ಪೂಜೆ ಮುಗಿದ ನಂತರ ಬಹಳ ಜನ ಹೋಗಿ ಪಾದರಿಗಳನ್ನು ಮಾತನಾಡಿಸುವ ಪದ್ಧತಿ ಇತ್ತು. ಮಕ್ಕಳ ನೆಂಟಸ್ತಿಕೆ, ಮದುವೆ, ನಾಮಕರಣ, ಸತ್ತವರಿಗೆ ಪಾಡು ಪೂಜೆ ಇರಿಸಿಕೊಳ್ಳುವುದು. ಹೀಗೆ ಜನರಿಗೆ ಒಂದಲ್ಲಾ ಒಂದು ಕೆಲಸವಿರುತ್ತಿತ್ತು. ಇದರ ಬಗ್ಗೆ ಪಾದರಿಗಳಿಗೆ ಮುಂಚಿತವಾಗಿ ತಿಳಿಸಬೇಕಾಗುತ್ತಿತ್ತು. ಇಲ್ಲವೆ ಮೂರು, ನಾಲ್ಕು ವರ್ಷಗಳಿಂದ ಅನ್ವಾಲ ಕಾಯಿದೆ ಬಾಕಿ ಇರುತ್ತಿತ್ತು. ಇದರ ಪರಿಹಾರ ಮಾಡಲು ಪಾದರಿಗಳ ಬಳಿಗೆ ಜನ ಹೋಗುತ್ತಿದ್ದರು. ಡಾ.ರೇಗೋ, ಜಾನ್ ಡಯಾಸ್ ಪಾದರಿಗಳ ಕ್ಷೇಮ ಸಮಾಚಾರ ಕೇಳಲು ಹೋಗುತ್ತಿದ್ದರು. ಮಕ್ಕಳಿಗೆ ಮೊದಲ ದಿವ್ಯಪ್ರಸಾದ ನೀಡುವಂತೆ ಕೇಳಿಕೊಳ್ಳಲು ಕೆಲವರು ಹೋಗುವುದಿತ್ತು. ಭಾನುವಾರದ ಪೂಜೆ ಮುಗಿಸಿ, ಪಾದರಿ ಸಣ್ಣದೊಂದು ಪ್ರಾರ್ಥನೆ ಮಾಡಿ ಬೆಳಗಿನ ಉಪಹಾರ ತೆಗೆದುಕೊಂಡು ಬಂಗಲೆ ಬಾಗಿಲು ತೆರೆದು ಹೊರಗೊಮ್ಮೆ ಇಣುಕಿ ನೋಡಿ-
“ಹಾಂ…ಕೋಣ್ರೆ?” ಎಂದು ಕೇಳಿ ಒಳಗೆ ಮರೆಯಾದಾಗ ಹೊರಗೆ ಜಗಲಿಯ ಮೇಲೆ, ಅಂಗಳದಲ್ಲಿ ನಿಂತವರು ಒಬ್ಬೊಬ್ಬರಾಗಿ ಒಳಗೆ ಹೋಗುತ್ತಿದ್ದರು.
ಇಂದು ಮಾತ್ರ ಹೀಗೆ ಯಾರೂ ಪಾದರಿ ಬಂಗಲೆಯ ಬಳಿ ಕಂಡು ಬರಲಿಲ್ಲ. ಡಾ.ರೇಗೋ ಹಾಗೂ ಜಾನ್ ಡಯಾಸ್ ಈರ್ವರೇ ತೆರೆದ ಬಂಗಲೆ ಬಾಗಿಲ ಮೂಲಕ ಒಳಹೋದುದನ್ನು ಜನ ಕಂಡರು.
*
*
*
ಮೂರು ಗಂಟೆಗೆ ಸೇರಿದ ಸಭೆಯಲ್ಲಿ ಅಂತಹ ತೀರ್ಮಾನವೇನೂ ಆಗಲಿಲ್ಲ. ಪಾಸ್ಕು ಪಾದರಿಗಳಿಗೆ ಹೊಡೆಯಬಾರದಿತ್ತು ಎಂಬ ಮಾತೇ ಕೇಳಿ ಬಂದಿತಲ್ಲದೆ ಇದಕ್ಕೆ ಏನು ಶಿಕ್ಷೆ ವಿಧಿಸಬೇಕು ಎಂಬ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡಲಿಲ್ಲ. ಜೂಂತ ಇರಿಸಿ ಅವನನ್ನು ಜೂಂತಗೆ ಕರೆಸಿ ದಂಡ ಹಾಕಿ, ಜಾತಿ ಕಟ್ ಮಾಡಿ ಎಂದೆಲ್ಲ ಜನ ಕೂಗಾಡಿದರು. ಇನಾಸನ ಮಗ , ಇನಾಸನ ಮನೆ, ಶಿಲುಬೆಯ ಮನೆ ಎಂದಾಗ ಏಕೋ ಜನರ ಕಾವು ಇಳಿಯಿತು.
“ಹೌದಪ್ಪ ಹುಡುಗ ಹೊಡೀಬಾರದಿತ್ತು..ಆದರೆ ಪಾದರಿ ಅವನನ್ನು ಲುಸಿಫ಼ೇರ್ ಅಂತ ಕರೀಬಹುದಾ?” ಎಂದು ಊಟದ ಮನೆ ಸಾಂತಾಮೋರಿಯ ಮಗ ಬಸ್ತು ಕೇಳಿದಾಗ ಯಾರೂ ಉತ್ತರ ಕೊಡಲು ಹೋಗಲಿಲ್ಲ. ಮದುವೆಯ ಸಂದರ್ಭದಲ್ಲಿ ಈ ಬಸ್ತುವನ್ನು ಪಾದರಿ ಸತಾಯಿಸಿದ್ದು ಆ ಕ್ಷಣದಲ್ಲಿ ಜನರ ನೆನಪಿಗೆ ಬಂದಿತು. ಹಿಂದೆಯೇ ಬೇರೆ ಬೇರೆ ಸಂದರ್ಭಗಳಲ್ಲಿ ಪಾದರಿ ತಮ್ಮ ಕಣ್ಣಿನಲ್ಲೂ ನೀರು ತರಿಸಿದ್ದು ನೆನಪಿಗೆ ಬಂದು ಬಸ್ತುವಿನ ವಿರುದ್ಧ ಯಾರೂ ಉತ್ತರ ಕೊಡಲು ಹೋಗಲಿಲ್ಲ.
ಇಷ್ಟಾದರೂ ಪಾಸ್ಕುವಿನ ಮೇಲೆ ಏನಾದರೊಂದು ಕ್ರಮ ಕೈಕೊಳ್ಳಬೇಕಲ್ಲ. ಹೀಗಾಗಿ ಮತ್ತೂ ಕೆಲ ಸಲಹೆಗಳು ಬಂದವು.
“ಖಾಂದೀರ ಖುರೀಸ್” (ಹೆಗಲ ಮೇಲೆ ಶಿಲುಬೆಕೊಟ್ಟು ನಿಲ್ಲಿಸುವುದು) ಎಂದರು ಯಾರೋ.
ಇದಕ್ಕೂ ಬೆಂಬಲ ಸಿಗಲಿಲ್ಲ.
ಕೊನೆಗೆ ಮಿರೋಣ ವಲೇರಿಯನ್ ಎದ್ದು ನಿಂತ.
ಈ ಸಭೆಗೆ ಊರಿನ ಕ್ರೀಸ್ತುವರೆಲ್ಲ ಬಂದಿದ್ದರು. ಡಾಕ್ಟ್ಯರ್ ರೇಗೋ ಒಬ್ಬರನ್ನು ಬಿಟ್ಟು. ಅವರಿಗೆ ಈ ಜನಸಾಮಾನ್ಯರ ಜತೆ ಕುಳಿತು ಮಾತನಾಡಲು, ಚರ್ಚೆ ಮಾಡಲು ಆಗುತ್ತಿರಲಿಲ್ಲವೇನೋ ಅವರು ಸಾಮಾನ್ಯವಾಗಿ ಬರುತ್ತಿರಲಿಲ್ಲ.
ಜಾನ್ ಡಯಾಸ್, ವಿನ್ಸೆಂಟ, ಡ್ರೈವರ್ ಚಾರ್ಲಿ ಬಂದಿದ್ದರು. ಈ ಜನ ಕೂಡ ಹೆಚ್ಚು ಮಾತನಾಡುತ್ತಿರಲಿಲ್ಲ. ಅಧಿಕ ಸಂಖ್ಯೆಯಲ್ಲಿದ್ದ ಊರ ಜನರಿಗೆ ಮಾತನಾಡಲು ಬಿಟ್ಟು ಇವರು ಕೇಳುತ್ತ ಕೂಡುತ್ತಿದ್ದರು. ಈ ಊರ ಜನರಿಂದ ಎನೂ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಇವರಿಗೆ ಏನೂ ಗೊತ್ತಿಲ್ಲ. ಇವರು ಅಶಿಕ್ಷಿತರು, ಅನಕ್ಷರಸ್ಥರು ಎಂಬುದು ಇವರಿಗೆ ತಿಳಿದಿತ್ತು. ಆದರೆ ಕೊನೆಯ ಮಾತನ್ನು ಹೇಳುವ ಅವಕಾಶವನ್ನು ಈ ವಿದ್ಯಾವಂತ ಜನ ಕಾದಿರಿಸಿಕೊಳ್ಳುತ್ತಿದ್ದರು. ವಿಚಿತ್ರವೆಂದರೆ ಇವರ ಮಾತಿಗೆ ಉಳಿದವರು ತಕ್ಷಣ ಒಪ್ಪಿಬಿಡುತ್ತಿದ್ದರು.
ಹೀಗಾಗಿ ಮಿರೋಣ ವಲೇರಿಯನ್ ಎದ್ದು ನಿಂತಾಗ ಎಲ್ಲರೂ ಮೌನದಿಂದ ಕುಳಿತರು.
“ನಾವು ಏನೇ ತೀರ್ಮಾನ ಮಾಡಿದ್ರು ಪಾದರಿಗಳು ಒಪ್ಪಬೇಕು..ಅಲ್ವೇ?” ಎಂದು ವಲೇರಿಯನ ಎಲ್ಲರ ಮುಖ ನೋಡಿದ.
“ನಾವು ನಿತ್ಯ ಮನೇಲಿ ಇಗರ್ಜಿಲಿ ಪರಲೋಕ ಮಂತ್ರ ಹೇಳತೇವೆ..ಕ್ರಿಸ್ತಪ್ರಭು ನಮಗೆ ಕೊಟ್ಟ ದೊಡ್ಡ ಬಲ ಅದು..ಮನುಷ್ಯನ ಬದುಕು ಇರೋದೇ ಈ ಮಂತ್ರದ ಆಶ್ರಯದಲ್ಲಿ..ಈ ಮಂತ್ರದ ಮೂಲಕ ಏಸು ಪ್ರಭು ಕ್ಷಮೆ ಎಷ್ಟು ದೊಡ್ಡದು ಅನ್ನೋದನ್ನ ನಮಗೆ ತಿಳಿಸಿಕೊಟ್ಟಿದ್ದಾರೆ..ನಾನು ಒಂದು ಸರಳ ದಂಡನೆ ಹೇಳತೇನೆ..ಪಾಸ್ಕು ಹೋಗಿ ಪಾದರಿಗಳ ಹತ್ತಿರ ಕ್ಷಮಾಪಣೆ ಕೇಳಲಿ..ಅವರೂ ಇದಕ್ಕೆ ಒಪ್ಪಿಕೊಳ್ಳುತ್ತಾರೆ ಅನ್ನೋ ಭರವಸೆ ನನಗಿದೆ…ಅಲ್ಲಿಗೆ ಈ ಪ್ರಕರಣ ಮುಗಿಯುತ್ತೆ..ಮುಂದೆ ಹೀಗೆ ಆಗದ ಹಾಗೆ ನಾವು ನಮ್ಮ ಮಕ್ಕಳಿಗೆ ದೈವಿಕ ಶಿಕ್ಷಣ ಕೊಡೋಣ..” ಎಂದ ಆತ ತನ್ನದೇ ಆದ ಮಂಗಳೂರಿನ ಕೊಂಕಣಿಯಲ್ಲಿ. ಈ ಭಾಷೆ, ಈ ಮಾತು, ಅವನ ಧ್ವನಿ, ಅವನು ಹೇಳಿದ ರೀತಿ ಜನರ ಮೇಲೆ ಪರಿಣಾಮ ಬೀರಿತು.
“ಇದೀಗ ಸರಿಯಾದ ಮಾತು” ಎಂದ ಪಾಸ್ಕೋಲ. ಉಳಿದವರು ಕೂಡ.
ಆದರೂ ಕೆಲವರಿಗೆ ಈ ತೀರ್ಮಾನ ಸರಿ ಎನಿಸಲಿಲ್ಲ. ಪಾದರಿ ಬಳಿ ಈತ ಹೋಗಿ ಕ್ಷಮಾಪಣೆ ಕೇಳುವುದೇನೋ ಸರಿ. ಪಾದರಿ ಕ್ಷಮಿಸದಿದ್ದರೆ?
“ಅದು ಜನರಿಗೆ ಬಿಟ್ಟಿದ್ದು..ಅವರು ಏನು ಬೇಕಾದರೂ ಮಾಡಲಿ..” ಎಂದು ಕೊನೆಗೆ ಕೈತಾನ ಹೇಳಿದ.
*
*
*
ಇಲ್ಲಿ ನಡೆದುದೆಲ್ಲ ಪಾಸ್ಕುಗೆ ತಿಳಿದು ಹೋಯಿತು. ಅವನ ವಯಸ್ಸಿನವರೆಲ್ಲ ಸಭೆಗೆ ಬಂದಿದ್ದರಲ್ಲ. ಯಾರು ಯಾರು ಏನೇನು ಹೇಳಿದರು ಎಂಬುದನ್ನು ಅದೇ ಧಾಟಿಯಲ್ಲಿ ಸ್ನೇಹಿತರು ಹೇಳಿದಾಗ ಪಾಸ್ಕು ಸಿಡಿಮಿಡಿಗೊಳ್ಳುತ್ತ ಸಿಟ್ಟಿನಿಂದ ಹಲ್ಲು ಕಡಿಯುತ್ತ ತಾಳ್ಮೆ ಕಳೆದುಕೊಂಡು ಕೂಗಾಡುತ್ತ ತನ್ನ ಪ್ರತಿಕ್ರಿಯೆಯನ್ನು ನೀಡಿದ.
“ಜೂಂತ ಮಾಡತಾರಂತ..ಮಾಡಲಿ..ಆ ಪಾದರೀನ ಅವರು ಜೂಂತಗೆ ಕರೆಸಬೇಕು..ಅಲ್ಲಿ ನಾನು ಎಲ್ಲ ತೆಗೀತೀನಿ..” ಎಂದ ಆತ ತೋಳೇರಿಸಿ.
“ಜಾತಿ ಕಟ್ ಮಾಡತಾರ..ಮಾಡಲಿ..ನನಗೆ ಈ ಜಾತಿ ಬೇಡ..ನಾನು ಸಾಬರ ಜಾತಿಗೆ ಸೇರತೀನಿ.”
“ಖಂದೀರ ಖುರೀಸ್ ಕೊಡತಾರಂತೆ..ಅದು ಯಾವ ನನ್ನ ಮಗ ಅವನು ಖುರೀಸ್ ಕೊಡೋದು..ಅವನಿಗೆ ಅಷ್ಟು ತಾಕತ್ ಇದೆಯಾ.” ಎಂದು ಕಣ್ಣು ಕೆಂಪಗೆ ಮಾಡಿಕೊಂಡ. ಪಾದರಿಗಳ ಬಳಿ ಹೋಗಿ ಕ್ಷಮಾಪಣೆ ಕೇಳಬೇಕಂತೆ ಅನ್ನುವ ಮಾತು ಬಂದಾಗ ಪಾಸ್ಕು..
“ನಾನು ಹೋಗೋಲ್ಲ..ಅವನೇನು ದೇವರ?” ಎಂದು ರೇಗಿದ. ಆದರೆ ಈ ಮಾತು ಬಂದಾಗ ಅವನು ಕೊಂಚ ತಣ್ಣಗಾಗಿದ್ದ. ಮೇಲೆ ಹೇಳಿದ ಎಲ್ಲ ಶಿಕ್ಷೆಗಳಿಗಿಂತ ಈ ಶಿಕ್ಷೆ ಸೌಮ್ಯವೂ, ಸಾಧುವೂ ಆಗಿದ್ದು ಒಂದು ಕಾರಣವಾದರೆ ಜನ ತನ್ನ ಬಗ್ಗೆ ಹೆಚ್ಚು ಕ್ರೂರಿಗಳಾಗಿ ವರ್ತಿಸಲಿಲ್ಲ ಎಂಬುದೂ ಒಂದು ಕಾರಣವಾಯಿತು.
ಅಂದೇ ಸಿಮೋನ ಅವನ ಮನೆಗೆ ಬಂದ.
“ಇನಾಸ ಇದೀಯ?” ಎಂದು ಕೇಳುತ್ತ ಬಂದವ ಪಾಸ್ಕುವನ್ನು ನೋಡಿ.
“ನೋಡಪ್ಪ..ನಾವು ಹೀಗೊಂದು ತೀರ್ಮಾನ ಮಾಡಿದೀವಿ..” ಎಂದು ವಿಷಯ ತಿಳಿಸಿದ.
“ನಾಳೆ ನಾಡಿದ್ದು ಹೋಗು..ಪದ್ರಾಬಾ ತಪ್ಪಾಯ್ತು..ಕ್ಷಮಿಸು..ಅಂತ ಕೇಳಿಕೋ..ಇದು ಊರಿಗೆಲ್ಲ ಗೊತ್ತಾಗೋ ಹಾಗೆ ಆಗಬಾರದು…ಬೇರೆ ಧರ್ಮೀಯರು ಏನು ತಿಳಕೊಳ್ಳೋದಿಲ್ಲ..” ಎಂದೂ ಕೆಲ ಮಾತುಗಳನ್ನು ನುಡಿದ.
ಪಾಸ್ಕು ಮಾತ್ರ ಹಾಂ ಹುಂ ಎಂದು ಏನೂ ಹೇಳಲಿಲ್ಲ. ಆದರೆ ಆತ ವಾದ ಮಾಡಲು ಪಾದರಿಗಳ ಬಗ್ಗೆ ಮತ್ತೇನೋ ಹೇಳಲು ಹೋಗಲಿಲ್ಲ. ಇದೊಂದೇ ಸಮಾಧಾನದಿಂದ ಸಿಮೋನ ಇನಾಸನಿಗೆ ಹೇಳಿ. ಅವನ ಹೆಂಡತಿಗೆ ಹೇಳಿ, ಸೈಡ್ ಡ್ರಾಮ ಸರಿಪಡಿಸುತ್ತ ಕುಳಿತ ರೈಮಂಡಗೆ ಹೇಳಿ. ಇನಾಸನ ಹೆಣ್ಣು ಮಕ್ಕಳನ್ನು ಮಾತನಾಡಿಸಿ ತಿರುಗಿ ಬಂದ.
ಇದೊಂದು ಪ್ರಕರಣ ಒಳ್ಳೆಯ ರೀತಿಯಲ್ಲಿ ಮುಗಿದು ಹೋದರೆ ಸಾಕು ಎಂದಾತ ಬಯಸಿದ್ದ.
*
*
*
ಪಾದರಿ ಮಸ್ಕರಿನಾಸರ ಬಟ್ಲರ್ ಫ಼ರಾಸ್ಕ ಮಾತ್ರ ಈ ಪ್ರಕರಣವನ್ನು ಬೇರೊಂದು ದಿಕ್ಕಿಗೆ ತಿರುಗಿ ನಿಲ್ಲಿಸಿದ.
ಹೆಂಡತಿ ರಜೀನಾ ವಾಂತಿಯಾದಂತೆ ಆಗುತ್ತದೆ, ತಲೆ ಸುತ್ತುತ್ತದೆ ಎಂದು ಹೇಳಿದ್ದೇ ಗಾಬರಿಗೆ ಕಾರಣವಾಗಿ ಆತ ವೈಜೀಣ ಕತ್ರೀನಳ ಮನೆಗೆ ಹೋಗಿದ್ದ.
“ಭಾನುವಾರ ಪೂಜೆಗೆ ಬರತೀನಲ್ಲ..ಆಗ ಬಂದು ನಿನ್ನ ಹೆಂಡತೀನ ನೋಡತೀನಿ..ನೀನು ಗಾಬರಿಯಾಗಬೇಡ” ಎಂದವಳು ಹೇಳಿದ್ದಳು.
ಶನಿವಾರ ಸಂಜೆಯೇ ಈ ಪ್ರಕರಣವಾದದ್ದು ತಿಳಿಯಿತು.
“ಮೋಜಾ ದೇವ..ಹೆಂ ಕಿತೆಂ ಜಾಲ್ಲೆಂ” (ನನ್ನ ದೇವರೆ ಇದೇನಾಯಿತು) ಎಂದು ಜಪಸರ ಹಿಡಿದು ಕುಳಿತ ಅವಳು ತುಂಬಾ ನೊಂದುಕೊಂಡಳು. ರಾತ್ರಿ ಎಲ್ಲ ಅವಳಿಗೆ ಕೆಟ್ಟ ಕನಸುಗಳು. ಭಾನುವಾರ ಎದ್ದವಳೇ ಮೊದಲ ಪೂಜೆಗೆ ಬಂದಳು. ಏನೂ ಆಗಿಲ್ಲವೆಂಬಂತೆ ಪಾದರಿಗಳು ಪೂಜೆ ಮುಗಿಸಿದರು. ಕತ್ರೀನ ಪೂಜೆ ಮುಗಿಸಿಕೊಂಡು ಪಾದರಿ ಬಂಗಲೆಯ ಹಿಂದಿದ್ದ ಕೂಜ್ನಗೆ ಹೋದಳು.
“ಯೋ ಮಮ್ಮಿ” ಎಂದು ಫ಼ರಾಸ್ಕ ಅವಳನ್ನು ಸ್ವಾಗತಿಸಿದ.
“ಏನು ಕಾಲ ಬಂತು ಫ಼ರಾಸ್ಕ” ಎಂದು ಅಲ್ಲಿ ಕುಳಿತು ಮುಖ ಬಾಡಿಸಿಕೊಂಡು ಲೊಚಗುಟ್ಟಿದಳು.
“ಹೀಗೆ ಆಗಬಾರದಿತ್ತು ಫ಼ರಾಸ್ಕ..ಪಾದರಿಗಳ ಮೇಲೆ ಕೈ ಮಾಡೋದೆ?” ಎಂದು ಅವಳು ಗೋಡೆಗೆ ವರಗಿ ಕುಳಿತಳು. ಬಂದ ವಿಷಯ ಮರೆತಳು.
“ಆದದ್ದು ಆಗಿ ಹೋಯ್ತು ಮಮ್ಮಿ…ಮುಂದೆ ಅನುಭವಿಸಬೇಕಾದವನು ಮಾತ್ರ ಈ ಹುಡುಗನೇ” ಎಂದ ಫ಼ರಾಸ್ಕ.
“ನಮ್ಮ ಪಾದರಿಗಳನ್ನು ಎದುರು ಹಾಕಿಕೊಂಡವರಿಗೆ ಯಾರಿಗೂ ಒಳ್ಳೆಯದಾಗಿಲ್ಲ..ದೇವ ಮಣಿಯಾರಿಗಳ ನೋವು ನರಕದ ಬೆಂಕಿಯ ಹಾಗೆ ಶಾಶ್ವತ.”
“ಅಲ್ವೇ ಮತ್ತೆ”
“ಹಿಂದೆ ಪದ್ರಾಬ ಹೊಂಕೇರಿಯಲ್ಲಿ ಇದ್ದರಲ್ಲ..ಅಲ್ಲಿ ಒಬ್ಬ ಹುಡುಗ ಇವರಿಗೆ ವಿರೋಧವಾಗಿದ್ದ..ಅವನು ಪಾಸ್ಕು ಹಾಗೇನೆ ಪಾದರಿಗಳನ್ನು ತುಂಬಾ ಹಗುರವಾಗಿ ಕಂಡ. ಪಾದರಿಗಳು ತುಂಬಾ ಸುಧಾರಿಸಿಕೊಂಡರು. ಜನರಿಗೂ ಹೇಳಿ ನೋಡಿದರು. ಒಂದು ದಿನ ಅವರ ತಾಳ್ಮೆಯ ತಂತಿ ತುಂಡಾಗಿ ಹೋಯಿತು..ಇಗರ್ಜಿನಲ್ಲಿ ದೇವರ ಪೀಠದ ಮುಂದೆ ನಿಂತು ಎಡಗೈ ಶಾಪವನ್ನು ನೀಡಿದರು. ಈವತ್ತಿಗೂ ಆತ ಮೈ ತುಂಬ ತೊನ್ನಾಗಿ ನರಳ್ತಿದಾನೆ..” ಎಂದು ಫ಼ರಾಸ್ಕ ನಿಜ ಘಟನೆಯೊಂದನ್ನು ಹೇಳಿದ. ಪಾದರಿಗಳು ಜನರನ್ನು ಆಶೀರ್ವದಿಸುವಾಗೆಲ್ಲ ಬಲಗೈಯಿಂದ ಗಾಳಿಯಲ್ಲಿ ಶಿಲುಬೆ ಬರೆಯುವುದು ರೂಢಿ. ಅದೊಂದು ಪದ್ದತಿ ಕೂಡ. ಮದುವೆಯ ಉಂಗುರವನ್ನು ಮಂತ್ರಿಸುವಾಗ, ಚಿಕ್ಕ ಮಗುವಿಗೆ ಆಶೀರ್ವಾದ ನೀಡುವಾಗ, ತಮ್ಮ ಮುಂದೆ ಮೊಣಕಾಲೂರಿದವರನ್ನು ಆಶೀರ್ವದಿಸುವಾಗ ಎಲ್ಲ ಸಂದರ್ಭಗಳಲ್ಲಿ ಪಾದರಿ ಬಲಗೈಯನ್ನು ಮಡಚಿ ಕೈಯಿಂದ ಶಿಲುಬೆಯ ಗುರುತು ಮಾಡಿ “ದೇವರ ಆಶೀರ್ವಾದ” ಅನ್ನುತ್ತಾರೆ. ಈ ಆಶೀರ್ವಾದ ಅಮೂಲ್ಯವಾದದ್ದು, ಶ್ರೇಷ್ಠವಾದದ್ದು ಎಂಬುದು ಒಂದು ನಂಬಿಕೆ. ಇದೇ ಪಾದರಿ ಇದೇ ಆಶೀರ್ವಾದವನ್ನು ಎಡಗೈಯಿಂದ ಮಾಡಿದರೆ? ಅದು ಶಾಪ, ಶಿರಾಪ. ಸಾಮಾನ್ಯವಾಗಿ ಪಾದರಿಗಳು ಎಡಗೈ ಬಳಸುವುದಿಲ್ಲ. ಬಳಸಿದರೆ ಮಾತ್ರ ಅದು ವಿನಾಶಕಾರಕ. ಈ ನಂಬಿಕೆ ಇಗರ್ಜಿ ಮಾತೆಯನ್ನು ನಂಬುವ ಕ್ರೈಸ್ತ ಸಮೋಡ್ತಿಯಲ್ಲಿ ಬಹಳ ದಿನಗಳಿಂದ ಇದೆ. ಜನ ಏನೂ ಸಹಿಸಿಕೊಳ್ಳುತ್ತಾರೆ. ಆದರೆ ಎಡಗೈ ಆಶೀರ್ವಾದವನ್ನಲ್ಲ.
ಫ಼ರಾಸ್ಕ ಈ ವಿಷಯ ಹೇಳುತ್ತಿರಲು ಕತ್ರೀನಾ “ದೇವಾ” (ದೇವರೇ) ಎಂದು ಮಿಡುಕಾಡಿದಳು.
ಫ಼ರಾಸ್ಕ ಪಿಂಗಾಣಿ ಬಟ್ಟಲು ತಟ್ಟೆಯಲ್ಲಿ ಟೀ ಮಾಡಿಕೊಟ್ಟ. ಒಂದು ತುಂಡು ಬ್ರೆಡ್ಡು ತಂದಿರಿಸಿದ. ಕತ್ರೀನಾ ಅದನ್ನು ಮುಗಿಸಿದಳು.
“ರಜೀನಾ..ಹೀಗೆ ಬಾ..” ಎಂದು ಫ಼ರಾಸ್ಕನ ಹೆಂಡತಿ ರಜೀನಾಳ ಪರೀಕ್ಷೆ ಮಾಡಿದಳು. ಅವಳ ಕಿವಿಯಲ್ಲಿ ಏನೋ ಹೇಳಿ, ಅವಳು ನಾಚಿ ಕೆಂಪೇರುತ್ತಿರಲು-
“ಫ಼ರಾಸ್ಕ ಗಾಬರಿ ಏನಿಲ್ಲ..ಇನ್ನೊಂದು ಹದಿನೈದು ದಿನ ಆಗಲಿ..ನಾನು ಡಾಕ್ಟರ್ ಶಾಂತಾಬಾಯಿ ಹತ್ತಿರ ಕರಕೊಂಡು ಹೋಗಿ ಪರೀಕ್ಷೆ ಮಾಡಿಸಿ ಹೇಳತೀನಿ..” ಎಂದು ನಗುನಗುತ್ತ ಹೇಳಿ ಎದ್ದಳು.
ಅವಳು ಮನೆಮುಟ್ಟುವಷ್ಟರಲ್ಲಿ ಇಗರ್ಜಿಯ ಎರಡನೇ ಪೂಜೆಗೆ ರೇಶಿಮೆ ಸೀರೆಯುಟ್ಟು ಹೊರಟ ನಾಲ್ವರು ಅವಳಿಗೆ ಭೇಟಿಯಾದರು.
“ಪೂಜೆಗೆ ಹೋಗಿ ಬಂದ್ರ?” ಎಂದು ಕೇಳುತ್ತ ನಿಂತರು.
“ನಿನ್ನೆ ನೋಡಿ ಹೀಗೆ ಆಯ್ತು..” ಎಂದರು. ಕತ್ರೀನಾ ಮುಂದಿನ ಪರಿಣಾಮ ಏನಾಗಬಹುದು ಎಂಬುದನ್ನು ಸೂಕ್ಷ್ಮವಾಗಿ ಅವರಿಗೆ ಹೇಳಿದಳು. ಮಾಂಸ ತರಲು ಮಾರ್ಕೆಟಿಗೆ ಹೊರಟ ಫ಼ರಾಸ್ಕ ಎದುರು ಸಿಕ್ಕ ಕೆಲವರಿಗೆ ಈ ಸುಳುವು ನೀಡಿದ. ಇದಕ್ಕೆ ಸರಿಯಾಗಿ ಪಾದರಿ ಮಸ್ಕರಿನಾಸರು ಪೂಜೆಯ ನಡುವೆ ಶೆರಮಾಂವಂಗೆ ನಿಂತವರು-
” ಈ ಬಗ್ಗೆ ನೀವು ಏನು ತೀರ್ಮಾನ ಕೈಗೊಳ್ಳುತ್ತೀರಿ ಎಂಬುದನ್ನು ನಾನು ಕಾದು ನೋಡುತ್ತೇನೆ”. ಎಂದು ಹೇಳಿದ್ದು ಬೇರೇನೋ ಅರ್ಥವನ್ನು ನೀಡಿತು. ಮೂರು ಗಂಟೆಯ ಸಭೆಯಲ್ಲಿ ಮಿರೋಣ ವಲೇರಿಯನ್ ಬೇರೆ ತನ್ನ ಮಂಗಳೂರಿನ ಕೊಂಕಣಿಯಲ್ಲಿ-
“ನಾವು ಏನೇ ತೀರ್ಮಾನ ಮಾಡಿದರೂ ಪಾದರಿಗಳು ಒಪ್ಪಬೇಕು..ಅಲ್ವೇ?” ಎಂದು ಕೇಳಿದ್ದ.
ಭಾನುವಾರವೆಲ್ಲ ಪಾಸ್ಕು ಏನು ಮಾಡುತ್ತಾನಂತೆ ಎಂಬುದರ ಬಗ್ಗೆಯೇ ಚರ್ಚೆ ನಡೆಯಿತು. ಆತ ಪಾದರಿಗಳ ಕ್ಷಮಾಪಣೆ ಕೇಳುವ ಮನೋಸ್ಥಿತಿಯಲ್ಲಿ ಇಲ್ಲ ಎನ್ನುವಾಗ ಎಡಗೈ ಶಾಪದ ಮಾತು ಬಲವಾಗಿ ಕೇಳಿ ಬರತೊಡಗಿತು. ಕ್ರೈಸ್ತ ಸಮುದಾಯದಲ್ಲಿ ಎಲ್ಲಿಯೋ ಗುಪ್ತವಾಗಿ ಅಡಗಿದ್ದ ಈ ಭೀತಿಯ ಹಸ್ತ ಸ್ವಲ್ಪ ಮೇಲೆದ್ದು, ರೆಕ್ಕೆ ಪುಕ್ಕಗಳನ್ನು ಹಚ್ಚಿಕೊಂಡು, ಕುಷ್ಟರೋಗ, ತೊನ್ನು, ಕಣ್ಣು ಕಾಣದಿರುವುದು, ಕಾಲು ಊನವಾಗುವುದು, ಕೈ ಮೊಟಕಾಗುವುದು, ನಾಲಿಗೆ ಬಿದ್ದು ಹೋಗುವುದು ಮೊದಲಾದ ಶಾಶ್ವತ ಅಂಗಹೀನತೆಗಳನ್ನು ತಂದು ಎದುರು ನಿಲ್ಲಿಸಿ ಇಗರ್ಜಿಯ ಸುತ್ತಲಿನ ಮೂರು ಬೀದಿಗಳಲ್ಲಿ, ಬಾಮಣರು ವಾಸಿಸುವ ಕೆಳಗಿನ ಕೇರಿಯಲ್ಲಿ, ಕರಿಕಾಲಿನವರು ವಾಸಿಸುವ ರೈಲು ಇಲಾಖೆಯ ಮನೆಗಳ ಬಳಿ ವಿಷ ಗಾಳಿಯಾಗಿ ಹರಡಿಕೊಂಡಿತು.
ಇನಾಸ ಚಾಪೆಯೊಂದನ್ನು ಶಿಲುಬೆ ದೇವರ ಮುಂದೆ ಹಾಸಿಕೊಂಡು ಮಲಗಿಬಿಟ್ಟ.
ಬ್ಯಾಂಡಕಾರ ರೈಮಂಡ್-
“ರಾಂಡ್ಲಾ ಪುತ್ತ..ನಮ್ಮ ಮನೆಗೇನೆ ಕೆಟ್ಟ ಹೆಸರು ತಂದೆಯಲ್ಲ” ಎಂದು ಕೂಗಾಡಿದ.
ಇನಾಸನ ಹೆಂಡತಿ ಮೊನ್ನೆ ತಲೆಗೂದಲು ಕೆದರಿಕೊಂಡು, ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು, ಶಾಲೆಗೆ ಹೋಗಲು ಹಟ ಮಾಡುವ ಹುಡುಗನನ್ನು ತಳ್ಳಿಕೊಂಡು ಶಾಲೆಗೆ ಕೊಂಡೊಯ್ಯುವಂತೆ ಪಾಸ್ಕುವನ್ನು ಮನೆಯ ಹೊರಗೆ ಎಳೆ ತಂದಳು. ಇಷ್ಟು ಹೊತ್ತಿಗೆ ಪಾಸ್ಕು ಕೂಡ ಅರ್ಧ ಜೀರ್ಣವಾಗಿದ್ದ. ಪಾದರಿಗಳ ಎಡಗೈಯ ಶಾಪದ ಬಗ್ಗೆ ಬಹಳಷ್ಟು ಕೇಳಿದ್ದ ಈತ ಈ ಪ್ರಕರಣವನ್ನು ಮುಂದುವರೆಸಿಕೊಂಡು ಹೋಗಬಾರದೆಂದು ನಿರ್ಧರಿಸಿದ.
*
*
*
ಎಲ್ಲೋ ಒಂದು ಕಡೆ ಬದಲಾವಣೆಯಾಯಿತೆಂದರೆ ಅದರ ಪ್ರಭಾವ ಎಲ್ಲ ಕಡೆ ಆಗುತ್ತದೆ. ಕಡಲಲ್ಲಿ ಹುಟ್ಟುವ ಒಂದು ಅಲೆ ಮತ್ತೊಂದು ಅಲೆಯ ಹುಟ್ಟಿಗೆ ಕಾರಣವಾಗುವಂತೆ ಹೊಸ ತರಂಗಗಳು ಏಳುತ್ತವೆ.
ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ವಾತಂತ್ರ್ಯ ಚಳುವಳಿ ನಡೆದರೂ ಈ ಚಳುವಳಿಯ ಬಿಸಿ ಕ್ರೀಸ್ತುವರ ಕೇರಿಯತ್ತ ಸುಳಿಯಲಿಲ್ಲ. ವಿಶೇಷವಾಗಿ ಕ್ರೀಸ್ತುವರು ಇರುವಲ್ಲೆಲ್ಲ ವಿದೇಶಿ ಪಾದರಿಗಳು ಇದ್ದುದರಿಂದ ಈ ಇಟಲಿ, ಫ಼್ರೆಂಚ್, ಯುರೋಪಿಯನ್, ಗೋವಾ ಪಾದರಿಗಳು ಕ್ರೀಸ್ತುವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದಂತೆ ನೋಡಿಕೊಂಡರು. ಹಾಗೆಯೇ ಕ್ರೀಸ್ತುವರಲ್ಲಿ ಅನಕ್ಷರಸ್ಥರು ಅಧಿಕ ಸಂಖ್ಯೆಯಲ್ಲಿ ಇದ್ದುದರಿಂದ ಚಳುವಳಿಗಳ ಕುರಿತು ಕೂಡ ಇವರು ವಿಚಾರ ಮಾಡಲಿಲ್ಲ.
ಬ್ರಿಟೀಷರು ಇಲ್ಲಿಯ ಜನರಿಗೆ ಆಡಳಿತವನ್ನು ವಹಿಸಿಕೊಟ್ಟು ಹೋಗುತ್ತಿರುವಾಗಲೇ ಶಿವಸಾಗರದ ಇಗರ್ಜಿ ಆಡಳಿತ ಗೋವೆಯ ಪ್ರಾವಿನ್ಶಿಯಲ್ ಅವರ ಕೈಯಿಂದ ಮೈಸೂರಿನ ಬಿಷಪ್ಪರ ಕೈಗೆ ಹಸ್ತಾಂತರಗೊಂಡಿತು. ನೀವು ಇದ್ದಲ್ಲಿಯೇ ಇರುತ್ತೀರೋ ಇಲ್ಲ ಗೋವೆಗೆ ಹಿಂತಿರುಗುತ್ತಿರೋ ಎಂದು ಗೋವೆಯ ಧರ್ಮಾಧಿಕಾರಿಗಳು ಇಲ್ಲಿದ್ದ ಗೋವೆಯ ಪಾದರಿಗಳಿಗೆ ಕೇಳಿದರು. ಕೆಲವರು ಇಲ್ಲಿಯೇ ಉಳಿದರು. ಕೆಲವರು ಗೋವೆಗೆ ಹಿಂತಿರುಗಿದರು.
ಮೈಸೂರಿನ ಸಭೆ ತಮಗೆ ಅಪರಿಚಿತ. ಈ ಸಭೆಗೆ ತಾನು ಹೊಸಬನಾಗುತ್ತೇನೆ. ಪರಕೀಯನಾಗುತ್ತೇನೆ. ಗೋವೆ ಇನ್ನೂ ಪೋರ್ತುಗಿಸರ ವಶದಲ್ಲಿಯೇ ಇದೆ. ಅಲ್ಲಿ ತಮಗೆ ಹೆಚ್ಚು ರಕ್ಷಣೆ ಇದೆ. ಸ್ವಾತಂತ್ರ್ಯಾನಂತರ ಇಲ್ಲಿಯ ಪರಿಸ್ಥಿತಿ ಹೇಗೋ ಎಂದೆಲ್ಲ ಯೋಚನೆ ಮಾಡಿದ ಪಾದರಿ ಮಸ್ಕರಿನಾಸ ಗೋವೆಗೆ ಹಿಂತಿರುಗುವ ತಮ್ಮ ನಿರ್ಧಾರವನ್ನು ಪ್ರಾವಿನ್ಶಿಯಲ್ ಅವರಿಗೆ ತಿಳಿಸಿ ಅಲ್ಲಿಂದ ಮುಂದಿನ ಆದೇಶ ಬರುವುದನ್ನು ಕಾಯತೊಡಗಿದರು.
ಶಿವಸಾಗರ ಬಹಳ ವೇಗವಾಗಿ ಬದಲಾವಣೆಯನ್ನು ಕಂಡಿತು. ಆಧುನಿಕ ಬದುಕಿಗೆ ಹೊರಳಿಕೊಂಡಿತು. ಜಾತಿಯ ಹೆಸರಿನ ಕೇರಿಗಳು, ಫ಼ಾತಿಮಾನಗರ, ಆಜಾದ ನಗರ, ಜೋಸೆಫ಼ ನಗರ ಎಂದೆಲ್ಲ ಪರಿವರ್ತನೆ ಹೊಂದಿದವು. ಜನರಲ್ಲಿ ಜಾತಿ, ಧರ್ಮ, ಒಳ ಪಂಗಡಗಳ ವ್ಯಾಮೋಹ ಹೋಗಲಿಲ್ಲವಾದರೂ ಈ ಬದಲಾವಣೆ ಒಂದು ರೀತಿಯಲ್ಲಿ ನಾಗರೀಕವಾಗಿ ಕಂಡಿತು.
ಊರಿನಲ್ಲಿ ಬ್ಯಾಂಕುಗಳು, ಸರಕಾರಿ ಕಛೇರಿಗಳು, ನರ್ಸಿಂಗ ಹೋಂಗಳು, ಶಾಲೆ, ಕಾಲೇಜುಗಳು, ವರ್ಕಶಾಪುಗಳು ಅಧಿಕಗೊಂಡದ್ದರಿಂದ ಮಂಗಳೂರು, ಕುಂದಾಪುರ, ಚಿಕ್ಕಮಗಳೂರಿನಿಂದ ಕ್ರೀಸ್ತುವರು ಅಧಿಕ ಸಂಖ್ಯೆಯಲ್ಲಿ ಬಂದರು. ಪ್ಲೇಗು, ಕಾಲರಾ ಮೂಲೋತ್ಪಾಟನೆ ಮಾಡುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿ ಡಾಕ್ಟರ್ ರೇಗೋ ಬೇರೆ ಕಡೆಗೆ ವರ್ಗವಾಗಿ ಹೋಗಿದ್ದರು. ಅವರ್ ಜತೆ ಬಂದ ಚಾರ್ಲಿ, ವಿನ್ಸೆಂಟ್ ಕೂಡ ಊರು ಬಿಟ್ಟಿದ್ದರು. ಆದರೆ ಮ್ಯಾನೇಜರ ಜಾನ ಡಯಾಸ್ ಇಲ್ಲಿರುವಾಗಲೇ ನಿವೃತ್ತನಾಗಿ ಅವನಿಗೆ ಒಂದಿಷ್ಟು ಹಣ ಬಂದಿತ್ತು. ಅವನ ಹೆಂಡತಿ ಸಿಲ್ವಿಯಾ-
“ಶಿವಸಾಗರದಲ್ಲಿಯೇ ಇದ್ದು ಬಿಡೋಣ” ಎಂದು ಹಠ ಮಾಡಿದಳು.
ಜಾನ ಡಯಾಸನಿಗೆ ತನ್ನ ಊರಿಗೆ ಹೋಗಿ ಅಲ್ಲಿದ್ದ ಹಿರಿಯರ ಮನೆಯನ್ನು ಹೊಸದಾಗಿ ಕಟ್ಟಿಸಿ ಅಲ್ಲಿರಬೇಕು ಎಂಬ ಆಸೆಯಿತ್ತು. ಅವನ ತಂದೆಯೂ ಇದನ್ನೇ ಬಯಸುತ್ತಿದ್ದ. ಆದರೆ ಜಾನ್ ಡಯಾಸರ ಇಬ್ಬರು ತಮ್ಮಂದಿರು ಅಲ್ಲಿ ಇದ್ದುದರಿಂದ ಅವರಿಗೆ ಅನುಕೂಲವಾಗಿ ಬಿಡುತ್ತದೆ ಎಂದು ಸಿಲ್ವಿಯಾ-
“ನಾಕಾ ಅಬಾ…ಅಮಿಂ ಹಾಂಗಾರಾವ್ಯಾಂ” (ಬೇಡಪ್ಪ ನಾವು ಇಲ್ಲಿಯೇ ಇರೋಣ) ಎಂದು ಹಟಹಿಡಿದಳು. ಡಯಾಸ ಇಲ್ಲಿ ಮನೆಕೊಂಡ. ಅವನ ಮಗ ಜಾಕೋಬನಿಗೆ ಶ್ರೀ ಶಿವಸಾಗರ ಬ್ಯಾಂಕಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಆತ ಶಿವಸಾಗರದವನೇ ಆದ.
ಮಿರೋಣ್ ವಲೇರಿಯನ್ ಇದನ್ನು ಸ್ವಲ್ಪ ಹೆಚ್ಚಾಗಿಯೇ ಹಚ್ಚಿಕೊಂಡ. ಮಗ ನಿವೃತ್ತನಾದ. ಐದಾರು ವರ್ಷಗಳ ನಂತರ ಆತ ತೀರಿಕೊಂಡು ಇಗರ್ಜಿಯ ಮಿರೋಣ್ ಜಾಗವನ್ನು ಮಗನಿಗೆ ಬಿಟ್ಟುಕೊಟ್ಟ. ಅವನು ಕೂಡ ಪಿಟೀಲು ಬಾರಿಸಬಲ್ಲವನಾಗಿದ್ದ. ಕೀರ್ತನೆ ಗಾಯನ ಬಲ್ಲವನಾಗಿದ್ದ. ಪಾದರಿಗಳ ವಿಶ್ವಾಸಗಳಿಸಿದ್ದ ಅವನಿಗೆ ಏನೂ ಕಷ್ಟವಾಗಲಿಲ್ಲ.
ಇಗರ್ಜಿಯ ಸುತ್ತ ಇದ್ದ ಕ್ರೀಸ್ತುವರ ಮನೆಗಳೂ ಮತ್ತೂ ದೂರ ಹಬ್ಬಿಕೊಂಡವು. ಸಿಮೋನನ ಮನೆಯ ಹಿಂದಿನ ಸಾಲು ಕೆಳಕೇರಿ ಎಂದೇ ಪ್ರಖ್ಯಾತವಾಗಿ ಮೊನ್ನೆ ಮೊನ್ನೆ ಫ಼ಾತಿಮಾ ನಗರ ಎಂಬ ಹೆಸರು ಪಡೆಯಿತು. ಇಲ್ಲಿಗೂ ಓರ್ವ ಗುರ್ಕಾರ ಬೇಕು ಎಂದು ಜನ ಹೇಳಿದ್ದರಿಂದ ಶಿವಸಾಗರಕ್ಕೆ ಬಂದು ಕೆಲವರ್ಷಗಳಾಗಿದ್ದ ಅಲೆಕ್ಸ ಪಿಂಟೋ ಫ಼ಾತಿಮಾ ನಗರದ ಗುರ್ಕಾರ ಆಗಿ ನೇಮಕಗೊಂಡಿದ್ದ.
ಜತೆಗೆ ಪಾದರಿ ಮಸ್ಕರಿನಾಸ ಬೇರೊಂದು ಯತ್ನ ಮಾಡಿದ್ದರು. ಶಿವಸಾಗರಕ್ಕೆ ಕ್ರೈಸ್ತ ಶಾಲೆಯೊಂದರ ಅವಶ್ಯಕತೆ ಇತ್ತು. ಕ್ರೈಸ್ತ ಮಕ್ಕಳು ಸರಕಾರಿ ಶಾಲೆಯಲ್ಲಿ ಓದತೊಡಗಿದ್ದರು. ಅಲ್ಲಿಯ ಶಿಕ್ಷಣ ಹೇಗೆ ಇರಲಿ ಕ್ರೈಸ್ತ ಮಕ್ಕಳಿಗೆ ದೊರಕಬೇಕಾದ ಧಾರ್ಮಿಕ ಶಿಕ್ಷಣ ಅಲ್ಲಿ ದೊರೆಯುತ್ತಿರಲಿಲ್ಲ. ಎಲ್ಲ ಹುಡುಗರ ಜತೆ ಸೇರಿ ಪಾಠ ಕಲಿಯುವುದು, ಪರೀಕ್ಷೆ ಪಾಸು ಮಾಡುವುದು, ಎಲ್ಲರ ಜೊತೆ ಒಂದಾಗಿ ಬೆರೆತು ಇವರು ಕಳೆದು ಹೋಗುತ್ತಿದ್ದರು.
ನಾಲ್ಕು ಏಳನೆಯ ತರಗತಿಯವರೆಗಾದರೂ ಕ್ರೈಸ್ತ ಮಕ್ಕಳು ತಮ್ಮ ಸುಪರ್ದಿನಲ್ಲಿದ್ದರೆ ಚೆಂದ ಎಂದು ಇವರಿಗನಿಸಿತು. ಹೀಗೆಂದೇ ಮಂಗಳೂರಿನ ಒಂದು ವಿದ್ಯಾಸಂಸ್ಥೆಗೆ ಕಾಗದ ಬರೆದರು ಪಾದರಿ ಮಸ್ಕರಿನಾಸ. ಅಲ್ಲಿಯ ತೆರೇಜಾ ವಿದ್ಯಾ ಸಂಸ್ಥೆ ಶಿವಸಾಗರದಲ್ಲಿ ಒಂದು ಕಾನ್ವೆಂಟ್ ತೆರೆಯಲು ಮುಂದೆ ಬಂದಿತು. ಕಾನ್ವೆಂಟ್ ಕಟ್ಟಡ ಕಟ್ಟಲು ಒಂದು ನಿವೇಶನ ದೊರಕಿಸಿಕೊಡಬೇಕು ಎಂಬ ನಿಬಂಧನೆ ಹಾಕಲು ಪಾದರಿ ಊರವರ ಒಪ್ಪಿಗೆ ಪಡೆದು ಇಗರ್ಜಿ ಮುಂದಿನ ಮೈದಾನವನ್ನು ಕಾನ್ವೆಂಟಿಗೆ ಬಿಟ್ಟು ಕೊಡಲು ಒಪ್ಪಿಕೊಂಡರು.
ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆಯೇ ಸಿಸ್ಟರುಗಳ ಒಂದು ತಂಡ ಇಲ್ಲಿಗೆ ಬಂದು ಇಳಿಯಲು ಅನೂಕೂಲವಾಗುವಂತೆ ಇಗರ್ಜಿಯ ಮುಂದೆಯೇ ಕಾನ್ವೆಂಟ್ ಕಟ್ಟಡ ಎದ್ದು ನಿಂತಿತು.ಹಿಂದೆಯೇ ಸಿಸ್ಟರುಗಳು ಬಂದರು. ತರಗತಿಗಳೂ ಆರಂಭವಾದವು.
ಕ್ರೀಸ್ತುವರು ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗಲ್ಲದೆ ಬೇರೆ ಶಾಲೆಗಳಿಗೆ ಕಳುಹಿಸಬಾರದು ಎಂದು ಪಾದರಿ ಆದೇಶ ಹೊರಡಿಸಿದರು. ಮಕ್ಕಳಿಗೆ ಜ್ಞಾನೋಪದೇಶ ಹೇಳಿ ಕೊಡುವ ಹೊಣೆ ಸಿಸ್ಟರುಗಳದಾಯಿತು. ಸಂಜೆ ಶಾಲೆ ಬಿಟ್ಟ ತಕ್ಷಣ ಸಾಲು ಸಾಲಾಗಿ ಕ್ರೀಸ್ತುವರ ಮಕ್ಕಳನ್ನು ಶಾಲೆಯಿಂದ ಇಗರ್ಜಿಗೆ ಕರೆತಂದು ಅಲ್ಲಿ ಪ್ರಾರ್ಥನೆ ಮಾಡಿ-
“ಜೂಜೆ ಬಾಪ ಪಾವತುಂ ಅಮ್ಕಾಂ” (ತಂದೆ ಜೂಜೆಯೆ ನಮ್ಮನ್ನು ಕಾಪಾಡು) ಎಂದು ಮಕ್ಕಳು ಸಾಮೂಹಿಕವಾಗಿ ಹಾಡಿ ಮನೆಗಳಿಗೆ ಹೋಗುವ ಪದ್ಧತಿ ರೂಢಿಗೆ ಬಂದಿತು.
ಇಷ್ಟು ಹೊತ್ತಿಗೆ ಮೈಸೂರಿನಿಂದ ಹೊಸ ಪಾದರಿಯೋರ್ವರನ್ನು ಶಿವಸಾಗರಕ್ಕೆ ವರ್ಗ ಮಾಡಲಾಯಿತು. ಅವರು ಬರುವುದಕ್ಕೂ ಮೊದಲು ಶಿವಸಾಗರದಿಂದ್ ಗೋವೆಗೆ ತಿರುಗಿ ಬರುವಂತೆ ಪಾದರಿ ಮಸ್ಕರಿನಾಸರಿಗೆ ಗೋವೆಯ ಪ್ರಾವಿನ್ಶಿಯಲ್ ಅವರಿಂದ ಆದೇಶ ಬಂದಿತು. ಗೋವೆಯ ಪೊಂಡಾದ ಇಗರ್ಜಿಗೆ ಅವರನ್ನು ವರ್ಗ ಮಾಡಲಾಗಿತ್ತು.” ನೀನೂ ನನ್ನ ಜತೆ ಹೊರಡು” ಎಂದರು ಪಾದರಿ ಫ಼ರಾಸ್ಕನಿಗೆ. ಅವನ ಹೆಂಡತಿ ರಜೀನಾ ಮಗಳು ಎಲಿಜಬೆತ್ ಅವರ ಜತೆ ಹೊರಡಬೇಕಿತ್ತಲ್ಲ.
ಊರ ಜನ ಇವರನ್ನು ಪ್ರೀತಿಯಿಂದಲೇ ಬೀಳ್ಕೋಟ್ಟರು.
-೬-
ಮೈಸೂರಿನಿಂದ ಬರಬಹುದಾದ ಹೊಸ ಪಾದರಿಗೆ ಜನ ಕಾದರು. ಅವರಂತೂ ಬರಲಿಲ್ಲ. ಇಲ್ಲಿ ಸಿಸ್ಟರುಗಳು ಇದ್ದುದರಿಂದ ಅವರು ದಿನನಿತ್ಯ ಪೂಜೆ ಕೇಳಿ ದಿವ್ಯ ಪ್ರಸಾದವನ್ನು ಸ್ವೀಕರಿಸಲೇಬೇಕಾಗಿದ್ದುದರಿಂದ ಶಿವಸಾಗರದ ಹತ್ತಿರದಲ್ಲಿಯೇ ಇದ್ದ ತೀರ್ಥಪುರದ ಪಾದರಿ ಕೆಲ ದಿನ ಬಂದು ಇಲ್ಲಿ ಇದ್ದುದಾಯ್ತು. ನಂತರ ಒಂದು ದಿನ ಇಗರ್ಜಿಯ ಗಂಟೆ ಸದ್ದು ಮಾಡಿ-
“ಹೊಸ ಪಾದರಿ ಬಂದರು” ಎಂಬ ಸಂತಸದ ಸುದ್ದಿಯನ್ನು ಊರ ಜನರಿಗೆ ತಿಳಿಸಿತು. ತುಂಬಾ ವಯಸ್ಸಾದ , ನಿವೃತ್ತಿಗೆ ಒಂದು ಒಂದೂವರೆ ವರುಷವಿರುವ ಪಾದರಿ ಲಾರೆಟ್ಟೋ ಇಲ್ಲಿಗೆ ಬಂದು ಅಧಿಕಾರ ವಹಿಸಿಕೊಂಡರು.
ಪಾದರಿ ಲಾರೆಟ್ಟೋ ನಿಧಾನ ಎಂದರೆ ನಿಧಾನ. ಪೂಜೆ, ಪ್ರವಚನ, ದಿವ್ಯ ಪ್ರಸಾದ ನೀಡುವುದರಲ್ಲೂ ನಿಧಾನ. ಮಾತಿನಲ್ಲೂ ಅಷ್ಟೇ. ದೇವರ ಪೀಠವನ್ನೇರಿ ಪೂಜೆಗೆ ತೊಡಗಿದರಂತೂ ಹೊರಗಿನ ಪ್ರಪಂಚವನ್ನೇ ಮರೆತುಬಿಡುತ್ತಿದ್ದರು. ಬಗ್ಗಿ ಪವಿತ್ರ ಪುಸ್ತಕವನ್ನು ಹತ್ತು ಬಾರಿ ಮುತ್ತಿಡುತ್ತಿದ್ದರು. ದಿವ್ಯ ಪ್ರಸಾದವನ್ನು ಪಾದರಿಯೇ ಸ್ವೀಕರಿಸಬೇಕಾಗಿದ್ದರಿಂದ ಈ ಕಾರ್ಯಕ್ಕೆ ಕಡಿಮೆ ಎಂದರೆ ಐದು ನಿಮಿಷ ತೆಗೆದುಕೊಳ್ಳುತ್ತಿದ್ದರು. ಪ್ರವಚನಕ್ಕೆ ನಿಂತವರು ಕ್ರಿಸ್ತ ಪ್ರಭುವಿನ ಮಾತುಗಳನ್ನು ನುಡಿಯುತ್ತ ಗದ್ಗದಿತರಾಗುತ್ತಿದ್ದರು. ಅವರ ದನಿ ನಡುಗುತ್ತಿತ್ತು. ಕಣ್ಣುಗಳಲ್ಲಿ ನೀರು ಬರುತ್ತಿತ್ತು. ಮಾತು ನಿಲ್ಲಿಸಿ, ಕೈನ ಉದ್ದ ತೋಳುಗಳಲ್ಲಿ ಇರಿಸಿದ ಕರವಸ್ತ್ರ ತೆಗೆದು ಕಣ್ಣೊರೆಸಿಕೊಳ್ಳುತ್ತಿದ್ದರು.
ಪಾದರಿ ಲಾರೆಟ್ಟೋ ಇಗರ್ಜಿ ಹಾಗೂ ಬಂಗಲೆ ಈ ಎರಡನ್ನೂ ಬಿಟ್ಟು ಹೊರ ಬರಲಿಲ್ಲ. ಇಗರ್ಜಿಯ ಎಲ್ಲ ವ್ಯವಹಾರ ವಹಿವಾಟನ್ನು ಗುರ್ಕಾರ ಸಿಮೋನ, ಗುರ್ಕಾರ ಪಿಂಟೋ, ಮಿರೋಣ್ ಡಯಾಸ್ ನಡೆಸಿಕೊಂಡು ಹೋದರು. ಹಿಂದಿನಿಂದ ನಡೆದುಕೊಂಡು ಬಂದುದೆಲ್ಲ ಹಾಗೆಯೇ ಮುಂದುವರೆಯಿತು.
ಲಾರೆಟ್ಟೋ ಬಂದ ಒಂದೂವರೆ ವರ್ಷಕ್ಕೆ ಅವರಿಗೆ ಅಲ್ಲಿಂದ ವರ್ಗವಾಯಿತು. ನಂತರ ಇನ್ನೂ ಕೆಲವರು ಊರಿಗೆ ಪಾದರಿಗಳಾಗಿ ಬಂದರು. ಪಾದರಿ ಫ಼ರ್ನಾಂಡಿಸ್, ಪಾದರಿ ಲೋಪಿಸ್, ಪಾದರಿ ಪಿಂಟೋ ಎರಡು ಮೂರು ವರ್ಷವಿದ್ದು ಕ್ರೀಸ್ತುವರ ಆಧ್ಯಾತ್ಮಿಕ ಬೇಕು ಬೇಡಗಳನ್ನು ಪೂರೈಸಿ ಹೋದರು.
ಊರು ಕೂಡ ಬೆಳೆಯಿತು. ಹಿರಿಯರು ಮತ್ತೂ ಹಿರಿಯರಾದರು. ಕಿರಿಯರಿಗೆ ವಯಸ್ಸಾಗಿ ಮದುವೆಯಾಗಿ ಮಕ್ಕಳಾದವು. ಕ್ರೀಸ್ತುವರ ಸಂಖ್ಯೆಯೂ ಅಧಿಕವಾಯಿತು. ಪಾದರಿ ಪಿಂಟೋ ವರ್ಗವಾಗಿ ಹೋದ ಮಾರನೇ ದಿನ ಒಂದು ಕರಿಕಾರು ಇಗರ್ಜಿಯ ಬಳಿ ಬಂದು ನಿಂತಿತು. ಗಡ್ಡ, ಮೀಸೆ ಇಲ್ಲದ, ಬೋಳು ಮುಖದ ಕರಿ ಪ್ಯಾಂಟು, ಬಣ್ಣದ ಶರಟಿನ, ಕಪ್ಪು ಕನ್ನಡಕ ಧರಿಸಿದ ಪಾದರಿ ಸಿಕ್ವೇರಾ ಕಾರಿನಿಂದ ಇಳಿದಾಗ ಅವರ ದಾರಿ ಕಾಯುತ್ತ ನಿಂತ ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ ಪಿಂಟೋ ಮುಂದೆ ಧಾವಿಸಿ-
“ಬ್ಲೆಸ್ ಮಿ ಫ಼ಾದರ್” ಎಂದು ಕೈಮುಗಿದಾಗ ಪಾದರಿ ಸಿಕ್ವೇರಾ ಕಣ್ಣುಗಳು ಮಿಂಚಿದವು.
ಶಿವಸಾಗರಕ್ಕೆ ಮತ್ತೂ ಓರ್ವ ಪಾದರಿಗಳು ಬಂದರೆಂದು ಗಂಟೆ ಢಣ ಢಣಿಸ ತೊಡಗಿತು.
ಊರಿಗೆ ಬಂದ ಈ ಪಾದರಿ ಮಾತ್ರ ನಮ್ಮವರೇ ಆಗಿದ್ದರು. ಅವರ ಬಣ್ಣ, ಮುಖ ಚಹರೆ, ಮಾತಿನ ರೀತಿ ದೇಸೀಯವಾಗಿತ್ತು. ಸ್ಥಳಿಯ್ರೇ ಸಮಿನರಿಯಲ್ಲಿ ಶಿಕ್ಷಣ ಪಡೆದು ಪಾದರಿಗಳಾಗಿ ಜನರ ದೇವರ ಸೇವೆ ಮಾಡಲು ಮುಂದಾಗಿದ್ದರು. ಪಿಂಟೋ, ಡಯಾಸರಂಥವರಿಗೆ ಇದು ಅಪಾರ ಸಂತಸದ ವಿಷಯವಾಯಿತು ಕೂಡ.
*
*
*
ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ್ ಪಿಂಟೋ ಬಹಳ ವರ್ಷ ಮುಂಬಯಿಯಲ್ಲಿದ್ದ. ಮಧ್ಯ ರೈಲ್ವೆ ವರ್ಕಶಾಪಿನಲ್ಲಿ ಫ಼ೋರಮನ್ ಹುದ್ದೆಯಲ್ಲಿ ಒಳ್ಳೆಯ ಸಂಬಳ ಇತ್ಯಾದಿ ಪಡೆಯುತ್ತ ಉತ್ತಮ ಮಟ್ಟದಲ್ಲಿಯೇ ಅವನಿದ್ದ. ವರ್ಕಶಾಪಿನಿಂದ ಕೆಲವೊಂದು ವಸ್ತುಗಳನ್ನು ಹೊರಗೆ ಸಾಗಿಸುವ ವಿಷಯದಲ್ಲಿ ಕೆಲವರೊಂದಿಗೆ ಮನಸ್ತಾಪ ಬೆಳೆಸಿಕೊಂಡ. ಅವರು ಸ್ಟೀಲು, ಕಬ್ಬಿಣ ಬಿಡಿ ಭಾಗಗಳನ್ನು ಯಾರಿಗೂ ಕಾಣದ ಹಾಗೆ ಹೊರಗೆ ತೆಗೆದುಕೊಂಡು ಹೋಗುವಾಗ ಈತ ಸೆಕ್ಯುರಿಟಿಯವರಿಗೆ ತಿಳಿಸಿ ಅವರು ಸಿಕ್ಕಿಬೀಳುವಂತೆ ಮಾಡಿದ. ಅವರು ಇವನ ಮೇಲೆ ಕಣ್ಣಿಟ್ಟು ಇವನನ್ನು ಮಾಲು ಸಹಿತ ಹಿಡಿಯುವ ಯತ್ನ ಮಾಡಿದರು. ಇದು ಕ್ರಮೇಣ ಜಗಳ ಮಾರಾಮಾರಿಗೆ ಕಾರಣವಾಗಿ ಇನ್ನು ಮುಂಬಯಿಯಲ್ಲಿ ಇದ್ದರೆ ತನ್ನ ಜೀವನಕ್ಕೇ ಅಪಾಯ ಎಂಬುದು ಖಚಿತವಾಗಿ ಅಲೆಕ್ಸ ಮುಂಬಯಿ ಬಿಡುವ ವಿಚಾರ ಮಾಡಿದ.
ಮೂರು ತಿಂಗಳ ರಜೆ ಹಾಕಿ ಹೆಂಡತಿಯ ಜತೆ ಶಿವಸಾಗರಕ್ಕೆ ಬಂದ ಅಲೆಕ್ಸ ಕಳೆಕೇರಿಯ ವಿನ್ಸೆಂಟ್ ಮನೆಯಲ್ಲಿ ಉಳಿದ. ವಿನ್ಸೆಂಟ್ ಇವನ ಹೆಂಡತಿಯ ತಮ್ಮ. ಮುಂಬಯಿ ಬಿಡಬೇಕು ಅನ್ನುವುದಂತೂ ನಿರ್ಧಾರವಾಗಿತ್ತು. ಮುಂದೆ ಎಲ್ಲಿ ತಳವೂರುವುದು ಎಂಬುದು ನಿರ್ಧಾರವಾಗಿರಲಿಲ್ಲ. ಶಿವಸಾಗರ ಅದೇ ಬೆಳವಣಿಗೆಯನ್ನು ಹೊಂದುವಂತಹ ನಗರದಂತೆ ಅವನಿಗೆ ಕಂಡಿತು. ಯಾವ ಗಲಾಟೆಯೂ ಇಲ್ಲ, ಗೊಂದಲವಿಲ್ಲ, ಸಿಟಿ ಬಸ್ಸು ಹಿಡಿ, ಕ್ಯೂ ನಿಲ್ಲು, ನೀರಿಗಾಗಿ ಪರದಾಡು, ರೇಷನ್ನಿಗೆ ಓಡಾಡು, ಸೀಮೆ ಎಣ್ಣೆ ಸಿಗುವುದಿಲ್ಲ ಎಂಬ ತಕರಾರಿಲ್ಲ. ಗೂಂಡಾಗಳ ಕಾಟವಿಲ್ಲ. ಇಲ್ಲಿಯೇ ಏಕೆ ಉಳಿಯಬಾರದು ಎಂದು ಯೋಚಿಸಿದ.
ಪೇಟೆ ಬೀದಿಯಲ್ಲಿ ಒಂದು ಮಳಿಗೆಕೊಂಡು ವಾಹನಗಳ ಬಿಡಿಭಾಗಗಳ ಅಂಗಡಿ ಇಟ್ಟರೆ ವ್ಯಾಪಾರವಾಗಲಾರದೆ ಅನಿಸಿತು.
ವಿನ್ಸಂಟ್ ಹತ್ತಿರ ಮಾತನಾಡಿದ ವಲೇರಿಯನ್ ಡಯಾಸ್, ಜಾನ್ ಡಯಾಸ್, ಚಾರ್ಲಿ ಮೊದಲಾದವರ ಜತೆ ಮಾತನಾಡಿ ನೋಡಿದ. ಮುಂಬಯಿಯಿಂದ ಈತ ಬಂದಿದ್ದಾನೆಂದೇ ಜಾನ್ ಡಯಾಸ್ ಇವನನ್ನು ರಾತ್ರಿ ಊಟಕ್ಕೆ ಕರೆದಿದ್ದ. ಶಿವಮೊಗ್ಗದಿಂದ ಸಾಕು ಹಂದಿಯ ಮಾಂಸ ತರಿಸಿದ್ದ. ಅಲೆಕ್ಸ ತಾನೇ ವಿಸ್ಕಿ ತೆಗೆದುಕೊಂಡು ಹೋಗಿದ್ದ.
“ಘೇ ಸಾಯಬಾ..ಘೇ..ಇಲ್ಲೆ ಸೆಂ ಘೇ” (ತೊಕೋಳಯ್ಯ ಸಾಹೇಬ ತೊಕೋ..ಸ್ವಲ್ಪ ತೊಕೋ) ಎಂದು ಎಲ್ಲರ ಗ್ಲಾಸಿಗೆ ಒಂದಿಷ್ಟು ವಿಸ್ಕಿ ಸುರಿದು ಅಲೆಕ್ಸ್ ತನ್ನ ವಿಚಾರ ಮುಂದಿಟ್ಟ.
“ನೀನು ಬಾರಪ್ಪ ಇಲ್ಲಿಗೆ..ಇಲ್ಲಿ ಎಲ್ಲ ಅನುಕೂಲ ಇದೆ..ಊರು ಸಣ್ಣದು..ಜನ ಸ್ವಲ್ಪ ಹಿಂದುಳಿದೋರು..ಇಗರ್ಜಿನಲ್ಲಿ ಇಂಗ್ಲೀಷ ಪೂಜೆ ಇಲ್ಲ ಅನ್ನೋದೊಂದು. ನಮ್ ಜನ ಅನಸಿವಿಲೈಸ್ಡ್ ಅನ್ನೋದು ಇನ್ನೊಂದು. ಈ ಕೆಲವು ಕಾರಣಗಳನ್ನು ಬಿಟ್ರೆ ಊರು ಒಳ್ಳೇದು.” ಎಂದ ಜಾನ್ ಡಯಾಸ. ಉಳಿದವರೂ ಇದೇ ಅಭಿಪ್ರಾಯ ಪಟ್ಟರು.
ಅಲೆಕ್ಸ ತರಾತುರಿಯಲ್ಲಿ ಸೈಕಲ್ ನಾಗಪ್ಪನ ಅಂಗಡಿ ಪಕ್ಕದಲ್ಲಿ ಒಂದು ಮಳಿಗೆ ಕೊಂಡ. ತಾನೇ ಶಿವಮೊಗ್ಗ, ಹುಬ್ಬಳ್ಳಿಗಳಿಗೆ ಹೋಗಿ ಬೇಕಾದ ಸಾಮಾನುಗಳ ಸರಬರಾಜಿಗೆ ವ್ಯವಸ್ಥೆ ಮಾಡಿದ. ಮುಂಬಯಿಗೆ ಹೋಗಿ ಕೆಲಸಕ್ಕೆ ಸ್ವಯಂ ನಿವೃತ್ತಿ ಘೋಷಣೆ ಮಾಡಿದ. ನಾಲ್ಕು ದಿನ ಅಲ್ಲಿ ಉಳಿದು ಪೆನ್ಶನ್ ಇತ್ಯಾದಿ ಬೇಗನೆ ಬರುವಂತೆ ಮಾಡಿದ. ಹೆಂಡತಿ ಮಕ್ಕಳ ಜತೆ ರೈಲು ಹತ್ತಿ ಶಿವಸಾಗರಕ್ಕೆ ಬಂದಿಳಿದ.
ಒಂದು ಶುಕ್ರವಾರ ಪೇಟೆ ಬೀದಿಯಲ್ಲಿ “ಪಿಂಟೋ ಆಟೋಸ್ಪೇರ್ಸ್” ಎಂಬ ಅಂಗಡಿ ತೆರೆದು ಪಾದರಿ ಮಸ್ಕರಿನಾಸರಿಂದ ಅಂಗಡಿ ಉದ್ಘಾಟನೆ ಇರಿಸಿಕೊಂಡ ಪಾದರಿಗಳು ಅಂಗಡಿಯನ್ನು ತಂದಿರಿಸಿದ ವಾಹನ ಬಿಡಿ ಭಾಗಗಳನ್ನು ಪವಿತ್ರ ಜಲದ ಸಿಂಪಡನೆಯಿಂದ ಮಂತ್ರಿಸಿ ದೇವರ ಪ್ರಾರ್ಥನೆ ಮಾಡಿದರು. ಪೇಟೆ ಬೀದಿಯವರು, ಕರಿಕಾಲಿನವರು ಡಾ.ರೇಗೋ, ಜಾನ ಡಯಾಸ್, ವಲೇರಿಯನ್ ಮೊದಲಾದವರು ಬಂದು ಅಲೆಕ್ಸಿಯ ಕೈ ಕುಲಕಿದರು. ಅಂಗಡಿ ಬೋನ, ಗುರ್ಕಾರ, ಸಿಮೋನ, ಪಾಸ್ಕೋಲ ಮೇಸ್ತ್ರಿ ಈ ಮೂವರನ್ನು ಮಾತ್ರ ಆತ ಕರೆದ. ಏಕೋ ಉಳಿದವರು ಅವನ ನೆನಪಿಗೆ ಬರಲಿಲ್ಲ.
ಅವನು ಮುಂಬಯಿ ಬಿಡಲು ಮತ್ತೂ ಒಂದು ಕಾರಣವೆಂದರೆ ಅವನ ಮೂರು ಜನ ಹೆಣ್ಣು ಮಕ್ಕಳು. ಗಂಡು ಮಕ್ಕಳಾಗಿದ್ದರೆ ಅವರ ವಿದ್ಯಾಭ್ಯಾಸ, ಮುಂದಿನ ಕೆಲಸ ಎಂದೆಲ್ಲ ಆತ ಮುಂಬಯಿಯಿಯಲ್ಲಿಯೇ ಇರಬೇಕಾಗುತ್ತಿತ್ತು. ಆದರೆ ತನ್ನ ಮೂವರೂ ಹೆಣ್ಣು ಮಕ್ಕಳು ಏನೆಂದರೂ ನಾಳೆ ಗಂಡನ ಮನೆಗೆ ಹೋಗುವವರು. ಅವರ ಹಣೆಯಲ್ಲಿ ಯಾವ ಊರು ಬರೆದಿದೆಯೋ ಅಂತು ಒಳ್ಳೆಯ ಕಡೆ ನೋಡಿ ಮದುವೆ ಮಾಡಿ ಕಳುಹಿಸಲು ಮುಂಬಯಿಯೇನು ಶಿವಸಾಗರವೇನು ಎಂದು ಆತ ಇಲ್ಲಿ ಬಂದ. ವಿನ್ಸೆಂಟ್ಯ್ ಅವನಿಗಾಗಿ ಒಂದು ಮನೆಯನ್ನು ತಾನಿರುವ ಕೇರಿಯಲ್ಲಿಯೇ ನೋಡಿದ. ಕೆಲವೇ ದಿನಗಳಲ್ಲಿ ಅಲೆಕ್ಸ್ ಬಲಾಢ್ಯನಾದ. ಅಂಗಡಿಯಲ್ಲಿ ಒಳ್ಳೆಯ ವ್ಯಾಪಾರವಿತ್ತು. ಊರಿನಲ್ಲಿ ಗೌರವವಿತ್ತು. ಕೆಳಕೇರಿಯಲ್ಲಿ ಕ್ರೀಸ್ತುವರ ಸಂಖ್ಯೆ ಅಧಿಕವಾಗಿ ಅವರಿಗೊಬ್ಬ ಗುರ್ಕಾರ ಬೇಕೆನಿಸಿದಾಗ ಪಾದರಿ ಮಸ್ಕರಿನಾಸ ಅಲೆಕ್ಸನನ್ನು ಗುರ್ಕಾರ ಎಂದು ನೇಮಿಸಿದರು.
ಪಾದರಿ ಸಿಕ್ವೇರಾ ಬಂದ ನಂತರವಂತೂ ಅಲೆಕ್ಸ ಅರ್ಧ ಊರನ್ನೇ ಗೆದ್ದುಕೊಂಡ.
ಮೈಸೂರು ನಗರದಲ್ಲಿದ್ದ ಸಿಕ್ವೆರಾ ಅವರಿಗೆ ಶಿವಸಾಗರಕ್ಕೆ ಹೊಂದಿಕೊಳ್ಳುವುದು ತುಸು ಕಷ್ಟವೆನಿಸಿತು. ಅವರಿಗಿದ್ದ ಒಂದು ಧೈರ್ಯವೆಂದರೆ ಇಲ್ಲಿ ತಮ್ಮ ಮಂಗಳೂರು ಭಾಷೆ ಮಾತನಾಡುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದುದು. ಮೈಸೂರಿನಲ್ಲಿ ತಮಿಳರು, ತೆಲುಗರು, ಕನ್ನಡಿಗರು ತುಂಬಿಕೊಂಡಿದ್ದರು. ಇವರು ಕೂಡ ಮನೆಯಲ್ಲಿ ಇಂಗ್ಲೀಷ ಮಾತನಾಡುತ್ತ ಯುರೋಪಿಯನ್ನರ ಒಂದು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಯತ್ನದಲ್ಲಿದ್ದರು.
ಅಲೆಕ್ಸ್ ಅವರಿಗೆ, ಶಿವಸಾಗರದ ಕ್ರೀಸ್ತುವರೆಲ್ಲರ ಪರಿಚಯ ಮಾಡಿಕೊಟ್ಟ. ಅವರ ವೃತ್ತಿ ಸ್ಥಾನ ಮಾನಗಳು, ಅವರ್ ಸ್ವಭಾವ, ಇಗರ್ಜಿಯ ಬಗ್ಗೆ ದೈವ ಭಕ್ತಿಯ ಬಗ್ಗೆ ಅವರಿಗಿರುವ ಆಸ್ಥೆ, ಆಸಕ್ತಿ ಹೀಗೆ ಸಮಸ್ತ ವಿಷಯಗಳೂ ಕೆಲವೇ ದಿನಗಳಲ್ಲಿ ಪಾದರಿ ಸಿಕ್ವೇರಾ ಅವರಿಗೆ ಲಭ್ಯವಾದವು. ಇಗರ್ಜಿಯ ಆಡಳಿತ ಅಲ್ಲಿಯ ಪದ್ಧತಿಗಳನ್ನು ಸಿಕ್ವೇರಾ ಪರಿಚಯ ಮಾಡಿಕೊಂಡರು. ಕ್ರೀಸ್ತುವರ ಮನೆಗಳಿಗೆ ಅವರು ಭೇಟಿಕೊಟ್ಟರು. ಜನರಲ್ಲಿಯ ದೈವ ಭಕ್ತಿ ದೈವ ಭೀತಿ ಕಂಡು ಅವರಿಗೆ ಸಂತಸವಾಯಿತು. ಇಂತಹ ಮುಗ್ಧತೆಯನ್ನು ಅವರು ಮೈಸೂರಿನಲ್ಲಿ ಕೂಡ ಕಂಡಿರಲಿಲ್ಲ. ಜನ ಪಾದರಿಗಳೆಂದರೆ ತುಂಬಾ ಗೌರವ ನೀಡುತ್ತಾರೆ ಎಂಬ ವಿಷಯ ಕೂಡ ಅವರ ಗಮನಕ್ಕೆ ಬಂದಿತು. ಆದರೆ ವೈಜಿಣ್ ಕತ್ರೀನ್ ತನ್ನ ಮನೆಯ ಜಗಲಿಯ ಮೇಲೆ ಕುಳಿತವಳು ಬಾಗಿಲಿಗೆ ಬಂದ ಸಿಕ್ವೇರಾ ಅವರನ್ನು ನೋಡಿ ಎದ್ದು ನಿಲ್ಲಲಿಲ್ಲ. ಕೈ ಮುಗಿಯಲಿಲ್ಲ. ಗುರ್ಕಾರ ಸಿಮೋನ ಹೇಳಿದಾಗ ಆಕೆ ಧಡ ಬಡಸಿ ಎದ್ದಳು. “ಪದ್ರಾಬ ಬೆಸಾಂವಂ ದಿಯಾ” ಎಂದು ಕೈಮುಗಿದಳು. ನಂತರ ತಾನು ಏನೋ ಒಂದು ತಪ್ಪು ಮಾಡಿದೆ ಎಂಬಂತೆ-
“..ಪದ್ರಾಬ ನೀವು ಲೋಬ್ ಹಾಕಿಕೊಂಡಿರಲಿಲ್ಲ ನೋಡಿ..ನನಗೆ ಗೊತ್ತಾಗಲಿಲ್ಲ..” ಎಂದು ತನ್ನ ವರ್ತನೆಗೆ ವಿವರಣೆ ನೀಡಿದಳು.
ಗುರ್ಕಾರ ಸಿಮೋನ ಕೂಡ ತನ್ನನ್ನು ಏನೋ ಒಂದು ರೀತಿಯಲ್ಲಿ ನೋಡುತ್ತಿದ್ದವನು.
“ಪದ್ರಾಬಾ ಒಂದು ವಿಷಯ” ಎಂದ.
“ಏನು?” ಎಂದು ಸಿಕ್ವೇರಾ ಅವನ ಮುಖ ನೋಡಿದರು.
“ನಮ್ಮ ಜನ ಉದ್ದ ನಿಲುವಂಗಿ, ಗಡ್ಡ, ಮೀಸೆ, ಕುತ್ತಿಗೆಯಲ್ಲಿ ಶಿಲುಬೆ, ಸೊಂಟಕ್ಕೆ ಗರ್ಡಲ್ ಇಲ್ಲವೆಂದರೆ ಪಾದರಿಗಳನ್ನು ಗುರುತಿಸುವುದಿಲ್ಲ..” ಎಂದು ಅಂಜುತ್ತ ಅಳುಕುತ್ತ ಹೇಳಿದ್ದು ಪಾದರಿ ಸಿಕ್ವೇರಾ ಅವರ ಮನಸ್ಸಿಗೆ ತಾಗಿತು.
ನಗರ ಪ್ರದೇಶಗಳಲ್ಲಿ ಆಗಲೇ ಪಾದರಿಗಳು ನಿಲುವಂಗಿ ತೊರೆದಿದ್ದರು. ಪ್ಯಾಂಟು, ಶರಟುಗಳು ಚಾಲ್ತಿಗೆ ಬಂದಿದ್ದವು. ಮುಖವನ್ನು ನುಣ್ಣಗೆ ಬೋಳಿಸಿಕೊಂಡು ಪೌಡರ್ ಸ್ನೋ, ಹಚ್ಚಿಕೊಳ್ಳುತ್ತಿದ್ದರು. ಪೂಜೆಯ ಸಮಯದಲ್ಲಿ ಧಾರ್ಮಿಕ ಕೆಲಸ ಮಾಡುವಾಗ ಮಾತ್ರ ನಿಲುವಂಗಿ ಇತ್ಯಾದಿ ತೊಡುತ್ತಿದ್ದರು. ಮೊದಲು ಪಾದರಿಗಳ ಈ ವರ್ತನೆಯನ್ನು ಅಲ್ಲಿಯ ಜನ ಪ್ರತಿಭಟಿಸಿದರು. ಆದರೆ ಎಲ್ಲ ಪಾದರಿಗಳೂ ಹೀಗೆಯೇ ಬದಲಾದಾಗ ಜನ ಅನಿವಾರ್ಯವಾಗಿ ಇದಕ್ಕೆ ಹೊಂಡಿಕೊಂಡರು.
ಇಲ್ಲೂ ಕೂಡ ಕೆಲ ದಿನ ಬೇಕಾಗಬಹುದು ಅಂದುಕೊಂಡರು ಸಿಕ್ವೇರಾ. ಸಿಮೋನನ ಮಾತಿಗೆ ಅವರು-
“ಹೌದೇನು?” ಎಂದು ಕೇಳಿ ನಕ್ಕರು.
ನಿಧಾನವಾಗಿ ಇಗರ್ಜಿಯಲ್ಲಿ ಕೆಲ ಬದಲಾವಣೆಗಳು ಆದವು. ಮುಷ್ಠಿ ಅಕ್ಕಿಯನ್ನು ಇನ್ನು ಮುಂದೆ ತರಬೇಡಿ ಎಂದರು. ತರಕಾರಿ ಇತ್ಯಾದಿ ತಂದು ಹರಾಜು ಹಾಕುವ ಪದ್ಧತಿ ನಿಂತು ಹೋಯಿತು. ಕಾಣಿಕೆ ಡಬ್ಬಿಯನ್ನು ಜನರ ಬಳಿಗೇನೆ ಕೊಂಡೊಯ್ಯುವುದು ನಿಂತು ಬಿಟ್ಟಿತು. ಇಗರ್ಜಿಯ ನಡುವೆ ಒಂದು ಮೇಜು ಇರಿಸಿ ಅದರ ಮೇಲೆ ಶಿಲುಬೆಗೇರಿದ ಏಸುವಿನ ಪ್ರತಿಮೆ ನಿಲ್ಲಿಸಲಾಯಿತು. ಪೂಜೆಯ ನಂತರ ಜನಬಂದು ಈ ಪ್ರತಿಮೆಯ ಪಾದಕ್ಕೆ ಮುತ್ತಿಟ್ಟು ಮುಂದೆ ಇಟ್ಟಿರುತ್ತಿದ್ದ ಗಾಜಿನ ತಟ್ಟೆಯಲ್ಲಿ ಕಾಣಿಕೆ ಹಾಕುವ ಪದ್ಧತಿ ಜಾರಿಗೆ ಬಂದಿತು.
ಶಿವಸಾಗರದ ಕ್ರೀಸ್ತುವರ ಪಾಲಿಗೆ ಸಂತಸ ತಂದ ವಿಷಯವೆಂದರೆ ಈ ಪಾದರಿ ಹಣದ ಬಗ್ಗೆ ಪದೇ ಪದೇ ಹೇಳುತ್ತಿರಲಿಲ್ಲ. ಇವರು ಶ್ರೀಮಂತ ಕುಟುಂಬದಿಂದ ಬಂದವರು ಎಂಬ ಮಾತು ಹಿಂದೆಯೇ ಎಲ್ಲರ ಕಿವಿಗೂ ಬಿದ್ದಿತು. ಇವರ ತಂದೆ ಚಿಕ್ಕಮಗಳೂರಿನ ಹತ್ತಿರವಿರುವ ಒಂದು ಕಾಫ಼ಿ ತೋಟದ ಮಾಲೀಕರೆಂದು, ಪಾದರಿ ಸಿಕ್ವೇರಾ ಅವರ ಕಿರಿಯ ಮಗನೆಂದೂ ಇವರ ಅಕ್ಕ ಭಾವಂದಿರು ಅಮೇರಿಕದಲ್ಲಿ ಇರುವುದರಿಂದಲೂ ಇವರಿಗೆ ಹಣದ ಕೊರತೆ ಇಲ್ಲವೆಂದೂ ಜನ ಮಾತನಾಡಿಕೊಂಡರು. ಪಾದರಿ ಸಿಕ್ವೇರಾ ಅವರ ಕರಿಯ ಕಾರು, ಕ್ಯಾಮರಾ, ರೇಡಿಯೋ ಇವರ ಕುತ್ತಿಗೆಯಲ್ಲಿಯ ಕಿರು ಬೆರಳ ಗಾತ್ರದ ಚಿನ್ನದ ಚೈನು, ಬೆರಳಲ್ಲಿಯ ಉಂಗುರಗಳು ಈ ಮಾತನ್ನು ಧೃಡಪಡಿಸಿದವು.
ಪಾದರಿ ಸಿಕ್ವೇರಾ ಇಗರ್ಜಿಗೆ ಬನ್ನಿ ಎಂದು ಹೇಳುತ್ತಿರಲಿಲ್ಲ. ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ, ಸತ್ತವರ ಆತ್ಮಗಳಿಗಾಗಿ ಪೂಜೆ ನೀಡುವುದು, ಇಗರ್ಜಿಗೆ ಕೊಡುವ ಅನ್ವಾಲ ಕಾಯಿದೆ ಈ ಯಾವ ಚಿಂತೆಯೂ ಅವರಿಗಿರಲಿಲ್ಲ. ಊರಿಗೆ ಬರುವಾಗ ಜೊತೆಯಲಿ ಓರ್ವ ಹುಡುಗನನ್ನು ಅವರು ಕರೆತಂದಿದ್ದರು. ಅವನು ಅವರ ಅಡಿಗೆಯ ಕೆಲಸವನ್ನು ನೋಡಿಕೊಳ್ಳುತ್ತಿದ್ದ. ಅವರು ಊರಿಗೆ ಬಂದ ಎಂಟು ದಿನಗಳ ನಂತರ ಒಂದು ಲಾರಿ ಬಂದು ಇಗರ್ಜಿಯ ಮುಂದೆ ನಿಂತು ಕುರ್ಚಿ, ಮೇಜು, ಮಂಚ, ಟೀಪಾಯಿ ಎಂದೆಲ್ಲ ಸಾಮಾನು ಇಳಿಸಿತು. ಜತೆಗೆ ಒಂದು ಮೋಟಾರು ಬೈಕ್ ಕೂಡ ಕೆಳಗಿಳಿಯಿತು. ಫೋಟೋ ಮುದ್ರಿಸುವ ಸಾಧನೆ ಸಲಕರಣೆಗಳೂ ಬಂದವು.
ಕೈಯಲ್ಲಿ ಕ್ಯಾಮರಾ ಹಿಡಿದು ತಿರುಗುವ ಪಾದರಿಯನ್ನು ಜನ ಕಂಡರು. ಅವರು ಇಗರ್ಜಿಯಲ್ಲಿ ಫೋಟೋ ತೆಗೆದರು. ಸಂತ ಜೋಸೆಫ಼ರ ಮಂಟಪದ ಫೋಟೋ ತೆಗೆದರು. ಇನಾಸನ ಮನೆ ಮುಂದಿನ ಶಿಲುಬೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದರು. ಎಳೆ ಮಕ್ಕಳು, ಮುದುಕಿಯರು, ಮುದುಕರು ಇಗರ್ಜಿಗೆ ಬಂದ ಯುವತಿಯರು, ಹುಡುಗಿಯರು ಎಲ್ಲರೂ ಅವರ ಕ್ಯಾಮರಾ ಎದುರು ನಿಂತು ನಕ್ಕರು, ನಾಚಿದರು, ಕೇಕೆ ಹಾಕಿದರು.
“ಬೋರೋ ಪದ್ರಾಬ” (ಪಾದರಿಗಳು ಒಳ್ಳೆಯವರು) ಎಂದರು ಕೆಲವರು.
“ದೇವೊ ಸ್ಪೊಣ ನಾ” (ದೈವ ಭಕ್ತಿ ಇಲ್ಲ) ಎಂಬ ಅಭಿಪ್ರಾಯವೂ ಬಂದಿತು.
“ಅವರೆಲ್ಲಿ ಇವರೆಲ್ಲಿ” ಎಂದು ಹಿಂದಿನ ಪಾದರಿಗಳ ಜತೆ ಹೋಲಿಸಿ ನೋಡಿದರು.
ಸಿಮೋನ, ಪಾಸ್ಕೋಲ, ಕೈತಾನ, ಬಳ್ಕೂರಕಾರ, ಪೆದ್ರು, ಸಂತು, ಇಂತ್ರು, ಹಸಿಮಡ್ಲು ಪಾತ್ರೋಲ ಮೊದಲಾದವರಿಗೆಲ್ಲ ವಯಸ್ಸಾಗಿತ್ತು. ಊಟದ ಮನೆ ಸಾಂತಾಮೋರಿ ತನ್ನ ವೃತ್ತಿಯನ್ನು ತ್ಯಜಿಸಿದ್ದಳು. ಎಮ್ಮೆ ಮರಿಯ ಕೂಡ ಹಾಲಿನ ಮಾರಾಟ ನಿಲ್ಲಿಸಿದ್ದಳು. ಇವರಲ್ಲಿ ಯಾರಿಗೂ ಪಾದರಿ ಸಿಕ್ವೇರಾ ಮನಸ್ಸಿಗೆ ಬಂದಿರಲಿಲ್ಲ. ಅವರು ಪೂಜೆ ಮಾಡುವ ವಿಧಾನ, ಜಪಹೇಳಿ ಕೊಡುವುದೂ ಹಿಡಿಸುತ್ತಿರಲಿಲ್ಲ. ಭಕ್ತಿಯ ಅಂಶವೂ ಇಲ್ಲದ ಈ ಪೂಜೆ. ಅದು ಹೇಗೆ ಇರಲಿ ಈ ಜನ ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಂಡರು. ಕ್ರಿಸ್ತ ಪ್ರಭುವಿನ ಬದುಕಿನ ಪರಿಚಯ ಇವರಿಗಂತೂ ಇತ್ತಲ್ಲ. ಆತ ಲೋಕದ ಪಾಪಿಗಳನ್ನು ಉದ್ಧರಿಸಲು ಬಂದವ ಜನರಲ್ಲಿ ಒಂದು ಧಾರ್ಮಿಕ ಪ್ರಜ್ಞೆಯನ್ನಂತೂ ಬಿತ್ತಿದ್ದ. ಕೆಲ ವರುಷಗಳ ಹಿಂದೆ ಬತ್ತಿ ಹೋದ ಅದನ್ನು ಪಾದರಿ ಗೋನಸ್ವಾಲಿಸ್ ರು, ಪಾದರಿ ಮಸ್ಕರಿನಾಸರು ಮತ್ತೆ ಚಿಗುರುವಂತೆ, ಬೆಳೆಯುವಂತೆ ಮಾಡಿದರು. ಅದರ ಯತ್ನದಿಂದಾಗಿ ಶಿವಸಾಗರದ ಜನ ಈಗಲೂ ಅದೇ ಮನೋಪ್ರವೃತ್ತಿಯವರಾಗಿದ್ದರು. ಹಿರಿಯರು, ಹಳಬರಂತೂ ಈ ಪ್ರವೃತ್ತಿಯಿಂದ ಹೊರಬರಲಿಲ್ಲ.
ಇಷ್ಟಾದರೂ ಫ಼ಾತಿಮಾ ನಗರದ ಜನ ಪಾದರಿ ಸಿಕ್ವೇರಾ ಅವರನ್ನು ತುಂಬಾ ಮೆಚ್ಚಿಕೊಂಡರು. ಪೂಜೆ ಮುಗಿದಾಕ್ಷಣ ಇವರೆಲ್ಲ ಹೋಗಿ ಅವರನ್ನು ಕಂಡು ಮಾತನಾಡಿ ಬರುತ್ತಿದ್ದರು. ವಾರಕ್ಕೊಮ್ಮೆ ಇಲ್ಲ ಎರಡು ಬಾರಿ ಪಾದರಿ ಸಿಕ್ವೇರಾ ಅವರ ಮೋಟಾರ ಸೈಕಲ್ಲು ಫ಼ಾತಿಮಾ ನಗರದತ್ತ ಗುಡುಗುಡು ಸದ್ದು ಮಾಡುತ್ತ ಬರುತ್ತಿತ್ತು. ಅಲ್ಲಿ ಕೆಲ ಮನೆಗಳ ಅಂಗಳಕ್ಕೆ ಹೋಗಿ. ಕೆಲ ಮನೆಗಳ ಒಳಗೆ ಪ್ರವೇಶಿಸಿ-
“ಕಿತೆಂ…ಕಸಿ ಭಲಾಯ್ಕಿ?” (ಹೇಗೆ? ಆರೋಗ್ಯವಾಗಿದ್ದೀರಾ?) ಎಂದು ಕೇಳಿ ಬರುತ್ತಿದ್ದರು ಅವರು.
ರೈಲ್ವೆ ಇಲಾಖೆಗೆ ಕೆಲ ಹೊಸ ನೌಕರರು ಅಧಿಕಾರಿಗಳು ಬಂದಿದ್ದರು. ಅವರಲ್ಲಿ ಕೆಲವರು ಕ್ರೀಸ್ತುವರೂ ಇದ್ದರು. ಎಲ್ಲರಿಗೂ ಸರಕಾರಿ ಮನೆಗಳು ಸಿಗದ್ದರಿಂದ ಕೆಲವರು ಫ಼ಾತಿಮಾ ನಗರದಲ್ಲಿ ಮನೆ ಮಾಡಿದರು. ಇವರಿಗೂ ಪಾದರಿ ಸಿಕ್ವೇರಾ ಅವರಿಗೂ ಒಳ್ಳೆಯ ಸ್ನೇಹವಿತ್ತು. ಅವರು ಇವರ ಮನೆಗಳಿಗೂ ಬಂದು ಮಾತನಾಡಿಕೊಂಡು ಹೋಗುತ್ತಿದ್ದರು. ತಮ್ಮ ಮಾತಿನಲ್ಲಿ ವರ್ತನೆಯಲ್ಲಿ ಫ಼ಾತಿಮಾ ನಗರದ ಕ್ರೀಸ್ತುವರ ಬಗ್ಗೆ ಮೃದುವಾದ ಭಾವನೆಯನ್ನು ಇರಿಸಿಕೊಂಡಿದ್ದರು ಪಾದರಿ. ಇದಕ್ಕೆ ಕಾರಣ ಇವರೆಲ್ಲ ವಿದ್ಯಾವಂತರಾಗಿದ್ದರು. ಒಳ್ಳೆಯ ಉದ್ಯೋಗಗಳಲ್ಲಿದ್ದರು. ಉಡಿಗೆ ತೊಡಿಗೆಯಲ್ಲಿ ಮನೆಯ ರೀತಿ ರಿವಾಜುಗಳಲ್ಲಿ ನಾಜೂಕುತನ ಇರಿಸಿಕೊಂಡಿದ್ದರು. ರೈಲು ಇಲಾಖೆಯ ಕ್ರೈಸ್ತ ನೌಕರರು ತಮಿಳರಾಗಿದ್ದರಿಂದ ಇವರಿಗೆ ಕರಿಕಾಲಿನವರು ಎಂಬ ಅಡ್ಡಹೆಸರೂ ಬಿದ್ದಿತ್ತು.
ಹೀಗೆಯೇ ಪಾದರಿ ಸಿಕ್ವೇರಾ ಅವರ ಆಗಮನ ಸಂತ ತೆರೇಜಾ ಕಾನ್ವೆಂಟಿನ ಕನ್ಯಾ ಸ್ತ್ರೀಯರಿಗೂ ಸಂತಸವನ್ನು ತಂದಿತು. ಶಿವಸಾಗರದ ಕ್ರೀಸ್ತುವರಿಗೆ ಶಿಕ್ಷಣದ ಜೊತೆಗೆ ಧಾರ್ಮಿಕ ತರಬೇತಿಯನ್ನೂ ನೀಡುವುದು ಅವರ ಉದ್ದೇಶವಾಗಿತ್ತು. ಈ ಕೆಲಸವನ್ನು ಪಾದರಿ ಮಾಡುತ್ತಾರಾದರೂ ಶಿಕ್ಷಣದ ಜತೆ ಜತೆಗೆ ನೀಡುವ ಈ ತರಬೇತಿ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಕೊನೆಯವರೆಗೂ ಇರುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು.
ಬಹಳ ಹುರುಪಿನಿಂದ ಬಂದ ಅವರಿಗೆ ಇಲ್ಲಿ ನಿರಾಶೆಯಾಗತೊಡಗಿತು. ಸರಕಾರಿ ಶಾಲೆಗಳಿಗೆ ಹೋಗುತ್ತಿದ್ದ ಕ್ರೀಸ್ತುವರ ಮಕ್ಕಳನ್ನು ಕಾನ್ವೆಂಟಿಗೆ ತಂದು ಸೇರಿಸಿಕೊಳ್ಳುವುದು ಮೊದಲು ಕಷ್ಟವಾಯಿತು. ಮನೆಗೆ ಶಾಲೆ ಹತ್ತಿರವಾಗಿದ್ದರೂ ಇದೊಂದು ವರ್ಷ ಕಳೆಯಲಿ ಎಂದರು. ನಂತರ ಮಕ್ಕಳು ಶಾಲೆಗೆ ಬಂದವು. ಹೆಸರು ಬರೆಸಿ ಹೋದವರು ನಿತ್ಯ ಹಾಜರಿ ಕೊಡಲು ಮರೆತರು. ಶುಚಿಯಾಗಿ ಬರುತ್ತಿರಲಿಲ್ಲ. ಪುಸ್ತಕ, ಪೆನ್ಸಿಲ್ಲು ತರುತ್ತಿರಲಿಲ್ಲ. ಬೆಳಿಗ್ಗೆ ಬಂದವರು ಸಂಜೆಗೆ ತಪ್ಪಿಸಿಕೊಂಡರು. ಕೆಲವರಿಗೆ ಆಸಕ್ತಿ ಇರಲಿಲ್ಲ. ಶಾಲೆಗೆ ಸೇರಿದ ಮೂರು ಆರು ತಿಂಗಳಲ್ಲಿ ಮಕ್ಕಳು ಬರುವುದನ್ನೇ ನಿಲ್ಲಿಸಿದರು.
ಸಿಸ್ಟರ್ ಲೀನಾ ದುಮಿಂಗನ ಮನೆಗೆ ಹೋಗಿ ಅವನ ಹೆಂಡತಿಗೆ-
“ನಿಮ್ಮ ಹುಡುಗ ಸರಿಯಾಗಿ ಶಾಲೆಗೆ ಬರುವುದಿಲ್ಲ” ಎಂದಾಗ ಆಕೆ-
“ಹೋಗು ಅಂತೀವಿ..ಅವನು ಹೋಗಿ ಗೇರು ಮರದ ಮೇಲೆ ಕೂತರೆ ನಾನು ಏನು ಮಾಡಲಿ?” ಎಂದು ಕೇಳಿದಳು.
ಜೋಸೆಫ಼ನ ಹೆಂಡತಿ ಕ್ರಿಸ್ತೀನಾ-
“ನೀವು ನಮ್ಮ ಹುಡುಗನಿಂದ ಕಸ ಗುಡಿಸೋದು ನೆಲ ತೊಳಿಯೋದು ಮಾಡಸ್ತೀರಂತೆ..ಆ ಕೆಲಸಾನ ಅವನು ಮನೇಲೇ ಮಾಡತಾನೆ ಬಿಡಿ..” ಎಂದಳು.
ಕಾನ್ವೆಂಟಿನ ಕನ್ಯಾಸ್ತ್ರಿಗಳು ಪ್ರತಿದಿನ ಒಂದೊಂದು ಮನೆಗೆ ಹೋಗಿ ಜಪಸರ ಪ್ರಾರ್ಥನೆ ಮಾಡುವ ಕಾರ್ಯಕ್ರಮವನ್ನು ಹಾಕಿಕೊಂಡರು. ಮನೆಯವರೂ ಸೇರಿಕೊಂಡಿದ್ದರೆ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿತ್ತು. ಆದರೆ ಮನೆಗಳಲ್ಲಿ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಇನಾಸನ ಮನೆಯಲ್ಲಿ ಅವನ ಮಕ್ಕಳು ಜಗಳವಾಡುತ್ತಿದ್ದರು. ಸಿಮೋನನ ಮನೆಯಲ್ಲಿ ಅತ್ತೆ ಸೊಸೆಯ ನಡುವೆ ಮಾತು. ಕೈತಾನ ಕುಡಿದು ಬಂದಿರುತ್ತಿದ್ದ.
“ಅಯ್ಯೋ ನಮ್ಮ ಕೆಲಸಾನೇ ಮುಗಿಲಿಲ್ವೇ” ಎಂದು ಹೆಂಗಸರು ಗೊಣಗಿದರು.
ಹೀಗಾಗಿ ಈ ಜಪಸರ ಪ್ರಾರ್ಥನೆ ಫ಼ಾತಿಮಾ ನಗರದ ಮನೆಗಳಿಗೆ ಮಾತ್ರ ಸೀಮಿತವಾಯಿತು.
ಪಾದರಿ ಮಸ್ಕರಿನಾಸ ಕೂಡ ಸಿಸ್ಟರುಗಳ ವಿಷಯದಲ್ಲಿ ಅಷ್ಟೊಂದು ಮೃದು ಹೃದಯಿಯಾಗಿರಲಿಲ್ಲ. ಊರಿಗೆ ಶಾಲೆ ಬೇಕು ಬನ್ನಿ ಎಂದು ಅವರೇ ತಮ್ಮನ್ನು ಕರೆದಿದ್ದರೂ ತಾವು ಬಂದ ನಂತರ ಅವರು ಬದಲಾಗಿದ್ದರು.
“ನಿಮ್ಮದೆಲ್ಲ ಸರಿ..ನೀವು ಎಲ್ಲ ಜನ ಬಂದ ಮೇಲೆ ಇಗರ್ಜಿಗೆ ಬರೋದು..ದಿವ್ಯ ಪ್ರಸಾದ ಸ್ವೀಕಾರಕ್ಕೆ ಪ್ರತ್ಯೇಕವಾಗಿ ಮೋಣಕಾಲೂರೋದು..ಕುಳಿತು ಕೊಳ್ಳಲಿಕ್ಕೆ ಬೇರೇನೆ ಜಾಗ ಬೇಕು ಅನ್ನೋದು ನನಗೆ ಹಿಡಿಸೋದಿಲ್ಲ..” ಅನ್ನುತ್ತಿದ್ದರು ಅವರು.
ಶಿವಸಾಗರಕ್ಕೆ ಹೊಸದಾಗಿ ಬಂದ ತಾವು ಹೀಗೊಂದು ಪದ್ಧತಿ ಆರಂಭಿಸಿದ್ದು ನಿಜವೆ. ಇನ್ನೇನು ಪಾದರಿ ಪೂಜೆ ಆರಂಭಿಸುತ್ತಾರೆ ಅನ್ನುವಾಗ ತಾವು ಕಾನ್ವೆಂಟಿನಿಂದ ಸಾಲಾಗಿ ಇಗರ್ಜಿಗೆ ಬರುತ್ತಿದ್ದೆವು. ಎಲ್ಲರೂ ಒಟ್ಟಿಗೇನೆ ಹೋಗಿ ದಿವ್ಯ ಪ್ರಸಾದ ಸ್ವೀಕರಿಸುವಲ್ಲಿ ಮೊಣಕಾಲೂರುತ್ತಿದ್ದೇವು. ಊರಿಗೆ ಬಂದ ತಕ್ಷಣ ತಮಗಾಗಿ ಬೇರೆಯೇ ಆಸನಗಳನ್ನು ವ್ಯವಸ್ಥೆ ಮಾಡಿಕೊಡಿ ಎಂದು ಪಾದರಿಗಳಿಗೆ ಕೇಳಿದ್ದೆವು. ಬೇರೆಲ್ಲ ಕಡೆಯೂ ಈ ಗೌರವ ತಮಗಿರುವಾಗ ಇಲ್ಲಿ ಏಕೆ ಬೇಡ? ಆದರೆ ಇದು ಮಸ್ಕರಿನಾಸರ ಕೋಪಕ್ಕೆ ಕಾರಣವಾಯಿತು. ಪೂಜೆ ಮುಗಿಸಿ ಅವರು ಪೂಜಾ ಪಾತ್ರೆ ಹಿಡಿದು ಒಳಕ್ಕೆ ತಿರುಗುವ ಮುನ್ನವೇ ತಾವು ಇಗರ್ಜಿಯಿಂದ ಹೊರಡುವುದನ್ನು ಸಹಿಸಲು ಅವರಿಂದ ಆಗುತ್ತಿರಲಿಲ್ಲ. ಆಗ ಅವರು ತಮ್ಮನ್ನು ದುರು ದುರು ನೋಡುತ್ತಿದ್ದರು.
ಪಾದರಿ ಸಿಕ್ವೇರಾ ಅವರಲ್ಲಿ ಈ ವರ್ತನೆಯಿಲ್ಲ.
“ಸಿಸ್ಟರ್ ಲೀನಾ…ಈವತ್ತು ನೀವು ಬೇರೆಯೇ ಕಾಣುತ್ತೀರಿ..”
“ಸಿಸ್ಟರ್ ಜ್ಯೋತಿ ನಿಮ್ಮದೊಂದು ಫೋಟೋ ತೆಗೆಯೋಣವೆ?”
“ಸಿಸ್ಟರ್ ಕ್ಲಾರಿಸ್..ನಿಮ್ಮ ಧ್ವನಿ ಚೆನ್ನಾಗಿದೆ.” ಎಂದೆಲ್ಲ ಹೇಳುತ್ತಾರೆ. ಕಾನ್ವೆಂಟಿಗೆ ಬರುತ್ತಾರೆ. ಇಗರ್ಜಿಗೆ ಹೂ ಕುಂಡ ಮಾಡಿಕೊಡಿ. ಅಲ್ತಾರ ಬಟ್ಟೆ ಹೆಣೆದು ಕೊಡಿ ಎಂದು ಕೇಳುತ್ತಾರೆ.
ಹಾಗೆಯೇ ಊರಿನ ಜನಕ್ಕೆ ಕಾನ್ವೆಂಟ್ ಬೇಕಾಗಿದೆ. ಊರಿನ ಶ್ರೀಮಂತರು, ವೈದ್ಯರು, ವಕೀಲರು, ಬ್ಯಾಂಕ್ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು, ತಮ್ಮ ಮಕ್ಕಳನ್ನು ತಂದು ತಂದು ಕಾನ್ವೆಂಟಿಗೆ ಸೇರಿಸುತ್ತಾರೆ. ಯೂನಿಫ಼ಾರಂ ಹೊಲಿಸಿ ಮಕ್ಕಳಿಗೆ ತೊಡಿಸಿ ಕಳುಹಿಸುತ್ತಾರೆ. ಫ಼ೀಸು ಡೋನೇಷನ್ ಎಷ್ಟು ಕೇಳಿದರೂ ಕೊಡುತ್ತಾರೆ. ಮದರ್ಸ್ ಡೇ, ಮಕ್ಕಳ ದಿನಾಚರಣೆ, ಫ಼್ಲ್ಯಾಗಡೇ ಎಂದೆಲ್ಲ ಹಣ ತನ್ನಿ ಎಂದಾಗ ಮಕ್ಕಳು ಉತ್ಸಾಹದಿಂದ ಹಣ ತರುತ್ತಾರೆ.
“ಏನಾದರೂ ಆಗಬೇಕಿದ್ದರೆ ಹೇಳಿ ಸಿಸ್ಟರ್” ಎಂದು ಕಂಟ್ರ್ಯಾಕ್ಟರ್ ಶೆಣೈ, ಹೋಟೆಲ್ ಮಾಲೀಕ ಅಪ್ಪಣ್ಣ, ಅಂಗಡಿ ಸಾಹುಕಾರ ವಿಶ್ವನಾಥ ಶೆಟ್ಟಿ, ಡಾಕ್ಟರ್ ಕೊದಂಡರಾವ್, ಎಸ್.ಪಿ ಷಡಕ್ಷರಿ ಬಂದು ಕೇಳುತ್ತಾರೆ. ತಟ್ಟನೆ ಏನಾದರೂ ಕೆಲಸವಾಗಬೇಕು ಅಂದರೆ ಮಾಡಿಕೊಡುತ್ತಾರೆ. ಈ ಸೌಜನ್ಯ ಸೇವಾ ಮನೋಭಾವ ಕ್ರೀಸ್ತುವರಲ್ಲಿ ಇಲ್ಲ.
“ಮದರ್ಸ್ ಡೇಗೆ ಎಂಟೆಂಟಾಣೆ ತನ್ನಿ ” ಎಂದರೆ ಕ್ರೀಸ್ತುವರ ಮಕ್ಕಳು ತರುವುದಿಲ್ಲ.
“ತೆಗೆದುಕೊಂಡು ಬಾ ಹೋಗು” ಎಂದು ಸಿಸ್ಟರ್ ಜ್ಯೋತಿ ಮಿಂಗೇಲಿಯ ಮಗನನ್ನು ಕಳುಹಿಸಿದ್ದಕ್ಕೆ ಅವನ ಹೆಂಡತಿ ಕಲ್ಲಿ ಕಾನ್ವೆಂಟಿಗೆ ಬಂದು-
“ನಿಮಗೇನು ಕಡಿಮೆಯಾಗಿರೋದು..ನಿಮಗೇನು ಮನೇ ಉಂಟು..ಮಕ್ಕಳಿದ್ದಾರೆಯೇ..” ಎಂದು ಕೂಗಾಡಿ ಹೋಗಿದ್ದಾಳೆ.
ಊರ ಜನರಿಗೆ, ಅಧಿಕಾರಿ ಶ್ರೀಮಂತರ ಮಕ್ಕಳಿಗೆ ಕಾನ್ವೆಂಟ್ ಬೇಕಾಗಿದೆ. ಹೀಗೆಂದೇ ಊರಿನಲ್ಲಿ ಕಾನ್ವೆಂಟ್ ನಡೆಯುತ್ತಿದೆ. ಈ ನಡುವೆ ಪಾದರಿ ಸಿಕ್ವೇರಾ ತಮ್ಮನ್ನು ಚೆನ್ನಾಗಿ ನಡೆಸಿಕೊಂಡು ಬರುತ್ತಿರುವುದು ಕೂಡ ನೆಮ್ಮದಿಯ ವಿಷಯ, ಎಂಬ ಅಭಿಪ್ರಾಯವನ್ನು ಸಂತ ತೆರೇಜಾ ಕಾನ್ವೆಂಟಿನ ಸಿಸ್ಟರುಗಳು ತಾಳಿದರು.
ಈ ಎಲ್ಲ ಹಿನ್ನೆಲೆಯಲ್ಲಿ ಶಿವಸಾಗರದ ಕ್ರಿಸ್ತುವರ ಬದುಕು ಸಾಗುತ್ತಿರಲು ಫ಼ಾತಿಮಾ ನಗರ ಹಾಗೂ ಜೋಸೆಫ಼್ ನಗರದ ಒಂದೊಂದು ಮನೆಯ ಬದುಕು ಒಂದೊಂದು ದಾರಿ ಹಿಡಿದಿತ್ತು.
*
*
*
ಸಿಮೋನ ಈಗ ಗುರ್ಕಾರ ಅಷ್ಟೆ. ಅವನು ಈಗ ಮೇಸ್ತ್ರಿಯಲ್ಲ.. ಕೆಲಸ ಮಾಡುವುದನ್ನು ಆತ ನಿಲ್ಲಿಸಿ ಬಹಳ ವರ್ಷಗಳಾಗಿವೆ. ಕೆಲಸ ಮಾಡಿಸುವುದನ್ನು ಕೂಡ. ಅವನ ಪ್ರಕಾರ ಕಲ್ಲು ಕೆಲಸ ಮಾಡುವುದರಲ್ಲಿ ಕ್ರೀಸ್ತುವರಿಗೆ ಇದ್ದ ಹೆಸರು. ನೈಪುಣ್ಯತೆ ಈಗ ಉಳಿದಿಲ್ಲ.
ಶಿವಸಾಗರದ ಯಾವುದೇ ಹಳೆ ಇಮಾರತ ತೆಗೆದುಕೊಳ್ಳಿ ಅದನ್ನು ಕಟ್ಟಿದವ ಇಲ್ಲ ಕಟ್ಟಿಸಿದವ ತಾನು ಅನ್ನುತ್ತಾನೆ ಸಿಮೋನ.
“ಅವತ್ತು ರಾಯರೆ, ಏನೂ ಇರಲಿಲ್ಲ..ಬಸ್ಸು, ರೈಲು ಕೇಳಬೇಡಿ..ಆದರೂ ಜನರನ್ನ ಕರೆತರತಿದ್ದೆ ಕೆಲಸ ಮಾಡತಿದ್ದೆ…ಎಂಥಾ ಕೆಲಸ! ಸೊರಬದ ಸೇತುವೆ ಕಟ್ಟಿದ್ದಕ್ಕೆ ಜಿಲ್ಲಾಧಿಕಾರಿಗಳೇ ನನಗೆ ಹಾರ ಹಾಕಿದ್ರು, ದೇವಪ್ಪನ ಛತ್ರ ಕಟ್ಟಿದ್ದಕ್ಕೆ ಬೆಳ್ಳಿ ಬಳೆ, ಮತ್ತೊಂದು ಕಟ್ಟಿದ್ದಕ್ಕೆ ಬಂಗಾರದ ಉಂಗುರ. ದಿನ ಬೆಳಗಾದ್ರೆ ಜನ ಮನೆಬಾಗಿಲಲ್ಲಿ ಸಿಮೋನ ಆ ಕೆಲಸ ಆಗಬೇಕು, ಈ ಕೆಲಸ ಆಗಬೇಕು..ಅಂತ ಬಂದು ನಿಂತಿರೋರು..”
ಕೇಳುವವರು ಸಿಕ್ಕರೆ ಆತ ಮಾತನಾಡುತ್ತ ಹೋಗುತ್ತಾನೆ. ಈಗೀಗ ಅವನು ಮಾತನಾಡುವುದನ್ನು ಹೆಚ್ಚು ಮಾಡಿದ್ದಾನೆ.
“ಈವತ್ತು ಈ ಹೆಸರು ಉಳಿದಿಲ್ಲ..ಊರಿನ ಯಾರಾದ್ರು ಒಬ್ರು ಕೇರಿಗೆ ಬರತಾರ ನೋಡಿ” ಎಂದು ಮುಖ ಬಾಡಿಸಿಕೊಂಡು ಕೇಳುತ್ತಾನೆ.
“ಯಾಕೆ? ಗೊತ್ತ ನಿಮಗೆ?”
ಅವನೇ ಉತ್ತರ ಕೊಡುತ್ತಾನೆ.
“ಬೇರೆ ಜನ ನಮಗಿಂತ ಚೆನ್ನಾಗಿ ಈ ಕೆಲಸ ಮಾಡತಾರೆ..ಮಲೆಯಾಳಿಗಳು, ತಮಿಳರು ಈ ಕೆಲಸ ಕಲಿತು ಭೇಷ ಅನ್ನಿಸಿಕೊಂಡಿದಾರೆ. ಹೊರಗಿನ ಜನ ಬೇಕಿಲ್ಲ. ಊರಲ್ಲಿ ಇರೋರೇ ಸಾಕು. ನಮ್ಮವರೂ ಇದ್ದಾರೆ..ಆದರೆ ರಾಯರೇ ನಮ್ಮ ಜನರನ್ನು ಹೆಂಡ ಕೆಡಿಸಿದೆ…ಕುಡಿದು ಕುಡಿದು ಎಲ್ಲ ದೋಟಿಗಳಾಗಿದಾರೆ..ಜನರ ಹತ್ರ ಅಡ್ವಾನ್ಸು ಅಂತ ಹಣ ತೊಕೊಳ್ಳೊದು..ಕೆಲಸಕ್ಕೆ ಹೋಗದೆ ಸತಾಯ್ಸೋದು..ಯಾರು ಕೆಲಸ ಕೊಡತಾರೆ ಹೇಳಿ ಹೀಗೆ ಮಾಡಿದ್ರೆ?” ಎಂದು ಕೇಳುತ್ತಾನೆ.
“ನಾನು ಹೇಳೋದು ಸುಳ್ಳಲ್ಲ, ಅಲ್ಲಿ ನೋಡಿ” ಸಿಮೋನ ತೋರಿಸುತ್ತಾನೆ. ಫ಼ಾತಿಮಾ ನಗರದಲ್ಲಿ ಎರಡು ಸಾರಾಯಿ ಅಂಗಡಿ , ಜೋಸೆಫ಼ ನಗರದಲ್ಲಿ ಎರಡು. ಈ ಎರಡೂ ನಗರಗಳಲ್ಲಿ ಎಂಟು ಬಾರುಗಳು.
“ಬ್ರಾಹ್ಮಣರ ಕೇರಿಲಿ ಲಿಂಗಾಯತರ ಕೇರೀಲಿ ಹೀಗೆ ಅಂಗಡಿ ಇಡೋಲ್ಲ…ಸರಕಾರ ಬಿಡಲ್ಲ..ಆದರೆ ಇಲ್ಲಿ..ಜನರಿಗೆ ಬೇಕು ಇಡತಾರೆ..ನಮ ಜನ ಈಗೀಗ ಕುಡಿದೇ ಸತ್ರು..” ಅನ್ನುತ್ತಾನೆ ಆತ.
ತಟ್ಟನೆ ಅವನಿಗೆ ತನ್ನ ಈರ್ವರು ಮಕ್ಕಳ ನೆನಪಾಗುತ್ತದೆ. ಕೇರಿಯ ಇತರೆ ತರುಣರ ನೆನಪಾಗುತ್ತದೆ. ಎಲ್ಲರೂ ಕುಡಿಯುವವರೆ, ಕುಡಿಯುವುದು ಅಂದರೇನು? ಬೆಳಿಗ್ಗೆ ಎದ್ದ ಕ್ಷಣದಿಂದ ಕುಡಿ ಕುಡಿ ಕುಡಿ. ಮದುವೆ ಮನೆಯಲ್ಲಿ ಕುಡಿ, ತೊಟ್ಟಿಲಿಗೆ ಹಾಕುವಲ್ಲಿ ಕುಡಿ, ಹಬ್ಬದ ದಿನ ಕುಡಿ, ಸತ್ತವರ ಮನೆಯಲ್ಲಿ ಕುಡಿ. ಹಿಂದೆ ಹೀಗೆ ಇರಲಿಲ್ಲ. ಕೆಲಸ ಮುಗಿಸಿ ಸಾಯಂಕಾಲ ಬಂದ ಏನೋ ಒಂದಿಷ್ಟು ಕುಡಿದು ಮಲಗಿದ. ಈಗ ? ಕುಡಿದವ ರಸ್ತೆಗೇನೆ ಹೋಗಬೇಕು.
ಊರ ಜನರಿಗೆ ಏನಾಗಿದೆ. ಕ್ರಿಶ್ಚಿಯನ್ ಅಂದ ಕೂಡಲೇ ಈ ಕುಡುಕುತನ ನೆನಪಿಗೆ ಬರುತ್ತದೆ.
“ಹೌದೋ ಅಲ್ಲವೋ ಹೇಳಿ?” ಮತ್ತೆ ಪ್ರಶ್ನೆ ಮಾಡುತ್ತಾನೆ ಸಿಮೋನ.
ಪಾದರಿ ಗೋನಸ್ವಾಲಿಸ್ ಹೇಳಿದರೆಂದು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿದ. ಅವರು ಒಂದು ಎರಡು ತರಗತಿ ಓದಿಬಿಟ್ಟರು. ಹೆಣ್ಣು ಮಕ್ಕಳು ಮದುವೆಯಾಗಿ ಹೋದರು. ಗಂಡು? ಅವರ ಮದುವೆಯೂ ಆಯಿತು. ಹಿರಿಯ ಮಗ ವಿಕ್ಟರ್ ಒಂದು ದಿನ ತನ್ನ ಬಳಿ ಬಂದ-
“..ಅಪ್ಪ ನಾನು ಬೇರೆ ಆಗುತ್ತೇನೆ” ಎಂದು.
ಅವನ ಮಾತೇ ವಿಚಿತ್ರವೆನಿಸಿತು. ತುಂಬಿಕೊಂಡ ಮನೆ ತನ್ನದು..ಆರು ಗಂಡು ಮೂರು ಹೆಣ್ಣು. ಹುಡುಗಿಯರು ಮದುವೆಯಾಗಿ ಹೋಗುವ ಮುನ್ನ ತನ್ನ ಮನೆಯಲ್ಲಿ ಸಂಜೆಯ ಪ್ರಾರ್ಥನೆ ಮಾಡುತ್ತಿದ್ದರೆ ಕೇರಿಗೆಲ್ಲ ಕೇಳುತ್ತಿತ್ತು. ತಾಯಿ ಬೇರೆ. ಎಲ್ಲರೂ ಅಲ್ತಾರಿನ ಮುಂದೆ ಮೊಣಕಾಲೂರಿ ಪರಲೋಕ ಮಂತ್ರ ಹೇಳುತ್ತಿದ್ದರೆ ಬಾಗಿಲ ಬಳಿ ನಿಂತ ತಾನು ಸಂತಸ ಪಡುತ್ತಿದ್ದೆ. ಈ ಮನೆ ಹೀಗೆಯೇ ತುಂಬಿಕೊಂಡಿರಲಿ ಎಂದು ಕೂಡ ಬಯಸುತ್ತಿದ್ದೆ.
“ನಮ್ಮ ಕುಟುಂಬದ ಏಕತೆಗಾಗಿ ಒಂದು ಪರಲೋಕ ಮಂತ್ರ ಎರಡು ನಮೋರಾಣೆ ಮಂತ್ರ ಸಮರ್ಪಿಸೋಣ” ಎಂದು ತಾನೇ ಹೇಳುತ್ತಿದ್ದ.
ಹೆಣ್ಣು ಮಕ್ಕಳ ಮದುವೆಯಾಯಿತು. ಮೂವರೂ ಮೂರು ದಿಕ್ಕಿಗೆ ಹೋದರು. ಅಮ್ಮ ತೀರಿಕೊಂಡಳು. ಆಗ ತನ್ನ ಮನೆಯ ಪ್ರಾರ್ಥನೆ ಸೊರಗಿತು. ಗಂಡು ಹುಡುಗರು ಹೆಣ್ಣು ಮಕ್ಕಳ ಹಾಗೆ ದನಿ ಎತ್ತಿ ಹಾಡುತ್ತಿರಲಿಲ್ಲ. ಹೆಂಡತಿಯೊಬ್ಬಳೆ ಹಾಡಬೇಕು. ಮನೆಯೂ ಬರಿದಾಗಿ ಹೋದಂತೆ. ಆದರೆ ಆಗಾಗ್ಗೆ ಇಗರ್ಜಿ ಹಬ್ಬಕ್ಕೊ ಕ್ರಿಸ್ಮಸ್ ಗೋ ಅಳಿಯಂದಿರು, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಬಂದಾಗ ಮತ್ತೆ ಮನೆ ತುಂಬಿಕೊಳ್ಳುತ್ತಿತ್ತು.
“ತೇರ್ಸ ಮಾಡಲಿಕ್ಕೆ ನಾವು ಇಗರ್ಜಿಗೇನೆ ಹೋಗಬೇಕು” ಅನ್ನುತ್ತಿದ್ದ ಕೊನೆಯ ಮಗ, ಅಷ್ಟು ಜನ ಮನೆಯಲ್ಲಿ ಆದರೂ ಅದೆಂತಹ ಸಂತಸ, ಸಂಭ್ರಮ. ಇದು ನಾಲ್ಕು ದಿನ ಎಂಟು ದಿನ. ನಂತರ ಮತ್ತೆ ಮನೆ ಬರಿದು. ಕ್ರಮೇಣ ಅಳಿಯಂದಿರು, ಹೆಣ್ಣು ಮಕ್ಕಳು ಬರುವುದನ್ನು ಕಡಿಮೆ ಮಾಡಿದರು. ಅವರಿಗೆ ಅವರದ್ದೇ ತಾಪತ್ರಯಗಳು ಕೆಲಸಗಳು.
ಹೀಗೆಂದೇ ಹಿರಿಯ ಮಗನಿಗೆ ಮದುವೆ ಮಾಡಿದೆ. ಎರಡನೆಯವನಿಗೂ ಇಬ್ಬರು ಸೊಸೆಯಂದಿರು ಬಂದರು.
ಮೇಣದ ಬತ್ತಿ ಹಚ್ಚಲು, ದೇವರಿಗೆ ಅಬ್ಬಲಿಗೆ ಹೂವಿನ ಹಾರ ಹಾಕಲು, ಪ್ರಾರ್ಥನೆ ಕಲಿಸಲು, ಕೀರ್ತನೆ ಹಾಡಲು ಹುಡುಗಿಯರು ಬಂದರು. ಮತ್ತೆ ಮನೆಗೆ ಕಳೆ ಬಂದಿತು. ದೇವರ ಕೋಣೆ ತುಂಬಿತು.
ಆದರೆ ಹೊರಗಿನಿಂದ ಬಂದ ಹುಡುಗಿಯರಿಂದ ಏಕೋ ಮನೆಯಲ್ಲಿ ಹೊಂದಾಣಿಕೆ ಕಾಣಲಿಲ್ಲ. ಮುಖ ಊದಿಸಿಕೊಳ್ಳುವುದು, ಅತ್ತೆಯ ಜತೆ ಜಗಳ, ಪ್ರಾರ್ಥನೆಗೆ ಬಾರದಿರುವುದು, ಊಟ ಮಾಡುವಾಗ ಬೇರೆ. ತನ್ನಿಂದ ಇದನ್ನು ಸಹಿಸಲಾಗಲಿಲ್ಲ.
“ಅಪ್ಪಿ..” ಎಂದು ಹೆಂಡತಿಯನ್ನು ಕರೆದೆ.
“ನೀನೆ ಸುಧಾರಿಸಿಕೊಂಡು ಹೋಗಬೇಕು. ಮೂರು ಜನ ಹೆಣ್ಣುಮಕ್ಕಳನ್ನು ಹೆತ್ತು ಬೆಳೆಸಿದವಳು ನೀನು. ಅವರು ಪರಸ್ಪರ ಕಾದಾಡುವಾಗ ಅವರಿಗೆ ಗದರಿಸಿ ಸುಮ್ಮನಿರಿಸಿದವಳು..ಈಗ ನಿನಗೆ ಇಬ್ಬರು ಸೊಸೆಯಂದಿರಿದ್ದಾರೆ..ನೋಡು..ಈ ಮನೆ ಮಾತ್ರ ಹೀಗೇ ಇರಬೇಕು ..” ಎಂದೆ.
ಅಪ್ಪಿ ಮಾತನಾಡಲಿಲ್ಲ, ಆದರೂ ಅವಳ ಮೇಲೆ ನನಗೆ ಭರವಸೆ, ನಂಬಿಕೆ, ತಾನು ಇಲ್ಲಿ ಬಂದು ಇದ್ದಾಗಲೂ ಮನೆ ನಡೆಸಿಕೊಂಡು ಹೋಗಿದ್ದಳು. ನಂತರವೂ ಮನೆ ನೋಡಿಕೊಂಡಿದ್ದಳು.
ಆದರೆ ಹಿರಿಯ ಮಗ-ಅಪ್ಪ ನಾನು ಬೇರೆಯಾಗುತ್ತೇನೆ ಎಂದು ಹೇಳಿದ ಹಿಂದಿನ ರಾತ್ರಿ ಅಪ್ಪಿ-
“..ನಾನೊಂದು ಮಾತು ಹೇಳತೇನೆ ನೀವು ಬೇಸರ ಮಾಡಿಕೋಬಾರದು..” ಎಂದು ಪೀಠಿಕೆ ಹಾಕಿದಳು.
“ಹಿರೇ ಸೊಸೆ ಹಠ ಹಿಡಿದುಕೂತಿದಾಳೆ..ಅವರು ಗಂಡ ಹೆಂಡತಿ ಬೇರೆ ಹೋಗಬೇಕಂತೆ…ಇಲ್ಲ ಅಂದ್ರೆ ನಾನು ಮನೇಲಿ ಇರೋದಿಲ್ಲ ಅಂತಿದಾಳೆ..”
“ಏನಂತೆ ಅವಳ ತೊಂದರೆ..”
“ನಿಜ ಏನೂಂತ ನನಗೆ ಗೊತ್ತಿಲ್ಲ-ಆದರೂ ನನಗೊಂದು ಅನುಮಾನ ಇದೆ..ಅವಳ ತಾಯಿ ಅವಳಿಗೆ ಇದನ್ನೆಲ್ಲ ಹೇಳಿಕೊಟ್ಟಿರಬಹುದು..”
“ನೋಡೋಣ” ಎಂದಿದ್ದೆ ತಾನು. ಆದರೆ ಈ ಮಾತು ನಡೆದ ಮಾರನೇ ದಿನವೇ ಮಗ ತಾನು ಬೇರೆಯಾಗುವುದಾಗಿ ಹೇಳಿದ್ದ.
“ಯೋಚಿಸು ವಿಕ್ಟರ್..ನಾವು ಒಡೆದು ಹೋಗುವುದರಲ್ಲಿ ದೊಡ್ಡಸ್ತಿಕೆ ಇಲ್ಲ..ಒಂದಾಗುವುದರಲ್ಲಿ ನಮ್ಮ ಸಮೋಡ್ತಿಯ ಪ್ರಭಾವ ಇದೆ..” ಎಂದೆ.
ಭಾಗ್ಯವಂತ ಕುಟುಂಬ ಅನ್ನುವಂತಹ ಒಂದು ಕಲ್ಪನೆ ನಮ್ಮಲ್ಲಿತ್ತು. ತಂದೆ ತಾಯಿ ಮಕ್ಕಳೆಲ್ಲ ಒಟ್ಟಿಗೇನೆ ಇರಬೇಕು. ಸುಖ ಸಂತೋಷ ಸ್ನೇಹದಿಂದ ಬದುಕಬೇಕು ಅನ್ನುವ ಆದರ್ಶವನ್ನು ಕ್ರಿಸ್ತಪ್ರಭು ನಮ್ಮ ಮುಂದೆ ಇಟ್ಟಿದ್ದ. ಈ ಕಲ್ಪನೆಗೆ ತನ್ನ ಕುಟುಂಬ ಈವರೆಗೆ ಒಂದು ನಿದರ್ಶನವಾಗಿತ್ತು. ನಾಳೆ ಈ ನಿದರ್ಶನ ಸುಳ್ಳಾಗಬಾರದಲ್ಲವೆ?
“ಇಲ್ಲ ಪಪ್ಪ..ನಾಳೆ ಜಗಳ ದೊಂಬಿ ಆಗುವುದಕ್ಕಿಂತ ಹೀಗೆ ಬೇರೆಯಾಗೋದೇ ಒಳ್ಳೇದೇನೋ ಅನ್ಸುತ್ತೆ..” ಎಂದ ಆತ ಎಲ್ಲವನ್ನೂ ನಿರ್ಧರಿಸಿರುವ ಹಾಗೆ.
“ಆಯಿತು..ನಿನ್ನ ತಾಯಿಗೂ ಒಂದು ಮಾತು ಹೇಳು..ನಿನ್ನ ತಮ್ಮಂದಿರಿಗೂ ಹೇಳು..” ಎಂದೆ.
ಅವನು ಯಾರಿಗೆ ಹೇಳಿದನೋ ಬಿಟ್ಟನೋ ಬೇರೆಯಾದ. ಇಗರ್ಜಿಯ ಹಿಂದೆಯೇ ವೈಜೀಣ ಕತ್ರಿನಳ ಮನೆ ಪಕ್ಕದಲ್ಲಿ ಬೇರೊಂದು ಮನೆ ಮಾಡಿದ.
“ಗುರ್ಕಾರ ಮಾಮ..ಏನು ಮಗ ಬೇರೆ ಹೋದನಂತೆ?” ಎಂದು ಹಲವರು ಕೇಳಿದರು. ಈ ಪ್ರಶ್ನೆಯ ಹಿಂದೆ ಏನೋ ವ್ಯಂಗ್ಯವಿತ್ತು. ಕುಹಕವಿತ್ತು. ನಿಮ್ಮ ಮನೆಯಲ್ಲಿಯೂ ಹೀಗೆ ಆಯಿತೆ” ಎಂಬ ತಿವಿತವಿತ್ತು.
ಹಲವಾರು ದಿನ ಇದೇ ಒಂದು ವ್ಯಥೆಯಾಯಿತು. ತನ್ನ ಪಾಲಿಗೆ ಈ ವ್ಯಥೆಯ ನಡುವೆಯೂ ಒಂದು ಸಂತಸವಿತ್ತು. ಊಟದ ಮನೆ ಸಾಂತಾಮೋರಿ ಮಕ್ಕಳು ಮಾಡಿಕೊಂಡ ಹಾಗೆ ತನ್ನ ಮಗ ಮಾಡಲಿಲ್ಲವಲ್ಲ ಎಂಬ ಸಮಾಧಾನ.
“ಅಪ್ಪಿ..ಹೋಗಲಿ ಬಿಡು..ದೇವದಿತ್ತ: ಸೈತಾನ ನಾಡ್ತ- ದೇವರು ಕೊಡುತ್ತಾನೆ ಸೈತಾನ ಆಟವಾಡಿಸುತ್ತಾನೆ ಅಂತ ಗಾದೆ ಇದೆಯಲ್ಲ. ಬೆರೆಯವರಾದರೂ ನಮ್ಮ ಜತೆ ಇರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದ ಗುರ್ಕಾರ ಸಿಮೋನ ಹೆಂಡತಿ. ಅವನಿಗೀಗ ವಯಸ್ಸಾಗಿತ್ತು.
ಜೋಸೆಫ಼ ನಗರದ ಜನರ ಕ್ಷೇಮ ಸಮಾಚಾರ, ಅವರ ಸಮಸ್ಯೆಗಳ ಪರಿಹಾರ ಎಂದು ಕೊಂಚ ತಿರುಗಾಟ ಮಾಡುವುದಿತ್ತು. ಗುರ್ಕಾರ ಎಂಬ ಗೌರವವಂತೂ ಇತ್ತು.
ಕ್ರೀಸ್ತುವರ ಸ್ಥಿತಿಗತಿಗಳು ಅಷ್ಟೊಂದು ಚೆನ್ನಾಗಿರಲಿಲ್ಲ. ಬೇರೆಯವರು ಇವರ ವೃತ್ತಿಗಳನ್ನು ಕೈಕೊಂಡಿದ್ದು ಯುವಕರು ಬೇರೆ ವೃತ್ತಿಗಳ ಹುಡುಕಾಟದಲ್ಲಿರುವುದು. ಮಿತಿಮೀರಿದ ಕುಡಿತಗಳು ಇವರ ಬದುಕನ್ನು ಅತಂತ್ರಗೊಳಿಸಿದ್ದವು.
ಮುಂದೆ ಇಂದಿನ ತರುಣರು ಬೇರೆ ಬೇರೆ ಕ್ಷೇತ್ರಗಳನ್ನು ಪ್ರವೇಶಿಸಿದರೆ ಅನುಕೂಲವಾಗುತ್ತಿತ್ತು. ಅಲ್ಲಲ್ಲಿ ಇರುವ ಕಾನ್ವೆಂಟುಗಳು, ಪಾದರಿಗಳ್ ಶಾಲೆ ಕಾಲೇಜುಗಳು ಈ ಕೆಲಸ ಮಾಡಬಹುದು. ಅವರು ಕೂಡ ಬೇರೆ ಜನರತ್ತ ತೋರುವ ಆಸಕ್ತಿಯನ್ನು ನಮ್ಮವರತ್ತ ತೋರುತ್ತಿಲ್ಲ. ಇದೂ ಒಂದು ಬೇಸರವೆ.
ಹೀಗೆ ಹಲವು ವಿಚಾರಗಳ ಸುಳಿಗೆ ಸಿಲುಕಿ ಬಿದ್ದು ತಾಳ್ಮೆ ಕಳೆದುಕೊಳ್ಳುತ್ತಿದ್ದ. ಯಾರಾದರೂ ಮಾತಿಗೆ ಸಿಕ್ಕರಂತೂ ಅವನ ತಾಳ್ಮೆಯ ಕಟ್ಟೆ ಒಡೆದು ಹೋಗುತ್ತಿತ್ತು. ಇತ್ತೀಚೆಗೆ ಸಾಂತಾಮೋರಿ ಮನೆಯಲ್ಲಿ ನಡೆದ ಪಂಚಾಯ್ತಿಯ ಸಂದರ್ಭದಲ್ಲಿ ಗುರ್ಕಾರ ಸಿಮೋನನಿಗೆ ಬಂದ ಸಿಟ್ಟು, ಕ್ರೋಧವನ್ನು ಈ ಹಿಂದೆ ಯಾರೂ ನೋಡಿರಲಿಲ್ಲ.
*
*
*
ಶಿವಸಾಗರದಲ್ಲಿ ಮಲೆಯಾಳಿಗಳು, ಬೇರೆ ಜನ ಕಲ್ಲಿನ ಕೆಲಸ ಆರಂಭಿಸಿದ ನಂತರ ಘಟ್ಟದ ಕೆಳಗಿನಿಂದ ಬರುವವರ ಸಂಖ್ಯೆ ಕಡಿಮೆಯಾಯಿತು. ಬಂದ ಕೆಲವರು ದೊಡ್ಡಪ್ಪನ ಮನೆ, ಚಿಕ್ಕಪ್ಪನ ಮನೆ ಎಂದು ಅವರಿವರಲ್ಲಿ ಉಳಿದು, ಮಳೆಗಾಲದ ನಂತರ ತಾವೇ ಹೊಸದಾಗಿ ಮನೆ ಮಾಡಿದರು. ಊರ ತುಂಬಾ ಹೋಟೆಲುಗಳು ಆದವು. ಅಂಟುವಾಳದ ಮನೆ ಸಾಂತಾಮೋರಿ ತನ್ನ ವೃತ್ತಿಯನ್ನು ನಿಲ್ಲಿಸಿದಳು. ಅವಳ ಮಕ್ಕಳು ಬಸ್ತು ಮತ್ತು ಜಾನಿ ಈರ್ವರೂ ಗಾರೆ ಕೆಲಸಕ್ಕೆ ಹೋಗಲಾರಂಭಿಸಿದ್ದರು. ಸಾಂತಾಮೋರಿ ಮಗಳ ಪ್ರಕರಣ ಬೇರೆ ಹಾಗೆ ಆದ ನಂತರ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದಳು. ಅನಂತರ ಅವಳು ಮಾಡಿದ ಒಂದು ಕೆಲಸವೆಂದರೆ ಇಬ್ಬರು ಮಕ್ಕಳ ಮದುವೆ ಮಾಡಿದ್ದು. ಮುರುಡೇಶ್ವರದಿಂದಲೇ ಇಬ್ಬರು ಹುಡುಗಿಯರನ್ನು ತಂದು ಮದುವೆ ಮಾಡಿ ಸೊಸೆಯಂದಿರನ್ನು ಮನೆ ತುಂಬಿಸಿಕೊಂಡಿದ್ದಳು. ಓಮ್ದು ವರ್ಷಕ್ಕೆಲ್ಲ ಸೊಸೆಯಮ್ದಿರು ಬಸಿರಾಗಿ, ಸೀಮಂತ ಮಾಡಿ ಅವರನ್ನು ಅವರವರ ತಾಯಂದಿರ ಮನೆಗೆ ಹೆರಿಗೆಗಾಗಿ ಕಳುಹಿಸಿದ್ದಳು. ಆರು ತಿಂಗಳ ನಂತರ ಸೊಸೆಯಂದಿರು ಮೊಮ್ಮಕ್ಕಳ ಜತೆ ಬಂದಿದ್ದರು. ಈರ್ವರು ಮೊಮ್ಮಕ್ಕಳನ್ನು ನೋಡಿಕೊಂಡು ಅವರ ಸ್ನಾನ ಮಾಡಿಸುತ್ತ, ಮಣ್ಣಿ ಮಾಡಿ ಅವುಗಳಿಗೆ ತಿನ್ನಿಸುತ್ತ-
“ಕುರುಕುರು ಕನ್ನ್ ಮ್ಹ್ಸಿಯೋ ಗೆಲೇರನ್ನ” ಎಂದು ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡುತ್ತ ಕಾಲ ಕಳೆದಳು.
ಸೊಸೆಯಂದಿರು ಗಂಡು ಮಕ್ಕಳ ನಂತರ ಮತ್ತೆ ಈರ್ವರು ಗಂಡನ್ನು ಒಂದು ಹೆಣ್ಣನ್ನು ಪಡೆದು ಅಂಟವಾಳದ ಮನೆ ಮಕ್ಕಳಿಂದ ತುಂಬಿಕೊಂಡಿರುವಾಗ , ಹಿರಿಯ ಮೊಮ್ಮಕ್ಕಳು ಹದಿನಾಲ್ಕು ಹದಿನೈದನೆ ವಯಸ್ಸು ಕಂಡಿರುವಾಗ ಈರ್ವರೂ ಮಕ್ಕಳು ಬೇರೆ ಮನೆ ಮಾಡಲು ಯೋಚಿಸಿರುವುದು ಅವಳ ಗಮನಕ್ಕೆ ಬಂದಿದೆ.
ಏನೆಂದರೂ ಅವಳದ್ದು ಊಟದ ಮನೆ. ಮೇಸ್ತ್ರಿಗಳು ಕೆಲಸಗಾರರು-
“ಮೋರಿ ಮಾಯ..ಘೇ” ಎಂದು ತಿಂಗಳಿಗಷ್ಟು ಊಟದ ಹಣವನ್ನು ಬಟವಾಡೆಯಾದ ದಿನ ನೀಡುತ್ತಿದ್ದರು. ಯಾರೂ ಹಣ ನಿಲ್ಲಿಸಿಕೊಂಡಿದ್ದಿಲ್ಲ. ಅಡಿಗೆ ಮಾಡುವಲ್ಲಿ, ಊಟ ಬಡಿಸುವಲ್ಲಿ, ಮೀನು ಮಾಂಸ ಮಾಡಿದ ದಿನ ಹೋಳೂ ಹಾಕುವಾಗ ಕೊಂಚ ಹೆಚ್ಚು ಕಡಿಮೆ ಆಗಿದ್ದಿರಬಹುದು. ಎಲ್ಲರಿಗೂ ಸಮಾನವಾಗಿ ನೀಡಬೇಕು ಎಂದು ಇದ್ದರೂ ಯಾರಿಗೋ ಹೆಚ್ಚು ಯಾರಿಗೋ ಕಡಿಮೆ ಆದದ್ದಿದೆ. ಹೀಗೆಂದು ಯಾರೂ ತಕರಾರೂ ಎತ್ತಲಿಲ್ಲ. ಸುಮಾರು ಮೂವತ್ತು ವರ್ಷ ತನ್ನ ಅನ್ನ ಸೇವೆ ನಡೆಯಿತು. ನಂತರ ತಾನೇ ನಿಲ್ಲಿಸಿದೆ. ಮಗಳು ಹಾಗೆ ಆಗಲೂ ತನ್ನ ಮನೆಯಲ್ಲಿ ಸದಾ ತುಂಬಿಕೊಂಡಿರುವ ಗಂಡಸರೇ ಕಾರಣ ಎಂಬ ಮಾತೂ ಕೇಳಿ ಬಂದಿತು. ಆದರೆ ಮನೆಗೆ ಊಟಕ್ಕೆ ಬರುವ ಜನ ಮಗಳ ವಿಷಯದಲ್ಲಿ ಸಲಿಗೆಯಿಂದ ಇರಲಿಲ್ಲ. ಮನೆಯಲ್ಲಿ ಇಂಥದಕ್ಕೆಲ್ಲ ಅವಕಾಶವಿರಲಿಲ್ಲ. ಮಕ್ಕಳ ಮದುವೆಯಾಗಿ ಸೊಸೆಯಂದಿರು ಬಂದ ನಂತರವೂ ಕೆಲ ವರುಷ ಊಟದ ಮನೆ ಮುಂದುವರಿದಿತ್ತು. ನಂತರ ಅದನ್ನು ನಿಲ್ಲಿಸಿದೆ. ಹೀಗೆಂದು ಅಡಿಗೆ ಮಾಡುವುದು ನಿಲ್ಲುವಂತಿಲ್ಲವಲ್ಲ. ಇಬ್ಬರು ಮಕ್ಕಳು, ಸೊಸೆ ಮೊಮ್ಮಕ್ಕಳು ಎಂದು ಈಗಲೂ ಹಿಂದಿನ ಪಾತ್ರೆಗಳಲ್ಲಿಯೇ ಅಡಿಗೆ ಮಾಡುತ್ತಿದ್ದೇನೆ. ಹಿಂದಿನ ಅವೇ ಕಂಚಿನ ತಟ್ಟೆಗಳು, ಕಂಚಿನ ಲೋಟಗಳು ಬಳಕೆಯಲ್ಲಿವೆ. ಸೊಸೆಯಂದಿರು ಮಾತ್ರ ಬರುವಾಗ ಸ್ಟೀಲಿನ ತಟ್ಟೆ ಲೋಟ ತಂದಿದ್ದಾರೆ. ಅವುಗಳನ್ನು ಅವರು ಹೊರಗೆ ತೆಗೆದಿಲ್ಲ. ತೌರು ಮನೆಯವರು ಕೊಟ್ಟ ಮರದ ಪೆಟ್ಟಿಗೆಯಲ್ಲಿ ಭದ್ರವಾಗಿ ಇರಿಸಿದ್ದಾರೆ.
“..ಇಡಿ..ಇಡಿ..ಈ ಕಂಚಿನ ತಟ್ಟೆ ಲೋಟಗಳು ಸದ್ಯಕ್ಕೇನೂ ಸವೆಯೋದಿಲ್ಲ..” ಎಂದು ತಾನು ಹೇಳಿದ್ದೇನೆ.
ಮಕ್ಕಳ ನಡುವೆ ಏನೂ ಮನಸ್ತಾಪ ಬಂದಿಲ್ಲ. ಅವರನ್ನು ಸೊಸೆ ಮೊಮ್ಮಕ್ಕಳನ್ನು ತಾನು ಚೆನ್ನಾಗಿಯೇ ನೋಡಿಕೊಂಡಿದ್ದೇನೆ. ಆದರೂ ಬಸ್ತು ಒಮ್ಮೊಮ್ಮೆ ಕುಡಿದು ಬಂದು ಜಗಲಿಯ ಮೇಲೆ ಕುಳಿತು ಕೂಗಾಡುತ್ತಾನೆ. ಈ ಬದಿಯಲ್ಲಿ ಜಾನಿ ಕೂಳಿತು ಕೂಗಾಡುತ್ತಾನೆ. ಇದು ತನಗೆ ಚೆನ್ನಾಗಿ ಕಾಣಿಸುವುದಿಲ್ಲ.
ಊಟಕ್ಕೆ ಅಷ್ಟೊಂದು ಜನ ಬರುತ್ತಿದ್ದರಲ್ಲ ಯಾರೂ ಇಲ್ಲಿ ಕುಡಿಯಬಾರದು ಎಂದು ತಾನು ಹೇಳುತ್ತಿದ್ದೆ. ಊಟ ಮುಗಿಸಿ ಹೊರಡಿ ಅನ್ನುತ್ತಿದ್ದೆ. ಊಟಕ್ಕೆ ಮುನ್ನ ಎಲ್ಲರೂ ಸಾಯಂಕಾಲದ ಸ್ನಾನ ಮಾಡಬೇಕು. ದೇವರ ಮುಂದೆ ಮೇಣದ ಬತ್ತಿ ಹಚ್ಚುತ್ತಿದ್ದೆ. ಅಲ್ಲಿ ನಿಂತು ಜಪ ಮಾಡಬೇಕು. ನಂತರ ಬಂದ ಹಾಗೆ ಅವರೆಲ್ಲರಿಗೂ ಕುಚಲಕ್ಕಿ ಗಂಜಿ ಇಲ್ಲವೇ ಅನ್ನ, ಮೀನಿನ ಸಾರು ಇಲ್ಲವೆ ಸಾರು, ಹುರಿದ ಮೀನು. ಭಾನುವಾರದ ಮಾಂಸ. ಊಟ ಮುಗಿಸಿ ನಿಮ್ಮ ನಿಮ್ಮ ಬಿಡಾರಗಳಿಗೆ ಹೊರಡಿ. ಕುಡಿಯುವುದಿದ್ದರೆ ಅಲ್ಲಿ. ಮೊದ ಮೊದಲು ಈ ಜಪ ಮುಂದುವರಿದು ನಡುವೆ ನಿಂತು ಹೋಗಿತ್ತು. ಪಾದರಿ ಗೋನಸ್ವಾಲಿಸ್, ಪಾದರಿ ಮಸ್ಕರಿನಾಸ ಬಂದ ನಂತರ ಮತ್ತೆ ಮುಂದುವರೆಯಿತು.
ಈಗ ಮೊಮ್ಮಕ್ಕಳು ಸೊಸೆಯಂದಿರು ತಪ್ಪದೆ ಆಮೋರಿ ಹೇಳುತ್ತಾರೆ. ಜಪಸರ ಪ್ರಾರ್ಥನೆ ಮಾಡುತ್ತಾರೆ. ಹಾಗೆಯೇ ಈ ಕೂಡುಕರ ಗದ್ದಲ. ಹಾಗೆಯೇ ಜಗಳ. ಬೇರೆ ಬೇರೆ ಬಿಡಾರ ಮಾಡುವ ಮಾತು.
“ಮಾಯ…ಹಾಂವುಂ. ಇಂಗಡ ರಾವ್ತಂ” (ಅಮ್ಮಾ ನಾನು ಬೇರೆ ಇರುತ್ತೇನೆ..) ಎಂದು ತೊದಲುತ್ತಾನೆ ಬಸ್ತು.
“ನಾನೂ ಅಷ್ಟೇ ” ಅನ್ನುತ್ತಾನೆ ಜಾನಿ.
ಅವರ ಮಾತು ಇವಳಿಗೆ ಅರ್ಥವಾಗುತ್ತದೆ. ದೊಡ್ಡ ಮನೆಯಲ್ಲಿ ಎರಡು ಅಡಿಗೆ ಮನೆ ಮಾಡುವ ಇರಾದೆ ಅವರದ್ದು. ಈಗ ಅವರು ದುಡಿದು ತಂದದ್ದರಲ್ಲಿ ಏನು ಕೊಡಲಿ ಕೊಡದಿರಲಿ ಇವಳು ಎಲ್ಲರಿಗೂ ಊಟ ಹಾಕುತ್ತಾಳೆ. ಕೆಲಬಾರಿ..”
“ಬಸ್ತು ಒಂದಿಷ್ಟು ಹಣ ಕೊಡು”
“ಜಾನಿ ನೀನು ದುಡ್ಡು ಕೊಟ್ಟಿಲ್ಲ” ಅನ್ನುವುದುಂಟು. ಬಟವಾಡೆಯ ದಿನ ಅವರಿಂದ ಹಣ ಕಿತ್ತುಕೊಳ್ಳುವುದುಂಟು.
“ಕೊಡಿ ಇಲ್ಲಿ..ನೂರು ರೂಪಾಯಿ..ಮನೆ ಹಿಂದೆ ಹಣದ ಗಿಡ ಇದೆ ಅಂತ ತಿಳಕೊಂಡಿದ್ದೀರ..ನಿಮಗೂ ಹಾಕಬೇಕು…ನಿಮ್ಮ ಹೆಂಡಿರಿಗೂ ಹಾಕಬೇಕು ಅಂದ್ರೆ ಎಲ್ಲಿಂದ ತರಲಿ” ಎಂದು ಕೇಳುತ್ತಾಳೆ.
ಬಸ್ತು, ಜಾನಿ ಇಬ್ಬರೂ ತಾಯಿಯ ಬಾಯಿಗೆ ಹೆದರಿ ಹಣ ಕೊಡುತ್ತಾರೆ. ಆದರೂ ತಾಯಿಯ ಹತ್ತಿರ ತುಂಬಾ ಹಣವಿದೆ ಅನ್ನುವುದು ಅವರ ವಾದ.
ಮನೆಯಲ್ಲಿ ಒಂದು ಕೊಠಡಿ ಇದೆ. ಕಾಳ್ಕಾ ಕೂಡ (ಕತ್ತಲೆ ಕೋಣೆ) ಎಂದು ಅದನ್ನು ಕರೆಯುತ್ತಾರೆ. ಈ ಕೋಣೆಗೆ ಕಿಟಕಿ ಇಲ್ಲ. ಮುಂಬದಿಯಲ್ಲಿ ಒಂದು ಬಾಗಿಲಿದೆ. ಒಳಗೆ ಮನೆಗೆ ಬೇಕಾದ ಅಷ್ಟು ಸಾಮಾನು ತುಂಬಿ ಇರಿಸಿದ್ದಾಳೆ. ಸಾಂತಾ ಮೊರಿ, ಪಾತ್ರೆ, ಪಡಗ, ಚೆಂಬು ಕೊಡಪಾನ, ತಟ್ಟೆ ಕರಟಗಳಿಂದ ಮಾಡಿದ ಸಾರು ಬಡಿಸುವ ಅನ್ನ ಬಡಿಸುವ ಕೈ ತಟ್ಟೆ ಲೋಟಗಳು, ಹಾಗೆಯೇ ಅಕ್ಕಿ, ಮೆಣಸಿನಕಾಯಿ, ನೀರುಳ್ಳಿ ಇತ್ಯಾದಿ ಸಾಮಾನು, ಒಂದು ಹಾಸಿಗೆ ಇದೆ. ಈ ಹಾಸಿಗೆಯ ಕೆಳಗೆ ಆಕೆ ಹಣವಿರಿಸಿದ್ದಾಳೆ ಎಂಬ ಅನುಮಾನ. ಈ ಹಾಸಿಗೆಯ ಕೆಳಗೆ ಆಕೆ ಹಣವಿರಿಸಿದ್ದಾಳೆ ಎಂಬ ಅನುಮಾನ. ಈ ಹಾಸಿಗೆಯ ಮೇಲೆ ಬಸ್ತು, ಜಾನಿ, ನಾತೇಲ ಮಲಗಿದ್ದಾರೆ. ಈಗ ಮೊಮ್ಮಕ್ಕಳೂ ಮಲಗುತ್ತಾರೆ. ಆದರೆ ಬೇರೊಬ್ಬರು ಅಲ್ಲಿ ಪ್ರವೇಶಿಸುವಂತಿಲ್ಲ. ಒಳಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ. ಸಾಂತಾಮೋರಿ ಹೊರ ಬಂದರೆ ಬಾಗಿಲಿಗೆ ಬೀಗ ಜಡಿಯುತ್ತಾಳೆ. ಕುತ್ತಿಗೆಯಲ್ಲಿಯ ಜಪಸರ, ಬಂಗಾರದ ಮಣಿ, ಸರದ ಜತೆಗೆ ಒಂದು ಕರಿ ಹಗ್ಗವಿದೆ. ಅದಕ್ಕೊಂದು ಬೀಗದ ಕೈಗೊಂಚಲು. ಪ್ರತಿ ಸಾರಿ ಹೊರಬಂದು ಬಾಗಿಲು ಹಾಕಿ ಬೀಗ ಸಿಕ್ಕಿಸಿ ಬೀಗ ಹಾಕುತ್ತಾಳೆ ಅವಳು. ಒಳಗೆ ಸಣ್ಣದೊಂದು ಪೆಟ್ಟಿಗೆಯೂ ಇದೆ. ಈ ಪೆಟ್ಟಿಗೆಯ ನೋಟುಗಳು, ನಾಣ್ಯಗಳು ಬಂಗಾರದ ಆಭರಣ ಇದೆ ಎಂಬುದು ಈ ಮಕ್ಕಳ ವಾದ.
ಮಗಳಿಗಾಗಿ ಅವಳು ತುಂಬಾ ಆಭರಣ ಮಾಡಿಸಿದ್ದರು. ಬಳೆ, ಕಿವಿ, ಬೆಂಡೋಲೆ, ಕೆನ್ನೆ ಸರಪಳಿ, ಪವನಿನ ಸರ, ಕಾಸಿನ ಸರ, ಜಡೆ ಬಿಲ್ಲೆ, ಮುಡಿಗೆ ಮುಳ್ಳು ಎಲ್ಲ ಮಾಡಿಸಿದ್ದಳು. ಮಗಳು ಓಡಿ ಹೋಗುವಾಗ ಎಲ್ಲ ಬಿಟ್ಟು ಹೋದಳು. ಅದನ್ನೆಲ್ಲ ಹಾಗೆಯೇ ಇರಿಸಿಕೊಂಡಿದ್ದಾಳೆ. ಸೊಸೆಯಂದಿರಿಗೂ ಕೊಟ್ಟಿಲ್ಲ. ಮೊಮ್ಮಕ್ಕಳಿಗೂ ಕೊಟ್ಟಿಲ್ಲ. ಹಣವಂತೂ ತುಂಬಾ ಇದೆ. ಇದೆಲ್ಲವನ್ನೂ ತಮಗೆ ಕೊಡಲಿ ಎಂಬುದು ಈ ಮಕ್ಕಳ, ಸೊಸೆಯಂದಿರ ಅಭಿಪ್ರಾಯ.
ಸಾಂತಾಮೊರಿಗೆ ಎಪ್ಪತ್ತೈದೋ, ಎಂಬತ್ತೋ ಆಯಿತು. ಇನ್ನೆಷ್ಟು ವರ್ಷ ಬದುಕುತ್ತಾಳೆ ಅವಳು ಎಂದು ಸಿಮೋನ, ಪಾಸ್ಕೊಲ, ಕತ್ರೀನ ಕೇಳುತ್ತಾಳೆ. ಮಕ್ಕಳಿಗೂ ಇದು ಹೌದು ಎನಿಸುತ್ತದೆ.
ದುಡಿದುದನ್ನು ಹೆಂಡಕ್ಕೆ ಹಾಕಿ, ಒಂದಿಷ್ಟನ್ನು ತಾಯಿಯ ಕೈಗೆ ಹಾಕಿ, ಮತ್ತೂ ಒಂದಿಷ್ಟನ್ನು ಹೆಂಡಿರ ಕೈಗೆ ಹಾಕಿ ಈ ಮಕ್ಕಳು ಕೂಗಾಡುತ್ತಾರೆ ನಾವು ಬೇರೆಆಗುತ್ತೇವೆ ಅನ್ನುತ್ತಾರೆ.
“ಏನು..ಈ ಮನೇಲಿ ಎರಡು ಒಲೇನ?” ಸಾಂತಾಮೋರಿ ಕೇಳುತ್ತಾಳೆ. ಇದು ತುಂಬಾ ವಿಚಿತ್ರವೆನಿಸುತ್ತದೆ ಅವಳಿಗೆ. ದಿನನಿತ್ಯ ಇಪ್ಪತ್ತು ಮೂವತ್ತು ಜನ ಒಂದೆಡೆಯಲ್ಲಿ ಕುಳಿತು ಊಟ ಮಾಡುತ್ತಿದ್ದುದು ನೆನಪಿಗೆ ಬರುತ್ತದೆ. ಅನುಕೂಲಕ್ಕೆಂದು ಈ ಎರಡು ಒಲೆಗಳು ಒಂದು ಕೂಡೊಲೆ, ಪಾತ್ರೆ ಸಣ್ಣದೆಂದು ಎರಡು ಮೂರು ಬಾರಿ ಅನ್ನ ಮಾಡುವುದು, ಗಂಜಿ ಬೇಯಿಸುವುದು ನಡೆಯುತ್ತಿತ್ತು. ಸಾಕಷ್ಟು ದೊಡ್ಡ ಅಡಿಗೆ ಮನೆ. ಊಟದ ಮನೆ ಕೂಡ ದೊಡ್ಡದೆ. ಆದರೆ ಮನೆಯನ್ನೇ ಎರಡು ಭಾಗವನ್ನಾಗಿ ವಿಭಜಿಸಿದ ಘಟನೆ ಈವರೆಗೆ ನಡೆದಿರಲಿಲ್ಲ.
ಒಟ್ಟಿಗೇ ಅಡಿಗೆ ಮಾಡಿ ಒಟ್ಟಿಗೇನೆ ಕುಳಿತು ಊಟ ಮಾಡುವ ಸಂಪ್ರದಾಯ ನಡೆದು ಬಂದ ಈ ಮನೆಯಲ್ಲಿ ಎರಡು ಒಲೆಗಳನ್ನು ಹೂಡಿದ ನಂತರ ಏನಾದೀತು? ಮೊಮ್ಮಕ್ಕಳು ಬೇರೆ ಬೇರೆ ಕುಳಿತು ಬೇರೆ ಬೇರೆ ಊಟ ಮಾಡುತ್ತಾರೆ. ಸೊಸೆಯಂದಿರು ಅವರವರ ಗಂಡಂದಿರಿಗೆ ಮಕ್ಕಳಿಗೆ ಬಡಿಸುತ್ತಾರೆ. ತಾನು ಊಟ ಮಾಡುವುದು ಎಲ್ಲಿ? ಇಲ್ಲ ತಾನೂ ಮೂರನೇ ಒಲೆ ಹೂಡಬೇಕೆ?
ಸಾಂತಾಮೊರಿ ಜಗಲಿಯ ಆ ತುದಿಗೊಬ್ಬ ಈ ತುದಿಗೊಬ್ಬರಂತೆ ಕುಳಿತ ಮಕ್ಕಳನ್ನು ನೋಡಿದಳು. ಅವಳ ತೊಡೆಯ ಮೇಲೆ ಈ ಇಬ್ಬರೂ ಮಕ್ಕಳು ಹೆತ್ತ ಕರುಳು ತುಂಡುಗಳು ತೊಡೆಗೆ ತಲೆಯೂರಿ ಮಲಗಿದ್ದವು. ಮೊಮ್ಮಕ್ಕಳ ತಲೆ ನೇವರಿಸಿ ಅವಳೆಂದಳು.
“…ಈ ಮನೇಲಿ ಎರಡು ಒಲೆ ಹೂಡಲಿಕ್ಕೆ ನಾನು ಬಿಡೋದಿಲ್ಲ..”
“..ಮತ್ತೆ?”
“ನೀವು ಬೇರೆ ಮನೆ ಮಾಡಿ” ಬಿಗಿ ಮಾತಿನಲ್ಲಿಯೇ ಅವಳು ಉತ್ತರಿಸಿದಳು.
ಬಸ್ತು, ಜಾನರು ಇದನ್ನು ನಿರೀಕ್ಷಿಸಿರಲಿಲ್ಲ. ಅವರಿಬ್ಬರೂ ಬೇರೆ ಬೇರೆ ಮನೆ ಮಾಡಲು ನಿರ್ಧರಿಸಿದ್ದರು. ಯಾವುದಾದರೂ ರೀತಿಯಲ್ಲಿ ತಾಯಿಯನ್ನು ತನ್ನ ಮನೆಯಲ್ಲಿರಿಸಿಕೊಂಡರೆ ಕತ್ತಲೆ ಕೋಣೆಯಲ್ಲಿ ಅವಳು ಗುಪ್ತವಾಗಿ ಇರಿಸಿರುವ
ಹಣ ಬಂಗಾರ ತನ್ನದಾಗುತ್ತದೆ ಎಂದು ಬಸ್ತು ತಿಳಿದ ಹಾಗೆಯೇ ಜಾನಿಕೂಡ ಯೋಚಿಸಿದ್ದ. ಮನೆಯಲ್ಲಿ ಎರಡು ಒಲೆ ಮಾಡಿದ ಕೂಡಲೆ ಅವಳು ಒಂದಲ್ಲ ಒಂದು ಕಡೆ ಸೇರಿಕೊಳ್ಳಬೇಕಲ್ಲ. ಅವಳು ಮೊದಲಿನಿಂದಲೂ ತನ್ನನ್ನೇ ಹೆಚ್ಚು ಪ್ರೀತಿಸುವುದರಿಂದ ತನ್ನ ಬಳಿಯೇ ಇರುತ್ತಾಳೆ ಎಂದು ಬಸ್ತು ನಿರೀಕ್ಷಿಸಿದ್ದ.
ಆದರೆ ನೀವು ಬೇರೆ ಮನೆ ಮಾಡಿ ಎಂದಾಗ ಇಬ್ಬರಿಗೂ ನಿರಾಶೆಯಾಯಿತು. ಬೇರೆ ಮನೆ ಎಂದರೆ ಅವಳು ಈ ಮನೆ ಬಿಡುವುದಿಲ್ಲ. ಕತ್ತಲೆ ಕೋಣೆ ಖಾಲಿಯಾಗುವುದಿಲ್ಲ.
“ಆಯ್ತು..ಮನೆ ಬೇರೆ ಮಾಡತೇವೆ..ನಮ್ಮದನ್ನ ನಮಗೆ ಕೊಡು..” ಎಂದ ಬಸ್ತು ಹೀಗಾದರೂ ಒಂದು ತೀರ್ಮಾನವಾಗಲಿ ಎಂದು.
“ಏನದು ನಿನ್ನ ಪಾಲಿನದು? ಏನು ನಿಮ್ಮಪ್ಪ ಮಾಡಿದ ಆಸ್ತಿ ಇದೆಯೆ ಇಲ್ಲಿ..ಇಲ್ಲ ನಿಮ್ಮಜ್ಜ ಮಾಡಿದ್ದು ಇದೆಯೆ?” ಎಂದು ಕೆಣಕಿದಳು ಸಾಂತಾಮೋರಿ.
ಘಟ್ಟದ ಕೆಳಗಿನಿಂದ ಅವಳು ಬರುವಾಗ ತಂದದ್ದು ಸಣ್ಣದೊಂದು ಬಟ್ಟೆಯ ಗಂಟು, ಪೊಟ್ಲಿ. ಈಗ ಮನೆಯಲ್ಲಿ ಏನೇನಿದೆ ಅದೆಲ್ಲವನ್ನೂ ಮಾಡಿದವಳು ತಾನು. ಈ ಮಕ್ಕಳು ದುಡಿಯುತ್ತಾರೆಂದು ಒಂದು ಸೂಜಿ ಕೂಡ ಈವರೆಗೆ ಮನೆಗೆ ಅಂತ ತಂದುದಿಲ್ಲ. ಇನ್ನು ಇವರದ್ದು ಏನಿದೆ ಇಲ್ಲಿ.
“ಕತ್ತಲೆ ಕೋಣೆಯಲ್ಲಿ ಮುಚ್ಚಿ ಇಟ್ಟೀದಿಯಲ್ಲ..ಅದೆಲ್ಲ ಯಾರಿಗೆ? ಬೇರೆ ಮನೆ ಮಾಡಬೇಕು ಅಂದ್ರೆ ಹಣ ಬೇಡ್ವ..” ಎಂದ ಜಾನಿ.
ಕತ್ತಲೆ ಕೋಣೆಯ ವಿಷಯ ಬಂದ ಕೂಡಲೆ ಸಾಂತಾಮೋರಿಗೆ ಚೇಳು ಕುಟುಕಿದಂತಾಯಿತು. ಅವಳು ಅಲ್ಲಿ ಹಣ ಇರಿಸಿದ್ದಳು. ಬಂಗಾರ ಇರಿಸಿದ್ದಳು. ಸತ್ತ ಮೇಲೆ ಕೊಂಡೊಯ್ಯಲೆಂದು ಇರಿಸಿದ್ದು ಅಲ್ಲ ಅದು. ಮಕ್ಕಳಿಗೆ ಮೊಮ್ಮಕ್ಕಳಿಗೆ ಕಷ್ಟ ಕಾಲದಲ್ಲಿ ಆದೀತೆಂದು ಇರಿಸಿದ್ದು. ಈಗ ತಾನು ಈ ಮನೆಯನ್ನು ನೋಡಿಕೊಳ್ಳುತ್ತಿರುವುದೇ ಆ ಹಣದಿಂದ. ಆ ಹಣವನ್ನು ಈಗ ಈ ಇಬ್ಬರಿಗೆ ಹಂಚಿ ಬಿಟ್ಟರೆ ನಾಳೆ ಮೊಮ್ಮಕ್ಕಳ ಗತಿ?
“ಜಾನಿ..ಅದೆಲ್ಲ ನೀನು ನನಗೆ ಕೇಳಬೇಡ..ನಿನಗೆ ಈ ಮನೇಲಿ ಇರಲಿಕ್ಕೆ ಮನಸ್ಸಿಲ್ಲ ಈಗಿಂದೀಗಲೇ ಹೊರಡು..ಹ್ಯಾಗೂ ದುಡೀತೀರಲ್ಲ..ನಿಮ ನಿಮ ಹೆಂಡಿರು ಮಕ್ಕಳನ್ನು ನೀವು ಸಾಕಿ..ನಿಮ್ಮ ಹೊಟ್ಟೆಗೆ ತಂದು ಹಾಕಿ ಹಾಕಿ ನನಗೆ ಸಾಕಾಗಿ ಹೋಗಿದೆ..” ಎಂದಳು ಸಾಂತಾ ಮೋರಿ.
ಈ ಮಾತು ಬೆಳೆಯುತ್ತಿರುವಾಗಲೇ ಸಿಮೋನ ಮನೆಗೆ ಬರುತ್ತಿದ್ದವ ಇವರ ಮನೆ ಬಳಿ ನಿಂತ.
“ಏನದು ಗಲಾಟೆ?” ಎಂದು ಸಾಂತಾ ಮೋರಿ ಮನೆ ಅಂಗಳಕ್ಕೆ ಕಾಲಿಟ್ಟ.
“ನೋಡು ಸಿಮೋನ..” ಎಂದು ಸಾಂತಾ ಮೋರಿ ಮುಖ ಬಡಿಸಿಕೊಂಡಳು.
“ಯಾಕ್ರೋ..ಕಷ್ಟಾನೋ ಸುಖಾನೋ ಒಂದಾಗಿ ಇರಬೇಕು..ಒಂದೇ ಮನೇಲಿ ಎರಡು ಒಲೆ ಹೂಡೋದು..ಅಣ್ಣ ತಮ್ಮಂದಿರು ಬೇರೆಯಾಗೋದು..ಆಸ್ತೀಲಿ ಪಾಲು ಕೇಳೋದು..ಏನದು?” ಎಂದ ಸಿಮೋನ ಗುರ್ಕಾರನ ಗತ್ತಿನಲ್ಲಿ.
“ಗುರ್ಕಾರ ಮಾಮ..ನಿಮ ಮನೆ ಕತೇನೆ ಹಳಸಿಕೊಂಡು ಕೂತಿದೆ..ನೀವು ಇಲ್ಲಿ ಯಾಕೆ ಬಂದ್ರಿ?” ಎಂದು ವ್ಯಂಗ್ಯವಾಗಿ ಕೇಳಿದ ಬಸ್ತು.
ಸಿಮೋನನ ಮಗ ವಿಕ್ಟರ್ ಆಗಲೇ ಬೇರೊಂದು ಮನೆ ಹುಡುಕುತ್ತಿರುವುದು ಕೇರಿಗೆಲ್ಲ ಗೊತ್ತಾಗಿತ್ತು.
“ಹಲ್ಲು ಉದುರಿಸಿ ಬಿಟ್ಟೇನು” ಎಂದು ಎರಡು ಹೆಜ್ಜೆ ಮುಂದಿಟ್ಟ ಸಿಮೋನ. ನಿನ್ನೆ ಮೊನ್ನೆಯವರೆಗೆ ಊಟ ಮಾಡಿದವರ ತಟ್ಟೆ ತೊಳೆದಿಡುತ್ತಿದ್ದ ಹುಡುಗ ನಾಲಿಗೆಯನ್ನು ಇಷ್ಟ ಉದ್ದ ಮಾಡುವುದೇ? ಬಸ್ತು ಕೂಡ ಹಿಂದೆ ಸರಿಯಲಿಲ್ಲ. ಮಾತು ಮಾತಿಗೆ ಸೇರಿ ಸಿಮೋನ ಬಸ್ತುವಿನ ಕೆನ್ನೆಗೆ ಹೊಡೆದ. ಬಸ್ತು ಕೂಡ ಕೈ ಉದ್ದ ಮಾಡಲಿದ್ದಾಗ ಸಾಂತಾಮೋರಿ ಅವನನ್ನು ತಡೆದಳು. ಇದೇ ಮೂಲ ಕಾರಣವಾಗಿ ಬಸ್ತು ಜಾನರು ಆ ಮನೆ ಬಿಟ್ಟು ಬೇರೆ ಮನೆ ಮಾಡಿದರು. ಊಟದ ಮನೆಯಲ್ಲಿ ಈಗ ಸಾಂತ ಮೋರಿಯೊಬ್ಬಳೆ. ಅವಳು ಕತ್ತಲೆ ಕೋಣೆ ಸೇರಿದರೆ ಹೊರಬೀಳುವುದೇ ಕಡಿಮೆಯಾಯಿತು.
-೭-
ಎಮ್ಮೆ ಮರಿಯಳ ಕೊಟ್ಟಿಗೆ ಈಗ ಬರಿದಾಗಿದೆ. ಹಿಂದಿನಂತೆ ಕೆಲಸ ಮಾಡಲು ಆಗುವುದಿಲ್ಲ ಎಂಬುದನ್ನು ಅರಿತ ಅವಳು ನಿಧಾನವಾಗಿ ವರ್ತನೆ ಮನೆಗಳಿಗೆ ಹಾಲು ಕೊಡುವುದನ್ನು ನಿಲ್ಲಿಸಿದಳು. ಹಿಂದೆಲ್ಲ ಎಮ್ಮೆಗಳು ಹಾಲು ಬತ್ತಿಸಿಕೊಂಡಾಗ ಹೊಸ ಎಮ್ಮೆ ತರುತ್ತಿದ್ದವಳು. ಹೊಸ ಎಮ್ಮೆ ಕೊಳ್ಳುವುದನ್ನು ಬಿಟ್ಟಳು. ಎರಡು ಎಮ್ಮೆಗಳು ಕೊಟ್ಟಿಗೆಯಲ್ಲಿಯೇ ಸತ್ತವು. ಒಂದು ಸೊರಬದ ಸೇತುವೆಯ ಮೇಲೆ ಶೇಂದಿ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಸತ್ತಿತು. ಉಳಿದ ಎಮ್ಮೆಗಳನ್ನು ಹಳ್ಳಿಗೆ ಹೊಡೆದಳು. ಅಲ್ಲಿ ಯಾರೋ ಅವುಗಳನ್ನು ಕೊಂಡರು. ಈಗ ಕೊಟ್ಟಿಗೆಯಲ್ಲಿ ಒಂದು ಹಸುವಿದೆ. ತುಂಬಿಕೊಂಡ ಕೊಟ್ಟಿಗೆಯನ್ನು ಬರಿದಾಗಿಸಬಾರದೆಂದು ಈ ಹಸು ಕಟ್ಟಿದ್ದಾಳೆ. ಜತೆಗೆ ಮನೆಯಲ್ಲಿ ಮೊಮ್ಮಕ್ಕಳಿಗೆ ಹಾಲು ಬೆಕಲ್ಲ.
ಗಾಡಿ ಮಂಜನ ತಾಯಿ ರುದ್ರಮ್ಮ ಪ್ರೀತಿಯಿಂದ ನೋಡಿಕೊಂಡ ಮಗಳು ಫ಼ಿಲೋಮೆನಾ ಗಂಡನ ಮನೆ ಸೇರಿದ್ದಳು. ಮದುವೆಯಾಗಿ ಹೋದವಳನ್ನು ಗಂಡ ಮತ್ತೆ ತಾಯಿಯ ಮನೆಗೆ ಕಳುಹಿಸಿರಲಿಲ್ಲ. ಮದುವೆಗೆ ಬಂದಾಗ ತನ್ನ ಕಡೆಯವರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಎಮ್ಮೆ ಕೊಟ್ಟಿಗೆಯ ಮಗ್ಗುಲಲ್ಲಿಯ ಕೋಣೆಯಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ಊಟ ಉಪಚಾರ ಸರಿ ಹೋಗಲಿಲ್ಲ ಎಂಬ ಕಾರಣವನ್ನೇ ದೊಡ್ಡದು ಮಾಡಿ ಆತ ಫ಼ಿಲೋಮೆನಾಳನ್ನು “ನೀನು ಮತ್ತೆ ತಾಯಿ ಮನೆ ಅಂದ್ರೆ ಬರೆ ಹಾಕತೀನಿ..” ಎಂದು ಬೆದರಿಸಿ ಇಟ್ಟಿದ್ದ. ಮಂಜನ ತಾಯಿ ರುದ್ರಮ್ಮ ಹಾಸಿಗೆ ಹಿಡಿದವಳು.
“ಪಿಲ್ಲಮ್ಮ..ಪಿಲ್ಲಮ್ಮ” ಎಂದು ಕನವರಿಸಿ ಮರಿಯಳ ಮಗ ಗುಸ್ತೀನ ಹೀಗೆ ಫ಼ಿಲೋಮೆನಾಳನ್ನು ಕಳುಹಿಸಿ ಎಂದು ಜನರ ಮೂಲಕ ಹೇಳಿ ಕಳುಹಿಸಿದ್ದರೂ ಫ಼ಿಲೋಮೇನಾ ಬಂದಿರಲಿಲ್ಲ. ಇಲ್ಲಿ ರುದ್ರಮ್ಮ ಇದೊಂದು ಕೊರಗು ಇರಿಸಿಕೊಂಡು ಸತ್ತಿದ್ದಳು. ಹಲವಾರು ವರ್ಷಗಳಿಂದ ಮಗಳನ್ನು ಕಾಣದ ಮರಿಯ-
“ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತ ಗಾದೆ ಉಂಟಲ್ಲ” ಎಂದು ಕೊರಗನ್ನು ಕಡಿಮೆ ಮಾಡಿದ್ದಳು.
ಈಗ ಇವಳಿಗೆ ನೆಮ್ಮದಿ ಎಂದರೆ ಮೂವರು ಮಕ್ಕಳೂ ಮದುವೆಯಾಗಿದ್ದರು. ಹಿರಿಯ ಮಗ ಗುಸ್ತೀನ ಬ್ಯಾಂಕಿನಲ್ಲಿ ಅಟೆಂಡರ್ ಆಗಿದ್ದ. ಎರಡನೆಯವ ದುಮಿಂಗ ವೆಟರನರಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದ. ಮೂರನೆಯವ ಸರಕಾರಿ ಆಸ್ಪತ್ರೆಯಲ್ಲಿ ವಾರ್ಡಬಾಯ್..ದೇವರ ದಯೆಯಿಂದ ಮೂವರೂ ಒಟ್ಟಿಗೇನೆ ಇದ್ದರು. ಸೊಸೆಯಂದಿರಾಗಿ ಮನೆಗೆ ಬಂದವರು ಕೂಡ ಒಳ್ಳೆಯ ಹುಡುಗಿಯರೆ. ಮಂಕಿ, ಹಡಿನಬಾಳ, ಕೂಡ್ಲದಿಂದ ಬಂದ ಈ ಹುಡುಗಿಯರು ಮನೆಯ ವಾತಾವರಣಕ್ಕೆ ಹೊಂದಿಕೊಂಡರು. ಕೊಟ್ಟಿಗೆಯಲ್ಲಿ ಎಮ್ಮೆ ಶಗಣೆ ಬಾಚಿದರು. ಎಮ್ಮೆಗಳ ಮೈ ತೊಳೆದು ಹಾಲು ಕರೆದರು.
ನಿತ್ಯ ಒಟ್ಟಿಗೇನೆ ಪ್ರಾರ್ಥನೆ ಮಾಡುತ್ತಾರೆ.
“ಮಾಯಂ ಬೆಸಾಂವಂದೀ” ಎಂದು ಸೊಸೆಯಂದಿರು, ಮಕ್ಕ್ಳು, ಮೊಮ್ಮಕ್ಕಳು ಬಂದು ಎದುರು ನಿಂತು ಕೈ ಮುಗಿಯುವಾಗ ಮರಿಯಾಗೆ ಕಣ್ಣುಗಳು ತುಂಬಿ ಬರುತ್ತವೆ.
ಎಲ್ಲರನ್ನೂ ದೇವರ ಹೆಸರಿನಲ್ಲಿ ಆಶೀರ್ವದಿಸುತ್ತಾಳೆ. ಪ್ರತಿ ಮೊಮ್ಮಗನ, ಮೊಮ್ಮಗಳ ಕೈಹಿಡಿದು “ಹೋಡಜಾ” “ಹೋಡಜಾ” (ದೊಡ್ಡವನಾಗು ದೊಡ್ಡವನಾಗು) ಎಂದು ಹೇಳುವಾಗ ಹೃದಯ ಹೂವಿನಂತೆ ಅರಳುತ್ತದೆ.
ಏಕೋ ಅವಳಿಗೆ ತಟ್ಟನೆ ಹಿಂದಿನದೆಲ್ಲ ನೆನಪಿಗೆ ಬರುತ್ತದೆ. ಇಲ್ಲಿ ಬಂದು ಕೆಲಸ ಮಾಡಿದರೆ ಒಂದಿಷ್ಟು ಹಣ ಮಾಡಬಹುದೆಂದು ಕಾಯ್ಕಿಣಿಯರ ಒಡೆಯರ ತೋಟ ಬಿಟ್ಟು ಇಲ್ಲಿಗೆ ಬಂದದ್ದು. ಗಂಡನ ಹಿಂದೆಯೇ ತಾನೂ ಬಂದೆ. ಗಂಡ ಸಂತಿಯಾಗ ಶೆಟ್ಟಿಹಳ್ಳಿ ಶ್ರೀಮಂತರ ಮನೆ ಕಟ್ಟುವಾಗ ಮನೆಯ ಮೇಲಿನಿಂದ ಬಿದ್ದು ಸತ್ತ. ಅಂದು ಕ್ರಿಶ್ಚಿಯನ್ನರು ಸತ್ತರೆ ಹುಗಿಯಲು ಊರಿನಲ್ಲಿ ಸಿಮಿತ್ರಿ ಇರಲಿಲ್ಲ. ಜತೆಗೆ ನೆಂಟರು ಇಷ್ಟರು ಇಲ್ಲದ ಕಡೆ ಗಂಡನನ್ನು ಮಣ್ಣು ಮಾಡಿ ತಿರುಗಿ ಬಂದೆ. ಎಮ್ಮೆ ಕಟ್ಟಿದೆ. ಪಾದರಿ ಗೋನಸ್ವಾಲಿಸ್ ಊರಿಗೆ ಬಂದ ನಂತರ ತನ್ನ ಮಕ್ಕಳ ಬದುಕಿಗೆ ಒಂದು ಕ್ರಮ ವಿಧಾನ ಬಂದಿತು. ಮಕ್ಕಳನ್ನು ಪಾದರಿಗಳ ಮಾತಿಗೆ ಬೆಲೆ ಕೊಟ್ಟು ಸರಕಾರಿ ಶಾಲೆಗೆ ಕಳುಹಿಸಿದೆ. ಮನೆ ಮನೆಗೆ ಹಾಲು ಕೊಡುತ್ತ ಮನೆಗೆ ಬಾರದ ಎಮ್ಮೆಗಳನ್ನು ಹುಡುಕಿ ತರುತ್ತ, ಇಗರ್ಜಿ ಪೂಜೆ, ಪ್ರಾರ್ಥನೆ ಎಂದು ಆ ಕೆಲಸ ಮಾಡುತ್ತ ಹುಡೂಗರು ಐದು ಆರನೆ ತರಗತಿಯವರೆಗೆ ಓದಿದರು.
ಮಕ್ಕಳಿಗೆ ಒಂದೊಂದು ಕೆಲಸ ಬೇಕಲ್ಲ. ಕ್ರೀಸ್ತುವರಿಗೊಂದು ಕೆಲಸ ಇತ್ತಾದರೂ ತನ್ನ ಗಂಡನ ತಲೆಗೇನೆ ಈ ಕೆಲಸ ಅಂತ್ಯ ಕಂಡಿತು. ಆ ಕೆಲಸ ಕೂಡ ಮಕ್ಕಳಿಗೆ ಬೇಡ ಎನಿಸಿತು. ತಾನೇ ಅವರಿವರನ್ನು ಕಂಡೆ. ಬ್ಯಾಂಕಿನ ಅಧ್ಯಕ್ಷರನ್ನು ಕಂಡೆ, ದನದ ಆಸ್ಪತ್ರೆ ವೈದ್ಯರನ್ನು ಕಂಡೆ. ಸರಕಾರಿ ಆಸ್ಪತ್ರೆ ವೈದ್ಯರು ಬಲ್ಲವರಾಗಿದ್ದರು.
“ರಾಯರೆ..ನಮ ಹುಡುಗನಿಗೆ ಒಂದು ಕೆಲಸ ಕೊಡಿಸಿ” ಎಂದೆ.
ಈ ಎಲ್ಲರ ಮನೆಗಳಿಗೂ ಹಾಲು ಕೊಡುತ್ತಿದ್ದವಳು ತಾನು. ದೊಡ್ಡವರ ಮನೆಗಳಿಗೆ ನೀರು ಬೆರೆಸದೆ ಹಾಲು ಸರಬರಾಜು ಮಾಡುತ್ತಿದ್ದೆ.
“ಕಳಿಸು..ಮಗ ಓದಿದಾನ?” ಎಂದು ಕೇಳಿದರು. ಗುಸ್ತೀನ, ದುಮಿಂಗ, ಬಸ್ತು ಈ ಮೂವರಿಗೂ ಕೆಲಸವಾಯಿತು. ತುಂಬಾ ಗೌರವದ ಕೆಲಸ. ಬೇರೆ ಕ್ರೀಸ್ತುವರ ಮಕ್ಕಳು ಬಾಚಿ ಹೆಗಲಿಗೇರಿಸಿಕೊಂಡು ಹೋಗುತ್ತಿದ್ದರೆ ತನ್ನ ಮಕ್ಕಳು ಶುಚಿಯಾದ ಬಟ್ಟೆ ಧರಿಸಿ, ಆಫ಼ೀಸರುಗಳ ಹಾಗೆ ಕೆಲಸಕ್ಕೆ ಹೋಗುವುದನ್ನು ಕಂಡಾಗ ಸಂತಸವಾಗುತ್ತಿತ್ತು.
ಮಕ್ಕಳು ಮುಂದೆಯೂ ಈ ಗೌರವವನ್ನು ಉಳಿಸಿಕೊಂಡರು. ಒಂದು ಕುಡಿಯುವುದಿಲ್ಲ, ಇಸ್ಪೀಟ ಆಡುವುದಿಲ್ಲ. ಬೀಡಿ ಸಿಗರೇಟು ಮುಟ್ಟಲಿಲ್ಲ. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸುತ್ತಿದ್ದಾರೆ. ಇದೇ ಸಂತಸ ಮರಿಯಳಿಗೆ.
ಆದರೂ ಒಂದು ಕೊರತೆ.
ಮೂವರು ಮಕ್ಕಳ ಸಂಸಾರ ಬೆಳೆಯುತ್ತಿದೆ. ಈ ಮೂವರಿಗೂ ಒಂದೊಂದು ಮನೆ ಮಾಡಿಕೊಟ್ಟರೆ ಆಗುತ್ತಿತ್ತೇನೋ ಎನಿಸುತ್ತದೆ. ತನ್ನ ಹಳೆಯ ಮನೆಯಲ್ಲಿ ಇವರು ಎಷ್ಟು ದಿನ ಇದ್ದಾರು. ಈ ವಿಚಾರ ಅವಳ ತಲೆಯಲ್ಲಿ ಬಂದ ಕೆಲವೇ ದಿನಗಳಲ್ಲಿ ಮೂರನೇ ಮಗ ಬಸ್ತು ಅವಳ ಬಳಿ ಬಂದ. ಅವನಿಗೆ ಆಸ್ಪತ್ರೆ ಬಸ್ತು ಎಂಬ ಹೆಸರು ಬಿದ್ದಿತ್ತು. ಊರಿನಲ್ಲಿ ಬಸ್ತು ಎಂದು ಹೆಸರಿರುವವರು ಬೇರೆಯವರೂ ಇದ್ದುದರಿಂದ ಇವನಿಗೆ ಈ ಹೆಸರು-
“ಮಾಯ್..” ಎಂದ ಆತ
“ಏನು ಬಸ್ತು?”
“ಮುನಿಸಿಪಾಲಿಟಿಯವರು ಜಾಗ ಇಲ್ಲದವರಿಗೆ ಜಾಗ ಮಂಜೂರು ಮಾಡತಿದಾರೆ..”
“ಹೌದು”
“ಹೌದು ನಾನೊಂದು ಅರ್ಜಿ ಹಾಕಿಕೊಂಡಿದೀನಿ..ದುಮಿಂಗನಿಗೂ ಹೇಳಿದೀನಿ..ನಮಗೆ ಜಾಗ ಸಿಕ್ಕರೆ ಸರಕಾರದಿಂದ ಮನೆಕಟ್ಟಲಿಕ್ಕೆ ಹಣಾನೂ ಸಿಗುತ್ತೆ..”
“ಒಳ್ಳೆ ಕೆಲಸ ಮಾಡಿದ್ರ..”
ಅಂದು ಮರಿಯ ಮಕ್ಕಳು ತಂದು ಕೊಟ್ಟ ಹಣದಲ್ಲಿ ಐವತ್ತು ರೂಪಾಯಿಗಳನ್ನು ದೇವರ ಪೀಠದಲ್ಲಿ ದೇವರ ಇಮಾಜಿನ ಪದತಳದಲ್ಲಿ ಇರಿಸಿದಳು. ದೋರನಳ್ಳಿಯ ಸಂತ ಅಂತೋನಿಯ ಹೆಸರಿನಲ್ಲಿ ಒಂದು ಮೇಣದ ಬತ್ತಿ ಹಚ್ಚಿ ಶಿಲುಬೆಯ ವಂದನೆ ಮಾಡಿದಳು..ದೋರ್ನಹಳ್ಳಿಗೆ ಹೋಗುವವರು ಸಿಕ್ಕಾಗ ಈ ಹಣವನ್ನು ದೇವರಿಗೆ ತಲುಪಿಸಬೇಕು ಅಂದುಕೊಂಡಳು.
ಅವಳ ಹರಕೆ ದೇವರಿಗೆ ತಲುಪಿತೇನೋ ಅನ್ನುವ ಹಾಗೆ ಆಸ್ಪತ್ರೆ ಬಸ್ತು ಹಾಗೂ ದುಮಿಂಗನಿಗೆ ಮುನಸಿಪಾಲಿಟಿಯಿಂದ ಜಾಗ ಮಂಜೂರಾಯಿತು. ಕೂಡಲೇ ಅವರು ಮನೆ ಕಟ್ಟಲು ಮುಂಗಡ ಹಣ ನೀಡುವಂತೆ ಸರಕಾರಕ್ಕೆ ಅರ್ಜಿ ಕೂಡ ಹಾಕಿದರು. ಶಿವಸಾಗರ ಜಯಪ್ರಕಾಶನಗರದಲ್ಲಿ ಹೊಸ ಮನೆಗಳನ್ನು ಕಟ್ಟುವ ಸಿದ್ಧತೆಗೂ ಅವರು ತೊಡಗಿದರು.
*
*
*
ಜಯಪ್ರಕಾಶ ನಗರದಲ್ಲಿ ಮೂರನೇ ತಿರುವಿನ ಮೊದಲ ಎರಡು ಮನೆಗಳು ಕಂಟ್ರ್ಯಾಕ್ಟರ್ ಕುಂಜುಮನ್ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವಾಗಲೇ ಜೋಸೆಫ಼ ನಗರದ ಸುತಾರಿ ಇನಾಸನ ಮನೆ ನೆಲಸಮವಾಯಿತು. ಸುಮಾರು ಐವತ್ತು ವರ್ಷಗಳ ಹಿಂದೆ ಸುಣ್ಣದ ರುದ್ರ ಕಟ್ಟಿದ ಮನೆಯನ್ನು ಬೀಳಿಸುವುದು ಏನೂ ಕಷ್ಟವಾಗಲಿಲ್ಲ. ಮಣ್ಣಿನ ಗೋಡೆಗಳು ಆಗಲೇ ಜೀರ್ಣಗೊಂಡಿದ್ದವು. ಬೊಂಬು ಹೊದಿಸಿದ ಮಾಡು ಸುರುಬು ಹತ್ತಿತ್ತು. ಮರದ ಬಾಗಿಲುಗಳು ಹುಳ ಹಿಡಿದು ಟೊಳ್ಳಾಗಿದ್ದವು. ಬಹಳ ಮುಖ್ಯವಾಗಿ ಸುತಾರಿ ಇನಾಸ ಒಂದು ಶುಕ್ರವಾರ ಶಿಲುಬೆಯ ಎದುರು ನಿಂತು ಕೈ ಮುಗಿದು-ದೇವಾ_ಎಂದು ದೇವರನ್ನು ಕರೆಯುತ್ತ ಹೋಗಿ ಮನೆ ಜಗಲಿಯ ಮೇಲೆ ಕುಳಿತವ ಅಲ್ಲೇ ಕುಸಿದು ಬಿದ್ದಿದ್ದ.
ಅದು ಶಿಲುಬೆಯ ಪ್ರಾರ್ಥನೆಗೆ ಜನ ಸೇರುವ ಸಮಯ. ಬಂದವರು ಯಾರೋ ಪಾದರಿ ಸಿಕ್ವೇರಾ ಅವರನ್ನು ಕರೆಯಲು ಓಡಿದರು. ಅವರು ಮೋಟಾರ ಬೈಕ್ ಹತ್ತಿ ಬಂದವರು ಕೊಂಚ ಬಿಸಿಯಾಗಿದ್ದ ಇನಾಸನಿಗೆ ಅಂತ್ಯ ಅಭ್ಯಂಜನ ನೀಡಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿ ಹೋದರು.
ಈ ಕಡೆ ಜನರ ಪ್ರಾರ್ಥನೆ ಮುಂದುವರಿದಿರಲು ಅತ್ತ ಕೆಲವರು ಇನಾಸನ ದೇಹಕ್ಕೆ ಮಜ್ಜನ ಮಾಡಿಸಿದರು. ಕೂಡಲೇ ಬಿಳಿ ಉಡುಗೆ ಸಿದ್ಧವಾಯಿತು. ಪೆಟ್ಟಿಗೆ ಮಾಡಲು ಸುತಾರಿ ಬಂದು ಅಂದಾಜಿನ ಅಳತೆ ತೆಗೆದುಕೊಂಡು ಹೋದ. ಚಮಾದೋರ ಇಂತ್ರು ಸಿಮಿತ್ರಿಯಲ್ಲಿ ಹೊಂಡ ತೋಡಲು ಹಾರೆ, ಪಿಕಾಸಿ ಹಿಡಿದು ನಡೆದ.
ಇನಾಸನ ಹೆಣ್ಣು ಮಕ್ಕಳಿಗೆ ಟೆಲಿಗ್ರಾಂ ಗಳನ್ನು ಕಳುಹಿಸಲಾಯಿತು. ಗಂಡು ಮಕ್ಕಳು ಜಗಲಿಯ ಮೇಲೆ ಕುಳಿತರು. ಮೊನ್ನೆ ಒಳ ಬಾಗಿಲಿಗೆ ಒರಗಿ ಕುಳಿತಳು.
ದೇವರ ಅಲ್ತಾರಿನ ಮುಂದೆ ಮೇಣದ ಬತ್ತಿಗಳು ಉರಿಯುತ್ತಿರಲು ಹೊರಗೆ ಸೇರಿದ ಜನ ನಿಧಾನವಾಗಿ ಒಳ ಬಂದು ಕುಳಿತು ಪ್ರಾರ್ಥನೆ, ಕೀರ್ತನೆಗಳನ್ನು ಮುಂದುವರೆಸಿದರು.
ಮಾರನೇ ದಿನ ಹನ್ನೆರಡು ಗಂಟೆಗೆಲ್ಲ ಇನಾಸನ ಹೆಣ್ಣುಮಕ್ಕಳು ಧಾವಿಸಿ ಬಂದರು.
“ಬಾಬಾ..ಬಾಬಾ” ಎಂದು ತಂದೆಯ ಶವದ ಮೇಲೆ ಬಿದ್ದು ಅವರು ಅತ್ತರು. ಇಂತ್ರು ಮೂರು ಗಂಟೆಗೆ ಮರಣ ಎಂದು ಮನೆ ಮನೆಗೆ ಹೋಗಿ ಹೇಳಿ ಬಂದ.
ರೈಮಂಡನ ಸಹಾಯಕರು ಮರಣ ಸೂಚಕವಾದ ರಾಗವನ್ನು ಬಾರಿಸುತ್ತಿರಲು ಇನಾಸನ ಶವಯಾತ್ರೆ ಮನೆಯಿಂದ ಹೊರಟಿತು. ಶವ ಪೆಟ್ಟಿಗೆಯನ್ನು ಶಿಲುಬೆಯ ಮೂಂದೆ ಇರಿಸಿ ಅಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಇಗರ್ಜಿ. ಅಲ್ಲಿಂದ ಸಿಮಿತ್ರಿ. ಪಾದರಿಗಳ ಪ್ರಾರ್ಥನೆ ಇತರೆ ಸಂಸ್ಕಾರಗಳು ಮುಗಿದ ನಂತರ ಇಂತ್ರು ಹೊಂಡಕ್ಕೆ ಇಳಿದು ಪೆಟ್ಟಿಗೆಯನ್ನು ಒಳಗೆ ಇಳಿಸಿಕೊಂಡ. ಅದನ್ನು ಸರಿಯಾಗಿ ಇರಿಸಿ ಹೊಂಡದ ಎರಡೂ ದಂಡೆಯ ಮೇಲೆ ಕೈ ಇರಿಸಿ ಆತ ಮೇಲೆ ಬಂದ ನಂತರ ಪಾದರಿ ಮೊದಲನೆಯವರಾಗಿ ಮೂರು ಹಿಡಿ ಮಣ್ಣನ್ನು ಹಾಕಿದರು. ನಂತರ ಜನ ನುಗ್ಗಿ ದಬದಬನೆ ಹಿಡಿ ಹಿಡಿ ಮಣ್ಣನ್ನು ಹೊಂಡಕ್ಕೆ ತೂರಿದರು.
ಗುರ್ಕಾರ ಸಿಮೋನ ಇಗರ್ಜಿ ಮುಂದೆ ನಿಂತು ಸಿಮಿತ್ರಿಯಿಂದ ತಿರುಗಿ ಹೋಗುತ್ತಿರುವ ಜನರಿಗೆ-
“…ಎಲ್ಲ ಮರಣದ ಮನೆಗೆ ಬಂದು ದೇವರ ಪ್ರಾರ್ಥನೆ ಮಾಡಿ ಗಂಜಿ ನೀರು ಕುಡಿದು ಹೋಗಬೇಕು” ಎಂದು ವಿನಂತಿ ಮಾಡಿಕೊಳ್ಳುತ್ತಿದ್ದ. ಇನಾಸನ ಕಿರಿಯ ಮಗ ಪಾಸ್ಕು ಆಗಲೇ ಪ್ರಾರ್ಥನೆಯ ಸಮಯದಲ್ಲಿ ನೀಡಲು ಶರಾಬನ್ನು ತರಲು ಹಣ ಕೊಟ್ಟು ಕಳುಹಿಸಿದ್ದ.
*
*
*
ಇನಾಸ ಸತ್ತ ತಿಂಗಳಿಗೆಲ್ಲ ಅವನ ಮನೆಯ ಗೋಡೆಗಳು ಬಿರುಕು ಬಿಟ್ಟವು.
ಒಂದು ಬೆಳಿಗ್ಗೆ ರೈಮಂಡ್ ಸಿಮೋನನ ಬಳಿ ಬಂದ.
“ಮಾಮ..” ಎಂದು ಮಾತಿಗೆ ತೊಡಗಿದ.
“ಅಪ್ಪ ಹೋದರು” ಎಂದು ಮುಖ ಸಣ್ಣದು ಮಾಡಿಕೊಂಡ.
“ಇನ್ನು ನಾನು ಪಾಸ್ಕು ಒಂದೇ ಮನೇಲಿ ಇರಲಿಕ್ಕೆ ಆಗೋಲ್ಲ ಮಾಮ..ನಾವು ಇರತೀವಿ ಎಂದ್ರು ಈ ಹೆಂಗಸರು ಬಿಡೋಲ್ಲ.” ಅಂದ.
“ಈಗ ಏನು ಆಗಬೇಕು?”
“ನೀವು ಹಿರಿಯರು ಬಂದು ಒಂದು ಪಂಚಾಯ್ತಿ ಮಾಡಬೇಕು.”
“ಏನು ಪಂಚಾಯ್ತಿ ರೈಮಂಡ್..ನೀನು ನಿನ್ನ ತಮ್ಮ ಕೂತು ಬಗೆಹರಿಸಿಕೊಳ್ಳಿ..” ಎಂದ ಸಿಮೋನ.
“ಹಾಗಲ್ಲ ಮಾಮ..ಮೂರನೆಯವರು ಒಬ್ಬರು ಇದ್ದರೆ ಒಳ್ಳೇದು..ನಾವು ನಾವು ಅಂದರೆ ಜಗಳ ಆಗುತ್ತೆ..ಕಿತ್ತಾಟ ಆಗುತ್ತೆ.”
“ಸರಿಯಪ್ಪ ಬರತೇನೆ…” ಎಂದು ಸಿಮೋನ ಒಪ್ಪಿಕೊಂಡ.
ಮನೆಯಲ್ಲಿ ಜೀವ ಇರಲಿಲ್ಲ. ಮನೆ ಇರುವ ಜಾಗವನ್ನು ಸರಿಯಾಗಿ ಅರ್ಧ ಮಾಡಲಾಯಿತು. ಒಂದು ಅರ್ಧ ರೈಮಂಡನಿಗೆ ಉಳಿದದ್ದು ಪಾಸ್ಕುಗೆ. ಮನೆಯಲ್ಲಿ ಹಂಡೆ, ತಪ್ಪಲೆ, ಕೊಡಪಾನ, ಚೆಂಬು, ತಟ್ಟೆ ಎಂದೆಲ್ಲ ತುಂಬಾ ಪಾತ್ರೆಗಳಿದ್ದವು. ಇವುಗಳ ಪಾಲೂ ಆಯಿತು.
ರೈಮಂಡನ ಹೆಂಡತಿ ಅವನ ಬಳಿ ನಿಂತು ಅವನ ಕಿವಿ ಕಚ್ಚುತ್ತಿದ್ದಳು. ಪಾಸ್ಕು ಹೆಂಡತಿ ತನ್ನ ಗಂಡನ ಕಿವಿ.
“ಇನ್ನೇನು?” ಎಂದು ಕೇಳಿದ ಸಿಮೋನ.
“ಅಲ್ಲ ಅಮ್ಮನ ಮೈ ಮೇಲೆ” ರೈಮಂಡ ನೆಲ ನೋಡುತ್ತ ನುಡಿದ.
ಸಿಮೋನನ ದೇಹದಲ್ಲಿಯ ರಕ್ತವೆಲ್ಲ ಮುಖಕ್ಕೆ ನುಗ್ಗಿ ಆತ ಕೆಂಪಗಾದ.
“..ಏಯ್ ರೈಮಂಡ..ನಿನಗೊಂದು ಧರ್ಮ ಇದೆ..ರೀತಿ ಇದೆ. ದೇವರ ಹತ್ತು ಕಟ್ಟಲೆಗಳನ್ನು ನಾವು ಯಾವತ್ತೂ ಮರೀಬಾರದು. ತಾಯಿ ಬದುಕಿರಬೇಕಾದರೇನೆ ಅವಳ ಮೈ ಮೇಲೆ ಇರೋ ಬಂಗಾರದ ಮೇಲೆ ಕಣ್ಣು ಹಾಕತೀಯಲ್ಲ ನೀನೇನು ಕ್ರೀಸ್ತುವನಾ? ಇಂತಹಾ ಪಂಚಾಯ್ತಿ ಮಾಡಲಿಕ್ಕೆ ನಾನಿಲ್ಲಿ ಬಂದಿಲ್ಲ..”
ಆತ ಕೂತಲ್ಲಿಂದ ಎದ್ದು ತನ್ನ ಹೆಗಲಿಗೆ ಟವಲು ಎಸೆದುಕೊಂಡು ಹೊರಟ.
“ನಿಲ್ಲಿ ಮಾಮ..ನಿಲ್ಲ..ನೀವು ಹೇಳಿದ ಹಾಗೆ ನಾವು ಕೇಳತೀವಿ” ಎಂದು ಪೇಚಾಡಿಕೊಂಡ ರೈಮಂಡ.
“..ಇಲ್ಲಿ ಕೇಳಿ..ಈಕೆ ಬದುಕಿರೋವರೆಗೆ ನೀವಿಬ್ರು ಇವಳನ್ನ ನೋಡಿಕೋ ಬೇಕು..ಅವಳ ಮೈಮೇಲಿನ ಬಂಗಾರಕ್ಕೆ ನೀವ್ಯಾರೂ ಕೈ ಹಾಕಬಾರದು..ಅವಳು ಇರೋ ತನಕ ಅದು ಅವಳದ್ದು..ಅವಳು ಅದನ್ನು ಏನೂ ಮಾಡಬಹುದು..ಕೇಳುವ ಹಕ್ಕು ನಿಮಗಿಲ್ಲ”
ಬಾಗಿಲ ಮರೆಯಲ್ಲಿ ನಿಸ್ತೇಜ ಮುಖ ಹೊತ್ತು ಕುಳಿತ ಮೊನ್ನೆಯನ್ನೇ ನೋಡುತ್ತ ಸಿಮೋನ ನುಡಿದ. ಅವಳು ಮೂಕಿಯಾಗಿದ್ದುದು ಒಳ್ಳೆದಾಯಿತೇನೋ ಅನಿಸಿತು. ಅವಳಂತೂ ಇವರೆಗೆ ಏನೂ ಮಾತನಾಡಿರಲಿಲ್ಲ.
“..ಹಾಗೇನೇ..ಮತ್ತೊಂದು ವಿಷಯ”
ಸಿಮೋನ ಮಾತನ್ನು ಮುಂದುವರೆಸಿದ.
“ನಿಮ್ಮ ಮನೆ ಅಂಗಳದಲ್ಲಿ ದೇವರ ಶಿಲುಬೆ ಇದು ಈ ಇಡೀ ಮನೆಗೆ, ಊರಿಗೆ ಸೇರಿದ್ದು. ನೀವಿಬ್ರು ಇದನ್ನು ನೋಡಿಕೊಳ್ಳತಕ್ಕದ್ದು.” ಎಂದ.
ರೈಮಂಡ ಪಾಸ್ಕು ಅವರ ಹೆಂಡಿರು ಒಪ್ಪಿಕೊಂಡರು.
ಈ ಪಂಚಾಯ್ತಿ ಮುಗಿಯುತ್ತಿದ್ದಂತೆಯೇ ಇನಾಸನ ಮನೆ ಕುಸಿಯಿತು. ತಾತ್ಕಾಲಿಕವಾಗಿ ತಮ್ಮ ತಮ್ಮ ಮಾವಂದಿರ ಮನೆ ಸೇರಿಕೊಂಡ ರೈಮಂಡ್ ಪಾಸ್ಕು ಇಲ್ಲಿ ಎರಡು ಮನೆಗಳನ್ನು ಕಟ್ಟಿಸಲು ಪ್ರಾರಂಭಿಸಿದರು ಕೂಡ. ಇನಾಸನ ಹೆಂಡತಿ ಮೊನ್ನೆ ಕೂಡ ಮಗ ಪಾಸ್ಕುವಿನ ಮಾವನ ಮನೆಯಲ್ಲಿ ಕೆಲದಿನಗಳ ಮಟ್ಟಿಗೆ ಉಳಿದುಕೊಂಡಳು.
*
*
*
ಈ ಜಾಗದಲ್ಲಿ ಪ್ರತ್ಯೇಕವಾದ ಮನೆಯೊಂದನ್ನು ಕಟ್ಟಬೇಕೆಂಬುದು ಪಾಸ್ಕು ಹೆಂಡತಿ ಜೋಸೆಫ಼ಿನಾಳ ಬಹುದಿನಗಳ ಆಸೆಯಾಗಿತ್ತು. ಗುತ್ತಿಗೆದಾರ ಪಾಸ್ಕೋಲ ಕೂಡ ತನ್ನ ಹಳೆ ಮನೆ ಮುರಿದು ಹೊಸ ಮನೆ ಕಟ್ಟಿದ್ದ. ಕೇರಿಯಲ್ಲಿ ಇನ್ನೂ ಕೆಲ ಹೊಸ ಮನೆಗಳು ಕಾಣಿಸಿಕೋಂಡಿದ್ದವು. ಹೀಗಿರುವಾಗ ತಾವು ಮಣ್ಣಿನ ಗೋಡೆ, ಬೊಂಬಿನಿಂದ ಮಾಡಿರುವ ಮನೆಯಲ್ಲಿ ವಾಸಿಸುವುದು ಅವಳಿಗೆ ಬೇಕಿರಲಿಲ್ಲ.
ಬೇರೆ ಎಲ್ಲಿಯಾದರೂ ಜಾಗ ನೋಡಿ..ಅಲ್ಲಿ ಹೊಸ ಮನೆ ಕಟ್ಟೋಣ” ಎಂಬ ಅವಳ ಮಾತಿಗೆ ಪಾಸ್ಕು ಅಷ್ಟು ಮಹತ್ವ ಕೊಟ್ಟಿರಲಿಲ್ಲ. ಮನೆ ತಾನೆ? ಕಟ್ಟೋಣ ಅನ್ನುತ್ತಿದ್ದ. ಅವನ ಮನಸ್ಸಿಗೆ ತಾವಿರುವಲ್ಲಿಯೇ ಮನೆ ಕಟ್ಟಬೇಕು ಅನಿಸುತ್ತಿತ್ತು. ಜೈಪ್ರಕಾಶನಗರದಲ್ಲೊ, ಅಶೋಕನಗರದಲ್ಲೋ ನಿವೇಶನಗಳು ದೊರೆತರೂ ಕೇರಿ ಬಿಟ್ಟು ಇಗರ್ಜಿ ಬಿಟ್ಟು ದೂರ ಹೋಗಲು ಆತ ಸಿದ್ಧನಿರಲಿಲ್ಲ.
ತಂದೆಗೆ ಹೇಳಿ ಇಲ್ಲಿಯೇ ಮನೆ ಕಟ್ಟಬಹುದು. ಆದರೆ ಈಗ ರೈಮಂಡಗೂ ಅದರಲ್ಲಿ ಜಾಗ ಕೊಡಬೇಕು. ತಾನು ಕಟ್ಟಿದ ಮನೆಯಲ್ಲಿ ಅವನೂ ಬಂದು ಸೇರಿಕೊಳ್ಳುತ್ತಾನೆ. ಏನು ಉಪಯೋಗ? ತಮ್ಮದೇ ಆದ ಒಂದು ಮನೆ ಇರಬೇಕು ಎಂಬ ಆಸೆ ನೆರವೇರುವುದಿಲ್ಲವೇ? ಎಂದು ಆತ ಯೋಚಿಸುತ್ತಿರಬೇಕಾದರೇನೆ ಇನಾಸ ತನ್ನ ಪ್ರಯಾಣ ಮುಗಿಸಿದ್ದ.
ಪಾದರಿಗಳನ್ನು ಕರೆದೊಯ್ದು ಮಂತ್ರಿಸಿ ಆತ ಕೆಲಸ ಪ್ರಾರಂಭಿಸಿದ. ಈತ ಮನೆಗೆ ನೆಲಪಾಯ ತೋಡುತ್ತಿರಲು ಅತ್ತ ಜಾನಿ ಕೂಡ ಕೆಲಸ ಪ್ರಾರಂಭಿಸಿದ.
ಕಲ್ಲು ಮರಳು ಮಣ್ಣು ಎಂದೆಲ್ಲ ಮನೆ ಅಂಗಳ ತುಂಬಿ ಹೋಗಲು ಶುಕ್ರವಾರದ ಪ್ರಾರ್ಥನೆಗೆ ಜನ ಬರುವುದು ನಿಂತು ಹೋಯಿತು. ಆದರೂ ಮೊನ್ನೆ ಮಾತ್ರ ಪ್ರತಿನಿತ್ಯ ಹೋಗಿ ಶಿಲುಬೆ ದೇವರ ಮುಂದೆ ಮೇಣದ ಬತ್ತಿ ಹಚ್ಚಿ ಶಿಲುಬೆಯ ವಂದನೆ ಮಾಡಿ ಬರುತ್ತಲಿದ್ದಳು.
*
*
*
ಅಳಿಯ ಮನೆ ಕಟ್ಟಿಸುತ್ತಿದ್ದಾನೆ ಎಂದರೆ ಪಾಸ್ಕೋಲ ಮೇಸ್ತ್ರಿಗೆ ಸುಮ್ಮನೆ ಮನೆಯಲ್ಲಿ ಕುಳಿತಿರಲು ಆಗಲಿಲ್ಲ. ಶಿವಸಾಗರದಲ್ಲಿ ಎಷ್ಟೋ ಮನೆಗಳನ್ನು ಕಟ್ಟಡಗಳನ್ನು ಅವನೂ ಕಟ್ಟಿಸಿದ್ದನಲ್ಲವೇ? ಸಿಮೋನನ ಸಹಾಯಕನಾಗಿ ಊರಿಗೆ ಬಂದ ತಾನು ಕೆಲವೇ ವರ್ಷಗಳಲ್ಲಿ ಕಂಟ್ರಾಟುದಾರನಾದೆ. ಸಿಮೋನ ಕಾಯಿಲೆಯಿಂದ ಮಲಗಿದ್ದುದರ ಲಾಭ ಪಡೆದು ತಾನು ಸ್ವತಂತ್ರವಾಗಿ ಕೆಲಸ ಹಿಡಿದೆ. ಸಿಮೋನ ತಿರುಗಿ ಬಂದವ-
“ಪಾಸ್ಕೋಲ..ನೀನು ಹೀಗೆ ಮಾಡೋದ? ಎಂದು ಕೇಳಿದ.
“ಅರ್ಧ ಆಗಿರೋ ಕೆಲಸ ನೀನಾದರೂ ಮುಗಿಸಿ ಕೊಡು ಅಂದರು..ಇದರಲ್ಲಿ ನನ್ನ ತಪ್ಪಿಲ್ಲ..” ಎಂದಿದ್ದೆ ತಾನು. ಸಿಮೋನ ಈ ಮಾತನ್ನು ನಂಬಲಿಲ್ಲ. ಅವನು ನಂಬಬೇಕು ಎಂದು ತಾನೂ ಬಯಸಲಿಲ್ಲ.
ಊರಿನಲ್ಲಿ ಕಾಮಗಾರಿಯಂತೂ ಭರ್ಜರಿಯಾಗಿತ್ತು. ಒಂದಲ್ಲಾ ಒಂದು ಕೆಲಸ ಸಿಕ್ಕಿತು. ಬೇಗನೆ ತಾನು ಸಿಮೋನನ ಹಾಗೆಯೇ ಕಂಟ್ರಾಟುದಾರನಾದೆ. ಕ್ರೀಸ್ತುವರ ನಡುವೆ ಸಿಮೋನನಿಗೆ ಮೊದಲ ಸ್ಥಾನವಾದರೆ ತನಗೆ ಎರಡನೆಯ ಸ್ಥಾನ. ಆತ ಗುರ್ಕಾರ ಆದರೆ ತಾನು ಫ಼ಿರ್ಜಂತ. ಮೊದಲ ನಾಲ್ಕು ವರ್ಷ ಈ ಫ಼ಿರ್ಜಂತ ಗೌರವದಿಂದ ತಾನು ಮುಕ್ತನಾಗಲಿಲ್ಲ. ಏಕೆಂದರೆ ತನ್ನನ್ನು ಬಿಟ್ಟರೆ ಬೇರೆ ಜನ ಕೇರಿಯಲ್ಲಿ ಇರಲಿಲ್ಲ. ಬಾಲ್ತಿದಾರ ಬೇಡ ಎಂದ. ಕೈತಾನ, ಬಳ್ಕೂರ ಕಾರ, ಸಾನಬಾವಿ, ಪೆದ್ರು ಎಲ್ಲರೂ-
“..ಅದನ್ನು ನಮ್ಮಿಂದ ಸುಧಾರಿಸಿಕೊಂಡು ಹೋಗಲಿಕ್ಕೆ ಆಗಲ್ಲಪ್ಪ..ನೀನೇ ಇರು..” ಎಂದರು.
ನಾಲ್ಕು ವರ್ಷ ತನ್ನ ಅಧ್ಯಕ್ಷತೆಯಲ್ಲಿಯ ಊರ ಇಗರ್ಜಿ ಹಬ್ಬ ನಡೆಯಿತು. ಒಂದಿಷ್ಟು ಖರ್ಚು ಬರುತ್ತಿತ್ತು. ಇಗರ್ಜಿಯ ಸಿಂಗಾರ. ಊರಿನಲ್ಲಿ ತೋರಣ ಕಟ್ಟುವುದು, ಕೇರಿಯಲ್ಲಿ ಅಲ್ಲಲ್ಲಿ ಕಮಾನು ನಿರ್ಮಾಣ. ಬ್ರೇಸ್ಪುರ ದಿನದ ಧ್ವಜಾ ರೋಹಣ, ಪಟಾಕಿ, ಬ್ಯಾಂಡು ಎಂದೆಲ್ಲ ತಾನೇ ಖರ್ಚು ಮಾಡುತಿದ್ದೆ. ನಂತರ ಬೇಡ ಬೇಡವೆಂದರೂ ಫ಼ಿರ್ಜಂತ ಆಗಲೇಬೇಕಾಯಿತು. ಅವರೆಲ್ಲ ನೆಪಮಾತ್ರದ ಫ಼ಿರ್ಜಂತಗಳು. ಯಾರೂ ತನ್ನ ಹಾಗೆ ಹಬ್ಬ ಮಾಡಲಿಲ್ಲ. ಈಗ ಹಬ್ಬದ ಮೊದಲ ದಿನ ಮೇಡಿ ನೆಟ್ಟು ಬಾವುಟ ಹಾರಿಸುವುದಿಲ್ಲ. ಫ಼ಿರ್ಜಂತ ಇಲ್ಲ. ಆ ವೈಭವವಿಲ್ಲ.
ಆ ವೈಭವ ತನ್ನ ಬದುಕಿನಿಂದಲೂ ಈಗ ದೂರ. ಮಗಳು ಜೋಸೆಫ಼ಿನಾ ಪಾಸ್ಕುವನ್ನು ಮದುವೆಯಾಗುತ್ತೇನೆ ಎಂದಾಗ ಬೇಡವೆಂದೆ. ಸುತಾರಿ ಇನಾಸನ ಅಂತಸ್ತಿಗೂ ತನ್ನ ಅಂತಸ್ತಿಗೂ ತುಂಬಾ ಅಂತರವಿದೆ ಎಂದೆ. ಪಾಸ್ಕುವಿಗೆ ಬಡಗಿಯ ಕೆಲಸವಲ್ಲದೆ ಬೇರೆ ಕೆಲಸ ಗೊತ್ತಿಲ್ಲ. ಅದೂ ಇವನು ಮಾಡುವ ಕೆಲಸಕ್ಕೊಂದು ಗೌರವವಿದೆಯೇ? ಎಂದು ಕೇಳಿದೆ. ಈ ಸಂಬಂಧ ಬೇಡವೆಂದರೂ ಆಕೆ ಕೇಳಲಿಲ್ಲ.
“ಸರಿ ನಿನ್ನ ಹಣೆಬರಹ” ಎಂದೆ.
ಮಗಳ ಮದುವೆಯನ್ನಂತೂ ಚೆನ್ನಾಗಿಯೇ ಮಾಡಿದೆ. ಒಬ್ಬಳೇ ಮಗಳ ಮದುವೆಯಲ್ಲವೆ? ಆದರೆ ಇದೇ ತನಗೆ ಭಾರವಾಯಿತು. ಜವಳಿ ಅಂಗಡಿಯಲ್ಲಿ ಸಾಲ, ದಿನಸಿ ಅಂಗಡಿಯಲ್ಲಿ ಸಾಲ, ಭಗವಾನಜಿ ಹತ್ತಿರ ಹೆಂಡತಿ ರೀತಾಳ ಭೋರಿ ಮಣೆ ಸರ, ಕಾಸಿನ ಸರ, ಉಂಗುರ ಒಯ್ದಿಟ್ಟು ಸಾಲ ತಂದದ್ದೂ ಆಯಿತು. ಅಂಗಡಿ ಸಾಲ, ಜವಳಿ ಅಂಗಡಿ ಸಾಲವನ್ನೂ ತೀರಿಸಲು ಎರಡು ಮೂರು ವರ್ಷಗಳು ಬೇಕಾದವು. ನಡುವೆ ಜೊಸೆಫ಼ಿನಾ ಹೆರಿಗೆಗೆ ಬಂದಳು. ಮಗುವಿನ ಅಂಗಡಿಯಿಂದ ರೀತಳ ಒಡವೆ ಬಿಡಿಸಿಕೊಂಡು ಬರಲಾಗಲಿಲ್ಲ.
“ರೀತಾ..ಏನು ಹೀಗಾಯ್ತು ನಮ್ಮ ಪರಿಸ್ಥಿತಿ” ಎಂದು ಕಣ್ಣಲ್ಲಿ ನೀರು ತಂದು ಕೊಂಡಾಗ ಅವಳು-
“ಅವೆಲ್ಲ ಮಾಡಿಸಿದ್ದೇ ಕಷ್ಟ ಕಾಲಕ್ಕೆ ಇರಲಿ ಅಂತ ಅಲ್ವೆ?” ಎಂದು ತನಗೇನೆ ಸಮಾಧಾನ ಹೇಳಿದಳು.
ಮೆಜಾರಿಟಿಗೆ ಬಂದ ಮಗ ತನ್ನದೇ ಕೆಲಸವನ್ನು ಮುಂದುವರೆಸಿದ. ಸರಕಾರಿ ಶಾಲೆಗೆ ಸೇರಿಸಿದರೂ ಈತ ಓದಲಿಲ್ಲ. ಮಿಡಲ ಸ್ಕೂಲ್ ತನಕ ಹೋಗಿ ಬಿಟ್ಟ. ಈಗ ನಾಲ್ಕನೆ ದರ್ಜೆ ಗುತ್ತಿಗೆದಾರನಾಗಿ ಲೋಕೋಪಯೋಗಿ, ನೀರಾವರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಾನೆ. ರಸ್ತೆ ರಿಪೇರಿ, ಸರಕಾರಿ ಮನೆಗಳಿಗೆ ಸುಣ್ಣ ಬಣ್ಣ, ಕಾಲು ಸೇತುವೆ ನಿರ್ಮಾಣ. ಮೋರಿ ಕಟ್ಟುವುದು, ಕೆರೆ ರಿಪೇರಿ ಎಂದು ಸಣ್ಣ ಪುಟ್ಟ ಕೆಲಸ ಮಾಡುತ್ತಾನೆ. ಸರಕಾರ ಕೊಡುವುದು ಅಲ್ಲಲ್ಲಿಗೆ ಸರಿ ಹೋಗುತ್ತದೆ. ಇದರಲ್ಲಿ ಕಛೇರಿ ಖರ್ಚು ಬೇರೆ. ಗುರ್ಕಾರ ಸಿಮೋನ ಈಗಲೂ ಊರ ಕ್ರೀಸ್ತುವರ ನಡುವೆ ತನ್ನ ಮೊದಲ ಸ್ಥಾನಮಾನಗಳನ್ನು ಉಳಿಸಿಕೊಂಡಿದ್ದಾನೆ. ಆದರೆ ತಾನು ಎಂದೋ ಒಂಭತ್ತನೆಯ ಸ್ಥಾನಕ್ಕೋ ಬಂದು ತಲುಪಿದ್ದೇನೆ. ಈ ಬೇಸರದಲ್ಲೇ ಮನೆಯಲ್ಲಿ ಕೂತಿರುತ್ತೇನೆ. ಪೇಟೆ ಕಡೆ ಹೋದರೆ ಬೋನನ ಅಂಗಡಿಗೆ ಹೋಗಿ ಬರುತ್ತೇನೆ.
ಅಳಿಯ ಮನೆ ಕಟ್ಟಿಸಲು ಆರಂಭಿಸಿದ ಮೇಲೆ ಕಾಲ ಕಳೆಯುವುದು ಕಷ್ಟವೆನಿಸುತ್ತಿಲ್ಲ. ಅಲ್ಲಿ ಹೋಗಿ ನಿಲ್ಲುತ್ತೇನೆ. ಒಂದು ಕಾಲದಲ್ಲಿ ತಾನು ಮಾಡಿದ ಕೆಲಸವೆ. ಆದರೆ ಈಗ ಎಲ್ಲ ಬದಲಾಗಿದೆ. ಒಂಬತ್ತು ಗಂಟೆಗೆ ಕೆಲಸದವರು ಬರುತ್ತಾರೆ. ಅವರು ಉಟ್ಟ ಪಂಚೆ ಬಿಚ್ಚಿ ಬೇರೆ ಉಡುಪು ಧರಿಸಿ ಕೆಲಸ ಆರಂಭಿಸುವುದು ಒಂಬತ್ತುವರೆಗೆ, ನಡುನಡುವೆ ಬೀಡಿ ಸೇದು, ಮಾತನಾಡು, ಹತ್ತೂವರೆಗೆ ಟೀ ಕುಡಿಯಲು ಹೋಗುತ್ತಾರೆ. ಒಂದು ಗಂಟೆಗೆ ಊಟ, ಮೂರು ಗಂಟೆಗೆ ಟೀ, ನಾಲ್ಕುವರೆಗೆಲ್ಲ ಕೆಲಸ ನಿಲ್ಲಿಸಿ ಹೊರಟರೆ. ಪಡಪೋಸಿ ಕೆಲಸ ಬೇರೆ. ಸಿಮೆಂಟು ಮಾರಿ ತಿಂದರು, ಮರಳು ಬೇರೆ ಕಡೆ ಸಾಗಿಸಿದರು. ವಾರದಲ್ಲಿ ಎರಡು ದಿನ ಬಾರದಿರುವುದೂ ಉಂಟು. ಹೀಗಾಗಿ ಜನ ಕ್ರೀಸ್ತುವರನ್ನು ಬಿಟ್ಟು ಬೇರೆಯವರನ್ನು ಕರೆಯುತ್ತಾರೆ. ಹಿಂದೆ ತಾನು, ಸಿಮೋನ, ಕೈತಾನ ಬೆಳಿಗ್ಗೆ ಏಳರಿಂದ ಸಂಜೆ ಆರರವರೆಗೆ ಎಷ್ಟೊಂದು ಶೃದ್ಧೆ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೆವಲ್ಲ. ಈಗ ಆ ಮನೋಭಾವವಿಲ್ಲ. ಕ್ರೀಸ್ತುವರಿಗೆ ಕೆಲಸ ಸಿಗದಿರಲು ಇದೂ ಒಂದು ಕಾರಣ.
ಸದ್ಯ ಅಳಿಯ ಯಾವ ಕ್ರೀಸ್ತುವರನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಈರ್ವರು ಮಲೆಯಾಳಿಗಳು, ಓರ್ವ ಊರಿನವನೇ. ತಾನು ಹೋಗಿ ಅಲ್ಲಿ ನಿಂತಿರುತ್ತೇನೆ.
ಅಳಿಯ ಬುದ್ದಿವಂತ ಆ ಸಣ್ಣ ಜಾಗದಲ್ಲಿಯೇ ಒಂದು ಮನೆ. ಅದರ ಮಗ್ಗುಲಲ್ಲಿ ಒಂದು ಮಳಿಗೆ ಕಟ್ಟಿಸುತ್ತಿದ್ದಾನೆ. ಉದ್ದೋ ಉದ್ದವಾಗಿರುವ ಈ ಮಳಿಗೆ ಏಕೆ ಅಂದರೆ-
“…ನನ್ನ ವಿಚಾರ ಏನೋ ಇದೆ ನೋಡೋಣ” ಅನ್ನುತ್ತಾನೆ.
ಮನೆ ಕೂಡ ಮಜಬೂತಾಗಿದೆ. ವ್ಹರಾಂಡ, ಹಾಲ್, ಮಲಗುವ ಕೋಣೆ, ಊಟದ ಕೋಣೆ, ಅಡಿಗೆ ಕೋಣೆ, ಹಿಂದೆ ಬಚ್ಚಲು, ಕಕ್ಕಸು ಎಂದು ಎಲ್ಲ ಅನುಕೂಲವಿರುವ ಮನೆ ಅಳಿಯನದು. ಹಿಂದೆ ತಾವೆಲ್ಲ ತಮಗಾಗಿ ಕಟ್ಟಿಕೊಳ್ಳುತ್ತಿದ್ದುದು ಬೇರೆಯದೇ ಆದ ರೀತಿಯ ಮನೆಗಳನ್ನು, ಜಗಲಿ ಅದು ದಾಟಿದರೆ ದೇವರ ಕೋಣೆ, ನಂತರ ಅಡಿಗೆ ಮನೆ, ಹಿತ್ತಲ ಅಂಚಿನಲ್ಲಿ ಕಕ್ಕಸು. ಕೆಲ ಮನೆಗಳಲ್ಲಿ ಎಮ್ಮೆ ಬಂದು ಬಾಯಿ ಹಾಕುವಂತಹ ಕಕ್ಕಸಿನ ಕಿಂಡಿ. ಕೆಲವು ಕಡೆಗಳಲ್ಲಿ ಆಳವಾದ ಹೊಂಡದ ಮೇಲೆ ಹಾಸಿದ ಚಪ್ಪಡಿ. ನಡುವೆ ದೊಡ್ದದೊಂದು ಕಿಂಡಿ. ಕೆಳಗೆ ಮಿಚುಗುಡುವ ಹುಳಗಳು. ಈಗ ಎಲ್ಲ ಬೇರೆ ಥರ. ಬೊಂಬಾಯಿ ಕಕ್ಕಸು ಬಂದ ನಂತರವಂತೂ ಮನೆಗಳು ಮತ್ತೂ ನಾಜೂಕು. ಪಾಸ್ಕು ಕಟ್ಟಿಸುತ್ತಿರುವ ಮನೆ ಕೂಡ ಇಂತಹದ್ದೆ, ಬೆಳಿಗ್ಗೆ ಸಂಜೆ ತಾನು ಅಲ್ಲಿಗೆ ಹೋಗುತ್ತೇನೆ.
“ನೀವು ಇಲ್ಲಿ ಇರತೀರಲ್ಲ” ಎಂದು ಹೇಳಿ ಅಳಿಯ ಹೊರಟು ಹೋಗುತ್ತಾನೆ.
ಪಾಸ್ಕೋಲ ಹೀಗೆ ಅಳಿಯನ ಮನೆಯ ಬಳಿ ನಿಂತಿರುವಾಗಲೇ ರಸ್ತೆಯ ಮೇಲೆ ಕೈತಾನ ಕಂಡು ಬಂದ.
“ಪಾಸ್ಕೋಲ ಮಾಮ ಹ್ಯಾಗೆ ಆರೋಗ್ಯ?” ಎಂದು ಕೇಳುತ್ತ ಕೈತಾನ ಪಾಸ್ಕೋಲನ ಬಳಿ ಬಂದ.
ಕೈತಾನನಿಗೆ ವಯಸ್ಸಾಗಿತ್ತು. ಈಗಂತೂ ಅವನು ಕೆಲಸಕ್ಕೂ ಹೋಗುತ್ತಿರಲಿಲ್ಲ. ನಾಲ್ಕು ಜನ ಹೆಣ್ಣು ಮಕ್ಕಳ ಮದುವೆ ನಂತರದ ಹೆರಿಗೆಗಳನ್ನು ಮಾಡಿ ಮಾಡಿ ಆತ ನಿತ್ರಾಣನಾಗಿ ಹೋಗಿದ್ದ. ಅವನ ಹೆಂಡತಿ ಕಾಸಿಲ್ಡ ಈಗ ದುಡಿದು ತಂದು ಗಂಡನನ್ನು ಮನೆಯಲ್ಲಿ ಉಳಿದ ಕೊನೆಯ ಮಗಳು ಪ್ರೆಸಿಲ್ಲಾಳನ್ನು ಸಾಕಬೇಕಿತ್ತು.
ಕಾಸಿಲ್ಡ ಮೂರು ನಾಲ್ಕು ಮನೆಯ ಕೆಲಸ ಮಾಡುತ್ತಿದ್ದಳು. ಫ಼ಾತಿಮಾ ನಗರದ ಅಲೆಕ್ಸ ಪಿಂಟೋ, ಜಾನ ಡಯಾಸ್, ರೈಲ್ವೆ ಇಲಾಖೆಯ ಇರುದನಾದನ ಮನೆಗಳಲ್ಲಿ ಎರಡು ಮೂರು ಗಂಟೆ ಅವಳು ಕೆಲಸ ಮಾಡುತ್ತಿದ್ದಳು. ಜಾನ ಡಯಾಸನ ಹೆಂಡತಿ ಸಿಲ್ವಿಯ ತೊಳೆದ ಪಾತ್ರೆಗಳನ್ನೇ ಎರಡೆರಡು ಬಾರಿ ತೊಳೆಯಲು ಹೇಳುತ್ತಿದ್ದಳು. ಮನೆಯನ್ನು ಎರಡು ಸಲ ಗುಡಿಸಿ ಒರೆಸಬೇಕು. ಪಿಂಟೋ ಹೆಂಡತಿ ಮಗ್ಗಿಬಾಯಿ ಕೂಡ ಹೀಗೆಯೇ.
“ಶಿಶಿಶಿ..ಏನಿದು ಪಾತ್ರೆ ತೊಳೆಯೋ ರೀತಿ? ನೀವು ನಿಮ್ಮ ಮನೇಲೂ ಹೀಗೇನೆ ಕೆಲಸ ಮಾಡುವುದ?” ಎಂದು ಮಾತು ಮಾತಿಗೆ ತಿವಿಯುತ್ತಿದ್ದಳು ಅವಳು. ಇರುದನಾದನ ಹೆಂಡತಿ ಪಾಪಮ್ಮ ಪಾಪದ ಹೆಂಗಸು-
“ಅಲ್ಲಿಷ್ಟು ಗುಡಿಸಿ ಬಿಡು ಕಾಶಿಲ್ಡ..ಬಟ್ಟೆ ನಾನು ಹಾಕತೇನೆ” ಅನ್ನುತ್ತಿದ್ದಳು.
ಪಿಂಟೋ, ಡಯಾಸ್ ಮನೆಯಲ್ಲಿ ಒಂದು ಲೋಟ ಕಾಫ಼ಿ ಕೂಡ ಇವಳಿಗೆ ಸಿಗುತ್ತಿರಲಿಲ್ಲ. ಪಾಪಮ್ಮ ಕಾಫ಼ಿ ತಿಂಡಿಕೊಟ್ಟು ಉಪಚರಿಸುತ್ತಿದ್ದಳು. ಈ ಮೂರು ಮನೆಗಳಲ್ಲಿ ಕೆಲಸ ಮಾಡಿ ಮನೆಗೆ ಬಂದು ಕಾಸಿಲ್ಡ ಅಡಿಗೆ ಮಾಡಬೇಕಿತ್ತು.
ಮನೆಗೊಬ್ಬ ಮಗಬೇಕು ಎಂದು ಎಲ್ಲ ದೇವರುಗಳಿಗೂ ಹರಕೆ ಹೊತ್ತು ಹುಟ್ಟಿದ ಮಗ ಅವರ ಕೈಬಿಟ್ಟಿದ್ದ. ಊರಿನಲ್ಲಿ ಜನರ ಬಾಯಲ್ಲಿ ಚೌಡಪ್ಪ ಎಂದೇ ಜನಪ್ರಿಯ ನಾಗಿದ್ದ ದುಮಿಂಗ ಮದುವೆಯಾಗಿದ್ದೇ ಹೊರ ಹೋದ. ಅವನಿಗೆ ತಂದೆ ತಾಯಿಯ ನೆನಪು ಕೂಡ ಆಗುವುದಿಲ್ಲ. ಹೀಗಾಗಿ ಕಾಸಿಲ್ಡ ತನ್ನ ಗಂಡ, ಕೊನೆಯ ಮಗಳು ಪ್ರೆಸಿಲ್ಲಳ ಬದುಕಿಗೊಂದು ಆಧಾರವಾಗಿ ಕೆಲಸ ಹುಡುಕಿಕೊಂಡಳು.
ಸಂಜೆ ಅವಳಿಗೆ ಮಹಿಳಾ ಸಮಾಜದ ಕೆಲಸ. ಅಲ್ಲಿ ಕಸ ಹೊಡೆಯುವುದು, ಬರುವ ಸದಸ್ಯೆಯರ ಸಣ್ಣ ಪುಟ್ಟ ಕೆಲಸ ಮಾಡಿಕೊಡುವುದು. ಆಕೆ ಕೊಂಚ ನಯ ನಾಜೂಕು ಕಲಿತಳು. ತಿದ್ದಿ ತೀಡಿ ಸೀರೆ ಉಡ ತೊಡಗಿದಳು.
ಗಂಡ ಅಂಕೋಲ ಬಿಟ್ಟು ಇಲ್ಲಿಗೆ ಬಂದದ್ದು ಹಣ ಮಾಡಲೆಂಬುದು ಅವಳಿಗೆ ಗೊತ್ತಿತ್ತು. ಅವನಿಂದ ಹಣ ಮಾಡಲಂತೂ ಆಗಲಿಲ್ಲ. ಆದರೂ ತಾವು ಸುಖವಾಗಿದ್ದೆವು. ಈಗಲೂ ಮರ್ಯಾದೆಯಿಂದ ಇದ್ದೇವೆ. ಜಪ, ಪೂಜೆ, ಪ್ರಾರ್ಥನೆ, ಪಾಪ ನಿವೇದನೆ. ದಿವ್ಯ ಪ್ರಸಾದ ಸ್ವೀಕಾರ ತಪ್ಪಿಸುವುದಿಲ್ಲ. ಆದರೂ ಏನೋ ಆತಂಕ. ಮಗಳೊಬ್ಬಳಿದ್ದಾಳೆ. ಅವಳ ಮದುವೆ ಆದರೆ ಸಾಕು ಎಂಬ ಹಾರೈಕೆ.
ಪ್ರೆಸಿಲ್ಲಾ ಬುದ್ಧಿವಂತ ಹುಡುಗಿ. ಎಲ್ಲ ವಿಷಯಗಳಲ್ಲೂ ಚುರುಕು. ಸರಕಾರಿ ಪ್ರೌಢಶಾಲೆಗೇನೆ ಹೆಸರು ತರುವಂತೆ ಓದಿ ಮುಂದೆ ಬಂದಳು. ಶಿವಸಾಗರದ ಕ್ರೀಸ್ತುವರಲ್ಲಿ ಹೀಗೆ ಓದಿ ಬೇರೆಯವರ ಗಮನ ಸೆಳೆದವಳು ಪ್ರೆಸಿಲ್ಲ ಒಬ್ಬಳೆ. ಇದೀಗ ಕಾನ್ವೆಂಟ್ ಶಾಲೆಯಲ್ಲಿ, ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಕ್ರೀಸ್ತುವರ ಮಕ್ಕಳು ಇದ್ದಾರಾದರೂ ತುಂಬಾ ಬುದ್ಧಿವಂತೆ ಎನಿಸಿಕೊಂಡವಳು ಪ್ರೆಸಿಲ್ಲಾ.
ಇದೇ ಕಾರಣದಿಂದಲೋ ಏನೋ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಪ್ರೆಸಿಲ್ಲಾಳನ್ನು ಕರೆದು-
“..ಮುಂದೆ ಕೆಲಸ ಮಾಡುವ ಆಸೆ ಇದೆಯೇನಮ್ಮ ನಿನಗೆ” ಎಂದು ಕೇಳಿದರು.
ಯಾವ ಹುಡುಗಿಯೂ ಕೆಲಸಕ್ಕೆ ಹೋಗದ ಕಾಲ ಅದು. ಹೋದರೂ ಆಸ್ಪತ್ರೆಯಲ್ಲಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ದೊರಕುತ್ತಿತ್ತು. ಪ್ರೆಸಿಲ್ಲ ಈ ದಿಕ್ಕಿನಲ್ಲಿ ವಿಚಾರ ಮಾಡಿರಲಿಲ್ಲ. ಅಕ್ಕಂದಿರ ಹಾಗೆಯೇ ಮದುವೆಯಾಗಿ ಹೋಗುವುದು ಎಂದವಳು ವಿಚಾರ ಮಾಡಿದ್ದಳು. ಆದರೆ ತನ್ನ ಮದುವೆಯ ನಂತರ ಅಪ್ಪ, ಅಮ್ಮನ ಗತಿ ಏನು ಎಂಬ ಪ್ರಶ್ನೆ ಅವಳನ್ನು ಕಾಡುತ್ತಿತ್ತು. ತಮ್ಮನಂತೂ ಅವರನ್ನು ನೋಡಿಕೊಳ್ಳುವುದಿಲ್ಲ. ಮುಂದೆ ಅವರ ಗತಿ?
“ಹೋಗತೀನ ಸಾರ” ಎಂದಳವಳು.
ಅವಳ ಅರ್ಜಿ ಶಿವಮೊಗ್ಗೆಯ ವಿದ್ಯಾ ಇಲಾಖೆಗೆ ಹೋಯಿತು. ಅಲ್ಲಿಂದ ಮಾರುತ್ತರಕ್ಕಾಗಿ ಕಾದಾಗ ಉತ್ತರ ಕೂಡ ಬಂದಿತು.
ಪ್ರೆಸಿಲ್ಲಾಳನ್ನು ಶಿವಮೊಗ್ಗೆಯ ಒಂದು ಕಡೆ ಸಂತಸ ಇನ್ನೊಂದು ಕಡೆ ಆತಂಕ. ಶಿವಮೊಗ್ಗೆಗೆ ಹೋಗಬೇಕು. ಅಲ್ಲಿ ವಾಸಿಸಬೇಕು. ದೊಡ್ಡ ಊರು. ಕೆಲಸ ಹೇಗೋ. ಹೀಗೆಂದು ಸಿಕ್ಕ ಕೆಲಸ ಬಿಡಲುಂಟೆ? ತಂದೆ ಕೆಲಸ ಮಾಡಲಾಗದೆ ಮನೆಯಲ್ಲಿ ಕೂತಿರುವಾಗ, ತಾಯಿ ಅವರಿವರ ಮನೆಗಳಲ್ಲಿ ದುಡಿಯುವಾಗ ತಾನು ಮನೆಬಾಗಿಲಿಗೆ ಬಂದ ಕೆಲಸವನ್ನು ತಿರಸ್ಕರಿಸುವುದೆ?
“ಬಾಬಾ…ನಾನು ಏನು ಮಾಡಲಿ?” ಎಂದು ತಂದೆಯನ್ನೇ ಕೇಳಿದಳು ಪ್ರೆಸಿಲ್ಲ.
“ಪದ್ರಾಬಾ ಅವರನ್ನ ಕೇಳಿ ಬರತೀನಿ” ಎಂದ ಕೈತಾನ ಮನೆ ಬಿಟ್ಟ.
ದಾರಿಯಲ್ಲಿ ಎದುರಾದ ಪಾಸ್ಕೋಲನ ಹತ್ತಿರವೂ ಈ ವಿಷಯ ಪ್ರಸ್ತಾಪ ಮಾಡಿದ.
“ಹೌದು? ಒಳ್ಳೆಯದಾಯ್ತು..ಪದ್ರಾಬ ಏನು ಹೇಳತಾರೋ ನೋಡು..ಕೊನೆಗಾಲದಲ್ಲಿ ನಿಮಗಂತೂ ಒಂದು ಆಧಾರ ಬೇಕಲ್ಲ” ಎಂದ ಪಾಸ್ಕೊಲ.
ಅವನಿಗೂ ಸಂತೋಷವಾಗಿತ್ತು. ಕೈತಾನನದು ಒಳ್ಳೆಯ ಕುಟುಂಬ. ಆದರೆ ಒಳ್ಳೆಯವರಿಗೇನೆ ಕಷ್ಟಗಳು ಹೆಚ್ಚಲ್ಲವೆ?
“ಹೋಗಿ ಬಾ..” ಎಂದು ಕೈತಾನನನ್ನು ಬೀಳ್ಕೋಟ್ಟ ಪಾಸ್ಕೊಲ.
*
*
*
ಇಗರ್ಜಿಯ ಗಂಟೆ ಮಧ್ಯಾಹ್ನದ ಪ್ರಾರ್ಥನಾ ಸಮಯವಾಯಿತು ಎಂಬುದನ್ನು ನೆನಪು ಮಾಡಿಕೊಟ್ಟಿತು. ಪಾಸ್ಕೊಲ ನಿಂತಲ್ಲಿಯೇ ಶಿಲುಬೆಯ ವಂದನೆ ಮಾಡಿದ.
ಒಂದೆರಡು ನಿಮಿಷಗಳಲ್ಲಿ ಮತ್ತೆ ಕೈತಾನ ಕಂಡ. ಉಟ್ಟ ಪಂಚೆಯ ಒಂದು ಚುಂಗನ್ನು ಕೈಯಲ್ಲಿ ಹಿಡಿದು ನಡೆದು ಬರುತ್ತಿದ್ದ. ನಡಿಗೆಯಲ್ಲಿ ಚುರುಕುತನವಿತ್ತು. ಲವಲವಿಕೆಯಿತ್ತು. ಮುಖದ ಮೇಲೆ ಬಹಳ ದಿನಗಳ ನಂತರ ಮೂಡಿ ಬಂದ ಮಂದಹಾಸ.
“ಕೈತಾನ ಮಾಮ ಕೆಲಸ ಹಣ್ಣೋ ಕಾಯೋ?”
“ಹಣ್ಣು ಪಾಸ್ಕೋಲ..ಹಣ್ಣು”
ಕೈತಾನ ನೇರವಾಗಿ ಪಾಸ್ಕೊಲನ ಬಳಿ ಬಂದ.
ಪಾದರಿ ಸಿಕ್ವೇರಾ ಅವನಿಗೆ ಭರವಸೆ ನೀಡಿದ್ದರು. ಸಿಸ್ಟರುಗಳು ನಡೆಸುವ ಹಾಸ್ಟೆಲಿನಲ್ಲಿ ಇರಲು ಪ್ರೆಸಿಲ್ಲಾಗೆ ಅವಕಾಶ ಮಾಡಿ ಕೊಡುವುದಾಗಿ ಹೇಳಿದ್ದರು.
“ಪ್ರೆಸಿಲ್ಲಾ ಹೋಗಲಿ..ಸಿಕ್ಕ ಕೆಲಸವನ್ನು ಬಿಡೋದು ಬೇಡ..” ಎಂದಿದ್ದರು.
“ಮುಂದಿನ ವ್ಯವಸ್ಥೆ ಮಾಡಬೇಕಲ್ಲ..ಬರತೀನಿ” ಎಂದು ಕೈತಾನ ರಸ್ತೆಗೆ ಇಳಿದ.
“ಪಾಯಸ ಮಾಡಲಿಕ್ಕೆ ಹೇಳು ಕಾಸಿಲ್ಡ ಬಾಯಿಗೆ ..ನಾನು ಸಾಯಂಕಾಲ ಬರತೀನಿ” ಎಂದ ಪಾಸ್ಕೊಲ.
ದೇವರು ಒಂದು ಕುಟುಂಬವನ್ನು ಕಾಪಾಡಿದ. ಅವನಿಗೆ ಕೃತಜ್ಞತೆಗಳಿರಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ.
ಕೆಲಸಗಾರರು ಊಟದ ಸಮಯವಾಯಿತೆಂದು ಕೆಲಸ ನಿಲ್ಲಿಸಿದಾಗ ಪಾಸ್ಕೊಲನಿಗೆ ಚುರುಗುಟ್ಟುತ್ತಿರುವ ತನ್ನ ಹೊಟ್ಟೆಯ ನೆನಪಾಯಿತು.
-೮-
ಸಾನಬಾವಿ ಪೆದ್ರು ಹೆಂಡತಿ ರಂಗಿ ಫ಼್ಲೋರಿನಾ ಆದನಂತರ ಸಂಪೂರ್ಣ ಬದಲಾಗಿ ಹೋದಳು. ಆವರೆಗೆ ಪೆದ್ರುವಿನ ಮನೆಯಲ್ಲಿದ್ದು ಅವನ ಹೆಂಡತಿ ಅನ್ನಿಸಿಕೊಳ್ಳದೇ, ಇಟ್ಟುಕೊಂಡವಳು ಎಂಬ ಹೆಸರಿನಲ್ಲಿಯೇ ಕರೆಸಿಕೊಳ್ಳುತ್ತಿದ್ದ ಆಕೆ ಪಾದರಿ ಗೋನಸ್ವಾಲಿಸರ ಕೃಪೆಯಿಂದ ’ಹೆಂಡತಿ’ ಎಂಬ ಗೌರವಕ್ಕೆ ಪಾತ್ರಳಾಗಿಬಿಟ್ಟಳು. ಕೇರಿಯವರು ಅವಳನ್ನು ನೋಡುವ ರೀತಿ ಬೇರೆಯಾಯಿತು. ಮಾತನಾಡಿಸುವ ಧಾಟಿ ಬೇರೆಯಾಯಿತು. ಸಿಮೋನಿನ ತಾಯಿ ಅವಳನ್ನು ಧುವೇ(ಮಗಳೆ) ಎಂದು ಕರೆಯತೊಡಗಿದಳು. ಅವಳು ಕೇರಿಯ ಇತರರ ಪಾಲಿಗೆ ಬಾಯಿ (ಅಕ್ಕ) ಹುನ್ನಿ (ಅತ್ತಿಗೆ) ಮೌಸಿ (ಚಿಕ್ಕಮ್ಮ) ಎಲ್ಲ ಆದಳು. ಕೆಲ ಮಕ್ಕಳಿಗೆ ದೇವಮಾತೆಯೂ ಆಗಿ ಅವರಿಂದ ಮೊದೋನ ಎಂದು ಕರೆಸಿಕೊಳ್ಳತೊಡಗಿದಳು. ತಟ್ಟನೆ ತನ್ನ ಸ್ಥಾನಮಾನಗಳು ಬದಲಾದದ್ದು ಅವಳಿಗೆ ಸಂತೋಷವನ್ನು ತಂದಿತು. ಹೀಗೆಯೇ ಸಿಮೋನನ ಮಗಳು ಕಲಿಸಿದ ಜಪ ಮಂತ್ರಗಳು ಅವಳ ವ್ಯಕ್ತಿತ್ವಕ್ಕೆ ಹೆಚ್ಚಿನ ಮೆರುಗನ್ನು ತಂದುಕೊಟ್ಟವು. ಭಾನುವಾರ ಬಂತೆಂದರೆ ಎಲ್ಲ ಹೆಂಗಸರ ಹಾಗೆ ಅಚ್ಚುಕಟ್ಟಾಗಿ ಸೀರೆಯುಟ್ಟು, ತಲೆಯ ಮೇಲೆ ಸೆರಗು ಹೊದ್ದು ಎಲ್ಲರಿಗೂ ಮೊದಲು ಇಗರ್ಜಿಗೆ ಹೋಗತೊಡಗಿದಳು. ಅಲ್ಲಿ ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ತಪ್ಪಿಸುತ್ತಿರಲಿಲ್ಲ. ಅವಳ ಈ ಶೃದ್ಧೆ ಆಸಕ್ತಿ ಉಳಿದವರನ್ನು ಬೆರಗುಗೊಳಿಸುತ್ತಿತ್ತು.
“ನೋಡೇ..ಮೊನ್ನೆ ಮೊನ್ನೆ ನಮ್ಮ ಸಮೋಡ್ತಿನೊಳಗೆ ಬಂದವಳ..ಭಕ್ತಿ ನೋಡು” ಎಂದು ಹೆಂಗಸರು ಮಾತನಾಡಿಕೊಳ್ಳುತ್ತಿದ್ದರು.
ಸಾನಬಾವಿ ಪೆದ್ರು ಕೂಡ ಪ್ರತಿ ಭಾನುವಾರ ಇಗರ್ಜಿಗೆ ಹೋಗಲೇ ಬೇಕಾಯಿತು. ಮನೆಯಲ್ಲಿ ನಿತ್ಯ ಪ್ರಾರ್ಥನೆ ತಪ್ಪಲಿಲ್ಲ. ದೇವರ ಮುಂದೆ ಮೇಣದ ಬತ್ತಿ ಹಚ್ಚುವುದನ್ನು ರಂಗಿ ಯಾವತ್ತೂ ಮರೆಯುತ್ತಿರಲಿಲ್ಲ.
ಅವರಿಗೆ ಮತ್ತೂ ಅಚ್ಚರಿಯಾದುದೆಂದರೆ ಇಗರ್ಜಿಯಲ್ಲಿ ಮದುವೆಯಾಗುವುದಕ್ಕೂ ಮೊದಲು ಅವರು ಒಟ್ಟಿಗೇನೆ ಇದ್ದರು. ಗಂಡ ಹನುಮಂತನ ಹತ್ತಿರದ ಸಂಬಂಧಿ ವೀರಭದ್ರ ತನ್ನನ್ನು ಒಳಗೆ ಹಾಕಿಕೊಳ್ಳುವ ಯತ್ನ ಮಾಡಿದಾಗ ರಂಗಿ ಪೆದ್ರುವಿನಲ್ಲಿಗೆ ಓಡಿ ಬಂದು ಅವನ ಮನೆ ಸೇರಿಕೊಂಡಿದ್ದಳು. ಒಂದು ಗಂಡು ಒಂದು ಹೆಣ್ಣು ಅದೆಷ್ಟು ದಿನ ದೂರ ದೂರ ಇರಲು ಸಾಧ್ಯ. ಅದೊಂದು ರಾತ್ರಿ ತನಗೆ ಅರಿವಿಲ್ಲದೇನೆ ರಂಗಿ ಪೆದ್ರುವಿನ ತೋಳುಗಳಲ್ಲಿ ಸಿಲುಕಿ ಮೈ ಹಿಂಡಿದಂತಾಗಿ ದೇಹದ ನರನರಗಳಲ್ಲಿ ಬೆಂಕಿ ಪ್ರಜ್ವಲಿಸಿ, ಹೀಗೆ ಹೊತ್ತಿಕೊಂಡ ಬೆಂಕಿ ಪೆದ್ರುವಿನಿಂದ ನಂದಿಹೋಗಿ ಹಿತಕರವಾಗಿ ಆಕೆ ನರಳಿದ್ದಳು. ಆನಂತರ ಈ ಪ್ರಕರಣ ಮತ್ತೆ ಮತ್ತೆ ಮುಂದುವರೆದಿತ್ತು. ಇಷ್ಟಾದರೂ ಅವಳು ಗರ್ಭಿಣಿಯಾಗಿರಲಿಲ್ಲ. ಎಲ್ಲಿ ಏನಾಗುತ್ತದೋ ಎಂಬ ದಿಗಿಲು. ಅನೈತಿಕವಾಗಿ ಬದುಕುತ್ತಿರುವ ತನಗೆ ಮಗುವಾದರೆ ಅದೊಂದು ಆಪಾದನೆ ಹೊರಬೇಕಾದೀತೆ ಎಂಬ ಆತಂಕದಲ್ಲಿ ದಿನಗಳು ಉರುಳಿ ಹೋಗಿದ್ದವು.
ನಂತರ ಪಾದರಿ ಗೋನಸ್ವಾಲಿಸರು ಅವರನ್ನು ಗಂಡ ಹೆಂಡತಿ ಎಂದು ದೇವರ ಎದುರು ನಿಲ್ಲಿಸಿ ಆಶೀರ್ವದಿಸಿದ್ದರು. ಇದರ ನಂತರ ಪೆದ್ರು-
“..ಫ಼್ಲೊರಿನಾ..” ಎಂದು ಬೇರೆಯೆ ಆದ ರೀತಿಯಲ್ಲಿ ಅಪ್ಪಿ ಮುದ್ದಾಡಿದ್ದ. ಆನಂತರ ಅವಳು ಕೂಡ ಯಾವುದೇ ಭೀತಿ ಭಿಡೆ ಇಲ್ಲದೆ ಪೆದ್ರುವಿಗೆ ತನ್ನ ಮೈ ನೀಡಿದ್ದಳು. ಇದಾದ ಕೆಲವೇ ತಿಂಗಳುಗಳಲ್ಲಿ ಸುತಾರಿ ಇನಾಸನ ಹೆಂಡತಿ ಮೊನ್ನೆ ಫ಼್ಲೊರಿನಾ ಮನೆ ಹಿಂದಿನ ಮಂಟಪದ ಬಳಿ ವಾಂತಿ ಮಾಡುತ್ತ ಕುಳಿತಿರುವುದನ್ನು ಕಂಡು ಸಾಂತಾ ಮೊರಿಯನ್ನು ಕರೆತಂದಳು.
ಸಾಂತಾಮೋರಿ-
“ರಂಗೀ..ರಂಗೀ..ಏನಾಯ್ತು..ಏನಾಯ್ತು?” ಎಂದು ಕೇಳುತ್ತ ಓಡಿ ಬಂದಳು.
ಪೆದ್ರು ಇದು ದೇವರ ಕೃಪೆಯೇ ಹೌದು ಅಂದುಕೊಂಡ. ಫ಼್ಲೋರಿನಾಗೂ ಇದರಲ್ಲಿ ಅನುಮಾನ ಉಳಿಯಲಿಲ್ಲ. ಅಂದು ಗಂಡ ಹೆಂಡತಿ ಅಲ್ತಾರಿನ ಮುಂದೆ ನಿಂತು ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಆರು ತಿಂಗಳ ನಂತರ ಪೆದ್ರುವಿನ ಹಾಗೆಯೇ ಗಟ್ಟಿ ಮುಟ್ಟಾಗಿದ್ದ. ಆದರೆ ರಂಗಿಯ ಬಣ್ಣ ಕಸಿದುಕೊಂಡ ಮಗ ಮನೆಯಲ್ಲಿ ಹುಟ್ಟಿದ.
ಹೆರಿಗೆ ಮಾಡಿಸಲೆಂದು ಬಂದ ವೈಜೀಣ್ ಕತ್ರೀಣ್ ಮಗುವಿನ ಹೊಕ್ಕಳು ಬಳ್ಳಿ ಕತ್ತರಿಸುತ್ತ-
“..ಆಂಜ್ ಬೊಡ್ವೊ (ದೇವದೂತ) ಬಂದಿದ್ದಾನೆ ನಿಮ್ಮ ಮನೆಗೆ..ತುಂಬಾ ಮುದ್ದಾಗಿದ್ದಾನೆ..” ಎಂದು ಕೂಗಿ ಹೇಳಿದ್ದು ನೋವಿನಲ್ಲೂ ಕಿವಿಗೆ ಬಿದ್ದು ರಂಗಿಯ ಮುಖ ಅರಳಿತ್ತು. ಟೋಲ್ ನಾಕಾದ ಆ ಮನೆಯನ್ನು ಬಿಟ್ಟು ಬಂದ ತನ್ನ ಬದುಕು ಈ ಪರಿಯಲ್ಲಿ ಹಿಗ್ಗಿದ್ದನ್ನು ಕಲ್ಪಿಸಿಕೊಂಡು ಅವಳು ಸಂತಸಪಟ್ಟಳು. ಏಸು ಮರಿ ಜೋಸೆಫ಼ರ ಮೇಲಿನ ಅವಳ ಭಕ್ತಿ ಮತ್ತೂ ಅಧಿಕವಾಯಿತು.
ಮಗನಿಗೆ ನಲವತ್ತನೇ ದಿನ ನಾಮಕರಣಕ್ಕೆಂದು ಕೊಂಡೊಯ್ದಾಗ ಪಾದರಿ ಮಗು ಹುಟ್ಟಿದ ತಾರೀಕು ಕೇಳಿದರು. ಕ್ರಿಶ್ಚಿಯನ್ ಕ್ಯಾಲೆಂಡರ್ ನೋಡಿ ಮಗು ಹುಟ್ಟಿದ ದಿನವೆ ಸಂತ ಗ್ರೆಗೋರಿ ಕೂಡ ಹುಟ್ಟಿದ್ದರಿಂದ ಮಗುವಿನ ಹುಟ್ಟಿದ ದಿನದ ಹೆಸರು ಗ್ರೆಗೋರಿ ಎಂದರು. ಪೆದ್ರುವಿಗೆ ತನ್ನ ಅಜ್ಜನ ಹೆಸರನ್ನು ಮಗುವಿಗೆ ಇಡಬೇಕೆಂದಿತ್ತು. ಅದನ್ನೂ ಆತ ಗೋನಸ್ವಾಲಿಸರಿಗೆ ಹೇಳಿದಾಗ ಅವರು ಇಡೋಣ ಎಂದರು. ಮಗುವಿನ ದೇವ ಪಿತ ದೇವ ಮಾತೆಯಾಗಲು ಅಂಕೋಲಾದ ಕೈತಾನ ಅವನ ಹೆಂಡತಿ ಕಾಸಿಲ್ಡ ಮುಂದೆ ಬಂದರು. ಇಗರ್ಜಿಯಲ್ಲಿ ಸಾನಬಾವಿ ಪೆದ್ರುವಿನ ಮಗನಿಗೆ ಗ್ರೆಗೋರಿ ಫ಼್ರಾನ್ಸಿಸ್ ಎಂದು ನಾಮಕರಣ ಮಾಡಲಾಯಿತು. ಬೋನ ಇಗರ್ಜಿಯ ಗಂಟೆ ಬಾರಿಸಿ ಊರಿಗೆಲ್ಲ ಸುದ್ದಿ ತಿಳಿಸಿದ. ಅಂದು ಸಣ್ಣ ಪ್ರಮಾಣದ ಒಂದು ಊಟ ಕೂಡ ಪೆದ್ರುವಿನ ಮನೆಯಲ್ಲಿ ಇತ್ತು. ಸಾನಬಾವಿ ಪೆದ್ರುವಿನ ಮನೆತನದ ಹೆಸರು ಡಿಸೋಜ ಆಗಿದ್ದರಿಂದ ಅವನ ಮಗ ಗ್ರೆಗೋರಿ ಫ಼್ರಾನ್ಸಿಸ್ ಡಿಸೋಜಾ ಎಂದೇ ಸರಕಾರಿ ಶಾಲೆಯಲ್ಲಿ ದಾಖಲಾದ.
ಸಾನಬಾವಿ ಪೆದ್ರು ಶಿವಸಾಗರಕ್ಕೆ ಬಂದ ಸಿಮೋನ, ಪಾಸ್ಕೊಲ ಇನಾಸ ಇವರೆಲ್ಲರಿಗಿಂತ ಏಳೆಂಟು ವರ್ಷ ಕಿರಿಯನಾಗಿದ್ದ. ಅವನು ಮದುವೆಯಾದದ್ದೂ ತಡವಾಗಿ, ಮಗು ಹುಟ್ಟಿದ್ದು ಮತ್ತು ತಡವಾಗಿ. ಹೀಗಾಗಿ ಅವನ ಮಗ ಗ್ರೆಗೋರಿ ಪ್ರೌಢಶಾಲೆಗೆ ಬಂದಾಗ ಪಾದರಿ ಗೋನಸ್ವಾಲಿಸ್ ಹೊರಟು ಹೋಗಿ ಪಾದರಿ ಮಸ್ಕರಿನಾಸ ಊರಿಗೆ ಬಂದು ಎರಡು ಮೂರು ವರ್ಷಗಳಾಗಿದ್ದವು. ಮಕ್ಕಳನ್ನು ಓದಿಸಿ ಓದಿಸಿ ಎಂಬ ಮಾತನ್ನು ಇವರೂ ಹೇಳುತ್ತಿದ್ದರು.
ಪೆದ್ರುಗೆ ಮಗನ ಓದಿನ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ.
“ಈ ಇಜಾರ ಪಜಾರ ಹಾಕಿಕೊಂಡವರು ಏನು ದುಡೀತಾರೆ ಮಾರಾಯ..ನಮ್ಮಷ್ಟು ದುಡೀತಾರ ಅವರು?” ಎಂದು ವಿದ್ಯಾವಂತರನ್ನು ತಿರಸ್ಕಾರದಿಂದ ನೋಡುತ್ತಿದ್ದ.
ಆದರೆ ಫ಼್ಲೋರಿನಾಗೆ ಮಗ ಓದಿ ಆಫ಼ೀಸರ ಆಗಬೇಕು ಎಂಬ ಆಸೆ. ಹೀಗೆಂದೇ ಅವಳು ಮಗನ ಬಗ್ಗೆ ತುಂಬಾ ಮುತುವರ್ಜಿ ವಹಿಸಿದ್ದಳು. ಆತ ಶಾಲೆಗೆ ತಪ್ಪಿಸಿಕೊಳ್ಳಬಾರದು, ಮನೆಯಲ್ಲಿ ಚೆನ್ನಾಗಿ ಓದಬೇಕು. ಸಂಜೆ ಪ್ರಾರ್ಥನೆಯ ಗಂಟೆ ಆಗುತ್ತಿದೆ ಅನ್ನುವಾಗ ಎಲ್ಲೇ ಇರಲಿ ಮನೆಗೆ ಬರಬೇಕು. ಕೈಕಾಲು ಮುಖ ತೊಳೆದು ಅಮೋರಿ ಮಾಡಿ ಓದಲು ಕೊಡಬೇಕು. ಒಂಬತ್ತು ಗಂಟೆಯ ತನಕ ಸೀಮೆ ಎಣ್ಣೆ ದೀಪ ಎದುರು ಇರಿಸಿಕೊಂಡು ಓದು. ಮತ್ತೆ ಬೆಳಗಿನ ಪ್ರಾರ್ಥನೆಯ ಗಂಟೆ ಆದಾಗ ಏಳಬೇಕು. ಮತ್ತೆ ಓದು. ವಯಸ್ಸಿಗೆ ಅನುಗುಣವಾಗಿ ಜ್ಞಾನೋಪದೇಶ ಕಲಿಸಿದಳು. ಪ್ರಥಮ ದಿವ್ಯ ಪ್ರಸಾದ ಸ್ವೀಕಾರ ಸಮಾರಂಭವನ್ನು ಚೆನ್ನಾಗಿಯೇ ಮಾಡಿದಳು. ಮಗನಿಗೆ ಬಿಳಿ ಉಡುಗೆ ತೊಡಿಸಿ ತಲೆಗೊಂದು ಹೂ ಕಿರೀಟವಿರಿಸಿ, ಕೈಗೆ ಮೇಣದ ಬತ್ತಿ ಕೊಟ್ಟು ದಿವ್ಯ ಪ್ರಸಾದ ಸ್ವೀಕಾರ ಸಮಾರಂಭ ಮುಗಿಸಿ, ತಾನೇ ಮಗನನ್ನು ಮನೆ ಮನೆಗೆ ಕರೆದೊಯ್ದು ಹಿರಿಯರಿಂದ ಆಶೀರ್ವಾದ ಮಾಡಿಸಿದಳು.
ಅವಳಿಗೊಂದು ಆಸೆ. ಟೋಲನಾಕಾದ ಬಳಿಯ ಅವರ ಹತ್ತಿರದ ಬಂಧು ಬಳಗದವರು ಅವಳನ್ನು ಅವಳ ಮಗ ಗಂಡನನ್ನು ಗಮನಿಸುತ್ತಿದ್ದರು. ಅವರ ಸ್ಥಿತಿಗತಿಯಲ್ಲಿ ಅಂತಹ ಬದಲಾವಣೆಗಳಾಗಿರಲಿಲ್ಲ. ಹಿಂದಿನಂತೆಯೇ ಬಡತನದಲ್ಲಿ ಕಲ್ಲು ಮಣ್ಣಿನ ಕೆಲಸ ಮಾಡುತ್ತ ಅವರಿದ್ದರು. ಅವರ ಮುಂದೆ ತನ್ನ ಮಗ ಮೆರೆಯಬೇಕು. ಊರಿನಲ್ಲಿ ಒಂದು ಒಳ್ಳೆಯ ನೌಕರಿ ಪಡೆದು ಭಲೆ ಅನಿಸಿಕೊಳ್ಳಬೇಕು ಎಂದೆಲ್ಲ ಅವಳು ಬಯಸಿದಳು. ಅವಳ ಬಯಕೆಯಂತೆಯೇ ಮಗ ಗ್ರೆಗೋರಿ ಓದುತ್ತಿದ್ದ ಕೂಡ.
ಸಾನಬಾವಿ ಪೆದ್ರುವಿನಲ್ಲಿ ಈಗಲೂ ಕೆಲಸ ಮಾಡುವ ಶಕ್ತಿ ಇತ್ತು. ಸಿಮೋನ, ಇನಾಸ ಮುದುಕರಾಗಿದ್ದರೂ ಈತ ಅಲ್ಲಿ ಇಲ್ಲಿ ಕೆಲಸ ಹಿಡಿದು ಮಾಡಿಸುತ್ತ, ತಾನೂ ಮಾಡುತ್ತ ಪೆದ್ರು ಮೇಸ್ತ್ರಿ ಅನ್ನುವ ಹೆಸರು ಉಳಿಸಿಕೊಂಡಿದ್ದ. ಫ಼್ಲೊರಿನಾ ಕೂಡ ಕೆಲಸ ಮಾಡಿಕೊಂಡಿದ್ದವಳೆ. ಪೆದ್ರು ಮನೆ ಸೇರಿದ ನಂತರವೂ ಅವಳು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಲಿಲ್ಲ. ಹಿಂದೆಲ್ಲ ಕಟ್ಟಡ ಕೆಲಸಕ್ಕೇ, ಸುಣ್ಣ ತೆಗೆಯಲು ಹೋಗುತ್ತಿದ್ದವಳು ಈಗ ಮೀನು ತೆಗೆದುಕೊಂಡು ಹಳ್ಳಿಗಳಿಗೆ ಹೋಗುತ್ತಾಳೆ. ಅವಳ ಜತೆ ಕೇರಿಯ ಮತ್ತೂ ಐದಾರೂ ಹೆಂಗಸರು ಬರುತ್ತಾರೆ. ಮೀನು ಮಾರ್ಕೆಟ್ಟಿನಿಂದ ಒಣ ಮೀನು ತರುವುದು ಅದನ್ನು ಬುಟ್ಟಿಗೆ ತುಂಬಿಕೊಂಡು ಐದಾರೂ ಹೆಂಗಸರು ಬರುತ್ತಾರೆ. ಮೀನು ಮಾರ್ಕೆಟ್ಟಿನಿಂದ ಒಣ ಮೀನು ತರುವುದು ಅದನ್ನು ಬುಟ್ಟಿಗೆ ತುಂಬಿಕೊಂಡು ಹತ್ತಿರದ ಐದಾರು ಹಳ್ಳಿಗಳಿಗೆ ಹೋಗುವುದು. ಹಳ್ಳಿ ಹೆಂಗಸರು ತಮಗೆ ಬೇಕಾದ ಒಣ ಬಂಗಡೆ, ಸೊರಲು, ಮೋರಿ ಮೀನು ಕೊಂಡು ಭತ್ತ ಕೊಡುತ್ತಾರೆ. ಹೋಗುವಾಗ ಮೀನು ಕೊಂಡೊಯ್ದರೆ ಬರುವಾಗ ಭತ್ತ ತುಂಬಿಕೊಂಡು ಬರುತ್ತಾರೆ. ಕೆಲಬಾರಿ ಮೀನು ಕೊಟ್ಟು ಸುಗ್ಗಿಯಲ್ಲಿ ಭತ್ತ ತರುತ್ತಾರೆ. ಹತ್ತು ಹದಿನೈದು ಮೈಲಿ ಫ಼ಾಸಲೆಯಲ್ಲಿರುವ ಹಳ್ಳಿಗಳಿಗೆ ಹೋಗಿ ಬರುವುದಕ್ಕೆ ಒಂದು ಎರಡು ಗಂಟೆಯಾಗುತ್ತದೆ.
ಮನೆಗೆ ತಂದ ಭತ್ತವನ್ನು ಕುದಿಸಬೇಕು, ಬೇಯಿಸಿದ ಭತ್ತವನ್ನು ಒಣಹಾಕ ಬೇಕು. ನಂತರ ಮಿಲ್ಲಿಗೆ ಕೊಂಡೊಯ್ದು ಅಕ್ಕಿ ಮಾಡಿಸಬೇಕು. ಇಷ್ಟು ಮಾಡಿದ ನಂತರ ಪರಿಮಳ ಬೀರುವ ಕುಸುಬಲು ಅಕ್ಕಿ ದೊರೆಯುತ್ತದೆ. ಮಳೆಗಾಲಕ್ಕೆ ಅಕ್ಕಿಯ ಸಮಸ್ಯೆ ಬಗೆಹರಿಯುತ್ತದೆ.
ಹಳ್ಳಿಗಳಿಗೆ ಹೊರಡುವಾಗ ಹೆಂಗಸರೆಲ್ಲ ಒಟ್ತಿಗೇನೆ ಹೋಗುತ್ತಾರೆ. ಊರ ಟೋಲಗೇಟಿನ ಬಳಿ ಮುಖ್ಯ ರಸ್ತೆ ಕಾಲು ದಾರಿಗಳಾಗಿ ಒಡೆದುಕೊಳ್ಳುತ್ತದೆ. ಒಂದೊಂದು ಹಳ್ಳಿ ಒಂದೊಂದು ದಿಕ್ಕಿಗೆ ಇದ್ದುದರಿಂದ-
“ಬರತೀನಿ ಕತ್ರೀನ”
“ಬರತೀನಿ ಮೇರಿ”
” ಬರತೀನಿ ರಂಗಿ” ಎಂದು ಕೂಗಿ ಹೇಳಿ ಎಲ್ಲ ಚದುರುತ್ತಾರೆ. ಆದರೆ ಮೀನು ಹೊತ್ತು ಅಷ್ಟು ದೂರ ಹೋದ ರಂಗಿ ಗಕ್ಕನೆ ತಿರುಗಿ ನಿಲ್ಲುತ್ತಾಳೆ.
“ಮೇರಿ..ನಿನಗೆ ಹೇಳಿದ್ದಲ್ವ?”
“ಏನು..ನೀನು ಹೇಳಿದ್ದು..”
“ನನ್ನ ರಂಗಿ ಅಂತ ಕರೀಬೇಡ ಅಂತ..”
“ಓ! ಮರೆತು ಹೋಯ್ತು ಕಣೆ ರಂಗಿ..”
ಮತ್ತೆ ಈರ್ವರೂ ನಗುತ್ತಾರೆ.
“ನಿನ್ನ ನಾಲಿಗೆಗೆ ಬರೆ ಹಾಕಬೇಕು ನೋಡು” ಅನ್ನುತ್ತಾಳೆ ಫ಼್ಲೊರಿನಾ ಮುಂಡಿಗೆ ಪೊದೆಗಳ ಆಚೆಗೆ ಮರೆಯಾಗುತ್ತ.
ಬಿದ್ರಳ್ಳಿಗೆ ಹೋಗುವ ಕಾಲುದಾರಿ ಹಿಡಿದಾಗ ಶಾಲೆಗೆ ಹೊರಟ್ಯ ಮಕ್ಕಳು ಎದುರಾಗುತ್ತಾರೆ.
“ಶಾಲೆಗಾ?” ಎಂದು ಕೇಳುತ್ತಾಳೆ ಫ಼್ಲೊರಿನಾ. ಮಕ್ಕಳು ಗುರುತಿದ್ದುದರಿಂದ ಹೌದು ಎಂದು ಹೇಳಿ ಮುಂದಾಗುತ್ತಾರೆ.
ಇವಳಿಗೆ ಮಗನ ನೆನಪಾಗುತ್ತದೆ.
ಮಗ ಸದಾ ಓದುತ್ತಿರುತ್ತಾನೆ. ಶಾಲೆಯ ಪುಸ್ತಕಗಳನ್ನು ಮಾತ್ರವಲ್ಲ ಬೇರೆ ಬೇರೆ ಪುಸ್ತಕಗಳನ್ನು ತಂದು ಓದುತ್ತಾನೆ.
ಮೊನ್ನೆ ಮನೆ ಮಂತ್ರಿಸಲು ಬಂದ ಪಾದರಿ ಸಿಕ್ವೇರಾ ಮಗ ಮೇಜಿನ ಮೇಲೆ ರಾಶಿ ಹಾಕಿರುವ ಪುಸ್ತಕಗಳನ್ನು ತಿರುವಿ ಹಾಕಿ-
“ಏನು ಗ್ರೆಗೋರಿ ಇವುಗಳನ್ನೆಲ್ಲ ಓದುತ್ತಾನ? ” ಎಂದು ಕೇಳಿದರು.
“ಹೌದು ಪದ್ರಾಬ..ಅವನಿಗೆ ಓದುವ ಹುಚ್ಚು. ಊಟ, ನಿದ್ದೆ ಕೂಡ ಬಿಟ್ಟು ಓದುತ್ತಾನೆ..” ಎಂದೆ.
“ಪ್ರಾರ್ಥನೆ ಜಪ ಎಲ್ಲ ಮಾಡತಾನೆ ಅಲ್ವೆ?” ಎಂದವರು ಕೇಳಿದರು.
“ಅದನ್ನ ಮರೆಯೋದಿಲ್ಲ..ಮನೇಲಿ ಪ್ರಾರ್ಥನೆ ಹೇಳಿ ಕೊಡುವವನೇ ಅವನು” ಎಂದೆ.
“ಓದಲಿ..ಓದಲಿ..ಏನು ಬೇಕಾದರೂ ಓದಲಿ. ಆದರೆ ಜಪ ಪ್ರಾರ್ಥನೆ ಇಗರ್ಜಿಗೆ ಬರೋದು ಬಿಡಬಾರದು. ದೈವ ಭಕ್ತಿ, ದೈವ ಭೀತಿ ಇರಬೇಕು.”
“ನಮ ಹುಡುಗ ಹಾಗಲ್ಲ ಪದ್ರಾಬಾ” ಎಂದಿದ್ದೆ ತಾನು.
ಆ ಭರವಸೆ ತನಗಿದೆ. ಮಗ ಗ್ರೆಗೋರಿ ದೇವರ ಮೇಲೆ ನಂಬಿಕೆ ಭಕ್ತಿ ಇರಿಸಿಕೊಂಡೇ ದೊಡ್ಡ ಮನುಷ್ಯನಾಗುತ್ತಾನೆ. ನಮಗೆ ಒಳ್ಳೆಯದಾಗಬೇಕು ಅಂದರೆ ದೇವರ ಕೃಪೆ ಬೇಕಲ್ಲವೇ?
ಬಿದ್ರಳ್ಳಿಯ ಹನುಮಂತ ದೇವರ ಗುಡಿಯ ಮುಂದೆ ಇವಳು ಊರನ್ನು ಪ್ರವೇಶಿಸುತ್ತಾಳೆ. ಅವಳನ್ನು ನೋಡಿದ್ದೆ ಹಳ್ಳಿ ಹೆಂಗಸರು-
“ಬಾ ಫ಼್ಲೋರಿ ನಮ್ಮ..ಹೋದವಾರ ನೀ ಬರ್ಲೇ ಇಲ್ಲ” ಎಂದು ಕೇಳುತ್ತಾರೆ.
*
*
*
ಬೋನ ರೆಮೇಂದಿಯರ ಮಗ ಫ಼ಿಲಿಪ್ಪ ಮಾತ್ರ ಸಾನಬಾವಿ ಪೆದ್ರುವಿನ ಮಗನಿಗಿಂತ ಚಿಕ್ಕವ. ಪ್ರೌಢಶಾಲೆ ಮುಗಿಸಿದ ಮಗ ಆಗಾಗ್ಗೆ ಬಂದು ಅಂಗಡಿಯಲ್ಲಿ ಕೂಡುವುದು ತುಸು ಅನುಕೂಲಕರವೆನಿಸಿತು ಬೋನನಿಗೆ. ಅವನಿಗೂ ಈಗ ವಯಸ್ಸಾಗುತ್ತ ಬಂದಿತ್ತಲ್ಲವೆ?
ಹೆಂಡತಿ ರೆಮೇಂದಿ ಮನೆಯನ್ನು ತೂಗಿಸಿಕೊಂಡು ಹೋಗುತ್ತಿದ್ದಳು. ಬೋನನಿಗೆ ಅವಳ ಮೇಲಿನ ಆಸಕ್ತಿ ಒಂದಿಷ್ಟು ಕಡಿಮೆಯಾಗಿರಲಿಲ್ಲ. ಮದುವೆಯಾಗಿ ಈಗ ಹಲವು ವರ್ಷಗಳಾಗಿದ್ದರೂ ರೆಮೇಂದಿ ಹಿಂದಿನಂತೆಯೇ ಉತ್ಸಾಹದ ಬುಗ್ಗೆಯಾಗಿದ್ದಳು. ಫ಼ಿಲಿಪ್ಪ ಹುಟ್ಟುವುದಕ್ಕೂ ಮೊದಲು ಒಂದು ಬಾರಿ ಮೈ ಇಳಿದು ಕತ್ರೀನ ಬಂದು ಅವಳನ್ನು ನೋಡಿಕೊಂಡಿದ್ದಳು. ಫ಼ಿಲಿಪ್ಪ ಹುಟ್ಟಿದಾಗ ಬಾಣಂತನ ಮಾಡಿದವಳು ಕೂಡ ಅವಳೇನೆ. ಆದರೆ ಮತ್ತೆ ಕೆಲ ವರ್ಷಗಳ ಹಿಂದೆ ಎರಡನೇ ಬಾರಿ ಮೈ ಇಳಿದಾಗ ಕತ್ರೀನಬಾಯಿ ಇರಲಿಲ್ಲ. ಊರ ತುಂಬ ನರ್ಸಿಂಗ ಹೋಂಗಳು ಆದದ್ದು ಒಂದು ಕಾರಣವಾದರೆ ಕತ್ರೀನಬಾಯಿ ಮನೆ ಜಗಲಿಯ ಮೇಲೆ ಕುಳಿತು ಜಪಸರದ ಮಣೆ ಎಣಿಸುತ್ತಲೇ ಪ್ರಾಣ ಬಿಟ್ಟದ್ದು ಮತ್ತೊಂದು ಕಾರಣವಾಗಿತ್ತು.
ಇಷ್ಟಾದರೂ ರೆಮೇಂದಿ ಸೊರಗಿಲ್ಲ.
ಪಾದರಿ ಗೋನಸ್ವಾಲಿಸ್ ಇದ್ದಾಗ ಅಡಿಗೆ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿದ್ದ ರೆಮೇಂದಿ ಅಂದು ಹೇಗಿದ್ದಳೋ ಇಂದೂ ಹಾಗೆಯೇ ಇದ್ದಾಳೆ. ಆದರೆ ಅವಳಲ್ಲಿ ಏನೋ ಗಾಂಭೀರ್ಯ ಬಂದಿದೆ. ನಡೆಯುವಾಗ ಆ ಚೆಲ್ಲುತನವಿಲ್ಲ. ನಿಧಾನವಾಗಿ ತೂಗಿ ನೋಡಿ ಹೆಜ್ಜೆ ಹಾಕುತ್ತಾಳೆ. ತಂದೆ ಸತ್ತ ಕೆಲವೇ ತಿಂಗಳುಗಳಲ್ಲಿ ತಾಯಿಯನ್ನೂ ಕಳೆದುಕೊಂಡ ಆಕೆಯ ಮೇಲೆ ಮನೆಯನ್ನು ನೋಡಿಕೊಂಡು ಹೋಗುವ ಜವಾಬ್ದಾರಿಯೂ ಬಿದ್ದು ಈ ಗಾಂಭೀರ್ಯ ಬಂದು ಅವಳಲ್ಲಿ ಸೇರಿಕೊಂಡಿದೆ.
ಆದರೆ ಕೆಲವೊಂದು ವಿಚಾರಗಳ ಬಗ್ಗೆ ಅವಳಲ್ಲಿ ಬೇಸರವಿದೆ.
ಬಟ್ಲರ ಫ಼ರಾಸ್ಕನ ಆಗಮನದ ನಂತರದ ಕಾಣಿಕೆ ಡಬ್ಬಿಯ ಪ್ರಕರಣ. ನಂತರ ವಲೇರಿಯನ ಡಯಾಸ ಮಿರೋಣ್ ಆದದ್ದು ಅವಳ ಮನಸ್ಸಿಗೆ ಬಂದಿಲ್ಲ. ಇದು ತನ್ನ ಗಂಡನಿಗೆ ಮಾಡಿದ ಅವಮಾನವೆಂದೇ ಅವಳು ತಿಳಿದುಕೊಂಡಿದ್ದಾಳೆ.
” ಇದನ್ನೆಲ್ಲ ನೀವು ಸುಮ್ನೆ ಸಹಿಸಿಕೊಂಡು ಹೋಗಬಾರದು” ಎಂದು ಹಲವು ಬಾರಿ ಹೇಳಿದ್ದಾಳೆ.
ಹಿಂದೆ ಬಟ್ಲರ ಹೆಂಡತಿ ಎಂದು ಕರೆಸಿಕೊಳ್ಳಲು ಕೊಂಚ ಹಿಂಜರಿಯುತ್ತಿದ್ದ ಆಕೆ ಈಗ ಜವಳಿ ಅಂಗಡಿ ಸಾಹುಕಾರನ ಹೆಂಡತಿ ಎಂದು ಕರೆಸಿಕೊಳ್ಳಲು ಹೆಮ್ಮೆ ಪಡುತ್ತಾಳೆ.
ಗಂಡ ಮನೆಗೆ ಬಂದು ಊಟ ಮುಗಿಸಿ ಮತ್ತೆ ಅಂಗಡಿಗೆ ಹೊರಟಾಗ ರೇಮೇಂದಿ-
“ಏನು ಬಿಸಿಲಲ್ಲಿ ಹೊರಟು ಬಿಟ್ರಿ” ಎಂದು ತುಸು ಧ್ವನಿ ಏರಿಸುತ್ತಿದ್ದಳು.
“ಬಾಳಾ..ಮಧ್ಯಾಹ್ನದ ನಂತರ ನೀನು ಸ್ವಲ್ಪ ಅಂಗಡಿ ನೋಡಿಕೋ” ಎಂದು ಮಗನಿಗೆ ಹೇಳುತ್ತಿದ್ದಳು.
ಆತ ಕೂಡ ವ್ಯಾಪಾರದಲ್ಲಿ ಪಳಗಿದ್ದ.
ಜವಳಿ ಅಂಗಡಿ ಈಗ ವಿಸ್ತಾರಗೊಂಡಿತ್ತು. ಅಂಗಡಿಯಲ್ಲಿ ಮೂರು ನಾಲ್ಕು ಜನ ಹುಡುಗರೂ ಇದ್ದರು. ತನ್ನ ನಂತರ ಯಾರಾದರೂ ಅಂಗಡಿ ನೋಡಿಕೊಳ್ಳಲು ಬೇಕಲ್ಲ ಎಂದು ಬೋನ ಮಗನನ್ನು ಕಾಲೇಜಿಗೆ ಕಳುಹಿಸಲಿಲ್ಲ. ಅದು ಈಗ ಅನುಕೂಲವೇ ಆಯಿತು.
ಊಟ ಮಾಡಿ ಮಲಗಿಕೊಂಡ ಬೋನ ನಾಲ್ಕು ಗಂಟೆಗೆ ಏಳುತ್ತಾನೆ. ರೆಮೇಂದಿ ಬಿಸಿಬಿಸಿ ಕಾಫ಼ಿ ಮಾಡಿ ತಂದು ಗಂಡನ ಕೈಗೆ ಕೊಡುತ್ತಾಳೆ.
ಆತ ಹೊರ ಹೋಗಲು ಸಿದ್ಧನಾಗುತ್ತಿರಲು ರೇಮೇಂದಿ ಒಂದೆರಡು ಸಾಮಾನಿನ ಹೆಸರು ಹೇಳಿ-
“ಬಾಳು ಕೈಲಿ ಈ ಸಾಮಾನು ಕಳಿಸಿಕೊಡಿ” ಅನ್ನುತ್ತಾಳೆ.
“ಮತ್ತೆ?” ಎಂದು ಅವಳ ಮುಖ ನೋಡುತ್ತಾನೆ ಬೋನ.
“ಏನದು?” ಹೊಸದಾಗಿ ನೋಡತಿದೀರೋ ಹೇಗೆ ನನ್ನನ್ನು ? ಅವಳು ಕೆಣಕುತ್ತಾಳೆ.
“ನೀನು ನನಗೆ ಯಾವತ್ತೂ ಹೊಸಬಳೆ” ಎಂದು ನಗುತ್ತಾನೆ ಬೋನ.
ರಸ್ತೆಯುದ್ದಕ್ಕೂ ಹಲವರನ್ನು ಮಾತನಾಡಿಸುತ್ತ ಬೋನ ಅಂಗಡಿಗೆ ಬರುತ್ತಾನೆ.
ಮಗನ ಎದುರು ಕುಳಿತು ನಗುತ್ತಿದ್ದ ಹುಡುಗಿಯೊಬ್ಬಳು ಧಡಬಡಿಸಿ ಎದ್ದು-
“ನಾನು ಬರತೀನಿ” ಎಂದು ಫ಼ಿಲಿಪ್ಪನಿಗೆ ಹೇಳಿ ಹೊರಡುತ್ತಾಳೆ.
ಫ಼ಿಲಿಪ್ಪ ತಾನು ಕುಳಿತಲ್ಲಿಂದ ಎದ್ದು ತಂದೆಗೆ ಜಾಗ ಮಾಡಿಕೊಡುತ್ತ-
“ಅಲೆಕ್ಸ ಪಿಂಟೋ ಮಗಳು ಪಪ್ಪ..” ಎಂದು ಹುಡುಗಿಯ ಪರಿಚಯ ಮಾಡಿಕೊಡುತ್ತಾನೆ.
“ಹೌದು..ಅಲ್ವೆ?”
ಬೋನ ಮಗನ ಮುಖದ ಮೇಲಿನ ಸಂಭ್ರಮವನ್ನು ಗಮನಿಸುತ್ತಾನೆ.
ಪಿಂಟೋ ಮಗಳು ಇವನ ಜವಳಿ ಅಂಗಡಿಯಿಂದ ಇಳಿದು ನಾಗಪ್ಪನ ಸೈಕಲ್ ಶಾಪ್ ಪಕ್ಕದ ಪಿಂಟೋ ಆಟೋ ಸ್ಪೇರ್‍ಸ ಅಂಗಡಿ ಮೆಟ್ಟಲು ಹತ್ತುತ್ತಾಳೆ.
-೯-
ಊರಿನ ಪುರಸಭೆಯ ಚುನಾವಣೆ ಬರುತ್ತದೆ. ಈ ಬಾರಿ ಕೆಲ ರಾಜಕೀಯ ಪಕ್ಷಗಳು ನೇರವಾಗಿ ಚುನಾವಣೆಗೆ ಧುಮುಕುತ್ತಿವೆ. ಫ಼ಾತಿಮಾ ನಗರ, ಜೋಸೆಫ಼ ನಗರ ಎರಡೂ ಸೇರಿ ಆದ ಮೂರನೇ ಡಿವಿಜನ್ನಿನಿಂದ ಯಾರನ್ನು ನಿಲ್ಲಿಸುವುದು ಎಂದು ಕಾಂಗ್ರೆಸ್ಸಿನವರು ಅಭ್ಯರ್ಥಿಯನ್ನು ಹುಡುಕ ಹೊರಟಾಗ ಅವರ ಕಣ್ಣಿಗೆ ಅಂತೋನಿ ಬೀಳುತ್ತಾನೆ. ಪಾಸ್ಕೋಲ ಮೇಸ್ತ್ರಿಯ ಮಗ. ಲೋಕೋಪಯೋಗಿ ಇಲಾಖೆ ನೀರಾವರಿ ಇಲಾಖೆಯಲ್ಲಿ ಗುತ್ತಿಗೆದಾರ ಅನಿಸಿಕೊಂಡು ಹೆಸರು ಮಾಡಿರುವಾತ. ಇವನಿಗೆ ಜಾತಿ ಬೆಂಬಲವೂ ಸಿಗುತ್ತದೆ. ಇವನನ್ನು ಏಕೆ ನಿಲ್ಲಿಸಬಾರದು ಎಂದು ಕಾಂಗ್ರೆಸ ಖಾಸಿಂ ಸಾಹೇಬರು ಪಾಸ್ಕೋಲನ ಮನೆಗೆ ಬಂದದ್ದೂ ಆಯಿತು. ಅವರ ಜತೆ ಇನ್ನೂ ಕೆಲವರು ಇದ್ದರು.
“ಅಂತೋನಿಯವರೆ..ನಾವು ಒಂದು ಇಚಾರಕ್ಕೆ ಬಂದಿದ್ದೇವೆ..ನೀವು ಆಗಲ್ಲ ಅನ್ನಬಾರದು..” ಎಂದು ಪೀಠಿಕೆ ಹಾಕಿ ವಿಷಯಕ್ಕೆ ಬಂದರು ಖಾಸಿಂ ಸಾಹೇಬರು.
ಚುನಾವಣೆ ಅಂದ ಕೂಡಲೆ ಅಂತೋನಿ ಬೆಚ್ಚಿ ಬಿದ್ದ. ಕಾಲಬಳಿ ಹಾವು ಸುಳಿದ ಹಾಗೆ ಪರದಾಡಿದ.
“ಅಲ್ಲ ಯೋಚಿಸಿ..ಎಲ್ಲ ಜಾತಿಯವರೂ ನಿಲ್ಲತಾರೆ ಅಂದ ಮೇಲೆ ನಿಮ್ಮವರೂ ನಿಲ್ಲಬೇಕು..ನಿಮ್ಮವರ ಓಟುಗಳಂತೂ ಗ್ಯಾರಂಟಿ..ಬೇರೆಯವರೂ ನಿಮ್ಮ ಕೈ ಬಿಡೋಲ್ಲ..ಹುಂ ಅನ್ನಿ” ಎಂದು ಉಳಿದವರೂ ಒತ್ತಾಯ ಮಾಡಿದ್ದರಿಂದ ಅಂತೋನಿ-
“ನೋಡೋಣ..ಒಂದೆರಡು ದಿನ ಕೊಡಿ” ಎಂದ.
“ಆಯ್ತು..ನಾಡಿದ್ದು ನಾವು ಬರತೇವೆ” ಎಂದು ಹೇಳಿ ಖಾಸಿಂ ಸಾಹೇಬರು ತಮ್ಮ ಸಂಗಡಿಗರ ಜತೆ ಹೋದರು.
ಆಂತೋನಿಯ ಮನಸ್ಸಿನಲ್ಲಿ ನಿಧಾನವಾಗಿ ಒಂದು ಬೀಜ ಮೊಳಕೆಯೊಡೆಯತೊಡಗಿತು. ಪುರಸಭೆ ಸದಸ್ಯನಾಗುವುದು ಸಣ್ಣ ವಿಷಯವಲ್ಲ. ಆದರೆ ಸ್ವಲ್ಪ ಪ್ರಯತ್ನಪಟ್ಟರೆ, ಜಾತಿಯವರೆಲ್ಲ ಕೈಹಿಡಿದರೆ ಇದು ಸುಲಭ. ಈ ಬಗ್ಗೆ ಒಂದಿಬ್ಬರಲ್ಲಿ ಮಾತನಾಡಿ ಒಂದು ನಿರ್ಧಾರಕ್ಕೆ ಬರಬಹುದಲ್ಲವೆ?
ಅಂತೋನಿ ಮೊದಲು ತನ್ನ ತಂದೆಯ ಹತ್ತಿರ ಈ ವಿಷಯ ಪ್ರಸ್ತಾಪಿಸಿದ.
“ನಿಲ್ಲು” ಎಂದು ಪಾಸ್ಕೋಲ ತಾನೇ ಹುರುಪುಗೊಂಡ. ಅವನದೊಂದು ಆಸೆ ಹಾಗೆಯೇ ಬತ್ತಿ ಹೋಗಿತ್ತು. ಶಿವಸಾಗರದ ಕ್ರೀಸ್ತುವರ ನಡುವೆ ತಾನು ಪ್ರಮುಖನಾಗಬೇಕೆಂದು ಅವನು ಏನೆಲ್ಲ ಮಾಡಿದ್ದ. ಸಿಮೋನನನ್ನು ಹಿಂದೆ ಹಾಕಬೇಕೆಂಬ ಅವನ ಯತ್ನ ಫ಼ಲಕಾರಿಯಾಗಲಿಲ್ಲ. ಕೊನೆಗೆ ಸಿಮೋನ ಗುರ್ಕಾರ ಆದ. ಈಗ ಅವನ ಹಿರಿಯ ಮಗ ತಂದೆಯ ಸ್ಥಾನಕ್ಕೆ ಬರುವ ಯತ್ನದಲ್ಲಿದ್ದಾನೆ. ಅಲ್ಲದೆ ಈಗೀಗ ಗುರ್ಕಾರನಿಗೆ ಹಿಂದಿನ ಗೌರವವಿಲ್ಲ. ಅವನ ಮಾತನ್ನು ಯಾರೂ ಕೇಳುವುದಿಲ್ಲ. ಅವನಿಗೆ ಗೊತ್ತಿಲ್ಲದೇನೆ ಇಗರ್ಜಿಯಲ್ಲಿ ಏನೇನೋ ನಡೆದುಹೋಗುತ್ತದೆ. ಈಗ ಗೌರವ ಇರುವುದು ಇಂತಹ ಸ್ಥಾನಗಳಿಗೆ. ಮಗ ನಾಳೆ ಗೆದ್ದು ಬಂದರೆ ತನಗೆ ತುಂಬಾ ಗೌರವ ಸಿಗುತ್ತದಲ್ಲವೇ?
“..ನಿಲ್ಲು..ಹಾಗೇ ಗುರ್ಕಾರ ಮಾಮನನ್ನು ಬೋನ ಸಾಹುಕಾರರನ್ನು ಪಾದರಿಗಳನ್ನು ಕಂಡು ಬಾ..” ಎಂದ ಪಾಸ್ಕೋಲ.
ಅಂತೋನಿ ಸಿಮೋನನ ಮನೆಗೆ ಹೋದ.
ಎಲೆ ಅಡಿಕೆಯನ್ನು ಕೊಟ್ಟಣಕ್ಕೆ ಹಾಕಿ ಕುಟ್ಟುತ್ತಿದ್ದ ಸಿಮೋನ..
“ಬಾ..” ಎಂದ.
“ಚೆನ್ನಾಗಿದೀಯ? ಇಷ್ಟು ದೂರ?” ಎಂದು ಕೇಳಿದ.
“ಹೌದು, ನಮ್ಮವರಿಗೆ ಮನೆ ಕಟ್ಟಲಿಕ್ಕೆ ಜಾಗಬೇಕು. ಮುನಿಸಿಪಾಲಿಟಿಗೆ ಹೋದರೆ ನಮ್ಮವರ ಕೆಲಸ ಕೂಡಲೇ ಆಗಬೇಕು ಅಂದರೆ ನಮ್ಮವರು ಯಾರಾದ್ರು ಅಲ್ಲಿ ಇರಬೇಕು. ಕಾನ್ವೆಂಟಿನವರು ಬಿದರಳ್ಳಿಗೆ ಹೋಗುವ ದಾರೀಲಿ ಜಾಗ ಕೇಳಿದಾರೆ ಅದು ಮಂಜೂರಾಗಬೇಕು..ನೀನು ನಿಲ್ಲು ..ನಾವು ಇದೀವಿ..” ಎಂದು ಆತ ತನ್ನ ಅಭಿಪ್ರಾಯ ಹೇಳಿದ.
ಈ ಹಿಂದೆ ಈರ್ವರು ಈ ಡಿವಿಜನ್ನಿನಿಂದ ನಿಂತು ಗೆದ್ದುಬಂದಿದ್ದರು. ಇವರಿಂದ ಹೇಳಿಕೊಳ್ಳುವ ಕೆಲಸವೇನೂ ಆಗಿರಲಿಲ್ಲ. ಇವರು ಬೇರೆ ಕೋಮಿನವರು ಆಗಿದ್ದರಿಂದ ಕ್ರೀಸ್ತುವರಿಗೆ ಅನುಕೂಲವಾಗಿರಲಿಲ್ಲ.
ಅಂತೋನಿ ಹಾಗೆಯೇ ಬೋನನನ್ನು ಕಂಡ.
ಅವನೂ ಸಂತೋಷ ವ್ಯಕ್ತಪಡಿಸಿದ.
“ನನ್ನ ಬೆಂಬಲ ನಿನಗಿದೆ..ನೀನೂ ಸ್ವಲ್ಪ ಹಣ ಖರ್ಚು ಮಾಡಬೇಕಾಗಿ ಬರಬಹುದು..ಆದರೆ ಧೈರ್ಯಗೆಡಬೇಡ..ನಿಲ್ಲು..” ಎಂದು ಆತ ಅಂತೋನಿಯವರನ್ನು ಹುರಿದುಂಬಿಸಿದ.
*
*
*
ಕ್ರಿಸ್ಮಸ್ ಗೆ ಕೆಲವೇ ದಿನಗಳಿದ್ದುದರಿಂದ ಪಾದರಿ ಸಿಕ್ವೇರಾ ಇಗರ್ಜಿಗೆ ಸುಣ್ಣ ಬಣ್ಣ ತೆಗೆಸುವಲ್ಲಿ ತೊಡಗಿದ್ದರು. ಗುರ್ಕಾರ ಅಲೆಕ್ಸ ಪಿಂಟೋ ಬಣ್ಣ ತೆಗೆಯುವವರಿಗೆ ಸಲಹೆ ನೀಡುತ್ತ ಇಗರ್ಜಿಯ ಹೊರಗೆ ಒಳಗೆ ತಿರುಗಾಡುತ್ತಿದ್ದ. ಪಾದರಿ ಸಿಕ್ವೇರಾ ಬಂದ ನಂತರ ಕ್ರಿಸ್ಮಸ್ ಹಬ್ಬಕ್ಕೆ ಒಂದು ಜಾತ್ರೆಯ ರೂಪ ಬಂದಿತು. ಇಗರ್ಜಿಯ ಬಲ ಭಾಗದಲ್ಲಿ ದೊಡ್ಡ ಪ್ರಮಾಣದ ಕ್ರಿಬ್ ತಯಾರಿಸಿ ಅಲ್ಲಿ ಜೋಸೆಫ಼ ಮೇರಿಯರ ಮೂರು ನಾಲ್ಕು ಅಡಿ ಎತ್ತರದ ಪ್ರತಿಮೆ ಇರಿಸಿ, ಇವರ ನಡುವೆ ಬಾಲ ಏಸುವನ್ನು ಮಲಗಿಸಿ ಕ್ರಿಸ್ಮಸ್ ಹಬ್ಬದ ಮಹತ್ವದ ಘಟನೆಯನ್ನು ಅತಿ ವರ್ಣರಂಜಿತವಾಗಿ ಸೃಷ್ಟಿ ಮಾಡಲಾಗುತ್ತಿತ್ತು. ಕ್ರಿಬ್ಬಿನಲ್ಲಿ ದನಕರು, ಕುರಿಗಳು, ದನಗಾಹಿಗಳು, ಸೇತುವೆ, ಕಾಡು ಹೊಲ ಗದ್ದೆಗಳು, ಹಳ್ಳಿ ಗುಡಿಸಲುಗಳು ರೂಪ ತಳೆಯುತ್ತಿದ್ದವು. ವಿದ್ಯುತ್ ದೀಪಗಳಿಂದ ಇದನ್ನು ಸಜ್ಜುಗೊಳಿಸಿ ಊರಿನ ಜನರನ್ನೇ ಇಲ್ಲಿಗೆ ಸೆಳೆದು ತರುತ್ತಿದ್ದರು ಪಾದರಿ ಸಿಕ್ವೇರಾ. ಈ ಬಾರಿ ಮತ್ತೆ ಏನು ಹೊಸದಾಗಿ ಮಾಡಬೇಕು ಎಂಬ ಬಗ್ಗೆ ವಿಚಾರ ಮಾಡುತ್ತ ನಿಂತಿದ್ದ ಪಾದರಿ ಸಿಕ್ವೇರಾ ಅವರ ಬಳಿ ಸಾರಿ ಅಂತೋನಿ ಕೈ ಮುಗಿದ.
“ಬೆಸಾಂವಂದಿಯಾ ಫ಼ಾದರ್..” ಅವರು ಕೊಂಚವೇ ತಿರುಗಿ ನೋಡಿ.
“ಹುಂ..ಏನು?” ಎಂದು ಕೇಳಿದರು.
ಕೈ ಎತ್ತಿ ಶಿಲುಬೆ ಗುರುತು ಮಾಡಿ ಆಶೀರ್ವದಿಸುವ ಪದ್ಧತಿಯನ್ನು ಇವರು ರೂಢಿಸಿಕೊಂಡಿರಲಿಲ್ಲ.
ಅಂತೋನಿ ತುಸು ಹೊತ್ತು ಅವರ ಮಗ್ಗುಲಲ್ಲಿ ನಿಂತಿದ್ದ. ತಾನು ಚುನಾವಣೆಗೆ ನಿಲ್ಲಲಿರುವ ವಿಷಯ ಹೇಳಿ ಅವರ ಅಭಿಪ್ರಾಯ ಬೆಂಬಲ ತಿಳಿದುಕೊಳ್ಳಲು ಆತ ಬಂದಿದ್ದ. ಪಾದರಿಗಳು ಹುಂ ಎಂದರೆ ಅವರ ಸಹಕಾರ ಸಿಕ್ಕರೆ ತನ್ನ ಗೆಲುವು ಸುಲಭ ಎಂಬುದು ಅವನ ಅಭಿಪ್ರಾಯವಾಗಿತ್ತು. ಆದರೆ ಈ ವಿಷಯವನ್ನು ಇಲ್ಲಿ ಹೊರಗೆ ಹೇಗೆ ಹೇಳುವುದು? ಅವರು ಬಂಗಲೆಯಲ್ಲಿ ಇದ್ದಿದ್ದರೆ ಹೇಳಲು ಅನುಕೂಲವಾಗುತ್ತಿತ್ತು.
“ಒಂದು ವಿಷಯ ಮಾತನಾಡಬೇಕಿತ್ತು ಫ಼ಾದರ್” ಎಂದ ಅಂತೋನಿ.
ಈಗ ಅವರು ಮುಖ ತಿರುಗಿಸಿ ಅವನನ್ನು ನೋಡಿದರು.
“ಏನದು?”
ಅಂತೋನಿ ಮತ್ತೂ ಕಾದ. ಅವರು ಹತ್ತು ನಿಮಿಷದ ಮಟ್ಟಿಗೆ ಬಂಗಲೆಗೆ ಬಂದಿದ್ದರೆ ಆಗುತ್ತಿತ್ತಲ್ಲ.
“ಏನು ಹೇಳು..”
ಅಂತೋನಿ ಹೇಳುವುದೇ, ಸೈ ಎಂದು ನಿರ್ಧರಿಸಿದ.
“ಫ಼ಾದರ್ ನಾನು ಚುನಾವಣೆಗೆ ನಿಲ್ಲಬೇಕು ಅಂತ ಯೋಚನೆ ಮಾಡತಿದೀನ..ನಿಮ್ಮ ಆಶೀರ್ವಾದ ಬೆಂಬಲ ಬೇಕು..”
ಅವರು ನಿಂತಲ್ಲಿಂದ ನಾಲ್ಕು ಹೆಜ್ಜೆ ಮುಂದೆ ಹೋದರು. ಗಂಟೆ ಗೋಪುರದವರೆಗೂ ಹೋಗಿ ಅಲ್ಲಿ ನಿಂತು ಇಗರ್ಜಿಯ ಬಲ ಮೂಲೆಯನ್ನು ನೋಡಿ ತಿರುಗಿ ಬಂದರು. ಅಂತೋನಿ ಅವರ ಹಿಂದೆಯೇ ಹೆಜ್ಜೆ ಹಾಕಿದ.
“ಯೋಚನೆ ಮಾಡೀದೀಯ? ಅಲ್ಲಿ ಹೋಗಿ ಏನೇನು ಮಾಡಬೇಕು ಗೊತ್ತಲ್ಲ? ಪುರಸಭೆ ಸದಸ್ಯತ್ವ ಅಂದರೆ ಸುಮ್ಮನೆ ಆಗೋದಿಲ್ಲ..ಅದು ಯಾರೂ ಮಾಡಬಹುದಾದ ಕೆಲಸ ಅಲ್ಲ..”
ಅಂತೋನಿಯ ಮುಖ ಬಿಳಿಚಿಕೊಳ್ಳತೊಡಗಿತು. ಗಂಟೆಗೋಪುರದ ನೆರಳಿನಲ್ಲಿ ನಿಂತಿರುವ ತನ್ನನ್ನು ಆ ನೆರಳು ನುಂಗುತ್ತಿದೆಯೇನೋ ಎಂದು ಆತ ಗಾಬರಿಗೊಂಡ. ಪಾದರಿ ಸಿಕ್ವೇರಾ ಅವರ ಮಾತಿನ ಧಾಟಿ, ಬಳಸಿದ ಶಬ್ದಗಳ ಧ್ವನಿ ಹಿತಕರವಾಗಿರಲಿಲ್ಲ. ಇದು ನಿನಗೆ ಹೆಳಿದ್ದಲ್ಲ ಎಂಬುದನ್ನು ಈ ರೀತಿಯಲ್ಲಿ ಅವರು ಹೇಳುತ್ತಿದ್ದಾರೆ ಎಂಬುದು ಅವನಿಗೆ ಖಚಿತವಾಯಿತು. ಆದರೂ ಅವನೆಂದ-
“ಫ಼ಾದರ್..ದೇವರ ಆಶೀರ್ವಾದ ಇದ್ದರೆ ಯಾವ ಕೆಲಸಾನೂ ದೊಡ್ಡದಲ್ಲ ಅಲ್ಲವೆ? ನೀವು ದೇವರ ಆಶೀರ್ವಾದಾನ ನನಗೆ ದೊರಕಿಸಿಕೊಡಬೇಕು..”
“ನೀನು ಪ್ರಯತ್ನಪಡು..ನಾವು ಪಾದರಿ ಮಾದರಿಗಳು ಈ ರಾಜಕೀಯದಲ್ಲಿ ಪ್ರವೇಶ ಮಾಡಬಾರದು..ನಿನಗೆ ಒಳ್ಳೆಯದಾಗಲಿ..” ಎಂದರವರು ಪ್ಯಾಂಟಿನ ಕಿಸೆಯಿಂದ ಬೀಗದ ಕೈ ಗೊಂಚಲು ತೆಗೆದು ಬಂಗಲೆಯತ್ತ ತಿರುಗುತ್ತ.
ಅಂತೋನಿ ಅಲ್ಲಿ ನಿಲ್ಲಲಿಲ್ಲ.
ಅವನಂತೂ ಒಂದು ನಿರ್ಧಾರ ಮಾಡಿದ್ದ. ಪುರಸಭೆಯ ಬರಲಿರುವ ಚುನಾವಣೆಗೆ ನಿಲ್ಲುವುದೇ ಸರಿ ಎಂಬ ತೀರ್ಮಾನಕ್ಕೂ ಬಂದಿದ್ದ. ಮತ್ತೆ ಮನೆಗೆ ಬಂದ ಖಾಸಿಂ ಸಾಹೇಬರಿಗೆ ತನ್ನ ನಿರ್ಧಾರ ಹೇಳಿದ. ಕೇರಿಯ ಎಲ್ಲರಿಗೂ ವಿಷಯ ತಿಳಿಯಿತು. ಎಲ್ಲರೂ ಅಂತೋನಿಯನ್ನು ಮುಂಚಿತವಾಗಿಯೇ ಅಭಿನಂದಿಸಿದರು ಕೂಡ.
ಆದರೆ ಅಂತೋನಿ ಚುನಾವಣಾ ಅಧಿಕಾರಿಗೆ ಅರ್ಜಿ ನೀಡಿದ ಒಂದೇ ದಿನದಲ್ಲಿ ಮೂರನೇ ಡಿವಿಜನ್ನಿನಿಂದ ಸೋಷಲಿಸ್ಟ
ಪಕ್ಷದಿಂದ ಜಾನ ಡಯಾಸ ಕೂಡ ಅರ್ಜಿ ಕೊಂಡದ್ದು ತಿಳಿದು ಬಂದು ಕಾಂಗ್ರೆಸ್ ಪಕ್ಷದವರು ಗೊಂದಲಗೊಂಡರು.
“ಬೇರೆ ಯಾರೇ ಆಗಿದ್ರು ನಾವು ಯೋಚನೆ ಮಾಡುತಿರಲಿಲ್ಲ..ಆದರೆ ನಿಮ್ಮ ಜಾತಿಯವರೇ ಬೇರೊಬ್ಬರು ನಿಂತರಲ್ಲ..ಓಟು ಒಡೆದು ಹೋಗಲ್ವೇ” ಎಂದವರು ಮೈ ಪರಚಿಕೊಂಡರು.
“ಡಯಾಸರಿಗೆ ಉಮೇದುವಾರಿಕೇನ ಹಿಂದಕ್ಕೆ ತೆಗೆದುಕೊಳ್ಳಲು ಹೇಳಿ..ನಿಮ್ಮ ನಿಮ್ಮಲ್ಲಿ ಈ ಪೈಪೋಟಿ ಬೇಡ.”
– ಎಂಬ ಮಾತುಗಳೂ ಕೇಳಿ ಬಂದವು.
ಡಯಾಸ ನಿರ್ಧಾರ ನಂತರದ್ದು ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಆದರೂ ಆತ ಹಿಂದೆ ಸರಿಯಲಿಲ್ಲ. ಬೋನ, ಸಿಮೋನ, ಪಾಸ್ಕೋಲ ಇನ್ನೂ ಕೆಲವರು ಈ ಬಗ್ಗೆ ಯತ್ನಿಸಿದರು. ಈ ಬಗ್ಗೆ ಇನ್ನೂ ವಿವರವಾಗಿ ಪರಿಶೀಲಿಸಿದಾಗ ಪಾದರಿ ಸಿಕ್ವೇರಾ ಡಯಾಸಗೆ ಬೆಂಬಲ ಕೊಡುತ್ತಿರುವುದೂ ತಿಳಿದುಬಂದಿತು.
“ನೀವು ಹಿಂದೆ ಸರಿಬೇಡಿ..ನಾವು ಫ಼ೈಟ್ ಕೊಡೋಣ” ಎಂದರು ಅಂತೋನಿಯ ಪರವಾಗಿದ್ದ ಕೇರಿಯ ಯುವಕರು.
ಚುನಾವಣೆ ಬರುತ್ತಿದೆ ಅನ್ನುವಾಗ ಮೂರನೆ ಡಿವಿಜನ ರಣರಂಗವಾಯಿತು.
“ಇದೇನ್ರಿ ಹೇಗೆ ನೀವು ನೀವೇ ಜಗಳ ಮಾಡೋದು” ಎಂದು ಇತರೆ ಕೋಮಿನವರು ಅಂತೋನಿ ಹಾಗೂ ಡಯಾಸರ ಮುಖ ನೋಡಿದರು.
ಭಾನುವಾರ ಪಾದರಿ ಸಿಕ್ವೇರಾ ಶರಮಾಂವಂಗೆ ನಿಂತವರು-
“ಚುನಾವಣೆ ಬಂದಿದೆ..ಬುದ್ಧಿವಂತರನ್ನ ಅನುಭವ ಇರುವವರನ್ನ ಆರಿಸಿ” ಎಂದಷ್ಟೇ ಹೇಳಿ ಬೇರೆ ವಿಷಯಕ್ಕೆ ಬಂದರೂ ಅವರು ಭೇಟಿಯಾದ ಎಲ್ಲರಿಗೂ ಡಯಾಸಗೇನೆ ಓಟು ಹಾಕಲು ಹೇಳಿದರು ಎಂಬುದು ಎಲ್ಲರ ಕಿವಿಗೂ ಬಿದ್ದಿತು.
ಸಾಲದ್ದಕ್ಕೆ ಕಾನ್ವೆಂಟಿನ ಸಿಸ್ಟರುಗಳು ಬೇರೆ ಮನೆಮನೆಗೆ ಹೋದವರು ಅಂತೋನಿಗೆ ಏನು ಗೊತ್ತು? ಕಂಟ್ರ್ಯಾಕ್ಟರ್ ಆದ ಕೂಡಲೆ ಎಲ್ಲ ಬರುತ್ತದೆಯೇ ಎಂದೇನೋ ಮಾತನಾಡಿಕೊಂಡದ್ದು ಕೇಳಿ ಬಂದಿತು.
ಅಂತೋನಿ, ಅವನ ಹೆಂಡತಿ, ಅವನ ಗೆಳೆಯರು ಕಾಂಗ್ರೆಸ್ ಸಂಸ್ಥೆ ಪ್ರಚಾರಕ್ಕೇನೂ ಕಡಿಮೆ ಮಾಡಲಿಲ್ಲ. ಆದರೆ ಚುನಾವಣೆ ನಡೆದು ಫ಼ಲಿತಾಂಶ ಹೊರಬಿದ್ದಾಗ ಜಾನಡಯಾಸ ಗೆದ್ದಿದ್ದ. ಅಂತೋನಿ ಸೋತಿದ್ದ.
ಅಂತೋನಿಯನ್ನು ಕಟ್ಟಿಕೊಂಡು ತಿರುಗಾಡಿದ ಕ್ರೀಸ್ತುವ ಯುವಕರು-
“..ಇದು ಯಾಕೆ ಹೀಗಾಯ್ತು ನಮಗೆ ಗೊತ್ತಿದೆ..” ಎಂದು ಹಲ್ಲುಕಡಿದರು. ಮಾಡಿದರು. ಮುಷ್ಟಿ ಬಿಗಿದುಕೊಂಡು, ತುಟಿ ಕಚ್ಚಿಕೊಂಡು ತೋಳಿನ ಸ್ನಾಯುಗಳನ್ನು ಹೊರಳಿಸುತ್ತ, ಅವರು ಮಾತನಾಡಿಕೊಳ್ಳುತ್ತಿದ್ದುದು ಗುರ್ಕಾರ ಸಿಮೋನನ ಕಿವಿಗೆ ಬಿದ್ದಿತು. ಬೋನ ಕೇಳಿಸಿಕೊಂಡ. ಇವರಿಬ್ಬರೂ ಆತಂಕದಿಂದ ಆ ಯುವಕರ ಬಳಿ ಹೋದರು.
“ನೋಡಿ ಹಾಗೆಲ್ಲ ಮಾತನಾಡಬಾರದು..ಡಯಾಸ ಕೂಡ ನಮ್ಮವನೇ ಅಲ್ವೆ..ಅವನೂ ನಮ್ಮ ಕೇರಿಗೆ ನಮ್ಮ ಜನರಿಗೆ ಒಳ್ಳೆಯದು ಮಾಡತಾನೆ..” ಎಂದು ಸಮಾಧಾನ ಹೇಳಿದರು.
ಈ ಚುನಾವಣಾ ಫಲಿತಾಂಶದ ಹಿಂದೆಯೇ ಕ್ರಿಸ್ಮಸ್ ಹಬ್ಬ ಬಂದಿತು. ಮನೆ ಮನೆಯ ಮುಂದೆ ನಕ್ಷತ್ರಗಳು ತೂಗಿ ಬಿದ್ದವು. ಶುಭಾಶಯ ಪತ್ರಗಳು ದೂರದ ನೆಂಟರಿಂದ ಗೆಳೆಯರಿಂದ ಬಂದವು. ಇವರೂ ಆರಿಸಿ ಜನರಿಗೆ ಕಳುಹಿಸಿದರು. ರಾತ್ರಿ ಎರಡು ಗಂಟೆಯವರೆಗೆ ಮನೆ ಮಂದಿ ಕುಳಿತು ಚಕ್ಕುಲಿ, ಶಂಕರ ಪೊಳೆ, ಉಂಡೆ, ಚೌಡೆ ಕಿಡಿಯೆ, ಸುಕ್ರುಂಡೆ, ನೆವ್ರೆ ಎಂದೆಲ್ಲ ತಿಂಡಿಗಳನ್ನು ಮಾಡಿದರು. ಹೊಸಬಟ್ಟೆ ಹೊಲಿಸುವ ಓಡಾಟ, ಮನೆಗೆ ಸುಣ್ಣ ಬಣ್ಣ ಮಾಡಿಸುವುದು. ಹೀಗೆ ಜನ ಕ್ರಿಸ್ಮಸ್ ಸಂಭ್ರಮದಲ್ಲಿ ಮುಳುಗಿದರು.
ಡಿಸೆಂಬರ ಇಪ್ಪತ್ನಾಲ್ಕರ ರಾತ್ರಿ ಹತ್ತು ಗಂಟೆಗೇನೆ ಇಗರ್ಜಿಯ ಗಂಟೆ ಬಾರಿಸಿತು. ಜಗತ್ತಿನಲ್ಲಿ ಶಾಂತಿ, ಪ್ರೀತಿ, ಕರುಣೆ, ಕ್ಷಮೆ, ದಯೆಯನ್ನು ಬಿತ್ತಲೆಂದು ಬಂದ ದೇವಕುಮಾರನ ಜನ್ಮ ಸಂದರ್ಭವನ್ನು ಆಚರಿಸಲು ಜೋಸೇಫ಼ ನಗರ, ಫ಼ಾತಿಮಾ ನಗರದ ಕ್ರೀಸ್ತುವರು ಸಂತಸ ಸಂಭ್ರಮದಲ್ಲಿ ಇಗರ್ಜಿಗೆ ಧಾವಿಸಿದರು. ರೈಲು ನಿಲ್ದಾಣದ ಹಿಂಬದಿಯ ಮನೆಗಳಿಂದ, ಜಯಪ್ರಕಾಶ ನಗರದಿಂದ, ಊರಿನ ಇನ್ನೂ ಕೆಲವು ಬಡಾವಣೆಗಳಿಂದ ಕ್ರೀಸ್ತುವರು ಬಂದರು.
ಇಗರ್ಜಿ ಬಾಗಿಲಲ್ಲಿ ಕೈ ಕುಲುಕುವ, ಹ್ಯಾಪಿ ಕ್ರಿಸ್ಮಸ್ ಎಂದು ಹೇಳುವ ಅಪ್ಪಿಕೊಳ್ಳುವ ಸಂಭ್ರಮ ಕಂಡಿತು. ವಿವಿಧ ಬಗೆಯ ಸೆಂಟುಗಳಿಂದ, ಸೀರೆಯೊಳಗೆ ಹಾಕಿ ಇರಿಸಿದ ಡಾಂಬರಿನ ಗುಳಿಗೆಯ ಪರಿಮಳದಿಂದ, ಜತೆಗೆ ವಿಸ್ಕಿ ಬ್ರಾಂಡಿ ಶರಾಬಿನ ವಾಸನೆಯಿಂದ ಇಗರ್ಜಿ ಸುತ್ತಲಿನ ಗಾಳಿ ಭಾರವಾಗಿ ಬೀಸಿತು.
ಮಧ್ಯರಾತ್ರಿಯ ಹೆಪ್ಪುಗಟ್ಟಿಸುವ ಛಳಿಯಲ್ಲಿ ಪಾದರಿ ಕ್ರಿಬ್ಬಿನಲ್ಲಿ ಏಸು ಬಾಲನ ಪ್ರತಿಮೆ ಇರಿಸಿದಾಗ ಗಡಿಯಾರ ಹನ್ನೆರಡು ಬಾರಿಸಿತು. ಇಗರ್ಜಿಯ ಗಂಟೆ ಮೋಹಕವಾಗಿ ಟಿಂಟಣಿಸಿತು. ಮಿರೋಣ್ ಜಾನಡಯಾಸ್ ಪೀಟಿಲಿನ ಮೇಲೆ ಕಮಾನು ಏರಿಸಿ, ಇಳಿಸಿ-
“ಆದೇಸ್ತೆ ಫ಼ಿದೇಲೆಸ ಲೇತು ತೂಯಿ ಪ್ರಾಂತಿಸ ಹೋಸಾನ್ನ ಹೋಸಾನ್ನ..” ಎಂದು ಏಸು ಹುಟ್ಟಿದ ಸಂತಸವನ್ನು ಸಾರುವ ಲ್ಯಾಟಿನ್ ಗೀತೆಯೊಂದನ್ನು ಹಾಡಿದ. ಛಳಿಗೆ ಸಣ್ಣಗೆ ನಡಗುತ್ತ ಜನ ಈ ಹಾಡಿಗೆ ತಮ್ಮ ದನಿ ಸೇರಿಸಿದರು. ಜನ ಎತ್ತರದ ದನಿಯಲ್ಲಿ ಹಾಡುತ್ತಿದ್ದರೆ ಪ್ರತ್ಯೇಕವಾಗಿ ಕುಳಿತ ಸಿಸ್ಟರುಗಳು ಕೆಳಗಿನ ದನಿಯಲ್ಲಿ ತಮ್ಮ ಧ್ವನಿ ಸೇರಿಸಿದರು.
*
*
*
ಬಳ್ಕೂರಕಾರ್ ಕೈತಾನನಿಗೆ ಯಾವುದೇ ತೊಂದರೆ ತಾಪತ್ರಯಗಳು ಇರಲಿಲ್ಲ. ಕೈ ತುಂಬ ಕೆಲಸವಿತ್ತು. ಅವನು ಎಲ್ಲರಿಗಿಂತಲೂ ಹಿರಿಯನಾಗಿದ್ದರಿಂದ ಊರಿನಲ್ಲಿ ಕ್ರೀಸ್ತುವರ ನಡುವೆ ಗೌರವವಿತ್ತು. ಮಜಬೂತಾದ ಮನೆ ಕಟ್ಟಿದ್ದ. ಕುರ್ಚಿ, ಮಂಚ, ಮೇಜು ಎಂದು ಅವರಿವರು ನೋಡಿ ಹೊಟ್ಟೆಗಿಚ್ಚು ಪಡುವಂತೆ ಮಾಡಿಸಿದ್ದ. ಗುಂಡಬಾಳೆಯಿಂದ ಇನಾಸಜ್ಜಿ ಬಂದು ಇವನ ಮನೆಯಲ್ಲಿ ನಿಂತ ನಂತರವಂತೂ ಇವನ ಅದೃಷ್ಟ ಬದಲಾಗಿತ್ತು.
ಮುದುಕಿ ಒಂದಿಷ್ಟು ಹಣ ತಂದು ಅಳಿಯನಿಗೆ ಕೊಟ್ಟಿದ್ದಾಳೆ..ಎಂದು ಜನ ಮಾತನಾಡಿಕೊಳ್ಳುತ್ತಿದ್ದರಾದರೂ ಇದೆಷ್ಟು ನಿಜ ಎಂಬುದು ಯಾರಿಗೂ ತಿಳಿದಿರಲಿಲ್ಲ.
ಇವನ ಹಿರಿಯ ಮಗ ಸ್ಯಾಮ್ಸನ್ ಮಾತ್ರ ವಿದ್ಯಾವಂತನಾಗಿರಲಿಲ್ಲ. ಉಳಿದವರೆಲ್ಲ ಪ್ರೌಢಶಾಲೆಯ ಒಂದು ಎರಡನೆ ತರಗತಿಯವರೆಗೆ ಓದಿ ಮುಂದೆ ಓದಲಾಗದೆ ಹಳ್ಳಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಕೈತಾನನ ಹಿರಿಯ ಮಗ ಸ್ಯಾಮ್ಸನ್ನನ ಮದುವೆ ಹಿಂದೇ ಆಗಿದ್ದರಿಂದ ಅವನ ಸಂಸಾರ ಕೂಡ ಕೈತಾನನ ಮೇಲೆಯೇ ಅವಲಂಬಿಸಿಕೊಂಡಿತ್ತು. ಓರ್ವ ಮಗಳ ಮದುವೆ ಮಾಡಿ ಕೈತಾನ ಒಂದು ಭಾರ ಕಡಿಮೆ ಮಾಡಿಕೊಂಡಿದ್ದ.
ಇನಾಸಜ್ಜಿ ಸತ್ತ ನಂತರ ಅವಳ ಹನ್ನೊಂದನೇ ದಿನ, ನಲವತ್ತನೇ ದಿನ ಎಂದೆಲ್ಲ ಮಾಡಿ ವರ್ಷದ ಪೂಜೆಯನ್ನೂ ಇರಿಸಿಕೊಂಡ. ಪ್ರತಿ ವರುಷ ಇಗರ್ಜಿಯಲ್ಲಿ ಪೂಜೆ ಮಾಡಿಸಿ ಮನೆಯಲ್ಲಿ ಊಟ ಹಾಕುವುದನ್ನು ಮುಂದುವರೆಸಿದ. ಹೀಗೆ ಒಂದೆರಡು ವರ್ಷ ಸತ್ತವರಿಗೆ ಪೂಜೆ ಕೊಡಿಸಿ ಒಂದಿಷ್ಟು ನಷ್ಟ ಮಾಡಿಕೊಂಡ. ಆದರೆ ಮೂರನೇ ವರ್ಷ ಅತ್ತೆ ಹೆಸರಿನಲ್ಲಿ ಪೂಜೆ ಕೊಡಿಸಲು ಇವನೇ ಇರಲಿಲ್ಲ.
ಭಟ್ಕಳದ ಇಗರ್ಜಿಯ ಹಬ್ಬಕ್ಕೆ ಹೋದವ ಅಲ್ಲಿ ನೆಂಟರ ಮನೆಯಲ್ಲಿ ಉಳಿದುಕೊಂಡಿದ್ದ. ಸಂಜೆ ತೆಂಗಿನಮರದ ಶೇಂದಿ ತಾಜಾ ತಾಜಾ ಸಿಗುತ್ತದೆಂದು ಕುಡಿಯಲು ಹೋದವ ಎಷ್ಟು ಕುಡಿದರೂ ತೃಪ್ತಿಯಾಗದೆ ಅದರಲ್ಲಿಯೇ ಮುಳುಗಿ ಹೋದ. ಕತ್ತಲಾದ ಮೇಲೆ ನೆಂಟರ ಮನೆಗೆ ಹಾಳು ಬಿದ್ದ ಒಂದು ಹಿತ್ತಲ ಮೂಲಕ ಬರುತ್ತಿದ್ದವ ಅಲ್ಲಿದ್ದ ನೆಲಬಾವಿಗೆ ಬಿದ್ದ.
ಯಾರೋ ನೆಂಟರ ಮನೆಗೆ ಹೋಗಿರಬೇಕೆಂದು ಇವನು ಉಳಿದುಕೊಂಡಿದ್ದ ಮನೆಯವರು ತಿಳಿದರು. ಶಿವಸಾಗರದಲ್ಲಿ ಇವನ ಹೆಂಡತಿ ನಮಾ ಮೊರಿಯಾ ಹೀಗೆ ತಿಳಿದಳು. ಆದರೆ ಮೂರು ದಿನಗಳ ನಂತರ ಕೆಟ್ಟ ವಾಸನೆಯಿಂದ ವಿಷಯ ತಿಳಿಯಿತು. ಕೆಂಪು ರುಮಾಲು, ಜರಕಿ ಚಪ್ಪಲಿ, ಎಲೆ ಅಡಿಕೆ ಚೀಲದಿಂದ ವಿಷಯ ಸ್ಪಷ್ಟವಾಯಿತು. ಹೆಣವನ್ನು ಭಟ್ಕಳದಲ್ಲಿಯೇ ಮಣ್ಣು ಮಾಡಲಾಯಿತು. ಇವನ ಹೆಂಡತಿ ಮಕ್ಕಳು ಸಿಮೋನ, ಪಾಸ್ಕೋಲ ಶಿವಸಾಗರದಿಂದ ಇಲ್ಲಿಗೆ ಬಂದರು.
ನಂತರ ಇಲ್ಲಿಯ ಪರಿಸ್ಥಿತಿ ಕೆಡತೊಡಗಿತು. ಮನೆಯಲ್ಲಿದ್ದ ಮರದ ಸಾಮಾನುಗಳನ್ನೆಲ್ಲ ಮಾರಿ ತಿನ್ನುವ ಪರಿಸ್ಥಿತಿ ಬಂದಿತು. ಸ್ಯಾಮ್ಸನ್ನನ ತಮ್ಮಂದಿರು ಶಿವಸಾಗರದ ಆಸುಪಾಸಿನ ಹಳ್ಳಿಗಳಲ್ಲಿ ಹಾಲುಮಡ್ಡಿ ವ್ಯಾಪಾರ, ಅಡಿಕೆ ವ್ಯಾಪಾರ ಎಂದು ಬೇರೆ ಬೇರೆ ಉದ್ಯೋಗ ಹಿಡಿದು ಅಲ್ಲಿಯೇ ಮನೆ ಮಾಡಿದರು. ಸ್ಯಾಮ್ಸನ ಹೆಂಡತಿ, ಮಗಳು ಗ್ಲೋರಿಯಾ ತಾಯಿಯನ್ನು ಸಾಕಿಕೊಂಡು ಹಳೆಯ ಮನೆಯಲ್ಲಿದ್ದಾನೆ. ಇವನ ಮಗಳು ಗ್ಲೋರಿಯಾ ವಿದ್ಯಾವಂತಳಾಗಿದ್ದಾಳೆ. ಅವಳಿಗೆ ಒಂದು ಕೆಲಸವನ್ನು ಹುಡುಕುವ ಯತ್ನದಲ್ಲೂ ಇದ್ದಾನೆ ಸ್ಯಾಮ್ಸನ.
ಈ ನಡುವೆ ಉಳಿದ ತಮ್ಮಂದಿರು ಮನೆಯಲ್ಲಿ ಪಾಲು ಕೇಳುತ್ತಿದ್ದಾರೆ. ಸ್ಯಾಮ್ಸನ ತಮ್ಮಂದಿರಿಗೆ ಎಲ್ಲಿ ಪಾಲುಕೊಡಬೇಕಾಗುತ್ತದೋ ಎಂದು ಮುನಿಸಿಪಾಲಿಟಿಯಲ್ಲಿ ಏನೋ ಭಾನಗಡಿ ಮಾಡಿದ್ದಾನೆಂದೂ ಸುದ್ದಿಯಿದೆ.
ಇಗರ್ಜಿ ಹಬ್ಬಕ್ಕೆ ವರ್ಷಕ್ಕೊಮ್ಮೆ ಬರುವ ಅವನ ತಮ್ಮಂದಿರು-
“ಸ್ಯಾಮ್ಸನ್, ಎಲ್ಲ ಸರಿ. ನೀನು ಈ ಮನೇನ ಒಳಗೆ ಹಾಕಿಕೊಂಡಿದ್ದು ನ್ಯಾಯಾನ? ಇದು ದೇವರ ಹತ್ತು ಕಟ್ಟಲೆಗಳಿಗೆ ವಿರೋಧ ಅಲ್ವ?” ಎಂದು ಜಗಳ ತೆಗೆಯುತ್ತಾರೆ.
ಬೆಳಿಗ್ಗೆ ಎದ್ದ ಕೂಡಲೇ ಕೈಯಲ್ಲಿ ಗ್ಲಾಸ್ ಹಿಡಿದ ಇವರು ಇಗರ್ಜಿಗೆ ಹೋದವರು ಅಲ್ಲಿಯೇ ಹತ್ತಿರದಲ್ಲಿರುವ ಶರಾಬು ಬಿಳಿಯಪ್ಪನ ಅಂಗಡಿಗೆ ಹೋಗಿ ಸ್ವಲ್ಪ ಕುಡಿದಿರುತ್ತಾರೆ. ಪೂಜೆ ಮುಗಿದದ್ದೆ ಸ್ನೇಹಿತರ ಮನೆ ಗುರುತಿನವರ ಮನೆ ಎಂದು ಒಂದೊಂದು ಗ್ಲಾಸು ಏರಿಸಿ ಊಟದ ಹೊತ್ತಿಗೆ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡಿರುತ್ತಾರೆ. ಅಣ್ಣ ಸ್ಯಾಮ್ಸನ ತಂದೆಯ ಮನೆಯನ್ನು ಮುರಿದು ಹೊಸದಾಗಿ ಕಟ್ಟಿರುವುದನ್ನು ನೋಡಿದಾಗ ಇವರಿಗೆ ತಾಳ್ಮೆ ಕಳೆದು ಹೋಗಿ ಇವರು ಮಾತನಾಡತೊಡಗುತ್ತಾರೆ. ಮಾತಿಗೆ ಮಾತು ಸೇರಿ ಅದು ಜಗಳವಾಗಿ ಪರಿವರ್ತನೆ ಹೊಂದಿ ಕೊನೆಗೆ ಹೊಡೆದಾಟಕ್ಕೆ ಹೋಗಿ ಸಿಮೋನನೋ ಪಾಸ್ಕೋಲನೋ ಬಂದು ಬಿಡಿಸ ಬೇಕಾಗುತ್ತದೆ. ಪ್ರತಿಬಾರಿ ಊರಿಗೆ ಹಬ್ಬ ಬಂತೆಂದರೆ ಸ್ಯಾಮ್ಸನ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಇದ್ದುದೆ. ಪ್ರತಿಬಾರಿ ಊರಿಗೆ ಹಬ್ಬ ಬಂತೆಂದರೆ ಸ್ಯಾಮ್ಸನ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಇದ್ದುದೆ.
ಗುರ್ಕಾರ ಸಿಮೋನ ಒಂದು ದಾರಿ ತೋರಿಸಿದ.
“ಮನೆ ಹೇಗೂ ನಿನ್ನದಾಗಿದೆ..ನಿನ್ನ ತಮ್ಮಂದಿರಿಗೆ ಅವರವರ ಪಾಲಿನ ಹಣ ಕೊಡು..ಒಂದು ಪತ್ರ ಬರೆಸಿಕೋ..ಅಲ್ಲಿಗೆ ಈ ಜಗಳ ನಿಲ್ಲುತ್ತೆ..ಹಬ್ಬಕ್ಕೆ ಬಂದವರು ಹೊಡೆದಾಡಿದರು ಅನ್ನುವ ಮಾತು ಸುಳ್ಳಾಗುತ್ತದೆ..” ಎಂಬ ಗುರ್ಕಾರನ ಮಾತಿಗೆ ಸ್ಯಾಮ್ಸನ್ ಅವನ ತಮ್ಮಂದಿರು ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಈ ನಡುವೆ ಸ್ಯಾಮ್ಸನ್ ಮಗಳು ಗ್ಲೋರಿಯಾ ಹೈಸ್ಕೂಲು ಮುಗಿಸಿದ್ದಾಳೆ. ಶಿಕ್ಷಕಿಯ ಕೆಲಸಕ್ಕೆ ಅರ್ಜಿ ಹಾಕಿದ್ದಾಳೆ. ಕೈತಾನನ ಮಗಳು ಪ್ರೆಸಲ್ಲಾಗೆ ಕೆಲಸ ಸಿಕ್ಕಿದೆ. ಇವಳಿಗೆ ಸಿಕ್ಕಿಲ್ಲ. ಮಗಳಿಗೊಂದು ಕೆಲಸ ಕೊಡಿಸಬೇಕು ಎಂಬ ಯತ್ನವನ್ನು ಸ್ಯಾಮ್ಸನ್ ಬಿಟ್ಟಿಲ್ಲ.
ಕಾನ್ವೆಂಟಿನಲ್ಲಿ ಈರ್ವರು ಶಿಕ್ಷಣ ತೆಗೆದುಕೊಳ್ಳುತ್ತಾರೆ ಎಂದರು. ಇದನ್ನು ಸ್ಯಾಮ್ಸನಗೆ ಹೇಳಿದವರು ಡಾಕ್ಟರ್ ಕೊದಂಡರಾವ್. ಮಳೆಗಾಲದಲ್ಲಿ ಅವರ ಬಾವಿ ಕುಸಿದಿತ್ತು. ಮಳೆಗಾಲ ಮುಗಿದ ನಂತರ ಬಾವಿಯಿಂದ ನೀರು ಹೊರ ಹಾಕಿ ಕೆಳಗಿನಿಂದ ಕಲ್ಲುಕಟ್ಟಿಕೊಂಡು ಬರುವ ಕೆಲಸ ವಹಿಸಿಕೊಂಡ ಸ್ಯಾಮ್ಸನ್ ಮೇಲಿನಿಂದ ಗಡಗಡೆಯ ಮೂಲಕ ಕಲ್ಲುಗಳನ್ನು ಕೆಳಕ್ಕೆ ಇಳಿಸುತ್ತಿರುವಾಗ ಡಾಕ್ಟರ್ ಕೊದಂಡರಾವ್ ಅಲ್ಲಿಗೆ ಬಂದು ನಿಲ್ಲುತ್ತಿದ್ದರು. ಅದು ಇದು ಮಾತಿನ ನಡುವೆ ಸ್ಯಾಮ್ಸನ್ ಮಗಳು ಪ್ರೌಢಶಾಲೆ ಮುಗಿಸಿ ಮನೆಯಲ್ಲಿ ಕುಳಿತಿರುವ ವಿಷಯ ಬಂದಿತು.
“ಅಲ್ಲಿ ಕಾನ್ವೆಂಟಿನಲ್ಲಿ ಎರಡು ಕೆಲಸ ಖಾಲಿ ಇದೆ ನೋಡು..” ಎಂದರು. ಅವರಿಗೂ ಕಾನ್ವೆಂಟಿಗೂ ಹತ್ತಿರದ ಸಂಪರ್ಕವಿತ್ತು. ಕೊದಂಡರಾಯರ ಮಕ್ಕಳೆಲ್ಲ ಕಾನ್ವೆಂಟಿನಲ್ಲಿಯೇ ಓದುತ್ತಿದ್ದರು. ಸಿಸ್ಟರುಗಳಿಗೆ ಏನೇ ಕಾಯಿಲೆಯಾದರೂ ಅವರು ಇವರ ಬಳಿಗೇನೆ ಬರುತ್ತಿದ್ದರು. ಹೀಗಾಗಿ ಕಾನ್ವೆಂಟಿನ ಹಲವು ವಿಷಯಗಳು ಇವರಿಗೆ ತಿಳಿದಿರುತ್ತಿದ್ದವು.
“ಹೌದಾ..ರಾಯರೆ?” ಎಂದು ಉತ್ಸಾಹದಿಂದ ಕೇಳಿದ ಸಾಮ್ಸನ್.
“ಹೌದು..ಅದು ನಿಮ್ಮದೇ ಅಲ್ವ..ಅರ್ಜಿ ಹಾಕಿಸು ಕೆಲಸ ಸಿಗುತ್ತೆ..” ಎಂದರವರು ಖಚಿತವಾಗಿ-
ಸ್ಯಾಮ್ಸನ್‌ಗೆ ಇಷ್ಟಕ್ಕೇನೆ ಸಂತೋಷವಾಯಿತು. ಮನೆಗೆ ಬಂದವನೇ ಮಗಳಿಗೆ ಹೇಳಿ ಒಂದು ಅರ್ಜಿ ಬರೆಸಿಕೊಂಡು ಸ್ನಾನ ಮಾಡಿ ಬೇರೆ ಉಡುಪು ಧರಿಸಿ ಮಗಳನ್ನು ಕರೆದುಕೊಂಡು ಕಾನ್ವೆಂಟಿಗೆ ಧಾವಿಸಿದ. ಸಿಸ್ಟರುಗಳೆಲ್ಲ ಕಾನ್ವೆಂಟಿನ ಒಳಗಿನ ಅವರ ಕೊಪೆಲಿನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದರು. ಪ್ರಾರ್ಥನೆ ಆಗುವ ತನಕ ಇವರು ಹೊರಗೇನೆ ನಿಂತಿರುತ್ತಿದ್ದರು. ನಂತರ ತೂಗು ಬಿದ್ದ ಕಿರು ಗಂಟೆಯ ದಾರ ಎಳೆದರು. ಹೆಡ್‌ಸಿಸ್ಟರ್ ಬಂದು ಬೀಗ ತೆಗೆದು ಬಾಗಿಲು ತೆಗೆದು-
“..ಕೋಣ್ ಜಾಯ?” (ಯಾರು ಬೇಕು?) ಎಂದು ಕೇಳಿದಾಗ ಸ್ಯಾಮ್ಸನ್ ಅವರ ಕೈಗೆ ಅರ್ಜಿ ನೀಡಿದ. ಅವರು ಅರ್ಜಿ ಓದಿದರು. ಸಾಮ್ಸನ್ ಹಾಗೂ ಗ್ಲೋರಿಯಾರನ್ನು ಎರಡು ಮೂರು ಸಾರಿ ನೋಡಿದರು. ನಂತರ-
“..ನೋಡೋಣ…” ಎಂದರು ತೀರಾ ಸಪ್ಪೆಯಾಗಿ.
“..ಸಿಸ್ಟರ್ ಇದೊಂದು ಉಪಕಾರ ಮಾಡಬೇಕು ನೀವು..” ಎಂದು ಸ್ಯಾಮ್ಸನ್ ಕೈ ಮುಗಿದ.
“ಆಯ್ತು…ಆಯ್ತು..” ಎಂದು ಹೆಡ್‌ಸಿಸ್ಟರ್ ಒಳಹೋಗಿ ಬೀಗ ಹಾಕಿಕೊಂಡರು.
ಕೊದಂಡರಾಯರ ಮಾತು ಕೇಳಿ ಉತ್ಸಾಹದಿಂದ ಬಂದವ ಏಕೋ ಸಿಸ್ಟರರ ದನಿ ಕೇಳಿ ನಿರುತ್ಸಾಹಗೊಂಡ.
ಗ್ಲೋರಿಯಾ ಹಿಂದೆಯೇ ವಿಷಯ ತಿಳಿದ ಹಸಿಮಡ್ಲು ಪಾತ್ರೋಲನ ಮಗಳೂ ಒಂದು ಅರ್ಜಿ ಕೊಟ್ಟಳು.
ತಿಂಗಳುಗಳು ಉರುಳಿದವು. ಅರ್ಜಿಕೊಟ್ಟವರಿಗೆ ತಾವು ಕೊಟ್ಟ ಅರ್ಜಿಯ ಕತೆ ಏನಾಯಿತು ಎಂಬುದು ತಿಳಿಯಲಿಲ್ಲ. ಆದರೂ ಅವರಿಗೊಂದು ಆಸೆ. ಕೆಲಸ ಸಿಗಬಹುದು. ದೇವರು ಕೈಬಿಡಲಾರ ಎಂಬ ಭರವಸೆ.
ಜನವರಿ ತಿಂಗಳು, ಮೂರು ರಾಯರ ಹಬ್ಬ ಆಚರಿಸುವ ಸಂದರ್ಭ. ಬಾಲ ಏಸುವನ್ನು ನೋಡಲು ಮೂರು ಜನ ಪಂಡಿತರು ಬಂದು ಮಗುವಿಗೆ ಕಾಣಿಕೆಗಳನ್ನು ನೀಡಿ ಹೋಗುತ್ತಾರೆ. ಕ್ರಿಬ್ಬಿನಲ್ಲಿ ಮೂವರು ರಾಯರ ಪ್ರತಿಮೆಗಳನ್ನು ಇರಿಸಿ ಅದೊಂದು ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಆಸುಪಾಸಿನಲ್ಲಿ ಒಂದು ಸುದ್ದಿ ಕೇಳಿ ಬಂದಿತು.
ಕಾನ್ವೆಂಟಿಗೆ ಈರ್ವರು ಹೊಸ ಶಿಕ್ಷಕಿಯರು ಬಂದಿದ್ದಾರೆ. ಒಬ್ಬರು ಮಂಗಳೂರಿನವರು. ಈಗ ಹಾಲಿ ಕಾನ್ವೆಂಟಿನಲ್ಲಿರುವ ಸಿಸ್ಟರ್ ಲೀನಾರ ಅಕ್ಕನ ಮಗಳು. ಇನ್ನೊಬ್ಬಳು ಮಿರೋಣ್ ಜಾನ್ ಡಯಾಸನ ಮಗಳು. ಈವರೆಗೆ ಮಂಗಳೂರಿನಲ್ಲಿ ಇದ್ದವಳನ್ನು ಈಗ ಡಯಾಸ ಇಲ್ಲಿಗೆ ಕರೆಸಿಕೊಂಡು ಕೆಲಸ ಕೊಡಿಸಿದ್ದಾನೆ.
ಸ್ಯಾಮ್ಸನ ಮನೆ ಜಗಲಿಯ ಮೇಲೆ ಕವಳ ಜಗಿಯುತ್ತ ಕುಳಿತವ ಮಗಳಿಂದ ಒಂದು ಚಂಬು ನೀರು ತರಿಸಿಕೊಂಡು ಬಾಯಿ ಮುಕ್ಕಳಿಸಿ, ಹಲ್ಲಿನ ಸಂದಿ ಗೊಂದಿಯಲ್ಲಿ ಸೇರಿಕೊಂಡ ಅಡಿಕೆ ಚೂರನ್ನು ನಾಲಿಗೆ ತುದಿಯಿಂದ ಹೊರಗೆಳೆದು ಅಂಗಳಕ್ಕೆ ತೂಸಿ, ಶರಟೊಂದನ್ನು ತಗುಲಿಸಿಕೊಂಡು ಮನೆಯಿಂದ ಹೊರಬಿದ್ದ.
ರೋಗ ಬಂದ ಕೋಳಿಯ ಮೂಗಿಗೆ ಅದರ ಒಂದು ಪುಕ್ಕ ಚುಚ್ಚಿ ಅದು ತೂರಾಡುತ್ತ ಅಂಗಳದ ತುಂಬ ಓಡಿಯಾಡುವ ಹಾಗೆ ಸ್ಯಾಮ್ಸನ್ನನ ಪರಿಸ್ಥಿತಿಯಾಗಿತ್ತು. ಮಗಳಿಗೆ ಕಾನ್ವೆಂಟಿನಲ್ಲಿ ಕೆಲಸ ಸಿಗಬಹುದು ಅನ್ನುವ ಆಸೆ ಇತ್ತು. ಇದು ನಿರಾಶೆಯಾಗಿ ಪರಿವರ್ತನೆ ಹೊಂದುವುದರ ಜತೆಗೆ ಮೀರೋಣ್ ಜಾನಡಯಾಸನ ಮಗಳಿಗೆ ಅಲ್ಲಿ ಕೆಲಸ ಸಿಕ್ಕಿತು.
ಜಾನಡಯಾಸನಿಗೇನೂ ಕಡಿಮೆಯಾಗಿರಲಿಲ್ಲ. ಅವನ ಮಗ ಕೆಲಸದಲ್ಲಿದ್ದ. ಹೆಣ್ಣು ಮಕ್ಕಳಲ್ಲಿ ಈರ್ವರು ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಕಂದಿರ ಜತೆಯಲ್ಲಿದ್ದ ಕೊನೆಯವಳಿಗೂ ಈಗ ಕೆಲಸ ದೊರಕಿದೆ.
ಇಷ್ಟೇ ಅಲ್ಲ ಈ ಬಾಮಣ ಊರಿನಲ್ಲಿ ಇಲ್ಲದ ಮನಸ್ತಾಪಗಳನ್ನು ಉಂಟುಮಾಡುತ್ತ ಅವರಿವರ ಮನೆಗೆ ಬೆಂಕಿ ಇಡುತ್ತ ಇಗರ್ಜಿಯಲ್ಲಿ ದೈವ ಭಕ್ತನಾಗಿ, ಪಾದರಿಯ ಆಪ್ತನಾಗಿ ಮೆರೆಯುತ್ತಿದ್ದಾನೆ.
ಪಾದರಿ ಸಿಕ್ವೇರಾ ಬಂದ ನಂತರ ಇಗರ್ಜಿಯ ಹಣಕಾಸಿನ ವ್ಯವಹಾರವನ್ನು ಈತ ನೋಡಿಕೊಳ್ಳುತ್ತಾನೆ. ಇಗರ್ಜಿಯ ನಡುವೆ ಇಟ್ಟ ಕಾಣಿಕೆ ತಟ್ಟೆಯನ್ನು ಒಳಗೆ ತೆಗೆದುಕೊಂಡು ಹೋಗುವುದು. ಉಳಿದ ಸಂತರ ಬಳಿ ಇರಿಸಿರುವ ಕಾಣಿಕೆ ಡಬ್ಬಗಳ ಬೀಗ ತೆಗೆದು ಹಣ ಎಣಿಸಿಕೊಳ್ಳುವುದು, ಈ ಬಗೆಯ ಕೆಲಸ ಮಾಡುತ್ತ ಒಂದಿಷ್ಟು ಹಣವನ್ನು ತನ್ನ ಜೇಬಿಗೂ ಇಳಿಸುತ್ತಾನೆಂದು ಇಗರ್ಜಿಗೆ ಹೋಗುವ ಸಣ್ಣ ಹುಡುಗರೂ ಹೇಳುತ್ತಾರೆ.
ಕರಿಕಾಲಿನ ಇರುದನಾದದ ಮಗಳು ರೈಲ್ವೆ ಗಾರ್ಡ್ ಓರ್ವನ ಜತೆ ಓಡಿ ಹೋಗಿ ಆರು ತಿಂಗಳಾಗಿತ್ತು. ಅವಳು ಭದ್ರಾವತಿಗೆ ಹೋಗಿ ಸೇರಿಕೊಂಡು ಅಲ್ಲಿ ಆ ಗಾರ್ಡ ಜತೆ ಸಂಸಾರ ಕೂಡ ಹೂಡಿದ್ದಳು. ಇಲ್ಲಿ ಗುಲ್ಲು ಗಲಾಟೆಯಾಯಿತು. ಈ ಡಯಾಸ ಹಾಗೂ ಗುರ್ಕಾರ ಪಿಂಟೋ ಭದ್ರಾವತಿಗೆ ಹೋಗಿ ಆ ಹುಡುಗಿಯನ್ನು ಕರೆ ತಂದರು. ಆರು ತಿಂಗಳು ಯಾರ ಜತೆಗೋ ಇದ್ದು ಬಂದವಳು ಅನ್ನುವ ಕಾರಣಕ್ಕೆ ಕ್ರೀಸ್ತುವರು ಅವಳ ವಿಚಾರಣೆ ಆಗಬೇಕು ಎಂದರು. ಜೂಂತ ಇರಿಸಿ ಎಂದು ಕೂಗಾಡಿದರು. ಈ ಡಯಾಸ ಅವಳ ಆರೋಗ್ಯ ಸರಿಯಿಲ್ಲ ಎಂದು ಅವಳನ್ನು ಶಿವಮೊಗ್ಗೆಗೆ ಕರೆದೊಯ್ದು ಹದಿನೈದು ದಿನ ಆಸ್ಪತ್ರೆಯಲ್ಲಿರಿಸಿ ಅವಳನ್ನು ಸರಿ ಮಾಡಿ ಕರೆತಂದ. ಇದು ಸಾಲದೆಂದು ಓಡಿ ಹೋದವಳನ್ನು ಪಾದರಿ ಕೋಲಾರದ ಓರ್ವ ಹುಡುಗನಿಗೆ ಮದುವೆ ಮಾಡಿದರು.
ಗುರ್ಕಾರನ ಪಿಂಟೋನ ಮೊಮ್ಮಗಳು ಅವನ ಹೆಂಡತಿ ತಂಗಿಯ ಮಗಳು ಚಿಕ್ಕಮಗಳೂರಿನಲ್ಲಿ ಎರಡು ವರ್ಷದಿಂದ ಪ್ರೌಢಶಾಲೆಯಲ್ಲಿ ಫ಼ೇಲಾಗುತ್ತಿದ್ದವಳನ್ನು ಇಲ್ಲಿಗೆ ಕರೆತಂದು ಕಾನ್ವೆಂಟಿಗೆ ಸೇರಿಸಿ ಪಾಸು ಮಾಡಿಸಿದ. ಆ ಹುಡುಗಿಯನ್ನು ಚೆನ್ನಾಗಿ ಓದಿ ಬರೆಯಬಲ್ಲ ಬೇರೊಂದು ಹುಡುಗಿಯ ಪಕ್ಕದಲ್ಲಿ ಕೂರಿಸಿ ಅವಳದನ್ನು ನೋಡಿ ಬರೆಯುವಂತೆ ಇವಳಿಗೆ ಹೇಳಿ ಇವಳು ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡಿದವ ಈ ಡಯಾಸ. ಇದಕ್ಕೆ ಸಿಸ್ಟರುಗಳ ಬೆಂಬಲ.
ಇವನ ಮನೆಯಿಂದ ಹಂದಿ ಮಾಂಸ, ಹೊಳೆ ಮೀನು ನಿರಂತರವಾಗಿ ಕಾನ್ವೆಂಟಿಗೆ ಸರಬರಾಜು ಆಗುತ್ತದೆ. ಸಿಸ್ಟರುಗಳು ಇವನ ಮನೆಗೆ ವಾರಕ್ಕೆ ಎರಡು ದಿನ ಬಂದು ಹೋಗುತ್ತಾರೆ. ಡಯಾಸ ತನ್ನ ಜನರ ಬಗ್ಗೆ ಅವರ ಮಕ್ಕಳ ಬಗ್ಗೆ ತುಂಬಾ ಮುತುವರ್ಜಿವಹಿಸುತ್ತಾನೆ.
ಬೇರೆ ಊರುಗಳಲ್ಲಿ ಮನೆ ಮಾಡಿಕೊಂಡಿರುವ ತನ್ನ ತಮ್ಮಂದಿರು ಆಸ್ತಿಯಲ್ಲಿ ಪಾಲು ಕೇಳಲು ಕೂಡ ಈ ಡಯಾಸ ಕಾರಣ ಎಂಬ ಮಾತಿದೆ. ಅವರು ಹಬ್ಬಕ್ಕೆ ಬಂದಾಗಲೆಲ್ಲ ಈತ ಅವರನ್ನು ನಿಲ್ಲಿಸಿಕೊಂಡು-
“ಫ಼್ಲೋರಾ..ಏನು ನಿನ್ನ ತಂದೆ ಕಟ್ಟಿದ ಮನೇನ ಪೂರ್ತಿಯಾಗಿ ನಿನ್ನ ಅಣ್ಣನಿಗೇಕೇ ಬಿಟ್ಟು ಬಿಟ್ತಿರಾ?” ಎಂದು ಓರ್ವ ತಮ್ಮನಿಗೆ ಕೇಳಿದರೆ ಇನ್ನೋರ್ವನ ಹತ್ತಿರ-
“ಹಬ್ಬಕ್ಕೆ ಬಂದೆಯಾ ಸೈಮನ್..ಬರಬೇಕು ..ಇಲ್ಲಿ ತಂದೇದು ಅಂತ ಒಂದು ಮನೆ ಇದೆಯಲ್ಲ..ಅದನ್ನು ಸಾಮ್ಸನ್ ನೋಡಿಕೊಂಡರೂ ಅದು ನಿಮ್ಮದೇ ಮನೆ ಅಲ್ವೆ?” ಎಂದು ಕೇಳುತ್ತಾನೆ.
ಮೂರನೆಯವನಿಗೂ ಹೀಗೆಯೇ ಕೇಳಿ ಅವರೆಲ್ಲರ ತಲೆ ಕೆಡಿಸುತ್ತಾನೆ.
ಇಂತಹ ಡಯಾಸ ಈಗ ತನ್ನ ಮಗಳಿಗೆ ಸಿಗಬಹುದಾಗಿದ್ದ ಕೆಲಸವನ್ನು ಕಿತ್ತುಕೊಂಡಿದ್ದಾನೆ. ಈ ಬಾಮಣ ಬಾಮಣರೂ ಒಂದೇ. ಅವರು ಬೇರೆಯವರನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಇಲ್ಲವೆಂದರೆ ಸಿಸ್ಟರ್ ಲೀನಾ ಅಕ್ಕನ ಮಗಳನ್ನು ಕರೆತಂದು ಇಲ್ಲಿ ಕೆಲಸ ಕೊಡಿಸಬೇಕಿತ್ತೆ? ಗ್ಲೋರಿಯಾಗೆ ಕೆಲಸ ಕೊಡುವುದು ಬೇಡ. ತೀರಾ ಬಡವನಾಗಿರುವ ಹಸಿಮಡ್ಲು ಪತ್ರೋಲನ ಮಗಳಿಗಾದರೂ ಕೊಡಬಹುದಿತ್ತಲ್ಲ.
ಈ ಎಲ್ಲ ವಿಷಯಗಳು ತಲೆಯಲ್ಲಿ ಮುಳ್ಳು ಹಂದಿಯ ಗಣೆಗಳ ಹಾಗೆ ನಿಮಿರಿ ನಿಂತಿರಲು ಆತ ರಸ್ತೆಗೆ ಇಳಿದ.
ಎದುರು ಬಂದ ಎಲ್ಲರನ್ನೂ ನಿಲ್ಲಿಸಿಕೊಂಡು-
“ಅಲ್ಲ..ಇವರು ಹೀಗೆ ಮಾಡಬಹುದ? ಅವರು ದೇವರ ಸೇವಕರಲ್ವ? ಹಗಲೂ ರಾತ್ರಿ ಪ್ರಾರ್ಥನೆ ಜಪ ಅಂತ ಕಾಲ ಕಳೆಯೋ ಜನ ಅಲ್ವ..ಅವರು ಹೀಗೆ ಮಾಡಬಹುದ?” ಎಂದು ಕೇಳಿದ.
ಗುರ್ಕಾರ ಸಿಮೋನನ ಮನೆಗೆ ಹೋಗಿ-
“ಅವರಿಗೆ ನಮ್ಮ ಊರಿನ ಜಮೀನಿರಬೇಕು..ಅಲ್ಲಿ ಅವರು ಕಾನ್ವೆಂಟ್ ಕಟ್ಟಬೇಕು..ಕೆಲಸ ಮಾಡಲಿಕ್ಕೆ ಮಂಗಳೂರಿನವರೇಬೇಕಾ? ನಮ್ಮ ಹೆಣ್ಣು ಮಕ್ಕಳಿಗೆ ಕೆಲಸ ಮಾಡಲಿಕ್ಕೆ ಬರೋದಿಲ್ವ..ನೀವು ಗುರ್ಕಾರ ಅಂತ ಇದೀರಲ್ಲ ಇದನ್ನ ಕೇಳಬೇಕು..” ಎಂದು ಕೂಗಾಡಿದ.
ಪಾಸ್ಕೋಲನನ್ನು ನಿಲ್ಲಿಸಿಕೊಂಡು-
“ಹ್ಯಾಗಿದೆ ನ್ಯಾಯ? ಆವತ್ತು ನಿನ ಮಗ ಸೋತ..ಯಾರಿಂದ? ಈ ಬಾಮಣರಿಂದ. ಈಗ ನನ ಮಗಳಿಗೆ ಕೆಲಸ ಸಿಗಲಿಲ್ಲ ಯಾರಿಂದ? ಈ ಬಾಮಣರಿಂದ. ನಾವು ಚಾರಡಿಗಳು ಗೌಡಿಗಳು ನೇಂದರಗಳು ಊರು ಬಿಡೋಣ..ಈ ಬಾಮಣರೇ ಇಲ್ಲಿ ಇದ್ದು ಬಿಡಲಿ..” ಎಂದ.
ಬೋನನ ಅಂಗಡಿಗೂ ಹೋದ.
ಅಲ್ಲಿ ಕೂಗಾಡಿ ಪಿಂಟೋನ ಅಂಗಡಿಯತ್ತ ಒಮ್ಮೆ ನೋಡಿ ರಸ್ತೆಯತ್ತ ಉಗುಳಿ ಮುಂದೆ ಹೋದ.
* * * *
ಸ್ಯಾಮ್ಸನಗೆ ಆದ ನಿರಾಶೆ, ಹಸಿಮಡ್ಲು ಪತ್ರೋಲನಿಗಾದ ಅನ್ಯಾಯ ಊರ ಕ್ರಿಸ್ತುವರ ಗಮನಕ್ಕೆ ಬಾರದಿರಲಿಲ್ಲ. ಹಿರಿಯರು ಮುದುಕರು ಛೆ! ಪಾಪ!! ಎಂದೆಲ್ಲ ಮರುಕ ಪಟ್ಟರು. ಸಿಸ್ಟರುಗಳು ಏಕೆ ಹೀಗೆ ಮಾಡಿದರು ಎಂದು ಇಳಿದನಿಯಲ್ಲಿ ಮಾತನಾಡಿಕೊಂಡರು. ಆದರೆ ಇದೀಗ ಮೀಸೆ ಚಿಗುರುತ್ತಿದ್ದ ಎದೆ ಬಿರುಸಾಗುತ್ತಿದ್ದ ತರುಣರು ಇದನ್ನು ಸಹಿಸಿಕೊಳ್ಳಲಿಲ್ಲ.
ಈ ಸಿಸ್ಟರುಗಳ ಬಗ್ಗೆ ಡಯಾಸ, ಪಿಂಟೋನ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ.
ಬೋನನ ಮಗ ಫ಼ಿಲಿಪ್ಪನಿಗೆ ಕೆಟ್ಟ ಅನುಭವಗಳು ಆಗಿದ್ದವು. ಕಾನ್ವೆಂಟ್ ಶಾಲೆಯಲ್ಲಿ ಓದುವಾಗ ಶಾಲೆಯನ್ನು ಗುಡಿಸಲು ತನ್ನನ್ನು, ಗ್ರೆಗೋರಿಯನ್ನು, ರಾಬರ್ಟಿಯನ್ನು ಅವರು ಕರೆಯುತ್ತಿದ್ದರು.
ಡಾಕ್ಟರ್ ಕೋದಂಡರಾಯರ ಮಗ ಶಾಲೆಯಲ್ಲಿ ವಾಂತಿಮಾಡಿಕೊಂಡಾಗ ಅದನ್ನು ತೆಗೆಯಲು ಸಿಸ್ಟರ್ ಲೀನಾ ಕರೆದದ್ದು ಇಂತ್ರು ಮಗ ಸಿರೀಲನನ್ನು. ನಿತ್ಯ ಶಾಲೆಯ ಬೀಗ ತಂದು ಬಾಗಿಲು ತೆಗೆದು, ಸಂಜೆ ಬೀಗ ಹಾಕುವ ಕೆಲಸ ಸುತಾರಿ ಇನಾಸನ ಮಗ ಪಾಸ್ಕು ಮಾಡಬೇಕಾಗುತ್ತಿತ್ತು.
ಊರಿನ ಬಡ ಕ್ರೈಸ್ತುವರ ಮಕ್ಕಳು. ಕಲ್ಲು ಕೆತ್ತುವ, ಕಲ್ಲು ತೆಗೆಯುವ, ಗಿಲಾಯಿ ಮಾಡುವ ಎಲ್ಲರ ಮಕ್ಕಳಿಗೂ ಶಾಲೆಯಲ್ಲಿ ಒಂದಲ್ಲಾ ಒಂದು ಕೆಲಸ.
“..ದೇವಾಚೆಂ ಕಾಮ ಕೆಲೇರ್..ದೇವ ಬೊರೆಂ ಕರ್ತಾ…”(ದೇವರ ಕೆಲಸ ಮಾಡಿದರೆ ದೇವರು ಒಳ್ಳೆಯದನ್ನು ಮಾಡುತ್ತಾನೆ) ಎಂಬ ಮಾತು ಬೇರೆ.
ಎಲ್ಲಿಂದಲೋ ಬರುವ ಗೋದಿ, ಎಣ್ಣೆ, ಹಾಲಿನ ಪುಡಿ ಬಟ್ಟೆ ಎಲ್ಲ ಡಯಾಸ, ಪಿಂಟೋ ಮನೆಗೆ. ಉಳಿದವರಿಗೆ ದೇವರ ಆಶೀರ್ವಾದ.
ಇದು ಫ಼ಿಲಿಪ್ಪನ ಅನುಭವ. ಉಳಿದವರ ಅನುಭವ ಕೂಡ ಬೇರೆಯಾಗಿರಲಿಲ್ಲ.
ಇಗರ್ಜಿಯಲ್ಲಿ ಸಾಲು ಸಾಲಾಗಿ ಬೆಂಚುಗಳನ್ನು ಹಾಕಲಾಗಿತ್ತು. ಈ ಬೆಂಚುಗಳ ಮೇಲೆ ಹೆಸರುಗಳು. ಅಲ್ಲಿ ಕುಳಿತುಕೊಳ್ಳಬೇಕಾದ ಜನರೇ ಬೇರೆ. ಪಾಸ್ಕು, ಬಸ್ತು, ಪೆದ್ರು, ಸಾಂತ ಕೈತಾನ, ಇಂತ್ರು, ಸಂತ, ಬಡ್ತೋಲ, ಫ಼ರಾಸ್ಕ ಯಾರೂ ಅಲ್ಲಿ ಕೂರುವಂತಿಲ್ಲ. ಒಂದು ವೇಳೆ ಕೂತರೂ ಅವರನ್ನು ಎಬ್ಬಿಸುತ್ತಾನೆ ಡಯಾಸ ಪಿಂಟೋ.
“ಏನು..ನೀನೇನು ದೊಡ್ಡ ಆಫ಼ೀಸರ್ರ..ಬೆಂಚಿನ ಮೇಲೆ ಕೂರಲಿಕ್ಕೆ?” ಎಂದು ಕೇಳುತ್ತಾನೆ.
ಆವತ್ತು ಅಂತೋನಿಗೆ ಹಾಗೆ ಆಯಿತು.
ಈಗ ಗ್ಲೋರಿಯಾಗೆ ಹೀಗೆ.
ಹಸಿಮಡ್ಲು ಮಗಳಿಗೆ ಹೀಗೆ.
“ಇದು ಯಾಕೆ ಹೀಗೆ ಆಗತಿದೆ..ನಮಗೆ ಗೊತ್ತು” ಎಂದು ಯುವಕರು ಗುರುಗುಟ್ಟಿದರು.
ಇಗರ್ಜಿ ಮುಂದೆ, ಸಂತ ಜೋಸೆಫ಼ರ ಮಂಟಪದ ಮುಂದೆ, ಕೇರಿಯ ಸರಕಾರಿ ಬಾವಿಯ ಬಳಿ ಜೋಸೆಫ಼ ನಗರದ ಕಾಮತಿ ಅಂಗಡಿ ಬಳಿ, ನಿಂತು ಯುವಕರು ಕಿಡಿಕಾರಿದರು. ಗುರ್ಕಾರ ಸಿಮೋನನ ಕಿವಿಗೂ ಇದು ಬಿದ್ದಿತು. ಬೋನನೂ ಕೇಳಿಸಿಕೊಂಡ.
ಈ ಬಾರಿ ಅವರು ಏನನ್ನೂ ಹೇಳಲು ಹೋಗಲಿಲ್ಲ.
ಸಂಜೆಯ ಆಮೋರಿಗೆ ಕುಳಿತಾಗ ಮಾತ್ರ
“ದೇವಾ” ಎಂದು ದೇವರೆದುರು ಮೊರೆ ಇಟ್ಟರು.
“ಈ ತಳಮಳ ಸಿಟ್ಟು ಕೋಪ ದೂರ ಮಾಡು..” ಎಂದು ಕೈ ಮುಗಿದರು.
*
*
*
ಇತ್ತೀಚಿನ ದಿನಗಳಲ್ಲಿ ಹೀಗೆ ಒಂದಲ್ಲಾ ಒಂದು ಘಟನೆ ನಡೆದು ಸಿಮೋನ ವಿಚಲಿತನಾಗುತ್ತಿದ್ದ. ಮೊನ್ನೆ ಮೊನ್ನೆ ವೈಜೀಣ್ ಕತ್ರೀನ ತೀರಿಕೊಂಡಾಗ ನಡೆದುದನ್ನು ಏನು ಮಾಡಿದರೂ ಮರೆಯಲು ಅವನಿಂದ ಆಗಿರಲಿಲ್ಲ.
ಹಿಂದೆ ಸಂತು ಮೇಸ್ತ ಎಂದು ಒಬ್ಬಾತ ಕೆಲ ವರುಷ ಶಿವಸಾಗರದಲ್ಲಿ ಮನೆ ಮಾಡಿಕೊಂಡಿದ್ದ. ಈತ ಹೊನ್ನಾವರದ ಹತ್ತಿರವಿದ್ದ ಜೋಗಮಠದವ. ಇವನ ಹೆಂಡತಿ ಹೊನ್ನಾವರದವಳು. ಇವಳ ತಂದೆ ಮೂರು ನಾಲ್ಕು ಮಚವೆ ಇರಿಸಿಕೊಂಡು ತುಸು ಅನುಕೂಲವಾಗಿಯೇ ಇದ್ದವನು. ಇವನು ಮಗಳಿಗೆ ಹೆರಿಗೆಯಾಗಿ ಮಗಳು ಗಂಡನ ಮನೆಗೆ ಹೊರಟಾಗ, ದೂರದ ಊರಿನಲ್ಲಿ ನೆಂಟರು ಇಷ್ಟರು ಇಲ್ಲದ ಕಡೆ ಮಗಳನ್ನು ಮಗುವನ್ನು ನೋಡಿಕೊಂಡು ಇರಲಿ ಎಂದು ಕತ್ರೀನಳನ್ನು ಅವಳ ಜತೆ ಕಳುಹಿಸಿದ. ಕತ್ರೀನಳ ತಾಯಿ ಅನ್ನಾಬಾಯಿ ಕೂಡ ಹೊನ್ನಾವರದಲ್ಲಿ ಹೆರಿಗೆ ಮಾಡಿಸುವುದು ಬಾಣಂತಿಯರಿಗೆ ಸ್ನಾನ ಮಾಡಿಸು ಎಂದು ಕೆಲಸ ಮಾಡಿಕೊಂಡಿದ್ದವಳೆ. ಇಷ್ಟು ಬಿಟ್ಟರೆ ಹೆಚ್ಚು ವಿವರ ಅವಳ ಬಗ್ಗೆಯೂ ಇಲ್ಲ. ಕತ್ರೀನಳ ಬಗ್ಗೆಯೂ ಇರಲಿಲ್ಲ.
ಕತ್ರಿನ ಶಿವಸಾಗರಕ್ಕೆ ಬಂದವಳು ಎರಡು ವರ್ಷ ಸಂತು ಮೇಸ್ತನ ಮನೆಯಲ್ಲಿದ್ದಳು. ಅವನ ಸಣ್ಣ ಸಣ್ಣ ಮಕ್ಕಳನ್ನು ನೋಡಿಕೊಂಡು, ಸಂತು ಹೆಂಡತಿಯನ್ನು ನೋಡಿಕೊಂಡು ಇವಳಿದ್ದಳು.
ಸಂತು ಮೇಸ್ತ ಮಾತ್ರ ಒಳ್ಳೆಯವನಾಗಿರಲಿಲ್ಲ. ಮೇಲಿನ ಮನೆ, ಹೆಗ್ಗೋಡು, ಸೂರಗುಪ್ಪೆ ಎಂದೆಲ್ಲ ಅಲ್ಲಲ್ಲಿ ಕೆಲಸ ಹಿಡಿದು ಮನೆ ಕಟ್ಟಿಸುತ್ತಿದ್ದ ಈತ ಹೋದಲ್ಲೆಲ್ಲ ಏನೇನೋ ಭಾನಗಡಿ ಮಾಡಿಕೊಳ್ಳುತ್ತಿದ್ದ ವಿಷಯ ತನ್ನ ಕಿವಿಗೂ ಬೀಳುತ್ತಿತ್ತು. ಒಂದೆರಡು ಸಾರಿ ತಾನೂ ಇವನಿಗೆ ಹೇಳಿದೆ-
“ನೋಡು ಸಂತು…ನಾವು ಬೇರೆ ಊರಿನವರು..ನಮ್ಮ ಧರ್ಮ ಕೂಡ ಬೇರೆ..ನಾವು ಇಲ್ಲಿ ಗೌರವದಿಂದ ಇರಬೇಕು..ಹೆಂಡತಿ ಮಕ್ಕಳು ಅಂತ ಇರಬೇಕಾದರೆ ನಮ್ಮ ಜವಾಬ್ದಾರಿ ಕೂಡ ಹೆಚ್ಚು..ಅವರಿವರು ಸದರದಿಂದ ಮಾತನಾಡಲಿಕ್ಕೆ ನಾವು ಅವಕಾಶ ಮಾಡಿಕೊಡಬಾರದು..” ಎಂದೆಲ್ಲ ಹೇಳಿಯೂ ನೋಡಿದೆ.
ಅವನು ಸರಿಹೋಗಲಿಲ್ಲ.
ಈ ನಡುವೆ ಅವನು ಮನೆಯಲ್ಲಿದ್ದ ಕತ್ರೀನಳನ್ನು ಕೆಣಕಿದ ಎಂದು ಕಾಣುತ್ತದೆ. ಅವಳೂ ಅವನ ಮನೆ ಬಿಟ್ಟು ಬೇರೆ ಮನೆ ಮಾಡಿದಳು. ಈ ಸಂತು ಮೇಸ್ತನ ಖ್ಯಾತಿ ಅವನ ಮಾವನ ಕಿವಿಗೂ ಬಿದ್ದು ಅವನು ಬಂದದ್ದೇ-
“..ನೀವೆಲ್ಲ ಇಲ್ಲಿಂದ ಹೊರಡಿ..” ಎಂದು ಹೇಳಿ ಸಂತುವಿನ ಇಡೀ ಕುಟುಂಬವನ್ನು ಹೊರಡಿಸಿಕೊಂಡು ಘಟ್ಟ ಇಳಿದ. ಆದರೆ ಈ ಕುಟುಂಬದ ಜತೆ ಬಂದ ಕತ್ರೀನ ಇಲ್ಲೇ ಉಳಿದಳು.
ಮನೆ ಮನೆಗೆ ಹೋಗಿ ಹೆರಿಗೆ ಮಾಡಿಸುವ ಕೆಲಸವನ್ನು ಕತ್ರೀನ ತನ್ನ ಕೈಗೆತ್ತಿಕೊಂಡಳು. ಶಿವಸಾಗರಕ್ಕೆ ಈ ಕೆಲಸ ಮಾಡುವವರ ಅವಶ್ಯಕತೆ ಇತ್ತು. ಈ ಅವಶ್ಯಕತೆಯನ್ನು ಕತ್ರೀನ ಪೂರೈಸತೊಡಗಿದಳು. ಸಂತು ಮೇಸ್ತು ಊರು ಬಿಡುವಾಗ ಅದೇ ಊರಿಗೆ ಬಂದ ಇಂತ್ರು ಈ ಮನೆಯಲ್ಲಿ ಸೇರಿಕೊಂಡ. ವೈಜೀಣ ಕತ್ರೀನ ಅಲ್ಲಿಯೇ ಬೇರೊಂದು ಮನೆ ಕಟ್ಟಿಕೊಂಡಳು. ಸಿಮೋನ ಅವಳ ನೆರವಿಗೆ ನಿಂತ.
ಒಂಟಿ ಹೆಂಗಸು ಉದ್ದಕ್ಕೂ ಒಂದೇ ಕೆಲಸ ಮಾಡಿಕೊಂಡು ಬಂದಳು. ರಾತ್ರಿ ಎಂದು ನೋಡಲಿಲ್ಲ. ಮಳೆಗಾಲ ಚಳಿಗಾಲ ಎಂದು ನೋಡಲಿಲ್ಲ. ಯಾರೇ ಮನೆ ಬಾಗಿಲಿಗೆ ಹೋಗಿ ಕರೆದರೂ ಸೀರೆಯ ಸೆರಗನ್ನು ಸೊಂಟಕ್ಕೆ ಕಟ್ಟಿಕೊಂಡು ಹೊರಡುತ್ತಿದ್ದಳು. ನೋವು ಎಂದು ನರಳುತ್ತಿದ್ದವರಿಗೆ ಧೈರ್ಯ ಹೇಳುತ್ತಿದ್ದಳು.
ಮನೆ ಬಾಗಿಲಿಗೆ ಕತ್ರೀನಮ್ಮ ಬಂದಿದ್ದಾಳೆ ಎಂದರೆ ಎಲ್ಲರಿಗೂ ಧೈರ್ಯ.
ಊರಿಗೆ ಬಂದಾಗ ಮೂವತ್ತು ಮೂವತ್ತೈದರ ಪ್ರಾಯ ಹೊಂದಿದ್ದ ಕತ್ರೀನ ಪುರುಷರ ದಬ್ಬಾಳಿಕೆಗೂ ಒಳಗಾದಳು. ಅವಳ ಮನೆಯ ಮೇಲೆ ಕಲ್ಲುಗಳು ಬೀಳುತ್ತಿದ್ದವು. ಯಾರೋ ಮನೆ ಬಾಗಿಲು ಬಡಿದು ಓಡಿ ಹೋಗುತ್ತಿದ್ದರು. ಸಾವಿರ ಕಣ್ಣುಗಳು ಆಸೆಯಿಂದ ಚಪಲದಿಂದ ಅವಳನ್ನು ನೋಡಿ ಉರಿಯುತ್ತಿದ್ದವು. ಆದರೂ ತನ್ನ ಕೆಲಸ ಮಾಡಿಕೊಂಡು ಉಳಿದಳು ಕತ್ರೀನ.
ಊರಿನಲ್ಲಿ ಪಾದರಿ ಇರಲಿ ಇಲ್ಲದಿರಲಿ ಮನೆಯಲ್ಲಿ ಜಪ ಪ್ರಾರ್ಥನೆ ನಿಲ್ಲಿಸಲಿಲ್ಲ. ನಿತ್ಯ ಅಮೋರಿಯ ಸದ್ದು ಕೇಳಿ ಬರುತ್ತಿದ್ದುದು ತಮ್ಮ ಮನೆಯಿಂದ ಹಾಗೂ ಅವಳ ಮನೆಯಿಂದ ಮಾತ್ರ. ಊರಿಗೆ ಪಾದರಿ ಬಂದದ್ದು ಅವಳಿಗೆ ತುಂಬಾ ಸಂತೋಷದ ವಿಷಯವಾಯಿತು. ಪ್ರತಿದಿನ ಬೆಳಿಗ್ಗೆ ಅವಳು ಇಗರ್ಜಿಗೆ ಬಂದು ಪೂಜೆ ಕೇಳಬೇಕು. ಭಾನುವಾರಗಳಂದು ದಿವ್ಯಪ್ರಸಾದ ಸ್ವೀಕಾರ.
“ಈ ಕತ್ರೀನಬಾಯಿ ಪ್ರತಿವಾರ ದಿವ್ಯಪ್ರಸಾದ ತೊಕೊಳ್ತಾಳಲ್ಲ ಅವಳೇನು ಪಾಪ ಮಾಡಿರತಾಳೆ?” ಎಂದು ಯಾರೋ ಮಾತಾಡಿಕೊಂಡಿದ್ದು ಇವಳ ಕಿವಿಗೆ ಬಿದ್ದು ಇವಳು-
“..ಪಾಪ ಮಾಡಿದೀನಿ ಅಂತ ಅಲ್ಲ..ನನಗೆ ಶಕ್ತಿ ಬರಲಿ ಅಂತ ನಾನು ಕ್ರಿಸ್ತ ಪ್ರಭುವಿನ ರಕ್ತ ಮಾಂಸವನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸೋದು” ಎಂದು ಹೆಳುತ್ತಿದ್ದಳು.
ತಪಸ್ಸಿನ ಕಾಲದ ಉಪವಾಸ, ಮುಂತಿ ಮಾತೆಯ ಹಬ್ಬದ ನವೇನ ಹೀಗೆ ಯಾವುದನ್ನೂ ಬಿಡಲಿಲ್ಲ.
ಊರಿಗೇನೆ ಬೇಕಾದವಳಾಗಿದ್ದವಳು ಕತ್ರೀನ. ಎಲ್ಲ ಜನರಿಗೂ ಅವಳ ಬಗ್ಗೆ ಗೌರವ ಪ್ರೀತಿ.
ಇತ್ತೀಚೆಗೆ ವಯಸ್ಸಾಗಿತ್ತು ಅವಳಿಗೆ. ಊರ ತುಂಬಾ ನರ್ಸಿಂಗ ಹೋಂಗಳು ಆಗಿದ್ದವು. ಆದರೂ ಹೆರಿಗೆ ಕಷ್ಟಕರವಾದಾಗ ನರ್ಸಿಂಗ ಹೋಂನವರು ಕೂಡ ಆಟೋ ಕಳುಹಿಸಿ ಕತ್ರೀನಳ ಮೇಲೆ ತುಂಬಾ ಭರವಸೆ ಇರಿಸಿಕೊಂಡ ಕೆಲವರು-
“..ನೀನು ಬಂದು ನಮ್ಮ ಜತೇಲಿ ಇರು..ಕತ್ರೀನಬಾಯಿ..ನಮಗಷ್ಟೇ ಸಾಕು” ಎಂದು ಹೇಳುತ್ತಿದ್ದರು.
ಕತ್ರೀನಬಾಯಿ ಹಣ ಮಾಡಬಹುದಿತ್ತು. ಕಳ್ಳ ಬಸಿರನ್ನು ತೆಗೆಸಲೆಂದು ಬಹಳ ಜನ ಅವಳಲ್ಲಿಗೆ ಬರುತ್ತಿದ್ದರು.
“ನಾನು ಇದೊಂದು ಕೆಲಸ ಮಾಡಲ್ಲ..ಇದು ಧರ್ಮ ದ್ರೋಹ…ದೇವರ ಸೃಷ್ಟಿನ ಹೊಸಕಿ ಹಾಕಿ ನಾನು ದೇವದ್ರೋಹಿ ಆಗಲಾರೆ..” ಎಂದು ಹೇಳುತ್ತಿದ್ದಳು.
ಹೆರಿಗೆ ಮಾಡಿಸಲೆಂದು ಹೋದ ಈಕೆಗೆ ದೊರಕುತ್ತಿದ್ದ ಪ್ರತಿಫ಼ಲ ಒಂದು ಸೀರೆ. ಒಂದು ಮೊರದ ತುಂಬ ಅಕ್ಕಿ, ಎಲೆ, ಅಡಿಕೆ, ಕೆಲ ರೂಪಾಯಿಗಳು ಇಷ್ಟರಿಂದಲೇ ಬದುಕಿದ್ದಳು ಕತ್ರೀನ.
ಇಳಿ ವಯಸ್ಸಿನಲ್ಲಿ ಕೈಯಲ್ಲಿ ಜಪಸರ ಹಿಡಿದು ಮಣಿ ಎಣಿಸುತ್ತ ಕೂತಿರುತ್ತಿದ್ದಳು. ಸಿಮೋನನ ಮನೆಯಿಂದ ಕೈತಾನ ಬಾಲ್ತಿದಾರನ ಮನೆಯಿಂದ ಕೈತಾನ ಬಾಲ್ತಿದಾರನ ಮನೆಯಿಂದ ಅವಳಿಗಾಗಿ ಊಟ ಮತ್ತೊಂದು ಹೋಗುತ್ತಿತ್ತು.
“ಬೇಡ ಕಣೆ ಅಪ್ಪಿ…ನಾಲಿಗೆಗೆ ರುಚಿಯಿಲ್ಲ” ಎಂದು ಹೇಳುತ್ತಿದ್ದಳು.
ಒಂದು ತುತ್ತು ಉಂಡು ಉಳಿದುದನ್ನು ಮನೆ ಬಾಗಿಲಿಗೆ ಬರುವ ಕೊರಗರ ಮಕ್ಕಳಿಗೆ ಇಕ್ಕುತ್ತಿದ್ದಳು.
ಈ ಕತ್ರೀನ ಕೈಯಲ್ಲಿ ಜಪಸರ ಹಿಡಿದೇ ಕೊನೆಯ ಉಸಿರು ಎಳೆದಳು. ರಾತ್ರಿಗೆ ಅವಳಿಗೆ ಊಟ ಕೊಡಲೆಂದು ಹೋಗಿದ್ದ ಸಿಮೋನನ ಹೆಂಡತಿ ಅಪ್ಪಿಬಾಯಿ-
“..ದೇವಾ..” (ದೇವರೇ) ಎಂದು ಕೂಗಿ ಓಡಿ ಬಂದಳು.
ಹೆಂಗಸರು ಹೋಗಿ ಸ್ನಾನ ಮಾಡಿಸಿ, ಬಿಳಿ ಸೀರೆ ಉಡಿಸಿ, ಶವವನ್ನು ತಂದು ಮನೆಯ ಹೊರಗೆ ಮಲಗಿಸಿದರು. ಸುತಾರಿ ಮರದ ಶವ ಪೆಟ್ಟಿಗೆ ಸಿದ್ಧಪಡಿಸಿದ. ಜನ, ಹೂವು, ಮೇಣದ ಬತ್ತಿಯನ್ನು ಹಿಡಿದು ಅವಳ ಮನೆಗೆ ಧಾವಿಸಿದರು. ಹಿಂದುಗಳು, ಮುಸ್ಲೀಮರು ದಂಡಿಯಾಗಿ ಬಂದರು. ಆದರೆ ಪಾದರಿ ಸಿಕ್ವೇರಾ ಕತ್ರೀನಬಾಯಿಯ ಶವ ಸಂಸಾರಕ್ಕೆ ಸಿಗಲಿಲ್ಲ.
ಬೆಳಿಗ್ಗೆ ಊರಲ್ಲಿದ್ದ ಅವರು-
“ನಾನು ಹತ್ತು ಗಂಟೆಗೆ ಹೊರಗೆ ಹೋಗಬೇಕು. ಅಷ್ಟರಲ್ಲಿ ಎಲ್ಲ ಮುಗಿಸಿ” ಎಂದರು.
ಕತ್ರೀನಳ ತಾಯಿಯ ಕಡೆಯ ಸಂಬಂಧಿಗಳು ಹೊನ್ನಾವರದಿಂದ ಬರಬೇಕಿತ್ತು. ಸಿಮೋನ-
“…ಅವರು ಬರಲಿ ಪದ್ರಾಬಾ..ಹನ್ನೆರಡು ಗಂಟೆವರೆಗೆ ನೀವು ಇರಿ..” ಎಂದು ಕೇಳಿಕೊಂಡ.
“ಇಲ್ಲ..ಇಲ್ಲ..ಎಲ್ಲ ನೀವೇ ಮಾಡಿ ಮುಗಿಸಿ” ಎಂದು ಸಿಕ್ವೇರಾ ಕಾರನ್ನು ಏರಿದರು.
ಹನ್ನೆರಡು ಗಂಟೆಗೆ ಕತ್ರೀನಳ ಸಂಬಂಧಿಕರು ಬಂದರು. ಶವಯಾತ್ರೆಗೆ ಸಾಕಷ್ಟು ಜನ ಸೇರಿದ್ದರು. ಶವವನ್ನು ಇಗರ್ಜಿಗೆ ಕೊಂಡೊಯ್ದು ಅಲ್ಲಿ ಒಂದು ತೇರ್ಸ ಮಾಡಲಾಯಿತು. ನಂತರ ಮಿರೋಣ, ಡಯಾಸ, ಗುರ್ಕಾರರ ನೇತೃತ್ವದಲ್ಲಿ ಶವ ಸಂಸ್ಕಾರ ಆಯಿತು.
“ಛೇ! ಎಂತಹ ಸಾವು ಬಂತು ನೋಡಿ. ಒಂದು ಪೂಜೆ ಸಿಗಲಿಲ್ಲ. ಪಾದರಿಗಳ ಆಶೀರ್ವಾದ ಸಿಗಲಿಲ್ಲ ಎಂದು ಜನ ಪೇಚಾಡಿಕೊಂಡರು.
ಪಾದರಿ ಸಿಕ್ವೇರಾ ಅಷ್ಟು ಅವಸರ ಮಾಡಿಕೊಂಡು ಹೋದದ್ದು ಎಲ್ಲಿಗೆ ಎಂಬುದು ಅನಂತರ ಸಿಮೋನನಿಗೆ ತಿಳಿದುಬಂದಿತು. ಮೈಸೂರಿನಿಂದ ಬಂದ ನಾಲ್ವರು ಹೆಂಗಸರನ್ನು ಕಾರಿನಲ್ಲಿ ಕೂಡಿಸಿಕೊಂಡು ಅವರಿಗೆ ಜಲಪಾತ ತೋರಿಸಲು ಪಾದರಿ ಸಿಕ್ವೇರಾ ಕರೆದುಕೊಂಡು ಹೋಗಿದ್ದರು.
ಸಿಮೋನ ಅಂತರಂಗದಲ್ಲಿಯೇ ಕೊರಗಿದ.
“ಏನು ಪದ್ರಾಬಾ..ನೀವು ಹೀಗೆ ಮಾಡುವುದಾ?” ಎಂದು ನೇರವಾಗಿ ಪಾದರಿ ಸಿಕ್ವೇರಾ ಅವರಿಗೆ ಕೇಳಿ ಬಿಡಬೇಕು ಅಂದುಕೊಂಡ. ಏನೋ ಅಳುಕು, ಅಂಜಿಕೆ ಅಡ್ಡ ಬಂದಿತು. ಪಾದರಿ ಹೀಗೆ ಮಾಡಬಾರದಿತ್ತು ಎಂದು ಮನಸ್ಸಿನಲ್ಲಿಯೇ ಮಿಡುಕಾಡಿದ.
“ಅರೆ..ನಿಮಗೆ ಗೊತ್ತಿಲ್ದ? ಈ ಜನ ದುಡ್ಡು ಮಾಡಾಕೆ ಹೋತಾರೆ.ದುಡ್ಡು.” ಎಂದಿದ್ದರು ಅವರು.
ಕೆಲವರನ್ನು ಈತ ಪರೀಕ್ಷೆ ಮಾಡಿಯೂ ನೋಡಿದ. ಅವರೆಲ್ಲ ದುಡ್ಡು ಮಾಡಿದ್ದರು..ಹೆಂಡತಿ ನಮಾಮೋರಿ ಜತೆ ಪ್ರಸ್ತಾಪಿಸಿದ.
ಬಳ್ಕೂರಿನಲ್ಲಿ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅಪರೂಪಕ್ಕೆ ಕೆಲಸ ಸಿಗುತ್ತಿತ್ತು. ಬೇರೆ ಸಂದರ್ಭಗಳಲ್ಲಿ ದೋಣಿಗಳಿಗೆ ಸುಪಾರಿ ತುಂಬುವುದು, ತೆಂಗಿನಕಾಯಿ ಸುಲಿಯುವುದು, ಎಣ್ಣೆ ಗಾಣ ಆಡಿಸುವುದು ಎಂದು ಅದು ಇದು ಕೆಲಸ ಮಾಡಬೇಕಾಗುತ್ತಿತ್ತು. ಮನೆಯಲ್ಲಿ ತಿನ್ನಲು ಐದು ಬಾಯಿಗಳು-ಹಾಡ ಹಾಡ (ತೆಗೆದುಕೊಂಡು ಬಾ ತೆಗೆದುಕೊಂಡು ಬಾ) ಅನ್ನುತ್ತಿರಲು ಇವನು ಎಲ್ಲಿಂದ ತಂದಾನು? ಹೆಂಡತಿ ಕೂಡ ’ನೋಡಿ’ ಎಂದಳು. ಆದರೆ ಗುಂಡುಬಾಳೆಯ ಈ ಮುದುಕಿ ತಟ್ಟನೆ ಒಪ್ಪಿಗೆ ಕೊಡಲಿಲ್ಲ.
“ಹ್ಯಾಗೋ ಆಗುತ್ತೆ..ಇಲ್ಲೇ ಇದ್ರೆ ಆಗಲಿಕ್ಕಿಲ್ಲ” ಎಂದು ಕೇಳಿದಳು ಅವಳು.
ಕೊನೆಗೆ ಅಳಿಯ ಓರ್ವನೇ ಹೋಗುತ್ತೇನೆ ಎಂದಾಗ “ಹೋಗಿ ಬನ್ನಿ..ದೇವರು ಒಳ್ಳೆಯದನ್ನು ಮಾಡತಾನೆ” ಎಂದಳು. ಅವಳಿಗೂ ಮಗಳ ಬದುಕು ಹಸನಾಗಲಿ ಎಂಬ ಆಸೆ ಇತ್ತು.
*
*
*
ಬಳ್ಕೂರಕಾರ ಕೈತಾನ ಶಿವಸಾಗರಕ್ಕೆ ಬಂದ. ಸಿಮೋನ ಕರೆದು ಅವನಿಗೆ ಕೆಲಸ ಕೊಟ್ಟ. ಸೇತುವೆ ನಿರ್ಮಾಣ, ಸರಕಾರಿ ಕಟ್ಟಡಗಳು, ಸಾಹುಕಾರಿ ಕಟ್ಟಡಗಳು ಎಂದು ಸಾಕಷ್ಟು ಕೆಲಸಗಳಿದ್ದವು. ಅಲ್ಲೆಲ್ಲ ಕಲ್ಲು ಕೆತ್ತುತ್ತ, ವಾರಕ್ಕೊಮ್ಮೆ ಸೈದೂರನ ಕುಲುಮೆಯಲ್ಲಿ ಬಾಚಿ ಸರಿಪಡಿಸಿಕೊಳ್ಳುತ್ತ ಸಾಂತಾಮೋರಿ ಮನೆಯಲ್ಲಿ ಊಟ ಮಾಡಿಕೊಂಡು ಆತ ಉಳಿದ.
ಒಂದು ಎರಡು ವರುಷ ಇಲ್ಲಿ ಇರಬೇಕು ಎಂದು ಬಂದವ ಕೊನೆಗೆ ಶಿವಸಾಗರದಲ್ಲಿಯೇ ತಾನು ಉಳಿಯಬೇಕೆಂದು ವಿಚಾರ ಮಾಡಿದ. ಕೊಪೆಲಗೆ ಹತ್ತಿರವೇ ಒಂದು ಜಾಗ ಕೂಡ ಅವನಿಗೆ ಮಂಜೂರಾಯಿತು. ಅವನೇ ಮನೆ ಕಟ್ಟಿದ. ಹೆಂಡತಿ ಮಕ್ಕಳನ್ನು ಇಲ್ಲಿಗೆ ಕರೆತಂದ.
ಗುಂಡಬಾಳೆಗೆ ಹೋಗಿ ಇನಾಸಜ್ಜಿಗೂ ಶಿವಸಾಗರಕ್ಕೂ ಬರಲಿಕ್ಕೆ ಹೇಳಿದ-
“ಅತ್ತೆ ಬಂದು ಬಿಡು ಹೋಗೋಣ” ಎಂದ.
ಇಷ್ಟು ಹೊತ್ತಿಗೆ ಇನಾಸಜ್ಜಿಯ ಕೈಯಲ್ಲೂ ಏನೂ ಮಾಡಲಾಗುತ್ತಿರಲಿಲ್ಲ. ಕಾಡಿಗೆ ಹೋಗಿ ಸೊಪ್ಪು, ಬೇರು ಹುಡುಕಿ ತರಲು ಕಷ್ಟವಾಗುತ್ತಿತ್ತು. ಮಡಲು ಹೆಣೆಯುತ್ತಿದ್ದಳಲ್ಲದೆ, ತೆಂಗಿನ ನಾರು ಬಿಡಿಸಿ ಹಗ್ಗ ಹೆಣೆಯಲು ಆಗುತ್ತಿರಲಿಲ್ಲ. ದೊಡ್ಡ ಶಾನುಭೋಗರು ಯಾವುದೋ ಅಭಿಮಾನದಿಂದ ಅಕ್ಕಿ ಅದು ಇದು ಕೊಡುತ್ತಿದ್ದರು. ಗುಂಡಬಾಳೆಯ ಇಗರ್ಜಿಯೊಂದೇ ಅವಳಿಗೆ ಆಧಾರ. ಎರಡನೆಯ ಆಧಾರವೆಂದರೆ ಬಳ್ಕೂರಿನ ಮಗಳು, ಅಳಿಯ, ಮೊಮ್ಮಕ್ಕಳು. ಈಗ ಅವರೂ ದೂರವಾಗುತ್ತಾರೆ ಅಂದಾಗ ಮನಸ್ಸು ಖಾಲಿ ಖಾಲಿಯಾದಂತೆ ಭಾಸವಾಯಿತು. ಇಲ್ಲಿ ಏನಿದೆ ಎಂದು ತಾನಿರಬೇಕು ಎಂದು ಒಂದು ಕ್ಷಣ ಯೋಚಿಸಿದಳು. ಅಳಿಯನಂತೂ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಮೊಮ್ಮಕ್ಕಳೂ ಕೂಡ. ಅವರ ಜತೆಗೇನೆ ಕೊನೆಯ ದಿನಗಳನ್ನು ಕಳೆಯುವುದು ಅಂದುಕೊಂಡ ಅವಳು-
“ಹೌದು ಕೈತಾನ..ಅಲ್ಲಿ ಇಗರ್ಜಿ ಪಾದರಿ ಅಂತ ಇದ್ದಾರೆ ಅಲ್ವ?” ಎಂದು ಸಹಜವಾಗಿ ಕೇಳಿದಳು.ಇಗರ್ಜಿ ಇಲ್ಲದ ಪಾದರಿ ಇಲ್ಲದ ಊರುಗಳೂ ಇರುತ್ತವೆ ಅಲ್ಲವೇ? ಈಗ ಇಗರ್ಜಿ ಹೊನ್ನಾವರ ಗುಂಡುಬಾಳೆಯಲ್ಲಿದೆ ಆದರೆ ಬೇರೆ ಕೆಲ ಊರುಗಳಲ್ಲಿ ಇಲ್ಲ. ಅಲ್ಲಿ ಹೇಗೋ ಯಾರಿಗೆ ಗೊತ್ತು?
ಅವಳ ಮಾತಿಗೆ ಕೈತಾನ ನಕ್ಕ.
“ಇಲ್ಲ ಅತ್ತೆ ನಮ್ಮವರ ಮನೆಗಳು ಹತ್ತು ಹದಿನೈದಿವೆ. ಒಂದು ಕೊಪೆಲ ಇದೆ. ಪಾದರಿ ಮಾತ್ರ ಇಲ್ಲ..ಮುಂದೆ ಬರಬಹುದು..”
“ಹಾಗಾದ್ರೆ ನಾನು ಬರೋದಿಲ್ಲ” ಎಂದು ಬಿಟ್ಟಳು ಇನಾಸಜ್ಜಿ.
ಇಗರ್ಜಿ ಪಾದರಿ ಇಲ್ಲದ ಊರಿಗೆ ಹೋಗಿ ದೈವಿಕತೆಯ ಗಂಧಗಾಳಿ ಇಲ್ಲದಲ್ಲಿ ಬದುಕಲು ಅವಳು ಸಿದ್ಧಳಿರಲಿಲ್ಲ.
“ಈವತ್ತಲ್ಲ ನಾಳೆ ಇಗರ್ಜಿಯಾಗುತ್ತೆ ಅತ್ತೆ” ಎಂದು ಕೈತಾನ ಹೇಳಿದರೂ ಅವಳು ಕೇಳಲಿಲ್ಲ.
“ಅದು ಆಗಲಿ..ನಾನು ಬರತೀನಿ” ಎಂದು ಬಿಟ್ಟಳು.
ಕೈತಾನ ಶಿವಸಾಗರಕ್ಕೆ ಬಂದು ಬಳ್ಕೂರಕಾರ ಆದ. ಅವನ ಹೆಂಡತಿ ಬಳ್ಕೂರಕಾರ ಹೆಂಡತಿಯಾದಳು. ಮಕ್ಕಳು ಬಳ್ಕೂರಕಾರ ಮಕ್ಕಳಾದರು.
ಇಲ್ಲಿಗೆ ಬಂದದ್ದು ಬಳ್ಕೂರಕಾರಗೆ ಒಳಿತಾಯಿತು. ಆತ ಒಳ್ಳೆಯ ಹಣ ಮಾಡಿದ. ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಮನೆಯನ್ನು ಹೊಸದಾಗಿ ಕಟ್ಟಿಸಿದ್ದಾನೆ. ಮನೆಯಲ್ಲಿ ಮೇಜು, ಕುರ್ಚಿ, ಮಂಚಗಳನ್ನೆಲ್ಲ ಮಾಡಿಸಿದ್ದಾನೆ. ಈಗ ಕಲ್ಲು ಕೆತ್ತುವ ಕೆಲಸ ಬಿಟ್ಟು ಮೇಸ್ತ್ರಿಯ ಕೆಲಸಕ್ಕೆ ತೊಡಗಿದ್ದಾನೆ. ಊರಿನಲ್ಲಿ ಇಗರ್ಜಿ ಬೇರೆ ಆಗಿದೆ. ಪಾದರಿ ಗೋನಸ್ವಾಲಿಸ್ ಬಂದಿದ್ದಾರೆ.
ಅವನಿಗೆ ತಟ್ಟನೆ ಇನಾಸಜ್ಜಿಯ ನೆನಪಾಗಿದೆ. ಅವನ ಹೆಂಡತಿ ನಮಾಮೋರಿ ಒಂದು ಬಾರಿ “ಇಲ್ಲಿ ಇಗರ್ಜಿ ಎಲ್ಲ ಆಗಿದೆ..ಅಮ್ಮ ಬರತಿದ್ಲೋ ಏನೋ..” ಎಂದು ಹೇಳಿದ್ದು ಕೂಡ ಕೈತಾನ ಈ ವಿಷಯ ಮರೆಯದಂತೆ ಮಾಡಿತು.
ಅತ್ತೆಯನ್ನು ನೋಡುವ ನೆಪದಲ್ಲಿ ಗುಂಡಬಾಳೆಗೆ ಹೋದ ಕೈತಾನ ಅಲ್ಲಿಂದ ತಿರುಗಿ ಬರುವಾಗ ಇನಾಸಜ್ಜಿಯನ್ನು ಕರೆತಂದ. ದೋಣಿಯಲ್ಲಿ ಅನಂತರ ಬಸ್ಸಿನಲ್ಲಿ ಜಪಸರದ ಮಣಿಗಳನ್ನು ಎಣಿಸುತ್ತ ಬಂದ ಇನಾಸಜ್ಜಿ ಶಿವಸಾಗರದ ಇಗರ್ಜಿಯನ್ನು ನೋಡಿ ಸಂತಸಪಟ್ಟಳು. ಮಗಳು ಮೊಮ್ಮಕ್ಕಳನ್ನು ನೋಡಿಯೂ ಅವಳಿಗೆ ಆನಂದವಾಯಿತು.
ಗುಂಡಬಾಳೆಯಲ್ಲಿಯ ಅವಳ ದಿನಚರಿ ಇಲ್ಲಿಯೂ ಹಾಗೆಯೇ ಮುಂದುವರೆಯಿತು.
ನಿತ್ಯ ಬೆಳಿಗ್ಗೆ ಇಗರ್ಜಿಗೆ ಹೋಗುತ್ತಿದ್ದ ಸಿಮೋನನ ತಾಯಿ, ವೈಜೀಣ್ ಕತ್ರೀನರ ಜತೆ ಇನಾಸಜ್ಜಿಯೂ ಸೇರಿಕೊಂಡಳು.
ಮೊದಲ ದಿನ ಇಗರ್ಜಿಗೆ ಹೋಗಿ ಬಂದ ಅಜ್ಜಿ ಗೋನಸ್ವಾಲಿಸ್ ರನ್ನು ತುಂಬಾ ಮೆಚ್ಚಿಕೊಂಡಳು.
“ಈ ಪಾದರಿಗಳು ತುಂಬಾ ದೈವಭಕ್ತರು…ಅವರು ಅರ್ಪಿಸುವ ಪೂಜೆಯನ್ನು ಕೇಳೋದೇ ಒಂದು ಪುಣ್ಯ..” ಎಂದಳವಳು.
ಅವರ ಕೋಪ, ಸಿಟ್ಟು, ಅವರ ನಾಗರಬೆತ್ತ, ಪಾಮಿಸ್ತ್ರಿ ಹಿಡಿದು ಹೊಡೆಯುವುದು ಅವಳ ಗಮನಕ್ಕೇನೆ ಬರಲಿಲ್ಲ. ಇದು ಅನಿವಾರ್ಯ ಎನಿಸಿತ್ತೇನೋ ಅವಳಿಗೆ. ಅವಳು ದಿವ್ಯಪ್ರಸಾದ ಸ್ವೀಕರಿಸುತ್ತ ಉಳಿದುಬಿಟ್ಟಳು.
ಆದರೆ ಮಸ್ಕರಿನಾಸರು ಊರಿಗೆ ಬಂದ ನಂತರ ಮಾತ್ರ ಅವಳ ಪ್ರತಿಕ್ರಿಯೆ ಬೇರೆಯಾಗಿತ್ತು.
“ಈ ಪಾದರಿ ಯಾಕೆ ಪದೇ ಪದೇ ಜನರ ಕಡೆ ತಿರುಗಿ ನೋಡೋದು ..” ಎಂದವಳು ಕೇಳುತ್ತಿದ್ದಳು.
“ಬರೀ ಕಾಣಿಕೆ ಕಾಣಿಕೆ ಅಂತಾರೆ ಪಾದರಿ..” ಎಂದು ರಾಗ ಎಳೆದರು.
ಆದರೂ ಅವಳ ನಿತ್ಯದ ಭೇಟಿ ನಿಲ್ಲಲಿಲ್ಲ. ಮನೆಯಲ್ಲಿ ಪೂಜೆ ಪ್ರಾರ್ಥನೆ ಬಿಡಲಿಲ್ಲ. ಶುಕ್ರವಾರದ ಶಿಲುಬೆಯ ಪ್ರಾರ್ಥನೆ ನಿಲ್ಲಿಸಲಿಲ್ಲ.
ಆದರೆ ಈಗ ಒಂದು ತಿಂಗಳಿಂದ ಅವಳು ಹಾಸಿಗೆ ಬಿಟ್ಟು ಏಳುತ್ತಿಲ್ಲ. ಮಗಳು ಅಳಿಯ ಅಕ್ಕಪಕ್ಕದ ಮನೆಗಳವರು ಅವಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಸರಕಾರಿ ವೈದ್ಯರೂ ಮನೆಗೆ ಬಂದು ನೋಡಿದ್ದಾರೆ.
“ಕಾಯಿಲೆ ಏನಿಲ್ಲ..ವಯಸ್ಸಾಯಿತಲ್ಲ” ಎಂದವರು ಹೇಳಿದ್ದಾರೆ.
ಇನಾಸಜ್ಜಿಗೆ ತೊಂಬತ್ತು ಆಗಿದೆ. ಮಲಗಿದಲ್ಲಿಯೇ ಕರಗಿ ಹೋಗಿದ್ದಾಳೆ ಆಕೆ. ಎಲ್ಲರ ಗುರುತು ಹಿಡಿಯುತ್ತಾಳೆ, ಮಾತನಾಡಿಸುತ್ತಾಳೆ. ಕೆಲ ಬಾರಿ ಎಲ್ಲ ಮರೆತು ಹೋದಂತೆ ಪಿಳಿ ಪಿಳಿ ನೋಡುತ್ತಾಳೆ.
ಸಿಮೋನ ಮನೆ ಬಾಗಿಲಿಗೆ ಬರುತ್ತಿದ್ದಂತೆಯೇ ಬಳ್ಕೂರಕಾರ್ ಎದುರಾದ.
“ಬನ್ನಿ ..ಗುರ್ಕಾರ ಮಾಮ” ಎಂದ.
“ಯಾರು ಸಿಮೋನನ?” ಎಂದು ಕೇಳಿದಳು ಮುದುಕಿ.
“ನಿನ್ನ ಹೆಂಡತಿ ಬಂದು ನೋಡಿಕೊಂಡು ಹೋದಳು” ಎಂದು ನಕ್ಕಳು.
“ಮಕ್ಕಳೆಲ್ಲ ಚೆನ್ನಾಗಿದಾರ? ಮಗಳ ಮದುವೆ ಮಾಡಬೇಕಾ?” ಎಂದೆಲ್ಲ ವಿಚಾರಿಸಿದಳು.
ಒಳ್ಳೆ ಕಡೆ ನೋಡಿ ಮದುವೆ ಮಾಡು..ನಾನು ಇರೋದಿಲ್ಲ ಮದುವೆ ನೋಡಲಿಕ್ಕೆ?..ನಾನು ಹೊರಟೆ” ಎಂದಳು ಯಾವುದೇ ಉದ್ವೇಗ ಉದ್ವಿಗ್ನತೆಗೆ ಒಳಗಾಗದೆ.
“ನಮಾಮೋರಿ..ಕುಡಿಲಿಕ್ಕೆ ಏನಾದರೂ ಮಾಡಿಕೊಡು” ಎಂದು ಮಗಳಿಗೆ ಕೂಗಿ ಹೇಳಿದಳು.
“ಶುಕ್ರವಾರ ಶಿಲುಬೆ ಪ್ರಾರ್ಥನೆ ಬಂದಿದೆ..” ಎಂದೇನೋ ಹೇಳಲು ಹೋಗಿ ಮಾತು ನಿಲ್ಲಿಸಿದಳು. ಸಿಮೋನ ಸುಮ್ಮನೆ ಕೊಂಚ ಹೊತ್ತು ಕುಳಿತಿದ್ದು ನಮಾಮೋರಿ ತಂದುಕೊಟ್ಟ ಕಾಫ಼ಿ ಕುಡಿದು ಎದ್ದು ಬಂದ.
*
*
*
ಉದ್ದ ಸಾಲಿನ ಮೂರನೆ ಮನೆ ಸುತಾರಿ ಇನಾಸನದಾದರೆ ಅಡ್ಡ ಸಾಲಿನ ಮೂರನೇ ಮನೆ ಬಳ್ಕೂರಕಾರನಾದು. ಶುಕ್ರವಾರ ಸಂಜೆ ಅಲ್ಲಿ ಪರಲೋಕ ಮಂತ್ರ ಹೇಳಿದರೆ, ಕೀರ್ತನೆ ಹಾಡಿದರೆ ಅದು ಇಲ್ಲಿ ನೇರವಾಗಿ ಕೇಳುತ್ತದೆ. ನಲವತ್ತು ಐವತ್ತು ಜನ ಸೇರಿ ಹಾಡುವುದರಿಂದ ಸಂಜೆಯ ಮೌನದಲ್ಲಿ ಇಂಪಾಗಿ ಕೇಳಿಸುತ್ತದೆ.
ಈ ಶಿಲುಬೆ ಪ್ರಾರ್ಥನೆಗೆ ಮುಂಚಿತವಾಗಿಯೇ ಕೈತಾನ ಪಾದರಿ ಮಸ್ಕರಿನಾಸರನ್ನು ಮನೆಗೆ ಕರೆಸಿಕೊಂಡಿದ್ದ.
“..ನಮ್ಮ ಅತ್ತೆಗೊಂದು ಅಂತ್ಯಾಭ್ಯಂಜನ ನೀಡಿಬಿಡಿ ಪದ್ರಾಬ..” ಎಂದು ಹೇಳಿದ್ದ.
ಅವನಿಗೆ ಏನೋ ಅನುಮಾನ. ಸಂಜೆಯ ರೈಲು ಊರು ಬಿಡುವಾಗ ಈ ಮುದುಕಿಯೂ ಹೊರಟು ಬಿಡುತ್ತಾಳೇನೋ ಎಂಬ ಆತಂಕ.
ಹೀಗಾಗಿ ಪಾದರಿ ಬಂದರು.
ಪಾಪ ನಿವೇದನೆಗೆ ಕಿವಿಗೊಟ್ಟರು.
ದಿವ್ಯಪ್ರಸಾದ ನೀಡಿದರು.
ಪರಿಶುದ್ಧ ಎಣ್ಣೆಯನ್ನು ಇನಾಸಜ್ಜಿಯ ಹಣೆಯ ಮೇಲೆ ಲೇಪಿಸಿ-
“ಈ ಲೇಪನದಿಂದಲೂ ತಮ್ಮ ಮಹತ್ವಾಕಾಂಕ್ಷೆಯಿಂದಲೂ, ಕರ್ತರು ನಿನ್ನ ಪಂಚೇಂದ್ರಿಯಗಳಿಂದ ನೀನು ಮಾಡಿದ ಪಾಪಗಳನ್ನು ಕ್ಷಮಿಸಲಿ” ಎಂದರು.
ಅವರು ತಮ್ಮ ಕೆಲಸಮುಗಿಸಿ ಹೋಗುತ್ತಿರಲು ಇನಾಸನ ಮನೆ ಮುಂದಿನಿಂದ ಪ್ರಾರ್ಥನೆ ಕೇಳಿ ಬರತೊಡಗಿತು.
ಅಜ್ಜಿ ಆಲಿಸುತ್ತ ಕುಳಿತಳು.
ಬೆನ್ನಿಗೆ ಕೊಟ್ಟ ತಲೆದಿಂಬನ್ನು ತೆಗೆಯಲು ಬಂದ ಮಗಳಿಗೆ ಬೇಡ ಎಂದವಳು ತಿಳಿಸಿದಳು. ತಲೆದಿಂಬಿನ ಅಡಿಯಿಂದ ಜಪಸರ ತೆಗೆದು, ಅದರಲ್ಲಿಯ ಶಿಲುಬೆಗೆ ಮುತ್ತಿಟ್ಟು ಮಣಿ ಮಣಿ ಎಣಿಸತೊಡಗಿದಳು.
ಏಳು ಗಂಟೆಗೆ ರೈಲು ಶಿವಮೊಗ್ಗೆಗೆ ಹೊರಟಿದ್ದು ಕೂ ಎಂದಿತು. ಇಲ್ಲಿ ಜನ ಕೀರ್ತನೆ ಹಾಡುತ್ತಿದ್ದರು.
ಇನಾಸಜ್ಜಿ ನಿಧಾನವಾಗಿ ಪಕ್ಕಕ್ಕೆ ಹೊರಳಿದಳು.
*
*
*
ಬೆಳಿಗ್ಗೆ ಸಿಮಿತ್ರಿಯಲ್ಲಿ ಹೊಂಡ ತೋಡಲೆಂದು ಅನುಮತಿ ಕೇಳಲು ಚಮಾದೋರ ಇಂತ್ರು ಪಾದರಿಗಳ ಬಂಗಲೆ ಬಳಿ ಹೋದ. ತನ್ನ ಸಂಗಡಿಗನನ್ನು ಸಲಕರಣೆಗಳ ಸಹಿತ ಸಿಮಿತ್ರಿಗೆ ಕಳುಹಿಸಿ ಇಂತ್ರು ಪಾದರಿಗಳ ಎದುರು ಹೋಗಿ ನಿಂತ.
ಮರಣದ ಗಂಟೆ ಕೂಡ ಆಗಲೇ ಸದ್ದು ಮಾಡುತಲಿತ್ತು.
“ಕೋಣ್ರೆತೋ?” ಎಂದು ಎಂದಿನಂತೆ ಕೇಳುತ್ತ ಬಂದರು ಪಾದರಿ.
ಫ಼ರಾಸ್ಕನ ಹೆಂಡತಿ ರಜೀನಾ ಕೆಂಪು ಸೀರೆಯುಟ್ಟು ಅಲ್ಲೆಲ್ಲ ತಿರುಗಾಡುತ್ತಿದ್ದಳು.
“ಪದ್ರಾಬಾ..ಬಳ್ಕೂರಕಾರ ಅತ್ತೆ ತೀರಿಕೊಂಡರಲ್ಲ” ಎಂದು ಪೀಠಿಕೆ ಹಾಕಿದ ಇಂತ್ರು.
“ಹೌದು ಏನೀಗ?” ಏಕೋ ಅವರ ಮಾತು ಗಡುಸಾಗಿತ್ತು.
“ನಾನು ಹೊಂಡ ತೆಗೀಲಿಕ್ಕೆ ಹೊರಟಿದ್ದಿ”
“ಅವರಿಗೆ ಇಲ್ಲಿ ಬರಲಿಕ್ಕೆ ಹೇಳು. ಅವರಿಂದ ಇಗರ್ಜಿಗೆ ಬರಬೇಕಾದ ಬಾಕಿ ಯಾರಂತೆ ಕೊಡೋದು” ಎಂದರು ಪಾದರಿ ಮಸ್ಕರಿನಾಸ ತುಸು ಒರಟಾಗಿ. ಇಂತ್ರು ಎರಡು ನಿಮಿಷ ನಿಂತು ಅಲ್ಲಿಂದ ಹೊರಟ.
*
*
*
ಸುತಾರಿ ಇನಾಸನ ಮಗ ಪಾಸ್ಕು ತಂದೆಯ ಕೆಲಸ ಮುಂದುವರೆಸಿದವ ಬಳ್ಕೂರಕಾರ ಮನೆ ಅಂಗಳದಲ್ಲಿಯೇ ಮರಣದ ಪೆಟ್ಟಿಗೆ ಮಾಡತೊಡಗಿದ. ಜನ ಬಂದು ಬಂದು ಹೋಗುತ್ತಿದ್ದರು. ಇನಾಸಜ್ಜಿಗೆ ಸ್ನಾನ ಮಾಡಿಸಿ ಬಿಳಿ ಸೀರೆ ಉಡಿಸಿ ತಂದು ಮಲಗಿಸಲಾಗಿತ್ತು. ಎಷ್ಟೋ ವರ್ಷಗಳಿಂದ ಅವಳ ಸಂಗಾತಿಯಾಗಿದ್ದ ಜಪಸರವನ್ನು ಜೋಡಿಸಿದ ಅವಳ ಕೈಗೆ ಸುತ್ತಲಾಗಿತ್ತು. ಜಪಸರದಲ್ಲಿನ ಬೆರಳುದ್ದದ ಶಿಲುಬೆ ಎದ್ದು ಕಾಣುತ್ತಿತ್ತು. ಶಾಂತಳಾಗಿ ಮಲಗಿದ್ದಳು ಅಜ್ಜಿ. ಬಂದ ಜನತಂದ ಹೂವು, ಮೇಣದ ಬತ್ತಿ ಪ್ಯಾಕೇಟುಗಳನ್ನು ಶವದ ಬಳಿ ಇರಿಸಿ, ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಗಂಡಸರು ಅಂಗಳದಲ್ಲಿ ಹಾಕಿದ ಅಡ್ಡ ಬೆಂಚಿನ ಮೇಲೆ ಕುಳಿತು ಅಲ್ಲಲ್ಲಿ ನಿಂತು ಮಾತಿಗೆ ತೊಡಗಿದ್ದರು. ಸಾವಿನ ಕರಿ ನೆರಳು ಅಲ್ಲೆಲ್ಲ ತೆಳುವಾಗಿ ಹರಡಿಕೊಂಡಿತು.
ಇಂತ್ರು…ದಣಪೆ ದಾಟಿ ಒಳಬಂದವನೇ ಸಿಮೋನ, ಬೋನರ ಜತೆ ಮಾತನಾಡುತ್ತ ನಿಂತಿದ್ದ ಬಳ್ಕೂರಕಾರನನ್ನು ಕರೆದ.
“..ಏನು ಇಂತ್ರು..ಕೆಲಸ ಆಯಿತೆ?” ಎಂದು ಅಲ್ಲಿಂದಲೇ ಕೇಳಿದ ಸಿಮೋನ.
“ಅಲ್ಲ ಅದೇನೋ ಇಗರ್ಜಿಗೆ ಕೊಡಬೇಕಾದ ಬಾಕಿ ಇದೆಯಂತಲ್ಲ..ಅದು ಕೊಡದೆ ಹೊಂಡ ತೆಗೀಲಿಕ್ಕೆ ಅನುಮತಿ ಕೊಡಲ್ವಂತೆ ಪಾದರಿಗಳು” ಎಂದು ಇಂತ್ರು ದೊಡ್ಡ ದನಿಯಲ್ಲಿ ಹೇಳುತ್ತಿರಲು ಅಲ್ಲಿ ಸೇರಿದವರೆಲ್ಲ ಕೇಳುತ್ತ ನಿಂತರು.
ಬಳ್ಕೂರಕಾರ್ ಕೂಡಲೇ ಎಚ್ಚೆತ್ತ. ಈ ಪ್ರಸಂಗವನ್ನು ಬೆಳೆಯಲು ಬಿಡಬಾರದು ಎನಿಸಿ ಆತ ಮನೆಯಿಂದ ಹೊರಟ. ಸಿಮೋನ, ಬೋನ ಕೂಡ ಅವನಿಗೆ ಜತೆಯಾದರು.
ಪಾದರಿ ಮಸ್ಕರಿನಾಸ ಸಹಜವಾಗಿ ಎಂಬಂತೆ ಅನ್ವಾಲ ಕಾಯಿದೆಯ ವಹಿ ತೆಗೆದರು.
“ನೋಡಿ ವರ್ಷಕ್ಕೊಂದು ಸಾರಿ ಕೊಡಬೇಕಾದ್ದನ್ನ ಕೊಟ್ಟರೆ ಈ ಎಲ್ಲ ರಗಳೆಗಳೂ ಇರೋದಿಲ್ವೆ..ನಮ್ಮ ಜನರಿಗೆ ಎಲ್ಲದಕ್ಕೂ ಹಣ ಇರುತ್ತೆ..ಇಗರ್ಜಿಗೆ ಕೊಡಲಿಕ್ಕೆ ಮಾತ್ರ ಇರಲ್ಲ..” ಎಂದು ಕೇಳುತ್ತ ಬಳ್ಕೂರಕಾರ ಕೊಟ್ಟ ಹಣವನ್ನು ಲೆಕ್ಕ ಮಾಡಿ ಅದಕ್ಕೊಂದು ರಶೀದಿ ಬರೆದುಕೊಟ್ಟರು.
ಸಿಮೋನನಿಗಾಗಲಿ, ಬೋನನಿಗಾಗಲಿ ಅಲ್ಲಿ ಮತ್ತೊಂದು ಮಾತು ಹೇಳಲು ಅವಕಾಶವಾಗಲಿಲ್ಲ.
ಇಂತ್ರು ಸಿಮಿತ್ರಿಯತ್ತ ತಿರುಗಿದ್ದನ್ನು ನೋಡಿ ಈ ಮೂವರೂ ಕೇರಿಗೆ ಹಿಂತಿರುಗಿದರು.
ಇನಾಸಜ್ಜಿಯನ್ನು ಮಣ್ಣಿಗೆ ತಲುಪಿಸಲು ಊರ ಕ್ರೀಸ್ತುವರೆಲ್ಲ ಬಂದರು.
ವಿಶೇಷವಾಗಿ ಗಮನ ಸೆಳೆದವರೆಂದರೆ ಬಾಮಣ ಪಂಗಡದವರು, ಹೆಂಗಸರು ಗಂಡಸರಾಗಿ ಎಲ್ಲರೂ ಕರಿ ಬಟ್ಟೆ ಧರಿಸಿ, ಕೈ ಮುಂದೆ ಕಟ್ಟಿಕೊಂಡು, ಇಂಗ್ಲೀಷಿನಲ್ಲಿ ಜಪ ಮಾಡುತ್ತ ಶವದ ಹಿಂದೆಯೇ ನಡೆದು ಬಂದದ್ದು ಉಳಿದ ಕ್ರೀಸ್ತುವರ ಮೆಚ್ಚುಗೆ ಗಳಿಸಿತ್ತು.
*
*
*
ಇನಾಸಜ್ಜಿ ತೀರಿಕೊಂಡ ಕೆಲವೇ ದಿನಗಳಲ್ಲಿ ಇಗರ್ಜಿಯ ಗಂಟೆ ಮರಣ ಸೂಚಕವಾದ ಸದ್ದನ್ನು ಮತ್ತೊಮ್ಮೆ ಮಾಡಿ-
“ಯಾರು..ಯಾರಂತೆ?” ಎಂದು ಕೇರಿಯ ಜನ ಮನೆಯಿಂದ ಹೊರಬಂದು ಇಗರ್ಜಿಯತ್ತ ನೋಡುವಂತೆ ಮಾಡಿತು.
ಬಲಗಾಲುದ್ಧ ಬಾಲ್ತಿದಾರ ಈಗ ನಾಲ್ಕು ತಿಂಗಳಿಂದ ಹಾಸಿಗೆ ಹಿಡಿದಿದ್ದ. ಅವನ ಕತೆ ಮುಗಿದು ಹೋಯಿತು ಎನ್ನುವಂತಾಗಿ ಪಾದರಿ ಮಸ್ಕರಿನಾಸ ಹೋಗಿ ಆತನಿಗೆ ಅಂತ್ಯಾಂಭ್ಯಂಜನ ನೀಡಿ ಬಂದಿದ್ದರು. ಪೆಟ್ಟಿಗೆ ಮಾಡುವವರು, ಬಟ್ಟೆ ಹೊಲಿಯುವವರು, ಸಮಾಧಿ ತೋಡುವವರು ಇಂದು ನಾಳೆ ಎಂದು ಕ್ಷಣಗಳನ್ನು ಎಣಿಸುತ್ತಿದ್ದಾಗ ಬಾಲ್ತಿದಾರ..
“ರೇಮೆಂದಿ..” ಎಂದು ಮಗಳ ಹೆಸರನ್ನು ಹಿಡಿದು ಕೂಗುತ್ತ ಎದ್ದು ಕುಳಿತಿದ್ದ
“ಹೋ..ಈ ಮುದುಕ ಇಷ್ಟು ಬೇಗ ಸಾಯೋದಿಲ್ಲಪ್ಪ..” ಎಂದು ಜನ ಮಾತನಾಡಿಕೊಂಡರು.
ಬಾಲ್ತಿದಾರ ಕಾಲೆಳೆದುಕೊಂಡು ಜಗಲಿಗೆ ಬಂದ. ಅಂಗಳಕ್ಕೂ ಬಂದ. ಮೊಮ್ಮಗನ ಜತೆ ಮಾತನಾಡಿದ. ಅಳಿಯನ ಸಂಗಡ ಹರಟೆ ಹೊಡೆದ. ಸಿಮೋನ, ಪಾಸ್ಕೋಲ ಹೋದಾಗ ಅವರೊಂದಿಗೂ ಅದು ಇದು ಪ್ರಸ್ತಾಪ ಮಾಡಿದ. ನಾಲ್ಕನೆಯ ದಿನ ಮತ್ತೆ ಹಾಸಿಗೆ ಹಿಡಿದ.
ಹೀಗೆಯೇ ಆಟವಾಡಿದವ ಒಂದು ದಿನ ಗೊರಗೊರ ಎಂದು ಸದ್ದು ಮಾಡಿ ಕತ್ತು ಹೊರಳಿಸಿದ.
ಎಂದಿನಂತೆ ಸಿಮೋನ ಓಡಿ ಬಂದ.
ಶಿರಾಲಿಯಿಂದ ಕರೆತಂದ ಈತನಿಗೆ ತಾನು ಜವಳಿ ಅಂಗಡಿ ಭುಜಂಗನಲ್ಲಿ ಕೆಲಸ ಕೊಡಿಸಿದ್ದನ್ನು ಸಿಮೋನ ಮರೆತಿರಲಿಲ್ಲ. ಕಲ್ಲು ಮಣ್ಣಿನ ಕೆಲಸ ಮಾಡಲಾಗದ ಈತ ದರ್ಜಿಯಾದ. ಜವಳಿ ಅಂಗಡಿ ಮಾಲಿಕನಾದ. ಬೋನ ಅಳಿಯನಾಗಿ ಬಂದ ನಂತರ ಇವನ ಅಂಗಡಿಯೂ ಅಭಿವೃದ್ದಿ ಹೊಂದಿತು. ಅಳಿಯ ಮಗ ಒಳ್ಳೆಯ ರೀತಿಯಲ್ಲಿದ್ದಾರೆ ಎಂಬ ಸಂತಸವೂ ಇವನಲ್ಲಿತ್ತು.
“ಎಲ್ಲ ಆಯಿತು ಸಿಮೋನ..ಈ ಹುಡುಗನದೊಂದು ಮದುವೆ ನೋಡಬೇಕು ಅಂತ ಆಸೆ..” ಎಂದು ಹೇಳುತ್ತಿದ್ದ ಆಗಾಗ್ಗೆ.
“ನೋಡುವಿಯಂತೆ..ಆ ಇಗರ್ಜಿ ಸಂತನನ್ನು ಕೇಳಿಕೊ..ಅವನು ಒಪ್ಪಿದರೆ ಇದು ಕಷ್ಟ ಅಲ್ಲ..” ಎಂದು ಹೇಳುತ್ತಿದ್ದೆ ತಾನು, ಈಗೀಗ ಬಾಲ್ತಿದಾರ ಸದಾ ಜಪಸರ ಹಿಡಿದು ಕೂರುತ್ತಿದ್ದ. ಆಗದಿದ್ದರೂ ಭಾನುವಾರ ಇಗರ್ಜಿಗೆ ಬರುತ್ತಿದ್ದ. ಆದರೆ ಇಗರ್ಜಿ ಸಂತನಿಗೆ ಇವನು ಇರುವುದು ಬೇಕಿರಲಿಲ್ಲವೇನೋ. ಆತ ಬಾಲ್ತಿದಾರನನ್ನು ತನ್ನಲ್ಲಿಗೆ ಕರೆದುಕೊಂಡ.
ಸಿಮೋನ ಬೋನನ ಮನೆಗೆ ಹೋದಾಗ ಬಾಲ್ತಿದಾರನ ಹೆಂಡತಿ ಅನರಿತಾ ಗಂಡನ ಶವದ ಮೇಲೆ ಬಿದ್ದು ಹೊರಳಾಡುತ್ತಿದ್ದಳು.
“..ಅಣ್ಣಾ..ನನಗಿನ್ನು ಯಾರಿದಾರೆ..ನನ್ನದೆಲ್ಲ ಹೋಯ್ತು..” ಎಂದವಳು ನೆಲಕ್ಕೆ ಹಣೆ ಚಚ್ಚಿಕೊಳ್ಳುವಾಗ ಸಿಮೋನ-
“ಅನರಿತಾ..ಸಾಕು ಮಾಡು…ಯಾರೂ ಇಲ್ಲ ಅಂತ ಹೇಳಬೇಡ..ದೇವರ ಹಾಗಿರೋ ಅಳಿಯ ಇದಾನೆ..ಮಗಳು ಇದಾಳೆ..ಮೊಮ್ಮಗ ಇದ್ದಾನೆ…ಏನು ಮಾತು ಅಂತ ಹೇಳ್ತಿಯಾ..ನೀನೇನು ಇಲ್ಲಿ ಖಾಯಂ ಆಗಿ ಇರಲಿಕ್ಕೆ ಬಂದವಳ..ನಿನ ಗಂಡನಿಗೆ ಬೇಗನೆ ಸದ್ಗತಿ ಸಿಗಲಿ ಅಂತ ಬೇಡಿಕೋ..” ಎಂದು ದನಿ ಎತ್ತರಿಸಿ ಕೂಗಾಡಿದ.
ಅನರಿತಾ ನಿಧಾನವಾಗಿ ಚೇತರಿಸಿಕೊಂಡು ಕುಳಿತಳು.
ಮನೆ ಮನೆಗಳಿಂದ ಬಂದವರು ಅಲ್ತಾರಿನ ಮುಂದೆ ಮೇಣದ ಬತ್ತಿ ಹಚ್ಚಿ ತೇರ್ಸ, ಕೀರ್ತನೆಯಲ್ಲಿ ತೊಡಗಿದರು.
ಬೋನ ಕಾಲಕಾಲಕ್ಕೆ ಇಗರ್ಜಿಗೆ ಕೊಡಬೇಕಾದುದನ್ನೆಲ್ಲ ಕೊಡುತ್ತ ಬಂದದ್ದರಿಂದ ಪಾದರಿ ಮಸ್ಕರಿನಾಸ ಯಾವುದೇ ತಕರಾರು ಮಾಡದೆ ಶವಸಂಸ್ಕಾರಕ್ಕೆ ಮುಂದಾದರು.
ಬಲಗಾಲುದ್ದನ ಹೆಂಡತಿ ಅನರಿತಾ ತುಸು ಮಂಕಾದಳು. ನಿಧಾನವಾಗಿ ಅವಳು ಕೂಡ ಜಪಸರ ಪ್ರಾರ್ಥನೆ, ಇಗರ್ಜಿಗೆ ಹೋಗುವುದು ಎಂದು ದೇವರತ್ತ ತಿರುಗಿಕೊಂಡಳು.
ಆದರೆ ಮನೆಗೆ ಹೊಸದಾಗಿ ಬಂದ ಮೊಮ್ಮಗ ಅವಳ ಸಮಯವನ್ನೆಲ್ಲ ತೆಗೆದುಕೊಳ್ಳತೊಡಗಿದ್ದ. ಫ಼ಿಲಿಪ್ಪ ತಾಯಿಯ ಬಣ್ಣವನ್ನು ತಂದೆಯ ಮುಖ ಚಹರೆಯನ್ನು ಪಡೆದಿದ್ದ.ಸದಾ ಚಟುವಟಿಕೆಯಲ್ಲಿರುವ ತುಂಟ. ಅವನಿಗೆ ನಿದ್ದೆಯೇ ಕಡಿಮೆ ಅನ್ನುವುದು ಅವನ ತಾಯಿಯ ದೂರು.
ಬೆಳಿಗ್ಗೆ ಇಗರ್ಜಿ ಗಂಟೆ ಆಗುತ್ತಿರುವಂತೆಯೇ ಎದ್ದು ಮಲಗಿದವರನ್ನೆಲ್ಲ ಎಚ್ಚರಿಸಿ ಅವರ ಹಾಸಿಗೆಯಿಂದ ಇವರ ಹಾಸಿಗೆಗೆ ತಿರುಗಾಡೀ ಎಲ್ಲರೂ ಎದ್ದು ಕೂಡುವಂತೆ ಮಾಡುತ್ತಿದ್ದ.
ಫ಼ಿಲಿಪ್ಪ ಬೋನ ರೇಮೇಂದಿಗಿಂತಲೂ ತನ್ನ ಅಜ್ಜಿಗೇನೆ ಹೆಚ್ಚಾಗಿ ಹಚ್ಚಿಕೊಂಡದ್ದು ಅವಳು ತನ್ನ ಗಂಡನನ್ನು ಮರೆಯಲು ಕಾರಣವಾಯಿತು.
-೪-
ಇನಾಸಜ್ಜಿಯ ತಿಂಗಳ ಪೂಜೆಯನ್ನು ಬಳ್ಕೂರಕಾರ ಒಳ್ಳೆಯ ರೀತಿಯಲ್ಲಿಯೇ ಇರಿಸಿಕೊಂಡ. ಬೆಳಿಗ್ಗೆ ಇಗರ್ಜಿಯಲ್ಲಿ ಇರಿಸಿಕೊಂಡು ಪಾಡುಪೂಜೆ ಹನ್ನೆರಡು ರೂಪಾಯಿಯ ಗಾಯನ ಪೂಜೆಯೇ. ಮಿರೋಣ ವಲೇರಿಯನ ಪಿಟಿಲು ಬಾರಿಸಿಕೊಂಡು ಹಲವು ಕೀರ್ತನೆಗಳನ್ನು ಹಾಡಿದ. ಪಾದರಿ ಮಸ್ಕರಿನಾಸ ಕರಿ ಉಡುಪು ಧರಿಸಿ ಪೂಜಾ ಸಲ್ಲಿಸಿದರು. ಇಗರ್ಜಿಯ ನಡುವೆ ಅಲ್ತಾರನ ಮುಂದೆ ಕಪ್ಪು ಬಟ್ಟೆ ಹೊದಿಸಿದ ಶವಪೆಟ್ಟಿಗೆಯನ್ನು ಇರಿಸಲಾಗಿತ್ತು. ಪೂಜೆಯ ನಂತರ ಬಳ್ಕೂರಕಾರ, ಅವನ ಹೆಂಡತಿ ಮಕ್ಕಳು, ಪೂಜೆಗೆ ಬಂದ ಇನ್ನೂ ಹಲವರು ಇಗರ್ಜಿಯ ಹಿಂಬದಿಯಿಂದ ಸಿಮಿತ್ರಿಗೆ ಹೋದರು. ಇನಾಸಜ್ಜಿಯ ಸಮಾಧಿಯ ಮೇಲೆ ಮೇಣದ ಬತ್ತಿ ಹಚ್ಚಿ ಇರಿಸಿದರು. ಪಾದರಿ ಮಸ್ಕರಿನಾಸರೂ ಅಲ್ಲಿಗೆ ಬಂದರು. ಅಲ್ಲಿ ಮತ್ತೆ ಪ್ರಾರ್ಥನೆಯಾಯಿತು. ಕುಟುಂಬದ ಎಲ್ಲರಿಗೂ ಒಳ್ಳೆಯದನ್ನು ಮಾಡುವಂತೆ ಇನಾಸಜ್ಜಿಯ ಆತ್ಮವನ್ನು ಕೇಳಿಕೊಳ್ಳಲಾಯಿತು. ಏಕೆಂದರೆ ಅವಳು ಈಗ ದೇವರಿಗೆ ಹತ್ತಿರವಾಗಿದ್ದಾಳೆ ಅಲ್ಲವೆ?
ಬಳ್ಕೂರಕಾರ ಮನೆಯಲ್ಲಿ ಮಧ್ಯಾಹ್ನದ ಊಟ. ಒಂದು ಬಾಳೆ ಎಲೆಯಲ್ಲಿಒಂದು ಎಡೆ ತೆಗೆದಿರಿಸಿ ಅದನ್ನು ಸಿಮೋನನ ಮನೆಯ ಬೆಳ್ಳಿಗೆ ಕೊಡಲಾಯಿತು. ನಂತರ ಗಂಡಸರ ಪಂಕ್ತಿಗೆ ಸಿಮೋನನೇ ಮುಂದೆ ನಿಂತು ಶರಾಬು ಹಂಚಿದ. ಊಟದ ಎಲೆಯ ಮುಂದೆ ಕುಳಿತ ಪ್ರತಿಯೊಬ್ಬರೂ ಶರಾಬಿನ ಗ್ಲಾಸನ್ನು ತೆಗೆದುಕೊಂಡು ಎರಡು ಹನಿ ಶರಾಬನ್ನು ನೆಲಕ್ಕೆ ಚಲ್ಲಿ ಗ್ಲಾಸನ್ನು ಹಿಡಿದುಕೊಂಡು-
ನಮ್ಮನ್ನು ಅಗಲಿಹೋದ ಇನಾಸಜ್ಜಿಗಾಗಿ, ಈ ಕುಟುಂಬದ ಅಗಲಿದ ಆತ್ಮಗಳಿಗಾಗಿ ಒಂದು ಪರಲೋಕ ಒಂದು ನಮೋರಾಣೆ ಮಂತ್ರ ಅರ್ಪಿಸೋಣ ಎಂದು ಹೇಳಿ ಅದನ್ನು ಮುಗಿಸಿ ಎಲ್ಲರತ್ತ ತಿರುಗಿ.
“ಹ್ವಾಯ..ದೇವ ಬರೆಂ ಕರುಂ” (ದೇವರು ಒಳ್ಳೆಯದನ್ನು ಮಾಡಲಿ) ಎಂದು ಹೇಳಿ ಗ್ಲಾಸನ್ನು ಬರಿದಾಗಿಸಿ ಬಳ್ಕೂರಕಾರಗೆ ಹಿಂತಿರುಗಿಸಿದರು.
ಅದೇ ಗ್ಲಾಸು ಎಲ್ಲರ ಕೈಗೂ ಹೋಯಿತು.. ಮತ್ತೆ ಪ್ರಾರ್ಥನೆ. ದೇವರು ಒಳ್ಳೆಯದನ್ನು ಮಾಡಲಿ ಎಂಬ ಹಾರೈಕೆ.
ಬಳ್ಕೂರಕಾರ ಎರಡು ಮೂರು ಬಾರಿ ಬೇಡ ಬೇಡ ಅನ್ನುತ್ತಿದ್ದರೂ ಗ್ಲಾಸನ್ನು ತುಂಬಿಕೊಟ್ಟ. ಅವನ ಹೆಂಡತಿ ನಮಾಮೋರಿ-
“ಮಾವ ಊಟ ಮಾಡಿ”
“ದೊಡ್ಡಪ್ಪ ಊಟ ಮಾಡಿ”
“ಅಣ್ಣ ನಾಚಿಕೋ ಬೇಡ”
“ತಮ್ಮ ಹೊಟ್ಟೆಗೆ ಕಮ್ಮಿ ಮಾಡಕೋಬಾರದು” ಎಂದು ಹೇಳಿ ಮತ್ತೆ ಮತ್ತೆ ಬಡಿಸಿದಳು. ಆಗ ಊಟಕ್ಕೆ ರಂಗೇರಿತು. ಮಾತುಗಳು ಕೊಂಚ ಬಿರುಸಾದವು.
ಪಾಸ್ಕೋಲ ಮೇಸ್ತ್ರಿ ಹಣೆಯ ಮೇಲೆ ಬಂದು ಬಿದ್ದ ಕೂದಲನ್ನು ಹಿಂದೆ ತಳ್ಳಿ-
“ಗುರ್ಕಾರ ಸಿಮೋನ..ನೀನು ಏನೇ ಹೇಳು..ಈ ಪಾದರಿ ನನ್ನ ಮನಸ್ಸಿಗೆ ಬರಲಿಲ್ಲ..” ಎಂದ.
“ನನ್ನ ಮನಸ್ಸಿಗೂ..” ಅಂಕೋಲದ ಕೈತಾನ ನಡುವೆ ಬಾಯಿ ಹಾಕಿದ.
“ಯಾಕೆ ಮನಸ್ಸಿಗೆ ಬರಲಿಲ್ಲ..ನಿನಗೆ ಗೊತ್ತಲ್ಲ..ಈತ ನಮ್ಮ ಬೀಗರ ಎದುರು ನನ್ನನ್ನು ಮೂರು ಕಾಸಿನವನಾಗಿ ಮಾಡಿಬಿಟ್ಟ..ಬೋನ ಸಾಹುಕಾರ ಇಲ್ಲದಿದ್ದಿದ್ದರೆ ನನ್ನ ಗತಿ ಏನಾಗುತ್ತಿತ್ತೊ..” ಎಂದು ಆತ ಒತ್ತರಿಸಿ ಬಂದ ನೋವನ್ನು ತಡೆದುಕೊಳ್ಳುತ್ತ ತೊದಲಿದ.
ಕೈತಾನ ಮೊಮ್ಮಗನನ್ನು ನಾಮಕರಣಕ್ಕೆ ಕರೆದೊಯ್ದದ್ದು. ಅಲ್ಲಿ ಪಾದರಿ ಬಾಕಿ ಕೇಳಿದ್ದು. ಕೈತಾನನ ಬೀಗರು ಹಣ ಕೊಟ್ಟದ್ದು. ಬೋನ ಸಾಹುಕಾರನಿಂದ ಸಾಲ ತಂದು ಆತ ಹಣ ಹಿಂದಿರುಗಿಸಿದ್ದು. ಈ ಬಗ್ಗೆ ಕೈತಾನನ ಬೀಗರು –
“ಪಾದರಿಗಳು ಹೀಗೂ ಇರತಾರೆಯೇ” ಎಂದು ಹೇಳಿದ್ದು ಊರಿಗೆಲ್ಲಾ ಗೊತ್ತಾಗಿತ್ತು.
“ಛೆ ಛೆ ಛೆ” ಎಂದು ಉಳಿದವರು ಲೊಚಗುಟ್ಟಿದರು.
“ನಾನು ಹೇಳತೀನಿ ಕೇಳು ಸಿಮೋನ” ತನ್ನ ಮಾತು ಮುಗಿದಿಲ್ಲ ಎಂಬಂತೆ ನಡುವೆ ಧುಮುಕಿದ ಪಾಸ್ಕೋಲ-
“..ಈ ಹಿಡಿ ಅಕ್ಕಿ ಪಾದರಿಗೆ ಹಣ ಎಷ್ಟಿದ್ದರೂ ಸಾಲದು ಮಾರಾಯ..ಇವನ ಹೊಸ ಪಿಲಾನ ಏನು ಗೊತ್ತ?”
ಆತ ಎಲ್ಲರ ಮುಖ ನೋಡಿದ.
“ಏನು ಏನು?” ಬಾಲ್ತಿದಾರ ಕುರಿಯ ಎಲುಬು ಚೀಪುತ್ತ ಕೇಳಿದ.
ಪಾದರಿ ಮಸ್ಕರಿನಾಸರಿಗೆ ’ಹಿಡಿ ಅಕ್ಕಿ ಪಾದರಿ’ ಎಂಬ ಹೆಸರು ಹೊಸದಾಗಿ ಬಿದ್ದಿತ್ತು. ಮನೆ ಹೆಂಗಸರಿಗೆಲ್ಲ ಅವರು ಒಂದು ಸಲಹೆ ನೀಡಿದರು.
“ನೀವು ದಿನಾ ಅನ್ನ ಮಾಡಲು ಅಕ್ಕಿ ಹಾಕುತ್ತೀರಲ್ಲ..ಅದರಲ್ಲಿ ಒಂದು ಹಿಡಿ ತೆಗೆದು ಬೇರೆ ಇಡಿ..ಒಂದು ವಾರಕ್ಕೆ ಹದಿನಾಲ್ಕು ಅಡಿ ಆದರೆ ಅರ್ಧ ಸೇರು ಆಗಬಹುದು. ಭಾನುವಾರ ಪೂಜೆಗೆ ಬರುವಾಗ ಅದನ್ನು ತಂದು ಇಗರ್ಜಿಗೆ ಕೊಡಿ..ನಿಮಗೆ ದೇವರ ಆಶೀರ್ವಾದ ದೊರೆಯುತ್ತದೆ.”
ಪಾದರಿ ಮಾತಲ್ಲವೇ? ಹೆಂಗಸರು ಇಗರ್ಜಿಗೆ ಬರುವಾಗ ಬಿಳಿ ವಸ್ತ್ರದಲ್ಲಿ ಸಣ್ಣ ಕೈಚೀಲದಲ್ಲಿ ಅಕ್ಕಿ ತಂದರು. ದೇವರ ಪೀಠದ ಮುಂದೆ ರಾಶಿ ಹಾಕಿದರು. ಪೂಜೆಯ ನಂತರ ಅದನ್ನು ತರಕಾರಿಯ ಜತೆ ಹರಾಜು ಹಾಕಲಾಯಿತು. ಜನರಿಗೆ ದೇವರ ಆಶೀರ್ವಾದ ಲಭ್ಯವಾಯಿತು. ಇಗರ್ಜಿಗೆ ಹಣ ಬಂದಿತು. ಪಾದರಿ ಮಸ್ಕರಿನಾಸ ಅವರಿಗೆ ಹಿಡಿ ಅಕ್ಕಿ ಪಾದರಿ ಎಂಬ ಹೆಸರು ಬಿದ್ದಿತು.
“ಈಗ ಮತ್ತೆ ಏನು ಉಪಾಯ ಹುಡುಕಿದ್ದಾರೆ ಈ ಪಾದರಿ?”
ಎಲ್ಲ ತಲೆ ಎತ್ತಿ ಪಾಸ್ಕೋಲನ ಮುಖ ನೋಡಿದರು.
“ನಿಮಗೆ ಬೇಕಾಗಿರೋ ಮೇಣದ ಬತ್ತಿನ ಇಗರ್ಜಿನಲ್ಲಿ ಕೊಂಡುಕೊಳ್ಳಿ ಅಂತ ಪಾದರಿ ಹೇಳೋದು ಯಾಕೆ ಗೊತ್ತೆ?”
ಪಾಸ್ಕೋಲ ಸುತ್ತ ಕುಳಿತವರ ಮುಂದೆ ಇನ್ನೊಂದು ಸವಾಲು ಇರಿಸಿದ.
“ಯಾಕೆ ಯಾಕೆ?” ಮತ್ತೆ ಪ್ರಶ್ನೆಗಳು ಕೇಳಿ ಬಂದವು.
ಹೋದ ಭಾನುವಾರ ಪಾದರಿ ಹೀಗೊಂದು ಫ಼ರಮಾನ ಹೊರಡಿಸಿದ್ದರು.
“ಪ್ರಿಯ ಕ್ರೀಸ್ತುವರೆ..ನೀವು ಮೇಣದ ಬತ್ತಿಗಳನ್ನು ಅಂಗಡಿಯಲ್ಲಿ ಕೊಳ್ಳುವುದರ ಬದಲು ಇನ್ನು ಮುಂದೆ ಇಗರ್ಜಿಯಲ್ಲಿ ಕೊಳ್ಳಿ..ಮಿರೋಣ ಆಗಲಿ ಕುಜ್ನೇರ ಆಗಲಿ ನಿಮಗೆ ಬೇಕಾದ ಮೇಣದ ಬತ್ತಿಗಳನ್ನು ನಿಮಗೆ ಕೊಡತಾರೆ..ಅಲ್ಲಿ ಕೊಡುವಷ್ಟೇ ಹಣಾನ ನೀವು ಇಲ್ಲಿ ಕೊಟ್ಟರಾಯ್ತು..” ಎಂದಿದ್ದರು ಅವರು.
ಪಾದರಿಯ ಮಾತಲ್ಲವೆ? ಯಾರೂ ಇದರ ಬಗ್ಗೆ ಹೆಚ್ಚು ಯೋಚಿಸಲು ಹೋಗಲಿಲ್ಲ. ಕೆಲವರು ಕೂಡಲೇ ಹಣಕೊಟ್ಟು ಮೇಣದ ಬತ್ತಿಗಳನ್ನು ಕೊಂಡು ಕೊಂಡರು. ಆದರೆ ಈಗ ಪಾಸ್ಕೋಲ ಮೇಸ್ತ್ರಿ ಇದರ ಗುಟ್ಟು ಹೊರಗೆ ಎಳೆದ.
ಕ್ರೀಸ್ತುವರು ಮಾತ್ರವಲ್ಲದೆ ಇತರೆ ಮತಸ್ಥರು ಕೂಡ ಸಂತ ಜೋಸೆಫ಼ರ ಮಂಟಪಕ್ಕೆ ಇಗರ್ಜಿಗೆ ಬೇರೆ ಬೇರೆ ಸಂತರಿಗೆ ಮೇಣದ ಬತ್ತಿಗಳನ್ನು ಕೊಡುವ ಪದ್ದತಿಯನ್ನು ರೂಢಿಸಿಕೊಂಡಿದ್ದರು. ಮಕ್ಕಳಿಗೆ ಕಾಯಿಲೆಯಾದರೆ, ಏನೋ ಕೆಡುಕಾದರೆ, ಒಳ್ಳೆಯದಾಗಬೇಕು ಎಂದೆನಿಸಿದರೆ, ಎತ್ತಿಗೋ ದನಕ್ಕೋ ತೊಂದರೆ ಉಂಟಾದರೆ ಕೂಡಲೆ ಜನ-
“ಶಿಲುಬೆ ದೇವರಿಗೆ ಮೇಣದ ಬತ್ತಿ ಕೊಡತೇನೆ” ಎಂದು ಹೇಳುತ್ತಿದ್ದರು.
ಈ ದೇವರು ಹಣ್ಣು, ಕಾಯಿ, ಉದ್ದಿನಕಡ್ಡಿ, ಕರ್ಪೂರ ಸ್ವೀಕರಿಸುವುದಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಹೀಗೆ ಹರಕೆ ಹೇಳಿಕೊಂಡವರು ಮೇಣದ ಬತ್ತಿಗಳನ್ನು ಬಂಡಲಗಟ್ಟಲೆ ತಂದು ದೇವರ ಮುಂದೆ ಹಚ್ಚಿ ಕೈ ಮುಗಿದು ಹೋಗುತ್ತಿದ್ದರು. ಈ ಬತ್ತಿಗಳು ಸಾಲು ಸಾಲಾಗಿ ಉರಿದು, ಕರಗಿದ ಮೇಣ ಅಲ್ಲೆಲ್ಲ ಗಟ್ಟಿಯಾಗಿ ನಿಂತಿರುತ್ತಿತ್ತು.
ಮಸ್ಕರಿನಾಸ ಬಂದ ಕೂಡಲೆ ಮೇಣದ ಬತ್ತಿಗಳನ್ನು ಉರಿಸುವುದನ್ನು ನಿಲ್ಲಿಸಿದರು. ದೇವರಿಗೆ ಮೇಣದ ಬತ್ತಿ ಕೊಟ್ಟರೆ ಸಾಕು. ಹಚ್ಚಲೇಬೇಕೆಂದಿಲ್ಲ ಎಂದರು. ಒಂದೆರಡು ಮೇಣದ ಬತ್ತಿಗಳನ್ನು ಬಂಡಲಗಟ್ಟಲೆ ತಂದು ದೇವರ ಮುಂದೆ ಸದಾ ಹಚ್ಚಿಡಿ ಉಳಿದ ಬತ್ತಿ ಬಂಡಲುಗಳನ್ನು ಹಾಗೆಯೇ ತೆಗೆದಿಡಿ ಎಂದು ಅಲ್ಲಿರುವ ಹುಡುಗರಿಗೆ ಹೇಳಿದರು.
ಜನ ಈ ಹೊಸ ಪದ್ದತಿಗೆ ಹೊಂದಿಕೊಂಡರು. ಮೇಣದ ಬತ್ತಿ ದೇವರಿಗೆ ತಲುಪಿಸಿದರಾಯಿತು. ಹಚ್ಚುವ ಕೆಲಸ ಅವರು ಮಾಡುತ್ತಾರೆ ಎಂದು ಜನ ತಿಳಿದರು.
ಇದರಿಂದಾಗಿ ಇಗರ್ಜಿಯಲ್ಲಿ ಮೇಣದ ಬತ್ತಿ ಬಂಡಲುಗಳು ರಾಶಿ ಬಿದ್ದಿದ್ದವು. ಆಗ ಪಾದರಿ ಮಸ್ಕರಿನಾಸರು ನಿಮಗೆ ಬೇಕಾದ ಮೇಣದ ಬತ್ತಿಗಳನ್ನು ಇಗರ್ಜಿಯಲ್ಲಿ ಕೊಳ್ಳಿರಿ ಎಂದರು.
“ಗೊತ್ತಾಯ್ತ ನಿಮಗೆ?” ಎಂದು ಮೀಸೆ ಕುಣಿಸಿದ ಪಾಸ್ಕೋಲ ಮೇಸ್ತ್ರಿ.
“ಹೌದು..ಈ ಪಾದರಿ ಹೀಗೆ ಹಣ ಮಾಡತಾನಲ್ಲ..ಅದು ಯಾರಿಗೆ? ಇವನಿಗೇನು ಸಂಸಾರನೆ? ಮಕ್ಕಳೆ?”
ಆ ವರೆಗೆ ಸುಮ್ಮನೆ ಕುಳಿತ ಸಾನಬಾವಿ ಪೆದ್ರು ಮುಖ್ಯವಾದ ಪಾಯಿಂಟ್ ಎತ್ತಿದ. ಈಗಾಗಲೇ ಓರ್ವ ಮಗನ ತಂದೆಯಾಗಿದ್ದ ಅವನಿಗೆ ತಾಪತ್ರಯಗಳು ಪ್ರಾರಂಭವಾಗಿದ್ದವು. ಕೆಲಸಕ್ಕೆ ಹೋಗುವುದು ಬೇಡ ಎಂದು ರಂಗಿಯನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದ. ಊರಿನಲ್ಲಿ ಕಲ್ಲು ಕೆಲಸದವರ ಸಂಖ್ಯೆ ಅಧಿಕವಾಗಿತ್ತು. ಹೊಸದಾಗಿ ಮಲೆಯಾಳಿ ಮೇಸ್ತ್ರಿಗಳು ಬಂದು ಸೇರಿಕೊಂಡು ಕ್ರೈಸ್ತ ಮೇಸ್ತ್ರಿಗಳ ಕೆಲಸಕ್ಕೇನೆ ಕಲ್ಲು ಹಾಕಿದ್ದರು. ಆದಾಯ ಕಡಿಮೆಯಾಗುತ್ತಿದೆ ಅನ್ನುವಾಗ ಪಾದರಿಗಳು ಅನ್ವಾಲ ಕಾಯಿದೆ..ಹಬ್ಬದ ವಂತಿಗೆ..ಪೂಜೆಗೆ ಹಣ..ಕಾಣಿಕೆ ಡಬ್ಬಿಗೆ ಹಣ..ಹಿಡಿ ಅಕ್ಕಿ ಎಂದೆಲ್ಲ ಹಣ ಕೇಳುತ್ತಿದ್ದರು. ಹೀಗೆಂದೇ ಸಿಡಿಮಿಡಿಗೊಂಡ ಪೆದ್ರು ಹೀಗೊಂದು ಪ್ರಶ್ನೆ ಕೇಳಿದ.
ಆಗಲೇ ಬಳ್ಕೂರಕಾರ ನಾಲ್ಕನೇ ಬಾರಿ ಬಾಟಲಿ ಗ್ಲಾಸಿನ ಜತೆ ಹೊರಬಂದು ಊಟ ಮಾಡುತ್ತಿರುವವರ ನಡುವೆ ನಿಂತ.
“..ಅದು..ನಾನು ಹೇಳತೇನೆ…” ಎಂದ ಹಸಿಮಡಲು ಪಾತ್ರೋಲ.
ಈತ ಶಿವಸಾಗರಕ್ಕೆ ಹೊಸದಾಗಿ ಎಂದರೆ ಇಗರ್ಜಿ ಕಟ್ಟಲು ಬಂದವರಲ್ಲಿ ಇವನೂ ಒಬ್ಬ. ಹೀಗೆ ಬಂದವ ಶಿವಸಾಗರದ ನಯ ನಾಜೂಕುತನ, ನಾಗರೀಕತೆ, ಪಟ್ಟಣದ ಸೊಬಗಿಗೆ ಮರುಳಾಗಿ ಇಲ್ಲಿಯೇ ಮನೆ ಮಾಡಿದ. ಊರಿನಿಂದ ಹೆಂಡತಿ ಮಕ್ಕಳನ್ನು ಕರೆತಂದ. ಈಗ ಈ ಊರಿನವನೆ ಈತ. ಆದರೆ ಹಸಿ ಮಡಲು ಪತ್ರೋಲ ಎಂಬ ಹೆಸರು ಇವನನ್ನು ಬಿಟ್ಟಿಲ್ಲ.
ಮುರುಡೇಶ್ವರದ ಚಂದ್ರ ಹಿತ್ತಲಿನಲ್ಲಿ ಇವನ ಮನೆ. ಒಡೆಯರ ಐನೂರು ಆರುನೂರು ತೆಂಗಿನ ಮರಗಳನ್ನು ನೋಡಿಕೊಂಡಿದ್ದ ಇವನ ಅಜ್ಜ ಹಸಿ ಮಡಲು ಲಾದ್ರು. ಇವನ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮುಖ್ಯ ಉದ್ಯಮವೆಂದರೆ ಮಡಲು ಹೆಣೆಯುವುದು. ತೆಂಗಿನ ಹೆಡೆ ಬಿದ್ದ ತಕ್ಷಣ ಇಲ್ಲವೆ ಕಾಯಿ ಕೀಳಲು ಮೇಲೆ ಹತ್ತಿದಾಗ ಬೇಡದ ಗರಿ ನೋಡಿ ಕತ್ತರಿಸಿ ಕೆಳಗೆ ಹಾಕಿ ಅದನ್ನು ಹೆಣೆಯುವುದು. ಹೆಣೆದು ಹೆಣೆದು ಮಡಲಿನ ರಾಶಿಯನ್ನು ಒಂದೆಡೆ ಒಟ್ಟುವುದು. ಮನೆಗೆ ಹೊದಿಸಲು, ಬಚ್ಚಲಿಗೆ ಮರೆಯಾಗಿ ಕಟ್ಟಲು, ಚಪ್ಪರದ ಮೇಲೆ ಹಾಸಲು, ನೆಲಕ್ಕೆ ಹಾಸಲು ಇದು ಬಳಕೆಯಾಗುತ್ತಿತ್ತು. ಮೀನಿನ ಅಂಗಡಿಗಳವರು, ಜಾತ್ರೆ ಅಂಗಡಿಗಳವರು, ಗುಡಿಸಲು ಕಟ್ಟುವವರು ಬಂದು ಈ ಮಡಲನ್ನು ಕೊಂಡುಕೊಳ್ಳುತ್ತಿದ್ದರು. ಮನೆಯಲ್ಲಿ ಲಾದ್ರು, ಅವನ ಹೆಂಡತಿ, ಹೆಂಡತಿಯ ತಂಗಿ, ಲಾದ್ರುವಿನ ತಾಯಿ, ಅವನ ಅಣ್ಣನ ಹೆಂಡತಿ, ಹೀಗೆ ಏಳೆಂಟು ಜನರಿಗೆ ಇದೇ ಕೆಲಸ. ಯಾರಿಗೇ ಆಗಲಿ ಮಡಲು ಬೇಕೆಂದರೆ ಅವರು ಇವನಲ್ಲಿಗೆ ಬರುತ್ತಿದ್ದರು. ಲಾದ್ರು ನಂತರ ಅವನ ಮಗ ಇದನ್ನು ಮುಂದುವರೆಸಿದ. ಆದರೆ ಪಾತ್ರೋಲ ಇಲ್ಲಿಗೆ ಬಂದದ್ದರಿಂದ ಅಲ್ಲಿ ಈ ಕೆಲಸ ಸೊರಗಿತು. ಆ ಹೆಸರು ಮಾತ್ರ ಇವನಿಗೆ ಖಾಯಂ ಆಯಿತು.
ಪಾದರಿಗೆ ಹಣ ಏಕೆ ಎಂಬ ಪ್ರಶ್ನೆ ಬಂದಾಗ ಅದನ್ನು ನಾನು ಹೇಳುತ್ತೇನೆ ಎಂದು ಪಾತ್ರೋಲ ಮುಂದೆ ಬರಲು ಒಂದು ಕಾರಣವಿತ್ತು. ಇವನ ಹೆಂಡತಿ ಭಟ್ಕಳದವಳು. ಪಾದರಿ ಮಸ್ಕರಿನಾಸರ ಬಟ್ಲರ್ ಫ಼ರಾಸ್ಕ ಏನಿದ್ದಾನೆ ಅವನ ಹತ್ತಿರದ ಸಂಬಂಧಿ ಇವನ ಹೆಂಡತಿ.
ಈ ಫ಼ರಾಸ್ಕನಿಗೆ ಮದುವೆ ಮಾಡಿದವರೇ ಪಾದರಿ ಮಸ್ಕರಿನಾಸ್. ಫ಼ರಾಸ್ಕ ಭಟ್ಕಳದ ಇಗರ್ಜಿಯ ಬಟ್ಲರ್ ಆಗಿದ್ದವ. ಬಹಳ ವರ್ಷಗಳಿಂದ ಮಸ್ಕರಿನಾಸರು ಅಲ್ಲಿಗೆ ಬರುವುದಕ್ಕೂ ಮೊದಲು ಅವನು ಅಲ್ಲಿಯ ಬಟ್ಲರೇ. ಮಸ್ಕರಿನಾಸ ಅಲ್ಲಿಗೆ ಬಂದದ್ದು ಸುಂಕೇರಿಯಿಂದ. ಬಂದವರೇ ಬಟ್ಲರ್ ಮದುವೆ ಬಗ್ಗೆ ಗಡಿಬಿಡಿ ಮಾಡಿದರು. ಫ಼ರಾಸ್ಕನಿಗೆ ಭಟ್ಕಳ, ಶಿರಾಲಿ, ಮುರುಡೇಶ್ವರ, ಹೊನ್ನಾವರದಲ್ಲಿ ಹೆಣ್ಣು ಕೊಡುವವರು ಇರಲಿಲ್ಲ ಎಂದಲ್ಲ, ಇದ್ದರು, ಆದರೆ ಮಸ್ಕರಿನಾಸರು ಸುಂಕೇರಿಯಿಂದ ಒಂದು ಹೆಣ್ಣನ್ನು ತಂದರು. ಈಗ ಇಲ್ಲಿಗೂ ಈ ಬಟ್ಲರನನ್ನು ಅವನ ಹೆಂಡತಿಯನ್ನು ಕರೆತಂದಿದ್ದಾರೆ.
“..ಈ ಬಗ್ಗೆ ನಾನು ವಿಶೇಷವಾಗಿ ಹೇಳೋದು ಏನಿಲ್ಲ..” ಎಂದು ಬೇರೆ ಹಸಿಮಡಲು ಪಾತ್ರೋಲ ನುಡಿದ.
“ಹಣ ಯಾಕೆ ಅಂತ ಕೇಳಿದ್ರಲ್ಲ ಅದಕ್ಕೆ ಹೇಳತೇನೆ. ಈ ಫ಼ರಾಸ್ಕನ ಹೆಂಡತಿ ರಜೀನಾ ಇದ್ದಾಳಲ್ಲ ಅವಳ ತಮ್ಮ ವಕೀಲ ಓದ್ತಿದಾನೆ..ಎಲ್ಲಿ? ಮುಂಬೈನಲ್ಲಿ..ಅವನನ್ನು ನಮ್ಮ ಪಾದರಿ ಓದಸ್ತಿದಾರೆ..ಈಗ ತಿಳೀತಲ್ಲ..” ಎಂದು ಪಾತ್ರೋಲ ನಾಲ್ಕನೇ ಗ್ಲಾಸಿಗೆ ಕೈ ಒಡ್ಡಿದ.
ಒಂದೇ ಗ್ಲಾಸನ್ನು ಮುಗಿಸಿ ಊಟ ಮಾಡುತ್ತಿದ್ದ ಬೋನ ಸಣ್ಣದಾಗಿ ಕೆಮ್ಮಿದ-
“ಇನ್ನು ಈ ವಿಷಯ ಬೇಡ” ಎಂದು ಆತ ನುಡಿದ.
“ಪಾದರಿ ಅಂದರೆ ದೇವರ ಮಣಿಯಾರಿ..ಅವರು ನಮಗೋಸ್ಕರ ಇದಾರೆ..ನಾವು ಅವರಿಗೋಸ್ಕರ ಅಲ್ಲ..ಅವರನ್ನು ನೋಡಿಕೊಳ್ಳೋನು ದೇವರು..ಅವನಿಗೆ ಬಿಡೋಣ..”
ಅರ್ಧ ಅಮಲಿನಲ್ಲಿದ್ದವರು, ಅದೇ ಅಮಲೇರುತ್ತಿದ್ದವರು ಈ ಮಾತಿಗೆ ತಲೆದೂಗಿದ್ದರು. ಸಿಮೋನ ಕೂಡ-
“ಅದು ಖರೆ..ಬೋನ ಸಾಹುಕಾರ್ರು ಹೇಳುವ ಮಾತು ಒಪ್ಪಬೇಕಾದ್ದೆ..” ಎಂದ.
ಬಳ್ಕೂರಕಾರಗೂ ಮಾತು ಈ ದಿಕ್ಕಿನಲ್ಲಿ ಸಾಗುವುದು ಬೇಕಿರಲಿಲ್ಲ.
“ಮಾತು ಸಾಕು ಊಟ ಮಾಡಿ” ಎಂದೂ ಅವನು ಹೇಳಿದ.
ಊಟ ಮುಂದುವರೆಯಿತು. ಬಳ್ಕೂರಕಾರ್ ಕರೆದ ಎಲ್ಲರೂ ಊಟಕ್ಕೆ ಬಂದಿದ್ದರು. ಆದರೆ ಅವನಿಗೆ ಬೇಸರವಾದುದೆಂದರೆ ಬಾಮಣರು ಯಾರೂ ಅವನ ಮನೆಯತ್ತ ಸುಳಿದಿರಲಿಲ್ಲ.
…ಇರಲಿ…ಎಂದು ಆತ ನೊಂದುಕೊಂಡ.
ಇನಾಸಜ್ಜಿಯ ತಿಂಗಳ ಪೂಜೆ ಮುಗಿಯುತ್ತಿದ್ದಂತೆಯೇ ನವೆಂಬರ ತಿಂಗಳು ಬಂದಿತು.
*
*
*
ನವೆಂಬರ ತಿಂಗಳ ಮೊದಲ ವಾರದಲ್ಲಿಯೇ ಸರ್ವ ಆತ್ಮರ ಹಬ್ಬ . ಸಿಮಿತ್ರಿಯಲ್ಲಿರುವ ಎಲ್ಲ ಸಮಾಧಿಗಳನ್ನು ಸಂಬಂಧಪಟ್ಟವರು ಶುಚಿಮಾಡಿ ಸುತ್ತ ಬೆಳೆದ ಪೊದೆ ಗಿಡಗಳನ್ನು ಕತ್ತರಿಸಿ, ಸುತ್ತ ಶಗಣಿ ಸಾರಿಸಿ, ಸಮಾಧಿಗಳಿಗೆ ಸುಣ್ಣ ಬಳಿದು, ತಲೆಯ ಬಳಿ ನೆಟ್ಟ ಶಿಲುಬೆ ಮುರಿದು ಬಿದ್ದಿದ್ದರೆ ಅದನ್ನು ಸರಿ ಮಾಡಿ, ಸಮಾಧಿ ಮಂತ್ರಿಸಲು ಬರುವ ಪಾದರಿಗಾಗಿ ಕಾಯುವುದು ಒಂದು ಪದ್ಧತಿ. ಇದರ ಹಿಂದಿನ ದಿನ ರಾತ್ರಿ ಮನೆಗಳಿಗೆ ಆಲ್ಮ(ಆತ್ಮ)ಗಳು ಬರುತ್ತವೆ ಎಂಬುದು ಒಂದು ನಂಬಿಕೆ. ಆಲ್ಮಗಳಿಗಾಗಿಯೇ ಅಡಿಗೆ ಮಾಡಿರಿಸಿ ವಿಶೇಷವಾಗಿ ಪಾಯಸ ಮಾಡಿ ಅದನ್ನು ಯಾರಿಗೂ ಬಡಿಸದೆ ಹಾಗೆಯೇ ಇರಿಸುವುದು ಕೂಡ ಒಂದು ಪದ್ಧತಿ. ಪಾಯಸ ಬಡಿಸು ಬಡಿಸು ಎಂದು ಹಟ ಹಿಡಿದ ಮಕ್ಕಳಿಗೆ-
“ಇಲ್ಲ ಮಗ ರಾತ್ರಿ ಅಜ್ಜ ಬರತಾರೆ..ಅಜ್ಜಿ ಬರತಾಳೆ ಅವರು ಊಟ ಮಾಡಿ ಹೋದ ನಂತರ ಬೆಳಿಗ್ಗೆ ನಾವು ಊಟ ಮಾಡೋಣ..” ಎಂದು ತಾಯಂದಿರು ಸಮಾಧಾನ ಹೇಳುವುದು ಎಲ್ಲ ಕ್ರೀಸ್ತುವರ ಮನೆಗಳಲ್ಲೂ ನಡೆದು ಬಂದಿತ್ತು. ಮನೆಯ ಸಣ್ಣ ಮಕ್ಕಳು ನಂಬುತ್ತಿದ್ದರು ಕೂಡ.
ಅದೇ ದಿನ ದೊಡ್ಡವರ ಕೆಲಸವೆಂದರೆ ಸಮಾಧಿ ಸರಿಪಡಿಸುವುದು.
ಶಿವಸಾಗರದ ಸಿಮಿತ್ರಿಯಲ್ಲಿ ಆಗಲೇ ಸಾಕಷ್ಟು ಸಮಾಧಿಗಳು ತಲೆ ಎತ್ತಿದ್ದವು. ಸಿಮಿತ್ರಿಯಲ್ಲಿ ಸುತ್ತ ಪಾಗಾರ ಹಾಕಲಾಗಿತ್ತು. ಪಾದರಿ ಗೋನಸ್ವಾಲಿಸ್ ಎತ್ತರದ ಒಂದು ಶಿಲುಬೆಯನ್ನು, ಒಂದು ವೇದಿಕೆಯನ್ನು ಮಾಡಿಸಿದ್ದರು. ಪ್ಲೇಗು ಮಾರಿಗೆ ಬಲಿಯಾದ ಜೂಜನ ಸಮಾಧಿಯೇ ಸಿಮಿತ್ರಿಯ ಮೊದಲ ಸಮಾಧಿಯಾದದ್ದು ಒಂದು ವಿಪರ್ಯಾಸವೆ. ಜೂಜ ಸತ್ತ ಸುಮಾರು ಆರು ತಿಂಗಳ ನಂತರ ಶಿರಾಲಿಯ ತಾರಿ ಬಾಗಿಲಿನಿಂದ ಅವನ ತಾಯಿಯ ಅಣ್ಣ ತಮ್ಮಂದಿರು ಎಂದು ಈರ್ವರು ಬಂದು ಊರಿನಲ್ಲಿ ಗಲಾಟೆ ಬೇರೆ ಮಾಡಿದ್ದರು.
“ನಮ್ಮವನು ಅಂತ ಅವನಿದ್ದ..ಅವನ ಹೊಂಡಕ್ಕೆ ಹಿಡಿ ಮಣ್ಣು ಹಾಕಲಿಕ್ಕೆ ನೀವು ನಮಗೆ ಅವಕಾಶ ಮಾಡಿಕೊಡಲಿಲ್ಲ..ನೀವು ನಮಗೊಂದು ಮಾತು ಹೇಳಿ ಕಳುಹಿಸಲಿಲ್ಲ..” ಎಂದು ಸಿಮೋನ ಜೂಜೆಯ ಕತೆಯನ್ನು ವಿಸ್ತಾರವಾಗಿ ಹೇಳಿದ.
ಅರಮನೆ ಕೊಪ್ಪದ ಜೂಜನ ಮನೆಯನ್ನು ರಿಪೇರಿ ಮಾಡಿ, ಅದನ್ನು ಯಾರೋ ಸಾಹೇಬರಿಗೆ ಕುರಿ ದೊಡ್ಡಿ ಮಾಡಿಕೊಳ್ಳಲು ಬಾಡಿಗೆಗೆ ಕೊಟ್ಟು, ತಿಂಗಳ ಬಾಡಿಗೆ ಎಂದು ಒಂದೂವರೆ ಸಾವಿರ ರೂಪಾಯಿಗಳನ್ನು ಮುಂಗಡ ತೆಗೆದುಕೊಂಡ ಹೊರಟ ಅವರು ಮಾಡಿದ್ದ ಒಂದು ಕೆಲಸವೆಂದರೆ ಜೂಜನ ಸಮಾಧಿಯನ್ನು ಕಲ್ಲಿನಿಂದ ಕಟ್ಟಿ, ಕಲ್ಲಿನ ಶಿಲುಬೆ ಇರಿಸಿ ಹೋದದ್ದು. ಹೀಗಾಗಿ ಸಿಮಿತ್ರಿಯ ಮೊದಲ ಸಮಾಧಿ ಒಳ ಹೋದ ತಕ್ಷಣ ಕಣ್ಣಿಗೆ ಬೀಳುತ್ತಿತ್ತು.
ಈ ಸಮಾಧಿಯ ಸಾಲಿನಲ್ಲಿಯೇ ಗಾಡಿ ಸಿಮೋನನ ತಾಯಿಯ ಸಮಾಧಿ ಕೂಡ ಮೊನ್ನೆ ಮೊನ್ನೆ ಕಾಣಿಸಿಕೊಂಡಿತ್ತು. ಮಗನನ್ನು ಮೊಮ್ಮಕ್ಕಳನ್ನು ಬಿಟ್ಟಿರಲಾರದ ಈ ಮುದುಕಿ ಮುರುಡೇಶ್ವರದಿಂದ ಇಲ್ಲಿಗೆ ಬಂದು, ನಿತ್ಯ ಮೊಮ್ಮಕ್ಕಳಿಗೆ ಜಪ, ಪ್ರಾರ್ಥನೆ ಹೇಳಿಕೊಟ್ಟು, ಪಾದರಿ ಊರಿಗೆ ಬಂದ ನಂತರ ಪ್ರತಿದಿನ ಬೆಳಿಗ್ಗೆ ತಪ್ಪದೆ ಪೂಜೆ ಕೇಳಿ ಒಂದು ಅರ್ಥದಲ್ಲಿ ದೈವಿಕ ಬದುಕನ್ನು ಸಾಗಿಸಿ ಭಾಗ್ಯವಂತ ಮರಣವನ್ನೇ ಅನುಭವಿಸಿದಳು.
ಬೂದಿ ಬುಧುವಾರದಿಂದ ಆರಂಭವಾಗುವ ತಪಸ್ಸಿನ ಕಾಲವನ್ನು ಕಟ್ಟು ನಿಟ್ಟಾಗಿ ಆಚರಿಸಿದಳು. ಉಪವಾಸ ಹಿಡಿದಳು. ವಯಸ್ಸಾದವರು ಉಪವಾಸ ಇರಬೇಕಾಗಿಲ್ಲ ಎಂದು ಪಾದರಿ ಹೇಳಿದರೂ ಇವಳು ಕೇಳಿರಲಿಲ್ಲ. ಈ ಕಾಲದಲ್ಲಿ ಹೂ ಮುಡಿಯ ಬೇಡಿ ಎಂದು ಸೊಸೆಗೆ ಕೇರಿಯ ಹೆಣ್ಣುಮಕ್ಕಳಿಗೆ ಹೇಳಿದಳು. ಮನೆಯಲ್ಲಿ ಸೀಟಿ ಹೊಡೆಯಬೇಡಿ, ಹಾಡು ಹೇಳಬೇಡಿ, ಕೇಕೆ ಹಾಕಿ ನಗಬೇಡಿ ಎಂದು ಮೊಮ್ಮಕ್ಕಳಿಗೆ ಹೇಳಿದಳು. ಪ್ರತಿ ಶುಕ್ರವಾರ ಇಗರ್ಜಿಗೆ ಹೋಗಿ ಶಿಲುಬೆಯ ಹಾದಿಯಲ್ಲಿ ಪಾಲ್ಗೊಂಡಳು. ಈ ಅವಧಿಯಲ್ಲಿ ಹೇಳುವ ಎಲ್ಲ ಕೀರ್ತನೆಗಳನ್ನು ನೋವು, ವಿಷಾದದ ದನಿಯಲ್ಲಿ ಹೇಳುವಂತೆ ಮಕ್ಕಳಿಗೆ ಸಲಹೆ ನೀಡಿದಳು. ಕ್ರಿಸ್ತ ಪ್ರಭು ಅವನ ಜೀವಿತದ ಈ ನಲವತ್ತು ದಿನ ಏನೆಲ್ಲ ನೋವು, ಹಿಂಸೆ, ಅವಮಾನಗಳನ್ನು ಎದುರಿಸಿದನೋ ಅದನ್ನೆಲ್ಲ ಸ್ಮರಿಸಿಕೊಳ್ಳುವಂತೆ ಪದೇ ಪದೇ ಮೊಮ್ಮಕ್ಕಳಿಗೆ ಹೇಳಿದಳು. ಶುಭ ಶುಕ್ರವಾರದಂದು ಕ್ರಿಸ್ತಪ್ರಭುವನ್ನು ಶಿಲುಬೆಗೆ ಏರಿಸಿದ ಘಟನೆಯನ್ನು ಪಾದರಿ ಗೋನಸ್ವಾಲಿಸ್ ಇಗರ್ಜಿಯಲ್ಲಿ ತಿಳಿಸಿಕೊಟ್ಟರು. ಈ ಘಟನೆಯನ್ನು ವಿವರಿಸುತ್ತ ಅವರ ಧ್ವನಿ ಗದ್ಗದಿತವಾಯಿತು. ಮಾತು ನಿಲ್ಲಿಸಿ ಅವರು ಎರಡು ನಿಮಿಷ ನಿಂತರು. ನಿಲುವಂಗಿಯ ಜೇಬಿನಿಂದ ಬಿಳಿವಸ್ತ್ರ ತೆಗೆದು ಕಣ್ಣೊರೆಸಿಕೊಂಡರು. ಸೆರಮಾಂವಂ ಕೇಳುತ್ತ ಕುಳಿತವರ ಅನುಭವ ಕೂಡ ಇದೇ ಆಯಿತು.
ಶಿಲುಬೆಗೆ ಏರಿಸಿದ ಕ್ರಿಸ್ತನ ಪ್ರತಿಮೆಗೆ ಎಲ್ಲ ಮುತ್ತಿಟ್ಟು ಮನೆಗೆ ಬಂದರು.
ಆ ರಾತ್ರಿ ಏಕೋ ಸಿಮೋನನ ತಾಯಿ ಎದ್ದು ಕುಳಿತಳು.
“ಸಿಮೋನ ಮಕ್ಕಳೆಲ್ಲ ಮಲಗಿದ್ದಾರಾ?” ಎಂದು ಕೇಳಿದರು.
ಸಿಮೋನನಿಗೆ ಅನುಮಾನವಾಗಿ ಆತ ಮಕ್ಕಳನ್ನು, ಹೆಂಡತಿಯನ್ನು ಕೂಗಿ ಎಬ್ಬಿಸಿ ಅವರನ್ನು ತಾಯಿಯ ಬಳಿ ಕರೆತರುವಷ್ಟರಲ್ಲಿ ಈ ಮುದುಕಿ ಎದ್ದು ದೇವರ ಪೀಠದ ಬಳಿ ಹೋಗಿದ್ದವಳು ಅಲ್ಲೇ ಕುಸಿದಿದ್ದಳು.
ಶಿವಸಾಗರದ ಸಿಮಿತ್ರಿಗೆ ಇನ್ನೊಂದು ಸೇರ್ಪಡೆಯಾಯಿತು. ಸಿಮೋನ ತಾಯಿಗಾಗಿ ಕಲ್ಲಿನ ಸಮಾಧಿ ಕಟ್ಟಿಸಿದ.
ಬಳ್ಕೂರಿನ ಕೈತಾನನ ಅತ್ತೆ ಗಂಡಬಾಳೆಯ ಇನಾಸಜ್ಜಿ ಕೊನೆಗಾಲದಲ್ಲಿ ಇಲ್ಲಿ ಬಂದು ಸತ್ತಳು. ಇವಳ ಸಮಾಧಿ ಕಟ್ಟಿಸಿ ಬಳ್ಕೂರಕಾರ ಅತ್ತೆಗೊಂದು ಶಾಶ್ವತ ಸ್ಥಾನ ಕಲ್ಪಿಸಿಕೊಟ್ಟ.
ಹೀಗೆಯೇ ಪಾಸ್ಕೋಲ ಮೇಸ್ತ್ರನ ಹೆಂಡತಿ ರೀತಾಳ ತಮ್ಮ ಬಹಳ ವರ್ಷ ಹೆಸರು ಗೊತ್ತಿಲ್ಲದ ಒಂದು ಕಾಯಿಲೆಯಿಂದ ಸತ್ತು ಸಿಮಿತ್ರಿ ಸೇರಿಕೊಂಡ.
ಊರಿಗೆಲ್ಲ ಆಗಾಗ್ಗೆ ಕಾಡು ಹಂದಿ ಮಾಂಸವನ್ನೋ ಜಿಂಕೆ ಮಾಂಸವನ್ನೋ ಬೇಟೆಯಾಡಿ ತಂದು ಪಾಲು ಮಾಡಿ ಮಾರುತ್ತಿದ್ದ ಹಂದಿಗುಸ್ತೀನ ಕೂಡ ಇಲ್ಲಿಯೇ ಇದ್ದ. ಬಲಗಾಲುದ್ದ ಬಾಲ್ತಿದಾರನ ಸಮಾಧಿ ಕೂಡ ಇದೇ ಸಾಲಿನಲ್ಲಿತ್ತು.
ಊರಿನ ಹೊಸ ಇಗರ್ಜಿ ಕಟ್ಟಲೆಂದೇ ಬಂದು ಶಿವಸಾಗದವನೇ ಆಗಿ ಹೋದ ಭಟ್ಕಳದ ಸಾನ್ ಪುತ್ತು ಮೂರು ತಿಂಗಳು ಕ್ಷಯರೋಗದಿಂದ ನರಳಿ, ಗುಣಕಾಣದೆ ಸತ್ತಿದ್ದ. ಅವನನ್ನು ಕೂಡ ಈ ಸಿಮಿತ್ರಿಯಲ್ಲಿಯೇ ಮಣ್ಣು ಮಾಡಲಾಗಿತ್ತು.
ಮೊನ್ನೆ ಮೊನ್ನೆ ಬಂದ ಹೆಲ್ತ ವಿಸಿಟರ್ ವಿನ್ಸೆಂಟನ ಮಾವ ಅಳಿಯನ ಮನೆಗೆ ಬಂದವ, ಬಂದ ಮೂರನೇ ದಿನ ಕುಡಿದದ್ದು ಜಾಸ್ತಿಯಾಗಿ ಸತ್ತಿದ್ದ. ಮೊದಲಿನಿಂದಲೂ ಅತಿಯಾಗಿ ಕುಡಿಯುತ್ತಿದ್ದ ಆತ ಶಿವಸಾಗರಕ್ಕೆ ಬಂದವನೇ ಕುಡಿಯಲಾರಂಭಿಸಿ, ಕೊನೆಗೆ ಅದು ಹೆಚ್ಚಾಗಿ ಪ್ರಾಣ ಬಿಟ್ಟಿದ್ದ. ಅವನ ಶವವನ್ನು ದೂರದ ಮಂಗಳೂರಿಗೆ ಒಯ್ಯುವ ಅನುಕೂಲತೆ ಇಲ್ಲದ್ದರಿಂದ ಅವನನ್ನು ಇಲ್ಲಿ ಹುಗಿಯಲಾಗಿತ್ತು. ವಿನ್ಸೆಂಟ್ ತನ್ನ ಮಾವನ ಸಮಾಧಿಯನ್ನು ಉಳಿದೆಲ್ಲ ಸಮಾಧಿಗಿಂತಲೂ ಉತ್ತಮವಾಗಿ ಭವ್ಯವಾಗಿ ಕಟ್ಟಿಸಿ ಸಮಾಧಿಯ ಶಿಲುಬೆಗಲ್ಲಿನ ಮೇಲೆ ತನ್ನ ಮಾವನ ಹೆಸರನ್ನು, ಹುಟ್ಟಿದ ತಾರೀಖನ್ನು ಸತ್ತ ತಾರೀಖನ್ನು ಬರೆಸುವುದರ ಜೊತೆಗೆ-ನಿಮ್ಮ ನೆನಪು ಸದಾ ನಮ್ಮಲ್ಲಿ ಹಸಿರಾಗಿರುತ್ತದೆ ಎಂದು ಇಂಗ್ಲೀಷಿನಲ್ಲಿ ಬರೆಸಿದ್ದ. ಶಿವಸಾಗರದ ಸಿಮಿತ್ರಿಯಲ್ಲಿ ಹೀಗೆ ಬರೆಸಲಾದ ಸಮಾಧಿ ಇದೊಂದೆ ಆಗಿತ್ತು.
ಹೀಗೆ ಸಿಮಿತ್ರಿಯಲ್ಲಿ ಇಪ್ಪತ್ತು ಇಪ್ಪತೈದು ಸಮಾಧಿಗಳು ಎದ್ದು ನಿಂತಿದ್ದವು. ಒಂದೆರಡು ಸಮಾಧಿಗಳು ಕಟ್ಟಿಸದೇ ಇದ್ದುದರಿಂದ ನೆಲಮಟ್ಟಕ್ಕೆ ಇಳಿದು ನಾಶವಾಗಿದ್ದವು. ಕೆಲವು ಸಮಾಧಿಗಳ ಬಳಿ ನೆಟ್ಟ ಶಿಲುಬೆ ಮುರಿದಿತ್ತು.
ಮುಖ್ಯವಾಗಿ ಸಿಮಿತ್ರಿಯ ತುಂಬ ಗಿಡ, ಪೊದೆಗಳು, ತುಂಬೆ ಗಿಡಗಳು, ಕಾಡು ಬಳ್ಳಿ ಹಬ್ಬಿತ್ತು. ನಾಳೆ ಸಮಾಧಿಗಳ ಪೂಜೆ ಮಾಡಬೇಕೆಂದರೆ ಸಿಮಿತ್ರಿ ಮೊದಲು ಶುಚಿಯಾಗಬೇಕು. ಸಮಾಧಿಗಳನ್ನು ಸಂಬಂಧಪಟ್ಟವರು ನೋಡಿಕೊಳ್ಳುತ್ತಾರೆ. ಆದರೆ ಸಿಮಿತ್ರಿಯನ್ನು ಶುಚಿ ಮಾಡುವವರು ಯಾರು?
ಪಾದರಿ ಮಸ್ಕರಿನಾಸ ಇದಕ್ಕೊಂದು ದಾರಿ ಕಂಡು ಹಿಡಿದರು. ಹಿಂದಿನ ಭಾನುವಾರ ಜ್ಞಾನೋಪದೇಶಕ್ಕೆ ಬಂದ ಯುವಕರಿಗೆ-
“ನೀವು ಈ ಬಾರಿ ಸಿಮಿತ್ರಿ ಶುಚಿ ಮಾಡಬೇಕು..ಶನಿವಾರ ಸರ್ವ ಆತ್ಮರ ಹಬ್ಬ..ಶುಕ್ರವಾರ ನೀವೆಲ್ಲ ಈ ಕೆಲಸ ಮಾಡಬೇಕು..” ಎಂದರು. ಹಾಗೆಯೇ ಜನರನ್ನು ಕುರಿತು ಇಗರ್ಜಿಯಲ್ಲಿ-
“ಯಾರ ನೆಂಟರ ಇಷ್ಟರ ಸಮಾಧಿಗಳು ಸಿಮಿತ್ರಿಯಲ್ಲಿವೆಯೋ ಅವರೆಲ್ಲ ಅಂತಹ ಸಮಾಧಿಗಳನ್ನು ಶುಚಿ ಮಾಡಿ, ಸುಣ್ಣ ಬಣ್ಣ ಮಾಡಿಸಿ..ಬಂಗಲೆಗೆ ಬಂದು ಹೆಸರು ಹೇಳಿ ಒಂದು ರೂಪಾಯಿ ಕೊಟ್ಟು ಚೀಟಿ ಮಾಡಿಸಿ..ನಾನು ಸಮಾಧಿ ಮಂತ್ರಿಸಲು ಬಂದಾಗ ಹೀಗೆ ಯಾರ ಚೀಟಿ ಇದೆಯೋ ಅಂತಹ ಸಮಾಧಿಗಳನ್ನು ಮಾತ್ರ ಮಂತ್ರಿಸುತ್ತೇನೆ..ಸಮಾಧಿಗಳ ಮೇಲೆ ಮೇಣದ ಬತ್ತಿ ಹಚ್ಚಿ ಹೂವು ಹಾಕಿ ನೀವು ನಿಮ್ಮ ನಿಮ್ಮ ಸಂಬಂಧಿಗಳ ಸಮಾಧಿ ಬಳಿ ಕಾದು ನಿಂತಿರಬೇಕು. ಸಮಾಧಿ ಮಂತ್ರಿಸುವ ಸಂದರ್ಭದಲ್ಲಿ ಗೌರವ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಅಂದರೆ ಸತ್ತು ಪುಲಗತ್ತಿಯಲ್ಲಿರುವ ಆತ್ಮಗಳಿಗೆ ಬೇಗನೆ ಸದ್ಗತಿ ದೊರೆಯುತ್ತದೆ”. ಎಂದು ಹೇಳಿದ್ದರು.
ಜ್ಞಾನೋಪದೇಶ ನಡೆಯುವಾಗ ಪಾದರಿಗಳು ಕೇವಲ ಯುವಕರಿಗೇನೆ ಕೆಲಸ ಹೇಳಿದ್ದು ಯುವತಿಯರಿಗೆ ಸಂತೋಷವನ್ನುಂಟು ಮಾಡಿತು. ಹೀಗಾಗಿ ಯುವತಿಯರ ನಡುವೆ ಇದ್ದ ಪಾಸ್ಕೋಲನ ಮಗಳು ಜೊಸೆಫ಼ಿನ, ಸುತಾರಿ ಇನಾಸನ ಕೊನೆಯ ಮಗಳು ಪಾವಲೀನಾ, ಎಮ್ಮೆ ಮರಿಯಳ ಮಗಳು ಫ಼ಿಲೋಮೆನಾ.
“ಪದ್ರಾಬಾ,…ಪದ್ರಾಬಾ..ನಮಗೆ ಏನೂ ಕೆಲಸ ಇಲ್ಲವೇ?” ಎಂದು ಕೇಳಿದರು.
ಈ ಹುಡುಗಿಯರ ತಂಡ ಯಾವಾಗಲೂ ಪಾದರಿ ಮಸ್ಕರಿನಾಸರ ಸುತ್ತ ಘೇರಾಯಿಸಿಕೊಂಡಿರುತ್ತಿತ್ತು. ಹಾ ಹೂ ಎಂದು ಕೂಗುತ್ತ ಅವರ ಹೊಟ್ಟೆ, ಬೆನ್ನು ತೋಳುಗಳನ್ನು ತೋರು ಬೆರಳಿನಿಂದ ತಿವಿಯುತ್ತ, ಕೈಯಲ್ಲಿ ಬೆತ್ತ ಹಿಡಿದು ಅವರತ್ತ ಬೆತ್ತ ಬೀಸಿದಂತೆ ಹೆದರಿಸುತ್ತ ತರುಣಿಯರ ತಂಡದ ಚೀತ್ಕಾರಕ್ಕೆ ಹುಸಿ ಮುನಿಸಿಗೆ ನಗೆಗೆ ಕಾರಣವಾಗುತ್ತಿದ್ದರು, ಪಾದರಿ ಮಸ್ಕರಿನಾಸ.
ಸರ್ವ ಆತ್ಮರ ಹಬ್ಬದ ಸಂದರ್ಭದಲ್ಲಿ ಹುಡುಗರಿಗೆ ಮಾತ್ರ ಕೆಲಸ ಹೇಳಿದರಲ್ಲ ಎಂದು ಇವರಿಗೆ ಸಂತಸವಾದರೂ, ಈ ನೆಪದಲ್ಲಿ ಇಗರ್ಜಿಗೆ ಬರುವ, ಇಲ್ಲಿ ತಿರುಗಾಡುವ ಅವಕಾಶ ತಪ್ಪಿ ಹೋಯಿತಲ್ಲ ಎಂದು ವ್ಯಥೆಯಾಯಿತು. ಹೀಗೆಂದೇ ಫ಼ಿಲೋಮೆನಾ ಬಾಯಿ ಬಿಟ್ಟು ಕೇಳಿದಳು. ಜೋಸೆಫ಼ಿನ ಪಾವಲಿನಾ ತಮ್ಮ ದನಿ ಸೇರಿಸಿದರು.
“…ಹೋ!” ಎಂದು ಅಚ್ಚರಿ ವ್ಯಕ್ತಪಡಿಸಿದರು ಪಾದರಿ.
“..ನೀವೂ ಬರಬೇಕು..ನನ್ನ ಜತೆ..ಸಮಾಧಿ ಮಂತ್ರಿಸುವಾಗ ಕೀರ್ತನೆ ಹೇಳಲಿಕ್ಕೆ ನೀವು ಬೇಕು..” ಎಂದರು.
“ಬರ್ತೀರಿ ಅಲ್ಲ? ಎಂದು ಬೇರೆ ಕೇಳಿದರು.
“ಬರ್ತೀವಿ..ಬರ್ತೀವಿ..”
ಎಂದು ರಾಗವಾಗಿ ಎಲ್ಲ ಹುಡುಗಿಯರೂ ಒಂದೇ ಸಾರಿ ಆಲಾಪಿಸಿದರು.
*
*
*
ಜ್ಞಾನೋಪದೇಶ ಮುಗಿದು ಮಕ್ಕಳು, ಯುವಕ ಯುವತಿಯರು ಚದುರಿ ಹೋಗತೊಡಗಿದಾಗ ಸುತಾರಿ ಇನಾಸನ ಮಗ ಪಾಸ್ಕು ಕೊಂಚ ಹಿಂದೆಯೇ ಉಳಿದ. ಎಲ್ಲ ಯುವಕರೂ ಇಗರ್ಜಿಯಿಂದ ಹೊರಬಿದ್ದ ನಂತರ ಹೊರಬಂದ ಹುಡುಗಿಯರ ತಂಡ ಕೂಡ ಎರಡು ಮೂರು ಗುಂಪುಗಳಾಗಿ ಒಡೆದುಕೊಂಡು ಪಾಸ್ಕೋಲ ಮೇಸ್ತ್ರಿಯ ಕೊನೆಯ ಮಗಳು ಜೋಸೆಫ಼ಿನ್ ಇಗರ್ಜಿ ಬಾವಿಯತ್ತ ತಿರುಗಿ-
“ನಾನು ಹೀಗೇ ಬರತೀನಿ ಕಣೆ ಫ಼ಿಲೋಮಿನಾ” ಎಂದು ಹೇಳಿ ಇಗರ್ಜಿ ಬಾವಿಯತ್ತ ತಿರುಗಿದಾಗ ಗಂಟೆಯ ಗೋಪುರದ ಕೆಳಗೆ ನಿಂತ ಪಾಸ್ಕುವಿನ ಮೈ ಎಲ್ಲ ಬಿಸಿಯಾಗಿ ಎದೆ ಬಡಿದುಕೊಳ್ಳತೊಡಗಿತು. ಜತೆಗೆ ಅಪಾರ ಸಂತೋಷವೂ ಆಯಿತು.
ಪಾದರಿ ಗೋನಸ್ವಾಲಿಸರು ಶಿವಸಾಗರ ಬಿಡುವ ಮುನ್ನ ಮಾಡಿದ ಇನ್ನೊಂದು ಕೆಲಸವೆಂದರೆ ಇಗರ್ಜಿಯ ಬಲ ಪಾರ್ಶ್ವದಲ್ಲಿ ಪಾಸ್ಕೋಲ ಮೇಸ್ತ್ರಿಯ ಮನೆಯ ನೇರಕ್ಕೆ ಒಂದು ಬಾವಿ ತೆಗೆಸಿದ್ದು. ಮೊದಲೆಲ್ಲ ಗಾಡಿ ಸಿಮೋನನ ಮನೆಯ ಬಾವಿಯಿಂದಲೇ ಬೋನನೀರು ತರುತ್ತಿದ್ದ. ಇಗರ್ಜಿಯ ಸುತ್ತ ಬೇಲಿ ಕಟ್ಟಿದ ಮೇಲೂ ಇಲ್ಲಿಂದಲೇ ನೀರು ತರುವ ಅವನ ಕಾಯಕ ಮುಂದುವರೆದಿತ್ತು. ಇಲ್ಲಿ ಇಗರ್ಜಿ ಕೆಲಸ ಪ್ರಾರಂಭವಾದಾಗ ಆ ಕಾಮಗಾರಿಗೆ ಸಿಮೋನ ಗಾಡಿಯಲ್ಲಿ ಊರ ಕೆರೆಯಿಂದ ನೀರು ತರಿಸಿ, ತಾತ್ಕಾಲಿಕವಾಗಿ ಕಟ್ಟಲಾದ ನೆಲ ಟ್ಯಾಂಕಿಯಲ್ಲಿ ಅದನ್ನು ತುಂಬಿ ಇರಿಸಿಕೊಳ್ಳುತ್ತಿದ್ದ.
ಇಗರ್ಜಿ ಕಟ್ಟಿ ಮುಗಿದ ನಂತರ ಇಗರ್ಜಿಗೆ ಒಂದು ಬಾವಿ ಇದ್ದರೆ ಅನುಕೂಲ ಎನಿಸಿತು ಗೋನಸ್ವಾಲಿಸರಿಗೆ. ಹಸಿರು ಕಡ್ಡಿ ಹಿಡಿದು ಜಲ ನೋಡುವ ಓರ್ವರು ಇಗರ್ಜಿಯ ಸುತ್ತ ತಿರುಗಾಡಿ ಕೊನೆಗೆ ಬಲ ಪಾರ್ಶ್ವದಲ್ಲಿ ತುಸು ದೂರ ಒಂದು ಜಾಗ ಗುರುತಿಸಿದರು. ಅಲ್ಲಿ ಬಾವಿ ತೆಗೆದಾಗ ಒಳ್ಳೆಯ ನೀರು ಸಿಕ್ಕಿತು. ಇಗರ್ಜಿಯ ನೀರಿನ ಸಮಸ್ಯೆ ಕೊನೆಗೂ ಬಗೆಹರಿಯಿತು. ಆದರೆ ಇಲ್ಲಿ ಬಾವಿಯಾದದ್ದು, ಬಾವಿಯಲ್ಲಿ ಹೇರಳ ನೀರಿರುವುದು, ಬಾವಿಯ ಆಚೆಗೆ ಇರುವ ಎರಡು ಮೂರು ಮನೆಗಳವರಿಗೆ ಆಸೆ ಕೆರಳಿಸಿತು.
ಜಿಲ್ಲಾಧಿಕಾರಿ ಮೆಗ್ಗಾನ ಸಾಹೇಬ ಇಗರ್ಜಿಗೆ ಬಂದು ಹೋದ ನಂತರ ಇಗರ್ಜಿ ಕೇರಿಯಲ್ಲಿ ಒಂದು ಸರಕಾರಿ ಬಾವಿ ತೋಡಲಾಗಿದ್ದರೂ ಅದರಲ್ಲಿ ನೀರು ತುಂಬಾ ಆಳದಲ್ಲಿತ್ತು. ಬೆಳಗಿನ ಜಾವ ಸೇದುಕೊಂಡರೆ ನೀರು ಸಿಗುತ್ತಿತ್ತಲ್ಲದೆ ಅನಂತರ ಕೊಡಪಾನದ ಬದಲು ತಂಬಿಗೆ ಹಾಕಿ ನೀರನ್ನು ಗೋರಬೇಕಾಗುತ್ತಿತ್ತು. ಹೀಗಾಗಿ ಸಾನ ಬಾವಿ ಪೆದ್ರು, ಪಾಸ್ಕೋಲ ಮೇಸ್ತ್ರಿ,ಬಲಗಾಲುದ್ಧ ಬಾಲ್ತಿದಾರ, ಬಳ್ಕೂರಕಾರ ಮೊದಲಾದವರೆಲ್ಲ ಸರಕಾರಿ ಬಾವಿ ಆಯಿತೆಂದು ಸಂತಸ ಪಟ್ಟವರು. ಆ ಬಾವಿಯ ಕತೆ ಹೀಗಾದುದರಿಂದ ಮತ್ತೆ ಹಿಂದಿನಂತೆಯೇ ಸಿಮೋನ ಮೇಸ್ತ್ರನ ಬಾವಿ, ಎಮ್ಮೆ ಮರಿಯಾಳ ಬಾವಿ, ಈ ತುದಿಯಲ್ಲಿ ಮಿಂಗೇಲಿ ಬಾವಿ ಎಂದು ನೀರಿಗೆ ಹೋಗತೊಡಗಿದರು.
ಆದರೆ ಇಗರ್ಜಿ ಜಾಗದಲ್ಲಿ ಒಂದು ಬಾವಿ ಆದದ್ದು, ಪಾದರಿ ಅವರ ಬಟ್ಲರ್ ಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲದೆ ಬಾವಿ ಸದಾ ತುಂಬಿರುವುದು ನೀರಿಗಾಗಿ ಪರದಾಡುತ್ತಿದ್ದವರಿಗೆ ಸಂತಸವನ್ನುಂಟು ಮಾಡಿತು. ಆದರೆ ನಡುವೆ ಬೇಲಿ ಇತ್ತು. ಒಂದು ಕಂದಕವಿತ್ತು. ಪಾದರಿಯ ಹೆದರಿಕೆ ಬೇರೆ. ಕೊನೆಗೆ ಪಾಸ್ಕೋಲ ಮೇಸ್ತ್ರಿ ಧೈರ್ಯ ಮಾಡಿ ಗೋನಸ್ವಾಲಿಸರಲ್ಲಿ ಬಂದ.
“ಪದ್ರಾಬಾ..” ಎಂದ.
“ಕೋಣ್ರೆ ತೋ..” ಎಂದವರು ಕೇಳಿದರು, ಟಪಾಲು ನೋಡುತ್ತ ಕುಳಿತವರು.
“ನಾನು ಪದ್ರಾಬ ಪಾಸ್ಕೋಲ”
“ಹಾಂ..ಏನು?”
ವಿನಯದಿಂದಲೇ ಪಾಸ್ಕೋಲ ತನ್ನ ಹಾಗೂ ಅಕ್ಕಪಕ್ಕದ ಮನೆಗಳವರ ನೀರಿನ ತಾಪತ್ರಯ ತೋಡಿಕೊಂಡ.
“ಹಾ..ಹೇಳು ಏನು ಮಾಡಬೇಕು”? ಅವನನ್ನೇ ಕೇಳಿದರು ಅವರು.
“ಅಲ್ಲಿ ಓಡಾಡಲಿಕ್ಕೆ ಒಂದು ದಣಪೆ ಇಟ್ಟರೆ ನಮಗೆ ನೀರು ಸಿಗುತ್ತಿತ್ತು”
“ನೀರು ತೊಗೊಂಡು ಹೋಗಿ..ಅದು ಇಗರ್ಜಿ ಬಾವಿ..ಧಾಜಣರಿಗೆ ಸೇರಿದ್ದು..ಆದರೆ..” ಅವರು ಮಾತು ನಿಲ್ಲಿಸಿದರು.
ಮತ್ತೆ ಜನ ಚೌಡಿ ಬನಕ್ಕೆ ಬರತೊಡಗಿದರೆ?
“ಇಲ್ಲ..ಪದ್ರಾಬ..ನೀರಿಗಲ್ಲದೇ ನಾವು ಬೇರೆ ಯಾವ ಕಾರಣಕ್ಕೂ ಅಲ್ಲಿಂದ ಬರೋದಿಲ್ಲ..” ಎಂದ ಆತ.
ಅಂತೆಯೇ ಅಲ್ಲೊಂದು ದಣಪೆ ತೆರೆದುಕೊಂಡಿತ್ತು. ಆ ನಾಲ್ಕು ಮನೆಗಳವರು ನೀರು ಕೊಂಡೊಯ್ಯತೊಡಗಿದರು. ಆದರೆ ಕ್ರಮೇಣ ಅಲ್ಲೊಂದು ಕಾಲು ದಾರಿ ಮೈತಳೆಯಿತು. ಇಗರ್ಜಿಗೆ ಬರುವವರು, ಇಗರ್ಜಿಯಿಂದ ಹೋಗುವವರು ಹೀಗೆಯೇ ತಿರುಗಾಡಲಾರಂಭಿಸಿದರು. ಪಾದರಿ ಮಸ್ಕರಿನಾಸ ಬಂದ ನಂತರವಂತೂ ಈ ದಾರಿ ಮತ್ತೂ ತೆರೆದುಕೊಂಡು ಅಗಲವಾಯಿತು.
ಹೀಗೆಂದು ಹಿಂದಿನಂತೆಯೇ ಪೊದೆಗಳು, ಮರಗಳು, ಗಿಡಗಳು, ಬಿದಿರ ಹಿಂಡು ಇದ್ದೇ ಇತ್ತು. ಸುತ್ತು ಬಳಸಿಕೊಂಡು ಬರುವುದರ ಬದಲು ಇದು ಸಮೀಪವಾಗಿದ್ದರಿಂದ ಇಗರ್ಜಿ ಸುತ್ತಲಿನ ಸಮೀಪದ ಏಳೆಂಟು ಮನೆಗಳವರು, ಮಕ್ಕಳು ಇದನ್ನೇ ಬಳಸಿಕೊಳ್ಳತೊಡಗಿದರು.
*
*
*
ಜೋಸೆಫ಼ಿನಾ ತಲೆಯ ಮೇಲಿನ ಏವ್ ತೆಗೆದು ಮಡಚಿ ಕೈಯಲ್ಲಿರಿಸಿಕೊಂಡು ಕಾಲುದಾರಿಯತ್ತ ತಿರುಗಿ ಅಷ್ಟು ದೂರ ಹೋದವಳು ತುಸು ತಡೆದು ನಿಂತಳು. ಹಿಂದಿನಿಂದ ಪಾಸ್ಕು ಬಂದು ಅವಳ ಜತೆ ಸೇರಿಕೊಂಡ-
” ಈದತೋರ್ನ ಯಾವಾಗ ಮುಗಿಯುತ್ತೆ ಅನ್ನಿಸಿ ಬಿಡುತ್ತೆ ಅಲ್ಲ?” ಎಂದು ಆತ ತಟ್ಟನೆ ಮಾತಿಗೆ ತೊಡಗಿದಾಗ.
ಇಬ್ಬರೂ ಕಾಲುದಾರಿ ಬಿಟ್ಟು ವಿಶಾಲವಾಗಿ ನೆಲದವರೆಗೂ ರೆಂಬೆಕೊಂಬೆ ಬಿಟ್ಟು ಹರಡಿಕೊಂಡ ಮಾವಿನ ಮರದ ಮರೆಗೆ ಸರಿದರು.
“..ದತೋರ್ನ ಕಲೀಬೆಕಲ್ಲ”
“ಏನದು ಕಲಿತದ್ದೆ ಕಲಿಯೋದು..ದೇವರ ಹತ್ತು ಕಟ್ಟಲೆಗಳು..ಇಗರ್ಜಿ ಮಾತೆಯ ಕಟ್ಟಲೆಗಳು..ಪಾಪ ನಿವೇದನಾ ಪ್ರಾರ್ಥನೆ. ದೇವದೂತರು ಕಲಿಸಿದ ವಿಶ್ವಾಸದ ಪ್ರಾರ್ಥನೆ..ಥೂ! ಥೂ! ಬೇಸರ ಬಂದು ಹೋಗುತ್ತೆ..”
ಮಾವಿನ ಮರದ ಸಣ್ಣ ರೆಂಬೆ ಮುರಿದು ಎಲೆಗಳನ್ನು ಹರಿದು ಚೆಲ್ಲುತ್ತ ಸಿಡಿಮಿಡಿಗೊಂಡ ಪಾಸ್ಕು.
“ದತೋರ್ನಗೆ ಬರಲಿಲ್ಲ ಅಂದರೆ ನಾಳೆ ಮದುವೆ ಇಲ್ಲ..ಮದುವೆ ಬೇಕು ಅನ್ನೋದಾದ್ರೆ ದತೋರ್ನ ಕಲೀಬೇಕು.”
ನಗು ನಗುತ್ತ ಕೆಣಕಿದಳು ಜೋಸೆಫ಼ಿನಾ.
ಕೆಲವೇ ತಿಂಗಳ ಹಿಂದೆ ಸಾಂತಾ ಮೋರಿ ಮಗ ಬಸ್ತು ಸಿದ್ಧಾಪುರದ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದ. ಮದುವೆ ಸಿದ್ಧಾಪುರದಲ್ಲಿ. ಆದರೆ ನಿಯಮದ ಪ್ರಕಾರ ಇಲ್ಲಿಯ ಪಾದರಿ ಚೀಟಿಕೊಡಬೇಕು. ಈ ಚೀಟಿ ತೆಗೆದುಕೊಂಡು ಹೋಗಿ ಅಲ್ಲಿಯ ಪಾದರಿಗೆ ಕೊಟ್ಟರೆ ಮದುವೆ.
ಬಸ್ತು ಮಸ್ಕರಿನಾಸರ ಬಳಿ ಹೋಗಿ
“ಪದ್ರಾಬ…ಚೀಟಿ ಕೊಡಿ” ಎಂದು ಕೇಳಿದಾಗ ಅವರು-
“ಸಾಂತಾಮೋರಿ ಎರಡು ವರ್ಷದಿಂದ ಅನ್ವಾಲ ಕಾಯಿದೆ ಕೊಟ್ಟಿಲ್ಲ..” ಎಂದು ಮೊದಲ ತಕರಾರು ತೆಗೆದರು. ನಂತರ “ನೀನು ಪ್ರತಿ ಭಾನುವಾರ ಇಗರ್ಜಿಗೆ ಬರುವುದಿಲ್ಲ”. ಇದು ಎರಡನೇ ತಕರಾರು.
“ವರ್ಷಕ್ಕೆ ಒಂದು ಸಾರಿಯಾದರೂ ಪಾಪ ನಿವೇದನೆ ಮಾಡಿ ದಿವ್ಯಪ್ರಸಾದ ಸ್ವೀಕರಿಸಬೇಕು ಎಂಬುದು ಇಗರ್ಜಿ ಮಾತೆಯ ಕಟ್ಟಲೆ..ಅದನ್ನು ಈಡೇರಿಸುತ್ತಿದ್ದೀಯಾ?” ಎಂದು ಮೂರನೇ ಪ್ರಶ್ನೆ ಕೇಳಿದರು.
ಈ ಮೂರೂ ಪ್ರಶ್ನೆಗಳನ್ನು ಕೇಳಿಯೂ ಬಸ್ತು ನೀಡಿದ ಉತ್ತರಗಳನ್ನು ಒಪ್ಪಿಕೊಂಡ ಮಸ್ಕರಿನಾಸರು-
“ಅದೆಲ್ಲ ಸರಿ..ನಿನಗೆ ಎಲ್ಲ ಜಪಮಂತ್ರಗಳು ಬರುತ್ತಾ? ಎಲ್ಲಿ ಪರಲೋಕ ಮಂತ್ರ ಹೇಳು..ದೇವರ ಹತ್ತು ಕಟ್ಟಲೆಗಳನ್ನು ಹೇಳು? ಪಾಪ ನಿವೇದನಾ ಪ್ರಾರ್ಥನೆ ಹೇಳು” ಎಂದು ಕೇಳಿ ಬಸ್ತುವನ್ನು ಗೊಂದಲದಲ್ಲಿ ಕೆಡವಿದರು. ಅವನಿಗೆ ಎಲ್ಲವೂ ಚೆನ್ನಾಗಿ ಬರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು-
“ನಾಳೆಯಿಂದ ಬಾ..ಎಲ್ಲ ಕಲಿತ ನಂತರ ನಿನಗೆ ಚೀಟಿ..” ಎಂದು ನುಡಿದು ಬಿಟ್ಟರು.
ಬಸ್ತು ನಿತ್ಯ ಕೆಲಸ ಮುಗಿಸಿಕೊಂಡು ಬಂದು ಪಾದರಿಯ ಬಂಗಲೆಗೆ ಹೋಗುವುದನ್ನು ನೋಡಿ ಜನ ನಕ್ಕರು. ಏಪ್ರಿಲ್ ತಿಂಗಳಲ್ಲಿ ತಪಸ್ಸಿನ ಕಾಲ ಮುಗಿದ ಕೂಡಲೇ ಆಗಬೇಕಾದ ಬಸ್ತು ಮದುವೆ ಮಳೆಗಾಲದ ಜೂನ್ ತಿಂಗಳಲ್ಲಿ ಆಗಿ ಜನ-
“ದತೋರ್ನ ಕಲೀದಿದ್ದರೆ ಹೀಗೆ..ಪಾಯಸ ಮಳೆನೀರಿನಿಂದ ತೆಳ್ಳಗಾಗಿ ಹೋಗುತ್ತೆ..” ಎಂದು ನಕ್ಕರು.
ಇದು ಎಲ್ಲ ಯುವಕ ಯುವತಿಯರಿಗೂ ಒಂದು ಎಚ್ಚರಿಕೆಯಾಯಿತು.
“ಅದು ಹೌದು” ಎಂದ ಪಾಸ್ಕು ಬಸ್ತುವಿಗಾದ ಅವಸ್ಥೆಯನ್ನು ನೆನಸಿಕೊಂಡು
ಪಾಸ್ಕು ಹಾಗೂ ಜೋಸೆಫ಼ಿನ ಮದುವೆ ಬಗ್ಗೆ ಮಾತನಾಡುವಲ್ಲಿ ಒಂದು ಉದ್ದೇಶವಿತ್ತು. ತಾವಿಬ್ಬರೂ ಮುಂದೆ ಮದುವೆಯಾಗಬೇಕೆಂದು ಇವರು ನಿರ್ಧರಿಸಿದ್ದರು. ಇಬ್ಬರ ನಡುವೆ ಬಹಳ ದಿನಗಳಿಂದ ನಡೆದು ಬಂದ ಸ್ನೇಹ ಅವರಿಗೆ ಗೊತ್ತಿಲ್ಲದೇನೆ ಪ್ರೇಮವಾಗಿ ಪರಿವರ್ತನೆ ಹೊಂದಿತ್ತು. ಚಿಕ್ಕಂದಿನಿಂದಲೂ ಇವರು ಒಟ್ಟಿಗೇನೆ ಆಟವಾಡಿಕೊಂಡು ಬೆಳೆದಿದ್ದರು. ಒಂದೆರಡು ವರ್ಷ ಶಾಲೆಗೂ ಒಟ್ಟಿಗೇನೆ ಹೋಗಿ ಬಂದಿದ್ದರು. ಪಾದರಿ ಗೋನಸ್ವಾಲಿಸ್ ಶಿವಸಾಗರಕ್ಕೆ ಬರುವ ಹೊತ್ತಿಗೆ ಇಲ್ಲಿಯ ಕ್ರೀಸ್ತುವರು ತಮ್ಮ ಹಿರಿಯ ಮಕ್ಕಳನ್ನು ತಮ್ಮ ಜತೆಗೇನೆ ಕೆಲಸಕ್ಕೆ ಕರೆದೊಯ್ಯುವುದನ್ನು ಅಭ್ಯಾಸ ಮಾಡಿದ್ದರು. ಈ ಮಕ್ಕಳು ಕೂಡ ತಂದೆಯ ಕೆಲಸವನ್ನೇ ಕಲಿತು ಅದನ್ನೇ ಮುಂದುವರಿಸುವ ನಿರ್ಧಾರ ಕೂಡ ಮಾಡಿದ್ದರು. ಹೀಗಾಗಿ ಶಾಲೆಗೆ ಹೋಗುವ ಕ್ರೀಸ್ತುವರ ಮಕ್ಕಳು ಯಾರೂ ಆಗ ಇರಲಿಲ್ಲ.
ಪಾದರಿ ಗೋನಸ್ವಾಲಿಸ್ ಬಂದವರೇ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಎಂದಾಗ ಸಿಮೋನ, ಇನಾಸ, ಮರಿಯ, ಪಾಸ್ಕೋಲ, ಬಾಲ್ತಿದಾರ, ಕೈತಾನ ಮೊದಲಾದವರು ತಮ್ಮ ಮಕ್ಕಳಲ್ಲಿ ತೀರಾ ಚಿಕ್ಕವರಾಗಿದ್ದವರನ್ನು ಶಾಲೆಗೆ ಸೇರುವ ವಯಸ್ಸಿನ ಒಳಗೆ ಇದ್ದವರನ್ನು ಶಾಲೆಗೆ ಕಳುಹಿಸಲು ಯತ್ನಿಸಿದರು. ಆದರೆ ಈ ಕ್ರಿಯೆ ಈ ಮಕ್ಕಳ ಪಾಲಿಗೆ ಹೊಸದಾಗಿತ್ತು. ಹಳ್ಳಿಗೆ ಅನತಿ ದೂರದಲ್ಲಿದ್ದ ಮಂಕಾಳೆ ಹಳ್ಳದಲ್ಲಿ ಏಡಿ ಹಿಡಿಯುತ್ತ, ಕಂಬಳಿಕೊಪ್ಪದ ಬ್ಯಾಣದಲ್ಲಿ ಕಾಡು ಗೇರು ಹಣ್ಣು, ಕವಳಿ ಹಣ್ಣು, ನೇರಲೆ ಹಣ್ಣು ಆರಿಸುತ್ತ, ಕೊಪೆಲ ಹಿಂಬದಿಯಲ್ಲಿ ಮರಕೋತಿ ಆಡುತ್ತ, ಮನೆ ಅಂಗಣದಲ್ಲಿ ಕುಂಟಾ ಬಿಲ್ಲೆ, ಜಗಲಿಯ ಮೇಲೆ ಎತಗಲ್ಲಾಟ, ಚೆನ್ನಮಣೆ, ಕವಡೆ ಆಡುತ್ತ ಕಾಲ ಕಳೆಯುತ್ತಿದ್ದ ಈ ಮಕ್ಕಳು ಇಗರ್ಜಿಗೆ ಹೋಗುವುದನ್ನು ರೂಢಿಸಿಕೊಳ್ಳುವುದೇ ಕಷ್ಟವಾಯಿತು. ಇವರು ಶಾಲೆಗೆ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಲಿಲ್ಲ. ಹೋದರೂ ಒಂದು ವರ್ಷ ಆರು ತಿಂಗಳು ಹೋಗಿ ಬಿಟ್ಟರು.
ಕ್ರೀಸ್ತುವರ ಮಕ್ಕಳಲ್ಲಿ ನಿರಂತರವಾಗಿ ಶಾಲೆಗೆ ಹೋದವರೆಂದರೆ ಸಿಮೋನನ ಮೂರನೇ ಮಗ ಫ಼ೆಡ್ಡಿ, ಪಾಸ್ಕೋಲನ ಮಗ ಅಂತೋನಿ, ಬಳ್ಕೂರಕಾರರ ಮಗ ಸಾಮ್ಸನ್, ಇಂತ್ರು ಮಗ ಸಿರಿಲ, ಇವರಲ್ಲೂ ಒಂದಿಬ್ಬರು ಶಾಲೆ ಬಿಟ್ಟರು. ಉಳಿದವರೆಲ್ಲ ತಂದೆಯ ಕೆಲಸ ಕಲಿಯುತ್ತ, ಪೋಲಿ ತಿರುಗುತ್ತ, ಪಾದರಿಗಳ ಕೆಲಸ ಮಾಡುತ್ತ ಉಳಿದರು.
ಪಾಸ್ಕೋಲನ ಮಗಳು ಜೋಸೆಫ಼ಿನ ಪ್ರೈಮರಿ ನಾಲ್ಕನೇ ತರಗತಿ ತನಕ ಓದಿ ಬಿಟ್ಟಳು. ಸುತಾರಿ ಇನಾಸನ ಮಗ ಪಾಸ್ಕು ಮಿಡಲ್ ಸ್ಕೂಲಿಗೆ ಹೋಗಿ ಅಲ್ಲಿ ಟೋಪಿ ಮೇಸ್ಟ್ರಿಗೆ ಬೈದು ಓಡಿ ಬಂದ. ಸ್ವಲ್ಪ ಅಣ್ಣನ ಬ್ಯಾಂಡ್‌ಸೆಟ್ಟಿನೊಂದಿಗೆ ತಾಳ ಬಾರಿಸಲು ಹೋದ. ಅದೂ ಬೇಸರವಾಯಿತು. ಕೊನೆಗೆ ತಂದೆಯ ಉಳಿ, ಗರಗಸ ಹಿಡಿದು ಕೆಲಸ ಕಲಿತ. ಅಷ್ಟು ಹೊತ್ತಿಗೆ ತನ್ನ ಮನೆಯಿಂದ ಎರಡೇ ಮನೆಗಳ ಆಚೆಗಿದ್ದ ಪಾಸ್ಕೋಲನ ಮಗಳು ಜೋಸೆಫ಼ಿನ ದುಂಡು ದುಂಡುಗೆ ಬೆಳೆದಿರುವುದು ಇವನಿಗೆ ಆಕರ್ಷಕವಾಗಿ ಕಂಡಿತು. ಮೊದಲೇ ಪರಿಚಯವಿದ್ದುದರಿಂದ ಮಾತನಾಡುವುದು ಕಷ್ಟವಾಗಲಿಲ್ಲ. ಪ್ರತಿ ಭಾನುವಾರ ಜ್ಞಾನೊಪದೇಶದ ನೆಪದಲ್ಲಿ ಒಂದೆರಡು ಗಂಟೆ ಒಟ್ಟಿಗೇನೆ ಕಳೆಯುತ್ತಿದ್ದರು. ಇಗರ್ಜಿಯಲ್ಲಿ ಪೂಜೆಯ ಸಂದರ್ಭದಲ್ಲಿ ಅವಳು ದಿವ್ಯ ಪ್ರಸಾದ ಸ್ವೀಕರಿಸಲು ಹೊಗುವಾಗ ಈತ ನೋಡುತ್ತಿದ್ದ. ಕೀರ್ತನೆ ಹಾಡುವಾಗ ಅವಳು ಇವನತ್ತ ದೃಷ್ಟಿ ಹಾಯಿಸಿ ನಗುತ್ತಿದ್ದಳು.
ಕ್ರಮೇಣ ಮಾತನಾಡಬೇಕು. ಹತ್ತಿರವಿರಬೇಕು ನೋಡಬೇಕು, ನಗಬೇಕು ಎಂಬ ಮನೋವಾಂಛೆ ಹೆಚ್ಚತೊಡಗಿತು. ಅದಕ್ಕಾಗಿ ಸಮಯ ಸಂದರ್ಭಗಳನ್ನು ಉಪಯೋಗಿಸಿಕೊಳ್ಳುವುದು, ಸೃಷ್ಟಿಸಿಕೊಳ್ಳುವುದು ಪ್ರಾರಂಭವಾಯಿತು.
“ಆ ವಿಷಯ ಹಾಗಿರಲಿ….ಶುಕ್ರವಾರ ಬೆಳಿಗ್ಗೆ ಬೇಗ ಬಂದು ಬಿಡು…ಸಿಮಿತ್ರಿ ಹತ್ತಿರ” ಎಂದ ಪಾಸ್ಕು, ಮದುವೆಯ ವಿಷಯ ಪಕ್ಕಕ್ಕಿರಿಸಿ.
“ಬೆಳಿಗ್ಗೆ ಯಾಕೆ..ಪದ್ರಾಬ ಸಮಾಧಿ ಮಂತ್ರಿಸಲಿಕ್ಕೆ ಬರತಾರಲ್ಲ..ಅವರ ಜತೆ ಬಂದರೆ ಸಾಕಲ್ಲ..” ಎಂದಳು ಜೊಸೆಫ಼ಿನಾ. ಪಾದರಿ ಕೂಡ ಹಾಗೆಯೇ ಹೇಳಿದ್ದರಲ್ಲ.
“ಬೆಳಿಗ್ಗೆ ಬಾ..ನಾವೆಲ್ಲ ಸೇರಿ ಸಿಮಿತ್ರಿ ಕ್ಲೀನ್ ಮಾಡೋಣ..” ಎಂದ ಆತ ಏನೋ ಆಸೆಯಿಂದ.
“ಅದೆಲ್ಲ ನಿಮ್ಮ ಕೆಲಸ..”
“ಮತ್ತೆ ನಿಮ್ಮ ಕೆಲಸ ಏನು? ಪಾದರಿ ಲೋಬ ಹಿಡಿದುಕೊಂಡು ಡ್ಯಾನ್ಸ್ ಮಾಡೋದ?” ಎಂದ ಸಿಡುಕಿನಿಂದ.
ಈ ಹುಡುಗಿಯರು ಅದರಲ್ಲೂ ತನ್ನ ಜೋಸೆಫ಼ಿನ ಪಾದರಿಯ ಭುಜಕ್ಕೆ ಅಂಟಿ ನಿಂತು ನಗುವುದು, ಕೇಕೆ ಹಾಕುವುದು, ಅವನಿಂದ ತಿವಿಸಿಕೊಳ್ಳುವುದು ಇವನಿಗೆ ಹಿಡಿಸುತ್ತಿರಲಿಲ್ಲ. ಮುಖ್ಯವಾಗಿ ಈ ಪಾದರಿಯ ಬಗ್ಗೇನೆ ಅವನಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ.
ಈ ಹಿಂದೆ ಆಗಿ ಹೋದ ತಪಸ್ಸಿನ ಕಾಲದ ಕೊನೆಯ ದಿನಗಳಲ್ಲಿ ಆತ ಕಂಡ ದೃಶ್ಯವನ್ನು ಮರೆಯಲಾರದವನಾಗಿದ್ದ. ಶುಭ ಶುಕ್ರವಾರ ಏಸು ಪ್ರಭುವಿನ ವಧೆಯಾಗಿತ್ತು. ಮತ್ತೆ ಪ್ರಭು ಪುನರುತ್ಥಾನವಾಗುವವರೆಗೆ ಲೋಹದ ಗಂಟೆ ಹೊಡೆಯುವಂತಿರಲಿಲ್ಲ. ಈ ಮೂರು ದಿನ ಬಾರಿಸಲೆಂದೇ ಒಂದು ಮರದ ಗಂಟೆಯನ್ನು ಮಾಡಿ ತನಗೆ ನೀಡಿ-
“ತೊಕೊಂಡು ಹೋಗಿ ಪದ್ರಾಬಾಗೆ ಕೊಡು” ಎಂದು ಹೇಳಿದ್ದ.
ಹಲ್ಲುಗಳಿರುವ ಒಂದು ಹಿಡಿ. ಅದಕ್ಕೆ ತೂಗು ಬಿದ್ದಿರುವ ಒಂದು ಹಲಗೆ ಹಿಡಿಯನ್ನು ಹಿಡಿದು ಬೀಸುತ್ತ ತಿರುಗಿಸಿದರೆ ಈ ಹಲಗೆ ಹಲ್ಲುಗಳಿಗೆ ತಾಗಿ ಕಿರ್ರ ಎಂದು ಸದ್ದು ಮಾಡುತ್ತಿತ್ತು. ಈ ಹಿಂದೆ ಇದ್ದು ಮುರಿದು ಹೋದ ಅದನ್ನು ಅಪ್ಪ ಸರಿ ಮಾಡಿದ್ದ. ಇದನ್ನು ಇಗರ್ಜಿಯ ಸುತ್ತ ತಿರುಗಿಸುತ್ತ ಮೂರು ಸುತ್ತು ಬಂದರೆ ಇಗರ್ಜಿಯ ಆಸುಪಾಸಿನ ಮನೆಗಳಿಗೆ ಕೇಳಿಸಿ ಜನ ಇಗರ್ಜಿಗೆ ಬರುತ್ತಿದ್ದರು.
ಈ ಮರದ ಗಂಟೆ ಹಿಡಿದು ತಾನು ಮೊದಲು ಇಗರ್ಜಿಗೆ ಹೋದೆ. ಇಗರ್ಜಿಯಲ್ಲಿ ಎಲ್ಲ ದೇವರ ಪ್ರತಿಮೆಗಳಿಗೂ ಮುಸುಕು ಹಾಕಲಾಗಿತ್ತು. ಇಗರ್ಜಿಯಲ್ಲಿಯ ಬಣ್ಣದ ತೋರಣಗಳನ್ನು ತೆಗೆಯಲಾಗಿತ್ತು. ಶಿಲುಬೆಗೇರಿಸಿದ ಏಸುವಿನ ಪ್ರತಿಮೆಯ ಎದುರು ಕೆಲವರು ದುಃಖ ವೇದನೆಯಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಪಾದರಿ ಅಲ್ಲಿ ಎಲ್ಲೂ ಕಾಣದ್ದರಿಂದ ತಾನು ಬಂಗಲೆಗೆ ಹೋದೆ.
ಬಂಗಲೆಯ ಬಾಗಿಲು ಅರ್ಧ ತೆರೆದುಕೊಂಡಿತ್ತು. ’ಪದ್ರಾಬ’ ಎಂದು ಕೂಗುತ್ತ ಬಾಗಿಲು ತಳ್ಳಿಕೊಂಡು ಒಳಹೋದೆ. ಪಾದರಿಗಳ ಜೊತೆಗಿದ್ದ ರಜೀನಾ ಗಾಬರಿಯಿಂದ ಎದ್ದು ಒಳಗೆ ಓಡಿ ಹೋದಳು. ಧಡಬಡಿಸಿ ಎದ್ದು ನಿಂತ ಪಾದರಿ-
“..ಯಾರು? ಏನು?” ಎಂದು ಕೇಳಿದರು.
ಮರದ ಗಂಟೆಯನ್ನು ಅವರ ಮುಂದೆ ಇರಿಸಿ ಬಂದೆ.
ತನ್ನ ಮೈ ಬೆವೆತು ಹೋಗಿತ್ತು. ತಾನೂ ಗಾಬರಿಯಾಗಿದ್ದೆ. ಅದೇ ಹೊಸ ಅನುಭವಗಳಿಗೆ ಹಾತೊರೆಯುತ್ತಿದ್ದ ತಾನು ಒಂದು ಕ್ಷಣ ವಿಚಲಿತನಾಗಿದ್ದೆ. ನೇರ ಬಂದವನೇ ಮನೆ ಜಗಲಿಯ ಮೇಲೆ ಕುಳಿತೆ. ಅಂಗಳದಲ್ಲಿ ಶಿಲುಬೆಗೆ ಅಪ್ಪ ಸುಣ್ಣ ಬಳಿಯುತ್ತಿದ್ದ. ಈಸ್ಟರ ಬಂತೆಂದು ಮನೆಗೆಲ್ಲ ಸುಣ್ಣ ಬಣ್ಣ ಆಗುತ್ತಲಿತ್ತು.
“ಕೊಟ್ಟೆಯಾ?” ಎಂದು ಕೇಳಿದ.
“ಹುಂ..” ಎಂದೆ.
ಅಪ್ಪನಿಗೆ ಈ ವಿಷಯ ಹೇಳಬೇಕು ಎನಿಸಿತು, ಹೇಳಲಿಲ್ಲ. ಈ ದೊಡ್ಡವರೇ ಒಂದು ರೀತಿ. ಇದೇ ಪಾದರಿ ತಮ್ಮ ಮನೆ ಅಂಗಳದಲ್ಲಿ ಯ ಶಿಲುಬೆ ದೇವರ ಮುಂದೆ ಕಬ್ಬಿಣದ ಕಾಣಿಕೆ ಡಬ್ಬಿ ತಂದಿರಿಸಿದಾಗ ತಾನು ಅಪ್ಪನ ಎದುರು ಕೂಗಾಡಿದ್ದೆ.
“ಪಾದರಿ ಇದನ್ನ ಯಾಕೆ ಇಲ್ಲಿ ತಂದಿಡಬೇಕು?” ಎಂದು ಕೇಳಿದ್ದೆ.
ವಾರಕ್ಕೊಮ್ಮೆ ಆತ ಬಂದು ಪೆಟ್ಟಿಗೆಯಿಂದ ಹಣ ತೆಗೆದುಕೊಂಡು ಹೋಗುವುದು ತನಗೆ ಸರಿ ಕಂಡಿರಲಿಲ್ಲ. ಶಿಲುಬೆಯ ರಕ್ಷಣೆ ಮಾಡುವವರು, ಅದರ ಮುಂದೆ ಮೇಣದ ಬತ್ತಿ ಹಚ್ಚಿ ಅದಕ್ಕೆ ಸುಣ್ಣ ಬಳಿದು, ಕೆಳಗೆ ಶಗಣಿ ಸಾರಿಸಿ ಬರುವವರಿಗೆ ವ್ಯವಸ್ಥೆ ಮಾಡಿಕೊಡುವವರು ನಾವು. ಹಣ ಮಾತ್ರ ಪಾದರಿಗೆ? ಎಂದು ಕೇಳಿದಾಗ ಅಪ್ಪ-
“..ಪಾದರಿಗಳ ಬಗ್ಗೆ ಹಾಗೆಲ್ಲ ಮಾತನಾಡಬಾರದು ಪಾಸ್ಕು..” ಎಂದಿದ್ದ.
ಈಗಲೂ ಹಾಗೆಯೇ ಆತ ಹೇಳುತ್ತಾನೆ. ಪಾದರಿ ಎಂದರೆ ಅಪ್ಪನಿಗೆ ಮಾತ್ರವಲ್ಲ ಊರ ಎಲ್ಲರಿಗೂ ದೇವರ ಪ್ರತಿರೂಪ. ಅವರ ಬಗ್ಗೆ ಭಿನ್ನವಾಗಿ ವಿಚಾರ ಮಾಡಲು ಅವರು ಸಿದ್ಧರಿಲ್ಲ. ಹೀಗೆಂದೇ ಮರದ ಗಂಟೆಯ ಪ್ರಕರಣವನ್ನು ತಾನು ಯಾರಿಗೂ ಹೇಳಲಿಲ್ಲ. ಆದರೆ ಪಾದರಿಯನ್ನು ನೋಡಿದಾಗಲೆಲ್ಲ ಮೈ ಉರಿಯುತ್ತದೆ. ಈ ಹುಡುಗಿಯರು ಅವನ ಸುತ್ತ ಕುಣಿಯುವುದನ್ನು ಕಂಡಾಗ ಸಿಟ್ಟು ಬರುತ್ತದೆ. ಈ ಹುಡುಗಿಯರಿಗೂ ಏನೂ ಗೊತ್ತಾಗುವುದಿಲ್ಲ. ಈಗ ಜೋಸೆಫ಼ಿನ ಕುಣಿಯುತ್ತಿಲ್ಲವೆ?
“..ಏನೀಗ? ಅವರು ಪಾದರಿ ಅಲ್ವ?” ಎಂದು ತಿರುಗಿ ಕೇಳಿದಳು ಜೋಸೆಫ಼ಿನಾ.
“ಸರಿ..ನಾನು ಬರತೀನಿ..ನಿನಗೆ ಮನಸ್ಸಿದ್ದರೆ ಬೆಳಿಗ್ಗೆ ಬಾ..ನಾನು ಅಲ್ಲಿ ಇರತೀನಿ”.
ಎಂದವನೇ ಪಾಸ್ಕು ಅಲ್ಲಿಂದ ಹೊರಟ. ಅವನಿಗೆ ಜೊಸೆಫ಼ಿನಳ ಮೇಲೆ ಸಿಟ್ಟು ಬಂದಿರಲಿಲ್ಲ. ಸಿಟ್ಟು ಬಂದದ್ದು ಪಾದರಿ ಮಸ್ಕರಿನಾಸರ ಮೇಲೆ.
*
*
*
ಪಾದರಿ ಮಸ್ಕರಿನಾಸರ ಮಾತಿಗೆ ಬೆಲೆ ಕೊಟ್ಟಂತೆ ಎಲ್ಲ ಯುವಕರು ಬೆಳಗಾಗುತ್ತಿರಲು ಸಿಮಿತ್ರಿಯ ಬಳಿ ಹಾಜರಾದರು. ಕತ್ತಿ, ಕುಡುಗೋಲು, ಗುದ್ದಲಿ ಹೊತ್ತುಕೊಂಡೇ ಅವರು ಬಂದರು. ಬಟ್ಲರ್ ಫ಼ರಾಸ್ಕ ಬಂದು ಸಿಮಿತ್ರಿಯಲ್ಲಿ ಏನು ಮಾಡಬೇಕು ಎಂಬುದನ್ನು ಹೇಳಿದ. ಸಿಮಿತ್ರಿಯೊಳಗೆ ಪ್ರವೇಶ ಮಾಡುವಲ್ಲಿ ಬೆಳೆದ ಗಿಡ, ಪೊದೆ ಸವರಿ ಬಿಡಿ ಎಂದ. ನಂತರ ಪ್ರತಿ ಸಮಾಧಿಯ ಬಳಿ ಹೋಗಲು ದಾರಿ ಮಾಡಿ. ಅಲ್ಲೆಲ್ಲ ಹುಲ್ಲು ಕೆತ್ತಿ ಹಾಕಿ. ಪೊದೆ ಬೆಳೆದಿದ್ದರೆ ತೆಗೆಯಿರಿ ಎಂದ.
ಪಾಸ್ಕು ಅವನ ಸ್ನೇಹಿತರು ಕೈಗೆ ಹತ್ಯಾರಗಳನ್ನು ಎತ್ತಿಕೊಂಡರು. ಶರಟು ತೆಗೆದು ಮರದ ರೆಂಬೆಗಳಿಗೆ ತೂಗು ಹಾಕಿ, ಥು ಎಂದು ಅಂಗೈಗಳ ಮೇಲೆ ಉಗಿದುಕೊಂಡು ಸಲಿಕೆ, ಗುದ್ದಲಿ ಹಿಡಿದರು.
ಪಾಸ್ಕು ತಲೆ ಎತ್ತಿ ನೋಡಿದ. ಯಾವ ಹುಡುಗಿಯರೂ ಬರಲಿಲ್ಲ. ಜೋಸೆಫ಼ಿನಾ ಕೂಡ ಬರಲಿಲ್ಲ.
ಜನ ಬಂದು ತಮ್ಮ ತಮ್ಮ ಬಂಧುಗಳು ಸಮಾಧಿಗಳನ್ನು ಸರಿಪಡಿಸತೊಡಗಿದರು. ಅಲ್ಲೂ ಕೂಡ ಹುಲ್ಲು ಕೀಳುವ, ಶಗಣೆ ಸಾರಿಸುವ, ಸುಣ್ಣ ತೆಗೆಯುವ ಕೆಲಸ ಆರಂಭವಾಯಿತು.
ಜೋಸೆಫ಼ಿನಾ ಬರಬಹುದು ಅಂದುಕೊಂಡಿದ್ದ ಪಾಸ್ಕು. ಈವತ್ತು ಇಲ್ಲಿಗೆ ಬರಲು ಯಾರೇ ತರುಣ ತರುಣಿಯರಿಗೆ ಅಡ್ಡಿ ಇರಲಿಲ್ಲ. ಸಿಮಿತ್ರಿಯಲ್ಲಿ ಸಮಾಧಿಗಳನ್ನು ಪಾದರಿ ಮಂತ್ರಿಸುತ್ತಾರೆಂಬುದು, ಸಿಮಿತ್ರಿಯಲ್ಲಿ ಜ್ಞಾನೋಪದೇಶಕ್ಕೆ ಬರುವವರೇ ಶುಚಿ ಮಾಡಬೇಕು ಎಂಬುದು ಎಲ್ಲರಿಗೂ ಗೊತ್ತಿತ್ತು. ನಿರೀಕ್ಷಿಸಿದ ಹಾಗೆ ಕೆಲ ಹುಡುಗಿಯರು ಬಂದು ಅದು ಇದು ಕಿತ್ತು ಹುಡುಗರ ಹತ್ತಿರ ನಿಂತು ಮಾತನಾಡಿಯೂ ಹೋಗಿದ್ದರು. ಆದರೆ ಜೋಸೆಫ಼ಿನಾ ಮಾತ್ರ ಬರಲಿಲ್ಲ.
ಪಾಸ್ಕು ಹಾಗೂ ಜೋಸೆಫ಼ಿನಾ ಬಹಳ ಸಾರಿ ಇಲ್ಲಿಗೆ ಬಂದಿದ್ದರು.
ಸಿಮಿತ್ರಿಯ ಹೊರಗೋಡೆಯ ಮಗ್ಗುಲಲ್ಲಿ ಪೊದೆ ಪೊದೆಯಾಗಿ ಬೆಳೆದಿರುವ ತುಂಬೆ ಗಿಡಗಳಲ್ಲಿ ಅರಳುವ ನೀಲಿ ಹೂವುಗಳಿಂದ ಮಕರಂದ ಹೀರಲು ಕರೀ ದುಂಬಿಗಳು ಹೇರಳವಾಗಿ ಬರುತ್ತಿದ್ದವು. ಇವುಗಳಲ್ಲಿ ಭೀಮ ಎಂಬ ಕಪ್ಪು ದುಂಬಿಯನ್ನು ಹಿಡಿದು ಅದರ ಕಾಲಿಗೆ ದಾರಕಟ್ಟಿ ಹಾರ ಬಿಡುವುದು ಹುಡುಗರ ಒಂದು ಹವ್ಯಾಸವಾಗಿತ್ತು. ಪಾಸ್ಕು ಇಂತಹ ಮೂರು ನಾಲ್ಕು ಭೀಮ ದುಂಬಿಗಳನ್ನು ಬೆಂಕಿಪೆಟ್ಟಿಗೆಯಲ್ಲಿ ಹಾಕಿ ಇರಿಸಿಕೊಳ್ಳುತ್ತಿದ್ದ. ತಿನ್ನಲೆಂದು ಚೆಂಡು ಹೂವಿನ ಸೊಪ್ಪನ್ನು ಕೂಡ ಈ ಪೆಟ್ಟಿಗೆಯಲ್ಲಿ ಹಾಕುತ್ತಿದ್ದ. ಈ ಭೀಮನನ್ನು ಹಿಡಿಯಲು ಆತ ಬಂದಾಗೆಲ್ಲ ಜೋಸೆಫ಼ಿನಾ ಅವನ ಹಿಂದಿರುತ್ತಿದ್ದಳು. ಇಗರ್ಜಿಗೆ ಪೂಜೆಗೆ, ಪಾಪ ನಿವೇದನೆಗೆ, ಇಗರ್ಜಿ ಗುಡಿಸಿ ತೊಳೆಯಲು, ಇಗರ್ಜಿಯ ಪೀಠದ ಮೇಲಿರಿಸುವ ಮೇಣದ ಬತ್ತಿ ಸ್ಟ್ಯಾಂಡು, ಹೂವಿನ ದಾನಿಗಳನ್ನು ಬೆಳಗಲು, ಜ್ಞಾನೋಪದೇಶಕ್ಕೆ ಇಲ್ಲಿ ಬಂದಾಗಲೆಲ್ಲ ಅವರು ದುಂಬಿ ಹಿಡಿಯಲು ಬರುವುದಿತ್ತು. ಇಲ್ಲಿ ಆಡಿ ಓಡಿ ನೆಗೆದು, ಪಾಸ್ಕು ಜೋಸೆಫ಼ಿನಾಳನ್ನು ಹೆದರಿಸಿ ಬೆದರಿಸಿ, ಅರ್ಧ ಗಂಟೆ ಕಳೆದು ಹಿಂದಿರುಗುತ್ತಿದ್ದರು. ಅದನ್ನೆಲ್ಲ ನೆನಸಿಕೊಳ್ಳುತ್ತ ಪಾಸ್ಕು ಕೆಲಸ ಮಾಡಿದ.
ಹನ್ನೆರಡು ಗಂಟೆಗೆ ಇಗರ್ಜಿಯ ಗಂಟೆ ಸದ್ದು ಮಾಡಿತು. ನಿಂತಲ್ಲೆ ಎಲ್ಲರೂ ಶಿಲುಬೆಯ ವಂದನೆ ಮಾಡಿದರು. ಕೆಲವರು ಜಪ ಮಾಡಿದರು.
ಜೋಸೆಫ಼ಿನಾ ಮಾತ್ರ ಬರಲಿಲ್ಲ.
*
*
*
ಸಂಜೆಯಾಗುತ್ತಿರಲು ಸಿಮಿತ್ರಿಯಲ್ಲಿ ಜನ ಸಂದಣಿ ಅಧಿಕವಾಯಿತು. ಸಮಾಧಿಗಳೆಲ್ಲ ಹೂವು ಬಣ್ಣದ ಕಾಗದಗಳಿಂದ ಸಿಂಗರಿಸಲ್ಪಟ್ಟವು. ಮೇಣದ ಬತ್ತಿಗಳನ್ನು ಶಿಲುಬೆಯ ಕೆಳಗೆ ಅಂಟಿಸಿ ಅವುಗಳನ್ನು ಹೊತ್ತಿಸಲು ಪಾದರಿ ಬರಲೆಂದು ಜನ ಕಾದರು. ಬೆಳಿಗ್ಗೆ ಪೂಜೆ ಮುಗಿಸಿಕೊಂಡು ಮನೆಗೆ ಹೋದವರು ಊಟ ಮುಗಿಸಿಕೊಂಡು ಮತ್ತೆ ಸಂಜೆ ಬಂದರು. ಸಮಾಧಿಗಳನ್ನು ಮಂತ್ರಿಸ ಬಯಸುವವರು ಪಾದರಿಗಳ ಬಂಗಲೆಗೆ ಹೋಗಿ ಹಣ ಕಟ್ಟಿ ಚೀಟಿ ತಂದರು. ಚೀಟಿ ಹಿಡಿದುಕೊಂಡು ಸಮಾಧಿಗಳ ಬಳಿ ಕಾದು ನಿಂತಾಗ ಪಾದರಿ ಬಂದರು.
ಅವರ ಹಿಂದೆ ಹುಡುಗಿಯರ ಹಿಂಡು.
ಜತೆಗೆ ಪಿಟೀಲು ಹಿಡಿದ ವಲೇರಿಯನ್ ಡಯಾಸ್, ಪಾಸ್ಕು ಹಾಗೂ ಇತರ ತರುಣರು ಕೂಡ ಈ ತಂಡದಲ್ಲಿ ಸೇರಿಕೊಂಡರು.
ಪಾದರಿ ಮಸ್ಕರಿನಾಸ ಒಂದೊಂದೇ ಸಮಾಧಿಯ ಬಳಿ ನಿಂತು ಚೀಟಿ ಕೈಗೆ ತೆಗೆದುಕೊಂಡು ಸಮಾಧಿಯನ್ನು ಪವಿತ್ರ ಜಲದಿಂದ ಮಂತ್ರಿಸಿದರು. ಸಾಮೂಹಿಕ ಪ್ರಾರ್ಥನೆ ನಡೆಯಿತು. ಕೀರ್ತನೆಗಳನ್ನು ಹಾಡಲಾಯಿತು. ಜನ ಕೂಡ ಎಲ್ಲ ಸಮಾಧಿಗಳ ಬಳಿ ಸೇರಿ ತಾವೂ ಪ್ರಾರ್ಥನೆಯಲ್ಲಿ ಸೇರಿಕೊಂಡರು.
ಆಗೆಲ್ಲ ಪಾಸ್ಕು ಗುಂಪಿನ ನಡುವೆ ನಿಂತು ಪಾದ್ರಿಗೆ ಹತ್ತಿರದಲ್ಲಿದ್ದ ಜೋಸಿಫ಼ಿನಾಳನ್ನು ನೋಡಿದ. ಅವಳೂ ಇವನನ್ನು ನೋಡಿ ನಕ್ಕಳು. ತಲೆಯ ಮೇಲಿನ ಏವ್ ಸರಿಪಡಿಸಿಕೊಂಡು ತುಟಿ ಕಚ್ಚಿಕೊಂಡಳು. ಶಿಲುಬೆಯ ಗುರುತು ಮಾಡುತ್ತ ಕತ್ತು ಹೊರಳಿಸಿದಳು. ಪಾಸ್ಕು ಮುಖ ಮಾತ್ರ ಬಿಗಿದುಕೊಂಡೇ ಇತ್ತು. ಹುಡುಗಿಯರ ಮುಖ ನೋಡುತ್ತ, ನಗುತ್ತ ಪುಟ ನೆಗೆಯುತ್ತ ಸಮಾಧಿಯಿಂದ ಸಮಾಧಿಗೆ ನಡೆದ ಪಾದರಿ ಮಸ್ಕರಿನಾಸರನ್ನೇ ದುರುಗುಟ್ಟಿ ನೋಡುತ್ತ ಆತ ಆ ಗುಂಪನ್ನು ಹಿಂಬಾಲಿಸಿದ.
ಎಲ್ಲ ಸಮಾಧಿಗಳನ್ನು ಮಂತ್ರಿಸಿ ಆಯಿತು. ಕೊನೆಯದಾಗಿ ಒಂದು ಪ್ರಾರ್ಥನೆ ಸಲ್ಲಿಸಲು ಜನ ಸಮಾಧಿಗಳನ್ನು ದಾಟಿಕೊಂಡು ಸಿಮಿತ್ರಿಯ ಪ್ರವೇಶ ದ್ವಾರದ ಬಳಿ ಇದ್ದ ಶಿಲುಬೆಯ ವೇದಿಕೆಯತ್ತ ನಡೆಯಲಾರಂಭಿಸಿದರು. ಆಗ ಕೊಂಚ ನೂಕು ನುಗ್ಗಲಾಯಿತು. ಬೆಳೆದ ಗಿಡಗಳ ನಡುವೆ ದಾರಿ ಮಾಡಿಕೊಳ್ಳುವಾಗ ಒಬ್ಬರಿಗೆ ಒಬ್ಬರು ಅಡ್ಡಿ ಬಂದರು. ಪಾಸ್ಕು ನೇರವಾಗಿ ಪಾದರಿ ಮಸ್ಕರಿನಾಸರ ನಿಲುವಂಗಿಯನ್ನು ತುಳಿದದ್ದರಿಂದ ಅವರು ಶಿರಾಲಿ ಜೂಜನ ಸಮಾಧಿಯ ಮೇಲೆ ಬೋರಲಾಗಿ ಬೀಳಬೇಕಿದ್ದವರು ಮುಗ್ಗರಿಸಿ ಸಮಾಧಿಯ ಶಿಲುಬೆಯನ್ನು ಹಿಡಿದು ಸಾವರಿಸಿಕೊಂಡು ನಿಂತರು. ಅದೇ ತಮ್ಮನ್ನು ದಾಟಿದ ಪಾಸ್ಕುವಿನ ತೋಳು ಹಿಡಿದು ಅವರು.
“ಏಯ್ ಲುಸಿಫ಼ೇರ್…ಕಣ್ಣು ಕಾಣೋದಿಲ್ವ ನಿನಗೆ?” ಎಂದು ಅಬ್ಬರಿಸಿದರು.
ಪಾಸ್ಕು ಇದನ್ನು ನಿರೀಕ್ಷಿಸಿದ್ದನೋ ಇಲ್ಲವೋ ಅಂತು ಲುಸಿಫ಼ೇರ ಎಂದು ಪಾದರಿ ತನ್ನನ್ನು ಕರೆದರಲ್ಲ ಎಂಬುದೇ ಅವನಿಗೆ ಸಾಕಾಯಿತು.
ಮುಂದೆ ಹೋದ ಆತ ತಟ್ಟನೆ ತಿರುಗಿ ನಿಂತನು. ಬೀಳಲಿದ್ದ ಪಾದರಿಯನ್ನು ಹುಡುಗಿಯರೆಲ್ಲ ತಡೆದು ನಿಲ್ಲಿಸಿದ ಹಾಗೆ ಮಸ್ಕರಿನಾಸರ ಸುತ್ತ ಈ ಹುಡುಗಿಯರು ನಿಂತಿರಲು, ಪ್ರಧಾನವಾಗಿ ಜೋಸೆಫ಼ಿನಾ ಮಸ್ಕರಿನಾಸರ ಬಲಗಡೆಯಲ್ಲಿ ಕಾಣಿಸಿಕೊಳ್ಳಲು ಪಾಸ್ಕು ಕೈಚಾಚಿ ಪಾದರಿಗಳ ಎದೆಯ ಮೇಲೆ ಅಂಗೈ ಊರಿ-
“ಲುಸಿಫ಼ೇರ್ ನಾನಲ್ಲ..ನೀನು..”
ಅನ್ನುತ್ತಿರಲು ಪಾದರಿ ಮಸ್ಕರಿನಾಸರ ಪಾಸ್ಕುವಿನ ಕೆನ್ನೆಗೆ ಅಪ್ಪಳಿಸಲು ಕೈ ಎತ್ತುತ್ತಿರಲು ಪಾಸ್ಕು ಕೈ ಬೀಸಿ ಆಯಿತು.
ಇಗರ್ಜಿಯಿಂದ ಸಾಯಂಕಾಲದ ಪ್ರಾರ್ಥನಾ ಗಂಟೆ ಕೇಳಿ ಬರುತ್ತಿರಲು ಇಲ್ಲಿ ಸಿಮಿತ್ರಿಯಲ್ಲಿ ಶಿಲುಬೆಯ ವೇದಿಕೆಯ ಬಳಿ ಶಿವಸಾಗರದ ಕ್ರೈಸ್ತರು, ಬಾಮಣ ಪಂಗಡದವರು.
“..ಜೇಜು ಅಮ್ಕಾಂರಾಕ್”
“ದೇವರೇ ನಮ್ಮನ್ನು ರಕ್ಷಿಸು”
“ಮೈ ಲಾರ್ಡ್ ಸೇವ್ ಅಸ್” ಎಂದು ಚೀರಿ ದಿಙ್ಮೂಢರಾಗಿ ನಿಂತರು.
-೫-
“ನಿಮ್ಮ ನಡುವೆಯೇ ಓರ್ವ ಅಂತಃ ಕ್ರಿಸ್ತ ಹುಟ್ಟಿಕೊಂಡಿದ್ದಾನೆ” ಎಂದು ಪಾದರಿ ಮಸ್ಕರಿನಾಸ ನುಡಿದಾಗ ಇಗರ್ಜಿಯಲ್ಲಿ ಕುಳಿತ ಜನರ ಮೈ ಮೇಲೆ ಹಾವು ಹರಿದಾಡಿತು. ಹಿಂದಿನ ಸಂಜೆ ನಡೆದ ಘಟನೆಗೆ ಎಲ್ಲರೂ ಸಾಕ್ಷಿಗಳಾಗಿದ್ದರು. ಕೆಲಸ ಕಾರ್ಯಗಳಿಗೆ ಹೋದ ಗಂಡಸರಿಗೆ ಮನೆಯಲ್ಲಿ ಹೆಂಗಸರು ಹೀಗೆ ಹೀಗೆ ಎಂದು ಹೇಳಿದರು. ಸಿಮೋನ, ಇನಾಸ, ಪೆದ್ರು, ಪಾಸ್ಕೋಲ, ಕೈತಾನ ಮೊದಲಾದವರಿಗೆ ಪೇಟೆ ಚೌಕದಲ್ಲಿಯೇ ವಿಷಯ ತಿಳಿದುಹೋಯಿತು.
“ಬೋನ ಸಾಹುಕಾರ್ರೆ ಯಾರೋ ನಿಮ್ಮ ಪಾದರೀನ ಹೊಡೆದರಂತೆ ಹೌದೆ?” ಎಂದು ಸೈಕಲ್ ಶಾಪ್ ನಾಗಪ್ಪ ಬೋನನ ಅಂಗಡಿಗೇನೆ ಬಂದು ಕೇಳಿದಾಗ ಬೋನ ಗಾಬರಿಗೊಂಡ. ಗೋಡೆ ಮೇಲಿನ ದೇವರ ಪಟ ಕಿತ್ತು ತಲೆಯ ಮೇಲೆ ಬಿದ್ದಂತಾಗಿ ಆತ ಕೂಡಲೆ ಅಂಗಡಿಯಿಂದ ಹೊರ ಬಂದ. ಬಾಚಿಯನ್ನು ಹೆಗಲ ಮೇಲೆ ಹೇರಿಕೊಂಡು ಅವಸರದಲ್ಲಿ ಹೊರಟ ಬಳ್ಕೂರಕಾರ್ ಕೈತಾನನ ಮಗನನ್ನು ನೋಡಿ, ’ಅರೇ ದುಮಿಂಗಾ? ಯೋ ಹಂಗಾ?” ಎಂದು ಕೂಗಿದ.
ಬಳಿ ಬಂದ ದುಮಿಂಗನಿಗೆ ಮಾತ್ರ ಕೇಳುವ ಹಾಗೆ-
“ಏನದು ಗಲಾಟೆ ಇಗರ್ಜಿ ಹತ್ತಿರ?” ಎಂದು ಕೇಳಿದ.
“ನನಗೂ ಗೊತ್ತಿಲ್ಲ..ಚಾ ಹೋಟೆಲಿನ ಹತ್ತಿರ ಮಾತನಾಡಿ ಕೊಳತಿದ್ರು..ಇನಾಸನ ಮಗ ಪಾಸ್ಕು ಪದ್ರಾಬ ಅವರನ್ನ ಹೊಡೆದನಂತೆ..” ಎಂದ ಆತ.
ಅರ್ಧ ಗಂಟೆ ಮುಂಚಿತವಾಗಿಯೇ ಅಂಗಡಿ ಬಾಗಿಲು ಹಾಕಿ ಕೇರಿಗೆ ಬಂದ ಬೋನ. ಅವನಂತೆಯೇ ಉಳಿದವರೂ ಅಲ್ಲಿ ಸೇರಿದ್ದರು. ಸಿಮೋನ ಆಗಲೆ ಬಂದು ಮನೆಗೆ ತಲುಪಿದ್ದ.
ಏನು ನಡೆಯಿತು ಎಂಬುದು ತಿಳಿಯಿತು. ಕೂಡಲೆ ಹೋಗಿ ಪಾದರಿ ಮಸ್ಕರಿನಾಸರನ್ನು ಮಾತನಾಡಿಸಬೇಕು ಎಂಬ ವಿಚಾರ ಬಂದಾಗ ಇನ್ನರೋ.
“ಅವರು ಪ್ರಾರ್ಥನೆ ಮಾಡಿದ್ದೇ ಹೋಗಿ ಬಂಗಲೆ ಒಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡರು” ಎಂದರು.
ಇಡೀ ಕೇರಿಗೇನೆ ಬರ ಸಿಡಿಲು ಬಡಿದಂತೆ ಆಗಿತ್ತು. ಆ ದೃಶ್ಯವನ್ನು ಕಣ್ಣಾರೆ ಕಂಡವರು ತಮ್ಮ ಕಣ್ಣೆದುರು ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದೆರಡು ನಿಮಿಷ ತೆಗೆದುಕೊಂಡಿದ್ದರು. ಪಾದರಿ ಮುಗ್ಗರಿಸಿದ್ದು, ಶಿಲುಬೆ ಹಿಡಿದು ನಿಂತು ಪಾಸ್ಕುವನ್ನು ಹಿಡಿದುಕೊಂಡದ್ದು, ಏನೋ ಹೇಳಿದ್ದು, ಆತ ತಿರುಗಿದ್ದು, ಮುಂದಿನ ಕ್ಷಣದಲ್ಲಿ ರಪರಪನೆ ಪಾದರಿಗಳ ಕೆನ್ನೆಗೆ ಪಾಸ್ಕು ಹೊಡೆದದ್ದು , ದೇವರ ಲಾರ್ಡು ಎಂದೆಲ್ಲ ಜನ ಕೂಗುತ್ತಿರಲು ಇನಾಸನ ಹೆಂಡತಿ ಮೊನ್ನೆ ಕೂಗುತ್ತ ತನ್ನ ಮಗನ ಮುಖ ಮೈ ಮೇಲೆ ಗುದ್ದುತ್ತ ಆತನನ್ನು ಸಿಮಿತ್ರಿಯ ಹೊರಗೆ ತಳ್ಳಿಕೊಂಡು ಹೋದದ್ದು, ಪಾದರಿಗಳು ವೇದಿಕೆಯನ್ನೇರಿ ಶಿಲುಬೆಯ ಮುಂದೆ ಮೊಣಕಾಲೂರಿದ್ದು ಎಲ್ಲ ಕೆಲವೇ ನಿಮಿಷಗಳಲ್ಲಿ ನಡೆದು ಹೋಗಿತ್ತು.
ಎಲ್ಲ ಜನ ನಾಲಿಗೆ ಒಣಗಿ ಹೋಗಿ, ಉಸಿರಾಟ ನಿಂತಂತಾಗಿ, ಕಲ್ಲು ಕಂಬಗಳ ಹಾಗೆ ನಿಂತಿರಲು ಶಿಲುಬೆಯ ಮುಂದೆ ಮೊಣಕಾಲೂರಿದ ಪಾದರಿ ಮಸ್ಕರಿನಾಸ ಎದ್ದು ನಿಂತು ಹಣೆ, ಎದೆ, ಭುಜಗಳ ಮೇಲೆ ಶಿಲುಬೆಯ ಗುರುತು ಬರೆದುಕೊಂಡು-
“ತಂದೆಯ ಮಗನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ” ಎಂದಾಗ ಜನ ಎಚ್ಚೆತ್ತಿದ್ದರು. ನಂತರ ನಿಧಾನವಾಗಿ ಪ್ರಾರ್ಥನೆಗೆ ತೊಡಗಿದ್ದರು.
ಪ್ರಾರ್ಥನೆ ಮುಗಿದ ನಂತರ ಪಾದರಿ ಅಲ್ಲಿ ನಿಲ್ಲಲಿಲ್ಲ. ಯಾರ ಹತ್ತಿರವೂ ಮಾತನಾಡಲಿಲ್ಲ. ಎಲ್ಲರಿಗಿಂತಲೂ ಮುಂದೆ ಹೋಗಿ ಬಂಗಲೆ ಸೇರಿಕೊಂಡರು.
ಜನ ಕೇರಿಗೆ ಬಂದರು.
ಹೀಗೆ ಈವರೆಗೆ ಎಲ್ಲಿಯೂ ನಡೆದಿರಲಿಲ್ಲ. ನಡೆಯಲೂ ಸಾಧ್ಯವಿಲ್ಲ. ಅಷ್ಟೇ ಅಲ್ಲ ಹೀಗೆ ನಡೆಯಬಾರದು.
ಏಕೆಂದರೆ ಮನುಷ್ಯರಿಗೆ ಸತ್ಯವನ್ನು ಭೋದಿಸಲು, ದಿವ್ಯ ಜೀವನವನ್ನು ಅವರಿಗೆ ತಂದುಕೊಡಲು, ದೇವರ ಮಕ್ಕಳಾಗಿ ಜೀವಿಸುವುದಕ್ಕೆ ಅವರಿಗೆ ಸಹಾಯ ಮಾಡಲು, ಮಹಾ ಯಾಜಕರಾದ ಏಸು ಪ್ರಭು ಇಗರ್ಜಿ ಮಾತೆಗೆ ಪಾದರಿಗಳನ್ನು ದಯಪಾಲಿಸಿದ್ದಾರೆ. ಈ ಪಾದರಿಗಳು ದೇವರ ಪ್ರತಿನಿಧಿ. ಕ್ರಿಸ್ತ ಪ್ರಭುವಿಗೆ ಸೇವಕರು. ಕ್ರೀಸ್ತುವರಿಗೆ ಹಲವು ಸಂಸ್ಕಾರಗಳನ್ನು ನೀಡುತ್ತ ಅವರ ಬದುಕನ್ನು ಆಧ್ಯಾತ್ಮಿಕ ಜೀವನವನ್ನು ಗಟ್ಟಿಗೊಳಿಸುವವರು ಈ ಪಾದರಿ.
ಈ ಕಾರಣದಿಂದಲೇ ಪಾದರಿಗಳ ಬಗ್ಗೆ ಕ್ರೀಸ್ತುವರಿಗೆ ಅಪಾರ ಗೌರವ. ರಸ್ತೆಯಲ್ಲಿ ಎದುರಾದರೆ ಮಣ್ಣಿನಲ್ಲಿ ಮೊಣಕಾಲೂರಿ ದೇವರ ಆಶೀರ್ವಾದ ಬೇಡುತ್ತಾರೆ. ಅವರಿಗೆ ಗೌರವ ನೀಡುತ್ತಾರೆ. ಯಾವ ಕಾರಣಕ್ಕೂ ಅವರ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಅವರ ಲೋಪ ದೋಷಗಳ ಬಗ್ಗೆ ವ್ಯಂಗ್ಯ ಮಾಡುವುದಿಲ್ಲ. ತಂದೆ ಎಂದು ಅವರನ್ನು ಕರೆಯುತ್ತಾರೆ. ಅಂತಹ ಆತ್ಮದ ತಂದೆಯನ್ನು ನಿನ್ನೆ ಮೊನ್ನೆಯ ಈ ಹುಡುಗ ಹೊಡೆಯುವುದೇ?
ಎಲ್ಲೆಲ್ಲೂ ಇದೇ ಮಾತಾಯಿತು.
ಮರಿಯ ದನಕರು, ಎಮ್ಮೆಗಳಿಗೆ ಹುಲ್ಲು ಹಾಕುವುದನ್ನು ಮರೆತಳು. ಸಾಂತಾಮೋರಿ ಕುದಿ ನೀರಿಗೆ ಅಕ್ಕಿ ಹಾಕುವುದನ್ನು ಮರೆತಳು. ಸಾಂತಾಮೋರಿ ಕುದಿ ನೀರಿಗೆ ಅಕ್ಕಿ ಹಾಕುವುದನ್ನು ಮರೆತಳು. ಪೆದ್ರು ಹೆಂಡತಿ ರಂಗಿ-
“ದೇವರೇ ಹೀಗೂ ಉಂಟ” ಎಂದಳು.
ವೈಜಿಣ್ ಕತ್ರೀನ್-
“ದೇವರೆ ನಾನು ಇದೇನು ಕೇಳುತ್ತಿದ್ದೇನೆ” ಎಂದು ಮೂಗಿನ ಮೇಲೆ ಬೆರಳಿರಿಸಿಕೊಂಡಳು. ಬೆಳಿಗ್ಗೆ ಪೂಜೆಗೆ ಹೋದ ಅವಳು ಸಂಜೆ ಸಿಮಿತ್ರಿಗೆ ಹೋಗಿರಲಿಲ್ಲ. ಈಗೀಗ ಇಗರ್ಜಿಗೆ ಹೋಗಿ ಬರುವುದೇ ಶ್ರಮದಾಯಕವಾಗುತ್ತಿತ್ತು. ಹೀಗೆಂದೇ ಆತ್ಮಗಳಿಗೆ ಶಾಂತಿಕೋರಲು ಅವಳು ಹೋಗಿರಲಿಲ್ಲ. ಈ ಸುದ್ದಿ ಕೇಳಿದ ಮೇಲೆ ಅಲ್ಲಿಗೆ ಹೋಗದಿದ್ದುದು ಒಳ್ಳೆಯದಾಯ್ತು ಅಂದುಕೊಂಡಳು.
ಮನೆಗಳ ದೇವರ ಪೀಠದ ಮುಂದೆ ಮೇಣದ ಬತ್ತಿಗಳು ಉರಿಯಲಿಲ್ಲ. ಹೊರಗೆ ಬಿಟ್ಟ ಕೋಳಿಗಳನ್ನು ಜನ ಗೂಡಿಗೆ ತುಂಬಿ ಗೂಡಿನ ಬಾಗಿಲು ಹಾಕಲಿಲ್ಲ. ಅಡಿಗೆ ಮನೆಯಲ್ಲಿ ಒಲೆಗೆ ಬೆಂಕಿ ಮಾಡಲಿಲ್ಲ. ಸಿಮಿತ್ರಿಯ ಪ್ರಾರ್ಥನೆಗೆ ಹೋಗಿ ಬಂದವರು ಬೇರೆ ಸೀರೆ ಉಡಲಿಲ್ಲ. ಹುಡುಗಿಯರು ಬಟ್ಟೆ ಬದಲಾಯಿಸಲಿಲ್ಲ. ಎಲ್ಲ ಕಡೆ ಇದೇ ಮಾತು ನಡೆಯುತ್ತಿರಲು ಕೆಲಸಕ್ಕೆ ಹೋದ ಗಂಡಸರೂ ಧಾವಿಸಿ ಬಂದರು.
ಇನಾಸ ಕೆಲಸಕ್ಕೆ ಹೋಗುತ್ತಿರಲಿಲ್ಲ. ಭಾರವಾದ ಕೆಲಸಗಳನ್ನು ಮಾಡಲು ಅವನಿಂದ ಆಗುತ್ತಿರಲಿಲ್ಲ. ಇಂದು ಹಬ್ಬ ಬೇರೆ. ದೊಡ್ಡ ಹಬ್ಬ ಅಲ್ಲವಾದರೂ ಸರ್ವ ಆತ್ಮಗಳಿಗೆ ಸದ್ಗತಿ ಕೋರುವ ಹಬ್ಬವೆಂದು ಮನೆಯಲ್ಲಿಯೇ ಇದ್ದ. ಸಂಜೆ ಸಿಮಿತ್ರಿಗೆ ಹೋಗುವುದೂ ಬೇಡವೆನಿಸಿತ್ತು.
ಹೆಂಡತಿ ಮೊನ್ನೆ ಜರಿ ಸೀರೆಯುಟ್ಟು ಅಬ್ಬಲಿಗೆ ಮುಡಿದು ತಾನು ಪ್ರಾರ್ಥನೆಗೆ ಹೋಗುವುದಾಗಿ ಸಂಜ್ಞೆ ಮಾಡಿ ಹೇಳಿ ಹೋದಳು. ಇಗರ್ಜಿ ಗಂಟೆ ಹೊಡೆದ ಕೊಂಚ ಹೊತ್ತಿಗೆ ಮಗನನ್ನು ಹೊಡೆಯುತ್ತ ದಬ್ಬುತ್ತ ತಾನೂ ಕೆಟ್ಟದಾಗಿ ಕಿರುಚುತ್ತ ಬಂದಾಗ ಇನಾಸನಿಗೆ ಅಚ್ಚರಿಯಾಯಿತು.
ಪಾಸ್ಕು ಮುಖ ಮುಚ್ಚಿಕೊಂಡು ಬಂದವನೇ ಮನೆಯೊಳಗೆ ಸೇರಿಕೊಂಡ. ಮೊನ್ನೆ ಜಗಲಿಯ ಮೇಲೆ ಕುಳಿತು ಹೋ ಎಂದಳು.
ಎಲ್ಲದಕ್ಕೂ ಅವಳು ಒಂದೊಂದು ಸಂಕೇತ ಇರಿಸಿಕೊಂಡಿದ್ದಳು. ಇಗರ್ಜಿ ಅನ್ನುವುದಕ್ಕೆ ಶಿಲುಬೆಯ ಗುರುತು. ಪ್ರಾರ್ಥನೆ ಅನ್ನುವುದಕ್ಕೆ ಕೈ ಮುಗಿಯುವುದು. ಪೂಜೆ ಅನ್ನುವುದಕ್ಕೆ ನಾಲಿಗೆ ಹೊರಹಾಕಿ ದಿವ್ಯಪ್ರಸಾದ ಸ್ವೀಕರಿಸುವುದು ಹೀಗೆ, ತನಗೆ ಮಾತ್ರ ಅರ್ಥವಾಗುವ ಸಂಕೇತಗಳು ಇವು. ಪಾದರಿ ಅನ್ನುವುದಕ್ಕೇ ಅವಳು ಎತ್ತರದ ವ್ಯಕ್ತಿ ಎಂದು ಕೈ ಮಾಡಿ ತೋರಿಸಿ ನಂತರ ಕನ್ನಡಕದ ಗುರುತು ಹೇಳುತ್ತಿದ್ದಳು. ಈಗ ಮಾತಿನ ನಡುವೆ ಐದಾರು ಬಾರಿ ಪಾದರಿ ಪಾದರಿ ಎಂದು ಹೇಳಿ ಕೆನ್ನೆಗೆ ಬಡಿದಂತೆ ತೋರಿಸಿ ಒಳಗೆ ಸೇರಿಕೊಂಡ ಮಗನತ್ತ ಬೆರಳು ಮಾಡಿದಳು.
“ಏನು ಇವನು ಪದ್ರಾಬಾಗೆ ಹೊಡೆದನೆ?” ಎಂದು ಇನಾಸ ಬೆರಗಾಗಿ ಬೆದರಿ ಎದ್ದು ನಿಂತು ಗದರಿಸಿ ಕೇಳಿದ.
“ಹೌದು ಹೌದು” ಎಂದು ತಲೆಯಾಡಿಸಿದಳು ಮೊನ್ನೆ. ಅವಳ ಕಣ್ಣುಗಳಿಂದ ನೀರು ಕೂಡ ಧುಮುಕಿತು.
“ಪಾಸ್ಕು..ಏನಾಯ್ತು?” ಎಂದು ಇನಾಸ ಒಳ ಹೋಗಿ ಮಗನ ಎದುರು ನಿಂತು ಅಬ್ಬರಿಸಿದ. ಆತ ಮಾತನಾಡದೆ ಕುಳಿತಾಗ ಏನೋ ಆಗಿದೆ ಎಂಬುದು ಖಚಿತವಾಯ್ತು.
ಸಿಮಿತ್ರಿಯ ಬಳಿ ಏನು ನಡೆಯಿತೆಂಬುದು ವಿವರವಾಗಿ ಇನಾಸನಿಗೆ ತಿಳಿದುಬಂದದ್ದು ಅಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಕೇರಿಯ ಜನ ತಿರುಗಿ ಬಂದಾಗಲೇ. ಪಾಸ್ಕು ಪಾದರಿಗಳಿಗೆ ಹೊಡೆದನೆಂಬುದಂತೂ ನಿಜವಾಗಿತ್ತು. ಅವರು ಲುಸಿಫ಼ೆರ್ ಎಂದು ಇವನನ್ನು ಬೈದದ್ದು. ಇವನು ಅದಕ್ಕೆ ನೀಡಿದ ಪ್ರತಿಕ್ರಿಯೆ ತಿಳಿಯಿತು. ಪಾಸ್ಕು ಅಷ್ಟು ದೂರ ಹೋಗಬಾರದಿತ್ತು. ಆದರೆ ಇದು ಇಂದೇ ಆಕಾರ ಪಡೆದ ಕ್ರಿಯೆಯಲ್ಲ. ಪಾಸ್ಕು ಯಾವತ್ತಿನಿಂದಲೋ ಪಾದರಿ ಮಸ್ಕರಿನಾಸರ ವಿರುದ್ಧ ಒಂದಲ್ಲಾ ಒಂದು ವಿಷಯ ಹೇಳುತ್ತ ಬಂದಿದ್ದ. ಆ ವಿಷಯ ಇಂದು ಹೀಗೆ ಸ್ಪೋಟಗೊಂಡಿದೆ.
ಇನಾಸ ಹೋಗಿ ಮಗನನ್ನು ಕೇಳಬೇಕೆಂದು ಬಯಸಿದ. ಆದರೆ ಅಷ್ಟುಹೊತ್ತಿಗೆ ಅವನ ಸಿಟ್ಟು ಕ್ರೋಧವೆಲ್ಲ ಇಳಿದು ಹೋಗಿತ್ತು.
ಮಗ ಹೀಗೆ ಮಾಡಬಾರದಿತ್ತು ಎಂದು ಈತ ಪೇಚಾಡುತ್ತ ಕುಳಿತನಲ್ಲದೆ ಮಗನನ್ನು ಇದಕ್ಕಾಗಿ ದಂಡಿಸಬೇಕು. ಏಕೆ ಹೀಗೆ ಮಾಡಿದೆ ಎಂದು ಕೇಳಬೇಕು ಎಂದು ಅವನಿಗೆ ಅನಿಸಲಿಲ್ಲ.
ನಿಧಾನವಾಗಿ ಕತ್ತಲು ಗಾಢವಾಯಿತು. ರಾತ್ರಿಯ ಗಂಟೆಗಳು ಉರುಳಿದವು. ಒಂದು ಬಗೆಯ ವಿಷಾದ ಉಸಿರುಗಟ್ಟಿಸುವ ವಾತಾವರಣ ಇಗರ್ಜಿಯ ಸುತ್ತ ಹಬ್ಬಿಕೊಂಡಿತು.
ಮಾರನೆ ದಿನ ಬೆಳಿಗ್ಗೆ ಪ್ರಾರ್ಥನೆಯ ಗಂಟೆಯಾಯಿತು. ನಂತರ ಸಾದಾ ಪೂಜೆಯ ಗಂಟೆ.
ಭಾನುವಾರದ ವಿಶೇಷ ಪೂಜೆಯ ಗಂಟೆ.
ಘಂಟಾನಾದದಲ್ಲಿ ಕೂಡ ಎಂದಿನ ಲವಲವಿಕೆ ಇಂಪು ಇರಲಿಲ್ಲ. ಜನ ಆತಂಕದಿಂದಲೇ ಇಗರ್ಜಿಗೆ ಹೋದರು. ಬಾಗಿಲಲ್ಲಿಯ ಪವಿತ್ರ ಜಲವನ್ನು ಪ್ರೋಕ್ಷಿಸಿಕೊಂಡು, ಗಂಡಸರು ತಲೆಯ ಮೇಲಿನ ಟೋಪಿ ತೆಗೆದು, ಹೆಂಗಸರು ತಲೆಯುಡುಗೆ ಧರಿಸಿ, ಸೀರೆ ಸೆರಗನ್ನು ಎಳೆದುಕೊಂಡು ಒಳ ಹೋದರು. ಪ್ರಾರ್ಥನೆ, ಕೀರ್ತನೆ, ಪಾದರಿ ಪೀಠಬಾಲಕರ ಜತೆ ಅಲ್ತಾರಿಗೆ ಬಂದು ಪೂಜೆಯನ್ನು ಆರಂಭಿಸಿದರು. ಅವರು ಎಂದಿನಂತಿದ್ದರು. ಅದೇ ಚುರುಕು, ಅದೇ ಮುಖಭಾವ, ಏನೂ ಆಗಿಲ್ಲ ಎಂಬಂತೆ.
ಪೂಜೆಯ ನಡುವೆ ದಿವ್ಯಪ್ರಸಾದದ ಮೇಜಿಗೆ ಒರಗಿ ಅವರು ನಿಂತರು.ಇಡೀ ಇಗರ್ಜಿಯ ತುಂಬ ದೃಷ್ಟಿ ಬೀರಿದರು. ಕೈಲಿದ್ದ ಕರವಸ್ತ್ರವನ್ನು ಮೇಲಂಗಿಯ ತೆರೆದ ತೋಳಿನೊಳಗೆ ತುರುಕಿಸಿದರು. ಆಳವಾಗಿ ಉಸಿರೆಳೆದುಕೊಂಡರು.
“ಮೊಗಚಾ ಕ್ರೀಸ್ತಾಂವನೂಂ” (ಪ್ರೀತಿಯ ಕ್ರೀಸ್ತುವರೆ) ಎಂದರು. ತುಸು ತಡೆದು ಅವರೆಂದರು.-
“ನಿಮ್ಮ ನಡುವೆಯೇ ಓರ್ವ ಅಂತಃಕ್ರಿಸ್ತ ಹುಟ್ಟಿಕೊಂಡಿದ್ದಾನೆ.”
ಹತ್ತಿಯ ಬಿಳಿ ಉಂಡೆಯಂತಿದ್ದ ಮುಗಿಲು ತಟ್ಟನೆ ಕಡು ಕಪ್ಪಾಗಿ, ಭಾರವಾಗಿ ಭರ್ಜಿಯಂತಹ ಒಂದು ಹೊನ್ನ ಶೂಲ ಅದರ ಒಡಲಿಂದ ಚಿಮ್ಮಿ ನೆಲಕ್ಕೆ ಅಪ್ಪಳಿಸಿತು. ಜನ ಬೆಚ್ಚಿದರು.
“ಕ್ರಿಸ್ತನನ್ನು ವಿರೋಧಿಸುವವರು, ಕ್ರಿಸ್ತ ಪ್ರಭುವಿನ ಪ್ರತಿನಿಧಿಗಳನ್ನು ಅವಮಾನಿಸುವವರು, ಪ್ರಭುವಿನ ಬೋಧನೆ ತತ್ವಗಳನ್ನು ಅವಹೇಳನಗೊಳಿಸುವವರು ನಿಮ್ಮ ನಡುವಿನಿಂದಲೇ ಹುಟ್ಟಿ ಬರುತ್ತಾರೆ ಎಂಬ ವಾಕ್ಯ ಪವಿತ್ರ ಗ್ರಂಥದಲ್ಲಿದೆ. ಈ ವಾಕ್ಯ ನಿಜವಾಗಿದೆ. ಯಾವ ತಂದೆಯೂ ರೊಟ್ಟಿಯನ್ನು ಕೇಳಿದ ಮಗನಿಗೆ ಕಲ್ಲನ್ನು, ಮೀನನ್ನು ಕೇಳಿದ ಮಗನಿಗೆ ಹಾವನ್ನು ಕೊಡುವುದಿಲ್ಲ. ನಿಮ್ಮೆಲ್ಲರನ್ನು ಪ್ರೀತಿ, ಮಮತೆ ದೈವ ಭಕ್ತಿಯನ್ನು ನೀಡಿ ಸಾಕುತ್ತಿರುವ ನಿಮ್ಮ ತಂದೆಗೆ ನೀವು ಏನು ಕೊಟ್ಟಿರುವಿರಿ ಯೋಚನೆ ಮಾಡಿ..”
ಪಾದರಿ ಮಸ್ಕರಿನಾಸರು ಕ್ಷಣ ಕ್ಷಣಕ್ಕೂ ಕೋಪಿಷ್ಟರಾಗುತ್ತ ಅಕ್ಕಪಕ್ಕದಲ್ಲಿ ಬೆಳೆದಿರುವ ಹುಲ್ಲು ಪೊದೆಗಳನ್ನು ತನ್ನ ಒಡಲೊಳಗೆ ಸೆಳೆದುಕೊಂಡು ಹೊತ್ತಿ ಉರಿಯುವ ಕಾಡು ಗಿಚ್ಚಿನಂತೆ ಚಟಪಟಿಸುತ್ತ ಮಾತನಾಡಿದರು. ಸಾಮಾನ್ಯವಾಗಿ ಬೈಬಲಿನ ಒಂದು ಪ್ರಸಂಗವನ್ನು ಆರಿಸಿಕೊಂಡು ಅದನ್ನೇ ವಿಸ್ತರಿಸಿ, ವಿಶ್ಲೇಷಿಸಿ ಜನತೆಗೆ ಸಂದೇಶ ನೀಡುವ ಕೆಲಸವನ್ನು ಅಂದು ಮಾಡದೆ ಕ್ರಿಸ್ತ ವಿರೋಧಿ ಧೋರಣೆಯ ಕುರಿತೇ ಸ್ವಲ್ಪ ಹೊತ್ತು ಮಾತನಾಡಿ ಕೊನೆಯಲ್ಲಿ.
“ಪ್ರೀತಿಯ ಕ್ರೀಸ್ತುವರೆ..ನಿಮ್ಮ ಕಣ್ಣೆದುರು ಒಂದು ಅಕೃತ್ಯ ನಡೆದಿದೆ…ಈ ಬಗ್ಗೆ ನೀವು ಏನು ತೀರ್ಮಾನ ಕೈ ಕೊಳ್ಳುತ್ತೀರಿ ಎಂಬುದನ್ನು ನಾನು ಕಾದು ನೋಡುತ್ತೇನೆ..ಧರ್ಮ ಸಮ್ಮತವಾದ ಒಂದು ತೀರ್ಮಾನವನ್ನು ಕೈಕೊಳ್ಳಲು ಕ್ರಿಸ್ತ ಪ್ರಭುವು ನಿಮಗೆ ಮನಸ್ಸನ್ನು ಶಕ್ತಿಯನ್ನು ನೀಡಲೆಂದು ನಾನು ಅವನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ..” ಎಂದು ತಮ್ಮ ಶೆರಮಾಂವಂ ಮುಗಿಸಿದರು.
ಪಾದರಿ ಈ ಎಲ್ಲ ಮಾತುಗಳನ್ನು ಆಡುವುದರ ಮೂಲಕ ಜನರ ಹೆಗಲ ಮೇಲೇನೆ ಒಂದು ಹೊರೆ ಹೊರಿಸಿದ್ದರು. ಸುತಾರಿ ಇನಾಸನ ಮಗ ಪಾಸ್ಕುವಿನಿಂದ ಪಾದರಿಗಳ ಅವಮಾನವಂತೂ ಆಗಿತ್ತು. ಅವರಿಗೆ ನೋವಾಗಿತ್ತು. ಇದರ ಪರಿಹಾರ ಹೇಗೆ ಎಂಬುದನ್ನು ಜನ ನಿರ್ಧರಿಸಬೇಕಿತ್ತು. ಇಗರ್ಜಿಯಿಂದ ಹೊರ ಬಂದ ಜನ ಅಲ್ಲಲ್ಲಿ ನಿಂತು ಇದೇ ವಿಷಯ ಮಾತನಾಡಿದರು. ಪಾಸ್ಕೋಲ, ಕೈತಾನ, ಬಾಲ್ತಿದಾರ ಮೊದಲಾದವರು ಗುರ್ಕಾರ ಸಿಮೋನನನ್ನು ಹುಡುಕಿಕೊಂಡು ಬಂದರು. ಮಿರೋಣ ವಲೇರಿಯನ ಜಾನಡಯಾಸ್ ವಿನ್ಸೆಂಟ್, ಜಾನಿ ಸಂತ ಜೋಸೆಫ಼ರ ಮಂಟಪಕ್ಕೆ ಅನತಿ ದೂರದಲ್ಲಿ ಒಂದೆಡೆ ನಿಂತರು. ಗುಡ್ ಮಾರ್ನಿಂಗ್ ಹೇಳುತ್ತ ಹೋಗಿ ಇವರ ಜತೆ ಸೇರಿಕೊಂಡರು.
ಈ ಬಗ್ಗೆ ಏನು ಮಾಡುವುದು ಎಂದು ಪಾದರಿ ಮಸ್ಕರಿನಾಸರನ್ನು ಕೇಳುವಂತಿರಲಿಲ್ಲ. ಅವರು ಈಗ ವಿಷಯವನ್ನು ಜನರ ನಿರ್ಧಾರಕ್ಕೆ ಬಿಟ್ಟು ತಾವು ದೂರ ಸರಿದಿದ್ದರು. ಎಲ್ಲ ಜನ ಗುರ್ಕಾರನ ಮುಖ ನೋಡುವ ಪರಿಸ್ಥಿತಿ ಉದ್ಭವವಾಗಿತ್ತು.
ನಿನ್ನೆ ರಾತ್ರಿಯೇ ಗುರ್ಕಾರ ಸಿಮೋನ ಇನಾಸನ ಮನೆಗೆ ಹೋಗಿದ್ದ.
“ಪಾಸ್ಕು ಎಂತಹ ಕೆಲಸ ಮಾಡಿಬಿಟ್ಟೆಯಲ್ಲ” ಎಂದು ಪಾಸ್ಕುವನ್ನು ಎದುರು ಕೂಡಿಸಿಕೊಂಡು ಸಿಮೋನ ಗೋಳಾಡಿದ್ದ.
ಈ ಪಾದರಿಯ ಬಗ್ಗೆ ತನಗಾಗಲಿ, ಊರಿನಲ್ಲಿ ಇತರ ಯಾರಿಗೇ ಆಗಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಹೀಗೆಂದು ತಮ್ಮ ಅಭಿಪ್ರಾಯವನ್ನು ಅಸಹನೆಯಿಂದ ಹೀಗೆ ವ್ಯಕ್ತಪಡಿಸಬೇಕೆಂದು ಯಾರೂ ಬಯಸಿರಲಿಲ್ಲ. ಪಾದರಿ ಏನೆಂದರೂ ದೇವರ ಪ್ರತಿನಿಧಿ. ತಮಗೂ ದೇವರಿಗೂ ನಡುವೆ ಸಂಬಂಧ ಸೇತುವೆಯಾಗಿ ನಿಂತಿರುವಾತ. ಆತನ ಮಾತು ಕೇಳಿಕೊಂಡು, ಹಿಂಸೆಯಾದರೆ ಸಹಿಸಿಕೊಂಡು ಹೋಗುವುದೇ ಸೂಕ್ತ ಎಂದು ಎಲ್ಲ ಜನ ನಿರ್ಧರಿಸಿದ್ದರು. ಊರಿನಲ್ಲಿ ಈ ಪಾದರಿ ಬಂದ ನಂತರ ಕಿರಿ ಕಿರಿಯುಂಟು ಮಾಡುವ ಹಲವು ಪ್ರಸಂಗಗಳು ನಡೆದಿದ್ದರೂ ಜನ ಅವುಗಳನ್ನು ನುಂಗಿಕೊಂಡಿದ್ದರು. ಆದರೂ ಈ ಹುಡುಗ ಹೀಗೆ ಮಾಡಿಬಿಟ್ಟನಲ್ಲ ಎಂದು ಸಿಮೋನ ಪೇಚಾಡಿದ.
ಪಾಸ್ಕು ತಾನು ತಪ್ಪು ಮಾಡಿಲ್ಲ, ತಪ್ಪು ಏನಿದ್ದರೂ ಪಾದರಿಗಳದ್ದು ಎಂದು ಹೇಳಲು ಬಾಯಿ ತೆರೆದನಾದರೂ ಸಿಮೋನ ಅದಕ್ಕೆ ಆಸ್ಪದ ಕೊಡಲಿಲ್ಲ.
“ನೀನು ದುಡುಕಬಾರದಿತ್ತು..ಅವರು ಲುಸಿಫ಼ೇರ ಅಂದರು..ಒಂದು ಏಟು ಹೊಡೆದರು. ಏನಾಯಿತು? ನಮ್ಮ ಆತ್ಮದ ತಂದೆ ಅಧ್ಯಾತ್ಮದ ಗುರು..ಅವರಿಗೆ ತಗ್ಗಿ ಬಗ್ಗಿ ನಾವು ನಡೆಯಬೇಕಲ್ಲವೇ? ” ಎಂದು ಪಾಸ್ಕುಗೇನೆ ಉಪದೇಶ ನೀಡಿದ.
“ನಿನ್ನ ಮನೆಗೆ ಎಂತಹ ಗೌರವ ಇದೆಯಲ್ಲ ಊರಿನಲ್ಲಿ..” ಎಂದು ಬೇರೆ ಮನೆಯ ಹಿರಿಮೆ ಬಗ್ಗೆ ಹೇಳಿದ.
ಸುತಾರಿ ಇನಾಸನ ಮನೆ ಈಗ ಒಂದು ಪವಿತ್ರ ತಾಣವಾಗಿತ್ತು. ತೇರ್ಸಗೆ ಬರುವವರು, ಮೇಣದ ಬತ್ತಿ ಕೊಡಲು ಬರುವವರು, ರಸ್ತೆಯ ಮೇಲೆ ಹೋಗುವಾಗ ನಿಂತು ಶಿಲುಬೆಯ ಗುರುತು ಮಾಡುವವರು ಹೆಚ್ಚಾಗಿದ್ದಾರು. ಖುರ್ಸಾ ಘರ್(ಶಿಲುಬೆಯ ಮನೆ) ಎಂಬ ಆಡ್ಡ ಹೆಸರು ಬಿದ್ದಿತ್ತು ಈ ಮನೆಗೆ. ಈ ಒಂದು ಪ್ರಕರಣದಿಂದಾಗಿ ಮನೆಯ ಹೆಸರೇ ಹಾಳಾಯಿತಲ್ಲ ಎಂದು ಆತ ವಿವರವಾಗಿ ಹೇಳಿದ.
“ಏನು ಮಾಡೋಣ ಇನಾಸ?” ಎಂದು ಇನಾಸನ ಮುಖ ನೋಡಿದ…
ತಾನಾಯಿತು ತನ್ನ ಕೆಲಸವಾಯಿತು ಮನೆ ಅಂಗಳದ ಶಿಲುಬೆಯಾಯಿತು ಎಂದು ಒಂದು ರೀತಿಯ ಸಂತನ ಬದುಕನ್ನು ಸಾಗಿಸಿದ್ದ ಇನಾಸ. ಅವನ ಹೆಂಡತಿ ಮೂಕಿಯಾಗಿದ್ದರಿಂದಲೋ ಏನೋ ಕೇರಿಯ ಉಸಾಬರಿಗೂ ಈಗೀಗ ಹೋಗುತ್ತಿರಲಿಲ್ಲ. ಹೆಣ್ಣು ಮಕ್ಕಳು ಕೂಡ ಅಷ್ಟೆಯೇ ಊರ ಅಡಿಕೆ ಮಂಡಿಯಲ್ಲಿ ಅಡಕೆ ಆರಿಸುವ ಕೆಲಸ ಮಾಡಿಕೊಂಡು ತನಗೆ ತಮಗೆ ಏನು ಬೇಕೋ ಅದನ್ನೆಲ್ಲ ಮಾಡಿಕೊಂಡಿದ್ದರು. ಇಬ್ಬರಿಗೂ ನೆಂಟಸ್ತಿಕೆಯಾಗಿತ್ತು. ಕೊನೆಯವಳಾದ ಪಾವೇಲಿನ ಕೂಡ ಒಳ್ಳೆಯ ಹುಡುಗಿಯೇ. ಇನಾಸನ ಹಿರಿಯ ಮಗ ಬ್ಯಾಂಡ್ ಸೆಟ್ ಇರಿಸಿಕೊಂಡು ತನ್ನ ಜೀವನಕ್ಕೊಂದು ದಾರಿ ಕಲ್ಪಿಸಿಕೊಂಡಿದ್ದ. ಈ ಪಾಸ್ಕು ಕೂಡ ತಂದೆಯ ಕೆಲಸವನ್ನು ಮುಂದುವರೆಸಿಕೊಂಡು ಒಳ್ಳೆಯ ಹೆಸರು ಮಾಡಿದ್ದ. ಈಗ ಇದೊಂದು ಕಳಂಕ ಅಂಟಿಕೊಂಡಿತೆ?
ಇನಾಸ ಕಣ್ಣೊರೆಸಿಕೊಂಡು ಸಿಮೋನನನ್ನೇ ಕೇಳಿದ.
“ಏನು ಮಾಡೋಣ ಹೇಳು ಸಿಮೋನ. ಮಗ ಮಾಡಿದ ತಪ್ಪಿಗೆ ಶಿಲುಬೆಯ ಮೇಲೆ ಮೊಳೆ ಹೊಡೆಸಿಕೋ ಅಂದರೂ ನಾನು ಸಿದ್ಧ..” ಎಂದ ಆತ ನೋವನ್ನು ತಡೆದುಕೊಳ್ಳಲಾರದೆ.
“ನೋಡೋಣ..ನೋಡೋಣ..” ಎಂದು ಸಿಮೋನ ರಾತ್ರಿ ಇನಾಸನ ಮನೆಯಿಂದ ತಿರುಗಿಬಂದಿದ್ದ.
ಈಗ ಭಾನುವಾರದ ಬೆಳಿಗ್ಗೆ ಪೂಜೆ ಮುಗಿದ ನಂತರ ಸಿಮೋನ ಹತ್ತು ಜನರಿಗೆ ಉತ್ತರ ಕೊಡಬೇಕಾಯಿತು. ಪಾಸ್ಕೋಲ-
“ಏನಾದರೊಂದು ತೀರ್ಮಾನ ಮಾಡಿ” ಎಂದ.
ಸಿಮೋನ ಸುತ್ತಲೂ ಸೂಕ್ಷ್ಮವಾಗಿ ಗಮನಹರಿಸಿದ. ಇಗರ್ಜಿಗೆ ಬಂದ ಎಲ್ಲ ಗಂಡಸರೂ ಅಲ್ಲಲ್ಲಿ ಗುಂಪುಗೂಡಿ ನಿಂತಿದ್ದರು. ಯುವಕರೂ ಇದ್ದರು. ಹೆಂಗಸರು, ಮಕ್ಕಳು, ಯುವತಿಯರು ನಿಧಾನವಾಗಿ ಕರಗಿ ಹೋಗಲಾರಂಭಿಸಿದರು. ಚಮಾದೋರ ಇಂತ್ರು ಗುರ್ಕಾರನ ಬಾಯಿಯಿಂದ ಬರುವ ಮಾತಿಗಾಗಿ ಎಂಬಂತೆ ಅವನ ಹತ್ತಿರವೇ ನಿಂತಿದ್ದ.
ಸಿಮೋನ, ಪಾತ್ರೋಲ, ಬೋನ, ಬಾಲ್ತಿದಾರ, ಕೈತಾನ ಎಂದು ಬಳಿ ಇದ್ದ ಕೆಲ ಹಿರಿಯರ ಬಳಿ ಸಮಾಲೋಚನೆ ನಡೆಸಿದ.
ಮಧ್ಯಾಹ್ನ ಮೂರು ಗಂಟೆಗೆ ಇಗರ್ಜಿಯಲ್ಲಿ ಒಂದು ಸಭೆ ಕರಿಯಬೇಕೆಂಬ ನಿರ್ಧಾರವಾಯಿತು. ಅಂತೆಯೇ ಇಂತ್ರುಗೆ ಎಲ್ಲರಿಗೂ ವಿಷಯ ತಿಳಿಸಲು ಹೇಳಲಾಯಿತು. ಏನೋ ಒಂದು ತೀರ್ಮಾನವಾಗಬಹುದು ಎಂಬ ಆಶಯದೊಂದಿಗೆ ಇಗರ್ಜಿಗೆ ಬಂದು ಉಪವಾಸವಿದ್ದು ದಿವ್ಯ ಪ್ರಸಾದ ಸ್ವೀಕರಿಸಿದ ಜನ ಉಪವಾಸ ಮುರಿಯಲು ಮನೆಗಳತ್ತ ತಿರುಗಿದರು. ಆದರೆ ಯಾರಲ್ಲೂ ಉತ್ಸಾಹವಿರಲಿಲ್ಲ.
ಪೂಜೆ ಮುಗಿದ ನಂತರ ಬಹಳ ಜನ ಹೋಗಿ ಪಾದರಿಗಳನ್ನು ಮಾತನಾಡಿಸುವ ಪದ್ಧತಿ ಇತ್ತು. ಮಕ್ಕಳ ನೆಂಟಸ್ತಿಕೆ, ಮದುವೆ, ನಾಮಕರಣ, ಸತ್ತವರಿಗೆ ಪಾಡು ಪೂಜೆ ಇರಿಸಿಕೊಳ್ಳುವುದು. ಹೀಗೆ ಜನರಿಗೆ ಒಂದಲ್ಲಾ ಒಂದು ಕೆಲಸವಿರುತ್ತಿತ್ತು. ಇದರ ಬಗ್ಗೆ ಪಾದರಿಗಳಿಗೆ ಮುಂಚಿತವಾಗಿ ತಿಳಿಸಬೇಕಾಗುತ್ತಿತ್ತು. ಇಲ್ಲವೆ ಮೂರು, ನಾಲ್ಕು ವರ್ಷಗಳಿಂದ ಅನ್ವಾಲ ಕಾಯಿದೆ ಬಾಕಿ ಇರುತ್ತಿತ್ತು. ಇದರ ಪರಿಹಾರ ಮಾಡಲು ಪಾದರಿಗಳ ಬಳಿಗೆ ಜನ ಹೋಗುತ್ತಿದ್ದರು. ಡಾ.ರೇಗೋ, ಜಾನ್ ಡಯಾಸ್ ಪಾದರಿಗಳ ಕ್ಷೇಮ ಸಮಾಚಾರ ಕೇಳಲು ಹೋಗುತ್ತಿದ್ದರು. ಮಕ್ಕಳಿಗೆ ಮೊದಲ ದಿವ್ಯಪ್ರಸಾದ ನೀಡುವಂತೆ ಕೇಳಿಕೊಳ್ಳಲು ಕೆಲವರು ಹೋಗುವುದಿತ್ತು. ಭಾನುವಾರದ ಪೂಜೆ ಮುಗಿಸಿ, ಪಾದರಿ ಸಣ್ಣದೊಂದು ಪ್ರಾರ್ಥನೆ ಮಾಡಿ ಬೆಳಗಿನ ಉಪಹಾರ ತೆಗೆದುಕೊಂಡು ಬಂಗಲೆ ಬಾಗಿಲು ತೆರೆದು ಹೊರಗೊಮ್ಮೆ ಇಣುಕಿ ನೋಡಿ-
“ಹಾಂ…ಕೋಣ್ರೆ?” ಎಂದು ಕೇಳಿ ಒಳಗೆ ಮರೆಯಾದಾಗ ಹೊರಗೆ ಜಗಲಿಯ ಮೇಲೆ, ಅಂಗಳದಲ್ಲಿ ನಿಂತವರು ಒಬ್ಬೊಬ್ಬರಾಗಿ ಒಳಗೆ ಹೋಗುತ್ತಿದ್ದರು.
ಇಂದು ಮಾತ್ರ ಹೀಗೆ ಯಾರೂ ಪಾದರಿ ಬಂಗಲೆಯ ಬಳಿ ಕಂಡು ಬರಲಿಲ್ಲ. ಡಾ.ರೇಗೋ ಹಾಗೂ ಜಾನ್ ಡಯಾಸ್ ಈರ್ವರೇ ತೆರೆದ ಬಂಗಲೆ ಬಾಗಿಲ ಮೂಲಕ ಒಳಹೋದುದನ್ನು ಜನ ಕಂಡರು.
*
*
*
ಮೂರು ಗಂಟೆಗೆ ಸೇರಿದ ಸಭೆಯಲ್ಲಿ ಅಂತಹ ತೀರ್ಮಾನವೇನೂ ಆಗಲಿಲ್ಲ. ಪಾಸ್ಕು ಪಾದರಿಗಳಿಗೆ ಹೊಡೆಯಬಾರದಿತ್ತು ಎಂಬ ಮಾತೇ ಕೇಳಿ ಬಂದಿತಲ್ಲದೆ ಇದಕ್ಕೆ ಏನು ಶಿಕ್ಷೆ ವಿಧಿಸಬೇಕು ಎಂಬ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡಲಿಲ್ಲ. ಜೂಂತ ಇರಿಸಿ ಅವನನ್ನು ಜೂಂತಗೆ ಕರೆಸಿ ದಂಡ ಹಾಕಿ, ಜಾತಿ ಕಟ್ ಮಾಡಿ ಎಂದೆಲ್ಲ ಜನ ಕೂಗಾಡಿದರು. ಇನಾಸನ ಮಗ , ಇನಾಸನ ಮನೆ, ಶಿಲುಬೆಯ ಮನೆ ಎಂದಾಗ ಏಕೋ ಜನರ ಕಾವು ಇಳಿಯಿತು.
“ಹೌದಪ್ಪ ಹುಡುಗ ಹೊಡೀಬಾರದಿತ್ತು..ಆದರೆ ಪಾದರಿ ಅವನನ್ನು ಲುಸಿಫ಼ೇರ್ ಅಂತ ಕರೀಬಹುದಾ?” ಎಂದು ಊಟದ ಮನೆ ಸಾಂತಾಮೋರಿಯ ಮಗ ಬಸ್ತು ಕೇಳಿದಾಗ ಯಾರೂ ಉತ್ತರ ಕೊಡಲು ಹೋಗಲಿಲ್ಲ. ಮದುವೆಯ ಸಂದರ್ಭದಲ್ಲಿ ಈ ಬಸ್ತುವನ್ನು ಪಾದರಿ ಸತಾಯಿಸಿದ್ದು ಆ ಕ್ಷಣದಲ್ಲಿ ಜನರ ನೆನಪಿಗೆ ಬಂದಿತು. ಹಿಂದೆಯೇ ಬೇರೆ ಬೇರೆ ಸಂದರ್ಭಗಳಲ್ಲಿ ಪಾದರಿ ತಮ್ಮ ಕಣ್ಣಿನಲ್ಲೂ ನೀರು ತರಿಸಿದ್ದು ನೆನಪಿಗೆ ಬಂದು ಬಸ್ತುವಿನ ವಿರುದ್ಧ ಯಾರೂ ಉತ್ತರ ಕೊಡಲು ಹೋಗಲಿಲ್ಲ.
ಇಷ್ಟಾದರೂ ಪಾಸ್ಕುವಿನ ಮೇಲೆ ಏನಾದರೊಂದು ಕ್ರಮ ಕೈಕೊಳ್ಳಬೇಕಲ್ಲ. ಹೀಗಾಗಿ ಮತ್ತೂ ಕೆಲ ಸಲಹೆಗಳು ಬಂದವು.
“ಖಾಂದೀರ ಖುರೀಸ್” (ಹೆಗಲ ಮೇಲೆ ಶಿಲುಬೆಕೊಟ್ಟು ನಿಲ್ಲಿಸುವುದು) ಎಂದರು ಯಾರೋ.
ಇದಕ್ಕೂ ಬೆಂಬಲ ಸಿಗಲಿಲ್ಲ.
ಕೊನೆಗೆ ಮಿರೋಣ ವಲೇರಿಯನ್ ಎದ್ದು ನಿಂತ.
ಈ ಸಭೆಗೆ ಊರಿನ ಕ್ರೀಸ್ತುವರೆಲ್ಲ ಬಂದಿದ್ದರು. ಡಾಕ್ಟ್ಯರ್ ರೇಗೋ ಒಬ್ಬರನ್ನು ಬಿಟ್ಟು. ಅವರಿಗೆ ಈ ಜನಸಾಮಾನ್ಯರ ಜತೆ ಕುಳಿತು ಮಾತನಾಡಲು, ಚರ್ಚೆ ಮಾಡಲು ಆಗುತ್ತಿರಲಿಲ್ಲವೇನೋ ಅವರು ಸಾಮಾನ್ಯವಾಗಿ ಬರುತ್ತಿರಲಿಲ್ಲ.
ಜಾನ್ ಡಯಾಸ್, ವಿನ್ಸೆಂಟ, ಡ್ರೈವರ್ ಚಾರ್ಲಿ ಬಂದಿದ್ದರು. ಈ ಜನ ಕೂಡ ಹೆಚ್ಚು ಮಾತನಾಡುತ್ತಿರಲಿಲ್ಲ. ಅಧಿಕ ಸಂಖ್ಯೆಯಲ್ಲಿದ್ದ ಊರ ಜನರಿಗೆ ಮಾತನಾಡಲು ಬಿಟ್ಟು ಇವರು ಕೇಳುತ್ತ ಕೂಡುತ್ತಿದ್ದರು. ಈ ಊರ ಜನರಿಂದ ಎನೂ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಇವರಿಗೆ ಏನೂ ಗೊತ್ತಿಲ್ಲ. ಇವರು ಅಶಿಕ್ಷಿತರು, ಅನಕ್ಷರಸ್ಥರು ಎಂಬುದು ಇವರಿಗೆ ತಿಳಿದಿತ್ತು. ಆದರೆ ಕೊನೆಯ ಮಾತನ್ನು ಹೇಳುವ ಅವಕಾಶವನ್ನು ಈ ವಿದ್ಯಾವಂತ ಜನ ಕಾದಿರಿಸಿಕೊಳ್ಳುತ್ತಿದ್ದರು. ವಿಚಿತ್ರವೆಂದರೆ ಇವರ ಮಾತಿಗೆ ಉಳಿದವರು ತಕ್ಷಣ ಒಪ್ಪಿಬಿಡುತ್ತಿದ್ದರು.
ಹೀಗಾಗಿ ಮಿರೋಣ ವಲೇರಿಯನ್ ಎದ್ದು ನಿಂತಾಗ ಎಲ್ಲರೂ ಮೌನದಿಂದ ಕುಳಿತರು.
“ನಾವು ಏನೇ ತೀರ್ಮಾನ ಮಾಡಿದ್ರು ಪಾದರಿಗಳು ಒಪ್ಪಬೇಕು..ಅಲ್ವೇ?” ಎಂದು ವಲೇರಿಯನ ಎಲ್ಲರ ಮುಖ ನೋಡಿದ.
“ನಾವು ನಿತ್ಯ ಮನೇಲಿ ಇಗರ್ಜಿಲಿ ಪರಲೋಕ ಮಂತ್ರ ಹೇಳತೇವೆ..ಕ್ರಿಸ್ತಪ್ರಭು ನಮಗೆ ಕೊಟ್ಟ ದೊಡ್ಡ ಬಲ ಅದು..ಮನುಷ್ಯನ ಬದುಕು ಇರೋದೇ ಈ ಮಂತ್ರದ ಆಶ್ರಯದಲ್ಲಿ..ಈ ಮಂತ್ರದ ಮೂಲಕ ಏಸು ಪ್ರಭು ಕ್ಷಮೆ ಎಷ್ಟು ದೊಡ್ಡದು ಅನ್ನೋದನ್ನ ನಮಗೆ ತಿಳಿಸಿಕೊಟ್ಟಿದ್ದಾರೆ..ನಾನು ಒಂದು ಸರಳ ದಂಡನೆ ಹೇಳತೇನೆ..ಪಾಸ್ಕು ಹೋಗಿ ಪಾದರಿಗಳ ಹತ್ತಿರ ಕ್ಷಮಾಪಣೆ ಕೇಳಲಿ..ಅವರೂ ಇದಕ್ಕೆ ಒಪ್ಪಿಕೊಳ್ಳುತ್ತಾರೆ ಅನ್ನೋ ಭರವಸೆ ನನಗಿದೆ…ಅಲ್ಲಿಗೆ ಈ ಪ್ರಕರಣ ಮುಗಿಯುತ್ತೆ..ಮುಂದೆ ಹೀಗೆ ಆಗದ ಹಾಗೆ ನಾವು ನಮ್ಮ ಮಕ್ಕಳಿಗೆ ದೈವಿಕ ಶಿಕ್ಷಣ ಕೊಡೋಣ..” ಎಂದ ಆತ ತನ್ನದೇ ಆದ ಮಂಗಳೂರಿನ ಕೊಂಕಣಿಯಲ್ಲಿ. ಈ ಭಾಷೆ, ಈ ಮಾತು, ಅವನ ಧ್ವನಿ, ಅವನು ಹೇಳಿದ ರೀತಿ ಜನರ ಮೇಲೆ ಪರಿಣಾಮ ಬೀರಿತು.
“ಇದೀಗ ಸರಿಯಾದ ಮಾತು” ಎಂದ ಪಾಸ್ಕೋಲ. ಉಳಿದವರು ಕೂಡ.
ಆದರೂ ಕೆಲವರಿಗೆ ಈ ತೀರ್ಮಾನ ಸರಿ ಎನಿಸಲಿಲ್ಲ. ಪಾದರಿ ಬಳಿ ಈತ ಹೋಗಿ ಕ್ಷಮಾಪಣೆ ಕೇಳುವುದೇನೋ ಸರಿ. ಪಾದರಿ ಕ್ಷಮಿಸದಿದ್ದರೆ?
“ಅದು ಜನರಿಗೆ ಬಿಟ್ಟಿದ್ದು..ಅವರು ಏನು ಬೇಕಾದರೂ ಮಾಡಲಿ..” ಎಂದು ಕೊನೆಗೆ ಕೈತಾನ ಹೇಳಿದ.
*
*
*
ಇಲ್ಲಿ ನಡೆದುದೆಲ್ಲ ಪಾಸ್ಕುಗೆ ತಿಳಿದು ಹೋಯಿತು. ಅವನ ವಯಸ್ಸಿನವರೆಲ್ಲ ಸಭೆಗೆ ಬಂದಿದ್ದರಲ್ಲ. ಯಾರು ಯಾರು ಏನೇನು ಹೇಳಿದರು ಎಂಬುದನ್ನು ಅದೇ ಧಾಟಿಯಲ್ಲಿ ಸ್ನೇಹಿತರು ಹೇಳಿದಾಗ ಪಾಸ್ಕು ಸಿಡಿಮಿಡಿಗೊಳ್ಳುತ್ತ ಸಿಟ್ಟಿನಿಂದ ಹಲ್ಲು ಕಡಿಯುತ್ತ ತಾಳ್ಮೆ ಕಳೆದುಕೊಂಡು ಕೂಗಾಡುತ್ತ ತನ್ನ ಪ್ರತಿಕ್ರಿಯೆಯನ್ನು ನೀಡಿದ.
“ಜೂಂತ ಮಾಡತಾರಂತ..ಮಾಡಲಿ..ಆ ಪಾದರೀನ ಅವರು ಜೂಂತಗೆ ಕರೆಸಬೇಕು..ಅಲ್ಲಿ ನಾನು ಎಲ್ಲ ತೆಗೀತೀನಿ..” ಎಂದ ಆತ ತೋಳೇರಿಸಿ.
“ಜಾತಿ ಕಟ್ ಮಾಡತಾರ..ಮಾಡಲಿ..ನನಗೆ ಈ ಜಾತಿ ಬೇಡ..ನಾನು ಸಾಬರ ಜಾತಿಗೆ ಸೇರತೀನಿ.”
“ಖಂದೀರ ಖುರೀಸ್ ಕೊಡತಾರಂತೆ..ಅದು ಯಾವ ನನ್ನ ಮಗ ಅವನು ಖುರೀಸ್ ಕೊಡೋದು..ಅವನಿಗೆ ಅಷ್ಟು ತಾಕತ್ ಇದೆಯಾ.” ಎಂದು ಕಣ್ಣು ಕೆಂಪಗೆ ಮಾಡಿಕೊಂಡ. ಪಾದರಿಗಳ ಬಳಿ ಹೋಗಿ ಕ್ಷಮಾಪಣೆ ಕೇಳಬೇಕಂತೆ ಅನ್ನುವ ಮಾತು ಬಂದಾಗ ಪಾಸ್ಕು..
“ನಾನು ಹೋಗೋಲ್ಲ..ಅವನೇನು ದೇವರ?” ಎಂದು ರೇಗಿದ. ಆದರೆ ಈ ಮಾತು ಬಂದಾಗ ಅವನು ಕೊಂಚ ತಣ್ಣಗಾಗಿದ್ದ. ಮೇಲೆ ಹೇಳಿದ ಎಲ್ಲ ಶಿಕ್ಷೆಗಳಿಗಿಂತ ಈ ಶಿಕ್ಷೆ ಸೌಮ್ಯವೂ, ಸಾಧುವೂ ಆಗಿದ್ದು ಒಂದು ಕಾರಣವಾದರೆ ಜನ ತನ್ನ ಬಗ್ಗೆ ಹೆಚ್ಚು ಕ್ರೂರಿಗಳಾಗಿ ವರ್ತಿಸಲಿಲ್ಲ ಎಂಬುದೂ ಒಂದು ಕಾರಣವಾಯಿತು.
ಅಂದೇ ಸಿಮೋನ ಅವನ ಮನೆಗೆ ಬಂದ.
“ಇನಾಸ ಇದೀಯ?” ಎಂದು ಕೇಳುತ್ತ ಬಂದವ ಪಾಸ್ಕುವನ್ನು ನೋಡಿ.
“ನೋಡಪ್ಪ..ನಾವು ಹೀಗೊಂದು ತೀರ್ಮಾನ ಮಾಡಿದೀವಿ..” ಎಂದು ವಿಷಯ ತಿಳಿಸಿದ.
“ನಾಳೆ ನಾಡಿದ್ದು ಹೋಗು..ಪದ್ರಾಬಾ ತಪ್ಪಾಯ್ತು..ಕ್ಷಮಿಸು..ಅಂತ ಕೇಳಿಕೋ..ಇದು ಊರಿಗೆಲ್ಲ ಗೊತ್ತಾಗೋ ಹಾಗೆ ಆಗಬಾರದು…ಬೇರೆ ಧರ್ಮೀಯರು ಏನು ತಿಳಕೊಳ್ಳೋದಿಲ್ಲ..” ಎಂದೂ ಕೆಲ ಮಾತುಗಳನ್ನು ನುಡಿದ.
ಪಾಸ್ಕು ಮಾತ್ರ ಹಾಂ ಹುಂ ಎಂದು ಏನೂ ಹೇಳಲಿಲ್ಲ. ಆದರೆ ಆತ ವಾದ ಮಾಡಲು ಪಾದರಿಗಳ ಬಗ್ಗೆ ಮತ್ತೇನೋ ಹೇಳಲು ಹೋಗಲಿಲ್ಲ. ಇದೊಂದೇ ಸಮಾಧಾನದಿಂದ ಸಿಮೋನ ಇನಾಸನಿಗೆ ಹೇಳಿ. ಅವನ ಹೆಂಡತಿಗೆ ಹೇಳಿ, ಸೈಡ್ ಡ್ರಾಮ ಸರಿಪಡಿಸುತ್ತ ಕುಳಿತ ರೈಮಂಡಗೆ ಹೇಳಿ. ಇನಾಸನ ಹೆಣ್ಣು ಮಕ್ಕಳನ್ನು ಮಾತನಾಡಿಸಿ ತಿರುಗಿ ಬಂದ.
ಇದೊಂದು ಪ್ರಕರಣ ಒಳ್ಳೆಯ ರೀತಿಯಲ್ಲಿ ಮುಗಿದು ಹೋದರೆ ಸಾಕು ಎಂದಾತ ಬಯಸಿದ್ದ.
*
*
*
ಪಾದರಿ ಮಸ್ಕರಿನಾಸರ ಬಟ್ಲರ್ ಫ಼ರಾಸ್ಕ ಮಾತ್ರ ಈ ಪ್ರಕರಣವನ್ನು ಬೇರೊಂದು ದಿಕ್ಕಿಗೆ ತಿರುಗಿ ನಿಲ್ಲಿಸಿದ.
ಹೆಂಡತಿ ರಜೀನಾ ವಾಂತಿಯಾದಂತೆ ಆಗುತ್ತದೆ, ತಲೆ ಸುತ್ತುತ್ತದೆ ಎಂದು ಹೇಳಿದ್ದೇ ಗಾಬರಿಗೆ ಕಾರಣವಾಗಿ ಆತ ವೈಜೀಣ ಕತ್ರೀನಳ ಮನೆಗೆ ಹೋಗಿದ್ದ.
“ಭಾನುವಾರ ಪೂಜೆಗೆ ಬರತೀನಲ್ಲ..ಆಗ ಬಂದು ನಿನ್ನ ಹೆಂಡತೀನ ನೋಡತೀನಿ..ನೀನು ಗಾಬರಿಯಾಗಬೇಡ” ಎಂದವಳು ಹೇಳಿದ್ದಳು.
ಶನಿವಾರ ಸಂಜೆಯೇ ಈ ಪ್ರಕರಣವಾದದ್ದು ತಿಳಿಯಿತು.
“ಮೋಜಾ ದೇವ..ಹೆಂ ಕಿತೆಂ ಜಾಲ್ಲೆಂ” (ನನ್ನ ದೇವರೆ ಇದೇನಾಯಿತು) ಎಂದು ಜಪಸರ ಹಿಡಿದು ಕುಳಿತ ಅವಳು ತುಂಬಾ ನೊಂದುಕೊಂಡಳು. ರಾತ್ರಿ ಎಲ್ಲ ಅವಳಿಗೆ ಕೆಟ್ಟ ಕನಸುಗಳು. ಭಾನುವಾರ ಎದ್ದವಳೇ ಮೊದಲ ಪೂಜೆಗೆ ಬಂದಳು. ಏನೂ ಆಗಿಲ್ಲವೆಂಬಂತೆ ಪಾದರಿಗಳು ಪೂಜೆ ಮುಗಿಸಿದರು. ಕತ್ರೀನ ಪೂಜೆ ಮುಗಿಸಿಕೊಂಡು ಪಾದರಿ ಬಂಗಲೆಯ ಹಿಂದಿದ್ದ ಕೂಜ್ನಗೆ ಹೋದಳು.
“ಯೋ ಮಮ್ಮಿ” ಎಂದು ಫ಼ರಾಸ್ಕ ಅವಳನ್ನು ಸ್ವಾಗತಿಸಿದ.
“ಏನು ಕಾಲ ಬಂತು ಫ಼ರಾಸ್ಕ” ಎಂದು ಅಲ್ಲಿ ಕುಳಿತು ಮುಖ ಬಾಡಿಸಿಕೊಂಡು ಲೊಚಗುಟ್ಟಿದಳು.
“ಹೀಗೆ ಆಗಬಾರದಿತ್ತು ಫ಼ರಾಸ್ಕ..ಪಾದರಿಗಳ ಮೇಲೆ ಕೈ ಮಾಡೋದೆ?” ಎಂದು ಅವಳು ಗೋಡೆಗೆ ವರಗಿ ಕುಳಿತಳು. ಬಂದ ವಿಷಯ ಮರೆತಳು.
“ಆದದ್ದು ಆಗಿ ಹೋಯ್ತು ಮಮ್ಮಿ…ಮುಂದೆ ಅನುಭವಿಸಬೇಕಾದವನು ಮಾತ್ರ ಈ ಹುಡುಗನೇ” ಎಂದ ಫ಼ರಾಸ್ಕ.
“ನಮ್ಮ ಪಾದರಿಗಳನ್ನು ಎದುರು ಹಾಕಿಕೊಂಡವರಿಗೆ ಯಾರಿಗೂ ಒಳ್ಳೆಯದಾಗಿಲ್ಲ..ದೇವ ಮಣಿಯಾರಿಗಳ ನೋವು ನರಕದ ಬೆಂಕಿಯ ಹಾಗೆ ಶಾಶ್ವತ.”
“ಅಲ್ವೇ ಮತ್ತೆ”
“ಹಿಂದೆ ಪದ್ರಾಬ ಹೊಂಕೇರಿಯಲ್ಲಿ ಇದ್ದರಲ್ಲ..ಅಲ್ಲಿ ಒಬ್ಬ ಹುಡುಗ ಇವರಿಗೆ ವಿರೋಧವಾಗಿದ್ದ..ಅವನು ಪಾಸ್ಕು ಹಾಗೇನೆ ಪಾದರಿಗಳನ್ನು ತುಂಬಾ ಹಗುರವಾಗಿ ಕಂಡ. ಪಾದರಿಗಳು ತುಂಬಾ ಸುಧಾರಿಸಿಕೊಂಡರು. ಜನರಿಗೂ ಹೇಳಿ ನೋಡಿದರು. ಒಂದು ದಿನ ಅವರ ತಾಳ್ಮೆಯ ತಂತಿ ತುಂಡಾಗಿ ಹೋಯಿತು..ಇಗರ್ಜಿನಲ್ಲಿ ದೇವರ ಪೀಠದ ಮುಂದೆ ನಿಂತು ಎಡಗೈ ಶಾಪವನ್ನು ನೀಡಿದರು. ಈವತ್ತಿಗೂ ಆತ ಮೈ ತುಂಬ ತೊನ್ನಾಗಿ ನರಳ್ತಿದಾನೆ..” ಎಂದು ಫ಼ರಾಸ್ಕ ನಿಜ ಘಟನೆಯೊಂದನ್ನು ಹೇಳಿದ. ಪಾದರಿಗಳು ಜನರನ್ನು ಆಶೀರ್ವದಿಸುವಾಗೆಲ್ಲ ಬಲಗೈಯಿಂದ ಗಾಳಿಯಲ್ಲಿ ಶಿಲುಬೆ ಬರೆಯುವುದು ರೂಢಿ. ಅದೊಂದು ಪದ್ದತಿ ಕೂಡ. ಮದುವೆಯ ಉಂಗುರವನ್ನು ಮಂತ್ರಿಸುವಾಗ, ಚಿಕ್ಕ ಮಗುವಿಗೆ ಆಶೀರ್ವಾದ ನೀಡುವಾಗ, ತಮ್ಮ ಮುಂದೆ ಮೊಣಕಾಲೂರಿದವರನ್ನು ಆಶೀರ್ವದಿಸುವಾಗ ಎಲ್ಲ ಸಂದರ್ಭಗಳಲ್ಲಿ ಪಾದರಿ ಬಲಗೈಯನ್ನು ಮಡಚಿ ಕೈಯಿಂದ ಶಿಲುಬೆಯ ಗುರುತು ಮಾಡಿ “ದೇವರ ಆಶೀರ್ವಾದ” ಅನ್ನುತ್ತಾರೆ. ಈ ಆಶೀರ್ವಾದ ಅಮೂಲ್ಯವಾದದ್ದು, ಶ್ರೇಷ್ಠವಾದದ್ದು ಎಂಬುದು ಒಂದು ನಂಬಿಕೆ. ಇದೇ ಪಾದರಿ ಇದೇ ಆಶೀರ್ವಾದವನ್ನು ಎಡಗೈಯಿಂದ ಮಾಡಿದರೆ? ಅದು ಶಾಪ, ಶಿರಾಪ. ಸಾಮಾನ್ಯವಾಗಿ ಪಾದರಿಗಳು ಎಡಗೈ ಬಳಸುವುದಿಲ್ಲ. ಬಳಸಿದರೆ ಮಾತ್ರ ಅದು ವಿನಾಶಕಾರಕ. ಈ ನಂಬಿಕೆ ಇಗರ್ಜಿ ಮಾತೆಯನ್ನು ನಂಬುವ ಕ್ರೈಸ್ತ ಸಮೋಡ್ತಿಯಲ್ಲಿ ಬಹಳ ದಿನಗಳಿಂದ ಇದೆ. ಜನ ಏನೂ ಸಹಿಸಿಕೊಳ್ಳುತ್ತಾರೆ. ಆದರೆ ಎಡಗೈ ಆಶೀರ್ವಾದವನ್ನಲ್ಲ.
ಫ಼ರಾಸ್ಕ ಈ ವಿಷಯ ಹೇಳುತ್ತಿರಲು ಕತ್ರೀನಾ “ದೇವಾ” (ದೇವರೇ) ಎಂದು ಮಿಡುಕಾಡಿದಳು.
ಫ಼ರಾಸ್ಕ ಪಿಂಗಾಣಿ ಬಟ್ಟಲು ತಟ್ಟೆಯಲ್ಲಿ ಟೀ ಮಾಡಿಕೊಟ್ಟ. ಒಂದು ತುಂಡು ಬ್ರೆಡ್ಡು ತಂದಿರಿಸಿದ. ಕತ್ರೀನಾ ಅದನ್ನು ಮುಗಿಸಿದಳು.
“ರಜೀನಾ..ಹೀಗೆ ಬಾ..” ಎಂದು ಫ಼ರಾಸ್ಕನ ಹೆಂಡತಿ ರಜೀನಾಳ ಪರೀಕ್ಷೆ ಮಾಡಿದಳು. ಅವಳ ಕಿವಿಯಲ್ಲಿ ಏನೋ ಹೇಳಿ, ಅವಳು ನಾಚಿ ಕೆಂಪೇರುತ್ತಿರಲು-
“ಫ಼ರಾಸ್ಕ ಗಾಬರಿ ಏನಿಲ್ಲ..ಇನ್ನೊಂದು ಹದಿನೈದು ದಿನ ಆಗಲಿ..ನಾನು ಡಾಕ್ಟರ್ ಶಾಂತಾಬಾಯಿ ಹತ್ತಿರ ಕರಕೊಂಡು ಹೋಗಿ ಪರೀಕ್ಷೆ ಮಾಡಿಸಿ ಹೇಳತೀನಿ..” ಎಂದು ನಗುನಗುತ್ತ ಹೇಳಿ ಎದ್ದಳು.
ಅವಳು ಮನೆಮುಟ್ಟುವಷ್ಟರಲ್ಲಿ ಇಗರ್ಜಿಯ ಎರಡನೇ ಪೂಜೆಗೆ ರೇಶಿಮೆ ಸೀರೆಯುಟ್ಟು ಹೊರಟ ನಾಲ್ವರು ಅವಳಿಗೆ ಭೇಟಿಯಾದರು.
“ಪೂಜೆಗೆ ಹೋಗಿ ಬಂದ್ರ?” ಎಂದು ಕೇಳುತ್ತ ನಿಂತರು.
“ನಿನ್ನೆ ನೋಡಿ ಹೀಗೆ ಆಯ್ತು..” ಎಂದರು. ಕತ್ರೀನಾ ಮುಂದಿನ ಪರಿಣಾಮ ಏನಾಗಬಹುದು ಎಂಬುದನ್ನು ಸೂಕ್ಷ್ಮವಾಗಿ ಅವರಿಗೆ ಹೇಳಿದಳು. ಮಾಂಸ ತರಲು ಮಾರ್ಕೆಟಿಗೆ ಹೊರಟ ಫ಼ರಾಸ್ಕ ಎದುರು ಸಿಕ್ಕ ಕೆಲವರಿಗೆ ಈ ಸುಳುವು ನೀಡಿದ. ಇದಕ್ಕೆ ಸರಿಯಾಗಿ ಪಾದರಿ ಮಸ್ಕರಿನಾಸರು ಪೂಜೆಯ ನಡುವೆ ಶೆರಮಾಂವಂಗೆ ನಿಂತವರು-
” ಈ ಬಗ್ಗೆ ನೀವು ಏನು ತೀರ್ಮಾನ ಕೈಗೊಳ್ಳುತ್ತೀರಿ ಎಂಬುದನ್ನು ನಾನು ಕಾದು ನೋಡುತ್ತೇನೆ”. ಎಂದು ಹೇಳಿದ್ದು ಬೇರೇನೋ ಅರ್ಥವನ್ನು ನೀಡಿತು. ಮೂರು ಗಂಟೆಯ ಸಭೆಯಲ್ಲಿ ಮಿರೋಣ ವಲೇರಿಯನ್ ಬೇರೆ ತನ್ನ ಮಂಗಳೂರಿನ ಕೊಂಕಣಿಯಲ್ಲಿ-
“ನಾವು ಏನೇ ತೀರ್ಮಾನ ಮಾಡಿದರೂ ಪಾದರಿಗಳು ಒಪ್ಪಬೇಕು..ಅಲ್ವೇ?” ಎಂದು ಕೇಳಿದ್ದ.
ಭಾನುವಾರವೆಲ್ಲ ಪಾಸ್ಕು ಏನು ಮಾಡುತ್ತಾನಂತೆ ಎಂಬುದರ ಬಗ್ಗೆಯೇ ಚರ್ಚೆ ನಡೆಯಿತು. ಆತ ಪಾದರಿಗಳ ಕ್ಷಮಾಪಣೆ ಕೇಳುವ ಮನೋಸ್ಥಿತಿಯಲ್ಲಿ ಇಲ್ಲ ಎನ್ನುವಾಗ ಎಡಗೈ ಶಾಪದ ಮಾತು ಬಲವಾಗಿ ಕೇಳಿ ಬರತೊಡಗಿತು. ಕ್ರೈಸ್ತ ಸಮುದಾಯದಲ್ಲಿ ಎಲ್ಲಿಯೋ ಗುಪ್ತವಾಗಿ ಅಡಗಿದ್ದ ಈ ಭೀತಿಯ ಹಸ್ತ ಸ್ವಲ್ಪ ಮೇಲೆದ್ದು, ರೆಕ್ಕೆ ಪುಕ್ಕಗಳನ್ನು ಹಚ್ಚಿಕೊಂಡು, ಕುಷ್ಟರೋಗ, ತೊನ್ನು, ಕಣ್ಣು ಕಾಣದಿರುವುದು, ಕಾಲು ಊನವಾಗುವುದು, ಕೈ ಮೊಟಕಾಗುವುದು, ನಾಲಿಗೆ ಬಿದ್ದು ಹೋಗುವುದು ಮೊದಲಾದ ಶಾಶ್ವತ ಅಂಗಹೀನತೆಗಳನ್ನು ತಂದು ಎದುರು ನಿಲ್ಲಿಸಿ ಇಗರ್ಜಿಯ ಸುತ್ತಲಿನ ಮೂರು ಬೀದಿಗಳಲ್ಲಿ, ಬಾಮಣರು ವಾಸಿಸುವ ಕೆಳಗಿನ ಕೇರಿಯಲ್ಲಿ, ಕರಿಕಾಲಿನವರು ವಾಸಿಸುವ ರೈಲು ಇಲಾಖೆಯ ಮನೆಗಳ ಬಳಿ ವಿಷ ಗಾಳಿಯಾಗಿ ಹರಡಿಕೊಂಡಿತು.
ಇನಾಸ ಚಾಪೆಯೊಂದನ್ನು ಶಿಲುಬೆ ದೇವರ ಮುಂದೆ ಹಾಸಿಕೊಂಡು ಮಲಗಿಬಿಟ್ಟ.
ಬ್ಯಾಂಡಕಾರ ರೈಮಂಡ್-
“ರಾಂಡ್ಲಾ ಪುತ್ತ..ನಮ್ಮ ಮನೆಗೇನೆ ಕೆಟ್ಟ ಹೆಸರು ತಂದೆಯಲ್ಲ” ಎಂದು ಕೂಗಾಡಿದ.
ಇನಾಸನ ಹೆಂಡತಿ ಮೊನ್ನೆ ತಲೆಗೂದಲು ಕೆದರಿಕೊಂಡು, ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು, ಶಾಲೆಗೆ ಹೋಗಲು ಹಟ ಮಾಡುವ ಹುಡುಗನನ್ನು ತಳ್ಳಿಕೊಂಡು ಶಾಲೆಗೆ ಕೊಂಡೊಯ್ಯುವಂತೆ ಪಾಸ್ಕುವನ್ನು ಮನೆಯ ಹೊರಗೆ ಎಳೆ ತಂದಳು. ಇಷ್ಟು ಹೊತ್ತಿಗೆ ಪಾಸ್ಕು ಕೂಡ ಅರ್ಧ ಜೀರ್ಣವಾಗಿದ್ದ. ಪಾದರಿಗಳ ಎಡಗೈಯ ಶಾಪದ ಬಗ್ಗೆ ಬಹಳಷ್ಟು ಕೇಳಿದ್ದ ಈತ ಈ ಪ್ರಕರಣವನ್ನು ಮುಂದುವರೆಸಿಕೊಂಡು ಹೋಗಬಾರದೆಂದು ನಿರ್ಧರಿಸಿದ.
*
*
*
ಎಲ್ಲೋ ಒಂದು ಕಡೆ ಬದಲಾವಣೆಯಾಯಿತೆಂದರೆ ಅದರ ಪ್ರಭಾವ ಎಲ್ಲ ಕಡೆ ಆಗುತ್ತದೆ. ಕಡಲಲ್ಲಿ ಹುಟ್ಟುವ ಒಂದು ಅಲೆ ಮತ್ತೊಂದು ಅಲೆಯ ಹುಟ್ಟಿಗೆ ಕಾರಣವಾಗುವಂತೆ ಹೊಸ ತರಂಗಗಳು ಏಳುತ್ತವೆ.
ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ವಾತಂತ್ರ್ಯ ಚಳುವಳಿ ನಡೆದರೂ ಈ ಚಳುವಳಿಯ ಬಿಸಿ ಕ್ರೀಸ್ತುವರ ಕೇರಿಯತ್ತ ಸುಳಿಯಲಿಲ್ಲ. ವಿಶೇಷವಾಗಿ ಕ್ರೀಸ್ತುವರು ಇರುವಲ್ಲೆಲ್ಲ ವಿದೇಶಿ ಪಾದರಿಗಳು ಇದ್ದುದರಿಂದ ಈ ಇಟಲಿ, ಫ಼್ರೆಂಚ್, ಯುರೋಪಿಯನ್, ಗೋವಾ ಪಾದರಿಗಳು ಕ್ರೀಸ್ತುವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದಂತೆ ನೋಡಿಕೊಂಡರು. ಹಾಗೆಯೇ ಕ್ರೀಸ್ತುವರಲ್ಲಿ ಅನಕ್ಷರಸ್ಥರು ಅಧಿಕ ಸಂಖ್ಯೆಯಲ್ಲಿ ಇದ್ದುದರಿಂದ ಚಳುವಳಿಗಳ ಕುರಿತು ಕೂಡ ಇವರು ವಿಚಾರ ಮಾಡಲಿಲ್ಲ.
ಬ್ರಿಟೀಷರು ಇಲ್ಲಿಯ ಜನರಿಗೆ ಆಡಳಿತವನ್ನು ವಹಿಸಿಕೊಟ್ಟು ಹೋಗುತ್ತಿರುವಾಗಲೇ ಶಿವಸಾಗರದ ಇಗರ್ಜಿ ಆಡಳಿತ ಗೋವೆಯ ಪ್ರಾವಿನ್ಶಿಯಲ್ ಅವರ ಕೈಯಿಂದ ಮೈಸೂರಿನ ಬಿಷಪ್ಪರ ಕೈಗೆ ಹಸ್ತಾಂತರಗೊಂಡಿತು. ನೀವು ಇದ್ದಲ್ಲಿಯೇ ಇರುತ್ತೀರೋ ಇಲ್ಲ ಗೋವೆಗೆ ಹಿಂತಿರುಗುತ್ತಿರೋ ಎಂದು ಗೋವೆಯ ಧರ್ಮಾಧಿಕಾರಿಗಳು ಇಲ್ಲಿದ್ದ ಗೋವೆಯ ಪಾದರಿಗಳಿಗೆ ಕೇಳಿದರು. ಕೆಲವರು ಇಲ್ಲಿಯೇ ಉಳಿದರು. ಕೆಲವರು ಗೋವೆಗೆ ಹಿಂತಿರುಗಿದರು.
ಮೈಸೂರಿನ ಸಭೆ ತಮಗೆ ಅಪರಿಚಿತ. ಈ ಸಭೆಗೆ ತಾನು ಹೊಸಬನಾಗುತ್ತೇನೆ. ಪರಕೀಯನಾಗುತ್ತೇನೆ. ಗೋವೆ ಇನ್ನೂ ಪೋರ್ತುಗಿಸರ ವಶದಲ್ಲಿಯೇ ಇದೆ. ಅಲ್ಲಿ ತಮಗೆ ಹೆಚ್ಚು ರಕ್ಷಣೆ ಇದೆ. ಸ್ವಾತಂತ್ರ್ಯಾನಂತರ ಇಲ್ಲಿಯ ಪರಿಸ್ಥಿತಿ ಹೇಗೋ ಎಂದೆಲ್ಲ ಯೋಚನೆ ಮಾಡಿದ ಪಾದರಿ ಮಸ್ಕರಿನಾಸ ಗೋವೆಗೆ ಹಿಂತಿರುಗುವ ತಮ್ಮ ನಿರ್ಧಾರವನ್ನು ಪ್ರಾವಿನ್ಶಿಯಲ್ ಅವರಿಗೆ ತಿಳಿಸಿ ಅಲ್ಲಿಂದ ಮುಂದಿನ ಆದೇಶ ಬರುವುದನ್ನು ಕಾಯತೊಡಗಿದರು.
ಶಿವಸಾಗರ ಬಹಳ ವೇಗವಾಗಿ ಬದಲಾವಣೆಯನ್ನು ಕಂಡಿತು. ಆಧುನಿಕ ಬದುಕಿಗೆ ಹೊರಳಿಕೊಂಡಿತು. ಜಾತಿಯ ಹೆಸರಿನ ಕೇರಿಗಳು, ಫ಼ಾತಿಮಾನಗರ, ಆಜಾದ ನಗರ, ಜೋಸೆಫ಼ ನಗರ ಎಂದೆಲ್ಲ ಪರಿವರ್ತನೆ ಹೊಂದಿದವು. ಜನರಲ್ಲಿ ಜಾತಿ, ಧರ್ಮ, ಒಳ ಪಂಗಡಗಳ ವ್ಯಾಮೋಹ ಹೋಗಲಿಲ್ಲವಾದರೂ ಈ ಬದಲಾವಣೆ ಒಂದು ರೀತಿಯಲ್ಲಿ ನಾಗರೀಕವಾಗಿ ಕಂಡಿತು.
ಊರಿನಲ್ಲಿ ಬ್ಯಾಂಕುಗಳು, ಸರಕಾರಿ ಕಛೇರಿಗಳು, ನರ್ಸಿಂಗ ಹೋಂಗಳು, ಶಾಲೆ, ಕಾಲೇಜುಗಳು, ವರ್ಕಶಾಪುಗಳು ಅಧಿಕಗೊಂಡದ್ದರಿಂದ ಮಂಗಳೂರು, ಕುಂದಾಪುರ, ಚಿಕ್ಕಮಗಳೂರಿನಿಂದ ಕ್ರೀಸ್ತುವರು ಅಧಿಕ ಸಂಖ್ಯೆಯಲ್ಲಿ ಬಂದರು. ಪ್ಲೇಗು, ಕಾಲರಾ ಮೂಲೋತ್ಪಾಟನೆ ಮಾಡುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿ ಡಾಕ್ಟರ್ ರೇಗೋ ಬೇರೆ ಕಡೆಗೆ ವರ್ಗವಾಗಿ ಹೋಗಿದ್ದರು. ಅವರ್ ಜತೆ ಬಂದ ಚಾರ್ಲಿ, ವಿನ್ಸೆಂಟ್ ಕೂಡ ಊರು ಬಿಟ್ಟಿದ್ದರು. ಆದರೆ ಮ್ಯಾನೇಜರ ಜಾನ ಡಯಾಸ್ ಇಲ್ಲಿರುವಾಗಲೇ ನಿವೃತ್ತನಾಗಿ ಅವನಿಗೆ ಒಂದಿಷ್ಟು ಹಣ ಬಂದಿತ್ತು. ಅವನ ಹೆಂಡತಿ ಸಿಲ್ವಿಯಾ-
“ಶಿವಸಾಗರದಲ್ಲಿಯೇ ಇದ್ದು ಬಿಡೋಣ” ಎಂದು ಹಠ ಮಾಡಿದಳು.
ಜಾನ ಡಯಾಸನಿಗೆ ತನ್ನ ಊರಿಗೆ ಹೋಗಿ ಅಲ್ಲಿದ್ದ ಹಿರಿಯರ ಮನೆಯನ್ನು ಹೊಸದಾಗಿ ಕಟ್ಟಿಸಿ ಅಲ್ಲಿರಬೇಕು ಎಂಬ ಆಸೆಯಿತ್ತು. ಅವನ ತಂದೆಯೂ ಇದನ್ನೇ ಬಯಸುತ್ತಿದ್ದ. ಆದರೆ ಜಾನ್ ಡಯಾಸರ ಇಬ್ಬರು ತಮ್ಮಂದಿರು ಅಲ್ಲಿ ಇದ್ದುದರಿಂದ ಅವರಿಗೆ ಅನುಕೂಲವಾಗಿ ಬಿಡುತ್ತದೆ ಎಂದು ಸಿಲ್ವಿಯಾ-
“ನಾಕಾ ಅಬಾ…ಅಮಿಂ ಹಾಂಗಾರಾವ್ಯಾಂ” (ಬೇಡಪ್ಪ ನಾವು ಇಲ್ಲಿಯೇ ಇರೋಣ) ಎಂದು ಹಟಹಿಡಿದಳು. ಡಯಾಸ ಇಲ್ಲಿ ಮನೆಕೊಂಡ. ಅವನ ಮಗ ಜಾಕೋಬನಿಗೆ ಶ್ರೀ ಶಿವಸಾಗರ ಬ್ಯಾಂಕಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಆತ ಶಿವಸಾಗರದವನೇ ಆದ.
ಮಿರೋಣ್ ವಲೇರಿಯನ್ ಇದನ್ನು ಸ್ವಲ್ಪ ಹೆಚ್ಚಾಗಿಯೇ ಹಚ್ಚಿಕೊಂಡ. ಮಗ ನಿವೃತ್ತನಾದ. ಐದಾರು ವರ್ಷಗಳ ನಂತರ ಆತ ತೀರಿಕೊಂಡು ಇಗರ್ಜಿಯ ಮಿರೋಣ್ ಜಾಗವನ್ನು ಮಗನಿಗೆ ಬಿಟ್ಟುಕೊಟ್ಟ. ಅವನು ಕೂಡ ಪಿಟೀಲು ಬಾರಿಸಬಲ್ಲವನಾಗಿದ್ದ. ಕೀರ್ತನೆ ಗಾಯನ ಬಲ್ಲವನಾಗಿದ್ದ. ಪಾದರಿಗಳ ವಿಶ್ವಾಸಗಳಿಸಿದ್ದ ಅವನಿಗೆ ಏನೂ ಕಷ್ಟವಾಗಲಿಲ್ಲ.
ಇಗರ್ಜಿಯ ಸುತ್ತ ಇದ್ದ ಕ್ರೀಸ್ತುವರ ಮನೆಗಳೂ ಮತ್ತೂ ದೂರ ಹಬ್ಬಿಕೊಂಡವು. ಸಿಮೋನನ ಮನೆಯ ಹಿಂದಿನ ಸಾಲು ಕೆಳಕೇರಿ ಎಂದೇ ಪ್ರಖ್ಯಾತವಾಗಿ ಮೊನ್ನೆ ಮೊನ್ನೆ ಫ಼ಾತಿಮಾ ನಗರ ಎಂಬ ಹೆಸರು ಪಡೆಯಿತು. ಇಲ್ಲಿಗೂ ಓರ್ವ ಗುರ್ಕಾರ ಬೇಕು ಎಂದು ಜನ ಹೇಳಿದ್ದರಿಂದ ಶಿವಸಾಗರಕ್ಕೆ ಬಂದು ಕೆಲವರ್ಷಗಳಾಗಿದ್ದ ಅಲೆಕ್ಸ ಪಿಂಟೋ ಫ಼ಾತಿಮಾ ನಗರದ ಗುರ್ಕಾರ ಆಗಿ ನೇಮಕಗೊಂಡಿದ್ದ.
ಜತೆಗೆ ಪಾದರಿ ಮಸ್ಕರಿನಾಸ ಬೇರೊಂದು ಯತ್ನ ಮಾಡಿದ್ದರು. ಶಿವಸಾಗರಕ್ಕೆ ಕ್ರೈಸ್ತ ಶಾಲೆಯೊಂದರ ಅವಶ್ಯಕತೆ ಇತ್ತು. ಕ್ರೈಸ್ತ ಮಕ್ಕಳು ಸರಕಾರಿ ಶಾಲೆಯಲ್ಲಿ ಓದತೊಡಗಿದ್ದರು. ಅಲ್ಲಿಯ ಶಿಕ್ಷಣ ಹೇಗೆ ಇರಲಿ ಕ್ರೈಸ್ತ ಮಕ್ಕಳಿಗೆ ದೊರಕಬೇಕಾದ ಧಾರ್ಮಿಕ ಶಿಕ್ಷಣ ಅಲ್ಲಿ ದೊರೆಯುತ್ತಿರಲಿಲ್ಲ. ಎಲ್ಲ ಹುಡುಗರ ಜತೆ ಸೇರಿ ಪಾಠ ಕಲಿಯುವುದು, ಪರೀಕ್ಷೆ ಪಾಸು ಮಾಡುವುದು, ಎಲ್ಲರ ಜೊತೆ ಒಂದಾಗಿ ಬೆರೆತು ಇವರು ಕಳೆದು ಹೋಗುತ್ತಿದ್ದರು.
ನಾಲ್ಕು ಏಳನೆಯ ತರಗತಿಯವರೆಗಾದರೂ ಕ್ರೈಸ್ತ ಮಕ್ಕಳು ತಮ್ಮ ಸುಪರ್ದಿನಲ್ಲಿದ್ದರೆ ಚೆಂದ ಎಂದು ಇವರಿಗನಿಸಿತು. ಹೀಗೆಂದೇ ಮಂಗಳೂರಿನ ಒಂದು ವಿದ್ಯಾಸಂಸ್ಥೆಗೆ ಕಾಗದ ಬರೆದರು ಪಾದರಿ ಮಸ್ಕರಿನಾಸ. ಅಲ್ಲಿಯ ತೆರೇಜಾ ವಿದ್ಯಾ ಸಂಸ್ಥೆ ಶಿವಸಾಗರದಲ್ಲಿ ಒಂದು ಕಾನ್ವೆಂಟ್ ತೆರೆಯಲು ಮುಂದೆ ಬಂದಿತು. ಕಾನ್ವೆಂಟ್ ಕಟ್ಟಡ ಕಟ್ಟಲು ಒಂದು ನಿವೇಶನ ದೊರಕಿಸಿಕೊಡಬೇಕು ಎಂಬ ನಿಬಂಧನೆ ಹಾಕಲು ಪಾದರಿ ಊರವರ ಒಪ್ಪಿಗೆ ಪಡೆದು ಇಗರ್ಜಿ ಮುಂದಿನ ಮೈದಾನವನ್ನು ಕಾನ್ವೆಂಟಿಗೆ ಬಿಟ್ಟು ಕೊಡಲು ಒಪ್ಪಿಕೊಂಡರು.
ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆಯೇ ಸಿಸ್ಟರುಗಳ ಒಂದು ತಂಡ ಇಲ್ಲಿಗೆ ಬಂದು ಇಳಿಯಲು ಅನೂಕೂಲವಾಗುವಂತೆ ಇಗರ್ಜಿಯ ಮುಂದೆಯೇ ಕಾನ್ವೆಂಟ್ ಕಟ್ಟಡ ಎದ್ದು ನಿಂತಿತು.ಹಿಂದೆಯೇ ಸಿಸ್ಟರುಗಳು ಬಂದರು. ತರಗತಿಗಳೂ ಆರಂಭವಾದವು.
ಕ್ರೀಸ್ತುವರು ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗಲ್ಲದೆ ಬೇರೆ ಶಾಲೆಗಳಿಗೆ ಕಳುಹಿಸಬಾರದು ಎಂದು ಪಾದರಿ ಆದೇಶ ಹೊರಡಿಸಿದರು. ಮಕ್ಕಳಿಗೆ ಜ್ಞಾನೋಪದೇಶ ಹೇಳಿ ಕೊಡುವ ಹೊಣೆ ಸಿಸ್ಟರುಗಳದಾಯಿತು. ಸಂಜೆ ಶಾಲೆ ಬಿಟ್ಟ ತಕ್ಷಣ ಸಾಲು ಸಾಲಾಗಿ ಕ್ರೀಸ್ತುವರ ಮಕ್ಕಳನ್ನು ಶಾಲೆಯಿಂದ ಇಗರ್ಜಿಗೆ ಕರೆತಂದು ಅಲ್ಲಿ ಪ್ರಾರ್ಥನೆ ಮಾಡಿ-
“ಜೂಜೆ ಬಾಪ ಪಾವತುಂ ಅಮ್ಕಾಂ” (ತಂದೆ ಜೂಜೆಯೆ ನಮ್ಮನ್ನು ಕಾಪಾಡು) ಎಂದು ಮಕ್ಕಳು ಸಾಮೂಹಿಕವಾಗಿ ಹಾಡಿ ಮನೆಗಳಿಗೆ ಹೋಗುವ ಪದ್ಧತಿ ರೂಢಿಗೆ ಬಂದಿತು.
ಇಷ್ಟು ಹೊತ್ತಿಗೆ ಮೈಸೂರಿನಿಂದ ಹೊಸ ಪಾದರಿಯೋರ್ವರನ್ನು ಶಿವಸಾಗರಕ್ಕೆ ವರ್ಗ ಮಾಡಲಾಯಿತು. ಅವರು ಬರುವುದಕ್ಕೂ ಮೊದಲು ಶಿವಸಾಗರದಿಂದ್ ಗೋವೆಗೆ ತಿರುಗಿ ಬರುವಂತೆ ಪಾದರಿ ಮಸ್ಕರಿನಾಸರಿಗೆ ಗೋವೆಯ ಪ್ರಾವಿನ್ಶಿಯಲ್ ಅವರಿಂದ ಆದೇಶ ಬಂದಿತು. ಗೋವೆಯ ಪೊಂಡಾದ ಇಗರ್ಜಿಗೆ ಅವರನ್ನು ವರ್ಗ ಮಾಡಲಾಗಿತ್ತು.” ನೀನೂ ನನ್ನ ಜತೆ ಹೊರಡು” ಎಂದರು ಪಾದರಿ ಫ಼ರಾಸ್ಕನಿಗೆ. ಅವನ ಹೆಂಡತಿ ರಜೀನಾ ಮಗಳು ಎಲಿಜಬೆತ್ ಅವರ ಜತೆ ಹೊರಡಬೇಕಿತ್ತಲ್ಲ.
ಊರ ಜನ ಇವರನ್ನು ಪ್ರೀತಿಯಿಂದಲೇ ಬೀಳ್ಕೋಟ್ಟರು.
-೬-
ಮೈಸೂರಿನಿಂದ ಬರಬಹುದಾದ ಹೊಸ ಪಾದರಿಗೆ ಜನ ಕಾದರು. ಅವರಂತೂ ಬರಲಿಲ್ಲ. ಇಲ್ಲಿ ಸಿಸ್ಟರುಗಳು ಇದ್ದುದರಿಂದ ಅವರು ದಿನನಿತ್ಯ ಪೂಜೆ ಕೇಳಿ ದಿವ್ಯ ಪ್ರಸಾದವನ್ನು ಸ್ವೀಕರಿಸಲೇಬೇಕಾಗಿದ್ದುದರಿಂದ ಶಿವಸಾಗರದ ಹತ್ತಿರದಲ್ಲಿಯೇ ಇದ್ದ ತೀರ್ಥಪುರದ ಪಾದರಿ ಕೆಲ ದಿನ ಬಂದು ಇಲ್ಲಿ ಇದ್ದುದಾಯ್ತು. ನಂತರ ಒಂದು ದಿನ ಇಗರ್ಜಿಯ ಗಂಟೆ ಸದ್ದು ಮಾಡಿ-
“ಹೊಸ ಪಾದರಿ ಬಂದರು” ಎಂಬ ಸಂತಸದ ಸುದ್ದಿಯನ್ನು ಊರ ಜನರಿಗೆ ತಿಳಿಸಿತು. ತುಂಬಾ ವಯಸ್ಸಾದ , ನಿವೃತ್ತಿಗೆ ಒಂದು ಒಂದೂವರೆ ವರುಷವಿರುವ ಪಾದರಿ ಲಾರೆಟ್ಟೋ ಇಲ್ಲಿಗೆ ಬಂದು ಅಧಿಕಾರ ವಹಿಸಿಕೊಂಡರು.
ಪಾದರಿ ಲಾರೆಟ್ಟೋ ನಿಧಾನ ಎಂದರೆ ನಿಧಾನ. ಪೂಜೆ, ಪ್ರವಚನ, ದಿವ್ಯ ಪ್ರಸಾದ ನೀಡುವುದರಲ್ಲೂ ನಿಧಾನ. ಮಾತಿನಲ್ಲೂ ಅಷ್ಟೇ. ದೇವರ ಪೀಠವನ್ನೇರಿ ಪೂಜೆಗೆ ತೊಡಗಿದರಂತೂ ಹೊರಗಿನ ಪ್ರಪಂಚವನ್ನೇ ಮರೆತುಬಿಡುತ್ತಿದ್ದರು. ಬಗ್ಗಿ ಪವಿತ್ರ ಪುಸ್ತಕವನ್ನು ಹತ್ತು ಬಾರಿ ಮುತ್ತಿಡುತ್ತಿದ್ದರು. ದಿವ್ಯ ಪ್ರಸಾದವನ್ನು ಪಾದರಿಯೇ ಸ್ವೀಕರಿಸಬೇಕಾಗಿದ್ದರಿಂದ ಈ ಕಾರ್ಯಕ್ಕೆ ಕಡಿಮೆ ಎಂದರೆ ಐದು ನಿಮಿಷ ತೆಗೆದುಕೊಳ್ಳುತ್ತಿದ್ದರು. ಪ್ರವಚನಕ್ಕೆ ನಿಂತವರು ಕ್ರಿಸ್ತ ಪ್ರಭುವಿನ ಮಾತುಗಳನ್ನು ನುಡಿಯುತ್ತ ಗದ್ಗದಿತರಾಗುತ್ತಿದ್ದರು. ಅವರ ದನಿ ನಡುಗುತ್ತಿತ್ತು. ಕಣ್ಣುಗಳಲ್ಲಿ ನೀರು ಬರುತ್ತಿತ್ತು. ಮಾತು ನಿಲ್ಲಿಸಿ, ಕೈನ ಉದ್ದ ತೋಳುಗಳಲ್ಲಿ ಇರಿಸಿದ ಕರವಸ್ತ್ರ ತೆಗೆದು ಕಣ್ಣೊರೆಸಿಕೊಳ್ಳುತ್ತಿದ್ದರು.
ಪಾದರಿ ಲಾರೆಟ್ಟೋ ಇಗರ್ಜಿ ಹಾಗೂ ಬಂಗಲೆ ಈ ಎರಡನ್ನೂ ಬಿಟ್ಟು ಹೊರ ಬರಲಿಲ್ಲ. ಇಗರ್ಜಿಯ ಎಲ್ಲ ವ್ಯವಹಾರ ವಹಿವಾಟನ್ನು ಗುರ್ಕಾರ ಸಿಮೋನ, ಗುರ್ಕಾರ ಪಿಂಟೋ, ಮಿರೋಣ್ ಡಯಾಸ್ ನಡೆಸಿಕೊಂಡು ಹೋದರು. ಹಿಂದಿನಿಂದ ನಡೆದುಕೊಂಡು ಬಂದುದೆಲ್ಲ ಹಾಗೆಯೇ ಮುಂದುವರೆಯಿತು.
ಲಾರೆಟ್ಟೋ ಬಂದ ಒಂದೂವರೆ ವರ್ಷಕ್ಕೆ ಅವರಿಗೆ ಅಲ್ಲಿಂದ ವರ್ಗವಾಯಿತು. ನಂತರ ಇನ್ನೂ ಕೆಲವರು ಊರಿಗೆ ಪಾದರಿಗಳಾಗಿ ಬಂದರು. ಪಾದರಿ ಫ಼ರ್ನಾಂಡಿಸ್, ಪಾದರಿ ಲೋಪಿಸ್, ಪಾದರಿ ಪಿಂಟೋ ಎರಡು ಮೂರು ವರ್ಷವಿದ್ದು ಕ್ರೀಸ್ತುವರ ಆಧ್ಯಾತ್ಮಿಕ ಬೇಕು ಬೇಡಗಳನ್ನು ಪೂರೈಸಿ ಹೋದರು.
ಊರು ಕೂಡ ಬೆಳೆಯಿತು. ಹಿರಿಯರು ಮತ್ತೂ ಹಿರಿಯರಾದರು. ಕಿರಿಯರಿಗೆ ವಯಸ್ಸಾಗಿ ಮದುವೆಯಾಗಿ ಮಕ್ಕಳಾದವು. ಕ್ರೀಸ್ತುವರ ಸಂಖ್ಯೆಯೂ ಅಧಿಕವಾಯಿತು. ಪಾದರಿ ಪಿಂಟೋ ವರ್ಗವಾಗಿ ಹೋದ ಮಾರನೇ ದಿನ ಒಂದು ಕರಿಕಾರು ಇಗರ್ಜಿಯ ಬಳಿ ಬಂದು ನಿಂತಿತು. ಗಡ್ಡ, ಮೀಸೆ ಇಲ್ಲದ, ಬೋಳು ಮುಖದ ಕರಿ ಪ್ಯಾಂಟು, ಬಣ್ಣದ ಶರಟಿನ, ಕಪ್ಪು ಕನ್ನಡಕ ಧರಿಸಿದ ಪಾದರಿ ಸಿಕ್ವೇರಾ ಕಾರಿನಿಂದ ಇಳಿದಾಗ ಅವರ ದಾರಿ ಕಾಯುತ್ತ ನಿಂತ ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ ಪಿಂಟೋ ಮುಂದೆ ಧಾವಿಸಿ-
“ಬ್ಲೆಸ್ ಮಿ ಫ಼ಾದರ್” ಎಂದು ಕೈಮುಗಿದಾಗ ಪಾದರಿ ಸಿಕ್ವೇರಾ ಕಣ್ಣುಗಳು ಮಿಂಚಿದವು.
ಶಿವಸಾಗರಕ್ಕೆ ಮತ್ತೂ ಓರ್ವ ಪಾದರಿಗಳು ಬಂದರೆಂದು ಗಂಟೆ ಢಣ ಢಣಿಸ ತೊಡಗಿತು.
ಊರಿಗೆ ಬಂದ ಈ ಪಾದರಿ ಮಾತ್ರ ನಮ್ಮವರೇ ಆಗಿದ್ದರು. ಅವರ ಬಣ್ಣ, ಮುಖ ಚಹರೆ, ಮಾತಿನ ರೀತಿ ದೇಸೀಯವಾಗಿತ್ತು. ಸ್ಥಳಿಯ್ರೇ ಸಮಿನರಿಯಲ್ಲಿ ಶಿಕ್ಷಣ ಪಡೆದು ಪಾದರಿಗಳಾಗಿ ಜನರ ದೇವರ ಸೇವೆ ಮಾಡಲು ಮುಂದಾಗಿದ್ದರು. ಪಿಂಟೋ, ಡಯಾಸರಂಥವರಿಗೆ ಇದು ಅಪಾರ ಸಂತಸದ ವಿಷಯವಾಯಿತು ಕೂಡ.
*
*
*
ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ್ ಪಿಂಟೋ ಬಹಳ ವರ್ಷ ಮುಂಬಯಿಯಲ್ಲಿದ್ದ. ಮಧ್ಯ ರೈಲ್ವೆ ವರ್ಕಶಾಪಿನಲ್ಲಿ ಫ಼ೋರಮನ್ ಹುದ್ದೆಯಲ್ಲಿ ಒಳ್ಳೆಯ ಸಂಬಳ ಇತ್ಯಾದಿ ಪಡೆಯುತ್ತ ಉತ್ತಮ ಮಟ್ಟದಲ್ಲಿಯೇ ಅವನಿದ್ದ. ವರ್ಕಶಾಪಿನಿಂದ ಕೆಲವೊಂದು ವಸ್ತುಗಳನ್ನು ಹೊರಗೆ ಸಾಗಿಸುವ ವಿಷಯದಲ್ಲಿ ಕೆಲವರೊಂದಿಗೆ ಮನಸ್ತಾಪ ಬೆಳೆಸಿಕೊಂಡ. ಅವರು ಸ್ಟೀಲು, ಕಬ್ಬಿಣ ಬಿಡಿ ಭಾಗಗಳನ್ನು ಯಾರಿಗೂ ಕಾಣದ ಹಾಗೆ ಹೊರಗೆ ತೆಗೆದುಕೊಂಡು ಹೋಗುವಾಗ ಈತ ಸೆಕ್ಯುರಿಟಿಯವರಿಗೆ ತಿಳಿಸಿ ಅವರು ಸಿಕ್ಕಿಬೀಳುವಂತೆ ಮಾಡಿದ. ಅವರು ಇವನ ಮೇಲೆ ಕಣ್ಣಿಟ್ಟು ಇವನನ್ನು ಮಾಲು ಸಹಿತ ಹಿಡಿಯುವ ಯತ್ನ ಮಾಡಿದರು. ಇದು ಕ್ರಮೇಣ ಜಗಳ ಮಾರಾಮಾರಿಗೆ ಕಾರಣವಾಗಿ ಇನ್ನು ಮುಂಬಯಿಯಲ್ಲಿ ಇದ್ದರೆ ತನ್ನ ಜೀವನಕ್ಕೇ ಅಪಾಯ ಎಂಬುದು ಖಚಿತವಾಗಿ ಅಲೆಕ್ಸ ಮುಂಬಯಿ ಬಿಡುವ ವಿಚಾರ ಮಾಡಿದ.
ಮೂರು ತಿಂಗಳ ರಜೆ ಹಾಕಿ ಹೆಂಡತಿಯ ಜತೆ ಶಿವಸಾಗರಕ್ಕೆ ಬಂದ ಅಲೆಕ್ಸ ಕಳೆಕೇರಿಯ ವಿನ್ಸೆಂಟ್ ಮನೆಯಲ್ಲಿ ಉಳಿದ. ವಿನ್ಸೆಂಟ್ ಇವನ ಹೆಂಡತಿಯ ತಮ್ಮ. ಮುಂಬಯಿ ಬಿಡಬೇಕು ಅನ್ನುವುದಂತೂ ನಿರ್ಧಾರವಾಗಿತ್ತು. ಮುಂದೆ ಎಲ್ಲಿ ತಳವೂರುವುದು ಎಂಬುದು ನಿರ್ಧಾರವಾಗಿರಲಿಲ್ಲ. ಶಿವಸಾಗರ ಅದೇ ಬೆಳವಣಿಗೆಯನ್ನು ಹೊಂದುವಂತಹ ನಗರದಂತೆ ಅವನಿಗೆ ಕಂಡಿತು. ಯಾವ ಗಲಾಟೆಯೂ ಇಲ್ಲ, ಗೊಂದಲವಿಲ್ಲ, ಸಿಟಿ ಬಸ್ಸು ಹಿಡಿ, ಕ್ಯೂ ನಿಲ್ಲು, ನೀರಿಗಾಗಿ ಪರದಾಡು, ರೇಷನ್ನಿಗೆ ಓಡಾಡು, ಸೀಮೆ ಎಣ್ಣೆ ಸಿಗುವುದಿಲ್ಲ ಎಂಬ ತಕರಾರಿಲ್ಲ. ಗೂಂಡಾಗಳ ಕಾಟವಿಲ್ಲ. ಇಲ್ಲಿಯೇ ಏಕೆ ಉಳಿಯಬಾರದು ಎಂದು ಯೋಚಿಸಿದ.
ಪೇಟೆ ಬೀದಿಯಲ್ಲಿ ಒಂದು ಮಳಿಗೆಕೊಂಡು ವಾಹನಗಳ ಬಿಡಿಭಾಗಗಳ ಅಂಗಡಿ ಇಟ್ಟರೆ ವ್ಯಾಪಾರವಾಗಲಾರದೆ ಅನಿಸಿತು.
ವಿನ್ಸಂಟ್ ಹತ್ತಿರ ಮಾತನಾಡಿದ ವಲೇರಿಯನ್ ಡಯಾಸ್, ಜಾನ್ ಡಯಾಸ್, ಚಾರ್ಲಿ ಮೊದಲಾದವರ ಜತೆ ಮಾತನಾಡಿ ನೋಡಿದ. ಮುಂಬಯಿಯಿಂದ ಈತ ಬಂದಿದ್ದಾನೆಂದೇ ಜಾನ್ ಡಯಾಸ್ ಇವನನ್ನು ರಾತ್ರಿ ಊಟಕ್ಕೆ ಕರೆದಿದ್ದ. ಶಿವಮೊಗ್ಗದಿಂದ ಸಾಕು ಹಂದಿಯ ಮಾಂಸ ತರಿಸಿದ್ದ. ಅಲೆಕ್ಸ ತಾನೇ ವಿಸ್ಕಿ ತೆಗೆದುಕೊಂಡು ಹೋಗಿದ್ದ.
“ಘೇ ಸಾಯಬಾ..ಘೇ..ಇಲ್ಲೆ ಸೆಂ ಘೇ” (ತೊಕೋಳಯ್ಯ ಸಾಹೇಬ ತೊಕೋ..ಸ್ವಲ್ಪ ತೊಕೋ) ಎಂದು ಎಲ್ಲರ ಗ್ಲಾಸಿಗೆ ಒಂದಿಷ್ಟು ವಿಸ್ಕಿ ಸುರಿದು ಅಲೆಕ್ಸ್ ತನ್ನ ವಿಚಾರ ಮುಂದಿಟ್ಟ.
“ನೀನು ಬಾರಪ್ಪ ಇಲ್ಲಿಗೆ..ಇಲ್ಲಿ ಎಲ್ಲ ಅನುಕೂಲ ಇದೆ..ಊರು ಸಣ್ಣದು..ಜನ ಸ್ವಲ್ಪ ಹಿಂದುಳಿದೋರು..ಇಗರ್ಜಿನಲ್ಲಿ ಇಂಗ್ಲೀಷ ಪೂಜೆ ಇಲ್ಲ ಅನ್ನೋದೊಂದು. ನಮ್ ಜನ ಅನಸಿವಿಲೈಸ್ಡ್ ಅನ್ನೋದು ಇನ್ನೊಂದು. ಈ ಕೆಲವು ಕಾರಣಗಳನ್ನು ಬಿಟ್ರೆ ಊರು ಒಳ್ಳೇದು.” ಎಂದ ಜಾನ್ ಡಯಾಸ. ಉಳಿದವರೂ ಇದೇ ಅಭಿಪ್ರಾಯ ಪಟ್ಟರು.
ಅಲೆಕ್ಸ ತರಾತುರಿಯಲ್ಲಿ ಸೈಕಲ್ ನಾಗಪ್ಪನ ಅಂಗಡಿ ಪಕ್ಕದಲ್ಲಿ ಒಂದು ಮಳಿಗೆ ಕೊಂಡ. ತಾನೇ ಶಿವಮೊಗ್ಗ, ಹುಬ್ಬಳ್ಳಿಗಳಿಗೆ ಹೋಗಿ ಬೇಕಾದ ಸಾಮಾನುಗಳ ಸರಬರಾಜಿಗೆ ವ್ಯವಸ್ಥೆ ಮಾಡಿದ. ಮುಂಬಯಿಗೆ ಹೋಗಿ ಕೆಲಸಕ್ಕೆ ಸ್ವಯಂ ನಿವೃತ್ತಿ ಘೋಷಣೆ ಮಾಡಿದ. ನಾಲ್ಕು ದಿನ ಅಲ್ಲಿ ಉಳಿದು ಪೆನ್ಶನ್ ಇತ್ಯಾದಿ ಬೇಗನೆ ಬರುವಂತೆ ಮಾಡಿದ. ಹೆಂಡತಿ ಮಕ್ಕಳ ಜತೆ ರೈಲು ಹತ್ತಿ ಶಿವಸಾಗರಕ್ಕೆ ಬಂದಿಳಿದ.
ಒಂದು ಶುಕ್ರವಾರ ಪೇಟೆ ಬೀದಿಯಲ್ಲಿ “ಪಿಂಟೋ ಆಟೋಸ್ಪೇರ್ಸ್” ಎಂಬ ಅಂಗಡಿ ತೆರೆದು ಪಾದರಿ ಮಸ್ಕರಿನಾಸರಿಂದ ಅಂಗಡಿ ಉದ್ಘಾಟನೆ ಇರಿಸಿಕೊಂಡ ಪಾದರಿಗಳು ಅಂಗಡಿಯನ್ನು ತಂದಿರಿಸಿದ ವಾಹನ ಬಿಡಿ ಭಾಗಗಳನ್ನು ಪವಿತ್ರ ಜಲದ ಸಿಂಪಡನೆಯಿಂದ ಮಂತ್ರಿಸಿ ದೇವರ ಪ್ರಾರ್ಥನೆ ಮಾಡಿದರು. ಪೇಟೆ ಬೀದಿಯವರು, ಕರಿಕಾಲಿನವರು ಡಾ.ರೇಗೋ, ಜಾನ ಡಯಾಸ್, ವಲೇರಿಯನ್ ಮೊದಲಾದವರು ಬಂದು ಅಲೆಕ್ಸಿಯ ಕೈ ಕುಲಕಿದರು. ಅಂಗಡಿ ಬೋನ, ಗುರ್ಕಾರ, ಸಿಮೋನ, ಪಾಸ್ಕೋಲ ಮೇಸ್ತ್ರಿ ಈ ಮೂವರನ್ನು ಮಾತ್ರ ಆತ ಕರೆದ. ಏಕೋ ಉಳಿದವರು ಅವನ ನೆನಪಿಗೆ ಬರಲಿಲ್ಲ.
ಅವನು ಮುಂಬಯಿ ಬಿಡಲು ಮತ್ತೂ ಒಂದು ಕಾರಣವೆಂದರೆ ಅವನ ಮೂರು ಜನ ಹೆಣ್ಣು ಮಕ್ಕಳು. ಗಂಡು ಮಕ್ಕಳಾಗಿದ್ದರೆ ಅವರ ವಿದ್ಯಾಭ್ಯಾಸ, ಮುಂದಿನ ಕೆಲಸ ಎಂದೆಲ್ಲ ಆತ ಮುಂಬಯಿಯಿಯಲ್ಲಿಯೇ ಇರಬೇಕಾಗುತ್ತಿತ್ತು. ಆದರೆ ತನ್ನ ಮೂವರೂ ಹೆಣ್ಣು ಮಕ್ಕಳು ಏನೆಂದರೂ ನಾಳೆ ಗಂಡನ ಮನೆಗೆ ಹೋಗುವವರು. ಅವರ ಹಣೆಯಲ್ಲಿ ಯಾವ ಊರು ಬರೆದಿದೆಯೋ ಅಂತು ಒಳ್ಳೆಯ ಕಡೆ ನೋಡಿ ಮದುವೆ ಮಾಡಿ ಕಳುಹಿಸಲು ಮುಂಬಯಿಯೇನು ಶಿವಸಾಗರವೇನು ಎಂದು ಆತ ಇಲ್ಲಿ ಬಂದ. ವಿನ್ಸೆಂಟ್ಯ್ ಅವನಿಗಾಗಿ ಒಂದು ಮನೆಯನ್ನು ತಾನಿರುವ ಕೇರಿಯಲ್ಲಿಯೇ ನೋಡಿದ. ಕೆಲವೇ ದಿನಗಳಲ್ಲಿ ಅಲೆಕ್ಸ್ ಬಲಾಢ್ಯನಾದ. ಅಂಗಡಿಯಲ್ಲಿ ಒಳ್ಳೆಯ ವ್ಯಾಪಾರವಿತ್ತು. ಊರಿನಲ್ಲಿ ಗೌರವವಿತ್ತು. ಕೆಳಕೇರಿಯಲ್ಲಿ ಕ್ರೀಸ್ತುವರ ಸಂಖ್ಯೆ ಅಧಿಕವಾಗಿ ಅವರಿಗೊಬ್ಬ ಗುರ್ಕಾರ ಬೇಕೆನಿಸಿದಾಗ ಪಾದರಿ ಮಸ್ಕರಿನಾಸ ಅಲೆಕ್ಸನನ್ನು ಗುರ್ಕಾರ ಎಂದು ನೇಮಿಸಿದರು.
ಪಾದರಿ ಸಿಕ್ವೇರಾ ಬಂದ ನಂತರವಂತೂ ಅಲೆಕ್ಸ ಅರ್ಧ ಊರನ್ನೇ ಗೆದ್ದುಕೊಂಡ.
ಮೈಸೂರು ನಗರದಲ್ಲಿದ್ದ ಸಿಕ್ವೆರಾ ಅವರಿಗೆ ಶಿವಸಾಗರಕ್ಕೆ ಹೊಂದಿಕೊಳ್ಳುವುದು ತುಸು ಕಷ್ಟವೆನಿಸಿತು. ಅವರಿಗಿದ್ದ ಒಂದು ಧೈರ್ಯವೆಂದರೆ ಇಲ್ಲಿ ತಮ್ಮ ಮಂಗಳೂರು ಭಾಷೆ ಮಾತನಾಡುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದುದು. ಮೈಸೂರಿನಲ್ಲಿ ತಮಿಳರು, ತೆಲುಗರು, ಕನ್ನಡಿಗರು ತುಂಬಿಕೊಂಡಿದ್ದರು. ಇವರು ಕೂಡ ಮನೆಯಲ್ಲಿ ಇಂಗ್ಲೀಷ ಮಾತನಾಡುತ್ತ ಯುರೋಪಿಯನ್ನರ ಒಂದು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಯತ್ನದಲ್ಲಿದ್ದರು.
ಅಲೆಕ್ಸ್ ಅವರಿಗೆ, ಶಿವಸಾಗರದ ಕ್ರೀಸ್ತುವರೆಲ್ಲರ ಪರಿಚಯ ಮಾಡಿಕೊಟ್ಟ. ಅವರ ವೃತ್ತಿ ಸ್ಥಾನ ಮಾನಗಳು, ಅವರ್ ಸ್ವಭಾವ, ಇಗರ್ಜಿಯ ಬಗ್ಗೆ ದೈವ ಭಕ್ತಿಯ ಬಗ್ಗೆ ಅವರಿಗಿರುವ ಆಸ್ಥೆ, ಆಸಕ್ತಿ ಹೀಗೆ ಸಮಸ್ತ ವಿಷಯಗಳೂ ಕೆಲವೇ ದಿನಗಳಲ್ಲಿ ಪಾದರಿ ಸಿಕ್ವೇರಾ ಅವರಿಗೆ ಲಭ್ಯವಾದವು. ಇಗರ್ಜಿಯ ಆಡಳಿತ ಅಲ್ಲಿಯ ಪದ್ಧತಿಗಳನ್ನು ಸಿಕ್ವೇರಾ ಪರಿಚಯ ಮಾಡಿಕೊಂಡರು. ಕ್ರೀಸ್ತುವರ ಮನೆಗಳಿಗೆ ಅವರು ಭೇಟಿಕೊಟ್ಟರು. ಜನರಲ್ಲಿಯ ದೈವ ಭಕ್ತಿ ದೈವ ಭೀತಿ ಕಂಡು ಅವರಿಗೆ ಸಂತಸವಾಯಿತು. ಇಂತಹ ಮುಗ್ಧತೆಯನ್ನು ಅವರು ಮೈಸೂರಿನಲ್ಲಿ ಕೂಡ ಕಂಡಿರಲಿಲ್ಲ. ಜನ ಪಾದರಿಗಳೆಂದರೆ ತುಂಬಾ ಗೌರವ ನೀಡುತ್ತಾರೆ ಎಂಬ ವಿಷಯ ಕೂಡ ಅವರ ಗಮನಕ್ಕೆ ಬಂದಿತು. ಆದರೆ ವೈಜಿಣ್ ಕತ್ರೀನ್ ತನ್ನ ಮನೆಯ ಜಗಲಿಯ ಮೇಲೆ ಕುಳಿತವಳು ಬಾಗಿಲಿಗೆ ಬಂದ ಸಿಕ್ವೇರಾ ಅವರನ್ನು ನೋಡಿ ಎದ್ದು ನಿಲ್ಲಲಿಲ್ಲ. ಕೈ ಮುಗಿಯಲಿಲ್ಲ. ಗುರ್ಕಾರ ಸಿಮೋನ ಹೇಳಿದಾಗ ಆಕೆ ಧಡ ಬಡಸಿ ಎದ್ದಳು. “ಪದ್ರಾಬ ಬೆಸಾಂವಂ ದಿಯಾ” ಎಂದು ಕೈಮುಗಿದಳು. ನಂತರ ತಾನು ಏನೋ ಒಂದು ತಪ್ಪು ಮಾಡಿದೆ ಎಂಬಂತೆ-
“..ಪದ್ರಾಬ ನೀವು ಲೋಬ್ ಹಾಕಿಕೊಂಡಿರಲಿಲ್ಲ ನೋಡಿ..ನನಗೆ ಗೊತ್ತಾಗಲಿಲ್ಲ..” ಎಂದು ತನ್ನ ವರ್ತನೆಗೆ ವಿವರಣೆ ನೀಡಿದಳು.
ಗುರ್ಕಾರ ಸಿಮೋನ ಕೂಡ ತನ್ನನ್ನು ಏನೋ ಒಂದು ರೀತಿಯಲ್ಲಿ ನೋಡುತ್ತಿದ್ದವನು.
“ಪದ್ರಾಬಾ ಒಂದು ವಿಷಯ” ಎಂದ.
“ಏನು?” ಎಂದು ಸಿಕ್ವೇರಾ ಅವನ ಮುಖ ನೋಡಿದರು.
“ನಮ್ಮ ಜನ ಉದ್ದ ನಿಲುವಂಗಿ, ಗಡ್ಡ, ಮೀಸೆ, ಕುತ್ತಿಗೆಯಲ್ಲಿ ಶಿಲುಬೆ, ಸೊಂಟಕ್ಕೆ ಗರ್ಡಲ್ ಇಲ್ಲವೆಂದರೆ ಪಾದರಿಗಳನ್ನು ಗುರುತಿಸುವುದಿಲ್ಲ..” ಎಂದು ಅಂಜುತ್ತ ಅಳುಕುತ್ತ ಹೇಳಿದ್ದು ಪಾದರಿ ಸಿಕ್ವೇರಾ ಅವರ ಮನಸ್ಸಿಗೆ ತಾಗಿತು.
ನಗರ ಪ್ರದೇಶಗಳಲ್ಲಿ ಆಗಲೇ ಪಾದರಿಗಳು ನಿಲುವಂಗಿ ತೊರೆದಿದ್ದರು. ಪ್ಯಾಂಟು, ಶರಟುಗಳು ಚಾಲ್ತಿಗೆ ಬಂದಿದ್ದವು. ಮುಖವನ್ನು ನುಣ್ಣಗೆ ಬೋಳಿಸಿಕೊಂಡು ಪೌಡರ್ ಸ್ನೋ, ಹಚ್ಚಿಕೊಳ್ಳುತ್ತಿದ್ದರು. ಪೂಜೆಯ ಸಮಯದಲ್ಲಿ ಧಾರ್ಮಿಕ ಕೆಲಸ ಮಾಡುವಾಗ ಮಾತ್ರ ನಿಲುವಂಗಿ ಇತ್ಯಾದಿ ತೊಡುತ್ತಿದ್ದರು. ಮೊದಲು ಪಾದರಿಗಳ ಈ ವರ್ತನೆಯನ್ನು ಅಲ್ಲಿಯ ಜನ ಪ್ರತಿಭಟಿಸಿದರು. ಆದರೆ ಎಲ್ಲ ಪಾದರಿಗಳೂ ಹೀಗೆಯೇ ಬದಲಾದಾಗ ಜನ ಅನಿವಾರ್ಯವಾಗಿ ಇದಕ್ಕೆ ಹೊಂಡಿಕೊಂಡರು.
ಇಲ್ಲೂ ಕೂಡ ಕೆಲ ದಿನ ಬೇಕಾಗಬಹುದು ಅಂದುಕೊಂಡರು ಸಿಕ್ವೇರಾ. ಸಿಮೋನನ ಮಾತಿಗೆ ಅವರು-
“ಹೌದೇನು?” ಎಂದು ಕೇಳಿ ನಕ್ಕರು.
ನಿಧಾನವಾಗಿ ಇಗರ್ಜಿಯಲ್ಲಿ ಕೆಲ ಬದಲಾವಣೆಗಳು ಆದವು. ಮುಷ್ಠಿ ಅಕ್ಕಿಯನ್ನು ಇನ್ನು ಮುಂದೆ ತರಬೇಡಿ ಎಂದರು. ತರಕಾರಿ ಇತ್ಯಾದಿ ತಂದು ಹರಾಜು ಹಾಕುವ ಪದ್ಧತಿ ನಿಂತು ಹೋಯಿತು. ಕಾಣಿಕೆ ಡಬ್ಬಿಯನ್ನು ಜನರ ಬಳಿಗೇನೆ ಕೊಂಡೊಯ್ಯುವುದು ನಿಂತು ಬಿಟ್ಟಿತು. ಇಗರ್ಜಿಯ ನಡುವೆ ಒಂದು ಮೇಜು ಇರಿಸಿ ಅದರ ಮೇಲೆ ಶಿಲುಬೆಗೇರಿದ ಏಸುವಿನ ಪ್ರತಿಮೆ ನಿಲ್ಲಿಸಲಾಯಿತು. ಪೂಜೆಯ ನಂತರ ಜನಬಂದು ಈ ಪ್ರತಿಮೆಯ ಪಾದಕ್ಕೆ ಮುತ್ತಿಟ್ಟು ಮುಂದೆ ಇಟ್ಟಿರುತ್ತಿದ್ದ ಗಾಜಿನ ತಟ್ಟೆಯಲ್ಲಿ ಕಾಣಿಕೆ ಹಾಕುವ ಪದ್ಧತಿ ಜಾರಿಗೆ ಬಂದಿತು.
*****
ಮುಂದುವರೆಯುವುದು
ಕೀಲಿಕರಣ ದೋಷ ತಿದ್ದುಪಡಿ: ನಸೀರ್ ಅಹಮದ್, ರಾಮದಾಸ್ ಪೈ