ಇಂಗ್ಲೀಷಿನಲ್ಲಿ ಎರಡು ಸಾಲು ಮಾಡಬೇಕು.
ಕತೆ ಬರೆಯುವ ವಿಶ್ವಾಸವನ್ನು ಅವನ ಕೆಲ ಸ್ನೇಹಿತರು ಕೇಳುತ್ತಲೇ ಇರುತ್ತಾರೆ. ನೀವು ಕತೆ ಹೇಗೆ ಬರೆಯುತ್ತೀರಿ? ಮೂಡ್ ಯಾವಾಗ ಬರುತ್ತೆ? ಹೀಗೇ ಇರಬೇಕೂಂತ ನಿರ್ಧಾರ ಮಾಡಿ ಬರೀತೀರಾ? ಸಂಭಾಷಣೆ ಹೇಗೆ ಹೊಂದಿಸ್ತೀರಿ? ಇತ್ಯಾದಿ, ಇತ್ಯಾದಿ. ಇವೆಲ್ಲಾ ಅವನಿಗೆ ತೊಡಕಿನ ಪ್ರಶ್ನೆಗಳು. ಏಕೆಂದರೆ ಪ್ರತೀಕತೆಗೂ ಒಂದು ವಿಭಿನ್ನ ಹಿನ್ನೆಲೆ ಇರುತ್ತದೆ. ಅದಕ್ಕೇ ಅವನೆಷ್ಟೋ ಬಾರಿ ಭಾಷಣವನ್ನೇ ಕೊಟ್ಟಿದ್ದಾನೆ.
ಕತೆ ಬರೆಯುವುದು ಹತ್ತರಿಂದ ಐದರವರೆಗೆ ಆಫೀಸಿಗೆ ಹೋಗಿ ಬರುವಂತಹ ಪೂರ್ವಯೋಜಿತ ಕಾರ್ಯಕ್ರಮವಲ್ಲ. ಅಥವಾ ಚಿತ್ರ ಕಲೆಯಂತೆ ಒಂದು ಮಾಡೆಲ್ ಎದುರಿಗಿಟ್ಟುಕೊಂಡು ಬಣ್ಣ ಬಳಿಯುವ ರೀತಿಯಂತೂ ಅಲ್ಲವೇ ಅಲ್ಲ, ಮನಸ್ಸಿನ ಭಾವತೀವ್ರತೆಯಿಂದ ಹೊರಹೊಮ್ಮುವ ಕವನವೂ ಅಲ್ಲ. ಅದೊಂದು ವಿಭಿನ್ನ ಮಾನಸಿಕ ಪರಿಸ್ಥಿತಿಯಲ್ಲಿ ಹೊರಹೊಮ್ಮುವ ಅಕ್ಷರ ಗುಚ್ಚ. ಅದು ಹೇಗೆ ಬರೀತಿರಿ ಅಂದರೆ ಉತ್ತರ ನನ್ನಲ್ಲಿಲ್ಲ. ಏಕೆಂದರೆ ಕೇಳಿದರೂ ಹೇಳಲಾರೆ. ಇವುಗಳ ಹಿಂದಿರುವ ಪ್ರೇರಕ ಶಕ್ತಿಯ ಅರಿವು ನನಗಿನ್ನೂ ಆಗಿಲ್ಲ….”
ಹೀಗೆಲ್ಲಾ ಹೇಳುವಾಗ ಕೆಲ ಪದಗಳು ಅವನ ಕೃತ್ರಿಮತೆಯ ಸಂಕೇತ ಎಂದು ಅವನಿಗನ್ನಿಸುತ್ತದೆ. ಆದರೂ ಆ ಹಿನ್ನೆಲೆಯಲ್ಲಿ ಅವನು ಎಷ್ಟೋ ಬಾರಿ ಆಲೋಚಿಸಿದ್ದಾನೆ. ಉತ್ತರ ಹುಡುಕಿದಷ್ಟೂ ಜಟಿಲ ಪ್ರಶ್ನೆಗಳು ಉದ್ಭವಿಸುವುದನ್ನೂ ಕಂಡಿದ್ದಾನೆ. ಅವನನ್ನು ಎಲ್ಲಕ್ಕಿಂತ ಹೆಚ್ಚಾಗಿ ಕಾಡುತ್ತಿದ್ದುದೆಂದರೆ ಎರಡು ವರ್ಷಗಳ ಹಿಂದೆ ಬರೆಯಲುಪಕ್ರಮಿಸಿ ಪೂರ್ಣಗೊಳಿಸಲಾಗದ ಒಂದು ಕತೆ. ಅರ್ಧ ಬರೆದ ಕತೆ ಇನ್ನೂ ಅವನ ಬಳಿ ಇದೆ. ಅದನ್ನುಅವನು ಅಗಾಗ ಓದುವುದುಂಟು.ಅದರ ಬಗ್ಗೆ ಚಿಂತಿಸುವುದುಂಟ್. ಹಾಗೇ ಇನ್ನೊಮ್ಮೆ ಆ ಕತೆಯನ್ನು ಓದಬೇಕೆನಿಸಿತು ವಿಶ್ವಾಸನಿಗೆ….
ವಿವೇಕ ಬೆಂಗಳೂರಿನಿಂದ ಬಂದು ಮೂರು ದಿನಗಳಾಗಿದ್ದವು. ಮೂರು ವಾರಗಳ ರಜೆಯ ಮೇಲೆ ಅವನು ಊರಿಗೆ ಬಂದಿದ್ದಾನೆ. ಈ ಬಾರಿ ಹಲವು ವಿಷಯಗಳನ್ನು ಅವ ಇತ್ಯರ್ಥ ಮಾಡಿಕೊಳ್ಲಬೇಕಿದೆ. ಬೆಂಗಳೂರಿನಲ್ಲಿರುವ ಹೆಂಡತಿ ವಿದ್ಯಾ, ಮಗಳು ವರ್ಷಾ, ಒಂದೆಡೆ ಅವನನ್ನುಸೆಳೆದರೆ ಇತ್ತ ತಂದೆಯ ಬಗೆಗೆ ಬೇರೆಯದೇ ಆಲೋಚನೆ. ತೀರ್ಥಹಳ್ಳಿಯ ಬಳಿಅ ಕೊಣಂದೂರಿನಲ್ಲಿ ಇರುವ ಮನೆ, ಜಮೀನು, ಅಲ್ಲಿನ ಅಡಿಕೆ ತೋಟ, ಪ್ರಕೃತಿ ಇವುಗಳ ಮಧ್ಯೆ ಸುಖವಾಗಿ ಇರುವ ಅಪ್ಪ ಬೆಂಗಳೂರಿಗೆ ಬರಲು ಸುತರಾಂ ಒಪ್ಪದ ಒಂಟಿಯಾಗಿ ಹಳ್ಳಿಯಲ್ಲಿರಲಾಗದ ಪರಿಸ್ಥಿತಿ. ‘ಅಗ್ರಹಾರ’ ಹೋಬ್ಳಿಯಲ್ಲಿಯೇ ಅತಿ ಹೆಚ್ಚು ಇಳುವರಿ ಕೊಡುವ ಭೂಮಿ ಮತ್ತದರ ಒಡೆಯ ಅಪ್ಪ.
ಇತ್ತ ಕೋರಮಂಗಲದಲ್ಲಿ ಸ್ವಂತ ಮನೆ, ನೌಕರಿ ವರ್ಷಾಳ ವಿದ್ಯಾಭ್ಯಾಸ ವಿದ್ಯಾಳ ಕೆಲಸ, ಹೀಗೆ ದ್ವಂಧ್ವ. ಹಳ್ಳಿಯನ್ನು ಬಿಡಲು ಅಪ್ಪನಿಗೆ ಹೇಳಲಾರ, ತಾನೂ ಬಂದು ಇಲ್ಲಿರಲಾರ….ಅಮ್ಮ ಇದ್ದಷ್ಟು ದಿನವಂತೂ ಯೋಚನೆ ಇರಲಿಲ್ಲ. ಈಗ ಈ ಮೂರು ವಾರದೊಳಗೆ ಏನಾದರೂ ಇತ್ಯರ್ಥವಾಗಲೇಬೇಕಾಗಿದೆ. ಅಪ್ಪ ಒಪ್ಪಿದರೆ ತೋಟ, ಮನೆ ಮಾರಾಟ ಮಾಡಿ ಆರಾಮವಾಗಿ ಬೆಂಗಳೂರಿಗೆ ಹೋಗಬಹುದು. ಅಥವಾ ಏನಾದರಾಲಲಿ ಎಂದು ತಾವೇ ಊರಿಗೆ ಬಂದುಬಿಡುವುದೇ? ಹೀಗೆ ದ್ವಂಧ್ವಗಳ ಮಧ್ಯೆ ಅವನ ಮನ ಎಡತಾಕುತ್ತಿತ್ತು.
ಈ ಹೊಯ್ದಾಟಕ್ಕೆ ಕಾರಣ ಇಲ್ಲದಿರಲಿಲ್ಲ. ಅಪ್ಪನನ್ನು ಒಂಟಿಯಾಗಿ ಬಿಟ್ಟು ಹೋಗುವ ಮಾತು ಅವಶ್ಯವಾಗಿತ್ತು. ಅಮ್ಮ ಹೋದಮೇಲಂತೂ ಅಪ್ಪ ಆರೋಗ್ಯದ ಬಗ್ಗೆ ಉದಾಸೀನದಿಂದಲೇ ಇದ್ದರು. ಅವರಿಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆ ಮತ್ತೆ ಮುದಿತನದೊಂದಿಗೆ ಅಂಟಿ ಬರುವ ಮಣ್ಣಿನ ಅಟಾಚ್‌ಮೆಂಟಿನ ಸೆಂಟಿಮೆಂಟಾಲಿಟಿಯ ಖಾಯಿಲೆಯೂ ಇದೆ. ಇಂಥೆಲ್ಲ ಖಾಯಿಲೆಗಳ ನಡುವೆ ಒಮ್ತಿಯಾಗಿ ನರಳುತ್ತಿರುವ ಅಪ ಕೆಲದಿನಗಳಿಂದ ಅಟ್ಟಾಗಿ ಹಾಸಿಗೆ ಹಿಡಿದಿದ್ದರು. ಅದೇನು ರೋಗವೋ ತಿಳಿಯದು. ಬೆಂಗಳೂರಿಗೆ ಕರೆದೊಯ್ದರೆ ಒಳ್ಳೆಯ ಡಾಕ್ಟರಿಗಾದರು ತೋರಿಸಬಹುದು. ಆದರೆ ಈ ಅಪ್ಪ ಒಪ್ಪುವುದೇ ಇಲ್ಲ. ಇವರಿಗೆ ಈ ಹಾಸಿಗೆಯ ಮೇಲೆ ಸಾವು ಬದುಕುಗಳ ನಡುವೆ ಎಡತಾಕುವುದೇ ಹೆಚ್ಚು ಪ್ರಿಯ.
ಅತ್ತ ಬೆಂಗಳೂರಿನಲ್ಲೂ ಇದೇ ಪರಿಸ್ಥಿತಿ. ಮಲೆನಾಡ ಹೆಣ್ಣೇ ಆದರೂ ವಿದ್ಯಾ ಮಾತ್ರ ತೀರ್ಥಹಳ್ಳಿಗೆ ಹಿಂದಿರುಗಲು ಸಿದ್ಧಳಿಲ್ಲ. ತೀರ್ಥಹಳ್ಳಿಗೇ ಬರದವಳು ಕೊಣಂದೂರಿಗೇನು ಬಂದಾಳು? ಎಶ್ಃಟೋ ಹೇಳಿದ್ದಾಗಿದೆ ಅವಳಿಗೆ-ತೀರ್ಥಹಳ್ಳಿ ಇತ್ತೀಚೆಗೆ ಡೆವಲಪ್ ಆಗಿದೆ, ಅಷ್ಟೇಕೆ? ಕೊಣಂದೂರಿನಲ್ಲೂ ಒಂದು ಸಿನೇಮಾ ಒಂದು ವಿಡಿಯೋ ಒಂದು ಟೈ ಇನ್ಸ್‌ಟಿಟ್ಯೂಟ್ ಇತ್ಯಾದಿಗಳೆಲ್ಲಾ ಬಂದಿವೆ….ಉಹುಂ. ಎಷ್ಟು ಹೇಳಿದರು ಅವಳಿಗೆ ಬೆಂಗಳೂರಿನ ಮೋಜು ಇಳಿಯುವುದಿಲ್ಲ. ವರ್ಷಾಳ ಓದಿನ ಪ್ರಶ್ನೆಯನ್ನು ತಂದಿಟ್ಟುಬಿಡುತ್ತಾಳೆ…ಇಂಥಾ ಸ್ಕೂಲಿಂಗ್ ನಿಮ್ಮೂರಿನಲ್ಲಿ ಎಲ್ಲಿ ದೊರೆಯಬೇಕು? ಎಂದು ಮೂದಲಿಕೆಯ ಪ್ರಶ್ನೆ.
ಹೀಗೆಲಾ ಪ್ರಶ್ನಿಸುವ ವಿದ್ಯಾಳನ್ನು ನಾಣ್ಯದ ಈ ಭಾಗ ನೋಡುವಂತೆ ಮಾಡಲು ವಿವೇಕ ಎಷ್ಟೋ ಬಾರಿ ಪ್ರಯತ್ನಿಸಿದ್ದಾನೆ. ತಾನೂ ತೀರ್ಥಹಳ್ಳಿ ಶಿವಮೊಗ್ಗೆಯಲ್ಲಿ ಓದಿ ಮೇಲೆ ಬಂದವ. ಅಲ್ಲಿಯೇ ಈಗ ಸಹ್ಯಾದ್ರಿ ಯೂನಿವರ್ಸಿಟಿ ಬೇರೆ ಆಗುತ್ತಿದೆ. ನಸೀಬಿದ್ದರೆ ಎಲ್ಲಾದರೂ ಓದಿ ಮೇಲೆ ಬರಬಹುದು ಇತ್ಯಾದಿ….ಆದರೆ ವಿದ್ಯಾಳದು ಇವಕ್ಕೆಲ್ಲಾ ಅನುಕೂಲದ ಕಿವುಡು.
ಹೀಗೆ ಆಲೋಚಿಸುತ್ತಿದ್ದ ವಿವೇಕ ಈ ಬಾರಿ ಬೆಂಗಳೂರಿಗೆ ಹಿಂದಿರುಗಿ ಹೋಗುವ ಮುನ್ನ ಏನೊಂದೂ ನಿರ್ಧರಿಸಬೇಕು ಎಂದುಕೊಂಡ.”
ಇದಿಷ್ಟೇ ವಿಶ್ವಾಸ ಅಂದು ಬರೆದಿಟ್ಟಿದ್ದ ಸಾರಾಂಶ. ಈ ಕತೆಯನ್ನು ಅದೇಕೋ ಅವನಿಗೆ ಮುಂದಕ್ಕೆ ಒಯ್ಯಲು ಸಾಧ್ಯವೇ ಆಗಲಿಲ್ಲ. ಪ್ರಾರಂಭಿಸಿದಾಗ ಮೂರು ವಾರಗಳೊಳಗಾಗಿ ವಿವೇಕನ ತಂದೆಯ ಸಾವು ಸಂಭವಿಸುವುದೆಂದೂ ಅಂತ್ಯ ಕ್ರಿಯೆ ಕುಗಿಸಿ, ಅದರೊಂದಿಗೇ ಜಮೀನು ಮಾರಿ ಬೆಂಗಳೂರಿಗೆ ವಿವೇಕ ಹಿಂದಿರುಗುವ ಚಿತ್ರಣವನ್ನು ನೀಡಿ ಯಾಂತ್ರಿಕತೆಯ ಆಕರ್ಷಣೆಯಲ್ಲಿ ಮುಳುಗಿದ ವ್ಯಕ್ತಿ, ಪ್ರಕೃತಿಯನ್ನೇ ಮರೆತು ಮುಂದಕ್ಕೆ ಸಾಗುವ ವಸ್ತುವನ್ನು ಸಂಕೇತಿಸುವಂತೆ ಬರೆಯಬೇಕೆಂದು ನಿರ್ಧರಿಸಿದ್ದ.
ಆದರೆ…..
ಕತೆ ಮಾತ್ರ ಅದೇಕೋ ಇಲ್ಲಿಂದ ಮುಂದಕ್ಕೆ ಆಗಲೇ ಇಲ್ಲ. ವಿಶ್ವಾಸನನ್ನು ಒಂದು ರೀತಿಯ ಅಪರಾಧೀ ಭಾವ ಕಾಡತೊಡಗಿತು. ವಿವೇಕನ ತಂದೆಯ ಸಾವು ಒಂದು ಸುಲಭೋಪಾಯವೆನ್ನಿಸಿ ಪಲಾಯನವಾದದತ್ತ ಬೊಟ್ಟು ತೋರಿತು. ಹೌದು ಲೇಖಕನಾಗಿ ಒಂದು ಜಟಿಲ ಸಮಸ್ಯೆಯನ್ನು ಎದುರಿಸಲಾಗದೇ ಅದಕ್ಕೆ ಸಾವಿನಲ್ಲಿ ಸುಲಭೋಪಾಯ ಕಂಡುಕೊಂಡದ್ದು ಏಕೆ? ಹೀಗೆ ಕತೆ ಬರೆದರೆ ಒಂದೇ ನಿಮಿಷದಲ್ಲಿ ಪಾತ್ರವನ್ನು ಕೊಂದು ಲೇಖನಿ ಖಡ್ಗಕ್ಕಿಂತ ಹರಿತ ಎಂದು ನಿರೂಪಿಸಬಹುದು, ಅಷ್ಟೇ. ತಾನು ಕತೆ ಬರೆಯುವುದು ಜೀವನ ಮೌಲ್ಯಗಳನ್ನು ಸಂದಿಗ್ಧಗಳನ್ನೂ ವಿಶ್ಲೇಷಿಸುವುದಕ್ಕಾಗಿ, ಮಾನವ ಪ್ರವರ್ತನಗಳನ್ನು ದಾಖಲಿಸುವುದಕ್ಕಾಗಿ, ಹಾಗಾದಲ್ಲಿ ಇಂಥ ಕತೆಗಳು ಕೇವಲ ಕೀರ್ತಿಗಾಗಿ ಬರೆಯಬೇಕೇ? ಅಥವಾ ಅಂತ್ಯದ ಬಗ್ಗೆ ಪುನರಾಲೋಚಿಸಬೇಕೇ? ಜೀವನವನ್ನು ವಾಸ್ತವವಾಗಿ ಅಲ್ಲದಿದ್ದರೂ ಕಥಾಮಾಧ್ಯಮ ದಲ್ಲಾದರೂ ಎದುರಿಸದಿದ್ದರೆ ಹೇಗೆ? ತಾನೇ ಈ ವಿವೇಕನಾಗಿದ್ದು ತಂದೆ ಸಾಯದಿದ್ದರೆ ಆಗುತ್ತಿದ್ದುದೇನು? ಅದನ್ನ್ದುರಿಸುವ ಎದೆಗಾರಿಕೆಯನ್ನು ತನ್ನ ಸೃಷ್ಟಿಯ ಕಥಾನಾಯಕ ತೋರದಿದ್ದರೆ ಹೇಗೆ?
ಹೀಗೆಲ್ಲ ಅಲೋಚನಗಳು ಒತ್ತರಿಸಿಕೊಂಡು ಬಂದಾಗ ವಿಶ್ವಾಸ ಕತೆಯನ್ನು ಹೇಗೆ ಮುಂದುವರಿಸಬೇಕೆಂದು ತಿಳಿಯದೇ ಅಲ್ಲೇ ನಿಲ್ಲಸಿದ. ಅದನ್ನು ಅವನು ಅಲ್ಲಿಗೇ ಮರೆತುಬಿಡೋಣವೆಂದುಕೊಂಡರೂ ಅದು ಮಾತ್ರ ಅವನನ್ನು ಭೂತದಂತೆ ಕಾಡುತ್ತಿತ್ತು. ಕತೆ ಬರೆಯದಿದ್ದರೆ ತನ್ನ ಕತೆಯನ್ನೂ ತಾನು ಎದುರಿಸಲಾಗದ ಪರಿಸ್ಥಿತಿ ಒದಗುತ್ತದೆ. ಇಲ್ಲಿ ಬರೆಯದೇ ಇರುವುದು ಪಲಾಯನವಾದದ ಮತ್ತೊಂದು ಮಜಲಾಗುತ್ತದೆ. ಅವನಿಗೆ ಇದು ಸಮ್ಮತವಿರಲಿಲ್ಲ. ಈ ಕತೆ ತನ್ನೊಳಗಿನ ಬರಹಗಾರ ಪ್ರವೃತ್ತಿಗೆ ಸವಾಲಾಗಿತ್ತು. ಅದೂ ಎಷ್ಟರಮಟ್ಟಿಗೆಂದರೆ ತನ್ನೊಳಗಿನ ಬರಹಗಾರ ಹಾಗೂ ತನ್ನ ದ್ವಂಧ್ವ ವ್ಯಕ್ತಿತ್ವವನ್ನೂ ಮೀರಿ ನಿಂತು ತಾನೇ ಎರಡೂ ವ್ಯಕ್ತಿತ್ವಗಳ ಸಾಕಾರ ಮೂರ್ತಿ ಎಂಬಂತೆ ಈ ಕತೆ ತನ್ನನ್ನು ಕಾಡುತ್ತಿತ್ತು. ಕತೆಯ ಹುಳ ಅವನ ಮೆದುಳನ್ನು ತೀವ್ರವಾಗಿ ಕೊರೆಯತೊಡಗಿತ್ತು.
ವಿವೇಕನ ತಂದೆಯನ್ನು ಬದುಕಿಸಿದರೆ, ಮುಂದೆ? ವಿವೇಕನನ್ನೂ ಆಕಸ್ಮಿಕವೊಂದರಲ್ಲಿ ಕೊಂದು ಕತೆಗೆ ನಾಟಕೀಯ ತಿರುವನ್ನು ಕೊಡಬಹುದೆನಿಸಿತು. ವಿಶ್ವಾಸನಿಗೆ ಇಲ್ಲಿ ಪಲಾಯನವಾದ ಪ್ರಶ್ನೆಯೇ ಇಲ್ಲ. ಏಕೆಂದರೆ ಕಥೆಯಲ್ಲಿ ಅನಿರೀಕ್ಷಿತ ತೊಂದರೆಗಳನ್ನು ತಾನೇ ಆಹ್ವಾನಿಸಿ, ಅವುಗಳ ವಿಶ್ಲೇಷಣೆ ಮಾಡಿ, ಸಮಸ್ಯೆಯ ವಿವಿಧ ಪದರಗಳ ಚಿತ್ರಣ ನೀಡಬಹುದು. ಕತೆ ಸಮಸ್ಯೆಗಳ ಹಂದರವಾಗುತ್ತದೆ. ಬರೆಯಲುಬೇಕಾದಷ್ಟು ಸರಕಂತೂ ಇರುತ್ತದೆ. ವಿದ್ಯಾ ಅನಿವಾರ್ಯವಾಗಿ ಕೊಣಂದೂರಿಗೆ ಹಿಂದಿರುಗುವ, ವರ್ಷಾ ಅಲ್ಲೇ ವಿದ್ಯಾಭ್ಯಾಸ ಮಾಡುವ ಕತೆ ಬೆಂಗಳೂರಿನಿಂದ ಏಕಾಏಕೀ ಕೊಣಂದೂರಿಗೆ ಬಂದಾಗ ಆಗುವ ಗೊಂದಲ. ಒಂದು ವ್ಯಕ್ತಿಯ ನಾಸ್ತಿತ್ವದ ಕೋಟಲೆಗಳು, ಅಲ್ಲೋಲಕಲ್ಲೋಲಗಳು. ವಿಧವೆಯ ಬದುಕಿನ ಪ್ರಶ್ನೆ….ಹೀಗೆ ಆಲೋಚಿಸುತ್ತಾ ಹೋದಂತೆ ವಿಶ್ವಾಸನಿಗೆ ಎರಡು ವಿಷಯ ತಕ್ಷಣಕ್ಕೆ ಹೊಳೆದವು….ಇಲ್ಲಿ ವಿವೇಕ ಕಥೆಯಿಂದಾಚೆ ಹೋಗುವುದರಿಂದ, ಇದು ಮತ್ತೊಮ್ಮೆ ಪಲಾಯನದತ್ತ ಬೆರಳು ಮಾಡಿತು. ವಿಶ್ಲೇಷಣೆಗೆ ಜೀವನ ಮೌಲ್ಯಗಳ ಮಂಥನಕ್ಕೆ ಗ್ರಾಸ ಎಂದು ಕೊಂಡಾಗಲೂ ವಿಶ್ವಾಸನಿಗೆ ಅದೇಕೋ ಇದು ಒಪ್ಪಿತವಾಗಲಿಲ್ಲ. ಅವನು ತನ್ನನ್ನೇ ಸಮಾಧಾನಪಡಿಸಿಕೊಳ್ಳಲು ಒಂದೆರದು ಕಾರಣಗಳನ್ನು ಒಡ್ಡಿಕೊಂಡ.
ಒಂದು : ಇಲ್ಲಿ ಕತೆಯ ದೃಷ್ಟಿಕೋನ ಹೆಣ್ಣಿನದಾಗುತ್ತದೆ. ಸಮಸ್ಯೆಯ ಚಿತ್ರೀಕರಣ ಆ ದೃಷ್ಟೀಕೋನದಿಂದ ತಾನು ಸಮರ್ಥನಾಗಿ ಮಾಡಲಾರ.
ಎರಡು : ಸಮಸ್ಯೆಗಳು ಗೋಜಲಾಗಿ ಕತೆ ಏಕತಾನತೆಯಲ್ಲಿ ಪರ್ಯಾವಸನ ಆಗಬಹುದು.
ಮೂರು : ಸಣ್ಣ ಕತೆಯಾಗಿ ಉಳಿಯದೇ ಕಣ್ಣೀರಿನ ಕಾದಂಬರಿಯಾಗಿ, ತನ್ನ ಹೆಂಡತಿಯ ಹೆಸರಿನಲ್ಲಿ ಪ್ರಕಟಿಸಬೇಕಾದ ಪ್ರಮಾದ ಒದಗಬಹುದು ಎಂಬ ಅಳುಕು.
ಅವನಿಗೇ ಹಾಗೆ ಮಿಣುಕುಳುಗಳಂತೆ ಇನ್ನೆರಡು ಅಂತ್ಯಗಳೂ ಗೋಚರಿಸಿದವು. ಅದೂ ಸಾವಿಗೆ ಸಂಬಂಧಿಸಿದ್ದೇ, ಒಂದು ವಿದ್ಯಾಳದ್ದು, ಮತ್ತೊಂದು ವರ್ಷಾಳದ್ದು. ಆದರೆ ಎರಡನ್ನೂ ಕೂಡಲೇ ತಳ್ಳಿಹಾಕಿದ.
ಈ ಕತೆಯ ಬಗ್ಗೆ ತನ್ನ ಸ್ನೇಹಿತ ಪಾಣಿಯ ಬಳಿ ಕುಳಿತು ಒಂದು ದಿನ ದೀರ್ಘ ಚರ್ಚೆ ನಡೆಸಿದ. ಅದೇಕೆ ಒಂದು ಸಣ್ಣ ಕತೆ ಇಷ್ಟು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂಬುದು ಅವನಿಗೆ ಅರ್ಥವೇ ಆಗಲಿಲ್ಲ. ದೀಪಾವಳೀ ವಿಷೇಷಾಂಕಕ್ಕಾಗಿ ಕತೆ ಕೋರುತ್ತಾ ಬಂದ ಸಂಪಾದಕರ ಪತ್ರ ಅವನನ್ನು ಈ ಕತೆಯ ಬಗ್ಗೆ ಮತ್ತೊಮ್ಮೆ ಜಾಗ್ರತನನ್ನಾಗಿಸಿತು.
ಆ ಕ್ಷಣದಲ್ಲಿ ವಿಶ್ವಾಸನಿಗೆ ಅದೇಕೋ ಜೀವನದಲ್ಲಿ ಅತೀ ದೊಡ್ಡ ಸಂದಿಗ್ಧ ಎನಿಸಿತ್ತು. ಇದು ಒಳ್ಳೆ ಮಲಬದ್ಧತೆಯಂತೆ ಪರಿಣಮಿಸಿತ್ತು. ಒಳಗಿತ್ತು ಹೊರಬರುತ್ತಿರಲಿಲ್ಲ!
ಯಾರನ್ನೂ ಕೊಲ್ಲದೆ ಕತೆ ಮುಗಿಸಬೇಕೆಂದು ಹೊರಟಾಗ ಈ ಬಾರಿ ಅವನಿಗೆ ವಿವೇಕನ ದೃಷ್ಟೀಕೋನದಿಂದ ಅವನ ತಂದೆಯ ದೃಷ್ಟಿಕೋನವೇ ಪ್ರಭಾವಶಾಲಿಯಾಗಿರಬಹುದೆಂದು ವಿಶ್ವಾಸ ಹಾಗೇ ಪ್ರಾರಂಭಿಸಿದ. ಈಗ ಬಂದು ಎರಡು ವಾರಗಳಾಯ್ತು. ಮುಂದಿನ ವಾರ ಹೊರಡುತ್ತಾನೆ. ಹೋಗುವ ಮೊದಲು ನನಗೊಂದು ಗಂಭೀರ ಪ್ರಶ್ನೆ ಹಾಕಿದ್ದಾನೆ. ನಾನೇ ಬೆಂಗಳೂರಿಗೆ ಹೋಗಬೇಕೋ ಅಥವಾ ಅವನೇ ಸಂಸಾರ ಸಮೇತ ಕೊಣಂದೂರಿಗೆ ಬರಬೇಕೋ ನಿರ್ಧರಿಸಿ ಹೇಳಬೇಕಂತೆ. ನನ್ನ ನಿರ್ಧಾರಕ್ಕೆ ಹಿನ್ನೆಲೆಯಾಗಿ ವಿದ್ಯಾಳ ಮನಸ್ತತ್ವ ಮಗಳು ವರ್ಷಾಳ ವಿದ್ಯಾರ್ಜನೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾನೆ. ಈಗ ಅವ ನನ್ನ ಮೇಲೇ ಸಂಪೂರ್ಣ ಬಿಟ್ಟಿರುವುದರಿಂದ ಸೆಂಟಿಮೆಂಟಾಲಿಟಿಯಿಂದ ಹೊರಬಂದು ಆಲೋಚಿಸಬೇಕಾಗುತ್ತದೆ. ‘ಬಂದುಬಿಡಿ’ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ಅವನ, ವಿದ್ಯಾಳ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.”
ಹೀಗೆ ವಿವೇಕನ ತಂದೆಯ ಕತೆಯೆಂಬಂತೆ ಬರೆಯಲು ಪ್ರಾರಂಭಿಸಿದರೂ ಅದೇಕೋ ಅಂತ್ಯಕ್ಕೆ ಬರುವ ವೇಳೆಗೆ ಸಹಜವಾಗಿ ವಿವೇಕನ ತಂದೆಯ ಆತ್ಮಹತ್ಯೆಯಲ್ಲಿ ಕತೆ ಪರ್ಯಾವಸನಗೊಂಡಿತು. ಅಂತ್ಯದಲ್ಲಿ ತೋಟ ಮಾರಿ ಬೆಂಗಳೂರಿಗೆ ಹೋಗಬೇಕೆಂಬ ವಿವೇಕನ ತಂದೆಯ ನಿರ್ಧಾರದೊಂದಿಗೆ ಕತೆ ಮುಗಿಸಬೇಕೆಂದಿದ್ದ, ವಿಶ್ವಾಸ. ಅದೇಕೋ ಹಾಗೆ ಮಾಡಲಿಲ್ಲ. ಆತ್ಮಹತ್ಯೆಯ ಸುಲಭೋಪಾಯ ಕಂಡಾಗ ಅವನಿಗೆ ಮತ್ತೊಮ್ಮೆ ಪಲಾಯನವಾದದ ಭೀತಿ ಉಂಟಾಯಿತು.
ಆದರೆ ಆಶ್ಚರ್ಯಕರ ವಿಷಯವೆಂದರೆ ಯಾವ ಕತೆಯ ಬಗೆಗೂ ಇಷ್ಟು ತಲೆಕೆಡಿಸಿಕೊಳ್ಳದ ವಿಶ್ವಾಸ ಈ ಕತೆಯೊಂದಿಗೆ ತನ್ನನ್ನು ತಾನೇ ಗುರುತಿಸಿಕೊಂಡದ್ದು. ಈ ಕತೆಯ ಸಫಲತೆ ಕತೆಗಾರನ ಸಫಲತೆ ವಿಫಲತೆ ತನ್ನ ತಥಾಜೀವನಕ್ಕೆ ಅಂತ್ಯ ಎನ್ನುವಷ್ಟರ ಮಟ್ಟಿಗೆ ಈ ಕತೆಯಲ್ಲಿ ತಾನು ಅಂತರ್ಲೀನವಾಗಿಹೋಗಿದ್ದ.
ಕಡೆಗೂ ಅದೇಕೋ ಕತೆಯನ್ನು ಕಳುಹಿಸಬೇಕೆಂದು ಅನ್ನಿಸಲಿಲ್ಲ. ಅಸಮಾಧಾನದಿಂದಲೇ ಸಂಪಾದಕರಿಗೆ ಪತ್ರ ಬರೆದ….ಕತೆ ಕಳಿಸಲಾರದ್ದಕ್ಕೆ ಕ್ಷಮೆ ಕೋರುತ್ತಾ ವಿದ್ಯಾಳ ದೃಷ್ಟಿಯಿಂದ ಕತೆಯ ಬಗ್ಗೆ ಮತ್ತೊಮ್ಮೆ ಆಲೋಚಿಸಿದಾಗಲೂ ಸಾವೇ ಅವನಿಗೆ ಉತ್ತರವಾಗಿ ಗೋಚರಿಸಿದ್ದರಿಂದ ಅವನಿಗೆ ಭೀತಿಯುಂಟಾಯಿತು. ತನ್ನ ಮಾನಸಿಕ ಸ್ವಾಸ್ಥ್ಯದ ಬಗೆಗೇ ಅನುಮಾನ ಬರುವಷ್ಟು ಭಯವಾಯಿತು. ಕತೆಯ ಪಾತ್ರದಲ್ಲಿ ಯಾವುದಾದರೊಂದನ್ನು ಸಾಯಿಸಲೇಬೇಕೆಂಬ ತನ್ನ ಪೂರ್ವಗ್ರಹ ಏಕೆ ಎಂಬುದು ವಿಶ್ವಾಸನಿಗೆ ಅರ್ಥವಾಗಲಿಲ್ಲ. ಹಾಗೇ ಅದನ್ನು ಒಪ್ಪದೇ ಕತೆ ಬರೆಯದೇ ಇರುವ ದ್ವಂದ್ವವೂ ಅರ್ಥವಾಗಲಿಲ್ಲ.
ವಿಶ್ವಾಸನಿಗೆ ದೃಢವಾಗಿ ಅನ್ನಿಸಿದ್ದಿಷ್ಟು….ಈ ರೀತಿಯ ತನ್ನ ಪ್ರವರ್ತನೆಗೆ ಏನೋ ಬಲವಾದ ಹಿನ್ನೆಲೆ ಇರಬೇಕು. ಇಲ್ಲದಿದ್ದರೆ ಅದು ತನ್ನನ್ನು ಹೀಗೆ ಕಾಡುವುದಿಲ್ಲ. ಇದರ ಚೆರಿತ್ರೆಯನ್ನು ಪರಿಶೋಧಿಸಲೇಬೇಕು. ಇದಕ್ಕೊಂದು ಮಾರ್ಗ ಕಂಡುಹಿಡಿಯುವವರೆಗೆ ಏನನ್ನೂ ಬರೆಯಬಾರದು. ಹೀಗೆಲ್ಲಾ ನಿರ್ಧರಿಸಿದ. ಏನನ್ನೂ ಬರೆಯಬಾರದು ಎಂಬುದನ್ನೇನೋ ಅವನು ನಿರ್ಧರಿಸಿದ್ದರೂ ಅವನ ಗಮನಕ್ಕೆ ಇನ್ನೂ ಬಂದಿರದಿದ್ದ ಅಂಶವೆಂದರೆ ಅವನು ಬರೆಯಲು ಪ್ರಯತ್ನಿಸಿದ್ದರೂ ಅವನಿಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ ಎಂಬುದು!
ಜನ್ಮಾಂತರ. ಟೆಲಿಪಥಿ ಇತ್ಯಾದಿಗಳ ಬಗೆಗೆ ಸ್ವಲ್ಪ ಮಟ್ಟಿನ ಸಂಶೋಧನಾತ್ಮಕ ದೃಷ್ಟಿಯಿಂದ ವಿಶ್ವಾಸ ಘಟನೆಯ ಬಗ್ಗೆಗೆ ಅತಿಯಾಗಿ ತಲೆ ಕೆಡಿಸಿಕೊಂಡ. ಹಾಗೆಂದೇ ವಾರ್ಷಿಕ ರಜೆ ಬಂದಾಗ ತೀರ್ಥಹಳ್ಳಿಗೂ ಕೊಣಂದೂರಿಗೂ ಒಮ್ಮೆ ಹೋಗಿ ಬಂದದ್ದು. ಈ ಊರುಗಳಿಗೂ ತನ್ನ ಕಡೆಗು ನಿಕಟ ಸಂಬಂಧವಿದ್ದು ಒಂದು ಸತ್ಯ ಘಟನೆಯ ಅಗೋಚರ ಪ್ರೇರಣೆ ಈ ಕತೆ ಇರಬಹುದೆನಿಸಿತ್ತು. ತೀರ್ಥಹಳ್ಳಿ ಕೊಣಂದೂರುಗಳಲ್ಲಿ ಮೂರು ವಾರಗಳ ಕಾಲ ತಿರುಗಾಡಿದರೂ ಏನೂ ಕಂಡು ಬರಲಿಲ್ಲ. ವಿಶ್ವಾಸ ಊರಿಗೆ ಹಿಂದಿರುಗಿದ.
ಊರಿನಿಂದ ಹಿಂದಿರುಗಿದ ನಂತರ ಪಾಣಿಯನ್ನು ಇನ್ನೊಮ್ಮೆ ಭೇಟಿಯಾಗಿ ಕತೆಯ ಬಗ್ಗೆ ಚರ್ಚಿಸಿದ್ದಾಯ್ತು. ಚರ್ಚೆಯನ್ನು ನೋಡಿ ಪಾಣಿಗೆ ರೇಗಿದ್ದೂ ಉಂಟು.
“ಏನಯ್ಯಾ ನಿನ್ನ ರಾಮಾಯಣ, ಒಂದು ಕತೆಯ ಬಗ್ಗೆ ಇಷ್ಟೊಂದು ಯೋಚನೆ ಮಾಡಿ ನನ್ನ ತಲೇನೂ ಕೆಡಿಸ್ತಾ ಇದ್ದೀಯಲ್ಲಾ.”
“ಅಲ್ಲಾ ಅದ್ಯಾಕೋ ಇದಕ್ಕೊಂದು ಅಂತ್ಯ ಹಾಡಲೇಬೇಕು.”
“ನೋಡು ನೀನು ಏನೇ ಅನ್ನು, ನನಗನ್ನಿಸೋದು ಇಷ್ಟೇ….ಒಂದು ಕತೆಯ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಂಡಿರೋ ವ್ಯಕ್ತೀನ ನೋಡ್ತಾ ಇರೋದು ಇದೇ ಮೊದಲು. ನೀನು ಈ ಕತೆ ನಿಂಗಿಷ್ಟ ಬಂದ ಹಾಗೇ ಬರೀ….ಇಲ್ಲದಿದ್ದರೆ ಬಿಟ್ಟುಬಿಡು….ಅದೂ ಸಾಧ್ಯವಾಗಲಿಲ್ಲಾಂದ್ರೆ ಈ ಕತೆ ನಿನ್ನನ್ನು ಕಾಡಿದ ಬಗ್ಗೆ ಒಂದು ಕತೆ ಬರೆದು ಬಿಡು…..ನನಗೆ ಮಾತ್ರ ಈ ಕತೆಯೊಂದಿಗೆ ತೊಂದ್ರೆ ಕೊಡಬೇಡ.”
ಹೀಗೆ ಎರಡು ವರ್ಷಗಳ ಕೆಳಗೆ ಅರ್ಧದಲ್ಲಿ ನಿಲ್ಲಿಸಿದ್ದ ಕತೆಯನ್ನು ವಿಶ್ವಾಸ ಕಾಲಗಮನದಲ್ಲಿ ಮರೆತಿರಬೇಕಿತ್ತು. ಆದರೆ ಅದೇಕೋ ಸಾಧ್ಯವೇ ಆಗಲಿಲ್ಲ. ಅದಕ್ಕೆ ಒಂದು ಕಾರಣ ಆ ಕತೆಯೇ ಅವನ ಅಂತಿಮ ಕತೆಯಾದದ್ದು ಇರಬಹುದು. ನಂತರ ವಿಶ್ವಾಸ ಕತೆಗಳನ್ನು ಬರೆಯಲೇ ಇಲ್ಲ. ಕತೆಗಳ ಕ್ಷೇತ್ರದಿಂದ ತನ್ನನ್ನು ಸಂಪೂರ್ಣವಾಗಿ ಹೊರಗುಳಿಸಿಕೊಂಡು ಅಜ್ಞಾತವಾಸದಲ್ಲಿದ್ದ.
ಹೀಗೆ ಯೋಚನೆಗಳು ಕಾಡುವಾಗಲೇ ಮೊನ್ನೆ ವಿಶ್ವಾಸನಿಗೆ ವಿಮರ್ಶೆಗೆಂದು ಒಂದು ಪುಸ್ತಕ ಬಂದಿತು. ಪೂರ್ಣೇಶರ ದಶಕದ ಹಿಂದೆ ಬಂದ ಮೂರು ಕಥಾ ಸಂಕಲನಗಳನ್ನು ಒಟ್ಟುಗೂಡಿಸಿ ಅವರ ಎಲ್ಲ ಕೃತಿಗಳ ಸಮಗ್ರ ಸಂಪುಟವೊಂದನ್ನು ಮುದ್ರಿಸಿ ಹೊರತರಲಾಗಿತ್ತು. ಆ ಮೂರೂ ಸಂಕಲನಗಳನ್ನೂ ವಿಶ್ವಾಸ ಓದಿದ್ದ. ಆದರೂ ವಿಮರ್ಶೆಗಾಗಿ ಮತ್ತೊಮ್ಮೆ ಓದತೊಡಗಿದ.
ಓದುತ್ತಿದ್ದಂತೆ ಒಂದು ಕತೆ ಅವನನ್ನು ವಿಶೇಷವಾಗಿ ಸೆಳೆಯಿತು. ತಾನು ಬರೆಯದೇ ಉಳಿಸಿದ್ದ ಕತೆಯ ಕಂತುಗಳನ್ನೇ ಹೊತ್ತ ಕತೆಯದು. ವಿವೇಕನ ಪಾತ್ರ, ಅವನ ತಂದೆಯ ಪಾತ್ರ, ಅದೇ ರೀತಿಯ ಸಂದರ್ಭ. ಬೊಂಬಾಯಿಯಲ್ಲಿ ಕಥಾನಾಯಕನ ವಾಸ್ತವ್ಯ. ಹಳ್ಳಿಯ ಸೆಳೆತ, ಇತ್ಯಾದಿ. ಕತೆಯ ಅಂತ್ಯದಲ್ಲಿ ಯಾರೂ ಸಿಗುತ್ತಿಲ್ಲ. ಮಗ ಮುಂಬಯಿಗೆ ಹಿಂದಿರುಗಿದ. ತಂದೆ ಹಳ್ಳಿಯಲ್ಲಿಯೇ ಉಳಿದುಕೊಂಡಿದ್ದ. ಮನೆಯ ಆಳು ಮಹದೇಶ್ವರ ದತ್ತು ಪುತ್ರನಂತೆ ವರ್ತಿಸುತ್ತಿದ್ದ. ತಂದೆಯನ್ನು ಅವನೇ ನೋಡಿಕೊಳ್ಳುತ್ತಿದ್ದ. ಆಸ್ತಿ ಮಹದೇಶ್ವರನಿಗೇ ಕೊಡುವಂತೆ ಮಗ ಹೇಳಿ ಮುಂಬಯಿಗೆ ಪಲಾಯನ ಗೈದಿದ್ದ.
ಹೌದು ವಿಶ್ವಾಸನಿಗೆ ಈಗ ನೆನಪಾಯ್ತು. ಈ ಕತೆಯನ್ನು ತಾನು ಓದಿದ್ದೆ ಓದಿದಾಕ್ಷಣಕ್ಕೆ ಇಲ್ಲಿ ಮಗನನ್ನು ಮುಂಬಯಿಗೆ ಕಳಿಸುವುದರಲ್ಲಿ ಲೇಖಕರದ್ದು ಪಲಾಯನವಾದವೆನಿಸಿತ್ತು. ಈ ಕಥೆ ತನ್ನ ಕಾಲೇಜು ದಿನಗಳಲ್ಲಿ ತನ್ನ ಮೇಲೆ ಗಾಢ ಪರಿಣಾಮ ಬೀರಿತ್ತು. ಆದರೆ ಅದನ್ನು ಕಾಲಗಮನದಲ್ಲಿ ಮರೆತಿದ್ದ. ಹಾಗಾದರೆ ತನಗೆ ಅದೇ ಕಥಾವಸ್ತುವಿನ ಚೌಕಟ್ಟಿನಲ್ಲಿ ಕತೆ ಬರೆಯಬೇಕೆನಿಸಿದ್ದು ಏಕೆ? ಈ ಕತೆ ಮುಗಿಸಿ ಪ್ರಕಟಿಸಿದ್ದರೆ ತನ್ನ ಮೇಲೆ ಕೃತಿಚೌರ್ಯದ ಅಪಾದನೆ ಬರುತ್ತಿತ್ತೇ? ಹೀಗೆಲ್ಲಾ ಆಗಬಹುದಿದ್ದ ಅನಂತ ಸಾಧ್ಯತೆಗಳ ಬಗೆಗೆ ವಿಶ್ವಾಸ ಆಲೋಚಿಸಿದ.
ಕಥೆಗಾರನಾಗಿ ವಿಶ್ವಾಸ ಸೋಲನ್ನೊಪ್ಪಿಕೊಂಡ. ತಾನೆಂದೂ ಕತೆಗಳನ್ನು ಬರೆಯಲಾರೆ ಎಂದು ನಿರ್ಧರಿಸಿದ.
ಇತ್ತೀಚೆಗೆ ಪ್ರಕಟಗೊಂಡ ವಿಶ್ವಾಸನ ಪ್ರಬಂಧ – ಪೂರ್ಣೇಶರ ಕತೆಗಳು – ಅನಂತ ಸಾಧ್ಯತೆಗಳು – ಅಪಾರ ಜನಮನ್ನಣೆ ಪಡೆದಿರುವ ವಿಷಯ ವಾಚಕರಿಗೆ ತಿಳಿದದ್ದೇ. ವಿಶ್ವಾಸನಿಗೆ ಪೂರ್ಣೇಶರ ಭೇಟಿ ಆಗಿಲ್ಲ. ಪೂರ್ಣೇಶನೆಂಬ ವ್ಯಕ್ತಿ ಹೇಗಿದ್ದಾನೋ ಯಾರೂ ನೋಡಿಲ್ಲ. ಪೂರ್ಣೇಶರು ಬರೆದ ಕಟ್ಟ ಕಡೆಯ ಕಥೆ ಎರಡು ವರ್ಷಗಳ ಕೆಳಗೆ ಪ್ರಕಟಗೊಂಡಿತ್ತು. ಆಗಿನಿಂದ ಆತ ಅಜ್ಞಾತವಾಸದಲ್ಲಿದ್ದಾರೆ. ವಿಶ್ವಾಸ ಈಗ ದೊಡ್ಡ ವಿಮರ್ಶಕನಾಗುವ ಲಕ್ಷಣ ತೋರುತ್ತಿದ್ದಾನೆ. ಈ ಪೂರ್ಣೇಶ ಯಾರೂ ಎಂಬ ಜಟಿಲ ಪ್ರಶ್ನೆ ಈಗ ಅವನನ್ನು ಕಾಡುತ್ತಿರುವ ಸಂಗತಿಯಾಗಿದೆ.
*****