ಎಷ್ಟು ಕಾಲದಿಂದ ಗರುಡಪಕ್ಷಿ ನಾರಾಯಣರಾಯರನ್ನು ನೋಡಬೇಕು ಅಂತ ಎಣಿಸಿಕೊಂಡೇ ಇದ್ದೆ. ಸನ್ಯಾಸಿಯಾದ ಮೇಲೆಯೂ. ಅದು ಯಾಕೆ ಆಗಲಿಲ್ಲವೋ. ಎಣಿಸಿದ್ದೆಲ್ಲ ಎಷ್ಟೋ ಸಲ ಮಾಡಲಿಕ್ಕೇ ಆಗುವುದಿಲ್ಲ. ಸಾಧ್ಯವಿಲ್ಲದೆ ಏನಲ್ಲ. ಮನಸ್ಸು ಉಮೇದು ತಾಳುವುದು ಸಾಕಾಗುವುದಿಲ್ಲ, ಸಕಾರಣವಾಗಿಯೇ.
ಅವರ ಕುರಿತು ನಂಬಬೇಕೋ ಬಿಡಬೇಕೋ, ನಂಬದಿದ್ದರೂ ಸರಿಯೇ ಎಂಬಂತಹ ಉದಾಸೀನದ, ವಿನೋದದ, ಖೇದದ ಹಲವು ಕತೆಗಳಿವೆ. ಒಂದು ಉದಾಹರಣೆಗೆ – ಆತ ಹುಟ್ಟುವಾಗ ತಲೆಗಿಂತ ಮೊದಲು ಮೂಗು ಬಂತಂತೆ. ಮಿಡ್ಬಾಯಿ ಮೂಗನ್ನೇ ಒತ್ತಿ ಹಿಡಿದು ಎಳೆದಳಂತೆ. ಹಾಗಾಗಿ ಅದು ನಡುಮಧ್ಯೆ ಡೊಂಕಾಗಿ ತುದಿಬಾಗಿ ಗರುಡ ಮೂಗಿನಂತೆಯೇ ಆಯಿತಂತೆ. ಅಲ್ಲಲ್ಲ. ಅದು ಹುಟ್ಟಾ ಗರುಡಮೂಗು ಎನ್ನುವವರೂ ಇದ್ದಾರೆ. ಇನ್ನೂ ಒಂದು ಕತೆ – ದೇವತ್ತೆ ಅವರೊಟ್ಟಿಗೆ ಬದುಕಲಾರೆ ಎನ್ನುತ್ತಾ ಮೊದಲ ರಾತ್ರಿಯೇ ಕೋಣೆ ಬಾಗಿಲು ಪಟಾರೆಂತ ತೆಗೆದು ಹೊರಗೋಡಿ ಬಂದದ್ದು. “ನೋಡುವುದಕ್ಕೆ ಮಾತ್ರ ಮನುಷ್ಯ. ಸತ್ಯಕ್ಕೂ ಅದು ಗರುಡಪಕ್ಷಿ.” – ಅಂತ ಹೇಳಿ ಹೇಳಿ ಅತ್ತದ್ದು. ಏನೇನು ಮಾಡಿದರೂ ಗಂಡನ ಮನೆಗೆ ಹೋಗದೆ ಕುಳಿತದ್ದು.
ಮರುಮದುವೆ ಮಾಡಲಿಕ್ಕೆ ಹೊರಟರೂ ಅತ್ತೆ ಒಪ್ಪಲೇ ಇಲ್ಲವಂತೆ. ಬದಲು ಜವಳಿ ವ್ಯಾಪಾರಕ್ಕೆಂದು ಮಂಗಳೂರಿಗೆ ಬಂದಿದ್ದ ಚೆಟ್ಟಿಯಾರ್ ಕುಟುಂಬವೊಂದು, ಮನೆಯ ಸಮೀಪದಲ್ಲಿಯೇ ವಾಸವಾಗಿದ್ದದ್ದು, ವ್ಯಾಪಾರವನ್ನು ಮಕ್ಕಳಿಗೆ ಒಪ್ಪಿಸಿ ಮದ್ರಾಸಿಗೆ ಮರಳುವಾಗ ಜೊತೆಯಲ್ಲಿ ಅಡುಗೆಯವಳಾಗಿ ಮದ್ರಾಸಿಗೆ ಹೋಗಿಬಿಟ್ಟಳಂತೆ. ಯಾರ್‍ಯಾರು ಎಷ್ಟೆಷ್ಟು ಪರಿಯಲ್ಲಿ ಹೇಳಿದರೂ ಕೇಳದೆ. ಆಮೇಲೆ ಒಬ್ಬರೂ ಅವಳನ್ನು ಕಂಡದ್ದಿಲ್ಲ. ಅದೂ ಕೂಡ ಸಾಧ್ಯವಿಲ್ಲದೆ ಏನಲ್ಲ; ಇರಲಿ.
ದೇವತ್ತೆ ನಾರಾಯಣರಾಯರಿಗೆ ಗರುಡಪಕ್ಷಿ ಎಂದದ್ದು ದಾಟುತ್ತಾ ದಾಟುತ್ತಾ ಕೊನೆಗೆ ಅವರಿಗೆ “ಗರುಡಪಕ್ಷಿ ನಾರಾಯಣರಾರು” – ಎಂದೇ ಅಡ್ಡಹೆಸರು ಬಂದುಬಿಟ್ಟಿತು. ಇದೆಲ್ಲ ತಡೆಯಲಾರದೆ ನಾರಾಯಣರಾಯರು ಊರು ಬಿಟ್ಟು ಸೀದಾ ಕಾಶಿಗೆ ಹೋದರು. ಅಲ್ಲಿ ದಿನಾ ಬೆಳಿಗ್ಗೆ ಸಂಜೆಯೆನ್ನದೆ ಗಂಗಾನದಿಯಲ್ಲಿ ಮುಳುಗು ಹಾಕಿ ಹಾಕಿ ಎದ್ದರು. ಅವಮಾನದ ಕಲೆ ಅಳಿಸಿಹೋಗದೆ ಅಲ್ಲಿಂದಲೂ ಹೊರಟು ಉತ್ತರ ದೇಶವನೆಲ್ಲ ತಿರುಗಿ ತಿರುಗಿ ಸನ್ಯಾಸಿಯಾಗಿಬಿಡುವ ನಿರ್ಧಾರಕ್ಕೆ ತಲುಪಿದರು.
ದೀಕ್ಷೆಗಾಗಿ ಹಿಮಾಲಯದಲ್ಲಿ ಒಬ್ಬ ದೊಡ್ಡ ಗುರುವಿನ ಬಳಿಗೆ ಹೋಗಿ ನಿಂತಾಗ ಗಂಗೆಯಲ್ಲಿ ಮಿಂದೂ ತಣಿಯದ ಅವಮಾನದ ಬೇಗೆ ಸನ್ಯಾಸಿಯಾದರೂ ತಣಿಯದು ಎಂದ ಆ ಗುರು “ಸನ್ಯಾಸ ಖಂಡಿತಾ ಬೇಡ. ಹೋಗು. ಕಂಡದ್ದು ಮಾಡು. ಅದರಲ್ಲೇ ನಿನಗೆ ಸಿದ್ದಿ. ನಿನಗೆ ನಾರಾಯಣ ದೇವರ ಅನುಗ್ರಹವಿದೆ. ನಿನ್ನ ಗರಡಮೂಗೇ ಅದನ್ನು ಹೇಳುತ್ತದೆ.” – ಎಂದರಂತೆ. (ಗರುಡ ಮೂಗೇ ಹಾಗೆ. ಬಹಳ ಲಕ್ಷಣದ್ದು-ಶಾಂತಕ್ಕ)
ಮೂರು ನಾಲ್ಕು ಜನ ಸಾಧು ಸಂತ ಸಾಧಕ ತಾಂತ್ರಿಕರೂ ಇದೇ ಮಾತು ಹೇಳಿದಾಗ ನಾರಾಯಣರಾಯರು ಮನಸ್ಸು ಬದಲಾಯಿಸಿ ಹಿಮಾಲಯ ಇಳಿಯತೊಡಗಿದರು. ಚಿಂತಿಸುತ್ತಾ ಇಳಿಯುತ್ತಾ ಇನ್ನೇನು ಬುಡ ತಲುಪಬೇಕು; ಥಟ್ಟೆಂತ ಅವರ ಮನಸ್ಸಿಗೆ ಗೋಚರಿಸಿದ್ದು – ಇಲ್ಲೊಂದು ಉಡುಪಿ ಹೋಟೆಲು ಇಲ್ಲವಲ್ಲ – ಅಂತ. ಆ ಕ್ಷಣದಲ್ಲೇ ಸನ್ಯಾಸದ ಕನವರಿಕೆ ಕಂತುತ್ತ ಹೋಟೆಲಿನ ಜಾನ ಹೆಚ್ಚುತ್ತ ಹೋಗಿ ಹೋಟೆಲ್ ಸುರುಮಾಡಿಯೂಬಿಟ್ಟರು. ಗೊತ್ತಲ್ಲ, ಒಬ್ಬ ಋಷಿ ಒಂದು ಇಲಿ ಮರಿಯನ್ನು ಹುಡುಗಿಯನ್ನಾಗಿ ಮಾಡಿ ಸಾಕಿ ಸಲಹಿ ಪ್ರಾಪ್ತ ವಯಸ್ಸಿನಲ್ಲಿ ಅವಳಿಗೆ ವರ ಹುಡುಕಲು ಹೊರಟಾಗ ಯಾವ ಯಾವ ವರವನ್ನೂ ಒಲ್ಲೆಂದ ಹುಡುಗಿ ಕೊನೆಗೆ ಒಂದು ಇಲಿಯನ್ನು ಕಂಡೊಡನೆ ವರಿಸಲೊಪ್ಪಿದ್ದು? ಅಂತೆಯೇ ಹಿಮಾಲಯದ ಬುಡದಲ್ಲಿಯೂ ನಾರಾಯಣರಾಯರಿಗೆ ತೋಚಿದ್ದು ತನ್ನೂರಿನ ಕಾಫಿ ಕ್ಲಬ್ಬೇ – ಅಂತ ವಿನೋದಪ್ರಿಯರು ಹೇಳದೆ ಬಿಡರು.
ಊರಲ್ಲಿ ಯಾರಿಗೂ ಚಕಾರ ವರ್ತಮಾನ ಕೊಡದೆ ಹೆಸರು ಸಹ ಇಡದೆ ಕಾಫಿ, ಇಡ್ಲಿ, ದೋಸೆ, ಹುಳಿಯವಲಕ್ಕಿ ಅಂತ ಸಣ್ಣದಾಗಿ ಪ್ರಾರಂಭವಾದ ಒಬ್ಬರೇ ನಡೆಸುತ್ತಿದ್ದ ಹೋಟೆಲು ಕ್ರಮೇಣ ಸಣ್ಣದೊಂದು ಬೋರ್ಡು ಧರಿಸಿತು. ತನಗೆ ಅವಮಾನ ತಂದ ಹೆಸರನ್ನೇ ಮುಂದಿಟ್ಟುಕೊಂಡರು ನಾರಾಯಣರಾಯರು. ‘ಹೋಟೆಲು ಗರುಡ ಕಾಫಿ ಕ್ಲಬ್’ – ಆರಂಭದಿಂದಲೂ ಕ್ಷಣದಿಂದ ಊರ್ಧ್ವಮುಖಿಯೇ. ಒಬ್ಬನೇ ನೋಡಿಕೊಳ್ಳುವುದು ಸಾಧ್ಯವೇ ಆಗದಂತಾಗಿ – ತಾನು ಇಂಥಲ್ಲಿದ್ದೇನೆ, ಹೀಗೆ ಹೀಗೆ ವಿಚಾರ ಅಂತೆಲ್ಲ ಬರೆದು ಊರಿನಿಂದ ಮಾಣಿಗಳನ್ನು ಭಟ್ಟರನ್ನು ಕರೆಸಿಕೊಂಡರು. ಹೋಟೆಲು ಇನ್ನಷ್ಟು ದೊಡ್ಡದಾಗುತ್ತ ಒಂದಿದ್ದದ್ದು ಎರಡಾಗಿ ನಾಲ್ಕಾಗಿ ಆರಾಗಿ ಕೊನೆಗೆ ‘ಗರುಡ ಗ್ರೂಪ್ ಆಫ್ ಹೋಟೆಲ್ಸ್’ ಅಂತಾಗಿ ಉತ್ತರ ದೇಶದ ಯಾತ್ರಾಸ್ಥಳಗಳಲ್ಲೆಲ್ಲ ಹರಡಿಕೊಂಡು ಹೆಸರು ಮಾಡಿತು. ಎಲ್ಲ ಗರುಡಮೂಗಿನ ಲಕ್ಷಣದಿಂದಾಗಿಯೇ – ಎಂದು ಹತ್ತು ಸಮಸ್ತರಿಗೂ ನಂಬಿಕೆ ಬರುವಂತೆ. ಇಷ್ಟೆಲ್ಲ ಆಗಿ ಗಟ್ಟಿ ನಿಂತ ಕಾಲಾಂತರದ ಮೇಲೆಯೇ ನಾರಾಯಣರಾಯರು ಊರಿನ ಕಡೆ ಬರತೊಡಗಿದ್ದು. ನಾರಾಯಣರಾಯರು ಬಂದರೆಂದರೆ ಈಗ ಕಷ್ಟಸುಖ ಕೇಳುವ ಜೀವವೊಂದು ಬಂದ ಹಾಗೆ. ಮದುವೆ ಮುಂಜಿ ಕಾಯಿಲೆ ಕಸಾಲೆ ಸಂಕಷ್ಟಗಳ ಏನೇ ಖರ್ಚಿರಲಿ ನಾರಾಯಣ ರಾಯರು ಅಂತಃಕರಣ ಮಿಡಿದು ಯಾವ ಅಹಂಕಾರವನ್ನೂ ತೋರದೆ ಸಹಾಯ ಮಾಡುವರು. “ಇದನ್ನು ಸಹಾಯ ಎನ್ನಬೇಡಿ. ನಾನು ದುಡಿದ ಕೂಡಲೇ ಅದು ನನ್ನದೇ ದುಡ್ಡು ಅಂತೇನೂ ಅಲ್ಲ. ಸಮಸ್ತರಿಗೆ ಸೇರಿದ್ದು” ಎಂಬ ಮಾತಿನ ತಂಪೆರೆಯುವರು. ಈ ಕಿಸೆಯಿಂದ ಆ ಕಿಸೆಯಿಂದ ಒಳಕಿಸೆಯಿಂದ ತೆಗೆದಷ್ಟೂ ದುಡ್ಡು. ಚೆಕ್ಕು ಡಿಡಿ ಯಾವುದಕ್ಕೂ ಲೆಕ್ಕಪತ್ರ ಇಲ್ಲ. ಎಲ್ಲಾದರೂ ಹೊಟ್ಟೆಕಿಚ್ಚು ಕಂಡಿತೇ ಮೊದಲು ಅದನ್ನು ನಂದಿಸಿ ಪ್ರಸನ್ನತೆ ಸ್ಥಾಪಿಸುವರು.
“ಆದರೂ…. ಆ ಮನುಷ್ಯನ ಒಂದು ವಿಲಕ್ಷಣ ಗುಣ ನೋಡು” – ಎಂದಳು ಶಾಂತಕ್ಕ. ಯಾವ ಶಾಂತಕ್ಕ ಎಂದರೆ ಅದೇ, ಇದುವರೆಗೆ ನಾರಾಯಣರಾಯರ ಕುರಿತು ಹೇಳಿದೆನಲ್ಲ ಅದನ್ನೆಲ್ಲ ಆಗಾಗ ಅಷ್ಟಷ್ಟೇ ನನಗೆ ಹೇಳುತ್ತ ಮುಂದುವರಿಸಿಕೊಂಡು ಬರುವ ಶಾಂತಕ್ಕ. ಅವರ ದೊಡ್ಡ ಅಭಿಮಾನಿ. ಸಂಪಾದಿಸಿದರೆ ಅವರ ಹಾಗೆ. ಖರ್ಚು ಮಾಡಿದರೆ ಅವರ ಹಾಗೆ. ವೈರಾಗ್ಯ ಬಂದರೆ ಅವರ ಹಾಗೆ ಇರಬೇಕು ಎಂಬವಳು. ಅವಳೊಡನೆ ಯಾವ ಮಾತಿಗೆ ಇಳಿದರೂ ಸುತ್ತಿ ಬಳಸಿ ಆಕೆ ಮುಟ್ಟಿಕೊಳ್ಳುವುದು ನಾರಾಯಣರಾಯರ ವಿಚಾರಕ್ಕೇ. ಮೊದಮೊದಲು ನನಗೂ ಹೊಳೆಯಲಿಲ್ಲ. ಆಮೇಲಾಮೇಲೆ ಗುರುತು ಹತ್ತಿದಂತೆ ಮೆಲ್ಲ ಛೇಡಿಸುತ್ತಿದ್ದೆ. ಛೇಡಿಸಿದರೆ ಏನೂ ಬೇಸರವಿಲ್ಲದೆ ಸುಖವಾಗಿ ನಗುತ್ತ ನಿಲ್ಲುವಳು.
“ಆ ಮನುಷ್ಯನ ಒಂದು ವಿಲಕ್ಷಣ ಗುಣ ನೋಡು, ಸಹಾಯ ಮಾಡುತ್ತಾನೆ ಮರುಗುತ್ತಾನೆ ಮಾತಾಡುತ್ತಾನೆ ಎಲ್ಲ ಸಮ. ಹೆಣ್ಣುಮಕ್ಕಳ ಮುಖ ಮಾತ್ರ ಸುತರಾಂ ನೋಡುವುದಿಲ್ಲ! ಹೆಂಗಸರು ಮಾತಾಡಿಸಿದರೆ, ಅವರು ಹಳಬರೇ ಇರಲಿ ಬೇಕಾದರೆ, ಗೋಡೆ ನೋಡುತ್ತ ಒಂದು ಮಾತಿಗೆ ಒಂದೇ ಉತ್ತರ. ಕೊಟ್ಟರೆ ಕೊಟ್ಟ ಇಲ್ಲದಿದ್ದರೆ ಅದೂ ಇಲ್ಲ.”
“ನಿನ್ನ ಹತ್ತಿರವೂ?”
“ಹೌದಪ್ಪ, ನನ್ನ ಹತ್ತಿರವೂ. ನಾನು ಯಾವದೊಡ್ಡ ಸ್ಪೆಶಲ್? ನಮ್ಮ ಪುಟ್ಟನ ಉಪನಯನಕ್ಕೆ ಬಂದಿದ್ದರಲ್ಲ. ಇವರಿಗೇನೋ, ತನ್ನದಾಗಿ ಇರಲಿ ಸ್ವಲ್ಪ ಅಂತ ಮರೆಯಲ್ಲಿ ಕರೆದು ದುಡ್ಡು ಕೊಟ್ಟರಂತೆ. ಆದರೆ, ನನ್ನ ಹತ್ತಿರ ಸ್ಯಾಂಪಲ್ಲಿಗೆ ಒಂದು ಮಾತು? ಒಂದು ನಗೆ? ಕಡೆಗೆ ಕಣ್ಣೆತ್ತಿ ನೋಡಿದರೆ ಹೇಳು….! ಅದಕ್ಕೇ….”
“ಏನು ಅದಕ್ಕೆ? ನಾನಾಗಿದ್ದರೆ ಆ ದುಡ್ಡು ವಾಪಾಸು ಕೊಡಿ ಅವರಿಗೆ ಎನ್ನುತ್ತಿದ್ದೆ.”
“ಯಾಕೆ? ಆತ ದ್ವೇಷದಿಂದ ಮಾತಾಡದೆ ಹೋದರೆ ಸರಿ. ಆದರೆ ಇದು ಹಾಗಲ್ಲವಲ್ಲ. ಹೆಂಗಸರ ಮುಖ ನೋಡುವ ಅಭ್ಯಾಸವೇ ಇಲ್ಲದವರು? ಈ ವ್ಯತ್ಯಾಸ ತಿಳಕೊ. ಅದಕ್ಕೇ….”
“ಏನು ‘ಅದಕ್ಕೆ’? ಹೇಳಿಬಿಡು.”
“ಅದಕ್ಕೇ ನನಗೊಂದು ಹಟ” – ನಕ್ಕಳು ಶಾಂತಕ್ಕ. “ಏನಂತ ಹೇಗೆ ಬೇಕಾದರೂ ಊಹಿಸಿಕೊ.”
“ಹೇಗೆ ಬೇಕಾದರೂ ಯಾಕೆ ಊಹಿಸಿಕೊಳ್ಳುತ್ತೇನೆ ನಾನು? ಹೆಚ್ಚಂದರೆ ಅಂತಹ ಗೋಡೆ ನೋಡುವ ಗಂಡಸನ್ನು ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿಸಲೇಬೇಕೆಂಬ ಹಟ ಅಂತ ಊಹಿಸುವೆ.”
“ಆದರೆ ಅದು ಸಾಧ್ಯವಿಲ್ಲವೇ. ಸೊಲ್ಲು ಎತ್ತುವುದರೊಳಗೆ ಆತ ಅಲ್ಲಿಂದ ಕಣ್ಮಾಯಕ.”
*
*
*
ಕಡೆಗೇನಾಯಿತು ಎಂದರೆ ನಾರಾಯಣರಾಯರಿಗೆ ಹೋಟೆಲು ಮಾಡಿ ಮಾಡಿ ಸಾಕಾಯಿತು. ವೈರಾಗ್ಯವೂ ಹೆಚ್ಚೆಚ್ಚು ಕವಿಯಿತು. ಹೋಟೆಲುಗಳನ್ನು ಅಲ್ಲಲ್ಲಿನ ಕೆಲಸದವರಿಗೇ ವಹಿಸಿಕೊಟ್ಟು, ಒಂದು ಮಸಾಲೆ ವ್ಯಾಪಾರ ತೆರೆದರು. ಅಲ್ಲಿಯೂ ದುಡ್ಡು. ಅಡಿಕೆಪುಡಿ ಅಂಗಡಿ ತೆರೆದರು. ಅಲ್ಲಿಯೂ ವ್ಯಾಪಾರ. ಕಡೆಗೆ ಅದೂ ಬೇಡ ಅಂತ ಅದನ್ನೂ ಯಾರಿಗೋ ವಹಿಸಿಕೊಟ್ಟು ನಸ್ಯದ ಅಂಗಡಿ ತೆರೆದರೆ ಅಲ್ಲಿಯೂ ದುಡ್ಡಿನ ಬುದುಬುದು ಅವತಾರವೇ! ಊರುಕಡೆಯ ಗಂಡುಮಕ್ಕಳನ್ನು ಕರೆಕರೆದು ವ್ಯಾಪಾರದಲ್ಲಿ ಭದ್ರ ಕೂಡಿಸಿದರು. ಈ ದುಡ್ಡು ಎಂಬುದುಂಟಲ್ಲ, ಯಾವಾಗ ಒಲಿಯುತ್ತದೆ, ಯಾಕೆ ಒಲಿಯುತ್ತದೆ, ಯಾವಾಗ ಮುನಿಯುತ್ತದೆ, ಯಾಕೆ ಮುನಿಯುತ್ತದೆ ಅಂತ ಹೇಳಲಿಕ್ಕೇ ಸಾಧ್ಯವಿಲ್ಲ ನೋಡು. ದುಡ್ಡು ಒಲಿಯಿತೆಂದರೆ ಆತ ಬುದ್ಧಿವಂತ ಎನ್ನುತ್ತಾರೆ. ನಷ್ಟವಾದರೆ ದಡ್ಡ ಎನ್ನುತ್ತಾರೆ ಸಲೀಸಾಗಿ. ಅದೆಲ್ಲ ಬಹುಶಃ ಹಾಗಲ್ಲ. ಅಂತಹ ಶ್ರಮವಂತನೂ ಅಲ್ಲದ ನಡುನಡುವೆ ವೈರಾಗ್ಯದಿಂದ ಎತ್ತಲೋ ಹೇಳದೆ ಕೇಳದೆ ಹೊರಟೂಬಿಡುವ ನಾರಾಯಣರಾಯರಿಗೆ ಏನು ಮಾಡಿದರೂ ಝಣಝಣ ಹಣವೆಂದರೆ! ದಿನವಿಡೀ ಗಲ್ಲಾಪೆಟ್ಟಿಗೆಯ ಮೇಲೆಯೇ ಪ್ರತಿಷ್ಠಾಪನೆ ಆಗಿರುವವರಿಗಿಂತ ಸಾವಿರ ಪಾಲು ಸಂಪಾದಿಸಿ ಅನಾಯಾಸವಾಗಿ ಹೀಗೆ ದುಡ್ಡು ತನಗೆ ಒಲಿದು ಬಂದು ಬೀಳುವುದು ಕಂಡೇ ದಿಗಿಲಾಯಿತೊ ಎಂತದೊ. ಸಾಯಲಿ ಈ ವ್ಯವಹಾರ ಅಂತ ಎಲ್ಲವನ್ನೂ ತ್ಯಜಿಸಿ ಕಡೆಗೆ ಸನ್ಯಾಸಿಯಾಗಿಬಿಟ್ಟರು.
ಸನ್ಯಾಸಿಯಾದರೂ ಹೆಣ್ಣುಮಕ್ಕಳನ್ನು ಮಾತ್ರ ನೋಡರು. ಅಪ್ಪಿತಪ್ಪಿ ಮಾತಾಡಲೇ ಬೇಕಾಗಿ ಬಂದರೆ ಆಕಾಶ ನೆಲ ಗೋಡೆ ಮಾಡು ನೋಡುತ್ತ ಕಷ್ಟದಲ್ಲಿ ಎರಡು ಮಾತು ಒಗೆದು ಮುಗಿಸುವ ವಿಚಿತ್ರ ಸನ್ಯಾಸಿ. ಹಾಗಾದರೆ ಆ ಸನ್ಯಾಸತ್ವ ಎಂತಹದು? – ಪ್ರತೀಸಲ ನಾರಾಯಣರಾಯರ ಕುರಿತು ಮಾತು ಮುಗಿಸುವಾಗಲೂ ಶಾಂತಕ್ಕನ ಪ್ರಶ್ನೆ ಇದು.
ಸನ್ಯಾಸಿಯಾದ ಮೇಲೆಯೂ ವರ್ಷಕ್ಕೊಮ್ಮೆ ತಪ್ಪದೆ ಊರಿಗೆ ಬರುತ್ತಿದ್ದರು ನಾರಾಯಣರಾಯರು. ದೇವಸ್ಥಾನದಲ್ಲಿ ಪ್ರವಚನವಿರುತ್ತಿತ್ತು. ಶಾಂತಕ್ಕ ತಪ್ಪದೇ ಹೋಗುತ್ತಿದ್ದಳು. “ಬಾ ಎಂದರೆ ಬರುವಿದಿಲ್ಲ ನೀನು. ಬಂದರೆ ಏನು ನಷ್ಟ? ಪ್ರವಚನ ಮಾಡುವಾಗ ಅವರ ಕಣ್ಣು ನೋವಿನ ಪಸೆಯಿಂದ ಮಿನಿಗುವುದನ್ನು ನೋಡಬೇಕು. ಆ ಕಣ್ಣಿಗೂ ಆ ನೋವಿಗೂ ಏನು ಲಗತ್ತು ಅಂತಿ! ನೋಡುತ್ತಿದ್ದರೆ ನೋಡುತ್ತಾ ಕುಳಿತುಕೊಳ್ಳಬೇಕು – ಹಾಗೆ. ನಾನಂತೂ ಒಂದೇ ಒಂದು ಪ್ರವಚನ ತಪ್ಪಿಸುವುದಿಲ್ಲ. ‘ಇವರು’ ಎಷ್ಟೇ ತಮಾಷೆ ಮಾಡಿದರೂ. ಅಲ್ಲ… ಒಮ್ಮೆ ಬಾ. ನಾ ಹೇಳುವುದು ನಿನಗೇ ತಿಳಿಯುತ್ತದೆ.”
ಪ್ರವಚನ ಕೇಳಲು ಹೋಗಿ ಕಣ್ಣು ನೋಡುತ್ತ ಕುಳಿತುಕೊಳ್ಳುವುದನ್ನ ಯಾವ ಮರೆಯಿಲ್ಲದೆ ಹೇಳುವ ಪ್ರೀತಿಯ ಶಾಂತಕ್ಕ. ಸನ್ಯಾಸಿ ಗಡ್ಡದ ರೋಮ ರೋಮದಲ್ಲಿಯೂ ಅಪಾರ ವೇದನೆಯನ್ನು ಊಹಿಸುವವಳು. “ಸುಲಭವಾಗಿ ಬ್ರಹ್ಮಚರ್ಯೆ ಸಾಧನೆಯಾದವರಲ್ಲಿ ಈ ಪರಿಯ ನೋವು ಇರುವುದಿಲ್ಲ. ರಾಮಕೃಷ್ಣ ಪರಮಹಂಸರ ಕಣ್ಣು ನೋಡು. ವಿವೇಕಾನಂದರ ಕಣ್ಣು ನೋಡು. ಶುಭ್ರ ಕೊಳ. ಅದೇ ನಾರಾಯಣರಾಯರ ಕಣ್ಣು ನೋಡು….”
“ಕಣ್ಣು ನೋಡದೆ ಮೂಗು ನೋಡಿದರೆ ಸೈಯಪ್ಪ.”
“ಹಾಂ. ಮೂಗನ್ನಾದರೂ ನೋಡಲ್ಲ. ಅದು ಗರುಡ ಮೂಗು. ಯಾರಿಗೆ ಗೊತ್ತು, ಯಾವ ಶಾಪಕ್ಕಾಗಿ ಈ ಭೂಮಿಯ ಮೇಲೆ ಜನಿಸಿದ ವಿರಹಿ ಗರುಡಪಕ್ಷಿಯೊ!”
“ಓಹೋಹೋ. ನಿನ್ನ ತಲೆಯೆಂದರೆ ತಲೆ! ಇಷ್ಟಕ್ಕೂ ಅವರು ಬ್ರಹ್ಮಚಾರಿಯಾಗಿಯೇ ಇದ್ದರೆಂದು ಹೇಗೆ ಹೇಳುತ್ತಿ ನೀನು?”
“ಹ! ಪ್ರಶ್ನೆಯೇ ಇದು?”
” ಆ ನೋವು ಅದೇ ಅಂತಾದರೂ ಹೇಗೆ ಗೊತ್ತು ನಿನಗೆ? ತಿರುಗಮುರುಗವೂ ಇರಬಹುದಲ್ಲ. ಎಲ್ಲ ಅನುಭವಿಸಿಯೂ…. ಇದೆಲ್ಲ ಇಷ್ಟೆಯೇ? ಯಾರ ಮಾತೂ ಕೇಳದೆ ಮೊದಲೇ ಸನ್ಯಾಸ ಸ್ವೀಕರಿಸಬಹುದಿತ್ತಲ್ಲಪ್ಪ, ಅಂತಲೂ?”
“ಅಯ್ಯೊ, ‘ಎಲ್ಲ’ ಅನುಭವಿಸುವುದೆ? ಅವರೆ? ಅದು ಅಂತಹ ಅಸಾಮಿಯೇ ಅಲ್ಲವೇ. ಒಮ್ಮೆ ಬಾ. ನೋಡು. ಕಡೆಗೆ ಮಾತಾಡು.” ಕಳವಳಿಸಿದಳು ಶಾಂತಕ್ಕ.
ಹಾಗೆ ನೋಡಿದರೆ ಎಷ್ಟೊತ್ತಿಗೂ ಗಳಿಸುತ್ತಲೇ ಹೋದ, ವಿನಿಯೋಗಿಸುತ್ತಲೇ ಹೋದ, ಕೈಹಾಕಿದಲ್ಲೆಲ್ಲ ಯಶಸ್ವಿಯಾದ ಆದರೂ ಅವ್ಯಕ್ತ ನೋವಲ್ಲಿ ಅದ್ದಿಕೊಂಡಂತೆ ಕಾಣುವ ಎಲ್ಲಿಯೂ ಯಾರಲ್ಲಿಯೂ ತನ್ನ ವೈಯಕ್ತಿಕ ಬದುಕಿನ ಯಾವ ವಿವರವನ್ನೂ ಬಿಟ್ಟುಕೊಡದೆ ಇಹಪರಗಳ ಕುರಿತು ಪ್ರವಚನ ಮಾಡುವ ನಾರಾಯಣರಾಯರ ಕುರಿತು ನನಗೂ ನನ್ನದೇ ಆದ ಕುತೂಹಲವಿತ್ತು. ಅವರು ಗೋಡೆಯ ಮೇಲಿಂದ ಕಣ್ಣು ಕಿತ್ತು ಧೈರ್ಯದಿಂದ ನೇರ ನೋಡುತ್ತ ಮಾತಾಡಲು ಪ್ರೇರಿಸ ಬಯಸುವ ಪ್ರಶ್ನೆಗಳೂ. ಆದರೆ ಅದೇ, ಹೇಳಿದೆನಲ್ಲ; ಗೋಡೆ ನೋಡಿ ಮಾತಾಡುವವರ ಭೇಟಿಗೆ ಮನಸ್ಸು ಬೇಕೆಂದರೂ ಉಮೇದು ತಾಳುವುದಿಲ್ಲ.
*
*
*
“ಇವರು ಹೇಳಿದರು-ನಾರಾಯಣರಾಯರು (ಆತನಿಗೆ ಏನೋ ಒಂದು ‘ಆನಂದ’ ಸ್ವಾಮಿ ಅಂತ ಹೆಸರಿದ್ದರೂ ಶಾಂತಕ್ಕನಿಗೆ ಆ ಹೆಸರು ಯಾವತ್ತೂ ಬಾಯಲ್ಲಿ ಬಂದದ್ದೇ ಇಲ್ಲ.) ಊರಿಗೆ ಬಂದಿದ್ದಾರಂತೆ. ‘ನಿನ್ನ ಪ್ರೇಮಿ ಬಂದಿದ್ದಾನೆ’ ಅಂತ ಎಷ್ಟು ಸರಾಗವಾಗಿ ಹೇಳಿ ನಕ್ಕರು ಗೊತ್ತೆ? ಗಂಡಸರಿಗೂ ಸೂಕ್ಷ್ಮವಿರುತ್ತದೆ ನೋಡು.” – ನಕ್ಕಳು ಶಾಂತಕ್ಕ. “ಈ ಸಲ ಖಂಡಿತಾ ನಾನವರನ್ನು ಮಾತಾಡಿಸಲೇಬೇಕು. ನೀನು ಜೊತೆಯಲ್ಲಿದ್ದರೆ ಸಾಕು. ಧೈರ್ಯಕ್ಕೆ. ನಾಳೆ ಪ್ರವಚನಕ್ಕೆ ಹೋಗೋಣ.”
“………”
“ಸಂಜೆ ಆರಕ್ಕೆ ಪ್ರವಚನ. ಒಂದು ಗಂಟೆ ಮೊದಲೇ ಹೋದರೆ ಮಾತಿಗೆ ಸಿಕ್ಕಿಯಾರು. ಬರುತ್ತೀಯಲ್ಲ?”
“ನೋಡುವ…..”
“ಏನು, ನೋಡುವ ಗೀಡುವ ಮಾತೇ ಇಲ್ಲ. ರೆಡಿಯಾಗಿರು ಎಂದರೆ ರೆಡಿಯಾಗಿರಬೇಕು. ಕಡೇಕ್ಷಣದಲ್ಲಿ ಮನಸ್ಸು ಬದಲಾಯಿಸಬೇಡ ಮತ್ತೆ. ಈ ಸಲ ಒಮ್ಮೆ ನೋಡಿಬಿಡು. ಆಮೇಲೆ ಪ್ರತೀಸಲ ಹೋಗುತ್ತೀ ನಾನು ಹೇಳದೇನೇ.” ನಗೆ.
ನಾಳೆಯಾಗಿ ಸಂಜೆ ನಾಲ್ಕಕ್ಕೆ ಹತ್ತಿರವಾಗಿರಬೇಕು. ಮತ್ತೆ ಶಾಂತಕ್ಕನ ಪೋನು. “ಹೇ, ದೇವತ್ತೆ ಬಂದಿದ್ದಾಳಂತೆ!”
“ಆಂ!….ಯಾರು…. ನಿನ್ನ ಗರುಡಪಕ್ಷಿ…..”
“ನಾರಾಯಣರಾಯರ ಹೆಂಡತಿ. ಬಂದಿದ್ದಾಳಂತೆ. ಫ್ಲೈಟಿನಲ್ಲಿ! ಇದ್ದಕ್ಕಿದ್ದಂತೆ. ಏ… ಗೊತ್ತುಂಟ? ಅವರು ಮದ್ರಾಸಿನಲ್ಲಿ ಪ್ರವಚನ ಮಾಡುವಾಗ ದೇವತ್ತೆ ನಿತ್ಯವೂ ಹೋಗುತ್ತಿದ್ದರಂತೆ…”
“!! ಇದೆಲ್ಲ ನಿನಗೆ ಗೊತ್ತಾಯಿತಾದರೂ ಹೇಗೆ?”
“ಇನ್ನೂ ಏನೆಲ್ಲ ಗೊತ್ತಾಗಿದೆ. ಎಲ್ಲ ಆಮೇಲೆ ಹೇಳುತ್ತೇನೆ….” ಶಾಂತಕ್ಕನ ಸ್ವರ ಹುರುಪೆಲ್ಲ ಕಳೆದು ಬಾವಿಯಿಂದ ಬಂದ ಹಾಗೆ ಕೇಳಿಸುತ್ತಿತ್ತು. ಫೋನು ಧಡಕ್ಕನೆ ಇಟ್ಟಳು. ಅಷ್ಟು ಬೇಗ ಮಾತಾಡಿ ಎಂದೂ ಮುಗಿಸದವಳು.
ಅದುವರೆಗೆ ಹೋಗಲೋ ಬೇಡವೋ ಅಂತ ಉದಾಸೀನದಿಂದ ಇದ್ದವಳನ್ನು ಹೊಡೆದೆಬ್ಬಿಸಿದಂತಾಗಿ ನಾನು ಲಗುಬಗನೆ ಹೊರಡತೊಡಗಿದೆ. ಕಣ್ಣಮುಂದೆ ಗರುಡಮೂಗೊಂದು ಚಿತ್ರ ಕಟ್ಟುತ್ತಿತ್ತು. ಕೇಳುತ್ತ ಕೇಳುತ್ತ ತನ್ನಷ್ಟಕ್ಕೆ ರೂಪ ಆಕಾರ ತಾಳಿಕೊಂಡಿದ್ದ ದೇವತ್ತೆ ಆಕಾಶ ಮಾರ್ಗದಿಂದ ಕೆಳಗಿಳಿಯುತ್ತಿದ್ದಳು. ಒಳಗೆ ನಗೆಯೊಂದು ಮೆಲ್ಲಗೆ ಮೃದುವಾಗಿ ನಿರಾಮಯ ಹರಡಿಕೊಂಡಿತು.
ಎಷ್ಟು ಹೊತ್ತು ಈ ಶಾಂತಕ್ಕನಿಗೆ ಬರಲು? ಎಂದುಕೊಳ್ಳುತ್ತಿರುವಾಗಲೇ ಅವಳದೇ ಪೋನು. “ಏನು? ಹೊರಟಿದ್ದೀಯ? ಇಲ್ಲ, ನನಗೆ ಗೊತ್ತು. ನಾನೂ ಹೋಗುವುದಿಲ್ಲ ಬಿಡು.”
“ಅರೆ! ಕಡೇಕ್ಷಣದಲ್ಲಿ….?”
“ಸಾರಿ. ಯಾಕೋ ಹೊರಡಬೇಕೆಂತಲೇ ಕಾಣುತ್ತಿಲ್ಲ. ಉಮೇದೇ ಇಲ್ಲಪ್ಪ.”
“ಆದರೆ ಶಾಂತಕ್ಕ ನಾನು ಹೊರಟಿದ್ದೇನೆ. ಬಾರೇ.”
“ನೀನ! ಹೊರಟಿದ್ದೀಯ!”
“ಹೌದು. ಬಾ ಬೇಗ. ಹೋಗುವ.”
“ಇಲ್ಲ ನಾ ಬರುವುದಿಲ್ಲ…. ನೀನಾದರೂ ಯಾಕೆ ಎಲ್ಲ ಬಿಟ್ಟು ಈಗ ಹೋಗಬೇಕು?”
“………..”
ಫೋನಿಟ್ಟು, ನಾನು ಹೊರಬಂದೆ.
*****
ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ