ಅಂದು ಪತ್ನಾಜೆ. ಬಯಲಾಟದ ಮೇಳಗಳು ಮುಂಬರುವ ಆರು ತಿಂಗಳ ಮಳೆಗಾಲಕ್ಕಾಗಿ ತಮ್ಮ ಆಟಗಳನ್ನು ನಿಲ್ಲಿಸುವ ದಿನ. ಕಳೆದ ಆರು ತಿಂಗಳುಗಳಿಂದ ಗೆಜ್ಜೆ ಕಟ್ಟಿ, ಬಣ್ಣ ಬಳಿದು, ವೇಷ ತೊಟ್ಟು ಕುಣಿದ ವೇಷಧಾರಿಗಳು, ಇನ್ನು ತಮ್ಮ ಮನೆ ಮಾರುಗಳನ್ನು ಸೇರಿ, ಅಗಲಿದ್ದ ಮಡದಿ ಮಕ್ಕಳ ಮುಖಗಳನ್ನು ಕಾಣಬೇಕು; ತಮಗಿದ್ದ ತುಂಡು ಹೊಲದ ಬೇಸಾಯವನ್ನು ಪೂರೈಸಬೇಕು.
ಆ ದಿನ ಎಲ್ಲಾ ಮೇಳಗಳೂ ತಮ್ಮ ತಮ್ಮ ಊರನ್ನು ಸೇರುವುವು. ಅಂದು ರಾತ್ರಿ ತಮ್ಮ ಇಷ್ಟದೇವತೆಯೆದುರು ಕೊನೆಯ ಆಟವನ್ನು ಆಡಿ, ಗೆಜ್ಜೆಪೂಜೆಗೈದು, ಮರುದಿನ ತಮ್ಮ ತಮ್ಮ ಹಾದಿಯನ್ನು ಮೇಳದವರು ಹಿಡಿಯುವರು. ಅವರು ಮುಂದೆ ಒಟ್ಟುಗೂಡುವುದು ಮಳೆಗಾಲದ ಆರು ತಿಂಗಳು ಕಳೆದ ಬಳಿಕ.
ಕುಂಬಳೆಯ ಶ್ರೀ ಗೋಪಾಲಕೃಷ್ಣ ದೇವಾಲಯದ ಮುಂದುಗಡೆಯಲ್ಲಿ ರಂಗಸ್ಥಳವನ್ನು ನಿರ್ಮಿಸಲಾಗಿತ್ತು. ಅಂದೇ ಊರು ಸೇರಿದ ಪಾರ್ತಿಸುಬ್ಬನ ಕಣಿಪುರದ ಶ್ರೀಗೋಪಾಲಕೃಷ್ಣ ಕೃಪಾ ಪೋಷಿತ ಯಕ್ಷಗಾನ ಮಂಡಲವು ಅಲ್ಲಿ ತಮ್ಮ ಕೊನೆಯಾಟವನ್ನು ಅಂದು ಆಡುವುದು.
ಆಗಲೇ ಸಂಜೆಯಾಗಿತ್ತು. ರಂಗಸ್ಥಳದ ಎರಡೂ ಪಕ್ಕಗಳಲ್ಲಿ ಎರಡು ದೊಡ್ಡದಾದ ದೀವಟಿಗೆಗಳು ಉರಿಸಲ್ಪಟ್ಟಿದ್ದವು. ರಂಗಸ್ಥಳದಲ್ಲಿ ನಿತ್ಯವೇಷಗಳಲ್ಲೊಂದಾದ ಕೋಡಂಗಿಗಳು ಕುಣಿಯುತ್ತಿದ್ದವು. ಸುತ್ತುಮುತ್ತಲಿನ ಹತ್ತಾರು ಊರುಗಳ ಜನರೆಲ್ಲರೂ ಆ ಗೆಜ್ಜೆ ಪೂಜೆಯಾಟವನ್ನು ನೋಡಲು ಆಗಲೇ ನೆರೆಯತೊಡಗಿದ್ದರು.
ರಂಗಸ್ಥಳದಿಂದ ಸ್ವಲ್ಪ ದೂರದಲ್ಲಿ ವೇಷಧಾರಿಗಳು ವೇಷ ಧರಿಸುವ ಚೌಕಿಯಿತ್ತು. ಅಲ್ಲಿ ಆಗಲೇ ಚಟುವಟಿಕೆ ಆರಂಭವಾಗಿತ್ತು.
ನಟರೆಲ್ಲರೂ ತಮ್ಮ ತಮ್ಮ ಪಾತ್ರಗಳಿಗನುಗುಣವಾಗಿ, ಮುಖಗಳಿಗೆ ಬಣ್ಣಗಳ ’ಚುಟ್ಟಿ’ ಬರೆಯುತ್ತಿದ್ದರು. ಅಂದು ಆಡುವ ಪ್ರಸಂಗವು “ಅಂಗದ ಸಂಧಾನ”ವೆಂದು ತೀರ್ಮಾನವಾಗಿತ್ತು. ಒಡ್ಡೋಲಗ ಪಾತ್ರಧಾರಿಗಳಾದ ರಾಮ ಲಕ್ಷ್ಮಣರು ಆಗಲೇ ತಮ್ಮ ವೇಷಭೂಷಣಗಳನ್ನು ಮುಗಿಸಿ ಸಿದ್ಧರಾಗಿ ಕುಳಿತಿದ್ದರು.
ರಾವಣ ಪಾತ್ರಧಾರಿಯಾದ ಬಣ್ಣದ ಗೋಪಣ್ಣ ಚೌಕಿಯ ಮಧ್ಯಭಾಗದಲ್ಲಿ ಒಂದು ದೊಡ್ಡ ಪೆಟ್ಟಿಗೆಗೊರಗಿ ಕುಳಿತುಕೊಂಡಿದ್ದನು. ಅವನ ಮುಂದೆ ಒಂದು ಕಾಲು ದೀಪ ಉರಿಯುತ್ತಿತ್ತು. ಅವನ ಮುಖಕ್ಕೆ ಭಯಂಕರವಾದ “ಪಟ್ಟಿ”ಗಳನ್ನು ಬರೆಯಲಾಗಿತ್ತು. ಪೆಟ್ಟಿಗೆಗೊರಗಿ ಕುಳಿತ ಅವನ ಬಣ್ಣ ಬಳಿದ ಮುಖದ ಸುತ್ತಲೂ ಹಿಟ್ಟಿನ ಮುಳ್ಳುಗಳನ್ನು ಒಬ್ಬನು ಅಂಟಿಸುತ್ತಿದ್ದನು. ಆ ಕೆಲಸ ಮುಗಿದ ಬಳಿಕ, ಮೂಗಿನ ತುದಿಗೆ, ಹಣೆಗೆ, ಹತ್ತಿಯ ಉಂಡೆಗಳನ್ನು ಅಂಟಿಸಿದರು. ಅದೂ ಮುಗಿದ ಬಳಿಕ, ಗೋಪಣ್ಣ ಎದ್ದು ನಿಂತನು. ಒಂದೊಂದಾಗಿ ಉಡಿಗೆ ಆಭರಣಗಳನ್ನು ಅವನಿಗೆ ತೊಡಿಸಿದರು. ಬಣ್ಣದ ಬಣ್ಣದ ತೊಡಿಗೆ, ಭುಜಕೀರ್ತಿ, ಎದೆಗಟ್ಟು, ವೀರಕಾಸೆ, – ಎಲ್ಲವನ್ನೂ ತೊಟ್ಟಾಯಿತು. ಕೊನೆಗೆ ಬೃಹತ್ತಾದ, ಚಕ್ರಾಕಾರದ ಕಿರೀಟವನ್ನು ತಲೆಗೆ ಕಟ್ಟಿದರು. ಈಗ, ಅವನನ್ನು ನೋಡಿದರೆ ಗಟ್ಟಿಯೆದೆಯ ಜವ್ವನಿಗನು ಕೂಡ ಹೆದರಬೇಕು. ಅಷ್ಟು ಭಯಾನಕವಾಗಿತ್ತು ಆ ವೇಷ!
ಇನ್ನೊಂದೆಡೆಯಲ್ಲಿ ರಾವಣನ ಮಂತ್ರಿ ಪ್ರಹಸ್ತನ ವೇಷವನ್ನು ರಾಮಚಂದ್ರ ತೊಡುತ್ತಿದ್ದನು. ಹೊಟ್ಟೆಯನ್ನು ದೊಡ್ಡದು ಮಾಡಲು ಎಷ್ಟು ಬಟ್ಟೆಯನ್ನು ಕಟ್ಟಿದರೂ ಅವನಿಗೆ ತೃಪ್ತಿಯಿಲ್ಲ. ಅಂತೂ, ಅವನ ವೇಷವೂ ಸಿದ್ಧವಾಯಿತು.
ಮೇಳದ ಭಾಗವತ – ಯಜಮಾನನಾದ ಕವಿ ಪಾರ್ತಿಸುಬ್ಬ, ಎಲ್ಲವನ್ನೂ ದಿಟ್ಟಿಸುತ್ತಾ ಒಂದು ಪೆಟ್ಟಿಗೆಯ ಮೇಲೆ ಗಂಭೀರವಾಗಿ ಕುಳಿತಿದ್ದನು. ನಸು ನೀಳವಾದ ಅಕರ್ಷಕವಾದ ಮುಖ. ಭಾವನೆಯ ಕಡಲಲ್ಲೇ ತೇಲುತ್ತಾ, ಕನಸನ್ನೇ ಕಾಣುತ್ತಿರುವ ಸುಂದರವಾದ ಕಣ್ಣುಗಳು. ಗಟ್ಟಿಮುಟ್ಟಾದ, ಉತ್ತರ ನಿಲುವಿನ ದೃಢ ದೇಹ. ಪ್ರಾಯವು ಐವತ್ತರ ಗಡಿ ದಾಟಿತ್ತು. ತಲೆಯಲ್ಲಿ ಬೆಳೆದ ತುಂಬುಗೂದಲು, ಹಣೆಯನ್ನು ಬಿಟ್ಟು ಹಿಂದು ಹಿಂದಕ್ಕೆ ಸರಿಯುವ ಚಿಹ್ನೆ ತಲೆದೋರಿತ್ತು.
ಪಾತ್ರಧಾರಿಗಳೆಲ್ಲರೂ ತಮ್ಮ ವೇಷ ಸಿದ್ಧವಾದೊಡನೆಯೇ, ತಮ್ಮ ಯಜಮಾನನಾದ ಪಾರ್ತಿಸುಬ್ಬನಿಗೆ ತೋರಿಸಿಕೊಂಡು ಅವನ ಒಪ್ಪಿಗೆಯನ್ನು ಪಡೆಯುತ್ತಿದ್ದರು. ಪಾರ್ತಿಸುಬ್ಬ ಎಲ್ಲರನ್ನೂ ಸೂಕ್ಷ್ಮ ದೃಷ್ಟಿಯಿಂದ ವಿಮರ್ಶಿಸುತ್ತಾ, ಲೋಪದೋಷಗಳನ್ನು ತಿಳಿಸಿ ಸರಿಗೊಳಿಸುತ್ತಿದ್ದನು. ಬಣ್ಣದ ಗೋಪಣ್ಣನ ಪಾತ್ರವನ್ನು ನೋಡಿ
“ಅದ್ಭುತವಾಗಿದೆ, ಗೋಪಣ್ಣ. ಬಣ್ಣದ ವೇಷದಲ್ಲಿ ನಿನ್ನನ್ನು ಮೀರಿಸುವವರು ಇನ್ನಿಲ್ಲವೆನ್ನುವಂತೆ ಮಾಡಿದ್ದೀಯ.”
ಎಂದು ಹೊಗಳಿದನು. ಗೋಪಣ್ಣ ಆ ಮಾತಿಗೆ ವಿನಯದಿಂದ ನಸು ನಾಚಿ,
“ಎಲ್ಲ ನಿಮ್ಮ ಪ್ರೀತಿ. ಏನೂ ತಿಳಿಯದ ಹಳ್ಳಿಯ ಈ ಕುರುಬನಿಗೆ ಒಂದಿಷ್ಟು ವಿದ್ಯೆ ಕಲಿಸಿದಿರಿ. ದಂಡಿನಲ್ಲಿದ್ದು, ಕುದುರೆಯೋಡಿಸುವುದನ್ನೇ ಕಲಿತು, ನಡೆಯುವುದನ್ನೇ ಮರೆತು ಬಿಟ್ಟಿದ್ದ ಈ ಕಾಲುಗಳಿಗೆ ಕುಣಿತ ಕಲಿಸಿದಿರಿ. ’ಹೊಡಿ, ಕಡಿ, ಬಡಿ’ ಎನ್ನುವುದಕ್ಕೆ ಒಗ್ಗಿದ್ದ ನಾಲಿಗೆಗೆ ಒಂದಿಷ್ಟು ’ಅರ್ಥ ಹೇಳುವ’ ಅಭ್ಯಾಸ ಮಾಡಿದಿರಿ. ಅಂತೂ ತಮ್ಮ ದಯೆಯಿಂದಾಗಿ, ಅಲ್ಪ ಸ್ವಲ್ಪ ಕಲಾಸೇವೆ ಮಾಡುವಂತಾಯಿತು.” ಎಂದು ನುಡಿದನು.
ಚೌಕಿಯಲ್ಲಿ ಅಷ್ಟು ಜನರಿದ್ದರೂ ಅದು ನಿಶ್ಶಬ್ದವಾಗಿತ್ತು. ಗೋಪಣ್ಣನ ಮಾತನ್ನು ಉಳಿದವರೆಲ್ಲರೂ ಕೇಳಿದರು. ಮೌನವಾಗಿಯೇ ಅವರೆಲ್ಲರೂ ಅವನ ಮಾತಿಗೆ ತಮ್ಮ ಸ್ವರವನ್ನು ಸೇರಿಸಿದರು.
ಬಣ್ಣದ ಗೋಪಣ್ಣ ಹೇಳಿದುದು ಬರೇ ಹೊಗಳಿಕೆಯ ಮಾತಲ್ಲ. ಪಾರ್ತಿಸುಬ್ಬನ ಯೋಗ್ಯತೆ ಅದಕ್ಕೂ ಮೀರಿದುದು. ಕಲಾ ಪ್ರಪಂಚದಲ್ಲಿ ಬೆಳೆದ ಬೃಹತ್ತಾದ ಕಲ್ಪವೃಕ್ಷ ಆತ. ಕಡು ಬಡವನಾಗಿ ಹುಟ್ಟಿದ್ದರೂ ಕಲೆಯ-ಸಾಹಿತ್ಯದ ಮೇಲಿನ ಆಸಕ್ತಿಯಿಂದ ನಿರಂತರವಾಗಿ ದುಡಿದು, ಯಕ್ಷಗಾನದ ಗಣ್ಯ ಕವಿಯಾಗಿದ್ದನು. ಕುಂಬಳೆಯರಸರ ನೆರವಿನಿಂದ ತಾನೇ ಒಂದು ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ, ಯಕ್ಷಗಾನವನ್ನು ತುಂಬಾ ಪ್ರಚಾರಗೊಳಿಸಿ, ಅದನ್ನು ಕನ್ನಡ ಜಿಲ್ಲೆಯಲ್ಲೆಲ್ಲಾ ಹರಡಿದನು. ಕೆಳದಿನಾಯಕರ, ಟಿಪ್ಪುಸುಲ್ತಾನನ, ಕುಂಬಳೆಯರಸರ ದಂಡಿನಲ್ಲಿದ್ದ ತರುಣರಿಗೆ, ಅರ್ಥಗಾರಿಕೆ, ಬಣ್ಣಗಾರಿಕೆ, ಕುಣಿತಗಳನ್ನು ಕಲಿಸಿ ಯಕ್ಷಗಾನದ ನಟರನ್ನಾಗಿ ಮಾಡಿದನು. ಅವರಲ್ಲಿ ಸಿಡಿಲುಮರಿ ಕೆಂಗಣ್ಣ ನಾಯಕ, ಬಣ್ಣದ ಗೋಪಣ್ಣ, ರಾಮಚಂದ್ರ ಮೊದಲಾದವರು ತುಂಬಾ ಹೆಸರು ಪಡೆದು ಪಾರ್ತಿಸುಬ್ಬನ ಪ್ರೀತಿಯ ಶಿಷ್ಯರಾಗಿದ್ದರು.
ಗೋಪಣ್ಣನ ಹೊಗಳಿಕೆಯ ಮಾತುಗಳನ್ನು ಕೇಳಿದ ಪಾರ್ತಿಸುಬ್ಬ ಗಂಭೀರವಾಗಿ ನಕ್ಕು,
“ನಾನೇನು ಮಾಡಿದೆ? ನಿಮ್ಮ ಮನಸ್ಸಿನಲ್ಲಿದ್ದ ಕಲಾಸಕ್ತಿಯೇ ನಿಮ್ಮನ್ನಿಂದು ಈ ಸ್ಥಾನಕ್ಕೆ ಮುಟ್ಟಿಸಿದೆ. ಎಲ್ಲವೂ ಶ್ರೀ ಗೋಪಾಲಕೃಷ್ಣನ ಕೃಪೆ ಗೋಪಣ್ಣ.”
ಎನ್ನುತ್ತಾ ದೇವಾಲಯದೆಡೆಗೆ ತಿರುಗಿ ಕೈಮುಗಿದನು. ಅವನೊಡನೆ, ಉಳಿದವರೂ ಆ ಭಕ್ತಿ ಪ್ರವಾಹದಲ್ಲಿ ತೇಲಿ, ತಮಗರಿಯದಂತೆಯೇ ತಾವೂ ಕೈಗಳನ್ನು ಜೋಡಿಸಿದರು.
ರಂಗಸ್ಥಳದಲ್ಲಿ ಸ್ತ್ರೀ ವೇಷ ಕುಣಿಯುತ್ತಿತ್ತು. ಅಲ್ಲಿಂದ ಕೇಳಿಬರುತ್ತಿದ್ದ ಮೃದಂಗದ ತಾಳಬದ್ಧವಾದ ಸಪ್ಪಳ ಕೇಳುತ್ತಾ ಚೌಕಿಯಲ್ಲಿದ್ದ ನಟರೆಲ್ಲರೂ ಕುಳಿತಲ್ಲಿಯೇ ತಮ್ಮ ಕಾಲುಗಳನ್ನು ಕುಣಿಸುತ್ತಿದ್ದರು.
“ಹೊತ್ತು ಕಂತಿ ಆಗಲೇ ನಾಲ್ಕು ಗಳಿಗೆ ಕಳೆಯಿತು. ಇನ್ನು ಪ್ರಸಂಗ ಸುರು ಮಾಡಬೇಕು.”
ಪಾರ್ತಿಸುಬ್ಬ ಅಪ್ಪಣೆಕೊಡುವ ಸ್ವರದಲ್ಲಿ ನುಡಿದನು. ಮೇಳದ ಆಳೊಬ್ಬನು ಭಾಗವತರ ಅಪ್ಪಣೆಯನ್ನು ಮುಟ್ಟಿಸಲು ರಂಗಸ್ಥಳದೆಡೆಗೆ ಧಾವಿಸಿದನು.
“ಏನು ಸಿಡಿಲು ಮರೀ, ಇನ್ನೂ ಆಗಿಲ್ಲವೇ?” ಪಾರ್ತಿಸುಬ್ಬ ಕೇಳಿದನು.
“ಆಯಿತು ಗುರುಗಳೇ, ಇನ್ನೇನು ಕಿರೀಟ ಕಟ್ಟಿಕೊಳ್ಳುತ್ತಿದ್ದೇನೆ.”
ಎಂದನು ಕೆಂಗಣ್ಣ ನಾಯಕ. ಕೆಂಗಣ್ಣ ನಾಯಕನು ಆ ಮೇಳದ ಗಣ್ಯ ನಟ; ಪಾರ್ತಿಸುಬ್ಬನ ಮೆಚ್ಚಿನ ಶಿಷ್ಯ. ಅವನ ವಾಕ್ಸಾಮರ್ಥ್ಯ, ನಟನಾ ಚಾತುರ್ಯಗಳಿಗೆ ಮನಸೋತ ಪಾರ್ತಿಸುಬ್ಬ, ಅವನಿಗೆ ’ಸಿಡಿಲುಮರಿ’ ಎಂಬ ಬಿರುದನ್ನಿತ್ತಿದ್ದರು.
’ಸಿಡಿಲುಮರಿ’- ಕವಿ ಪಾರ್ತಿಸುಬ್ಬ , ’ಅಂಗದ ಸಂಧಾನ’ ಯಕ್ಷಗಾನ ಕಾವ್ಯ ಬರೆಯುತ್ತಾ, ಎಳೆಯ ವೀರನಾದ ಅಂಗದನ ಪಾತ್ರಕ್ಕೆ ಮನಸೋತು, ಒಲಿದು, ಕೊಟ್ಟ ಬಿರುದು, ” ಸಿಡಿಲುಮರಿಯಂಗದ”. ಪಾರ್ತಿಸುಬ್ಬನ ಕನಸಿನ ಪಾತ್ರಸೃಷ್ಟಿಯಾದ ಅಂಗದನನ್ನು ಮೂರ್ತಿಮತ್ತಾಗಿ ಜೀವಂತ ಕಳೆಯಿಂದ ಆಡಿತೋರಿಸಲು ಕೆಂಗಣ್ಣ ನಾಯಕನಿಗಲ್ಲದೆ, ಇನ್ನಾರಿಗೂ ಆಗುತ್ತಿರಲಿಲ್ಲ. ಆದುದರಿಂದಲೇ ಪಾರ್ತಿಸುಬ್ಬ, ತನ್ನ ಪಾತ್ರದ ಬಿರುದನ್ನು, ಆ ಪಾತ್ರವನ್ನು ಮನವೊಲಿಯುವಂತೆ ಅಭಿನಯಿಸುತ್ತಿದ್ದ ತನ್ನ ಶಿಷ್ಯ ಕೆಂಗಣ್ಣ ನಾಯಕನಿಗೇ ಇತ್ತಿದ್ದನು.
“ಕೆಂಗಣ್ಣ ನಾಯಕ” ಎಂಬ ಅವನ ಹೆಸರೇ ಎಲ್ಲರಿಗೂ ಮರೆತು, ಈಗ ಎಲ್ಲರ ಬಾಯಲ್ಲೂ ’ಸಿಡಿಲು ಮರಿ’ಯಾಗಿ ಅವನು ವಿರಾಜಿಸುತ್ತಿದ್ದನು.
ಇಂದಿನ ಆಟದಲ್ಲೂ ಸಿಡಿಲು ಮರಿಯು ಸಿಡಿಲುಮರಿಯಂಗದನ ಪಾತ್ರವನ್ನು ವಹಿಸುವನು. ಒಂದೆರಡು ನಿಮಿಷಗಳಲ್ಲಿ ಸಿಡಿಲು ಮರಿ ಕೆಂಗಣ್ಣ ನಾಯಕ ಅಂಗದನಾಗಿ ಬಂದು ತನ್ನ ಗುರುಗಳ ಮುಂದೆ ನಿಂತುಕೊಂಡನು. ಪಾರ್ತಿಸುಬ್ಬ ಅವನ ವೇಷವನ್ನು ಪರಿಶೀಲಿಸಿ ನುಡಿದನು:
“ಚೆನ್ನಾಗಿದೆ-ಹೋಗು; ಕಲಾಸರಸ್ವತಿಯ, ಶ್ರೀ ಗೋಪಾಲಕೃಷ್ಣನ ಪ್ರೀತ್ಯರ್ಥವಾಗಿ ಅಭಿನಯಿಸು.”
ಗುರುಗಳ ಆಶೀರ್ವಾದದೊಡನೆ ಸಿಡಿಲುಮರಿ ಚೌಕಿಯಿಂದ ಹೊರಗೆ ಕಾಲಿಟ್ಟನು. ಪಾರ್ತಿಸುಬ್ಬ ಅರೆಕ್ಷಣ ಅವನು ಹೋಗುವುದನ್ನೇ ಗಂಭೀರವಾಗಿ ನೋಡುತ್ತಾ ಕುಳಿತನು. ಅನಂತರ ಎದ್ದು ’ಭಾಗವತರ ಮುಂಡಾಸ’ನ್ನು ತಲೆಗೆ ಕಟ್ಟಿ, ಕಲಾಸರಸ್ವತಿಯನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ, ತನ್ನ ಜಾಗಟೆಗೆ ನಮಸ್ಕರಿಸಿ ಅದನ್ನು ಕೈಗೆತ್ತಿಕೊಂಡು ರಂಗಸ್ಥಳದೆಡೆಗೆ ನಡೆದನು. ಪಾತ್ರಧಾರಿಗಳೆಲ್ಲರೂ ಅವನನ್ನು ರಂಗಸ್ಥಳದ ಹಿಂಬದಿಯ ತನಕ ಹಿಂಬಾಲಿಸಿದರು.
ಪಾರ್ತಿಸುಬ್ಬ ಬಂದೊಡನೆಯೇ ಗೌರವದಿಂದ ಎಲ್ಲರೂ ಎದ್ದು ನಿಂತರು. ಅಷ್ಟರತನಕ, ಸಭಾಲಕ್ಷಣ ಪದಗಳನ್ನು ಹಾಡುತ್ತಾ ನಿತ್ಯವೇಷಗಳನ್ನು ಕುಣಿಸುತ್ತಿದ್ದ ಕಿರಿಯ ಭಾಗವತ ಎದ್ದು ಬಂದನು. ಪಾರ್ತಿಸುಬ್ಬನು ಮೃದಂಗಕ್ಕೆ ನಮಸ್ಕರಿಸಿ ತನ್ನ ಸ್ಥಾನದಲ್ಲಿ ಕುಳಿತುಕೊಂಡನು. ಅನಂತರ ’ಪ್ರಸಂಗ ಪೀಠಿಕೆ’ ಆರಂಭವಾಯಿತು.
ಅಷ್ಟರಲ್ಲಿ ಅರಸರು ಆಟ ನೋಡುವುದಕ್ಕಾಗಿ ಬಂದು ಕುಳಿತರು. ಅವರಿಗಾಗಿಯೇ ರಂಗಸ್ಥಳದ ಬದಿಯಲ್ಲಿ ಒಂದು ವೇದಿಕೆಯನ್ನೂ ಕಟ್ಟಿ ಸಿಂಗರಿಸಿದ್ದರು. ಅವರು ಬಂದೊಡನೆಯೇ ಸಭೆ ಗಂಭೀರವಾಗಿ ಎದ್ದು ನಿಂತು ಗೌರವ ಸೂಚಿಸಿತು.
ಅರಸರ ಅಪ್ಪಣೆಯಂತೆ ಕಥಾಭಾಗವನ್ನು ಪ್ರಾರಂಭ ಮಾಡಲಾಯಿತು. ರಂಗಭೂಮಿಗೆ ಪರದೆಯನ್ನು ಹಿಡಿದರು – ಕ್ರಮದಂತೆ ರಾಮಲಕ್ಷ್ಮಣರ ಒಡ್ಡೋಲಗವಾಯಿತು. ಅನಂತರ ಸುಗ್ರೀವನ ಪ್ರವೇಶವಾಯಿತು. ರಾವಣನೊಡನೆ ಯುದ್ಧ ಹೂಡುವ ಮೊದಲೊಮ್ಮೆ ರಾಯಭಾರಿಯೊಬ್ಬನನ್ನು ಕಳುಹಿಸಬೇಕೆಂಬ ಅಭಿಪ್ರಾಯ ಬಂದಾಗ, ಸುಗ್ರೀವನು ತನ್ನಣ್ಣನ ಮಗನಾದ ಮಹಶೂರ ಅಂಗದನನ್ನು ಕಳುಹಿಸಬಹುದೆಂದು ಸೂಚಿಸಿದನು. ರಾಮಲಕ್ಷ್ಮಣರು ಅದಕ್ಕೆ ಒಪ್ಪಿ ಅಂಗದನನ್ನು ಸನ್ನಿಧಿಗೆ ಕರೆಯಲು ದೂತರನ್ನು ಕಳುಹಿಸಿದರು.
ಶ್ರೀ ರಾಮನಿಂದ ಕರೆಯಲ್ಪಟ್ಟ ಅಂಗದನು ಇನ್ನು ರಂಗಭೂಮಿಯನ್ನು ಪ್ರವೇಶಿಸಬೇಕು. ಹಿಮ್ಮೇಳವಾದ ಮೃದಂಗ, ಚಂಡೆ, ಜಾಗಟೆಗಳು ತಾರಕ ಸ್ವರದಲ್ಲಿ ಮೊಳಗುತ್ತಾ ವೀರರಸವನ್ನು ಪ್ರೇಕ್ಷಕರೆದೆಯಲ್ಲಿ ತುಂಬುತ್ತಿದ್ದುವು. ಭಾಗವತರು ಉಚ್ಚಸ್ವರದಲ್ಲಿ ಅಂಗದನ ಪ್ರವೇಶದ ಪದವನ್ನು ಹಾಡುತ್ತಿದ್ದರು:
“ರಾಮನಣತಿಯಂತೆ ಸಿಡಿಲು ಮರಿಯಂಗದನು….”
ಪ್ರೇಕ್ಷಕರೆಲ್ಲರೂ, ವೀರರಸವನ್ನು ಉಕ್ಕೇರಿಸುವ ಸನ್ನಿವೇಶದಲ್ಲಿ ತಲ್ಲೀನರಾಗಿ, ವೀರಮೂರ್ತಿ ಅಂಗದನ ಬರವನ್ನೇ ಹಾರೈಸುತ್ತಾ ಕುಳಿತಿದ್ದರು. ಸನ್ನಿವೇಶ, ಹಾಡು , ಹಿಮ್ಮೇಳಗಳು ಪ್ರೇಕ್ಷಕರನ್ನು ಕುತೂಹಲದ ಬಂದಿಯಾಗಿ ಮಾಡಿದ್ದುವು.
ಅಂಗದನು ಇನ್ನೇನು ರಂಗಭೂಮಿಯನ್ನು ಪ್ರವೇಶಿಸಬೇಕು- ಅಷ್ಟರಲ್ಲಿ ಕುದುರೆಯೊಂದು ಬಯಲಾಟ ನಡೆಯುತ್ತಿದ್ದಲ್ಲಿಗೆ ನೆಗೆದು ಬಂತು. ಕುದುರೆಯನ್ನೇರಿದ್ದ ಸವಾರನು, ಕುದುರೆಯಿಂದ ಹಾರಿ ಕೆಳಗೆ ನಿಂತನು. ಅವನೊಬ್ಬ ಸೈನಿಕ. ಅರಸನೆಡೆಗೆ ಫಕ್ಕನೆ ಸರಿದು ವಿನಯದಿಂದ ವಂದಿಸಿ:
“ಮಹಾಪ್ರಭೂ, ಕ್ಷಮಿಸಬೇಕು.”
ಎಂದು ತೊದಲಿದನು.
ಈ ವಿಚಿತ್ರ ಘಟನೆಯಿಂದ ಗಾಬರಿಗೊಂಡ ಜನರೆಲ್ಲರೂ ಆಶ್ಚರ್ಯ ಭಯಗಳಿಂದ ಪ್ರೇರಿತರಾಗಿ ಎದ್ದು ನಿಂತರು. ಕ್ಷಣದ ಹಿಂದೆ ಅವರಲ್ಲಿ ಒಡಮೂಡಿದ್ದ ವೀರರಸವು ತಾನಾಗಿ ಕರಗಿ ಹೋಗಿ, ಈಗ ಯಾವುದೋ ಆ ಶಂಕೆಯ ಅಜ್ಞಾತ ಭಯವೊಂದು ಅವರನ್ನು ಆವರಿಸಿತ್ತು. ಬಯಲಾಟದ ಕಥಾಭಾಗ, ಸನ್ನಿವೇಶ, ಎಲ್ಲವೂ ಅವರ ಮನದಿಂದ ಮರೆಯಾಗಿದ್ದವು.
ಅಜ್ಞಾತ ಭಯದಿಂದ ತಳ್ಳಂಕಗೊಂಡ ರಾಜರು, ಸೈನಿಕನನ್ನು ಅವಸರವಸರವಾಗಿ ಪ್ರಶ್ನಿಸಿದರು:
“ಸೈನಿಕ, ಏನಾಯಿತು? ಏನು ನಡೆಯಿತು? ಏನು ಸುದ್ದಿ?”
“ಮಹಾಪ್ರಭೂ, ಕ್ಷಮಿಸಬೇಕು. ಇಂಗ್ಲಿಷರ ಸೈನಿಕರು ಸಾಧಾರಣ ಇನ್ನೂರು ಮಂದಿ ಕಾಸರಗೋಡಿನ ಕಡೆಯಿಂದ ಇಲ್ಲಿಗೆ ಮುನ್ನುಗ್ಗುತ್ತಿದ್ದಾರೆ……”
ಹಾಯಾಗಿ, ಪುರಾಣ ಪುಣ್ಯಕಥೆಯ ನಂದನೋದ್ಯಾನದಲ್ಲಿ, ಕಲಾದೇವಿಯ ಸಿರಿಭೂಮಿಯಲ್ಲಿ, ವಿಹರಿಸುತ್ತಿದ್ದ ಎಲ್ಲರ ಚೈತನ್ಯಗಳ ಮೇಲೂ ಬರಸಿಡಿಲಿನಂತೆ ಸೈನಿಕನ ಈ ಮಾತು ಆಘಾತಿಸಿತು. ಆ ಹೊಡೆತದಿಂದ ಅಲ್ಲಿ ಕೂಡಿದ ಸಾವಿರಾರು ಮಂದಿಯಲ್ಲಿ ಪ್ರಜ್ಞೆ ತಪ್ಪಿದವರೆಷ್ಟೋ! ಜಂಘಾಬಲವೇ ಉಡುಗಿ ನೆಲಕ್ಕೆ ಕುಸಿಕೂತವರೆಷ್ಟೋ! ಹೆಂಗಸರು ಮಕ್ಕಳಂತೂ ತಮ್ಮ ಸರ್ವಸ್ವ ಸೂರೆಯಾದವರಂತೆ ದೊಡ್ಡ ದನಿಯಿಂದ ಅಳತೊಡಗಿದ್ದರು………….
ಸೈನಿಕ ನುಡಿಯುತ್ತಲೇ ಇದ್ದ:
uಟಿಜeಜಿiಟಿeಜ”ಮೈಸೂರಿನಲ್ಲಿ ಟಿಪ್ಪು ಸುಲ್ತಾನನನ್ನು ಶ್ರೀರಂಗ ಪಟ್ಟಣದ ಕೋಟೆಯ ಬಾಗಿಲಿನಲ್ಲಿ ಇಂಗ್ಲೀಷರು ಕೊಂದು ಹಾಕಿದರಂತೆ. ಟಿಪ್ಪು ಸುಲ್ತಾನನ ಸಾಮ್ರಾಜ್ಯ ನುಚ್ಚು ನೂರಾಯಿತಂತೆ. ಆ ಸಾಮ್ರಾಜ್ಯದ ಮೇಲೆ ಆಘಾತಿಸಿದ ಧೂಮಕೇತು, ಈಗ ಘಟ್ಟದಿಂದ ಕೆಳಗಿಳಿದಿದೆ. ಟಿಪ್ಪು ಸುಲ್ತಾನನ ಸಾಮಂತರಾಗಿದ್ದ ಕನ್ನಡ ಜಿಲ್ಲೆಯ ಒಬ್ಬೊಬ್ಬ ರಾಜನನ್ನೂ ಬಗ್ಗಿಸತೊಡಗಿದ್ದಾರೆ; ಒಂದೊಂದು ಕೋಟೆಯನ್ನೂ ಆಧೀನಪಡಿಸಿಕೊಳ್ಳತೊಡಗಿದ್ದಾರೆ. ದಕ್ಷಿಣದಲ್ಲಿ ಬೇಕಲ, ಕಾಸರಗೋಡುಗಳಂತ ಸುಭದ್ರವಾದ ಕೋಟೆಗಳನ್ನೇ ಹೊಡೆದು ನುಂಗಿದ ಫ಼ಿರಂಗಿ ಯಮರಾಯ, ಈಗ ಉತ್ತರಕ್ಕಾಗಿ ಕುಂಬಳೆಗೆ ಧಾಳಿಯಿಡುತ್ತಿದ್ದಾನೆ. ಅವರ ಸೈನ್ಯ ಈಗಾಗಲೇ ಅರ್ಧ ದಾರಿ ದಾಟಿರಬಹುದು………..”
ಸೈನಿಕನ ವಿವರಣೆಗಳೊಂದೂ ಯಾರ ಕಿವಿಯನ್ನೂ ಸೇರುತ್ತಿರಲಿಲ್ಲ. ತನ್ನ ಕರ್ತವ್ಯವನ್ನು ಮಾಡಿ ಮುಗಿಸುವ ಧನ್ಯತೆಯಿಂದಲೋ ಎಂಬಂತೆ ಅವನು ನುಡಿಯುತ್ತಿದ್ದನು.
ಅರಸರು ಮರಗಟ್ಟಿ ರಾಜಾಸನದಲ್ಲಿಯೇ ಒರಗಿದ್ದರು. ಅವರ ಸುತ್ತುಮುತ್ತಲೂ ಇದ್ದ ಪರಿವಾರ, ಕೈಯಲ್ಲಿದ್ದ ಆಯುಧಗಳನ್ನೂ ಮರೆತು, ತಮ್ಮ ಆತ್ಮರಕ್ಷಣೆಯನ್ನು ಮಾಡುವ ಉಪಾಯ ತೋರಿಸೆಂದು ದೇವರನ್ನು ಮೊರೆಯಿಡುತ್ತಿತ್ತು. ಹೊಟ್ಟೆ ತುಂಬಿಸುವುದಕ್ಕಾಗಿ ಮಾತ್ರ ರಾಜನನ್ನು ಓಲೈಸುತ್ತಿದ್ದ ಅವರ ಮನಸ್ಸಿನಿಂದ, ಈ ಗಂಡಾಂತರದ ಸಂದರ್ಭದಲ್ಲಿ ರಾಜಭಕ್ತಿ ಮಾಯವಾಗಿತ್ತು.
ಅನಿರೀಕ್ಷಿತವಾದ, ವಿಧಿಯ ದುಷ್ಟ ಪೀಡೆ ಎಂಬ ಘಾತದ ಭಯದಿಂದ ಮಂಜುಗಟ್ಟಿ ಅಚಲವಾಗಿದ್ದ ಆ ಗುಂಪಿನಲ್ಲಿ ಕ್ಷಣ ಹೊತ್ತಿನಲ್ಲಿಯೇ ಚೈತನ್ಯ ಸಂಚರಿಸಿತು. ಅಲ್ಲಿ ನೆರೆದಿದ್ದ ಧನಿಕರು, ವರ್ತಕರು, ರೈತರು, ತಮ್ಮ ತಮ್ಮ ಸೊತ್ತುಗಳನ್ನೂ, ಕುಟುಂಬಗಳನ್ನೂ ಸೈನಿಕರ ದುರಾಕ್ರಮಣದಿಂದ ಕಾಪಾಡುವುದಕ್ಕಾಗಿ, ತಮ್ಮ ತಮ್ಮ ನಿವಾಸದತ್ತ ಆಕ್ರಂದಿಸುತ್ತಾ ಓಡತೊಡಗಿದರು.
ಕ್ಷಣಮಾತ್ರದಲ್ಲಿ, ರಸಸರಸ್ವತಿಯ ಆರಾಧನಾ ಭೂಮಿಯಾದ ರಂಗಭೂಮಿ, ಮರಣದ ಭೀಭತ್ಸತೆಯನ್ನು ತಾಳಿತ್ತು.
ಮೆಲ್ಲಮೆಲ್ಲನೆ ಅರಸರು ಚೇತರಿಸಿಕೊಂಡು ನುಡಿದರು:
“ಎಲ್ಲಿ ನಮ್ಮ ಸೇವಕರು? ನಡೆಯೋಣ- ಅರಮನೆಗೆ. ಏನಾದರೂ ಬರುವ ವಿಪತ್ತಿನಿಂದ ರಕ್ಷಣೆಯ ದಾರಿ ನೋಡಬೇಕಲ್ಲ.”
ಅರಸರ ಸೇವಕರು ಕೂಡಿದರು; ಅರಸರನ್ನು ಅರಮನೆಗೆ ಕರೆದೊಯ್ಯಲು ಸಿದ್ಧರಾದರು.
ಈ ಅನಿರೀಕ್ಷಿತ ಆಘಾತದಿಂದ ನೊಂದುಕೊಂಡ ಪಾರ್ತಿಸುಬ್ಬನು ರಂಗಭೂಮಿಯಿಂದ ಅರಸರ ಸಮ್ಮುಖಕ್ಕೆ ಬಂದಿದ್ದನು. ಅವನ ದು:ಖಕ್ಕೆ ಮಿತಿಯಿರಲಿಲ್ಲ. ದೇವರ ಸೇವೆಗಾಗಿ ಆಡುತ್ತಿರುವ ಈ ಬಯಲಾಟವನ್ನು, ಮರ್ಯಾದೆಯಿಂದ ಕೊನೆಗಾಣಿಸುವ ಬಯಕೆ-ಹರಕೆ ದೇವರದಲ್ಲವೇನೋ ಎಂದು ಮನಸ್ಸಿನಲ್ಲಿಯೇ ಮಿಡುಕಿಕೊಂಡನು.
“ಈ ವಿಪತ್ತಿನಿಂದ ಪಾರಾಗುವುದು ಹೇಗೆ?”
– ಎಂಬ ಪ್ರಶ್ನೆ ಎಲ್ಲರ ಮನಸ್ಸನ್ನೂ ಕಾಡುತ್ತಿತ್ತು. ತಮ್ಮ ಅರಸರು ಅಷ್ಟು ಶಕ್ತಿಶಾಲಿಯಲ್ಲ. ಈ ಅರಸರ ತಂದೆಯವರ ಕಾಲದಲ್ಲಿಯೇ ಕುಂಬಳೆಯರಸರ ಪರಾಕ್ರಮ-ಅಟ್ಟಹಾಸ ಮುಗಿದು ಹೋಗಿತ್ತು. ಆಗ, ಕೆಳದಿಯ ನಾಯಕರ ಸಾಮಂತನಾಗಿದ್ದ ಅರಸು, ಚಂದ್ರಗಿರಿ ನದಿಯ ದಕ್ಷಿಣದ ಮಲೆಯಾಳೀ ರಾಜನಾಗಿದ್ದ ಕೋಲತ್ತರಸನೊಡನೆ ಒಳಸಂಚು ಹೂಡಿ ಕೆಳದಿಯ ನಾಯಕರ ಸಾರ್ವಭೌಮತ್ವದ ಹೊರೆಯನ್ನು ತಪ್ಪಿಸಿಕೊಂಡು ಸ್ವತಂತ್ರರಾಗಲು ಪ್ರಯತ್ನಿಸಿದ್ದರು. ಅದರಿಂದ ಸಿಟ್ಟುಗೊಂಡ ನಾಯಕರು, ಸೈನ್ಯ ಕಳುಹಿಸಿ, ಎರಡು ರಾಜರನ್ನೂ ಸೋಲಿಸಿದ್ದರು. ಕುಂಬಳೆಯರಸರು ಕೈದಿಯಾಗಿ ತಮ್ಮ ಸೆರೆಮನೆಯಲ್ಲಿಯೇ ಕೊಳೆಯಿತ್ತಿದ್ದರು. ಆಗ ಅವರ ಕಾವಲುಗಾರರು ಅವರ ಮೇಲೆ ಕನಿಕರಿಸಿ, ಅವರಿಗೆ ಹೆಣ್ಣು ವೇಷ ತೊಡಿಸಿ ಸೆರೆಮನೆಯಿಂದ ಪಾರುಮಾಡಿದ್ದರು.
ಪರಾಕ್ರಮಿಯಾಗಿದ್ದ ಅರಸು ಪ್ರಾಣರಕ್ಷಣೆಗಾಗಿ ಹೆಣ್ಣು ವೇಷ ಧರಿಸಿದುದೇ ಅವರ ವಂಶಕ್ಕೆ ಒಂದು ಶಾಪವಾಗಿ ಪರಿಣಮಿಸಿತೇನೋ! ಅವರ ಅನಂತರ ಪಟ್ಟಕ್ಕೆ ಬಂದ ಅವರ ಮಗ- ಈಗಿನ ಅರಸು – ಯುದ್ಧದ ಹೆಸರು ಕೇಳಿದರೇ ನಡುಗುತ್ತಿದ್ದರು. ಅಂತಹವರಿಂದ ಈ ಗಂಡಾಂತರ ಹೇಗೆ ನಿವಾರಿಸಲ್ಪಡಬೇಕು?
ಅರಸು, ತನ್ನ ಐಶ್ವರ್ಯವನ್ನೂ ಪ್ರಾಣವನ್ನೂ ರಕ್ಷಿಸುವುದಕ್ಕಾಗಿ, ಎಲ್ಲಾದರೂ ಓಡಿಹೋಗಿ ಅಡಗಿಕೊಳ್ಳಬೇಕೆಂದು ನಿಶ್ಚಯಿಸಿಕೊಂಡು ಗಡಿಬಿಡಿಯಿಂದ ತನ್ನ ಸೇವಕರೊಡನೆ ತನ್ನ ಅರಮನೆಯತ್ತ ನಡೆದರು.
ಈ ಭಯಂಕರವಾದ ವಾರ್ತೆಯನ್ನು ತಂದ ಸೈನಿಕರು ತನಗೆ ಅರಸರ ಅಪ್ಪಣೆಯೇನೆಂದು ಅರಿಯದೆ ಅಲ್ಲಿಯೇ ನಿಂತಿದ್ದನು. ಅವನ ಕುದುರೆಯೂ ತನಗೇನಪ್ಪಣೆ ಎಂದು ಪ್ರಶ್ನಿಸುವಂತೆ ಅವನನ್ನೇ ನೋಡುತ್ತಾ ಬಳಿಯಲ್ಲಿಯೇ ನಿಂತಿತ್ತು.
ಕವಿ ಪಾರ್ತಿಸುಬ್ಬನ ಅಂತರಂಗ ಬಿರುಗಾಳಿಯೆದ್ದ ಕಡಲಿನಂತೆ ಕಲಕಿ ಹೋಗಿತ್ತು. ತನ್ನ ಆಟ ಆಗದುದರಿಂದಲೂ ಹೆಚ್ಚಿನ ದು:ಖವು, ಈ ವಿಚಿತ್ರ ದೈವದಾಟದಿಂದ ಪಾರಾಗುವುದು ಹೇಗೆಂಬ ಯೋಚನೆಯಿಂದ ಅವನ ಅಂತರಂಗದಲ್ಲಿ ಮೂಡಿತ್ತು.
ಈ ಸಂದರ್ಭದಲ್ಲಿ ಬೇರೆ ದಾರಿಗಾಣದೆ ಅವನ ಪರಿಪಕ್ವವಾದ ಕವಿ ಹೃದಯವು ತನ್ನ ಇಷ್ಟದೈವವಾದ ಶ್ರೀ ಗೋಪಾಲಕೃಷ್ಣನನ್ನು ’ತ್ರಾಹಿ’ ಎಂದು ಮೊರೆಯಿಡುತ್ತಿತ್ತು.
ಆ ಒಂದು ಕ್ಷಣದಲ್ಲಿ-
ಅವರ ಮೇಲೆ ಕವಿದಿದ್ದ ದು:ಖದ ಕಪ್ಪು ಮೋಡದಲ್ಲಿ ಕಣ್ಣು ಕೋರೈಸುವ ಮಿಂಚೊಂದು ಹೊಳೆಯಿತು. ಸಿಡಿಲುಮರಿ ಕೆಂಗಣ್ಣ ನಾಯಕ ಎಲ್ಲಿಂದಲೋ ಹಾರಿ ಬಂದು ಗುರುವಿನ ಪಾದಗಳಿಗೆರಗಿ ಹೇಳಿದನು:
“ಗುರುವೇ, ನನ್ನನ್ನು ಆಶೀರ್ವದಿಸಿರಿ. ಈ ಶಿಷ್ಯನು ತಮ್ಮ ಅನುಗ್ರಹದಿಂದ ಒಮ್ಮೆ ಮರೆತ ವಿದ್ಯೆಯನ್ನು ಲೋಕಕಲ್ಯಾಣಾರ್ಥವಾಗಿ ಪುನ: ನೆನಪಿಗೆ ತರಲು ಬಯಸುವನು.”
ಪಾರ್ತಿಸುಬ್ಬನಿಗೆ, ಅಚ್ಚರಿಯಾಯಿತು. ಸಿಡಿಲುಮರಿಯನ್ನು ಹಿಡಿದೆತ್ತಿ ತಬ್ಬಿಕೊಂಡು ಅರ್ಥವಾಗದವನಂತೆ ತೊದಲಿದನು:
“ಅಂದರೇನು ಸಿಡಿಲುಮರೀ, ಯುದ್ಧಕ್ಕೆ ಹೊರಡುವಿಯಾ?”
“ಹೌದು- ಪ್ರೀತಿಯಿಂದ ತಾವಿತ್ತ ಸಿಡಿಲು ಮರಿಯೆಂಬ ಬಿರುದನ್ನು ಸಾರ್ಥಕಗೊಳಿಸಲು ಬಯಸುವೆ.”
ಎನ್ನುತ್ತಾ ಬಾಗಿ ಗುರುವಿನ ಚರಣಧೂಳಿಯನ್ನು ಹಣೆಗಿಟ್ಟುಕೊಂಡು ಮರುಕ್ಷಣದಲ್ಲಿಯೇ ಬಳಿಯಲ್ಲಿದ್ದ ಸೈನಿಕನ ಕುದುರೆಯ ಮೇಲೆ ಟಣ್ಣನೆ ಜಿಗಿದು ಮಿಂಚಿನೋಟದಿಂದ ಮರೆಯಾದನು.
ಎಲ್ಲರೂ ಬೆರಗಾಗಿ ನೋಡುತ್ತಿದ್ದರು. ತಮ್ಮ ಕಿವಿ ಕಣ್ಣುಗಳ ಮೇಲೆ ಎಷ್ಟೆಂದರೂ ಅವರಿಗೆ ನಂಬಿಕೆ ಹುಟ್ಟದೆ ತೊಳಲಾಟದಲ್ಲಿ ಸಿಲುಕಿದ್ದರು.
ಕ್ಷಣಹೊತ್ತು ಕಳೆದಾಗ ಪಾರ್ತಿಸುಬ್ಬನಿಗೆ ನಡೆದುದೇನೆಂಬುದರ ಅರಿವು ಬಂದಿತು. ಆದ ಪ್ರಮಾದಕ್ಕಾಗಿ ಅವನ ಮನಸ್ಸು ಮಿಡುಕಿತು. ಇನ್ನೂರು ಮಂದಿ ಭಯಂಕರವಾದ ಫ಼ಿರಂಗಿ ಸೈನಿಕರನ್ನು ಇದಿರಿಸಲು ಏಕಾಂಗಿಯಾದ ಸಿಡಿಲುಮರಿಗೆ ಸಾಧ್ಯವೇ? ತಿಳಿದೂ ತಿಳಿದೂ ಪತಂಗವು ಅಗ್ನಿಕುಂಡಕ್ಕೆ ಹಾರುತ್ತಿದೆಯೆಂದು ಹೆದರಿದನು. ಸುತ್ತಲೂ ತನ್ನಂತೆಯೇ ನಿಬ್ಬೆರಗಾಗಿ ನಿಂತಿದ್ದ ಬಣ್ಣದ ಗೋಪಣ್ಣ, ರಾಮಚಂದ್ರರನ್ನು ಉದ್ದೇಶಿಸಿ ನುಡಿದನು:
“ಏನು ನೋಡುತ್ತೀರಿ? ಸಿಡಿಲು ಮರಿಯನ್ನು ಸಾವಿನ ಬಾಯಿಗೆ ಬಿಡುವಿರಾ?”
ಗುರುವಿನ ಮಾತು ಶಿಷ್ಯರಿಗೆ ಅರ್ಥವಾಯಿತು. ಬಣ್ಣದ ಗೋಪಣ್ಣ, ರಾಮಚಂದ್ರ ಮತ್ತು ಅವರನ್ನು ಅನುಸರಿಸಿ ಇನ್ನೂ ಹಲವು ವೀರರು ಸಿಡಿಲುಮರಿ ನೆಗೆದೆಡೆಗೆ ಧಾವಿಸಿದರು.
ಪಾರ್ತಿಸುಬ್ಬ ಆಹತ ಭಾವದಿಂದ ಬೆಂದು, ಬಸವಳಿದು ಕುಸಿದು ಕುಳಿತನು. ಏನೋ ಒಂದು ಪ್ರತ್ಯಾಶೆ ಅವನ ಕಣ್ಣುಗಳನ್ನು ಸಿಡಿಲುಮರಿ ಮರೆಯಾದ ದಿಕ್ಕಿಗೆ ತಿರುಗಿಸುತ್ತಿದ್ದಿತು…………..
*
*
*
ಪಾರ್ತಿಸುಬ್ಬನ ಯಕ್ಷಗಾನ ಮಂಡಲಿ ಚದರಿತ್ತು. ನಟರು, ಹಿಮ್ಮೇಳದವರು, ಪಾರ್ತಿಸುಬ್ಬನ ಅಪ್ಪಣೆಯನ್ನು ಪಡೆಯಲು ಅವಕಾಶವಿಲ್ಲದೆ, ತಮ್ಮ ತಮ್ಮ ಊರುಗಳತ್ತ ಧಾವಿಸಿದ್ದರು. ಆ ವರ್ಷ ದೇವರ ಸೇವೆ- ಗೆಜ್ಜೆಪೂಜೆ ನಡೆಯದೆ ನಡೆಯದೆ ಮೇಳ ಚದುರಿತು. ಈ ಕೊರಗು ಪಾರ್ತಿಸುಬ್ಬನ ಭಕ್ತಿ ಭರಿತವಾದ ಕವಿಹೃದಯವನ್ನು ಕೊರೆಯುತ್ತಿತ್ತು.
ಮರುದಿನ ಸಂಜೆಯ ಹೊತ್ತು. ಕುಂಬಳೆಯ ಶ್ರೀ ಗೋಪಾಲಕೃಷ್ಣ ದೇವಾಲಯದ ಮುಂದಿನ ಮಂಟಪದಲ್ಲಿ ಪಾರ್ತಿಸುಬ್ಬ ಯೋಚನಾಮಗ್ನನಾಗಿ ಕುಳಿತಿದ್ದನು. ತನ್ನ ಪ್ರೀತಿಯ ಸಿಡಿಲುಮರಿ, ಅವನನ್ನು ಹಿಂಬಾಲಿಸಿ ತೆರಳಿದ ಬಣ್ಣದ ಗೋಪಣ್ಣ, ರಾಮಚಂದ್ರರ ಸುದ್ದಿ ತಿಳಿಯದೆ ಅವನ ಕರುಳು ಕಳವಳದ ಪಂಜರವಾಗಿತ್ತು………………….
ಆದರೆ, ಒಂದು ಅಚ್ಚರಿಯ ಸಂಗತಿ. ಯಾವುದಕ್ಕೆ ಹೆದರಿ ನಿನ್ನೆಯ ಆಟ ಅರ್ಧದಲ್ಲಿ ಕಡಿದಿತ್ತೋ, ಅಂತಹ ಸಿಡಿಲಿನಂತಹ ಸುದ್ದಿ, ಸೈನಿಕನು ಅರುಹಿದುದು- ಅದರಂತೆ ಫ಼ಿರಂಗಿಯವರ ಸೈನ್ಯ ಕುಂಬಳೆಯತ್ತ ಬರಲೇ ಇಲ್ಲ; ಎಲ್ಲರೂ ಹೆದರಿದ್ದಂತೆ, ಬಂದು ಕುಂಬಳೆಯ ಕೋಟೆಯನ್ನು ಕೆಡವಿ, ಅರಸರ ವಂಶವನ್ನು ತರಿದು, ಬೊಕ್ಕಸವನ್ನು ಸುಲಿದು, ಊರಿಗೆ ಕೊಳ್ಳೆಯಿಟ್ಟು ಅನಾಹುತ ಮಾಡಲೇ ಇಲ್ಲ…………. ಹಾಗಾದರೆ, ಆ ಸೈನಿಕನು ಹೇಳಿದುದು ಸುಳ್ಳೇ?-ಪಾರ್ತಿಸುಬ್ಬ ವಿಚಾರಿಸುತ್ತಿದ್ದನು………
ಸೂರ್ಯನು ಕೆಂಪಿನ ಗೋಳವಾಗಿ ಪಡುಕಡಲಿಗೆ ಉರುಳುವುದರಲ್ಲಿದ್ದನು. ಎಲ್ಲೆಲ್ಲೂ ಸ್ಮಶಾನ ಶಾಂತಿ ಒಡಮೂಡಿತ್ತು. ಹಕ್ಕಿಗಳ ಸುಳಿವೂ ಇರಲಿಲ್ಲ. ಆ ರುದ್ರ ಸಂಧ್ಯೆಯಲ್ಲಿ ಇಬ್ಬರು ಯುವಕರು ಯಾವುದೋ ಭಾರವಾದ ವಸ್ತುವನ್ನು ಒಂದು ಬಿದಿರಗಳಕ್ಕೆ ಕಟ್ಟಿ ಹೆಗಲಲ್ಲಿಟ್ಟುಕೊಂಡು, ದೇವಾಲಯದತ್ತ ಬಂದರು. ದೇವಾಲಯದ ಮುಂಬಾಗಿಲಿನಲ್ಲಿ ಅದನ್ನಿಳಿಸಿ, ಅದರಲ್ಲೊಬ್ಬನು ಒಳನಡೆದನು.
“ಗುರುಗಳೇ, ತಮ್ಮ ಸಿಡಿಲಮರಿಯನ್ನು ಕರೆತಂದಿರುವೆವು.”
– ಎಂದ ವ್ಯಕ್ತಿಗಳು. ವಿನಯವು ಅವರ ಮಿದುಮಾತಿನಲ್ಲಿ ತುಂಬಿ ತುಳುಕುತ್ತಿತ್ತು.
“ಯಾರು ಗೋಪಣ್ಣನೇ?- ಏನು ಸಿಡಿಲುಮರಿ ಬಂದನೇ?”
ಪಾರ್ತಿಸುಬ್ಬ ಬಹಿರ್ಮುಖನಾಗಿ ಆಶ್ಚರ್ಯದಿಂದ ಪ್ರಶ್ನಿಸಿದನು..
“ಹೌದು ಗುರುದೇವ. ಆದರೆ…………”
ಎಂದು ಗೋಪಣ್ಣ ಏನನ್ನೋ ಹೇಳಲು ಬಾಯ್ತೆರೆದನು. ಆದರೆ ಅವನ ಬಾಯಿಯಿಂದ ಮಾತು ಹೊರ ಹೊರಡಲಿಲ್ಲ. ನಾಲಿಗೆ ಕೊರಡಾಗಿತ್ತು.
ಪಾರ್ತಿಸುಬ್ಬ ಗೋಪಣ್ಣನ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ತನ್ನ ಸಿಡಿಲುಮರಿಯನ್ನು ಕಾಣುವ ಉತ್ಸಾಹದಲ್ಲಿ ಆಗಲೇ ಅವನು ದೇವಾಲಯದಿಂದ ಹೊರಕ್ಕೆ ಜಿಗಿದಿದ್ದನು. ತನ್ನ ಶಿಷ್ಯನನ್ನು ಕಾಣುವ ಉತ್ಸಾಹ ಅವನ ಚಿಂತೆಯನ್ನು ಹೊಡೆದೋಡಿಸಿತ್ತು.
ಆದರೆ……………..
ವಿಧಿಯಾಟವು ಬೇರೊಂದು ತೆರನಾಗಿತ್ತು.
ರಾಮಚಂದ್ರ, ತಾನು ಇಳುಹಿದ ಸಿಡಿಲು ಮರಿಯ ಶವದ ಬುಡದಲ್ಲಿ ಕುಳಿತು ಅಳುತ್ತಿದ್ದನು. ಪಾರ್ತಿಸುಬ್ಬ ಬಂದುದು ಕಂಡೊಡನೆಯೇ ಅವನ ದು:ಖವು ಉಮ್ಮಳಿಸಿ ಬಂತು. “ಗುರುದೇವ……….” ಎನ್ನುತ್ತಾ ಗುರುವಿನ ಕಾಲನ್ನು ತಬ್ಬಿಕೊಂಡನು.
ಪಾರ್ತಿಸುಬ್ಬನಿಗೆ ನಡೆದುದೇನೆಂದು ತಿಳಿಯಿತು. “ಸಿಡಿಲುಮರೀ………….” ಎನ್ನುತ್ತಾ ಕೆಂಗಣ್ಣ ನಾಯಕನ ದೇಹವನ್ನು ಅಪ್ಪಿಕೊಂಡನು. ಪ್ರಾಯಮೀರಿದ ಮೇಲೆ ಅದುತನಕ ಅತ್ತು ಅರಿಯದ ಅವನ ಕಣ್ಣುಗಳಿಂದ ಅಶ್ರುಧಾರೆ ಸತತವಾಗಿ ಸುರಿಯತೊಡಗಿತು…………..
ಬಣ್ಣದ ಗೋಪಣ್ಣ ಪಾರ್ತಿಸುಬ್ಬನ ಹಿಂದಿನಿಂದಲೇ ಬಂದು ನಿಂತಿದ್ದನು. ಆತನು, ಮೆಲ್ಲ ಮೆಲ್ಲನೆ ನಡೆದಿದ್ದ ಕತೆಯನ್ನು ಹೇಳತೊಡಗಿದನು:
“ಗುರುದೇವ, ನಮ್ಮ ಸಿಡಿಲುಮರಿ ಹಾಗೆಯೇ ಸಾಯಲಿಲ್ಲ. ತಾನು ಕೊನೆಯ ಬಾರಿ ಆಡಿದ ಮಾತನ್ನು ಸಾರ್ಥಕಗೊಳಿಸಿದ್ದಾನೆ. ಸಿಡಿಲುಮರಿಯಾಗಿಯೇ ಇನ್ನೂರು ಮಂದಿ ಫ಼ಿರಂಗಿ ಸೈನಿಕರನ್ನು ಕೊಂದು ಕೆಡಹಿದ್ದಾನೆ.”
ಪಾರ್ತಿಸುಬ್ಬನಿಗೆ ಅಚ್ಚರಿಯಾಯಿತು. ಗದ್ಗದ ಕಂಠದಲ್ಲಿ ಅಭಿಮಾನ ತುಂಬಿಕೊಂಡು ಕೇಳಿದನು:
“ಏಕಾಂಗಿಯಾಗಿ?”
“ಹೌದು-ಏಕಾಂಗಿಯಾಗಿಯೇ. ಹೇಗೆಂಬುದರ ವಿವರವು ಆರಿಗೂ ಅರಿಯದು. ಬಹುಶ: ಕಾಡುದಾರಿಯಲ್ಲಿ ಸೈನಿಕರನ್ನು ದಾರಿತಪ್ಪಿಸಿ- ರಾತ್ರಿ ಕಾಲವಲ್ಲವೇ?- ತನ್ನೂರಿಗೆ ಕೊಂಡೊಯ್ದು ತನ್ನ ಗೆಳೆಯರ ಸಹಾಯದಿಂದ ಸದೆ ಬಡಿದನೆಂದು ತಿಳಿಯುತ್ತದೆ. ಕೊನೆಯ ಗಳಿಗೆಯಲ್ಲಿ ಫ಼ಿರಂಗಿಯವರ ಗುಂಡೊಂದು ಸಿಡಿಲುಮರಿಯ ಪ್ರಾಣವನ್ನು ಕುಡಿಯಿತು…….. ಅವನ ಊರು ರಣರಂಗವಾಗಿ ರಕ್ತದ ನೆರೆಯಲ್ಲಿ ಮುಳುಗಿದೆ. ಅಲ್ಲಿ ಹೋಗಿ ಹುಡುಕಿ ಈ ದೇಹವನ್ನು ತಂದೆವು………”
ಗೋಪಣ್ಣನ ಮಾತು ತಡೆಯಿತು. ಅಲುಗಾಡದ ಎಲ್ಲರ ದೇಹಗಳೂ ಅಭಿಮಾನದ ಉಸಿರನ್ನು ಸೇದುತ್ತಿದ್ದವು.
*
*
*
ಚಿತೆ ಉರಿಯಿತು; ಎಲ್ಲರ ಎದೆಯನ್ನೂ ಉರಿಸುತ್ತಿದ್ದ ಚಿಂತೆಯ ದಾವಾಗ್ನಿಯೊಡನೆ, ಪಾರ್ತಿಸುಬ್ಬ ನಿನ್ನೆಯ ರಾತ್ರಿ ಪೂರೈಸದಿದ್ದ ಗೆಜ್ಜೆಪೂಜೆಯನ್ನು ಇಂದು ಪೂರೈಸಿದ್ದನು: ಗೆಜ್ಜೆಯನ್ನು ಪೂಜಿಸಿ, ಸಿಡಿಲುಮರಿಯ ಕಾಲುಗಳಿಗೆ ಕಟ್ಟಿ ಹಾಗೆಯೇ ಅಭಿಮಾನದಿಂದ, ಭಕ್ತಿಯಿಂದ ತಾನೇ ಹೊತ್ತು ಚಿತೆಯೇರಿಸಿದ್ದನು.
ಪಡುವಣ ಬೆಂಕಿಯ ಗೋಳ ಆರಿತ್ತು. ಎಲ್ಲೆಲ್ಲೂ ಚಿಂತೆಯು ಕಪ್ಪಾಗಿ ದಟ್ಟವಾಗಿ ಆವರಿಸಿತ್ತು. ಅದನ್ನು ಸಿಡಿಲುಮರಿಯ ಚಿತೆಯನ್ನುರಿಸುತ್ತಿದ್ದ ವೀರಾವೇಶದ ಬೆಳಕು ಬೆಳಗಿಸಿತ್ತು. ಅದನ್ನು ದಿಟ್ಟಿಸಿ ನೋಡುತ್ತಾ, ಪಾರ್ತಿಸುಬ್ಬನ ಮನಸ್ಸಿನಲ್ಲಿ ತನ್ನ ಮೆಚ್ಚಿನ ಗೀತೆಯು ಮೂಡಿ ಬಂತು:
“ರಾಮನಾಣತಿಯಂತೆ ಸಿಡಿಲುಮರಿಯಂಗದನು……….”
ಎಂದೂ ಕವಿಗಳಲ್ಲದ ಬಣ್ಣದ ಗೋಪಣ್ಣ ರಾಮಚಂದ್ರರ ಮನಸ್ಸಿನಲ್ಲೂ ಆ ಕವಿತೆಯ ಪ್ರತಿಧ್ವನಿ ಸುಳಿಯುತ್ತಿತ್ತು:
“ಗುರುವಿನಾಣತಿಯಂತೆ ಸಿಡಿಲುಮರಿ ಕೆಂಗಣನು…………”
ಮೆಲ್ಲ ಮೆಲ್ಲನೆ ಬೆಳಕು ಮೂಡಿ ಜಗತ್ತನ್ನು ಬೆಳಗಿದಾಗ, ಸಿಡಿಲುಮರಿಯ ಚಿತೆಯ ಪವಿತ್ರ ಜ್ಯೋತಿಯು ಮೆಲ್ಲ ಮೆಲ್ಲನೆ ವಿಶ್ವಜ್ಯೋತಿಯಲ್ಲಿ ವಿಲೀನವಾಯಿತು.
‘ಸಿಡಿಲುಮರಿ’- ಕೇರಳದ ಹೈಸ್ಕೂಲ್ ತರಗತಿಗಳಿಗೆ ಕನ್ನಡ ಪಠ್ಯದಲ್ಲಿ ಓಂದು ಪಾಠವಾಗಿತ್ತು ಹಾಗೂ ’ಕಾಸರಗೋಡಿನ ಕತೆಗಳು’ (ಸಂ: ವಸಂತಕುಮಾರ ಪೆರ್ಲ) ನಲ್ಲಿ ಶತಮಾನದ ಒಂದು ಕತೆಯಾಗಿ ಪ್ರಕಟಗೊಂಡಿದೆ.
*****