೧
ಕಾಲಪುರುಷರು ಧೈರ್‍ಯ ಸಾಲದಾಯಿತು ಇಂದು
ನಿನ್ನ ಕೊಂಡೊಯ್ಯುವೊಡೆ ಕೈ ನಡುಗಿತು;
ಉಕ್ಕಿನೆದೆ ಬಂಟನಿಗು ಕಂಟಕವನೊಡ್ಡುವರೆ
ಕವಡುಗಂಟಕ ವಿಧಿಯ ಎದೆಯುಡುಗಿತು!
೨
ಭಾರತವಿಯತ್ತಳದಿ ವೈರಿಬಲದೆದುರಿನಲಿ
ಗುಡುಗು ಹಾಕಿದ ಗಂಡುಗಲಿಯು ನೀನು
‘ವೀರ ವಲ್ಲಭಭಾಯಿ ನಾಡಗುಡಿಯನು ಕಾಯಿ’
ಎಂದು ಮೊರೆದವು ಎಲ್ಲ ಗಿರಿಯ ಸಾನು!
೩
ಇಂದಾರ ಕೇಳುವದು ಎಂದು ವಿಹ್ವಲಗೊಂಡು
ನೈರಾಶ್ಯದಲಿ ನಿಂದು ಭರತಮಾತೆ
ಅಷ್ಟ ದಿಗ್ಗಜಗಳಿಗೆ ಹಂಬಲಿಸಿ ಕೈಚಾಚಿ
ಅರಸುತಿಹಳಾ ತಾಯಿ ಶೋಕಭರಿತೆ.
೪
ಭರತಭೂಮಿಯ ದಂಡೆಗಪ್ಪಳಿಸುತಿಹವಿಂದು
ಶೋಕಸಾಗರದೆದೆಯ ಬಲ್ದೆರೆಗಳು-
ಒಂದಾದರಿನ್ನೊಂದು ಬರುವ ವಜ್ರಾಘಾತ-
ಕೀಡಾಗಿ ನರಳುತಿದೆ ಜನದ ಬಾಳು.
೫
ಧೀರ ಜವಹರ ಕೂಡ ಮಗುವಾಗಿ ಮರುಗಿಹನು
ನಮ್ಮ ಪಾಡನು ಬೇರೆ ತೋಡಬೇಕೆ?
ನೋಡನೋಡುತ ಬಂಡೆಗಲ್ಲಿಗಪ್ಪಳಿಸುತಿರೆ
ಉರುಳಿ ಹೊರಳಾಡದೆಯ ರಾಷ್ಟ್ರನೌಕೆ?
೬
ನ್ಯಾಯನಿಷ್ಠುರ ಧರ್‍ಮದಸ್ತಿವಾರದಿ ರಾಜ್ಯ
ರಂಗವನು ನಿರ್‍ಮಿಸಿದ ಚತುರ ನೀನು,
ರಾಜಕೀಯಕು ಸಾಜಮಾದ ತೇಜವ ತಂದ
ವೀರವಿಲಸತ್ಪ್ರಭೆಯ ದಿವ್ಯ ಭಾನು!
೭
ರಾಜ್ಯ ಸಾಮ್ರಾಜ್ಯಗಳ ಗಳಿಸಿ ಉರುಳಿಸಬಹುದು
ನಾಡಕಟ್ಟುವ ಚಮತ್ಕೃತಿಯೆ ಬೇರೆ,
ಪರಪೀಡೆಗೆಡೆಗೊಡದೆ ಸ್ವಾರಾಜ್ಯಕಣಿಗೊಂಡ
ಸೇನಾಧಿಪತ್ಯವದು ದೊಡ್ಡ ಹೋರೆ,
೮
ಈವರೆಗು ಬಾಗದೆಯೆ ನಾಡ ಕಾಪಾಡಿದೊಲು
ಎದೆಗೊಟ್ಟು ನಿಲ್ಲುವೊಲು ನಮ್ಮ ಹೆಮ್ಮೆ
ಸಾಹಸಕೆ ಅನುಗೊಳಿಸು ಬೀಸು ದೋರ್‍ದಂಡವನು
ಮತ್ತೆ ಮಾರ್‍ಮೊಳಗಲಿದೆ ನಾಡ ಹಿರಿಮೆ.
೯
ಆ ಮಹಾತ್ಮನ ಸತ್ಯ ರತ್ನದೀವಿಗೆ ಹಿಡಿದು
ನಾಡನೆಮ್ಮದಿಗೊಳಿಸಿದಮರ ವ್ಯಕ್ತಿ-
ದಿಟ್ಟತನದೀ ಅಟ್ಟಹಾಸದಲಿ ಮೆರೆದ ಛಲ
ಎಂದಿಗೂ ಕಾಪಿಡಲಿ ಭೀಮಶಕ್ತಿ!
೧೦
ವೀರಭಾರತ ಕುಲಾವತಂಸನವ, ಬಲ್ಲಿದರ
ಬಲ್ಲಹಂ, ನಾಳ್ಗಾಹಿ ಶ್ರೇಯಾಂಶಿತ-
ಅವನ ಮೇಲ್ಮೆಯನರಿತು ನಾಡನುನ್ನತಿಗೊಳಿಪ
ಕೈದೀಪವಾಗು ಓ ಅಧಿದೈವತ!
*****