನಾಗಿ ಮಾರ್ಪಡಿಸಿಕೊಂಡು ಪರಿಣಾಮಕ್ಕೆ ಕಣ್ಣುಮೂಗಿನಿಂದ ಸಣ್ಣಗೆ ಹರಿಯತೊಡಗಿದ ಹಳ್ಳವನ್ನು ಎಡಕ್ಕಿದ್ದ ಡೋಮನ ಕಡೆ ಸಿಡಿಸುತ್ತ ಜೋರಾಗಿ ಅಳತೊಡಗಿದಳು.
ಮೂರೂರುಳಿಕೆ ಉರುಳುವಂತೆ ಆಕೆಯ ಬೆನ್ನಿಗೆ ಝಾಡಿಸಿ ಒದೆಯಲೆಂದು ಎಷ್ಟು ಪ್ರಯತ್ನಿಸಿದರೂ ಭರಮ್ಯನಿಂದ ಬಲಗಾಲನ್ನು ಎತ್ತಲಾಗಲೇ ಇಲ್ಲ. ಆದರೆ ಅವನಿಂದ ಅಂಥ ಒಂದು ಒದೆತವನ್ನು ತಪ್ಪಿಸಿಕೊಂಡ ಜಾಣ ಅರ್ಜುನ ಬೆಕ್ಕಿನ ಸಹಾಯ ಪಡೆದು ಮನೆಯ ಅಡುಗೆ ಮನೆ ಒಳಕ್ಕೆ ಹೋಗಿ ಒಂದು ರವುಂಡು ಮುಗಿಸಿ ಮತ್ತೆ ಹೊರ ಬಂದು ಮುದುಕಿ ಕಡೆ ಆಕೆ ಮಾತು ಕೇಳುವ ಆಸೆಯಿಂದ ನೋಡಿತು. ಅದರ ಆಸೆಯನ್ನು ಈಡೇರಿಸಲೆಂದು ಮುದುಕಿ ‘ಅಲಲಲಾ ಅಂದಿತು’ ಬಿಡಕೀ… ಯಲಾಽಽಽ ಬಿಡಕೀಽಽ… ನನ್ಮಗ ಕಾಲು ಮುರುದು ಕಯ್ಯಾಗೆ ಕ್ವಡೋನಾಗಿದ್ರಿಂಗ್ಯಾಕಾಡ್ತಿದ್ದೆ… ಯೀ ಬಾಡ್ಕಾವನ ನ್ಯೆತ್ತೀಗೆ ಅದ್ಯಾವ ಗಿಡ ತೇದಚ್ಚೀಯೋ ಯ್ಯೋನೊ… ಆ ದ್ಯಾವ್ರೀಗೇ ಗ್ವತ್ತು. ಯಿವನ್ನ ಕರ್‍ಕಂಡು ಯಿವತ್ತೆ ವಂಡು ಬ್ಯಾಡಾಂದ್ರೆ ಕ್ಯೋಳ್ವಂತೆ ಕ್ವಕ್… ಕ್ವಕ್… ನನ್ ಮಮ್ಮಗನ ಮೊಖಾ ನೋಡ್ಕೊಂಡು ಯಿಸು ದಿನ ಸುಮ್ಕಿದ್ದೆ. ಹ್ಹ್… ಹ್ಹ್… ಬಡ್ಕಂಡೋಕಿ ನೀನು ಅಡಕಂಡೋಕಿ ನೀನು ನಡೆಸ್ತಿದ್ದೀ ನಡ್ಸು ಕ್ವಕ್… ಕ್ವಕ್… ಹ್ಹ್…” ಮುಷ್ಠಿ ಕಡೆಗೆ ಜೂಜುಕಾಯಿ ಸರಿದಂತೆ ತನ್ನೆರಡು ಕೈಗಳ ಆಸರೆಯಿಂದ ಕಾಲುಗಳನ್ನು ನಡೆಸುತ್ತ ಅವನಿಗೆ ಹತ್ತಿರ ಬಂದು ಮುದುಕಿ ಆದಷ್ಟು ಎತ್ತರ ಮುಖ ಎತ್ತಿ ನೋಡಿತು. ತನ್ನ ಎದೆ ಹಾಲು ಕುಡಿಯುವಾಗ ಸ್ವಾಟಿಯ ಎರಡೂ ಕಡಿಂದ ಹಾಲು ಇಳಿಸಿಕೊಂಡು ಮೈ‌ಎಲ್ಲ ಒದ್ದೆ ಮಾಡಿಕೊಳ್ಳುತ್ತಿದ್ದ ಅದೇ ಮಗನೇ ಇವನು? ಎಂಬ ಪ್ರಶ್ನೆ ಅದರ ಮುಖದ ಪ್ರತಿ ನೆರಿಗೆ ತುಂಬಿ ಜೀಕಿತು… ಬೇಡಿದ್ದೆಲ್ಲ ಕೊಡಿಸುತ್ತ ತಾನು ಸಾಲೆಗೆ ಹೊತ್ತು ಬಿಟ್ಟು ಆರನೆ ಕಿಲಾಸಿನವರೆಗೆ ಓದಿಸಿದ್ದೂ; ಅದು ಮನೀಗೆ ಬಂದ ಕೂಡಲೇ ಯವ್ವೋ ನಿಂಗೆ ಇಂಗ್ಲೀಸ್ನಲ್ಲಿ ಓಲ್ಡು ವುಮ್ಯಾನಂತಾರವ್ವೋ ಎಂದು ಉಲಿದಾಗ ರೋಮಾಂಚನಗೊಂಡು ಭಲೆ ಮಗ್ನೇ ಎಂದು ಉದ್ಗರಿಸಿದ್ದೂ; ಆಗ ಪ್ರೀತಿಯಿಂದ ಹಚ್ಚೇರು ಜ್ವಾಳಮಾರಿ ಗಂಗವ್ವನೋಟ್ಲಾಗೆ ಪಾವೂವರೆ ಕರಜೀಕಾಯಿ ಕೊಡಿಸಿದ್ದೂ ಎಲ್ಲ ನೆಪ್ಪಾಗಿ ಮತ್ತೆ ತಿಬ್ಬಳಿಸಿ ನೋಡುತ್ತದೆ…. ಆ ಮುಖ ಎಲ್ಲಿ! ಈ ಮುಖಾ ಎಲ್ಲಿ! ಕಿರಾಪು ಬಿಟ್ಟಿರುವ ತಲೆ, ಪ್ರೆಂಚು ಮೀಸೆ, ಅಲ್ಲದೆ ಬಲಗಿವಿ ಸಂಧಿಯಲ್ಲಿ ಕ್ವರೆ ಸೀಕರೇಟು ತುಂಡು… ಓಹ್ಹೋ ಬಂದವ್ನೆ ಯಂಡ್ತಿ ಸೆರ್‍ಗು ತೀಡಾಕೆ. ಹಲ್ಲು ಕಡಿಯಾಕೆ ಎಂದರೆ ಬಾಯೊಳಗೆ ಎರಡಾದರೂ ಹಲ್ಲುಗಳಿದ್ದಿದ್ದರೇ….. ಮುದುಕಿ ನೀರು ತುಂಬಿ ಮಂಜುಗವಿಯುತ್ತಿದ್ದರೂ ಅವುಡು ಗಚ್ಚಿ ಕ್ಯಾಕ್ಕನೆ ಕಫವನ್ನು ಬಾಯಿಗೆ ತಂದು ಕೊಂಡದ್ದೆ ಥೂ ಅಂತ ಉಗುಳುತ್ತಲೇ ಅದು ಪ್ರೇಕ್ಷಕರ ಪೈಕಿ ಸಿದ್ರಾಮ, ಸಂಗ, ದೊಡ್ಡಿಯರಿಗೂ ಬಿದ್ದು ಹೋ ಎಂಬ ಉದ್ಗಾರ ಹುಟ್ಟಲು ಕಾರಣವಾಯಿತು. “ಅಸ್ಟಾಡ್ತಿದ್ರೂ ನ್ವಾಡ್ತಾ ನಿಂತೀಯ್ಯೋನೋ… ಥೂ ನಿನ ಜಲುಮಾಕೆ ಬ್ಯೆಂಕಿ ಆಕಾ…. ಓಗು ಯಲ್ಲವ್ನ ಗುಡ್ಗೋಗಿ ಸೀರಿ ಉಟ್ಕುಂಡು ಬಳೀ ತ್ವಟ್ಕೋ….” ಹೀಗೆ ತನ್ನ ಗಂಡಸ್ತನಕ್ಕೆ ಹಡೆದ ತಾಯಿಯೇ ಸವಾಲು ಹಾಕಿದಾಗ ಭರಮ್ಯಗೆ ಸೊಲುಪಾದರೂ ಸಿಟ್ಟು ತೋರಿಸುವುದು ಅನಿವಾರ್ಯವಾಯಿತು. ಯಾವ ಅಸ್ತ್ರವನ್ನು ಯಾವ ರೀತಿ ಪ್ರಯೋಗಿಸಬೇಕೆಂದು ಯೋಚಿಸುತ್ತ ಕಾಲ ಕಳೆದರೆಲ್ಲಿ ಹೆಂಡತಿ ಕುಪ್ಪಳಿಸಿ ಎದ್ದು ಪ್ರತಿವಾದವನ್ನು ಮಂಡಿಸಿ ತನ್ನನ್ನು ಕಕ್ಕಾವಿಕ್ಕಿ ಮಾಡುವಳೋ ಎಂದು ಅನುಮಾನಿಸಿ ಕೂಡಲೇ ಬಲಗಾಲನ್ನೆತ್ತಿ ಹೆಂಡತಿ ಡುಬ್ಬಕ್ಕೆ ಬಾರಿಸುತ್ತಲೆ ಆಕೆ ಮೂರುರುಳುವಿಕೆ ಉರುಳಿ ಬಿದ್ದು ನೆಲದ ತುಂಬ ಉರುಳಾಡಿ ಕಾಡಿನ ಗುಬ್ಬಿಯಾಗಿ ರೋಧಿಸತೊಡಗಿದಳು.

ಹೆತ್ತಾಕಿ ಶಬ್ಬಾಷ್ ಎನ್ನಬುದೇನೋ ಅಂತ ಮುದುಕಿ ಕಡೆ ಅಂಜುತ್ತ ಅಳುಕುತ್ತ ಭರಮ್ಯ ನೋಡುತ್ತಿರಲು ಅದು “ವಡೀ ಅಂದ್ರ ಯಿಂಗ ವಡ್ಯೋದ್ಯೇನೋ… ನಿನ ಕಾಲು ಸ್ಯೇದ್ಯೋಗ ಕಾಲಾಗ ವುಳಾ ಬೀಳಾ… ಅಯ್ಯೋ ನನ ಸ್ವಸೀಗೆ ವಟ್ಟೆಗೆಲ್ಲಿ ವಡ್ತ ಬಿತ್ತೋ ಸಿವ್ನೆ” ಎಂದಾತುರದಿಂದ ನೆಲದ ಮೇಲೆ ಬಕ ಬೋರಲು ಬಿದ್ದು ಉರುಳಾಡುತ್ತಿದ್ದ ಸೊಸೆ ಕಡೆ ಅಬಡಾ ದಬಡಾ ಓಡಿತು. ನಾಗವ್ವ ಮುದುಕಿಯ ಸ್ವರ್ಶ ಕೊಸರಿ ದೂರ ಸರಿದಳು. “ವಡ್ಸೋದು ವಡ್ಸಿ ರಮುಸೋಕೆ ಬಂದೀಯ್ಯೇನಬೇ ನಿಂದೇನು ನಂಗೆ ಬ್ಯಾಡ ಓಗು… ವಡೀಲಿ ಅದ್ಯೆಸ್ಟು ವಡಿತೀಯೋ… ಪಿರಾಣ ಓಗಾಮಟಾ ವಡೀ…. ಯೀ ತಳಾರ್‍ಗೆ ಅನುಮಂತಪ್ಪ ಮೊಗ್ಳು ವಡ್ತಕ್ಕೆ ಯದ್ರಲ್ಲ… ತಿಳೀತ…” “ಅಯ್ಯೋ ಒದ್ದುಬಿಟ್ಟೆನಲ್ಲಾ” ಎಂದು ಕೈಯಿ ಕೈಯಿ ಹಿಚುಗಿಕೊಳ್ಳುತ್ತಿದ್ದ ಗಂಡನೆದುರು ಸಿಡಿದು ನಿಂತಳು. ಥಾಳಿ ಕಟ್ಟಿಸ್ಕೊಂಡೋಳ್ಗಿಂತ ಹಡ್ದೊಳೆ ಯಚ್ಚಾದ್ಳಾ ನಿಂಗೆ… ವಡ್ಯೋದಲ್ಲ… ಇಸಾಕ್ವಡು ಕುಡಿತೀನಿ” ಗಂಡನ ಕೊರಳಿಗೆ ತೋಳು ಹಾಕಿ ಮೇಲೆ ಎಳೆದುಕೊಂಡು ಜಗ್ಗಾಡಿದಳು. ಇಸಪೀಟು ಕಿಲಬ್ಬಿನಲ್ಲಿ ಬರೀ ಗಿಂಗಲ್ಲು ಚಾ… ಚೂರು ಪಾರು ಖಾರಸೇವು ಜಮುಡೇ ಜೀವ ಹಿಡಿದುಕೊಂಡಿದ್ದ ಭರಮ್ಯ ಆ ಎಳೆದಾಟಕ್ಕೆ ದುಬುಕ್ಕನೆ ಬಿದ್ದನು. ಗಂಡನ ಮೇಲೆ ಹೆಂಡತಿಯೋ, ಹೆಂಡತಿಯ ಮೇಲೆ ಗಂಡನೋ, ಮಗ ಸೊಸೆಯರ ಪರಸ್ಪರ ಈ ತೆರನ ಎಳೆದಾಟ ಮುದುಕಿಯ ಕಣ್ಣಿಗೆ ಹಬ್ಬವನ್ನುಂಟು ಮಾಡಿತು. “ಮೈಲಾರಲಿಂಗಾ ನನ್ಮೊಗಾ ಸ್ವಸೀನ ಸಾಯೋಗಂಟಾಯಿಂಗೇ ಯಿಟ್ಟಿರು” ಅಂತ ಮುದುಕಿ ಬೇಡಿಕೊಳ್ಳುತ್ತಿರುವಾಗ್ಗೆ ಎಳೆದಾಟ ಉರುಳಾಟದಲ್ಲಿದ್ದ ನಾಗವ್ವ ತೆಳೂಪೆಂದರೆ ತೆಳೂಪಿರುವ ಗಂಡನ ಶರೀರದ ಮೇಲೆ ದಷ್ಟಪುಷ್ಟವಾಗಿರುವ ತಾನು ಕೂತರೆ ಜನರೂ, ಅಂತರಾತ್ಮವೂ ಮೆಚ್ಚದೆಂದು ತಾನೇ ಅಡಿಯಾಗಿ” ನನ್ನ ಸಾಯಿಸೋ… ನನ್ ಕುತ್ತಿಗೆ ಯಿಚ್ಗೋ” ಎಂದು ವೀರಾವೇಶದಿಂದ ಕ್ಷೀಣ ಸ್ವರ ತೆಗೆದಳು.
uಟಿಜeಜಿiಟಿeಜ
ಕೇರಿಗೆ ಯಜಮಾನನೆಂಬುದು ಯಾವ ಕಾರಣಕ್ಕೆಂದರೆ ಕಣುಕುಪ್ಪಿ ಗುರುಬಸ್ವಿಯನ್ನು ಲಗಾಯ್ತು ಇಟ್ಟುಕೊಂಡಿರುವ ಚೆನ್ನೀರನು ಇದೇ ಛಾನ್ಸು ಎಂದು ಮುನ್ನುಗಿದನು. ಕೇರಿಯ ಗಂಡ ಹೆಂಡಿರ ಜಗಳವನ್ನು ಬಿಡಿಸುವುದರಲ್ಲಿ ನಿಷ್ಣಾತನಾಗಿರುವ ಆತನು “ಯ್ಯೋನಬೇ ನಾಗವ್ವ ಬುದ್ದಿಯಲ್ಲಿಟ್ಟಿದ್ದೀ” ಎಂದು ಆಕೆ ತುಂಬುದೋಳಿಗೆ ಕೈಯನ್ನು ಭದ್ರವಾಗಿ ಹಚ್ಚಿದನು. “ಮಾಡ್ಕೆಂಡ ಗಂಡ ಯೆಂಥೋನೆ ಆಗಿರ್‍ಲಿ, …. ಅವ್ನು ದೇವ್ರಿಗೆ ಸಮಾನ, … ಅಂದ್ರ ಅನ್ನಿಸ್ಗೋ ಬೇಕು. ವದ್ರೆ ವದಿಸ್ಗೋ ಬ್ಯೇಕು. ಅದು ಬುಟ್ಟು ಯಿಂಗಾ ಮಾಡೋದು ಕ್ಯೇರಿ ಜನ್ಕೆ ಯದ್ರೋದು ಬ್ಯಾಡ ಬುಡು, ನಿಂ ಮನಸಿಗೆ ನೀವು ಯದ್ರೋದು ಬ್ಯಾಡೇನು… ಹ್ಹ್” ಸೆರಗಿರದೆ ಹಾಲುಕ್ಕಿ ಒದ್ದೆಯಾಗಿ ಪುಟದಿಳಿಬಿದ್ದಿದ್ದ ಮೊಲೆ ಕಡೇ ನಿಗಾ ಇಟ್ಟು ಬುದ್ಧೀವಾದ ಹೇಳಿ ಪಟ್ಟು ಸಡಿಲಿಸಿ ಜಲಜಲ ಬೆವತ ಚೆನ್ನೀರನು ಭರಮ್ಯಾಗೆ ತುಂಬ ಬೇಕಾದೋನು. ಕೇಳಿದಾಗ ಇಲ್ಲೆನ್ನದೆ ಎಂಟಾಣೆ ರೂಪೈ ಕೊಡುತ್ತಿದ್ದ ಚೆನ್ನೀರನಿಂದ ನಾಡಿದ್ದು ಬಿಕ್ಕಿ ಮರಡಿ ಜಾತ್ರೆಗೆ ಐದಾದರು ಪಡೆಯಬಹುದೆಂದು ತಮ್ಮವ್ವನ ಮಗ್ಗುಲು ನಿಂತಿದ್ದ ಭರಮ್ಯ ಲೆಕ್ಕ ಹಾಕುತ್ತಿದ್ದನು.

ರೆಟ್ಟೆ ಮುರಿದು ಕುಟುಂಬವನ್ನೇ ಸಲಹುತ್ತಿದ್ದ ನಾಗವ್ವಗೆ ಚೆನ್ನೀರನೆಂಥೋನೆಂಬುದು ಗೊತ್ತು… ಅದಕ್ಕೆ ಅವಳಿದ್ದು “ಓಗಲೋ ಓಗು… ನೀನ್ಯಾವೂರ ರಾಜ ಬುದ್ದಿ ಯ್ಯೋಳಾಕೆ… ನಾವು ಗಂಡಯೆಂಡ್ರು. ಯೀಗ ಜಗ್ಳ ಆಡ್ತೀವಿ… ಯಿನ್ನೊಂದು ಚಾವತ್ತಿಗೆ ವಂದಾಕ್ಕೀವಿ…” ಎಂದು ದಭಾಯಿಸಿದ್ದನ್ನು ಅಚ್ಚವ್ವನ ಮನಿ ಮ್ಯಾಳಿಗೆ ಮೇಲೆ ನಿಂತಿದ್ದ ಗುರುಬಸ್ವಿ ಕೇಳಿಸಿಕೊಂಡವಳೆ ಎಲಾ ಎಂದು ಕನಲಿದಳು. ಮೊದಲೆ ತನ್ನ ಐಬು ಎಡಗಾಲಿಗೆ ಹರುಕು ಸೀರೆ ತೊಡರಿ ಬಿದ್ದೆದ್ದು ಬಿರುಗಾಳಿಯಂತೆ ಸುಯ್ಯನೆ ಬಂದಳು. “ಯ್ಯೋನೇ ಭೋಸುಡಿ….. ನನ ಗಂಡಗೆ ಲೇಂತ… ಲೇ…. ಅಂತಾಡ್ತೀಯಾ….” ಎಂದು ಸೆಡ್ಡೊಡೆದು ನಿಂತಳು. ಕೆಂಪು ತೊಡೆ ತಟ್ಟಿದ್ದು ಮಾತ್ರಕ್ಕೆ ಹೆದರುವ ಪೈಕಿಯಾಗಿರಲಿಲ್ಲ ನಾಗವ್ವ….. ಸಜ್ಜನಳ ಪೈಕಿ ಸಜ್ಜನಳಾಗಿದ್ದ ಆಕೆಗೆ ಕೇರಿಯ ಯಾರ ಹಳ್ಳಗಳಲ್ಲಿ ಎಷ್ಟೆಷ್ಟು ನೀರಿದೆ ಎಂದು ಗೊತ್ತು. “ಹ್ಹಾ ಹ್ಹಾ… ಹ್ಹ… ಬೊಂದು ಬುಟ್ಳು ಆದ್ರಗಿತ್ತಿ… ತಾಳಿ ಕಟ್ಟಿದ ಗಂಡಾಗಿದ್ರೆ ಯಿನ್ನು ಯೇಟು ಅಂತಿದ್ಳೋ…” ಚದುರಿದ್ದ ಮುಡಿ ತುರುಬು ಬಿಗಿದು ಹೇಳಿದಳು “ಬ್ಯಾರ್‍ಯೋರ ಯೆಂಡ್ರು ಮೈಯಿ ಕೈಯಿ ಮುಟ್ಟಿ ಪಂಚಾತಿ ಯ್ಯೋಳಾಕೆ ಬರಾದಾ ನಿನ್ನೆಜುಮಾನ. ಮರುವಾದಿಯಿದ್ರೆ ಯೀಗೀಂದೀಗ್ಲೇ ಕರ್‍ಕಂಡು ವಂಡು” ತನ್ನ ಜಗಳಗಂಟಿ ಮುದುಕಿಯೇ ಸೈ ಅನ್ನುವಂತೆ ನಾಗವ್ವ ನುಡಿದಳು. ಅರ್ಜುನಗೂ ಆಕೆಯ ಮಾತು ಸೈ ಅನ್ನಿಸಿ ಕುಂಯ್ ಅಂತ ಆಕೆಯ ಕಾಲ ಮೀನಖಂಡಕ್ಕೆ ತನ್ನ ಮೈ ತಿಕ್ಕಿ ಸುಳಿಯಿತು.

ಬೀಸಿದ ಗಾಳಿಗೆ ಬೇವನಮರ ಹೊಯ್ದಾಡುತ್ತಿದ್ದಾಗ ಗುರಬಸ್ವಿ ಚೆನ್ನೀರನ ರೆಟ್ಟೆ ಹಿಡಿದು “ನಿಂಗೆ ಯೇಟು ಯ್ಯೋಳಿದ್ರೂ ಬುದ್ಧಿ ಬರ್‍ಲಿಲ್ಲ…” ಎಂದು ಜಗ್ಗಿದಳು. “ಲೇ ಲವುಡಿ-ಔದಲೇ ನಾನಿವನ್ನ ಯಿಟ್ಕಂಡೀನಿ… ಅದ್ನೇನ್ಯೋಳ್ತಿ ಬೋಳು ಬದ್ನೆಕಾಯಿ ತುಂಬು. ನಿನ್ನಣೇಲಿರೋ ಕುಂಕ್ಮ ನಿಂಗೇ ಸಾಸ್ವತ ಅಲ್ಲ – ನನ್ನಂಗೆ ನಿನ್ಗೂ ಗತಿ ಬರ್‍ಲೀ ತಿಳೀತತೆ-ಹ್ಹಾಂ ಅಹ್… ಅಯ್ಯೋ ನನ ಕರುಮವೇ. ನನ್ನ ಮಿಂಡ್ರುಗಳ್ಳಿ ಅಂದ್ಳಲ್ಲಪೋ…. ನನ್ನಿಟುಗೊಂಡಾನಾ ಸೀರೆ ಬಿಚ್ಚಿ ವದ್ಯೋನಾಗಿದ್ರೆ ಯಿಂಗಂತಿದ್ಯಾಽ.” ಕಣ್ಣು ಮೂಗಿಂದ ಧಾರಾಕಾರವಾಗಿ ಹರಿಯ ತೊಡಗಿದ ನೀರನ್ನು ಎಡಗೈಲೂ ಬಲಗೈಲೂ ಸುತ್ತಾನ್ನಾಕಡೆ ಶಾಪಗ್ರಸ್ತವಾಗಿ ಸಿಂಪಡಿಸುತ್ತ ಅಬ್ಬರಿಸಿದಳು.

ಬಂಜೆಯೂ ವಿಧವೆಯೂ ಆದ ಗುರುಬಸವಿ ತುಂಬಿದ ಮನೆಯಲ್ಲಿ ಅತ್ತರೆ ಒಳ್ಳೆಯದಾಗುವುದಿಲ್ಲವೆಂಬ ಉದ್ದೇಶದಿಂದ ಮುದುಕಿ ತನ್ನ ರುಗ್ಣಶಯ್ಯೆಯಿಂದ ಮೇಲೆದ್ದು “ಲ್ಯೇ ಗುರುಬೊಸ್ವಿ…. ನನ್ ಸ್ವಸೀ ಸಿಟ್ನಾಗ ಯ್ಯೋನ ಅಂದ್ಲು. ಸುಧಾರಿಸಗ್ಯಾ…” ಎಂದು ರಮಿಸುತ್ತ ಬಂದಿತು. ಊರಮ್ಮ ದೇವತೆಯ ಶಾಪದಿಂದ ತಾನು ಬಸುರಿಯಾಗದಿದ್ದಾಗ ಸುಂಕುಲಮ್ಮ ದೇವತೆಯ ಶಾಪದಿಂದ ತನ್ನ ಗಂಡ ಗೋಯಿಂದನು ವಿಚಿತ್ರ ರೋಗಕ್ಕೆ ಸತ್ತಾಗ ಮತ್ತು ಬಳ್ಳಾರಿ ಸೆಂಟ್ರಲು ಜೇಲಿನಲ್ಲಿ ಮೂರು ತಿಂಗಳು ಶಿಕ್ಷೆ ಅನುಭವಿಸಿ ಬಂದಿದ್ದ ಚೆನ್ನೀರನನ್ನು ತಾನು ಪರಮೆಂಟಾಗಿ ಯಿಟುಗೊಂಡಾಗ ತನಗೆ ಸಪೋರ್ಟೆಂದರ ಸಪೋರ್ಟು ನೀಡಿದ ಪುಣ್ಯಾತ್ಗಿತ್ತಿ ಸೆವುಡವ್ವನ ಮಾತಿಗೆ ಬೆಲೆ ಕೊಡದೆ ಇರಲಾಗಲಿಲ್ಲ ಗುರುಬಸವಿಗೆ. ಅಲ್ಲದೆ ಮಂಗ್ನಳ್ಳಿ ಸೆಂಬಯ್ಯ ಸಾಸ್ತ್ರಿಗಳು “ನೋಡವ್ವಾ ಈ ವರ್ಸ ಗ್ರಹಗತಿಗಳು ನಿಂಗೆ ದೂರಾಗ್ಯಾವ…. ಉಗಾದಿ ಅಮಾಸಿ ಕಳ್ಯೋಮಟ ಯಾರ್ ವದ್ರೂ ವದಿಸಿಗ್ಯಾ…. ಯಾರ್ ಬೈಯ್ದರೂ ಬೈಸಿಗ್ಯಾ…. ನೀನೊಂದುಲ್ಲು ಕಡ್ಡಿಯಿಡ್ಕಂಡ್ರೂ ಅದು ನಾಗ್ರಾವಾಗಿ ಬುಸ್ ಅಂತ ಕಚ್ಲಾಕ ಬರ್‍ತದೆ…. ತಿಳಿತಾ” ಎಂದು ಹೇಳಿದ್ದು ನೆನಪಾಗಿ ಸಿಟ್ಟನ್ನು ಗಂಟಲಿಂದ ಹೊಟ್ಟೆಗಿಳಿಸಿದಳು. ಚೆನ್ನೀರನ ಕೈ ಹಿಡಿದು ಎಳೆಯುತ್ತ “ಬಾರೋ ಬಾ. ಅಮಾಸಿ ಕಳೀಲಿ ಯೀಗ್ಯಾಕ ಆ ಮಾತು” ಎಂದು ಕರೆದುಕೊಂಡು ಬಾಕುಲು ದಾಟಿ ಹೋದಳು. ಜಗಳದ ವಿಷಯದಲ್ಲಿ ಮಾತ್ರ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕಿಡದ ಸರ್ದಾರಿ ಎಂದು ಕ್ಯೇರಿ ಆದ್ಯಂತ ಹೆಸರಾಗಿದ್ದ ಗುರುಬಸವಿ ನಾಲಗೆಯಿಂದ ಬ್ರಹ್ಮಾಸ್ತ್ರ ಪ್ರಯೋಗಿಸದೆ ಮಿಂಡನೊಡನೆ ಹೋದದ್ದರಿಂದ ಸಾಂಬ, ಅಪಾರಿ, ಡೋಮ, ಎಂಕಟಿ ಇವೇ ಮೊದಲಾದ ಪ್ರೇಕ್ಷಕರಿಗೆ ತುಂಬ ನಿರಾಶೆಯಾಯಿತು. ಕೆಲವು ಚಣ ಕವಿದ ಮೌನದಲ್ಲಿ ಅವರೆಲ್ಲ ಪರಸ್ಪರ ಮುಖ ನೋಡಿಕೊಂಡರು.

ಸಣ್ಣಪುಟ್ಟ ಗೊಣಗಾಟ ಬಿಟ್ಟರೆ ರಂಪಾಟಕ್ಕೆ ಆಸ್ಪದ ಕೊಡುವಂಥ ಮತ್ತೊಂದು ಮಾತನ್ನು ಆಡಲು ಮುದುಕಿಯಾಗಲೀ, ನಾಗವ್ವನಾಗಲೀ ತಯಾರಿರಲಿಲ್ಲ. ಗಂಟೆಗಟ್ಟಲೆ ನಿರ್ವಿರಾಮ ಜಗಳಕ್ಕೆ ಖರ್ಚಾಗಿದ್ದ ಶಕ್ತಿಯನ್ನು ಮತ್ತೆ ಪಡೆಯಲು ಏನು ಮಾಡಬೇಕೆಂದು ತೋಚದೆ ಅವರೆಲ್ಲ ಕೇವಲ ದೀರ್ಘ ಉಸಿರಾಟಕ್ಕೆ ತೊಡಗಿದ್ದರು.

ಇಷ್ಟು ಸುಲಭವಾಗಿ ಜಗಳ ಬಗೆಹರಿಯಬಹುದೆಂದು ಕನಸಲ್ಲೂ ಊಹಿಸಿರದಿದ್ದ ಭರಮ್ಯ ದೇವರ ದೊಡ್ಡಸ್ತಿಕೆಯನ್ನು ತನಗರಿವಿದಲ್ಲದಂತೆ ಕೊಂಡಾಡುತ್ತಾ ಕಿವಿ ಸಂಧಿಯಲ್ಲಿದ್ದ ಸಿಗರೇಟಿನ ತುಂಡು ಬೆವರಿಗೆ ತೋಯ್ದು ಚಪ್ಪಟೆಯಾಗಿರುವುದನ್ನು ಖಚಿತಪಡಿಸಿಕೊಂಡು ಎದೆಯ ಬಿಸಿಗೆ ಒಣಗಬಹುದೆಂಬ ಖಾತರಿಯಿಂದ ಜೇಬಿನಲ್ಲಿರಿಸಿದನು.

ನಿಡಿದಾಗಿ ಉಸಿರಾಟದ ರೀತಿಗೆ ಕೆಮ್ಮು ವಕ್ಕರಿಸುತ್ತಲೆ ಮುದುಕಿ ಕ್ವಕ್ ಕ್ವಕ್ ಕೆಮ್ಮುತ್ತ ಗಂಟಲಲ್ಲಿದ್ದ ಕಫವನ್ನು ಒಮ್ಮೆಗೆ ಬಾಯಿಗೆ ತಂದುಕೊಂಡು ಅದನ್ನು ಉಗುಳಲಿಕ್ಕಿದ್ದ ಚಿಪ್ಪು ಕಾಣದಾದಾಗ ಮೂಕ ಅಭಿನಯಕ್ಕೆ ತೊಡಗಿ ನೋಡುವವರಿಗೆ ಉತ್ತಮ ಮನರಂಜನೆಯನ್ನು ಒದಗಿಸಿದಳು.

ಗಂಡನ ಮೇಲಿನ ಸಿಟ್ಟನ್ನು ಗುರುಬಸವಿಯ ಮೇಲೆ ತೀರಿಸಿಕೊಳ್ಳಬೇಕೆಂದಿದ್ದಾಗ ಆಕಿ ತಮ್ಮನ್ನೆಲ್ಲ ಉದಾರವಾಗಿ ಕ್ಷಮಿಸಿ ಹೊರಟುಹೋಗಿದ್ದರಿಂದ ತನಗೆ ಅವಮಾನವಾಯಿತೆಂದು ಭಾವಿಸಿದ ನಾಗವ್ವ ನಾಗರದಂತೆ ಬುಸುಗುಟ್ಟಿದಳು. “ವತ್ತುಟ್ಟೋದ್ರೊಳಗಾಗಿ ಕನ್ನೀರವ್ವನ ಬಾವಿಗ್ಬೀಳ್ಲಿಲ್ಲ ನಾನು ತಳಾರ್‍ಗೆ ಅನುಮಂತಪ್ನ ಮೊಗ್ಳೆ ಅಲ್ಲಽಽ” ಎಂದಾಕೆ ಶಪಥ ಮಾಡಿದೇಟಿಗೆ ಮರ ಬಲವಾಗಿ ಮಿಸುಕಾಡಿ ಕೂತಿದ್ದ ಕಾಗೆಯನ್ನು ಝಾಡಿಸಿ ಮುಗಿಲಿಗೆ ತಳ್ಳಿತು. ಮಾಳಿಗೆ ಇಲ್ಲದ ಮನೆಯ ಮೇಲೆ ಕಾಗೆ ಪ್ರದಕ್ಷಿಣೆ ಹಾಕುತ್ತ ಬಿತ್ತತೊಡಗಿದ ಕಾಽಽ ಕಾಽಽ ಸ್ವರಕ್ಕೆ ಬೆಚ್ಚಿಬಿದ್ದೋ; ತನ್ನ ಮುಖ ಭಾಗವನ್ನು ಬೆಕ್ಕೂ ತಿಕಭಾಗವನ್ನೂ ಅರ್ಜುನನೂ ಗುತ್ತಿಗೆ ಹಿಡಿದು ಪುರುಸೊತ್ತಿಲ್ಲದೆ ನೆಕ್ಕುತ್ತಿದ್ದುದಕ್ಕೆ ಬೇಸರದಿಂದಲೋ ಹೋಽಽ ಅಂತ ಅಳುತ್ತಿದ್ದ ಕಂದಯ್ಯನ ಕಡೆ ಸುರ್ರಂತ ನುಗ್ಗಿ “ನನ್ವಟ್ಯಾಗ ವುಟ್ಟಿದ್ಕೆ ಅನುಭವ್ಸುಽಽ. ಮುಂಜಾನಿಂದ ಒಂದ್ತೊಟ್ಟು ಆಲುಕಾಣ….. ದರಿದ್ರದ್ದು…..” ಎಂದು ಸಿಟ್ಟಿನಿಂದಲೋ ಪ್ರೀತಿಯಿಂದಲೋ ಗೊಣಗುತ್ತ ಎತ್ತಿಕೊಂಡು ಜಿನುಗುತ್ತಿದ್ದ ಮೊಲೆಗೆ ಹಾಕ್ಕೊಂಡಳು. ಹಸಿದಿದ್ದ ಕಂದಯ್ಯ ಅಡಬುರಸಿ ಮೊಲೆ ಜವಡುತ್ತಿದ್ದ ಸೊಗಸಿಗೆ ಮೈ ಎಂಭೋ ಮೈ ರೋಮಾಂಚನದ ಸೆಳವಿಗೆ ಸಿಲುಕಿದಾಗ ಒಂದು ಕ್ಷಣ ಕಣ್ಣು ಮುಚ್ಚಿ ಸುಖದ ಉತ್ತುಂಗಕ್ಕೇರಿದಳು. ತಾನೂ ತನ್ನ ಕಂದಯ್ಯನೂ ನೆಲದಾಳಕ್ಕೆ ಬೇರುಚಾಚಿ ಚಕಪಕ ಚಿಗಿತು ಬಯಲ ತುಂಬ ಕೊಂಬೆಗಳ ಹರಡಿ ಎಲೆ ಹೂವು; ಈಚೂ; ಕಾಯೀ; ಹಣ್ಣೂ ಬಿಟ್ಟು ಸುವಾಸನೆ ಹರಡಿದಂತೆಯೂ ತಮ್ಮ ಮೇಲೆ ಕಾಗೆ, ಗುಬ್ಬಿ, ಗಿಳಿ, ಗೊರವಂಕ, ಇವೇ ಮೊದಲಾದ ನೂರೆಂಟು ನಮೂನೆ ಪಕ್ಷಿಗಳು, ಎಲೆಗೊಂದರಂತೆ ಗೂಡು ಕಟ್ಟಿ ಮೊಟ್ಟೆ ಇಟ್ಟಂತೆಯೂ; ಭರಮ್ಯ ಚೆನ್ನೀರ, ಸಾಂಬ, ಗೌಡ ಇವೇ ಮೊದಲಾದ ಮಾನವರು ಭಲ್ಲೆ ಭರ್ಚಿ; ಗಂಡರಗೊಡಲಿ; ಕುಡುಗೋಲು ಇವೇ ಮೊದಲಾದ ನೂರೆಂಟು ನಮೂನೆಯ ಮಾರಕಾಯುಧಗಳನ್ನು ಹಿಡಿದುಕೊಂಡು ತಮ್ಮ ಬುಡ ಸುತ್ತವರಿದು ನಿಂತು ಕೇಕೆ ಹಾಕಿದಂತೆಯೂ ಅವರು ಹಾಕುತ್ತಿದ್ದ ಒಂದೊಂದು ಏಟುಗಳಿಗೆ ಹಸಿರು ಬಣ್ಣದ ರಕ್ತ ಚೆಲ್ಲೆಂದು ಹರಿಯುತ್ತಿದ್ದು ಕ್ರಮೇಣ ಪ್ರವಾಹದಂತೆ; ಪಕ್ಷಿಗಳು ಕೋಪಗೊಂಡು ತಮ್ಮ ಚೂಪನೆಯ ಕೊಕ್ಕುಗಳಿಂದ ಮಾನ್ನವರ ಕಣ್ಣುಗಳನ್ನು ಕುಕ್ಕಲು, ಅವರೆಲ್ಲ ಕುರುಡಾಗಿ ಹಸಿರೊಳಗೆ ಜಳಕ ಮಾಡಿ ಕಣ್ಣುಳ್ಳವರಿಗೆ ಹಬ್ಬವನ್ನುಂಟು ಮಾಡಿದಂತೆ ವಿಚಿತ್ರವಾದ ಕನಸೊಂದನ್ನು ಆ ಕ್ಷಣವೊಂದರಲ್ಲಿ ಕಂಡು ಬೆಚ್ಚಿ ಬಿದ್ದು ಕಣ್ಣು ತೆರೆದು ಅದೇ ವಾಸ್ತವವನ್ನು ಕಂಡಳು.

ಯಲ್ಲಿಂದಲೋ ಬೆಂಕಿ ಸಂಪಾದಿಸಿಕೊಂಡು ಎರಡು ದಮ್ಮಿಗೆ ಕ್ವರೆ ಸಿಕರೇಟು ಸುಟ್ಟು ಬಿಸಾಕಿದ ಭರಮ್ಯ ಕಷ್ಟಪಟ್ಟು ಜಠರ, ಸಣ್ಣಕರುಳು, ದೊಡ್ಡ ಕರುಳು ಮುಂತಾದ ಸಂದಿಗೊಂದಿ ತುಂಬಿ ಅದುಮಿಡಿದಿದ್ದ ಹೊಗೆ ಅದಾವ ಮಾಯದಿಂದಲೋ ಮೂಗು ಬಾಯಿ ಕಿಂಡಿಗಳ ಮೂಲಕ ಎಳೆ‌ಎಳೆಯಾಗಿ ಹೊರ ಹಾದು ಅಖಿಲಾಂಡಕೋಟಿ ಬ್ರಹ್ಮಾಂಡದಲ್ಲಿ ಲೀನವಾಗುತ್ತಿತ್ತು. ಲೀನವಾಗುವ ಸೌಂದರ್ಯಕ್ಕೆ ಬೆರಗಾಗಿದ್ದರೂ ಭರಮ್ಯ ಬಳ್ಳಾರಿ ಪ್ಯಾಟಿಗೆ ಹೋಗಿ ಪಾತ್ರದ ಕೆಂಚವ್ವನ ಲಾರಿಯಲ್ಲಿ ಕಿಲೀನರನ ಕೆಲಸಕ್ಕೆ ಸೇರಿ ಪ್ರತಿ ತಿಂಗಳು ಇನ್ನೂರು ಮುನ್ನೂರು ಎಣಿಸಿ ಕೊಳ್ಳುವ ಪಿಲಾನು ಹಾಕುತ್ತಿದ್ದ, ಲಾರಿ ಎಂಬುದು ಅವನು ಚಿಕ್ಕಂದಿನಿಂದಲು ಯೋಚಿಸುತ್ತಿದ್ದ ಅದ್ಭುತ ವಾಹನ. ಅಕ್ಷರಗಳನ್ನು ಬರೆಯುವ ಬದಲು ಸೆಲೇಟಿನಲ್ಲಿ ಸೊಟ್ಟಗೆರೆಗಳಿಂದ ಒಂದು ಎಂಥಾದೋ ಚಿತ್ರ ಬರೆದು ಅದನ್ನು ಗೆಳೆಯರಿಗೂ ಮೈಲಿ ಮುಖದ ಮೇಸ್ಟ್ರಿಗೂ ಲಾರಿ ಎಂದು ವಿವರಿಸಿ ಒಪ್ಪಿಸುತ್ತಿದ್ದ. ಮೆಳ್ಳೆಗಣ್ಣಿನ ಮೇಸ್ಟ್ರಿಗಂತೂ ಅದು ಲಂಕಾದಹನ ನಾಟಕದ ಪುಪ್ಷಕವಿಮಾನದಂತೆ ಕಂಡಿತ್ತು. ಆದ್ದರಿಂದ ಅವರು “ಲೋ ಭರಮ್ಯಾ ಮುಂದೆ ನಿಂಗೆ ಲಾರಿ ಡ್ರೈಯವರ್ರಾಗೋ ಯೋಗ ಐತಲೋ” ಭವಿಷ್ಯ ನುಡಿದಿದ್ದರು.
uಟಿಜeಜಿiಟಿeಜ
ಆರನೇ ಕಿಲಾಸಿನ ಮಾತು.

ಕರಿಯಪ್ಪ ಮೇಸ್ಟ್ರು “ಲ್ರೇ ಮುಂದೆ ಯೇನೇನಾಕೀರಲೇ!” ಎಂದು ಕೇಳಿದ್ದಕ್ಕೆ ಒಬ್ಬೊಬ್ಬರು ಸಾ ನಾನಿಂಜೀನಿಯರಾಕೀನಿ…. ಸಾ ಡಾಟ್ರಾತೀನಿ…. ಸಾ ನಾ ವಕೀಲಾಕೀನಿ ಎಂದು ಉತ್ತರಿಸಿ ಸಂತೋಷವನ್ನುಂಟು ಮಾಡಿದರು. ಆದರೆ ಭರಮ್ಯ ‘ಸಾ ನಾ ಲಾರೀ ಡ್ರಯವರಾಕೀನಿ’ ಎಂದು ಹೇಳಿ ಕಿಲಾಸೆಂಭೋ ಕಿಲಾಸನ್ನು ನಗೆಯ ವಕ್ರಾಣಿಯಲ್ಲಿ ನೂಕಿದ್ದನು. ಆದರೆ ಕರಿಯಪ್ಪ ಮೇಸ್ಟ್ರು ಕೋಪದಿಂದ ಕಿಡಿಕಿಡಿಯಾಗಿದ್ದರು. ಕಿಲಾಸಿನಲ್ಲಿ ಜಾಣ ವಿದ್ಯಾರ್ಥಿಯಾದ ಭರಮ್ಯ ಲಾರಿ ಡ್ರಯವರಾಗುವುದೆಂದರೇನು!

“ಲಾರಿ ಡ್ರಯವರಾಕೀನಿ ಅಂದದ್ದು ತಪ್ಪಾತು ಸಾರ್ ಮುಂದೆ ನಾನಿಂಜಿನೀಯರ್ರಾಕ್ತೀನಿ ಎಂದು ಬೊಗಳ್ತೀಯೋ ಇಲ್ಲಾ ಕೈಕಾಲು ಮುರೀಲೋ” ಎಂದು ಕರಿಯಪ್ಪ ಮಾಸ್ಟರು ಲೆಕ್ಕಿ ಜುಳ್ಳಿ ಝಳಪಿಸಿದ್ದರು. ಅವರು ಎಷ್ಟು ಕೇಳಿದರೂ ಎಷ್ಟೇ ಹೊಡೆದರೂ ಭೂಪತಿಕರ್‍ಣನಾದ ಭರಮ್ಯನು ಆಡಿದ ಮಾತನ್ನು ವಾಪಸ್ಸು ತಕ್ಕೊಳ್ಳಲಿಲ್ಲ…. ಮೂರು ತಿಂಗಳುಗಳಿಂದ ಸಂಬಳ ಬಾರದ ಸಿಟ್ಟನ್ನೂ ಸದ್ಯದ ಸಿಟ್ಟಿಗೆ ಮಿಕ್ಸು ಮಾಡಿ ಅವನ ಕಪ್ಪು ಬಣ್ಣದ ಎಳೇ ದೇಹದ ಮೇಲೆ ರೇಖಾಗಣಿತದ ರೀತಿಯಲ್ಲಿ ಅನೇಕ ಬಾಸುಂಡೆಗಳನ್ನು ಎಳೆದೂ ಎಳೆದೂ ಮೇಸ್ಟ್ರು ಸುಸ್ತಾದರೇ ಹೊರತು ಭರಮ್ಯನ ಬಾಯಿಂದ ಕನಿಷ್ಠ ಪಕ್ಷ ಡಾಟ್ರಾತೀನಿ ಎಂದಾದರೂ ಅನ್ನಿಸಲಾಗಲಿಲ್ಲ.

ಬಾಲಕನಾದ ಭರಮ್ಯಾನು ಹೋ ಎಂದಳುತ್ತ ಗೌಡರ ಹಟ್ಟಿಯಲ್ಲಿ ಸೆಗಣಿ ಬಳಿಯುತ್ತಿದ್ದ ತನ್ನ ಪಿತೃಶ್ರೀ ಸೇಸನಿಗೆ ಅಂಗಿ ಚೊಣ್ಣಾಲ ಬಿಚ್ಚಿ ಬಾಸುಂಡೆಗಳನ್ನು ತೋರಿಸಿ ಅತ್ತನು. ‘ನಂಜಾತ್ಯೋನಾಗಿದ್ರವ್ನು ನನ್ಮಗನ್ನಿಂಗ್ವಡೀತಿದ್ನಾ’ ಎಂದು ಸೇಸನಿಗೆ ಸಿಟ್ಟು ಬಂತು. ಇನ್ನೇನು ಮೇಸ್ಟರ ಕೊರಳಪಟ್ಟಿ ಹಿಡಿದು ನಾಲ್ಕು ಝಾಡಿಸಿಯೇ ಬಿಡುವವನಂತೆ ಹೋದ ಸೇಸಿ, ಟೋಜರು ಬುಸ್‌ಸರಟು ತೊಟ್ಟು ಲಕಲಕ ಹೊಳೀತಿದ್ದ ಕರಿಯಪ್ಪ ಮೇಸ್ಟರನ್ನು ಕಾಣುತ್ತಲೇ ದೀನರ ಪೈಕಿ ದೀನನಾಗಿ ಮೈಯ ಇಸ್ಟೇ ಮಾಡಿಕೊಂಡು “ಸಾರೂ ನನ್ಮಗ ಬರಮ್ಯಾನ ದನಕ್ವಡದಾಂಗೆ ವಡ್ದೀರಿ…. ಮಗಾ ಸಾಲೀ ವಲ್ಲೆಂತೈತಿ… ಅದು ಮಾಡೋ ತೆಪ್ನ ವಟ್ಟಿಗೆ ಆಕ್ಕೆಂಡು ಯಿದ್ಯೆ ಕಲಿಸ್ರೀ ಸಾರೂ” ಎಂದು ಕಣ್ಣು ತುಂಬಿಕೊಂಡು ಕೇಳಿದ್ದನು.

ಅದರಿಂದ ಮೇಸ್ಟ್ರ ಕರುಳೇ ಚುರುಕ್ಕಂತು. ಅವರು ಮೆಳ್ಳೆಗಣ್ಣು ಮೇಸ್ಟ್ರಿಗೂ ತಮಗೂ ಆಗದ ಸಂಗತಿಯಿಂದ ಹಿಡಿದು ಇಂದಿನವರೆಗೆ ವಿವರಿಸಿ ಹೇಳಿದ ಮೇಲೆ ಸೇಸಿಗೆ ಭ್ರಮನಿರಸನವಾಯಿತು. ಮಗ ದೊಡ್ಡಾಪೀಸರ್ರಾಗಬೇಕೆಂದೇ ಆತ ಸಾಲೆಗೆ ಗದುಮುತ್ತಿದ್ದುದು, ಆದರೆ ಮಾಮೂಲಿ ಡ್ರಯವರಾಗೋದೆಂದರೇನು! ಜೊತೆಗೆ ಹೆಂಡತಿ ಸೇವುಡಿ ಬೇರೆ ಮಗ ಶಾಲೆಗೆ ಹೋಗುವುದನ್ನು; ಹೋಗಿ ಒದೆಸಿಕೊಳ್ಳುವದನ್ನು ವಿರೋಧಿಸಿದಳು.

ಸಾಲಿಬಿಟ್ಟ; ಎಲ್ಲಾ ಬಿಟ್ಟ ಮಗ ಭರಮ್ಯನನ್ನು ಅನ್ನಕೊಡುವ ಧಣಿ ಸಿವ ಪೂಜೆ ಕ್ವಟ್ರು ಗೌಡರ ಬಳಿಗೆ ಕರೆದೊಯ್ದು ಎಪ್ಪಾ ಹಿಂಗಿಂಗೆಂತ ಎಲ್ಲ ಹೇಳಿದ. ಕೇಳಿ ಸಂತೋಷಪಟ್ಟ ಗೌಡರು ಅವನಿಗೂ ಕೆಲಸ ಕೊಡುವುದಾಗಿ ಒಪ್ಪಿಕೊಂಡರು. ಆರನೇ ಕಿಲಾಸಿನವರೆಗೆ ಓದಿರುವ ಹುಡುಗನನ್ನು ಹೊಲದ ಕೆಲಸಗಳಿಗೆ ಹಚ್ಚಿದರೆ ದೇವರು ಮೆಚ್ಚುವುದಿಲ್ಲವೆಂದು ಅವನನ್ನು ತಮ್ಮ ಇಸಪೀಟು ಕಿಲಬ್ಬಿನ ಚಿಲ್ಲರೆ ಪಲ್ಲರೆ ಚಾಕರಿಗಳಿಗೆ ನಿಯಮಿಸಿಕೊಂಡರು.

ಅಲ್ಲೋ ಬೆವರು ಸುರಿಸದ ಕೆಲಸ; ಬೀಡಿ, ಸಿಕರೇಟು, ಚಾ ತಂದು ಕೊಡುವುದು, ಚಿಲ್ಲರೆ ಪಲ್ಲರೆ ಉಳಿದದ್ದನನ್ನು ಒಳಚೊಕ್ಕಣಕ್ಕಿಳಿಸುವುದು. ಬಹಳ ಜಲ್ದಿ ಈ ಕೆಲಸಕ್ಕೆ ಭರಮ್ಯ ಹೊಂದಿಕೊಂಡ. ರಾಜ, ರಾಣಿ ಜೋಕರುಗಳ ನಾಗರೀಕತೆಯನ್ನು ರೂಢಿಸಿಕೊಂಡು ಬೆಳೆದು ದೊಡ್ಡವನಾಗಿ ಸಂಸಾರವಂದಿಗನಾದ ಭರಮ್ಯ ದೊಡ್ಡ ಪ್ಯಾಟಿ ಸೇರುವ, ಕಿಲೀನರು ಕೆಲಸ ಬೊಗಳುವುದರ ಮೂಲಕ ಡ್ರಯವರ್ರಾಗುವ ಕನಸು ಕಾಣುವುದರಲ್ಲಿ ತಪ್ಪುಂಟೇನು? ಹಾಗೆ ಅವನು ಕೈಕಟ್ಟಿ ಕೂತಿಲ್ಲ. ಮನೆಯಲ್ಲಿ ಮುದುಕಿಗೂ ಹೆಂಡತಿಗೂ ಮಾರಾಮಾರಿಯಾದಾಗೆಲ್ಲ ದೆವ್ವದ ಮನಿ ಚಿನ್ನೋಬನ ಸಹವಾಸದಿಂದ ಶ್ರೀಮಂತಳಾಗಿ ಪ್ಯಾಟಿ ಸೇರಿ ಲಾರಿಗೆ ಒಡತಿಯಾಗಿರುವ ಪಾತ್ರದ ಕೆಂಚವ್ವನ ಕುರಿತು ಜಪ ಮಾಡುವನು. ಕಳೆದ ತಿಂಗಳು ಹಳ್ಳಿಗೆ ಆಕೆ ವಿಜಿಟ್ ಕೊಟ್ಟಾಗ ‘ಎವ್ವೋ’ ಅಂತ ಕಂಡಿದ್ದ. ಬಾರಲೋ ಬಾಡ್ಯಾ…. ನಿನಗಿಲ್ಲಂಥೀನೇನು! ಎಂದು ಆಶ್ವಾಸನೆಯನ್ನೂ ನೀಡಿದ್ದಳು. ಕೆಂಚವ್ವ ಮುಟ್ಟಿದ ಕೊರಡು ಕೊನರುವುದಯ್ಯಾ ಅಂದ ಮೇಲೆ ಆಕಿ ಎಡಗಾಲಿಂದ ಆಶೀರ್ವಾದ ಮಾಡಿದರೂ ಸಾಕು, ತಾನು ಉದ್ಧಾರವಾದಂತೆಯೇ ಲೆಕ್ಕ…. ಇಲ್ಲೆಂದರೆ ತಾನು ಇಷ್ಟು ಓದಿ ವಿದ್ಯಾವಂತನಾಗಿ ಏನು ಸಾರ್ಥಕ?…. ನಾಯಿಗಳ ಥರಾ ಕಚ್ಚಾಡುವ ತಾಯಿ…. ಹೆಂಡತಿಯರ ಮುಖ ನೋಡಿದ ಕೂಡಲೆ ಭರಮ್ಯ ಕೆಂಚವ್ವನನ್ನು ಧೇನಿಸಿ ಅವತ್ತು ಬೀಳುವ ಕನಸಿನಲ್ಲಿ ಕಂಡೇ ಬಿಡುವನು. ಆದ್ದರಿಂದಲೇ ಗಂಟಿ ಚವುಡಿಯರಿರುವ ನರಕ ಸದೃಶ ಮನೆಯಿಂದ ದೂರವಿದ್ದು ಟೈಮು ಪಾಸುಮಾಡಲಿಕ್ಕೆಂದು ನಂಜುಂಡಿಯ ಕಿಲಬ್ಬಿನಲ್ಲಿ ರಾಜ, ರಾಣಿಯರ ಸಹವಾಸ ಮಾಡಿಕೊಂಡು ತಾನೊಬ್ಬ ರಾಜ ಪರಿವಾರಕ್ಕೆ ಸೇರಿದವನಂತೆ ಠೀವಿಯಿಂದ ಬೀಗುತ್ತಿರುವನು. ಇಂಥ ದಿವ್ಯ ಹಿನ್ನೆಲೆ ಇರುವ ಭರಮ್ಯಗೆ ಬೇಸರವಾಗದಿರಲು ಸಾಧ್ಯವೆ!

ಜಗಳ ನಿಂತರೂ ವಟವಟಗುಡುತ್ತಿರುವ ತಾಯಿ ಕಡೆಗೂ ಹೆಂಡತಿ ಕಡೆಗೂ ದುರುಗುಟ್ಟಿ ನೋಡಿದನು. ಪರಮೇಸುರಗಿರುವಂತೆ ತನಗೂ ಹಣೆಗಣ್ಣಿದ್ದಿದ್ದರೆ ಹಿಂದು ಮುಂದು ನೋಡದೆ ಅವರನ್ನು ಸುಟ್ಟು ಬೂದಿ ಮಾಡಿ ಎರಡು ಚೀಲಕ್ಕೆ ತುಂಬಿ ಗೊಬ್ಬರವೆಂದು ಗೌಡರಿಗೆ ಮಾರಿ ಕನಿಷ್ಟ ಹತ್ತು ರೂಪಾಯಿಯನ್ನಾದರೂ ಗಿಟ್ಟಿಸಿಕೊಳ್ಳದೆ ಇರುತ್ತಿರಲಿಲ್ಲವೇನೋ…. ಹೀಗೆ ತನ್ನ ಬದುಕಿನ ಆಗುಹೋಗುಗಳನ್ನು ಕುರಿತು ಯೋಚಿಸುತ್ತ ಮೈಮರೆತಿದ್ದ ಭರಮ್ಯ ತನ್ನ ದೇಹದೊಳಗೆ ತಡೆಹಿಡಿದಿದ್ದ ಸೀಕರೇಟಿನ ಹೊಗೆ ಅದು ಹೇಗೋ ಬಯಲಿಗೆ ಹೋಗಿಬಿಟ್ಟಿತ್ತು. ನಿಡಿದಾಗಿ ನಿಟ್ಟುಸಿರು ಬಿಟ್ಟು ತ್ರಿಪುಟ ತಾಳ ಹಾಕುತ್ತಿದ್ದ ಜಠರ ಪ್ರದೇಶವನ್ನು ಬಲಗೈಯಿಂದ ಸವರಿಕೊಂಡು ಹ್ಹಾಂ…. ಅಂತ ಆಕಳಿಸಿದನು.

ಹಸಿದಿದ್ದ ಕಾರಣಕ್ಕೋ ಜಗಳ ಆಡಿ ದಣಿದಿದ್ದ ಕಾರಣಕ್ಕೋ ಜೊಂಪು ಹತ್ತಿ ತೂಕಡಿಸುತ್ತಿದ್ದ ನಾಗವ್ವನ ಮೊಲೆಗಳೊಂದಿಗೆ ಕುಡಿಯುವುದನ್ನು ಬಿಟ್ಟು ಆಟ ಆಡುತ್ತಿತ್ತು ಕಂದಯ್ಯ. ಗುಂಡಿಗಳಿಂದ ಹಾಲ ಹನಿಗಳು ಉದುರೀ ಉದುರೀ ಪುಟ್ಟ ಹಳ್ಳವೊಂದು ತಯಾರಾಗಿ ಕಂದಯ್ಯನ ಎದೆ ಮೆಲೆ ಹರಿಯುತ್ತಿದ್ದುದನ್ನು ಬೆಕ್ಕು ಆಸೆಯಿಂದ ಗಮನಿಸುತ್ತಿತ್ತು.

ಪಟ್ಟಾಗಿ ಹಿಡಿದು ಗಂಟಲಿಗೆ ಕೂತಿದ್ದ ಕಫ ಕೀಳಲು ಕೆಮ್ಮುವುದರ ಮೂಲಕ ಶತಪ್ರಯತ್ನಕ್ಕೆ ತೊಡಗಿದ್ದ ಮುದುಕಿಯ ಅಂಗ ಚೇಷ್ಟೆಗೆ ಅರ್ಜುನ ಬೆರಗಾಗಿ ನೋಡುತ್ತಿತ್ತು.

“ಓಹೋ, ಬರಮ್ಯಾ…. ಬರಮ್ಯೆಣ್ಣೊ… ವಳಾಗದಿಯಾ…” ಗೌಡರ ಮನಿ ಸಂಬಳದಾಳು ಎರಡು ಬಾರಿ ಕೂಗಿ ಒಳಗಿನ ಮೌನ ಕದಡಿದ. ಯಾಯಂಡ್ರು ಮಕ್ಳೀಗೆ ತಂದಾಕಿದೀಯ್ಯೋಳು…. ಸಾಲಕ್ವಟ್ಟೋರು ಆಳುಗಳ್ನ ಅಡ್ಡಾಡ್ಸಿದ್ದೇ ಅಡ್ಡಾಡ್ಸಿದ್ದು…. ನನಕರುಮವೇ, ದಿಗ್ಗನೆಚ್ಚತ್ತು ನಾಗವ್ವ ಕೆರಳಿ ನುಡಿದಳಲ್ಲದೆ ಕಂದಯ್ಯನ ಎಳೆ ಕುಂಡಿಯನ್ನು ಚಿವುಟಿ ರಾಪೆಬ್ಬಿಸಿದಳು.

ಅವಿತುಕೊಳ್ಳಲು ಜಾಗ ನೋಡುತ್ತಿದ್ದ ಏಕೈಕ ಪುತ್ರನ್ನು ನೋಡಿ ಮುದುಕಿ ಹಣೆ ಹಣೆ ಚಚ್ಚಿಕೊಂಡಿತು. ಅಯ್ಯೋ ಅಯ್ಯೋ…. ದುಡೀಲಿಲ್ಲಾ…. ದುಕ್ ಪಡೀಲಿಲ್ಲಾ…. ಸಾಲಗಾರ ಮೊಗನ್ನ ಕ್ವಟ್ಟೀಯಲ್ಲೋದ್ಯಾವ್ರೇ…. ಯಾವ ಸೋಬಾಗ್ಯಕ್ಕೆಯಿದೆಲ್ಲ…. ಹ್ಹ್…. ಹ್ಹ್…. ಕ್ವಕ್… ಕ್ವಕ್… ಯಂಗಿಸ್ನಂಗೆ ಯಾಕೊಕ್ಕಂತೀ ಓಗಿ ಉತ್ರ ಕ್ವಡು, ಮರುವಾದಿಯಿಂದ”

“ಬರಮಣ್ಣೋ” ಗೊಣಗಾಟ ಕೇಳಿಸಿಕೊಂಡ ಕಿವುಡ ಬಾಕುಲು ದಾಟಿ ಸೀದ ಒಳಗೆ ಒಂದೇ ಬಿಟ್ಟ ಮೇಲೆ ಅವಿತುಕೊಳ್ಳುವುದುಂಟೆ? ತಂದೆ ತಾಯಿ ಮದುವೆಯಾದ ಇಪ್ಪತ್ತೈದು ವರ್ಷಕ್ಕೆ ಹುಟ್ಟಿದಂಥ ಭರಮ್ಯನೂ ನಗುನಗುತ್ತಲೇ ಸ್ವಗತಿಸಿದ. ಅವರಿಬ್ಬರೂ ಬೀಡಿ ವಿನಿಮಯ ಮಾಡಿಕೊಂಡರು. ಎಷ್ಟೋ ಮಾತಾಡಬೇಕೆಂದಿರುವವನಂತೆ ಭರಮ್ಯಾ ಕೆಮ್ಮಿ ಗಂಟಲು ಸರಿಪಡಿಸಿಕೊಂಡ.

ಅವನ ಎದೆಯಲ್ಲಿ ಹೇಳಿಕೊಳ್ಳಬೇಕೆಂಬ ಎಷ್ಟೋ ವಿಷಯಗಳಿದ್ದವು. ಅವುಗಳ ಪೈಕಿ ಎಂದರೆ ಕಮ್ಮಗೆ ದುಡಿದುಕೊಂಡು ಬದುಕುತ್ತಿದ್ದ ತನ್ನನ್ನು ಕೈಬಿಟ್ಟು ಹಾರಕನಾಳು ಸೂಗನನ್ನು ಕೈಹಿಡಿದ ಹೆಂಡತಿ ಉಡಿಕೆ ಮಾಡಿಕೊಂಡದ್ದು, ಇದ್ದೊಬ್ಬ ಮಗ ಗೌಡರ ಎತ್ತು ಮೇಯಿಸಲೆಂದು ಅಡವಿ ಹೊಲಕ್ಕೆ ಹೋದಾಗ ಹಾವು ಕಚ್ಚಿ ಸತ್ತದ್ದು, ತಾನು ಕುಡಿದ ಅಮಲಿನಲ್ಲಿ ಕೋಮಟಿಗರ ತಿಮ್ಮಯ್ಯಶೆಟ್ಟಿ ಹೋಟ್ಲಲ್ಲಿ ನೂರು ರೂಪಾಯಿ ಗಟ್ಟಿ ನೋಡಿಗೇ ವಗ್ಗರಣಿ ಹಾಕಿಸಿಕೊಂಡು ತಿಂದು ಅದನ್ನು ಜಂಗಮರ ಈಸೂರಯ್ಯನ ಕಡೆ ಕೈ ಒರೆಸಿಕೊಂಡೆಸದದ್ದು ಹೀಗೆ ಎದೆಯೊಳಗೆ ಹುಣ್ಣು ಮಾಡಿದ್ದ ಸಂಗತಿಯಳನ್ನು ಕುರಿತು ಮಾತಾಡಿ ಹಗುರ ಮಾಡಿಕೊಂಡ.

ಅವನ ಕಣ್ಣುಗಳಲ್ಲಿ ಕಣ್ಣೀರು ಮಿನುಗುತ್ತಿರುವುದನ್ನು ಅಷ್ಟು ದೂರದಿಂದಲೇ ಗುರುತಿಸಿದ ಮುದುಕಿ “ನಿನ್ ಅಣ್ಯಾಗಷ್ಟು ಬರೆದಿತ್ತು, ಅಸ್ಟಾತು ಬುಡು…. ಕಾವಲಿ ಅನುಮಕ್ಕ ಯೆಂಗೋ ಗಂಡ ಬಿಟ್ಟು ಗಂಡಸಿನಂಗೆ ದುಡಿತಾ ಬದುಕ್ತಾಳೆ…. ಅಕಿನ್ಯಾಕೆ ಉಡಿಕೆಮಾಡ್ಕೊಂಡು ಬದುಕಬಾರ್‍ದು ನೀನು” ಎಂದು ದಿಗ್ಗನೆ ನಪ್ಪು ಮಾಡಿಕೊಂಡು ಹೇಳಿತು.

ಕಾವಲಿ ಅನುಮಕ್ಕನೆಂದರೆ ಗಂಡು ದೇವರಿಗೆ ಮೀಸಲು ಬಿಟ್ಟಂಥ ಎಮ್ಮೆಯಂಥ ಮೈಯವಳು. ತನಗಿಂತ ಎರಡು ಮೂರು ವರ್ಷ ಹಿರೆಯವಳಾದ ಆಕೆಯನ್ನು ಹೊಲಗಳಲ್ಲಿ ಗದ್ದೆಗಳಲ್ಲಿ ನೋಡಿ ತಾನು ಆಸೆಪಟ್ಟಿರುವುದುಂಟು. ಆದರೆ ತಾತ ಮುತ್ತಾತನ ಕಾಲದಿಂದ ಗೌಡರ ಕಮತದಲ್ಲಿ ಸಂಬಳಕ್ಕಿರುವ ತನ್ನನ್ನು ಆಕೆ ಉಡಿಕೆ ಮಾಡಿಕೊಳ್ಳಲು ಒಪ್ಪುವಳೇ ಎಂಬ ಅನುಮಾನ ಮೂಡಿತು ಕಿವುಡಗೆ. ಆದರೂ ನಾಚಿಕೊಂಡೇ ಮಾತಾಡಿದ-

“ಹಯ್…. ಆಕೀನ ಕಂಟ್ಲಿಸಿವ್ಲಿಂಗಪ್ಪ ಯಿಟ್ಕೊಂಡಾನಂತೆ…. ವಟ್ಗೆ ಬಟ್ಗೆ ಕಡ್ಮೆ ಮಾಡ್ದೆ ನೋಡ್ಕೊಂತಾನಂತವ್ನು…. ಅಂಥೋನ್ನ ಬಿಟ್ಟು ನನ್ನಂಥೋನ್ಗೆಂಗೆ ನೆಳ್ಳಾತಾಳೆ….” ಹಿಂದಲೆ ಕೆರೆಯುತ್ತ ನುಡಿದ…. ಅವನಿಗೆ ಆಕೆಯ ಮೇಲೆ ಆಸೆ ಇರಬಹುದೆಂದುಕೊಂಡರು ಎಲ್ಲರು.

“ಅದ್ಯೆಲ್ಲ ಮೈಯಾಗ ಮಾಂಸ ಸುಡ್ತಿರೋವರ್‍ಗೆಲೋ ಕಿವುಡ…. ಯಾ ಯೆಣ್ಣೆ ಆತು ಕಟ್ವಿಕ್ವಂಡೋನೇ ಕ್ವನೆ ತನ್ಕ ತಿಳಿ…. ನಿಂಗ್ಯಾಕ…. ಆಕೀನೆಲ್ಲ ನಾನ ಸರಿಮಾಡ್ತೀನಿ…. ನೀ ಸುಮ್ನಿರು…. ಆಕೀ ವಟ್ಯಾಗ ನಿಂದೊಂದು ಗೊಂಡು ಮೊಗು ಕಂಡೇ ನಾ ಸಾಯಾದು…. ಏನಂತೀ….” ಮುದುಕಿ ಮಾತಾಡಿ ಅವನ ಪಂಚೇಂದ್ರಿಯಗಳ ಕಡೆ ಇಗಾ ಇಟ್ಟು ಕೂತಿತು.
uಟಿಜeಜಿiಟಿeಜ
ಕಂದಯ್ಯನ ಮುಖಾ ನೆಕ್ಕುತ್ತಿದ್ದ ಬೆಕ್ಕೂ ಅಷ್ಟೆ, ಕಂದಯ್ಯನ ತಿಕಾ ನೆಕ್ಕುತ್ತಿದ್ದ ಅರ್ಜುನನೂ ಅಷ್ಟೆ.

“ಊಹ್ಹುಂ…” ನಾಚಿಕೆಯಿಂದ ಮುಖ ಕೊಡವಿ ನುಡಿದ ಕಿವುಡ “ನಂಗೇನು ಬ್ಯಾಡ-ಯವ್ವಾ… ಸಂಬ್ಳಕ್ಕಿರೋ ನನ್ನಿಂದ ಅಕೀಗೆಂಥ ಸುಕಾಸಿಕ್ಕೀತು… ಬ್ಯಾಡಾ ಬುಡು”

ಮುದುಕಿ ಎದ್ದು ಬಂದದ್ದೆ ಅವನ ಕಿವಿ ಹಿಂಡಿ “ಮಳ್ಳಿಗ… ನಾಡ ಮಳ್ಳಿಗ… ನಿಂದು ನಂಗ್ವೆತ್ತಿಲ್ಲಾಂಥ ತಿಳ್ಕಂಡಿಯಾ…. ವಡ್ಲಾಗ್ವಂದು ಯಿಟ್ಕೊಂಡು ವರಾಗೊಂದಾಡಿದ್ರೆ ಕ್ಯೋಳಾಕೆ ನಾನೇನು ದಡ್ಡಿ ಅಲ್ಲ…. ಅಕೀನ ನಿಂಗೆ ನಾನು ಗಂಟ್ಹಾಕೋದೇ ಸೈ…. ಕ್ವಕ್…. ಕ್ವಕ್….. ಹ್‌ಹ್‌ಹ್….” ಮುದುಕಿ ಕೆಮ್ಮುತ್ತ ಸಾವರಿಸಿಕೊಳ್ಳುತ್ತಿರುವಾಗ್ಯೇ ಕಿವುಡ ತನ್ನ ಮೈಯ್ಯಾಗಿನ ಚೂರುಪಾರು ರಕ್ತಾನ ಮುಖಕ್ಕೆ ತಂಡುಕೊಂಡು ನಗಾಡುತ್ತಲೆ, ಎಲ್ಲರೂ ಅದಕ್ಕೆ ತಂತಮ್ಮ ನಗೆ ಸೇರಿಸಿದರು.

ಬೀಸಿದ ಗಾಳಿಗೆ ಬೇವಿನ ಮರವೂ ತಲೆ ಅಲ್ಲಾಡಿಸಿ ತನ್ನ ಸಮ್ಮತಿ ಸೂಚಿಸಿತು.

ಹೆಣ್ಣಲ್ಲೂ ನೀನೆ ಆದಿ ಗಂಡಲ್ಲೂ ನೀನೇ ಆದಿ…. ಹೆಣ್ಣುಗಂಡು ಎರಡರ ನಡುವೆ ಹರನೋ ತಾನೋರ್ವನೋ ಸರ್ವರೊಳಗೇ ವ್ಯಾಪಿಸಿದಂತವನೋ…. ವಾತಾವರಣವನ್ನು ಅದರಲ್ಲೂ ತನ್ನ ಹೆಂಡತಿಯ ಮುಖವನ್ನು ತಿಳಿಗೊಳಿಸುವ ಉದ್ದೇಶದಿಂದ ಭರಮ್ಯಾ ಸುಶ್ರಾವ್ಯವಾಗಿ ಗೊಣಗಿದನು.

ಇಂಥ ಗಂಡನನ್ನು ಪಡೆದ ತಾನೇ ಪುಣ್ಯವಂತೆ ಎಂಬ ಭಾವನೆ ಬಂದು ನಾಗವ್ವ ಕುಡಿಗಣ್ಣಿಂದ ಗಂಡನ ಕಡೆ ನೋಡಿದಳು.

ಡಣ್… ಡಣ್…. ಡಣ್… ಎತ್ತರದಲ್ಲಿರುವ ಶಾನಬೋಗರ ಮನೆಯಿಂದ ಎರಡನೇ ಪೂಜೆಯ ಜಾಗಟೆ ಧ್ವನಿ ಕೇಳಿ ಬರುತ್ತಲೇ ಕಿವುಡ “ನಡಿಯಣ್ಣೋ ನಡಿ… ವತ್ತಾತು” ಎಂದು ಅವಸರಿಸಿದನು.

“ಕಿವುಡೋ…. ನಂಗೆ ಗೋಡ್ರಂದ್ರೆ ಯೆದ್ರೀಕೆ ಆತತೆ…. ಬಾಕಿ ಕಟ್ಟಂದ್ರೇನು ಮಾಡ್ಲಿ…. ಬೊಕ್ಣದಾಗೆ ದಮ್ಮಡಿಯಿಲ್ಲ” ಭರಮ್ಯ ತನ್ನ ಗೆಣೆಕಾರನ ಎಡಭುಜವನ್ನು ನೀವಿದನು.

“ಅಂಥಾದ್ದೇನೂ ಯಿಲ್ಲ ಬುಡು…. ಯಿಶ್ಯಾ ಬ್ಯಾರೆ ಐತೆ…. ನಿಂಗ್ವಪ್ಗಿ ಆದ್ರೆ…. ಊನ್ನು…. ಇಲ್ಲಾಂದ್ರೆ ಇಲ್ಲಾನ್ನು ತಿಳೀತಾ…. ಗೋಡ್ಕೀಗೆ ಯದ್ರಿ ಮಾತಾಡಬ್ಯಾಡ….” ಹೀಗೆ ನುಡಿದ ಕಿವುಡನನ್ನು ಹಿಂಬಾಲಿಸದಿರಲಾಗಲಿಲ್ಲ. ಭಯಂಕರ ಯುದ್ಧಕ್ಕೆ ಹೋಗಲಿರುವವನಂತೆ ಬಾಗಿಲು ದಾಟುವಾಗ ಒಮ್ಮೆ ಹಿಂತಿರುಗಿ ನೋಡಿದನು. ಕೊಟ್ಟಿದ್ದ ಹಣಕ್ಕೆ ಪೂರ್ತಿ ದುಡಿಯದೆ ಬಂದಿದ್ದೂ ಒಂದು ತಪ್ಪು. ಗೌಡರ ದಪ್ತರದೊಳಗೆ ಇರುವುದು ಬೇರೆ…..

ಹೊಲಸಾಗಿದ್ದ ಲುಂಗಿ, ಕೊಳಕು ಅಂಗಿ, ಕೆದಿರಿರುವ ಕಿರಾಪು…. ಈ ಸ್ಥಿತಿಯಲ್ಲಿ ತನ್ನ ಗಂಡ ಗೌಡರನ್ನು ಕಾಣಲು ಹೋಗುವುದೆಂದರೇನು? “ರವ್ವೋಟು ಬಂದೋಗಿಲ್ಲಿ” ನಾಗವ್ವ ಒಳಗಿನಿಂದ ಕೂಗಿಕರೆದಳು. ಕೈರ ಮೆಟ್ಟಿಕೊಳ್ಳುತ್ತಿದ್ದ ಅವನು ಮದಲಿಂಗನಂತೆ ಒಳಗೆ ಹೋದ.

“ಯಂಗದಿನ್ವಾಡು…. ಸಂಬ್ಳದಾಳ್ಗಿಂತ ಅತ್ತತ್ತ ಇದ್ದೀ. ದ್ವಡ್ಡೋರತ್ರ ಓಗುವಾಗ ಯಂಗಿರಬೇಕು?” ಅವನನ್ನು ಕದದ ಮರೆಗೆ ಕುಂಡ್ರಿಸಿದಳು. ಡಬ್ಬಿಯ ಮೂಲೆಯಲ್ಲಿದ್ದ ಕೊಬ್ರಿ ಎಣ್ಣೆಯನ್ನು ನೀರಿನೊಂದಿಗೆ ಮಿಕ್ಸು ಮಾಡಿ ಗಂಡನ ತಲೆಗೆ ಒತ್ತಿ ಒತ್ತಿ ಲೇಪಿಸಿದಳು. ತನ್ನ ಕಾಲ ಇಕ್ಕಳದಲ್ಲಿ ಅವನನ್ನು ಕುಂಡಿರಿಸಿಕೊಂಡು ಸೀರಣಿಗೆಯಿಂದ ಅವನ ತಲೆಯನ್ನು ಪರಪರ ಕೆರೆಯಲಾರಂಭಿಸಿದಳು. ಅವನು “ಅಯ್ಯೋ ಅವ್ವೋ…. ಬಿಡೇ…. ಬೆಡೆಲೇ….” ಎಂದು ಅರಚಿದರೂ ಬಿಡದೆ ಹತ್ತಿಪ್ಪತ್ತು ಸೀರೂ…. ಏಳೆಂಟು ಹೇನುಗಳನ್ನೂ ಹಿಡಿದು ಅವನ ಅಂಗೈಗೆ ಹಾಕಿ “ನಿನ್ತಲ್ಯಾಗ ಯಂಥೆಂಥೋವೈದಾವ ನೋಡು” ಎಂದಳು.

ಭರಮ್ಯ ನೋಡುತ್ತಾನೆ…. ತನ್ನ ಅಂಗೈ ತುಂಬಾ ಹರಿದಾಡುತ್ತಿರುವ ಕ್ರಿಮಿಗಳು…. ಯಾವನ್ನು ಕುಕ್ಕುವುದೋ! ಯಾವನ್ನು ಬಿಡುವುದೋ… ಸಿಕ್ಕವರಿಗೆ ಸಿವಲಿಂಗ ಅಂತ ಗಂಡ ಹೆಂಡತಿ ಇಬ್ಬರೂ ಕುಕ್ಕುತ್ತಿರವಾಗ ಪಟಾಕಿ ಹಾರಿಸುವಂಥ ಸವಂಡು ಬಂದಿತು.

“ಥಲಿ ತುಂಬ ಯಿಂಥೋವ್ನ ತುಂಬಿಕೆಂಡಿದ್ರೆ ಬಾಳುವೆ ಮಾಡಂದ್ರೆ ಯೆಂಗೆ ಮಾಡ್ತಿ”…. ಗೊಣಗುತ್ತ ಬಾಚಿ ತಲೆಗೂದಲನ್ನು ಒಪ್ಪ ಓರಣಮಾಡಿ ಕಾಲು ಹಾದಿಯಂಥ ಬೈತಲೆ ತೆಗೆದಳಲ್ಲದೆ ಏರಿಳಿತದ ಕಿರಾಪನ್ನೂ ಸೃಷ್ಟಿಸಿ ಹಲವು ಕೋನಗಳಿಂದ ನೋಡಿ ಥೇಟ್ ರಾಜ್ಕುಮಾರ ಕಂಡಂಗೆ ಕಾಣ್ತಿದೀ…. ದಾರ್‍ಯಾಗ ವುಷಾರು ಎಂದು ಎಚ್ಚರಿಸಿದಳು.

ತಾನೂ ಗೋಡೆಯಲ್ಲಿದ್ದ ಮುರುಕು ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡು ಗೊಡ್ಡೀರವ್ವ ತನಗೆ ಡವ್ವು ಹೊಡೆಯುತ್ತಿರುವುದರಲ್ಲಿ ಸತ್ಯಾಂಶವಿದೆ ಎಂದುಕೊಂಡನು.

ತನ್ನಷ್ಟು ವಿದ್ಯಾವಂತನೂ ತನ್ನಂಥ ಸುಂದರಾಂಗನೂ ಈ ಕೇರಿಯಲ್ಲಿ ಯಾರೂ ಇರಲಿಕ್ಕಿಲ್ಲವೆಂದು ಭಾವಿಸಿ ಹೆಂಡತಿಯಿಂದ ಬೀಳ್ಕೊಂಡು ಬೀದಿ ಪಾಲಾದನು. ಅವನ ಬಣ್ಣದ ಲುಂಗಿಯೊಳಗಿದ್ದ ವಿದ್ಯೆಯನ್ನೂ ವಾಸನೆಯೊಳಗಿದ್ದ ಸೌಂದರ್ಯವನ್ನೂ ಮೂರಿಂಚು ದೂರದಿಂದಲೇ ಆಘ್ರಾಣಿಸುತ್ತ ಅರ್ಜುನ ಹಿಂಬಾಲಿಸಿತು. “ಅಚಾ…. ಗೋಡ್ರು ಮಂತ್ಯಾಕ ಓಗಿ ಬತ್ತೀನಿ ಓಗಲೇ ಅಜ್ಜುನಾ” ಹತ್ತು ಹೆಜ್ಜೆಗೊಮ್ಮೆ ಬುದ್ಧಿ ಹೇಳಿದ ಮತ್ತು ಗದರಿಸಿದ ಭರಮ್ಯಾ, “ಬೊರ್‍ಲಿ ಬಿಡು ಬಿಡು ಅದ್ಯೇನ್ಮಾಡತೈತಿ” ಎಂದು ಕಿವುಡ ಸೌಜನ್ಯಕ್ಕೆ ಹೇಳಿದ. ಆದರೆ ಅರ್ಜುನಗೂ ಗೌಡರ ಮನೆಯ ಮುಂದಿರೋ ರಾಮಾಗೂ ಆಗೊಲ್ಲ ಎಂಬ ಸತ್ಯ ಕಿವುಡಗೂ ಗೊತ್ತುಂಟು. ರಾಮನ ಧಿಮಾಕು ಏನಿದ್ರು ಅಲ್ಲಿಯೇ. ಅದರ ಆಟ ಕೆಳಗೇರಿಗೆ ಬಂದರೆ ನಡೆಯೊಲ್ಲ ಎಂಬುದಕ್ಕೆ ಉದಾಹರಣೆಗಳು ಉಂಟು. ರಾಮ ತಿಂಥಿರೋ ಆಹಾರದ ಪೈಕಿ ಆಣೆ ಭಾಗ ಬಿದ್ದಿದ್ದೇ ಆದರೆ ಅರ್ಜುನನ್ನು ಹಿಡಿಯುವವರು ಯಾರು? ಎಷ್ಟು ಗದರಿಸಿದರೂ ಸೊಪ್ಪು ಹಾಕದೆ ರಾಮನನ್ನು ದೂರದಿಂದಲೇ ಒಂದು ಕೈ ನೋಡಬೇಕೆಂಬಾಸೆಯಿಂದ ಹೊರಟ ಅರ್ಜುನ ಮೋಟುಗಲ್ಲಮೇಲೆ ಬಲ ಹಿಂಗಾಲೆತ್ತಿ ಮೂತ್ರಾಭಿಷೇಕ ಮಾಡುತ್ತ ನಿಂತಿದ್ದಾಗ ಭರಮ್ಯ ಕಿವುಡ ಗಪ್ಪಂತ ಊರಮ್ಮನ ಗುಡಿ ಸಂದಿಗೆ ತಿರುಗಿದರು.

ಸಂದಿಯ ನಿರ್ಮಾನುಷತೆಯಿಂದಾಗಿ ಕಿವುಡ ಭರಮ್ಯನ ಕಿವಿಗೆ ಹತ್ತಿರದಲ್ಲಿ ತನ್ನ ಬಾಯನ್ನಿರಿಸಿ ಗೌಡರ ಮಗ ಷಣ್ಮುಖ ಪ್ಯಾಟಿ ಸೇರಿ ಕಿರುಸ್ತಾನರ ಹುಡುಗಿ ಪೌಲಿಯನ್ನು ಗಾಂಧರ್ವ ವಿವಾಹವಾಗಿರುವುದಾಗಿ ವಿವರಿಸಿದಲ್ಲದೆ ಅವರ ಮಗಳು ಪಾರ್ವತಿ ಮುಸುಲ್ಮಾನರ ಹುಡುಗ ಷಾವಲಿಯನ್ನು ನಿಖಾ ಮಾಡಿಕೊಂಡು ಮಮ್ತಾಜ್ ಎಂದು ಹೆಸರು ಬದಲಾಯಿಸಿಕೊಂಡಿರುವುದಾಗಿ ಉಸುರಿದ. ಈ ಸುದ್ದಿ ತಿಳಿದಂದಿನಿಂದ ಗೌಡರು ಹಗಲು ಹೊತ್ತು ಮಲಗುತ್ತಾರೆಂದು ರಾತ್ರಿ ಹೊತ್ತು ಎಚ್ಚರಿದ್ದು ತಮ್ಮಷ್ಟಕ್ಕೆ ತಾವೇ ಮಾತಾಡಿಕೊಳ್ಳುತ್ತಿರುವರೆಂದೂ ಹೇಳಿದ ಮೇಲೆ ಭರಮ್ಯಗೆ ನಿಜಕ್ಕೂ ಖುಷಿಯಾಯಿತು.

ದೂರದಿಂದ ಸಾಬಾಣದ ಬಿಳುಪಿನಿಂದ ಮಾಡಿದ್ದೋ ಎಂಬಂತೆ ಕಂಡ ಮನೆ ಅಂಗಳ ಎಡವಿದನು. ತಾನು ಎಷ್ಟಿದ್ದರೂ ರಾಜಾ ರಾಣಿ ಜೋಕರರ ಒಡನಾಟದ ಮನುಷ್ಯ. ಗೌಡಗೆ ಹೆದರುವುದೋ, ಬ್ಯಾಡವೋ. ಅವನ ಮನಸ್ಸು ಅಡಕೆ ಗಿಡದಂತೆ ಹೊಯ್ದಾಡುತ್ತಿರಲು ಗೌಡ ಕೊಕ್ ಕೊಕ್ ಕೆಮ್ಮುತ್ತ ಬಂದು ಆಪಾದ ಮಸ್ತಕ ನಿಟ್ಟಿಸಿ ತನ್ನೊಳಗಿನ ಅಸ್ತಮಾವೇ ಮನುಷ್ಯ ರೂಪ ತಾಳಿ ಎದುರಿಗೆ ನಿಂತಿರುವುದೇನೋ ಎಂದು ಭಾವಿಸಿ ಪ್ರೀತಿ ಪ್ರಕಟಿಸಿದನು. ತಾನು ಅನ್ನ ಕೊಟ್ಟಿದ್ದು ಹಳೇ ದೋತರಗಳನ್ನು ಉಟ್ಟುಕೊಳ್ಳಲು ಕೊಟ್ಟಿದ್ದು ಅಲ್ಲದೆ ರೂಪಾಯಿಗಳನ್ನು ದರಕಾ ಇಲ್ಲದೆ ಬಿಸಾಕುತ್ತಿದ್ದುದರಿಂದ ಹಿಡಿದು ಲೆಕ್ಕದ ಬುಕ್ಕದೊಳಗೆ ಅಸ್ತಮಾ ರೋಗದಂತೆಯೇ ಬೆಳೆದಿರುವ ಬಾಕಿಯನ್ನು ಸೂಕ್ಷ್ಮವಾಗಿ ನೆಪ್ಪು ಮಾಡಿಕೊಟ್ಟ ಗೌಡನು ಸೀಕರೇಟನ್ನು ಅರ್ಧ ಸೇದಿ ಭರಮ್ಯಾನ ಬೊಗುಸೆಗೆ ಎಸೆದನು. ಧಮ್ಮು ಎಳೆದಂತೆ ನಟಿಸಿ ತನ್ನ ಕಾಲಮೀನ ಖಂಡಗಳನ್ನು ಮೂಸಿ ನೋಡಿದ ಗೌಡರ ನಾಯಿ ಕಡೆ ಎಸೆದು ಗೌಡ ತನ್ನನ್ನು ಬಾಕಿ ಕೇಳಲಾರನೆಂದು ಖುಷಿಯಾಗಿ ಬುರಬುರ ಊದಿದನು.

“ಲ್ಯೇ ಭರಮ್ಯಾ…. ನನ್ವಟ್ಟೀಲಿ ವುಟ್ಟಿದ ಮೊಗಾ ಬ್ಯಾರೆ ಅಲ್ಲ…. ನೀನು ಬ್ಯಾರೆ ಅಲ್ಲ…. ಐವತ್ತು ಕೊಡುವಲ್ಲಿ ನೂರು ಕೊಟ್ಟೇನು” ಕೆಮ್ಮು ಬಂತು ಬಡ್ಡಿ ಮಗನಂತೆ, ಕೆಮ್ಮಿ ಗಂಟಲು ಸರಿಪಡಿಸಿಕೊಂಡು ಆಸರೆಗೆ ಗೋಡೆ ಹಿಡಿದು ನಿಸೂರಾಗಿ ಮುಂದುವರಿದು ಹೇಳಿದನು. “ನಾನೊಂದು ಕ್ಯೇಳ್ತೀನಿ…. ಹೂ ಅನ್ನಬೇಕಲೇ”

ನೂರರ ಗರಿಗರಿ ನೋಟು ಹಂಸ ಪಕ್ಷಿಯಂತೆ ಶುಕ್ಲಪಟಲದ ತುಂಬ ಹಾರಾಡಿ ಬಾಯಿ ತುಳುಕಿತು.

“ನಿಮ್ ಪಾದಾಣೆ ಗೋಡಾ…. ಇಲ್ಲಂದ್ರೆ ನಾಲಿಗ್ಯಾಗ ವುಳಾ ಬಿದ್ದಾವು. ಕಾಲೀಲೇ ಯ್ಯೋಳಿ, ಥಲೀಲೆ ವತ್ತು ನಡೆಸಿಕ್ವೊಡ್ತೀನಿ” ಚರ ಚರ ಅಂತ ಅರಳಿದ ಕನಸುಗಳ ಗೊಂಡಾರಣ್ಯದೊಳು ಒಂಚಣ ದಾರಿ ತಪ್ಪಿದನು ಭರಮ್ಯಾ.

ಲಯನು ಕ್ಲಿಯರು ಆದದ್ದೆ ಗೌಡ ತನಗೆ ಬೇಕಿರುವ ಬೇವಿನ ಮರ ಕುರಿತು ಹೇಳಿ ಒಪ್ಪಿಸಿ ಇಪ್ಪತ್ತರ ಎರಡು ನೋಟುಗಳನ್ನು ಮುಂಗಡವೆಂದು ಬೊಗಸೆಗೆ ಎಸೆದನು. ಆ ಒಂದು ಚಣ ನಡುಗಿ ಸೋಬನದ ಸುಖ ನೆಪ್ಪಿಗೆ ಬಂತು ಭರಮ್ಯಗ.

“ಬೆಳಗಾಗುತ್ಲೆ ಆಳುಗೋಳ್ನ ಕಳ್ಸಕ್ವಡು ಗೋಟಾ…. ಮರಾನ ಬುಡ ಸಮೇತ ಕಡಿಸಿ ಕಳಿಸತೇನಿ” ಎಂದು ಹೊರಟ ಭರಮ್ಯ ಗೋಡರ ಮೆನಯ ಅಂಗಳ ದಾಟಿ ಊರಮ್ಮನ ಬಯಲು ಸೇರುತ್ತಲೆ ಭಲಲಲೈ ಸಾರಥೀ ನಾನುದಾರೆಂದರೇ ಎಂದು ಗಟ್ಟಿಯಾಗಿ ಸಾರಬೇಕೆನಿಸಿತು.

ಆ ಎರಡು ಕೆಂಪನೆಯ ನೋಟುಗಳನ್ನು ಎಲ್ಲರಿಗೆ ಕಾಂಬುವಂತೆ ಬಕ್ಕೇಂದು ಜೇಬಿನಲ್ಲಿರಿಸಿ ಅವುಗಳ ಕಡೆ ಜನರ ಗಮನ ಸೆಳೆದು ತೋರಿಸುತ್ತ, ಸಾಲಿಗರು ಎದುರಾದಾಗ ಬಿಚ್ಚಿಟ್ಟುಕೊಳ್ಳುತ್ತ ಹೆಂಡದೆಲ್ಲಯ್ಯನ ಅಂಗಡೀಲಿ ಎಲ್ಡು ಬಾಟಲಿ ಖಾಲಿ ಮಾಡಿ, ಪಾತರದ ಸಣ್ಣಕ್ಕನ ಹತ್ತಿರ ಎರಡು ಕರಿದ ಮಾಂಸದ ತುಂಡು ಕರಕರ ಅಂತ ಜಮಡಿ ತಿಂದು ತಾನೊಬ್ಬ ಪರಿಸೇ ಪೈಕಿ ಪೈಲ್ವಾನನಂತೆ ಆಕಾಶಕ್ಕೂ ಭೂಮಿಗೂ ಏಕಾಗಿ ನಿಲ್ಲಲು ಯತ್ನಿಸುತ್ತ ಕೇರಿ ತುದಿಗೆ ಬಂದು ಕೇಕೆಕಣಣ ಎಂದು ಸಿಂಹನಾದ ಮಾಡಿದನು. ಅಲ್ಲಿಂದ ಸುಂಟರ ಗಾಳಿಯಂತೆ ಬರ ಬರ ಸುತ್ತ ಸೆಟ್ಟೀ ಶಂಕರಣ್ಣನ ಇಸಪೀಟಾಡುವ ಮನೆಗೆ ಹೋಗಿ ಸ್ಟಯಿಲಾಗಿ ಬೀಡಿ ಸೇದುತ್ತ ತನ್ನ ಬಳಿ ಇರುವ ನೋಟುಗಳನ್ನು ಇನ್‌ಡಯರೆಕ್ಟಾಗಿ ಪ್ರದರ್ಶಿಸಿದನು. ಜೀರ್ರ ಪೊಂಪ ಮಸಕಾ ಹೊಡೆಯಲು ಅವನು ಆಡದೆ ಇರಲಾಗಲಿಲ್ಲ. ಆಡುತ್ತಲೆ ಎಂಟೂವರೆ ಟುಸ್ ಎಂದು ಕೈಬಿಟ್ಟಿತು. ಅಲ್ಲಿಂದ ಸೀದ ಹೊರಟವನೆ ಡಾಣಿ ಗುಂಡಿನ ಅಂಗಡೀಲಿ ಅರ್ಧ ಕೇಜಿ ನೆಲ್ಲಕ್ಕಿ ಕೊಂಡುಕೊಂಡು ಮನೆ ಕಡೆ ನಡೆದನು.

ಕೇರಿಯ ಸಮಸ್ತ ಮನೆಗಳು ತನ್ನನ್ನು ಸ್ವಾಗತಿಸಲು ಒಳಗೊಳಗೇ ಪಿತೂರಿ ನಡೆಸಿವೆ ಅನ್ನಿಸಿತು ಮೊದಲ ನೋಟಕ್ಕೆ. ಆವಾಗಿನಿಂದ ತಲೆ ಎತ್ತಿ ನಡೆದಿದ್ದುದರಿಂದ ಬೆನ್ನೆಲೆಬಿನಲ್ಲಿ ಸಣ್ಣ ಸೆಳಕು ಕಾಣಿಸಿಕೊಂಡು ರಾಜ ಠೀವಿಯಲ್ಲಿ ನಡೆದು ಮನೆ ತಲುಪುವುದು ಸೊಲುಪ ಕಷ್ಟವಾಯಿತು.

“ಸೂರ್‍ಯ ವುಟ್ಟುತ್ಲೇ ಈ ಮಸಾಣ ಖಾಲಿ ಮಾಡಿ ಗಂಡನ್ನೂ, ಈ ಮೊಗನ್ನೂ ಕಟ್ಕೊಂಡು ವೋಗ್ಲಿಲ್ಲ…. ನಾನು ತಳಾರ ಅನುಮಂತ್ಗೆ ವುಟ್ಟಿದ ಮಗ್ಳೇ ಅಲ್ಲ” ಮೂಗಿನಲ್ಲಿಳಿದ ತಿಳಿ ಜಲವನ್ನು ಎಡಗೈಯಿಂದ ತೆಗೆದವಳೇ ರಭಸದಿಂದ ಗಂಡನ ಕಡೆ ಎಸೆದಳು ನಾಗವ್ವ.

“ಅಲಲಲಾ….! ಬಿಡಕೀ ಯದರಿಸ್ತೀಯ್ಯೋನಲೇ…. ವಂಟೋಗಲೇ…. ಬ್ಯಾಡಂತೀನಾ….. ಕಟ್ಕಂಡಿದ್ದು ಗಂಡಗಾಗಲ್ಲೀ…. ಇಟ್ಕಂಡಿದ್ದ ಮಿಂಡಗಾಗ್ಲೀ ಯದ್ರಿದೋಳಲ್ಲ ನಾನು ತಿಳೀತಾ….” ಕೂತುಕೊಳ್ಳಲಿಕ್ಕೂ ಆಗದೆ ಮುದುಕಿ ಶಿವನ ಧನಸ್ಸಿನಂತೆ ಬಾಗಿ ನಿಂತು ಕೊಕ್ ಕೊಕ್ ಕೆಮ್ಮಿ ಕಫವನ್ನು ಉಗುಳುವುದೆಂದು ಹೊಳೆಯದೆ ಬಾಯಿ ತುಂಬಿಕೊಂಡು ಸುತ್ತ ನಿಟ್ಟಿಸಿತು. ಅದರಿಂದ ಏನೋ ಅರ್ಥ ಮಾಡಿಕೊಂಡಂತೆ ಅರ್ಜುನ ಬಾಲ ಅಲ್ಲಾಡಿಸುತ್ತ ಬೆಕ್ಕಿನ ಕಡೆ ಅರ್ಥಪೂರ್ಣವಾಗಿ ನೋಡಿ ಕಂಯ್ ಕಂಯ್ ಎಂದು ರಾಗ ಮಾಡಿತು.

ಹೇಮರೆಡ್ಡಿಯಂತೆ ಸ್ಟಯಿಲ್ಲಾಗಿ ಬೀಡಿ ಹೊಗೆ ಬಿಡುತ್ತಲೂ ಕೈಲೊಂದು ಪೊಟ್ಟಣ ಹಿಡಿದುಕೊಂಡು ಬಂದ ಗಂಡನ ಕಡೆ ನಾಗವ್ವ ಅನುಮಾನದಿಂದ ನೋಡುತ್ತ ಭಾಳದಿನ್ಕೆ ಕಂಕುಳಾಗ ಸಿರಿಸಂಪತ್ತು ಇಟ್ಟುಕೊಂಡವನಂತೆ ಬರುತ್ತಿರುವನಲ್ಲಾ ಎಂದು ಅನುಮಾನಪಟ್ಟಳು. ಮುದುಕಿಗೂ ಮಗನ ಮುಖಾರವಿಂದ ಚೋಜಿಗದ ಸಂಗತಿಯೇ….

ಬೇಯಿಸಲು ಹೆಂಡತಿಗೆ ಕಂಕುಳಲ್ಲಿದ್ದ ಅಕ್ಕಿಯನ್ನು ಕೊಟ್ಟವನೆ ಹೋ ಎಂದು ರಂಪಾಟ ಮಾಡುತ್ತಿದ್ದ ತನ್ನ ವಂಶದ ಕುಡಿಯನ್ನು ಎತ್ತಿಕೊಂಡು ಅದರ ಬಾಯಿಗೆ ಬ್ಯಾಗಡಿ ಚಾಕುಲೇಟು ಇಟ್ಟು ಅದು ಜೊಲ್ಲಿಳಿಸಿ ಚೀಪುವ ಸೊಬಗು ನೋಡುತ್ತ ಅಹಾ ನನ್ನ ಸಂಸಾರವೇ ಎಂದು ಉದ್ಗರಿಸಿದನು.

“ತಾಟಗಿತ್ತಿ ಗೀಟಗಿತ್ತಿ…. ನನ್ ಮೊಗುನ್ನ ಗೊಂಬಿ ಮಾಡಿ ಕುಣುಸ್ತಿದಿಯಾ…. ಕುಣುಸೂ…. ಅದ್ಯೆಲ್ಲಿವರ್‍ಗೆ ಕುಣುಸ್ತಿಯೋ ಕುಣುಸು….” ಪಟಪಟ ನುಡಿಯುತ್ತಲೇ ಬಾಗಿಕೊಂಡೇ ಹೋಗಿ ಮೂತರ ವಿಸರ್ಜಿಸಿ ಬಂತು….

“ಯ್ಯೋನು ಪಾಪ ಮಾಡಿದ್ನೋ ಶಿವನೇ…. ಈ ಮನ್ಯಾಗ ಚೊಸಿಯಾಗ ಬರಾಕೆ…. ಊರಿಗಿಲ್ಲದ ಆಸ್ತಿ ಮಾಡ್ದೋಳಂಗೆ ಅಕ್ಕಿ ಕಾಳುದುರಿಸ್ತಿಯಾ ಮುದುಕಿ…. ಎಂದು ತಾನೂ ಉದುರಿಸುತ್ತ ಅನ್ನ ಬಸಿದಿಟ್ಟಳು….

ಕಿಮ್ಮೆಕ್ಕನ್ನದೆ ತಾನೇ ಪರಿಪರಿ ರಮಿಸಿ ಹೆತ್ತ ತಾಯಿಗೆ ಉಂಬಾಕಿಟ್ಟು ಯವ್ವೋ…. ನೀನು ಪ್ರತ್ಯಚ್ಚ ದ್ಯಾವ್ರು… ನೀನು ಬೇಷಿರಬೇಕು ಎಂದು ಬೆಣ್ಣೆ ಹಚ್ಚಿದನು. “ಯ್ಯೊನೋ ನೀನು ನನ್ನ ಪಿರಾಣ ಪದಕ, ನೀನು ಬೇಷರ ಬ್ಯೇಕು” ಎಂದು ಡಾಲ್ಡಾ ಹಚ್ಚುತ್ತ ತಾನೂ ಉಂಡು ಹೆಂಡತಿ ಪಟಪಟ ನುಡಿಯುತ್ತ ಗಬಗಬ ಅಂತ ನಾಕುತುತ್ತು ಉಣ್ಣುತ್ತಿದ್ದುದನ್ನು ಕಣ್ತುಂಬ ನೋಡಿ ಸ್ಟಯಿಲ್ಲಾಗಿ ಸಿಕರೇಟು ಹಚ್ಚಿಕೊಂಡು ಬುಸ್ಸು ಎಂದು ಹೊಗೆ ಬಿಟ್ಟನು.

ಅಕ್ಕಿ ಬಾನ: ಕಡ್ಲಿ ಬಜ್ಜಿ ಉಂಡ ಮೇಲೆ ಅತ್ತೆ ಸೊಸೆಯರಿಬ್ಬರ ಉದರದೊಳು ಒಂದು ರೀತಿಯ ಸವುಂಡು ಕಾಣಿಸಿಕೊಂಡಿತು. ಮುಗಿಲಾಚೆ ಕೈಲಾಸವನ್ನೂ ಗ್ರಹಿಸುವ ಅವರಿಗೆ ಯಾಕೋ ಅನುಮಾನ ಬಂತು. ಈಟೊಂದು ರ್‍ವಕ್ಕ ಯಲ್ಲಿಂದ ತಂದೆ…. ಏನ್ಕಥೆ…. ಎಂದು ಎರಡು ಮಗ್ಗುಲಿಂದ ಇಬ್ಬರೂ ಪೀಡಿಸಲಾರಂಭಿಸಿದರು. ಹೆಂಡತಿಯೊಬ್ಬಳೆ ತನ್ನ ಪರವಾಗಿ ವಕಾಲತ್ತು ಮಾಡಿದರಾಯಿತು. ಬಾಕಿ ಅರವತ್ತರಲ್ಲಿ ಆಕೆಗೊಂದು ರೋಡ್‌ಗೋಲ್ಡು ಮೂಕಬೊಟ್ಟು ತಂದರಾಯಿತು ಎಂದು ಯೋಚಿಸುತ್ತ ಭರಮ್ಯಾ ತಾನು ಅಂಗಳದ ಬೇವಿನ ಮರವನ್ನು ಗೌಡಗೆ ಮಾರಿರುವ ಸಂಗತಿಯನ್ನು ಅರುಹಿ ಬಿಟ್ಟನು. ಅದನ್ನು ಕೇಳಿದ್ದೇ ಅತ್ತೆ ಸೊಸೆಯರಿಬ್ಬರೂ ಕಿಡಿಕಿಡಿಯಾಗಿಬಿಟ್ಟರು…. ಖಡೆ ಖಡೆ ಅಂತ ಆತನ ಎರಡೂ ಮಗ್ಗುಲು ನಿಂತರು.

“ಯ್ಯೋನಲೋ ಬಾಡ್ಯಾ…. ಯಿಲ್ಲಿ ತಂಕ ಬಂದ್ಯಾ…. ಇವತ್ತು ಮರ್ಽನಮಾರ್‍ತಿ…. ನಾಳೆ ಕಟ್ಕೊಂಡ ಹೆಂಡ್ತೀನ ಮಾರ್‍ತೀ…. ಥೂ…. ನಿನ ಜನುಮಕಸ್ಟು ಬೆಂಕಿ ಆಕ…. “ಮುದುಕಿ ಕೆಮ್ಮುತ್ತ ನಿಂತುಬಿಟ್ಟಿತು….

“ಬ್ಯೇ ಮುದುಕೀ ಇಂಥೋನ ಕಟ್ಟಿಕೊಂಡು ಅದೆಂಗೆ ಬಾಳುವೆ ಮಾಡ್ಲಿ” ನಾಗವ್ವ ಪರಪರ ತಲೆ ಕೆರೆದುಕೊಂಡು ಕೂದಲು ಚೆಲ್ಲೊಡೆದಳು.

“ನನ್ನ ಕರುಮ ಬೇ ಬಿಡಕೀ….” ಮುದುಕಿ ಸೆಡ್ಡೊಡೆದು ನಿಂತು ಅಲಲಲಾ ಅಂದಿತು. “ಅದೆಂಗೆ ಕಡುಸ್ತಿ ಕಡುಸಲೋ ಬಾಡ್ಕಾವ್”

ತಾಯಿ ಹೆಂಡತಿ ಇಬ್ಬರೂ ಕ್ಷಣಾರ್ಧದಲ್ಲಿ ಒಂದಾಗಿದ್ದು ಕಂಡು ಭರಮ್ಯಾನ ತಲೆ ಗರಗರಂತ ತಿರುಗಿತು. “ಆಗ್ಲೆ ಅಡ್ವಾನ್ಸು ಇಸ್ಕ ಬಂದೀನಲ್ಲ…. ಈಗ ಎದೀ ಮಟ ತಿಂದ್ರೆಲ್ಲ ಅಕ್ಕಿಬಾನ…. ಅದರ್‍ದೇ ಮತ್ತೆ” ಸಿಟ್ಟು ಬಂದು ಅಂಗಿ ಎತ್ತಿ ಹೊಟ್ಟೆ ಪ್ರದೇಶವನ್ನು ಪಟಪಟ ಬಡಿದುಕೊಂಡನು….

ಅದನ್ನು ಕೇಳಿದ್ದೆ ಅತ್ತೆಸೊಸೆ ಪರಸ್ಪರ ಮುಖ ನೋಡಿಕೊಂಡರು…. ಅಯ್ಯೋ ಯಂಥಾ ಕೆಲ್ಸ ಆಗೋಯ್ತೇ ನಾಗಿ…. ಅದ್ಕೇ ಬಡಬಡಸತೈತಿ ಬಾನ ಒಡಲಾಗೆ…. ಯ್ಯೋನುಮಾಡಲೀ ಶಿವ್ನೇ…. ಮುದುಕಿ ಅಂಗಳಕ್ಕೆ ಕುಂತು ಎದೆ ನಗಾರಿ ಮಡಿಕೊಂಡು ಬಡಿಯತೊಡಗಿತು. ಅತ್ತೆ ಸೊಸೆಯರಿಬ್ಬರು ಪರಸ್ಪರ ಎದುರು ಬದುರಾಗಿ ಕೂತು ಗಂಟಲಲ್ಲಿ ಕೈತೂರಿಸಿ ಕಕ್ಕಿಕೊಳ್ಳುವ ಪ್ರಯತ್ನಕ್ಕೆ ತೊಡಗಿದರು….. ದೇಹದ ಕಣ ಕಣಕ್ಕೂ ವ್ಯಾಪಿಸುತ್ತಿದ್ದ ಅನ್ನ ಬ್ರಹ್ಮ ಅಷ್ಟು ಸುಲಭವಾಗಿ ಹೊರಬಂದಾನೆಯೇ! ಹಠಕ್ಕೆ ಹೆಸರಾದ ಮುದುಕಿ ಬುದುಬುದು ಅಂಗಳ್ಕೆಕ ಓಡಿ ಎಮ್ಮೆಯ ಸೆಗಣಿಯನ್ನು ಸಿಲವಾರ ಡಬರಿಯಲ್ಲಿ ನೀರು ಹಾಕಿ ಕದಡಿತು.

“ಅದ್ಯೆಂಗ ವಾಂತಿ ಆಗಕಿಲ್ಲ ನೋಡೇ ಬುಡ್ತೀನಿ” ಗಟಗಟ ಕುಡಿದು ಹೋಬ್ಬ ಅಂತ ಡೇಗಿತು. ಅಪ್ಪಗುಟ್ಟಿದ ಮಗಳು ನಾಗವ್ವ ಹೇಗೆ ಸುಮ್ಮನಿದ್ದಾಳು? ತಾನೂ ಗಟಗಟ ಕುಡಿದು ಟೊಯ್ಯೋ ಅಂತ ಡೇಗಿದಳು…. ಮಿಂಡರಿಗುಟ್ಟಿದೋನೆ…. ಭರಮ್ಯಾ ಹಣೆ ಹಣೆ ಚಚ್ಚಿಕೊಳ್ಳುತ್ತಿರುವಾಗಲೇ ಅವರಿಬ್ಬರು ವ್ಯಯ್ಕ… ವಯ್ಕ ಅಂತ ವಾಂತಿ ಮಾಡಿಕೊಂಡರು.
uಟಿಜeಜಿiಟಿeಜ
“ಲೋ, ನೀನು ಈಟಿದ್ದಾಗ ನಿನ್ನ ಬೊದ್ಕಿಸಿದ್ದು ಆ ಮರಽಲೋ. ಅದೇ ಕೊಂಬೆಗೆ ತ್ವಟ್ಲ ಕಟ್ಟಿ ನಿನ್ನಾಕಿ ಬುಟ್ರೆ ಗಪ್ಪಂತ ಮಲಗ್ತಿದ್ದೆ…. ಹೆತ್ತಾಯಿ ಬ್ಯಾರೆ ಅಲ್ಲ… ಆ ಮರ ಬ್ಯಾರೆ ಅಲ್ಲ…. ಕ್ಯೇರ್‍ಯಾಗ ಒಂದ್ವಳ್ಳೇದ್ಕೂ ಆ ಮರ ಬೇಕು…. ಒಂದು ಕ್ಯೆಟ್ಟದ್ಕೂ ಆ ಮರಾಬ್ಯೇಕು…. ಅದು ಬರೀ ಬೇವಿನ ಮರ ಅಲ್ಲಲೋ…. ಅದ್ರಾಗ ಚವುಡವ್ವಾ ಮನಿಮಾಡ್ಕಂಡಾಳೇ…. ಅಂಥಾದಕ್ಕೆ ಕೊಡ್ಲಿ ಬುದ್ರೆ, ನರಮನುಸ್ರು ಬೊದ್ಕಿ ಉಳ್ದಾರಾ….. ಬಲುಗಂಡ್ಸು. ನೀರೊತ್ತು ಬೆಳೆಸ್ಸೋ ನನ್ನಂಗೆ. ಗೋಡ್ಗೆ ಮಾರಿ ತಂಬ್ಲ ತಿಂದು ಬೊಂದೀಯಾ…. ಬಾಡ್ಯಾ…. ಬೊರ್ಲಿ…. ಅದಾವನು ಬರ್ತಾನೆ ಬರ್ಲಿ…. ನ್ವಾಡೇಬುಡ್ತೀನಿ…. ಯಲೇ ನಾಗಿ…. ನೀನು ತಳಾರ ಅನುಮಂತ್ಗೆ ವುಟ್ಟಿದ್ ಮೊಗ್ಳಾಗಿದ್ರೆ ಆ ಮರಾನ ಉಳಿಸ್ಗೆಂತಿ…..” ನಾಲಿಗೆಯನ್ನು ಝಳಪಿಸಿ ಕಿಡಿಕಿಡಿ ಎಗರಿಸಿತು ಮುದುಕಿ.

“ಬರ್‍ಲಬೇ ಬರ್‍ಲಿ…. ಯಂಥಾ ಮೊಗುನ್ನ ಹಡ್ಕಂಡಿಯಬೇ…. ಹಡ್ಕಂಡೋಕಿ ನೀನು ಅನುಭೋಸು…..” ನಾಗವ್ವ ಮುದುಕಿಯ ಸೋಟಿ ತಿವಿದು ಗಂಡನೆದುರು ಕುಪ್ಪಳಿಸಿ ನಿಂತಳು. “ಯಾನೋ…. ಗಂಡ್ಸೇ…. ದುಡ್ಡು ಸಂಪಾದಿಸೋದು ಬುಟ್ಟು ಮರಾ ಮಾರಿ ಕೆಂಭಾಮಟ ಬಂದ್ಯಾ…. ನನ್ನೆಣಾಬೀಳ್ಲೀ…. ಸಿಂತೆ ಇಲ್ಲ….” ಅಬ್ಬರಿಸಿದಳು.

“ಲೇ ರಾಕ್ಕಚಿಮುಂಡೇರ…. ನಾನು ಗೊಂಡಸು…. ಬೇಕಾದ್ದು ಮಾರ್ಕೆಂತೀನಿ….. ಅದನ್ನ ಕೇಳಾಕೆ ನೀವ್ಯಾರು” ಭರಮ ಒದರಿದೇಟಿಗೆ ಮರ ಎಂಭೋಮರ ಅಳ್ಳಾಡಿ ಪ್ರತಿಭಟನೆ ಸೂಚಿಸಿತು.

ತಂತಮ್ಮದುಕ್ಕದಲ್ಲಿ ತಾವು ನಿರತರಾಗಲು ಕಂದಮ್ಮನ ಅರಣ್ಯರೋಧನ ಕೇಳಲಿಕ್ಕೆಂದು ಬಳಿಗೆ ನಾಯಿ ಬೆಕ್ಕು ಓಡಿ ಕುಯ್ ಕುಯ್ ರಾಗವಾಡಿದವು. ಓಹೋ ಎಂದಳುತ್ತಿದ್ದ ಕಂದಮ್ಮನ ಬಂಗಾರದ ಬಾಯಿಯಿಂದ ಓತೋಪ್ರೋತವಾಗಿ ಸುರಿಯುತ್ತಿದ್ದ ಚಾಕುಲೇಟಿನ ಅಂಟು ಅಂಟಾದ ದ್ರವದ ಆಸೆಯಿಂದ ನಾಯಿ ತನ್ನೆರಡು ಕಾಲುಗಳನ್ನು ಮಗುವಿನ ಭುಜಗಳ ಮೇಲೆ ಹಾಕಿ ನೀಳವಾಗಿ ನಾಲಿಗೆ ಚಾಚಿ ಕಂದಮ್ಮನ ಮೂಗು ಬಾಯಿ ಪರದೇಸವನ್ನು ಯಥೇಷ್ಟವಾಗಿ ನೆಕ್ಕಿತು. ಬೆಕ್ಕು ಮ್ಯಾವ್‌ಗುಟ್ಟುತ್ತ ಪ್ರತಿಭಟನೆ ಸೂಚಿಸಿತು.

ಹೆತ್ತವ್ವ ಮತ್ತು ಹೆಂಡತಿಯರೀರ್ವರ ಬೊಂಬಾಯಿಗೆ ತಡೆಯಲಾರದೆ ಭರಮ್ಯಾ ಉಳಿದಿದ್ದ ಯಾವತ್ತು ಹಣ ವಿನಿಯೋಗಿಸಿ ಕಂಠಮಟ ಕುಡಿದು ಬಂದು ನಿದ್ದೆ ಹೋದನು.

ಸೂರ್ಯಪರಮಾತುಮ ಹುಟ್ಟುವುದಕ್ಕೆ ಮುಂಚೆ ಹರಿಯುವ ಬೆಳಕಿನಂತೆ ಬೇವಿನಮರವನ್ನು ಭರಮ್ಯಾ ಮನಿಹಾಳು ಗೌಡಗೆ ಮಾರಿರುವ ಸಂಗತಿ ಕೇರಿ ಎಂಬೋ ಕೇರಿತುಂಬ ಹರಡಿಬಿಟ್ಟಿತು. ನಾಗವ್ವ ಮನಿಯೊಳಗಿನ ಸರ್ವ ಹನ್ನೊಂದು ಸಾಮಾನು ತಂದು ಬೆಳಕಿನ ಎಳೆ ಬೆಳಕಿನಲ್ಲಿ ಲಕಲಕ ಹೊಳೆಯುತ್ತಿದ್ದ ಬೇವಿನ ಮರದ ಕೊಂಬೆ ರೆಂಬೆಗೆ ಕಟ್ಟಿ ತೂಗಿಳಿಬಿಟ್ಟಳು. ಇನ್ನೊಂದು ರೆಂಬೆಗೆ ಹಗ್ಗದಿಂದ ತೊಟ್ಟಿಲು ಕಟ್ಟಿ ‘ಹೋ’ ಎಂದಳುತ್ತಿದ್ದ ತನ್ನ ಕಂದಮ್ಮನನ್ನು ಅದರಲ್ಲಿ ಕುಕ್ಕರು ಬಡಿದಳೂ. ಮುದುಕಿ ಮರದಡಿ ಮುರುಕು ಹೊರಸು ಹಾಕಿಸಿಕೊಂಡು ಅದರ ಮೇಲೆ ವಿರಾಜಮಾನಗೊಂಡು ಅಲಲಾ ಎಂದಬ್ಬರಿಸಲಾರಂಭಿಸಿತು ಇಡೀ ಓಣಿಗೆ ಕೇಳಿಸುವಂತೆ. ಮೇಲ್ಮನೆ ಸಿದ್ದಜ್ಜ ಕೆಳ್ಮನೆ ಕೇವಳಜ್ಜ; ಸಿಂಗಾರಿಗ; ಚವುಡ; ಅಲಸಂದಿಕಳ್ಳ ಇವೇ ಮೊದಲಾದ ಕೇರಿಯ ಪ್ರಮುಖರು ಒಬ್ಬೊಬ್ಬರಾಗಿ ಮುದುಕಿ ಸುತ್ತ ಜಮಾಯಿಸಿ, ಕೊರೆಚುಟ್ಟ ಹಚ್ಚಿಕೊಂಡು ಬುಸು ಬುಸು ಹೊಗೆ ಬಿಡತೊಡಗಿದರು.

ಹೊತ್ತು ಹುಟ್ಟಿ ಎರಡೂವರೆ ಗೇಣು ಮೇಲೇರುತ್ತಲೆ ಮಾರಕಾಯುಧಗಳನ್ನು ಹಿಡಿದುಕೊಂಡಿದ್ದ ಪಡೆಯ ನೇತೃತ್ವವಹಿಸಿ ಅಷ್ಟೊತ್ತಿಗೆ ಎಲ್ಡುಧರಾಮು ಹಾಕಿಕೊಂಡು ಭರಮ್ಯಾ ಬಂದುಬಿಟ್ಟನು.

“ಬಾಡ್ಕಾವ್ ಸೂಳ್ಯಾಮಕ್ಳಾ ನೀವು ಗಂಡುಸ್ರಾಗಿದ್ರೆ ಮರಾನ ಮುಟ್ತೀರಿ….” ಎಂದೋಡಿ ಬಂದದ್ದೇ ಮರದ ಬೊಡ್ಡೆ ಏರಿ ಅಬ್ಬರಿಸಿತು ಮುದುಕಿ.

“ಈ ನನ್ ಮನಿಮುರಕ ಗಂಡ ಯ್ಯೋಳಿಬುಟ್ಟ…. ನೀವು ಬೊಂದುಬುಟ್ರಾ…. ಥೂ…. ನಿಮಬಾಯಾಕಽ,” ನಾಗವ್ವ ಮರವನ್ನು ಎರಡು ಸುತ್ತು ಪರದಕ್ಷಿಣೆ ಹಾಕಿ ಕುಪ್ಪಳಿಸಿ ನಿಂತಳು. “ಇದು ನಮ್ಮತ್ತಿ ಸಾಕಿ ಬ್ಯೆಳೆಸಿದ ಮರ…. ತಿಳಿತೇನ್ರಲೋ.”

“ನಾನು ಆಕೀಮಗ…. ನಂಗಿದ್ರಮ್ಯಾಲೆ ಅಧಿಕಾರೈತೆ!” ಭರಮ್ಯ ಏರಿಹೋದದ್ದನ್ನು ಕೇವಳಜ್ಜ ಬಲವಾಗಿ ತಡೆದನು. “ಈ ಮರ ಕೇರಿಗೆ ಆಸ್ತಿ ಇದ್ದಂಗಲೇ ವುಡ್ಗ ಮುಂಡೇದೇ” ಎಂದು.

“ದುಡ್ಕಂಡು ತಿಂಭೋರು ನಾವು ನೀವೂ ಒಂದೆ…. ನಮ್ಮಿಬ್ರು ನಡ್ವೆ ಜಗಳ ಇಟ್ಟು ಗೋಡ ತಮಾಷೆ ನೋಡ್ತಿರಬಹುದು. ಬರ್ರೆಲೆ ಯಾಕಿದ್ದೀತು. ಕೂಲಿ ರೊಕ್ಕನ ಆತನ ಮೊಖದಮ್ಯಾಕೆ ಬಿಸಾಕಿ ಬ್ಯಾರೆ ಬೊದ್ಕೀಗೆ ಹೋಗಾಣು,” ಕೊಟ್ರ ತನ್ನ ಸಂಗಡಿಗರೊಂದಿಗೆ ವಾಪಾಸಾದನು.

“ಅವ್ರುವೋಗಿ ಬುಟ್ರಂದಾಕ್ಷಣ ಕಂಟಕ ಇಲ್ಗೆ ಬಗೆಹರೀತೂಂತ ತಿಳ್ಕಬ್ಯಾಡಬೇ ಮುದ್ಕೀ….” ಸಣ್ಣೀರಜ್ಜ ಹೇಳಿದ್ದು ನಿಜವೆಂಬಂತೆ ಕೆಮ್ಮು ದಮ್ಮಿನ ಗೋಡ ಇಪ್ಪತೈದು ಮಂದಿ ಬಲವಾದ ಆಳುಗಳೊಂದಿಗೆ ಬಂದು ಮರಕ್ಕೆ ಕೈಹಚ್ಚಿಸಿದ. ಆಗ ಮನೆಮನೆಯ ಮೇಲೆ ಅವಿತಿದ್ದ ಚಿಳ್ಳೆಮಿಳ್ಳೆಗಳು ಕಲ್ಲುಗಳ ಮಳೆಯನ್ನೇ ಕರೆದು ಓಡಿಸಿಬಿಟ್ಟರು ಅವರೆಲ್ಲರನ್ನೂ.

“ಕಂಟಕ ಇಷ್ಟಕ್ಕೇ ಬಗೆಹರಿತಂತ ತಿಳೀಬ್ಯಾಡಬೇಮುದ್ಕಿ” ಎಂದು ಅಲಸಂದಿ ಕಳ್ಳ ಹೇಳಿದ. ಸೊಲುಪ ಹೊತ್ತಿಗೆ ಗೋಡ ಇಲೇಜು ಅಕೌಂಟೆಂಟು ಮತ್ತು ಪೀಸಿ ರಂಗಣ್ಣನೊಂದಿಗೆ ಮೀಸೆತಿರುವುತ್ತ ಬಂದನು. ಅವರನ್ನು ಮಾನವರೊಂದೇ ಅಲ್ಲದೆ ಮರದ ಮೇಲಿದ್ದ ಹಿರಿಕಿರಿಯ ಪಕ್ಷಿಗಳು ಒಂದೆರಡು ಚಣದಲ್ಲಿ ನಿರಾಶ್ರಿತರಾಗುವ ತಮ್ಮಗತಿಗೆ ದಿಗ್ಭ್ರಮೆಯಾಗಿ ಚೀರಾಡುತ್ತ ನೆಗೆದಾಡತೊಡಗಿದವು. ಇಡೀ ಮರ ಚವುಡಿಕೆ ಮೀಟಿದಂತೆ ಸದ್ದು ಮಾಡಿತು.

ತಾನೊಬ್ಬ ಮಹಾತತ್ವಜ್ಞಾನಿಯಂತೆ ಅದುವೆರೆಗೆ ಮಾತಾಡುತ್ತಿದ್ದ ಗೌಡ ಕಣ್ಣು ಮಿಟುಕಿಸಿ ಮರದ ಮೇಲೆ ದಾಳಿ ಮಾಡಲು ತಮ್ಮವರಿಗೆ ಸೂಚಿಸಿದ. ಹೊಸ ಬ್ರಿಸ್ಟಾಲ್ ಪ್ಯಾಕಿನಿಂದ ಸಿಗರೇಟು ಹಚ್ಚಿದ ಪೀಸಿ ರಂಗಣ್ಣ ಕೇರಿಜನರ ಕಡೆ ತಿರುಗಿ “ಲ್ರೇ…. ಈ ಪೀಸಿ ರಂಗಣ್ಣನ ಲಿಸ್ಟಿಗೆ ಬಿದ್ದಿರಂದ್ರೆ ಮೈಮುಪ್ಪಾಗೋದಂತು ಗ್ಯಾರಂಟಿ… ಮರ ಕಡಿಯೋದ್ನ ನೋಡ್ತ ತೆಪ್ಪಗೆ ಕುಂತಿರಿ” ಎಂದು ಎಚ್ಚರಿಸಿ ತನ್ನನ್ನು ಕಳಿಸಿಕೊಟ್ಟ ಎಸೈ ಸಾಹೇಬರನ್ನು ಮನದಲ್ಲೆ ನೆನೆದ. ಆ ಮಾತಿಗೆ ಭಯ ಪಟ್ಟು ಕೆಲವರು ಹೋದಂತೆ ನಟಿಸಿ ಅಲ್ಲಲ್ಲಿ ನಿಂತರು.

ರಾತ್ರಿಯಿಂದ ಉಂಡರೂ ಉಪಾಸವಿದ್ದ ನಾಗವ್ವ ತಲೆ ತಿರುಗಿ ನೆಲಕ್ಕೊರಗಿದಳು.

“ನಾಗವ್ಗೇನಾತೋ ಏನೋ…. ಓಗಿ ಒಂಚೂರು ಇಚಾರಿಸ್ರೆಪೋ” ಮಾಳವ್ವ ಎಲ್ಲರಿಗೂ ಕೇಳಿಸುವಂತೆ ಕೂಗಿದಳು. “ಕೂಸಿನ್ತಾಯಿ ಬೇಸಿದ್ರೆ ಊರೇ ಬೇಷಿದ್ದಂಗೆ.”

ವುಸ್ರಾಟ ಸಜ್ಜಿಲ್ಲ. ಪ್ಯಾಟಿಗೆತ್ತಬೇಕಾತೈತೋ ಯ್ಯೇನೋ, ನಾಡಿ ನಿಪುಣ ಕುರುಬರ ಸೋಮಣ್ಣ ನೋಡಿ ಬಂದು ಹೇಳಿದ.

ಆ ಮಾತು ಕೇಳಿಸಿಕೊಳ್ಳುತ್ತಲೆ ಮುದುಕಿ ಒಬ್ಬನ ಕೈಯಿಂದ ಕೊಡಲಿ ಕಿತ್ತುಕೊಂಡು ನನ್ನ ಸ್ವಸಿಗೇನಾದ್ರೂ ಆದ್ರೆ ನಿಮ್ಮನ್ನ ಸುಮ್ನೇ ಬುಡಾಕಿಲ್ಲ…. ದೆವ್ವಾಗಿ ಬಂದು ಬಲಿತಕ್ಕಂತೀನಿ….ನೋಡ್ತೀರಿ ಹ್…ಹ್….ಹ್…. ಲಬೋಲಬೋ ಬಾಯಿ ಬಡಿದುಕೊಳ್ಳುತ್ತ ಒಳಗೂ ಹೊರಗೂ ಅಡ್ಡಾಡುತ್ತಿತ್ತು ಮುದುಕಿ ಸೇವುಡವ್ವಾ….

ಮರಕ್ಕೆ ಜೋತು ಬಿದ್ದಿದ್ದ ತೊಟ್ಟಿಲಿಂದ ಹೋ ಎಂದಳುತ್ತಿದ್ದ ಕಂದಯ್ಯನನ್ನು ಕಂಕುಳಿಗೆ ಸಿಕ್ಕಿಸಿಕೊಂಡ ಭರಮ್ಯಾ “ಓಗಬೇ ಓಗು…ನಿನೂ ಆಕಿ ಇಬ್ರೂ ದೆವ್ವಾರ ಆಗ್ರಿ ಪಿಚಾಚ್ಯಾರ ಆಗ್ರಿ….ಅದ್ಕೆಲ್ಲ ಇಲ್ಲಿ ಯದ್ರೋಲ್ಲ” ಎಂದು ಗದರಿಸಿ, ಕಾನೂನಂದ್ರೆ ಕಾನೂನು….ಅದೇ ಎಲ್ಲ ದೆವ್ವ ಪಿಚಾಚಿಗಳಿಗಿಂತ ದೊಡ್ದು….

ಅಷ್ಟೋತ್ತು ದಮ್ಮಾರಿಸಿಕೊಳ್ಳುತ್ತ ಕುಂತಿದ್ದ ತಿಂದಜ್ಜ ಕೋಲಿನಾಸರೆಗೆ ಕೈ ಕೊಟ್ಟು ಮೇಲೆದ್ದು ಸುತ್ತ ಕಣ್ಣಾಡಿಸಿದ. ಗೌಡ ತಮ್ಮನ್ನೂ ಒಂದು ಮರ ಅಂತ ತಿಳಿದುಕೊಂಡರೆ ಹೇಗೆ ತಪ್ಪಿಸಿಕೊಳ್ಳುವುದೆಂದು ಯೋಚಿಸುತ್ತಿರುವವರಂತೆ ನಿಂತಿದ್ದ ತಮ್ಮ ಕೇರಿ ಜನ ಬೇವಿನ ಮರವನ್ನಾಗಲೀ ನಾಗವ್ವನನ್ನಾಗಲೀ ರಕ್ಷಿಸಲು ಅಸಮರ್ಥರೆಂದೂಹಿಸಿಕೊಂಡು ನಿಟ್ಟುಸಿರುಬಿಟ್ಟ…. ಎಂಥ ಸುಮಾರು ಕಾಲ ಬಂತಲ್ಲಾ ಸಿವ್ನೇ ಎಂದು ಗೊಣಗುತ್ತ ಮರದ ಕಡೆ ನಡೆದು ತಿಂದಜ್ಜ ಅದಕ್ಕೆ ತನ್ನ ಮೈ ಆನಿಸಿ ಅದೇಸ್ನೂರುಜನ ಬಂದು ಕಡಿತಾರೊ ಕಡೀಲಿ ಎಂದು ಸರ್ವರಿಗೆ ಕೇಳಿಸುವಂತೆ ಗೊಣಗಿದ.

“ತಿಂದಜ್ಜಾ….ನಿಂಗ್ಯಾಕ ಬೇಕು ಯಿದ್ರ ಉಸಾಬರಿ…. ಇವತ್ತೋ ನಾಳ್ಯೋ ಸಾಯೋನ್ಗೆ” ಗೌಡ ಮೆತ್ತಗೆ ಬುದ್ಧಿ ಹೇಳಿದ. “ಇದು ನಂ ಕ್ಯೇರಾಗಿನ ಮಾತು ಗೋಡಾ….ನಮ್ ಕೇರ್‍ಯಾಗ ಒಂದು ಬೇವಿನಮರಾನಾದ್ರು ಇರಾಕೆ ಬುಡಬಾರದಂದ್ರೆಂಗೆ…. ಕ್ವಕ್… ಕ್ವಕ್….” ಮುದುಕ ಮರದ ಕಾಂಡಕ್ಕೆ ಮುತ್ತಿಟ್ಟ.

“ಏಯ್ ಮುದ್ಕಾ….ರೊಕ್ಕ ಕೊಟ್ಟು ಕೊಂಡ್ಕೊಂಡಿರೋ ಮರ….ಕಡ್ಕೋತಾರೆ….ಒಳ್ಳೇಮಾತೀಲಿ ಈ ಕಡೆ ಬಾ” ಪೀಸಿ ರಂಗ ಖಾಕಿ ಶೈಲಿಯಲ್ಲಿ ನುಡಿದ.

ಗೌಡನ ಆಜ್ಞೆ ಮೇರೆಗೆ ಗಿಡ್ಡ ಲುಂಗಿ ಅಡರುಗಟ್ಟಿ ಮುದುಕನ ರೆಟ್ಟೆಗೆ ಕೈಹಚ್ಚಿ ತಿಣುಕಿದ. ಸೌಗಂಧಿಕಾ ಪುಪ್ಪಹರಣದ ಕಾಲಕ್ಕೆ ಭೀಮನಿಂದ ಹನುಂತನ ಬಾಲ ಎತ್ತಲಿಕ್ಕೆ ಹೇಗೆ ಸಾಧ್ಯವಾಗಲಿಲ್ಲವೋ ಹಾಗೆ ಗಿಡ್ಡಗೆ ತಿಂದಜ್ಜನ ರೋಮ ಕೊಂದಿಸಲಾಗಲಿಲ್ಲ.

“ಎಲಾ ಇವ್ನ” ಕಳೆದವಾರವಷ್ಟೆ ಇಪ್ಪತ್ತೈದನೇ ಇಂಕ್ರಿಮೆಂಟು ಪಡೆದು ಸಿಲ್ವರುಜುಬ್ಲಿ ಆಚರಿಸಿರುವ ಪೀಸಿರಂಗಣ್ಣಗೆ ತಾನು ಗೌಡನಿಂದ ಪಡೆದಿರುವ ನೂರಾ ಒಂದರ ಋಣ ತೀರಿಸಲು ಉಡದಂತೆ ಕೂತಿರುವ ಮುದುಕನನ್ನು ಮರದ ಬೊಡ್ಡೆಯಿಂದ ಕದಲಿಸಲೇ ಬೇಕೆನಿಸಿತು.

ಎಂಥೆಂಥೋರ್‍ನೇ ನಡುಗಿಸಿರುವ ಲಾಠಿ ಇಂದ್ರನ ಕೈಯ ವಜ್ರಾಯುಧಕ್ಕಿಂತ ಯಾವುದರಲ್ಲಿ ತಾನೆ ಕಡಿಮೆ. ಕೋಪದಿಂದ ಬಾಂಛೋದ್ ಎಂದು ಝಳಪಿಸಿದ. ಮೊದಲೇ ಆತ ಕೆಟ್ಟಿರುವ ಲಿವರ್ರನ್ನೇ ಕೇರುಮಾಡದೆ ಡ್ಯೂಟಿಮಾಡುವ ಮನುಷ್ಯ.

ಭಿಕ್ಷೆ ಎತ್ತಲು ಪಕ್ಕದ ಹಳ್ಳಿಗಳಿಗೆ ಹೋಗಿದ್ದ ಹುಲಿಗೆಮ್ಮ ಓಡಿ ಬಂದು…. ಸಾರೂ ನಮ್ ಮುದಕನ ತಂಟೆಗೋಗಬ್ಯಾಡ….ಎಂದು ಅಡ್ಡ ನಿಂತಳು. ತನ್ನ ಹೆಗಲಗುಂಟ ಇಳಿಬಿದ್ದಿದ್ದ ಚವುಡಕೆಯಿಂದ ಟಿವ್ ಟಿವ್ ನುಡಿಸುತ್ತ “ರಾಮನೇ-ಪರಶುರಾಮನೇ-ಅರಣ್ಯದೊಳಗೆ ಕೋರಣ್ಯ ಮಾಡೋಳೆ-ದೇವದಾರಿ ಹೆಣ್ಣೆಂತ ನೆಲಸ್ಸಾಳೆ-ಯಲ್ಲವ್ವ-ದೇವಿಗತಿ ಎಂದು ನಡೆದೇವೋ….” ಎಂದು ಕುಣಿಯುತ್ತ ಹಾಡಲಾರಂಭಿಸಿದಳು. ಬಂಗಾರ ಬಣ್ಣದ ಹುಡಿಯನ್ನು ಜೋಳಿಗೆಯಿಂದ ತೆಗೆದು ಮರ ಕಡಿಯಲು ಬಂದವರ ಮೇಲೆರಚಿದಳು. ಹೆಣ್ಣು ದೇವತೆಗಳಿಗೆ ಸೊಲುಪಾದರೂ ಹೆದರುವ ಗೌಡ ಯವ್ವೋತಾಯಿ ನಿಂಗೆ ಬೆಳ್ಳಿ ಛತ್ರಿ ಮಾಡಿಸ್ತೀನಿ ಮರನ ಭೂಮಿಗುರುಳಿಸೂ….ಎಂದು ಬೇಡಿಕೊಂಡ.

ಪೊಲೀಸ್ರೆ ನಿಂತಮ್ಯಾಕೆ ಮರ ಬೂಳ್ದಂಗಿದ್ದೇತೇನು!….ಎಂಕಟಿ ಬೆಣ್ಣೆ ಮಾತಾಡಿ ಅಂತೂ ಭರಮ್ಯಾನಿಂದ ಸಿಗರೇಟು ಗಿಟ್ಟಿಸುವಲ್ಲಿ ಯಶಸ್ವಿಯಾದನು.

ತನ್ನ ಜೀವದ ಜೀವ ಮರದ ಬೊಡ್ಡೆಗೆ ತಲೆಗೆ ಢೀಕೊಡಲಾಗದೆ ಮುದುಕಿ ಭೂಮಿಯನ್ನು ನಗಾರಿಯಂತೆ ಬಡಿದುಕೊಳ್ಳುತ್ತ “ಅಯ್ಯೋ ನನ್ನ ಸೊಸಿ….ಅಯ್ಯೊ ನನ್ ಮರ….”ಎಂದಬ್ಬರಿಸುತ್ತಿತ್ತು. ಮರದ ಕೊಂಬೆರೆಂಬೆಗಳಲ್ಲಿ ಕಟ್ಟಿದ್ದ ಮನೆಯ ಸಾಮಾನು ಮುಂಕಟ್ಟುಗಳನ್ನು ಗೌಡನ ಆಳುಗಳು ಬಿಚ್ಚಲಾರಂಭಿಸಿದ್ದರು. ಪಕ್ಷಿಗಳ ಚೀತ್ಕಾರ ಮುಗಿಲಿಗೆ ಮುಟ್ಟಿತ್ತು. ಮರದ ಬೊಡ್ಡೆ ಮೇಲೆಲ್ಲ ಗಿಡ್ಡ ಇದ್ದಿಲಚೂರಿನಿಂದ ರೇಖಾ ಗಣಿತ ಬರೆಯತೊಡಗಿದ್ದ ಕಡಿವವರಿಗೆ ಅನುಕೂಲವಾಲೆಂದು….ಅಲ್ಲದೆ ಪೀಸಿ ರಂಗಣ್ಣ ಸೋಗುಗಿವಿಯಲ್ಲಿ ತನ್ನ ದಂತಕ್ಷಯದ ಬಾಯಿ ಇರಿಸಿ ಕೇರಿಯ ಶಿವುಗ ತಮ್ಮೀಕೇರಿಯಲ್ಲಿ ಯಾರು ಗಾಂಜಾ ಬೆಳೆಯುತ್ತಿರುವರು, ಯಾರು ಕಳ್ಳಭಟ್ಟಿ ಇಳಿಸುತ್ತಿರುವರು, ಅಕ್ಕಪಕ್ಕದ ಊರುಗಳಿಗೆ ಹೋಗಿ ಯಾರ್‍ಯಾರು ಸೂಳೆಗಾರಿಕೆ ಮಾಡುತ್ತಿರುವರು ಎಂದು ಗುಟ್ಟಾಗಿ ಮಾಯಿತಿ ನೀಡುತ್ತಿದ್ದನು. ಪದ ಹಾಡುತ್ತ, ಕುಣಿಯುತ್ತ ಮೈಮರೆತಿದ್ದ ಹುಲಿಗೆವ್ವನ ದೇಹದ ಆಯಕಟ್ಟಾದ ಜಾಗಗಳನ್ನು ಗಮನಿಸುತ್ತಿದ್ದ ರಂಗಣ್ಣ ಎಷ್ಟು ಕೇಳಿಸಿಕೊಂಡನೋ ಬಿಟ್ಟನೋ!

ಅಯ್ಯೋ ದ್ಯಾವ್ರೆ ನನ್ ಕೊಣ್ಣುಮುಚ್ಕೋ….ನನ್ ಸೊಸಿ ಕಣ್ ತಗೀವಲ್ಲು….ನನ್ ಮರಽನ ಉಳ್ಸೋ ಪರಾಕ್ರಮಿ ಗಂಡ್ಸು ಈ ಭೂಮಿಮ್ಯಾಕೆ ಇಲ್ಲೇನು…. ಇಂಥ ನರಸತ್ತ ಮೊಗುನ್ನ ಯಾಕಕ್ವಟ್ಟಿ ದ್ಯಾವ್ರೆ….ಬಂಜೇನಾದ್ರು ಮಾಡಬಾರ್‍ದಾಗಿತ್ತೇ…. ಎಂದು ಎದೆ ಎದೆ ಬಡಿದುಕೊಳ್ಳುತ್ತಿರುವ ತನ್ನ ತಾಯಿ ಈಕ್ಷಣ ಸತ್ತರೆಲ್ಲಿ ಹೆಣ ಹುಗಿಯಲು ಕೈಯಲ್ಲಿ ತಕತಕ ಕುಣಿಯುತ್ತಿರುವ ಹಣವನ್ನು ಖರ್ಚು ಮಾಡಬೇಕಾಗಬಹುದೋ ಎಂದು ಭರಮ್ಯ ಹೆದರಿ, ಬ್ಯೇ ಸುಮ್ಕಿರಬೇ ನಿಮವ್ನ, ಎಂದು ಕೂಗಿದ. ಮತ್ತೆ ಮುದುಕಿ ಪವುರುಷದಿಂದ ಪೀಸಿ ರಂಗಣ್ಣ ಮುಂದೆ ಕುಪ್ಪಳಿಸಿ ನಿಂತು. ಪೋಲೀಸಪ್ಪ….ನೀನಿಕಂಡಿರೋ ಕೋಲಿಗಾಗ್ಲೀ….ನೀ ತೊಟ್ಕಂಡಿರೋ ದಿರಿಸಿಗಾಗ್ಲೀ ಯದ್ರೋಳಲ್ಲ ಈ ಸೆವುಡೀ….ಮರಕಡ್ಸೋ ನಿನ್ ಕಾನೂನ್ಗೆ ಬೆಂಕಿ ಬೂಳ್ಲಿ….ನಿಂ ಕೈಯಲ್ಲಿ ಸೇದಿವಾಗ್ಲಿ. ಕ್ವಕ್….ಕ್ವಕ್ ಎಂದುಗುಳು ಸಿಂಪಡಿಸಿ ಮಾತಾಡಿತು.

ಮರದ ಸುತ್ತು ಕಟುಕರ ಕೊಡಲಿ ಹಿಡಿದು ಒಲ್ಲದ ಮನಸಿನಿಂದ ನಿಂತು ಮರದ ಕಡೆ ಪಿಳಿಪಿಳಿ ಕಣ್ಣುಬಿಟ್ಟರು. ಇಡೀ ಕೇರಿಯ ಇಡೀ ಶೂದ್ರ ಸಮುದಾಯದ ಇಚ್ಚಾ ಶಕ್ತಿಯೇ ಮರ ರೂಪ ಧರಿಸಿ ನಿಂತಿರುವಂತೆ ಕಂಡಿತವರಿಗೆ….ಕೊಡಲಿ ಎತ್ತುವ ಶಕ್ತಿಯೇ ತಮ್ಮ ರೆಟ್ಟೆಗಳಲ್ಲಿ ನಶಿಸಿ ಹೋಗಿದೆ ಎನ್ನಿಸಿ ಮಂಕಾದರು.

ಚಣದಿಂದ ಚಣಕ್ಕೆ ರಾಪಾಗುತ್ತಿದ್ದ ಹುಲಿಗೆವ್ವನಂತೂ ಮೈ ಮೇಲಿನ ಬಟ್ಟೆ ಖಬರಿಲ್ಲದೆ ಚವುಡಿಕೆ ಟಿವ್ವ….ಟಿವ್ವ ನುಡಿಸುತ್ತ ಹಾವಿನ ಹಾಸಿಗೆ ಚೇಳಿನ ತಲೆದಿಂಬು ನಾಗರಾವುನಡುಕಟ್ಟು ಈವೂರ ತಾಯಿಗೆ ಬಿರುದು ಸಲುವಾವೆ….ಟೆವ್….ಟೆವ್….ವೇಗದ ಗತಿಯಲ್ಲಿ ಹಾಡುತ್ತ….ಕುಣಿಯುತ್ತ ಚಿನ್ನದ ಹುಡಿಯಂಥ ಭಂಡಾರ ಚೆಲ್ಲಾಡುತ್ತ….ಮರವನ್ನು ರವಂಡು ಹಾಕಿ ನುಗ್ಗಿದಳು ಒಳಕ್ಕೆ….ಮೈಮೇಲೆ ಖಬರಿಲ್ಲದೆ ಮಲಗಿದ್ದ ನಾಗವ್ವನ ಎದೆ ಮಾತ್ರ ದೀರ್ಘ ಉಸಿರಾಟಕ್ಕೆ ಏರಿಳಿಯುತ್ತ ವಿಚಿತ್ರ ಸವಂಡು ಉಂಟು ಮಾಡಿದ್ದ ಪವಿತ್ರ ತಾವಿಗೆ.

ಚವುಡಿಕೆ ಸ್ವರ ಕಳೆದುಕೊಂಡು ಹರಿದ ತಂತಿ ದೇವಿಯ ಹರಿದ ರೋಮದಂತೆ ಕೆಳಕ್ಕೂ ಮ್ಯಾಕೂ ಜೋಕಾಲಿ ಆಡುತ್ತಿರುವಾಗ ಭಂಡಾರದ ಹುಡಿ ಪುತು ಪುತು ಅಂತ ಸಾದ್ವಿ ನಾಗವ್ವನ ದುಂಡು ಮುಖದ ಮೇಲುದುರಿತು. ಎಲ್ಲಿ ಕಾಣೆಲ್ಲಿ ಕಾಣೆ. ಎಲ್ಲವ್ವನಂತಾಕಿನೆಲ್ಲಿಕಾಣೆಲ್ಲಿ ಕಾಣೆ….ಕಂಚಿನ ಕಂಠ ನಿರರ್‍ಗಳವಾಗಿ ಹರಿಸುತ್ತ ಹುಲಿಗೆವ್ವ ಚವುಡಿಕೆಯನ್ನು ನುಡಿಸುತ್ತ ಕುಣಿದಾಡಿದಳು. ಗೆಜ್ಜೆ ಕಾಲುಗಳಿಂದ, ಮೇಲಿಂದ ಮೇಲೆ ಉದುರುತ್ತಿರುವ ಭಂಡಾರ….ಬಡವರದಲ್ಲ ಮನೆ ಅದು ಶ್ರೀಮಂತರ ಬಂಗಾರದ ಮನೆಯಂತೆ ಕಂಡಿತು ಒಂದು ಚಣ ಬಂಗಾರದ ಹುಡಿಯೊಳಗೆ.

ಮಾರೆಮ್ಮ ತಾಯೆ ನಿನಗಾರು ಸರಿಯೇ ಸರಿ ಅಂದವರ ಹಲ್ಲುಮುರಿಯೇ….ಬಹುಪರಾಕ್….ಹುಲಿಗೆವ್ವನ ಧ್ವನಿ ಸುತ್ತ ಇದ್ದ ಜನ ಧ್ವನಿ ಸೇರಿಸಲು ಮಾಡಿನಿಂದ ಮಣ್ಣುದುರಿತು. ಬೇವಿನಮರ ಎಲೆ ಉದುರಿಸಿ ಹರ್ಷ ಪ್ರಕಟಿಸಿತು.

“ಎದ್ದೇಳೆ ತಾಯಿ! ನಾಗವ್ವನ ಮೈಯಾಗ ಯಾಕ ಹೊಕ್ಕಂಡಿದೀ…ನಿನ್ ವಾಸಸ್ಥಾನ ಕಡಿಯಾಕ ಹತ್ತಿರೋದು ನೋಡಿದ್ರು ನೋಡ್ದೋಳಂಗೆ ಮಲಿಕ್ಕಂಡೀಯಲ್ಲಬೇ ತಾಯಿ….ಎಂಥೆಂಥ ರಾಕ್ಷಸರ್‍ನ ಧ್ವಂಸ ಮಾಡ್ದೋಳು ನೀನು….ಈಗ ತೋರಿಸೇ ನಿನ್ನ ಪ್ರತಾಪ…..” ಹುಲಿಗೆವ್ವ ಮಾಂತ್ರಿಕ ಶೈಲಿಯಲ್ಲಿ ಮಾತಾಡುತ್ತ ಒಂದು ಹಿಡಿ ಕುಂಕುಮ ತೆಗೆದು ನಾಗವ್ವನ ಮುಖದ ಮೇಲೆ ಸುರಿದಳು…. ಸುರಿಯುತ್ತ ರಕ್ತದಲ್ಲಿ ಅದ್ದಿ ತೆಗೆದಂತೆ ಕಂಡಿತು ಆಕೆಯ ಮೊಗ….ಪ್ರಪಂಚವನ್ನೆಲ್ಲ ಆಪೋಶನ ತೆಗೆದುಕೊಳ್ಳಲಿರುವವಳಂತೆ ಕಣ್ಣು ತೆರೆದು ಎಚ್ಚರಾದಳು ನಾಗವ್ವ….ಮುಗಿಲಮಟ ನಿಲ್ಲುವವಳಂತೆ….ನೆಲವನ್ನು ಪಾತಾಳಕ್ಕೆ ತಳ್ಳುವವಳಂತೆ ಆಕೆ ನಿಂತೇಟಿಗೆ ಜನ ಎಂಭೋಜನ ನಾಗವ್ವನ ಮೈಯಾಗ ಅವ್ವ ವಕ್ಕಂಡವಳೇ…. ಎಂದು ಹರ್ಷೋದ್ಗಾರ ಮಾಡಿದರು….ತಲೆಯನ್ನೂ ಅತ್ತ ಇತ್ತ ವೇಗವಾಗಿ ತಿರುಗಿಸುತ್ತ ನಾಗವ್ವ ಬಾಗಿಲಕಡೆ ಹೆಜ್ಜೆ ಇಡಲು ಹುಲಿಗೆವ್ವ ಚವುಡಿಕೆ ಹರಿದು ಹೋಗುವಂತೆ ನುಡಿಸತೊಡಗಿದಳು.

ಮೊದಲಿಗೆ ನಾಗವ್ವ ನಾಟಕ ಆಡ್ತಿದಾಳೇನೋ ಎಂದು ಭಾವಿಸಿದ ಗೌಡ ಉರಿಯುತ್ತಿದ್ದ ಕರ್ಪುರವನ್ನೇ ಆಕೆ ಬಾಯಲ್ಲಿಟ್ಟುಕೊಂಡು ನುಂಗುತ್ತಲೆ ಹಡಲ್ಲಾಗಿ ಹೋದನು. ದೋತರ ಒದ್ದೆ ಮಾಡಿಕೊಂಡು ಯವ್ವೇ ತಾಯಿ ಎಂದು ತನ್ನ ಪಾದಕ್ಕೆರಗಿದ ಗೌಡನ ಬೆನ್ನ ಮೇಲೆ ಕಾಲಿಟ್ಟು ಪೀಸಿ ರಂಗಣ್ಣನ ಕಡೆ ನುಗ್ಗಿದಳು ಬಿರುಗಾಳಿಯಂತೆ…. ಆ ಬಿರುಗಾಳಿಯಲ್ಲಿ ತರಗೆಲೆಗಳಂತಾದ ಪೀಸಿ ರಂಗಣ್ಣ, ಗಂಡ ಭರಮ್ಯಾ….ಮುಂತಾದವರನ್ನು ಓಡಿಸಿಕೊಂಡು ಬಹು ದೂರದವರೆಗೆ ಓಡಿಸಿಕೊಂಡು ಹೋದಳು.

ಸಂತೋಷದಿಂದ ಗಾಳಿಗೆ ಸಮಸ್ತ ಅಂಗೋಪಾಂಗ ಮಿಸುಕಾಡಿಸಿದ ಬೇವಿನ ಮರದ ಮೇಲೆ ಪಕ್ಷಿಗಳು ಕುಣಿದು ಕುಪ್ಪಳಿಸಿದವು.
*****

ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.